ತವರುಮನೆ ಹಿರಿಕೊಡಿಗೆಯಿಂದ ಗಂಡನ ಮನೆ ಕುಪ್ಪಳ್ಳಿಗೆ ಚೊಚ್ಚಲು ತಾಯಿಯಾಗಿ ನನ್ನಮ್ಮ ಸೀತಮ್ಮನವರು ತೊಟ್ಟಿಲ ಕೂಸಾದ ನನ್ನನ್ನು ಕರೆತಂದು ಮನೆವುಗಿಸಿದಂದು ನಮ್ಮ ಮನೆ,-ಕುಪ್ಪಳ್ಳಿ,-ಆಗಿನ ಕಾಲದ ಸುತ್ತಮುತ್ತಣ ಜನ ಮತ್ತು ಜೀವನದ ಸ್ಥಿತಿಗತಿಯನ್ನು ಅನುಲಕ್ಷಿಸಿ ಹೇಳುವುದಾದರೆ,-ನೆಮ್ಮದಿಯ ಬೀಡಾಗಿತ್ತು. ಕುಪ್ಪಳಿಯನ್ನು ದೊಡ್ಡಮನೆ ಎಂದೂ, ಕುಪ್ಪಳ್ಳಿ ಮನೆಯವರನ್ನು ದೊಡ್ಡ ಮನೆತನದವರೆಂದೂ ಭಾವಿಸಿ ಜನ ಗೌರವಿಸುತ್ತಿದ್ದರು. ಬತ್ತದ ಗದ್ದೆ, ಅಡಕೆ ತೋಟ, ಜಾನುವಾರು, ಆಳುಕಾಳು, ಪಟೇಲಿಕೆಯ ಅಧಿಕಾರ-ಎಲ್ಲ ದೃಷ್ಟಿಗಳಿಂದಲೂ ಶ್ರೀಮಂತಿಕೆಯ ಮಟ್ಟದ್ದು ಎನ್ನುವಂತಿತ್ತು.

ಅಲ್ಲದೆ ಎಲ್ಲ ಮನೆಗಳಂತೆ ಕುಪ್ಪಳ್ಳಿಯ ಮನೆಯೂ ಪ್ರಕೃತಿಸೌಂದರ್ಯದ ನಿಚ್ಚನೆಲೆವೀಡಾದ ಸಹ್ಯಾದ್ರಿಶ್ರೇಣಿಯ ಮಲೆ ಕಾಡು ಗುಡ್ಡ ಬೆಟ್ಟಗಳ ನಡುವೆ ಇದ್ದರೂ ಇತರ ಮನೆಗಳಿಗಿಲ್ಲದ ಒಂದು ವಿಶೇಷ ಅನುಕೂಲ ಸನ್ನಿವೇಶ ಅದಕ್ಕಿದೆ: ಮನೆಯ ಮುಂದೆ, ಅಡಕೆ ತೋಟದಾಚೆಯೆ ಮೊದಲುಗೊಂಡು ನಡೂ ಆಕಾಶದವರೆಗೆಂಬಂತೆ ಗೋಡೆ ಹಾಕಿದಂತೆ ಕಡಿದಾಗಿ ವಿಜೃಂಭಿಸಿ ಮಹೋನ್ನತವಾಗಿ ಮೇಲೆದ್ದು, ನಿತ್ಯ ಶ್ಯಾಮಲ ಅರಣ್ಯಾಚ್ಛಾದಿತವಾಗಿರುವ ಮನೆ; ಮತ್ತು ಮನೆಯ ಹಿಂಬದಿಯಿಂದಲೆ ಪ್ರಾರಂಭವಾಗಿ ವಿರಳ ಮರಪೊದೆಗಳಿಂದ ಹಕ್ಕಲುಹಕ್ಕಲಾಗಿ ಮೇಲೇರಿ ಏರಿ ಬಂಡೆ ಮಂಡೆಯಲ್ಲಿ ಕೊನೆಗೊಂಡಿರುವ ಹಿರಿಯ ಹಾಸುಗಲ್ಲಿನ ಕವಿಶೈಲ! ಇವೆರಡೂ ಕವಿ ಹೃದಯದ ಅಕ್ಕಪಕ್ಕದಲ್ಲಿರುವ ಎರಡು ಶ್ವಾಸಕೋಶಗಳಂತೆ ನನ್ನ ಬಾಲ್ಯದ ರಸಜೀವನದ ಬದುಕಿಗೆ ಉಸಿರನ್ನಿತ್ತು ಪೊರೆದಿವೆ. ಮುಂದೆ ಮಹಾಕವಿಯಾಗಲಿರುವ ಒಂದು ಋಷಿಚೇತನದ ವಿಕಾಸನಕ್ಕೆ ವಿಧಿ ಅದಕ್ಕಿಂತಲೂ ಹೆಚ್ಚು ಅರ್ಹವೂ ಅನುಕೂಲವೂ ಆದ ಭಿತ್ತಿರಂಗವನ್ನು ಸಮೆಯಲಾರದೆಂದು ತೋರುತ್ತದೆ.

