ಮೈಲಿಯಿಂದ ಬಚಾವಾಗಿ ಸುಮಾರು ೧೯೨೮ ನೆಯ ಜನವರಿ ತುದಿಗೆ ಆಶ್ರಮಕ್ಕೆ ಮರಳಿದೆನೆಂದು ತೋರುತ್ತದೆ. ಆಗಿನ ಕ್ರಮದಂತೆ ಎರಡು ವರ್ಷದ ಎಂ.ಎ. ಕೋರ್ಸಿಗೆ ಮೊದಲನೆಯ ವರ್ಷ ಪರೀಕ್ಷೆಯಿರುತ್ತಿರಲಿಲ್ಲ; ಮೊದಲನೆಯ ವರ್ಷದ ವಿದ್ಯಾರ್ಥಿಗಳೆಲ್ಲರನ್ನೂ ಮುಂದಿನ ವರ್ಷಕ್ಕೆ ಅಪರೀಕ್ಷಿತವಾಗಿಯೆ ತಳ್ಳಿಬಿಡುತ್ತಿದ್ದರು! ಆದ್ದರಿಂದ ಕಾಯಿಲೆ ಬಿದ್ದೆದ್ದು ಬಂದಿದ್ದ ನನಗೆ ಪರೀಕ್ಷೆಗಾಗಿ ಓದಿಕೊಳ್ಳುವ ಹೊರೆ ಹೊಣೆ ಬೇಗೆ ಬಸವಳಿಕೆ ಯಾವುದೂ ಇರಲಿಲ್ಲ. ಆಶ್ರಮದ ಪ್ರಶಾಂತ ವಾತಾವರಣದಲ್ಲಿ ಸ್ವಾಮಿಜಿಯ ಸಂತೋಷಮಯ ಪ್ರಬೋಧಕರ ಸಾನ್ನಿಧ್ಯದಲ್ಲಿ ಮಿತ್ರರ ಸಾಂಗತ್ಯದಲ್ಲಿ ಕಾಲ ಕಳೆದು ಮಾರ್ಚ ತಿಂಗಳ ತುದಿಗೆ ಬೇಸಗೆ ರಜಾಕ್ಕೆ ಊರಿಗೆ ಹೋದೆ.

೧೯೨೮ ನೆಯ ತುದಿಯಲ್ಲಿ ಕುಪ್ಪಳಿಗೆ ಒದಗಿದ ದುರಂತದ ಛಾಯೆ ನನ್ನ ಸದಾ ಉದ್ದೀಪ್ತವಾಗಿರುತ್ತಿದ್ದ ಚಿತ್ತಕ್ಕೆ ಅಷ್ಟೇನೂ ಬರಲಿಲ್ಲ. ನನ್ನ ತಮ್ಮ, ರಾಮಣ್ಣಗೌಡರ ಹಿರಿಯ ಮಗ, ತಿಮ್ಮಯ್ಯ ಗೃಹಕೃತ್ಯದ ಹೊರೆ ಹೊತ್ತು ಸಾಗಿಸುತ್ತಿದ್ದ. ಕಾಡು ಬೆಟ್ಟ ಅಲೆಯುವುದರಲ್ಲಿ, ಪ್ರಕೃತಿ ಸೌಂದರ್ಯ ಸವಿಯುವುದರಲ್ಲಿ, ಬೇಟೆಯಲ್ಲಿ, ಕತೆ ಕವಿತೆ ಪ್ರಬಂಧ ಬರೆಯುವುದರಲ್ಲಿ, ಕಾವ್ಯ ಮತ್ತು ತತ್ತ್ವಗ್ರಂಥಗಳನ್ನು ಓದುವುದರಲ್ಲಿ ಮತ್ತು ನನ್ನ ಅನುಭವಗಳನ್ನೂ ವಿಚಾರಗಳನ್ನೂ ಕುರಿತು ಇತರರೊಡನೆ ಮಾತಾಡುವುದರಲ್ಲಿ-(ಅವರಿಗೆ ಗ್ರಾಹ್ಯವಾಗುತ್ತದೆಯೊ ಇಲ್ಲವೊ ಎಂಬ ವಿಚಾರದ ಗೋಜಿಗೆ ಹೋಗದೆ)-ಕವಿಶೈಲಕ್ಕೋ ಕಾಡಿನ ತೊರೆಯ ನಡುವಣ ಬಂಡೆಯ ನೆತ್ತಿಗೂ ಹೋಗಿ ಕುಳಿತು ಧ್ಯಾನಿಸುವುದರಲ್ಲಿ ಬೇಸಗೆ ಕಳೆಯಿತು.

(ಬಹಳ ದಿನಗಳಿಂದ ನಿಂತುಹೋಗಿದ್ದ ‘ನೆನಪಿನ ದೋಣಿಯಲ್ಲಿ’ಯ ಅರುವತ್ತನೆಯ ಅಧ್ಯಾಯ ಪ್ರಾರಂಭಮಾಡಿ ಮೇಲಿನ ಎರಡು ಪ್ಯಾರಾಗಳನ್ನು ಬರೆದಿದ್ದೆ. ಅಷ್ಟರಲ್ಲಿ ಮಲೆನಾಡಿನಲ್ಲಿ ನನಗೆ ಆಪ್ತ ಸಹೃದಯ ಚೇತನರಾಗಿದ್ದ ಅಲಿಗೆ ಪುಟ್ಟಯ್ಯನಾಯಕರ ನಿಧನವಾರ್ತೆ ತಲುಪಿತು. ಅವರ ಮಗ, ಡಾ. ಪ್ರಭುಶಂಕರ ಅವರಿಗೆ ಬರೆದಿದ್ದ ಕಾರ್ಡನ್ನು ಅವರು ನನಗೆ ಕಳುಹಿಸಿದ್ದರು. ಅವರಿಗೆ ಸುಮಾರು ೮೦ ರ ಹತ್ತಿರ ಹತ್ತಿರ ವಯಸ್ಸಾಗಿತ್ತು. ತುಂಬ ಕಠೋರ ತಪಸ್ವಿ. ಹಿಡಿದ ವ್ರತವನ್ನು ಕಠಿಣವಾಗಿರಲಿ ತಪ್ಪದೆ ಆಚರಿಸುತ್ತಿದ್ದರು. ಈ ‘ನೆನಪಿನ ದೋಣಿಯಲ್ಲಿ’ಗೆ ವಿಷಯ ಸಂಗ್ರಹ ಮಾಡುವುದರಲ್ಲಿ ನನಗೆ ಅಮೂಲ್ಯ ನೆರವಿತ್ತಿದ್ದರು. ‘ಶ್ರೀರಾಮಾಯಣದರ್ಶನಂ’ ಮೊದಲುಗೊಂಡು ನನ್ನ ಕೃತಿಗಳನ್ನೆಲ್ಲ ಓದಿದ್ದರು. ಗಾಂಧೀಜಿಯ ಭಕ್ತರಾಗಿಯೂ ಅನೇಕ ಕರ್ಮಕ್ರಿಯೆಗಳಲ್ಲಿ ಭಾಗಿಯಾಗಿದ್ದರು. ನಿಷ್ಠಾವಂತ ಖಾದಿಧಾರಿ. ಹಿರಿಕೊಡಿಗೆಯಲ್ಲಿ ನಾನು ಭೂಸ್ಪರ್ಶಮಾಡಿದ್ದ ಜಾಗದಲ್ಲಿ ಒಂದು ಏನಾದರೂ ಸ್ಮಾರಕ ಸ್ಥಾಪಿಸಿಬೇಕೆಂಬುದು ಅವರ ಹಂಬಲವಾಗಿತ್ತು. ಅದಕ್ಕಾಗಿ ಅದರ ಈಗಿನ ಒಡೆಯರಾಗಿರುವ ಶ್ರೀ ವೆಂಕಟರಮಣಭಟ್ಟರು ಎಂಬುವವರಿಂದ ಆ ಜಾಗವನ್ನು ಕುವೆಂಪು ವಿದ್ಯಾವರ್ಧಕ ಟ್ರಸ್ಟಿಗೆ ರಿಜಿಸ್ಟರ್ ಮಾಡಿಸಿ ಕೊಟ್ಟಿದ್ದಾರೆ.  ಮುಂದುವರಿದ ಕೃಷಿಕಾರರಾಗಿ ಹೆಸರು ವಾಸಿಯಾಗಿ ಇತರ ಒಕ್ಕಲುಮಕ್ಕಳಿಗೆ ಆದರ್ಶಪ್ರಾಯರಾಗಿ ಧ್ಯೇಯವಸ್ತುವಾಗಿದ್ದರು. ಹಿಂದಿಯಲ್ಲಿಯೂ ಪಾಂಡಿತ್ಯವಿತ್ತು. ಅವರನ್ನು ಒಬ್ಬ ‘ಅಜ್ಞಾತ ಮಹಾಪುರುಷ’ ಎಂದು ಕರೆದರೆ ಸತ್ಯದೂರವಾಗುವುದಿಲ್ಲ. ಆದರೆ ಅವರ ನಿಧನ ಪತ್ರಿಕೆಗಳಿಗೆ ವಾರ್ತೆಯಲ್ಲ. ಅದು ‘ಅಪತ್ರಿಕಾ ವಾರ್ತೆ!’ ಪತ್ರಿಕೆಗಳ ಬಾಯಿಗೆ ಬಿದ್ದು ಎಂಜಲಾಗದಿರುವ ಅವರ ಬದುಕನ್ನು ಧನ್ಯವೆಂದೇ ಹೇಳಬೇಕು! ಈ ‘ನೆನಪಿನ ಡೋಣಿ’ಯಲ್ಲಿ ಹಿಂದೆಯೂ ಅವರ ವಿಷಯ ಬಂದಿದೆ. ಮತ್ತೆ ಮುಂದೆಯೂ ಬರುತ್ತದೆ. ಶ್ರೀಗುರು ಅವರ ಆತ್ಮಕ್ಕೆ ತನ್ನ ಪಾದಾರವಿಂದದಲ್ಲಿ ಶಾಂತಿಯಿಯಲಿ!)

