೧೯೨೬ನೆಯ ಫೆಬ್ರವರಿ ೬ನೆಯ ಶನಿವಾರದ ದಿನಚರಿ:

ಆಶ್ರಮಕ್ಕೆ ಹೋದೆ. ಸ್ವಾಮೀಜಿ ನನ್ನನ್ನು ಸಂತೋಷದಿಂದ ಸ್ವಾಗತಿಸಿದರು.  ಅವರು ಹೊರಡಿಸಲಿದ್ದ ಕನ್ನಡ ಮ್ಯಾಗಜೀನ್ಗೆ ನನ್ನಿಂದ ಲೇಖನಗಳನ್ನು ಕೇಳಿದರು.  ಬಹಳ ಹೊತ್ತು ಮಾತುಕತೆ ನಡೆದ ಮೇಲೆ ನಾನು ಉದಾತ್ತಚೇತನನಾಗಿ ಹೊರಟು ಬಂದೆ.(Afvter much talk I departed fromthe Ashrama ennobled) ನಮ್ಮ ಫೋಟೋಗಳನ್ನು ತೆಗೆದುಕೊಂಡೆವು. ತುಂಬ ದೂರ ವಾಕಿಂಗ್ ಹೋದೆವು,  ಖುಷಿಯಾಗಿತ್ತು, ಆಯಾಸಕರ ಆಗಿತ್ತು. ಮೂರು ಕವನಗಳನ್ನು ರಚಿಸಿದೆ:” ಎಲೆ ವಸಂತ ಕುಸುಮವೆ”. “ಶ್ರೀ ಸ್ವಾಮಿ ವಿವೇಕಾನಂದನೆ”, “ಚಂದಿರ ಬಾರೋ”.

ಮೇಲಿನ ದಿನಚರಿ ಎಷ್ಟು ಸರ್ವ ಸಾಧಾರಣ ಎಂಬಂತಎ ವರದಿಗೊಂಡಿದೆ! ನನ್ನ ಬದುಕಿನಲ್ಲಿ ಅದೊಂದು  ಮಹತ್ವಪೂರ್ಣ ದಿನ ಎಂಬುವುದರ ಅರಿವೇಇಲ್ಲ, ಪ್ರಜ್ಞೆಗೆ! ಆದರೂ ennobled ಎಂಬ ಪದವೊಂದು ತಕ್ಕಮಟ್ಟಿಗಾದರೂ ನಡೆದುದಕ್ಕೆ ಗವಾಕ್ಷವಾಗಿದೆ!

ಜನವರಿ ೧೫ರಂದು ನಾನು ಬನುಮಯ್ಯ ಹೈಸ್ಕೂಲಿನಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮೋತ್ಸವಕ್ಕೆ ಹೋಗಿ ಕರ್ನಾಟಕ ರಾಷ್ಟ್ರಗೀತೆ ಹಾಡಿದಂದಿನಿಂದ ಸ್ವಾಮಿ  ಸಿದ್ದೇಶ್ವರಾನಂದರು ನನ್ನ ಮಿತ್ರರ ಮುಖಾಂತರ ನನಗೆ ಬರಹೇಳಿ ಕಳಿಸುತ್ತಲೇ ಇದ್ದರು. ನಾನು ದಿನವೂ ಕಾಲೇಜಿಗೆ ಹೋಗುವಾಗ ಆಶ್ರಮದ ಪಕ್ಕದಲ್ಲಿಯೆ ಹಾದು ಹೋಗುವ ರಸ್ತೆಯಲ್ಲಿಯ ಹೋಗುತ್ತಿದ್ದರೂ ಆಶ್ರಮಕ್ಕೆ ಹೋಗುವ ಮನಸ್ಸು ಮಾಡಿರಲಿಲ್ಲ. ಒಂದು ದಿನ ಎಸ್.ವಿ.ಕನಕಶೆಟ್ಟರು ಸ್ವಲ್ಪ ಕಟುವಾಗಿಯೇ” ಏನ್ರಿ, ಸ್ವಾಮಿಜಿ ಅಷ್ಟು ದಿನಗಳಿಂದ ಹೇಳಿ ಕಳಿಸುತ್ತಿದ್ದಾರೆ, ನೀವು ಮಾತ್ರ ಹೋಗಿಲ್ಲ”. ಎಂದು ದೂರಿದರು. ಪಕ್ಕದಲ್ಲಿದ್ದ ಸಿವಿ.ಕೃಷ್ಣಮೂರ್ತಿಯು ದನಿಗೂಡಿಸಿದರು. “ನನ್ನ ಹತ್ತಿರವೂ ಎಷ್ಟೋ ಸಲ ಹೇಳಿದ್ದಾರೆ, ಸ್ವಾಮಿಜಿ ಪುಟ್ಟಪ್ಪನ್ನ ಕರಕೊಂಡು ಬನ್ನಿ ಎಂದು, ನಿಮ್ಮ ಪದ್ಯಗಳನ್ನು ಕೇಳಿ ಅವರಿಗೆ ತುಂಬ ಮೆಚ್ಚುಗೆಯಾಗಿದೆ. ಒಮ್ಮೆ ಹೋಗಿ ಬನ್ನಿ”.

ಕನಕಶೆಟ್ಟರು “ನಾಳೆ ಶನಿವಾರ ಬೆಳಿಗ್ಗೆ ಕ್ಲಾಸು. ಕ್ಲಾಸು ಮುಗಿಸಿಕೊಂಡು ಬರುವಾಗಲಾಗಲಿ ಅಥವಾ ಹೋಗುವಾಗಲಾಗಲಿ ಆಶ್ರಮಕ್ಕೆ ಹೋಗೋಣ, ಬನ್ನಿ, ಆಶ್ರಮ ಎಂತಿದ್ದರೂ ದಾರಿಯ ಮೇಲೆಯೇ ಇದೆಯಲ್ಲಾ? ಪಾಪ, ಸ್ವಾಮಿಜಿ ಅಷ್ಟೊಂದು ವಿಶ್ವಾಸದಿಂದ ಹೇಳಿ ಕಳಿಸುತ್ತಿದ್ದಾರೆ ಎಂದರು. ನಾನು “ಆಗಲಿ. ನಾಳೆ ಸಂತೆಪೇಟೆಯಿಂದ ಪರಕಾಲಸ್ವಾಮಿ ಮಠದ ಗಲ್ಲಿಯಲ್ಲಿ ನುಗ್ಗಿ ಹೋಗುವ ಬದಲು ಶಿವರಾಂ ಪೇಟೆಯ ಮೇಲಾಸಿ ಬರುತ್ತೇನೆ. ನೀವೂ ಬನ್ನಿ. ಜೊತೆಗೂಡಿಯೆ ಹೋಗೋಣ”.ಎಂದೆ.

