ಹೀಗೆ ಕ್ರಮೇಣ ಬರುಬರುತ್ತಾ ಶ್ರೀ ರಾಮಕೃಷ್ಣಾಶ್ರಮವು ನನ್ನ ಒಳಬಾಳಿನ ಕೇಂದ್ರವಾಗತೊಡಗಿತು. ಹೊರನೋಟಕ್ಕೆ ಅತ್ಯಂತ ಸಾಧಾರಣರೂ ಯಃಕಶ್ಚೀತರೂ ಆಗಿ ತೋರುತ್ತಿದ್ದ ಸ್ವಾಮಿ ಸಿದ್ದೇಶ್ವರಾನಂದರು ಆ ಕೇಂದ್ರದ ಅಧಿದೇವತಾ ಕಾಂತಶಕ್ತಿಯಾಗಿ ನನ್ನ ಅಹಂಕಾರ ಸ್ವಪ್ರತಿಷ್ಠೆಗಳನ್ನೆಲ್ಲ ತಮ್ಮ ಅಹಂಕಾರಶೂನ್ಯತೆಗೆ, ನನ್ನ ಆತ್ಮಗೌರವಕ್ಕೆ ಅಪಚಾರವಾಗದಂತೆ, ಸೇದಿಕೊಳ್ಳತೊಡಗಿದರು.  ಸಂತೇಪೇಟೆಯ ಆನಂದಮಂದಿರದ ನನ್ನ ರೂಮಿನಿಂದ ದಿನವೂ ಕಾಲೇಜಿಗೆ ಹೋಗುವಾಗಲೂ ಮತ್ತೇ ಕಾಲೇಜಿನಿಂದ ಬರುವಾಗಲೂ ನಡುವೆ ದಾರಿಯಲ್ಲಿದ್ದ ಆಶ್ರಮಕ್ಕೆ ಹೋಗಿ ಸ್ವಾಮೀಜಿ ಅವರೊಡನೆ ಮಾತುಕತೆಯಾಡಿ, ನಡುಮನೆಯಲ್ಲಿ ಪೂಜಾಪೀಠಸ್ಥರಾಗಿದ್ದ ಶ್ರೀ ಗುರುಮಹಾರಾಜರು, ಒಮ್ಮೊಮ್ಮೆ ಸಂಜೆಯ ಮಂಗಳಾರತಿಯಲ್ಲಿ ಭಾಗಿಯಾಗಿ ಪ್ರಾರ್ಥನೆಯಲ್ಲಿ ಪಾಲುಗೊಂಡ, ಧನ್ಯನಾಗುವುದುಒಂದು ಅವಶ್ಯ ರೂಢಿಯಾಗಿಬಿಟ್ಟಿತ್ತು. ಕಸ್ತೂರಿ, ತಾತಾಗಾರು ಮೊದಲಾದ ನನಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದವರೊಂದಿಗೆ ಸಸ್ನೇಹ ವಾದ ವಿವಾದ ಜಿಜ್ಞಾಸೆಗಳೂ ನನ್ನ ವಿದ್ಯಾಜೀವನದ ಸ್ವಾರಸ್ಯ ಸಂಗತಿಗಳಗಿದ್ದುವು. ಜೊತೆಗೆ ಎಲ್ಲಕ್ಕಿಂತಲೂ ಹೆಚ್ಚು ಆಕರ್ಷಣೀಯ ವಾಗಿದ್ದುದೆಂದರೆ, ಆ ಕನ್ನಡಿಗರಲ್ಲದ ಮತ್ತು ಕನ್ನಡ ಆಗತಾನೆ ಅಲ್ಪಸ್ವಲ್ಪ ಅರ್ಥವಾಗುತ್ತಿದ್ದ ಇಬ್ಬರು ಮಲೆಯಾಳಿಗಳೂ ನನ್ನ ಕವನಗಳನ್ನು ಓದಿಸಿ ಹಾಡಿಸಿ ಕೇಳಿ ಮೆಚ್ಚಿ ತಲೆದೂಗಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದುದು ಆಗಿನ ಕಾಲದ ಯಾವ ಹಿರಿಯ ಕನ್ನಡಿಗ ಸಾಹಿತಿಯ ಪರಿಚಯವೇನೂ ಇಲ್ಲದ ನನಗೆ- ದೂರದ ಕಾಡುಹಳ್ಳಿಯಿಂದ ಬಂದಿದ್ದ ನನಗೆ ಒಂದು ದೈವಿ ಕಾವ್ಯೋತ್ಸಾಹವಾಗಿ, ಸಧ್ಯಃ ಪ್ರಪುಲ್ಲವಾಗಿ ವಿಕಾಸೋನ್ಮುಖವಾಗುತ್ತಿದ್ದ ನನ್ನ ಪ್ರತಿಭೆ ಸ್ಪೂರ್ತಿದಾಯಕ ಅಮೃತವಾರಿಯಾಗಿತ್ತು.

ನಾನು ಸ್ವಾಮಿವಿವೇಕಾನಂದರ ಭಾಷಣಗಳನ್ನು ತಕ್ಕ ಮಟ್ಟಿಗೆ ಓದಿದ್ದರೂ ಶ್ರೀರಾಮಕೃಷ್ಣರ ಜೀವನಚರಿತ್ರೆಯನ್ನು ಅವರ ದೊಡ್ಡ ಜೀವನ ಚರಿತ್ರೆಯಿಂದ ತಿಳಿದಿದ್ದರೂ (ಭೂಪಾಳಂ ಚಂದ್ರಶೇಖರಯ್ಯ ಬೆಂಗಳೂರಿನ ಆರ್ಯ ವೈಶ್ಯ ವಿದ್ಯಾರ್ಥಿನಿಲಯದಲ್ಲಿ ನನಗೆ ಉಡುಗೊರೆಯಾಗಿ ಕೊಟ್ಟ ಹೊತ್ತಗೆ(, ಶ್ರೀ ರಾಮಕೃಷ್ಣ ಮಿಷನ್ನಿನ ಮತ್ತು ಶ್ರೀ ರಾಮಕೃಷ್ಣ ಆಶ್ರಮಗಳ ವಿಚಾರವಾಗಿಏನನ್ನು ತಿಳೀಯುವ ಗೋಜಿಗೆ ಹೋಗಿರಲಿಲ್ಲ. ಇನ್ನೂ ಶ್ರೀ ರಾಮಕೃಷ್ಣರ ಅಂತರಂಗ ಶಿಷ್ಯರ ವಿಚಾರವಾಗಿಯಾಗಲಿ ಅಥವಾ ಪ್ರಪಂಚದ ಬೇರೆ ಬೇರೆ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಇತರೆ ಸಾಧು ಸಂನ್ಯಾಸಿಗಳ ವಿಷಯವಾಗಿಯಾಗಲಿ ನನಗೆ ಏನೇನೂ ಗೊತ್ತಿರಲಿಲ್ಲ; ಮಾತ್ರವಲ್ಲ, ಗೊತ್ತು ಮಾಡಿ ಕೊಳ್ಳಬೇಕೆಂಬ ಆಸಕ್ತಿಯೂ ಇರಲಿಲ್ಲ; ಅಷ್ಟೇ ಅಲ್ಲ, ಪಾಶ್ಚಾತ್ಯ ತತ್ವಶಾಸ್ತ್ರಜ್ಞರನ್ನೂ ಮಹಾಮಹಾ ಸಾಹಿತಿ ಲೇಖಕ ಕವಿಗಳನ್ನೂ ಓದುತ್ತಿರುವ ಮತ್ತೂ ದೊಡ್ಡ ದೊಡ್ಡ ಪ್ರೋಫೆಸರುಗಳ ಮುಖಾಂತರ ಆ ವಿದ್ವತ್ ಪ್ರಪಂಚವನ್ನು ಪ್ರವೇಶಿಸಿ, ಅಲ್ಲಿಯ ವಿದ್ಯಾಶ್ರೀಯನ್ನು ಸೂರೆಗೊಳ್ಳುತ್ತಿರುವ ನನ್ನಂತಹ ಪ್ರೌಢ ವಿದ್ಯಾರ್ಥಿಗೆ ಅಲ್ಲಿ ಗೊತ್ತು ಮಾಡಿಕೊಳ್ಳಬೇಕಾದುದು ತಾನೇ ಏನಿದೆ? ಎಂಬ ತಾತ್ಸಾರಭಾವವೂ ಇತ್ತು!