೧೯೨೮ – ೨೯ ನೆಯ ವರ್ಷಾವಧಿ ನನ್ನ ಬದುಕಿನಲ್ಲಿ ಒಂದು ಗಮನಾರ್ಹ ಘಟ್ಟವಾಗಿದೆ. ಆ ಅವಧಿಯಲ್ಲಿ ಉದಯೋನ್ಮುಖವಾಗುತ್ತಿದ್ದ ನನ್ನ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ತನ್ನ ಪುಷ್ಪಗಳನ್ನರಳಿಸಿತು. ಭಾವಗೀತೆಗಳು, ಸಣ್ಣಗೀತೆಗಳು, ದೀರ್ಘ ಕವನಗಳು, ನಾಟಕಗಳು ನಾನಾ ಪ್ರಕಾರದ ಪ್ರಯತ್ನ ಪ್ರಯೋಗಗಳಲ್ಲಿ ಮೈದೋರಿದುವು. ಆಶ್ರಮದ ಆಧ್ಯಾತ್ಮಿಕ ಜೀವನಕ್ಕೆ ವಿಶ್ವವಿದ್ಯಾನಿಲಯದ ಸಾಹಿತ್ಯಿಕ ಜೀವನವು ನೂತನೋಜ್ವಲ ಕಾಂತಿಯಿತ್ತು ನನ್ನ ಹೃದಯ ಹುರಿದುಂಬಿತು. ಪೂಜ್ಯ ಸ್ವಾಮಿ ಸಿದ್ದೇಶ್ವರಾನಂದರಂತಹ ತ್ಯಾಗೀಶ್ವರ ಸಾನಿಧ್ಯಕ್ಕೆ ಪೂಜ್ಯ ವೆಂಕಣ್ಣಯ್ಯನವರಂತಹ ಪ್ರಾಧ್ಯಾಪಕವರೇಣ್ಯರ ಸ್ನೇಹಮಯ ಸಹವಾಸ ದೊರೆತು ನನ್ನ ಚೇತನಕ್ಕೆ ಮೋಡದ ನಾಡಿನಲ್ಲಿ ಮಳೆಬಿಲ್ಗರಿ ರೆಕ್ಕೆ ಮೂಡಿತು! ಆದರೆ ಆ ಕಾಲದಲ್ಲಿ ನಾನು ದಿನಚರಿ ಬರೆಯದಿದ್ದುದರಿಂದ ನನ್ನ ನೆನಪಿಗೆ ವಿವರ ದೊರೆಯುತ್ತಿಲ್ಲ. ಕೊಳಲು, ನವಿಲು, ಪಾಂಚಜನ್ಯ ಮೊದಲಾದ ಕವನಸಂಗ್ರಹಗಳಲ್ಲಿರುವ ಕವನಗಳೆಲ್ಲ ಆ ಕಾಲದಲ್ಲಿ ರಚಿತವಾದುವು. ನೆನಪಿಗೆ ಬರುವ ಕೆಲವನ್ನು ನಮೂದಿಸುತ್ತೇನೆ.

ಬಿ.ಎಂ. ಶ್ರೀಯವರು ಶ್ರೀಮನ್ ಮಹಾರಾಜ ಕೃಷ್ಣರಾಜ ಒಡೆಯರು ಪಟ್ಟಕ್ಕೆ ಬಂದ ಇಪ್ಪತ್ತೈದು ವರ್ಷಗಳ ನೆನಪಿಗಾಗಿ ಒಂದು ರಜತೋತ್ಸವ ಪದಕವನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಹುಮಾನವಾಗಿ ಸ್ಥಾಪಿಸಿದರು. ಆ ಸ್ಪರ್ಧೆಗೆ ಕವಿತೆ ಕಳುಹಿಸುವವರು ಹೊಸ ಕನ್ನಡದ ಹೊಸ ಛಂದಸ್ಸಿನಲ್ಲಿಯೇ ಬರೆದು ಕಳುಹಿಸಬೇಕೆಂಬುದು ಒಂದು ವಿಧಿಯಾಗಿತ್ತು. ಆ ಕವಿತೆ ಸುಮಾರು ಮುನ್ನೂರು ಪಂಕ್ತಿಗಳಿರಬಹುದೆಂದೋ ಏನೋ ನಿಗಧಿಯಾಗಿತ್ತು. ನಾನು ಬೇಸಗೆ ರಜಕ್ಕೆ ಮನೆಗೆ ಹೋಗಿದ್ದಾಗ ‘ಕುಮುದಿನಿ’ ಎಂಬ ಕಥನಕವನ ರಚಿಸಿದೆ. ಆ ಕಥೆ ವರ್ಡ್ಸ್‌ವರ್ತ್ ಕವಿಯ ಸುಪ್ರಸಿದ್ಧ ಕಥನಕವನ Laodamia  (ಲೊಡಾಮಿಯಾ)ದ ಆಧಾರದ ಮೇಲೆ ಬರೆದದ್ದು. ಆದರೆ ಭಾಷಾಂತರವಲ್ಲ. ಅಲ್ಲದೆ ಭಾರತೀಯವಲ್ಲದ್ದೆಲ್ಲವನ್ನೂ ತಿರಸ್ಕರಿಸಿ, ಭಾರತೀಯ ಸ್ತ್ರೀಯ ಆದರ್ಶಕ್ಕೆ ಅನುಗುಣವಾಗುವಂತೆ ರಚಿತವಾಗಿದೆ. ಅದರ ಛಂದಸ್ಸು ವಿಶೇಷ ಗಮನಾರ್ಹವಾಗಿದೆ. ಅದರ ಗಣವಿನ್ಯಾಸ ಭಾಮಿನಿಯದ್ದಾದರೂ ಅದು ಷಟ್ಪದಿಯಲ್ಲ. ಬಹುಪದಿ. ಮೂರು-ನಾಲ್ಕು ಮಾತ್ರೆಯ ಎರಡು ಗಣಗಳ ಪಂಕ್ತಿಗಳು ಎರಡು, ಮೂರು, ನಾಲ್ಕು, ಐದಾರು, ಹತ್ತು ಇಪ್ಪತ್ತು ಬಂದ ತರುವಾಯ ಒಂದು ಗಿಡ್ಡ ಪಂಕ್ತಿ ಮೂರುನಾಲ್ಕು ಮಾತ್ರೆಯ ಒಂದು ಗಣ ಮತ್ತು ಕೊನೆಯ ಅಕ್ಷರ ಒಂದು ಗುರು-ಹೀಗೆ ಬರುತ್ತದೆ.

ಕವನಕ್ಕೆ ಸ್ಪರ್ಧೆಯ ಮೊದಲನೆಯ ವರ್ಷವೆ, ನನಗೆ ಆ ಪದಕ ದೊರೆಯಿತು. ಅದನ್ನು ಆ ವರ್ಷವೆ (೧೯೨೮) ಘಟಿಕೋತ್ಸವದಲ್ಲಿ ನನಗೆ ನೀಡಲಾಯಿತು. ಯಾವ ಡಿಗ್ರಿಗಲ್ಲದಿದ್ದರೂ ಆ ಪದಕ ಸ್ವೀಕಾರಕ್ಕಾಗಿಯೆ ನಾನು ಘಟಿಕೋತ್ಸವದ ಉಡುಪು ಧರಿಸಿ ಹೋಗಬೇಕಾಯಿತು! ನಾನು ಅದನ್ನು ತೆಗೆದುಕೊಳ್ಳಲು ವೇದಿಕೆಯನ್ನಡರಿದಾಗ ಜಗನ್ಮೋಹನ ಅರಮನೆಯಲ್ಲಿ ನೆರೆದಿದ್ದ ಸಹಸ್ರಾರು ಜನರು ಕೈಚಪ್ಪಾಳೆಯಿಕ್ಕಿ ಜಯಘೋಷ ಮಾಡಿದ್ದು ಚೆನ್ನಾಗಿ ನೆನಪಿದೆ. ಅದಕ್ಕೆ ಮುಂಚೆಯೆ ನಾನು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪ್ರೊ. ಕೃಷ್ಣಶಾಸ್ತ್ರಿಗಳು ಏರ್ಪಡಿಸಿದ್ದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರಿಂದಲೊ ಏನೊ ನಾನಾಗಲೆ ಜನಮನಕ್ಕೆ ಗೋಚರನಾಗಿದ್ದೆ!

