‘ಜಲಗಾರ’ ‘ಯಮನಸೊಲು’ ಮತ್ತು ‘ಮಹಾರಾತ್ರಿ’ ಈ ಮೂರೂ ಸರಳ ರಗಳೆಯ ನಾಟಕಗಳನ್ನು ನಾನು ಮೂರು ನಾಲ್ಕು ದಿನಗಳಲ್ಲಿ ಒಂದರ ಮೇಲೊಂದರಂತೆ ಬರೆದೆ. ಆ ಕಾಲದಲ್ಲಿ ಒಂದು ರಸಾವೇಶ ನನ್ನ ಚೇತನವನ್ನೆಲ್ಲ ವ್ಯಾಪಿಸಿ ದೀಪ್ತಗೊಳಿಸಿದಂತಿರುತ್ತಿತ್ತು. ಯಾವುದೊ ಒಂದು ಮಹತ್ತರವಾದ ವಿಶ್ವವ್ಯಾಪಾರಗಳಲ್ಲಿ ಅಂಗೀಭೂತವಾಗಿ ಕೃತಿಗಳು ಅವತರಿಸುವಂತೆ ತೋರುತ್ತಿತ್ತು. ರವಿಂದ್ರನಾಥರ ಮತ್ತು ಸ್ವಾಮಿ ವಿವೇಕಾನಂದರ ಕೃತಿಗಳು ಆ ನಾಟಕಗಳಿಗೆ ಪ್ರೇರಕವಾದ ವಸ್ತುಗಳನ್ನು ಬಿಂದು ರೂಪದಲ್ಲಿ ಒದಗಿಸಿದ್ದುವು. ಮಹಾತ್ಮಾ ಗಾಂಧೀಜೀಯ ಅಸ್ಪೃಶ್ಯತಾ ನಿವಾರಣಾ ಮತ್ತು ಹರಿಜನ ದೇವಸ್ಥಾನ ಪ್ರವೇಶದ ಚಳವಳಿಗಳೂ ತಮ್ಮ ಪ್ರಭಾವ ಬೀರಿದ್ದುವು.

ಅಚ್ಚಾದದ್ದು ಮೊದಲು ‘ಯಮನಸೋಲು’ ಆದ್ದರಿಂದ ಅನೇಕರು ಅದನ್ನೆ ಕನ್ನಡದ ಮೊದಲ ‘ಸರಳರಗಳೆ’ಯ ನಾಟಕ ಎಂದು ಭಾವಿಸಿದ್ದಾರೆ. ಆ ಸ್ಥಾನ ನಿಜವಾಗಿ ಸಲ್ಲಬೇಕಾದ್ದು ‘ಜಲಗಾರ’ಕ್ಕೆ.

ನಾಟಕವನ್ನು ಬರೆದು ಮುಗಿಸಿದೊಡನೆ ಅದು ಬಿಸಿಬಿಸಿಯಾಗಿರುವಾಗಲೆ ಆಶ್ರಮದಲ್ಲಿದ್ದವರಿಗೆ ಬಡಿಸುತ್ತಿದ್ದೆ. ಸಾಮಾನ್ಯವಾಗಿ ಸ್ವಾಮಿ ಸಿದೇಶ್ವರಾನಂದರು ಮತ್ತು ಕಸ್ತೂರಿ ಇಬ್ಬರೂ ಅನಿವಾರ್ಯವಾಗಿ ಸದಸ್ಯಮಂಡಲಿಯಲ್ಲಿ ಇದ್ದೇ ಇರುತ್ತಿದ್ದರು. ಅವರ ಪ್ರಶಂಸೆ ನನಗೆ ಮಾದಕ ಪ್ರೋತ್ಸಾಹವಾಗಿರುತ್ತಿತ್ತು. ಅವರಿಬ್ಬರೂ ಕನ್ನಡಿಗರಲ್ಲವಾಗಿ, ಕನ್ನಡವನ್ನು ಸಾಹಿತ್ಯದ ಒರೆಗಲ್ಲಿಗೆ ತಿಕ್ಕಿನೋಡುವಷ್ಟು ಶಕ್ತರಾಗಿರಲಿಲ್ಲ. ಕಸ್ತೂರಿಯವರಿಗೂ ಆಗತಾನೆ ಕನ್ನಡ ಭಾಷೆಯ ಪರಿಚಯವಾಗುತ್ತಿತ್ತು. ಮುಂದೆ ಕನ್ನಡದಲ್ಲಿ ಸೊಗಸಾದ ಸಾಹಿತ್ಯ ಸೃಷ್ಟಿಮಾಡಿ ಹೆಸರಾಂತಿರುವ ಅವರು ಸಾಹಿತ್ಯ ಭೂಮಿಕೆಯಲ್ಲಿ ಕನ್ನಡ ಕಲಿತದ್ದೇ ಕವನ, ಪ್ರಬಂಧ ಮತ್ತು ನಾಟಕ ಕೃತಿಗಳನ್ನು ಓದಿಸಿ, ಓದಿ, ಕೇಳಿ ಮತ್ತು ಆಡಿಸಿ. ವಿವೇಕಾನಂದ ರೋವರ್ ಸ್ಕೌಟುಗಳಿಂದ ‘ಜಲಗಾರ’ವನ್ನು ಅಭ್ಯಾಸ ಮಾಡಿಸಿ, ಸ್ಕೌಟು ದಳದ ವಾರ್ಷಿಕೋತ್ಸವದಲ್ಲಿ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ ಮುಂದೆ ಅವರ ಅಧ್ಯಕ್ಷತೆಯಲ್ಲಿ ಮೊತ್ತಮೊದಲು ಆಡಿಸಿದ್ದೇ ಕಸ್ತೂರಿಯವರು. ಆ ರೀತಿಯ ಮತ್ತು ಕ್ರಾಂತಿಭಾವದ ಸರಳರಗಳೆಯ ನಾಟಕ ಅದೇ ಮೊತ್ತಮೊದಲನೆಯದಾಗಿ ಹೊಸ ಪ್ರಯೋಗವಾದ್ದರಿಂದ ಅದನ್ನು ನೋಡಿದ ಅನೇಕರು ಆಶ್ಚರ್ಯಪಟ್ಟುದಲ್ಲದೆ ತುಂಬ ಶ್ಲಾಘಿಸಿದರಂತೆ. (ನಾನು ನನ್ನ ರೂಢಿಯಂತೆ ಆ ನಾಟಕ ಪ್ರದರ್ಶನಕ್ಕೆ ಹೋಗಿರಲಿಲ್ಲ.) ಆದರೆ ಮೈಸೂರಿನ ವೃದ್ಧಪಿತಾಮಹರೆಂದು ಪ್ರಸಿದ್ದರಾಗಿದ್ದ ಎಂ. ವೆಂಕಟಕೃಷ್ಣಯ್ಯನವರು ಮರುದಿನದ ತಮ್ಮ ಪತ್ರಿಕೆಯಲ್ಲಿ ಆ ನಾಟಕ ಬ್ರಾಹ್ಣಣರನ್ನು ಅವಹೇಳನ ಮಾಡುವುದಕ್ಕೆ ಬರೆಯಲಾಗಿದೆಯೆಂದೂ ಹೀಗೆ ಜಾತಿದ್ವೇಷದ ವಿಷದ ಹಲ್ಲನ್ನು ಬಿತ್ತುವವರು ವಿಷದ ಫಲವನ್ನೆ ಅನುಭವಿಸಬೇಕಾಗುತ್ತದೆ ಎಂದೂ ಕಟುವಾಗಿ ಟೀಕಿಸಿದ್ದರು.

