೧೯೨೬ನೆಯ ಏಪ್ರೀಲ್ ೨೭ನೆಯ ಮಂಗಳವಾರದ ದಿನಚರಿ:   
“ಷಿಕಾರಿಯನ್ನೆ ಬಿಟ್ಟು ಬಿಡಲು ಆದಷ್ಟು ಪ್ರಯತ್ನಿಸುತ್ತಿದ್ದೇನೆ. ಏಕೋ ಅದು ನನ್ನ ಆತ್ಮಕ್ಕೆ ಹಿಡಿಸುತ್ತಿಲ್ಲ. ಇಂದ್ರೀಯಗಳಿಗೆ ಹಿತವಾಗಿದ್ದರೂ! ಹೇ ಶ್ರೀರಾಮಕೃಷ್ಣ, ನನ್ನನ್ನು ರಕ್ಷಿಸು. ನನಗೆ ಮಾರ್ಗದರ್ಶನ ಮಾಡು”.

೧೯೨೬ನೆಯ ಏಪ್ರೀಲ್ ೨೮ನೆಯ ಬುಧವಾರದ ದಿನಚರಿ:        
“ಅತ್ಯಂತ ಸುಮಧುರ ಸ್ವಪ್ನವೊಂದನ್ನು ಕಂಡೆ. ಕೈ ಕೈ ಹಿಡಿದು ಗಿರಿಜೆಯೊಡನೆ ನಡೆದಾಡುತ್ತಿದ್ದೆ. ಮಧುರ ಸುಮಧುರ ಸಂಪರ್ಕವಾಗಿತ್ತು ಅದು. ಅವಳು ಕೇಳಿದಳು ‘ನೀವು ಯಾರಾದರೂ ಅನ್ಯರನ್ನು ಮದುವೆಯಾಗುತ್ತೀರಾ?’ ಎಂದು. ನಾನೆಂದೆ ‘ ಇಲ್ಲ’! ಅವಳು ಅಂಗಲಾಚಿದಳು ‘ಅಯ್ಯೋ ಹಾಗೆ ಬೇರೆಯವರೊಡನೆ ಮದುವೆಯಾಗುವ ವಿಚಾರ ಎತ್ತಬೇಡಿ, ದಯವಿಟ್ಟು! ನಾನೆಂದೆ ‘ನಿನ್ನೊಡನೆಯೇ ಇದ್ದೇನೆ.’ ‘ ಗಿರಿಜಿಯನ್ನು ಕುರಿತು ಒಂದು ಕವನ ರಚಿಸಿದೆ”[1]

ಪ್ರಣಯಸ್ವಪ್ನ!     

ಪೂರ್ಣಚಂದ್ರನುದಯವಾಗಿ
ನೀಲನಭದ ನಡುವೆ ತೊಳಗಿ
ರಮ್ಯ ಕಾಂತಿಯನ್ನು ಬೀರಿ
ನಲಿಯುತಿರ್ದನು.

ಉಡುಗಳಮಿತ  ಮಿನುಗಿ ಮಿನುಗಿ
ಮೆರೆಯುತಿರ್ದುವು.

ಛಿದ್ರಮೇಘ ತತಿಯು ನಭದಿ
ಪುಣ್ಯ ಜನರ ಮನದಿ ಬರುವ

ಪರಮ ಸ್ವಪ್ನ ನಿಕರದಂತೆ
ತೇಲುತಿರ್ದುದು.

ರವ ವಿಹೀನ ಧರೆಯು ತಾನು
ನಿದ್ರಿಸಿರ್ದುದುದು

ತಂಪಿನೆಲರು ವಿವಿಧ ಕುಸುಮ
ಗಂಧಗಳನು ಸೊರೆಗೊಂಡು
ತಳಿರ ಕೂಡೆ ಸರಸವಾಡಿ
ನುಸುಳುತಿರ್ದುದು.
ವಿಶ್ವತಾ ಸುಸುಪ್ತಿಯಲ್ಲಿ
ನೆಲಸಿಯಿರ್ದುದು.

ವ್ಯೋಮಶ್ರೀಯು ಕರವ ನೀಡಿ
ಭೂ ರಮಣಿಯ ಕರವ ಪಿಡಿದು
ವಿಶ್ವದೈಕ್ಯಶ್ರೀಯ ಕರೆದು
ಮನ್ನಿಸಿರ್ದಳು.

ಮಾಯಾಶ್ರೀ ದೂರ ನಿಂತು
ನಗುತಲಿರ್ಧಳು.

ಜನವಿಹೀನ ಗಿರಿಯ ರಮ್ಯ
ಶಿಖರದೆಡೆಯೊಳೊಂದು ದಿವ್ಯ
ಕೊಳವು ಶಶಿಮರೀಚಿಯಿಂದ
ರಾಜಿಸಿರ್ದುದು.
ಸುತ್ತ ನಿಬಿಡ ವನದ ರಾಜಿ
ಪಸರಿಸಿರ್ದುದ.

ಕೊಳದೋಳೇಳುವನಿಲ ಜನಿತ
ಜಲ ತರಂಗ ತತಿಯ ಮಾಲೆ
ಕಮಲ ಕುದುಮಗಳೊಳು ಸರಸ
ವಾಡುತಿರ್ದುವು.

ಚಂದ್ರಬಿಂಬ ಸರದ ನಡುವೆ
ಶೋಭಿಸಿರ್ದುದು.

ಕಾಂತಿಯಿಂತು ರಂಜಿಸಿರಲು,
ಶಾಂತಿಯಿಂತು ಪಸರಿಸಿರಲು,
ಭ್ರಾಂತಿಯಿತ್ತು ಜಗಕೆ ದೇಸಿ
ಮೋಹಿಸಿಂತಿರೆ,
ಪ್ರಣಯಪ್ರೇಮ ಹೃದಯದಲ್ಲಿ
ನಲಿಯುತಿರ್ದುದು

ದೂರ ದೂರ ಕಡಲ ತೆರಗ-
ಳಂದದಚಲ ಶ್ರೇಣಿ ಕಣ್ಗೆ
ಶಾಂತಮನದ ಪರಮ ಚಿಂತೆ-
ಮಾಲೆಯಂತಿರೆ
ಚಂದ್ರಕಾಂತಿ ಪಸುರ ಮೇಲೆ
ಪವಡಿಸಿರ್ದುದು.

ಸರದ ತಟದೊಳೆಸೆಯುತಿರ್ದ
ಚಂದ್ರಕಾಂತ ಶಿಲೆಯ ಮೇಲೆ
ಚಂದ್ರವದನೆ ಗಿರಿಜೆಯೊಡನೆ
ಸರಸವಾಡುತ
ಈಲನಭದ ರಮ್ಯ ಶಶಿಯ
ತೋರುತಿರ್ದೆನು.

