ಸ್ವಾಮಿ ಸಿದ್ಧೇಶ್ವರಾನಂದರ ಪ್ರೇರಣೆ ಪ್ರಯತ್ನಗಳಿಂದ ನಾನು ೧೯೨೯ ರ ಮಧ್ಯಭಾಗದಲ್ಲಿ ವಿಶ್ವವಿದ್ಯಾನಿಲಯದ ಅಧ್ಯಾಪಕರಾಗಿ ಸರಕಾರಿ ಕೆಲಸಕ್ಕೆ ಸೇರಿದೆ. ಆ ವೃತ್ತಿ ನನ್ನ ಪ್ರವೃತ್ತಿಗೆ ಪ್ರತಿಕೂಲವಾದುದಾಗಿರಲಿಲ್ಲ. ಅಲ್ಲದೆ ಕವಿತಾ ಪ್ರವೃತ್ತಿಗೆ ಅತ್ಯಂತ ಸಹಾಯಕವಾದುದಾಗಿಯೂ ಇತ್ತು. ಬದುಕಿನ ಬಹುಭಾಗವನ್ನೆಲ್ಲ ಆಶ್ರಮದ ಸಾಧು ಸಂನ್ಯಾಸಿಗಳ ಸಂಘದ ಆಧ್ಯಾತ್ಮಿಕ ವಲಯದಲ್ಲಿ ಕಳೆಯುತ್ತಿದ್ದಂತೆ ಅದರ ಮುಖ್ಯಭಾಗವನ್ನು ಅಧ್ಯಾಪಕರು ಪಾಠಪ್ರವಚನಗಳು ಪುಸ್ತಕ ಭಂಡಾರಗಳು ಉತ್ಸಾಹಿ ಮಿತ್ರ ವಿದ್ಯಾರ್ಥಿಗಳು ಅಧ್ಯಯನ ಕಾವ್ಯವಾಚನಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇವುಗಳಲ್ಲಿ ಕಳೆಯುತ್ತಿದ್ದೆ. ಕವಿಪ್ರತಿಭೆ ಘನಪ್ರಕಾಶನಕ್ಕೆ ಅತ್ಯವಶ್ಯವಾದ ವಿದ್ವತ್ಸಂಗವೂ ಬಹುಶ್ರುತಿಯೂ ಭಾಷಾಪ್ರಭುತ್ವವೂ ನನಗೆ ದೊರೆಕೊಳ್ಳುವಂತಾಯಿತು.

ಆ ವರ್ಷ ದಸರಾ ರಜಾ ಸಮಿಪಿಸುತ್ತಿದ್ದಂತೆ ಸ್ವಾಮಿಜಿ ನನ್ನೊಡನೆ ದೀಕ್ಷೆ ತೆಗೆದುಕೊಳ್ಳುವ ಮಾತನ್ನೆತ್ತಿದರು. ಅದಕ್ಕಾಗಿ ನಾವು ಮೂವರೂ-ಸ್ವಾಮಿಜಿ, ನಾನು, ದೇವಂಗಿ ಮಾನಪ್ಪ-ಶ್ರೀರಾಮಕೃಷ್ಣ ಮಹಾಸಂಘದ ಮೂಲಕೇಂದ್ರವಿರುವ ಬೇಲೂರು ಮಠಕ್ಕೆ ಹೋಗಬೇಕೆಂದೂ ಗೊತ್ತಾಯಿತು.

ಆ ವಿಚಾರವಾಗಿ ನಾನು ತಕ್ಕಮಟ್ಟಿನ ವಿವರಪೂರ್ವಕವಾಗಿಯೆ ‘ದೀಕ್ಷಾಯಾತ್ರೆ’ ಎಂಬ ಭಾವಪ್ರಬಂಧದಲ್ಲಿ ಬರೆದಿದ್ದೇನೆ. ಆ ಪ್ರಬಂಧ “ಸ್ವಾಮಿ ಶಿವಾನಂದ ಸ್ಮೃತಿ ಸಂಗ್ರಹ” ಎಂಬ ಹೆಸರಿನ ಬಂಗಾಳಿ ಭಾಷೆಯ ಗ್ರಂಥಕ್ಕಾಗಿ ಬರೆದುದು. ಸ್ವಾಮಿ ಅಪೂರ್ವಾನಂದರು ಸಂಪಾದಿಸಿರುವ ಆ ಗ್ರಂಥದಲ್ಲಿ, ಅವರ ಪ್ರೇರಣೆಯಿಂದಲೆ ನಾನು ಕನ್ನಡದಲ್ಲಿ ಬರೆದ ಆ ಪ್ರಬಂಧವನ್ನು ಅಲ್ಲಿ ಕನ್ನಡ ತಿಳಿದವರಿಂದ ಇಂಗ್ಲಿಷಿಗೆ ಭಾಷಾಂತರರಿಸಿಕೊಂಡು, ಆ ಇಂಗ್ಲಿಷ್ ಭಾಷಾಂತರವನ್ನು ಮತ್ತೆ ತಾವೇ ಬಂಗಾಳಿಗೆ ಅನುವಾದ ಮಾಡಿ ಪ್ರಕಟಿಸಿದ್ದಾರೆ! ನನ್ನ ಕನ್ನಡ ಪ್ರಬಂಧ ಮೊದಲು ‘ಪ್ರಬುದ್ಧ ಕರ್ಣಾಟಕ’ದಲ್ಲಿ ಪ್ರಕಟಗೊಂಡು ಆಮೇಲೆ ‘ಉದಯರವಿ ಪ್ರಕಾಶನ’ದಿಂದ “ಮನುಜಮತ-ವಿಶ್ವಪಥ” ಎಂಬ ಹೆಸರು ಹೊತ್ತು ಪ್ರಕಾಶಿತವಾಗಿರುವ ಹೊತ್ತಗೆಯಲ್ಲಿ ಮುದ್ರಿತವಾಗಿದೆ. ಆದ್ದರಿಂದ ಆ ಬೌದ್ಧಿಕ ಮತ್ತು ಭಾವುಕ ವಿವರಗಳನ್ನೆಲ್ಲ ಇಲ್ಲಿ ಮತ್ತೆ ಕೊಡುವುದಕ್ಕೆ ಬದಲಾಗಿ ನಾನು ಅಂದಿನಿಂದ (೩-೧೦-೧೯೨೯) ಬರೆದಿರುವ ‘ದಿನಚರಿ’ಯನ್ನಿಲ್ಲಿ ಸೂಕ್ತ ತೋರಿದಂತೆ ಕೊಡುತ್ತೇನೆ. ನಡುವೆ ಮತ್ತೇನಾದರೂ ಹೆಚ್ಚಿಗೆ ವಿಷಯ ವಿವರಣೆ ಬೇಕು ಎಂದು ತೋರಿದರೆ ಟಿಪ್ಪಣಿ ರೂಪದಲ್ಲಿ ಕಂಸಗಳಲ್ಲಿ ಬರೆಯುತ್ತೇನೆ:

೩-೧೦-೧೯೨೯ – ಗುರುವಾರ:

ಶ್ರೀಗುರುದೇವನಿಗೆ ನಮಸ್ಕರಿಸಿ ನಾನು, ಮಾನಪ್ಪ, ಗೋಪಾಲ್ ಮಹಾರಾಜ್ ಆಶ್ರಮದಿಂದ ಹೊರಟೆವು. ರೈಲ್ವೇ ಸ್ಟೇಷನ್ನಿಗೆ ಹೋದಾಗ ಇನ್ನೂ ಎರಡೂವರೆ ಗಂಟೆಯಾಗಿತ್ತು. ನಿಲ್ದಾಣಕ್ಕೆ ಹೋಗಿ ನಿಂತಾಗಲೆ ಮಳೆ ಪ್ರಾರಂಭವಾಯಿತು. ಜಿರೆಂದು ಆಕಾಶವೆ ಕಳಚಿ ಬೀಳುವುದೂ ಎಂಬಂತೆ ವರ್ಷವು ಭಯಂಕರವಾಗಿ ಸುರಿಯಿತು. ಗಾಳಿಯೂ ಪ್ರಚಂಡವಾಗಿ ಎದ್ದಿತು. ಪ್ಲಾಟಫಾರಂನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮೂರಾವರ್ತಿ ಸಾಮಾನು ಸಾಗಿಸಿದ್ದಾಯಿತು. ಅರಸೀಕೆರೆಗೆ ಹೋಗುವ ರೈಲು ಇನ್ನೂ ನಿಂತಿತ್ತು. ಮಳೆಯ ಹನಿಗಳು ಬಂಡಿಗಳ ಮೇಲೆ ಬಿದ್ದು ತುಂತುರು ತುಂತುರಾಗಿ ಗಾಳಿಯಲ್ಲಿ ತೇಲಿ ನಮ್ಮನ್ನೆಲ್ಲ ತೋಯಿಸಿಬಿಟ್ಟುವು. ಮೂರು ಗಂಟೆಯ ಹೊತ್ತಿಗೆ ಬೆಂಗಳೂರು ಗಾಡಿಯಲ್ಲಿ ಕುಳಿತೆವು. ಮಳೆ ಇನ್ನೂ ಸತತವಾಗಿ ಸುರಿಯುತ್ತಿತ್ತು. ಸ್ವಲ್ಪ ಹೊತ್ತಿನಲ್ಲಿ ಸದ್ಭವಾನಂದ ಸ್ವಾಮಿಜಿಯನ್ನು ಕ್ಷಯಾಸ್ಪತ್ರೆಯಲ್ಲಿ ನೋಡಲೆಂದು ನಮ್ಮೊಡನೆ ಬಂದಿದ್ದ ಪ್ರಿಯನಾಥ ಮಹಾರಾಜರನ್ನು ಬೀಳ್ಕೊಂಡು ಬೆಂಗಳೂರಿಗೆ ಹೊರಟೆವು. ದಾರಿಯಲ್ಲಿ ರಮಣೀಯ ಕೋಮಲ ಶ್ಯಾಮಲವಾಗಿ ಹಬ್ಬಿದ್ದ ಶಾಲಿವನಗಳು ರೈಲುರಸ್ತೆಯ ಇಕ್ಕೆಲದಲ್ಲಿಯೂ ಪ್ರಯಾಣಿಕರನ್ನು ಆಹ್ವಾನಿಸಿ ನಗುವಂತೆ ಇದ್ದುವು. ಆ ಹಸುರಿನ ಹಬ್ಬುಗೆಯ ನಡುವೆ ಅಲ್ಲಲ್ಲಿ ಶ್ವೇತಬಲಾಕಗಳು ಅತಿಮನೋಹರವಾಗಿ ಕಂಗೊಳಿಸುತ್ತಿದ್ದುವು. ದೂರದ ದಿಗಂತದ ಬೆಟ್ಟದ ಸಾಲುಗಳು ಧಾರೆಯಲ್ಲಿ ಮುಸುಗು ಹಾಕಿಕೊಂಡಂತೆ ಇದ್ದುವು. ನಾನು ಮೆಲುಬಾಯಲ್ಲಿ ಆ ದಿನ ತಾನೆ ರಚಿಸುತ್ತಿದ್ದ ಒಂದು ಹಾಡನ್ನು ಮೆಲ್ಲಗೆ ಹಾಡುತ್ತಿದ್ದೆ. ಚನ್ನಪಟ್ಟಣದಲ್ಲಿ ಯಾರೊ ಒಬ್ಬ ಗುಮಾಸ್ತ ಮಹನೀಯರು ಬಂದು ಹತ್ತಿರದರು. ಅವರು ಹಿಂದೂ-ಮುಸಲ್ಮಾನ್ ಬ್ರಾಹ್ಮಣ-ಬ್ರಾಹ್ಮಣೇತರ ಮೊದಲಾದ ಒಳಜಗಳಗಳ ವಿಚಾರವಾಗಿ ಒಬ್ಬೊಬ್ಬರೂ ಹೇಗೆ ಮತ್ತೊಬ್ಬರನ್ನು ತುಳಿಯಬೇಕೆಂದು ಕಾದುಕೊಂಡಿದ್ದಾರೆ ಎಂಬುದನ್ನು ಹೇಳಿದರು. ಅಂತೂ ಬೆಂಗಳೂರಿನವರೆಗೆ ಪ್ರಯಾಣವು ಸುಖಕರವಾಗಿಯೂ ಮಂಗಳವಾಗಿಯೂ ಹಿತವಾಗಿಯೂ ಪ್ರಿಯವಾಗಿಯೂ ಇತ್ತು. ಸದ್ಯಕ್ಕೆ ‘ಗುರುವಾರ ಸಾಯಂಕಾಲ’ವಾಗಲಿಲ್ಲವೆಂದು ಸಂತೋಷಪಟ್ಟೆವು. *[ಶ್ರೀರಾಮಕೃಷ್ಣ ಸಂಘದ ಸಾಧುಗಳಲ್ಲಿಯೂ ಅಂತರ್ವಲಯದ ಭಕ್ತರಲ್ಲಿಯೂ ಇರುತ್ತಿದ್ದ ಒಂದು ಮೌಢ್ಯಸದೃಶವಾದ ನಂಬಿಕೆ: ‘ಬಾರ್‌ಬೇಳ’ ಎನ್ನುತ್ತಿದ್ದರು ಬಂಗಾಳಿಯಲ್ಲಿ. ಅಂದರೆ ‘ಗುರುವಾರ ಸಂಜೆ’ ಎಂದರ್ಥವಂತೆ. ಶ್ರೀರಾಮಕೃಷ್ಣರು ಗುರುವಾರ ಅಪರಾಹ್ನದ ಒಂದು ಅವಧಿಯನ್ನು ಕೆಟ್ಟಗಳಿಗೆ ಎಂದು ಭಾವಿಸುತ್ತಿದ್ದರಂತೆ. ರಾಹುಕಾಲ ಎಂಬಂತೆ. ಆ ಹೊರಡಲೇಬೇಕಾದರೆ ಆ ಕೆಟ್ಟಕಾಲ ಪ್ರಾರಂಭವಾಗುವ ಮೊದಲೆ ಹೊರಡುತ್ತಿದ್ದರಂತೆ. ಅಥವಾ ಅದು ಮುಗಿಯುವವರೆಗೂ ಕಾಯುತ್ತಿದ್ದು ಆಮೇಲೆ ಹೊರಡುತ್ತಿದ್ದರಂತೆ. ಆ ಶ್ರೀಗುರು ಹಾಗೆ ನಂಬಿದ್ದರೆಂಬ ನಂಬುಗೆಯಿಂದ ಶ್ರೀರಾಮಕೃಷ್ಣ ಆಶ್ರಮದವರೆಲ್ಲ ಅದನ್ನು ತಪ್ಪದೆ ಅನುಸರಿಸುತ್ತಿದ್ದರು. ಆದರೆ ನನಗೆ ಅಂತಹ ಮೌಢ್ಯಗಳಲ್ಲಿ ಸ್ವಲ್ಪವೂ ವಿಶ್ವಾಸವಿರಲಿಲ್ಲ. ಶ್ರೀರಾಮಕೃಷ್ಣರೂ ಹಾಗೆ ನಂಬಿದ್ದರು ಎಂಬುದಕ್ಕೆ ಯಾವ ದಾಖಲೆಯೂ ನನಗೆ ಸಿಕ್ಕಿಲ್ಲ. ಒಂದು ವೇಳೆ ಸಿಕ್ಕಿದ್ದರೂ ಮೌಢ್ಯ ಯಾರಲ್ಲಿಯೆ ಇರಲಿ ಅದು ಪೂಜ್ಯವೆಂದು ಭಾವಿಸುವಷ್ಟು ಭಕ್ತಿಮೂಢನಾಗಿರಲಿಲ್ಲ ನಾನು ಅಂದೂ! ಇಂದೂ ನಾನು ಅಂತಹ ಅವೈಜ್ಞಾನಿಕ ಮೌಢ್ಯಗಳಿಗೆ ಸಂಪೂರ್ಣ ವಿರೋಧಿ.]

