ಅಂದು ನನ್ನ ಕಾವ್ಯೋತ್ಸಾಹ ಎಷ್ಟರಮಟ್ಟಿಗಿತ್ತು ಎಂದರೆ, ನನಗೆ ಸ್ವಾಭಾವಿಕವಾಗಿರುವ ಸ್ಥಾವರ ಪ್ರಕೃತಿಯೂ ಆ ಉತ್ಸಾಹದಿಂದ ದೀಪ್ತವಾಗಿ ಚೇತನಗೊಂಡು, ಕರೆ ಸಹೃದಯಪೂರ್ವಕವೂ ಹೃತ್‌ಪೂರ್ವಕವೂ ಆಗಿದೆ ಎಂದು ಕಂಡು ಬಂದರೆ, ಕರೆದಲ್ಲಿಗೆ ಹೋಗಿ ನನ್ನ ಕವನ ನಾಟಕಗಳನ್ನು ಗಂಟೆಗಟ್ಟಲೆಯಾದರೂ ಸರಿಯೆ. ವಾಚನ ಮಾಡುತ್ತಿದ್ದೆ, ದೊಡ್ಡದೊಡ್ಡ ಸಭೆಗಳಿಗೆಂತೊ ಅಂತೆಯೆ ಸಣ್ಣಸಣ್ಣ ಮಿತ್ರ ಗೋಷ್ಠಿಗಳಿಗೂ.

ಒಮ್ಮೆ ಸ್ವಾಮಿ ಸಿದ್ದೇಶ್ವರಾನಂದರ ಅಪೇಕ್ಷೆಯಂತೆ, ಕೃಷ್ಣಮೂರ್ತಿಪುರಕ್ಕೆ ವರ್ಗವಾಗಿದ್ದ ಆಶ್ರಮದ ನಡುಮನೆಯಲ್ಲಿ ಒಂದು ವಾಚನಗೋಷ್ಠಿ ಏರ್ಪಾಡಾಗಿತ್ತು. ನನ್ನ ‘ಜಲಗಾರ’ ನಾಟಕದ ವಾಚನಕ್ಕಾಗಿಯೆ. ಆಶ್ರಮದ ಗೃಹಸ್ಥ ಮತ್ತು ವಿದ್ಯಾರ್ಥಿ ಭಕ್ತವೃಂದವೆಲ್ಲ ನೆರೆದಿತ್ತು. ನಾ.ಕಸ್ತೂರಿ, ಸ್ವಾಮಿ ಸಿದ್ದೇಶ್ವರಾನಂದರು, ಸ್ವಾಮಿ ನಿಖಿಲಾನಂದರು (ಅವರಿಗೆ ಕನ್ನಡ ಅಷ್ಟೇನೂ ಅರ್ಥವಾಗದಿದ್ದರೂ ಜನೋತ್ಸಾಹದಲ್ಲಿ ಪಾಲುಗೊಳ್ಳುವ ಪ್ರಕೃತಿ ಅವರದಾಗಿತ್ತು.) ಪ್ರಿಯನಾಥ್ ಮಹಾರಾಜ್ (ಸ್ವಾಮಿ ಚಿನ್ಮತ್ರಾನಂದರು), ಶಂಕರ್ ಮಹಾರಾಜ್ (ಸ್ವಾಮಿ ರಂಗನಾಥಾನಂದರು), ತಾತಾಗಾರು (ವೆಂಕಟಸುಬ್ಬಯ್ಯಗಾರು) ಮೊದಲಾದವರು. ಆವೊತ್ತು ಶಿವರಾತ್ರಿಯೊ ಏನೊ ಆಗಿತ್ತೆಂದು ನೆನಪು. ನಾಟಕದ ತುದಿಯಲ್ಲಿ ಶಿವ ಪ್ರತ್ಯಕ್ಷನಾಗುತ್ತಾನೆ ಎಂಬ ಕಾರಣಕ್ಕಾಗಿಯೆ ಶಿವರಾತ್ರಿಯಲ್ಲಿ ಓದಿಸಿಕೊಳ್ಳುವುದಕ್ಕೆ ಹಕ್ಕು ಬಂದಿತ್ತೆಂದು ಭಾವಿಸುತ್ತೇನೆ, ‘ಜಲಗಾರ’ ನಾಟಕಕ್ಕೆ. ಹಾಗೆಂದು ಕೇಳಿಯೆ ಒಬ್ಬ ಲಿಂಗಾಯತ ಶಿವಭಕ್ತ ಗೃಹಸ್ಥರು-ಅವರಿಗೆ ಸಾಹಿತ್ಯಾಭಿರುಚಿಯಾಗಲಿ, ಆಧುನಿಕ ಸಾಹಿತ್ಯದಲ್ಲಿ ಆಸಕ್ತಿಯಾಗಲಿ ಏನೇನೊ ಇರದಿದ್ದರೂ-ಬಂದು ನಾಟಕ ಕೇಳಲು ಕುಳಿತಿದ್ದರು. ಅವರ ಮಗನೊಬ್ಬ ಬನುಮಯ್ಯ ಹೈಸ್ಕೂಲಿನಲ್ಲಿ ಓದುತ್ತಿದ್ದು ಕಸ್ತೂರಿಯವರ ವಿದ್ಯಾರ್ಥಿಯಾಗಿ ಯಾವಾಗಲೂ ಆಶ್ರಮಕ್ಕೆ ಬಂದು ಹೋಗುತ್ತಾ ಸ್ವಾಮಿಗಳಿಗೆ ಸೇವೆ ಸಲ್ಲಿಸುತ್ತಿದ್ದನು. ಆತ ಬಹುಶಃ ತಂದೆಗೆ ಹೇಳಿದ್ದನೆಂದು ತೋರುತ್ತದೆ.

