ಮಳೆಗಾಲ ಕಾಲಿಟ್ಟ ಮೇಲೆಯೆ ನಾನು ಜೂನ್ ತಿಂಗಳಲ್ಲಿ ಮತ್ತೆ ಮೈಸೂರಿಗೆ ಹೊರಟೆ. ನನ್ನ ನೆನಪು ಸರಿಯೊ ತಪ್ಪೊ ಗೊತ್ತಿಲ್ಲ: ಆಗ ಎಂ.ಎ. ಬರೆಹದ ಪರೀಕ್ಷೆ ಬೇಸಗೆ ರಜಾಕ್ಕೆ ಮೊದಲೆ ಮುಗಿದು, ಬಾಯಿಪರೀಕ್ಷೆ ಕಾಲೇಜುಗಳು ಪ್ರಾರಂಭವಾದ ಮೇಲೆ ಆಗುತ್ತಿತ್ತೆಂದು ತೋರುತ್ತದೆ. ಆ ‘ವೈವಾವೋಸಿ’ ಪೂರೈಸಿ ಫಲಿತಾಂಶ ಪ್ರಕಟವಾಯಿತು. ನಾನು ಉತ್ತಮ ಸೆಕೆಂಡ್ ಕ್ಲಾಸಿನಲ್ಲಿ ತೇರ್ಗಡೆಯಾಗಿದ್ದೆ. ನನ್ನ ಮಿತ್ರ ನರಸಿಂಹಚಾರ್ಯರು ಫಸ್ಟಕ್ಲಾಸಿನಲ್ಲಿ ತೇರ್ಗಡೆಯಾಗಿದ್ದರು. ಇದನ್ನಿಲ್ಲಿ ಹೇಳುವ ಉದ್ದೇಶ ಮುಂದೆ ಗೊತ್ತಾಗುತ್ತದೆ. ಏಕೆಂದರೆ, ಆಗ ನಾನಿರುತ್ತಿದ್ದ ಮನೋಧರ್ಮಕ್ಕೆ ಪ್ರಥಮ ದ್ವಿತೀಯಾದಿ ವರ್ಗ ತಾರತಮ್ಯಗಳಾಗಲಿ ಮೇಲುಕೀಳು ಭಾವಗಳಾಗಲಿ ಸಂಪೂರ್ಣವಾಗಿ ನಿರ್ಲಕ್ಷಿತವಾಗಿದ್ದುವು. ಅಲ್ಲದೆ ನನ್ನಲ್ಲಿರುತ್ತಿದ್ದ ಸಾರಸ್ವತ ಪ್ರತಿಭೆ ತನ್ನ ಮಹೋನ್ನತಿಯಿಂದ ನನ್ನ ಪ್ರಜ್ಞೆಯನ್ನು ಯಾವ ಎತ್ತರಕ್ಕೆ ಎತ್ತಿರುತ್ತಿತ್ತು ಎಂದರ ಲೋಕದ ಇತರ ಔನ್ನತ್ಯಗಳೆಲ್ಲ ನನ್ನ ಮೊಳಕಾಲೆತ್ತರಕ್ಕೂ ಎಟುಕುತ್ತಿರಲಿಲ್ಲ. ಆ ಮಹೋನ್ನತಿಯ ಭಾವ ಹೊರಗಣ ಆಲೋಚನೆಗೆ ಅಹಂಕಾರರೂಪವಾಗಿದ್ದರೂ ಅನುಭವಕ್ಕೆ ವಾಸ್ತವ ವಿಷಯವಾಗಿತ್ತು. ಆದ್ದರಿಂದಲೆ ಇತರರ ಲೌಕಿಕದೃಷ್ಟಿಯ ಅಭ್ಯುದಯಕ್ಕಾಗಲಿ ಖ್ಯಾತಿಗಾಗಲಿ ಸ್ಥಾನಮಾನ ಅಧಿಕಾರಿಗಳ ಉಚ್ಚಸ್ಥಿತಿಗಾಗಲಿ ನಾನೆಂದೂ ಕರುಬಿದವನಲ್ಲ, ಆಸೆಪಟ್ಟವನೂ ಅಲ್ಲ. ನನ್ನ ಸ್ಥಾನಮಾನ ಅಭ್ಯುದಯವನ್ನೆಲ್ಲ ನಿಯಂತ್ರಿಸುತ್ತಿರುವ ಜಗಜ್ಜನನಿಯ ಮಡಿಲಲ್ಲಿ ನಾನು ಸುರಕ್ಷಿತಭಾವದಿಂದ ನಿಶ್ಚಿಂತನಾಗಿರುತ್ತಿದ್ದೆ. ಆ ಭಾವ ಅಂದಿನ ಭಾವಗೀತೆಗಳಲ್ಲಿಯೂ ಸಾಕಷ್ಟು ಪ್ರಕಟವಾಗಿದೆ ಎಂದು ಭಾವಿಸುತ್ತೇನೆ.

ಎಂ.ಎ. ತೇರ್ಗಡೆಯಾದ ಮೇಲೆಯೂ ಮುಂದೇನು ಎಂಬ ವಿಚಾರದಲ್ಲಿ ನಾನು ನಿರಾಲೋಚನೆಯಿಂದಲೆ ಇದ್ದೆ. ಯಾವುದಾದರೂ ಹುದ್ದೆಗೆ ಸೇರಬೇಕೆಂದಾಗಲಿ ಸಂಪಾದನೆ ಮಾಡಬೇಕೆಂದಾಗಲಿ ಇದ್ದೆ. ಯಾವುದಾದರೂ ಹುದ್ದೆಗೆ ಸೇರಬೇಕೆಂದಾಗಲಿ ಸಂಪಾದನೆ ಮಾಡಬೇಕೆಂದಾಗಲಿ ನನ್ನ ತಲೆಗೆ ಬಂದಿರಲಿಲ್ಲ. ಇಂದ್ರಿಯ ದೌರ್ಬಲ್ಯಗಳಿಗೆ ಸಂಪಾದನೆ ಮಾಡಬೇಕೆಂದಾಗಲಿ ನನ್ನ ತಲೆಗೆ ಬಂದಿರಲಿಲ್ಲ. ಇಂದ್ರಿಯ ದೌರ್ಬಲ್ಯಗಳಿಗೆ ವಶವಾಗಿ ಅವುಗಳನ್ನು ಗೆಲ್ಲಲು ಜೀವ ಹೋರಾಡುತಿದ್ದರೂ ಮನಸ್ಸು ಒಮ್ಮೊಮ್ಮೆ ಸಂನ್ಯಾಸದತ್ತ ಒಲೆಯುವ ಹುಡುಗಾಟದಲ್ಲಿಯೂ ತೊಡಗುತ್ತಿತ್ತು. ನನಗೆ ಹೆಣ್ಣು ಕೊಡಲು ಬಂದ ನನ್ನ ಅಭ್ಯುದಯಾಕಾಂಕ್ಷಿಗಳಿಗೂ ನಾನು ತಿರಸ್ಕಾರದ ಉತ್ತರವನ್ನೆ ಕೊಡುತ್ತಿದ್ದೆ. ಮುಂದೆ ಯಾರ ಮಗಳನ್ನೆ ನಾನು ಮದುವೆಯಾಗಬೇಕೆಂದು ವಿಧಿ ನಿಯಂತ್ರಿಸಿತ್ತೋ ಅವರ ಮತ್ತೊಬ್ಬಳು ಹಿರಿಯ ಮಗಳ ವಿಚಾರವಾಗಿಯೂ ನಾನು ನಕಾರವನ್ನೆ ಆಡಿದ್ದೆ. ನನ್ನ ಚೇತನ ಬೇರೆ ಯಾರಿಗೂ ಅರಿಯದಂತೆ “ಕವಲೊಡೆದ ಹಾದಿಗಳು ಕವಿದಿಹುದು ಕತ್ತಲೆಯು, ದಾರಿ ತೋರೆನಗೆ ಗುರುವೇ, ದಾರಿ ತೋರೆನಗೆ!” ಎಂದು ಒಳಗೊಳಗೇ ಪರಿತಪಿಸಿ ಮೊರೆಯಿಡುತ್ತಿತ್ತು.

ಎಂದಿನಂತೆ ಅಂದೂ ಮತ್ತೆ ಶ್ರಿಗುರುಕೃಪೆ ಪರಮಪೂಜ್ಯ ಸ್ವಾಮಿ ಸಿದ್ಧೇಶ್ವರಾನಂದರ ಮೂಲಕವೆ ಮೈದೋರಿತು:

ಒಂದು ದಿನ ಸ್ವಾಮಿಜಿ ಕೇಳಿದರು “ವಿಶ್ವವಿದ್ಯಾನಿಲಯದಲ್ಲಿ ಒಂದು ಕನ್ನಡ ಲೆಕ್ಚರರ್ ಸ್ಥಾನವಿದೆಯಂತೆ ನೀವೇಕೆ ಅರ್ಜಿ ಹಾಕಿಕೊಳ್ಳಬಾರದು ಅದಕ್ಕೆ?” ಎಂದು. ಆ ಸ್ಥಾನ ಇರುವುದೂ ನನಗೆ ಗೊತ್ತಿಲ್ಲ, ಆವಿಚಾರವಾಗಿ ನಾನು ಯೋಚಿಸಿಯೆ ಇಲ್ಲ ಎಂಬ ನನ್ನ ಉತ್ತರಕ್ಕೆ, ಅವರು “ನಾನು ಅರ್ಜಿ ತರಿಸಿಕೊಡುತ್ತೇನೆ, ತುಂಬಿ ಕೊಡಿ” ಎಂದರು.

