ಇನ್ನೊಂದು ಸ್ವಾರಸ್ಯದ ಸಂಗತಿ. ನಾನು ಉದ್ದುದ್ದವಾಗಿ ಕೂದಲು ಬಿಟ್ಟು ಬೈತಲೆ ಬಾಚುತ್ತಿದ್ದೆ. ಆಶ್ರಮಕ್ಕೆ ಹೋದ ಪ್ರಥಮದಲ್ಲಿಯೆ ಸ್ವಾಮಿಜಿ ಉದ್ದ ಕೂದಲು ರೋಗಿಯಾಗಿರುವವನಿಗೆ ತೊಂದರೆಯಾಗುತ್ತದೆ, ಸ್ನಾನಮಾಡಿ ಶುಚಿಯಾಗಿಟ್ಟುಕೊಳ್ಳಲೂ ಆಗುವುದಿಲ್ಲ, ಆದ್ದರಿಂದ ಅದನ್ನು ಬೋಳಿಸುವುದು ಮೇಲು ಎಂದು ಸೂಚಿಸಿದರು. ರೋಗ ಗುಣವಾಗಿ ಆರೋಗ್ಯವಂತನಾದ ಮೇಲೆ ಮತ್ತೆ ಉದ್ದುದ್ದ ಕ್ರಾಪು ಬಿಡಬಹುದು ಎಂದರು. ಸರಿ, ಕ್ಷೌರದವನು ಬಂದು ಬುಡಮುಟ್ಟ ಹತ್ತರಿ ಹೊಡೆದು ಬಿಟ್ಟ, ನನ್ನ ಮಂಡೆಗೂ ಸಂನ್ಯಾಸಿಯ ಮಂಡೆಗೂ ಏನೂ ಭೇದ ಕಾಣದಂತೆ! ಒಡನೆಯೆ ಹಬ್ಬಿತು ಸುದ್ದಿ ‘ಪುಟ್ಟಪ್ಪ ಆಶ್ರಮ ಸೇರಿ ಸಂನ್ಯಾಸಿಯಾಗಿ ಬಿಟ್ಟ’ ಎಂದು. ಈ ಸುದ್ದಿ ಮಲೆನಾಡಿಗೂ ಮುಟ್ಟಿತು. ಮೊದಲೇ ಎಲ್ಲರೂ ಶಂಕಿಸುತ್ತಿದ್ದರು. ನನ್ನ ತತ್ವಶಾಸ್ತ್ರಸಕ್ತಿಯನ್ನೂ ವಿರಕ್ತ ಭಂಗಿಯನ್ನೂ ಮೂರು ಹೊತ್ತೂ ಸ್ವಾಮಿ ವಿವೇಕಾನಂದರನ್ನು ಕೊಂಡಾಡುತ್ತಿದ್ದುದನ್ನೂ ಕಂಡು, ನಾನೆಲ್ಲಿ ಸನ್ಯಾಸಿಯಾಗಿ ಬಿಡುತ್ತೇನೆಯೊ ಎಂದು. ತಲೆ ಬೋಳಿಸಿಕೊಂಡ ಸುದ್ದಿ ಮುಟ್ಟಿದೊಡನೆಯೆ ನಾನು ಸಂನ್ಯಾಸಿಯಾಗಿಯೆ ಬಿಟ್ಟ ವಿಷಯದಲ್ಲಿ ಅವರಿಗೆ ಏನೂ ಸಂದೇಹ ಉಳಿಯಲಿಲ್ಲ. ವಿಷಯಸರಿಯಾಗಿ ತಿಳಿದು, ನನ್ನನ್ನು ಮನೆಗೆ ಕರೆತರಲು ತಮ್ಮ ತಿಮ್ಮಯ್ಯನನ್ನೂ ದೇವಂಗಿ ಮಾನಪ್ಪನನ್ನೂ ಕಳಿಸಿದರು ದೊಡ್ಡ ಚಿಕ್ಕಪ್ಪಯ್ಯ. ಅವರಿಬ್ಬರೂ ಬಂದವರು ವಿಷಯವನ್ನೆಲ್ಲವನ್ನೂ ತಿಳಿದು ತಲೆ ಬೋಳಿಸಿದಕ್ಕೆ ಕಾರಣವನ್ನೂ, ನಾನು ಆಶ್ರಮದಲ್ಲಿ ರೋಗ ಗುಣವಾಗುವವರಿಗೆ ಮಾತ್ರ ಇರುವುದು ಎಂಬ ನಿಜಸಂಗತಿಯನ್ನೂ ಮನೆಗೆ ಬರೆದರು. ಆದರೆ ನಡೆದದ್ದೇನು? ಆಶ್ರಮದ ಸಂನ್ಯಾಸಿಗಳಿಂದ ನನ್ನನ್ನು ದೂರಮಾಡಿ ಪಾರು ಮಾಡಲೆಂದು ಕಳಿಸಿದ್ದ ಆ ದೂತರಿಬ್ಬರೂ ಸ್ವಾಮಿ ಸಿದ್ದೇಶ್ವರಾನಂದರ ಅಕ್ಕರೆಗೆ ಸೋತು ವಶವಾಗಿ ಹೋದರು. ಅದರಲ್ಲಿಯೂ ದೇವಂಗಿ ಮಾನಪ್ಪನಂತೂ ಸಂಪೂರ್ಣವಾಗಿ ಸ್ವಾಮಿಜಿಗೆ ಶಿಷ್ಯನಾಗಿಯೇ ಬಿಡುವುದೇ? ಸ್ವಾಮಿಜಿ ನನಗೆ ಹೇಳಿದರು; “ನೀವು ಮತ್ತೆ ಏಕೆ ಆ ಸಂತೆಪೇಟೆಯ ಕೊಂಪೆ ಕೋಣೆಗೆ ಹೋಗಿ ಹೋಟೆಲ್ ಊಟ ತಿಂಡಿ ತಿಂದು ಆರೋಗ್ಯ ಕೆಡಿಸಿಕೊಳ್ಳುವುದು? ಎಂತಿದ್ದರೂ ತಿಮ್ಮಯ್ಯ ಮಾನಪ್ಪ ಮನೆಗೆ ಹಿಂತಿರುಗಿದವರು ನಿಮ್ಮ ಮನೆಯವರಿಗೆ ನೀವು ಸಂನ್ಯಾಸಿಯಾಗಿಲ್ಲ ಎಂಬುದನ್ನು ತಿಳಿಸಿ ಅವರನ್ನು ಸಮಾಧಾನಪಡಿಸುತ್ತಾರೆ. ತಿಮ್ಮಯ್ಯ ಮಾನಪ್ಪನಿಗೆ ಹೇಳಿ ಆ ಹೋಟಲಿನಿಂದ ನಿಮ್ಮ ಸಾಮಾನೆಲ್ಲ ತರಿಸಿಬಿಡಿ, ಹೋಟಲಿನವನಿಗೆ ಕೊಡಬೇಕಾದ್ದನ್ನೆಲ್ಲ ಲೆಕ್ಕ ಸಲ್ಲಿಸಿಬಿಟ್ಟು, ಆಶ್ರಮದ ಈ ರೂಮಿನಲ್ಲಿಯೆ ಇದ್ದುಬಿಡಿ. ಇಲ್ಲಿಂದ ಕಾಲೇಜಿಗೂ ಹತ್ತಿರ ಎರಡು ಫರ್ಲಾಂಗು ಆಗಬಹುದೇನೊ!” ಕೃಪೆಯ ವ್ಯೂಹ ಸಫಲವಾಗದೆ ಇರುತ್ತದೆಯೆ? ತಿಮ್ಮಯ್ಯ ಮಾನಪ್ಪ ಹೋಟೆಲಿನ ರೂಮಿನಲ್ಲಿದ್ದ ನನ್ನ ಹಾಸಗೆ, ಬಟ್ಟೆಬರೆ, ಟ್ರಂಕು, ಪುಸ್ತಕ ಒಂದು ಸಣ್ಣ ಬೀರು ಎಲ್ಲವನ್ನೂ ತಂದು, ನನ್ನದಾಗಿದ್ದ ಆಶ್ರಮದ ಕೋಣೆಯಲ್ಲಿ ಜೋಡಿಸಿಬಿಟ್ಟರು. ಹೋಟೆಲ್ ರೂಮಿನಲ್ಲಿದ್ದ ದೇಶಭಕ್ತರ, ಕವಿಗಳ ಆಧ್ಯಾತ್ಮಿಕ ವಿಭೂತಿ ಪುರುಷರ ಸುಮಾರು ಐವತ್ತು ಅರುವತ್ತು ಚೌಕಟ್ಟು ಹಾಕಿದ್ದ ಪಟಗಳನ್ನು ಕುಪ್ಪಳಿಗೇ ತೆಗೆದುಕೊಂಡು ಹೋಗಿ, ಅಲ್ಲಿ ಉಪ್ಪರಿಗೆಯ ನಾಗಂದಿಗೆಯ ಕೆಳಗಣ ಗೋಡೆಗೆ ತಗುಲಿ ಹಾಕುವಂತೆ ತಿಳಿಸಿದೆ. ಹೀಗೆ ಆಶ್ರಮದಿಂದ ನನ್ನನ್ನು ಬಿಡಿಸಲು ಬಂದಿದ್ದರೆ ನನ್ನನ್ನು ಆಶ್ರಮಕ್ಕೆ ನೆಲೆಯಾಗಿ ಸೇರಿಸಲು ಕಾರಣವಾದರು!