ಗಿರಿಜೆಯೆನ್ನ ತೊಡೆಯ ಮೇಲೆ
ಕುಳಿತು, ಕೊರಳ ಕರದೊಳಪ್ಪಿ,
ಮೊಗದಿ ತನ್ನ ಲಲಿತ ಮೊಗವ-
ನಿಡುತಲಿರ್ದಳು;
ಒಲುಮೆಯವಳ ಹೃದಯದಲ್ಲಿ
ಸ್ಫುರಿಸುತಿರ್ದುದು.

“ಗಿರಿಜೆ! ರಮಣಿ! ಕೋಮಲಾಂಗಿ!
ಮೌನವೇಕೆ? ಮಾತನಾಡು!

ನಿನ್ನ ದನಿಯ ಸುಧೆಯೆನೆನ್ನ.
ಕರ್ಣವೀಂಟಲಿ!
ನುಡಿಯ ಕೇಳಲಾರುಮಿಲ್ಲ.
ರಮಣಿ” ಎಂದೆನು.

“ಪಿಸುಣನಲ್ಲ ಅನಿಲದೇವ;
ಧರಣಿರಮೆಗಸೂಯೆ ಇಲ್ಲ;
ಗಗನರಮಣಿ ಇದನು ಕಂಡು
ಕರುಬಳೆಂದಿಗೂ !
ಶಶಿಯ ಭಯವು ಬೇಡ, ಅವನು
ಪರಮಗೆಳೆಯನು!”

ಇಂತು ನುಡಿಯಲಾನು, ಗಿರಿಜೆ
ಮಂದಹಾಸದಿಂದಲೆನ್ನ
ಮೊಗವ ನೋಡಿ ಲಜ್ಜೆಯಿಂದ
ಇಂತು ನುಡಿದಳು!
ನುಡಿಗೆ ನಾಕ ನಡುಗುತಿಳೆಯ
ಶರಣು ಹೊಕ್ಕಿತು!

“ಹೃದಯಕೀಶ ನೀನೇ ಪ್ರೀಯನೆ,
ನಿನ್ನನಲ್ಲದನ್ಯರನ್ನು
ಹೃದಯವರಿಯದಿಹುದು, ಮನವು
ಚಿಂತೆಮಾಡದು.
ನಿನ್ನನಲ್ಲದಿತರರನ್ನು
ವರಿಸೆನೆಂದಿಗೂ!”

ರನ್ನೆ ತಾನು ನುಡಿಯುತಿಂತು
ಚೆನ್ನ ವ್ದನದಿಂದಲೆನ್ನ
ಕೆನ್ನೆಗಳನು ಚುಂಬಿಸುತ್ತ
ನಲ್ಮೆದೋರಲು
ಕಾಲದೇವಳಿದು ವಿಶ್ವ
ಶೂನ್ಯವಾಯಿತು!

ಭೀತಿಯಿಂದ ಕಣ್ಣ ತೆರೆಯೆ
ಸೂಯೃನುದಯವಾಗುತಿರ್ದ;
ಪಕ್ಷಿಜಾಲ ವನಗಳಲ್ಲಿ
ಹಾಡುತಿರ್ದುವು!
ಪ್ರಣಯಸ್ವಪ್ನ ಶೂನ್ಯವಾಯ್ತು,
ಪ್ರಣಯವುಳಿಯಿತು!

೧೯೨೬ನೆಯ ಏಪ್ರೀಲ್ ೨೯ನೆಯ ಗುರುವಾರದ ದಿನಚರಿ:       
“ನಾನೊಬ್ಬನೆ ‘ಕವಿಶೈಲಕ್ಕೆ’ ಹೋಗಿ ಪ್ರಾಣಾಯಾಮ ಮಾಡಿ ಧ್ಯಾನ ಮಾಡಿದೆ. ಒಂದು ಬೇಟೆಯ ಗುಂಪಿನೊಡನೆ ಹೋಗಿ ದಿನವೆಲ್ಲ ಬೇಟೆಯಾಡಿ ಕತ್ತಲಾದ ಮೇಲೆ ಮನೆಗೆ ಬಂದೆ. ಗದುಗಿನ ಭಾರತ ಓದಿ ‘ವಿದುರನೀತಿ’ ಯನ್ನು ವಿವರಿಸಿದೆ. ಸ್ವಾಮಿ ಸಿದ್ದೇಶ್ವರಾನಂದರಿಂದ ಕಾಗದ ಬಂತು”.

೧೯೨೬ನೆಯ ಏಪ್ರೀಲ್ ೩೦ನೆಯ ಶುಕ್ರವಾರದ ದಿನಚರಿ:        
“ಪ್ರಾಂತಃಕಾಲ ಕಾಡಿನ ಒಂದು ವಿಜನ ಪ್ರದೇಶಕ್ಕೆ ಹೋಗಿ ಪ್ರಾಣಾಯಾಮ ಮಾಡಿ, ಶ್ರೀತಾಯಿಯನ್ನು ಕುರಿತು ಧ್ಯಾನಿಸಿದೆ (Meditated on the Mother). ಆ ಮಹೂರ್ತದಲ್ಲಿ ನಾನು ಪೂರ್ಣನಾಗಿದ್ದೆ (I Was full then),. ನನ್ನ ಮಗುವೆ, ನಾ ನಿನ್ನ ಸೋದರ’ ಎಂದು ಅಕ್ಕರೆದೋರಿದೆ. (I was full then). ನನ್ನ ಪಕ್ಕದಲ್ಲಿದ್ದ ಎಲರಿಗೆ ನಲಿಯುತ್ತಿದ್ದ ಒಂದು ಗಿಡದ ಎಲೆಯನ್ನು ಮುದ್ದಿಸಿ ‘ನನ್ನಮ್ಮನ ಮಗುವೆ, ನಾ ನಿನ್ನ ಸೋದರ.’ ಎಂದು ಅಕ್ಕರೆದೋರಿದೆ. (I Kissed the leaf that danced beside me and said, ‘Child of my mother, I am thy own the brother!) ನಾನು, ಗಿರಿಯಪ್ಪ ಹೆಗ್ಗಡೆ (ನಮ್ಮ ಮನೆಯಲ್ಲಿ ಕರಣಿಕನಾಗಿದ್ದರು. ) ಮಲೆನೆತ್ತಿಗೆ ಹೋದೆವು. ನನ್ನ ಕೆಲವು ಭಾವಗೀತೆಗಳನ್ನು ಹಾಡಿದೆ”.

೧೯೨೬ನೆಯ ಮೇ ೧ನೆಯ ಶನಿವಾರದ ದಿನಚರಿ:      
“ಆನಂದಾನುಭವದಲ್ಲಿ ಆತ್ಮ ಸಮರ್ಪಣ ಮಾಡಿಕೊಳ್ಳಲು ಕಾಡಿಗೆ ಹೋಗಿದ್ದೆ. ಅಲ್ಲಿ ಧ್ಯಾನ ಮಾಡಿದೆ (I had been to woods to lose myself in the experience of Ananda. I meditated.) ಸಂಜೆ ಇಂಗ್ಲಾದಿಗೆ ಹೋದೆ, ಮರಿತೊಟ್ಟಲಿಗೆ ಹೋಗಲೆಂದು ಹೇಳಿಕಳಿಸಿದ್ದರಿಂದ.. ಗಿರಿಯಪ್ಪ ಹೆಗ್ಗಡೆಯವರಿಗೆ ಎರಡು ಪುಸ್ತಕ ಕೊಟ್ಟೆ…. ಗಿರಿಜೆಯ ಕುರಿತ ಕೆಲವು ಪದ್ಯ ರಚಿಸಿದೆ”.