ಸ್ವಾಮಿಜಿ ವಿಶೇಷವಾಗಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಉಪಪ್ರಾಧ್ಯಾಪಕರು ಮತ್ತು ಅಧ್ಯಾಪಕರುಗಳೊಡನೆ ಸಂಪರ್ಕವಿಟ್ಟುಕೊಂಡಿರುತ್ತಿದ್ದರಿಂದ ಅವರಿಗೆ ಆ ವಿಷಯ ತಿಳಿದಿತ್ತೆಂದು ತೋರುತ್ತದೆ. ಅಲ್ಲದೆ ನನ್ನ ಅಭ್ಯುದಯದಲ್ಲಿ ಸ್ವಾಮಿಜಿಗೆ ಆಸಕ್ತಿಯಿರುವ ವಿಚಾರವನ್ನು ತಿಳಿದಿದ್ದ ಪ್ರೊ. ವಾಡಿಯಾ,-ನಾನು ಬಿ.ಎ. ತರಗತಿಯಲ್ಲಿ ತತ್ತ್ವಶಾಸ್ತ್ರವನ್ನೆ ವಿಶೇಷ ವಿಷಯವನ್ನಾಗಿ ತಗೆದುಕೊಂಡಿದ್ದು ಅವರ ಮೆಚ್ಚುಗೆಯ ವಿದ್ಯಾರ್ಥಿಯೂ ಆಗಿದ್ದುದರಿಂದ, ಬಹುಶಃ ಅವರಿಗೆ ಹೇಳಿದ್ದಿದ್ದರೂ ಇರಬಹುದು. ಏಕೆಂದರೆ ಒಂದು ದಿನ ಸ್ವಾಮಿಜಿಯ ಸಂಗಡ ನಾನೂ ಸಂಚಾರ ಹೋಗುತ್ತಿದ್ದಾಗ ಕುಕ್ಕರಹಳ್ಳಿಯ ಕೆರೆಯ ಏರಿಯ ಹತ್ತಿರ ‘ಪ್ರೊಫೆಸರ್ಸ್ ಕ್ವಾರ್ಟರ್ಸ್’ ಕಡೆಯಿಂದ ಬಂದು ನಮ್ಮನ್ನು ಕೂಡಿಕೊಂಡ ಪ್ರೊ. ವಾಡಿಯಾ ಅವರು ಮಾತು ಮಾತಿನ ಮಧ್ಯೆ ನನ್ನನ್ನು ಕೇಳಿದರು “ಮುಂದೇನು ಮಾಡಬೇಕೆಂದಿದ್ದೀರಿ ನೀವು?” ಎಂದು. ನಾನು ಹೇಳಿದೆ “ಸ್ವಾಮಿಜಿ ಹೇಳುತ್ತಾರೆ, ಮಹಾರಾಜಾ ಕಾಲೇಜಿನಲ್ಲಿ ಒಂದು ಲೆಕ್ಚರರ್ ಸ್ಥಾನ ಇದೆ ಎಂದು, ನಾನು ಅದಕ್ಕೆ ಅರ್ಜಿ ಹಾಕಿಕೊಳ್ಳಬೇಕಂತೆ.” ಅದಕ್ಕೆ ಅವರು “ಅದು ಟಿ.ಎನ್. ಶ್ರೀಕಂಠಯ್ಯಗೆ ದೊರೆಯುತ್ತದೆ.” ಎಂದರು. ನಾನು ಮಾತಾಡದೆ ಸುಮ್ಮನಿದ್ದುದನ್ನು ನೋಡಿ “ಇಂಟರ್‌ಮಿಡಿಯಟ್ ಕಾಲೇಜಿನಲ್ಲಿ ಒಂದು ಸ್ಥಾನ ಇದೆ. ಅದಕ್ಕೆ ಹಾಕಿಕೊಳ್ಳಬಹುದು.” ಎಂದರು.

ಪ್ರೊ. ವಾಡಿಯಾ ಅಂದಿನ ಮೈಸೂರು ಸಂಸ್ಥಾನದ ಅಧಿಕಾರ ರಾಜಕೀಯದಲ್ಲಿ ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿದ್ದರು. ಆಗ ಬಿಸಿಬಿಸಿಯಾಗಿರುತ್ತಿದ್ದ ಬ್ರಾಹ್ಮಣ ಬ್ರಾಹ್ಮಣೇತರ ವಾದದಲ್ಲಿ ಬ್ರಾಹ್ಮಣೇತರ ಪಕ್ಷದ ಪರವಾಗಿದ್ದರು. ಆಗ ಮೈಸೂರು ವಿಶ್ವವಿದ್ಯಾನಿಲಯ ಸಂಪೂರ್ಣವಾಗಿ ಬ್ರಾಹ್ಮಣರ ವಶವಾಗಿತ್ತು. ಬ್ರಾಹ್ಮಣೇತರರು ನೂರಕ್ಕೆ ಒಬ್ಬನಿರುತ್ತಿದ್ದರೂ ಅವನಿಗೆ ಹಾರುವರ ಕಿರುಕುಳದಿಂದ ಉಳಿಗತಿ ಇರುತ್ತಿರಲಿಲ್ಲ. ಒಕ್ಕಲಿಗ ಮೊದಲಾದ ಶೂದ್ರವರ್ಗಗಳಿಗೆ ಅಲ್ಲಿ ಪ್ರವೇಶನೆ ಇರುತ್ತಿರಲಿಲ್ಲ, ಜವಾನರನ್ನುಳಿದು. ಅಧ್ಯಾಪಕ, ಉಪಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಸ್ಥಾನಗಳಿಗೆ ಒಕ್ಕಲಿಗಾದಿ ಶೂದ್ರರ ಪ್ರವೇಶ ಎಷ್ಟು ಅಸಾಧ್ಯವಾಗಿತ್ತೆಂದರೆ ಶೃಂಗೇರಿ ಜಗದ್ಗುರು ಪೀಠಕ್ಕೆ ಶೂದ್ರವನ್ನು ಜಗದ್ಗುರುವಾಗಿ ಆರಿಸುವ ಸಂಬಂಧದಷ್ಟೆ! ನಾನು ಬ್ರಾಹ್ಮಣನಲ್ಲ ಎಂಬ ಕಾರಣವಷ್ಟೇ ಸಾಕಾಗಿತ್ತು ಪ್ರೊ. ವಾಡಿಯಾರವರಿಗೆ ನನ್ನನ್ನು ವಿಶ್ವವಿದ್ಯಾನಿಲಯದ ಹುದ್ದೆಯ ಮೇಲುಪ್ಪರಿಗೆಗೆ ಎತ್ತಿಕೊಳ್ಳುವುದಕ್ಕೆ! ನಾನು ಕನ್ನಡ ಕವಿ ಎಂಬುದಾಗಲಿ ಕನ್ನಡದ ಏಳಿಗೆಗೆ ನನ್ನಿಂದ ಸೇವೆ ಒದಗುತ್ತದೆ ಎಂಬುದಾಗಲಿ ಸ್ವಲ್ಪವೂ ಕಾರಣವಾಗಿರಲಿಲ್ಲ. ಏಕೆಂದರೆ ಅವರು ಕನ್ನಡಕ್ಕೆ ಕಟ್ಟಾ ವಿರೋಧಿಯಾಗಿದ್ದರು. ಅವರು ಮೈಸೂರಿನಲ್ಲಿ ೨೦-೨೫ ವರ್ಷಗಳಿದ್ದರೂ ಕನ್ನಡ ಕಲಿಯುವ ಗೋಜಿಗೆ ಹೋಗಲಿಲ್ಲ. ಕನ್ನಡ ಮಾತಾಡುವುದು ಅವರ ಭಾಗಕ್ಕೆ ಮೈಲಿಗೆಯಾಗಿತ್ತು, ಪರಸ್ಪರ ವೈಯಕ್ತಿಕವಾಗಿ ಮಾತಾಡುವಾಗಲೂ! ಇನ್ನು ಸಾರ್ವಜನಿಕ ವೇದಿಕೆಯ ವಿಷಯವೆ ಬೇರೆ. ಅಲ್ಲಿ ಕನ್ನಡದ ನವೋದಯದ ಜನಕರೆಂದು ಹೆಸರಾಂತ ಬಿ.ಎಂ.ಶ್ರೀಯವರೂ ಆಗ ಕನ್ನಡದಲ್ಲಿ ಭಾಷಣ ಮಾಡುವುದಕ್ಕೆ ನಾಚುತ್ತಿದ್ದರು, ಹೇಸುತ್ತಿದ್ದರು ಎಂದ ಮೇಲೆ ಪ್ರೊ.ವಾಡಿಯಾರವರನ್ನು ಖಂಡಿಸುವುದೆಲ್ಲಿಂದ ಬಂತು?

ಅಂತೂ ಸ್ವಾಮಿಜಿ ಅಪ್ಲಿಕೇಷನ್ ಫಾರ್ಮ್ ತರಿಸಿದರು. ನಾನು ಅದನ್ನು ಅವರ ಮಾರ್ಗದರ್ಶನದಲ್ಲಿಯೆ ತುಂಬಿಸಿದೆ. ವಿದ್ಯಾರ್ಥಿ ಶಿಷ್ಯನೊಬ್ಬನ ಕೈಲಿ ಅದನ್ನು ವಿಶ್ವವಿದ್ಯಾನಿಲಯಕ್ಕೆ ಕಳಿಸಿದರು. ಆಗ ರಿಜಿಸ್ಟ್ರಾರ್ ಆಗಿದ್ದರು ಬಿ.ಎಂ.ಶ್ರೀ.

