ಸಂದೇಹ:        ಯೋಚನೆಯ ಮಾಡುವೆನು
ಮನದ ಸಂತಸಕಾಗಿ,
ನಿಜವನರಿಯಲು ಅಲ್ಲ.
ನಿಜವೆಂಬುದೂ ಇಲ್ಲ!
“ತತ್ವ ತಾನತಿಭೋಗ” ಇಂತು ಲೋಕಾಯತಿಕನೆಂದ.

ನಾವಿರಲು ಸಾವಿಲ್ಲ!
ಸಾವಿರಲು ನಾವಿಲ್ಲ!
ಸಾವು ಸಾವೆಂದೇಕೆ
ಜೀವವನು ಹಿಂಗಿಸುವೆ?
ಸಾವರಿಯದೆಮ್ಮ ನಾವರಿಯೆವದನಿನ್ನೀಕೆ ಭೀತಿ?

ವಿಧಿಯಾಟವಾಡುತಿಹ
ಚೆಂಡುಗಳು ನಾವೆಲ್ಲ;
ಉರುಳುವೆವು, ಹೊರಳುವೆವು,
ತಾಗುವೆವು, ಬಾಗುವೆವು:
ಸ್ವಾತಂತ್ಯ್ರವಿಲ್ಲದೆಡೆ ಇಹುದೆಂಬ ಹುಸಿ ಚಿಂತೆ ಏಕೆ ?

ತತ್ವವೊಂದಿರಲಿಷ್ಟು
ಶುಷ್ಕವಾದವದೇಕೆ?
ಅವತಾರ ಪುರುಷರೊಳು
ಮತಭೇಧವಿಹುದೇಕೆ?
ಆಚಾರ್ಯರೊಬ್ಬೊಬ್ಬರೊಂದ ಬೋಧಿಸುವುದೇಕೆ?

ಜ್ಞಾನ ಸೂರ್ಯನ ಮುನ್ನ
ಸಂಶಯಾರುಣನುದಯ![1]

೧೯೨೬ ನೆಯ ಫೆಬ್ರವರಿ ೮ನೆಯ ಸೋಮವಾರದ ದಿನಚರಿ:     
“ಇವೊತ್ತು ಆಶ್ರಮಕ್ಕೆ ಹೋಗಿ ಒಂಬತ್ತು ‘ವೇದಾಂತ ಕೇಸರಿ’ಯ ಸಂಚಿಕೆಗಳನ್ನು ತಂದೆ. ಅಧ್ಯಾಪಕ ವರ್ಗದ ಒಂದು ಚರ್ಚೆ(debate) ಇತ್ತು. ಸ್ವಾರಸ್ಯವಾಗಿತ್ತು.  ಆಶ್ರಮದಲ್ಲಿ ಅದ್ವೈತದ ವಿಚಾರವಾಗಿ ಅನೇಕ ವಿಷಯಗಳನ್ನು ಕುರಿತು ಜಿಜ್ಞಾಸೆ ನಡೆಸಿದೆವು”.

೧೯೨೬ನೆಯ ಫೆಬ್ರವರಿ ೯ನೆಯ ಮಂಗಳವಾರದ ದಿನಚರಿ :    
“ಚೈತನ್ಯ ಸ್ಪೂರ್ತಿದಾಯಕವಾಧ (Inspiring) ‘ವೇದಾಂತ ಕೇಸರಿ’ಯ ಸಂಚಿಕೆಗಳನ್ನು ಓದಿದೆ. ಡಾ.ಹೋಮ್ಸ್ (Dr Hommes) “Modern Tendencies in Philosophy” (ತತ್ವಶಾಸ್ತ್ರದ ಕ್ಷೇತ್ರದಲ್ಲಿ ಆಧುನಿಕ ಭಾವನೆಗಳು) ಎಂಬ ವಿಷಯದ ಮೇಲೆ ಉಪನ್ಯಾಸ ಮಾಡಿದರು. ಡಾ.ಬ್ರಜೇಂದ್ರನಾಥ ಶೀಲ್ ಅಧ್ಯಕ್ಷತೆ ವಹಿಸಿದ್ದರು. ಅವರು ವೇದಾಂತ ಮತ್ತು ಜೈನ ದರ್ಶನಗಳನ್ನು ಕುರಿತು ಮಾತಾಡಿದರು”

೧೯೨೬ನೆಯ ಫೆಬ್ರವರಿ ೧೦ನೆಯಬುಧವಾರದ ದಿನಚರಿ:        
“ಇವೊತ್ತು ಡಾ.ಹೋಮ್ಸ ಉಪನ್ಯಾಶವಿತ್ತು. ‘International Religion’ (ಅಂತಾರಾಷ್ಟ್ರೀಯ ಮತಧರ್ಮ) ಎಂಬ ವಿಷಯವಾಗಿತ್ತು. ಪ್ರೋ.ಜಿ.ಸಿ.ರಾಲೋ ಅಧ್ಯಕ್ಷತೆ ವಹಿಸಿದ್ದರು. ಬೋಧಪ್ರದವಾಗಿ ಸ್ಪೂತಿಋದಾಯಕವಾಗಿತ್ತು. ನಾನು, ಸಿದ್ದೇಶ್ವರಾನಂದರು ಮತತು ಇತರರು (ಕಸ್ತೂರಿ, ವೆಂಕಟಸುಬ್ಬಯ್ಯ ಮೊದಲಾದ ಆಶ್ರಮದ ಗುಂಪಿನವರು) ಸಭೆಗೆ ಹೋಗಿದ್ದೇವು. ಆಶ್ರಮಕ್ಕೆ ಹಿಂತಿರುಗಿದ ಮೇಲೆ ಭಾಷಣದ ವಸ್ತುವನ್ನು ಕುರಿತು ಜಿಜ್ಞಾಸೆ ಮಾಡಿದೆವು. ತರುವಾಯ ಕೊಠಡಿಗೆ ಹಿಂತಿರುಗಿದೆ”.

೧೯೨೬ನೆಯ ಫೆಬ್ರವರಿ ೧೧ನೆಯ ಗುರುವಾರದ ದಿನಚರಿ:       
“ಡಾ.ಹೋಮ್ಸ್ ಅವರಲ್ಲಿ ಸ್ವಾಮಿ ಸಿದ್ದೇಶ್ವರಾನಂದರು ಕೊಟ್ಟ ಕಾಗದಗಳನ್ನು ಕೊಂಡೊಯ್ದು ತಲುಪಿಸಿದೆ. ಆತ, ಪಾಪ! ನನ್ನನ್ನು ಆಶ್ರಮದ ಚಾರಕನೆಂದು ತಿಳಿದನೋ ಏನೋ? ಬಳಿಯಿದ್ದ ಒಬ್ಬ ಸೇವನಕ, ಹತ್ತಿರ, ನನಗೇನಾದರೂ ಭಕ್ಷೀಸು ಕೊಡಬೇಕೆ?   ಎಂದು ಕೇಳೀದ. ನಾನು ಒಳಗೊಳಗೇ ನಕ್ಕುಬಿಟ್ಟು ಹೊರಟು ಬಂದೆ. ಆಶ್ರಮಕ್ಕೆ ಹಿಂತಿರುಗಿದವನು ನನ್ನ ಕೆಲವು ಕವನಗಳನ್ನು ಹಾಡಿದೆ”.

೧೯೨೬ನೆಯ ಫೆಬ್ರವರಿ ೧೨ನೆಯ ಶುಕ್ರವಾರದ ದಿನಚರಿ:

‘ನಿನ್ನೆ ನಾಗಮಹಾಶಯನ ಜೀವನ ಚರಿತ್ರೆ ಓದಿದೆ. ಅತ್ಯಂತ ಆಧ್ಯಾತ್ಮಿಕ ಸ್ಪೂರ್ತಿದಾಯಕವಾಗಿದೆ. ನಾನೊಬ್ಬನೆ ಸಂಜೆ ಬೆಟ್ಟದ ಕಡೆಗೆ ಹೋಗಿದ್ದೆ. ಅಲ್ಲಿ ಶ್ರೀ ರಾಮಕೃಷ್ಣರನ್ನು ಕುರಿತು ಒಂದು ಪದ್ಯ (Stanza)ರಚಿಸಿದೆ; ಮತ್ತು ಧ್ಯಾನ ಮಾಡಿದೆ”.

೧೯೨೬ನೆಯ ಫೆಬ್ರವರಿ ೧೩ನೆಯ ಶನಿವಾರದ ದಿನಚರಿ:         
“ಶ್ರೀರಾಮಕೃಷ್ಣಾಶ್ರಮಕ್ಕೆ ಹೋಗಿಸ್ವಾಮಿ ಸಿದ್ದೇಶ್ವರಾನಂದರ ಹತ್ತಿರ ಬಹಳ ಹೊತ್ತು ವಿಚಾರ ವಿನಿಮಯ ಮಾತಾಡಿದೆ. ಸಂಜೆ ನಮ್ಮ ಕಾಲೇಜಿನ ಸಂಘದ ವಾರ್ಷಿಕ ಸಂತೋಷ ಕೂಟದ ಉತ್ಸವಕ್ಕೆ (Union Social) ಹೋಗುವುದಕ್ಕೆ ಬದಲಾಗಿ ಚಾಮುಂಡಿ ಬೆಟ್ಟದ ಕಡೆಗೆ ಸಂಚಾರ ಹೋಗಿದ್ದೆ. ಅಲ್ಲಿ ಶ್ರೀರಾಮಕೃಷ್ಣರ ಮೇಲೆ ಮತ್ತ್ತೇ ಎರಡು ಮೂರು ಪದ್ಯ ರಚಿಸಿದೆ ಮತ್ತು ಧ್ಯಾನ ಮಾಡಿದೆ!”

