ಮನೆಯಿಂದ ಮೈಸೂರಿಗೆ ಹಿಂತಿರುಗಿದೆ. ಬಿ.ಎ. ಡಿಗ್ರಿ ಪಾಸುಮಾಡಿದ ತೃಪ್ತಿ, ಹೆಮ್ಮೆ. ಎಂ.ಎ.ಗೆ ಸೇರುವ ಹಿಗ್ಗು. ಈಗಿನಂತೆ (೧೯೨೩) ಆಗ (೧೯೨೭) ಕಾಸಿಗೊಬ್ಬ ಕೊಸರಿಗೊಬ್ಬ ಬಿ.ಎ., ಎಂ.ಎ., ಇರಲಿಲ್ಲ. ಆ ಡಿಗ್ರಿಗಳಿಗೆ ಸ್ವಲ್ಪವಾದರೂ ಬೆಲೆ ಇತ್ತು, ಆದ್ದರಿಂದ ಗೌರವವೂ ಇತ್ತು. ಅಲ್ಲದೆ ಯಾವ ಎಂ.ಎ. ಗೆ ಸೇರಬೇಕು ಎಂಬ ಅನಿಶ್ಚಯತೆಯೂ ಇರಲಿಲ್ಲ. ಬಿ.ಎ.ಗೆ ತತ್ತ್ವಶಾಸ್ತ್ರವನ್ನು ಪ್ರಧಾನ ವಿಷಯವನ್ನಾಗಿ ಆರಿಸಿಕೊಂಡಿದ್ದರಿಂದ ತತ್ತ್ವಶಾಸ್ತ್ರದ ಎಂ..ಎ.ಗೆ ಸೇರುವುದೆಂದು ಮನಸ್ಸು ಮಾಡಿದ್ದೆ. ಆಶ್ರಮದ ಜೀವನ ಮತ್ತು ವಾತಾರಾವರಣವೂ ಅತ್ತಕಡೆಗೇ ಮನಸ್ಸನ್ನು ಪ್ರೇರೆಪಿಸಿತ್ತು ಮತ್ತು ಆಕರ್ಷಿಸಿಯೂ ಇತ್ತು.

ಆಶ್ರಮವಂತೂ ಮನೆಗಿಂತಲೂ ಹೆಚ್ಚಾಗಿ ತವರುಮನೆಯಾಗಿತ್ತು. ಸ್ವಾಮಿ ಸಿದ್ದೇಶ್ವರಾನಂದರು ಪೂಜ್ಯ, ಪ್ರಿಯ, ಗುರು, ಮಿತ್ರ, ಮಾರ್ಗದರ್ಶಿ ಎಲ್ಲವೂ ಆಗಿ ಅತ್ಯಂತ ಆತ್ಮೀಯರಾಗಿದ್ದರು. ಅವರ ನಿರ್ದೇಶನದಂತೆ ತತ್ತ್ವಶಾಸ್ತ್ರದ ಎಂ.ಎ.ಗೆ ಅಭ್ಯರ್ಥಿಯಾಗಿ ಅಪ್ಲಿಕೇಷನ್ ಸಲ್ಲಿಸಿದೆ.

ಆದರೆ ವಿಧಿಯ ಇಚ್ಚೆ ಬೇರೆಯಾಗಿತ್ತು. ಕಾಕತಾಳೀಯವಾಗಿ ಆಕಸ್ಮಿಕವೆಂಬಂತೆ ತೋರುವ ಘಟನೆಗಳ ಅಂತರಾಳದಲ್ಲಿ ಯಾವ ಮಹೋದ್ದೇಶ ಇರುತ್ತದೆ ಎಂದು ತತ್ಕಾಲದಲ್ಲಿ, ಬುದ್ಧಿಗ್ರಾಹ್ಯವಾಗುವುದಿರಲಿ ಪ್ರಜ್ಞಾಗೋಚರವೂ ಆಗಿ, ತೋರದಿದ್ದರೂ ಕಾಲಾನಂತರದಲ್ಲಿ ನಡೆದು ಬಂದ ಹಾದಿಯನ್ನು ಕುರಿತು ಸಿಂಹಾವಲೋಕನ ರೀತಿಯಿಂದ ಚಿಂತಿಸುವ ಅಂತರ್‌ದೃಷ್ಟಿಗೆ, ನಾವು ಊಹಿಸುವಷ್ಟು ನಿರುದ್ದೇಶಕವಾಗಿ ತೋರದೆ, ಅಚಿಂತ್ಯ ರೀತಿಯಲ್ಲಿ ಅರ್ಥಪೂರ್ಣವಾಗುತ್ತದೆ.

ಎಲ್ಲಾ ಬಿಟ್ಟು ಆ ವರ್ಷವೆ ಕನ್ನಡ ಎಂ.ಎ. ಪ್ರಾರಂಭವಾಗಬೇಕೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿ? ಆ ವರ್ಷ ಅದು ಪ್ರಾರಂಭವಾಗದಿದ್ದರೆ ನನ್ನ ಬದುಕಿನ ದಿಕ್ಕು ಎತ್ತ ತಿರುಗುತ್ತಿತ್ತೊ? ಆದರೆ ಕನ್ನಡದ ವಾಗ್ದೇವಿ ಎಲ್ಲವನ್ನೂ ನಿಯಂತ್ರಿಸಿದ್ದಳೆಂದು ತೋರುತ್ತದೆ, ಶ್ರೀರಾಮಾಯನದರ್ಶನಂ ಮೇರುಕೃತಿ ಸೃಷ್ಟಿಗೆ! ನನಗೆ ಸ್ನಾತಕೋತರ ತತ್ತ್ವಶಾಸ್ತ್ರಕ್ಕೆ ಸಿಕ್ಕಿದ್ದ ಸ್ಥಾನವನ್ನು ತ್ಯಜಿಸಿ, ಹೊಸದಾಗಿ ಸ್ಥಾಪಿತವಾಗಿದ್ದ ಕನ್ನಡ ಎಂ.ಎ.ಗೆ  ಶ್ರೀಕೃಷ್ಣಶಾಸ್ತ್ರಿಗಳ ಸಲಹೆಯಂತೆ ಸೇರಿದ ‘ಆ ಅಮೃತ ಕ್ಷಣ’ ಎಂಬ ಭಾವಪ್ರಬಂಧ ರೂಪದ ಲೇಖನದಲ್ಲಿ ವಿವರವಾಗಿ ನಿರೂಪಿಸಿದ್ದೇನೆ; ಆದ್ದರಿಂದ ಅದನ್ನಿಲ್ಲಿ ಮತ್ತೆ ಹೇಳುವುದು ಅನಾವಶ್ಯಕ. ಅಂತೂ ನನ್ನ ಸುದೈವ ನನ್ನನ್ನು ಹಾಗೂ ಹೀಗೂ ಎಳೆತಂದು ಕನ್ನಡದ ಪುನರುತ್ಥಾನದ ಮತ್ತು ನವೋದಯ ಕೇಂದ್ರಾನುಗ ಶಕ್ತಿವಲಯಕ್ಕೇ ನೂಕಿಬಿಟ್ಟಿತು, ಕವಿ ಕಸಿನ್ಸ್ ಅವರ ನಿಮಿತ್ತ ಇಂಗ್ಲಿಷಿನಿಂದ ತಾಯ್ನುಡಿಗೆ ತಳ್ಳಿದಂತೆ, ಸ್ವಾಮಿ ಸಿದ್ಧೇಶ್ವರಾನಂದರ ನಿಮಿತ್ತ ಶ್ರೀರಾಮಕೃಷ್ಣ ಆಶ್ರಮಕ್ಕೆ ಸೆಳೆದಂತೆ!

