ತಿಮ್ಮಯ್ಯ ತೀರಿಕೊಂಡ ಮೇಲೆ ಮನೆಯ ಹೊರೆಹೊಣೆಗಳು ನನ್ನ ಮೇಲೆ ಬೀಳಬೇಕಾಗಿತ್ತು. ಆದರೆ ನನ್ನ ಎಂ.ಎ.ಪರೀಕ್ಷೆಗೆ ಇನ್ನೂ ಎರಡು ಮೂರು ತಿಂಗಳು ಮಾತ್ರ ಇತ್ತು. ಅದನ್ನು ಮುಗಿಸಿ ಎಂ.ಎ. ಡಿಗ್ರಿ ಸಂಪಾದಿಸಿದರೆ ವಿದ್ಯಾಭ್ಯಾಸದಲ್ಲಿ ತುದಿ ಮುಟ್ಟಿದಂತಾಗುತ್ತದೆ. ಮುಂದೇನು ಎಂಬುದು ನನಗೆ ಗೊತ್ತಿರಲಿಲ್ಲ. ಬೇಸಗೆ ರಜಾಕ್ಕೆ ನಾನು ಹಿಂತಿರುಗಿ ಅನಂತರ ಯಾವುದನ್ನೂ ನಿರ್ಣಯಿಸುವುದು ಎಂದು ಆಲೋಚಿಸಿ, ತಿಮ್ಮಯ್ಯನ ತಮ್ಮ ವೆಂಕಟಯ್ಯನಿಗೆ ಯಜಮಾನ್ಯ ವಹಿಸಿ ಮೈಸೂರಿಗೆ ಬಂದೆ. ಅವನ ವಯಸ್ಸು ಕಿರಿದಾದರೂ ನಂಟರಿಷ್ಟರ ನೆರವಿನಿಂದ ಅವನು ಆ ಹೊರೆ ಹೊರಲು ಧೈರ್ಯಮಾಡಿದ್ದು ನನಗೆ ಪರಮೋಪಕಾರವಾಯಿತು. ದುಗ್ಗಪ್ಪ ಹೆಗ್ಗಡೆ ಎಂಬೊಬ್ಬ ತರುಣರು ರೈಟರು ಕೆಲಸ ನೋಡಿಕೊಳ್ಳುತ್ತಿದ್ದು ಅವರು ವ್ಯಾವಹಾರಿಕ ಅನುಭವಸ್ಥರಾಗಿದ್ದು ನಮಗೆ ಸಹಾಯ ಮಾಡಿದರು. ದೊಡ್ಡಚಿಕ್ಕಪ್ಪಯ್ಯ ರಾಮಣ್ಣಗೌಡರು ಸಾಲ ತಂದು ಅಡಕೆ ವ್ಯಾಪಾರ ಮೊದಲಾದ ಸಾಹುಕಾರಿಕೆ ಮಾಡಿ ಹಣಕಾಸಿನ ಸ್ಥಿತಿಯನ್ನು ಬಹಳ ಕಷ್ಟದೆಸೆಗೆ ತಂದಿದ್ದರು. ಅವರ ಅಡಕೆ ವ್ಯಾಪಾರ ಲೇವಾದೇವಿಯನ್ನು ತಿಮ್ಮಯ್ಯ ಸಾಲ ಕೊಟ್ಟವರ ಪ್ರೋತ್ಸಾಹದಿಂದ (ಅವರು ಬೇರೆ ಯಾರೂ ಅಲ್ಲದೆ ಹತ್ತಿರದ ನಂಟರಾಗಿದ್ದರು. ತಿಮ್ಮಯ್ಯ-ವೆಂಕಟಯ್ಯನವರ ತಾಯಿಯ ತವರಿನವರು!) ಮುಂದುವರೆಸಲು ಪ್ರಯತ್ನಿಸಿದ್ದನು. ಆದರೆ ಅವನೂ ತೀರಿಕೊಂಡ ತರುವಾಯ ಅದಕ್ಕೆ ಪೂರ್ಣವಿರಾಮ ಹಾಕಲೇಬೇಕಾಯಿತು. ಆಮೇಲೆ ಸಾಲ ತೀರಿಸಲು ಕುಪ್ಪಳ್ಳಿ ಮನೆಗೆ ಸೇರಿದ ಹಲವು ಜಮೀನು ಗದ್ದೆ ಅಡಕೆ ತೋಟಗಳನ್ನೆಲ್ಲ ಸಾಲ ಕೊಟ್ಟವರಿಗೆ ಬರೆದುಕೊಡಬೇಕಾಯಿತು. ಆಸ್ತಿ ಎಲ್ಲ ಹೋಗಿ ಮನೆಯ ಮುಂದಿನ ಅಡಕೆ ತೋಟ ಮತ್ತು ಮನೆಯ ಬಳಿಯಲ್ಲೆ ಇದ್ದ ಗದ್ದೆಗಳು ಮಾತ್ರ ನಮಗೆ ಉಳಿದುವು.

ಮೈಸೂರಿಗೆ ಬಂದೆ. ಸ್ವಾಮಿಜಿ ನನ್ನಿಂದ ನಮ್ಮ ಮನೆಯ ವಿಷಯಗಳನ್ನೆಲ್ಲ ತಿಳಿದರು. ಆದರೆ ನನಗೆ ಯಾವ ಮುಂದಣ ಸಲಹೆಗಳನ್ನೂ ಕೊಟ್ಟಂತೆ ನೆನಪಿಲ್ಲ. ಏನಾದರೂ ಅವರು ತಮ್ಮ ಮನದಲ್ಲಿಯೆ ಅದನ್ನೆಲ್ಲ ಇರಿಸಿಕೊಂಡರೆಂದು ತೋರುತ್ತದೆ.

ಎಂ.ಎ. ಡಿಗ್ರಿಯ ಕೊನೆಯ ಪರೀಕ್ಷೆಗೆ ಕುಳಿತದ್ದಾಯಿತು. ಬೇಸಗೆಯ ರಜಕ್ಕೆ ಮನೆಗೆ ಆದಷ್ಟು ಬೇಗನೆ ಹಾರುವುದೆ ರೂಢಿಯಾಗಿತ್ತು. ಆದರೆ ಕನ್ನಡ ಎಂ.ಎ. ಡಿಗ್ರಿಯ ಒಂದು ಅವಶ್ಯ ಅಂಗವಾಗಿದ್ದ ಸಂಸ್ಕೃತಿ ಪ್ರವಾಸಕ್ಕೆ ಹೋಗಬೇಕಾಯಿತು.

ಏಪ್ರಿಲ್ ತಿಂಗಳಲ್ಲಿ ಆ ಪ್ರವಾಸ. ಆ ಆಯಾಸದಿಂದ  ಹಿಂತಿರುಗಿದ ಮೇಲೆ ಅದನ್ನು ಕುರಿತು ‘ನಮ್ಮ ಹಂಪೆಯ ಯಾತ್ರೆ’ ಎಂದು ಒಂದು ಸುದೀರ್ಘ ಪ್ರಬಂಧವನ್ನು ಬರೆಯಲು ಉದ್ದೇಶಿಸಿ ಒಂದು ಹೊಸ ನೋಟುಬುಕ್ಕನ್ನೂ ಕೊಂಡು ಬರೆಯತೊಡಗಿ, ಇಪ್ಪತ್ತಾರು ಪುಟಗಳಷ್ಟನ್ನು ಮಾತ್ರ ಬರೆದು ನಿಲ್ಲಿಸಿದ್ದೇನೆ. ಅಪೂರ್ಣವಾಗಿರುವ ಆ ಪ್ರಬಂಧವನ್ನು ಒಳಗೊಂಡ ಹಸ್ತಪ್ರತಿಯ ನೋಟುಬುಕ್ಕಿನ ಉಳಿದೆಲ್ಲ ಪುಟಗಳೂ ಖಾಲಿಯಾಗಿಯೆ ಇವೆ. ಪ್ರಬಂಧದ ವಿಷಯ ಬರಿಯ ರೈಲು ಪ್ರಯಾಣವೆ ಆಗಿದೆ. ಪ್ರವಾಸಿಗಳೆಲ್ಲ-ಮಾರ್ಗದರ್ಶಿ ಮುಖಂಡರು ಶ್ರೀನಿವಾಸಚಾರ್ಲು, (ಅವರು ಎಂ.ಎ. ವಿದ್ಯಾರ್ಥಿಯಲ್ಲ. ಶ್ರೀ ಅನಂತಕೃಷ್ಣ ಶರ್ಮರವರ ತಮ್ಮಂದಿರು. ಅವರು ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಅವರಿಗೆ ಅತ್ತಕಡೆಯ ಪರಿಚಯ ಚೆನ್ನಾಗಿದ್ದುದರಿಂದಲೂ ಹೊಸಪೇಟೆ ಮೊದಲಾದ ಕಡೆ ಅವರ ನಂಟರಿಷ್ಟರಿದ್ದುದರಿಂದಲೂ ನಮಗೆ ನೆರವಾಗಲೊಪ್ಪಿ ಬಂದವರು.) ಡಿ.ಎಲ್.ನರಸಿಂಹಾಚಾರ್ಯ, ಕೆ.ವೆಂಕಟರಾಮಪ್ಪ, ಬಿ.ಎಸ್.ವೆಂಕಟರಾಮಯ್ಯ, ಎನ್. ಅನಂತರಂಗಾಚಾರ್, ನಂಜುಂಡಯ್ಯ, ಭೀಮಸೇನರಾವ್, (ಹೈದರಾಬಾದಿನಿಂದ ಬಂದು ನಡುವೆ ಕೂಡಿಕೊಂಡರು.) ಮತ್ತು ಇತರರು. ಹೊಸಪೇಟೆಯಲ್ಲಿ ರೈಲಿನಿಂದ ಇಳಿದು ಬಾಡಿಗೆ ಕಾರು ಹತ್ತುವವರೆಗೆ ಪ್ರಬಂಧ ಸಾಗಿ ನಿಂತುಬಿಟ್ಟಿದೆ.

