೧೯೨೬ನೆಯ ಮೇ ೧೮ನೆಯ ಮಂಗಳವಾರದ ದಿನಚರಿ:                     
“ಬೆಳಿಗ್ಗೆ ಎದ್ದು ಕರೆಯ ಕಡೆಗೆ ಹೋಗಿ ಹಲ್ಲುಜ್ಜಿ ಮುಖ ತೊಳೆದುಕೊಂಡೆ. ತರುವಾಯ ಗುಡ್ಡದ ನೆತ್ತಿಗೆ ಹೋದೆ.  ಧ್ಯಾನ ಮಾಢುವುದಕ್ಕೆ … ಇವೊತ್ತು ಪ್ರತಿಜ್ಞೆ ಮಾಡಿಕೊಂಡಿದ್ದೇನೆ, ಬೇಟೆಯಾಡುವುದೆ ಮುಂತಾದ ಕ್ರೂರ  ಕಾರ್ಯಗಳನ್ನು ಸಂಪೂರ್ಣವಾಗಿ ಬಿಟ್ಟುಬಿಡುತ್ತೇನೆ ಎಂದು …. ಓಂ ಶ್ರೀ ರಾಮಕೃಷ್ಣ ! ಓಂ ಸ್ವಾಮಿ ವಿವೇಕಾನಂದ!…‘ಗೀತಾರಹಸ್ಯ ಓದಿದೆ…”

೧೯೨೬ನೆಯ ಮೇ ೧೯ನೆಯ ಬುಧವಾರದ ದಿನಚರಿ
“ಭಾಯಿ ಪರಮಾನಂದ ಭಾಷಾಂತರಿಸಿದೆ… ಪಿ.ಗೋಪಾಲಕೃಷ್ಣ ಶೆಟ್ಟರಿಂದ ಕಾಗದ ಬಂತು. ‘ಗೀತಾರಹಸ್ಯ’-‘ವರ್ಡ್ಸವರ್ತ’- In the Hours of Meditation (ಧ್ಯಾನದ ಮುಹೂರ್ತಗಳಲ್ಲಿ) ಓದಿದೆ… ಗುಡ್ಡದ ನೆತ್ತಿಗೆ  ಹೋಗಿ ಒಂದು ಕನ್ನಡ ಕವನ ರಚಿಸಿದೆ.  ದ್ಯಾನ ಮಾಡಿ ಪ್ರಾಣಾಯಾಮ ಅಭ್ಯಾಸ ಮಾಡಿದೆ. ಓಂ ಶ್ರೀರಾಮಕೃಷ್ಣ!”

೧೯೨೬ನೆಯ ಮೇ ೨೦ನೆಯ ಗುರುವಾರದ ದಿನಚರಿ:             
“ಬೆಳಿಗ್ಗೆ ಮಲೆಗಳಲ್ಲಿತಿರುಗಾಟಕ್ಕೆ ಹೋದೆ. ಅಲ್ಲಿಯೆ ‘ಪ್ರಣಯ ಸ್ವಪ್ನ’ ಕವನ ರಚಿಸಿದೆ.[1] ಅಲ್ಲದೆ ಸುಡುಗಾಡು ಅಥವಾ ‘ಮಸಣ’ವನ್ನು… ಸಂಜೆ ನಾವೆಲ್ಲ ನಾಯಿಗಳನ್ನು ಕರೆದುಕೊಂಡು ಕಾಡು ಮೇಡುಗಳಲ್ಲಿ ತುಸುದೂರ ಸಂಚಾರ ಮಾಡಿದೆವು…. ಗೀತಾರಹಸ್ಯ ಓದಿದೆ. ಓಂ ಶ್ರೀರಾಮಕೃಷ್ಣ!”

ಮಸಣ  

ಹೃದಯ ಮಸಣವಾಗಲಿ,
ಕಾಳಿ ಅಲ್ಲಿ ಕುಣಿಯಲಿ!

ಬಾಲ್ಯವೆಂಬ ರಮ್ಯ ಬನವು
ನೋಡು ನಲಿಯುತಿರುವುದು:
ಎಲ್ಲಿ ನೋಡಲಲ್ಲಿ ಹಸುರ
ಲಲ್ಲೆಯಿಂದ ತಲೆಯ ತೂಗಿ
ಕೋಮಲತೆಯ ಬೀರುವೆಳೆಯ
ಲಲಿತ ಬಾಲನಂತಿದೆ.
ಎಲ್ಲಿ ನೋಡಲಲ್ಲಿ ತಳಿರು,
ಎಲ್ಲಿ ನೋಡಲಲ್ಲಿ ಕುಸುಮ,
ಎಲ್ಲಿ ನೋಡಲಲ್ಲಿ ಲೀಲೆ,
ಮರೆದು ನಳನಳಿಸುತಿದೆ.
ಕಾಮಧೇನು ಒಂದೆಡೆ:
ಕಲ್ವೃಕ್ಷ ಒಂದೆಡೆ;
ಅಮೃತಗಾನ ಸರಿಯ ಸೂಸಿ
ಅಮೃತತನವಿವನಿರದೆ ಈವ
ದಿವ್ಯವಾದ ಪರಮ ಶುಭದ
ಅಮರಲೋಕ ಒಂದೆಡೆ.
ಎಲ್ಲಿ ನೋಡಲಲ್ಲಿ ಹರುಷ
ಎಲ್ಲಿ ನೋಡಲಲ್ಲಿ ವರ-
ವಿಹಂಗ ತತಿಯ ಗಾನವರುಷ
ಇಂಪ ಬೀರುತಿರುವುದು.
ದಿವ್ಯ ಸುಮ ಸುಗಂಧವ
ಸೊರೆಗೊಂಡು ನಲಿಯುವ
ಬನದ ತುಂಬಿಯೊಂದೆಡೆ
ವರ ಸಮೀರನಲ್ಲಿ ಇಲ್ಲಿ
ನುಸುಳಿ ಓಡಿ ನಲಿವನು.

ಹಾರಿ ಮೊರೆಯುತಿರುವುದು:
ಅಳಿಯ ಬಳಗ ಮಧುವ ಕುಡಿದು
ಮದಿಸಿ ಅಲೆಯುತಿರುವುದು:
ಬಾಲ್ಯವೆಂಬ ವನವಿದನು ವಿ-
ವೇಕ ಖಡ್ಗದಿಂದ ಸವರಿ,
ಜ್ಞಾನ ಶಿಖಿಯ ತಂದು ದಹಿಸು:
ತ್ಯಾಗ ಸುಳಿಗಳೇಳಲಿ!

