ಆಶ್ರಮದಲ್ಲಿ ಎಷ್ಟೋ ಸಾರಿ ಗುರುತತ್ವದ ವಿಚಾರವಾಗಿ ವಾದವಿವಾದ ನಡೆಯುತ್ತಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಕವಿ ಪ್ರಶ್ನೆ ಕೇಳಿಕೊಂಡು ಉತ್ತರ ಹೇಳುತ್ತಾನೆ:

ಗುರುವು ನಿನಗಾರೋ, ಕಿಶೋರಚಂದ್ರ?
ಪರತತ್ವಗಳನೆಲ್ಲ ಬೋಧಿಸುವ ಪರಮ
ಗುರುವು ನಿನಗಾರೋ, ಕಿಶೋರಚಂದ್ರ?

ಗುರುವೆಂಬೆನನಗೋರ್ವನಿಲ್ಲ;
ಗುರುವು ಎನಗೀ ಲೋಕವೆಲ್ಲ !
ರಮ್ಯಾರುಣೋದಯವು ಗುರುವು :
ದಿವ್ಯ ಚಮದ್ರೋದಯವು ಗುರುವು;
ಗುರುವೆನಗೆ ಕಾರ ಮುಗಿಲೋಳೀ,
ಕಂಗೊಳಿಪ ಪಸುರು ವೃಕ್ಷಾಳಿ.
ಪರಮಗುರು ಹಾಡುವ ವಿಹಂಗ:
ಸರಸಿಯೊಳು ನಲಿಯುವ ತರಂಗ.
ಗುರುವು ಝೇಂಖರಿಪ ಭಂಗಾಳಿ;
ಗುರುವು ನಲಿನಲಿವ ತಂಗಾಳಿ!
ಜನನ ಮರಣಗಳೆರೆಡು ಗುರುವು:
ಪಾಪ ಪುಣ್ಯಗಳೆರಡು ಗುರುವು.
ಸತ್ಯಮಿಥ್ಯೆಗಳೆರಡು ಗುರುವು;
ಅನಿತ್ಯ ನಿತ್ಯಗಳೆರಡು ಗುರುವು;
ವಿಶ್ವಸೊಬಗೇ ಎನ್ನ ಮಂತ್ರ!
ವಿಶ್ವೇ ಆನಂದಯಂತ್ರ!

ಗುರುವೆಂಬನೆನಗೊರ್ವನಲ್ಲ;
ಗುರುವು ಎನಗೀ ಲೋಕವೆಲ್ಲ!
೨೬-೮-೧೯೨೬.

ಮೇಲಿನ ಕವನದಲ್ಲಿ ‘ಓರ್ವ’ ಮತ್ತು ‘ಒರ್ವ’ ಪದಪ್ರಯೋಗ ಧ್ವನಿಪೂರ್ಣವಾಗಿದೆ. ಮನೋವ್ಯಾಪಾರಗಳೂ ಪ್ರಕೃತಿ ವ್ಯಾಪಾರಗಳೂ ಸಮಸ್ತ ವಿಶ್ವೂ ಜಗತ್ತು ಕವಿಗೆ ‘ಗುರು’.

೨೭-೮-೧೯೨೬ರಲ್ಲಿ ರಚಿತವಾಗಿರುವ ‘ದಾಸವಾಳದ ಹೂ’ ಸರ್ವ ಖಲ್ವಿದಂ ಬ್ರಹ್ಮ ಎಂಬ ತತ್ವ ಒಂದು ಹೂವಿನ ‘ಅಲ್ಪ’ದಲ್ಲಿಯೂ ‘ಭೂಮ’ವನ್ನೆ ದರ್ಶಿಸುವ ಕವಿಯ ಯೋಗ ಪ್ರಜ್ಞೆಗೆ ಸಾಕ್ಷಿಯಾಗುತ್ತದೆ;

ದಾಸವಾಳದ ಹೂ           

ಸಕಾಲಾನಲನಿಂ ಪೊರಮಡುವು
ಜ್ವಾಲೆಯು ನಾನಹೆ! ಹೂವಲ್ಲ!
ಬ್ರಹ್ಮಾನಂದಾಂಬುಧಿಯಲ್ಲಿ
ಪ್ರೇಮ ಸಮೀರಣ ಚುಂಬನದಿ
ಉದಿಸಿದ ವೀಚಿಯು ನಾನಹೆನು:
ಉದಯದ ಲೀಲೆಯು ಹೂವಲ್ಲ!

ಬಂದಿಹೆ ನಿತ್ಯತೆಯದೆಯಿಂದ
ತಂದಿಹೆ ನಾನಮೃತಾನಂದ!
ತೊರುವ ಎನ್ನೀ ಕೋಮಲತೆ
ಘೋರತೆ ತಾಳಿರುವಾ ವೇಷ!
ಆಡಗಿಹುದೆನ್ನೀ ಆತ್ಮದೊಳು
ಪೊಡವಿಯ ಧಗಿಸುವ ಬಡಬಾಗ್ನಿ!

ಸಮೆದುರು ತಮ್ಮಾಯುಷ್ಯವನು
ಕಮಲಜರೆಷ್ಟೊ ಎನಗಾಗಿ;
ಎಲರೊಡನಾಡುತಲಿರೆ ನಾನು
ನಲಿದಾಡುವುದೀ ಬ್ರಹ್ಮಾಂಡ!
ಒಲಿದಾಡುತ ನಾ ತಲೆದೂಗೆ
ಒಲೆದಾಡುವುದೀ ಬ್ರಹ್ಮಾಂಡ!
ಸುಮವಲ್ಲವೋ ನಾ: ಚೈತನ್ಯ!
ಸುಮಮಾಯೆಯು ಕೇವಲ ಶೂನ್ಯ!
೨೭-೮-೧೯೨೬.