ಕನ್ನಡ ಭಾಷೆಯ ತಿಳಿವಳಿಕೆ ಅಷ್ಟೇನೂ ಇಲ್ಲದಿದುದರಿಂದ ಸ್ವಾಮಿಜಿಯೂ ಕಸ್ತೂರಿಯೂ ನನ್ನ ನಾಟಕಗಳನ್ನು ಭಾಷೆ ಛಂದಸ್ಸು ವ್ಯಾಕರಣ ಇತ್ಯಾದಿ ಪಾಂಡಿತ್ಯ ವಿಮರ್ಶಕ ದೃಷ್ಟಿಯಿಂದ ಪರಿಶೀಲಿಸುವ ಗೋಜಿಗೆ ಹೋಗಲಿಲ್ಲ. ಅವರನ್ನು ಮುಖ್ಯವಾಗಿ ಆಕರ್ಷಿಸಿದ್ದು ಅಲ್ಲಿದ್ದ ಹೊಸ ಆಲೋಚನೆಗಳು ಮತ್ತು ಹೊಸ ಭಾವಗಳು. ಆದರೂ ನಾನು ಅವುಗಳನ್ನು ಬರೆದ ಹೊಸದರಲ್ಲಿ ಆವೇಶಪೂರ್ವಕವಾಗಿ ಓದುತ್ತಿದ್ದುದು ಅವರಿಗೆ ಅದರ ಕಲ್ಪನಾಂಶ ರೂಪಾಂಶಗಳ ಓಜಸ್ಸನ್ನೂ ನಿವೇದಿಸುತ್ತಿತ್ತು.

ನಾನು ‘ಜಲಗಾರ’ ಬರೆದು ಮುಗಿಸಿದ ಮರುದಿನವೆ ‘ಯಮನಸೋಲು’ ನಾಟಕವನ್ನು ಬರೆದು ಪೂರೈಸಿದೆ. ಅದನ್ನು ಬರೆಯುತ್ತಿರುವಾಗ ಮತ್ತು ಬರೆದ ಮೇಲೆ ನಡೆದ ಮೂರು ಘಟನೆಗಳನ್ನು ತಿಳಿಸಿದರೆ ಮೇಲಿನ ಉಕ್ತಿಗಳಿಗೆ ಸಾಕ್ಷಿ ದೊರೆಯುತ್ತದೆಂದು ನಂಬುತ್ತೇನೆ:

ಬೆಳಿಗ್ಗೆ ಕಾಫಿ ತಿಂಡಿ ಪೂರೈಸಿ ಆಗ ನಾನಿರುತ್ತಿದ್ದ ಆಶ್ರಮದ ಹಿಂಭಾಗದ ಕಡಿಮಾಡಿನ ಕೋಣೆಗೆ ಹೋಗಿ, ಸುಮಾರು ಎಂಟು ಗಂಟೆ ಹೊತ್ತಿಗೆ ನಾಟಕ ಬರೆಯಲು ಕುಳಿತೆ (ಕಾಯಿಲೆಯಾಗಿ ಆಶ್ರಮಕ್ಕೆ ನನ್ನನ್ನು ಸ್ವಾಮಿಜಿ ಕರೆದೊಯ್ದಾಗ ಅವರ ಕೊಠಡಿಗೆ ಎದುರಾಗಿದ್ದ ಪ್ರಶಸ್ತವಾದ ಮುಂಭಾಗದ ಕೊಠಡಿಯನ್ನೇ ನನ್ನ ವಾಸಕ್ಕೆ ಬಿಟ್ಟುಕೊಟ್ಟಿದ್ದರು. ಕೆಲವು ತಿಂಗಳಾದ ಮೇಲೆ ಸ್ವಾಮಿ ಘನಾನಂದರು ಬಂದರು. ಅವರು ನನ್ನನ್ನು ಕಡಿಮಾಡಿನ ಅಪ್ರಶಸ್ತ ಕೊಠಡಿಗೆ ಕಳಿಸಿ ತಾವು ಇರುವುದಕ್ಕೆ ನಾನಿದ್ದ ಕೊಠಡಿಯನ್ನು ತಮಗೆ ಬಿಡಿಸಿಕೊಡಬೇಕೆಂದು ಸ್ವಲ್ಪ ಕಟುವಾಗಿಯೆ ಹಠಹಿಡಿದರಂತೆ. ಸ್ವಾಮಿಜಿ ಮನಸ್ಸಿಲ್ಲದಿದ್ದರೂ ನನ್ನನ್ನು ಹಿಂದಿನ ಕೋಣೆಗೆ ಕಳಿಸಬೇಕಾಯಿತಂತೆ.) ಹಿಂದಿನ ದಿನ ಮುಗಿಸಿದ ‘ಜಲಗಾರ’ದಲ್ಲಿ ಬ್ಲಾಂಕ್‌ವರ್ಸ್ ರಚನೆಯಲ್ಲಿ ನನ್ನ ಕೈ ಪಳಗಿತ್ತು. ಕೋಣೆಯ ಬಾಗಿಲು ಹಾಕಿ ಕೊಂಡು, ಒಂದು ರಸಾವೇಶದಲ್ಲಿ, ಪ್ರತಿಭೆ ಕಲ್ಪಿಸಿದಂತೆ ದೃಶ್ಯಗಳನ್ನು ಕಾಣುತ್ತಾ ಸಂವಾದಗಳನ್ನು ಆಲಿಸುತ್ತಾ ಲಿಪಿಕಾರನೆಂಬಂತೆ ಮುಂದುವರಿಯುತ್ತಿದ್ದೆ. ನಾನು ಬೇರೊಂದು ಬ್ರಾಹ್ಮೀ ಜಗತ್ತಿನಲ್ಲಿದ್ದೆ. ಆ ವಿರಾಟರಂಗದಲ್ಲಿ ಮಹದ್ ವ್ಯಕ್ತಿಗಳೂ ಮಹಚ್ಛಕ್ತಿಗಳೂ ತಮ್ಮ ಭವ್ಯ ಲೀಲಾಕ್ರಿಯೆಯಲ್ಲಿ ತೊಡಗಿದ್ದುವು. ನನಗೆ ಬಾಹ್ಯಪ್ರಪಂಚವೆ ವಿಸ್ಮ್ರತವಾಗಿತ್ತು.

ಸುಮಾರು ಹನ್ನೆರಡು ಗಂಟೆಯೂ ಒಂದು ಗಂಟೆಯೊ ಇರಬಹುದು. ಸ್ವಾಮಿಜಿ ನನಗಾಗಿ ಕಾದುಕಾದು, ನಾನು ಊಟಕ್ಕೆ ಹೊರಗೆ ಬರದಿದ್ದುದನ್ನು ಗಮನಿಸಿ, ತಾವೇ ಕರೆಯಲು ಬಂದು ಬಾಗಿಲು ತಟ್ಟಿದರು. ಎರಡು ಮೂರು ಸಲ ತಟ್ಟಿದರೂ ನಾನು ಬಾಗಿಲು ತೆರೆಯಲೂ ಇಲ್ಲ, ಮಾತಾಡಲೂ ಇಲ್ಲ. ನನ್ನ ಮನಸ್ಸೆಲ್ಲ ಯಾವುದೊ ಒಂದು ಸನ್ನಿವೇಶದಲ್ಲಿ ಕೇಂದ್ರೀಕೃತವಾಗಿ ಹೊರಗಿನ ವ್ಯಾಪಾರಗಳನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ.

