೧೯೨೭ರಲ್ಲಿ ನಾನು ಸುಮಾರು ೭೦ ಭಾವಗೀತೆಗಳನ್ನು ಬರೆದಿರುವುದು ನನ್ನ ಹಸ್ತಪ್ರತಿಯಿಂದ ಗೊತ್ತಾಗುತ್ತದೆ. ಅವುಗಳಲ್ಲಿ ಅನೇಕ ಕವನಗಳು ‘ಕೊಳಲು’ ಅಲ್ಲಿ ಪ್ರಕಟಗೊಂಡಿವೆ. ಮತ್ತೆ ಕೆಲವು ಪ್ರಕಟಣೆಗೆ ಅನರ್ಹವೆಂದೋ ಅಥವಾ  ಹಸ್ತಪ್ರತಿಯಿಂದ ಅಚ್ಚಿಗೆ ಸಂಗ್ರಹಿಸಿ ಪ್ರತಿಯೆತ್ತಿದವರ ಅಭಿರುಚಿಗೆ ಕೈತಪ್ಪಿಯೋ ಉಳಿದುಕೊಂಡಿವೆ. ಅವುಗಳಲ್ಲಿ ಕೆಲವನ್ನು ಸೂಕ್ತ ಕಂಡಲ್ಲಿ ಇಲ್ಲಿ ಕೊಡಬಯಸುತ್ತೇನೆ. ಆ ಕವನಗಳಲ್ಲಿ ಅಭಿವ್ಯಕ್ತಗೊಂಡ ವಸ್ತುವೈವಿಧ್ಯದ ಜೊತೆಗೆ ನಾನಾ ವಿನ್ಯಾಸಗಳ ಪ್ರಯೋಗಗಳನ್ನೂ ಕಾಣಬಹುದು. ಕೆಲವಂತೂ ಛಂದಸ್ಸಿನ ಪ್ರಯೋಗದೃಷ್ಟಿಯಿಂದ ಮಾತ್ರವೆ ಗಮನಾರ್ಹವಾಗಿವೆ. ಉದಾಹರಣೆಗೆ ೨೩-೭-೨೭ ಒಂದೆ ದಿನದಲ್ಲಿ ಮೂರು ಕವನಗಳು ರಚಿತವಾಗಿವೆ: ಮಹಾತ್ಮಾಗಾಂಧಿ, ಶಂಕರಾಚಾರ್ಯ ಮತ್ತು ಕುರಿಕುರಿ ಮತ್ತು ಚಿತ್ರಗುಪ್ತ. ಅವುಗಳಲ್ಲಿ ‘ಶಂಕರಾಚಾರ್ಯ ಮತ್ತು ಕುರಿ’, ‘ಕೊಳಲು’ ಅಲ್ಲಿ ಪ್ರಕಟಗೊಂಡಿದೆ.

ಮಹಾತ್ಮಾಗಾಂಧಿ

ಶ್ರೀ ಮಹಾತ್ಮಾ ಗಾಂಧಿಯೆ
ಕೀರ್ತಿದೇವಿಯ ಬಂಧಿಯೆ
ಭರತ ನೆಲದಭ್ಯುದಯ ಸೂತ್ರವ
ಹಿಡಿದ ಧರ್ಮದ ಮೂರ್ತಿಯೆ,
ಭಾರತೇತರ ಕೀರ್ತಿಯೆ,
ಕರ್ಮಯೋಗದ ಸಿದ್ಧನು
ನೀನು ಕಲಿಯುಗ ಬುದ್ಧನು!
ನಿನ್ನ ಕರುಣೆಯ ಸರಿಯು ಸುರಿಯಲಿ
ಭೇದಗಳನದು ಕೊಚ್ಚಿ ಹರಿಯಲಿ!
ಮಂಗಳದ ಮಳೆ ಕರೆಯಲಿ!
ರಂಗ ನಿನ್ನನು ಪೊರೆಯಲಿ!

ಹೇ ಅಹಿಂಸಾ ಶೀಲನೆ,
ಖಾದಿ ಚರಕದ ಲೋಲನೆ,
ನಿನ್ನ ಸೇವೆಯ ಅಮಲ ಗಂಗೆಯು
ಜಗವ ಪಾವನಗೈಯಲಿ;
ಮುಕ್ತಿಗೆಮ್ಮನು ಒಯ್ಯಲಿ!
ನೀನು ಪರಮ ಪವಿತ್ರನು,
ನೀನಮರ ಚಾರಿತ್ರನು!
ಗತಿವಿಹೀನರನಾಥ ಬಂಧುವು,
ನೀನು ದಯೆಯ ವಿಶಾಲ ಸಿಂಧುವು!
ಮಂಗಳದ ಮಳೆ ಕರೆಯಲಿ,
ರಂಗ ನಿನ್ನನು ಪೊರೆಯಲಿ!

ಭರತ ಖಂಡದ ಜ್ಯೋತಿಯೆ,
ಹೇ ಅಪಾರ ಪ್ರೀತಿಯೆ,
ನಿನ್ನ ತಾಳ್ಮೆಯು ಶಾಂತಿ ಶಕ್ತಿಗ-
ಳಿಳೆಯ ಕಂಗಳ ಹಿಡಿದಿವೆ,
ಎಲ್ಲರೊಲುಮೆಯ ಪಡೆದಿವೆ.
ನೀನೆ ಪರಮಾದರ್ಶವು,
ಧನ್ಯ ಭಾರತ ವರ್ಷವು!
ನಿನ್ನ ಹೊಯಿಲಿನೊಳೆಲ್ಲ ಹರಿಯಲಿ;
ಜಾತಿ ವೈರವನೆಲ್ಲ ಮರೆಯಲಿ.
ಮಂಗಳದ ಮಳೆ ಕರೆಯಲಿ,
ರಂಗ ನಿನ್ನನು ಪೊರೆಯಲಿ!
೨೩-೭-೧೯೨೭

ಚಿತ್ರಗುಪ್ತ

ಬರೆಯುತಿಹೆ ಬರೆಯುತಿಹೆ
ಬಿಡುವೆಯಿಲ್ಲದೆ
ತಡೆಯೆಯಿಲ್ಲದೆ!
ಆದಿಯಂತ್ಯವಿಲ್ಲದಂಥ
ಕಾಲಪತ್ರದೊಳು ವಿಚಿತ್ರ
ಲಿಪಿಯ ಬರೆಯುವೆ!
ಬುವಿಯ ಬಾಳ ಅಂತರಾಳ
ದಲ್ಲಿ ಮಾಸದಿರುವ ವೇಷ
ತತಿಯ ಕೊರೆಯುವೆ!
ಯಮನ ಕಾರಕೂನ, ಚಾರ,
ಕರ್ಮದಾಪ್ತನೆ,
ಬೊಮ್ಮಬಂಟ, ಬಿದಿಯ ನಂಟ,
ಚಿತ್ರಗುಪ್ತನೆ!
ಬರೆಯುತಿಹೆ ಬರೆಯುತಿಹೆ
ಬಳಲಲೊಲ್ಲದೆ

ಬೇಸರಿಲ್ಲದೆ!

ನೋಡುತಿಹೆ ನೋಡುತಿಹೆ
ಒಂದೆ ದೃಷ್ಟಿಯೊ-
ಳೆಲ್ಲ ಸೃಷ್ಟಿಯ!
ಮಹಾ ಶ್ಯಾನುಭೋಗ ನೀನು,
ಸಮೆಯದಿರುವ ಗರಿಯು, ಸುರಿವ
ಮಸಿ ಚಿರಾಮೃತ!
ಪಕ್ಷಪಾತವಿಲ್ಲದಾತ
ನೀನು ಮರೆಯೆ; ಅಳಸಿ ಬರೆಯೆ;
ಬರೆದುದೇ ಋತ!
ನೀನು ಅಚಲ, ನೀನು ಅಮಲ,
ಯಮನ ಕರಣಿಕ;
ಮೋಹಪಡಿಸದನ್ನ, ಕೆಡಿಸ-
ದಮೃತ, ಲೇಖಕ!
ಬರೆಯುತಿಹೆ ಬರೆಯುತಿಹೆ:
ಕಾಣೆ ತುದಿಯನು,
ಕಾಣೆ ಮೊದಲನು!
೨೩-೭-೧೯೨೭

ಐದು  ಸೀಸಪದ್ಯಗಳಲ್ಲಿ ೨೬-೭-೧೯೨೭ ರಲ್ಲಿ ಬರೆದಿರುವ ‘ಕೋಗಿಲೆಗೆ’ ಎಂಬ ಕವನ ಆ ಕಾಲದ ಕವಿಯು ಮನೋಧರ್ಮದ ದೃಷ್ಟಿಯಿಂದ ಗಮನಾರ್ಹವಾಗಿದೆ. ಹಿಂದೆ ೭-೧೨-೧೯೨೪ ರಲ್ಲಿ ಬರೆದಿರುವ ಇಂಗ್ಲಿಷ್ ಕವನ To A Bul-Bul ಗೆ ಹೋಲಿಸಬಹುದಾಗಿದೆ.

ಕೋಗಿಲೆಗೆ

ಯಾರನೀ ಪರಿ ಕೂಗಿ ಕರೆಯುತಿದೆ, ಕೋಗಿಲೆಯೆ?
ಯಾರನಗಲಿದೆ ಎಂದು? ಏತಕಾಗಿ?
ಯಾವ ಹರುಷದ ಹೊಳೆಯು ನಿನ್ನ ಹೃದಯದ ತುಂಬಿ
ಹರಿವುದಿಂಚರವಾಗಿ, ಗೀತಶಿಲ್ಪಿ?
ವಿರಹವಾವುದು ನಿನ್ನನೆನಿತು ಕಲ್ಪಗಳಿಂದ
ಬಾಧಿಸಿಹುದಿಂಪು ಕೊರಲಿನ ಕೋಗಿಲೆ?
ಮೈಮೆ ಯಾವುದು ನಿನ್ನ ಯಾವ ತೀರಗಳಿಂದ
ಕರೆಯುತಿದೆ ಕೈಬೀಸಿ, ವನವಾಣಿಯೆ?
ವಿಶ್ವಗರ್ಭದೊಳಡಗಿ ಯೋಗನಿದ್ರೆಯೊಳಿರುವನಂ
ನಿನ್ನತುಳ ವಾಣಿಯಿಂ ಕೂಗಿ ಎಚ್ಚರಗೊಳಿಪೆಯೊ?
ಕಾಲದೋಟವ ತಿಳಿಸಿ ಹೊಡೆಯುವೆಯೊ ಜವಗಂಟೆಯಂ?
ಬ್ರಹ್ಮನೃತ್ಯಕ್ಕೆ ಮೆಚ್ಚಿ ಹಾಕುವೆಯೊ ಕರತಾಳವ?