ಆಶ್ರಮ ಆಗ ತುಂಬ ಬಡಸ್ಥಿತಿಯಲ್ಲಿತ್ತು. ಸ್ವಾಮಿಜಿಯೆ ಗುಡಿಸುವ ಕೆಲಸದಿಂದ ಹಿಡಿದು ಅಡುಗೆ ಮಾಡುವ ಕೆಲಸದವರೆಗೂ ಮಾಡುತ್ತಿದ್ದರು. ಇನ್ನು ದೇವರಮನೆಯ ಕೆಲಸ, ಪೂಜಾದಿಕಾರ್ಯಗಳನ್ನೆಲ್ಲ ನಿರ್ವಹಿಸುತ್ತಿದ್ದರು, ಒಬ್ಬರು ಕಿರಿಯ ಸಂನ್ಯಾಸಿ, ಕುಮಾಲಾನಂದರು. ವೆಂಕಟೇಶಯ್ಯ, ಶಂಕರ್ ಮಹಾರಾಜ್ (ಅವರೂ ನಾನು ಆಶ್ರಮಕ್ಕೆ ಹೋಗುವುದಕ್ಕೆ ನಾಲ್ಕು ತಿಂಗಳ ಮೊದಲೇ ಬಂದಿದ್ದರು.) ಲಕ್ಷ್ಮಣ, ಚಂದ್ರಶೇಖರಯ್ಯ ಮೊದಲಾದ ಕಸ್ತೂರಿಯವರ ವಿದ್ಯಾರ್ಥಿಗಳೂ ಮತ್ತು ವಿವೇಕಾನಂದ ಸ್ಕೌಟು ದಳದವರೂ ಆಗಾಗ ಬಂದು ಅವರಿಗೆ ನೆರವಾಗುತ್ತಿದ್ದರು.

ವೆಂಕಟೇಶಯ್ಯ ಎಂಬುವರು ಭಿಕ್ಷಾನ್ನದ ವಿದ್ಯಾರ್ಥಿ. ಆತ ಭಿಕ್ಷೆ ಎತ್ತಿತಂದು ‘ಭಕ್ಷ್ಯಭೋಜ್ಯ’ಗಳಲ್ಲಿ, ಅಂದರೆ ಅನ್ನ ಸಾರು ಪಲ್ಯಗಳಲ್ಲಿ ಒಮ್ಮೊಮ್ಮೆ ಸ್ವಾಮಿಜಿಯೂ ತುಸು ಪಾಲುಗೊಂಡು ತಮ್ಮ ‘ನೀರಸ, ದರಿದ್ರ, ಭೋಜನವನ್ನು ಶ್ರೀಮಂತಗೊಳಿಸಿಕೊಳ್ಳುತ್ತಿದ್ದರು! ಮತ್ತೆ ತಾವೆ ಅಷ್ಟು ಕಷ್ಟದ ಮತ್ತು ರಿಕ್ತಸ್ಥಿತಿಯಲ್ಲಿದ್ದೂ ರೋಗಿಯಾಗಿದ್ದ ನನ್ನ ಭಾರದ ಹೊಣೆಯನ್ನೇಕೆ ಹೊತ್ತರೋ ನಾನು ಬೇರೆ ಕಾಣೆ! ಅಲ್ಲಿ ಸಮೃದ್ಧಿಯಾಗಿದ್ದುದು ಎಂದರೆ ಒಂದೇ ವಸ್ತುಃ ಸ್ಥಳ! ಆ ಬಾಡಿಗೆ ಮನೆ ತಕ್ಕಮಟ್ಟಿಗೆ ದೊಡ್ಡದಾಗಿದ್ದು ಇಬ್ಬರೆ ಸಂನ್ಯಾಸಿಗಳಿದ್ದುದರಿಂದ ನನಗೆ ಒಂದು ದೊಡ್ಡ ಕೊಠಡಿಯನ್ನು ಬಿಟ್ಟುಕೊಡಲು ಸಾಧ್ಯವಾಗಿತ್ತು.