೧೯೨೬ನೆಯ ಫೆಬ್ರವರಿ ೧೪ನೆಯ ಭಾನುವಾರದ ದಿನಚರಿ:     
“ಬೆಳಿಗ್ಗೆ ಸ್ವಾಮೀಜಿಯ ಬಳೀಗೆ ಹೋಗಿದ್ದೆ. ಸರ‍್ ಜಾನ್ ಉಡ್ರಾಫ್ ಅವರ The world as power and power as mind ಓದಿದೆ.  ಅದನ್ನು ರೂಮಿಗೆ ತೆಗೆದುಕೊಂಡು ಬಂದಿದ್ದೇನೆ. ‘The morning Star’ ಅನ್ನೂ ಓದಿದೆ. ಟಿ.ವಿ. ಅಭಿರಾಮನ್ ಮತ್ತು ಹನುಮಂತಪ್ಪನವರರಿಗೆ ನಮ್ಮೂರಿನ ವಿಷಯವನ್ನೆಲ್ಲ ತಿಳಿಸಿದೆ. ಸಂಜೆ ಆಶ್ರಮಕ್ಕೆ ಆರತಿಗೆ ಹೋಗಿದ್ದೇವು”.

೧೯೨೬ ನೆಯ ಫೆಬ್ರವರಿ ೧೫ನೆಯ ಸೋಮವಾರದ ದಿನಚರಿ:  
“ಶ್ರೀರಾಮಕೃಷ್ಣ ಜನ್ಮೋತ್ಸವ ಸಮಾರಂಭಕ್ಕೆ ಹೋಗಿದ್ದೆ. (ಅದೂ ಹಿಂದೆ ಜನೆವರಿ ೧೫ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮೋತ್ಸವ ನಡೆದು ಬನುಮಯ್ಯ ಹೈಸ್ಕೂಲಿನಲ ಭವನದಲ್ಲಿಯೆ ನಡೆದಿತ್ತು). ಪ್ರಾರಂಭದಲ್ಲಿ ನಾನು ‘ಎಲ್ಲಿಹೆ?’ ‘ಎಂತಿಹೆ?’ ಎಂಬ ನನ್ನ ಎರಡು ಕವನಗಳನ್ನು ರಾಗವಾಗಿ ವಾಚಿಸಿದೆ.  ಅಲ್ಲದೇ ‘ಶ್ರೀ ರಾಮಕೃಷ್ಣ ಪರಮಹಂಸ’ ಎಂಬ ಹೊಸದಾಗಿ ರಚಿಸಿದ್ದ ಕವನವನ್ನೂ ಹಾಡಿದೆ. ಸಿ.ವಿ.ಕೃಷ್ಣಮೂರ್ತಿ ನನ್ನ ‘ಕರ್ನಾಟಕ ರಾಷ್ಟ್ರಗೀತೆ’ಯನ್ನು ಹಾಡಿದರು. ಅಧ್ಯಕ್ಷತೆ ವಹಸಿದ್ದ ಪ್ರೊ.ವೆಂಕಟೇಶ್ವರ ಐಯ್ಯರ ಅವರ ಭಾಷಣ ಉಜ್ವಲವೂ ಉನ್ಮೇಷನಕರವೂ(Brilliant and inspiring) ಆಗಿತ್ತು.  ಕಾರ್ಯದರ್ಶಿಗಳಲ್ಲಿ ಒಬ್ಬರಾದ ಕೃಷ್ಣರಾವ್ ಅವರ ಭಾಷಣವೂ ಸೊಗಸಾಗಿತ್ತು. ನಾ. ಕಸ್ತೂರಿ ವಂದನಾರ್ಪಣೆಯ ತಮ್ಮ ಭಾಷಣದಲ್ಲಿ ‘Let the spirit of Paramahamsa descend on Mr. Puttappa’ (ಪರಂಹಂಸರ ದಿವ್ಯ ಕೃಪೆ ಶ್ರೀ ಪುಟ್ಟಪ್ಪನವರ ಮೇಲೆ ತನ್ನ ಅನುಗ್ರಹ ವರ್ಷವನ್ನು ಕರೆದು ಇಳಿಯಲಿ.) ಎಂದು ಗುರುಹರಕೆ ಯಾಚಿಸಿದರು.  Yet, It did descend! (ಹೌದು, ಅದು ಇಳಿದೇ ಇಳಿಯಿತು!… ಟಿ.ವಿ.ಅಭಿರಾಮನ್ ಅವರಿಗೆ ನನ್ನ ಕೆಲವು ಕವನಗಳನ್ನು ಹಾಡಿದೆ”.

ಮೇಲಿನ ದಿನಚರಿಗಳಲ್ಲಿ ಟೆಲಿಗ್ರಾಂ ಭಾಷೆಯಲ್ಲಿ ಚುಟುಕು ಚುಟುಕವೆಂಬಂತೆ ಲಿಖಿತವಾಗಿರುವ ವಾಕ್ಯಗಳ ಅಂತರಾಳದಲ್ಲಿ ಎಂತಹ ಶ್ರೀಮಂತ ಅನುಭವದ ಒಂದು ಧ್ವನಿ ಪ್ರಪಂಚವೇ ಅಡಿಗೆ ಎಂಬುವುದನ್ನು ಪ್ರಾಯಶಃ ಗ್ರಹಿಸಲು ಕಷ್ಟವಾಗುತ್ತದೆ,  ವಾಚಕರಿಗೆ, ಆಶ್ರಮಕ್ಕೆ ಹೋದಾಗಲೆಲ್ಲ ಒಂದು ಆಧ್ಯಾತ್ಮಕ ತೀರ್ಥಯಾತ್ರೆಯಾಗುತ್ತಿತ್ತು ನನ್ನ ಚೇತನಕ್ಕೆ, ಮೇಲು ಮನಸ್ಸಿಗೆ ಅಗೋಚರವಾಗಿ, ತತ್ಕಾಲದಲ್ಲಿ ಅಪ್ರಜ್ಞಾಪೂರ್ವಕವಾಗಿ, ಗೋಪಾಲ್ ಮಹಾರಾಜ್ (ಸ್ವಾಮಿ ಸಿದ್ದೇರ್ಶವರಾನಂದರು ಅಷ್ಟು ಹೊತ್ತಿಗಾಗಲೇ ಗೋಪಾಲ್ ಮಹಾರಾಜ್ ಆಗಿಬಿಟ್ಟಿದ್ದರು) .ಅವರ ಅಕ್ಕರೆಯ ಮಾತುಕತೆಯ ಬೆಳಕು ಬಿಸುಪುಗಳಲ್ಲಿ, ಅದರ ವೈವಿಧ್ಯತೆ ಮತ್ತು ವ್ಯಾಪ್ತಿಯ ವಿಸ್ತಾರ ಔನ್ನತ್ಯಗಳಲ್ಲಿ, ಬುದ್ಧಿ ಹೃದಯಗಳೆರಡೂ ಅಮೃತಾಹಾರವನ್ನು ಸ್ವೀಕರಿಸಿ ದಿನದಿನಕ್ಕೂ ಹೆಚ್ಚು ಹೆಚ್ಚಾಗಿ ಸುತೀಕ್ಷಣವೂ ಸುಪುಷ್ಟವೂ ಆಗುತ್ತಿದ್ದವು. ಅವರು ಓದಲು ಕೊಡುತ್ತಿದ್ದ ಮಾಸ ಪತ್ರಿಕೆಗಳೂ ಪುಸ್ತಕಗಳೂ ಆಗಲೇ ತಕ್ಕ ಮಟ್ಟಿಗೆ ತೇಜಃ ಪುಂಜವಾಗಿದ್ದ ನನ್ನ ಜ್ಞಾನ ಕೋಶಕ್ಕೆ ಅನಂತ ಐಶ್ವರ್ಯವನ್ನೇ ಕಾಣಿಕೆ ನೀಡುತ್ತಿದ್ದವು.

ಆ ಬಾಡಿಗೆ ಮನೆಯ ಆಶ್ರಮದ ನಡುಮನೆಯಲ್ಲಿ ಒಂದು ಪೀಠದ ಮೇಲೆ ಶ್ರೀರಾಮಕೃಷ್ಣರು, ಮಹಾಮಾತೆ ಶ್ರೀ ಶಾರದಾದೇವಿಯವರು ಮತ್ತು ಸ್ವಾಮಿವಿವೇಕಾನಂದರು ಅವರ ಚಿತ್ರಗಳನ್ನು ಇಟ್ಟಿದ್ದರು. . ಪೂಜೆ ಅತ್ಯಂತ ನಿರಾಡಂಬರವಾಗಿ ನಡೆಯುತ್ತಿತ್ತು.  ಸಂಜೆ ದಿನವೂ ಮಂಗಳಾರತಿ ಮಾಡಿ ‘ಓಂ ಹ್ರೀಂ ಋತಂ’ ಹೇಳುತ್ತಿದ್ದರು. ಸಾಧಾರಣವಾಗಿ ಎಂಟೋ ಹತ್ತೋ ಹದಿನೈದೋ ಜನಕ್ಕಿಂತ ಹೆಚ್ಚಾಗಿರುತ್ತಿರಲಿಲ್ಲ; ಆಶ್ರಮವನ್ನೆಲ್ಲ ಒಂದು ನಿಃಶಬ್ದತೆ ಮತ್ತು ಪ್ರಶಾಂತಿ ತುಂಬಿರುತ್ತಿತ್ತು. ಹೇಳಿ ಮಾಡಿಸಿದಂತಿರುತಿತ್ತು ಧ್ಯಾನಕ್ಕೆ ಆ ಪವಿತ್ರ ಸನ್ನಿವೇಶ. ಆರತಿ ಸಮಯಕ್ಕೆ ಹೋಗಿ ಭಾಗಿಯಾದಾಗಲೆಲ್ಲ ನನ್ನ ಜೀವಕ್ಕೊಂದು ಆಗ್ನಿ ಸ್ನಾನವಾಗುತ್ತಿತ್ತು.