ನಾಲ್ಕನೆಯ ಸಲವೂ ಐದನೆಯ ಸಲವೊ ಅವರು ರಭಸವಾಗಿಯೆ ಬಾಗಿಲು ತಟ್ಟಲು ನಾನು ಸುಖಸ್ವಪ್ನಭಂಗವಾಗಿ ಮೇಲಿಂದ ಕೆಳಗೆ ಬಿದ್ದವನಂತೆ ಕಾವ್ಯಲೋಕಚ್ಯುತನಾಗಿ ಸರಕ್ಕನೆ ಕುರ್ಚಿಯಿಂದೆದ್ದು ಸಿಡಿಮಿಡಿಗೊಂಡು ಬಾಗಿಲು ತೆರೆದೆ. ಎದುರಿಗೆ ನಿಂತದ್ದು, ನನಗೆ ಪೂಜ್ಯರೂ ನನ್ನ ಅಕ್ಕರೆಗೆ ಪಾತ್ರರೂ ಆಗಿದ್ದ ಸ್ವಾಮಿಜಿ! ಇಂಗ್ಲಿಷಿನಲ್ಲಿ ‘ಪುಟ್ಟಪ್ಪ, ಊಟಕ್ಕೆ ಹೊತ್ತು ಮೀರಿತಲ್ಲಾ? ಬರುವುದಿಲ್ಲವೆ? ನಾವೆಲ್ಲ ಕಾಯುತ್ತಿದ್ದೇವೆ. ತಟ್ಟಿಹಾಕಿ ಬಡಿಸಿದೆ.’ ಎಂದರು, ಅವರಿಗೆ ಸಾಜವಾಗಿರುತ್ತಿದ್ದ ನಗೆಮೊಗದಿಂದ.

ನಾನು ಯಾವ ಭಾವದಲ್ಲಿದ್ದೆನೊ ಏನೊ? ಸಿಡುಕುಮೋರೆ ಮಾಡಿ ಕಟುವಾಗಿಯೆ ‘ನೀವು ಹೋಗಿ ಊಟಮಾಡಿ, ಸ್ವಾಮಿಜಿ. ನನ್ನದನ್ನು ಮುಚ್ಚಿಡಿ. ನಾನು ಆಮೇಲೆ ಬಂದು ಬಡಿಸಿಕೊಂಡು ಊಟಮಾಡ್ತೇನೆ.’ ಎಂದು ನಿಷ್ಠುರ ನುಡಿದು ನಿರ್ದಾಕ್ಷಿಣ್ಯವಾಗಿ ಬಾಗಿಲು ಮುಚ್ಚಿಕೊಂಡು ಬಂದು ಮತ್ತೆ ಬರೆಯಲು ತೊಡಗಿದೆ….

ಸುಮಾರು ಅಪರಾಹ್ನ ಮೂರು ಗಂಟೆ ಆಗಿರಬಹುದು. ‘ಯಮನ ಸೋಲು’ ಮತ್ತವೇಗದಿಂದ ಉನ್ಮತ್ತವೆಂಬಂತೆ ಸಾಗಿತ್ತು. ಇದ್ದಕಿದ್ದಂತೆ ಯಮ-ಸಾವಿತ್ರಿಯರ ಸಂವಾದ ತುಂಡುಗಡಿದು ಕೊಚ್ಚಿಹೋಗುವಂತೆ ಒಂದು ಭೀತಿಯ ಆರ್ತನಾದದ ಚೀರ್ದನಿಯ ಚೀತ್ಕಾರ ಕಿವಿಯುರಿಯುವಂತೆ ಚಿಟಾರಿಸಿತು! ಹಠಾತ್ತನೆ ಬಹಿರ್ಲೋಕಸ್ಥವಾಯ್ತು ನನ್ನ ಚಿತ್ತ. ಕೂಗು ಬಂದ ದಿಕ್ಕಿಗೆ ಕಿಟಕಿಯಿಂದ ಕಣ್ಣು ಹಾಯಿಸಿದೆ. ಕದ್ದಿಂಗಳ ಕತ್ತಲೆಗೆ ಹೆಪ್ಪುಗಟ್ಟಿಸಿದಂತಿದ್ದ ಒಂದು ಕರನೆಯ ಬೆಕ್ಕು ಮೃತ್ಯುವೇಗದಿಂದ ಒಂದು ಅಳಿಲನ್ನು ಬೆನ್ನಟ್ಟಿ ಬರುತ್ತಿತ್ತು. ಆ ಅಳಿಲು ಪ್ರಾಣಭಯದಿಂದ ಚೀತ್ಕರಿಸುತ್ತಾ ಧಾವಿಸಿ ಓಡಿ ಬರುತ್ತಿತ್ತು ನನ್ನ ರೂಮಿನ ಕಡೆಗೆ.

ಸ್ವಾಮಿಜಿಯನ್ನು ಕಳಿಸಿದನು ಬಾಗಿಲು ಮುಚ್ಚಿದ್ದೆನೆ ಹೊರತು ಅಗುಣಿ ಹಾಕಿ ಭದ್ರಪಡಿಸಿರಲಿಲ್ಲ. ಅದು ಸ್ವಲ್ಪ ತೆರೆದುಕೊಂಡೆ ಇತ್ತೆಂದು ತೋರುತ್ತದೆ.

ರಕ್ಷೆ ಪಡೆಯುವುದಕ್ಕಾಗಿ ಮಿಂಚಿನ ಜವದಿಂದ ನನ್ನ ಕೊಠಡಿಯತ್ತ ನೆಗೆದು ಬರುತ್ತಿದ್ದ ಆ ಅಳಿಲನ್ನು ಬೆಕ್ಕು ಹಿಡಿಯದಂತೆ ತಡೆಯುವುದಕ್ಕಾಗಿ ನಾನು ಕುರ್ಚಿಯನ್ನು ತುಸು ಹಿಂದಕ್ಕೆ ತಳ್ಳಿಕೊಂಡು ಸರಕ್ಕನೆ ಎದ್ದು ಬಾಗಿಲತ್ತ ತಿರುಗಿದೆ. ತಿರುಗುವುದರೊಳಗಾಗಿ, ಅಕ್ಷರಶಃ ಕ್ಷಣಾರ್ಧದಲ್ಲಿ, ಆ ಅಳಿಲು ಅರೆತೆರೆದಿದ್ದ ನನ್ನ ರೂಮಿನೊಳಗೆ ನುಗ್ಗಿ ಬಂದು ಗೋಡೆಗೆ ಒರಗಿದಂತಿದ್ದ ಕ್ಯಾಂಪ್‌ಕಾಟ್‌ನ ಕೆಳಗಿದ್ದ ಸ್ಟೀಲ್‌ಟ್ರಂಕಿನತ್ತ ಧಾವಿಸಿತ್ತು. ಕಣ್ಣುಮುಚ್ಚಿ ಬಿಡುವುದರೊಳಗಾಗಿ ಬೆಕ್ಕು ಬಾಣವೇಗದಿಂದಲ್ಲ ಅದಕ್ಕಿಂತಲೂ ವೇಗವಾಗಿ ಹಿಂಬಾಲಿಸಿ ಬಂದು ಚೀರುತ್ತಿದ್ದ ಅಳಿಲನ್ನು ಕಚ್ಚಿಕೊಂಡು ನಾನು ಕುರ್ಚಿಯಿಂದೆದ್ದು ತಿರುಗುವುದರೊಳಗಾಗಿ  ಹಿಂಚಿಮ್ಮಿ ಬಾಗಿಲಿಂದಾಚೆಗೆ ನೆಗೆದು ನೆಗೆದು ಕಣ್ಮರೆಯಾಗಿಯೆ ಬಿಟ್ಟಿತ್ತು! ನಾನು ಬೆಪ್ಪುಬೆರಗಾಗಿ  ಕೈಲಾಗದವನಂತೆ ನಿಂತಿದ್ದೆ! ಸಾವಿತ್ರಿಗೆ ಯಮನು ಸೋಲುತ್ತಿದ್ದ ಸನ್ನವೇಶದಲ್ಲಿಯೆ ಮೃತ್ಯು ತನ್ನ ಕ್ರೂರ ಕಠೋರ ನಿಷ್ಠುರ ಕ್ರಿಯೆಯನ್ನು ನಿರ್ದಾಕ್ಷಿಣ್ಯವಾಗಿ ಸಾಧಿಸಿ ಗೆದ್ದುಬಿಟ್ಟಿತ್ತು!  ಸ್ತಂಭಿತನಾದಂತೆ ಮತ್ತೆ ಕುರ್ಚಿಯ ಮೇಲೆ ಕುಳಿತು ದೀರ್ಘ ಚಿಂತಾಮಗ್ನನಾದೆ….ಆ ಅಳಿಲು ಟ್ರಂಕಿಗೂ ಗೋಡೆಗೂ ನಡುವೆ ಇದ್ದ ಇಕ್ಕಟ್ಟಿನ ಸಂಧಿಯಲ್ಲಿ ಅವಿತಿದ್ದರೆ ಅದಕ್ಕಿಂತಲೂ ದೊಡ್ಡ ಗಾತ್ರದ ಬೆಕ್ಕಿಗೆ ಅಲ್ಲಿಗೆ ಪ್ರವೇಶಿಸಲಾಗುತ್ತಿರಲಿಲ್ಲ. ಅಷ್ಟರೊಳಗೆ ನಾನು ಎದ್ದೋಡಿ ಬೆಕ್ಕನ್ನು ಹೊಡೆದೊಡಿಸುತ್ತಿದ್ದೆ. ಆದರೆ ಅಳಿಲಿಗೆ ಪ್ರಾಣಭಯದಿಂದ ದಿಕ್ಕು ತೋಚದಂತಾಯಿತೊ ಏನೊ?