ಎನ್ನ ಗಿರಿಜೆಯೆ, ಗಿರಿಜೆಯೆ!

ಗಿರಿಜೆ, ಕೋಮಲೆ, ಎನ್ನ ಹೃದಯಾನಂದ ನೈದಿಲೆಗಿಂದುವೆ,
ಎನ್ನ ಮನವನು ಮಧುವು ನೀನಹೆ, ಎನ್ನ ಗಿರಿಜೆಯೆ, ಗಿರಿಜೆಯೆ!
ಕಮಲ ರಾಗವ ನೋಡಿ ನಗುವುದು ನಿನ್ನ ರಂಜಿಪ ವದನವು;
ನಯನ ನಗುವುದು ತಳಿರ ಮಿಂಚನು, ಎನ್ನಗಿರಿಜೆಯೆ, ಗಿರಿಜೆಯೆ!

ರಮಣಿ ನಿನ್ನಾ ರಮ್ಯ ರೂಪವು ಎನ್ನ ಕಂಗಳ ತುಂಬಿದೆ;
ಕಮಲ ನಯನೆಯೆ, ಹೃದಯವನ್ನೆದು ನಿನ್ನ ಭಾವದೊಳಿಡಿದಿದೆ.
ನಿಮಿಷ ನಿನ್ನದು, ದಿವಸ  ನಿನ್ನದು, ವರುಷ ಯುಗಗಳು ನಿನ್ನವು;
ರಮಣಿ, ನಿನ್ನೊಳು ಮನವು ಸೆರೆಯಿದೆ, ಎನ್ನ ಗಿರಿಜೆಯೆ, ಗಿರಿಜೆಯೆ!

ಚೈತ್ರಮಾಸದ ರಮ್ಯ ಕುಸುಮವು ರವಿಯುದಯದೊಳು ನಲಿಯುತ
ಚುಂಬಿಸೆನ್ನನು ‘ಕವಿಯೆ ಬಾರೈ’ ಎಂದು ಕರೆಯುವ ತೆರದೊಳು
ಕರೆವೆ ನಿನ್ನೀ ಪ್ರೀಯ ಕವಿವರನ ಚುಂಬಿಸಲೊಲಿಸುವ ತವಕದಿ,
ಕಾಲಚೈತ್ರನ ನಿತ್ಯ ಕುಸುವನೆ, ಎನ್ನ ಗಿರಿಜೆಯೆ, ಗಿರಿಜೆಯೆ!

ನಯನ ಕಾಂತಿಯದೊಂದು ನಾಕವು, ನುಡಿಯದನುಪಮ ನಾಕವು;
ಹೃದಯ ಸರಳತೆಯೊಂದು, ನಾಕವು, ಗಮನ ಮೋಹಿಪ ನಾಕವು;
ರೂಪಿನತಿಶಯವೊಂದು ನಾಕವು, ಚುಂಬನದ ಸಿರಿ ನಾಕವು;
ನಾಕ ಭರಿತೆ ಸುಮೋಕ್ಷೆ ನೀನಹೆ, ಎನ್ನ ಗಿರಿಜಿಯೆ, ಗಿರಿಜಿಯೆ!

ಗಿರಿಜೆ ನುಡಿವುವು ಮಧುವಿಹಂಗಮ ನಿನ್ನ ಮಂಗಳನಾಮವ;
ತೊರೆಯ ಗಳರವ ನಿನ್ನ ಮೈಮೆಯ ಕೀರ್ತಿಗೈವುದು, ರಮಣಿಯೆ:
ತರುಣಿ, ನಿನ್ನಾ ಕೋಮಲತ್ವ ನೋಡಿ ಕರುಬಿತು ವನಲತೆ,
ನೆಲೆಯು ಚೆಲುವಿಗೆ ನೀನೆ, ಹೇ ಪ್ರೀಯೆ, ಎನ್ನ ಗಿರಿಜೆಯೆ, ಗಿರಿಜೆಯೆ!

ನಿನ್ನನಲ್ಲದೆ ಬೇರೆಯಾರನು ಮನವು ಚಿಂತಿಸಲರಿಯದು;
ನಿನ್ನನಲ್ಲದೆ ಉಳಿದ ರೂಪವ ನಯನ ವೀಕ್ಷಿಸಲೊಲ್ಲದು;
ನಿನ್ನ ನಾಮವನೊಂದನಲ್ಲದೆ ನುಡಿಯಲಾರದು ಜಿಹ್ವೆಯು;
ನಿನ್ನೊಳಾನೇ ಲೀನವಾಗಿಹೆ, ಎನ್ನ ಗಿರಿಜೆಯೆ, ಗಿರಿಜೆಯೆ!

ನಿನ್ನ ನೋಡುವೆ ನೀಲ ಗಗನದಿ ಥಳಿಪ ತಾರಾಗಣದೊಳು;
ರನ್ನೆ, ನೀನೇ ತೇಲುತಿಹೆ ಜೀಮೂತದಂದದಿ ನಭದೋಳು;
ಕನ್ಯೆ, ನೀನೆ ನಿರತೆಯಾಗಿಹೆ ಉದಯ ಸಂಧ್ಯಾ ಸಮಯದಿ;
ಚೆನ್ನೆ, ನೀನೇ ಪ್ರಕೃತಿ ಮಿತ್ರಳು, ಎನ್ನ ಗಿರಿಜೆಯೆ, ಗಿರಿಜೆಯೆ!

ನನ್ನ ಹೃದಯದೊಳೈಕ್ಯಮಾಗಲಿ ನಿನ್ನ ಹೃದಯವು, ಶಶಿಮುಖಿ;
ಎಮ್ಮ ಬಾವಗಳಿರದೆ ಸಂಗಮವಾಗಿ ಹರಿಯಲಿ, ಹೇ ಪ್ರೀಯೆ!
ಬಾಹ್ಯವಲ್ಲದೆ ಅಂತರಂಗಗಳೊಂದುಗೂಡಲಿ, ರಮಣಿಯೆ;
ನಿನ್ನೋಳಾನೆ ಐಕ್ಯವಾಗಲಿ, ಎನ್ನ ಗಿರಿಜೆಯೆ, ಗಿರಿಜೆಯೆ!