ಆ ವರ್ಷವೆ ಡಿಸೆಂಬರ್ ತಿಂಗಳು ೧೫ ನೆಯ ತಾರೀಖಿನಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಲನದ ವಿಚಾರ ಸಾಹಿತ್ಯ ಪ್ರೇಮಿಗಳಿಗೆ ಈಗಾಗಲೆ ಸುಪರಿಚಿತವಾಗಿರುವ ಸುಪ್ರಸಿದ್ಧ ಸಂಗತಿಯಾಗಿರುವುದರಿಂದ ಆ ವಿಚಾರ ನಾನೇನೂ ಇಲ್ಲಿ ಬರೆಯುವುದು ಅನಾವಶ್ಯಕ. ಆ ನನ್ನ ಅಧ್ಯಕ್ಷ ಭಾಷಣ ‘ಸಾಹಿತ್ಯ ಪ್ರಚಾರ’ ಎಂಬ ಹೊತ್ತಗೆಯಲ್ಲಿ ಅಚ್ಚಾಗಿದೆ. ಆದರೆ ಒಂದು ಸ್ಮರಣೀಯವಾದ ವಿಷಯವನ್ನು ಅದರ ಸ್ವಾರಸ್ಯಕ್ಕಾಗಿ ಇಲ್ಲಿ ಪ್ರಸ್ತಾಪಿಸುತ್ತೇನೆ. ಸಮ್ಮೇಲನದ ಮರುದಿವಸ ಪ್ರೊ. ಕೃಷ್ಣಶಾಸ್ತ್ರಿಗಳು ಸೆಂಟ್ರಲ್ ಕಾಲೇಜಿನ ವಿಶಾಲವಾದ ಗಣಿತಭವನದಲ್ಲಿ ನನ್ನ ಕವನ ವಾಚನ ಏರ್ಪಡಿಸಿದ್ದರು. ಭವನ ಕಿಕ್ಕಿರಿದಿತ್ತು. ಬೆಂಗಳೂರಿನ ಗಣ್ಯವ್ಯಕ್ತಿಗಳೆಲ್ಲ ಬಂದಿದ್ದರು. ಡಿ.ವಿ. ಗುಂಡಪ್ಪನವರು, ಎಸ್.ಜಿ.ಶಾಸ್ತ್ರಿಗಳು, ಮಾಸ್ತಿ ವೆಂಕಟೇಶ ಐಯ್ಯಂಗಾರರು ಇತ್ಯಾದಿ. ಎಸ್.ಜಿ.ಶಾಸ್ತ್ರಿಗಳು ಸದಸ್ಯರ ಮೊದಲನೆಯ ಪಂಕ್ತಿಯಲ್ಲಿಯೆ ಆಸೀನರಾಗಿದ್ದು ವೇದಿಕೆಯಿಂದ ನೇರ ನನ್ನ ಕಣ್ಣಿಗೆ ಬೀಳುತ್ತಿದ್ದರು. ಆಗಾಗಲೇ ತಕ್ಕಮಟ್ಟಿಗೆ ಪ್ರಸಿದ್ಧವಾಗಿದ್ದ ನನ್ನ ಅನೇಕ ಕವನಗಳನ್ನು ಒಂದಾದಮೇಲೆ ಒಂದರಂತೆ, ಸದಸ್ಯವರ್ಗದ ತರುಣ ಮಿತ್ರರು ಕಳುಹಿಸುತ್ತಿದ್ದ ಚೀಟಿಯ ಮಾಲೆಗಳನ್ನು ಅವಲೋಕಿಸಿ, ಹಾಡುತ್ತಿದ್ದೆ, ಓದುತ್ತಿದ್ದೆ, ನಾಟಕೀಯವಾಗಿ ವಾಚನ ಮಾಡುತ್ತಿದ್ದೆ. ಚಪ್ಪಾಳೆಯ ಸುರಿಮಳೆ ಭವನವನ್ನು ಅನುರಣಿಸಿ ತೊಯ್ಯಿಸಿತ್ತು! ಕಡೆಗೊಮ್ಮೆ ಸಭೆಯ ಒಕ್ಕೊರಲೊ ಎಂಬಂತೆ ‘ಕಿಂದರಿಜೋಗಿ!’ ‘ಕಿಂದರಿಜೋಗಿ’ ಎಂಬ ಉಗ್ಗಡ ಕೇಳಿಸಿತು. ಸರಿ, ಬೊಮ್ಮನಹಳ್ಳಿಯ ಕಿಂದರಿಜೋಗಿಯನ್ನು ತುಸು ರಾಗವಾಗಿ ಅಭಿನಯಪೂರ್ವಕವಾಗಿ ಲಾವಣಿಯಂತೆ ಅನ್ನತೊಡಗಿದೆ! ತಟಸ್ಥವಾಗಿದ್ದ ಸದಸ್ಯಸ್ತೋಮ ಸಚಲವಾಯಿತು. ಸಭಾಸಮುದ್ರ ನಗೆಯ ಮೆಲುಗಾಳಿಗೆ ತೆರೆ ತೆರೆಯಾಯಿತು. ಬರಬರುತ್ತಾ ಹಾಸ್ಯದ ಕಡೆಗೋಲಿಗೆ ಸಿಕ್ಕಿದಂತೆ ಅಲ್ಲೋಲಕಲ್ಲೋಲವಾಯಿತು. ನಗೆ ಅಟ್ಟಹಾಸದ ಮಟ್ಟಕ್ಕೇರಿತು. ಹಾಸ್ಯರಸ ಸಮುದ್ರವೆ ಅಟ್ಟಹಾಸದ ಬಿರುಗಾಳಿಗೆ ಸಿಕ್ಕಿದಂತೆ ಕಡೆಗೊಂಡು ಭೋರ್ಗರೆಯಿತು. ಕರತಾಡನದ ಸಿಡಿಲೂ ಗುಡುಗೂ ಕಿವಿ ಚಿಟ್ಟಿಡುವಂತೆ ಭವನವನ್ನಪ್ಪಳಿಸಿತು. ‘ಭಟ್ಟಾಶಾಸ್ತ್ರೀಯ ಜನಿವಾರ’ ‘ಶೇಷಕ್ಕನ ನುಣ್ಣನೆ ಫಣಿವೇಣಿ’ ಬರುವ ಹೊತ್ತಿಗೆ ನಕ್ಕೂನಕ್ಕೂ ಸುಸ್ತಾಗುವಂತಾಗಿತ್ತು ಇಡಿಯ ಸಭೆ. ನೋಡುತ್ತೇನೆ: ಎದುರು ಸಾಲಿನಲ್ಲಿ ಕೂತಿದ್ದ ಹಿರಿಯ ಗಂಭೀರ ವ್ಯಕ್ತಿಗಳೂ ಹೊಟ್ಟೆ ಹುಣ್ಣಾಗುವಂತೆ ಬಿದ್ದುಬಿದ್ದು ಕೇಕೆನಗು ನಗುತ್ತಿದ್ದಾರೆ. ಜರೀಪೇಟೆ ಧರಿಸಿ ಕೋಟು ಪ್ಯಾಂಟುಗಳಿಂದ ಸೂಟುಧಾರಿಯಾಗಿ ಕುಳಿತಿದ್ದ ಎಸ್.ಜಿ.ಶಾಸ್ತ್ರಿಗಳು ಗಾಂಭೀರ್ಯವನ್ನೆಲ್ಲ ಗಾಳಿಗೆ ತೂರಿ ಬಿದ್ದುಬಿದ್ದು ನಗುತ್ತಿದ್ದಾರೆ,  ಹುಡುಗರಂತೆ. ತಡೆದುಕೊಳ್ಳಲು ಕೈಯನ್ನು ಬಾಯಿಗೆ ಅಡ್ಡವಿಟ್ಟು ಪ್ರಯತ್ನಿಸುತ್ತಿದ್ದಾರೆ. ಆಗದು! ಕಣ್ಣಿನಲ್ಲಿ ನೀರು ಬೇರೆ ಸುರಿಯುತ್ತಿದೆ. ನನ್ನನ್ನೆ ನೇರವಾಗಿ ನೋಡಿ ಹೊಟ್ಟೆ ಕುಲುಕಿ ಮೈಬಾಗಿ ಕುರ್ಚಿಯಿಂದ ಬೀಳುವರೋ ಎಂಬಂತೆ ನಗುತ್ತಿದ್ದಾರೆ, ನಗುತ್ತಿದ್ದಾರೆ, ನಗುತ್ತಿದ್ದಾರೆ! ಆ ದೃಶ್ಯ ಈಗಲೂ ನನಗೆ ಕಣ್ಣಿಗೆ ಕಟ್ಟಿದಂತಿದೆ.

ಆ ವರ್ಷವೆ ಸಂಭವಿಸಿದ ಇನ್ನೊಂದು ವಿಶೇಷವೆಂದರೆ ನನಗೆ ಬೆಂಗಳೂರು ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘದವರು ಏರ್ಪಡಿಸಿದ್ದ ಸಣ್ಣಕಥೆಗಳ ಸ್ಪರ್ಧೆಯಲ್ಲಿ ನನ್ನ ‘ಯಾರೂ ಅರಿಯದ ವೀರ’ಕ್ಕೆ ಮುದ್ದಣ ಸ್ವರ್ಣಪದಕ ಬಹುಮಾನವಾಗಿ ಬಂದದ್ದು. ಆ ಸಣ್ಣ ಕಥೆ ನಾನು ಬರೆದಿದ್ದು ೧೯ನೆಯ ಮಾರ್ಚ ೧೯೨೭. ಆ ವರ್ಷ ಕಾಲೇಜು ಕರ್ಣಾಟಕ ಸಂಘದ ವಾರ್ಷಿಕೋತ್ಸವದಲ್ಲಿ ಅದನ್ನು ಸ್ವೀಕರಿಸಲು ನಾನು ಬೆಂಗಳೂರಿಗೆ ಹೋಗಿರಲಿಲ್ಲ. ಆದ್ದರಿಂದ ಅದನ್ನು ೧೯೨೮ನೆಯ ವರ್ಷದ ಮಹಾರಾಜ ಕಾಲೇಜಿನ ವಾರ್ಷಿಕೋತ್ಸವದಲ್ಲಿ ನನಗೆ ಕೊಡಲು ಪ್ರೊ.ವೆಂಕಣ್ಣಯ್ಯನವರು ನಿರ್ಧರಿಸಿದ್ದರು. ಅದಕ್ಕೆ ಇನ್ನೂ ಒಂದು ಸಕಾರಣ: ಪ್ರೊ. ವೆಂಕಣ್ಣಯ್ಯನವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದಲ್ಲಿ ಅಧ್ಯಕ್ಷರಾಗಿದ್ದವರು ಮೈಸೂರಿಗೆ ಪ್ರೊಫೆಸರ್ ಆಗಿ ಬಂದಮೇಲೆ ಇಲ್ಲಿಯ ಕರ್ಣಾಟಕ ಸಂಘಕ್ಕೆ ಅಧ್ಯಕ್ಷರಾಗಿದ್ದರು. ಅಲ್ಲಿ ಅವರಿಂದ ಸ್ವೀಕರಿಸದಿದ್ದುದರ ತಪ್ಪಿಗೆ ಇಲ್ಲಿಯಾದರೂ ಅವರಿಂದಲೆ ಸ್ವೀಕರಿಸಬೇಕಾದದ್ದು!

