ಕಾಯಿಲೆ ಬೀಳುವ ಮುನ್ನವೂ ಕಾಯಿಲೆ ಗುಣವಾಗಿ ಮನೆಗೆ ಮರಳಿದ ಅನಂತರವೂ ಬೇಸಗೆಯ ರಜದಲ್ಲಿ ಅನೇಕ ಕವನಗಳು ರಚಿತವಾಗಿವೆ. ಅವುಗಳಲ್ಲಿ ಬಹುಪಾಲು ಈಗಾಗಲೇ ಅಚ್ಚಾದ ಕವನಸಂಗ್ರಹಗಳಲ್ಲಿ ಬಂದಿವೆ. ಸುಪ್ರಸಿದ್ಧವಾಗಿಯೂ ಇವೆ. ಮತ್ತೆ ಕೆಲವು ಅಪ್ರಕಟಿತ. ಅವುಗಳಲ್ಲಿ ಉಚಿತವೆಂದು ತೋರಿದವುಗಳನ್ನು ಮುಂದೆ ಕೊಡುತ್ತೇನೆ. ಈ ಮಧ್ಯೆ ಬಿ.ಎ. ತೇರ್ಗಡೆ ಹೊಂದಿದಮೇಲೆ ಮುಂದೇನು ಎಂಬ ಪ್ರಶ್ನೆ ಮೂಡಿತು. ಉತ್ತರ ಯಾರಿಗೂ ಗೊತ್ತಿಲ್ಲ, ನಾನಂತೂ ಆ ವಿಚಾರವಾಗಿ ಆಲೋಚಿಸಿಯೇ ಇರಲಿಲ್ಲ. ಆದರೆ ನನಗೆ ಮುಂದೆ ಎಂ.ಎ. ಓದಬೇಕೆಂಬ ಮನಸ್ಸು. ಅದೂ ಏಕೆ ಬಂದಿತೊ ಗೊತ್ತಿಲ್ಲ. ಆಶ್ರಮದ ಮತ್ತು ಸ್ವಾಮಿ ಸಿದ್ದೇಶ್ವರಾನಂದರ ಪ್ರಭಾವದ ಪರಿಣಾಮವಾಗಿ ಏನೇನೊ ಅಸ್ಪಷ್ಟವಾದ ಆದರ್ಶದ ಪ್ರೇರಣೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದುವು: ದೊಡ್ಡ ಕವಿಯಾಗಬೇಕು? ದೊಡ್ಡ ತತ್ತ್ವಶಾಸ್ತ್ರಜ್ಞನಾಗಬೇಕು? ಸ್ವಾಮಿ ವಿವೇಕಾನಂದರಂತೆ ಮಹಾಸನ್ಯಾಸಿಯಾಗಬೇಕು? ಆದರೆ ಯಾವುದೂ ನಿಷ್ಕೃಷ್ಟವಲ್ಲ. ಕಡೆಗೆ, ಹಳ್ಳಿಯ ಮನೆಯಲ್ಲಿಯೆ ನಿಂತು ಸಾಹಿತ್ಯಾದಿ ಕಾರ್ಯಗಳನ್ನು ಮಾಡುತ್ತಾ ಜನರ ತಿಳಿವಳಿಕೆ ಹೆಚ್ಚಲು ಸಹಾಯ ಮಾಡುತ್ತಾ ಹೋಗಬಾರದೇಕೆ? ಇದರ ಮಧ್ಯೆ ಮದುವೆಯ ಪ್ರಸ್ತಾಪವೂ ಬಂತು. ಆ ವಿಚಾರದಲ್ಲಿ  ನಾನೇನು ಮಹಾ ಅನಾಸಕ್ತನಾಗಿದ್ದೆನೆಂದು ಹೇಳಲಾರೆನಾದರೂ, ಪುನಃ ಏಕೊ ಏನೊ  ನನಗರಿಯದಂತೆ ನಾನು ಅದಕ್ಕೆ ಒಪ್ಪಲಿಲ್ಲ. ಕೊಟ್ಟ ಕಾರಣ, ಎಂ.ಎ. ಪಾಸಾಗದೆ ನಾನು ಮದುವೆಯಾಗುವುದಿಲ್ಲ ಎಂದು. ಅಂತೂ ನಾನೇ ನಿರ್ಣಯಿಸುತ್ತಿದ್ದೇನೆ ಎಂದುಕೊಂಡು ನನ್ನ ಬದುಕು ಮಹಾತಾಯಿಯ ಜಗನ್ನಿಯಂತ್ರಣ ಶಕ್ತಿಯ ಮೂಗುದಾರದ ಪಶುವಿನಂತೆ ಮುಂಬರಿಯುತ್ತಿತ್ತು:

“ಯಾವ ಮಹಾಗತಿಗೆನ್ನನು ಕೈಹಿಡಿದನುದಿನ ನಡೆಸುತಿಹೆ?
ಯಾವಾನಂದವನೆನಗಾಗಡಗಿಸಿ ಕರೆಕರೆದೆಳೆಯುತಿಹೆ?”

ಎಂದು ಪ್ರಶ್ನಿಸುತ್ತಾ ಕೈಹಿಡಿದು ಎಳೆದು ನಡೆಸುತ್ತಿರುವ ತಾಯಿಗೆ ‘ಕೈಬಿಡು, ತಾಯೇ’ ಎಂದೂ ಕೊಡವಿ ಸಿಡಿಮಿಡಿಗೊಳ್ಳುತ್ತಾ. ಆದರೆ ಅವಳೋ? ಮುತ್ತಿಟ್ಟು ಮುದ್ದಿಸಿ ಹಟಮಾರಿ ಕಂದನನ್ನು ಮುಂದು ಮುಂದಕ್ಕೆ ಸಾಗಿಸುತ್ತಲೆ ಇದ್ದಳು!

