ನನಗೆ ಮೈಮೇಲೆ ಬಂದಿರುವುದನ್ನು, ಎಂದರೆ ಭೂತಚೇಷ್ಟೆಯನ್ನು, ಬಿಡಿಸಲು ಏನೇನು ಅಲೌಕಿಕೋಪಾಯಗಳನ್ನು ಕೈಕೊಂಡರೊ ನನಗೆ ತಿಳಿಯದು. ನಿಮಿತ್ತ ಕೇಳಿಸಿರಬಹುದು; ದೇವರಿಗೆ ಕಾಣಿಕೆ ಕಟ್ಟಿರಬಹುದು; ತಿರುಪತಿ ಧರ್ಮಸ್ಥಳ ಮೊದಲಾದ ಸ್ಥಾನಗಳಿಗೆ ಹೇಳಿಕೊಂಡಿರಬಹುದು. ಆ ಮೂಢನಂಬಿಕೆಗಳನ್ನೆಲ್ಲ ನಾನು ತಿರಸ್ಕರಿಸುತ್ತೇನೆ ಎಂಬ ಅಂಶವೂ ಮಾನಪ್ಪ, ಮಂಜಪ್ಪಗೌಡರು, ದೊಡ್ಡ ಚಿಕ್ಕಪ್ಪಯ್ಯ ಎಲ್ಲರಿಗೂ ಗೊತ್ತಿದ್ದ ಅಂಶವೆ ಆಗಿತ್ತು. ಆದರೆ ಹಳೆಯ ಸಂಪ್ರದಾಯದಲ್ಲಿಯೇ ಬೆಳೆದಿದ್ದ ಚಿಕ್ಕಪ್ಪಯ್ಯನವರಿಗೆ ನಾನು ನಂಬಲಿ ಬಿಡಲಿ ಅದು ಅಪ್ರತ್ಯಕ್ಷವಾಗಿತ್ತು. ರೋಗಿಯ ನಂಬಿಕೆ ಅಪನಂಬಿಕೆ ಕಟ್ಟಿಕೊಳ್ಳುತ್ತಾನೆಯೆ ವೈದ್ಯನಾದವನು? ಆದ್ದರಿಂದ ಹಳ್ಳಿಯಲ್ಲಿ ಭೂತ ದೆವ್ವ ಮೈಮೇಲೆ ಬಂದಿರುವವರಿಗೆ ಅವರು ಮಾಡುತ್ತಿದ್ದ ಚಿಕಿತ್ಸೆಯನ್ನೆ ಮಾಡಲು ಅನುವಾದರು:

ಒಂದು ಕೋಳಿಹುಂಜವನ್ನು ಕುಂಕುಮಾದಿಗಳಿಂದ ಸಂಸ್ಕರಿಸಿ ಜೋಪಡಿಗೆ ತಂದರು. ‘ಏನಿದ್ದರೂ ಎಲ್ಲ ಆ ಹುಂಜದ ಮೇಲೆ ಬರಲಿ’ ಎಂದು ಹೇಳಿಕೊಂಡು ಅದನ್ನು ನನ್ನೆದುರು ಚಕ್ರಾಕಾರವಾಗಿ ಸುತ್ತಿಸಿ, ಅದರ ಚೊಟ್ಟಿಯ ಎಂದರೆ ಕೆಂಪು ಚೂಡದ ರಕ್ತವನ್ನು ನನ್ನ ಹಣೆಗೆ ಹಚ್ಚಿ ದೆವ್ವ ಬಿಡಿಸುವ ಉದ್ದೇಶದಿಂದ ನಾಲ್ಕಾರು ಜನರು ಪ್ರವೇಶಿಸಿದರು. ದೊಡ್ಡ ಚಿಕ್ಕಪ್ಪಯ್ಯನೆ ಮುಂದಾಳಾಗಿ ಆ ಹುಂಜವನ್ನು ಇಕ್ಕೈಗಳಿಂದಲೂ ಹಿಡಿದು ನನಗೆ ‘ಸುಳಿಯಲು’ ಮುಂದಾದರು. ಆ ರೀತಿಯ ಮಂತ್ರತಂತ್ರಗಳನ್ನೂ ಭೂತ ದೆವ್ವದ ಪೂಜೆಯನ್ನೂ ಖಂಡಿಸುತ್ತಿದ್ದ ನನಗೆ ತುಂಬಾ ರೇಗಿತು. ಶ್ರೀರಾಮಕೃಷ್ಣ, ವಿವೇಕಾನಂದ ಮೊದಲಾದವರನ್ನು ಆರಾಧಿಸುತ್ತಿದ್ದು ಪ್ರಾಚ್ಯ ಪಾಶ್ಚಾತ್ಯ ತತ್ವಶಾಸ್ತ್ರಗಳನ್ನು ಅಧ್ಯಯನ ಮಾಡಿ, (ತತ್ವಶಾಸ್ತ್ರವೆ ನನ್ನ ಐಚ್ಛಿಕ ಪಠ್ಯವಿಷಯವಾಗಿತ್ತು ಬಿ.ಎ.ನಲ್ಲಿ) ವಿಚಾರವಾದಿಯಾಗಿ ವೈಜ್ಞಾನಿಕ ದೃಷ್ಟಿಯನ್ನೆ ಉಪಾಸಿಸುತ್ತಿದ್ದ ನನಗೆ, ಪ್ರತೀಕಾರ ರೂಪವಾಗಿ ಅವಮಾನ ಮಾಡಲೆಂದೇ ಕೋಳಿಹುಂಜವನ್ನು ಮುಖಕ್ಕೆ ಆರತಿ ಎತ್ತುವಂತೆ ಸುಳಿಸುತ್ತಿದ್ದಾರೆ ಎಂದು ಭಾವಿಸಿ ಸಿಟ್ಟು ನೆತ್ತಿಗೇರಿತು. ಪದ್ಮಾಸನ ಹಾಕಿ ಕುಳಿತಲ್ಲಿಂದಲೆ, ಬಾಗಿ ನಿಂತು ಹುಂಜವನ್ನು ಮುಂದೆ ಸುಳಿಯುತ್ತಿದ್ದ ದೊಡ್ಡ ಚಿಕ್ಕಯ್ಯನವರ ಕಪಾಳಕ್ಕೆ ಬಲಗೈಯಿಂದ ಪಠೀರೆಂದು ಹೊಡೆದುಬಿಟ್ಟೆ, ದಕ್ಷಿಣೇಶ್ವರದ ಕಾಳಿಕಾಪ್ರಸಾದವನ್ನು ಹಣೆಗಿಟ್ಟು ಕೊಂಡಂದಿನಿಂದ ನನ್ನಲ್ಲಿ ಉಂಟಾಗಿದ್ದ ದೈತ್ಯಬಲವನ್ನೆಲ್ಲ ಉಪಯೋಗಿಸಿ!

‘ಹೊಡೆದುಬಿಟ್ಟೆ’ ಎಂಬ ಪದಪ್ರಯೋಗ ಅಷ್ಟೇನೂ ಪೂರ್ತಿ ಸರಿಯಲ್ಲ. ಅವರೆಲ್ಲ ತಿಳಿದ್ದಂತೆ ಯಾವುದೋ ಭೂತ ನನ್ನ ಮೈಮೇಲೆ ಬಂದಿದೆ ಎಂಬ ಭಾವನೆ ಮೂಢಬುದ್ಧಿಯ ಕಲ್ಪನೆಯಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಕಾಳಿಕಾಪ್ರಸಾದವನ್ನು ಹಣೆಗಿಟ್ಟುಕೊಂಡೊಡನೆ ನನ್ನ  ಅಂತಶ್ಚೇತನದಲ್ಲಿ ಏನೋ ಒಂದು ಹಠಾತ್ ಪರಿವರ್ತನೆಯಾಗಿಬಿಟ್ಟಿತ್ತು. ನಾನು ಸಂಪೂರ್ಣವಾಗಿ ಲುಪ್ತವಾಗಿ ಇನ್ನೊಂದೇನೊ ಆಗಿಬಿಟ್ಟಿತ್ತು. ನನ್ನ ಕೈಕಾಲು ಅಂಗಾಂಗಗಳು ಇನ್ನೊಂದು ಶಕ್ತಿಯ ಅಧೀನವಾಗಿ ನಿಯಂತ್ರಿತವಾಗಿದ್ದುವು. ಕ್ರಮೇಣ ಆ ವಿಚಿತ್ರ ಅನುಭವ “ಪುಟ್ಟಪ್ಪ ಸತ್ತುಹೋದ; ನಾನು ವಿವೇಕಾನಂದ!” ಎಂಬ ಉಕ್ತಿಯಲ್ಲಿ ಅಭಿವ್ಯಕ್ತವಾಗಿ ಸ್ಥಾಯಿಯಾಗಿಬಿಟ್ಟಿತು. ಆದರೆ ಅದ್ಭುತ ಕಥನವನ್ನು ಮುಂದೆ ವಿವರಿಸಲು ನೆನಪಿಗೆ ಬರುವಷ್ಟನ್ನು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ ಸದ್ಯಕ್ಕೆ..

ನನ್ನ, ಆದರೆ ನಿಜವಾಗಿಯೂ ನನ್ನದಲ್ಲದ, ಅಮಾನುಷ ಶಕ್ತಿಯ ಪೆಟ್ಟಿನಿಂದ ದೊಡ್ಡ ಚಿಕ್ಕಪ್ಪಯ್ಯ ತತ್ತರಿಸಿ ಹೋದರಂತೆ. ಅವರ ದವಡೆ ಸಂದು ತಪ್ಪಿದಂತಾಯಿತಂತೆ. ಸಾಧಾರಣ ಸ್ಥಿತಿಯಲ್ಲಿ ನಾನು ಯಾವಾಗಲೂ ಅವರನ್ನು ತುಸುಭಯಮಿಶ್ರಿತ ಗೌರವದಿಂದಲೆ ಕಾಣುತ್ತಿದೆ. ಅವರಿಂದ ನನ್ನ ತಂದೆತಾಯಿಯವರಿಗೆ ಅನ್ಯಾಯವಾಗಿದೆ ಎಂಬ ಭಾವನೆ ನನ್ನ ಗುಪ್ತಚಿತ್ತದಲ್ಲಿ ಸುಪ್ತಸ್ಥಿತಿಯಲ್ಲಿ ಸಮಯ ಕಾಯುತ್ತಿದ್ದರೂ ಇರಬಹುದು. ಆಧುನಿಕ ಮನಶ್ಯಾಸ್ತ್ರ ನನ್ನ ಆಗಿನ ವರ್ತನೆಗೆ ಆ ವಿಶ್ಲೇಷಣೆಯ ಉಪಪತ್ತಿಯನ್ನೊಡ್ಡುತ್ತದೆಂದು ತೋರುತ್ತದೆ.

ಅಂತೂ ನನ್ನಿಂದ ಆ ಪೆಟ್ಟು ಅವರ ಅಂತ್ಯಕ್ಕೆ ನಿಮಿತ್ತಮಾತ್ರವೋ ಅಥವಾ ಕಾರಣವೋ ಆಯಿತು. ಮೊದಲೇ ಅವರಿಗೆ ಮೈಲಿಯ ಸೋಂಕು ತಗುಲಿತ್ತೆಂದು ಭಾವಿಸಬಹುದು. ಅದು ನನ್ನಿಂದ ಏಟುಬಿದ್ದ ಮೇಲೆ ಪ್ರಕಟಗೊಂಡು ಭಯಂಕರ ಜ್ವರದ ರೂಪದಲ್ಲಿ ಕಾಣಿಸಿಕೊಂಡು, ತರುವಾಯ ಭೀಷಣಪ್ರಮಾಣದ ಸಿಡುಬಾಗಿ ಪ್ರಕಟವಾಯಿತಂತೆ. ಅವರನ್ನು ನಾನಿದ್ದ ಜೋಪಡಿಗೆ ಸಮಿಪದಲ್ಲಿಯೆ ಇದ್ದ ಮತ್ತೊಂದು ಜೋಪಡಿಯಲ್ಲಿಟ್ಟರು. ಇತ್ತ….

