೧೯೨೬ನೆಯ ಜುಲೈ ೫ನೆಯ ಸೋಮವಾರದ ದಿನಚರಿ:         
“ಬೆಳಿಗ್ಗೆ ಭೂ.ಚಂ.ಬಂದರು. ನನ್ನ ಸಣ್ಣ ಕತೆ ‘ಕತೆಗಾರ ಮಂಜಣ್ಣ’ನ ಕೊನೆಯ ಭಾಗವನ್ನು ಬರೆದು ಪೂರೈಸಿದೆ. Matter is but a state of force(ಜಡ ಎಂಬುದು ಶಕ್ತಿಯ ಒಂದು ಸ್ಥಿತಿ ಮಾತ್ರ.) ಎಂಬುವುದನ್ನು ಕುರಿತು ಚರ್ಚಿಸಿದೆವು. ಸಂಜೆಯೂ ಅವರು ಬಂದರು. ನನ್ನ ಕವನಗಳನ್ನು ವೆಂಕಣ್ಣನವರಿಗೆ ಕಳಿಸುವುದಾಗಿ ಹೇಳಿದರು. ನಾನು ಮೈಸೂರಿಗೆ ಹೊರಟೆ, ಮಾನಪ್ಪ, ಭೂಪಾಳಂ, ಮತ್ತು ಇತರೆ ಮಿತ್ರರು ರೈಲುವೆ ಸ್ಟೇಷನ್ನಿಗೆ ಬಂದು ಬೀಳ್ಕೊಟ್ಟರು”

೧೯೨೬ನೆಯ ಜುಲೈ ೬ನೆಯ ಮಂಗಳವಾರದ ದಿನಚರಿ:        
“ಮಸೂರೀಗೆ ಬಂದೆ, ವಿ.ಎಸ್. ವಿ.ಕ. ಜೊತೆಗೆ. (ಬಹುಶಃ ಚಿಕ್ಕಮಗಳೂರಿನಿಂದ ಬರುವ ಕನಕಶೆಟ್ಟರು ಕಡೂರಿನಲ್ಲಿ ರೈಲು ಹತ್ತಿರಬೇಕು). ಅವರೇ ಹೇಳಿದ್ದು ನನಗೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದೇನೆ ಎಂದು. (ಪಾಪ, ಅವರದ್ದು ಇಂಗ್ಲಿಷಿನಲ್ಲಿ ಹೋಗಿತ್ತು!) ಕಾರಣ, ಅವರ ಬರವಣಿಗೆ ಓದಲು ಅಸಾಧ್ಯವಾಗುವಷ್ಟರ ಮಟ್ಟಿಗೆ ಮೋಡಿಯಾಗಿರುತ್ತಿತ್ತು!) ಆಶ್ರಮಕ್ಕೆ ಹೋದೆ, ಕಾಲೇಜಿಗೂ. ಅಬ್ದುಲ್ ಖುದ್ದೂಸ, ವಕುಳ್, ತಮ್ಮಯ್ಯ ಮತ್ತು ಇತರರನ್ನು ಸಂಧಿಸಿದೆ… ಗೀತಾ ಮತ್ತು ಟಾಲ್ ಸ್ಟಾಯ್ ಓದಿದೆ”.

೧೯೨೬ನೆಯ ಜುಲೈ ೭ನೆಯ ಬುಧವಾರದ ದಿನಚರಿ
“ಮೂರು ಕನ್ನಡ ಭಾವಗೀತೆಗಳನ್ನು ರಚಿಸಿದೆ* ಟಾಲ್ ಸ್ಟಾಯ್ ಓದಿದೆ.  ಎ.ಸಿ.ಶ್ರೀಕಂಠಯ್ಯ ಟಾಲ್ ಸ್ಟಾಯ್ ಪೋಟೋ ತಂದರು. ನಮ್ಮ ತಂದೆಯ ಭಾವಚಿತ್ರವನ್ನು ದೊಡ್ಡದು  ಮಾಡಿಸಲು ಅವರ ಕೈಗೆ ಕೊಟ್ಟೆ. ಎರಡು ರೂಪಾಯಿ ಮುಂಗಡ ಕೊಟ್ಟೆ”.

[*ಈ ದಿನಚರಿಯ ಮೂರು ವಾಕ್ಯಗಳಿಗೂ ಸ್ವಲ್ಪ ಟಿಪ್ಪಣಿ ಕೊಡಬೇಕಾಗುತ್ತದೆ, ಅರ್ಥವಾಗುವುದಕ್ಕಾಗಿ. ಮೊದಲನೆಯದು ಭಾವಗೀತೆಗಳದ್ದು. ಒಂದೇ ದಿನ ಮೂರು ಭಾವಗೀತೆಗಳನ್ನು ಬರೆದಿದ್ದೇನೆ. (೧) ‘ಎನ್ನನತಿ  ಕಿರಿದು ಮಾಡಲು ದೇವ ನೀನು’, (೨), ದಿನದಿನವೂ ನೀ ಬಂದಿರುವೆ’, (೩) ‘ಎನಗಾವ ಬಹುಮಾನವನು ಕೊಡುವೆ ನೀನು?’ ೧ ಮತ್ತು ೩ ‘ಕೊಳಲು’ ಮತ್ತು ‘ಷೋಡಶಿ’ ಕವನ ಸಂಗ್ರಹಗಳಲ್ಲಿ ಅಚ್ಚಾಗಿವೆ. ೨ನೆಯದು ಎಲ್ಲಿಯೂ ಅಚ್ಚಾಗಿಲ್ಲ. ಅದನ್ನಿಲ್ಲಿ ಕೊಡುತ್ತೇನೆ’.]

ದಿನದಿನವೂ ನೀ ಬಂದಿರುವೆ,
ಎನಗಾಗೊಲುಮೆಯ ತಂದಿರುವೆ,
ಮೋದದಿ ನಾನದ ಹೀರಿದೆನು,
ಆದರೂ ನಿನ್ನನ್ನು ದೂರಿದೆನು!
ದೂರನು ಸೈರಿಸಿ ಮೌನದಲಿ
ತೋರಿದ ಕೃಪೆಯನು ಕರುಣದಲಿ:

ದಿನ ದಿನ ಬರುವುದ
ಬಿಡಲಿಲ್ಲ ನೀನು;
ಅನುದಿನ ಬೈವುದ
ಬಿಡಲಿಲ್ಲ ನಾನು!

ಕಡೆಯೊಳು, ದೇವಾ,
ಜೀವರ ಜೀವಾ,

ನಾಚಿಕೆ  ಪೀಡಿಸಿತಡಗಿದೆನು;
ನೀಚನು ಎನ್ನುತ ನಡುಗಿದೆನು.

ನಿಂದೆಯ ಮರೆತು
ತಂದೆಯೆ, ಬಂದೆ!

