ಆಶ್ರಮದ ಪ್ರಶಾಂತ ಪವಿತ್ರ ಸ್ನೇಹಮಯ ವಾತಾವರಣದಲ್ಲಿ ಸ್ವಾಮಿಜಿಯ ಅಕ್ಕರೆಯ ಶುಶ್ರೂಷೆಯಿಂದ ನಾನು ಚೇತರಿಸಿಕೊಂಡ ಮೇಲೆ, ನಾನು ಊರಿಗೆ ಹೋಗಿ ಬರುವಂತೆ ಸ್ವಾಮಿಜಿಯೆ ಹೇಳಿದರು. ಅವರ ಉದ್ದೇಶ ನನ್ನ ಆರೋಗ್ಯ ಸುಧಾರಣೆಯ ಕಾರಣವಾಗಿರಲಿಲ್ಲ; ಆಶ್ರಮದ ಮೇಲೆ ಬಂದಿದ್ದ ಆಪಾದನೆಯ ನಿವಾರಣಕ್ಕಾಗಿ: ನಾನು ಊರಿಗೆ ಹೋಗಿ ನೆಂಟರಿಷ್ಟರಿಗೆ ಮುಖ ತೋರಿಸಿ, ಸ್ವಾಮಿಜಿಗಳು ನನ್ನನ್ನು ಆಶ್ರಮಕ್ಕೆ ಕರೆದೊಯ್ದುದು ಸಂನ್ಯಾಸಿಯನ್ನಾಗಿ ಮಾಡಲಿಕ್ಕಲ್ಲ ಎಂದು ಅವರಿಗೆಲ್ಲ ಮಂದಟ್ಟು ಮಾಡಿಕೊಡಲಿಕ್ಕೆ; ಆಶ್ರಮದ ಮತ್ತು ಸ್ವಾಮಿಗಳ ವಿಷಯದಲ್ಲಿ ಅವರ ದುರ್ಭಾವನೆ ತೊಲಗಿ, ವಿಶ್ವಾಸ ಗೌರವವನ್ನು ಮಂಡಿಸಲಿಕ್ಕೆ. ನನಗಂತೂ ನಮ್ಮೂರಿಗೆ ಹೋಗುವುದೆಂದರೆ ಇಷ್ಟವೆ: ನಂಟರಿಷ್ಟರಿಗಾಗಿ ಅಲ್ಲದಿದ್ದರೂ ಕಾಡು ಮಳೆ ಹೊಳೆ ತೊರೆ ಹಕ್ಕಿ ಹೂವು ಮೊದಲಾದ ನಿಸರ್ಗಶ್ರೀ ದರ್ಶನಕ್ಕಾಗಿ.

ಪಟ್ಟಣದಲ್ಲಿದ್ದು ಕಾಯಿಲೆಯ ವಾತಾವರಣದಿಂದ ಮಲೆನಾಡಿಗೆ ಹೋಗುವಾಗ ಪದ್ಧತಿಯಂತೆ ಶಿವಮೊಗ್ಗದಲ್ಲಿ ಕೆಲದಿನ ತಂಗಿದ್ದೆ. ದೇವಂಗಿ ರಾಮಣ್ಣಗೌಡರ ಅಡಿಕೆ ಮಂಡಿಯಲ್ಲಿ,  ಹೊಸಮನೆ ಮಂಜಪ್ಪಗೌಡರು ಮತ್ತು ದೇವಂಗಿ ಮಾನಪ್ಪ ಅವರ ಆತಿಥ್ಯದಲ್ಲಿ. ಹಸ್ತಪ್ರತಿಯಲ್ಲಿ ೨-೧೨-೧೯೨೬ ತಾರೀಖು ಹಾಕಿರುವ ಅಪ್ರಕಟಿತ ಕವನ ‘ಹೊಳೆಯರೆಯ ಮೇಲೆ’ ಎಂಬುದು ಬಹುಶಃ ತುಂಗಾ ನದಿಯ ನಡುವಣ ಬಂಡೆಯ ಮೇಲೆ ಕುಳಿತು ಸಂಜೆಯ ಅನಂತರ ಮೂಡಿದ ಚಂದ್ರನ ಬೆಳಕಿನಲ್ಲಿ ಮಲೆಗಳ ಸೊಬಗನ್ನು ಸವಿದು ಬರೆದದ್ದಿರಬೇಕು:

ಹೊಳೆಯರೆಯ ಮೇಲೆ

ಗಗನ ರಮಣಿಯ ನೀಲ ನಿರ್ಮಲ
ಹಣೆಯ ಮಂಗಳ ತಿಲಕದಂದದಿ
ಕಾಂತಿಯಿಂದಲಿ ಮೆರೆಯುತ
ಶಾಂತಿ ಮಳೆಯನು ಸುರಿಸುತ,
ಹಸುರು ವಸನವ ಧರಿಸಿ ನಭವನು
ಚುಂಬಿಸುತಲಿಹ ಗಿರಿಶಿಖರದೆಡೆ,
ಹೃದಯಕಡಲೊಳು ಹರುಷದಲೆಗಳ-
ನಿರದೆ ಏಳಿಸಿ ಮನವ ಮೋಹಿಸಿ
ಮೆರೆದನಿಂದುವು ಚೆಂದದಿ,
ಮೆರೆದನತ್ಯಾನಂದದಿ!

ಗೆಳೆಯನೊರ್ವನ ಕೂಡೆ ಹಿಂದಿನ
ಕಳೆದ ದಿನಗಳನೆಲ್ಲ ನೆನೆಯುತ
ಹೊಳೆಯ ಬಂಡೆಯ ಶಿಖರದಿ
ಕುಳಿತೆನಮೃತಾನಂದದಿ!
ಗಳಗಳೆಂಬುವ ನದಿಯ ಮಂಜುಳ
ದನಿಯು ಜೋಗುಳದಂತೆ ಮೊರೆಯುತ
ಮರಳಿ ತಾಯಿಯ ನೆನಪು ತಂದಿತು:
‘ಕಂದ! ಕಂದಾ!’ ಎಂದಿತು,
‘ಅಮ್ಮ! ಅಮ್ಮಾ!’ ಎಂದೆನು.
ಹಸುರನಾಲಿಂಗಿಸಿದ ತಿಂಗಳ
ಬೆಳಕು ನೀರಿನ ಮೇಲೆ ಲೀಲೆಯ-
ನಾಡುತಿದ್ದುದು ನಲಿಯುತ
ಜೊನ್ನದಲೆಗಳ ರಚಿಸುತ!
ತಳಿರ ಸಂಗಡ ಲೀಲೆದೋರುತ
ಬೀಸುತಿದ್ದಿತು ಮಂದಮಾರುತ;
ದೂರದೂರಿನ ದೀಪಸಂಕುಲ
ಗೂಡದರ್ಥದಿ ಮಿನುಕುತಿದ್ದುವು;
ಗುಡಿಯ ದೇವರ ಪೂಜೆಯ
ಗಂಟೆ ಕೇಳುತಲಿದ್ದಿತು!

