ಅವೊತ್ತು ಸಂಜಿ ಶ್ರೀರಾಮಕೃಷ್ಣಾಶ್ರಮದಲ್ಲಿ ‘ವಿವೇಕಾನಂದ ರೊವರ ಸ್ಕೌಟ್ಸ್’ ದಳವನ್ನು ವಿಧಿವತ್ತಾಗಿ ಮೈಸೂರು ಸಂಸ್ಥಾನದ ಸ್ಕೌಟ್ ಪಡೆಗೆ ಸೇರಿಸಿಕೊಳ್ಳುವ ದೀಕ್ಷೋತ್ಸವ ಸಮಾರಂಭ ಸಾಗಿತ್ತು. ಸ್ಕೌಟ್ ದಳದ ಮುಖ್ಯಸ್ಥರಾಗಿದ್ದ ನಾ.ಕಸ್ತೂರಿ ಸ್ಕೌಟ ಸಮವಸ್ತ್ರ ಧರಿಸಿ ತಮ್ಮ ವಿದ್ಯಾರ್ಥಿ ಸ್ಕೌಟುಗಳೊಡನೆ ಶಿಸ್ತು ಕವಾತು ನಡೆಸಿದ್ದರು. ಸಂಸ್ಥಾನದ ಸರ್ವೊನ್ನತ ಕೌಟ್ ಕಮೀಷನರ ವಿಧಿವತ್ತಾಗಿ ಆಶಿರ್ವಧಿಸಲು ಬಂದಿದ್ದರು. ಬಹುಶಃ ನಾನು ಬರೆದಿದ್ದೆ ‘ಶ್ರೀ ವಿವೇಕಾನಂದ ಬಾಲಚಾರರ ಹಾಡು’ ಸಾಮೂಹಿಕವಾಗಿ ಹಾಡಲ್ಪಟ್ಟಿರಬಹು. ಅದನ್ನು ಆಲಿಸಿ ಮೆಚ್ಚಿದ ಸ್ವಾಮಿ ಸಿದ್ದೇಶ್ವರಾನಂದರು ” ಪುಟ್ಟಪ್ಪ ಏಕೆ ಇತ್ತೀಚೆಗೆ ಆಶ್ರಮಕ್ಕೆ ಬರುತ್ತಲೇ ಇಲ್ಲ, ದಿನವೂ ತಪ್ಪದೇ ಬರುತ್ತಿದ್ದವು?” ಎಂದು ವಿಚಾರಿಸಿದರು. ಹತ್ತಿರವಿದ್ದು ಕೇಳಿಸಿಕೊಂಡ ಒಬ್ಬ ವಿದ್ಯಾರ್ಥಿ ಸ್ಕೌಟ್ ಲಕ್ಷ್ಮಣ, “ಅವರಿಗೆ ಸ್ವಸ್ಥವಿಲ್ಲವಂತೆ .” ಎಂದನು. ಅದನ್ನು ಕೇಳಿ ಸ್ವಾಮಿಜಿ ಆಂತಕಗೊಂಡವರಾಗಿ “ಹಾಗಾದರೆ ಅವರ ಸಂತೆಪೇಟೆ ರೂಮಿಗೆ ಹೋಗಿ ವಿಚಾರಿಸಿಕೊಂಡು ಬಾ ಹೋಗು” ಎಂದು ಆತನನ್ನು ಕಳಿಸಿದರು. ಆತ ಹೋಗಿ ಬಂದು, ನಾನು ತುಂಬ ಜ್ವರಗ್ರಸ್ತನಾಗಿ ಏಕಾಕಿಯಾಗಿ ಹಾಸಗೆ ಹಿಡಿದಿದ್ದ ವಿಚಾರ ತಿಳಿಸಿದನು ಸ್ವಾಮಿಜಿಗೆ. ಸ್ವಾಮಿಜಿ ಕಸ್ತೂರಿಗೆ “ಹೋಗಿ ನೋಡಿಕೊಂಡು ಬರೋಣ, ಒಬ್ಬರೆ ಮಲಗಿದ್ದಾರಂತೆ. ವೈದ್ಯ ಶುಶ್ರೂಷೆ ಇದೆಯೊ ಇಲ್ಲವೋ?” ಎಂದರು. “ಆಗಲಿಸ್ವಾಮಿಜಿ, ಇನ್ ವೆಸ್ಟಿಚರ್ ಸೆರಿಮನಿ ಮುಗಿದ ಮೇಲೆ ನಮ್ಮ ಸ್ಕೌಟ್ಗಳೊಡನೆಯೇ ಹೋಗೋಣ, ಸೇವೆಗೆ. ನಮ್ಮ ವಿವೇಕಾನಂದ ರೋವರ್ ಸ್ಕೌಟ್ ದಳದ ಮೊತ್ತ ಮೊದಲನೆಯ ‘ಗುಡ್ ಟರ್ನ್’ ಅದೇ ಆಗಲಿ, ಪುಟ್ಟಪ್ಪನವರ ಸೇವೆ!” ಎಂದರು, ಅವರ ರೂಢಿಯೆ ಸಂತಗೋಷಶೀಲದ ವಿನೋದಾತ್ಮಕ ರೀತಿಯಲ್ಲಿ.
ನಾನು ಹಿಂದೆಯೆ ತಿಳಿಸಿರುವಂತೆ ನನ್ನ ಆರೊಗ್ಯ ಕ್ರಮೇಣ ಕೆಡುತ್ತಲೇ ಇತ್ತು. ವ್ಯಾಯಾಮ, ಸಂಜೆಯಲ್ಲಿ ದೂರ ತಿರುಗಾಟ, ಯೋಗಾಂಗಾಸನಗಳು, ಟಾನಿಕ್ ಮುಂತಾದವುಗಳಿಂದ ದೇಹಪಟುತ್ವವನ್ನುಕಾಪಾಡಿಕೊಳ್ಳು ಪ್ರಯತ್ನಗಳೇನೋ ನಡೆಯುತ್ತಿದ್ದುವು. ಆದರೂ ಮಲೆನಾಡಿಗೆ ಹೋಗಿ ಬಂದಾಗಲೆಲ್ಲ ಮಲೇರಿಯಾ ಕಾಣಿಸಿಕೊಳ್ಳುತ್ತಿತ್ತು. ಔಷಧಿ ಕುಡಿದು ಶಮನವಾಗುತ್ತಿತ್ತು. ಶಮನವಾಗುವುದೆಂದರೆ ಏನು? ಮಲೇರಿಯಾ ಕ್ರಿಮಿಗಳು ನಾಶವಾಗುತ್ತಿರಲಿಲ್ಲ! ಸ್ಥಳ ಬದಲಾಯಿಸುತ್ತಿದ್ದುವಷ್ಟೆ! ರಕ್ತದಿಂದ ತೊಗಿ ಗುಲ್ಮದಲ್ಲಿ ಆಶ್ರಯ ಪಡೆಯತುತಿದ್ದವು. ಜ್ವರಗಡ್ಡೆ ಯಾವಾಗಲೂ ಇದ್ದೆ ಇರುತ್ತಿತ್ತು. ಆ ಜೀವಾಣುಗಳಿಗೆ ಸುಸಮಯ ಒದಗಿದಾಗ ಮತ್ತೇ ರಕ್ತಕ್ಕೆ ಸೇರಿ ಜ್ವರ ಕಾಣಿಸಿಕೊಳ್ಳುತ್ತಿತ್ತು. ಈ ಸಾರಿ ಜ್ವರ ಕಾಣಿಸಿಕೊಂಡಾಗ ನಾನು ಔಷಧಿ ಕುಡಿದು ಎಂದಿನಂತೆ ಶಮನವಾಗುತ್ತದೆ ಎಂದು ಭಾವಿಸಿದ್ದೆ. ಆದರೆ ಜ್ವರ ಬಂದಿದ್ದು ಬಿಡಲೆ ಇಲ್ಲ. ಮೈಸುಡುತ್ತಿತ್ತು. ಬಹುಶಃ ಥರ್ಮಾಮೀಟರ ಇಟ್ಟು ನೋಡಿದರೆ ೧೦೪ ಡಿಗ್ರಿಯಿಂದ ೧೦೫ ಡಿಗ್ರಿ ಇರುತ್ತಿತ್ತೋ ಏನೋ? ಹೋಟಲಿನವರು ಗಂಜಿ ನೀರು ತಂದು ಕೊಡುತ್ತಿದ್ದರು. ನಾನುಸುಸ್ತಾಗಿ ಕೆಳಗೆ ಮೇಲೆ ಸಂಚರಿಸುವುದು ಕಷ್ಟವಾಗಿ, ಹಾಸಗೆ ಹಿಡಿದ ಮೇಲೆ ಅದರೂ ಮಲಮೂತ್ರ ವಿಸರ್ಜನೆಗೆ ಮೇಲೆ ನುಕೂಲವಿರಲಿಲ್ಲವಾಗಿ ನಾನು ಸುಡುಜ್ವರದಲ್ಲಿಯೆ ಇದ್ದು ಕೆಳಗಿಳಿದು ಹೋಗಿ ಸಾರ್ವಜನಿಕ ಕಕ್ಕಸ್ಸಿನಲ್ಲಿ (ಅದರ ಬಣ್ಣನೆ ಹಿಂದೆ ಮಾಡಿದ್ದೇನೆ!) ಎಲ್ಲ ತೀರಿಸಿಕೊಳ್ಳಬೇಕಾಗಿತ್ತು. ಇದರ ಜೊತೆಗೆ ನನಗೆ ಹೋಟೇಲಿನ ಆಹಾರದೋಷದಿಂದಲೂ ಸಂಪರ್ಕ ಮಾಲಿನ್ಯದಿಂದಲೂ ರಕ್ತ ಕೆಟ್ಟು ಕಜ್ಜಿ ಕುರು ನಿತ್ಯ ಸಂಗಾತಿಗಳಾಗಿದ್ದುವು. ( ಈ ಕಜ್ಜಿ ಕುರುಗಳಿಂದ ನಾನು ಆಶ್ರಮ ಸೇರಿದ ಮೇಲೆ ಹೇಗೆ ಸ್ವಾಮಿಜಿಯ ಆಯುರ್ವೆದ ಔಷಧಿಗಳಿಂದ ಪಾರಾದೆ ಎಂಬುವುದನ್ನು ಮುಂದೆ ಹೇಳುತ್ತೇನೆ),. ಆಗ ನನ್ನ ರೂಮಿನಲ್ಲಿ ನಾನೊಬ್ಬನೆ ಇದ್ದೆ. ತಿಮ್ಮಯ್ಯ ಮಾನಪ್ಪ ಓದುಬಿಟ್ಟು ಮನೆ ಸೇರಿದ್ದರು. ಇತರೆ ಸಹನಿವಾಸಿಗಳಾಗಿದ್ದ ಮಿತ್ರರು ಕಾಲೇಜು ಸೇರಿ ಬೆಂಗಳೂರಿಗೂ ಮತ್ತೆಲ್ಲಿಗೋ ಹೋಗಿದ್ದರು. ಜ್ವರ ಇಂದು ಬಿಡುತ್ತೆ ನಾಳೆ ಬಿಡುತ್ತೆ ಎಂದು ವಿಶ್ವಾಸದಿಂದ ಹಾಸಗೆಯ ಬಳಿ ಸ್ವಾಮಿ ವಿವೇಕಾನಂದರು, ಶ್ರೀರಾಮಕೃಷ್ಣರು, ಇಂಗ್ಲೀಷ್ ಕವಿಗಳ ಭಗವದ್ಗೀತೆ ಉಪನಿಷತ್ತು ಮೊದಲಾಧ ಕೃತಿಗಳನ್ನೂ ಜೀವನ ಚರಿತ್ರೆಗಳನ್ನು ಕುತ್ತುರೆ ಹಾಕಿಕೊಂಡು , ಓದುತ್ತಾ ಧೈರ್ಯ ತುಂಬಿಕೊಳ್ಳುತ್ತಾ ಪ್ರಾರ್ಥಿಸುತ್ತಾ ಹಗಲು ರಾತ್ರಿಗಳನ್ನು ಕಷ್ಟದಿಂದ ಕಳೆಯುತ್ತಾ ಹಾಸಗೆ ಹಿಡಿದಿದ್ದೆ. ಇಂತಹ ಸಂದರ್ಭಗಳಲ್ಲಿ ನನ್ನ ವರ್ತನೆ ವಿಚಿತ್ರವಾಗಿತ್ತು. ಬೇಜವಾಬ್ದಾರಿಯದಾಗಿತ್ತು ಎಂದೇ ಹೆಳಬೇಕಾಗುತ್ತದೆ. ಏಕೆಂದರೆ ನಾನು ಮನೆಗೆ ನನಗೆ ಹೀಗಾಗಿದೆ ಎಂದು ಯಾವಾಗಲೂ ಕಾಗದ ಬರೆಯುತ್ತಿರಲಿಲ್ಲ. ಇತರರಿಂದ ಹೇಗೋ ತಿಳಿದೆ ಅವರು ನೆರವು ಒದಗುತ್ತಿತ್ತು. ಹೋಗಲಿ, ಮನೆಗಂತೂ ಬರೆಯುತ್ತಿರಲಿಲ್ಲ; ಹತ್ತಿರವೇ ಇದ್ದ ಸ್ವಾಮೀಜಿಗಾದರೂ ತಿಳಿಸಬಹುದಿತ್ತಲ್ಲ. ‘ನಾನು ಮಹಾ ಯಾರು? ಸ್ವಾಮಿಜಿಯಂತಹವರು ಬಂದು ಹೊಣೆವಹಿಸುವುದಕ್ಕೆ? ಅಲ್ಲದೆ ಅವರಿಗೇಕೆ ತೊಂದರೆ ಕೊಡುವುದು?’ ಎಂದೋ ಏನೋ ಆಶ್ರಮಕ್ಕೂ ನನಗೆ ಕಾಯಿಲೆಯಾಗಿರುವ ಸುದ್ಧಿ ಮುಟ್ಟಿಸಿರಲಿಲ್ಲ. ಎಲ್ಲಕ್ಕಿಂತಲೂ ಹೆಚ್ಚಾಗಿ, ‘ತಾಯಿ’ ಇದ್ದಾಳೆ. ಯೋಗಕ್ಷೇಮವೆಲ್ಲ ಅವಳ ಕೈಲಿ’. ಎಂಬ ಭರವಸೆಯಿಂದ ಜಗಜ್ಜನನಿಯ ಮೇಲೆ ಭಾರ ಹಾಕಿ ಪ್ರಾರ್ಥಿಸುತ್ತಾ ಕಾಲ ಹಾಕುತ್ತಿದ್ದೆ.
ಬೈಗು ಕತ್ತಲಾಗುತ್ತಿತ್ತು. ವಿದ್ಯುದೀಪಗಳೂ ಹೊತ್ತಿದ್ದುವು. ಸಂತೆಪೇಠೆಯ ಗಲಿಬಿಲಿ ಗಲಾಟೆಗೆ ಇನ್ನೂ ವಿರಾಮ ಕಾಲ ಸಮೀಪಿಸಿರಲಿಲ್ಲ. ಆದರೆ ನಾನುಮಲಗಿದ್ದ ಆನಂದಮಂದಿರದ ಉಪ್ಪರಿಗೆಯ ಕೊಠಡಿಗೆ ಆ ಸದ್ದು ಗದ್ದಲಕ್ಕೆ ಅಷ್ಟಾಗಿ ಹೆಚ್ಚೇನೂ ಪ್ರವೇಶ ದೊರೆಯುವಂತಿರಲಿಲ್ಲ. ನನ್ನ ರೂಮಿನ ವಿದ್ಯುದೀಪವೂ ಹೊತ್ತಿತ್ತು. ಬಾಗಿಲು ಮುಚ್ಚಿತ್ತು; ಅಗಣಿ ಹಾಕಿರಲಿಲ್ಲ; ಇದ್ದಕ್ಕಿದ್ದಂತೆ ಹಲವರು ಸೋಪಾನಗಳನ್ನೇರಿ ಉಪ್ಪರಿಗೆಗೆ ಬರುವ ಸದ್ದು! ನನ್ನ ಕೊಠಢಿಯ ಬಾಗಿಲ ಬಳಿಗೂ ಬಂದರು! ನನ್ನ ಹೆಸರನ್ನು ಕೂಗುತ್ತಲೇಬಾಗಿಲೂ ತೆರೆಯಿತು! ಸ್ವಾಮಿಜಿ, ಕಸ್ತೂರಿ, ತಾತಾಗಾರು ಒಳಕ್ಕೆ ಬಂದರು. ಲಕ್ಷ್ಮಣ, ಚಂದ್ರಶೇಖರಯ್ಯ (ಸಮವಸ್ತ್ರ ಧರಿಸಿದ ಸ್ಕೌಟ್ಗಳು) ಕೋಣೆ ಸಣ್ಣದಾಗಿರುವುದನ್ನು ಗಮನಿಸಿ ಬಾಗಿಲಾಚೆಯೇ ನಿಂತರು. ನಾನು ಗೌರವ ಸೂಚಿಸುವುದಕ್ಕಾದರೂ ಏಳಲಾಗದಷ್ಟು ಜ್ವರಪೀಡಿತನಾಗಿ ಮಲಗಿದ್ದಂತೆಯೇ ಸ್ವಾಮೀಜಿಗೆ ನಮಸ್ಕರಿಸಿದೆ. ಅವರು “ಏನು, ಪುಟ್ಟಪ್ಪ, ಆಶ್ರಮಕ್ಕೆ ಹೇಳಿ ಕಳಿಸಬಾರದಾಗಿತ್ತೇ?” ಎನ್ನುತ್ತಾ ಬಂದು ನನ್ನ ತಲೆಯ ಬಳಿ ಕುಳಿತರು. ಕಸ್ತೂರಿಯೂ ಬಿಚ್ಚಿದ್ದ ಚಾಪೆಯೊಂದರ ಮೇಲೆ ತುದಿಗಾಲ ಮೇಲೆ ಕುಳಿತರು ತಾತಾಗಾರು ದೊಣ್ಣೆಯೂರಿ ನಿಂತಿದ್ದರು.