೧-೯-೧೯೨೬ನೆಯ ತಾರೀಖು ಹಾಕಿರುವ ‘ಹೊಸಬ!’ ಎಂಬ ದೀರ್ಘ ಕವನದಲ್ಲಿ ಜನ್ಮವೆತ್ತುವ ಜೀವಾತ್ಮನಿಗೆ ಬಾಲ್ಯ ಕೌಮಾರ್ಯ  ಯೌವ್ವನ ನಿರಂತರವಾಗಿ ಪರಮಾತ್ಮನ ಸಂಗ ಸಾನಿಧ್ಯ ಪ್ರೇಮಾದಿಗಳಿದ್ದರೂ ಪರಮಾತ್ನ ಅಪರಿಚಿತನಾಗಿಯೆ ಉಳಿಯುತ್ತಾನೆ ಎಂಬ ಭಾವ ಅಭಿವ್ಯಕ್ತವಾಗಿದೆ. ಭಗವದ್ಗೀತೆಯಲ್ಲಿ ಬರುವ ‘ಮಮೈವಾಂಶೋ’ಜೀವಲೋಕೇ ಜೀವಭೂತಃ ಸನಾತನಃ ಎಂಬುವುದನ್ನು ಆಶ್ರಯಿಸಿ: ಎಷ್ಟು ತಿಳಿದರೂ ಎಷ್ಟು ಒಡನಾಡಿದರೂ ಬ್ರಹ್ಮವು ಅಥವಾ ಪರಮಾತ್ಮನು ಅನಿರ್ವಚನೀಯ, ಅಚಿಂತ್ಯ, ನಿತ್ಯವೂ ನೂತನ! ಅತ್ಯಂತ ಹಳಬನಾದರೂ ಯಾವಾಗಲೂ ಹೊಸಬನಾಗಿಯೆ ಉಳಿಯುತ್ತಾನೆ:

ಹೊಸಬ


ಗುರುತ್ತಿಲ್ಲವಿನ್ನೂ,
ನಿನ್ನ ಗುರುತೆನಗಿಲ್ಲವಿನ್ನೂ!

ಬಾಲತನದೊಳು ಸೇರಿ ಆಡಿದೆವು ನಾವು;
ಲೀಲೆಯಿಂದೆಒಲುಮೆಯಿಂ ಪಾಡಿದೆವು ನಾವು;
ಹರಳೂ ಶಿಲೆಗಳನಾಯ್ದೆ ವಿರ್ವರೂ ಸೇರಿ;
ಅರಳೀರುವ ಸುಮಗಳನು ಕೊಯ್ದೆವೈ ಸೇರಿ;
ಬೀದಿಯೊಳು ಧೂಳ ರಾಶಿಯ ಮಾಡಿ ಮೈಗೆ
ಮೋದದಿಂದೆರಚಿದೆವು ಮಣ್ಣಾಗೆ ಕೈಗೆ!
ಹಾರಿದೆವು ಅಂಬರಕೆ ಗಾಳಿಪಟವಾಡಿ,
ತೂರಿದೆವು ದುಃಕಗಳೀಗುಲ್ಲಸವ ನೀಡಿ!
ನೀರಾಡವಾಡಿದೆವು ಇರ್ವರು ಸೇರಿ;
ಹಾರುತಿಹ ತರಗೆಲೆಯನಟ್ಟಿದೆವು ಹಾರಿ.
ಮಳೆಬರಲು ಗುಡುಗಿದೆವು ನಾವಿರ್ವರಂದು,
ಮಳೆಯ ಕರೆದೆವು ‘ಮಳೆಯೆ ಬಾ’ ಎಂದು.

ಕೋಗಿಎಯನನುಕರಿಸಿ ಕೂಗುತಿರೆ ನಾನು
ಬೇಗ ಬಂದಂತರಂಗದಿ ನಲಿದೆ ನೀನು!
ಬಣ್ಣದ ಪತಂಗವನು ಹಿಡಿಯಲೆಳಸುತ್ತ
ಕಣ್ಣೀಗದು ಮರೆಯಾಗೆ ತಿರುಗಿದೆವು ಸುತ್ತ;
ನೀನೆನ್ನ ಹೃದಯದೊಳು ನಲಿದೆ ಬೆಳಕಾಗಿ!
ನಾನದನು ಚುಂಬಿಸಿದೆ ಬೆಪ್ಪು ಬೆರಗಾಗಿ!
ಆದರೂ ನಿನ್ನ ಗುರುತೆನಗಿಲ್ಲವಿನ್ನೂ,
ಗುರುತಿಲ್ಲವಿನ್ನೂ!