ಆ ವರ್ಷ ಜರುಗಿದ ಮತ್ತೂ ಒಂದು ಸಂಗತಿ: ನನ್ನ ‘ಯಮನ ಸೋಲು’ ನಾಟಕವನ್ನು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳೂ ಅಧ್ಯಾಪಕರೂ ಸೇರಿ ವಾರ್ಷಿಕೋತ್ಸವದಲ್ಲಿ ಅಭಿನಯಿಸಿದ್ದು. ‘ಯಮನ ಸೋಲು’ ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾಗಿ ಸಾಹಿತ್ಯ ಲೋಕವನ್ನೆ ಚಕಿತಗೊಳಿಸಿತ್ತು, ಕನ್ನಡದಲ್ಲಿ ಮೊತ್ತಮೊದಲನೆಯ ಸರಳ ರಗಳೆಯ ನಾಟಕವಾಗಿ! ಅದನ್ನು ಕಾಲೇಜಿನಲ್ಲಿ ಆಡಿದ ಮೇಲಂತೂ ಎಲ್ಲರೂ ಸರಳ ರಗಳೆಯಲ್ಲಿಯೆ ಮಾತಾಡತೊಡಗಿದ್ದರು! ‘ಗಾಳಿವಟ್ಟೆಯೊಳಿಂತು ವೇಗದಿಂದೋಡುತಿಹೆ, ಯಾವೆಡೆಗೆ, ಯಮದೂತ?’ ಎಂದು ಸ್ನೇಹಿತನು ಸ್ನೇಹಿತನನ್ನು ಬೀದಿಯಲ್ಲಿ ಸಂಧಿಸಿದಾಗ ಕೇಳುತ್ತಿದ್ದ ಪ್ರಶ್ನೆಯಾಗಿತ್ತು!

ಅದನ್ನು ಅಭಿನಯಿಸಿದ ದಿನ ಪ್ರಿನ್ಸಿಪಾಲ್ ಆಗಿದ್ದ ಜೆ.ಸಿ. ರಾಯಲೋ ಅವರೂ ಬಂದಿದ್ದರು. ನನಗಿನ್ನೂ ನೆನಪಿದೆ: ನಾನೂ ಬಿ.ಎಂ.ಶ್ರೀಕಂಠಯ್ಯನವರೂ ಹೊರಗಡೆ ವರಾಂಡದಲ್ಲಿ ಮಾತಾಡುತ್ತಿದ್ದಲ್ಲಿಗೆ ಬಂದ ರಾಲೋ ಅವರು “ಏನು? ಗುರು ಶಿಷ್ಯ ಇಬ್ಬರು ಕವಿಗಳೂ ’ಏನೋ ಸಂವಾದದಲ್ಲಿ ತೊಡಗಿರುವಂತಿದೆ! ಆಡಲಿರುವ ಹೊಸ ಬ್ಲಾಂಕ್‌ವರ್ಸ್ ನಾಟಕವನ್ನು ಕುರಿತೋ?’ ಎಂಬರ್ಥದಲ್ಲಿ ಇಂಗ್ಲಿಷಿನಲ್ಲಿ ನಗುತ್ತಾ ಕೇಳಿ, ತಮ್ಮ ಶ್ಲಾಘನೆ ಮತ್ತು ಸಂತೋಷಗಳನ್ನು ವ್ಯಕ್ತಪಡಿಸಿದ್ದು.”

ಆ ವರ್ಷ ಮತ್ತೊಂದು ಸಂಭ್ರಮದ ವಿಷಯವಾಗಿತ್ತು ‘ಕಿರಿಯ ಕಾಣಿಕೆ’ಯ ಪ್ರಕಟಣೆ. ಅದರಲ್ಲಿ ಪ್ರಕಟವಾದ ಕವನಗಳ ಸಂಖ್ಯೆಯಲ್ಲಿ ನನ್ನವೇ ಅಧಿಕ, ಸುಮಾರು ಏಳು. ಅವುಗಳಲ್ಲಿ ಸುಮಾರು ೨೧ ಪುಟಗಳನ್ನು ಆಕ್ರಮಿಸಿತ್ತು ’ಬೊಮ್ಮನಹಳ್ಳಿಯ ಕಿಂದರಿಜೋಗಿ’ ಒಂದೇ! ಯಮನ ಸೋಲಿನಂತೆಯೆ ಬೊಮ್ಮನಹಳ್ಳಿಯ ಕಿಂದರಜೋಗಿಯೂ ಏಕ್‌ದಂ ಕರ್ಣಾಟಕವನ್ನೆಲ್ಲ ಬೆರಗುಗೊಳಿಸಿತ್ತು. ಅದರಲ್ಲಿಯೂ ಮಕ್ಕಳ ಲೋಕವನ್ನು. ಎಷ್ಟರಮಟ್ಟಿಗೆಂದರೆ, ಪಂಜೆ ಮಂಗೇಶರಾಯರು ಪ್ರೊ. ವೆಂಕಣ್ಣಯ್ಯನವರಿಗೆ ಕಾಗದ ಬರೆದು, ನನ್ನ ಅನುಮತಿ ಪಡೆದು, ತಮ್ಮ ಬಾಲ ಸಾಹಿತ್ಯ ಮಾಲೆಯಲ್ಲಿ ಅದನ್ನು ಸಾವಿರಗಟ್ಟಲೆ ಅಚ್ಚುಮಾಡಿಸಿದ್ದರು!

ಆ ವಾರ್ಷಿಕೋತ್ಸವದ ದಿನ ಕಾಲೇಜಿನ ಸಭಾಂಗಣ ತುಂಬಿ ತುಳುಕುತ್ತಿತ್ತು. ಜನರಿಂದ ಮತ್ತು ಹಿಗ್ಗಿನಿಂದ. ಕನ್ನಡ ನವೋದಯದ ಅರುಣೋದಯದ ಕಾಲವದು: ಯಃಕಶ್ಚಿತನಾದರೂ ಕನ್ನಡಕ್ಕೆ ತುಸುವೆ ಕಾಣಿಕೆ ನೀಡಿದ್ದರೂ ಅದನ್ನು ಮಹಾ ಎಂದೇ ಭಾವಿಸಿ ಉಘೆಯಿಸುತ್ತಿದ್ದ ನಿರಸೂಯೆಯ ಕಾಲ! ನಗರದ ಸಾರ್ವಜನಿಕ ಮಹನೀಯರೂ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಷ್ಟೇ ಆತ್ಮೀಯತೆಯಿಂದ ಮತ್ತು ಅಭಿಮಾನದಿಂದ ಕಾಲೇಜಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಕಾಲ. ಅಂದಿನ ಸಭೆಗೆ ಪ್ರಿನ್ಸಿಪಾಲ್ ರಾಲೋ ಆದಿಯಾಗಿ ಪ್ರಾಧ್ಯಾಪಕರೂ ವೈಸ್‌ಛಾನ್ಸಲರ್ ಆಗಿದ್ದ ಎನ್.ಎನ್. ಸುಬ್ಬರಾಯರು, ಅಸಿಸ್ಟೆಂಟ್ ಕಮಿಷನರ್ ಆಗಿದ್ದ ಮಾಸ್ತಿವೆಂಕಟೇಶ ಐಯ್ಯಂಗಾರರು ಮೊದಲಾದ ಗಣ್ಯರೂ ದಯಮಾಡಿಸಿದ್ದರು. ಪ್ರೊ. ವೆಂಕಣ್ಣಯ್ಯನವರ ದೀರ್ಘೋನ್ನತ ವ್ಯಕ್ತಿತ್ವವೇ ಒಂದು ಆಕರ್ಷಣೆಯಾಗಿತ್ತು ಆಹ್ವಾನಿತರಿಗೆ!

‘ಯಮನ ಸೋಲು’ ನಾಟಕ ಅದ್ಭುತವಾಗಿ ಪ್ರದರ್ಶಿತವಾಯಿತು. ಕನ್ನಡದ ಸೌಭಾಗ್ಯದ ಬಾಗಿಲು ತೆರೆಯಿತೆಂಬಂತೆ ನಾಟಕ ಬರೆದವನನ್ನು ಹೊಗಳಿದರು,  ಅಭಿನಂದಿಸಿದರು. ಕೊನೆಯಲ್ಲಿ ಕವಿಗೆ ಹಾರ ಹಾಕಲೆಂದು ಅಲ್ಲೆಲ್ಲಿಯೂ ಸಂಕೋಚದಿಂದ ಹುದುಗಿದ್ದ ನನ್ನನ್ನು ಮಿತ್ರರು ರಂಗವೇದಿಕೆಗೆ ಎಳೆತಂದರು. ಸರಿ, ಕೊರಳೊಡ್ಡಿ ಹಾರ ಹಾಕಿಸಿಕೊಂಡೆ. ಮುದುಗಿಕೆಗೆ ಅದು ಸಾಲದಂತೆ ಸಭೆಯ ಮುಂದಣ ಸಾಲಿನಲ್ಲಿ ಕುಳಿತಿದ್ದ ಮಾಸ್ತಿ ವೆಂಕಟೇಶ ಐಯ್ಯಂಗಾರರು ಕೈಚಪ್ಪಾಳೆ ಹೊಡೆಯುತ್ತಾ ನನ್ನನ್ನು ನಿರ್ದೇಶಿಸಿ ‘ಇವರೇಯೊ ಕಿಂದರಿಜೋಗಿ?’ ಎಂದು ಸಭೆಗೆಲ್ಲ ಕೇಳುವಂತೆ ಗಟ್ಟಿಯಾಗಿ ಕೇಳಿಬಿಟ್ಟರು! ಕೈಚಪ್ಪಾಳೆಯ ಬೋರಾಟದೊಡನೆ ಗೊಳ್ಳೆಂದಿದ್ದ ಸದ್ದು ನನ್ನ ಕಿವಿಗಪ್ಪಳಿಸಿತು. ಅಷ್ಟೇನೂ ನಾಗರಿಕವಲ್ಲ ಎಂಬೊಂದು ಕಾಡು ಕಾಡು ಭಂಗಿಯಿಂದ ವೇದಿಕೆಯತ್ತ ಓಡಿ ತಲೆಮರೆಸಿಕೊಂಡೆ!

ಮರುದಿನ ಬೀದಿಯಲ್ಲಿ ನನ್ನನ್ನು ಎದುರುಗೊಂಡ ಗೆಳೆಯರು ಕೇಳಿದ ಮೊದಲ ಪ್ರಶ್ನೆ: ‘ಗಾಳಿವಟ್ಟೆಯೊಳಿಂತು ವೇಗದಿಂದೋಡುತಿಹೆ ಯಾವೆಡೆಗೆ, ಯಮದೂತ?’ ಯಾಕೆಂದರೆ ನಿನ್ನೆ ನಾನು ವೇದಿಕೆಯಿಂದ ಓಟಕಿತ್ತದ್ದು ಹಾಗಿತ್ತಂತೆ!