ಸ್ವಾಮೀಜಿ ನನ್ನ ತಲೆ ಮೈಮುಟ್ಟಿ ಜ್ವರ ಏರಿರುವುದನ್ನು ಗುರುತಿಸಿದರು. ಅದರ ವಿಷಮತೆಯೂ ಅವರ ಅರಿಗೆ ಬಂತೆಂದು ತೋರುತ್ತದೆ. ನನಗೆ ಶುಶ್ರೂಷೆ ಮಾಡಲು ಅಲ್ಲಿ ಯಾರು ಇಲ್ಲದಿರುವುದನ್ನೂ ಗಮಿನಿಸಿದರು. “ಪುಟ್ಟಪ್ಪ , ನಿಮ್ಮನ್ನು ಆಸ್ಪತ್ರೆಗೆ ಕರದೊಯ್ದು ಸೇರಿಸಲುಬಂದಿದ್ದೇವೆ. ನಮ್ಮ ಸ್ಕೌಟು ಗಳು ಬಂದಿದ್ದಾರೆ, ನಿಮ್ಮ ಸೇವೆಗಾಗಿ. ಹೊರಡೋಣ!” ಎಂದರು.
ನನಗೆ ಸ್ವಾಭಾವಿಕವಾಗಿರುವ ಸ್ಥಾವರ ಪ್ರಕೃತಿಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವುದೆಂದರೆ ಆಗದು. ಆದರಲ್ಲಿಯೂ ಅಷ್ಟು ತಟಕ್ಕನೆ ಶೀಘ್ರ ನೋಟೀಸು ಕೊಟ್ಟು ಹೊರಡಲಿಕ್ಕೆ ಹೇಳಿದರೆ, ದೇವರೆ ಗತಿ!
ಕಸ್ತೂರಿಯೂ ದ್ವನಿಗೂಡಿಸಿದರು: “ನಿಮ್ಮನ್ನು ಆಸ್ಪತ್ರೆಗೆ ಕರೆದೊಯ್ಯಲು ಫೀಟನ್ನೂ ಸಿದ್ಧವಾಗಿ ನಿಂತಿದೆ!… (ಫೀಟನ್ ಎಂದರೆ ನಾಲ್ಕು ಚಕ್ರದ ದೊಡ್ಡ ಕುದುರೆ ಕೋಚ್). ನಿಮ್ಮ ಸಾಮಾನು ರೂಮು ಎಲ್ಲವನ್ನೂ ಜೋಪಾನವಾಗಿನೋಡಿಕೊಳ್ಳಲಿಕ್ಕೆ ಲಕ್ಷ್ಮಣ, ಚಂದ್ರ ಬಂದಿದ್ದಾರೆ”.
ಅವರೆಲ್ಲ ಏನೆನೂ ಹೇಳಿದರು ನಾನು ಆಸ್ಪತ್ರೆಗೆ ಸೇರಲು ಒಪ್ಪಲಿಲ್ಲ. ಸುಮಾರು ಅರ್ಧ ಮುಕ್ಕಾಲು ಗಂಟೆಯೆ ವಾದಿಸಿದರೂ ಪುಸಲಾಯಿಸಿದರೂ!
ಸ್ವಾಮೀಜಿ ನನ್ನ ಸೌಂದಯೃ ಪ್ರೀತಿಯ ಕವಿಪ್ರಜ್ಞೆಗೆ ಅಹವಾಲು ಮಾಡುವಂತೆ ಹೇಳಿದರು: “ಪುಟ್ಟಪ್ಪ ನಿಮಗೆ ಆಸ್ಪತ್ರೆಗೆಯಲ್ಲಿ ಮೇಲಿನ ಮಹಡಿಯಲ್ಲಿ ಅತ್ಯಂತ ಸೊಗಸಾದ ರೂಮನ್ನು ಕೊಡಿಸುತ್ತೇವೆ. ಅಲ್ಲಿಂದ ನೋಡಿದರೆ ಕಿಟಕಿಯ ಮುಖಾಂತರ ನೀವು ಮಲಗಿದ್ದಂತೆಯೇ ಇಡಿ ಮೈಸೂರು, ಚಾಮುಂಡಿ ಬೆಟ್ಟ, ದೀಪದ ಸಾಲುಗಳು ಎಲ್ಲ ಕಾಣಿಸುತ್ತವೆ!… ಡಾಕ್ಟರುಗಳೆಲ್ಲ ನನಗೆ ಪರಿಚಿತರು. ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನೀವೇನು ಹೆಚ್ಚು ದಿನ ಇರಬೇಕಾಗಿಲ್ಲ. ಜ್ವರ ಬಿಟ್ಟೊಡನೆಯೇ ಹಿಂದಕ್ಕೆ ಬಂದು ಬಿಡಬಹುದು” ಇತ್ಯಾದಿ ಇತ್ಯಾದಿ.
ತಾತಾಆರು ಕೂಡ ಅವರಿಗೆ ಬೆಂಬಲವಾಗಿ ಏನೇನೋ ವಿವೇಕದ ಮಾತು ಹೇಳಿದರು. ಆದರೆ ನನ್ನ ಹಟಮಾರಿತನದ ಅವಿವೇಕ ಬಿಲ್ ಕುಲ್ ಆಸ್ಪತ್ರೆಗೆ ಹೋಗಲು ಒಪ್ಪಲಿಲ್ಲ. ಪಾಪ ಅವರೆಲ್ಲರಿಗೂ ತಮ್ಮ ಉಪಕಾರ ಬುದ್ಧಿ ಒದಗಿದ ತಿರಸ್ಕಾರದ ಒದೆತದಿಂದ ಮನಸ್ಸು ತುಂಬಾ ನೊಂದುಕೊಂಡಿತು. ಕೊನೆಗೂ ಕಸ್ತೂರಿ ತುಂಬಾ ವಿಷಾದ ಧ್ವನಿಯಲ್ಲಿ “ಹೋಗಲಿ ಬಿಡಿ, ಸ್ವಾಮೀಜಿ, ನಮ್ಮ ಸ್ಕೌಟುಗಳ ಸಹಾಯದಿಂದ ಇಲ್ಲಿಯೆ ಅವರ ಶುಶ್ರೂಷೆಗಾಗಿ ಏರ್ಪಾಡು ಮಾಡೋಣ” ಎಂದರು.