ಮೇಲಿನ ದಿನಚರಿಯಲ್ಲಿ ಉಕ್ತವಾಗಿರುವಂತೆ ಶ್ರೀರಾಮಕೃಷ್ಣ ಜನ್ಮೋತ್ಸವದ ಸಂದರ್ಭದಲ್ಲಿ ನಾನು ಅಂದು ಹಾಡಿದ ‘ಎಲ್ಲಿಹೆ?’ ‘ಎಂತಿಹೆ’ ? ಎಂಬ ಕವನಗಳು ೧೯೩೦ರಲ್ಲಿ ‘ಕೊಳಲು’ ಕವನ ಸಂಗ್ರಹದಲ್ಲಿ ಅಚ್ಚಾಗಿವೆ. ‘ಶ್ರೀರಾಮಕೃಷ್ಣ ಪರಮಹಂಸ’ ‘ಅಗ್ನಿ ಹಂಸ’ ಕವನ ಸಂಗ್ರಹದಲ್ಲಿ ಅಚ್ಚಾಗಿ ಸುಪ್ರಿಸಿದ್ಧವೇ ಆಗಿದೆ. ಇನ್ನೂ ಕಸ್ತೂರಿ ಮತ್ತು ಸ್ವಾಮಿ ಸಿದ್ದೇಶ್ವರಾನಂದರಿಂದ ನನ್ನ ಸಾಹಿತ್ಯಕರ ರಸ ಸಾಹಸಕ್ಕೆ ಒದಗಿದ ಸ್ಪೂರ್ತಿ ಮತ್ತು ಉತ್ತೇಜನಗಳನ್ನು ಕುರಿತು ಉಚಿತ ಸಂದರ್ಭದಲ್ಲಿ ಹೇಳುತ್ತೇನೆ.

೧೯೨೬ನೆಯ ಫೆಬ್ರವರಿ ೧೬ನೆಯ ಮಂಗಳವಾರದ ದಿನಚರಿ:   
“ಸರ‍್ ಜಾನ್ ಉಡಾಫೆ ಅವರ  The world as Power and Power as Mind ಓದಿದೆ… ಸಂಜೆ ಆಶ್ರಮಕ್ಕೆ ಹೋಗಿದ್ದೆ. ನನ್ನ ಕೆಲವು ಕವನಗಳನ್ನು ಹಾಡಿದೆ, ವಾಚಿಸಿದೆ. ತುಂಬಾ ಮೆಚ್ಚಿಕೊಂಡರು. ಕಲ್ಕತ್ತಾದಿಂದ ಸಂಗೀತ ಕೇಳಲುವ ಐರಲೆಸ್ ಟೆಲಿಗ್ರಫಿ ಹೌಸ್ ಗೆ ಹೋದೆವು. ಆದರೆ ಬರಿಯ ವಾರ್ತೆ ಕೇಳಿದೇವು, ಸಂಗೀತವೇನೂ ಕೇಳಿಸಲಿಲ್ಲ.”

ಆಗ ಇನ್ನೂ ರೇಡಿಯೋ ಪ್ರಚಾರಕ್ಕೆ ಬಂದಿರಲಿಲ್ಲ. ಅರಮನೆಯವರಿಗಾಗಿ ಮಾತ್ರ ತರಿಸಿ ಅರಮನೆಗೆ ಸೇರಿದ್ದ ಫಿರಂಗಿ ಮನೆಯ ಬಳಿಯಲ್ಲಿ ಅದನ್ನು ಖಾಸಗಿಯಾಗಿ  ಇಟ್ಟುಕೊಂಡಿದ್ದರು. ಸ್ವಾಮೀಜಿ ಅಧಿಕಾರಿಗಳಿಂದ ಅಪ್ಪಣೆ ಪಡೆದು ನನ್ನನ್ನೂ ಕಸ್ತೂರಿ ಯನ್ನು, ಬಹುಶಃ ತಾತಾಗಾರು ಅವರನ್ನೂ, ಅಲ್ಲಿಗೆ ಕರೆದುಕೊಂಡು ಹೋದರು.  ರಾತ್ರಿಯಾಗಿದ್ದಂತೆ ನೆನಪು. ನಮಗೆ ಅಚ್ಚರಿಯೊ ಅಚ್ಚರಿ; ಸುಮ್ಮನೆ ಒಂದು ಗುಂಡಿ ಒತ್ತಿ ಒಂದು ಗುಂಡಿ ತಿರುಗಿಸುವುದರಿಂದ ಒಮ್ಮೆ ಕಲ್ಕತ್ತಾದಿಂದ, ಒಮ್ಮೆ ಆ‌ಸ್ಟ್ರೇಲಿಯಾದಿಂದ, ಒಮ್ಮೆ ಜಗತ್ತಿನ ಇನ್ನಾವುದೋ ಸುದೂರದ ಪಟ್ಟಣದಿಂದ ಮಾತು ಕೇಳೀಬರುತ್ತಿತ್ತು.  ಈಗ ಎಳೆ ಮಕ್ಕಳಿಗೂ ಅತ್ಯಂತ ಸರ್ವ ಸಾಧಾರಣ ವಿಷಯವಾಗಿರುವ ಅದು, ದನಕಾಯುವವರೂ ಗಾರೆ ಕೆಲಸದವರೂ ಜಲಗಾರರೂ ಟ್ರಾನ್ಸಿಸ್ಟರ‍್ ರೂಪದಲ್ಲಿ ಹಿಡಿದು ಉಪಯೋಗಿಸುತ್ತಿರುವ ಅದು, ಆಗ ಅರಮನೆಯವರಿಗೂ ಅತ್ಯಂತ ದುರ್ಲಭ ಭೋಗವಸ್ತುವಾಗಿತ್ತು.

೧೯೨೬ನೆಯ ಫೆಬ್ರವರಿ ೧೭ನೆಯ ಬುಧವಾರದ ದಿನಚರಿ :      
“ಸಿದ್ದೇಶ್ವರಾನಂದರು ನನ್ನ ದೀನ ನಿವಾಸಕ್ಕೆ ಆಗಮಿಸಿ, (Siddheswarananda visited my humble adobe and sanctified it.) ಅದನ್ನು ಪವಿತ್ರಗೊಳಿಸಿದರು… ಕನಕಶೆಟ್ಟರಿಗೆ ಐದು ರೂಪಾಯಿ ಕೊಟೆ… ನಾನೊಬ್ಬನೇ ಬೆಟ್ಟದ ಕಡೆಗೆ ಸಂಚಾರ ಹೋಗಿದ್ದೆ. ಸುಮಾರು ಎರಡು ಮೂರು ದಿನಗಳಿಂದ ಏಕಾಂತದ ಆನಂದ ಅನುಭವಿಸಿರಲಿಲ್ಲ. (I had not the bliss of solitude).ಅದಕ್ಕಾಗಿ ಪರಿತಪಿಸುತ್ತಿದ್ದೆ.  (I was hankering for it.) ಇವೊತ್ತು ಬೂದಿ ಬುಧವಾರದ ಪ್ರಯುಕ್ತ ಬೆಳಿಗ್ಗೆ ಕ್ಲಾಸು ಇತ್ತು… ಹೇ ಜಗಜ್ಜನನಿ ಓಂ!”

