ನನ್ನಂತೆಯೆ ಅಲ್ಲಿ ಇಲ್ಲಿ ಇದ್ದ ಮನೆಯವರೆಲ್ಲರೂ ಕ್ಷಣಕಾಲ ಸ್ತಬ್ಧರಾಗಿ ಮತ್ತೆ ಎಚ್ಚೆತ್ತು, ಎಲ್ಲಿಗೆ ಸಿಡಿಲು ಹೊಡೆದದ್ದು? ಯಾರಿಗೆ ಏನಾಯಿತು? ಎಂದು ನುಗ್ಗಿ ನುಗ್ಗಿ ಬರುತ್ತಿದ್ದರು. ಅಂತೂ ಮನೆಗಲ್ಲ ಸಿಡಿಲು ಹೊಡೆದದ್ದು ಎಂದು ಗೊತ್ತಾಯಿತು. ಯಾರಿಗೂ ಏನೂ ಅಪಾಯವಾಗಿರಲಿಲ್ಲ. ಆದರೂ ಸಿಡಿಲು ಅಲ್ಲಿಯೆ ಎಲ್ಲಿಯೊ ಹತ್ತಿರವೆ ಹೊಡೆದಿರಬೇಕು, ಇಲ್ಲದಿದ್ದರೆ ಆ ಹೊಳಪು ಸದ್ದು ಆ ಕಂಪನ ಆಗುತ್ತಿರಲಿಲ್ಲ ಎಂದು ದೊಡ್ಡ ಚಿಕ್ಕಪ್ಪಯ್ಯ ಮೊದಲಾದ ಹಿರಿಯರು ಮನೆಯ ಸುತ್ತಣ ತೋಟ, ಕಾಡು ಮತ್ತು ಮರಗಳನ್ನು ಪರಿಶೀಲಿಸಿದರು.

ಆ ದಿನ ಸಿಡಿಲು ಹೊಡೆದದ್ದು ಎಲ್ಲಿಗೆ ಎಂಬುದನ್ನು ಪತ್ತೆಹಚ್ಚಲು ಆಗಲಿಲ್ಲ. ಆದರೆ ಒಂದೆರಡು ದಿನಗಳೊಳಗೆ ಉಮ್ಮಿಗುಡ್ಡೆಯ ಕೆಳಗಣ ಭಾಗದ ತೋಟದ ಅಡಕೆ ಮರಗಳ ನೆತ್ತಿ ಬಾಡಿ ಸುಟ್ಟಂತಾಗಿ ಜೋತುಬಿದ್ದದ್ದು ಕಾಣಿಸಿತು. ಹತ್ತಿರಕ್ಕೆ ಇಳಿದು ಹೋಗಿ ನೋಡಲಾಗಿ ಅಡಕೆ ಮರಗಳ ಬುಡದ ಬಾಳೆಮರಗಳು ಸುಟ್ಟು ಬಾಡಿದೆಲೆಗಳಿಂದ ಬಳಲಿದ್ದುದು ಗೊತ್ತಾಯಿತು. ಸಿಡಿಲು ಮನೆಗೆ ಹತ್ತಿಪ್ಪತ್ತೆ ಮಾರು ದೂರದಲ್ಲಿ ತೋಟಕ್ಕೆ ಹೊಡೆದಿತ್ತು!

ಸಿಡಿಲು ಹೊಡೆಯುವುದು ಬರಿಯ ಒಂದು ನಿಸರ್ಗವ್ಯಾಪಾರ. ತೋಟವೊ ಗದ್ದೆಯೊ ಕಾಡೊ ಮನೆಯೊ ಮನುಷ್ಯನೊ ಪ್ರಾಣಿಯೊ ಹೊಡೆಯುವುದರಲ್ಲಿ ಅದಕ್ಕೆ ಪಕ್ಷಪಾತವಾಗಲಿ ದುರುದ್ದೇಶವಾಗಲಿ ಇಲ್ಲ. ಅದು ಮೇಘದ ಮತ್ತು ಭೂಮಿಯ ಧನ ಮತ್ತು ಋಣ ವಿದ್ಯುತ್ತುಗಳು ಸಂಪರ್ಕಗೊಂಡಾಗ ಸಂಭವಿಸುವ ಘಟನೆ; ಆದರೆ ನಮ್ಮ ಮತದ ಮೂಢನಂಬಿಕೆ ಪುರಾಣದ ಇಂದ್ರನನ್ನು ಕರಣವನ್ನಾಗಿ ಒಡ್ಡಿ, ಸಿಡಿಲು ಅವನ ಕೈಯ ವಜ್ರಾಯುಧವಾಗಿ ಬಿಟ್ಟಿದೆ. ಇಂದ್ರನು ತನ್ನ ವಜ್ರಾಯುಧವನ್ನು ಸುಮ್ಮಸುಮ್ಮನೆ ಪ್ರಯೋಗಿಸಿತ್ತಾನೆಯೆ? ಯಾವನೊ ಒಬ್ಬ ಅಸುರನನ್ನು ಸಂಹರಿಸಲೆಂದೇ ಅವನು ಪ್ರಯೋಗಿಸುತ್ತಾನೆ. ಇಲ್ಲಿ ಆ ಅಸುರ ಯಾವನು? ಯಾರೂ ಇಲ್ಲ. ಭಟ್ಟರು ಹೇಳುತ್ತಾರೆ: ಕಲಿಕಾಲದಲ್ಲಿ ಯಾವ ಅಸುರನೂ ನೇರವಾಗಿ ಗೋಚರಿಸುವುದಿಲ್ಲ. ಏನೊ ಯಾರದೊ ಒಂದು ದೋಷವೆ ಇಲ್ಲಿ ಅಸುರನಿಗೆ ಪ್ರತಿನಿಧಿಯಾಗುತ್ತದೆ. ಆ ದೋಷದಿಂದಲೆ ಇಂದ್ರನ ಕೋಪ ಹೀಗೆ ಸಿಡಿಲಾಗಿ ಪ್ರಕಟವಾಗಿ ತೋಟಕ್ಕೆ ಹೊಡೆದು ಮಾಲೀಕನಿಗೆ ಎಚ್ಚರಿಕೆ ಇತ್ತಿದೆ. ಆದ್ದರಿಂದ ದೋಷ ಪರಿಹಾರಕ್ಕಾಗಿ ಶಾಂತಿಮಾಡಿಸಬೇಕು. ಅಂದರೆ, ಹಾರುವರ ಕೈಯಿಂದ ಪೂಜೆಗೀಜೆ ಹೋಮಗೀಮ ಮಾಡಿಸಿ ಅವರಿಗೆ ಸಮಾರಾಧನೆಯ ಊಟ ಹಾಕಿಸಿ ದಾನ ದಕ್ಷಿಣೆ ಕೊಡಬೇಕು. ಸರಿ, ಪುರೋಹಿತರ ಆ ಮಹಾ ವೈಜ್ಞಾನಿಕ ಸಂಶೋಧನೆಯ ಸತ್ಯಕ್ಕೆ ತಲೆಬಾಗಿ, ನಮ್ಮ ದೊಡ್ಡ ಚಿಕ್ಕಯ್ಯನವರು ಮನೆಗೆ ಸಂಭವಿಸಲಿರುವ ಕೇಡನ್ನು ತಪ್ಪಿಸುವ ಸಲುವಾಗಿ ‘ಶಾಂತಿ’ ಮಾಡಿಸಲು ನಿಶ್ಚಯಿಸಿದರು.