ನನಗೆ ಬಾಹ್ಯ ಪ್ರಜ್ಞೆ ಬಂದಾಗ ‘ನಾನು ಯಾಕೆ ಇಲ್ಲಿದ್ದೇನೆ?’ ‘ಯಾರು ನನ್ನನ್ನು ಇಲ್ಲಿಗೆ ತಂದು ಬಂಧಿಸಿಟ್ಟರು?’ ‘ನನ್ನ ಅಂಗಾಲುಗಳನ್ನು ಏಕೆ ಹೀಗೆ ಸುಟ್ಟಿದ್ದಾರೆ?’ (ಅಂಗಾಲುಗಳಲ್ಲಿ ಎದ್ದಿದ್ದ ಸಿಡುಬಿನ ಬೊಕ್ಕೆಗಳು ಗುಣವಾಗಿದ್ದರೂ ಸುಟ್ಟಗಾಯಗಳಂತೆ ಕಾಣುತ್ತಿದ್ದುದರಿಂದ ಯಾರೊ ದುರಾತ್ಮರು ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದು ವ್ಯಾಖ್ಯಾನ ಮಾಡಿತ್ತು ನನ್ನ ಮನಸ್ಸು.) ‘ಇಲ್ಲಿಂದ ಹೇಗಾದರೂ ಮಾಡಿ ತಪ್ಪಿಸಿಕೊಂಡು ಹೋಗಬೇಕು’ ಎಂದು ನಿಶ್ಚಯಿಸಿದ್ದರಿಂದಲೆ, ನಾನು ಜೋಪಡಿಯಿಂದ ಓಡುವ ಪ್ರಯತ್ನಕ್ಕೆ ತಡೆಯುಂಟುಮಾಡುವ ಕಾರ್ಯದಲ್ಲಿ ನನಗೂ ನನ್ನ ಶುಶ್ರೂಷೆ ಮಾಡುತ್ತಿದ್ದವರಿಗೂ ಹೋರಾಟ ಗುದ್ದಾಟಗಳು ಪ್ರಾರಂಭವಾದದ್ದು.

ಆ ಕರಾಳ ಸನ್ನಿವೇಶದಲ್ಲಿ ಸಹಾಯಕ್ಕೆ ಬರುತ್ತಿದ್ದ ಒಂದೇ ಒಂದು ಆಶಾಕಿರಣವಾಗಿದ್ದವನೆಂದರೆ-ನನ್ನನ್ನು ನೋಡಿಕೊಳ್ಳಲು ನೇಮಕವಾಗಿದ್ದ ಆ ಮುದುಕ!

ಆ ಮುದುಕ, ನಾನು ಇತರರೊಡನೆ ಎಷ್ಟೇ ರಂಪಾಟ ಮಾಡುತ್ತಿರಲಿ, ನನ್ನ ಎದುರಿಗೆ ಬಂದು ನಿಂತು ಕೈಮುಗಿದುಕೊಂಡು ವಿನಯದಿಂದ ಬೇಡಿಕೊಂಡೊಡನೆಯೆ ನಾನು ಶಾಂತನಾಗುತ್ತಿದ್ದೆ. ರೂಪಸಾದ್ರಶ್ಯವೋ ಏನೋ? ಆ ಮುದುಕನಲ್ಲಿ ಪರಮಹಂಸರನ್ನು ಸಂಭಾವಿಸತೊಡಗಿತ್ತು ನನ್ನ ಶ್ರದ್ಧೆ! ಪರಮಹಂಸರೆ ನನ್ನನ್ನು ರಕ್ಷಿಸಲು ಆ ರೂಪದಲ್ಲಿ ಬಂದಿದ್ದಾರೆ ಎಂಬಂತೆ!

ಒಂದು ದಿನ ಉರಿಬಿಸಲಿನ ಮಟಮಟ ಮಧ್ಯಾಹ್ನ. ಜೋಪಡಿಯಲ್ಲಿ ನಾನು ನಿದ್ದೆ ಮಾಡುತ್ತಿದ್ದೆ. ನನ್ನನ್ನು ನೋಡಿಕೊಳ್ಳುತ್ತಿದ್ದ ಬಂಧುವರ್ಗದವರೆಲ್ಲ ಹೊರಗೆ ಹೋಗಿದ್ದರು. ಹುಡುಗ ‘ಗಡ್ಲಿ’ಯೂ ಇರಲಿಲ್ಲ. ಅವನನ್ನು ನನ್ನೊಡನೆ ಇರಲು ಹೇಳಿ ಆ ಮುದುಕ ಯಾರೊ ನಂಟರಮನೆಗೆ (ಅಲ್ಲಿಯ ಬಳಿಯಿದ್ದ) ಕರೆದಿದ್ದರೆಂದು ಊಟಕ್ಕೆ ಹೋಗಿದ್ದನಂತೆ ಬೇಗ ಹಿಂತಿರುಗಲು ನಿಶ್ಚಯಿಸಿ, ಆ ಹುಡುಗ ನಾನು ನಿದ್ದೆ ಮಾಡುತ್ತಿದ್ದುದರಿಂದ ಏನೂ ಅಪಾಯವಾಗಲಾರದು ಎಂದು ಸ್ವಲ್ಪ ಹೊರಗೆ ಹೋಗಿದ್ದನಂತೆ.

ನನಗೆ ಎಚ್ಚರವಾಯಿತು. ಎದ್ದುನಿಂತು ‘ಜಯ್ ರಾಮಕೃಷ್ಣಾ’ ಎನ್ನುತ್ತ ಹಿಂದೆ ಮುಂದೆ ತಿರುಗಾಡಿದೆ. ಯಾರೂ ಇರದಿದ್ದುರಿಂದ ತಪ್ಪಿಸಿಕೊಂಡು ಓಡಿಹೋಗಲು ಒಳ್ಳೆಯ ಸಮಯ ಎಂದು ಬಾಗಿಲನ್ನು ಎಳೆದೆ. ಹೊರಗಡೆಯಿಂದ ಚಿಲಕ ಹಾಕಿತ್ತು. ಬಾಗಿಲು ತೆರೆಯಲಿಲ್ಲ. ದೇಹತಃ ತಪ್ಪಿಸಿಕೊಂಡು ಹೋಗಲು ಆಗದಿದ್ದರೆ ಆತ್ಮತಃ ಆಗಬಹುದಲ್ಲಾ ಎಂದು ಯೋಚನೆ ಬಂತು. ನಾನು ದೇಹವಲ್ಲ ಆತ್ಮಾ ಎಂಬುದು ನನಗೆ ಮುಷ್ಟಿಗ್ರಾಹ್ಯವಾದ ಅನುಭವವಾಗಿತ್ತು. ದೇಹದಿಂದ ಬೇರೆ ಆಗುವ ಉಪಾಯ ಯೋಚಿಸಿದೆ. ಅಲ್ಲಿಯೆ ಎಲ್ಲಿಯಾದರೂ ಆಯುಧ ಇದೆಯೇ ಎಂದೋ ಅಥವಾ ನೇಣು ಗೀಣು ದೊರಕಬಹುದೆಂದೋ ಹುಡುಕತೊಡಗಿದೆ. ನನ್ನ ಕಣ್ಣಿಗೆ ಮುದುಕ ನನಗಾಗಿ ಗಂಜಿಗಿಂಜಿ ಬೇಯಿಸಲೆಂದು ಇಟ್ಟುಕೊಂಡಿದ್ದ ಬೆಂಕಿಪೊಟ್ಟಣ ಕಣ್ಣಿಗೆ ಬಿತ್ತು.

ಒಡನೆಯೆ ದೇಹದಿಂದ ಪಾರಾಗುವ ಸುಲಭೋಪಾಯ ಹೊಳೆಯಿತು. ಸರಕ್ಕನೆ ಬೆಂಕಿಪೊಟ್ಟಣವನ್ನು ಕೈಗೆತ್ತಿಕೊಂಡು  ಮುದುಕ ಮಲಗುತ್ತಿದ್ದ ಅಡುಗೆ ಮನೆಯಂತಿದ್ದ ಆ ಸಣ್ಣಭಾಗದಿಂದ ನಾನು ಮಲಗುತ್ತಿದ್ದ ದೊಡ್ಡ ಭಾಗಕ್ಕೆ ಬಂದೆ. ಯಾರೂ ಒಳಗೆ ಬರದಿರಲಿ ಎಂದು ಒಳಗಡೆಯಿಂದ ತಾಳಹಾಕಿ ಭದ್ರಪಡಿಸಿಕೊಂಡೆ. ಮಟಮಟ ಮಧ್ಯಾಹ್ನದ ಬಿಸಿಲಲ್ಲಿ ಆ ಹುಲ್ಲಿನ ಗುಡಿಸಲು ಒಣಗಿ ಗರಿಗರಿಯಾಗಿತ್ತು. ಅದರ ಮಾಟು ತನ್ನ ತಲೆಗಿಂತಲೂ ತುಸು ಮೇಲಿದ್ದು ಕೈನೀಡಿದರೆ ಚೆನ್ನಾಗಿ ಎಟಗುತ್ತಿತ್ತು. ಒಂದು ಕಡ್ಡಿಗೀರಿ ಹೊತ್ತಿಸಿದರೆ ಐದು ಹತ್ತು ನಿಮಿಷದಲ್ಲಿ ಜೋಪಡಿ ಸುಟ್ಟು ಬೂದಿಯಾಗುತ್ತಿತ್ತು. ನಾನು ಎಂದರೆ ಸನ್ನಾತ್ಮ ಸಂಪೂರ್ಣವಾಗಿ ಸ್ವತಂತ್ರವಾಗಿ ಬಿಡುಗಡೆ ಹೊಂದಿಬಿಡುತ್ತೇನೆ ಎಂದು ನಿಶ್ಚಯಿಸಿದೆ. ದೇಹ ಸುಟ್ಟಾಗ ನೋವಾಗುತ್ತದೆ ಎಂಬ ಭಾವಗಳಾವುವೂ ತಲೆಗೆ ಬರಲೆ ಇಲ್ಲ, ಸಾವಂತೂ ಬರಿಯ ಸುಳ್ಳಾಗಿತ್ತು ನನಗೆ. ವಿದೇಹ ಮುಕ್ತಿಗಾಗಿ ಹಾತೊರೆಯುತ್ತಿತ್ತು ನನ್ನ ಚೈತನ್ಯ. ಆ ವಿಷಯದಲ್ಲಿ ಯಾವ ಅನಿಶ್ಚಯತೆಯೂ ಇರಲಿಲ್ಲ; ಸುದೃಢವಾಗಿತ್ತು ಶ್ರದ್ಧೆ.