ಆ ಹಿಮಬಂಡೆಯನ್ನು ಸ್ವಾಮಿ ಸಿದ್ದೇಶ್ರಾನಂದರ ಸೌಜನ್ಯಶೀಲ ವಿನಿಯ ಸೂರ್ಯನ ದೀಪ್ತಿ ಒಯ್ಯೊಯ್ಯನೆ ಕರಗಿಸಿತು. ದಿನದಿನದ ಮಾತುಗಳಲ್ಲಿ ಅವರು ಮಿಶನ್ನಿನ ಮತ್ತು ಮಠ ಸಂಸ್ಥೆಗಳ ಮತ್ತು ಅಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಸಾಧುಗಳ ವಿಷಯವಾಗಿ ತಿಳಿಸುತ್ತಿದ್ದು, ಅವರಲ್ಲಿ ನನಗೆ ಪೂಜ್ಯಭಾವನೆಯಲ್ಲದಿದ್ದರೂ ಗೌರವ ಮೂಡುವಂತೆ ಮಾಡಿದ್ದರು.  ಪ್ರಬುದ್ಧ ಭಾರತ ವೇದಾಂತ ಕೇಸರಿ ಮೊದಲಾದ ಮಾಸಪತ್ರಿಕೆಗಳನ್ನು ಕೊಟ್ಟು, ಲೇಖನಗಳನ್ನು ಓದುವಂತೆ ಮಾಡಿ, ಶ್ರೀರಾಮಕೃಷ್ಣರ ಮಹಾಸಂಘದ ಕೇಂದ್ರಗಳಲ್ಲಿ ನಡೆಯುತ್ತಿದ್ದ ಕಾರ್ಯ ಕಲಾಪಗಳ ಪರಿಚಯವಿತ್ತರು. ತಾವು ಬ್ರಹ್ಮಚಾರಿಯಾಗಿ, ತರುವಾಯ ಸಂನ್ಯಾಸಿಯಾಗಿ, ಮೊತ್ತ ಮೊದಲು ಸೇರಿದ ಮದರಾಸಿ ಶ್ರೀ ರಾಮಕೃಷ್ಣಾಶ್ರಮದ ವಿಚಾರವಾಗಿ ಮತ್ತು ಅದರ ಅಧ್ಯಕ್ಷರಾಗಿ ಕೆಲಸ ಮಾಡಿ ಶ್ರೀ ಗುರು ಮಾಹಾರಾಜರ ಮತ್ತು ಸ್ವಾಮಿ ವಿವೇಕಾನಂದರ ಸಂದೇಶವನ್ನು ಪ್ರಸಾರ ಮಾಡಿ ಶ್ರೀ ಗುರು ಮಹಾರಾಜರ ಮತ್ತು ಸ್ವಾಮಿ ವಿವೇಕಾನಂದರ ಸಂದೇಶವನ್ನು ಪ್ರಸಾರಮಾಡಿದ ಸಾಧುವೇರಣ್ಯರನ್ನು ಕುರಿತು ಅವರಲ್ಲಿ ತಮಗಿದ್ದ ಪೂಜ್ಯತೆ ನನ್ನಲ್ಲಿಯೂ ಪ್ರಸರಿಸುವಂತೆ ಬಿತ್ತರಿಸುತ್ತಿದ್ದರು.  ಹಾಗೆ ಪ್ರಶಂಶಿಸುವಾಗ ಒಮ್ಮೆ ಮದರಾಸು ಆಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ಶರ್ವಾನಂದರ ವಿಷಯವಾಗಿ ವಿಶೇಷ ಸ್ಪೂರ್ತಿಯಿಂದ ಮಾತಾಡಿದರು.  ಮತ್ತು ಅವರು ಮೈಸೂರು ಆಶ್ರಮಕ್ಕೆ ಸಂದರ್ಶನ ದಯಪಾಲಿಸುವಂತೆ ಕೇಳೀಕೊಂಡಿರುವುದಾಗಿಯೂ ತಿಳಿಸಿದರು.  ನಾನು ತುಂಬು ಕುತೂಃಲದಿಂದ ಆ ದಿನದ ಆಗಮನಕ್ಕಾಗಿ ಕಾಯುತ್ತಿದ್ದೆ.  ಕಡೆಗೂ ಅ ದಿನ ಬಂದಿತು. ಸ್ವಾಮಿ ಶರ್ವಾನಂದರು ಆಗಮಿಸಿದರು. ಮೈಸೂರಿನಲ್ಲಿ ಹತ್ತು ಹದಿನೈದು ದಿನಗಳಿಗಿಂತಲೂ ಹೆಚ್ಚಾಗಿ ತಂಗಿದ್ದರು. ಅವರ ಮಾತುಕತೆ, ಅವರೊಡನೆ ಜಿಜ್ಞಾಸೆ, ಅವರೊಡನೆ ಕುಕ್ಕನಹಳ್ಳಿಯ ಕೆರೆಯ ಏರಿಯ ಮೇಲೆ ಸಂಝೆಯ ವಾಯು ಸಂಚರ, ಅವರ ಪ್ರವಚನ, ಅವರ ಉಪವಾಸ, ಅವರ ಉಪನಿಷತ್ತು ಗೀತಾದಿ ಗ್ರಂಥಾವ್ಯಾಖ್ಯಾನ,  ಇವುಗಳಿಂದ ನನ್ನ ಚಿತ್ಕೋಶ ಪವಿತ್ರವೂ ಶ್ರೀಮಂತವೂ ಆಗಿ, ಅವರ ಪೂಜ್ಯ ವ್ಯಕ್ತಿತ್ವಕ್ಕೆ ನಾನು ಮಾರು ಹೋದೆ.  ಅವರ ಆಗಮನದ ದಿನದಂದು ನಾನು ಅದೃಷ್ಠವಶಾತ್ ಒಂದು ನೋಟಪುಸ್ತಕದ ಹಾಳೆಯಲ್ಲಿ ಗೀಚಿ ಬರೆದಿದ್ದ ವರದಿ ಸಿಕ್ಕಿದೆ;  ಅದನ್ನು ಉಲ್ಲೇಖಿಸಿದರೆ ಸಾಕು, ಸ್ವಾಮಿ ಶರ್ವಾನಂದರ ತೇಜಃಪೂರ್ಣವಾದ ವ್ಯಕ್ತಿತ್ವವನ್ನು, ನನ್ನ ಮೇಲೆ ಉಂಟು ಮಾಡಿದ ಪ್ರಭಾವವನ್ನು ತುಸು ಮಟ್ಟಿಗಾದರೂ ಪ್ರದರ್ಶಿಸುತ್ತದೆ.  ಆ ದಿನಚರಿ ಅಂದಿನ ರೂಢಿಯಂತೆ ಇಂಗ್ಲೀಷಿನಲ್ಲಿಯೆ ಬರೆಯಲ್ಪಟ್ಟಿದೆ.  ಅದರ ಕನ್ನಡ ಅನುವಾದವನ್ನು ಕೊಡುತ್ತೇನೆ. ಅದೃಷ್ಟವಾದೆಡೆ ಬ್ರಾಕೆಟ್ಟಿನಲ್ಲಿ ಮೂಲವನ್ನೂ ಬರೆಯುತ್ತೇನೆ.

೧೯೨೬ನೆಯ ಆಗಸ್ಟ್ ೮ನೆಯ ಬಾನುವಾರ :
“ಇವೊತ್ತು ನನ್ನ ಕನಸುಗಳಲ್ಲಿ ಒಂದು ನನಸಾಗಿದೆ. ಸ್ವಾಮಿ ಶರ್ವಾನಂದರ ದರ್ಶನಕ್ಕಾಗಿ ನಾನು ಕಾತುರನಾಗಿದ್ದೆ. ಇವೊತ್ತು ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಅವರು ಬರುತ್ತಾರೆ ಎಂದು ಸ್ವಾಮಿ ಸಿದ್ದೇಶ್ವರಾನಂದರು ನನಗೆ ತಿಳಿಸಿರು.  ನಾನು ನನ್ನ ಮಿತ್ರ ಎಚ್.ಕೆ. ವೀ.ಅವರೊಡನೆ ಆಶ್ರಮಕ್ಕೆ ಹೋಗಿ,. ಅಲ್ಲಿಂದ ಸ್ವಾಮಿಜಿ, ಕಸ್ತೂರಿ ಮತ್ತು ವೆಂಕಟಸುಬ್ಬಯ್ಯ (ತಾತಾಗಾರು) ಅವರನ್ನು ಕೂಡಿಕೊಂಡು ರೇಲ್ವೆ ಸ್ಟೇಷನ್ನಿಗೆ ಹೋದೆವು.  ಸುಮಾರು ಅರ್ಧ ಗಂಟೆಗಿಂತಲೂ ಹೆಚ್ಚಾಗಿ ಕಾದೇವು,. ಆಮೇಲೆ ಸ್ವಾಮಿ ಶರ್ವಾನಂದರನ್ನು ಹೊತ್ತು  ತರುತ್ತಿದ್ದ ರೈಲು ಪ್ಲಾಟ್ ಫಾರಂ ಪ್ರವೇಶಿಸಿತು.   ಗಾಡಿಗಳು ಒಂದೊಂದೆ ಚಲಿಸಿ ಮುಂಬರಿದಂತೆಲ್ಲಾ ನಾನು ಸ್ವಾಮಿಜಿಯ ದರ್ಶನಕ್ಕಾಗಿ ಪ್ರತಿಯೊಂದು ಕಂಪಾರ್ಟಮೆಂಟ್ ನ್ನು ಎವೆಯಿಕ್ಕದೆ ಈಕ್ಷಿಸುತ್ತಿದ್ದೆ; ಆಗ ನನ್ನಲ್ಲಿ ಒಂದು ಆನಂದ ವಿದ್ಯುತ್ ಸಂಚಾರ ವಾಯಿತೆಂಬಂತಾಗಿ ಕಂಡೆ, ಜ್ಯೋತಿರಮ್ಮಯವಾಗಿ ಮತ್ತು ಶಾಂತಿಮಯವಾಗಿ ದಿವ್ಯ ನಿರ್ಜ ದೇವತಾ ಸದೃಶವಾಗಿ ಕುಳಿತ್ತಿದ್ದ ಆ ಮಹಾ ಸಾಧುಮೂರ್ತಿಯನ್ನು !  (As the carriages moved I gazed at every compartment to see the Swami When to my ectasy  I beheld him sitting like a God, radiant and peacefu)/

“ರೈಲು ನಿಂತಿತು.  ಸ್ವಾಮಿ ಸಿದ್ದೇಶ್ವರಾನಂದಜಿಯವರೊಡನೆ ನಾನೂ ಪ್ರವೇಶಿಸಿದೆ. ಸ್ವಾಮಿ ಶವಾನಂದಜೀಯವರಿಂದ ಪವಿತ್ರೀಕೃತವಾದ ಆ ರೈಲುಗಾಡಿಗೆ. ಅವರನ್ನು ದಿಟ್ಟಿಸಿ ನೋಡಿದೆ. ನನ್ನ ಕಲ್ಪನೆ ಕಟ್ಟಿದ್ದು ಕಡುಬಡವಾಗಿತ್ತು.  ನನ್ನ ಕಣ್ಣೀಗೆ ಬಿದ್ದಿದ್ದರ ಮುಂದೆ ! (When I beheld him what I had imagined about him fell too short of reality). ಅವರು ಭೀಮ ಮೂರ್ತಿಯಾಗಿದ್ದರು.! (He was Bhima!) ಎಂತಹ ಮಹಿಮಾಮಯ ದೃಶ್ಯವಾಗಿತ್ತು ಅದು? (What glorious sight it was?) ಅವರೆದುರು ನಾನೊಂದು ಆಲ್ಪಾಣು ಎಂಬ ಭಾವನೆಯುಂಟಾಯ್ತು. ( I felt myself too puny before  him).