ಇಂದೇನೂ (೧೯೭೪) ಅದನ್ನು ಒಂದು ರಕ್ಷಿತಪ್ರದೇಶವೆಂದು ಘೋಷಿಸಿ ಪ್ರಾಚೀನ ಅವಶೇಷಗಳನ್ನೆಲ್ಲ ಅಚ್ಚುಕಟ್ಟಾಗಿ ಇಟ್ಟಿದ್ದಾರಂತೆ. ಆದರೆ ಅಂದು (೧೯೨೯) ನಾವು ಕಂಡದ್ದು ದಿಕ್ಕಿಲ್ಲದ ಅನಾಥ ಪ್ರದೇಶವೆಂಬಂತಿತ್ತು. ಹೊಲಗಳ ನಡುನಡುವೆ ಪೊದೆಗಳು ಕಿಕ್ಕಿರಿದು ಸುತ್ತುವರೆದ ಜಾಗಗಳಲ್ಲಿ ಅಲ್ಲೊಂದು ಇಲ್ಲೊಂದು ಮುರಿದ ವಿಗ್ರಹ, ಹಾಳುಬಿದ್ದ ಕಟ್ಟಡ ಪ್ರೇತವತ್‌ನಿಂತಿದ್ದುವು. ಜೊತೆಗೆ ಆ ಉರಿಬಿಸಿಲಿನ ಬೇಸಿಗೆಯಲ್ಲಿ ಏನನ್ನೂ ಶಾಂತವಾಗಿ ಸಮಾಧಾನದಿಂದ ನೋಡಲೂ ಸಾಧ್ಯವಿರಲಿಲ್ಲ. ಒಮ್ಮೆಯಂತೂ ಬಾಯಾರಿಕೆ ಹೆಚ್ಚಿ ಏನಾದರೂ ಸರಿಯೆ ಎಂಥ ನೀರಾದರೂ ಸರಿಯೆ ಸಿಕ್ಕಿದರೆ ಸಾಕು ಕುಡಿಯುತ್ತೇವೆ ಎಂದು ದೂರದಲ್ಲಿ ಹಸುರೆದ್ದು ಕಾಣುತ್ತಿದ್ದ ಒಂದು ಕಬ್ಬಿನ ಹೊಲದತ್ತ ಓಡಿದೆವು. ನೀರೇನೊ ಇತ್ತು. ಆದರೆ ಹುಳು ಮಿಜಿಮಿಜಿ ಎನ್ನುತ್ತಿತ್ತು. ಆಚಾರ್ಲು ಅವರು ನಮ್ಮನ್ನು ತಡೆದು ‘ಸ್ವಲ್ಪ ತಡೆಯಿರಿ, ಕುಡಿಯಬೇಡಿ. ನಾನು ನನ್ನ ವಸ್ತ್ರದಿಂದ ಸೋಸಿ ಕೊಡುತ್ತೇನೆ. ಹುಳುಗಳಾದರೂ ಹೊಟ್ಟೆಗೆ ಹೋಗದಿರಲಿ, ನೀರು ಕೆಟ್ಟದ್ದಾದರೂ!’ ಎಂದು ಅವರ ಉತ್ತರೀಯವನ್ನೆ ಸೋಸಣಿಗೆ ಮಾಡಿ ನೀರು ಹಿಂಡಿದರು, ನಮ್ಮ ಬೊಗಸೆಗಳಿಗೆ. ಆ ಕೊಳಕು ಬಗ್ಗಡದ ನೀರನ್ನೆ ಹೊಡೆತುಂಬೆ ಕುಡಿದೆವು! ಬಟ್ಟೆಗಳನ್ನು ಒದ್ದೆ ಮಾಡಿ ತಲೆಮೇಲೆ ಹಾಕಿಕೊಂಡೆವು. ಹಾಳು ಹಂಪೆ ಎಂದು ಬೈದೆವು ಅದರ ಹೆಸರನ್ನು ಹಿಡಿದು!

ಪ್ರವೇಶಿಸುವ ಪ್ರಾರಂಭದಲ್ಲಿಯೇ ಅವಶೇಷರೂಪವಾಗಿ ಉಳಿದಿರುವ ಕೋಟೆಯ ಹೆಬ್ಬಾಗಿಲಲ್ಲಿ ಕಾವಲು ನಿಂತಿರುವುದು ಭೀಮನ ಪ್ರತಿಮೆಯಂತೆ! ಅವನ ಮುಖವೆಲ್ಲ ಮುಸಲ್ಮಾನರ ದಸ್ಯುತನಕ್ಕೆ ಸಿಕ್ಕಿ ಸಿಡುಬಿನ ಕಲೆಗಳಿಂದ ಕನಿಕರ ಹುಟ್ಟಿಸುವಷ್ಟು ವಿಕಾರವಾಗಿತ್ತು. ಸುತ್ತ ಹಳು ಹಬ್ಬಿ.

ಆ ದಿನವೆ (೯-೪-೧೯೨೯) ನಾವು ಉಳಿದುಕೊಂಡಲ್ಲಿ ಇದ್ದ ಒಂದು ಕೃತಕಕೊಳದ ಸೋಪಾನ ಪಂಕ್ತಿಯ ಮೇಲೆ ಕುಳಿತು ನಾನು ರಚಿಸಿದ ಒಂದು ಕವನ ‘ಹಂಪೆಯ ಭೀಮ’ ನನ್ನ ಒಂದು ಕವನಸಂಗ್ರಹ ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ದಲ್ಲಿ ಅಚ್ಚಾಗಿದೆ. ಮೊದಲು ಅದು ‘ಮಹಾರಾಜಾ ಕಾಲೇಜಿನ ಕರ್ಣಾಟಕ ಸಂಘವು ಕಿರಿಯ ಕಾಣಿಕೆ’ಯ ತರುವಾಯ ಮರುವರ್ಷ ಪ್ರಕಟಿಸಿದ ‘ತಳಿರು’ ಎಂಬ ಕವನಸಂಗ್ರಹದಲ್ಲಿ ಅಚ್ಚಾಗಿತ್ತು. ಆದರೂ ಅದರ ಕೆಲವು ಪಂಕ್ತಿಗಳನ್ನಿಲ್ಲಿ ಕೊಡುತ್ತೇನೆ.

ಕೋಟೆಹೆಬ್ಬಾಗಿಲಲಿ ಬಿಸುಸುಯ್ವನಿವನಾರು?
ಬಲ್ಗದೆಯ ಮೆಯ್ಗಲಿಯು! ಭೀಮನೇನು?

(ಆ ವಿಗ್ರಹದ ಮುಖದ ಮೇಲೆ ಬಿದ್ದಿದ್ದ ಏಟುಗಳು ಕಣ್ಣಿಗೂ ಬಿದ್ದು ಕಣ್ಣಿನ ಕೆಳಗೂ ಕಲ್ಲು ಚೆಕ್ಕೆಯೆದ್ದು ಕಂಬನಿ ಉದುರುವಂತೆ ತೋರುತ್ತಿತ್ತು.)

ಕಂಬನಿಯ ಕರೆಯುತ್ತ ಮೂಕನಾಗೇಕಿಂತು,
ನಿಂತಿರುವೆ, ಮಾರುತಿಯೆ? ಮಾತನಾಡು!
ಬೀರಬೀರರ ಬೀರ, ಕಲ್ಲಾಗಿ ನೀನಿಂತು
ಹಾಳೂರು ಬಾಗಿಲನು ಕಾಯುತಿಹೆಯೇನು?
ಧರಣಿಪರು ಮಂತ್ರಿಗಳು ಸೈನಿಕರು ಕಬ್ಬಿಗರು
ಬಿಟ್ಟಳಿದ ಪಾಳ್ನೆಲವ ಕಾಯುತಿಹೆಯೇನು?
………………………………………………….
ನೀನು ಬಾಗಿಲ ಕಾಯುತಿರ್ದೊಡಂ ಹಂಪೆಯಿದು
ಮುಸಲರಿಂ ಹಸಿಮಸಣವಾದುದೇನು?
ನಿನ್ನಣ್ಣ ಹನುಮಂತನಿಲ್ಲಿರ್ದೊಡಂ ಬಂದು
ನಿನಗೆ ನೆರವಾಗಿದನು ಪೊರೆಯಲಿಲ್ಲೇನು?
ರನ್ನ ಪಂಪರ ಮಹಾಕಾವ್ಯ ರಸರಂಗದಲಿ
ಭಾರತದ ಕೊಳುಗುಳದಿ ನಿನ್ನ ನೋಡಿಹೆನು?
ಕಂಬನಿಯ ಕರೆವ ಭೀಮನನಲ್ಲಿ ಕಂಡಿಲ್ಲ,
ಜಯಮತ್ತ ರುದ್ರಮಾರುತಿಯ ಕಂಡೆ!
………………………………………………
ಇಲ್ಲಿಗೈತಹ ಯಾತ್ರಿಕರ ಎದೆಯ ಮೂಷೆಯಲಿ
ಹಾಳಾದ ಐಸಿರಿಯ ಕಿಚ್ಚ ಮರುಕೊಳಿಸು!
ಅಣಕಿಸೆಮ್ಮನು, ವೀರ: ಹೆಂಬೇಡಿಗಳು ನಾವು!
ನಿನ್ನ ಗದೆಯಾಘಾತದಿಂದೆಚ್ಚರುವೆವು!
ಹೇ ವೀರಮೂರ್ತಿಯೇ, ಹಂಪೆಯೀ ಮಸಣದಲಿ
ಭೈರವಾಶ್ರುವ ಚೆಲ್ಲಿ ಮೌನದಲಿ ನಿಲ್ಲು!
ಯಾತ್ರಿಕರ ಹೃದಯದಲಿ ಕೆಚ್ಚೂರಿ ನೆಚ್ಚೂರಿ
ಹೆಂಬೇಡಿಗಳನ್ನೆಲ್ಲ ನಿನ್ನೆಡೆಗೆ ಗೆಲ್ಲು!