ಹೃದಯ ಮಸಣವಾಗಲಿ,
ಕಾಳಿ ಅಲ್ಲಿ ಕುಣಿಯಲಿ!
ತಿರುಗಿ ನೋಡು: ಯೌವನ ವನ
ಎಂತು ಶೋಬಿಸಿರುವುದು?
ಅಹಹ! ನೋಡು, ಕುಸುಮ ವರ್ಷ
ನಾಕದಿಂದ ಸೂಸುತಿಹುದು.
ನೋಡು, ಸುಧೆಯ ತೊರೆಗಳೆಲ್ಲ
ಇರದೆ ಹರಿಯುತಿರುವುವು.

ಅಹಹ! ನೋಡು ಮುಂದೆ ಬರುವ
ಸ್ವಲ್ಪ ಸುಖಗಳೊಂದುಗೂಡಿ
ನಾನು ಮುಂದೆ ಬರುವ
ಎಂದು ಹೋರುತಿರುವುವು!
ಪದವಿ ಎಂಬುದೊಂದೆಡೆ;
ಕೀತಿಋಯ ಎಂಬುದೊಂದೆಡೆ
ಅಮಿತ ಧನವಿನಿರದೆ ಗಳಿಸಿ
ಅಮರ ಪೆರ್ಮೆಯಿಂದ ಮೆರೆವ
ಮೂರ್ಖಮಾನ್ಯ, ‘ಪರಮ’ ಸಾಹು.

ಕಾರತನವದೊಂದೆಡೆ!
ಚಂದ್ರನನ್ನೆ ಮೀರುತಿರುವ
ಚಂದ್ರಮುಖಿಯದೊಂದೆಡೆ;
ಚಂದ್ರಹಾಸ ಬಾರೋ ಎಂದು

ಕರೆವ ಸುಖವದೊಂದೆಡೆ!
ಅಮಿತ ಗೆಳೆಯರೊಂದೆಡೆ;
ಅಮಿತ ಚಾರರೊಂದೆಡೆ ;

ರಾಜಪೀಟದಿಂದ ಬರುವ
ಬಿರುದು ನಿಕರವೊಂದೆಡೆಳ:
ಜಯಜಯೆಂದು ಹೊಗಳುವ
ಹೊಗಳು ಭಟ್ಟರೊಂದೆಡೆ;

ನೀನೆ ಇಂದ್ರ , ನೀನೇ ಚಂದ್ರ,
ದಾನದಲ್ಲಿ ನೀನೇ ಕರ್ಣ,
ನೀನೆ ರಾಜರಾಜನೆಂದು

ಕೀರ್ತಿಗೈವರೊಂದೆಡೆ!
ಯೌವನ ವನವಿದನು, ವೀತ-
ರಾಗ ಖಡ್ಗದಿಂದ ಸವರಿ,
ಜ್ಞಾನ ಶಿಖಿಯ ತಂದು ದಹಿಸು:
ತ್ಯಾಗ ಸುಳಿಗಳೇಳಲಿ!

ಹೃದಯ ಮಸಣವಾಗಲಿ,
ಕಾಳಿ ಅಲ್ಲಿ ಕುಣಿಯಲಿ!
ಮೃತ್ಯು ದೂತ ಬನವ ನೋಡು,

ಬಾಡಿ ಸೊರಗಿ     ನಿಂತಿದೆ:
ನೋಡು ರವಿಯು ಗಗನ ಮಧ್ಯೆ
ಚಂಡಕಿರಣದಿಂದ ಝಗಿಸಿ
ಧರೆಯ ಪಸುರ ಬಯಲನುರಿಸಿ
ಮಾರಿಯಂತೆ  ನಗುವನು!

ರಮ್ಯ ವನಗಳೆಲ್ಲ ಬಿಸಿಲ
ಬೇಗೆಯಲ್ಲಿ ಉರಿದು ಬಾಗಿ
ಅಗ್ನಿಗಾಹುತಿಯಾಗಲೆಂದು
ಸಿದ್ಧವಾಗಿ ನಿಂತಿವೆ!
ತೊರೆಗಳೆಲ್ಲ ಒಣಗಿವೆ;
ನದಿಗಳೆಲ್ಲ ಆರಿವೆ;

ಬಡವನಾದ ಧನಿಕನಂತೆ
ನದಿಯು ತನ್ನ ವಕ್ರತನವ
ದಾರಿಹೋಕರೆಲ್ಲ ಅರಿಯು-
ವಂತೆ ಸಾರುತಿರುವುದು,
ವಿಹಗ ತತಿಯು ಬಿಸಿಲ ಝಳವ
ಸಹಿಸಲಾರದಡಗಿ, ತಳಿರ
ಮರೆಯೊಳಿಂಚರವನೆ ನೀಗಿ,

ಬಳಲಿ ತಲ್ಲಣಿಸುತಿವೆ.
ಹೊಗಳು ಭಟ್ಟರೊಬ್ಬರಿಲ್ಲ;
ಶಶಿವದನೆಯರೊಬ್ಬರಿಲ್ಲ;
ಗೆಳೆಯರಿಲ್ಲ, ಚಾರರಿಲ್ಲ,

ಇಲ್ಲರಾಜಮನ್ನಣೆ.
ಬೆದರಬೇಡ ಎನ್ನುತಿಹುದು
ಪರಮ ಪುಣ್ಯವೊಂದೆಡೆ;
ಘೋರ ಕೊರೆದಾಡೆಗಳನು
ಪಾಪ ತೋರುತಿರುವುದು.
ಮೃತ್ಯತಾನು ಬಾಗಿಲ ಬಳಿ
ಇಣುಕಿ ನೋಡುತ್ತಿರುವುದು!
‘ನಾನೇಶಿವನು! ನಾನೇ ಶಿವನು!’
ಬ್ರಹ್ಮ ನಾನೇ       ! ಬ್ರಹ್ಮ ನಾನೇ!”
ಎಂದು ಕೂಗು! ಧರನಾಗು

ಜಯಿಸು! ಜಯಿಸು ಮೃತ್ಯುವ!
ಮೃತ್ಯದೂತ ಬನವ ನೋಡು;
ಯೋಗ ಖಡ್ಗದಿಂದ ಸವರಿ
ಮೋಕ್ಷ ಶಿಖಿಯು ತಂದು ಸುಡು, ಸ
ಮಾಧಿ ಸುಳಿಗಳೇಳಲಿ!