ನಿಂದಿಸಿದವನನು ಚುಂಬಿಸಿದೆ!
ತಂದೆಯ ಒಲುಮೆಯ ನಂಬಿಸಿದೆ!
೭-೭-೧೯೨೬

ಇನ್ನು ಟಾಲ್ ಸ್ಟಾಯ್ ಪೋಟೋ ವಿಚಾರ: ಟಾಲ್ ಸ್ಟಾಯ್ ಪ್ರಸಿದ್ಧಿ ಈಗ ಹೆಚ್ಚಾಗಿ ನಿಂತಿರುವುದು ಆತನ ಕಾದಂಬರಿಗಳ ಮೇಲಾದರೂ ನನಗೆ ಆತನ ಪ್ರಥಮ ಪರಿಚಯವಾದದ್ದು ‘A Confession And what believe’ (ಒಂದು ತಪ್ಪೊಪ್ಪಿಗೆ ಮತ್ತು ನನ್ನ ಶ್ರದ್ದೆ) ಮತ್ತು ಸಂಪ್ರದಾಯ ಕ್ರೈಸ್ತ ಮತ ಮತ್ತು ಚರ್ಚುಗಳ ವಿಚಾರವಾಗಿ ಆತನು ಟೀಕಿಸಿ ಬರೆದಿರುವ ಆ ಲಘು ಪ್ರಬಂಧಗಳ ಮೂಲಕವಾಗಿಯೆ. ಕಾದಂಬರಿಗಳ ವಿಚಾರವಾಗಿ ಮೊದಲಿನಿಂದಲೂ ನಾನು ಅಶ್ರದ್ಧ. ಇಂಗ್ಲೀಷ್ ಸಾಹಿತ್ಯದಲ್ಲಿಯೂ ನಾನು ಕವಿತೆ ಮತ್ತು ನಾಟಕಗಳಿಂದ ಆಕರ್ಷಿತನಾದಂತೆ ಇತರ ಸಾಹಿತ್ಯ ಪ್ರಕಾರಗಳಿಂದ ಮೋಹಿತನಾಗಿರಲಿಲ್ಲ. ಕಾಂಬರಿ ಎಂದರಂತೂ ಒಂದು ವಿಧವಾದ ತಿರಸ್ಕಾರವಿತ್ತು. ಅವುಗಳಲ್ಲಿ ಏನು ಗಾಂಭೀರ್ಯ ಗುರುತ್ವಗಳೀಲ್ಲ ಎಂಬ ಭಾವನೆಯಿಂದಾಗಿ. ಆ ಭಾವನೆಯಿಂದ ನನ್ನನ್ನು ಪಾರುಮಾಡಿ ಕಾದಂಬರಿಗಳಲ್ಲಿಯೂ ಓದಲು ಅರ್ಹವಾದ ಗಂಭೀರ ಸತ್ವವು ಇವೆ ಎಂಬುವದನ್ನು ತೋರಿಸಿಕೊಟ್ಟವನು ಟಾಲ್ ಸ್ಟಾಯ್: ‘ರಿಸರಕ್ಷನ್’, ‘ಅನ್ನಾ ಕರಿನಿನಾ’ ಮತ್ತು ‘ವಾರ‍್ ಅಂಡ ಪೀಡ್’-ಇವುಗಳಲ್ಲಿ. ಆತನ ಇತರೆ ಗಂಭೀರ ಬರವಣಿಗೆಗಳನ್ನು ಓದಿ, ಆತನಲ್ಲಿ ಗುರುಗೌರವ ಉಂಟಾಗಿದ್ದ ನನಗೆ, ಆತ ಕಾದಂಬರಿಗಳನ್ನೂ ಬರೆದಿದ್ದಾನೆ ಎಂಬುವುದನ್ನು ಕೇಳಿದಾಗ ತುಂಬಾ ಆಸಮಾಧಾನ ಪಟ್ಟುಕೊಂಡೆ.  ಅಂಥಾ ಮಹದ್ ವ್ಯಕ್ತಿಯೂ ಕೂಡ ಕಾದಂಬರಿ ಬರೆಯುವಂಥಾ ಕೀಳೂಗೆಯ್ಮೆಗೆ ಕೈ ಹಾಕಿದನೆ ಎಂದು! ಆದರೂ ಆತನಲ್ಲಿಗೆ ಗೌರವ ಬೆಳೇದುಬಿಟ್ಟಿತ್ತಾದ್ದರಿಂದ ನೋಡೋಣ ಎಂದು ‘ರಿಸರಕ್ಷನ್’ (ಅದನ್ನು ಈಗ ಕನ್ನಡಕ್ಕೆ ‘ಪುನರುತ್ಥಾನ’ ಎಂಬ ಹೆಸರಿಟ್ಟು ಅನುವಾದ ಮಾಡಿದ್ದಾರೆ. ದೇ.ಜ.ಗೌ ಅವರು). ಎಂಬ ಶಿರ್ಷಿಕೆಯ ಆತನ ಕಾದಂಬರಿಗಳಲ್ಲಿಯೆ ಕಿರಿಯ ಗಾತ್ರದ್ದನ್ನು ಓದಲು ಆರಿಸಿಕೊಂಡೆ. ಓದಿದೊಡನೆಯೆ ಕಾದಂಬರಿಗಳ ಮೇಲಿದ್ದ ನನ್ನ ಪೂರ್ವಗ್ರಹ ಸ್ವರೂಪದ ಜುಗುಪ್ಸೆ ತಿರಸ್ಕಾರಗಳು ತಿರೋಹಿತವಾಗಿ, ಬರೆಯುವವನಲ್ಲಿ ಮಹತ್ತೂ ಮಹದ್ದರ್ಶನವೂ ಇರುವ ಪಕ್ಷದಲ್ಲಿ ಕಾದಂಬರಿಯೂ ಗುರು ಗಂಭೀರವಾದ ಪೂಜ್ಯ ಕೃತಿಯೆ ಆಗಿಬಿಡಬಹುದು ಎಂಬುವುದು ಮನವರಿಕೆಯಾಯಿತು. ಆ ಮೇಲೆ ಜಗತ್ತಿನ ಮಹಾಕಾದಂಬರಿಗಳೆಂದು ಸುಪ್ರಸಿದ್ಧವಾಗಿರುವ  ಫ್ರೆಂಚ್, ಇಂಗ್ಲೀಷ್, ರಷ್ಯನ್ ಭಾಷೆಯ ಹತ್ತಾರು ಬೃಹರ್ತ ಕೃತಿಗಳನ್ನು ಓದಿದೆ.  ಮಾತ್ರವಲ್ಲದೆ ಮುಂದೆ ಕನ್ನಡದಲ್ಲಿ ನಾನೇ ಮೊತ್ತ ಮೊದಲನೆಯ ಮಹಾ ಕಾದಂಬರಿ ‘ಕಾನೂರು ಹೆಗ್ಗಡಿತ್ತಿ’ಯನ್ನು ತರುವಾಯ ‘ಮಲೆಗಳಲ್ಲಿ ಮದುಮಗಳು’ ಎಂಬುವುದನ್ನೂ ಬರೆದೆ.  ಅವುಗಳಲ್ಲಿರುವ ಹರವು, ವವರ, ವೈವಿಧ್ಯ, ಕಲೆಗಾರಿಕೆ ಎಲ್ಲವೂ ಟಾಲ್ ಸ್ಟಾಯ್ ಜಟ್ಟಿಯ ಗರಡಿಯಲ್ಲಿ ತರಬಿಯತ್ತಾಗಿರುವುದನ್ನು ಕಾಣಬಹುದು. ಸುತೀಕ್ಷ್ಣಮತಿಯ ಓದುಗರು.