ನಾನು ಕಾಯಿಲೆ ಬೀಳುವ ಮೊದಲು ಬರೆದಿರುವ ಎಂಟು ಕವನಗಳಲ್ಲಿ ೩-೫-೧೯೨೭ ರಲ್ಲಿ ಬರೆದ ‘ಘೋರಾಂಧಕಾರದೊಳು ಕಾರ್ಮುಗಿಲನುಟ್ಟು’ ೫-೫-೧೯೨೭ ರಲ್ಲಿ ಬರೆದ ‘ಹೊಲದ ಹುಡುಗಿ’ ಎಂಬ ಶೀರ್ಷಿಕೆಯ ವರ್ಡ್ಸ್‌ವರ್ತ್ ಕವಿಯ The Reaper  ಕವನದ ಅನುವಾದ, ೭-೫-೧೯೨೭ ರಲ್ಲಿ ಬರೆದ ಶಿಶುಗೀತೆ ‘ಅರ್ಧಚಂದ್ರ’ – ಇವು ‘ಕೊಳಲು’ ಕವನಸಂಗ್ರಹದ ಮೊದಲ ಮುದ್ರಣದಲ್ಲಿ ಅಚ್ಚುಗೊಂಡು ಪ್ರಸಿದ್ಧವಾಗಿವೆ. ೪.೫.೧೯೨೭ ರಲ್ಲಿ ಮಾಡಿದ ಸಿ.ಜಿ. ರಾಸೆಟ್ಟಿಯ When Iam dead, my Dearest, ೫-೫-೧೯೨೭ ರಲ್ಲಿ ಮಾಡಿದ ಲಾರ್ಡ್ ಬೈರನ್ ಕವಿಯ Youth and Age,  ೬-೫-೧೯೨೭ ರಲ್ಲಿ ಮಾಡಿದ ರವೀಂದ್ರರ ಗೀತಾಂಜಲಿಯ ಒಂದು ಕವನ ಇವುಗಳ ಅನುವಾದಗಳೂ ೨೨-೬-೧೯೨೭ ರಲ್ಲಿ ರಚಿಸಿದ ‘ಮನೆಯ ಬಿಡುವ ಕಾಲ ಬರಲು’ ಎಂಬ ಗೀತೆಯೂ ಮತ್ತು ೨೧-೬-೧೯೨೭ ರಲ್ಲಿ ಮಾಡಿದ ‘ಅಲೆಕ್ಸಾಂಡರ್ ಸೆಲ್‌ಕಿರ್ಕ್‌’ ಎಂಬ ಶೀರ್ಷಿಕೆಯ ಕೌಪರ್ ಕವಿಯ ಕವನದ ಅನುವಾದವೂ ಇದುವರೆಗೆ ಬೆಳಕು ಕಂಡಿಲ್ಲ.

WHEN I AM DEAD, MY DEAREST

ಸಾಯೆ ನಾ, ಕೈಹಿಡಿದ ರಮಣಿಯೆ,
ಎನ್ನ ನೆನೆದಳಬೇಡೆಲೌ!
ಎನ್ನ ದಹಿಸುವ ಮಸಣದಲಿ ನೀ
ತುಳಸಿಯನು ನೆಡಬೇಡೆಲೌ!

ಮಂಜುಮಳೆಯಲಿ ಬೆಳೆದ ಹಸುರೇ
ನನ್ನ ಮಸಣವ ಮುಚ್ಚಲಿ;
ಮನಸು ಬಂದರೆ ಎನ್ನ ನೆನಪಿಡು,
ಬಾರದಿದ್ದರೆ ತೊರೆ, ಬಿಡು.

ಮೂಸಿ ನೋಡೆನು ತುಳಸಿ ಗಂಧವ,
ಮಳೆಯ ಚಳಿ ಎನಗಿಲ್ಲವು.
ಅಳಲ ಸೂಚಿಪ ತೆರದಿ ಕೋಗಿಲೆ
ಉಲಿಯ ಬೀರಲು ಕೇಳೆನು.

ಉದಿಸಿ ಅಳಿಯದ ಕರಿಯ ಬೆಳಕಲಿ
ಕನಸ ಕಾಣುತ ನಿನ್ನನು,
ಯಾರು ಬಲ್ಲರು? ನೆನೆವೆನೋ? ಮೇಣ್
ಆರು ಬಲ್ಲರು? ಮರೆವೆನೋ?
೪-೫-೧೯೨೭

ಮೇಲಿನ ಅನುವಾದದಲ್ಲಿ ಕ್ರೈಸ್ತ ಸಂಪ್ರದಾಯವನ್ನು ಪರಿವರ್ತಿಸಿ ಹಿಂದೂ ಸಂಪ್ರದಾಯದಂತೆ ಅನುವಾದಿಸಿರುವುದನ್ನು ಗಮನಿಸಬಹುದು; “ದಹಿಸುವ ಮಸಣ” “ತುಳಸಿಯನು ನೆಡಬೇಡ” ಎಂಬಲ್ಲಿ.