“ತರುವಾಯ ಸ್ವಾಮಿ  ಸಿದ್ದೇಶ್ವರಾನಂದರು ಅವರ ಒಂದೊಂದೆ ಗಂಟು ಮೂಟೆ ಸಾಮಾನುಗಳನ್ನು ಇಳಿಸಲು ನನ್ನ ಕೈಗೆ ತೆಗೆದುಕೊಟ್ಟರು: ಒಂದು ಬೆತ್ತದ ಹೆಣಿಗೆಯ ಪೆಟ್ಟಿಗೆ, ಒಂದು ಚರ್ಮದ ಪಾಕೆಟ್ಟಡು, ಒಂದು ಹಾಸಗೆ ಗಂಟು ಮತ್ತು ಒಂದು ತಲೆದಿಂಬು. ಧನ್ಯನಾದೆ ಎಂದೆನಿಸಿತು ನನಗೆ. ಆಲೋಚಿಸಿದೆ ಸ್ವಾಮಿ ಶರ್ವಾನಂದರೆ ಹೀಗಿರಬೇಕಾದರೆ ಸ್ವಾಮಿ ವಿವೇಕಾನಂದರು ಹೇಗಿದ್ದಿರಬೇಕು? I Felt myself blest, and thought that if Swamy Sharvananda is such what must have been Swamy Vivekananda!) ಅವರ ಸಾಮಾನನ್ನು ಟಾಂಗಾಕ್ಕೆ ಒಯ್ಯುವ ಸುಕೃತ ನನ್ನದಾಗಿತ್ತು.  ಅವರು  ಎಷ್ಟು ಮಹತ್ತಾಗಿ ತೋರಿದರೆಂದರೆ ಅವರ ಮುಂದೆ ನಾನು ಮೂಕವಾಗಿ ನಿಂತುಬಿಟ್ಟೆ.  (He seemed to me so great the I simply stood dumb!) ಸ್ವಾಮಿ ಸಿದ್ದೇಶ್ವರಾನಂದರು ‘ಇವರೆಲ್ಲ ವಿದ್ಯಾರ್ಥಿಗಳು’ ಎಂದು ನಮ್ಮನ್ನೆಲ್ಲ ಪರಿಚಯಿಸಿದರು.  ಅವರು ನನತ್ತ ತಿರುಗಿ ಮುಗುಳು ನಗುತ್ತಾ ಓಹೋ ಎಂದರಷ್ಟೆ. ಬಹುಶಃ ನಮ್ಮ ಅಲ್ಪಗ್ರಾತ್ರತ್ವಕ್ಕೆ ಅವರ ಕನಿಕರಗೊಂಡಿರಬೇಕು!  ಆಮೇಲೆ ಒಂದು ಟಾಂಗಾ ಬಾಡಿಗೆ ಮಾಡಿದರು. ಶರ್ವಾನಂದರು ಹತ್ತಿ ಕುಳಿತರು: ಅವರು ಎಷ್ಟೂ ತೂಕದವರಾಗಿದ್ದರೆಂದರೆ, ನನಗೆ ಹೆದರಿಕೆಯಾಯ್ತು! ಕುದುರೆ ಟಾಂಗಾ ಎರಡೂ ಮೇಲಕ್ಕೆ ನೆಗೆದು ಎಲ್ಲ ತಲೆಕೆಳಗಾಗು ಮುಗುಚಿಕೊಳ್ಳುತ್ತವೆಯೋ ಎಂದು! ಅವರು ಸಾಮಾನು ಹೊತ್ತಿದ್ದ ಕೂಲಿಗೆ ನಾಲ್ಕಾಣೆ ಕೊಟ್ಟರು: ಸಿದ್ದೇಶ್ವರಾನಂದರು ‘ಏನು ? ಅವನಿಗೆ ನಾಲ್ಕಾಣೆ ಕೊಟ್ಟಿರಾ?’ ಎಂದು ಕೇಳಿದರು. ‘ಏನು ಮಾಡಲಿ, ಚಿಲ್ಲರೆ ಇರಲಿಲ್ಲ’ ಎಂದರವರು.  (ಆಗಿನ ಕಾಲದಲ್ಲಿ ಪ್ಲಾಟ್ ಫಾರಂನಿಂದ ಸಾಮಾನು ಹೊತ್ತು ಟಾಂಗಾಕ್ಕೆ ಸಾಗಿಸಿದವರಿಗೆ ಹೆಚ್ಚು ಎಂದರೆ ಒಂದಾಣೆ ಕೊಡುತ್ತಿದ್ದರು. ಚೌಕಾಸಿ ಮಾಡಿ ಮೂರು ಕಾಸು ಆರು ಕಾಸು ಕೊಡುತ್ತಿದ್ದುದೇ ರೂಢಿ.  ಹೀಗಿರುವಾಗ ಸಂನ್ಯಾಸಿಯೊಬ್ಬರು ನಾಲ್ಕು ಆಣೆ ಕೊಡುವುದು ದುಂದು ವೆಚ್ಚವೆಂದು ಭಾವಿಸಲಾಗುತ್ತಿತ್ತು. ಅದೇ ಸ್ವಾಮಿ ಸಿದ್ದೇಶ್ವರಾನಂದರ ಪ್ರಶ್ನೆಯ ಇಂಗಿತವಾಗಿತ್ತು) ತರುವಾಯ ಟಾಂಗಾ ಆಶ್ರಯದತ್ತ ಚಲಿಸಿತು.

“ಆಮೇಲೆ ನಾನು ವೆಂಕಟಸುಬ್ಬಯ್ಯ (ತಾತಾಗಾರು) ಮತ್ತು ವೀರಪ್ಪ ಅವರೊಡನೆ ನಡೆದುಕೊಂಡೆ ಆಶ್ರಮದ ಕಡೆಗೆ ಹೊರಟೆವು. ನನಗೆ ಭಾವ ಸಂಯಂ ಮಾಡಿಕೊಳ್ಳುವುದೇ ಕಷ್ಟವಾಯಿತು. (I could not control my emotion) ಅವು ಮಹೋನ್ನತ ವ್ಯಕ್ತಿತ್ವವನ್ನು ಸಂದರ್ಶಿಸಿ ನಾನು ಹಿಗ್ಗಿಹೋಗಿದ್ದೆ. ಅಂತಹ ಮಹತ್ತಾದ ತೇಜಪೂರ್ಣವಾದ ಭವ್ಯ ಪುರುಷಕಾರವನ್ನು ನಾನು ನೋಡಿಯೇ ಇರಲಿಲ್ಲ.ನಾನು ಚಿತ್ರಪಟಗಳಲ್ಲಿ ಕಂಡಿದ್ದ ಸ್ವಾಮಿ ವಿವೇಕಾನಂದರ ದಿವ್ಯ ವಿಗ್ರಹ ಮಾತ್ರವೇ ಬಹುಶಃ ಸ್ವಾಮಿ ಶರ್ವಾನಂದರನ್ನು ಮೀರಿಸುವಂತ್ತಿತ್ತೇನೋ? ‘ಪ್ರತಿಯೊಬ್ಬ ಭಾರತೀಯನು ಹೀಗಾಗುವ ಪಕ್ಷಕ್ಕೆ ನಾವು ಸ್ವರಾಜ್ಯಕ್ಕಾಗಿ ಹೋರಾಡುವುದೇ ಬೇಕಾಗುವುದಿಲ್ಲ!’ ಎಂದು ಹೇಳಿದ ನಾನು ನನ್ನ ಮಿತ್ರನಿಗೆ ಸ್ವಾಮಿ ಶರ್ವಾನಂದರ ಮುಖ ಪರಿಚಯವಾದ ತರುವಾಯ ನನ್ನ ಕಣ್ಣಿಗೆ ಬಿದ್ದ ಒಂದೊಂದು ಮುಖವು ನನ್ನಿಂದ ನಗಿಸಿಕೊಳ್ಳುತ್ತಿತ್ತು. ಇತರೆ ಎಲ್ಲ ಮುಖಗಳು ಕಳೆದಗೆಟ್ಟು ಮೃತಪ್ರಾಯವಾಗಿ ತೋರಿದುವು. ನನ್ನನ್ನು ನಾನ ನೋಡಿಕೊಂಡು ನಕ್ಕು ಬಿಟ್ಟೆ. (I Was so much elated to see a personlaity so grand. I had never seen a personality  so grand radiant and majestic before. Perhaps the personality (photo) of Swamy Vivekananda was the only thing that exceeded that of Shravananda. I said to my friend, if every Indian were to become like that then we need not fight fow Swaraj at all; I laughed at every other face I saw after my acquaintance of Shravananda. All other faces seemed to me lifeless and dead. I looked at myelf and laughted.)

ಅಂತಹ ವ್ಯಕ್ತಿತ್ವವನ್ನು ಸಂಪಾದಿಸುವಂತೆ ಶ್ರೀ ವೆಂಕಟಸುಬ್ಬಯ್ಯ ನನಗೆ ಬುದ್ಧ ಹೇಳಿದರು. ವೆಂಟಸುಬ್ಬಯ್ಯ ಆಶ್ರಮಕ್ಕೆ ಹೋದರು. ಅಪರಾಹ್ನ ಮೂರು ಗಂಟೆಯ ಹೊತ್ತಿಗೆ ಆಶ್ರಮಕ್ಕೆ ಬರುತ್ತೇನೆ ಎಂದು ಅವರಿಗೆ ತಿಳಿಸಿ, ನಾನೂ ವೀರಪ್ಪನೂ ನನ್ನ ರೂಮಿಗೆ ಹೋದೆವು. ಅವರನ್ನು ಕಂಡು ಅಚ್ಚರಿ ಬಡಿದಂತಾಗಿತ್ತು ನಮಗೆ. ಅವರ ಮುಂದೆ ನಾವೆಲ್ಲ ಕ್ರಿಮಿಮಾತ್ರರಾಗಿದ್ದೇವೆ ಎಂದು ಹೇಳಿದೆ ನನ್ನ ಮಿತ್ರನಿಗೆ. ನಾನೆಂದೆ-ಅದಕ್ಕೆಲ್ಲ ಕಾರಣ ತಪ್ಸ್ಯೆಯ ತೇಜಸ್ಸು. ಎಂತಹ ಕಾಂತಿ ಹೊಮ್ಮುತ್ತಿದೆ ಅವರ ಮೈಯಿಂದ! (I said that it was due to the Tejas of Tasasya that he emits such light!)

ನನ್ನ ಸಮಸ್ತ ಚೇತನವೂ ತುಂಬಿ ಹೋಯಿತು ಬ್ರಹ್ಮಾನಂದಮಯವಾಗಿ! (My whole being was filled with bliss:)

“ಮೇಲಿನ ದಿನಚರಿಯ ಭಾಗವನ್ನು ಬರೆದವನಿಗೆ ನನ್ನ ರೂಮಿನಲ್ಲಿ ಕುಳಿತುಕೊಳ್ಳಲು ಮನಸ್ಸು ಬರಲಿಲ್ಲ, ಸಾಧ್ಯವಾಗಲಿಲ್ಲ. ಏನೋ ನಿರ್ವಚನಾತೀತವಾದುದೊಂದು ಆಶ್ರಮದತ್ತ ನನ್ನನ್ನು ಸೆಳೆಯುತ್ತಿತ್ತು.  (Something ineffable was dragging me to the Ashram) ಆದ್ದರಿಂದ ನಿದ್ದೆ ಮಾಡುತ್ತಿದ್ದ ನನ್ನ ಮಿತ್ರ ಎಚ್.ಕೆ. ವೀರಪ್ಪನನ್ನು ಎಬ್ಬಿಸಿ ಆತನನ್ನು ಕರೆದುಕೊಂಡು ಆಶ್ರಮಕ್ಕೆ ಹೋದೆ. ಎಚ್.ಸಿ.ದಾಸಪ್ಪ, ನಾ.ಕಸ್ತೂರಿ, ತಾತಾಗಾರು ವೆಂಕಟಸುಬ್ಬಯ್ಯ ಮತ್ತು ಸ್ವಾಮಿ ಸಿದ್ದೇಶ್ವರಾನಂದರು ಹಾಲಿನಲ್ಲಿ ಕುಳಿತ್ತಿದ್ದರು. ‘ಊಟ ಪೂರೈಸಿ, ವಿಶ್ರಾಂತಿ ನಿದ್ರೆಯಲ್ಲಿದ್ದಾರೆ ಸ್ವಾಮಿ ಶರ್ವಾನಂದಜಿ’. ಎಂದು ತಿಳಿಸಿದರು.  ಸ್ವಾಮಿ ಸಿದ್ದೇಶ್ವರಾನಂದರು. ನಾವು ಅನೇಕ ವಿಷಯಗಳನನ್ನು  ಕುರಿತು ಮಾತನಾಡುತ್ತ ಕುಳಿತೆವು”.