ನಾಟಕ ವಾಚನ ನಡೆಯಿತು. ನಾನು ತಕ್ಕಮಟ್ಟಿನ ಆವೇಶದಿಂದಲೆ ಅಪ್ರಾಸಛಂದಸ್ಸಿನ ಹೊಸ ಶೈಲಿಯಲ್ಲಿ ಅದನ್ನು ಧ್ವನಿಯ ಮಟ್ಟಿಗಾದರು ಅಭಿನಯಪೂರ್ವಕವಾಗುವಂತೆ ವಾಚಿಸಿದೆ. ಶಿವನು ತನ್ನ ಸಂಪ್ರದಾಯದ ವೇಷವನ್ನೆಲ್ಲ ಕಿತ್ತುಬಿಸುಟು ಜಗದ ಜಲಗಾರನ ವೇಷದಿಂದ ಪ್ರತ್ಯಕ್ಷನಾದುದೂ ಜಲಗಾರನ ಕರ್ಮವೇ ತನಗೆ ಮಹತ್ತಾದ ಪೂಜೆಯಾಗಿದೆ ಎಂದು ಲೋಕಕ್ಕೆ ಘೋಷಿಸಿದುದೂ ಸದಸ್ಯವರ್ಗಕ್ಕೆ ಪುಲಕಕಾರಿಯಾಗಿತ್ತು. ಆದರೆ ಆ ಸಂಪ್ರದಾಯದ ಸದ್‌ಗೃಹಸ್ಥ ಶಿವಭಕ್ತನಿಗೆ ಅದೊಂದೂ ಅರ್ಥವಾಗಲಿಲ್ಲ, ಹಿಡಿಸಲೂ ಇಲ್ಲ. ನಾಟಕದ ಹೊಸ ರೀತಿಯ ಕಲಾ ಹೃದಯ ಪ್ರವೇಶವೂ ಅವರಿಂದ ಸಾಧ್ಯವಾಗಲಿಲ್ಲ. ಶಿವನಿಂದ ಅಲಂಕಾರಗಳನ್ನೆಲ್ಲ ಕಿತ್ತುಕೊಂಡು ಅವನನ್ನು ಒಬ್ಬ ಝಾಡಮಾಲಿಯನ್ನಾಗಿ ಮಾಡಿದ್ದು ಆತನ ಸಂಪ್ರದಾಯ ಭಕ್ತಿಗೆ ಮಹಾ ಅಪಚಾರವಾಗಿ ತೋರಿ ಆತನ ಮನದಲ್ಲಿ ತಡೆಯಲಾರದ ಉಗ್ರಕೋಪ ಸಿಡಿಯುತ್ತಿತ್ತು. ವಾಚನ ಮುಗಿದು ಎಲ್ಲರೂ ಮೆಚ್ಚುಗೆಯ ಮನೋಧರ್ಮವನ್ನು ಪ್ರಕಟಿಸುತ್ತಾ ಎದ್ದು ಹೋಗತೊಡಗಿರಲು ಈ ಶಿವಭಕ್ತಿ ತಟಕ್ಕನೆ ಎದ್ದು ನಿಂತು ನನ್ನ ಕಡೆಗೆ ಕೈದೋರುತ್ತಾ ಭಯಂಕರವಾಗಿ “ಶಿವದ್ರೋಹಿ! ಶಿವದ್ರೋಹಿ!” ಎಂದು ಆರ್ಭಟಿಸಿ ಶಿವನಿಂದೆಯಾದಲ್ಲಿ ನಿಲ್ಲಬಾರದು ಎನ್ನುತ್ತಾ ಸಭಾತ್ಯಾಗ ಮಾಡುವವನಂತೆ ರಭಸದಿಂದ ಹೊರಗೆ ನುಗ್ಗಿ ಹೊರಟೇಹೋದನು. ಸ್ವಾಮಿ ಸಿದ್ದೇಶ್ವರಾನಂದರಿಗೆ ಆತನ ವರ್ತನೆ ಅರ್ಥವಾಗದೆ ಮೊದಮೊದಲು ಬೆಕ್ಕಸಪಡುತ್ತಿದ್ದರೂ ನಾ. ಕಸ್ತೂರಿಯವರಿಂದ ವಿಷಯ ತಿಳಿದು ಗಹಗಹಿಸಿ ನಗತೊಡಗಿದರು. ಉಳಿದ ಸ್ವಾಮಿಗಳೂ ಇತರರೂ ಭಾಗಿಗಳಾಗಿದ್ದರು ಆ ನಗೆಯಲ್ಲಿ!

*          *          *

ಆಶ್ರಮ ಒಂಟಿಕೊಪ್ಪಲಿನ ಸ್ವಂತ ಕಟ್ಟಡಕ್ಕೆ ೧೯೩೧ ಆದಿಭಾಗದಲ್ಲಿ ವರ್ಗವಾಗುವ ಮುನ್ನ ಕೃಷ್ಣಮೂರ್ತಿಪುರದ ಆಶ್ರಮದಲ್ಲಿದ್ದಾಗಲೆ (೧೯೨೮-೨೯) ನನ್ನ ಸಾಹಿತ್ಯ ಕಾರ್ಯದ ಕೆಲವು ಪ್ರಧಾನ ಕೃತಿಗಳು ರಚಿತವಾದುವು. ನಾನು ’ಸ್ವಾಮಿ ವಿವೇಕಾನಂದ’ವನ್ನು ಬರೆದುದು ಅಲ್ಲಿಯೆ. ಸ್ವಾಮಿ ನಿಖಿಲಾನಂದರು ‘The Gospel of Sri Ramakrishna’  ಎಂದು  ತರುವಾಯ ಪ್ರಕಟವಾಗಿ ಜಗತ್‌ಪ್ರಸಿದ್ಧವಾಗಿರುವ ಬಂಗಾಳಿಯಲ್ಲಿ ‘ಮ’ ಬರೆದ ‘ಶ್ರೀರಾಮಕೃಷ್ಣ ಕಥಾಮೃತ’ವನ್ನು ಆಗ ಅಲ್ಲಿಯೆ ಅನುವಾದ ಮಾಡುತ್ತಿದ್ದರು. ಅವರಿಂದ ಅದರ ಪ್ರಯೋಜನವನ್ನೂ ಪಡೆಯುತ್ತಿದ್ದೆ. ಸ್ವಾಮಿ ಸಿದ್ದೇಶ್ವರಾನಂದರಂತೂ ದಿನದಿನವೂ ಅದರ ಪ್ರಗತಿಯನ್ನು ವಿಚಾರಿಸಿ ಸಲಹೆ ಕೊಟ್ಟು ಸಂತೋಷಿಸುತ್ತಿದ್ದರು. ಅದೆಲ್ಲದರ ಫಲವಾಗಿ ‘ಸ್ವಾಮಿ ವಿವೇಕಾನಂದ’ ಹದಿನೇಳು ದಿನಗಳಲ್ಲಿಯೆ ಸಿದ್ದವಾಗಿಬಿಟ್ಟಿತು. ಆ ಕಾಲದಲ್ಲಿಯೆ ‘ಟೆಂಪೆಸ್ಟ್’ ಎಂಬ ಷೇಕ್ಸ್ಪಿಯರ್ ಮಹಾಕವಿಯ ನಾಟಕದ ಅನುವಾದವೂ ಎರಡು ಮೂರು ದಿನಗಳಲ್ಲಿ ‘ಬಿರುಗಾಳಿ’ ಎಂದು ನಾಮಕರಣಗೊಂಡು ಸಿದ್ಧವಾಯಿತು (೪-೮-೧೯೨೯). ಅದಿನ್ನೂ ಹಸ್ತಪ್ರತಿಯಲ್ಲಿದ್ದಾಗಲೆ ಆ ವರ್ಷವೆ ಮಹಾರಾಜಾ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಅದನ್ನು ಆಡಿದರು. ಮನಶ್ಯಾಸ್ತ್ರದ ಅಧ್ಯಾಪಕ ಎನ್.ಎಸ್‌.ನಾರಾಯಣಶಾಸ್ತ್ರಿಯವರ ಉತ್ಸಾಹಪೂರ್ಣ ಸಮರ್ಥ ಮುಂದಾಳುತನದಲ್ಲಿ ನಟೇಶ್ ಮೊದಲಿಯಾರ್, ಬಿ.ಕೃಷ್ಣಮೂರ್ತಿ. ಎ.ಸಿ.ನರಸಿಂಹಮೂರ್ತಿ, ಜಯರಾಮ್, ಶ್ರೀನಿವಾಸನ್ ಮುಂತಾದ ವಿದ್ಯಾರ್ಥಿಗಳು ಮಹಾರಾಜಾ ಕಾಲೇಜಿನ ಒಳ ಅಂಗಳದಲ್ಲಿ ಕಿಕ್ಕಿರಿದಿದ್ದ ಪ್ರೇಕ್ಷಕ ವರ್ಗದ ಮುಂದೆ ‘ಬಿರುಗಾಳಿ’ಯನ್ನು ಅದ್ಭುತವಾಗಿ ಅಭಿನಯಿಸಿದರು. ಪ್ರೇಕ್ಷಕರಾಗಿದ್ದ ಬಿ.ಎಂ.ಶ್ರೀಯವರು ಕೊನೆಯಲ್ಲಿ “ಟೆಂಪೆಸ್ಟ್ ನಾಟಕವನ್ನು ನಾನು ಎಷ್ಟೋ ವರ್ಷ ಪಾಠ ಹೇಳಿದ್ದರೂ ಅದರ ಸಂಪೂರ್ಣ ಸೊಗಸು ಸ್ವಾರಸ್ಯಗಳನ್ನು ನಾನು ಗ್ರಹಿಸಿದ್ದು ಇಂದೇ!” ಎಂದು ಶ್ಲಾಘಿಸಿದ್ದರು. ಆನಾಟಕದ ಅನುವಾದವೂ ಕಟ್ಟುನಿಟ್ಟಾದ ಭಾಷಾಂತರವಲ್ಲ; ದೃಶ್ಯಗಳನ್ನೂ ಭಾರತೀಯ, ಅದರಲ್ಲಿಯೂ ಕರ್ಣಾಟಕದ, ವಾತಾವರಣಕ್ಕೆ ಹೊಂದಿಸಿ ಕೊಂಡಿದೆ. ಅಲ್ಲಿ ಬರುವ ತ್ರಿಶಂಕು, ಭೀಮಣ ಮತ್ತು ಶನಿಯರಂತೂ ಇಂಗ್ಲೆಂಡಿನಲ್ಲಿ ಸತ್ತು ನಮ್ಮಲ್ಲಿ ಪುರ್ನಜನ್ಮವೆತ್ತಿದ್ದಾರೆ. ಅವರ ಮಾತುಕತೆ, ಸಂವಾದ ಸ್ವಾರಸ್ಯ, ಹಾಸ್ಯದ ಸ್ವರೂಪ ಎಲ್ಲವೂ ಮೂಲಕ್ಕಿಂತ ಬೇರೆಯಾಗಿದೆ. ಆದ್ದರಿಂದಲೆ ನಮ್ಮ ಪ್ರೇಕ್ಷಕರಿಗೆ ಆ ಹಾಸ್ಯ ಅರ್ಥವಾಗಿ ಅಷ್ಟರಮಟ್ಟಿಗೆ ಹಿಡಿಸಿದ್ದು. ಆ ಕಾಲದಲ್ಲಿಯೆ ಹುಟ್ಟಿದ ಮತ್ತೊಂದು ನನ್ನ ಮಹತ್ತಾದ ಕೃತಿ, ಸ್ವತಂತ್ರ ನಾಟಕ, ‘ಶ್ಮಶಾನ ಕುರುಕ್ಷೇತ್ರ’! ಅದರ ರಚನೆಗೆ ನನಗೆ ಒಂದು ಅಲೌಕಿಕ ಸ್ಫೂರ್ತಿ ಒದಗಿತ್ತೆಂದು ಭಾವಿಸುತ್ತೇನೆ. ಪ್ರತಿಭೆ ಒಂದು ಅತೀಂದ್ರಿಯ ಎಂಬಂತಹ ಸ್ತರದಲ್ಲಿ ಸಂಚಲಿಸಿದಂತೆ ಲೇಖನಿ ಅವಶ್ಯವಾಗಿಯೆ ಚಲಿಸುತ್ತಿತ್ತು. ಆ ನಾಟಕ ಆಲೋಚಿಸಿ ಕಟ್ಟಿದುದಲ್ಲ, ಅಧಿಮಾಸದ ಸಂಸ್ಪರ್ಶದಿಂದ ಅವತರಿಸಿ ಹುಟ್ಟಿದುದು. ಅದರ ಕೊನೆಯ ದೃಶ್ಯವನ್ನು ಬರೆಯುತ್ತಿದ್ದಾಗ ನನಗೆ ಉಂಟಾದ ಅನುಭವ ಲೋಕೋತ್ತರವಾಗಿ ಅಕ್ಷರಶಃ ರೋಮಾಂಚನಕಾರಿಯಾಗಿತ್ತು. ಕೌರವರ ಮತ್ತು ಪಾಂಡವರ ವಿನಾಶದ ಪ್ರತಿನಿಧಿಗಳಾಗಿ ಕುರುಕ್ಷೇತ್ರ ಶ್ಮಶಾನದಲ್ಲಿ ಭವ್ಯವಾಗಿ ಸ್ತೂಪಗೊಂಡಿದ್ದ ಎರಡು ಮಹಾ ಭಸ್ಮರಾಶಿಗಳ ಮೇಲೆ ತನ್ನ ಒಂದೊಂದು ಕಾಲನ್ನಿಟ್ಟು ನಿಂತಿದ್ದ ರುದ್ರಮಹಾದೇವನ ಮಹೋನ್ನತ ಮೂರ್ತಿ ಕವಿಯ ಕಲ್ಪನಾ ರಂಗದಲ್ಲಿ ಮೂಡಿನಿಂತಾಗ-ಸಾಕ್ಷಾತ್ ದೇವದೇವ ಮಹಾರುದ್ರನ ಸಾನ್ನಿಧ್ಯಾನುಭವವಾಗಿ, ಮೈನವಿರು ನಿಮಿರಿ, ಚೇತನ ಭಯಚಕಿತವಾಗಿ, ಶರೀರ ಪುಲಕಸ್ವೇದಮಯವಾಯ್ತು:

ಆ ಕೊನೆಯ ದೃಶ್ಯವನ್ನು ಬರೆಯುತ್ತಿದ್ದಾಗ ರಾತ್ರಿ ಹನ್ನೆರಡು ಘಂಟೆಯ ಮೇಲೆಯೆ ಆಗಿತ್ತು. ನನಗೆ ಕೊಟ್ಟಿದ್ದ ಒಂದು ಚಿಕ್ಕ ಕೊಠಡಿಯಲ್ಲಿ ಕುರ್ಚಿಯ ಮೇಲೆ ಕುಳಿತು ಮೇಜಿನ ಮೇಲಿದ್ದ ಹಸ್ತಪ್ರತಿಯಲ್ಲಿ ಬರೆಯುತ್ತಿದ್ದೆ. ಆಶ್ರಮದ ದೀಪಗಳೆಲ್ಲ ಆರಿದ್ದುವು. ನನ್ನ ಕೋಣೆಯ ದೀಪವೂ ಆರಿತ್ತು. ಮೇಜಿನ ಮೇಲಿದ್ದ ಟೇಬಲ್ ಲ್ಯಾಂಪ್ ತನ್ನ ಬೆಳಕಿನ ಸಣ್ಣವಲಯವನ್ನು ಮಾತ್ರ ರಚಿಸಿ ನನ್ನ ಹಸ್ತಪ್ರತಿಯನ್ನು ಬೆಳಗಿತ್ತು. ಅಂದಿನ ಕೃಷ್ಣಮೂರ್ತಿಪುರ ಜನನಿಬಿಡವೂ ಆಗಿರಲಿಲ್ಲ; ಗೃಹನಿಬಿಡವೂ ಆಗಿರಲಿಲ್ಲ; ಮೈಸೂರಿನ ಅಂಚಿನಲ್ಲಿ ತುತ್ತತುದಿಯಲ್ಲಿ ಎಂಬಂತೆ ನಗರದೂರವೆಂಬಂತ್ತಿತ್ತು. ಮುಟ್ಟಿ ಅನುಭವಿಸುವಂತಿತ್ತು ನಿಃಶಬ್ದತೆ.  ಕಗ್ಗತ್ತಲೆಯ ಮಹಾಕಡಲದಲ್ಲಿ ಎಲ್ಲವೂ ಮುಳುಗಿತ್ತು. ಆಶ್ರಮ ಮೂರ್ಛಿತ ಎಂಬಷ್ಟರಮಟ್ಟಿಗೆ ನಿದ್ರಾಮಗ್ನವಾಗಿತ್ತು. ಸರ್ವತ್ರ ನಿಶ್ಚಲ, ನೀರವ! ನನಗೆ ಬಾಹ್ಯ ಜಗತ್ತಿನ ಅರಿವಿರಲಿಲ್ಲ. ನನ್ನ ಪ್ರಜ್ಞೆ ಸಂಪೂರ್ಣವಾಗಿ ಕಾವ್ಯಸತ್ತಾಸಂಚಾರಿಯಾಗಿತ್ತು! ಕೋಣೆಯ ಬಾಗಿಲು ಹಾಕಿತ್ತು. ಹಠಾತ್ತನೆ ಯಾರೊ ಪ್ರವೇಶಿಸಿದಂತಾಯ್ತು! ಅದು ಎಷ್ಟು ಭೌತಿಕವೆಂಬಂತೆ ಸ್ಥೂಲವಾಗಿತ್ತೆಂದರೆ, ಯಾರೊ ನನ್ನ ಬೆನ್ನಹಿಂದೆ ಬಂದು  ಹೆಗಲಮೇಲೆ ಕೈಯಿಟ್ಟಂತಾಗಿತ್ತು! ನನಗೆ ಮೈ ಜುಮ್ಮೆಂದಿತು! ಏನೊ ಒಂದು ‘ಭಯವಿಲ್ಲದ ಭೀತಿ’ ಹೃದಯವ್ಯಾಪಿಯಾಗಿ ಭಯರಸ ಪುಲಕಿತನಾದೆ! ಪ್ರವೇಶಿಸಿದ್ದ ಆ ದಿವ್ಯ – ಭವ್ಯ – ಮಹಾ ಆರೂಪ ಸಾನ್ನಿಧ್ಯ ಕೊಠಡಿಯನ್ನೆಲ್ಲ ವ್ಯಾಪಿಸಿ ಘನವಾದಂತಾಯ್ತು. ಬರೆಯುವುದನ್ನು ನಿಲ್ಲಿಸಿ ಕತ್ತೆತ್ತಿದೆ. ಎಡ ಬಲಕ್ಕೆ ಅತ್ತಿತ್ತ ಕಣ್ಣು ಹಾಯಿಸಿದೆ. ಏನೂ ಕಾಣಿಸಲಿಲ್ಲ. ಹಿಂದಕ್ಕೆ ನೋಡಬೇಕೆನ್ನಿಸಿತು! ಆದರೆ ಎಲ್ಲಿ ಕಂಡುಬಿಡುತ್ತದೆಯೊ ಎಂದು ಹೆದರದ ಮನಸ್ಸು ತಿರುಗಿ ನೋಡಲು ಬಿಡಲಿಲ್ಲ! ಒಂದು ರೀತಿಯ ಭಾವ ಸಮಾಧಿಯ ಸ್ಥಿತಿಯಲ್ಲಿ ಸ್ತಬ್ಧಗೊಂಡ ಪ್ರಾಣ ಹಾಗೆಯೆ ಕೆಲವು ನಿಮಿಷ ಕಣ್ಣುಮುಚ್ಚಿ ಸಾನ್ನಿಧ್ಯಾನುಭವದ ಮತ್ತಿನಲ್ಲಿತ್ತು! ಕ್ರಮೇಣ ಆ ಸಾನ್ನಿಧ್ಯ ಕೊಠಡಿಯಿಂದ ಒಯ್ಯೊಯ್ಯನೆ ಹೊರಗೆ ಹೋದಂತೆ ಸ್ಪಷ್ಟ ಅನುಭವವಾಗಿ ಸುಯ್ದು, ಕಣ್ಣು ತೆರೆದು, ರುದ್ರ-ಕೃಷ್ಣರ ಸಂವಾದ ಸೃಜನೆಯನ್ನು ಮುಂದುವರಿಸಿದೆ. ಆದರೆ ಆ ಅಲೌಕಿಕ ಸಾನ್ನಿಧ್ಯಾನುಭವದ ಅಮಲು ನನ್ನ ಚೇತನವನ್ನೆಲ್ಲ ಆಕ್ರಮಿಸಿದಂತಿತ್ತು!

