೧೯೨೬ನೆಯ ಮಾರ್ಚಿ ೨೨ನೆಯ ಸೋಮವಾರದ ದಿನಚರಿ: “ನನ್ನ ತಮ್ಮನನ್ನು ಪರೀಕ್ಷೆಗೆ ಸೇರಿಸಲಿಲ್ಲ.[1]

ವೈ.ಎಂ.ಶ್ರೀ ಅಲ್ಲಿಗೆ ಹೋಗಿದ್ದೆ. ಅಲ್ಲಿಂದ ಆಶ್ರಮಕ್ಕೆ ಹೋದೆ. ಪೋಪ್ ಕವಿಯ ಪಠ್ಯಭಾಗ ಅಧ್ಯಯನ ಮಾಡಿದೆ. ಚಾಮುಂಡಿ ಬೆಟ್ಟದ ಕಡೆಗೆ ಒಬ್ಬನೆ ಸಂಚಾರ ಹೋದೆ. ದಾರಿಯಲ್ಲಿ ಶೆಟ್ಟಿ ಮಿತ್ರರನ್ನೆಲ್ಲ ಎದುರುಗೊಂಡೆ. ಅನೇಕ ತಮಾಷೆ ವಿಷಯಗಳ ಮಾತುಕತೆ ನಗೆಯಾಟ ನಡೆಯಿತು. ಎಂ.ತಮ್ಮಯ್ಯ ನನ್ನ ರೂಮಿಗೆ ಬಂದು ನನ್ನೊಡನೆ ಪೋಪ್ ಅಧ್ಯಯನ ಮಾಡಿದರು”.

೧೯೨೬ನೆಯ ಮಾರ್ಚಿ ೨೩ನೆಯ ಮಂಗಳವಾರದ ದಿನಚರಿ:   
“ವೈ.ಎಂ.ಶ್ರೀ ಬಳಿಗೆ ಹೋಗಲಿಲ್ಲ. ಡ್ರಾಮಾ ಓದಿದೆ. ಒಂಟಿಯಾಗಿ ಸಂಚಾರ ಹೋದೆ, ದಾರಿಯಲ್ಲಿಯೆ ಕವನ ರಚನೆ ಮಾಡುತ್ತಾ, ‘ಅಶ್ವತ್ಥನಾರಾಯಣ ಅಶ್ವಪಥ’ (Aswathanarayana Bridle Pathr[2])ದಲ್ಲಿ ಬೆಟ್ಟವೇರಿ ನಡೆದೆ. ಎತ್ತರವಾಗಿದ್ದ ಒಂದು ಬಂಡೆಯ ಮೇಲೆ ಕುಳಿತೆ. ಜ್ಯೋತಿಃಸ್ಪೂರ್ತಿಯ ಸೂರ್ಯಾಸ್ತದ ಸಂಧ್ಯಾ ಸೌಂಧರ‍್ಯವನ್ನು ದರ್ಶಿಸುತ್ತಾ ಅನೇಕ ಕವನಗಳನ್ನು ಹಾಡಿಕೊಂಡೆ.(Sat on a rock and sangs songs, facing the ispiring sunset) ಜೀವನದಲ್ಲಿ , ಹೇ ಸ್ವಾಮೀ, ನಿನ್ನನ್ನು ಮೃತು ಕಷ್ಟ ಸಂಕಟಗಳಲ್ಲಿಯೂ ಕಾಣುವಂತೆ ನನಗೆ ಅನುಗ್ರಹ ಮಾಡು, ಬರಿಯ ಹೂವು ಹಸುರು ತೊರೆಗಳ ಚೆಲುವಿನಲ್ಲಿ ಮಾತ್ರವಲ್ಲ!”

೧೯೨೬ನೆಯ ಮಾರ್ಚಿ ೨೪ನೆಯ ಬುಧವಾರದ ದಿನಚರಿ:        
“ವೈ.ಎಂ.ಶ್ರೀ ಬಳಿಗೆ ಹೋಗಿದ್ದೆ. ಸೈಕಾಲಜಿ ಅಧ್ಯಯನ ಮಾಡಿದೆವು. ಇಂದು ಅನಿರೀಕ್ಷಿತವಾಗಿ ಪಿ.ಗೋಪಾಲಕೃಷ್ಣ ಶೆಟ್ಟಿ ಬಂದರು. ಅವರು ಕೊಠಡಿ ಪ್ರವೇಶಿಸಿದಾಗ ನಾನು ಶಂಕರಾಚಾರ್ಯರ ‘ನಿವಾಣಷಟ್ಕಂ’ ಅನ್ನು ಭಾಷಾಂತರಿಸುತ್ತಿದ್ದೆ.  ಸಂಚಾರ ಹೋಗುತ್ತಿದ್ದಾಗ ದಾರಿಯ ಮೇಲೆಯೆ ಒಂದು ಕವನ ರಚನೆಯಾಯಿತು. ನಾನೂ ಎ.ಸಿ.ಶ್ಯಾಮರಾವ Ethics ಮತ್ತು Political philosophy ಅರ್ಧಯಯನ ಮಾಡಿದೆವು”.

ದಿನಚರಿಯಲ್ಲಿ ಕವನದ ಹೆಸರಿಲ್ಲ. ದೇವಂಗಿ ಮಾನಪ್ಪನ ಹಸ್ತಾಕ್ಷರದಲ್ಲಿರುವ ‘ಸಂಪಗೆ ಹೂವಿಗೆ’ ಎಂಬುದಿರಬಹುದೆಂದು ಊಹಿಸಿ ಅದನ್ನಿಲ್ಲಿ ಕೊಡುತ್ತೇನೆ. ಅದು ಇದುವರೆಗೆ ಎಲ್ಲಿಯೂ ಪ್ರಕಟವಾಗಿಲ್ಲ’

ಸಂಪಿಗೆ ಹೂವಿಗೆ 

ಸ್ವಾತಂತ್ಯ್ರವಾವುದುದು ಬಂಧಿಸಿದೆ ನಿನ್ನ,
ಸ್ವಾತಂತ್ಯ್ರಧಾರಾಮ ದೇವತೆಯ ದಾಸ?

ಪರತಂತ್ರದೊಳು ನೀಣು ಸ್ವಾತಂತ್ಯ್ರವನು ಹೊಂದಿ
ಕಾಲದೇಶಾತೀತನಾಗಿ ನಲಿವೆ;

ಸುಖ ದುಃಖ ಲಯ ಜನ್ಮ ಧರೆ ನಾಕಗಳು ನಿನ್ನ
ಆನಂದದೊಳಗೈಕ್ಯವಾಗುತಿಹವು.

ಆಯುಷ್ಯವತಿ ಸ್ವಲ್ಪ; ಭಾರವೋ ಬಲು ಹಗುರ;
ವೈಭವದ ವೈಯಾರಕೆಲ್ಲೆ ಇಲ್ಲ.

ಒಂದುದಯದಾಯುಷ್ಯದೊಳೆ ಸವಿದು ನಿತ್ಯತೆಯ
ಶತಮಾನಗಳನೆಲ್ಲ ಸೂರೆಗೊಳುವೆ!

ನೀತಿಯೆಂಬುವ ಮಾಯೆಯೊಳಗಾಗದೆಯೆ ನೀನು
ಯಮ ಸುರರ ಲೋಕಗಳನೇಳಿಸುತಿಹೆ;
ಪರತಂತ್ರ, ಸ್ವಾತಂತ್ರಗಳು ನಿನ್ನ ಹೃದಯದೊಳು
ಒಂದಾಗಿ ಚುಂಬಿಪವು ನಿತ್ಯತೆಯನು.

೧೯೨೬ನೆಯ ಮಾರ್ಚಿ ೨೫ನೆಯ ಗುರುವಾರದ ದಿನಚರಿ:       
“ಬೆಳಿಗ್ಗೆ ಪರೀಕ್ಷೆಯ ಸಹಾಧ್ಯಯನಕ್ಕಾಗಿ ವೈ.ಎಂ.ಶ್ರೀಯಲ್ಲಿಗೆ ಹೋಗಿದ್ದೆ. ಬಸವರಾಜು ಬಂದರು. ಹೇ ಸ್ವಾಮಿ, ನಿನ್ನನ್ನು ಮೃತ್ಯು- ಸಂಕಟಗಳಲ್ಲಿ ಭೀತಿ ಕೋಟಲೆಗಳಲ್ಲಿ ಸಂಧಿಸುವೆ. ಹೂವು ಹಕ್ಕಿ ಹಾಡುಗಳಲ್ಲಿ ಮಾತ್ರವಲ್ಲ. ‘ನಿರ್ವಾಣಷಟ್ಕ’ವನ್ನೂ ಪೂರ್ತಿ ಭಾಷಾಂತರಿಸಿದೆ”.

೧೯೨೬ನೆಯ ಮಾರ್ಚಿ ೨೬ನೆಯ ಶುಕ್ರವಾರದ ದಿನಚರಿ:        
“ಇವೊತ್ತು  ನಮ್ಮ ಪರೀಕ್ಷೆಗಳು ಪ್ರಾರಂಭವಾದುವು. General Psychology (ಸಾಮಾನ್ಯ ಮನಃಶಾಸ್ತ್ರ) ಮತ್ತು  INdian Philosophy  (ಭಾರತೀಯ ತತ್ವಶಾಸ್ತ್ರ) ಮುಗಿದುವು. ನಾನು ಮತ್ತು ಪಿ.ಗೋ.ಶೆಟ್ಟಿ ಸೃಷ್ಟಿಯ ವೈಶಾಲ್ಯ , ವೈಭವ, ರಹಸ್ಯಗಳ ವಿಚಾರ ಮಾತಾಡುತ್ತಾ ಸಂಚಾರ ಹೋಗಿದ್ದೇವು. ಅದಕ್ಕೆ ಮೊದಲು ಆಶ್ರಮಕ್ಕೂ ಹೋಗಿದ್ದೆ”.[3]

೧೯೨೬ನೆಯ ಮಾರ್ಚಿ ೨೭ನೆಯ ಶನಿವಾರದ ದಿನಚರಿ:          
“ಇವೊತ್ತು Theory of Knowledge ಪ್ರಶ್ನೆ ಪತ್ರಿಕೆ ಪೂರೈಸಿತು. ಅದನ್ನು ಮುಗಿಸಿಕೊಂಡು ಆಶ್ರಮಕ್ಕೆ ಹೋದೆ.‘ಮಾಯಾ ಸಿದ್ದಾಂತ’ದ ವಿಚಾರವಾಗಿ ಚರ್ಚೆ ನಡೆಯುತ್ತಿತ್ತು.  ನಾನು ಭಾಗವಹಿಸಿದೆ ಚರ್ಚೆಯಲ್ಲಿ… ನಾನೂ ಪಿಗೋ.ಶೆಟ್ಟಿಯೂ ಸಂಚಾರ ಹೋಗಿದ್ದೇವು, ವಿಷಕಂಠನೊಡನೆ. ಬೆಳುದಿಂಗಳು ಮನೋಹರವಾಗಿತ್ತು”.