ಬೆಂಗಳೂರಿನಲ್ಲಿ ಮೈಸೂರು ರೈಲಿನಿಂದ ಇಳಿದವರೇ ಮದರಾಸಿನ ರೈಲಿಗೆ ಹೋಗಿ ಇಂಟರ್‌ಕ್ಲಾಸಿನಲ್ಲಿ ಸ್ಥಳ ಗೊತ್ತುಹಚ್ಚಿದೆವು. ನಮ್ಮ ನಮ್ಮ ‘ಬರ್ತು’ಗಳನ್ನು ಸ್ವಾಧೀನಪಡಿಸಿಕೊಂಡು ಹಾಸಿಗೆಯೇ ಮೊದಲಾದ ಧ್ವಜಗಳನ್ನು ಅಲ್ಲಿ ನೆಟ್ಟು, ಕಾರಿಯಪ್ಪನವರ ಕಾವಲಿಗೆ ಅವುಗಳನ್ನು ಬಿಟ್ಟು, ಸ್ವಲ್ಪ ಕಾಫಿ ತಿಂಡಿ ತೆಗೆದುಕೊಳ್ಳಲು ಹೋಟೆಲಿಗೆ ಹೋದೆವು. ಅಲ್ಲಿ ಬಳಗಟ್ಟೆ ವೆಂಕಟಪ್ಪನ ಸವಾರಿ ಬಂದಿತ್ತು. (ನಮ್ಮೂರ ಬಳಿಯ ಒಂದು ಹಳ್ಳಿಯ ಹುಡುಗ ವೈದ್ಯವಿದ್ಯಾರ್ಥಿಯಾಗಿ ಬೆಂಗಳೂರಿನಲ್ಲಿ ಓದುತ್ತಿದ್ದನು.) ಅಂತೂ ಪೂರಿಪಲ್ಯಗಳನ್ನು ಚೆನ್ನಾಗಿ ಮೆದ್ದು ರೈಲಿಗೆ ಬಂದೆವು. ಅಷ್ಟರಲ್ಲಿ ಡಾ. ಎಂ.ಎಚ್.ಕೃಷ್ಣಯ್ಯಂಗಾರ್ಯರೂ ಮದರಾಸಿಗೆ ಹೋಗುವ ಸಲುವಾಗಿ ನಮ್ಮ ಗಾಡಿಗೆ ಬಂದು ಕುಳಿತರು. (ಡಾ|| ಎಂ.ಎಚ್.ಕೃಷ್ಣ ಪ್ರಸಿದ್ಧ ಸಂಶೋಧಕರು. ನನ್ನನ್ನು ಐರಿಸ್ ಕವಿ ಜೆ.ಎಚ್.ಕಸಿನ್ಸ್ ಅವರಲ್ಲಿಗೆ ಅವರು ಕಳುಹಿಸಿದ್ದ ವಿಷಯವನ್ನು ಕುರಿತು ಹಿಂದೆ ಬರೆದಿದ್ದೇನೆ.) ಅವರೂ ನಾನು ಸ್ವಲ್ಪಹೊತ್ತು ಸಂಭಾಷಣೆ ಮಾಡಿದೆವು. ಅವರು ನಾನು ಕಲ್ಕತ್ತಾಗೆ ಹೋಗುವೆನೆಂಬ ಸುದ್ದಿಯನ್ನು ಕೇಳಿ “ಹೌದಪ್ಪಾ ಈಗಲೇ ಹೋಗಬೇಕು. ಮುಂದೆ ಸಂಸಾರದ ತಾಪತ್ರಯಗಳು ಬಂದುಬಿಟ್ಟರೆ ತುಂಬಾ ತೊಂದರೆ. ನೋಡಿ, ನಾನೂ ಎಷ್ಟೆಷ್ಟೂ ಮಾಡಬೇಕೆಂದು ಮುಂದಿನ ಕಾಲದ ಹೊಂಗನಸುಗಳನ್ನು ಕಟ್ಟಿದ್ದೆ. ಎಲ್ಲಾ ಹೀಗಾಗಿ ಹೋಯಿತು. ನನ್ನ ಮನಸ್ಸು ನಾನೀಗ ಮಾಡುತ್ತಿರುವ ಕೆಲಸಕ್ಕಾಗಿ ನಿಜವಾಗಿ ಸೃಷ್ಟಿ ಮಾಡಲ್ಪಟ್ಟಿಲ್ಲ. ಅದರೇನು ಮಾಡುವುದು? ಎಂದು ಮೊದಲಾಗಿ ಹೇಳಿದರು.

ಅಷ್ಟರಲ್ಲಿ ಸಂವಿದಾನಂದ ಸ್ವಾಮಿಗಳೂ ಎಳೆಯತಂಬಿಯೂ (ಬೆಂಗಳೂರು ಶ್ರೀರಾಮಕೃಷ್ಣಾಶ್ರಮದಿಂದ) ಬಂದರು. ಬಂದ ಕೂಡಲೆ ಸಂವಿದಾನಂದ ಸ್ವಾಮಿಗಳು ಇಂಗ್ಲಿಷಿನಲ್ಲಿ “ಕವಿಗಾಗಿ ಈ ಹೂವುಗಳನ್ನು ತಂದೆ.” ಎಂದು ನನಗೆ ಸುಮನೋಹರಗಳಾದ ಗುಲಾಬಿ ಹೂಗಳ ಗೊಂಡೆಯೊಂದನ್ನು ಕೊಟ್ಟರು. ಎಳೆಯತುಂಬಿಯೂ ನನ್ನನ್ನು ಆಲಿಂಗಿಸಿ ಕುಶಲಪ್ರಶ್ನೆ ಮಾಡಿದರು. (ಅವರು ಸಿಂಗಪುರದಲ್ಲಿ ಹುದ್ದೆಯಲ್ಲಿದ್ದು ನಿವೃತ್ತರಾದ ಮೇಲೆ ಮದರಾಸಿಗೆ ಬಂದು ಬದುಕಿನ ಕೊನೆಯ ದಿನಗಳನ್ನು ವಿಶೇಷವಾಗಿ ಶ್ರೀರಾಮಕೃಷ್ಣಾಶ್ರಮಗಳಲ್ಲಿಯೆ ಕಳೆಯುತ್ತಿದ್ದ ಅತೀವ ಭಾವಮಯ ಹೃದಯದ ಭಕ್ತಿ ಜೀವಿ. ಅವರ ಭಾವಾತಿಶಯಕ್ಕೆ ನಿದರ್ಶನ ಒಂದು ವಿಚಿತ್ರವೆ ಆಗಿದೆ. ಒಮ್ಮೆ ಅವರು ನನಗೆ ಒಂದು ಕಾಗದ ಬರೆದಿದ್ದರು. ಸಿಂಗಪುರದಿಂದ. ಕವರು ದಪ್ಪವಾಗಿಯೆ ಇತ್ತು, ಏಳೆಂಟು ಪುಟಗಳಷ್ಟು. ಒಡೆದು ನೋಡಿದರೆ ಅಷ್ಟೂ ಪುಟಗಳ ತುಂಬ Love Love Love Love ಎಂಬ ನಾಲ್ಕು ಅಕ್ಷರಗಳ ಪದವೇ ಪಂಕ್ತಿಪಂಕ್ತಿಯಾಗಿ ಮಾಲೆಮಾಲೆಯಾಗಿ ತುಂಬಿಹೋಗಿತ್ತು, ಕೋಟಿ ರಾಮನಾಮ ಬರೆಯುತ್ತಾರಲ್ಲಾ ಹಾಗೆ!!) ನನ್ನ ಕ್ರಾಪನ್ನು ನೋಡಿ “ಓಹೋ ಇದೇಕೆ ಹೀಗೆ ಮಾಡಿದರಿ? ನೀವು ಮೊದಲು ಕ್ರಾಪು ಬಿಟ್ಟಂತೆ ಉದ್ದವಾದ ಕೂದಲುಗಳನ್ನೇ ಬಿಟ್ಟರೆ ಚೆನ್ನು.” ಎಂದರು. ಅಲ್ಲಿಂದ ಸ್ವಾಮಿ ಸಿದ್ದೇಶ್ವರಾನಂದರು ಮಾನಪ್ಪನ ಪರಿಚಯವನ್ನು ಅವರಿಗೆಲ್ಲ ಹೇಳಿದರು. ಡಾ.ಎಂ.ಎಚ್.ಕೃಷ್ಣಯ್ಯಂಗಾರ್ಯರ ಪರಿಚಯವನ್ನೂ ಅವರಿಗೆ ಮಾಡಿಸಿಕೊಟ್ಟರು. ಆಮೇಲೆ ನಾನಾ ಮಾತುಕತೆಗಳಾದುವು.

ನನ್ನ ಕವಿತೆಗಳ ವಿಚಾರವಾಗಿ ಕೃಷ್ಣಯ್ಯಂಗಾರ್ಯರು ಅನೇಕ ವಿಚಾರಗಳನ್ನು (ಅವರಿಗೆಲ್ಲಾ) ಹೇಳಿದರು. ನಾನು ಕನ್ನಡದಲ್ಲಿ ಕವಿತೆ ಬರೆಯಲು ಮೊದಲು ಮಾಡುವುದಕ್ಕೆ ಅವರೇ ಕಾರಣಭೂತರೆಂಬುದನ್ನು ತಿಳಿಸಿದೆ. ಬೀಳ್ಕೊಳ್ಳುವಾಗ ಎಳೆಯತಂಬಿಯವರು ಸ್ವಾಮಿಜಿಗೆ ದಂಡಪ್ರಣಾಮಗೈದರು. ನಾನು ಅವರ (ಅವರು ಮುದುಕರು, ಸ್ವಾಮಿಜಿ ತರುಣರು.) ನಮ್ರತೆಯನ್ನು ನೋಡಿ ಆನಂದಪಟ್ಟೆ. ಮೊದಲು ಸ್ವಾಮಿಜಿ (ಕಾಲುಮುಟ್ಟಿ) ನಮಸ್ಕಾರ ಮಾಡಲು ಬಿಡಲಿಲ್ಲ. ಆಗ ಎಳೆಯತುಂಬಿಯವರು “ಈ ನಮಸ್ಕಾರಗಳು ನಿಮಗಲ್ಲ, ಮಹಾಪುರುಷ ಮಹಾರಾಜರಿಗೆ ಮತ್ತು ಸ್ವಾಮಿ ಶರ್ವಾನಂದರಿಗೆ.” ಎಂದು ಹೇಳಿ ಕಾಲಿಗೆ ಅಡ್ಡಬಿದ್ದೇಬಿಟ್ಟರು. ನಾನೂ ಸಂವಿದಾನಂದ ಸ್ವಾಮಿಗಳಿಗೆ ಕಾಲುಮುಟ್ಟಿ ನಮಸ್ಕಾರ ಮಾಡಿದೆ. ಅವರು “ಇದು ರೈಲಪ್ಪಾ, ಹೀಗೆಲ್ಲ ಮಾಡಿದರೆ ಜನರು ಏನೆಂದುಕೊಂಡಾರು?” ಎಂದರು. ನಾನು ನಗುತ್ತಾ “ಪರ್ವಾ ಇಲ್ಲ.” ಎಂದೆನು. ಕಂಟೋನ್ಮೆಂಟ್ ನಿಲ್ದಾಣದಲ್ಲಿ ಅವರಿಬ್ಬರೂ ಇಳಿದುಹೋದರು.”