*          *          *

ಇತ್ತ ನನ್ನ ಸಾಹಿತ್ಯದ ಪ್ರತಿಭೆ ಅರಳಿ ಹೂಬಿಡುತ್ತಿತ್ತು; ಆಧ್ಯಾತ್ಮಿಕದಲ್ಲಿ ಚೇತನ ಮುಂದುವರಿಯುತ್ತಿತ್ತು; ಕೊನೆಯ ವರ್ಷದ ಎಂ.ಎ. ಪರೀಕ್ಷೆಗೆ ಅಧ್ಯಯನ ಅಭ್ಯಾಸ ನೆಡೆಯುತ್ತಿತ್ತು. ಅತ್ತ ಮನೆಯ ಕಡೆ ಏನು ಆಗುತ್ತಿತ್ತು. ಏನು ಆಗುತ್ತಿರಲಿಲ್ಲ, ಎಂಬ ಗೊಡವೆಯ ಕಡೆಗೆ ನನ್ನ ಪ್ರಜ್ಞೆ ಹೋಗುತ್ತಲೆ ಇರಲಿಲ್ಲ. ಒಂದು ಆಶಾವಾದಿಯಾದ ಆಧ್ಯಾತ್ಮಿಕ ಶ್ರದ್ಧೆ ಎಂತಹ ವಿಪತ್ತಿನಲ್ಲಿಯೂ ನಾನು ಧೃತಿಗೆಡದಂತೆ ನನ್ನ ಚೇತನಕ್ಕೆ ಧೈರ್ಯಶಕ್ತಿಯಾಗಿತ್ತು. ಆದರೆ ಸರೋವರದ ಪ್ರಶಾಂತಿಗೆ ಭಂಗಬರಲು ಹೆಚ್ಚು ಕಾಲ ಹಿಡಿಯಲಿಲ್ಲ. ನನಗೆ ಮೈಲಿಯಾಗಿ, ದೊಡ್ಡ ಚಿಕ್ಕಪ್ಪಯ್ಯ ಮತ್ತು ಕಿರಿಯ ತಂಗಿ ಪುಟ್ಟಮ್ಮ ತೀರಿಕೊಂಡು ಸುಮಾರು ಒಂದು ವರ್ಷವಾಗಿತ್ತಷ್ಟೆ. ಮನೆಯ ವಹಿವಾಟವನ್ನೆಲ್ಲ ಇಷ್ಟಮಿತ್ರರ ಮತ್ತು ನೆಂಟರ ನೆರವಿನಿಂದ ತಮ್ಮ ತಿಮ್ಮಯ್ಯ ಹೇಗೋ ನಡೆಸಿಕೊಂಡು ಹೋಗುತ್ತಿದ್ದನು. ಅವನಿಗೆ ಮದುವೆಯಾಗಿ ಇನ್ನೂ ಎರಡು ವರ್ಷ ತುಂಬಿರಲಿಲ್ಲ. ೧೯೨೯ ನೆಯ ಜನವರಿ ೧ ನೆಯ ತಾರೀಖು ತಿಮ್ಮುಗೆ ತುಂಬಾ ಕಾಯಿಲೆಯಾಗಿದೆ ಎಂಬ ದುರ್ವಾರ್ತೆ ಬಂದಿತು. ಆ ತಾರೀಖು ಹಾಕಿ ಬರೆದ ಚುಟಕ ಮಂತ್ರಾಕ್ಷತೆ ಹೀಗಿದೆ:

ದುಃಖ ಮಲಗಿಹುದೆಮ್ಮ ಸುಖದ ಎದೆಯಲ್ಲಿ!
ಪಾಪವಡಗಿಹುದೆಮ್ಮ ಪುಣ್ಯದೆದೆಯಲ್ಲಿ!