ಸ್ವಾಮಿಜಿಯ ರೋಗೀ ಶುಶ್ರೂಷೆಯ ಶಿಸ್ತು ಆಸ್ಪತ್ರೆಯದಕ್ಕಿಂತಲೂ ಹೆಚ್ಚು ನಿಷ್ಠುರವಾಗಿದ್ದರೂ ಅದಕ್ಕೆ ಅವರ ಅಕ್ಕರೆಯ ಸಾಣೆ ಇರುತ್ತಿದ್ದುದರಿಂದ ಅದನ್ನು ಪಾಲಿಸುವುದು ಸಂತೋಷಕರವಾಗಿಯೆ ಇತ್ತು. ಮೊದಮೊದಲು ಅವರು ನನ್ನನ್ನು ಅನಾವಶ್ಯಕವಾಗಿ ಎದ್ದು ಓಡಾಡುವುದಕ್ಕೂ ಬಿಡುತ್ತಿರಲಿಲ್ಲ. ಚೆನ್ನಾಗಿ ಹೊದ್ದುಕೊಂಡು ಮಲಗಿದ್ದೇನೆಯೊ ಇಲ್ಲವೊ ಎಂದು ಪರಿಶೀಲಿಸಿ ನ್ಯೂಮೋನಿಯಾಕ್ಕೆ ತಿರುಗಿಬಿಟ್ಟೀತು ಎಂದು ಎಚ್ಚರಿಕೆ ನೀಡುತ್ತಿದ್ದರು. ಅನ್ನ ಊಟಮಾಡುತ್ತೇನೆ ಎಂದು ನಾನು ಕಾಡಿಸಿದರೂ ಒಪ್ಪುತ್ತಿರಲಿಲ್ಲ; ಹಾಲು ಬ್ರೆಡ್ಡಿನ ಪಥ್ಯವನ್ನೆ ಸ್ವಲ್ಪ, ಜೀರ್ಣಶಕ್ತಿ ಕುದುರುವವರೆಗೂ, ಮುಂದುವರಿಸಬೇಕು ಎಂದು ಬಿಟ್ಟರು. ಮುಸಂಬಿ ಕಿತ್ತಳೆ ಹಣ್ಣುಗಳನ್ನು ತಿನ್ನುವುದರಲ್ಲಿ ನಾನು ಆಸಕ್ತಿ ತೋರುತ್ತಿರಲಿಲ್ಲ. ನಮ್ಮ ಹಳ್ಳಿಯ ಮನೆಗಳಲ್ಲಿ ಹಣ್ಣು ತಿನ್ನುವುದನ್ನು ಎಂದಿಗೂ ಆಹಾರಾಂಗವನ್ನಾಗಿ ಭಾವಿಸಿರಲಿಲ್ಲ. ಹುಡುಗರು ತಿನ್ನುವ ಹುಡುಗಾಟದ ವಸ್ತು ಹಣ್ಣು ಎಂಬುದು ಅವರ ಭಾವನೆಯಾಗಿತ್ತು. ನನ್ನ ಬಾಲ್ಯಕಾಲದಲ್ಲಿ ಬಾಳೆಹಣ್ಣು ಕಿತ್ತಿಳೆ ಹಣ್ಣು ಮಾವಿನ ಹಣ್ಣು ಮತ್ತು ಇತರ ಕಾಡು ಹಣ್ಣುಗಳನ್ನು ನಾವು ಕದ್ದೇ ತಿನ್ನಬೇಕಾದ ವಸ್ತುಗಳೆಂದು ಭಾವಿಸಿ ಹಾಗೆಯೆ ಆಚರಿಸುತ್ತಲೂ ಇದ್ದೆವು. ನಮಗೆ ಶೀತ ಜ್ವರ ಹೊಟ್ಟೆನೋವು ವಾಂತಿ ಭೇದಿ ಏನೆ ಆದರೂ ಬಾಳೆಹಣ್ಣನ್ನೊ ಹಲಸಿನ ಹಣ್ಣನ್ನೊ ಇತರ ಯಾವುದೊ ಹಣ್ಣನ್ನೊ ತಿಂದೇ ಕಾಯಿಲೆ ತಂದುಕೊಂಡಿರಿ ಎಂದು, ಮಲೇರಿಯಾವನ್ನೂ, ಹಣ್ಣಿಗೇ ಆರೋಪಿಸುತ್ತಿದ್ದರು. ಹಣ್ಣಿನಲ್ಲಿ ಅನ್ನಾಂಗಗಳಿದ್ದು ಅವನ್ನು ತಿನ್ನುವುದು ಆರೋಗ್ಯಕ್ಕೆ ಅವಶ್ಯಕ ಎಂಬುದು ಆಶ್ರಮಕ್ಕೆ ಬಂದ ಮೇಲೆಯೆ ನನಗೆ ತಿಳಿದದ್ದು!

ಆಸ್ಪತ್ರೆಯಿಂದ ಪಡೆಯಬೇಕಾಗಿದ್ದ ಇಂಜೆಕ್ಷನ್‌ಗಳೆಲ್ಲಾ ಪೂರೈಸಿ ನಾನು ತಕ್ಕಮಟ್ಟಿಗೆ ಗುಣಮುಖಿಯಾದ ಮೇಲೆ ಅವರು ಕಲ್ಕತ್ತಾಕ್ಕೆ ಬರೆದು ಮಲೇರಿಯಾ ಜ್ವರಗಡ್ಡೆಯನ್ನು ಕರಗಿಸುವ ಔಷಧಿ ‘ಗುಲಂಚಾ’ವನ್ನು ಬಾಟ್ಲಿಗಳ ಮೇಲೆ ಬಾಟ್ಲಿ ತರಿಸಿ, ಅವನ್ನು ತಿಂಗಳುಗಟ್ಲೆ ಕುಡಿಯುವಂತೆ ಮಾಡಿದರು. ಅದು ಕಹಿಯಾಗಿದ್ದರೂ ಪ್ರತಿದಿನ ಎರಡೂ ಹೊತ್ತು ಊಟದ ಅನಂತರ ಕುಡಿಯಬೇಕಾಗಿತ್ತು. ಮತ್ತೊಂದು, ಸ್ವಾಮಿಗೆ ನನಗೆ ಮಾಡಿದ ಮಹದುಪಕಾರವೆಂದರೆ, ಸೊಳ್ಳೆಪರದೆ ಕಟ್ಟುವುದನ್ನು ಕಡ್ಡಾಯವಾಗಿ ಕಲಿಸಿದ್ದು! ನಾವು ಸೊಳ್ಳೆ ಪರದೆಯ ಹೆಸರನ್ನೂ ಕೇಳಿಸಿರಲಿಲ್ಲ, ಹಳ್ಳಿಯಲ್ಲಿ. ಪಟ್ಟಣಕ್ಕೆ ಬಂದಮೇಲೆಯೂ ಆಸ್ಪತ್ರೆ ಸೇರಿದಾಗಲೆ ಅದನ್ನು ಕಂಡಿದ್ದೂ! ಅದೊಂದು ಅನಾವಶ್ಯಕವಾದ ಶ್ರೀಮಂತರ ಷೋಕಿಯ ಭೋಗವಸ್ತು ಎಂದು ಭಾವಿತವಾಗಿತ್ತು. ಆಶ್ರಮಕ್ಕೆ ಬಂದಮೇಲೆ  ಎಲ್ಲಿಗೇ ಹೋಗಲಿ, ಎಲ್ಲಿಯೇ ಮಲಗಲಿ, ಊರಿಗೆ ಹೋದಾಗ ಕುಪ್ಪಳಿಯಲ್ಲಿಯೆ ಆಗಲಿ ಅಥವಾ ಯಾವ ನೆಂಟರ ಮನೆಗೆ ಉಳಿಯಲು ಹೋದಾಗಲೆ ಆಗಲಿ, ಸೊಳ್ಳೆಪರದೆ ತೆಗೆದುಕೊಳ್ಳದೆ ಹೋಗುತ್ತಿರಲಿಲ್ಲ; ಸೊಳ್ಳೆಪರದೆ ಕಟ್ಟಿಕೊಳ್ಳದೆ ಮಲಗುತ್ತಿರಲಿಲ್ಲ. ಹಾಗೆ ಮಾಡಿಯೆ ನಾನು ಮಲೇರಿಯಾದಿಂದ ಮುಕ್ತನಾಗಿದ್ದು, ಡಿ.ಡಿ.ಟಿ. ಬರುವುದಕ್ಕೆ ಬಹು ಪೂರ್ವದಲ್ಲಿಯೆ!