[*ಇಲ್ಲಿ, ಈ ಕಾಲುಮುಟ್ಟಿ ನಮಸ್ಕಾರ ಮಾಡುವುದರ ವಿಚಾರವಾಗಿ  ಎರಡು ಮಾತು ಬರೆಯಬೇಕು ಎನ್ನಿಸುತ್ತದೆ. ಈ ಸಂಪ್ರದಾಯ ಬಂಗಾಳದಲ್ಲಿ ಸರ್ವಸಾಮಾನ್ಯ. ಹಿರಿಯರಿಗೆ ಕಿರಿಯರು ಎಲ್ಲಿ ಅಂದರೆ ಅಲ್ಲಿ ಕಾಲುಮುಟ್ಟಿ ನಮಸ್ಕರಿಸುತ್ತಾರೆ. ಇನ್ನು ಸಾಧು ಸಂನ್ಯಾಸಿಗಳಿಗೆ ಹಾಗೆ ನಮಿಸುವುದೇ ಮರ್ಯಾದೆ ಮಾತ್ರವಲ್ಲ ಸಂಪ್ರದಾಯಸಿದ್ಧವಾದ ರೂಢಿ. ನಾನು ಶ್ರೀರಾಮಕೃಷ್ಣಾಶ್ರಮಕ್ಕೆ ಬಂದಮೇಲೆ ಆಶ್ರಮವಲಯಕ್ಕೆ ಸಂಬಂಧಪಟ್ಟವರೆಲ್ಲರೂ ಹಾಗೆ ಆಚರಿಸುತ್ತಿದ್ದುದನ್ನು ನೋಡಿ ಸ್ವಲ್ಪ ಸಂಕೋಚವನ್ನು ಅನುಭವಿಸಿದೆ. ಏಕೆಂದರೆ ನಾನು ಹುಟ್ಟಿ ಬೆಳೆದ ವಾತಾವರಣದಲ್ಲಿ ಹಾಗೆ ಮಾಡುತಿದ್ದುದು ಅಪೂರ್ವ. ನಮ್ಮ ಅಜ್ಜಯ್ಯ ಪೂಜೆಯಾದ ಮೇಲೆ ತುಳಸೀಕಟ್ಟೆಗೆ ಪ್ರದಕ್ಷಿಣೆ ಬಂದು ಹಾಗೆ ದಿಂಡುರುಳಿ ಅಡ್ಡಬಿದ್ದು ನಮಸ್ಕಾರ ಮಾಡುತ್ತಿದ್ದುದನ್ನು ನೋಡಿದ್ದೆ. ನವರಾತ್ರಿಯಲ್ಲಿ ಓಲೆಗರಿ ಪುಸ್ತಕಗಳನ್ನೆಲ್ಲ ಉಪ್ಪರಿಗೆ ಕೋಣೆಯಲ್ಲಿ ಜೋಡಿಸಿ ಒಂಬತ್ತು ದಿನಗಳೂ ಸರಸ್ವತಿ ಪೂಜೆ ಮಾಡುತ್ತಿದ್ದಾಗ ಅವರು ನಮ್ಮನ್ನು ಹಾಗೆ ಅಡ್ಡಬೀಳಿಸುತ್ತಿದ್ದರು. ತಲೆ ಚೆನ್ನಾಗಿ ನೆಲಕ್ಕೆ ಮುಟ್ಟುವಂತೆ ಮಾಡಿಸುತ್ತಿದ್ದರು. ನಾನು ಯಾವ ಮನುಷ್ಯರಿಗೂ ಅಡ್ಡಬಿದ್ದವನಲ್ಲ. ಅದೊಂದು ಹೀನಾಯ ಎಂದು ಭಾವಿಸಿದ್ದೆ. ನಮ್ಮ ತಾಯಿಯ ತಿಥಿಯ ಸಂದರ್ಭದಲ್ಲಿ ಕಜ್ಜಿಬುರುಕ ದಾಸಯ್ಯನಿಗೆ ಅಡ್ಡಬೀಳಲು ನಿರಾಕರಿಸಿದ್ದನ್ನು ಹಿಂದೆ ಹೇಳಿದ್ದೇನೆ. ಮೈಸೂರಿಗೆ ಬಂದು ಸಾಹಿತ್ಯ ಮತ್ತು ತತ್ತ್ವಶಾಸ್ತ್ರಾದಿಗಳನ್ನು ಓದಿದ ಮೇಲಂತೂ ನನಗೆ ಅದು ಅಸಹ್ಯ ಕರ್ಮವಾಗಿ ಜುಗುಪ್ಸಾರ್ಹವಾಗಿತ್ತು. ಸ್ವಾಮಿ ವಿವೇಕಾನಂದರ ಕೃತಿಗಳನ್ನು ಓದಿದ ಮೇಲೆ ಮನುಷ್ಯತ್ತ್ವದ  ಹಿರಿಮೆ ಗರಿಮೆ ಮಹಿಮೆ ದೈವಿಕತೆ ಇವುಗಳ ಅದ್ವೈತಪ್ರಜ್ಞೆ ನನ್ನಲ್ಲಿ ಆತ್ಮಗೌರವವನ್ನು ಉದ್ದೀಪನಗಿಳಿಸಿದುದರ ಪರಿಣಾಮವಾಗಿ ನನ್ನಲ್ಲಿ ‘ಸೋಹಂ’ ’ಬ್ರಹ್ಮಾಸ್ಮಿ’ ’ತತ್ತ್ವಮಸಿ’ ಇತ್ಯಾದಿಗಳನ್ನು ಭಾವನೆಗಳು ಸಂಸ್ಥಾಪಿತವಾಗಿ ನಾನು ಯಾರಿಗೂ ಎಂದಿಗೂ ಕಾಲುಮುಟ್ಟುವುದು ಅಸಾಧ್ಯವಾಗಿತ್ತು. ಅಶ್ರಮಕ್ಕೆ ಬಂದಮೇಲೆಯೂ ದೇವರಿಗಲ್ಲದೆ ಇತರರಿಗೆ ಅಡ್ಡಬೀಳುವುದು ನನಗೆ ತುಂಬಾ ಕಷ್ಟವಾಗುತ್ತಿತ್ತು. ನನ್ನ ಬದುಕಿಗೆ ಭಗವತ್ ಸದೃಶವಾಗಿ ಪ್ರವೇಶಿಸಿದ್ದ ಸ್ವಾಮಿ ಸಿದ್ದೇಶ್ವರಾನಂದರಿಗೂ ನಾನು ಮಂತ್ರದೀಕ್ಷಿತನಾಗುವವರೆಗೂ ಅಡ್ಡಬಿದ್ದವನಲ್ಲ. ನನ್ನ ಗೌರವಕ್ಕೆ ಸಂಪೂರ್ಣ ಭಾಜನರಾದ ಸ್ವಾಮಿ ಶರ್ವಾನಂದರಂತಹ ಉಜ್ವಲ ವ್ಯಕ್ತಿತ್ವದ ಹಿರಿಯ ಸಂನ್ಯಾಸಿಗಳಿಗೂ ನಾನು ಕಾಲುಮುಟ್ಟಿ ನಮಸ್ಕಾರ ಮಾಡುತ್ತಿದ್ದುದು ದಾಕ್ಷಿಣ್ಯಕ್ಕಾಗಿಯೆ ಎಂದು ತೋರುತ್ತದೆ. ಅವರು ಆಗಮಿಸಿದಾಗ ಅವರನ್ನು ಎದುರುಗೊಳ್ಳಲು ಹೋದ ಗುಂಪಿನವರೆಲ್ಲ ಅಡ್ಡಬೀಳುತ್ತಿರಲು ನಾನೊಬ್ಬನೆ ಹಾಗೆ ಮಾಡದಿದ್ದರೆ ನಾನು ಅಹಂಭಾವಕ್ಕೆ ಆರೋಪಿತನಾಗುತ್ತೇನೆ ಎಂದು ಮನಸ್ಸಿಲ್ಲದ ಮನಸ್ಸಿನಿಂದ ಹಾಗೆ ಮಾಡುತ್ತಿದ್ದೇನೆಂದು ನಿಸ್ಸಂಕೋಚವಾಗಿ ಹೇಳಬಯಸುತ್ತೇನೆ. ಆದರೆ ಸಿದ್ಧೇಶ್ವರಾನಂದರು ಎಂದೂ ನನಗೆ ಬಾಯಿಬಿಟ್ಟು ಆ ವಿಚಾರವಾಗಿ ಏನನ್ನೂ ಹೇಳಿದ್ದು ಜ್ಞಾಪಕವಿಲ್ಲ. ಅವರು ಮಾತ್ರ ಹಿರಿಯ ಸಂನ್ಯಾಸಿಗಳು ಆಶ್ರಮಕ್ಕೆ ಬಂದಾಗಲೆಲ್ಲ ಕಾಲುಮುಟ್ಟಿಯೆ ನಮಸ್ಕರಿಸುತ್ತಿದ್ದರು;  ಸಮವಯಸ್ಕರಾದರೆ ಆಲಿಂಗಿಸಿ ನಮಿಸುತ್ತಿದ್ದರು. ಅದು ಸಂನ್ಯಾಸಿಗಳ ಪದ್ಧತಿ ಎಂದು ಕ್ಷಮಿಸುತ್ತಿದ್ದೆ! ಆದರೆ ಒಮ್ಮೆ ಆಶ್ರಮಕ್ಕೆ ಪ್ರಸಿದ್ದ ವಿಜ್ಞಾನಿ ಸರ್.ಪಿ.ಸಿ.ರಾಯ್ ಅವರು ಆಗಮಿಸಿದ್ದರು. (ಅವರು ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದ ಭಾಷಣ ಮಾಡುವುದಕ್ಕಾಗಿ ಬಂದಿದ್ದರು. ಆಗ ಮಹಾರಾಜರೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸುತ್ತಿದರು. ಯಾರೆ ಆಗಲಿ ಮೈಸೂರು ಆಸ್ಥಾನದ ಸಮವಸ್ತ್ರಧಾರಿಗಳಾಗಿಯೆ ಮಹಾರಾಜರ ಮುಂದೆ ಬರಬೇಕಾಗಿದ್ದ ಕಾಲ. ಆದರೆ ಪಿ.ಸಿ.ರಾಯ್ ಮಾತ್ರ ಅದೊಂದನ್ನೂ ಮಾನ್ಯಮಾಡದೆ ತಮ್ಮ ದೈನಂದಿನ ಉಡುಪಿನಲ್ಲಿಯೆ ಬಂದು ಯಾವ ಆಡಂಬರವೂ ಇಲ್ಲದೆ ಕ್ಲಾಸರೂಮಿನಲ್ಲಿಯೊ ಅಥವಾ ಕಾಲೇಜಿನ ಸಂಘದಲ್ಲಿಯೋ ಮಾತಾಡುವಂತೆ ಭಾಷಣ ಮಾಡಿದ್ದರು. ನನಗಂತೂ ಅವರ ಸ್ವತಂತ್ರ ಧೀರ ನಿರಾಡಂಬರ ಅಕೃತಕ ನೈಜ ರೀತಿ ತುಂಬ ಮನಸ್ಸಿಗೆ ಹಿಡಿಸಿ ಅವರಲ್ಲಿ ಅಸಾಧಾರಣ ಪೂಜ್ಯಬುದ್ಧಿ ಹುಟ್ಟಿತ್ತು. ಅವರ ಉಡುಪಾದರೂ ಮೇಲುಮಟ್ಟದ್ದಾಗಿರುತ್ತಿರಲಿಲ್ಲ. ಕ್ಷೌರವನ್ನು ಮಾಡಿಕೊಂಡಿರುತ್ತಿರಲಿಲ್ಲ. ನೋಡುವುದಕ್ಕೆ ತಿರುಕನಿದ್ದರೂ ಇರಬಹುದೇನೊ ಎಂಬಂತಿರುತ್ತಿದ್ದರು. ಅದಕ್ಕೇ ಶ್ರೀಮತಿ ಸರೋಜಿನಿ ನಾಯ್ಡು ಅವರು ಅವರನ್ನು ಕುರಿತು “ಯಾರು ಬೇಕಾದರೂ ಅವರನ್ನು ತಿರುಕನೆಂದು ಭಾವಿಸಿ ಅವರತ್ತ ಮೂರು ಕಾಸನ್ನು ಎಸೆಯುವಂತಿದ್ದಾರೆ!” ಎಂದು ವರ್ಣಿಸಿದ್ದರು.) ವೃದ್ಧರೂ ಸುಪ್ರಸಿದ್ದರೂ ರಾಷ್ಟ್ರೀಯ ಮಹಾವ್ಯಕ್ತಿಗಳಲ್ಲಿ ಒಬ್ಬರೂ ಆಗಿದ್ದ ಅವರು ಆಶ್ರಮ ಪ್ರವೇಶಮಾಡುತ್ತಿದ್ದಂತೆ ಅವರನ್ನು ಎದುರುಗೊಂಡು ಸ್ವಾಗತಿಸಿದ ಸ್ವಾಮಿ ಸಿದ್ದೇಶ್ವರಾನಂದರು ಅವರ ಬೂಟ್ಸ್ ಹಾಕಿದ್ದ ಕಾಲುಮುಟ್ಟಿ  ಪ್ರಣಾಮ ಸಲ್ಲಿಸಲು ಮುಂದಾಗಿ ಬಾಗಿದ ಕೂಡಲೆ ಪಿ.ಸಿ.ರಾಯ್ ಅವರು ಬಂಗಾಳಿ ಭಾಷೆಯಲ್ಲಿ – (ಸ್ವಾಮಿ ಸಿದ್ಧೇಶ್ವರಾನಂದರಿಗೂ ಬಂಗಾಳಿ ಚೆನ್ನಾಗಿ ಬರುತ್ತಿತ್ತು.) ‘ಬೇಡ! ಬೇಡ’ ಎಂದು ಬೆಚ್ಚಿ ಹಿಂದಕ್ಕೆ ಸರಿದರೂ ಬಿಡದೆ ಸ್ವಾಮಿಜಿ ಏನನ್ನೋ ಬಂಗಾಳಿಯಲ್ಲಿ ಹೇಳುತ್ತಾ ಕಾಲುಮುಟ್ಟಿ  ನಮಸ್ಕರಿಸಿಯೆಬಿಟ್ಟರು! ರಾಯ್ ಅವರು ವೃದ್ದರೇನೋ ಹೌದು. ಆದರೆ ಸನ್ಯಾಸಿಯಲ್ಲ. ಸಂಸಾರಿಯಾಗದೆ ಆಜನ್ಮಬ್ರಹ್ಮಚಾರಿಯಾಗಿದ್ದರೂ ಲೌಕಿಕರು. ಲೌಕಿಕರಿಗೆ ಸಂನ್ಯಾಸಿ ಅವರು ನಮಸ್ಕರಿಸುವುದಕ್ಕೆ ಮೊದಲೆ ಕೈಮುಗಿದರೆ ಅಪಶಕುನವಾಗುತ್ತದೆ ಎಂಬ ಭಾವನೆಯಿದೆ. ಹಾಗಿದ್ದರೂ ಸಂನ್ಯಾಸಿಯಾಗಿದ್ದ ಸ್ವಾಮಿಜಿ ಲೌಕಿಕರಾಗಿದ್ದ ರಾಯ್ ಅವರಿಗೆ ಕಾಲುಮುಟ್ಟಿಯೆ ನಮಸ್ಕರಿಸಿದ್ದರು! ಅದೆನ್ನೆಲ್ಲ ದೂರದಲ್ಲಿ ನಿಂತು ನೋಡುತ್ತಿದ್ದ ನನಗೆ, ಆಗ, ಸ್ವಾಮಿಜಿ ಮಾಡಿದ್ದು ಮನಸ್ಸಿಗೆ ಬರಲಿಲ್ಲ. ನಾವೆಲ್ಲ ಅಷ್ಟೊಂದಾಗಿ ಪ್ರೀತಿಸಿ ಗೌರವಿಸುತ್ತಿದ್ದ ಸ್ವಾಮಿಜಿ ಶ್ರೀರಾಮಕೃಷ್ಣ ಸಂಘಕ್ಕೆ ಸೇರದ ಮತ್ತು ಸಂನ್ಯಾಸಿಯೂ ಅಲ್ಲದೆ ಪ್ರೊಫೆಸರ್ ಮಾತ್ರದವರೊಬ್ಬರಿಗೆ ಕಾಲುಮುಟ್ಟಿದುದು ಹೀನೈಸಿಕೊಂಡಂತೆ ತೋರಿತ್ತು. ಆದರೆ ಹಿರಿದಾದುದಕ್ಕೆ ಮಣಿಯುವುದು, ಯಾವ ವಿಧವಾದ ಬಲಾತ್ಕಾರವೂ ಇಲ್ಲದೆ ಸ್ವೇಚ್ಛೆಯಿಂದ ನಮಿಸುವುದು ಕೀಳೈಸಿಕೊಂಡಂತಲ್ಲ ಮೇಲೈಸಿಕೊಂಡಂತೆ ಎಂಬ ವಿಭೂತಿಪೂಜಾ ತತ್ವವನ್ನು ಸ್ವಾಮಿಜಿ, ಉಪದೇಶದಿಂದಲ್ಲ ತಮ್ಮ ನಡೆಯ ನಿದರ್ಶನದಿಂದ, ನನ್ನ ಅಂತಃ ಪ್ರಜ್ಞೆಗೆ ಬೋಧವಾಗುವಂತೆ ಮಾಡಿದ್ದರು. ಅಲ್ಲದೆ ನನಗೆ ಆಗ ಪ್ರಫುಲ್ಲಚಂದ್ರ ರಾಯ್ ಅವರು ಒಬ್ಬ ಬರಿಯ ಸುಪ್ರಸಿದ್ದ ವೈಜ್ಞಾನಿಕ ಪ್ರಾಧ್ಯಾಪಕರು ಮಾತ್ರ ಆಗಿದ್ದರೇ ಹೊರತು. ಸ್ವಾಮಿಜಿಗೆ ತಿಳಿದಿದ್ದಂತೆ, ಆಜನ್ಮ ಬ್ರಹ್ಮಚಾರಿಯಾದ ಆಧ್ಯಾತ್ಮಿಕ ಸಾಧಕ ತಪಸ್ವಿ ಎಂಬುದೂ ಗೊತ್ತಿರಲಿಲ್ಲ.] ಹೀಗೆ ಸ್ವಾಮಿಜಿ ತಮ್ಮ ವರ್ತನೆಯಿಂದಲೆ ನನ್ನ ಚೇತನೆಯಲ್ಲಿ ಪರಿವರ್ತನೆಯಾಗುವಂತೆ ಮಾಡುತ್ತಿದ್ದರು. ಅವರು ಬಾಯಿಬಿಟ್ಟು ಭರ್ತ್ಸನೆಮಾಡಿ ನನಗೆ ಬುದ್ಧಿ ಹೇಳಿದುದು ಒಂದೇ ಒಂದು ಸಲ: ಅದೂ ಸ್ವಾರಸ್ಯವಲ್ಲದ ಸನ್ನಿವೇಶದಲ್ಲಿ! (ಕೃಷ್ಣಮೂರ್ತಿಪುರದಲ್ಲಿದ್ದ ಬಾಡಿಗೆ ಮನೆಯ ಆಶ್ರಮದಲ್ಲಿದ್ದ ಕಕ್ಕಸ್ಸಿನ ಮೇಲೆ ಹಾಕಿದ್ದ ಚಪ್ಪಡಿಗೆ ಒಂದು ಎಲ್ಲೆಲ್ಲಿಯೂ ಇದ್ದ ಕಕ್ಕಸ್ಸುಗಳೆ ಹಾಗಿದ್ದುವು. ಕಕ್ಕಸ್ಸಿನ ಮೇಲೆ ಹಾಕಿದ್ದ ಚಪ್ಪಡಿಗೆ ಒಂದು ತೂತಿದ್ದು ಅದರ ಮುಖಾಂತರ ನಮ್ಮ ವಿಸರ್ಜನೆ ಕೆಳಗೆ ಇಟ್ಟಿರುತ್ತಿದ್ದ ಒಂದು ಬುಟ್ಟಿಗೊ ಡಬ್ಬಿಗೊ ಬೀಳುತ್ತಿತ್ತು. ಜಲಗಾರನು ಬಂದು ಆ ಬುಟ್ಟಿಯನ್ನು ಹೊತ್ತುಕೊಂಡು ಹೋಗುತ್ತಿದ್ದನು. ನಾವು ಮೇಲೆ ಕುಳಿತೇ ಗುದಪ್ರಕ್ಷಾಳನ ಕಾರ್ಯ ಮಾಡಿದಾಗ ನೀರೆಲ್ಲ ಬುಟ್ಟಿಗೇ ಬೀಳುತ್ತಿತ್ತು, ಜಲಗಾರನು ಅದನ್ನು ಹೊತ್ತಾಗ ಅವನ ತಲೆ ಮೈ ಬುಟ್ಟಿಯೆಲ್ಲ ಹೊಲಸು ನೀರಿನಿಂದ ಒದ್ದೆಯಾಗುತ್ತಿತ್ತು. ಅದಕ್ಕಾಗಿ ಸ್ವಾಮಿಜಿ ಯಾವಾಗಲೂ ವಿಸರ್ಜನೆಯ ತರುವಾಯ ಕೆಳಗಿಳಿದು ನೆಲದ ಮೇಲೆಯೆ ಕುಳಿತು ಪ್ರಕ್ಷಾಳನ ಕಾರ್ಯ ಮಾಡುತ್ತಿದ್ದರು. ಇತರ ಸಾಧುಗಳೂ ಅವರಂತೆಯೆ ಅನುಸರಿಸುತ್ತಿದ್ದರು. ನಾನು ಮಾತ್ರ ಉದಾಸೀನತೆಯಿಂದ ಮೇಲೆ ಕುಳಿತೇ ತೊಳೆದುಕೊಂಡು ನೀರೆಲ್ಲ ಡಬ್ಬಿಗೇ ಬೀಳುವಂತೆ ಮಾಡುತ್ತಿದ್ದೆ. ಸ್ವಾಮಿಜಿ ಒಂದೆರಡು ಸಾರಿ ಸೂಚಕವಾಗಿ ಹೇಳಿನೋಡಿದರು. ಸೂಚನೆ ಸಾಲಲಿಲ್ಲ. ಕೊನೆಗೊಂದು ಸಲ ವಾಚಕವಾಗಿಯೆ ಹೇಳಬೇಕಾಯಿತು, ನನ್ನ ಶಿಷ್ಟಪ್ರಜ್ಞೆ ಎಚ್ಚರಬೇಕಾದರೆ! ಅವರು ಮೂದಲಿಸುವಂತೆ “ನೀವು ‘ಜಲಗಾರ’ ನಾಟಕ ಬೇರೆ ಬರೆದು, ಶಿವನನ್ನೆ ‘ಜಗದ ಜಲಗಾರ’ ಎಂದು ಕರೆದು, ಜಲಗಾರ ಕರ್ಮಕ್ಕೆ ಯೋಗ್ಯವಾದ ಔನ್ನತ್ಯವನ್ನು ಆರೋಪಿಸಿದ್ದೀರಿ. ಆದರೆ ವಾಸ್ತವ ಜೀವನದಲ್ಲಿ ಆ ಜಲಗಾರನನ್ನು ನೀವು ಯಾವ ರೀತಿ ಕಾಣುತ್ತಿದ್ದೀರಿ? ಮೇಲೆ ಕುಳಿತು ತೊಳೆದುಕೊಳ್ಳಬೇಡಿ ಎಂದು ಎಲ್ಲರಿಗೂ ಹೇಳಿದ್ದೇನೆ. ನೀವು ಮಾತ್ರ ಹಾಗೆ ಮಾಡುತ್ತಿಲ್ಲ. ಪಾಪ! ಅದನ್ನು ಹೊರುವ ಜಲಗಾರ ಎಂತಹ ಅಸಹ್ಯವನ್ನು ಸಹಿಸಬೇಕಾಗುತ್ತದೆ? ನಿಮ್ಮ ಸಹಾನುಭೂತಿ ಗೌರವಗಳೆಲ್ಲ ಬರಿಯ ಕಾವ್ಯವಸ್ತುವಾಗುತ್ತವಲ್ಲಾ? ಆ ಬುದ್ಧಿ ಲೋಕಕ್ಕೂ ಇಳಿಯಲಿ!” ಎಂದೆಲ್ಲ ತುಂಬ ಸ್ನೇಹವಾಣಿಯಿಂದಲೆ ಛಡಿ ಏಟು ಬಿಗಿದಿದ್ದರು.)