ಹೃದಯ ಮಸಣವಾಗಲಿ !
ಕಾಳಿ ಅಲ್ಲಿ ಕುಣಿಯಲಿ!!
-೨೩-೫-೧೯೨೬.

೧೯೨೬ನೆಯ ಮೇ ೨೧ನೆಯ ಶುಕ್ರವಾರದ ದಿನಚರಿ:

“ರಾತ್ರಿ ಉಪ್ಪರಿಗೆಯಲ್ಲಿ ಮಲಗಿ ಗಾಢನಿದ್ರೆಯಲ್ಲಿದ್ದೆ. ಹಠಾತ್ತನೆ ಪುಟ್ಟಣ್ಣ ಒಂದು ಲ್ಯಾಂಪು ತಂದ. ಆಗ ಕೆಲವು ಕವನ ಪಂಕ್ತಿ ಹೊಳೆದುವು: ‘ಮಾಯ ತಿಮಿರ ಕವಿದ ಹೃದಯಾರಣ್ಯದೊಳು ಭಕ್ತಿ ಲಾಂದ್ರವ ಪಿಡಿದು ಅರಸು ರಮಣನ, ಸಖಿ!… ಬೇಟೆಗೆ ಹೋದಾಗ ಮಲೆಗಳಲ್ಲಿ ಒಂದು ಹಲಸಿನ ಹಣ್ಣು ತಿಂದೆವು…”

ಮುಂದಿನ ಹನ್ನೊಂದು ದಿನಗಳ ದಿನಚರಿ ಖಾಲಿ. ೨೭-೨೮ ನೆಯ ತಾರೀಖಿನ ಹಾಳೆಗಳಲ್ಲಿ I am writing my auto-biography ಎಂದು ಮಾತ್ರ ಬರೆದಿದೆ. ಕಾಯಿಲೆ ಬಿದ್ದಿದೆನೋ ಏನೋ?

೧೯೨೬ನೆಯ ಜೂನ್ ೨ನೆಯ ಬುಧವಾರದ ದಿನಚರಿ
“ಗ್ರಾಮಪೋನ್ ತರಲು ನಾವು ಇಂಗ್ಲಾದಿಗೆ ಹೋದೆವು.[2] ಬರುತ್ತಾ ಡಿ.ಆರ‍್.ವೆಂಕಟಯ್ಯನವರನ್ನು ಕರೆತಂದೆ. ಆಗಲೇ ರಾತ್ರಿಯಾಗಿತ್ತು. ನನ್ನ ಬಳಿ ಎಲೆಕ್ಟ್ರಿಕ್ ಟಾರ್ಚ ಇತ್ತು”.

೧೯೨೬ನೆಯ ಜೂನ್ ೩ನೆಗುರುವಾರದ ದಿನಚರಿ:     
“ಒಂದು ಗುಂಪಿನೊಡನೆ ದೊಡ್ಡ ಬೇಟೆಗೆ ಹೋದೆವು. ನಾನೂ ಡಿ.ಆರ‍್.ವೆಂ.ಬಿಲ್ಲಿಗೆ ನಿಂತಿದ್ದ ಕಂಡಿಗೆ ಎರಡು ಹಂದಿಗಳು ನುಗ್ಗಿದವು. ಅವುಗಳಲ್ಲಿ ಒಂದನ್ನು ಡಿ.ಆರ‍್.ವೆಂ. ಗುಂಡಿಕ್ಕಿ ಕೊಂದರು. ಮತ್ತೊಂದು ತಪ್ಪಿಸಿಕೊಂಡು ಓಡಿ ಹೋಯಿತು… ಹೆದರಿ ಗಾಬರಕಗೊಂಡು ಒಂದು ಕಾಡು ಕುರಿಯೂ ಚಿಮ್ಮಿ ಬಂದಿತು. ಡಿ.ಆರ‍್.ವೆಂ.ಅದಕ್ಕೂ ಈಡು ಹೊಡೆದರು. ಆದರೆ ಗುರಿ ತಪ್ಪಿತು. ಬೈಗಿಗೆ ಮನೆಗೆ ಬಂದೇವು ಸುಸ್ತಾಗಿ”.

೧೯೨೬ನೆಯ ಜೂನ್ ೪ನೆಯ ಶುಕ್ರವಾರದ ದಿನಚರಿ
“ಇವೊತ್ತು ಒಂದು ದೊಡ್ಡ ಬೆಟ್ಟಕ್ಕೆ ಹೋಗಿದ್ದೇವು. ನಾನೂ ಕೋವಿ ಹಿಡಿದು ಬಿಲ್ಲಿಗೆ ನಿಂತಿದ್ದೆ, ಒಂದು ಕರಾರಿನ ಮೇಲೆ:ಹಂದಿ ಹುಲಿ ನುಗ್ಗಿ ಬಂದರೆ ಮಾತ್ರ ಹೊಡೆಯುತ್ತೇನೆ, ಉಳಿದ ಪ್ರಾಣಿಗಳಿಗೆ ಹೊಡೆಯುವುದಿಲ್ಲ ಎಂದು.ನನ್ನ ಕಂಡಿಗೆ ಒಂದು ಕಾಡು ಕುರಿ ನುಗ್ಗಿ ಬಂದಿತು.  ಹೊಡೆಯದೆ ಬಿಟ್ಟು ಬಿಟೆ (ಹೊಡೆಯಲಾರದೆ ಬಿಟ್ಟೆ ಎಂದು ಲೇವಿ ಮಾಡಿ ನಕ್ಕರು ಎನ್ನಿ!) ಅನೇಕ ಮೈಲಿ ಕಾಡು ಸುತ್ತಿ ದಣಿದು ಖಾಲಿ ಕೈಯಾಗಿ ಮನೆಗೆ ಬೈಗು ಹೋತ್ತಿಗೆ ಬಂದೆವು. ಡಿ.ಆರ.ವೆಂ. ಇಲ್ಲಿಯೆ ಉಳಿದುಕೊಂಡರು”.

೧೯೨೬ನೆಯ ಜೂನ್ ೫ನೆಯ ಶನಿವಾರದ ದಿನಚರಿ:  
“ಬೆಳಿಗ್ಗೆ ‘ಸಾಬೀ’ ಗ್ರಾಮಫೋನ ತೆಗೆದುಕೊಂಡು ಹೋಗಲು ಡಿ.ಎನ್.ಹಿ ಅವರಿಂದ ಕಾಗದ ತಂದ. ಸಂಜೆ ಮತ್ತೊಂದು ಕಾಗದ ತಂದ, ಭೂ.ಚಂ. ಬಂದಿದ್ದು ಹೋದರು ಎಂದು. (ಭೂಪಾಳಂ ಚಂದ್ರಶೇಖರಯ್ಯ). ನಾನೂ ಇಂಗ್ಲಾದಿಗೆ ಹೋದೆ. ರಾತ್ರಿ ಕಗ್ಗತ್ತಲೆಯಲ್ಲಿಯೆ ಹಿಂತಿರುಗಿದೆ. ‘ಜಯಕರ್ನಾಟಕ’ ಬಂತು.ನನ್ನ ಎರಡು ಕವನಗಳು ಅದರಲ್ಲಿ ಅಚ್ಚಾಗಿದ್ದುವು”.

