೬-೧೦-೧೯೨೯ನೆಯ ಭಾನುವಾರ:

ಪ್ರಾತಃಕಾಲ ಕಿಟಕಿಯಿಂದ ಹೊರಗೆ ನೋಡಲು ರೈಲು ರಸ್ತೆಯ ಇಕ್ಕೆಲುಗಳಲ್ಲಿಯೂ ವಿಸ್ತಾರವಾದ ಶ್ಯಾಮಲ ಕೋಮಲ ಶಾಲಿವನ ಪಂಕ್ತಿ ನಿಬಿಡ ರಮಣೀಯವಾಗಿ ದಿಗಂತದವರೆಗೂ ಹಬ್ಬಿ ಹಸರಿಸಿ ನಮಗೆ ಸುಖಾಗಮನ ಬಯಸುತ್ತಿದ್ದುವು, ಸಂತೋಷಾಧಿಕ್ಯದಿಂದ ಗಹಗಹಿಸಿ ನಗುವಂತೆ ತೋರಿ! ಭರತಖಂಡದ ಪೂರ್ವತೀರ ಪ್ರದೇಶವು ಈ ತಿಂಗಳಿನಲ್ಲಿ ಒಂದು ಅತ್ಯಂತ ಮನಮೋಹಕವಾದ ಹಸುರಿನ ಹಾಸಗೆಯಾಗಿರುತ್ತದೆ. ಬಿತ್ತರದ ಹಸುರುಕ್ಕುವ ಗದ್ದೆಗಳು ನೂರಾರು ಮೈಲಿಗಳವರೆಗೂ ನಮ್ಮನ್ನು ಬಿಡದೆ ಹಿಂಬಾಲಿಸುವುವು. ಹೆಚ್ಚೇನು? ಮದರಾಸಿನಿಂದ ಕಲ್ಕತ್ತಾಗೆ ನುಗ್ಗುವವರೆಗೂ ನಮ್ಮನ್ನು ಬಿಡದೆ ಬೆನ್ನಟ್ಟುವುವು. ಹಾದಿಯಲ್ಲಿ ಅತ್ಯಾಶ್ಚರ್ಯಕರವಾಗಿ ಕಂಡದ್ದೆಂದರೆ ಗೋದಾವರಿಯ ಕಬ್ಬಿಣದ ಸೇತುವೆ. ಅಲ್ಲಿ ಹೊಳೆ ಎಷ್ಟು ವಿಸ್ತಾರವಾಗಿದೆ! ಆ ದಿನ ರಾತ್ರಿಯಾಯಿತು. ಪುನಃ ಅದೇ ರೈಲಿನ ಪ್ರಪಂಚ.

೭-೧೦-೧೯೨೯ನೆಯ ಸೋಮವಾರ:

ಸಾಮಾನ್ಯ ಬಂಗಾಳಿಗಳ ಹೆಮ್ಮೆ, ಗರ್ವ, ಸಂಕುಚಿತ ದೃಷ್ಟಿ, ಅಧಿಕ ಪ್ರಸಂಗಿ ತನ ಇವುಗಳೆಲ್ಲ ಬಂಗಾಳದ ಬಾಗಿಲಲ್ಲಿಯೆ ತೋರಿದೆವು. ಅವರ ಮನಸ್ಸಿನಲ್ಲಿ ತಮ್ಮನ್ನು ಬಿಟ್ಟರೆ ಮತ್ತಾರೂ ಇಂಡಿಯಾ ದೇಶದಲ್ಲಿ ನಾಗರಿಕರಾದ ನೀತಿವಂತರಾದ ಜನಗಳು ಇಲ್ಲವೆ ಇಲ್ಲ ಎಂದು! ಇದಕ್ಕೆ ಕಾರಣಗಳಿರಬಹುದು. ಆದರೆ ಕಾರಣಗಳ ತೂಕಕ್ಕಿಂತ ಗರ್ವದ ಭಾರವೆ ಮಿಗಿಲಾಗಿದೆ. ಬಂಗಾಳಿ ಒಬ್ಬರು ಗಾಡಿಯಲ್ಲಿ ಕುಳಿತು “ತೆಲುಗು ಬ್ರಾಹ್ಮಣರಿಗೆ ನ್ಯಾಯ ನೀತಿ ಒಂದೂ ತಿಳಿಯದು” ಎಂದು ಉಪನ್ಯಾಸ ಮಾಡಿಯೆಬಿಟ್ಟರು. ಬಹುಶಃ ದೇಶೋದ್ಧಾರವಾಗಬೇಕಾದರೆ ಆ ತರದ ಹೆಮ್ಮೆಯೂ ಬೇಕೋ ಏನೋ? ಹೆಮ್ಮೆ ಮೇಲ್ಮೆಗೆ ಸಹಾಯ ಮಾಡುವುದಾದರೆ ಒಳ್ಳೆಯದೆ.

ಬಂಗಾಳವು ವಿಸ್ತಾರಗೊಂಡ ಮಲೆನಾಡು. ಒಂದೆ ವ್ಯತ್ಯಾಸ: ಅಲ್ಲಿ ಗುಡ್ಡ ಬೆಟ್ಟ ಕಣಿವೆಗಳು ಹೆಚ್ಚು, ಇಲ್ಲಿ ಸಮಭೂಮಿಯೆ ಜಾಸ್ತಿ. ಆ ನೀರು, ಆ ಹಸುರು, ಆ ಗದ್ದೆ ಎಲ್ಲವೂ ಅಲ್ಲಿವೆ. ಆದರೆ ಬಹುಶಃ ಬೇಸಗೆ ಕಾಲದಲ್ಲಿ ಬೇರೆಯ ತರವಾಗಿ ಕಾಣಬಹುದೆಂದು ತೋರುತ್ತದೆ.

ಇಲ್ಲಿಯ ಗುಡಿಸಲುಗಳೇನು? ನೋಟಕ್ಕೆ ಮಣ್ಣಿನ ಕುರಿದೊಡ್ಡಿಗಳಂತಿವೆ. ವೃತ್ತ ಪತ್ರಿಕೆಗಳಲ್ಲಿ ಪ್ರವಾಹ ಬಂದು ನೂರಾರು ಹಳ್ಳಿಗಳು ಕೊಚ್ಚಿಹೋದುವೆಂದು ಓದಿದಾಗ ಆಶ್ಚರ್ಯವಾದರೆ ಈ ಹಳ್ಳಿಗಳನ್ನು ನೋಡಿದಾಗ ಆ ಬೆಕ್ಕಸವು ಬಯಲಾಗುವುದು. ಈ ಮನೆಗಳನ್ನು ಕೊಚ್ಚುವುದಕ್ಕೆ ಬಿರುಮಳೆಯೆ ಏಕೆ ಬೇಕು? ಕಿರುಮಳೆಯೆ ಸಾಕು! ಬೆಸ್ತರನ್ನಂತೂ ಬಹಳ ಕಂಡೆವು. ಬ್ರಾಹ್ಮಣರೂ ಮೀನು ತಿನ್ನುವ ದೇಶವಷ್ಟೇ ಇದು? ಅದಕ್ಕೆ ಬೆಸ್ತರ ಸಂಖ್ಯೆಯೂ ಹೆಚ್ಚಾಗಿರಲೇಬೇಕು. ಇಂತಹ ರಮಣೀಯವಾದ ಐಶ್ವರ್ಯ ಮಂಗಲಸೂಚಕವಾದ ದೃಶ್ಯಗಳನ್ನು ಹಾಯ್ದು ರೈಲು ಹೌರಾ ಸ್ಟೇಷನ್ನಿಗೆ ಬಂದಿತು.

ಹೌರಾ ಸ್ಟೇಷನ್ ದೊಡ್ಡದು. ಆದರೆ ನನಗೆ ಯಾವ ವಿಧದಲ್ಲಿಯೂ ಹೊಸದಾಗಿಯಾಗಲಿ ದೊಡ್ಡದಾಗಿಯಾಗಲಿ ಕಾಣಲಿಲ್ಲ. ಬಹುಶಃ ಹಿಂದಿನ ಜನ್ಮದಲ್ಲಿ ಇಲ್ಲೆಲ್ಲ ಓಡಾಡಿರಬಹುದೆ? ಏನೊ ಯಾರಿಗೆ ಗೊತ್ತು? ಅಲ್ಲಿಂದ ಒಂದು ಮೋಟಾರನ್ನು ಬಾಡಿಗೆಗೆ ತೆಗೆದುಕೊಂಡು ಬೇಲೂರು ಮಠಕ್ಕೆ ಹೊರಟೆವು. ಸ್ಟೇಷನ್ನಿಗೆ ರಾಮನಾಥ ಮಹಾರಾಜ್ ಅವರು ಬಂದಿದ್ದರು. ನಗರದ ಕಿರಿದಾದ, ಹಿರಿದಾದ, ಕೊಳಕಾದ ಬಿದಿಗಳಲ್ಲಿ ಮೋಟಾರು ಸರಿಯಿತು. ನಾವು ಹೋಗುವ ಮುನ್ನ ಎರಡುಮೂರು ದಿನಗಳಿಂದ ಮಳೆ ಸತತವಾಗಿ ಸುರಿದಿತ್ತು. ಆದ್ದರಿಂದ ಎಲ್ಲೆಲ್ಲಿಯೂ ಕೆಸರಾಗಿತ್ತು. ‘ಇದೇನೇ ಅರಮನೆಗಳ ಪಟ್ಟಣ?’ ಎಂದುಕೊಂಡೆ. ಮೈಸುರಿನಿಂದ ಹೊರಟವನಿಗೆ ಯಾವ ನಗರವೂ ರಮಣೀಯವಾಗಿ ಕಾಣಿಸಲೆಂದು ತೋರುತ್ತದೆ. ‘ವನಜದರಳನುಳಿ ದಾರಡಿಗೆ ಬೊಬ್ಬುಳಿಯ ಪೂವಿನೊಳ್ ಮಧುವುಂಟೆ?’ ಅಂತೂ ಬೇಲೂರು ಮಠ ಸಮೀಪಿಸಿತು:

“ನೋಡದೋ ಸ್ವಾಮಿಜಿಯ ಸಮಾಧಿ ಮಂದಿರ! ನೋಡದೋ ಬೇಲೂರು ಮಠ! ನೋಡದೋ ದಕ್ಷಿಣೇಶ್ವರ ದೇವಾಲಯ! ಜಯ್ ಮಹಾಮಾಯೇಕಿ ಜೈ!” ಎಂದು ಸ್ವಾಮಿ ಸಿದ್ಧೇಶ್ವರಾನಂದರು ಉದ್ಘೋಷಿಸಿದರು. ನನಗೆ ಎದೆ ಉಬ್ಬಿಹೋಯಿತು. ಇದುವರೆಗೆ ದಕ್ಷಿಣೇಶ್ವರ, ಬೇಲೂರು, ಕಲ್ಕತ್ತ ಎಲ್ಲ ಪುಸ್ತಕದಲ್ಲಿಯೆ ಇದ್ದುವು. ಈಗ ಕಣ್ಣಿಗೆ ಗೋಚರವಾದುವು. ಅಲ್ಲದೆ ಯಾರನ್ನು ನಾನು ಅವತಾರ ಪುರುಷನೆಂದು ಪೂಜಿಸುವೆನೊ ಅಂಥಾ ಮಹಾವ್ಯಕ್ತಿ ಭಗವಾನ್ ಶ್ರೀರಾಮಕೃಷ್ಣ ಪರಮಹಂಸ ಗುರುದೇವನು ಬಾಳಿ ಬದುಕಿ ನೆಲ; ಆತನ ಅಡಿಯ ಪುಡಿಯಿಂದ ಪವಿತ್ರವಾದ ಸ್ಥಳ. ಅಲ್ಲದೆ ಕಾವ್ಯಗಳಲ್ಲಿ ಅಮರತೆಯನ್ನು ಪಡೆದ ಗಂಗಾಮಾತೆಯ ಪ್ರಥಮ ಸಂದರ್ಶನ. ನನಗಾದ ಅನುಭವವನ್ನು ಇಲ್ಲಿ ಚುಟುಕಿಯಲ್ಲಿ ವರ್ಣಿಸಲಸದಳ!