ನಾನು, ಮಾನಪ್ಪ, ಸ್ವಾಮಿಜಿ ಎಲ್ಲರೂ ಹಾಸಗೆಗಳನ್ನು ಹಾಸಿ ಮಲಗಿಕೊಂಡೆವು. ನನಗೆ ಗಾಢನಿದ್ರೆ ಹತ್ತಿತು. ಬೆಳಗಾದಾಗ ಎಚ್ಚರವಾಯಿತು. ನಾವು ಮದರಾಸು ಸ್ಟೇಷನ್ನಿಗೆ ಅತಿ ಸಮಿಪದಲ್ಲಿದ್ದೆವು. ಹೊರಗೆ ನೋಡಿದೆನು. ಅಲ್ಲಲ್ಲಿ ಹಸುರಾದ ಮರಗಳ ಗುಂಪು ಕಾಣಿಸಿತು. ನಾನು ಸ್ವಾಮಿಜಿಗೆ “ದೇವರ ದಯೆಯಿಂದ ಇಲ್ಲಿಯೂ ಪ್ರಕೃತಿದೇವತೆ ಇದ್ದಾಳೆ.” ಎಂದೆನು. ಅವರು “ಅದೇಕೆ?” ಎಂದರು. “ಅಯ್ಯೋ ನೀವು ಹೈದರಾಬಾದು ಲೈನಿನಲ್ಲಿ ಹೋಗಬೇಕು. ಎಲ್ಲಾ ಸ್ಮಶಾನ ಮತ್ತು ತಲೆಬುರುಡೆಗಳು” ಎಂದೆನು. ದೂರದಲ್ಲಿ ಮದರಾಸಿನ ಗುಡಿಗೋಪುರಗಳು ಕಾಣಿಸಿದುವು.