ತರುಣವರ್ಗದ ನಮಗೆಲ್ಲ ಒಳಗೊಳಗೆ ತುಂಬ ಅಸಮಾಧಾನ. ಸಿಡಿಲು ತೋಟಕ್ಕೆ ಹೊಡೆದು ಆಗಿರುವ ನಷ್ಟಕ್ಕೆ ಪರಿಹಾರ ದೊರೆಯುತ್ತದೆಯೆ ಹಾರುವರಿಗೆ ಊಟ ಹಾಕಿದ ಮಾತ್ರಕ್ಕೆ? ಬೇರೆ ಸಸಿ ಹಾಕಿ, ಗೊಬ್ಬರ ಹಾಕಿ, ಕೃಷಿಮಾಡಿದರೆ ಆಗಿರುವ ನಷ್ಟಕ್ಕೆ ಕ್ರಮೇಣ ಪರಿಹಾರ ದೊರೆಯುತ್ತದೆ, ಈ ಪುರೋಹಿತವರ್ಗ ಎಲ್ಲ ದೇಶಗಳಲ್ಲಿಯೂ ಎಲ್ಲ ಕಾಲಗಳಲ್ಲಿಯೂ ಎಲ್ಲ ಮತಗಳಲ್ಲಿಯೂ ಇದೇ ಕೆಲಸ ಮಾಡುತ್ತಾ ಬಂದಿದೆ, ತಮ್ಮ ಹೊಟ್ಟೆ ಹೊರೆದುಕೊಳ್ಳಲು: ಬುಡಭದ್ರವಿಲ್ಲದ ಮೂಢನಂಬಿಕೆಗಳನ್ನು ಸೃಷ್ಟಿಸಿ, ಅವಕ್ಕೆ ಭಾವಮಯ ವರ್ಣದ ಪೌರಾಣಿಕ ಕಥಾಧಾರಗಳನ್ನು ಕಲ್ಪಿಸಿ, ಶಾಸ್ತ್ರಜ್ಞಾನ ಭ್ರಾಂತಿಯ ಹಗಲುವೇಷಗಳನ್ನು ತೊಡಿಸಿ, ಶೂದ್ರಾದಿಗಳ ಅಜ್ಞಾನವನ್ನೆ ತಮ್ಮ ಆದಾಯದ ಬಂಡವಾಳವನ್ನಾಗಿ ಮಾಡಿಕೊಂಡು ಅವರ ಗೆಯ್ಮೆಯನ್ನೆಲ್ಲ ತಮ್ಮ ಸೌಕರ್ಯ ಸೌಖ್ಯಗಳಿಗಾಗಿ ಲೂಟಿ ಹೊಡೆಯುತ್ತಾ ಬರುತ್ತಿದ್ದಾರೆ, ಮಠ, ಗುರು, ಪೂಜೆ, ಹೋಮ, ಯಜ್ಞ, ಸತ್ಯನಾರಾಯಣ ವ್ರತ ಇತ್ಯಾದಿ ಭದ್ರಕೋಟೆಗಳಲ್ಲಿ ತಮ್ಮ ರಕ್ಷಾಸ್ಥಾನಗಳನ್ನು ರಚಿಸಿಕೊಂಡು. ಮಂಕು ಕುರಿಗಳು-ಶೂದ್ರರು-ಆ ಕಟುಕರ ಕೈಯ ಹುಸಿಹಸುರಿಗೆ ಬ್ಯಾಗುಡುತ್ತಾ ನುಗ್ಗುತ್ತಿವೆ!

ಅಂತೂ ತೋಟದಲ್ಲಿ ಶಾಂತಿಯ ಮುಖ್ಯ ಅಂಗವಾದ ಸಮಾರಾಧನೆ ನಡೆಯಿತು. ನೆರೆದ ಹಾರುವರಿಗೆಲ್ಲ ಭೂರಿ ಭೋಜನ ದಾನದಕ್ಷಿಣೆ ಮುಗಿದ ತರುವಾಯ ಅವರ ಪ್ರಸಾದವನ್ನು (ಎಂಜಲನ್ನು ಸಂಸ್ಕೃತ ಪದದಿಂದ ಕರೆದು ಶೂದ್ರರು ಗೌರವಿಸುವಂತೆ ಮಾಡುತ್ತಿದ್ದ ರೀತಿ.) ನಮಗೆಲ್ಲ ಬಡಿಸಿದರು. ಪುಳಿಚಾರಿನ ಸಿಹಿಯೂಟ ನಮಗೆ ಅಷ್ಟೇನೂ ಆದರಣೀಯವಾಗಿರದಿದ್ದರೂ ಹೊಡೆಬಿರಿಯೆ ತಿನ್ನುವುದನ್ನು ಕಡಮೆ ಮಾಡಲಿಲ್ಲ; ಸೇರಿದ ನಮ್ಮ ನಂಟರು ಇಷ್ಟರು ಆಳುಕಾಳುಗಳು ನಾನೂ ಒಡೆ ಇತ್ಯಾದಿಗಳನ್ನು ಮಿತಿಗೆ ಮೀರಿಯೆ ತಿಂದುಬಿಟ್ಟೆ, ಪ್ರಚ್ಛನ್ನ ಯೌವನಮದವಶನಾಗಿ!

ಅದು ಕಾರಣವಾಗಿಯೊ ಅಥವಾ ನಿಮಿತ್ತ ಮಾತ್ರವಾಗಿಯೊ ತೋಟಕ್ಕೆ ಬಡಿದ ‘ಅಶನಿ’ಗಾಗಿ ಮಾಡಿದ ಶಾಂತಿ ನನಗೆ ‘ಶನಿ’ಯಾಯ್ತು!

ನಾನು ದಿನವೂ ಬೆಳಿಗ್ಗೆ ಮುಂಚೆ ಆಧ್ಯಾತ್ಮಿಕ ಸಾಧನೆಯ ಅಂಗವಾಗಿ, ಈಗ ‘ಕವಿಶೈಲ’ ಎಂದು ಪ್ರಸಿದ್ಧವಾಗಿರುವ, ಮನೆಯ ಹಿಂದಣ ಬೆಟ್ಟದ ನೆತ್ತಿಯ ಕಲ್ಲು ಬಂಡೆಗೆ ಹೋಗಿ, ಅಲ್ಲಿ ವ್ಯಾಯಾಮ, ಪ್ರಾಣಾಯಾಮ ಮತ್ತು ಧ್ಯಾನಗಳಲ್ಲಿ ತೊಡಗುತ್ತಿದ್ದೆ. ಮಳೆ ಬಿದ್ದರೂ ಹೋಗುತ್ತಿದ್ದೆ, ಮಂಜು ದಟ್ಟಯಿಸಿದರೂ ಹೋಗುತ್ತಿದ್ದೆ. ಪ್ರಕೃತಿ ಸೌಂದರ್ಯವೂ ಒಂದು ಪ್ರಬಲ ಆಕರ್ಷಣೆಯಾಗಿರುತ್ತಿತ್ತು. ಬಹುಶಃ ಮಂಜು ಬೀಳುತ್ತಿದ್ದ ಸಮಯದಲ್ಲಯೂ ಪ್ರಾಣಾಯಾಮದಲ್ಲಿ ತೊಡಗಿದುದರಿಂದಲೊ ಏನೊ ನನಗೆ ನ್ಯೂಮೋನಿಯಾ ತಗುಲಿತು. ಮೊದಮೊದಲು ಜ್ವರಕ್ಕಾಗಲಿ ಕೆಮ್ಮು ಕಫಗಳಿಗಾಗಲಿ ಹೆದರಲಿಲ್ಲ. ಆದರೆ ಜ್ವರ ಬಿಡಲಿಲ್ಲ ಮಾತ್ರವಲ್ಲ, ದಿನದಿನಕ್ಕೂ ಹೆಚ್ಚಾಯಿತು. ದೇವಂಗಿ ಆಸ್ಪತ್ರೆಯಿಂದ ಔಷಧಿ ತರಿಸಿ ಕುಡಿಯುತ್ತಿದ್ದರೂ. ಕಡೆಗೆ ಹಾಸಿಗೆ ಹಿಡಿದೆ. ನಾನು ಜ್ವರತಪ್ತನಾಗಿ ಮಲಗಿದ್ದಾಗಲೆ ನನಗೆ ಮೈಸೂರಿಂದ ಮಿತ್ರರ ಕಾಗದ ಬಂತು, ನಾನು ಎರಡು ಭಾಗದಲ್ಲಿಯೂ ಎರಡನೆ ಕ್ಲಾಸಿನಲ್ಲಿ ತೇರ್ಗಡೆಯಾಗಿದ್ದೇನೆಂದು, ನನಗೆ ಹಿಗ್ಗು. ಮನೆಯವರಿಗೂ ನಂಟರಿಗೂ ಬಂಧುಮಿತ್ರರಿಗೂ ತಮ್ಮವನೊಬ್ಬನು ಬಿ.ಎ. ಪಾಸಾದನಲ್ಲಾ ಎಂದು ಹೆಮ್ಮೆ. ಆಗಿನ ಕಾಲದಲ್ಲಿ ಅಲ್ಲಿಯ ಹಿಂದುಳಿದ ಪಂಗಡಗಳಲ್ಲಿ ಲೋವರ್ ಸೆಕೆಂಡರಿ ಅಥವಾ ಎಸ್.ಎಸ್.ಎಲ್.ಸಿ ಪಾಸು ಮಾಡುವುದೇ ಒಂದು ಮಹತ್ವವಾಗಿತ್ತು! ನನ್ನ ಬಿ.ಎ. ಪಾಸಿನಿಂದ ಯಾರಿಗೂ ಮೂರು ಕಾಸಿನ ಪ್ರಯೋಜನವಾಗದಿದ್ದರೂ ಎಲ್ಲರೂ ಸಂತೋಷಪಟ್ಟರು.