ಬೆಂಕಿಪೆಟ್ಟಿಗೆ ತೆರೆದು ಕಡ್ಡಿಯೊಂದನ್ನು ಕೈಗೆ ತೆಗೆದುಕೊಂಡೆ. ಅದನ್ನು ಗೀಚಿದರೆ ಮಾಡು ಎಟುಕುವಷ್ಟು ಕಡಿಮಾಡಿನ ಇಳಿಜಾರಿನತ್ತ ಸರಿದೆ. ಎಡ ಬಗಲ ಸಂಧಿಯಲ್ಲಿ ‘ಚಿತ್ರಕೋಶ’ ಇದ್ದುದರಿಂದ ಆ ತೋಳು  ಅನೈಚ್ಛಿಕವೆಂಬಂತೆ  ಯಂತ್ರಿಕವಾಗಿಯೆ ಸ್ವತಂತ್ರಿಸಿ ಬಲಗಡೆಯ ತೋಳಿನಂತೆ ಮೇಲೇಳಲಿಲ್ಲ. ಆದ್ದರಿಂದ ಬೆಂಕಿ ಪೆಟ್ಟಿಗೆಯನ್ನು ಮೊಳಕೈಯಿಂದ ಮಾತ್ರಮೇಲೆತ್ತಿದ್ದ ಮಟ್ಟದಲ್ಲಿ ಹಿಡಿದು ಬಲಗೈಯಲ್ಲಿದ್ದ ಕಡ್ಡಿಯನ್ನು ಗೀರಲು ಹವಣಿಸಿ, ಹೊತ್ತಿಸುವ ತಾಣದತ್ತ ಕಣ್ಣು ಹಾಯಿಸುತ್ತಿದ್ದೆ! ಅಷ್ಡರಲ್ಲಿ:

ಬಾಗಿಲ ಹೊರಗೆ ಯಾರೊ ದಡದಡನೆ ಅವಸರವಾಗಿ ಓಡಿ ಬಂದ ಸದ್ದು ನನ್ನ ಗಮನವನ್ನು ಸೆಳೆಯಿತು!… ಆ ಮುದುಕನಿಂದ ತರುವಾಯ ತಿಳಿದದ್ದು ಹೀಗಿದೆ:

ಅವನು ನೆಂಟರ ಮನೆಯಲ್ಲಿ ಔತಣಕೂಟ ಮುಗಿಸಿ ಜಗಲಿಗೆ ಬಂದು ಲೋಕಾಭಿರಾಮವಾಗಿ ಹರಟುತ್ತಾ ಎಲೆಅಡಿಕೆ ಹಾಕಿಕೊಳ್ಳಲು ಹರಿವಾಣಕ್ಕೆ ಕೈಹಾಕಿದ್ದನಂತೆ. ನನಗೆ ತಲೆಕೆಟ್ಟಿದೆ; ನನ್ನೊಬ್ಬನನ್ನೆ ಬಿಟ್ಟಿದ್ದರೆ ಅಪಾಯ ಎನ್ನುವುದು ಆತನಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ತಾನು ಬರುವ ‘ಗಡ್ಲಿ’ಯನ್ನು ನೋಡಿಕೊಳ್ಳುತ್ತಿದ್ದರು ಎಂದು ಕಾವಲು ಕೂರಿಸಿ ಬಂದಿದ್ದ. ಆದ್ದರಿಂದ ನಿರಪಾಯ ಭಾವನೆಯಿಂದ ಇದ್ದ. ಆದರೆ ಇದ್ದಕಿದ್ದಂತೆ ಅವನನ್ನು ಯಾರೊ ಹೊಡೆದೆಬ್ಬಿಸಿದಂತೆ ಆಯಿತಂತೆ! ಎಷ್ಟು ತಡೆದರೂ ಮನಸ್ಸು ನಿಲ್ಲಲಿಲ್ಲವಂತೆ. ನೆಂಟರು ಎಲೆಅಡಿಕೆ ಹಾಕಿಕೊಂಡು ಹೋಗಿ ಎಂತಿದ್ದರೂ ಹುಡುಗ ಕಾವಲಿದ್ದಾನಲ್ಲಾ ಎಂದರೂ ಮುದುಕನಿಗೆ ತಡೆಯಲಾಗಲಿಲ್ಲವಂತೆ! ತಟಕ್ಕನೆ ಎದ್ದು ಒಂದೇಸಮನೆ ಓಡುತ್ತಲೆ ಬಂದನಂತೆ, ಬಿಸಿಲಲ್ಲಿ. ಬಂದವನೆ ಹೊರ ಚಿಲಕ ಹಾಕಿದು ಕಂಡು ಹಮ್ಮೈಸಿ ಹೋದನಂತೆ. ಬೇಗಬೇಗನೆ ಚಿಲಕ ತೆಗೆದು ಬಾಗಿಲು ತಳ್ಳಿದರೆ ತೆರೆಯಲಿಲ್ಲ! ಏನೂ ಭಯಂಕರ ಅನಾಹುತದ ಕರಾಳಛಾಯೆ ಅವನ ಮನಸ್ಸನ್ನು ಕದಡಿತು. ಪುಣ್ಯಕ್ಕೆ, ಆ ಒಂದೆ ರೆಕ್ಕೆಯ ಬಾಗಿಲಿಗೆ ಅದರ ಒಳಗಿನ ತಾಳವಿದ್ದ ತಾಣಕ್ಕೆ ಸಮಿಪದಲ್ಲಿ ಒಂದು ಕಂಡಿಯಿತ್ತು. ಆ ಕಂಡಿಯಲ್ಲಿ ಅವನು ಇಣುಕಿದಾಗ ನಾನು ಬೆಂಕಿಪೊಟ್ಟಣ ಹಿಡಿದು ಕಡ್ಡಿ ಗೀರಲು ಅನುವಾಗಿ ನಿಂತಿದ್ದನ್ನು ಕಂಡು ತತ್ತರಿಸಿ ಹೋಗಿ “ಬೇಡಾ! ಬೇಡಾ! ಸ್ವಾಮಿ! ತಾಳ ತೆಗೆಯಿರಿ, ದಮ್ಮಯ್ಯ!” ಎಂದು ಕೂಗಿಕೊಂಡ. ಮುದುಕನಲ್ಲಿ ನನಗಿದ್ದ ವಿಶ್ವಾಸಪೂರ್ವಕ ಗೌರವದ ಕಾರಣದಿಂದಾಗಿಯೊ ಏನೊ ನಾನು ಕಡ್ಡಿಗೀರುವುದನ್ನು ತುಸು ತಡೆದೆ. ಆದರೆ ಅವನು ಕೇಳಿಕೊಂಡಂತೆ ಬಾಗಿಲ ತಾಳ ತೆಗೆಯಲಿಲ್ಲ. ಸಮಯ ಸ್ಫೂರ್ತಿಯೋ ದೈವಕೃಪೆಯ ಪ್ರೇರಣೆಯೋ? ಮುದುಕನು ಇಣಿಕಿನೋಡುತ್ತಿದ್ದ ಕಂಡಿ ಬಡಕಲಾಗಿದ್ದ ಅವನ ಕೈ ತುರುವಷ್ಟು ದೊಡ್ಡದಾಗಿತ್ತು. ಬೇಗಬೇಗನೆ ಆ ಕಂಡಿಯಲ್ಲಿ ಕೈಹಾಕಿ ಒಳಗಣಿಂದ ಹಾಕಿದ್ದ ತಾಳವನ್ನು ಎಳೆದುತೆಗೆದು ಬಾಗಿಲನ್ನು ನೂಕಿಕೊಂಡು ತೆರೆದು ಒಳಗೆ ನುಗ್ಗಿ ಬಂದು ನನ್ನೆದುರು ಕೈಮುಗಿದು ನಿಂತು ಬೆಂಕಿಪೆಟ್ಟಿಗೆ ಕೊಡುವಂತೆ ಯಾಚಿಸಿದನು. ನಾನು, ಕೈಕೊಳ್ಳಲಿದ್ದ ಕಾರ್ಯವನ್ನು ನಿಲ್ಲಿಸಿ, ಅನುಗ್ರಹಿಸಲೆಂಬಂತೆ, ಬೇಡುತ್ತಿದ್ದ ಮುದುಕನ ಚಾಚಿದ ಅಂಗೈಗೆ ಕಡ್ಡಿಯನ್ನೂ ಬೆಂಕಿಪೆಟ್ಟಿಗೆಯನ್ನೂ ಹಾಕಿದೆ!

ಆಗ ನನಗೆ ಉಂಟಾಗಿದ್ದ  ಅನುಭವಗಳಲ್ಲಿ ಕೆಲವು ಅತೀಂದ್ರಿಯ ಲಕ್ಷಣದವೂ ಆಧ್ಯಾತ್ಮಿಕ ಸ್ವರೂಪದವೂ ಆಗಿದ್ದುವು ಎಂದು ಭಾವಿಸುತ್ತೇನೆ. ಅವುಗಳಲ್ಲಿ ಎರಡು ಮೂರನ್ನು ನೆನಪಿಗೆ ಬರುವಷ್ಟರ ಮಟ್ಟಿಗೆ ವಿವರಿಸಲು ಪ್ರಯತ್ನಿಸುತ್ತೇನೆ:

೧) ನನ್ನ ಎಂದರೆ ಪುಟ್ಟಪ್ಪನ ವ್ಯಕ್ತಿತ್ವದ ಸಂಪೂರ್ಣ ವಿಸ್ಮೃತಿ ಮತ್ತು ವಿನಾಶ. ೨) ಸ್ವಾಮಿ ವಿವೇಕಾನಂದರ ಆವಾಹನೆ ೩) ಎಲ್ಲ ಬೌದ್ಧಿಕ ಸಮಸ್ಯೆಗಳ ಪರಿಹಾರ ೪) ಸರ್ವಜ್ಞತಾ ಮತ್ತು ಸರ್ವಶಕ್ತಿತಾ ಭಾವನೆ ೫) ನನ್ನ ದೈಹಿಕ ವ್ಯಾಪಾರಗಳನ್ನೆಲ್ಲ ಯಾವುದೋ ಶಕ್ತಿ ನಿಯಂತ್ರಿಸುತ್ತಿದ್ದ ಪ್ರತ್ಯಕ್ಷಾನುಭವ ೬) ಎಲ್ಲ ಹೊರೆ ಹೊಣೆಗಳಿಂದ ನಾನು ವಿಮುಕ್ತನಾಗಿ ನನ್ನನ್ನು ಆಕ್ರಮಿಸಿ ನಿಯಂತ್ರಿಸುತ್ತಿರುವ ಶಕ್ತಿಯದೇ ಪೂರ್ತಿ ಜವಾಬುದಾರಿಯಾಗಿದೆ ಎಂಬ ಅನುಭವದಿಂದ ಉಂಟಾದ ಹಗುರ-ಗರಿಹಗುರ-ಸ್ಥಿತಿ ೭) ಆನಂದಮಯತೆ! ೮) ಎಷ್ಟು ತಿಂದರೂ ಸಾಕಾಗದ ಅಸಾಮಾನ್ಯ ಹಸಿವೆ ೯) ಜಗತ್ತು ತನ್ನ ಸ್ಥೂಲತೆಯನ್ನು ವಿಸರ್ಜಿಸಿ ಛಾಯಾಮಾತ್ರ ಸೂಕ್ಷ್ಮತೆಯನ್ನು ಧರಿಸಿದಂತೆ ತೋರಿತು. ವಸ್ತುಗಳೆಲ್ಲ ತಮ್ಮ ಘನಾಂಶವನ್ನು ತೊರೆದು ಬರಿಯ ರೂಪಾಂಶದಿಂದ ಕನಸಿನ ವಸ್ತುಗಳಂತೆ ತೋರಿದುದು.

