ರೋಗ ದೃಷ್ಟಿಯಿಂದ ನಾನು ಸಂಪೂರ್ಣವಾಗಿ ನಿರಪಾಯಸ್ಥಿತಿಗೆ ಬಂದಿದ್ದೆನಾದರೂ ಮಾನಸಿಕವಾಗಿ ನನ್ನ ‘ಹುಚ್ಚು’ ಪೂರ್ತಿ ಇಳಿದು ಹಿಂದಿನ ಸಾಮಾನ್ಯಸ್ಥಿತಿಗೆ, ನನ್ನ ಮಿತ್ರರು ಊಹಿಸಿದಂತೆ, ಬಂದಿರಲಿಲ್ಲವಾದ್ದರಿಂದ ನನ್ನನ್ನು ಜೋಪಡಿಯಿಂದ ಎಲ್ಲಿಗೆ ಸಾಗಿಸಬೇಕು ಎಂಬ ವಿಚಾರವಾಗಿ ತುಂಬ ಜಿಜ್ಞಾಸೆ ನಡೆದಿದ್ದಿರಬೇಕು ಎಂದು ಊಹಿಸುತ್ತೇನೆ. ಏಕೆಂದರೆ, ಸಾಂಕ್ರಾಮಿಕವಲ್ಲದ ರೋಗ ತಗುಲಿದ್ದು ನನ್ನನ್ನು ಆಸ್ಪತ್ರೆಯ ವಾರ್ಡಿಗೆ ಸೇರಿಸಿದ್ದರೆ, ರೋಗ ಗುಣವಾದೊಡೆ ಮನೆಗೆ ಕರೆದೊಯ್ಯುತ್ತಿದ್ದರು. ಆಪ್ತ ಮಿತ್ರರೂ ನಿಕಟ ಬಂಧುಗಳೂ ಆಗಿದ್ದ ದೇವಂಗಿ ಮಾನಪ್ಪ ಮತ್ತು ಹೊಸಮನೆ ಮಂಜಪ್ಪಗೌಡರ ಮಂಡಿ ಮತ್ತು ಮನೆಗಳು ಶಿವಮೊಗ್ಗದಲ್ಲಿ ಅಲ್ಲಿಯೆ ಸಮಿಪದಲ್ಲಿ ಇದ್ದುವು. ಆದರೆ ಹಾಗೆ ಮಾಡಲು ಹಿಂಜರಿದರೆಂದು ತೋರುತ್ತದೆ.

ಕುಪ್ಪಳಿ ಐಯಪ್ಪಗೌಡರು (ಆಗ ಮನೆ ಪಾಲಾಗಿದ್ದು ಅವರು ಅದೇ ಮನೆಯ ಒಂದು ಭಾಗದಲ್ಲಿ ಬೇರೆಯೆ ಇದ್ದರು.) ಒಂದು ದಿನ ನನ್ನನ್ನು ನೋಡಲು ಬಂದವರು ಮನೆಗೆ ಬರುತ್ತೀಯಾ ನನ್ನ ಜೊತೆಯಲ್ಲಿ? ಎಂದು ಕೇಳಿದರು. ನಾನು ಸಂತೋಷದಿಂದಲೆ ಒಪ್ಪಿದೆ. (ನನ್ನ ಹುಚ್ಚು ಬಿಡಲು ಲೇಬಲ್ ಹರಿದ ಶೀಷೆಯ ಮಾತ್ರೆಗಳನ್ನು ಕೊಡುತ್ತಿದ್ದರೂ ಮುಂಜಾಗ್ರತೆಯ ಕ್ರಮವಾಗಿ ನನ್ನನ್ನು ಬೆಂಗಳೂರಿನ ಹುಚ್ಚಾಸ್ಪತ್ರೆಗೆ (ಮೆಂಟಲ್ ಹಾಸ್ಪಿಟಲ್) ಸೇರಿಸುವ ಸಲಹೆಯೂ ಬಂದಿತ್ತಂತೆ! ಹಾಗೇನಾದರೂ ಮಾಡಿದ್ದರೆ ನನ್ನ ಗತಿ ಮುಗಿಯುತ್ತಿತ್ತು! ಅಂತೂ ಐಯ್ಯಪ್ಪ ಚಿಕ್ಕಪ್ಪಯ್ಯರ ವಿವೇಕ ರೂಪದಲ್ಲಿ ಶ್ರೀಗುರು ರಕ್ಷಿಸಿದರೆಂದು ಭಾವಿಸುತ್ತೇನೆ!) ಸಾಮಾನ್ಯವಾಗಿ ಶಿವಮೊಗ್ಗದಿಂದ ಕುಪ್ಪಳಿಗೆ ಹೋಗಬೇಕಾದರೆ ಬಸ್ಸು ಹತ್ತಿ ತೀರ್ಥಹಳ್ಳಿಗೆ ಹೋಗಿ ಅಲ್ಲಿಂದ ಕೊಪ್ಪದ ರಸ್ತೆಯಲ್ಲಿ ಗಾಡಿಯ ಮೇಲೆಯೋ ನಡೆದೋ ಹೋಗುತ್ತಿದ್ದುದು ರೂಢಿ. ಆದರೆ ಐಯ್ಯಪ್ಪಗೌಡರು ನನ್ನನ್ನು ಬಸ್ಸಿನಲ್ಲಿ ನರಸಿಂಹರಾಜಪುರ-ಕೊಪ್ಪದ ಮಾರ್ಗವಾಗಿ ಮಾದಲಿಗೆ ಕರೆದುಕೊಂಡು ಹೋದರು. ಕೊಪ್ಪದಿಂದ ಮಾದಲಿಗೆ ಕಾಡಿನಮರ ಕಿಕ್ಕಿರಿದ ದಟ್ಟ ಮಲೆನಾಡಿನ ಕಾಡಿನ-ನಡುವೆ ಕಾಲುದಾರಿಯಲ್ಲಿ ನಡೆದೆಹೋದೆವು. ನನಗಂತೂ ಆ ನಿಬಿಡ ನೀರವ ಕಾನನದ ಮಧ್ಯೆ ನಡುಹಗಲಲ್ಲಿಯೂ ಮರದಳಿರು ಕೊಡೆ ಹಿಡಿದ ತಂಪಿನಲ್ಲಿ ನಡೆಯುತ್ತಿದ್ದಂತೆ ಮತ್ತೆ ಹೆತ್ತ ತಾಯಿಯ ಮಡಿಲನ್ನು ಹೊಕ್ಕಂತೆ ಗೆಲುವಾಯ್ತು. ಐಯ್ಯಪ್ಪಗೌಡರೊಡನೆ ಸಾಹಿತ್ಯ ತತ್ತ್ವ ಆಧ್ಯಾತ್ಮ ಏನೇನನ್ನೊ ಗಳಪುತ್ತಾ ನಡೆದೆ, ಅವರಿಗೆ ಅದು ಗ್ರಾಹ್ಯವಾಗುತ್ತದೆಯೊ ಇಲ್ಲವೊ ಒಂದನ್ನೂ ಲೆಕ್ಕಿಸದೆ. ಪಂಜರದಿಂದ ಹೊರಬಿದ್ದ ಹಕ್ಕಿಯಂತಾಗಿತ್ತು ನನ್ನ ಜೀವ.

‘ಮಾದಲು’ ಕೊಪ್ಪದಿಂದ ಮೂರುನಾಲ್ಕು ಮೈಲಿ ದೂರವಿರುವ ಮಲೆನಾಡಿನ ಒಂದೆಮನೆಯ ಹಳ್ಳಿ. ನಮ್ಮ ತಂದೆಯ ತಂಗಿಯನ್ನು ಅಲ್ಲಿಗೆ ಕೊಟ್ಟಿದ್ದು, ಅವರ ಮಗನಿಗೆ ನನ್ನ ಕಿರಿಯ ತಂಗಿ ಪುಟ್ಟಮ್ಮನನ್ನು ಅಲ್ಲಿಗೆ ಕೊಟ್ಟಿತ್ತು. ನಾನು ಅಲ್ಲಿಗೆ ಹೋದಾಗ ಅವಳಿಗೆ ತುಂಬ ಕಾಯಿಲೆಯಾಗಿ ಹಾಸಗೆ ಹಿಡಿದಿದ್ದಳು. ನನಗೆ ಅದು ತಿಳಿದಿರಲಿಲ್ಲ.