ಇಪ್ಪತ್ತೆರಡು ದಿನಗಳಿಂದ ಗಾಳ ಹಾಕಿಕೊಂಡು ಕಾದು ಕುಳಿತ್ತಿತ್ತು ನನ್ನ ಸುದೈವ. ಅಂತೂ ಕಡೆಗೆ ತೇಲುವ ಬೆಂಡು ಮುಳುಮುಳುಗಿ ಅಲುಗಾಡಿತು: ಗಾಳ ಕಚ್ಚಿತು ಮೀನು! ಅದನ್ನಿನ್ನು ಮೇಲೆತ್ತಿ ತನ್ನ ದಡಕ್ಕೆಳೆದುಕೊಂಡು ಅಪ್ಪಳಿಸಿ ಹಿಡಿಯದೆ ಬಿಡುತ್ತದೆಯೆ, ಕೃಪೆಯೆ ಕೈ?

ಮನ್ನಾರ ಕೃಷ್ಣೆಶೆಟ್ಟಿ ಹಾಸ್ಟೆಲಿನಿಂದ ನಾವು (ಕನಕಶೆಟ್ಟೆಇ, ಕೃಷ್ಣಮೂರ್ತಿ, ನಾನು) ದಿನವಾನರ ರಸ್ತೆಗೆ ನಡೆದು ಮರಿಮಲ್ಲಪ್ಪನವರ ಹೈಸ್ಕೂಲಿನ ಪಕ್ಕದಲ್ಲಿಯೇ ಇದ್ದ ಬಾಡಿಗೆ ಮನೆಯ ಆಶ್ರಮ- ಪ್ರವೇಶ ಮಾಡಿದೆವು, ಮರುದಿನ ಬೆಳಿಗ್ಗೆ, ಕಾಲೇಜಿಗೆ ಹೋಗುವ ದಾರಿಯಲ್ಲಿ. ಆ ಮನೆ ನಿಶಬ್ದವಾಗಿತ್ತು.  ನಿರ್ಜನವೂ ಆಗಿದ್ದಂತೆ ತೋರುತ್ತಿತ್ತು.  ಸಂಸಾರಿಗಳು ವಾಸಿಸುವ ಯಾವ ಮನೆಯಲ್ಲಿಯೂ ಸಾಧ್ಯವಲ್ಲದ ಆ ನಿಶ್ಯಬ್ದತೆ ಮತ್ತು ನಿರ್ಜನತಾಭಾವಗಳ ಜೊತೆಗೆ ಒಂದು ಧ್ಯಾನಮಯ ಮೌನದ ಪ್ರಶಾಂತಿ ನಮ್ಮದು ಸ್ವಾಗತಿಸಿತು, ಆ ಮನೆಯ ಮುಂಗಜಲಿಯಲ್ಲಿ, ಊದಿನ ಕಡ್ಡಿಯ ಮೃದು-ಮಂದವಾದ ಸುವಾಸನೆಯನ್ನೂ ಆಘ್ರಾಣಿಸಿತ್ತು ನನ್ನ ಜೀವಶ್ವಾಸಕೋಶ!

ಆ ಹಾಲಿನಲ್ಲಿ ಒಂದು ಮರದ ಬೆಂಚು ಹೊರತುಇನ್ನಾವ ಪೀಠೋಪಕರಣವೂ ಇದ್ದಂತಿರಲಿಲ್ಲ.

ಕನಕಶೆಟ್ಟಿ ಅತ್ತ ಇತ್ತ ಕಣ್ಣು ಹಾಯಿಸಿ, ಪ್ರವೇಶಿಸಿದ ನಮಗೆ ಆ ಹಾಲಿನ ಬಲಪಕ್ಕದಲ್ಲಿದ್ದ ಒಂದು ಕೊಠಡಿಯ ತೆರೆದ ಬಾಗಿಲಿಗೆ ಹೋಗಿ ಇಣುಕಿ “sfvAmiji, Mr. Puttappa has come” (ಪುಟ್ಟಪ್ಪ ಬಂದಿದ್ದಾರೆ, ಸ್ವಾಮೀಜಿ.) ಎಂದರು. ಅವರಿಗೆ ಇದ್ದ ಸಹಜವಾಗಿದ್ದ ನಗೆ ದನಿಯಲ್ಲಿ.

ಹಾಲಿನಲ್ಲಿ ನಿಂತಿದ್ದ ನನಗೆ ಕೊಠಡಿಯಲ್ಲಿದ್ದವರು ಕಾಣಿಸುತ್ತಿರಲಿಲ್ಲ. ನಾನೂ ಇಣುಕಿ ನೋಡಿದ್ದರೆ : ಕೋಣೆಯ ಮೂಲೆಯಲ್ಲಿ ಗೋಡೆಗೆ ಒತ್ತಿದಂತೆ ಒಂದರ ಪಕ್ಕದಲ್ಲೊಂದು ಒತ್ತಿ ಇಟ್ಟಿದ್ದ ಎರಡು ಮರದ ಬೆಂಚುಗಳು ಬಿಚ್ಚಿದ್ದ ಚಾಪೆಯ ಮೇಲೆ ಹಾಸಿದ್ದ ಬಹು ತೆಳ್ಳನೆಯ ಹಾಸಿನಲ್ಲಿ ಮಲಗಿ ಏನನ್ನೂ ಓದುತ್ತಿದ್ದ, ಎಲುಬೆಲುಬಾಗಿದ್ದ ಕಾವಿಯುಟ್ಟಿದ್ದ, ಬಡಕಲು, ವ್ಯಕ್ತಿಯೊಂದು ಕಾಣಿಸುತ್ತಿತ್ತು: ಅವರೇ ಗೋಪಾಲ್ ಮಹಾರಾಜ್, ಅರ್ಥಾರ್ತ ಸ್ವಾಮಿ ಸಿದ್ದೇಶ್ವರಾನಂದರು! ಮೈಸೂರು ಶ್ರೀರಾಮ ಕೃಷ್ಣಾಶ್ರಮದ ಪ್ರಥಮ ಅಧ್ಯಕ್ಷರು!

ಸ್ವಾಮೀಜಿ ತಾವು ಓದುತ್ತಿದ್ದ ‘ವೇದಾಂತ ಕೇಸರಿ’ ಯನ್ನೋ ‘ಪ್ರಬುದ್ಧ ಭಾರತ’ವನ್ನೋ ಅಥವಾ ಬೇರಾವ ಪುಸ್ತಕವನ್ನೋ ಕೈಲಿ ಹಿಡಿದೇ ಎದ್ದು ಬಂದರು. ನನ್ನ ಔಪಚಾರಿಕ ನಮಸ್ಕಾರವನ್ನು ಗಮನಿಸಿದರೋ ಇಲ್ಲವೋ? “O Puttappa, Come! Come!” ಎನ್ನುತ್ತಾ ನಗುಮೊಗರಠಾಗಿ ಇರ್ಕಯ್ಗಳಿಂದಲೂ ನನ್ನನ್ನು ಬಾಚಿ ಬಳಿಯ ಬೆಂಚಿನ ಮೇಲೆ ಕುಳ್ಳರಿಸಿ, ತಾವೂ ಪಕ್ಕದಲ್ಲಿ ಕುಳಿತರು. ಕನಕಶೆಟ್ಟಿ, ಕೃಷ್ಣಮೂರ್ತಿ ತಮಗೆ ಕ್ಲಾಸಿಗೆ ಹೊತ್ತಾಗುತ್ತದೆ ಎಂದು ಬೀಳ್ಕೋಂಡರು, ಅವರು ಆರಿಸಿಕೊಂಡಿದ್ದ ಐಚ್ಛಿಕ ವಿಷಯಗಳು ನನ್ನದಕ್ಕಿಂತ ಭಿನ್ನವಾಗಿದ್ದುದರಿಂದ.