೧೯೨೭-೨೮ ಮತ್ತು ೧೯೨೮-೨೯ ಈ ಎರಡು ವರ್ಷಗಳಲ್ಲಿ ನನ್ನ ಸಾಹಿತ್ಯಕ ಮತ್ತು ಸಾಂಸಾರಿಕ ಜೀವನ ಕ್ಷೇತ್ರಗಳಲ್ಲಿ ತುಂಬ ಪರಿಣಾಮಕಾರಿಗಳಾದ ಘಟನೆಗಳು ಸಂಭವಿಸಿವೆ.  ಕ್ರಮಬದ್ಧವಾದ ಯಾವ ದಿನಚರಿಯನ್ನೂ ಇಟ್ಟಿರಲಿಲ್ಲವಾದ್ದರಿಂದ ಕಾಲಾನುಕ್ರಮವಾಗಿಯಾಗಲಿ ವಿವರ ವಸ್ತುನಿಷ್ಠವಾಗಿಯಾಗಿರಲಿ ಅವುಗಳನ್ನು ಕುರಿತು ಬರೆಯಲು ಸಾಧ್ಯವಾಗದಿರಬಹುದು. ಸಾಧ್ಯವಾದಷ್ಟು ಅನುಕ್ರಮವಾಗಿ ನೆನಪಿಗೆ ಬರುವ ಮತ್ತು ಉಲ್ಲೇಖನಾರ್ಹ ಎಂದು ತೋರುವ ಘಟನೆಗಳನ್ನು ಬಣ್ಣಿಸಲು ಪ್ರಯತ್ನಿಸುತ್ತೇನೆ. ಅದೃಷ್ಟವಶಾತ್ ನನ್ನ ಹಸ್ತಪ್ರತಿಗಳಲ್ಲಿರುವ ಕವನಗಳಿಗೆ ಅವುಗಳನ್ನು ಬರೆದ ತಾರೀಖು ಹಾಕಿರುವುದರಿಂದ ನೆನಪಿಗೆ ತಕ್ಕಮಟ್ಟಿನ ಅಡಪು ದೊರೆಯುತ್ತದೆ. ಅದನ್ನಾಶ್ರಯಿಸಿ ನೆನಪಿನ ದೋಣಿಗೆ ಹುಟ್ಟುಹಾಕುತ್ತೇನೆ.

ನಮ್ಮ ಮನೆಯಲ್ಲಿ ನಡೆಯುತ್ತಿದ್ದ ಮದುವೆ, ಹುಟ್ಟು, ಸಾವುಗಳ ವಿಚಾರದಲ್ಲಿ ನನ್ನ ದಿನಚರಿ ಎಷ್ಟು. ನಿರ್ದಾಕ್ಷಿಣ್ಯ ಉದಾಸೀನವಾಗಿದೆ ಎಂಬ ವಿಷಯವನ್ನು ನಾನು ಹಿಂದೆಯೆ ತಿಳಿಸಿದ್ದೇನೆ. ನನ್ನ ತಾಯಿಯ ಮರಣವೆಂತೂ ಅಂತೆಯೆ ನನ್ನ ತಂಗಿಯರಿಬ್ಬರ ಮದುವೆಯೂ ನಿರ್ಲಕ್ಷಿತವಾಗಿದೆ. ಹಾಗೆಯೆ ಅಜ್ಜಯ್ಯನ ಮತ್ತು ಮನೆಯ ಅನೇಕ ಅಮ್ಮಂದಿರ ಸಾವು! ದಿನಚರಿ ಲೆಕ್ಕಿಸದಿದ್ದರೂ ನನ್ನ ಕವಿತೆ ಲೆಕ್ಕಿಸದ ನನ್ನೊಬ್ಬ ಪುಟ್ಟ ತಮ್ಮ, ದೊಡ್ಡ ಚಿಕ್ಕಪ್ಪಯ್ಯನವರ ಹಿರಿ ಹೆಂಡತಿಯ ಅತ್ಯಂತ ಕಿರಿಯ ಮಗ, ವಾಸಪ್ಪನ ಅಕಾಲಮರಣವನ್ನು ಮರುಗುವ ಒಂದು ಚರಮಗೀತೆ ೧೬-೧-೧೯೨೭ ರಲ್ಲಿ ರಚಿತವಾಗಿದೆ; ನಾವು ರಜಾಕ್ಕೆ ಊರಿಗೆ ಹೋದಾಗಲೆಲ್ಲ ಅವನಿಗೆ ಹಿಗ್ಗು. ನಮಗೂ ಅವನ ಮುಗ್ಧ ಆಟಪಾಟ ಪಡೆನುಡಿ ವಿನೋದ ಚೇಷ್ಟೆಗಳು ಅತ್ಯಂತ ಅಸ್ವಾದ್ಯವಾಗಿದ್ದುವು. ಅವನು ದೇವಂಗಿಯ ಮಿಶನ್ ಸ್ಕೂಲಿನಲ್ಲಿ ಓದು ಪೂರೈಸಿದ ಮೇಲೆ ಮುಂದಿನ ಓದಿಗಾಗಿ ಅವನನ್ನು ಶಿವಮೊಗ್ಗೆಗೆ ಕಳಿಸಿದ್ದರು. ಅಡಕೆಮಂಡಿ ಇಟ್ಟಿದ್ದ ದೇವಂಗಿ ರಾಮಣ್ಣಗೌಡರಲ್ಲಿಗೆ. ಅಲ್ಲಿ ಟೈಪಾಯ್ಡ್ ಆಗಿ ೧೯೨೭ ರಲ್ಲಿ ತೀರಿಕೊಂಡನು:

