ಕ್ರಿ.ಶ.೧೯೨೬ನೆಯ ಸಂವತ್ಸರ ನನ್ನ ಜೀವಮಾನದಲ್ಲಿ ಒಂದು ಮಹತ್ತಾದ ಕ್ರಾಂತಿಕಾರಕ ಪರಿವರ್ತನೆಯ ವರ್ಷವಾಗಿದೆ. ನನ್ನ ಬದುಕಿನಲ್ಲಿ ಮಲೆಯ ಕಿರುದೊರೆ ಒಂದು ವಿಶ್ವಜೀವನವಾಹಿನಿಯನ್ನು ಸಂಧಿಸಿ ಸಂಗಮಿಸಿದ ಪವಿತ್ರ ವರ್ಷವಾಗಿದೆ ಅದು. ಸಹ್ಯಾದ್ರೀಯ ತುಂಗೆಯ ಅಭೀಪ್ಸೆಗೆ ಓಗೊಟ್ಟು ಹಿಮಾಲಯದ ಗಂಗೆಯ ಅಕ್ಕರೆಯ ಕೃಪೆ ಅದನ್ನು ಆಲಿಂಗಿಸುವ ಮಹದ್ದರ್ಶನವನ್ನಲ್ಲಿ ಎದುರುಗೊಳ್ಳುತ್ತೇವೆ.ಆದರೆ ಆ ಪುಣ್ಯ ಘಟನೆ ಎಷ್ಟು  ನಿರ್ವಿಶಿಷ್ಟವಾಗಿ ಸದ್ದಗದ್ದಲವಿಲ್ಲದೆ ಯಕಃಶ್ಚಿತವೊ ಎಂಬಂತೆ ನಡೆಯುತ್ತದೆ ಎಂದರೆ ಅದು ಸಂಭವಿಸಿದಾಗ ನನಗೆ ಅದರ ಅಪೂರ್ವತೆಯಾಗಲಿ ಮಹತ್ತಾಗಲಿ ಕೃಪಾಗ್ರಹವಾಗಲಿ ಒಂದಿನಿತೂ ಪ್ರಜ್ಞಾಗೋಚರವಾಗರಲಿಲ್ಲ! ಶ್ರೀ ಗುರುವಾಗಿ ಆವತರಿಸಿದ ಜಗನ್ಮಾತೆ ತನ್ನ ಕಾಡು ಮಗುವನ್ನು ಕೈ ಹಿಡಿದೆತ್ತಿಕೊಳ್ಳದಿದ್ದರೆ ಅದು ಯಾವ ಕಸದ ಡಬ್ಬಿಗೆ ಬಿದ್ದು, ಹೇಳ ಹೆಸರಿಲ್ಲದಾಗುತ್ತಿತೋ ? ಅನವರತ ಉದ್ಧಾರಕಾಂಕ್ಷೆ ಮತ್ತು ನಿರಂತರತೆ ಅಭೀಪ್ಸೆಯ ಪ್ರಾರ್ಥನೆ ವಿನಾ ಅದಕ್ಕಿದ್ದ ಅರ್ಹತೆಯಾದರೂ ಏನು?

೧೯೨೬ನೆಯ ಜನವರಿ ೧ನೆಯ ಶುಕ್ರವಾರದ ದಿನಚರಿ:           
“ರೂಮಿನಲ್ಲಿ ಒಬ್ಬನೆ ಇದ್ದೇನೆ. ‘To the Full Moon’ (ಪೂರ್ಣಚಂದ್ರನಿಗೆ) ಎಂದ ಒಂದು ಇಂಗ್ಲೀಷ ಕವನ ರಚಿಸಿದೆ.  ಸಂಜೆ ನಾನು ಪಿ.ಗೋಪಾಲಕೃಷ್ಣ ಶೆಟ್ಟಿ ಅವರೂ ನಮ್ಮ ಕಾಲೇಜಿನ ಯೂನಿಯನ್ ಗೆ ಹೋದೆವು. Indian National Congress (ಭಾರತ ರಾಷ್ಟ್ರೀಯ ಕಾಂಗ್ರೆಸ್ಸು) ವಿಚಾರವಾಗಿದ್ದ ಸುದ್ಧಿಗಳನ್ನು ಪತ್ರಿಕೆಗಳಲ್ಲಿ ಓದಿದೆ. ಅಬ್ದುಲ್ ರಹಮಾನ್ ಎಂಬುವರ ಒಂದು ಭಾಷಣದ ವರದಿಯೂ ಅಲ್ಲಿದ್ದು ಅದನ್ನೂ ಓದಿ ತುಂಬ ನೊಂದುಕೊಂಡು ದುಃಖಿಸಿದೆ.(Whichsent a pang of pain through my heart), ಅಯ್ಯೋ, ನನ್ನ ದೇಶವೇ, ಹಿಂದೂಗಳೂ ಮುಸಲ್ಮಾನರೂ ಹೃತ್ಪೂರ್ವಕವಾಗಿ ಪರಸ್ಪರ ಹಸ್ತಲಾಘವ  ಕೊಡುವುದು ಎಂದು? (Alas, my country, when do the Muslims and Hindus shake hands heartily) ನಾವು ಕುಕ್ಕನಹಳ್ಳಿ ಕೆರೆಯ ಏರಿಯ ಮೆಲೆ ತಿರುಗಾಟಕ್ಕೆ ಹೋದೆವು, ಅನೇಕ ವಿಚಾರವಾಗಿ ಮಾತನಾಡುತ್ತಾ. ರೂಮಿಗೆ ಬಂದ ಮೇಲೆ ಎರಡು ಕನ್ನಡ ಕವನಗಳನ್ನುರಚಿಸಿದೆ: ‘ಯಾವ ನೋವಿದು ಬಾಧಿಪುದು, ಹೃದಯ?’ ಮತ್ತು ‘ಮುಸುಗುತ್ತಿದೆ ಕಾರಿರುಳು, ಜನ್ಮಭೂಮಿ.’

೧೯೨೬ನೆಯ ಜನವರಿ ೨ನೆಯ ಶನಿವಾರದ ದಿನಚರಿ:
“ಬೆಳಿಗ್ಗೆ ಎಸ್.ಎಸ್.ಕೃಷ್ಣಮೂರ್ತಿ ಬಂದರು. ವರ್ಡ್ಸವರ್ತ ಕವಿಯ ಕೆಲವು ಕವನಗಳನ್ನು (ನಮಗೆ ಪಠ್ಯವಿಷಯವಾಗಿದ್ದವು) ಅವರಿಗೆ ವಿವರಿಸಿದೆ. ಆಮೇಲೆ ಗಂಟೆ ಗಂಟ್ಟಲೆ ನನ್ನ ಕೆಲವು ಕವನಗಳನ್ನು ಹಾಡಿದೆ. ತರುವಾಯ ಬರೆಯಬೇಕಾಗಿದ್ದ ಒಂದು ಪೀಠಿಕೆ (ಬಹುಶಃ ತರಗತಿಯ ಪ್ರಬಂಧ ರಚನೆಗೆ ಸಂಬಂಧಪಟ್ಟದ್ದಿರಬಹುದು). ಬರೆದೆ. ಕೆ.ರಾಮರಾವ್ ಕೊಟ್ಟ ಹಸ್ತಪ್ರತಿಯಲ್ಲಿದ್ದ ಅವರ ಕಾದಂಬರಿಯನ್ನು ಓದಿದೆ.  ಕನ್ನಡದಲ್ಲಿದ್ದ ‘ರಾಷ್ಟ್ರೀಯ ಕಾಂಗ್ರೆಸ್ಸಿನ ಇತಿಹಾಸ’ ವನ್ನು ಓದಿದೆ. ಪಿ.ಗೋ.ಶೆಟ್ಟಿ ಮತ್ತು ನಾನು ಲಲಿತಾದ್ರಿಯ ಬುಡಕ್ಕೆ ದೀರ್ಘ ದೂರ ಸಂಚಾರ ಹೋದೆವು, ಸೃಷ್ಟಿಯ ಮಹಾದ್ಭುತ ವೈಚಿತ್ಯ್ರಗಳನ್ನೂ ಬದುಕಿನ ರಹಸ್ಯಗಳ ಅನಿರ್ವಚನೀಯವನ್ನೂ ಕುರಿತು ಮಾತನಾಡುತ್ತಾ ನಿರ್ಜನವೂ ನಿಃಶಬ್ದವೂ ಗಂಭೀರವೂ ಆಗಿದ್ದ ರಸ್ತೆಯಲ್ಲಿ  ನನ್ನ ಮತ್ತು ಠಾಕೂರರ ಕೆಲವು ರಚನೆಗಳನ್ನು ಹಾಡಿದೆ. ಸ್ಪೂರ್ತಿದಾಯಕವೂ ಸುಮಧುರವೂ ಆಗಿತ್ತು ಆ ನಿರ್ಜನತಾ ಏಕಾಂತ. ಓಂ! ಓಂ! ಓಂ”