ಸ್ವಾಮೀಜಿ ನೋಡುವುದಕ್ಕೆ ತೀರ ಸಾಮಾನ್ಯವಾಗಿದ್ದರು. ಸಂಪ್ರದಾಯ ಸನ್ಯಾಸದ ಯಾವ ಆಡಂಬರವೂ ಇರಲಿಲ್ಲ. ಕಾವಿಯನ್ನುಳಿದರೆ ನಮಗೂ ಅವರಿಗೂ ಏನೂ ವ್ಯತ್ಯಾಸ ತೋರುತ್ತಿರಲಿಲ್ಲ.  ಅವರ ಎತ್ತರ ಸಾಮಾನ್ಯವಾದುದ್ದಾಗಿದ್ದರೂ ಅವರ ಕೃಶತ್ವದಿಂದ ಅದು ತುಸು ಅಧಿಕಗೊಂಡಂತೆ ಭಾಸವಾಗುತ್ತಿತ್ತು. ಅವರ ಆಕಾರ ಅಸಾಧಾರಣವಾಗಿಯೆ ಸಾಧಾರಣವಾಗಿತ್ತು!  ರೂಪವು ವಾಲುತ್ತಿದ್ದುದು ಸುರೂಪದ ಕಡೆಗಲ್ಲ. ಅವರ ದೈಹಿಕ ಸ್ಥಿತಿಯನ್ನು ನೋಡಿದರೆ ಕರುಣೆ ಕನಿಕರಗಳಿಗೆ ಪಾತ್ರವಾಗುವಂತಿತ್ತು. ಅವರು ಹುಟ್ಟಿನಲ್ಲಿ ಮಲೆಯಾಳಿಯಾಗಿದ್ದು ಆಗ ಅವರಿಗೆ ಕನ್ನಡ ಏನೇನು ಬರುತ್ತಿರಲಿಲ್ಲ. ಅವರು ಮಾತನಾಡುತ್ತಾ ಇಂಗ್ಲೀಷಿನಲ್ಲಿ ಮಲೆಯಾಳಿ ಭಾಷೆಯ ಉಚ್ಛಾರಣೆಯ ಪ್ರಭಾವ ಕಾಣುತ್ತಿತ್ತು.  ನನ್ನನ್ನು ಯಾವ ಬಹಿರ್ವಿಶೆಷತೆಯಿಂದಲೂ ಅವರು ಆಕರ್ಷಿಸಿರಲಿಲ್ಲ; ನನಗೆ ಅತಿ ಹತ್ತಿರ ಕುಳಿತು ಸಂವಾದಿಸುತ್ತಿದ್ದ ಅವರ ಮಾತೃಪ್ರೇಮ ಸ್ವರೂಪದ ಬ್ರಾತೃಸ್ನೇಹದ ಅಹೈತುಕವಾದ ದೈವಿ ವಿಶ್ವಾಸದ ಆನಂದಮಯ ಆವರ್ತಗರ್ತಕ್ಕೆ ಸಿಕ್ಕಿ ಬಿಟ್ಟಿತ್ತುನನ್ನ ಚೈತನ್ಯ ನೌಕೆ!

ನಮ್ಮ ಸಂಭಾಷಣೆಯ ವಿವರವೇನೂ ನನಗೆ ನೆನಪಿಲ್ಲ. ಬಹುಶಃ ನನ್ನ ಏನು ಏಂತು ಗೊತ್ತು ಗುರಿಗಳನ್ನು ಕುರಿತು ವಿಚಾರಿಸಿರಬಹುದು. ನಾನು ಶ್ರೀರಾಮಕೃಷ್ಣ ವಿವೇಕಾನಂದರನ್ನು ಕುರಿತು ಏನೇನು ಓದಿದ್ದೇನೆ ಎಂದು ಕೇಳಿರಬಹುದು ನಮ್ಮ  ಮಾತುಕತೆ ತುಸು ದೀರ್ಘವಾಗಿಯೆ ನಡೆಯಿತೆಂದು ನನ್ನ ನೆನಪು. ಮತ್ತೆ ಮತ್ತೆ ಆಶ್ರಮಕ್ಕೆ ಬರುತ್ತಿರುವಂತೆ ನನ್ನನ್ನು ಸರಳವೋ ಸರಳ ಪ್ರೀತಿಯಿಂದ ಆಹ್ವಾನಿಸಿ, ‘ವೇದಾಂತ ಕೇಸರಿ’ಯವೊ? ಅಥವಾ ‘ಪ್ರಬುದ್ಧ ಭಾರತ’ದವೊ?  ಕೆಲವು ಮಾಸ ಪತ್ರಿಕೆಯ ಪ್ರತಿಗಳನ್ನು ಓದಲು ಕೊಟ್ಟು, ಅವುಗಳಲ್ಲಿ ಯಾವ ಯಾವ ಲೇಖನಗಳು ಮುಖ್ಯವಾಗಿ ಓದಬೇಕಾದುವು ಎಂಬುವುದನ್ನು ತಿಳಿಸಿ, ಬಾಗಿಲವರೆಗೂ ಎದ್ದು ಬಂದು ನನ್ನನ್ನು ಬಿಳ್ಕೊಂಡರು.

ಬುದ್ಧಿಗಲ್ಲದಿದ್ದರೂ ನನ್ನ ಜೀವಾತ್ಮಕ್ಕೆ , ಪರಕೀಯವಾದಂತಿದ್ದ ಈ ಲೋಕದಲ್ಲಿ, ಸ್ವಕೀಯರೊಬ್ಬರು ಸಿಕ್ಕಿದಂತಾಗಿ, ಏನೋ ಅನಿರ್ದೇಶ್ಯ ಧೈರ್ಯವೊಂದು ನನ್ನನ್ನು ಆತುಕೊಂಡಿತ್ತು. ದಿಕ್ಕಿಲ್ಲದ ಚೇತನಕ್ಕಾಗಿ ದಿಕ್ಕಾಗಿ.