ನಾನು ಅಲ್ಲಿಗೆ ಬಂದುದನ್ನು ಕೇಳಿ ಅಲ್ಲಿಗೆ ಪುಟ್ಟಯ್ಯನಾಯಕರೂ ಬಂದಿದ್ದರು. ಮಲೆನಾಡಿನ ಅತ್ತಕಡೆಯಲ್ಲಿ ಅವರು ಬುದ್ಧಿ ಮತ್ತು ಸಂಸ್ಕೃತಿಯಲ್ಲಿ ಉಳಿದವರಿಗಿಂತ ಮೇಲುಮಟ್ಟದವರಾಗಿ ನನ್ನ ಮನಃಸ್ಥಿತಿಯನ್ನು ತುಸುಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲವರಾಗಿದ್ದರು. ಮಾದಲಿನಲ್ಲಿ ನಾನಿದ್ದ ಮೂರ್ನಾಲ್ಕು ದಿವಸವೂ ಅವರು ಜೊತೆಯಿದ್ದು ನನ್ನ ಸ್ಥಿತಿಯ ‘ಅಸಾಮಾನ್ಯತೆ’ಯನ್ನು ಸಾಮಾನ್ಯತೆಗೊಳಿಸಿದ್ದರು. ನನ್ನ ಸಾಹಿತ್ಯಕ ಮತ್ತು ಆಧ್ಯಾತ್ಮಿಕ ವ್ಯಕ್ತಿತ್ವದ ಪರಿಚಯವಾಗಿ ಅವರಿಗೆ ಮೊದಲೇ ಇದ್ದುದರಿಂದ ಅವರಿಗೆ ನಾನು ಅಷ್ಟೇನೂ, ಅವರಿಗೆ ಹಿಂದೆ ಪರಿಚಯವಾಗಿ ಇದ್ದುದಕ್ಕಿಂತ ಹೆಚ್ಚಾಗಿ, ಅಸಾಮಾನ್ಯವಾಗಿ ತೋರಲಿಲ್ಲ. ಸ್ವಲ್ಪ ಅತಿಶಯವಾಗಿ ತೋರುತ್ತಿದ್ದುದೆಂದರೆ, ಹಿಂದೆ ಯಾವ ಭಾವಾನುಭವಗಳನ್ನು ಕಂಡಕಂಡವರ ಮುಂದೆ ಹೇಳಿಕೊಳ್ಳದೆ ಪ್ರದರ್ಶಿಸದೆ ಸಂಯಮನ ಮಾಡಿ ಗೋಪ್ಯವಾಗಿಟ್ಟುಕೊಳ್ಳಲು ಸಮರ್ಥನಾಗಿದ್ದೆನೋ ಆ ಸಾಮರ್ಥ್ಯ ಕಾಯಿಲೆ ಬಿದ್ದು ಉಂಟಾದ ದೇಹದ ನರದೌರ್ಬಲ್ಯದ  ದೆಸೆಯಿಂದ ಶಿಥಿಲವಾಗಿ, ಭಾವಗಳು ವಿಸೃಂಖಲವಾಗಿ ಅಭಿವ್ಯಕ್ತಗೊಂಡು ಘೋಷಿತವಾಗುತ್ತಿದ್ದುದು! ಈಗಲೂ ಕೂಡ (೧೯೭೩) ನನ್ನ ಕವಿಚೇತನದ ಭಾವಾನುಭವಗಳನ್ನೂ ಚಿಂತನಗಳನ್ನೂ ಮುಚ್ಚುಮರೆಯಿಲ್ಲದೆ ಲೋಕರಂಗದಲ್ಲಿ ಬಿಚ್ಚಿದೆನಾದರೆ ನಾನು ಅಂದಿಗಿಂತಲೂ ಹೆಚ್ಚಾಗಿ ಹುಚ್ಚನಾಗಿ ಕಾಣುವುದರಲ್ಲಿ ಸಂಶಯವಿಲ್ಲ! ಅದನ್ನೆ ಕಲೆಯ ಮತ್ತು ಕಾವ್ಯದ ರಂಗದಲ್ಲಿ ಬಿಚ್ಚಿ ಬರೆದು ನಾನು ಮಹಾಕವಿಯೆಂದೂ ರಸಋಷಿಯೆಂದೂ ಏನೇನೋ ವಿಶೇಷಣಗಳಿಂದ ಸುಪ್ರಸಿದ್ಧನೂ ಕೆಲವರಿಗೆ ಪೂಜ್ಯನೂ ಆಗಿಬಿಟ್ಟಿದ್ದೇನೆ. ಆದರೆ ಅದನ್ನೇನಾದರೂ ಲೋಕರಂಗಕ್ಕೆ ತಂದೆನಾದರೆ ಎಲ್ಲರಿಂದಲೂ ದೂರವಾಗಬೇಕಾಗುತ್ತದೆ! ಲೋಕರಂಗದ ಹುಚ್ಚನ್ನು ಕಲಾರಂಗಕ್ಕೆ ವರ್ಗಾಯಿಸುವುದೆ ಕಾವ್ಯರಂಗದ ಯಶಸ್ಸಿದ್ಧಿ!?

ನಿದರ್ಶನಕ್ಕಾಗಿ, ೧೯೨೫ ನೆಯ ಮಾರ್ಚ ೧೮ ರಂದು ನಾನು ರಚಿಸಿದ್ದು, ೧೯೭೩ ರಲ್ಲಿ ೪೮ ವರ್ಷಗಳ ಮೇಲೆ ಪ್ರಕಟನಗೊಂಡ ಇಂಗ್ಲಿಷ್ ಕವನಗಳ ಸಂಗ್ರಹ Alien Harp ನಲ್ಲಿ ಅಚ್ಚಾಗಿರುವ The Lunatic Ode ಅನ್ನು ನೋಡಬಹುದು. ನನಗೆ ‘ಮೈಲಿ’ಯಾದ  ೧೯೨೮ನೆಯ ಇಸವಿಗಿಂತಲೂ ಮೂರು ವರ್ಷಗಳ ಹಿಂದೆ ಬರೆದದ್ದು ಆ ಕವಿತೆ. ಆ ಕವಿತೆಯಲ್ಲಿ ಅಭಿವ್ಯಕ್ತಗೊಂಡಿರುವ ಭಾವಗಳಲ್ಲಿ ಕಾಲುಪಾಲು ದೂರವನ್ನು ಸಂಕ್ರಮಿಸಿರಲಿಲ್ಲ ನನ್ನ ‘ಹುಚ್ಚು’! ಸುತ್ತಮುತ್ತಣ ಜನರ ಮನದ ಮಟ್ಟಕ್ಕೆ ಮೀರಿ ಆಲೋಚಿಸಿದರೆ ಅವರ ಗುಮಾನಿಗೆ ಒಳಗಾಗುತ್ತೇವೆ. ಅಲೋಚಿಸಿದ್ದನ್ನೂ ಕಾರ್ಯಗತ ಮಾಡುವುದಕ್ಕಾಗಲಿ ಅನುಷ್ಠಾನಕ್ಕೆ ತರುವುದಕ್ಕಾಗಲಿ ಹೋದರೆ ಅವರನ್ನು ಇದಿರುಹಾಕಿಕೊಳ್ಳಬೇಕಾಗುತ್ತದೆ. ಅದನ್ನೂ ಲೆಕ್ಕಿಸದೆ ಮುಂದೆ ಹೋದರೆ ಕಾನೂನಿಗೆ ಒಳಪಡಿಸಿ ಶಿಕ್ಷೆ ವಿಧಿಸುತ್ತಾರೆ; ಇಲ್ಲವೆ, ಇವನಿಗೆ ತಲೆಕೆಟ್ಟಿದೆ ಎಂದು ಉಪಾಯವಾಗಿ ಹುಚ್ಚಾಸ್ಪತ್ರೆಗೆ ದಾಖಲಿಸುತ್ತಾರೆ; ಇಲ್ಲವೆ, ಮರಣ ದಂಡನೆ ವಿಧಿಸಿ ಗಲ್ಲಿಗೇರಿಸುತ್ತಾರೆ; ಇಲ್ಲವೆ, ಪತ್ತೆಯಿಲ್ಲದಂತೆ ಪೂರೈಸಿಬಿಡುತ್ತಾರೆ!