೧೯೨೬ನೆಯ ಜೂನ್ ೬ನೆಯ ಭಾನುವಾರದ ದಿನಚರಿ:           
“ಬೆಳಿಗ್ಗೆ ಎಲ್ಲಾ ಇಂಗ್ಲಾದಿಗೆ ಹೋದೆ. ೧೦ ಗಂಟೆ ಹೊತ್ತಿಗೆ ಭೂಪಾಳಂ ಚಂದ್ರಶೇಖರಯ್ಯ ಬಂದರು, ತೀರ್ಥಹಳ್ಳಿಯಿಂದ. ‘ಕರ್ಮಯೋಗ’,ಕರ್ಮ ಸಂನ್ಯಾಸ’, ‘ಸಿಡಿಯ’ಕ್ಕೆ ಹೋಗಿ ಹಿಂತಿರುಗಿ ಬಂದರು. ಉಪ್ಪರಿಗೆಗೆ ಹೋಗಿ ಕುಳಿತೇವು. ಅಲ್ಲಿ ನನ್ನ ಅನೇಕ ಕವನಗಳನ್ನು ವಾಚಿಸಿದೆ.  ಶಿಶುಗೀತೆಗಳು ಅವರಿಗೆ ಅತಿಶಯ ಆನಂದ ವುಂಟು ಮಾಡಿದವು.  ಹಸ್ತಪ್ರತಿಯಲ್ಲಿದ್ದ ಅವುಗಳ ಸಂಖ್ಯೆಯನ್ನು ತಮ್ಮ ದಿನಚರಿಗೆ ಬರೆದುಕೊಂಡರು. ಹಿಂತಿರುಗಿ ತೀರ್ಥಹಳ್ಳೀಗೆ ಹೋಗಿ, ಅಲ್ಲಿಂದ ಶಿವಮೊಗ್ಗಕ್ಕೆ ಹೋಗಬೇಕು ಎಂದರು. ಆದರೆ ನಾನು ಅವರನ್ನು (ಕುಪ್ಪಳ್ಳಿಗೆ) ನಮ್ಮ ಮನೆಗೆ  ಎಳೆದೆ. ಹಿರಿಯಣ್ಣನೂ ನಮ್ಮ ಜೊತೆಗೂಡಿದರು. ಮನೆಗೆ ಬಂದವರು ನಾವೆಲ್ಲ ಮನೆಯ ಹಿಂದಿನ ಗುಡ್ಡದ ನೆತ್ತಿಗೆ ಹೋದೆವು. (ಆಗ ಅದಕ್ಕೆ ಇನ್ನೂ ‘ಕವಿಶೈಲ’ ಎಂದು ನಾಮಕರಣ ವಾಗಿರಲಿಲ್ಲ)”

೧೯೨೬ನೆಯ ಜೂನ್ ೭ನೆಯ ಸೋಮವಾರದ ದಿನಚರಿ:        
“ಬೆಳಿಗ್ಗೆ ನಾನು ಚಂದ್ರಶೇಖರಯ್ಯ ನಮ್ಮ ಉಪ್ಪರಿಗೆಯಲ್ಲಿ ಕುಳಿತು ಎದುರಿಗೆ ಆಕಾಶೋನ್ನತವಾಗಿ ಎದ್ದಿದ್ದ ದಟ್ಟಗಾಡಿನ ಮಲೆಯ ಮತ್ತು ತಪ್ಪಲಿನ ಕಡು   ಹಸುರು ಅಡಕೆ ಬಾಳೆಯ ತೋಟದ ದಿವ್ಯ ದೃಶ್ಯವನ್ನು ಆಸ್ವಾದಿಸಿದೆವು. ಅವರು ಭಗವದ್ಗೀತೆ ಓದಿದರು.  ಆಮೇಲೆ ಕೆರೆಗೆ ಹೋಗಿ ಮುಖಮಜ್ಜನ ಸ್ನಾನಾದಿಗಳನ್ನು ಪೂರೈಸಿ ಕಾಫೀ ತಿಂಡಿ ತೆಗೆದುಕೊಂಡೆವು. ಆಮೇಲೆ ಕಾಡಿನಲ್ಲಿ ಅಲೆದಾಡಲು ಹೋದೆವು. ಇಂಬಳಗಳು ತುಂಬ ತೊಂದರೆ ಕೊಟ್ಟರು…. ಒಂದು ಮಂಡರಗಪ್ಪ ಚೇಳನ್ನು ಸಾಯಿಸಿದೆವು. ಅಲೆದಾಟ ತುಂಬಾ ಸೊಗಸಾಗಿತ್ತು ತರುವಾಯ ಇಂಗ್ಲಾದಿಗೆ ಹೋದೆವು. ನನ್ನ ಕವನಗಳ ಹಸ್ತಪ್ರತಿಯನ್ನು ಅವರಿಗೆ ಕೊಟ್ಟೆ. ಸೈಕಲ್ ಹತ್ತಿ ತೀರ್ಥಹಳ್ಳಿಗೆ ಹೋದರು. ಓಂ ಶ್ರೀ ಮಾತೆ!”

೧೯೮೨೬ನೆಯ ಜೂನ್ ೮ನೆಯ ಮಂಗಳವಾರದ ದಿನಚರಿ:     
“ಚಂದ್ರಶೇಖರಯ್ಯಗೆ ಒಂದು ಕಾಗದ ಬರೆದು ಹಾಕಿ, ಇಂಗ್ಲಾದಿಯಿಂದ ಹೊರಟು ಬಂದೆ. ದಾರಿಯಲ್ಲಿ ಇಂತಹ ಕೆಲವು ಪಂಕ್ತಿಗಳಲ್ಲಿ ಗೊಣಗುತ್ತಾ ಬಂದೆ:‘ಶೈಲ ಸದೃಶನು ನೀನು,’ ಪರಮಾಣು ರೇಣುವು ನಾನು. ಜೊತಿ ಸಾಗರ ನೀನು, ಕಿರಿದಾದ ಕಿರಣವು ನಾನು, ಇತ್ಯಾದಿ… ಅತಿ ವ್ಯಾಯಾಮದ ದೆಸೆಯಿಂದ ಕಾಯಿಲೆ ಬಿದ್ದೆ…. ವರ್ಡ್ಸವರ್ತ ಓದಿದೆ… ‘ಸರ್ವನಾಶವಲ್ಲ, ಜನನಿ, ಸ್ವಲ್ಪವಿನ್ನೂ ಉಳಿದಿದೆ’, ಜಯ್ ಗುರುಮಹಾರಾಜ! ಜಯ್ ಮಹಾಮಾತೆ! ಜಯ್ ಸ್ವಾಮೀಜಿ”.