ಮಠವನ್ನು ಸೇರಿದೆವು. ಶರ್ವಾನಂದ ಅನಂತಾನಂದರಿಗೆ ನಮಸ್ಕಾರವಾಯಿತು. ನಮ್ಮ ಗಂಟು ಮೂಟೆಗಳನ್ನು ತೆಗೆದು ಅತಿಥಿಗಳ ಕೊಠಡಿಯಲ್ಲಟ್ಟೆವು. ಸ್ನಾನವನ್ನು ಮುಗಿಸಿ ಸ್ವಾಮಿ ವಿವೇಕಾನಂದರು, ಮಹಾಮಾತೆ, ಬ್ರಹ್ಮಾನಂದರು ಇವರ ಗಂಗಾತೀರಸ್ಥವಾಗಿದ್ದ ಸಮಾಧಿ ಮಂದಿರಗಳನ್ನು ದರ್ಶನ ಮಾಡಿಕೊಂಡು ಶ್ರೀಗುರುಮಂದಿರಕ್ಕೆ ಹೋಗಿ ಅಡ್ಡಬಿದ್ದು ಊಟ ಪೂರೈಸಿದೆವು. ಮಹಾಪುರುಷಜಿ (ಸ್ವಾಮಿ ಶಿವಾನಂದರು) ಹಗಲು ನಿದ್ದೆಯಲ್ಲಿದ್ದುದರಿಂದ ಮೂರು ಗಂಟೆಯ ತರುವಾಯ ನೋಡಬಹುದೆಂದು ಲೈಬ್ರರಿ ಗೃಹಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಂಡೆವು. ಅಭಿರಾಮತಮವಾದ ಬೇಲೂರು ಮಠವು ತತ್ತ್ವದೃಷ್ಟಿಯಿಂದಲೂ ಮನಸ್ಸನ್ನು ಸ್ವರ್ಗದೆಡೆಗೆ ತೇಲಿಸುವಂತಿದೆ.

ಮೂರು ಗಂಟೆಯಾದ ಮೇಲೆ ಭಗವಾನ್ ಶ್ರೀರಾಮಕೃಷ್ಣರ ಪ್ರಿಯಶಿಷ್ಯರೂ ಸಚ್ಚದಾನಂದವನ್ನು ಸಾಕ್ಷತ್ಕಾರ ಮಾಡಿಕೊಂಡವರೂ ಸಿದ್ಧಪುರುಷರೂ ನನ್ನ ಆತ್ಮ ಗುರುಗಳೂ ಪ್ರೇಮ ಕರುಣ ದಯಾಮಯರೂ ಒಲ್ಮೆಯ ಮುದ್ದೆಯೂ ಆದ ಶ್ರೀ ಶಿವಾನಂದರ ದರ್ಶನಕ್ಕಾಗಿ ಹೊರಟೆವು. ನಾನು ಸ್ವಲ್ಪ ವಿಮರ್ಶಕ ದೃಷ್ಟಿಯುಳ್ಳವನು. ತರ್ಕಶಾಸ್ತ್ರ ಆಧ್ಯಾತ್ಮಶಾಸ್ತ್ರಗಳನ್ನು  ಓದಿದವನಾದುದರಿಂದ ಯಾವುದನ್ನೂ ನೋಡದೆ ನುಂಗಿಬಿಡುವುದಿಲ್ಲ; ಎಲ್ಲಿಯಾದರೂ ಗುಳುಮ್ಮನೆ ಹಾರಿಬಿಡುವುದಿಲ್ಲ. ಆದರೆ ನಾನು ಕವಿಯೂ ಹೌದು. ರಸಯೋಗಿಯೂ ದಿಟ. ಆದ್ದರಿಂದ ತರ್ಕವರಿಯದ ಕೇವಲ ಆತ್ಮಾನುಭವಗಳನ್ನು ಅರಿಯಬಲ್ಲ ಶಕ್ತಿಯಿದೆ. ಅಂದರೆ ತತ್ತ್ವಜ್ಞಾನಿಗೆ ಇರಬೇಕಾದ ಮನೋಸೂಕ್ಷ್ಮತೆಯೂ ಕವಿಗೆ ಇರಬೇಕಾದ ಯೌಗಿಕದೃಷ್ಟಿಯೂ ನನ್ನಲ್ಲಿ ಇವೆ. ಆದ್ದರಿಂದ ನಾನು ಮಹಾಪುರುಷಜಿಯ ಬಳಿಗೆ ಹೋಗುವಾಗ ತತ್ತ್ವಜ್ಞನಾಗಿಯೂ ಕವಿಯಾಗಿಯೂ ಹೋದೆ.

ಮೆಟ್ಟಿಲುಗಳನ್ನು ಹತ್ತಿ ಮಹಡಿಗೆ ಹೋದೆವು. ಅಲ್ಲಿ ತಮ್ಮ ಕೋಣೆಯಲ್ಲಿ ಮಹಾಪುರುಷಜಿ ಮೂರ್ತಿವೆತ್ತ ಕರುಣೆಯಂತೆ ಮೈಗೊಂಡ ಪ್ರೇಮದಂತೆ ಆರಾಮ ಕುರ್ಚಿಯ ಮೇಲೆ ಒರಗಿಕೊಂಡು ಕುಳಿತಿದ್ದರು. ಆ ಮೃದುಲ ಸ್ವಭಾವದ ವೃದ್ಧದೇಹದ, ನಿಹಂಕಾರದ ಮೂರ್ತಿಯನ್ನು ಕಂಡೊಡನೆ ‘ಈತನೀಗ ಮಹಾಪುರುಷ!’ ಎಂದುಕೊಂಡೆ. ಅವರ ಮುಂದುಗಡೆ ಒಂದು ಹುಕ್ಕಾ ಇತ್ತು. ಕೋಣೆಯಲ್ಲಿ ನಾಲ್ಕೈದು ಪಟಗಳಿದ್ದುವು. ಒಂದು ಕಡೆ ಅವರ ಮಲಗುವ ಮಂಚ. ಕೆಲವು ಪುಸ್ತಕಗಳು ಮತ್ತೊಂದು ಕಡೆ. ಒಂದೆಡೆ ಒಂದು ಮೇಜು. ಮೊದಲು ಸಿದ್ದೇಶ್ವರಾನಂದರು ಹೋಗಿ ಪ್ರಣಾಮ ಮಾಡಿದರು. ತರುವಾಯ ಮಾನಪ್ಪನು ನಾವು ಮೈಸೂರಿನಿಂದ ತಂದಿದ್ದ ಶ್ರೀ ಚಾಮುಂಡಿ ಮಾತೆಯ ಬೆಳ್ಳಿಯ ವಿಗ್ರಹವನ್ನು ಅರ್ಪಿಸಿ ನಮಿಸಿದನು. ನಾನು ಊದಿನಕಡ್ಡಿಗಳ ಕಟ್ಟುಗಳನ್ನು ಅರ್ಪಿಸಿ ನಮಿಸಿದೆನು. ಸಿದ್ದೇಶ್ವರಾನಂದರು ನಮ್ಮ ಪರಿಚಯ ಹೇಳಿದರು: ನಾವು ಅವರನ್ನೆ ನೆಮ್ಮಿದ್ದೇವೆ; ನಾವು ಅವರ ಮಾನಸಪುತ್ರರು; ನಮ್ಮನ್ನು ಕಾಪಾಡಬೇಕು ಎಂದರು. ಅದಕ್ಕೆ ಅವರು “ನಾನಾರು? ನಾನಾರು? ನಾನಾರು?” ಎಂದು ಎರಡು ಮೂರು ಸಲ ಗಂಭೀರವಾಣಿಯಿಂದ ಉಚ್ಚರಿಸಿ “ಎಲ್ಲ ಗುರುಮಹಾರಾಜ್! ಎಲ್ಲ ಗುರುಮಹಾರಾಜ್! ನಾನಾರು? ಎಲ್ಲ ಅವನೆ! ಆತನಿಷ್ಟವಿದ್ದಂತಾಗಲಿ!” ಎಂದರು. “ನನಗೇನು ಗೊತ್ತು? ಎಲ್ಲ ಅವನಿಗೆ ಗೊತ್ತು. ನಾನು ಅವನ ಆಜ್ಞಾಪಾಲಕ!” ಎಂದು ಅವರು ಹೇಳಿದಾಗ ಅವರ ನಮ್ರತೆ ವಿಶ್ವವನ್ನೆ ಗೆದ್ದ ಮಹಾತ್ಮನ ದೈನ್ಯತೆಯಂತೆ ಇತ್ತು. ದಡ್ಡರು ‘ನನಗೇನು ಗೊತ್ತು’ ಎಂದು ಹೇಳುವುದಕ್ಕೂ ಬ್ರಹ್ಮ ಸಾಕ್ಷಾತ್ಕಾರ ಮಾಡಿಕೊಂಡ ಆದರ್ಶ ಸಿದ್ದಪುರುಷನು ‘ನನಗೇನು ಗೊತ್ತು?’ ಎಂದು ಹೇಳುವುದಕ್ಕೂ ಅಜಗಜಾಂತರ ತಾರತಮ್ಯವಿದೆ.