ಅಂದು ಅವಿಭಕ್ತ ಕುಟುಂಬವಾಗಿದ್ದ ಕುಪ್ಪಳ್ಳಿ ಮನೆ ಜನ ತುಂಬಿದ ಬೀಡಾಗಿತ್ತು. ಹೆಂಗಸರ ಸಂಖ್ಯೆಯೆ ಗಂಡಸರ ಸಂಖ್ಯೆಗೆ ಎರಡು ಮೂರರಷ್ಟಿತ್ತು. ನನಗೆ ಬುದ್ದಿ ಬರುವ ಸಮಯಕ್ಕೆ ಮನೆಯಲ್ಲಿ ಮನೆಯವರಾಗಿದ್ದ ಗಂಡಸರೆಂದರೆ ಮೂವರೆ: ಅಪ್ಪಯ್ಯ-ನನ್ನ ತಂದೆ ವೆಂಕಟಪ್ಪಗೌಡರು, ದೊಡ್ಡ ಚಿಕ್ಕಪ್ಪಯ್ಯ-ರಾಮಣ್ಣ ಗೌಡರು, ಅಜ್ಜಯ್ಯ-ನನ್ನ ತಂದೆಯ ಕಕ್ಕಂದಿರಾದ ಬಸಪ್ಪಗೌಡರು. ಹೆಂಗಸರು: ಶಿವಪುರದ ಅಮ್ಮ, ಕಾಗಿನಗೊಳ್ಳಿ ಅಮ್ಮ, ಕೆರೆಕೇರಿ ಅಮ್ಮ, ಹೊಳೆ ಕೊಪ್ಪದ ಅಮ್ಮ, ಅಂದಗೇರಿ ಅಮ್ಮ, ದೇವಂಗಿ ಅಮ್ಮ, ಹಿರಿಕೊಡಿಗೆ ಅಮ್ಮ ಇತ್ಯಾದಿ: ಕೊನೆಯ ಮೂವರನ್ನುಳಿದು ಉಳಿದವರೆಲ್ಲ ನನಗೆ ಬುದ್ದಿ ಬರುವಷ್ಟರಲ್ಲಿ ವಿದವೆಯರಾಗಿದ್ದರು. ಅವರ ವೈಯಕ್ತಿಕವಾದ ಆಶೆ ಆಶಯ ದುಃಖ ಸಂಕಟಗಳೇನಿದ್ದರೂ ನನ್ನಂತಹ ಹುಡುಗರಿಗೆ ಅದೊಂದೂ ತಿಳಿಯುವಂತಿರಲಿಲ್ಲ. ನಮಗೆ ಅವರೆಲ್ಲರೂ ಸಾಮೂಹಿಕವಾಗಿ ತಾಯಂದಿರೇ ಆಗಿದ್ದರು. ಇಷ್ಟೇ ವ್ಯತ್ಯಾಸ: ನನ್ನ ಹೆಚ್ಚ ತಾಯನ್ನು ಹಿರಿಕೊಡಿಗೆ ಅಮ್ಮ ಎಂದು ಕರೆಯುತ್ತಿರಲಿಲ್ಲ; ಅವ್ವ ಎಂದು ಕರೆಯುತ್ತಿದ್ದೆ. ಉಳಿದವರನ್ನೆಲ್ಲ ಅವರವರ ತವರಿನ ಹೆಸರಿಗೆ ಅಮ್ಮ ಎಂಬ ಪದವನ್ನು ಲಗತ್ತಿಸಿ ಕರೆಯುತ್ತಿದ್ದೆ. ಅವರ ವೈಯಕ್ತಿಕವಾದ ಹೆಸರುಗಳೂ ನನಗೆ ಗೊತ್ತಿರಲಿಲ್ಲ. ಉಳಿದವರಿದ್ದಿರಲಿ, ನನ್ನ ಅವ್ವನದೂ ನನಗೆ ಗೊತ್ತಿರಲಿಲ್ಲ, ಇತ್ತೀಚಿನವರೆಗೆ!