ಬಹುಶಃ ನನ್ನ ಕವಿಪ್ರಜ್ಞೆಗೆ ಮುಂದೆ ಒದಗಲಿರುವ ದುರಂತಗಳು ಮುನ್ನರಿವು ಸುಳಿದಾಡಿತೋ ಏನೋ? ೨೧-೧೨-೨೮ ರಲ್ಲಿ ಮತ್ತು ೩-೧-೧೯೨೯ ರಲ್ಲಿ ಬರೆದಿರುವ ಎರಡು ಪ್ರಾರ್ಥನಾಕವನಗಳು ‘ಕೈಬಿಟ್ಟರೆ ನೀ ಗತಿಯಾರೈ, ಕಿರುದೋಣಿಯಿದು ಮುಳುಗದೇನೈ?’ ಮತ್ತು ‘ದಾರಿ ತೋರೆನಗೆ-ಗುರುವೇ-ದಾರಿ ತೋರೆನಗೆ!’ ಎಂಬಲ್ಲಿ ನನ್ನ ಹೃದಯದ ಆರ್ತತೆ ಮತ್ತು ದಿಗಿಲುಗಳು ಭಗವಂತನಿಗೆ ಪ್ರಾರ್ಥಿಸುತ್ತಿರುವುದನ್ನು ಕಾಣುತ್ತೇವೆ. (ಆ ಕವನಗಳು ಕೊಳಲಿನಲ್ಲಿ ಅಚ್ಚಾಗಿದ್ದು, ‘ಪ್ರಾರ್ಥನಾ ಗೀತಾಂಜಲಿ’ಯಲ್ಲಿ ಸೇರಿವೆ.)

ಹಿಂದೆ ತಾಯಿ ತೀರಿಕೊಂಡಾಗ ವರ್ತಿಸಿದಂತೆ ಮಾಡಲು ಸ್ವಾಮಿಜಿ ಬಿಡಲಿಲ್ಲ. ಅವರ ಹಿತವಚನದಂತೆ ರೈಲಿನಲ್ಲಿ ಹೊರಟೆ. ಆದರೆ ಮನೆ ಸೇರುವಷ್ಟರಲ್ಲಿ ತಿಮ್ಮು ತೀರಿಕೊಂಡಾಗಿತ್ತು, ದಹನ ಸಂಸ್ಕಾರವೂ ಪೂರೈಸಿತ್ತು, ಅವನ ಚಿಕ್ಕ ವಯಸ್ಸಿನ ಹೆಂಡತಿ ಕೆಲವೇ ತಿಂಗಳ ಗರ್ಭಿಣಿಯಾಗಿದ್ದಳು. ಮುಂದೆ ಶೋಕಾಗ್ನಿಯಲ್ಲಿ ಬೆಂದ ಅವಳು ಹೆತ್ತ ಕೂಸೂ ಬದುಕಲಿಲ್ಲ.

ಈ ಸಾರಿಯೂ ನಾನು ಅಳುವುದು ಮೊದಲಾದ ರೀತಿಯಲ್ಲಿ ಸ್ವಲ್ಪವೂ ದುಃಖ ಪ್ರದರ್ಶನ ಮಾಡಲಿಲ್ಲ. ಆತ್ಮದ ಅಮೃತತ್ವದ ಶ್ರದ್ಧೆ ನನಗೆ ಅನುಭವದ ದಿಟದವಸ್ತುವಾಗಿತ್ತು. ಜಗಲಿಯಲ್ಲಿ ನೆರೆದ ನಂಟರು ಮಿತ್ರರಿಗೆ ಭಗವದ್ಗೀತೆಯನ್ನೋದಿದೆ. ಅವರೆಲ್ಲ ಏನೆಂದು ಊಹಿಸಿದರೋ ನಾನರಿಯೆ: ಮೈಲಿಯಾದಾಗ ಹಿಡಿದಿದ್ದ ಹುಚ್ಚು ಇನ್ನೂ ಪೂರ್ತಿಯಾಗಿ ಬಿಟ್ಟಿಲ್ಲವೆಂದು ಒಳಗೊಳಗೇ ಭಾವಿಸಿದ್ದರೆ ಅಚ್ಚರಿಪಡಬೇಕಾಗಿಲ್ಲ!

ಅದೇ ವರ್ಷದಲ್ಲಿ ಪ್ರಕಟವಾದ ‘ಕೊಳಲು’ ಕವನಸಂಗ್ರಕ್ಕೆ ಮುನ್ನುಡಿಯಂತೆ ಕವನರೂಪದಲ್ಲಿ ಬರೆದ ‘ಗೊಲ್ಲನ ಬಿನ್ನಹ’ದ ೫, ೬, ೭ನೆಯ ವಿಭಾಗಗಳಲ್ಲಿ ತಿಮ್ಮುವನ್ನು ನೆನೆದ ದುಃಖದ ಕಂಬನಿ ಹರಿದಿದೆ:

ಬನದೊಳು ಮೊದಲೀ ವೇಣುವನಕಟಾ
ಕೇಳಿದ ಕಿವಿಗಳನೊಡೆದೆಯ, ದೇವ!
ಗೊಲ್ಲನ ಕೊಳಲಿನ ಉಸಿರನು ಕೊಟ್ಟಾ
ಎದೆಯಲರೊಂದನು ಕೊಯ್ದೆಯ, ಶಿವನೆ!
ಗೊಲ್ಲನ ಹಾಡನು ಹುರಿದುಂಬಿಸಿದಾ
ತಮ್ಮನ ತಿಮ್ಮುವನೊಯ್ದೆಯ, ಹರಿಯೆ!
…………………………………………..
ಕಾಡಿನೊಳಿಬ್ಬರೆ ತಿರುಗಿದೆವಂದು
ಹೂಗಳ ಕೊಯ್ದೆವು ಹಣ್ಗಳ ತಿಂದು.
……………………………………………
ಕಡಿದಾದರೆಗಳನೇರುವ ಸಮಯದಿ,
ಹುತ್ತದ ಜೇನನು ಕೀಳುವ ಸಮಯದಿ,
ಬಿರುಸಿನ ಬೇಟೆಯನಾಡುವ ಸಮಯದಿ
ಎಲ್ಲಿಯೂ ತಿಮ್ಮುವೆ ಕೆಚ್ಚಾಳು!
…………………………………………….
ಹೋದವರೆಲ್ಲರ ಊರನು ಸೇರಿದೆ,
ತಮ್ಮಾ, ಗೊಲ್ಲನ ದುಃಖಕೆ ಮಾರಿದೆ!
ನಾ ಸಾವಿಗೆ ಅಂಜುವೆನೆಂದಲ್ಲ,
ಅದರರ್ಥವ ತಿಳಿಯದನೆಂದಲ್ಲ;
ನಿನ್ನಾ ಸಂಗಕೆ ಕೊರಗುವೆನು;
ನಿನ್ನಾ ಪ್ರೇಮಕೆ ಮರುಗುವೆನು!
ಶ್ರೀಗುರುದೇವನ ಪಾದವ ಸೇರಿದೆ:
ಬಲ್ಲೆನು ನಾನೂ ಸೇರುವೆನು.
ಮಾಡುವ ಕೆಲಸವ ಮುಗಿಯಿಸಿ ಬೇಗನೆ
ಬಲ್ಲೆನು ನಾನೂ ಸೇರುವೆನು.
ನಿನ್ನಯ ನೆನಪಿಗೆ ಗೊಲ್ಲನು ನೀಡುವ
ಪ್ರೇಮದ ಗಾನದ ಕಾಣ್ಕೆಯಿದು!
ಶ್ರೀಗುರುದೇವಗೆ ನೀನೆ ನಿವೇದಿಸು
ಕಬ್ಬಿಗನಿಂಚರಗಾಣ್ಕೆಯಿದು!