ಯಾವುದು ದಿನಚರಿಯಲ್ಲಿ ಒಂದೇ ವಾಕ್ಯದಲ್ಲಿ ವರದಿಗೊಂಡಿದೆಯೊ ಆ ಘಟನೆ-ಸ್ವಾಮಿವ ಸಿದ್ದೇಶ್ವರಾನಂದರು ನನ್ನ ರೂಮಿಗೆ ಭೇಟಿಕೊಟ್ಟಿದ್ದು- ತುಂಬಾ ಮಹತ್ವಪೂರ್ಣವಾದದ್ದು. ಶ್ರೀ ಗುರುದೇವನ ಕರುಣಾಹಸ್ತ ಒಯ್ಯೋಯ್ಯನೆ ನನ್ನ ಕಡೆಗೆ ಬಳಿ ಸಾರುತ್ತಿತ್ತು. ಎತ್ತಿ ಕೊಂಡೊಯ್ಯಲು! ಸ್ವಾಮಿಜಿ ಕೆಲವು ದಿನಗಳಿಂದಲೂ ನನ್ನ ಕೊಠಡಿಗೆ ಭೇಟಿ ಕೊಡುವ ಅಪೇಕ್ಷೆಯನ್ನು ಪ್ರಕಟಪಡಿಸುತ್ತಲೇ ಇದ್ದರು.  ನಾನು ಮುಂದೆ ಹಾಕುತ್ತಿದ್ದೆ. ಏಕೆಂದರೆ ಕಸ ಕೊಳೆಗಳಿಂದಲೂ ಅಸ್ತವ್ಯಸ್ತವಾಗಿದ್ದ ಪುಸ್ತಕ ಟ್ರಂಕು ಬಟ್ಟೆ ಬರೆಗಳಿಂದಲೂ ಯೋಗ್ಯರ ಭೇಟಿಗೆ ಅನರ್ಹವಾಗಿದ್ದ ನನ್ನ ರೂಮನ್ನು ಸ್ವಲ್ಪ ಶುಚಿಗೊಳಿಸಿ ಕ್ರಮಪಡಿಸಿದ ಮೇಲೆಯೇ ಅವರನ್ನು ಆಹ್ವಾನಿಸಬೇಕೆಂದು ಮನಸ್ಸು ಮಾಡಿದ್ದೆ. ಆ ದಿನ ಬೂದಿ ಬುಧವಾರದ ಪ್ರಯುಕ್ತ ಬೆಳಿಗ್ಗೆ ಕ್ಲಾಸಾಗಿತ್ತು.  ಪ್ರೋ.ವಾಡಿಯಾರವರ ಪಿರಿಯಡ್  ಕ್ಲಾಸನ್ನು ಮುಗಿಸಿ, ಒಂಬತ್ತು ಗಂಟೆ ಹೊತ್ತಿಗೆ ಆಶ್ರಮಕ್ಕೆ ಹೋದೆ. ಸ್ವಾಮೀಜಿ ಪೂಜೆ ಮುಗಿಸಿದ ಮೇಲೆ ನನ್ನ ಸಂಗಡ ಹೊರಟರು. ಜೊತೆಯಲ್ಲಿ ತಾತಾಗಾರು ಇದ್ದರು.

ಬಂದವರಿಗೆ ಕೂತುಕೊಳ್ಳಲು ಕುರ್ಚಿ ಬೆಂಚು ಯಾವ ಪೀಠಪಕರಣವೂ ಇರಲಿಲ್ಲ. ಹಾಸಿದ್ದ ಚಾಪೆಯ ಮೇಲೆ ಕುಳಿತು, ಸುರುಳಿ ಸುತ್ತಿ ಗೋಡೆಗೆ ಆನಿಸಿರುತ್ತಿದ್ದ ಹಾಸುಗೆ ಗಂಟನ್ನು ಒರಗಿಕೊಂಡು ಓದುತ್ತಿದ್ದುದು ನನ್ನ ರೂಢಿಯಾಗಿತ್ತು.  ಆದ್ದರಿಂದ ಬಂದ ಅಭ್ಯಾಗತರು, ನನ್ನಂತೆಯೆ ವಿದ್ಯಾರ್ಥಿಗಳಾಗಿ ಸ್ನೇಹಿತರಾಗದಿದ್ದರೆ, ನಿಂತೇ ಎಲ್ಲ ವ್ಯವಹಾರಗಳನ್ನೂ ಮುಗಿಸಿ ಹೊರಡಬೇಕಾಗುತ್ತಿತ್ತು. ಸ್ವಾಮೀಜಿ ನಿಂತೆ ಎಲ್ಲವನ್ನೂ ವೀಕ್ಷಿಸಿದರು:

ಸೊಂಟೆತ್ತರದ ಸಣ್ಣ ಬಿರುವಿನಲ್ಲಿ ನನ್ನ ಲೈಬ್ರರಿ ಇತ್ತು. ಷೇಕ್ಸಪೀಯರ‍್, ಮಿಲ್ಟನ್, ವರ್ಡ್ಸ ವರ್ತ   ಮುಂತಾದ ಇಂಗ್ಲೀಷ್ ಕವಿಗಳ ಕಂಪ್ಲೀಟ್ ವರ್ಕಸ್ (Complete Work) ಸ್ವಾಮಿ ವಿವೇಕಾನಂದರ ಭಾಷಣ ಲೇಖನ ಸಂಗ್ರಹ, (Selected Speeches and Writings of Swami vivekananda) ಸುರೇಂದ್ರನಾಥ ಬ್ಯಾನರ್ಜಿ, ಸರೋಜಿನಿ ನಾಯ್ಡು ಅಂತಹ ದೇಶಭಕ್ತರ ಭಾಷಣಗಳ ಸಂಗ್ರಹಗಳು, ಸ್ವಾಮಿ ರಾಮತೀರ್ಥ, ಭಾಯಿ ಪರಮಾನಂದ, ಬಾಬಾ ಭಾರತಿ ಅಂತಹವರ ಕೃತಿಗಳು, ಶ್ರೀ ರಾಮಕೃಷ್ಣರ ಬೃಹತದ ಜೀವನ ಚರಿತ್ರೆ, World’s Classic(ವರ್ಲ್ಡ್‌ಸ್ಸ ಕ್ಲಾಸಿಕ್ಸ್) ನ ಪುಸ್ತಕ ಶ್ರೇಣಿ,ಟಾಲ್ ಸ್ಟಾಯ್ ಕೃತಿಗಳು ಮತ್ತು ಜೀವನ ಚರಿತ್ರೆ, ಇತ್ಯಾದಿ ಇತ್ಯಾದಿ ಪ್ರಾಚ್ಯ ಪಾಶ್ಚಾತ್ಯ ಸಾಹಿತ್ಯಕ ಮತ್ತು ದಾರ್ಶನಿಕ ಗ್ರಂಥಗಳ ಪುಟ್ಟ ಸಂಗ್ರಹವಿತ್ತು .ಸ್ವಾಮೀಜಿ ವೀಕ್ಷಿಸಿದರು ಮತ್ತೆ:

ಗೋಡೆಗಳ ಮೇಲೆ ಆಗಿನ ಸುಪ್ರಿಸದ್ಧ ದೇಶಭಕ್ತರೆಲ್ಲರೂ ಹಂತಿಗೊಂಡಿದ್ದರು. ಆ ಜೋಡಣೆಯಲ್ಲಾಗಲಿ ಆಯ್ಕೆಯಲ್ಲಾಗಲಿ ಯಾವ ಪಕ್ಷಪಾತವೂ ಇರಲಿಲ್ಲ. ಗಾಂಧೀಜಿ, ವಿವೇಕಾನಂದರು, ಅರವಿಂದರು, ಠಾಕೂರರ ನಡುವೆ ಮಹಮ್ಮದಾಲಿ, ಷೌಕತಾಲಿ ಯಂತಹರೂ ಪೂಜೆ ಗೊಂಡಿದ್ದರು. ಪುಟ್ಟ ಬಿರುವಿನ ಕನ್ನಡಿ ಬಾಗಿಲಿಗೆ ಶ್ರೀರಾಮಕೃಷ್ಣರ ಒಂದು ಬಣ್ಣ ಚಿತ್ರ (ಯಾವುದೊ ಮಾಸಪತ್ರಿಕೆಯಿಂದ ಹರಿದದ್ದು) ಗೋಂದಿನ ಮಜ್ಜನಾನಂತರ ಅಂಟಿಸಿಕೊಂಡಿತ್ತು:

ಸ್ವಾಮೀಜಿ ಬಹುಶಃ ಅಂತಹ ದುರವಸ್ಥೆಯ ಕೊಠಡಿಯಲ್ಲಿ ಅಂತಹ ವೈಭವದ ಪಟಗಳು ಮತ್ತು ಪುಸ್ತಕಗಳು ಗಿತ್ತುಗರ್ದುದನ್ನು ಕಂಡಿರಲಿಲ್ಲ? ನನ್ನ ಅಂತರಂಗದ ಚೇತನದ ಭೂಮಿಕೆಯ ಭವ್ಯತೆಗೂ ನನ್ನ ಬಹಿರಂಗದ ಸನ್ನಿವೇಶದ ಶೋಚನೀಯ ಸ್ಥಿತಿಗೂ ಇದ್ದ ತಾರತಮ್ಯಕ್ಕೆ ಅವರು ತುಂಬ ಖಿನ್ನರಾದರೆಂದು ತೊರುತ್ತದೆ.  ನಾನು ನನ್ನ ಕೊಠಡಿಯೂ ಸುವ್ಯವಸ್ಥಿತವಾಗಿ ಪ್ರದರ್ಶನಯೋಗ್ಯವಾದ ವಸ್ತು ಸಂಗ್ರಹ ಶಾಲೆಯಂತಲ್ಲದೆ ಬರಿಯ ಒಂದು ಮಹಾಲಂಬರಿನಂತೆ, ಬೆಲೆಯುಳ್ಳ ಹಳೆಯ ಸಾಮಾನಿನ ಮಹೋಗ್ರಾಣದಂತೆ, ತೋರಿರಬೇಕು ಅವರಿಗೆ.