ಮಾದಲಿನಲ್ಲಿ ಇದ್ದಾಗ ನನ್ನ ಭಾವೋನ್ಮಾದವನ್ನು ತಕ್ಕಮಟ್ಟಿಗೆ ಸ್ವಾಧೀನದಲ್ಲಿಟ್ಟುಕೊಳ್ಳಲು ಸಮರ್ಥನಾಗಿದ್ದೆ. ನನಗಿದ್ದ ಹಸಿವೆಯ ಅತಿರೇಕವನ್ನು ಕುರಿತು ಐಯ್ಯಪ್ಪ ಚಿಕ್ಕಪ್ಪಯ್ಯ, ಒಳಗೆ, ಅಂದರೆ ಮಹಿಳಾಲೋಕಕ್ಕೆ, ತಿಳಿಸಿದ್ದರಾದ್ದರಿಂದ ಆ ವಿಚಾರದಲ್ಲಿ ದಾಕ್ಷಿಣ್ಯ ಮರ್ಯಾದೆಗಳೊಂದನ್ನೂ ಲೆಕ್ಕಿಸದೆ ನನಗೆ ಹೊಟ್ಟೆಗೆ ಒದಗುತ್ತಿತ್ತು, ಹೊತ್ತು ಗೊತ್ತು ಇಲ್ಲದೆ, ಮಧ್ಯರಾತ್ರಿಯಾದರೆ ಮಧ್ಯರಾತ್ರಿ, ಬೆಳಗಿನ ಜಾವವಾದರೆ ಬೆಳಗಿನ ಜಾವ! ಮಾತಿನ ಅತಿರೇಕವನ್ನು ಪುಟ್ಟಯ್ಯನಾಯಕರ ಮುಖಾಂತರ ಗಂಡಸರು ಅರ್ಥಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಭಾವಾತಿರೇಕವಾದಾಗ ‘ಜಯ್ ಗುರುದೇವ್’ ‘ಜಯ್ ಮಹಾಕಾಲಿ!’ ‘ಜಯ್ ಸ್ವಾಮಿಜಿ ಮಹಾರಾಜ್!’ ಇತ್ಯಾದಿ ಘೋಷಣೆಗಳು ನನ್ನ ವಿಚಾರದಲ್ಲಿ ಆಗಲೆ ಸ್ವಾಭಾವಿಕವಾಗಿ ಬಿಟ್ಟಿದ್ದು ಯಾರೂ ಗಾಬರಿಗೊಳ್ಳುತ್ತಿರಲಿಲ್ಲ.

ಇಷ್ಟೆಲ್ಲ ಆದರೂ ಒಂದು ಮಾತ್ರ ‘ಅನುಚಿತ’ ಘಟನೆ ನಡೆದುಹೋಯಿತು. ನನ್ನ ತಂಗಿ ಪುಟ್ಟಮ್ಮಗೆ ವಿಷಮಶೀತ ಜ್ವರವೋ ಶ್ಲೇಷವೋ ಜ್ವರವೊ ಆಗಿ ತುಂಬ ವಿಷಮಸ್ಥಿತಿಗೆ ಬಂದದ್ದು ತಿಳಿದಾಗ ನನ್ನ ಭಾವಸ್ಥಿತಿ ಉದ್ರೇಕಗೊಂಡು ನಾನು ಅವಳನ್ನು ನೋಡಬಯಸಿದೆ. ಅಷ್ಟು ಹೊತ್ತಿಗಾಗಲೆ ನನ್ನ ಹಿರಿಯ ತಂಗಿ ದಾನಮ್ಮ ತನ್ನ ಗಂಡನ ಮನೆ ಅಲೆಮನೆಯಿಂದ ತನ್ನ ಅಣ್ಣತಂಗಿಯರಿಬ್ಬರನ್ನೂ ನೋಡಲು ಮಾದಲಿಗೆ ಬಂದಿದ್ದಳು. ಪಾಪ! ಅವಳ ಮನಸ್ಸಿನ ಯಾತನೆ, ಜೀವದ  ಮೂಖಸಂಕಟ ಆ ಪರಮಾತ್ಮನಿಗೇ ಗೊತ್ತು. ತಂದೆ ತಾಯಿಯರನ್ನು ಎಂದೋ ಕಳೆದುಕೊಂಡು, ಇದ್ದ ಒಬ್ಬ ಅಣ್ಣನಿಗೂ ಮೈಲಿಯಾಗಿ ತಲೆಕೆಟ್ಟುಹೋಗಿದೆ ಎಂಬ ವದಂತಿಗೆ ತತ್ತರಿಸಿ, ತಂಗಿಗೂ ಕಾಯಿಲೆ ವಿಷಮಗೊಂಡು ಬದುಕುವ ಸ್ಥಿತಿಯಲ್ಲಿ ಇಲ್ಲ ಎಂಬುದನ್ನು ಕೇಳಿ ಧಾವಿಸಿ ಬಂದಿದ್ದಳು. ಅವಳೂ ಚೊಚ್ಚಲು ಗರ್ಭಿಣಿ! (ಒಂದು ವಾರದಲ್ಲಿಯೇ ತೀರಿಕೊಳ್ಳಲಿರುವ ತನ್ನ ತಂಗಿಯನ್ನು ತಾನೂ, ತಾನು ಹೆರಲಿರುವ ಶಿಶುವಿನೊಡನೆ, ಇನ್ನೊಂದು ವರ್ಷದೊಳಗೇ ಕೂಡಿಕೊಳ್ಳುವ ಕಠೋರ ಲಲಾಟಲಿಖಿತವಿರುವುದು ಅವಳಿಗಾಗಲಿ ನನಗಾಗಲಿ ಹೇಗೆ ಗೊತ್ತಾಗುತ್ತದೆ?)

ಪುಟ್ಟಮ್ಮನನ್ನು ತುಸು ಕತ್ತಲೆ ತುಂಬಿದ್ದ ಮಾಣಿಗೆಯಲ್ಲಿ ಮಲಗಿಸಿದ್ದರು. ಅವಳಿಗೆ ಪ್ರಜ್ಞೆ ಇತ್ತೋ ಇರಲಿಲ್ಲವೋ ನಾನರಿಯೆ. ಪುಟ್ಟಯ್ಯನಾಯಕರು ನನ್ನನ್ನು ಅಲ್ಲಿಗೆ ಕರೆದೊಯ್ದರು. ನಾನು ಹಾಸಗೆಯ ಪಕ್ಕದಲ್ಲಿ ಕುಳಿತೆ. ಅವಳ ಕಾಯಿಲೆಯನ್ನೆಲ್ಲ ಗುಣಪಡಿಸುತ್ತೇನೆ ಎಂಬ ದೃಢಬುದ್ಧಿಯಿಂದ ನನ್ನ ಕೈಯನ್ನು ಅವಳ ಹಣೆಯ ಮೇಲಿಟ್ಟು ವಿಶೇಷ ಭಾವೋದ್ರೇಕದಿಂದ “ಜಯ್ ಗುರುಮಹಾರಾಜ್! ಜಯ್ ಮಹಾಕಾಲಿ! ಜಯ್ ಗುರುದೇವ್!” ಎಂದೆಂದು ಮತ್ತೆಮತ್ತೆ ಭಯಂಕರವಾಗಿ ಆರ್ಭಟಿಸಿ ಜಯಕಾರ ಮಾಡಿದೆ. ಅಲ್ಲಿದ್ದವರಿಗೆಲ್ಲ ಕಂಗಾಲಾಯಿತು! ಭಾವದಲ್ಲಿದ್ದ ನನ್ನನ್ನು ಉಪಾಯದಿಂದ ಹೊರಗೆ ಕರೆತಂದರು. ಬಹುಶಃ ಅಂದೇ ಐಯಪ್ಪಗೌಡರೊಡನೆ ಮಾತಾಡಿ ನಿಶ್ಚಯಿಸಿದರೆಂದು ತೋರುತ್ತದೆ, ನನ್ನನ್ನು ಮರುದಿನವೆ ಕಾಡುದಾರಿಯ ಮುಖಾಂತರವಾಗಿ ಕುಪ್ಪಳಿಗೆ ಕರೆದೊಯ್ಯಲು.