ಬಹುಶಃ ಆ ಘಟನೆ ನಡೆದ ತರುವಾಯ ಬರೆದವಿರಬೇಕು ಯಮನಬಾಯಲ್ಲಿ ಬಂದ ಈ ಪಂಕ್ತಿಗಳು:

ಇಲ್ಲ, ದೇವಿಯೆ, ಇಲ್ಲ. ಸರ್ವವೂ ವಿಶ್ವ
ಧರ್ಮದ, ಋತದ ಅಂಗಾಂಗಗಳು, ತಾಯೆ. ಧರ್ಮ-
ಬದ್ಧವಾಗಿಹುದೀ ಮಹಾವಿಶ್ವ. ಧರ್ಮಾಧ –
ಕಾರಿಯಾದೀ ನಾನು ಕೂಡ ತರಗೆಲೆಯೆ
ಋತನಿಯಮದೆದುರು: ತಾಯೆ, ಮೃತ್ಯುವನು
ಜಯಿಸಿದವರುಂಟೆ?………

ಅಪರಾಹ್ನ ಸುಮಾರು ನಾಲ್ಕುಗಂಟೆಯ ಹೊತ್ತಿಗೆ ‘ಯಮನಸೋಲ’ನ್ನು ಬರೆದು ಮುಗಿಸಿದೆ. ಯಾವುದೊ ಒಂದು ಅಪೂರ್ವವಾದ ಮಹಾತ್ಕಾರ್ಯವನ್ನು ಸಾಧಿಸಿದ ಧನ್ಯಭಾವ ನನ್ನ ಹೃದಯವನ್ನು ತುಂಬಿತ್ತು. ಆಗ ನೆನಪಾಯಿತು, ನಾನು, ಊಟ ಮಾಡಲಿಲ್ಲ ಎಂದು. ನೆನಪಿನೊಡನೆ ಹಸಿವೆಯೂ ಆಯಿತು! ಸ್ನಾನವನ್ನೂ ಮಾಡಿರಲಿಲ್ಲ. ಹೋಗಿ ನಲ್ಲಿಯ ಕೆಳಗೆ ಕುಳಿತು, ತಣ್ಣಗೆ ಚೆನ್ನಾಗಿ ಮಿಂದು, ತಲೆಗೇರಿದ್ದ ಬಿಸಿಯನ್ನು ಇಳಿಸಿ ಪ್ರಶಾಂತನಾಗಿ, ಊಟದ ಮನೆಗೆ ನಡೆದು ಆರಿ ತನ್ನಗಿದ್ದುದರಿಂದಲೆ ತುಂಬ ಹಿತವಾಗಿದ್ದ ಊಟವನ್ನು ಉಂಡುಮುಗಿಸಿ ಸ್ವಾಮಿಜಿಯ ಬಳಿಗೆ ಜಗಲಿಗೆ ಹೋದೆ.

ಆಗಲೆ ಸುಮಾರು ಐದು ಐದೂವರೆ ಗಂಟೆಯಾಗಿತ್ತು. ಜಗಲಿಯಲ್ಲಿದ್ದ ಬೆಂಚುಗಳ ಮೇಲೆ ನಾ. ಕಸ್ತೂರಿ, ವೈ. ಶ್ರೀನಿವಾಸಯ್ಯ (ಕಸ್ತೂರಿಯ ಜೊತೆ ಆಶ್ರಮದ ಕಾರ್ಯದರ್ಶಿಗಳಾಗಿದ್ದಲಾಯರು.) ತಾತಾಗಾರು, ಶೇಷಗಿರಿರಾವ್ ಕುಳಿತಿದ್ದರು. ಸ್ವಾಮಿಜಿ ಒಂದು ಹೆಣೆದ ಬೆತ್ತದ ಆರಾಮಕುರ್ಚಿಯ ಮೇಲೆ ಸುಖಾಸೀನರಾಗಿದ್ದರು. ಆಶ್ರಮಕ್ಕೆ ಬಂದು ಹೋಗಿ ಸೇವೆ ಸಲ್ಲಿಸುತ್ತಿದ್ದ ಕೆಲವು ವಿದ್ಯಾರ್ಥಿ ತರುಣರೂ ನಿಂತಿದ್ದರು. ಏನೇನೊ ಮಾತುಕತೆ ಹರಟೆ ವಿನೋದ ಸಾಗಿತ್ತು.

ನಾನು ಪ್ರವೇಶಿಸಲು ಎಲ್ಲರೂ ಮಾತುನಿಲ್ಲಿಸಿ ನನ್ನನ್ನೆ ಅರ್ಥಪೂರ್ಣವಾಗಿ ನೋಡತೊಡಗಿದರು. ನಾನು ಬೆಳಗಿನಿಂದ ನಾಟಕರಚನೆಯಲ್ಲಿ ತೊಡಗಿದ್ದು, ಕರೆದರೂ ಊಟಕ್ಕೆ ಬರದೆ ಇದ್ದುದರ ವಿಚಾರ ಎಲ್ಲರಿಗೂ ವಿಚಾರ ಎಲ್ಲರಿಗೂ ಸ್ವಾಮಿಜಿಯಿಂದ ತಿಳಿದಿತ್ತು ಎಂದು ತೋರುತ್ತದೆ. ಕಸ್ತೂರಿ, ಅವರ ರೂಢಿಯಂತೆ, ವಿನೋದವಾಗಿಯೆ “ಸುಖಪ್ರಸವವಾಗಿದೆಯೆ?” ಎಂದು ಕೇಳಿದರು. ಯಮನ ಸೋಲು ನಾಟಕ ಬರೆದು ಪೂರೈಸಿತು ಎಂದು ತಿಳಿದೊಡನೆ ಎಲ್ಲರೂ ಅದನ್ನು ಕೇಳಲು ಇಚ್ಛಿಸಿದರು. ನನಗೂ ಬರೆದ ಹೊಸದರಲ್ಲಿ ಅದನ್ನು ಮಿತ್ರರೆದುರು ವಾಚಿಸಬೇಕೆಂಬ ಹುಮ್ಮಸ್ಸು. ಕೃತಿಯೂ ಬಿಸಿಬಿಸಿಯಾಗಿತ್ತು; ಕೃತಿಕಾರನೂ ಬಿಸಿಯಾಗಿಯೆ ಇದ್ದ. ಸರಿ, ಕೊಠಡಿಗೆ ಹೋಗಿ ಹಸ್ತಪ್ರತಿ ತಂದೆ. ಕೂತುಕೊಳ್ಳಲು ಬೆಂಚಿನ ನಡುವೆ ಜಾಗ ಮಾಡಿಕೊಟ್ಟರು, ಓದತೊಡಗಿದೆ.