೧೯೨೬ನೆಯ ಮಾರ್ಚಿ ೨೮ನೆಯ ಬಾನುವಾರದ ದಿನಚರಿ:      
“ನಾನು ಶ್ಯಾಮರಾವ್ Ethics ಮತ್ತು Political Philosophy ಅಧ್ಯಯನ ಮಾಡಿದೆವು… ನಾನು ಶೆಟ್ಟಿ ಬಹಳ ದೂರ ಸಂಚಾರ ಹೋಗಿದ್ದೆವು. ನಾನು ಕವನಗಳನ್ನು ಹಾಡಿದೆ”.

೧೯೨೬ನೆಯ ಮಾರ್ಚಿ ೨೯ನೆಯ ಸೋಮವಾರದ ದಿನಚರಿ:    
“Political Philosophy ಮತ್ತು Ethics ಪರೀಕ್ಷೆಗಳೂ ಮುಗಿದುವು. ಚೆನ್ನಾಗಿ ಮಾಡಿದ್ದೇನೆ. ನಾನೂ ಪಿ.ಗೋ.ಶೆಟ್ಟಿ ಬೆಟ್ಟದ ಮೇಲಕ್ಕೆ ಹೋಗಿ ಸೂರ್ಯಾಸ್ತದ ಸಂಧ್ಯಾವೈಭವವನ್ನು ವೀಕ್ಷಿಸಿದ್ದೇವು. ಶಂಕರಾಚಾರ್ಯರ ‘ನಿರ್ವಾಣ ಷಟ್ಕಂ’ ಅನ್ನು ಹಾಡಿದೆ. (ನನ್ನ ಭಾಷಾಂತರವನ್ನು)”[4]

೧೯೨೬ನೆಯ ಮಾರ್ಚಿ, ೩೦, ೩೧, ಎರಡೂ ಪರೀಕ್ಷೆಯ ದಿನಗಳಾಗಿದ್ದುವೆಂದಷ್ಟೇ ದಿನಚರಿಯಲ್ಲಿ ಬರೆದಿದೆ. ಏಪ್ರೀಲ್ ೧ನೆಯ ಗುರುವಾರದ ದಿನಚರಿಯಲ್ಲಿ ‘ನಮ್ಮ ಪರೀಕ್ಷೆಗಳೆಲ್ಲ ಪೂರೈಸಿದುವು;… ನಾನು ಪಿ.ಗೋ. ಶೆಟ್ಟಿ ಸಂಚಾರ ಹೋಗಿದ್ದೆವು,’ ಎಂದಷ್ಟೆ ಇದೆ. ಏಪ್ರೀಲ್ ೨ನೆಯ ದಿನಚರಿ ಖಾಲಿ. ಏಪ್ರೀಲ್ ೩ನೆಯ ತಾರೀಖಿನಲ್ಲಿ : ‘ಭಾಯಿ ಪರಮಾನಂದರನ್ನು ಭಾಷಾಂತರಿಸಲು ಪ್ರಾರಂಭಿಸಿದೆ. ಒಂದು ಅಧ್ಯಾಯ ಮುಗಿಸಿದೆ. ನಾನೂ ಶೆಟ್ಟಿ ವಾಕ್ ಹೋದೆವು’ ಎಂದಿದೆ.

೧೯೨೬ನೆಯ ಎಪ್ರೀಲ್ ೪ನೆಯ ಬಾನುವಾರದ ದಿನಚರಿ:                    
“ಭಾಯಿ ಪರಮಾನಂದರ ಕೆಲವು ಭಾಗವನ್ನು ಭಾಷಾಂತರಿಸಿದೆ… ನಾನು, ಗೋಪಾಲಕೃಷ್ಣ ಶೆಟ್ಟಿ, ತಮ್ಮಯ್ಯ ಸಂಚಾರ ಹೋದೆವು. ದಾರಿಯಲ್ಲಿ ಬ್ರಾಹ್ಮಣ ಬ್ರಾಹ್ಮಣೇತರ ಚಳುವಳಿ ವಿಚಾರ ಪ್ರಸ್ಥಾಪಿಸಿದೆವು”.

೧೯೨೬ನೆಯ ಏಪ್ರೀಲ್ ೫ನೆಯ ಸೋಮವಾರದ ದಿನಚರಿ:                  
“ಬೆಳಿಗ್ಗೆ ಆಶ್ರಮಕ್ಕೆ ಹೋದೆ. ಭಗವದ್ಗೀತೆ, ಶ್ರೀರಾಮಕೃಷ್ಣ ವಚನಾಮೃತ ಮತ್ತು In Hours of Meditation ಕೊಂಡು ಕೊಂಡೆ. ಮೈಸೂರಿನಿಂದ ಊರಿಗೆ ಹೊರಡಲು ತಯಾರಿಕೆ ನಡೆದಿದೆ. ಪ್ರೋ.ಎ.ಆರ‍್.ವಾಡಿಯಾ ಅವರೆಡೆಗೆ ಹೋಗಿದ್ದೆ. ನಾನು ಕೊಟ್ಟಿದ್ದ ಇಂಗ್ಲೀಷ್ ಕವನಗಳನ್ನು ಅವರು ಇನ್ನೂ ಓದಿಲ್ಲವೆಂದರು. ಹಿಂದಕ್ಕೆ ಬರುತ್ತಾ ದಾರಿಯಲ್ಲಿ ಮತ್ತೆ ಆಶ್ರಮಕ್ಕೆ ಹೋಗಿ ಇನ್ನೂ ಕೆಲವು ಪುಸ್ತಕ ಕೊಂಡೆ:”.

೧೯೨೬ನೆಯ ಏಪ್ರಿಲ್ ೬ನೆಯ ಮಂಗಳವಾರದ ದಿನಚರಿ:       
“ಊರಿಗೆ ಹೊರಟೆ, ಕನಕಶೆಟ್ಟಿ ಮತ್ತು ಇತರರೊಡನೆ, ರೈಲಿನಲ್ಲಿ ಹಾಸನದ ಲಾಯರೊಬ್ಬರೊಡನೆ ಪರಿಚಯ ಮಾಡಿಸಿದರು. ನನ್ನ ಕೆಲವು ಕವನಗಳನ್ನು ಹಾಡಿದೆ.

ಅವರು ಬಹಳ ಮೆಚ್ಚಿದರು. ಕನಕಶೆಟ್ಟಿ ನನ್ನ ಕವನಗಳ ಹಸ್ತಪ್ರತಿಯನ್ನು ತೆಗೆದುಕೊಂಡು ಹೋದರು. (ಅವರೆಲ್ಲ ಚಿಕ್ಕಮಗಳೂರಿಗೆ ಹೋಗುವವರು ಕಡೂರಿನಲ್ಲಿ ಇಳಿದು ಬಿಟ್ಟರು). ಸುರಕ್ಷಿತವಾಗಿ ಶಿವಮೊಗ್ಗ ಸೇರಿದೆವು… ವಿವೇಕಾನಂದರ (Inspired Talks) ಓದಿದೆ.

೧೯೨೬ನೆಯ ಏಪ್ರೀಲ್ ೭ನೆಯ ಬುಧವಾರದ ದಿನಚರಿ:          
“ಶಿವಮೊಗ್ಗದಲ್ಲಿ ಉಳಿದುಕೊಂಡೆ. ವಿವೇಕಾನಂದರ Inspired Talks ಓದಿದೆ ಮತ್ತು ಪರಿಭಾವಿಸಿದೆ. ಧ್ಯಾನಿಸಿದೆ. ರಾತ್ರಿ ಹೊಸಮನೆ ಮಂಜಪ್ಪಗೌಡರೊಡನೆ ಕರ್ಮ ಸಿದ್ಧಾಂತದ ವಿಚಾರವಾಗಿ ಮಾತನಾಡಿದೆ. ‘ಹೇ’ ಸ್ವಾಮಿ, ನಿನ್ನ ಕಂದನಾದೆನಗೆ ತಗುವು ಯೋಗ್ಯತೆ ನೀಡು… ಹೇ ರಾಮಕೃಷ್ಣ! ವಿವೇಕಾನಂದ!”

೧೯೨೬ನೆಯ ಏಪ್ರೀಲ್ ೮ನೆಯ ಗುರುವಾರದ ದಿನಚರಿ:          
“ಬೆಳಿಗ್ಗೆ ಶಿವಮೊಗ್ಗೆಯಿಂದ ಹೊರಟು (ಬಸ್ಸಿನಲ್ಲಿ) ತೀರ್ಥಹಳ್ಳಿಗೆ ೧೨ ಗಂಟೆಗೆ ಸೇರಿದೆ. ಉರಿವ ಸುಡು ಬಿಸಿಲಿನಲ್ಲಿ ದೇವಂಗಿಗೆ ಹೊರಟೆ.  (ಬಹುಶಃ ದೇವಂಗಿಯ ಗಾಡಿಯಲ್ಲಿರಬೇಕೆಂದು ಊಹಿಸುತ್ತೇನೆ. ದೇವಂಗಿ ತಿಮ್ಮಣ್ಣಗೌಡರು, ಡಿ.ಟಿ.ಚಂದ್ರಶೇಖರನ ತಂದೆ, ನಾನು ಮೈಸೂರಿನಿಂದ ಕುಪ್ಪಳಿಗೆ ಹೋಗುವಾಗಲೆಲ್ಲ, ಸಾಧಾರಣವಾಗಿ, ತಮ್ಮ ಎತ್ತಿ ಸವಾರಿ ಗಾಡಿಯನ್ನು ತೀರ್ಥಹಳ್ಳಿಗೆ ಕಳಿಸಿರುತ್ತಿದ್ದರು. ಅದು ಹೊಳೆಯಾಚೆ ಕಾಯುತ್ತಿರುತ್ತದೆ.  ತುಂಗಾ ನದಿಗೆ ಆಗ ಸೇತುವೆ ಇರಲಿಲ್ಲ. ರಾಮತೀರ್ಥದ ಕಲ್ಲು ಸಾರದ ಮೇಲೆಯೆ ದಾಟಿ   ಹೋಗಬೇಕಾಗಿತ್ತು.  ವಿನೋದಶೀಲದ ಬಡಗಿ ಮಂಜು ಗಾಡಿ ಹೊಡೆಯುತ್ತಿದ್ದನು). ದೇವಂಗಿಯನ್ನು ಸೇರಿ, ಸ್ನಾನ  ಊಟ ಮುಗಿಸಿ ವಿಶ್ರಾಂತಿ ಪಡೆದೆ. ಸಂಜೆ ಡಿ.ಆರ‍್.ವೆಂಕಟಯ್ಯ ಬಂದರು. (ಇಂಗ್ಲಾನದಿಯಿಂದ.) ಡಾಕ್ಟರೊಡನೆ ಅನೇಕ ವಿಚಾರ ಮಾತುಕತೆ. (ಆಗ ಆಸ್ಪತ್ರೆ ದೇವಂಗಿ ಮನೆಯಲ್ಲಿಯೆ ಇದ್ದು, ಅದರ ಡಾಕ್ಟರಿಗೆ ಮನೆಯ ಹಿಂಭಗದ ಒಂದು ಸಣ್ಣ ಹೊರಮನೆಯಲ್ಲಿ ನಿವಾಸ ಕಲ್ಪಿಸಿದ್ದರು) ಸಾಯಂಕಾಲ ನಾನು ವೆಂಕಟಯ್ಯ ಖಾಸಗಿ ವಿಷಯಗಳು, ವಿದ್ಯಾಭ್ಯಾಸ. ದೇಶದ ಭವಿಷ್ಯತ್ತು ಇತ್ಯಾದಿ ಮಾತಾಡುತ್ತಾ ಕಾಡುಗಳಲ್ಲಿ ತಿರುಗಾಡಿದೆವು….”