ನೀನೆನಗೆ ವಿರಹಿಗಳ ತಳಿದೆರೆಯ ಖಗವಲ್ಲ,
ನಿನ್ನುಲಿಯು ಲಲಿತ ಕಲೆಯಲ್ಲವೆನಗೆ,
ಶಕ್ತಿ ಮೈದೋರಿಹುದ ನಿನ್ನಲ್ಲಿ ನೋಡುವೆನು!
ಎನಗೆ ನಿನ್ನುಲಿಯು ಕರ್ತವ್ಯದಾಜ್ಞೆ!
ರಸಿಕರಿಗೆ ಅದು ಬರಿಯ ಮಧುರಮಯ ಲಾಲಿತ್ಯ;
ಎನಗಾದರದು ಗೆಲುವಿನುಪದೇಶವು.
ಸೃಷ್ಟಿಯಾನಂದವನು ನೋಡಿದರು ನಿನ್ನಲ್ಲಿ
ಲಯದಳಲನೂ ಬಿಡದೆ ನೋಡುತಿರುವೆ!
ಹಿಗ್ಗುತಿಹುದೆನ್ನೆದೆಯು, ತಳಮಳಿಸುತಿದೆ ಜೀವ;
ಆದರದು ಮಾಧುರ್ಯದಿಂದಲ್ಲ ಬೆರಗಿನಿಂದ!
ವಿಲಯದಗ್ನಿಯ ವಿಹಗ, ಕೋಗಿಲೆಯೆ, ಕೂಗು! ಕೂಗು!
ಬೆಚ್ಚುವಂತೆಚ್ಚರಿಸು ತೂಕಡಿಪ ಮಂದಾತ್ಮರ!

ಗಾನದಿಂ ಬ್ರಹ್ಮನಂ ಸಾಧಿಸುವ ರಸಋಷಿಯೆ,
ನೀನು ಕೋಗಿಲೆಯಲ್ಲ ಸ್ವರಯೋಗಿಯು!
ನಿನ್ನಮಲ ಗೆಲವಿನುಲಿಯಲೆಯೊಲುಮೆ ಎಳೆತನದ
ನೆನಪ ತರುವಾ ಕಾಲವೊಂದಿದ್ದಿತು;
ನಿನ್ನುಲಿಯ ಮಾಧುರ್ಯ ಒಲಿದವಳ ನೆನಪ ತಹ
ಆ ಕಾಲವೊಂದಿತ್ತು, ಪರಗಾಯಕ!
ಅದರಿಂದ ಆ ದನಿಯು ಮುಂದರಿವಿನಿಂಚರವು:
ಗುರುವಾದೆಯೈ ಎನಗೆ, ವನವೈಣಿಕ.
ನಿನ್ನ ಗಾಯನ ಮಧುರ; ಸಂದೇಶ ಮಧುರವೈ!
ಯಾರು ಬಲ್ಲರು, ವಿಹಗ, ನಿನ್ನದನಿಯಧಿಕಾರವಂ?
ನೀನು ಕೂಗಲು ಯಾವ ಜಗ ಹೊಳೆದು ಬೆಳೆಯುತಿಹುದೊ?
ಮೇಣಾವ ಜಗವಳಿದು ಬ್ರಹಸ್ಥವಾಗುತಿಹುದೋ?

ಮಧುವನದ ಗೋಪಿಯರ ಮನಕಿನಿಯನನು ತಂದು
ಮೋಹಿಸಿದೆಯಾದೊಡೆಯು, ವನಕಿನ್ನರ,
ಕವಿಯೋಗಿ ವ್ಯಾಸ ವಾಲ್ಮೀಕಿಯರ ಹೃದಯದೊಳು
ಬ್ರಹ್ಮವನೆ ತಂದೆಯೈ, ವೃಕ್ಷಯಕ್ಷ?
ಜಯ ಹೊಂದಿ ರಣದಿಂದ ಹಿಂತಿರುಗಿ ಬಹ ವೀರ-
ರಾಲಿಸಿಹರೈ ನಿನ್ನ ಗೆಲುವಿನುಲಿಯ;
ರಣಭೇರಿ ತಳಮಳಿಸದವರೆದೆಯು ನಿನ್ನುಲಿಗೆ
ಜಲ್ಲೆಂದಿಹುದು, ನಾದಯೋಗಿವರ್ಯ:
ಬಾಳ ಬೇಗೆಯ ಬಿಸುಟು ಶಾಂತಿಯಾರಾಮದೆಡೆಗೆ
ನಿನ್ನಿಂಚರದೊಳೆಲ್ಲರಂ ಕೂಗಿ ಹಾರುತಿರುವೆ.
ನಿನ್ನಮರ ದನಿಯಮೃತದಿಂಪೆನ್ನ ಜೀವತ್ವಮಂ
ಶೂನ್ಯತೆಗೆ ಕೊಂಡೊಯ್ಯುತೀಯುತಿದೆ ದೇವತ್ವದ!

ಕೋಗಿಲೆಯೆ, ಎನ್ನನುಲಿಯಂಬುಧಿಯೊಳಾಳಿಸುವ
ಸಾಧಕನೆ, ಹೇ ನಾದಯೋಗೀಶನೆ,
ಮಧುಮಾಸದಾನಂದ ವಾರಿಧಿಯು ಕಲುಕುತಿಹೆ
ಸೃಷ್ಟಿಸುತಲಾವೇಶ ವೀಚಿಗಳನು!
ಧರೆಯ ಶ್ಯಾಮಲ ಪುಳಕ ರಂಜಿಪುದು ಕಂಗೊಳಿಸಿ;
ಕುಸುಮಿಸಿದೆ ವನರಮೆಯ ಲೋಲಾಂಚಲ.
ಕಂಪಿಸುವ ಕಿಸಲಯ ತರಂಗಗಳು ನಲಿಯುತಿವೆ;
ಮಧುಸಮೀರಣನೊಯ್ಯನಲೆಯುತಿಹನು!
ಹಾಡೆಲೈ ಬಾಲ ಹೃದಯರ ನಲಿಸಿ, ನಾದಯೊಗಿ!
ಹಾಡೆಲೈ ರಸಿಕ ಮನಗಳನೊಲಿಸಿ, ಮೋದ ಭೋಗಿ!
ಹಾಡೆಲೈ ಸಾಧುಸಂತರಿಗೆಲ್ಲ ವೇದವಾಗಿ!
ಹಾಡೆಲೈ ಮುಕ್ತಾತ್ಮ ಜೀವರಾನಂದವಾಗಿ!
೨೬-೭-೧೯೨೭

ಒಂದು  ದಿನ  ದಸರಾ ಕಾಲದಲ್ಲಿ ಚಾಮುಂಡಿಬೆಟ್ಟದ ಜಾತ್ರೆಗೆ ಹೋಗಲು ನಿರ್ಧರಿಸಿದರು ಸ್ವಾಮಿಜಿ, ಕಸ್ತೂರಿ, ಶೇಷಗಿರಿರಾವ್, ತಾತಾಗಾರು ಇತ್ಯಾದಿ. ಅವರೆಲ್ಲ ಚಾಮುಂಡೇಶ್ವರಿ ಗುಡಿಗೆ ಹೋಗಿ ಪೂಜಾಮಾಡಿಕೊಂಡು ಬರುವವರು. ಆದರೆ ನಾನು ಕೆಲವು ವರ್ಷಗಳ ಹಿಂದೆಯೆ ಬ್ರಾಹ್ಮಣ ಪೂಜಾರಿಗಳಿರುವ ದೇವಸ್ಥಾನಕ್ಕೆ ಪೂಜೆಗಾಗಿ ಹೋಗುವುದನ್ನು ನಿಲ್ಲಿಸಿದ್ದೆನಾದ್ದರಿಂದ ಪೂಜೆಗಾಗಿ ಗುಡಿಗೆ ಹೋಗದಿದ್ದರೂ ಪ್ರಕೃತಿ ಸೌಂದರ್ಯದ ಆಸ್ವಾದನೆಗಾಗಿ ಅವರೊಡನೆ ಹೊರಟೆ. ಎಲ್ಲರೂ ಕಾಲುನಡಿಗೆಯಿಂದಲೇ ಬೆಟ್ಟದ ಬುಡ ಸೇರಿ, ಮೆಟ್ಟಲು ಹತ್ತಿದೆವು. ಮೆಟ್ಟಲ ಇಕ್ಕೆಲದಲ್ಲಿಯೂ ಸಾಂದ್ರವಾಗಿ ನೆರೆದಿದ್ದ ನಾನಾ ರೀತಿಯ ಭಿಕ್ಷುಕವರ್ಗಕ್ಕೆ ಅಲ್ಲೊಂದು ಇಲ್ಲೊಂದು ಕಾಸು ಹಾಕುತ್ತಾ, ಅಲ್ಲಲ್ಲಿ ದೃಶ್ಯ ಸಂವೀಕ್ಷಣೆಯ ನೆಪವೊಡ್ಡಿ ಆಯಾಸ ಪರಿಹಾರಮಾಡಿಕೊಳ್ಳುತ್ತಾ ಬಸವನ ಮಂಟಪದ ವೆರೆಗೆ ಹೋದೆವು, ‘ನಾನು ಮೇಲಕ್ಕೆ ಬರುವುದಿಲ್ಲ. ಇಲ್ಲಿಯೆ ಮಂಟಪದಲ್ಲಿ ಕುಳಿತು ನಗರದ ದೀಪೋಜ್ವಲ ಸೌಂದರ್ಯವನ್ನು ನೋಡುತ್ತಿತುತ್ತೇನೆ, ನೀವು ಬರುವ ತನಕ!’ ಎಂದು ಸ್ವಾಮಿಜಿಗೆ ತಿಳಿಸಿ, ಅವರೆಲ್ಲ ಮುಂದೆ ಹೋದಮೇಲೆ. ಕಲ್ಲು ಮಂಟಪದ ಒಂದು ತುದಿಯು ಅಂಚಿನಲ್ಲಿ ಪದ್ಮಾಸನ ಹಾಕಿ ಕುಳಿತು, ದೃಶ್ಯವೀಕ್ಷಣೆಯಲ್ಲಿ ತಲ್ಲೀನನಾದೆ. ಸೋಪಾನ ಪಂಕ್ತಿಯಲ್ಲಿ ಮೇಲಕ್ಕೆ ಹೋಗುವ ಮತ್ತು ಮೇಲಿಂದ ಕೆಳಕ್ಕೆ ಇಳಿಯುವ ಜನಸ್ತೋಮವಿದ್ದರೂ ನಾನು ಕುಳಿತಿದ್ದ ಸ್ಥಳ ಏಕಾಂತವಾಗಿಯೆ ಇತ್ತು.