ನಾಟಕ ನೇರವಾಗಿ ಸತ್ಯವಾನ್-ಸಾವಿತ್ರಿ ಕಥೆಯ ಹೃದಯಕೇಂದ್ರಕ್ಕೇ ಪ್ರವೇಶಿಸುತ್ತದೆ. ಆಕಾಶಮಾರ್ಗದಲ್ಲಿ ಒಬ್ಬರನೊಬ್ಬರು ಇದಿರುಗೊಳ್ಳುವ ಅಲೌಕಿಕ ವ್ಯಕ್ತಿಗಳಾದ ಯಕ್ಷ-ಯಮದೂತರು ಸಹೃದಯರ ಪ್ರಜ್ಞೆಯನ್ನು ತಟಕ್ಕನೆ ಲೋಕಾತಿಕ್ರಾಂತ ಭೂಮಿಕೆಗೆ ಒಯ್ಯುತ್ತಾರೆ. ಕ್ರಿಯೆಯ ಪ್ರಾರಂಭವೆ ಒಂದು ವಿರಾಡ್‌ರಂಗದಲ್ಲಿ ನಡೆಯುತ್ತದೆ. ಆಲಿಸುತ್ತಿದ್ದವರು ಒಂದು ಅಲೋಕ ವ್ಯಾಪಾರದಲ್ಲಿ ಭಾಗಿಗಳಾಗುತ್ತಾರೆ. ನನ್ನ ಲಯಬದ್ಧವೂ ಆವೇಶಪೂರ್ಣವೂ ಆಗಿದ್ದ ನಾಟಕೀಯ ವಾಚನವೂ ಸದಸ್ಯರೆಲ್ಲರನ್ನೂ ಉಲ್ಲೋಲ-ಕಲ್ಲೋಲಮಯವಾದ ರಸಸಮುದ್ರಕ್ಕೆ ಬಿಸಿಬಿಟ್ಟಿತು. ಸ್ವಲ್ಪ ಹೊತ್ತಿನೊಳಗಾಗಿ ಆಶ್ರಮದ ಜಗಲಿ ಕಿಕ್ಕಿರಿದು ಬಿಟ್ಟಿತು. ಸಾಯಂಕಾಲ ಬೇಗನೆ ಹಾಲು ತರಲು ನಿಯೋಜಿತನಾಗಿ ಅವಸರದಿಂದ ಹೋಗುತ್ತಿದ್ದ ಭಿಕ್ಷಾನ್ನದ ಹುಡುಗ ಶ್ರೀಕಂಠಯ್ಯ ಹಾಲಿನ ಪಾತ್ರೆಯನ್ನು ಅವುಚಿಕೊಂಡು ತನ್ನನ್ನು ತಾನೆ ಮರೆತನಂತೆ ನಿಂತುಬಿಟ್ಟಿದ್ದನು! ಅವನಂತೆ ಬೇರೆಬೇರೆ ಕರ್ತವ್ಯಗಳಿಗಾಗಿ ಬರುತ್ತಿದ್ದ ಭಕ್ತವರ್ಗದವರು ತಮ್ಮ ಕರ್ತವ್ಯಗಳನ್ನೆಲ್ಲ ಮರೆತು ಸಂಮ್ಮೋಹಿತರಾದಂತೆ ನಿಂತುಬಿಟ್ಟಿದ್ದರು. ಜಗಲಿ ತುಂಬಿದ್ದರೂ ನಾನು ಓದುವುದು ವಿನಾ ಸಂಪೂರ್ಣ ನಿಃಶಬ್ದವಾಗಿತ್ತು. ಉಸಿರೇ ಕಟ್ಟಿಹೋದಂತೆ ಆಲಿಸಿದ್ದರೆಲ್ಲರೂ!

*          *          *

‘ಜಲಗಾರ’ ‘ಯಮನಸೋಲು’ ‘ಮಹಾರಾತ್ರಿ’ ನಾಟಕಗಳು ಸೃಷ್ಟಿಯಾಗುತ್ತಿದ್ದ ತಿಂಗಳುಗಳಲ್ಲಿ ನಾನು ಅನೇಕ ಕವನಗಳನ್ನು ಬರೆದೆ. ಅವುಗಳಲ್ಲಿ ಬಹುಪಾಲು ‘ಕೊಳಲು’ ‘ನವಿಲು’ ‘ಕಲಾಸುಂದರಿ’ ‘ಷೋಡಸಿ’ಗಳಲ್ಲಿ ಪ್ರಕಟವಾಗಿವೆ. ಕೆಲವು ಪ್ರಸಿದ್ಧವಾಗಿಯೂ ಇವೆ: ‘ರತಿ’ (೩-೮-೧೯೨೭), ಥಾಮಸ್ ಮೂರ್ ಕವಿಯ ’The Light of other Days’ ನ ಅನುವಾದ ‘ಹೋದ ಬಾಳಿನ ಬೆಳಕು’ (೪-೮-೧೯೨೭), ‘ದೋಣಿಗನ ಹಾಡು’ (೪-೮-೧೯೨೭), ‘ನನ್ನ ಮನೆ’ (೨೭-೧೦-೧೯೨೭), ‘ಕಾಣದ ಕಡಲಿಗೆ’ (೨೫-೧೧-೧೯೨೭), ‘ಕವಿತೆಗೆ’ (೨೬-೧೧-೧೯೨೭). ‘ದೋಣಿಗನ ಹಾಡು’ ಮತ್ತು ‘ನನ್ನ ಮನೆ’ಗಿರುವ ಎರಡು ತಿಂಗಳ ಅಂತರದಲ್ಲಿ ಬಹುಶಃ ಜಲಗಾರಾದಿ ನಾಟಕಗಳು, ಪ್ರಬಂಧಗಳು, ಸಣ್ಣಕಥೆಗಳು ರಚಿತವಾಗುತ್ತಿದ್ದುವೇನೊ? ಹಾಗೆಯೆ ‘ಕವಿತೆಗೆ’ ಎನ್ನುವ ಕವನದ ತರುವಾಯ ೧೯೨೭ ನೆಯ ನವೆಂಬರ್ ೨೬ರಿಂದ ೧೯೨೮ನೆಯ ಫೆಬ್ರವರಿ ೨೪ರ ವರೆಗೆ ಹಸ್ತಪ್ರತಿಯಲ್ಲಿ ಖಾಲಿಯಿದೆ, ಸುಮಾರು ಮೂರು ತಿಂಗಳು. ಆ ಅವಧಿಯಲ್ಲಿಯೇ ಇರಬೇಕು ನಾನು ಸ್ವಾಮಿಜಿ, ಪ್ರೊ. ಮಾಧ್ವ, ಡಾ. ಚೊಕ್ಕಂ ಜೊತೆ ಹೋಗಿ ಮೈಲಿಯಾಗಿ ಏನೇನೊ ಅತಿಂದ್ರಿಯ ಸ್ವರೂಪದ ವಿಶೇಷಾನುಭವಗಳನ್ನು ಪಡೆದದ್ದು. ಅದನ್ನು ಮುಂದೆ ವಿವರವಾಗಿ ಹೇಳುತ್ತೇನೆ. ಸದ್ಯಕ್ಕೆ ಆ ಕಾಲದಲ್ಲಿ ನಾನು ಬರೆದಿದ್ದು, ಇದುವರೆಗೂ ಎಲ್ಲಿಯೂ ಪ್ರಕಟವಾಗದಿರುವ ಕೆಲವು ಕವನಗಳನ್ನಿಲ್ಲಿ ಕೊಡುತ್ತೇನೆ:

ಕಟ್ಟಿರುವೆ

ಅಲೆಯೆಲೆಯೈ, ಎಲೆ ಕಟ್ಟಿರುವೆ,
ಮುದ್ದಿನ ಪುಟ್ಟಿರುವೆ!
ಇರುಳಿನ ಕಣ್ಣಿನ ಹರಳಿನ ಕಪ್ಪಿಗೆ
ಕುರುಡತೆಯಿಯುವ ಮಸಿಯನು ಸೇರಿಸಿ
ಬಟ್ಟೆಯನುಟ್ಟಿರುವೆ!

ಆದರು ಸೂರ್ಯನ ಸುತ ನೀನು,
ಹಿಮಕರ ಹಿತ ನೀನು!
ಮುಗಿಲನು ಮಿಂಚನು ಗುಡುಗನು ಮಳೆಯನು
ಕಾಮನ ಬಿಲ್ಲಿನ ಬಣ್ಣದ ಬಳೆಯನು
ಪಡೆದಿಹ ಪಿತ ನೀನು!
೨-೮-೧೯೨೭

ಎಂದು? ಏತಕೆ? ಎಲ್ಲಿ?

ಎಂದು  ಏತಕೆಲ್ಲಿ ನೀನು ಕವಿಯೆ ಜನಿಸಿದೆ?
ಎಂದುಗಿಂದು ಇಲ್ಲದಂದು,
ಏತಕೆಂದು ಕೇಳಲೆಂದು,
ಅಲ್ಲಿ ಇಲ್ಲಿ ಇರದ ಅಲ್ಲಿ ನಾನು ಜನಿಸಿದೆ!
ಲೋಕದುದಯ ಜನಿಪ ಮುನ್ನ
ಬ್ರಹ್ಮವಿಷ್ಣುರುದ್ರರೆಲ್ಲ
ವಿಶ್ವಗರ್ಭದಲ್ಲಿ ಮೊಳೆವ ಮುನ್ನ ಜನಿಸಿದೆ!
ಕಾಡಿನಲ್ಲಿ ನಲಿವ ಹೂವ,
ನಿಶೆಯ ನಭದ ತಾರೆಗಳನು,
ರಮೆಯ ಮುದ್ದು ಮೊಗದ ನಗೆಯ, ನೋಡೆ ಜನಿಸಿದೆ!
ರೈತನುಳುವ ಗದ್ದೆಯಲ್ಲಿ,
ಅರಿಯದಲರು ಅರಳುವಲ್ಲಿ,
ತುಂಬಿ ಬಂಡನುಣ್ಣುವಲ್ಲಿ, ನಾನು ಜನಿಸಿದೆ!
೧೨-೮-೧೯೨೭

ಹಿಗ್ಗಲೆ ಬೇಕೊ ದೇಹಕೆ!

ಹಿಗ್ಗಲೆ ಬೇಕೊ ಈ ದೇಹಕೆ
ಹಿಗ್ಗುತ ನುಗ್ಗುತ ನಿಲ್ಲದೆ ಗೆಲ್ಲುತ
ಸೇವೆ ಮಾಡುತ ಮುಕ್ತಿಯಿಯುವ ದೇಹಕೆ  ||ಅ.ಪ||


ಯುಗಯುಗಗಳು ಕೂಡಿ ಬಹುಪೂಜೆಯನು ಮಾಡಿ
ರಚಿಸಿದ ದೇವರ ಗುಡಿಯಾದ ದೇಹಕೆ…


ಕೂಡಿದ ಕರ್ಮವ ತಿಂದು ಹಾಕುತಲಿರ್ಪ
ಕರ್ಮ ಮುಗಿಯಲು ಬಿಟ್ಟು ಹೋಗುವ ದೇಹಕೆ…

ಧರೆಯ ಸೇವೆಯ ಮಾಡಿ; ದುರಿತಕೋಟಿಯ ನೀಗಿ
ತಿರುಗಿ ತಿರುಗಿ ಗೆದ್ದು ತೆರಳುವ ದೇಹಕೆ…


ಪಾಪ ಮಾಡಿದವನ ಕೂಪದಿಂದೆತ್ತುತ
ವೈಕುಂಠಕೊಯ್ಯುವ ಮಂಗಳ ದೇಹಕೆ…


ಪುರಂದರ ದಾಸನೆ ಬೈಯುವೆ ಏತಕೆ?
ಪುರಂದರ ವಿಠಲನ ಶಯನವೀ ದೇಹಕೆ…
೧೨-೮-೧೯೨೭

ಮೇಲಿನ ಹಾಡು ‘ಹಿಗ್ಗುವೆ ಏತಕೊ ಈ ದೇಹಕೆ?’ ಎಂದು ಮೊದಲಾಗುವ ಕೀರ್ತನೆಯನ್ನು ಆಶ್ರಮದಲ್ಲಿ ಪೂಜಾಸಮಯದಲ್ಲಿ ಯಾರೊ ಹಾಡಿದಾಗ ಮನಸ್ಸು ಪ್ರತಿಭಟಿಸಿ ಬರೆದದ್ದು. ಈ ನಿರಾಶಾವಾದದ ಕೃತಿಯನ್ನು ಬರೆದ ದಾಸರೇ ಈಸಬೇಕು ಇದ್ದು ಜೈಸಬೇಕು? ಎಂದು ಆಶಾವಾದದ ಕೃತಿಯನ್ನೂ ರಚಿಸಿದ್ದಾರೆ. ಸ್ವಾಮಿ ವಿವೇಕಾನಂದರು “ನ್ಯಾಯಾಮಾತ್ಮಾ ಬಲಹೀನೇನ ಲಭ್ಯಃ” ಎಂಬಂತೆ ಆತ್ಮದ ಬಲಿಷ್ಠತೆಯನ್ನು ಸಾಧಿಸಬೇಕಾದರೆ ಅದಕ್ಕೆ ಸಾಧನವಾಗಿರುವ ದೇಹದ ಬಲಿಷ್ಠತೆಯನ್ನು ಮೊದಲು ಸಾಧಿಸಬೇಕೆಂದು, ಯುವಕರಿಗೆ ಕರೆಯಿತ್ತರು. ‘ಶರೀರಮಾದ್ಯಂ ಖಲು ಧರ್ಮ ಸಾಧನಂ!’

ಕಾರಿರುಳುಕಾರ್ಮಿಂಚು


ಕಾಂತಿಯ ಕೊಲ್ಲುವ ಕಾಳಿಯ ಕಾಯದ
ಕಪ್ಪನು ಕರೆದುದು ಕಾರಿರುಳು;
ಕಾಳಿಯ ಕಂಗಳ ಕೋಪದ ಕಿಡಿಗಳ
ಜ್ಯೋತಿಯ ಜರೆದುದು ಕಾರ್ಮಿಂಚು.