ದಿನದಿನಕ್ಕೆ ಕಾಯಿಲೆ ಹೆಚ್ಚಾಗುತ್ತಾ ಕಡೆಗೆ ಜ್ವರ ಮೂರ್ಛೆಗೂ ಶುರುವಾಯ್ತು. ಉಪ್ಪರಿಗೆಯ ಮೇಲಿಂದಿಳಿದು ಮಲಮೂತ್ರ ವಿಸರ್ಜನೆಗೆ ಹೋಗುವುದು ಆಯಾಸಕರವಾಗಿ, ಕೆಳಗೆ ಜಗಲಿಯಲ್ಲಿ ಹಾಸಗೆ ಹಾಸಿದರು. ದೇವಂಗಿ ಇಂಗ್ಲಾದಿಗಳಿಂದ ಬಂದು ನನ್ನನ್ನು ನೋಡಿದ ಮಿತ್ರರಿಗೆ, ವೆಂಕಟಯ್ಯ, ಹಿರಿಯಣ್ಣ ಇವರಿಗೆ, ನನ್ನ ಸ್ಥಿತಿ ಉಲ್ಬಣಿಸಿದ್ದನ್ನು ಕಂಡು ದಿಗಿಲಾಯ್ತು. ದೊಡ್ಡ ಚಿಕ್ಕಪ್ಪಯ್ಯನವರಿಗೂ ಅವರೆಲ್ಲರ ಅಭಿಪ್ರಾಯ ತಿಳಿದು ನಾನು ಬದುಕುವುದು ಸಂದೇಹಾಸ್ಪದವಾಗಿ ತೋರಿರಬೇಕು. ಒಡನೆಯೆ ಅವರು ಶಿವಮೊಗ್ಗಾಕ್ಕೆ ಟೆಲಿಗ್ರಾಂ ಕೊಡುವಂತೆ ತಿಳಿಸಿದರು. ಹೊಸಮನೆ ಮಂಜಪ್ಪಗೌಡರು, ಮಾನಪ್ಪ ಆಗ ಅಲ್ಲಿ ಅಡಕೆಮಂಡಿ ನೋಡಿಕೊಳ್ಳುತ್ತಿದ್ದರು. ತಂತಿ ಕೊಟ್ಟಿದ್ದರ ಉದ್ದೇಶ ನನ್ನನ್ನು ಮೊಟಾರು ಕಾರು ತಂದು ಶಿವಮೊಗ್ಗಕ್ಕೆ ವಿಶೇಷ ವೈದ್ಯಕೀಯ ಸೌಲಭ್ಯವಿರುವಲ್ಲಿಗೆ ಸಾಗಿಸಲೆಂದು. ಆಗ ಅಲ್ಲಿ ಎಲ್ಲಿಯೂ ಕಾರುಗಳಿರಲಿಲ್ಲ.

ಅಂದು ಹಗಲು ಹೇಗೋ ಕಳೆಯಿತು. ಜ್ವರದ ಆಧಿಕ್ಯದಿಂದಲೊ ಏನೊ ನನಗೆ ಹಿಂದಿನ ದಿನದಿಂದಲೆ ಮಾತಾಡುವ ಶಕ್ತಿ ಉಡುಗಿ ಹೋಗಿತ್ತು. ಪ್ರಜ್ಞೆ ಬಂದಾಗ ಮಾತನಾಡಬೇಕೆಂದು ಎಷ್ಟು ಪ್ರಯತ್ನಿಸಿದರೂ ನನ್ನಿಂದ ಧ್ವನಿ ಹೊರಡುತ್ತಿರಲಿಲ್ಲ. ಮನೆಯವರು, ನನ್ನ ತಂಗಿಯರಿಬ್ಬರೂ ಸೇರಿ, ಅತ್ಯಂತ ಖಿನ್ನರಾಗಿ ದುಃಖಿತರಾಗಿ ಸುತ್ತ ಅಲ್ಲಲ್ಲಿ ನಿಂತೊ ಕುಳಿತೊ ತಮ್ಮ ರೀತಿಯಲ್ಲಿ ದೇವರಿಗೆ ಮೊರೆಯಿಡುತ್ತಿದ್ದರೆಂದು ತೋರುತ್ತದೆ. ನನಗೆ ತಿಳಿಯದಂತೆ, ಏಕೆಂದರೆ ನಾನು ಆ ಮೂಢಾಚಾರಗಳನ್ನೆಲ್ಲ ಖಂಡಿಸುತ್ತಿದ್ದೆ, ತೋಟದಾಚೆಯ ಭೂತರಾಯನಿಗೊ, ತಿರುಪತಿ ತಿಮ್ಮಪ್ಪಗೊ ಧರ್ಮಸ್ಥಳಕ್ಕೊ ಮುಡಿಪು ಕಟ್ಟಿ ಹೇಳಿಕೊಳ್ಳುತ್ತಿದ್ದರೂ ಇರಬಹುದು.

ಮಳೆಗಾಲ ಕಾಲಿಟ್ಟ ಸಮಯ. ಹಗಲೆಲ್ಲ ಮಳೆ ಬೀಳುತ್ತಿತ್ತು. ಕತ್ತಲಾಗುತ್ತಾ ಬಂದಂತೆಲ್ಲ ಮಳೆ ಜೋರಾಯಿತು. ಶಿವಮೊಗ್ಗದಿಂದ ಈಗ ಬರುತ್ತದೆ. ಕತ್ತಲಾಗುತ್ತಾ ಬಂದಂತೆಲ್ಲ ಮಳೆ ಜೋರಾಯಿತು. ಶಿವಮೊಗ್ಗದಿಂದ ಈಗ ಬರುತ್ತದೆ, ಇನ್ನೇನು ಬರುತ್ತದೆ ಎಂದು ಕಾಯುತ್ತಿದ್ದ ನೆರವು ಎಲ್ಲಿಯೂ ಗೋಚರವಾಗಲಿಲ್ಲ. ಜಗಲಿಗೆ ಲ್ಯಾಂಪು ಹೊತ್ತಿಸಿದರು. ತುಳಸಿಕಟ್ಟೆಯ ದೇವರಿಗೆ ನೀಲಾಂಜನ ಹೊತ್ತಿಸಿ, ಮಳೆಗಾಳಿಗೆ ಕೆಡದಂತೆ ತಗಡಿನ ಗೂಡಿನ ಮರೆಮಾಡಿದರು. ರಾತ್ರಿ ಏಳಾಯ್ತು, ಎಂಟಾಯ್ತು, ಒಂಬತ್ತೂ ಆಯ್ತು! ಎಲ್ಲರಿಗೂ ನಿಶ್ಚಯವಾಯ್ತು, ಪುಟ್ಟು ಬೆಳಕಿನ ತನಕ ಉಳಿಯುವುದು ಕಷ್ಟ ಎಂದು!