ಸ್ವಾಮೀಜಿ ಮಾತನಾಡಲಿಲ್ಲ. ರೂಮಿನಲ್ಲಿ ನಿಃಶಬ್ದತೆ ವ್ಯಾಪಿಸಿತು. ನನ್ನ ಭವಿಷ್ಯಜೀವನಮಾನದ ಹಣೆಯ ಬರಹದ ನಿರ್ಣಯದ ವಿಷಯದಲ್ಲಿ ಅಸುರೀ ಶಕ್ತಿಗಳಿಗೂ ದೈವಿಶಕ್ತಿಗಳಿಗೂ ತೂಗುಯ್ಯಾಲೆಯ ಕಾದಾಟ ನಡೆಯುತ್ತಿತ್ತೆಂದು ತೊರುತ್ತದ! ದೇವರ ಪಾದ ಸೇರಿದ್ದ ನನ್ನ ತಂದೆ ತಾಯಿಯರು ಆತನಲ್ಲಿ ಮೋರೆಯಿಟ್ಟಿರಬಹುದು ! ಕನ್ನಡ ತಾಯಿ ತನ್ನ ಕೈಜೋಡಿಸಿ ಸರ್ವ ಭಾಷಾಮಯಿ ಮಹಾಸರಸ್ವತಿಗೆ ತನ್ನ ಕಂದನ ಪರವಾಗಿ ನಮನಗೈದಳೋ ಏನೋ? ‘ಕಾನೂರು ಹೆಗ್ಗಡತಿ’ ‘ಮಳೆಗಳಲ್ಲಿ ಮದುಗಳು’ ‘ಸ್ವಾಮಿ ವಿವೇಕಾನಂದ’ ‘ಶ್ರೀರಾಮಕೃಷ್ಣ ಪರಮಹಂಸ’ ‘ಶ್ರೀರಾಮಾಯಣ ದರ್ಶನಂ’ ಇತ್ಯಾದಿ ಕೃತಿರೂಪಿ ಅಲೋಕಚೇತನಗಳು ತಮ್ಮ ಆಗಮಿ ಅವತರಣ ಪಾತ್ರದ ಶಾರೀರಿಕ ಕ್ಷೇಮಕ್ಕಾಗಿ ತಪೋಲೋಕಯಾತ್ರಿಗಳಾಗಿದ್ದುವೋ ಏನೋ? ವಿಶಾಲ ಜಗಜ್ಜೀವನದಲ್ಲಿ ಒಂದು ಯಃಕಶ್ಚಿತ ನಗರದ ಒಂದು ಯಃಕಶ್ಚಿತ ಬೀದಿಯ ಒಂದು ಯಃಕಶ್ಚಿತ ಹೋಟೆಲಿನ ಉಪ್ಪರಿಗೆಯ ಕಿರುಕೊಠಡಿಯಲ್ಲಿ ಒಬ್ಬ ಯಃಕಶ್ಚಿತ ವಿದ್ಯಾರ್ಥಿಯ ಕ್ಷೇಮಕ್ಕಾಗಿ ಆ ಸಂಜೆ ಜರುತ್ತಿದ್ದ ಆ ಘಟನೆ ತಾತ್ಕಾಲಿಕವಾಗಿ ಬಾಹ್ಯ ದೃಷ್ಟಿಗೆ ಅತ್ಯಂತ ಯಃಕಶ್ಚಿತವಾಗಿ ತೋರುತ್ತಿದ್ದರೂ ನನ್ನನ್ನು ಗುರುವಿನೆಡೆಗೆ ಕರೆದು ಗುರುವಿಗೆ ಆ ಸಂನ್ಯಾಸಿಗೆ -ಆತನ ಯೋಗದೃಷ್ಟಿ-ಅದಾಗಿತ್ತು ಒಂದು ಮಹದ್ ಘಟನೆ.
ಸ್ವಲ್ಪ ಹೊತ್ತು ಧ್ಯಾನಸ್ಥರಾಗಿದ್ದಂತೆ ಮೌನವಾಗಿ ಕುಳಿತ್ತಿದ್ದ ಸ್ವಾಮಿ ಸಿದ್ದೇಶ್ವರಾನಂದರು ಕಸ್ತೂರಿಯವರ ಸೂಚನೆಗೆ ಉತ್ತರ ಕೊಡುವವರಂತೆ ಹೇಳಿದರು: ” ಇಲ್ಲಿ ಹೇಗೆ ಸಾಧ್ಯ ಶುಶ್ರೂಷೆ ಮಾಡಲು? ಮಲಮೂತ್ರ ವಿಸರ್ಜನೆಗೂ ಇಲ್ಲಿ ಸೌಕರ್ಯವಿಲ್ಲ. ಪ್ರತಿ ಸಲವು ಜ್ವರತಪ್ತ ರೋಗಿ ಕೆಳಗಿಳಿದು ದೂರ ನಡೆದು ಮತ್ತೇ ಮೇಲಕ್ಕೆ ಹತ್ತಿಬರಬೇಕಾಗುತ್ತದೆ. ಔಷಧೀ ಪಥ್ಯೋಪಚಾರಕ್ಕೂ ಈ ಗಲೀಜು ಹೋಟೆಲಿನಲ್ಲಿ ಅವಕಾಶವಿಲ್ಲ. ಒಳ್ಳೆಯ ಗಾಳಿ ಬೆಳಕಿಗೂ ಅಭಾವ. ಆಗಲೇ ನಿತ್ರಾಣನಾಗಿರುವ ರೋಗಿಯ ಹೃದಯ ನಾಡಿ ರಕ್ತಪರೀಕ್ಷೆ ಇತ್ಯಾದಿ ವೈದ್ಯಕೀಯ ವ್ಯಾಪಾರಗಳನ್ನೂ ಇಲ್ಲಿ ಕೈಗೊಳ್ಳುವುದು ಕಷ್ಟಸಾಧ್ಯ. ಜೊತೆಗೆ ಅವರೇ ಹೇಳುವಂತೆ ಇಲ್ಲಿ ತಿಗಣೆ ಸೊಳ್ಳೆಗಳು ವಿಪರೀತವಂತೆ. ಕಾಯಿಲೆ ಉಲ್ಬಣಿಸುತ್ತದೆಯೆ ಹೊರತು….” ಎಂದವರು ನನ್ನ ಕಡೆಗೆ ತಿರುಗಿ ನೇರವಾಗಿ ನನಗೆ ಹೇಳಿದರು. ಸಕುರಣ ಧ್ವನಿಯಿಂದಲಂಬಂತೆ “ಪುಟ್ಟಪ್ಪ, ನನ್ನ ಮಾತು ಕೇಳಿ, ಕೋಚಿಗಾಡಿ ಆಗಲೇ ಬಂದು ನಿಂತಿದೆ. ನಿಮ್ಮ ಸಾಮಾನು ರೂಮು ಎಲ್ಲ ನೋಡಿಕೊಳ್ಳುತ್ತಾರೆ ನಮ್ಮ ಹುಡುಗರು. ನೀವು ಸುಮ್ಮನೆ ಹೊರಡಿ!”
ಕಾವ್ಯ-ಗೀವ್ಯ, ಸೌಂಧರ್ಯ-ಗಿವುಂದರ್ಯಗಳ ವಾದಕ್ಕೆ ಮಣಿಯದೆ ಹಟಮಾರಿಯಾಗಿದ್ದ ನನ್ನ ಮನಸ್ಸು ಸ್ವಾಮೀಜಿಯಲೌಕಿಕ ಕಾರಣಗಳಿಗೆ ಓಗೊಟ್ಟಿತು. ನನ್ನ ಒಪ್ಪಿಗೆ ಬಂದ ಕೂಡಲೇ ಅಲ್ಲಿದ್ದವರೆಲ್ಲರಿಗೂ ಅದ ಸಂತೋಷ ಅಷ್ಟಿಷ್ಟಲ್ಲ. ನಾಲ್ಕು ಚಕ್ರದ ದೊಡ್ಡ ಕೋಚು ಗಾಡಿಯ ಮೇಲೆ ಸ್ವಾಮಿಜಿ ಕಸ್ತೂರಿ ತಾತಗಾರು ಇವರೊಡನೆ ಕೃಷ್ಣರಾಜೇಂದ್ರ ಆಸ್ಪತ್ರೆಗೆ ತೆರಳಿ ದಾಖಲಾದೆ ನಾನು!
ಆಗಲೆ ಕತ್ತಲಾಗಿ ವಿದ್ಯುದ್ದೀಪಗಳಿಂದ ಆಸ್ಪತ್ರೆ ಬೆಳಕೋ ಬೆಳಕಾಗಿತ್ತು. ಆಸ್ಪತ್ರೆಯ ಡಾಕ್ಟರುಗಳೆಲ್ಲ ಸ್ವಾಮಿಜಿಗೆ ಗೊತ್ತಿದ್ದುದರಿಂದ ಆ ಆವೇಳೆಯಲ್ಲಿಯೂ ನನ್ನನ್ನು ಸೇರಿಸಿಕೊಂಡರು. ಸ್ವಾಮಿಜಿಗೆ ತಿಳಿಸಿದ್ದಂತೆ ನನಗೆ ಮಹಡಿಯ ಮೇಲಣ ಒಂದು ಸೊಗಸಾದ ಸ್ಥಳದಲ್ಲಿ ಸುಪ್ಪತ್ತಿಗೆಯ ಮಂಚ ದೊರಕಿತು!
ಎಲ್ಲ ಏರ್ಪಾಡುಗಳನ್ನೂ ಸಮರ್ಪಕವಾಗಿ ಮಾಡಿ ಮುಗಿಸಿ ಅವರೆಲ್ಲ ಬೀಳ್ಕೊಂಡ ಮೇಲೆ, ಆ ದೊಡ್ಡ ಕೊಠಡಿಯಲ್ಲಿ ಇತರ ರೋಗಿಗಳು ಮಂಚ ಶಾಯಿಗಳಾಗಿದ್ದರೂ, ನನ್ನನ್ನು ಏನೊ ಒಂದು ಅನಾಥಭಾವದ ಒಂಟಿತನದ ಖಿನ್ನತೆ ಆಕ್ರಮಿಸಿತು. ಜಗನ್ಮಾತೆಯನ್ನೂ ಶ್ರೀಗುರುವನ್ನೂ ನೆನೆಯುತ್ತಾ ಪ್ರಾರ್ಥಿಸುತ್ತಾ ಮಲಗಿ ನಿದ್ರೆ ಮಾಡಿದೆ.