ಕಾಲವೆಮ್ಮಯ ದಿವ್ಯ ಪ್ರೇಮವ ನುಂಗಲಾರದು, ತರುಣಿಯೆ!
ದೇಶವೆಮ್ಮೀ ಪರಮ ಬಂಧವ ಭಂಗಪಡಿಸದು, ತರಳೆಯೆ!
ಮೃತ್ಯುವೆಮ್ಮನುರಾಗ ತಂತ್ರಿಯ ಹರಿಯಲಾರದು, ಹೇ ಪ್ರೀಯೆ!
ನಿತ್ಯವಾಗಿಹುದೆಮ್ಮ ಗೆಳೆತನ, ಎನ್ನಗಿರಿಜೆಯೆ, ಗಿರಿಜೆಯೆ!                      ೨೩-೦೫-೧೯೨೬

೧೯೨೬ನೆಯ ಮೇ ೨ನೆಯ ಭಾನುವಾರದ ದಿನಚರಿ:  
“ನಾವು (ನಾನು -ಡಿ.ಆರ‍್. ವೆಂಕಟಯ್ಯ) ಮರಿತೊಟ್ಲಿಗೆ ಹೊರಟೆವು. ಕಮಾನು ಗಾಡಿಯಲ್ಲಿ ಹಾಕಿದ ಮೆತ್ತೆಯ ಮೇಲೆ ಕುಳಿತು ಸಹ್ಯಾದ್ರಿಯ ಕಾಡುಗಳ ನಡುವಣ ಅಂಕುಡೊಂಕು. ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಇಕ್ಕೆಲದ ಅರಣ್ಯಮಯ ದೃಶ್ಯ ಮನೋಹರವಾಗಿತ್ತು.  ಎತ್ತುಗಳ ಕೊರಳ ಗಂಟೆಯ ಉಲಿಯ ಶ್ರುತಿಗೆ ನಾನೂ ನನ್ನ ಕೆಲವು ಭಾವಗೀತೆಗಳನ್ನು ಹಾಡುತ್ತ್ ಹೋದೆ.  ನಾಲ್ಕು ಐದು ಗಂಟೆ ಪ್ರಯಾಣ ಮಾಡಿ ಹನ್ನೆರಡೂ ಹದಿನೈದು ಮೈಲಿ ದೂರದ ಮರಿತೊಟ್ಲಿಗೆ ಕತ್ತಲಾಗುತ್ತಿದ್ದ ಹೊತ್ತಿನಲ್ಲಿ ೭-೧೫ಕ್ಕೆ ತಲುಪಿದೆವು… ಓಂ ಶ್ರೀರಾಮಕೃಷ್ಣ ಪರಮಹಂಸ -ಶ್ರೀ ವಿವೇಕಾನಂದ!”

೧೯೨೬ನೆಯ ಮೇ ೩ನೆಯ ಸೋಮವಾರದ ದಿನಚರಿ:            
“ನಾರ್ವೆಯ ಜಾತ್ರೆಗೆ (ತೇರಿಗೆ) ಹೋದೆವು… ಅಲ್ಲಿ ಭಗವದ್ಗೀತೆಯನ್ನೋದಿದೆ.  ಈ ಜಗತ್ತಿನಲ್ಲಿ ನಾನು ಮಾಡಬೇಕಾಗಿರುವ ಮತ್ತು ಭಗವಂತನು ನನ್ನ ಮೇಲೆ ಹೊರಿಸಿ ಕಳಿಸಿರುವ ಕರ್ತವ್ಯ ಕರ್ಮವನ್ನು ಕುರಿತು ಪರಿಚಿಂತಿಸಿದೆ. (I read Gita there and mused on the work that I am ordained by God to do in this world). ಕೆಲವು ಉತ್ಸಾಹಿಗಳಿಗೆ ಸ್ವಾಮಿ ವಿವೇಕಾನಂದರ ವಿಚಾರ ತಿಳಿಸಿದೆ”.

೧೯೨೬ನೆಯ ಮೇ ೪ನೆಯ ಮಂಗಳವಾರದ ದಿನಚರಿ:           
“ಮರಿತೋಟ್ಲಿಗೆ ಹಿಂತಿರುಗಿದೆವು ಗದ್ದೆಗಳ ನಡುವೆ ಮೊರೆಯುತ್ತಾ ಹರಿಯುವ ಹಳ್ಳದ ಕಲ್ಲುಬಂಡೆಯ ಮೇಲೆ ಕುಳಿತು ‘ನನ್ನ ಮುದ್ದಿನ ಗಿರಿಜೆ’ಯನ್ನು ಕುರಿತು ಕೆಲವು ಹಾಡುಗಳನ್ನು ರಚಿಸಿದೆ. ಶೃಂಗೇರಿಗೆ ಹೋಗುವ ಆಲೋಚನೆ…”

೧೯೨೬ನೆಯ ಮೇ ೫ನೆಯ ಬುಧವಾರದ ದಿನಚರಿ:    
“ಸ್ವಾಮಿ ವಿವೇಕಾನಂದರ ಸಂದೇಶವನ್ನು ಕುರಿತು ಒಬ್ಬಾತನೊಡನೆ ಪ್ರಸಂಗಿಸುವ ಅವಕಾಶ ದೊರೆಯಿತು. ಬಹಳ ಹೊತ್ತು ಮಾತಾಡಿದೆ. ಶೃಂಗೇರಿಗೆ ಹೋದೆವು. ಶಂಗೇರಿಯನ್ನು ಕುರಿತು ಎರಡು ಪಂಕ್ತಿ ರಚಿಸಿದೆ. ಎಲ್ಲವನ್ನೂ ನೋಡಿಕೊಂಡು ವಾಪಸಾದೆವು…”

೧೯೨೬ನೆಯ ಮೇ ೬ನೆಯ ಗುರುವಾರದ ದಿನಚರಿ:   
“ನಮ್ಮ ಶೃಂಗೇರಿಯು ಪ್ರವಾಸ ಸೊಗಸಾಗಿತ್ತು. ದೇವಾಲಯಗಳನ್ನೂ ಮೀನುಗಳನ್ನೂ ನೋಡಿದೆವು ಆದರೆ ಆ ಊರೆಲ್ಲ ಕೊಳಕಾಗಿತ್ತು. ಆದರೂ ನಮ್ಮ ಮೇಲೆ ಒಂದು ಪವಿತ್ರ ಪರಿಣಾಮವಾಯಿತು.  ಪ್ರಕೃತಿ ಸೌಂದರ್ಯವಂತೂ ನಿಜವಾಗಿಯೂ ಭವ್ಯವಾಗಿತ್ತು”  ಇವೊತ್ತು…. ‘ಅಂದಗಾರು’ ಅಲ್ಲಿಗೆ ಹೋಗಿದ್ದೆವು. ಕೆರೆ, ಗುಡಿ, ಸುತ್ತಣ ಮಲೆ ಕಾಡು ಎಲ್ಲ ಸುಂದರವಾಗಿತ್ತು. ದಿವ್ಯವಾಗಿತ್ತು, ಭವ್ಯವಾಗಿತ್ತು. (Beautiful, Sublime, Divine). ಅದರ ವಿಚಾರವಾಗಿ ಇನ್ನು ಹೆಚ್ಚಾಗಿ ಹಾಡಲಿದ್ದೇನೆ”.

