ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಕಿರುದೊರೆಯಾಗಿ ಹುಟ್ಟಿ, ಗಿರಿವನ ಕಂದರಗಳಲ್ಲಿ ಹರಿದು ಬಂದು, ನನ್ನ ಜೀವನ ತರಂಗಿಣಿ ಶ್ರೀಗುರು ಕೃಪೆಯ ಮಹಾನದಿಯ ಗಂಗಾ ಪ್ರವಾಹಕ್ಕೆ ಸಂಗಮಿಸಿತು. ಅಂತರ್ ವೈಶಾಲ್ಯದಲ್ಲಿ ಅಲ್ಲದಿದ್ದರೂ ಬಾಹ್ಯವಿಸ್ತೀರ್ಣದ ದೃಷ್ಟಿಯಿಂದ ಅದುವರೆಗೆ ಕೂಪನಿವಾಸಿಯಂತಿದ್ದ ಮಂಡೂಕವು ಮಹಾನದಿ ಸಂಗಮದಿಂದ ಸಮುದ್ರ ಪ್ರವಾಸಿಯಾಯಿತು. ಆಂತರಿಕವಾಗಿ ನನ್ನ ಚೇತನ ವಾಜ್ಙಯ  ಶರೀರಿಗಳಾಗಿ ಗ್ರಂಥರೂಪದಲ್ಲಿದ್ದ ಕವಿ ಋಷಿ ಸಂತ ದಾರ್ಶನಿಕ ವಿಭೂತಿಗಳ ಚೈತನ್ಯಸಂಗಿಯಾಗಿ ಸಕ್ರಮ ದಿಕ್ಸೂಚಿರಹಿತವಾದ ಸಾಗರ ಪ್ರವಾಸದ ಸಾಹಸವನ್ನೇನೊ ಈ ಮೊದಲೆ ಕೈಕೊಂಡಿತ್ತು. ಆದರೆ ನಾನು ಶ್ರೀರಾಮಕೃಷ್ಣಾಶ್ರಮ ನಿವಾಸಿಯಾದ ಮೇಲೆ ಆ ಅಂತರ್ ವೈಶಾಲ್ಯಕ್ಕೆ ಬಾಹ್ಯವಿಸ್ತೀರ್ಣದ ವೈವಿಧ್ಯವೂ ಲಭಿಸಿ, ಯಾವುದು ಸ್ವಾಪ್ನಿಕ ಮಾತ್ರವಾಗಿರುತ್ತಿತ್ತೋ ಅದಕ್ಕೆ ಜಾಗ್ರತ್ ಸತ್ತೆಯ ವಾಸ್ತವ ಘನತ್ವವೂ ದೊರೆಕೊಂಡಂತಾಯ್ತು. ದಿಕ್ಕುಗೆಟ್ಟಂತಾಗಿ ಅಲೆಯುತ್ತಿದ್ದ ಸಾಗರ ಪ್ರವಾಸಿಗೆ ಉತ್ತರಮುಖಿಯೂ ಲಭಿಸಿ, ಧ್ರುವತಾರೆಯೂ ಗೋಚರಿಸಿದಂತಾಯ್ತು.

ಮೈಸೂರಿನಲ್ಲಿ ಆಗತಾನೆ ಪ್ರಾರಂಭವಾಗಿದ್ದರೂ ಶ್ರೀರಾಮಕೃಷ್ಣಾಶ್ರಮ ಎಂಬ ಹೆಸರೇ ಪವಿತ್ರವೂ ಪೂಜಾರ್ಹವೂ ಗೌರವಾಸ್ಪದವೂ ಆಗಿದ್ದ ಸಂಸ್ಥೆಗೆ ಪ್ರತೀಕವಾಗಿದ್ದುದರಿಂದ ಅದು ಬಹು ಶೀಘ್ರದಲ್ಲಿಯೆ ನಗರದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಜ್ಞಾನಕೇಂದ್ರವಾಗಿ ಧಾರ್ಮಿಕಪ್ರಜ್ಞೆಯ ನಾಗರಿಕರನ್ನು ಆಕರ್ಷಿಸ ತೊಡಗಿತ್ತು. ಜೊತೆಗೆ, ಸ್ವಾಮಿ ಸಿದ್ದೇಶ್ವರಾನಂದರ ವಿಭೂತಿ ವ್ಯಕ್ತಿತ್ವವೂ ಒಂದು ಕೇಂದ್ರಾನುಗ ಸ್ಫೂರ್ತಿಶಕ್ತಿಯಾಗಿ ಜನರನ್ನು ಆಶ್ರಮಕ್ಕೆ ಸೆಳೆಯುತ್ತಿತ್ತು. ಪ್ರೌಢಶಾಲೆಯ ಮತ್ತು ಕಾಲೇಜಿನ ವಿದ್ಯಾರ್ಥಿ ಮತ್ತು ಅಧ್ಯಾಪಕ ವರ್ಗದವರು ಆಶ್ರಮದ ಪೂಜಾ ಪ್ರಾರ್ಥನೆ ಜನ್ಮೋತ್ಸವಾದಿ ಸಭಾ ಸಮಾರಂಭಗಳಲ್ಲಿ ಬಹುಮಟ್ಟಿಗೆ ಭಾಗವಹಿಸುತ್ತಿದ್ದರು. ಮೈಸೂರಿನ ಹೊರಗಡೆಯ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಗೌರವದಿಂದ ನಗರಕ್ಕೆ ಬಂದವರು ಆಶ್ರಮಕ್ಕೆ ಭೇಟಿಯಿಯುತ್ತಿದ್ದರು. ವಿಶ್ವವಿದ್ಯಾನಿಲಯದ ವಿಶೇಷೋಪನ್ಯಾಸಗಳಿಗೆ ಆಹ್ವಾನಿತರಾಗಿ ಬರುತ್ತಿದ್ದ ದೇಶ ವಿದೇಶಗಳ ವಿದ್ವಾಂಸರು, ತಮ್ಮಲ್ಲಿಯ ಶ್ರಿರಾಮಕೃಷ್ಣಾಶ್ರಮಗಳ ಅಭಿಮಾನಿಗಳಾಗಿಯೊ ಭಕ್ತರಾಗಿಯೊ ಇರುತ್ತಿದ್ದುದರಿಂದ, ಇಲ್ಲಿಯ ಶ್ರೀರಾಮಕೃಷ್ಣಾಶ್ರಮಕ್ಕೆ ಭೇಟಿ ಕೊಡದೆ ಹೋಗುತ್ತಿರಲಿಲ್ಲ; ಕೆಲವರು ಸ್ನಾತಕೋತ್ತರ ಮೌಖಿಕ ಪರೀಕ್ಷೆಗಳಿಗಾಗಿಯೊ ಅಥವಾ ಇನ್ನಾವುವಾದರೂ ಸಮಿತಿ ಸಭೆಗಳಿಗಾಗಿಯೊ ಬರುತ್ತಿದ್ದವರು ಒಮ್ಮೊಮ್ಮೆ ಆಶ್ರಮದಲ್ಲಿಯೆ ಉಳಿದುಕೊಳ್ಳುತ್ತಿದ್ದುದೂ ಉಂಟು. ಭಾರತದ ಮತ್ತು ಭಾರತೇತರ ದೇಶಗಳಲ್ಲಿರುವ ಶ್ರೀರಾಮಕೃಷ್ಣ ಮಿಶನ್ನಿಗೆ ಸೇರಿದ ಸ್ವಾಮಿಗಳೂ ಬಂದು ಉಳಿದು ಆಧ್ಯಾತ್ಮಿಕತೆಯ ಮತ್ತು ಜ್ಞಾನದ ಔತಣವನ್ನು ಒದಗಿಸುತ್ತಿದ್ದರು. ಹೀಗಾಗಿ ನನಗೆ, ಎಲ್ಲಿಗೂ ಹೋಗದೆ ಯಾರೊಡನೆಯೂ ಹೆಚ್ಚಾಗಿ ಸೇರದೆ ಸ್ಥಾವರ ಪ್ರಕೃತಿಯ ‘ಅತಿಮಾನಿ’ ಎಂಬಂತಿರುತ್ತಿದ್ದ ನನಗೆ, ನನ್ನ ಪ್ರಯತ್ನವಿಲ್ಲದೆ ಮಾತ್ರವಲ್ಲ ನನ್ನ ಪ್ರಯತ್ನಕ್ಕೆ ವಿರುದ್ಧವಾಗಿಯೂ, ಅನಿವಾರ್ಯವಾಗಿಯೆ ವಿವಿಧ ಪ್ರಕೃತಿಯ ವಿವಿಧ ಮೇಧಶಕ್ತಿಯ ಮತ್ತು ವಿವಿಧ ಪ್ರತಿಭೆಯ ಬಹು ಜನರ ಸಂಪರ್ಕ ಲಭಿಸಿ ನನ್ನ ವ್ಯಕ್ತಿತ್ವದ ಶ್ರೀಮಂತತೆಗೆ ಅವಕಾಶವೊದಗಿತು. ಅಂತಹರು ಯಾರು ಆಶ್ರಮಕ್ಕೆ ಬಂದರೂ ಸ್ವಾಮಿಜಿ ನನ್ನನ್ನು ಅವರಿಗೆ ಪರಿಚಯಿಸಿ, ನನ್ನ ಕವಿತೆಯನ್ನು ಬಾಯಿತುಂಬ ಹೊಗಳಿ, ನನ್ನ ಪ್ರತಿಭಾವಿಶಿಷ್ಟತೆಯನ್ನು ಪ್ರಶಂಸಿಸಿದಲ್ಲದೆ ಅವರಿಗೆ ತೃಪ್ತಿಯಾಗುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ನಡೆಯುತ್ತಿದ್ದ ಮಾತುಕತೆ ಚರ್ಚೆ ಜಿಜ್ಞಾಸೆ ತತ್ತ್ವಚಿಂತನ ಮತ್ತು ಮಂಥನಗಳಲ್ಲಿ ನಾನೂ, ತತ್ತ್ವಶಾಸ್ತ್ರಾಧ್ಯಾಯಿಯಾಗಿ, ಹುರುಪಿನಿಂದಲೆ ಭಾಗವಹಿಸುತ್ತಿದ್ದೆ: ಬುದ್ಧಿಗೆ ಪ್ರಖರತೆ, ದೃಷ್ಟಿಗೆ ವೈಶಾಲ್ಯ, ಹೃದಯಕ್ಕೆ ಸ್ಫೂರ್ತಿ!