೪-೧೦-೧೯೨೯ನೆಯ ಶುಕ್ರವಾರ:

ಮದರಾಸು ನನಗೆ ಯಾವ ವಿಧದಲ್ಲಿಯು ಹೊಸದಾಗಿ ಕಾಣಲಿಲ್ಲ. ಬಂದಿಳಿದ ಕೂಡಲೆ ಸ್ವಾಮಿಜಿಯವರಿಗೆ ಹೇಳಿದೆನು: “ನನಗೆಲ್ಲವೂ ಹಳೆಯದಾಗಿ ತೋರುತಿವೆ” ಎಂದು. ಅವರು ದಾರಿಯಲ್ಲಿ ‘ಅದು ಕೋರ್ಟು’ ಇದು ಅದು ಎಂದು ತೋರಿಸಿದರು. ನನಗಂತೂ ಯಾವುದೂ ಮನಸ್ಸಿಗೆ ಹಿಡಿಯಲಿಲ್ಲ. ಸರಿ, ಅಲ್ಲಿಂದ ಮೈಲಾಪುರದಲ್ಲಿರುವ ಶ್ರೀರಾಮಕೃಷ್ಣಾಶ್ರಮಕ್ಕೆ ಬಂದೆವು. ಮೊದಲು ಗರ್ಭಗುಡಿಗೆ ಹೋಗಿ ಗುರುದೇವನಿಗೆ ನಮಸ್ಕಾರ ಮಾಡಿದೆವು. ಮಠವು ಶುಚಿಯಾಗಿಯೂ ನಿಃಶಬ್ದವಾಗಿಯೂ ಪಟ್ಟಣದಲ್ಲಿದ್ದರೂ ಕೂಡ ಶಾಂತಿದಾಯಕವಾಗಿಯೂ ಇತ್ತು. ಪುರುಷೋತ್ತಮ ಮಹಾರಾಜ್, ಈಶ್ವರಾನಂದ ಸ್ವಾಮಿಗಳು ಮೊದಲಾದ ಪರಿಚಿತ ಸ್ವಾಮಿಗಳ ದರ್ಶನವಾದ ಮೇಲೆ ಅಸಂಗಾನಂದ ಸ್ವಾಮಿಗಳು ಗಣೇಶ ಮಹಾರಾಜ್ ಇಂದು ಮಹಾರಾಜ್ ಇವರೆಲ್ಲರ ಪರಿಚಯವಾಯಿತು. ಮುಖ ತೊಳೆದು ಕಾಫಿ ಉಪ್ಪಿಟ್ಟು ಪೂರೈಸಿದೆವು….

ಅಸಗಾನಂದ ಸ್ವಾಮಿಗಳ ಕೋಣೆಯಲ್ಲಿ ಯೋಗಾಸನಗಳನ್ನು ಪ್ರದರ್ಶನ ಮಾಡಿದೆನು. ಎಲ್ಲರೂ ನೋಡಿ ಸಂತೋಷಪಟ್ಟರು. ಆಶ್ರಮವೆಂತೂ ನನಗೆ ಹೊಸದಾಗಿ ಕಾಣಲಿಲ್ಲ. ಅದೇ ಪ್ರೇಮ, ಅದೇ ವಾತ್ಸಲ್ಯ, ಅದೇ ಸ್ನೇಹ, ಅದೇ ಚಚ್ಚಡಿ, ಅದೇ ಗುರುಮಹಾರಾಜ್, ಸ್ವಾಮಿಜಿ, ಮಹಾಮಾತೆ!….

ಊಟ ಪೂರೈಸಿದ ಮೇಲೆ ಉಪ್ಪರಿಗೆಗೆ ಮಲಗಲು ಹೋದೆವು. ಅಲ್ಲಿಗೆ ಸಿದ್ಧೇಶ್ವರಾನಂದ ಸ್ವಾಮಿಗಳ ತಮ್ಮಂದಿರು ಬಂದರು. ಇಂದು ಮಹಾರಾಜ್ ಬಂದರು. ಇಂದು ಮಹಾರಾಜ್ ಎಂದರೆ ಆಕಾರದಲ್ಲಿಯೂ ಆತ್ಮದಲ್ಲಿಯೂ ಒಲ್ಮೆಯ ಮುದ್ದೆ. ಸುಂದರ ಭದ್ರಾಕಾರರಾಗಿರುವರು, ಅವರ ನುಡಿಗಳನ್ನೇಲ್ಲಾ ಕೋಮಲತೆ ಉಕ್ಕುವುದು. ಅವರು ನಜರೂಲ್ ಇಸ್ಲಾಮ್ ಎಂಬ ಮಹಮ್ಮದೀಯ ಕವಿ ಬಂಗಾಳಿ ಭಾಷೆಯಲ್ಲಿ ಬರೆದ “ವಿದ್ರೋಹಿ” ಎಂಬ ಕವಿತೆಯನ್ನು ಒದಿದರು. ತುಂಬಾ ಓಜೋಯುಕ್ತವಾದ ಕವಿತೆಯದು. ಅದರಲ್ಲಿಯೂ ತುರುಕನು ಆ ರೀತಿ ಹಿಂದೂಗಳ ಪುರಾಣವನ್ನು ಕವಿತೆಯಲ್ಲಿ ಉಪಯೋಗಿಸಿದುದನ್ನು ನಾನು ಕಂಡದ್ದು ಅದೇ ಮೊದಲು. ಆ ಪದ್ಯವನ್ನು ಬ್ರಿಟಿಷ್ ಸರಕಾರದವರು ‘ಪ್ರೊಸ್‌ಕ್ರೈಬ್’ ಮಾಡಿದ್ದಾರಂತೆ. ತರತರದ ಭಾವಗಳಿಂದ ತುಂಬಿರುವ ಆ ಕವಿತೆಯನ್ನು ಅಭಿನಯಿಸಿದರೆ ನಿಜವಾಗಿಯೂ ಶಕ್ತಿಯುಂಟಾಗುವುದರಲ್ಲಿ ಸಂದೇಹವಿಲ್ಲ.

ಅದಾದ ತರುವಾಯ ಸ್ವಾಮಿಜಿಯವರು ನನ್ನ ‘ಪಾಂಚಜನ್ಯ’ ಎಂಬ ಕವಿತೆಯನ್ನು ನೆನಪಿದ್ದರೆ ಹೇಳಲು ಹೇಳಿದರು. ನಾನೂ ಹೇಳಿದೆ. ಅರ್ಥವನ್ನೂ ಮಾಡಿದೆ. ಎಲ್ಲರೂ ಆನಂದಪಟ್ಟರು. ತರುವಾಯ ನನ್ನ “ಯಮನ ಸೋಲು” ನಾಟಕದಿಂದ ನೆನಪಿನಲ್ಲಿದ್ದ ಒಂದೆರಡು (ಸ್ವಗತ) ಭಾಷಣಗಳನ್ನೂ ಹೇಳಿ, ಕನ್ನಡ ವಾಙ್ಮಯದಲ್ಲಿ ಈಗ ಬಂದಿರುವ ನವಯುಗದ ವಿಚಾರವಾಗಿ ಅವರಿಗೆ ತಿಳಿಸಿದೆ. ನನ್ನ ‘ಜಲಗಾರ’ ನಾಟಕದ ತಾತ್ಪರ್ಯವನ್ನು ಹೇಳಿ, ತರುವಾಯ ‘ಗಾನದರ್ಶನ’ ಎಂಬ ನನ್ನ ಕವಿತೆಯನ್ನು ಹಾಡಿದೆ. ಆಮೇಲೆ ಈಗಿನ ಮತ್ತು ಹಿಂದಿನ ನಾಟಕದ ಆದರ್ಶಗಳ ವಿಚಾರವಾಗಿ ಎಷ್ಟೋ ತರ್ಕ ವಿತರ್ಕಗಳು ನಡೆದುವು. ಆಮೇಲೆ ಸ್ವಲ್ಪ ನಿದ್ದೆಮಾಡಿ, ಸಮುದ್ರ ಭಗವಾನ್ ಸಂದರ್ಶನಕ್ಕೆ ಹೋಗಬೇಕೆಂದು ನಿರ್ಧರಿಸಿದೆವು.

ನಾನು ಹುಟ್ಟಿದಂದಿನಿಂದಲೂ ಅಂದಿನವರೆಗೆ ಕಡಲನ್ನು ಕಂಡವನೆ ಅಲ್ಲ. ಆದ್ದರಿಂದಲೆ ‘ಕಾಣದ ಕಡಲಿಗೆ’ ಎಂಬ ಕವನ ಬರದಿದ್ದೆ. ಇಂದು ಕಡಲನ್ನು ಕಾನುವ ಸೌಭಾಗ್ಯ ಒದಗಿದ್ದಕ್ಕಾಗಿ ಮನದಲ್ಲಿಯೆ ಭಗವಂತನಿಗೆ ನಮಸ್ಕಾರ ಮಾಡಿದೆ.

ಸ್ವಲ್ಪ ಹೊತ್ತು ಮಲಗಿ ಎದ್ದು ತರುವಾಯ ಸಿದ್ದೇಶ್ವರಾನಂದ, ಇಂದು ಮಹಾರಾಜ್, ಮಾನಪ್ಪ, ಪುರುಷೋತ್ತಮ ಮಹಾರಾಜ್, ನಾನು ಇಷ್ಟುಜನ ಕಡಲಿಗೆ ಹೊರಟೆವು. ದಾರಿಯಲ್ಲಿ ಕೊಳಕು ಬೀದಿಗಳಲ್ಲಿ ದಾಟಿದೆವು. ಮೈಸೂರಿನಿಂದ ಬಂದ ನಮಗಂತೂ ‘ಹಾಳು ಮದರಾಸೇ!’ ಎನ್ನುವ ಹಾಗಾಯಿತು. ಕಡೆಗೆ ಇಂದು ಮಹಾರಾಜ್ ಅವರು ‘ನೋಡಲ್ಲಿ! ನೋಡಲ್ಲಿ!’ ಎಂದರು: ‘ಅದೇ ಕಡಲು!’

ಸಮುದ್ರ ಭಗವಾನ್ ಸಂದರ್ಶನವೂ ಪ್ರಥಮತಃ ಆಯಿತು. ನಾನಂತೂ ಪರಮಾತ್ಮನ ಬಳಿಗೆ ಭಕ್ತನು ಹೋಗುವಂತೆ, ಗುರುವಿನ ಬಳಿಗೆ ಶಿಷ್ಯನು ಹೋಗುವಂತೆ, ತಾಯಿಯ ಬಳಿಗೆ ಮಗುವು ಹೋಗುವಂತೆ, ಸೌಂದರ್ಯದೆಡೆಗೆ ಹೋಗುವ ಕಬ್ಬಿಗನಂತೆ ಭಗವಾನ್ ಸಮುದ್ರನನ್ನು ನೋಡಲು ಹೋಗಿದ್ದೆ. ಏನು ನೋಡುವುದು? ಏನು ಮಾತಾಡುವುದು? ನೋಡಿದೆ, ನೋಡಿದೆ. ಕಣ್ಣು ಹೋಗುವಲ್ಲಿ ಪರಿಯಂತ ನೋಡಿದೆನು. ದಿಗಂತದವರೆಗೂ ಹಬ್ಬಿ ಮಿರಿರ್ದ ಅದನ್ನು ಕವಿತೆಯಲ್ಲಿ ಯಾವ ರೀತಿ ವರ್ಣಿಸುವೆನೋ ನಾ ಬೇರೆ ಕಾಣೆ!…. ಸಮುದ್ರತೀರದಲ್ಲಿಯೆ ನಡೆದು ನಡೆದು ‘ಮತ್ಸ್ಯ ಪ್ರದರ್ಶನ ಶಾಲೆ’ಗೆ ಹೋದೆವು. ತೀರದ ಬಳಿಯ ಬೀದಿಯು ರಮಣೀಯವಾಗಿತ್ತು. ಆದರೆ ಮೈಸೂರಿನ ರಸ್ತೆಗಳನ್ನು ಮಿರಲಿಲ್ಲ. ‘ಮತ್ಸ್ಯ ಪ್ರದರ್ಶನ ಶಾಲೆ’ಯಲ್ಲಿ ಬಣ್ಣ ಬಣ್ಣದ ಮೀನುಗಳನ್ನು ನೋಡಿ “ಇದು ನೀರಿನ ಲೋಕದ ಬಣ್ಣದ ಚಿಟ್ಟೆ. ಇದು ನೀರಿನ ಲೋಕದ ಸೋಮಾರಿ, ಇದು ನೀರಿನ ರಾಜ್ಯದಲ್ಲಿ ಹುಲಿ, ಇದು ಬ್ರಿಟಿಷ್ ದಬ್ಬಾಳಿಕೆಯ ಪ್ರತಿನಿಧಿ” ಎಂದು ಮೊದಲಾಗಿ ವರ್ಣಿಸುತ್ತಾ ಹೋದೆವು. ಅಲ್ಲಿಂದ ಪುನಃ ಸಮುದ್ರತೀರಕ್ಕೆ ಹೋಗಿ ಮರುಳುಗುಡ್ಡೆಯ ಮೇಲೆ ಕುಳಿತೆವು. ನಾನು ರೈಲಿನಲ್ಲಿ (ಮೈಸೂರಿನಿಂದ ಬರುವಾಗ) ರಚಿಸಿದ್ದ ಹಾಡನ್ನು ಹಾಡಿದೆ:

ಬಾ ಬಾ ದೊರೆ ಬಾಗಿಲ ತೆರೆ:
ಸುಮ್ಮನಿರುವರೇ  ||ಪ||
ಎದೆಯ ಮೊರೆ ಕರೆಯುತಿರೆ
ಮರೆವರೇ ತೊರೆವರೇ  ||ಅ.ಪ||

ಎಂದು ಮೊದಲಾಗಿ ಪ್ರಾರಂಭವಾಗುತ್ತದೆ. ಅದು ‘ಕಲಾಸುಂದರಿ’ ಕವನಸಂಗ್ರಹದಲ್ಲಿ ಅಚ್ಚಾಗಿದೆ.