೧೯೨೬ನೆಯ ಮೇ ೭ನೆಯ ಶುಕ್ರವಾರದ ದಿನಚರಿ:    
“ಮರಿತೋಟ್ಲಿನಿಂದ ಹೊರಟೆವು. ನನ್ನ ‘ರಾಷ್ಟ್ರಗೀತೆ’ಯನ್ನು ಲಿಂಗಪ್ಪನಿಗೆ ಕೊಟ್ಟೆ.  ದಾರಿಯಲ್ಲಿ ಅಮ್ಮಡಿ ರಂಗಯ್ಯನಾಯಕರ ಮದುವೆ ಮೆರವಣಿಗೆಯನ್ನು ಸಂಧಿಸಿದೆವು. ಇಂಗ್ಲಾದಿಗೆ ಹೋದೆವು. ‘ಜಯಕರ್ನಾಟಕ ’ಬಂದಿತು. ಓ ಸ್ವಾಮಿ ವಿವೇಕಾನಂದರೇ,  ನನ್ನನ್ನು ಬಲಿಷ್ಠನನ್ನಾಗಿ ಮಾಡಿ: ನಿಮ್ಮ ವ್ಯಕ್ತಿತ್ವದ ನೂರನೆಯ ಒಂದಂಶವನ್ನು ನನಗೆ ನೀಡಿ: ಉಳಿದುದನ್ನು ನನಗೆ ಬಿಟ್ಟು ಬಿಡಿ, ನೋಡಿಕೊಳ್ಳುತ್ತೇನೆ. ಜಯ ಶ್ರೀ ಗುರುಮಹಾರಾಜ್! (O Swami Vivekananda, make me strong; give 1/100 of your personality and  I shall answer for the rest,. Jay Sri gurumaharaj).

೧೯೨೬ನೆಯ ಮೇ ೮ನೆ ಶನಿವಾರದ ದಿನಚರಿ:          
“ಜಿ.ಎ.ನಟೇಶನ್ ಕಂಪನಿಗೂ ಸ್ವಾಮಿ ಸಿದ್ದೇಶ್ವರಾನಂದರಿಗೂ ಕಾಗದಗಳನ್ನು ಬರೆದೆ. ಮನಗೆ (ಕುಪ್ಪಳಿಗೆ) ಬಂದೆ.‘ಗಿರಿಜೆ’ ಕುರಿತು ಕೆಲವು ಹಾಡು ರಚಿಸಿದೆ. ಶ್ರೀ ರಾಮಕೃಷ್ಣ ವಚನಾಮೃತ ಓದಿದೆ ಕಾಡಿಗೆ ಹೋಗಿ ಧ್ಯಾನ ಮಾಡಿದೆ.  ಪ್ರಾಣಾಯಾಮವನ್ನೂ ಅಭ್ಯಾಸ ಮಾಡಿದೆ. ಓಂ ಶ್ರೀ ಗುರುಮಹಾರಾಜ್ ಮತ್ತು ಸ್ವಾಮಿಜಿ”.

೧೯೨೬ನೆಯ ಮೇ ೯ನೆಯ ಭಾನುವಾರದ ದಿನಚರಿ:  
“ಇಂಗ್ಲಾನದಿಗೆ ಹೋದೆ. ಅಲ್ಲಿಂದ ವೆಂಕಟಯ್ಯನೊಡನೆ ಬಳಗಟ್ಟೆ ವೆಂಕಟಪ್ಪನ ಮದುವೆಗೆ ಹೋದೆ. ‘ಜಯಕರ್ನಾಟಕ’ದ ಸಂಪಾದಕ ವಿ.ಬಿಅಲೂರು ಅವರಿಂದ ಒಂದು ಅಭಿನಂದನೆಯ ಪತ್ರ ಬಂದಿತು. ಬಸರೊಳ್ಳಿಗೆ ಹೋದೆವು, ಓಂ ಶ್ರೀರಾಮಕೃಷ್ಣ, ಓಂ ಸ್ವಾಮಿ ವಿವೇಕಾನಂದ, ರಕ್ಷಿಸು, ಓಂ ಶ್ರೀ ಭಗವಾನ್”.

೧೯೨೬ನೆಯ ಮೇ ೧೦ನೆಯ ಸೋಮವಾರದ ದಿನಚರಿ:         
“ಇಂಗ್ಲಾನದಿಗೆ ಬಂದೆವು. ಕಾಡು ದಾರಿಯಲ್ಲಿ ವಾಟಿಗಾರು ಮಂಜಪ್ಪಗೌಡರಿಗೆ ಮತ್ತು ಒಬ್ಬ ಕ್ರೈಸ್ತರಿಗೆ ಶ್ರೀರಾಮಕೃಷ್ಣ ಪರಮಹಂಸರ ವಿಚಾರವಾಗಿ ಅನೇಕ ವಿಷಯ ತಿಳಿಸಿದೆ; ಮತ್ತು ಸ್ವಾಮಿ ವಿವೇಕಾನಂದರ ಗುಣಕಥನ ಮಾಡಿದೆ. ನನ್ನ ಲೇಖನವನ್ನು ವಾ.ಮಂಜಪ್ಪಗೌಡರಿಗೆ ತೋರಿಸಿದೆ. ಅಲ್ಲಿಯೆ ಉಳಿದೆ. ನನ್ನ ಹೃದಯದ ಪಾಪವನ್ನೆಲ್ಲ ದಹಿಸು, ಓ ಶ್ರೀರಾಮಕೃಷ್ಣ!…”

೧೯೨೬ನೆಯ ಮೇ ೧೧ನೆಯ ಮಂಗಳವಾರದ ದಿನಚರಿ:         
“ಇಂಗ್ಲಾದಿಯಲ್ಲಿಯೆ ಇದ್ದೆ. ಡಿ.ಆರ‍್.ಮಾನಪ್ಪ ಶಿವಮೊಗ್ಗದಿಂದ ಬಂದ. ವೆಂಕಟಯ್ಯ ಮರಿತೋಟ್ಲಿಗೆ ಹೋದರು. ಡೇಯ್ಲಿ ಮೇಯ್ಲ್ (Daily Mail) ಪತ್ರಿಕೆ ಓದಿದೆ. ‘ನಾನು ದುರ್ಬಲ, ನನ್ನನ್ನು ಬಲಿಷ್ಠನನ್ನಾಗಿ ಮಾಡು’ ಬರ‍್ಕ್ (Edmond Burk)ನ  ಭಾಷಣಗಳನ್ನು ಓದಿದೆ. ಜಯ್ ಗುರುಮಹಾರಾಜ್”.