ಮತ್ತೇ ವೀಕ್ಷಿಸಿದರು, ಸುತ್ತಲೂ: ಆ ಸಂತೆಪೇಟೆಯ ಸನ್ನಿವೇಶವೂ ಬರಿಯ ದಿನಸಿ, ಗಾಡಿ, ಧೂಳಿ, ಘಾಟು, ಮೆಣಸಿನಕಾಯಿ, ಕೊತ್ತಂಬರಿ, ಹುರುಳಿ ಇತ್ಯಾದಿ ಮೂಟೆ ಮೂಟೆಮೂಟೆಗಳ ಗೊಂದಲ, ಗಲಾಟೆ, ಕಾವ್ಯಕ್ಕಾಗಲಿ ಕಲೆಗಾಗಲಿ, ತತ್ತ್ವಕ್ಕಾಗಲಿ ಅಲ್ಲಿ ತಲೆಹಾಕಲೂ ಪ್ರವೇಶವಿಲ್ಲ. ಕೊಠಡಿಯ ಮೇಲುಛಾವಣಿಯೊ ಹಲಗೆ ಹಾಕಿ ಮಣ್ಣಿನ ಮೆತ್ತು ಹಾಕಿದ್ದಾರೆ! ಅದೂ ಅಲ್ಲ್ಲಿ ಧರಿಸಿಕೊಂಡು ಬೀಳುತ್ತದೆ.  ಹೋಟೆಲಿನ ಅಡುಗೆಮನೆಯ ಹೊಗೆಗೆ ಅದು ಆಡುಂಬೊಲವಾಗಿರುವುದಕ್ಕೆ ಸಾಕ್ಷಿಯಾಗಿ ಕರಿಬಲೆ ಕುಟ್ಟೆ ಹಿಡಿದಿದ್ದ ತೊಲೆಗಳಿಗೆ ಜೋತುಬಿದ್ದಿದೆ. ಓಡು ಹೆಂಚಿನ ಹೊದಿಕೆಯ ಆ ಕಟ್ಟಡ ನೀರು ಸೋರಿ ಸೋರಿ ಗೋಡೆಗಳ ಮೇಲೆ ನಾನಾ ನವ್ಯ ಕಲಾವಿನ್ಯಾಸಗಳನ್ನು ರಚಿಸಿದೆ! ಸಧ್ಯ: ಅವರು ಬಂದದ್ದು ಹಗಲಾಗಿತ್ತು. ರಾತ್ರಿಯಾಗಿದ್ದರೆ? ದೇವರೇ ಗತಿ! ಅಲ್ಲಿದ್ದ ತಿಗಣೆ ದಂಡು ಇನ್ನೂ ಹಗಲು ಧಾಳಿ ಪ್ರಾರಂಭಿಸುವಷ್ಟು ವೈಜ್ಞಾನಿಕ ಪ್ರಗತಿ ಸಾಧಿಸಿರಲಿಲ್ಲ!

“Puttappa how can a poet like you live in this dingy place?” (ಪುಟ್ಟಪ್ಪ, ಕವಿಯಾಗಿರುವ ನಿಮ್ಮಂಥಹವರು ಈ ಅಸಹ್ಯ ಸ್ಥಳದಲ್ಲಿ ವಾಸಮಾಡುತ್ತಿರುವುದಾದರೂ ಹೇಗೆ?) ಹೊರ ಹೊಮ್ಮಿತ್ತು ಸ್ವಾಮೀಜಿಯ ದುಃಖಧ್ವನಿ. ತಾತಗಾರು ಅವರೂ ಇನ್ನೂ ಹೆಚ್ಚು ವಾಚ್ಯವಾಗಿದೆಯ ದನಿಗೂಡಿಸಿದರು.

ಸ್ವಾಮೀಜಿಯವರಿಗೆ ಕಾಣಿಸುತ್ತಿದ್ದ ದುಃಕಕಾರಣವಾದ ದಾರುಣ ಪರಿಸ್ಥಿತಿ ನನಗೇನೂ ಕಾಣಿಸುತ್ತಿರಲಿಲ್ಲ. ಆ ಸ್ಥಳದ ಮತ್ತು ಸನ್ನಿವೇಶದ ಸಮರ್ಥನೆಯ ಪರವಾಗಿ ಎಂಬಂತೆ, ಹೋಟೇಲಿನ ಒಳ ಅಂಗಳದಲ್ಲಿದ್ದ ಒಂದು ದೊಡ್ಡ ಸಂಪಗೆ ಮರದತ್ತ ಅವರ ಗಮನ ಸೆಳೆದು ಹೇಳಿದೆ: “Why Swamiji, what is wrong with the place?. There is a beautiful Champak Tree! (ಯಾಕೆ, ಸ್ವಾಮೀಜಿ ಏನಾಗಿದೆ ಈ ಜಾಗ? ನೋಡಿ ಅಲ್ಲಿ, ಎಂತಹ ಸೊಗಸಾದ ಸಂಪಗೆ ಮರ ಇದೆ!)

ನಾನೆಂದುದಕ್ಕೆ ಸ್ವಾಮೀಜಿ ತಡೆಯಲಾರದೆ ನಕ್ಕುಬಿಟ್ಟರು, ನನ್ನ ಕಡೆಯೆ ನೋಡುತ್ತಾ, ಕನಿಕರಿಸಿ.

ಆದರೂ ಸ್ವಾಮೀಜಿ, ‘ಆ ಕಚಡ ಜಾಗದಲ್ಲಿರುವುದರಿಂದ ಆರೋಗ್ಯ ಕೆಡುತ್ತದೆ’ ಎಂದು ನಾನಾ ರೀತಿಯಿಂದ ಬುದ್ಧಿ ಹೇಳಿ ಚಿಂತಿಸುತ್ತಾ ಬೀಳ್ಕೋಂಡರು.

ಅವರಿಗೆ ನನ್ನಲ್ಲಿದ್ದ ಆಸಕ್ತಿ ಮಾತ್ರ ನೂರ‍್ ಮಡಿಯಾಯಿತು ನನ್ನ  ಕೊಠಡಿಯಲ್ಲಿದ್ದ ಪಟಗಳನ್ನೂ ಪುಸ್ತಕಗಳನ್ನೂ ಕಂಡು. ಬಹುಶಃ ಅಂದು ಅವರ ಪ್ರಾರ್ಥನೆಯಲ್ಲಿ ವಿಶೇಷವಾಗಿ ನನ್ನ ಯೋಗಕ್ಷೇಮ ಮತ್ತು ಶ್ರೇಯಸ್ಸೂಗಳು ಸೇರಿದುವೆಂದು ಭಾವಿಸಿದರೆ ಅದು ಬರಿಯ ಊಹೆಯಾಗಲಾರದೆಂದು ನಂಬುತ್ತೇನೆ.

೧೯೨೬ನೆಯ ಫೆಬ್ರವರಿ ೧೮ನೆಯ ಗುರುವಾರದ ದಿನಚರಿ:       
ಬೆಳಿಗ್ಗೆ ಸಿ.ವಿ.ಕೃ.ಸಂಗಡ Political Philosophy ಓದಿದೆ. ಆಶ್ರಮಕ್ಕೆ ಹೋಗಿ ಜಾನ್ ಉಡ್ರಾಫ್ ಅವರ The World as Power and Relaity ತೆಗೆದುಕೊಂಡೆ. ತರಗತಿಯಲ್ಲಿ ಹೇಗೆಲ್ (Hegel) ದರ್ಶನದ ಮೂಲತತ್ವಗಳ ವಿಚಾರವಾಗಿ ತುಂಬಿ ಚರ್ಚೆ ನಡೆಯತು. ಯಾವ ಇತ್ಯರ್ಥಕ್ಕೂ ಬರಲಾಗಲಿಲ್ಲ. ಟಿ.ವಿ. ಅಭಿರಾಮನ್ ತುಂಬ ವಿಚಿತ್ರ ಸಂಗತಿಗಳನ್ನು ನನಗೆ ಹೇಳಿದರು. ಲಲಿತಾದ್ರಿಯ ಬಳಿಯ ತಾವರೆ ಕೊಳದ (Lotus Pond) ದಡದ ಮೇಲೆ ಕುಳಿತು ಮಾತಾಡಿದೆವು. ಒಂದು ಇಂಗ್ಲೀಷ್ ಕವನ ‘The Vision’ ರಚಿಸಿದೆ”.