ಹಾಗೆಯೆ ಮತ್ತೊಂದು ಕವನ ‘ಹಂಪೆ’ ಎಂಬ ಶೀರ್ಷಿಕೆಯದು. ‘ಕದರಡಿಕೆ’ ಎಂಬ ಕವನಸಂಗ್ರಹದಲ್ಲಿ ಅಚ್ಚಾಗಿದೆ:

ಬಾ ಇಲ್ಲಿ, ಬಾ ಇಲ್ಲಿ, ಕನ್ನೆಡಿಗ ಬಾ ಇಲ್ಲಿ!
ಮೈಮೆಯನು ಕಂಡರಿಯದಿಹ ನೀನು; ನೋಡದರ
ಹುಳು ಹಿಡಿದ ಹೆಣವನಾದರು, ನೋಡು, ಬಾ ಇಲ್ಲಿ!…

ಎಂದು ಪ್ರಾರಂಭವಾಗುತ್ತದೆ.

ಒಟ್ಟಿನಲ್ಲಿ ನಾವು ಕಂಡದ್ದು ಹುಳುಹಿಡಿದ ಹೆಣದಂತಿದ್ದರೂ ವಿರೂಪಾಕ್ಷ ದೇವಸ್ಥಾನ, ಮತ್ತು ಮತಂಗ ಪರ್ವತದ ಪಾದವನ್ನು ತೊಳೆಯುತ್ತಾ ಹರಿಯುತ್ತಿರುವ ತುಂಗಭದ್ರೆಯ ಮಳಲದಿಣ್ಣೆಯ ಮೇಲೆ ಕುಳಿತು ದೃಶ್ಯದಂತಹುಗಳು ನಮ್ಮ ಪ್ರವಾಸದ ಹರ್ಷ ಬಿಂದುಗಳಾಗಿದ್ದವು. ಸಹ್ಯಾದ್ರಿಯ ರುದ್ರ ರಮಣೀಯ ಪ್ರಕೃತಿ ಸೌಂದರ್ಯದ ಮಧ್ಯೆ ಹುಟ್ಟಿ ಬೆಳೆದು ಅದನ್ನು ಹೀರಿಕೊಂಡ ಕವಿಯ ಚೇತನಕ್ಕೆ ಅಲ್ಲಿಯ ನಿಸರ್ಗ ಅಷ್ಟೇನೂ ಆಕರ್ಷಣೀಯವಾಗಿರಲಿಲ್ಲ. ಹಿಂದೆ ಇದ್ದುದರ ನೆನಪಿನಿಂದಲೆ ಅದು ನಮ್ಮ ಹೃದಯಕ್ಕೂ ಮನಕ್ಕೂ ತುಷ್ಟಿಯೊದಗಿಸಬೇಕಾಗಿತ್ತು.

*          *          *

ಪ್ರವಾಸ ಮುಗಿಸಿ ಊರಿಗೆ ಮರಳಿದೆ, ಮರುಭೂಮಿಯ ಪರ್ಯಟನದಿಂದ ನಂದನಕ್ಕೆ ಬಂದಂತಾಯಿತು ನನ್ನ ಚೇತನಕ್ಕೆ, ಮಲೆನಾಡಿನ ಹಸುರು ಮಲೆಗಾಡುಡೆಯ ಪ್ರಕೃತಿ ದೇವಿಯ ಮಡಿಲಿನಲ್ಲಿ. ಕುಪ್ಪಳ್ಳಿಯಲ್ಲಿಯೆ ಆ ಬೇಸಗೆಯ ಎರಡು ತಿಂಗಳುಗಳಲ್ಲಿ ೨೪ ಕವನಗಳನ್ನು ರಚಿಸಿರುವುದು  ನನ್ನ ಹಸ್ತಪ್ರತಿಯಿಂದ ಗೊತ್ತಾಗುತ್ತದೆ. ‘ಕವಿ ಬಿಲ್ಹಣ’ ಎಂಬ ಸರಳರಗಳೆಯ ನಾಟಕವನ್ನೂ ಪ್ರಾರಂಭಿಸಿ ಎರಡು ದೃಶ್ಯಗಳನ್ನು ಬರೆದು, ಮೂರನೆಯ ದೃಶ್ಯಗಳನ್ನು ಅರ್ಧ ಬರೆದುಬಿಟ್ಟಿರುವುದು ಕಾಣುತ್ತದೆ,

ಆ ಇಪ್ಪತ್ತಾರು ಕವನಗಳಲ್ಲಿ ಒಂದೆರಡನ್ನುಳಿದು ಎಲ್ಲವೂ ‘ಕೊಳಲು’ ‘ನವಿಲು’ ಕವನ ಸಂಗ್ರಹಗಳಲ್ಲಿ ಅಚ್ಚುಗೊಂಡು ಕನ್ನಡಿಗ ಸಹೃದಯರಿಗೆ ಸುಪ್ರೀತವಾಗಿ ಸುಪ್ರಸಿದ್ಧವಾಗಿಯೆ ಇವೆ. ಉಳಿದಿದ್ದ ಆ ಒಂದೆರಡೂ ಈಚೆಗೆ ಪ್ರಕಟವಾದ ‘ಕದರಡಕೆ’ಯಲ್ಲಿ ಅಚ್ಚಾಗಿವೆ. ತಿರಸ್ಕೃತವಾಗಿರುವ ಒಂದೇ ಒಂದು ಗಾಡು ‘ಕೋಗಿಲೆಯ ಗೋಳು’ ನಾಡಿನ ಜನರು ಲೆಕ್ಕಿಸದ ಕವಿ ತನ್ನ ಹೊಟ್ಟೆಯುರಿಯ ಸಿಟ್ಟನ್ನು ತೋಡಿಕೊಳ್ಳುವಂತಿದೆ. ಅದಕ್ಕೆ ನನ್ನ ವೈಯಕ್ತಿಕ ಜೀವನದ ಆಧಾರವಿರುವಂತೆ ತೋರುವುದಿಲ್ಲ. ಬಹುಶಃ ತನಗೆ ಕಾವ್ಯಾನಂದ ನೀಡುವ ಯಾವ ಕವಿಗೇ ಆಗಲಿ ನಾಡಿನ ಜನ ಹೊಟ್ಟೆ ಬಟ್ಟೆಗೆ ಕೊಟ್ಟು ಅವನ ಯೋಗಕ್ಷೇಮವನ್ನು ನೋಡಿಕೊಳ್ಳಬಾಕೇದುದು ಅವರ ಕರ್ತವ್ಯವೆಂಬ ಭಾವನೆಯಿಂದ ಉದ್ದೀಪನವಾಗಿರಬೇಕು ಆ ರಚನೆ:

ಕೋಗಿಲೆಯ ಗೋಳು

ಕೋಗಿಲೆಯೊಂದನು ಸಾಕಲರಿಯದು ನಾಡೆಲ್ಲಾ ಸೇರಿ| ||ಪಲ್ಲವಿ||
ಕೋಗಿಲೆ ನಮ್ಮದು, ನಮ್ಮದು ಕೋಗಿಲೆ! ಎನ್ನುವರೆಲ್ಲಾ ಹೋರಿ|| ||ಅ.ಪ.||
ಆನಂದದಿಂದ ತಲೆದೂಗಿ ನಲಿವರು ಕೋಗಿಲೆ ತಳಿರಲಿ ಹಾಡೆ|
ಬನ ಬನ ಬನದಲಿ ಕುಹು ಕುಹು ಕುಹು ಎಂದು ಇಮ್ಮಡಿಯಿಂಚರ ಮಾಡೆ|
ಹಣ್ಣನು ತಿನೆ ನಾ ಕೋಪಿಪರೆಲ್ಲಾ! ಮಣ್ಣನು ತಿನ್ನಲೆ ನಾನು?|
ಜಿಪುಣರ ಜಿಪುಣತೆಯೊಂದೇ ತಾನಿರೆ, ಮಾಗಿಯ ಬಂಧನವೇನು?||
ಅಡವಿಯೊಳಾನಿರೆ ಹೊಗಳುವರೆಲ್ಲಾ ‘ಕೂಗೆಲೆ ಕೋಗಿಲೆ!’ ಎಂದು|
ಉಪವನಕೈತರೆ ತೆಗಳುವರೆಲ್ಲಾ ‘ಹೋಗೆಲೆ ಹೋಗೆಲೆ!’ ಎಂದು||
ಚಿ ಚಿ ರಸಿಕನೆ, ನೀರಸ ರಸಿಕನೆ, ನಾಚಿಗೆಯಿಲ್ಲವೆ ನಿನಗೆ?|
ಹಣ್ಣನು ಕೊಡದೆಯೆ ಹಾಡನು ಕೇಳುವೆ! ತಿರುಪೆಯ ನೀಡುವೆ ನಿನಗೆ!||