೧೯೨೬ನೆಯ ಮೇ ೧೨ನೆಯ ಬುಧವಾರದ ದಿನಚರಿ
“ಕುಪ್ಪಳಿಗೆ ಬಂದೆ, ದಾರಿಯಲ್ಲಿ ದೊಡ್ಡ ಚಿಕ್ಕಪ್ಪಯ್ಯ ಸಿಕ್ಕರು, ‘ಗೀತಾರಹಸ್ಯ’ ಓದಿದೆ, ‘ವಚನಾಮೃತ’ವನ್ನೂ. ಕಾಡಿಗೆ ಹೋಗಿ ಧ್ಯಾನ ಮಾಡಿದೆ. ಓ ತಾಯೀ, ನಿನ್ನ ಪಾದಧೂಲಿಗೆ ಅರ್ಹನಾಗುವಂತೆ ನನ್ನನ್ನು ಭವ್ಯನನ್ನಾಗಿಯೂ ಪರಿಶುದ್ಧನನ್ನಾಗಿಯೂ ಮಾಡು! (O Mother, make me pure and sublime to be worthy of the dust of they feet)”.

೧೯೨೬ನೆಯ ಮೇ ೧೩ನೆಯ ಗುರುವಾರದ ದಿನಚರಿ
“ದೊಡ್ಡ ಬೇಟೆಗೆ ಹೋಗಿದ್ದೆವು,. ದಾರಿಯಲ್ಲಿ ಒಂದು ತುಡುವೆ ಜೇನುಗೂಡನ್ನು ಲೂಟಿ ಮಾಡಿದೆವು… ಏನನ್ನೂ ಹೊಡೆಯಲಾಗಲಿಲ್ಲ. ಬೇಟೆ ಮುಗಿಸಿಕೊಂಡು ಬಂದು ಕವಿಶೈಲದ ಬಂಡೆಯ ಮೇಲೆ ಸ್ವಲ್ಪ ವಿಶ್ರಮಿಸಲು ಕುಳಿತೇವು. ಆಗ ಅಲ್ಲಿಗೆ ಬಂದ ನಮ್ಮ ನಾಯಿಗಳಲ್ಲಿ ಒಂದರ ಬೆನ್ನೆಲ್ಲ ಕೆಮ್ಮಣ್ಣಾಗಿತ್ತು. ತುಸು ಕತ್ತಲಾಗಿದ್ದರೂ ಮತ್ತೇ ಕಾಡಿಗೆ ಹೋದೆವು[2] ಓಂ ಶ್ರೀ ರಾಮಕೃಷ್ಣ! ಓಂ ಶ್ರೀ ವಿವೇಕಾನಂದ!”

೧೯೨೬ನೆಯ ಮೇ ೧೪ನೆಯ ಶುಕ್ರವಾರದ ದಿನಚರಿ:  
“ದಿನವೆಲ್ಲಾ ಮಳೆ ಹೊಯ್ದಿತು”.

೧೯೨೬ನೆಯ ಮೇ ೧೫ನೆಯ ಶನಿವಾರದ ದಿನಚರಿ:   
“ಕಾಡಿನಲ್ಲಿ ಕೋವಿ ಹಿಡಿದು ಮರಸು ಕುಳಿತೆ, ಬೇಟೆಯಾಡುವುದು ಕೆಟ್ಟದೆಂದು ಆಲೋಚಿಸುತ್ತಾ, ಮತ್ತೊಮ್ಮೆ ಪ್ರತಿಜ್ಞೆ ಮಾಡಿದೆ, ಬೇಟೆಯಾಡುವುದಿಲ್ಲ ಎಂದು. ಹೇ ಸ್ವಾಮೀ, ನಿನ್ನ ನಾಮಗ್ರಹಣ ಮಾಡಲು ನನ್ನನ್ನು ಯೋಗ್ಯನನ್ನಾಗಿ ಮಾಡು”

೧೯೨೬ನೆಯ ಮೇ ೧೬ನೆಯ ಭಾನುವಾರದ ದಿನಚರಿ:           
“ಹೃದು ಮಸಣವಾಗಲಿ! ಕಾಳಿ ಅಲ್ಲಿ ಕುಣಿಯಲಿ” ಎಂದು ಪ್ರಾರಂಭವಾಗುವ ಒಂದು ಕನ್ಡ ಕವನ ರಚಿಸಿದ್ದೆ. ಗುಡ್ಡ ಹತ್ತಿ ಹೋದೆವು. ಅಲ್ಲಿ (ಕವಿಶೈಲದಲ್ಲಿ) ಬಂಡೆಯ ಮೇಲೆ ನನ್ನ ಹೆಸರು ಕೆತ್ತಿದೆ”.

೧೯೨೬ನೆಯ ಮೇ ೧೭ನೆಯ ಸೋಮವಾರದ ದಿನಚರಿ:                     
“ಬೆಳಿಗ್ಗೆ ಧ್ಯಾನ ಮಾಡಲು ಗುಡ್ಡಕ್ಕೆ ಹೋದೆ. (ಕವಿಶೈಲಕ್ಕೆ) ಎಫ್.ಜಿ.ಅಲೆಗ್ಸಾಂಡರ‍್ ಅವರ ‘ಧ್ಯಾನ್ಯ ಮುಹೂರ್ತಗಳಲ್ಲಿ’ (In the Hours of Meditation by F.J. Alexander) ಓದಿದೆ. ಸಂಜೆ ನನ್ನ ತಂಗಿ (ದಾನಮ್ಮ) ಆಲೆಮನೆಗೆ (ಗಂಡನ ಮನೆ)ಹೋದಳು.[3] ನಾವು ಅವಳನ್ನು ಕಳುಹಿಸುತ್ತಾ ಹೋಗಿ, ಸಿದ್ದಪ್ಪ ನಾಯಕರನ್ನು (ತಂಗಿಯ ಗಂಡ) ಕಂಡೆವು… ಕೇಸು… ರಾತ್ರಿ ಗೀತಾರಹಸ್ಯ ಓದಿದೆ”.