(*ನನಗಿನ್ನೂ ನೆನಪಿದೆ ಆ ದಿನದ ಚರ್ಚೆಯಲ್ಲಿ ಇಡೀ ಪಿರಿಯಡ್ಡೇ ಮುಗಿದು ಹೋಯ್ತು. ಪ್ರೋ.ವಾಡಿಯಾ The Evolving Absolute of Hegel ಹೇಗೆಲ್ಲನ ಕೇವಲ ತತ್ವದ ವಿಕಾಸವಾದವನ್ನು ವಿವರಿಸುತ್ತಿದ್ದರು. ನಾನ Absolute ಮತ್ತು  Evolution ಎರಡೂ ಪರಸ್ಪರ ವಿರೋಧ ಭಾವನೆಗಳು ಎಂದು ವಾದಿಸತೊಡಗಿದೆ.  ಸರ್ವ ಸಂಪೂರ್ಣವಾದುದಕ್ಕೆ ವಿಕಾಸವಾಗಿ ಪಡೆಯಬೇಕಾದುದು ಏನಿರುತ್ತದೆ?ಹಾಗೆ ವಿಕಾಸವಾಗಿಯೇ ಏನನ್ನಾದರೂ ಅದು ಸಾಧಿಸುವುದು ಇದ್ದ ಪಕ್ಷದಲ್ಲಿ ಅದನ್ನು Absolute ಎಂದು ಕರೆಯುವುದೇ ಅಭಾಸವಾಗುತ್ತದೆ. ನನ್ನದು ಭಾರತೀಯ ವೇದಾಂತ ದೃಷ್ಟಿಯನ್ನು ಸಮರ್ಥಿಸುವುದೇ ಉದ್ದೇಶವಾಗಿತ್ತು. ಇಲ್ಲಿಯೂ ಪರಬ್ರಹ್ಮದಿಂದಲೇ ಸೃಷ್ಟಿ ಹೊಮ್ಮುತ್ತದೆ.  ಅದರ ವಿವರಣೆ ಮಾತ್ರ ಹೇಗೆಲ್ಲನದಕ್ಕಿಂತಲೂ ಹೆಚ್ಚು ತರ್ಕ ಸಮಂಜಸವಾಗಿದೆ. ಏಕೆಂದರೆ ತರ್ಕಾತೀತವಾಗಿ ಕಾಯೃ ಕಾರಣ ವಾದಕ್ಕೇ ಅದು ಅತೀತವಾಗಿದೆ. ಅದ್ವೈತವು ‘ಮಾಹೆ’ ಎಂದೂ ವಿಶಿಷ್ಟಾದ್ವೈತಾದಿಗಳು, ‘ಲೀಲೆ’ ಎಂದೂ ಅದು ಆನಂದದ ಅಭಿವ್ಯಕ್ತಿಯೆಂದೂ ಅವಶ್ಯಕತೆಯದ್ದಲ್ಲವೆಂದೂ, ಅಂದರೆ ಯಾವ ಅವಶ್ಯಕತೆಗೂ ಕಟ್ಟುಬಿದ್ದು ಪರಬ್ರಹ್ಮವು- ಯಾವುದು ಸ್ವಯಂ ಪೂರ್ಣವೊ, ಯಾವುದು ಸ್ವಯಂ ತೃಪ್ತವೋ,ಯಾವುದನ್ನು ‘ನಾನ ವಾಪ್ತಮವಾಪ್ತವ್ಯಂ’ ಎಂದು ವರ್ಣಿಸಿದ್ದಾರೋ ಆ ಕೇವಲ ತತ್ತ್ವವು-ಸೃಷ್ಟಿಯಲ್ಲಿ ತೊಡಗುವುದಿಲ್ಲವೆಂದೂ ಸಿದ್ದಾಂತಿಸುತ್ತದೆ.  ಅಂತೂ ನಾವಿಬ್ಬರೆ ಒಂದು ಗಂಟೆಯನ್ನೆಲ್ಲ ವಾದ ವಿವಾದಗಳಲ್ಲಿ ಕಳೆದೆವು. ಉಳಿದ ನನ್ನ ವಿದ್ಯಾರ್ಥಿನಿ ಮಿತ್ರರು ತುಸು ಬೆರಗುವಟ್ಟು, ಪ್ರೇಕ್ಷಕರಾಗಿ ಕುಳಿತ್ತಿದ್ದರು. ಕಡೆಗೂ ಪ್ರೊ.ವಾಡಿಯಾ ಸ್ವಲ್ಪ ಅಸಮಾಧಾನದ ಧ್ವನಿಯಿಂದಲೇ “Alright, let us stop. We shall continue if necessary, in the next period.” (ಸರಿ ಬಿಡಿ, ಇಲ್ಲಿಗೆ ನಿಲ್ಲಿಸೋಣ, ಅವಶ್ಯಕವಿದ್ದರೆ ಮುಂದಿನ ಪಿರಿಯಡ್ಡಿನಲ್ಲಿ ಮುಂದುವರಿಸೋಣ). ಎಂದು ಗೌನನ್ನು ಸರಿಪಡಿಸಿಕೊಳ್ಳುತ್ತಾ ವೇದಿಕೆಯಿಂದಿಳಿದು ತಮ್ಮ ಕೊಠಡಿಗೆ ನಡೆದುಬಿಟ್ಟರು)

ಪ್ರೋ.ವಾಡಿಯಾ ಅವರಿಗೆ ಸಮಾಜಶಾಸ್ತ್ರದಲ್ಲಿದ್ದ ಆಸಕ್ತಿಯಾಗಲಿ ಪಾಂಡಿತ್ಯವಾಗಲಿ ತತ್ವಶಾಸ್ತ್ರದಲ್ಲಿ ಇರಲಿಲ್ಲ. ವಿದ್ಯಾರ್ಥಿಯಾಗಿ ಅವರು ವಿದೇಶಗಳಲ್ಲಿ ಅಧ್ಯಯನ ಮಾಡಿದ್ದೂ ಮುಖ್ಯವಾಗಿ ಸಮಾಜಶಾಸ್ತ್ರವನ್ನೇ ಎಂಬ ಪ್ರತೀತಿಯೂ ಇತ್ತು.

೧೯೨೬ನೆಯ ಫೆಬ್ರವರಿ ೧೯ನೆಯ ಶುಕ್ರವಾರದ ದಿನಚರಿ:        
“ಸಿವಿ.ಕೃ. ಮನೆಗೆ ಹೋದೆ. ‘ಎಥಿಕ್ಸ್’ ಓದಿದೆ ಅವರೊಡನೆ, ಸಂಜೆ ಟಿ.ವಿ.ಅವರೊಡನೆ ಲಲಿತಾದ್ರಿಯ ಬಳಿಗೆ ದೀರ್ಘ ಸಂಚಾರ ಹೋದೆ. ಕಾವ್ಯ ಯೋಗ ದರ್ಶನ ಇತ್ಯಾದಿ ಕುರಿತು ನಾವಿಬ್ಬರೂ ಅನೇಕ ವಿಷಯ ಮಾತಾಡಿದೇವು. ರಾತ್ರಿ ರೂಮಿಗೆ ಬಂದ ಮೇಲೆ ಅವರಿಗೆ ನನ್ನ ‘ವಸಂತ ದೂತ’ ಓದಿ ಹೇಳಿದೆ”[2]

೧೯೨೬ನೆಯ ಫೆಬ್ರವರಿ ೨೦ನೆಯ ಶನಿವಾರದ ದಿನಚರಿ:

“ಬೆಳಿಗ್ಗೆ ವಾಡಿಯಾ ಕ್ಲಾಸಿಗೆ ಹೋದೆ. ಆಶ್ರಮಕ್ಕೆ ಬಂದು ಸ್ವಾಮೀ ಸಿದ್ದೇಶ್ವರಾನಂದರನ್ನು ಕಂಡೆ, ಸ್ವಾಮೀಜಿಗೂ (ವಿವೇಕಾನಂದರು) ಅಶ್ವಿನಿಕುಮಾರ ದತ್ತರಿಗೂ ನಡೆದ ಸಂಭಾಷಣೆಯನ್ನು ಓದಿದೆ. The World As Power and Reality ಓದಿದೆ. ಸಂಜೆ ಟಿ.ವಿ.ಅ. ಮತ್ತು ಹನುಮಂತಪ್ಪ ಅವರನ್ನೊಡಗೊಂಡು ಲಲಿತಾದ್ರಿಯ ಕಡೆ ವಾಕ್ ಹೋದೆ.  ಟಿ.ವಿ.ಅ. ಅವರಿಗೆ ವರ್ಡ್ಸ ವರ್ತ ಮತ್ತು ಠಾಗೂರ ಕೃತಿಗಳನ್ನು ಓದಿದೆ”

೧೯೨೬ನೆಯ ಫೆಬ್ರವರಿ ೨೧ನೆಯ ಭಾನುವಾರದ ದಿನಚರಿ:     
“ಬೆಳಿಗ್ಗೆ ಸಿ.ವಿ.ಕೃ. ಅವರಲ್ಲಿಗೆ ಹೊಗಿದ್ದೆ: ಎಥಿಕ್ಸ್ (Ethics)ಅಧ್ಯಯನ ಮಾಡಿದೆವು. ಎಸ್.ವಿ.ಕ. ಅವರಿಂದ ಪೋಪ ಕವಿಯ ಕೃತಿಗಳನ್ನು ತೆಗೆದುಕೊಂಡೆ. ನಮ್ಮ ಗ್ರೂಫ್ ಪೋಟೋ ತೆಗೆಸಿಕೊಂಡೆವು. ಟಿ.ವಿ.ಅ  ಮತ್ತು ನಾನು ತುಂಬ ದೂರ ವಾಕ್ ಹೋದೆವು. ಪ್ರಕೃತಿ ಸೌಂಧರ್ಯದ ವಿಚಾರ ಮಾತಾಡಿದೆವು; ಕೆಂಡವಾಗಿ ಗುಂಡಗೆ ಮುಳುಗುತ್ತಿದ್ದ ಹೊನ್ನುಂಡೆಯ ಸೂರ್ಯನನ್ನು ವೀಕ್ಷಿಸಿದೇವು. ನಾನೊಂದು ಕನ್ನಡ ಕವನ ರಚಿಸಿದೆ: ‘ರಂಜಿಪ ಸಂಜೆ ಸೂರ್ಯ ತರುವೆನು ಇತ್ಯಾದಿ’ ಟಿ.ವಿ.ಅ.ಅವರಿಗೆ ಠಾಕೂರನ್ನು ಓದಿದೆ”.