ಏಪ್ರೀಲ್ ೯ನೆಯ ಶುಕ್ರವಾರದ ದಿನಚರಿ:      
“ಇಂಗ್ಲಾನದಿಯಲ್ಲಿ ಉಳಿದೆ. ಬೆಳಿಗ್ಗೆ ನಾನು ವೆಂಕಟಯ್ಯ ಕೋವಿ ಹಿಡಿದು ಕಾಡಿಗೆ ಹೋಗಿದ್ದೇವು. ಸಂಜೆಯೂ ಹೋಗಿದ್ದಾಗ ನಾನೊಂದು ಕಾಡುಕೋಳಿಗೆ ಈಡು ಹೊಡೆದೆ.  ಅದೃಷ್ಟವಶಾತ ತಗುಲಿಲ್ಲ. ಗುರಿ ತಪ್ಪಿತು…”ಅಯ್ಯೋ ದೇವರೆ, ಮುಗ್ದ ಪ್ರಾಣಿಗಳನ್ನು ಕೊಲ್ಲುವುದರಿಂದ ನನ್ನನ್ನು ತಪ್ಪಿಸಿ ಕಾಪಾಡು”.

ಏಪ್ರೀಲ್, ೧೦, ೧೧ರಲ್ಲಿ ಏನೂ ಬರೆದಿಲ್ಲ. ಏಪ್ರೀಲ್ ೧೨ರಲ್ಲಿಯೂ ಇಂಗ್ಲಾನದಿಯಲ್ಲಿಯೆ ಇದ್ದೆ. ನಾನು ರಜಾಕ್ಕೆ ಊರಿಗೆ ಹೋಗುತ್ತಿದ್ದಾಗಲೆಲ್ಲಾ ದೇವಂಗಿ- ಇಂಗ್ಲಾನದಿಗಳಲ್ಲಿ ಮೂರು ನಾಲ್ಕು ದಿನ ಇದ್ದು ಹೋಗುತ್ತಿದ್ದುದು ರೂಢಿ. ತವರುನಾಡಿಗೆ ಬಯಲುಸೀಮೆಯ ಬರಡು ಬದುಕಿನಿಂದ ಹಿಂತಿರುಗಿದಾಗ ಅದೇನು ಉಲ್ಲಾಸ? ಅದೇನು ಉತ್ಸಾಹ ? ಅದೇನು ಉನ್ಮೇಷನ! ಏನು ಸ್ನೇಹ ಮಾಧುರ್ಯ. ಅದೆಷ್ಟು ಬಾಂಧವ್ಯ ಬಂಧುರ! ಆ ವಿಷಯದಲ್ಲಿ ಬಯಲುಸೀಮೆಯು ಬಾಳಿನಂತೆ ಬರಡಾಗಿರುವ ದಿನಚರಿಯ ಕೃಪಣತೆಯನ್ನು ಒದಿನಿತೂ ನಂಬಬಾರದು. ಬಹುಶಃ ಅದರ ನೈಜ ರಸತ್ವ ತುಸುಮಟ್ಟಿಗೆ ನನ್ನ ಬರಹಗಳಲ್ಲಿ ಅಭಿವ್ಯಕ್ತಗೊಂಡಿವೆ. ಇಂಗ್ಲಾನದಿಯಲ್ಲಿ ಬೇಟೆ  ಮಾತ್ರವಲ್ಲದೆ ಇತರೆ ಕ್ರೀಡೆಗಳೂ ಇರುತ್ತಿದ್ದವು:  ವಾಲಿಬಾಲ್ , ಬ್ಯಾಡಮಿಂಟನ್, ಇಸ್ಪೀಟು, ಇತ್ಯಾದಿ, ಓದಲು ಹೋಗಿದ್ದ ಬಾಲಕರು ತರುಣರು ಎಲ್ಲ ಬೇಸಗೆ ರಜಾಕ್ಕೆ ಹಿಂತಿರುಗುತ್ತಿದ್ದರು : ಇಂಗ್ಲಾನದಿಯಲ್ಲಿ ಹಿರಿಯ ವೆಂಕಟಯ್ಯ ಅಲ್ಲದೆ ಮಾನಪ್ಪ, ವಿಜಯದೇವ; ಬಳಿಯ ಉಂಟೂರಿನಿಂದ ಹಿರಿಯಣ್ಣ, ಸುಬ್ಬಯ್ಯ, ಶ್ರೀನಿವಾಸ: ದೇವಂಗಿಯಿಂದ ಚಂದ್ರಶೇಖರ, ನಾಗೇಶ, ಕುಪ್ಪಳ್ಳಿಯಲ್ಲಿ ತಿಮ್ಮಯ್ಯ, ವೆಂಕಟಯ್ಯ, ಶ್ರೀನಿವಾಸ: ದೇವಂಗಿಯಿಂದ ಚಂದ್ರಶೇಖರ , ನಾಗೇಶ್, ಕುಪ್ಪಳ್ಳಿಯಲ್ಲಿ ತಿಮ್ಮಯ್ಯ, ವೆಂಕಟಯ್ಯ, ವಾಸಪ್ಪ, ಓಬಯ್ಯ, ತಂಗಿಯರು ದಾನಮ್ಮ, ಪುಟ್ಟಮ್ಮ , ರಾಜಮ್ಮ, ಇವರಲ್ಲದೆ ಒಮ್ಮೊಮ್ಮೆ ಅಲ್ಲಿಗೆ ಪುಟ್ಟಯ್ಯ ನಾಯಕರು ವಾಟಿಗಾರು ಮಂಜಪ್ಪ ಗೌಡರು ಬರುತ್ತಿದ್ದರು. ಒಟ್ಟಿನಲ್ಲಿ ಆ ಸಂತೋಷಕೂಟವು ಒಂದು ಉಲ್ಲಾಸದ ಸಂತೆ ನೆರೆದಂತೆ ಇರುತ್ತಿತ್ತು!

೧೯೨೬ನೆಯ ಏಪ್ರೀಲ್ ೧೨ನೆಯ ಸೋಮವಾರದ ದಿನಚರಿ:               
“ಬೆಳಿಗ್ಗೆ ಒಂದು ‘ದೊಡ್ಡ ಬೇಟೆ’ಗೆ ಏರ್ಪಾಡು ಮಾಡಿ ಹೊರಟೇವು* ಕಾಡಿನಲ್ಲಿ Kali, the Mother ಓದಿದೆ. ಒಂದು ದೊಡ್ಡ ಕಾಡು ಹಂದಿ ಹೊಡೆದರು. ನಮ್ಮ ಗುಂಪೆಲ್ಲ ಹಂದಿಯ ಹಿಂದೆ ನಿಂತು ಫೋಟೋ ತೆಗೆಸಿಕೊಂಡಿತು: ಅಲ್ಲಿಗೆ ಪುಟ್ಟಯ್ಯ ನಾಯಕರ ಜೊತೆಗೆ ಅನೇಕ ತತ್ವ ವಿಚಾರ ಮಾತಾಡಿದೆ.  ಕೇಸು!…. ಇಸ್ಪೀಟು ಆಡಿದೆವು”.

[*ಮರುದಿನ ‘ದೊಡ್ಡ ಬೇಟೆ’ ಎಂದು ನಮಗೆಲ್ಲ ಸಡಗರ, ಉತ್ಸಾಹ. ನನಗೆ ಭೇಟೆಯ ಜೊತೆಗೆ ಕಾಡಿನಲ್ಲಿ ಅಲೆಯುವ ಅವಕಾಶ ದೊರೆತದ್ದಕ್ಕಾಗಿ ಹಿಗ್ಗು. ಮೈಸೂರು ಬಯಲು ಬಾಳಿನಲ್ಲಿ ಬಾಯಾರಿ ಬೇಸತ್ತಿದ್ದ ನನ್ನ ಕವಿಚೇತನಕ್ಕೆ ಗುಡ್ಡ ಗಾಡುಗಳಲ್ಲಿ ಅಲೆಯುವುದೆಂದರೆ ರಸದೌತಣವಾಗುತ್ತಿ‌ತ್ತು.  ಅಲ್ಲದೆ ಅಂದು ಇಂಗ್ಲಾನದಿಯಲ್ಲಿ ನಾವೆಲ್ಲ ಸೇರಿದ್ದೇವು. ಅಲಿಗೆಯಿಂದ ಪುಟ್ಟಯ್ಯ ನಾಯಕರು ಬಂದಿದ್ದರು’] ಮನೆಯ ಮಹಿಳೇಯರು ರಾತ್ರಿಯೆ ಮುಂಜಾವಿನಲ್ಲಿ ಎದ್ದು ನಮಗಾಗಿ ಕಾಫಿ ತಿಂಡಿ ಮಾಡುವುದು, ಬುತ್ತಿ ಕಟ್ಟುವುದು ಇತ್ಯಾದಿ ಕಾರ್ಯಗಳಲ್ಲಿ ತೊಡಗಿದರು.