ಆ ಇಪ್ಪತ್ತಾರು ಕವನಗಳಲ್ಲಿ ಕೆಲವು ಸುಪ್ರಸಿದ್ಧವಾಗಿ ಒಂದು ರೀತಿಯಲ್ಲಿ ನವೋದಯ ಸಾಹಿತ್ಯದಲ್ಲಿ ಐತಿಹಾಸಿಕ ಸ್ಥಾನ ಗಳಿಸಿವೆ ಎನ್ನಬಹುದು: ‘ಮುಂಗಾರು’ ‘ಮಲೆನಾಡಿಗೆ ಬಾ’ ‘ಕಾಜಾಣ’ ‘ಸಹ್ಯಾದ್ರಿ ಶೃಂಗದಲಿ’ ‘ಅರುಣ ಗೀತೆ’ ಇವುಗಳಲ್ಲಿ ೧, ೩, ೫ನೆಯ ಕವನಗಳಿಗೆ ಸ್ವಾರಸ್ಯವಾದ ‘ಚರಿತ್ರೆ’ಗಳಿವೆ. ನಮ್ಮ ಸಹೃದಯರಿಗೂ ವಿಮರ್ಶಕರಿಗೂ ಗೊತ್ತಿರಬೇಕಾದ ವಿಷಯಗಳಾದ್ದರಿಂದ ಇಲ್ಲಿ ಸಂಕ್ಷೇಪವಾಗಿ ನಿರೂಪಿಸುತ್ತೇನೆ:

‘ಮುಂಗಾರು’-ಇದನ್ನು ನಾನು ರಚಿಸಿದ್ದು ಕುಪ್ಪಳಿಯ ಉಪ್ಪರಿಗೆಯಲ್ಲಿ ಕುಳಿತು. ಆ ಉಪ್ಪರಿಗೆ ಪೂರ್ವದಿಕ್ಕಿಗೆ ಪೂರ್ತಿ ತೆರೆದಿದೆ. ಪೂರ್ವದಿಕ್ಕಿಗೆ ಅಡಕೆ ತೋಟದಿಂದ ಆಚೆಗೆ ಏರುವ ಮಲೆನೆತ್ತಿ ಅರ್ಧ ಆಕಾಶಕ್ಕೇ ಏರಿದೆ. ಮಲೆ ಎಂದರೆ ಬರಿಯ ಬೆಟ್ಟವಲ್ಲ. ನಿಬಿಡಾರಣ್ಯ ಮುಚ್ಚಿ ಮುಸುಗಿರುವ ಪರ್ವತಶ್ರೇಣಿ. ಆ ದಿನ ಸಂಜೆಯ ಹೊತ್ತು ಧ್ಯಾನನೇತ್ರಗಳಿಂದ ನೋಡುತ್ತಾ ಕುಳಿತಿದ್ದೆ. ಆಕಾಶದಲ್ಲಿ ಮುಂಗಾರಿನ ಮೋಡ ಕವಿದು ಭಯಂಕರ ಗುಡುಗು ಮಿಂಚುಗಳಿಂದ ವಿಜೃಂಭಿಸಿತ್ತು. ಕರ್ಮೋಡದ ತುದಿ ಮಲೆನೆತ್ತಿಯನ್ನೆ ಮರೆಗೊಳಿಸಿ ಭೂಮಿಗೆ ಸಮಿಪಿಸಿತ್ತು. ಹೆಮ್ಮೆರಗಳನ್ನೂ ಅಲುಬಿ ತೂಗಿಸುವ ಬಿರುಗಾಳಿಯೂ ಎದ್ದಿತು. ನೋಡುತ್ತಿದ್ದಂತೆ, ಮಳೆ ಶುರುವಾದುದು ಮಲೆಯ ನೆತ್ತಿಯ ಮರಹಸುರು ಮಬ್ಬಾಗಿ ಗೊತ್ತಾಯಿತು. ಮತ್ತೆ ಮಳೆ ಮಲೆಯ ಇಳಿಜಾರಿನಲ್ಲಿ ಮನೆಯ ಕಡೆಗೆ ಇಳಿಯತೊಡಗಿತು, ನೆತ್ತಿಯಿಂದ ಮಲೆಯ ಓರೆಯ ಸೋಪಾನವನ್ನಿಳಿದು ಬರುವಂತೆ: ಅದು ಇಳಿದಂತೆಲ್ಲ ಕಾಡು ಮಬ್ಬಾಗುತ್ತಾ ಮಬ್ಬು ಮುಂದುವರಿಯುತ್ತಿತ್ತು. ದೂರವಿದ್ದ ಹನಿಗಳು ಬರಬರುತ್ತಾ ಬಳಿಸಾರಿ ಕೊನೆಗೆ ನಮ್ಮ ತೋಟವೂ ಸೇರಿದಂತೆ ಎಲ್ಲವೂ ಸೊಳ್ಳೆಪರದೆಯೊಳಗಾದಂತೆ ದೃಶ್ಯ ಕಂಗೊಳಿಸಿತು. ಆ ಕವನದಲ್ಲಿ ಈ ಮೇಲೆ ವರ್ಣಿಸಿದ ಚಿತ್ರದ ಅನುಭವ ಹೀಗೆ ಅಭಿವ್ಯಕ್ತಿಗೊಂಡಿದೆ: ೫ನೆಯ ಪದ್ಯದಲ್ಲಿ.

ವನಪರಿವೃತ ಗಿರಿಶಿರದಿಂದೊಯ್ಯನೆ ಮರದಲೆದಳಿರನು ತುಳಿತುಳಿದು
ಚೆಲುವಿನ ಹನಿಗಳು, ಸುರಶಿಶುಮಣಿಗಳು ಬುವಿಗಿಳಿತಂದರು ನಲಿನಲಿದು:
ಬಳಿಸಾರುವ ದೂರದ ಸರ ಕೇಳೆ
ಗಣನೆಗೆ ಸಿಲುಕದ ಮಳೆಹನಿ ಬೀಳೆ
ಕಬ್ಬಿಗನೆದೆಯಲಿ ಮುದ ಮೊಳೆತೇಳೆ
ನೆನೆವುದು ಸೊಗದಲಿ ಬಗೆಗಣ್ಣು:
ಧಾರೆಯ ದಾರದಿ ನೆಯ್ದಿಹ ತೆಳ್ಳನೆ ಜವನಿಕೆಯುಡುವಳು ತಿರೆವೆಣ್ಣು!

ಮಳೆಯ ಹನಿಯ ದಾರಗಳಿಂದ ನೆಯ್ದ ಒಂದು ಯವನಿಕೆ (ಪರದೆ) ಕಾಡನ್ನು ಸುತ್ತುವರಿದಂತಾಗಿ ಮಲೆ ಕಾಡು ಎಲ್ಲ ಒಂದು ಸೊಳ್ಳೆಪರದೆಯೊಳಗಾದಂತಾಗಿ ಮಸುಗು ಮಸುಗಾಗುತ್ತದೆ ಎಂಬ ಸುಂದರ ದೃಶ್ಯಕ್ಕೆ ಪ್ರತಿಮೆಯೊಡ್ಡುತ್ತದೆ ಕವಿಪ್ರತಿಭೆ, ಕೊನೆಯ ಪಂಕ್ತಿಯಲ್ಲಿ. ಈ ‘ಮುಂಗಾರು’ ಕವನವನ್ನು ನಾನು ಬಹಿರಂಗ ಸಭೆಗಳಲ್ಲಿ ಓದಿದಾಗೆಲ್ಲ ಸಹೃದಯರು ಮೆಚ್ಚಿ ಹರ್ಷಘೋಷ ಮಾಡುತ್ತಿದ್ದರು. ಆದರೆ ‘ಕೊಳಲು’ ಅವನ ಸಂಗ್ರಹದಲ್ಲಿ ಅದು ಅಚ್ಚಾದಾಗ ಧಾರವಾಡದ ‘ಜಯಕರ್ಣಾಟಕ’ ಮಾಸಪತ್ರಿಕೆ ‘ಕೊಳಲಿನ’ನ ಕವನಗಳಲ್ಲಿ ಬರಿಯ ದೋಷಗಳೆನ್ನೆ ಕೆದಕಿ ಪರಿಹಾಸ್ಯಮಾಡಿ ತೆಗಳಿತು. ಅದನ್ನು ಬರೆದ ವಿಮರ್ಶಕಮಾನ್ಯರೊಬ್ಬರು ‘ಧಾರೆಯ ದಾರದಿ’ ಎಂದು ಪ್ರಾರಂಭವಾಗುವ ಪದ್ಯದ ಕೊನೆಯ ಪಂಕ್ತಿಯನ್ನು ಲೇವಡಿ ಮಾಡುತ್ತಾ ‘ಈ ಜವನಿಕೆಯನ್ನು ಉಡುವ ತಿರೆವೆಣ್ಣಿನ ದಪ್ಪ ಸೊಂಟ ಎಷ್ಟು ಮೈಲಿ ವಿಸ್ತಾರದ್ದಿರಬೇಕು?’ ಎಂದು ಬರೆದು ತಮ್ಮ ಕಲ್ಪನಾದಾರಿದ್ಯ್ರವನ್ನೂ ಕರುಬನ್ನೂ ಪ್ರದರ್ಶಿಸಿದ್ದರು!