ಮರುದಿನ ಬೆಳಿಗ್ಗೆ ಕಾಫಿ ತಿಂಡಿ ಪೂರೈಸಿ ಅಯ್ಯಪ್ಪಗೌಡರಿಗೆ ತಿಳಿದಿದ್ದ ಕಾಡಿನ ಒಳದಾರಿಯಲ್ಲಿ ಕುಪ್ಪಳಿಗೆ ಹೊರಟೆವು. ‘ಮಾದಲು’ ಇರುವುದೆ ದುರ್ಭೇದ್ಯವಾದ ಪರ್ವತಾರಣ್ಯದಲ್ಲಿ. ಅಲ್ಲಿಂದ ನಾಲ್ಕೈದು ಮೈಲಿ ಉದ್ದಕ್ಕೂ ಅತ್ಯಂತ ದಟ್ಟವಾದ ಗುಡ್ಡಗಾಡಿನಲ್ಲಿ ಉಬ್ಬು ತಗ್ಗು ಕೊರಕಲುಗಳ ಒಳದಾರಿಯಲ್ಲಿ ತುಂಬಿ ಉಕ್ಕುವ ಹರ್ಷದಿಂದ ನಡೆದುಹೋದೆ. ಚಳಿಗಾಲದ ಹವೆ ನಿರ್ಮಲ ಸುಖಶೀತವಾಗಿತ್ತು. ನನ್ನ ಕವಿಚೇತನಕ್ಕೆ ರಸಸ್ನಾನ ಒದಗಿತ್ತು. ಶಿವಮೊಗ್ಗದಲ್ಲಿ ಜರುಗಿದ್ದ ಕಷ್ಟಕ್ಲೇಷ ದುರಂತವಾಗಲಿ (ದೊಡ್ಡ ಚಿಕ್ಕಪ್ಪಯ್ಯ ತೀರಿಕೊಂಡಿದ್ದರು, ನನಗೆ ತಿಳಿದಿರಲಿಲ್ಲ.) ಮಾದಲಿನಲ್ಲಿ ಜರುಗುತ್ತಿದ್ದ ಮತ್ತು ಜರುಗಲಿದ್ದ ಸಾವು ನೋವಿನ ಚಿಂತೆಯಾಗಲಿ ನನ್ನ ಅಗಿನ ಅನಂದಮಯಪ್ರಜ್ಞೆಯ ರಸೋನ್ಮಾದವನ್ನು ಮುಟ್ಟಿರಲಿಲ್ಲ.

ಮನೆಯನ್ನೆಲ್ಲ ಮುಸುಗಿದ್ದ ದುಃಖಮಯ ದುರಂತದ ಛಾಯೆ ನನ್ನ ಸಂತೋಷಮಯ ಪ್ರಜ್ಞೆಗೆ ಗೋಚರಿಸಲೆ ಇಲ್ಲ. ದೊಡ್ಡಚಿಕ್ಕಪ್ಪಯ್ಯ ಶಿವಮೊಗ್ಗದಲ್ಲಿ ತೀರಿಕೊಂಡಿದ್ದರು. ಮೈಲಿಯಾಗಿ ಸತ್ತವರನ್ನು ಸುಡಬಾರದಂತೆ. ಆದ್ದರಿಂದ ಅವರನ್ನು ಹೂಳಿಯೆ ಮಣ್ಣು ಮಾಡಿದ್ದರು. ಮೈಲಿಯಾಗಿ ಮಡಿದವರಿಗೆ ಮರಣೋತ್ತರ ಸಂಪ್ರದಾಯದ ಸಂಸ್ಕಾರಗಳನ್ನೂ ಕ್ರಿಯಾದಿಗಳನ್ನೂ ಮಾಡುವುದಿಲ್ಲವಂತೆ. ಮನೆಯಿಂದ ತಿಮ್ಮಯ್ಯ (ಅವರ ಹಿರಿಯ ಮಗ)ನಾಗಲಿ ಗರ್ಭಿಣಿಯಾಗಿದ್ದ ಚಿಕ್ಕಮ್ಮನಾಗಲಿ ಯಾರೂ ಶಿವಮೊಗ್ಗಕ್ಕೆ ಹೋಗಬಾರದಾಗಿ ಹೋಗಲಿಲ್ಲ. ನಾನು ಕುಪ್ಪಳಿಗೆ ಬಂದ ಒಂದೆರಡು ದಿನಗಳಲ್ಲಿಯೆ ಮಾದಲಿನಲ್ಲಿ ಕಿರಿಯ ತಂಗಿ ಪುಟ್ಟಮ್ಮ ತೀರಿಕೊಂಡಿದ್ದಳು. ಅವಳ ಉತ್ತರಕ್ರಿಯಾ ಸಂಸ್ಕಾರ ಪೂರೈಸಿಕೊಂಡು ಹಿರಿಯ ತಂಗಿ ದಾನಮ್ಮ ಮತ್ತೆ ತನ್ನ ಅಣ್ಣಯ್ಯನನ್ನು ನೋಡಲೂ ನೋಡಿಕೊಳ್ಳಲೂ ಕುಪ್ಪಳಿಗೆ ಬಂದಲು. ಏನೊ ನೋಡಿದಳೊ ಏನು ನೋಡಿಕೊಂಡಳೊ ಏನು ಅನುಭವಿಸಿದಳೊ ಭಗವಂತನಿಗೇ ಗೊತ್ತು! ಅವಳ ಅಣ್ಣಯ್ಯ ಮಾತ್ರ ಆ ಅಕ್ಕರೆಗೆ ಆ ಕನಿಕರಕ್ಕೆ ಆ ತ್ಯಾಗಕ್ಕೆ ಲೌಕಿಕವ್ಯಾವಹಾರಿಕ ಬದುಕು ತೋರಿಸಬೇಕಾದ ಯಾವ ಪ್ರತಿಕ್ರಿಯೆಯನ್ನು ತೋರಿಸಲಾರದ ಅಲೌಕಿಕ ಆನಂದದ ಉನ್ಮಾದದಲ್ಲಿ ತೇಲುತ್ತಿದ್ದನು!

ನಾನು ಮಾಂಸಾಹಾರವನ್ನು ತ್ಯಜಿಸಿ ಅನೇಕ ವರ್ಷಗಳಾಗಿತ್ತು. ಆದರೆ ಮೈಲಿಯಾದ ತರುವಾಯದ ‘ಹುಚ್ಚಿ’ನಲ್ಲಿ, ಆ ಭಾವನೆಗಳೆಲ್ಲ ಕೊಚ್ಚಿಹೋದವು. ಅತೀಂದ್ರಿಯ ಪ್ರಮಾಣದ ಭಯಂಕರ ಹಸಿವೆಯಲ್ಲಿ ಏನು ತಿಂದರೂ ಸಾಲದಾಯಿತು; ಎಷ್ಟು ತಿಂದರೂ ಸಾಲದಾಯಿತು. ಆ ಮಾಂಸ ಈ ಮಾಂಸ ಎಂಬ ಭೇದವೂ ಅಳಿಯಿತು. ಸ್ವಲ್ಪವೂ ತಾರತಮ್ಯ ಮಾಡದೆ ಸರ್ವಭಕ್ಷಕತನಕ್ಕೆ ಇಳಿದುಬಿಟ್ಟಿದ್ದೆ. ನನಗೋಸ್ಕರ ಎಲ್ಲ ಪದಾರ್ಥಗಳನ್ನೂ ರಾಕ್ಷಸ ಪ್ರಮಾಣದಲ್ಲಿ ಅಟ್ಟು ಭೀಮಪ್ರಮಾಣದಲ್ಲಿ ಬಡಿಸುತ್ತಿದ್ದರು. ಮನೆಯಲ್ಲಿ ಮಾತ್ರವೆ ಅಲ್ಲ! ನಂಟರ ಮನೆಯಲ್ಲಿಯೂ ಆ ಹೊಟ್ಟೆಬಾಕತನ ಮಾನ ಮರ್ಯಾದೆ ದಾಕ್ಷಿಣ್ಯ ಒಂದನ್ನೂ ಲೆಕ್ಕಿಸುತ್ತಿರಲಿಲ್ಲ.

ಒಮ್ಮೆ ದೇವಂಗಿ ವೆಂಕಟಯ್ಯ, ಮಾನಪ್ಪ ಬಂದು ನನ್ನನ್ನು ಇಂಗ್ಲಾದಿಗೆ ಕರೆದುಕೊಂಡು ಹೋದರು. ಅಲ್ಲಿ ನಾನು ನಾಗರಿಕವಾಗಿ ಗೌರವಯುತವಾಗಿ ವರ್ತಿಸಲು ಬಹಳ ಪ್ರಯತ್ನಪಟ್ಟೆ, ಆಗಲಿಲ್ಲ. ಉಳಿದೆಲ್ಲ ರೀತಿಗಳಲ್ಲಿಯೂ ತಕ್ಕಮಟ್ಟಿನ ಸಾಮಾನ್ಯತೆಗೆ ಬಂದಿದ್ದರೂ ಹಸಿವೆ ಮಾತ್ರ ಅಸಾಧ್ಯವಾಗಿಯೆ ಉಳಿದಿತ್ತು.