ಕಿವಿಯು ಕೇಳಿತು ಮೌನದುಲಿಯನು,
ನಯನ ನೋಡಿತು ಶೂನ್ಯದಂದವ,
ತಾಯ ಕಂಗಳ ಒಲುಮೆಯ
ಮನಕೆ ತಂದಿತು ನೀಲವು!
ನೋಡಲಿಂದುವನಿಂದುವಾದೆನು,
ನೋಡೆ ಗಗನವ ಗಗನವಾದೆನು,
ನೋಡೆ ವನಗಳ ವನಗಳಾದೆನು,
ನೋಡಲಲೆಗಳನಲೆಗಳಾದೆನು;
ವಿಶ್ವವೆನ್ನೊಳು ಸೇರಿತು,
‘ನಾನು’ ಶೂನ್ಯವ ಸೇರಿದೆ!

ಅರಿವಿನಾಚೆಯ ಯಾವನೊರ್ವನ
ಕವಿಯ ಪರಮ ಪುರಾಣ ಪುರುಷರ
ತೆರದಿ ಕುಳಿತೆವು ಮರಳಲಿ,
ಮಾಯೆಯಂದವ ಸವಿಯುತ!
ಚಿತ್ರದೊಳಗಿಹ ಚಿತ್ರದಂದದಿ
ಕನಸಿನೊಳಗಿಹ ಕನಸಿನಂದದಿ
ಇಂದುಕಾಂತಿಯ ಮಾಯೆ ಮೆರೆಯಿತು;
ನದಿಯು ಮಂಜುಳ ರವದಿ ಹರಿಯಿತು:
ಯಾರೊ ‘ಕಂದಾ!’ ಎಂದರು
‘ಅಮ್ಮ, ಅಮ್ಮಾ!’ ಎಂದೆನು!
೨-೧೨-೧೯೨೬

ಮಲೆನಾಡಿನ ಗುಡ್ಡ ಬೆಟ್ಟ ಕಾಡು ಹಕ್ಕಿ ಮಿಗ ಹೊಳೆ ತೊರೆ ತೋಟ ಗದ್ದೆ ಬಾನು ಬಯಲುಗಳ ಸಂಗದಲ್ಲಿ ಆಗತಾನೆ ಕಾಯಿಲೆ ಬಿದ್ದೆದ್ದು ಆರೋಗ್ಯ ಸಂಪಾದಿಸುತ್ತಿದ್ದ ಕವಿಚೇತನಕ್ಕೆ ಹೊಸ ಹುರುಪು ಬಂದು ಚಳಿಗಾಲದಲ್ಲಿಯೂ ‘ವಸಂತಾಗಮ’ವನ್ನು ಕಾಣುವಂತೆ ಮಾಡಿತು. ೭-೧೧-೧೯೨೬ ರಲ್ಲಿ ರಚಿತವಾದ ಆ ಕವನ ಆಂತರಿಕ ಆತ್ಮಾಹ್ಲಾದಕ್ಕೆ ವಸಂತಾಗಮದ ಪ್ರತಿಮೆನ್ನೊಡ್ಡಿದೆ. ಭಾಷೆಯ ಲಾಲಿತ್ಯ, ಛಂದಸ್ಸಿನ ವಿನ್ಯಾಸ, ಪಂಕ್ತಿಮಧ್ಯ ಪ್ರಾಸ ಮಾಧುರ್ಯ ಮತ್ತು ಯತಿಸ್ಥಾನ ಮನೋಹರತೆ ಇವೆಲ್ಲ ಕವಿಯ ಜೀವನದಲ್ಲಿ ಉಕ್ಕುತ್ತಿದ್ದ ಹರ್ಷದ ಬುಗ್ಗೆಗೆ ಪ್ರತೀಕಗಳಾಗಿವೆ;

ಚೈತನ್ಯದಲ್ಲಿ ವಸಂತಾಗಮ

ಮಾವಿನ ತಳಿರದಲ್ಲಿ-ಹಾಡುವರಿಂಪಿಂದಾರಲ್ಲಿ?
ವಾಣಿಯೆ, ನೀನಾರು?-ಪೇಳೆನಗಾವುದು ನಿನ್ನೂರು?
ಕಾಣದೆ ಹಾಡುತಿಹೆ,-ಮನಕಾನಂದವ ನೀಡುತಿಹೆ;
ಕೋಗಿಲೆ, ವನವಾಣಿ,-ನೀನೇ ಮಧುಭೂಪನ ರಾಣಿ!

ಚಂದದ ವನ ಕೇಳಿ!-ಬಂದಿತು ಕಂಪಿನ ಬನಗಾಳಿ!
ಮೊರೆವುವು ಭೃಂಗಾಳಿ,-ಇಂಚರವೀವುವು ವಿಹಗಾಳಿ;
ನವಸುಮಗಳ ತಾಳಿ-ಕಂಗೊಳಿಪವು ತರುಲತೆಯಾಳಿ;
ಚಂದದ ಮಧು ಬಂದ,-ಧರೆಗಾನಂದದ ನೆರೆ ತಂದ!

ಭೂಮಿಯು ಹಸುರಾಗಿ-ತೋರ್ಪುದು ಸುಮನೋಹರವಾಗಿ!
ಸರ್ವವು ಕಮನೀಯ,-ಉರ್ವರೆ ನಭ ರವಿ ರಮಣೀಯ!
ಭುವಿಗೈತಂದಿಹುದು-ಸೊಬಗೊಂದಾತ್ಮವ ತಂದಿಹುದು;
ಅಹ ಹರುಷವ ತಾಳಿ!-ಅದೊ ಹಕ್ಕಿಗಳುಲಿಯನು ಕೇಳಿ?