ಬಹಳ ಹೊತ್ತಾದರೂ ಅವರು ಯಾರೂ ಹಿಂದಕ್ಕೆ ಬರದಿದ್ದುದನ್ನು ಕಂಡು, ಸುಮ್ಮನೆ ಕುಳಿತಿರಲಾರದೆ. ಅಲ್ಲಿಯೆ ಸ್ವಲ್ಪ ದೂರದಲ್ಲಿ ಬುಟ್ಟಿಯಂಗಡಿ ಇಟ್ಟುಕೊಂಡು ಪುರಿಕಡಲೆ ಮಾರುತ್ತಿದ್ದ  ಮುದುಕಿಯ ಬಳಿಗೆ ಹೋಗಿ, ಕಾಲಕಳೆಯುವುದಕ್ಕಾಗಿ ಆರುಕಾಸಿನದೊ ಒಂದಾಣೆಯದೊ ಪುರಿಕಡಲೆ ಕೊಂಡೆ. ಮತ್ತೆ ಮೊದಲು ಕುಳಿತಿದ್ದ ಜಾಗಕ್ಕೇ ಬಂದು ಅದನ್ನು ತಿನ್ನುತ್ತಾ ಮೈಸೂರಿನ, ಅದರಲ್ಲಿಯೂ ಉಜ್ವಲಿಸುತ್ತಿದ್ದ ಅರಮನೆ ಇತ್ಯಾದಿಗಳ, ಕೃತಕ ಸೌಂದರ್ಯವನ್ನು ನೋಡುತ್ತಾ ಕುಳಿತೆ.

ಇದ್ದಕಿದ್ದ ಹಾಗೆ ನನ್ನ ಹುಳುಕು ದವಡೆ ಪುರಿಕಡಲೆಯಲ್ಲಿದ್ದ ಒಂದು ಸಣ್ಣಕಲ್ಲು ಸಿಕ್ಕಿ, ನಾನು ದೃಶ್ಯತಲ್ಲೀನವಾಗಿದ್ದ ಅನ್ಯಮನಸ್ಸಿನಲ್ಲಿ ಎಚ್ಚರತಪ್ಪಿ ಬಲವಾಗಿ ಅಗಿಯಲು, ಅದು ಘಾತವಾಗಿ ಒಳಗೆ ಜಜ್ಜಿ ತಗುಲಿ, ನರಕ್ಕೇ ಏಟು ಬಿದ್ದಂತೆ ತುಂಬ ನೋವಾಯಿತು. ಎಚ್ಚರಿಕೆಯಿಂದ ಒಳಕ್ಕೆ ಹೊಕ್ಕಿದ್ದ ಕಲ್ಲನ್ನೇನೊ ತೆಗೆದುಹಾಕಿದೆ. ಆದರೆ ನೋವು ಬರಬರುತ್ತಾ ತೀಕ್ಷ್ಣವಾಗಿ ನಿರಂತರ ಯಾತನೆಯಾಯಿತು. ಸ್ವಾಮಿಜಿ ಬರುವತನಕ ಕುಳಿತಿರಲು ಪ್ರಯತ್ನಪಟ್ಟೆ. ಆದರೆ ಹಲ್ಲುನೋವು ಸಹಿಸಲಾರದಷ್ಟು ಎಲ್ಲೆಮಿರಿತು, ಏನುಮಾಡಲೂ ತೋರದೆ, ನೆಟ್ಟಗೆ ಆಶ್ರಮಕ್ಕೇ ಹೋಗಿಬಿಡುವುದೆಂದು ಮನಸ್ಸುಮಾಡಿ ಆದಷ್ಟು ವೇಗವಾಗಿ ಮೆಟ್ಟಲು ಇಳಿಯತೊಡಗಿದೆ. ನಿರಂತರ ಯಾತನೆ ಅನುಭವಿಸುತ್ತಲೆ ಆಶ್ರಮ ತಲುಪಿದೆ. ಆಶ್ರಮದಲ್ಲಿದ್ದವರಿಗೆ ಎಲ್ಲ ವಿಷಯ ತಿಳಿಸಿದೆ. ಅಷ್ಟುಹೊತ್ತಿಗೆ ರಾತ್ರಿ ಹತ್ತುಗಂಟೆಯೆ ಆಗಿತ್ತೋ ಏನೊ?  ಸ್ವಲ್ಪ ಹೊತ್ತಿನ ಮೇಲೆ ಸ್ವಾಮಿಜಿ ಇತರರೂ ಬಂದರು. ನನ್ನನ್ನು ಹುಡುಕಿ, ನನಗಾಗಿ ಕಾದು, ಬಹುಶಃ ತಡವಾದ್ದರಿಂದ ಆಶ್ರಮಕ್ಕೆ ಹೋಗಿರಬಹುದೆಂದು ಶಂಕಿಸಿ ಬಂದರಂತೆ. ನಾನು ಏಕೆ ಬಂದದ್ದು ಎಂದು ಗೊತ್ತಾದ ಮೇಲೆ ಸಮಾಧಾನಗೊಂಡು ತಮಗೆ ತತ್ಕಾಲದಲ್ಲಿ ತಿಳಿದ ಔಷಧಿ ಮಾಡಿದರು, ಮರುದಿನ ಬೆಳಿಗ್ಗೆ ದಂತವೈದ್ಯರ ಬಳಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ.

ನನಗೆ ಹಲ್ಲು ನೋವು ಹೊಸದಾಗಿ ಬಂದಿರಲಿಲ್ಲ. ಹಲ್ಲು ಹುಳುಕಾದರೆ ದಂತವೈದ್ಯರಲ್ಲಿಗೆ ಹೋಗಬೇಕೆಂದು ಪ್ರಜ್ಞೆಯೆ ಬಂದಿರಲಿಲ್ಲ. ಕೊರೆಯುತ್ತಾರೆ, ಕೀಳುತ್ತಾರೆ, ತುಂಬಾ ಯಾತನೆಯಾಗುತ್ತದೆ ಎಂಬ ಭಯವೂ ಕಾರಣವಾಗಿತ್ತು. ಆದ್ದರಿಂದ ನಂಜನಗೂಡು ಟೂತ್‌ಪೌಡರನ್ನೊ ಇನ್ನೇನೊ ಮಣ್ಣುಮಸಣವನ್ನೊ ಹಾಕಿ ತಿಕ್ಕಿದರೆ ನೋವು ಹೋಗುತ್ತದೆಂದು ಹಾಗೆಯೆ ಮಾಡುತ್ತಿದ್ದೆ. ಕಜ್ಜಿ ಮಲೇರಿಯಾದಿ ಜಾಡ್ಯಗಳಿಗೆ ಮದ್ದು ಮಾಡಿ ರಕ್ಷಿಸಿದ್ದ ಸ್ವಾಮಿಜಿಯೆ ಹಲ್ಲಿನ ಕ್ಷೇಮಕ್ಕೂ ಕಾರಣವಾಗಬೇಕಾಯಿತು.

ರಾತ್ರಿಯೆಲ್ಲ ನೋವು, ನೋವು, ನೋವು! ನಿದ್ದೆ ಮಾಡಲಾಗಲಿಲ್ಲ. ಹಲ್ಲುನೋವನ್ನು ಅನುಭವಿಸಿದವರಿಗಲ್ಲದೆ ಅದರ ನರಕಯಾತನೆ ತಿಳಿಯುವುದಿಲ್ಲ. ಮರುದಿನ ಎಷ್ಟು ಬೇಗನೆ ಬರುತ್ತದೆಯೊ ಎಂದು ಕುದಿಯುತ್ತಾ ಕಾತರಿಸುತ್ತಾ ರಾತ್ರಿಯನ್ನು ಕಳೆದೆ.