ರಾತ್ರಿ ಅವರೆಲ್ಲರ ಜೊತೆ ಇಸ್ಪೀಟನ್ನೂ ಆಡಿದ್ದೆ. ಊಟಕ್ಕೆ ಕುಳಿತಾಗ ಮತ್ತೆ ಮತ್ತೆ ಬೃಹತ್ ಪ್ರಮಾಣದಲ್ಲಿಯೆ ಬಡಿಸಿದ್ದರಿಂದ ಹೊಟ್ಟೆ ಸಿಡಿಯುವಷ್ಟು ತುಂಬಿಕೊಂಡಿದ್ದೆ. ರಾತ್ರಿ ಎಲ್ಲಿಯಾದರೂ ಹಸಿವೆ ಕೆರಳೀತು ಎಂಬ ಹೆದರಿಕೆಯಿಂದ ಊಟದ ಮೇಲೆ ಬಾಳೆಯ ಹಣ್ಣುಗಳನ್ನೂ ಸಾಕಷ್ಟು ತಿಂದು, ಆಪತ್ತಿನ ಸಮಯಕ್ಕೆ ಇರಲಿ ಎಂದು, ಮಾನಪ್ಪನಿಗೆ ಹೇಳಿ, ಒಂದು ಬಾಳೆಯ ಹಣ್ಣಿನ ಗೊನೆಯ ಉಳಿದ ಚಿಪ್ಪುಗಳನ್ನೆಲ್ಲ ತೆಗೆಸಿ ಹಾಸಗೆಯ ಪಕ್ಕದಲ್ಲಿಡಿಸಿದ್ದೆ. ಅವರ ಆಫೀಸು ಕೋಣೆಯಲ್ಲಿ ನನಗೆ ಹಾಸಗೆ ಹಾಕಿದ್ದರು. ಪಕ್ಕದಲ್ಲಿ ರಕ್ಷಣೆಗಾಗಿ ಮಾನಪ್ಪ ಮಲಗಿದ್ದ. ಅವನಿಗೂ ಹೆದರಿಕೆ, ಎಲ್ಲಿ ಏನು ಮಾಡಿಬಿಡುತ್ತೇನೊ ಎಂದು! ದೀಪ ಆರಿಸಿರಲಿಲ್ಲ; ಸಣ್ಣಗೆ ಮಾಡಿದ್ದರು.

ಮಲಗಿ ಒಂದೆರಡು ಗಂಟೆ ಆಗಿರಬಹುದು. ಶುರುವಾಯಿತು ಹಸಿವೆ! ಅಷ್ಟೊಂದು ಊಟ ಮಾಡಿದ್ದೆನಲ್ಲಾ? ಇದು ಬರಿಯ ಕಳ್ಳಹಸಿವೆ ಇರಬೇಕು ಎಂದು ನನಗೆ ನಾನೆ ಬುದ್ಧಿ ಹೇಳಿಕೊಂಡು ತಡೆಯಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ಮಾನಪ್ಪನನ್ನು ಎಬ್ಬಿಸಿದೆ. ಅವನೂ ಗಾಢನಿದ್ರೆಯಲ್ಲಿದ್ದವನು ಕಣ್ಣುಜ್ಜಿಕೊಳ್ಳುತ್ತಾ ಎದ್ದು ಕುಳಿತ. “ಹಸಿವೆ ಆಗುತ್ತದಲ್ಲೋ! ಏನಾದರೂ ಮಾಡಬೇಕಲ್ಲಾ!” ಎಂದೆ. ಅವನೂ ಬೆರಗಾಗಿ “ಈಗತಾನೆ ಊಟಮಾಡಿದ್ದೀಯಲ್ಲಾ?  ಏನಾದರೂ ಅಜೀರ್ಣಗಿಜೀರ್ಣವಾಗಿ ಅಪಾಯವಾದರೆ…” ಆದರೆ ನನ್ನ ಹಸಿವೆ ಬರಿಯ ಭಾವನೆಯದಾಗಿದ್ದಿಲ್ಲ, ನಿಜವಾದುದಾಗಿತ್ತು! ಕೊನೆಗೆ ಅವನು ಅಲ್ಲಿ ಆಪತ್ಸಮಯಕ್ಕಾಗಿ ಇಟ್ಟಿದ್ದ ಬಾಳೆಯ ಹಣ್ಣುಗಳನ್ನೆಲ್ಲ ಕೊಟ್ಟ. ತಿಂದು ನೀರು ಕುಡಿದು, ‘ಇನ್ನು ಪರ್ವಾಯಿಲ್ಲ, ಬೆಳಗಾಗುವವರೆಗಾದರೂ’ ಎಂದುಕೊಂಡು ಮಲಗಿದೆ. ಆದರೆ ಮತ್ತೆ ಸ್ವಲ್ಪ ಹೊತ್ತಿನಲ್ಲಿಯೆ ಹೊಟ್ಟೆಯಲ್ಲಿ ಧಗೆ ಶುರುವಾಗಬೇಕೆ? ತಡೆದೆ, ತಡೆದೆ, ಕಡೆಗೆ ತಡೆಯಲಾಗದೆ ಮತ್ತೆ ಮಾನಪ್ಪನನ್ನು ಎಬ್ಬಿಸಿದೆ. ಗೊಣಗಿಕೊಂಡು ಎದ್ದ. ‘ಹಸಿವೆ, ತಡೆಯುವುದಕ್ಕೇ ಆಗುವುದಿಲ್ಲ!’ ಎಂದೆ. “ಏನು ಮಾಡುವುದು? ಒಳಗೆ ಎಲ್ಲಾ ಮಲಗಿಬಿಟ್ಟಿದ್ದಾರೆ?” ಅಂದ. “ಯಾರನ್ನೂ ಎಬ್ಬಿಸಬೇಡ, ಅಡಿಗೆಮನೆಗೆ ಹೋಗಿ ನೋಡೋಣ.” ಎಂದೆ. ಇಬ್ಬರೂ ಒಳಗೆ ಹೋದೆವು. ಮಾನಪ್ಪ ಪತ್ತೆಹಚ್ಚಿ, ಪಾತ್ರೆಗಳಲ್ಲಿ ಉಳಿದಿದ್ದ ತಂಗಳನ್ನವನ್ನೂ ಪಲ್ಯ ಸಾರು ಮಜ್ಜಿಗೆ ಎಲ್ಲವನ್ನೂ ತಂದು ಬಡಿಸಿದ. ನಾನು ಕಲಸಿ ಕೊಂಡು ಅಮೃತಾನ್ನವೆಂಬಂತೆ ತಿಂದೂತಿಂದೆ! ಹಸಿವೆ ತಕ್ಕಮಟ್ಟಿಗೆ ಶಮನವಾಯಿತು. ತಿನ್ನಲೂ ಇನ್ನೇನೂ ಇರಲಿಲ್ಲವೆಂದು ಖಾತ್ರಿ ಮಾಡಿಕೊಂಡಮೇಲೆಯೆ ನಾನು ಎದ್ದೆ. ಬಂದು ಮಲಗಿದೆವು. ಸದ್ಯಃ ಮತ್ತೆ ಹಸಿವೆಯಾಗುವಷ್ಟರಲ್ಲಿ ಬೆಳಕು ಬಿಡುತ್ತಾ ಇತ್ತು!

ಪ್ರೊ. ವೆಂಕಣ್ಣಯ್ಯನವರಿಗೆ ನಾನೊಂದು ಕಾಗದ ಬರೆದೆ: ಅದರಲ್ಲಿ ನಡೆದ ದುರಂತವೆಲ್ಲವನ್ನೂ ಉಲ್ಲೇಖಿಸಿ, ನಾನಿನ್ನು ಓದು ಮುಂದುವರಿಸಲು ಸಾಧ್ಯವಾಗುವುದಿಲ್ಲವೆಂದೂ ಮನೆಗೆ ಹಿರಿಯರಾಗಿದ್ದು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದ ದೊಡ್ಡಚಿಕ್ಕಪ್ಪಯ್ಯ ತೀರಿಕೊಂಡು ಸದ್ಯಕ್ಕೆ ನಾನೆ ಹಿರಿಯನಾಗಿ ಉಳಿದಿರುವುದರಿಂದ ಸಂಸಾರದ ಭಾರ ಹೊರಬೇಕಾಗುತ್ತದೆಂದೂ ಅವರ ಸಲಹೆ ಬುದ್ದಿವಾದ ಆಶೀರ್ವಾದಗಳಿಗಾಗಿ ಕಾಗದ ಬರೆದೆ. ಆದರೆ ನಿಜವಾಗಿಯೂ ನನಗೆ ಓದು ನಿಲ್ಲಿಸಲು ಮನಸ್ಸಿರಲಿಲ್ಲ. ನನಗಿಂತಲೂ ಚಿಕ್ಕವನಾಗಿದ್ದರೂ ಮೂರುನಾಲ್ಕು ವರ್ಷಗಳಿಂದಲೂ ಮನೆಯಲ್ಲಿಯೆ ಇದ್ದುಕೊಂಡು, ಮದುವೆಯಾಗಿ, ಮನೆಯ ಕಾರುಭಾರನ್ನು ನೋಡಿಕೊಳ್ಳುವುದರಲ್ಲಿ ತನ್ನ ತಂದೆಗೆ ನೆರವಾಗುತ್ತಿದ್ದು ಆ ರೀತಿಯ ಅನುಭವವನ್ನು ನನಗಿಂತಲೂ ಚೆನ್ನಾಗಿ ಪಡೆದಿದ್ದನು ತಿಮ್ಮಯ್ಯ. ಅವನಾಗಲೆ ಆ ಭಾರವನ್ನು ಇತರರ ನೆರವಿನಿಂದ ಹೊತ್ತುಕೊಂಡೂ ಇದ್ದನು.