ಆ ಸ್ಥಾನಕ್ಕೆ ಆ ವರ್ಷ ಕನ್ನಡ ಎಂ.ಎ. ಪಾಸು ಮಾಡಿದ್ದ ಯಾರುಯಾರು ಅರ್ಜಿ ಸಲ್ಲಿಸಿದ್ದರೊ ನನಗೆ ತಿಳಿಯದು. ನಾನಂತೂ ಆ ವಿಚಾರವಾಗಿ ಯಾರ ಮನೆ ಮೆಟ್ಟಿಲನ್ನೂ ಹತ್ತಲಿಲ್ಲ; ಯಾರಿಂದಲೂ ಸಿಫಾರಸು ಮಾಡಿಸುವ ಗೋಜಿಗೆ ಹೋಗಲಿಲ್ಲ. ಫಲಿತಾಂಶದ ಕಡೆಗೂ ಇನಿತೂ ಗಮನವಿಲ್ಲದೆ ‘ದಿವ್ಯ ನಿರ್ಲಕ್ಷತೆ’ಯಿಂದಿದ್ದು ಬಿಟ್ಟಿದ್ದೆ. ಆದರೂ ಇಂಟರ್ ಮಿಡಿಯಟ್ ಕಾಲೇಜಿನ (ಈಗಿನ ಯುವರಾಜಾ ಕಾಲೇಜು) ಕನ್ನಡ ಲೆಕ್ಚರರ್ ಆಗಿ ಅಪಾಯಿಂಟ್‌ಮೆಂಟ್‌ಆರ್ಡರ್ ನನ್ನ ಕೈಸೇರಿತು, ತಿಂಗಳಿಗೆ ೧೦೦ ರೂ. ಸಂಬಳದ ಮೇಲೆ!

ಎರಡು ಆಶ್ಚರ್ಯಕರ ಸಂಗತಿಗಳು: ಒಂದನೆಯದು, ಸಾಧಾರಣವಾಗಿ ಕನ್ನಡದವರನ್ನು ‘ಪಂಡಿತ’ ನಾಮಕ ಪಟ್ಟಿಯಲ್ಲಿಟ್ಟು ತಿಂಗಳಿಗೆ ೭೫ ರೂ. ಮೇಲೆಯೆ ನೇಮಿಸುತ್ತಿದ್ದುದು ರೂಢಿ. ನನ್ನನ್ನು ಲೆಕ್ಚರರ್ ಎಂದು ಕರೆದು ನೂರು ರೂಪಾಯಿಯ ಮೇಲೆ ನೇಮಿಸಿದ್ದರು. ಎರಡನೆಯದು ನನಗಿಂತಲೂ ಉತ್ತಮ ಪ್ರಥಮದರ್ಜೆಯಲ್ಲಿ ತೇರ್ಗಡೆ ಹೊಂದಿದ್ದ ಮತ್ತು ಪಡೆದಿದ್ದ ಡಿ.ಎಲ್. ನರಸಿಂಹಾಚಾರ್ಯರನ್ನು ಬಿಟ್ಟು (ಅವರೂ ಅರ್ಜಿ ಹಾಕಿದ್ದರು ಎಂಬ ಊಹೆಯ ಮೇಲೆ ನಾನು ಬರೆಯುತ್ತಿದ್ದೇನೆ.) ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದ ನನ್ನನ್ನು ನೇಮಿಸಿದ್ದು!

ನಾನು ಊಹಿಸುವ ಕಾರಣಗಳಿವು: ಬ್ರಾಹ್ಮಣೇತರರಿಗೆ ಪ್ರೋತ್ಸಾಹ ಕೊಡಬೇಕೆಂಬ ಚಳವಳಿ ತುಂಬ ಬಿಸಿಯಾಗಿದ್ದ ಕಾಲ ಅದು. ಯೂನಿವರ್ಸಿಟಿ ಕೌನ್ಸಿಲ್ಲಿನಲ್ಲಿ ಡಿ.ವಿ.ಗುಂಡಪ್ಪನವರಂತಹ ಬ್ರಾಹ್ಮಣ ಜಾತಿವಾದಿಗಳೂ ಜಾತಿಪ್ರೇಮಿಗಳೂ ಪ್ರಬಲರಾಗಿದ್ದರೂ ಪ್ರೊ.ವಾಡಿಯಾರವರಂತಹ ಜಾತಿವಿರೋಧಿಗಳೂ, ಆದ್ದರಿಂದಲೆ ಆ ಕಾರಣಕ್ಕಾಗಿಯೆ ಬ್ರಾಹ್ಮಣೇತರ ಪಕ್ಷಪಾತಿಗಳೂ ಆಗಿದ್ದವರ ಪ್ರತಿಭಟನೆ ತೀವ್ರವಾಗಿರುತ್ತಿತ್ತು. ಆದ್ದರಿಂದ ನನ್ನ ಇನ್ನಾವ ಲಕ್ಷಣಕ್ಕೂ ಅಲ್ಲದಿದ್ದರೂ ಬ್ರಾಹ್ಮಣೇತರ ಲಕ್ಷಣಕ್ಕೆ ವಿಜಯ ಲಭಿಸಿತ್ತು! ಮತ್ತೊಂದು ಕಾರಣ: ಬಿ.ಎಂ.ಶ್ರೀ ರಿಜಿಸ್ಟ್ರಾರ್ ಆಗಿದ್ದುದು. ಅವರಿಗೆ ನನ್ನ ಸಾಹಿತ್ಯಕ ಪ್ರತಿಭೆ ಚೆನ್ನಾಗಿ ತಿಳಿದಿತ್ತು. ಅವರು ಸರಳರಗಳೆಯಲ್ಲಿ ಅಶ್ವತ್ಥಾಮನ್ ಬರೆಯುವುದಕ್ಕೆ ಬಹು ಮುನ್ನವೆ ನಾನು ಜಲಗಾರ, ಯಮನ ಸೋಲು, ಮಹಾರಾತ್ರಿ, ಬಿರುಗಾಳಿಗಳನ್ನು ಬರೆದಿದ್ದು, ಬಹುಶಃ ಅವರಿಗೂ ನನ್ನ ಪ್ರಯೋಗವೆ ಪ್ರೇರಣೆಯಾಗಿದ್ದರೂ ಇರಬಹುದು. ನನ್ನ ಆ ನಾಟಕಗಳು ಮಹಾರಾಜಾ ಕಾಲೇಜಿನ ಅಂಗಳದಲ್ಲಿ ಅಭಿನಯಿಸಲ್ಪಟ್ಟಾಗ ಎಷ್ಟೋ ಸಾರಿ ಅವರೇ ಅಧ್ಯಕ್ಷತೆ ವಹಿಸಿ ಅವುಗಳನ್ನು ತುಂಬ ಮೆಚ್ಚಿ ಹೊಗಳಿ ಹರಸಿದ್ದರು. ಅಲ್ಲದೆ ನನ್ನ ಮೊದಲ ಕವನಸಂಗ್ರಹ ‘ಕೊಳಲು’ ಅವರಿಂದಲೆ ಮುನ್ನುಡಿಯ ಆಶೀರ್ವಾದ ಪಡೆದಿತ್ತು. ನನ್ನಿಂದ ಕನ್ನಡ ಸಾಹಿತ್ಯಕ್ಕೆ ಮಹೋನ್ನತಿ ಸೇವೆ ಒದಗುತ್ತದೆ ಎಂಬ ನಂಬುಗೆ ಅವರಿಗೆ ಮುಂಗಾಣ್ಕೆಯಾಗಿತ್ತೆಂದು ತೋರುತ್ತದೆ. ಆದ್ದರಿಂದಲೆ ಅವರು ರೂಢಿಯ ಸಾಮಾನ್ಯ ನಿಯಮವನ್ನೂ ಬದಿಗೊತ್ತಿ, ಬರಬಹುದಾದ ಟೀಕೆಗಳಿಗೂ ಸೊಪ್ಪು ಹಾಕದೆ ನನ್ನನ್ನು ೧೦೦ ರೂ. ಸಂಬಳದ ಲೆಕ್ಚರರ್ ಸ್ಥಾನಕ್ಕೆ ನೇಮಿಸಿದ್ದರು.

ನನ್ನ ನೇಮಕದ ಆರ್ಡರರನ್ನು ನನಗೆ ಕಳಿಸುವ ಮುನ್ನ ಆಫೀಸಿನ ಮುಖ್ಯ ಕರಣಿಕನು Superintendent – ಆತ ಜಾತಿ ಬ್ರಾಹ್ಮಣ-ರಿಜಿಸ್ಟ್ರಾರ್ ಬಳಿಗೆ ನೇಮಕಾಜ್ಞೆಯನ್ನು ತೆಗೆದುಕೊಂಡು ಹೋಗಿ, ನಿಯಮ ಭಂಗವಾದದ್ದನ್ನು ತೋರಿಸಿ “ಸಾರ್, ರೂಲ್ಸಿನ ಪ್ರಕಾರ ಎಲ್ಲರನ್ನೂ ತಿಂಗಳಿಗೆ ೭೫ ರೂ. ನಂತೆ ನೇಮಕ ಮಾಡಬೇಕು. ಇವರಿಗೆ ೧೦೦ ರೂಪಾಯಿ ಮಾಡಿಬಿಟ್ಟಿದ್ದೀರಿ. ಆಮೇಲೆ ‘ಅಬ್ಜೆಕ್ಷನ್’ ಬರುತ್ತೆ….” ಎಂದೆಲ್ಲ ತನ್ನ ಕರ್ತವ್ಯಪ್ರಜ್ಞೆ ಪ್ರದರ್ಶನ ಮಾಡಿದನಂತೆ. ಅದಕ್ಕೆ ಅವರು ಮುಗುಳು ನಗುತ್ತಾ ಹೇಳಿದರಂತೆ “ಮಿಸ್ಟರ್….ಯ್ಯ, ಎಲ್ಲಿ ಸಿಗುತಾರಿ ನಿಮಗೆ ಅವರಂಥವರು, ಸಾವಿರ ರೂಪಾಯಿ ಕೊಟ್ಟರೂ?….ಇವೊತ್ತೇ ಆರ್ಡರ್ ಕಳಿಸಿಬಿಡಿ, ಆಶ್ರಮಕ್ಕೆ.”