ನಾನೇ ಕೆಲವು ವರ್ಷಗಳ ಹಿಂದೆ ಭಾಷಾಂತರಿಸಿದ್ದ ಲಾರ್ಡ್ ಬೈರನ್ ಕವಿಯ Youth and Age ಅನ್ನು ಮತ್ತೆ ಇಲ್ಲಿ ಅನುವಾದಿಸಿದ್ದೇನೆ. ಹಿಂದೆ ಮಾಡಿದ್ದ ಭಾಷಾಂತರವನ್ನು ಈ ‘ನೆನಪಿನ ಡೋಣಿ’ಯಲ್ಲಿ ಹಿಂದೆಯೆ ಕೊಟ್ಟಿದ್ದಾಗಿದೆ. ಅದನ್ನೂ ಇದನ್ನೂ ಹೋಲಿಸಿದರೆ ಗೊತ್ತಾಗುತ್ತದೆ ಕವಿಯ ಭಾಷೆಯ ಮುನ್ನಡೆ:

ಮುಪ್ಪು ಮತ್ತು ಯೌವನ

ಕಾಲ ಕೊಡುವಾನಂದ ಮೀರದು ಕಾಲ ನುಂಗುವ ಸುಖಗಳ,
ಬಾಲ್ಯದೂಹನೆಯಂದವೆಲ್ಲಾ ಮಂದ ಮುಪ್ಪಿನೊಳಳಿಯಲು.
ಯುವಕತನದಾ ಕೆನ್ನೆಯರುಣತೆಯೊಂದೆ ಬಾಡುವುದಲ್ಲವು,
ಹೃದಯಕಮಲದ ಕೋಮಲತೆಯನೆ ಮುಪ್ಪು ಕೊಂದೇಬಿಡುವುದು,

ಶೋಕದರೆಯನು ತಾಗಿ ಮುಳುಗದೆ ತೇಲುತಿಹ ಕೆಲ ಪುರುಷರು
ಪಾಪ ಭೋಗದ ಮರಳ ದಿಣ್ಣೆಯೊಳಿರದೆ ನೂಕಲ್ಪಡುವರು:
ಹಡಗಿನುತ್ತರಮು-ಯು ಕೆಡುವುದು, ಅಥವ ಬರಿದೇ ತೋರ್ಪುದು
ಹರಕು ಪಟದಾ ಮುರಿದ ನಾವೆಯು ಎಂದು ಸೇರದ ತೀರವ.

ಆಗ ಜೀವನ ಮಂಜುಗಡ್ಡೆಯು ಸಾವಿನಂದದೊಳಿಳಿವುದು;
ಮನವನೀಯದು ಪರರಳಲಿಗದು, ತನ್ನ ಗೋಳನು ಸಹಿಸದು.
ಆಗ ಕಂಗಳ ನೀರಿನೊರತೆಯು ಹೆಪ್ಪುಗಡುವುದು ಚಳಿಯಲಿ;
ಕಣ್ಣುಗುಡ್ಡೆಯು ಹೊಳೆದರೂ ಅದು ಮಂಜುಗಡ್ಡೆಯ ಕೆಳಗಡೆ!

ಆಗ ಹಾಸ್ಯದ ನುಡಿಯ ಕೇಳಿದರೊಲುಮೆ ಹೃದಯವನಿರಿದರೂ
ರಾತ್ರಿ ಹಿಂದಿನ ನಿದ್ದೆಯಿಯದು, ಕಳೆದ ನೆಚ್ಚನು ತಾರದು!
ಬಿದ್ದುಹೋಗುವ ಲಡ್ಡುಗೋಪುರ, ಬಳ್ಳಿಹಬ್ಬಿರೆ, ನೋಟಕೆ
ಮೇಲೆ ಹಸುರಾಗೆಸೆವುದಾದರು, ಕೆಳಗೆ ನಾಶವು ನಗುವುದು.

ಹಿಂದಿನನುಭವ ಬಾರದೇ? ಹಾ! ಹಿಂದಿನಂತೀಗಾಗೆನೇ?
ಹಿಂದಿನಂತೆಯೆ ಕಳೆದ ಗೆಳೆಯರ ಮರಳಿ ನೆನೆದಳಲಾರೆನೇ?
ಮರುಳು ಭೂಮಿಯ ಕೆರೆಯ ನೀರದು ಮಧುರ, ಉಪ್ಪೇ ಆದರೂ;
ಅಂತೆ ಜೀವದ ಹಾಳೊಳಳಲಿನ ಕಂಬನಿಯೆ ಸುಖದೊರತೆಯು!
೫-೫-೧೯೨೭

ಇದೊಂದು ಭಾಷಾಂತರ, ರವೀಂದ್ರರಿಂದ. ಕವಿ ಇಲ್ಲಿ ತಾನು ಸೋತವರೊಡನೆ ದುಃಖಿಗಳೊಡನೆ ಹುಟ್ಟಿರುವುದಕ್ಕಾಗಿ ವ್ಯಸನಪಡದೆ ನಾಚದೆ ದೇವರಿಗೆ ವಂದನೆ ಅರ್ಪಿಸುತ್ತಾನೆ. ಇವೊತ್ತು ಗೆದ್ದ ಗರ್ವಿಗಳ ಕಾಲವಾಗಿದೆ. ಆದರೆ ಈಗ ಸೋತಿರುವವರು ಗೆಲ್ಲುವ ಕಾಲ ಮುಂದೆ ಬಂದೇ ಬರುತ್ತದೆ. ಆಗ ಸೂರ್ಯದೇವ ಮೂಡಿ ನೋಡುತ್ತಾನೆ: ‘ಜಯಿಸಿದವರ ಸೋಲನು, ಸೋತ ಜನರ ಜಯವನು!’ ಇದರ ಧ್ವನಿ ಸ್ಪಷ್ಟವಾಗಿದೆ. ಇದು ಆಗಿನ ಬ್ರಿಟಿಷರಿಗೂ ಭಾರತೀಯರಿಗೂ ಅನ್ವಯಿಸುತ್ತದೆ.