ಮುಂದಿನ ೯ ದಿನಗಳ ದಿನಚರಿ ಖಾಲಿ, ಕಾಯಿಲೆ ಬಿದ್ದಿದ್ದರ ಪರಿಣಾಮವಾಗಿ.

೧೯೨೬ನೆಯ ಜೂನ್ ೧೮ನೆಯ ಶುಕ್ರವಾರದ ದಿನಚರಿ:          
“ಒಂದು ಹೊಸ ಛಂದಸ್ ಶೈಲಿಯಲ್ಲಿ ಒಂದು ಕನ್ನಡ ‘ಗ್ರಾಮಕ -ಕವಿತೆ’ (Pastoral) ‘ಪಾಳುಮನೆ’* ಬರೆಯಲು ತೊಡಗಿದೆ”

೧೯೨೬ನೆಯ ಜೂನ್ ೧೯ನೆಯ ಶನಿವಾರದ ದಿನಚರಿ :          
“ಪಾಳು ಮನೆ’ಯನ್ನು ಸ್ವಲ್ಪ ಮುಂದುವರಿಸಿದೆ. ಸಂಜೆ ಇಂಗ್ಲಾದಿಗೆ ಹೋದೆ.  ಅಲ್ಲಿ ನನ್ನ ಒಲವನ್ನು ಕಂಡೆ. ಹೇ ಜಗನ್ಮಾತೆ, ನನ್ನ ಜೀವನದ ನಶ್ವರ ಕ್ಷಣಗಳ ಮೇಲೆ ನಿತ್ಯತಾ ಮುದ್ರೆಯನ್ನೊತ್ತಮ್ಮಾ! ನನ್ನ ಹೃದಯವನ್ನು ನಿನ್ನ ನಿವಾಸವನ್ನಾಗಿ ಮಾಡಿಕೊ,ತಾಯಿ! (O Devine Mother, stamp the signet of Eternity  on the fleeting moments of my life. Make my heart thy Abode!)

೧೯೨೬ನೆಯ ಜೂನ್ ೨೦ನೆಯ ಭಾನುವಾರದ ದಿನಚರಿ:        
“ಹಳ್ಳದ ಪಕ್ಕದಲ್ಲಿ ಕುಳಿತು ಅದನ್ನುದ್ದೇಶಿಸಿ ‘ತೊರೆಯ ಬಳಿ’ ಎಂಬ ಕವನ ರಚಿಸಿದೆ. (ಅದು ‘ಮೇಘಪುರ’ ಎಂಬ ಶಿಶುಗೀತೆಗಳ ಕವನ ಸಂಗ್ರಹದಲ್ಲಿ ಅಚ್ಚಾಗಿದೆ) ನೀರಿನ ಮೊರೆಯನ್ನು ಆಲಿಸುತ್ತಾ ಹೊನಲನ್ನು ನೋಡಿ ನಲಿಯುತ್ತಾ ಒಂದು ಗಂಟೆ ನಿಂತಿದ್ದೆ. ನಾನು -ಡಿ.ಎನ್.ಹಿ.ಅವರೂ ಬೈಸಿಕಲ್ಲುಗಳ ಮೇಲೆ ಪಿ.ಎನ್.ನರಸಿಂಹ ಮೂರ್ತಿಯವರನ್ನು ನೋಡಲು ತೀರ್ಥಹಳ್ಳಿಗೆ ಹೋದೆವು. ನಾವೂ ಅವರೂ ಎರಡೂ ಮೂರು ಗಂಟೆಗಳ ಕಾಲ ತುಂಬ ಸಂತೋಷದಿಂದ ಒಟ್ಟಿಗಿದ್ದೆವು. ಮತ್ತು ನಾವು ಇಂಗ್ಲಾದಿಗೆ ಹಿಂತಿರುಗಿದೆವು. ಜಯ್ ಶ್ರೀ ರಾಮಕೃಣ!”

೧೯೨೬ನೆಯ ಜೂನ್ ೨೧ನೆಯ ಸೋಮವಾರದ ದಿನಚರಿ:      
“ಬೆಳಿಗ್ಗೆ ಒಂದು ದೊಡ್ಡ ಷಿಕಾರಿಗೆ ಹೋದೆವು. ಅಲ್ಲಿ ಒಂದು ತೊರೆದಯ ಬಳಿ ‘ಬಡವನೆಂದುಸುರಲತಿ ನಾಚುವೆನು ದೇವ’  ಎಂದು ಮೊದಲಾಗುವ ಒಂದು ಕನ್ನಡ ಗೀತೆಯನ್ನು ರಚಿಸಿದೆ. (ಅದು ‘ಕೊಳಲು’ ಕವನ ಸಂಗ್ರಹದಲ್ಲಿ ನಾಲ್ಕು ವರ್ಷಗಳ ಅನಂತರ ೧೯೩೦ರಲ್ಲಿ ಅಚ್ಚಾಯಿತು) ಸಂಜೆ ಗ್ರಾಮಾಫೋನ್ ಹಾಕಿದ್ದೆವು. ಅಲ್ಲಿ ನನ್ನ ಒಲವಿನ ಸಾನ್ನಿಧ್ಯದ ಆಧ್ಯಾತ್ಮಿಕ ಆನಂದಾನುಭವವಿತ್ತು”.