ಪ್ರೊ.ವೆಂಕಣ್ಣಯ್ಯನವರು ಉತ್ತರ ಬರೆದರು: ಎಂ.ಎ. ಕೋರ್ಸನ್ನು ಅರ್ಧಮಟ್ಟಿಗೆ ಮುಗಿಸಿಯೆ ಇದ್ದೀಯೆ. ಈಗಲೆ ಬಿಟ್ಟುಬಿಡಬೇಡ; ಪೂರ್ತಿ ಓದಿ ಮುಗಿಸಿಬಿಡು ಎಂದು. ಸ್ವಾಮಿಜಿಯೂ ಕಾಗದ ಬರೆದರು. ನಾನು ಮೈಸೂರಿಗೆ ಹೊರಟೆ.

ನನ್ನ ಮನಃಸ್ಥಿತಿ ಇನ್ನೂ ಸಾಮಾನ್ಯ ಸ್ತರಕ್ಕೆ ಪೂರ್ತಿ ಇಳಿದಿರಲಿಲ್ಲ. ಹಾಗೆ ಹೇಳಿದರೆ ಅದು ಬರಿಯ ವಾಡಿಕೆಯ ಹೇಳಿಕೆಯಾಗುತ್ತದೆಂದು ತೋರುತ್ತದೆ. ಏಕೆಂದರೆ ನನ್ನ ಮನಃಸ್ತರ ಯಾವಾಗಲೂ ಸಾಮಾನ್ಯಕ್ಕಿಂತ ಮಿರಿಯೆ ಇತ್ತು. ಅದನ್ನು ಕವಿತೆಗಳಲ್ಲಿಯೆ ಪ್ರಕಟಗೊಳಿಸುತ್ತಿದ್ದು ಕಾವ್ಯದಿಂದ ಯಾರಿಗೂ ತೊಂದರೆಯಾಗುತ್ತಿರಲಿಲ್ಲವಾದ್ದರಿಂದ ಯಾರೂ ನನ್ನನ್ನು ಹುಚ್ಚನೆಂದು ಕರೆಯುತ್ತಿರಲಿಲ್ಲ. ಅದನ್ನೆ, ಅದಕ್ಕೆ ಬದಲಾಗಿ, ಪ್ರತಿಭಾವಂತನೆಂದು ಕರೆಯುತ್ತಿದ್ದರು. ಷೇಕ್ಸಪಿಯರ್ ಮಹಾಕವಿ ಹೇಳಿರುವಂತೆ, ಕವಿಗಳೂ ಹುಚ್ಚರೂ ಪ್ರತಿಭೆಯಲ್ಲಿ ಸಮಾನರಲ್ಲವೆ? ಆದರೆ ಆ ಪ್ರತಿಭೆ ಕಾವ್ಯರಂಗದಿಂದ ಲೋಕರಂಗಕ್ಕೆ ಇಳಿಯತೆಂದರೆ ತೊಂದರೆ ಪ್ರಾರಂಭವಾಗುತ್ತದೆ; ಆಧ್ಯಾತ್ಮಿಕ ಅನುಭವ ಆಧ್ಯಾತ್ಮಿಕ ರಂಗಕ್ಕೆ ಸೀಮಿತವಾಗಿರಬೇಕು. ದೈನಂದಿನ ಸಾಮಾನ್ಯ ಭೂಮಿಕೆಗೂ ಇಳಿದು ಕ್ರಿಯೆಯಾಗಿ ವರ್ತಿಸತೊಡಗಿದರೆ ಕೆಲಸ ಕೆಡುತ್ತದೆ. ಕಾವ್ಯದಲ್ಲಿ ಎಷ್ಟು ಬೇಕಾದರೆ ಅಷ್ಟೂ ಸರ್ವತ್ರ ಜಗನ್ಮಾತೆಯನ್ನು ದರ್ಶಿಸು, ಬೇಡವೆಂದವರಾರು? ಅದನ್ನು ಕುರಿತು ಹಾಡು, ಆಲಿಸಿ ಆನಂದ ಪಡುತ್ತೇವೆ, ಆದರೆ ಅದನ್ನು ರಸಭಾವ ಭೂಮಿಕೆಯಿಂದ ಲೋಕಭೂಮಿಕೆಗೆ ತಂದು ಅದರಂತೆ ವರ್ತಿಸತೊಡಗಿದರೆ ಕೇಡಾಗುತ್ತದೆ. ಮಾತಿನಲ್ಲಾಗಲಿ ನಡತೆಯಲ್ಲಾಗಲಿ ಕಾರ್ಯದಲ್ಲಾಗಲಿ ಆಯಾ ಭೂಮಿಕೆಗೆ ಸೀಮಿತವಾದ ಔಚಿತ್ಯವನ್ನು ಉಲ್ಲಂಘಿಸಬಾರದು!?

ನನ್ನ ಮನಃಸ್ಥಿತಿಯನ್ನು ಸಾಮಾನ್ಯ ಸ್ತರಕ್ಕೆ ಇಳಿಸಿದೆನು ಎನ್ನುವುದರ ಅರ್ಥ ಇಷ್ಟೇ: ಮಾತಿನಲ್ಲಿ ನಡತೆಯಲ್ಲಿ ಸಮಾಜ ಔಚಿತ್ಯಕ್ಕೆ ಭಂಗ ಬರದಂತೆ ವರ್ತಿಸುವುದನ್ನು ಅಭ್ಯಾಸ ಮಾಡಿದೆ ಎಂದು. ಏಕೆಂದರೆ ನಿಜವಾಗಿಯೂ ನನ್ನ ಮನಃಸ್ತರ ಹಿಂದೆ ಇದ್ದುದಕ್ಕಿಂತ ಕೆಳಗಿಳಿಯಲಿಲ್ಲ; ಬದಲಾಗಿ, ಏರುತ್ತಲೆ ಹೋಗಿದೆ, ಹೋಗುತ್ತಲೂ ಇದೆ. ಆದರೆ ಅದಕ್ಕೆ ಬಹಿರಂಗ ಪ್ರದರ್ಶನ ಮುಟ್ಟುಗೋಲಾಗಿದೆ!

ಆಶ್ರಮದ ಜೀವನದ ಮರ್ಯಾದೆಯ ಚೌಕಟ್ಟಿನಲ್ಲಿ ನನ್ನ ಭಾವಗಳೂ ವರ್ತನೆಗಳೂ ಉಕ್ತಿಗಳೂ ‘ಸಾಮಾನ್ಯ’ವಾಗಿಯೆ ಇದ್ದುವು. ಕಾರಣ, ಆಶ್ರಮದವರ ‘ಸಾಮಾನ್ಯ’ ಜೀವನವೆ ‘ಅಸಾಮಾನ್ಯ’ವಾಗಿದ್ದುದರಿಂದ! ರೋಗರೂಪಿಯಾಗಿ ನನಗೆರಗಿದ ಭಗವತ್ ಕೃಪಾಕ್ಲೇಶ್‌ವು ಅನುಗ್ರಹಿಸಿದ ಅನುಭವಗಳನ್ನು ಕುರಿತು ಸ್ವಾಮಿಗೆ ನಾನು ವಿವರಿಸಿ ತಿಳಿಸಿದಾಗ ಅವರಿಗೆ ಅದರಲ್ಲಿ ‘ಹುಚ್ಚು’ ಕಾಣಲಿಲ್ಲ, ‘ಮೆಚ್ಚು’ ಕಂಡಿತು. ಅವರು ಹೇಳಿದ ಬುದ್ಧಿವಾದವೆಂದರೆ:  ಅನಧಿಕಾರಿಗಳಲ್ಲಿ ಅಪಾತ್ರರಲ್ಲಿ ಅನುಚಿತ ಸನ್ನಿವೇಶಗಳಲ್ಲಿ ನಡೆಯುವಾಗ ನುಡಿಯುವಾಗ ಸಂಯಮವಿರಬೇಕು; ಮತ್ತು ಇತರರಿಗೆ ಅಗಮ್ಯವಾದ ಮತ್ತು ಅವರಿಗೆ ಎಟುಕದ ಅನುಭವಗಳನ್ನು ಕುರಿತು ನುಡಿಯ ಹೋಗುವುದೂ ನಡೆಯ ಹೋಗುವುದೂ ತಪ್ಪಾಗುತ್ತದೆ ಎಂದು.

