ಪಾಳುಮನೆ[1]      

ಘೋರ ವಿಪಿನದ ನಡುವೆ ಪಾಳುಮನೆಯಿದೆ ನೋಡು:
ದಾರಿಹೋಕನೆ, ನಿಂತಿದಕೆ ಮನ್ನಣೆಯ ಮಾಡು.
ಯಾರು ಬಾರದ ಗುಡಿಸಲೆಂದಿದೆ ಜರೆಯಬೇಡ:
ಊರ ಬಡ ಕವಿಗಿರಲಿ, ಬೇರೆ ಯಾರಿಗು ಬೇಡ.
ಮುರಿದುರುಳುವಂತಿಹುದು ಹರಿದ ಹುಲ್ಲಿನ ಮಾಡು.
ಅರೆಯುರುಳಿ ಒರಗಿದೆ ಪಿಶಾಚದಂತಿಹ ಗೋಡೆ!        
ಬಿರುಕಿನೊಳಗರಳಿ ಮೊದಲಾದ ಗಿಡುಗಳ ನೋಡು:
ಕಿರುಜಗಲಿಯೊಳು ಬೆಳೆದ ಕಳೆ ಆಗಿಹುದು ಕಾಡು!
ಗೋಡೆಗಳ ಮೇಲಿಳಿದು ಮುಂಗಾರು ಮಳೆ ನೀರು
ಮಾಡಿಹುದು ಕಿರುಗಾಲ್ವೆಗಳನು ತರತರವಾಗಿ;
ಗೂಡು ಮಾಡಿಹ ಗೂಬೆಗಳ ಹಿಕ್ಕೆಯು ರಾಶಿ ನೋಡುವಗೆ
ಬಣ್ಣಿಪುದು ಪಾಳಾದ ಕತೆ ಹೇಳಿ!
ಕಳೆ ಬೆಳೆದು ಕಾಡಾದ ಹೊರ ಅಂಗಳವ ನೋಡು:
ತುಳಸಿಯೊಂದಡಗಿಹುದು ಕಂಗಳಿಗೆ ಮರೆಯಾಗಿ,
ಅಳಿಯೆ ಸಿರಿ ಅವಳಡಿಯ ಗುರುತು ತಾನುಳಿವಂತೆ,

ಅಳಿಯೆ ಜಗ ಅದರ ನಡು ಪರಮಾತ್ಮನುಳಿವಂತೆ!
ಶಿಖಿಯ ಕಾಣದ ಒಲೆಯ ನೋಡೆಂತಿರುವುದಲ್ಲಿ
ಸುಖವನಿರದರಸಿ ಕಡೆಗವಳ ಕಂಡಳಿದಂತೆ,
ಶಿಖಿವಾಹನೆಯ ಕೃಪೆಯ ಬೇಡವಳ ಹಳಿದಂತೆ,
ಅಕಟ ವಿಧಿಮಾಯೆಯಿದು ವಿಶ್ವನಿಯಮದ ಲೀಲೆ!
ಬಿದ್ದಿಹುದು ಮೂಲೆಯೋಳು ಹರಕು ಚಾಪೆಯ ಗಂಟು,
ಗೆದ್ದಲವನಾವರಿಸಿ ಪುಡಿಮಾಡುತಿದೆ ತಿಂದು.
ಒದ್ದೆಯಾಗಿಹ ನೆಲವನಣಬೆಯುತ್ಸವ ತುಂಬಿ
ಎದ್ದಿಹವು ಸಂಹರಿಪ ಕಾಲ ಕೇತನದಂತೆ!*
ಮಕ್ಕಳಾಡಿದ ಕೋಣೆಯ ಇಕ್ಕೆಯಾಗಿಹುದಿಂದು
ಕಕ್ಕಸದ ಕಡೊಳಿಹ ಮೃಗತತಿಗೆ; ತಾನಂದು
ಅಕ್ಕರೆಯ ಜೀವರಾವಾಸವಾಗಿತ್ತಿಂದು
ಹಕ್ಕಿ ಇಲಿ ಬೆಕ್ಕಿಗಾಯ್ತಾವಾಸ ತಾನಾಗಿ!
ಮಳೆ ಬರಲು ಊರ ದನಕರುಗಳಲ್ಲಿಗೆ ಬಂದು
ಮಳೆ ಬಿಡುವ ತನಕಿಹವು ಕರುಗಳಿಗೆ ಪೊಲೆಯೂಡಿ;
ಎಳೆಯ ಕುರಿಮರಿಯ ತಾತ್ತಾ ನಿಲ್ಲಿಗೈತಂದು
ಎಳೆಯವಂಗೊಳಿದೀಯುವುದು ಬಿಸಿಯ ನೊರೆ ಹಾಲ!
ಕಾನನದಿ ಸಂಚರಿಪ ಊರ ಕವಿತಾನಿಲ್ಲಿ
ಆನಂದಿಂದ ಬಂದು, ಪಾಳ ಮಹಿಮೆಯ ಕಂಡು
ಧ್ಯಾನಪರವಶನಾಗಿ, ತಾಯೊಡನೆ ಮಾತಾಡಿ,
ಮೌನದಿಂ ಕುಳಿತಿಲ್ಲಿ ವಿರಚಿಸುವನಾಗಾಗ!
ಪಾಳುಮನೆ ಇದಕ್ಕೊಂದು ಕಥೆಯಿಹುದದನು ಪೇಳೆ
ಬಾಳ ಗೋಳೆಲ್ಲ ಸುರಿಯುವುದು ಕಂಬನಿಯಾಗಿ.
ಹಾಳು ಕತೆಯಲ್ಲವದು: ಕೇಳು ನೀ, ಶ್ರೀರಾಮ
ಲೀಲೆಯಂತಿದು ಪುಣ್ಯಕರ, ಭಕ್ತಿಯಿಂ ಕೇಳೆ!