ನಾವು ಬೆಳಿಗ್ಗೆ ಮುಂಚೆಯೆ ಎದ್ದು ಸ್ನನಾದಿಗಳನ್ನು ಮುಗಿಸಿ, ಬೇಟೆಯ ಉಡುಪು ತೊಟ್ಟು, ಕೋವಿಗಳನ್ನೂ ತೋಟಾಗಳನ್ನೂ ಆಣಿಗೊಳಿಸಿಕೊಂಡೆವು. ಯಾರು ಯಾರಿಗೆ ಯಾವ ಯಾವ ತೋಟಾಗಳು, ಗುಂಡಿನ ತೋಟಾಗಳೆಷ್ಟು, ಕಡಕಿನ ತೋಟಾಗಳೆಷ್ಟು ಚರೆ ತೋಟಾಗಳೆಷ್ಟು ಇತ್ಯಾದಿ ಹಂಚಿಕೆಯಾಯಿತು. ನನಗೆ ಬರಿಯ ಗುಂಡಿನ ಮತ್ತು ಕಡಕಿನ ತೋಟಾಗಳೆ ಸಾಕು ಎಂದೆ. ಏಕೆಂದರೆ ನಾನು ಹಂದಿ ಹುಲಿಗಳನ್ನಲದೆ ಬೇರೆ ಯಾವ ಪ್ರಾಣಿಗಳನ್ನು ಕೊಲ್ಲುವುದಿಲ್ಲವೆಂದು ವ್ರತ ತೊಟ್ಟಿದ್ದೇನಾಗಿ! ಕಾಡುಕುರಿ, ಮಿಗ ಇತ್ಯಾದಿ ಅನುಗ್ರಹ ಪ್ರಾಣಿಗಳು ನನ್ನ ಬಿಲ್ಲಿನ ಕಂಡಿಗೆ ಬಂದರೆ ನಾನು ಹೊಡೆಯುವುದಿಲ್ಲವಾದ್ದರಿಂದ ನನ್ನನ್ನು ಹುಲಿ ಹಂದಿಗಳು ಬರುವಂಥ ಕಂಡಿಗೆ ಮಾತ್ರ ಬಿಲ್ಲಿಗೆ ನಿಲ್ಲಿಸುವಂತೆಯೂ ಕೇಳಿಕೊಂಡೆ. ಆ ವಿಚಾರವಾಗಿ ಹಾಸ್ಯ ಪರಿಹಾಸ್ಯ ವಿನೋದಗಳ ಚಟಾಕಿಗಳು ಟೀಕಾತ್ಮಕವಾಗಿ ಹಾರಿದುವು!

ದೇವಂಗಿ ಉಂಟೂರು ಮತ್ತು ಇಂಗ್ಲಾನದಿಯ ಮೂರು ಮನೆಯ ನಾಯಿಗಳೂ ನೆರೆದುವು! ಹತ್ತಿಪ್ಪತ್ತು ಮೂವತ್ತು ಇರಬಹುದೇನೋ! ನಾಯಿಗಳಂತೆ ಹಳುವಿನವರೂ ಬಿಲ್ಲಿನವರೂ ಒಂದಿಪ್ಪತ್ತು ಮೂವತ್ತು ಜನ ಆಳುಗಳೂ ಒಕ್ಕಲುಗಳು ಜಮಾಯಿಸಿದ್ದರು. ಆಳು ಒಕ್ಕಲುಗಳಲ್ಲಿ ಇಬ್ಬರು ನೆನೆಯುವಂತಹರು; ಬಡಗಿ ಮಂಜು ಮತ್ತು ಮರಾಠಿ ಯಲ್ಲು. ಬಡಗಿ ಮಂಜು- ದೇವಂಗಿ ತಿಮ್ಮಯ್ಯಗೌಡರ ನೆಚ್ಚಿನ ಬಂಟ. ಯಲ್ಲು-ದೇವಂಗಿ ರಾಮಣ್ಣಗೌಡರ (ಇಂಗ್ಲಾನದಿಯಲ್ಲಿ ವಾಸವಾಗಿದ್ದರು.) ಆಪ್ತ ಸೇವಕ, ವಿಶೇಷವಾಗಿ ಷಿಕಾರಿ ಕಾರ್ಯದರ್ಶಿ.

ಕಾಫಿ ತಿಂಡಿ ಮುಗಿಸಿ ಸಿಬ್ಬಲು ಗುಡ್ಡೆಯ ಕಡೆಯ ಕಾಡುಗಳತ್ತ ಹೊರಟೆವು. ಬುತ್ತಿ ನೀರು ಇತ್ಯಾದಿ ಊಟದ ಸೌಕರ್ಯಗಳನ್ನು ಹೊತ್ತು ಒಂದು ಆಳುಗಳ ತಂಡವು ಹಿಂಬಾಲಿಸಿತ್ತು. ಅಲ್ಲದೇ ಮಧ್ಯಾಹ್ನದ ಮೇಲೆ ಸುಮಾರು ಅಪರಾಹ್ನ ನಾಲ್ಕು ಗಂಟೆಯ ಹೊತ್ತಿಗೆ ಕಾಫಿ ತಿಂಡಿ ಹೊತ್ತು ತರಬೇಕೆಂದೂ ವೆಂಕಟಯ್ಯನವರು ಆಜ್ಞೆ ಮಾಡಿದ್ದರು!

ಕಡು ಬೇಸಗೆಯ ಸುಡು ಬಿಸಿಲಿನಲ್ಲಿ ಆ ದಿನದ ಬೇಟೆ ಆಯಾಸಕರವಾಗಿಯೆ ಇತ್ತು. ಹಳುವಿನವರಿಗಿರಲಿ, ಬಿಲ್ಲಿನವರಿಗೆ ಕೂಡ! ಬೇಟೆಯ ನಾನಾ ಮುಖವಾದ ಸಾಹಸ ಸ್ವಾರಸ್ಯಗಳನ್ನು ಕುರಿತು ನಾನಿಲ್ಲಿ ಪ್ರಸ್ತಾಪಿಸುವುದಿಲ್ಲ. ಆ ವಿಚಾರವಾಗಿ ಅಲ್ಪಸ್ವಲ್ಪವನ್ನಾದರೂ ನನ್ನ ಸಾಹಿತ್ಯಕ ಬರಹಗಳಲ್ಲಿ ಬಣ್ಣಿಸಿದ್ದೇನೆ. ಇಲ್ಲಿ ವೈಯಕ್ತಿಕ ಪಕ್ಷವನ್ನು ಕುರಿತು ಮಾತ್ರ ಹೇಳುತ್ತೇನೆ.

ಒಂದು ಕಾಡನ್ನು ಕಟ್ಟಿದಾಗ ನನ್ನನ್ನು ಒಂದು ರಮಣೀಯವಾದ ವನ ನಿರ್ಝಣಿಯ ನಡುವಣ ಹೆಬ್ಬಂಡೆಯ ಮೇಲೆಯ ಬಿಲ್ಲಿಗೆ ಕೂರಿಸಿದ್ದರು! ಏಪ್ರೀಲ್ ತಿಂಗಳ ಬೆಟ್ಟ ಬೇಸಗೆಯಲ್ಲಿಯೂ ಆ ಮಲೆ ತೊರೆಯ ದಡಗಳಲ್ಲಿ ದಟ್ಟತ್ತಾಗಿ ಬೆಳೆದು ನೀಂತಿದ್ದ ಹೊಂಗೆಯ ಮರಗಳು ಕಡುಹಸಿರಾಗಿ ಕರ್ನೆಳಲಿನ ತಣ್ಗೋಡೆಯನ್ನು ಎತ್ತಿ ಹಿಡಿದಿದ್ದುವು. ನಾನು ಕುಳಿತ್ತಿದ್ದ ಬಂಡೆಯ ನೆತ್ತಿಯ ಎತ್ತರಕ್ಕೆ ಹಿಂದಕ್ಕೂ ಮುಂದಕ್ಕೂ ಸುಮಾರು ದೂರದವರೆಗೂ ಕಣ್ಬೊಲ ಬಿತ್ತರಿಸಿತು. ಹಳುವಿನವರ ಬೊಬ್ಬಗೆ ಓಡಬೇಕಾಗಿತ್ತು. ಅಂದರೆ ಬಿಲ್ಲಿಗೆ ಕುಳಿತ್ತಿದ್ದ ನನ್ನ ಕಣ್ಣಿಗೆ ಕಾಣಿಸಿಕೊಂಡು ಚೆನ್ನಾಗಿ ಗುರಿಗೆ ಸಿಗುತ್ತಿದ್ದುವು. ಕಂಡಿಯಲ್ಲಿ ಸಣ್ಣ ಪ್ರಾಣಿಗಳಾವುವೂ ಹೆಚ್ಚಾಗಿ ಬರುವುದಿಲ್ಲ, ಬಂದರೆ ಹಂದಿ ಹುಲಿಗಳೆ ಬರುತ್ತವೆ ಎಂದು ಹೇಳಿದರು. ಸರಿ, ಕೋವಿ ಹಿಡಿದು ಕಾದು ಕುಳಿತೆ.

ಬಿಲ್ಲಿನವರು ಎಲ್ಲರೂ ತಮ್ಮತಮ್ಮ ಕಂಡಿಗಳಿಗೆ ಹೊರಟು ಹೋದರು. ನಾನೊಬ್ಬನೆ ಒಬ್ಬೊಂಟಿಗನಾದೆ. ತೊರೆಯ ಪಿಸುಮೊರೆ ಮತ್ತು ಕೆಲವು ಹಕ್ಕಿಗಳ ಉಲಿಹ ವಿನಾಸರ್ವವೂ ನಿಃಶಬ್ದವಾಗಿತ್ತು. ಬೆರೆಯ ಸಮಯದಲ್ಲಾಗಿದ್ದರೆ ಆ ತೊರೆಯ ಮೊರೆ ಭೋರೆಂದೆ ಕಿವಿಗೆ ಇತರ ಸದ್ದುಗಳಾವುವು ಬೀಳದಂತೆ ಹರಿಯುತ್ತಿತ್ತು.  ಆದರೆ ಬೆಟ್ಟ ಬೇಸಗೆಯಲ್ಲಿ ನೀರು ಬತ್ತಿ ತುಂಡುಗಡಿದು ಅಲ್ಲಲ್ಲಿ ಸಣ್ಣ ಸಣ್ಣಗೆ ಮಡುಗಟ್ಟಿ ನಿಂತು ಸೋತು ಹರಿಯುತ್ತಿದ್ದುದರಿಂದ ಆ ಸದ್ದು  ಪಿಸುಮೊರೆ ಮಾತ್ರವಾಗಿತ್ತು. ಹೊಂಗೆಯ ದಟ್ಟ ನೆಳಲಿನಲ್ಲಿ ಕುಳಿತ್ತಿದ್ದ ನನ್ನ ಮೇಲೆ ಕಾಡಿ ತಂಗಾಳಿಮೆಲ್ಲಗೆ ತೀಡುತ್ತಿದ್ದುದ್ದುದು ತುಂಬ ಹಿತವಾಗಿತ್ತು.