ಮತ್ತೂ ಒಂದೂವರೆ: ನನಗೆ ಬಹುಕಾಲದಿಂದ ಹಿಡಿದಿದ್ದ ಕಜ್ಜಿಶನಿಯಿಂದ ನನ್ನನ್ನು ಪಾರುಮಾಡಿದ್ದು! ತುರಿಗಜ್ಜಿ, ಹಸಿಬೊಕ್ಕೆ, ಕುರು, ಬಾವು ಹೀಗೆ ನಾನಾ ಅವತಾರಗಳನ್ನೆತ್ತಿ ಕಜ್ಜಿ ನನ್ನನ್ನು ಬಾಲ್ಯದಿಂದಲೂ ಬಿಟ್ಟಿರಲಿಲ್ಲ. ಏನೇನೂ ಔಷಧಿ ಮುಲಾಮು ಎಣ್ಣೆ ಹಚ್ಚಿಕೊಂಡು ಸ್ನಾನಮಾಡಿದ್ದೆ. ರಕ್ತ ಕೆಟ್ಟುದರಿಂದ ಹಾಗಾಗುತ್ತದೆ ಎಂದು ರಕ್ತಶುದ್ಧಿ ಮಾಡುತ್ತವೆ ಎಂದು ಹೇಳಲಾದ ಅನೇಕ ಟಾನಿಕ್ಕು ಕಷಾಯಾದಿಗಳನ್ನೂ ಕುಡಿದೂ ಕುಡಿದೂ ಹಾಕಿದ್ದೆ. ಏನೇನೂ ಮಾಡಿದರೂ ಏರಿದ್ದು ತುಸು ಇಳಿಮುಖವಾಗುತ್ತಿತ್ತು ಹೊರತು ಎಂದೂ ಪೂರ್ತಿ ಬಿಟ್ಟು ತೊಲಗಿರಲಿಲ್ಲ. ಸ್ವಾಮಿಜಿ ವಿಶೇಷ ಪ್ರಯತ್ನ ಮಾಡಿ ಆಸ್ಪತ್ರೆಯಲ್ಲಿ ಕವಿಗಾಗಿ ಸಂಪಾದಿಸಿ ಕೊಡಿಸಿದ್ದ ಉಪ್ಪರಿಗೆಯ ಸ್ವರ್ಗದಿಂದ ಸಾಂಕ್ರಾಮಿಕ ಷೆಡ್ಡುಗಳ ಪಾತಾಳಕೂಪಕ್ಕೆ ನನ್ನನ್ನು ತುಳಿದು ಕಳಿಸಿದ್ದ ಪಾದವೂ ಈ ಕಜ್ಜಿತ್ರಿವಿಕ್ರಮನದೇ ಆಗಿತ್ತು!

ಜ್ವರ ಬಿಟ್ಟು ತಕ್ಕಮಟ್ಟಿಗೆ ಆರೋಗ್ಯ ಬಂದಮೇಲೆ ಸ್ವಾಮಿಜಿ ಒಂದು ಔಷಧಿ ತಯಾರಿಸಿದರು. ನನಗೆ ನೆನಪಿರುವಷ್ಟನ್ನು ಇಲ್ಲಿ ಬರೆಯುತ್ತೇನೆ. ನನ್ನಂತೆಯೇ ಪೀಡೆಗೆ ಒಳಗಾಗಿರುವವರಿಗೆ ಉಪಯೋಗವಾಗಬಹುದು, ಏಕೆಂದರೆ ಸ್ವಾಮಿಜಿಯ ಈ ಔಷಧಿಯನ್ನು ನಾನು ಅನೇಕರಿಗೆ ಹೇಳಿ, ಅವರು ಅದರಿಂದ ಪೂರ್ಣಪ್ರಯೋಜನ ಪಡೆದಿದ್ದಾರೆ. ಗಂಧಕದ ಪುಡಿ, ತೆಂಗಿನಕಾಯಿ ತುರಿ, ಎಕ್ಕದ ಎಲೆಯ ಕೊಚ್ಚುಗೆ, ತುಲಸಿಯೆಲೆ, ಇನ್ನೊಂದೊ ಎರಡೂ ಮರೆತುಬಿಟ್ಟೆ, ಇಷ್ಟನ್ನು ಒಂದು ತಾಮ್ರದ ಪಾತ್ರೆಗೆ ಹಾಕಿ, ಸಾಕಷ್ಟು ಕೊಬ್ಬರಿ ಎಣ್ಣೆ ಹೊಯ್ದು ಚೆನ್ನಾಗಿ ಕುದಿಸಿದರು. ಅದನ್ನು ದಿನವೂ ಸ್ನಾನಕ್ಕೆ ಅರ್ಧಗಂಟೆ ಮುಂಚೆ ಮೈಗೆ ಚೆನ್ನಾಗಿ ತಿಕ್ಕಿ ಬಳಿದುಕೊಂಡೆ. ಬಹುಶಃ ಎಂಟು ಹತ್ತು ದಿನ ಹಾಗೆ ಮಾಡಿರಬಹುದು. ನನ್ನ ಕಜ್ಜಿಶನಿ ಸಂಪೂರ್ಣ ಬಿಟ್ಟು ಹೋಗಿದು ಆಮೇಲೆ ಇದುವರೆಗೂ ನನ್ನ ಹತ್ತಿರ ಸುಳಿದಿಲ್ಲ!

ಹೀಗೆ ಔಷಧಿ ಪಥ್ಯಗಳ ದೈಹಿಕವಾದ ಬಾಹ್ಯಶುಶ್ರೂಷೆ ನಡೆದಿತ್ತು. ಜೊತೆಗೆ ಆಧ್ಯಾತ್ಮಿಕವೂ ಮಾನಸಿಕವೂ ಆದ ಅಂತರ ಶುಶ್ರೂಷೆಯೂ ಸಾಗುತ್ತಿತ್ತು. ಪ್ರಚ್ಛನ್ನವಾಗಿ, ಗೋಪಾಲ್ ಮಹಾರಾಜರೊಡನೆ ಸುಮ್ಮನೆ ಹರಟೆ ಹೊಡೆಯುವುದೂ ಒಂದು ಆತ್ಮೋತ್ತೇಜನವಾಗಿತ್ತು. ಆಶ್ರಮದ ವಾತಾವರಣವೆಲ್ಲ ಒಂದು ಪವಿತ್ರ ಅಭಯ ಸಾನ್ನಿಧ್ಯವಾಗಿತ್ತು. ಆಶ್ರಮದ ವಾತಾವರಣವೆಲ್ಲ ಒಂದು ಪವಿತ್ರ ಅಭಯ ಸಾನ್ನಿಧ್ಯವಾಗಿತ್ತು ನನ್ನ ತಪ್ತ ಚೇತನಕ್ಕೆ. ಅವರು ಎಂದೂ ನೇರವಾಗಿ ನೀತಿಬೋಧೆ ಮಾಡಿದುದಾಗಲಿ ಉಪದೇಶ ನೀಡಿದುದಾಗಲಿ ನನಗೆ ನೆನಪಿಲ್ಲ. ಅವರದ್ದೆಲ್ಲ ಇಂಗಿತ ವಿಧಾನವಾಗಿತ್ತು. ಧ್ವನಿಮಾರ್ಗವಾಗಿತ್ತು.