ಹರಿದಾರಿ ದೂರದೊಳಗುಂಟೊಂದು ಊರು,
ಕರೆವರದನೆಲ್ಲರೂ ಸಿದ್ಧನೂರೆಂದು.
ನೆರೆಹೊರೆಯ ಮನೆ ಮಾರು ಕೇರಿ ಅಲ್ಲಿರಲಿಲ್ಲ.
ಕರಿಸಿದ್ದನೋರ್ವನೇ ಅಲ್ಲಿರ್ದನು.
ಜಾತಿಯೊಳಗೊಕ್ಕಲಿಗ, ನೀತಿಯೊಳಗವ ಯೋಗಿ,
ಪ್ರೀತಿಯೊಳಗಿರ್ದನವ ಹರಿಭಕ್ತನಾಗಿ.
ಖ್ಯತಿಯೊಳಗವನೇನು ಕಡಮೆಯಾಗಿರಲಿಲ್ಲ:
ಸೀತೂರು ಸಾಹುಕಾರರೂ ಇವನ ಅರಿತಿರ್ದರು!
ಕರಿಸಿದ್ಧನಿಗೆ ಒರ್ವ ಸತಿ ಇರ್ದಳಾಕೆ
ಪರಿಶುದ್ದೆ ಅಲ್ಲದತಿ ಪತಿ ಭಕ್ತೆಯಂತೆ.
(ಕರಿ ಎಂಬುದೇನು ಸಿದ್ಧನ ನಾಮವಲ್ಲ.
ಅರಿತವಂಗದು ಗೊತ್ತವನ  ಬಣ್ಣ ಎಂದು)
ಹೆಂಡತಿಯ ಹೆಸರೇನು ಎಂಬುವುದು ಮರೆತೆ.
(ಬಂಗಾಳದಿಂ ಬಂದ ಮಾರುದ್ದ ಹೆಸರಲ್ಲ!
‘ಹೆಡ್ಡಿ’ ಎಂಬುವುದಲ್ಲ, ಅವಳು ಜಾಣೆ .
‘ಗಿಡ್ಡಿ’ ಎಂದಿರಬೇಕು, ಮರೆತಿರ್ದೆನಲ್ಲಾ ?
ದಂಪತಿಗಳಿಗೆ ಬಹಳ ಕಾಲ ಸುತರಿಲ್ಲದಿರೆ
ಕೆಂಪು ಚೌಡಿಯ ದಿನವು ಪೂಜೆ ಮಾಡಿದರು.
ಅವರದೇನದು ಪುತ್ರಕಾಮೇಷ್ಟಿಯಲ್ಲ,
ಕವಿಯೋಗಿ ಋಷಿಗಳ ಸಹಾಯಕವದಕಿಲ್ಲ.
ಒಂದು ಹಣತೆಗೆಯ ತುಂಬ ತುಪ್ಪವನ್ನು ಹಾಕಿ,
ತಂದ ಕಾಡರಳೆಯಿಂ ಬತ್ತಿಯನು ಮಾಡಿ
ಹೊತ್ತಿಸುವ ದೀಪವನು ಚೌಡಿಗೆ ನಮಸ್ಕರಿಸಿ
ಪುತ್ರ ಸಂತತಿಯಾಗಲೆಂದು ರತಮ್ಮನು ತಾವೇ
ಚಿತ್ತದೊಳು ಹರಸಿಕೊಂಡರು ಚಿತ್ರಮಾಗಿ!
ಭಾವವಿದ್ದರೆ ಸರಿ, ದೇವನೆಂತಿರ್ದೊಡೇಂ?
ಭಾವಿಸಿದುದೆಂತಾದರಾಗದಿಹುದೇ ಹೇಳು?

ಅದರಂತಿರಲಿ. ಅವರ ದಿನದಿನದ ಕೃಷಿ ಕೆಲಸಗಳ
ಪರಿಕಿಸುತ ಅದರ ಬಗೆ ಅರಿಯೋಣ ಬನ್ನಿ:
ಸಿದ್ದನಿಗೆ ಬಲವಾದ ಕಾಲ್ನಡೆಗಳೇಳೆಂಟು
ಸಿದ್ಧವಾಗಿಹವೇಗಳೂ ಕೃಷಿ ಕಾರ್ಯಕ್ಕೆ.
ಗಿಡ್ಡಿಯಾದರೋ ತಾನು ನಾಲ್ಕೈದು ಹಸುಗಳನು
ಅಡ್ಡಿಯಿಲ್ಲದೆ ದಿನವು ಹಾಲ್ಕರೆವಳು.
ಮುಂಜಾನೆ ತಾನೇಳುವತವಳು ಗಂಜಿಯ ಮಾಡಿ
ಪಂಜ್ರೋಳಿಗೆಡೆಯಿಟ್ಟು ಧೂಪ ಹಾಕಿ,
ಕಡೆದು ಮೊಸರನು, ತೆಗೆದು ಸವಿಯ ಬೆಣ್ಣೆಯನು,
ಕಡೆಗೋಲ ಶುಚಿ ಮಾಡಿ ತೆಗೆದಿಡುವಳು.
ಸಿದ್ಧನಾದರೋ ಎದ್ದು ದೇವರಿಗೆ ಹೂಮುಡಿಸಿ
ಶುದ್ದಾಥ್ಮನಾಗಿ ಪೂಜೆಯನು ಮಾಡಿ
ಗಂಜಿಯನಮೃತವೆಂದು ಭಾವಿಸುವ ಉಂಡು,
ಕಂಜಸಖನಂ ಪಾಡಿ ಎಚ್ಚರಿಸುತರ್ದ!
ತರುವಾಯ ದಂಪತಿಗಳೀರ್ವರೂ ಹೊಲದೆಡೆಗೆ
ತುರುಗಳನ್ನಟ್ಟಿಕೊಂಡೈತರುವರು.
ಮೇಯುತಿರೆ ತುರುಗಳಲ್ಲಿವರು ಹೊಲಗೆಲಸಗಳ,
ಕಾಯ ಬಳಲುವ ತನಕ, ಮಾಡುವರು ಬಿಡದೆ.
ಮಳೆ ಬರಲು ಸಿದ್ಧನಿಗೆ ಕಂಬಳಿಯೆ ಕೊಡೆಯಹುದು;
ಎಲೆ ನೆಯ್ದ ಕೊಡೆ ಗಿಡ್ಡಿಗಾಗುವುದು ಗೊರಬು.
ನೆತ್ತಿಗೇರಲು ಹೊತ್ತು ಗಿಡ್ಡಿ ಬರುವಳು ಗುಡಿಗೆ
ಬುತ್ತಿಯನ್ನವ ಮಾಡಿ ಕೊಂಡೊಯ್ಯಲು.
ಸಿದ್ಧನಾದರೊ ಬೆವರಿಳಿಯೆ ದುಡಿದು ದಿನವೆಲ್ಲ,
ಗದ್ದೆಗಳ ಹಸುರಾದ ಪೈರ ಹರುಷದಿ ನೋಡಿ,
ಸಂಜೆಯಾಗಲು ತನ್ನ ಗುಡಿಸಲಿಗೆ ಬಂದು
ಭುಂಜಿಸುವನತಿ ಹರುಷ ಭಾವದಿಂದ:
ರೊಟ್ಟಿ ಚಟ್ನಿಯು ಕಡುಬು ತುಪ್ಪ ಬಾಳೆಯ ಹಣ್ಣು
ಹಿಟ್ಟುಂಡೆ ಮೊದಲಾದ ತಿಂಡಿಗಳನು.
ಕತ್ತಲಿಡೆ ಹರಳೆಣ್ಣೆ ತುಂಬಿದಾ ಹಣತೆಯನು
ಹೊತ್ತಿಸುತ, ಅದರ ಬೆಳಕಲಿ ಕುಇತು ಮಾತ
ನಾಡುತ್ತಾ ಸಂತೋಷಿಸುವರಾ ದಂಪತಿಗಳು!