*          *          *          *

ಆ ಎರಡು ವರ್ಷಗಳ ಅವಧಿಯಲ್ಲಿ ಗದ್ಯ ಪದ್ಯ ಬರವಣಿಗೆ ತಕ್ಕಮಟ್ಟಿಗೆ ವಿಪುಲವಾಗಿಯೆ ಸಾಗಿತ್ತು. ೧೯೨೭ ರಲ್ಲಿ ಸರಳರಗಳೆಯ ಪ್ರಯೋಗದ ಪರಿಣಾಮವಾಗಿ ‘ಕರಿಸಿದ್ಧ’ ರಚಿತವಾಗಿದ್ದಂತೆ ‘ಪ್ರಾಯಶ್ಚಿತ್ತ’ ಎಂಬ ಮತ್ತೊಂದು ಸರಳರಗಳೆಯ ಸುಮಾರು ೨೨೫ ಪಂಕ್ತಿ ದೀರ್ಘ ಕಥನಕವನವನ್ನೂ ಬರೆದಿದ್ದೆ. ಅದು ಎಲ್ಲಿಯೂ  ಇನ್ನೂ ಅಚ್ಚಾಗಿಲ್ಲ. ಹಸ್ತಪ್ರತಿಯಲ್ಲಿ ಅದಕ್ಕೆ ೨೬-೯-೧೯೨೭ ಎಂದು ತಾರೀಖು ಹಾಕಿದೆ. ಅದಕ್ಕಿಂತಲೂ ಮುಖ್ಯವಾಗಿ, ಐದು ಗಣಗಳೂ ತುದಿಯಲ್ಲಿ ಮೂರು ಮಾತ್ರೆಯ ಅಥವಾ ಕೊನೆಯ ಅಕ್ಷರವನ್ನು ಗುರು ಎಂದು ಭಾವಿಸುವುದಾದರೆ ನಾಲ್ಕು ಮಾತ್ರೆಯ ಒಂದು ಗಣವೂ ಇರುವ ದೀರ್ಘಪಂಕ್ತಿಯ ಛಂದಸ್ಸಿನಲ್ಲಿ ರಚಿತವಾಗಿರುವ ಸುಮಾರು ಏಳುನೂರು ಪಂಕ್ತಿಯ ’ಮಹಾದರ್ಶನ’ ಎಂಬ ಸುದೀರ್ಘ ಕಾವ್ಯ ರಚಿತವಾಗಿದೆ, ೨೯-೭-೧೯೨೮ ರಲ್ಲಿ. ಬಿ.ಎಂ.ಶ್ರೀಯವರು ತಮ್ಮ ‘ರಜತಮಹೋತ್ಸವ ಪ್ರಗಾಥ’ದಲ್ಲಿ ಹೆಕ್ಸಾಮೀಟರ್‌ಗೆ ಸಂವಾದಿಯಾಗಿ ಆ ಛಂದಸ್ಸಿನ ಪ್ರಯೋಗವನ್ನು ನಡೆಸಿದ್ದರು. ಆ ಕಾವ್ಯದ ವಸ್ತು ಸ್ವಾಮಿ ವಿವೇಕಾನಂದರು ತಮ್ಮ ಭಾರತ ಪರಿವ್ರಾಜನದಲ್ಲಿ ಕನ್ಯಾಕುಮಾರಿಯ ತುತ್ತತುದಿಯ ವಸ್ತು ಸ್ವಾಮಿ ವಿವೇಕಾನಂದರು ತಮ್ಮ ಭಾರತ ಪರಿವ್ರಾಜದಲ್ಲಿ ಕನ್ಯಾಕುಮಾರಿಯ ತುತ್ತತುದಿಯ ಕಡಲ ನಡುವಣ ಬಂಡೆಯನ್ನೇರಿ ಕುಳಿತು ಧ್ಯಾನ ಮಾಡುತ್ತಿದ್ದಾಗ ಕಂಡ ‘ದರ್ಶನ’. ಅದನ್ನು ಎಲ್ಲಿಯೂ ಪ್ರಕಟಿಸಿಲ್ಲ. ಅದರ ವಸ್ತು, ಭಾವ, ಕಲ್ಪನೆ ಮತ್ತು ದರ್ಶನಗಳು ಮಹೋನ್ನತವಾಗಿರುವುದಾದರೂ ಭಾಷೆ ಆ ಮಟ್ಟಕ್ಕೆ ಏರಿಲ್ಲ. ಮಾದರಿಗಾಗಿ ಇಲ್ಲಿ ನಾಲ್ಕಾರು ಪಂಕ್ತಿಗಳನ್ನು ಕೊಡುತ್ತೇನೆ:

ಮುನ್ನೀರಿನಿಂದುದಿಸಿ ಅರಳಿದಂಬುಜದಂತೆ ಕಂಗೊಳಿಸಿ ಮೆರೆವ
ಸಿಂಹಳದ ಹೂಮಣಿಯ ಮೇಲೆ, ಯುಗಯುಗಗಳಿಂದಡಿಯೂರಿ ನಿಂತು,
ಇಳೆಗೆ ಸಗ್ಗದ ಸೊಗವ ಹಾರೈಸಿ, ಜಯಿಸಿ ಸೆರೆಗೈಯಲೆಂದೆಳಸಿ,
ಧ್ಯಾನದೊಳು ನಿಂತಿರುವ ಭಾರತಾಂಬೆಯ ಮಂಗಳದ ಅಡಿಯ ಗುಡಿಯ
ಕಾಲುಂಗುರದ ಹೊಳೆವ ಮಣಿಕಲಶವೆಂಬಂತೆ, ಬಿತ್ತರದ ಕಡಲಿ-
ನಿಂದೆದ್ದು ರಾಜಿಸುವ ಕನ್ಯಾಕುಮಾರಿಯರೆಯಲ್ಲಿ, ಗುರುವರನು,
ಪರಮಹಂಸರ ಪರಮಶಿಷ್ಯ ಚೂಡಾಮಣಿಯು, ಸಾಧು ಭೈರವನು,
ಬೂದಿ ಮುಚ್ಚಿದ ಕೆಂಡದಂತಿರ್ದ್ದ ಭರತಭೂಮಿಯನೂದಿ ಬೆಳಗಿ
ತೊಳಗಿಸಿದ ದಿವ್ಯಾತ್ಮನಮಲತರ ವೇದಾಂತಿ, ವೀರಸಂನ್ಯಾಸಿ,
ಶ್ರೀ ವಿವೇಕಾನಂದ ಯೋಗೀಶ ತಾಂ ಕುಳಿತು ಜಾನಿಸಿದನಿಂತು:

‘ರಾಮರಾವಣರ ಯುದ್ಧ’ (೧೬-೯-೧೯೨೭) ಮೊದಲಾದ ಮಲೆನಾಡಿನ ಚಿತ್ರಗಳಲ್ಲಿ ಪ್ರಕಟವಾಗಿರುವ ಪ್ರಬಂಧಗಳೂ ಆ ಕಾಲದಲ್ಲಿಯೆ ಮೂಡಿದ್ದು, ಪ್ರೊ. ವೆಂಕಣ್ಣಯ್ಯ ಮತ್ತು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದಿಂದ ಹೊರಡುತ್ತಿದ್ದ ಪ್ರಬುದ್ಧ ಕರ್ಣಾಟಕದ ಸಂಪಾದಕರಾಗಿದ್ದ ಪ್ರೊ. ಕೃಷ್ಣಶಾಸ್ತ್ರಿಗಳ ಪ್ರೋತ್ಸಾಹ ಸ್ಫೂರ್ತಿಗಳ ಪರಿಣಾಮವಾಗಿ. ‘ನನ್ನ ಗೋಪಾಲ’ ಎಂಬ ಮಕ್ಕಳ ನಾಟಕವನ್ನೂ (೪-೮-೧೯೨೮) ಸ್ಕೌಟುಗಳಿಗಾಗಿ ಅಗಲೆ ಬರೆದದ್ದು. ಆ ಮಕ್ಕಳ ನಾಟಕವನ್ನು ಓದಿ ಪ್ರೊ. ಕೃಷ್ಣಶಾಸ್ತ್ರಿಗಳು ನನಗೆ ಬರೆದ ಕಾಗದ ಅದ್ಭುತವಾಗಿದೆ:

೧೩-೩-೧೯೩೦ ರಲ್ಲಿ:

My dear Puttappa

I received and read immediately — this morning your `ನನ್ನ ಗೋಪಾಲ’- As I have written to Mr. Sastri it is a little gem containing in itself the essence of ಭಗವದ್ಗೀತಾ and ಭಾಗವತ. I have read the book with tears in my eyes – and feel like a piece of clean linen for it, Iam considered to be generally cold and cutting but, believe me, Iam  over – whelmed by a feeling of exaltation after reading it and feel incapable of doing any dull routine duty. Never was literature made such a useful handmaid of Religion. May God and Goddess of Learning continue to go with you in your career of service!

yours affectionately
A.R. KRISHNA SASTRI

*          *          *

‘ಸಂನ್ಯಾಸಿ ಮತ್ತು ಇತರ ಕಥೆಗಳು’ ಅಲ್ಲಿ ಪ್ರಕಟವಾಗಿರುವ ಸಣ್ಣ ಕತೆಗಳೆಲ್ಲ ಆ ಅವಧಿಯಲ್ಲಿಯೆ ಸೃಷ್ಟಿಯಾಗಿದ್ದು: ಯಾರೂ ಅರಿಯದ ವೀರ (೨೧-೬-೨೭) ಪಾಪ! ಎಳಗರು ಅಥವಾ ಶ್ರೀಮನ್ಮೂಕವಾಗಿತ್ತು (೯-೭-೨೮). ಆರಾಣೆ ಮೂರುಕಾಸು (೧೯-೩-೨೮) – (ಆಶ್ರಮಕ್ಕೆ ಮತ್ತೆಮತ್ತೆ ಬಂದು ಸಹಕರಿಸುತ್ತಿದ್ದ ಗಣಿತಶಾಸ್ತ್ರದ ಪ್ರೊಫೆಸರ್ ಮಾಧ್ವ ಅವರು ಹೇಳಿದ ಅವರ ಸ್ವಂತ ಜೀವನದ ಸಂಗತಿಯನ್ನು ಆಧರಿಸಿ ಕಥೆ) – ’ಕ್ರಿಸ್ತನಲ್ಲ ಪಾದ್ರಿಯ ಮಗಳು’ (೨೬-೬-೨೭), ‘ಸಂನ್ಯಾಸಿ’ (೩೧-೮-೨೮ ರಿಂದ ೧-೯-೨೮), ಇತ್ಯಾದಿ.