ನನ್ನ ಕವನಗಳಲ್ಲಿ ಬಹುಪಾಲು ಸ್ವಾನುಭವ ಸನ್ನಿವೇಶಗಳಿಂದಲೆ ಹೊಮ್ಮಿವೆ. ಅಂತಹ ಸನ್ನಿವೇಶಗಳ ಪರಿಚಯದಾರಿದ್ಯ್ರವಾಗಲಿ ಅಂತಹ ಅನುಭವಗಳ ದರಿದ್ರತೆಯಾಗಲಿ ಇರುವ ಓದುಗ ಸಹೃದಯನಾಗಿದ್ದರೆ, ಆ ಸನ್ನಿವೇಶ ಮತ್ತು ಅನುಭವಗಳನ್ನು ತನ್ನ ಭಾವಯಿತ್ರೀ ಪ್ರತಿಭೆಯಿಂದ ಕಲ್ಪಿಸಿಕೊಂಡು ಆ ಕವನಗಳ ರಸಾಸ್ವಾದನೆ ಮಾಡಬೇಕಾಗುತ್ತದೆ. ಅಸೂಯೆ ಅಥವಾ ದ್ವೇಷವಿದ್ದರಂತೂ ಅಂತಹ ವಾಚಕನಿಗೆ ಅವು ಒಣಕಟ್ಟಿಗೆಯೆ ಆಗುತ್ತದೆ. ಅವನು ಗೆದ್ದಲಾಗಿಯೆ ತಿಂದು ಹಾಳು ಮಾಡುತ್ತಾನೆ.

“ಕೊಳಲು” ಪ್ರಕಟವಾದಾಗ ಜಯಕರ್ಣಾಟಕದಲ್ಲಿ ಬಂದ ವಿಮರ್ಶೆಯನ್ನು ಕುರಿತು ಅಂದು (೧೬-೮-೧೯೩೦) (೮-೮-೧೯೩೦) ನನ್ನ ಇಬ್ಬರು ಮಿತ್ರರು ನನಗೆ ಬರೆದ ಎರಡು ಕಾಗದಗಳು ಅದೃಷ್ಟವಶಾತ್ ಸಿಕ್ಕಿವೆ. ಅವನ್ನಿಲ್ಲಿ ಮುಂದೆ ಕೊಡುತ್ತೇನೆ: ಅವರಲ್ಲಿ ಒಬ್ಬರು ದಿವಂಗತರಾಗಿದ್ದಾರೆ: ಕನ್ನಡ ಕತೆಗಾರರಲ್ಲಿ ಮಾಸ್ತಿಯವರಿಗೆ ಮಾತ್ರವೆ ದ್ವಿತೀಯ ಸ್ಥಾನದಲ್ಲಿರುವವರು ಎಂದು ಸುಪ್ರಸಿದ್ಧರಾದ ಎ. ಸೀತಾರಾಂ, ಕಾವ್ಯನಾಮದಿಂದ ‘ಆನಂದ’ ಎಂದು ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿರುವವರು. ಮತ್ತೊಬ್ಬರು ಭೂಪಾಳಂ ಚಂದ್ರಶೇಖರಯ್ಯನವರು, ಈಗಲೂ ಶಿವಮೊಗ್ಗದಲ್ಲಿ ಜನಜೀವನದ ಶ್ರೇಯಾಭಿವೃದ್ಧಿಗಾಗಿ ನಾನಾ ರೀತಿಯಲ್ಲಿ ಶ್ರಮಿಸುತ್ತಿರುವವರು.

‘ಕಾಜಾಣ’-ಈ ಕವನವನ್ನೂ ನಾನು ಕುಪ್ಪಳ್ಳಿಯ ಉಪ್ಪರಿಗೆಯಲ್ಲಿ ರಚಿಸಿದ್ದು ಜೋರಾಗಿ ಮಳೆ  ಸುರಿಯುತ್ತಿದ್ದ ರಾತ್ರಿ, ಸುಮಾರು ೮-೯ ಗಂಟೆ. ಈಗ ಆ ಪಕ್ಷಿ ಕರ್ಣಾಟಕದಲ್ಲೆಲ್ಲ ಹೆಸರಾಂತಿದೆ. ಕನ್ನಡ ಸಾಹಿತ್ಯ ಓದುವವರಿಗೆಲ್ಲ ಚಿರಪರಿಚಿತ, ‘ಉದಯರವಿ ಪ್ರಕಾಶನ’ದ ಮುದ್ರಿಕೆಯಲ್ಲಿ ಚಿತ್ರಿತವಾಗಿ. ಆಗ ಅದು ಅಜ್ಞಾತ ಪಕ್ಷಿ. ಹಳ್ಳಿಗರು ಅದನ್ನು ಏಕೆ “ಕಾಜಾಣ” ಎಂದು ಕರೆಯುತ್ತಾರೋ ಗೊತ್ತಿಲ್ಲ. ಕಿಟ್ಟೆಲ್ ನಿಘಂಟಿನಲ್ಲಿ ಆ ಹೆಸರಿನಲ್ಲಿ ನಾನೊಮ್ಮೆ ಭಾಸದ ಒಂದು ನಾಟಕ (ಸ್ಪಪ್ನವಾಸವದತ್ತ ಇರಬಹುದೊ ಏನೊ) ಓದುತ್ತಿರುವಾಗ ‘ಖಂಜನ ಪಕ್ಷ್ಮ ಕವಾಟ’ ಎಂಬ ಸಮಾಸ ಪದವನ್ನು ಎದುರುಗೊಂಡೆ. ನಿಘಂಟಿನಲ್ಲಿ ‘ಖಂಜನ’ಕ್ಕೆ ‘ಕಾಡಿಗೆ ಬಣ್ಣದ ಹಕ್ಕಿ’ ಎಂದು ಅರ್ಥವಿತ್ತು. ಅಂದರೆ ಕಾಡಿಗೆ ಹಚ್ಚಿದ ಹೆಣ್ಣಿನ ಕಣ್ಣಿನ ರೆಪ್ಪೆಗಳ ಕಣ್ಣಿಗೆ ಬಾಗಿಲುಗಳಾಗಿ ಅವು ಮುಚ್ಚಿ ತೆರೆಯುತ್ತವೆ ಎಂಬ ಭಾವ. ಆಗ ನನಗೆ ಬಹುಶಃ ಖಂಜನವೆ ಕಾಜಾಣವಾಗಿರಬಹುದೆ ಎಂದೆನ್ನಿಸಿತು. ಏಕೆಂದರೆ ಕಾಜಾಣದ ಬಣ್ಣ ಅಚ್ಚ ಮಿರುಗುಗಪ್ಪು. ಮತ್ತೊಮ್ಮೆ, ವಾಲ್ಮೀಕಿ ರಾಮಾಯಣದಲ್ಲಿಯೂ ಈ ಖಂಜನಪಕ್ಷಿಯನ್ನು ಎದುರುಗೊಂಡೆ. ಆದ್ದರಿಂದ ಬಹುಶಃ ಖಂಜನದಿಂದಲೆ ಕಾಜಾಣ ಬಂದಿರಬಹದೆಂದು ಊಹಿಸಿದೆ. ಮತ್ತೆ ನನ್ನ ಕನ್ನಡ ಹೆಮ್ಮೆ ಎಚ್ಚತ್ತು ಕಾಜಾಣದಿಂದಲೆ ಏಕೆ ಬಂದಿರಬಾರದು ’ಖಂಜನ’ ಎಂದೂ ತರ್ಕಿಸಿದ್ದುಂಟು. ಇರಲಿ, ಹೆಸರು ಎಲ್ಲಿಂದಲೆ ಬರಲಿ, ಈಗಂತೂ ಕನ್ನಡ ಸಾಹಿತ್ಯದಲ್ಲಿ ಕಾಜಾಣಕ್ಕೆ ಭದ್ರಸ್ಥಾನ ದೊರಕಿದೆ!

ಆ ಕವನ ರಚಿಸಲು ತೊಡಗಿದ್ದೆ, ಲಾಂದ್ರದ ಬೆಳಕಿನಲ್ಲಿ, ಉಪ್ಪರಿಗೆಯಲ್ಲಿ.

ಕೋಗಿಲೆಯಂತೆಯೆ ಬಣ್ಣವು ನಿನಗಿದೆ.
ಕೋಗಿಲೆಯಿಂಚರಕಿಮ್ಮಡಿಯಿಂಚರ!
ಕೋಗಿಲೆಗೆಲ್ಲಿದೆ ನಿನಗಿರುವಂತಹ
ಪುಕ್ಕದ ನೇಲುವ ಗರಿಯೆರಡು?
ಕೋಗಿಲೆಯಿನಿದನಿಯೊಂದೇ ಆಗಿದೆ,
ನಿನ್ನದು ಬಹುವಿಧವಾಗಿಹುದು!