ಪರಕೀಯನಿನ್ನೂ,
ನೀಣು ಪರಕೀಯನೆನಗಿನ್ನೂ!
ಕೌಮಾರ್ಯದೊಳು ಗೆಳೆಯಂತೆ ನೀ ಬಂದೆ;
ಕೌಮಾರ್ಯದಾನಂದಗಳನ್ಲ್ಲ ತಂದೆ,
ಹಿಂದಾದ ಲೀಲೆಗಳನ್ನೆಲ್ಲ ಮಾತಾಡಿ
ಮುಂದೆ ಬಹ ವೈಭವದ ಸಂತಸವ ನೀಡಿ.
ಗಿರಿವನಗಳಲ್ಲಿ ನಾವಿರ್ವರೂ ಸೇರಿ
ಆರಿಯದೆಯೆ ಪರಮ ಸೌಂಧರ್ಯವನು ಹೀರಿ
ಸಿರಿಗೆ ಮತ್ಸರವಿತ್ತು, ನಲಿಯುತಿರೆ ನಾವು
ಕರುಬಿತ್ತೆಮ್ಮಿರವ ಕೈಲಾಗದಿಹ ಸಾವು!
ಬೆದರುತಿರೆ ಬರಿದೆ ನಾ,ಬೆದರ ಬೇಡೆಂದೆ:
‘ಪದುಮಜಾಂಡಕೆ ನೀನು ಒಡೆಯನಹೆ’ ಎಂದೆ!
ಸುಳೀಯೆ ಬಳಿಯೊಳು ಮುಂದೆ ಬಹ ಎಡರ ಛಾಯೆ
‘ಗೆಳೆಯ, ಭಯವೇಕೆ‘ಂದೆ ‘ಅವು ಬರಿಯ ಮಾಯೆ’,
ತಿರುಗಿದೆವು ದಿನದಿನವು ನಾವು ಜೊತೆಯಾಗಿ,
ಹರುಷದಿಂದಿರಳಿದೆವು ನಾವು ಜೊತೆಯಾಗಿ,
ನೀನೆನ್ನ ಕೈ ಹಿಡಿದು ನಡೆಸುವವನಾದೆ,
ನೀನೊಯ್ದು ಕಡೆಗಾನು ಚಿಂತಿಸದೆ ಹೋದೆ.
ನೀನಂದು ಎನಗಾದೆ ಜಿವನದ ಜೀವ,
ನೀನಿಲ್ಲದಿಹ ಭಾವಮದು ಶುನ್ಯಭಾವ!
ಆದರೂ ನೀನು ಪರಕೀಯನೆನಗಿನ್ನೂ,
ಪರಕೀಯ ನಿನ್ನೂ!

ಆಪರಿಚಿತನಿನ್ನೂ,
ಎನಗೆ ನೀನಪರಿಚಿತನಿನ್ನೂ!
ಯೌವನದ ಮಧುವ ನೀ ಎನಗಿತ್ತೆ ಅಂದು:
ಜವನ ನೂಂಕಿದೆ ಕುಡಿದದನು, ಮರೆಯನೆಂದೂ!
ಆಶೇ ಅಭಿಲಾಷೆಗಳ ವನದೆಡೆಗೆ ಬಂದು
ಆಶೆಗಳನಾರಿಸುತ ನಿಂತೇವಾವಂದು.
ಕದನದೊಳು ನೀನೆನಗೆ ನಿಂತ ನೆರವಾಗಿ;
ಬುಧರೊಡನೆ ವಾದಿಸಿದೆ ನಿನ್ನ ಪರವಾಗಿ.
ಎಲ್ಲವನು ಮರೆತೆ ನಾ ನಿನ್ನೊಡನೆ ಸೇರಿ,
ಉಲ್ಲಸವು ಭವಗಳ ಚುಂಬಿಸಿದೆ ನಾನಿರದೆ ನಿನ್ನ.
ಉನ್ನತ್ತನಾಗೆ ನಾ, ಅಂತೆ ನೀನಾದೆ;
ಸನ್ಮತಿಯು ಬರಲೆನಗೆ ಚಿನ್ಮಯನು ಆದೆ.
ಎನ್ನ ಹರದಯದೊಳು ನೀನಗ್ನಯಂತಿರ್ದೆ;
ನಿನ್ನ ಬಲದಿಂದಾನು ಈಶನಾಗಿರ್ದೆ,
ಆಡಿದೆವು ಪಾಡಿದೆವು ಅಗಲದೇ ಸೇರಿ,
ನೋಡಿದೆವು ನೋಟಗಳನೀರ್ವರೂ ಸೇರಿ.
ಆಗಿರ್ದೆ ನಿನೆನ್ನ ಪರಮಚೈತನ್ಯ!
ಆಗಿರ್ದುದಿರ್ವರೂ ಭಾವನ್ಯೋನ್ಯ!
ಆದರೂ ಎನಗೆ ನೀನಪರಿಚಿತನಿನ್ನೂ,
ಅಪರಿಚಿತನಿನ್ನೂ!

ಗುರುತಿಲ್ಲವಿನ್ನೂ,

ಮುದಿತನದ ಕಡೆಯ ಸೋಪಾನದೊಳು ನಾನು
ಹೆದಹದರಿ ತಡವಿ ನೋಡುತಲಿರಲು ನೀನು
ಮುದದ ಕಳಶವ ಹಿಡಿದು ಕರುಣದಿಂ ಬಂದೆ,
ಪದುಳದಿಂ ಸಂತೈಸುತೆನ್ನೆದುರು ನಿಂದೆ,
ಬಾಲ್ಯದಾ ಗೆಳೆಯ ನೀ, ಎನ್ನ ಕೌಮಾರ
ಶೀಲದಾನಂದ, ಯೌವನದ ಜೊತೆಗಾರ,
ಪಾಳಾದ ಮುದಿತನದ ಪರಮೋಕಾರಿ,
ಬಾಳೆಲ್ಲ ನಿನ್ನದೇ, ಮೃತ್ಯು ಸಂಹಾರಿ!
ಅಂದಿನಿಂದೀ ವರೆಗೆ ನೀನೆನ್ನ ಬೆನ್ನ
ಹಿಂದೆಯೆ ಬಂದೆ ಹಜ್ಜೆಯನುಸರಿಸೆನ್ನ:
ದಾರಿ ತೋರಿಸಿದೆ ದಾರಿಯನಗಲೆ ನಾನು:
ದಾರಿಯೊಳು ನಾ ಬೀಳೆ ಎತ್ತಿದೈ ನೀನು?
ದಾರಿಗರಿಗಳು ಬರಲು ಸಮರಿದೈ ನೀನು;
ದಾರಿಯೊಳಗೆನ್ನ ಹುರಿದುಂಬಿಸಿದೆ ನೀನು;
ಪಯಣದಾಯಾಸವನು ಹಿಂಗಿಸಲು ನೀನು
ಪಯಣಿಗರ ಹಾಡುಗಳ ಕಲಿಸಿದೆಯೋ ಏನು?
ನೀನೆಂದಿಗು ಎನ್ನ ಬಾಳಿನಾನಂದ!
ನೀನಿರದ ಬಾಳು ಬಾಳಲ್ಲವದು ಬಂಧ!
ಆಧರೂ ನಿನ್ನ ಗುರುತೆನಗಿಲ್ಲವಿನ್ನೂ,
ಗುರುತಿಲ್ಲವಿನ್ನೂ!
೧-೯-೧೯೨೬.