ನನ್ನ ಜೀವ, ಮೈಸೂರಿನ ರಿಪಬ್ಲಿಕನ್ ಲೈಬ್ರರಿಯಲ್ಲಿ  ಸುಮಾರು ಐದಾರು ವರ್ಷಗಳ ಹಿಂದೆ, ರಾಬಿನ್ ಸನ್ ಕ್ರೂಸೋ ಓದಲು ಹೋಗುತ್ತಿದ್ದಾಗ, ಅಕಸ್ಮಾತ್ತಾಗಿ ಸ್ವಾಮಿ ವಿವೇಕಾನಂದರ ಬರಹಗಳನ್ನು ಸಂಧಿಸಿದಾಗಣಿಂದಲೂ ದಿಕ್ಕು ದಿಕ್ಕಿಗೆ ಕೈಚಾಚಿ ಏನನ್ನೊ ಹುಡುಕುತ್ತಿತ್ತು.  ಇನ್ನೂ ಕಣ್ದೆರೆಯದಿದ್ದ ಆಧ್ಯಾತ್ಮಿಕ ತೃಷೆಯೊಂದು ತಾನರಿಯದಿದ್ದ ಯಾವುದೋ ಅಮೃತಕ್ಕಾಗಿ ಬಾಯಿ ಬಯಿ ಬಿಡುತ್ತಿತ್ತು.  ಅಲ್ಲಿಯ ತನಕ ನಾನು ರಚಿಸಿದ್ದ ನನ್ನ ಇಂಗ್ಲೀಷ್ ಮತ್ತು ಕನ್ನಡ ಕವನಗಳಲ್ಲಿ ಅ ಹಂಬಲಿಕೆ, ಆ ಹುಡುಕಾಟ ತಡಕಾಟಗಳ ಹೆಜ್ಜೆಯ ಗುರುತುಗಳು ಚೆನ್ನಾಗಿ ಮುದ್ರಿತವಾಗಿರುವುದನ್ನು ನೋಡಬಹುದು. ಪ್ರಕೃತಿ ವ್ಯಾಪಾರಗಳ ಸಂದರ್ಶನ ಮತ್ತು ನಿಸರ್ಗ ದೃಶ್ಯಗಳ ಸೌಂಧರ್ಯದ ರಸಾನುಭವದಲ್ಲಿ ನನಗಾಗುತ್ತಿದ್ದ ಕಲ್ಪನಾಭೂಮಿಕೆಯ ರಸರೂಪದ ಅತೀಂದ್ರಿಯಾನುಭವಗಳ ಉಲ್ಲೇಖವೂ ನನ್ನ ದಿನಚರಿಯಲ್ಲಿರುವುದನ್ನು ಕಾಣಬಹುದು; ಕವಿಗಳು, ದಾರ್ಶನಿಕರು, ಭಕ್ತರು ಮತ್ತು ಸಂತರು ಇವರ ಕೃತಿಗಳ ಮತ್ತು ಜೀವನಚರಿತ್ರೆಯ ಓದಿನಲ್ಲಿ ಹೃದಯದ ಆಧ್ಯಾತ್ಮಿಕ ತೃಷ್ಣೆಗೆ ತಕ್ಕ ಮಟ್ಟಿನ ಅಮೃತಪಾನ ದೊರೆಕೊಂಡಿತ್ತು. ನನ್ನ ಚೇತನ ಟಿಕೆಟನ್ನೇನೋ ಕೊಂಡುಕೊಂಡಿತ್ತು ಆದರಿನ್ನೂ ರೈಲು ಹತ್ತಿರಲಿಲ್ಲ.

ಅಂತೂ ಕೊನೆಗೆ ನನ್ನ ಆ ಪ್ರಾರ್ಥನೆಗೆ, ಆ ಅಭೀಪ್ಸೆಗೆ, ಆ ಕರೆಗೆ ಶ್ರೀ ಶ್ರೀ ಜಗನ್ಮಾತೆ, ನನ್ನ ದಿಚರಿಯಲ್ಲಿ ಪ್ರತಿದಿನದ ದಿನಚರಿಯ ತುದಿಯಲ್ಲಿಯೂ ಯಾರನ್ನು Mother Devine ಎಂದು ಸಂಭೋಧಿಸುತ್ತಿದ್ದೆನೊ ಆ ‘ನಮ್ಮಮ್ಮ’ ಓಗೊಟ್ಟು, ಶ್ರೀ ರಾಮಾಕೃಷ್ಣಾಶ್ರಮ ಸ್ಥಾಪನೆಯ ರೂಪದಲ್ಲಿ ನನ್ನ ಕೃಪೆಯ ತೋಳು ನ ಈಡಿ, ಕರೆ ಕರೆದಲೆಯುತ್ತಿದ್ದ ತನ್ನ ಕಂದನನ್ನು ಎತ್ತಿಕೊಂಡಳು. ತನ್ನ ದಿವ್ಯ ರಕ್ಷಣೆಯ ‌ವಕ್ಷಕ್ಕೆ! ೧೯೨೬ರಲ್ಲಿಯೆ ನಾನು ರಚಿಸಿದ ಒಂದುಕವನ ಹೀಗೆ ಪ್ರಾರಂಭವಾಗುತ್ತದೆ:

“ಯಾವ ಮಹಾಗತಿಗೆನ್ನನನು ಕೈಹಿಡಿದನುದಿನ ನಡೆಸುತಿಹೆ?
ಯಾವ ನಂದವನೆನಗಾಗಡಗಿಸಿ ಕರೆ ಕರೆದೆಳಯುತಿಹೆ?”

ಸ್ವಾಮೀಜಿಯನ್ನು ಬೀಳುಕೊಂಡು ರೂಮಿಗೆ ಹೋದವನು, ದಿನಚರಿಯಲ್ಲಿ ಹೇಳಿಕೊಂಡಿರುವಂತೆ, ಮೂರು ಕವನಗಳನ್ನು ರಚಿಸಿದೆನು ಎಂದಿದೆ: ಅದರ ಹೆಸರು ಇದೆ. ಅವುಗಳಲ್ಲಿ ಒಂದು ‘ಚಂದಿರ ಬಾರೊ’ ಎಂಬುವುದನ್ನು ನನ್ನ ಪ್ರಕಟಿತ ಕವನ ಸಂಗ್ರಹಗಳಲ್ಲಿ ಅಚ್ಚುಗೊಂಡು ಅನೇಕರಿಂದ ಹಾಡಲ್ಪಟ್ಟು, ಪ್ರಸಿದ್ಧವೂ ಆಗಿದೆ. ಆದರೆ ಉಳಿದ ಎರಡು ಅಚ್ಛಿನ ಮುಖ ಕಂಡಿಲ್ಲ: ‘ಶ್ರೀ ಸ್ವಾಮಿ ವಿವೇಕಾನಂದನೆ’ ಮತ್ತು ‘ಎಲೆ ವಸಂತ ಕುಸುಮವೆ,’  ಅದೃಷ್ಟವಶಾತ್ ಅವು ಮೂರು ಒಟ್ಟಿಗೆ ಒಂದಾದ ಮೇಲೊಂದು ಹಸ್ತಪ್ರತಿಯಲ್ಲಿ ಲಿಖಿತವಾಗಿವೆ, ಮಾನಪ್ಪನ ಕೈಬರಹದಲ್ಲಿ.ಮುಂದೆ ನಾನು ಬರೆದು ಈ ಸುಪ್ರಸಿದ್ಧವಾಗಿರುವ ಅದೇ ಶೀರ್ಷಿಕೆಯ ಕವನದ ಮಟ್ಟಕ್ಕೆ, ಭಾಷೆಯಲ್ಲಾಗಲಿ ವಸ್ತುವಿನಲ್ಲಾಗಲಿ ಇದು ಏರುವುದಿಲ್ಲ. ಅದು ಕವನಕ್ಕಿಂತಲೂ ಅತಿಶಯವಾಗಿ ಹಾಡಿನಂತಿದೆ, ಪಲ್ಲವಿಯನ್ನು ಒಳಗೊಂಡು! ಅದಕ್ಕಿರುವ ಇನ್ನೊಂದು ವಿಶೇಷತೆಯೆಂದರೆ ನಾನು ಸ್ವಾಮಿ ಸಿದ್ದೇಶ್ವರಾನಂದರನ್ನು ಸಂದರ್ಶಿಸಿದ ದಿನವೇ ಅದು ರಚಿತವಾಗಿರುವುದು.