ಶ್ರೀನಿವಾಸ
(ಮೋಕ್ಷಗತವಾದ ನನ್ನ ಮುದ್ದು ಸೋದರ ವಾಸುವ ನೆನಪಿಗೆ ಬರೆದ ಚರಮಗೀತೆ)

ಶ್ರೀವಾಸನಳಿದನೇ? ಬಾಡಿತೇ ಎಳೆಯಲರು
ಹೂವಾಗಿ ಕಾಯಾಗಿ ಫಲಿಸುವಾ ಮುನ್ನ?
ಏಕಿಂತುಟೊಣಗಿದೈ, ಮಲ್ಲಿಕಾ ಬಾಲಲತೆ,
ಚೈತ್ರಮಾಸವು ಬಂದು ಮುದ್ದಿಡುವ ಮುನ್ನ?
ಬೇಸರಾಯಿತೆ ನಿನಗೆ ಧರೆಯ ಹೂದೋಟ?
ಬೇಡವಾದುದೆ ನಿನಗೆ ತಂಬೆಲರ ತೀಟ?
ಪೂರೈಸಿತೇ ನಿನ್ನ ಇಹಲೋಕದಾಟ?
ನಿನಗಿನ್ನು ಪರಲೋಕವೇ ಪರಮ ಪೀಠ?
ನಿನ್ನ ಭಾಗಕ್ಕಿನ್ನು ರವಿಯುದಯ ಮೆರೆಯದೈ;
ನಿನಗಿಲ್ಲ ರಮಣೀಯ ಚಂದ್ರೋದಯ!
ನಿನ್ನ ಕೋಮಲ ರೂಪವನು ನೋಡವೈ, ತಳಿತು
ನಳನಳಿಪ ಹಸುರಾದ ವನಗಳನ್ನು!
ನಿನ್ನ ವಾಣಿಯ ಕೇಳಿ ಮರುದನಿಯವೀಯವೈ
ಗಗನವಂ ಚುಂಬಿಸುವ ಗಿರಿಶಿಖರ ನಿಕರ!
ಗಳಗಳ ನಿನಾದದಿಂದೋಡುವ ತರಂಗಿಣಿಗೆ
ನಿನ್ನ ಲೀಲೆಯ ಸುಖವು ದೊರೆಯದಿನ್ನು!
ನಿನ್ನನಗಲಿದ ಶೋಕದಿಂ ಪಸಲೆ ಕರಗುವುದು;
ನಿನ್ನೀ ವಿಯೋಗಂ ಕೊರಗುವುವು ರೋಗದಿಂ
ನಿನ್ನ ಕೂಡಾಡಿದಾ ಜಂತು ಸಂಕುಲವು.
ಬರಿದೆ ಕೂಗುವೆಯೇಕೆ, ಕೋಗಿಲೆಯೆ, ನೀನು!
ನಿನ್ನನಣಕಿಪ ವಾಸನೀ ಧರೆಯೊಳಿಲ್ಲ.
ಲಾವುಗೆಯೆ, ಬರಿದೆ ನೀನಿಂಚರವ ಬೀರುತಿಹೆ,
ಕೇಳಿ ಆದ ನಲಿವಾತನಿಂದು ಇಲ್ಲಿಲ್ಲ.
ಗೊರವಂಕವೇ, ನಿನ್ನನನುಕರಿಸಿ ನಲಿವ
ಶ್ರೀವಾಸನಿಂದು ಪರಲೋಕಗತವಾದನೈ!
ಕಂಬನಿಯ ಕರೆಯಿರೈ, ಎಲೆ ವಿಹಂಗಮಗಳಿರ!
ಗೋಳಾಡಿ! ಗೋಳಾಡಿ, ಎಲೆ ವನಸ್ಥಳಗಳಿರ,
ನಿಮ್ಮಾತ್ಮದಾನಂದವಿಂದಿಂಗಿತೆಂದು!
ಹೋದನೇ? ಹಾ! ಇನ್ನು ಹಿಂತಿರುಗಿ ಬಾರನೇ?
ಇನ್ನು ತನ್ನಣ್ಣನಿಗೆ ಬಂದು ಮೊಗದೋರನೇ?
‘ಅಣ್ಣಯ್ಯ, ಬಾ!’ ಎಂದು ಕರೆಯನೇ ಎನ್ನ?
ತೊರೆದೆಯಾ ನೀನೆನ್ನ, ಮುದ್ದಿನೆನ ತಮ್ಮಾ?
ಶ್ರೀವಾಸ, ಎನ್ನ ಹೃದಯದ ಹರುಷದಾವಾಸ,
ಎಲ್ಲಿರುವೆ? ಎಲ್ಲಿರುವೆ? ಬಾ ಬೇಗ, ಬೇಗ.
ಮರೆತೆನ್ನ ಹೋದೆಯಾ, ಎಲೆ ಬಾಲ ಗೆಳೆಯ?
ಇನ್ನೊಮ್ಮೆ ಬರಬಾರದೇ, ಎನ್ನ ಎಳೆಯ?
ಎನ್ನೊಡನೆ ವನಗಳಿಗೆ ಬರುವರಿನ್ನಾರು?
ಹೊಲಗದ್ದೆಯೊಳು ಕೂಡಿ ತಿರುಗಾಡುವವರಾರು?
ಮನೆಯ ಮುಂದಿನ ಕೆರೆಯೊಳೀಜುತಿರೆ ನಾನು
ನಿಂತು ದಡದೊಳು ಎನ್ನ ಹೊಗಳುವವರಾರು?
ನೀರಿಗಿಳಿಯಲು ಬೇಡ ಎಂದಾರ ಬೆದರಿಸಲಿ?
ಹಠಮಾಡಿ ನೀರಿಗಿಳಿವುದ ಕಂಡು ‘ಬೇಗೇಳು!
ಮೇಲೇಳು!’ ಎಂದಾರಿಗುಸುರಲಿನ್ನು?
ನಿರ್ಜನಾರಣ್ಯಗಳಲಲೆಯುತಿರೆ ನಾನು
ಎನ್ನ ಕವಿತೆಯ ಕೇಳಿ ನಲಿವರಿನ್ನಾರು?
“ಆ ಮರವ ನೋಡಣ್ಣ! ಈ ಹೂವ ನೋಡಣ್ಣ!
ಕೋಗಿಲೆಯ ಕೇಳಣ್ಣ! ಹಾಡೆಷ್ಟು ಇಂಪಣ್ಣ!
ಅಲ್ಲಿ ಹಣ್ಣಿವೆ, ಅಣ್ಣ! ನಾನು ಕಂಡಿಹೆನಣ್ಣ!
ಮಳೆಬಿಲ್ಲ ನೋಡಣ್ಣ! ಬಾ ಎನ್ನ ಜೊತೆ, ಅಣ್ಣ!”
ಎಂದೆನ್ನ ಮುಗ್ಧನೋಟದಿ ಹಿಡಿದು, ನಲ್ಮೆಯಿಂ
ಕಲ್ಲುಮುಳ್ಳಿಡಿದಿರುವ ಡೊಂಕು ದಾರಿಯೊಳು
ಸೂತ್ರಧಾರನ ತೆರದಿ ನಡೆಸುವವರಿನ್ನಾರು?
ನೀನಿರದ ಜೀವನವು ಶೂನ್ಯವೈ, ಸೋದರನೆ!
ಬಾಳೇಕೆ? ಬದುಕೇಕೆ? ನೀನಳಿದ ಮೇಲೆ!