*          *          *          *

ಮೈಸೂರು ಆಗ ದೇಶೀಯ ಸಂಸ್ಥಾನ; ರಾಜರು ಆಳುತ್ತಿದ್ದ ಕಾಲ; ಉಡುಗೆ ತೊಡುಗೆಗಳ ಠೀವಿಯಲ್ಲಿ ಅವರು, ಎಂದರೆ ಅವರ ಸರಕಾರ, ನಿಯಮಿಸಿದ್ದಂತೆ. ಸರಕಾರ ರಾಜರ ನಿರಂಕುಶ ಇಚ್ಛೆಯ ಒಂದು ಕಾರಣಮಾತ್ರವಾಗಿದ್ದ ಕಾಲ ವಿಶ್ವವಿದ್ಯಾನಿಲಯವೂ ಸರಕಾರದ ಒಂದು ಇಲಾಖೆ. ಅಧ್ಯಾಪಕರೆಲ್ಲ ಸರಕಾರೀ ನೌಕರರೆ. ಅಧ್ಯಾಪಕರಾದವರು ಕೋಟು ಪಂಚೆ ಅಥವಾ ಷರಾಯಿ ಪೇಟ ಹಾಕಿಕೊಂಡೇ ಕಾಲೇಜಿಗೆ ಹೋಗಬೇಕೆಂಬ ಕಟ್ಟುನಿಟ್ಟಾದ ನಿಯಮವಿತ್ತು. ನಾನು ಸಾಮಾನ್ಯವಾಗಿ ಖಾದಿಧಾರಿಯಾಗಿದ್ದೆ. ಪರದೇಶೀ ವಸ್ತ್ರದಹನದ ಚಳವಳಿಯಲ್ಲಿ ಅದುವರೆಗೆ ಕಡ್ಡಾಯವಾಗಿ ಎಂಬಂತೆ ತೊಟ್ಟುಕೊಳ್ಳುತ್ತಿದ್ದ ಒಂದು ಕೋಟನ್ನು ಬೆಂಕಿಗೆ ಎಸೆದಮೇಲೆ ಕೋಟನ್ನೂ ಹೆಚ್ಚಾಗಿ ತೊಟ್ಟುಕೊಳ್ಳುತ್ತಿರಲಿಲ್ಲ. ಒಂದು ಖಾದಿ ಪಂಜಾಬಿ ತರಹದ ಷರ್ಟು, ಖಾದಿ ಅಡ್ಡ ಪಂಚೆ ಇಷ್ಟೆ ನನ್ನ ಉಡುಪಾಗಿತ್ತು. ಹವಾ ಕಾರಣಕ್ಕಾಗಿ ಕೋಟು ತೊಟ್ಟುಕೊಳ್ಳುತ್ತಿದ್ದುದೂ ಉಂಟು. ಅದರಲ್ಲಿಯೂ ಆಶ್ರಮವಾಸಿಯಾದ ಮೇಲೆ ಸಂನ್ಯಾಸಿ ಬ್ರಹ್ಮಚಾರಿಗಳನ್ನು ಅನುಸರಿಸಿ ನಾನು ಕೋಟನ್ನು ತೊರೆದೇಬಿಟ್ಟಿದ್ದೆ. ಘಟಿಕೋತ್ಸವಕ್ಕೆ ಹೋಗುವ ಸಲುವಾಗಿ ಖಾದಿಬಟ್ಟೆಯಲ್ಲಿ ಒಂದು ಕರಿಯ ಬಣ್ಣದ ನಿಲುವಂಗಿಯನ್ನೂ ಒಂದು ಪಾಯಜಾಮೆಯನ್ನೂ ಜರಿಪೇಟ ಕಾಲುಚೀಲ ಬೂಟ್ಸುಗಳನ್ನು ಕೊಂಡದ್ದು ಉಂಟು. ಈಗ ಕಾಲೇಜಿಗೆ ಅಧ್ಯಾಪಕನಾಗಿ ಹೋಗುವ ಸಲುವಾಗಿ, ಮಿತ್ರರ ಅನುರೋಧಕ್ಕೂ ಸ್ವಾಮಿಜಿಯ ಬುದ್ಧಿವಾದಕ್ಕೂ ಶರಣಾಗಿ, ಕೋಟು ಕಚ್ಚೆಪಂಚೆ ಪೇಟ ಮತ್ತು ಕೊರಳ ಸುತ್ತ ಉತ್ತರೀಯ ಧರಸಿದೆ: ತುಂಬಾ ಜರ್ಬಾಗಿ ಕಾಣುತ್ತೀಯೆ ಎಂದಿದ್ದರು ನನ್ನ ಮಿತ್ರರು!

ಅಧ್ಯಾಪಕನಾಗಿ ಇಂಟರ‍್ಮಿಡಿಯೆಟ್ ಕಾಲೇಜಿಗೆ ದಾಖಲಾಗಿ ತರಗತಿಗೆ ಹೋದೆ. ವಿದ್ಯಾರ್ಥಿಗಳಿಗೆ ನಾನು ಹೊಸಬನಾಗಿರಲಿಲ್ಲ; ಅವರು ಅನೇಕ ಸಾರಿ ವೇದಿಕೆಗಳಿಂದ ನನ್ನ ಕಾವ್ಯವಾಚನ ಮತ್ತು ಭಾಷಣಗಳನ್ನು ಕೇಳಿ ನನ್ನಲ್ಲಿ ಭಕ್ತಿಮಟ್ಟದವರೆಗೂ ಗೌರವವಿಟ್ಟುಕೊಂಡಿದ್ದರು. ನನ್ನ ನಾಟಕಗಳನ್ನು ಕೇಳಿ ನನ್ನಲ್ಲಿ ಭಕ್ತಿಮಟ್ಟದವರೆಗೂ ಗೌರವವಿಟ್ಟುಕೊಂಡಿದ್ದರು. ನನ್ನ ನಾಟಕಗಳನ್ನು ರಂಗಮಂಚದ ಮೇಲೆ ನೋಡಿ ಆಡಿ ಹಿಗ್ಗಿದ್ದರು. ಮೂರು ನಾಲ್ಕು ಗಂಟೆಗಳ ಕಾಲ ನನ್ನ ಸ್ವಂತ ಕೃತಿಗಳ ವಾಚನವನ್ನು ಕೇಳಿಯೂ ಸಾಲದೆಂದು, ನನಗೆ ಕಾಫಿ ತರಿಸಿಕೊಟ್ಟು ಉಪಚಾರಮಾಡಿ ಕವನಗಳನ್ನೋದಿಸಿ ಕೇಳಿದ್ದೂ ಉಂಟು! ಆದ್ದರಿಂದ ಹೊಸ ಮೇಷ್ಟರುಗಳಿಗೆ ಆಗುತ್ತಿದ್ದ ಷೋಡಶೋಪಚಾರದಿಂದ ನಾನು ಸಂಪೂರ್ಣ ಪಾರಾಗಿದ್ದೆ. ನನಗೆ ಜನಜಂಗುಳಿಯ ಮುಂದೆ ನಿಂತು ಮಾತಾಡುವುದು ವಾಚನ ಮಾಡುವುದು ಅಭ್ಯಾಸವಾಗಿದ್ದು ಸಭಾಕಂಪನವೆಂದರೇನೆಂಬುದೂ ಗೊತ್ತಿರಲಿಲ್ಲ. ವಿದ್ಯಾರ್ಥಿಗಳು ತರಗತಿಯಲ್ಲಿ ನಿಃಶಬ್ದರಾಗಿ ಕುತೂಹಲದಿಂದ ನನ್ನ ಪಾಠಪ್ರವಚನವನ್ನು ಆಲಿಸಿ ಆಸ್ವಾದಿಸುತ್ತಿದ್ದರು.

ಆದರೂ ನಾನು ಷೋಡಶೋಪಚಾರದಿಂದ ಸಂಪೂರ್ಣ ಪಾರಾಗಲಿಲ್ಲ: (ಬಹುಶಃ ನಾ.ಕಸ್ತೂರಿಯವರ ಕೈಯಿಂದ) ಜರಿಪೇಟ ಕಟ್ಟಿಸಿ ಹಾಕಿಕೊಂಡು ಹೋಗಿದ್ದೆ. ನನಗೇನಾದರೂ ಪಾಠ ಹೇಳುವಾಗ ಆದಿನ ಕಿನಿಸಿಗೆ ಒದಗಿದ್ದರೆ ಅದು ಅದುವರೆಗೆ ಅಭ್ಯಾಸವಿರದಿದ್ದ ಆ ಕಚ್ಚೆಪಂಚೆ ಕೋಟು ಪೇಟಗಳಿಂದಲೆ! ಹೇಗೋ ಸಹಿಸಿಕೊಂಡು ಚೆನ್ನಾಗಿ ಪಾಠ ಹೇಳಿದ ಪ್ರಥಮ ದಿನದ ದಿಗ್ವಿಜಯದಿಂದ ಹೆಮ್ಮೆಯಿಂದಲೆ ಆಶ್ರಮಕ್ಕೆ  ಮರಳಿದ್ದೆ.  ಆದಷ್ಟು ಬೇಗನೆ ಆ ಉಡುಪಿನಿಂದ ಪಾರಾಗಲೆಂದು ಕಚ್ಚೆಪಂಚೆ ಕೋಟುಗಳನ್ನು ತೆಗೆದಿಟ್ಟು, ಪೇಟವನ್ನು, ಕಟ್ಟಿದ್ದು ಹಾಳಾಗದಂತೆ. ಜತನದಿಂದ ತೆಗೆದು ಗೋಡೆಯ ಒಂದು ಗೂಟಕ್ಕೆ ಜೋಪಾನವಾಗಿ ಸಿಕ್ಕಿಸಿದ್ದೆ. ಸ್ವಾಮಿಗಳೊಡನೆ ಆ ದಿನದ ಅನುಭವಗಳನ್ನು ವರ್ಣಿಸಿ, ನಗಿಸಿ, ನಕ್ಕು ನಲಿದಿದ್ದೆ.