ಇದ್ದಕ್ಕಿದ್ದ ಹಾಗೆ, ತಮ್ಮ ಕೋಣೆಯಲ್ಲಿ ಚಿಂತಾಕ್ರಾಂತರಾಗಿ ಕುಳಿತಿದ್ದ ಹೊಳೆಕೊಪ್ಪದ ಅಮ್ಮಗೆ ಕಿಟಕಿಯ ಮುಖಾಂತರ ಏನೊ ಒಂದು ಅತ್ಯತಿಪ್ರಕಾಶ ಪ್ರವೇಶಿಸಿದಂತಾಯ್ತು. ಕೋಣೆಯೆಲ್ಲ ಬೆಳ್ಳಂಬೆಳಕಾಯ್ತು. ಮಿಂಚಿರಬೇಕು ಎಂದು ಮೊದಲು ಭಾವಿಸಿದರು. ಆದರೆ ಆ ಕಾಂತಿ ಅಳಿಯಲೆ ಇಲ್ಲ, ಮತ್ತೂ ಪ್ರಕಾಶಮಾನವಾಯ್ತು, ಬೆರಗಾಗಿ ನೋಡುತ್ತಿದಂತೆ ಕಿವಿ ಕೆಪ್ಪಾಗುವುದೊ ಎಂಬಂತಹ ಒಂದು ಪೋಂಕ್ ಪೋಂಕ್ ಸದ್ದು ಆ ಮಳೆಗಾಳಿಗಳ ಸದ್ದನ್ನೆಲ್ಲ ತಿಂದು ತೇಗಿದಂತೆ ಕೇಳಿಸಿತು. ಬೆಚ್ಚಿಬಿದ್ದರು; ಅವರು ಎಂದೂ ಕಂಡಿರಲಿಲ್ಲ ಮೋಟಾರುಕಾರಿನ ಹೆಡ್‌ಲೈಟುಗಳನ್ನು, ಎಂದೂ ಕೇಳಿರಲಿಲ್ಲ ಕಾರಿನ ಹಾರನ್‌!

ಮಾನಪ್ಪ , ಬಾಡಿಗೆ ಕಾರಿನಲ್ಲಿ, ಭದ್ರಾವತಿಯಲ್ಲಿ ಡಾಕ್ಟರಾಗಿದ್ದ ಚೊಕ್ಕಂ ಐಯ್ಯಂಗಾರರನ್ನೂ ಜೊತೆಗೆ ಕರೆದುಕೊಂಡು ಧಾವಿಸಿ ಬಂದಿದ್ದ, ಮಳೆಗಾಳಿ ಹಾಳು ರಸ್ತೆ ಒಂದನ್ನೂ ಲೆಕ್ಕಿಸದೆ, ಶಿವಮೊಗ್ಗೆಯಿಂದ ರಾತ್ರಾರಾತ್ರಿ!

ಡಾಕ್ಟರನ್ನೂ ಕರೆದುಕೊಂಡೇ ಬಂದಿದ್ದ ಅವನ ಮುಂದಾಲೋಚನೆ ಭಗವತ್ ಪ್ರೇರಣೆಯಿಂದಲೆ ಆದದ್ದು ಎಂದು ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಬಹುಶಃ ನನ್ನ ಹೆಣವನ್ನೆ ಸಾಗಿಸಬೇಕಾಗುತಿತ್ತೊ ಏನೊ? ಅಥವಾ, ಹಾಗೇಕೆ ತಿಳಿಯಬೇಕು? ಮುಂದೆ ೧೯೨೯ ರಲ್ಲಿ ನಾನೂ ಅವನೂ ಒಟ್ಟಾಗಿ ಸ್ವಾಮಿ ಸಿದ್ದೇಶ್ವರಾನಂದರೊಡನೆ ಬೇಲೂರು ಮಠಕ್ಕೆ ಹೋಗಿ ಸ್ವಾಮಿ ಶಿವಾನಂದ ಮಹಾರಾಜರಿಂದ ದೀಕ್ಷೆ ತೆಗೆದುಕೊಳ್ಳುವ ಯೋಗವಿದ್ದಾಗ?

ಸರ್ವದಾ ನಗೆಮೊಗದ ಮತ್ತು ವಿನೋದಶೀಲದ ಸರಳಹೃದಯದ ಸಾತ್ವಿಕ ವ್ಯಕ್ತಿ ಡಾ. ಚೊಕ್ಕಂ. ಬಂದವರೆ ಏನೇನೊ ವಿನೋದ ಮಾತುಗಳನ್ನೆ ನನ್ನನ್ನು ನಿರ್ದೇಶಿಸಿ ಹೇಳುತ್ತಾ, ಜೊತೆಯಲ್ಲಿ ತಾವು ತಂದಿದ್ದ ವೈದ್ಯನ ಮಂಜೂಷೆಯಿಂದ ಏನೇನನ್ನೊ ತೆಗೆದು ಸೂಜಿಮದ್ದು ಕೊಡಲು ಅಣಿಯಾಡಿದರು. ಕೈಹಿಡಿದು ನೋಡಿ ಸ್ಟೆಥಾಸ್ಕೋಪು ಇಟ್ಟು ನೋಡಿ, ವಿಷಮತೆಯನ್ನು ಗ್ರಹಿಸಿದರು. ಒಂದು ಇಂಜೆಕ್ಷನ್ ಕೊಟ್ಟು, ಒಡನೆಯೆ ರೋಗಿಯನ್ನು ಭದ್ರಾವತಿಯ ತಮ್ಮ ಆಸ್ಪತ್ರೆಗೆ ಕರೆದೊಯ್ಯಲು ನಿಶ್ಚಯಿಸಿದರು.

ಕಗ್ಗತ್ತಲ ರಾತ್ರಿ; ಮುಂಗಾರು ಮಳೆ ಸುರಿಯುತ್ತಿತ್ತು; ಕಾಡುದಾರಿ ಗುಡ್ಡ ಬೆಟ್ಟ ಕಂದರಗಳಲ್ಲಿ ಸಾಗುತ್ತಿತ್ತು. ಆಗಿನ ಮಲೆನಾಡಿನಲ್ಲಿ ರಸ್ತೆಗಳೆ ಇರಲಿಲ್ಲ; ಕೊರಕಲು ಕಲ್ಲುಮುಳ್ಳು ಕೆಸರಿನ ಕಾಡುದಾರಿಗಳನ್ನೆ ರಸ್ತೆ ಎಂದು ಕರೆಯುತ್ತಿದ್ದರಷ್ಟೆ. ಆ ಕಾರು ಹಳೆಯ ಮಾದರಿಯ ಕ್ಯಾನ್‌ವಾಸ್ ಮುಚ್ಚಿಗೆಯ ಫೋರ್ಡ್ ಕಾರು, ಸೆಡಾನ್ ಬಾಡಿಯದಲ್ಲ. ಮಳೆ ಗಾಳಿಗಳಿಂದ ರಕ್ಷೆ ಕಷ್ಟಸಾಧ್ಯ. ಯಾವ ದೃಷ್ಟಿಯಿಂದ ಪರಿಶೀಲಿಸಿದರೂ ರೋಗಿಯನ್ನು, ಅದರಲ್ಲಿಯೂ ನಾನಿದ್ದ ವಿಷಯ ಸ್ಥಿತಿಯಲ್ಲಿ, ಎಪ್ಪತ್ತು ಎಂಬತ್ತು ಮೈಲಿ ಸಾಗಿಸುವುದಕ್ಕೆ ವಿರುದ್ಧವಾಗಿತ್ತು. ಆದರೂ ಧೈರ್ಯ ಮಾಡಿಬಿಟ್ಟಿದ್ದರು ಡಾ. ಚೊಕ್ಕಂ.