ನಮ್ಮ ಹೆಸರನ್ನು ಕೇಳಿದರು. ತಾವೇ ಎರಡು ಸಲ ಉಚ್ಚರಿಸಿದರು. ಸ್ವಲ್ಪ ಹೊತ್ತು ಅವರ ಮುಂದೆ ನಿಂತಿದ್ದೆವು. ಶ್ರೀ ಗುರುಮಹಾರಾಜರು ಹೇಗಿದ್ದರು ಎಂಬುದು ಸ್ವಲ್ಪಮಟ್ಟಿಗಾದರೂ ಗೊತ್ತಾಗುತ್ತದೆ ಮಹಾಪುರುಷಜಿಯನ್ನು ನೋಡಿದರೆ, ಅವರು ಭಗವಾನರ ಪ್ರತಿಬಿಂಬ. ಅವರ ಮುಂದೆ ನಿಂತಾಗ ಒಬ್ಬ ಮಹಾಪುರುಷನ ಮುಂದೆ ನಿಂತಂತಾಗುತ್ತದೆ. ಅವರೊಂದು ದೊಡ್ಡ ಸಾಗರ. ನಾನು ನೋಡಿದ ಇತರ ಮಹಾವ್ಯಕ್ತಿಗಳಲ್ಲಿ ಯಾರಲ್ಲಿಯೂ ತೋರದ ಒಂದು ಅಲೌಕಿಕ ಆಧ್ಯಾತ್ಮ ಮಹಿಮೆ ಇವರಲ್ಲಿದೆ! ಜಯ ಗುರುದೇವ!

ತರುವಾಯ ಸ್ವಾಮಿ ವಿವೇಕಾನಂದರ ಕೊಠಡಿಗೆ ಹೋದೆವು. ಅವರು ಇಹಲೋಕವನ್ನು ಬಿಡುವಾಗ ಅವರ ಕೋಣೆ ಯಾವ ರೀತಿ ಇತ್ತೋ ಈಗಲೂ ಅದೇ ರೀತಿ ಇದೆ. ನೋಡಿದರೆ ಸ್ವಾಮಿಗಳು ಎಲ್ಲಿಯೋ ಕ್ಷಣಕಾಲ ಹೊರಗೆ ಹೋಗಿದ್ದಾರೆ, ಇನ್ನೇನು ಬಂದುಬಿಡುತ್ತಾರೆ, ಕಾದುಕೊಂಡಿರೋಣ ಎನ್ನುವ ಹಾಗಿದೆ. ಅವರ ಪಾದುಕೆಗಳಿಗೆ ನಮಸ್ಕಾರ ಮಾಡಿದೆವು.

ಕೋಣೆಯ ಒಂದು ಭಾಗದಲ್ಲಿ ಮಲಗುವ ಮಂಚ, ಒಂದು ಮೇಜು, ಒಂದು ಕುರ್ಚಿ. ಅಲ್ಲಿ ಒಂದು ಬುದ್ಧನ ವಿಗ್ರಹ. (ಅದು ಈಚೆಗೆ ಇಟ್ಟಿದ್ದಂತೆ.) ಅವರು ಉಪಯೋಗಿಸುತ್ತಿದ್ದ ತಂಬೂರಿ, ಕೊಡೆ, ಊರುಗೋಲು, ಬಟ್ಟೆಬರೆ, ಪುಸ್ತಕ ಎಲ್ಲಾ ಅಲ್ಲಿ ಇವೆ. ಸ್ವಲ್ಪವೂ ವ್ಯತ್ಯಾಸವಾಗಿಲ್ಲ. ಅಲ್ಲಿಯೆ ಮೂರು ದೊಡ್ಡದಾದ ಪರಮಹಂಸರ ತೈಲಚಿತ್ರಗಳು ಸ್ವಾಮಿಜಿಯ ಭಾವಚಿತ್ರಗಳೂ ಇವೆ. ಹಾಸಗೆಯ ಮೇಲೆ ಸ್ವಾಮಿಜಿಯ ಪಟಗಳನ್ನು ಇಟ್ಟಿದ್ದಾರೆ. “ಸ್ವಾಮಿಜಿ ಇಲ್ಲಿ ಮಲಗುತ್ತಲೆ ಇರಲಿಲ್ಲ. ಅಲ್ಲಿ ಹೊರಗಡೆ ವರಾಂಡದಲ್ಲಿ ಒಂದು ಬರಿಯ ಚಾಪೆಯ ಮೇಲೆ ಮಲಗುತ್ತಿದ್ದರು.” ಎಂದರು ಸ್ವಾಮಿ ಸಿದ್ಧೇಶ್ವರಾನಂದರು.

ಅಲ್ಲಿಂದ ಮಹಡಿಯ ವರಾಂಡಕ್ಕೆ ಹೋಗಿ ನಿಂತುಕೊಂಡೆವು. ಎಂತಹ ದೃಶ್ಯ! ತುಂಬಿ ಹರಿತುವ ಬಿತ್ತರದ ಎದೆಯ ಗಂಗಾಮಾತೆ ಕೆಂಗಾವಿಯುಟ್ಟಂತೆ ಕೆಂಪಾಗಿ ಹರಿಯುತ್ತಿರುವಳು. ಅಲ್ಲಲ್ಲಿ ದೋಣಿಗಳು, ಜಹಜುಗಳು, ಇಕ್ಕೆಲಗಳಲ್ಲಿಯ ನದಿಯು ತೀರದಲ್ಲಿ ಮಹಾ ಸೌಧಗಳ ಸಾಲು. ಅಲ್ಲಲ್ಲಿ ದಟ್ಟವಾಗಿ ತಳಿರಿಡಿದ ಹಸುರಿನ ಮರಗಳ ತೋಪುಗಳು. ಈ ಸ್ಥಳವನ್ನು ಗೊತ್ತುಹಚ್ಚಿ ಈ ರೀತಿ ಮಠ ಕಟ್ಟಿಸಿದ ಆ ರುದ್ರ ಸಂನ್ಯಾಸಿಯ ಹೃದಯದಲ್ಲಿ ಎಂತಹ ರಸಿಕತೆ ಇರಬೇಕು!

ತರುವಾಯ ಆರತಿ ಮುಗಿಸಿಕೊಂಡು ದೇವರ ಗುಡಿಯನ್ನು ಚೆನ್ನಾಗಿ ದರ್ಶನ ಮಾಡಿದೆವು. ಹಾಲುಗಲ್ಲುಗಳ ಚಪ್ಪಡಿಗಳಿಂದ ನುಣುಪಾಗಿ ಮಾಡಲ್ಪಟ್ಟ ನೆಲವು ತಣ್ಣಗಿತ್ತು. ಒಳಗೆ ಪೀಠದಲ್ಲಿ ಒಂದು ಚಿಕ್ಕ ಗುರುಮಹಾರಾಜರ ಶಿಲಾಕೃತಿಯಿದೆ. ಪಕ್ಕದ ಕೋಣೆಯೆ ಅವರ ಮಲಗುವ ಮನೆ. ಗುಡಿಯಿಂದ ಮಹಾಪುರುಷಜಿ ಇರುವ ಕೋಣೆಗೆ ಮಹಡಿಯ ಮೇಲೆಯೆ ಒಂದು ದಾರಿಯಿದೆ. ಮುದುಕರಾದ ಅವರು ಆಗಾಗ ಅಲ್ಲಿ ತಿರುಗಾಡುವರು.

ಅಂಗಳದಲ್ಲಿ ಸ್ವಹಸ್ತದಿಂದಲೆ ಹುಲ್ಲು ಕೊಯ್ಯುತ್ತಿದ್ದ ಸಂನ್ಯಾಸಿಗಳು ಕತ್ತಲಾದ ಮೇಲೆ ಒಳಗೆ ಹೋದರು. ದುರ್ಗೆಯನ್ನು ಸಿಂಗರಿಸುವುದರಲ್ಲಿ ಕೆಲವರು ಉದ್ಯುಕ್ತರಾದರು. ಆಹಃ! ಎಂತಹ ಸುಂದರ ವಿಗ್ರಹ ಅದು? ಅದನ್ನು ಸಿಂಗರಿಸುವುದರಲ್ಲಿಯೂ ಏನು ಚಮತ್ಕಾರ! ಒಂದು ಕಡೆ ಲಕ್ಷ್ಮಿ. ಒಂದು ಕಡೆ ಸರಸ್ವತಿ, ಒಂದು ಕಡೆ ಗಣೇಶ, ಇನ್ನೊಂದು ಕಡೆ ಸುಬ್ರಹ್ಮಣ್ಯ. ಮಲಗಿಯೂ ಮಲೆತಂತಿರುವ ಮಹಿಷಾಸುರನ ಕಣ್ಣುಗಳೇನು ಉಜ್ವಲ! ಆ ನಾಗರಹಾವೋ, ಆ ಸಿಂಹವೋ! ಅಲಂಕೃತಳಾದ ಮಾತೆ ಭಯಂಕರಳಾಗಿಲ್ಲ, ರಾಮಣೀಯಕವಾಗಿಹಳು!

ತರುವಾಯ ತಾನೊಬ್ಬನೆ ನಕ್ಷತ್ರಕಾಂತಿಯಲ್ಲಿ ಗಂಗೆಗೆ ಚಾಚಿಕೊಂಡಿರುವ ಮಠದ ಮುಂದಿನ ಸೋಪಾನಪಂಕ್ತಿಯ ಬುಡದ ವೇದಿಕೆಯ ಮೇಲೆ ತಿರುಗಾಡುತ್ತಾ ಮೆಲ್ಲಗೆ ಹಾಡಿಕೊಳ್ಳುತ್ತಾ ಸುತ್ತಲೂ ನೋಡಿದೆನು. ಅಲ್ಲಲ್ಲಿ ವಿದ್ಯುಚ್ಛಕ್ತಿಯ ದೀಪಗಳು ಎರಡೂ ದಡಗಳ ಮೇಲೆಯೂ ಮಿಣುಕುತ್ತಿದ್ದುವು. ಹೊಳೆಯಲ್ಲಿ ತೇಲಿ ಹೋಗುತ್ತಿದ್ದ ದೋಣಿಗಳ ಸೊಡರುಗಳು, ಸ್ಟೀಮರುಗಳ ಸರ್ಚ್‌ಲೈಟುಗಳು, ಕಾರ್ಖಾನೆಯಗಳ ಸದ್ದು! ಆದರೂ ಬೇಲೂರು ಮಠದಲ್ಲಿ ಒಂದು ಶಾಂತಿಯಿದೆ. ಅದರ ಸಂಗ ಸಂಸ್ಕಾರಗಳು ಮಹೋನ್ನತವಾದುವು…ಊಟ ಮುಗಿದು ಮೇಲೆ ವಸತಿಗೆ ಬಂದು ಮಲಗಿದೆವು.