ಕಾಳಿಯು ಉಟ್ಟಿಹ ಕುರುಡಿನ ಸೀರೆಯ
ಕರಿಯಂಚಾದುದು ಕಾರಿರುಳು;
ಕಾಳಿಯು ತೊಟ್ಟಿಹ ಕೈಗಳ ಬಳೆಗಳ
ಕುಡಿಮಿಂಚಾದುದು ಕಾರ್ಮಿಂಚು.


ಕಾಳಿಯು ಕೆದರಿದ ಕೇಶವ ಕೂರಾ-
ದೊಡ್ಡಂತಾದುದು ಕಾರಿರುಳು;
ಕಾಳಿಯು ಮುಡಿದಿಹ ಕಿಚ್ಚಿನ ಮುಗುಳಿನ
ಥಳಕಂತೆಸೆದುದು ಕಾರ್ಮಿಂಚು.


ಕಾಳಿಯ ಸಿಟ್ಟಿನ ಕಾಳ ಕರಾಳದ
ಮೊಗದೊಲು ಮೆರೆದುದು ಕಾರಿರುಳು;
ಕಾಳಿಯ ಆಸ್ಯದ ಹಾಸ್ಯದ ಹಾಸ ವಿ-
ಲಾಸವ ಹೋಲಿತು ಕಾರ್ಮಿಂಚು.
(ರಾತ್ರಿ ರಚಿಸಿದ್ದು) ೧೫-೯-೧೯೨೭

ನಿನ್ನ ನೋಡಿದ ಮೇಲೆ


ನಿನ್ನ ನೋಡಿದ ಮೇಲೆ ಇನ್ನು ನೋಡುವುದುಂಟೆ?
ನಿನ್ನ ಕೂಡಿದ ಮೇಲೆ ಕೂಟವುಂಟೆ?
ನಿನ್ನ ಹಾಡಿದ ಮೇಲೆ ಇನ್ನು ಹಾಡುವುದುಂಟೆ?
ನಿನ್ನ ಬೇಡಿದ ಮೇಲೆ ಬಡತನವುಂಟೆ?


ಹೊತ್ತು ಮೂಡುವುದರಿಂದ, ಮತ್ತೆ ಮುಳುಗುವುದರಿಂದ,
ಬಿತ್ತರದ ಬಾಂದಳದೊಳಿಂದು ಚೆಂದ;
ಸೊಬಗಂದ, ಸಿರಿ ಅಂದ, ಒಲವಂದ, ಚೆಲುವಂದ;
ನಿನ್ನ ಮುತ್ತಿನ ಬಂಧ ಮಿರಿದಂದ!
೨೧-೯-೧೯೨೭

ಹುಚ್ಚು


ಹೂವು ಬಳ್ಳಿಯ ಹುಚ್ಚು,
ಕವಿತೆ ಕವಿಗಳ ಹುಚ್ಚು;
ಬೆಳಕು ಹೊತ್ತಿನ ಹುಚ್ಚು,
ಮಳೆಯು ಮೋಡದ ಹುಚ್ಚು.


ಕೂಸು ತಾಯಿಯ ಹುಚ್ಚು,
ಪ್ರೇಮ ಪ್ರಣಯದ ಹುಚ್ಚು;
ಹಾಡು ಹಕ್ಕಿಯ ಹುಚ್ಚು,
ಸೃಷ್ಟಿ ದೇವರ ಹುಚ್ಚು.


ಹುಟ್ಟು ಸಾವಿನ ಹುಚ್ಚು,
ಸಾವು ಹುಟ್ಟಿನ ಹುಚ್ಚು;
ಮುಕ್ತಿ ಬಂಧದ ಹುಚ್ಚು,
ಬಂಧ ಮುಕ್ತಿಯ ಹುಚ್ಚು.


ಕಾಮ ಕೆಲವರ ಹುಚ್ಚು,
ರಾಮ ಕೆಲವರ ಹುಚ್ಚು;
ಗೀತ ಕೆಲವರ ಹುಚ್ಚು,
ಗಾಡಿ ಕೆಲವರ ಹುಚ್ಚು.


ಕೀರ್ತಿ ಕೆಲವರ ಹುಚ್ಚು,
ಪ್ರೀತಿ ಕೆಲವರ ಹುಚ್ಚು;
ಆಟ ಕೆಲವರ ಹುಚ್ಚು,
ಪಾಟ ಕೆಲವರ ಹುಚ್ಚು.


ಕಡಿಮೆ ಕೆಲವರ ಹುಚ್ಚು,
ಹೆಚ್ಚು ಕೆಲವರ ಹುಚ್ಚು;
ಅಂತು ಎಲ್ಲರು ಹುಚ್ಚು,
ಜಗದ ಜೀವವೆ ಹುಚ್ಚು!
೨೧-೯-೧೯೨೭

ತ್ಯಾಗ


ಜನರು ಕೂಡಿ ಹೊಗಳಲೆನ್ನ
ಮನವು ಮರೆಯದಿರಲಿ ನಿನ್ನ;
ಪದವಿ ಸಿರಿಗಳೊಲಿಯಲೆನ್ನ
ಎದೆಯು ತೊರೆಯದಿರಲಿ ನಿನ್ನ!


ಇಳೆಗೆ ಕೊಟ್ಟ ಅಲರನೆಲ್ಲ
ನಿನ್ನ ತೋಟದಿಂದ ಕಳ್ಳ
ತನದಿ ಕೊಯ್ದು ಕದ್ದು ತಂದೆ;
ಜನರ ಮುಂದೆ ನನ್ನದೆಂದೆ!


ಜಗದ ಗುಟ್ಟು ತಿರೆಯ ಬಾಳು,
ಸಾವು, ಹುಟ್ಟು, ನೋವು, ಗೋಳು
ಜೀವ ಕೊಡುವ ಸೊಗದ ಸೊಂಪು,
ಬೆಳಗು ಪೆಂಪು, ಬೈಗುಗೆಂಪು!


ಹಳ್ಳಿ, ಬಳ್ಳಿ, ಭಕ್ತಿ, ಶಕ್ತಿ,
ಸೊಬಗು ಸುರಿವ ಸೊದೆಯ ಮುಕ್ತಿ,
ಮೆರೆವ ಗಿರಿಯು, ಸುರಿವ ಸರಿಯು,
ಬೆಟ್ಟದಿಂದ ಹರಿವ ಝರಿಯು!


ಅರಿಯದಿರುವ ಜನರ ಜೀವ,
ಬಾಳು ಬಸಿವ ವಿವಿಧ ಭಾವ,
ಉಂಡು ಕಂಡ, ಭೀತಿ, ನೀತಿ,
ಒಲ್ಮೆ, ನಲ್ಮೆ, ಪ್ರೇಮ, ಪ್ರೀತಿ!


ಹಗಲು, ಮುಗಿಲು, ಹೊತ್ತು, ಚುಕ್ಕಿ,
ಹಸುರು, ಪಯಿರು, ಹೂವು, ಹಕ್ಕಿ,
ಹರಿವ ಹೊಳೆಯು ಇಂದು, ಇರುಳು,
ನನ್ನ ಹಾಡುಗಳಿಗೆ ತಿರುಳು.


ನಿನ್ನ ಅಡಿಯೆ ಎನಗೆ ಗುಡಿಯು,
ಅಡಿಯ ಪುಡಿಯೆ ಮುಡಿಯ ಮಡಿಯು;
ನಿನ್ನ ನೋಡಲದುವೆ ಹಬ್ಬ;
ನಿನ್ನ ಹಾಡಲದುವೆ ಕಬ್ಬ!