೧೯೨೬ನೆಯ ಜೂನ್ ೨೨ನೆಯ ಮಂಗಳವಾರದ ದಿನಚರಿ:     
“ಬೆಳಿಗ್ಗೆ ಇಂಗ್ಲಾದಿಯಿಂದ ಹೊರಟು  ಮನೆಗೆ ಬಂದೆ. ಆಮೇಲೆ ಭೇಟೆಗೆ ಹೋಗಿದ್ದೆವು.  ಇಂಗ್ಲಾದಿಯಿಂದ ಬರುತ್ತಿರುವಾಗ, ದಾರಿಯಲ್ಲಿ ‘ಅಪಜಯದ ಸುಖವನನುಭವಿಪುದನು ನಾನು’ ಎಂದ ಮೊದಲಾಗುವ ಒಂದು ಭಾವಗೀತೆಯನ್ನು ರಚಿಸಿದೆ. (ಅದೂ ೧೯೩೦ರಲ್ಲಿ ‘ಕೊಳಲು ಕವನ’ ಸಂಗ್ರಹದಲ್ಲಿ ಅಚ್ಚಾಗಿದೆ.) ಸಾಯಂಕಾಲ ಬೇಟೆಯಿಂದ ಬಳಲಿ ಬಂದ ಮೇಲೆ ‘ಪಾಳು ಮನೆ’ಯ ಕೆಲವು ಪಂಕ್ತಿ ರಚಿಸಿದೆ”

೧೯೨೬ನೆಯ ಜೂನ್ ೨೩ನೆಯ ಬುಧವಾರದ ದಿನಚರಿ:          
“ಅಬ್ಯಂಜನ ಮಾಡಿದೆ. ‘ಪಾಳು ಮನೆ’ ಬರೆದೆ. ಇಂಗ್ಲಾದಿಗೆ ಬೈಸಿಕಲ್ಲಿನ ಮೇಲೆ ಹೋಗುತ್ತಾ ಬಾಳೆಕೊಪ್ಪದ ಸೇತುವೆ ಬಳಿ ಬಿದ್ದ. ಡಾಕ್ಟರನ್ನು ಕರೆದುಕೊಂಡು ಹೋದೆ. ಮತ್ತೇ ಇಂಗ್ಲಾದಿಗೆ ಹಿಂತಿರುಗಿದೆ.  ಮರುದಿನ ಬೆಳಿಗ್ಗೆ ಶಿವಮೊಗ್ಗಕ್ಕೆ ಹೊರಡುವ ಸಲುವಾಗಿ…”

[ಆವೊತ್ತು ಮನೆಯಲ್ಲಿ ಯಾರೋ ಖಾಯಿಲೆ ಮಲಗಿದ್ದು ಜ್ವರ ಆತಂಕಗೊಳ್ಳುವ ಮಟ್ಟಿಗೆ ಏರಿತ್ತು ಯಾರು ಎಂಬುವುದು ಸರಿಯಾಗಿ ನೆನಪಿಲ್ಲ. ತಿಮ್ಮುವೋ? ವೆಂಕಟಯ್ಯನೋ? ವಾಸಪ್ಪನೋ? ನಾನು ಮರುದಿನ ಮೈಸೂರಿಗೆ ಹಿಂತಿರುಗುವ ಮಾರ್ಗವಾಗಿ ಶಿವಮೊಗ್ಗಕ್ಕೆ ಹೊರಡಲು ನಿಶ್ಚಯಿಸಿದ್ದೆ. ಕಾಲೇಜು ತಾರೀಖು ೨೪ಕ್ಕೆ ತೆರೆಯುತ್ತಿತ್ತು. ಸಾಮಾನ್ಯವಾಗಿ ಊರಿಗೆ ಹೋದವನು ರಜಾ ಮುಗಿಯುವ ತುತ್ತ ತುದಿಯವರೆಗೂ, ಕೆಲವು ಸಾರಿ ರಜಾ ಮುಗಿದು ನಾಲ್ಕು ಐದು ದಿನಗಳವರೆಗೂ, ಅಲ್ಲಿಂದ ಹೊರಡುತ್ತಿರಲಿಲ್ಲ. ಆ ದಿನ ಬೆಳಿಗ್ಗೆ ಎಣ್ಣೆ ಸ್ನಾನ  ಮಾಡಿ, ಊಟ ಮುಗಿಸಿ, ಮಧ್ಯಾಹ್ನದ ಮೇಲೆ,ರೋಗಿಗೆ ಜ್ವರ ಏರಿರುವುದನ್ನು ಗಮನಿಸಿ ಡಾಕ್ಟರನ್ನು ದೇವಂಗಿಯಿಂದ ಕರೆತರುವ ಸಲುವಾಗಿ ಬೈಸಿಕಲ್ಲಿನ ಮೇಲೆ ಹೊರಟೆ, ಅವಸರವಾಗಿ.

ಸಾಧಾರಣವಾಗಿ ಇಂಗ್ಲಾದಿಗೆ ಹೋಗುವಾಗಲೆಲ್ಲ ಹತ್ತಿರದ ಕಾಲುದಾರಿಯಲ್ಲಿಯೆ ನಡೆದು ಹೋಗುತ್ತಿದ್ದುದು ರೂಢಿ.ಅಂದು ಡಾಕ್ಟರನ್ನು ಕರೆ ತಂದು ರೋಗಿಗೆ ಔಷಧೋಪಚಾರ ಮಾಡಿಸಿ, ಮತ್ತೆ ಮರುದಿನ ಶಿವಮೊಗ್ಗಕ್ಕೆ ಹೊರಡುವ ನಿಮಿತ್ತವಾಗಿ ಅಂದೇ ಸಂಜೆಗೆ ಇಂಗ್ಲಾದಿಗೆ ಹೋಗಿ ಉಳೀದುಕೊಳ್ಳುವ ಸಲುವಾಗಿ ಬೇಗ ಬೇಗ ಕಾರ್ಯನೆರವೇರಿಸಲು ಬೈಸಿಕಲ್ಲಿನ ಮೇಲೆ ಸರಕಾರಿ, ರಸ್ತೆಯಲ್ಲಿ ಹೊರಟೆ. ಬೈಸಿಕಲ್ ಸವಾರಿ ಕಲಿತ್ತಿದ್ದೆನಾದರೂ ಪ್ರಾರಂಭಿಕ ಸ್ಥಿತಿಗಿಂತಲೂ ಹೆಚ್ಚು ಮುಂದುವರಿದಿರಲಿಲ್ಲ. ಅದರಲ್ಲಿಯೂ ಆ ಕಾಡು ರಸ್ತೆಯೋ ಕೊರಕಲು ಬಿದ್ದು ಹೋಗಿರುತ್ತಿತ್ತು. ಅಂತೂ ತುರ್ತು ಪರಿಸ್ಥಿತಿ ಎಂದುಕೊಂಡು ಆ ಸಾಹಸ ಕೈಗೊಂಡಿದ್ದೆ,. ನನ್ನ ದುರದೃಷ್ಟಕ್ಕೆ ಹೋದ ಮಳೆಗಾಲದಲ್ಲಿ ಬಾಳೆಕೊಪ್ಪದ ಬಳಿಯ ಸೇತುವೆ ತುಂಡಗಿ ಕೊಚ್ಚಿಹೋಗಿದ್ದ ವಿಚಾರ ನನಗೆ ತಿಳಿದಿರಲಿಲ್ಲ. ಅಥವಾ ಮರೆತುಹೋಗಿತ್ತು. ವಾಟಿಗಾರನ್ನು ದಾಟಿದ ಮೇಲೆ ಆ ರಸ್ತೆ ಬಾಳೆಕೊಪ್ಪದವರೆಗೂ ಒಂದೇ ಸಮನಾಗಿ ಸುಮಾರು ಒಂದು ಮೈಲಿ ದೂರ ಇಳಿಜಾರಾಗಿದೆ. ಅದೇನೋ ಸಾಧಾರಣ ಇಳಿಜಾರಲ್ಲ, ಕಡಿದಾದ ಇಳಿಜಾರು!