ಕಾರಿನ ಮುಂದಿನ ಸೀಟಿನಲ್ಲಿ ಚೊಕ್ಕಂ ಮತ್ತು ಮಾನಪ್ಪ ಕುಳಿತರು. ನನ್ನನ್ನು ಹಿಂದಿನ ಸೀಟಿನಲ್ಲಿ ದಿಂಬು ರಗ್ಗು ಇತ್ಯಾದಿಗಳಲ್ಲಿ ಹುದುಗಿಸಿ ಮಲಗಿಸಿಕೊಂಡು ದೊಡ್ಡ ಚಿಕ್ಕಪ್ಪಯ್ಯ ಒಂದು ತುದಿಯಲ್ಲಿ ಕುಳಿತರು. ಅವರು ಎಷ್ಟು ಕಾತರರೂ ಚಿಂತಾಕ್ರಾಂತರೂ ಆಗಿದರೆಂದರೆ ನನ್ನೊಡನೆ ಇತರರಾರನ್ನಾದರೂ ಕಳಿಸಲು ಒಪ್ಪಲಿಲ್ಲ.

ಮನೆಯವರೆಲ್ಲ ಹೆಬ್ಬಾಗಿಲಾಚೆಗೆ ಬಂದು ನಿಂತು ಕಾರು ಹೊರಟು ಹೋಗುವುದನ್ನೆ ನೋಡುತ್ತಿದ್ದರು, ಖಿನ್ನರಾಗಿ, ಪುಟ್ಟು ಮತ್ತೆ ಹಿಂದಕ್ಕೆ ಬರುತ್ತಾನೆಯೊ ಇಲ್ಲವೊ ಎಂಬ ಚಿಂತಾಭಾರದಿಂದ ಕುಸಿದು! ಏಕೆ? ಏನು? ಎಂತು? ಯಾರು? ಏನನ್ನೂ ಅರಿಯಲಾರದ ನಾಯಿಗಳೂ ಅವರೊಡನೆಯೆ ಬಾಲವಳ್ಳಾಡಿಸುತ್ತಾ ನಿಂತು ಬೆರಗಾಗಿದ್ದುವು. ಮುಂದೀಪ ಹೊತ್ತಿಸಿಕೊಂಡು ಕಾರು ಮಳೆ ಗಾಳಿ ಮಿಂಚಿನ ಕತ್ತಲೆಯನ್ನು ಸೀಳಿಕೊಂಡು ಓಡಿ ಕಣ್ಮರೆಯಾಗುವುನ್ನೆ ನೋಡುತ್ತಾ!

ಕಾರು ಕೊಪ್ಪ-ನರಸಿಂಹರಾಜಪುರ ಮಾರ್ಗದಲ್ಲಿ ಹೊರಟಿತು. ಆಗ ತೀರ್ಥಹಳ್ಳಿಯಲ್ಲಿ ತುಂಗಾನದಿಗೆ ಸೇತುವೆ ಕಟ್ಟಿರಲಿಲ್ಲವಾಗಿ ಶಿವಮೊಗ್ಗ ಕಡೆ ಹೋಗುವ ಯಾನಗಳು ಸ್ವಲ್ಪ ಹೆಚ್ಚು ದೂರವಾಗುವ ಕೊಪ್ಪ-ನರಸಿಂಹರಾಜಪುರ ಮಾರ್ಗವಾಗಿಯೆ ಪ್ರಯಾಣಿಸಬೇಕಿತ್ತು. ಅಮ್ಮಡಿ ಕಾಫಿಕಾನಿನ ಕಲ್ಗುಂಡು-ಕೆಮ್ಮಣ್ಣು ಕೆಸರೆದ್ದ ರಸ್ತೆಯಲ್ಲಿ ಹಾದು ಕಾರು ನಿಧಾನವಾಗಿ ಮುಂದುವರೆದು ಸಾಗಿತು. ಮಳೆ ಉದ್ದಕ್ಕೂ ಸುರಿಯುತ್ತಿತ್ತು. ದಾರಿಯಲ್ಲೊಮ್ಮೆ ಡಾಕ್ಟರು ನನ್ನ ನಾಡಿ ನೋಡಿದರಂತೆ. ನಾಡಿಯ ಬಡಿತ ಎಷ್ಟು ಅತೃಪ್ತಕರವಾಗಿತ್ತು ಎಂದರೆ, ತರುವಾಯ ಅವರು ನನ್ನೊಡನೆ ಹೇಳಿದಂತೆ “It was so low, I was shaking in my boots. And I was cursing myself for having brought you in the car in such a condition. And began praying”.[1] ಅಷ್ಟು ನಿರಾಶಾದಾಯಕವಾಗಿತ್ತಂತೆ.

ಜೊತೆಯಲ್ಲಿ ತಂದಿದ್ದ ಕಾಫಿಯನ್ನೊ ಏನನ್ನೊ ಕುಡಿಸಿದರು.

ಭದ್ರಾವತಿಗೆ ಇನ್ನೇನು ಏಳೆಂಟು ಮೈಲಿಗಳಿಗೆ ಎನ್ನುವಾಗ ಕಾರಿನ ಹೆಡ್ ಲೈಟುಗಳು ಕೆಟ್ಟು ಹೋದುವು. ಕಗ್ಗತ್ತಲೆಯಲ್ಲಿ ಒಂದು ಅಡಿ ದಾರಿ ಕಾಣಿಸುತ್ತಿರಲಿಲ್ಲ. ಬೆಳಕು ಬಿಡುವ ತನಕ ಕಗ್ಗಾಡ ನಡುವೆ ಅಲ್ಲಯೆ ನಿಲ್ಲಬೇಕಾಯಿತು. ಅಪಶಕುನದ ಮೇಲೆ ಅಪಶಕುನ!

ಹಾದಿ ತುಸುವೆ ಕಾಣುವಷ್ಟು ಬೆಳಕುಬಿಡಲು ಆ ನಸುಕಿನಲ್ಲಿಯೆ ಮೆಲ್ಲನೆ ಚಲಿಸಿ ಬೆಳಗಾಗುವಷ್ಟರಲ್ಲಿ ಕಾರು ಭದ್ರಾವತಿ ನದಿಯ ದಂಡೆಯ ಮೇಲಿದ್ದ ಆಸ್ಪತ್ರೆಗೆ ತಲುಪಿತು. ಪಕ್ಕದಲ್ಲಿದ್ದ ಷೆಡ್ಡಿನಂತಹ ವಾರ್ಡಿನಲ್ಲಿ ರೋಗಿಯನ್ನು ಮಂಚಸ್ಥ ಮಾಡಿದರು.