ಗರ್ವದಿಂದ ನಡೆಯುತ,
ಪಾದದಿಂದ ಬಡಿಯುತ,
ಜೀವಕಲಶವೊಡೆಯುತ,
ರಕುತದಡಿಯ ಗುರುತನಿಡುತ
ಧರೆಯ ಹಸುರ ಕೆಡಿಸುತ,
ನಡೆವ ಜನರು ನಡೆಯಲಿ!
ನಿನ್ನ ವಂದಿಸೊಲಿಯಲಿ!
ಹೇ ಮಾ ದೇವಾ
ಕಾಲವವರದಾಗಿದೆ!

ಕಷ್ಟ ಕೇಳ್ವುದೆಲ್ಲ ತೆತ್ತು,
ದರ್ಪವಿಡುವ ಹೊರೆಯ ಹೊತ್ತು,
ಕತ್ತಲಲ್ಲಿ ಬಿಕ್ಕಿ ಅತ್ತು,
ನಾಚಿ ಮುಖವ ತೋರದಿರುವ
ದೀನ ಜನರ ಸಂಗವ
ಎನ್ನ ಭಾಗಕಿತ್ತೆ, ದೇವ,
ನಿನ್ನನೆಂದೂ ವಂದಿದೆ!

ನಿನ್ನ ನಿಶೆಯ ಗೂಢದಾಳ-
ದೆಡೆಯೊಳಿವರ ಗೋಳಿನಲೆಗ-
ಳಿವರು ಪಡೆದ ನಿಂದೆಯಲೆಗ-
ಳೆಲ್ಲ ಮಹಾ ಮೌನದಲ್ಲಿ
ಬಿಡದೆ ಸಂಗಮಿಸಿಹವು!
ಕಾಲಮಿಂದು ಇವರದಲ್ಲ,
ಆದರೇನು, ದೇವನೇ?
ನಾಳೆಯಾದರಿವರದೇ!

ರಕುತ ಸುರಿವ ಎದೆಗಳೆಲ್ಲ
ಉದಯದಲರಿನಿಂದ ಮೆರೆಯೆ,
ಗರ್ವ ಭೋಗವೆಂಬ ದೀಪ
ಉರಿದು ಆರಿ ಬೂದಿಯಾಗೆ,
ಹೇ ದಿನೇಶ, ಮೂಡು ನೋಡು
ಜಯಸಿದವರ ಸೋಲನು,
ಸೋತ ಜನರ ಜಯವನು!
೬-೫-೧೯೨೭

ಮುಂದಿನ ಕವನ ಕಾಯಿಲೆಯಾದಾಗ ಸಾವಿನ ಮುಷ್ಟಿಯಲ್ಲಿದ್ದ ಜೀವ ಭಗವಂತನಿಗೆ ಹೇಳಿಕೊಂಡಂತಿದೆ.

ಮನೆಯ ಬಿಡುವ ಕಾಲ ಬರಲು
ನೆನೆದು ನಿನ್ನ ಮನೆಯನು
ಅಳುಕದೆಲ್ಲ ಸಿರಿಯ ತೊರೆದು
ಬಾಗಿಲಿಂದ ತೆರಳುವೆ!

ಗಳಿಸಿದಮಿತ ಹೇಮದಿಂದ
ಧೂಳನೊಂದು ತಾರೆನು;
ಉಡುಗೆ ತೊಡುಗೆ ಒಂದನಾದ-
ರೊಲಿದು ಧರಿಸಿ ಬಾರೆನು!

ನಿನ್ನ ಮನೆಯೊಳಾವುದೇಕೆ?
ಅಲ್ಲಿ ಎಲ್ಲ ಇರುವುದೆಂದು
ಬೆತ್ತಲಾಗಿ ಬಡವನಾಗಿ
ನೆಚ್ಚಿನಿಂದ ಬರುವೆನು!

ಆದರೆನ್ನ ಒಡೆಯ, ನಿನ್ನ
ಪರಮಚರಣ ಕಮಲಗಳನು
ಪೂಜೆಮಾಡೆ ತೋಟದಿಂದ
ಹೂವನೊಂದ ತರುವೆನು!
೨೨-೬-೧೯೨೭

ಮುಂದಿನ ಕವನ ಒಂದು ಕಥನಕವನದಂತಿರುವ ಭಾವಗೀತೆಯ ಭಾಷಾಂತರ. ವಿಲಿಯಂ ಕೌಪರ್ ಕವಿಯ ಪ್ರಸಿದ್ಧ ಕವನ ‘ಅಲೆಕ್ಸಾಂಡರ್ ಸೆಲ್‌ಕಿರ್ಕ್’ದ ಭಾಷಾಂತರ.  ಮೂಲಕ್ಕೆ ಅಕ್ಷರಶಃ ಹತ್ತಿರ ಇರಬೇಕೆಂಬ  ಪ್ರಯತ್ನದಲ್ಲಿ ಭಾಷೆಯ ಶಯ್ಯೆ ರೂಕ್ಷವಾಗಿ ಬಿಟ್ಟಿದೆ. ಹಡಗೊಡೆದು ಫೆಸಿಫಿಕ ಸಾಗರದ ನಡುವಣ ಒಂದು ಕಿರುದೀವಿಯಲ್ಲಿ ಅಲೆಕ್ಸಾಂಡರ್ ಸೆಲ್‌ಕಿರ್ಕ್‌ಎಂಬ ಹೆಸರಿನ ನಾವಿಕನು ಒಬ್ಬನೆಯೆ ಬಹುಕಾಲ ಕಳೆದನಂತೆ. ಅವನ ಕಥೆಯೆ ‘ರಾಬಿನ್‌ಸನ್‌ಕ್ರೂಸೊ’ವನ್ನು ಬರೆಯಲು ಡಾನಿಯೇಲ್ ಡೀಫೋಗೆ ಪ್ರಚೋದನೆ ಇತ್ತಿತ್ತಂತೆ.