(ಕೋಗಿಲೆ ಸಾಮಾನ್ಯವಾಗಿ ಕುಹೂ ಕುಹೂ ಎಂದು ಕೂಗುತ್ತದೆ. ಕಾಜಾಣದ ಆಲಾಪನೆ ತರತರವಾಗಿರುತ್ತದೆ. ’ಉದಯಗಗನದಲಿ ಅರುಣನ ಛಾಯೆ’ ಎಂದು ಪ್ರಾರಂಭವಾಗುವ ನನ್ನ ಇನ್ನೊಂದು ಗೀತೆಯಲ್ಲಿ ಅದರ ದಿವ್ಯತೆ ವರ್ಣಿತವಾಗಿದೆ. ಅಲ್ಲದೆ ಇತ್ತೀಚಿಗೆ ‘ಚದುರಂಗ’ರಿಂದ ಚಿತ್ರಿತವಾಗಿರುವ ‘ರಾಷ್ಟ್ರಶಕ್ತಿ ಕುವೆಂಪು’ ಸಾಕ್ಷ್ಯ ಚಿತ್ರದಲ್ಲಿ ಕಾಜಾಣದ ಉಲಿಹವನ್ನು ಹಿಡಿದಿಡುವ ಪ್ರಯತ್ನ ತಕ್ಕಮಟ್ಟಿಗೆ ಸಫಲವಾಗಿದೆ.)

ಕೋಗಿಲೆಯಂದದಿ ಹೆರವರ ಮನೆಯಲಿ
ಹುಟ್ಟಿದ ತಬ್ಬಲಿ ನೀನಲ್ಲ!
ಕೋಗಿಲೆಯಂದದಿ ಹೊಲಸನು ತಿನ್ನುವ
ಕಾಗೆಗೆ ನೀ ಋಣಿಯಾಗಿಲ್ಲ!

(ಆದಂತೂ ಎಲ್ಲರಿಗೂ ಗೊತ್ತಿರುವ ವಿಷಯ. ಕಾಗೆಯ ಗೂಡಿನಲ್ಲಿರುವ ಅದರ ಮೊಟ್ಟೆಯನ್ನು ತಿಂದುಹಾಕಿಯೋ ಹೊರಗೆ ಎಸೆದೋ ಕೋಗಿಲೆ ತನ್ನ ಮೊಟ್ಟೆಯನ್ನು ಅಲ್ಲಿ ಇಡುತ್ತದೆ. ಬೆಪ್ಪು ಕಾಗೆ ಕಾವು ಕೂತು ಮರಿ ಮಾಡಿ ತುತ್ತುಕೊಟ್ಟು ಸಾಕುತ್ತದೆ. ಆ ತುತ್ತಿನಲ್ಲಿ ಇಲಿ ಹೆಗ್ಗಣ ಹಲ್ಲಿ ಹಾವು ಮಾಂಸ ಏನು ಬೇಕಾದರೂ ಇರಬಹುದು, ಸ್ವಲ್ಪವೂ ಬ್ರಾಹ್ಮಣಿಕೆ ಇಲ್ಲ!)

ಶೂದ್ರನೆ ಹುಟ್ಟಿಸಿ, ಶೂದ್ರನೆ ಬೆಳೆಯಿಸಿ,
ಶೂದ್ರನೂ ಕೊಟ್ಟಾಹಾರವ ತಿಂದಿಹ
ಕೋಗಿಲೆಗೆಲ್ಲಿಯ ದ್ವಿಜತನವು?

(ಇಲ್ಲಿ ‘ದ್ವಿಜ’ ಪದದ ಎರಡು ಅರ್ಥಗಳಲ್ಲಿಯೂ ಹೊಮ್ಮುತ್ತದೆ ಧ್ವನಿ!)

ಕಾಗೆಯ ಮರಿಗಳ ಸಂಗದಿ ಬಳೆದಿಹ

ಆ ಪರಪುಟ್ಟನು ನಿನಗೆಣೆಯೆ?
ಬನದೆಲೆವನೆಯಲಿ ರಿಸಿಕುವರರವೊಲು
ಜನಿಸಿದ ಪರಿಶುದ್ಧಾತ್ಮನು ನೀನಹೆ;
ಸಾಟಿಯ ನಿನಗಾ ದೇಸಿಗನು?

(ಈ ಪಂಕ್ತಿ ಮುಗಿದಾಗ ರಾತ್ರಿ ೮ ಗಂಟೆಯಾಗಿತ್ತು. ನನ್ನ ಹಸ್ತಪ್ರತಿಯ ಅಂಚಿನಲ್ಲಿ ‘ರಾತ್ರಿ ೮ ಗಂಟೆ. ಕೋಗಿಲೆ ಕೂಗಿತು!’ ಎಂದು ಬರೆದಿದೆ. ಘನಘೋರ ಮುಂಗಾರಿನ ಕತ್ತಲೆ. ಮಳೆ ಭೋರೆಂದು ಸುರಿಯುತ್ತಿದೆ. ಆ ಸದ್ದನ್ನೆಲ್ಲ ಮೀರಿ ಮುಳುಗಿಸುವಂತೆ ಒಂದು ಕೋಗಿಲೆ, ಎಲ್ಲಿಂದ ಬಂತೋ ಎಲ್ಲಿತ್ತೋ ದೇವರೇ ಬಲ್ಲ, ಸುಮ್ಮನೆ ಕೂಗತೊಡಗಿತು! ‘ನಾನು ದಿಗಿಲುಗೊಂಡಂತೆ ಎಚ್ಚತ್ತೆ, ನನ್ನ ಕಾವ್ಯ ಸಮಾಧಿಯಿಂದ! ಕೂಗು ನಿಂತಿತು. ನಾನು ನಿಜವಾಗಿಯೂ ಕೋಗಿಲೆ ಕೂಗಿತೋ ಅಥವಾ ನನ್ನ ಕಲ್ಪನಾರಾಜ್ಯದಲ್ಲಿ ಹಾಗೆ ಕೂಗಿದಂತಾಯಿತೋ ಎಂದು ಆಲೋಚಿಸುತ್ತಿದ್ದಂತೆ ಮತ್ತೆ ಸ್ಪಷ್ಟವಾಗಿ ಆಶ್ಚರ್ಯಕರವಾಗಿ ನೀಳಿಂಚರದಿಂದ ಕೂಗಿ ಕೂಗಿ ನಿಲ್ಲಿಸಿಬಿಟ್ಟಿತು!)

ಮೊದಲನೆಯದಾಗಿ, ಅಲ್ಲಿ ಕಾಗೆಗಳೂ ಅಪರೂಪವಾಗಿರುವುದರಿಂದ ಆ ಕಾಡಿನಲ್ಲಿ, ಅದರಲ್ಲಿಯೂ ನಮ್ಮ ಮನೆ ಇರುವ ಕಗ್ಗಾಡಿನಲ್ಲಿ, ಕೋಗಿಲೆಯ ಕೂಗು ಸ್ವಲ್ಪ ಅಪರೂಪವೆ, ಹಗಲಿನಲ್ಲಿಯೂ! ಹೀಗಿರುವಾಗ ಇರುಳಿನಲ್ಲಿ ಮಳೆ ಸುರಿಯುತ್ತಿರುವ ಭೋರ್ಭೋರನೆಯ ಸದ್ದಿನಲ್ಲಿ. ಅದನ್ನೆಲ್ಲ ಮೀರುವಂತೆ ಕೋಗಿಲೆ ಕೂಗುದುದು ನಿಜವಾಗಿಯೂ ಪವಾಡರೂಪದ ಅಚ್ಚರಿಯೆ!

ಎರಡನೆಯದಾಗಿ, ಹಿಂದೆಂದೂ ರಾತ್ರಿಯಲ್ಲಿ, ಅದರಲ್ಲಿಯೂ ಮಳೆಗಾಲದ ಕಗ್ಗತ್ತಲಲ್ಲಿ, ಅಲ್ಲಿ ಕೂಗದಿದ್ದ ಕೋಗಿಲೆ, ನಾನು ಕೋಗಿಲೆಯನ್ನು ಮೂದಲಿಸಿ ಅವಹೇಳನ ಗೈದು ಕಾಜಾಣವನ್ನು ಹೊಗಳಿ ‘ಆ ಪರದೇಶಿ ನಿನಗೆ ಸಮಾನನೆ?’ ಎಂದು ಬರೆದು ನಿಲ್ಲಿಸಿದೊಡನೆಯೆ ತನ್ನ ಪ್ರತಿಭಟನೆಯನ್ನು ಸೂಚಿಸಿ ಕವಿಯನ್ನು ನಿಂದಿಸುವಂತೆ ಎರಡು ಸಾರಿ ಕೂಗಬೇಕೆ?

ಮೂರನೆಯದಾಗಿ, ಅಂದು ಆದ ಆ ಅನುಭವ ಮುಂದೆ ಯಾವಾಗಲೂ ನನಗಾಗಿಲ್ಲ. ಆವೊತ್ತಂತೂ ಹಾಗೆ ಕವಿಯನ್ನು ಭರ್ತ್ಸನೆ ಮಾಡುವಂತೆ ಇರ್ಮೆ ಕೂಗಿ ನಿಲ್ಲಿಸಿದ ಕೋಗಿಲೆ ಮತ್ತೆ ಬಾಯ್ದರೆಯಲಿಲ್ಲ!