ಸ್ವಾಮಿ ವಿವೇಕಾನಂದ

ಶ್ರೀವಿವಾಕಾನಂದನೆ  | ಬ್ರಹ್ಮಾನಂದನೆ
ನಿನಗೆ ಪರಮ ಮಂಗಳಂ| ಓಂ ಓಂ ಮಂಗಳಂ ||ಪ||


ಪರಮಹಂಸರ| ಪರಮ ಶಿಷ್ಯನೆ
ಆರು ಅರಿಗಳ| ವೀರ ವೈರಿಯೆ… ಶ್ರೀ….


ತತ್ತ್ವಕಡಲನು| ಕುಡಿದು ಯೋಗಿಯೆ
‘ತತ್ತ್ವಮಸಿ’ಯನು| ಸವಿದ ಭೋಗಿಯೆ… ಶ್ರೀ…


ಮೃತ್ಯ ಎಂಬುವ| ಮಿಥಯೆ ಭಯವನು
ಕಿತ್ತು ಹಾಕಿದ| ನಿತ್ಯ ಬ್ರಹ್ಮನೆ…. ಶ್ರೀ…


ಭೇದ ಮಾರಿಯ | ಛೇದಿಸಾಡಿದ
ವೇದ ಮಾರ್ಗದ| ವೀರ ಸಿಂಹನೆ… ಶ್ರೀ…


ಭಾರತಾಂಬೆಯ | ವೀರಪುತ್ರನೆ
ಭಾರತೀಯರ ಪ್ರೇಮ ಪಾತ್ರನೆ… ಶ್ರೀ…


ವಿಶ್ವ ಹೃದಯನೆ| ವಿಶ್ವದಾತ್ಮನೆ
ವಿಶ್ವಕಾಯನೆ| ನೀನೆ ವಿಶ್ವವು… ಶ್ರೀ
– ೬-೨-೧೯೨೬

‘ವಸಂತ ಕುಸುಮ’ ಎಂಬ ಶೀರ್ಷಿಕೆಯ ಇನ್ನೊಂದು ಕವನವು ಅಚ್ಚಾಗಿ ಕವನ ಸಂಗ್ರಹದಲ್ಲಿ ಸೇರಲು ತಕ್ಕ ಮಟ್ಟಿಗೆ ಅರ್ಹತೆ ಪಡೆದಿರುವ ಸಾಹಿತ್ಯಕ ರಚನೆ. ಆದರೂ ಅದು ಇದುವರೆಗೂ ಸೇರಿಲ್ಲ. ಕಾರಣ, ನನ್ನ ಮೊದಲನೆಯ ಕವನ ಸಂಗ್ರಹ ಅಚ್ಚಿಗೆ ಹೋದ ಕಥೆಯಲ್ಲಿದೆ: ೧೯೨೬, ಆಶ್ರಮ ಕೃಷ್ಣಮೂರ್ತಿಪುರದ ಮತ್ತೊಂದು ಬಾಡಿಗೆ ಮನೆಗೆ ವರ್ಗಾಯಿಸಲ್ಪಟ್ಟಿತ್ತು. ಒಂದು ದಿನ ಅಸಿಸ್ಟೆಂಟ್ ಕಮೀಷನ ಆಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಆಶ್ರಮಕ್ಕೆ ಬಂದರು. ಸ್ವಾಮಿ ಸಿದ್ದೇಶ್ವರಾನಂದರು ನನ್ನನ್ನು ಪರಿಚಯಿಸಿ ನನ್ನ ಕವನಗಳನ್ನು ಬಹುವಾಗಿ ಹೊಗಳಿದರು ಅವರ ಮುಂದೆ. ಮಾಸ್ತಿಯವರು ಕೆಲವು ಕವನಗಳನ್ನು ಓದುವಂತೆ ನನ್ನನ್ನು ಕೇಳೀಕೊಂಡರು. ಅಗಲೆ ಪ್ರಸಿದ್ಧರಾಗಿದ್ದ  ಹಿರಿಯ ಸಾಹಿತಿಗೆ ನಾನು ಹೆಮ್ಮೆಪಟ್ಟುಕೊಂಡೇ ನನ್ನ ಹಲವಾರು ಕವನಗಳನ್ನು ಓದಿದೆ ಅವರು ಮೆಚ್ಚಿಕೊಂಡು ಅವುಗಳಲ್ಲಿ ಕೆಲವನ್ನು ಆಯ್ದು ಅಚ್ಚು ಮಾಡಿಸುವುದಾಗಿ ಹೇಳಿದರು. ಅದಕ್ಕಾಗಿ ಹಸ್ತಪ್ರತಿಯನ್ನು ಸಿದ್ಧಮಾಡುವಷ್ಟೂ ಉತ್ಸಾಹಿಯಾಗಿದ್ದರೆಂದು ತೋರುತ್ತದೆ, ಅವರ ಸಂಗಡ ಬಂದಿದ್ದ ತಿರುಮಲೆ ಶ್ರೀನಿವಾಸಾಚಾಯೃ ಎಂಬುವರು, ಅವರಿಗೆ ಹಿಡಿಸಿದಂತಹ ಕವನಗಳನ್ನೆಲ್ಲ ಆಯ್ದು, ಅಚ್ಚಿನಮನೆಗೆ ಕಳುಹಬಹುದಾದ ಒಂದು ಹಸ್ತಪ್ರತಿಯನ್ನು ಸಿದ್ಧಪಡಿಸಿ ತಂದುಕೊಟ್ಟರು. ಅದೇ  ನೋಟ ಬುಕ್ಕಿನಲ್ಲಿದ್ದ ‘ಚಂದಿರ ಬಾರೊ’ ಎಂಬುವುದನ್ನು ಅವರು ಆರಿಸಿದ್ದರೂ ಅದರ ಪಕ್ಕದಲ್ಲಿಯೇ ಇದ್ದ ‘ವಸಂತ ಕುಸುಮ’ವನ್ನು ಕೈಬಿಟ್ಟಿದ್ದರು.  ಅವರು ತಯಾರಿಸಿದ್ದ ಹಸ್ತಪ್ರತಿ ‘ಕೊಳಲು’ ಎಂಬ ಅಭಿನಾನದಿಂದ ‘ಸತ್ಯಶೋದನಾ ಪುಸ್ತಕ ಭಂಡಾರ’ದವರಿಂದ ಅಚ್ಚುಗೊಂಡು ಪ್ರಕಟವಾಯಿತು ೧೯೩೦ರಲ್ಲಿ. ಉತ್ತಮವಾದುದ್ದನ್ನೆಲ್ಲ ಆರಿಸಿಬಿಟ್ಟಿದ್ದಾರೆ ಎಂದುಕೊಂಡ ನಾನು ಮತ್ತೇ ಆ ನೋಟುಪುಸ್ತಕ ನೋಡುವ ಗೊಜಿಗೆ ಹೋಗಲಿಲ್ಲ. ಈ ‘ನೆಪಿನ ದೋಣಿ’ಯಲ್ಲಿ ಬರೆಯುವು ಕೆಲಸಕ್ಕೆ ಕೈಹಾಕದಿದ್ದರೆ ಎಂದೆಂದಿಗೂ ಅದರ ಗೋಜಿಗೆ ಹೋಗುತ್ತಲೂ ಇರಲಿಲ್ಲವೇನೋ?