ಯಾರಾದರೂ ನನ್ನನ್ನು ಹಿಡಿದು ಸಂಬೋಧಿಸಿದರೆ ನಾನು ಕಟು ತಿರಸ್ಕಾರದ ಭಂಗಿಯಲ್ಲಿ “ಪುಟ್ಟಪ್ಪ ಸತ್ತ, ಅವನಿಲ್ಲ. ನಾನು ವಿವೇಕಾನಂದ!” ಎನ್ನುತ್ತಿದ್ದೆ. ಒಂದು ದಿನ, ನನ್ನ ಸಿಡುಬುರೋಗಕ್ಕಾಗಿ ಅಲ್ಲ, ಅದು ಹೆಚ್ಚು ಕಡಮೆ ಗುಣವಾಗಿತ್ತು, ನನ್ನ ಹುಚ್ಚಿನ ಪರೀಕ್ಷೆಯಾಗಿ ಒಬ್ಬ ಡಾಕ್ಟರನ್ನು ಕರೆತಂದರು ಹೊಸಮನೆ ಮಂಜಪ್ಪಗೌಡರು. ಆ ಡಾಕ್ಟರಿಗೆ ಜೋಪಡಿಯೊಳಕ್ಕೆ ಬರಲು ಭಯವೋ ಭಯ! ಹುಚ್ಚ ಎಲ್ಲಿ ಏನು ಮಾಡಿಬಿಡುತ್ತಾನೋ ಎಂದು! ಬಾಗಿಲ ಹೊರಗೆ ನಿಂತು, ವಿವೇಕಾನಂದರ ಚಿಕಾಗೋ ಭಂಗಿಯಲ್ಲಿ ವೃಕ್ಷದ ಮೇಲೆ ಎರಡೂ ಕೈಗಳನ್ನು ಹೆಣೆದು ವೀರಭಂಗಿಯಲ್ಲಿ ನಿಂತಿದ್ದ ನನ್ನನ್ನು ನೋಡುತ್ತಾ Good Morning, Mr. Puttappa, how do you do? (ಸುಪ್ರಭಾತ, ಪುಟ್ಟಪ್ಪನವರೇ, ಹೇಗಿದ್ದೀರಿ?) ಎಂದು ನಗೆಮೊಗದಿಂದ ಪ್ರಶ್ನಿಸಿದರು. ಬಹುಶಃ ರೋಗಿಯನ್ನು ಮಾತನಾಡಿಸಿ ಒದಗುವ ಪ್ರತಿಕ್ರಿಯೆಯಿಂದ ನನ್ನ ಉನ್ಮಾದ ಸ್ವರೂಪದ ಮತ್ತು ರೋಗನಿದಾನ ಮಾಡಲೆಂದೋ ಏನೋ?

ಅದಕ್ಕೆ ನಾನು ಖಂಡತುಂಡವಾಗಿ ಕೊಟ್ಟ ಉತ್ತರ “Iam not  Mr. Puttappa. Mr. Puttappa is dead and gone! (ನಾನೇನು ಪುಟ್ಟಪ್ಪ ಅಲ್ಲ. ಪುಟ್ಟಪ್ಪ ಎಂದೋ ಸತ್ತುಹೋಗಿದ್ದಾನೆ!”)

“And who are you?” (ಹಾಗಾದರೆ ನೀವು ಯಾರು?) ಡಾಕ್ಟರ ಮರುಪ್ರಶ್ನೆ.

“Iam Swami Vivekananda!” (ನಾನು ಸ್ವಾಮಿ ವಿವೇಕಾನಂದ!) ನನ್ನ ಉತ್ತರ.

ಆ ಡಾಕ್ಟರಿಗೆ ನನಗೆ ಹುಚ್ಚು ಹಿಡಿದಿದ್ದುದರಲ್ಲಿ ಖಾತ್ರಿಯಾಗದೆ ಮತ್ತೇನಾದೀತು? ಅವರು ಕಲ್ಕತ್ತಾದಿಂದ ಪ್ರಸಿದ್ಧ ವೈದ್ಯರೊಬ್ಬರ ‘Lunacy Pills’ (ಉನ್ಮಾದ ಮಾತ್ರೆಗಳು) ತರಿಸಿ ಕೊಡಲು ಹೇಳಿದರು. ನನ್ನ ಸ್ನೇಹಿತರಾದ ಭೂಪಾಳಂ ಚಂದ್ರಶೇಖರಯ್ಯನವರ ಸಲಹೆಯಂತೆ, ಆ ಶೀಷೆಗಳ ಮೇಲಿದ್ದ ‘ಇದು ಹುಚ್ಚಿಗೆ ಔಷಧಿ’ ಎಂಬರ್ಥದ ಇಂಗ್ಲಿಷ್ ಲಿಪಿಯ ಲೇಬರ್ ಅನ್ನು ಹರಿದುಹಾಕಿ ನನಗೆ ಕೊಡುತ್ತಿದ್ದರು. ಆ ಲೇಬಲ್ ಏನಾದರೂ ಹಾಗೆಯೆ ಇದ್ದಿದ್ದರೆ ‘ಯಾರು ಹೇಳಿದವರು ನಿಮಗೆ ನನಗೆ ಹುಚ್ಚು ಹಿಡಿದಿದೆ ಎಂದು?’  ಎಂದು ನಾನು ಆರ್ಭಟಿಸಿ ಪ್ರತಿಭಟಿಸುತ್ತೇನೆ ಎಂಬ ಕಾರಣಕ್ಕಾಗಿ.

ನನ್ನ ವ್ಯಕ್ತಿತ್ವದ ಸಂಪೂರ್ಣ ವಿಸ್ಮೃತಿ ಮತ್ತು ವಿನಾಶ-ಎಂದು ಬರೆದದ್ದು ಅಷ್ಟು ಸರಿಯಲ್ಲ ಎಂದು ತೋರುತ್ತದೆ. ಏಕೆಂದರೆ ಪುಟ್ಟಪ್ಪತನದ ಅಹಂಕಾರದ ವ್ಯಕ್ತಿತ್ವ ಸಂಪೂರ್ಣ ವಿನಾಶ ಹೊಂದಿದ್ದರೂ ತೀರಿಹೋಗಿ ಸದ್ಯಕ್ಕೆ ಅತೀತವಾಗಿರುವ ಪುಟ್ಟಪ್ಪನ ನೆನಪು ಇತರ ಯಾವನೋ ಒಬ್ಬ ಗತಿಸಿದವನ ನೆನಪಿನಂತೆ ಇರುತ್ತಿತ್ತು. ಒಮ್ಮೆ ಭೂಪಾಳಂ ಚಂದ್ರಶೇಖರಯ್ಯ ಬಂದವರು, ಆಗ ಅಲ್ಲಿ ಇರುತ್ತಿದ್ದ ಒಂದು ಮರದ ಕಾಲ್ಮಣೆಯ ಮೇಲೆ ಕುಳಿತು, ನನ್ನ ಕ್ಷೇಮಸಮಾಚಾರವನ್ನು ವಿಚಾರಿಸುತ್ತಾ ಏನೇನೊ ಮಾತಿನಮಧ್ಯೆ, ನನ್ನ ಪ್ರಜ್ಞೆಗೆ ಪುಟ್ಟಪ್ಪತನವನ್ನು ತಂದು ಮತ್ತೆ ಅದನ್ನು ಪುನಃಸ್ಥಾಪಿಸುವ ಗುಪ್ತ ಉದ್ದೇಶದಿಂದ, ಮೆಲ್ಲನೆ ನನ್ನ ಸಾಹಿತ್ಯಸೃಷ್ಟಿಯ ಮಾತೆತ್ತಿ, ಆಗಲೇ ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾಗಿದ್ದ ’ಯಮನಸೋಲು’ ನಾಟಕದ ಪ್ರಸ್ತಾಪವೆತ್ತಿ “ನೀವು ಬರೆದ ಆ ನಾಟಕ ತುಂಬ ಸೊಗಸಾಗಿದೆ” ಎಂದು ಹೊಗಳಿ, ಅದನ್ನು ಬರೆದವನು ಸದ್ಯದಲ್ಲಿ ಅವರೊಡನೆ ಸಂಭಾಷಿಸುತ್ತಿರುವ ವ್ಯಕ್ತಿಯೇ ಎಂದು ಸಿದ್ದಾಂತಪಡಿಸಲು ಪ್ರಯತ್ನಿಸಿದರು. ಆಗ ನಾನು ಅವರ ‘It is great work of art’ ಎಂಬ ಇಂಗ್ಲಿಷ್ ಪ್ರಶಂಸೆಗೆ ಉತ್ತರವಾಗಿ Yes, Puttappa was a great man, but he is no more! (ಹೌದು, ಪುಟ್ಟಪ್ಪ ಒಬ್ಬ ಮಹಾವ್ಯಕ್ತಿಯಾಗಿದ್ದ, ಆದರೆ ಅವನು ಇನ್ನಿಲ್ಲ!) ಎಂದು ಹೇಳಲು ಅವರು ತಬ್ಬಿಬ್ಬಾದರು! ಅವರ ಪ್ರಶ್ನೆ ಮತ್ತು ಆಗ ನನ್ನಿಂದ ಬಂದ ಉತ್ತರಗಳನ್ನು ವಿಶ್ಲೇಷಿದರೆ, ಅಹಂಭಾವನೆ ಮತ್ತು ವ್ಯಕ್ತಿತ್ವದ ಸಂಪೂರ್ಣ ವಿನಾಶವನ್ನು ಸೂಚಿಸುತ್ತದೆಯೆ ಹೊರತು ವಿಸ್ಮೃತಿಯನ್ನು ಸೂಚಿಸುವುದಿಲ್ಲ. ಪುಟ್ಟಪ್ಪ ಸತ್ತುಹೋದ, ಇನ್ನಿಲ್ಲ ಎಂಬುದು ನಟನೆಯಾಗಿರದೆ ಅನುಭವ ಆಗಿತ್ತು. ನಾನು ವಿವೇಕಾನಂದ ಎಂಬುದೂ ಬರಿಯ ಆಲೋಚನೆಯ ಆರೋಪ ಸ್ವರೂಪದ್ದಾಗಿರಲಿಲ್ಲ. ಅಹಂಕಾರದ ಸಂಪೂರ್ಣ ವಿನಾಶವಾದರೂ ಜೀವತ್ವದ ಅಸ್ತಿತ್ವಕ್ಕೆ ಲೋಪವುಂಟಾಗುವುದಿಲ್ಲ ಎಂಬ ತತ್ವಶಾಸ್ತ್ರದ ನಿಲುವನ್ನು ಚೆನ್ನಾಗಿ ಅನುಭವತಃ ಅರ್ಥಮಾಡಿಕೊಳ್ಳಲು ನನಗೆ ಸಹಾಯವಾಗಿದೆ ಅಂದಿನ ಆ ಅನುಭವ!