ನಡುರಾತ್ರಿ ಒಯ್ದಿತೇ ನಿನ್ನನೆಲೆ ಸೋದರನೆ?
ಹಗಲೊಳೊಯ್ಯಲು ಯಮನು ಬೆದರಿದನು ನಿನಗೆ;
ಕಳ್ಳನಾದನೆ ಮೃತ್ಯು? ಧರ್ಮವಂ ಮಿರಿದನೆ
ನಿನ್ನ ಮಹಿಮೆಗೆ ಬೆದರಿ? ಸುಡು ಯಮನ ಬಾಳ!
ಖಗಗಳಿರ, ಮೃಗಗಳಿರ, ತರು ಗುಲ್ಮ ಲತೆಗಳಿರ,
ಬನಗಾಳಿಗಳಿರ ನೀವೆಲ್ಲ ನಿದ್ರಿಸುವ
ವೇಳೆಯಲಿ ಚೋರ ಮೃತ್ಯುವು ಬಂದು ನಿಮ್ಮ
ಪ್ರೀತಿಯಾ ಗೆಳೆಯನನು ಕದ್ದೊಯ್ದನೇ?
ಧೀರಾತ್ಮನಾಗಿದ್ದೆಯೈ, ಎಲೆ ಸಹೋದರನೆ,
ಹಗಲೊಳೊಯ್ಯಲು ಯಮನು ಬೆದರಲಚ್ಚರಿಯೇನು?
ಹೇ ಪ್ರಕೃತಿ ಮಾತೆಯೇ, ಗೋಳಾಡು, ಗೋಳಾಡು,
ನಿನ್ನ ಮುದ್ದಿನ ಕಂದನನು ಇನ್ನು ನೀ ಕಾಣೆ!
ನಿನ್ನ ಸೌಂದರ್ಯ ಲಾವಣ್ಯಗಳನೆಲ್ಲ ನೋಡಿ
ಚಿತ್ತದೊಳು ನಿತ್ಯತೆಯನನುಭವಿಸನವನಿನ್ನು!
ದೀರ್ಘ ನಿದ್ದೆಯೊಳಿಹನು, ಬಾರನವನಿನ್ನು!

ಬಾರನೇ? ಹೋದನೇ? ಶೂನ್ಯಗತನಾದನೇ?
ಆಟವೋ? ನಾಟಕವೊ? ಭೂತಳವಿದೇನು?
ಪಾತ್ರಧಾರರೊ ನಾವು ಸೂತ್ರಧಾರನ ಕೈಲಿ?
ಎಲ್ಲಿಂದ ಬಂದಿಹೆವು? ಹೋಗುತಿಹೆವಾವೆಡೆಗೆ?
ಮಾಯೆಯೋ? ಸ್ವಪ್ನವೋ? ಸತ್ಯವೋ ನಿತ್ಯವೋ?
ಪಥವಾವುದೆಮಗೆಲ್ಲ? ಗತಿಯಾವುದು?
ಶೂನ್ಯದಿಂದಲೆ ಬಂದು ಶೂನ್ಯಗತವಾಗುವೆವೆ?
ಸತ್ಯದಿಂದಲೆ ಬಂದು ಮಿಥ್ಯೆಯೊಳು ನಿಂದು
ಸತ್ಯಗತವಾಗುವೆವೆ ಮತ್ತೆ? ಬಲ್ಲವರದಾರು?
ಮೃತ ಎಂಬುದದು ಸುಳ್ಳೆ? ಅಮೃತವದು ಸತ್ಯವೇ?
ಸಂದೇಹದಲಿ ಕುಂದಿ ಕೊರಗುವೆವು ನಾವು!
ಆದರದೊ! ಕೇಳು ಪರಮಾತ್ಮನಾ ವಾಣಿ!
ಅಭಯವಾಣಿ ಅದಮೃತ ವಾಣಿ, ನೆಚ್ಚಿನ ವಾಣಿ
ಮರುದನಿಯ ಬೀರುತಿದೆ ಹೃದಯದಿಂದ;
‘ಬೆದರ ಬೇಡಲೆ ಜೀವ ಬೆದರಬೇಡ;
ಸಂದೇಹವನು ಬಿಡು, ನಿರಾಶನಾಗದಿರು.
ಶೂನ್ಯವಲ್ಲದು ಸತ್ಯ; ಅಮೃತ, ಅದು ನಿತ್ಯ!
ಜನನವಲ್ಲವು ಮೊದಲು, ಮರಣವಲ್ಲವು ತುದಿಯು,
ಜನನ ಮರಣಾತೀತವಾಗಿರುವುದಾತ್ಮ!
ದೇಹವಳಿದೊಡೆ ಜೀವ ತಾನಳಿಯುವನೆ?
ಹುಟ್ಟದಿಹ ಜೀವನಿಗೆ ಸಾವೆಂಬುದೆಲ್ಲಿ?
ಆದಿಯನು ಕಾಣದವಗಂತ್ಯವೆಂಬುವುದೆಲ್ಲಿ?
ಹಳೆಯ ವಸನವ ಬಿಟ್ಟು ಹೊಸ ಬಟ್ಟೆಯುಡುವಂತೆ
ನಾಂತನಾಗಿರುವಾತ್ಮ ನಾನಾ ಶರೀರದಲಿ
ಒಂದೊಂದು ಜನ್ಮದಲಿ ಸಂಚರಿಪನು!
ಉದ್ದೇಶವಿಹುದೊಂದು; ಜೀವವಿದು ಕುರುಡಲ್ಲ;
ಭೂಮಿಯಿದು ಬರಿಯ ಕನಸಿನ ರಂಗವಲ್ಲ.
ಚಿಂತೆಗಸದಳವಾದ ಆತ್ಮವೀ ವಿಶ್ವವನು
ಧರ್ಮದಿಂದಾಳುತಿಹುದೆಂಬುದದು ಬರಿಯ
ಕವಿಯ ಕಲ್ಪನೆಯಲ್ಲ; ಉಹನೆಯ ಮಾತಲ್ಲ.
ಶ್ರದ್ಧೆಯಿಡು ಪೂರ್ವಾವತಾರಗಳ ವಚನದೊಳು;
ಬುದ್ಧಿಯದು ಮರ್ಕಟವು, ತಿಳಿಯದೈ ನಿಜವ!
ಯಾರ ನಿಯಮದ ಮೇಲೆ ರವಿಯುದಯವಾಗಿ
ದಿನದಿನವು ಬೆಳಗುವನು ತಪ್ಪದೀ ಜಗವ?
ಯಾರೀ ಧರಾತಳವ ರವಿಯ ಬಳಸುವ ತೆರದಿ
ಮಾಡಿ, ದಿನ ನಿಶೆಗಳನು ಕೊಡುತಲಿಹಳೆಮಗೆ;
ಯಾರ ಭಯಕೀ ಅಮಿತ ತಾರೆಗಳು ತಂತಮ್ಮ
ಗತಿಯನಗಲದೆ ಧರ್ಮದಿಂ ಚರಿಸುತಿಹವು;
ಯಾರ ಹೆದರಿಕೆಯಿಂದಲೀ ಗಾಳಿಬೆಂಕಿಗಳು
ತಮ್ಮ ಕರ್ಮವನಿರದೆ ಮಾಡುತಿಹವೋ
ಆ ಮಹಾತ್ಮನ ಮೀರಿ ನಡೆಯುವುದೆ ಮೃತ್ಯು?
ಆನಂದದಿಂದುದಿಸಿ ಆನಂದದೊಳೆ ಬೆಳೆದು
ಆನಂದದೊಳಗೈಕ್ಯವಾಗುವುದು ಈ ಸೃಷ್ಟಿ!
ಸಾವು ಸಾವಲ್ಲವೈ, ಅದು ಪರಮ ಬಾಳು,
ಸಂಶಯಾತ್ಮಕನಾಗದಿರು, ಜೀವ, ಮೇಲೇಳು!’