೧೯೨೬ನೆಯ ಫೆಬ್ರವರಿ ೨೨ನೆಯ ಸೋಮವಾರದ ದಿನಚರಿ :  
“ಹಾಗಾದರೆ ಬಾ, ಓ ಬ್ರಹ್ಮಾಂಡದ ಅಧಿಪತಿಯೆ, ನನ್ನ ಹೃದಯದಲ್ಲಿ ನಿನ್ನ ನಿತ್ಯ ತಾಂಡವವೆಸಗು. (Come thou LOrd of Brahmanda and  Dance they eternal dance on my heart)… I narrated the story pathetic of my life to Mr. T.V. Abhiraman, Om! Om! (ನನ್ನ ದಾರುಣ ಜೀವನ ಕಥೆಯನ್ನು ಟಿ.ವಿ.ಅಭಿರಾಮನ್ ಅವರಿಗೆ ಹೇಳಿದೆ)”

೧೯೨೬ನೆಯ ಫೆಬ್ರವರಿ ೨೩ನೆಯ ಮಂಗಳವಾರದ ದಿನಚರಿ:   
“ಟಿ.ವಿ.ಅ.ವಾಕಿಂಗಿಗೆ ಬರಲಿಲ್ಲ. ನಾನೊಬ್ಬನೆ ಸುದೂರ ಹೋಗಿದ್ದೆ. ಬರುವಾಗ ಎಚ್.ಕೆ.ವೀರಪ್ಪ ಸಿಕ್ಕರು. ಕಬ್ಬಳ್ಳಿ ಚೆನ್ನಬಸಪ್ಪನವರ ಹಠಾತ್ ನಿಧನದ ಸಂಗತಿ ಹೇಳಿದರು. ರಾಮತೀರ್ಥರನ್ನು ಓದಿದೆ. ಓಂ ಶಾಂತಿಃ”

೧೯೨೬ನೆಯ ಫೆಬ್ರವರಿ ೨೪ನೆಯ ಬುಧವಾರದ ದಿನಚರಿ:

“ಸಿ.ವಿ.ಕೃ.ಬಳಿಗೆ ಹೋಗಿದ್ದೆ. (ಪರೀಕ್ಷೆ ಸಮೀಪಿಸುತ್ತಿದ್ದುದರಿಂದ ಒಟ್ಟೊಓದಿಗಾಗಿ Joint studyಸೇರುತ್ತಿದ್ದುದು ವಾಡಿಕೆ). ಟಿ.ವಿ.ಅ  ಮತ್ತು ನಾನು ಬಹಳ ದೂರ ಸಂಚಾರ ಹೋಗಿದ್ದೇವು. ಅಲ್ಲಿ ನಾನು ಠಾಕೂರರ ಗೀತಾಂಜಲಿಯ ಕೆಲವು ಕವನಗಳನ್ನು ವಾಚಿಸಿದೆ.  ಅವರಿಗೆ ಬಹಳ ಮೆಚ್ಚುಗೆಯಾಯಿತು.ನನ್ನ ಕೆಲವು ಕನ್ನಡ ಭಾವಗೀತೆಗಳನ್ನು ಹಾಡಿದೆ. ರಾತ್ರಿ ಎರಡು ಪದ್ಯಗಳನ್ನು ಬರೆದೆ. ಒಂದು ಕನ್ನಡದಲ್ಲಿ, ಒಂದು ಇಂಗ್ಲೀಷಿನಲ್ಲಿ- ನಾಗಪ್ಪನವರಿಗಾಗಿ”.[3]

೧೯೨೬ನೆಯ ಫೆಬ್ರವರಿ ೨೫ನೆಯ ಗುರುವಾರದ ದಿನಚರಿ:       
ಫ್ರೊ.ಜಿ.ಸಿ.ರಾಲೋ, ಅವರನ್ನು ಕಾಣಲು ಹೋಗಿದ್ದೆ. ನೋಡಲು ಸಾಧ್ಯವಾಗಲಿಲ್ಲ. ಆಶ್ರಮಕ್ಕೆ ಬಂದು ‘ವೇದಾಂತ ಕೇಸರಿ’ಯ ಕೆಲವು ಲೇಖನಗಳನ್ನು ಓದಿದೆ.  ನಾಗಪ್ಪನವರ ಮದುವೆ ಸಂದರ್ಭಕ್ಕಾಗಿ ಬರೆದ ಪದ್ಯಗಳನ್ನು ಶೇಷಾದ್ರಿ ಕೈಲಿ ಕೊಟ್ಟು ಕಳಿಸಿದೆ. ಜಿ.ಸಿ.ರೋಲೋ ಐದು ರೂಪಾಯಿ ಚೆಂದಾ ಕೊಟ್ಟರು….[4] ನಾನು ಟಿ.ವಿ.ಅ. ಸುದೂರ ಸಂಚಾರ ಹೋಗಿದ್ದೆವು. ರಾತ್ರಿ Theory of KNowledge ಅಧ್ಯಯನ ಮಾಡಿದೆ. (ಪರೀಷೆ ಗಿದ್ದ ಪಠ್ಯ ವಿಷಯ)…. ಹೇ ರಾಮಕೃಷ್ಣ- ವಿವೇಕಾನಂದರೇ ನನಗೆ ಶಕ್ತಿಯನ್ನು ದಯಪಾಲಿಸಿ, ನಿಮ್ಮಂತೆಯೂ ಆಗುವುದಕ್ಕೆ! (Oh Ramakrishna- Vivekananda, give me strength to be even as you were!)”

೧೯೨೬ನೆಯ ಫೆಬ್ರವರಿ ೨೬ನೆಯ ಶುಕ್ರವಾರದ ದಿನಚರಿ:        
“ಫ್ರೊ.ವಾಡಿಯಾ ಕ್ಲಾಸಿಗೆ ಹೋಗಿದ್ದೆ. ಅವರು ನನ್ನನ್ನು ‘ನೀವು ಆಶ್ರಮಕ್ಕೆ ಸಂಬಂಧಪಟ್ಟವರೇನು?’ ಎಂದು ಕೇಳಿದರು. ‘ಹೌದು’ ಎಂದೆ. ಸೋಮವಾರ ಬಂದು ಕಾಣಲು ಹೇಳಿದರು. ಟಿ.ವಿ.ಹೇಳಿದರು ನನಗೆ: ‘ನಿಮ್ಮ ಮುಖ ನೋಡಿದರೆ ಕೃಷ್ಣಮೂರ್ತಿಗೆ ಏನೋ ಒಂದು ತರಹ ಭಯಸಂಚಾರವಾಗುತ್ತದಂತೆ!’ ಎಂದು. ಚೆನ್ನಾಗಿ ನಕ್ಕುಬಿಟ್ಟೆ ಅದನ್ನು ಕೇಳಿ… ಒಂದು ಕನ್ನಡ ಕವನ ಬರೆದೆ.”

೧೯೨೬ನೆಯ ಫೆಬ್ರವರಿ ೨೮ನೆಯ ಭಾನುವಾರದ ದಿನಚರಿ:     
“ನಾನು (ಇತರರೊಡನೆ ) ಪ್ರೊ.ಎ.ಆರ‍್.ವಾಡಿಯಾ ಅವರಲ್ಲಿಗೆ ಹೋಗಿದ್ದೆ.  ಅವರು ನಮ್ಮೊಡನೆ ಸಂಭಾಷಿಸುತ್ತಾ, ನಮ್ಮ ವೈಯಕ್ತಿಕ ಜೀವನ ವಿಚಾರ ಕೇಳಿದರು.  ನನ್ ಕವಿತಾರಚನೆಯನ್ನೂ ಮತ್ತು ನನ್ನ ಭವಿಷ್ಯತ್ ಜೀವನದ ದಾರಿಯನ್ನೂ ಕುರಿತು ಪ್ರಶ್ನಿಸಿದರು. ನಮ್ಮನಮ್ಮ ಆತ್ಮಕಥೆಯನ್ನು ಒಂದು ಪ್ರಬಂಧ ರೂಪದಲ್ಲಿ ಬರೆದು ಮುಂದಿನ ಏಪ್ರೀಲ್ ತಿಂಗಳಲ್ಲಿ ಅವರಿಗೆ ಕಳಿಸಿಕೊಡುವಂತೆ ಪ್ರತಿಯೊಬ್ಬರಿಗೂ ಹೇಳಿದರು. I departed from him with the idea that I should stand on a white ground (ಶುಭ್ರ ವೇದಿಕೆಯ ಮೇಲೆಯೇ ನಿಲ್ಲಬೇಕೆಂದು ಮನಸ್ಸು ಮಾಡಿ ಅವರನ್ನು ಬೀಳುಕೊಂಡೆ”.)

೧೯೨೬ನೆಯ  ಮಾರ್ಚಿ ೧ನೆಯ ಸೋಮವಾರದ ದಿನಚರಿ:      
“I wrote and ode to Ananda” (‘ಆನಂದ’ವನ್ನು ಕುರಿತು ಒಂದು ಪ್ರಗಾಥ ಬರೆದೆ. ಮತ್ತೆ ವಾಡಿಯಾ ಅವರಲ್ಲಿಗೆ ಹೋದೆ. ಆಶ್ರಮದ (Poor -feeding)ದರಿದ್ರ ನಾರಾಯಣರ ಸೇವೆವಾಗಿ ನಾಲ್ಕು ರೂಪಾಯಿ ಚಂದಾ ಕೊಟ್ಟರು…. ‘ಭರತ ಖಂಡದ ಪುನರತ್ಥಾನದ ಯಾವುದರ ಮೇಲೆ ನಿಂತಿದೆ?’ (In what lies the regeneration of India?) ಎಂದು ನಾನು ಅವರನ್ನು ಪ್ರಶ್ನಿಸಿದೆ. ‘ಜಾತಿ ಪದ್ಧತಿ ಸಂಪೂರ್ಣವಾಗಿ ಹೇಳ ಹೆಸರಿಲ್ಲದೆ ತೊಲಗಬೇಕು.’ ಎಂದರವರು. (About Khaddar he said, he won’t make a fetish of it. It is one of the means (ಖಾದಿಯ ವಿಚಾರವಾಗಿ ಹೇಳುತ್ತಾ, ನಾನದನ್ನೇನು ಒಂದು ಅತಿರೇಕ ನಿಷ್ಠೆಯ ವಿಷಯವನ್ನಾಗಿ ಮಾಡುವುದಿಲ್ಲ. ಅದರೂ ಒಂದು ಸಾಧನೋಪಾಯ ಮಾತ್ರ ಎಂದರು)… Oh Lord make me really great! ( ಹೇ ದೇವ ನನ್ನನ್ನು ನಿಜವಾದ ಮಹಾ ವ್ಯಕ್ತಿಯನ್ನಾಗಿ ಮಾಡು!”.