ಇನ್ನು ‘ನಾನು ವಿವೇಕಾನಂದ’ ಎನ್ನುವುದನ್ನು ಹೇಗೆ ವಿವರಿಸುವುದು? ’ಪುಟ್ಟಪ್ಪ ಸತ್ತುಹೋದ, ನಾನು ವಿವೇಕಾನಂದ’ ಎನ್ನುವುದನ್ನು ವಾಚ್ಯವಾಗಿ ಅಕ್ಷರಶಃ ಅರ್ಥಯಿಸಿದರೆ, ಪುಟ್ಟಪ್ಪ ಎಂಬ ಹೆಸರಿದ್ದ ಜೀವ ಈಗ ಆ ದೇಹದಲ್ಲಿ ಇಲ್ಲ, ಆ ದೇಹದಲ್ಲಿ ಸದ್ಯಕ್ಕೆ ಇರುವ ಜೀವ ವಿವೇಕಾನಂದರದು ಎಂದಾಗುತ್ತದೆ. ನರಮಹರ್ಷಿಯ ಅಂಶವೆ ಅವತರಿಸಿ ‘ನರೇಂದ್ರ’ನಾಗಿ ಬಂದಿದೆ ಎಂದು ಪರಮಹಂಸರು ವರ್ಣಿಸಿದ್ದ ಆ ಮುಕ್ತಾತ್ಮ ಯಃಕಶ್ಚಿತ ಪುಟ್ಟಪ್ಪನಾಗಿದ್ದವನ ಕಳೇಬರಕ್ಕೆ ಇಳಿದಿದೆ ಎಂದರೆ, ಹೆಚ್ಚೇನು ಹೇಳಲಾಗದಿದ್ದರೂ ಕನಿಷ್ಠವೆಂದರೆ ಹಾಸ್ಯಾಸ್ಪದವಾಗುತ್ತದೆ. ಹಾಗಲ್ಲದೆ, ಮೈಮೇಲೆ ದೆಯ್ಯ ಬಂದಿದೆ ಎಂದು ವರ್ಣಿಸುತ್ತಾರಲ್ಲ ಹಾಗೆ ಪುಟ್ಟಪ್ಪನ ಮೈಮೇಲೆ ವಿವೇಕಾನಂದರ ದೆಯ್ಯ ಬಂದಿದೆ; ಅದು ಪುಟ್ಟಪ್ಪನನ್ನು ಮೆಟ್ಟಿ ತುಳಿದು ಹಿಂದಿಕ್ಕಿ ತಾನು ಮಾತನಾಡುತ್ತಿದೆ ಎಂದು ವ್ಯಾಖ್ಯಾನ ಮಾಡೋಣವೆ? ವಿವೇಕಾನಂದರಂತಹ ದಿವ್ಯಜ್ಯೋತಿಯನ್ನು ದೆಯ್ಯದ ಮಟ್ಟಕ್ಕೆ ಇಳಿಸಿದಂತಾಗುತ್ತದೆ. ಯಾವುದಾದರೂ ಆದರ್ಶವನ್ನು ನಾವು ಮೆಚ್ಚಿ, ಪೂಜಿಸಿ, ಉಪಾಸಿಸಿ, ಮೂರುಹೊತ್ತೂ ಅದನ್ನೇ ಧ್ಯಾನಿಸಿ ಆಹ್ವಾನಿಸುತ್ತಿದ್ದರೆ ಕ್ರಮೇಣ ‘ಭ್ರಮರ ಕೀಟ’ ನ್ಯಾಯದಂತೆ ಕೀಟತ್ವವಳಿದು ಭ್ರಮರತ್ವ ಪರಿಣಮಿಸುವಂತೆ ಸದಾ ವಿವೇಕಾನಂದರನ್ನೆ ಕುರಿತು ಅಲೋಚಿಸುತ್ತಾ ಧ್ಯಾನಿಸುತ್ತಾ ಅವರ ಕೃತಿಗಳನ್ನೆ ಅಧ್ಯಯನ ಮಾಡುತ್ತಾ ಇದ್ದುದರಿಂದ, ‘ನನ್ನನಳಿಸಿ ನೀನೆ ನೆಲೆಸು ಹೃದಯಪದ್ಮ ದಲದಲಿ’ ಎಂಬ ರವೀಂದ್ರರ ಒಂದು ಪ್ರಾರ್ಥನೆಯಲ್ಲಿ ಬರುವ ಅಭೀಪ್ಸೆಯಂತೆ ಪುಟ್ಟಪ್ಪತ್ವವನ್ನಳಿಸಿ ವಿವೇಕಾನಂದತ್ವ ನೆಲೆಸಿತೆಂದು ಭಾವಿಸೋಣವೆ? ಹಾಗೆ ಭಾವಿಸಿದರೂ ಅದು ತಾತ್ಕಾಲಿಕವಾಗಿ ಅಪಾಯಕ್ಕೊಳಗಾಗಿದ್ದ ಪುಟ್ಟಪ್ಪತ್ವವನ್ನು ಕಾಪಾಡಲೋಸುಗವೆ ಎಂದೂ ಭಾವಿಸಬೇಕಾಗುತ್ತದೆ. ಮುಂದೆ ಈ ಪುಟ್ಟಪ್ಪನಿಂದ ಮಾಡಿಸಬೇಕಾದ ದೈವೀ ಮಹತ್ಕಾರ್ಯಗಳಿಗಾಗಿಯೆ ಅವನ ಈ ಜನ್ಮದ ಈ ‘ಆಧಾರ’ದ ಎಂದರೆ ‘ಪಾತ್ರ’ದ, ಎಂದರೆ ಒಡಲಿನ ರಕ್ಷಣೆಗಾಗಿಯೆ ಎಂದೂ ಊಹಿಸಬೇಕಾಗುತ್ತದಲ್ಲವೆ? ಏಕೆಂದರೆ, ಮುಂದೆ ಸುಮಾರು ಒಂದೆರಡು ತಿಂಗಳೊಳಗಾಗಿ ವಿವೇಕಾನಂದತ್ವ ಒಯ್ಯೊಯ್ಯನೆ ತಿರೋಹಿತವಾಗಿ ಪುಟ್ಟಪ್ಪತನ ಮತ್ತೆ ಪ್ರತಿಷ್ಠಿತವಾಗುವುದನ್ನು ಕಾಣುತ್ತೇವೆ. ಸೋಜಿಗದ ಸಂಗತಿಯೆಂದರೆ, ಅದೇ ನನಗೆ ಬಂದ ಕೊನೆಯ ಕಾಯಿಲೆಯಾಗಿ, ಶ್ರೀಗುರುಕೃಪೆಯಿಂದ, ಅಂದಿನಿಂದ ಇಂದಿನವರೆಗೆ (೧೯೭೩) ನಾನು ರೋಗ ವಿಮುಕ್ತನಾಗಿ ಅರೋಗ ದೃಢಕಾಯನಾಗಿರುವುದು!

ಮತ್ತೊಂದು ಅದ್ಭುತಾನುಭವ, ಸಂಪೂರ್ಣ ಆಧ್ಯಾತ್ಮಿಕ ಸ್ವರೂಪದ್ದು: ನಾನು ಸರ್ವಜ್ಞನಾಗಿದ್ದೇನೆ; ನನಗೆ ಸರ್ವಶಕ್ತಿ ಲಭಿಸಿದೆ; ಬುದ್ಧಿಯ ಸಮಸ್ಯೆಗಳೊಂದೂ ಇಲ್ಲದಂತೆ ಪರಿಹಾರವಾಗಿದೆ; ಪ್ರಕೃತಿಯ ನಿಯಮಗಳನ್ನೆಲ್ಲ ನಿಯಂತ್ರಿಸುವ ಪ್ರಭುಶಕ್ತಿ ನನ್ನ ವಶವಾಗಿದೆ; ಸಿಡಿಲು ಗುಡುಗು ಮಿಂಚುಗಳು ನನ್ನ ಕೈಯಲ್ಲಿವೆ; ನಾನು ಸಂಪೂರ್ಣ ಕೃತಕೃತ್ಯನಾಗಿದ್ದೇನೆ, ಪರಿಪೂರ್ಣನಾಗಿದ್ದೇನೆ-ಎಂಬ ಭಾವನೆ, ಅಲ್ಲ ಅನುಭವ ಅಥವಾ ಸಾಕ್ಷಾತ್ಕರಣ: ಅದರ ಪರಿಣಾಮವಾಗಿ ಉಂಟಾದ ಒಂದು ಅದ್ಭುತ ಶಾಂತಿ ಮತ್ತು ಆನಂದ! ಆ ಸರ್ವಶಕ್ತಿ ಮತ್ತು ಸರ್ವಜ್ಞತೆ ಇತ್ಯಾದಿಗಳು ಲೋಕೋಪಯೋಗಿಗಳಾಗಿರಲಿಲ್ಲ ಎಂಬುದರಿಂದ ಸ್ವಲ್ಪವೂ ವಿಚಲಿತವಾಗುತ್ತಿರಲಿಲ್ಲ, ನನಗುಂಟಾಗುತ್ತಿದ್ದ ಅದರ ಭಾವೋಪಯೋಗಿತ್ವ! ಯಾರಾದರೂ ಆ ಸರ್ವಜ್ಞಾನ ಮತ್ತು ಸರ್ವಶಕ್ತಿಗಳನ್ನು ವಾಸ್ತವದ ಒರೆಗಲ್ಲಿಗೆ ತಿಕ್ಕಿ ಪರೀಕ್ಷಿಸಿದ್ದರೆ ಅವು ಭ್ರಮಾಮೂಲವು ಅವಾಸ್ತವವೂ ಆಗುತ್ತಿದ್ದುದರಲ್ಲಿ ಸಂದೇಹವಿಲ್ಲ. ಅಂದಮಾತ್ರಕ್ಕೆ ನನಗಾಗುತ್ತಿದ್ದ ಅನುಭವದ ಭಾವಸತ್ಯಕ್ಕೆ ಚ್ಯುತಿ ಇರುತ್ತಿರಲಿಲ್ಲ. ಉದಾಹರಣೆಗೆ-ಒಮ್ಮೆ ನನ್ನ ಯೋಗಕ್ಷೇಮ ವಿಚಾರಿಸಲು  ಬಂದ ಮಿತ್ರ ಭೂಪಾಳಂ ಚಂದ್ರಶೇಖರಯ್ಯನವರಿಗೆ ನನಗೆ ಲಭಿಸಿರುವ ಸರ್ವಶಕ್ತಿತ್ವದ ಅನುಭವವನ್ನು ವರ್ಣಿಸುತ್ತಾ ನನಗೆ ಅನುಭವವಾಗುತ್ತಿದ್ದ ಶಕ್ತಿಸ್ಫುರಣದ ವಿಷಯ ವಿವರಿಸುತ್ತಾ ನನ್ನ ಮೈಯಲ್ಲಿ ಪ್ರವಹಿಸುತ್ತಿರುವ ವಿದ್ಯುಚ್ಛಕ್ತಿ ನನ್ನ ತೋಳಿನ ಕಾಲುವೆಯಲ್ಲಿ ಹರಿದು ಬೆರಳುಗಳ ತುದಿಯಲ್ಲಿ ಅದೃಶ್ಯ ಜ್ವಾಲೋಗ್ರಜಿಹ್ವೆಗಳಾಗಿ ಚುರುಗುಟ್ಟುತ್ತಿದೆ ಎಂದು ಹೇಳಿದೆ. ಅಷ್ಟೇ ಸಾಲದೆ ನನ್ನ ಕೈಯನ್ನು ಯಾರಾದರೂ ಮುಟ್ಟಿದರೆ ವಿದ್ಯುತ್ತು ಪ್ರವಹಿಸುವ ತಂತಿಯನ್ನು ಮುಟ್ಟಿದಂತೆ ಸುಟ್ಟು ಸೀಯುತ್ತಾರೆ ಎಂದೂ ಬೆದರಿಸಿದೆ. ಅವರು ನಗುತ್ತಾ “ಎಲ್ಲಿ ನೋಡೋಣ, ನಾನು ಮುಟ್ಟುತ್ತೇನೆ” ಎಂದರು. ನಾನು “ಬೇಡ, ನಿಮಗೆ ಅಪಾಯವಾಗುತ್ತದೆ” ಎಂದೆ. ಅವರು ತುಸು ಮೂದಲಿಕೆಯ ಸಿನಿಕನಗೆ ಬೀರಿ “ಪರ್ವಾ ಇಲ್ಲ, ಕೈನೀಡಿ ನಾನು ಪರೀಕ್ಷಿಸುತ್ತೇನೆ” ಎಂದರು. ನಾನು ತೋಳು ಚಾಚಿದೆ ಅವರತ್ತ. ಅವರು ನನ್ನ ಕೈಯನ್ನು ಮುಷ್ಟಿಯಪ್ಪಿ ಹಿಡಿದುಕೊಂಡರು. ಏನೂ ಆಗಲಿಲ್ಲ! ನಗುತ್ತಿದ್ದರು! ನಾನೂ ಸ್ವಲ್ಪವೂ ಅಪ್ರತಿಭನಾಗಲಿಲ್ಲ! ಏಕೆಂದರೆ ಲೋಕರಂಗದಲ್ಲಿ ಅದು ಕಾರ್ಯಕಾರಿಯಾಗದಿದ್ದರೂ ನನಗಾಗುತ್ತಿದ್ದ ಆ  ಅನುಭವ ಆಗುತ್ತಲೆ ಇತ್ತು!