ಮೊನ್ನೆ ಮೊನ್ನೆ ದೇವಂಗಿ ಚಂದ್ರಶೇಖರನ ಸಂಶೋಧನಾಸಕ್ತಿ-ನನ್ನ ಪ್ರಶ್ನಾವಳಿಯ ಹಾವಳಿಯ ಕಾಟದಿಂದ ಎಚ್ಚತ್ತು!-ನನಗೆ ಒದಗಿಸಿರುವ ಪ್ರಾಕ್ತನ ಸಾಮಗ್ರಿಯ ಆಧಾರದ ಮೇಲೆ ಹೇಳುವುದಾದರೆ, ನಮ್ಮ ಕುಪ್ಪಳ್ಳಿ ಮನೆತನದ ಮೂಲ ನಮ್ಮ ಮುತ್ತಜ್ಜನಿಂದ-ಅಂದರೆ ನನ್ನ ತಂದೆಯ ಅಜ್ಜ-ಓಬಯ್ಯಗೌಡರಿಂದ ಪ್ರಾರಂಭವಾಗುತ್ತದೆ. ಆ ಮುತ್ತಜ್ಜನಿಗೂ ಅಜ್ಜ ಮುತ್ತಜ್ಜರಿರಬೇಕಷ್ಟೆ? ಆದರೆ ಅವರು ಯಾರು? ಎಲ್ಲಿದ್ದರು? ಏನು? ಎಂತು? ಅವರ ಹೆಸರುಗಿಸರು ಊರುಗೀರು ಎಲ್ಲ ಭೂತಕಾಲದ ಅನಂತತೆಯಲ್ಲಿ ಸಂಪೂರ್ಣ ಸುಲೀನವಾಗಿ ವಿಸ್ಕೃತವಾಗಿದೆ. ಆದರೂ ಆ ಅಜ್ಞಾತ ಅಜ್ಜಮುತ್ತಜ್ಜರೂ ಕುಪ್ಪಳಿಯ ಆ ಗದ್ದೆ ತೋಟಗಳಲ್ಲಿಯೆ ದುಡಿದು ಮಡಿದಿರಬೇಕೆಂದು ಊಹಿಸುತ್ತೇನೆ. ಅಥವಾ?…. ಅವರಲ್ಲಿ ಯಾರಾದರೂ ಆಗಿನ ಕಾಲದ ಪಾಳೆಯಗಾರಿಕೆಯ ಭಾಗಿಗಳಾಗಿ ತತ್ಕಾಲದೇಶದಲ್ಲಿ ಕೀರ್ತಿವೆತ್ತಿದ್ದರೂ ಇರಬಹುದೇನೊ? ಅಥವಾ ನೆಪೋಲಿಯನ್ನನ ಭಯಂಕರ ಸೈನ್ಯಕ್ಕೂ ಜಾರ್ ಅಲೆಕ್ಸಾಂಡರನ ಮಹಾಸೇನಾನಿ ಕುಟುಜೋವನ ದುರ್ದಮ್ಯ ದೃಢಶೌರ್ಯದ ಕೆಚ್ಚೆದೆಯ ದಳಗಳಗೂ ‘ಬೋರೊಡಿರೊ ಮಹಾಕದನ’ ನಡೆದಂದು ಅದೊಂದರ ಅರಿವೂ ಒಂದಿನಿತೂ ಇರದೆ ಆ ಅಜ್ಜ ಮುತ್ತಜ್ಜರು ‘ಹೊನಸಿನ ಕೊಡಿಗೆ’ಯ ಗದ್ದೆಯನ್ನುತ್ತು ಸಸಿನೆಡುವ ಮಹತ್ತರ ಕಾರ್ಯದಲ್ಲು ದೀಕ್ಷಿತರಾಗಿ ನೆಪೋಲಿಯನ್ನನಿಗಿಂತಲೂ ನೂರುಮಡಿ ಧನ್ಯರಾಗಿದ್ದಿರಬಹುದೇ? ಆಗಿರಬಾರದೇಕೆ?