ಮರುಗದಿರು, ಮರುಗದಿರು, ಎಲೆ ಮೂರ್ಖ ಮನವೇ,
ಶ್ರೀವಾಸನಳಿದಿಲ್ಲ; ಶೂನ್ಯಗತನಾಗಿಲ್ಲ:
ಸಾವು ಸತ್ತಿತು, ವಾಸನಳಿದಿಲ್ಲ, ಇಲ್ಲ!
ಬೊಮ್ಮದೊಳಗೊಂದಾಗಿ ಆನಂದದಿಂದಿಹನು;
ಶೋಕವೇಕಿನ್ನು ಬಿಡು ಕಂಬನಿಯನೊರಸು.
ಮಾಯೆಯಾ ಜಾಲದೊಳು ಸಿಲುಕಿ ನರಳುವೆ ಏಕೆ?
ಮೈ ಕೊಡಹು! ಗರ್ಜಿಸುತ ಎದ್ದೇಳು! ಹಂಗಿಸೈ
ಮೃತ್ಯುವನು! ಬಲೆಹರಿದು ನೆಲಕುರುಳಲಿ!
ಮೇಘ ಮುಸುಗಿದೊಡೇನು ಖದ್ಯೋತನಳಿಯುವನೆ?
ರಾಹು ನುಂಗಿದೊಡೇನು ಚಂದ್ರನಿಗೆ ಕುಂದಹುದೆ?
ಇಮ್ಮಡಿಯ ಕಾಂತಿಯಿಂ ಬೆಳಗನೇ ಮರಳಿ?
ಚ್ಯುತಿಯಿಲ್ಲದಾತ್ಮನಿಗೆ ಸಾವೆಂದರೇನು?
ಸುಡನವನ ಪಾವಕಂ, ಕಡಿಯಲರಿಯದು ಶಸ್ತ್ರ,
ಉದಕ ಕೊಳೆಯಿಸದವನ, ಹೀರಲರಿಯದು ಗಾಳಿ!
ನಿರವಯವ, ಅಮೃತನವ, ಅಚ್ಛೇದ್ಯನವ, ನಿತ್ಯನ್
ಅಚಲಂ ಸನಾತನಂ! ಹುಟ್ಟಿಲ್ಲ, ಸಾವಿಲ್ಲ;
ಬಾಳಿಲ್ಲ, ಹಾಳಿಲ್ಲ; ನಾಂತನವನವ್ಯಕ್ತನ್
ಅಚ್ಯುತನ್ ಅನಾಕಾರನ್ ಅದ್ವೈತನ್ ಅವಿಕಾರನ್
ಆನಂದಶೀಲನ್ ಅವನಮಲಾತ್ಮನು!
ಮಾಯಾ ಪ್ರಪಂಚವಿದು ಬಣ್ಣದ ಸುಲೋಚನಂ!
ನಿತ್ಯತಾ ಧವಲತೆಗೆ ಮಿಥ್ಯರಾಗಗಳಿತ್ತು
ಚಿತ್ತವನು ಮೋಹಿಪುದು ಸತ್ಯಮಂ ಮರೆಸಿ!
ಅಂತ್ಯದೊಳಗೊಂದುಳಿವುದಿನ್ನುಳಿದವೆಲ್ಲವಾ
ಒಂದರೊಳಗೊಂದಾಗಿ ಮಾಯವಾಗುವುವು!
ಪರದ ಬೆಳಕುಳಿವುದೈ, ಧರೆಯ ನೆರಳಳಿವುದೈ;
ಇನ್ನು ಬಿಡು ಶೋಕವನು, ಎದ್ದೇಳು ಏಳು!
ಶ್ರೀವಾಸನಿಹನಿಲ್ಲೆ, ಕಂಬನಿಯನೊರಸು!