೮-೧೦-೧೯೨೯: ಮಂಗಳವಾರ

ಇಂದು ನನ್ನ ಜೀವಮಾನದಲ್ಲಿ ಅತ್ಯಂತ ಶ್ರೇಷ್ಠವಾದ ದಿನಗಳಲ್ಲಿ ಒಂದು! ಏಕೆಂದರೆ ಶ್ರೀಮತ್ ಸ್ವಾಮಿ ಶಿವಾನಂದಜಿಯವರಿಂದ ನನಗೆ ದೀಕ್ಷೆ ಲಭಿಸಿತು. ಇದರ ವಿಷಯ ರಹಸ್ಯವಾಗಿರಬೇಕಾದುದರಿಂದ ನಾನು ಏನನ್ನೂ ಬರೆಯುವುದಿಲ್ಲ.

ಮಧ್ಯಾಹ್ನ ಶಾಶ್ವತಾನಂದ ಸ್ವಾಮಿಗಳ ಬಂಗಾಳಿ ಪದ್ಯಕಾವ್ಯಗಳನ್ನು ಓದಿ ಹೇಳಿದರು. ಮೈಕೇಲ್ ಮಧುಸೂದನ ದತ್ತರ ‘ಮೇಘನಾದ ವಧ’ ಎಂಬ ಕಾವ್ಯದಿಂದಲೂ ಮತ್ತು ಅವರ ಒಂದೆರಡು ‘ಸಾನೆಟ್’ಗಳನ್ನೂ ಓದಿ ತೋರಿಸಿದರು. ತರುವಾಯ ಸ್ವಲ್ಪ ಹೊತ್ತು ‘ಗೀತೆ’ಯ ವಿಚಾರವಾಗಿ ಮಾತಾಡಿದೆವು. ’ಗೀತೆಯ ಉದ್ದೇಶ ಯೋಗ. ಯೋಗ ಎಂದರೆ ಸಮತೆ. ಅಂದರೆ ಜ್ಞಾನ ಭಕ್ತಿ ಕರ್ಮಗಳ ಸಮನ್ವಯ. ಆನಂದ ಆಲೋಚನೆ ಆಚಾರ ಇವುಗಳ ಸಮನಾದ ಸಂಸ್ಕೃತಿ.’

ಸುಮಾರು ಮೂರುವರೆ ಗಂಟೆಯ ಹೊತ್ತಿಗೆ ಅನಂತಾನಂದ, ಸಿದ್ಧೇಶ್ವರಾನಂದ ಮತ್ತು ಇತರ ಸಿಂಹಳದ ಮಿತ್ರರೊಡನೆ ಒಂದು ದೋಣಿಯಲ್ಲಿ ಕುಳಿತು ದಕ್ಷಿಣೇಶ್ವರಕ್ಕೆ ಹೊರಟೆವು. ನವಯುಗಾವತಾರರಾದ ಶ್ರೀ ರಾಮಕೃಷ್ಣರ ಸಂಗದಿಂದ ಆ ಸ್ಥಳ ಜಗತ್ ಪಾವನವಾದುದಾಗಿದೆ. ನನ್ನ ಕಲ್ಪನೆಗೆ ಹಿಂದಿನ ಸ್ಮರಣೆಯೆಲ್ಲವೂ ಬಂದು ಭಾವೋನ್ಮತ್ತನಾದೆ.

ನದಿಯ ವಿಶಾಲ ಗಂಭೀರ ವಕ್ಷಸ್ಥಲದ ಮೇಲೆ ದೋಣಿ ಸರಾಗವಾಗಿ ತೇಲಿತು. ಬೇಲೂರ ಮಠದ ಸ್ನಾನಘಟ್ಟದಿಂದ ದಕ್ಷಿಣೇಶ್ವರದ ಸ್ನಾನಘಟ್ಟಕ್ಕೆ ಸುಮಾರು ಎರಡೂವರೆ ಮೈಲಿಗಳಿರಬಹುದು. ಮಹಾಪುರುಷನೊಬ್ಬನು (ತನ್ನ ಆಧ್ಯಾತ್ಮಿಕ ಸಾಧನೆಯಿಂದ) ಜನ್ಮವೆತ್ತಿದ ಸ್ಥಳಕ್ಕೆ ಹೋಗುತ್ತಿರುವೆನಲ್ಲಾ ಎಂದು ನನ್ನ ಹೃದಯ ಪಾವನವಾಗತೊಡಗಿತು. ದಡಗಳಲ್ಲಿರುವ ಮನೆ, ಮಠ, ತೆಂಗಿನಮರ, ಹೊಗೆಯಾಡುವ ನವನಾಗರಿಕತೆಯ ಚಿಮ್ನಿಗಳು, ನೀಲಾಗಸ, ತೇಲುವ ಬೆಳ್ಮುಗಿಲು, ಬೈಗಿನ ಕೆಂಪಿನ ನೇಸರು ಎಲ್ಲವೂ ಆನಂದಕರವಾಗಿದ್ದುವು. ಹೊಸದಾಗಿ ಕಟ್ಟುತ್ತಿರುವ ಕಬ್ಬಿಣದ ಸೇತುವೆಯನ್ನು ದಾಟಿದೆವು. ಶ್ರೀ ಗುರುದೇವನ ಕಾಲದ ದಕ್ಷಿಣೇಶ್ವರದ ಪವಿತ್ರತಮವಾದ ಗಂಭೀರಶಾಂತಿ ನವನಾಗರಿಕತೆಯ ಯಂತ್ರಗಳ ದಾಂದಲೆಗೆ ಒಳಗಾಗಿ ಹೋಗಿದೆ. ಆದರೂ ನನಗೆ ದಕ್ಷಿಣೇಶ್ವರದಲ್ಲಿ ಆತ್ಮಜ್ಯೋತಿಯ ಅನುಭವ ಆಗದೆ ಹೋಗಲಿಲ್ಲ. ಸ್ನಾನಘಟ್ಟದಲ್ಲಿ ಇಳಿದು ಗಂಗೆಯಲ್ಲಿ ಕೈಕಾಲು ತೊಳೆದುಕೊಂಡು ಗುಡಿಯನ್ನು ಪ್ರವೇಶಿಸಿದೆವು. ಆರಾರು ಶಿವದೇವಾಲಯಗಳು ಎರಡೂ ಪಕ್ಕದಲ್ಲಿವೆ. ಒಳಗೆ ಅಂಗಣ. ಅಲ್ಲಿ ಎಡಗಡೆ ರಾಧಾಗೋವಿಂದ. ಮಧ್ಯೆ ಕಾಳಿಯ ಗುಡಿ. ಬಲಕ್ಕೆ ನಾಟ್ಯಮಂದಿರ. ಸುತ್ತಲೂ ಪ್ರಾಕಾರ.  ಮೊದಲು ಹೋಗಿ ಭಗವಾನರ ಮಹಾಮಾತೆಯಾದ ದೇವಿಯ ದರ್ಶನ ಮಾಡಿದೆವು. ಗುರುದೇವನು ಅರ್ಚಿಸಿದ ವಿಗ್ರಹವನ್ನು ನೋಡಿದೆ. ಆತನು ತುಳಿದ ನೆಲವನ್ನು ತುಳಿದಾಗ ನನ್ನ ಮನಸ್ಸು ಗಗನಕ್ಕೆ ಹಾರಿತು. ಅಲ್ಲಿ ‘ರಾಮಲಾಲ’ ವಿಗ್ರಹವನ್ನೂ ನೋಡಿದೆವು. ಖಡ್ಗವನ್ನೂ ನೋಡಿದೆವು. ಆಹಾ ಇಲ್ಲಿಯೆ ಮಹತ್ಕಾರ್ಯಗಳು ನಡೆದವಲ್ಲವೆ? ದಕ್ಷಿಣೇಶ್ವರದಲ್ಲಿ ಜಡವೆಂಬುದಿಲ್ಲ. ಸರ್ವವೂ ಚೈತನ್ಯಮಯ ಅಲ್ಲಿಯ ಕಲ್ಲು ಮಣ್ಣು ಮರ ದೂಳು ಗಾಳಿ ಗಗನ ಎಲ್ಲವೂ ಕತೆ ಹೇಳುತ್ತವೆ, ಮಾತಾಡುತ್ತವೆ. ಎಲ್ಲವೂ ಗುರುಗಳೆ! ನಾನು ಶಿಷ್ಯ!

ಅಲ್ಲಿಂದ ಗುರುದೇವನು ವಾಸಿಸುತ್ತಿದ್ದ ಕೊಠಡಿಗೆ ಹೋದೆವು. ಎಲ್ಲವೂ ಆಗ ಇದ್ದ ಹಾಗೆಯೆ ಇವೆ. ಆತನು ಮಲಗುತ್ತಿದ್ದ ಮಂಚಗಳು, ಆಗ ಅಲ್ಲಿದ್ದ ಚಿತ್ರಪಟಗಳು, ಆತನು ಉಪಯೋಗಿಸುತ್ತಿದ್ದ ನೀರಿನ ಹಂಡೆ! ನಾವು ಅದರಿಂದ ನೀರು ಕುಡಿದೆವು. (ಅಂದರೆ ತೀರ್ಥದ ರೂಪದಲ್ಲಿ ಬಾಯಿಗೆ ಬಿಟ್ಟುಕೊಂಡೆವು.) ಅವರು ಬರೆದ ಕೈಯಕ್ಷರ. ಸಾಷ್ಟಾಂಗ ನಮಸ್ಕಾರ ಮಾಡಿದೆವು. ನಾನು ಹುಚ್ಚನಂತೆ ಆಗಿಬಿಟ್ಟೆ. ಕುಳಿತು ಧ್ಯಾನ ಮಾಡೋಣ ಎಂದು ನಿರ್ಧರಿಸಿ ಕಣ್ಣುಮುಚ್ಚಿದೆವು.

ಅಷ್ಟರಲ್ಲಿ ಶ್ರೀ ಗುರುದೇವನ ಶುಶ್ರೂಷೆಯನ್ನು ಹದಿನಾಲ್ಕು ವರ್ಷಗಳ ಪರಿಯಂತ ಮಾಡಿದ, ಈಗ ಮುದುಕರಾಗಿರುವ ಶ್ರೀ ರಾಮಲಾಲದಾದ ಅವರು ಬಂದರು. ಎಲ್ಲರೂ ಎದ್ದು ಪ್ರಣಾಮ ಮಾಡಿದೆವು. ಅವರು ಆಶೀರ್ವದಿಸಿದರು. ಅವರಿಗೆ ಇಂಗ್ಲಿಷ್ ಬರುವುದಿಲ್ಲ. ಬಂಗಾಳಿಯಲ್ಲಿ ಮಾತಾಡಿದರು. ನಮ್ಮ ಆಕೃತಿಗಳನ್ನು ನೋಡಿ ರೂಪದಿಂದ ಹೇಗೆ ಹೃದಯವನ್ನು ತಿಳಿಯಬಹುದೆಂದು ಹೇಳಿದರು. ನಾವೆಲ್ಲರೂ ಅವರ ಸುತ್ತ ಕುಳಿತೆವು. ದಕ್ಷಿಣೆ ಕೊಟ್ಟು ನಮಸ್ಕಾರ ಮಾಡಿದೆವು. (ದಕ್ಷಣೇಶ್ವರದಲ್ಲಿ ಪೂಜಾರಿಗಳು ದಕ್ಷಿಣೆ ಕೇಳುವುದಿಲ್ಲ.) ತರುವಾಯ ರಾಮಲಾಲದಾದರ ಫೋಟೊ ತೆಗೆದುಕೊಂಡೆವು.