ಸ್ವಾಮಿ ಶರ್ವಾನಂದರು ಶ್ರೀ ಚಾಮುಂಡೇಶ್ವರೀ ದೇವಾಲಯಕ್ಕೆ ಹೋಗಲು ಬಯಸಿದರು. ಅದಕ್ಕಾಗಿ ಭಕ್ತರೊಬ್ಬರು ಕಾರನ್ನು ಸುಮಾರು ೪-೩೦ಕ್ಕೆ ತಂದರು. ಅದಕ್ಕೆ ಮುನ್ನವೆ ಸ್ವಾಮಿ ಶರ್ವಾನಂದಜಿ ಎದ್ದು ಬಂದಾಗ ಸ್ವಾಮಿ ಸಿದ್ದೇಶ್ವರಾನಂದರು ಅವರಿಗೆ ನನ್ನನ್ನು ಪರಿಚಯಿಸಿದರು: ‘ಪ್ರಾಚ್ಯ ಮತ್ತು ಪಾಶ್ಚಾತ್ಯ ತತ್ವಶಾಸ್ತ್ರಗಳೆರಡೂ ನಿಮ್ಮ ಅಧ್ಯಯನ ವಿಷಯಗಳಾಗಿವೆಯೇನು?’ ಎಂದು ಕೇಳಿದರು ಶರ್ವಾನಂದಜಿ. ನಾನು ಹೌದು ಎಂದೆ. ‘ವಿಶಿಷ್ಟ ವಿಷಯವಾಗಿ ಯಾವುದನ್ನಾದರೂ ಆಯ್ದುಕೊಳ್ಳುವ ಸ್ವಾತತ್ಯ್ರ ವಿರುತ್ತದೆಯೆ?’ ಎಂದು ಪ್ರಶ್ನಿಸಿದರು. (Whether we are allowed to specilise) ‘ಎಂ.ಎ. ತರಗತಿಗಳಲ್ಲಿ ಹಾಗೆ ಮಾಡಬಹುದು’ ಎಂದೆ. ಮತ್ತೇ ಕೇಳಿದರು : ‘ಉಪನಿಷತ್ತುಗಳನ್ನೂ ತತ್ವ ಶಾಸ್ತ್ರ ವಿಷಯವಾಗಿ ಅಧ್ಯಯನ ಮಾಡುತ್ತೀರಾ?’ ‘ಹೌದು’ ಎಂದೆ. ‘ಮೂಲದಲ್ಲಿ ?’ (The origina Upanishads?) ಎಂದು ಕೇಳಿದರು. ‘ ಇಲ್ಲ, ಸ್ವಾಮೀಜಿ, ಉಪನಿಷತ್ತಿನ ತತ್ವಶಾಸ್ತ್ರವನ್ನು ಮಾತ್ರ’, ಮತ್ತೇ ಕೇಳಿದರು. ‘ಡಾ.ಬ್ರಜೇಂದ್ರನಾಥ ಶೀಲ ಅವರು ನಿಮಗೇನಾದರೂ ಪಾಠ ತೆಗೆದುಕೊಳ್ಳುತ್ತಾರೆಯೆ?’  ‘ಇಲ್ಲ, ಎಂದೆ’. ಮತ್ತೇ ಪ್ರಶ್ನಿಸಿದರು: ‘ಎಂ.ಎ.ತರಗತಿಗಳನ್ನಾದರೂ ತೆಗೆದುಕೊಳ್ಳುತ್ತಾರೆಯೇ?’ ‘ ಇಲ್ಲ, ಕೆಲವು ಸಾರಿ ಸಭೆಗಳಿಗೆ ಅಧ್ಯಕ್ಷತೆ ವಹಿಸುತ್ತಾರೆ ಮಾತ್ರ’ ಎಂದೆ. ಆಗ ನಡುವೆ ಕಸ್ತೂರಿ ಬಾಯಿ ಹಾಕಿ ಹೇಳಿದರು: ‘ಸ್ವಾಮಿಜಿ, ಅವರು ಒಮ್ಮೆ ಹತ್ತು ಹನ್ನೆರಡು ಜನರಿದ್ದ ನಮ್ಮ ಒಂದು ಗೋಷ್ಠಿಗೆ ಭಗವದ್ಗೀತೆಯ ಮೇಲೆ ಪ್ರವಚನ ತರಗತಿಗೆ ಒಪ್ಪಿಕೊಂಡರು.ಅವರು ಅದನ್ನು ಮೂರು ಭಾಗವಾಗಿ ವಿಂಗಡಿಸಿದರು. ಧರ್ಮಗಳ ಸಮನ್ವಯವನ್ನು ಗೀತೆ ಹೇಗೆ ಸಾಧಿಸುತ್ತದೆ ಎಂಬುವುದನ್ನು ತೋರಿಸಿದರು”

“ಸ್ವಾಮಿಜಿ : ‘ಪೀಠಿಕೆ ಅಷ್ಟೊಂದು ಸುದೀರ್ಘ? ಅದೇ ಕಷ್ಟ ಅವರ ಹತ್ತಿರ!”

ನಾನು:  ‘ಅವರ ಪ್ರಧಾನ ಲಕ್ಷಣವೆ ಅದು, ಧೀರ್ಘತೆ.’

ಕಸ್ತೂರಿ: ಗೀತೆಯ ಮೇಲೆ ಒಂದು ಪ್ರವಚನಗಳ ಮಾಲೆಯನ್ನೆ ಕೊಡುವುದಾಗಿ ಮಾತು ಕೊಟ್ಟಿದ್ದರು;  ಆದರೆ ಅವರಿಗೆ ಸಾಧ್ಯವಾಗಲಿಲ್ಲ’.

ಸ್ವಾಮಿಜಿ : ‘ಆ ಕಾರಣವಾಗಿಯೇ ಅವರಿಂದ ಯಾವ ದೊಡ್ಡ ಕೃತಿಯು ಹೊರಬರಲಿಲ್ಲ. “The positive science of Ancient Hindus” ವಿನಾ’.

ಸ್ವಲ್ಪ ಹೊತ್ತು ಸುಮ್ಮನಿದ್ದು ಮತ್ತೆ ಸ್ವಾಮಿಜಿ : ‘ಹದಿನಾರು ಮಹಾ ಸಂಪುಟಗಳಲ್ಲಿ ಭಾರತೀಯ ತತ್ವಶಾಸ್ತ್ರದ ಒಂದು ಬೃಹತ್ ನಿಘಂಟನ್ನು ಸಿದ್ಧಪಡಿಸುತ್ತಾರಂತೆ. ಅದಕ್ಕೆ ಡಾ.ಶೀಲ್ ಅವರು ಒಂದು ಮುನ್ನುಡಿ ಬರೆಯುತ್ತಾರಂತೆ’.

ಕಸ್ತೂರಿ : ‘ಆ  ಮುನ್ನುಡಿಯೆ ಹದಿನಾರು ಸಂಪುಟಗಳನ್ನೂ ಆಕ್ರಮಿಸಲೂಬಹುದು!’ ಎಲ್ಲರೂ ಗಹಗಹಿಸಿ ನಕ್ಕೆವು.

ಅಷ್ಟರಲ್ಲಿ ಮೋಟಾರು ಕಾರು ಆಶ್ರಮದ ಗೇಟಿನ ಬಳಿಗೆ ಬಂದಿತು. ಸಿದ್ದೇಶ್ವರಾನಂದಜಿ ಮತ್ತು ಕಸ್ತೂರಿ ಸ್ವಾಮಿ ಶರ್ವಾನಂದರೊಡನೆ ಬೆಟ್ಟಕ್ಕೆ ಹೋದರು. ನಾವೆಲ್ಲರು ಎವೆಯಿಕ್ಕದೆ ನೋಡುತ್ತಾ ನಿಂತೆವು,  ಆ ಮಹಾ ವ್ಯಕ್ತಿಯನ್ನು ಹೊತ್ತ ಕಾರು ಕಣ್ಮರೆ ಯಾಗುವ ತನಕ.

ತರುವಾಯ ತಾತಗಾರು ವೆಂಕಟಸುಬ್ಬಯ್ಯ ಸ್ವಾಮಿ ಶರ್ವಾನಂದರನ್ನು ನೋಡಲು ಬಂದಿದ್ದ ಒಬ್ಬ ಪಂಡಿತರಿಗೆ ನನ್ನ ಪರಿಚಯ ಹೇಳಿದರು.  ಇವರು ಕವಿಗಳು, ದಾರ್ಶನಿಕರು ಇತ್ಯಾದಿಯಾಗಿ. ಆ ಪಂಡಿತರು ಹೇಳಿದರು- ಸ್ವಾಮಿ ಅಭೇದಾನಂದರು ಮೈಸೂರಿಗೆ ಬಂದಿದ್ದರು.  ಅವರು ಶರ್ವಾನಂದರಿಗಿಂತಲೂ ಮಹೋನ್ನತ ವ್ಯಕ್ತಿಯಾಗಿದ್ದರು- ಎಂದು. (That Pandit tolds us of the visit of Sri Swamy ABhedananda. He said that Abhedananda was still m ore titanic thatn Sharvananda)

ಆದರೆ ತತ್ಕಾಲದಲ್ಲಿ ನನ್ನ ಕಲ್ಪನೆಗೆ ಸ್ವಾಮಿ ಶರ್ವಾನಂದರಿಗಿಂತಲೂ ಭವ್ಯತರವಾದುದನ್ನು ಕಲ್ಪಿಸಿಕೊಳ್ಳಲು ಅಸಾಧ್ಯವಾಯಿತು. (But felt myself just then incapable of conceiving anything above Shravananda)

“ನಾನು ನನ್ನ ಮಿತ್ರರೂ ಆಶ್ರಮದಿಂದ ಹೊರಟು ರೂಮಿಗೆ ಬಂದೆವು. ದಾರಿಯಲ್ಲಿ ನಾವು ಆ ದಿನ ಸಂದರ್ಶಿಸಿದ ಅದ್ಭುತವನ್ನೆ ಕುರಿತು ಮಾತನಾಡುತ್ತಾ (I and my friend left the Ashrama and came to my room talking on the road upon the marvel that we saw that day).” ರೂಮಿಗೆ ಬಂದು ಟಿಫಿನ್ ತೆಗೆದುಕೊಂಡು ಮತ್ತೆ ಸುಮಾರು ಆರು ಗಂಟೆಯ ಹೊತ್ತಿಗೆ ಆಶ್ರಮಕ್ಕೆ ಹೋದೆವು. ಸ್ವಾಮೀಜಿ ಬೆಟ್ಟದಿಂದ ಹಿಂತಿರುಗಿರಲಿಲ್ಲ. ಸ್ವಲ್ಪಕಾಲ ಕಾದು ಸ್ವಾಮಿ ಕುಮಾರಾನಂದರಿಗೆ ಹೊಸಮನೆ ಮಂಜಪ್ಪಗೌಡರಿಗೂ ದೇವಂಗಿ ವೆಂಕಟಯ್ಯನವರಿಗೂ ಕೆಲವು ಪುಸ್ತಕಗಳನ್ನು ಕಳಿಸಲು ಕೇಳಿಕೊಂಡೆ. ಅಷ್ಟು ಹೊತ್ತಿಗೆ ಕಾರು ಬಂದಿತು.  ಅವರೆಲ್ಲ ಆಶ್ರಮಕ್ಕೆ ಪ್ರವೇಶಿಸಿದರು….