ಜಗದ ನವ ನಾಗರಿಕತೆಯ ಹಾವಳಿಯುಮಿಲ್ಲ,
ಜಗದ ಅನ್ಯಾಯಗಳ ತಂಟೆಯೂ ಅಲ್ಲಿಲ್ಲ.
ಅಜ್ಞಾತರಾಗಿ ಅಶ್ರುತರಾಗಿ ಆಶೋಕರಾಗಿ
ಆಜ್ಞಾನದಾನಂದ ಸಾಗರದಿ ಮುಳಗಾಡಿ,

‘ಅಜ್ಞಾನವಾನಂದವೀಯುತಿರೆ ಬರಿದೆ
ಸುಜ್ಞಾನವಂ ಬಯಸುವುದು ಮೂರ್ಖತನವು!’
ಎಂಬ ನಾಣ್ಣುಡಿಯ ನಿಜ ಮಾಡಿರ್ದರವರು.
ಪುರಜನರ ಲೋಭಿತನ  ಅವರಿಗಿರಲಿಲ್ಲ.
ಸಿರಿಯ ಸಂಪಾದನೆಯ ಮೇಲಾಟವಿರಲಿಲ್ಲ;
ದುಡಿದುದನೆ ತಿಂದುಂಡು ಸುಖದಿ ಬಾಳುತ್ತ
ಬಡತನದ ಶಾಂತಿಯನು ಪಡೆದಿರ್ದರವರು!

ಇಂತು ದಿನಗಳು ಕಳೆಯುತಿರಲೊಂದು ದಿವಸ
ಸಂತಸದ ರವಿ ಅವರ ಜೀವನಾಕಾಶದಲಿ
ಪುಣ್ಯದಿನದೊಂದು ಶುಭಗಳಿಗೆಗೆ ಕುವರನುದಿಸೆ
ಪುಣ್ಯವೆ ಬಂದವರ ಮನೆಗಿಳೀದ ತೆರನಾಯ್ತು.
ಪರಿದುದವರಿರ್ವರಾನಂದ ವಾಹಿನಿ ಉಕ್ಕಿ;
ಪರಿಪರಿಯಲೀಶ್ವರನ ಪೊಗಳಿ ಪೂಜಿಸಿದರು.
ಬಂಧುಗಳನೆಲ್ಲರಂ ಕರೆದು ಉಪಚರಿಸಿ
ಚೆಂದದಿಂ  ನಾಮಕರಣಂಗೈದರವರು.
ಹೆಸರೇನು ವೈಭವದ ಹೆಸರಲ್ಲವಾದರೂ
ಹೆಸರನಾಲಿಸಿ ನೀವು ನಗುವಕಾರಣವಿಲ್ಲ.
‘ಸಿಂಗ’ನಿಗೆ ಮಂಗ ಎನೆ ಆತಂಗೆ ಕುಂದೇನು?
ಮಂಗನಂ ಸಿಂಗವೆನೆ ಅದು ಸಿಂಹವಹುದೆ?
ಮಲ್ಲಿಗೆಯ ಕಲ್ಲೆನಲು ತೊಲಗುವುದೆ ಕಂಪು?
ಕಲ್ಲ ಮಲ್ಲಿಗೆ ಎನಲು ಬಂದಪುದೆ ಪೆಂಪು?
ಹೇಗಾದರಿರಲಿ ಅದು: ಸಿದ್ದನ ಕುಮಾರನಂ
ನಾಗ ಎಂಬುವ ನಾಮದಿಂ ಭೂಷಿಸಿದರು.!