ಅಲ್ಲಿಂದ ಮಹಾಮಾತೆ ವಾಸಿಸುತ್ತಿದ್ದ ಒಂದು ಚಿಕ್ಕ ಬೆಳಕಿಲ್ಲದ ಮಂದಿರಕ್ಕೆ (ನಹಬತ್ ಖಾನೆ) ಹೋದೆವು. ಅದನ್ನೆಲ್ಲ ನೋಡಿ. ನಾನು ನಿಟ್ಟುಸಿರು ಬಿಟ್ಟೆ. ಜಗನ್ಮಾತೆ ಮನುಷ್ಯಾಕೃತಿಯಲ್ಲಿ ಬಂದರೆ ಇದೇನೆ ನಾವು ಆಕೆಗೆ ಕೊಡುವ ಆವಾಸ ಮಂದಿರ?… ಅಲ್ಲಿಂದ ಪಂಚವಟಿಗೆ ಹೋಗಿ ನಮಸ್ಕರಿಸಿದೆವು. ಅಲ್ಲಿಂದ ಬಿಲ್ವವೃಕ್ಷದ ಬಳಿಗೆ ಹೋದೆವು. ಅಲ್ಲಿಯೆ ಪರಮಹಂಸರು ತಾಂತ್ರಿಕ ಸಾಧನೆ ಮಾಡಿದುದು. ತೋತಾಪುರಿ ಧುನಿಯ ಬಳಿಯಲ್ಲಿ ಕುಳಿತಿದ್ದಾಗ ಕಂಡ  ಬ್ರಹ್ಮದೈತ್ಯನ ಮರವನ್ನೂ ನೋಡಿದೆವು. ಮಥುರಬಾಬುವಿನ ಅರಮನೆ ಈಗ ಮುರಿದುಬೀಳುತ್ತಿದೆ. ಗುರುದೇವನು ತನ್ನ ಕೈಯಿಂದಲೆ ಬರೆದ ಚಿತ್ರವು ಇನ್ನೂ ಗೋಡೆಯ ಮೇಲೆ ಇದೆ. ಇದ್ದಲಿನಲ್ಲಿ ಬರೆದಿದ್ದಾರೆ. ಒಂದು ಹಕ್ಕಿ ಒಂದು ಹೂವಿನ ಗಿಡದ ಮೇಲೆ ಕೂತಂತಿದೆ. ಗುರು ಮಹಾರಾಜರು ಇಸ್ಲಾಂ ಸಾಧನೆ ಸ್ಥಳ, ಅವರು ಮೊದಲು ಮಥುರಬಾಬುವಿನ ಅರಮನೆಯಲ್ಲಿಯೆ ಸಾಧನೆ ಮಾಡಿದ ಕೋಣೆ ನೋಡಿದೆವು.  ದಕ್ಷಿಣೇಶ್ವರದಲ್ಲಿ ಪ್ರತಿಯೊಂದು ವಸ್ತುವೂ ಪವಿತ್ರವಾದುದೆ! ಅದರಲ್ಲಿಯೂ ಗುರುದೇವನ ಜೀವನ ಚರಿತ್ರೆಯನ್ನು ಚೆನ್ನಾಗಿ ಓದಿದವನಿಗಂತೂ ಹೇಳಬೇಕಾದುದೇ ಇಲ್ಲ! ನಾನೇನಾದೆನೋ ನನಗೇ ಗೊತ್ತಿಲ್ಲ.

ಶಿವದೇವಾಲಯಗಳನ್ನು ನೋಡಿದೆವು. ಶ್ರಿ ರಾಮಲಾಲದಾದರು ಪ್ರಸಾದ ಹಂಚಿದರು. ಹಣೆಗೆ ಬೊಟ್ಟಿಟ್ಟರು. ಅಷ್ಟು ಹೊತ್ತಿಗೆ ಕತ್ತಲಾಗುತ್ತಿತ್ತು. ಪಡುವಣ ಗಗನವು ದಕ್ಷಣೇಶ್ವರದ ಅಗೋಚರವಾದ, ಅನುಭವಮಾತ್ರ ವೇದ್ಯವಾದ ಆತ್ಮಜ್ಯೋತಿಯನ್ನು ಪ್ರತಿಬಿಂಬಿಸುವಂತೆ ರಹಸ್ಯ ರಮಣೀಯವಾಗಿ ರಂಜಿಸುತ್ತಿತ್ತು. ನನಗೆ ಎಲ್ಲವೂ ಯಾವುದೋ ಒಂದು ಮಹಾ ಸುವರ್ಣ ಸ್ವಪ್ನದೋಪಾದಿಯಲ್ಲಿ ತೋರಿತು. ‘ಹಾ! ಗುರುದೇವ, ಕ್ಷಣಮಾತ್ರ ನಿನ್ನ ಸ್ಥೂಲರೂಪದ ದರ್ಶನವಿತ್ತು ನನ್ನನ್ನು ಕೃತಾರ್ಥನನ್ನಾಗಿ ಮಾಡು’ ಎಂದೆನು. ‘ಬಾ ಬಾ ಗುರುವೆ, ನೀನೆಲ್ಲರುವೆ?’ ‘ಯಾತ್ರಿಕನೆ, ಕೈಮುಗಿ, ದೋಣಿಯಿಂದಿಳಿ ಕೆಳಗೆ. ಇಲ್ಲಿಗೆ ಮರ್ತ್ಯವು ಮುಗಿಯಿತು. ಇನ್ನು ಮುಂದಿರುವುದು ಸ್ವರ್ಗ. ಗಂಗೆಯ ನೀರಿನಿಂದ ಪವಿತ್ರವಾಗಿ ಮಂದಿರವನ್ನು ಪ್ರವೇಶಿಸು.’ ಹೀಗೆಲ್ಲ, ಮುಂದೆ ನಾನು ಬರೆಯಬಹುದಾದ ಕವನಗಳಿಗೆ ಹದಿಹಾಕುವಂತೆ ಮನದಲ್ಲಿಯೆ ಹೇಳಿಕೊಂಡೆ.

ಮನಸ್ಸಿಲ್ಲದ ಮನಸ್ಸಿನಿಂದ ದೋಣಿಗೆ ಬಂದೆವು. ಷಷ್ಠಿಯ ಚಂದ್ರನು ಬಾಂದಳದಲ್ಲಿ ಮೆರೆಯುತ್ತಿದ್ದನು. ಗಂಗಾಜಲವೆಲ್ಲ ಅವನ ಮಂದಕ್ರಾಂತಿಯಿಂದ ಅಲ್ಪಪ್ರಕಾಶಮಾನವಾಗಿತ್ತು. ನಾಗರಿಕತೆಯ  ಸದ್ದುಗಳು ಕೇಳಿಸುತ್ತಿದ್ದುವು. ಆದರೆ ಸ್ವಪ್ನಸ್ಥನಂತಿದ್ದ ನನಗೆ ಎಲ್ಲವೂ ಶಾಂತಿಯಿಂದ, ಮಹಿಮೆಯಿಂದ ಆನಂದದಿಂದ ತುಂಬಿ ತುಳುಕುತ್ತಿತ್ತು. ದೋಣಿ ಬೇಲೂರು ಮಠಕ್ಕೆ ಹೊರಟಿತು. ನಾನು ‘ದೂರ, ಬಹುದೂರ, ಹೋಗುವ ಬಾರಾ’ ಎಂಬ ನನ್ನ ‘ದೋಣಿಗನ ಹಾಡು’ ಅನ್ನು ಮೆಲ್ಲಗೆ ಹಾಡಿಕೊಳ್ಳತೊಡಗಿದೆ. ಅನಂತಾನಂದ ಸ್ವಾಮಿಗಳು ನನ್ನನ್ನು ಗಟ್ಟಿಯಾಗಿ ಹಾಡುವಂತೆ ಬೆಸಸಿದರು. ‘ಶ್ರೀ ರಾಮಕೃಷ್ಣ ಪರಮ ಹಂಸ’ ಎಂಬ ಕವನವನ್ನು ಕೊರಳೆತ್ತಿ ಹಾಡಿದೆನು. ತರುವಾಯ ‘ಗಾನದರ್ಶನ’ವನ್ನೂ ಹಾಡಿದೆ. ಬೊಂಬಾಯಿ ಆಶ್ರಮದ ಗುಣಾತೀತಾನಂದರು ಮರಾಠಿಯ ಹಾಡೊಂದನ್ನು ಹಾಡಿದರು.

ಸ್ವಾಮಿ ಸಿದ್ದೇಶ್ವರಾನಂದರು “ಶ್ರೀ ರಾಮಕೃಷ್ಣ ಮಿಶನ್ ಎಂದರೆ ಸರ್ವಧರ್ಮಭಾಷಾ ಪಾಕ ಸಮನ್ವಯ! ತಮಿಳಿನ ಗೀತೆಯೊಂದನ್ನು ಹಾಡಿ” ಎಂದು ಸಿಂಹಳದವರಿಗೆ ಹೇಳಿದರು. ತಾವೇ ತೆಲುಗಿನ ಕೀರ್ತನೆ ಹಾಡುವುದಾಗಿಯೂ ಹೇಳಿದರು. ನಾನು ಡಿ.ವಿ.ಗುಂಡಪ್ಪನವರ ‘ವನಸುಮ’ ಎಂಬ ಪದ್ಯ ಹಾಡಿದೆ. ಆಹಾ! ಗಂಗಾಮಾತೆ ನನ್ನ ನೆಚ್ಚಿನ ಕನ್ನಡವನ್ನಾಲಿಸಿ ತೆರೆಗಳೆಂಬ ಮುಗುಳುನಗೆಯ ಲೀಲೆಯಿಂದ ನನ್ನ ಸುತ್ತಲೂ ನಲಿದಳು! ನಮ್ಮ ಯಾತ್ರೆ ಅತ್ಯಂತ ಪವಿತ್ರವೂ ರಮ್ಯವೂ ಭಾವಮಯವೂ ಪ್ರಶಾಂತವೂ ಆಗಿತ್ತು! ದಿವ್ಯ ದಿನ! (ನನ್ನ ತಾಯಿ ತಂದೆ ತಂಗಿ ಮೊದಲಾದ ಗತಿಸಿದವರನ್ನೆಲ್ಲ -(ತಿಮ್ಮು ಇತ್ಯಾದಿ)- ದಕ್ಷಿಣೇಶ್ವರದಲ್ಲಿ ನೆನೆದೆ.)