ಟಾಲ್ ಸ್ಟಾಯ್ ಕುರಿತು ಆಸಕ್ತಿ  ಮತ್ತು ಆತನಲ್ಲಿ ಗೌರವ ಆರಾಧನೆಯ ಮಟ್ಟಕ್ಕೇರಿದರೂ ಆತನು ಭೌತಿಕವಾಗಿ ಹೇಗಿದ್ದಿರಬಹುದು ಎಂಬ ಕುತೂಹಲಕ್ಕೆ ತೃಪ್ತಿಯೊದಗಿಸುವ ಯಾವ ಭಾವಚಿತ್ರವೂ ನನಗೆ ಸಿಕ್ಕಿರಲಿಲ್ಲ. ಆಗಿನ ತಾರುಣ್ಯಕ್ಕೆ ವಿಗ್ರಹರಾಧನೆ ಬಹು ಪ್ರೀಯವಾಗಿತ್ತು. ಅವಶ್ಯಕತೆವೂ ಆಗಿತ್ತು” ನಮ್ಮ ಮೆಚ್ಚುಗೆಯ ವ್ಯಕ್ತಿಯ ಪರವಾಗಿ ಹೃದಯದಲ್ಲಿ ಉಕ್ಕುವ ಭಾವಕ್ಕೆ ಒಂದು ಭಾವಚಿತ್ರಗಳು ಸಾಲು ಸಾಲಾಗಿ ನನ್ನ ಕೊಠಡಿಯನ್ನು ಅಲಂಕರಿಸಿದ್ದುವು. ಅವುಗಳ ಜೊತೆಗೆ ಟಾಲ್ ಸ್ಟಾಯ್ ಚಿತ್ರವೂ ಸೇರಬೇಕಾಗಿತ್ತು.

ಅದನ್ನರಿತ ಎ.ಸಿ.ಶ್ರೀಕಂಠಯ್ಯ ಎಲ್ಲಿಂದಲೋ ಒಂದು ಮಾಸಿದ ಹಳೆಯ ಒಂದಂಗುಲ ಅಗಲದ ಟಾಲ್ ಸ್ಟಾಯಿ ಚಿತ್ರವನ್ನು ಸಂಪಾದಿಸಿ ತಂದರು. ಯಾವುದೊ ಪತ್ರಿಕೆಯಲ್ಲಿಯೋ ಏನೂ ಇದ್ದಿರಬಹುದಾದ ಆ ಚಿತ್ರವನ್ನು ಕೆಲವು ವರ್ಷಗಳ ಮೇಲೆ ನಾನು ಆಶ್ರಮಕ್ಕೆ ಬರುತ್ತಿದ್ದ ರಾಜ ಐಯ್ಯಂಗಾರ‍್ ಎಂಬ ಹೆಸರಿನ ಚಿತ್ರಕಾರ ತರುಣನಿಂದ ದೊಡ್ಡದಾಗಿ ಬರೆಯಿಸಿದೆ. ಅದು ಈಗಲೂ ‘ಉದಯ ಸಿರಿ’ಯ ಕೊಠಡಿಯಲ್ಲಿ ಬೃಹದಾಕಾರವಾಗಿ ಮರೆಯುತ್ತಿದೆ.

ಇನ್ನು ನಮ್ಮ ತಂದೆಯ ಭಾವಚಿತ್ರದ ವಿಚಾರ: ಸುಮಾರು ೧೯೧೦ರಲ್ಲಿ ಎಂದು ಕಾಣುತ್ತದೆ, ನಾನು ಐದು ವರ್ಷದವನಾಗಿದ್ದಾಗ ಇರಬಹುದು, ಯಾರೊ ಒಬ್ಬ ಫೋಟೋಗ್ರಾಫರ‍್ ತೀರ್ಥಹಳ್ಳಿಯಿಂದಲೋ ಏನೋ ಪ್ರವಾಸಿಯಾಗಿ ಬಂದು ಕುಪ್ಪಳ್ಳಿ ಮನೆಯಲ್ಲಿ, ಮನೆಯ ಪಕ್ಕದ ಒಕ್ಕುವ ಕಣದಲ್ಲಿ ನಮ್ಮ ಪೋಟೋ ತೆಗೆದದ್ದು ನನಗೆ ಮುಗುಮುಸುಗಾಗಿ ನೆನಪಿದೆ. ಆಗಿನ ಕಾಲದಲ್ಲಿ ಪ್ರವೇಶಕ್ಕೆ ದುರ್ಗಮವಾಗಿದ್ದ ಆ ಕಾಡಿನ ಮನೆಗೆ ಹೇಗೆ ಬಂದನೋ ಆ ಪುಣ್ಯಾತ್ಮ ತಿಳಿಯದು.  ನಾನು, ಕೆ.ಬಿ.ಮಾನಪ್ಪ ಇಬ್ಬರೂ ಕಾಲಿಗೆ ನಾಯಿಗಳನ್ನು ಕಟ್ಟಿರುವ ಕುರ್ಚಿಯ ಮೇಲೆ ಕುಳಿತಿರುವ ನನ್ನ ತಂದೆಯ ಅಕ್ಕಪಕ್ಕದಲ್ಲಿ ನಿಂತಿದ್ದೇವೆ, ಕೈಕಾಲ್ಗಳೀಗ ಬೆಳ್ಳಿ ಬಳೆ ಹಾಕಿಕೊಂಡು,  ಅಡ್ಡಪಂಚೆ ಉಟ್ಟು, ಕೋಟು ಹಾಕಿ, ಥೇಟ್ ಹಳ್ಳಿಯ ಭೀತ ಕಾಡುಪಾಪಗಳಂತೆ! ನನ್ನ ತಂದೆ, ಕಚ್ಚೆ ಪಂಚೆ ಕೋಟು ಟೋಪಿ ಹಾಕಿದ್ದಾರೆ. ಗಡಿಯಾರದ ಜೇಬಿನಿಂದ ಒಂದು ಬೆಳ್ಳಿಯ ಸರಪಣಿ ಕೋಟಿನ ಗುಂಡಿಯ ಜೊತೆಗೆ ಕಾಚದಿಂದ ನೇತಾಡುತ್ತಿದೆ. ಆ ಫೋಟೋ ಒಂದು ಬಿರುವಿನಲ್ಲಿ ಹಳೆಯ ಕಾಗದ ಲೆಕ್ಕದ ಪುಸ್ತಕಗಳ ಜೊತೆಗೆ ಬಿದ್ದದ್ದನ್ನು ತಂದು ನಮ್ಮ ತಂದೆಯ ಅರ್ಧಾಕೃತಿಯನ್ನು ಮಾತ್ರ ಎನ್ ಲಾರ್ಜ (ದೊಡ್ಡದು) ಮಾಡಿಸಿ ಕೊಡುವಂತೆ ಎ.ಸಿ.ಶ್ರೀಯವರ ಕೈಲಿ  ಕೊಟ್ಟೆ.  ಅವರು ಎ.ವಿ.ವರದಾಚಾರ್ಯರ ಸ್ಟುಡಿಯೋದಲ್ಲಿ ಅದನ್ನು ಸುಮಾರು ಎರಡೂವರೆ ಮೂರು ಅಡಿಗಳ ಗಾತ್ರಕ್ಕೆ ಮಾಡಿಸಿ, ಗಾಜು ಚೌಕಟ್ಟು ಹಾಕಿಸಿ ತಂದುಕೊಟ್ಟರು.  ಅದನ್ನು ರಜಾಕ್ಕೆ ಹೋಗುವಾಗ ಕುಪ್ಪಳಿಗೆ ಒಯ್ದು ಜಗಲಿಯಲ್ಲಿ ತೂಗು ಹಾಕಿದ್ದೆ. ಕೆಲವು ವರ್ಷಗಳ ಮೇಲೆ, ಮನೆ ಮತ್ತೇ ಪಾಲಾದಾಗ, ಮತ್ತು ನಾನು ಮದುವೆಯಾಗಿ ಮೈಸೂರಿನಲ್ಲಿ ಸ್ವಂತ ಮನೆ ಕಟ್ಟಿಸಿದಾಗ ಅದನ್ನು ತಂದುಬಿಟ್ಟೆ. ಅದೀಗ ‘ ಉದಯ ರವಿ’ ಯಲ್ಲಿ ದೇವರ ಮನೆಯಲ್ಲಿದೆ.