ತಂಬೆಲರಿನ ತಂಪು-ಬನಗಳ ತುಂಬಿದೆ ಪೂಗಂಪು;
ಸೊಬಗಿನ ಚಿರ ಸೊಂಪು-ಬನದೇವಿಗೆ ಸುರುಚಿರ ಪೆಂಪು;
ಕವಿಕಂಗಳಿಗಿಂಪು-ತಳಿತೆಸೆಯುವ ಮರಗಳ ಗುಂಪು;
ಮಧು ಜೀವನ ಬೀಡು,-ಅಮರತೆಗಾತನೆ ನೆಲೆವೀಡು!

ರಂಜಿಸೆ ರವಿಯುದಯ-ನೆರೆ ತಳಮಳಿಪುದು ಕವಿಹೃದಯ:
ಇದೆ ವರ ಮಧು ಉದಯ-ಭೂದೇವಿಗೆ ನವಸುಖದುದಯ!
ಹಾಡಿರಿ ಹಕ್ಕಿಗಳೆ!-ಬೀಸಿರಿ ಎಲೆ ಬನಗಾಳಿಗಳೆ!
ಮೊರೆಯಿರಿ ಭೃಂಗಗಳೆ!-ಮೆರೆಯಿರಿ ಶ್ಯಾಮಲ ಶೃಂಗಗಳೆ!

ಮೋಹಿಸಿ ಹೂವುಗಳೆ,-ಸೊಂಪನು ಬೀರಿರಿ ಮಾವುಗಳೆ!
ಹರಿಯಿರಿ ತೊರೆಗಳಿರ,-ಮೆರೆಯಿರಿ ರಮ್ಯ ವನಂಗಳಿರ!
ನಿಮ್ಮೊಡಗೂಡುವೆನು,-ನಿಮ್ಮಾಟವ ನಾನಾಡುವೆನು!
ನಿಮ್ಮೊಡನೇರುವೆನು,-ಹರುಷದ ಹಬ್ಬವ ಸೇರುವೆನು!
೭-೧೧-೧೯೨೬

ಆ ಸಮಯದಲ್ಲಿಯೆ (ಎಂದರೆ ೧೬-೧೧-೧೯೨೬) ಬರೆದ ಮತ್ತೊಂದು ಕವನ ಕವಿಯ ಚೇತನದಲ್ಲಿ ಜರುಗುತ್ತಿದ್ದ ದಾರ್ಶನಿಕ ಚಿಂತನಕ್ಕೊಂದು ಪುಟ್ಟ ಗವಾಕ್ಷದಂತಿದೆ: ತಾಯಿಯ ಒಲುಮೆ ಒಂದೆಯೆ ಸರ್ವಸಿದ್ದಿಗಳನ್ನೂ ಮೀರುವ ಪರಮೋಚ್ಚಸಿದ್ಧಿ!

ನಿನ್ನ ಸಿರಿ ಬೇಡೆನಗೆ;
ನಿನ್ನ ಬಲ ಬೇಡೆನಗೆ,
ನಿನ್ನೊಲುಮೆ ಸಾಕು!
ನಿನ್ನ ಕರುಣೆಯು ಬೇಡ,
ನಿನ್ನ ವರಗಳು ಬೇಡ,

ನಿನ್ನೊಲುಮೆ ಬೇಕು!

ಮುಕ್ತಿ ಬಂದರು ಬರಲಿ,
ಮುಕ್ತಿ ಬಾರದೆ ಇರಲಿ,
ಭಕ್ತಿಯೊಂದಿರಲಿ!
ದುಃಖಗಳ ನೀ ನೀಡೆ
ಸುಖಗಳನು ನಾ ಬೇಡೆ;

ನಿನ್ನಿಷ್ಟವಿರಲಿ!

ಸ್ವರ್ಗಸುಖವೆನಗೇಕೆ?
ವೈಕುಂಠವೆನಗೇಕೆ?
ಮೋಕ್ಷವೆನಗೇಕೆ?
ಇರಲು ನಿನ್ನನುರಾಗ
ಅದೆ ಪರಮತರ ಭೋಗ!

ಅದೆ ಚಾಗ, ಯೋಗ!
೧೬-೧೧-೧೯೨೬

ಅದೇ ಸಮಯದಲ್ಲಿ ಬರೆದ ಇನ್ನೆರಡು ಕವನಗಳು ‘ಜೀವ ರಥೋತ್ಸವ’ ಮತ್ತು ‘ಚೋರರು ಹೃದಯದೊಳಡಗಿಹರು’ ‘ಕೊಳಲು’ ಕವನ ಸಂಗ್ರಹದಲ್ಲಿ ಪ್ರಕಟವಾಗಿವೆ. ಸಂನ್ಯಾಸಿಯನ್ನು ಸಂಭೋದಿಸಿರುವ ‘ಜೀವ ರಥೋತ್ಸವ’ ನನ್ನ ಅಂತರಂಗದ ಹೋರಾಟದಲ್ಲಿ ಜೀವ ಎತ್ತಕಡೆ ತುಯ್ಯುತ್ತಿತ್ತು ಎಂಬುದಕ್ಕೆ ಸಾಂಕೇತಿಕ ಉತ್ತರಮುಖಿಯಾಗಿದೆ.

‘ಮಲೆನಾಡು’ ಎಂಬ ಶೀರ್ಷಿಕೆಯಲ್ಲಿ ಸೀಸಪದ್ಯದ ದಾಟಿಯಲ್ಲಿ ಬರೆದ ಒಂದು ಪ್ರಾಸಾನುಪ್ರಾಸ ಭೂಯಿಷ್ಠವಾದ ಮುಕ್ತಕ ನಮ್ಮ ಊರಿಗೆ ಹೋಗಿ ಗುಡ್ಡ ಬೆಟ್ಟ ಕಾಡುಗಳನ್ನು ಸಂದರ್ಶಿಸಿದಾಗ ಉಂಟಾದ ಆನಂದವನ್ನು ವ್ಯಕ್ತಪಡಿಸುತ್ತದೆ.