‘ದಾಸವಾಳ ಹೂ’ವಿನ ‘ಅಲ್ಪ’ದಲ್ಲಿ ‘ಭೂಮ’ವನ್ನು ಸಂದರ್ಶಿಸಿದ ವೇದಾಂತದ ಪೂರ್ಣದೃಷಟಿ ಒಂದು ಮುಗ್ದ ಶಿಶುವಿನಲ್ಲಿಯೂ ಮಹಾಚೈತನ್ಯ ಪ್ರಚ್ಛನ್ನವಾಗಿರುವುದನ್ನು ಗುರುತಿಸುತ್ತದೆ.  ೩-೯-೧೯೨೬ರಲ್ಲಿ ರಚಿತವಾದ ‘ಮೂರ್ತಿಗೆ’ ಎಂಬ ಕವನ ನಾ.ಕಸ್ತೂರಿಯ ಮಗುವನ್ನದ್ದೇಶಿಸಿದ್ದು.

ಮೂರ್ತಿಗೆ

ಬಾಲ್ಯ ರಾಜ್ಯದ ಚಕ್ರವರ್ತಿಯೆ,
ದೇವಮೂರ್ತಿಯೆ ,ಮೂರ್ತಿಯೆ,
ಯಾವ ಪರಮಾನಂದ ನಿನ್ನದು?
ಯಾವ ಸ್ವಾತಂತ್ಯ್ರ?
ಜ್ಯೋತಿ ಯಾವುದು ನಿನ್ನ ಹೃದಯದ
ಬೆಳಗಿಯೊಲಿವುದು ಪೇಳೆಲೈ?
ಯಾವ ದರ್ಶನವತುಳವೀ ಪರಿ
ನಿನ್ನ ಕೈಹಿಡಿದೆಳೆಯುತ
ಮುಂದೆ ಸಾಗಿಪುದು?

ಯಾವ ಮಾಯಾವರಣ ನಿನ್ನನು
ಧರೆಯಳಲಿನಿಂ ಪೊರೆವುದು?
ನಿನ್ನ ಕೂಗನು ಕೇಳೆ ಶೋಕವು
ಮಾಯವಾಗುವುದು.
ನಾಕ ನಿನ್ನೊಳಗವಿತುಕೊಂಡಿದೆ,
ವಿಶ್ವಮೂರ್ತಿಯೆ, ಮೂರ್ತಿಯೆ,
ಮೃತ್ಯವಳಿದುದು, ಪಾನಮಾಡಲು
ನಿನ್ನ ಲೀಲಾಮಧುವನು,
ಬಾಲ ವಿಷಕಂಠ !

ಜಗದ ಗಲಿಬಿಲಿ ನಿನ್ನ ತಾಗದು,
ಶಾಂತಿ ನೆಲೆಸಿದೆ ನಿನ್ನೋಳು;
ಜಗದ ಮತ್ಸರ ಜೂಜು ನಿನ್ನನು
ಎಂದು ಭಾದಿಸವು.
ಸಾಲವರಿಯದು, ದೂರು ಕಾಣದು,
ಚಾಡಿ ತಿಳಿಯದು ನಿನ್ನನು.
ಭಾವ ಜಗದಾನಂದ ವನದೊಳು
ಹಾಡುವಾತ್ಮ ವಿಹಂಗಮ
ಆಗಿರುವೆ ನೀನು;

ಎನ್ನ ಬಾಲ್ಯದ ನೆನಪು ಬರುವುದು
ನಿನ್ನಕೂಗನು ಕೇಳಲು;
ಮರೆತ ಹರುಷವದೊಂದು ಮನವನು
ತುಂಬಿ ನೋಯಿವುದು!
ಅಂದಿನಾ ವನ, ಅಂದಿನಾ ಹೊಳೆ,
ಅಂದಿನರುಣೋದಯಗಳು
ಒಂದರಾ ಮೇಲೊಂದು ಬರುವುವು,
ಅಂದನಿಂದಿಗೆ ತರುವುವು,
ಇಂದು ಅಂದಾಗೆ!

ಪುಣ್ಯ ಬಾಲ್ಯವು ದೇವನಂಶವು,
ಪರಮ ಪಾವನಮಾದುದು;
ಬಾಲ್ಯಲೋಕದ ಮಿಮೆ ತರುವುದು
ಜಡಕೆ ಚೇತನವ!
ಮೂರ್ತಿ, ನಿನ್ನಾನಂದ ಕಡಲಿನ
ಮೇರೆಯೆರಿಯುವುದೆಂತುಟು?
ಕೋಲ ಕುಕದುರೆಯ ಮಾಡಿ ಹೊಡೆಯುವೆ
ಬೊಮ್ಮನಿಮ್ಮಡಿಯಂದದಿ
ತುಂಬಿ ಜೀವವನು!