ಕವಿಗಳೀಗೆ ಕಥೆಗಳಿಗೆ ಕಾಲಭಯ ಉಂಟೆ?
ಅವರ ಸುಕುಮಾರನು ಸುಧಾಕರನ ತೆರದಿ
ಜವದಿ ಬೆಳದೊಂಬತ್ತು ವರ್ಷದವನಾದ.
ತರಳನಂ ನೋಡಲತಿ ಸುಂದರನು ಕೋಮಲನು
ಕರಿಮುಗಿಲ ಕಾಂತಿಯಿಂ ದೃಢಕಾಯನು.
ಅರಸುಗಳ ಲಾಲನೆಯ ಪಾಲನೆ ಅವನಿಗಿಲ್ಲ,
ಸಿರಿಯಾವ ವಸನಗಳ ಬೆಡಗಿನಿತುಮಿಲ್ಲ;
ತರತರದ ಆಟಗಳನಾಡಿವರಿಲ್ಲ,
ಪರಿಪರಿಯ ನೋಟಗಳ ತೋರಿಸುವರಿಲ್ಲ;
ಅರಿವಿರವು ಎಲ್ಲಮುಂ ಪ್ರಕೃತಿದೇವಿಯೆ ಅವಗೆ,
ಸಿರಿಯಾಕೆ, ಚರಳಾಕೆ, ಚರಿಸೆ ವಾಹನವಾಕೆ;
ತರತರದ ಆಟಗಳನಾಡಿಸುವಳಾಕೆ;
ಪರಿಪರಿಯ ನೋಟಗಳ ತೋರಿಸುವಳಾಕೆ;
ಪ್ರಕೃತಿ ದೇವಿಯ ದಾದಿತನದೊಳಾ ಬಾಲಕನು
ಸುಕೃತ ವಶದಿಂ ಬೆಳೆದು ಶೈಶವವ ಕಳೆದ.

ಸಿದ್ಧನೂರೊಳಗರಸಲೊಂದು ಶಾಲೆಯೂ ಇಲ್ಲ;
ವಿದ್ಯೆ ಎಂಬುದ ಹೆಸರ ಕೇಳಿಬಲ್ಲವರಷ್ಟೆ;
ಗದ್ದೆ ಉಳುವುದೆ ಅವರ ಬ್ರಹ್ಮವಿದ್ಯೆ!
ಸಿದ್ದತ್ವ ಎಂಬುದೊ ಗೋಪಾಲತನವು!
ವಿದ್ಯೆಯರಿಯದ ನರನು ಪಶು ಎಂದು ಹೇಳುವರು.
ವಿದ್ಯೆಯುರಿತವರೆಲ್ಲ ಹುಲಿರಾಯರೋ?
ತತ್ವಜರಿದಕೇನು ತರ್ಕಮಾಡಿದರೇನು,
ತತ್ವದಿಂದಾಚೆಗಿಹುದಸ್ತಿತ್ವವು!
ಸೃಷ್ಟಿನಿಯಮದ ಲೀಲೆಗಜ್ಞಾನ ಹೊರತಲ್ಲ;
ಸೃಷ್ಟಿಯೊಳಗಜ್ಞಾ ತರುಜ್ಜಗಂ ವ್ಯರ್ಥವಲ್ಲ!
ಯಾರರಿಯದಂತಿರ್ದು ಅಳಿವೊಂದು ಕುಸುಮವೂ
ಧಾರಿಣಿಗೆ ತಿಳಿದೊರ್ವ ಶಂಕರಾಚಾರ್ಯನೂ
ಬ್ರಹ್ಮದಾನಂದ ವಿರ್ವರೊಳು ಸಂಚರಿಸುತಿರೆ
ಬ್ರಹ್ಮನಿಯಮದೊಳೊಂದೆ ಆಗಿರುವರು!
ನರನೆ ನೀನಜ್ಞಾನಿಯೆಂದು, ಭಯಪಡಬೇಡ;
ದುರಿತಹರೆಯಾದವಳ ತಾಯ್ಮೊಡಿಲೊಳಿಹೆ ನೀನು!
ಕಿರಿಗೆಲಸವೆಂದಾವುದನು ಹಳಿಯಬೇಡ;
ಕಿರಿದು ಹಿರಿದೆಂಬುದೀ ಬ್ರಹ್ಮಾಂಡದೊಳಗಿಲ್ಲ!
ಕಿರಿದು ಹಿರಿದಾವುದುದು ಬ್ರಹ್ಮವಾಗಿರಲೆಲ್ಲ?