ಬೆಳಗಾಯಿತು. ನೋವು ತುಸು ಇಳಿಮುಖವಾಗಿತ್ತು. ಸ್ವಾಮಿಜಿ ದಂತವೈದ್ಯರಲ್ಲಿಗೆ ಹೋಗೋಣ ಎಂದರು, ಬೆಳಗಿನ ಉಪಾಹಾರದ ಅನಂತರ. ನಾನು, ಆಗಲೆ ರಾತ್ರಿಯ ಯಮಯಾತನೆಯನ್ನು ಮರೆತು, “ಈಗ ಪರ್ವಾಇಲ್ಲ, ಸ್ವಾಮಿಜಿ. ನೋವು ಕಡಿಮೆಯಾಗಿದೆ, ಡೆಂಟಿಸ್ಟ್ ಹತ್ತಿರ ಹೋಗುವ ಅಗತ್ಯವಿಲ್ಲ!” ಎಂದಾಗ ಸ್ವಾಮಿಜಿ ಭರ್ತ್ಸನೆ ಮಾಡಿ ನನ್ನನ್ನು ಲ್ಯಾನ್ಸ್‌ಡೌನ್ ಬಿಲ್ಡಿಂಗನಲ್ಲಿ ಡೆಂಟಿಸ್ಟ್ ಕ್ಲಿನಿಕ್ ಇಟ್ಟುಕೊಂಡಿದ್ದ ಶ್ರೀ ಕಮಾಲ್ ಷರೀಫರೆಡೆಗೆ ಕರೆದೊಯ್ದರು, ತಾತಾಗಾರು ಸಲಹೆಯ ಮೇರೆಗೆ. ಅವರು ತಕ್ಷಣ ಕೊರೆಯುವುದಾಗಲಿ, ಕೀಳುವುದಾಗಲಿ ಅಪಾಯ ಎಂದು ಹೇಳಿ ಔಷಧಿ ತುಂಬಿ ಹತ್ತಿ ಇಡಿದರು. ಪವಾಡ ಪ್ರಮಾಣದಲ್ಲಿ ನೋವೆಲ್ಲ ಒಡನೆಯೆ ಸಂಪೂರ್ಣ ನಿಂತು ಹೋಯಿತು! ನನಗೆ ಆನಂದ ಸಾಕ್ಷಾತ್ಕಾರಕ್ಕೆ ಆದಂತಾಯಿತು!

ಶ್ರೀ ಕಮಾಲ್‌ ಷರೀಫರು ಒಳ್ಳೆಯ ಸಂತೋಷ ಪ್ರಕೃತಿಯ ಸ್ವಲ್ಪ ಸ್ಥೂಲಕಾಯದ ಮನುಷ್ಯ; ಯಾವಾಗಲೂ ನಗೆಮೊಗದಿಂದಲೇ ಬಂದವರನ್ನು ಮಾತಾಡಿಸುತ್ತಾ ವಿನೋದಗೊಳಿಸುತ್ತಾ ಕುಳಿತಿರುತ್ತಿದ್ದರು. ಅವರ ತಮ್ಮ ತರುಣ ಸಿದ್ದಿಕ್ ಷರೀಫ್ ತೆರೆಮರೆಯ ಹಿಂದೆ ಹಲ್ಲು ಕೊರೆಯುವ ಮತ್ತು ಕಟ್ಟುವ ಎಲ್ಲ ಕೆಲಸ ಮಾಡುತ್ತಿದ್ದರು. ಅವರೂ ತುಂಬಾ ಸ್ನೇಹಪ್ರಕೃತಿಯ ಮನುಷ್ಯ. ಕಮಾಲ್ ಷರೀಫರು ನಾನು ಅವರಲ್ಲಿಗೆ ಹೋಗುವ ಮೊದಲೆ, ಬಹುಶಃ ಒಂದು ವರುಷದ ಹಿಂದೆ ಇರಬೇಕು, ಶಿವಮೊಗ್ಗೆಗೆ ಹೋಗಿ ದೇವಂಗಿ ರಾಮಣ್ಣಗೌಡರಿಗೆ ಹಲ್ಲು ಕಿತ್ತು ಕಟ್ಟಿಕೊಟ್ಟಿದ್ದರಂತೆ. ಆಗ ಅವರ ಮನೆಯಲ್ಲಿಯೆ ತಮ್ಮ ದಂತವೈದ್ಯ ಯಂತ್ರಸಾಮಗ್ರಿಯನ್ನೆಲ್ಲ ಸ್ಥಾಪಿಸಿ ಅಲ್ಲಿಯೆ ಕೆಲಸಮಾಡಿದ್ದರಂತೆ. ಕಮಾಲ್ ಷರೀಫರು ತುಂಬ ಹೆಮ್ಮೆಯಿಂದ ದೇವಂಗಿ ರಾಮನ್ನಗೌಡರ ಔದಾರ್ಯವನ್ನು ಹೊಗಳುತ್ತಿದ್ದರು: ದಿನಕ್ಕೊಂದು ಕೋಳಿ ಪಲಾವು ಮಾಡಿಕೊಡುತ್ತಿದ್ದರಂತೆ! ಅದನ್ನೆಲ್ಲ ನೆನೆದು ಬಾಯಿ ಚಪ್ಪರಿಸಿಕೊಂಡು ಸವಿಯುವಂತೆ ಗಂಟೆಗಟ್ಟಲೆ ಹೇಳುತ್ತಿದ್ದರು, ನಾನು ಅವರ ಬಳಿ ಕುಳಿತು ಕಾಯಬೇಕಿದ್ದಾಗ, ತೆರೆಮರೆಯ ಆಚೆ ಸಿದ್ದಿಕ್ ಷರೀಫರು ಮತ್ತೊಬ್ಬ ಯಾರಿಗೋ ಹಲ್ಲು ಕೊರೆಯುತ್ತಿದ್ದಾಗಲೆಲ್ಲ! ಷರೀಫ್ ಸೋದರರಿಗೂ ನನಗೂ ಅಂದು ಪ್ರಾರಂಭವಾದ ದಂತವೈದ್ಯಕೀಯ ರೂಪವಾದ ಸಂಬಂಧ ಸುಮಾರು ಮೂವತ್ತು ವರುಷಗಳವರೆಗೂ ಅವರು ತೀರಿಕೊಳ್ಳುವ ತನಕ ಮುಂದುವರಿದಿತ್ತು. ಅವರು ಕೆಲಕಾಲದ ಮೇಲೆ ನಿಷಾದ್‌ಬಾಗಿನ ವಲಯದಲ್ಲಿ ತಮ್ಮದೇ ಒಂದು ದೊಡ್ಡ ಮನೆ ಕಟ್ಟಿಸಿಕೊಂಡು ಅಲ್ಲಿಗೆ ಮನೆಯನ್ನೂ ಆಸ್ಪತ್ರೆಯನ್ನೂ ಸಾಗಿಸಿದ್ದರು. ನಾನು ಪ್ರೊಫೆಸರ್ ಆಗಿದ್ದಾಗಲೂ ಹಲ್ಲಿನ ತೊಂದರೆಯ ದೆಸೆಯಿಂದ ಅವರಲ್ಲಿಗೆ ಹೋಗುತ್ತಿದ್ದೆ. ನಾನು ವೈಸ್‌ಛಾನ್ಸಲರ್ ಆದಮೇಲೆಯೆ ಸಿದ್ದಿಕ್ ಷರೀಫರು-ಅಷ್ಟು ಹೊತ್ತಿಗೆ ಅವರ ಅಣ್ಣ ತೀರಿಹೋಗಿದ್ದರಿಂದ ಅವರೇ ಆಸ್ಪತ್ರೆಗೆ ಮುಖ್ಯರಾಗಿದ್ದರು. ನಾನು ಬಡಪಟ್ಟಿಗೆ ಒಪ್ಪದಿದ್ದರೂ ಅವರ ವಿಶ್ವಾಸಪೂರ್ವಕವಾದ ಜುಲುಮ್ಮನ್ನು ಉಪಯೋಗಿಸಿ ನನ್ನ ಹಲ್ಲುಗಳನ್ನೆಲ್ಲ ಕಿತ್ತು ಬೇರೆ ಹಲ್ಲು ಕಟ್ಟಿಕೊಟ್ಟರು. ಈಗಲೂ ನಾನು (೧೯೨೩) ಅವರು ಕಟ್ಟಿಕೊಟ್ಟಿದ್ದ ಹಲ್ಲಿನ ಸೆಟ್ಟನ್ನೆ ಬಳಸುತ್ತಿದ್ದೇನೆ. ಅಷ್ಟು ಚೆನ್ನಾಗಿ ಭದ್ರವಾಗಿ ಕಟ್ಟಿಕೊಟ್ಟಿದ್ದಾರೆ. ಎಷ್ಟೋ ಸಾರಿ ಅವರನ್ನು ನೆನೆದುಕೊಳ್ಳುತ್ತೇನೆ. ಪ್ರಾಯಕಾಲದಲ್ಲಿಯೆ ತೀರಿಹೋದ ಅವರ ಆತ್ಮಕ್ಕೆ ಶಾಂತಿಯೊದಗಲಿ ಎಂದು ಮನದಲ್ಲಿಯೆ ಪ್ರಾರ್ಥಿಸುತ್ತೇನೆ.

ಮೇಲಿನ ಸಂದರ್ಭದಲ್ಲಿ ನಡೆದ ಒಂದು ವಿಷಯ ನೆನಪಿಗೆ ಬರುತ್ತದೆ. ನಾನು ಬೆಟ್ಟಕ್ಕೆ ಏರಿಯು ಚಾಮುಂಡಿದೇವಿಯ ದರ್ಶನಕ್ಕೆ ಹೋಗದೆ ಇದ್ದುದಕ್ಕೆ ತಕ್ಕಶಿಕ್ಷೆ ಒದಗಿತೆಂದು ಸ್ವಾಮಿಜಿಯೋ ಕಸ್ತೂರಿಯೋ ಯಾರೋ ಒಬ್ಬರು ವಿನೋದವಾಡಿದ್ದರು. ಹಾಗೆ ಹೇಳಿದ್ದವರು ಲಘುವಾಗಿಯೆ ಹೇಳಿದ್ದರು;  ನಾನೂ ಅದಕ್ಕೆ ಯಾವ ಬೆಲೆಯನ್ನೂ ಕೊಡದೆ ಲಘುವಾಗಿಯೆ ತಗೆದುಕೊಂಡಿದ್ದೆ. ವಿಚಾರಮತಿ ಇಲ್ಲದವನಾಗಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳದೆ, ಚಾಮುಂಡೇಶ್ವರಿ ತಾನು ಅವಳ ಪೂಜೆಗೆ ಹೋಗದಿದ್ದುದಕ್ಕಾಗಿ ಸಿಟ್ಟುಗೊಂಡು ಕಡಲೆಪುರಿಯಲ್ಲಿ ಕಲ್ಲಾಗಿ ಸೇರಿಕೊಂಡು ತನ್ನ ಹಲ್ಲಿಗೆ ಇಡಿದು ನರಕಯಾತನೆ ಅನುಭವಿಸುವಂತೆ ಶಿಕ್ಷೆ ವಿಧಿಸಿದಳೆಂದು ನಂಬಿ ಭಯಪಡುತ್ತಿದ್ದನೆಂದೆ ತೋರುತ್ತದೆ! ಹೀಗೆ ಭಕ್ತಿಪ್ರಚೋದನೆಗೆ ಶಿಕ್ಷೆಯ ರೂಪದ ಪ್ರತೀಕಾರವನ್ನು ದೇವರಿಗೆ ಆರೋಪಿಸುವುದು ಸಾಮಾನ್ಯ ರೂಢಿಯ ಮತಾಚಾರದ ವಿಧಾನ. ಆ ತೆರನಾದ ಅವಿಚಾರದ ಭಯವನ್ನೆ ಆಸ್ತಿಕತೆಯೆಂದೂ ಭಕ್ತಿಯೆಂದೂ ಕರೆಯುವುದು ಮತರೂಢ ಪುರೋಹಿತ ವರ್ಗದವರ ದಂಡೋಪಾಯ: ಏಕೆಂದರೆ, ಅಜ್ಞಾನಿಗಳ ಹೆದರಿಕೆಯೆ ಅವರಿಗೆ ತಮ್ಮ ಹೊಟ್ಟೆ ಹೊರೆದುಕೊಳ್ಳುವ ಬಂಡವಾಳ!