ಅಲ್ಲಿಂದ ಹೊರಟು ಪಾರ್ಥಸಾರಥಿ ದೇವಾಲಯಕ್ಕೆ ಬಂದೆವು. ಆ ಜನಗಳ  ಗೊಂದಳದಲ್ಲಿ ನನಗೆ ಸಾಕಾಗಿ ಹೋಯ್ತು. ನಾನು ಪರಮಾತ್ಮನನ್ನು ಹೊರಗೆ ಸೊಬಗಿನಲ್ಲಿ ತಿಳಿಗಾಳಿಯಲ್ಲಿ ಶುಚಿಯಲ್ಲಿ ಕಾಣಬಲ್ಲೆನೆ ಹೊರತು ಆ ಸೆಕೆಯಲ್ಲಿ ಕತ್ತಲಲ್ಲಿ ಹೋರಾಟದಲ್ಲಿ (ನೂಕು ನುಗ್ಗಲಿನಲ್ಲಿ) ಕಾಣಲಾರೆನು. ಅಲ್ಲಿಮದ ಕಪಾಲೀಶ್ವರ ಗುಡಿಗೆ ಬಂದೆವು. ಅದನ್ನೂ ಮುಗಿಸಿದೆವು. ಅಲ್ಲಿಂದ ಆಶ್ರಮಕ್ಕೆ ಹೋದೆವು….

ರಾತ್ರಿ ಮಲಗುವಾಗ ಭಗವಾನ್ ಸಮುದ್ರದ ನಿತ್ಯ ನಿರಂತರ ಸನಾತನ ಗಂಭೀರವಾನಿಯ ಜೋಗುಳವು ನನಗೆ ಬೇಗನೆ ನಿದ್ದೆ ಬರುವಂತೆ ಮಾಡಿತು. ಭಗವಾನ್ ಶ್ರೀ ರಾಮಕೃಷ್ಣರ ಸ್ಮರಣೆಯಲ್ಲಿ ಕಣ್ಣುಮುಚ್ಚಿದೆನು.

೫-೧೦-೧೯೨೯ನೆಯ ಶನಿವಾರ:

ಐದು ಗಂಟೆಗೆ ಎದ್ದು ನಾನೂ ಪುರುಷೋತ್ತಮರೂ ಸಮುದ್ರದ ಮೇಲಾಗುವ ಸೂರ್ಯೋದಯವನ್ನು ನೋಡಲು ಹೋದೆವು. ದಾರಿಯಲ್ಲಿ ಕೊಳಕು ಬೀದಿಗಳನ್ನು ದಾಟುವಾಗ ನಾನು “ಮದರಾಸಿನಲ್ಲಿ ಜನಗಳೂ ಮನೆಗಳೂ ಬೀದಿಗಳೂ ಎಲ್ಲರೂ ಕಲಾಹೀನರು. ಲೆಕ್ಕಾಚಾರವೊಂದೇ ಇಲ್ಲಿ ಸರಿಯಾಗಿ ನಡೆಯುವುದು.” ಎಂದೆನು.

ಕಡಲ ತೀರಕ್ಕೆ ಹೋದೆವು. ಇಲ್ಲಿ ಮುಗಿಲು ಕವಿದುಕೊಂಡು ಸೂರ್ಯೋದಯ ಕಾಣಿಸುವುದಿಲ್ಲವೋ ಎಂದು ನಮಗಿದ್ದ ಹೆದರಿಕೆ ತೊಲಗಿತು. ಗಗನ ನಿರ್ಮಲವಾಗಿತ್ತು. ಅಪಾರವಾದ ಅನಂತವಾದ ಉದಧಿದಿಗಂತವಿಶ್ರಾಂತವಾಗಿಯೂ ದಿಗಂತಾತೀತವಾಗಿಯೂ ಹಬ್ಬಿತ್ತು. ಅದರ ತರಂಗಲೀಲೆಯೋ  ಅತಿ ಮನೋರಮ್ಯವಾಗಿತ್ತು. ಕಡಲ ಅಲೆಗಳೆಂಬ ತನ್ನ ಕೈಬೊಗಸೆಗಳಲ್ಲಿ ಗಣನೆಯಿಲ್ಲದ ಮುತ್ತುಗಳ ಮೊತ್ತವನ್ನು ಭೂದೇವಿಗೆ ಸಮರ್ಪಿಸಲೋಸುಗ ಅವುಗಳನ್ನು ತೆಗೆತೆಗೆದು ಮತ್ತೆಮತ್ತೆ ಎರಚುವಳೆಂಬಂತೆ ಬಿಳಿಯ ತುಂತುರು ಹನಿಗಳು ಕಂಗೊಳಿಸುತ್ತಿದ್ದುವು.

ನಾನು ಗುರುವಿನ ಬಳಿಗೆ ಮಂತ್ರೋಪದೇಶ ಪಡೆಯೆಹೋಗುತ್ತಿದ್ದೆ. ಅದರ ಕಡಲೇ ಮಹಾಮಂತ್ರವನ್ನು ಮೂಕವಾಗಿ ನನ್ನ ಎದೆಯಲ್ಲಿ ಉಸುರುವಂತಿತ್ತು. ಪರಮಾತ್ಮನ ಅನಂತತೆಯನ್ನು ಮಹಿಮೆಯನ್ನು ಸೂಚಿಸುವ ವಸ್ತುಗಳೆಂದರೆ ಸಾಗರ, ಗಗನ, ಮಹಾಪರ್ವತಶ್ರೇಣಿ, ಭೂಮಿ, ಸೂರ್ಯ, ದೇಶ, ಕಾಲ ಇವುಗಳು. ನಾನು ತೀರದಲ್ಲಿ ನಿಂತಾಗ ಆ ಸ್ಥಳ ಮಹಾ ಪರಮಪುರುಷನ ಮಹಾಪ್ರತೀಕವೆಂಬಂತೆ ಭಾಸವಾಯಿತು. ಒಂದು ಕಡೆ ಶ್ರೀರಾಮನ ಕಾಲದ ವಿಸ್ತಾರವಾದ ಪುರಾತನವಾದರೂ ಯೌವ್ವನದಲ್ಲಿರುವ ಕಡಲು; ಒಂದು ಕಡೆ ಸನಾತನ ವ್ಯೋಮವು ಕಡಲನ್ನು ದಿಗಂತದಲ್ಲಿ ಚುಂಬಿಸುವ ಪ್ರೇಮಾಟ್ಟಹಾಸ; ಒಂದು ಕಡೆ ದೊಡ್ಡವಳಾದ ಭೂಮಿದೇವಿ ಸಮುದ್ರವರಾಜನನ್ನು ಅಪ್ಪುವ ಗಾಂಭೀರ್ಯ. ಅಲ್ಲಿಯೆ ೯.೩ ಕೋಟಿ ಮೈಲಿಗಳಿಂದ ತನ್ನ ಕಿರಣಗಳನ್ನು ಬೀರುತ್ತ ಉದಯಿಸಿ ಬರುವ ಸೂರ್ಯದೇವ. ಎಲ್ಲಕ್ಕೂ ಕಡೆಯದಾಗಿ ಆದರೂ ಎಲ್ಲಕ್ಕೂ ಹಿರಿದಾಗಿ ಸಣ್ಣವನಾದರೂ ತನ್ನ ಅಚ್ಯುತತ್ವದ ಹೆಮ್ಮೆಯಿಂದ ಕೆಚ್ಚೆದೆಯಾಗಿ ನಿಂತುಕೊಂಡು. ಸರ್ವವಿಶ್ವ ಸೌಂದರ್ಯವನ್ನು ದೃಷ್ಟಿಸುವ ಮನುಷ್ಯ! ಸೂರ್ಯನು ಮೇಲೇರಿದನು. ಅಲೆಗಳು ಹೊಳೆದುವು. ‘ಸಲಿಲತೆವೆತ್ತಿಹ ನೀಲಾಗಸವಿದು.’  ’ನೀರಿನ ರೂಪದ ದೇವನು ಇದು.’ ನಾನೂ ನೋಡಿದೆನು, ಹಾಡಿದೆನು, ನಿಂತು, ಕೂತು, ಕೈಮುಗಿದು. ಕಡೆಗೆ ಇಬ್ಬರೂ ಹೊತ್ತಾಗುವುದೆಂದು ಮನಸ್ಸಿಲ್ಲದ ಮನಸ್ಸಿನಿಂದ ಹೊರಟುಬಂದೆವು.

ಅಲ್ಲಿಂದ ನಾನೂ ಸ್ವಾಮಿಜಿ ಮಾನಪ್ಪ ಮೂವರೂ ಅಡೆಯಾರಕ್ಕೆ ಹೊರಟೆವು. ಥಿಯಾಸೊಫಿ ಎಂದರೆ ನನಗೆ ಅದರಲ್ಲಿ ಅತಿಶಯವಾದ ಗೌರವವೇನೂ ಇಲ್ಲ. ಆದರೂ ಅಡೆಯಾರದ ಸೌಂದರ್ಯವನ್ನು ನೋಡಲು ಹೋದೆವು. ಅಡೆಯಾರದ ಸೇತುವೆಯಲ್ಲಿ ನಿಂತು ನೋಡುವುದೊಂದು ಸೌಭಾಗ್ಯವೆ ಸರಿ. ದೂರದಲ್ಲಿ ನದಿ ಕಡಲನ್ನು ಸೇರುವ ದೃಶ್ಯ. ಇತ್ತಕಡೆ ಹಸುರಾದ ಕಿರುಬೆಟ್ಟಗಳ ಸಾಲು. ಒಂದು ಕಡೆ ಸುಂದರವಾದ ಅಡೆಯಾರದ ನಂದನ. ನಾವು ಒಳಗೆ ಹೋಗಿ ಅವರ ಲೈಬ್ರರಿಯನ್ನು ನೋಡಿದೆವು. ಅಲ್ಲಿದ್ದ ಕೆಲವು ‘ರಹಸ್ಯಚಿಹ್ನೆ’ಗಳನ್ನು ನೋಡಿ ಮನದಲ್ಲಿಯೆ ನಕ್ಕೆ. ಪುಸ್ತಕ ಭಂಡಾರವೇನೊ ಅತ್ಯಂತ ಬೆಲೆಯುಳ್ಳದ್ದು. ಆದರೆ ನನಗೆ ಷೇಕ್ಸಪಿಯರ್ ಕವಿಯ “There are powers of darkness who sometimes show us the light of truth to win us again  into greater darkness” ಎಂಬರ್ಥದ ವಚನದ ನೆನಪಾಯಿತು. ಅಲ್ಲಿ ಒಬ್ಬಿಬ್ಬರನ್ನು ಕಂಡು ಮಾತಾಡಿಸಿದೆವು. ಅತಿ ವಿನಯದಿಂದಲೂ ಗೌರವದಿಂದಲೂ ನಮ್ಮೊಡನೆ ವರ್ತಿಸಿದರು. ಅಲ್ಲಿದ್ದ ಶುಚಿಯನ್ನು ನೋಡಿ ನನಗೆ ಪರಮಾನಂದವಾಯಿತು. ಲೈಬ್ರರಿಯಿಂದ ಅಡೆಯಾರ ಹೊಳೆಯ ನೋಟ ರಮಣೀಯವಾದುದು. ಎದುರಿಗಿರುವ ಯೂರೋಪಿಯನ್ನರ Boating Club (ಬೋಟಿಂಗ್ ಕ್ಲಬ್) ಮೊದಲಾದ ಸೌಧಗಳೂ, ಅಲ್ಲಲ್ಲಿ ದೋಣಿಗಳಲ್ಲಿ ಮೀನು ಹಿಡಿಯುತ್ತಿದ್ದ ಬೆಸ್ತರೂ, ನೀರಿನ ನಡುನಡುವೆ ತಲೆಯೆತ್ತಿಕೊಂಡಿದ್ದ ಹಸುರು ನೆಲವೂ, ಅಲ್ಲಲ್ಲಿ ತೇಲುತ್ತಿದ್ದ ಹಾರುತ್ತಿದ್ದ ಜಲಪಕ್ಷಿಗಳೂ ಆಹ್ಲಾದಕರವಾಗಿದ್ದುವು. ಅಲ್ಲಿಂದ ಹೊರಟು ಅಡೆಯಾರಿನ ಮುದ್ರಣಾಲಯವನ್ನು ನೋಡಿದೆವು. ಎಲ್ಲೆಲ್ಲಿಯೂ ಇದ್ದ ಸುವ್ಯವಸ್ಥೆ ನನ್ನ ದೃಷ್ಟಿಗೆ ಬಿದ್ದಿತು. ತರುವಾಯ ಅಡೆಯಾರದ ಪ್ರಸಿದ್ದ ವಟವೃಕ್ಷವನ್ನು ನೋಡಲು ಹೋದೆವು.