ಕೂಗು ಕೂಗೈ! ಕೇಕೆ ಹಾಕೈ!
ಬಾಲಯೋಗಿಯೆ, ಮೂರ್ತಿಯೆ.
ಕೇಕೆಯೋಳಿಹಾನಂದ ವಾಹಿನಿ-
ಗಿಳಿಯಲೆನ್ನಾತ್ಮ.
ಬೊಮ್ಮನೊಲುಮೆಗೆ ಹರುಷವೀಯುವ
ಬೊಮ್ಮಗವಿತೆಯು ನೀನಹೆ;
ದೇವದೂತನು ನೀನು, ಬಾಲನೆ,
ನಿನ್ನೆ ಕೇಕೆಗಳೆಲ್ಲವು
ಜನನಿಯಾದೇಶ!
೩-೯-೧೯೨೬

ಮುಂದೆ ‘ಕೀರ್ತಿಶನಿ ಮುಂತಾದ ಕವನಗಳಲ್ಲಿ ವಾಚ್ಯವಾಗಿಯೆ ಸುಪ್ರಕಟವಾದ, ಅಹಂಕಾರವನ್ನು ಬಲಿಯುವ ಕೀರ್ತಿಕಾಂಕ್ಷೆಗಿಂತಲೂ ಅಹಂಕಾರ ನಿರಸನ ಜನ್ಯವಾದ ‘ಯಶೋಲಕ್ಷ್ಮಿ’ಯೆ ಮೇಲು ಎಂಬ ಭಾವನೆಯ ಬೀಜರೂಪ ಈ ಕೆಳಗಣ ಗೀತೆಇಯಲ್ಲಿ ಅಭಿವ್ಯಕ್ತವಾಗಿರುವುದನ್ನು ಕಾಣುತ್ತೇವೆ.

ರವಿಯ ಸಂತಸವೆನಗೆ ಬೇಡ,
ಅವಿತಿರುವ ತಾಋಎಯಾನಂದವಿರಲಿ! ||ಪ||

ರಾಜನುದ್ಯಾನವನದಲ್ಲಿ
ವೈಭವದ ಸಂಕೊಲೆಯಲ್ಲಿ
ಸಿಲುಕಿ ಬೆಳೆಯುವ ಹೂವದೆಲ್ಲಿ?
ಸ್ವಾತಂತ್ಯ್ರದೊಳು ನವದಿ ಅರಳುವಲರೆಲ್ಲಿ?
ಧರೆಯ ಕಂಗಲಿಗಿನನು ತಾನು
ಪಿರಿದಾಗಿ ಕಾಣಿಸಿದೊಡೇನು?
ಪರದ ಕಂಗಳಿಗೆಸೆವ ತಾರೆ
ಪಿರಿದಾಗಿ ತೋರದೇ ಅದರ ಬಳಿಸಾರೆ?

ಶ್ರೇಷ್ಠತೆಯು ಕೀರ್ತಿಯೋಳಗಿಲ್ಲ;
ಖ್ಯಾತಿಯದು ಶಾಶ್ವತವೂ ಅಲ್ಲ;
ಜ್ಯೋತಿ ತಾನಾನಂದವಲ್ಲ;
ಅಜ್ಞಾತದಾನಂದಕಾವುದೇಣೆಯಿಲ್ಲ!
೫-೯-೧೯೨೬

ಸಶೇಷವಾಗಿರುವ ‘ಭೈಗು ಗಗನ’ ಎಂಬ ಚಿಕ್ಕ ಕವನ ಕವಿಯ ಆಗಿನ ಮನವನ್ನೆಲ್ಲ ಆವರಿಸಿದ್ದ ತಾತ್ವಿಕ ಚಿಂತನೆ ಜಿಜ್ಞಾಸೆ ಆತ್ಮಾನುಸಂಧಾನ ಇವುಗಳ ಮಧ್ಯೆ ಆತನ ಸಹಜ ಪ್ರಕೃತಿ ಸೌಂಧರ್ಯ ವೀಕ್ಷಣೆಯು ತಪ್ಪದೆ ಸಾಗುತ್ತಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಆಧರೆ ಕವನ ‘ಸಶೇಷ’ವಾಗಿರುವುದನ್ನು ಓಡಿದರೆ ಮುಖ್ಯ ಆಸಕ್ತಿ ತತ್ಕಾಲದಲ್ಲಿ ಆದಾಗಿರಲಿಲ್ಲವೆನ್ನಬಹುದೇನೋ?

ಬೈಗು ಗಗನ

ಯಾರ ಮೋಹಿಸಲೆಂದು
ಬೈಗಿನಾಕಾಶದೊಳು
ಚಿತ್ರ ಬರೆಯುವೆ ನೀನು,
ಎಲೆ ಚಿತ್ರಗಾರ?

ಕವಿಮನದ ಭಾವಗಳ
ಚಾಳಿಸು ಯತ್ನಮೋ?
ಧರೆಯ ಸೌಂಧರ್ಯವನು
ಏಳಿಪೆಯೊ ನೀನು?
ಯಾವ ಕಡಲನು ಸೇರೆ
ಹರಿಯುತಿಹುದಾ ಹೊಳೆಯು?
ಏತಕಾಗಿರುವುದಾ
ಗಿರಿಶಿಖಿರದೊಳಿ?
ಯಾವ ಬಂದರಿಗಾಗಿ
ತೆಲುತಿಹುದಾ ನಾವೆ?
ಕಾಲದೇಶಾತೀತ-
ವಾಗಿಹುದು ಪಯಣ!
(ಸಶೇಷ)

