ಕ್ರಿಸ್‌ಮಸ್‌ ರಜಾ ಪ್ರಾರಂಭವಾಯಿತು. ಸಾಮಾನ್ಯವಾಗಿ ನಾನು ರಜಾ ಕಾಲದಲ್ಲಿ ತಪ್ಪದೆ ಊರಿಗೆ ಹೋಗುವುದು ವಾಡಿಕೆಯಾಗಿತ್ತು. ಆದರೆ ಈ ಸಾರಿ ಸ್ವಾಮಿ ಸಿದ್ದೇಶ್ವರಾನಂದರು ಜೋಗದ ಜಲಪಾತ ನೋಡುವ ಕಾರ್ಯಕ್ರಮ ಹಾಕಿದರು. ಪ್ರೊಫೆಸರ್ ಮಾಧ್ವ, ಗಣಿತಶಾಸ್ತ್ರದ ಪ್ರಾಧ್ಯಾಪಕರು ಅವರೂ ನಮ್ಮೊಡನೆ ಬರುವುದೆಂದು ಗೊತ್ತಾಯಿತು. ಸ್ವಾಮಿಜಿ ಮೊದಲೇ ಭದ್ರಾವತಿಗೆ ಕಾಗದ ಬರೆದಿದ್ದು ಅಲ್ಲಿಂದ ಡಾಕ್ಟರ್ ಚೊಕ್ಕಂ ಐಯ್ಯಂಗಾರ್ ನಮ್ಮನ್ನು ಕೂಡಿಕೊಳ್ಳುವುದೆಂದು ಗೊತ್ತಾಗಿತ್ತು.

ಅಂದು (೧೯೨೭ರಲ್ಲಿ) ಅದೊಂದು ಅತ್ಯಂತ ಸಾಧಾರಣವಿಷಯವಾಗಿತ್ತು. ಯಾವ ವಿಶೇಷ ಗಮನಕ್ಕೂ ಒಂದಿನಿತೂ ಅರ್ಹವಲ್ಲದ್ದಾಗಿತ್ತು. ರಜಾ ಕಾಲದಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹೊರಡುವುದರಲ್ಲಿ ಏನು ತಾನೆ ವಿಶೇಷಾರ್ಥ ವಿದ್ದೀತು? ಆದರೆ ಇಂದು (೧೯೨೩ರಲ್ಲಿ) ನಾಲ್ವತ್ತಾರು ವರ್ಷಗಳ ತರುವಾಯ, ಸ್ವಾಮಿಜಿ ನಿಮಿತ್ತರಾಗಿ ನಾವು ಕೈಕೊಂಡ ಆಪ್ರವಾಸ, ವಿಧಿನಿಯಂತ್ರಣದಂತೆ, ರಹಸ್ಯಗರ್ಭಿತವೂ ಅರ್ಥಪೂರ್ಣವೂ ನನ್ನ ಬದುಕಿನ ಮೇಲೆ ಮಹತ್ ಪರಿಣಾಮಕಾರಿಯೂ ಆಗಿ ತೋರುತ್ತದೆ. ಆ ಪ್ರವಾಸ ನನ್ನ ಚೈತನ್ಯದಲ್ಲಿ ಒಂದು ಕ್ರಾಂತಿಕಾರಕ ಪರಿವರ್ತನೆಯನ್ನು ಸಾಧಿಸುವುದಕ್ಕಾಗಿಯೆ ಜಗನ್ಮಾತೆ ನಿಯೋಜಿಸಿದ ಒಂದು ತಂತ್ರವಾಗಿತ್ತೆಂದೇ ನಾನು ಭಾವಿಸುತ್ತೇನೆ.

ಕೆಲದಿನಗಳ ಹಿಂದೆ ಜಗನ್ಮೋಹನ ಅರಮನೆಯಲ್ಲಿ ಜರುಗಿದ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಬಿ.ಎ. ಡಿಗ್ರಿಯ ಪಟ್ಟಸ್ವೀಕಾರದ ಸಮಾರಂಭದಲ್ಲಿ ಭಾಗಿಯಾಗಲು ನಿಯಮ ಪ್ರಕಾರದ ವಸ್ತ್ರಧಾರಣೆ ಮಾಡಲೆಂದು ನಾನು ಒಂದು ಕರಿ ಬಣ್ಣದ ಖಾದಿ ನಿಲುವಂಗಿಯನ್ನೂ ಆಗಿನ ಆಜ್ಞೆಯಂತೆ ಧರಿಸಲೇಬೇಕಾಗಿದ್ದ ಒಂದು ಖಾದಿಯ ಜರಿಪೇಟವನ್ನೂ ಒಂದು ಜೊತೆ ಕರಿ ಬೂಟ್ಸನ್ನೂ ಕೊಂಡಿದ್ದೆ. ನಾನೆಂದೂ ಬಟ್ಟೆಯ ಷೋಕಿಯಾಗಿ ದುಡ್ಡು ಖರ್ಚು ಮಾಡಿದವನಲ್ಲ. ಖಾದಿಯ ಅಂಗಿ, ಖಾದಿಯ ಪಂಚೆ, ಖಾದಿಯ ಟೋಪಿ, ಸಾಧಾರಣ ಬೆಲೆಯ ಮೆಟ್ಟು – ಇಷ್ಟರೊಳಗೆ ಇತ್ತು ನನ್ನ ವ್ಯಯದ ವ್ಯಾಪ್ತಿ. ಅಲ್ಲದೆ ಹಾಗೆಲ್ಲ ಖರ್ಚು ಮಾಡಲು ಹಣವೂ ಇರುತ್ತಿರಲಿಲ್ಲ. ವಿದ್ಯಾರ್ಥಿವೇತನದ ದುಡ್ಡು ಏನಾದರೂ ಮಿಗುವ ಪಕ್ಷದಲ್ಲಿ ಅದು ಪುಸ್ತಕಕೊಳ್ಳಲು ಮಾತ್ರ ವಿನಿಯೋಗವಾಗುತ್ತಿತ್ತು. ಘಟಿಕೋತ್ಸವ ಸಂದರ್ಭದ ಅನಿವಾರ್ಯತೆಯಿಂದಲೆ ಆ ಬಟ್ಟೆ ಬೂಟ್ಸ್ ಪ್ರಾಪ್ತವಾಗಿತ್ತು! ಅಲ್ಲದೆ ಗೈರುಹಾಜರಿಯಲ್ಲಿ ಡಿಗ್ರಿ ಪಡೆಯಬೇಕಾದರೆ ತುಂಬ ಹೆಚ್ಚು ಪ್ರಮಾಣದ ಶುಲ್ಕ ವಸೂಲು ಮಾಡುತ್ತಿದ್ದರು. ಮೈಸೂರಿನಲ್ಲಿಯೆ ಇದ್ದು ಗೈರುಹಾಜರಾಗುವುದೇಕೆ ಎಂದು ನನ್ನೊಡನೆ ಡಿಗ್ರಿ ಪಡೆಯುವ ನನ್ನ ಆಪ್ತಮಿತ್ರರೂ ಉಪದೇಶಿಸಿದ್ದರಿಂದ ನಾನು ಒಪ್ಪಿದ್ದೆ.

ಘಟಿಕೋತ್ಸವದ ಅನಂತರ ಆ ನಿಲುವಂಗಿ ಷರಾಯಿ ಪೇಟಗಳನ್ನು ಡೋಬಿಗೆ ಕೊಟ್ಟು ಒಗೆಸಿ ಇಸ್ತ್ರಿ ಮಾಡಿಸಿ ಟ್ರಂಕಿನಲ್ಲಿ ಜೋಪಾನಗೊಳಿಸಿದ್ದೆ. ಅದೇ ಮೂಲ ಕಾರಣವಾಯಿತೋ ಏನೋ ಮುಂದೆಲ್ಲ ನಡೆದ ಘಟನೆಗಳಿಗೆ?

ಮೈಸೂರಿನಿಂದ ಶಿವಮೊಗ್ಗೆಗೆ ರೈಲಿನಲ್ಲಿ ಹೋಗಿ, ಆಗ ಅದು ಆ ಮಾರ್ಗದಲ್ಲಿ ಕೊನೆಯ ರೈಲ್ವೆಸ್ಟೇಷನ್ ಆಗಿದ್ದುದರಿಂದ, ಮುಂದಿನ ಪ್ರಮಾಣವನ್ನು ಕಾರಿನಲ್ಲಿ ಕೈಕೊಳ್ಳುವುದೆಂದು ನಿರ್ಣಯವಾಗಿತ್ತು. ರೈಲ್ವೆಸ್ಟೇಷನ್ನಿಗೆ ಹೊರಡುವ ಮುನ್ನ ದಿನನಿತ್ಯವೂ ಧರಿಸುತ್ತಿದ್ದ ಉಡುಪಿಗೆ ಬದಲಾಗಿ ಕಾನ್ವೋಕೇಷನ್‌ಗಾಗಿ ಹೊಲಿಸಿದ್ದ ಷರಾಯಿ ನಿಲುವಂಗಿಗಳನ್ನು ತೊಟ್ಟೆ! ಕಾಲುಚೀಲಗಳನ್ನು ಹಾಕಿ ಬೂಟ್ಸ್ ಧರಿಸಿದೆ! ಪೇಟ ಹಾಕಿಕೊಳ್ಳಲಿಲ್ಲ ಸದ್ಯಕ್ಕೆ!! ಈಗ ನೆನೆದರೆ ನಗುಬರುತ್ತದೆ. ಆ ಉಡುಪೋ ಅಪರಿಚಿತವಾಗಿ ತುಂಬ ಅನನುಕೂಲದ್ದಾಗಿತ್ತು. ಕಾಲುಚೀಲ ಬೂಟ್ಸ್‌ಗಳಂತೂ ನನ್ನ ನಡೆಗೆ ಅತ್ಯಂತ ತೊಡಕಿನ ವಸ್ತುಗಳಾಗಿದ್ದುವು. ನಿತ್ಯದಂತೆ ಕಾಲು ಹಾಕುವುದೂ ಕಷ್ಟವಾಗಿ ನನ್ನ ನಡಿಗೆಯೆ ಕೃತಕವಾಗಿತ್ತು! ಆದರೂ ಅದನ್ನೆಲ್ಲ ಸಹಿಸಿಕೊಂಡಿದ್ದೆ! ಏಕೆ? ನಾನೇನೂ ಬಟ್ಟೆಯ ಷೋಕಿಯ ವ್ಯಕ್ತಿಯಾಗಿರಲಿಲ್ಲ. ನನಗಿದ್ದ ನನ್ನ ವ್ಯಕ್ತಿತ್ವದ ವಿಷಯಕವಾದ ಸೌಂದರ್ಯಪ್ರಜ್ಞೆ ಏನಿದ್ದರೂ ಈಶ್ವರದತ್ತವಾಗಿದ್ದ ನನ್ನ ಸಹಜ ಶರೀರವನ್ನವಲಂಬಿಸಿತ್ತು: ನನ್ನ ಬಣ್ಣ, ನನ್ನ ಆಕಾರ, ನನ್ನ ರೂಪ, ನನ್ನ ಗುಂಗುರು ಕೂದಲು ಇತ್ಯಾದಿಗಳಲ್ಲಿ. ಆದರೂ ತತ್ಕಾಲದಲ್ಲಿ ನಾನು ಏನೋ ಒಂದು ಹೆಮ್ಮೆಯ ಹೆಬ್ಬುಬ್ಬೆಯ ಭ್ರಮೆಗೆ ಒಳಗಾದೆನೆಂದು ತೋರುತ್ತದೆ. ಆಗತಾನೆ ಡಿಗ್ರಿ ಪಾಸಾಗಿದ್ದ ಹೆಮ್ಮೆಯೋ? ಸ್ನೇಹಿತರ ಮುಂದೆ ನಾಜೋಕವಾಗಿ ತೋರುವ ಹೆಬ್ಬುಬ್ಬೆಯೋ? ಯೌವನ ಪ್ರಾರಂಭದಶೆಯ ಪ್ರದರ್ಶನಾಭಿಲಾಷೆಯೋ?  ಡೋಬಿ ಒಗೆದು ಇಸ್ತ್ರಿ ಮಾಡುವಾಗ ಪ್ರಮಾದವಶದಿಂದ ಬೇರೆಬೇರೆ ಯಾವನೋ ಸಿಡುಬುರೋಗಿಯ ಬಟ್ಟೆಯಿಂದ ನನ್ನ ಉಡುಪಿಗೆ ತಗುಲಿರಬಹುದಾಗಿದ್ದ ಸೋಂಕಿನ ದೆಸೆಯಿಂದ ನನಗೆ ‘ಮೈಲಿ’ ತಗುಲಬೇಕೆಂಬ ವಿಧಿಯ ಸಂಕಲ್ಪದ ತಂತ್ರವೋ? ಅಂತೂ ‘ದಿರುಸು’ ಹಾಕಿಕೊಂಡು ಸ್ವಾಮಿಜಿ ಮತ್ತು ಪ್ರೊ. ಮಾಧ್ವರೊಡನೆ ರೈಲಿನ ಸೆಕೆಂಡ್ ಕ್ಲಾಸ್ ಗಾಡಿಗೆ ಹತ್ತಿದೆ.