ಮರುದಿನ ನನಗೆ ಕ್ಲಾಸ್ ಇದ್ದದ್ದು ಮಧ್ಯಾಹ್ನದ ಮೇಲೆ. ಸ್ನಾನ ಊಟ ಮುಗಿಸಿ ಕಚ್ಚೆಪಂಚೆ ಉಟ್ಟು ಕೋಟು ಹಾಕಿಕೊಂಡು, ಗೂಟಕ್ಕೆ ತಗುಲಿಸಿದ್ದ ಪೇಟವನ್ನು ಕೆಡದಂತೆ ಎಚ್ಚರಿಕೆಯಿಂದ ತೆಗೆದು ಹಾಕಿಕೊಂಡು , ಕೊಡೆ ಹಿಡಿದು ಹೊರಟೆ. ಕೃಷ್ಣಮೂರ್ತಿಪುರದ  ಬಳಿಯ ರೈಲುದಾರಿಯ ಪಕ್ಕದಲ್ಲಿಯೆ ಕೋರ್ಟಿನ ಮತ್ತು ಮಹಾರಾಜಾ ಕಾಲೇಜು ಹಾಸ್ಟಲಿನ ಮುಂದೆ ಹಾದುಹೊಗುವ ರಸ್ತೆಯಲ್ಲಿ ನಡೆದು ಕಾಲೇಜು ಸೇರಿದೆ. ಕೊಡೆ ಹಿಡಿದಿದ್ದರೂ ಬಿಸಿಲು ತೀಕ್ಷ್ಣವಾಗಿ ಇತ್ತು. ಅಭ್ಯಾಸವಿಲ್ಲದ ಉಡುಪಿನ ತೊಂದರೆ ಬೆವರಿನಿಂದಾಗಿ ಹೆಚ್ಚಾಗಿತ್ತು.

ಹಿಂದಿನ ದಿನದ ವಿಜಯದ ಮತ್ತಿನಲ್ಲಿಯೆ ಮಹಡಿಯ ಮೇಲೆ ನಡೆಯುತ್ತಿದ್ದ ತರಗತಿಗೆ ಹೋಗಿ ವೇದಿಕೆಯನ್ನೇರಿ, ತುಂಬಿ ಕಿಕ್ಕಿರಿದು ನೆರೆದಿದ್ದ ವಿದ್ಯಾರ್ಥಿವೃಂದವನ್ನು ಒಮ್ಮೆ ವೀಕ್ಷಿಸಿ, ಹಾಜರಿ ರಿಜಿಸ್ಟರು ತೆಗೆದುಕೊಂಡು ಹೆಸರುಗಳನ್ನು ಕರೆದು ಮುಗಿಸಿ, ನಿಂತು ಪಾಠಪ್ರವಚನೋಪನ್ಯಾಸಕ್ಕೆ ಶುರುಮಾಡಿದೆ. ಪಠ್ಯಪುಸ್ತಕ ಗದಾಯುದ್ಧ ನಾಟಕವೋ ಕಾದಂಬರಿ ಸಂಗ್ರಹವೋ ಯಾವುದೊ ಸರಿಯಾಗಿ ನೆನಪಿಲ್ಲ.

ನಾನು ಪಾಠಮಾಡುವಾಗ ಕಾವ್ಯವಸ್ತುವಿನಲ್ಲಿ ತಲ್ಲೀನರಾಗಿ ರಸಾಸ್ವಾದನೆ ಮಾಡುತ್ತಲೆ ಉಪನ್ಯಾಸ ಮಾಡುತ್ತಿದ್ದೆ. ಆ ಭಾವದೀಪ್ತಿ ಆಲಿಸುತ್ತಿದ್ದ ವಿದ್ಯಾರ್ಥಿವೃಂದವನ್ನೂ ಒಳಗೊಳ್ಳುತ್ತಿತ್ತೆಂದು ತೋರುತ್ತದೆ. ಅವರೂ ಕಾವ್ಯಲೋಕ ಪ್ರವೇಶಮಾಡಿ ಸಹೃದಯರಾಗಿ ಆಲಿಸುತ್ತಿದ್ದರು. ಇದು ಕ್ಲಾಸು, ಇವರು ಮೇಷ್ಟರು, ಇದು ಪಠ್ಯಪುಸ್ತಕ, ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದಕ್ಕೆ ಮಾತ್ರ ನಾವಿಲ್ಲಿ ಕರ್ತವ್ಯ ಮಾಡುತ್ತಿದ್ದೇವೆ ಎಂಬ ಭಾವನೆಗಳೆಲ್ಲ ಪ್ರಜ್ಞೆಯ ಹಿಂಭಾಗದ ಸುದೂರ ಭಿತ್ತಿಗೆ ತಳ್ಳಲ್ಪಟ್ಟು ವಿದ್ಯಾರ್ಥಿಗಳೆಲ್ಲ ಸಹೃದಯರಾಗಿ ಬಿಡುತ್ತಿದ್ದರು.