ಅಲೆಕ್ಸಾಂಡರ್ ಸೆಲ್ಕಿರ್ಕ್ ಏಕಾಂತ

ನಾನಲೆಯುವ ನೆಲಕೆಲ್ಲಾ ನಾ ದೊರೆ,
ನನ್ನೀ ಬಾಧ್ಯತೆಗಾರೆದುರಿಲ್ಲ;
ಖಗಮೃಗಗಳಿಗೆಲ್ಲೊಡೆಯನು ನಾನೇ
ನಡುವಿಂದಂಬುಧಿ ಪರಿಯಂತ.
ಋಷಿಗಳು ನಿನ್ನಾನನದೊಳು ಕಂಡಿಹ
ಸೊಬಗೆಲ್ಲಿಹುದೈ, ಏಕಾಂತ?
ಗಲಿಬಿಲಿಯಲ್ಲಿರುವುದೆ ಬಹು ಮೇಲ್ ಈ
ಭೀಕರ ದೇಶದ ದೊರೆತನಕಿಂತ!

ಮಾನವ ಜಾತಿಯನೆಂದೂ ಸಂಧಿಸೆನ್
ಒಬ್ಬನೆ ಪಯಣವ ಮುಗಿಸಲೆಬೇಕು;
ಮಾತಿನ ಗೀತವನಾಲಿಸೆನೆಂದೂ;
ನನ್ನೀ ನುಡಿಗೇ ನಾ ಬೆಚ್ಚುವೆನು!
ಬಯಲೊಳು ತಿರುಗುವ ಮೃಗಗಳು ಅಲೆವುವು
ಈ ಮನುಜಾಕಾರವ ಲೆಕ್ಕಿಸದೆ!
ಮನುಜನ ಕಂಡೇ ಅರಿಯವು; ನನ್ನನು
ಬೆದರಿಪುದವುಗಳ ಈ ಸಾಧುತನ!

ಮನುಜ ಸಮಾಜವು, ಗೆಳೆತನ, ಪ್ರೇಮವು
ದೇವರ ಕೃಪೆಯಿಂದೊದಗಿದವೆಮಗೆ!
ಹಕ್ಕಿಯ ರೆಕ್ಕೆಗಳೆನಗಿದ್ದಿದ್ದರೆ, ಹಾ,
ಬೇಗನೆ ನಿಮ್ಮನು ಸೇರುತ್ತಿದ್ದೆ!
ಆಗೆನ್ನಳಲನು ತೂರುತ್ತಿದ್ದೆನು
ದೇವರ ಭಜಿಸುತ ಸತ್ಯದಿ ನಡೆದು;
ಮುದುಕರ ಅರಿವಿಂದರಿಯುತ್ತಿದ್ದೆನು,
ಯುವಕರ ನಲವಿಂ ನಲಿಯುತ್ತಿದ್ದೆ!

ಲಿಲೆಯೊಳೆನಗೀ ಸೆರೆಯಿತ್ತನಿಲನೆ,
ಮುಂದೆಂದೂ ನೋಡದ ಊರಿಂದ
ಮುದ್ದಿನ ಸುದ್ದಿಗಳಾವುದೆ ಆಗಲಿ
ಈ ನಿರ್ಜನ ತೀರಕೆ ತೂರಿಬಿಡು.
ದಿನದಿನ ನನ್ನಾ ಗೆಳೆಯರು ನನ್ನನು
ಕುರಿತಾಲೋಚನೆ ಮಾಡುವರೇ? ಹಾ!
ಹೇಳಿರಿ: ಎನಗಿಹನೊಬ್ಬನೆ ಗೆಳೆಯನು,
ಎಂದಿಗು ನೋಡದ ಸಖನಾದೊಡೆಯೂ!

ಮನಸಿನ ಕಣ್ಣಿನ ವೇಗವದೆನಿತೋ!
ಹೋಲಿಸಲದರೋಟದ ಜವದೊಡನೆ
ಗಾಳಿಯ ವೇಗವೆ ಹಿಂದಾಗುವುದೈ,
ಮೇಣ್ ಬೆಳಕಿನ ಕಣೆಗಳೆ ಸೋಲುವುವು!
ನನ್ನೂರನು ನಾ ನೆನೆದಾ ಕ್ಷಣದೊಳೆ
ನಾನಲ್ಲಿಯೆ ಇದ್ದಂತಾಗುವುದು!
ಆದರೆ ಮರುನೆನಪೆನ್ನನು ನಿಮಿಷದಿ
ಹಾ! ಅಲ್ಲಿಂದಿಲ್ಲಿಗೆ ನೂಕುವುದು!