ನಾನು ಹಸ್ತಪ್ರತಿಯಲ್ಲಿ ಒಂದು ಬ್ಯ್ರಾಕೆಟ್ ಹಾಕಿ ಆ ಕೋಗಿಲೆಯನ್ನು ಸಂಬೋಧಿಸಿ ಅದರ ಕ್ಷಮೆ ಕೇಳುವಂತೆಯೂ ಮತ್ತು ಪರರ ಹೊಗಳಿಕೆಯನ್ನು ಸಹಿಸದ ಅದರ ಮಾತ್ಸರ್ಯ ಅದಕ್ಕೆ ತಕ್ಕದಲ್ಲವೆಂಬಂತೆಯೂ ೨೮ ಪಂಕ್ತಿಗಳನ್ನು ಬರೆದು ಬ್ಯ್ರಾಕೆಟ್ ಮುಚ್ಚಿ, ಮತ್ತೆ ಕಾಜಾಣದ ಪ್ರಶಂಸೆಯನ್ನು ಮುಂದುವರೆಸಿ ೨೩ ಪಂಕ್ತಿಗಳನ್ನು ಬರೆದು ಮುಗಿಸಿದೆ. ಆದರೆ….

ಅಲ್ಲಿಗೆ ಮುಗಿಯಲಿಲ್ಲ ಆ ಕವನದ ಚರಿತ್ರೆಯ ಸ್ವಾರಸ್ಯ.

ಆ ಕವನ ಮೊದಲು ‘ಪ್ರಬುದ್ಧ ಕರ್ಣಾಟಕ’ದಲ್ಲಿ ಪ್ರಕಟವಾಯಿತು, ಪ್ರಸಿದ್ಧವಾಯಿತು. ನಾನು ಅಲ್ಲಲ್ಲಿ ಅದನ್ನು ವಾಚನ ಮಾಡಿ ಅದು ಸುಪ್ರಸಿದ್ಧವೂ ಆಯಿತು. ವಿದ್ಯಾಭ್ಯಾಸದ ಇಲಾಖೆ ಅದನ್ನು ಹೈಸ್ಕೂಲಿನ ಒಂದು ಪಠ್ಯಪುಸ್ತಕಕ್ಕೂ ಸೇರಿಸಿತು. ಆಗ ಶುರುವಾಯ್ತು ಅದರ ಶ್ರಾದ್ಧ. ಆಗ ಹೈಸ್ಕೂಲಿನಲ್ಲಿ ಕನ್ನಡ ಪಾಠಮಾಡುತ್ತಿದ್ದವರಲ್ಲಿ ಬಹುಪಾಲು ಸಂಪ್ರದಾಯದ ಪಂಡಿತರು. ಅವರಿಗೆ ಹೊಸರೀತಿಯ ಬರವಣಿಗೆ ಕಂಡರಾಗುತ್ತಿರಲಿಲ್ಲ. ಹೊಸ ಹೊಸ ಛಂದಸ್ಸಿನ ಕವನಗಳಂತೂ ಅವರ ತಲೆಗೆ ಹೋಗುತ್ತಿರಲಿಲ್ಲ. ಅವುಗಳನ್ನು ತರಗತಿಗಳಲ್ಲಿ ನಾನಾ ವಿಧವಾಗಿ ಹೀಯಾಳಿಸಿ, ಬರೆದವರನ್ನು ಬೈದು ಮೂದಲಿಸುತ್ತಿದ್ದರು. ಅದರಲ್ಲಿಯೂ ಹೆಚ್ಚಾಗಿ ಬ್ರಾಹ್ಮಣವರ್ಗದಿಂದಲೆ ಬಂದಿರುತ್ತಿದ್ದ ಆ ಪಂಡಿತರಿಗೆ ಪದ್ಯ ಬರೆದವನು ಶೂದ್ರನೆಂದು ಗೊತ್ತಾದರಂತೂ ಆಯಿತು ಗತಿ! “ಶೂದ್ರಮುಂಡೇದು ಕಾವ್ಯ ಬೇರೆ ಬರೆಯುತ್ತದಂತೆ! ಇದರ ತಲವಾಯಿ!” ಎಂದೆಲ್ಲ ಬಹಿರಂಗವಾಗಿ ಕ್ಲಾಸಿನಲ್ಲಿಯೆ ಬೈಯುವವರೆಗೂ ಹೋಗುತ್ತಿತ್ತು ಅವರ ರಚ್ಚು! ಅದರಲ್ಲಿಯೂ ಈ ಕವನದಲ್ಲಿ ಬ್ರಾಹ್ಮಣರ ವಿಡಂಬನೆ ಇದೆ ಎಂದು ಭಾವಿಸಿ ಅದನ್ನು ವಿಶೇಷ ರೀತಿಯಲ್ಲಿ ತಮ್ಮ ಖಂಡನೆಗೆ ಗುರಿಮಾಡಿದರೆಂದು ತೋರುತ್ತದೆ!

ಆ ವಿಚಾರವಾಗಿ ನಾನು ಸಂಪೂರ್ಣ ಮುಗ್ಧನಾಗಿದ್ದೆ. ನನಗೆ ಆಗಿನ್ನೂ ಈ ಬ್ರಾಹ್ಮಣ ಬ್ರಾಹ್ಮಣೇತರ ಪಿಡುಗು ಇದೆ ಎಂಬುದೇ ತಿಳಿದಿರಲಿಲ್ಲ. ನಾನು ಆಶ್ರಮದಲ್ಲಿದ್ದು ನನಗೆ ಜಾತೀಯತೆಯ ಅಸ್ತತ್ವವೆ ಪ್ರಜ್ಞಾಗೋಚರವಾಗುವಂತಿರಲಿಲ್ಲ. ಏನಿದ್ದರೂ ನನ್ನ ಕಚ್ಚಾಟದ ಅರ್ಥವೂ ಆಗುತ್ತಿರಲಿಲ್ಲ.

ಒಂದು ದಿನ ಆಶ್ರಮಕ್ಕೆ ಬಂದಿದ್ದ ಮಾಸ್ತಿ ವೆಂಕಟೇಶ ಐಯ್ಯಂಗಾರರು ನನ್ನನ್ನು ಕೇಳಿದವರು “ಹೌದೇನ್ರೀ, ನಿಮ್ಮ ಆ ಕವನ ‘ಕಾಜಾಣ’ದಲ್ಲಿ ಬ್ರಾಹ್ಮಣರನ್ನು ಕುರಿತು ಮೂದಲಿಸಿ ವಿಡಂಬನೆ ಮಾಡಿರುವಿರಂತೆ?” ಎಂದು! ನಾನು ಕಕ್ಕಾವಿಕ್ಕಿಯಾದೆ. ಅದು ನನ್ನ ತಲೆಗೇ ಹೊಳೆದಿರಲಿಲ್ಲ. ಆದ್ದರಿಂದ ನಕ್ಕುಬಿಟ್ಟು “ಯಾರು ಹೇಳಿದರು ನಿಮಗೆ? ನನಗೆ ಆ ಭಾವನೆ ತಲೆಯಲ್ಲಿಯೆ ಸುಳಿದಿರಲಿಲ್ಲ.” ಎಂದೆ. ಅವರು ಹೊರಟು ಹೋದ ಮೇಲೆ, ನೋಡೋಣ ಎಂದುಕೊಂಡು ‘ಕಾಜಾಣ’ ಕವನವನ್ನು ತೆಗೆದುಕೊಂಡು ಮತ್ತೆಮತ್ತೆ ಓದಿದೆ, ಹೊಸದೃಷ್ಟಿಯಿಂದ, ಅಂದರೆ ಬ್ರಾಹ್ಮಣ ಶೂದ್ರ ಭೇದ ಭಾವನೆಯ ದೃಷ್ಟಿಯಿಂದ. ನನಗೇನಾಯಿತು ಗೊತ್ತೇ? ಆ ದೃಷ್ಟಿಯನ್ನಿಟ್ಟುಕೊಂಡು ಓದಿದರೆ ಅದು ಹಾಗೆಯೆ ತೋರತೊಡಗಿತು: ನಾನು ಅದನ್ನು ರಚಿಸುವಾಗ ನನಗೆ ಒಂದಿನಿತೂ ಇರದಿದ್ದ ದೃಷ್ಟಿ!

ನನ್ನ ಅನೇಕ ಕವನಗಳಿಗೂ ನಾಟಕಗಳಿಗೂ ಕೆಲವರು ‘ಬ್ರಾಹ್ಮಣ-ಶೂದ್ರ’ ಭೇದ ದೃಷ್ಟಿಯಿಂದಲೇ ವ್ಯಾಖ್ಯಾನ ಮಾಡಿ ಅವುಗಳ ಸಾಹಿತ್ಯ ಮೌಲ್ಯವನ್ನೆ ಕಲುಷಿತಗೊಳಿಸಿರುವುದು ವಿಷಾದದ ವಿಷಯವಾಗಿದೆ: ಜಲಗಾರ, ಶೂದ್ರತಪಸ್ವಿಗಳು ಪ್ರಕಟವಾದಾಗಲೂ ಪ್ರಕಟವಾದದ್ದು ಇಂತಹ ಪ್ರತಿಕ್ರಿಯೆಯೇ!
ಅದಿರಲಿ ‘ಕಾಜಾಣ’ ಕವನವನ್ನು ಓದುವ ಎಂತಹ ಶುಂಠನಿಗಾದರೂ ಅದೊಂದು ಪಕ್ಷಿ ಇರಬೇಕು ಎಂಬಷ್ಟಾದರೂ ಅರ್ಥವಾಗುತ್ತದೆ. ಒಮ್ಮೆ ನನ್ನ ಮಿತ್ರರೊಬ್ಬರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಒಬ್ಬ ಹೈಸ್ಕೂಲು ವಿದ್ಯಾರ್ಥಿ ಎದುರಿಗೆ ಕೂತು ಒಂದು ಪುಸ್ತಕ ಓದುತ್ತಿದ್ದನಂತೆ. ‘ಏನಯ್ಯಾ ಓದುತ್ತಿದ್ದೀಯಾ?’ ಎಂದಾಗ “ಕನ್ನಡ ನೋಟ್ಸ್” ಎಂದನಂತೆ. ಇವರು ಕುತೂಹಲಕ್ಕೆ ಅದನ್ನು ಇಸಿಕೊಂಡು ಸುಮ್ಮನೆ ಕಣ್ಣುಹಾಯಿಸಿದರಂತೆ. ‘ಕಾಜಾಣ’ ಕವನದ ಮೇಲೆಯೂ ನೋಟ್ಸು ಇದ್ದದ್ದನ್ನು ನೋಡಿದರಂತೆ. “ಕಾಜಾಣ= ಇದೊಂದು ಜಾತಿಯ ಕ್ರಿಮಿ!” ಎಂದು ಪ್ರಾರಂಭಿಸಿದ್ದನಂತೆ ಆ ಬೃಹಸ್ಪತಿ ಪಂಡಿತ!