ನನಗೆ ಸುಸ್ಪಷ್ಟವಾಗಿ ಆಗುತ್ತಿದ್ದ ಮತ್ತೊಂದು ಅನುಭವವೆಂದರೆ: ನಾನು ಯಾವ ತೊಂದರೆಯನ್ನೂ ತೆಗೆದುಕೊಳ್ಳುವ ಆವಶ್ಯಕತೆ ಇರಲಿಲ್ಲ; ನನ್ನ ಚಲನವಲನಗಳ ಹೊರೆ ಹೊಣೆಗಳೆಲ್ಲ ನನ್ನನ್ನು ಆಕ್ರಮಿಸಿ ನಿಯಂತ್ರಿಸುತ್ತಿರುವ ಶಕ್ತಿಯೆ ವಹಿಸಿಕೊಂಡಿತ್ತು. ಉಣ್ಣುವಾಗ ತಿನ್ನುವಾಗ ನಡೆಯುವಾಗ ನನ್ನ ಯಾವ ಪ್ರಯತ್ನ ಶ್ರಮವೂ ಇರುತ್ತಿರಲಿಲ್ಲ. ಕೈ ತನಗೆತಾನೆ ಚಲಿಸಿ, ಬಾಯಿ ತನಗೆತಾನೆ ಆಡುತ್ತಿತ್ತು. ಕೆಲವು ತಿಂಗಳುಗಳ ಹಿಂದೆತಾನೆ ಮೈಸೂರಿನಲ್ಲಿ ಕೊರೆದು ತುಂಬಿಸಿದ್ದ ದವಡೆಹಲ್ಲು ತನಗೆತಾನೆ ಅರೆಯುತ್ತಿತ್ತು. ಆ ಎಲ್ಲ ಜವಾಬುದಾರಿಯಿಂದ ಪಾರಾಗಿ ನಾನು ಖುಷಿಯಾಗಿರುತ್ತಿದ್ದೆ; ಮನಸ್ಸು ಹೊಣೆಯ ಭಾರದಿಂದ ವಿಮುಕ್ತವಾಗಿ ಹಸುಗೂಸಿನಂತೆ ಗರಿಹಗುರವಾಗಿ ಆನಂದಮಯವಾಗಿರುತ್ತಿತ್ತು. ನಿದರ್ಶನಕ್ಕಾಗಿ ನಡೆದ ಒಂದು ಘಟನೆ ಹೇಳುತ್ತೇನೆ. ನನಗೆ ಮನುಷ್ಯ ಸಾಧಾರಣವಲ್ಲದ ಭಯಂಕರ ಹಸಿವೆ ಶುರುವಾಗಿತ್ತು. ಆಗತಾನೆ ಕಾಯಿಲೆ ಬಿದ್ದೆದ್ದ ಕೃಶ ಮತ್ತು ದುರ್ಬಲಸ್ಥಿತಿಯಲ್ಲಿ ಸ್ವಲ್ಪಸ್ವಲ್ಪ ಆಹಾರವನ್ನು ತುಂಬ ಮಿತವಾಗಿ ಸೇವಿಸುತ್ತಾ ಹೋಗಬೇಕು ಎಂಬುದು ವೈದ್ಯಕೀಯ ಸಲಹೆಯಾಗಿತ್ತು; ತುಸು ಗಂಜಿಯನ್ನೊ ಹಣ್ಣಿನ ರಸವನ್ನೊ; ಅಥವಾ ಚೆನ್ನಾಗಿ ಬೇಯಿಸದ ಅನ್ನಕ್ಕೆ ಸಪ್ಪೆಸಾರು ಇತ್ಯಾದಿ. ಆದರೆ ನನಗೆ ಆರೋಗದೃಢಕಾಯರಾದ ಇಬ್ಬರು ಮೂವರು ಉಣ್ಣುವಷ್ಟು ಅನ್ನ ಹಾಕಿ, ಅದೇ ಬೃಹತ್ ಪ್ರಮಾಣದಲ್ಲಿ ವ್ಯಂಜನಗಳನ್ನು ಕೊಟ್ಟರೂ ಸಾಕಾಗುತ್ತಿರಲಿಲ್ಲ. ಶುಶ್ರೂಷೆ ಮಾಡುವವರಿಗೆ ಗಾಬರಿಯಾಗಿ ಏನೇನೊ ಉಪಾಯ ಮಾಡಿ ಸುಮ್ಮನಾಗಿಸುತ್ತಿದ್ದರು. ಆದರೆ ಉಂಡು ಕಾಲುಗಂಟೆಯೊ ಅರ್ಧ ಗಂಟೆಯೊ ಆಗುವುದರೊಳಗೆ ನನಗೆ ಭಯಂಕರ ಹಸಿವಾಗಿ ಕಿರಿಚಿಕೊಳ್ಳುತ್ತಿದ್ದೆ. ಒಂದು ರಾತ್ರಿ ಆ ಮುದುಕ ಹೆಚ್ಚು ಅನ್ನ ಬೇಯಿಸಿ, ದೇವಂಗಿ ಮನೆಯಿಂದ ಕಳುಹಿಸುತ್ತಿದ್ದ ಪಲ್ಯ ಸಾರು ಹುಳಿ ಮೊಸರು ಸಂಡಿಗೆ ಉಪ್ಪಿನಕಾಯಿ ಎಲ್ಲವನ್ನೂ ದೊಡ್ಡ ಪ್ರಮಾಣದಲ್ಲಿಯೆ ಇಕ್ಕಿ, ನನ್ನನ್ನು ತೃಪ್ತಿಪಡಿಸಿ, ನಾನು ಕೇಳಿದಷ್ಟು ನೀರು  ಕುಡಿಯಲು ಕೊಟ್ಟು ನನ್ನನ್ನು ಮಲಗುವಂತೆ ಮಾಡಿದ್ದ.

ಮಲಗಿ ಒಂದೆರಡು ಗಂಟೆಯಾಗಿತ್ತೊ ಏನೊ? ನನಗೆ ಹಸಿವೆಯಾಗಿ ಎಚ್ಚರವಾಯಿತು. ಒಂದು ಲಾಟೀನನ್ನು ಹೊತ್ತಿಸಿ ಸಣ್ಣಗೆ ಮಾಡಿ ಮೂಲೆಯಲ್ಲಿಟ್ಟಿದ್ದರು. ಅದರ ಬಹುಕಾಂತಿ ಜೋಪಡಿಯ ವಸ್ತುಗಳನ್ನು ಕಾಣಿಸುವಷ್ಟರಮಟ್ಟಿಗಿತ್ತು. ನಾನು ಮೆಲ್ಲಗೆ ಎದ್ದುಕುಳಿತು ನೋಡಿದೆ. ನನ್ನನ್ನು ನೋಡಿಕೊಳ್ಳುತ್ತಿದ್ದವರೆಲ್ಲ ಗಾಢನಿದ್ರೆಯಲ್ಲಿದ್ದರು. ನನಗೆ ಭಯಂಕರ ಹಸಿವೆಯಾಗುತ್ತಿತ್ತು! ಯಾರನ್ನಾದರೂ ಎಬ್ಬಿಸಿದರೆ ಅವರು ಖಂಡಿತ ನನಗೆ ಏನನ್ನೂ ತಿನ್ನಲು ಬಿಡುವುದಿಲ್ಲ ಎಂದು ಯೋಚಿಸಿದೆ. ಏಕೆಂದರೆ ಈಗತಾನೆ ಸೇರಕ್ಕಿ ಅನ್ನ ಉಂಡು ಮತ್ತೆ ಬೇಕು ಎಂದರೆ ಅವರಾದರೂ ಹೇಗೆ ಬಡಿಸಿಯಾರು? ಅಜೀರ್ಣವಾಗಿ ನನಗೆ ಕೇಡಾಗುತ್ತದೆ ಎಂಬುದರಲ್ಲಿ ಅವರಿಗೆ ಸಂದೇಹವಿರುತ್ತಿರಲಿಲ್ಲ. ಆದ್ದರಿಂದ ನಾನು ಯಾರನ್ನೂ ಎಬ್ಬಿಸುವ ಗೋಜಿಗೆ ಹೋಗಲಿಲ್ಲ. ಅಷ್ಟೇ ಅಲ್ಲ, ನಾನು ಏನು ಮಾಡಿದರೂ ಎಷ್ಟು ಶಬ್ಧಮಾಡಿದರೂ ಅವರು ಯಾರೂ ಏಳುವುದಿಲ್ಲ ಎಂಬ ದೃಢ ನಿಶ್ಚಯತೆಯೂ ನನ್ನಲ್ಲಿತ್ತು, ನನ್ನನ್ನು ನಿಯಂತ್ರಿಸುತ್ತಿದ್ದ ಶಕ್ತಿಯೆ ಹಾಗೆ ಮಾಡುತ್ತದೆ ಎಂದು. ಎದ್ದು ಪಕ್ಕದ ಸಣ್ಣಭಾಗಕ್ಕೆ ಹೋದೆ. ಅಲ್ಲಿಯೆ ಅಡುಗೆ ಮಾಡುತ್ತಿದ್ದುದು; ಅಡುಗೆ ಸಾಮಾನು ಇರುತ್ತಿದ್ದುದು; ಊಟದ ವಸ್ತುಗಳೂ ಮಿಕ್ಕಿದ್ದ ಅನ್ನ ಮೊದಲಾದವೂ ಇರುತ್ತಿದದ್ದು. ಪುನಃ ಎಚ್ಚರಿಸುತ್ತೇನೆ: ಇದನ್ನು ಓದುವವರಿಗೆ. ನಾನು ಮಾಡಿದೆ, ನಾನು ತಿಂದೆ ಎಂದೆಲ್ಲ ಬರೆಯುತ್ತಿರುವೆನಾದರೂ ನಿಜವಾಗಿಯೂ ‘ನಾನು’ ಎಂಬುದು ಇಲ್ಲಿ ವ್ಯರ್ಥಪ್ರಯೋಗ ಅಥವಾ ‘ನಾನು’ ಎಂಬುದು ಸಂಗಮದೂರವಾಗಿ ಸಾಕ್ಷೀಪ್ರಜ್ಞೆಯಂತೆ ಇತ್ತು ಎಂದು ಬೇಕಾದರೆ ಹೇಳಬಹುದು ಅಷ್ಟೆ.