ರೈಲಿನಲ್ಲಿ ರಾತ್ರಿ ಪಯಣ ಸುಖಕರವಾಗಿತ್ತು; ಆಹ್ಲಾದಕರವೂ ಆಗಿತ್ತು, ಪ್ರೊ. ಮಾಧ್ವ ಅವರ ಸರ್ವದಾ ವಿನೋದಶೀಲದ ಮಾತುಕತೆಗಳಿಂದ. ಬೆಳಿಗ್ಗೆ ಶಿವಮೊಗ್ಗದಲ್ಲಿ ರೈಲಿನಿಂದಿಳಿದು ವೆಯ್ಟಿಂಗ್ ರೂಂ ಹೊಕ್ಕೆವು, ಮಾನಪ್ಪ ನಮಗಾಗಿ ವಾಹನ ತರುವತನಕ ಕಾಯಲೆಂದು. ಆದರೆ ಬಹಳ ಹೊತ್ತಾದರೂ ಯಾರೂ ಬರಲಿಲ್ಲ. ಆಮೇಲೆ ಯಾವನೊ ಒಬ್ಬ ಕೂಲಿಯಾಳಿನ ಕೈಲಿ ಹೊಸಮನೆ ಮಂಜಪ್ಪಗೌಡರಿಗೆ ಒಂದು ಚೀಟಿ ಬರೆದು ಕಳಿಸಿದ ಮೇಲೆ ಮಾನಪ್ಪ ಕಾರು ತಂದ: ಡಾ. ಚೊಕ್ಕಂ ಐಯ್ಯಂಗಾರರನ್ನು ಮಾನಪ್ಪನೆ ಭದ್ರಾವತಿಗೆ ಹೋಗಿ ಕರೆದುತಂದನೊ ಅಥವಾ ಅವರೇ ಬಂದರೊ ನನಗೆ ಸರಿಯಾಗಿ ನೆನಪಿಲ್ಲ. ಅಂತೂ ನಾವು ಐವರು-ಸ್ವಾಮಿಜಿ, ಮಾಧ್ವ, ಚೊಕ್ಕಂ, ಮಾನಪ್ಪ, ನಾನು ಕಾರಿನಲ್ಲಿ ಜೋಗಕ್ಕೆ ಹೊರಟೆವು.

ಆಗ ಜೋಗದ ಮೈಸೂರು ಬಂಗಲೆಗೆ ಹೋಗಬೇಕಾದರೆ ಶರಾವತಿಯನ್ನು ದೋಣಿಯ ಮೇಲೆ ದಾಟಬೇಕಾಗಿತ್ತು. ಈಗಿನಂತೆ ಸೇತುವೆ ಇರಲಿಲ್ಲ. ಆದರೆ ಬೊಂಬಾಯಿ ಬಂಗಲೆಗೆ ನೇರವಾಗಿ ಕಾರಿನಲ್ಲಿ ಹೋಗಬಹುದಿತ್ತು.(ಸ್ವಾತಂತ್ಯ್ರಾನಂತರ ಕರ್ನಾಟಕದ ಏಕೀಕರಣವಾದ ಮೇಲೆ ಜೋಗದ ಎರಡು ದಡದ ಬಂಗಲೆಗಳೂ ಮೈಸೂರಿಗೆ ಸೇರಿದುವು. ಆಗ ಬಲದ ದಡದ ಬಂಗಲೆ ಬೊಂಬಾಯಿ ಪ್ರಾಂತಕ್ಕೆ ಸೇರಿದ್ದರಿಂದ ಅದನ್ನು ಬೊಂಬಾಯಿ ಬಂಗಲೆ ಎಂದು ಕರೆಯುತ್ತಿದ್ದರು.) ಆದ್ದರಿಂದ ಮೊದಲು ಬೊಂಬಾಯಿ ಬಂಗಲೆಗೆ ಹೋಗಿ, ಆ ಕಡೆಯಿಂದ ಜಲಪಾತದ ಭೀಷಣ ಸೌಂದರ್ಯವನ್ನು ವೀಕ್ಷಿಸಿ ತರುವಾಯ ದೋಣಿತೆಪ್ಪದ ಮೇಲೆ ಕಾರನ್ನು ಆಚೆ ದಡಕ್ಕೆ ಸಾಗಿಸಿಕೊಂಡು ಮೈಸೂರು ಬಂಗಲೆಗೆ ಹೋಗುವುದೆಂದು ನಿಶ್ಚಯವಾಯಿತು. ಕಾರು ಬೊಂಬಾಯಿ ಬಂಗಲೆಗೆ ತಲುಪಿತು.

ಆ ಬೊಂಬಾಯಿ ಬಂಗಲೆ ತುಂಬ ಸಾಧಾರಣದ ಕಟ್ಟಡವಾಗಿತ್ತು; ಅದರ ನೈರ್ಮಲ್ಯವೂ ಅಷ್ಟಕ್ಕಷ್ಟೆ ಇತ್ತು. ಅದು ಮೈಸೂರು ಕಡೆಯ ಬಂಗಲೆ ಇದ್ದ ಸ್ಥಾನಕ್ಕಿಂತ ಎತ್ತರದ ಸ್ಥಾನದಲ್ಲಿದ್ದು ಅಲ್ಲಿ ತುಂಬ ಕಡಿದಾಗಿತ್ತು. ಶರಾವತಿ ಧುಮುಕುತ್ತಿದ್ದ ಪ್ರಪಾತ ಮಹಾಕಾಳಿ ತೆರೆದ ಬಾಯಂತೆ ಭೀಕರವಾಗಿ ತೋರಿತ್ತು; ನಾಲ್ಕೂ ಸ್ಥಾನಗಳಲ್ಲಿ ಧುಮುಕುತ್ತಿದ್ದ ಜಲಪಾತ ಆ ಮಹಾಕಾಳಿಯ ಮಹಾಜಿಹ್ವೆಗಳಂತೆ ತೋರಿದುವು; ಸುತ್ತಣ ಮಹಾ ಅರಣ್ಯಾವೃತ ಅದ್ರಿಪಂಕ್ತಿಗಳೂ ಆ ರುದ್ರ ಭೀಷ್ಮತೆಗೆ ಪೋಷಕವಾಗಿ ನನ್ನ ಕವಿಚೇತನಕ್ಕೆ ಏನೋ ಶಕ್ತಿಸ್ಪಂದನ ಸ್ಫುರಿಸಿದಂತಾಯ್ತು. ನನ್ನ ಮೈ ಬಿಸಿಯಾಯ್ತು. ತುಸುಮಟ್ಟಿಗೆ ತಲೆ ತಿರುಗಿದಂತಾಯ್ತು, ಕಮರಿಯನ್ನು ನೋಡುತ್ತಿದ್ದುದಕ್ಕೊ ಎಂಬಂತೆ! ನನಗಾಗಲೇ ಜ್ವರ ಬಂದಿತ್ತೊ ಏನೊ! ನನ್ನ ಬೂಟ್ಸ್ ಕಲ್ಲುಹರಳುಗಳಿದ್ದ ಇಳಿಜಾರಿನಲ್ಲಿ ಜಾರಿ ಎಲ್ಲಿ ನಾನು ಕಮರಿಗೆ ಬೀಳುವೆನೊ ಎಂದಳುಕಿ ಹಿಂದಕ್ಕೆ ಸರಿದು ನಿಂತೆ. ಆಗ ನನಗುಂಟಾದ ಅನುಭವವನ್ನು ಕುರಿತು ಮುಂದೊಮ್ಮೆ, ಎರಡು ವರ್ಷಗಳ ಅನಂತರ, ಮತ್ತೆ ಜೋಗದ ಜಲಪಾತಕ್ಕೆ ಹೋಗಿ ಮೈಸೂರು ಬಂಗಲೆ ಕಡೆಯಿಂದ ನೋಡಿ ಉಂಟಾದ ಅನುಭವಕ್ಕೆ ಅಭಿವ್ಯಕ್ತಿ ಕೊಡುವಾಗ ಹೀಗೆಂದು ಬಣ್ಣಿಸಿದ್ದೇನೆ, ‘ನವಿಲು’ ಕವನ ಸಂಗ್ರಹದಲ್ಲಿ ಪ್ರಕಟವಾಗಿ ಇರುವ ‘ಜೋಗ’ ಎಂಬ ಶೀರ್ಷಿಕೆಯ ದೀರ್ಘ ಕವನದಲ್ಲಿ:

ಸೌಂದರ್ಯ

ಎಂದಿದನು ಕರೆಯುವೆನೆ, ಬಹು ಭಯಂಕರವಾಗಿ
ತೋರುತಿದೆ; ರೌದ್ರ ಎಂದೊರೆಯುವೆನೆ, ಕಣ್ಗಳಿಗೆ
ಮಳೆಬಿಲ್ಲಿನಿಂಪುತನ ತೋರುತಿದೆ. ಅಂದೆನಗೆ
ಎರಡುವರುಷಗಳಾಚೆಯಲಿ ರೌದ್ರದಂದದಲಿ
ರಂಜಿಸಿತು; ಇಂದೆನಗೆ ಸಂಗಾತಿಯಂದದಲಿ
ಸೌಂದರ್ಯವನು ತೋರಿ ನಲಿಯುತಿದೆ. ಓ ಪ್ರಕೃತಿ…

ನನ್ನ ಪ್ರಜ್ಞೆ ಆಗಲೆ ಅಸ್ಪಷ್ಟವಾಗುತ್ತಿದ್ದು, ಪ್ರೊ. ಮಾಧ್ವ ಸ್ವಾಮಿಜಿ ಚೊಕ್ಕಂ ಮತ್ತು ಅಲ್ಲಿ ನೆರೆದಿದ್ದ ಇತರ ಅಪರಿಚಿತ ಪ್ರೇಕ್ಷಕರು ಎಲ್ಲ ಜಾಗ್ರಚ್ಚಿತ್ತದ ಅಂಚಿನಲ್ಲಿ ದೂರದೂರವಾದಂತಾಗಿದ್ದರು. ಅವರೆಲ್ಲ ಏನೇನೊ ಮಾತಾಡುತ್ತಿದ್ದರು; ನಗುತ್ತಿದ್ದರು;  ಟೀಕಿಸುತ್ತಿದ್ದರು; ಪ್ರಶಂಸಿಸುತ್ತಿದ್ದರು. ನನ್ನ ಚಿತ್ತದ ಮಂಜಿನಲ್ಲಿ ಅದೆಲ್ಲ ಮಸಗು ಮಸುಗಾಗಿತ್ತು. ನನ್ನ ಜ್ವರ ಎಂಬುದು ಮಾತ್ರ ನನಗೆ ಅರಿವಾಗಿರಲಿಲ್ಲ!