ನನ್ನ ಕವಿತಾಪ್ರಜ್ಞೆ ಎಚ್ಚತ್ತು ಮೃಗಯಾ ಪ್ರಜ್ಞೆಯನ್ನು ಮೆಲ್ಲಗೆ ಮುಸುಗಿತು. ಸೃಷ್ಟಿ ಸೌಂಧರ್ಯದ ರಸಲೋಕದಲ್ಲಿ ವಿಹರಿಸತೊಡಗಿದೆ. ದೂರ, ಬಹುದೂರ, ಎಲ್ಲಿಂದಲೋ ಎಂಬಂತೆ, ರಸಲೋಕದಲ್ಲಿ ವಿಹರಿಸತೊಡಗಿದೆ. ದೂರ ಬಹುದೂರ , ಎಲ್ಲಿಂದಲೋ ಎಂಬಂತೆ, ಹಳುವಿನವರ ಸೋವಿನ ಬೊಬ್ಬೆ, ಕನಸಿನಲೆಂಬಂತೆ, ಕನಸು ಕನಸಾಗಿ ಆಗೊಮ್ಮೆ ಈಗೊಮ್ಮೆ ಕಿವಿಗೆ ಕೇಳಿಸಿದಂತಾಗುತ್ತಿತ್ತು. ಹಳುವಿನವರ ಜೊತೆಗೆ ಹಳ್ಳುನುಗ್ಗಿದ ನಾಯಿಗಳ ಕೂಗು ಕೇಳಿಸುತ್ತಿರಲಿಲ್ಲ. ನಾಯಿಗಳು ಕೂಗಬೇಕಾದರೆ, ಯಾವುದಾದರೂ ದೊಡ್ಡ ಪ್ರಾಣಿ ಎದ್ದರೆ ಮಾತ್ರ. ಅಂದರೆ ಪ್ರಾಣಿಗಳು ನನ್ನ ಬಿಲ್ಲಿಗೆ ಬರುವ ಸಾಧ್ಯತೆ ಹತ್ತಿರದಲ್ಲಿಲ್ಲವೆಂದು ಖಾತ್ರಿ ಮಾಡಿಕೊಂಡೆ.

ಮೆಲ್ಲಗೆ ಜೇಬಿನಲ್ಲಿಟ್ಟುಕೊಂಡಿದ್ದ ಪುಸ್ತಕ ತೆಗೆದು Kali, the Mother (ಜಗಜ್ಜನನಿ ಕಾಳಿಕಾಮಾತೆ) ಸೋದರಿ ನಿವೇದಿತಾ ಬರೆದದ್ದು. ರಜಾಕ್ಕೆ ಬರುವಾಗ ಆಶ್ರಮದಿಂದ ಕೊಂಡು ತಂದಿದ್ದೆ. ಓದುತ್ತಾ ಓದುತ್ತಾ ಮನಸ್ಸು ಬೇರೊಂದು ಭೂಮಿಕೆಗೆ ಪ್ರವೇಶಿಸಿತು. ಇದ್ದಕಿದ್ದಂತೆ ಎಲ್ಲಿಯೋ ದೂರದ ಕಾಡಿನಲ್ಲಿ ಹಾರಿದ ಒಂದು ಈಡಿನ ಸದ್ದು ಮತ್ತೆ ನನ್ನನ್ನು ಸದ್ಯದ ವಾಸ್ತವಿಕತೆಗೆ ಎಳೆತಂದಿತು.  ಆಲಿಸಿದೆ. ನಾಯಿಗಳ ಬೊಗಳುವಿಕೆಯ ಜೊತೆಗೆ ಹಳುವಿನವರ ಕಾಕೂ ದೂರದಿಂದೆಂಬಂತೆ ಮಂದವಾಗಿ ಕೇಳಿಸಿತು. ಬೇಗ ಬೇಗನೆ ಪುಸ್ತಕ ಮುಚ್ಚಿ ಜೇಬಿಗೆ ತುರುಕಿದೆ. ಕೋವಿಯನ್ನು ಕೈಗೆ ತೆಗೆದುಕೊಂಡೆ. ನಳಿಗೆ ಕಳಚಿ, ತೋಟಾ ಹಾಕಿದ್ದನ್ನು ಪರಿಶೀಲಿಸಿದೆ. ಕಿವಿ ನಿಮಿರಿ, ಹುಡುಕುಗ್ಗಣಾಗಿ, ಜೀವಾದಿ ನುಗ್ಗಿ ಬರುವುದನ್ನೇ ಕಾತರದಿಂದ ಕಾಯುತ್ತಾ ಸಿದ್ಧನಾಗಿ ಎದ್ದು ನಿಂತೆ. ಎತ್ತರದ ಬಂಡೆಯ ಮೇಲೆ.

ನನ್ನ ಕಂಡಿಗೆ ಒಂದು ನೊಣವೂ ಬರುವಂತೆ ತೋರಲಿಲ್ಲ. ಆದರೆ ಹಳುವಿನವರ ಆರ್ಭಟವೂ ನಾಯಿಗಳ ಅಬ್ಬರವೂ ಹೆಚ್ಚು ಹೆಚ್ಚು ಸ್ಪಷ್ಟವಾಗಿ ಅವರು ಹತ್ತಿರ ಹತ್ತಿರಕ್ಕೆ ಸೋವುತ್ತಾ ಬರುತ್ತಿರುವುದನ್ನು ಸಾರಿತು.

ಅಷ್ಟರಲ್ಲಿ ನನ್ನ ಬಿಲ್ಲಿಗೆ ಒಂದೆರಡು ಬಿಲ್ಲಿ ನಾಚೆಯಿದ್ದ ಕಂಡಿಯತ್ತ ನಾಯಿಗಳು ನುಗ್ಗುವ ಬೊಳಸದ್ದು ಕೇಳಿಸಿ, ಒಡನೆಯೆ ಗುಂಡು ಹಾರಿದ ಸದ್ದೂ ಕೇಳಿಸಿತು! ತಕ್ಷಣವೇ ಮತ್ತೊಂದು ಈಡೂ ಹಾರಿತು! ಹಳುವಿನವರ ಬೊಬ್ಬೆಯ ಮೊಳಗು ಕರೆಗಣ್ಮಿದಂತಾಯ್ತು.  ನನ್ನ ಮೈವಿರು ನಿಮಿರಿ ಅಂಗಾಂಗ ಸೆಡೆತು ನಿಂತುವು, ಇನ್ನೇನು ನನ್ನ ಕಂಡಿಗೂ ಹಂದಿಯೊ ಹುಲಿಯೋ ಹಾರಿ ಬರಬಹುದೆದಂದ! ಆದರೆ  ಬಂದದ್ದು ಒಂದು ಮುಂಗುಸಿ! ಬಡ ಪ್ರಾಣಿ! ಕಡ, ಮಿಗ, ಕಡುಕುರಿ, ಕಡೆಗೆ ಕಾಡುಕೊಳಿಯನ್ನೂ ಹೊಡೆಯುವುದಿಲ್ಲವೆಂದು ಪಣ ತೊಟ್ಟವನಿಂದ ಮುಂಗುಸಿಗೆ ಏನೂ ಅಪಾಯವಾಗದೆ ಮುಂದಿನ ಕಾಡಿಗೆ ನೆಮ್ಮದಿಯಾಗಿ ಹೋಯಿತು!

ಆ ಕಟ್ಟು ಮುಗಿಯುವ ಹೊತ್ತಿಗೆ ಹೊತ್ತು ನೆತ್ತಿಗೇರಿತು. ಬಿಲ್ಲಿನವರು ಹಳುವಿನವರೂ ಗೊತ್ತಾದ ಒಂದೆಡೆಗೆ ಸೇರತೊಡಗಿದರು. ಎಲ್ಲರಿಗೂ ಕುತೂಹಲ: ಯಾರು ಈಡು ಹೊಡೆದದ್ದು? ಏನು ಪ್ರಾಣಿಗೆ? ಬಿತ್ತೊ ಇಲ್ಲವೋ?

ಫಲಿತಾಂಶ: ಹಳುವಿನವರಲ್ಲಿ ಒಬ್ಬನು ಒಂದು ಕಾಡುಕೋಳಿ ಹೊಡೆದಿದ್ದನು. ಇನ್ನೊಬ್ಬನು ಬಿಲ್ಲಿನವನು ಒಂದು ಕಾಡುಕುರಿಗೆ ಹೊಡೆದು ಈಡು ಸರಿಯಾಗಿ ತಗುಲದೆ ಅದು ಮುಂದಿನ ಕಟ್ಟಿಗೆ ಓಡಿತ್ತು. ಒಂದು ದೊಡ್ಡ ಹಂದಿಗೆ ಹಳು ಸೋವುತ್ತಿದ್ದ ಯಲ್ಲು ಹೊಡೆದ ಗುಂಡು ತಗುಲಿ ರಕ್ತ ಸೋರುತ್ತಾ ಯಾರದೋ ಬಿಲ್ಲಿನ ಕಂಡಿಯಲ್ಲಿ ನುಸುಳಿ ಹೋಗಿತ್ತು. ಆಧರೆ ಯಾರೊಬ್ಬರನ್ನು ಕೇಳಿದರೂ ಬಿಲ್ಲಿನವರು ತಮ್ಮ ಕಂಡಿಯಲ್ಲಿ ಹೋಗಲಿಲ್ಲವೆಂದು ಬಿಟ್ಟರು. ಆದರೆ ಯಾರೊಬ್ಬರನ್ನೂ ಕೇಳಿದರೂ ಬಿಲ್ಲಿನವರು ತಮ್ಮ ಕಂಡಿಯಲ್ಲಿ ಹೋಗಲಿಲ್ಲ ಎಂದುಬಿಟ್ಟರು. ಯಾರೊ ಒಬ್ಬರು ಸುಳ್ಳು ಹೇಳುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಾಯಿತು. ತಮ್ಮ ಕಂಡಿಗೆ ಬಂದ ಹಂದಿಯನ್ನು ಹೊಡೆದು ತಪ್ಪಿದರಾಗಲಿ ಹೊಡೆಯದೇ ಬಿಟ್ಟರಾಗಲಿ, ಕಷ್ಟಪಟ್ಟು ದುಡಿದ ಹಳುವಿನವರ ಕಠಿಣ ಬೈಗುಳಿಗೆ ತುತ್ತಾಗಬೇಕಾಗುತ್ತಿತ್ತು!