೧೯೨೬ನೆಯ ಜನೆರಿ ೩ನೆಯ ಭಾನುವಾರದ ದಿಚರಿ! :
“ಎಸ್.ಎಸ್.ಕೃಷ್ಣಮೂರ್ತಿ ಬಂದು ನನ್ನೊಡನೆ ವರ್ಡ್ಸವರ್ತ ಕವನಗಳನ್ನು ಅಧ್ಯಯನ ಮಾಡಿದರು.ಆಮೇಲೆ ವಿಷಕಂಠ ಬಂದವರು ಈ ಡೈರಿಯನ್ನೂ ಕೆಲವು ಕಿತ್ತಳೆ ಹಣ್ಣುಗಳನ್ನೂ ತಂದು ಕೊಟ್ಟರು. ಇಂಡಿಯಾ ಕುರಿತು ಒಂದು ಸಾನೆಟ್ ರಚಿಸಿದೆ.  ಠಾಕೂರರ Fugitive ಅಲ್ಲಿ ಕೆಲವು ಕವನಗಳನ್ನು ಓದಿದೆ. ಪಿ.ಗೋಪಾಲಕೃಷ್ಣ ಶೆಟ್ಟಿ ಬೆಂಗಳೂರಿಗೆ ಹೋದರು. ಅವರ ಕೈಲಿ ಚಂದ್ರಶೇಖರ ಶೆಟ್ಟರಿಗೆ ಕೊಡಲು ನನ್ನ ಕೆಲವು ಕನ್ನಡ ಕವನಗಳನ್ನು ಕಳಿಸಿದೆ. ಸಂಜೆ ನಾನೂ ವಿಷಕಂಠ ನಮ್ಮ ಕಾಲೇಜು ಯೂನಿಯನ್ನಿಗೆ ಹೋಗಿದ್ದೇವು. ಆಮೇಲೆ ನಾನೊಬ್ಬನೇ ತಿರುಗಾಡಲು ಹೋದೆ. ಹಾದಿಯಲ್ಲಿ “ಜಯಾಪಜಯಗಳು” ಎಂಬ ಕನ್ನಡ ಭಾವಗೀತೆ ರಚಿಸಿದೆ. ಇದನ್ನು ಬರೆಯುತ್ತಿರುವಾಗಲೇ ಪಟ್ಟ ಪಟ್ ಎಂದು ಮಳೆ ಕರೆಯತೊಡಗಿತು. ಹವಾ ತಂಪಾಗಿ ಉಲ್ಲಾಸಕರವಾಗಿದೆ. ನಂಜಯ್ಯ ನಾನು ಇಸ್ಲೀಪಟು ಆಡಿದೇವು. ರಾತ್ರಿ ಹೊರಗೆ ತಾರಸಿಯ ಮೇಲೆ ಮಲಗಿದೇವು. ಆದರೆ ಸೊಳ್ಳೆ ಕಡಿಯಲು ತೊಡಗಲು ಕೊಠಡಿಯೊಳಕ್ಕೆ ಓಡಿಬಿಟ್ಟೇವು. ತಾಯೀ! ಸುಃಖ ದುಃಖಗಳನ್ನು ಸಮಚಿತ್ತದಿಂದ ಸಹಿಸಲು ತನಗೆ ಬಲವನ್ನು ದಯಪಾಲಿಸು!”

೧೯೨೬ನೆಯ ಜನವರಿ ೪ನೆಯ ಸೋಮವಾರದ ದಿನಚರಿ :      
“Morte de Aurther ಅನ್ನು ವಸ್ತುವಾಗಿಟ್ಟುಕೊಂಡು ಒಂದು ಕನ್ನಡ ನಾಟಕ ರಚನೆಗೆ ಪ್ರಾರಂಭಿಸಿದೆ. ಬಸವರಾಜು ಬಂದರು. ಒಂದು ಸಿನಿಮಾ ನೋಡಲು ಹೋದೇವು. ಜಾಕ್ ತೋರಿಸುತ್ತಿದ್ದ ನನ್ನ ತಾಯಿಯ ಮೇಲಣ ಅಕ್ಕರೆಯನ್ನೂ ಅವನ ತಾಯಿ ತೋರಿಸುತ್ತಿದ್ದ ಮಗನ ಮೇಲಣ ಪ್ರೀತಿಯನ್ನೂ ನೋಡಿ ನನ್ನ ಮನಸ್ಸು ನನ್ನ ತಾಯಿಯನ್ನು ನೆನೆಯಿತು. ನನ್ನವ್ವಗೆ ಕಾಯಿಲೆಯಾಗಿದ್ದಾಗ ಒಮ್ಮೆ ನನಗೆ ಹೇಳಿದರು ‘ಅಪ್ಪಾ, ನೀನೆಲ್ಲಿ ಇದ್ದರೆ ಏನಪ್ಪಾ? ಸೌಖ್ಯವಾಗಿದ್ದರೆ ಅದೇ ನನಗೆ ಸಂತೋಷ’. ಅಮ್ಮನ ಆ ವಾಕ್ಯ ನನಗೆ ಎಲ್ಲ ಕಾವ್ಯ ಮತ್ತು ಎಲ್ಲ ತತ್ವಗಳಿಗಿಂತ ಮಹತ್ತರವಾಗಿದೆ. ಅದು ನನಗೆ ‘ದೀಕ್ಷೆ’ಯಾಗಿದೆ. ನನ್ನಮ್ಮ ನನಗೆ ದೀಕ್ಷೆ ಕೊಟ್ಟಿದ್ದರೂ- ತಿಳಿಯದಯೆ! (To me this is greater than all poetry and all philosophy. To me that is the initiation, I was initiated by my mother-unconsciously!)”

೧೯೨೬ನೆಯ ಜನವರಿ ೫ನೆಯ ಮಂಗಳವಾರದ ದಿನಚರಿ:      
“ನಿನ್ನೆ ಬರೆಯಲು ಪ್ರಾರಂಭಮಾಡಿದ ಕನ್ನಡ ನಾಟಕವನ್ನು ಮುಂದುವರೆಸಿದಿಎ. ಒಂದು  ಭಕ್ತಿ ಗೀತೆಯನ್ನುರಚಿಸಿದೆ.  ಸಂಜೆ ಎಂ.ಬಸವರಾಜು ಮತ್ತು  ಖುದ್ದೂಸ್ ಅವರೊಡನೆ The sultaners of Love ಎಂಬ ಸಿನಿಮಾಕ್ಕೆ ಹೋಗಿದ್ದೆ. ಅದೂ ಅರೇಬಿಯನ್ ನೈಟ್ಸ್ (ಯವನಯಾಮಿನನಿ ಕಥೆಗಳು) ವಸ್ತು. ಬಣ್ಣದ ದೃಶ್ಯಗಳಂತೂ ಬಲು ಸೊಗಸಾಗಿದ್ದುವು. ಸೂರ್ಯಾಸ್ತ, ಸರೋವರ ಮತ್ತು ಇತರೆ ನಿಸರ್ಗ ರಮಣೀಯ ದೃಶ್ಯಗಳು ಅತ್ಯಂತ ಮನೋಹರ ಭವ್ಯವಾಗಿದ್ದುವು. ಎಂ. ಬಸವರಾಜು ತಾವು ರಾತ್ರಿ ರೈಲಿಗೆ ಬೆಂಗಳೂರಿಗೆ ಹೊರಡುವುದಾಗಿ ಹೇಳಿದರು. ಸ್ವಾಮಿ ರಾಮತೀರ್ಥರ ಒಂದು ಉಪನ್ಯಾಸದ ಭಾಗವನ್ನು ಓದಿ ಮಲಗಿದೆ. ಮಾನವನ ಬದುಕು ರಹಸ್ಯಪೂರ್ಣ, ನಿರ್ವಚನಾತೀತ, ತಾಯೀ, ನೀನೇನೂ ಶುಷ್ಯನ್ಯಾಯಾಧೀಶಲ್ಲ! (Mother, thou art not a dry judge!)”

೧೯೨೬ನೆಯ ಜನವರಿ ೬ನೆಯ ಬುಧವಾರದ ದಿನಚರಿ:           
“ಬೆಳಿಗ್ಗೆ ಎದ್ದವನೇ ಸ್ನಾನ ಮಾಡಿದೆ. ಎಸ್.ಎಸ್.ಕೃಷ್ಣಮೂರ್ತಿ ಬಂದರು. ಕೋಲರಿಜ್ಜನ ಕೃತಿಗಳನ್ನು ಅವರಿಗೆ ಓದಿದೆ. ತರುವಾಯ ನನ್ನ ಕನ್ನಡ ನಾಟಕ ಬರೆಯಲು ಕುಳಿತೆ. ಆ ನಾಟಕಕ್ಕಾಗಿ ಜಗನ್ಮಾತೆಯನ್ನುದ್ದೇಶಿಸಿ ಒಂದು ಪ್ರಾರ್ಥನೆ ರಚಿಸಿದೆ. ನಾನು ಕಾಲೇಜಿಗೆ ಹೋಗುತ್ತಿದ್ದಾಗ ‘ಮರಿ ವಿಜ್ಞಾನಿ’ (The child scientist) ಎಂಬ ವಸ್ತು ಚಿಂತೆಗೆ ಹೊಳೆಯಿತು. ‘ಗಿಳಿ ವಾಡಿಯಾಗಿಂತ ಉತ್ತಮವಾಗಿ ಬೋಧಿಸುತ್ತದೆ’ (The parrot taches better than Wadia) ಎಂಬ ಹೆಸರಿಟ್ಟು, ಅಬ್ದುಲ ಖುದ್ದೂಸ್ ಮತ್ತು ನಾನು ವಾಕಿಂಗ ಹೋದೆವು. ಮಳೆ ಬಂತು. ಕೊಠಡಿಗೆ ಹಿಂತಿರುಗಿದೆ. ‘ಜಯ ಕರ್ನಾಟಕ’ ಬಂದಿತ್ತು. ಅದರಲ್ಲಿದ್ದ ಕೆಲವು ಲೇಖನಗಳನ್ನು ಓದಿದೆ. ಮಲಗಿ ನಿದ್ದೆ ಹೋದೆ. ತಾಯೀ, ನನ್ನನ್ನು ತಾನು ಆಳಿಕೊಳ್ಳುವ ಶಕ್ತಿ ಕೊಡು. (Mother, gie me the strength to rule myself)”.