ಕಾರಿನಲ್ಲಿ ಕುಳಿತು ನಮ್ಮ ಗುಂಪು ಮೈಸೂರು ಕಡೆಯ ಬಂಗಲೆಗೆ ಹೊರಟಿತು. ದೋಣಿಗಳನ್ನು ಜೋಡಿಸಿ ಮಾಡಿದ್ದ ತೆಪ್ಪಕ್ಕೆ ನಮ್ಮ ಸಹಿತ ಕಾರು ಏರಿತು. ತೆಪ್ಪ ತೇಲಿ ಆಚೆ ದಡಕ್ಕೆ ತಲುಪಿತು. ಕಾರು ಬಂಗಲೆಗೆ ಸೇರಿತು. ಬಂಗಲೆಯ ಇದಿರ ಅಂಗಳದಲ್ಲಿ ನಿಂತು ಜೋಗದ ಜಲಪಾತದ ಅಥವಾ ಜಲಪಾತಗಳ ಅದ್ಬುತ ಸೌಂದರ್ಯನ್ನು ಆಸ್ವಾದಿಸಿದೆ; ನೀರು ಬೀಳುವ ಓಂಕಾರ ಸ್ಪರ್ಧಿ ನಿನಾದವನ್ನೂ ಭಾವಮಯವಾಗಿ ಆಲಿಸಿದೆ; ಧ್ಯಾನಮಗ್ನ ಚೇತನನಾಗಿ ಅಲ್ಲಿದ್ದ ಕಲ್ಲುಬೆಂಚಿನ ಮೇಲೆ ಕುಳಿತೆ, ನೋಡುತ್ತಾ!

ನಾವು ಹೋದದ್ದು ಚಳಿಗಾಲದ ರಜಾಕಾಲವಾಗಿತ್ತು. ನಾನಾ ಕಡೆಗಳಿಂದ ಬಂದಿದ್ದ  ಪ್ರೇಕ್ಷಕವರ್ಗ ದಟ್ಟಯಿಸಿತ್ತು. ಬಂಗಲೆಯ ಕಟ್ಟಡದಲ್ಲಿ ಉಳಿಯಲು ನಮಗೆ ಜಾಗ ದೊರಕಲಿಲ್ಲ. ಪ್ರೇಕ್ಷಕರಿಗಾಗಿ ಹಾಕಿದ್ದ ಟೆಂಟುಗಳಲ್ಲಿ ಒಂದರಲ್ಲಿ ನಮ್ಮ ಗುಂಪಿಗೆ ಜಾಗ ಮಾಡಿಕೊಟ್ಟರು. ಮುಂದಿನ ವಿವರಗಳಾವುವೂ ನನಗೆ ಬರುವುದಿಲ್ಲ, ಅಲ್ಲಲ್ಲಿ ಒಂದೊಂದು ತುಣುಕು ವಿನಾ.

ಆಗಲೆ ಕತ್ತಲಾಗುತ್ತಿತ್ತು. ಟೆಂಟಿಗೆ ದೀಪ ಹೊತ್ತಿಸಿದ್ದರು. ಸ್ವಾಮಿಜಿ ಇತರರು ಕೆಳಗಿಳಿದು ಹೋಗಿ ಜಲಪಾತವನ್ನು ವೀಕ್ಷಿಸುವ ತವಕದಲ್ಲಿದ್ದರು. ಡಾ. ಚೊಕ್ಕಂ ನನ್ನ ಸ್ಥಿತಿಯನ್ನು ಗಮನಿಸಿ ಏನೇನೋ ವಿನೋದವಾಗಿ ಪ್ರಶ್ನಿಸುತ್ತಾ ಮೈಮುಟ್ಟಿ ಪರೀಕ್ಷಿಸಿದರು; ಸ್ವಲ್ಪ ಗಾಬರಿಯಾದರು! Mr. Puttappa, you have high temperature. please take rest ಎಂದು ನನ್ನನ್ನು ಒಂದು ಕ್ಯಾಂಪು ಮಂಚದ ಮೇಲೆ ಮಲಗಿಸಿ, ಹೊದೆಸಿ, ತಮ್ಮ ವೈದ್ಯಕೀಯ ಮಂಜೂಷೆಯಿಂದ ಏನೊ ಮಾತ್ರೆ ತೆಗೆದುಕೊಟ್ಟರು. ಅವರೆಲ್ಲ ಜಲಪಾತವೀಕ್ಷಣೆಗೆ ಮೆಟ್ಟಲಿಳಿದು ನೀರ್ಬಿಳದ ಪಾತಾಳದತ್ತ ನಡೆದರು. ಮುಂದೇನು ನಡೆಯಿತೋ ಅದೆಲ್ಲ ನನಗೆ ಮಂಜು ಮಂಜು! ಜ್ವರದತ್ತ ಪ್ರಜ್ಞೆ ವಿಸ್ಮೃತಿಯ ತೊಟ್ಟಿಲ ಶಿಶುವಾಗಿತ್ತು!

ನನಗೆ ತುಸು ಎಚ್ಚರವಾಗಿ ಪ್ರಜ್ಞೆ ಮರಳಿದಂತೆ ಆದಾಗ, ರಾತ್ರಿ ಎಷ್ಟು ಹೊತ್ತೊ ತಿಳಿಯದು, ಜಲಪಾತವೀಕ್ಷಣೆಗೆ ಕಮರಿಗೆ ಇಳಿದವರು ಮರಳಿದ್ದರು. ಬೆಳ್ದಿಂಗಳು ಸುತ್ತನ ಕಾಡಿನ ಮೇಲೆ ಬಿದ್ದಿದ್ದ ಚಂದವನ್ನೊ ನೀರ್ಬಿಳಗಳ ಸೊಗಸನ್ನೊ ಕುರಿತು ಮಾತಾಡುತ್ತಿದ್ದಂತಾಯ್ತು; ಮುಂದೆ ಮತ್ತೆ ನನಗೆ ಬಾಹ್ಯಪ್ರಜ್ಞೆ ಮರುಕೊಳಿಸಿದಾಗ ನಾನು ಕಾರಿನಲ್ಲಿದ್ದೆ; ನಮ್ಮ ಕಾರು ದಟ್ಟಕಾಡುಗಳ ನಡುವೆ ರಸ್ತೆಯಲ್ಲಿ ಶಿವಮೊಗ್ಗದತ್ತ ಧಾವಿಸುತ್ತಿತ್ತು; ರಾತ್ರಿಯಲ್ಲಿ! ಕಾರಿನ ಬೆಳಕಿನಲ್ಲಿ ಒಂದು ಹುಲಿ ಹೆದ್ದಾರಿಯ ಒಂದು ಪಕ್ಕದಿಂದ ಮತ್ತೊಂದು ಪಕ್ಕಕ್ಕೆ ದಾಟಿ ಹೋದದ್ದನ್ನು ಇತರರಿಗೆ ಸ್ವಾಮಿಜಿ ಉತ್ಸುಕತೆಯಿಂದ ಹೇಳುತ್ತಿದ್ದುದು ನನ್ನ ಕಿವಿಗೆ ಬಿದ್ದದ್ದು ನೆನಪಿದೆ!

ನನ್ನ ದೆಸೆಯಿಂದ ನನ್ನ ಮಿತ್ರರು, ಒಂದೆರಡು ದಿನವಾದರೂ ಜೋಗದಲ್ಲಿದ್ದು ಬರಬೇಕೆಂಬ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿ, ಹಿಂದಕ್ಕೆ ಧಾವಿಸುತ್ತಿದ್ದರು. ಆಮೇಲೆ ನನಗೆ ತಿಳಿದು ಬಂದಂತೆ, ರಾತ್ರಿ ಡಾ. ಚೊಕ್ಕಂ ಅವರು ನನ್ನನ್ನು ಪರೀಕ್ಷಿಸಿದಾಗ ನನ್ನ ಸ್ಥಿತಿ ತುಂಬ ವಿಷಮವಾಗಿದ್ದಂತೆ ಕಂಡುಬಂದಿತಂತೆ. ತಳುವಿದರೆ ಅಪಾಯ ಎಂದು ರಾತ್ರಾರಾತ್ರಿಯೆ, ಸುಮಾರು ಎರಡು ಗಂಟೆಯಲ್ಲಿಯೊ ಮೂರು ಗಂಟೆಯಲ್ಲಿಯೊ ಅಲ್ಲಿಂದ ಹೊರಟುಬಿಟ್ಟಿದ್ದರು.

ಮತ್ತೊಮ್ಮೆ ನನಗೆ ಪ್ರಜ್ಞೆ ಮರುಕೊಳಿಸಿದಾಗ ನಮ್ಮ ಕಾರು ಭದ್ರಾವತಿಯನ್ನು ಸಮೀಪಿಸುತ್ತಿತ್ತು; ಆಗತಾನೆ ಬೆಳಗಾಗುತ್ತಿತ್ತು. ತಕ್ಕಮಟ್ಟಿಗೆ ಚೆನ್ನಾಗಿಯೇ ಬೆಳಕು ಬಿಟ್ಟಿರಬೇಕು. ಏಕೆಂದರೆ, ಸರ್. ಎಂ. ವಿಶ್ವೇಶ್ವರಯ್ಯನವರು ತಮ್ಮ ದಿನನಿತ್ಯದ ಪದ್ಧತಿಯಂತೆ ಪ್ರಾತಃಸಂಚಾರಕ್ಕೆ ಹೊರಟವರು ನಮ್ಮ ಕಾರಿಗೆ ಇದಿರಾಗಿ ನಡೆದು ಹೋಗುತ್ತಿದ್ದುದನ್ನು ಗುರುತಿಸಿ ಸ್ವಾಮಿಜಿ ಮತ್ತು ಚೊಕ್ಕಂ ಮಾತಾಡಿಕೊಳ್ಳುತ್ತಿದ್ದುದು ನನ್ನ ನೆನಪಿಗೆ ಬರುತ್ತಿದೆ.