೯-೧೦-೧೯೨೯: ಬುಧವಾರ

ಪ್ರಾತಃಕಾಲ ಎದ್ದು ವ್ಯಾಯಾಮ ಮುಗಿಸಿಕೊಂಡು ಟೀ ಕುಡಿದು ಅಖಂಡಾನಂದ ಸ್ವಾಮಿಗಳ ಕೊಠಡಿಗೆ ಹೋದೆವು. ಮಹಾಪುರುಷಜಿಯವರನ್ನು ನೋಡಲಾಗಲಿಲ್ಲ. ಅಖಂಡಾನಂದರು ಬಂಗಾಳಿಯಲ್ಲಿಯೆ ಮಾತಾಡುತ್ತಿದ್ದರು. ನನಗೆ ಬೇಸರವಾಯಿತು. ಎಂಥವರೆ ಆಗಲಿ ವಿಷಯ ಅರ್ಥವಾಗದಿದ್ದರೆ ಏನು ಮಾಡಿಯಾರು?….

ಬಟ್ಟೆ ಒಗೆದುಕೊಂಡೆವು. ಸ್ನಾನ ಮಾಡಿದೆವು. ಕೆಲವು ಆಗಂತುಕರಿಗೆ ಪಶ್ಚಿಮಘಟ್ಟಗಳ ಮತ್ತು ಮೈಸೂರಿನ ಪ್ರಕೃತಿ ವೈಭವವನ್ನು ವರ್ಣಿಸಿದೆ.

ಶಾಶ್ವತಾನಂದ ಸ್ವಾಮಿಗಳು ಬಂಗಾಳಿ ಕವಿತೆಯ ಛಂದಸ್ಸಿನ ವಿಚಾರವಾಗಿ ಸ್ವಲ್ಪ ಹೊತ್ತು ಮಾತಾಡಿದರು. ಅವರ ಭಾಷೆಯಲ್ಲಿ ಕನ್ನಡಕ್ಕೆ ಇರುವ ಛಂದೋ ಸೌಲಭ್ಯಗಳಿಲ್ಲವೆಂದು ತೋರುತ್ತದೆ.

ಮೂರು ಗಂಟೆಯ ಹೊತ್ತಿಗೆ ಹೋಗಿ ಮಹಾಪುರುಷ ಮಹಾರಾಜರನ್ನು ನೋಡಿದೆವು. ನಾವು ನಿನ್ನೆ ದಕ್ಷಿಣೇಶ್ವರಕ್ಕೆ ಹೋಗಿ ಬಂದ ಸಂಗತಿಯನ್ನು ಕೇಳಿ “How did you like it?”  ಎಂದು ಕೇಳಿದರು. ಅವರನ್ನು ನೋಡಿದಾಗೆಲ್ಲಾ ಶಿವಾನಂದರು ಶ್ರೀ ರಾಮಕೃಷ್ಣರಲ್ಲಿ ಮಗ್ನರಾದಂತೆ ತೋರುತ್ತದೆ.

ಮೂರುವರೆ ಗಂಟೆ ಹೊತ್ತಿಗೆ ಸ್ಟೀಮರ್ ಘಟ್ಟಕ್ಕೆ ಬಂದು ಸ್ಟೀಮರ್ ಹತ್ತಿ ಉದ್ಭೋದನ ಆಫೀಸಿಗೆ ಹೊರಟುಬಂದೆವು. ನಮ್ಮ ಗಂಗಾಯಾನ ರಮಣೀಯವಾಗಿತ್ತು. ಉದ್ಭೋದನ ಆಫೀಸಿನಲ್ಲಿ ಶಾರದಾನಂದ ಸ್ವಾಮಿಗಳ ಮತ್ತು ಮಹಾಮಾತೆಯವರ ಕೋಣೆಗಳನ್ನು ಸಂದರ್ಶಿಸಿದೆವು. ಕೋಕಾ ಮಹಾರಾಜ್ (ಸ್ವಾಮಿ ಸುಬೋಧಾನಂದರು) ಹಾಸಗೆ ಹಿಡಿದು ಕ್ಷೀಣದೇಹರಾಗಿ ಮಲಗಿದ್ದರು. ಅವರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದೆವು. ತರುವಾಯ ಪ್ರಸಾದ ಸ್ವೀಕಾರವೂ ಆಯಿತು. (ಅಂದರೆ ಭೋಜನ ಆಯಿತು ಎಂದರ್ಥ!) ಟೀ ಸಿಕ್ಕಿತು. ಪ್ರಸಾದ್ ಮಹಾರಾಜ್, ಶ್ರೀಧರ ಮಹಾರಾಜ್ ಇವರನ್ನು ಕಂಡೆವು. ಅಲ್ಲಿಂದ ‘ಶ್ರೀರಾಮಕೃಷ್ಣ ಕಥಾಮೃತ’ದ ಸುಪ್ರಸಿದ್ಧ ಗ್ರಂಥಕರ್ತರಾದ ಮಾಸ್ಟರ್ ಮಹಾಶಯರ ಮನೆಯನ್ನು ಹುಡುಕಿಕೊಂಡು ಹೊರಟೆವು. ಕಲ್ಕತ್ತಾ ಬೀದಿಗಳ ಗಲಭೆ ಸಾಕಾಗಿಹೋಯಿತು ನನಗೆ. ಅಂತೂ ಕಡೆಗೆ ದೊಡ್ಡ ಮಹಡಿಯೊಂದನ್ನು ಹತ್ತಿ ಕವಿದಿದ್ದ ಕತ್ತಲೆಯಲ್ಲಿಯೆ ಹೋದೆವು.

ಮಾಸ್ಟರ್ ಮಹಾಶಯರು ಬೊಳುಮಹಡಿಯಲ್ಲಿ (ಅನೇಕ ಅಂತಸ್ತಿನ ಕಟ್ಟಡದ ಕೊನೆಯ  ಅಂತಸ್ತಿನ ತಾರಸಿಯ ಮೇಲೆ) ಕುರ್ಚಿಯ ಮೇಲೆ ಕುಳಿತು ಧ್ಯಾನಸಕ್ತರಾಗಿದ್ದರು. ನಾವು ನಮಸ್ಕಾರ ಮಾಡಿದೆವು. ಸ್ವಲ್ಪ ಹೊತ್ತಾದ ಮೇಲೆ ನಮ್ಮೊಡನೆ ಸ್ನೇಹಪೂರ್ಣ ವಾತ್ಸಲ್ಯಭಾವದಿಂದ ಮಾತಾಡತೊಡಗಿದರು. ನವಶಿಲಾಯುಗಾವತಾರನ ಲೀಲೆಯನ್ನು ಜಗತ್ತಿಗೆ ತಿಳುಹಿದವರಲ್ಲಿ ಮೊತ್ತಮೊದಲಿಗರು ಅವರೇ. ನಿಳವಾದ ಗಡ್ಡದಿಂದಲೂ ಬಿಳಿದಾದ ಕೂದಲಿನಿಂದಲೂ ಗಾಂಭೀರ್ಯದ ಮೂರ್ತಿಯಾಗಿರುವರವರು. ಅಷ್ಟೇನೂ ಆಡಂಬರದ ಮನುಷ್ಯನಲ್ಲ. ಬಹಳ ಸಾಧಾರಣ ವಸ್ತ್ರಗಳನ್ನು ಧರಿಸಿದ್ದರು. ನನ್ನನ್ನು ಕವಿ ಎಂದು ಸಿದ್ಧೇಶ್ವರಾನಂದರು ಪರಿಚಯ ಮಾಡಿಕೊಟ್ಟ ಮೇಲೆ ನಾನು ಬರೆದ ‘ಶ್ರೀರಾಮಕೃಷ್ಣ ಪರಮಹಂಸ’ ಎಂಬ ಕವನವನ್ನು ಹಾಡಲು ಹೇಳಿದರು. ನಾನು ಹಾಡಿದೆ. ಅವರು ಬಹಳ ಸಂತೋಷಪಟ್ಟು ಅದರ ಪಂಕ್ತಿಪಂಕ್ತಿಯಾದ ಭಾಷಾಂತರವನ್ನು ಬಂಗಾಳಿಯಲ್ಲಿ ಬರೆದು ಕಳುಹಿಸಬೇಕೆಂದು ಸ್ವಾಮಿಜಿಯೊಡನೆ ಹೇಳಿದರು. ನಮ್ಮನ್ನು ತಮ್ಮ ಕೊಠಡಿಯ ಒಳಕ್ಕೆ ಕರೆದೊಯ್ದು ಅಲ್ಲಿದ್ದ ಪಠಗಳನ್ನು ತೋರಿಸಿದರು. ಶ್ರೀ ಗುರುದೇವನ ಯೋಗಿಯ ದೃಷ್ಟಿಯು ಮೊಟ್ಟೆಯ ಮೇಲೆ ಕಾವು ಕುಳಿತ ಹಕ್ಕಿಯ ದೃಷ್ಟಿಯಂತೆ ಅಂತರ್ಮುಖವಾಗಿರುವುದನ್ನು ಚಿತ್ರವಾಗಿ ಬರೆಯಿಸಿದ್ದ ಪಟವನ್ನೂ ನೋಡಿದೆವು. ಶಿವನ ತಾಂಡವ ನೃತ್ಯ, ಗುರು ಮಹಾರಾಜರು, ಮಹಾಮಾತೆ ಮೊದಲಾದವರ ಚಿತ್ರಗಳೂ ಇದ್ದುವು. ಕೋಣೆ ಸ್ವಲ್ಪ ಕೊಳಕಾಗಿಯೂ ನಿಯಮವಿಹೀನವಾಗಿ ಹರಡಲ್ಪಟ್ಟ ತುಂಬಿ ‘ಅಂತಸ್ತಿನ ಅವತಾರ’ದಂತಿತ್ತು!

ತರುವಾಯ ಸಂಭಾಷಣೆ ಆರಂಭವಾಯಿತು. ಹಕ್ಸ್ಲೆ ವಿಷಯ ಹೇಳಿ “ವಿಜ್ಞಾನಶಾಸ್ತ್ರದ ದೃಷ್ಟಿಯೆ ಬೇರೆ ಆಧ್ಯಾತ್ಮಶಾಸ್ತ್ರದ ದೃಷ್ಟಿಯೆ ಬೇರೆ ಎಂಬುದನ್ನು ವಿವರಿಸಿ ತಿಳಿಸಿದರು. ಆದ್ದರಿಂದಲೆ ಯಾವುದನ್ನು ವಿಜ್ಞಾನಿಗಳು ಕಾಣಲಾರರೊ ಕೇಳಲಾರರೊ ಅದನ್ನು ಯೋಗಿಗಳು ಕಾಣಬಲ್ಲರು, ಕೇಳಬಲ್ಲರು. It is very difficult for the ordinary mind to think that God is seeable. Our privilege was to come in contact with a man who saw and talked with God.” ಎಂದೆಲ್ಲ ನುಡಿದರು.