ತಕ್ಕಮಟ್ಟಿನ ಆರೋಗ್ಯ ಸಂಪಾದಿಸಿ ಮಲೆನಾಡಿನಿಂದ ಹಿಂದಿರುಗಿದ ಮೇಲೆ ಆಶ್ರಮದ ಪ್ರಶಾಂತ ನಿಃಶಬ್ದ ವಾತಾವರಣದಲ್ಲಿ ನನ್ನ ಅಧ್ಯಯನ ಪ್ರಾರಂಭವಾಯಿತು: ಕೊನೆಯ ಮತ್ತು ಮೂರನೆಯ ವರ್ಷದ ಡಿಗ್ರಿ ಪರೀಕ್ಷೆಗೆ ಸಿದ್ಧತೆ ಮತ್ತು ಇತರ ಮೈನರ್ ವಿಷಯಗಳ ಪರೀಕ್ಷೆಗಳೆಲ್ಲ ಎರಡನೆಯ ವರ್ಷದಲ್ಲಿಯೆ ಮುಗಿದಿದ್ದು, ಕೊನೆಯ ವರ್ಷಕ್ಕೆ ಮೇಜರ್ ವಿಷಯವಾಗಿದ್ದ ತತ್ತ್ವಶಾಸ್ತ್ರ ಮಾತ್ರವೆ ಪರೀಕ್ಷೆಯ ವಿಷಯವಾಗಿ ಉಳಿದಿತ್ತು. ಒಂದು ತರಹದ ಮೊಂಡಕೆಚ್ಚಿನ ಆತ್ಮಪ್ರಯತ್ನದ ಅಮಲಿನಲ್ಲಿ ನಾನು ತರಗತಿಗಳಲ್ಲಿ ಟಿಪ್ಪಣಿ ತೆಗೆದುಕೊಳ್ಳುವ ಗೋಜಿಗೇ ಹೋಗುತ್ತಿರಲಿಲ್ಲ. ಪ್ರೊಫೆಸರುಗಳು ಏನಾದರೂ ತಪ್ಪು ತಿಳಿದುಕೊಂಡಾರು ಎಂದು ಟಿಪ್ಪಣಿ ತೆಗೆದುಕೊಳ್ಳುವಂತೆ ನಟಿಸುತ್ತಿದ್ದ ಬರವಣಿಗೆಯೂ ಇಡೀ ವರ್ಷದಲ್ಲಿ ನಾಲ್ಕು ಐದು ಪುಟಗಳಷ್ಟೂ ಆಗಿರಲಿಲ್ಲ. (ಆ ನೋಟು ಪುಸ್ತಕ ಈಗಲೂ ನನ್ನ ದಪ್ತರಲ್ಲಿ ಹೇಗೋ ಉಳಿದಿದೆ. ಅದನ್ನು ನೋಡಿದಾಗಲೆಲ್ಲ ನನಗೆ ನಗೆಯೂ ಬರುತ್ತದೆ, ಆಶ್ಚರ್ಯವೂ ಆಗುತ್ತದೆ!) ಆ ರೀತಿಯಿಂದ ಪಡೆಯಬೇಕಾಗಿದ್ದ ನೆರವನ್ನು ವೈ.ಎಂ.ಶ್ರೀಕಂಠಯ್ಯ ಮೊದಲಾದ ಮಿತ್ರರನ್ನು ‘ಜಾಯಿಂಟ್ ಸ್ಟಡಿ’ಗೆ ಆಹ್ವಾನಿಸಿ ಪಡೆಯುವ ಹುನಾರು ಮಾಡಿದ್ದೆ. ಅವರಿಗೂ ಅದರಿಂದ ಲಾಭವಾಗುತ್ತಿತ್ತು. ಏಕೆಂದರೆ ಅವರು ತೆಗೆದುಕೊಂಡಿದ್ದ ನೋಟ್ಸ್ ಅವರಿಗೆ ಭಾವವಾಗದೆ ಇರುತ್ತಿದ್ದುದನ್ನು ನಾನು ವಿವರಿಸಿ ತಿಳಿಯುವಂತೆ ಮಾಡುತ್ತಿದ್ದೆ. ಆಶ್ರಮದ ತಾರಸಿಗೂ ಒಂದು ವಿದ್ಯುತ್ತಂತಿಯನ್ನೇಳದು ದೀಪವೊದಗಿಸಿಕೊಟ್ಟಿದ್ದರು ಸ್ವಾಮಿಜಿ, ರಾತ್ರಿ ಬಹಳ ಹೊತ್ತಿನವರೆಗೂ-ಕೆಳಗಿನ ಕೊಠಡಿಯ ಸೆಕೆಯಿಂದ ಪಾರಾಗಿ ತಾರಸಿಯ ಮೇಲಣ ತಂಗಾಳಿಯ ತಂಪಿನಲ್ಲಿ-ನಾವು ಓದಿಕೊಳ್ಳಲು ಅನುಕೂಲವಾಗಲಿ ಎಂದು. ಅಷ್ಟು ಗಂಭೀರ ಭಾವನೆ ಅವರಿಗೆ ನಮ್ಮ ಅಧ್ಯಯನದ ಗುರುತ್ವದಲ್ಲಿ!

ಆ ಸಮಯದಲ್ಲಿ ನಾನು ಕವನ ರಚನೆಯ ಕಡೆಗೆ ಮನಸ್ಸು ಕೊಡಲು ಸಮಯವಿರಲಿಲ್ಲವಾದರೂ ಶ್ರೀರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ ಮತ್ತು ಮಹಾಮಾತೆಯ ಜನ್ಮೋತ್ಸವ ಸಂದರ್ಭದಲ್ಲಿ ಬರೆದಿದ್ದ ಕವನಗಳು ತರುವಾಯ ‘ಅಗ್ನಿಹಂಸ’ದಲ್ಲಿ ಅಚ್ಚಾಗಿ ಈಗ ಸುಪ್ರಸಿದ್ಧವಾಗಿಯೆ ಇವೆ. ಎಲ್ಲಿಯೂ ಇದುವರೆಗೆ ಅಚ್ಚಾಗದಿದ್ದ ಒಂದು ಗೀತೆ ‘ಬಲವ ನೀಡೆನೆಗೆ’ ಎಂಬುದು ನನ್ನ ಅಂತರಾಳದ ಅಭೀಪ್ಸೆಯ ಪ್ರಾರ್ಥನೆಯಾಗಿದೆ. ಸ್ವಾಮಿಜಿಯ ಸಾನ್ನಿಧ್ಯದಲ್ಲಿ ದಿನವೂ ಸಂಧ್ಯಾ ಸಮಯದ ಪೂಜೆ ಪ್ರಾರ್ಥನೆ ಮಂಗಳಾರತಿಯಲ್ಲಿ ಭಾಗಿಯಾಗಿ; ತರುವಾಯ ಸ್ವಲ್ಪ ಹೊತ್ತು ಧ್ಯಾನ ಮಾಡುವುದನ್ನೂ ಮರೆಯುತ್ತಿರಲಿಲ್ಲ; ಮರೆಯುವಂತೆಯೂ ಇರಲಿಲ್ಲ. ಸ್ವಯಂ ಸ್ವಾಮಿಜಿಯೆ ವಿದ್ಯುದ್ದೀಪಗಳನ್ನೆಲ್ಲ ಆರಿಸಿ, ನೀಲಾಂಜನದ ಬೆಳಕಿನ ರಹಸ್ಯಮಯ ಕತ್ತಲಿನಲ್ಲಿ, ಹೊರಗಣ ಭಕ್ತಗಣವೆಲ್ಲ ಹೊರಟುಹೋದಮೇಲೆ ಉಂಟಾಗುತ್ತಿದ್ದ, ನಿರ್ಜನ ನಿಃಶಬ್ದತೆಯಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರು, ಬಹಳ ಹೊತ್ತು. ಆಗ ಆಶ್ರಮದ ನಿವಾಸಿಗಳಾಗಿದ್ದ ನಾವು ಮೂವರು ತರುಣರೂ – ಶಂಕರ್ ಮಹಾರಾಜ್, ಕುಮಾರಾನಂದಜಿ ಮತ್ತು ನಾನು-ಅವರನ್ನು ಸಾಧ್ಯವಾದ ಮಟ್ಟಿಗೆ ಅನುಸರಿಸುತ್ತಿದ್ದೆವು.[1]