ಮಾನಪ್ಪನೂ ಜೊತೆಗೆ ಇದ್ದುದರಿಂದ ನನ್ನನ್ನು ದಾರಿಯಲ್ಲಿ ಸಿಕ್ಕುವ ಶಿವಮೊಗ್ಗದಲ್ಲಿಯೇ ದೇವಂಗಿ ಅಡಕೆ ಮಂಡಿಯ ಮನೆಗೆ ಬಿಡಬಹುದಾಗಿತ್ತು. ಆದರೆ ನನ್ನ ಕ್ಷೇಮಭಾರವನ್ನು ಹೊತ್ತಿದ್ದ ಡಾ. ಚೊಕ್ಕಂ ಅವರ ಸಲಹೆಯಂತೆ ನನ್ನನ್ನು ಭದ್ರಾವತಿಯ ತಮ್ಮ ಮನೆಯಲ್ಲಿಯೆ ಚಿಕಿತ್ಸೆಗೊಳಪಡಿಸುವ ಉದ್ದೇಶದಿಂದ ಕಾರನ್ನು ನೇರವಾಗಿ ಭದ್ರಾವತಿಗೇ ಬಿಡುವಂತೆ ಮಾಡಿದ್ದರು.

ಮುಂದೆ ನಡೆದುದನ್ನು ನೆನಪಿನಿಂದ ಬರೆಯಲಾರೆ. ಅದನ್ನೆಲ್ಲ ತರುವಾಯ ಪಡೆದ, ಇತರರು ನೀಡಿದ, ತಿಳಿವಿಕೆಯಿಂದಷ್ಟೆ ಬರೆಯುತ್ತೇನೆ. ಏಕೆಂದರೆ, ಮತ್ತೆ ನನಗೆ ಬಾಹ್ಯಪ್ರಪಂಚವನ್ನು ಬುದ್ಧಿಪೂರ್ವಕವಾಗಿ ಗ್ರಹಿಸುವಷ್ಟರ ಪ್ರಜ್ಞೆ ಉಂಟಾದಾಗ ನಾನು, ಎಲ್ಲಿಯೆಂದು ಗೊತ್ತಿಲ್ಲದ, ಏಕೆ ಎಂದು ಅರಿಯಲಾರದ, ತಲೆತಗುಲುವಷ್ಟರಮಟ್ಟಿನ ಕೆಳಮಟ್ಟದ, ಒಂದು ಸಣ್ಣದ ಹಳೇ ಹುಲು ಜೋಪಡಿಯೊಳಗೆ ಬಂಧಿತನಾದಂತೆ ಇದ್ದೆ.

ಉಗ್ರಜ್ಜರತಪ್ತನಾಗಿದ್ದ ನನ್ನನ್ನು ಭದ್ರಾವತಿಯಲ್ಲಿ ಡಾ. ಚೊಕ್ಕಂ ಅವರ ಮನೆಗೆ ಕರೆದೊಯ್ದು ಮಲಗಿಸಿ, ಶುಶ್ರೂಷೆಗೈದು, ಜ್ವರ ಇಳಿಯಲು ಇಂಜೆಕ್ಷನ್ ಚುಚ್ಚಿದರಂತೆ. ಆದರೆ ಏನೂ ಗುಣ ಕಾಣದಿರಲು, ನನ್ನನ್ನು ಆ ಸ್ಥಿತಿಯಲ್ಲಿ ಮೈಸೂರಿಗೆ ರೈಲಿನಲ್ಲಿ ಕರೆದೊಯ್ಯುವುದು ಅಪಾಯಕಾರ ಎಂಬ ಡಾಕ್ಟರ ಬುದ್ಧಿವಾದದ ಮೇರೆಗೆ, ಸ್ವಾಮಿಜಿ ಮಾನಪ್ಪನೊಡನೆ ನನ್ನನ್ನು ಶಿವಮೊಗ್ಗೆಗೆ ಬಿಟ್ಟು, ತಾವೂ ಪ್ರೊ. ಮಾಧ್ವರೂ ಮೈಸೂರಿಗೆ ಹಿಂತಿರುಗಿದರು. ದೇವಂಗಿ ರಾಮಣ್ಣಗೌಡರ ಮಂಡಿಮನೆಯ ಉಪ್ಪರಿಗೆಯ ಮೇಲೆ ಮಾನಪ್ಪ ಮತ್ತು ಹೊಸಮನೆ ಮಂಜಪ್ಪಗೌಡರ ಶುಶ್ರೂಷೆಯ ಅತಿಥಿಯಾಗಿ ಹಾಸಿಗೆ ಹಿಡಿದೆ.

ಸಾಧಾರಣವಾಗಿ ಜ್ವರಕ್ಕೆ ಔಷಧಿ ತರುವಂತೆ ಆಸ್ಪತ್ರೆಯಿಂದ ಔಷಧಿ ತರಿಸಿ ಕುಡಿಸಿದರು. ಸೂಜಿಮದ್ದನ್ನೂ ಚುಚ್ಚಿಸಿದರು. ಆದರೆ ಜ್ವರ ವಿಷಮಸ್ಥಿತಿಗೇರಿತೇ ಹೊರತು ಇಳಿಯಲಿಲ್ಲ. ಪ್ರಜ್ಞೆ ಸನ್ನಿಯಮಟ್ಟಕ್ಕೂ ಏರಿತಂತೆ. ನಾನು ಬದುಕುವ ಆಶೆಯನ್ನೆ ಕೈಬಿಡುವ ಹಾಗಾಯಿತಂತೆ. ಒಂದೆರಡು ದಿನಗಳಲ್ಲಿ ಕಣ್ಣು ಕೆಂಪಗಾಯಿತಂತೆ. ನನ್ನ ಆ ಪ್ರಜ್ಞಾಹೀನ ದುಃಸ್ಥಿತಿಯಲ್ಲಿ ದೇವರೆ ಸಹಾಯಕ್ಕೆ ಬಂದಂತೆ ಆಕಸ್ಮಾತ್ತಾಗಿ ಯಾವುದೊ ತಮ್ಮ ಕಾರ್ಯನಿಮಿತ್ತ ಶಿವಮೊಗ್ಗಕೆ ಬಂದಿದ್ದ ಗುಂಡಾಪಂಡಿತರು ಅಡಿಕೆ ಮಂಡಿಗೆ ರಾಮಣ್ಣಗೌಡರನ್ನು ಕಾಣಲು ಬಂದರಂತೆ.

ಗುಂಡಾಪಂಡಿತರು ಸ್ವಾತಂತ್ಯ್ರ ಚಳುವಳಿಯಲ್ಲಿ ಭಾಗಿಯಾಗಿ ಹೆಸರುವಾಸಿಯಾಗಿ ಇರುವ ಪಾರ್ಥನಾರಾಯಣ ಪಂಡಿತರ ತಂದೆ ಸುಬ್ಬಾಪಂಡಿತರ ತಂದೆ ಸುಬ್ಬಾಪಂಡಿತರ ತಮ್ಮಂದಿರು. ಸುಬ್ಬಾಪಂಡಿತರಿಗೂ ದೇವಂಗಿ ರಾಮಣ್ಣಗೌಡರಿಗೂ ಬಹುಕಾಲದ ಪರಿಚಯ ಮತ್ತು ಸ್ನೇಹ. ಇಬ್ಬರಿಗೂ ಆಯುರ್ವೇದದಲ್ಲಿ ತುಂಬ ಆಸಕ್ತಿ. ಆರ್ಥಿಕವಾಗಿಯೂ ಪಂಡಿತರು ಗೌಡರಿಗೆ ಕೃತಜ್ಞರಾಗಿದ್ದರು.

ನನಗೆ ಕಾಯಿಲೆಯಾಗಿ ಅಸ್ತಾವಸ್ಥೆಯಲ್ಲಿರುವ ವಿಚಾರ ತಿಳಿದೊಡನೆ ಗುಂಡಾ ಪಂಡಿತರು ಬಂದು ಚೆನ್ನಾಗಿ ರೋಗಪರೀಕ್ಷೆ ಮಾಡಿ, ಏನೇನೋ ಔಷಧಿಗಳನ್ನು ತೇದು ನಾಲಗೆಗೆ ಸವರಿದಂತೆ. ಎಷ್ಟು ದಿನಗಳಿಂದ ಏರಿದ ಜ್ವರ ಇಳಿಯದೆ ಬರುತ್ತಿದೆ, ಏನೇನು ಔಷಧಿ ಪ್ರಯೋಗವಾಗಿದೆ, ಎಲ್ಲವನ್ನೂ ತಿಳಿದು, ಜ್ವರದ ಲಕ್ಷಣ ಮತ್ತು ಕಣ್ಣು ಕೆಂಪಗಾಗಿರುವುದು ಇತ್ಯಾದಿ ದೇಹದ ಲಕ್ಷಣಗಳನ್ನು ಪರಿಶೀಲಿಸಿ, ಇದಕ್ಕೆ ಬೇರೆ ಏನೂ ಚುಚ್ಚುಮದ್ದು ಗಿಚ್ಚುಮದ್ದು ಮಾಡುವುದು ಬೇಡ ಎಂದು ತಿಳಿಸಿ, ಒಂದೆರಡು ದಿನ ತಾವೇ ನನ್ನ ಶಯ್ಯೆಯ ಪಕ್ಕದಲ್ಲಿದ್ದು ಗಿಡಮೂಲಿಕೆಯ ಔಷಧಿ ಪ್ರಯೋಗ ನಡೆಸಿದರಂತೆ. ಕೊನೆಗೆ ಮೈಮೇಲಣ ಲಕ್ಷಣಗಳಿಂದ, ನನಗೆ ಬಂದಿರುವ ಕಾಯಿಲೆ ಮತ್ತೇನೂ ಅಲ್ಲ, ‘ಮೈಲಿ’ ಎಂದು ನಿರ್ಣಯಿಸಿ, ನನ್ನನ್ನು ಪ್ರತ್ಯೇಕ ಸ್ಥಳಕ್ಕೆ ಸಾಗಿಸಿ, ಶುಶ್ರೂಷೆಗೆ ಏರ್ಪಡಿಸಲು ತಿಳಿಸಿದಂತೆ, ಇತರರಿಗೆ ಸೋಂಕು ತಗುಲಬಾರದು ಎಂಬ ಕಾರಣಕ್ಕಾಗಿ.