ಆದರೆ ದೇವಂಗಿ ಚಂದ್ರಶೇಖರನಿಗಿಂತಲೂ ಬಹುಪೂರ್ವದಲ್ಲಿಯೆ, ಎಂದರೆ ೧೯೩೫ನೆಯ ಡಿಸೆಂಬರ್ ೧೩ನೆ ತಾರೀಖಿನಲ್ಲಿ ಸ್ವಾಮಿ ಸಿದ್ದೇಶ್ವರಾನಂದರು ನನಗೆ ಬರೆದಿದ್ದ ಕಾಗದವೊಂದು ಸಿಕ್ಕಿದೆ. ಅವರು ಅದನ್ನು ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಿಂದ ಬರೆದಿದ್ದಾರೆ. ಮೈಸೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿದ್ದ ನನಗೆ. ಅದರಲ್ಲಿ ಆಗ ಬೆಂಗಳೂರಿನಲ್ಲಿ ಆರೋಗ್ಯಲಾಭದ ನಿಮಿತ್ತ ಸ್ವಲ್ಪ ಕಾಲ ತಂಗಿದ್ದ ದೇವಂಗಿ ರಾಮಣ್ಣಗೌಡರು (ಮುಂದೆ ತಮ್ಮ ಮಗಳನ್ನು ಧಾರೆಯೆರೆದಿತ್ತು ನನಗೆ ಹೆಣ್ಣು ಕೊಟ್ಟ ಮಾವಂದಿರಾದ ಪೂಜ್ಯರು.) ಅವರಿಗೆ ಭಾವಪೂರ್ವಕವಾಗಿ ಹೇಳಿದ ಒಂದು ಸಂಗತಿಯನ್ನು ತಿಳಿಸಿದ್ದಾರೆ. ನನ್ನ ತಂದೆಯ ತಂದೆ ಓಬಯ್ಯಗೌಡರು ಇನ್ನೂ ಅರಿಯದ ಬಾಲಕನಾಗಿದ್ದಾಗ, ಸಿಡುಬಿನ ಮಾರಿಗೆ ‘ಮನೆಯ’ವರೆಲ್ಲ ತುತ್ತಾಗಿ, ಮನೆ ತೋಟ ಗದ್ದೆಗಳನ್ನು ನೋಡಿಕೊಳ್ಳುವ ಗಂಡಸರು ಯಾರೂ ಇರದಿದ್ದಾಗ, ಹೊಲೆಯರವನೊಬ್ಬನು (ಬೇಲರು ಎಂದು ಆ ಜಾತಿಯ ಅಸ್ಪೃಶ್ಯರನ್ನು ಕರೆಯುತ್ತಾರೆ, ಸ್ಥಳೀಯರು.) ತನ್ನ ಸ್ವಾಮಿಭಕ್ತಿ ಸೇವಾನಿಷ್ಠೆಗಳಿಂದ ಕುಪ್ಪಳಿಯ ಮನೆತನಕ್ಕೆ ಹೇಗೆ ನೆರವಾಗಿ ಅದನ್ನು ಉಳಿಸಿದನು ಎಂಬ ವಿಷಯವನ್ನು ತುಂಬಾ ಭಾವವಶರಾಗಿ ವರ್ಣಿಸಿದರಂತೆ. ನನ್ನ ಮಾವನವರು, ಸಾಮಾನ್ಯವಾಗಿ ಭಾವವಶರಾಗುವವರಲ್ಲದವರು ಹಾಗೆ ಕಣ್ಣು ಕೆಂಪಾಗಿ ಹನಿಗೂಡಿ ಮಾತನಾಡಿದ್ದನ್ನು ಕಂಡು ಸ್ವಾಮಿಜಿಗೆ ಆಶ್ಚರ್ಯವಾಯಿತಂತೆ: ಅಂತೂ ಆ ಬೇಲರವನು ನನ್ನ ಮುತ್ತಜ್ಜನನ್ನು ಸಂರಕ್ಷಿಸಿ, ಲೋಕಕ್ಕೆ ‘ಕುವೆಂಪು’ ಆಗಮಿಸುವಂತೆ ಮಾಡಿ, ಕೃತಜ್ಞತೆಗೆ ಪಾತ್ರನಾಗಿದ್ದಾನೆ!