ಈ ಸಂದರ್ಭದಲ್ಲಿಯೆ ಮತ್ತೊಂದು ಸಂಕಟಕರ ಘಟನೆ ನಡೆದುದನ್ನೂ ಬರೆಯುತ್ತೇನೆ. ಅದು ನನ್ನ ಹಿರಿಯ ತಂಗಿಯ ನಿಧನ. ಆಕೆ ಹೆತ್ತು ಶಿಶುವಿನೊಡನೆ ತೀರಿಕೊಂಡಳು. ನನಗೆ ಆ ಸುದ್ದಿ ತಿಳಿದುದು ನಾನು ರಜಾಕ್ಕೆ ಹೋದಾಗಲೆ! ಅಂತೂ ನನ್ನ ತಾಯಿತಂದೆಯರ ಸಂತಾನದಲ್ಲಿ ತಂಗಿಯರಿಬ್ಬರೂ ಮದುವೆಯಾದ ಒಂದೆರಡು ವರ್ಷಗಳಲ್ಲಿಯೆ ನಿಸ್ಸಂತಾನರಾಗಿ ನಿಧನ ಹೊಂದಿದ್ದರಿಂದ ಜಗತ್ತಿನಲ್ಲಿ ಅವರ ಪೀಳಿಗೆಯನ್ನು ಮುಂದುವರಿಸಲು ಉಳಿದದ್ದು ನಾನೊಬ್ಬನೆ, ಸಂನ್ಯಾಸಿಗಳೊಡನೆ ಆಶ್ರಮವಾಸಿಯಾಗಿ!

ಕಾಲಾನುಕ್ರಮವಿಲ್ಲದಿದ್ದರೂ ಇಲ್ಲಿಯೆ ಮುಂದೆ ನಡೆದ ಒಂದು ದುಃಖಕರ ಸಾಂಸಾರಿಕ ಘಟನೆಯನ್ನು ಕುರಿತು ಬರೆಯಲಿಚ್ಛಿಸುತ್ತೇನೆ. ಅದು ’ಕಾಂಚನ ಮಾಯೆ’ಗೆ ಸಂಬಂಧಪಟ್ಟ ವಿಷಯ. ನನ್ನ ಸ್ವಭಾವದ ಮೇಲೆಯೂ ಮತ್ತು ಅಂದಿನ ನನ್ನ ಮನಸ್ಥಿತಿಯ ಮೇಲೆಯೂ ಪ್ರಕಾಶ ಬೀರುತ್ತದೆ:

ನಮ್ಮ ತಾಯಿ ತೀರಿಕೊಂಡಾಗ ನಾನು ತಿಥಿಗೆ ಹೋಗಿ ಬಂದೆನೆ ಹೊರತು ಯಾರೊಡನೆಯೂ ಯಾವ ಲೌಕಿಕವನ್ನೂ ಕುರಿತು ಮಾತನಾಡಲಿಲ್ಲ; ಹಾಗೆ ಮಾತಾಡುವುದು ಅಂದರೇನೂ ಅದೂ ಗೊತ್ತೆ ಇರಲಿಲ್ಲ. ತಾಯಿಯ ಬಳಿ ಬೆಳ್ಳಿಯ ಮತ್ತು ಚಿನ್ನದ ಒಡವೆ ವಸ್ತು ಮತ್ತು ಹಣ, ಅವರ ತವರಿನಿಂದ ಬಂದದ್ದು ಮತ್ತು ನಮ್ಮ ತಂದೆಯಿಂದ ಬಂದದ್ದು, ಮತ್ತು ಕೋಳಿ, ಕದರಡಕೆ ಇತ್ಯಾದಿಗಳಿಂದ ಸಂಪಾದಿಸುತ್ತಿದ್ದ ಪುಡಿಕಾಸು-ಇವೆಲ್ಲ ಇದ್ದುವಷ್ಟೆ. ಅದನ್ನೆಲ್ಲ ಇನ್ನೂ ಲೋಕವ್ಯವಹಾರ ತಿಳಿಯದ ನನ್ನ ಇಬ್ಬರು ತಂಗಿಯರೆ ಜೋಪಾನಗೊಳಿಸಿದ್ದರು. ಯಾವಾಗಲೊ ಒಮ್ಮೆ ನಾನು ರಜಾಕ್ಕೆ ಹೋದಾಗ ನನಗೆ ಅವುಗಳನ್ನು ನಮ್ಮ ಕೋಣೆಯ ಬಾಗಿಲನ್ನು ಮುಚ್ಚಿಕೊಂಡು ರಹಸ್ಯವಾಗಿ ಪಿಠಾರಿ ತೆರೆದು ತೋರಿಸಿದ್ದ ನೆನಪು. ಹಾಗೆ ತೋರಿಸಿದ ಹಿರಿಯ ತಂಗಿ ದಾನಮ್ಮನ ಉದ್ದೇಶ, ಬಹುಶಃ ನನ್ನಿಂದ ಆ ಒಡವೆ ವಸ್ತುಗಳ ವಿಚಾರವಾಗಿ ಏನಾದರೂ ಸಲಹೆ ಪಡೆಯುವುದಾಗಿತ್ತೋ ಎನೊ? ಆದರೆ ನನ್ನಲ್ಲಿ ಆ ವ್ಯಾವಹಾರಿಕ ಬುದ್ದಿಯೂ ಲೋಪವಾಗಿದ್ದು, ನಾನು ಯಾವ ಸಲಹೆಯನ್ನೂ ಹೇಳದೆ ಸುಮ್ಮನೆ ನೋಡಿದ್ದೆ, ಪ್ರದರ್ಶನ ದರ್ಶನ ಮಾಡಿದಂತೆ! ನಮ್ಮ ಅಮ್ಮನ ಆ ಆಸ್ತಿಯು ಹಂಚಿಕೆಯ ವಿಚಾರವಾಗಿ ‘ಅಣ್ಣಯ್ಯ’ನಿಂದ ಬರುವ ಸಲಹೆಯಂತೆ ನಡೆದುಕೊಳ್ಳವುದು ಆ ಬಾಳದೆ ಹೋದ ಸಾಧ್ವಿಯ ಉದ್ದೇಶವಾಗಿತ್ತೇನೊ? ತರುವಾಯ ಅವರಿಬ್ಬರೂ ಮದುವೆಯಾದ ಮೇಲೆ ಆ ಒಡವೆ ವಸ್ತುಗಳನ್ನು ಅವರು ಹಂಚಿಕೊಂಡರೆಂದು ತೋರುತ್ತದೆ. ನಾನು ಮದುವೆಯಾದಮೇಲೆ ನನ್ನದಾಗುವುದನ್ನು ಪಿಠಾರಿಯಲ್ಲಿ ಇಟ್ಟರೋ ಏನೋ ನನಗೆ ತಿಳಿಯದು. ಏಕೆಂದರೆ ಮುಂದೆ, ಅವರಿಬ್ಬರೂ ಮದುವೆಯಾದ ಹೊಸದರಲ್ಲಿಯೆ ತೀರಿಕೊಂಡಮೇಲೆ, ನಾನು ಆ ಪ್ರಸ್ತಾಪವನ್ನೆ ಎತ್ತಲಿಲ್ಲ. ನನಗಾಗಿ ಇಟ್ಟಿದ್ದಿರಬಹುದಾಗಿದ್ದ ಆ ಒಡವೆ ವಸ್ತು ಏನಾದುವೊ ನನಗೆ ಗೊತ್ತಿಲ್ಲ. ನಾನು ೧೯೨೯ರಲ್ಲಿ ಅಧ್ಯಾಪಕನಾಗಿ ಕೆಲಸಕ್ಕೆ ಸೇರಿ ಎಂಟು ವರ್ಷದ ಮೇಲೆ ೧೯೨೭ರಲ್ಲಿ ಮದುವೆಯಾದಾಗಲೂ (ಅದೂ ಒಂದು ವಿಶೇಷ ರೀತಿಯಲ್ಲಿ ನಡೆಯಿತು. ಅದನ್ನು ಮುಂದೆ ಹೇಳುತ್ತೇನೆ.) ಅದೊಂದನ್ನೂ ಬಯಸಲೂ ಇಲ್ಲ, ವಿಚಾರಿಸುವ ಗೋಜಿಗೆ ಹೋಗಲೂ ಇಲ್ಲ. ಅವೆಲ್ಲ ಯಾರುಯಾರ ಪಾಲಾದುವೋ ದೇವರಿಗೆ ಗೊತ್ತು! ಅಥವಾ ದುಷ್‌ಪ್ರವೇಶ್ಯವಾದ ನಮ್ಮ ಕುಟಿಲ ಜಟಿಲ ಸಾಂಸಾರಿಕ ಸೀಗೆಮೆಳೆಗಳಲ್ಲಿ ಲಂಟಾನ ಪೊದೆಗಳಲ್ಲಿ ಹೊಗಲು  ಹೇಸಿ ಹೆದರಿದ ಅವನಿಗೂ ಗೊತ್ತೋ ಇಲ್ಲವೊ? ಯಾರು ಬಲ್ಲರು?