“ಬಲವ ನೀಡೆನಗೆ” ಎಂಬ ಪ್ರಾರ್ಥನಾ ಗೀತೆಯಲ್ಲಿ ಚಿತ್ತಶುದ್ಧಿಗಾಗಿಯೂ ಆತ್ಮಸ್ಥೈರ್ಯಕ್ಕಾಗಿಯೂ ಭಕ್ತನ ಚೇತನ ಬೇಡುತ್ತದೆ:

ಬಲವ ನೀಡೆನಗೆ, ಗುರುವೇ
ಬಲವ ನೀಡು. ||ಪಲ್ಲವಿ||

ಎಡವಿ ಬೀಳದೆ, ಬಿದ್ದರಳುಕದೆ
ಎದ್ದು ನಡೆಯುವಂತೆ ||ಅನುಪಲ್ಲವಿ||

ಜಗದ ಮೋಹವು ಮನವ ಮೋಹಿಸಿ
ಮಾಯ ಜಾಲವ ಬೀಸಿ ಬರುತಿರೆ
ಮತ್ತನಾಗದೆ ಕುರುಡನಾಗದೆ
ಚಿತ್ತಶುದ್ಧಿಯೊಳಿರುವ ತೆರದೊಳು…ಬಲವ…

ಆತ್ಮವೆಲ್ಲವ ಬಿಡದೆ ಮುತ್ತುತ
ಭುವಿಯ ತಿಮಿರವು ನುಂಗಲೈತರೆ
ದೆಸೆಯನರಿಯದೆ ಮನವು ಭಯದಲಿ
ಪುಡಿಯೊಳೊರಲುತ ಹೊರಳದಂದದಿ…..ಬಲವ…

ಧರೆಯ ರಂಗದಿ ಕಡುಗಿ ಕಾದುತ
ಅರಿಯ ಘಾತದಿ ಮುರಿದು ಬೀಳಲು
ನೆಚ್ಚ ತೊರೆಯದೆ ಬೆಚ್ಚಿ ಬೀಳದೆ
ಮತ್ತೆ ಕೆಚ್ಚೆದೆಯಿಯುವಂದದ…….ಬಲವ…
೨-೩-೧೯೨೭

ಅಂತೂ ಪರೀಕ್ಷೆ ಬಳಿಸಾರಿತು. ೧೦ರಿಂದ ೧ರ ವರೆಗೆ ಮತ್ತೆ ೨ರಿಂದ ೫ರ ವರೆಗೆ ಬರೆದೂ ಬರೆದೂ ಕೈನೋವು ಹತ್ತಿ, ತಲೆಗೆ ಬಿಸಿ ಏರಿ, ಮೊದಲನೆಯ ದಿನ ನಾನು ಸುಸ್ತಾಗಿ ಆಶ್ರಮಕ್ಕೆ ಬಂದವನೆ ನಲ್ಲಿ ತಿರುಗಿಸಿ ಅದರಡಿ ತಲೆಕೊಟ್ಟು ಕುಳಿತದ್ದು ನೆನಪಿದೆ. ದಿನಕ್ಕೆ ಎರಡೆರಡು ಪ್ರಶ್ನಪತ್ರಿಕೆಗಳಂತೆ ಮುಗಿದು ಡಿಗ್ರಿ ಪರೀಕ್ಷೆ ಶೀಘ್ರದಲ್ಲಿಯೇ ಕೊನೆಗೊಂಡಿತು.ಸ್ವಾಮಿಜಿಯ ಆಶೀರ್ವಾದ ಪಡೆದು, ಬೇಸಗೆಯ ರಜೆಯಲ್ಲಿ ಓದಿಕೊಳ್ಳಲೆಂದು ಕೆಲವು ಸಾಹಿತ್ಯಿಕ ಮತ್ತು ದಾರ್ಶನಿಕ ಗ್ರಂಥಗಳನ್ನು ತೆಗೆದುಕೊಂಡು ಊರಿಗೆ ಊರಿಗೆ ರೈಲು ಹತ್ತಿದೆ.

ಎಂದಿನಂತೆ ಶಿವಮೊಗ್ಗದಲ್ಲಿ ನಾಲ್ಕು ದಿನ ಸ್ನೇಹಿತರ ಜೊತೆಯಲ್ಲಿ ಕಳೆದು, ಅಲ್ಲಿಂದ ಮನೆಗೆ ಹೋಗುವ ಮಾರ್ಗದಲ್ಲಿ ದೇವಂಗಿ, ಇಂಗ್ಲಾದಿಗಳಲ್ಲಿ ಒಂದೆರಡು ದಿನ ತಂಗಿ, ಕುಪ್ಪಳಿಗೆ ಹೋದೆ. ಸರಿ, ಪ್ರಾರಂಭವಾಯ್ತು: ಬೆಟ್ಟ ಮಲೆಗಳಲ್ಲಿ ಕೋವಿ ಹಿಡಿದು ಅಲೆಯುವುದು; ಪ್ರಾತಃಕಾಲ ಮತ್ತು ಸಂಜೆ ಕವಿಶೈಲ ಮತ್ತು ಸಂಜೆಗಿರಿಗಳಿಗೆ ಸೋದರ ಸೋದರಿಯರೊಡನೆ ಏರಿ ಸೂರ್ಯೋದಯ ಸೂರ್ಯಾಸ್ತಗಳ ಸೌಂದರ್ಯ ಸವಿಯುವುದು; ಭಾವಗೀತೆಗಳನ್ನು ಬರೆಯುವುದು ಮತ್ತು ಹಾಡುವುದು; ಜೀವ, ಜಗತ್ತು ಈಶ್ವರ ಮೊದಲಾದ ತಾತ್ವಿಕ ವಿಚಾರಗಳ ಪರಿಚಿಂತನೆ, ಪರಿಭಾವನೆ, ಧ್ಯಾನ ಇತ್ಯಾದಿ ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗುವುದು; ಸಾರಿಕೆ ಬೇಟೆ, ದೊಡ್ಡ ಬೇಟೆ, ಮರಸು ಬೇಟೆ ಇತ್ಯಾದಿಗಳಲ್ಲಿ ಹಳ್ಳಿಗರೊಡನೆ ಸೇರುವುದು; ಉಪ್ಪರಿಗೆಯಲ್ಲಿ ಕುಳಿತು ಎದುರಿಗೇ ಬಾನ್‌ಮುಟ್ಟಲೆಂಬಂತೆ ಎದ್ದಿರುವ ದಟ್ಟಗಾಡಿನ ಮಲೆಯ ಮತ್ತು ಅದರ….ಅಡಕೆ ಬಾಳೆಯ ತೋಟದ ಸೌಂದರ್ಯ ಸಾನ್ನಿಧ್ಯದಲ್ಲಿ ಪ್ರಾಚ್ಯ ಮತ್ತು ಪಾಶ್ಚಾತ್ಯ ಸಾಹಿತ್ಯ ಮತ್ತು ತತ್ವಶಾಸ್ತ್ರ ಗ್ರಂಥಗಳಲ್ಲಿ ಮಗ್ನನಾಗುವುದು ಇತ್ಯಾದಿ ಇತ್ಯಾದಿ ಇತ್ಯಾದಿ.

ಆ ದಿಗಳಲ್ಲಿ ದಿನಚರಿ ಬರೆದಿಟ್ಟಿಲ್ಲವಾದ್ದರಿಂದ ಸ್ವಾರಸ್ಯವಾದ ಎಷ್ಟಷ್ಟೊ ಅನುಭವಗಳನ್ನು ಚಿತ್ರಿಸುವುದು ಸಾಧ್ಯವಿಲ್ಲ. ಆದರೆ ಹಸ್ತಪ್ರತಿಗಳಲ್ಲಿರುವ ಆಗ ರಚಿತವಾದ ಕವನಗಳಿಗೆ ತಾರೀಖು ಹಾಕಿರುವುದರಿಂದ ಅವುಗಳ ಸಹಾಯದಿಂದ ಮರುಕೊಳಿಸುವ ಕೆಲವು ನೆನಪುಗಳನ್ನಿಲ್ಲಿ ಕೊಡುತ್ತೇನೆ.

ಆ ಬೇಸಗೆಯ ರಜೆಯಲ್ಲಿ ನಡೆದ ಮೂರು ಮುಖ್ಯ ಘಟನೆಗಳು ಉಲ್ಲೇಖನಾರ್ಹವಾಗಿವೆ: ೧. ಶೃಂಗೇರಿಗೆ ಹೋಗಿ ಬಂದದ್ದು. ೨. ಅಡಕೆ ತೋಟಕ್ಕೆ ಸಿಡಿಲು ಹೊಡೆದುದಕ್ಕೆ ಶಾಂತಿ ಮಾಡಿಸಿದ್ದು. ೩. ನನಗೆ ನ್ಯೂಮೋನಿಯಾ ಆಗಿ ವಿಷಮಿಸಿದ್ದು.