ಆಗಿನ ಅನುಭವಗಳಲ್ಲೆಲ್ಲ ಮುಖ್ಯವಾದುದೂ ಸ್ಥಾಯಿಯಾದುದೂ ಎಂದರೆ: ಸಚ್ಚಿದಾನಂದ ಜಗನ್ಮಾತೆ ಎಲ್ಲೆಲ್ಲಿಯೂ ಇದ್ದಾಳೆ; ಎಲ್ಲವೂ ಆಗಿದ್ದಾಳೆ; ಸರ್ವವನ್ನೂ ಸರ್ವದಾ ಸೃಷ್ಟಿಸುತ್ತಿರುವವಳೂ ನಿಯಂತ್ರಿಸುತ್ತಿರುವವಳೂ ಅವಳೆ – ಎಂಬುದು. ಒಂದು ರೀತಿಯಲ್ಲಿ ನೋಡಿದರೆ, ನನಗೆ ಅದೇನೂ ಹೊಸದಾಗಿರಲಿಲ್ಲ. ಚಿಂತನವಸ್ತುವಾಗಿ ಮಾತ್ರವಲ್ಲ ಭಾವವಸ್ತುವಾಗಿಯೂ ತಾಯಿಯ ಸಾನಿಧ್ಯವನ್ನು ಬಹುಹಿಂದೆಯೆ ಅನುಭವಿಸುತ್ತಿದ್ದೆ. ಕನ್ನಡದಲ್ಲಿ ಬರೆಯುವುದಕ್ಕೆ ಮುನ್ನ ಇಂಗ್ಲಿಷ್ ಕವನಗಳಲ್ಲಿಯೂ ಆ ಅನುಭಾವ ಯಥೇಚ್ಛವಾಗಿದೆ. ಉದಾಹರಣೆಗಾಗಿ ಈ ವರ್ಷವೆ (೧೯೭೩) ಪ್ರಕಟವಾಗಿರುವ Alien Harp ಎಂಬ ಸಂಗ್ರಹದಲ್ಲಿ ‘On the way to Chamundi Hill’s ಮತ್ತು `Midnight’ ಎಂಬ ಕವನಗಳನ್ನು ನೋಡಬಹುದು. ನನ್ನ ಆ ಹುಚ್ಚಿನ ಕಾಲದಲ್ಲಿಯೆ, ಎಂದರೆ ೧೯೨೮ ನೆಯ ಫೆಬ್ರವರಿ ೨೩ ರಲ್ಲಿ ಮತ್ತು ೨೪ ರಲ್ಲಿ ರಚಿತವಾಗಿರುವ ಈ ಕವನಗಳನ್ನು ನೋಡಬಹುದು. ಆ ಕವನಗಳು ಇದುವರೆಗೂ ಎಲ್ಲಿಯೂ ಅಚ್ಚುಗೊಂಡಿಲ್ಲ: ಅವು ನನ್ನ ಅಂದಿನ ಮನಃಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ:

ತಾಯಿ

ಎಲ್ಲಿ ನೋಡಲಲ್ಲಿ ತಾಯಿ
ಎನ್ನ ತಾಯಿಯು  ||ಪಲ್ಲವಿ||

ಕಲ್ಲು ಮರಗಳಲ್ಲಿ ತಾಯಿ
ಹಕ್ಕಿ ಹಾವುಗಳಲಿ ತಾಯಿ
ಸಜ್ಜನರೆದೆಗಳಲಿ ತಾಯಿ
ದುಷ್ಟರೆದೆಗಳಲ್ಲಿ ತಾಯಿ  ||೧||

ಯುದ್ಧರಂಗಗಳಲಿ ಸಿಡಿವ
ಮದ್ದು ಗುಂಡುಗಳಲಿ ತಾಯಿ,
ಬೆಟ್ಟ ಗುಡ್ಡಗಳಲಿ ಇರುವ
ಸಿದ್ಧರೊಡಲುಗಳಲಿ ತಾಯಿ  ||೨||

ಮಂಜುನಾದದಿಂದ ಹರಿವ
ಚೆಲುವು ತೊರೆಯ ಜಲದಿ ತಾಯಿ,
ನಲಿದು ಮೆರೆವ, ಕವಿಯ ಕರೆವ
ಸುಮದ ಸೊಬಗಿನಲ್ಲಿ ತಾಯಿ  ||೩||

ನೀಲಗಗನತಳದಿ ಹೊಳೆವ
ರವಿಯು ಶಶಿಯು ತಾರೆಗಳಲಿ,
ದಿನವು ಬಂದು ತಿರುಗುತಿರುವ
ಹಗಲು ರಾತ್ರಿ ಎರಡರಲ್ಲಿ  ||೪||

ಗಾನದಲ್ಲಿ ಎನ್ನ ತಾಯಿ
ಮೇಣ್ ವಿನೋದದಲ್ಲಿ ತಾಯಿ,
ತತ್ತ್ವವೇತ್ತರಲ್ಲಿ ತಾಯಿ
ತತ್ತ್ವವಿಲ್ಲದರೊಳು ತಾಯಿ  ||೫||

ಕಾರಮಿಂಚಿನಲ್ಲಿ ತಾಯಿ,
ಕಾರ ಮಿಂಚೆ ಎನ್ನ ತಾಯಿ;
ವರ ವಸಂತನಲ್ಲಿ ತಾಯಿ
ಜಗದೊಳೆಲ್ಲ ಎನ್ನ ತಾಯಿ  ||೬||

ದುಃಖ ಸುಖದೊಳೆನ್ನ ತಾಯಿ,
ವಿಶ್ವರೂಪಿ ಎನ್ನ ತಾಯಿ;
ತಾಯಿ ಅಲ್ಲದೊಂದು ಇಲ್ಲ,
ಎಲ್ಲ ತಾಯಿ, ತಾಯಿ ಎಲ್ಲ.  ||೭||
೨೩-೨-೧೯೨೮

ನಾನರಿಯೆ ಎನಲಾರೆ


ನಾನರಿಯೆ ಎನಲಾರೆ, ನಾನರಿಯೆ ಎನಲಾರೆ,
ನಾನೆಲ್ಲವರಿತವನು ಎನಲಾರೆ, ತಾಯಿ;
ಒಂದ ನಾ ಬಲ್ಲೆ ನಾ ಎಂದಿಗದ ನಾ ಮರೆಯೆ:
ಎಲ್ಲ ನೀನೇ ಎಂದು, ಎನ್ನ ಮಾತಾಯಿ.


ಬನಗಳಲಿ ಸಂಚರಿಸೆ ಮರಗಳೆನ್ನುವುವೆನಗೆ
‘ನೀನೆ ಅವನಲ್ಲವೇ? ಅವನಲ್ಲವೇ?’ ಎಂದು.
ತೊರೆಗಳಲಿ ನಾನಿಳಿಯೆ ತೊರೆಯ ಜಲ ಗುಟ್ಟಾಗಿ
“ನೀನೆ ನಾನಲ್ಲವೇ?” ಎನ್ನುವುದು, ತಾಯಿ.