ನನ್ನನ್ನು ಸಾಗಿಸಿ ಇಟ್ಟಿದ್ದ ಜೋಪಡಿಯನ್ನು ನೆನೆದರೆ, ನನ್ನ ಈಗಿನ ಮನೋಧರ್ಮಕ್ಕೆ, ಅತ್ಯಂತ ರಿಕ್ತವೂ ದರಿದ್ರವೂ ಕರುಣಕರವೂ ಆಗಿ ತೋರುತ್ತದೆ. ರಸ್ತೆಯ ಪಕ್ಕದ ಒಂದು ಕಾಂಪೌಂಡಿನಂತಹ ಮಣ್ಣಿನ ಗೋಡೆಗೆ ಆನಿಸಿ ಕಡಿಮಾಡುಮಾಡಿದ್ದ ಕೊಟ್ಟಿಗೆಯಾಗಿತ್ತು ಅದು. ಅಡಕೆಸೋಗೆಯನ್ನೊ ನೆಲ್ಲುಹುಲ್ಲನ್ನೊ ಹೊದಿಸಿತ್ತೆಂದು ತೋರುತ್ತದೆ. ಅದು ಇದ್ದ ಸ್ಥಳ ಒಂದು ದೇವಸ್ಥಾನಕ್ಕೆ ಸುತ್ತುವರಿದಿದ್ದ ಜಾಗಕ್ಕೆ ಸೇರಿತ್ತು. ದೇವಂಗಿ ರಾಮಣ್ಣಗೌಡರ ವಾಸದ ಮನೆಗೆ (ಅಡಕೆ ಮಂಡಿಗಲ್ಲ.) ಒಂದೊ ಒಂದೂವರೆಯೊ ಫರ್ಲಾಂಗು ದೂರದಲ್ಲಿತ್ತು.  ಅವರ ಮನೆಯ ಎದುರಿನ ರಸ್ತೆ ದಕ್ಷಿಣಾಭಿಮುಖವಾಗಿ ಹೋಗಿ ದೊಡ್ಡ ರಸ್ತೆಯನ್ನು ಸೇರುವ ತಾಣಕ್ಕೆ ಸ್ವಲ್ಪ ಹೆಚ್ಚು ಕಡಿಮೆ ನೇರವಾಗಿತ್ತೆಂದು ತೋರುತ್ತದೆ. ಬಹುಶಃ ಮನೆಗೆ ಸಮೀಪವಾಗಿದ್ದು ಶುಶ್ರೂಷೆಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿಯೂ ಆ ಜಾಗವನ್ನು ಆರಿಸಿದ್ದರೂ ಇರಬಹುದು. ಕೂಲಿಯಾಳುಗಳ ವಾಸಕ್ಕಾಗಿ ಕಟ್ಟಿದ್ದೆಂದು ಕಾಣುತ್ತದೆ. ಹತ್ತು ಹನ್ನೆರಡು ಅಡಿಯ ಉದ್ದಗಲದ ಆ ಜೋಪಡಿ ಎರಡು ಭಾಗವಾಗಿ ಮಾಡಲ್ಪಟ್ಟಿತ್ತು, ಒಂದು ತಡಿಕೆಯ ಅಡ್ಡಗೋಡೆಯಿಂದ. ಬಹುಶಃ ಆ ಸಣ್ಣ ಭಾಗ ಅಡುಗೆ ಮನೆಯಾಗಿಯೂ ದೊಡ್ಡಭಾಗ ಕೂರುವ ಮಲಗುವ ಮನೆಯಾಗಿಯೂ ಇದ್ದಿರಬೇಕು. ಅದಕ್ಕೊಂದು ಒಂದೇ ರೆಕ್ಕೆಯ ಬಾಗಿಲೂ ಇದ್ದು, ಒಳಗಿನಿಂದ ತಾಳ ಹಾಕಿಕೊಳ್ಳುವಂತಿತ್ತು. ಈ ವರ್ಣನೆಯನ್ನೆಲ್ಲ ಏಕೆ ಬರೆಯುತ್ತಿದ್ದೇನೆ ಎಂದರೆ ಮುಂದೆ ನಡೆದ ಕೆಲವು ಘಟನೆಗಳಿಗೆ ಅದರ ಅವಶ್ಯಕತೆ ಇರುವುದರಿಂದ.

ನನಗೆ ಬಂದಿದ್ದ ‘ಮೈಲಿ’ ಅಥವಾ ‘ಅಮ್ಮ’ ಅಥವಾ ‘ದೊಡ್ಡ ಸಿಡುಬು’ ಭಯಂಕರ ಪ್ರಮಾಣದ್ದಾಗಿತ್ತಂತೆ. ಮುಳ್ಳುಮೊನೆಕೊಳ್ಳದಷ್ಟು ನಿಬಿಡವಾಗಿ ಮೈತುಂಬ ಎದ್ದಿತ್ತಂತೆ. ದೇಹದ ಯಾವ ಭಾಗವನ್ನೂ ಅದು ಬಿಟ್ಟಿರಲಿಲ್ಲ. ಕಣ್ಣಿನೊಳಗೂ ಸಿಡುಬಿನ ಗುಳ್ಳೆಬೊಕ್ಕೆಗಳು ಎದ್ದಿದ್ದುವು. ಅಂಗಾಲೂ ಕೂಡ ಭೀಕರ ಬೊಕ್ಕೆಗಳಿಂದ ತುಂಬಿಹೋಗಿತ್ತಂತೆ. ನಾನು ಬದುಕುವ ಆಸೆಯನ್ನೆ ಬಿಟ್ಟಿದ್ದರಂತೆ ಮಿತ್ರರು. ಬದುಕಿದರೂ ಅಂಗವಿಕಲನಾಗಿಯೊ ಸಂಪೂರ್ಣ ಕುರುಡನಾಗಿಯೊ ಆಗುವುದು ಅನಿವಾರ್ಯ ಎಂದು ನಿಶ್ಚಯಿಸಿದ್ದರಂತೆ: ಶ್ರೀ ತಾಯಿಯ ವಿಶೇಷ ಕೃಪೆ ಇರಬೇಕು, ನನಗೆ ಮಾತ್ರ ನನಗೆ ‘ಮೈಲಿ’ ಬಂದ್ದಾಗಲಿ ಅದು ಭಯಂಕರವಾಗಿದ್ದು ಯಾತನಾ ಕ್ಲಿಷ್ಟವಾಗಿದ್ದುದಾಗಲಿ, ಅದು ಕ್ರಮೇಣ ಗುಣಮುಖವಾದದ್ದಾಗಲಿ ಒಂದೂ ಗೊತ್ತಿರಲಿಲ್ಲ. ನನಗೆ ಬಾಹ್ಯಪ್ರಜ್ಞೆ ತಿಳಿದಾಗ, ನಾನು ಏಕೆ ಹೇಗೆ ಆ ಜೋಪಡಿಗೆ ಬಂದೆ? ಯಾರು ನನ್ನನ್ನು ಅಲ್ಲಿಗೆ ತಂದು ಬಂಧಿಸಿದರು? ಅಲ್ಲಿ ನನ್ನನ್ನು ನೋಡಿಕೊಳ್ಳಲೆಂದಿದ್ದ ಒಬ್ಬ ಮುದುಕ ಮತ್ತೊಬ್ಬ ಹುಡುಗ ಅವರಾದರೂ ಯಾರು?-ಎಂಬುದೊಂದೂ ನನಗೆ ಬಗೆಹರಿಯದೆ, ಏನೇನೊ ದುರುದ್ದೇಶ ಶಂಕೆ ದುರಂತ ದುರೂಹೆಗಳಿಂದ ನನ್ನ ಮನಸ್ಸು ವ್ಯಗ್ರವಾಯಿತು! ನಡೆದುದ್ದಕ್ಕೂ ಅಲ್ಲಿದ್ದುದಕ್ಕೂ ಮತ್ತು ನನ್ನ ಮನಸ್ಸು ವಾಸ್ತವವನ್ನು ಗ್ರಹಿಸಲೋಸ್ಕರ ತಾನು ಮಾಡುತ್ತಿದ್ದ ವ್ಯಾಖ್ಯಾನಕ್ಕೂ ಸ್ವಲ್ಪವೂ ಹೊಂದಾಣಿಕೆಯಾಗದೆ ನನ್ನ ಮಾತಿನ ಮತ್ತು ವರ್ತನೆಯ ಪ್ರತಿಕ್ರಿಯೆ ತಲೆಕೆಟ್ಟು ಹೋಗಿ ಹುಚ್ಚು ಹಿಡಿಯಿತೆಂಬಂತೆ ತೋರಿತ್ತು ಇತರರಿಗೆ.

ಬಹಿರಂಗದ ಈ ರೋಗನಾಟಕದ ತೆರೆಯ ಹಿಂದೆ ಅಂತರಂಗದ ಒಂದು ಯೋಗ ನಾಟಕ ನಡೆಯುತ್ತಿತ್ತೆಂದು, ತರುವಾಯ ನಾನು, ಪ್ರತ್ಯಕ್ಷವಾಗಿ ಭಾಗವಹಿಸಿದ್ದ ಸಾಕ್ಷಿಗಳಿಂದ, ಸಂಗ್ರಹಿಸಿದ ಸುದ್ದಿಯಿಂದ ತಿಳಿದುಬರುತ್ತದೆ. ನೆನಪಿನಲ್ಲಿರುವಷ್ಟನ್ನೆ ಬಿಡಿಬಿಡಿಯಾಗಿ ಹೇಳುತ್ತೇನೆ. ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸಿಕೊಳ್ಳುವುದು ಸಾಧ್ಯವಾದರೆ ಸಹೃದಯ ಮಿತ್ರರು ಹಾಗೆ ಮಾಡಿಕೊಳ್ಳಬಹುದು.

ನಾನು ಬಾಹ್ಯಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೂ ಕೆಲವೊಂದು ವಿಚಾರಗಳಲ್ಲಿ ಸುಸಂಗತವಾಗಿಯೆ ಏನೇನನ್ನೊ ಆಡಿಕೊಳ್ಳುತ್ತಿದ್ದನಂತೆ, ವಿಶೇಷವಾಗಿ ಶ್ರೀರಾಮಕೃಷ್ಣ ವಿವೇಕಾನಂದರನ್ನು ಕುರಿತು, ಸ್ವಾಮಿ ಸಿದ್ಧೇಶ್ವರಾನಂದರು ಸಂತೆಪೇಟೆಯ ಕೊಠಡಿಯಲ್ಲಿ ಕಾಯಿಲೆ ಬಿದ್ದಿದ್ದ ನನ್ನನ್ನು ಆಸ್ಪತ್ರೆಗೆ ಸೇರಿಸಿದಾಗ ನನಗೆ ಕೊಟ್ಟಿದ್ದ ಸ್ವಾಮಿಜಿ ಗುರುಮಹಾರಾಜ್-ಮಹಾಮಾತೆಯರ ಚಿಕ್ಕ ಪಟಗಳಿದ್ದ ಚಿತ್ರಕೋಶ ಆಲ್ಬಂ ಅನ್ನು ನಾನು ಸದಾಕಾಲವೂ ಆರಾಧ್ಯವಸ್ತುವಾಗಿ ನನ್ನ ಬಳಿಯಲ್ಲಿಯೆ ಇಟ್ಟುಕೊಂಡಿರುತ್ತಿದ್ದೆ. ಆಗಾಗ ಮನಸ್ಸು ಬಂದಾಗ ಅದನ್ನು ತೆಗೆದು ಬಿಚ್ಚಿ ದೃಷ್ಟಿಪೂಜೆ ಸಲ್ಲಿಸುತ್ತಿದ್ದೆ, ಗೋಪ್ಯವಾಗಿ. ಯಾವಾಗಲೂ ನನ್ನ ಷರ್ಟಿನ ಜೇಬಿನಲ್ಲಿರುತ್ತಿದ್ದ ಅದನ್ನು ಸ್ನಾನಮಾಡಿ ಬಟ್ಟೆ ಬದಲಾಯಿಸುವಾಗ ಹಾಕಿಕೊಳ್ಳುತ್ತಿದ್ದ ಮಡಿಷರ್ಟಿನ ಜೇಬಿಗೆ ಬದಲಾಯಿಸುತ್ತಿದ್ದೆ. ಕಕ್ಕಸಿನಲ್ಲಿರಲಿ, ಊಟಮಾಡುತ್ತಿರಲಿ, ಕಾಲೇಜಿನಲ್ಲಿರಲಿ, ನಿದ್ದೆ ಮಾಡುತ್ತಿರಲಿ ಆ ‘ಪಟಮಂದಿರ’ವಾಗಿದ್ದ ‘ಆಲ್ಬಂ’ ಚಿತ್ರಕೋಶ ಸರ್ವದಾ ನನ್ನ ಮೈಮೇಲಿಂದ ಅಗಲುತ್ತಿರಲಿಲ್ಲ. ಈ ಸಾರಿ ನಾನು ಜೋಗಕ್ಕೆ ಪ್ರವಾಸ ಹೊರಟಾಗಲೂ ಅದನ್ನು ನಿಲುವಂಗಿಯ ಒಳಜೇಬಿನಲ್ಲಿ ಭದ್ರಪಡಿಸಿದ್ದೆ. ನನಗೆ ಕಾಯಿಲೆ ಉಲ್ಬಣಿಸಿ ಹಾಸಗೆ ಹಿಡಿದ ಸಂದರ್ಭದಲ್ಲಿ ಆ ಘಟಿಕೋತ್ಸವದ ದಿರುಸನ್ನೆಲ್ಲ ತೆಗೆದಿಟ್ಟರು. ಸಿಡುಬು ತೋರಿ ಮೈಮೇಲೆಲ್ಲ ಬೊಕ್ಕೆಗುಳ್ಳೆಗಳು ಕಾಣಿಸಿಕೊಂಡ ಮೇಲಂತೂ ನಾನು ನಗ್ನಸ್ಥಿತಿಯಲ್ಲಿರುವುದು ಅನಿವಾರ್ಯವಾಯಿತು. ಹೀಗಿರುವಾಗ ನಾನು ಒಮ್ಮೆ ಏನನ್ನೊ ಹುಡುಕಾಡತೊಡಗಿ ‘ಆಲ್ಬಂ ಕೊಡಿ’ ಎಂದು ಕೇಳತೊಡಗಿದೆನಂತೆ. ಶುಶ್ರೂಷೆ ಮಾಡುತ್ತಿದ್ದವರಿಗೆ ಅದು ಏನು ಎಂದು ಅರ್ಥವಾಗಲಿಲ್ಲ. ಮೊದಮೊದಲು ನಾನು ಸನ್ನಿಯಲ್ಲಿ ಏನನ್ನೋ ಬಡಬಡಿಸುತ್ತಿರಬೇಕು ಎಂದು ಭಾವಿಸಿ ನಿರ್ಲಕ್ಷಿಸಿದರು. ಆದರೆ ನನ್ನ ಕಾಟ ಅತಿಯಾಗಲು ವಿಷಯವನ್ನು ಹೊಸಮನೆ ಮಂಜಪ್ಪಗೌಡರಿಗೂ ಮಾನಪ್ಪಗೂ ತಿಳಿಸಿದರು. ಮಾನಪ್ಪನನ್ನು ಸಿಡುಬಿನ ಸೋಂಕಿನ ಭಯದಿಂದ ನನ್ನ ಬಳಿಗೆ ಬಿಡುತ್ತಿರಲಿಲ್ಲ. ಅವನಿಗೆ ನನ್ನ ಬಳಿ ಈ ‘ಆಲ್ಬಂ’ ಇರುವ ಸಂಗತಿ ಗೊತ್ತಿದ್ದುದರಿಂದ ನನ್ನ ಕೋಟಿನಲ್ಲಿದ್ದ ಅದನ್ನು ಪತ್ತೆಹಚ್ಚಿ ತೆಗೆದುಕೊಟ್ಟನಂತೆ.