ಹಿಂದೆ ಒಂದೆಡೆ ಸೂಚಕ ಪ್ರಾಯವಾಗಿ ಹೇಳಿರುವಂತೆ, ನನ್ನ ದಿನಚರಿ ಮನೆಯ ಬದುಕಿನ ಸವಿಯ ವಿಚಾರವಾಗಿ ಮೌನವ್ರತಾಚಾರಿಯಾಗಿರುವುದನ್ನು ಕಾಣುತ್ತೇವೆ. ತುಂಬ ವೈಯುಕ್ತಿಕವಾದ್ದರಿಂದ ಇತರರ ಕಣ್ಣಿಗೆ ಬೀಳದಂತೆ ಗೋಪ್ಯವಾಗಿರಿಸಬೇಕೆಂಬ ಉದ್ದೇಶವೆ ಕಾರಣವಾಗಿರಬಹುದೆ? ಅಥವಾ ದಿನಚರಿಯಲ್ಲಿ ಬರೆಯುವಂಥ ವಿಶೆಷ ಅದರಲ್ಲೆನಿದೆ ಎಂಬ ತಾತ್ಸಾರವೆ? ತಮ್ಮ ತಮ್ಮ  ತಂದೆ ತಾಯಿ ಅಣ್ಣ ತಮ್ಮ ತಂಗಿಯರನ್ನು ಅಕ್ಕರೆಯಿಂದ ಕಂಡು ಅನುಗುಣವಾಗಿ ವರ್ತಿಸುವುದು ಸರ್ವ ಸಾಧರಣವಾಗಿ ಎಲ್ಲರೂ ಮಾಡುವುದೆ ಆದ್ದರಿಂದ ಅಲ್ಲಿ ಹೇಳುವುದಕ್ಕಾಗಲಿ ಹೇಳಿಕೊಳ್ಳುವುದಕ್ಕಾಗಲಿ ಏನಿದೆ ಎಂದೆ? ಅಥವಾ ಆಗಿನ ನನ್ನ ಮನೋಧರ್ಮಕ್ಕೆ ಕಾವ್ಯ ಸಾಹಿತ್ಯ ಅಧ್ಯಾತ್ಮಕ ಇತ್ಯಾದಿಗಳು ಮಾತ್ರವೇ ದಾಖಲೆಗೆ ಯೋಗ್ಯವಾಗಿದ್ದುವೆಂದೆ?

ರಜಾಕ್ಕೆ ನಾನು ಮನೆಗ ಹೋದಾಗಲೆಲ್ಲ ಮನೆಯ ಮಕ್ಕಳು- ನನ್ನ ಸ್ವಂತ ತಂಗಿಯರು ದಾನಮ್ಮ ಪುಟ್ಟಮ್ಮ, ಚಿಕ್ಕಪ್ಪಯ್ಯನ ಮಕ್ಕಳೂ ತಿಮ್ಮು, ವೆಂಕಟಯ್ಯ , ದಾಸಪ್ಪ,ರಾಜಮ್ಮ- ನನ್ನನ್ನು ಎಂತಹ ಪ್ರೀತಿಯಿಂದ, ಎಂತಹ ಅಕ್ಕರೆಯಿಂದ, ಎಷ್ಟು ಹೆಮ್ಮೆಯಿಂದ ಇದಿರುಗೊಳ್ಳುತ್ತಿದ್ದರು? ಮಾತಾಡಿಸುತ್ತಿದ್ರು? ಗೌರವ ತೋರಿಸುತ್ತಿದ್ದರು? ಅವರನ್ನೆಲ್ಲ ನಾನು ಅದೆಂತಹ ಅಪ್ರಜ್ಞೆಯ ಎಂದರೆ ಪ್ರೀತಿಪ್ರಜ್ಞೆಯ ಪ್ರಜ್ಞೆಯೆ ಇಲ್ಲದ, ಮುದ್ದಿನಕ್ಕರೆಯಿಂದ ಓಲೈಸುತ್ತಿದ್ದೆ? ಅವರಿಗೆ ನನ್ನ ರಚನೆಗಳನ್ನು ಓದುತ್ತಿದ್ದೆ. ನನ್ನ ಭಾವಗೀತೆಗಳನ್ನು ಹಾಡುತ್ತಿದ್ದೆ. ಸಂಜೆ ಕವಿಶೈಲಕ್ಕೆ ಅವರನ್ನೆಲ್ಲ ಒಡಗೊಂಡು ಹೋಗಿ, ಏನೇನು ತಮಾಷೆ ಮಾಡಿ ನಗಿಸುತ್ತಿದ್ದೆ? ಎಲ್ಲರೂ ಸೇರಿ ಕದ್ದಡಗುವ ಆಟದಿಂದ ಹಿಡಿದು ಗೋಲಿ, ಬುಗುರಿ, ಚಿಣ್ಣಿಕೋಲು, ಕಣ್ಣಾಲೆ, ಚನ್ನೆಮಣೆ ಆಟ, ದೂಪದ ಕಾಯಿ, ಆಟ, ಸರಿಬೆದ ವರೆಗೂ ಆಡಿ ನಲಿಯುತ್ತಿದ್ದೇವು. ತಂಗಿಯರನ್ನಂತೂ ಬೇಟೆಯೊಂದನ್ನು ಬಿಟ್ಟು ಉಳಿದ ಎಲ್ಲ ಆಟಗಳಲ್ಲಿಯೂ ಸೇರಿಸಿಕೊಳ್ಳುತ್ತಿದ್ದೆವು. ಅವರೂ ಅಮ್ಮಂದಿರನ್ನು ಪುಸಲಾಯಿಸಿಯೊ ಪೀಡಿಸಿಯೋ ನನಗಾಗಿ ವಿಶೇಷ ತಿಂಡಿಗಳನ್ನು ಮಾಡಿ ಮಾಡಿಸಿ ಕೊಡುತ್ತಿದ್ದುದುಂಟು.