“ಸ್ವಾಮಿ ಶರ್ವಾನಂದರು ಆರಾಮಕುರ್ಚಿಯ ಮೇಲೆ ಕುಳಿತರು; ನಾವೆಲ್ಲ ಚಕ್ಕಾಲುಬಕ್ಕಾಲು ಹಾಕಿಕೊಂಡು ಸುತ್ತಲೂ ಚಾಪೆಗಳ ಮೇಲೆ ಕುಳಿತೆವು. ಸ್ವಾಮಿಜಿ ಸ್ವಲ್ಪ ಹೊತ್ತು ವಿ.ಸುಬ್ರಹ್ಮಣ್ಯ ಅಯ್ಯರ‍್ ಅವರ ಹತ್ತಿರ ಬಟ್ಟೆಗೆ ಬಣ್ಣ ಹಾಕುವ ವಿಚಾರವಾಗಿಯ (dyeing) ಮಾತಾಡುತ್ತಿದ್ದರು.  ವರ್ಣಮಿಶ್ರಣ ವಿಚಾರವಾಗಿಯೂ ಸ್ವಾಮಿಜಿಗೆ ಇದ್ದ ವೈಜ್ಞಾನಿಕವಾದ ತಿಳುವಳಿಕೆಯನ್ನು ಕಂಡು ನನಗೆ ಆಶ್ಚರ್ಯವಾಯಿತು. ವಿ.ಸು. ಹೇಳಿದರು ‘ಗುಣದಲ್ಲಾಗಲೀ ಗಾತ್ರದಲ್ಲಾಗಲಿ ವನಸ್ಪತಿ ವರ್ಣಗಳು ರಾಸಾಯನಿಕ ವರ್ಣಗಳಿಗಿಂತ ಉತ್ತಮವಾದವುಗಳಲ್ಲ’, ‘ಇಲ್ಲ, ಇಲ್ಲ, ಹಾಗೆ ಆಲೋಚಿಸಬೇಡಿ,’  ಸ್ವಾಮಿಜಿ ಉತ್ತರಿಸಿದರು ‘ಗಾತ್ರದಲ್ಲಿ ಮೀರಲಾರವು ಎಂದರೇನೋ ಒಪ್ಪಬಹುದು, ಆದರೆ ಗುಣದಲ್ಲಿ ಅಲ್ಲವೆ ಅಲ್ಲ. ವನಸ್ಪತಿ ವರ್ಣಗಳು ರಾಸಾಯನಿಕ ವರ್ಣಗಳಿಗಿಂತ ಏಷ್ಟೋ ಪಾಲು ಉತ್ತಮವಾದುವು.’

”  ಆವಿಚಾರವಾಗಿ ಸ್ವಲ್ಪ ಚರ್ಚೆ ನಡೆಸಿ, ನಿಲ್ಲಿಸಿದರು.  ಸ್ವಾಮಿ ಸಿದ್ದೇಶ್ವರಾನಂದರು ಮಹಾರಾಜಾಕಾಲೇಜಿನ ನಮ್ಮ ತತ್ವಶಾಸ್ತ್ರ ಸಂಘದ ವಿಷಯ ಪ್ರಸ್ತಾಪಿಸಿದರು. ನಾನು ಹೇಳಿದೆ- ಸ್ವಾಮಿಜಿ, ನಾವು ಇದುವರೆಗೆ ನಮ್ಮ ತತ್ವಶಾಸ್ತ್ರ ಸಂಘದ ಪ್ರಾರಂಭ ಭಾಷಣವನ್ನೇ ಮಾಡಿಸಿಲ್ಲ. ನಮ್ಮ ಬರವಿಗಾಗಿ ಕಾಯುತ್ತಿದ್ದೆವು. ಹಿಂದಿನ ವಾರವೇ ಒಂದು ಭಾಷಣ ಏರ್ಪಡಿಸಬೇಕಾಗಿತ್ತು. ಆದರೆ ತಾವು ಬರುತ್ತೀರಿ ಎಂದು ಮುಂದಕ್ಕೆ ಹಾಕಿದೇವು’. ಅವರು ‘ಮಾಯವಾದ’ ಮೇಲೆ ಸಂಘದ ಪ್ರಾರಂಭ ಭಾಷಣ ಮಾಡಲು ಒಪ್ಪಿದರು. ಆದರೆ ಸ್ವಲ್ಪ ಸಂದೇಹ ವ್ಯಕ್ತಪಡಿಸಿ ‘ವಿದ್ಯಾರ್ಥಿಗಳಿಗೆ ಅದನ್ನು ಗ್ರಹಿಸುವ ಸಾಮರ್ಥ್ಯವಿದೆಯೆ?’ ಎಂದು ಕೇಳಿದರು. (Can the students follow me?)

ನಾನೆಂದೆ: ‘ಇದೆ, ಸ್ವಾಮಿಜಿ. ಕೊನೆಯ ವರ್ಷದ ಬಿ.ಎ. ವಿದ್ಯಾರ್ಥಿಗಳೂ ಎಂ.ಎ. ವಿದ್ಯಾರ್ಥಿಗಳು ಬರುತ್ತಾರೆ’

“ನನಗೆ ಗೊತ್ತಿತ್ತು, ಚೆನ್ನಾಗಿಯೆ ಗೊತ್ತಿತ್ತು. ತತ್ವಶಾಸ್ತ್ರ ತೆಗೆದುಕೊಂಡಿದ್ದ ಮೂರನೆಯವರ್ಷದ ವಿದ್ಯಾರ್ಥಿಗಳು ಮೆದುಳಿನಲ್ಲಿ ಶಕ್ತಿಯಲ್ಲಿ, ದೇಶಕ್ತಿಯಲ್ಲಿ ಎಂತೊ ಅಂತೆ, ದುರ್ಬಲರಾಗಿದ್ದರು ಎಂದು. ಆದರೆ ನನಗೆ ಸ್ವಂತವಾಗಿ ಆ ವಿಷಯದ ಮೇಲೆ ಸ್ವಾಮೀಜಿಯ ಅಭಿಪ್ರಾಯ ತಿಳಿಯಬೇಕೆಂಬ ಆಶೆ ಬಲವಾಗಿತ್ತು. ಆದ್ದರಿಂದ ಸತ್ಯದೂರವಾದರೂ ಚಿಂತೆಯಿಲ್ಲ ಎಂದುಕೊಂಡು ಬಿಳೀ ಸುಳ್ಳು ಹೇಳಿಬಿಟ್ಟೆ!”

ಮತ್ತೇ ಸ್ವಾಮಿಜಿ ‘ಯಾರನ್ನಾದರೂ ಅಧ್ಯಕ್ಷತೆ ವಹಿಸಲು ಕೇಳೀಕೊಳ್ಳುತ್ತೀರೋ?’ (Will you have any president?)

ನಾನು : ಹೌದು, ಸ್ವಾಮಿಜಿ, ಯಾರನ್ನಾದರೂ….

ನಾನು : ಮುಗಿಸುವ ಮುನ್ನ ಸ್ವಾಮಿ ಸಿದ್ದೇಶ್ವರಾನಂದರು ‘ಡಾ.ಶೀಲ್ ಅವರನ್ನು ಕೇಳಿಕೊಳ್ಳಬಹುದಲ್ಲಾ?’ ಎಂದರು.

ಸ್ವಾಮಿ ಶರ್ವಾನಂದರು ಮುಳ್ಳೂ ಚುಚ್ಚಿದವರಂತೆ ತಟ್ಟಕ್ಕನೆ ಹೇಳಿದರು ‘ಅಯ್ಯೊಯ್ಯೋ  ಬೇಡ, ಬೇಡ ಅವರು ಎಲ್ಲವನ್ನೂ ಕೆಡಿಸಿ ಹಾಳು ಮಾಡಿಬಿಡುತ್ತಾರೆ!’ (Oh no, that will spoin everything!)

ಕಸ್ತೂರಿ : ‘ಕೆಲವು ಗಂಟೆಗಳನ್ನೆ ತೆಗೆದುಕೊಳ್ಳುತ್ತಾರೆ ಭಾಷಣಕಾರರ ಪರಿಚಯಕ್ಕೆ; ಮತ್ತೆ ಕೆಲವು ಗಂಟೆಗಳ ಭಾಣದ ಪರಿಚಯಕ್ಕೆ!’ (He will take hours to introduce the lecturer and lecturer too!)

ನಾನು : ಪ್ರೋವಾಡಿಯಾ ಅವರನ್ನು ಕೇಳಿಕೊಳ್ಳಬಹುದೇ?

ಸ್ವಾಮೀಜಿ : ಆದರೆ ಅವರು ಸ್ವಂತ ತತ್ವದೃಷ್ಟಿ ಯಾವುದು? ಮಾಯವಾದದ ವಿಚಾರವಾಗಿ ಅವರಿಗೆ ಸಹಾನೂಭೂತಿ ಇದೆಯೆ? ಇಲ್ಲದೆ ಇರುವ ಪಕ್ಷದಲ್ಲಿ ಏನೂ ಪ್ರಯೋಜನವಾಗುವುದಿಲ್ಲವಲ್ಲ!…. ಎನನ್ನಾದರೂ ಮಾಡಿ. ನನ್ನ ವಿರೊಧವೇನೂ ಇಲ್ಲ. ಯಾರನ್ನಾದರೂ ಕರಕೊಂಡು ಬನ್ನಿ. ಆದರೆ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಏನಾದರೂ ಅವಿವೇಕ ಹೇಳಿದರೆ ಅದಕ್ಕೆ ಉತ್ತರ ಕೊಡುವ ಅವಕಾಶ ನನಗಿರಬೇಕು ಅಷ್ಟೆ. (But what is his philosophy? Has he sympathy towards Maya? Orelese it is useless!… I have no objection. You can bring any man. But if he speaks nonsense in the end I must get my chance of replying.)

ವಿ.ಸುಬ್ರಹ್ಮಣ್ಯ ಐಯ್ಯರ: ‘ಆದರೆ ಇಂಗ್ಲೀಷ್ ಪದ್ಧತಿಯಂತೆ ಅವಕ್ಕೆ ಅವಕಾಶ ಕೊಡುವುದಿಲ್ಲ’ ಎಂದರು.  (But according to English mehtods it is not allowed.

ಸ್ವಾಮಿಜಿ : ಅದೇ ತೊಂದರೆ! (That’s the difficuty).

ವಿ.ಸು. : ‘ನನಗೇನೂ ’ ಆ ಪದ್ಧತಿ ಹಿಡಿಸುವುದಿಲ್ಲ. IDon’t like the method)

ಸ್ವಾಮಿನಿ ನನ್ನ ಕಡೆಗೆ ತಿರುಗಿ ಕೇಳಿದರು: ‘ಅಧ್ಯಕ್ಷರಿಲ್ಲದೇ ನಡೆಸುವುದಕ್ಕೆ ಆಗುವುದಿಲ್ಲವೇ?’ (Can you not goon without a chairman?)