೧೯೨೭ ನೆಯ ಅಕ್ಷೋಬರ್ ತಿಂಗಳು ೨೧ ನೆಯ ತಾರೀಖಿನಲ್ಲಿ ಬರೆದ ಒಂದು ಪ್ರಬಂಧ ‘ಕನ್ನಡ ಸಾಹಿತ್ಯದ ಮೇಲೆ ಇಂಗ್ಲಿಷ್ ಸಾಹಿತ್ಯದ ನವೀನ ಪ್ರಭಾವ’ ತಿರುಮಲೆ ತಾತಾಚಾರ್ಯ ಶರ್ಮರು ಹೊರಡಿಸುತ್ತಿದ್ದ ‘ವಿಶ್ವ ಕರ್ಣಾಟಕ’ ಪತ್ರಿಕೆಯ ಒಂದು ವಾರ್ಷಿಕ ಸಂಚಿಕೆಗಾಗಿ ಬರೆದದ್ದು. ಅದನ್ನು ಬೇರೆ ಎಲ್ಲಿಯೂ ಇನ್ನೂ ಪ್ರಕಟಿಸಿಲ್ಲ. ಅದರಲ್ಲಿ ನವೋದಯದ ಉತ್ಸಾಹವು ಪ್ರಶಂಸೆಯ ಚಾಮರ ಹಿಡಿದು ಸರಸ್ವತಿಗೆ ಚವರಿಯಿಕ್ಕುತ್ತಿರುವುದನ್ನು ಕಾಣುತ್ತೇವೆ. ಹಾಗೆಯೆ ‘ಕಾವ್ಯವಿಹಾರ’ದಲ್ಲಿ ತರುವಾಯ ಪ್ರಕಟವಾಗಿರುವ ‘ಸೀತಾವನವಾಸ’ದ ಬರವಣಿಗೆಯ ಕಾಲ ೧೦-೮-೧೯೨೮. ಆಗ ಅದು ‘ಪ್ರಭುದ್ಧ ಕರ್ಣಾಟಕ’ದಲ್ಲಿ ಪ್ರಕಟವಾಯಿತು. ಅದರ ವಿಚಾರವಾಗಿರುವ ಸ್ವಾರಸ್ಯದ ನೆನಪನ್ನು ಇಲ್ಲಿ ಹೇಳಬೇಕೆಂಬಾಸೆ: ಆ ಪ್ರಬಂಧ ಇನ್ನೂ ಹಸ್ತಪ್ರತಿಯಲ್ಲಿದ್ದಾಗಲೆ ಪ್ರೊ. ವೆಂಕಣ್ಣಯ್ಯನವರು ಅದನ್ನು ಮಹಾರಾಜಾ ಕಾಲೇಜಿನ ಕರ್ಣಾಟಕ ಸಂಘದಲ್ಲಿ ಓದಬೇಕೆಂದು ಹೇಳಿದರು. ಅದಕ್ಕಾಗಿಯೆ ಸಂಘದ ಕಾರ್ಯದರ್ಶಿಗೆ ಹೇಳಿ ಒಂದು ಸಭೆ ಕರೆಯಿಸಿದರು. ವೆಂಕಣ್ಣಯ್ಯನವರೆ ಅಧ್ಯಕ್ಷತೆ ವಹಿಸಿದ್ದರು. ಆ ಸಭೆಗೆ ವಿದ್ಯಾರ್ಥಿ ಅಧ್ಯಾಪಕರಲ್ಲದೆ ನಗರದ ಆಸಕ್ತರೂ ಬಂದಿದ್ದರು. ವಿದ್ಯಾಭ್ಯಾಸದ  ಇಲಾಖೆಯಲ್ಲಿ ಅಧಿಕಾರಿಯಾಗಿದ್ದು ಕೆಲಸದ ಮೇಲೆ ಮೈಸೂರಿಗೆ ಬಂದಿದ್ದ, ಮುಂದೆ ‘ನಾಗರಿಕ’ ‘ಧರ್ಮದುರಂತ’ ‘ರಂಗಣ್ಣನ ಕನಸಿನ ದಿನಗಳು’ ಮೊದಲಾದವುಗಳನ್ನೂ ಬರೆದು ಪ್ರಸಿದ್ಧರಾದ ಎಂ.ಆರ್. ಶ್ರೀನಿವಾಸಮೂರ್ತಿಯವರೂ ಬಂದಿದ್ದರು. ಸಭೆ ಮುಗಿದು ನಾವೆಲ್ಲ ಮಾತಾಡುತ್ತಾ ಮನೆಗಳಿಗೆ ಹಿಂತಿರುಗುತ್ತಿದ್ದಾಗ ಶ್ರೀನಿವಾಸಮೂರ್ತಿಯವರು ನನ್ನನ್ನೂ ನನ್ನ ಪ್ರಬಂಧವನ್ನೂ ಬಹಳವಾಗಿ ಹೊಗಳಿದರು. ನಾನು ’ನಿಮ್ಮ ವಿದ್ಯಾರ್ಥಿಯನ್ನೆ ಹೊಗಳಿ ನಿಮ್ಮನ್ನೆ ಹೊಗಳಿಕೊಳ್ಳುತ್ತಿದ್ದೀರಿ’ ಎಂದು ವಿನೋದವಾಗಿದೆ. ‘ಅದು ಹೇಗಪ್ಪಾ?’ ಎಂದರವರು ಅಚ್ಚರಿಯಿಂದ. ನಾನು ‘ತೀರ್ಥಹಳ್ಳಿಯ ಎ.ವಿ. ಸ್ಕೂಲಿನಲ್ಲಿ ನೀವು ಹೆಡ್ಮಾಸ್ಟರಾಗಿದ್ದಿರಿ ನಮಗೆ!’ ಎಂದಾಗ ಅವರಿಗೆ ತುಂಬ ಸಂತೋಷವಾಯಿತು. ಆದರೆ ಅನೇಕ ಪೇಟೆ ಹುಡುಗರ ಮಧ್ಯೆ ಹಳ್ಳಿ ಹುಡುಗನಾಗಿ ಅಜ್ಞಾತನಾಗಿದ್ದ ನನ್ನ ನೆನಪು ಅವರಿಗೆ ಉಂಟಾಗಲೊಲ್ಲದೆ ಹೋಯ್ತು!

*          *          *

ಕನ್ನಡದ ಎಂ.ಎ. ತರಗತಿಗಳು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭವಾದ ವರ್ಷವೆ ನಾನು ಅದಕ್ಕೆ ಸೇರಿದಂತೆಯೆ ಡಿ.ಎಲ್.ನರಸಿಂಹಾಚಾರ್ಯರೂ ಸೇರಿದ್ದರು. ನಾನು ಬಿ.ಎ.ಗೆ ತತ್ತ್ವಶಾಸ್ತ್ರವನ್ನು ವಿಶೇಷ ವಿಷಯವಾಗಿ ಅಭ್ಯಸಿಸಿದ್ದು ಎಂ.ಎ.ಗೂ ಆ ವಿಷಯವನ್ನೆ ಆರಿಸಿಕೊಂಡಿದ್ದೆ. ಆದರೆ ಪ್ರೊ. ಕೃಷ್ಣಶಾಸ್ತ್ರಿಗಳ ಪ್ರೇರಣೆಯಿಂದ ಕನ್ನಡ ಎಂ.ಎ.ಗೆ ಸೇರಿದ್ದೆ. (ಆ ವಿಷಯವಾಗಿ ನನ್ನ ಲೇಖನ ‘ಆ ಅಮೃತ ಕ್ಷಣ’ ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾಗಿದ್ದು, ಈಗ ‘ಉದಯರವಿ ಪ್ರಕಾಶನ’ದವರು ಪ್ರಕಟಿಸಿರುವ ‘ಮನುಜಮತ-ವಿಶ್ವಪಥ’ದಲ್ಲಿ ಅಚ್ಚಾಗಿದೆ.) ನರಸಿಂಹಾಚಾರ್ಯರು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ವಿಜ್ಞಾನ ವಿಷಯಗಳನ್ನು ತೆಗೆದುಕೊಂಡು ಬಿ.ಎಸ್.ಸಿ.ಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದರೂ ಅವರ ಒಲವರ ಕನ್ನಡ ಸಾಹಿತ್ಯದ ಕಡೆ ಇದ್ದುದರಿಂದ ಮೈಸೂರಿಗೆ ಬಂದು ಕನ್ನಡ ಎಂ.ಎ.ಗೆ ಸೇರಿದ್ದರು. ಆ ದೃಷ್ಟಿಯಿಂದ ನಮ್ಮಿಬ್ಬರಿಗೂ ಸಾದೃಶ್ಯವಿತ್ತು. ಬಹುಶಃ ಆ ಸಾದೃಶ್ಯವೇ ಸಾಮಿಪ್ಯಕ್ಕೂ ದಾರಿಯಾಯಿತೋ ಏನೊ?