ಆ ಇಳಿಜಾರೇ, ನನ್ನ ಪ್ರಯತ್ನವೇನೂ ಇಲ್ಲದೆ, ಬೈಸಿಕಲ್ಲಿನ ವೇಗವನ್ನು ಉತ್ಕರ್ಷಿಸಿತ್ತು. ನಾನು ಪೆಡ್ಲ ಹೊಡೆಯದಿದ್ದರೂ ಬ್ರೇಕ್ ಒತ್ತುವ ಗೋಜಿಗೆ ಹೋಗಿರಲಿಲ್ಲ. ಆ ಇಳಿಜಾರು ರಸ್ತೆ ಎಲ್ಲಿ ತುಂಬ ಕಡಿದಾಗಿಯೆ ತಿರುಗಿಕೊಳ್ಳುತ್ತದೆಯೋ ಆ ತಿರುಗಣೆಯಲ್ಲಿಯೆ ಹತ್ತೆ ಮಾರು ದೂರುದಲ್ಲಿದೆ ಬಾಳೆಕೊಪ್ಪದ ಸೇತುವೆ. ನಾನು ಸುವೇಗವಾಗಿ ಹೋಗುತ್ತಲೆ, ಬ್ರೇಕು ಹಾಕದೆಯೆ, ಆ ಕಡಿದಾದ ತಿರುಗಣೆಯಲ್ಲಿ ತಿರುಗಿಸಿದೆ! ಏನು ನೋಡುವುದು ? ಸೇತುವೆಯೆ ಇಲ್ಲ! ಹಳ್ಳ ಹರಿಯುತ್ತಿದೆ! ಸೇತುವೆಯಾಗಿದ್ದ ಭಾಗ ಆ ಎಂದು ಬಾಯಿ ತೆರೆದುಕೊಂಡಿದೆ, ನನ್ನನ್ನು ನುಂಗಲೆಂಬಂತೆ! ಆಲೋಚಿಸಲೂ ಪುರಸತ್ತಿಲ್ಲ! ಏನು ನಿರ್ಣಯ ತೆಗೆದುಕೊಳ್ಳುತ್ತಿದ್ರೂ ಕ್ಷಣಾರ್ಧದಲ್ಲಿ ಮುಗಿಸಬೇಕು.  ಅರೆಕ್ಷಣ ತಡೆದರೆ ಕಲ್ಲು ಮುಳ್ಳಿನ ಹಳ್ಳಕ್ಕೆ ಬೈಸಿಕಲ್ಲು ನಾನು ಆಹುತಿ! ಹಳ್ಳಕ್ಕೆ ಬಿದ್ದಿದ್ದ ಸೇತುವೆಯ ಕಟ್ಟಣೆಯ ಕಲ್ಲುಗಳೆ ತಲೆಗೆ ತಗುಲಿ ಬುರುಡೆ ಒಡೆಯುತ್ತದೆ; ಕೈಕಾಲು ಬೆನ್ನು ಎಲುಬು ಮುರಿಯುತ್ತದೆ!  ಪೂರೈಸುತ್ತದೆ ನನ್ನ ಕತೆ, ಕವಿತೆಗಿವಿತೆ ಎಲ್ಲಾ!

ಬೈಸಿಕಲ್ಲನ್ನು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಸೋಣ ಎಂದರೆ, ಎಡಕ್ಕೆ ಎರಡಾಳೆತ್ತರಕ್ಕೆ ರಸ್ತೆಗಾಗಿಯೆ ಮಣ್ಣು ಕಡಿದು ಉಂಟಾಗಿದ್ದ ಕಡಿದಾದರೆ ಇದೆ; ಬಲಕ್ಕೆ ಎರಡಾಳಿಗೂ ಮೇಲುಪಟ್ಟು ಆಳವಾಗಿರುವ ಮುಳ್ಳು ಪೊದೆಯಿಡಿದ ಕೊರಕಲಿದೆ!

ಅದೇ ಮಳೆಗಾಲದಲ್ಲಿ ಬಿರುಗಾಲಿಗೆ ಬೇರುಡಿಯ ಉರುಳಿದ ಹೆಮ್ಮರವೊಂದು ರಸ್ತೆಯ ಎಡಭಾಗದಂಚಿಗೆ ಅಡ್ಡ ಬಿದ್ದಿತು.  ಅದರಲ್ಲೊಂದು ಭಾರಿ ಕೊಂಬೆಯ ದಿಮ್ಮಿ ಮುರಿದ ಸತುವೆಯ ಅಂಚಿಗೆ ಅಡ್ಡವಾಗಿತ್ತು. ಸುಮಾರು ಒಂದೂವರೆ ಎರಡಡಿ ಎತ್ತರವಾಗಿ. ಎತ್ತ ತಿರುಗಿದರೂ ಅಪಾಯವೇ ಇದ್ದಾಗ ತುಸು ಕಡಮೆಯ ಅಪಾಯದತ್ತ ತಿರುಗಿಸಿದೆ ಬೈಸಿಕಲ್ಲನ್ನು, ಹೋಗಿದ್ದೆ ಡಿಕ್ಕಿ ಹೊಡೆಯಿತು. ಆ ದಿಮ್ಮಿಗೆ! ನೆಗೆದುರುಳಿಬಿದ್ದೆ! ಷಾಕ್ ಹೊಡೆದಂತೆ! ಬೈಸಿಕಲ್ಲಿನ ಮುಂದಿನ ಚಕ್ರ ಕೋವಿಯೀಡು ಹೊಡೆದಂತೆ ಸದ್ದಾಗಿ ಟೈರು ಟ್ಯೂಬು ಒಡೆದು ಹೋಯ್ತು! ಸಧ್ಯ ರಸ್ತೆಗೇ ಬಿದ್ದಿದ್ದೆ! ಎದ್ದೆ.ತತ್ಕಾಲದಲ್ಲಿ ನನಗೆ ಏನೂ ಆದಂತೆ ತೋರಲಿಲ್ಲ. ತುಸು ಪರಚಿದಂತೆ ಗಾಯವಾಗಿತ್ತು ಮಾತ್ರ, ಬೈಸಿಕಲ್ಲನ್ನು ನೂಕಿಕೊಂಡು ಇಂಗ್ಲಾದಿಗೆ ಹೋದೆ.