ತಿರುಮಲೆ ಶ್ರೀನಿವಾಸಾಚಾರ್ಯರು ಈ ಕವನವನ್ನು ಅಷ್ಟಾಗಿ ಮೆಚ್ಚಿಕೊಳ್ಳದಿದ್ದುದಕ್ಕೆ ಬಹುಶಃ ಈ ಕವನದಲ್ಲಿ ಅಭಿವ್ಯಕ್ತವಾಗಿರುವ ಅದ್ವೈತ ದೃಷ್ಟಿಯು ಕಾರಣವಾಗಿರಬಹುದೆಂದು ತೋರುತ್ತದೆ.  ವಿಶಿಷ್ಟಾದ್ವೈತದ ಶ್ರೀ ವೈಷ್ಣವರಾಗಿದ್ದ ಅವರಿಗೆ.

೧೯೨೬ರಲ್ಲಿ ಬರೆದ ಈ ಕವನಕ್ಕೆ ಅದರಲ್ಲಿ ಅಭಿವ್ಯಕ್ತವಾಗಿರುವ ತಾತ್ವಿಕ ದರ್ಶನ ಮಾತ್ರವಲ್ಲದೆ ಅಲ್ಲಿ ಮೈದಾಳಿರುವ ಛಂದೋವಿಲಾಸವೂ ಒಂದು ವಿಶೇಷತೆಯನ್ನು ಒದಗಿಸುತ್ತದೆ. ಮೂರು ಮಾತ್ರೆಯ ಗಣದ ಸಕ್ರಮ ವಿನ್ಯಾಸವಿದ್ದರೂ ಪಂಕ್ತಿಗಳಹ್ರಸ್ವ ದೀರ್ಘತೆಗಳ ಅಸಮ ವಿನ್ಯಾಸವನ್ನೂ ಎದುರುಗೊಳ್ಳುತ್ತೇವೆ.

ವಸಂತ ಕುಸುಮ

ಎಲೆ ವಸಂತ ಕುಸುಮವೆ,
ಆವ ಪರಮ ಜನನಿಯುದರದಿಂದ ನೀನು ಬಂದಿಹೆ?
ಇನಿತು ಕಾಲವಾವ ಹರುಷ ನಿನ್ನನೊಲಿದು ಸಲುಹಿತು?
ನಿನ್ನ ಪಡೆಯಲೆಂದು, ಕುಸುಮ,
ಎನಿತು ಬ್ರಹ್ಮರಳಿದರು?
ಬ್ರಹ್ಮಯಜ್ಞವಾವುದು
ನಿನ್ನ ಸೇವಿಸಿ
ಮಿಥ್ಯೆಯಿಂದ ಸತ್ಯವನ್ನು ಸೃಜಿಸಿ ಬಲವ ಪಡೆಯಿತು?
ಎಲೆ ವಸಂತ ಕುಸುಮವೆ,
ಪರ ರಹಸ್ಯವೆ,
ನಿನ್ನೊಳೆಲ್ಲ ವೈಕ್ಯವು;
ನಿನ್ನನರಿಯಲೆಲ್ಲವರಿವೆ, ನೀನೆ ಸಕಲ ಜ್ಞಾನವು!
ರಮ್ಯ ಕುಸುಮವೆ,
ದಿವ್ಯ ಆತ್ಮವೆ,
ಎನಿತು ನಿಯಮ ಕೋಟಿಯು
ಗರ್ವವುಳಿದು ಕಣ್ಣ ತೆರೆದು
ನಿನ್ನ ಸೇವೇಗೈವವು?
ಎಲೆ ವಸಂತ ಕುಸುಮವೆ,
ಪರಮ ಋತಕೆ ಈಶನೆ,
ಕಾಲ ದೇಶಗಳನು ಮೀರಿ ನೀನು ನಲಿಯುವೆ!
ಕಾರ್ಯಕಾಗಿಣಾ-
ತೀತನಾಗಿಹೆ!
ಬ್ರಹ್ಮರೆಲ್ಲ ನಿನ್ನೊಳಿಹರು,
ನೀನೆ ಪರಬ್ರಹ್ಮವು!
೬-೨-೧೯೨೬

ಆ ಫೆಬ್ರವರಿ ೬ನೆಯ ಶನಿವಾರದ ಸಂದರ್ಶನದ ತರುವಾಯ ಸಾಧಾರಣವಾಗಿ ಒಂದು ದಿನವೂ ತಪ್ಪದೇ ಪ್ರತಿ ದಿನವೂ ನಾನು ಆಶ್ರಮಕ್ಕೆ ಹೋಗುತ್ತಿದ್ದುದನ್ನು ನನ್ನ ದಿನಚರಿ ಹೇಳುತ್ತದೆ.

೧೯೨೬ನೆಯ ಫೆಬ್ರವರಿ ೭ನೆಯ ಭಾನುವಾರದ ದಿನಚರಿ:        
“ಶ್ರೀ ರಾಮಕೃಷ್ಣಾಶ್ರಮಕ್ಕೆ ಹೋದೆ. ಕಸ್ತೂರಿ, ಸಿದ್ದೇಶ್ವರಾನಂದ ಇತ್ಯಾದಿ ಸಂಧಿಸಿದೆ. ಸ್ವಾಮೀಜಿ” You cannot spend your life easily n ow as you are gifted with poetic faculty’ (ನೀವಿನ್ನು ನಿಮ್ಮ ಬದುಕನ್ನು ಹಗುರವಾಗಿ ಕಳೆಯುವಂತಿಲ್ಲ, ನಿಮಗೆ ಕವಿ ಪ್ರತಿಭೆಯವರ ಪ್ರಾಪತವಾಗಿರುವುದರಿಂದ) ಎಂದರು. ನನ್ನ ‘ಸಂದೇಹ’ ಎಂಬ ಕವನವನ್ನು ಹಾಡಿದೆ.  ಬಹಳ ಹೊತ್ತು ಮಾತಾಡುತ್ತಾ ಇದ್ದೆ. ರೂಮಿಗೆ ಹಿಂಗಿರುಗುತ್ತಾ ‘ವೇದಾಂತ ಕೇಸರಿ’ಯ ಹಳೆಯ ಸಂಚಿಕೆಗಳನ್ನು ಕೊಂಡೊಯ್ದೆ… ನನ್ನ ‘ಪ್ರಕೃತಿ ಸೌಂಧರ್ಯ’ (ಎಂಬ ಪ್ರಬಂಧ ಜಯಕರ್ನಾಟಕದ ಮಾಸಪತ್ರಿಕೆಯಲ್ಲಿ) ಪ್ರಕಟವಾಗಿದೆ. ನಾನು, ಚಿನ್ನಸ್ವಾಮಿ, ಶ್ಯಾಮರಾವ ತುಂಬ ದೂರ ವಾಕ್ ಹೋಗಿದ್ದೆವು. ಬೆಟ್ಟದ ಹತ್ತಿರದ ತಾವರೆಕೊಳದ ದಡದ ಮೇಲೆ ನಾನು ನನ್ನ ಕೆಲವು ರಚನೆಗಳನ್ನು ಹಾಡಿದೆ.”