ತರುವಾಯ ಸ್ವಾಮಿಜಿ “ಮಹಾಶಯ, ನಾವು ಇಷ್ಟೆಲ್ಲ ಪ್ರಯತ್ನಪಟ್ಟರೂ ನಮಗೆ ಇನ್ನೂ ದಿವ್ಯಾನುಭವವಾಗಲಿಲ್ಲ.” ಎಂದರು.

ಅದಕ್ಕೆ ಅವರು “ಛೇ, ಹಾಗೆನ್ನಬಾರದು. ಗುರುದೇವನು ನಿಮ್ಮ ಮೇಲೆ ಕೃಪಾವರ್ಷವನ್ನೆ ಕರೆದಿದ್ದಾನೆ. ಅದು ನಿಮಗೆ ತಿಳಿದಿದೆ. ನಾವೀಗ ವಾಯುಮಂಡಲದ ಭಾರವೆಷ್ಟನ್ನು ಹೊತ್ತುಕೊಂಡಿದ್ದೇವೆ. ಆದರೆ ಆ ಭಾರದ ಅನುಭವವು ನಮಗೆ ಆಗುತ್ತಿದೆಯೆ? ಹಾಗೆಯೆ ನೀವು ಆತ್ಮಜ್ಯೋತಿಯ ಕಡಲಿನಲ್ಲಿ ಮಗ್ನವಾಗಿರುವುದರಿಂದ ಒಂದು ತರಹದ ಕತ್ತಲೆಯ ಕವಿದುಕೊಂಡಂತೆ ಭಾಸವಾಗುತ್ತಿದೆ. ಅಂದಮಾತ್ರಕ್ಕೆ ಅದಿಲ್ಲ ಎನ್ನಬಾರದು.” ಎಂದರು.

ಆಮೇಲೆ ಅವರ ‘ಕಥಾಮೃತ’ವೆ ನಮ್ಮನ್ನೆಲ್ಲ ಗುರುಮಹಾರಾಜರ ಬಳಿಗೆ ತಂದಿತು ಎಂದೆವು. ಆಗ ಅವರು ಭಕ್ತ, ಭಾಗವತ ಮತ್ತು ಭಗವಾನ್ ಈ ಮೂರೂ ಒಂದೇ ಎಂಬ ತತ್ವವನ್ನು ವಿವರಿಸಿದರು. ರೋಮನ್ ರೋಲೆಂಡ್ (Roman Rolland)  ಪ್ರಸ್ತಾಪ ಬಂದಿತು. ಶ್ಲಾಘಿಸಿದರು. “Avatar makes history and history prepares the ground for the advent fo the Avatar”  ಎಂದರು. ಮತ್ತೆ “Don’t scatter pearls before swine” ಎಂದೂ ಸೇರಿಸಿದರು. ಅಷ್ಟು ಹೊತ್ತಿಗೆ ಸ್ವಾಮಿ ರಾಘವಾನಂದರು ಬಂದರು, ಮಾಸ್ಟರ್ ಮಹಾಶಯರು ಬಹು ದೊಡ್ಡ ವ್ಯಕ್ತಿ. ಆದರೂ ತುಂಬ ರಾಘವಾನಂದರು ಬಂದರು. ಮಾಸ್ಟರ್ ಮಹಾಶಯರು ಬಹು ದೊಡ್ಡ ವ್ಯಕ್ತಿ. ಆದರೂ ತುಂಬ ಸರಳ ಸ್ವಭಾವದವರು. ಹೊರಡುವಾಗ ನಾವು ಕಾಲು ಮುಟ್ಟಿ ನಮಸ್ಕರಿಸಲು ‘ಬೇಡ! ಬೇಡ!’ ಎಂದು ತಡೆದು ಹಸ್ತಲಾಘವವಿತ್ತು ಕಳಿಸಿದಾರು. ಅಲ್ಲಿಂದ ಹೊರಟು ಅದ್ವೈತಾಶ್ರಮಕ್ಕೆ ಬಂದೆವು.

ಅಲ್ಲಿ ‘ಪ್ರಬುದ್ಧ ಭಾರತ’ದ ಸಂಪದಕರಾಗಿದ್ದ ಅಶೋಕಾನಂದ ಸ್ವಾಮಿಗಳನ್ನು ಕಂಡೆವು. ಸ್ವಲ್ಪ ಹೊತ್ತಿನಲ್ಲಿಯೆ ಅವರು ಎಂತಹ ಮೇಧಾವಿ ಎಂಬುದು ನನ್ನ ಮನಸ್ಸಿಗೆ ಹೊಳೆಯಿತು. ಗಾಂಧೀಜಿಯವರೊಡನೆ ಅವರು ಹೂಡಿದ್ದ ಖದ್ದರ್ ವಿಚಾರವಾದ ವಾಗ್ವಾದದ ಪ್ರಸ್ತಾಪವಾಯಿತು. ರೋಮಾ ರೋಲಾ ವಿಚಾರ ಮಾತಾಡಿದೆವು. ರಾಧಾಕೃಷ್ಣನ್ ಅವರು ಪ್ರಭಾವಶಾಲಿಗಳೆಂಬುದನ್ನು ವಿನೋದವಾಗಿ ಸಮರ್ಥಿಸಿದರು ವಿನೋದವಾಗಿ ಸಮರ್ಥಿಸಿದರು.

‘ಸಮನ್ವಯ’ ಬಂಗಾಳಿ ಮಾಸಪತ್ರಿಕೆಯ ಸಂಪಾದಕರ ಪರಿಚಯವಾಯಿತು. ಅವರಿಗೆ ಮೈಸೂರು ವಿಶ್ವವಿದ್ಯಾಲಯದ ವಿಚಾರವಾಗಿಯೂ ಡಾ. ಬ್ರಜೇಂದ್ರನಾಥ ಶೀಲ್ ಅವರ  ವಿಚಾರವಾಗಿಯೂ ಸಂಗತಿಗಳನ್ನು ತಿಳಿಸಿದೆವು. ರೋಜಾ ರೋಲಾ ಅವರ ಶ್ರೀರಾಮಕೃಷ್ಣ-ವಿವೇಕಾನಂದ ಜೀವನ ಚರಿತ್ರೆಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಹಕ್ಕನ್ನು ನಮಗೆ ಕೊಡುವುದಾಗಿ ಹೇಳಿದರು.

೧೦-೧೦-೧೯೨೯: ಗುರುವಾರ

ನನಗೆ ಮಂತ್ರದೀಕ್ಷೆ ಆದ ಆನಂತರ ಶಾಶ್ವತಾನಂದ ಸ್ವಾಮಿಗಳು ಒಂದು ಜಪಮಾಲೆಯನ್ನು ಇಟ್ಟುಕೊಳ್ಳುವಂತೆ ಹೇಳಿದರು. ಸಾಮಾನ್ಯವಾಗಿ ಮಂತ್ರದೀಕ್ಷೆ ಪಡೆದವರೆಲ್ಲ ಜಪಮಾಲೆಯಿಡುವುದು ವಾಡಿಕೆ. ಆದರೆ ನನ್ನ ಕವಿಚೇತನಕ್ಕೆ ಅಂತಹ ಸಂಪ್ರದಾಯದ ಸಂಕೋಲೆಯ ಶಿಸ್ತು ಹಿಡಿಸುವುದಿಲ್ಲವಾದ್ದರಿಂದ ಒಲ್ಲೆ ಎಂದುಬಿಟ್ಟೆ. ಕವಿಯ ಸಾಧನ ಮಾರ್ಗವೆ ಬೇರೆ, ಸಂನ್ಯಾಸಿಯ ಸಾಧನ ಮಾರ್ಗವೆ ಬೇರೆ. ಆಗ ಬರೆದ ಕವನವಿದು: ಇದು ತರುವಾಯ ‘ಕುಟೀಚಕ’ ಎಂಬ ಹೆಸರಿನ ನನ್ನ ಕವನ ಸಂಗ್ರಹದಲ್ಲಿ ಅಚ್ಚಾಗಿದೆ. ಕೆಲವು ಪಂಕ್ತಿಗಳನ್ನು ಮಾತ್ರ ಇಲ್ಲಿ ಕೊಡುತ್ತೇನೆ:

ಜೀವನವನಿತುಂ ಜಪವೆನಗಾಗಿರೆ
ಜಪಗಿಪ ಮಣಿಗಿಣಿ ಮಾಲೆಯದೇಕೆ?
ಸುಂದರ ಜಗ ಶಿವಮಂದಿರವಾಗಿರೆ
ಅಂಧತೆ ಕವಿದಿಹ ದೇಗುಲವೇಕೆ?

*          *          *

ಕಂಗಳ ಸುಂದರ ಪೂಜೆಯ ಮಾಡುವೆ
ಶಿವ ನವ ಸೃಷ್ಟಿಯ ದೇಸಿಯ ನೋಡಿ;
ಜಿಹ್ವೆಯ ಮಂಜುಳ ಜಪವನು ಮಾಡುವೆ
ನವ ನವ ಕವಿತಾವೇದವ ಹಾಡಿ.

*          *          *

ದೇಹದ ದೇಗುಲದಿಂದ್ರಿಯ ದ್ವಾರವ
ಎಂದಿಗು ಮುಚ್ಚೆನು; ತೆರೆದಿಹೆ ನಾನು:
ಗಾಳಿಯ ರೂಪದಿ, ಬೆಳಕಿನ ರೂಪದಿ
ದಿನದಿನ ಶಿವ ಸಂಚರಿಪನು ತಾನು!