೧೯೨೬ನೆಯ ಜುಲೈ ೮ನೆಯ ಗುರುವಾರದ ದಿನಚರಿ:
“ಬೆಳಿಗ್ಗೆ ಟಾಲ್ ಸ್ಟಾಯ್ ಓದಿದೆ. ನನ್ನ ಆತ್ಮಕಥೆಯನ್ನಿಷ್ಟು ಬರೆದೆ. (ಪ್ರೋ.ವಾಡಿಯಾ ತಮ್ಮ ಏಳೆಂಟು ಜನ ತತ್ವಶಾಸ್ತ್ರದ ವಿದ್ಯಾರ್ಥಿಗಳನ್ನು ಹಾಗೆ ಬರೆದು ಕೊಡಲು (ಕೇಳಿದ್ದರು) ಭೂಪಾಳಂ ಚಂದ್ರಶೇಖರಯ್ಯಗೆ ಒಂದು ಪತ್ರ ಬರೆದೆ…. ತೀರ್ಥಹಳ್ಳಿಯಲ್ಲಿ ನಮ್ಮ ಜೊತೆ ಓದುತ್ತಿದ್ದ ಬಿ.ದೊರೆಸ್ವಾಮಿ ಐಯಂಗಾರನ್ನು ಎಂಟು ವರ್ಷದ ತರುವಾಯ ಇವೊತ್ತು ಕಂಡೆ.  ನನ್ನನ್ನು ನೋಡಿ ಆತ ‘ತಾರಾನಾಥರನ್ನು ನೋಡಿದ ಹಾಗಾಗುತ್ತದೆ’ ಎಂದ”.

೧೯೨೬ನೆಯ ಜುಲೈ ೯ನೆಯ ಶುಕ್ರವಾರದ ದಿನಚರಿ
“ಬೆಳಿಗ್ಗೆ ಕ್ಲಾಸು…. ಭೂ.ಚಂ.,ಪಿ.ಗೋ.ಶೆ., ಎ.ಸಿ. ಮತ್ತು ಕೆ.ಮ.ಇವರಿಗೆ ಕಾಗದ ಬರೆದೆ. ಪ್ರೋ.ಎ.ಆರ‍್.ವಾಡಿಯಾ ಅವರನ್ನು ನೋಡಿದೆ. ಸಾಯಂಕಾಲ ಮನೆಯ ಹತ್ತಿರಕ್ಕೆ ಬರಲು ಹೇಳಿದರು”.

೧೯೨೬ನೆಯ ಜುಲೈ ೧೦,೧೧,೧೨ನೆಯ ದಿನಚರಿ ಖಾಲಿ.       
ದಿನಚರಿ ಖಾಲಿಯಾದರೆ ದಿನವೂ ಖಾಲಿ ಎಂದೇನೂ ಅರ್ಥವಲ್ಲ. ೧೦-೭-೨೬ರಲ್ಲಿ ಶಿರ್ಷಿಕೆಯಿಲ್ಲದ ಒಂದು ಕವನ ರಚಿತವಾಗಿದೆ; ‘ಕಾಣಿಸದೆ ಮೂಲೆಯೊಳು’ಬೆರಗಾಗಿ ನಿಂತೆ’ ಎಂದು ಪ್ರಾರಂಭವಾಗುತ್ತದೆ,  ದ್ವೀತಿಯಾಕ್ಷರ ಪ್ರಾಸಬದ್ಧವಾಗಿ. ಜೀವಕ್ಕೆ ಮುಕ್ತಿ ತನ್ನೊಬ್ಬನ ಮುಕ್ತಿಯಿಂದ ಸಾಧ್ಯವಿಲ್ಲ; ಸರ್ವರ ಮುಕ್ತಿಯನ್ನು ಸಾಧಿಸಿದ ಅನಂತರವೆ ಸಂಪೂರ್ಣ ಮುಕ್ತಿ ಸಾರ್ಧಯ ಎಂಬ ಭಾವನೆಯನ್ನು ಪ್ರತಿಮಿಸುತ್ತದೆ ಆ ಕವನ. ಬೇಕಾದರೆ ಆ ಕವನಕ್ಕೆ ‘ಸರ್ವಮುಕ್ತಿ’ ಎಂಬ ಶೀರ್ಷಿಕೆ ಕೊಡಬಹುದೆಂದು ತೋರುತ್ತದೆ. ಆ ಕವನ ಹಿಂದೆಲ್ಲಿಯೂ ಅಚ್ಚಾಗದೆ ಕೈ ಬಿಟ್ಟುಹೋಗಿದೆ;

ಸರ್ವ ಮುಕ್ತಿ                   

ಕಾಣಿಸದ ಮೂಲೆಯೊಳು ಬೆರಗಾಗಿ ನಿಂತೆ,
ಕಾಣಿತಿರೆ ನರರ ಮರುಳಾಟದಾ ಸಂತೆ:
ಗುರಿಯಿಲ್ಲ; ಬೇಕಾಗುವುದೆಂಬ ಅರಿವಿಲ್ಲ;
ಬರಿದೆ ಮೇಲಾಡಿದರು. ಯಾವುದಕೋ ಕಾಣೆ!
ನುಗ್ಗಿದರು ನಾ ಮೇಲೆ ತಾ ಮೇಲೆ ಎಂದು,
ಹಿಗ್ಗಿದರು ಹಂಗಿಸುತ ಕೆಲರೆನ್ನ ನೋಡಿ,
ಕೂಗಿದರು ಕೆಲರೆನಗೆ ಕೈಸನ್ನೆ ಮಾಡಿ;
ಕೆಲರೆನ್ನ ದೂರಿದರು ‘ಸೋಮಾರಿ’ ಎಂದು
ಕೆಲರೆನ್ನ ಬೈದರೆ ‘ಬಲು ಹೇಡಿ’ ಎಂದು
ಬೋಧಿಸಿದರಿತರರೆನಗವರ ಸೇರೆಂದು,
ಬೋಧಿಸಿದರಿನ್ನುಳಿದರಾಟಾವಾಡೆಂದು.
ನರರೂಪುವೆತ್ತಿಳೆಯ ಮರುಳಾಟದಂತೆ
ಸರಿದುದಾ ಗಲಿಬಿಲಿಯ ಸಂತೆ; ನಾ ನಿಂತೆ.
ಮಸುಗಾದ ದೂರದೊಳು ಮರೆಯಾದರೆಲ್ಲ,
ತುಸು ಹೊತ್ತಿನಾಮೇಲೆ ರವ ಕೇಳಲಿಲ್ಲ.