ಮೇಲಿನ ದಿನಚರಿಯಲ್ಲಿ ಕಸ್ತೂರಿ, ಸಿದ್ದೇಶ್ರಾನಂದರು ಇತ್ಯಾದಿ ಎಂದಿದೆ. ಆಶ್ರಮದ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದ ಕಸ್ತೂರಿಯವರ ಮನೆ ಆಶ್ರಮದ ಪಕ್ಕದಲ್ಲಿಯೇ ಇದ್ದುದರಿಂದ ಅವರನ್ನು ಅಲ್ಲಿ ಸಾಧಾರಣವಾಗಿ ಯಾವಾಗಲೂ ಕಾಣುತ್ತಿದ್ದೆ. ರಜಾ ಕಾಲದಲ್ಲಿ ಅವರು ಬಹುಪಾಲು ಆಶ್ರಮದಲ್ಲಿಯೆ ಇರುತ್ತಿದ್ದರು. ವಿನೋದಶೀಲದ ಸಾಮಾಜಿಕ ವ್ಯಕ್ತಿಯಾಗಿ ಆಶ್ರಮವನ್ನೆಲ್ಲ ನಗೆಯಿಂದಲೂ ಉಲ್ಲಾಸದಿಂದಲೂ ತುಂಬ ಜೀವಂತಗೊಳಿಸುತ್ತಿದ್ದರು.  ಅವರೂ ಮಲೆಯಾಳಿಯಾಗಿ ಸ್ವಾಮೀಜಿಯ ಪೂರ್ವಾಶ್ರಮದ ಪರಿಚಿತರು ಆಗಿದ್ದರೆಂದೂ ತೋರುತ್ತದೆ.  ಮೈಸೂರಿನಲ್ಲಿ ಆಶ್ರಮ ಬೇರುಬಿಟ್ಟು ಬೆಳೆಯಲು ಅವರು ಸ್ವಾಮಿ ಸಿದ್ದೇಶ್ವರಾನಂದರಿಗೆ ಬಲಗೈಯಾಗಿದ್ದರು.  ಇನ್ನೊಬ್ಬ ಕಾರ್ಯದರ್ಶಿ ಕೃಷ್ಣರಾವ್ ಎಂಬುವವರು ವಕೀಲರು, ಅವರೂ ಆಗಾಗ ಕಸ್ತೂರಿಯಂತೆಯೆ ಬನುಮಯ್ಯ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಮತ್ತೊಬ್ಬರು ವೆಂಕಟಸುಬ್ಬಯ್ಯ ಎಂಬುವರು, ನಿವೃತ್ತ ರೈಲ್ವೇ ಅಧ್ಯಾಪಕರಾಗಿದ್ದರುಲ ಮತ್ತೊಬ್ಬರು ವೆಂಕಟಸುಬ್ಬಯ್ಯ ಎಂಬುವರು, ನಿವೃತ್ತ ರೈಲ್ವೆ ಅಧಿಕಾರಿಗಳು. ಅವರನ್ನು ಎಲ್ಲರೂ ‘ತಾತಾಗಾರು’ಎಂದೇ ಕರೆಯುತ್ತಿದ್ದರು.

ಮೇಲಿನ ದಿನಚರಿಯಲ್ಲಿ ನನ್ನ ಒಂದು ಕವನ ‘ಸಂದೇಹ’ ಎಂಬುದನ್ನು ಹಾಡಿದೆ ಎಂದಿದೆ. ಆ ಕವನವೂ ಅಪ್ರಕಟಿತ. ಅದರಲ್ಲಿ ದೇವರು, ಸೃಷ್ಟಿ, ಮಾಯೆ, ಮಿಥ್ಯೆ, ಸುಕೃತ ದುಷ್ಕೃತ, ಸ್ವರ್ಗ, ನರಕ, ಇಹ ಪರ, ಬ್ರಹ್ಮ ಆತ್ಮ, ಇತ್ಯಾದಿಗಳನ್ನು ಕುರಿತು ಕವಿಯ ಸಂದೇಹಾತ್ಮಕವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ.   ನಾಸ್ತಿಕತೆಯ ಮತ್ತು ಚಾವಾಕತ್ವದ ಷೋಕಿಯೂ ಅಲ್ಲಲ್ಲಿ ಇಣುಕುತ್ತದೆ.

ಸಂದೇಹ
ದೇವನೆಂಬುವನಾರು?
ಸೃಷ್ಟಿ ಎಂದರೆ ಏನು?
ಯೋಗಿಗಳ ಭ್ರಾಂತಿಯಿದೋ?
ಸತ್ಯದೊಳು ನೆಲಸಿಹುದೋ?
ನಂಬಿಕೆಯ ತತ್ವವಿದು ಮಿಥ್ಯೆಯಾಗಿರಬಾರದೇಕೆ?

ಮಾಕಂಬುವುದೇಕೆ?
ಗುಣರಹಿತನಾದವಗೆ
ಲೀಲೆಯೆಂಬುದು ಬೇಕೆ?
ಭ್ರಾಂತಿಯಲ್ಲವೆ ಬ್ರಹ್ಮ ?
ತತ್ವಗಳು ಚೀರಿದೊಡೆ , ನಂಬಿಕೆಗೆ ಇಹುದೊಂದು ಮೇರೆ !

ಐತಿಹ್ಯದಿಂ ಬಂದ
ಮಿಥ್ಯೆಯನು ಖಂಡಿಸದೆ
ಬೊಮ್ಮವೆಂದುಸುರಿದೊಡೆ
ಬೊಮ್ಮವಿರಲೇ ಬೇಕೆ?
ಇದು ಎಲ್ಲರೊಳಗಿರುವ ರೋಗವಾಗಿರಬಾರದೇಕೆ?

ನೀತಿಯನು ಬೋಧಿಪರು;
ಪ್ರೀತಿಸೆಂದುಸುರುವರು;
ವಿಶ್ವಾತ್ಮನಾದವಗೆ
ನೀತಿ ಎಂಬುದು ಏಕೆ?
‘ಲೀಲೆ’ ಎನ್ನುವ ಬದಲು ದೇವನಿಲ್ಲೆನಬಾರದೇಕೆ?

ಮಿಥ್ಯೆಯೆಂಬರು ಮರಣ;
ಮಿಥ್ಯೆಂಬರು ಜನನ;
ನಿತ್ಯನೆಂಬರು ಆತ್ಮ;
ಸತ್ಯವೆಂಬರು ವೇದ;
ಸ್ವಾರ್ಥತೆಯ ಸೃಷ್ಟಿಯಿದು; ಸತ್ಯದಾ ತಳಹದಿಯೆ ಮಿಥ್ಯೆ!