ಮೃತ್ಯುವಶವಾದನೆ? ಹುಚ್ಚು ಮಾತದು ಬಿಡಿರಿ!
ಯಮನೆಲ್ಲಿ? ಬ್ರಹಾತ್ಮ ಶ್ರೀವಾಸನೆಲ್ಲಿ?
ಎಲೆ ಚಂದ್ರ, ಎಲೆ ಮೇಘಸಂಕುಲವೆ, ಗೂಢತರ
ಗಾಂಭೀರ್ಯದಿಂ ಮೆರೆವ ತಾರಕಿತ ಗಗನವೇ?
ಎಲೆ ರಮ್ಯ ಭೂದೇವಿ, ಗಗನವಂ ಚುಂಬಿಸುವ
ಗಿರಿಶಿಖರ ನಿಖರವೇ, ಪ್ರಕೃತಿ ದೇವತೆಗಳಿರ,
ತರುಗುಲ್ಮ ಲತೆಗಳಿರ, ರಮಣೀಯ ಸುಮಗಳಿರ,
ಬನಗಳಿರ, ತೊರೆಗಳಿರ, ಖಗಗಳಿರ, ಮೃಗಗಳಿರ,
ಹೇ ಪರಬ್ರಹ್ಮಪ್ರತೀಕಗಳೆ, ನಲಿಯಿರೈ,
ನಲಿಯಿರೈ: ಶ್ರೀವಾಸ ನಿಮ್ಮಗಳ ಸೇರಿಹನು,
ನಿಮ್ಮಾತ್ಮದಾತ್ಮದೊಳಗೊಂದಾದನು!
ಹೇ ಪ್ರಕೃತಿ ದೇವತೆಯೆ, ನಿನ್ನನೊಲಿದಾ ವಾಸ
ನಿನ್ನ ಹೃದಯಾನಂದವಾಗಿರುವನೀಗ!
ನಿತ್ಯತೆಯ ಸತ್ತೆಯೊಳಗೊಂದಾದೆ, ಸೋದರನೆ,
ವಿಶ್ವದಾಧಾರ ಚೈತನ್ಯ ನೀನಾದೆ! ಹೇ
ಪ್ರಿಯ ಸಹೋದರ, ಸಚ್ಚಿದಾನಂದನಾದಯ್,
ಎನ್ನಾತ್ಮದಾನಂದ ನೀನಾದೆಯಯ್!
ಶೋಕಿಸೆನು ನಿನಗಾಗಿ; ಕಂಬನಿಯ ಕರೆಯೆ;
ಮರುಳುತನವೈ ವ್ಯಸನ; ದುಃಖವದು ಮಾಯೆ!
ಎಲೆಮುದ್ದು ಸೋದರನೆ, ಎನ್ನಾತ್ಮದಾತ್ಮ,
ನೀನಿರುವೆ! ನೀನಿರುವೆ! ಎಲ್ಲಿಯೂ ಇರುವೆ!
ಶಶಿ ನೀನು, ರವಿ ನೀನು, ನಭ ನೀನು, ಧರೆ ನೀನು;
ಕಾಲ ದೇಶಗಳೆಲ್ಲ ನೀನು! ನೀನು!
ಅರುಣಕಿರಣದಿ ಮೆರೆವೆ, ತೊರೆಯಾಗಿ ಹರಿವೆ;
ತಳಿರಾಗಿ ಹೂವಾಗಿ ವನಗಳಲಿ ಮೈದೋರಿ
ನಿನ್ನ ಕವಿಸೋದರನ ಕೈಬಿಸಿ ಕರೆವೆ!
ತಂಬೆಲರ ತೀಟದೊಳು ನೀನಡಗಿ ಎನ್ನ
ಸುತ್ತಮುತ್ತಲು ನಲಿವೆ ಕಾಣಿಸದೆ ಕಣ್ಗೆ!
ನಿನ್ನ ವಾಣಿಯನಾಲಿಸುವೆ ಹರಿವ ತೊರೆಗಳಲಿ!
ನಿನ್ನ ರೂಪವ ನೋಡುವೆನು ಜಗದ ಸೊಬಗಿನಲಿ!
ನಿನ್ನ ಮಹಿಮೆಯನರಿವೆ ವಿಶ್ವದ ರಹಸ್ಯದಲಿ!
ನೀನಳಿದೆ ಎಂದಾರು ನುಡಿದವರು ಮಿಥ್ಯೆ!

ನಿರ್ಜನಾರಣ್ಯಗಳ ಗಂಭೀರ ಶಾಂತಿಯಂ
ಮನದೊಳನುಭವಿಸುತಾನಂದದಿಂದ
ಭಾವಪರವಶವಾಗಿ ತೇಲುತಿರೆ ನಾನು,
ಸೋದರನೆ, ನಿನ್ನಿರವನೆನ್ನಿರವಿನೊಳು ಪಡೆವೆ!
ನಿನ್ನನಾಲೋಚಿಸುತ ಏಕಾಂಗಿಯಾಗಿ
ಮಧುಮಾಸದಮಲತರ ಹಸುರ ಮೇಲೊರಗಿರಲು
ಪಲ್ಲವಿತ ಬನದಳಿರ ಲೀಲೆಯಾ ಬೆಡಗಿನೊಳು
ನಿನ್ನ ಪೆಂಪನು ನೋಡಿ ಹಾಡಿ ನಲಿವೆ!
ಉದಯ ರವಿಕಿರಣದಲಿ ಮಿಂದು, ಸುಮಸಂಕುಲದ
ಸೌಂದರ್ಯ ಲಾವಣ್ಯ ವೈಭವಂಗಳ ತೊಟ್ಟು
ಪರದ ಮರುಬಿಂಬವನು ಧರೆಯ ಬೆಡಗಿನೊಳಿಟ್ಟು
ಮೆರೆವ ತರುನಿಕರದಲಿ ಕೋಗಿಲೆಯುಲಿಯ ಬೀರೆ
ನಿನ್ನ ಕಂಠದ ದನಿಯನಾಲಿಸುವೆ, ಭಾವದಾ
ಆವೇಶದಿಂದಿಳಿಯುತಿರೆ ಕಂಬನಿಯ ಧಾರೆ!
ಶ್ರೀವಾಸನಳಿದನೆಂದಳುವನಾರದು? ಮರುಳ!