ಎಲ್ಲಿ ಕಣ್ಣಿಡಲಲ್ಲಿ ನೀನು ನಾನೊಂದಾಗಿ
ತೋರುವುದು ಕಂಗಳಿಗೆ, ಅನುಭವಕೆ, ಮನಕೆ;
ಎಲ್ಲ ನಿನ್ನಯ ಮಾಯೆ, ಎಲ್ಲ ನಿನ್ನಯ ಲೀಲೆ,
ಎನಗಾಗಿ ನೀ ಮಾಡಿದೀ ವಿಶ್ವ ನೀನೆ!
೨೪-೨-೧೯೨೮

ಆ ಹುಚ್ಚಿನ ಕಾಲದಲ್ಲಿಯೆ ಬರೆದ ಇನ್ನೊಂದು ಕವನ ತುಂಬ ಕುತೂಹಲಕಾರಿಯಾಗಿದೆ. ಅದನ್ನು ಇದುವರೆಗೂ ಎಲ್ಲಿಯೂ ಪ್ರಕಟಿಸಿಲ್ಲ. ಬಹುಶಃ ಸ್ವಾಮಿಜಿ ಒಬ್ಬರಿಗಲ್ಲದೆ ಬೇರೆ ಯಾರಿಗೂ ಓದಿಲ್ಲ. ಅದನ್ನು ಕೇಳಿದ ಸ್ವಾಮಿಜಿ ಅದರ ಒಂದೆರಡು ಚರಣಗಳಿಗೆ ತಮ್ಮ ಅಸಮ್ಮತಿಯನ್ನು “No, no; that is too much!” (ಇಲ್ಲ, ಇಲ್ಲ. ಅದು ಅತಿಯಾಯಿತು!) ಎಂದು ಸೂಚಿಸಿದರು. ತರುವಾಯ ಅದನ್ನು ಕುರಿತು ಆಲೋಚಿಸಿದ ನನಗೂ ಅದು ಅತಿಯಾಯಿತೇನೋ ಎನ್ನಿಸಿತು. ಆದರೆ ಆ ಕವನ ಆಲೋಚನೆಯ ಪರಿಣಾಮದ್ದಾಗಿರಲಿಲ್ಲ. ‘ನಾನು ವಿವೇಕಾನಂದ’ ಎಂಬ ಅನುಭವದಂತೆಯೇ ಮತ್ತು ‘ಪುಟ್ಟಪ್ಪ ಸತ್ತುಹೋದ.’ ಎಂಬ ಅನುಭವದಂತೆಯೆ ಅದೂ ತತ್  ಕಾಲದ ಅನುಭವ ರೂಪದ್ದಾಗಿಯೆ ಹೊರಹೊಮ್ಮಿತ್ತು. ವಿವೇಕಾನಂದತ್ವ ತಿರೋಹಿತವಾಗಿ ಪುಟ್ಟಪ್ಪತ್ವ ಪ್ರತಿಷ್ಠಾಪನೆಗೊಂಡ ತರುವಾಯ ಸ್ವಾಮಿಜಿ ಹೇಳಿದಂತೆ ನನಗೂ ಅತಿಯಾಗಿ ತೋರಿತು. ಆದ್ದರಿಂದ ಅದನ್ನು ದಮನಮಾಡಿದ್ದೆ. ಈಗ ಇಲ್ಲಿ ಅದನ್ನು ಕೊಡುತ್ತೇನೆ!


ಪರಬ್ರಹ್ಮ ಎನಗೆ ತಂದೆ,
ಮಹಾಕಾಳಿ ಎನ್ನ ತಾಯಿ;
ರಾಮಕೃಷ್ಣರೆನಗೆ ಗುರುವು,
ಶ್ರೀ ವಿವೇಕಾನಂದರೆನಗೆ ಗುರುಭಾಯಿ!


ಪುಣ್ಯ ಭೂಮಿ ತೊಟ್ಟಿಲೆನಗೆ
ತೂಗುವವನು ಸೂರ್ಯದೇವ;
ಗಗನ ತಳವೆ ನೀಲಿಕೊಡೆಯು,
ತಾರೆಯಾಳಿ ತಾಯಿಯಿತ್ತ ಹೊಳೆವ ಮಣಿಗಳು!


ಕಾಡುಬೆಟ್ಟ ಹೊಳೆಯು ಕಡಲು
ಮಳೆಯು ಚಳಿಯು ಬೆಂಕಿ ಗಾಳಿ
ಹಗಲು ಇರುಳು ಮಾಸ ಋತುವು
ಎನ್ನ ಕುಡಿಯಾಡುತಿರುವ ಗೆಳೆಯರಾವಳಿ!


ರಾಮಕೃಷ್ಣದೇವರೆಂದು
ಎನ್ನ ಕರೆಯುವರೋ ಅಂದು
ಗೆಳೆಯ ಮೃತ್ಯುವೊಡನೆ ಕೂಡಿ
ನಲಿದು ಹಾಡಿ ಬಾಲನಂತೆ ನಗುತ ತೆರಳುವೆ!

ಮೇಲಿನ ಕವನಕ್ಕೆ ಶೀರ್ಷಿಕೆ ಇಲ್ಲ, ತಾರೀಖೂ ಹಾಕಿಲ್ಲ. ಅದನ್ನು ಹುಚ್ಚಿನ ಕಾಲದಲ್ಲಿ ಯಾವುದೊ ಕಾಗದದ ಮೇಲೆ ಗೀಚಿಕೊಂಡಿದ್ದು ತರುವಾಯ ಹಸ್ತಪ್ರತಿಗೆ ಬರೆದಂತಿದೆ. ಹಸ್ತಪ್ರತಿಯಲ್ಲಿ ಅದರ ತರುವಾಯ ಬರೆದಿರುವ ಕವನ “ಕರೆಯೆಂದು ಬರುವುದೋ? ನಾನರಿಯೆ ಅರಿಯೆ! ಕಾಯುವೆನು ಕರೆಯು ಬರುವಲ್ಲಿ ಪರಿಯಂತ, ದೊರೆಯೆ!” ಎಂದು ಪ್ರಾರಂಭವಾಗುವ ಕವನ. ಮೊದಲು ‘ಕೊಳಲು’ ಅಲ್ಲಿ ಅಚ್ಚಾಗಿದ್ದು ತರುವಾಯ ‘ಷೋಡಶಿ’ಗೆ ವರ್ಗಾಯಿಸಿದೆ. ಅದರ ತಾರೀಖು ೨೮-೨-೧೯೨೮.

ಸ್ವಾಮಿಜಿಗೆ ಅತಿಯಾಗಿ ತೋರಿದ ಪಂಕ್ತಿಗಳೆಂದರೆ ಮೇಲಿನ ಕವನದ ಮೊದಲನೆ ಪದ್ಯದ ಕೊನೆಯ ಎರಡು ಚರಣಗಳು ಅಥವಾ ಕೊಟ್ಟಕೊನೆಯ ಚರಣವೆಂದರೂ ಸರಿಯೆ.  ಶ್ರೀ ವಿವೇಕಾನಂದರಿಗೆ ನಾನು ಸಮಸ್ಥಾನದಲ್ಲಿ ನಿಂತು, ಅವರನ್ನು ನನ್ನ ‘ಗುರುಭಾಯಿ’ ಎಂದು ಕರೆದುಕೊಂಡದ್ದು ಅವರಿಗೆ ಅತಿಯಾಗಿ ಕಾಣಿಸಿತು. ಗುರುಬಾಯಿ ಎನ್ನುವ ಪದವನ್ನು ಶ್ರೀರಾಮಕೃಷ್ಣರ ಅಂತರಂಗ ಶಿಷ್ಯವರ್ಗಕ್ಕೆ ಸೇರಿದವರು ಮಾತ್ರ ತಮ್ಮ ಸೋದರ ಸಂನ್ಯಾಸಿಗಳನ್ನು ಕರೆಯುತ್ತಿದ್ದ ರೀತಿ. ಆ ಮಹಾಪಟ್ಟಕ್ಕೆ ನನ್ನಂತಹ ಕ್ಷುದ್ರ ಸಾಮಾನ್ಯಜೀವ ಹೇಗೆತಾನೆ ಅರ್ಹವಾದೀತು? ಆದರೆ ಆ ರೀತಿಯಲ್ಲಿ ಅನುಭವಿಸಿದ್ದ ನನ್ನ ಆ ಉನ್ಮಾದ ಪ್ರಜ್ಞೆಗೆ ‘ಪುಟ್ಟಪ್ಪ ಸತ್ತುಹೋದ. ನಾನು ವಿವೇಕಾನಂದ!’ ಎಂಬುದು ಎಷ್ಟು ಸಹಜಸತ್ಯವಾಗಿದ್ದಿತೋ ಅಷ್ಟೇ ಸ್ವಾಭಾವಿಕವಾಗಿತ್ತು ಎಂದು ತೋರುತ್ತದೆ, ಶ್ರೀ ವಿವೇಕಾನಂದರು ನನ್ನ ‘ಗುರುಭಾಯಿ’ಯಾಗಿ ಇದ್ದದ್ದು!