ಮೈಲಿ ಆದವರಿಗೆ ಬೇವಿನೆಲೆಯ ಕಷಾಯ ಮಾಡಿ ದಿನವೂ ಸ್ವಲ್ಪಸ್ವಲ್ಪ ಕುಡಿಸುತ್ತಾರೆ. ಸ್ನಾನವನ್ನೂ ಬೇವಿನ ಎಲೆ ಹಾಕಿ ಕಾಯಿಸಿದ ಬಿಸಿನೀರಿನಲ್ಲಿ ಮಾಡಿಸುತ್ತಾರೆ. ಆ ಮುದುಕ ನನಗಾಗಿ ಒಂದು ದೊಡ್ಡ ಬೋಗುಣಿಯಲ್ಲಿ ಬೇವಿನ ಎಲೆ ಹಾಕಿ ತಯಾರಿಸಿದ ಕಷಾಯ ತುಂಬಿಸಿ ಇಟ್ಟಿದ್ದ. ಬಾಯಾರಿದ ಒಂದು ದೊಡ್ಡ ಹಸುವೂ ಅಷ್ಟು ನೀರನ್ನು ಒಮ್ಮೆ ಕುಡಿಯಲಾರದಷ್ಟು ಅದರಲ್ಲಿ ತುಂಬಿತ್ತು. ಮತ್ತೊಂದು ಪಾತ್ರೆಯಲ್ಲಿ ತಂಗಳನ್ನ ತುಂಬಿತ್ತು. ಪಕ್ಕದಲ್ಲಿ ಬಿದಿರಿನ ತಟ್ಟೆಯಲ್ಲಿ ಒಣಮೆಣಸಿನಕಾಯಿ ಸಂಗ್ರಹವಾಗಿತ್ತು. ಅಲ್ಲಿಯೆ ಒಂದು ಬುಟ್ಟಿಯಲ್ಲಿ ಹಪ್ಪಳರಾಶಿ ಮತ್ತು ಕಲ್ಲುಸೋಲುವ ಮಟ್ಟಿಗೆ ಗಟ್ಟಿಯಾಗಿದ್ದ ಒಣಗು ಸಂಡಿಗೆ ಇದ್ದುವು. ಒಂದು ಮರಿಚಟ್ಟಿಯಲ್ಲಿ ಉಪ್ಪೂ ಇತ್ತು; ಉಪ್ಪಿನಕಾಯಿ, ಕಳಲೆಉಪ್ಪಿನ ಕಾಯಿಯೂ ಇತ್ತು. ನನ್ನ ಹಸಿವೆ ಯಾವ ಉಗ್ರಪ್ರಮಾಣಕ್ಕೇರಿತ್ತು ಎಂದರೆ, ಇದು ಎಂಬ ಭೇದವೆಣಿಸದೆ, ಒಂದು ಕಡೆಯಿಂದ ಸಾಲಾಗಿ ಒಂದೊಂದನ್ನೆ ಖಾಲಿಮಾಡುತ್ತಾ ಹೋದೆ. ಖಾರ ಕಹಿ ಉಪ್ಪು ಹುಳಿ ಎಂಬ ಯಾವ ಭೇದಭಾವವೂ ನನ್ನ ಪ್ರಜ್ಞೆಗೆ ಆತಂಕ ಒಡ್ಡಲಿಲ್ಲ: ಬೋಗುಣಿ ತುಂಬಿದ್ದ  ಬೇವಿನ ಕಷಾಯವನ್ನು ಗೊಟಗೊಟ ತಲಸ್ಪರ್ಶಿಯಾಗಿ ಹೀರಿದೆ! ಕುತ್ತುರೆಯಾಗಿದ್ದ ತಂಗಳನ್ನವನ್ನೆಲ್ಲ ತಿಂದುಬಿಟ್ಟೆ! ಬಿದಿರಿನ ತಟ್ಟೆಯಲ್ಲಿದ್ದ ಒಣಮೆಣಸಿನ ಕಾಯಿಯನ್ನೆಲ್ಲ ಮಂಡಕ್ಕಿ ತಿನ್ನುವಂತೆ ಮುಕ್ಕಿಬಿಟ್ಟೆ! ಆಮೇಲೆ ಹಪ್ಪಳದ ರಾಶಿಯನ್ನು ಇಲ್ಲಗೈದೆ! ಕಲ್ಲಿನಂತೆ ಗಟ್ಟಿಯಾಗಿದ್ದ ಹಸಿ ಸಂಡಿಗೆಯನ್ನೂ ನನ್ನ ದವಡೆ ಒಂದಿನಿತೂ ಲೆಕ್ಕಿಸದೆ ಕರಂಕರಂ ಕರಮ್ಮನೆ ಆಗಿದು ಪುಡಿಗೈದು ಕಬಳಿಸಿತು. (ಕೊರೆದು ತುಂಬಿಸಿದ್ದ ದವಡೆ ಹಲ್ಲುಗಳಲ್ಲಿ ಸಾಮಾನ್ಯಸ್ಥಿತಿಯಲ್ಲಿದ್ದಾಗ ಸ್ವಲ್ಪ ಗಟ್ಟಿಪದಾರ್ಥವಾದರೂ ಆಗಿದರೆ ನೋವಾಗುತ್ತಿದ್ದುದರಿಂದ ನಾನು ಆ ಕೆಲಸಕ್ಕೇ ಹೋಗುತ್ತಿರಲಿಲ್ಲ!) ಕೊನೆಗೆ ಉಪ್ಪು ಉಪ್ಪಿನ ಕಾಯಿಗಳಿಗೂ ತಪ್ಪಲಿಲ್ಲ ನನ್ನ ಹಸಿವೆಗೆ ಆಹುತಿಯಾಗುವ ಗತಿ! ಎಲ್ಲ ಪೂರೈಸಿತು ಎಂದು ಖಾತ್ರಿಯಾದ ಮೇಲೆಯೆ ನಾನು ಹೊಟ್ಟೆ ತುಂಬಿತೆಂದು ಸಂತೃಪ್ತನಾಗಿ ಬಂದು ಮಲಗಿ ನಿದ್ದೆಹೋದೆ! ಯಾರಿಗೂ ಎಚ್ಚರವಿರಲಿಲ್ಲ.

ಮರುದಿನ ಬೆಳಿಗ್ಗೆ ಅಡುಗೆಮನೆಯಲ್ಲಿದ್ದುದೆಲ್ಲ ಖಾಲಿಯಾಗಿರುವುದನ್ನು ಕಂಡು ಗಮನಿಸಿದ ಮುದುಕನಿಗೆ ಬೆರಗೋ ಬೆರಗು, ದಿಗಿಲೋ ದಿಗಿಲು! ಆತನಿಗೆ ಅಲ್ಲಿ ನಡೆದದ್ದು ಮನುಷ್ಯವ್ಯಾಪಾರವಾಗಿ ತೋರಲಿಲ್ಲ! ಭೂತಚೇಷ್ಟೆಯೆ ಆಗಿರಬೇಕು, ನನ್ನ ಮೂಲಕ ನಡೆದಿದ್ದರೂ!

ಅಂದಿನಿಂದ ಯಾವ ಪದಾರ್ಥಗಳನ್ನೂ ಜೋಪಡಿಯಲ್ಲಿ ಮಡಗುತ್ತಿರಲಿಲ್ಲ. ಅಷ್ಟನ್ನೆಲ್ಲ ಅಸ್ವಾಭಾವಿಕವಾಗಿ ಅಕ್ರಮವಾಗಿ ತಿಂದಿದ್ದ ನನಗೆ ಏನಾದರೂ ಭಯಂಕರ ಬೇನೆ ಸ್ವತಃಸಿದ್ದ ಎಂದು ನಿರೀಕ್ಷಿಸಿದ್ದ ಅವರು ಎರಡುಮೂರು ದಿನವಾದರೂ ನಾನು ಆರೋಗ್ಯವಾಗಿರುತ್ತಿದ್ದುದನ್ನು ಕಂಡು ಬೆಕ್ಕಸಬೆರಗಾಗಿ ಸಮಾಧಾನದ ನಿಟ್ಟುಸಿರೆಳೆದರು. ಆದರೆ ನನ್ನ  ಅಮಾನುಷ ಹಸಿವೆ ಇಳಿಯಲೂ ಇಲ್ಲ, ಕಡಿಮೆಯಾಗಲೂ ಇಲ್ಲ! ಸುಮಾರು ಎರಡು ತಿಂಗಳಾದರೂ ಆಗಿತ್ತು ಅದು ಸ್ವಲ್ಪಮಟ್ಟಿಗಾದರೂ ಸಾಮಾನ್ಯಸ್ಥಿತಿಗೆ ಬರಲು.