೧೯೨೬ನೆಯ  ಮಾರ್ಚಿ ೨ನೆಯ ಮಂಗಳವಾರದ ದಿನಚರಿ:     
“I prayed to Sri Ramkrishna and took an oath not give into the temptation agin. A firmer oath was never taken. (ಪ್ರಲೋಭನಕ್ಕೆ ಮತ್ತೆ ಎಂದಿಗೂ ಒಳಗಾಗುವುದಿಲ್ಲ ಎಂದು ಪ್ರತಿಜ್ಞೆಮಾಡಿ ಶ್ರೀ ರಾಮಕೃಷ್ಣರಿಗೆ ಪ್ರಾರ್ಥನೆ ಸಲ್ಲಿಸಿದೆ. ಅದಕ್ಕಿಂತಲೂ ದೃಢತರ ವ್ರತವನ್ನು ಹಿಂದೆಂದೂ ಕೈಗೊಂಡಿರಲಿಲ್ಲ)”.

೧೯೨೬ನೆಯ  ಮಾರ್ಚಿ ೩ನೆಯ ಬುಧವಾರದ ದಿನಚರಿ :         
“ಆಶ್ರಮಕ್ಕೆ ಹೋಗಿದ್ದೆ. ಅಲ್ಲಿ ಬರ್ಮಾ ಜೈಲಿನಲ್ಲಿರುವ ಭಾರತೀಯ ರಾಜಕೀಯ ಖೈದಿಗಳ ಬದುಕಿನ ಗೋಳನ್ನು ಕೇಳೀದೆ. ನಾನೊಬ್ಬನೆ ಒಂಟಿಯಾಗಿ ಸಂಚಾರ ಹೋಗಿದ್ದೆ.  ಕ್ಲಾಸ ರೂಮಿನಲ್ಲಿರಲಿ ಬೆಟ್ಟಗಳ ಮೇಲಿರಲಿ ನನ್ನ  ಮನೋಲೋಕವನ್ನು ಮುತ್ತಿ ಬರುವ ಅತೀಂದ್ರೀಯವಾದ ಅಲೋಚನೆಗಳನ್ನು ಮೆಲುಕು ಹಾಕುತ್ತಾ, ಓಂ (I had been on a lonely walk brooding over the mystic thoughts that every come to me whether in class room or or hills. OM)/

೧೯೨೬ನೆಯ  ಮಾರ್ಚಿ ೪ನೆಯ ಗುರುವಾರದ ದಿನಚರಿ:         
“ಕನಕಶೆಟ್ಟಿ ಬಂದು ನನ್ನೊಡನೆ ಕನ್ನಡ ಪದ್ಯ (ಪಠ್ಯಪುಸ್ತಕ) ಅಧ್ಯನ ಮಾಡಿದರು…. ನಾನು Theory of Knowledge ಓದಿದೆ.  ಟಿ.ವಿ.ಅಭಿರಾಮನ್ ಮತ್ತು ನಾನು ಒಂದು ದೀರ್ಘ ಸಂಚಾರ ಹೋದೇವು. ದಾರಿಯಲ್ಲಿ ‘ಪ್ಯಾರಡೈಸ್ ಲಾ‌ಸ್ಟ್’ (Paradise Lost) ಕುರಿತು ಚರ್ಚಿಸಿದೆವು.  ಸೇಟನ್ನಿಗೂ ರಾವಣನಿಗೂ ಹೋಲಿಸಿ ತಾರತಮ್ಯ ಗುರುತಿಸಿದೆವು. ಹಿಂದೂ ಕವಿಗಳು ಪಾಪತತ್ವವನ್ನು ಎಂದಿಗೂ ನಿತ್ಯವಸ್ತುವನ್ನಾಗಿ ಚಿತ್ರಿಸಿಲ್ಲ ಮತ್ತು ಸರ್ವಶಕ್ತವನ್ನಾಗಿ ಭಾವಿಸಿಯೂ ಇಲ್ಲ”.

 


[1] ಇಲ್ಲಿಗೆ ಅಪೂರ್ಣವಾಗಿಯೆ ನಿಂತಿದೆ. ಕೊನೆಯ ಅಪೂರ್ಣವಾಗಿರುವ ಪದ್ಯದ ಮೊದಲು ಎರಡು ಪಂಕ್ತಿಗಳು ದರ್ಶನವನ್ನು ನೀಷೇಧಾತ್ಮಕಯಿಂದ ವಿಧ್ಯಾತ್ಮಕತೆಗೆ ತಿರುಗಿಸಿ ಕೊಂಡೊಯ್ಯುವಂತಿವೆ. ಪ್ರಾರಂಭದ ವಿಭಾಗದ ಕೊನೆಯ ಪದ್ಯ ಸೂಚಿಸುವಂತೆ

[2] ಈ ಕವನ “ಸಂಝೆಯ ರವಿ” ಎಂಬ ಶಿರ್ಷಿಕೆಯಲ್ಲಿ ಮೊದಲು ೧೯೩೦ರಲ್ಲಿ ‘ಕೊಳಲು’ ಅಲ್ಲಿ ಪ್ರಕಟವಾಯಿತು. ತರುವಾಯ ಶಿಶು ಗೀತಾಂಜಲಿಯಲ್ಲಿ ‘ನನ್ನ ಮನೆ’ ವಿಭಾಗದಲ್ಲಿ ಅಚ್ಚುಗೊಂಡಿದೆ

[3] ಕೆ.ಆರ‍್.ನಾಗಪ್ಪ ಎಂಬೊಬ್ಬ ಮಿತ್ರರು ತಮ್ಮ ಮದುವೆಯ ಕರೆಯೋಲೆಯನ್ನು ಕಳಿಸಿ, ಒಂದು ಕಾಗದವನ್ನೂ ಬರೆದಿದ್ದರು.  ಅವರ ಸಂಸಾರ ಜೀವನಕ್ಕೆ ಮಂಗಳ ಕೋರಿ ಒಂದು ಸಣ್ಣ ಇಂಗ್ಲೀಷ್ ಪದ್ಯ ಬರೆದು, ಅದರ ಕನ್ನಡ ಅನುವಾದವನ್ನೂ ಮಾಡಿ ಕಳಿಸಿದ್ದೆ. ಅದನ್ನು ಅವರು ತುಂಬ ಶ್ರದ್ದೆಯಿಂದ ರಕ್ಷಿಸಿಒಂಡು ಬಂದು ದೊಡ್ಡ ದೊಡ್ಡ ಹುದೆದೆಗಳಿದ್ದು ಅಖಿಲ ಭಾರತೀಯ ರಂಗದಲ್ಲಿ ಅಧಿಕಾರ ನಡೆಸಿ, ನಿವೃತ್ತರಾದ ಮೇಲೆ ಮತ್ತೇ ಮೈಸೂರಿಗೆ ಬಂದು ನೆಲೆಸಿದ ಮೇಲೆ ಆ ಶುಭಷಯ ಪದ್ಯಗಳನ್ನು ಪ್ರೊ.ದೇ.ಜ.ಗೌಡ. ಅವರಿಗೆ ಕೊಟ್ಟು, ಅವರು ಅವುಗಳನ್ನು ಕನ್ನಡ ಮತ್ತು ಇಂಗ್ಲೀಷ್ ಎರಡನ್ನೂ ತಮ್ಮ “ರಾಷ್ಟ್ರಕವಿ ಕುವೆಂಪು” ಎಂಬ ಗ್ರಂಥದಲ್ಲಿ ಪ್ರಕಟಿಸಿದ್ದಾರೆ

[4] ಶ್ರೀ ರಾಮಕೃಷ್ಣಾಶ್ರಮವು ಪ್ರತಿ ವರ್ಷವೂ ಶ್ರೀ ರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಜನ್ಮೋತ್ಸವ ಸಂದರ್ಭದಲ್ಲಿ ದರಿದ್ರ ನಾರಾಯಣನ ಸೇವೆ ಎಂದು ಬಡಬಗ್ಗರಿಗಾಗಿ ಅನ್ನದಾನ ಏರ್ಪಡಿಸುತ್ತಿತು. ಅದಕ್ಕಾಗಿ ಆಶ್ರಮದ ಅಂತರ್ವಲಯಕ್ಕೆ ಸೇರಿದ ನಾವು ಕೆಲವರು ಚಂದಾ ಒಟ್ಟು ಮಾಡಿ ಕೊಡುತ್ತಿದ್ದವು.  ಸ್ವಾಮೀಜಿಯು ಕಸ್ತೂರಿ ಮತ್ತಿತರ ಹಿರಿಯರೊಡನೆ ಹೋಗಿ ವತೃಕಾದಿಗಳಿಂದ ಧನಧಾನ್ಯ ಸಂಗ್ರಹ ಮಾಡುತ್ತಿದ್ದರು. ಮಹಾರಾಜಾ ಕಾಲೇಜಿನ ಅಧ್ಯಾಪಕವರ್ಗದವರಿಂದ ಚಂದಾ ವಸೂಲು ಮಾಡುವ ಕರ್ತವ್ಯ ನನ್ನ ಮೇಲೆ ಬಿದ್ದಿತು.