ನರಸಿಂಹಾಚಾರ್ಯರು ಭಾಷಾಶಾಸ್ತ್ರ ಮತ್ತು ವ್ಯಾಕರಣಗಳಲ್ಲಿ ಸಮರ್ಥ ವಿದ್ಯಾರ್ಥಿಯಾಗಿದ್ದರು. ನನಗೆ ಅವುಗಳಲ್ಲಿ ಅಭಿರುಚಿ ಅಷ್ಟಕ್ಕಷ್ಟೆ: ಪರೀಕ್ಷೆಯ ದೃಷ್ಟಿಯಿಂದ ಮಾತ್ರ ಆಸಕ್ತಿ! ನನಗೆ ಅವುಗಳನ್ನು ಓದಿಕೊಳ್ಳುವುದೆಂದರೂ ಬೇಜಾರು! ಆದ್ದರಿಂದ ನರಸಿಂಹಾಚಾರ್ಯರನ್ನು ನನ್ನಲ್ಲಿದ್ದ ಒಂದು ಹಳೆಯ ಓಲೆಗರಿಯ ಹಸ್ತಪ್ರತಿಯ ನೆವವೊಡ್ಡಿ ಆಶ್ರಮಕ್ಕೆ ಆಕರ್ಷಿಸಿದೆ. ಅದನ್ನು ತುಸುಹೊತ್ತು ಪರಿಶೀಲಿಸಿದ ತರುವಾಯ ಕೇಶಿರಾಜನ ಶಬ್ದಮಣಿದರ್ಪಣದ ಅಧ್ಯಯನಕ್ಕೆ ಅವರಿಂದ ನೆರವು ಪಡೆಯುತ್ತಿದ್ದೆ. ಜೊತೆಗೆ, ನನಗೆ ಚಿಕ್ಕಂದಿನಿಂದಲೂ ಅಭ್ಯಾಸವಾಗಿದ್ದ ನಶ್ಯದ ಸ್ವಾರಸ್ಯವೂ ಕ್ರಮಕ್ರಮೇಣ ಅವರ ಮೂಗಿಗೂ ಹತ್ತುವಂತೆ ಮಾಡಿದೆ. ಅಂತೂ ಓಲೆಗರಿಯ ಹಸ್ತಪ್ರತಿಯ ಮತ್ತು ನಶ್ಯದ ಪಾಶಗಳಿಗೆ ವಶರಾಗಿ ಅವರು ದಿನವೂ ಆಶ್ರಮಕ್ಕೆ ಬಂದು ನನಗೆ ಶಬ್ದಮಣಿದರ್ಪಣದ ಖರ್ಪರ ಕಠಿನ ವಲಯಕ್ಕೆ ಪ್ರವೇಶ ಮಾಡಲು ತುಂಬ ಸಹಾಯ ಮಾಡಿದರು. ಆದರೂ (ನಾನು ನಶ್ಯದ ಪಾಶದಿಂದ ಕೆಲವರ್ಷಗಳಲ್ಲಿಯೆ ಪಾರಾದೆ. ಆದರೆ ನಶ್ಯ ಸೇಯುವುದರಲ್ಲಿ ನನ್ನಿಂದ ದೀಕ್ಷೆ ಪಡೆದಿದ್ದ ಅವರು ಬದುಕಿನ ತುದಿಯವರೆಗೂ ಅದಕ್ಕೆ ನಿಷ್ಠೆಯಿಂದ ನಡೆದುಕೊಂಡರು!) ನನ್ನ ನಶ್ಯ ಅವರಿಗೆ ದಕ್ಕಿದರೂ ಅವರ ವ್ಯಾಕರಣ ಅಷ್ಟೇನೂ ನನಗೆ ದಕ್ಕಲಿಲ್ಲ. ಕನ್ನಡ ಸಾಹಿತ್ಯಕ್ಕೆ ಅದರಿಂದಾದ ಪ್ರಯೋಜನವೆಂದರೆ: ನನ್ನ ‘ಕೇಶಿರಾಜ’ ಎಂಬ ವಿಡಂಬ ಕವನ ರಚನೆ! ಅದು ‘ನವಿಲು’ ಕವನ ಸಂಗ್ರಹದಲ್ಲಿ ಅಚ್ಚಾಗಿದೆ. ನನಗಾಗಿಯೆ ಏರ್ಪಾಡಾಗುತ್ತಿದ್ದ ಅನೇಕ ಸಭೆಗಳಲ್ಲಿ ‘ಕೇಶಿರಾಜ’ ಕವನವನ್ನೋದಿ ಸಹೃದಯರನ್ನು ನಲವೇರಿಸುತ್ತಿದ್ದೆ: ನಗಿಸಿ, ನಗಿಸಿ, ನಕ್ಕೂ ನಕ್ಕೂ! ಕಡೆಗೂ ನರಸಿಂಹಾಚಾರ್ಯರ ಮೇಷ್ಟ್ರಿಕೆಯಿಂದಾದ ಫಲ ಅವರ ವಿದ್ಯಾರ್ಥಿಯಿಂದ ರಚಿತವಾಗಿ ಸುಪ್ರಸಿದ್ದವಾಗಿರುವ ಒಂದು ಸೂತ್ರಪ್ರಾಯದ ಸೂಕ್ತಿ:

ಕವಿಗೆ ಕರ್ಣಂ ಪ್ರಮಾಣಂ
ವ್ಯಾಕರಣಮಲ್ತು:
ವ್ಯಾಕರಣಮೇಕೆಂಬೆಯೇಂ?
ಮರೆವುದಕೆ ಕಲ್ತು!

ಈ ಸಂದರ್ಭದಲ್ಲಿ ನಡೆದ ಒಂದು ಆಶ್ಚರ್ಯಕರವೂ ಅವಿಸ್ಮರಣೀಯವೂ ಆದ ಘಟನೆ ನೆನಪಿಗೆ ಬರುತ್ತದೆ. ಅದನ್ನು ಇದುವರೆಗೂ ನಾನು ಯಾರೊಡನೆಯೂ ಹೇಳಿಲ್ಲ; ಬಹುಶಃ ಅವರೂ ಹೇಳಿರಲಿಕ್ಕಿಲ್ಲ; ಅಥವಾ ಸಂಪೂರ್ಣವಾಗಿ ಮರೆತೂ ಬಿಟ್ಟದ್ದಿರಬಹುದು. ಏಕೆಂದರೆ ನಾನಾಗಲಿ ಅವರಾಗಲಿ ತರುವಾಯ ಪರಸ್ಪರವಾಗಿ ಎಂದೂ ಆ ವಿಚಾರವನ್ನು ಮತ್ತೆ ಎತ್ತಿರಲಿಲ್ಲ. ಈಗ ಎತ್ತುವುದೂ ಸಾಧ್ಯವಲ್ಲದ ಸ್ಥಿತಿಗೆ ಅವರ ಚೈತನ್ಯ ಏರಿಹೋಗಿದೆ (೧೬-೧-೧೯೨೪).

ಒಂದು ದಿನ ಬೆಳಿಗ್ಗೆ, (ಮರಿಯಲ್ಲಪ್ಪ ಹೈಸ್ಕೂಲಿನ ಪಕ್ಕದ ‘ದಿವಾನರ ರಸ್ತೆ’ಯ ಮನೆಯಿಂದ ಕೃಷ್ಣಮೂರ್ತಿಪುರದ ಮತ್ತೊಂದು ಬಾಡಿಗೆ ಮನೆಗೆ ಆಶ್ರಮ ವರ್ಗವಾಗಿತ್ತು.) ಕಾರ್ಯಾರ್ಥವಾಗಿ ಕಾಲೇಜಿಗೆ ಹೋಗುವಾಗ ಕೃಷ್ಣಮೂರ್ತಿಪುರದಲ್ಲಿದ್ದ ಆಶ್ರಮದಿಂದ ಹೊರಟಿದ್ದ ನಾನು ಅಲ್ಲೆಲ್ಲಿಯೋ ಮಧ್ಯೆ ಇರುತ್ತಿದ್ದ ನರಸಿಂಹಾಚಾರ್ಯರ ರೂಮಿಗೆ ಹೋದೆ. ಅವರು ಪುಸ್ತಕಮಯವಾಗಿದ್ದ ಮೇಜಿನ ಎದುರು ಕುರ್ಚಿಯಲ್ಲಿ ಕುಳಿತು ಅಧ್ಯಯನದಲ್ಲಿ ತೊಡಗಿದ್ದರು. ಅವರು ಏನನ್ನು ಓದುತ್ತಿದ್ದರೋ ನನಗೆ ತಿಳಿಯದು. ಮುಂದೆ ನಡೆದ ಘಟನೆಯು ಸ್ವರೂಪದ ಮೇಲೆ ಊಹಿಸಿವುದಾದರೆ, ಆದು ಯಾವುದೊ ಧಾರ್ಮಿಕ, ಆಧ್ಯಾತ್ಮಿಕ ಅಥವಾ ಆನುಭಾವಿಕ ವಿಷಯವನ್ನೋ ವ್ಯಕ್ತಿಯನ್ನೋ ವಸ್ತುವಾಗಿ ಉಳ್ಳ ಗ್ರಂಥವಾಗಿದ್ದಿರಬಹುದು! ನನ್ನನ್ನು ಕಂಡವರೇ ಎದ್ದು ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದರು. ಬಹುಶಃ ತುಸು ಭಾವಸ್ಥಿತಿಯಲ್ಲಿದ್ದರೆಂದು ತೋರುತ್ತದೆ. ತಟಕ್ಕನೆ ತಿರುಗಿ ನನ್ನನ್ನು ಮುಖಾಮುಖಿ ನೋಡುತ್ತಾ, ಗದ್ಗದ ಧ್ವನಿಯಿಂದ “I say! you are my Guru!” ಎಂದರು.