ಮರುದಿನ ಸಂಜೆ ಸ್ವಾಮಿಜಿ ಬಂದು ನೋಡುತ್ತಾರೆ, ನಾನು ಮಲಗಿದ್ದ ಮಂಚ ಖಾಲಿಯಾಗಿದೆ! ಸ್ವಾಮಿಜಿ ಬೆಚ್ಚಿದರು! ಅಮಂಗಳಾಶಂಕೆಯಿಂದ ಅವರ ಮನಸ್ಸು ಕಾತರಿಸಿತು; ದುರಂತ ಕಲ್ಪನೆ ಶವದ ಮನೆಯವರೆಗೂ ಹೋಗಿ, ಹೃದಯ ತತ್ತರಿಸಿತು! ಪಕ್ಕದಲ್ಲಿದ್ದ ಹಾಸಗೆಯ ರೋಗಿಯನ್ನು ವಿಚಾರಿಸಿದಾಗ ತಿಳಿಯಿತು, ನನಗೆ ಕಜ್ಜಿ ಇದ್ದುದರಿಂದ ಸಾಂಕ್ರಾಮಿಕ ಶಾಖೆಗೆ (ಆಸ್ಪತ್ರೆಯ ಮುಖ್ಯ ಕಟ್ಟಡದ ಹಿಂಬದಿಯಲ್ಲಿ ಸ್ವಲ್ಪ ದೂರದಲ್ಲಿದ್ದ ಷೆಡ್ಡುಗಳಿಗೆ.) ಸಾಗಿಸಿದರು ಎಂದು. ಅಂತೂ ‘ಸ್ವರ್ಗಚ್ಯುತಿ’ಯಾಗಿತ್ತೆ ಹೊರತು ಸ್ವರ್ಗಪ್ರಾಪ್ತಿಯಾಗಿರಲಿಲ್ಲ!
ಅಂದು ನನ್ನ ಹೃದಯದಲ್ಲಿ ಉಂಟಾಗಿದ್ದ ಕ್ಷೋಭೆ, ಭೀತಿ, ದುಃಖ, ದೈನ್ಯಭಾವಗಳನ್ನು ಆ ಸಮಯದಲ್ಲಿಯೇ ಬರೆದ ಈ ಆರ್ತನಾದದಂತಿರುವ ಪ್ರಾರ್ಥನೆಗಳು ಅಭಿವ್ಯಕ್ತಗೊಳಿಸುತ್ತವೆ:
ಘೋರ ಘನ ನಿಬಿಡ ತಿಮಿರವಿದು, ತಾಯೆ, ದಾರಿಗಾಣೆನು ಬಾ, ಕೈಹಿಡಿದು ನಡಸೆನ್ನನು!
ಮೇಲೆ ನೋಡೆ ಶಶಿ ತಾರೆಗಳಿಲ್ಲ
ಕಾರ ಮುಗಿಲೋ ಮುತ್ತಿದೆ ಎಲ್ಲ.
ಚಂಡ ಅನಿಲ ಗರ್ಜಿಸಿ ಭೋರೆಂದು
ಧರೆಯ ತಲ್ಲಣಿಸಿ ಬೀಸುವನಿಂದು.
ಗುಡುಗು ಆಂಬರದಿ ಆರ್ಭಟಿಸುತಿದೆ
ಮಿಂಚು ಥಳಥಳಿಸಿ ಓಡುತಲಿಹುದು.
ಘೋರ ಘನನಿಬಿಡ ತಿಮಿರವಿದು, ತಾಯೆ,
ದಾರಿಗಾಣೆನು ಬಾ, ಕೈಹಿಡಿದು ನಡಸೆನ್ನನು!
ಕೂಗಿದರೆ ನಾನು, ಮರುದನಿಯಿಲ್ಲ;
ಆಪ್ತವಚನದಾ ಭರವಸೆಯಿಲ್ಲ!
ತಿರುಗಾಡುವವರ ಸುಳಿವೇ ಇಲ್ಲ;
ಬಹು ಕಾಳರಾತ್ರಿಯಿದು, ಹೇ ಜನನಿ!
ದೂರದೊಳು ನಿನ್ನ ನೂಪರ ನಾದ
ಕೇಳಿ ಬರುತಲಿದೆ ಕಿವಿಗಿಂಪಾಗಿ!
ಕಂಡರು ಕಾಣದ ತೆರೆದೊಳು ನೀನು
ಮಿಂಚಿನ ಬೆಳಕಲಿ ಅಡಗುವೆ ತೋರಿ!
ಅಂಧನಂತೆ ನಾ ಬೇಡುವೆ ನಿನ್ನ;
ಕೈಹಿಡಿದೆನ್ನನು ನಡೆಸೌ, ತಾಯೆ!
ಘೋರ ಘನನಿಬಿಡ ತಿಮಿರವಿದು, ತಾಯೆ,
ದಾರಿಗಾಣೆನು ಬಾ, ಕೈಹಿಡಿದು ನಡಸೆನ್ನನು!
೨೧-೧೦-೧೯೨೬
ಎತ್ತಿಕೋ ಬಂದೆನ್ನ, ಎಲೆ ದೇವಮಾತೆ,
ಅತ್ತು ಅತ್ತು ಬಲು ಬಳಲಿದೆನಮ್ಮಾ!
ಸುತ್ತ ನೋಡೆ ನಿರ್ಜನ ಮರುಭೂಮಿ
ಎತ್ತಿಕೊಳ್ಳುವರನೊಬ್ಬರ ಕಾಣೆ!
ಜೊತೆಗಾರರೆಲ್ಲ ನಡೆದರು ಮುಂದೆ
ಏಕಾಂಗಿಯಾಗಿ ಉಳಿದೆನು ಹಿಂದೆ.
ಎತ್ತಿಕೋ ಬಂದೆನ್ನ, ಎಲೆ ದೇವಮಾತೆ,
ಅತ್ತು ಅತ್ತು ಬಲು ಬಳಲಿದೆನಮ್ಮಾ!
ತಾಳಲಾರೆ ನಾನಿದು ಘೋರ ಮೌನ,
ಬಾಲನ ಕರುಣಿಸಿ ಕಾಯೌ, ತಾಯೆ.
ನಿನ್ನೆರಡು ಕರಕಮಲಗಳಿಗೆ ಮನವು
ಹಂಬಲಿಸುತಿಹುದು ಕಂಬನಿ ತುಂಬಿ.
ಎತ್ತಿಕೋ ಬಂದೆನ್ನ ಎಲೆ ದೇವಮಾತೆ,
ಅತ್ತು ಅತ್ತು ಬಲು ಬಳಲಿದೆನಮ್ಮಾ!
೨೧-೧೦-೧೯೨೬
ಜ್ವರ ಕ್ಲೇಶರೂಪಿಯಾಗಿಯೆ ಬಂದು ಭಗವತ್ ಕೃಪಾಹಸ್ತ ನನ್ನನ್ನು ಆಸ್ಪತ್ರೆಗೆ ಎತ್ತಿಕೊಂಡು ಹೋಗಿತ್ತು ಎಂಬುದನ್ನಾಗಲಿ, ಆ ಕೃಪೆ ಹರಿದು ಬರುವ ದಿವ್ಯ ಪ್ರಣಾಳಿಕೆಯಾಗಿಯೂ ಅದರ ಅಭಿವ್ಯಕ್ತಿಯ ಮುಖಪಾತ್ರವಾಗಿಯೂ ಸ್ವಾಮಿ ಸಿದ್ದೇಶ್ವರಾನಂದರೆ ನಿಯೋಜಿತರಾಗಿದ್ದರೆಂಬುದನ್ನಾಗಲಿ ಗ್ರಹಿಸುವಷ್ಟು ಸಮರ್ಥವಾಗಿರಲಿಲ್ಲ ಕಷ್ಟದಲ್ಲಿ ಸಿಕ್ಕಿ ಕಂಗೆಟ್ಟಂತಿದ್ದ ಆಗಿನ ನನ್ನ ಪ್ರಜ್ಞೆ.