ಸಿದ್ಧನು ಕುಮಾರನಿಗೆ ಗೋಪಾಲತನದ
ವಿದ್ಯೆಯುದ್ಯೋಗ ದೀಕ್ಷೆಯನು ಕೊಟ್ಟು,
ಬುದ್ಧಿಯಂ, ಪೇಳಿ ಕಳುಹಿದನು ವನಕೆ:
“ಮಗನೆ , ಬಾ ಹೇಳುವುದ ಕಿವಿಗೊಟ್ಟು ಕೇಳು:
ಆಗಲಿ ಗುರುಗಳನೆಲ್ಲಿಗೂ ಹೋಗಬೇಡ.
ಗೋಗಳಿತರರ ಗದ್ದೆ ಗಿಳಿಯದಂತೆ
ಜಾಗರೂಕತೆಯಿಂದ ದನಗಳನು ಕಾಯು.
ಕೇಳಿದೆಯ? ಮರೆಯದಿರು ಹೇಳುವುದನೆಲ್ಲ.
ಕಾಳಿ ಬಲುತುಂಟ ದನ,  ಎಚ್ಚರಿಕೆಯಿಂದ
ಕೇಳೀ ದೋಂಟಿಯ ದನಿಯ ಕಾಯುವುದು ನೀನು.
ಬೆಟ್ಟದೊತ್ತಿಗೆ ಗೋವುಗಳ ಹೊಡೆಯಬೇಡ,
ಕೆಟ್ಟ ಹುಲಿರಾಯ ತಾ ಹೊಂಚುತಿಹನು.
ಕತ್ತಲಾಗುವ ಮುನ್ನ ಕೊಟ್ಟಿಗೆಯ ಸೇರು;
ಎತ್ತು ಹಸುಗಳ ದಿನದಿನವು ಲೆಕ್ಕ ಮಾಡು.
ಎತ್ತ ನೋಡುವೆ, ಕಂದ? ಇತ್ತ ನೋಡು.
ಕೇಳಿದೆಯ? ಮರೆಯದಿರು ಹೇಳುವುದನೆಲ್ಲ.
ಹಾಳಾದ ಮನೆಯ ನಾ ಉದ್ದಾರ ಮಾಡಿದೆನೊ;
ಹಾಳು ಕತೆ ನಿನಗೇಕೆ? ಮುದ್ದಾದ ನೆನಪಲ್ಲ.
ಸಾಲಗಾರರು ಬಂದು ಮನೆಯ ಸುತ್ತಲು ನಿಂದು
ಬೋಳಿಮಗ ಸೂಳೆಮಗ ಎಂದರಂದು.
ಸಾಲಗಾರರ ನುಡಿಯು ಶೂಲದಿರಿತವು, ಕಂದ!
ಸಾಲವನು ಕೊಡಬೇಡ, ಸಾಲ ಮಾಡಲು ಬೇಡ,
ಸಾಲವದು ಕೊಡುವ ಕೊಂಬುವರಿರ್ವರಿಗೂ ಶೂಲ!
ಸಾಲಗಾರರ ಕಾಲ ನಾ ಕಟ್ಟಿಕೊಂಡು
ಗೋಳಿಟ್ಟೆ; ದಮ್ಮಯ್ಯ, ತೀರಿಸುವೆ ಎಂದೆ.
ಕೂಲಿ ಮಾಡುವೆನೆಂದೆ: ಆಳಾಗುವೆನು ಎಂದೆ,
ಬಾಲನಂದದೆ ನಾನು ರೋದಿಪುದ ಕಂಡು
‘ಹಾಳಾಗು ಹಾಳಾಗು’ ಎಂದೆನ್ನ ಹರಸಿ
ಕಾಲಿನಿಂದೊದ್ದೆನ್ನ ತೆರಳಿದರು ಬೈದು.
ಮೇಲೆ, ನಾ ಕೂಲಿ ಮಾಡವರವರ ಸಾಲಗಳ
ತೀರಿಸುತ ಬಂದೆ, ಉದಯಿಸಿತೆನ್ನ ಸಿರಿಯು,
ಮೂರು ಕಾಸಾಗೇ ಕೈಯಲಿ, ಗದ್ದೆಯನು ಕೊಂಡೆ- ಮಾರುದ್ದದಾ ಕತೆಯೇಕೆ? ಮುಂದೆ ಇಂತಾದೆ!
ನಾನಿನ್ನು ಮುದಿಯಾದೆ, ನಿನ್ನ ತಾಯಿಯು ಮುದುಕಿ,
ನೀನಾವುದನು ಕಳೆಯದುದ್ದಾರ ಮಾಡು!”

ಸಿದ್ಧನೀಪರಿ ಬುದ್ಧಿ ಹೇಳಲಾ ನಾಗ
ನಿದ್ದೆಯಿಂದೆಚ್ಚತ್ತವನ ತೆರದಿ ನೋಡಿ
ಮುದ್ದಾಗಿ ತಲೆದೂಗುತಿಂತೆಂದನು”
“ಅಪ್ಪಯ್ಯ, ಕೇಳುಲ ನಿನಗೇತಕಾ ಚಿಂತೆ?
ತಪ್ಪು ಮಾಡದೆ ನಾನು ನಡೆದುಕೊಳ್ಳುವೆನೆಂದೂ.
ಉಳುವೆ ನಾ ಗದ್ದೆಯನು; ಗೊಬ್ಬರವ ಹಾಕುವೆನು;
ಕಳೆಯ ನಾ ಕೀಳುವೆನು; ಬಿತ್ತುವೆನು ಬೀಜವನು;
ಒಣಗಿ ಕೊಯ್ಲಿಗೆ ಬರಲು ಪೈರನು ಕಣಕೆ ಒಯ್ದು
ಬಣಮೆ ಹಾಕುವೆನು; ಒಕ್ಕಿ ಕಾಳನ್ನೆಲ್ಲ
ಕಣಜದೊಳು ಭದ್ರಾಗಿ ಕೂಡಿಡುವೆನು.
ನೀ ಹೇಳಿದಂತೆಯೇ ನಾ ನಡೆದುಕೊಳ್ಳುವೆನು.
ನೀ ನುಡಿದುದಕೆ ನಾ ಎದುರು  ಮಾತಾಡೆನು.”

ಮಗನ ಮಾತನು ಕೇಳಿ ಸಿದ್ಧನಿಗೆ ಸಂತೋಷ
ಮಿಗಿಲಾಯ್ತು; ಕಣ್ಣೀರ ಸುರಿಸುತ್ತ ಮಗನ
ಅಲಿಂಗಿಸಾನಂದ ವಶವಾದನು.
ಗಿಡ್ಡಿಯೂ ತನ್ನ ಮಗ ಅಷ್ಟು ಮತಿವಂತ
ಆದುದನು ಕಂಡು ಚೌಡಿಗೆ ಹರಕೆ ಸಲ್ಲಿಸಲು
ತೆಂಗಾಯ ಸುಳಿದು ಕಾಣಿಕೆ ಕಟ್ಟಿದಳು ತೊಲೆಗೆ!…

ಇಲ್ಲಿಗೆ ಕವನ ನಿಂತಿದೆ. ಬಹುಶಃ ಆ ಮನೆ ‘ಪಾಳು ಮನೆ’ ಹೇಗಾಯ್ತು ಎಂಬುವುದನ್ನು ನಿರೂಪಿಸುವ ಉದ್ದೇಶ ಕಥೆಗೆ ಇತ್ತು ಎಂದು ತೋರುತ್ತದೆ.  ಆದರೆ ‘ಕರಿಸಿದ್ದ’ ಎಂಬ ಸರಳರಗಳೆಯ ಕಥನಕವನವೊಂದು ಮುಂದೆ ಬರೆಯಲ್ಪಟ್ಟಿದೆ. ಅದು ‘ಕಥನಕವನಗಳು’ ಎಂಬ ಕವನ ಸಂಗ್ರಹದಲ್ಲಿ ಸೇರಿದೆ.