ಜ್ವರ ಬಿಟ್ಟು ನನ್ನ ಕಾಯಿಲೆ ಗುಣಮುಖವಾಗುತ್ತಿದ್ದಾಗ ಅವರು ನಾನು ಯಾವ ಗುರುತರ ಸಾಹಿತ್ಯವನ್ನೂ ಓದಬಾರದೆಂದು ವಿಧಿಸಿದರು, ಮೆದುಳಿಗೆ ಶ್ರಮವಾಗಬಾರದೆಂದು. ಸ್ವಲ್ಪ ಮಟ್ಟಿಗೆ ಪತ್ರಿಕೆ ಓದಲು ಬಿಡುತ್ತಿದ್ದರು: ಅವನ ರಚನೆಯನ್ನಂತೂ ಸಂಪೂರ್ಣವಾಗಿ ನಿಷೇಧಿಸಿದ್ದರು. ಆದರೆ ಆಗ ನನ್ನ ಮನಸ್ಸು ಮತ್ತು ಹೃದಯ ಎರಡೂ ಅಪೂರ್ವವೂ ಆಧ್ಯಾತ್ಮಿಕವೂ ಆದ ಚಿಂತನ ಮತ್ತು ಭಾವನೆಗಳ ಸುಳಿಗೆ ಸಿಕ್ಕು ಅಭಿವ್ಯಕ್ತಿಗಾಗಿ ಹಾತೊರೆಯುತ್ತಿದ್ದುವು, ಭಕ್ತಿ, ಜ್ಞಾನ ಮತ್ತು ಆನಂದಗಳ ಬುಗ್ಗೆಯೆ ಚಿಮ್ಮುತ್ತಿತ್ತು ನನ್ನ ಚಿದ್‌ಭೂಮಿಕೆಯಲ್ಲಿ. ಕವನ ರಚನಾ ಪ್ರತಿಭೆ ಹೊರಹೊಮ್ಮಲೆಂದು ರಸಾನುಭವ ಮಂದಿರದ ಬಾಗಿಲನ್ನು ದಬ್ಬುತ್ತಿತ್ತು; ಗುದ್ದುತ್ತಿತ್ತು; ತೆರೆಯದಿದ್ದರೆ ಮುಂದೂಡಿಕೊಂಡೆ ಹೊರನುಗ್ಗುತ್ತೇನೆ ಎಂಬ ರಭಸಾವೇಶದಲ್ಲಿ! ತಲೆಯಲ್ಲಿ ಪಂಕ್ತಿಗಳೂ ಪದಪುಂಜಗಳೂ ಕವನಗಳೂ ತುಂಬಿಕೊಳ್ಳುತ್ತಿದ್ದು ರಾತ್ರಿ ನಿದ್ದೆಮಾಡಲೂ ಬಿಡುತ್ತಿರಲಿಲ್ಲ. ಇಡೀ ಪದ್ಯಗಳನ್ನೆ ಮರೆಯದಂತೆ ಮನಸ್ಸಿನಲ್ಲಿ ಹೇಳಿಕೊಂಡು ರಕ್ಷಿಸುತ್ತಿದ್ದೆ. ನಿದ್ದೆಮಾಡಿದರೆ ಎಲ್ಲಿ ಮರೆಯುವೆನೋ ಎಂಬ ಭೀತಿ ಬೇರೆ ಬಾಧಿಸುತ್ತಿತ್ತು, ಹೀಗಾಗಿ ನಿದ್ದೆಗೆಡುತ್ತಿದ್ದೆ. ಇದನ್ನೆಲ್ಲ ಒಮ್ಮೆ ಕಸ್ತೂರಿಯವರಿಗೆ ಹೇಳಿದಾಗ ಅವರು ಸ್ವಾಮಿಜಿಗೆ ನನ್ನ ಪರವಾಗಿ ಹೇಳಿದರು: ‘ಸ್ವಾಮಿಜಿ, ಕವಿಗೆ ತಲೆಯಲ್ಲಿ ಬಂದದ್ದನ್ನು ಕಾಗದಕ್ಕೆ ಇಳಿಸಿಬಿಡಲು ಅನುಮತಿ ನೀಡಿದರೆ ವಾಸಿ; ಇಲ್ಲದಿದ್ದರೆ ಆ ಭಾರವನ್ನು ಹೊತ್ತುಕೊಂಡೇ ಇರಬೇಕಾಗಿ ಬಂದು ನಿದ್ದೆಗೇಡಾಗುತ್ತದೆ. ಅನುಮತಿ ದೊರೆತ ಮೇಲೆ ತಲೆಯ ಹೊರೆಯನ್ನು ಕಾಗದಕ್ಕೆ ಇಳಿಸಿ ಸುಖವಾಗಿ ನಿದ್ದೆ ಹೋಗಲು ಸಾಧ್ಯವಾಯಿತು.

ಆ ಸಮಯದಲ್ಲಿ ಬರೆದ ಕವನಗಳಲ್ಲಿ ಕೆಲವನ್ನು, -ಈಗಾಗಲೇ ಅಚ್ಚಾದ ಕವನ ಸಂಗ್ರಹಗಳಲ್ಲಿ ಬಂದಿರದೆ ಇರುವವುಗಳನ್ನು ಮಾತ್ರ – ಇಲ್ಲಿ ಕೊಡಬಯಸುತ್ತೇನೆ. ರುಗ್ಣಶಯ್ಯೆಯ ಮೇಲೆ ಕುಳಿತೇ ರಚಿಸಿದ್ದ ದೀರ್ಘಕವನವೆಂದರೆ ‘ಹಾಳೂರು’. ಅದು ಗೊಲ್ಡ್ ಸ್ಮಿತ್ ಕವಿಯ Deserted Village ನ ಭಾಷಾಂತರವೂ ಅಲ್ಲ, ಸರಳಾನುವಾದವೂ ಅಲ್ಲ. ಆಗ ನನ್ನ ಬಳಿ ಆ ಪುಸ್ತಕವೂ ಇರಲಿಲ್ಲ. ಅದನ್ನು ಹಿಂದೆ ಓದಿದ್ದರ ಪ್ರಭಾವವೆಷ್ಟೊ ಅಷ್ಟೆ. ಸಂಪೂರ್ಣವಾಗಿ ನಮ್ಮ ಹಳ್ಳಿಯ ಜೀವನ ಮತ್ತು ಹಳ್ಳಿಗಳಿಂದ ಪೇಟೆಗೆ ಬಂದು ನೆಲಸುತ್ತಿದ್ದ ಹಳ್ಳಿಗರ ದಾರುಣವಾದ ಬದುಕು ಇವುಗಳನ್ನು ಕುರಿತದ್ದು. ಅದನ್ನು ಬರೆದಂತೆಲ್ಲ ನನ್ನ ಕೊಟಡಿಗೆ ಬಂದು ದೇಹಸ್ಥಿತಿ ವಿಚಾರಿಸುತ್ತಿದ್ದ ಮಿತ್ರರಿಗೆಲ್ಲ ಓದುತ್ತಿದ್ದೆ. ಸ್ವಾಮಿಜಿ ಮತ್ತು ಕಸ್ತೂರಿಯವರೂ ತುಂಬ ಮೆಚ್ಚಿ ಆಸ್ವಾದಿಸುತ್ತಿದ್ದರು!

ರೋಗಿಯ ಮನಸ್ಸಿಗೆ ಆಹ್ಲಾದವೂ ಒಂದು ಮಾನಸಿಕ ಭೇಷಜವಾಗಿ ರೋಗ ಬೇಗ ಗುಣವಾಗುವುದಕ್ಕೆ ನೆರವಾಗುತ್ತದೆ ಎಂಬ ಉದ್ದೇಶದಿಂದ ಆಶ್ರಮದ ಆವರಣದಲ್ಲಿದ್ದ ಹೂವಿನ ಗಿಡಗಳಿಂದ ಹೂವುಗಳನ್ನು ಕುಯ್ದು ತಂದು ನನ್ನ ಕೊಠಡಿಯಲ್ಲಿ ಮನೋಹರವಾಗಿ ಆಳವಡಿಸುತ್ತಿದ್ದರು ಸ್ವಾಮಿಜಿ. “ರೋಗ ಶಯನದೊಳಿದ್ದಾಗ ಪೂಜೊಂಪ ನೋಡಿ ಬರೆದುದು” ಎಂಬ ಷರಾ ಇರುವ ಈ ಕೆಳಗಣ ಸಣ್ಣ ಕವನ ಆ ಸಂದರ್ಭಕ್ಕೆ ಸೇರಿದುದು:

ಮುದ್ದು ಹೂಗಳೆ, ನಿಮ್ಮ ನೋಡೆನ್ನ ರೋಗ
ಜಾರಿಹೋದುದು ಬೇಗ; ಹರುಷವೊಂದೀಗ
ಬಂದಂತೆ ಭಾಸವಾಯಿತು; ನಿಮ್ಮ ಚೆಂದ
ರುಜೆಗೆಲ್ಲ ಬಂಧ, ಮೇಣಾತ್ಮದಾನಂದ!
ವೈದ್ಯರೌಷಧಿ ಕೊಡುವರಾದರೂ ಒಮ್ಮೆ
ನಿಮ್ಮಗಳ ಮುಂದವರ ಪಾಂಡಿತ್ಯ ಹೆಮ್ಮೆ!
ಕವಿಯ ರುಜೆಗಾವಗಂ ಪಂಡಿತರು ನೀವು!
ಸೌಂದರ್ಯವೌಷಧವು! ವರ ವೈದ್ಯ – ಹೂವು!

೨೯-೧೦-೧೯೨೬

ಜೀವ, ಜಗತ್ತು, ಈಶ್ವರ, ಜನ್ಮಾಂತರ, ಕರ್ಮ, ಕೃಪೆ, ಪ್ರಾರ್ಥನೆ, ಸಾಧನೆ, ತಪಸ್ಯೆ, ಗುರು, ಅವತಾರ ಇತ್ಯಾದಿ ನಾನಾ ವಿಚಾರಗಳ ಮಂಥನ ನಿರಂತರ ನಡೆಯುತ್ತಿತ್ತು ಮನದಲ್ಲಿ. ಅವುಗಳನ್ನು ಕುರಿತು ಸ್ವಾಮಿಜಿಯೊಡನೆ ನಿತ್ಯವೂ ವಿನಿಮಯ ಜಿಜ್ಞಾಸೆಯಾಗುತ್ತಿತ್ತು. ಬಹು ಪೂರ್ವಕಾಲದಿಂದಲೂ ನನ್ನಲ್ಲಿ ನಿರಂತರವಾಗಿರುತ್ತಿದ್ದ ‘ನನ್ನ’ ಜಗನ್ಮಾತೆಯ ಸಾನಿಧ್ಯದ ಅನುಸಂಧಾನ ಸತತವಾಗಿತ್ತು. ಅದು ಎಲ್ಲಿ ವಿಸ್ಮೃತವಾಗಿಬಿಡುವುದೊ ಸುಖದ ಸಮಯದಲ್ಲಿ ಎಂದು ಜೀವ ಎಚ್ಚರಿಕೆ ಹೇಳುತ್ತಿತ್ತು. ಹಾಗಾದಂತೆ ದುಃಖ ಸಮಯದಲ್ಲಿ ಎಂತೋ ಅಂತಹ ಸುಖದ ಸಮಯದಲ್ಲಿಯೂ ನಾನು ನಿನ್ನನ್ನು ಮರೆಯದಂತೆ ಕೃಪೆಮಾಡು ಎಂದು ತಾಯಿಯನ್ನು ಬೇಡುತ್ತದೆ ಈ ಕೆಳಗಿನ ಗೀತೆ:

ದುಃಖವೈತರೆ ನಿನ್ನ ನೆನೆಯುವೆವು ಬಿಡದೆ,
ಮರೆಯುವೆವು ಸುಖದೊಳಿರಲು;
ಸಂತಸದೊಳಿರುವಾಗ ನಿನ್ನ ನೆನೆವಂತೆ
ಮನವ ದಯಪಾಲಿಸೆನಗೆ!
ನಿತ್ಯತ್ತ್ವವು ನೀನು ಚಿತ್ತದೊಳು, ತಾಯೆ,
ನಿತ್ಯವೂ ನಿನ್ನ ನೆನೆವೆ!
ಸುಖವಿರಲಿ ದುಃಖವೇ ಇರಲಿ ಮತಿಯಿಯು
ನಿನ್ನ ನಾ ಮರೆಯದಂತೆ!
೨೫-೧೦-೧೯೨೬

ಅದೇ ತೇದಿಯಲ್ಲಿ ಬರೆದ ಇನ್ನೊಂದು ಕವನ, ತಾಯಿಯ ಅನಿರ್ವಚನೀಯ ರಹಸ್ಯಮಯ ಸಾನಿಧ್ಯ ಸರ್ವದಾ ನನ್ನ ಬಳಿ ಸುತ್ತುತ್ತಿರುವಂತೆ ಅನುಭವವಾಗುತ್ತಿರುವುದನ್ನು ಕುರಿತು ಹೇಳುತ್ತದೆ, ನಡೆಯುತ್ತಿರಲಿ ನುಡಿಯುತ್ತಿರಲಿ ಆಡುತ್ತಿರಲಿ ಓದುತ್ತಿರಲಿ ಚಿಂತನೆ ಮಾಡುತ್ತಿರಲಿ:
ಒಂದು ರಹಸ್ಯವು ಪೀಡಿಪುದೆನ್ನ
ಒಂದಾನಂದವು ಬಾಧಿಪುದೆನ್ನ!
ನಡೆಯುತಲಿರಲಿ ನುಡಿಯುತಲಿರಲಿ
ಚಿಂತನೆ ಮಾಡುತಲಿರಲಿ, ಸದಾ;
ಆಡುತಲಿರಲಿ ಓದುತಲಿರಲಿ
ಕವಿತೆಯ ರಚಿಸುತ ನಾನಿರಲಿ;
ಎಲ್ಲೇ ಇರಲಿ, ಎಂತೇ ಇರಲಿ,
ಏನನೆ ಮಾಡುತಲಿರಲಿ, ಸದಾ
ಒಂದು ರಹಸ್ಯವು ಪೀಡಿಪುದೆನ್ನ!
ಒಂದಾನಂದವು ಬಾಧಿಪುದೆನ್ನ!
ಬಳಿಯೊಳಗಾರೋ ಇರುವರು ಎಂಬ
ಒಂದು ರಹಸ್ಯವು ಪೀಡಿಪುದೆನ್ನ!
ಯಾರಾನಂದವು ಬಾಧಿಪುದೆನ್ನ!
೨೬-೧೦-೧೯೨೬

ಅದೇ ತಾರೀಖು ಹಾಕಿರುವ ಇನ್ನೊಂದು ಕವನ ‘ಹೂದೋಟ’ ಎಂಬ ಶೀರ್ಷಿಕೆಯದು. ಬಹುಶಃ ರೋಗವಿಮುಕ್ತನಾಗುತ್ತಿರುವ ಕವಿಹೃದಯ ಕೋಣೆಯಿಂದ ಹೊರಗೆ ಬಂದು ಬೆಳಗಿನ ಎಳಬಿಸಿಲಲ್ಲಿ ಆಶ್ರಮದ ಹೂದೋಟವನ್ನು ಕಂಡು ಹಿಗ್ಗಿ ಹಾಡಿದುದು ಎಂದು ತೋರುತ್ತದೆ.