ಮುಂದಿನ ಕಾಡನ್ನು ಕಟ್ಟುವ ಮುನ್ನ ಬುತ್ತಿ ಮುಗಿಸುವ ಸೂಚನೆಯನ್ನು ನಾವು ಕೆಲವರು ಕೊಟ್ಟೆವು. ನಾವಲ್ಲದೆ ಬೇರೆ ಯಾರಾದರೂ ಆಗಿದ್ದರೆ ಆಳು ಒಕ್ಕಲು ಹಳುವಿನವರು ಛೀಮಾರಿ ಹಾಕದೆ ಬಿಡುತ್ತಿರಲಿಲ್ಲ. ಏಕೆಂದರೆ ಗಾಯಗೊಂಡ ಹಂದಿ ಮುಂದಿನ ಕಾಡನ್ನೂ ದಾಟಿ ಬೇರೆ ದೂರದ ಕಾಡಿಗೆ ಪಲಾಯನ ಮಾಡುವ ಮುನ್ನವೆ ಅದನ್ನು ಸುತ್ತುವರಿಯಬೇಕಾದುದು ಬೇಟೆಯ ನೀತಿಯಾಗಿತ್ತು. ಆದರೆ ನಾವೆಲ್ಲ ದೊಡ್ಡ ಮನುಷ್ಯರು. ಶ್ರೀಮಂತರ ಮಕ್ಕಳು.ಹಸಿವೆಯ ಕಷ್ಟ ಸಹಿಸಲಾರದವರು. ಆದ್ದರಿಂದ ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಬುತ್ತಿ ಬಿಚ್ಚಲು ಸಮ್ಮತಿಯಿತ್ತರು.

ಆ ಹಳ್ಳದ ಹಾಸು ಬಂಎಗಳ ಮೇಲೆಯೆ ನಾವೆಲ್ಲ ಅಲ್ಲಲ್ಲಿ ಹೊಂಗೆಯ ನೆರಳಿನಲ್ಲಿ ಉಣ್ಣಲು ಕುಳಿತೆವು. ಮಾನಪ್ಪ ವೆಂಕಟಯ್ಯ, ಹಿರಿಯಣ್ಣ, ಪುಟ್ಟಯ್ಯ ನಾಯಕರು, ಗುರಪ್ಪಳ್ಳಿ, ಚಿಕ್ಕಪ್ಪಯ್ಯ ಎಂಬ ಅಡ್ಡ ಹೆಸರಿನ ಶೇಷಪ್ಪಗೌಡರು, ಶ್ರೀನಿವಾಸ, ವಿಜಯದೇವ ಇತ್ಯಾದಿ.

ಏಲಕ್ಕಿ ಕೊತ್ತಂಬರಿ ಸೊಪ್ಪಿನ ಗಮಗಮ ಕಂಪನಿನ ಆ ಮೊಸರನ್ನದ ಬುತ್ತಿ, ಕಳಲೆ ಉಪ್ಪನಕಾಯಿಯ ಸಾನಿಧ್ಯದಲ್ಲಿ, ಆ ಕಾಡಿನ ನಡುವೆ, ನಿರ್ಝರಿಣಿಯ ಮಧ್ಯೆ, ಅಲೆದಲೆದು ದಣಿದ ನಮಗೆ ಅಮೃತದೌತಣವನ್ನು ನಾಚಿಸುವಂತಿ‌ತ್ತು ಎಂದರೆ ಹಳಸಲು ಉಪಮಾನವಾದೀತೇನೋ! ಹಳ್ಳದ ನೀರನ್ನೆ ಬುತ್ತಿಯನ್ನಕೆ ಹಾಕಿಕೊಂಡು ಉಂಡೇವು: ಆ ನೀರನ್ನೆ ಕುಡಿದೆವು, ಮನೆಯಿಂದ ಹೊರಸಿಕೊಂಡು ಬಂದ ಕಾಯಿಸಿ ಆರಿಸಿದ ನೀರು ಇದ್ದರೂ! ಅಷ್ಟು ಸ್ವಾದುವಾಗಿತ್ತು. ಅಷ್ಟು ಹಿತವಾಗಿತ್ತು ಆ ಪ್ರಕೃತಿ ವಾರಿ! ಅರಣ್ಯ ಸನ್ನಿವೇಶದಲ್ಲಿ!

ಸ್ವಲ್ಪ ವಿಶ್ರಮಿಸಿಕೊಂಡ ಅನಂತರ ಮತ್ತೇ ಹೊರಟಿತು ಬೇಟೆಯ ಗುಂಪು ಮುಂದಿನ ಕಾಡು ಕಟ್ಟಲೆಂದು.

ಆ ಕಟ್ಟಿನಲ್ಲಿ ಹಿಂದಿನ ಕಟ್ಟಿನಲ್ಲಿ ಹಳು ಸೋವುತ್ತಿದ್ದ ಯಲ್ಲು ಗಾಯಗೊಳಿಸಿದ್ದ ಹಂದಿ, ಬಿಲ್ಲಿಗೆ ಕುಳಿತ್ತಿದ್ದ ಹಿರಿಯಣ್ಣನ ಕಂಡಿಗೆ ನುಗ್ಗಿಗು ಗುರಿಯಲ್ಲಿ ಎತ್ತಿದ ಕೈ ಎಂದು ಸು‌ಪ್ರಸಿದ್ಧವಾಗಿದ್ದ ಹಿರಿಯಣ್ಣನ ಈಡು ತಗುಲಿ ನೆಲಕ್ಕೊರಗಿತು; ಅದಕ್ಕೆ ಕೋರೆ ದಾಡೆಗಳಿತ್ತು. ಅದೊಂದು ಭಾರಿ ಒಂಟಿಗವಾಗಿತ್ತು. ಹತ್ತು ಹನ್ನೆರಡು ಜನ ಹೊರಲಾರದೆ ಹೊರಬೇಕಾಯ್ತು!

ಅಷ್ಟು ಹೊತ್ತಿಗಾಗಲೇ ಸಂಜೆ ಐದು ಗಂಟೆಯಾಗಿತ್ತು. ಇಂಗ್ಲಾದಿಯಿಂದ ಕಾಫಿ ತಿಂಡಿ ಹೊತ್ತ ಆಳುಗಳೂ ಬೇಟೆಗಾರರನ್ನು ಹುಡುಕಿಕೊಂಡು ಬಂದು ಸೇರಿದ್ದರು. ಕಾಫಿಗೆ ಮುನ್ನ ಮಾನಪ್ಪ ತನ್ನ ಕ್ಯಾಮರಾ ತೆಗೆದು ಹಂದಿಯೊಂದಿಗೆ ನಮ್ಮನ್ನೆಲ್ಲ ನಿಲ್ಲಿಸಿ ಪೋಟೋ ತೆಗೆದ. ಆ ಫೋಟೋ ಚೆನ್ನಾಗಿ ಬಂದಿಲ್ಲ. ಕಪ್ಪು ಕಪ್ಪು ಮಸಕಾಗಿ ಕಾಣುತ್ತದೆ. ಅದಿನ್ನೂ ನನ್ನ ಬಳಿ ಇದೆ. ಹಂದಿಯನ್ನು ಮುಂದಿಟ್ಟುಕೊಂಡೆ ಷಿಕಾರಿಗೆ ಕೇಂದ್ರ ವ್ಯಕ್ತಿ ಎಂಬಂತೆ  ನಾನು ಬೇಟೆಯ ಉಡುಪಿನಲ್ಲಿ ಬಂದೂಕು ಹಿಡಿದು ಸೈನಿಕನ ಭಂಗಿಯಲ್ಲಿ ನಿಂತಿದ್ದೇನೆ! ಉಪಹಾಸಾರ್ಹನಾಗಿ೧ ನಿಜವಾಗಿ ದುಡಿದವರೂ  ಹಳು ನುಗ್ಗುವ ಕಂಟಕಶ್ರಮ ಸಹಿಸಿದವರೂ… ಮರಾಠಿ ಯಲ್ಲು, ಬಡಗಿ ಮಂಜು ಮತ್ತು ಇತರರು ಅಮುಖ್ಯರಾಗಿ ಅಂಚಿಗೆ ಸೇರಿಬಿಟ್ಟಿದ್ದಾರೆ! ಹಾಗೆಯೆ ತಾನೆ ನೆಪೋಲಿಯನ್ ಅಂತಹ ಸೇನಾಪತಿಗಳೂ ಮುಖ್ಯರಾಗಿರುವುದು?

ಬೆಳಿಗ್ಗೆ ಉಲ್ಲಾಸದಿಂದ ಹೊರಟವರು ದಣಿದು ಬೆಂಡಾಗಿ ಕಾಲೆಳೆದುಕೊಂಡು ಬೈಗುಗಪ್ಪಿನಲ್ಲಿ ಇಂಗ್ಲಾದಿಗೆ ಹಿಂತಿರುಗಿದೆವು. ಆದರೆ ಭಾರಿ ಹಂದಿಯೊಂದನ್ನು ಹೊತ್ತು ತಂದಿದ್ದ ಹೆಮ್ಮೆಯ ಹಿಗ್ಗು ನಮ್ಮೆದೆಗಳನ್ನು ಮಾತ್ರವಲ್ಲದೆ ಹೊಟ್ಟೆಯನ್ನೂ ತುಂಬಿತ್ತು!

ಹಂದಿಯ ಹಸುಗೆಯಾಗಿ ಪಕರಾದ ಊಟ ಸಿದ್ಧವಾಗುವುದು ರಾತ್ರಿ ಸ್ವಲ್ಪ ಹೊತ್ತೇ ಆಯ್ತು.  ಅಲ್ಲಿಯತನಕ ನಾವೆಲ್ಲ ಆಫಿಸು ಕೋಣೆಯಲ್ಲಿ ತೂಗು ಹಾಕಿದ್ದ ಲ್ಯಾಂಪಿನ ಕೆಳಗೆ ನೆರೆದು ಹರಟೆ ಹೊಡೆಯುತತಾ ಇಸ್ಪೀಟು ಆಡುತ್ತಾ ಆಟಗದ ಜಗಳವಾಡುತ್ತಾ ತೇರುಮಿಣಿಗೆ ಕೈಕೊಟ್ಟಂತೆ ಗಲಾಟೆ ಮಾಡುತ್ತಾ ಕಾಲ ಹಾಕಿದ್ದೇವು!

ಊಟದ ಬೆಲ್ಲಿನ ಸದ್ದು ಟ್ರೀಂ ಟ್ರೀಂ ಟ್ರೀಂ! ಎಲ್ಲರೂ ಎದ್ದು ಊಟದ ಮನೆಗೆ ಧಾಳಿಟ್ಟೇವು!

ದಿನಚರಿಯಲ್ಲಿ ಎಪ್ರೀಲ್ ೧೩, ೧೪,೧೫,೧೬ ಖಾಲಿ. ಆದರೆ ೧೭ನೆಯ ಶನಿವಾರದ ದಿನಚರಿಯಲ್ಲಿ “In the moon light I sat with a gun and these thoughts came (ತಿಂಗಳ ಬೆಳಕಿನಲ್ಲಿ ಬಂದೂಕು ಹಿಡಿದು ಕುಳಿತ್ತಿದ್ದೆ.  ಈ ಚಿಂತನೆಗಳು ಬಂದುವು).