ನಾನು ಶೃಂಗೇರಿಗೆ ಹೋದದ್ದು ಪೂಜೆಗಾಗಿಯೂ ಅಲ್ಲ, ಯಾತ್ರಾರ್ಥಿಯಂತೆಯೂ ಅಲ್ಲ. ದೇ.ರಾ.ವೆಂಕಟಯ್ಯನವರು ಅವರ ಹೆಣ್ಣು ಕೊಟ್ಟ ಮಾವನಮನೆ ಮರಿತೊಟ್ಟಿಲಿಗೆ ಹೋಗುವಾಗ ಒಬ್ಬರೆ ಹೋಗಲು ಬೇಜಾರಾಗಿ ನನ್ನನ್ನೂ ಜೊತೆಗೆ ಬರುವಂತೆ ಕೇಳಿಕೊಂಡರು. ೧೯೨೭ರ ಹೊತ್ತಿಗಾಗಲೆ ಅವರು ಕಾರನ್ನಿಟ್ಟಿದ್ದರು. ಹಿಂದೆ ಎತ್ತಿನ ಗಾಡಿಯಲ್ಲಿ ಹೋಗುವಾಗ ಇರುತ್ತಿದ್ದ ಪ್ರಮಾಣದ ದೀರ್ಘತೆ ಇರುತ್ತಿರಲಿಲ್ಲ. ಇಂಗ್ಲಾದಿಯಿಂದ ಕಾರಿನಲ್ಲಿ ಕುಪ್ಪಳಿಗೆ ಬಂದು ಜೊತೆಗೆ ಬಾ ಎಂದು ಕರೆದಾಗ ಸಂತೋಷದಿಂದಲೆ ಹೋಗಿದ್ದೆ.

ಮಾವನ ಮನೆಯಲ್ಲಿ ಎರಡು ದಿನ ಇರಬೇಕಾಗಿ ಬಂದುದರಿಂದ ಕಾರಿನಲ್ಲಿ ಶೃಂಗೇರಿಗೆ ಹೋಗಿ ಬರುವ ಏರ್ಪಾಡಾಗಿ ಹೋದೆವು. ಪಯಣ, ರಸ್ತೆ ಕೊರಕಲು ದಾರಿಯಾದರೂ, ಇಕ್ಕೆಲದ ಸಹ್ಯಾದ್ರಿ ಪರ್ವತ ಶ್ರೇಣಿಯ ಅರಣ್ಯಮಯ ಗಿರಿಕಂದರಗಳಿಂದ ಭವ್ಯ ರಮ್ಯವಾಗಿದ್ದುದರಿಂದ ಸುಖಕರವೂ ಸಂತೋಷಕರವೂ ಕಾವ್ಯೋನ್ಮೇಷಕರವೂ ಆಗಿತ್ತು.

ಕೆಲವು ವರ್ಷಗಳ ಹಿಂದೆ ಶೃಂಗೇರಿಗೆ ಎತ್ತಿನ ಗಾಡಿಯಲ್ಲಿ ಹೋಗಿದ್ದಾಗ ನನಗಿದ್ದ ಆಜನ್ಮ ಸಹಜ ಪ್ರಕೃತಿ ಪ್ರೇಮವು ಈಗ ವರ್ಡ್ಸವರ್ತ್ ಮೊದಲಾದ ಪಾಶ್ಚಾತ್ಯ ಕವಿವರ್ಯರ ಕೃತಿಪರಿಚಯದಿಂದಲೂ ಉಪನಿಷತ್ತಿನ ಋಷಿಗಳು ರವೀಂದ್ರರು ವಿವೇಕಾನಂದರು ಮೊದಲಾದವರ ಪ್ರಾಚೀನ ಮತ್ತು ಅರ್ವಾಚೀನ ಕೃತಿಗಳ ಅಧ್ಯಯನದಿಂದಲೂ ಸೌಂದರ್ಯಾನುಭೂತಿಯ ಮತ್ತು ಆಧ್ಯಾತ್ಮಿಕ ಪ್ರಜ್ಞೆಯ ದಾರ್ಶನಿಕ ಭೂಮಿಕೆಗೆ ಏರಿದ್ದುದರಿಂದ ಪ್ರಮಾಣದ ದಾರಿಯ ಅನುಭವವು, ಅದರ ಗುರಿಯಿಂದ ಒದಗಬಹುದಾಗಿದ್ದ ಅನುಭವಕ್ಕೆ ಮೀರಿ, ‘ಅನುಭಾವ’ವೆ ಆಗಿತ್ತು.

ಶೃಂಗೇರಿಯ ಭವ್ಯತೆ ಮನಸ್ಸಿಗೆ ಬಂದುದು ವಿಶೇಷವಾಗಿ ಅದರ ನೈಸರ್ಗಿಕ ಪರಿಸರದಿಂದ ಮತ್ತು ಅದ್ವೈತ ಮಹಾದರ್ಶನವನ್ನು ವಿಶ್ವಕ್ಕೆ ನೀಡಿದ ಆದಿ ಶಂಕರಾಚಾರ್ಯರ ದಿವ್ಯ ಸ್ಮೃತಿಯ ಪರಿವೇಷ ಮಹಿಮೆಯಿಂದ. ತುಂಗೆಯ ಸುಂದರ ಸ್ನಾನಘಟ್ಟ, ಅಲ್ಲಿ ನಿರ್ಭಯದಿಂದ ಬಳಿಗೆ ಬಂದು ಆಡುವ ಬೃಹದ್ ಗಾತ್ರದ ಮತ್ಸ್ಯ ಸಂಕುಲ, ಸುತ್ತಣ ಆಕಾಶವನ್ನೆ ಎತ್ತಿ ಹಿಡಿದಿರುವಂತಿರುವ ಅಭ್ರಂಕಷ ಗಿರಿಶೃಂಗ ಪಂಕ್ತಿ, ನಿಃಶಬ್ದ ಸುಷುಪ್ತಿ ಸದೃಶ ಪ್ರಶಾಂತಿಯನ್ನೆ ಮೃದುವಾಗಿ ಮಿಡಿಯುವ ವಿವಿಧ ಪಕ್ಷಿ ಕೂಜನ ಮತ್ತು ಘನೀಭೂತ ಶತಮಾನಗಳಂತೆ ಕಾಲತ್ರಯಾತೀತವಾಗಿ ನಿಂತಿರುವ ಶಾಂಕರ ಶಿಲಾಮಯ ಪವಿತ್ರಕಲೆಯ ದೇವಾಲಯ-ಇವುಗಳನ್ನೆಲ್ಲ ದರ್ಶಿಸಿ ನನ್ನ ಚೇತನ ಒಂದು ದಿವ್ಯತೆಯನ್ನು ಅನುಭವಿಸಿತು. ಅಂದು (೧೯೨೭ನೆಯ ಏಪ್ರಿಲ್ ೨೧) ‘ಶೃಂಗೇರಿ’ ಎಂಬ ಶೀರ್ಷಿಕೆಯಲ್ಲಿ ಬರೆದಿದ್ದ ಒಂದು ಕವನ ನನ್ನ ಹಸ್ತಪ್ರತಿಯಲ್ಲಿದೆ. ಅದು ಎಲ್ಲಿಯೂ ಅಚ್ಚಾಗಲಿಲ್ಲ; ಯಾರ ಕಣ್ಣಿಗೂ ಬಿದ್ದಿಲ್ಲ. ಯಾವ ಕವನ ಸಂಗ್ರಹದಲ್ಲಿಯೂ ಸೇರದಿರುವುದಕ್ಕೆ ಕಾರಣ-ಮಠಗಳು, ದೇವಸ್ಥಾನಗಳು, ನೂರಾರು ದೇವರುಗಳು, ಪುರೋಹಿತ ವರ್ಗದವರು, ಮತ ಮತ್ತು ಧರ್ಮದ ಹೆಸರಿನಲ್ಲಿ ವಿಜೃಂಭಿಸುತ್ತಿರುವ ಮೂಢನಂಬಿಕೆಗಳು ಇತ್ಯಾದಿಗಳ ವಿಷಯದಲ್ಲಿ ನನ್ನ ಮನೋಧರ್ಮದಲ್ಲಿ ಉಂಟಾದ ವಿರುದ್ಧ ಭಾವನೆಯೆ. ಜಗತ್ತಿನ ತತ್ವಜ್ಞರಲ್ಲಿ ಕಿರೀಟಸದೃಶನಾಗಿ ವಿಶ್ವ ವಿಶಾಲವಾದ ಅದ್ವೈತವನ್ನು ಬೋಧಿಸಿದ ಆಚಾರ್ಯನ ಕೇಂದ್ರಸ್ಥಾನ ಇಂದು ಯಾವ ದುರ್ಗತಿಗಿಳಿದಿದೆ? ಎಂತಹ ಸಂಕುಚಿತ ಜಾತಿಭಾವನೆಯ ಗೂಬೆಗವಿಯಾಗಿದೆ, ವಿಶ್ವಕ್ಕೇ ಜ್ಯೋತಿರ್ದಾನ ಮಾಡಲೆಂದು ಆಚಾರ್ಯನು ಕಟ್ಟಿದ ಆ ಸಂಸ್ಥೆ, ಇತರ ಅಂತಹ ಎನಿತೋ ಹಿಂದೂ ಸಂಸ್ಥೆಗಳಂತೆಯೆ? ನನ್ನ ಜುಗುಪ್ಸೆಗೆ ಕಾರಣ ಆ ಸಂಸ್ಥೆಗಳಲ್ಲ ಅವುಗಳ ಅಧೋಗತಿ ಮತ್ತು ಅವು ಇಳಿದಿರುವ ದುಃಸ್ಥಿತಿ! ಆ ಕವನವನ್ನು ಪ್ರಕಟಿಸಿದರೆ ನಾನೂ ಈಗಿನ ಶೃಂಗೇರಿ ಮಠದ ಭಕ್ತನೆಂದುಕೊಂಡಾರು ಎಂದು ಹೆದರಿ ಅದನ್ನು ಅಚ್ಚುಹಾಕಿಸಿರಲಿಲ್ಲ. ಈಗ ಇಲ್ಲಿ ಅದನ್ನು ಕೊಡುತ್ತೇನೆ. ಇದು ಶಂಕರಾಚಾರ್ಯರ ಅದ್ವೈತ ದರ್ಶನಕ್ಕೆ ಸಾಂಕೇತಿಕವಾದ ‘ಶೃಂಗೇರಿಗೆ ಮಾತ್ರ ಅನ್ವಯಿಸುತ್ತದೆಯೆ ಹೊರತು ವರ್ಣಾಶ್ರಮ , ಜಾತಿಭೇದ, ಚತುರ್ವರ್ಣ, ಶೂದ್ರ, ಬ್ರಾಹ್ಮಣ ಇತ್ಯಾದಿ ಸಂಕುಚಿತ ಭಾವನೆಗಳನ್ನು ಪೋಷಿಸುವ ಸಂಪ್ರದಾಯ  ಕೂಪದ ಸಂಸ್ಥೆಗಲ್ಲ ಎಂಬುದನ್ನು ಯಾರೂ ಮರೆಯದಿರಲಿ ಎಂದು ಕೇಳಿಕೊಳ್ಳುತ್ತೇನೆ:

ಶೃಂಗೇರಿ

ಶ್ರೀಮಚ್ಛಂಕರ ಗುರುವರ ಪುರವಿದು

ಪಾವನಮಾಗಿಹ ಶೃಂಗೇರಿ;
ಪರಮತೆಗಾಲಯ, ರಮ್ಯತೆಗಾಶ್ರಯ,
ಬ್ರಹ್ಮಾನಂದಾವಾಸಮಿದು!
ಪುಣ್ಯ ತೀರ್ಥ ಜಲದಿಂದ ಮೆರೆವಮಲ
ತುಂಗಾ ತೀರೋದ್ಯಾನಮಿದು;
ಶಂಕರ ಕೇಸರಿ ಗರ್ಜಿಸುತಲೆದ ಮ-
ಹಾ ಅದ್ವೈತಾರಣ್ಯಮಿದು!

ಕಂಗಳ ಮೋಹಿಪ ಮಂಗಳಕರವಹ
ಶೃಂಗಗಳೆಲ್ಲಿಯು ಮೆರೆಯುತಿವೆ;
ಮನವನೆ ಅಲಿಸುವ ಘನತರವಾಗಿಹ
ಚಿನುಮಯನನುಭವವಾಗುತಿದೆ;
ಮಾಯಾ ಬಂಧವ ಮುರಿಯಾ ಚೆಂದವ
ಮೋಕ್ಷಾನಂದವು ತೋರುತಿದೆ;
ಶಕ್ತಿಗೂಡಭಯ ಭಕ್ತಿವಾಹಿನಿಯ
ಮುಕ್ತಿಮಹಾರ್ಣವವಾಗುತಿದೆ!

ಕಲ್ಪನೆಯನ್ನನು ಶತಮಾನಗಳಾ-
ಚೆಗೆ ಕರೆದೊಯ್ಯನೆ ಒಯ್ಯುತಿದೆ:
ಅಂದಿನ ಜೀವನವಂದಿನ ನೋಟಗ-
ಳಂದದಿ ಮನದೊಳು ಮೆರೆಯುತಿವೆ.
ಕುಸುಮಿತ ಮರದಡಿ ಶಂಕರ ಗುರು ತಾ
ಧ್ಯಾನದೊಳಿರುವುದ ನೋಡುವೆನು!
ಅಹಹಾ ಶಾಂತಿಗೆ ನೆಲವನೆಯಾಗಿಹ
ವದನವು ಜ್ಯೋತಿಯ ಬೀರುತಿದೆ!

ತುಂಗೆಯೆ, ಗುರುವಿನ ಮಂಗಲ ಚರಣ ಯು-
ಗಂಗಳ ನಿನ್ನ ತರಂಗದೊಳು
ಮಂಜುಳ ವೇದ ನಿನಾದವ ಮಾಡುತ
ತೊಳೆಯುವ ನೀನೇ ಪಾವನಳು!
ನಿನ್ನಾ ಪರಮ ಪವಿತ್ರತೆ ಇಂದಿಗು
ಪಾಪವಿನಾಶಕವಾಗಿಹುದು.
ಜನ್ಮಮೃತ್ಯುಗಳ ಪಾಪಪುಣ್ಯಗಳ
ಮೀರಿದೆ ಗುರುವಿನ ಸಂಗದಲಿ!

ಎಲೆಲೇ ಕೋಗಿಲೆ, ಕೂಗುವೆ ಏತಕೆ
ಗುರುವಿನ ಧ್ಯಾನವ ಭಂಗಿಸಲು?
ವಿಕಲ್ಪವಿಲ್ಲದ ಭಾವಸಮಾಧಿಯ-
ಲಳಿವನು ಎಂಬುವ ಭಯದಿಂದೇ?
ಲೋಕಕೆ ಗುರುವರ ಬೋಧಾಮೃತ ತಾ
ದೊರಕದು ಎಂಬುವ ಭಯದಿಂದೇ?
ಹಾಡೈ, ಕೋಗಿಲೆ, ಸೃಷ್ಟಿ ನಿಯಮದೊಳು
ನಿನಗಿಹ ಕರ್ಮವ ನೀಮಾಡು!

ಗುರುವರ, ನಿನ್ನಯ ಹೃದಯ ವಿಶಾಲತೆ-
ಯರಿಯರು ನಿನ್ನನುಯಾಯಿಗಳು:
ಎಲ್ಲದರಲ್ಲಿಯು ಎಲ್ಲೆಲ್ಲಿಯು ನೀ
ಬ್ರಹ್ಮವ ಕಾಣುತ ಪೂಜಿಸಿದೆ.
ಮ್ಲೋಚ್ಛ ಶೂದ್ರರನು ತತ್ತ್ವವೇತ್ತರನು
ಒಂದೇ ಎನ್ನುತ ಭಾವಿಸಿದೆ;
ತ್ಯಾಗಭೋಗಗಳ ಕರ್ಮಧರ್ಮಗಳ
ಯೋಗದ ಪರಿಯನು ಬೋಧಿಸಿದೆ.

ಗುರುವರ, ನಿನ್ನೀ ಮುದ್ದಿನ ಭಾರತ
ಭೂಮಿಯ ದುರ್ಗತಿಗಿಳಿದಿಹುದು;
ಹಿಂದೂಸ್ಥಾನದ ರಮ್ಯಾರಣ್ಯವ
ಸೋಹಂ ಗರ್ಜನೆ ಇನ್ನೊಮ್ಮೆ
ಕುರಿಗಳ ಹರಿಗಳ ಮಾಡುವ ತೆರದೊಳು
ತುಂಬಲಿ, ಶಂಕರ ಕೇಸರಿಯೆ!
ತಾಯಿಯ ಭೂಮಿಯ ಸಲಹಲು ಜನಿಸೈ
ಭಾರತ ಭೂಮಿಯೊಳಿನ್ನೊಮ್ಮೆ!
೨೪-೪-೧೯೨೭