ಅದಿರಲಿ ಈಗ ಪ್ರಕೃತ ಉದ್ದೇಶಿಸಿದ ವಿಷಯಕ್ಕೆ ಬರುತ್ತೇನೆ:

ತಂಗಿಯರಿಬ್ಬರೂ ಸಂತಾನವಿಲ್ಲದೆ ಮದುವೆಯಾದ ಅಲ್ಪಾವಧಿಯಲ್ಲಿಯೆ ತೀರಿಕೊಂಡಿದ್ದರಿಂದಲೂ, ಮತ್ತು ಅವರ ಗಂಡಂದಿರು ಮತ್ತೆ ಅಲ್ಪಾವಧಿಯೊಳಗಾಗಿ ಮರು ಮದುವೆಯಾದದ್ದರಿಂದಲೂ ಅವರು ತವರಿನಿಂದ ತೆಗದುಕೊಂಡು ಹೋಗಿದ್ದ ಒಡವೆ ವಸ್ತುಗಳನ್ನು ಅವರ ತವರಿಗೆ ಹಿಂದಿರುಗಿಸಬೇಕಾದದ್ದು ರೂಢಿ ಎಂಬಂತೆ ತೋರುತ್ತದೆ. ಆದರೆ ಆ ಗಂಡಂದಿರು ಹಾಗೆ ಮಾಡಲಿಲ್ಲ. ಆ ವಿಚಾರವಾಗಿ ಅವರನ್ನು ಕೇಳಿ ಪಡೆಯಲೂ ತವರಿನಲ್ಲಿ ಸ್ವಂತ ತಾಯಿತಂದೆಯಯರೂ ಇರಲಿಲ್ಲ. ಇದ್ದ ಅಣ್ಣನೊಬ್ಬನು ಅದನ್ನೆಲ್ಲ ಲೆಕ್ಕಿಸುವ ಮನೋಧರ್ಮದವನಾಗಿರಲಿಲ್ಲ, ಹೀಗಾಗಿ ನಮ್ಮ ಅವ್ವನ ಚಿನ್ನ ಬೆಳ್ಳಿ ಅನ್ಯರ ಪಾಲಾಯಿತು! ಆದರೆ ಜನರ ಮೌಢ್ಯ ಬೇರೊಂದು ರೀತಿಯಲ್ಲಿ ನ್ಯಾಯ ಪಡೆಯುವ ಮತ್ತು ಶಿಕ್ಷೆ ವಿಧಿಸುವ ತನ್ನ ಕಾರ್ಯವನ್ನು ಕೈಕೊಂಡಿತು: ಆ ಆಭರಣಗಳನ್ನು ಯಾರು ಉಪಯೋಗಿಸುತ್ತಾರೋ ಅವರಿಗೆ ಕೇಡಾಗುತ್ತದೆ ಎಂದು ಕಥೆ ಹುಟ್ಟಿಸಿತು. ಅಂದರೆ, ನನ್ನ ತಂಗಿಯರ ಅಥವಾ ನನ್ನ ತಾಯಿಯ ‘ದೆಯ್ಯ’ ಆ ಒಡವೆ ಹಾಕಿಕೊಂಡವರನ್ನು ಮೆಟ್ಟಿಕೊಳ್ಳುತ್ತದೆ ಎಂದು! ನಾನು ನನ್ನ ತಾಯಿ ತಂಗಿಯರ ಆತ್ಮಶಾಂತಿಗಾಗಿ ದಿನವೂ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದುದು ಯಾವ ಕೆಲಸಕ್ಕೂ ಬಾರದ್ದಾಗಿತ್ತು! ನನ್ನ ತಾಯಿ ತಂಗಿಯರ ಚೇತನಗಳಿಗೆ ಬೇರೆ ಏನೂ ಕೆಲಸವಿಲ್ಲ. ಅವರು ಹಿಂದೆ ಬಿಟ್ಟುಹೋದ ಹಾಳು ಒಡವೆಗಳನ್ನು ತೊಟ್ಟವರನ್ನು ಮೆಟ್ಟುವ ಪಿಶಾಚಿಗಳಾಗುವುದೊಂದೇ ಕೆಲಸವಾಗಿತ್ತು. ಮೂಢಮತಿಗಳ ದೃಷ್ಟಿಯಲ್ಲಿ! ಅಂತೂ ಅವರ ಮೌಢ್ಯಕ್ಕೆ ಆಧಾರ ದೊರೆಯುವಂತೆ,-ಸರ್ವ ಸಾಮನ್ಯವಾಗಿ ಆರೋಗ್ಯ ಎಂಬುದನ್ನೆ ಕಾಣದಿರುತ್ತಿದ್ದ ಮಲೆನಾಡಿನ ಜನರಲ್ಲಿ, ಅದರಲ್ಲಿಯೂ ಮಲೆನಾಡಿನ ಹೆಣ್ಣುಮಕ್ಕಳಲ್ಲಿ-ಆ ಒಡವೆಗಳನ್ನು ತೊಡುತ್ತಿದ್ದವರಿಗೆ ಏನಾದರೂ ರೋಗವೊ ರುಜಿನವೊ ಮೈಮೇಲೆ ಬರುವುದೊ ಆಗುತ್ತಿತ್ತಂತೆ. ನಿತ್ಯವೂ ಏನಾದರೊಂದು ರೋಗದಿಂದ ನರಳುತ್ತಿದ್ದವರಿಗೆ ಆಭರಣ ತೊಟ್ಟಾಗಲೂ ಕಾಣಿಸಿಕೊಳ್ಳುತ್ತಿದ್ದುದು ಆ ರೋಗವೇ ಆಗಿದ್ದರೂ ಕಾಕತಾಳೀಯವಾಗಿ ಅದನ್ನು ಒಡವೆಗಳ ಮೇಲೆ ಹೊರಿಸುತ್ತಿದ್ದರು! ಕಡೆಕಡೆಗೆ ಆ ಒಡವೆಗಳ ಮೇಲೆ ಈ ಅಪವಾದ ಬಂದು ಅವುಗಳನ್ನು ತೊಡಲು ವಿಷಯ ಗೊತ್ತಿದ್ದವರಾರೂ ಒಪ್ಪುತ್ತಿರಲಿಲ್ಲವಂತೆ. ಆದರೂ ನನ್ನ ಹಿರಿಯ ತಂಗಿಯ ಗಂಡನ ಮರುಮದುವೆಯಾದ ಹುಡುಗಿ, ನನ್ನ ಹಿರಿಯ ತಂಗಿಯ ತಂಗಿಗೆ ತುಂಬ ಪ್ರೀತಿಪಾತ್ರಳಾದ ಗೆಳತಿಯಾಗಿದ್ದಳು, ಗೆಳತಿಯಾಗಿದ್ದುದರಿಂದಲೆ ಹಿರಿಯ ತಂಗಿಯ ಪಿಶಾಚಿ ಆಕೆಗೇನೂ ತೊಂದರೆ ಕೊಡುವುದಿಲ್ಲವೆಂದು ಭರವಸೆ ಕೊಟ್ಟು ಧೈರ್ಯ ಹೇಳಿದ್ದರಿಂದ, ಆ ಕಂಠಾಭರಣವನ್ನು ತೊಟ್ಟುಕೊಂಡು ತನ್ನ ತವರಿಗೆ ಹೋದಳಂತೆ. ದಾರಿಯಲ್ಲಿಯೆ ಕುತ್ತಿಗೆ ಉಳುಕಿದಂತಾಗಿ ತೊಂದರೆಯಾಯಿತಂತೆ. ಮನೆ ಸೇರುವಷ್ಟರಲ್ಲಿ ಊದಿಕೊಂಡು ಗಂಟಲು ಕಟ್ಟಿತ್ತು. ಒಡನೆಯೆ ಆ ಕಂಠಾಭರಣವನ್ನು ತೆಗೆದುಹಾಕಿ ವೈದ್ಯ ಶುಶ್ರೂಷೆ ಮಾಡಿದರೂ ದೆಯ್ಯದ್ಯಾವರುಗಳಿಗೆ ಹೇಳಿಕೊಂಡು ತಪ್ಪುಕಾಣಿಕೆ ಕಟ್ಟಿದರೂ ಸಾರ್ಥಕವಾಗದೆ ತೀರಿಕೊಂಡಳು, ಮೌಢ್ಯಕ್ಕೆ ಬಲಿಯಾಗಿ! ಮೌಢ್ಯಕ್ಕೆ ಬಲಿಯಾಗಿ ಎಂದು ಒಪ್ಪಿದರೆ ನಾನೂ ಮೂಢನಾಗುತ್ತೇನೆ! ಬಹುಶಃ ಡಿಫ್ತಿರಿಯಾದಂತಹ ಏನೊ ವ್ಯಾಧಿ ಕಾರಣವಾಗಿರಬೇಕು.