ಮೇಲಿನ ಸಂದರ್ಭದಲ್ಲಿ ನನಗೆ ಒದಗಿದ ಹಲ್ಲುನೊವಿನ ‘ಶಿಕ್ಷೆ’ ನಿಜವಾಗಿಯೂ ನನಗೆ ಒದಗಿದ ತಾಯಿಯ ‘ಕೃಪೆ’ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ನನಗೆ ಹಾಗೆ ಹಲ್ಲುನೋವು ಆಗದೆ ಇದ್ದಿದ್ದರೆ ನಾನು ದಂತವೈದ್ಯರಿಂದ ಚಿಕಿತ್ಸೆ ಮಾಡಿಸಿಕೊಳ್ಳದೆ ಇನ್ನೂ ಭಯಂಕರವಾದ ಕೇಡಿಗೆ ಒಳಗಾಗುತ್ತಿದ್ದೆ. ಹಾಗೆಯೆ ತಾರ್ಕಿಕವಾಗಿ ವಾದಮಾಡುವುದಾದರೆ, ಗುಡಿಗೆ ಹೋಗಿ ಪುರೋಹಿತರಿಂದ ಪೂಜೆ ಮಾಡಿಸದೆ ಬಸವನ ಬಳಿಯ ಕಲ್ಲುಮಂಟಪದಲ್ಲಿ ಸೌಂದರ್ಯವೀಕ್ಷಣೆ ಮಾಡಿದುದರಿಂದಲೆ ನನಗೆ ಶ್ರೇಯಸ್ಸಾಯಿತು ಎಂದು ನಿರ್ಣಯಿಸಬೇಕಾಗುತ್ತದೆ.

*          *          *          *

೧೯೨೭-೧೯೨೮ನೆಯ ಎರಡು ವರ್ಷಗಳು ನನ್ನ ಸಾಹಿತ್ಯಿಕ ಸೃಜನಾತ್ಮಕ ಜೀವನದಲ್ಲಿ ವಿಶೇಷ ಪರ್ವಕಾಲಗಳಾಗಿವೆ. ಕನ್ನಡ ಎಂ.ಎ. ತೆಗೆದುಕೊಂಡಿದ್ದರಿಂದ ಕನ್ನಡ ಸಾಹಿತ್ಯದ ಸಕ್ರಮ ಅಧ್ಯಯನ ಅವಕಾಶ ಒದಗಿತು. ನಮ್ಮ ಪರಂಪರೆಯ ಶಾಸ್ತ್ರೀಯವಾದ ಅಭ್ಯಾಸದಿಂದ ಕವಿಯ ಸೃಜನ ಪ್ರತಿಭೆಯ ತಾಯಿಬೇರಿಗೆ ಅಮೃತಾಹಾರ ಒದಗಿ ತಾಯಿನೆಲಕ್ಕೆ ಆಳವಾದ ಪ್ರವೇಶ ಲಭಿಸಿತ್ತು, ಪಾಶ್ಚಾತ್ಯ ಸಾಹಿತ್ಯದ ಕುಂಡದಲ್ಲಿಯೆ ಅದುವರೆಗೆ ಬೆಳೆಯುತ್ತಿದ್ದ ನನ್ನ ಸಾಹಿತ್ಯ ವಟಶಿಶು ಬೇರುಬಲಿತು ಕುಂಡವನ್ನೊಡೆದು ಕೊಂಡು ನೆಲಕ್ಕೆ ಕಾಲೂರಿ ಭದ್ರವಾಗಿ ನಿಂತಿತು: ಮಾತೃಸತ್ತ್ವದ ಮಹಿಮೆಯಿಂದ ತನ್ನ ವಟವೃಕ್ಷತ್ವದ ಮಹತ್ ಸ್ವರೂಪದ ಬೃಹದ್ ವಿಕಾಸದತ್ತ ಮೈಚಾಚಿ ಮೊಗವೆತ್ತಿ, ಆಕಾಶದತ್ತ ಶಾಖೋಪಶಾಖೆಯ ಸುದೀರ್ಘಬಾಹುಪ್ರಸಾರ ಮಾಡಲು ಉತ್ಸಾಹದಿಂದ ವಿಜೃಂಭಿಸಿತು!

ಆಂಗ್ಲೇಯ ಕಾವ್ಯಸಾಹಿತ್ಯದ ಪರಿಚಯದಿಂದ ನನಗೆ ಅಲ್ಲಿಯ ನಾನಾ ರೀತಿಯ ಛಂದೋವಿಧಾನಗಳೆಲ್ಲ ಗ್ರಾಹ್ಯವಾಗಿದ್ದುವು. ಅಲ್ಲದೆ ನಾನೂ ಇಂಗ್ಲಿಷಿನಲ್ಲಿ ಪದ್ಯರಚನೆ ಮಾಡುತ್ತಿದ್ದುದರಿಂದ ಆ ಎಲ್ಲ ಛಂದೋವಿಧಾನಗಳಲ್ಲಿಯೂ ಪ್ರಯೋಗ ನಡೆಸಿದ್ದೆ. ಇಂಗ್ಲಿಷಿನಲ್ಲಿ ಸಾನೆಟ್ ಮತ್ತು ಬ್ಲಾಂಕ್‌ವರ್ಸ್‌ಗಳನ್ನು ರಚಿಸಿದ್ದಂತೆ ನನ್ನಿಂದ ಕನ್ನಡದಲ್ಲಿಯೂ ಪ್ರಯತ್ನಗಳು ನಡೆದಿದ್ದವು. ಮಾಸ್ತಿ ವೆಂಕಟೇಶ ಐಯ್ಯಂಗಾರ ಅವರು ‘ಮದಲಿಂಗನ ಕಣಿವೆ’ ಮೊದಲಾದವುಗಳಲ್ಲಿ ಬ್ಲಾಂಕ್‌ವರ್ಸ್ ಪ್ರಯೋಗ ನಡೆಸಿದ್ದನ್ನು ಗಮನಿಸಿದ್ದೆ. ಆಗಿನ್ನೂ ಅದಕ್ಕೆ ‘ಸರಳರಗಳೆ’ ಎಂದು ಹೆಸರು ಸಿದ್ಧವಾಗಿರಲಿಲ್ಲ. ಕನ್ನಡದಲ್ಲಿ ಸಾನೆಟ್ ರಚನೆಯಾದದ್ದು ನನ್ನ ಗಮನಕ್ಕೆ ಬಂದಿರಲಿಲ್ಲ. ಪ್ರಯೋಗಕ್ಕಾಗಿ ಹನ್ನೆರಡು ಪಂಕ್ತಿಯ ಸೀಸಪದ್ಯಗಳನ್ನು ಸಾನೆಟ್ಟಿಗೆ ಸಂವಾದಿಯಾಗಿ ರಚಿಸಿ ಪ್ರಯೋಗ ನಡೆಸಿದ್ದೆ. ಆದರೆ ಮನಸ್ಸಿಗೆ ತೃಪ್ತಿಯಾಗಲಿಲ್ಲ. ೧೯೨೬ರಲ್ಲಿ ಬಿ.ಎಂ.ಶ್ರೀಯವರು ಪ್ರಕಟಿಸಿದ್ದ ‘ಇಂಗ್ಲೀಷ್ ಗೀತಗಳು’ ಅಲ್ಲಿ ಸಾನೆಟ್ ಆಗಲಿ ಬ್ಲಾಂಕ್‌ವರ್ಸ್ ಆಗಲಿ ಇರಲಿಲ್ಲ. ಅಲ್ಲದೆ ಷೇಕ್‌ಸ್ಪಿಯರ್ ನಾಟಕಗಳನ್ನು ಓದಿದಾಗಲೆಲ್ಲ ಕನ್ನಡದಲ್ಲಿಯೂ ಬ್ಲಾಂಕ್‌ವರ್ಸ್ ನಾಟಕ ರಚನೆ ಮಾಡಬೇಕು ಎಂಬ ಹಂಬಲವಾಗುತ್ತಿತ್ತು. ಮಿಲ್ಟನ್ ಮಹಾಕವಿಯ ಪ್ಯಾರಡೈಸ್ ಲಾಸ್ಟ್‌ನಂತೆ ಕನ್ನಡದಲ್ಲಿ ಬ್ಲಾಂಕ್‌ವರ್ಸ್ ಎಪಿಕ್ ಬರೆಯಬೇಕೆನ್ನುವ ಅಭೀಷ್ಟೆ ಬೇರೆ ಕಾಡುತ್ತಿತ್ತು. ಆದರೆ ಮಾಸ್ತಿಯವರ ಬ್ಲಾಂಕ್ ವರ್ಸ್ ರೀತಿ ಮಹಾಕಾವ್ಯದ ಮಹಾಶೈಲಿಗೆ ಒಂದಿನಿತೂ ಹೊಂದಿಕೊಳ್ಳುವುದಿಲ್ಲ ಎಂಬುದೂ ನನಗೆ ಖಾತ್ರಿಯಾಗಿತ್ತು. ನಾನೂ ಮಾಸ್ತಿಯವರಂತೆ ಬ್ಲಾಂಕ್‌ವರ್ಸ್ ನಲ್ಲಿ ೨೨-೯-೧೯೨೭ರಲ್ಲಿ ಈಗಾಗಲೇ ‘ಕಥನಕವನಗಳು’ ಅಲ್ಲಿ ಪ್ರಕಟಗೊಂಡಿರುವ ‘ಕರಿ ಸಿದ್ದ’ ಎಂಬ ಕಥನಕವನ ರಚಿಸಿದ್ದೆ. ಅದನ್ನು ಬರೆದ ನಾಲ್ಕೆ ದಿನಗಳಲ್ಲಿ ಎಂದರೆ ೨೬-೯-೨೭ರಲ್ಲಿ ‘ಪ್ರಾಯಶ್ಚಿತ್ತ’ ಎಂಬ ಸುಮಾರು ೨೨೦ ಪಂಕ್ತಿಯ ಮತ್ತೊಂದು ಕಥನವನ್ನೂ ಬ್ಲಾಂಕ್‌ವರ್ಸ್‌ನಲ್ಲಿ ರಚಿಸಿದ್ದೇನೆ. (ಅದನ್ನು ಇದುವರೆಗೆ ಎಲ್ಲಿಯೂ ಪ್ರಕಟಿಸಿಲ್ಲ. ಉಚಿತ ಕಂಡಲ್ಲಿ ನೆನಪಿನ ದೋಣಿಯಲ್ಲಿ ಪ್ರಕಟಿಸುತ್ತೇನೆ.) ಆದರೆ ಮೇಲೆ ಹೇಳಿರುವ ಎರಡೂ ಕಥನಕವನಗಳ ವಸ್ತು ಸಾಮಾನ್ಯದ್ದು, ಗ್ರಾಮೀಣ ಜೀವನದ ಸಾಧಾರಣ ಬದುಕನ್ನು ಕುರಿತದ್ದು. ಮಹತ್ತಾದ ಮತ್ತು ಮಹೋದಾತ್ತವಾದ ವಸ್ತುವಿಗೆ ಆ ರೀತಿಯ ಬ್ಲಾಂಕವರ್ಸ್ ಒಗ್ಗುವುದಿಲ್ಲ. ನಾಟಕಕ್ಕೆ ಕನ್ನಡದಲ್ಲಿ ನನಗೆ ತಿಳಿದಂತೆಯೂ ಬ್ಲಾಂಕವರ್ಸ್ ಪ್ರಯೋಗ ಮಾಡಿರಲಿಲ್ಲ. ನಾನು ಮೊತ್ತ ಮೊದಲಾಗಿ ೧೯೨೭ರಲ್ಲಿ ‘ಜಲಗಾರ’, ‘ಯಮನಸೋಲು’ ಮತ್ತು ‘ಮಹಾರಾತ್ರಿ’ ಮೂರು ನಾಟಕಗಳನ್ನು ಒಂದಾದಮೇಲೆ ಒಂದರಂತೆ ಮೂರುನಾಲ್ಕು ದಿನಗಳಲ್ಲಿಯೆ ರಚಿಸಿದೆ, ಆ ವಿಚಾರವಾಗಿ ಮುಂದೆ ಹೇಳುತ್ತೇನೆ. ಸದ್ಯಕ್ಕೆ ಮಹಾಕಾವ್ಯಕ್ಕೆ ಬ್ಲಾಂಕ್‌ವರ್ಸ್ ಬಳಸುವ ನನ್ನ ಹಂಬಲದ ತೀವ್ರತೆಯನ್ನು ಪ್ರತಿಮಿಸುವಂತೆ ನನಗಾದ ಒಂದು ಅನುಭವವನ್ನು ಕುರಿತು ಹೇಳುತ್ತೇನೆ. ಕವಿಗಳೆಂದರೆ ಭವಿಷ್ಯತ್ತು ವರ್ತಮಾನದ ಮೇಲೆ ಚೆಲ್ಲುವ ಛಾಯೆಗಳು ಎಂದು ಶೆಲ್ಲಿ ಹೇಳಿದ್ದ ಸುಭಾಷಿತವನ್ನು ಒಂದು ಅರ್ಥದಲ್ಲಿ ನಿಜಗೊಳಿಸುತ್ತದೆ ನನಗೆ ಉಂಟಾದ ಆ ಅನುಭವ:

ಯಾವುದೋ ಒಂದು ಭಾನುವಾರವಿರಬೇಕು. ರಜಾ ಇದ್ದುದರಿಂದ ಹಗಲುನಿದ್ದೆಗೆ ಸದವಕಾಶ. ಆಗ ದಿವಾನರ ರಸ್ತೆಯಲ್ಲಿದ್ದ ಆಶ್ರಮದ ಬಾಡಿಗೆ ಕಟ್ಟಡದಲ್ಲಿ ಪ್ರತ್ಯೇಕ ದೇವರ ಮನೆಯ ಕೊಠಡಿ ಇರಲಿಲ್ಲ. ಆ ಮನೆಗೆ ಇದ್ದ ಒಂದೇ ಒಂದು ದೊಡ್ಡ ಹಾಲಿನ ಅಗ್ರಭಾಗದಲ್ಲಿ ಶ್ರೀಗುರು ಶ್ರೀಮಾತೆ ಮತ್ತು ಶ್ರೀ ಸ್ವಾಮಿಜಿಯವರ ಪಟಗಳನ್ನು ಸಣ್ಣ ವೇದಿಕೆಯ ಮೇಲಿಟ್ಟು ತಾತ್ಕಾಲಿಕ ದೇವರಮನೆ ರಚಿಸಿದ್ದರು. ಅದಕ್ಕೆ ಸರಿಸಬಹುದಾದ ಒಂದು ತೆರೆಮರೆ ಎಳೆದು ಪೂಜೆಯ ಅನಂತರ ಅದನ್ನು ಪ್ರತ್ಯೇಕಿಸುತ್ತಿದ್ದರು. ಆ ಹಾಲಿನಲ್ಲಿಯೆ ದೇವರ ಕಡೆ ತಲೆಹಾಕಿಕೊಂಡು ಮಲಗುತ್ತಿದ್ದೆವು.

ಒಂದು ಚಾಪೆ ಹಾಕಿಕೊಂಡು, ತಲೆಗೆ ಏನನ್ನೊ ಆಪು ಕೊಟ್ಟುಕೊಂಡು, ಮಧ್ಯಾಹ್ನದ ಊಟ ಪೂರೈಸಿದ ಮೇಲೆ, ಆ ಹಾಲಿನಲ್ಲಿ ನಾನೊಬ್ಬನೆ ಮಲಗಿದೆ. ಹೆಚ್ಚು ಹೊತ್ತು ಮಲಗಬಾರದೆಂದೇ ಹಾಸಗೆ ಹಾಸಿಕೊಂಡಿರಲಿಲ್ಲ. ಸ್ವಾಮಿಜಿ ಮುಂಭಾಗದ ಅವರ ಕೊಟಡಿಯಲ್ಲಿ ಜೋಡಿ ಬೆಂಚಿನ ಚಾಪೆಹಾಸಗೆಯ ಮೇಲೆ ಮಲಗುತ್ತಿದ್ದುದು ರೂಢಿ. ನನ್ನನ್ನು ಯಾರಾದರೂ ಕೇಳಿಕೊಂಡು ಆಶ್ರಮಕ್ಕೆ ಪ್ರವೇಶಿಸಿದರೆ ಅವರಿಗೆ ಮೊದಲು ಕಾಣಸಿಗುತ್ತಿದ್ದವರು ಸ್ವಾಮಿಜಿ. ಅವರ ನಿರ್ದೇಶನದ ಮೇರೆಗೆ ನನ್ನಲ್ಲಿಗೆ ಬರಬೇಕಿತ್ತು. ಆಶ್ರಮ ಸಂಪೂರ್ಣ ನಿಃಶಬ್ದವಾಗಿತ್ತು. ನಾನು ಮಲಗಿದ ನಡುಮನೆ ದೇವರಮನೆಯೂ ಆಗಿದ್ದುದರಿಂದ ಹೂವಿನ ಮತ್ತು ಕಡ್ಡಿಯ ಸುವಾಸನೆ ತುಂಬಿ ವಾತಾವರಣವನ್ನು ಪವಿತ್ರಗೊಳಿಸಿತ್ತು. ಅಲ್ಲದೆ ನಿತ್ಯವೂ ಸಾಯಂಕಾಲ ಅಲ್ಲಿ ಪೂಜೆ ಪ್ರಾರ್ಥನೆ ಭಜನೆ ಧ್ಯಾನ ನಡೆಯುತ್ತಿದ್ದುದರಿಂದ ಒಂದು ಚಿನ್ಮಯ ಪರಿವೇಷವೂ ಉಂಟಾಗಿದ್ದಿರಬಹುದು, ಶ್ರದ್ಧೆಯ ಅನುಭವಕ್ಕೆ.