ನನ್ನ ಜೊತೆ ಬಂದಿದ್ದವರು ಭಟ್ಟರ ಕೈಲಿ ಪೂಜೆಗೀಜೆ ಮಾಡಿಸುವ ಕಾರ್ಯದಲ್ಲಿ ತೊಡಗಿದ್ದರು. ನಾನು ಎಂದಿನಂತೆ ಆ ಪೂಜೆ ಪ್ರಸಾದಗಳ ಗೋಜಿಗೆ ಹೋಗದೆ ಶಾಂಕರ ದೇವಾಲಯದ ಪ್ರಾಚೀನ ಪ್ರಶಾಂತಿಯಲ್ಲಿ ಪರಿಚಿಂತನಶೀಲನಾಗಿದ್ದೆ: ಈ ದೇವಾಲಯಗಳ ಸ್ವರೂಪವೆ ಬದಲಾಗದಿದ್ದರೆ, ಶ್ರುತ್ಯಂಶದ ವೇದಾಂತ ದರ್ಶನವನ್ನಾಶ್ರಯಿಸಿ, ಸ್ಮೃತ್ಯಂಶದ ಧರ್ಮಶಾಸ್ತ್ರ ಪುರಾಣಾದಿಗಳ ಕಾಲದೇಶಾಚಾರಗಳ ಅನಿತ್ಯಾಂಶಗಳನ್ನು ತ್ಯಜಿಸದಿದ್ದರೆ ಹಿಂದೂ ಧರ್ಮದ ವಿನಾಶ ಇಂದಲ್ಲ ನಾಳೆ ಸ್ವತಃಸಿದ್ದ! ವರ್ಣಾಶ್ರಮ, ಜಾತಿಪದ್ಧತಿ, ಚಾತುರ್ವರ್ಣ್ಯ ಮೊದಲಾದ ಮೂಢನಂಬಿಕೆಗಳ ಪುರೋಹಿತಶಾಹಿಯಿಂದ ಸಂಪೂರ್ಣವಾಗಿ ಪಾರಾದಂದೇ ಹಿಂದೂ ಮತವು ವೇದಾಂತ ದರ್ಶನವಾಗಿ, ವಿಶ್ವಧರ್ಮವಾಗಿ, ಸರ್ವಧರ್ಮಗಳನ್ನೂ ಒಳಗೊಂಡು, ನಿಜವಾದ ವಿಶ್ವಧರ್ಮವಾಗುತ್ತದೆ. ಅಲ್ಲಿಯವರೆಗೂ ಅದು, ಶೂದ್ರಪೀಡನಕರವಾಗಿ ಪುರೋಹಿತ ಪೀಡೆಯ ‘ಬ್ರಾಹ್ಮಣ್ಯ’ ಮಾತ್ರವಾಗಿರುತ್ತದೆ; ಮತ್ತು ಬುದ್ಧಿಯುಳ್ಳವರಿಗೆ ಜುಗುಪ್ಸೆ ಉಂಟುಮಾಡುವ ಅಸಹ್ಯವಾಗಿರುತ್ತದೆ.

*          *          *          *

ಒಂದು ದಿನ ಅಪರಾಹ್ನ ನಾಲ್ಕು ಗಂಟೆಯ ಸಮಯ. ಉಪ್ಪರಿಗೆಯಲ್ಲಿ ಹಗಲು ನಿದ್ದೆ ಮಾಡಿದ್ದ ಹಾಸಗೆಯ ಮೇಲೆಯೆ ಗೋಡೆಗೆ ಒರಗಿ ಕುಳಿತು ಸ್ವಾಮಿ ವಿವೇಕಾನಂದರ ಭಾಷಣವನ್ನೊ ಅಥವಾ ಇನ್ನಾವಿದೊ ಸಾಹಿತ್ಯಕೃತಿಯನ್ನೊ ಓದುತ್ತಾ ಇದ್ದೆ. ಎದುರಿಗೆ ಮನೆಗೆ ಅಂಟಿಕೊಂಡಿದ್ದ ಅಡಕೆ ತೋಟದಾಚೆಗೆ ಅದರ ಬುಡದಿಂದಲೆ ಕಡಿದಾಗಿ ಬಾನೆಡೆಗೆ ನಿಮಿರಿ ಎದ್ದಂತಿದ್ದ ಕಾಡಿಡಿದ ದಟ್ಟಮಲೆಯ ಹಂತಿ ಇಳಿಬಿಸಿಲಿನಲ್ಲಿ ನಾನಾ ಛಾಯೆಯ ಹಸುರು ಬಣ್ಣಗಳಲ್ಲಿ ಮೆರೆದಿತ್ತು. ಕೆಳಗೆ ಅಂಗಳದ ಸುತ್ತಣಿದ್ದ ಕೀಳ್ಗರಡಿಯಲ್ಲಿ ಬೇಲರ ಹೆಂಗಸರು ಬತ್ತ ಕುಟ್ಟುತ್ತಿದ್ದ ಲಯಬದ್ಧವಾದ ಸದ್ದು ಅವರ ಕಡೆಗೆ ಬಳೆಗಳ ಟಿಂಟಿಣಿನಾದದೊಡನೆ ಕೇಳಿಯೂ ಕೇಳದಂತೆ ಕೇಳಿಬರುತ್ತಿತ್ತು, ಅದ್ದೂ ನಿದ್ದೆ ಮಾಡುತ್ತಿದೆಯೊ ಎಂಬಂತೆ.

ಓದುತ್ತಾ ಮೈಮರೆತಂತಿದ್ದ ನಾನು ತೆಕ್ಕನೆ ಎಚ್ಚತ್ತಂತಾಗಿ ಆಲಿಸಿದೆ-ದೂರದ ಗುಡುಗಿನ ಸದ್ದು! ನೋಡುತ್ತೇನೆ, ಮಲೆಯ ಮೇಲೆ ಹಿಂದಿದ್ದ ಬಿಸಲಿಲ್ಲ; ತಿಳಿಯಾಗಿದ್ದ ಆಕಾಶ ಕಾರ್ಮೋಡಗಳಿಂದ ದಟ್ಟಯ್ಸುತ್ತಿದೆ. ಎದುರಿಗಿದ್ದ ತೋಟದ ಅಡಕೆಮರಗಳೂ ಬಾವಿಕಟ್ಟೆಯ ಬಳಿಯ ಎತ್ತರದ ತೆಂಗಿನ ಮರವೂ ಕವಿಶೈಲದತ್ತ ಏರುವ ದಾರಿಯ ಪಕ್ಕದ ದೀರ್ಕನಮರ ಹಲಸಿನಮರ ಬೂರುಗದ ಹೆಮ್ಮೆರಗಳೂ ಮಧುಪಾನ ಮತ್ತರಂತೆ ನೆತ್ತಿದೂಗತೊಡಗಿವೆ. ಮುಂಗಾರ ಮೊದಲ ಮಳೆಗೆ ನಾಂದಿಯಾಗುತ್ತಿದೆ!

ತುಸು ಹೊತ್ತಿನಲ್ಲಿಯೆ ನುಗ್ಗಿ ಬಂದಳು “ಮುಂಗಾರಸುರಿಯು ರಕ್ಕಸವಜ್ಜೆಗಳಿಕ್ಕುತ ಬಲುಗದರಿ!” ನನ್ನ ಕವನ ‘ಮುಂಗಾರು’ ಸೋತು ಸಪ್ಪೆಯಾಗುವಂತೆ. ಮುಂಗಾರಿನ ಪ್ರಥಮ ಆಗಮನದ ರುದ್ರ ರಮಣೀಯತೆಯನ್ನು ನನ್ನ ಕವಿತೆ ಕಾದಂಬರಿ ಚಿತ್ರಗಳಲ್ಲಿ ವಿಪುಲವಾಗಿ ವಿವಿಧವಾಗಿ ವರ್ಣಿಸಿದ್ದೇನೆ. ಮತ್ತೆ ಇಲ್ಲಿ ಬಣ್ಣಿಸಬೇಕಾಗಿಲ್ಲ. ಆದರೆ ಒಂದೇ ಒಂದು ವಿಷಯದಲ್ಲಿ ಅಂದಿನ ಅನುಭವದ ಘೋರತೆ ಎಲ್ಲಿಯೂ ವರ್ಣಿತವಾಗಿಲ್ಲ. ಆ ಅನುಭವಕ್ಕಾಗಿಯೇ ಅದು ಇಲ್ಲಿ, ‘ನೆನಪಿನ ದೋಣಿಯಲ್ಲಿ’, ಪ್ರಸ್ತಾಪಿಸಲ್ಪಡಬೇಕಾಗಿ ಬಂದದ್ದು:- ಸಿಡಿಲು ಬಡಿದಿದ್ದು!