ಮನೋತಿರೇಕ ವಿನಾ ನನ್ನ ಕಾಯಿಲೆ ತಕ್ಕಮಟ್ಟಿಗೆ ಗುಣವಾಯಿತು. ಕೋಳಿ ಸುಳಿಯುವುದೆ ಮೊದಲಾದ ಉಪಾಯಗಳಿಂದ ಏನೂ ಪ್ರಯೋಜನವಾಗದಿದ್ದಾಗ, ನಾನಿದ್ದ ಜೋಪಡಿಗೆ ಸಮಿಪವಾಗಿ ಅದೇ ದೊಡ್ಡ ಕಾಂಪೌಂಡಿನೊಳಗಿದ್ದ ದೇವಾಲಯದಲ್ಲಿ ನನ್ನ ಹುಚ್ಚಿನ ಶಮನಾರ್ಥವಾಗಿ ಸತ್ಯನಾರಾಯಣನ ಪೂಜೆಯನ್ನೊ ಎಂಥದೋ ಒಂದನ್ನು ಏರ್ಪಡಿಸಿದ್ದರು. ಆ ದೇವರುಗಳು, ದೇವಸ್ಥಾನಗಳು ಪೂಜೆಗಳು ಇವುಗಳ ವಿಚಾರದಲ್ಲಿಯೂ ನನಗೆ ದೆಯ್ಯಕ್ಕೆ ಕೋಳಿ ಸುಳಿಯುವುದರ ವಿಚಾರವಾಗಿ ಇದ್ದಷ್ಟೇ ಉಗ್ರ ತಿರಸ್ಕಾರವಿತ್ತು.  ಹೊಸಮನೆ ಮಂಜಪ್ಪಗೌಡರು ಮಾನಪ್ಪ ಮೊದಲಾದ ಮಿತ್ರರು ‘ಏನೊ ಅವರ ನಂಬಿಕೆಯಾಗಿ ಮಾಡಿಕೊಳ್ಳುತ್ತಿದ್ದಾರೆ. ನಾವು ಏಕೆ ಬೇಡ ಎನ್ನಬೇಕು. ನೀನೇನು ಭಟ್ಟರ ಪೂಜೆಯಲ್ಲಿ ಭಾಗಿಯಾಗಿರುವುದು ಬೇಡ;  ದೂರ ಸುಮ್ಮನೆ ಕೂತಿರು’ ಎಂದೆಲ್ಲ ಪುಸಲಾಯಿಸಿ ನನ್ನನ್ನು ಒಪ್ಪಿಸಿದರು. ಸ್ನಾನ ಮಾಡಿಸಿ ಬಟ್ಟೆ ಹೊದಿಸಿ ಪಂಚೆ ಉಡಿಸಿ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಅಲ್ಲಿ ತುಂಬ ಜನರು ನೆರೆದು ತುಂಬಿ ಕುಳಿತಿದ್ದರು. ಬಹುಶಃ ಪೂಜೆಯ ಅನಂತರ ಊಟವಿದ್ದುದರಿಂದ ಭೂಸುರವರ್ಗದವರೇ ಅಲ್ಲಿ ಹೆಚ್ಚಾಗಿದ್ದಿರಬೇಕು. ನನ್ನನ್ನು ಒಂದು ಮೂಲೆಯಲ್ಲಿ ಕೂರಿಸಿ ಸುತ್ತಲೂ ನಮ್ಮವರು ಕೂತರು. ನನ್ನ ಮನಸ್ಸು ಒಂದು ಉಚ್ಚಭೂಮಿಕೆಯಲ್ಲಿದ್ದು ನನ್ನ ನಡೆ ತುಸು ಕುಡಿದವನಂತೆ ತತ್ತರಿಸುತ್ತ ಇದ್ದುದರಿಂದ ನನ್ನನ್ನು ರಟ್ಟೆಹಿಡಿದು ನಡೆಸಿಕೊಂಡು ಹೋಗಿ ಕುಳ್ಳಿರಿಸಿದರು. ನಾನು ಆ ಜನಸಂದಣಿಯನ್ನಾಗಲಿ ಪೂಜೆಯನ್ನಾಗಲಿ ಒಂದಿನಿತೂ ಲೆಕ್ಕಿಸದೆ ‘ಜಯ್ ಗುರುಮಹಾರಾಜ್ ಕೀ ಜಯ್ ಎಂದು ಗಟ್ಟಿಯಾಗಿ ಜಯಧ್ವನಿಮಾಡಿ, ಕಂಕುಳಲ್ಲಿದ್ದ ಸ್ವಾಮಿಜಿ, ಗುರುಮಹಾರಾಜ್ ಮತ್ತು ಮಹಾಮಾತೆಯರಿದ್ದ ‘ಚಿತ್ರಕೋಶ’ವನ್ನು ಹೊರತೆಗೆದು ಬಿಚ್ಚಿ ನನ್ನೆದುರು ಕಲ್ಲುನೆಲದ ಮೇಲೆ ಸ್ಥಾಪಿಸಿ ನನ್ನದೇ ಆದ ರೀತಿಯಲ್ಲಿ ಸ್ತೋತ್ರ ಪಠನ ಮಾಡುತ್ತಾ ಧ್ಯಾನ ಪೂಜೆಗಳಲ್ಲಿ ತೊಡಗಿದೆ. ನನ್ನ ವರ್ತನೆ ನೆರೆದವರಿಗೆಲ್ಲ, ಅದರಲ್ಲಿಯೂ ಹಾರುವರಿಗೆ, ವಿಚಿತ್ರವಾಗಿ ಹಾಸ್ಯಾಸ್ಪದವಾಗಿ ಕಂಡಿರಬೇಕು: ಶೂದ್ರ ಮುಂಡೇದು ಸಂಸ್ಕೃತ ಸ್ತೋತ್ರ ಹೇಳುತ್ತಾ ಅವರ ದೇವರ ಪೂಜೆಯನ್ನು ತಿರಸ್ಕರಿಸಿದ ಅವರ ದೇವಸ್ಥಾನದಲ್ಲಿಯೆ ಅವರಿಗೆ ಅವಮಾನ ಮಾಡುತ್ತಿದ್ದಾನಲ್ಲಾ ಎಂದು! ಪೂಜಾರಿ ಮಂಗಳಾರುತಿ ಎತ್ತಿದ್ದೂ ಗಂಟೆ ಬಾರಿಸಿದ್ದೂ ಮುಗಿದು, ತಟ್ಟೆಯಲ್ಲಿ ಉರಿಯುವ ಕರ್ಪೂರವನ್ನಿಟ್ಟುಕೊಂಡು ನೆರೆದವರೆಲ್ಲರಿಗೂ ತೋರುತ್ತಾ ಬಂದ. ನನ್ನ ಮುಂದೆ ಬರುತ್ತಿದ್ದಾಗ ನಾನು ಪೂಜಿಸುತ್ತಿದ್ದ ಚಿತ್ರಕೋಶವನ್ನು ಕಾಲಿಂದೆಡವಿ ಬೀಳಿಸಿದ. ಅವನು ಬೇಕೆಂದೇ ಹಾಗೆ ಮಾಡಿದನೋ ಅಥವಾ ಗಮನಿಸದೆ ಎಡಬಿಟ್ಟನೋ ನಾನರಿಯೆ. ಆದರೆ ಆಗ ನನಗೆ ಅವನು ನಾನು ಆರಾಧಿಸುತ್ತಿದ್ದ ಆ ಮಹಾಮಹಿಮರನ್ನು ಬೇಕೆಂತಲೆ ಒದ್ದು ಅವಮಾನಗೊಳಿಸಿದನೆಂದು ತೋರಿ ಮಹಾಕೋಪ ಭುಗಿಲ್ಲೆಂದಿತು! ಚಂಗನೆ ನೆಗೆದೆದ್ದು ಪೂಜಾರಿ ತತ್ತರಿಸುವಂತೆ ತಳ್ಳಿ “ಜಯ್ ಗುರುಮಹಾರಾಜ್! ಜಯ್ ಮಹಾಕಾಳಿ! ಜಯ್ ಸ್ವಾಮಿಜಿ!” ಎಂದು ಗುಡಿಯೆಲ್ಲ ಪ್ರತಿಧ್ವನಿಗೈದು ನಡುಗುವಂತೆ ಆರ್ಭಟಿಸಿದೆ. ಉಡಿಸಿದ್ದ ಪಂಚೆ ಸಡಿಲಗೊಂಡು ಜಾರಿ ಕೆಳಗೆ ಬಿತ್ತು. ನಾನು ನಗ್ನನಾದೆ. ಆದರೆ ಮಾನಾವಮಾನದ  ಪರಿವೆಯೆ ಇರಲಿಲ್ಲ. ನೆರೆದವರೆಲ್ಲ ಬರೆಗು ಬಡಿದಂತೆ ನನ್ನತ್ತ ನೋಡಿದರು. ನನ್ನ ಬಳಿ ಕೂತಿದ್ದ ಮಿತ್ರರು ಬೇಗಬೇಗನೆ ಎದ್ದು, ಪಂಚೆ ಸರಿಪಡಿಸಿ, ಪೂಜಾರಿ ಕಾಣದೆ ಎಡವಿಬಿಟ್ಟನೆಂದೂ ತಪ್ಪಾಯಿತೆಂದೂ ಹೇಳಿ ನನ್ನನ್ನು ಸಂತೈಸಿ ಕೂರಿಸಿದರು. ನಾನು ‘ಆಲ್ಬಂ’ ಅನ್ನು ಎತ್ತಿಕೊಂಡು ಹಣೆಗೂ ಎದೆಗೂ ಮತ್ತೆಮತ್ತೆ ಮುಟ್ಟಿಸಿಕೊಂಡು ಜಯಕಾರ ಮಾಡಿ, ಮತ್ತೆ ಕಂಕುಳಿಗೆ ಸೇರಿಸಿದೆ.

ನನ್ನ ಮಾನಸಿಕ ಅವಸ್ಥೆ, ಮಿತ್ರರು ಊಹಿಸಿದಂತೆ, ಸ್ವಲ್ಪ ಸಾಮಾನ್ಯಸ್ಥಿತಿಗೆ ಬಂದಾಗ ಒಂದು ದಿನ ನನ್ನನ್ನು ಪಕ್ಕದ ಜೋಪಡಿಗೆ ಕರೆದುಕೊಂಡು ಹೋದರು. ಬಹುಶಃ ದೊಡ್ಡಚಿಕ್ಕಪ್ಪಯ್ಯನವರೇ ನನ್ನನ್ನು ನೋಡಬಯಸಿದರೋ ಏನೋ ತಿಳಿಯದು. ನಾನು ಪ್ರವೇಶಿಸಿ ಅವರ ಹಾಸಗೆಯ ಬಳಿಗೆ ಹೋಗಿ ಕುಳಿತೆ. ಅವರು ಮಲಗಿದ್ದವರು ಎದ್ದು ಕುಳಿತರು. ಆಗ ಕಂಡ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಆಗ ನನಗೆ ಅದರ ಭಯಂಕರತೆ ಮತ್ತು ಭೀಬತ್ಸತೆ ಅಷ್ಟಾಗಿ  ತಗುಲಿಲ್ಲವೆಂದು ಭಾವಿಸುತ್ತೇನೆ, ಆಗಿದ್ದ ನನ್ನ ಮನಸ್ಸಿನ ವಿಶೇಷ ಪರಿಸ್ಥಿತಿಯಿಂದಲಿರಬಹುದು. ಸೂಜಿಮೊನೆ ಕೊಳ್ಳದಂತೆ ಅವರ ಮುಖದ ತುಂಬ ಮೈಲಿ ಎದ್ದಿತ್ತು. ಊದಿಕೊಂಡು ಭಯಾನಕವಾಗಿತ್ತು, ಗುರುತೇ ಸಿಗದಷ್ಟು ಮಟ್ಟಿಗೆ. ನಾನು ಅಥವಾ ನನ್ನ ಮೇಲೆ ಬಂದಿದ್ದ ಭೂತ ಅಥವಾ ಮಾರಿ ಅವರ ಕಪಾಳಕ್ಕೆ ಹೊಡೆದದ್ದರಿಂದಲೇ ಅವರಿಗೂ ‘ಅಮ್ಮ’ ಎದ್ದಿತೆಂದು ಅವರ ನಂಬುಗೆಯಾಗಿತ್ತೊ ಏನೊ? “ನನಗೆ ಹೊಡೆದುಬಿಟ್ಟೆಯಲ್ಲೋ ನಾನೂ ನಿನಗೆ ಹೊಡೆದರೆ?” ಎಂದು ಕೈಎತ್ತಲು ಪ್ರಯತ್ನಿಸಿದಂತೆ ನನಗೆ ಭಾವನೆ. ಆದರೆ ನಾನು ಏನೂ ಮಾತಾಡದೆ, ಅವರು ಏನನ್ನು ಅಥವಾ ಯಾವುದನ್ನು ನಿರ್ದೇಶಿಸಿ ಹೇಳುತ್ತಿದ್ದಾರೆ ಎಂಬುದನ್ನೂ ಅರಿಯದೆ ಮುಗ್ಧವಾಗಿ ಅವರ ಭಯಂಕರ ಮುಖದ ವಿಕಾರವನ್ನೆ ನೋಡುತ್ತ ಕುಳಿತಿದ್ದೆ. ಅವರು ಮತ್ತೆ ನನ್ನನ್ನೆ ನೋಡುತ್ತಾ ಏನನ್ನೊ ಕಂಡವರಂತೆ ಗಟ್ಟಿಯಾಗಿ “ಅಯ್ಯೋ, ಪುಟ್ಟೂ! ನೀನು ಎಲ್ಲೆಲ್ಲಿಯೂ ಇದ್ದೀಯಲ್ಲೋ!” ಎಂದು ಕೂಗಿದರು. ಅದೂ ನನಗೆ ಏನೂ ಅರ್ಥವಾಗಲಿಲ್ಲ. ಈಗ ಆಲೋಚಿಸಿದರೆ ಅವರ ಆ ಘೋಷ ನನ್ನ ಸರ್ವಜ್ಞತ್ವ ಮತ್ತು ಸರ್ವಶಕ್ತಿತ್ವಗಳ ಭಾವನೆಯ ಆಯಾಮಕ್ಕೆ ಸರ್ವವ್ಯಾಪಿತ್ವವನ್ನೂ ಸೇರಿಸಿತೆಂಬಂತೆ ಭಾಸವಾಗುತ್ತದೆ! ಹಿಂದೆ ನನ್ನ ತಂದೆ ತಮ್ಮ ಕೊನೆಗಾಲದಲ್ಲಿ ಮರಣಶಯ್ಯೆಯ ಮೇಲೆ ನಾಲಗೆ ಬಿದ್ದುಹೋಗಿ ಮಾತನಾಡಲಾರದಿದ್ದಾಗ ನನ್ನನ್ನು ನೋಡುತ್ತಾ ಆನಂದದಿಂದಲೆಂಬಂತೆ ನಕ್ಕಿದ್ದು ಎಷ್ಟು ರಹಸ್ಯಮಯವಾಗಿದೆಯೊ ಅಷ್ಟೆ ರಹಸ್ಯ ಪೂರ್ಣವಾಗಿದೆ ಮರಣೋನ್ಮುಖರಾಗಿದ್ದ ದೊಡ್ಡಚಿಕ್ಕಪ್ಪಯ್ಯನವರ “ಅಯ್ಯೊ, ಪುಟ್ಟೂ, ನೀನು ಎಲ್ಲೆಲ್ಲಿಯೂ ಇದ್ದೀಯಲ್ಲೋ!” ಎಂಬ ಉಕ್ತಿ! ಬಹುಶಃ ಮುಂದೆ ನನಗೊದಗಲಿರುವ ಕೀರ್ತಿಯ ವ್ಯಾಪ್ತಿ ಅವರಿಗೆ ನಾನು ಎಲ್ಲೆಲ್ಲಿಯೂ ಇರುವಂತೆ ತೋರಿರಬಹುದೆ, ಪ್ರತಿಮಾ ವಿಧಾನದಿಂದ ರೂಪವೆತ್ತು? ಅವರನ್ನು ನಾನು ನೋಡಿದ್ದು ಅದೇ ಕಡೆಯಾಯ್ತು!