ಆ ದಿನ ಹೀಗೆ ಉಪನ್ಯಾಸ ಮುಂದುವರಿಯುತ್ತದ್ದಾಗ ನನ್ನ ಗಮನ ನನ್ನ ಕೆನ್ನೆಯ ಕಡೆಗೆ ಎಳೆದಂತಾಯಿತು. ಏನೊ ಹರಿದಂತಾಯ್ತು. ಬಿಸಿಲಿನಲ್ಲಿ ಬಂದದ್ದರಿಂದ ಬೆವರು ಹನಿ ತಲೆಯ ಕಡೆಯಿಂದ ಇಳಿಯುತ್ತಿರಬೇಕೆಂದು ಭಾವಿಸಿ ಜೇಬಿನಲ್ಲಿದ್ದ ಕರವಸ್ತ್ರದಿಂದ ಒರೆಸಿಕೊಂಡು ಭಾಷಣ ಮುಂದುವರೆಸಿದೆ. ಸ್ವಲ್ಪ ಹೊತ್ತಿನ ಮೇಲೆ ಮತ್ತೆ ಏನೊ ಎಡಕೆನ್ನೆಯ ಮೇಲೆಯೂ ಹರಿದಂತಾಯಿತು. ಸರಿ, ಮತ್ತೆ ಒರಸಿಕೊಂಡೆ. ಆಮೇಲೆ ಸ್ವಲ್ಪ ಹೊತ್ತಿನಲ್ಲಿಯೆ ಪೇಟದ ಒಳಗೆ ತಲೆಗೂದಲೊಳಗೆ ಏನೊ ಗುಳುಗುಳು ಹರಿದಂತಾಯ್ತು. ನನ್ನ ಗಮನ  ಪಾಠದ ಉಪನ್ಯಾಸದ ಕಡೆಗೆ ನಿರಂತರವಾಗಿದ್ದುದು ಸಾಂತಾರವಾಗತೊಡಗಿತು. ಹೊಸದಾಗಿ ಪೇಟ ಧರಿಸಿದ್ದ ನನಗೆ ಪೇಟದ ಮೇಲಿಂದಲೆ ಕೂದಲನ್ನು ತುರಿಸಿಕೊಳ್ಳುವ ಧೈರ್ಯವಾಗಲಿಲ್ಲ, ಎಲ್ಲಿ ಪೇಟ ಸಡಿಲವಾಗಿ ಬಿಚ್ಚಿಹೋಗಿ ಹುಡುಗರೆದುರು ಆಭಾಸವಾಗುವುದೊ ಎಂದು. ತಲೆಯ ಒಳಗೆ ಗುಳುಗುಳು ಹರಿಯುತ್ತಿದ್ದರೂ ತುಂಬ ತಿತಿಕ್ಷೆಯಿಂದ ಅದನ್ನು ನಿರ್ಲಕ್ಷಿಸಿ ಸಹಿಸಿಕೊಂಡು ಉಪನ್ಯಾಸ ಮುಂದುವರಿಸಿದೆ. ಮತ್ತೆ ಸ್ವಲ್ಪ ಹೊತ್ತಿನಲ್ಲಿಯೆ ತಲೆಯ ಬುರುಡೆಯನ್ನೆ ಸಣ್ಣಗೆ ಹತ್ತಾರು ಕಡೆ ಕಡಿದಂತಾಯ್ತು! ಪೇಟವನ್ನು ತುಸು ಒತ್ತಿ ಉಜ್ಜುವ ಮನಸ್ಸಾಯ್ತು. ಆದರೆ ಧೈರ್ಯವಾಗಲಿಲ್ಲ. ಮತ್ತೆ ಕಿವಿಯ ಸಂಧಿಯಲ್ಲಿ ಏನೊ ಗುಳುಗುಳು ಹರಿದಂತಾಯ್ತು. ಕರವಸ್ತ್ರ ತೆಗೆಯುವ ಗೋಜಿಗೆ ಹೋಗದೆ ಕೈಬೆರಳಿನಿಂದಲೆ ಆ ಸ್ಥಳವನ್ನು ಉಜ್ಜಿಕೊಂಡೆ. ತಲೆಯ ಒಳಗೆ ಪೇಟದ ಅಡಿ ಸಣ್ಣ ಸೂಜಿ ಚುಚ್ಚಿದಂತೆ ಕಡಿತಗಳು ಹೆಚ್ಚಿದುವು. ತುಂಬ ಕಠಿಣ ಸಂಯಮದಿಂದ ಕೈಗಡಿಯಾರವನ್ನು ನೋಡಿಕೊಂಡೆ. ಇನ್ನೂ ಕೆಲವು ನಿಮಿಷ ಇತ್ತು ಗಂಟೆ ಹೊಡೆಯಲು. ಎಷ್ಟು ಬೇಗ ಗಂಟೆ ಹೊಡೆಯುತ್ತದೆಯೋ ಎಂದು ನಿರೀಕ್ಷಿಸುತ್ತಲೆ ಪಾಠ ಮುಂದುವರೆಸಿಯೆಬಿಟ್ಟೆ. ತುದಿತುದಿಗೆ ನನಗರಿಯದಂತೆಯೆ ಕೈ ಪೇಟದ ಮೇಲಿಂದಲೆ ಕಡಿತವಿದ್ದಲ್ಲಿಗೆ ಒತ್ತಿ ಕೆರೆದೂ ಬಿಟ್ಟಿತು. ಅದೃಸ್ಟವಷಾತ್ ಕಸ್ತೂರಿ ಪೇಟವನ್ನು ಕಟ್ಟಿ ಅದು ಬಿಚ್ಚಿಹೋಗದಂತೆ ಪಿನ್ನುಗಳನ್ನು ಚುಚ್ಚಿದರು! ಹುಡುಗರು ಪಾಠದ ಸ್ವಾರಸ್ಯಕ್ಕೋ ಯಾವುದಾದರೂ ಉಕ್ತಿಯ ಅಥವಾ ಸನ್ನಿವೇಶ ವಿನೋದಕ್ಕೋ ನಕ್ಕರೂ ನನಗೆ ನನಗೆ ಅದರ ಗುರಿಯ ವಿಚಾರದಲ್ಲಿ ಸಂಶಯ ತೋರತೊಡಗಿತ್ತು. ಘಟನೆ ಪೂರ್ತಿ ವಿಪತ್ತಿಗೆ ಹೋಗುವ ಮುನ್ನವೆ ಅಂತು ಗಂಟೆ ಹೊಡೆಯಿತು! ನಾನು ಸರಕ್ಕನೆ ವೇದಿಕೆಯಿಂದಿಳಿದು ನೇರವಾಗಿ ಆಶ್ರಮಕ್ಕೆ ಹೊರಟುಬಿಟ್ಟೆ. ಆದಷ್ಟು ಚುರುಕಾಗಿ ಕಾಲು ಹಾಕಿದೆ. ಆಶ್ರಮ ಸೇರಿ ನನ್ನ ಕೊಠಡಿಗೆ ಹೋಗಿ, ತಲೆಯಿಂದ ಪೇಟ ತೆಗೆದು ನೋಡುತ್ತೇನೆ: ಸಣ್ಣ ಇರುವೆಗಳ ಹಿಂಡು ಹಿಂದಿನ ದಿನ ಕ್ರಾಪಿಗೆ ಹಚ್ಚಿದ ಎಣ್ಣೆಯನ್ನು ಹೀರಿಕೊಂಡಿದ್ದ ಪೇಟದ ಮಡಿಕೆ ಮಡಿಕೆಗಳಲ್ಲಿ ಠಾಣೆಯ ಹೊಡೆದು ಗಸ್ತು ತಿರುಗುತ್ತಿವೆ! ಬಾಚಣಿಗೆ ತೆಗೆದುಕೊಂಡು ಮೇಜಿನ ಮೇಲಕ್ಕೆ ತಲೆಬಾಗಿಸಿ, ಅದರ ಮೇಲಿದ್ದ ಕಾಗದಕ್ಕೆ ತಲೆ ಬಾಚುತ್ತೇನೆ: ಬುಳುಬುಳು ಬುಳು ಬುಳು ಬುಳು ಬೀಳುತ್ತಿವೆ, ಬಿಳಿಯ ಕಾಗದದ ಮೇಲೆ ಕರಿಯ ಚುಕ್ಕಿಗಳಾಗಿ ಇರುವೆಗಳು, ಇರುವೆಗಳು, ಇರುವೆಗಳು!!

ಅಂದಿನಿಂದ ಆ ಗೂಟಕ್ಕೆ ಪೇಟ ತಗುಲಿಹಾಕುವುದನ್ನು ಬಿಟ್ಟೆ! ತಲೆಗೆ ಹಿಂದಿನಂತೆ ಎಣ್ಣೆ ಹಾಕುವುದನ್ನು ಬಿಟ್ಟೆ, ಪೇಟವನ್ನು ತೊರೆದು, ಕ್ರಾಪಿನಲ್ಲಿಯೆ ಕಾಲೇಜಿಗೆ ಹೋಗುವ ಕ್ರಾಂತಿಕಾರಕ ಧೈರ್ಯದಿಂದ ನಾನೇ ಹಾದಿ ಹಾಕಿ, ಮುನ್ನುಗ್ಗಿ. ಇತರ ಅಧ್ಯಾಪಕರಿಗೂ ಮೇಲ್ಪಂತಿಯಾಗುವ ಭವಿಷ್ಯದವರೆಗೂ! ಅಲ್ಲದೆ ಅಂದಿನಿಂದ ಪೇಟವನ್ನಾಗಲಿ ಪಂಚೆಯನ್ನಾಗಲಿ ಕಡೆಗೆ ಕೋಟನ್ನಾಗಲಿ ಚೆನ್ನಾಗಿ ಕೊಡವಿ ಪರೀಕ್ಷಿಸಿದಲ್ಲದೆ ಕಾಲೇಜಿಗೆ ಹಾಕಿಕೊಂಡು ಹೋಗುತ್ತಿರಲಿಲ್ಲ.

*          *          *

ಬೇಸಿಗೆ ರಜಾ ಪೂರೈಸಿ ಮೈಸೂರಿಗೆ ಬಂದಂದಿನಿಂದ ನನ್ನ ಜೀವನದ ಭವ್ಯವೂ ಆಧ್ಯಾತ್ಮಿಕವೂ ಆದ ಮಹದ್‌ಘಟನೆಯ ಸಂಭವಕ್ಕಾಗಿ ನಾನು ಸ್ವಾಮಿ ಸಿದ್ಧೇಶ್ವರಾನಂದರೊಡನೆ ಕಲ್ಕತ್ತಾದ ಬೇಲೂರು ಮಠಕ್ಕೆ ಹೊರಡುವವರೆಗೆ, ಎಂದರೆ ೧-೭-೧೯೨೯ ರಿಂದ ೩-೧೦-೧೯೨೯ ರ ವರೆಗೆ, ನನ್ನ ಹಸ್ತಪ್ರತಿಯ ಸಾಕ್ಷಿಯಂತೆ, ನಾನು ಸುಮಾರು ಹತ್ತು ಕವನಗಳನ್ನು ಬರೆದಿದ್ದೇನೆ. ಈ ಅವಧಿಯಲ್ಲಿ ನಾಟಕ, ಜೀವನ ಚರಿತ್ರೆ ಇತ್ಯಾದಿಗಳೂ ಕೊಡೆಕೂಡೆ ಸಾಗುತ್ತಿದ್ದುವೆಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಆ ಹತ್ತು ಭಾವಗೀತೆಗಳಲ್ಲಿ ಕೆಲವು ಪ್ರಕೃತಿ ಗೀತೆಗಳು, ಕೆಲವು ಆಧ್ಯಾತ್ಮ ಮತ್ತು ಭಕ್ತಿ ಸಂಬಂಧವಾದುವು. ‘ಲಲಿತಾದ್ರಿ’ ಮತ್ತು ‘ಪಾಂಚಜನ್ಯ’ ಎರಡೂ ದೀರ್ಘಕವನಗಳಾಗಿವೆ. “ಪಾಂಚಜನ್ಯ’ವಂತೂ ಐತಿಹಾಸಿಕವೆ ಆಗಿದೆ! ಆಗ ‘ಲಲಿತಾದ್ರಿ’ ಮಹಾರಾಜರ ಸ್ವಂತ ಕ್ಷೇತ್ರವಾಗಿದ್ದು ತುಂಬ ಮನೋಹರವಾಗಿತ್ತು. ನಾನು ಆ ಕವನವನ್ನು ರಚಿಸಿ ಓದಿದ್ದನ್ನು ಕೇಳಿ ಎನ್‌.ಎಸ್‌.ಸುಬ್ಬರಾಯರ ಅಣ್ಣಂದಿರು ಶ್ರೀ ನರಸಿಂಹಮೂರ್ತಿಯವರು ಆಗ ಅವರು ಯೂನಿವರ್ಸಿಟಿ ಲೈಬ್ರೇರಿಯನ್ ಆಗಿದ್ದರು, ಬಹಳ ಮೆಚ್ಚಿಕೊಂಡಿದ್ದರು. ತರುವಾಯ ಹುಣ್ಣಿಮೆಯ ದಿನ ಆ ಕವನವನ್ನು ಅದು ರಚಿತವಾಗಿ ಸ್ಥಳದಲ್ಲಿಯೆ ಓದಿ ಅನುಭವಿಸಬೇಕೆಂದು ನನ್ನನ್ನು ಒಂದು ಕಾರಿನಲ್ಲಿ, ಸೂರ್ಯಾಸ್ತ ಮತ್ತು ಚಂದ್ರೋದಯಗಳೆರಡೂ ಸಂಭವಿಸುವ ಸಂಧ್ಯಾ ಸಮಯಕ್ಕೆ ಸರಿಯಾಗಿ, ಸ್ವಾಮಿಜಿ ಮತ್ತು ಇತರ ಮಿತ್ರರೊಡನೆ ಅಲ್ಲಿಗೆ ಕರೆದೊಯ್ದರು:

ಹುಣ್ಣಿಮೆಯ ದಿನದಲ್ಲಿ
ಪೂರ್ವ ದಿಗ್ದೇಶದಲಿ,
ದೂರ, ಬಹುದೂರದಲಿ
ಮಬ್ಬಿನ ದಿಗಂತದಲಿ
ದುಂಡಾಗಿ, ಕೆಂಪಾಗಿ,
ಸುಂದರ ಸುಧಾಕರನು
ಮೂಡಿ ಮೇಲೇಳುತಿರೆ;
ಸುತ್ತಲಿಹ ಬಯಲುಗಳ
ಹಸುರಾದ ಹೊಲಗಳನು
ಅಲ್ಲಲ್ಲಿ ಮೆರೆಯುತಿಹ
ಬಿತ್ತರದ ಜಲಗಳನು
ಕೌಮುದಿಯು ಮುತ್ತುತ್ತಿರೆ,
ಚಂದ್ರಿಕೆಯು ಬೆಳಗುತಿರೆ,
ಬೆಳದಿಂಗಳೆಸೆಯುತಿರೆ,
ಮೌನ ಮಿತಿಮಿರುತಿದೆ
ಧ್ಯಾನ ಬಗೆವುಗುತಲಿರೆ
ನಿಂತಿಲ್ಲಿ ನೇಹಿಗನೆ
ಚೆಲುವ ನೋಡು!

ಈ ಭಾಗವನ್ನು ಓದುವಂತೆ ಹೇಳಿ, ಅವರು ಅಜಮಾಯಿಸಿ ಮಾಡುವವರಂತೆ, ಕವಿತೆ ಸರಿಯಾಗಿ ವರದಿ ಮಾಡಿದೆಯೊ ಇಲ್ಲವೊ ಎಂಬಂತೆ ‘ಇನ್‌ಸ್ಪೆಕ್ಷನ್’ಗೆ ಶುರುಮಾಡಿದರು. ಇತರರು ನೋಡಿ ನಗುತ್ತಿದ್ದರೂ ಅದರ ಹಾಸ್ಯಾಸ್ಪದತೆ ಅವರ ಬಗೆಗೆ ಹೋಗಲಿಲ್ಲ. ಅಂತೂ ಅವರು ನಡೆಸಿದ ತನಿಖೆಯ ಪ್ರಕಾರ ನನ್ನ ಕವಿತೆ ಸರಿಯಾಗಿ ಲೆಖ್ಖವಿಟ್ಟಿರಲಿಲ್ಲ! ತಪ್ಪಿತಸ್ಥವಾಗಿತ್ತು!

ಆ ಕವಿತೆ ಮೊದಲು ೧೯೩೦ರಲ್ಲಿ ಮಹಾರಾಜಾ ಕಾಲೇಜಿನ ಕರ್ಣಾಟಕ ಸಂಘ ಪ್ರಕಟಿಸಿದ ‘ತಳಿರು’ ನಾಮಕ ವಿವಿಧ ವಿದ್ಯಾರ್ಥಿ ಕವಿಗಳ ಕವನಸಂಗ್ರಹದಲ್ಲಿ ಪ್ರಕಟವಾಯಿತು. ಆದರೆ ವರ್ಣನಾತ್ಮಕ ಪ್ರತಿಭೆಯ ಮನೋಹರತೆಗೆ ಅನೇಕ ಸಹೃದಯರು ಮಾರುವೋಗಿದ್ದರು. ಬೈಗುಹೊತ್ತು ಬೆಟ್ಟದ ನೆತ್ತಿಯಲ್ಲಿ ನಿಂತು ಕತ್ತಲಾಗುತ್ತಿದ್ದಾಗ ಬೆಟ್ಟದ ಮೇಲೂ ಮೆಟ್ಟಿಲುಗಳಲ್ಲಿಯೂ ಮೈಸೂರು ನಗರದಲ್ಲಿಯೂ ಒಟ್ಟಿಗೆ ಒಮ್ಮೆಗೆ ವಿದ್ಯುದ್ದೀಪಗಳೆಲ್ಲ ಹೊತ್ತಿಕೊಂಡಾಗ

ತಾರೆಗಳ ದಿಬ್ಬಣವು
ಗಗನದಿಂದೈತಂದು
ಬೆಟ್ಟದುದಿಯಲಿ ತಳುವಿ,
ಸೋಪಾನಗಳನಿಳಿದು
ತಪ್ಪಲಲಿ ಮೇಳವಿಸಿ
ಕವಿದು ಕಿಕ್ಕಿರಿದಂತೆ;
ಬುವಿ ಬೆಸಲೆಯಾದಂತೆ,
ಚುಕ್ಕಿಗಳ ತಿಂತಿಣಿಯ
ತೆಕ್ಕನೆಯೆ ಪೆತ್ತಂತೆ;
ಸಗ್ಗ ನೆಲಕಿಳಿದಂತೆ;
ಬಾನಿಳೆಗೆ ಬಿದ್ದಂತೆ,
ನೂರಾರು ದೀಪಗಳು,
ಮಿಣುಕುತಿಹ ಸೊಡರುಗಳು,
ಸಾಲಾಗಿ, ಡೊಂಕಾಗಿ,
ಗುಡಿಗಟ್ಟಿ ಕೊಂಕಾಗಿ
ಗೊಂಚಲಲಿ ಗುಂಪಾಗಿ
ತೆಕ್ಕನೆಯೆ ಹುಟ್ಟಿಬರೆ
ಪತ್ತನದಿ ತುಂಬಿಬರೆ,
ಬೆರಗಾಗಿ, ಮರುಳಾಗಿ
ಬಾ ನೋಡು, ನಿಂತಿಲ್ಲಿ
ಮೂಕನಾಗಿ!

ಎಂಬಲ್ಲಿ ಗೋಚರಿಸುವ ವರ್ಣಾನಾ ಚಮತ್ಕಾರಕ್ಕೆ ಅನೇಕ ಹೃದಯಗಳು  ಹರ್ಷೋನ್ಮೇಷಿತವಾಗುತ್ತಿದ್ದುವು. ಆದರೆ ಕೆಲವು ವಿಮರ್ಶಕರು ಮಾತ್ರ ದೋಷಗಳನ್ನೆ ಪಟ್ಟಿ ಮಾಡಿ ಅದರ ಸೌಂದರ್ಯದಿಂದ ಸ್ವಾರಸ್ಯಕ್ಕೆ ಹೊರಗಾಗುತ್ತಿದ್ದರು. ‘ಕೌಮುದಿಯ ಮುತ್ತುತಿರೆ, ಚಂದ್ರಿಕೆಯು ಬೆಳಗುತಿರೆ, ಬೆಳ್ದಿಂಗಳೆಸೆಯುತಿರೆ’ ಎಂಬಂತಹ ಪುನರುಕ್ತಿಯ ದೋಷಕ್ಕೆ ಪಕ್ಕಾಗಿ ಖಂಡನೆಗೆ ಪಕ್ಕಾಗುತ್ತಿದ್ದವು. ಕೆಲವು ಅಸೂಯಾಪರರಾದವರು ವಿಮರ್ಶಕ ವೇಷವನ್ನು  ತೊಟ್ಟು ಜಿಗಣೆಗಳಾಗಿದ್ದರು. ಅವರು ಬಿಣ್ಪಿಡಿದ ಕೆಚ್ಚಲಿನ ಹಾಲನ್ನು ಹೀರುವ ಕರುವಿನಂತಲ್ಲದೆ ಕೆಚ್ಚಲಿನ ಮಾಂಸಕ್ಕೆ ಕಚ್ಚಿ ಗಂಟುಬಿದ್ದು ರಕ್ತ ಹಿರುವ ಕೆಲಸದಲ್ಲಿ ತೃಪ್ತರಾಗುತ್ತಿದ್ದರು. ಕೌಮುದಿ, ಚಂದ್ರಿಕೆ ಮತ್ತು ಬೆಳ್ದಿಂಗಳು ಈ ಪದಗಳಿಗೆ ನಿಘಂಟು ಸಮಾನಾರ್ಥವಿದ್ದರೂ ಕವಿಪ್ರತಿಭೆಯ ಕಾವ್ಯಪ್ರಯೋಗದಲ್ಲಿ ಅವುಗಳಿಗೆ ಬೇರೆಬೇರೆಯ ಭಾವಕೋಶಗಳೊದಗಿ ರಸಪುಷ್ಟಿಗೆ ನೆರವಾಗುತ್ತದೆಂಬುದು ಆ ಮಂದಮತಿಗಳಿಗೆ ಹೊಳೆಯುತ್ತಿರಲಿಲ್ಲ. ’ಸುಖ ದೂರನ್ ಅಸೂಯಾಪರ್ಯ’ ಎಂದಿಲ್ಲವೆ ಹರಿಹರ? ಆ ಸುಖ ಯಾವುದು? ನಿರಸೂಯವಾದ ಸಹೃದಯತೆಯಿಂದ ಉಂಟಾಗುವ ರಸಾನುಭವ ತಾನೆ?