ಕಡಲಿನ ಖಗಗಳು ಗೂಡಿಗೆ ನಡೆದುವು,
ಮೃಗಗಳು ಗುಹೆಮನೆಗಳ ಸೇರಿದುವು;
ತೆರಳುವೆ ನಾನೂ ನನ್ನ ಬಿಡಾರಕೆ:
ಇಹುದಿಲ್ಲಿಯು ವಿಶ್ರಾಂತಿಯ ಕಾಲ!
ಪರಮಾತ್ಮನ ದಯೆ ಇಹುದೆಲ್ಲೆಲ್ಲಿಯು:
-ದಯೆ ಅಳಲಿಗೆ ಗಾಂಭೀರ್ಯವನಿತ್ತು
ಮನುಜನ ಗತಿಗವನನ್ನೊಲಿಸುವುದೈ-
ಎಂಬಾಲೋಚನೆ ಉತ್ತೇಜನಕವೈ! ೨೧-೬-೧೯೨೭

ಇದುವರೆಗೆ ಎಲ್ಲಯೂ ಅಚ್ಚಾಗದ ಒಂದು ಠಾಕೂರರ ಕವನ ೨೯-೬-೧೯೨೭ ರಲ್ಲಿ ಭಾಷಾಂತರಗೊಂಡಿದೆ:

ದುಃಖದ ಕಂಬನಿಗಳನಾಯುವೆನು;
ನಿನ್ನಯ ಕೊರಳಿಗೆ ಮುತ್ತಿನ ಮಾಲೆಯ,
ತಾಯೇ, ನೇಯುವೆನು!

ಉಡುಗಳು ನಿನ್ನಡಿಗಳ ಸಿಂಗರಿಸೆ
ಜೋತಿಯ ಬಳೆಗಳ ರಚಿಸಿಹವು;
ಆದರೆ ನನ್ನದು ನಿನ್ನೆದೆಯೆಡೆಯೊಳು,
ತಾಯೇ, ರಂಜಿಪುದು!

ಜಸ ಸಂಪದಗಳ ಕೊಡುವಳು ನೀನೇ:
ಅವುಗಳ ಕೊಡುವುದು ಬಿಡುವುದು ಎಲ್ಲಾ,
ತಾಯೇ, ನಿನ್ನೊಳಗೆ!

ಎನ್ನಳಲಾದರೆ ಕೇವಲ ಎನ್ನದೆ;
ನಿನಗದನರ್ಪಿಸೆ ನಾ ತರಲು
ನಿನ್ನಯ ಕೃಪೆಯನು ದಯಪಾಲಿಸುವೆ,
ತಾಯೇ, ವರವಾಗಿ!
೨೯-೬-೧೯೨೭