೧೯೨೬ನೆಯ ಜನವರಿ ೭ನೆಯ ಗುರುವಾರದ ದಿನಚರಿ:          
“ಎಸ್.ಎಸ್.ಕೆ. ಬಂದು,ನನ್ನೊಡನೆ ಕೋಲರಿಜ್ ಅಧ್ಯಯನ ಮಾಡಿದರು.  ತರುವಾಯ ನನ್ನ ಕನ್ನಡ ನಾಟಕವನ್ನು ಮುಂದುವರೆಸಿ ಬರೆದೆ. ಎಂಬತ್ತು ರೂಪಾಯಿ ಬಂತು. (ಮನಿಯಾರ್ಡರು). ಹಿಂದೂ ನೀತಿಶಾಸ್ತ್ರ (Hindu Ethics) ಎಂಬ ಪುಸ್ತಕ ಕೊಂಡು ಕೊಂಡೆ. ನನ್ನ ರಕ್ತ ಕುದಿಯಿತು.  ಸ್ವಲ್ಪವೂ ಸಹಾನುಭೂತಿಯಿಲ್ಲದ ರೀತಿಯಲ್ಲಿ ಹಿಂದೂ ಭಾವನೆಗಳನ್ನು ಕುರಿತು ಬರೆದಿದ್ದುದನ್ನು ಕಂಡು. ಜಾನ್ ಮೆಕೆನ್ ಜಿ ತನ್ನದಲ್ಲದ್ದನ್ನೆಲ್ಲ ಖಂಡಿಸುವ ಸ್ವಮತಭ್ರಾಂತ ಮನೋಧರ್ಮದವನು. (John mckenzie is a fanatic of negaive order.) ಅವನ ಮೇಲೆ ನನಗೇನೂ ದ್ವೇಷಭಾವನೆಯಿಲ್ಲ; ಆದರೆ ಅವನನ್ನು ಕನಿಕರದಿಂದ ಕಾಣಬೇಕಷ್ಟೆ! ಕ್ರೈಸ್ತ ಧರ್ಮಕ್ಕೆ ಕಳಂಕ ತರುವ ಅವನೊಬ್ಬ ಶಠಬುದ್ಧಿ ಕಿಲಸ್ತರವನು! “ಹೇ ಕ್ರಿಸ್ತ, ಹೇ ಕೃಷ್ಣ- ಜನಕ್ಕೆ ಅವರಲ್ಲಿದ್ದೂ ಸದ್ಯಕ್ಕೆ ಪ್ರಜ್ಞಾಗೋಚರವಾಗದಿರುವ ಸ್ವಸ್ವರೂಪಜ್ಞಾನವನ್ನು ದಯಪಾಲಿಸಿ!”

೧೯೨೬ನೆಯ ಜನವರಿ ೮ನೆಯ ಶುಕ್ರವಾರದ ದಿನಚರಿ :          
“ಬೆಳಿಗ್ಗೆ ೧೦ ಗಂಟೆಯವರೆಗೆ Hindu Ethics ಓದಿದೆ.  ಆಮೇಲೆ ಕಾಲೇಜಿಗೆ ಹೋದೆ. ಗಂಗಾನಾಥ ಝಾ ಅವರ ಒಂದು ಲೇಖನ ಓದಿದೆ. ‘Ethics of India as America see it’. ಅದರ ಶೀರ್ಷಿಕೆ. ಹಾಪ್ ಕಿನ್ನನ Ethics of India (ಇಂಡಿಯಾದ ನೀತಿಶಾಸ್ತ್ರ) ಪೂರ್ವ ಗ್ರಹ ಪೀಡಿತವಾದುದಲ್ಲ: ಆದರೆ ಮೆಕೆನ್ ಜಿಯದು ಮಾತ್ರ ಪೂರ್ತಿಯಾಗಿ ಪೂರ್ವಗ್ರಹಪೀಡಿತ. ಧೀರ್ಘ ದೂರ ವಾಕ್ ಹೋದೆ. ವಾಪಸಾಗುತ್ತಿದ್ದ ಖುದ್ದೂಸ್ ಸಿಕ್ಕರು. ರಾಮತೀರ್ಥರ ಭಾಷಣ ಓದಿದೆ.  ಕೀನ್ಯಾದಲ್ಲಿ ಮೂರು ವರ್ಷಗಳಿದ್ದು ಬಂದಿದ್ದ ಒಬ್ಬಾತನೊಡನೆ ಅಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ದಬ್ಬಾಳಿಕೆ ಕ್ರೌರ್ಯಗಳನ್ನು ಕುರಿತು ಮಾತಾಡಿದೆ. ಆತ ನಮ್ಮ ರೂಮಿನಲ್ಲಿಯೆ ಮಲಗಿದ. ಓಂ! ತಾಯಿ! ಶಾಂತಿಃ!”

೧೯೨೬ನೆಯ ಜನವರಿ ೯ನೆಯ ನಿವಾರದ ದಿನಚರಿ :  
“ಒಬ್ಬ ದೇವತಾಪುರುಷ ಕಾಣಿಸಿಕೊಂಡು ನನ್ನ ಆತ್ಮ ಸಾಕ್ಷಿಯನ್ನು ಸದಾ ಎಚ್ಚರವಾಗಿಟ್ಟಿರಬೇಕೆಂದು ಎಚ್ಚರಿಕೆ ನೀಡಿದನು. (An angle appeared and warned me to keep my conscience always awake!).

ಸ್ನಾನ  ಮುಗಿಸಿಕೊಂಡು ಬಂದು ಧ್ಯಾನ  ಮಾಡಿದೆ, ಆ ಅಮೇಲೆ ನನ್ನ ಕನ್ನಡ ನಾಟಕದ ಎರಡು ದೃಶ್ಯ ರಚಿಸಿದೆ. ತರುವಾಯ ಹಿಂದೂ ಎಥಿಕ್ಸ್ ಓದಿದೆ. ಸಂಜೆ ಕಾಲೇಜ್ ಯೂನಿಯನ್ನಿನಲ್ಲಿ ಒಂದು ಕನ್ನಡ ಚರ್ಚೆ ಏರ್ಪಟ್ಟಿತ್ತಾದ್ದರಿಂದ ಅಲ್ಲಿಗೆ ಹೋದೆ. ನಾನೂ ಮಾತನಾಡಿದೆ. ರಾತ್ರಿ ಹಾಸಗೆಯ ಮೇಲೆ ಮಲಗಿದ್ದಾಗ ತನ್ನ ಬದುಕಿನ ಹಿಂದಿನ ಮತ್ತು ಮುಂದಿನ ಚಿತ್ರಗಳು ಮನವನ್ನೆಲ್ಲ ಅಕ್ರಮಿಸಿ ಕವಿದುಬಿಟ್ಟವು. (At night as I lay on my bed visions of past and future began to swarm my mind. The great men of all times stood before me in a meaningful mystery.) ಸರ್ವಕಾಲದ ಮಹಾಪುರುಷರೂ ನನ್ನ ಮುಂದೆ ನಿಂತರು, ಅರ್ಥಪೂರ್ಣವಾದ ಯೋಗರಹಸ್ಯವಾಗಿ! ಓಂ”

೧೯೨೬ನೆಯ ಜನವರಿ ೧೦ನೆಯ ಬಾನುವಾರದ ದಿನಚರಿ:      
“ಹಿಂದೂ ಎಥಿಕ್ಸ್, ಕ್ಯಾಂಟ್ ಮತ್ತು ಠಾಕೂರರ ‘ಸಾಧನಾ’ ಓದಿದೆ.  ಹೇ ಜಗಜ್ಜನನಿ, ನನ್ನನ್ನು ಸಬಲ ಮತ್ತು ಶುದ್ಧನನ್ನಾಗಿ ಮಾಡುವ, ನಿಮಿರಿ ನಿಂತು ಎದೆ ಚಾಚಿ ನಾನು ನಿನ್ನಲ್ಲಿ ಒಂದಾಗಿದ್ದೇನೆ ಎಂದು ಘೋಷಿಸಿಸಲು ಸಮರ್ಥನಾಗುವಂತೆ. ಸಿ.ಟಿ.ನರಸಿಂಹ ಶೆಟ್ಟಿ ಬಂದರು, ಕತ್ತಲಾದ ಮೇಲೆ ಅವರೊಡನೆ ಸ್ವಲ್ಪ ದೂರ ಹೋದೆ. ಅವರು ನಿನ್ನ ಕೃಪೆ ನನ್ನ ಬಲಕ್ಕೆ ಜ್ಯೋತಿರ್ದಾನ ಮಾಡಬೇಕು, ಅದನ್ನು ದೃಢವಾಗಿಸಲು. ಓಂ! ಓಂ! ತಾಯೀ, ನನ್ನನ್ನು ಶುದ್ಧನನ್ನಾಗಿ ಮಾಡು, ಬಲಿಷ್ಠನನ್ನಾಗಿ ಮಾಡು, ನೀನಾಗಿದ್ದೀಯಲ್ಲಾ ಅಷ್ಟರ ಮಟ್ಟಿಗೇ!”

೧೯೨೬ನೆಯ ಜನವರಿ ೧೧ನೆಯ ಸೋಮವಾರದ ದಿನಚರಿ :   
“ಕುಳಿತು ಧ್ಯಾನ ಮಾಡಿದೆ. ತರುವಾಯ ಎಸ್.ಎಸ್.ಕೃ ಬಂದರು. ಕೋಲರಿಜ್ಜನ ಕವನಗಳನ್ನು ಅವರಿಗೆ ಓದಿ ವಿವರಿಸಿದೆ. ಶ್ರೀ ವಾಡಿಯಾ ಅವರು ಕಲ್ಕತ್ತಾದ ಅವರ ಅನುಭವಗಳನ್ನು ಕುರಿತು ಮಾತನಾಡಿದರು.  ಜಗದೀಶ ಚಂದ್ರಭೋಸರ ವ್ಯಕ್ತಿತ್ವ ಇವರಿಗೆ ತುಂಬ ಮೆಚ್ಚುಗೆಯಾಯಿತಂತೆ. ಪಿಸಿ.ರಾಯ್ ಅವರದ್ದು ಶಿಶು ಸಹಜ ಸರಳತೆಯಂತೆ.  ಬೋಲ್ಪುರದ ಶಾಂತಿನಿಕೇತನಕ್ಕೂ ಹೋಗಿ ರವೀಂದ್ರನಾಥ ಠಾಕೂರರನ್ನೂ ನೋಡಿದರಂತೆ. ಕವಿಯ ಜೀವನದ ತರುವಾಯ ಶಾಂತಿನಿಕೇತನ ಮುಂದುವರಿಯುವ ವಿಚಾರದಲ್ಲಿ ಶಂಕೆ ವ್ಯಕ್ತಪಡಿಸಿದರು. ರಾತ್ರಿ ಹಾಸಗೆಯ ಮೇಲೆ ಮಲಗಿ ಭರತ ಖಂಡದ ಭವಿಷ್ಯವನ್ನು ಕುರಿತ ಚಿಂತನ ಧ್ಯಾನದಲ್ಲಿದ್ದೆ”.