ನನಗೆ ಮಲೆನಾಡಿನ ಮುಂಗಾರಿನ ಆಗಮನದ ಭೀಷಣತೆ ಭಯದ ಜೊತೆಗೆ ಭಯರಸವನ್ನೂ ಉಂಟುಮಾಡಿ ಭವ್ಯವಾಗುತ್ತಿತ್ತು. ಬಳ್ಳಿಮಿಂಚು, ಕೋಲ್ಮಿಂಚು, ಹಾವ್ನಾಲಗೆ ಮಿಂಚು, ಗೊಂಚಲ್ಮಿಂಚು, ದಿಗಂತದಿಂದ ದಿಗಂತಕ್ಕೆ ಚಿಮ್ಮಿತೆಂಬಂತೆ ತೋರುವ ಪುಂಖಾನುಪುಂಖ ಬಾಣಮಿಂಚು ಇವೆಲ್ಲ ಮೇಘಪ್ರತಿಭೆಯ ಸೃಜನಶೀಲ ವರ್ಣಶಿಲ್ಪದಂತೆ ಅತ್ಯಂತ ದರ್ಶನೀಯವಾಗಿ ಮನಮೋಹಕವಾಗಿರುತ್ತಿತ್ತು. ಆದರೆ ಮಿಂಚನ್ನು ಹಿಂಬಾಲಿಸಿ ಬರುವ ಗುಡುಗು ಹೆದರಿಕೆ ಹುಟ್ಟಿಸುತ್ತಿತ್ತು. ಆ ಗುಡುಗು ಸಿಡಿಲಾದರಂತೂ ಪ್ರಾಣಭಯದಿಂದ ಜೀವ ತತ್ತರಿಸಿತ್ತು; ಒಳಗೆ ಓಡಿ ಅಡಗಿಕೊಳ್ಳುವಂತಾಗುತ್ತಿತ್ತು. ಆದರೆ ಮಿಂಚು ಗುಡುಗು ಸಿಡಿಲುಗಳನ್ನು ಕುರಿತ ವೈಜ್ಞಾನಿಕ ಜ್ಞಾನ ತಿಳಿದಮೇಲೆ ವಿಷಯ ತಲೆಕಾಳಗಾಯಿತು. ಯಾವುದು ಮನಮೋಹಕವಾಗಿರುತ್ತಿತ್ತೊ ಅದೇ ಅಪಾಯಕಾರಿ ಎಂದೂ ಯಾವುದಕ್ಕೂ ಕಿವಿ ಹೆದರಿ ಹುದುಗಿಕೊಳ್ಳುವಂತಾಗುತ್ತಿತ್ತೊ ಅದು ನಿರಪಾಯಕವೆಂದೂ ಗೊತ್ತಾಯಿತು. ಮಿಂಚನ್ನು ನೀನು ಕಂಡಮೇಲೆ ಅದರ ಅಪಾಯದಿಂದ ನೀನು ಪಾರಾದಂತೆಯೆ; ಏಕೆಂದರೆ ಮಿಂಚಿನ ತರುವಾಯ ಹಿಂಬಾಲಿಸುವ ಸದ್ದು-ಗುಡುಗಾಗಲಿ ಸಿಡಿಲಾಗಲಿ-ಕೋವಿಯಿಡಿನ ಸದ್ದಿನಂತೆಯೆ ಹೊರತು ಕೋವಿಯ ಗುಂಡಿನಂತಲ್ಲದೆ, ಅತ್ಯಂತ ನಿರುಪದ್ರವವಾದದ್ದು. ಪ್ರಾಣಹಾನಿಯಾಗುವುದು ಸದ್ದಿಗೆ ಮುನ್ನವೆ ತಗಲುವ, ಮಿಂಚಾಗಿ ಕಣ್ಣಿಗೆ ತೋರುವ, ವಿದ್ಯುತ್ತಿನಿಂದಲೆ ಹೊರತು ಕಿವಿಗೆ ಗುಡುಗಾಗಿ ತೋರುವ ಶಬ್ದಮಾತ್ರದಿಂದಲ್ಲ. ಆದರೂ ಇಷ್ಟು ತಿಳಿವಳಿಕೆಯಾದ ಮೇಲೆಯೂ, ಗುಡುಗಿಗೆ ಹೆದರುವುದು ತಕ್ಕಮಟ್ಟಿಗೆ ಕಡಿಮೆಯಾದರೂ, ಸಿಡಿಲೇನೂ ಭಯಂಕರವಾಗಿಯೆ ಇರುತ್ತಿತ್ತು, ಅದರ ಕಿವಿಯೊಡೆಯುವ ಸದ್ದಿಗೆ ಭೂಮಿಯೆ ಝಗ್ಗೆಂದು ಪ್ರಕಂಪಿಸಿದಂತಾದಾಗ! ಸಿಡಿಲು ಗುಡುಗಿನ ಒಂದು ಸಮೀಪಗತ ತೀವ್ರ ಸ್ಥಿತಿಯೆ ಆದರೂ ಅದರ ಘೋರ ಪ್ರಮಾಣದಿಂದಲೆ ಅದು ಭಯಾನಕವಾಗುತ್ತದೆ. ಮುಗಿಲಿನಿಂದ ಮುಗಿಲಿಗೆ ನೆಗೆಯುವ ಮಿಂಚು ಗುಡುಗಾದರೆ ಮುಗಿಲಿಂದ ನೆಲಕ್ಕೆ ನೆಗೆಯುವ ಮಿಂಚು ಸಿಡಿಲಾಗುತ್ತದೆ. ಮಿಂಚಿನ ಆ ವಿದ್ಯುತ್ತು ಮರಕ್ಕೊ ಮನೆಗೊ ತಗಲಿದಾಗ ‘ಸಿಡಿಲು ಹೊಡೆಯಿತು’ ಎನ್ನುತ್ತೇವೆ. ಸಿಡಿಲು ಹೊಡೆದರೆ ಮುಗಿಯಿತು ಗತಿ; ಸಿಡಿಲು ನಮಗೇ ಹೊಡೆಯದಿದ್ದಾಗ ಅದರ ಮಿಂಚಿನ ಕಾಂತಿಯೂ ಅದನ್ನು ಕ್ಷಣಮಾತ್ರವೂ ತಡಮಾಡದೆ ಬೆನ್ನಟ್ಟುವ ಭಯಂಕರ ಗುಡುಗೂ ಒಟ್ಟೊಟ್ಟಿಗೆ ಸಂಭವಿಸುತ್ತವೆ. ನಮಗೇ ಹೊಡೆದಾಗ? ಏನನ್ನೂ ಕಾಣುವುದೂ ಇಲ್ಲ, ಕೇಳುವುದೂ ಇಲ್ಲ!

ಯಾವಾಗ ಬಿರುಗಾಳಿ ಬೀಸಿ, ಕಾರ್ಮುಗಿಲು ಕವಿದು, ಮುಗಿಲಿನಿಂದ ಮುಗಿಲಿಗೆ ಮಿಂಚು ಥಳ್ಳನೆ ಹಾರಿ, ಗುಡುಗು ಗಗನದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಬ್ಬಿಣದ ನೆಲದ ಮೇಲೆ ಉಕ್ಕಿನ ಗುಂಡು ಉರುಳಿದಂತೆ ಗುಡುಗುಡಿಸತೊಡಗಿತೊ ನಾನು ಪುಸ್ತಕವನ್ನು ಕೆಳಗಿಟ್ಟು, ಬೆಚ್ಚಿ, ನಿರ್ನಿಮೇಷ ಗಗನದೃಷ್ಟಿಯಾದೆ. ಕವಿ ಆ ರುದ್ರ ಸೌಂದರ್ಯವನ್ನು ಆಸ್ವಾದಿಸಲು ತನ್ನ ಪ್ರತಿಭೆಯ ರಸಜಿಹ್ವೆಯನ್ನು ಚಾಚುತ್ತಿದ್ದನು; ನರಪ್ರಾಣಿ ಪ್ರಕೃತಿಯ ರೌದ್ರತೆಗೆ ಗದಗದಿಸುತ್ತಿತ್ತು!

ಇದ್ದಕಿದ್ದಂತೆ ಕಣ್ಣು ಕೋರೈಸಿ ಮುಚ್ಚಿತು; ಒಡನೊಡನೆ, ಅರೆಕ್ಷಣವೂ ಅಂತರವಿಲ್ಲದೆ, ಭೂವ್ಯೋಮ ಸಹಿತ ಇಡೀ ಬ್ರಹ್ಮಾಂಡವೆ, ಗಾಜಿನ ಬುರುಡೆಯನ್ನು ದೊಣ್ಣೆಯಿಂದ ಹೊಡೆದು ಪುಡಿಪುಡಿ ಮಾಡಿದಂತೆ, ಠಳಠಳನೆ ಒಡೆದು ಸಿಡಿದು ಚೂರುಚೂರಾಯಿತು! ಚೂರುಚೂರಾದಂತಾಯಿತು ಎಂದಲ್ಲ, ಗಮನಿಸಬೇಕು, ಚೂರು ಚೂರು ಚೂರೆ ಆಯಿತು!

ಕಣ್ಣು ಕಿವಿಗಳು ಸೋತು ಮೂರ್ಛೆಹೋಗುವಂತಹ ಆ ವಜ್ರಪ್ರದೀಪ್ತಿಗೆ ಮತ್ತು ಪ್ರಚಂಡ ರಾವಕ್ಕೆ ನನ್ನ ಪ್ರಜ್ಞೆ ಕುಸಿದು, ಕುನಿದು, ಒರಗಿದ್ದ ಗೋಡೆಯೊಳಕ್ಕೇ ನುಗ್ಗಿ ಹುದುಗುವಂತೆ ಯಾವ ಕ್ರಿಯಾಪದವೂ ಸೂಚಿಸಲಾರದ ನಿಷ್ಕ್ರಿಯಾವಸ್ಥೆಗೆ ದುಮುಕಿಬಿಟ್ಟಿತು! ಕ್ಷಣ ಮಾತ್ರ!

ಮತ್ತೆ ಕುಳಿತು ಕಣ್ದೆರೆದೆ: ಪುಡಿಪುಡಿವೋಗಿದ್ದ ಲೋಕ ಪುನಃ ಸೃಷ್ಟಿಯಾಗಿ, ನಾನು ಪುನರ್ಜನ್ಮವೆತ್ತಿದ್ದೆ!