ಮನೆಗೆ ತೆರಳಿದರೆಂದು ಯೋಚಿಸುತ ನಾನು
ಮನೆಯೆಡೆಗೆ ಬರುತಿರಲು ಮುಳುಗಿದನು ಭಾನು.
ನಿನ್ನೆದುರು ನಿಲ್ಲಲಾಂ ಮನೆಯೊಳಗೆ ಬಂದು
ಕೇಳಿದೈ” ಇನ್ನುಳಿದ ಸುತರೆಲ್ಲಿ?” ಎಂದು.
ಮರಳಿ ನಾ ಬೆರಗಾಗಿ ನಿನ್ನೆದುರು ನಿಂತೆ,
ನೆರೆ ಬಾಧಿಸಿತು ಹೃದಯವನು ಮಹಾಚಿಂತೆ.
“ನಡೆ, ಹೋಗು, ನೀನವರನೇಕುಳಿದು ಬಂದೆ?
ನಿನ್ನ ಕಳುಹಿದುದವರ ಕರೆತರಲು ಎಂದೇ!”

ನಿನ್ನೊಲುಮೆ ಲಾಂದ್ರವನು ಕೈಯಲ್ಲಿ ಹಿಡಿದೆ;
ನಿನ್ನ ಶ್ರೀರಾಮವನು ಬಾಯಲ್ಲಿ ನುಡಿದೆ;
ನಿನ್ನನೇ ನಂಬಿ ನಾ ಹಿಂತಿರುಗಿ ನಡೆದೆ;
ನಿನ್ನವರನೆನ್ನವರನರಸಿದೆನು ಬಿಡದೆ:
ಕಡೆಗೆಲ್ಲರನು ನಿನ್ನ ಬಳಿಗೆ ಕರೆತಂದೆ !
ಕಡೆಗೆ ಧೈರ್ಯದಿ ನಿಂತೆ ನಾ ನಿನ್ನ ಮುಂದೆ!
ಅಗ ನೀನೆನ್ನನಾಲಿಂಗಿಸಿದೆ, ತಾಯೆ:
ಆಗ  ನಿನಗಾನಂದ! ಮೊದಲಲ್ಲಿ, ತಾಯೆ!
೧೦-೭-೧೯೨೬

೧೯೨೬ನೆಯ ಜುಲೈ ೧೩ನೆಯ ಮಂಗಳವಾರದ ದಿನಚರಿ:      
“ಠಾಕೂರರ ‘ಸಾಧನಾ’ ಓದಿದೆ. ನಾನು ಟಿ.ವಿ.ಎ. ತಿರುಗಾಟಕ್ಕೆ ಹೋದೆವು. ದ್ವಂದ್ವಗಳ ಸಾಮ್ರಾಜ್ಯ, ಮಾಯಾ ಮಗ್ತು ಮಾಯೆಯಿಂದ ಆಚೆಗಿರುವ ತತ್ ಇವುಗಳನ್ನು ಕುರಿತು ವಿವರಿಸಿದೆ… ಠಾಕೂರರ ‘ಗೀತಾಂಜಲಿ’ಯನ್ನೂ ಪರಿಚಯ ಮಾಡಿಸಿದೆ. ‘ಗೀತಾಂಜಲಿ’ಯನ್ನು ಓದಲು ಕೊಟ್ಟೆ.

೧೯೨೬ನೆಯ ಜುಲೈ ೧೪ನೆಯ ಬುಧವಾರದ ದಿನಚರಿ:                      
“ಬೆಳಿಗ್ಗೆ ಎಂ.ಕೆ. ಹಾಸ್ಟೇಲಿಗೆ ಹೋಗಿ, ನಮ್ಮ ಪದ್ಮಪತ್ರ ಸಂಘವು (Lotus Leaf Union) ಏರ್ಪಡಿಸಬೇಕೆಂದಿದ್ದ ಚರ್ಚೆಗೆ Patriotism has always hindered the progress of humanity’ (ಮಾನವ ಕುಲಕದ ಪ್ರಗತಿಗೆ ರಾಷ್ಟ್ರಪತಿ ಯಾವಾಗಲೂ ಅಡ್ಡಿ ತಂದೊಡ್ಡಿದೆ) ಎಂಬ ವಿಷಯ ಸೂಚಿಸಿದೆ.  ಕೆ.ಆರ‍್. ನಾ.ಅವರಿಂದ ಪ್ರೋ.ವಾಡಿಯಾ ಅವರ ಭಾಷಣ ಈಸಿಕೊಂಡು ಓದಿದೆ. ಎಸ್.ಆರ‍್.ಬಂದರು. ಅವರಿಗೆ ನನ್ನ ಇಂಗ್ಲೀಷ್ ಮತ್ತು ಕನ್ನಡ ಕವನಗಳನ್ನು ಓದಿದೆ… ಆಶ್ರಮದಲ್ಲಿ ಒಂದು ಸಂವಾದ ಚರ್ಚೆ ನಡೆಯಿತು. ಅಲ್ಲಿ ಹಳ್ಳಿಯ ಬಾಳಿನ ವಿಚಾರವಾಗಿ ನನ್ನ ಅಭಿಪ್ರಾಯ ಮಂಡಿಸಿದೆ.  ಎ.ಸಿ.ಶ್ಯಾಮರಾವ್ ಅವರಿಗೆ ನನ್ನ‘ಆತ್ಮಕಥೆ’ ವಿಚಾರವಾಗಿ ನನ್ನ ಅಭಿಪ್ರಾಯ ಮಂಡಿಸಿದೆ. ಎ.ಸಿ.ಶ್ಯಾಮರಾವ್ ಅವರಿಗೆ ನನ್ನ ‘ಆತ್ಮಕಥೆ’ ವಿಚಾರ ಹೇಳೀದೆ. ಟಿ.ವಿ. ಎ.ನಾನು ಸಂಚಾರ ಹೋದೆವು…. ಬೆಸೆಂಟ್ ಅವರ ಗೀತಾ ವ್ಯಾಖ್ಯಾನ ಓದಿದೆ.  ಸಿ.ಟಿ.ನರಸಿಂಹ ಶೆಟ್ಟಿ ಬಂದರು”.