ಹೂದೋಟ

ಉದಯ ದಿನೇಶನ ಕೋಮಲ ಕಾಂತಿಯು
ಚುಂಬಿಸುತಿದೆ ಹೂದೋಟವನು;
ವಿಧವಿಧ ಬಣ್ಣದ ಹೂಗಳು ಕವಿಯನು
ಕರೆವವು ತಲೆದೂಗಿ!
ಕೆಂಪಿನ ಹೂಗಳು ಹಳದಿಯ ಹೂಗಳು,
ಕುಂಕುಮರಾಗದ ಹೂವುಗಳು,
ಕವಿತೆಗಳಂದದಿ ಹೃದಯವ ಸೆಳೆವುವು
ಮೋಹಿಸಿ ಕವಿಮನವ!
ನಾನಾ ವರ್ಣದ ರಮ್ಯ ಪತಂಗಗಳ-
ಳೆಲ್ಲಿಯು ಹಾರುತ ನಲಿಯುವುವು;
ಪೂವಿಂ ಪೂವಿಗೆ ಹಾರುತ ನಲಿವುವು
ಹೀರುತ ನವವಧುವ!
ಆಹಹಾ! ದಿವ್ಯಾನಂದದ ಬಾಳದು!
ಮುಕ್ತಾತ್ಮಕ ಬಾಳಂತಿಹುದು!
ಸುಮವು ಪತಂಗವನೊಲಿದಂತಿರುವುದು
ಮೌನದ ಮಾತಾಡಿ!
ಕವಿಗಿದು ಭಾವಾವೇಶವ ತರುವುದು
ಪರಮಾನಂದದೊಳೊಂದಾಗೆ!
ಸೊಬಗಿದು ದ್ವೈತದ ಆಚೆಗೆ ಒಯ್ವುದು
ಬ್ರಹ್ಮದೊಳೆಲ್ಲವು ಲಯವಾಗೆ!
೨೬-೧೦-೧೯೨೬

ಈ ಲೋಕ, ಇದರ ಬದುಕು, ಈ ಸಂಸಾರ ಎಲ್ಲವನ್ನೂ ಹಳಿಯುವ ಮನೋಧರ್ಮವನ್ನು ಒಪ್ಪದೆ, ಇದು ತಾಯಿಯ ಲೀಲಾಮಯಿಯ ಅಂಕಪೀಠ, ನಾವೆಲ್ಲ ಆ ತಾಯಿಯ ತೊಡೆಯ ಮೇಲೆ ಆಡಲು ಬಂದವರು ಎಂದು ಆಶ್ವಾಸನೆ ನೀಡುತ್ತದೆ, ಅದೇ ದಿನದಲ್ಲಿ ಬರೆದ ಮತ್ತೊಂದು ಕವನ: ಮಾಡೋ ಜನ್ಮ ಎನ್ನುವ ದಾಸಯ್ಯನನ್ನು ಸಂಭೋದಿಸುತ್ತದೆ:

ಸುಖವಿಲ್ಲವೇನಬೇಡ
ದುಃಖವೆನಬೇಡ;
ತಾಯ ತೊಡೆಯಿದು, ದಾಸ
ಹರುಷದಾವಾಸ.

ಪಾಪಿ ತಾನೆನಬೇಡ,
ದಾಸನೆನಬೇಡ;
ತಾಯಿ ಸುತರಾವೆಲ್ಲ,
ಬರಿಯ ದಾಸರಲ್ಲ!

ಸಂಸಾರ ಬರಿ ಮೋಸ
ಎನಬೇಡ, ದಾಸ.
ತಾಯ ಲೀಲೆಯ ನೀನು
ಬಲು ಬಲ್ಲೆಯೇನು?

ಜೀವವಿದು ಬರಿ ವೇಷ
ಅಲ್ಲವೋ ದಾಸ!
ತಾಯ ತೊಡೆಯಿದು, ದಾಸ,
ಹರುಷದಾವಾಸ!
೨೬-೧೦-೧೯೨೬

ಆ ದಿನವೆ ಬರೆದ ಮತ್ತೊಂದು ಕವನ ‘ಆಟ ಮುಗಿಯುವ ಮುನ್ನ’ ಎಂಬುದು ‘ಮರಿವಿಜ್ಞಾನಿ’ ಎಂಬ ಶಿಶುಗೀತೆಗಳ ಸಂಗ್ರಹದಲ್ಲಿ ಅಚ್ಚಾಗಿದೆ. ನಾನು ಕಾಯಿಲೆಯಾಗಿ ಮಲಗಿದ್ದಾಗ ‘ಎಲ್ಲಿ ಸತ್ತು ಹೋಗಿ ಬಿಡುವೆನೊ’ ಎಂಬ ಆಲೋಚನೆ ಬಗೆಗೆ ಬಂದಾಗ, ತಾಯಿಗೆ ಹೇಳಿಕೊಂಡಿದ್ದು. ಸಾವು ಆತ್ಮದ ವಿನಾಶ ಎಂಬ ಹೆದರಿಕೆ ಯಿಂದಲ್ಲ. ಸಾಧಿಸಬೇಕಾದುದು ಇನ್ನೂ ಬಹಳಷ್ಟು ಇರುವಾಗ ಅದನ್ನೆಲ್ಲ ಕೈಗೂಡಿಸದೆ ಹೋಗುವ ನಷ್ಟಕ್ಕೆ ನನ್ನನ್ನು ಗುರಿಪಡಿಸದಿರು ಎಂದು ಬೇಡುತ್ತದೆ. ಆಗಲೆ ಅಚ್ಚಾಗಿದ್ದರೂ ಇಲ್ಲಿ ಕೊಡುವುದು ಉಚಿತ ಎಂದು ತೋರುತ್ತದೆ. ಮಗು ತಾಯಿಗೆ ಹೇಳುತ್ತದೆ;

ಆಟ ಮುಗಿಯುವ ಮುನ್ನ
ಕರೆಯಬೇಡೆನ್ನ!
ಆಟ ಮುಗಿಯಲು ನಾನೆ
ಬರುವೆನಮ್ಮಾ!
ಇದ್ದರೂ ಸವಿಯೂಟ
ಬೇಡವೆನಗೀಗ;
ಪೊರೈಸಲೀ ಆಟ
ಬರುವೆನಾಗ!

ಆಟ ತೊಲಗುವುದಲ್ಲಾ
ಎಂಬುವಳಲಿಲ್ಲ;
ಆಟ ಮುಗಿಯಲು ನಾನೆ
ಬರುವೆನಮ್ಮಾ!

ಬರಲೆನಗೆ ಭಯವಿಲ್ಲ,
ಸಂದೇಹವಿಲ್ಲ;
ತಾಯೆ, ನಿನ್ನಾನಂದ
ನಿನ್ನ ಕಂದ!