ದೇವಂಗಿಯಿಂದ ಡಾಕ್ಟರೊಡನೆ ಹಿಂತಿರುಗಿ ಬಂದು, ರೋಗಿಗೆ ಔಷಧೋಪಚಾರ ಮಾಡಿಸಿ, ಮತ್ತೇನನ್ನ ಗಂಟು ಮುಟೆ ಹೊರಿಸಿಕೊಂಡು ಇಂಗ್ಲಾದಿಗೆ ಹೋದೆ; ಬೇಸಗೆ ರಜಾ ಮುಗಿಸಿ, ತೀರ್ಥಹಳ್ಳಿ ಶಿವಮೊಗ್ಗ ಮೇಲಾಸಿ ಮೈಸೂರಿಗೆ ಹೋಗಲೆಂದು]

 


[1] ಪ್ರಣಯ ಸ್ವಪ್ನ ಎಂಬ ಶೀರ್ಷಿಕೆಯ ಕವನದ ಪೂರ್ತಿ ಪಾಠವನ್ನು ಹಿಂದೆಯೆ ಕೊಟ್ಟಿದ್ದೆ. ‘ಮಸಣ’ವನ್ನು ಇಲ್ಲಿ ಕೊಡುತ್ತೇನೆ.  ‘ಪ್ರಣಯ ಸ್ವಪ್ನ’ ಮತ್ತು ‘ಮಸಣ’ ಕವನಗಳೂ, ಒಂದಕ್ಕೊಂದು ಪರಸ್ಪರ ವಿರುದ್ಧವಾದ ಭಾವಲೋಕಗಳಿಗೆ ಸೇರಿ. ಒಂದು ಸಮಯದಲ್ಲಿಯೇ ರಚಿತವಾಗಿವೆ. ನನ್ನ ಹೃದಯದಲ್ಲಿ ನಡೆಯುತ್ತಿದ್ದ ವ್ಯಾಮೋಹದ ಮತ್ತು ವೈರಾಗ್ಯದ ತಿಕ್ಕಾಟಗಳಿಗೆ ಇವು ಪ್ರತಿನಿಧಿಗಳಾಗಿವೆ. ಹಸ್ತಪ್ರತಿಯಲ್ಲಿ ಅದೇ ತಾರೀಖು ಹಾಕಿರುವ ‘ಎನ್ನ ಗಿರಿಜೆಯೆ, ಗಿರಿಜೆಯೆ!’ ಎಂಬ ಕವನವೂ ಇದೆ. ‘ಮಸಣ’ ಕವನದ ಭೀಷಣ ಭಯಂಕರತೆಯು ಕಠೋರ, ವೈರಾಗ್ಯಕ್ಕೂ ‘ಪ್ರಣಯ ಸ್ವಪ್ನ’ ಮತ್ತು ‘ಎನ್ನಗಿರಿಜೆಯೆ’ ಕವನಗಳ ಸುಂದರ ಶೃಂಗಾರದ ಆಶಾವಾದಕ್ಕೂ ಇರುವ ಭಾವತಾರತಮ್ಯ ಮನಃಶಾಸ್ತ್ರೀಯವಾದ ವಿಶ್ಲೇಷಣೆಗೆ ಆಹಾರ ಒದಗಿಸುವಂತಿದೆ.

[2] ಮೇಲಿನ ದಿನಚರಿಯ ಸಂಕ್ಷೇಪ ದಾಖಲೆ ನಮ್ಮ ಮನೆಯಲ್ಲಿ ನಾವು ಸಾಧಾರಣವಾಗಿ ನಡೆಸುತ್ತಿದ್ದ ಸಂತೋಷದ ಬದುಕಿಗೆ ಒಂದು ಕಿರು ಗವಾಕ್ಷದಂತಿದೆ.  ಬೈಗು ಕತ್ತಲಾದೊಡನೆ ಕಾಡುಬೆಟ್ಟಗಳಿಗೂ ಗದ್ದೆ ತೋಟಗಳಿಗೂ ಕವಿಶೈಲಕ್ಕೂ ಮತ್ತೆಲ್ಲಿಗೋ ತಿರುಗಾಡಲು ಹೋಗಿದ್ದ ನಾವೆಲ್ಲ ಹಿಂತಿರುಗಿ ಬಂದು ಕೈಕಾಲು ತೊಳೆದು, ಉಪ್ಪರಿಗೆಗೆ ಹೋಗಿ, ಲ್ಯಾಂಪು ಹೊತ್ತಿಸಿ, ಸಭೆ ನೆರೆಯುತ್ತಿದ್ದೆವು.  ಹರಟೆ, ಇಸ್ಪೀಟು, ಆಟದಿಂದ ಹಿಡಿದು ಕಾವ್ಯ ವಾಚನದವರೆಗೆ ನಾನಾ ತೆರನಾದ ಮನರಂಜನೆಯ ಕಲಾಪಗಳಲ್ಲಿ “ಬಳ್ಳೆ ಹಾಕಿದ್ದಾರೆ!” ಎಂದು ಕರೆಯುವವರೆಗೂ ತೊಡಗಿರುತ್ತಿದ್ದೆ! ಇಂಗ್ಲಾದಿ ದೆವಂಗಿಗಳಿಗೆ ನಾವೆಲ್ಲ ಹೋಗುತಿದ್ದಂತೆ ಅವರೂ ಆಗಾಗ್ಗೆ ಕುಪ್ಪಳ್ಳಿಗೆ ನೆಂಟರು ಬಂದು ನಮ್ಮ ಸಂತೋಷದಲ್ಲಿ ಭಾಗಿಗಳಾಗುವುದರಿಂದಲೇ ಅದನ್ನು ಸಮರ್ಥಿಸುತ್ತಿದ್ದರು