ಮಲೆನಾಡು

ಶ್ರೀವನಿತೆಗಿದು ಬೀಡು, ಸೊಬಗಿಗಿದು ಗೂಡು,

ಇದು ನಮ್ಮ ರಮಣೀಯ ಮಲೆಯ ನಾಡು!
ಲಾವಣ್ಯದಾರಾಮವಿದು ಸುಖದ ಧಾಮ,

ಜನಮನೋತ್ಪಲಕಿದುವೆ ಪೂರ್ಣಸೋಮ!

ಆನಂದದ ನಿವಾಸ, ಪುಣ್ಯಕಾವಾಸ,
ಋಷಿಗಳ ತಪೋವನಂ, ರಮ್ಯ ದೇಶ!
ಎಲ್ಲಿ ನೋಡಲು ಮನವ ಮೋಹಿಸುವ ವನವ
ಸುಮತತಿಯು ತುಂಬಿಹುದು ಕರೆದು ಜನವ!

ನಿನ್ನ ನೋಡದ ಹೃದಯಕಿಹುದೆ ಸುಖದುದಯ?
ಮಲೆನಾಡೆ, ಲಾವಣ್ಯದರಸಂಗೆ ಬೀಡೆ,
ಆನಂದ ನೀನಾಗಿ ಬೊಮ್ಮನಂ ನೀಗಿ
ಕರ್ಣಾಟಕಿಳಿದಿರುವೆ ಮಲೆಯನಾಡಾಗಿ!
೨೭-೧೧-೧೯೨೬

ಧೀರ್ಘಕಾಲದ ಕಾಯಿಲೆಯ ತರುವಾಯ ಹುಟ್ಟೂರಿನ ಮಲೆ ಬಾನು ಬಯಲು ಕಾಡುಗಳಲ್ಲಿ ತುಸು ವಿಹರಿಸಿ ಮನಃಸಂತೋಷವನ್ನೂ ದೇಹಾರೋಗ್ಯವನ್ನೂ ಸಂಪಾದಿಸಿದೆ. ನಂಟರಿಷ್ಟರು ಹುಟ್ಟುಗೆಳೆಯರ ನಡುವೆ ಅಕ್ಕರೆಯನ್ನು ಸವಿದ ಪ್ರಾಣ ಹಿಗ್ಗನ್ನು ಹೀರಿ ಬಲಿಷ್ಠವಾಯಿತು. ಆದರೆ ಅದೆಲ್ಲಕ್ಕಿಂತ ಅತಿಶಯವಾದುದೆಂದರೆ, ಕನ್ನಡ ಸಾಹಿತ್ಯಕ್ಕೂ, ವಿಶೇಷವಾಗಿ ಕನ್ನಡನಾಡಿನ ಮಕ್ಕಳಿಗೂ ಲಭಿಸಿದೊಂದು ಸಿರಿಯ ಹೊಂಗಾಣಿಕೆ: ಬೊಮ್ಮನ ಹಳ್ಳಿಯ ಕಿಂದರಿಜೋಗಿ!

ಆಶ್ರಮದಲ್ಲಿ ರುಗ್ಣಶಯ್ಯೆಯಲ್ಲಿ ಗುಣಮುಖನಾಗುತ್ತಿದ್ದಾಗಲೆ ‘ಹಾಳೂರು’ ನೀಳ್ಗವಿತೆಯನ್ನು ಬರೆದ ವಿಚಾರವನ್ನು ಹಿಂದೆಯೆ ಹೇಳಿದ್ದೇನೆ. ಇಲ್ಲಿ ‘ಬೊಮ್ಮನ ಹಳ್ಳಿಯ ಕಿಂದರಿಜೋಗಿ’ ಉದ್ಭವಿಸಿದ ಸನ್ನಿವೇಶವನ್ನು ಕುರಿತು ಎರಡು ಮಾತು ಹೇಳಬಯಸುತ್ತೇನೆ.

ಮೈಸೂರಿನಿಂದ ಊರಿಗೆ ಹೊರಟವನು ಶಿವಮೊಗ್ಗದಲ್ಲಿ ವಾಡಿಕೆಯಂತೆ ಹಲವು ದಿನಗಳನ್ನು ಕಳೆದೆ, ಗೆಳೆಯರ ಜೊತೆಯಲ್ಲಿ, ದೇವಂಗಿ ರಾಮಣ್ಣಗೌಡರ ಅಡಕೆ ಮಂಡಿಯ ಉಪ್ಪರಿಗೆಯಲ್ಲಿ. ಭೂಪಾಳಂ ಚಂದ್ರಶೇಖರಯ್ಯ ಮೊದಲಾದ ಮಿತ್ರರು ಬಂದು ಹರಟೆ ಹೊಡೆದು ನನ್ನ ಹೊಸ ರಚನೆಗಳ ವಾಚನವನ್ನು ಕೇಳಿ ಆನಂದಿಸಿ ಪ್ರಶಂಸಿಸಿ ಟೀಕಿಸಿ ಲೇವಡಿಮಾಡಿ ಕೇಕೆ ಹಾಕಿ ನಕ್ಕು ನಗಿಸಿ ಹೋಗುತ್ತಿದ್ದರು. ಮಾನಪ್ಪ ಆಪ್ತಕಾರ್ಯದರ್ಶಿಯಂತೆ ಆತಿಥ್ಯದ ಭಾರ ವಹಿಸುತ್ತಿದ್ದನು, ಅಲ್ಲದೆ ನನ್ನ ಕವನಗಳನ್ನೆಲ್ಲ ತನ್ನ ಮುದ್ದಾದ ಅಕ್ಷರಗಳಲ್ಲಿ ಒಂದು ನೋಟುಬುಕ್ಕಿನ ಹಸ್ತಪ್ರತಿಗೆ ಬರೆದುಕೊಡುವ ಶ್ರದ್ಧಾಪೂರ್ವಕ ಕಾರ್ಯವನ್ನೂ ನಡೆಸುತ್ತಿದ್ದನು. ಅವನ ಹಸ್ತಾಕ್ಷರದಲ್ಲಿ ಪ್ರತಿ ಮಾಡಿರುವ ನಾಲ್ಕಾರು ಹಸ್ತಪ್ರತಿಗಳು ನನ್ನಲ್ಲಿ ಈಗಲೂ ಇದ್ದು, ಅವುಗಳನ್ನು ಪ್ರೀತಿಯ ಸ್ಮಾರಕಗಳನ್ನಾಗಿ ಭಾವಿಸಿ ರಕ್ಷಿಸಿದ್ದೇನೆ. ನಾನು ಶ್ರೀರಾಮಕೃಷ್ಣಾಶ್ರಮದಲ್ಲಿ ರುಗ್ಣಶಯ್ಯೆಯಲ್ಲಿದ್ದಾಗ ಗೀಚಿ ಬರೆದಿದ್ದ ‘ಹಾಳೂರು’ ನೀಳ್ಗವಿತೆಯನ್ನು ದಪ್ಪರಟ್ಟಿನ ನೋಟುಬುಕ್ಕಿಗೆ ಮುದ್ದಾಗಿ ಪ್ರತಿಯೆತ್ತಿ, ಅದರ ತುದಿಯಲ್ಲಿ 18th Nov.1926, copied by D.R. Manappa ಎಂದು ರುಜು ಹಾಕಿದ್ದಾನೆ. ಅದು ಮುಗಿದ ತರುವಾಯದ ಎರಡನೆ ಪುಟದಲ್ಲಿ ‘ಬೊಮ್ಮನಹಳ್ಳಿಯ ಕಿಂದರಜೋಗಿ’ಯನ್ನು ಪ್ರತಿಮಾಡಿ ತುದಿಯಲ್ಲಿ copied by DRM, 19th Nov.1926 ಎಂದು ಸಹಿ ಹಾಕಿದ್ದಾನೆ. ಅಂದರೆ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ರಚನೆ ಒಂದೆ ದಿನದಲ್ಲಿ ನಡೆದದ್ದು, ಕೆಲವು ಗಂಟೆಗಳೊಳಗೆ.