ಇತ್ತ ಬಾ! ಹೊರಗೆ ಬಾ! ನೋಡು ಬಾ! ಬೇಗ ಬಾ!
ವಿಶ್ವವನೆ ತುಂಬಿಹನು ವಿಶ್ವ ತಾನಾಗಿ!
ನಲಿಯಿರಿ, ವಿಹಂಗಮಗಳಿರ ನೀವು! ಹಾಡಿರೈ
ಸಂತಸದಿ ಮಂಗಳದ ಹಾಡುಗಳನು!
ವನಗಳಿರ, ಮೋದಿಸಿರಿ ಮರುದನಿಯ ಬೀರಿ!
ಹಿಗ್ಗಿರೈ, ಗಿರಿಗಳಿರ, ಸಂತಸವ ತೋರಿ!
ಹರಿಯಿರೈ, ಜಲಗಳಿರ, ಮಂಜುಳ ನಿನಾದದಿಂ;
ನಿಮ್ಮ ವೀಚಿಗಳಲಿಹನೆನ್ನೊಲುಮೆಯಾವಾಸ,
ಎನ್ನಾತ್ಮದಾನಂದರೂಪನಾ ಶ್ರೀವಾಸ!
ತಾರೆಗಳೆ, ಗಗನವೇ, ನೀಲ ಮುಗಿಲೋಳಿಗಳೆ,
ಕೀರ್ತಿಸಿರಿ ನಿಮ್ಮ ಮಂಗಳ ವಾಣಿಯನು ಬೀರಿ:
ಯಾವ ಪರಮಾತ್ಮನಿಂದೀ ಸೃಷ್ಟಿಯುದಿಸಿಹುದೊ,
ಯಾವ ದಿವ್ಯಾತ್ಮನೊಳು ಬ್ರಹ್ಮಾಂಡ ನೆಲಸಿಹುದೊ,
ಯಾವನಾನಂದವೀ ಬೊಮ್ಮವಂ ತುಂಬಿ
ಬೊಮ್ಮತನಕೆಲ್ಲರಂ ಬಿಡದೆಳೆಯುತಿಹುದೊ,
ಯಾವ ಮಹಿಮನ ಬೆಳಕು ತುಂಬಿಹುದೊ ಜಗವ,
ಯಾವ ಪರಮಾನಂದನೀ ಸೃಷ್ಟಿಯಾಗಿಹನೊ,
ಯಾವ ಪುರುಷನು ತನ್ನ ಯೋಗಮಾಯೆಯ ಬಲದಿ,
ವ್ಯಕ್ತ ಅವ್ಯಕ್ತಗಳ ಮಿರಿದರು, ತೋರಿಕೆಗೆ
ವ್ಯಕ್ತ ಅವ್ಯಕ್ತನಾಗಿರುವಂತೆ ತೋರ್ಪನೋ,
ಯಾವ ಮಹಿಮನ ಮಾತು ಮುಟ್ಟದೋ, ಮೇಣಾವ
ಪುರುಷನಂ ಬುದ್ಧಿಯರಿಯದೊ, ಚಿಂತೆ ಸಾಧಿಸದೊ,
ಆ ಮಹಾಮಹಿಮನನು ಕೀರ್ತಿಸಿರಿ! ಹಾಡಿರೈ,
ನಲಿಯಿರೈ, ಮಂಗಳಸ್ವನಗಳಂ ಬೀರಿರೈ
ಸಚ್ಚಿದಾನಂದದೊಳಗೈಕ್ಯವಾಗಿ!

ಹರ್ಷವಾಗಲಿ ಶೋಕ! ಮೋದವಾಗಲಿ ಖೇದ!
ದುಃಖಾಶ್ರು ಸುಖದ ಕಂಬನಿಯಾಗಲಿ!
ಮರಣವೆಂಬುದು ಮಧುರ! ಮೃತ್ಯು ಮಾತೆಯ ಉದರ!
ಸುಖಿಯಾದೆಯ್ಯೆ ನೀನು ಸುಖ ದುಃಖಗಳ ಮೀರಿ!
ಕಾಲ ದೇಶವ ಮೀರಿದುದು ನಿನ್ನದು, ತಮ್ಮ,
ಅದು ನಮ್ಮ ತವರೂರು! ಅಲ್ಲಿಹಳು ಅಮ್ಮ
ಜಗದಂಬೆ ಜೋಗುಳದಿ ಕರೆಯುತೆಮ್ಮ!
ಆಲಿಸುವೆನಮ್ಮನಾ ಜೋಗುಳವ ನಾನು,
ಎಂದಾದರೊಂದು ದಿನ ಸೇರುವೆನು ನಿನ್ನ.
ಅಲ್ಲಿಗಾನೈತರಲು ಮರೆಯದಿರು ನನ್ನ!
ಅಣ್ಣ ಬಂದಾ ಅಣ್ಣ! ಅಮ್ಮ, ನೋಡೆಂದು
ಅಪ್ಪಿಕೊಂಡೆನ್ನ ಕರೆದೊಯ್ಯೆಲೈ ತಮ್ಮ!
ತಾಯಿಯಂಕದ ಮೇಲೆ ನಾವಿರ್ವರೂ ಕೂಡಿ
ಮನ ಬಂದವೊಲು ತೊದಲು ಮಾತುಗಳನಾಡಿ
ನಿತ್ಯತೆಯ ಪೀಡಿಸುವ ಚೆಲ್ಲಾಟವಾಡಿ! ೧೬-೧-೧೯೨೭

ಮೇಲಿನ ಸುದೀರ್ಘ ಚರಮಗೀತೆಯಲ್ಲಿ ತತ್ಕಾಲದಲ್ಲಿ ಕವಿಗೆ ಜೀವ, ಜಗತ್ತು, ದೇವರು, ಹುಟ್ಟು, ಸಾವು, ಸೃಷ್ಟಿಯ ಉದ್ದೇಶ ಇತ್ಯಾದಿಗಳ ವಿಚಾರದಲ್ಲಿ ಇದ್ದ ಭಾವನೆಗಳೆಲ್ಲ ಚೆಲ್ಲಿ ಸೂಸಿದಂತಿದೆ. ಭಾವೋತ್ಕರ್ಷದ ಅಭಿವ್ಯಕ್ತಿಯಲ್ಲಿ ಸಂಯಮಭಾವ ತೋರಿರುವುದು ಆವೇಶದ ದುರ್ದಮತೆಯನ್ನೂ ಅನುಭವದ ಹೃತ್ಪೂರ್ವಕತೆಯನ್ನೂ ಸೂಚಿಸುತ್ತದೆ. ಬೆಳೆಯುತ್ತಿರುವ ಕವಿಯ ಮನಸ್ಸು ಸೃಷ್ಟಿಯ ರಹಸ್ಯಗಳೊಡನೆ ಮಲ್ಲಗಾಳೆಗವಾಡುತ್ತಿತ್ತೆಂದು ತೋರುತ್ತದೆ. ಆಶ್ರಮವಾಸದ ಪ್ರಭಾವವನ್ನೂ ಚೆನ್ನಾಗಿ ಗುರುತಿಸಬಹುದು.