ಸ್ವಾಮಿಜಿ : ‘ಹಾಗೆ ಮಾಡುವುದೆ ಲೇಸು, ಯಾಕೆಂದರೆ ಈ ಅಧ್ಯಕ್ಷರು ಇಡೀ ವಾತಾವರಣವನ್ನೆ ಕೆಡಿಸಿಬಿಡುತ್ತಾರೆ. ಹಾಗಾಯಿತು ಒಂದು ಸಾರಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ. (I think it’s better, because  these president spoin the whole atmosphere. It happened so at the Presidency Colelge, Madras!)’

‘ಹೌದು, ಪ್ರೋ.ಚಕ್ರವರ್ತಿ ಅಧ್ಯಕ್ಷತೆ ವಹಿಸಿದ್ದರು. ಅವರು ಜೈನರು’. ಎಂದು ಸಮರ್ಥಿಸಿದರು ಸ್ವಾಮಿ ಸಿದ್ದೇಶ್ವರಾನಂದರು.

‘ಅವರು’ ಜೈನರಾಗಿದ್ದರಿಂದ ಎಂದೇನು ಅಲ್ಲ; ಆತನ ಮಾನಸಿಕ ಜೀವನವೇ ಸಂಕುಚಿತ ದೃಷ್ಟಿಯದಾಗಿತ್ತು. ಜಟಿಲವಾದ ದಾರ್ಶನಿಕ ಸೂಕ್ಷ್ಮಟ್ಮತೆಗಳಲ್ಲಿ ವ್ಯವಹರಿಸುವುದೇ ಆತನ ಬುದ್ಧಿ ಶಕ್ತಿಗೆ ಅಸಾಧ್ಯವಾದುದಾಗಿತ್ತು. (Not that he was a Jain. He had a very narrow outlook of mental life. He cannot indulge in philosophical subteleties) ಎಂದರು ಸ್ವಾಮಿ ಶರ್ವಾನಂದರು. ಈ ಮಧ್ಯೆ ಯಾರೋ ಪ್ರೊ.ರಾಧಾಕೃಷ್ಣನ್ ಪ್ರಸ್ತಾಪ ಎತ್ತಿ, ಅವರು ಇಂಗ್ಲಂಡಿನಲ್ಲಿ ಮಾಡಿದ ಉಪನ್ಯಾಸಗಳ ವಿಚಾರದತ್ತ ಗಮನ ಸೆಳೆದರು:

ಸ್ವಾಮಿಜಿ: ‘ಅವರಿಗೆ ಭಾಷಾಭಿವ್ಯಕ್ತಿಯ ಸೌಲಭ್ಯ ಬಹಳ ಚೆನ್ನಾಗಿದೆ, ಆಲೋಚನೆಯ ಸ್ಪಷ್ಟತೆ ಹಾಗೂ ಆಕರ್ಷಣೀಯ ಶೈಲಿ. ಆದರೆ ಭಾರತೀಯ ದರ್ಶನ ಶಾಸ್ತ್ರಗಳಲ್ಲಿ ಪಾಂಡಿತ್ಯ’ದ ದೃಷ್ಟಿಯಿಂದ ನೋಡಿದರೆ ಅವರು ಏನನ್ನೂ ಇಲ್ಲ. ಸಂಸ್ಕೃತವನ್ನು ಪರಿಪೂರ್ಣವಾಗಿ ಅರಿಯದೇ ಯಾರೂ ವೇದಾಂತದ ಯಾಥಾರ್ಥ ಜ್ಞಾನ ಸಂಪಾದಿಸಿದ್ದೇನೆ ಎಂದು ತಿಳಿಯುವುದು ವ್ಯರ್ಥ.  ನಗಬೇಕಾಗುತ್ತದೆ,  ಈ ಜನರು ಸಂಸ್ಕೃತವನ್ನು ಚೆನ್ನಾಗಿ ತಿಳಿದುಕೊಳ್ಳದೆಯೇ ಭಾರತೀಯ ತತ್ವಶಾಸ್ತ್ರಗಳನ್ನು ಕುರಿತು ಅಧಿಕಾರವಾಣಿಯಿಂದ ಮಾತಾಡಲು ಹೋಗುತ್ತಿರುವುದನ್ನು ನೋಡಿ, ಏನು ಉದ್ದ, ಏನು ಉಡಾಫೆ? ಭಾಮತಿ ಇತ್ಯಾದಿ (ಅವರು ಅದ್ವೈತ ಸಿದ್ಧಿ ಮೊದಲಾದ ಇನ್ನೂ ಒಂದೆರಡು ಹೆಸರು ಹೇಳಿದರು). ಗ್ರಂಥಗಳನ್ನು ಅಧ್ಯಯನ ಮಾಡದೆ ಶಂಕರಾಚಾರ್ಯರನ್ನಾಗಲೀ ಮಾಯವಾದವನ್ನಾಗಲೀ ಯಾರಿಗೂ ಗ್ರಹಿಸಲು ಸಾಧ್ಯವಾಗುವುದಿಲ್ಲ. ಇವರೆಲ್ಲ ವಿದ್ವತ್ ಸಂಫಾದನೆ ಮಾಡುವುದು ಹುಸಿ ಹುಸಿಯ ಮತ್ತು ಪಕ್ಷಪಾತದ ಭಾಷಾಂತರಗಳಿಂದ ಮಾತ್ರವೇ. ಮತ್ತೇ ನೋಡಿದರೆ, ಹೋಗಿ ಭಾರತೀಯ ದರ್ಶನಗಳನ್ನು ಕುರಿತು ದೊಡ್ಡ ದೊಡ್ಡ ಉಪನ್ಯಾಸ ಕೊಡುತ್ತಾರೆ. ಅದನ್ನೆಲ್ಲ ನೋಡಿದರೆ ಯಾರಾದರೂ ನಗಬೇಕಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಇನ್ನೇನು ಮಾಡಲು ತಾನೇ ಸಾಧ್ಯ? ಪ್ರಾಚ್ಯದ ಸೂಕ್ಷ್ಮಾತ್ ಸೂಕ್ಷ್ಮತತ್ವ ಚಿಂತನೆಯ ಮುಂದೆ ಪಾಶ್ಚಾತ್ಯದ ಅತ್ಯಂತ ಉನ್ನತೋನ್ನತ ಆಲೋಚನೆಗಳು ಮಕ್ಕಳ  ತೊದಲಟವಾಗಿ ಬಿಡುತ್ತವೆ. ಮಹಾ ತತ್ವಜ್ಞಾನಿ ಎಂದು ಹೆಸರಾಂತಿರುವ ಕ್ಯಾಂಟನನ್ನು ಕೂಡ ಶಂಕರಾಚಾರ್ಯರ ಪಾಧೂಳೀಗೂ ಹೋಳಿಸಲು ಸಾಧ್ಯವಿಲ್ಲ. ಡಾ.ಶೀಲ ಕೂಡ ಅವರು ಪ್ರೋಫೆಸರ‍ಆಗಿದ್ದಾಗ ಭಾರತೀಯ ತತ್ವಶಾಸ್ತ್ರದ ವಿಷಯದಲ್ಲಿ ತುಂಬಾ ಅಪಚಾರದ ಭಾವನೆಯುಳ್ಳವರಾಗಿದ್ದರು. ಅವರು ಹೇಳುತ್ತಿದ್ದರು, ಜಗತ್ತು ಆರೇ ಆರು ಮಹಾದಾರ್ಶನಿಕರನ್ನುಸೃಷ್ಟಿಸಿದೆ ಎಂದು, ಯಾರಾದರೆಂದರೆ :ಪ್ಲೇಟೋ, ಆರಿಸ್ಟಾಟಲ್, ಕ್ಯಾಂಟ್, ಹೆಗೆಲ್, ಸ್ಪೆನ್ಸರ‍ಮತ್ತು ಇನ್ಯಾರೋ ಒಬ್ಬ! ಆದರೆ ಅವರು ಸಂಸ್ಕೃತ ಅಭ್ಯಾಸ ಮಾಡಿ, ಅದರ ಮುಖಾಂತರ ನಮ್ಮ ದರ್ಶನಗಳನ್ನೆಲ್ಲ ಅಧ್ಯಯನ ಮಾಡಿದ ಮೇಲೆ ಪಾಶ್ಚಾತ್ಯ ದಾರ್ಶನಿಕರನ್ನು ಕುರಿತು ಅವರ ಅಭಿಪ್ರಾಯ ಬದಲಾಯಿಸಿ, ಅವರೆಲ್ಲ ತಾವು ಹಿಂದೆ ತಿಳಿದಷ್ಟೇನೂ ಉದ್ದಾರಮಲ್ಲವೆಂದೂ ನಮ್ಮವರ ಮತ್ತು ಅವರ ಶಿಶುಗಳಾಗಿ ಬಿಡುತ್ತಾರೆಂದು ಹೇಳತೊಡಗಿದರು.  ಪಾಶ್ಚಾತ್ಯರು ಯಾರಿಗೂ ತಿಳಿದೂ ಇಲ್ಲ, ಮಾಯವಾದದ ಸಮೀಪಕ್ಕೆ ಕೂಡ ಅವರ ಅಲೋಚನೆ ಎಟುಕಿಲ್ಲ.  ಇಂಗ್ಲೀಷ್ ಭಾಷೆಯೆ ಬಡಕಲು. ಅಲೋಚನೆ ಬೆಳೆದಂತೆಲ್ಲ ಭಾಷೆಯೂ ಬೆಳೆಯುತ್ತದೆ.  ಅವರ ಅಲೋಚನೆಯ ಮಟ್ಟವೆ ಅಷ್ಟು ಕೆಳಗಿರುವಾಗ ಅವರ ಭಾಷೆ ನಮ್ಮದಕ್ಕಿಂತ ಹೇಗೆ ತಾನೆ ಮೇಲೇರೀತು? ಉದಾಹರಣೆಗೆ ‘ಸವಿಕಲ್ಪ’ ‘ನಿರ್ವಿಕಲ್ಪ’ ಪದಗಳನ್ನೆ ತೆಗೆದುಕೊಳ್ಳಿ. ಆ ಅರ್ಥ ಅಭಿವ್ಯಕ್ತಗೊಳಿಸಲು ಯಾವ ಇಂಗ್ಲೀಷ್ ಪದಗಳಿವೆ? ನಿಮ್ಮ relative ಮತ್ತು absolute ಎಂಬ ಪದಗಳು ಸರಿಹೋಗುವುದಿಲ್ಲ. ಏಕೆಂದರೆ ‘ಸವಿ ಕಲ್ಪ’ ಒಂದರಲ್ಲಿಯೆ ಮೂರು ಬೇರೆ ಬೇರೆ ಸ್ತರಗಳಿವೆ….

ಅಷ್ಟರಲ್ಲಿ ಸ್ವಾಮಿ ಸಿದ್ದೇಶ್ವರಾನಂದರು ಕೇಳಿದರು:

“ಪಾಶ್ಚಾತ್ಯರಲ್ಲಿ ಯಾರಿಗಾದರೂ ಸಮಾಧಿಸ್ಥಿತಿ ದೊರೆಕೊಂಡದ್ದುಂಟೆ?”