ಇದೇ ಸಮಯದಲ್ಲಿ ಬರೆದ (೧೭-೯-೧೯೨೬) ‘ಗೋಮಟೇಶ್ವರ’ ‘ಹಾಡುವನು ಹಾಡುವನು’ ಎಂದು ಪ್ರಾರಂಭವಾಗುವ ‘ಗಾನದರ್ಶನ’ ಎಂಬ ಕವನಗಳು ‘ಕೊಳಲು’ ‘ಷೋಡಶಿ’ ಕವನ ಸಂಗ್ರಹಗಳಲ್ಲಿ ಪ್ರಕಟವಾಗಿ ಸುಪ್ರಸಿದ್ಧವಾಗಿವೆ. ‘ಗೋಮಟೇಶ್ವರ’ ಹೇಗೆ ಮೂಡಿತು ಎಂಬ ವಿಚಾರವಾಗಿ ಹಿಂದೆಯೇ ಹೇಳಲಾಗಿದೆ. ‘ಗಾನದರ್ಶನ’ದ ವಿಚಾರವಾಗಿ ಒಂದು ಮಾತು ಹೇಳಬಹುದೆಂದು ತೋರುತ್ತದೆ.  ವೇಣುವಾದನವನ್ನು ಕೇಳಿದಾಗಲೆಲ್ಲ ನನ್ನ ಕಲ್ಪನಾಲೋಕದಲ್ಲಿ ಶ್ರೀ ಕೃಷ್ಣ ಗೋಪಿಯರ ರಾಸಲೀಲೆ ಮೂಡುತ್ತಿ‌ತ್ತು: ಮೂಡುತ್ತದೆ; ಸುಂದರ ನಂದನ ಬೃಂದಾವನದಲ್ಲಿ ಬೆಳ್ದಿಂಗಳಲ್ಲಿ ಶ್ರೀಕೃಷ್ಣನು ಕೋಲಲು ಭಾರಿಸುತ್ತಿರುವಂತೆಯೂ ಅವನ ಸುತತಲೂ ಗೋಪಯರು ನೃತ್ಯಲಾಸ್ಯಗಳಲ್ಲಿ ವರ್ತುಲವಾಗಿ ಚಲಿಸುತ್ತಿರುವಂತೆಯೂ! ಈ ಪ್ರತಿಮೆ ಭಗವಂತನಿಗೂ ಕಾಲದೇಶಾತ್ಮಕವಾದ ಅವನ ಸೃಷ್ಟಿಗೂ ಸಂಕೇತವಾಗಿ ಆ ಕವನದಲ್ಲಿ ಮೂಡಿದೆ.

ಹಾಗೆಯೆ ಬಂಧ ಮತ್ತು ಮುಕ್ತಿ ಸುಖ ಮತ್ತು ದುಃಖ ಇವುಗಳ ವಿಚಾರವಾಗಿಯೂ ವೇದಾಂತ ಜಿಜ್ಞಾಸೆ ವಿಷಯವಾಗಿ ನಡೆಯುತ್ತಿದ್ದ ಕಾಲವದು. ಮುಕ್ತಿಯಿಹುದೆಲ್ಲಿ? ಎಂಬ ಪ್ರಶ್ನೆಗೆ ಉತ್ತರ ಬಂಧನದ ಹೃದಯದಲ್ಲಿ! ಆನಂದಮೆಲ್ಲಿ? ಎಂಬ ಪ್ರಶ್ನೆಗೆ ಉತ್ತರ: ಶೋಕದಾಂತ್ಯರದಲ್ಲಿ!

ಮುಕ್ತಿಯಿಹುದೆಲ್ಲಿ?
ಬಂಧನದ ಹೃದಯದಲ್ಲಿ!

ಸುಮದ ಮುಕ್ತಿಯ ಪಡೆಯೆ
ಬೀಜ ತಾ.ಮೊಳೆತು, ಗಿಡ
ವಾಗಿ, ಮರವಾಗುವಾ
ಭಾರದಾ ಬಂಧನವ-
ನಪ್ಪಿದುದ ಕಂಡೆ!

ಮುಕ್ತಿಯಿಹುದೆಲ್ಲಿ?
ಬಂಧನದ ಹೃದಯದಲ್ಲಿ!
ಆನಂದಮೆಲ್ಲಿ?
ಶೋಕಾದಾಂತರ್ಯದಲ್ಲಿ!
ಧರಣಿ ಉರ್ವರೆಯಾಗ –
ಉರಿದುರಿದುತಾಳೆಮಯಿಂ
ಯುಗಯುಗಗಳಾ ಶೋಕ-
ಮಂ ಸಹಿಸದೆ ಸಸ್ಯ-
ದಾನಂದಕಾಗಿ
ಆನಂದಮೆಲ್ಲಿ?
ಶೋಕದಾಂತ್ಯದಲ್ಲಿ!
೨೫-೯-೧೯೨೬.

ಪರಮಾತ್ಮನ ಸನಾತನ ಅಂಶವಾದ ಜೀವಾತ್ಮನು ಲೀಲಾಲೋಕಕ್ಕೆ ಜನ್ಮವೆತ್ತಿದರ ಉದ್ದೇಶ ಲೀಲೆಯೆ. ಆದ್ದರಿಂದ ನಿರಪೇಕ್ಷ! ನಿಂದೆ ಸ್ಥುತಿ ಗಳ ಹಂಗಿಲ್ಲ: ಲಾಭ ನಷ್ಟಗಳಿಲ್ಲ; ಯಾವ ನಿರ್ಬಂಧವೂ ಇಲ್ಲ; ಅವನೊಡನೆ ಸೃಷ್ಟಿ ಸಮಸ್ತವೂ ಲೀಲಾತ್ಮಕವಾಗುತ್ತದೆ. ೨೮-೯-೧೯೨೬ರಲ್ಲಿ ರಚಿತವಾಗಿರುವ ಈ ಕವನ ಅ ನಿರಪೇಕ್ಷತೆಯ ಮತ್ತು ನಿರಂಕುಷತೆಯ ಭಾವವನ್ನು ಅಭಿವ್ಯಕ್ತಗೊಳಿಸುತ್ತದೆ;