ತಾರೀಖು ಹಾಕಿಲ್ಲದೆ ಬರೆದ ಒಂದು ಚರಮಗೀತಾ ಕವನ ಒಂದು ಬೇಟೆನಾಯಿಯ ಸಾವಿಗೆ ಸಂಬಂಧಪಟ್ಟಿದೆ. ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬಂದು, ಸ್ವಲ್ಪ ಕಾಲ ವಿಶ್ರಾಂತಿ ತೆಗೆದುಕೊಂಡು, ಶಿವಮೊಗ್ಗೆಯ ಸ್ನೇಹಿತರೊಡನೆ ಸಂಜೆ ಸಂಚಾರ ಹೋಗಿ. ನನ್ನ ಕವನಗಳನ್ನು ಅವರಿಗೆ ಓದಿ, ಅವರಿಂದ ಮೆಚ್ಚುಗೆಯ ಮದ್ದನ್ನು ಪಡೆದು, ಕಾಯಿಲೆಯಿಂದ ಸಂಪೂರ್ಣ ಚೇತರಿಸಿಕೊಂಡು. ಕುಪ್ಪಳಿಗೆ ಹೋಗುವ ದಾರಿಯಲ್ಲಿ ಇಂಗ್ಲಾದಿಯಲ್ಲಿ ತಂಗಿದ್ದಾಗ ಒಂದು ದಿನ ಮಿತ್ರರೊಂದಿಗೆ ಬೇಟೆಗೆ ಹೋಗಿದ್ದೆವು. ಆಗ ಹಳುವಿನಲ್ಲಿ ನಾಯಿಗಳು ಒಂದು ದೊಡ್ಡ ಒಂಟಿಗ ಹಂದಿಯನ್ನು ತಡೆದಾಗ ಒಂದು ಒಳ್ಳೆಯ ಜೂಲುಜೂಲು ಬೇಟೆನಾಯಿ ಆ ಒಂಟಿಗನ ಕೋರೆಗೆ ತುತ್ತಾಯಿತು. ಅದರ ಯಾತನೆ ಕಠೋರವಾಗಿತ್ತು. ಅದು ಬದುಕುವುದೇ ಇಲ್ಲ ಎಂದು ನನಗೆ ಖಾತ್ರಿ. ಆದ್ದರಿಂದ ಅದರ ತಲೆಗೆ ಒಂದು ಗುಂಡು ಹೊಡೆದು ಕೊಲ್ಲಲು ಸೂಚನೆಯಿತ್ತೆ. ಆದರೆ ಗುಂಡು ಹೊಡೆಯುವ ಎದೆ ಯಾರಿಗು ಇರಲಿಲ್ಲ. ಬದುಕಿದರೂ ಬದುಕಬಹುದೋ ಏನೋ ಎಂದು ಆಶೆ! ಹಳುವಿನಲ್ಲಿ ಸೋವಿಕೊಂಡು ಬರುತ್ತಿದ್ದು ಆ ಹಂದಿಗೆ ಗುಂಡಿಟ್ಟು ಕೊಂದಿದ್ದ ಈಡುಗಾರರ ಮರಾಠಿ ‘ಯಲ್ಲು’ ತಾನು ಕರುಳನ್ನು ಒಳಕ್ಕೆ ತಳ್ಳಿ ಹೊಲಿಗೆ ಹಾಕುವುದಾಗಿ ಹೇಳಿ ಹೇಗೆಯೆ ಮಾಡಿದನು. ಅದನ್ನು ನೋಡುವುದಕ್ಕಾಗಿಗುತ್ತಿರಲಿಲ್ಲ; ಈ ನಾಯಿ ಪಿಳುಪಿಳನೆ ಕಣ್ಣು ಬಿಟ್ಟುಕೊಂಡು ನಮ್ಮ ಕಡೆ ದೈನ್ಯದೃಷ್ಟಿ ಪ್ರಸಾರ ಮಾಡುತ್ತಿತ್ತು. ಕರುಳಿಗೆ ಹಿಡಿದಿದ್ದ ಹುಲ್ಲು ಕಸಕಡ್ಡಿಗಳನ್ನು ಕೈಯಿಂದ ಸವರಿ ತೆಗೆದು ಅದನ್ನು ಒಳಗೆ ಹೇಗೆಹೇಗೆಯೊ ತಳ್ಳಿ ಹೊಲಿದೇಬಿಟ್ಟನು! ಕಸಕಡ್ಡಿ ಪೂರ್ತಿ ತೆಗೆಯಲಾಗಲಿಲ್ಲ. ಸ್ವಲ್ಪಸ್ವಲ್ಪ ಕರುಳಿಗೆ ಅಂಟಿಕೊಂಡೇ ಇತ್ತು. ಕರುಳೂ ಎಲ್ಲಿ ಇರಬೇಕು? ಹೇಗೆ ಇರಬೇಕು ಎಂಬ ಶರೀರಶಾಸ್ತ್ರ ಜ್ಞಾನ ‘ಯಲ್ಲು’ಗೆ ಲವಲೇಶವೂ ಗೊತ್ತಿರಲಿಲ್ಲ. ಅಂತೂ ಅದನ್ನು ತುಂಬಿ ಮೂಟೆ ಹೊಲಿಯುವಂತೆ ಹೊಲಿದ! ಹಳ್ಳದಿಂದ ನೀರು ತಂದು ಕುಡಿಸಿದ. ನಾಯಿ ಮೆಲ್ಲಗೆ ಎದ್ದು ನಿಂತಿತು! ನಮಗೆ ಆಶ್ಚರ್ಯ! ಇಬ್ಬರು ಆಳುಗಳು ಕಂಬಳಿಯನ್ನು ಡೋಲಿಮಾಡಿ ನಾಯಿಯನ್ನು ಇಂಗ್ಲಾದಿ ಮನೆಗೆ ಸಾಗಿಸಿದರು. ಅದು ರಾತ್ರಿಯೆಲ್ಲಾ ಯಾತನೆಯಿಂದ ಕೂಗಿಕೊಳ್ಳುತ್ತಿತ್ತು. ಬೆಳಿಗ್ಗೆ ನೋಡಿದಾಗ ಸಂಪೂರ್ಣ ನಿಃಶಬ್ದವಾಗಿತ್ತು, ಪ್ರಾಣ ಹೋಗಿ! ಅದನ್ನು ಕುರಿತು ಬರೆದ ಈ ಕವನ ಎಲ್ಲಿಯೂ ಅಚ್ಚಾದಂತಿಲ್ಲ. ಅದನ್ನಿಲ್ಲಿ ಕೊಡುತ್ತೇನೆ:

(ಬೇಟೆಯಲ್ಲಿ ಕಾಡುಹಂದಿಯೊಡನೆ ಹೋರಾಡಿ ಮಡಿದ ಮುದ್ದು ನಾಯಿ ‘ಕೇಸರಿ’ಯ ನೆನಪಿಗಾಗಿ ಬರೆದುದು.)

ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ,
ಹಸುರಿಂದ ನಲಯುವೀ ನೆಲದಾಳದಲ್ಲಿ!
ನಿನ್ನ ಬಾಳಿನ ಪಯಣ ಪೂರೈಸಿತಿಂದು
ಇನ್ನು ವಿಶ್ರಾಂತಿಯೈ ಮುಂದೆ ನಿನಗೆಂದೂ!
ನಿನ್ನ ಗೋರಿಯ ತೋರಲಾವ ಗುರುತಿಲ್ಲ;
ನಿನ್ನ ಕೀರ್ತಿಯ ಸಾರೆ ಬಡ ಚೈತ್ಯವಿಲ್ಲ.
ಆದರೇನಾ ಪೂತ ಪೊದೆ ಸಹಜ ಚೈತ್ಯ;
ನಿನ್ನ ಕೀರ್ತಿಯ ಕಲ್ಲೆ ಶಾಶ್ವತವು ನಿತ್ಯ.
ತಿಳಿನೀಲ ಬಾಂದಳವು ಮೆರೆಯುವುದು ಮೇಲೆ;
ಮುಗಿದು ಕೊಡೆ ಹಿಡಿಯುವುದು, ಮೋಡಗಳು ತೇಲೆ.
ಇನಿದನಿಯ ಬೀರುವುದು ಲಾವುಗೆಯು ಇಲ್ಲಿ;
ಚೇರುಲಿಯ ಕೋಗಿಲೆಯು ವನದಳಿರಿನಲ್ಲಿ.
ಬೇಸರಾಗದು ನಿನಗೆ: ಗೋಪಾಲರಿಲ್ಲಿ
ಕೊಳಲೂದಿ ನಲಿಯುವರು ಬಯಲ ಹಸುರಲ್ಲಿ.
ವರುಷಗಳ ಮೇಲವರು ನಿನ್ನ ಕತೆ ಹೇಳಿ
ನಿಟ್ಟುಸಿರು ಬಿಡುವರೈ ಕಿವಿಗೊಟ್ಟು ಕೇಳಿ.
ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ
ಹಸುರಿಂದ ನಲಿಯುವೀ ನೆಲದಾಳದಲ್ಲಿ!