೧೯೨೬ನೆಯ ಜೂನ್ ೨೪ನೆಯ ಗುರುವಾರದ ದಿನಚರಿ:         
“ಇಂಗ್ಲಾದಿಯಿಂದ ತೀರ್ಥಹಳ್ಳಿಗೆ ಹೊರಟೆ, ಶಿವಮೊಗ್ಗಕ್ಕೆ ಹೋಗುವುದಕ್ಕಾಗಿ. ಆದರೆ ಬಸ್ಸಿಗೆ ಟಿಕೆಟ್ಟು ಸಿಗಲಿಲ್ಲವಾಗಿ ತೀರ್ಥಹಳ್ಳಿಯಲ್ಲಿಯೆ ಉಳಿದೆ. ಪಿ.ಎನ್.ನರಸಿಂಹ ಮೂರ್ತಿ ಸಿಕ್ಕರು… ವಿ.ಗೋ.ಕೃ.ಶೆಟ್ಟರಿಗೂ ಭೂಪಾಳಂ ಚಂದ್ರಶೇಖರಯ್ಯನವರಿಗೂ ಸ್ವಾಮಿ  ಸಿದ್ದೇಶ್ವರಾನಂದರಿಗೂ ಕಾಗದ ಬರೆದೆ”.

ಟಿಕೆಟ್ಟು ಸಿಗದಿದ್ದರಿಂದ ಮತ್ತೇ ಇಂಗ್ಲಾದಿಗೆ ಹಿಂತಿರುಗಿ ಮರುದಿನ ಮತ್ತೇ ತೀರ್ಥಹಳ್ಳಿಗೆ ಬಂದು ಬಸ್ಸು ಹತ್ತಿ ಶಿವಮೊಗ್ಗಕ್ಕೆ ಹೋದೆ, ತಾರಿಖು ೨೫ರಲ್ಲಿ.

೨೬ನೆಯ ಶನಿವಾರದ ದಿನಚರಿಯಲ್ಲಿ, ಮುಂದೆ ನನ್ನ ಸಾಹಿತ್ಯಕ ಜೀವನದಲ್ಲಿ ತಕ್ಕ ಮಟ್ಟಿನ ಭಾಗವಹಿಸಲಿದ್ದ ಇಬ್ಬರ ಪರಿಚಯವಾಯಿತೆಂದು ಉಲ್ಲೇಖವಿದೆ; ಬಿ.ಎಸ್.ರಾಮರಾವ್ ಮತ್ತು ಎ.ಸೀತಾರಾಂ.

ಜೂನ್ ೨೭, ೨೮, ೨೯, ೩೦ ಮತ್ತು ಜುಲೈ ೧, ೨,೩,ನೆಯ ತಾರೀಖುಗಳ ದಿನಚರಿ ಖಾಲಿಯಿದೆ. ಅಂದರೆ ಮೈಸೂರಿಗೆ ಹೊರಡದೆ ಶಿವಮೊಗ್ಗದಲ್ಲಿ ೮-೧೦ ದಿನಗಳು ಉಳಿಯಬೇಕಾಯಿತು. ಕಾರಣ? ಸ್ವಾರಸ್ಯವಾಗಿದೆ!?