ಒಂದು ದಿನ ಬೆಳಿಗ್ಗೆ ಸ್ವಾಮಿ ಸಿದ್ದೇಶ್ವರಾನಂದರು ನನ್ನನ್ನು ಮಾಸ್ತಿವೆಂಕಟೇಶ ಐಯ್ಯಂಗಾರರನ್ನು ನೋಡಲು ಕರೆದುಕೊಂಡು ಹೋದರು. ಮಾಸ್ತಿಯವರು ಆಗ ಮೈಸೂರಿನಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಇದ್ದರೆಂದು ತೋರುತ್ತದೆ. ದೊಡ್ಡವರು ಚಿಕ್ಕವರು ಎಂಬ ಯಾವ ಭೇದವೂ ಇಲ್ಲದೆ ಎಲ್ಲರೆಡೆಗೂ ಒಂದೇ ನಿರಹಂಕಾರದಿಂದ ಮತ್ತು ಅನುಗ್ರಹಭಾವ ಲೇಶವೂ ಇಲ್ಲದ ವಿಶ್ವಾಸದಿಂದ ಹೋಗುತ್ತಿದ್ದುದು ಸ್ವಾಮಿ ಸಿದ್ದೇಶ್ವರಾನಂದರ ಸಹಜ ರೂಢಿ. ತಮ್ಮ ಆಗಮನ ಅವರಿಗೆ ಇಷ್ಟವೋ ಅನಿಷ್ಟವೋ ಅದನ್ನೂ ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಸಿದ್ದೇಶ್ವರಾನಂದರ ಈ ವಿಶ್ವ ವಿಶ್ವಾಸದ ಸ್ವರೂಪವನ್ನು ಕುರಿತು, ಬಹುಕಾಲದ ತರುವಾಯ, ಪ್ರಿಯನಾಥ್ ಮಹಾರಾಜ್ (ಸ್ವಾಮಿ ಚಿನ್ಮಾತ್ರಾನಂದರು) ನನ್ನೊಡನೆ ಹೀಗೆಂದು ಹೇಳಿದ್ದರು: ‘ಗೋಪಾಲ್ ಮಹಾರಾಜ್ ಯಾರನ್ನಾದರೂ ಹೋಗಳಿದರೆ ನಿಜಸ್ಥಿತಿ ತಿಳಿಯುವುದಕ್ಕೆ ಶೇಕಡ ತೊಂಬತ್ತರಷ್ಟನ್ನು ಕಳೆಯಬೇಕಾಗುತ್ತದೆ; ಯಾರನ್ನಾದರೂ ಖಂಡಿಸಿದರೆ ಶೇಕಡ ತೊಂಬತ್ತರಷ್ಟನ್ನು ಕೊಡಬೇಕಾಗುತ್ತದೆ! ‘If Gopal Maharaj praises anybody you will have to minus ninety to get at the truth; if he critisises anyone you will have to add ninety percent to arrive at the real fact!’

ಮಾಸ್ತಿಯವರು ಆಗ ನನಗೆ ದೊಡ್ಡದೆಂದು ತೋರಿದ್ದ ಮನೆಯಲ್ಲಿದ್ದರು. ಅಲ್ಲಿಯ ಪೀಠೋಪಕರಣ, ಬಾಗಿಲು ಪರದೆ, ಮೆತ್ತೆಗಳು ಇತ್ಯಾದಿಗಳೆಲ್ಲ ನನಗೆ ಭೋಗೈಶ್ವರ್ಯಗಳಾಗಿ ತೋರಿದ್ದುವು. ನಮ್ಮ ಹಳ್ಳಿಯ ಮನೆಯಲ್ಲಾಗಲಿ ಸಂತೆಪೇಟೆಯ ಕೊಠಡಿಯಲ್ಲಾಗಲಿ ಕುರ್ಚಿಯನ್ನೇ ಕಾಣದಿದ್ದ ನನಗೆ ಮಾಸ್ತಿಯವರ ಮನೆಯ ಸಾಧಾರಣತೆಯಲ್ಲಿಯೂ ವೈಭವ ಕಂಡಿದ್ದರಲ್ಲಿ ಆಶ್ವರ್ಯವೇನಿಲ್ಲ. ಆಗಿನ ನಾನಿದ್ದ ಶ್ರೀರಾಮಕೃಷ್ಣಾಶ್ರಮವೂ ಬಡತನದೊಡನೆ ಪೈಪೋಟಿ ನಡೆಸುವಷ್ಟರಮಟ್ಟಿಗೆ ರಿಕ್ತದಶೆಯಲ್ಲಿ ಇತ್ತು!

ನಡೆದ ಮಾತುಕತೆಗಳ ವಿವರ ನನಗೆ ಮರೆತುಹೋಗಿದೆ. ಆದರೆ ವಿಶ್ವಾಸದಲ್ಲಾಗಲಿ ವಿನಯದಲ್ಲಾಗಲಿ ಸಭ್ಯಾಚಾರದಲ್ಲಾಗಲಿ ಮಾಸ್ತಿಯವರು ಸ್ವಾಮಿ ಸಿದ್ಧೇಶ್ವರಾನಂದರಿಗೆ ಹೊಯಿಕೈಯಾಗಿ ವರ್ತಿಸಿದರು ಎಂಬ ಭಾವನೆ ನನಗಿದೆ. ಸ್ವಾಮಿಜಿ ನನ್ನನ್ನು ಅವರಿಗೆ ಪರಿಚಯಮಾಡಿಕೊಡುತ್ತಾ ನಾನು ಕವಿತೆ ಬರೆಯುತ್ತಿರುವ ವಿಚಾರ ತಿಳಿಸಿದರು. ಆದರೆ ಅದರ ವಿಚಾರವಾಗಿ ಅವರು ನನ್ನನ್ನು ಏನಾದರೂ ಕೇಳಿದರೇ ಎಂಬುದು ನೆನಪಿಲ್ಲ. ಬದಲಾಗಿ, ಅವರೇ ತಮ್ಮ ಕೆಲವು ಕವನಗಳನ್ನು ರಾಗವಾಗಿ ಅಂದು ತೋರಿಸಿದರು. ಬಹುಶಃ ಅವು ‘ಬಿನ್ನಹ’ದ ಕವನಸಂಗ್ರಹದಲ್ಲಿರುವುವು ಎಂದು ಭಾವಿಸುತ್ತೇನೆ. ನನಗಂತೂ ಅವರ ಪ್ರಾರ್ಥನಾಗೀತಗಳೂ ಮತ್ತು ಅವರು ಇಂಪಾಗಿ ಮೃದುವಾಗಿ ಹಾಡುತ್ತಿದ್ದ ರೀತಿಯೂ ತುಂಬ ಹೃದಯಂಗಮವಾಗಿತ್ತು. ಮನದಲ್ಲಿ ಅವರ ಪರವಾಗಿ ನನಗೆ ಮೂಡಿದ ಭಾವನೆಯನ್ನು ವರ್ಣಿಸಲೆಬೇಕಾದ ಪಕ್ಷದಲ್ಲಿ, ಪ್ರೀತಿ ಗೌರವಪೂರ್ವಕವಾದ ಮಧುರಮೈತ್ರಿ ಎಂದು ಹೇಳಬಹುದೇನೊ! ಆ ಭೇಟಿಯನ್ನು ಕುರಿತು ಅವರು ತಮ್ಮ ‘ಭಾವ’ದಲ್ಲಿ ತುಸು ಪ್ರಸ್ತಾಪಿಸಿದ್ದಾರೆ.

*          *          *          *