ಅಚ್ಚರಿಯೆಂಬಂತೆ ಮರುದಿನದಿಂದಲೆ ಜ್ವರ ಇಳಿದು ನಾನು ಚೇತರಿಸಿಕೊಳ್ಳ ತೊಡಗಿದೆ. ಡಾ. ಚೊಕ್ಕಂ ಅವರು ನಾನು ಯಾವ ಮಾನಸಿಕ ಶ್ರಮದ ಕಾರ್ಯವನ್ನೂ ಮಾಡಬಾರದು ಎಂದು ವಿಧಿಸಿದರು. ನಾನು ಕವಿತೆ ಕಟ್ಟುವ ಚಟದವನು ಎಂದು ಅವರಿಗೆ ಗೊತ್ತಿದ್ದುದರಿಂದ ಅದನ್ನೂ ಸದ್ಯಕ್ಕೆ, ಚೆನ್ನಾಗಿ ದೈಹಿಕ ಬಲ ಬರುವತನಕ, ನಿಲ್ಲಿಸಬೇಕೆಂಬ ಪಥ್ಯದ ಕಟ್ಟಪ್ಪಣೆ ಮಾಡಿದರು. ಏಕೆಂದರೆ ದೈಹಿಕ ಬಲಹೀನತೆಯ ಸಮಯದಲ್ಲಿ ಮಾನಸಿಕ ಶ್ರಮ ದುಷ್ಪರಿಣಾಮಕಾರಿಯಂತೆ! ಆದರೆ ಒಂದು ರಿಯಾಯತಿ ತೋರಿಸಿದರು, ಓದುವುದನ್ನು ಬೇಡ ಎಂದರೂ ಬಣ್ಣದ ಚಿತ್ರಗಳನ್ನು ನೋಡುವುದನ್ನು ನಿಷೇಧಿಸಲಿಲ್ಲ. ಬದಲಾಗಿ, ಬಣ್ಣಬಣ್ಣದ ಚಿತ್ರಗಳನ್ನು ನೋಡಿ ಆನಂದಿಸುವುದರಿಂದ ಮನಸ್ಸಿಗೆ ಶ್ರಮವಿಲ್ಲದ ಸತ್ಪರಿಣಾಮವಾಗಿ ಕಾಯಿಲೆ ಬೇಗ ವಾಸಿಯಾಗುವುದಕ್ಕೆ ನೆರವಾಗುತ್ತದೆ ಎಂದೂ ಅಂದರು. ಮಾನಪ್ಪ ಆ ಬಣ್ಣದ ಮದ್ದನ್ನು ಒದಗಿಸಲು ಒಪ್ಪಿಕೊಂಡು, ತನ್ನ ಸ್ವಂತ ಲೈಬ್ರರಿಯಲ್ಲಿ ಯಾರಿಗೂ ಕೊಡದ ಕೃಪಣತೆಯಿಂದ ರಕ್ಷಿಸಿಕೊಂಡು ಬಂದಿದ್ದ, ಸುಪ್ರಸಿದ್ಧರಾದ ಪಾಶ್ಚಾತ್ಯ ಮತ್ತು ಭಾರತೀಯ ಮಹಾ ವರ್ಣಚಿತ್ರಕಾರರ ಕೃತಿಗಳನ್ನೊಳಗೊಂಡ ನಾಲ್ಕಾರು ಬೃಹದ್‌ಗಾತ್ರದ ‘ಆಲ್ಬಂ’ಗಳನ್ನು ತಂದುಕೊಟ್ಟ. ಅವು ನಿಜವಾಗಿಯೂ ನನ್ನ ಮನಸ್ಸಿಗೂ ಕಣ್ಣಿಗೂ ಹಬ್ಬವಾಗಿಬಿಟ್ಟವು! ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಅರಣ್ಯಶ್ರೇಣಿ, ಸಹ್ಯಾದ್ರಿ ಪರ್ವತಪಂಕ್ತಿ, ಪಕ್ಷಿತುಮುಲಗಾನ ಇತ್ಯಾದಿ ಪ್ರಕೃತಿ ದೃಶ್ಯಗಳನ್ನು ನೋಡಿದಾಗ ಉಂಟಾಗುತ್ತಿದ್ದ ರಸಾನಂದವನ್ನೆ ಆ ವರ್ಣಚಿತ್ರಗಳನ್ನು ವೀಕ್ಷಿಸಿ ಪರಿಭಾವಿಸಿದಾಗ ಅನುಭವಿಸಿದೆ. ಹಾಗೆಯೆ ಅಲ್ಲಿಯ ಕೆಲವು ಚಿತ್ರಗಳಿಂದ ಪ್ರೇರಿತವಾಗಿ ಪ್ರತಿಭೆ ಕವನ ಸೃಜನಾಸಕ್ತವಾಗಿಬಿಟ್ಟಿತು. ಅವುಗಳನ್ನು ರಚಿಸಿ ನೆನಪಿನಲ್ಲಿಟ್ಟುಕೊಂಡು ಬಹಳ ಕಾಲ ಮರೆಯದೆ ಇರುವುದಕ್ಕಾಗುತ್ತದೆಯೆ? ಅದಕ್ಕೊಂದು ಉಪಾಯ ಹುಡುಕಿದೆ. ಜ್ವರ ಬಿಟ್ಟಿರುವುದರಿಂದ ಪತ್ರಿಕೆಯಂತಹ ಭಾರವಲ್ಲದ ಸಾಹಿತ್ಯವನ್ನು ಓದಲು ಅವಕಾಶ ಕೊಡುವಂತೆ ಡಾಕ್ಟರನ್ನು ಕೇಳಿಕೊಂಡಾಗ ಒಪ್ಪಿದರು. ಮಾನಪ್ಪ ದಿನವೂ ಶಿವಮೊಗ್ಗದಿಂದ ಬರುವಾಗ ಹಿಂದೂ ಪತ್ರಿಕೆಯನ್ನು ತಂದುಕೊಡುತ್ತಿದ್ದ. ಅವನಿಂದಲೆ ಒಂದು ಸೀಸದ ಕಡ್ಡಿಯನ್ನೂ ಸಂಪಾದಿಸಿದೆ. ಪತ್ರಿಕೆಯ ಅಂಚಿನಲ್ಲಿ ಇರುವ ಖಾಲಿಜಾಗದಲ್ಲಿ ‘ಆಲ್ಬಂ’ ಚಿತ್ರಗಳಿಂದ ಪ್ರೇರಿತವಾದ ಕವನಗಳನ್ನು ಬರೆದು ಹಾಸಗೆಯ ಅಡಿಯಲ್ಲಿ ಇಡುತ್ತಿದ್ದೆ.

ಹಿಂದೂ ಪತ್ರಿಕೆಯ ಅಂಚಿನಲ್ಲಿ ಬರೆದ ಕವನಗಳ ಸಂಖ್ಯೆ ನಾನು ಆಸ್ಪತ್ರೆಯಿಂದ ಹೊರಗೆ ಬರುವಷ್ಟರಲ್ಲಿ ಹನ್ನೊಂದಕ್ಕೆ ಮುಟ್ಟಿತ್ತು. ಅವುಗಳಲ್ಲಿ ‘ಆಲ್ಬಂ’ ಚಿತ್ರಗಳಿಂದ ಪ್ರೇರಿತವಾದುವು ಆರು:

೧. ಶ್ರೀಯುತ ಎಚ್. ಮುಜುಂದಾರರ “Divine Flute” ಎಂಬ ಚಿತ್ರವನ್ನು ನೋಡಿ ಬರೆದುದು. ಕವನದ ಹೆಸರು ‘ಮುರಳಿ ಶಿಕ್ಷ’. ಇದು “ಷೋಡಶಿ” ಕವನಸಂಗ್ರಹದಲ್ಲಿ ಅಚ್ಚಾಗಿದೆ.

೨. ಶ್ರೀಯುತ ಮುಜುಂದಾರರ “In Expectation” ಎಂಬ ಚಿತ್ರವನ್ನು ನೋಡಿ ಬರೆದುದು. ಕವನದ ಹೆಸರು “ಹಾರೈಕೆ”. ಇದು ‘ಷೋಡಶಿ’ ಕವನ ಸಂಗ್ರಹದಲ್ಲಿ ಅಚ್ಚಾಗಿದೆ.