ಚಂದ್ರನುಡುಗಣ ನೀಲ ಗಗನವನಿಂತು ಶೋಭಿಸಿ ಕಾಂತಿಯಿಂ
ವನವಿರಾಜಿತ ರಮ್ಯ ಧಾರಿಣಿ ಮಲಗಿ ತಾನಿರೆ ಶಾಂತಿಯಿಂ
ಸೃಷ್ಟಿದೇವನೆ, ಹೃದಯ ಕರ್ಣದೊಳಿಯಲಾತ್ಮಾನಂದದಿಂ… ಇತ್ಯಾದಿ

ಎಂದಿದೆ. ಅಂದರೆ ನಾನು ಮನೆಗೆ (ಕುಪ್ಪಳಿಗೆ) ಹೋಗಿದ್ದೆ. ಮತ್ತು ೧೭ನೆಯ ಶನಿವಾರ ಬೆಳ್ದಿಂಗಳ ಭೇಟೆಗೆ ಹೋಗಿ ಮರಸು ಕೂತಿದ್ದಿರಬೇಕು.

ನನ್ನ ದಿನಚರಿ ಸರ್ವಸಾಧಾರಣವಾಗಿ ನಮ್ಮ ಮನೆಯಲ್ಲಿಯ ನನ್ನ ಬಾಳಿನ ವಿಚಾರವಾಗಿ ಮೌನವಾಗಿರುವುದನ್ನು ಕಾಣುತ್ತೇವೆ. ಆಶ್ಚರ್ಯವಾಗುತ್ತದೆ. ಅದಕ್ಕೆ ಕಾರಣ ಔದಾಸೀನ್ಯವಲ್ಲ. ತಾತ್ಸಾರವೂ ಅಲ್ಲ. ಮನೆಯ ಬಾಳು ಎಷ್ಟೇ ಸವಿಯಾಗಿದ್ದರೂ ಪ್ರೀತಿ ತುಂಬಿದ್ದರೂ ಅದು ಸಹಜವಾಗಿ ಹಾಗಿರತಕ್ಕದ್ದೆ ಆದ್ದರಿಂದ ಅದನ್ನೊಂದು ವಿಶೇಷವೆಂದು ಭಾವಿಸಿ, ಹೊರಗಣದ್ದನ್ನೂ ದೂರದ್ದನ್ನೂ ನಂಟರನ್ನೂ ಕಾಣುವಂತೆ ಕಂಡು, ಅದನ್ನು ಅಗೌರವಿಸಲೊಪ್ಪದ ಮನೋಧರ್ಮವಿರಬೇಕೆಂದು ಭಾವಿಸುತ್ತೇನೆ. ಮದುವೆ ಸಾವುಗಳಂತಹ ಘಟನೆಗಳನ್ನು ಸಹ ನನ್ನ ದಿನಚರಿ ದಾಖಲಿಸಿವುದಿಲ್ಲ;ನನ್ನ ತಂಗಿಯರ ಮದುವೆಯಂತಹ ಸಂಗತಿಗಳನ್ನೂ ಕೂಡ!

೧೯೨೬ನೆಯ ಏಪ್ರೀಲ್, ೧೮ನೆಯ ಭಾನುವಾರದ ದಿನಚರಿ:     
“ಮನೆಯಿಂದ ಶಿವಮೊಗ್ಗೆಗೆ ಹೊರಟೆ. ಶಿವಮೊಗ್ಗೆಯಲ್ಲಿ ಕೆಲವು ಸ್ಕೌಟು ಸ್ನೇಹಿತರನ್ನು ಸಂಧಿಸಿದೆ. ನಾಳೆ ಸ್ಕೌಟು ರಾಲಿ ನಡೆಯುತ್ತದೆ. ಸಾಮಾನು ಕೊಳ್ಳುವುದರಲ್ಲಿಯೆ ದಿನ ಕಳೆದೆ.[5]

೧೯೨೬ನೆಯ ಏಪ್ರೀಲ್ ೧೯ನೆಯ ಸೋಮವಾರದ ದಿನಚರಿ:   
“ಶಿವಮೊಗ್ಗದಿಂದ ಹೊರಟೆ. ಬಸ್ಸಿನಲ್ಲಿ ಒಬ್ಬ ಬಿ.ಎ.ವಿದ್ಯಾರ್ಥಿಯೊಡನೆ ಮಾತುಕತೆ ನಡೆಯಿತು. ತೀರ್ಥಹಳ್ಳಿಗೆ ಬಂದು ಊಟ ಪೂರೈಸಿದೆ. ಬಳಗಟ್ಟೆ ವೆಂಕಟಪ್ಪ ಸಿಕ್ಕಿದ್ದರು: ದೇವಂಗಿ ಡಾಕ್ಟರೂ ಸಂಧಿಸಿದರು. Kali the Mother ಓದಿದೆ ಅವರಿಬ್ಬರಿಗೂ …. ದೇವಂಗಿ ಗಾಡಿಯಲ್ಲಿ ದೇವಂಗಿಗೆ ಬಂದೆವು ನಾವೆಲ್ಲ. ಸಂಜೆ ನಾನೂ ಡಾಕ್ಟರೂ ವಾಕ್ ಹೋದೆವು; ಮಲೆನಾಡಿನ ಅರೋಗ್ಯದ ದುರ್ಗತಿಯು ವಿಚಾರ ಮಾತಾಡಿದೆವು”.

೧೯೨೬ನೆಯ ಏಪ್ರೀಲ ೨೦ನೆಯ ಮಂಗಳವಾರದ ದಿನಚರಿ:    
“ಇಂಗ್ಲಾದಿಯಲ್ಲಿ ನಾನು ಡಿ.ಎನ್. ಹಿರಿಯಣ್ಣ ಮತ್ತು ಡಿ.ಆರ‍್. ವೆಂಕಟಯ್ಯ ಅವರೊಡನೆ ಹಿಮ್ಮುತ್ತೂರಿಗೆ ಹೋದೆ (ಬೆಳಿಗ್ಗೆ)… ಇಸ್ಪೀಟು ಆಡಿದೇವು. ಇ. ಪುಟ್ಟಣ್ಣ ಬಂದ (ಕುಪ್ಪಳ್ಳಿಯಿಂದ). ನಾನು ಅವನೂ ಮನೆಗ (ಕುಪ್ಪಳಿಗೆ) ಬಂದೆವು. ದಾರಿಯಲ್ಲಿ ಅವನೊಡನೆ ಬದುಕಿನ ವಿಚಾರವಾಗಿ ಮಾತಾಡಿದೆ. ಸಂಜೆ ಕವಿಶೈಲಕ್ಕೆ ಹೋಗಿ ವ್ಯಾಯಾಮ ಮಾಡಿದೆ. ಮತ್ತು ‘ಭುವನ ವಿನುತ’[6] ಮುಂತಾಗಿ ಅನೇಕ ನನ್ನ ಕವನಗಳನ್ನು ಹಾಡಿದೆ. ರಾತ್ರಿ ಉಪ್ಪರಿಗೆಯಲ್ಲಿ ‘ಗದಾಯುದ್ಧ’ವನ್ನು ಓದಿ ಹೇಳಿದೆ”

ಏಪ್ರೀಲ್ ೨೧ ರಿಂದ ೨೬ರವರೆಗೆ ದಿನಚರಿಯ ಹಾಳೆಗಳು ಖಾಲಿಯಾಗಿವೆ. ಮನೆಯ ಅಕ್ಕರೆಯ ಸವಿಯ ಶ್ರೀಮಂತ ಬಾಳನ್ನು ದಿನಚರಿಯಲ್ಲಿ ಗುರುತಿಸುವುದಕ್ಕೂ ಸಮಯವಿರಲಿಲ್ಲವೆಂದು ಊಹಿಸುತ್ತೇನೆ.

 


[1] ಕೆ.ಆರ. ತಿಮ್ಮಯ್ಯ ಬಹುಶಃ ಎಸ್.ಎಸ್.ಎಲ್.ಸಿ. ಓದಿರಬೇಕು. ಹಾಜರಿ ಸಾಲಲಿಲ್ಲವೋ ಅಥವಾ ಇನ್ನಾವ ಕಾರಣವೋ ಅವನನ್ನು ಪರೀಕ್ಷೆಗೆ ಸೇರಿಸಲಿಲ್ಲ. ಅವನೂ ಮಾನಪ್ಪನೂ ಆ ವರ್ಷದಿಂದ ಮೇಲೆ ಓದು ನಿಲ್ಲಿಸಿಬಿಟ್ಟರು. ಮುಂದೆ ನಾನೊಬ್ಬನೆ ಆ ರೂಮಿನಲ್ಲಿದ್ದೆ

[2] ಮಹಾರಾಜರು ಕುದುರೆಯ ಮೇಲೆ ಕುಳಿತು ಬೆಟ್ಟದ ಮೇಲಕ್ಕೆ ವಾಯು ವಿಹಾರಕ್ಕೆ ಹೋಗಲು ಮಾಡಿಸಿಕೊಂಡಿದ್ದ ಕಾಲುದಾರಿ. ಅಥವಾ ನಡೆದಾದರೂ ಹೋಗಬಹುದಿತ್ತು.  ನಿರ್ಜನವಾಗಿರುತ್ತಿತ್ತು

[3] ದಿನಚರಿಯಲ್ಲಿ ಅಲ್ಲೊಂದು ಇಲ್ಲೊಂದು ಕಡೆ ಚುಟುಕವಾಗಿ ನಾನು ಅಶ್ರಮಕ್ಕೆ ಹೋಗುತ್ತಿದ್ದ ಸಂಗತಿ ವರದಿಯಾಗಿದ್ದರೂ ವಾಸ್ತವವಾಗಿ ನಾನು ಹೆಚ್ಚು ಕಡಿಮೆ ದಿನವೂ ತಪ್ಪದೇ ಆಶ್ರಮಕ್ಕೆ ಹೋಗುತ್ತಿದ್ದೆ. ಅಲ್ಲದೇ ಸ್ವಾಮಿ  ಸಿದ್ದೇಶ್ವರಾನಂದರೊಡನೆಯೂ ಕಸ್ತೂರಿ ಮುಂತಾಗಿ ಅಲ್ಲಿಗೆ ಬರುತ್ತಿದ್ದ ಅಧ್ಯಾಪಕ ಮಿತ್ರರೊಡನೆಯು ಹರಟೆಹೊಡೆಯುವುದರಿಂದ ಹಿಡಿದು ಗಂಭೀರ ತತ್ವ ಜಿಜ್ಞಾಸೆಯವರೆಗೂ ಸಲ್ಲಾಪಿಸುತ್ತಿದ್ದ.