ದೂರದಾ ಕಾನನದಿ ಜನಿಸಿ ಬೆಳೆದು
ಯಾರರಿಯದಂತಿಳೀವ ಸುಮವು ನಾನು!
ಬರುವ ಸುಖಕಾಗಿಯೇ ಬಂದಿರುವೆ ನಾನು.
ಇರುವ ಸುಖಕಾಗಿಯೇ ಇರುತಿಹೆನು ನಾನು;
ಬೆಳೆವ ಸುಖಕಾಗಿಯೇ  ಬೆಳೆಯುತಿಹೆ ನಾನು;
ಅಳಿವ ಸುಖಕಾಗಿಯೇ ಅಳಿಯುವೆನು ನಾನು;

ಏಕೆಂದು ಕೆಳದಿರು ಎನ್ನ ನೀನು.
ಏಕೆಂದರಾಟಕುದ್ದೇಶವೇನು?
ತುಂಬಿಗಳ ಬರುವ ನಾ ಹಾರೈಸನೆಂದೂ;
ತುಂಬಿಡುವೆ ನವ ಮಧುವನದು ಲೀಲೆ ಎಂದು.
ಪರಿಮಳವ, ಯಾರಿರಲಿ, ಯಾರಿಲ್ಲದಿರಲಿ,
ಎರಚುವೆನು, ನುತಿ ನಿಂದೆ ಎಂತಾದರಿರಲಿ!

ಪಂಡಿತರ ಬಹುಮಾನವೆನಗೆ ಬೇಡ,
ಕಂಡವರ ಕೈಮುಗಿವುದೆನಗೆ ಬೇಡ.

ಬಿಡುಗಡೆಯ ಹೊಂದಿಹೆನು, ಎನಗಿಹುದೆ ಬಂಧ?
ಪಡೆಯಲೆನಗೇನಿಲ್ಲ; ಕೊಡುವುದಾನಂದ!
ಲಾಭ ಬಯಕೆಯ ಮಾಡೆ ನಾ ಗಂಧದಿಂದ;
ಎನಗಿನಿತುಮಿಲ್ಲವೈ ನಿಯಮ ನಿರ್ಬಂಧ!

ಸೋತವರ ಸಂತೊಷವೆನ್ನ ಹರುಷ!
ಖ್ಯಾತಿ ಗಾನೆಂದು ಮಜ್ಞಾತ ಪುರುಷ;
ವೈಭವದಿ ಮೆರೆಯುತಿರಲರಸುಗಳ ಪೀಠ;
ರತ್ನ ಶೋಭೆಯ ನೀಡಲರವಾ ಕಿರೀಟ.
ಪಂಡಿತರು ಹೋರಾಡಲೈ ಹೆಮ್ಮೆಗಾಗಿ:
ನಲಿವೆನಾಂ ಕಾನನದೊಳಜ್ಞಾತನಾಗಿ!

ದೂರದಾ ಕಾನನದಿ ಜನಿಸಿ ಬೆಳೆದು
ಯಾರರಿಯದಂತಳಿವ ಸುಮವು ನಾನು!
ಕರುಣಾರೊಣೋದಯದಿ ಬೀಸೆ ತಂಗಾಳಿ
ನವಸೊಬಗಿನಿಂ ಮೆರೆಯೆ ಮಧುವನಗಳೋಳಿ
ತಿರುತಿರುಗಿ ಝೇಂಕರಿಸೆ ಮುಕ್ತ ಭೃಂಗಾಳಿ
ಬ್ರಹ್ಮನಂ ತೂಗುವೆನು ಜೋಗುಳವ ಹೇಳೀ!

ಎನ್ನೊಡನೆ ತೂಗುವುದು ವಿಶ್ವವೆಲ್ಲ!
ಎನ್ನೊಡನೆ ನಲಿಯುವುದು ಬ್ರಹ್ಮವೆಲ್ಲ!
ಎನ್ನೊಡನೆ ಸೂರ್ಯ ಚಂದ್ರರು ತಾರೆಯಾಳಿ
ಸಂತಸದಿ ನಲಿಯುವರು ಸುಮತಾಳ ಹಾಕಿ!
ಸವೃಸೃಷ್ಟಿಯ ತತ್ವ ಸಂಗೀತವಾಗಿ
ಹಿಗ್ಗುವುದು ಓಂಕಾರ ಪಲ್ಲವಿಯ ಹಾಡಿ!
೨೮-೯-೧೯೨೬