೧೯೨೬ನೆಯ ಜನವರಿ ೧೨ನೆಯ ಮಂಗಳವಾರದ ದಿನಚರಿ:   
“ಬೆಳಿಗ್ಗೆ (ಕೊಡಗಿನ ಕಡೆಯವರಾಗಿದ್ದ) ವೀರಪ್ಪ ಇತರರು ಬಂದರು. ಕಿತ್ತಿಳೆ ಹಣ್ಣುಗಳನ್ನು ತಂದಿದ್ದಾರೆ. ನನ್ನ ‘ಗೀತವಸಂತ’ವನ್ನು ಬರಲಿರುವ ಸ್ಪರ್ಧೆಗೆ ಕಳಿಸಿದೆ.  (ನನ್ನ ಕೆಲವು ಕನ್ನಡ ಕವನಗಳನ್ನು ಬರೆದ ಹಸ್ತಪ್ರತಿಯನ್ನು ಬಹುಶಃ ದೇವರಾಜ ಬಹುದ್ದೂರ ಸ್ಪರ್ಧೆಗೆ ಕಳಿಸಿದ್ದೆ) ಎಸ್.ಎಸ್.ಕೃ. ಬಂದು ಅವರು ಬರೆದಿದ್ದ ಪ್ರಬಂಧವನ್ನು (ಇಂಗ್ಲೀಷಿಗೆ) ತಿದ್ದಲು ಕೊಟ್ಟರು. ‘ಹಿಂದೂ ಎಥಿಕ್ಸ್’ ಓದಿದೆ”.

೧೯೨೬ನೆಯ ಜನೆವರಿ ೧೩ನೆಯ ಬುಧವಾರದ ದಿನಚರಿ:        
“ಬೆಳಿಗ್ಗೆ ಸ್ಕೂಲಿಗೆ ಹೋದೆ. (ಕಾಲೇಜು ಸೇರಿದ ಪ್ರಾರಂಭದಲ್ಲಿ ‘ಸ್ಕೂಲಿಗೆ ಹೋಗುವುದು’ ಎಂಬ ಮಾತು ಇನ್ನೂ ಮಾಸಿರಲಿಲ್ಲ!) ತಿಮ್ಮಯ್ಯ, ಮಾನಪ್ಪ ಊರಿನಿಂದ ಬಂದರು. (ಕ್ರಿಸ್ ಮಸ್ ರಜಾಕ್ಕೆ ಹೋಗಿದ್ದವರು.) ನನ್ನನ್ನು  ಊರಿನವರೆಲ್ಲ ತುಂಬ ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದು ಗೊತ್ತಾಯಿತು. ನಾನು ಸಂನ್ಯಾಸಿಯಾಗಿ ಹೋಗುತ್ತೇನೆ ಎಂದು ಅವರೆಲ್ಲ ಶಂಕಿಸುವರಂತೆ. ಶ್ರೀ ರಾಮಕೃಷ್ಣ ಆಶ್ರಮದ ಸಂಪರ್ಕವನ್ನೆಪಡೆದಿರಲಿಲ್ಲ; ಮಾತ್ರವಲ್ಲ, (ನನಗಿನ್ನೂ ಶ್ರೀರಾಮಕೃಷ್ಣ ಆಶ್ರಮ ಮತ್ತು ಮಿಶನ್ ವಿಚಾರವೂ ನನ್ನ ಪ್ರಜ್ಞೆಗೆ ಅಷ್ಟಾಗಿ ಬಂದಿರಲಿಲ್ಲ. ಆಶ್ರಮ ಇನ್ನೂ ಮೈಸೂರಿಗೆ ಬಂದಿತ್ತೊ ಇಲ್ಲವೊ ಅದು ಸರಿಯಾಗಿ ತಿಳಿದಿರಲಿಲ್ಲ?) ಅಯ್ಯಪ್ಪಗೌಡ ವಿಚಾರ ಕೇಳಿದೆ. ಪಾಪ ಎನ್ನಿಸಿತು. ಅವರಿಗೊಂದು ಕಾಗದ ಬರೆದೆ. ಅವರ ಗೋಳನ್ನು ಕೇಳಿ ಕಣ್ಣೀರು ಕರೆದೆ.. ದೇವರೇ: ಓಂ ! ಓಂ”

೧೯೨೬ನೆಯ ಜನವರಿ ೧೪ನೆಯ ಗುರುವಾರದ ದಿನಚರಿ:                   
“ಇವೊತ್ತು ರಜ. ‘ಹಿಂದೂ ಎಥಿಕ್ಸ್’ ಓದಿದೆ.  ಮನ್ನಾರ ಕೃಷ್ಣಶೆಟ್ಟಿ ಹಾಸ್ಟೇಲಿಗೆ ಹೋಗಿ ಎಸ್.ವಿ.ಕನಕಶೆಟ್ಟಿ ಮತ್ತು ರಾಮಶೆಟ್ಟಿ ಅವರೊಡನೆ ಭರತಖಂಡದ ಭವಿಷ್ಯವನ್ನೂ ಇಂದಿನ ಯುವಜನರ ಔದಾಸೀನ್ಯವನ್ನೂ ಕುರಿತು ಮಾತನಾಡಿದೆ. ಸಂಜೆ ನಾನೊಬ್ಬನೆ ವಾಕ್ ಹೋದೆ. ಪ್ರಯತ್ನಿಸಿದರೂ ಒಂದು ಪಂಕ್ತಿಯನ್ನೂ ರಚಿಸಲಾಗಲಿಲ್ಲ! ಓಂ!”

೧೯೨೬ನೆಯ ಜನೆವರಿ ೧೫ನೆಯ ಶುಕ್ರವಾರದ ದಿನಚರಿ:        
“ಸ್ಕೂಲಿನಲ್ಲಿ (ಅಂದರೆ ಕಾಲೇಜಿನಲ್ಲಿ) ‘ಇನ್ನೇನು ಬೇಕೆನಗೆ, ದೇವ!’ ಎಂಬ ಶೀರ್ಷಿಕೆಯಲ್ಲಿ ಒಂದು ಕನ್ನಡ ಕವನ ರಚಿಸಿದೆ. ‘Krishna and Blade of Grass’ ಎಂಬ ಹೆಸರಿನ ಒಂದು ಇಂಗ್ಲೀಷ್ ಕವನವನ್ನು ಆಲೋಚಿಸಿದೆ. ಸಂಜೆ ವಿವೇಕಾನಂದರ ಜನ್ಮೋತ್ಸವ ಸಮಾರಂಭಕ್ಕೆ ಹೋಗಿ,ನನ್ನ ರಾಷ್ಟ್ರಗೀತೆಯನ್ನು ಹಾಡಿದೆ. ಕಸ್ತೂರಿಯ ಉಪನ್ಯಾಸ ಕೇಳಿ… ರೂಮಿಗೆ ಹಿಂತಿರುಗಿದವನು Galsworthy ಓದಿದೆ.  (ಗಾಲ್ಫ ವರ್ದಿಯ The Strike ‘ಮುಷ್ಕರ’ ಎಂಬ ನಾಟಕ ಪಠ್ಯಪುಸ್ತಕವಾಗಿತ್ತು)”.

ನಿರ್ವಿಶೇಷವಾಗಿ ನಿರ್ಭಾವವಾಗಿ ಯಾವ ವಿಶೇಷತಾ ಭಾವನೆಯ ಸೂಚನೆಯೂ ಇಲ್ಲದೆ ಅತ್ಯಂತ ಸಾಮಾನ್ಯವಾದ ಸುದ್ದಿ ವರದಿಯಂತಿದೆ ಮೇಲಣ ದಿನಚರಿ. ಆದರೆ ೧೯೨೬ನೆಯ ಜನೆವರಿ ೧೫ ನೆಯ ಶುಕ್ರವಾರ ನನ್ನ ಬದುಕಿನಲ್ಲಿ ಒಂದು ಚಿರಸ್ಮರಣೀಯವಾಗಿರಬೇಕಾದ ದಿವ್ಯ ದಿನ. ನಿರಾಕಾರವಾಗಿದ್ದ ಶ್ರೀಗುರು ಕೃಪೆ ನನ್ನ ಅನಿರ್ಧಿಷ್ಟತೆಯನ್ನು ಉಳಿದು ಸಾಕಾರವೂ ನಿರ್ಧಿಷ್ಟವೂ ಆಗಿ ನನ್ನನ್ನು ತನ್ನಡಿಗೆ ಎಳೆದುಕೊಳ್ಳಲು ಅವತರಿಸಿದ ಪುಣ್ಯ ದಿನ. ತನ್ನರಿವಿಲ್ಲದೆಯೇ ನನ್ನ ಚೇತನ ತನ್ನುದ್ದಾರದ ಊರ್ಧ್ವಮುಖ ಪ್ರವಾಸ ತೀರ್ಥಕ್ಕೆ ಧುಮುಕಿ ಮಂಗಲಸ್ನಾನ ಮಾಡಿದ ಸುಮೂರ್ತದ ರಕ್ಷಾದಿನವದು!