ಆ ವಟವೃಕ್ಷ ದರ್ಶನೀಯವಾದುದೇನೊ ದಿಟ. ಎಷ್ಟು ಶ್ರಮದಿಂದ ಎಷ್ಟು ಎಚ್ಚರಿಕೆಯಿಂದ ಎಷ್ಟು ರಸಿಕತೆಯಿಂದ ಎಷ್ಟು ಚಮತ್ಕಾರದಿಂದ ಅದನ್ನು ಬೆಳೆಯಿಸಿದ್ದಾರೆ ಎಂದರೆ ಅದನ್ನು ನೋಡಿದವರಲ್ಲಿ ಸ್ವಲ್ಪವಾದರೂ ರಸಿಕತೆಯಿದ್ದರೆ ಅಲ್ಲಿಯೇ ಬಹಳ ಹೊತ್ತು ಕುಳಿತು ಮೂಕವಾಗಿಬಿಡುವುದರಲ್ಲಿ ಸಂದೇಹವಿಲ್ಲ. ನಾವು ಹೋಗಿ ಸುತ್ತಲೂ ನೋಡಿ, ಅದರ ಬಿಳಲುಗಳನ್ನು ಬಲಗೊಂಡು, ‘ಬ್ರಹ್ಮವಿದ್ಯಾ ಸಂಘ’ದ ವಿಚಾರವಾಗಿ ಪ್ರಶಂಸನೀಯವೂ ವಿಮರ್ಶನೀಯವೂ ಆದ ಮಾತುಗಳನ್ನು ಆಡಿದವು. “ಸ್ವಾಮಿಜಿ, ನಿಜವಾಗಿಯೂ ಈ ಸ್ಥಳವು ಧ್ಯಾನಕ್ಕೆ ಅರ್ಹವಾಗಿದೆ” ಎಂದೆ. ಅಂತೂ ಮದರಾಸಿನಲ್ಲಿ (ನನಗೆ ಹಿಡಿಸಿದ್ದು) ಮೊದಲನೆಯದು ಸಮುದ್ರ, ಎರಡನೆಯದು ಆ ಆಲದ ಮರ. ಮದರಾಸೆಂಬ ‘ನರಕ’ಕ್ಕೆ ಅಡೆಯಾರೇನೊ  ದಿಟವಾಗಿಯೂ ‘ಸ್ವರ್ಗ’ವೆ ಸರಿ! ಶಾಂತಿಯಿದೆ ಸೌಂದರ್ಯವಿದೆ, ಓದಲು ಪುಸ್ತಕಭಂಡಾರವಿದೆ, ವಾಸಿಸಲು ರಮ್ಯವಾದ ಗೃಹ ಮಂದಿರಗಳಿವೆ, ಒಳ್ಳೆಯ ಹವವಿದೆ. ಬಹುಶಃ ಅದಕ್ಕಾಗಿಯೆ ಅನೇಕರು, ಥಿಯಾಸೊಫಿಯ ತತ್ವಗಳನ್ನು ಮೂರ್ಖತೆಯ ಹೆಗ್ಗುರುತುಗಳೆಂದು ಒಳಗೊಳಗೆ ನಂಬಿಕೊಂಡಿದ್ದರೂ, ಆ ಸಂಘದ ಸದಸ್ಯರಾಗುವರೆಂದು ತೋರುತ್ತದೆ. ಆದರೆ ಥಿಯಾಸೊಫಿಯ ತತ್ವಗಳೇನೊ ಖಂಡನೀಯವಾಗಿರದೆ ಇರಬಹುದು – ಆಚಾರದಿಂದ ಬೇಸರವಾಗುವುದು. ಅದು ಐಶ್ವರ್ಯವಂತರಾದ ಮಧ್ಯಮ ತರಗತಿಯ ಮೆದುಳಿನ ಶ್ರೀಮಂತರ ಒಂದು ಕೂಟ. ಅಂತೂ ಅಡೆಯಾರವೊಂದು ಮನೋಹರವಾದ ವಸತಿ.

ಆಗಲೆ ಹೊತ್ತಾಗುತ್ತಾ ಬಂದಿತ್ತು. ಶ್ರೀರಾಮಕೃಷ್ಣಾಶ್ರಮ ವಿದ್ಯಾರ್ಥಿನಿಲಯವನ್ನು ನೋಡಲು ಹೊತ್ತಾಗುವುದೆಂದು ಅಲ್ಲಿಂದ ಹೊರಟೆವು. ದಾರಿಯಲ್ಲಿ ಥಿಯಾಸೊಫಿಯವರು ನಂಬಿರುವ ಕೊಟ್ಟುಮಿ ಮೋರಿಯಾ, ಹಾರಾಡುವ ಮಹಾತ್ಮರು ಮೊದಲಾದವುಗಳ ವಿಚಾರವಾಗಿ ಸ್ವಲ್ಪ ವಿನೋದಕರವಾದ ಮಾತುಗಳನ್ನು ಆಡುತ್ತ ಬಂದೆವು. ನಮಗಾದ ಆಶ್ಚರ್ಯವೆಂದರೆ ವಿದ್ಯಾವಂತರೂ ಬುದ್ಧಿವಂತರೂ ಎನ್ನಿಸಿಕೊಂಡವರೂ ಅಂತಹ ಕ್ಷುದ್ರ ಅತಿಮಾನುಷ ವಿಚಾರಗಳನ್ನು ನಂಬುವರಲ್ಲಾ ಎಂದು. ಆದರೆ ಪ್ರತಿಯೊಬ್ಬ ಮಾನವನೂ ತನ್ನ ನಂಬಿಕೆಗಳೆಲ್ಲಾ ಯುಕ್ತಿಯುಕ್ತವಾದುವೆಂದೂ ಇತರರ ಶ್ರದ್ಧೆಯೆಲ್ಲಾ ಅಂಧಶ್ರದ್ಧೆಯೆಂದೂ ತಿಳಿಯುವುದೂ ಸ್ವಾಭಾವಿಕವೆ. ನಾವೂ ಹಾಗೆಯೆ ಮಾಡಿರಬಹುದು. ಆಗಲಿ, ಮುಂದೆ ನೋಡೋಣ.

ಅಲ್ಲಿಂದ ನೆಟ್ಟಗೆ ಶ್ರೀರಾಮಕೃಷ್ಣ ವಿದ್ಯಾರ್ಥಿನಿಲಯಕ್ಕೆ ಹೋದೆವು, ಮದರಾಸಿಗೆ ಹೋದವರು ಈ ವಿದ್ಯಾರ್ಥಿನಿಲಯವನ್ನು ನೋಡದೆ ಬರಬಾರದು. ಏಕೆಂದರೆ ಸರ್ವ ವಿಧದಿಂದಲೂ ಈ ನಿಲಯವು ಆದರ್ಶನೀಯವಾಗಿದೆ. ಉದರ ದೃಷ್ಟಿ, ಹೃದಯದೃಷ್ಟಿ, ಮನೋದೃಷ್ಟಿ, ಆತ್ಮದೃಷ್ಟಿ, ಜನಾಂಗದೃಷ್ಟಿ, ವ್ಯಷ್ಟಿದೃಷ್ಟಿ, ಸಮಷ್ಟಿ ದೃಷ್ಟಿಗಳೆಲ್ಲದರಿಂದಲೂ ಶ್ರೀರಾಮಕೃಷ್ಣ ವಿದ್ಯಾರ್ಥಿನಿಲಯವು ಶ್ಲಾಘನೀಯವಾಗಿದೆ. ನಿಲಯದ ನೈರ್ಮಲ್ಯ, ಶಿಕ್ಷಣ, ವ್ಯವಸ್ಥೆ ಕೊಂಡಾಡತಕ್ಕವುಗಳಾಗಿವೆ ನಾನಂತೂ ಆನಂದದಲ್ಲಿ ಮುಳುಗಿ ಸ್ವಾಮಿಜಿಯವರನ್ನು ಕುರಿತು “ಇಲ್ಲಿದೆ ಭರತಖಂಡದ ಮುಕ್ತಿ. ಎಲ್ಲರೂ ಬಾಯಲ್ಲಿ ಮಾತನಾಡುವರು; ವೇದಿಕೆಗಳ ಮೇಲೆ ಉಪನ್ಯಾಸ ಮಾಡುವರು. ಆದರೆ ಇಲ್ಲಿ ಆ ತತ್ವಗಳೆಲ್ಲ ಅನುಷ್ಠಾನ ಮಾಡಲ್ಪಟ್ಟಿವೆ.” ಎಂದೆ.

ಪ್ರಪಂಚದ ಪ್ರಸಿದ್ದ ಪುರುಷರ ಪಟಗಳನ್ನು ಜಾತಿಭೇದ ಮತಭೇದ ಜನಾಂಗ ಭೇದಗಳನ್ನು ಎಣಿಸದೆ ಇಟ್ಟಿರುವರು. ಯೇಸು, ಬುದ್ಧ, ಶಂಕರಾಚಾರ್ಯ, ಜಾರ್ಜ್ ವಾಷಿಂಗ್‌ಟನ್, ಬಂಕಿಂಚಟರ್ಜಿ, ಆಂಗ್ಲೇಯ ಕವಿಗಳು ಎಲ್ಲರ ಚಿತ್ರಗಳೂ ಇವೆ. ಬಡಗಿಯ ಕೆಲಸ, ಕಮ್ಮಾರನ ಕೆಲಸ, ನೇಯ್ಗೆಯ ಕೆಲಸ, ಮೇದರ ಕೆಲಸ, ಚಿತ್ರ ಬರೆಯುವ ಕೆಲಸ, ಸಂಗೀತ ಎಲ್ಲವನ್ನೂ ಹೇಳಿಕೊಡುತ್ತಾರೆ. ಅಲ್ಲಿಯ ದೇವರ ಮಂದಿರವನ್ನು ನೋಡಿ ಭಾವಪರವಶನಾದೆ.

ಬಾಲಕರಿಗೆ ಬೇಕಾದುದು ಎಲ್ಲವೂ ಅಲ್ಲಿವೆ. ಜನಾಂಗದ ಏಳಿಗೆಗೂ ವ್ಯಕ್ತಿಯ ಮೇಲ್ಮೆಗೂ ಬೇಕಾದುದೇನು? ಆತ್ಮಕ್ಕೆ ಸಾಕ್ಷಾತ್ಕಾರ; ಮನಸ್ಸಿನ ಸುಸಂಸ್ಕಾರ, ಹೊಟ್ಟೆಗೆ ಆಹಾರ. ಅಂದರೆ ದರ್ಶನ, ಸತ್ಯ, ಸೌಂದರ್ಯಗಳ ಮಿಲನ. ಸಾಧುಗಳ ಸತ್ಸಂಗ ಮೊದಲಾದ ಧಾರ್ಮಿಕ ಸನ್ನಿವೇಶಗಳಿಂದ ಆತ್ಮೋದ್ಧಾರವೂ, ವಿದ್ಯೆಯಿಂದ ಮತ್ತು ಸುಶಿಕ್ಷಣದಿಂದ ಮನೋಸಂಸ್ಕಾರವೂ, ಕೈಗಾರಿಕೆಯಿಂದ ಜೀವನವೂ ಸಾಗುವುವು. ಅಲ್ಲಿ ಇವೆಲ್ಲವೂ ಇವೆ.

ಅಲ್ಲಿಂದ ಮಠಕ್ಕೆ ಬಂದು, ಎಂದಿನಂತೆ ಯೋಗಾಸನ ವ್ಯಾಯಾಮ ಮಾಡಿ, ಊಟ ಮುಗಿಸಿದೆವು. ತರುವಾಯ ಮಹಡಿಯಲ್ಲಿ ಹಗಲು ನಿದ್ದೆಗೆಂದು ಮಲಗುವ ವೇಳೆ ಇಂದು ಮಹಾರಾಜ್ ಬಂದರು. ಅವರು “ಶ್ರೀರಾಮಕೃಷ್ಣ ವಿದ್ಯಾರ್ಥಿ ನಿಲಯಕ್ಕೆ ಹೋಗಿ ಬಂದಿರೇನು?” ಎಂದು ಕೇಳಿದರು.

“ಹೌದು.”

“ಹೇಗಿದೆ?”

“ಶ್ಲಾಘನೀಯವಾಗಿದೆ, ಆದರ್ಶನೀಯವಾಗಿದೆ. ಇಹಪರ ಸೌಖ್ಯಗಳನ್ನೂ ನಾಲ್ಕು ಪುರುಷಾರ್ಥಗಳನ್ನೂ ಆತ್ಮೋದ್ಧಾರವನ್ನೂ ಬಾಲಕರಿಗೆ ದೊರಕಿಸಿ ಕೊಡಲು ಯಾವ ಆವರಣ ಸನ್ನವೇಶ ಬೇಕೋ ಅಂಥಾ ಸನ್ನಿವೇಶ ಅಲ್ಲಿದೆ.” ಎಂದು ಮೊದಲಾಗಿ ಮನಸ್ಸು ಬಿಚ್ಚಿ ಪ್ರಶಂಸೆ ಮಾಡಿದೆ.