೧೯೨೬ನೆಯ ಜುಲೈ ೧೫ನೆಯ ಗುರುವಾರದ ದಿನಚರಿ:          
“ನನ್ನ Philosophy of Silence (ಮೌನತಾ ದರ್ಶನ) ಪ್ರಬಂಧಕ್ಕೆ ಟಿಪ್ಪಣಿ ಹಾಕಿದೆ. ಜಿ.ಎಚ್.ಕಸಿನ್ಸ್ ಅವರ Base of Theosophy (ಥಿಯೊಸೂಫಿಯ ಆಧಾರಗಳು) ಓದಿದೆ. Gandhi, the Significance of the World ಓದಿದೆ. (ಗಾಂಧಿ-ಲೋಕವನ್ನು ಅರ್ಥವತ್ತಾಗಿ ಮಾಡುತ್ತದೆ ಅವರ ಜೀವನ.) ‘ನನ್ನ ಸೆರೆಮನೆ ದೇವರು’ ಎಂಬ ಸಣ್ಣ ಕತೆ ಬರೆಯಲು ಆಲೋಚಿಸಿದೆ”.

೧೯೨೬ನೆಯ ಜುಲೈ ೧೬ನೆಯ ಶುಕ್ರವಾರದ ದಿನಚರಿ:           
“ಆಶ್ರಮದ ಬೆಳಕು’ ಎಂಬ ಸಣ್ಣ ಕತೆ ಬರೆಯಲು ಆಲೋಚಿಸಿದೆ.  ಸ್ವಾಮಿ ವಿವೇಕಾನಂದರಿಗೂ ಕೆಲವು  ವಿದ್ಯಾರ್ಥಿಗಳಿಗೂ ನಡೆದ ಸಂವಾದವನ್ನು (ವೇದಾಂತ ಕೇಸರಿಯಲ್ಲಿಯೊ ಪ್ರಬುದ್ಧ ಭಾಋತದಲ್ಲಿಯೊ ಇದ್ದ) ಟಿ.ವಿ. ಅಭಿರಾಮನ್ ಗೆ ತೋರಿಸಲು ತಂದೆ… ಅಧ್ಯಕ್ಷತೆ ವಹಿಸುವಂತೆ ಕಸ್ತೂರಿಯವರನ್ನು ಕೇಳಿಕೊಂಡೆ (ಲೋ. ಲೀ.ಯೂನಿಯನ್ನಿನ ಚರ್ಚಾಸಭೆಗೆ)”.

೧೯೨೬ನೆಯ ಜುಲೈ ೧೭ನೆಯ ಶನಿವಾರ ದಿನಚರಿಯಲ್ಲಿ ಏನನ್ನೂ ಬರೆದಿಲ್ಲ. ಆದರೆ ಆ ದಿನ ಒಂದು ಸಣ್ಣ ಕವನ ಬರೆದದ್ದು ಹಸ್ತಪ್ರತಿಯಲ್ಲಿದೆ. ಅದು ಎಲ್ಲಿಯೂ ಅಚ್ಚಾಗದೆ ಕೈಬಿಟ್ಟು ಹೋಗಿದೆ. ಅದಕ್ಕೆ ಹೆಸರಿಟ್ಟಿಲ್ಲ. ‘ಎಂದಾದರೊಂದು ದಿನ’ ಎಂದು  ಮೊದಲಾಗುತ್ತದೆ.

ಎಂದಾದರೊಂದು ದಿನ!    

ಎಂದಾದರೊಂದು ದಿನ ನಿನ್ನೆದುರು ನಿಲ್ಲುವೆನು,
ಎಂದಾದರೊಂದು ದಿನವು!
ಹಿಂದಾದ ವೈರವನು ಮರೆತು ನೀನೈತರುವೆ,
ಎಂದಾದರೊಂದು ದಿನವು!

ನಿನ್ನ ನಾನರಿಯದೆ ನಿಂದಿಸಿದುದನು ಮರೆವೆ;
ನಿನ್ನ ನಾನರ್ತಿಗರ್ವದಿಂ ಮರೆತುದುನು ಮರೆವೆ;
ನಿನ್ನಿರವೆ ಸುಳ್ಳೆಂದುದನು ಮರೆವೆ, ಮರೆವೆ;
ಎಂದಾದರೊಂದು ದಿನವು!

ಬಲ್ಲೆ ನಾ ನೀನೆಲ್ಲ ಎನಗೆ ವಹಿಸುವೆ ಎಂದು;
ಬಲ್ಲೆ ನಾ ನೀನೆನ್ನ ದೊರೆಯ ಮಾಡುವೆ ಎಂದು;
ಬಲ್ಲೆ ನಾ ನಿನ್ನನೇ ಎನಗೀವೆ ಎಂದು;
ಎಂದಾದರೊಂದು ದಿನವು!
೧೮-೭-೧೯೨೬.

೧೯೨೬ನೆಯ ಜುಲೈ ೧೮ನೆ ಭಾನುವಾರದ ದಿನಚರಿ
“ನನ್ನ Philosophy of Silence ಸ್ವಲ್ಪ ಬರೆದೆ ನಮ್ಮ ಲೋಟಸ್ ಲೀಫ್ ಯೂನಿಯನ್ನಿನ ಮೀಟಿಂಗು ಮುಂದಕ್ಕೆ ಹಾಕಲ್ಪಟ್ಟಿತ್ತು. ಟಿ. ಅಬ್ದುಲ್ ಖುದ್ದೂಸ್ ಬಂದರು. ಇಸ್ಪೀಟು ಆಡಿದೆವು ಮತ್ತು ತರುವಾಯ ವಾಕಿಂಗ್ ಹೋದೆವು. ಮಳೆ ಬೀಳುತ್ತಿತ್ತು”

೧೯೨೬ನೆಯ ಜುಲೈ ೧೯ನೆಯ ಸೋಮವಾರದ ದಿನಚರಿ:      
“ಬೆಳಿಗ್ಗೆ ಕ್ಲಾಸು, ಪ್ರೋ.ಎ.ಆರ‍್.ವಾಡಿಯಾ ಉಪನ್ಯಾಸ ತೆಗೆದುಕೊಂಡೆ. ನನ್ನ Philosophy of Silence ಬರೆದೆ. ಒಂದು ಕನ್ನಡ ಭಾವಗೀತೆ ಬರೆದೆ. ನಾನೂ ಟಿ.ವಿ.ಎ.ವಾಕ್ ಹೋದೆವು. ಜನತೆಯನ್ನು ಮೇಲೆತ್ತುವ ವಿಚಾರವಾಗಿ ಮಾತಾಡಿದೆ, ನೀತಿ ಜೀವನದ ವಿಚಾರವಾಗಿಯೂ”.

ಮೇಲಿನ ದಿನಚರಿಯಲ್ಲಿ ಹೇಳೀರುವ ಭಾವಗೀತೆ ‘ಪಯಣ’ ಎಂದು ಹಸ್ತಪ್ರತಿಯಲ್ಲಿದೆ. ಅದು ಎಲ್ಲಿಯೂ ಅಚ್ಚಾಗಿಲ್ಲ. ಅದು ರೈಲು ಪ್ರಯಾಣವನ್ನು ಸಂಕೇತಿಸಿ ಬದುಕಿನ ಪಯಣವನ್ನು ಧ್ವನಿಸುತ್ತಿದೆ. ಕೆಲವೇ ದಿನಗಳ ಹಿಂದೆ ಮಾಡಿದ ರೈಲು ಪ್ರಯಾಣದ ಪ್ರಭಾವವೂ ಇರಬಹುದು. ಅದೇ ದಿನ ರಚಿತವಾದ ‘ಆತ್ಮ ಸ್ವಾತಂತ್ಯ್ರ’ ಎಂಬ ಕವನ ‘ಕೊಳಲು’ ಕವನ ಸಂಗ್ರಹದಲ್ಲಿ ಪ್ರಕಟವಾಗಿದೆ.