ಅದಕ್ಕಾಗಿ ಗೋಗರೆಯುತ್ತಿದ್ದ ನನ್ನ ಕೈಗೆ ಆ ಚಿತ್ರಕೋಶವನ್ನು ಕೊಟ್ಟೊಡನೆ, ಬಯಸಿದ್ದ ಮಹದೈಶ್ವರ್ಯವೆ ಕೈಸಾರಿದಂತಾಗಿ ನಾನು ಹರ್ಷಿತನಾಗಿ, ಶಾಂತನಾಗಿ, ಚಿತ್ರಕೋಶವನ್ನು ತುಂಬ ಭಕ್ತಿಯಿಂದ ಹಣೆಗೆ ಮುಟ್ಟಿಸಿಕೊಂಡೆನಂತೆ. ಮತ್ತೆ ಮೆಲ್ಲಗೆ ಅದನ್ನು ತೆರೆದು, ಕಣ್ಣೆದುರಿಗೆ ಹಿಡಿದುಕೊಂಡು, ಮೂರು ಪವಿತ್ರ ವ್ಯಕ್ತಿಗಳನ್ನೂ (ಸ್ವಾಮಿ ವಿವೇಕಾನಂದರು, ಶ್ರೀರಾಮಕೃಷ್ಣರು ಮತ್ತು ಶಾರದಾದೇವಿಯವರು) ರೆಪ್ಪೆಮುಚ್ಚದೆ ಭಾವಾವೇಶದಿಂದಲೆಂಬಂತೆ ನೋಡತೊಡಗಿದನಂತೆ. ಮತ್ತೆ ಅದನ್ನು ಹಣೆಗೆ, ಮತ್ತೆ ಕಣ್ಣಿಗೆ, ಮತ್ತೆ ಎದೆಗೆ ಒತ್ತಿಕೊಂಡನಂತೆ. ಹಾಗೆ ಕೆಲವು ನಿಮಿಷಗಳವರೆಗೆ ಮಾಡುತ್ತಿದ್ದು, ಚಿತ್ರಕೋಶದ ಮೂರು ಮೂರು ಮಡಿಕೆಯ ರೆಕ್ಕೆಗಳನ್ನೂ ಕ್ರಮಬದ್ಧವಾಗಿ ಮುಚ್ಚಿ, ಒಂದರೆಕ್ಷಣ ಅತ್ತಿಇತ್ತ ಕಣ್ಣು ಹಾಯಿಸಿದೆನಂತೆ, ಮುಂದೇನು ಮಾಡುವುದು ಎಂಬುದನ್ನು ನಿರ್ಣಯಿಲೆಂಬಂತೆ.  ಇದ್ದಕಿದ್ದಂತೆ ಒಂದು ನಿರ್ಣಯಕ್ಕೆ ಬಂದು, ಬಟ್ಟೆ ಲವಲೇಶವಿಲ್ಲದೆ ಬೆತ್ತಲೆ ಇದ್ದ ಎಡಗೈ ತೋಳನ್ನು ಎತ್ತಿಹಿಡಿದು ಚಿತ್ರಕೋಶವನ್ನು ಬಗಲುಸಂಧಿಗೆ ತಳ್ಳಿ, ಕೌಂಕುಳದಲ್ಲಿ ಭದ್ರಪಡಿಸಿ ತೋಳನ್ನಿಳಿಸಿ ಮುಚ್ಚಿಬಿಟ್ಟೆನಂತೆ!

ಅದು ಅಲ್ಲಿ ಹತ್ತಿಪ್ಪತ್ತೊ ಮೂವತ್ತೊ ದಿನಗಳವರೆಗೆ, ನನಗೆ ಮೈಲಿ ಗುಣವಾಗಿ ಬೇವಿನ ಸೊಪ್ಪಿನ ಬಿಸಿನೀರಿನ ಮಿಂದು ಷರ್ಟು  ಹಾಕಿಕೊಳ್ಳುವ ಕಾಲ ಬರುವವರೆಗೆ ನನ್ನ ಕಂಕುಳ ಬೀಗಮುದ್ರೆಯಲ್ಲಿ ಭದ್ರವಾಗಿತ್ತು! ಬೇಕುಬೇಕಾದಾಗ ತೆಗೆದು ನೋಡುವುದು, ಹಣೆಗೆ ಮುಟ್ಟಿಸಿಕೊಂಡು ನಮಸ್ಕಾರ ಮಾಡುವುದು, ಮತ್ತೆ ಕಂಕುಳದಲ್ಲಿ ಹುದುಗಿಸುವುದು. ಮಡಿ ಮೈಲಿಗೆ ಎಂಬ ಭೇದ ಭಾವನೆ ಇರಲಿಲ್ಲ. ಕಕ್ಕಸಿಗೆ ಹೋಗಿ ಎಡಗೈಯಲ್ಲಿ ತೊಳೆದುಕೊಳ್ಳುತ್ತಿರುವಾಗಲೂ ಕಂಕುಳುಬಿಗಿ ಸಡಿಲುತ್ತಿರಲಿಲ್ಲವಂತೆ. ಸ್ನಾನ ಮಾಡುತ್ತಿರುವಾಗಲೂ ಕಂಕುಳು ಭದ್ರವಾಗಿ ಬಿಗಿದೇ ಇರುತ್ತಿದ್ದುದರಿಂದ ಅದಕ್ಕೆ ಒಂದಿನಿತೂ ನೀರು ಸೋಂಕುತ್ತಿರಲಿಲ್ಲ. ಹಾಗೇನಾದರೂ ನೀರು ತಗುಲಿ ತೊಯ್ದಿದ್ದರೆ ಬಟ್ಟೆ ಕಾಗದಗಳಿಂದಾಗಿದ್ದ ಆ ಚಿತ್ರಕೋಶ ಕರಗಿ ಹಾಳಾಗಿ ಹೋಗದೆ ಇರುತ್ತಿರಲಿಲ್ಲ. ಇಷ್ಟೆಲ್ಲ ನಡೆಯುತ್ತಿದ್ದುದು ಸಂಪೂರ್ಣ ಪ್ರಯತ್ನವಿಹೀನವಾದ ಅನೈಚ್ಛಿಕತೆಯಿಂದಲೆ! ಹೊರಗಣಿಂದ ನೋಡಿದರೆ ಯಾವುದು ಪ್ರಜ್ಞಾಪೂರ್ವಕವಾದ ಮತ್ತು ಬುದ್ಧಿಸಾಧ್ಯವಾದ ಸ್ವಪ್ರಯತ್ನದ ಜಾಗರೂಕತೆಯೆಂಬಂತೆ ತೋರುತ್ತಿತ್ತೋ ಆದಷ್ಟೂ ಏನೇನೂ ಸ್ವಪ್ರಯತ್ನವಿಲ್ಲದೆ ಯಂತ್ರಾರೂಢವಾದ ಪುತ್ಥಲಿಯ ವರ್ತನೆಯಂತೆ ಅನ್ಯ ನಿಯಂತ್ರಿತವಾಗಿಯೆ ನಡೆಯುತ್ತಿತ್ತು. ಮುಂದೆ ನಾನು ಹೇಳಲಿರುವ ಇತರ ಘಟನೆಗಳಿಂದ ಅದು ಸುಸ್ಪಷ್ಟವಾಗುತ್ತದೆ.