ಅನೇಕರು ಅದನ್ನು ಬ್ರೌನಿಂಗ್ ಕವಿಯ ‘ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಕವಿತೆಯ ಭಾಷಾಂತರವೆಂದು ಭಾವಿಸಿದ್ದಾರೆ. ಅದು ಮೊದಲು ‘ಕಿರಿಯ ಕಾಣಿಕೆ’ಯಲ್ಲಿ ಮಹಾರಾಜಾ ಕಾಲೇಜಿನ ಕರ್ಣಾಟಕ ಸಂಘದಿಂದ ೧೯೨೮ರಲ್ಲಿ ಪ್ರಕಟವಾದಾಗ ಅದು ಬ್ರೌನಿಂಗ್ ಕವಿಯ ಕವಿತೆಯ ಆಧಾರದ ಮೇಲೆ ರಚಿತವಾದದ್ದು ಎಂಬ ಉಲ್ಲೇಖವಿದೆ. ಅದು ಯಾವ ದೃಷ್ಟಿಯಿಂದ ಪರಿಶೀಲಿಸಿದರೂ ಭಾಷಾಂತರವಾಗುವುದಿಲ್ಲ; ಕಡೆಗೆ, ಸಮೀಪದ ಅನುವಾದ ಕೂಡ ಆಗುವುದಿಲ್ಲ. ಅದನ್ನು ಬರೆಯುವಾಗ ಶಿವಮೊಗ್ಗದಲ್ಲಿ ನನ್ನ ಬಳಿ ಬ್ರೌನಿಂಗ್ ಕೃತಿ ಇರಲಿಲ್ಲ. ಅಷ್ಟೆ ಅಲ್ಲ. ಇಂಗ್ಲಿಷಿನಲ್ಲಿ ಅದನ್ನು ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ನಾನು ಐದನೆ ಫಾರಂನಲ್ಲಿ ಓದುತ್ತಿದ್ದಾಗ ಪಠ್ಯಪುಸ್ತಕದಲ್ಲಿ ಓದಿದ್ದೇನೆ ಹೊರತು ಆಮೇಲೆ ಅದನ್ನು ಓದಿರಲೂ ಇಲ್ಲ. ಆದ್ದರಿಂದ ಅದು ಭಾಷಾಂತರವೂ ಅಲ್ಲ, ಅನುವಾದವೂ ಅಲ್ಲ. ಆ ಕಥೆಯ ನೆನಪಿನ ಆಧಾರದ ಮೇಲೆ ರಚಿತವಾದದ್ದು ಎಂದು ಹೇಳಬಹುದು.

ನನಗಿನ್ನೂ ವಿಶದವಾದ ನೆನಪಿದೆ. ಬೆಳಿಗ್ಗೆ ಸ್ನಾನ ಕಾಫಿ ತಿಂಡಿ ಪೂರೈಸಿ ಉಪ್ಪರಿಗೆಗೆ ಹೋಗಿ, ಒಂದು ಮೇಜಿನ ಮುಂದಿದ್ದ ಕುರ್ಚಿಯ ಮೇಲೆ ಕುಳಿತು, ಬಿಡಿ ಹಾಳೆಗಳಲ್ಲಿ ಬರೆಯತೊಡಗಿದೆ. ಒಂದೊಂದೆ ಹಾಳೆ ತುಂಬಿದಂತೆಲ್ಲ ಅದನ್ನು ಕೆಳಗೆ ಹಾಕುತ್ತಿದ್ದೆ. ಮಾನಪ್ಪ ಈಗ ನನ್ನ ಬಳಿ ಇರುವ ನೋಟುಬುಕ್ಕಿನ ಹಸ್ತಪ್ರತಿಗೆ ಅದನ್ನು ಕಾಪಿ ಮಾಡುತ್ತಾ ಹೋಗುತ್ತಿದ್ದ. ಮಧ್ಯಾಹ್ನದ ಊಟದ ಹೊತ್ತಿಗೆ ಬರೆಯುವುದೂ ಪೂರೈಸಿತ್ತು! ಅಂದರೆ ಅದರ ರಚನೆಗೆ ಸುಮಾರು ನಾಲ್ಕು – ಐದು ಗಂಟೆ ಹಿಡಿದಿತ್ತು.