ಶಿವಮೊಗ್ಗಕ್ಕೆ ಹೋದ ರಾತ್ರಿ ಅಡಕೆ ಮಂಡಿಯ ಮುಂಭಾಗದ ಉಪ್ಪರಿಗೆಯಲ್ಲಿ ಮಲಗಿದ್ದೆ. ಬೆಳಿಗ್ಗೆ ಏಳಲು ಪ್ರಯತ್ನಿಸಿದಾಗ ಆಗಲಿಲ್ಲ. ನನಗೆ ತುಂಬ ಬೆರಗು. ಇದೇನಿದು? ನಿನ್ನೆ ರಾತ್ರಿ ಮಲಗುವಾಗ ಸರಿಯಾಗಿದ್ದೆ. ಈಗ ಇದಕ್ಕಿದ್ದ ಹಾಗೆ ಏಳುವುದಕ್ಕೇ ಆಗುತ್ತಿಲ್ಲ? ಮತ್ತೇ ಸ್ವಲ್ಪ ಪ್ರಯತ್ನಪೂರ್ವಕವಾಗಿ ಮೆಲ್ಲಗೆ ಹೇಗೋ ಮಂಚದಿಂದ ಕೆಳಗಿಳಿದೆ. ನಾನೊಬ್ಬನೇ ಉಪ್ಪರಿಗೆಯಲ್ಲಿ ಮಲಗಿದ್ದೆನಾದ್ದರಿಂದ ಸಹಾಯಕ್ಕೆ ಯಾರನ್ನೂ ಕರೆಯಾಗಲಿಲ್ಲ. ಮಾನಪ್ಪ ನಡುವಣ ಅಟ್ಟದಲ್ಲಿ ಬೇರೆಯಾಗಿ ತನ್ನ ರೂಮನ್ನು ಏರ್ಪಡಿಸಿಕೊಂಡಿದ್ದ,. ನನಗೆ ಎದ್ದು ನಿಲ್ಲಲೂ ಆಗುತ್ತಿರಲಿಲ್ಲ; ಸೊಂಟ ನೋಯುತ್ತಿತ್ತು. ದೇಹವೆಲ್ಲ ಹಠಾತ್ತಾನೆ ಶಿಥಿಲವಾಗಿತ್ತು.  ಹೇಗೊ ಗೋಡೆಗೆ ಆನಿಸಿಕೊಂಡು ತೆವಳಿ ಉಪ್ಪರಿಗೆಯ ಬಾಗಿಲವರೆಗೂ ಬಂದಿದ್ದೆ. ಅಷ್ಟರಲ್ಲಿ ಮಾನಪ್ಪ, ಅಷ್ಟು ಹೊತ್ತಾದರೂ ನಾನು ಕೆಳಕ್ಕೆ ಬರದಿದ್ದುದನ್ನು ಕಂಡು ಮೆಟ್ಟಿಲೇರಿ ಬಂದ. ನಾನು ಸೊಂಟ ಮುರುಕ ಹೇಳವನಂತೆ ನೆಲದ ಮೇಲೆ ಕುಳಿತಿದ್ದದನ್ನು ಕಂಡು  ಏನೋ ವಿನೋದವಿರಬೇಕೆಂದು ಭಾವಿಸಿ ನಗತೊಡಗಿದನು. ನಾನು ಮತ್ತೆ ಎದ್ದು ನಿಲ್ಲಲು ಪ್ರಯತ್ನಿಸಿ ಆಗದಿದ್ದುದಕ್ಕೆ ಕಂಡು ಅವನಿಗೂ ದಿಗಿಲಾಯಿತು. ಏನು ಎಂದು ವಿಚಾರಿಸಿದ “ಏನೊ ಗೊತ್ತಾಗುವುದಿಲ್ಲ,. ಮೈ ಕೈ ಎಲ್ಲ ನೋವು; ಸೊಂಟವಂತೂ ಏಳಲು ಪ್ರಯತ್ನಿಸಿದರೆ ಸಿಡಿಯುತ್ತದೆ” ಎಂದೆ. ಸರಿ, ಅವನ ಸಹಾಯದಿಂದ ಒಂದೊಂದೆ ಮೆಟ್ಟಿಲನ್ನು ತೆವಳಿಕೊಂಡೆ ನಿಧಾನವಾಗಿ ಇಳಿದೆ. ಆದರೆ ನೆರವಿಲ್ಲದೆ ನಡೆಯಲು ಆಗುತ್ತಿರಲಿಲ್ಲ. ಅವನ ಸಹಾಯದಿಂದ ಮೆಲ್ಲಗೆ ನಡೆದು ಮುಖ ತೊಳೆಯುವುದು ಕಾಫಿ ತಿಂಡಿ ತೆಗೆದುಕೊಳ್ಳುವುದು ಮಾಡಿದೆ.  ಆದರೆ ಏಕೆ ಹೀಗಾಯಿತು? ಒಬ್ಬರಿಗೂ  ತಿಳೀಯದು. ಕಡೆಗೆ ಡಾಕ್ಟರಿಗೂ ಹೇಳಿ ಕಳೀಸಿದರು. ಅವರೂ ಏನೋ ಕುಡಿಯಲು ಔಷಧಿ ಕೊಟ್ಟರು. ಅವರು ಎಲ್ಲಿಯಾದರೂ ಏಟ್ಟಾಗಿತ್ತೇ? ಏನಾದರೂ ಸೊಂಟಕ್ಕೆ ತಗುಲಿತ್ತೆ? ಇತ್ಯಾದಿ ವಿಚಾರಿಸಿದಾಗ ನನಗೆ ಎರಡು ದಿನಗಳ ಹಿಂದೆ ನಡೆದ ಬೈಸಿಕಲ್ಲಿನ ಘಟನೆ ನೆನಪಾಗಿ ಅದನ್ನು ವಿವರಿಸಿದೆ. ಆಗಲೇ ಗೊತ್ತಾಗಿದ್ದು, ಬೈಸಿಕಲ್ಲು ದಿಮ್ಮಿಗೆ ಡಿಕ್ಕಿ ಹೊಡೆದಗ ನರಗಳಿಗೆಲ್ಲ ಷಾಕ್ ಹೊಡೆದ ಹಾಗಾಗಿ ತತ್ಕಾಲದಲ್ಲಿ ಏನೂ ಕಾಣಿಸದಿದ್ದದದು ಎರಡು ದಿನದ ಮೇಲೆ ಈ ರೀತಿ ಪ್ರಕಟಗೊಂಡಿದೆ ಎಂದು!! ಸರಿ, ಎಂಟು ಹತ್ತು ದಿನ ರೋಗಿಯಂತೆ ಮಲಗಿ ಮಿತ್ರರ ಸ್ನೆಹ ಶುಶ್ರೂಷನೆಗಳನ್ನು ಸವಿದೆ. ಆಗಲೆ ಎ.ಸೀತಾರಾಂ ಮತ್ತು ಬಿ.ಎಸ್. ರಾಮರಾವ ಅವರ ಹೊಸ ಪರಿಚಯವಾದದ್ದು.  ಮಾನಪ್ಪನಂತೂ ಮನೆಯವನಷ್ಟೆ! ಭೂಪಾಳಂ ಚಂದ್ರಶೇಖರಯ್ಯ , ಕೂಡಲಿ ಚಿದಂಬರಂ ಅವರೂ ದಿನವೂ ಬಂದು ನಾನಾ ವಿಚಾರವಾಗಿ ಮಾತುಕತೆ ನಡೆಸುತ್ತಿದ್ದರು.

೧೯೨೬ನೆಯ ಜುಲೈ ೪ನೆಯ ಭಾನುವಾರದ ದಿನಚರಿ:                       
“ಬೆಳಿಗ್ಗೆ ಭೂಪಾಳಂ ಚಂದ್ರಶೇಖರಯ್ಯ ಬಂದರು. ಭಗವದ್ಗೀತೆಯನ್ನು ಓದಿ ಕೆಲವು ವಿಚಾರ ಜಿಜ್ಞಾಸೆ ಮಾಡಿದೆವು. ‘ಹಕ್ಕಿಗಳೆ ಕಾಡಿನೊಳಗಲೆದಾಡಿ ಹೋಗಿ’ ಛೆ ಎಂದು ಮೊದಲಾಗುವ ಒಂದು ಕನ್ನಡ ಕವನ ರಚಿಸಿದೆ. (ಅದು ಶಿಶುಗೀತೆಗಳ ಕವನ ಸಂಕಲನದ ‘ಮೇಘಪುರ’ದಲ್ಲಿ ಅಚ್ಚಾಗಿದೆ.  ಸಂಜೆ ಅವರು ಬಂದಾಗ ಭೂ.ಚಂ.ಗೆ ಆ ಕವನ ತೋರಿಸಿದೆ.  ಮೊದಲು ಅವರಿಗೆ ಅದರ ಭಾವ ಸ್ಫುರಿಸಲಿಲ್ಲ. ಆದರೆ ನಾನು ಹೇಳಿದ ಮೇಲೆ ಅದನ್ನು ಬಹಳವಾಗಿ ಮೆಚ್ಚಿಕೊಂಡರು. ಭಗವದ್ಗೀತೆ ಓದಿದೆವು”.