ಸ್ವಾಮಿಜಿ : ‘ಯಾವ ತತ್ವಶಾಸ್ತ್ರಜ್ಞನಿಗೂ ಅದು ಲಭಿಸಿಲ್ಲ’, ಪ್ಲೇಟೋ ಕೂಡ ಅದಕ್ಕೆ ಹತ್ತಿರ ಹತ್ತಿರ ಬರುತ್ತಾನಷ್ಟೆ, ಆತ ‘ಫೆನಮಿನಲ್’ ಮತ್ತು ‘ನೋಮಿನಲ್’ ಎಂದು ಗುರುತಿಸುವಾಗ. ಆದರೆ ಪಾಪ ಆತನೂ ‘ವ್ಯಾವಹಾರಿಕ’ದಲ್ಲಿರುವ ಒಂದು ಕುರ್ಚಿಗೆ ‘ಪಾರಮಾರ್ಥಿಕ’ದಲ್ಲಿ ಒಂದು ಧ್ಯೇಯ ಕುರ್ಚಿ ಇರಬೇಕೆಂದು ಆಲೋಚಿಸುತ್ತಾನೆ! (Phenomenon=ವ್ಯವಾಹಾರಿಕಸತ್ತೆ, Nominal=ಪಾರಮಾರ್ಥಿಕಸತ್ತೆ) ಅವರೂ ಈ ಪರಸ್ಪರ ವಿರೋಧಗಳನ್ನು ಗುರುತಿಸಿದರು; ಆದರೆ ಅದನ್ನು ವಿವರಿಸಲಾರದೆ ಹೋದರು. ಹೇಗೆ ತಾನೆ ನಿರ್ವಚನಿಸಲು (ವಿವರಿಸಲು) ಸಾಧ್ಯ., ನಿರ್ವಿಕಲ್ಪ ಸಮಾಧಿಗೇರದೆ? ನಿರ್ವಿಕಲ್ಪಕ್ಕೇರಿದಾಗಲೆ  ಮಾತ್ರ ಸಾಧ್ಯವಾಗುತ್ತದೆ ಮಾಯಾ ತತ್ವವನ್ನು ಗ್ರಹಿಸಲು, ಅಲ್ಲವೆ ಮತ್ತೇ? ಫೀಸ್ಟ್ (Fichte) ತುಸು ಮಟ್ಟಿಗೆ ಆ ತತ್ವಕ್ಕೆ ಬಳಿಸಾರುತ್ತಾನೆ. ಆದರೆ ಅವನೂ ಸೋತು ಹೋಗಿದ್ದಾನೆ. ನಿಜ, ಪ್ಲೆಟೋ ಬೌದ್ಧ ದಾರ್ಶನಿಕರ ತತ್ವಚಿಂತನೆಯ ಪ್ರಭಾವಕ್ಕೆ ಒಳಗಾಗಿದ್ದಾನೆ, ಪೈಥಾಗರಸ್ನು ಸಾಂಖ್ಯೆ ದಾರ್ಶನಿಕರ ಪ್ರಭಾವಕ್ಕೆ ಒಳಗಾದಂತೆ….

ವಿ.ಸುಬ್ರಹ್ಮಣ್ಯ ಐಯ್ಯರ‍್ : ನೇರವಾದ ಸಾಕ್ಷಿ ಏನಾದರೂ ಇದೆಯೆ, ಸ್ವಾಮಿಜಿ, ಪ್ಲೇಟೋ, ಬೌದ್ಧ ದಾರ್ಶನಿಕರ ಪ್ರಭಾವಕ್ಕೆ ಒಳಗಾಗಿದ್ದಾನೆ ಎಂಬುವುದಕ್ಕೆ?

ಸ್ವಾಮೀಜಿ : ‘ ಇಲ್ಲ, ಸಾಕ್ಷ್ಯ ಕೊಟ್ಟು ಪ್ರಮಾಣಿಕರಿಸಲು ಸಾಧ್ಯವಾಗುವುದಿಲ್ಲ. ಆದರೆ ಆಲೋಚನೆಗಳ ಸಾದೃಶ್ಯದಿಂದಲೂ ಮತ್ತು ಏಲೆಗ್ಸಾಂಡಿರಯಾದ ದಾರ್ಶನಿಕರು ಬೌದ್ಧ ಸಂನ್ಯಾಸಿಗಳ ಪ್ರಭಾವಕ್ಕೆ ಒಳಗಾಗಿದ್ದರು ಎಂಬ ಜ್ಞಾನದಿಂದಲೂ ನಾವು ಹಾಗೆ ಅನುಮಾನಿಸಬಹುದು. ಅಷ್ಟೇ ಏಕೆ? ಯೇಸುಕ್ರಿತನು ಕೂಡ ಒಂದು ಬೌದ್ಧ ಸಂನ್ಯಾಸಿಗಳ ಸಂಘಕ್ಕೆ ಸೇರಿದವನು ಎನ್ನುತ್ತಾರೆ!’

ನಾನು : ‘ಹಾಗಾದರೆ, ಸ್ವಾಮೀಜಿ, ಕ್ರಿಸ್ತನು ಬೌದ್ಧ ಸಂನ್ಯಾಸಿಗಳ ಸಂಘಕ್ಕೆ ಸೇರಿದವನಾಗಿದ್ದ ಪಕ್ಷದಲ್ಲಿ ಆತನೇಕೆ ಎಲ್ಲಿಯೂ ತನ್ನ ಗುರುದೇವನ ಎಂದರೆ ಬುದ್ಧನ ಹೆಸರನ್ನೆ ಎತ್ತುವುದಿಲ್ಲವೆ? ಹೊಸ ಒಡಂಬಡಿಕೆಯಲ್ಲಿ (New Testament) ಎಲ್ಲಿಯೂ ಬುದ್ಧನ ಹೆಸರು ಬರುವುದಿಲ್ಲ.

ಸ್ವಾಮಿಜಿ : ‘ನಿಜವೇ, ಕ್ರೈಸ್ತಮತ ಸಂಪೂರ್ಣ ಭಿನ್ನವಾದದ್ದೆ ಬೌದ್ಧ ಧರ್ಮಕ್ಕೆ. ನನ್ನ ಅಭಿಪ್ರಾಯ ಇಷ್ಟೆ, ಅಹಿಂಸಾಭಾವನೆ ಮತ್ತು ಅಸತ್ತನ್ನು (ಕೇಡನ್ನು) ಪ್ರತಿಭಟಿಸದಿರುವುದು (Non-Resistance to Evil) ಇವು ಬೌದ್ಧರಿಂದ ತೆಗೆದುಕೊಂಡವು ಎಂದು. ಅದೂ ಅಲ್ಲದೆ ಹೊಸ ಒಡಂಬಡಿಕೆಯಲ್ಲಿರುವ ಬೋಧನೆಯ ಭಾವಗಳೆಲ್ಲ ನಿಜವಾಗಿಯೂ ಯೇಸು ಕ್ರೀಸ್ತನವೆಂದೇ ನೀವು ಭಾವಿಸುತ್ತೀರೇನು? ಅವರೆಲ್ಲ ಯೇಸು ಕ್ತಿಸ್ತನು ತೀರಿಕೊಂಡ ೨೦೦ ವರ್ಷಗಳ ತರುವಾಯ ತಯಾರಾದುವು. ಅದೆಲ್ಲ ಸಂತ ಪಾಲನ ಸೃಷ್ಟಿ, ಕ್ರಿಸ್ತನವಲ್ಲ’

ಈ ಮಧ್ಯೆ ಸ್ವಾಮಿ ಸಿದ್ದೇಶ್ವರಾನಂದರ ನಾನು ಅವರಿಗೆ  ಮತ್ತೆ ಮತ್ತೆ ಹಾಕುತ್ತಿದ್ದ ಒಂದು ಪ್ರಶ್ನೆಯನ್ನು ಕೇಳಲು ಸೂಚಿಸಿದರು. ಕಾಲ ಮತ್ತು ದೇಶ ಇವುಗಳ ಪರಸ್ಪರ ವಿರೋಧಾಭಾವದ ವಿಚಾರವಾಗಿ (Space and Time being Contradictory). ನಾನು ಸ್ವಾಮಿ ಶರ್ವಾನಂದರಿಗೆ ಹೇಳಿದೆ: ಪ್ರೋ.ರಾದಾಕೃಷ್ಣನ್ನರ (Philosophy of the Upanishads) ಓದುತ್ತಿದ್ದಾಗ, ಆ ಅರ್ಥ ಬರುವ ವಾಕ್ಯಗಳನ್ನು ಎದುರುಗೊಂಡೆ ಎಂದು. ‘ಆ ಸಂದರ್ಭ ನೋಡಬೇಕು, ಅದನ್ನು ತಂದು ತೋರಿಸು’ ಎಂದರು. ಆಗಲಿ ಎಂದೆ. ಆದರೂ ಅವರು ಕ್ಯಾಂಟಲ್ ಕಾಲ-ದೇಶ ನಿಮಿತ್ತ ತತ್ವಗಳನ್ನು (Categories of Time- space -causation) ವಿವರಿಸಿದರು. ಮತ್ತೆ ಹೇಳಿದರು, ಕಾಲ-ದೇಶ-ನಿಮಿತ್ತ ಭಾವನೆಗಳು ಅಷ್ಟಾಗಿ ಉಪನಿಷತ್ತುಗಳಲ್ಲಿ ಬರುವುದಿಲ್ಲ; ಅಲ್ಲಿ ಹೆಚ್ಚಾಗಿ ಬರುವುದು ನಾಮ-ರೂಪಗಳ ವಿಚಾರ.  ಆಮೇಲೆ ಅವರು ಕಾಲ ಮತ್ತು ದೇಶ ಎರಡೂ ಪರಿವರ್ತನೇ ಅತವಾ ಚಲನೆಯಲ್ಲಿ ಅಂತರ್ತತವಾಗುತ್ತವೆ ಎಂಬುವುದನ್ನು ವಿವರಿಸಿದರು. (How time and space are contained in the idea of Change).

“ಇದಾದ ಮೇಲೆ ವಿಷಯ ‘ಕೃಷ್ಣಾಜಿ’ ಮತ್ತು ‘ಥಿಯಾಸೊಫಿ’ ಅತ್ತ ತಿರುಗಿತು. ಸ್ವಾಮಿಗಳು ಗಹಿಗಹಿಸಿ ನಗತೊಡಗಿದರು. ಸಿದ್ದೇಶ್ವರಾನಂದರು (The Mesaiah in tennis flannels) ಟೆನ್ನಿಸ ಉಡುಪಿನಲ್ಲಿ ಅವತಾರ ಪುರುಷ) ಎಂದು ಮಾತೆತ್ತಿದ್ದರು.

ಸಿದ್ದೇಶ್ವರಾನಂದರು : ನಲವತ್ತೊಂದು ಸಾವಿರ ಸಂಖ್ಯೆಯ ಸದಸ್ಯರಿದ್ದಾರೆ ಅವರ ಸಂಘದಲ್ಲಿ. (Theyhave 41,000 members)

ಸ್ವಾಮಿಜಿ :‘ಹಾಗಿದ್ದರೆ ಅವರೆಲ್ಲಿ ೪೦೦೦೦ ಬೆಪ್ಪರು, ೧೦೦೦ ಠಕ್ಕರು!’ (ಎಲ್ಲರೂ ಬಿದ್ದು ಬಿದ್ದು ನಕ್ಕರು).