ಇದನ್ನು ಬರೆದು ಮುಗಿಸುತ್ತಿದ್ದಂತೆಯೆ ಕಸ್ತೂರಿ ಇತರರೊಡನೆ ಕೊಟಡಿಗೆ ಬಂದರು. ಆಗ ನಾನಿದನ್ನು ಮಕ್ಕಳ ದನಿದಾಟಿಯಲ್ಲಿ ರಾಗವಾಗಿ ಹಾಡಿದೆ. ನನ್ನ ಕಾಯಿಲೆಯ ಸ್ಥಿತಿಯ ಹಿನ್ನೆಲೆಯಲ್ಲಿ ಈ ಭಾವ ಅವರಿಗೆ ತುಂಬ ಹೃದಯಸ್ಪರ್ಶಿಯಾಗಿ, ಇತರರಿಗೂ ಅದನ್ನು ಹೇಳಿ, ಹಾಡಿಸಿ ಪ್ರಶಂಸಿದ್ದರು. ಇಂತಹುದೆ ಮತ್ತೊಂದು ನೆನಪಿಗೆ ಬರುತ್ತದೆ. ಅದು ನಡೆದುದು ಇನ್ನೂ ಮುಂದೆ, ನಾನು ‘ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ, ಸಖೀ’ ಎಂದು ಪ್ರಾರಂಭವಾಗುವ ‘ಆತ್ಮನಿವೇದನ’ ಎಂಬ ಕವನವನ್ನು ಬರೆದ ಸಮಯದಲ್ಲಿ. ಒಮ್ಮೆ ಅವರಿಗೆ ಗಂಟಲಿನಲ್ಲಿ ಏನಿ ಊದಿಕೊಂಡು ಜ್ವರ ಬಂದಿತಂತೆ. ಆಗ ತನಗೆ ಪ್ಲೇಗು ಅಂಟಿದೆ ಎಂದು ಭಾವಿಸಿ, ತಾನು ಸಾಯುವುದು ನಿಶ್ಚಯವಾದರೆ, ಸಾಯುವ ಮುನ್ನ ಪುಟ್ಟಪ್ಪನವರನ್ನು ಕರೆದು ‘ಆತ್ಮನಿವೇದನ’ವನ್ನು ಹಾಡುವಂತೆ ಕೇಳಿಕೊಂಡು, ಅವರು ಹಾಡುವುದನ್ನೆ ಆಲಿಸುತ್ತಾ ಪ್ರಾಣಬಿಡುತ್ತೇನೆ ಎಂದು ಆಲೋಚಿಸಿದರಂತೆ!

ರೋಗ ಗುಣಮುಖವಾಗಿ ಚೇತರಿಸಿಕೊಳ್ಳುತ್ತಿದ್ದೆ. ಬೆಳಿಗ್ಗೆ ಹೊರಬಂದೆ. ಒಂದು ಹಕ್ಕಿ, ಕರಿಯ ಮತ್ತು ಬಿಳಿಯ ಬಣ್ಣಗಳದ್ದು, ಮಲೆನಾಡಿನಲ್ಲಿ ಅದನ್ನು ‘ಹಂಡ ಹಕ್ಕಿ’ ಎಂದೂ ಸಾಹಿತ್ಯದಲ್ಲಿ ‘ಮಡಿವಾಳ’ ಎಂದೂ ಕರೆಯುತ್ತಾರೆ, ಆಶ್ರಮದ ಒಂದು ಗಿಡದ ಮೇಲೆ ಕುಳಿತು ಸಿಳ್ಳು ಹಾಕುತ್ತಿತ್ತು. ನನಗೆ ನಮ್ಮೂರಿನ ಒಂದು ಆರಣ್ಯಕ ಚೇತನವೆ ಹಕ್ಕಿಯಂತೆ ನನ್ನ ಕ್ಷೇಮಸಮಾಚಾರ ವಿಚಾರಿಸಲು ಬಂದಂತಾಗಿ, ಅದನ್ನು ಮಾತಾಡಿಸಿದೆ:

ಮಡಿವಾಳ

ಬಂದಿರುವೆ ಎಲ್ಲಿಂದ?
ಸಂದೇಶವಾರಿಂದ
ತಂದಿರುವೆ, ಎಲೆ ಮುದ್ದು ಮಡಿವಾಳ ಹಕ್ಕಿ?

ಹಿಂದಿನಾ ದಿನಗಳಾ-
ನಂದವನು ತಂದಿಹೆಯ?
ಮುಂದಿನಾನಂದವನು ತಂದಿರುವೆ ಏನು?

ತಂದಿಹೆಯ ತಾಯ್ನುಡಿಯ?
ಬಂದಿಹೆಯ ಇನಿಯಳಾ
ಸಂದೇಶವನು ಕೊಂಡು ಭರದಿಂದ ನೀನು?

ಗುರುವಿನಾದೇಶವನು
ಭರದಿಂದ ತಂದಿಹೆಯ?
ವರಕವಿಗಳಾಗವೇಶವನು ತಂದೆಯೇನು?

ಯಾರಾದೊಡೇನು? ನೀ-
ನೂರಿಂದ ಬಂದವನು!
ಸಾರುತಿಹೆ ನಮ್ಮೂರ ಹಾಡುಗಳನಿಲ್ಲಿ!

ಸಾರೆಲೈ ಮಡಿವಾಳ;
ಸೇರಿ ನಾವಿರ್ವರೂ
ಸಾರೋಣ ನಮ್ಮೂರ ಹಾಡುಗಳನಿಲ್ಲಿ!
೨೭-೧೦-೧೯೨೬

೨೯.೧೦.೧೯೨೬ನೆಯ ರಾತ್ರಿ. ಬಹಳ ಹೊತ್ತು ನಿದ್ದೆ ಬರಲಿಲ್ಲ. ಏನೇನೋ ಯೋಚನೆಗಳು; ಲೌಕಿಕ ಮತ್ತು ತಾತ್ತ್ವಿಕ ಒಮ್ಮೊಮ್ಮೆ ನಾನು ಬದುಕುತ್ತೇನೆಯೊ ಇಲ್ಲವೊ ಎಂಬ ಆಶಂಕೆ. ತಾಯಿ ಏಕೆ ಹೀಗೆಲ್ಲ ಮಾಡುತ್ತಿದ್ದಾಳೆ ಎಂದು ಅವಳ ಮೇಲೆ ಮುನಿಸು. ನೀನು ಏನು ಬೇಕಾದರೂ ಮಾಡು ನಾನೇನು ಹೆದರುವವನಲ್ಲ ಎಂಬ ಗರ್ವಭಂಗಿ ಅವಳೊಡನೆ. ನಾನು ಎಲ್ಲಕ್ಕೂ ಸಿದ್ದ ಎಂಬ ಕೆಚ್ಚು. ಆ ಮಧ್ಯರಾತ್ರಿಯಲ್ಲಿ ಒಂದು ಕವನ ಮೂಡಿತು; ಆಗಲೆ ದೀಪಹೊತ್ತಿಸಿ ಅದನ್ನು ಬರೆದುಬಿಟ್ಟೆ: ಕವನದ ಕೆಳಗೆ ತಾರೀಖು ಹಾಕಿ ಬ್ರಾಕೆಟ್ಟಿನಲ್ಲಿ Night  ಎಂದೂ ಹಸ್ತಪ್ರತಿಯಲ್ಲಿ ಬರೆದಿದೆ.

ಸಿದ್ಧವಾಗಿಹೆ ನಾನು, ಕಾಳಿ!
ಎದೆಯೊಡ್ಡಿ ನಿಂತಿಹೆನು;
ಆದುದಾಗಲಿ, ದೇವಿ,
ನಿರ್ಭೀತ ನಾನು!

ಬರಸಿಡಿಲ ಬೀಸು,
ಕಾರ್ಮಿಂಚ ಸೂಸು;
ಶೋಣಿತವ ಚೆಲ್ಲು,
ಜೀವವನೆ ಮೆಲ್ಲು;
ಬರಲೆನಗೆ ಸಾವು,
ಬರಲೆನಗೆ ನೋವು;

ದುಃಖಗಳ ಬೀರು,

ಸುಖಗಳನು ಹೀರು;
ನಿನ್ನ ಖಡ್ಗದಿ ಎದೆಯ ಸೀಳು;
ಶೂನ್ಯವಾಗಲಿ ನನ್ನ ಬಾಳು;

ಸಿದ್ಧವಾಗಿಹೆ ನಾನು, ಕಾಳಿ!
ಎದೆಯೊಡ್ಡಿ ನಿಂತಿಹೆನು;
ಆದುದಾಗಲಿ, ದೇವಿ,
ನಿರ್ಭೀತ ನಾನು!
೨೯-೧೦-೧೯೨೬
(Night)