ನಾನು ದಿಗ್‌ಭ್ರಾಂತನಾದಂತೆ ಬೆಚ್ಚಿಬಿದ್ದೆ! ನನಗೇನೂ ಅರ್ಥವಾಗಲಿಲ್ಲ. ನಾನು ಅವರಿಗೆ ಗುರುವಾಗತಕ್ಕಂತಹ ಕೆಲಸ ಏನನ್ನೂ ಮಾಡಿರಲಿಲ್ಲ. ಅದಕ್ಕೆ ಬದಲಾಗಿ ಅವರೇ ಗುರುಸ್ಥಾನದಲ್ಲಿದ್ದರೆಂದು ಹೇಳಬಹುದಾಗಿತ್ತು, ಪಠ್ಯವಿಷಯಗಳಲ್ಲಿ ವ್ಯಾಕರಣ ಭಾಷಾಶಾಸ್ತ್ರಾದಿಗಳಲ್ಲಿ ನನಗೆ ಸಹಾಯ ಮಾಡಿ. ನಾನು ನನಗೆ ಸಹಜವಾಗಿದ್ದ ರೀತಿಯಲ್ಲಿ ಅವರೊಡನೆ ತತ್ತ್ವಶಾಸ್ತ್ರಾದಿ ವಿಷಯಗಳನ್ನು ಕುರಿತು ಮಾತಾಡುತಿದ್ದುದೇನೋ ಉಂಟು.  ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣಪರಮಹಂಸರ ವಿಚಾರವಾಗಿಯೂ ಅವರ ಬೋಧನೆ ಸಾಧನೆಗಳನ್ನು ಕುರಿತೂ ಅವರೊಡನೆ, ಇತರರೊಡನೆ ವಿಚಾರವಾಗಿಯೂ ಅವರ ಬೋಧನೆ ಸಾಧನೆಗಳನ್ನು ಕುರಿತೂ ಅವರೊಡನೆ, ಇತರರೊಡನೆ ಎಂತೊ ಅಂತೆ ಸಂಭಾಷಿಸುತ್ತಿದ್ದುದುಂಟು. ಅಲ್ಲದೆ ನಾನು ಬಿ.ಎ.ಗೆ ತತ್ತ್ವಶಾಸ್ತ್ರವನ್ನೇ ಮುಖ್ಯ ವಿಷಯವನ್ನಾಗಿ ಆರಿಸಿಕೊಂಡಿದ್ದರಿಂದ ಉಪನಿಷತ್ತು ದರ್ಶನಗಳು ಇತ್ಯಾದಿ ಭಾರತೀಯ ತತ್ತ್ವಶಾಸ್ತ್ರಗಳನ್ನೂ ಪಾಶ್ಚಾತ್ಯ ದಾರ್ಶನಿಕರ ತತ್ತ್ವಶಾಸ್ತ್ರಗಳನ್ನೂ ಕುರಿತು ತುಸು ಆವೇಶಪೂರ್ವಕವಾಗಿ ಸಂವಾದಿಸುತ್ತಿದ್ದುದೂ ಉಂಟು. ಅಲ್ಲದೆ ನನ್ನ ಕವನಗಳಲ್ಲಿಯೂ ಆಧ್ಯಾತ್ಮವೇ ತುಸು ಮೇಲುಗೈಯಾಗಿದ್ದು ಅವುಗಳನ್ನು ನಾನು ಭಾವಪೂರ್ಣವಾಗಿ ವಾಚಿಸುತ್ತಿದ್ದುದೂ ಉಂಟು: ಅದರಲ್ಲಿ ತೀ.ನಂ.ಶ್ರೀಕಂಠಯ್ಯ, ಪು.ತಿ.ನರಸಿಂಹಾಚಾರ್, ನಂ.ಶಿವರಾಮಶಾಸ್ತ್ರಿ ಮೊದಲಾದವರೂ ಭಾಗಿಗಳಾಗಿದ್ದರು. ಅವರು ಯಾರಿಗೂ ಗೋಚರಕ್ಕೆ ಬಾರದ ನನ್ನ ಗುರುತ್ವ ನರಸಿಂಹಾಚಾರ್ಯರೊಬ್ಬರಿಗೇ ಬಂದುದೆಂತು? ಅಂತೂ ನಾನು ಕಕ್ಕಾಬಿಕ್ಕಿಯಾದಂತೆ ತುಸು ಮಂದಸ್ಮಿತನಾಗಿ ಮಿತ್ರ ಮಹಾಶಯನ ಮುಖವನ್ನೆ ನೋಡುತ್ತಾ ಶ್ರೀಮನ್ಮೂಕವಾಗಿದ್ದೆ!

ಅವರು ನನ್ನ ಸಂದೇಹಾತ್ಮಕ ಮತ್ತು ಪ್ರಶ್ನಾರ್ಥಕ ಮುಖಮುದ್ರೆಯನ್ನು ಕಂಡು ಮುಂದುವರಿದರು, ಮೊದಲಿನಂತೆ ಇಂಗ್ಲಿಷಿನಲ್ಲಿಯೆ:

I saw your radiant face with a divine halo, just infront of me! With open eyes and complete awareness! I was reading and lifted my head and saw!…

ನಾನು ಆಶ್ಚರ್ಯ ವ್ಯಕ್ತಪಡಿಸಿದೆನೇ ಹೊರತು ಆ ವಿಚಾರವಾಗಿ ಮಾತನಾಡುವ ಅಥವಾ ಅವರ ಕಾಣುವಿಕೆಯ ಅನುಭವವನ್ನು ಕುರಿತು ಚರ್ಚಿಸುವ ಯಾವ ಪ್ರತಿಕ್ರಿಯೆಯನ್ನೂ ತೋರಲಿಲ್ಲ. ಅಂತಹದ್ದೇನೂ ನಡೆಯದಿದ್ದಿದ್ದರೆ ಹೇಗೊ ವರ್ತಿಸಿ, ಬೇರೆ ನಮ್ಮ ಅಧ್ಯಯನ ವಿಷಯದತ್ತ ಗಮನ ಸೆಳೆದು ಮಾತಾಡತೊಡಗಿದೆ. ಅವರೂ ನಡೆದದ್ದ ಮರೆತಂತೆ ಮನದ ಹಿಂದಿಕ್ಕಿ, ತಮ್ಮ ಪ್ರಜ್ಞೆಯನ್ನು ಸದ್ಯಃಪ್ರಕೃತ ವಿಷಯದತ್ತ ಹೊರಳಿಸಿದರು. ಮುಂದೆ ನಮ್ಮಿಬ್ಬರ ದೀರ್ಘಕಾಲದ ಸಹಜೀವನದಲ್ಲಿ ಒಮ್ಮೆಯಾದರೂ ನನ್ನೊಡನೆ ಅವರು ತಮ್ಮ ಹಿಂದಿನ ಅನುಭವದ ಮಾತೆತ್ತಲಿಲ್ಲ; ನಾನೂ ಎಂದೂ ಅದರ ಪ್ರಸ್ತಾಪ ಮಾಡಲಿಲ್ಲ; ನನಗೆ ಒಮ್ಮೊಮ್ಮೆ ಅಂದು ನಡೆದ ಘಟನೆಯ ನೆನಪು ಮರುಕೊಳಿಸುತ್ತಿತ್ತಾದರೂ!

ಇಂಥವೇ ಕೆಲವು ಅನುಭವಗಳು ನನ್ನ ಜೀವನದ ಪಥದಲ್ಲಿ ನನಗೆ ಎದುರಾಗಿವೆ. ತುಸು ವಿಚಿತ್ರವೆಂದು ತೋರುವ ಒಂದನ್ನು ಮಾತ್ರ ಇಲ್ಲಿ ಹೇಳುತ್ತೇನೆ, ಅದು ಸಂಭವಿಸಿದ್ದು ಬಹು ವರ್ಷಗಳ ತರುವಾಯವೆ ಆಗಿದ್ದರೂ: ನನ್ನ ಕೃತಿಗಳನ್ನು ಓದಿ ಮೆಚ್ಚಿಕೊಂಡು ನನ್ನಲ್ಲಿ ಅಪಾರ ಗೌರವ ಶ್ರದ್ಧೆಗಳನ್ನಿಟ್ಟುಕೊಂಡಿದ್ದ-ದೂರವಿದ್ದರೂ ಬಹುಶಃ ಈಗಲೂ ಇಟ್ಟುಕೊಂಡಿರುವ-ಒಬ್ಬ ತರುಣ ಮಿತ್ರರು ತಾವು ಕಂಡ ಒಂದು ‘ದರ್ಶನ’ ವನ್ನು ವರ್ಣಿಸಿದ್ದರು: ರಾತ್ರಿಯ ಆಕಾಶದಂತಿದ್ದ ಒಂದು ಪ್ರದೇಶದಲ್ಲಿ ಎರಡು ದೊಡ್ಡ ಉಜ್ವಲ ನಕ್ಷತ್ರಗಳು ಹೊಳೆದುವಂತೆ. ಒಂದರಲ್ಲಿ ವಿವೇಕಾನಂದರಿದ್ದರಂತೆ; ಮತ್ತೊಂದರಲ್ಲಿ ನಾನಿದ್ದೆನಂತೆ! ಇಬ್ಬರ ಶರೀರಗಳೂ ದೇದೀಪ್ಯಮಾನವಾಗಿ ಕಂಡುವಂತೆ! ತಾವು ಕಂಡ ‘ದರ್ಶನ’ವನ್ನು ವರ್ಣಿಸಿ, ಅವರು ಊಹಿಸಿದ್ದ ಅದರ ಅರ್ಥವನ್ನೂ ನನಗೆ ಹೇಳಿದ್ದರು: ನಾನೂ ವಿವೇಕಾನಂದರಂತೆ ಅಮೇರಿಕಾ ಮೊದಲಾದ ದೂರದ ದೇಶಗಳಿಗೆ ಹೋಗಿ ಜಗದ್ವಿಖ್ಯಾತನಾಗುತ್ತೇನೆ ಎಂದು! ನಾನು ಆಗಲೇ ಅವರ ಸುಲಭಶ್ರದ್ಧೆಗೆ ತಣ್ಣೀರು ಹೊಯ್ದು ನಕ್ಕಿದ್ದೆ. ಏಕೆಂದರೆ, ಅಂದಿಗೂ ಇಂದಿಗೂ, ಅಮೇರಿಕಾಕ್ಕೆ ಹೋಗುವುದನ್ನೂ ನೊಬೆಲ್ ಬಹುಮಾನ ಪಡೆಯುವುದನ್ನೂ ನನ್ನ ಬೆಲೆಗೆ ಅಳತೆಗೋಲುಗಳನ್ನಾಗಿ ಇಡುವವರನ್ನು ಕಂಡಾಗಲೆಲ್ಲ ನಾನು ಅಂಥವರನ್ನು ಪರಿಹಾಸ್ಯಪೂರ್ಣ ತಿರಸ್ಕಾರದಿಂದಲೆ ಕಂಡಿದ್ದೇನೆ!

*          *          *          *