ಅಂತೂ ತಕ್ಕಮಟ್ಟಿಗೆ ದೇಹಾರೋಗ್ಯವನ್ನೂ ವಿಶೇಷವಾಗಿ ಮನಸ್ಸಿನ ಆಹ್ಲಾದವನ್ನೂ ಸಂಪಾದಿಸಿ ಮತ್ತೆ ಆಶ್ರಮಕ್ಕೆ ಹಿಂತಿರುಗಿ ಸ್ವಾಮಿಜಿಯ ಸ್ನೇಹಮಯ ಪವಿತ್ರ ಸಂಗದಲ್ಲಿ ಶ್ರೀಗುರು ಶ್ರೀಮಾತೆಯರ ಆರಾಧನಾ ದಿವ್ಯ ಸಾನ್ನಿಧ್ಯದಲ್ಲಿ ಬದುಕಿನ ಊರ್ಧ್ವಮುಖ ಪ್ರವಾಸವನ್ನು ಪ್ರಾರಂಭಿಸಿದೆ. ಬಿ.ಎ. ಡಿಗ್ರಿಯ ಕೊನೆಯ ವರ್ಷವಾದ್ದರಿಂದ ಪರೀಕ್ಷೆಯ ಗರಡಿಯಲ್ಲಿ ತೇರ್ಗಡೆ ಹೊಂದಲು ಅಧ್ಯಯನ ಅಂಗಸಾಧನೆಯನ್ನೂ ಕೈಕೊಂಡೆ. ಬಿ.ಎ. ಡಿಗ್ರಿಯ ಎರಡನೆಯ ವರ್ಷದಲ್ಲಿಯೆ ಇಂಗ್ಲಿಷ್ ಕನ್ನಡ ಪರೀಕ್ಷೆಗಳೆಲ್ಲ ಪೂರೈಸಿ, ಮೂರನೆಯ ವರ್ಷಕ್ಕೆ ಮುಖ್ಯ ಐಚ್ಛಿಕ ವಿಷಯಗಳಾಗಿದ್ದ ತತ್ತ್ವಶಾಸ್ತ್ರ ಮತ್ತು ಮನಃಶಾಸ್ತ್ರಗಳು ಮಾತ್ರ ಇದ್ದುವು.

ಇಷ್ಟೆಲ್ಲ ತುರುತ್ತಾದ ಕರ್ತವ್ಯಭಾರವಿದ್ದರೂ ಕವಿತಾರಚನೆ ತನ್ನ ಪಾಡಿಗೆ  ತಾನು ನಡೆಯುತ್ತಲೆ ಇತ್ತು. ಡಿಸೆಂಬರ್ ಜನವರಿ ತಿಂಗಳ ತಾರೀಖು ಹಾಕಿರುವ ಸುಮಾರು ೧೫ – ೧೬ ಕವಿತೆಗಳು ಹಸ್ತಪ್ರತಿಯಲ್ಲಿ ಸಾಕ್ಷಿ ಹೇಳುತ್ತಿವೆ: ೧. ‘ಅಮ್ಮನ ಮೂರ್ತಿ’, ೨. ‘ಕಬೀರದಾಸರಿಂದ’, ೩. ‘ನಾನಿನ್ನ ಮರೆಯೆ’, ೪. ‘ಉದಯ’, ೫. ‘ಬಂಧನ ಮತ್ತು ಮುಕ್ತಿ’, ೬. ‘ಜೋಗುಳ’, ೭. ‘ಬಾರೋ ಬೇಗ’, ೮. ‘ಮೂರ್ತಿಯ ಚಂದ್ರ’, ೯. ‘ಸೋಮಾರಿತನ ಹಾಡು’, ೧೦. ‘ಮಹಾಮಾತೆ’, ೧೧. ‘ಸ್ವಾಮಿ ವಿವೇಕಾನಂದ’, ೧೨. ‘ನಾನು – ನೀನು’, ೧೩. ‘ಸಂಜೆಯಾಗಮನ’, ೧೪. ‘ಕುಸುಮಕ್ಕೆ’, ೧೫. ‘ಬಲವನೀಡೆನಗೆ’ ೧೬. ‘ಸುಂದರಳು ನೀನೆಂದು’. ಜನವರಿಯಿಂದ ಏಪ್ರಿಲ್‌ವರೆಗೆ ಕವನ ರಚನೆಯ ಚಿಹ್ನೆಯೂ ಇಲ್ಲ. ಕಾರಣ, ಕೊನೆಯ ವರ್ಷದ ಡಿಗ್ರಿ ಪರೀಕ್ಷೆ!

ಕಾಯಿಲೆಯಾದ ತರುವಾಯ ಬರೆದ ಕವನಗಳಲ್ಲಿ ವಿಶೇಷವಾಗಿ ಮಕ್ಕಳ ಕವಿತೆಗಳಿರುವುದನ್ನು ಗಮನಿಸಬಹುದು: ಕಿಂದರಿಜೋಗಿ, ಅಮ್ಮನ ಮೂರ್ತಿ, ಮೂರ್ತಿಯ ಚಂದ್ರ, ಒಡವೆಗಳು, ಮೂರ್ತಿಯ ವಿಜ್ಞಾನ ಇತ್ಯಾದಿ. ಇವೆಲ್ಲವೂ ಮಕ್ಕಳ ಕವಿತಾ ಸಂಗ್ರಹಗಳಲ್ಲಿ ಪ್ರಕಟಗೊಂಡು ಪ್ರಸಿದ್ದವಾಗಿಯೆ ಇವೆ. ಇಲ್ಲಿ ಮತ್ತೆಮತ್ತೆ ಬರುವ ಮಗುವಿನ ಹೆಸರು ‘ಮೂರ್ತಿ’ ನಾ. ಕಸ್ತೂರಿಯವರ ಮೊದಲನೆಯ ಮಗುವಾಗಿದ್ದು, ಅವನು ಆಶ್ರಮದ ಪಕ್ಕದಲ್ಲಿಯೆ ಇದ್ದ ಅವರ ಮನೆಯಿಂದ ತನ್ನ ತಂದೆಯೊಡನೆ ಆಶ್ರಮಕ್ಕೆ ಬಂದು ತೊದಲು ಮಾತಿನಿಂದಲೂ ಮಕ್ಕಳಾಟದಿಂದಲೂ ಆಶ್ರಮದ ಆಧ್ಯಾತ್ಮಿಕ ಭಾರದ ಗುರುತ್ವಕ್ಕೆ ತುಸು ಲೌಕಿಕ ವಿನೋದದ ಮತ್ತು ಲಘುತ್ವದ ಹರ್ಷವನ್ನುಂಟು ಮಾಡುತ್ತಿದ್ದನು.