೧೯೨೮-೨೯ರ ಅವಧಿಯಲ್ಲಿ ರಚಿತವಾಗಿರುವ ಅನೇಕ ಕವನಗಳು ಅಚ್ಚಿನ ಮನೆ ಕಾಣದೆ ಇನ್ನೂ ನನ್ನ ಹಸ್ತಪ್ರತಿಗಳಲ್ಲಿ ತಲೆಮರೆಸಿಕೊಂಡಿವೆ. ಅವುಗಳನ್ನು ಹೆಕ್ಕಿ ಮುಂದೆ ಎಂದಾದರೂ ಬೆಳಕಿಗೆ ತರುವ ಆಸೆಯಿದೆ. *(ಈಗ (೧೯೮೦) ಅವೆಲ್ಲ ‘ಹೊನ್ನಹೊತ್ತಾರೆ’ ಎಂಬ ಕವನಸಂಕಲನದಲ್ಲಿಯೂ, ‘ಕಾನೀನ’ ಎಂಬ ಕೃತಿಯಲ್ಲಿಯೂ ಉದಯರವಿ ಪ್ರಕಾಶದಿಂದ ಅಚ್ಚುಗೊಂಡಿದೆ.) ಇನ್ನೇನಲ್ಲದಿದ್ದರೂ ಅಂದಿನ ಕವಿಮನದ ವಿವಿಧ ಛಾಯೆಗಳ ಪರಿಚಯ ಅವುಗಳಿಂದಾಗಬಹುದು. ಕವನಗಳಂತೆಯೆ ಹುದುಗಿರುವ ಎರಡು ನಾಟಕಗಳೂ ಇವೆ. ಒಂದು ‘ಶ್ರೀಕೃಷ್ಣ ಮತ್ತು ಕರ್ಣ’ ಎಂಬ ಶೀರ್ಷಿಕೆಯಲ್ಲಿ ಮಹಾರಾಜಾ ಕಾಲೇಜಿನ ಯೂನಿಯನ್ ಹೊರಡಿಸುತ್ತಿದ್ದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅದು ಒಂದೇ ಒಂದು ಛಂದಸ್ಸಿಗೆ ಅಳವಡಿಸಿ, ಅಲ್ಲಿ ನನ್ನ ಸ್ವಂತ ರಚನೆಯನ್ನೂ ಸೇರಿಸಿ ರಚಿತವಾಗಿದೆ. ಮತ್ತೊಂದರ ಹೆಸರು ‘ಕಾನೀನ’, ಕರ್ಣನ ಜೀವನವನ್ನು ದೃಶ್ಯರೂಪಕ್ಕೆ ತಿರುಗಿಸುವ ಸ್ವತಂತ್ರ ಪ್ರಯತ್ನ.[1] ಭಾಷೆ ಗದ್ಯ ಸರಳರಗಳೆಯ ಮಿಶ್ರಣವಾಗಿದೆ, ಮುಂದೆ ‘ಶೂದ್ರತಪಸ್ವಿ’ ಮತ್ತು ‘ಬೆರಳ್‌ಗೆ ಕೊರಳ್’ಗಳಲ್ಲಿ ಸಿದ್ಧಸ್ಥಿತಿ ಮುಟ್ಟಿರುವ ನಾಟ್ಯಛಂದಸ್ಸಿನ ಭ್ರೂಣಾವಸ್ಥೆ ಎನ್ನಬಹುದೇನೋ: ಐದನೆಯ ದೃಶ್ಯ ಹೀಗೆ ಕೊನೆಗೊಳ್ಳುತ್ತದೆ:

ದುಶ್ಯಾಸನ: ಈಗ ಗರುಡಿಗೆ ಹೋಗಿ ಗುರುಗಳೈತಹ ಮುನ್ನ
ಭೀಮನೇನೆಸಗುವನೊ ನೋಡೋಣ, ಬನ್ನಿ. (ತೆರಳುವನು.)
ಯೌರವ: (ಕರ್ಣನನ್ನೆ ನೋಡುತ್ತಾ)
ರಾಧೇಯ, ಮುಂದೆ ಎಂದೆಂದಿಗೂ ನೀನೆನ್ನ
ಜೀವದುಸಿರೆಂದು ತಿಳಿಯುವೆನು.
ಕರ್ಣ: ಕೌರವೇಂದ್ರ,
ನೀ ಬೇರೆ ನಾ ಬೇರೆ ಎಂಬುದನು ಮರೆತೆ.
ನಿನ್ನುಸಿರೆ ಎನ್ನುಸಿರು, ನಿನ್ನೆದೆಯೆ ಎನ್ನೆದೆಯು!
ನಿನ್ನಳಿವೆ ಎನ್ನಳಿವು, ನಿನ್ನುಳಿವೆ ಎನ್ನುಳಿವು! (ಅಪ್ಪುವರು.)

 


[1] ಆದರೆ ನನ್ನ ಸ್ವಂತದ್ದೆನ್ನಬಹುದಾದ ‘ದರ್ಶನ’ವನ್ನು ಅಭಿವ್ಯಕ್ತಗೊಳಿಸಿಬೇಕೆಂಬ ಉದ್ದೇಶದ ಪ್ರಚೋದನೆಯನ್ನು ಅದರಲ್ಲಿ ಕಾಣಬಹುದು. ಅದು ದೀರ್ಘನಾಟಕ. ಈಗ ರಚಿತವಾಗಿರುವುದೇ ಐದು ದೃಶ್ಯಗಳನ್ನೊಳಗೊಂಡಿದೆ. ಕಥಾಭಾಗ ಕರ್ಣನು ಹಸ್ತಿನಾಪುರಕ್ಕೆ ಬಂದು ಕೌರವೇಂದ್ರನ ಸ್ನೇಹ ಸಂಪಾದಿಸುವವರೆಗೆ ಸಾಗಿದೆ.