[4] ಬೆಟ್ಟಕ್ಕೆ ಹೋಗಿ ಎತ್ತರದ ಬಂಡೆಯ ಮೇಲೆ ಕುಳಿತು ಸೂರ್ಯಾಸ್ತದ ಸಂಧ್ಯಾಸೌಂದರ್ಯ ವೀಕ್ಷಣೆ ಮಾಡುವುದು ನನಗೊಂದು ಹುಚ್ಚಾಗಿತ್ತು. ದುರ್ವ್ಯಸನವೋ ಎಂಬಷ್ಟರ ಮಟ್ಟಿಗೆ! ನಾನು ಬೈಸಿಕಲ್ಲನ್ನಾಗಲಿ ಅಥವಾ ಯಾವುದೇ ವಾಹನದ ನೆರವನ್ನಾಗಲಿ ಎಂದಿಗೂ ತೆಗೆದುಕೊಂಡದ್ದು ನೆನಪಿಲ. ನಡೆದೇ ಹೋಗುತ್ತಿದ್ದೆ ಚಾಮುಂಡಿ ಬೆಟ್ಟದಡೆಗೆ.ಸಂತೆಪೇಟೆಯಿಂದ, ಸುಮಾರು ಮೂರು ನಾಲ್ಕು ಮೈಲಿ!ಪರೀಕ್ಷೆಯ ಸಮಯದಲ್ಲಿಯೂ, ಪರೀಕ್ಷೆ ಮುಗಿಸಿಕೊಂಡು, ಅಷ್ಟು ದೂರ ನಡೆದುಕೊಂಡು ಹೋಗಿ ಸೂರ್ಯಾಸ್ತದ ಸಂಧ್ಯಾ ಸೌಂದರ್ಯ ವೀಕ್ಷಣೆ ಮಾಡಿದೆನೆಂದರೆ ಅದಕ್ಕೆ ಎಂತಹ ಮಹತ್ತರ ಪ್ರಚೋದನೆ ಇರಬೇಕಾಗುತ್ತದೆ! ನನಗೆ ಅದೊಂದು ಆಧ್ಯಾತ್ಮಿಕ ಅನುಭವದ ದಿವ್ಯದರ್ಶನವಾಗಿರುತ್ತಿತ್ತು! ಅಂತಹ ಪ್ರಚೋದನೆಯ ಕಾರಣವಾಗಿತ್ತಿತ್ತು.  ಎಷ್ಟೋ ಸಾರಿ. ಮಲೆನಾಡಿಗೆ ಬಂದ ನನ್ನ ಬಯಲು ಸೀಮೆಯ ಮಿತ್ರರನ್ನು ಬೆಳಗಿನ ಜಾಔ ನಾಲ್ಕು ಗಂಟೆಗೆ ಎಬ್ಬಿಸಿ, ಸೂರ್ಯೋದಯಕ್ಕೆ ಮೊದಲೇ ಉಷಃಕಾಲದ ವಿಭವವನ್ನೂದರ್ಶಿಸಲು ಅವರನ್ನು ಕಾಡಿನಲ್ಲಿ ಅಲೆಯಿಸಿ, ಗುಡ್ಡ ಹತ್ತಿಸಿ, ಮಲೆಯ ನೆತ್ತಿಗೆ ಕರೆದೊಯ್ಯುತ್ತಿದ್ದುದು! ನನ್ನೆಲ್ಲ ಗದ್ಯಪದ್ಯ ಕೃತಿಗಳಲ್ಲಿ ಆ ಅನುಭವದ ದಿವ್ಯ ರಸಾಸ್ವಾದನೆಯನ್ನು ಓದುಗರು, ಸಹೃದಯರಾಗಿದ್ದರೆ, ಯಥೇಚ್ಛವಾಗಿ ಪಡೆಯಬಹುದು. ಅದಿನ್ನೂ ನನ್ನಲ್ಲಿ ಜೀವಂತವಾಗಿರುವ ದಿವ್ಯ ದುರ್ವ್ಯಸನವೆ! ಪರೀಕ್ಷೆಗಳು ಇನ್ನೂ ಮುಗಿದು ಇರಲಿಲ್ಲ!

[5] ದೊಡ್ಡ ಚಿಕ್ಕಪ್ಪಯ್ಯ ರಾಮಣ್ಣಗೌಡರು ನಾನು ರಜಾಕ್ಕೆ ಊರಿಗೆ ಹೋದಾಗಲೆಲ್ಲ ನನ್ನನ್ನು ಸಾಂಸಾರಿಕ ಲೌಕಿಕ ಕಾರ್ಯಗಳಿಗೆ ನಿಯೋಜಿಸುವ ಪ್ರಯತ್ನಿಸುತ್ತಿದ್ದರೆಂದು ನನಗನಿಸುತ್ತದೆ.  ಕಾವ್ಯ, ಸಾಹಿತ್ಯ, ಅಧ್ಯಾತ್ಮ, ಪ್ರಕೃತಿ ಸೌಂಧರ್ಯೋಪಾಸನೆಯ ಇತ್ಯಾದಿಗಳಲ್ಲಿ ನನಗಿದ್ದ ಆಸಕ್ತಿಯನ್ನೂ, ಗದ್ದೆ ತೋಟ ಜಮೀನು ಮನೆ ಇತ್ಯಾದಿಗಳ ವಿಷಯದಲ್ಲಿದ್ದ ಔದಾಸೀನ್ಯವನ್ನೂ ಹಿಂದೆ ಮನೆ ಪಾಲಾಗುವ ಕಾಲದಲ್ಲಿಯೂ ಆ ವಿಚಾರದಲ್ಲಿ ನಾನು ತೋರಿದ್ದ ತಾತ್ಸಾರವನ್ನೂ, ರಜಾಕ್ಕೆ ಬಂದಾಗಲೂ ಕವಿಶೈಲಕ್ಕೆ ಹೋಗಿ ಧ್ಯಾನತಪಸ್ಸುಗಳಲ್ಲಿ ಆವರು ತಿಳಿದುಕೊಂಡಂತೆ ನಿರತನಗುತ್ತಿದ್ದುದನ್ನೂ ನೋಡಿ, ಮತ್ತು ಇತ್ತೀಚೆಗೆ ನಾನು ಶ್ರೀ ರಾಮಕೃಷ್ಣಾಶ್ರಮಕ್ಕೆ ಹೋಗಿ ಸಂನ್ಯಾಸಿಗಳ ಜೊತೆಗೆ ಸೇರುತ್ತಿದ್ದುದನ್ನು ಕೇಳಿ. ನಾನೆಲ್ಲಿ ಮನೆ ಮಾರು ಬಿಟ್ಟು ಸಂನ್ಯಾಸಿಯಾಗಿ ಹೊರಟು ಹೋಗುತ್ತೇನೆಯೋ ಎಂದು ಆಶಂಕಿಸುತ್ತಿದ್ದರೆಂದು ಭಾವಿಸುತ್ತೇನೆ.  ಅದಕ್ಕಾಗಿ ನನಗೆ ಗೃಹಕೃತ್ಯದ ಹೊಣೆ ಹೊರಿಸುವ ಒಂದು ಸಾಧನೋಪಾಯವಾಗಿ ಕೊಪ್ಪದ ಸಂತೆಗೋ ತೀರ್ಥಹಳ್ಳಿಯ ಪೇಟೆಗೋ ಶಿವಮೊಗ್ಗಕ್ಕೋ ಮನೆಗೆ ದಿನಸಿ ಸಾಮಾನುತರಲು ಕಳಿಸುತ್ತಿದ್ದರು.  ಅಲ್ಲಿ ನಡೆಯುತ್ತಿದ್ದುದೇನೋ ಅವರ ಉದ್ದೇಶಕ್ಕೆ ಅನುಕೂಲವಾಗಿ ಇರುತ್ತಿರಲಿಲ್ಲ! ನಾನು ಬರಿಯ ನಿಮಿತ್ತ ಮಾತ್ರವಾಗಿರುತ್ತಿದ್ದ.  ಯಾರಾದರೂ ಸಂತೆಗೆ ಬಂದು ನೆಂಟರ ಮನೆಯ ಹಿರಿಯರು ನನಗಾಗಿ ಆ ಕೆಲಸ ಮಾಡಿಕೊಡುತ್ತಿದ್ದರು.   ಶಿವಮೊಗ್ಗದಲ್ಲೆನೂ ಹೊಸಮನೆ ಮಂಜಪ್ಪಗೌಡರು ತಮ್ಮ ಯಾರಾದರೊಬ್ಬ ಅನುಭವಸ್ಥ ರೈಟರನ್ನು ಕಳಿಸಿ ಕೆಲಸ ನಿರ್ವಹಿಸಿಕೊಡುತ್ತಿದ್ದರು.  ನಾನು ಆ ಕಾದಲ್ಲಿ ಅವರೊಡನೆ ಸಾಹಿತ್ಯಕ ಅಥವಾ ದಾರ್ಶನಿಕ ವಿಚಾರದಲ್ಲಿ ತೊಡಗಿರುತ್ತಿದ್ದೆ! … ಒಮ್ಮೊಮ್ಮೆ ಕೆಲಸ ಮಾಡುವ ಆಳುಗಳು ಮೇಲ್ವಿಚಾರಣೆಗೆ ನಿಯೋಜಿಸುತ್ತಿದ್ದರು.  ಒಮ್ಮೆಯಂತೂ ಕೂಡು ಹಟ್ಟಿಯ ಗೊಬ್ಬರದ ಗುಂಡಿಯಿಂದ ಗದ್ದೆಗೆ ಹಡಗೆಗಳಲ್ಲಿಯೂ ಮಣ್ತಟ್ಟೆಗಳಲ್ಲಿಯೂ ಗೊಬ್ಬರ ಸಾಗಿಸುವ ಕಾಯಕದಲ್ಲಿ ಪಾಲುಗೊಂಡಿದೆ. ನನ್ನ ಕರ್ಮಯೋಗಿತ್ವವನ್ನು ಸಿದ್ದಾಂತ ಮಾಡಿ ತೋರಿಸಲಿಕ್ಕೆ! ಮುಂದೊಮ್ಮೆ ನಾನು ಬಿ.ಎ. ಪಾಸಾದಾಗ ಮದುವೆ ಮಾಡುವ ಪ್ರಯತ್ನವನ್ನೂ ನಡೆಸಿದರು: ಎಂ.ಎ. ಓದುವುದನ್ನು ಹೊಣೆಯಾಗಿ ಒಡ್ಡಿ ಅದನ್ನು ಮುಂದಕ್ಕೆ ತಳ್ಳಿದೆ!

[6] ಕರ್ಣಾಟಕ ರಾಷ್ಟ್ರಗೀತೆಯ ಮೊದಲಿದ್ದ ಪಾಠದಂತೆ