ಶ್ರೀರಾಮಕೃಷ್ಣರ ಜೀವನ ಚರಿತ್ರೆ ಮತ್ತು ಸ್ವಾಮಿ ವಿವೇಕಾನಂದರ ಭಾಷಣಗಳನ್ನು ಓದಿ ಸಂಪೂರ್ಣವಾಗಿ ಪ್ರಭಾವಿತನಾಗಿದ್ದರೂ ನಿತ್ಯವೂ ಅವರನ್ನು ನೆನೆದು ಪ್ರಾರ್ಥಿಸಿ ಪೂಜಿಸುತ್ತಿದ್ದರೂ ನನಗೆ ಶ್ರೀರಾಮಕೃಷ್ಣ ಮಿಷನ್ನಿನ ವಿಚಾರವಾಗಲಿ ಶ್ರೀ ರಾಮಕೃಷ್ಣಾಶ್ರಮಗಳ ವಿಚಾರವಾಗಲಿ ಗೊತ್ತಿರಲಿಲ್ಲ. ತಿಳಿಯಬೇಕೆಂಬ ಆಸಕ್ತಿಯೂ ಇರಲಿಲ್ಲ. ಕಾವಿಯನ್ನು ಅಧಿಕಾರದ ಸಮವಸ್ತ್ರವೆಂಬಂತೆ ಧರಿಸಿ ಅಡ್ಡಪಲ್ಲಕ್ಕಿಗಳ ಅಟ್ಟಹಾಸದಿಂದ ಮೆರವಣಿಗೆ ಹೋಗುತ್ತಿದ್ದ ನಮ್ಮಸಂಪ್ರದಾಯದ ಮಠಾಧೀಶ್ವರ ಸಂನ್ಯಾಸಗಳಲ್ಲಿಯೂ ಭಿಕ್ಷಾಟನೆ ವೃತ್ತಿಗೆ ರಹದಾರ ಎಂಬಂತೆ ಕಾವಿಯುಟ್ಟು ಬೀದಿಗಳಲ್ಲಿ ಅಲೆಯುತ್ತಿದ್ದ ಬೈರಾಗಿಗಳಲ್ಲಿಯೂ ನನಗೆ ಸಮಾನ ತಿರಸ್ಕಾರವಿದ್ದುದರಿಂದ, ಅವರು ಯಾವ ಸಂಸ್ಥೆಗೇ ಸೇರಿರಲಿ, ಸಂನ್ಯಾಸಿಗಳೆಂದರೆ ನನಗೆ ಅಪನಂಬಿಕೆಯ ವಸ್ತವಾಗಿದ್ದರು! ಶ್ರೀ ರಾಮಕೃಷ್ಣ -ಸ್ವಾಮಿ ವಿವೇಕಾನಂದರ ಶಿಷ್ಯ ವರ್ಗದವರ ಸಂನ್ಯಾಸವೇ ಬೇರೆಯ ಸ್ವರೂಪದ್ದೆಂದು ತಿಳಿದುದು ಅವರೆಲ್ಲರ ಸರ್ವೊಚ್ಛ ಪ್ರತಿನಿಧಿ ಸ್ವರೂಪವಾಗಿದ್ದ ಸ್ವಾಮಿ ಸಿದ್ದೇಶ್ವರಾನಂದರನ್ನು ಪರಿಚಯಿಸಿಕೊಂಡ ಮೇಲೆಯೇ!

ಮೈಸೂರಿಗೆ ಶ್ರೀ ರಾಮಕೃಷ್ಣಾಶ್ರಮ ಬಂದು ಏಳೆಂಟು ತಿಂಗಳುಗಳೇ ಆಗಿತ್ತು. ೧೯೨೫ನೆಯ ಜೂನ್ ೧೧ನೆಯ ದಿನದಂದು ಸ್ವಾಮಿ ಶರ್ವಾನಂದರು ಮರಿಮಲ್ಲಪ್ಪ ಹೈಸ್ಕೂಲಿನ ಬಳಿಯ ದಿವಾನ ರಸ್ತೆಯ ಬಾಡಿಗೆ ಮನೆಯಲ್ಲಿ ಆಶ್ರಮದ ಪ್ರಾರಂಭೋತ್ಸವ ನೆರವೇರಿಸಿದ್ದರು. ಆದರೂ ಶ್ರೀರಾಮಕೃಷ್ಣ-ವಿವೇಕಾನಂದರನ್ನು ಕುರಿತು  ಮಿತ್ರರ ಮುಂದೆ ಉಚಿತಾನುಚಿತ ಸಮಯಾಸಮಯ ಎನ್ನದೆ ಪ್ರಶಂಶಿಸಿಸಿ ನನ್ನ ಪೂಜ್ಯಭಾವನೆಯನ್ನು ಪ್ರಕಟಿಸುತ್ತಿದ್ದ ನನಗೇ ಮೈಸೂರಿನಲ್ಲಿ ಆಶ್ರಮ ಸ್ಥಾಪನೆಯಾಗಿದ್ದುದರ ಅರಿವೇ ಇರಲಿಲ್ಲ.  ಇಂಗ್ಲೀಷಿನಲ್ಲಿ ಮತ್ತು ಕನ್ನಡದಲ್ಲಿ ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರನ್ನು ಕುರಿತೂ ಅವರ ಬೋಧನೆ ಭಾವನೆಗಳನ್ನು ಆಶ್ರಯಿಸಿಯೂ ಕವನ ರಚನೆ ಮಾಡಿದ್ದೆ.  ಅವುಗಳನ್ನು ಆವೇಶಪೂರ್ವಕವಾಗಿ ಸ್ನೇಹಿತರಿಗೆ ಓದಿಯೂ ಇದ್ದೆ. ಅದು ವ್ಯರ್ಥವಾಗಲಿಲ್ಲ, ಕೊನೆಗೂ!

ಆ ವರ್ಷ ಸ್ವಾಮಿ ವಿವೇಕಾನಂದರ ಜನ್ಮ ತಿಥಿ ಜನೆವರಿ ಆರನೆಯ ತಾರೀಖಿಗೆ ಬಿದ್ದಿತ್ತು. ಆ ದಿನದ ನನ್ನ ದಿನಚರಿಯೆ ಹೇಳಿರುವಂತೆ ಅದು ನನ್ನ ಗಮನಕ್ಕೇ ಬಂದಿರಲಿಲ್ಲ. ಬಹುಶಃ ಆವೊತ್ತು, ಅಚಿರ ಪೂರ್ವದಲ್ಲಿ ಪ್ರಾರಂಭವಾಗಿದ್ದ ಮೈಸೂರಿನ ಆಶ್ರಮ ತನ್ನ ಪ್ರ ಪ್ರಥಮ ಪೂಜಾದಿಕರ್ಮಗಳನ್ನು ಆಶ್ರಮದಲ್ಲಿ ‘ಖಾಸಗಿ’ ಯಾಗಿ, ಅಂದರೆ ಕೆಲವೇ ಹತ್ತಿರದ ಭಕ್ತರನ್ನು ಅಹ್ವಾನಿಸಿ, ಆಚರಿಸಿತ್ತು ಎಂದು ಭಾವಿಸುತ್ತೇನೆ. ಆದರೆ ಸಾರ್ವಜನಿಕವಾದ ಸಭೆಯನ್ನು ಜನೆವರಿ ೧೫ಕ್ಕೆ ಏರ್ಪಡಿಸಿತ್ತು. ನನ್ನ ಸಹಪಾಠಿ ಸ್ನೇಹಿತರಲ್ಲಿ ಕೆಲವರು, ಆಶ್ರಮಕ್ಕೆ ಹೋಗಿ ಬರುತ್ತಾ ಇದ್ದವರು, ನನ್ನ ಮತ್ತು ನನ್ನ ಕವನಗಳ ವಿಚಾರವಾಗಿಯೂ, ಶ್ರೀರಾಮಕೃಷ್ಣ- ವಿವೇಕಾನಂದರಲ್ಲಿ ನನಗಿರುವ ಶ್ರದ್ದಾಭಕ್ತಿಯ ವಿಚಾರವಾಗಿಯೂ ಆಶ್ರಮದಲ್ಲಿ ಹೇಳಿರಬೇಕೆಂದು ತೋರುತ್ತದೆ.  ಆಶ್ರಮದ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದ ನಾ. ಕಸ್ತೂರಿಯವರು ಬನುಮಯ್ಯ (ಧರ್ಮ ಪ್ರಕಾಶ ಡಿ ಬನುಮಯ್ಯನವರು ಆಶ್ರಮದ ಸಾರ್ವಜನಿಕ ಸಮಿತಿಯ ಗೌರವಾಧ್ಯಕ್ಷರಾಗಿದ್ದರು) . ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದು, ಅಲ್ಲಿಗೆ ಒದಲು ಹೋಗುತ್ತಿದ್ದ ಮನ್ನಾರ ಕೃಷ್ಣಶೆಟ್ಟಿ ಹಾಸ್ಟೇಲಿನ ನನ್ನ ಪರಿಚಯದ ಅವರ ವಿದ್ಯಾರ್ಥಿಗಳಿಂದ ನನ್ನ ವಿಷಯವನ್ನು ತಿಳಿದಿದ್ದರೆಂದು ಊಹಿಸುತ್ತೇನೆ.  ಅಲ್ಲದೇ ನನ್ನ ‘BEGINNER’S MUSE’ ಇಂಗ್ಲೀಷ್ ಕವನಗಳ ಸ್ಥಳೀಯ  ವ್ಯಾಪ್ತಿಯ ಖ್ಯಾತಿಯೂ ಮತ್ತು ‘ಸಂಪದಭ್ಯುದಯ’ ಪತ್ರಿಕೆಯಲ್ಲಿ ಪ್ರಕಟವಾಗಿ ಮೈಸೂರಿನ ಪತ್ರಿಕಾವಾಚಕರ ಗಮವನ್ನೂ ಕುತೂಹಲವನ್ನೂ ಸೆಳೆದಿದ್ದಿರಬಹುದಾದ ನನ್ನ ನವೀನ ರೀತಿಯ ಕನ್ನಡ ಕವನಗಳ ಕೀರ್ತಿಯೂ ನಿಮಿತ್ತವಾಗಿ ನನ್ನನ್ನು ಸ್ವಾಮಿ ವಿವೇಕಾನಂದರ ಜನ್ಮೋತ್ಸವದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಅಹ್ವಾನಿಸುವಂತೆ ಮಾಡಿದಂತೆ ತೋರುತ್ತದೆ.  ಅಂತೂ ಆ ದಿನದ ಕಾರ್ಯಕ್ರಮದ ಪಟ್ಟಿಯಲ್ಲಿ ನನ್ನ ಹೆಸರು ಸೇರಿತು.