೫-೧೦-೧೯೨೬ ರಂದು ರಚಿತವಾದ ಕವನ ‘ತಾಯಿಯೊಡನಢುವುದು ಇಂತುಂಟೆಂದು ಬೋಧಿಸುವುದುಎನಗೆ ಬೇಡ’ ಎಂದು ಪ್ರಾರಂಭವಾಗುತ್ತದೆ. ಅದು ‘ಒಡನಾಟ’ ಎಂಬ ಶಿರ್ಷಿಕೆಯಲ್ಲಿ ‘ಮೆಘಪುರ’ ಎಂಬ ಶಿಶುಗೀತೆಗಳ ಸಂಗ್ರಹದಲ್ಲಿ ಅಚ್ಚಾಗಿದೆ. ಅದರಲ್ಲಿ ಸಂಪ್ರದಾಯ, ಶಾಸ್ತ್ರಗಳನ್ನೆಲ್ಲ ಮೂಲೆಗೊತ್ತಿ ನನ್ನ ತಾಯೊಡನೆ ಆಡುತ್ತೇನೆ ಎಂಬ ಎಲ್ಲ ಕಟ್ಟುನಿಟ್ಟು ಬಮಧನಗಳ ನಿರಾಕರಣೆಯಿದೆ. ಹೀಗೆ ಕವಿಯ ಬಾಳು ನಾನಾ ಚಿಂತನೆಗಳಲ್ಲಿ ಅದರ್ಶಗಳಲ್ಲಿ ತತ್ವಗಳಲ್ಲಿ ಆಕಾಂಕ್ಷೆಗಳಲ್ಲಿ ಊರ್ಧ್ವಮುಖ ಪ್ರವಾಸಿಯಾಗಿದ್ದ ಮಾತ್ರಕ್ಕೆ ಅದು ಐಂದ್ರಿಯ ಮಾನಸಿಕ ಅರಿಷಡ್ ವರ್ಗಗಳಿಂದ ಪಾರಾಗಿತ್ತೆಂದು ಭಾವಿಸುವುದು ತಪ್ಪಾಗುತ್ತದೆ.  ಪ್ರಾಣಮಯಕ್ಕೆ ಸೇರಿದ ಅಸುರೀ ಶಕ್ತಿಗಳು ಅವನನ್ನು ಮೇರೆರದಂತೆ ಜಗ್ಗಿಸಿ ಎಳೆಯುತ್ತಿದ್ದವು. ಅವುಗಳಿಂದ ತನ್ನನ್ನು ಪಾರುಮಾಡಬೇಕೆಂದು ನಿರಂತರವಾಗಿ ತಾಯಿತೆ ಪ್ರಾರ್ಥನೆ ಸಲ್ಲುತ್ತಲೇ ಇತ್ತು ೫-೧೦-೧೯೨೬ನೆಯ ತಾರಖಿನಲ್ಲಿಯೆ ರಚಿತವಾದ ಈ ಕೆಳಗಿನ ಚಿಕ್ಕ ಪ್ರಾರ್ಥನೆ ಗೀತೆ ಅದನ್ನು ಸಮರ್ಥಿಸುತ್ತದೆ.

ಕ್ಷಣಮಾತ್ರ ಹೀನ ಬಯಕೆಗಳ ಬಿಸುಡು, ಮನವೆ!
ಕ್ಷಣ ಮಾತ್ರ ಪರಮ ಬಯಕೆಯನು ಬಯಸು, ಮನವೆ!
ಧೂ ಪರಿವೃತಮಾದ ಭೂಮಿಯಿಂ ಮೇಲೇರು
ನಿರ್ಮಲಾನೀಲ ಭರಿತ ನೀಲ ಗಗನವ ಸೇರು.
ಕೊಳೆತು ನಾರುವ ತಿಪ್ಪೆಯಂ ತ್ಯಜಿಸಿ ಹಾರು.
ರಮಣೀಯತರ ಸುಮದ ನವಮಧುವ ಹೀರು.
ಕ್ಷಣ ಮಾತ್ರ ಹೀನ ಬಯಕೆಗಳ ಬಿಸುಡು, ಮನವೆ!
ಕ್ಷಣ ಮಾತ್ರ ಪರಮ ಬಯಕೆಯನು ಬಯಸು, ಮನವೆ!

ನನ್ನ ಪ್ರಾರ್ಥನೆ ಓಗೊಡುವಂತೆ ಕ್ಲೇಶರೂಪಿ ಭಗವತ್ ಕೃಪೆಯ ಗದೆಯಾಘಾತ ಬಂದೆರಗಿತು. ಕೊಳೆತು ನಾರುವ ತಿಪ್ಪೆಯಿಂದ ನನ್ನನ್ನು ರಮಣೀಯೆತರ ಸುಮಧುರ ನವಮಧುವಿರುವ ಉದ್ಯಾನದೆಡೆಗೆ ಕಚ್ಚಿ ಹಾರಿತು ಈ ವಿಧಿಯ ಉಗುರುಗೊಕ್ಕು! ಆದರೆ ಆಗ ಅದರ ಅರವಿಲ್ಲದ ನಾನು ಕಂಗೆಟ್ಟು ಹೋದೆ, ಕಂಗಾಲಾದೆ! ದಿನಚರಿ ಬರೆದಿದ್ದರೆ ಅದರ ನಾಟಕೀಯ ವಿವರವನ್ನು ಕೊಡಬಹುದಾಗಿತ್ತು.  ಅದು ಇಲ್ಲ. ನನ್ನ ಹಸ್ತಪ್ರತಿಯಲ್ಲಿ ೫-೧೦-೧೯೨೬ರಲ್ಲಿ ಬರೆದ ಮೇಲಿನ ಪ್ರಾರ್ಥನಾಗೀತೆಯ ತರುವಾಯದ ಗೀತೆ ‘ಘೋರ ಘನ ನಿಬಿಡ ತಿಮಿರವಿದು, ತಾಯೆ’ ದಾರಿಗಾಣೆನು ಬಾ, ಕೈಹಿಡಿದು ನಡೆಸೆನ್ನನು!’ ಎಂದು ಪ್ರಾರಂಭವಾಗುತ್ತದೆ. ಅದನ್ನು ಬರೆದ ತಾರೀಖು ೨೧-೧೦-೧೯೨೬. ಆ ಹದಿನೈದು ದಿನಗಳ ಅಂತರ ನಾನು ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ರೋಗಶಯ್ಯೆಯಲ್ಲಿದ್ದೆನೆಂದು ಭಾವಿಸುತ್ತೇನೆ.