ನನ್ನನ್ನು ಷೆಡ್ಡುಗಳಿಗೆ ಸಾಗಿಸಿದ್ದನ್ನು ತಿಳಿದು ದುಃಖಿತರಾದ ಸ್ವಾಮಿಜಿ ಅಲ್ಲಿಗೆ ಅರಸಿಕೊಂಡು ಬಂದರು. ಧೈರ್ಯ ಹೇಳಿದರು, ಸಂತೈಸಿದರು. ಶ್ರೀ ಗುರುಮಹಾರಾಜ್, ಶ್ರೀಮಹಾಮಾತೆ ಮತ್ತು ಶ್ರೀ ಸ್ವಾಮಿ ವಿವೇಕಾನಂದರು ಇವರ ಪುಟ್ಟ ಭಾವಾಚಿತ್ರಗಳಿದ್ದು, ಮಡಿಸಿ ಇಟ್ಟುಕೊಳ್ಳಬಹುದಾಗಿದ್ದ ಒಂದು ಪುಟ್ಟ ‘ಚಿತ್ರಮಾಲಿಕೆ’ಯನ್ನೂ (ಆಲ್ಬಂ) ತಂದುಕೊಟ್ಟು, ಪ್ರಚ್ಛನ್ನವಾಗಿ ಎಂಬಂತೆ ನನ್ನ ಚೇತನದಲ್ಲಿ ಒಂದು ಆಧ್ಯಾತ್ಮಿಕ ವಿದ್ಯುತ್ ಕೇಂದ್ರವನ್ನೆ ಸ್ಥಾಪಿಸಿದರು! ಪ್ರತಿ ದಿನವೂ ಸಂಜೆ ಕಸ್ತೂರಿ, ತಾತಾಗಾರು ಒಡನಾಗಲಿ, ಚಂದ್ರ, ಲಕ್ಷ್ಮಣ ಮೊದಲಾದ ಸ್ಕೌಟುಗಳೊಡನಾಗಲಿ ತಪ್ಪದೆ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದರು. ಅಲ್ಲಿಂದ ಡಾಕ್ಟರು ನಸುಗಳಿಗೂ ನನ್ನ ವಿಶೇಷ ಪ್ರತಿಭೆಯ ವಿಷಯ ತಿಳಿಸಿ, ವಿಶೇಷ ವಿಶ್ವಾಸದಿಂದ ಗಮನಕೊಟ್ಟು ನೋಡಿಕೊಳ್ಳುವಂತೆ ಮಾಡಿದರು. ಮೊದಲನೆಯ ದಿನವೆ, ಸ್ವಾಮಿಜಿ ಮತ್ತು ಕಸ್ತೂರಿ ನನ್ನ ವಿಷಯದಲ್ಲಿ ವಿಶೇಷ ದಾಕ್ಷಿಣ್ಯ ತೋರಿಸಿ ಮುತುವರ್ಜಿ ವಹಿಸುವಂತೆ ಕೇಳಿಕೊಳ್ಳುತ್ತಿದ್ದಾಗ, ಒಬ್ಬ ಯುವಕ ಡಾಕ್ಟರು ಒಬ್ಬಳು ತರುಣಿ ನರ್ಸಿಗೆ ನನ್ನ ಶುಶ್ರೂಷೆಯ ವಿಚಾರವಾಗಿ ಸಲಹೆ ಕೊಡುತ್ತಾ, ಮುಗುಳುನಕ್ಕು ಇಂಗಿತವಾಗಿ (You have got a beautiful patient to nurse!) (ಶುಶ್ರೂಷೆ ಮಾಡಲು ನಿಮಗೊಬ್ಬ ಸುಂದರ ರೋಗಿ ಸಿಕ್ಕಿದ್ದಾನೆ!) ಎಂದು ಹೇಳುತಿದ್ದುದು ನನ್ನ ಕಿವಿಗೂ ಬಿದ್ದಿತು; ಆದರೆ ಕಾಯಿಲೆಯಿಂದ ನರಳುತ್ತಿದ್ದ ನನ್ನ ಮನಸ್ಸು ಆ ಉಕ್ತಿಯ ರಸಿಕ ಸ್ವಾರಸ್ಯವನ್ನು ಆಸ್ವಾದಿಸುವ ಸ್ಥಿತಿಯಲ್ಲಿರಲಿಲ್ಲ; ಆದರೆ ನನ್ನ ಆಗಿನ ಅತಿರೇಕದ ನೀತಿಪ್ರಜ್ಞೆಗೆ ಅದು ಅಸಹ್ಯವಾಗಿ ಜುಗುಪ್ಸೆ ಹುಟ್ಟಿಸಿಯೂ ಇತ್ತು!
ಸ್ವಾಮಿಜಿ ಆ ದಿನ ತಂದುಕೊಟ್ಟ ಆ ‘ಆಲ್ಬಂ’ ಈಗಲೂ ನನ್ನ ಬಳಿ ಇದೆ, ಆದರೆ ತುಂಬ ಜೀರ್ಣಾವಸ್ಥೆಯಲ್ಲಿ! ಶ್ರೀಗುರುಕೃಪಾ ಪ್ರತೀಕವಾಗಿ ಅಂದು ಅವರು ಏನೊ ಯಕಶ್ಚಿತ ಸಾಧಾರಣವೆಂಬಂತೆ ಅನುಗ್ರಹಿಸಿದ ಆ ‘ಚಿತ್ರಮಾಲೆ’ ನನ್ನ ಬದುಕಿನಲ್ಲಿ ಎಷ್ಟಷ್ಟು ಆಶ್ಚರ್ಯಕರವಾದ ಸನ್ನಿವೇಶಗಳಲ್ಲಿ ಎಂತೆಂತಹ ಪಾತ್ರಗಳನ್ನು ವಹಿಸಿದೆ ಎಂಬುನ್ನು ಈ ‘ನೆನಪಿನ ದೋಣಿಯಲ್ಲಿ’ಯ ಓದುಗರು ಮುಂದೆ ತಿಳಿಯಬಹುದು.
ಸ್ವಾಮಿಜಿ ಪ್ರತಿದಿನವೂ ಸಂಜೆ ತಪ್ಪದೆ ಬರುತ್ತಿದ್ದರು. ಜ್ವರ ಬಿಟ್ಟು ನಾನು ಆಹಾರ ಸ್ವೀಕರಿಸಬಹುದು ಎಂದು ವೈದ್ಯರು ಒಪ್ಪಿಗೆ ಕೊಟ್ಟಮೇಲೆ ಅವರು ಬರುವಾಗಲೆಲ್ಲ ಕಿತ್ತಳೆ ಸೇಬು ಮುಂತಾದ ರೋಗಿ ತಿನ್ನಬಹುದಾದ ಹಣ್ಣುಗಳನ್ನು ತಂದುಕೊಟ್ಟು ಒಮ್ಮೊಮ್ಮೆ ಅದನ್ನು ಸುಲಿದೂ ಕೊಟ್ಟು, ಉಪಚರಿಸುತ್ತಿದ್ದರು. ಬಳಿ ಕುಳಿತುಕೊಳ್ಳುವುದಕ್ಕೆ ಜಾಗವಾಗಲಿ ಪೀಠವಾಗಲಿ ಇರದಿದ್ದರೂ ನಿಂತೇ ಮಾತನಾಡಿಸಿ, ಹುರಿದುಂಬಿಸಿ, ಒಮ್ಮೊಮ್ಮೆ, ಪರಿಹಾಸ್ಯ ಮಾಡಿ ನಗಿಸಿ ಆಶೀರ್ವದಿಸಿ ಹೋಗುತ್ತಿದ್ದರು. ಒಮ್ಮೊಮ್ಮೆ. ನಾನೇ ಬರೆದು ಅವರ ಮುಂದೆ ಓದಿದ್ದ ನನ್ನ ಕನ್ನಡ ಕವನಗಳ ಪಂಕ್ತಿಗಳನ್ನು ಉದಾಹರಿಸಿ. ಕೆಚ್ಚಿರಲಿ, ನೆಚ್ಚಿರಲಿ ಎಂದೆಲ್ಲ, ಮೂದಲಿಸಿ ನಗುವಂತೆ, ಹೇಳಿ ಚೇತನಕ್ಕೆ ಶಕ್ತಿದಾನ ಮಾಡುತ್ತಿದ್ದರು.
ಎಷ್ಟೇ ಸೌಕರ್ಯಗಳನ್ನು ಒದಗಿಸಿದ್ದರೂ ಎಷ್ಟೇ ಶುಶ್ರೂಷೆ ಮಾಡಿ ಉಪಚರಿಸಿದ್ದರೂ ನನಗಂತೂ ಎಷ್ಟು ಹೊತ್ತಿಗೆ ಜ್ವರ ಬಿಟ್ಟು ಆಸ್ಪತ್ರೆಯಿಂದ ನನ್ನ ಕೊಠಡಿಗೆ ಹಿಂತಿರುಗೇನು ಎಂದು ಹಂಬಲಿಸುತ್ತಿದ್ದೆ. ಸುತ್ತಮುತ್ತಲೂ ಇದ್ದ ರೋಗದ ಮತ್ತು ಸಂಕಟದ ವಾತಾವರಣವೆ ನನ್ನ ನಿಸರ್ಗ ಸೌಂದರ್ಯಾಸ್ವಾದನಾ ಲೋಲವಾದ ಚೇತನಕ್ಕೆ ಆಸ್ಪತ್ರೆಯನ್ನು ಕರಾಳವಾಗಿ ಕಾಣಿಸಿತ್ತು. ಆ ಕತ್ತಲೆಗೆ ಪ್ರವೇಶಿಸುತ್ತಿದ್ದ ಬೆಳಕಿನ ಕಿರಣವೆಂದರೆ ಅದೊಂದೆ: ಸಾಯಂಕಾಲದ ಸ್ವಾಮಿಯ ಆಗಮನ!