ಪಯಣ 

ತನ್ನ ಮಾರ್ಗ ನಿಶೆಯ ಭೇದಿಸಿ ಹೊಗೆಯ ಗಾಡಿಯು ಸಾಗಿತು;
ನಮ್ಮ ಕೊಠಡಿಯ ಮಸಗು ದೀಪವು ಬರಿದೆ ನಿಶೆಯನು ತಾಗಿತು.
ತೆರೆದ ಕಿಟಕಿಯ ಬಳೀಯೆ ಕುಳಿತೆನು ಕೆನ್ನೆಯಿರಿಸುತ ಹಸ್ತದಿ;
ನಯನ ನೋಡಿತು ತಿಮಿರ ಮುಸುಗಿದ ನಭವ ಹೃದಯವನಂತವ!
ಅದೆರೆನ್ನೆಡೆ ಕುಳಿತ ಕೆಲವರು ಹರಟೆ ಹೊಡೆದಾಕಳಿಸುತ
ತೂಕಡಿಸಿದರು, ಚಿಂತೆಯಿಲ್ಲದೆ, ಅಚಿರವೆಂಬುವದನರಿಯದೆ.
ಹಾಗೆ, ಹಾಗೆಯೇ ಜನ್ಮ ಪಯಣದಿ ಜೀವಕಿಟಕಿಯ ಬಳಿಯೊಳು
ಕೆಲರು ಕುಳಿತೀಕ್ಷಿಸುವರನುಪಮ ವಿಶ್ವರೂಪನ ಅಚಿಂತ್ಯನ!
ಹಾಗೆ, ಹಾಗೆಯೆ ಕಾಲ ಕಳೆವರು ಕೆಲರು ಹರಟುತ, ಕೆಲವರು
ಆಕಳಿಸುವರು: ತೂಕಡಿಸುವರು ಕಾಲನೈತರುವಲ್ಲಿಗಂ!
೧೮-೭-೧೯೨೬

೧೯೨೬ನೆಯ ಜುಲೈ ೨೦ನೆಯ ಮಂಗಳವಾರದ ದಿನಚರಿ:      
“ಬೆಳಿಗ್ಗೆ ಕ್ಲಾಸು….  ಆಶ್ರಮಕ್ಕೆ ಹೋದೆ…. Got Kamakya Nath Mitra’s pessimism and Life’s Ideal.* ಕಸ್ತೂರಿಯ ಭಾಷಣಗಳನ್ನು ತೆಗೆದುಕೊಂಡೆ. ಮಿತ್ರನ ಅಭಿಪ್ರಾಯಗಳೂ ಆದರ್ಶವೂ ನನಗೆ ಸ್ಪೂರ್ತಿದಾಯಕವಾಗಿದ್ದುವು. ಎ.ಸಿ.ಶ್ಯಾಮರಾವ್ ಬಂದಾಗ ಅವರ ಮುಂದೆಯೂ ಅದನ್ನು ಓದಿದೆ. ಕಾಯಿಲೆ ಬಿದ್ದೆ. ಒಂದು  ಕನ್ನಡ ಪ್ರಬಂಧ ಬರೆಯಲು ಪ್ರಾರಂಭಿಸಿದೆ.  ಒಂದು ಕನ್ನಡ ಭಾವಗೀತೆ ಬರೆದೆ. ರಾತ್ರಿ ಮತ್ತೊಂದು ಕನ್ನಡ ಭಾವಗೀತೆಯನ್ನು ರಚಿಸಿದೆ. ನನ್ನ ಫೋಟೋವನ್ನು‘…’ಗೆ ಕೊಟ್ಟೆ”.

[ಆಶ್ರಮಕ್ಕೆ ಹೋದಾಗಲೆಲ್ಲ ಸ್ವಾಮಿ ಸಿದ್ದೇಶ್ವರಾನಂದರೊಡನೆ ನಾನಾ ಧಾರ್ಮಿಕ ಅಧ್ಯಾತ್ಮಿಕ ವಿಚಾರಗಳನ್ನು  ಕುರಿತು ಮಾತಾಡುತ್ತಿದ್ದೆ. ಅವರೂ ತಾವು ಓದಿದ್ದ ಗ್ರಂಥಗಳತ್ತ ನನ್ನ ಗಮನ ಸೆಳೆದು ಅವುಗಳನ್ನು ಓದಲು ಹುರಿದುಂಬಿಸುತತಿದ್ದರು.  ಈ ಸಾರಿ ‘ವೇದಾಂತ ಕೇಸರಿ’ಯಲ್ಲಿ ಬಂದಿದ್ದ ಕಾಮಾಖ್ಯನಾಥ ಮಿತ್ರ ಎಂಬುವವರ ಲೇಖನದತ್ತ ನನ್ನ ಗಮನ ಸೆಳೆದು ಅದನ್ನು ಓದಲು ಕೊಟ್ಟರು. ಆ ಲೇಖನ ತುಂಬ ಶಕ್ತಿಯುತವಾಗಿತ್ತು.  ಭಾರತೀಯ ವೇದಾಂತ Pessimism…  ಎಂದರೆ ನಿರಾಶಾವಾದದಲ್ಲಿ ಪರ್ಯವಸಾನವಾಗುತ್ತದೆ ಎಂಬುವರ ವಾದವನ್ನು ನಿದರ್ಶನಪೂರ್ವಕವಾಗಿಯೂ ತರ್ಕಬದ್ಧವಾಗಿಯೂ ಸಮರ್ಥವಾದ ಇಂಗ್ಲೀಷಿನಲ್ಲಿ ಖಂಡತುಂಡವಾಗಿ ಖಂಡಿಸಿ  ಪ್ರತಿಪಾದಿಸಿದ್ದರು. … ಮೇಲಿನ ದಿನಚರಿಯಲ್ಲಿ ರಚಿತವಾಗಿವೆ ಎಂದು ಹೇಳಲಾದ ಎರಡು ಕವನಗಳೂ ಎಲ್ಲಿಯೂ ಪ್ರಕಟವಾಗಿಲ್ಲ. ಒಂದು ‘ಬಳಿಯೊಳಿರದಿರೆ ನೀನು’ ಎಂದೂ, ಎರಡನೆಯದು ‘ಎಂದಿಗೂ ಮುಗಿಯದ ಹಾಡನು ಹಾಡು’ ಎಂದು ಪ್ರಾರಂಭವಾಗುತ್ತವೆ:]