ಲೋಟಸ್ ಲೀಫ್ ಯೂನಿಯನ್ನಿನ ನನ್ನ ಮಿತ್ರರ ಸಂಗಡ ಬನುಮಯ್ಯ ಹೈಸ್ಕೂಲಿನ ಸಭಾಂಗಣಕ್ಕೆ ಹೋದೆ. ವಿವೇಕಾನಂದರ ಜನ್ಮೋತ್ಸವಕ್ಕೆ ಸಭಾಂಗಣ ತುಂಬಿತ್ತು. ಸ್ವಾಮೀಜಿಯ ಭಾವಚಿತ್ರ ಪದ್ಧತಿಯಂತೆ ಅಲಂಕೃತವಾಗಿ ವಿರಾಜಿಸಿತ್ತು. ಕಾರ್ಯಕ್ರಮ ನನ್ನ ರಾಷ್ಟ್ರಗೀತೆಯಿಂದ ಪ್ರಾರಂಭವಾಯಿತು. ಅದು ಈಗ ಪ್ರಕಟವಾಗಿರುವಂತೆ ಇರಲಿಲ್ಲ: ‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ಣಾಟಕ ಮಾತೆ!’ ಎಂದು. ಆದರೂ ಅದು, ನಾನು ಹಾಡಿದ ರೀತಿಯಿಂದಲೂ ಇರಬಹುದು, ಎಲ್ಲರ ಮೆಚ್ಚುಗೆಯನ್ನೂ ಪಡೆಯಿತು. ಅವೊತ್ತಿನ ಭಾಷಣಕಾರರು ನಾ. ಕಸ್ತೂರಿ. ಅವರ ಭಾಷಣ ತುಸು ದೀರ್ಘವಾಗಿದ್ದರೂ ಚೆನ್ನಾಗಿತ್ತು. ಅದು ಆಗಿನ ಪದ್ಧತಿಯಂತೆ ಇಂಗ್ಲಿಷಿನಲ್ಲಿಯೆ ಇತ್ತು. ತರುವಾಯ ಅದನ್ನು ಆಶ್ರಮ ಒಂದು ಸಣ್ಣ ಹೊತ್ತಿಗೆಯ ರೂಪದಲ್ಲಿ ಅಚ್ಚು ಹಾಕಿಸಿಯೂ ಪ್ರಕಟಿಸಿತ್ತು.

ಅಂದು  ಆ ಸಭೆಗೆ ಆಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ಸಿದ್ಧರಾಶ್ವನಂದರೂ ಬಂದೇ ಇದ್ದಿರಬೇಕು. ಅವರೇ ಅಧ್ಯಕ್ಷತೆ ವಹಿಸಿದ್ರೋ ಏನೋ? ಅದೊಂದು ನನ್ನ ದಿನಚರಿಯಲ್ಲಿಲ್ಲ. ಅವರು ಅಧ್ಯಕ್ಷತೆ ವಹಿಸದಿದ್ರೂ ಸುಮ್ಮನೆ ಬಂದಿದ್ದರೆಂಬುವುದಂತೂ ಖಚಿತ. ಸಭೆಯ ತರುವಾಯ ಅವರಿಗೆ ನನ್ನ ಪರಿಚಯ ಮಾಡಿಸಿದ್ರೂಇರಬಹುದು. ಆದರೆ ಅದಾವುದೂ ನನ್ನ ನೆನಪಿನಲ್ಲಿಲ್ಲ. ಯಾರು ನನ್ನ ಬದುಕಿನ ಗತಿಯ ದಿಕ್ಕನ್ನೇ ಬದಲಾಯಿಸಿದರೋ, ಯಾರು ಸಿದ್ಧಗುರುವಿನಿಂದ ಮಂತ್ರದೀಕ್ಷೆಯನ್ನು ಕೊಡಿಸಿ ಅನುಗ್ರಹಿಸಿದರೋ, ಯಾರ ಪವಿತ್ರ ಸಂಗದಲ್ಲಿ ಹತ್ತು ವರ್ಷಗಳ ಕಾಲ ನನ್ನ ಚೇತನ ತನ್ನ ಊರ್ದ್ವ ಮುಖ ಯಾತ್ರೆಯನ್ನು ಕೈಕೊಂಡು ಧನ್ಯವಾಯಿತೋ ಅಂಥವರನ್ನು ಮೊದಲು ಸಂಧಿಸಿದಾಗ ನಾನು ಗುರುತಿಸಲೂ ಇಲ್ಲ, ಲೆಕ್ಕಿಸಲೂ ಇಲ್ಲ! ಗೌರವ ತೋರಿಸುವ ಗೋಜಿಗೂ ಹೋಗಿಲಿಲ್ಲ! ಕರ್ಣಾಟಕ ರಾಷ್ಟ್ರಗೀತೆ ಹಾಡಿ ಸಭೆಯನ್ನು ಮೆಚ್ಚಿಸಿದ ನನ್ನ ಯಶಸ್ಸಿನ ಆನಂದದಲ್ಲಿಯೇ ಮುಳುಗಿಬಿಟ್ಟೆನೆಂದು ತೋರುತ್ತದೆ.

ಆದರೆ ಅವರು ಗುರುತಿಸದೆ ಬಿಡಲಿಲ್ಲ! ಮತ್ತೆ ಮತ್ತೆ ನನ್ನ ಮಿತ್ರರ ಮುಖಾಂತರ ನನಗೆ ಹೇಳಿ ಕಳಿಸಿದರು. ಆಶ್ರಮಕ್ಕೆ ಬರುವಂತೆ. ನಾನು ನಿತ್ಯವೂ ಸಂತೆ ಪೇಟೆಯಿಂದ ಕಾಲೇಜಿಗೆ ಹೋಗುವಾಗ ಆಶ್ರಮದ ಪಕ್ಕದಲ್ಲಿಯೆ ರಮಾವಿಲಾಸ ಆಗ್ರಹಾರದ ರಸ್ತೆಯಲ್ಲಿ ಹೋಗಿ ಬರುತ್ತಿದ್ದರೂ ಆಶ್ರಮಕ್ಕೆ ಹೋಗಲಿಲ್ಲ. ನನ್ನ ಮನಸ್ಸು ಅವರ ಕರೆಯನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಲಿಲ್ಲ, ಇಂದೋ ನಾಳೆಯೋ ಯಾವೊತ್ತೋ ಹೋದರಾಯಿತು ಎಂದು ಕೊಂಡು.

೧೯೨೬ನೆಯ ಜನೆವರಿ ೧೬ನೆಯ ಶನಿವಾರದ ದಿನಚರಿ:         
“ಬೆಳಿಗ್ಗೆ ಸ್ವಲ್ಪ ಹೊತ್ತು ಗ್ರೀನ್ನ ‘ಪೊಲಿಟಿಕಲ್ ಆಬ್ಲಿಗೇಷನ್’(Political Obligation by green) ಅಧ್ಯಯನ ಮಾಡಿದೆ. ಕನಕ ಶೆಟ್ಟಿ ಬಳಿಗೆ ಹೋಗಿ (ಎಂ.ಕೆ. ಹಾ‌‌ಸ್ಟೆಲಿಗೆ. ನಮ್ಮ ಪದ್ಮಪತ್ರ ಸಂಘದ ಕೇಂದ್ರ ಅಲ್ಲಿಗೆ ವರ್ಗಾಯಿಸಲ್ಪಟ್ಟಿತ್ತು. ಅದರ ಸದಸ್ಯರ ಸಂಖ್ಯೆ ಮತ್ತು ವ್ಯಾಪ್ತಿ ವಿಸ್ತರಿಸಿದ್ದರಿಂದ) ಸಂಘದ ಕಾರ್ಯಕಾರಿ ಸಮಿತಿಯ ಒಂದು ಕ್ರೀಯಾನಿಮಿತ್ತ ಸಭೆ ನಾಳೆ ಸೇರುವಂತೆ ಗೊತ್ತುಪಡಿಸಿದೆ.(Business meetig),. ಸಂಜೆ ಕಾಲೇಜಿನಲ್ಲಿ ಎಫ್.ಆರ‍್.ಸೆಲ್. ಅವರ ಸಚಿತ್ರ ಭಾಷಣವಿತ್ತು. ‘ಪ್ಯಾರಡೈಸ್ ಲಾ‌ಸ್ಟ್’ ಕುರಿತು (Lantern Slides Lecture) ಸದಸ್ಯರಿಗೆ ಯಾರೂ ಅವರನ್ನು ಪರಿಚಯಿಸಲಿಲ್ಲ: ತುದಿಯಲ್ಲಿ ಯಾರೂ ಅಭಿವಂದಿಸಲೂ ಇಲ್ಲ. ಮೂರ್ಖ ವಿದ್ಯಾರ್ಥಿಗಳು ಹಿಸ್ಸುತ್ತಾ ಚಪ್ಪಳಿಸುತ್ತಾ, ಕೀಟಲೆ ಮಾಡುತ್ತಲೇ ಇದ್ದರು.  ನಮ್ಮ ಕಾಲೇಜು ಪ್ರೋಫೆಸರುಗಳು ಈ ನಿಷ್ಠುರ ವರ್ತನೆಯನ್ನು ಕಂಡು ನನಗೆ ತುಂಬು ಜಿಗುಪ್ಸೆಯಾಯಿತು.  (ಸೆಲ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಇಂಗ್ಲೀಷ್ ಫ್ರೊಫೆಸರ‍್ ಆಗಿದ್ದರು.  ಅವರಲ್ಲಿ ತುಸು ವಿದೂಷಕತನವಿದ್ದುದರಿಂದ ಅವರನ್ನು ಲಘುವಾಗಿ ಕಾಣುತ್ತಿದ್ದರೆಂದು ನನ್ನ ಊಹೆ)”

೧೯೨೬ನೆಯ ಜನೆವರಿ ೧೭ನೆಯ ಭಾನುವಾರದ ದಿನಚರಿ:      
“ಸಾರ್ಥಕವಾಯಿತು ನನ್ನ ದೃಢ ನಿಶ್ಚಯತೆ! ನಾನು ಗೆದ್ದೆ!… ಇಂದು ಕಾಲೇಜಿನ ಉಪನ್ಯಾಸ ಮಂದಿರದಲ್ಲಿ ತುಂಬ ರೋಮಾಂಚಕಾರಕವಾದ ಚರ್ಚೆ ಏರ್ಪಟ್ಟಿತ್ತು.  ಮಹಾರಾಣಿ ಕಾಲೇಜಿನ ಪ್ರತಿನಿಧಿಗಳು ಪ್ರಪ್ರಥಮವಾಗಿ ಭಾಗವಹಿಸಿ ಎಲ್ಲರೂ ತಮ್ಮ ತಮ್ಮ ಭಾಷಣಗಳನ್ನು ಓದಿದರು. (ಇಂಗ್ಲೀಷಿನಲ್ಲಿ!) ಉಳಿದವರೂ ಚೆನ್ನಾಗಿ ಮಾತನಾಡಿದರು.  ಶ್ರೀಮಾನ್ ಬಿ.ಎಂ.ಶ್ರೀಕಂಠಯ್ಯ ನವರು ಇಂಡಿಯಾ ಇನ್ನೂ ಸ್ವರಾಜ್ಯಕ್ಕೆ ಅರ್ಹವಾಗಿಲ್ಲ ಎಂದೆಲ್ಲ ಭಾಷಣ ಮಾಡಿದರು. ನನ್ನಗನ್ನಿಸಿತು, ಆ ಕಥೆಯನ್ನು ಹಿಂದೆ ಎಷ್ಟೋ ಸಾರಿ ಕೇಳಿಯೂ ಆಗಿದೆ ಮತ್ತು ಮರೆತೂ ಆಗಿದೆ. (Which I think is a tale long before heared and forgotten!)”