ವೈದ್ಯರ ಪರೀಕ್ಷಾನಂತರ ರೋಗ ನಿಧಾನದಲ್ಲಿ ಕಂಡುಬಂದ ಅಂಶವೆಂದರೆ, ನನಗೆ ಬಂದದ್ದು ಮಲೇರಿಯಾ! ಅದು ಬಹುಕಾಲದ್ದಾಗಿ ಪ್ರಚ್ಛನ್ನ ಸ್ಥಿತಿಗೆ ಏರಿ ಇಗ ಕ್ರಾನಿಕ್ ಮಲೇರಿಯಾ ಆಗಿದೆ; ಅದಕ್ಕೆ ಹದಿನಾಲ್ಕು ಹದಿನೈದು ಕ್ವಿನೀನ್ ಇಂಜೆಕ್ಷನ್ಗಳನ್ನಾದರೂ ತೆಗೆದುಕೊಳ್ಳಲೆಬೇಕು, ಜ್ವರ ನಿಂತು ಹೋದಮೇಲೆಯೂ! ಇಲ್ಲದಿದ್ದರೆ ಮತ್ತೆ ಮರುಕೊಳಿಸುತ್ತದೆ.
ಜ್ವರವೇನೊ ನಾಲ್ಕು ಐದು ದಿನಗಳಲ್ಲಿಯೆ ಬಿಟ್ಟುಹೋಯಿತು. ಇಂಜೆಕ್ಷನಗಳನ್ನೂ ಪ್ರಾರಂಭಿಸಿದರು. ಎದ್ದು ನಡೆದಾಡುವಂತಾದೊಡನೆ ನನ್ನನ್ನು ‘ಮನೆಗೆ’ ಕಳಿಸುತ್ತಾರೆಂದು ಹಾರೈಸಿದ್ದೆ. ಆದರೆ ಡಾಕ್ಟರು ಒಪ್ಪಲಿಲ್ಲ. ನಾನು ಸ್ವಾಮಿಜಿಯನ್ನು ದಮ್ಮಯ್ಯಗುಡ್ಡೆ ಹಾಕಿ ಕಾಡತೊಡಗಿದೆ, ನನ್ನನ್ನು ಹೇಗಾದರೂ ಇಲ್ಲಿಂದ ಬಿಡಿಸಿ ಎಂದು. ಅವರೂ ಅನೇಕ ವೈದ್ಯಕೀಯ ಕಾರಣಗಳನ್ನು ಕೊಟ್ಟು ಇನ್ನೂ ಸ್ವಲ್ಪ ಕಾಲ ಆಸ್ಪತ್ರೆಯಲ್ಲಿಯೆ ಇರಬೇಕೆಂಬುದನ್ನು ಒತ್ತಿ ಹೇಳಿದರು. ಸ್ವಾಮಿಜಿಯ ಪ್ರೀತಿಪೂರ್ಣವಾದ ಹಿತವಾಕ್ಯಗಳಿಗೆ ನನ್ನ ಜೀವ ತಣಿದು ತತ್ಕಾಲದಲ್ಲಿ ಸಮ್ಮತಿ ಸೂಚಿಸುತಿತ್ತಾದರೂ ಅವರು ಹೊರಟುಹೋಗಿ ರಾತ್ರಿಯಾದ ಮೇಲೆ ನಾನು ಗುಟ್ಟಾಗಿ ಅಳುತ್ತಿದ್ದೆ! ತಾಯಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದೆ, ಈ ತೊಂದರೆಯಿಂದ ಪಾರುಮಾಡೆಂದು! ಸ್ವಾಮಿಜಿ ಕೊಟ್ಟಿದ್ದು, ನನ್ನ ತಲೆದಿಸಿ ಇಟ್ಟುಕೊಂಡಿರುತ್ತಿದ್ದ ‘ಚಿತ್ರಮಾಲಿಕೆ’ಯನ್ನು (ಆಲ್ಬಂ) ದೀಪಗಳೆಲ್ಲ ಆರಿ ಕತ್ತಲೆ ಕವಿದ ಮೇಲೆ, ಕೈಗೆತ್ತಿಕೊಂಡು, ಎದೆಯೂ ಹಣೆಗೂ ಒತ್ತಿಕೊಳ್ಳುತ್ತಾ ಶ್ರೀಗುರುವನ್ನು ಬೇಡಿಕೊಳ್ಳುತ್ತಿದ್ದೆ ಅತ್ಯಂತ ಆರ್ತನಾಗಿ!
ಆ ನನ್ನ ಭಾವವನ್ನು ಆಗ ಬರೆದ ಈ ಕೆಳಗಿನ ಕವನ ಪ್ರತಿಮಿಸುತ್ತದೆ:
ಹೃದಯ ಸರಸಿನ ಜಲವು
ಆರಿಹೋಗಿದೆ, ಜನನಿ;
ಕಮಲ ನೈದಿಲೆ ಎಲ್ಲ
ಬಳಲಿ ಬೆಂಡಾಗಿಹುವು.
ಅರಸಂಜೆಗಳು ಎಲ್ಲ
ಹಾರಿಹೋದುವು ದೂರ;
ಅಂಚಿನೊಳು ನಲಿನಲಿವ
ಹಸುರಿಲ್ಲ! ಕಳೆಯಿಲ್ಲ!
ಅಳಿದಿಹುದು ಸೊಬಗೆಲ್ಲ,
ಮಸಣದಂತಿಹುದೆಲ್ಲ;
ಕರುಣ ಸರಿಯನು ಸುರಿಸು!
ಭಕುತಿ ಬುಗ್ಗೆಯ ಬರಿಸು!
ಜಲ ತುಂಬಿ ತುಳುಕಾಡಿ,
ಮುನ್ನಿನಂದದಿ ಗಾಡಿ
ಮೆರೆಯಲಾನಂದದಿಂದ,
ಶೋಭಿಸಲಿ ಚೆಂದದಿಂದ!
೨೩-೧೦-೧೯೨೬
ಒಮ್ಮೊಮ್ಮೆ ದೈಹಿಕ ಕ್ಲೇಶಕಷ್ಟಗಳಿಗೆ ಬೇಸತ್ತು ಹೃದಯ ಹೆದರಿದಂತಾಗಿ ಆರ್ತನಾದ ಹೊರಹೊಮ್ಮುತ್ತಿದ್ದರೂ ನನ್ನ ಅಂತರಾಳದಲ್ಲಿ ಅಂತರಾತ್ಮನಿಗೆ ಸಹಜವಾಗಿರುವ ಆಶಾವಾದ ತಲೆಯೆತ್ತಿ ಧೈರ್ಯಘೋಷ ಮಾಡಿ ಹುರಿದುಂಬಿಸುತ್ತಲೂ ಇತ್ತು. ೨೩-೧೦-೧೯೨೬ ರಲ್ಲಿಯೆ ಬರೆದ ಇನ್ನೊಂದು ಕವನ, ‘ನಡೆಮುಂದೆ’ ಎಂಬ ಶೀರ್ಷಿಕೆಯಲ್ಲಿ ೧೯೩೦ರಲ್ಲಿ ‘ಕೊಳಲು’ ಕವನ ಸಂಗ್ರಹದಲ್ಲಿ ಪ್ರಕಟವಾಗಿರುವುದು – ಅದಕ್ಕೊಂದು ಉಜ್ವಲ ಸಾಕ್ಷಿಯಾಗಿದೆ. ಅದು ಆತ್ಮದ ಅಮೃತತ್ವವನ್ನೂ ನಿರ್ಭಯತ್ವವನ್ನೂ ಘೋಷಿಸುತ್ತದೆ:
“ಧೀರಾತ್ಮ, ವೀರಾತ್ಮ, ನುಗ್ಗು ನಡೆ ಮುಂದೆ!
ಅಚಲಾತ್ಮ, ಅಮೃತಾತ್ಮ, ನಡೆ ಮುಂದೆ ಮುಂದೆ!