ಮೇಲೆ ಹೆಸರಿಸಿದ ಹದಿನಾರು ಕವನಗಳಲ್ಲಿ ೧, ೩, ೪, ೬, ೭, ೮, ೯, ೧೦, ೧೧, ೧೩ ‘ಕೊಳಲು’ ಮತ್ತು ಇತರ ಕವನ ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಆದ್ದರಿಂದ ಇಲ್ಲಿ ಇದುವರೆಗೆ ಎಲ್ಲಿಯೂ ಪ್ರಕಟವಾಗಿಲ್ಲದ ೨, ೫, ೧೨, ೧೪, ೧೫, ೧೬ ಅವುಗಳನ್ನು ಕೊಟ್ಟು ಏನಾದರೂ ವಿಶೇಷವಾಗಿದ್ದು ಹೇಳುವುದಿದ್ದರೆ ಹೇಳಿ, ಈ ವಿಭಾಗವನ್ನು ಮುಗಿಸುತ್ತೇನೆ:

ಕಬೀರ ದಾಸರಿಂದ

ವ್ಯಕ್ತದಿಂದಾಚೆಗಿಹುದವ್ಯಕ್ತವೆಂದು

ವೇದ ವೇದಾಂತಗಳು ಬೋಧಿಸುವುವು;
ಎಲ್ಲವನು ಮೀರಿಹನೊ? ಎಲ್ಲದರೊಳಿಹನೊ?

ಎಂಬ ವಾದವದೇಕೆ ನಿನಗೆ, ರಮಣಿ!

ನಿನ್ನ ವಾಸವದೆಂದೆ ಎಲ್ಲವನು ನೋಡು:

ಸುಖ ದುಃಖ ಹಿಮವಲ್ಲಿ ಹರಡದೆಂದೂ.
ಬ್ರಹ್ಮದರ್ಶನ ಸರ್ವಕಾಲದೊಳಗಲ್ಲಿ:
ವಸನ ಪೀಠಗಳವನ ಜ್ಯೋತಿಯಲ್ಲಿ!

ಬ್ರಹ್ಮ ಜ್ಯೋತಿಯು ಸದಾ ಮುಕುಟ ನಿನಗಲ್ಲಿ:
(ತೋರದಾ ಬೆಳಕಿನಂಬುಧಿಯ ತೀರ!)
‘ಸತ್ಯನಾಗಿರುವೆನ್ನ ಗುರು ಬರಿಯ ಬೆಳಕು,
ಪೂರ್ಣ ಬೆಳಕೆಂದು’ ನುಡಿದವನು ಕಬೀರ!

ಬಂಧನ ಮತ್ತು ಮುಕ್ತಿ

ನೂರಾರು ಬಂಧನಗಳಿಂದೆನ್ನ ಬಂಧಿಸಿರುವೆ:
ಬಂಧನಗಳೊಂದೊಂದ ಹರಿವ ಸುಖವೀಯುತಿರುವೆ!

ಬಂಧನಗಳಿವು ಮುಕ್ತಿದೇವತೆಯ ಮಧುರಗಾನೆ;
ಬಂಧನಗಳೆನ್ನಾತ್ಮ ನಾವಿಕಗೆ ಪರಮ ಯಾನ!

ಬಂಧನಗಳಾನಂದವೆನಗಿರಲಿ, ದೇವದೇವ!
ಬಂಧನದಿ ಮುಕ್ತಿಯನುಭವವಿಹುದು, ಜೀವಜೀವ!
೧೭-೧೨-೧೯೨೬

‘ನಾನು’ ಎಂಬುವರ ಸಂಪೂರ್ಣ ವಿಲಯನವಿಲ್ಲದೆ ಈಶ್ವರ ಸಾಕ್ಷಾತ್ಕಾರವಿಲ್ಲ ಎಂಬ ವಿಚಾರವಾಗಿ ಆಶ್ರಮದಲ್ಲಿ ಮತ್ತೆಮತ್ತೆ ಜಿಜ್ಞಾಸೆಯಾಗುತ್ತಿತ್ತು. ಅಭಿಪ್ರಾಯ ಘರ್ಷಣೆ ಉಂಟಾಗುತ್ತಿದ್ದುದು ವಿಶೇಷವಾಗಿ ‘ವಿಲಯನ’ದ ವ್ಯಾಖ್ಯಾನದಲ್ಲಿ. ವಿಲಯನ ಎಂದರೆ ‘ಸಂಪೂರ್ಣ ನಾಶ’ ಎಂದು ಒಂದು ವಾದ; ನಾಶವಲ್ಲ, ಐಕ್ಯವಾಗಿ ಇರುವುದು ಎಂದು ಮತ್ತೊಂದು ವಾದ. ಈ ಕವನ ‘ನಾನು-ನೀನು’ ವಿನಾಶವಲ್ಲದ ಐಕ್ಯವನ್ನು ಸೂಚಿಸುತ್ತದೆ. ‘ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ’ ಎಂಬ ಗೀತೋಕ್ತಿಯಂತೆ ಜೀವ ಭಗವಂತನ ಸನಾತನ ಅಂಶವಾಗಿರುವುದರಿಂದ ಐಕ್ಯದಲ್ಲಿ ಅದರ ಸನಾತನತ್ವಕ್ಕೆ ಬಾಧೆಯುಂಟಾಗುವುದಿಲ್ಲ!