‘ಅರುಣಗೀತೆ’- ಇದರ ವಿಚಾರವಾಗಿ ಮೇಲಣ ಕವನಗಳಿಗಿರುವಂತೆ ‘ಚರಿತ್ರೆ’ ಅಷ್ಟೇನೂ ಇಲ್ಲ. ಸಹಾನುಭೂತಿಯಿಲ್ಲದೆ ವಿಮರ್ಶೆ ಮಾಡುವವನು ಎಂತಹ ಮೂರ್ಖನಾಗುತ್ತಾನೆ ಎನ್ನುವುದಕ್ಕೆ ಇದರ ಒಂದು ಪಂಕ್ತಿಯನ್ನು ಆಶ್ರಯಿಸಿ ಕವಿಯನ್ನು ಲೇವಡಿಮಾಡಲು ಹೊರಟು ತನ್ನನ್ನೆ ಶಾಶ್ವತಲೇವಡಿಗೆ ಗುರಿಮಾಡಿಕೊಂಡ ಒಬ್ಬ ಪಂಡಿತನ ವಿಚಾರ ಹೇಳಿ, ಅನುದಾರತೆಗೆ ಒಂದು ನಿದರ್ಶನ ಕೊಡುತ್ತೇನೆ, ಅಷ್ಟೆ. ಈ ಪದ್ಯ ವಿಶೇಷವಾಗಿ ಮಕ್ಕಳನ್ನು ನಿರ್ದೇಶಿಸುತ್ತದೆ. ಇದು ಒಮ್ಮೆ ಹೈಸ್ಕೂಲಿನ ಯಾವುದೊ ತರಗತಿಯ ಒಂದು ಪಠ್ಯಪುಸ್ತಕದಲ್ಲಿ ಅಚ್ಚಾಯಿತು. ವೀರಶೈವ ಧರ್ಮಶಾಸ್ತ್ರ-ಸಾಹಿತ್ಯ-ಸಂಶೋಧನೆಗಳಲ್ಲಿ ಹೆಸರಾಂತು ಅನೇಕ ಗ್ರಂಥವನ್ನು ಬರೆದ ಒಬ್ಬರು ಪ್ರಸಿದ್ಧ ಪಂಡಿತರು ಒಂದು ಪತ್ರಿಕೆಯ ವಾಚಕರ ವಾಣಿಯಲ್ಲಿ ಆ ಬಡಪಾಯಿ ಮಕ್ಕಳ ಕವನದ ಮೇಲೆ ತಮ್ಮ ವಿದ್ವತ್ತಿನ ಬ್ರಹಾಸ್ತ್ರ ಪ್ರಯೋಗ ಮಾಡಿದ್ದರು! ಅದೆಲ್ಲ ತುಂಬ ಕ್ಷುಲ್ಲಕವಾಗಿಯೆ ಇದ್ದುದರಿಂದ ನಾನು ಆ ಎಲ್ಲ ವಿಮರ್ಶೆಯನ್ನೂ ನೆನಪಿನಲ್ಲಿ ಇಟ್ಟುಕೊಂಡಿರಲಿಲ್ಲ; ಇಟ್ಟುಕೊಳ್ಳುವಂತಹ ಯೋಗ್ಯತೆಗೂ ಅದು ಅರ್ಹವಾಗಿರಲಿಲ್ಲ. ಆ ಕವನ ಹೀಗೆ ಪ್ರಾರಂಭವಾಗುತ್ತದೆ!

ದೇವರ ಮಕ್ಕಳೆ, ಎಲ್ಲರು ಏಳಿ,
ಬೆಳ್ಳಗೆ ಬೆಳಗಾಯಿತು ಬೇಗೇಳಿ!

ಆ ಪಂಡಿತರ ವಿಮರ್ಶಕರು ‘ಬೆಳ್ಳಗೆ ಬೆಳಗಾಯಿತು’ ಎನ್ನುವ ಉಕ್ತಿಯ ಮೇಲೆ ತಮ್ಮ ಅಮೋಘ ಖಡ್ಗಪ್ರಹಾರ ಮಾಡಿದ್ದರು. ಬೆಳಗಾಯಿತು ಎಂದರೇ ಸಾಕಿತ್ತು, ಬೆಳ್ಳಗೆ ಬೆಳಗಾಯಿತು ಎನ್ನುವ ಪುನರುಕ್ತಿಯ ಅರ್ಥವೇನು? ಎಂದು ಮೊದಲಾಗಿ ತಮ್ಮ ವಿದ್ವತ್ತಿನ ಪ್ರದರ್ಶನ ಮಾಡಿದ್ದರು. ಈಗಲೂ ಹಳ್ಳಿಯ ಜನ ಚೆನ್ನಾಗಿ ಬೆಳಕು ಬಿಟ್ಟಿತ್ತು ಎಂಬ ಅರ್ಥದಲ್ಲಿ ಬೆಳ್ಳಗೆ ಬೆಳಗಾಗಿತ್ತು ಎಂದೇ ಹೇಳುತ್ತಾರೆ. ಅದರಲ್ಲಿಯೂ ಕಾಡುಬೆಟ್ಟಗಳಲ್ಲಿರುವವರಿಗೆ ಒಮ್ಮೆಗೇ  ಬೆಳಕು ಬೆಳ್ಳಗೆ ಬಿಡುವುದಿಲ್ಲ. ಉಷಃಕಾಲದಿಂದ ಹಿಡಿದು ಅರುಣೋದಯ ಸೂರ್ಯೋದಯಗಳವರೆಗೆ ನಸುಕುನಸುಕಾಗಿ, ತುಸು ಬೆಳಕಾಗಿ ಮತ್ತೆ ಕೆಂಬೆಳಕಾಗಿ, ನೀರು ಬೆಳಕಾಗಿ ಕಡೆಗೆ ಬೆಳ್ಳಗೆ ಬೆಳಗಾಗುತ್ತದೆ. ಬೆಳ್ಳಗೆ ಬೆಳಕಾಗಿದೆ ಎಂದರೆ ಪ್ರಾತಃಕಾಲವಾಗಿ ಚೆನ್ನಾಗಿ ಹೊತ್ತು ಮೂಡಿದೆ, ಆದ್ದರಿಂದ ಇನ್ನೂ ಮಲಗಿರುವುದು ಸೋಮಾರಿತನವಾಗುತ್ತದೆ, ಬೇಗನೆ ಹೊತ್ತು ಮೂಡಿದೆ, ಆದ್ದರಿಂದ ಇನ್ನೂ ಮಲಗಿರುವುದು ಸೋಮಾರಿತನವಾಗುತ್ತದೆ, ಬೇಗನೆ ಎದ್ದುಬಿಡಿ-ಎಂದು ಮಕ್ಕಳಿಗೆ ಕರೆ ಕೊಡುತ್ತದೆ ಆ ಪಂಕ್ತಿ! ಸ್ವಲ್ಪ ಸಹಾನುಭೂತಿಯಿಂದ ಓದಿದ್ದರೆ ಆ ಪಂಡಿತರಿಗೆ ಅದೇನು ಅರ್ಥವಾಗದಂತಹ ಬ್ರಹ್ಮಗ್ರಂಥಿಯಾಗುತ್ತಿರಲಿಲ್ಲ. ವಿಮರ್ಶಿಸಲೇ ಬೇಕು ಖಂಡಿಸಲೇ ಬೇಕು ಎಂಬ ಪೂರ್ವಗ್ರಹಪೀಡಿತರಾಗಿ ಹೊರಟಿದ್ದರೆ ಮಾತ್ರ ಅಲ್ಲಿ ಪುನರುಕ್ತಿಯ ದೋಷಾರೋಪಣೆಗೆ ಅವಕಾಶ ದೊರೆಯುತ್ತದೆ!  ಕವಿಯನ್ನು ಖಂಡಿಸಿದ ತೃಪ್ತಿಯಿಂದ ಪಂಡಿತ ಹೆಮ್ಮೆಯ ಹುಂಜ ಮನೆಯ ಬೆಂಗಟೆಗೆ ಹಾರಿ ರೆಕ್ಕೆ ಬಡಿದು ಕೊಕ್ಕೊಕ್ಕೋ ಎಂದು ತನ್ನ ದಿಗ್ವಿಜಯ ಸಾರಲು ಸಹಾಯವಾಗುತ್ತದೆ.

*          *          *