ಗರ್ಜಿಸುತ ನಡೆ ಮುಂದೆ
ನಿರ್ಭಯದಿ ನಡೆ ಮುಂದೆ!
ಎದ್ದೇಳು! ಎದ್ದೇಳು! ಏಳು, ನಡೆ ಮುಂದೆ!
ವೇದಾಂತ ಕೇಸರಿಯ ನಡೆ, ನುಗ್ಗು, ಮುಂದೆ!”
ಎಂದು ಕೊನೆಯಾಗುತ್ತದೆ.
ಹಾಗೂ ಹೀಗೂ ಇನ್ನೂ ಐದಾರು ದಿನಗಳು ಕಳೆದುವು. ಪ್ರತಿದಿನವೂ ನಾನು ಸ್ವಾಮಿಜಿಯನ್ನು ಪೀಡಿಸುತ್ತಿದ್ದೆ, ನನ್ನನ್ನು ಆಸ್ಪತ್ರೆಯಿಂದ ಬಿಡಿಸಿ ರೂಮಿಗೆ ಕಳುಹಿಸಿ ಎಂದು. ನನ್ನ ದೇಹಸ್ಥಿತಿ ಇನ್ನೂ ಬಹಳ ದುರ್ಬಲವಾಗಿದೆ ಎಂದೂ, ರೂಮಿನಲ್ಲಿ ಸರಿಯಾಗಿ ಆವಶ್ಯಕವಾದ ಔಷೋಧೋಪಚಾರವಾಗಲಿ ಪಥ್ಯ ಶುಶ್ರೂಷೆಯಾಗಲಿ ಸಾಧ್ಯವಾಗುವುದಿಲ್ಲವೆಂದೂ, ಕ್ರಾನಿಕ್ ಮಲೇರಿಯಾ ಆದುದರಿಂದ ಬಹಳ ಕಾಲ ಅದರಿಂದ ಪಾರಾಗಲು ಶ್ರಮಿಸಬೇಕಾಗುತ್ತದೆಂದೂ, ನನ್ನ ಬದುಕು ನಾಡಿಗೆ ಬೇಕಾಗಿದ್ದು ಅಮೂಲ್ಯವಾದುದರಿಂದ ಅದನ್ನು ವಿವೇಕದಿಂದಲೂ ಎಚ್ಚರಿಕೆಯಿಂದಲೂ ಕಾಪಾಡಿಕೊಳ್ಳಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದೂ ನಾನಾ ರೀತಿಯಾಗಿ ಭಾವಕ್ಕೂ ಬುದ್ಧಿಗೂ ಮುಟ್ಟುವಂತೆ ಮಾತಾಡಿದರು. ಅವರ ದೈವಿಕವೂ ಅಹೈತುಕಿಯೂ ಆದ ಪ್ರೇಮಕ್ಕೆ ನಾನು ತತ್ಕಾಲದಲ್ಲಿ ಸೋತರೂ ಮತ್ತೆ ಅವರು ಬಂದಾಗ ಹಳೆಯ ರಾಗವನ್ನೆ ಎತ್ತುತ್ತಿದ್ದೆ.
ಆಸ್ಪತ್ರೆಯಿಂದ ವಿಮುಕ್ತನಾಗಬೇಕೆಂಬ ನನ್ನ ಹಂಬಲ ತೀವ್ರಾತಿತೀವ್ರ ಘಟ್ಟಕ್ಕೆ ಏರಿದುದನ್ನು ಗಮನಿಸಿ ಸ್ವಾಮಿಜಿ ಕಡೆಗೆ ಒಂದು ಸಲಹೆ ಸೂಚಿಸಿದರು: “ನೀವು ಒಪ್ಪುವುದಾದರೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಲು ನಾನು ಒಂದು ವಿವೇಕದ ಮಾರ್ಗ ಸೂಚಿಸುತ್ತೇನೆ. ನಿಮ್ಮನ್ನು ನೇರವಾಗಿ ಆಶ್ರಮಕ್ಕೆ ಕರೆದೊಯ್ಯುತ್ತೇನೆ. ನೀವು ಚೆನ್ನಾಗಿ ಗುಣಹೊಂದಿದ ಮೇಲೆ ಮತ್ತೆ ನಿಮ್ಮ ಸಂತೆಪೇಟೆ ರೂಮಿಗೆ ಹೋಗುವಿರಂತೆ.” ಸದ್ಯಃ ಆಶ್ಪತ್ರೆ ತಪ್ಪಿದರೆ ಸಾಕೆಂದು ನಾನು ಒಪ್ಪಿಗೆ ಕೊಟ್ಟೆ: ಭಗವಂತನ ಉದ್ದೇಶ ಸಾಧನೆ ಅದೆಂತಹ ಸಹಜ ಸಾಧಾರಣವಾಗಿ ತೋರುವ ಮತ್ತು ಮೇಲು ನೋಟಕ್ಕೆ ಯಾವ ವಿಶೇಷತೆಯೂ ಪ್ರದರ್ಶಿತವಾಗದ ರೀತಿಯಲ್ಲಿ ನೆರವೇರಿಸುತ್ತದೆ! ಸ್ವಾಮಿ ಸಿದ್ದೇಶ್ವರಾನಂದರು ನನ್ನನ್ನು ಒಂದು ಜಟಕಾ ಗಾಡಿಯಲ್ಲಿ ಕರೆದೊಯ್ದರು ಶ್ರೀರಾಮಕೃಷ್ಣಾಶ್ರಮಕ್ಕೆ, ಬಾಕಿ ಉಳಿದ ಇಂಜೆಕ್ಷನ್ನುಗಳನ್ನು ದಿನವೂ ಆಸ್ಪತ್ರೆಗೆ ಕರೆತಂದು ಕೊಡಿಸಿಕೊಂಡು ಹೋಗುವುದಾಗಿ ಡಾಕ್ಟರುಗಳಿಗೆ ಭರವಸೆಯಿತ್ತು: ನನ್ನ ಬದುಕಿನ ಒಂದು ಮಹಾ ದಿವ್ಯ ಅಧ್ಯಾಯ ಪ್ರಾರಂಭವಾಯಿತು!
ಆಶ್ರಮದ ಮನೆಯ ಮುಂಭಾಗದಲ್ಲಿ ಸ್ವಾಮಿಜಿಯ ಕೊಠಡಿಗೆ ಸಂವಾದಿ ಯಾಗಿದ್ದ ಒಂದು ಪ್ರಶಸ್ತ ಕೊಠಡಿಯಲ್ಲಿ ನನ್ನ ರೋಗಶಯ್ಯೆ ಸಿದ್ದವಾಯಿತು. ನಾನಿದ್ದ ಸಂತೆಪೇಟೆಯ ಕೊಠಡಿ ಇದರ ಮುಂದೆ ಒಂದು ಹಾಳು ಕೊಂಪೆ, ಗಾಳಿ, ಬೆಳಕು, ಶುಚಿ, ಪ್ರಶಾಂತಿ, ಎಲ್ಲ ದೃಷ್ಟಿಗಳಿಂದಲೂ! ಆಶ್ರಮದ ಸೇವೆಗೆ ಬರುತ್ತಿದ್ದ ಸ್ಕೌಟುಗಳೂ ನನ್ನ ಶುಶ್ರೂಷೆಗೆ ಒದಗಿದರು, ಔಷಧಿ ಪಥ್ಯ ಇತ್ಯಾದಿಗಳಲ್ಲದೆ ನನ್ನ ಬಟ್ಟೆ ಒಗೆಯುವುದೂ ಸೇರಿ. ನೆನದರೆ ಈಗಲೂ ನನ್ನ ಕಣ್ಣು ಒದ್ದೆಯಾಗುತ್ತದೆ, ಒಮ್ಮೊಮ್ಮೆ ಸೇವೆಗೆ ಯಾರು ಒದಗದಿದ್ದಾಗ, ಸ್ವಯಂ ಸ್ವಾಮಿಜಿಯೆ ನನ್ನ ಬಟ್ಟೆಗಳನ್ನು ಒಗೆದು ಒಣಗಿಸಿ ಕೊಡುತ್ತಿದ್ದರು! ಅವರು ರಾಜಮನೆತನದಲ್ಲಿ ಹುಟ್ಟಿ ಬೆಳೆದಿದ್ದರು; ಆದರೆ ಪ್ರತಿಷ್ಠೆಯ ಗಂಧವೂ ಇಲ್ಲದ ನಿರಹಂಕಾರದಲ್ಲಿ ಅವರು ರಾಜಯೋಗಿಯಾಗಿರದೆ ಇದ್ದಿದ್ದರೆ ಇಂತೆಲ್ಲ ವರ್ತಿಸಲು ಸಾಧ್ಯವಾಗುತ್ತಿರಲಿಲ್ಲ.
Leave A Comment