ನನ್ನ ತಂದೆಯ ಅಜ್ಜ ಓಬಯ್ಯಗೌಡರಿಗೆ ಮೂರು ಜನ ಹೆಂಡಿರಂತೆ. ಸರಡೊಳ್ಳಿ ಮನೆಯ ಹೆಣ್ಣಾಗಿದ್ದ ಅವರ ಎರಡನೆಯ ಹೆಂಡತಿಯ ಹೊಟ್ಟೆಯಲ್ಲಿ ಹುಟ್ಟಿದ ಇಬ್ಬರು ಮಕ್ಕಳಲ್ಲಿ-ಒಂದು ಗಂಡು, ಒಂದು ಹೆಣ್ಣು-ಮಂಜಪ್ಪಗೌಡರು ನನ್ನ ತಂದೆಯ ತಂದೆ. ಅವರಿಗೆ ಕೊಳಾವರದಿಂದ ಹೆಣ್ಣು ತಂದಿತ್ತಂತೆ. ಆ ನನ್ನ ಅಜ್ಜಿಗೆ ನನ್ನ ತಂದೆ ಏಕಮಾತ್ರಪುತ್ರರಾಗಿ ಜನಿಸಿದರು: ಕುಪ್ಪಳಿ ವೆಂಕಟಯ್ಯಗೌಡರು.

ಮೈಲಿಯ ಮಾರಿ ಕುಪ್ಪಳಿ ಮನೆ ಖಾಲಿಯಾಗುವಂತೆ ಮಾಡಿದ್ದರೂ ಬೇನೆಗೆ ಬಲಿಯಾಗದೆ ಉಳಿದುಕೊಂಡಿದ್ದ ಅದರ ಒಂದೆ ಒಂದು ಕೊಳೆ-ಓಬಯ್ಯಗೌಡರು-ಪ್ರವರ್ಧಮಾನರಾಗಿ ಬಹು ಬೇಗನೆ ಮನೆ ತುಂಬಿ ತುಳುಕುವಂತೆ ಮಾಡಿದರು. ಗಂಡು ಹೆಣ್ಣು ಸೇರಿ ಅವರಿಗೆ ಮೂವರು ಹೆಂಡಿರಲ್ಲಿ ಎಂಟು ಮಕ್ಕಳಾದರು: ಮೊದಲನೆಯ ಹೆಂಡತಿಯಲ್ಲಿ ಇಬ್ಬರು; ಎರಡನೆಯವರಲ್ಲಿ ಇಬ್ಬರು; ಮೂರನೆಯವರಲ್ಲಿ ನಾಲ್ವರು! ನಾನು ಹುಟ್ಟಿ ಬುದ್ದಿ ತಿಳಿಯುವ ಕಾಲಕ್ಕೆ ಇದ್ದ ಮೂವರು ಗಂಡಸರಲ್ಲಿ ಒಬ್ಬೊಬ್ಬರೂ ಆ ಒಬ್ಬೊಬ್ಬ ತಾಯಂದಿರನ್ನು ಪ್ರತಿನಿಧಿಸುವವರಾಗಿದ್ದರು.

ನನ್ನ ಪ್ರಜ್ಞೆ ಕಣ್ಣು ತೆರೆದಂದು ಕುಪ್ಪಳಿಯಲ್ಲಿದ್ದ ಮೂವರು ಗಂಡಸರೆಂದರೆ: ಅಜ್ಜಯ್ಯ, ಅಪ್ಪಯ್ಯ, ದೊಡ್ಡ ಚಿಕ್ಕಪ್ಪಯ್ಯ, ಅಜ್ಜಯ್ಯ,-ಬಸಪ್ಪಗೌಡರು, ಮುತ್ತಜ್ಜ ಓಬಯ್ಯಗೌಡರ ಮೂರನೆಯ ಹೆಂಡತಿಯ ಮೂರನೆಯ ಮಗ; ಅಪ್ಪಯ್ಯ-ವೆಂಕಟಯ್ಯಗೌಡರು,-ಎರಡನೆಯ ಹೆಂಡತಿಯ ಮಗ ಮಂಜಯ್ಯಗೌಡರ ಒಬ್ಬನೆ ಮಗ; ದೊಡ್ಡ ಚಿಕ್ಕಪ್ಪಯ್ಯ,-ರಾಮಯ್ಯಗೌಡರು,-ಮೊದಲನೆಯ ಹಂಡತಿಯ ಮಗ ಮಾನಪ್ಪಗೌಡರ ಎರಡನೆಯ ಮಗ, ಅಂದರೆ ನಾವೆಲ್ಲ ಅಜ್ಜಯ್ಯ ಎಂದು ಕರೆಯುತ್ತಿದ್ದ ಬಸಪ್ಪಗೌಡರು ನೇರವಾಗಿ ಮುತ್ತಜ್ಜ ಓಬಯ್ಯಗೌಡರ ಮಕ್ಕಳು, ಉಳಿದ ಇಬ್ಬರೂ ಮುತ್ತಜ್ಜನ ಮೊಮ್ಮಕ್ಕಳು.