ಅದ್ಭುತ ಕನಸು: ನನ್ನ ಹಿಗ್ಗಿಗೆ ಮೇರೆ ಇರಲಿಲ್ಲ. ಹಲವು ಕಾಲದಿಂದಲೂ ಹಂಬಲಿಸುತ್ತಿದ್ದುದು ಕೈಗೂಡಿತ್ತು. ಕನ್ನಡದಲ್ಲಿ ಇಂಗ್ಲಿಷಿನಲ್ಲಿರುವ ಸರ್ವ ಛಂದಸ್ಸುಗಳಲ್ಲಿಯೂ ಕಾವ್ಯರಚನೆ ಮಾಡಬೇಕು; ಇಂಗ್ಲೀಷ್ ಸಾಹಿತ್ಯಕ್ಕೆ ಯಾವ ವಿಧದಲ್ಲಿಯೂ ಬಿಟ್ಟುಕೊಡದಂತಹ ಕನ್ನಡ ಸಾಹಿತ್ಯ ಸೃಷ್ಟಿಯಾಗಬೇಕು; ಕನ್ನಡವು ಜಗತ್ತಿನಲ್ಲಿಯೆ ಕೀರ್ತಿಶಾಲಿಯಾಗಬೇಕೆಂದು ಒಂದು ವರ್ಷದ ಹಿಂದೆಯೆ ೧೯೨೬ರಲ್ಲಿ ಬರೆದಿದ್ದ ‘ಹಾಳೂರು’ ದೀರ್ಘ ಕವನದಲ್ಲಿ

“ಕರ್ಣಾಟಮಾತೆಯಾ ಮಕ್ಕಳಿರ, ಕೂಡಿ
ತಾಯ್ನುಡಿಯ ಸೇವೆಯನ್ನು ಮನಸಿಟ್ಟು ಮಾಡಿ…
ಕನ್ನಡದ ಕವಿವರರೆ, ನೀವೆಲ್ಲ ಸೇರಿ
ಕನ್ನಡದ ಕೇತನವು ನಭದಲ್ಲಿ ಹಾರಿ
ಜಗದ ಕಂಗಳ ಹಿಡಿದು ಮೆರೆವಂತೆ ಮಾಡಿ,
ಕನ್ನಡದ ವಾಗ್ದೇವಿಗಮರತೆಯ ನೀಡಿ!”

ಎಂದು ನಾನು ಹಾಡಿದ್ದೆ. ಕವಿಯ ಧ್ಯೇಯ ‘ಜಗದ ಕಂಗಳ’ ಹಿಡಿದು ಕನ್ನಡದ ವಾಗ್ದೇವಿಗಮರತೆಯ ನೀಡಬೇಕೆಂದು ಆಕಾಶದೆತ್ತರಕ್ಕೆ ಕೈಚಾಚಿತ್ತು. ಅದು ಇಂದು ಕೈಗೂಡಿತ್ತು: ನಾನೊಂದು ಬ್ರಹದ್‌ಗಾತ್ರದ ಅಪ್ರಾಸಛಂದಸ್ಸಿನ (ಬ್ಲಾಂಕ್‌ವರ್ಸ್) ಮಹಾಕಾವ್ಯ (ಎಪಿಕ್) ರಚಿಸಿದ್ದೇನೆ. ಅದು ಅಚ್ಚಾಗಿ ಬಂದಿದೆ! ಕೈಯಲ್ಲಿ ಹಿಡಿದಿದ್ದೇನೆ ತೂಕವಾಗಿದೆ! ಎಷ್ಟು ಮನೋಹರವಾಗಿ ಮುದ್ರಿತವಾಗಿದೆ! ಅದರ ಕ್ಯಾಲಿಕೊ ಬೈಂಡಿನ ಸೌಂದರ್ಯವೊ ಹೇಳತೀರದು! ಹಾಳೆಗಳನ್ನು ಮಗುಚಿ ನೋಡುತ್ತಿದ್ದೇನೆ: ನುಣ್ಣನೆ ಕಾಗದ, ಮುದ್ದಾದ ಅಚ್ಚು! ಓದುತ್ತಿದ್ದೇನೆ….

“ರೀ, ರೀ, ಪುಟ್ಟಪ್ಪ! ಎಷ್ಟು ನಿದ್ದೆ ಮಾಡ್ತೀರಿ? ಏಳ್ರೀ!” ನನ್ನ ಭುಜ ಹಿಡಿದು ತಳ್ಳಿತಳ್ಳಿ ಎಬ್ಬಿಸಿಬಿಟ್ಟರು! ಸ್ವಲ್ಪ ಸಿಟ್ಟಿನಿಂದಲೆ ಕಣ್ಣುಬಿಟ್ಟು ನೋಡುತ್ತೇನೆ, ಸರ್ವದಾ ವಿನೋದ ಪ್ರವೃತ್ತಿಯ ಮಿತ್ರ ಎಚ್.ಬಿ.ನಂಜಯ್ಯ! ಪಾಪ! ಆತನಿಗೆ ಹೇಗೆ ಗೊತ್ತಾಗಬೇಕು ತಾನೆಸಗಿದ ಮಹಾ ಅನರ್ಥ?

ಅವರು ಏನೇನೊ ತಮಾಷೆ ಮಾಡಿ ಹರಟೆಹೊಡೆದು ಹೊರಟುಹೋದರು. ನಾನು ಕಾಣುತ್ತಿದ್ದು ಮಧ್ಯದಲ್ಲಿಯೆ ಭಗ್ನವಾಗಿದ್ದ ಕನಸನ್ನು ಮತ್ತೆ ನೆನೆಯತೊಡಗಿ ಅತೀವ ಹರ್ಷಿತನಾದೆ, ಕನಸಿನಲ್ಲಾದರೂ ಎಪಿಕ್ಕಿಗೆ ಬೇಕಾದ ಅಪ್ರಾಸಛಂದಸ್ಸಿನ (ಬ್ಲಾಂಕ್‌ವರ್ಸ್) ಗುಟ್ಟು ಸಿಕ್ಕಿತಲ್ಲಾ ಎಂದು. ನನ್ನ ಸ್ಮೃತಿಗೆ ಅಚ್ಚಾಗಿದ್ದ ಆ ಪುಸ್ತಕದ ಚಿತ್ರ, ಅದನ್ನು ನಾನು ಹಿಡಿದುಕೊಂಡಿದ್ದ ರೀತಿ, ಆ ಮಹಾಕಾವ್ಯ ಪ್ರಾರಂಭವಾಗಿದ್ದ ಆ ಪುಸ್ತಕದ ಚಿತ್ರ, ಅದನ್ನು ನಾನು ಹಿಡಿದುಕೊಂಡಿದ್ದ ರೀತಿ, ಆ ಮಹಾಕಾವ್ಯ ಪ್ರಾರಂಭವಾಗಿದ್ದ ಪುಟದ ಪಂಕ್ತಿ ಜೋಡಣೆ,  ಅದರ ಅಂದ-ಚೆಂದ ಎಲ್ಲ ಬಂದುವು. ಆದರೆ ನನಗೆ ತಿಳಿಯದ ಬೇರೊಂದು ಭಾಷೆಯ ಬೇರೊಂದು ಲಿಪಿಯಲ್ಲಿ ಅದು ಹೇಗಾಗುತ್ತಿತ್ತೊ ಹಾಗಾಯಿತು! ಕನ್ನಡದಲ್ಲಿದ್ದ ಅದರ ಒಂದು ಪಂಕ್ತಿಯನ್ನಾದರೂ ನೆನಪಿಗೆ ತಂದುಕೊಳ್ಳಲು ಸಮರ್ಥನಾದರೆ ಐಶ್ವರ್ಯವಿದ್ದ ಪೆಟ್ಟಿಗೆಯ ಬೀಗಕ್ಕೆ ಬೀಗದ ಕೈ ಸಿಕ್ಕಿದಂತಾಗುತ್ತಿತ್ತಲ್ಲಾ ಎಂದು ಮತ್ತೆಮತ್ತೆ ಪ್ರಯತ್ನಪಟ್ಟೆ. ವ್ಯರ್ಥವಾಗಿ! ಏನು ಮಾಡಿದರೂ ಯಾವ ಪದಗಳಿಂದ ಹೇಗೆ ಪ್ರಾರಂಭವಾಗಿತ್ತು ಎಂಬುದು ಹೊಳೆಯಲಿಲ್ಲ!

ಆ ದಿನ ಮಾತ್ರವಲ್ಲ. ಎಷ್ಟೊ ದಿನಗಳು, ಕುಳಿತಲ್ಲಿ, ನಿಂತಲ್ಲಿ, ಏನೇನೊ ಕೆಲಸದ ಮಧ್ಯದಲ್ಲಿ ಆ ಕನಸಿನ ಗಂಟೆಗೆ ಕೈಹಾಕಿ ಪಡೆಯಲು ಹುಚ್ಚು ಸಾಹಸಮಾಡಿದೆ. ಆದರೆ ಮಹಾಕಾವ್ಯಕ್ಕೆ ಒಗ್ಗುವ ಅಪ್ರಾಸಛಂದಸ್ಸಿನ (ಎಪಿಕ್ ಬ್ಲಾಂಕ್‌ವರ್ಸಿನ) ಗುಟ್ಟು ಕೈವಶವಾಗಲಿಲ್ಲ. ಸೋತು ತೆಪ್ಪಗಾದೆ.

ಒಂದು ದೃಷ್ಟಿಯಲ್ಲಿ ಸೋತಿದ್ದೆ; ಆದರೆ ನಿಜವಾಗಿಯೂ ಸೋತಿರಲಿಲ್ಲ ಎಂಬುದು ಆಮೇಲೆ ಗೊತ್ತಾಯಿತು. ಹಲವು ವರ್ಷಗಳ ಅನಂತರ. ಯಾವುದು ಸುಪ್ತಪ್ರಜ್ಞೆಯಿಂದ ಹೊಮ್ಮಿ ಸ್ವಪ್ನಸತ್ತೆಯಲ್ಲಿ ಮೂರ್ತಿಗೊಂಡು ಜಾಗ್ರತ್ ಪ್ರಜ್ಞೆಗೆ ಸಂಪೂರ್ಣವಾಗಿ ಲುಪ್ತವಾಗಿ ಹೋಗಿತ್ತೋ ಅದು ತನ್ನದೇ ರೀತಿಯಲ್ಲಿ ತನ್ನದೇ ಆದ ದಾರಿ ಹಿಡಿದು ಮೆಲ್ಲಮೆಲ್ಲಗೆ ಆವಿರ್ಭೂತವಾಗುತ್ತಿತ್ತು.