ನಿನ್ನ ನಂಬಲದುವೆ ನೆಚ್ಚು!
ನಿನ್ನನೊಲಿಯಲದುವೆ ಹುಚ್ಚು;
ಕದ್ದು ತಂದ ನಾನೆ ಕಳ್ಳ!
ಎನ್ನದೆಂದ ನಾನೆ ಸುಳ್ಳ!


ಜನರು ಕೂಡಿ ಹೊಗಳಲೆನ್ನ
ಮನವು ಮರೆಯದಿರಲಿ ನಿನ್ನ;
ಪದವಿ ಸಿರಿಗಳೊಲಿಯಲೆನ್ನ
ಎದೆಯು ತೊರೆಯದಿರಲಿ ನಿನ್ನ!
ಎನ್ನ ಶಿರವಿದ್ದಂತೆ ನಿನ್ನ ಪಾದ!

ಎಂತೆಂತು ಚಿಂತಿಪುದೊ ಬುದ್ಧಿ
ಅಂತಂತೆ ಆಗುವುದು ಸಿದ್ಧಿ.
ಎತ್ತೆತ್ತ ಚರಿಸುವುದೊ ಮನವು
ಅತ್ತತ್ತ ತಿರುಗುವುದು ತನುವು.
ಎನ್ನ ಮನವಿದ್ದಂತೆ ನಿನ್ನ ರೂಪ;
ಎನ್ನ ಶಿರವಿದ್ದಂತೆ ನಿನ್ನ ಪಾದ!
೨೯-೯-೧೯೨೭

ಮಲೆನಾಡಿನಲ್ಲಿ ಮಳೆ ಬಿಟ್ಟಮೇಲೆ


ಮಳೆ ಹೊಯ್ದು ಹೊಳವಾಯಿತೆಳಬಿಸಿಲು ಬೆಳಗುತಿದೆ
ಮಲೆನಾಡ ವನರಮೆಯ ತಳಿರುಡೆಯನು;
ಅಳಿಲುಗಳ ಚಿಳಿಲುದನಿ ಬನಗಳನು ತುಂಬಿರುವು-
ದಶರೀರ ವಾಣಿಗಳ ತೆರದಿ ನಲಿದು.
ಹಾಡುತಿವೆ ಚೋರೆ ಗಿಳಿ ಕೋಗಿಲೆಗಳು;
ನೋಡುತಿವೆ ಕೇಳುತಿವೆ ವನಗಿರಿಗಳು;
ಮಲೆನಾಡಿನಲ್ಲಿ ಮಳೆ ಬಿಟ್ಟಮೇಲೆ
ತೋರುವುದು ಕಬ್ಬಿಗಗೆ ಸೃಷ್ಟಿಲೀಲೆ!


ಕಾವಿಬಟ್ಟೆಯನುಟ್ಟ ಸಂನ್ಯಾಸಿಯಂತೆ
ಹಳೆಯ ಜಡತನವುಳಿದು ಹರುಷದಿಂದ
ಮೊರೆಮೊರೆದು ದೇವನಿಗೆ ಬಿನ್ನಹವ ಮಾಡಿ
ಹರಿಯುತಿವೆ ತುಂಬಿ ಕೆರೆತೊರೆಗಳೆಲ್ಲ.
ಚಿಗುರಿಡಿದು ನಳನಳಿಪ ಬಯಲಿನಲ್ಲಿ
ಮೇಯುತಿವೆ ಸಂತಸದಿ ದನಕರುಗಳು;
ಮಲೆನಾಡಿನಲ್ಲಿ ಮಳೆ ಬಿಟ್ಟಮೇಲೆ
ತೋರುವುದು ಕಬ್ಬಿಗಗೆ ಸೃಷ್ಟಿಲೀಲೆ!

ಸಂನ್ಯಾಸಿಯ ಹಾಡು

ಜಗವೇ ಮನೆ, ಜಗವೇ ಮನೆ, ಜಗವೇ ಮನೆ ಎನಗೆ ||ಪ||
ಹಸಿವೇ ಅನ್ನ, ನೆಲವೇ ಹಾಸು, ಮೃತ್ಯುವೆ ಬಹುಮಾನ;
ಹಗಲಿರುಳೂ ಮಳೆಬಿಸಿಲೂ ಚಳಿಗಾಳಿಯೆ ಹೊದಿಕೆ   ||ಅ.ಪ||


ಹಕ್ಕಿಗಳಿಗೆ ಗೂಡು ಬೇಕು,
ಹಾವುಗಳಿಗೆ ಬಿಲವು ಬೇಕು,
ಅರಸರಿಗರಮನೆಯು ಬೇಕು:
ಸಾಧು ನಾನು ಏನು ಬೇಕು?… ಜಗವೇ ಮನೆ…


ಹೊಳೆಗಳ ದಡ, ಮರಗಳ ಬುಡ,
ಗಿರಿಗಳ ತುದಿ, ವನಗಳ ಬದಿ,
ಹಾಡಿಬರುವ ಹಕ್ಕಿಯಂತೆ
ಮೂಡಿ ಅಳಿವ ಚುಕ್ಕಿಯಂತೆ!…ಜಗವೇ ಮನೆ…


ಧರೆಗೆ ರವಿಯ ಬಲುಮೆ ಬೇಕು,
ಗಿರಿಗೆ ತಿರೆಯ ಮರೆಯು ಬೇಕು,
ಕಡಲಿಗಿಳೆಯ ಬಲುಮೆ ಬೇಕು:
ಸಾಧು ನಾನು, ಏನು ಬೇಕು?…ಜಗವೇ ಮನೆ…


ಹೂವು ಮೆರೆಯೆ ಬಣ್ಣ ಬೇಕು,
ಹಣ್ಣುಗಳಿಗೆ ಸಿಹಿಯು ಬೇಕು,
ಎನಗೆ ಸತ್ಯವೊಂದೆ ಸಾಕು:
ಸಾಧುಗಿನ್ನು ಏನು ಬೇಕು?… ಜಗವೇ ಮನೆ…

ಅಜಗೆ ವಾಣಿಯೊಲುಮೆ ಬೇಕು,
ಹರಿಗೆ ಸಿರಿಯ ಸರಸ ಬೇಕು,
ಶಿವಗೆ ಕೂಡ ಗಿರಿಜೆ ಬೇಕು:
ಸಾಧು ಎನಗೆ ಏನು ಬೇಕು?… ಜಗವೇ ಮನೆ…


ಬೆಂಕಿಯಲ್ಲಿ ಕಾವು ನಾನು,
ನೀರಿನಲ್ಲಿ ತಂಪು ನಾನು,
ಹೊತ್ತಿನಲ್ಲಿ ಬೆಳಕು ನಾನು:
ಏನು ಬೇಕು? ಸಾಧು ನಾನು?…ಜಗವೇ ಮನೆ…


ನನ್ನದೆಲ್ಲವೆಂದು ಬಲ್ಲೆ,
ನಾನೆ ಎಲ್ಲ ಎಂದು ಬಲ್ಲೆ:
ಸಾಧುಗಿನ್ನು ಏನು ಬೇಕು?
ನಾನೆ ನನಗೆ ಸಾಕೆ ಸಾಕು!… ಜಗವೇ ಮನೆ…

ಸಂನ್ಯಾಸ ಸಂಸಾರಗಳ ನಡುವೆ ತುಯ್ಯಲಾಡುತ್ತಿದ್ದ ನನ್ನ ಚೇತನ ಸಂನ್ಯಾಸದ ಕಡೆಗೆ ಒಲೆದಾಗ ಹೊಮ್ಮಿದ ಕವನವಿರಬೇಕು ಮೇಲಿನದು!