ಕಂಗಳಿಗೆ ಕಣ್ಣಂತೆ;
ಕಿವಿಗಳಿಗೆ ಕಿವಿಯಂತೆ:
ಬುದ್ಧಿಗೆ ಬುದ್ಧಿಯಂತೆ:
ಚಿಂತೆಗಸದಳವಂತೆ:
‘ಕಂಡರೂ ಕಾಣೀಸನು’ ಎಂಬರಿದು ಬರಿಯಂತೆ ಕಂತೆ!

ಸುಕೃತ ದುಷ್ಕೃತವಂತೆ
ಹರಿಯನೊಬ್ಬನಿಹನಂತೆ;
ಹರಿ ಬರಿಯ ಸತ್ ಅಂತೆ;
ತರ್ಕದಿಂ ಠಕ್ಕಿಸುವ ಬದಲರಿಯೆನೆನಬಾರದೇಕೆ?

ಮಿಥ್ಯೆ ಭಯವನು ಹೇಳಿ
ನೀತಿಗೆಳೆಯುವ ಬದಲು
ಧೀರತನವನು ನೂಂಕಿ
ಭೀತಿಯನು ತುಂಬುವರು:
ಆಶುಚಿಯಿಂ ಶುಚಿಯ ತೊಳೆದೊಡೆ ಅದು ಪವಿತ್ರಮಹುದಂತೆ!

ಸ್ವರ್ಗ ನರಕಗಳಂತೆ:
ಇಂದ್ರ ಯಮರಿಹರಂತೆ;
ವಿಧಿ ಕರ್ಮಫಲವಂತೆ:
ಆಹಹ! ಇದು ಹೇಡಿಗಳಿ-
ಗಿಂಪಾಗಿ ತೊರಿದೊಡೆ, ಧೀರರಿಗೆ ಈ ತತ್ವವೇಕೆ?

ದೇವರೆಂಬುವ ತತ್ವ
ಬದುಕಿ ಸಾಯಲು ಬೇಕೆ?
ಜೀವನದ ಕಷ್ಟಗಳು
‘ದೇವ’ ಎನೆ ತೊಲಗುವೊಡೆ
ದೇವನಿಲ್ಲೆಂದು ಧೈಯೃದಿ ಪೇಳುವೊಡೆ ತೊಲಗವೇಕೆ?

ಕುರುಡ ಕುರುಡನ ಪಿಡಿದು
ಕೊರಕಲೊಳಗಿಳಿದಂತೆ,
ಕುಂಟ ಕುಂಟನ ನಂಬಿ
ಇದ್ದೆಡೆಯ ಇರುವಂತೆ,
ಧೈಉಋ ಗುಂದಿಪ ತತ್ವಗಳ ನಂಬಿ ಕುಂದುವುದದೇಕ?

ಜೀವನದ ಮಾರ್ಗ ತಾ
ದೇವನಿಹನೆನಲು ಬದ-
ಲಾವಣೆಯ ಹೊಂದುವುದೇ?
ಸಾವಿಗಂಜುತ ನಾವು
ದೇವನೆಂಬಿನ್ನೊಂದು ಸಾವ ರಚಿಸಲಳಿವುದೆ ನೋವು?

ಇಹಸುಖವನರಿತಿಹೆವು;
ಪರಮಸುಖವದೆಂತಿಹುದೊ?
ಕರದೊಳಿಹ ರತ್ನ ತಾ
ಮಿಗಿಲು ಶರಧಿಯ ಸಿರಿಗೆ!
ಪರಸುಖವ ಪಡೆಯಲೆಂದಿಹ ಸುಖವ ಬಿಡುವೆಯಾ? ಜೋಕೆ!

ಬ್ರಹ್ಮ ಒಂದೆಂದುಸುರು;
ಆತ್ಮಚಿತ್ ಎಂದು ಸುರು;
ಸಚ್ಚಿದಾನಂದನೆನು;
ಏನು ಹೇಳಿದರೇನು?
ಆಶಾನುಭವ ಭಯಗಳಿಂದಿಡಿದ ನರಗದು ರಹಸ್ಯ!

ಸರ್ವ ಶಕ್ತಂಗವಗೆ
ನಿಯಮ ಬಂಧನವೇಕೆ?
ವ್ಯಾಪ್ತಿ ಸರ್ವಂಗವಗೆ
ಸಂಚಲನೆ ತಾನೇಕೆ?
ಸರ್ವಜ್ಞನಾದವನು ದುಷ್ಕೃತವ ಸೃಷ್ಟಿಸಿದನೇಕೆ?

ನ್ಯಾಯವನು ಖಂಡಿಪುದು
ದಯೆ: ನಿಯಮ ಖಂಡಿಪುದು
ಸರ್ವಶಕ್ತಿತ್ವವನು,
ನೀತಿ ಸರ್ವಜ್ಞತೆಯ;
ಈತತ್ವಗಳ ಬೆದರಿಪುದು ವರ ಕೃಪಾನಿಧಿಯ ಭಾವ !

‘ದೇವ’ ಎಂದವರೆಲ್ಲ
ಸಾವ ದಾಂಟಿದರೇನು?
‘ದೇವ’ ಎಂದರು ಒಂದೆ
ಎನ್ನದಿದ್ದರು ಒಂದೆ!
ಆದುದಾಗಲಿ, ಪರಮಸುಖವಿರಲಿ, ಚಿಂತೆಯೆಮಗೇಕೆ?

ಎಂತೂ ಬಂದೆವು ನಾವು,
ಎಂತೊ ಪೋಪೆವು ನಾವು;
ಇಂತಿರಲು ಇಲ್ಲದಿಹ
ಚಿಂತೆಗೊಳಗಾಗೇಕೆ
ಭ್ರಾಂತಿಯಿಂ ವಿರಚಿಪುದು ಪರವನಿಹಮೆಮಗೀಗ ಸಾಕು!

‘ಬ್ರಹ್ಮಾಸ್ಮ’ ‘ತತ್ ತ್ವಮಸಿ’
‘ಶಿವ ನಾನು’ ಇವುಗಳಿಗೆ
ಭ್ರಾಂತಿಯೆ ತವರೂರು!
ಶಾಂತಿ ಎಂಬುದು ಢಂಬ!
ಮೋಹಿಸುವ ತತ್ವಗಳಿಗಿಂತ ನಾಸ್ತಿತ್ವವೇ ಲೇಸು!

ಸಂದೇಹಮಿದು, ದೇವ,
ಪ್ರಥಮವಾಗಿಹ ಧ್ಯಾನ!
ಬ್ರಹ್ಮತ್ವವನು ಪಡೆಯೆ
ಇದು ಒಂದು ಸೋಪಾನ!
ಪರಮಾತ್ಮ, ಕ್ಷಮಿಸದು ಕೀಶೋರಂದ್ರನ ದುರಭಿಮಾನ!

(ಇಲ್ಲಿಗೆ  ಇದು ಕೊನೆಯಮುಟ್ಟಿದಂತಿದ್ದರೂ ಹಸ್ತಪ್ರತಿಯ ಬೇರೊಂದೆಡೆಯಲ್ಲಿ ಮತ್ತೆಯೂ ಮುಂದುವರಿದಿದೆ)