೧೯೨೬ನೆಯ ಜನವರಿ ೧೮ನೆಯ ಸೋಮವಾರದ ದಿನಚರಿ :   
“ನನ್ನ ಕನ್ನಡ ನಾಟಕವನ್ನು ಬರೆದೆ. ಕಾಲೇಜಿನಲ್ಲಿ ‘Krishna and the Blade of Grass’ ಎಂಬ ನನ್ನ ಇಂಗ್ಲೀಷ್ ಕವನವನ್ನು ಕುರಿತು ಪರಿಭಾವಿಸಿದೆ. ತಮ್ಮೆಲ್ಲ ಗರ್ವ ಗೌರವ ಅಹಂಕಾರ ಸ್ವಾರ್ಥಗಳನ್ನು ಶರಣು ಮಾಡಿ, ಸೊರೆಗೊಟ್ಟು, ನಿವೇದಿಸಿ, ಸಮರ್ಪಿಸಿ ಎನಿಸಿತು ಕೋಟಿ ಕೋಟಿ ನಿಯಮಗಳು (Many myrriad laws) ದುಡಿಯುತ್ತವೆ, ಒಂದು ಹುಲ್ಲೆಸಳಿನ ಸಂತೋಷಕ್ಕಾಗಿ!… ಸಂಜೆ ಬಹುದೂರ ತಿರುಗಾಡಲು ಹೋಗಿದ್ದೆ. ಅಲ್ಲಿ ‘ಲಲಿತಾದ್ರಿ’ ಎಂಬ ಕವನವನ್ನು ಕುರಿತು ಪರಿಭಾವಿಸಿದೆ. ಪಟ್ಟಣದ ಕಡೆಗೆ ನಾನು ಬರುತ್ತಿದ್ದಂತೆಯೇ ಕೆಲವು ಪಂಕ್ತಿಗಳನ್ನು ರಚಿಸಿದೆ.  ಹೇ ವಿಶ್ವಮಾತೆ, ನನ್ನನ್ನು ಧೀರನನ್ನಾಗಿಯೂ ನಿಜವಾಗಿಯೂ ಮಹಾನ್ ವ್ಯಕ್ತಿಯನ್ನಾಗಿಯೂ ಮಾಡು! ಓಂ! ಓಂ! (Mother of the Universe, make me bold and really great!”)

೧೯೨೬ನೆಯ ಜನವರಿ ೧೯ನೆಯ ಮಂಗಳವಾರದ ದಿನಚರಿ:   
“ಕನ್ನಡ ನಾಟಕದಲ್ಲಿ ಒಂದು ದೃಶ್ಯ ಬರೆದೆ. ತತ್ವಶಾಸ್ತ್ರ ಸಮ್ಮೇಲನದಲ್ಲಿ ರವೀಂದ್ರನಾಥ ಠಾಕೂರರು ಮಾಡಿದ ಅಧ್ಯಕ್ಷರ ಭಾಷಣ ಓದಿದೆ.  ವಿಶ್ವದ ರಹಸ್ಯ ಚಿಂತನೆ ಮಾಡುತ್ತಾ ಸಂಚಾರ ಹೋಗಿ ಬಂದೆ. ರಾತ್ರಿ ಗ್ರೀನ್ಸ ಪೊಲಿಟಿಕಲ್ ಆಬ್ಲಿಗೇಷನ್ ಓದಿದೆ”

೧೯೨೬ನೆಯ ಜನವರಿ ೨೦ನೆಯ ಬುಧವಾರದ ದಿನಚರಿ :       
” ನನ್ನ ಕನ್ನಡ ನಾಟಕವನ್ನು ‘ಮ’ಗೆ ಓದಿದೆ. ಇನ್ ಸ್ಪೆಕ್ಟರ‍್ ಜನರಲ್ ಆಫ್ ಎಜುಕೇಷನ್ ಅವರಿಂದ ಇಂದು ಅಕ್ನಾಲೆಡ್ಜ್ಮೆಂಟ್ ಬಂದಿತು. (ನಾನುದೇವರಾಜ ಬಹದ್ದೂರ‍್ ಸಾಹಿತ್ಯ ಸ್ಪರ್ಧೆಗೆ ಕಳಿಸಿದ ಹಸ್ತಪ್ರತಿ ‘ಗೀತವಸಂತ’ಕ್ಕೆ ಸಂಬಂಧಿಸಿದಂತೆ.) Ode to the Blade of Grass ರಚಿಸಿದೆ.  ಇಂಗ್ಲೀಷ್ ಷಾರ್ಟ ಸ್ಟೋರಿಸ್ ಓದಿದೆ”.

೧೯೨೬ನೆಯ ಜನವರಿ ೨೧ನೆಯ ಗುರುವಾರದ ದಿನಚರಿ :      
“ಬೆಳಿಗ್ಗೆ ಕನಕಶೆಟ್ಟಿ ಅವರೆಡಗೆ ಹೋಗಿದ್ದೆ. ಕಾರ್ಯಕ್ರಮವನ್ನು ಸೂಚಿಸಿದೆ. ನನ್ನ ಕರ್ನಾಟಕ ರಾಷ್ಟ್ರಗೀತೆಯನ್ನು ವಾರ್ಷಿಕೋತ್ಸವದಲ್ಲಿ ಹಾಡಲು ಒಪ್ಪಿದೆ. ಅಲ್ಲದೇ ನನ್ನ ದೊಂದು ಕವನವನ್ನು ಇತರರಿಗೆ  ಹಾಡಲು ಕೊಡಲು ಸಮ್ಮತಿಸಿದೆ. ನನಗೆ ಇವೊತ್ತು ಸ್ಕಾಲರಸಷೀಪ್ ಬಂತು. ಕೆ.ರಾಮಶೆಟ್ಟರ ಕೈಲಿ ಪಂಪ ರಾಮಾಯಣದ ಪ್ರತಿಗಾಗಿ ಮುಂಗಡ ಹಣ ಕೊಟ್ಟೆ”.

ಮರುದಿನ ಶುಕ್ರವಾರ ಬೆಳಿಗ್ಗೆ ಕ್ಲಾಸ ಎಂದಷ್ಟೇ ಬರೆದಿದೆ. ೨೨-೧-೧೯೨೬.

೧೯೨೬ನೆಯ ನನವರಿ ೨೩ನೆಯ ಶನಿವಾರದ ದಿನಚರಿ:          
“ಬೆಳಿಗಗೆ ಕನಶೆಟ್ಟರೆಡಗೆ ಹೋಗಿ, ಅವರನ್ನು ಕೂಡಿಕೊಂಡು, ಪ್ರೋಫೆರಸರ‍್ ಡಿಸೋಜ, ಎಸ್.ವಿ.ರಂಗಣ್ಣ ಮತ್ತು ಜಿ.ಹನುಮಂತರಾವ್ ಇವರೆಲ್ಲರ ಬಳಿ ಹೋಗಿ ಪದ್ಮಪತ್ರ ಸಂಘದ ವಾರ್ಷಿಕೋತ್ಸವ ದಿನವನವನು ಗೊತ್ತುಪಡಿಸಿದೆವು. ಕ್ರಮಬದ್ಧ ಅಧ್ಯಯನವೇನನ್ನೂ ಮಾಡಲಾಗಲಿಲ್ಲ.  ಬೆಳಿಗ್ಗೆ ೫ ಗಂಟೆಗೆ ಗ್ರೀನ್ ಮತ್ತು ಗೀತಾ ಓದಿದೆ. ಕೆಲವು ಕವನಗಳನ್ನು ಹಾಡಿದೆ. ಸಂಜೆ ಒಂದು ಲಾಂಗ್ ವಾಕ್ ಹೋದೆ. ಓಂ!”

೧೯೨೬ನೆಯ ಜನವರಿ ೨೪ನೆಯ ರವಿವಾರದ ದಿನಚರಿ :         
“ಎಂ.ಕೆ. ಹಾಸ್ಟೇಲಿಗೆ ಹೋದೆ. ಸಿ.ವಿ.ಕೃಷ್ಣಮೂರ್ತಿ ನನ್ನ ಕೆಲವು ಕವನಗಳನ್ನು ಹಾಡಿದರು. ಮಧುರವಾಗಿತ್ತು. ಇವೊತ್ತು ಏನೂ ಅಧ್ಯಯನ  ನಡೆಯಲಿಲ್ಲ. ಸಂಜೆ ನಾನು ಕನಕಶೆಟ್ಟಿ ವಾಕ್ ಹೋದೇವು. ದಾರಿಯಲ್ಲಿ ಎಲ್. ಗುಂಡಪ್ಪ,ಎಸ್.ರಾಮರಾವ್ ಸಿಕ್ಕಿದ್ರು. ರಾತ್ರಿ ‘ರಾಜಶೇಖರ ವಿಲಾಸ’ ಓದಿದೆ”.

೧೯೨೬ನೆಯ ಜನೆವರಿ ೨೫ನೆಯ ಸೋಮುವಾರದ ದಿನಚರಿ:  
“ಮ್ಯಾಕ್ಸ ಮುಲ್ಲರ‍್ ಓದಿದೆ. ಸುದೂರು ತಿರುಗಾಡಲು ಹೋದೆ. ಆಃ ಏನದ್ಭುತವಾಗಿದೆ ಈ ಜಗತ್ತು! ಜ್ಞಾನವೆಲ್ಲ ಮೋಡದಂತೆ ಚೆದರಿ ಮಾಯವಾಗುತ್ತದಲ್ಲಾ!”.