[ಜುಲೈ ೪ನೆಯ ತಾರೀಖು ಬರೆದ ಕವನ ‘ಹಕ್ಕಿಗಳೆ, ಕಾಡಿನೊಳಗಲೆದಾಡಿ ಹೋಗಿ’ ಎನ್ನುವುದೇನೋ ಮುಂದೆ ‘ಮೇಘಪುರ’ದಲ್ಲಿ ಅಚ್ಚಾಗಿದೆ.  ಆದರೆ ಜುಲೈ ೩ನೆಯ ತಾರೀಖಿನಲ್ಲಿ ರಚಿತವಾದ ಒಂದು ಕವನ ‘ವಿವಿಧ ವೇಷಗಳು ಧರಿಸಿ’ ಎಂದು ಪ್ರಾರಂಭವಾಗುವುದು ಎಲ್ಲಿಯೂ ಪ್ರಕಟವಾಗಿಲ್ಲ.ಅದನ್ನಿಲ್ಲಿ ಕೊಡಲು ಅರ್ಹವಾಗಿದೆ. ದ್ವೀತಿಯಾಕ್ಷರ ಪ್ರಾಸವೂ ಗಮನೀಯವಾಗಿದೆ’]

ವಿವಿಧ ವೇಷಗಳನು ಧರಿಸಿ
ಕವಿಯ ಬಳಿಗೆ ಬರುವೆ, ತಾಯೆ;
ಕವಿಯ ಮನದಿ ಕನಸುಗಳನು
ಕಡೆದು ಹೂಡುವೆ:
ವಿವಿಧ ಚಿಂತೆಗಳಲಿ ನೀನೆ
ಒಡೆದು ಮೂಡುವೆ!

ಕವಿಯು ಭಾವ ಭರಿತನಾಗಿ
ಬುವಿಯ ಸೊಬಗ ನೋಡಿ ನಿಲಲು
ಅವನ ನಡುಗುತಿರುವ ಕೈಗೆ
ವೀಣೆಯೀಯುವೆ;
ಕವಿಯ ಒಡಕು ದನಿಗೆ ನಿನ್ನ
ವಾಣಿಯೀಯುವೆ!

ಜನರು ಕವಿಯ ದನಿಯ ಕೇಳಿ
ಮನವ ಮರೆತು ಪೊಗಳಲವನು
ಜನನಿ ನುಡಿದಳೆಂದು ತಿಳಿದು
ದೀನನಾಪನು;
ಜನನಿ ಅಗಲಲಿನಿತೆ ಕವಿಯು
ಗಾನಹೀನನು.

ಕವಿಯ ಬೆಡಗು ಕಾಮಧೇನುವು!
ರವಿಯು ಮುಗಿಲು ಗಗನ ಎಲ್ಲ
ಅವನ ಪರಮಜನನಿ, ಅವಳೆ
ಕವಿಯ ಜೀವವು!
ಕವಿಯ ಕವಿತೆಗಳವಳೆ ಹೃದಯ
ಅವಳೆ ಭಾವವು!
೩-೭-೧೯೨೬

 


[1] ಮೇಲಿನ ದಿನಚರಿಯಲ್ಲಿ ‘ಪಾಳು ಮನೆ’ ಎಂಬ Pastroal ರಚನೆಯ ವಿಚಾರ ಬರುತ್ತದೆ.  ಇಂಗ್ಲೀಷ್ ಸಾಹಿತ್ಯದಲ್ಲಿ ಅಂತಹ ಗ್ರಾಮಕ- ಕವಿತೆಗಳನ್ನು ಪ್ರಕೃತಿ ಮತ್ತು ಹಳ್ಳಿಯ ಬಾಳನ್ನು ವಸ್ತುವಾಗಿ ತೆಗೆದುಕೊಂಡು ಬರೆಯುವುದು ಹಿಂದಿನ ಕವಿಗಳಲ್ಲಿ ಒಂದು ಹವ್ಯಾಸವೆ ಆಗಿತ್ತು, ಈ ‘ಪಾಳು ಮನೆ’ಯು ಅಂತಹ ಒಂದು ಪ್ರಯತ್ನ. ಅದು ಯಾವ ಹಸ್ತಪ್ರತಿಯಲ್ಲಿಯೂ ಇಲ್ಲ. ಅದನ್ನು ಗೀತೆ ಬರೆದಿದ್ದೆ ಒಂದು ಕಾಗದದ ಷೀಟು ನಾಲ್ಕು ಮಡಿಕೆಗೊಂಡು ಒಂದು ನೋಟುಬುಕ್ಕಿನಲ್ಲಿ ಬಿದ್ದಿತ್ತು. ಆ ಕವನ ಪೂರ್ತಿಯಾಗಿಲ್ಲ. ಅರ್ಧಕ್ಕೆ ನಿಂತಿದೆ.  ಸುಮಾರು ೨೫೦ ಪಂಕ್ತಿಗಳಲ್ಲಿ , ದ್ವೀತಿಯಾಕ್ಷರ ಪ್ರಾಸ ಒಮ್ಮೊಮ್ಮೆ ಎರಡು ಪಂಕ್ತಿಗಳಲ್ಲಿ. ಒಮ್ಮೊಮ್ಮೆ ಅನಿಯಮಿತವಾಗಿ ಅನುಕೂಲಕ್ಕೆ ಅನುಗುಣವಾಗಿ ಸ್ವಾತಂತ್ಯ್ರ ವಹಿಸಿ ಬರುತ್ತಿರುತ್ತದೆ