ಇಲ್ಲಿ ನನ್ನ ಭಾಷೆ ರೂಪಕವಿಧಾನವನ್ನು ಅನುಸರಿಸುವುದಕ್ಕೆ ಕಾರಣ ನನಗಾಗಿದ್ದ ಅನುಭವದ ‘ಭಾವಸತ್ಯ’ವನ್ನು ಬೇರೆ ರೀತಿಯಲ್ಲಿ ಹೇಳಿದರೆ ಸುಳ್ಳಾಗುತ್ತದೆ. ‘ಲೋಕ ಪುಡಿಪುಡಿ ಆದಂತಾಯ್ತು’, ‘ಲೋಕ ಮತ್ತೆ ಸೃಷ್ಟಿಯಾದಂತಾಯ್ತು’, ‘ನನಗೆ ಪುನರ್ಜನ್ಮವೆತ್ತಂತಾಯ್ತು’ ಎಂಬ ಉಪಮಾ ವಿಧಾನ ಭೌತಸತ್ಯಕ್ಕೆ ಅಥವಾ ಲೋಕಸತ್ಯಕ್ಕೆ ಹತ್ತಿರವಾಗುತ್ತದಾದರೂ ನನಗಾದ ಅನುಭವದ ಭಾವಸತ್ಯವನ್ನು ಒಂದಿನಿತೂ ಪ್ರತಿಧ್ವನಿಸದೆ ಸುಳ್ಳಿನ ಸುಳ್ಳಾಗುತ್ತದೆ.

ಅಂದು ನನಗಾದ ಆ ಅನುಭವ ಮುಂದೆ ನನಗೆ ‘ಪ್ರತಿಮಾ ಮತ್ತು ಪ್ರತಿಕೃತಿ’ ವಿಧಾನಗಳನ್ನು ಕಂಡುಹಿಡಿದು ಪ್ರತಿಪಾದಿಸುವುದಕ್ಕೆ ತುಂಬಾ ಸಹಾಯವಾಯಿತು; ಮತ್ತು ಭಾಷೆಯ ‘ಲೋಕೋಪಯೋಗ’ ಮತ್ತು ‘ಭಾವೋಪಯೋಗ’ಗಳನ್ನು ಕುರಿತು. ಕಾವ್ಯಮೀಮಾಂಸೆಯಲ್ಲಿ ಗುರುತಿಸಲು ಸಾಧ್ಯವಾಯಿತು; ಮತ್ತು ನವೀನ ವಿಮರ್ಶಕರ ಧಿಕ್ಕಾರಕ್ಕೆ ಒಳಗಾಗಿದ್ದ ‘ಕವಿಸಮಯ’ಗಳನ್ನು ‘ಮೃತ’ವಲ್ಲ ಎಂದು ಸಮರ್ಥಿಸಿ ನನ್ನ ಬರವಣಿಗೆಯಲ್ಲಿ ಪ್ರಯೋಗಿಸಲೂ!

ಸಿಡಿಲು ನನಗೇ ಹೊಡೆದಿರಲಿಲ್ಲ. ಹೊಡೆದಿದ್ದರೆ ನನಗೆ ಹೊಡೆಯಿತೊ ಇಲ್ಲವೊ ಎಂಬ ಜಿಜ್ಞಾಸೆಗೆ ಎಲ್ಲಿರುತ್ತಿತ್ತು ಅವಕಾಶ? ಆದರೆ ನನಗಾಗಿದ್ದ ಅನುಭವದ ಭೀಷಣ ಭಯಂಕರತೆಯಿಂದ ಸಿಡಿಲು ಮನೆಗೇ ಹೊಡೆದಿರಬೇಕೆಂದು ನಿಶ್ಚಯಿಸಿದೆ. ಮನೆ ದೊಡ್ಡದಾಗಿ ವಿಸ್ತಾರವಾಗಿ ಹರಡಿದ್ದುದರಿಂದ ಯಾವ ಭಾಗಕ್ಕೆ ಹೊಡೆಯಿತೋ ಯಾರು ಹೊಡೆತಕ್ಕೆ ಸಿಕ್ಕಿ ಏನಾದರೋ ಎಂದು ಹೆದರಿ ವಿಚಾರಿಸಲು ಉಪ್ಪರಿಗೆಯಿಂದ ಕೆಳಗಿಳಿದು ಓಡಿದೆ.

 


[1] ಶಂಕರ್ ಎಂಬ ಸುಮಾರು ಹದನೆಂಟು ವರುಷದ ಕೇರಳದ ಹುಡುಗನಿಗೆ ಸ್ವಾಮಿ ಸಿದ್ದೇಶ್ವರಾನಂದರು ನೀಲಗಿರಿಗೆ ಬಂದಿದ್ದ ಶ್ರೀರಾಮಕೃಷ್ಣ ಮಹಾಸಂಘದ ಮಹಾಧ್ಯಕ್ಷರಾಗಿದ್ದ ಮಹಾಪುರಷಜಿ ಸ್ವಾಮಿ ಶಿವಾನಂದ ದೀಕ್ಷೆಕೊಡಿಸಿ, ನಾನು ಅಕ್ಟೋಬರ್ ತಿಂಗಳಲ್ಲಿ ಆಸ್ಪತ್ರೆಯಿಂದ ಆಶ್ರಮಕ್ಕೆ ಬರುವುದಕ್ಕೆ ಮೂರು ತಿಂಗಳಿಗೆ ಪೂರ್ವದಲ್ಲಿ, ಎಂದರೆ ೧೯೨೬ ನೆಯ ಜುಲೈ ೨ ರಲ್ಲಿ ಮೈಸೂರು ಆಶ್ರಮಕ್ಕೆ ಕರೆತಂದಿದ್ದರು. ತುಂಬ ಸಾಮಾನ್ಯವಾಗಿ ಅಂದು ತೋರುತ್ತಿದ್ದ ಆ ಹುಡುಗ ಮುಂದೆ ಸ್ವಾಮಿ ರಂಗನಾಥಾನಂದರಾಗಿ, ರಂಗೂನ್, ಬರ್ಮಾ, ಕರಾಚಿಗಳಲ್ಲಿ ಶ್ರೀರಾಮಕೃಷ್ಣಾಶ್ರಮದ ಬೃಹತ್ ಸಂಸ್ಥೆಗಳನ್ನು ಕಟ್ಟಿ, ತರುವಾಯ ಅದ್ಭುತವಾಗ್ಮಿಯಾಗಿ ಪೂರ್ವಾರ್ಧ ಪಶ್ಚಿಮಾರ್ಧ ಗೋಳಗಳ ಪ್ರಪಂಚದ ನಾನಾ ಭಾಷೆಗಳ ಮತಗಳ ನಾಗರಿಕತೆಗಳ  ದೇಶಗಳನ್ನೆಲ್ಲ ಸುತ್ತಿ, ಶ್ರೀರಾಮಕೃಷ್ಣ-ವಿವೇಕಾನಂದರ ಸಂದೇಶವನ್ನು ಸಾರಿ, ಉಪನಿಷತ್ತು-ವೇದಾಂತ ತತ್ತ್ವಗಳನ್ನು ಸಾಮಾನ್ಯರೂ ವಿದ್ವಜ್ಜನರೂ ಬೆರಗಾಗಿ ಶ್ಲಾಘಿಸುವಂತೆ ಉಪನ್ಯಾಸಗಳ ಮತ್ತು ಮಹದ್ ಗ್ರಂಥಗಳ ಮುಖಾಂತರ  ಪ್ರಚಾರಮಾಡಿ, ಲೋಕಪೂಜ್ಯ ಜಗದ್ವ್ಯಕ್ತಿಯಾಗುತ್ತಾರೆಂದು ಯಾರುತಾನೆ ಊಹಿಸಲು ಸಾಧ್ಯವಾಗಿತ್ತು? ಆದರೆ ಸ್ವಾಮಿ ಸಿದ್ದೇಶ್ವರಾನಂದರ ಆಧ್ಯಾತ್ಮಿಕ ವೈನತೇಯ ದೃಷ್ಟಿ ಇತರರಿಗೆ ಅಗೋಚರವಾದುದನ್ನು ಕಾಣುತಿತ್ತು ಎಂಬುದಕ್ಕೆ ಸ್ವಾಮಿ ರಂಗನಾಥಾನಂದರು ಒಂದು ಮಹತ್ ಸಾಕ್ಷೀ ಸ್ವರೂಪದ ನಿದರ್ಶನವಾಗಿದ್ದಾರೆ. ಅವರು ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಸಿಲೋನ್, ಸಿಂಗಪೂರ್, ಮಲೇಸಿಯಾ, ವಿಯತ್ನಾಂ, ಕಾಂಬೋಡಿಯಾ, ಇಂಡೋನೇಸಿಯಾ, ಜಪಾನ್, ಫಿಜಿ, ಜೆಕೊಸ್ಲೊವಾಕಿಯಾ, ಸೋವಿಯತ್ ರಾಷ್ಟ್ರಕೂ, ಸ್ಪೆಯ್ನ್, ಇಂಗ್ಲೆಂಡ್, ಫ್ರಾನ್ಸ್, ನಾರ್ವೆ, ಸ್ವೀಡನ್, ಜರ್ಮನಿ ಮೊದಲಾದ ಯೂರೋಪಿಯನ ದೇಶಗಳು, ಉತ್ತರ ದಕ್ಷಿಣ ಅಮೇರಿಕಾದ ದೇಶಗಳು, ಆಸ್ಟ್ರೇಲಿಯಾ ಇತ್ಯಾದಿಯಾಗಿ ಜಗತ್ತಿನ ಸರ್ವದೇಶಗಳಲ್ಲಿಯೂ ಭಾಷಣ ಪ್ರವಾಸಮಾಡಿ ಭಾರತೀಯ ವೇದಾಂತದರ್ಶನ ಜ್ಯೋತಿಯನ್ನು ಪ್ರಸಾರ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ೨೦-೧೨-೧೯೭೨