ಹೀಗೆ ನನಗೆ ‘ಮೈಲಿ’ಯಾಗಿ ನನ್ನನ್ನು ಜೋಪಡಿಗೆ ಸಾಗಿಸಿರುವ ವಾರ್ತೆಯನ್ನು ಮನೆಗೆ ಎಂದರೆ ಕುಪ್ಪಳಿಗೆ ಮುಟ್ಟಿಸಿದರು. ದೊಡ್ಡ ಚಿಕ್ಕಪ್ಪಯ್ಯ (ಕುಪ್ಪಳಿ ರಾಮಣ್ಣಗೌಡರು) ದಾರುಣ ಚಿಂತಾಗ್ರಸ್ತರಾದರು. ಬಹುಶಃ ನನ್ನ ತಂದೆ ತಮ್ಮೊಡನೆ ಭಿನ್ನಾಭಿಪ್ರಾಯದಿಂದ ಮುನಿಸಿಕೊಂಡು ತೀರ್ಥಹಳ್ಳಿಗೆ ಹೋಗಿ, ಅಲ್ಲಿ ವಿಷಮಶೀತಜ್ವರದಿಂದ ಮಡಿದ ಸಂಕಟಕರ ಸಂಗತಿ ಅವರ ಚಿತ್ತವನ್ನು ಕಲಕಿತೆಂದು ತೋರುತ್ತದೆ. ಅಲ್ಲದೆ ನನ್ನ ತಾಯಿಯೂ ಅವರ ಮೇಲೆ ಮುನಿದುಕೊಂಡೇ ತವರಿಗೆ ತನ್ನಿಬ್ಬರು ಹೆಣ್ಣು ಮಕ್ಕಳೊಡನೆ ಹೋಗಿದ್ದು, ಕಾಯಿಲೆಯಾಗಿ ಮನೆಗೆ ಹಿಂತಿರುಗಿ, ತೀರಿಕೊಂಡದ್ದೂ ನೆನಪಿಗೆ ಬಂದಿರಬೇಕು. ಮನೆ ಪಾಲಾಗುವಾಗಲೂ ನಾನು ಪ್ರತ್ಯೇಕವಾಗುವುದಕ್ಕೆ ಒಪ್ಪದೆ ಅವರೊಡನೆಯೆ ಇರಲೊಪ್ಪಿದುದೂ, ಅಲ್ಲದೆ ಆಗಿನ ಕಾಲದಲ್ಲಿ ಒಕ್ಕಲಿಗ ಜನಾಂಗದಲ್ಲಿ ಅತಿ ವಿರಳವಾಗಿದ್ದ ಬಿ.ಎ. ಡಿಗ್ರಿ ಪಾಸುಮಾಡಿ ಎಂ.ಎ.ಗೆ ಓದುತ್ತಿದ್ದು ಮನೆತನಕ್ಕೆ ಕೀರ್ತಿ ತಂದವನು ಎಂಬ ನನ್ನ ಮೇಲಣ ಮಮತೆಯೂ ಕಾರಣವಾಗಿರಬೇಕು, ಅವರ ದೃಢನಿರ್ಧಾರಕ್ಕೆ. ಅವರು ಸುದ್ದಿ ಬಂದೊಡನೆಯೆ ಶಿವಮೊಗ್ಗಾಕ್ಕೆ ಹೊರಡಲು ಸಿದ್ಧರಾಗಿ ಗಾಡಿಕಟ್ಟಿಸಿದರು. ಗಾಡಿ ಮನೆಗೆ ಸುಮಾರು ಒಂದು ಮೈಲಿ ದೂರವಿದ್ದ ಗಡಬಡೆ ಹಳ್ಳವನ್ನು ದಾಟುತ್ತಿದ್ದಾಗ, ತೆಳ್ಳೆನೀರಿನ ನಡುವೆ ಇದ್ದ ತುಸು ಗಾತ್ರದ ಉಂಡೆಕಲ್ಲುಗಳ ಮೇಲೆ ಚಕ್ರ ಹರಿದು ಉರುಳಿಬಿತ್ತು. ಗಾಡಿಯಲ್ಲಿದ್ದವರಿಗೆ ಹೆಚ್ಚೇನು ಅಪಾಯವಾಗಿರಲಿಲ್ಲ. ಆದರೂ ಜೊತೆಯಲ್ಲಿದ್ದವರು ಗಾಡಿ ಉರುಳಿದುದು ದೊಡ್ಡ ಅಪಶಕುನ ಎಂದು ಭಾವಿಸಿ ಆವೊತ್ತು ಪ್ರಯಾಣ ಮಾಡುವುದು ಬೇಡವೆ ಬೇಡ ಎಂದು ಎಷ್ಟು ಹೇಳಿದರೂ ದೊಡ್ಡ ಚಿಕ್ಕಪ್ಪಯ್ಯ ಅವರ ಮಾತಿಗೆ ಕಿವಿಗೊಡದೆ ಗಾಡಿಯನ್ನೇರಿ ತೀರ್ಥಹಳ್ಳಿಗೆ ಬಂದು, ಬಸ್ಸು ಹತ್ತಿ ಶಿವಮೊಗ್ಗೆಗೆ ಬಂದರು, ದೇವಂಗಿ ರಾಮಣ್ಣಗೌಡರ ಮನೆಗೆ.

ಮೈಲಿ ಸೋಂಕುಜಾಡ್ಯವಾಗಿರುವುದರಿಂದಲೂ ಅದು ಒಮ್ಮೆ ತಗುಲಿದವರಿಗೆ ಮತ್ತೆ ತಗಲುವ ಸಂಭವವಿಲ್ಲದುದರಿಂದಲೂ  ನನ್ನ ಶುಶ್ರೂಷೆಗೆ ಹಿಂದೆ ಮೈಲಿ ತಗುಲಿದವರಾಗಿದ್ದ ಒಬ್ಬ ಮುದುಕನನ್ನೂ ಮತ್ತೊಬ್ಬ ‘ಗಡ್ಲಿ’ ಎಂಬ ಹೆಸರಿನ ದೃಢಕಾಯದ ಬಲಿಷ್ಠ ಹುಡುಗನನ್ನೂ ನೇಮಿಸಿದ್ದರು. ಜೊತೆಗೆ ದೂರದ ಸಂಬಂಧಿಗಳಾಗಿದ್ದ ತರುಣರಿಬ್ಬರನ್ನೂ (ಗುಬ್ಬಗದ್ದೆ ದುಗ್ಗು ಮತ್ತು ಜಟ್ಟಿನಮಕ್ಕಿ ಸುಬ್ಬು) ನನ್ನ ವೈಯಕ್ತಿಕ ಉಸ್ತುವಾರಿಗೆ ಗೊತ್ತುಮಾಡಿದ್ದರು. (ಇವರಿಬ್ಬರು ಗುಬ್ಬಗದ್ದೆ ಮತ್ತು ಜಟ್ಟಿನಮಕ್ಕಿ ಎಂಬ ಹಳ್ಳಿಯವರಾಗಿದ್ದು ಅವರಿಗೂ ಮೈಲಿ ಎದ್ದು ಗುಣವಾಗಿದ್ದವರು. ಅವರು ನನಗಿಂತಲೂ ನಾಲ್ಕೈದು ವರುಷ ಹಿರಿಯರಾಗಿದ್ದು ನನ್ನ ಪರಿಚಯ ಉಳ್ಳವರಾಗಿದ್ದರು. ಅವರಲ್ಲಿ ಜಟ್ಟಿನಮಕ್ಕಿ ಸುಬ್ಬು ಅಥವಾ ಆಗ ಕರೆಯುತ್ತಿದ್ದಂತೆ ಸುಬ್ಬಯ್ಯಗೌಡರು ಹುಡುಗರಾಗಿದ್ದಾಗ ಅನಾಥರಾಗಿದ್ದುದರಿಂದ ನಮ್ಮ ಮನೆ ಕುಪ್ಪಳಿಯಲ್ಲಿಯೆ ಬೆಳೆದಿದ್ದರು, ನನ್ನ ಶೈಶವದಲ್ಲಿ ಆಗ ನಾನು ಅವರನ್ನು ‘ಸುಬ್ಬಣ್ಣಯ್ಯ’ ಎಂದೆ ಕರೆಯುತ್ತಿದ್ದದ್ದು.)

ರೋಗಿಯ ಪಥ್ಯ ಮತ್ತು ಶುಶ್ರೂಷೆಗೆ ಇಷ್ಟೆಲ್ಲ ನೇಮಕವಾಗಿದರೂ ದೊಡ್ಡ ಚಿಕ್ಕಪ್ಪಯ್ಯನವರು ತಾವೇ ಖುದ್ದಾಗಿಯೂ ನನ್ನನ್ನು ನೋಡಿಕೊಳ್ಳಲು ಮುಂದಾದರು. ಅವರಿಗೆ ಅನ್ಯರ ಸೇವೆಯ ಸಮರ್ಪಕತೆಯಲ್ಲಿ ಸಂದೇಹ, ಸಾಕಷ್ಟು ಮುತುವರ್ಜಿ ವಹಿಸುತ್ತಾರೆಯೊ ಇಲ್ಲವೊ ಎಂದು. ದೇವಂಗಿ ರಾಮಣ್ಣಗೌಡರಾದಿಯಾಗಿ ಎಲ್ಲರೂ ಎಷ್ಟು ಬೇಡ ಎಂದರೂ ಕೇಳದೆ, ‘ನಾನು ಡಾಕು ಹಾಕಿಸಿಕೊಂಡಿದ್ದೇನೆ. ನನಗೇನೂ ಆಗುವುದಿಲ್ಲ. ಅಷ್ಟರ ಮೇಲೆ ಏನಾದರೂ ಆದರೂ ಚಿಂತೆಯಿಲ್ಲ: ಅವನೇ ಹೋಗಿ ಉಳಿಯಬೇಕಾದ್ದೇನಿದೆ?’ ಎಂದೊರೆದು ನನ್ನನ್ನು ಇಟ್ಟಿದ್ದ ಜೋಪಡಿಗೆ ಬಂದು ಎಲ್ಲ ಸರಿಯಾಗಿ ನಡೆಯುತ್ತಿದೆಯೆ ಇಲ್ಲವೆ ಎಂಬುದನ್ನು ವಿಚಾರಿಸಿಕೊಳ್ಳತೊಡಗಿದರು. ತಮಗಾಗಲಿ ತಮ್ಮ ಬಟ್ಟೆಬರೆಗಳಿಗಾಗಲಿ ತಗುಲಿದ ಸೋಂಕು ಇತರ ಮನೆಮಂದಿಗೆ ತಗುಲಬಾರದೆಂದು ಅವರು ನಾನಿದ್ದ ಜೋಪಡಿಗೆ ಬಂದು ಹಿಂದಕ್ಕೆ ಹೋದವರು ಉಟ್ಟ ಬಟ್ಟೆಗಳನ್ನೆಲ್ಲ ಒಗೆಯಲು ಹಾಕಿ, ಸ್ನಾನಮಾಡಿ, ಮನೆಯೊಳಗೆ ಹೋಗುತ್ತಿದ್ದರಂತೆ, ಮನೆಯ ಇತರರೆಲ್ಲ ವ್ಯಾಕ್ಸಿನೇಶನ್‌ಹಾಕಿಸಿಕೊಂಡಿದ್ದರು, ಮುನ್ನೆಚ್ಚರಿಕೆಗಾಗಿ. ಆದರೆ ದೊಡ್ಡ ಚಿಕ್ಕಪ್ಪಯ್ಯ ಹಿಂದೆ ತಾವು ಹಾಕಿಸಿಕೊಂಡಿದ್ದರಿಂದ ಈಗ ಹಾಕಿಸಿಕೊಳ್ಳುವುದು ಅನಾವಶ್ಯಕವೆಂದು ಹಟಹಿಡಿದರು. ಹಾಕಿಸಿಕೊಳ್ಳಲೆ ಇಲ್ಲವಂತೆ!