ನಾನು-ನೀನು
ನಾನೆನ್ನದಿರಲು ನೀನು,
ನೀನೆನ್ನದಿರಲು ನಾನು:
ನಾನೆನಲು ಅಣುವಾಗುವೆ;

ನೀನೆನಲು ವಿಭುವಾಗುವೆ!
ನನ್ನದೆನೆ ನರಕಲೋಕ;
ನಿನ್ನದೆನೆ ಪರಮ ನಾಕ;
ನಾನೆನಲು ಮೃತನಾಗುವೆ;
ನೀನೆನಲಮೃತನಾಗುವೆ!
ನಾನೆನಲು ಪಾಪಜನ್ಯ,
ನೀನೆನಲು ಪರಮಪುಣ್ಯ!
ನಾನೆ ಎನಲದು ಬಂಧವು;
ನೀನೆ ಎನಲಾನಂದವು!
ನಾನೆ ನೀನೆನಲು ಮುಕ್ತಿ;
ನೀನೆ ನಾನೆನಲು ಭಕ್ತಿ!
ನಾನಿರಲು ನೀನಿಲ್ಲವು,

ನೀನಿರಲು ನಾನಿಲ್ಲವು!
ನಾನೆನ್ನದಿರಲು ನೀನು!
ನೀನೆನ್ನದಿರಲು ನಾನು!
೧೨-೧-೧೯೨೭

ತಾ ೨೮-೧-೧೯೨೭ ರಲ್ಲಿ ಬರೆದಿರುವ ‘ಕುಸುಮಕ್ಕೆ’ ಎಂಬ ಕವನ ಸೃಷ್ಟಿಯ ವಿಕಾಸದಲ್ಲಿ ಭೂಮಕ್ಕೂ ಅಲ್ಪಕ್ಕೂ ಮೌಲ್ಯಸಮಾನತೆಯನ್ನು ಗುರುತಿಸುತ್ತದೆ. ಮುಂದೆ ‘ಶಿಲಾತಪಸ್ವಿ’ ಮುಂತಾದ ಕವನಗಳಲ್ಲಿ ಈ ತತ್ತ್ವದೃಷ್ಟಿ ವೈಜ್ಞಾನಿಕವಾಗಿಯೂ ವಿಚಾರಾತ್ಮಕವಾಗಿಯೂ ಅಭಿವ್ಯಕ್ತಿವಾಗಿರುವುದರ ಬೀಜರೂಪ ಇಲ್ಲಿ ಗೋಚರವಾಗುತ್ತದೆ. ಕೊನೆಕೊನೆಗೆ ಈ ದೃಷ್ಟಿ ಕವಿಯ ‘ದರ್ಶನ’ ಒಂದು ಅಗ್ನಿಉಜ್ವಲ ಶ್ವಾಸಸ್ಪಂದನವಾಗಿ ಅವನ ಕೃತಿಗಳನ್ನೆಲ್ಲ ಮಿಡಿದು, ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ ಉತ್ತುಂಗ ಶಿಖರ ಸ್ಥಾನಕ್ಕೆ ಏರಿರುವುದನ್ನು ಕಾಣುತ್ತೇವೆ.

ಕುಸುಮಕ್ಕೆ

ಎದುರುಗೊಳ್ಳಲು ನಿನ್ನ ಯುಗಯುಗಗಳನು ಕಳೆದೆ;
ಎದುರುಗೊಂಡೆವು ಕಡೆಗೆ ನಾವಿಂದು, ಕುಸುಮ!
ನೀನಲೆದೆ ಎನಲಾಗಿ, ನಾನಲೆದೆ ನಿನಗಾಗಿ,

ಬೊಮ್ಮಾಂಡವಲೆದುದೈ ಎಮ್ಮ ಸಲುವಾಗಿ!

ಆದಿತಿಮಿರದಿ ಬಂದು ಮೊದಲ ಬೆಳಕೊಳು ಮಿಂದು
ಜಡತನದೊಳುಳಿದೆದ್ದು ಚೇತನದಿ ನಿಂದು
ಕಲ್ಲಾಗಿ ನಿದ್ರಿಸುತ್ತ ಗಿಡವಾಗಿ ಕನವರಿಸಿ
ಜೀವನಾಗೆಚ್ಚತ್ತು ಬಂದೆ ನಾನಿಂದು!

ಹಬೆಯಾಗಿ ರವಿಗೆ ಸತ್ತ್ವವನಿತ್ತು, ತರುವಾಯ
ಕರಗಿ ಕುದಿದೆವು ಧರೆಯ ಗೋಳೊಡನೆ ಸೇರಿ;
ಬೊಮ್ಮಾಂಡ ಮೊರೆಯಿಡಲು ಕಾರಿದೆವು ಕಣ್ಣೀರ,
ಬೊಮ್ಮಾಂಡದಿಂಚರದೊಳೆಮ್ಮುಲಿಯ ಬೀರಿ!

ರವಿ ಶಶಿಯು ನಭ ತಾರೆ ತಂಬೆಲರು ಶೀತಾಂಬು

ಭೂದೇವಿ ಮೊದಲಾದರೆಲ್ಲರೂ ನಮ್ಮ
ಬರವ ಹಾರೈಸೆನಿತು ಕಲ್ಪಗಳ ಕಳೆದರೈ,
ಎಲೆ ಕುಸುಮ? ನಮ್ಮ ಸಂಗಮವವರ ಮುಕ್ತಿ! ೨೮-೧-೧೯೨೭

ಯುಗಯುಗಾಂತರಗಳ ಅಗಲಿಕೆಗೆ ತುತ್ತತುದಿಯಲ್ಲಿ ಒದಗುವ ಮಿಲನವೆ ಪರಮ ಸಫಲತೆ, ಮತ್ತು ಸೃಷ್ಟಿಯ ವಿಕಾಸನದ ಚರಮೋದ್ದೇಶ್ಯ. ಕವಿಚೇತನ ಹೂವನ್ನು ಕಂಡು, ಕಂಡುಹಿಡಿದು, ಬ್ರಹ್ಮಾನಂದಾಂಗವಾದ ಅದರ ಸೌಂದರ್ಯವನ್ನು ಆಸ್ವಾದಿಸುವ ರಸಾನುಭೂತಿಯೆ ಆ ಮಿಲನಸ್ವರೂಪಕ್ಕೆ ಮತ್ತು ಉದ್ದೇಶ ಸಾಫಲ್ಯತೆ ಸಾಂಕೇತಿಕ ಪ್ರತಿಮೆಯಾಗುತ್ತದೆ!