ಅವರು ನಕ್ಕರು. ಮತ್ತೊಬ್ಬ ಬ್ರಹ್ಮಚಾರಿಯೂ ನಕ್ಕರು. ಏಕೆಂದರೆ ಅವರ ಮನಸ್ಸಿನಲ್ಲಿ ನಾನು ಬಾಹ್ಯಾಡಂಬರವನ್ನು ನೋಡಿ ಅಂತರಂಗದ ಕತ್ತಲೆಯನ್ನು ಅರಿಯದೆ ಮೋಸಹೋದೆನೆಂದು ತಿಳಿಸಿದರು.

“ಯಾವ ದೃಷ್ಟಿಯಿಂದ ಅದನ್ನು ನೀವು ಈ ರೀತಿ ಹೊಗಳುವುದು?” ಎಂದರು.

“ಸರ್ವ ದೃಷ್ಟಿಗಳಿಂದಲೂ: ಆತ್ಮದೃಷ್ಟಿ, ದೇಹದೃಷ್ಟಿ, ಇಹದೃಷ್ಟಿ, ಪರದೃಷ್ಟಿ, ಮನೋದೃಷ್ಟಿ, ಹೃದಯದೃಷ್ಟಿ ಎಲ್ಲ ದೃಷ್ಟಿಗಳಿಂದಲೂ ಅತ್ಯುತ್ತಮವಾಗಿದೆ.” ಎಂದೆನು.

ಆಮೇಲೆ ಅವರಿಗೂ ನನಗೂ ಬಹಳ ಮಾತುಕತೆಗಳಾದುವು. ಅವರು “ಅದು ಬಾಲಕರ ಶೀಲವನ್ನು ಉದ್ಧಾರ ಮಾಡಿದೆಯೇ?” ಎಂದು ಕೇಳಿದರು.

“ಅದೇನೋ ನನಗೆ ಗೊತ್ತಿಲ್ಲ. ಉದ್ಧಾರಕ್ಕೆ ಬೇಕಾದ ವಾತಾವರಣ ಇದೆ.”

“ಹಾಗಲ್ಲ. ಈಗ ನೋಡಿ; ಕಲ್ಕತ್ತಾ ರಾಮಕೃಷ್ಣ ವಿದ್ಯಾರ್ಥಿನಿಲಯದಿಂದ ಎಷ್ಟು ಜನ ಸಂನ್ಯಾಸಿಗಳು ಬಂದಿದ್ದಾರೆ. ಈ ನಿಲಯ ಸ್ಥಾಪಿತವಾಗಿ ಈಗಾಗಲೆ ಇಪ್ಪತ್ತು ವರ್ಷಗಳಾಗಿವೆ. ಇನ್ನೂ ಅಂತಹ ಒಬ್ಬರಾದರೂ ಬರಲಿಲ್ಲ.”

“ಹಾಗಾದರೆ ವಿದ್ಯಾರ್ಥಿ ನಿಲಯಗಳ ಗುಣಮಾಪನವನ್ನು ಮಾಡಲು ಅದು ಹೆರುವ ಸಂನ್ಯಾಸಿಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕೇನು?”

“ಅಷ್ಟೇ ಅಲ್ಲ. ಸಂನ್ಯಾಸಿಗಳನ್ನಂತೂ ಬೇಡ. ಪ್ರತಿಭಾಶಾಲಿಗಳನ್ನು ಹುಟ್ಟಿಸಿದೆಯೆ?”

“ಪ್ರತಿಭಾಶಾಲಿಗಳು ಸ್ವಭಾವತಃ ಬರುತ್ತಾರೆ. ಪ್ರಕೃತಿದೇವಿಯೆ ಸ್ವತಃ ಅವರನ್ನು ಹೆರುತ್ತಾಳೆ. ಯಾವ ಸಂಸ್ಥೆಯೂ ಅವರನ್ನು ನಿರ್ಮಿಸಲಾರದು. ಸಂಸ್ಥೆಗಳು ಒಂದು ವೇಳೆ ಅದೃಷ್ಟವಶಾತ್ ಅವರ ಪುರೋಭಿವೃದ್ಧಿಗೆ ಕಾರಣಭೂತವಾಗಬಹುದು. ಅಂದ ಮಾತ್ರಕ್ಕೆ ಸಂಸ್ಥೆಗಳ ಕರ್ತವ್ಯ ಪ್ರತಿಭಾಶಾಲಿಗಳನ್ನು ತಯಾರು ಮಾಡುವುದು ಎಂದು ನಿರ್ಧರಿಸಬಾರದಷ್ಟೆ? ಮಹಾಕವಿಗಳು, ಗಣಿತಶಾಸ್ತ್ರ ಕೋವಿದರು, ಶಿಲ್ಪಿವರ್ಯರು, ಸಾಹಿತ್ಯ ನಿಪುಣರು ತಮಗೆ ತಾವೆ, ಆವರಣ ಸನ್ನವೇಶಗಳು ದೊರಕಲಿ, ದೊರಕದಿರಲಿ, ಬಂದೇ ಬರುತ್ತಾರೆ. ಆದ್ದರಿಂದ ಜಗತ್‌ಪ್ರಸಿದ್ಧ ಪ್ರತಿಭಾಶಾಲಿಗಳನ್ನು ಸೃಜಿಸದ ಮಾತ್ರಕ್ಕೆ ನಾವು ಸಂಸ್ಥೆಯೊಂದನ್ನು ಅಲ್ಲಗಳೆಯಬಾರದಷ್ಟೆ?”

“ಹಾಗಾದರೆ ಮತ್ತೇತಕ್ಕೆ ಸಂಸ್ಥೆಗಳಿರುವುದು?”

“ಸಾಮಾನ್ಯ ಮಾನವರಿಗಾಗಿ. ಬಹುಶಃ ಅತ್ಯಂತ ದರಿದ್ರರಾದ ಜನರಿಂದ ವಿದ್ಯಾರ್ಥಿಗಳನ್ನು ಆರಿಸಿಕೊಂಡಿರುವುದರಿಂದ ಅಲ್ಲಿ ಒಳ್ಳೆಯ ಬೀಜಗಳು ದೊರಕದೆ ಇರಬಹುದು. ಆದರೆ ಜನಾಂಗದೃಷ್ಟಿಯಿಂದ ಯುವಕನೊಬ್ಬನು ದೈವಭಕ್ತನೂ ಸಜ್ಜನನೂ ಸ್ವಾವಲಂಬಿಯೂ ಆದರೆ ಸಾಕಲ್ಲವೆ? ಜನರೆಲ್ಲ ಪರಮಹಂಸರಾಗಬೇಕೆ? ಬಾಲಕರೆಲ್ಲ ವಾಲ್ಮೀಕಿ, ವ್ಯಾಸರಾಗಬೇಕೆ? ನ್ಯೂಟನ್, ಬೋಸ್‌ಗಳು ಆಗಬೇಕೆ? ಅದೆಲ್ಲಿ ಆಗುತ್ತದೆ? ನೀವೇನೇ ಹೇಳಿದರೂ ನಾನೇನೂ ವಿದ್ಯಾರ್ಥಿನಿಲಯ ಆದರ್ಶವಾದುದೆಂದೇ ಹೇಳುತ್ತೇನೆ!”

“ಅಲ್ಲಿಗೆ ಹೋದವರೆಲ್ಲ ಅದರ ಬಹಿರಂಗವನ್ನು ಮೆಚ್ಚಿ ಬೆರಗಾಗಿ ಶ್ಲಾಘಿಸಿಬಿಟ್ಟಿದ್ದಾರೆ. ಮಹಾತ್ಮಾಗಾಂಧೀಜಿಯಾದರೋ ‘ಅತಿಥಿ ಪುಸ್ತಕ’ದಲ್ಲಿ-ಹೊರಗೆ ಹೊಳೆದಂತೆಯೆ ಒಳಗೂ ರಂಜಿಸುವುದೆಂದು ಹಾರೈಸುತ್ತೇನೆ-ಎಂದಷ್ಟೆ ಬರೆದಿದ್ದಾರೆ.”

“ಅಯ್ಯೋ, ಸ್ವಾಮಿಗಳೆ, ನಾಲ್ಕು ಜನ ಸೇರಿದ ಕಡೆ ಕೆಟ್ಟದ್ದು ಸ್ವಲ್ಪವಾದರೂ ಇದ್ದೇ ಇರುತ್ತದೆ. ಸಬರ್ಮತಿ ಆಶ್ರಮದಲ್ಲಿಯೆ ಮಹಾತ್ಮಾ ಗಾಂಧೀಜಿಯವರ ಪವಿತ್ರ ಒಜೋಯುಕ್ತವಾದ ಸನ್ನಿಧಿಯಲ್ಲಿಯೇ ಎಂತಹ ಅನಾಚಾರಗಳು ನಡೆದಿಲ್ಲ. ಅದನ್ನು ಗಾಂಧೀಜಿಯೆ ಒಪ್ಪಿಕೊಂಡಿದ್ದಾರೆ.”

“ಹಾಗಲ್ಲ. ಅತಿ ಶಿಸ್ತಿನ ಶಿಕ್ಷಣದಿಂದ ಬಾಲಕರ ಸ್ವಾತಂತ್ರವೆ ನಶಿಸಿ, ಅವರ ವ್ಕ್ತಿತ್ವ ಬೆಳೆಯಲವಕಾಶವಿಲ್ಲದೆ ಕುಬ್ಜವಾಗುತ್ತದೆ. ಕುಂಠಿತವಾಗುತ್ತದೆ.”

“ಹೆಚ್ಚು ಜನ ಹುಡುಗರಿರುವ ಎಡೆ ಸಂಪೂರ್ಣ ಸ್ವಾತಂತ್ಯ್ರವಿರಬಾರದು. ಅದು ಇದ್ದರೆ ಬೇಗನೆ ಸ್ವೇಚ್ಛಾಚಾರವಾಗಿ ಪರಿಣಮಿಸುತ್ತದೆ. ಈಗ ನೋಡಿ, ಶಾಂತಿನಿಕೇತನದಲ್ಲಿ ಅಂತಹ ಸ್ವಾತಂತ್ಯ್ರ ಕೊಟ್ಟಿದ್ದಕ್ಕೆ ಜನರು ಏನೇನೋ ಅಂದುಕೊಳ್ಳುತ್ತಿದ್ದಾರೆ. ಏನು ಮಾಡಿದರೂ ಕಷ್ಟ. ಪೂರ್ಣಸ್ವಾತಂತ್ಯ್ರ ಕೊಟ್ಟರೆ ಸ್ವೇಚ್ಛಾಚಾರ ಎನ್ನುತ್ತಾರೆ. ಶಿಸ್ತಿನ ಶಿಕ್ಷಣ ಮತ್ತು ನಿಯಮಗಳಿದ್ದರೆ ‘ಇದೇನು ಸೆರೆಮನೆಯೊ?’ ಎನ್ನುತ್ತಾರೆ. ಹೇಗಿದ್ದರೂ ಕಷ್ಟವೆ!”

“ಹಾಗಲ್ಲ, ಸುಶಿಕ್ಷಿತ ಸ್ವಾತಂತ್ಯ್ರವಿರಬೇಕು.”

“ಸ್ವಾಮಿಜಿ, ಅದೇನೊ ಒಳ್ಳೆಯ ಯುಕ್ತಿಯುಕ್ತವಾದ ಮಾತು. ಹೇಳುವುದು ಸುಲಭ, ಮಾಡುವುದು ಕಷ್ಟ….”

ಆ ದಿನ ಸಾಯಂಕಾಲ ಬೇಗನೆ ಕವಳ ಪೂರೈಸಿ, ಗುರುದೇವನ ಮಂಗಳಾರತಿಯಲ್ಲಿ ಭಾಗಿಗಳಾಗಿ ಎಲ್ಲ ಸ್ವಾಮಿಗಳಿಗೂ ಬ್ರಹ್ಮಚಾರಿಗಳಿಗೂ ಕೈಮುಗಿದು, ಅಡ್ಡಬಿದ್ದು, ರೈಲ್ವೆಸ್ಟೇಷನ್ನಿಗೆ ಹೊರಟೆವು. ಅಧ್ಯಕ್ಷರಾಗಿದ್ದ ಸ್ವಾಮಿ ಯತೀಶ್ವರಾನಂದರು “ಶ್ರೀಗುರುಮಹಾರಾಜರ ಕೃಪೆ ನಿಮಗಾಗಲಿ! ಮಹಾಪುರುಷಜಿಯವರ ಅನುಗ್ರಹ ದೊರಕಲಿ!” ಎಂದು ಹರಸಿ ಬೀಳ್ಕೊಂಡರು.

ರೈಲಿನಲ್ಲಿ ಕುಳಿತುಕೊಂಡಾಗ ಸೆಕೆಯಿಂದ ಬಹಳ ಬೇಗುದಿಗೊಂಡೆವು. ಅಂತೂ ಪ್ರಯಾಸದಿಂದ ಮಲಗುವ ಜಾಗ ಸಿಕ್ಕಿ ಮಲಗಿದೆವು.