ನನಗೆ ರೋಗ ಉಲ್ಬಣಿಸಿದಾಗ ಬಾಹ್ಯಪ್ರಜ್ಞೆ ಇಲ್ಲದಿದ್ದರೂ ಆಗಾ ಸ್ವಾಮಿ ಸಿದ್ದೇಶ್ವರಾನಂದರನ್ನು ನೋಡಬೇಕು ಎಂದು ಹಂಬಲಿಸುತ್ತಿದೆನಂತೆ. ಸ್ವಾಮಿಜಿ ನನ್ನ ಸ್ಥಿತಿಯನ್ನು ಕುರಿತು ಪ್ರಶ್ನಿಸಿ ಕಾಗದ ಬರೆದಾಗ ಅವರಿಗೆ ನಾನು ಅವರನ್ನು ಪದೇಪದೇ ಕೇಳುತ್ತಿರುತ್ತೇನೆ ಎಂದು ಉತ್ತರ ಬರೆದರಂತೆ. ಸ್ವಾಮಿಜಿ ಮೈಸೂರಿನಿಂದ ಕಾಗದ ಬರೆದರು: “ನಾನು ಖಂಡಿತ ಶಿವಮೊಗ್ಗಕೆ ಬರುತ್ತಿದ್ದೆ; ಆದರೆ ಮಹಾಮಾತೆಯ ಜನ್ಮದಿನ ಹತ್ತಿರ ಬಂದಿರುವುದರಿಂದ ಅದರ ಪೂಜೆ ಉತ್ಸವ ದರಿದ್ರ ನಾರಾಯಣ ಸೇವೆಗಳಿಗೆ ಏರ್ಪಾಡು ಮಾಡಬೇಕಾಗಿರುವುದರಿಂದ ಈಗ ಬರಲು ಸಾಧ್ಯವಿಲ್ಲ. ಪುಟ್ಟಪ್ಪಗೆ ನಾನು ಹೇಳಿದೆನೆಂದು ತಿಳಿಸಿ. ಈ ಕಾಗದದ ಜೊತೆಯಲ್ಲಿ ಬೇಲೂರು ಮಠದಿಂದ ಕಳಿಸಿದ ದಕ್ಷಿಣೇಶ್ವರದ ಕಾಳಿಕಾಪ್ರಸಾದ ಇಟ್ಟಿದ್ದೇನೆ. ಅದನ್ನು ಪುಟ್ಟಪ್ಪಗೆ ಕೊಟ್ಟು, ಶ್ರೀಗುರುಮಹಾರಾಜರ ಕೃಪೆ ಅವರ ಮೇಲೆ ಸದಾ ಇರುವುದರಿಂದ ಭಯಪಡುವುದು ಬೇಡ ಎಂದು ನಾನು ಹೇಳಿದೆನೆಂದು ತಿಳಿಸಿ!” (ಶ್ರೀ ಶ್ರೀ ಮಹಾಮಾತೆಯ ಜನ್ಮತಿಥಿ ಮಾರ್ಗ ಶೀರ್ಷ ಬಹುಳ ಸಪ್ತಮಿದಿನದಂದು ಬೀಳುತ್ತದೆ. ಪಂಚಾಂಗ ರೀತ್ಯಾ ಅದು ನನ್ನ ಜನ್ಮದಿನವೂ ಆಗುತ್ತದೆ.

ಇಷ್ಟೆಲ್ಲ ಕಾಗದ ಪತ್ರವ್ಯವಹಾರ ನಡೆಯುತ್ತಿರುವಷ್ಟರಲ್ಲಿ ನನ್ನ ಸಿಡುಬು ಬೊಕ್ಕೆಯೊಡೆದು, ಬತ್ತಿ, ಇಳಿಮುಖವಾಗಿತ್ತು. ಆದರೆ ನನ್ನ ಒಡಲು ಚರ್ಮ ಸುತ್ತಿದ ಎಲುಬಿನ ಗೂಡು ಮಾತ್ರವಾಗಿತ್ತು. ಇತರರು ಕೈಹಿಡಿದು ಎತ್ತಿದಲ್ಲದೆ ಏಳಲಾಗುತ್ತಿರಲಿಲ್ಲ; ಬೆನ್ನಿಗೆ ಕೈ ಆಪುಕೊಟ್ಟು ನಡೆಸಿಸಲ್ಲದೆ ಒಂದು ಹೆಜ್ಜೆಯನ್ನೂ ಇಡಲಾಗುತ್ತಿರಲಿಲ್ಲ. ಇಂತಹ ದುಃಸ್ಥಿತಿಯಲ್ಲಿ ನೆಲದ ಮೇಲೆ ಒಂದು ಚಾಪೆ ಅದರ ಮೇಲೆ ಒಂದು ಕಂಬಳಿ ಜಮಖಾನೆ ಹಾಕಿದ ತೆಳ್ಳನೆಯ ಹಾಸಗೆಯಲ್ಲಿ ನಾನು ಸೊರಗಿ ಕುಳಿತಿದ್ದಾಗ, ಹೊಸಮನೆ ಮಂಜಪ್ಪಗೌಡರಿರಬೇಕೆಂದು ನನ್ನ ಮಸುಗು ನೆನಪು, ಅವರಿಗೆ ಹಿಂದೆಯೆ ಮೈಲಿ ಆಗಿದ್ದುದರಿಂದ ಸೋಂಕಿನ ಭಯವಿಲ್ಲದೆ ಅವರು ಆಗಾಗ್ಗೆ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದರು. ಜೋಪಡಿಯೊಳಗೆ ಪ್ರವೇಶಿಸಿ “ಸ್ವಾಮಿಜಿ ಕಾಗದ ಬರೆದಿದ್ದಾರೆ. ಮಹಾಮಾತೆಯ ಜನ್ಮದಿನ ಹತ್ತಿರ  ಬರುತ್ತಿರುವುದರಿಂದ ಅವರಿಗೆ ಈಗ ಬರಲು ಸಾಧ್ಯವಿಲ್ಲವಂತೆ. ನಿನಗೆ ಹೇಳಿ ಸ್ವಲ್ಪ ಕಾಳಿಕಾಪ್ರಸಾದ ಕಳಿಸಿದ್ದಾರೆ, ಅದು ಕಲ್ಕತ್ತಾದ ದಕ್ಷಿಣೇಶ್ವರದ ದೇವೀ ಪ್ರಸಾದವಂತೆ.” ಎಂದು ಹೇಳುತ್ತಾ ಜೇಬಿನಿಂದ ಒಂದು ಕಾಗದದ ಸಣ್ಣ ಪೊಟ್ಟಣ ತೆಗೆದು ಬಿಚ್ಚಿ ಬಾಗಿ ನನ್ನ ಮುಖದೆದುರಿಗೆ ಹಿಡಿದರು. ಶೀರ್ಣದೇಹವಾಗಿ ಕ್ಷೀಣಸ್ವರವಾಗಿ ಅತ್ಯಂತ ನಿತ್ರಾಣಸ್ಥಿತಿಯಲ್ಲಿದ್ದ ನಾನು ಹರ್ಷಿತ ನೇತ್ರನಾಗಿ ಹೃತ್ಪೂರ್ವಕ ಭಕ್ತಿಯಿಂದ ಕಾಗದದಲ್ಲಿದ್ದ ಕೆಂಪು ಕುಂಕುಮವನ್ನು ನಡುಗುತ್ತಿದ್ದ ಕೈಯಿಂದ ಸ್ವಲ್ಪ ಚಿಟಿಗೆ ತೆಗೆದು ‘ಜೈ ಗುರುಮಹಾರಾಜ್! ಜೈ ಮಹಾಕಾಳಿ!’ ಎಂದು ಹಣೆಗಿಟ್ಟುಕೊಂಡೆನಂತೆ! ಏನು ಶಕ್ತಿಸಂಚಾರವಾಯಿತೋ? ಏನು ಪವಾಡವಾಯಿತೋ? ಯಾರಿಗೂ ಅರ್ಥವಾಗಲಿಲ್ಲವಂತೆ. ಯಾರಾದರೂ ಹಿಡಿದೆತ್ತಿಯೇ ನಿಲ್ಲಿಸಬೇಕಾದ ಸ್ಥಿತಿಯಲ್ಲಿದ್ದ ನಾನು ಚಂಗನೆ ನೆಗೆದೆದ್ದು ನಿಂತೆನಂತೆ! ಮತ್ತೆ ‘ಜಯ್ ಗುರುಮಹಾರಾಜ್! ಜಯ್ ಮಹಾಕಾಳಿ!’ ಎಂದು ಜೋಪಡಿ ಹಾರಿಹೋಗುವಂತೆ ಭಯಂಕರವಾಗಿ ಉಗ್ಗಡಿಸಿದೆನಂತೆ! ಅಲ್ಲಿದ್ದವರ ಎದೆ ಏನೋ ಅಲೌಕಿಕ ಎಂಬಂತಹ ಭೀತಿಯಿಂದ ನಡುಗಿತಂತೆ! ಎಲ್ಲರೂ ಕಂಗಾಲಾದರಂತೆ! ನನ್ನನ್ನು ಇಬ್ಬರು ಹಿಡಿದು ಕುರಿಸಿ ಸಮಾಧಾನ ಮಾಡಲು ಪ್ರಯತ್ನಿಸಿದಾಗ ನಾನು ಜಯಕಾರ ಹಾಕಿ ಕೈ ಕೊಡಹಿದ ಹೊಡೆತಕ್ಕೆ ಅವರು ತತ್ತರಿಸಿ ದೂರ ಹೋದರಂತೆ. ನಾನು ಬಗಲಲ್ಲಿದ್ದ ‘ಚಿತ್ರಕೋಶ’ವನ್ನು ಕೈಗೆ ತೆಗೆದುಕೊಂಡು ಬಿಚ್ಚಿ ಹಣೆಗೂ ಎದೆಗೂ ಮತ್ತೆಮತ್ತೆ ಮುಟ್ಟಿಸಿಕೊಂಡು ನಮನಮಾಡುತ್ತಾ ಜಯ್ ಗುರುಮಹಾರಾಜ್! ಜಯ್ ಮಹಾಕಾಳಿ! ಜಯ್ ಸ್ವಾಮಿ ವಿವೇಕಾನಂದ! ಎಂದೆಂದು ಗರ್ಜಿಸಿ ಕಾಕು ಹಾಕಿ ಉನ್ಮತ್ತನಾದಂತೆ ಕೂಗುತ್ತಾ ಮತ್ತೆ ‘ಚಿತ್ರಕೋಶ’ವನ್ನು ಬಗಲಿಗೆ ಇಟ್ಟು ಭದ್ರಪಡಿಸಿದೆನಂತೆ. ನನ್ನನ್ನು ಸಾಂತ್ವನಗೊಳಿಸಲು ಪ್ರಯತ್ನಿಸಿದ ಮೂರುನಾಲ್ಕು ಜನರೂ ನನ್ನನ್ನು ಹಿಡಿದು ನಿಲ್ಲಿಸಲಾರದೆ ಸೋತರಂತೆ. ನಿತ್ರಾಣಿಯಾಗಿ ಚರ್ಮಾಸ್ಥಿಮಾತ್ರನಾಗಿ ಮಾತೂ ಸರಿಯಾಗಿ ಹೊರಡಲಾರದೆ ಬಿದ್ದುಕೊಂಡಿದ್ದ ರೋಗಿಗೆ ನಾಲ್ಕಾರು ಜನರನ್ನು ನೂಕಿ ಗಾಳಿಗೆ ತೂರುವ ರಾಕ್ಷಸಶಕ್ತಿ ಎಲ್ಲಿಂದ ಬಂದಿತೆಂದು ಅವರೆಲ್ಲ ದಿಙ್ಮೂಢರಾದರು. ಯಾಕಾಗಿ ಈ ಕಾಳಿಕಾ ಪ್ರಸಾದ ಕಳಿಸಿದರೋ ಆ ಸ್ವಾಮಿಜಿ? ಎಂದು ಅವರನ್ನೂ ಶಪಿಸಿದರು! ರೋಗಿಗೆ ಈ ಶಕ್ತಿ ಬರುವುದೆಂದರೆ ಹೇಗೆ ಸಾಧ್ಯ: ಇವನ ಮೈಮೇಲೆ ಏನೋ ಬಂದಿರಬೇಕು ಎಂದು ನಿಶ್ಚಯಿಸಿದರಂತೆ!