೩. ಶ್ರೀಯುತ ಮುಜುಂದಾರರ “Traffic in Soul”  ಎಂಬ ಚಿತ್ರವನ್ನು ನೋಡಿ ಬರೆದುದು. ಕವನದ ಹೆಸರು “ಆತ್ಮನಿವೇದನ” ಇದು “ಪ್ರೇಮಕಾಶ್ಮೀರ” ಕವನ ಸಂಗ್ರಹದಲ್ಲಿ ಅಚ್ಚಾಗಿದೆ.

೪. ಶ್ರೀ ಮುಜುಂದಾರರ “Lingering Look” ಎಂಬ ಚಿತ್ರವನ್ನು ನೋಡಿ ಬರೆದುದು. ಕವನದ ಹೆಸರು “ನಟ್ಟ ನೋಟ”. ಇದು “ಷೋಡಶಿ” ಕವನಸಂಗ್ರದಲ್ಲಿ ಅಚ್ಚಾಗಿದೆ.

೫. ಶ್ರೀ ಮುಜುಂದಾರರ `The Goal’ ಎಂಬ ಚಿತ್ರವನ್ನು ನೋಡಿ ಬರೆದುದು. ಕವನದ ಹೆಸರು ‘ಗತಿ’, ‘ಕೊಳಲು’ ಕವನ ಸಂಗ್ರಹದಲ್ಲಿ ಅಚ್ಚಾಗಿದೆ.

೬. ‘ಆಲ್ಬಂ’ನಲ್ಲಿದ್ದ ಇನ್ನಾರದೊ ಒಂದು ಚಿತ್ರದಿಂದ ಪ್ರೇರಿತವಾದುದು. ಆ ಚಿತ್ರ ‘ಓಮರ್ ಖಯಾಮ್’ಗೆ ಸಂಬಂಧಪಟ್ಟದ್ದು. ನನಗೆ ನೆನಪಿರುವಂತೆ, ಒಬ್ಬ ರಸಿಕ ಗಡ್ಡದಾರಿ ಒಂದು ಮರದಡಿಯಲ್ಲಿ ಒಬ್ಬ ಚೆಲುವೆಯೊಡನೆ ಕುಳಿತಿದ್ದಾನೆ. ಪಾನೀಯ ಪದಾರ್ಥಗಳು ಬಳಿ ಇವೆ. ಏನನ್ನೊ ಹೇಳುವಂತಿದೆ. ಕವನದ ಹೆಸರೂ ‘ಓಮರ್ ಖಯಾಮ್’ ಎಂದೇ ಅದು ಎಲ್ಲಿಯೂ ಅಚ್ಚಾಗಿಲ್ಲವಾದ್ದರಿಂದ ಇಲ್ಲಿ ಕೊಡಲಾಗಿದೆ:[2]

ಓಮರ್ ಖಯಾಮ್
(ಒಂದು ಚಿತ್ರವನ್ನು ನೋಡಿ ಬರೆದುದು)

ನಿಶೆಯು ಧರೆಯನಾಳುತಿಹುದು
ಮೌನದಿಂದ ರಮಣಿಯೆ.
ಶಶಿಯು ನೀಲ ಗಗನದಲ್ಲಿ
ಮನವ ಮೋಹಿಸಿರುವನು.

ಬಿಳಿಯ ಮುಗಿಲು ಬಾನಿನಲ್ಲಿ
ಮೈಮೆದೋರುತಿರುವುದು;
ಅಲರ ಕಂಪ ಸೂರೆಗೊಂಡು
ಎಲರು ಬೀಸುತಿರುವುದು.

ಗಗನವೇನೊ ಮೌನವಚನ-
ವಾಡುತಿಹುದು ತರಳೆಯ,
ಜಗವೆ ನಿಂತು ಕೇಳುತಿಹುದು!
ಮಾಯೆಯಾಡುತಿರುವಳು.

ನಿಶೆಯು ಧರೆಯನಾಳುತಿರಲಿ,
ಜೊನ್ನಕಾಂತಿ ಬೆಳಗಲಿ;
ಎಸೆವ ಗಗನ ನುಡಿಯುತಿರಲಿ,
ಮಾಯೆ ಮೆರೆದು ನಲಿಯಲಿ.

ಬಾಲೆ, ಬಾರೆ, ಪ್ರಣಯ ಮಧುವ
ಸುರಿದು ತಾರೆ ಬೇಗನೆ.
ಕಾಲನೆಮ್ಮ ಯೌವನವನು
ಕದಿವ ಮುನ್ನ ಹೀರುವ!

ಉಳಿದ ಐದು ಕವನಗಳಲ್ಲಿ ‘ನೇಗಿಲಯೋಗಿ’ ಎಂಬುದು ’ಕೊಳಲು’ ಕವನಸಂಗ್ರಹದಲ್ಲಿ ಅಚ್ಚಾಗಿ ಸುಪ್ರಸಿದ್ಧವಾಗಿದೆ. ಇನ್ನುಳಿದ ನಾಲ್ಕು ಎಲ್ಲಿಯೂ ಅಚ್ಚಾದಂತಿಲ್ಲ. ಆದರೆ ರೋಗದ ದವಡೆಗೆ ಸಿಕ್ಕಿ ತಪ್ಪಿಸಿಕೊಂಡಿದ್ದ ನನ್ನ ಆಗಿನ ಮನಃಸ್ಥಿತಿಯನ್ನು ಅರಿಯಲು ನೆರವಾಗುತ್ತವೆ. ಅವುಗಳೆಲ್ಲ ಪ್ರಾರ್ಥನಾ ಸ್ವರೂಪದ್ದಾಗಿವೆ. ಮೊದಲನೆಯದರ ಶೀರ್ಷಿಕೆಯೆ ‘ಪ್ರಾರ್ಥನೆ’ ಎಂದಿದೆ.

ಕೈಹಿಡಿದು ನಡೆಸೆನ್ನ, ಗುರುವೆ,
ಬಾಲಕನು ನಾನೇನನರಿಯೆ. ||ಪ||

ನುಗ್ಗಿ ನಡೆಯುವೆನೆಂದು
ಮುಗ್ಗರಿಸಿ ಬೀಳುವೆನು;
ತಪ್ಪುದಾರಿಯ ಹಿಡಿವೆ
ದಾರಿ ಸರಿ ಎಂದು.
ಕವಲೊಡೆದ ದಾರಿಯೊಳು
ಋಜುಮಾರ್ಗವನು ತಿಳಿಯೆ.
ಅಲ್ಲಿ ಎದೆ ಕಂಗೆಟ್ಟು
ನಿಲ್ಲುವುದು, ಗುರುವೆ.

ಮನವೊ ಅತಿ ಚಂಚಲವು;
ಒಮ್ಮೆ ಇದು ಸರಿಯೆಂದು,
ಒಮ್ಮೆ ಅದು ಸರಿಯೆಂದು
ಅಲೆಯುವುದು ಬರಿದೆ!
ಜನರ ನುಡಿಯೋ ಚಪಲ;
ಒಬ್ಬೊಬ್ಬರೊಂದೊಂದು
ದಾರಿಯನು ತೋರುವರು.
ಗತಿ ನೀನೆ, ಗುರುವೆ!