ಮತ್ತೊಂದು ಕವನ ‘ಪಾಂಚಜನ್ಯ’: ಅಂದು ನಡೆಯುತ್ತಿದ್ದ ಸ್ವಾತಂತ್ಯ್ರ ಸಂಗ್ರಾಮ ಜನ್ಯವಾದದ್ದು; ಬಂಗಾಳದಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿಗಳ ವೀರಾಂದೋಲನಕ್ಕೆ ಸಂಬಂಧಪಟ್ಟದ್ದು. ಜತೀಂದ್ರನಾಥ ದಾಸ್ ಎಂಬ ಯುವಕ ದೇಶಭಕ್ತಿ ವೀರನು ಬ್ರಿಟಿಷ್ ಸರಕಾರದಿಂದ ಸೆರೆಹಿಡಿಯಲ್ಪಟ್ಟು ಕ್ರೂರ ಶಿಕ್ಷೆಗೆ ಒಳಗಾದನು. ಆತ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಹೂಡಿದನು. ಗಾಂಧೀಜಿಯೆ ಮೊದಲಾದ ಹಿರಿಯ ದೇಶಭಕ್ತರೂ ರಾಜಕಾರಣಿಗಳೂ ಬ್ರಿಟಿಷ್ ಸರಕಾರಕ್ಕೆ ಎಷ್ಟು ಹೇಳಿದರೂ ಅದು ಜಗ್ಗಲಿಲ್ಲ. ಆರುವತ್ತು ದಿನಗಳ ಉಪವಾಸಾನಂತರ ಜತೀಂದ್ರ ಸತ್ತೆಹೋದ! ಇಡೀ ಭಾರತ ಜನತೆ ಮರುಗಿತು; ಯುವಕರ ರಕ್ತವಂತೂ ಪ್ರತೀಕಾರಕ್ಕಾಗಿ ಕುದಿಯತೊಡಗಿತು. ಆ ಸಂದರ್ಭದಲ್ಲಿ ಮೂಡಿತ್ತು ‘ಪಾಂಚಜನ್ಯ’! ಅದನ್ನು ನಾನು ಅನೇಕ ಕವನ ವಾಚನ ಸಭೆಗಳಲ್ಲಿ ವೀರಾವೇಶದಿಂದಲೂ ಅಭಿನಯಪೂರ್ವಕವಾಗಿಯೂ ವಾಚನ ಮಾಡುತ್ತಿದ್ದೆ. (ಹಾಡುತ್ತಿರಲಿಲ್ಲ! ಅಂತಹ ಕವನಗಳನ್ನು ಸಾಭಿನಯ ವಾಚನಕ್ಕಾಗಿಯೆ ಬರೆದದ್ದು. ಮುಂದೆ ‘ಕಲ್ಕಿ’ ‘ಕುಮಾರವ್ಯಾಸ’ ‘ರಕ್ತಧುನಿ’ ‘ಕ್ರಾಂತಿಕಾಳಿ’ ಮುಂತಾದ ಅನೇಕ ಕವನಗಳು ನನ್ನ ಲೇಖನಿಯಿಂದ ಹೊಮ್ಮಿ ಅಂದಿನ ಸತ್ಯಾಗ್ರಹದ ಸ್ವಾತಂತ್ಯ್ರ ಸಂಗ್ರಾಮಕ್ಕೆ ರಣಮಂತ್ರಗಳಾಗಿ ಪರಿಣಮಿಸಿ ಸುಪ್ರಸಿದ್ಧವಾಗಿವೆ. ಸಾಧಾರಣವಾಗಿ ‘ಪಾಂಚಜನ್ಯ’ ಮತ್ತು ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ ಕವನಸಂಗ್ರಹಗಳಲ್ಲಿರುವ ಕವನಗಳೆಲ್ಲ ವಾಚನ ಜಾತಿಗೆ ಸೇರಿವೆ. ಗಾಯನ ಜಾತಿಗಲ್ಲ. ಆದರೂ ಕೆಲವರು. ಅದರಲ್ಲಿಯೂ ಇತ್ತೀಚಿಗೆ ರೇಡಿಯೋ ಪ್ರಚಾರಕ್ಕೆ ಬಂದ ಮೇಲೆ, ಅವುಗಳನ್ನು ಗಾಯನ ಮಾಡುತ್ತಿರುವುದನ್ನು ಆಲಿಸಿ ತುಂಬ ನೊಂದುಕೊಂಡಿದ್ದೇನೆ.) ಆ ಕವನವನ್ನು ಸತ್ಯಾಗ್ರಹಿಗಳೂ ರಾಜಕೀಯ ಆಂದೋಲನದ ಸಭೆಗಳಲ್ಲಿ ವಾಚನಮಾಡತೊಡಗಿ ಬ್ರಿಟಿಷ್ ಸರಕಾರದ ವಿರುದ್ಧಾಗ್ನಿಗೆ ತುಪ್ಪಹೊಯ್ಯತೊಡಗಿದರು. ಅದು ಮೊದಲು ಪ್ರಕಟವಾದದ್ದು ದಿವಂಗತ ತಿ.ತಾ.ಶರ್ಮರು ನಡೆಸುತ್ತಿದ್ದ ‘ವಿಶ್ವಕರ್ಣಾಟಕ’ ಪತ್ರಿಕೆಯಲ್ಲಿ. ನಾನು ಅವರಿಗೆ ಬರೆಯುತ್ತಿದ್ದ ಕಾಗದಗಳಲ್ಲಿ, ಕವರಿನಲ್ಲಿ ಮಾತ್ರವಲ್ಲ ಕಾರ್ಡುಗಳಲ್ಲಿಯೂ, ‘ಓಂ ಶಾಂತಿಃ ಶಾಂತಿಃ ಶಾಂತಿಃ’ಗೆ ಬದಲಾಗಿ ‘ಓಂ ಕ್ರಾಂತಿಃ ಕ್ರಾಂತಿಃ ಕ್ರಾಂತಿಃ’ ಎಂದು ಮುಗಿಸಿ ನನ್ನ ರುಜು ಹಾಕುತ್ತಿದ್ದೆ. ಅಷ್ಟು ಬಟ್ಟಬಯಲಾಗಿ ಬರೆಯಬಾರದೆಂದು ನನ್ನ ಹಿತಕ್ಕಾಗಿಯೆ ಸೂಕ್ಷ್ಮವಾಗಿ ಸೂಚಿಸಿದ್ದರು.

ಸಭೆ ಸಭೆಗಳಲ್ಲಿ ಹೊರಗೆ ಮಾತ್ರವಲ್ಲದೆ ಜೈಲಿನಲ್ಲಿ ಒಳಗೆಯೂ ‘ಪಾಂಚಜನ್ಯ’ ಕವನ ಮೊಳಗತೊಡಗಿತು ಬ್ರಿಟಿಷರ ಪರವಾಗಿ ದೇಶೀಯ ಸಂಸ್ಥಾನಗಳಲ್ಲಿ ಬೇಹು ಕಾವಲುಗಾರಿಕೆ ನಡೆಸುತ್ತಿದ್ದ ರೆಸಿಡೆಂಟ್ ಮಹಾಶಯನ ಕಿವಿ ನಿಮಿರಿತು! ರಾಜದ್ರೋಹದ ವಸ್ತುವನ್ನು ಪ್ರಕಟಿಸಿದಕ್ಕಾಗಿ ‘ವಿಶ್ವಕರ್ಣಾಟಕ’ದ ಸಂಪಾದಕರಿಗೆ ನೋಟೀಸು ಕೊಟ್ಟರಂತೆ. ಅದನ್ನು ಇಂಗ್ಲಿಷಿಗೆ ಭಾಷಾಂತರಿಸಲೂ ಅದರಲ್ಲಿರುವ ಬ್ರಿಟಿಷ್ ಸರಕಾರದ ವಿರುದ್ಧವಾಗಿರಬಹುದಾದ ರಾಜದ್ರೋಹದ ಲೇಖನ ವಸ್ತುವನ್ನು ತೋರಿಸಿಕೊಡಲೂ ಮೈಸೂರು ಸರಕಾರದ ಅಧಿಕೃತ ಭಾಷಾಂತರ ಇಲಾಖೆಗೆ ಕಳುಹಿಸಲಾಯಿತಂತೆ. ಆಗ ಮುಖ ಭಾಷಾಂತರಕಾರರಾಗಿದ್ದವರು ದಿವಂಗತ ಸಿ.ಕೆ.ವೆಂಕಟರಾಮಯ್ಯನವರು. ಅವರು ಅದನ್ನು ಭಾಷಾಂತರಿಸಿ, ಅದರಲ್ಲಿ ಸಾಮಾನ್ಯವಾದ ದೇಶಭಕ್ತಿಯ ವಿಚಾರವಿದೆಯೆಂದೂ ಯಾವ ದೇಶವನ್ನಾಗಲಿ ಸರ್ಕಾರವನ್ನಾಗಲಿ ಜನಾಂಗವನ್ನಾಗಲಿ ಹೆಸರಿಸಿಲ್ಲವೆಂದೂ, ಆದ್ದರಿಂದ ಕಾನೂನು ಪ್ರಕಾರಕ್ಕೆ ಅದು ಒಳಗಾಗುವಂತಿಲ್ಲವೆಂದೂ ಅಧಿಕೃತವಾಗಿ ಬರೆದರಂತೆ!