ಬಳಿಯೊಳಿರದಿರೆ ನೀನು    

ಬಳಿಯೊಳಿರದಿರೆ ನೀನು
ಬೇಸರವು ಎನಗೆ:
ಉಳಿದವರು ಬೇಡೆನಗೆ
ನೀನೇ ಬೇಕು!
ಬಡತನದ ಕೂಡಾಡುವುದನರಿಯದವರು;
ಎಡರನಾಲಿಂಗಿಪುದನರಿಯರವರು.
ಸಿರಿಯ ಕೂಡಾಡುವುದೆ ಬೇಕೆಂಬರವರು;
ಮರುಳಾಟವಾಡೆ ನಾ ಸಹಿಸರವರು.
ಎನ್ನೊಡನೆ ಕೂಡಿ ನೀ ದೂಳಾಡಬಲ್ಲೆ;
ಚೆನ್ನವಿಲ್ಲದ ಸಿರಿಯನೊಲಿಯ ಬಲ್ಲೆ!…

ಬಳಿಯೊಳಿರದಿರೆ ನೀನು
ಬೇಸರವು ಎನಗೆ;
ಉಳಿದವರು ಬೇಡೆನಗೆ
ನೀನೆ ಬೇಕು!
೧೯-೭-೧೯೨೬.

ಎಂದಿಗು ಮುಗಿಯದ ಹಾಡನು ಹಾಡು!        
ಎಂದಿಗು ಮುಗಿಯದ ಹಾಡನು ಹಾಡು,
ತುದಿ ಮೊದಲಿಲ್ಲದೆ ಹಾಡು!
ಎಂದಿಗು ನಿಲ್ಲದ ನೃತ್ಯವ ಮಾಡು,
ತುದಿ ಮೊದಲಿಲ್ಲದ ಆಡು!

ಒಂದು ಪಾದವಿಡಲು ಸೃಷ್ಟಿ!
ಮತ್ತೊಂದು ಪಾದವಿಡಲು ಲಯ!
ಒಂದು ರಾಗವೆಳೆಯೆ ದುಃಖ!
ಮತ್ತೊಂದು ರಾಗವೆಳೆಯೆ ಸುಖ!

ಒಂದು ಸಾರಿ ತಿರುಗೆ ನೀನು
ಕಲ್ಪವೊಂದು ಸಾಗುವುದು!
ಮತ್ತೊಂದು ಸಾರಿ ತಿರುಗೆ ನೀನು
ಬ್ರಹ್ಮರಾತ್ರಿಯಾಗುವುದು!…  ಎಂದಿಗೂ ಮುಗಿಯದ…..
೨೦-೭-೧೯೨೬

ಕಾಯಿಲೆ ಬಿದ್ದಿದ್ದರಿಂದ ೧೯೨೬ನೆಯ ಜುಲೈ ೨೧, ೨೨, ೨೩, ೨೪ನೆಯ ದಿನಚರಿಯ ಹಾಳೆಗಳು ಖಾಲಿಯಾಗಿವೆ. ಆದರೆ, ಕವನ ರಚನೆ, ಆಧ್ಯಾತ್ಮ ಚಿಂತನೆ, ಸಾಹಿತ್ಯಾವಲೋಚನೆ, ಮುಂತದುವು ನಿರಂತರವಾಗಿ ನಡೆಯುತ್ತಿದ್ದವು. ೨೧ನೆಯ ತಾರೀಖು ಬುಧವಾರ ರಾತ್ರಿ ‘ ಅಂದು ನೀ ವನಗಳಲ್ಲಿ ನುಡಿದ ಪಿಸುಮಾತು’ ಎಂಬ ಕವನ ರಚಿತವಾಗಿದೆ.  ಆ ಕವನ ‘ಕೊಳಲು’. ಕವನ ಸಂಗ್ರಹದಲ್ಲಿ ಅಚ್ಚಾಗಿದೆ. ೨೩ನೆಯ ತಾರಿಖು ಶುಕ್ರವಾರ ‘ಯುಗ ಯುಗಗಳನುಭವವು ಅಡಗಿಹುದು ನಿನ್ನ’ ಎಂದು ಮೊದಲಾಗುವ ಒಂದು ಗೀತೆ ರಚಿತವಾಗಿದೆ. ಅದು ಎಲ್ಲಿಯೂ ಅಚ್ಚಾಗಿಲ್ಲ. ಆ ಕವನ ಒಂದು ಶಿಶುವನ್ನು ಉದ್ದೇಶಿಸಿದಂತಿದೆ.  ಆಕಾರದಿಂದ ಮುದ್ದಾಗಿ ಮುಗ್ದವಾಗಿ ತೋರಿದರೂ ಜನ್ಮಾಂತರಗಳ ಸಂಸ್ಕಾರವನ್ನು ಹೊತ್ತು ಬಂದಿರುವ ಆ ಹಸುಳೆಯ ಸ್ವರೂಪ ಗಂಭೀರವೂ ಗಂಭೀರವೂ ಆದುದಾಗಿರುತ್ತದೆ: ‘ಹಸುಳೆ’ ಎಂಬ ಶಿರ್ಷಿಕೆ ಕೊಡಬಹುದು:

ಹಸುಳೆ
ಯುಗ ಯುಗಗಳನುಭವವು ಅಡಗಿಹುದು ನಿನ್ನ
ಸೊಗಸಿಡಿದ ಕಂಗಳಲಿ ಮುದ್ದಿನೆನ ಕಂದ.
ಕಾಂತಿಪೊರಮಡುತಿಹುದದನು ತಡೆಯಲಾರೆ:
ಶಾಂತಿ ರೌದ್ರವ ಕೂಡಿ ನಸುನಗುವುದಲ್ಲಿ!

ಮೋಹಿಸುವೆ ನೀನೆಲ್ಲರನು ಮಾಯೆಯಂತೆ
‘ಬಾ, ಹಸುಳೆ!’ ಎಂದೆಲ್ಲರಪ್ಪುವರು ನಿನ್ನ.
ತೋರಿಕೆಗೆ ನೀ ಶುದ್ಧವಾಗಿರುವೆ, ಮಗುವೆ:
ಯಾರು ಬಲ್ಲರು ನಿನ್ನ ಪೂರ್ವವನು ಹೇಳೂ?

ಋಷಿಯೋ ಯೋಗಿಯೊ ಕವಿಯೊ ಸಿದ್ಧನೋ ನೀನು?
ವಿಷಯ ಲಂಪಟನೋ ದುರಾಚಾರಿಯೋ ನೀನು?
ಕಳ್ಳನೋ ಸುಳ್ಳನೋ ಕಟುಕನೋ ನೀನು?
ಬಲ್ಲಿದನೋ? ಎಂಬುದನು ಬಲ್ಲವರದಾರು?

ಘೋರ ಸಂಸಾರವೆಂದರಿತರು ಎಲ್ಲ
ನೀರ ಮೇಲಿನ ಗುಳ್ಳೆಯೆಂದರೂ ಎಲ್ಲ
ಸಾರವಿಹುದೆಂದಿಳೆಯನಾಲಿಂಗಿಪಂತೆ
ದೂರದಿಂ ಬರಹ ನಿನ್ನ ಚುಂಬಿಪರು, ಕಂದಾ!
೨೩-೭-೧೯೨೬.