ಘೋರ ಸೂಕರದೊಡನೆ ಮಡಿದೆ ಕಾದಾಡಿ;
ನಾಕದೊಳು ನಲಿವೆ ನೀ ವೀರರೊಡಗೂಡಿ.
ಸುಖದಿಂದ ನಿದ್ರಿಸೈ ಗಲಭೆ ಇಲ್ಲಿಲ್ಲ;
ಇಲ್ಲಿ ಹೊಗಳುವರಿಲ್ಲ, ನಿಂದಿಸುವರಿಲ್ಲ.
ಮೇಲಾಟ ಹೋರಾಟವೆಂಬುವಿಲ್ಲಿಲ್ಲ,
ಸಿರಿಸುತರು ಬಡವರೆಂಬುವ ಭೇದವಿಲ್ಲ.
ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ
ಹಸುರಿಂದ ನಲಿಯುವೀ ನೆಲದಾಳದಲ್ಲಿ!

ಮುಂದೆ ನೀ ಜಿಂಕೆಗಳನೋಡಿಸುವುದಿಲ್ಲ;
ನೀನಿನ್ನು ಹುಲಿಗಳನು ಅಟ್ಟುವುದು ಇಲ್ಲ.
ನಿನ್ನ ಕೂಗಿಗೆ ಕಾಡು ಗಿರಿ ಗುಹೆಗಳೆಲ್ಲ
ಇನ್ನೆಂದು ಮಾರ್ದನಿಯ ಬೀರುವುದೆ ಇಲ್ಲ.
ಬೇಟೆಗಾರರ ಕೂಗ ನೀ ಕೇಳಲಾರೆ,
ಸಿಡಿದ ಗುಂಡಿನ ಸದ್ದನಾಲಿಸಲು ಆರೆ,
ನಿತ್ಯ ಮೌನತೆ ನಿನ್ನ ನುಂಗಿರುವುದೀಗ;
ನಿನ್ನ ಗಂಟಲಿಗಾಯ್ತು ಮಿರ್ತುವಿನ ಬೀಗ.
ಹೋಗುವೆವು ನಾವೆಲ್ಲ ಮನೆಗೆ; ಮಲಗಿಲ್ಲಿ
ಹೊಸ ಹಸುರಿನಿಂದೆಸೆಯುವೀ ಪಸಲೆಯಲ್ಲಿ!

ಇಲ್ಲಿ; ನೀನಿಲ್ಲಿಲ್ಲ, ನಿತ್ಯ ಸಂಚಾರಿ!
ನಲಿಯುತಿಹೆ ಯಾರು ಕಾಣದ ಊರ ಸೇರಿ.
ಪೂರ್ವ ಜನ್ಮದೊಳಾವ ವೀರನೋ ನೀನು?
ಕರ್ಮದಿಂದೀ ಜನ್ಮವೆತ್ತಿದೆಯೊ ಏನು?
ಯಾರು ಬಲ್ಲರು ಎಲ್ಲಿ ಜನಿಸಿಹೆಯೊ ಈಗ?
ಯಾವ ವೀರನ ಪುತ್ರನಾಗಿಹೆಯೊ ಈಗ?
ಮುದ್ದು ಕೇಸರಿಯೆ, ನೀ ಎಲ್ಲಿದ್ದರೇನು?
ಯಾವ ಲೋಕವ ಸೇರಿ ಎಂತಿದ್ದರೇನು?
ಗುಂಡುಗಳು ಹಾರುವುವು ಸನ್ಮಾನಕಾಗಿ!
ಜಯವೆನ್ನುವೆವು ನಿನ್ನ ಗೌರವಕೆ ಕೂಗಿ!

ಶಾಂತಿ ಸುಖಗಳು ಬರಲಿ, ವೀರಾತ್ಮ, ನಿನಗೆ!
ಮಂಗಳವೊ ಮಂಗಳವು, ಕೇಸರಿಯೆ, ನಿನಗೆ!

ಈ ಬೇಸಿಗೆಯ ರಜದಲ್ಲಿಯೆ ನಮ್ಮ ಮನೆಯ ಉಪ್ಪರಿಗೆಯ ಮೇಲೆ ಕುಳಿತು ‘ರನ್ನಕವಿ’ ಪ್ರಶಸ್ತಿಗಾಗಿ ‘ರನ್ನನ ವೀರಕೌರವ’ ಬರೆದದ್ದು. ಹಾಗೆಯೇ ‘ಮಲೆನಾಡಿನ ಚಿತ್ರಗಳು’  ಎಂಬ ಹೆಸರಿನಲ್ಲಿ ತರುವಾಯ ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾದ ‘ಮನೆಯ ಶಾಲೆಯ ಐಗಳಮಾಲೆ’ ‘ತೋಟದಾಚೆಯ ಭೂತ’ ಮೊದಲಾದ ಭಾವ ಪ್ರಬಂಧಗಳನ್ನೂ ಬರೆದೆ, ಅನೇಕ ಶಿಶುಗೀತೆಗಳನ್ನೂ ಕವನಗಳನ್ನೂ.