ನಡೆಯಬೇಕಾದ ದಾರಿಯ ವಿಚಾರದಲ್ಲಿ ಗುರುದೇವನ ಮಾರ್ಗದರ್ಶನವನ್ನು ಕೋರುತ್ತದೆ ಮೇಲಿನ ಪ್ರಾರ್ಥನೆ. ಮುಂದಿನ ಕವನ ‘ನಿನ್ನ ಕೊಳಲಯ್ಯ ನಾನು’ ಎಂಬುದು ಕವಿಯನ್ನು ಭಗವಂತನ ಕಯ್ಯ ಕೊಳಲೆಂದೂ ಊದುವವನು ಭಗವಂತನೆ ಎಂದೂ ಆ ನಾದದ ಇಂಪಿಗೆ ಲೋಕ ಮೋಹಗೊಳ್ಳುವುದೆಂದೂ, ಯಾರು ಆಲಿಸಲಿ ಬಿಡಲಿ ಕೊಳಲಿಗೆ ಆತಂಕವಿಲ್ಲವೆಂದೂ ಹೇಳುತ್ತದೆ:

ನಿನ್ನ ಕೊಳಲಯ್ಯ ನಾನು,
ಕೊಳಲೂದಿ ಮೋಹಿಪನು ನೀನು. ||ಪ||

ಗಿರಿಯಲ್ಲಿ ಬನದಲ್ಲಿ ಬಯಲಲ್ಲಿ ಹೊಲದಲ್ಲಿ
ಚರಿಪೆ ನೀ ಮನಬಂದ ಹಾಡುಗಳ ಹಾಡಿ.
ಆಲಿಸುವರಾಲಿಸಲಿ, ಆಲಿಸದವರು ಬಿಡಲಿ,
ಹಾಡುತಿಹೆ ಗಾನಗಳ ಸ್ವಾನಂದಕಾಗಿ.

ಕೊಳಲ ನಾದವ ಕೇಳಿ ತಲೆಯೆತ್ತಿ ನಿಲ್ಲುವುವು
ಮೇಯುತಿಹ ಗೋವುಗಳು ಹಸಿವೆಯನು ಮರೆತು;
ಗೋಪಿಯರು ಬೆರಗಾಗಿ ನಾದಮೋಹಿತರಾಗಿ
ಮೈಮರೆತು ಕೇಳುವರು ಮನೆಗಳನು ನೀಗಿ.

ಕೊಳಲ ಗಾನವು ಹರಡಿ ತಿಳಿಯಾಗಸವ ತುಂಬಿ
ಬಿಳಿಮುಗಿಲ ಚುಂಬಿಪುದು ಮೋಹವನು ಚೆಲ್ಲಿ;
ಹೊಳೆ ನಿಂತು ಕೇಳುವುದು, ತಂಗಾಲಿಯಾಲಿಪುದು,
ಇಳೆಯೆ ಮೌನವನಾಂತು ಕೇಳುವುದು ಕೊಳಲ!

‘ಸ್ಥಿರಚಿತ್ತವೇಕಿನ್ನು ಬರಲಿಲ್ಲ, ತಾಯೆ?’ ಎಂದು ಪ್ರಾರಂಭವಾಗುತ್ತದೆ ಮುಂದಿನ ಗೀತೆ. ಸುಖ ನೆಮ್ಮದಿ ಇರುವಾಗ ದೇವರಿದ್ದಾನೆ, ಕಾಪಾಡುತ್ತಾನೆ ಎಂಬ ನಂಬಿಕೆ ಇರುತ್ತದೆ. ಅದು ತಪ್ಪಿ ಕಷ್ಟ ಕೋಟಲೆ ಪ್ರಾಪ್ತವಾಗಲು ದೇವರಿದ್ದಾನೆ ಎಂಬ ಶ್ರದ್ಧೆಯೆ ಅಳ್ಳಾಡಿಹೋಗುತ್ತದೆ.

ಸ್ಥಿರ ಚಿತ್ತವೇಕಿನ್ನು ಬರಲಿಲ್ಲ, ತಾಯೆ?
ಚಿತ್ತವನು ಮುತ್ತಿರುವುದೇಕಿನ್ನು ಮಾಯೆ? ||ಪ||

ಕತ್ತಲೊಳು ನಡುಗುವುದು ಎದೆ ಧೈರ್ಯಗುಂದಿ
ಚಿತ್ತದೊಳು ಸುಳಿಯುವುದು ಸಂದೇಹವು;
ಮತ್ತೆ ಬೆಳಕಾಗೆ ನಲಿವುದು ಧೈರ್ಯಹೊಂದಿ
ಸುತ್ತ ನೀನಿಹೆ ಎಂಬ ಭರವಸೆಯಲಿ!

ಬಿರುಗಾಳಿ ಬೀಸದಲೆ ಸಾಗುತಿರೆ ನಾವೆ
ಭರವಸೆಯು ನಾವೆಯೊಳಗಿರುವೆ ಎಂದು;
ಬಿರುಗಾಳಿ ಭೋರೆಂದು ಕಡಲು ಕುದಿದೇಳೆ
ಭರವಸೆಯು ಜಾರುವುದು ಸಂಶಯದೊಳು!

“ಭೀತಿ ಸಂದೇಹಗಳ ಪರಿಹರಿಸು, ಗುರುವೆ” ಎಂದು ಮೊದಲಾಗುವ ಮುಂದಿನ ಗೀತೆಯಲ್ಲಿ ಕೃಪೆಯನ್ನು ಯಾಚಿಸುತ್ತಿದೆ ಅಭೀಪ್ಸೆ.

ಭೀತಿ ಸಂದೇಹಗಳ ಪರಿಹರಿಸು, ಗುರುವೆ’
ಪ್ರೀತಿಯಿಂದೆದೆಯಲ್ಲಿ ನೆಲೆಸೆನ್ನ ದೊರೆಯೆ. ||ಪ||

ಪರತತ್ತ್ವದರಿವಿನಾ ಶಿಲೆಯ ದುರ್ಗವು ನಡುಗಿ
ಧರೆಗುರುಳುವಾ ಕಾಲ ಬರಬಹುದು, ಗುರುವೆ;
ಬಯಲಾದ ದುರ್ಗದೊಳು ಚಳಿಗಾಳಿ ಮಳೆ ನುಗ್ಗಿ
ವಾಸಿಸುವಗತಿ ಗೋಳುಕೊಡಬಹುದು, ದೊರೆಯೆ!

ನಿಮ್ಮ ಕೃಪೆಯಾತಪತ್ರವ ಹಿಡಿದು, ಹೇ ಗುರುವೆ,
ಸೆಡೆತು ಚಳಿಗಾಳಿಯಲಿ ನಡುಗುತಿಹ ನರಗೆ
ನಿಮ್ಮೊಲುಮೆಯಗ್ನಿಯಾ ಬಿಸಿಗಾಳಿಯನು ಬೀಸಿ
ಪೊರೆ, ಭಕ್ತಕುಲ ಕಲ್ಪತರುವೆ ಶ್ರೀಗುರುವೆ!

 


[1] ನಾಡಿ ಯಾವಾಗ ನಿಂತುಬಿಡುತ್ತದೆಯೋ ಎಂಬಂತಿತ್ತು. ಬೂಟ್ಸಿನ ಒಳಗಡೆ ಕಾಲು ನಡುಗತೊಡಗಿತು. ಇಂಥ ಸ್ಥಿತಿಯಲ್ಲಿ ನಿಮ್ಮನ್ನು ಯಾಕಾದರೂ ಕರೆತಂದೆನಪ್ಪಾ ಕಾರಿನಲ್ಲಿ? ಎಂದು ನನ್ನನ್ನು ನಾನೆ ಶಪಿಸಿಕೊಂಡೆ. ದೇವರೇ ಕಾಪಾಡು ಎಂದು ಪ್ರಾರ್ಥಿಸತೊಡಗಿದೆ.

[2] ಆಸ್ಪತ್ರೆಯಲ್ಲಿ ಬರೆದ ಹತ್ತು ಕವನಗಳು ನನ್ನ ಹಸ್ತಪ್ರತಿಯಲ್ಲಿ ಮಾನಪ್ಪನ ಹಸ್ತಾಕ್ಷರದಲ್ಲಿವೆ. ನನ್ನ ಅಶಕ್ತತೆಯ ಕಾರಣದಿಂದ ಅವನು ಪ್ರತಿಮಾಡಿರಬೇಕು.