ನಾನು: ‘ಹೌದು ! ಹೌದು! ಠಕ್ಕರಿಲ್ಲದಿದ್ದರೆ ಬೆಪ್ಪರಿರುವುದು ಸಾಧ್ಯವಿಲ್ಲ!’

ಸ್ವಾಮಿಜಿ ಬೆಸೆಂಟ್ ಅವರನ್ನು ಟೀಕಿಸಿ, ‘ಅವರ ಚಳುವಳಿ ತನಗೆ ತಾನೆ ಸಹಜ ಸಾವನ್ನು ಎದುರುಗೊಳ್ಳುತ್ತದೆ . ಎಲ್ಲ ವಂಚನೆ, ಭ್ರಾಂತಿ’ ಎಂದರು.

ಕೊನೆಯಲ್ಲಿ ನಾವು ಕೆಲವು ಪ್ರವಚನ ತರಗತಿಗಳನ್ನು ತೆಗೆದುಕೊಳ್ಳುವಂತೆ ಕೇಳೀಕೊಂಡೆವು.

ಸ್ವಾಮಿ ಶರ್ವಾನಂದರು ನಾನು ಕೇಳಿಕೊಂಡಂತೆ ನಾನೇ ಕಾರ್ಯದರ್ಶಿಯಾಗಿದ್ದ ಮಹಾರಾಜ ಕಾಲೇಜಿನ ತತ್ವಶಾಸ್ತ್ರ ಸಂಘದ ಪ್ರಾರಂಭ ಭಾಷಣ ಮಾಡಿದರು. ನಮ್ಮ ಸಂಘದ ಅಧ್ಯಕ್ಷರಾಗಿದ್ದ ಪ್ರೊ.ವಾಡಿಯಾ ಅಧ್ಯಕ್ಷತೆ ವಹಿಸಿದ್ದರು, ಅಧಿಕಾರ ಸ್ಥಾನ ಮಹಿಮೆಯಿಂದಲೆ. ಸ್ವಾಮಿಜಿ ನಿರೀಕ್ಷಿಸಿದಂತೆ ಯಾವ ಅವಿವೇಕವೂ ನಡೆಯಲಿಲ್ಲ. ಎಲ್ಲವೂ ತುಂಬ ಗಂಭೀರವಾಗಿ ಸಭಾ ಮರ್ಯಾದೆಗೆ ಇನಿತೂ ಕುಂದು ಬರದಂತೆ ನೆರವೇರಿತು.  ಮಾಯವಾದದ ಮೇಲಣ ಸ್ವಾಮಿಜಿಯ ಭಾಷಣದ ಸಾರಸಂಗ್ರಹವನ್ನುತಾನೇ ತಯಾರಿಸಿ ಸಂಘದ (ಮಿನಿಟ್ಸ್ ಬುಕ್) ವರದಿ ಪುಸ್ತಕದಲ್ಲಿ ಬರೆದಿಟ್ಟೆ. ಅದು ಈಗಲೂ ಅಲ್ಲಿರಬಹುದು, ಮಿನಿಟ್ಸ್ ಬುಕ್ ಇರುವ ಪಕ್ಷದಲ್ಲಿ?

ನನ್ನ ಮೇಲೆ ಆ ವೇಳೆಗಾಗಲಿ ಉಂಟಾಗಿದ್ದ ವೇದಾಂತ ದರ್ಶನದ ಪ್ರಭಾವ ಸ್ವಾಮಿ ಶರ್ವಾನಂದರ ಸಾನ್ನಿಧ್ಯ ಸಂವಾದ ಪ್ರವಚನ ಭಾಷಣಾದಿಗಳಿಂದ ಮತ್ತಷ್ಟು  ಘನತರವಾಯಿತು. ಆ ಕಾಲಾವಧಿಯಲ್ಲಿ ರಚಿತವಾದ ನನ್ನ ಕನ್ನಡ ಕವನಗಳಲ್ಲಿ (ಇಂಗ್ಲೀಷಿನಲ್ಲಿ ಕವನ ಬರೆಯುವುದು ಸಂಪೂರ್ಣವಾಗಿ ನಿಂತುಹೋಗಿತ್ತು) ಅದು ಚೆನ್ನಾಗಿ ಎದ್ದು ಕಾಣುತ್ತದೆ.  “ಏನಿಲ್ಲ! ಏನಿಲ್ಲವೆಂಬುವುದೂ ಅಲ್ಲಲ್ಲ!” ಎಂದು ಪ್ರಾರಂಭವಾಗುವ “ಬಲ್ಲವರದಾರು”? ‘ನಡೆಮುಂದೆ,’ ‘ವೇದಾಂತ ಕೇಸರಿ’ ಮೊದಲಾದ ಪ್ರಕಟಿತ ಕವನಗಳಲ್ಲದೆ ಇನ್ನೂ ಹಲವು ಅಪ್ರಕಟಿತ ಕವನಗಳಲ್ಲಿ ವೇದಾಂತಾನುಭವ, ಅಭಿವ್ಯಕ್ತಗೊಂಡಿದೆ.  ಸುಪ್ರಿಸದ್ಧವಾಗಿರುವ ‘ಗೋಮಟೇಶ್ವರ’ ಕವನವು ಸ್ವಾಮಿ ಶರ್ವಾನಂದರು ಸ್ವಾಮಿ ಸಿದ್ದೇಶ್ವರಾನಂದರೊಡನೆ ಬೇಲೂರು ಹಳೆಬೀಡು ಶ್ರವಣಬೆಳಗೋಳಗಳಿಗೆ ಹೋಗಿ ಬಂದು ತಮಗೆ ಆ ಭವ್ಯ ಮೂರ್ತಿಯಿಂದೊದಗಿದ ಆಧ್ಯಾತ್ಮಿಕ ರಸಾನುಭವಗಳನ್ನು ಕುರಿತು ಬಣ್ಣಿಸಿದಾಗ ಉನ್ಮೇಷನಗೊಂಡು ಸ್ಪೂರ್ತಿಯಿಂದ ರಚಿತವಾದದ್ದು! ನಿದರ್ಶನಕ್ಕಾಗಿ ಇದುವರೆಗೆ ಅಪ್ರಕಟಿವಾಗಿರುವ ಕೆಲವು ಕವನಗಳನ್ನು ಇಲ್ಲಿ ಕೊಡುತ್ತೇನೆ:

ಬ್ರಹ್ಮಾಪೋಷನ ! ವಿಶ್ವಭಕ್ಷಿ!          

ಅಂಬರದಿಂದುವು ತೊಳಗಿದನು;
ಕುಂಭಿನಿಯೆಲ್ಲವ ಬೆಳಗಿದನು.
ತಂಬೆಲರೆಲ್ಲಿಯು ಬೀಸಿದುದು;
ತರಣಿಯ ಮಾರ್ಗವನ್ನೀಕ್ಷಿಸುತ
ಧರಣಿಯ ತಳದೊಳು ನಾ ನಿಂತೆ!
ಭಾವಾವೇಶದಿ ನಿಂತಿರಲು
ದೇವನುಹೃದಯದಿ ಥಳಿಸಿದನು!
ಗಗನದ ಸೆರಗನು ಹಿಡಿದೆಳೆದು
ಬಗ ಬಗ ನುಂಗಲು ತೊಡಗಿದೆನು!
ಉಡುಗಣ ಒಂದರ ಮೇಲೊಂದು
ಬಿಡದೆನ್ನುದರವ ಸೇರಿದುವು!
ಕಡೆಯೊಳು ಚಂದ್ರನು ಕಾಂತಿಯಲಿ
ಪೊಡೆಯೊಳಗಿಳಿದನು ಶಾಂತಿಯಲಿ!

ಬಿತ್ತರದಂಬರ ಪೂರೈಸಿ
ಕಿತ್ತೇನು ಕಾಲವ ದೇಶವನು!
ಕಡೆಯೊಳಗಾತ್ಮನ ಆತ್ಮದಲಿ
ಅಡಗಿಸಿ ಮಾಯೆಯೆ ಚಿಮ್ಮಿದೆನು!
ಅಹಹಾ! ಶೂನ್ಯತೆ ! ಶೂನ್ಯತೆಯು!
ಅಹಹಾ! ಆನಂದಾಮಂಬುಧಿಯು!
೨೫-೮-೧೯೨೬.

ಮೇಲಿನ ಕವನ  ನಿರ್ವಿಕಲ್ಪ ಪರವಾಗಿದ್ದರೆ  ಈ ಕೆಳಗಣದ್ದು ಸವಿಕಲ್ಪ ಪರವಾಗಿದೆ.  ಸವಿಕಲ್ಪನಾನುಭವದಲ್ಲಿಯೂ ಬುದ್ಧಿ ವಿಶಿಷ್ಟವಾದ ಜ್ಞಾನಕ್ಕಿಂತಲೂ ಹೆಚ್ಚಾಗಿ ಭಾವಪೂರ್ಣವಾದ ಭಕ್ತಿಯಿದ್ದರೆ ಸಾಕು ಎಂದು ತೃಪ್ತಿ ಹೊಂದುತ್ತದೆ. ಒಂದೇ ತಾರೀಖಿದೆ ಎರಡಕ್ಕೂ!

ನಿರ್ವಿಕಲ್ಪವು ಬೇಡ
ಸವಿಕಲ್ಪವೂ ಬೇಡ,
ನಾನೆ ನೀನಾಗುವುದೂ ಬೇಡ,
ನೀನೇ ನಾನಾಗುವುದು ಬೇಡ.
ನಿನ್ನಿಂದ ನಾ ಬೆರೆಯಾಗುವುದೂಬೇಡ:
ನಿನ್ನಿಂದ ನೀ ಬೇರೆಯಾಗುವುದೂ ಬೇಡ!

ಇಹೆ ಎಂತುಟದು ಏಕೆ?
ಇಹೆ ಎಂಬುದದೆ ಸಾಕು?
ಸರ್ವ ಶಕ್ತನು ಎಂಬುದೇಕೆ ?
ಸರ್ವ ವ್ಯಾಪಿಯು ಎಂಬುದೇಕೆ?
ಸರ್ವಜ್ಞ ಎಂಬುದೆನಗೇಕೆ? ಎನಗೇಕೆ?
ಸರ್ವತ್ವದಿಂ ನಿನ್ನ ನೌಕರಿಯುಬೇಕೆ?

ಭಕ್ತಿಯೊಂದಿರೆ ಸಾಕು!
ಮುಕ್ತಿಯೇತಕೆ ಬೇಕು?
ಧ್ಯಾನದಾ ನಮ್ರತೆಯೆ ಸಾಕು!
ಜ್ಞಾನ ಗರ್ವವದೇಕೆ ಬೇಕು?
ವೇದ ವೇದಾಂತಗಳ ಮೀರಿರುವೆ ನೀನು!
ಹೇ ದೇವ, ಇದನರಿತವನೆ ಧನ್ಯ ತಾನು!
೨೫-೮-೧೯೨೬.