೧೯೨೬ನೆಯ ಜನವರಿ ೨೭ನೆಯ ಬುಧವಾರದ ದಿನಚರಿ:        
“ಪ್ರೋ.ಡಿಸೋಜ ಅವರಲ್ಲಿಗೆ ಹೋಗಿ ನಮ್ಮ ಪದ್ಮಪತ್ರ ಸಂಘದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಲು ಕೇಳಿಕೊಂಡೆ. ನನ್ನ ಕವನಗಳನ್ನು ಅವರಿಗೆ ತೋರಿಸಲು ಒಪ್ಪಿಕೊಂಡೆ. ಒಂದು ಕನ್ನಡ ಭಾವಗೀತೆ ಪ್ರಾರಂಭಿಸಿದೆ: ‘ಎಲ್ಲವು ಬೊಮ್ಮನೆ ನೀನು’… ಇತ್ಯಾದಿ”

೧೯೨೬ನೆಯ ಜನವರಿ ೨೮ನೆಯ ಗುರುವಾರದ ದಿನಚರಿ :      
“ವಾರ್ಷಿಕೋತ್ಸವಕ್ಕಾಗ ಒಂದು ಕವನ ರಚಿಸಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ಚಂದ್ರೋದಯವನ್ನು ಕುರಿತು ಒಂದು ಕನ್ನಡ ಕವನ ರಚಿಸಲು ಪ್ರಾರಂಭಿಸಿದೆ:.

೧೯೨೬ನೆಯ ಜನವರಿ ೨೯ನೆಯ ಶುಕ್ರವಾರದ ದಿನಚರಿ:        
“ವಾರ್ಷಿಕೋತ್ಸವಕ್ಕಾಗಿ ಬರೆಯಬೇಕೆಂದಿದ್ದ ಕವನವನ್ನು ರಚಿಸಿದೆ. (ಇಂಗ್ಲೀಷಿನಲ್ಲೋ? ಕನ್ನಡದಲ್ಲೋ?) ಸಂಜೆ ಕೆಲವರು ಸಂಗೀಗಾರರ ಬಳಿಗೆ ಹೋಗಿ ನಮ್ಮ ಸಂಘದ ವಾರ್ಷಿಕೋತ್ಸವದಲ್ಲಿ ಹಾಡಲು ಕೇಳಿಕೊಂಡೆವು. ಮ್ಯಾಕ್ಸಮುಲ್ಲರ‍್ ಓದಿದೆ.  ತರಗತಿಯಲ್ಲಿ ಕೆಲವು ಮಿತ್ರರಿಗೆ ವೇದಾಂತದರ್ಶನದ ಮಹತ್ವವನ್ನು ಕುರಿತು ಮಾತಾಡಿದೆ”.

೧೯೨೬ನೆಯ ಜನವರಿ ೩೦ನೆಯ ಶನಿವಾರದ ದಿನಚರಿ:          
“ಬೆಳಿಗ್ಗೆ (ಏ.ಏ.ಕೆ) ಹತ್ತಿರ ಹೋಗಿ ಫೊಟೋಕ್ಕೆ ಏರ್ಪಡಿಸಿಕೊಳ್ಳಲು ಅವಕಾಶ ಕೊಡುವಂತೆ ಕೇಳಿಕೊಂಡೆವು. ರಾಮಸ್ವಾಮಿಗೆ ಒಂದು ರೂಪಾಯಿ ಕೊಟ್ಟೆ. ಪ್ರೋ.ಡಿಸೋಜ, ಶ್ರೀಯುತರಾದ ಎಸ್.ವಿ.ರಂಗಣ್ಣ ಮತ್ತು ಜಿ.ಹನುಮಂತರಾಯರನ್ನು ಆಹ್ವಾನಿಸಿ (ನಮ್ಮ ಸಂಘದ ಕಾರ್ಯಕಾರಿ ಸಮಿತಿಯ) ಪೋಟೋ ತೆಗೆಸಿಕೊಂಡೆವು. ನಾಗಪ್ಪನಿಗೆ ಮೂರು ರೂಪಾಯಿ ಕೊಟ್ಟೆ”.

೧೯೨೬ನೆಯ ಜನವರಿ ೩೧ನೆಯ ಭಾನುವಾರದ ದಿಚರಿ:
“ನಮ್ಮ (ಪದ್ಮಪತ್ರ) ಸಂಘದ ವಾರ್ಷಿಕೋತ್ಸವ ಸಂಜೆ ೫-೩೦ಕ್ಕೆ (ಎಂಕೆ. ಹಾಸ್ಟೆಲಿನಲ್ಲಿ ಒಳ ಅಂಗಳದಲ್ಲಿ) ಪ್ರಾರಂಭವಾಯಿತು. ನಾನೇ ಸ್ವಾಗತ ಭಾಷಣ ಮಾಡಿ (ಇಂಗ್ಲೀಷಿನಲ್ಲಿ!), ಕರ್ಣಾಟಕ ರಾಷ್ಟ್ರಗೀತೆಯನ್ನು ಹಾಡಿದೆ. ನನ್ನ ‘ಸಂದೇಹ’ ಎಂಬ ಕವನವನ್ನು ಸಿ.ವಿ.ಕೃಷ್ಣಮೂರ್ತಿ ವಾಚನ ಮಾಡಿದರು. ನೆರೆದ ಜನ ಅದನ್ನು ಬಹಳ ಶ್ಲಾಘಿಸಿದರು, ಮತ್ತು (ಅಚ್ಚಾಗಿದೆ ಎಂದು ಭಾವಿಸಿ) ಅದರ ಪ್ರತಿಗಳನ್ನೂ ಕೇಳಿದರು”.

೧೯೨೬ನೆಯ ಫೆಬ್ರವರಿ ೧ನೆಯ ಸೋಮುವಾರದ ದಿನಚರಿ:     
“ಬೆಳಿಗ್ಗೆ ಗೋಪಾಲಕೃಷ್ಣ ಶೆಟ್ಟರನ್ನು ಕಳಿಸಿಕೊಡಲು ರೈಲ್ವೆ ಸ್ಟೇಷನ್ನಿಗೆ ಹೋಗಿದ್ದೇವು. ಎಂ.ತಮ್ಮಯ್ಯ ನಾನು ಪ್ರೂಫ್ ನೋಡಲು ಹೋದೆವು. Einstein and the Universe ಓದಿದೆ. ಒಂದು ಇಂಗ್ಲೀಷ್ ಕವನ ಪ್ರಾರಂಭಿಸಿದೆ; ‘Sage- like, serene, the mystic night stood stil’ ಇತ್ಯಾದಿ”.

೧೯೨೬ನೆಯ ಫೆಬ್ರವರಿ ೩ನೆಯ ಬುಧವಾರದ ದಿನಚರಿ:          
When I read Einstein, his idea of the finiteness and unlimitedness of the universe. I was awe- inspired(ವಿಶ್ವವು ಅಪರಿಮಿತ, ಆದರೆ, ಅನಂತವಲ್ಲ ಎಂಬ ಐನ್ ಸ್ಟೀನ್ರ ಸಿದ್ಧಾಂತವನ್ನು ಓದಿ ನಾನು ಅದ್ಭುತ ರಸಾವಿಷ್ಟನಾದೆ) ಕಾಲೇಜಿನಲ್ಲಿ The Starry Night            (ತಾರಕಿನ ರಾತ್ರಿ) ಕವನದ ಹದಿನಾರು ಪಂಕ್ತಿಗಳನ್ನು ರಚಿಸಿದೆ… ನಾನೂ ರಾಮರಾವ ಸುದೂರು ಸಂಚಾರ ಹೋಗಿದ್ದೇವು. ಬೆಟ್ಟದ ಬುಡದಲ್ಲಿ ನೆಲ್ಲಿಕಾಯಿ ಕಿತ್ತೇವು. … ನನ್ನ ರಾಷ್ಟ್ರಗೀತೆಯನ್ನು (ಜಯಹೇ ಕರ್ಣಾಟಕ ಮಾತೆ!) ‘ಸಂಪದಭ್ಯುಯ’  ಪತ್ರಿಕೆಗೆ ಕಳಿಸಿದೆ”.

೧೯೨೬ನೆಯ ಫೆಬ್ರವರಿ ೪ನೆಯ ಗುರುವಾರದ ದಿನಚರಿ :                    
“ಚಾಮುಂಡಿ ಬೆಟ್ಟದ ಬಳಿ ಟಿ.ವಿ.ಅಭಿರಾಮನ್ ಅವರನ್ನು ಸಂಧಿಸಿದೆ. ಮಾತನಾಡುತ್ತಾ ಬರುತ್ತಿರುವಾಗಲ ಎಸ್.ವಿ.ಕನಕಶೆಟ್ಟಿ, ಕೆ.ರಾಮಶೆಟ್ಟಿ ಅವರನ್ನು ಕಾರಂಜಿ ಕೆರೆಯ ಎರಿಯಾ ಮೇಲೆ ಸಂಧಿಸಿದೆವು… ನನ್ನ ಕವನಗಳನ್ನೆಲ್ಲ ಇಂದು ಟಿ.ವಿ.ಅಭಿರಾಮನ್ ಗೆ ತೋರಿಸಿದೆ. ಅದನ್ನೆಲ್ಲ ನೋಡಿ ತನಗೆ ಬೆಕ್ಕಸ ಬೆರಗಾಯಿತು ಎಂದರವರು… ಕಾಲೇಜಿನಲ್ಲಿ The Starry Night ಕವನದ ಉಳಿದ ಭಾಗ ರಚಿಸಿದೆ. ಅದನ್ನು ಟಿ.ಎ.ಖುದ್ದೂಸ್ ಮತ್ತು ಎಚ್.ಎಸ್. ರಾಮಯ್ಯ ಓದಿದರು. ಓಂ! ಓಂ…!”

೧೯೨೬ನೆಯ ಫೆಬ್ರವರಿ ೫ನೆಯ ಶುಕ್ರವಾರದ ದಿನಚರಿ:
“ನನ್ನ ರಾಷ್ವ್ರಗೀತೆ ಸ್ಕೌಟ್ ಮ್ಯಾಗ ಜೀನ್ ನಲ್ಲಿ ಪ್ರಕಟವಾಗಿದೆ. ಚಾಮುಂಡಿ ಬೆಟ್ಟದ ಕಡೆ ಸುದೂರು ತಿರುಗಾಟಕ್ಕೆ ಹೋಗಿದ್ದೆ.