ನನ್ನ ದಿನಚರಿಯಲ್ಲಿ ಎಲ್ಲಿಯೂ ನಮೂದಿಸದಿದ್ದರೂ ನನ್ನ ದೊಡ್ಡ ತಂಗಿ ದಾನಮ್ಮಗೆ ಕೆಲವು ತಿಂಗಳ ಹಿಂದೆ ಮದುವೆಯಾಗಿತ್ತು. ಅವಳನ್ನು  ಅಲೆಮನೆ ಸಿದ್ದಪ್ಪ ನಾಯಕರಿಗೆ ಕೊಟ್ಟಿತ್ತು. ಅಲೆಮನೆ ಕುಪ್ಪಳಿಗೆ ಎರಡು ಎರಡೂವರೆ ಮೈಲಿ ದೂರದಲ್ಲಿದೆ. ಅಂದು ಅವಳನ್ನು ಗಂಡನ ಮನೆಗೆ ಕಳಿಸಲು ನಾನು, ತಿಮ್ಮಯ್ಯ ಮತ್ತು ಇತರರು ಹೊರಟೆವು. ಅಲೆಮನೆ ಹತ್ತಿರವಾಗಿ ಇದ್ದುದರಿಂದಲೂ ಮತ್ತು ನಾವು ಕೋವಿ ಹಿಡಿದು ಸಂಜೆಯ ತಿರುಗಾಟಕ್ಕೆ ಹೋಗಬೇಕಾಗಿದ್ದುದರಿಂದಲೂ, ಗಾಡಿ ಕಟ್ಟಿಸುವುದನ್ನು ತಡೆದು, ನಡೆದುಕೊಂಡೆ ಹೋಗಲು ಮನಸ್ಸು ಮಾಡಿ ಅವಳನ್ನೂ ಒಪ್ಪಿಸಿದೆವು. ಅವಳ ಸಾಮಾನನ್ನು ಒಬ್ಬ ಆಳಿನ ಕೈಲಿ ಹೊರಿಸಿ, ನಾವೆಲ್ಲ ತಮಾಷೆಯಾಗಿ ಮಾತಾಡುತ್ತಾ ಅವಳೊಡನೆ ಹೊರಟೆವು. ನಮ್ಮದೆಲ್ಲ ಎಷ್ಟು ಅನೌಪಚಾರಿಕವಾಗಿತ್ತುಎಂದರೆ, ಅಲೆಮನೆ ಬಾಗಿಲವರೆಗೂ ಅವಳೊಡನೆ ಹೋಗಿ, ಅಲ್ಲಿಯೆ ಅವಳನ್ನು ಬೀಳುಕೊಟ್ಟು ಹಿಂತಿರುಗಿ , ಬೇಟೆಯಾಡುತ್ತಾ ಕಾಡುದಾರಿಯಲ್ಲಿ ಬರಬೇಕೆಂದು ಉದ್ದೇಶಿಸಿದ್ದೇವು. ತಂಗಿ ಮನೆಯೊಳಗೆ ಬಂದು ಏನನ್ನಾದರೂ ಸ್ವೀಕರಿಸುವಂತೆ ಕೇಳಿಕೊಂಡರೂ ನಾವು ನಮ್ಮ ಷಿಕಾರಿಯ ಗುರುತ್ವವನ್ನು ಕಾರಣವೊಡ್ಡಿ ಬೀಳುಕೊಂಡೆವು.  ಅಷ್ಟರಲ್ಲಿ ಒಳಗೆ ಅಂಗಳಕ್ಕೆ ಆಳೀನೊಡನೆ ಬಂದ ಹೆಂಡತಿಯಿಂದ ವಿಷಯ ತಿಳಿದ ಸಿದ್ದಪ್ಪ ನಾಯಕರು ಓಡುತ್ತಲೇ ಬಂದು ಭಾವಂದಿರನ್ನು ಒಳಗೆ ದಯಮಾಡಿಸಬೇಕೆಂದು ಅಂಗಲಾಚಿ ಬೇಡಿಕೊಂಡರು. ಆದರೆ ಅವರಿಗೂ ನಮ್ಮ ಕಾರ್ಯ ಗೌರವದ ಮಹತ್ತನ್ನು ಮನದಟ್ಟು ಮಾಡಿಕೊಟ್ಟು ನಮಸ್ಕಾರ ಹೇಳಿ ಹೊರಟು ಬಂದಿದ್ದೇವು! ಹಾ ವಿಧಿಯೆ, ಇನ್ನು ಮೂರೇ ಮೂರು ವರ್ಷಗಳೊಳಗೆ ಆ ತಂಗಿ ಚೊಚ್ಚಲು ಮಗುವನ್ನು ಹೆತ್ತು , ಮಗುವಿನೊಂದಿಗೆ ತಾನೂ ತನ್ನ ತಾಯ್ತಂದೆಯರನ್ನು ಕೂಡುಕೊಳ್ಳುತ್ತಾಳೆಂದು…?!

 


[1] ಈ ಹೆಸರು ಯಾವ ಒಬ್ಬ ವ್ಯಕ್ತಿಗೂ ಅನ್ವಯವಾಗುವುದಲ್ಲ. ಚೆಲುವೆಯಲ್ಲರ ಪ್ರಾತಿನಿಧಿಕ ಮೂರ್ತಿಯೆಂದು ಭಾವಿಸಬಹುದು.  ಈ ಹೆಸರನ್ನು ಆಶ್ರಯಿಸಿ ಬೇರೆ ಬೇರೆ ಕಾಲದಲ್ಲೇ ಅನೇಕ ಪ್ರೇಮ ಗೀತೆಗಳು ಮಾಡಿವೆ. ಈ ಸಂದರ್ಭದಲ್ಲಿ ಎರಡು ಆಪ್ರಕಟಿತ ಕವನಗಳು ಹಸ್ತಪ್ರತಿಯಲ್ಲಿ ದೊರೆತಿವೆ. ಈ ‘ಗಿರಿಜಿ’ ಕವಿ ಕಲ್ಪನಾಲೋಕದ ಒಬ್ಬಳು ಸ್ವಲ್ಪಸುಂದರಿ.  ಮುಂದೆ ಈ ಶೃಂಗಾರ ತತ್ವವೇ ಸೌಂಧರ್ಯದ ತತ್ವವೂ ಆಗಿ ದಾರ್ಶನಿಕ ಸ್ತರದಲ್ಲಿ ಅಭಿವ್ಯಕ್ತವಾಗುವುದನ್ನು ಕಾಣುತ್ತೇವೆ. ‘ರತಿ’ ‘ಕಲಾಸುಂದರಿ’ ಮತ್ತು ‘ ಕಲ್ಪನಾ ಸುಂದರಿ’ಗಳಲ್ಲಿ ಪ್ರಮುಖವಾಗಿವೆ.

[2] ನಾಯಿ ಬರ್ಕವನ್ನೋ ಕಣೆಹಂದಿಯನ್ನೊ ಬೆನ್ನಟ್ಟಿ ಅದು ಗುದ್ದು ನುಗ್ಗಿದರೆ ತಾನೂ ನುಗ್ಗಿದಾಗ ಅದರ ಬೆನ್ನೆಲ್ಲ ಕೆಮ್ಮಣ್ಣಾಗುತ್ತದೆ. ಆದ್ದರಿಂದ ನಾವು ಆ ನಾಯಿಯೊಡನೆ ಮತ್ತೆ ಕಾಡು ನುಗ್ಗಿದೆವು. ಅದು ನುಗ್ಗಿದ ಗುದ್ದನ್ನು ತೋರಿಸುವಂತೆ ಅದಕ್ಕೆ ಸೂಚನೆ ಕೊಟ್ಟು ಅದರೆ ಏನೂ ಫಲಿಸಲಿಲ್ಲ.

[3] ಅಯ್ಯೋ, ಆ ಪ್ರೀತಿಯ ಸೋಮವಾರದ ಶ್ರೀಮಂತಿಕೆಯನ್ನು ಈ ದರಿದ್ರ ದಿನಚರಿಯ ಭಾಷಾಭಿವ್ಯಕ್ತಿಯ ಕಟು ಕೃಪಣತೆ ಚಿತ್ರಿಸಬಲ್ಲುದೆ? ಅದನ್ನು ನೆನೆದು ಇದನ್ನು ಬರೆಯುತ್ತಿರುವ ಇಂದೂ (೨೩-೯-೧೯೭೨) ನನಗೆ ಕಣ್ಣು ಒದ್ದೆಯಾಗುತ್ತಿದೆ!  ಹೃದಯ ಭಾವದಿಂದ ಉಕ್ಕುತ್ತಿದೆ.  ದುಃಖವೋ ಸುಖವೋ ಹೇಳಲಾಗದೆ ಒಂದು ಅತೀತ್ ಭಾವಾವಸ್ಥೆಯ ಮಡಿಲಿಗೆ ಶರಣಾಗುತ್ತಿದೆ ನನ್ನ ಚೇತನ.  ಶಿಶುವಾಗಿ!