೧೯೨೭ ರಲ್ಲಿ ನಾನು ಮೊದಲನೆಯ ಎಂ.ಎ.ಗೆ ಸೇರಿದ ಕೆಲತಿಂಗಳಲ್ಲಿಯೆ, ಬಹುಶಃ ಆಗಸ್ಟ್-ಅಕ್ಟೋಬರ್‌ಗಳಲ್ಲಿರಬಹುದು, ನಾನು ಬ್ಲಾಂಕ್‌ವರ್ಸ್ ಪ್ರಯೋಗಿಸಿ ನಾಟಕ ರಚಿಸಲು ಉದ್ಯುಕ್ತನಾದೆ. ಐದು ಮಾತ್ರೆಯ ನಾಲ್ಕು ಗಣಗಳನ್ನುಪಯೋಗಿಸಿ ಆದಿ ಅಂತ್ಯಪ್ರಾಸಗಳನ್ನು ಬಿಟ್ಟು ಅಪ್ರಾಸಛಂದಸ್ಸಿನ (ಇಂಗ್ಲಿಷಿನ ಬ್ಲಾಂಕ್‌ವರ್ಸಿಗೆ ಸಂವಾದಿಯಾಗಿ) ಪ್ರಯೋಗ, ವಿಶೇಷವಾಗಿ ಕಥನಕ್ಕೆ, ಕನ್ನಡದಲ್ಲಿ ಆಗಲೆ ಬಳಕೆಯಾಗಿತ್ತು, ಗೋವಿಂದ ಪೈ, ಮಾಸ್ತಿ ವೆಂಕಟೇಶ ಐಯ್ಯಂಗಾರ್ ಮುಂತಾದವರಿಂದ.

ಆದರೆ ನಾಟಕಕ್ಕೆ ಅಪ್ರಾಸಛಂದಸ್ಸು ಇನ್ನೂ ಪ್ರಯೋಗಗೊಂಡಿರಲಿಲ್ಲ. ಹಾಗೇನಾದರೂ ಪ್ರಯೋಗಗೊಂಡಿದ್ದರೆ ಅದು ಪ್ರೊ. ವೆಂಕಣ್ಣಯ್ಯನಂತಹರಿಗೆ ತಿಳಿಯದೆ ಇರುತ್ತಿರಲಿಲ್ಲ. ನನ್ನ ‘ಯಮನಸೋಲು’ ಮತ್ತು ‘ಬಿರುಗಾಳಿ’ಗಳು ಒಟ್ಟಿಗೆ ‘ಎರಡು ನಾಟಕಗಳು’ ಎಂದು ಪ್ರಕಟವಾದಾಗ ಅದಕ್ಕೆ ಮುನ್ನುಡಿ ಬರೆಯುತ್ತ ಪ್ರೊ. ವೆಂಕಣ್ಣಯ್ಯನವರೇ ಮೊತ್ತಮೊದಲಾಗಿ ಅಪ್ರಾಸಛಂದಸ್ಸಿಗೆ ‘ಸರಳರಗಳೆ’ ಎಂದು ನಾಮಕರಣ ಮಾಡಿದರು. ಅವರು ಹೀಗೆ ಹೇಳಿದ್ದಾರೆ: “ಈ ನಾಟಕಗಳಲ್ಲಿರುವ ಪದ್ಯದ ಮೂಲವು ರಗಳೆಗಳಲ್ಲಿದೆ. ಲಲಿತರಗಳೆಯಲ್ಲಿ ಪ್ರತಿಪಾದದಲ್ಲಿಯೂ ಐದು ಮಾತ್ರೆಯ ನಾಲ್ಕು ಗಣಗಳಿರುತ್ತವೆ; ಪಾದದ ಆದ್ಯಂತಗಳಲ್ಲಿ ಪ್ರಾಸವಿರುತ್ತದೆ. ಈ ಪ್ರಾಸದ ಕಟ್ಟನ್ನು ತೆಗೆದುಹಾಕಿದರೆ ಪುಟ್ಟಪ್ಪನವರು ಬರೆದ ಪದ್ಯದ ತಳಹದಿ ಸಿಕ್ಕುತ್ತದೆ. ಈ ಪ್ರಾಸರಹಿತವಾದ ರಗಳೆಯನ್ನು ‘ಸರಳರಗಳೆ’ ಎಂದು ಕರೆಯಬಹುದು….  ಈ ಸರಳರಗಳೆಯನ್ನು ಪುಟ್ಟಪ್ಪನವರು ಹೊಸದಾಗಿ ಕಲ್ಪಿಸಿಕೊಳ್ಳಲಿಲ್ಲ. ಅದು ಮೊದಲೇ ಪ್ರಚಾರಕ್ಕೆ ಬಂದಿತ್ತು. ಅದನ್ನು ಮೊದಲು ನಾಟಕಕ್ಕೆ ಬಳಸಿಕೊಂಡವರು ಪುಟ್ಟಪ್ಪನವರು….”

ಮೊದಲೇ ಸಿದ್ದವಾಗಿದ್ದ ’ಸರಳರಗಳೆ’ಯನ್ನು ನಾಟಕಕ್ಕೆ ಬಳಸಿಕೊಳ್ಳುವುದರಲ್ಲಷ್ಟೇ ಏನೂ ಹೆಚ್ಚುಗಾರಿಕೆ ಇಲ್ಲ. ಆದರೆ ಕಥನಕ್ಕೆ ಒಗ್ಗುವ ಸರಳರಗಳೆ ಹಾಗೆಹಾಗೆಯೆ ನಾಟಕಕ್ಕೆ ಸರಿಹೊಂದುವುದಿಲ್ಲ ಎಂಬುದು ನನಗೆ ಇಂಗ್ಲಿಷ್ ಸಾಹಿತ್ಯದ ಪರಿಚಯದಿಂದ ಚೆನ್ನಾಗಿ ತಿಳಿದಿತ್ತು. ಷೇಕ್‌ಸ್ಪಿಯರ್ ನಾಟಕದ ಬ್ಲಾಂಕ್‌ವರ್ಸ್‌ಗೂ ಮಿಲ್ಟನ್ನಿನ ಎಪಿಕ್ ಬ್ಲಾಂಕ್‌ವರ್ಸ್‌ಗೂ ಇರುವ ಧ್ರುವಾಂತರ ವ್ಯತ್ಯಾಸವನ್ನು ನಾನು ಓದಿ ಮಾತ್ರವಲ್ಲ ಅಧ್ಯಯನ ಮಾಡಿಯೂ ತಿಳಿದಿದ್ದೆ. ನಾಟಕವು ಸಂವಾದ ಪ್ರಧಾನ; ಮಹಾಕಾವ್ಯ ಕಥನಪ್ರಧಾನ. ಉದಾತ್ತ ವಸ್ತುಕಥನಕ್ಕೆ ಬೇಕಾದ ಭಾಷೆಯ, ಛಂದಸ್ಸಿನ ಮತ್ತು ಲಯದ ಬೀಸು ಸಂವಾದವೆ ಮುಖ್ಯವಾಗಿರುವ ನಾಟಕಕ್ಕೆ ಹಿಡಿಸುವುದಿಲ್ಲ. ಅಲ್ಲದೆ ಛಂದಸ್ಸಿನ ಲೆಕ್ಕಾಚಾರವೂ ಆಡುವ ಮಾತಿನ ಭಾಷೆಗೂ ಓದಿ ವಾಚನ ಮಾಡುವ ಭಾಷೆಗೂ ವ್ಯತ್ಯಸ್ತವಾಗುತ್ತದೆ. ನಾಟಕದ ಸಂವಾದದ ಛಂದಸ್ಸು ಅರ್ಧ ಪಂಕ್ತಿಯಲ್ಲಿ ನಿಲ್ಲಬಹುದು; ಕಾಲುಪಂಕ್ತಿಯಲ್ಲಿ ನಿಲ್ಲಬಹುದು; ಒಂದು ಎರಡು ಮೂರು ಪಂಕ್ತಿಗಳವರೆಗೂ ವಿಸ್ತರಿಸಬಹುದು. ಒಮ್ಮೊಮ್ಮೆ ಐದು ಮಾತ್ರೆಯ ಸ್ಥಾನದಲ್ಲಿ ಮೂರೆ ಮಾತ್ರೆಗಳು ನಿಲ್ಲಬೇಕಾಗುತ್ತದೆ; ಇನ್ನೊಮ್ಮೆ ಒಂದು ಪ್ಲುತವೇ ಒಂದು ಇಡೀ ಗಣದ ಸ್ಥಾನವನ್ನು ಆಕ್ರಮಿಸುವುದೂ ಉಂಟು. ಅಲ್ಲದೆ ನಾಟಕೀಯವಾದ ಸಂವಾದದ ಮತ್ತು ಅಭಿನಯದ ಭಾಷೆ ಕಥನ ರೀತಿಯ ‘ರಗಳೆಯತನ’ದಿಂದ  ಪ್ರಯತ್ನಪೂರ್ವಕವಾಗಿ ಬಿಡಿಸಿಕೊಂಡು ಪಾರಾಗಿ ನಿಲ್ಲಬೇಕಾಗುತ್ತದೆ. ಅದಕ್ಕಾಗಿ ನಿಲ್ದಾಣಗಳನ್ನು ಅಥವಾ ಯತಿಸ್ಥಾನಗಳನ್ನು ಕಲ್ಪಿಸಬೇಕಾಗುತ್ತದೆ. ಏಕರೂಪತೆಯ ಬೇಸರ (ರಗಳೆತನ) ಒದಗದ ಹಾಗೆ. ಅಂತೂ ಇಂತೂ ಮುಂದೆ ಕೆಲವರ್ಷಗಳಲ್ಲಿ ಕಾವ್ಯಕ್ಕೆ ಮಹಾಛಂದಸ್ಸಾಗಿಯೂ ನಾಟಕಕ್ಕೆ ನಾಟ್ಯಛಂದಸ್ಸಾಗಿಯೂ ಪರಿವರ್ತಿತವಾಗುವ ವಿಕಾಸದ ಹಾದಿಯಲ್ಲಿ ’ರಗಳೆ’ ಅಪ್ರಾಸಛಂದಸ್ಸಿನ ’ಸರಳರಗಳೆ’ಯಾಗಿ ನನ್ನ ಮೊದಲ ನಾಟಕವಾದ ‘ಜಲಗಾರ’ದಲ್ಲಿ ಕಣ್ದೆರೆಯಿತು.