ಸ್ವಾಮಿ ಅಭೇದಾನಂದರನ್ನು ನೋಡಲು ಹೋದೆವು. ಮಹಡಿ ಏರಿ ದೇವರ ಕೋಣೆಗೆ ಹೋಗಿ ಗುರುಮಹಾರಾಜರಿಗೆ ನಮಸ್ಕಾರ ಮಾಡಿದೆವು. ದೇವರ ಮನೆಯಲ್ಲಿ  ಆಸ್ಟ್ರಿಯಾ ದೇಶದ ಚಿತ್ರಕಾರನೊಬ್ಬನು ‘ದರ್ಶನ’ ದಲ್ಲಿ ಕಂಡು ಬರೆದ ಶ್ರೀಗುರುದೇವನ ಚಿತ್ರವೂ ಇದೆ. ಮತ್ತು ಆತನೆಯೆ ಬರೆದ ಮಹಾಮಾತೆಯವರ ಅತ್ಯಂತ ಮನೋರಂಜಕವಾದ ಬಣ್ಣದ ಚಿತ್ರವೂ ಅಲ್ಲಿದೆ. ಅದನ್ನು ನೋಡಿ “ಏನಿತು ಚೆಲುವೆ ಎನ್ನ ತಾಯಿ ಎಂಬ ನಿಜವನಿಂದು ತಿಳಿದೆ.” ಎಂದುಕೊಂಡೆನು. ಸುತ್ತಲೂ ಅಭೇದಾನಂದ ಸ್ವಾಮಿಗಳ ಚಿತ್ರಪಟಗಳಿದ್ದುವು. ದುರ್ಗಾಪೂಜೆ ನಡೆಯುತ್ತಿತ್ತು. ಸ್ವಲ್ಪ ಹೊತ್ತಾದ ಮೇಲೆ ಅವರ ಕೊಠಡಿಗೆ ಹೋಗಿ ಸ್ವಾಮಿ ಅಭೇದಾನಂದರನ್ನು ಕಂಡೆವು. ನೋಡಿದ ಕೂಡಲೆ ಅವರು ತುಂಬಾ ರಾಜಸಿಕ ಶಕ್ತಿವಂತರೆಂದು ಅವರ ಮೈಕಟ್ಟು ಮುಖಭಾವಗಳಿಂದ ತಿಳಿದು ಬರುವುದು. ತುಂಬಾ ಮೇಧಾವಿಗಳು. ಅವರ ಮಾತುಗಳಿಂದ ಅವರಿಗೆ ಕೀರ್ತಿಯಲ್ಲಿ ಆಕಾಂಕ್ಷೆ ಇದೆ ಎಂಬುದು ತಿಳಿದುಬಂತು. ಮಹಾಪುರುಷಜಿ, ಮಾಸ್ಟರ್ ಮಹಾಶಯ ಇವರು ನಿರಹಂಕಾರದ ಮೂರ್ತಿಗಳು. ಅಭೇದಾನಂದರಾದರೊ ಗಂಭೀರ ಬ್ರಹ್ಮಾಹಂಕಾರದ ಮೂರ್ತಿಗಳು. ಅವರು ತಮ್ಮ ವಿಷಯವನ್ನೆ ಕುರಿತು ಮಾತಾಡತೊಡಗಿದರು. ಅವರು ಮೇಧಾವಿಗಳು,  ಪ್ರತಿಭಾಶಾಲಿಗಳು, ಆದರೆ ಆತ್ಮಜ್ಯೋತಿಯ ಆಗರ ಎಂದು ಹೇಳಲಾಗುವುದಿಲ್ಲ. ಅನೇಕ ಸಂವತ್ಸರಗಳು ಪಶ್ಚಿಮ ದೇಶಗಳಲ್ಲಿ ಅಮೇರಿಕಾದಲ್ಲಿ ವಾಸಿಸಿದ್ದರಿಂದ ಶ್ರೀಗಳು ಮತ್ತು ಶ್ರೀ ಸ್ವಾಮಿಜಿ ಅವರಿಂದ ಅತ್ಯಂತವಾಗಿ ಪ್ರೀತಿಸಲ್ಪಟ್ಟ ಮತ್ತು ಗೌರವಿಸಲ್ಪಟ್ಟ ಸಮರ್ಥರಾದ ಅಭೇದಾನಂದರೂ ಕೂಡ ಸಂಗದೋಷದಿಂದ ಕಲುಷಿತರಾದರೇನೋ ಎಂದುಕೊಂಡೆ. ಆಹಾ! ಸಂಗದ ಮಹಾತ್ಮ್ಯೆಯೇ!

ವಿಜ್ಞಾನ ಆಧ್ಯಾತ್ಮಗಳ ವಿಚಾರವಾಗಿ ಸ್ವಲ್ಪ ಮಾತಾಡಿದರು. ಅವರು ತೀವ್ರ ಅದ್ವೈತವಾದಿಗಳು. ವಾದದಲ್ಲಿ ತರ್ಕದಲ್ಲಿ ಅತ್ಯಾಸಕ್ತಿಯುಳ್ಳವರು. ತುಂಬಾ ರಾಜಸಿಕ ಓಜಸ್ವಿಗಳು. ‘ಇಂಥವರೇ ಸರಿ ಪಶ್ಚಿಮ ದೇಶಗಳಿಗೆ ತಕ್ಕವರು.’ ಎಂದುಕೊಂಡೆ. ಅವರ ಫೋಟೊ (ಬೈತಲೆ ತೆಗೆದದ್ದು) ಒಂದನ್ನು ಕೊಂಡು ಅವರ ರುಜು ಹಾಕಿಸಿಕೊಂಡೆವು. ಪ್ರಸಾದ ಕೊಟ್ಟರು. ಹರಚೈತನ್ಯ ಎಂಬ ಬ್ರಹ್ಮಚಾರಿಗಳು ನಮಗೆಲ್ಲವನ್ನೂ ತೋರಿಸಿ ಬೀಳುಕೊಟ್ಟರು.

ಅಲ್ಲಿಂದ ಹೊರಟುಬರುವಾಗ ಸ್ವಾಮಿಜಿ ಇಂಗಿತವಾಗಿಯೂ ಮಾನಪ್ಪ ಸುಪ್ರಕಟವಾಗಿಯೂ ಸ್ವಾಮಿ ಅಭೇದಾನಂದರ ದೋಷಗಳ ವಿಚಾರವಾಗಿ ಮಾತಾಡತೊಡಗಿದರು. ನಾನು ತಡೆದು “ಸ್ವಾಮಿ ನೀವು ಆತ್ಮದೃಷ್ಟಿಯಿಂದ ಅವರಲ್ಲಿಗೆ ಹೋದರೆ ಆಗದು. ಬುದ್ಧಿ ದೃಷ್ಟಿಯಿಂದ ನೋಡಿ. ಎಂತಹ ಮೇಧಾವಿಗಳು?” ಎಂದೆ.

ಅಲ್ಲಿಂದ ಕಾಳೀಘಟ್ಟಕ್ಕೆ ಹೋದೆವು. ದಾರಿಯಲ್ಲಿ ಔರಂಗಿ, ಅಕ್ಬರ್‌ಲೋನಿ ಸ್ಮಾರಕಸ್ತಂಭ ಮೊದಲಾದವುಗಳನ್ನು ನೋಡಿದೆವು. ಮಿಸ್ ಮೇಯೊ ಬರೆದುದೇನು ಅತಿಶಯೋಕ್ತಿಯಲ್ಲ. ರಾಮ! ರಾಮ! ಏನು ಕಾಳಿಘಟ್ಟವೊ? ಹಿಂದೂಗಳಿಗೆ ಹುಚ್ಚುಹಿಡಿದಿದೆ ಎಂದು ತೋರುತ್ತದೆ! ನನಗಂತೂ ಜುಗುಪ್ಸೆ ಹುಟ್ಟಿಹೋಯಿತು. ಆ ಸಂದಣಿ, ಆ ಜಾರುವ ಹಾಸುಗಲ್ಲು, ಆ ಕತ್ತಲೆ, ಆ ಭಯಂಕರ ಕಲಾಹೀನವಾದ ಕ್ರೂರ ವಿಗ್ರಹ! ಅಯ್ಯೋ ಆ ಕೂಗಿನಲ್ಲಿ ಗಲಭೆಯಲ್ಲಿ ಹೋರಾಟದಲ್ಲಿ ಕತ್ತಲೆಯಲ್ಲಿ ಕಿತ್ತಾಟದಲ್ಲಿ ಕೋಮಲವಾದ ಮೃದುವಾದ  ಹೃದಯಂಗಮವಾದ ಮೌನಪ್ರಿಯವಾದ ಭಕ್ತಿಲತೆ ಎಂತು ಚಿಗುರೀತು? ಚಿಗುರಿದ್ದರೂ ಅಲ್ಲಿಗೆ ಬಂದೊಡನೆ ಸತ್ತು ಬತ್ತಿ ಒಣಗಿಹೋಗದೆ ಇರದು. ನೂರಾರು ಜನರು ಆ ಗಲೀಜಿನಲ್ಲಿಯೆ ಗಲಿಬಿಲಿಯಲ್ಲಿಯೆ ಕುಳಿತು ಪುಸ್ತಕಗಳನ್ನು ಕೈಲಿ ಹಿಡಿದು ಚಂಡಿಪಾಠ ಮಾಡುತ್ತಿದ್ದರು. ಗುಡಿಯ ಮುಂಭಾಗದಲ್ಲಿ ಕುರಿಗಳನ್ನು ಕತ್ತರಿಸಿ ಕತ್ತರಿಸಿ ಬಲಿಕೊಡುತ್ತಿದ್ದರು. ಆ ಕುರಿಗಳನ್ನು ಬಲಿಕೊಡುವ ಮೊದಲು ಅವುಗಳನ್ನು ಕಾಲುಹಿಡಿದು ಕುತ್ತಿಗೆ ಸುತ್ತ ಬಳಸಿ ಎತ್ತಿಕೊಂಡು ಬಂದು ಅಲ್ಲಿಯೆ ಬಳಿಯಿದ್ದ ಕೊಳಕು ನೀರಿನ ಕೆರೆಯಲ್ಲಿ ಅದ್ದಿ ಮುಳುಗಿಸಿ ಮಿಯಿಸಿ ಮಡಿಮಾಡಿ, ಅದೊಂದು ಪ್ರಾಣವಿರುವ ಪ್ರಾಣಿ ಎಂಬುದನ್ನೆ ಪ್ರಜ್ಞೆಯಿಂದಾಚೆಗೆ ತಳ್ಳಿ, ಆ ಕೆನ್ನಾಲಿಗೆ ಚಾಚಿದ ಭಯಂಕರ ಕ್ರೂರ ಕಾಳಿಯ ಮುಂದೆ ಬಲಿಪೀಠದ ಮೇಲೆ ಕಾಲು ಹಿಡಿದು ಮಲಗಿಸಿಡುತ್ತಿದ್ದರು. ಮಲಗಿಸಿಡುವುದೆ ತಡ ಹೊಳೆಯುವ ಖಡ್ಗವೊಂದು ಚಕ್ಕನೆ ಕುತ್ತಿಗೆಯನ್ನು ಕತ್ತರಿಸುತ್ತಿತ್ತು. ಆ ಭಕ್ತಿ ಅದನ್ನು ಎತ್ತಿ ಕೊಂಡೊಡನೆ ಮತ್ತೊಬ್ಬ ಭಕ್ತ ತನ್ನ ಇನ್ನೊಂದು ಕುರಿಯನ್ನಿಡುತ್ತಿದ್ದ. ಕ್ಷಣಾರ್ಧದಲ್ಲಿ ಅದರ ಕತ್ತು ತುಂಡಾಗುತ್ತಿತ್ತು. ಹೀಗೆ ಒಂದೊಂದು ಕ್ಷಣಕ್ಕೆ ಒಂದೊಂದರಂತೆ ರಕ್ತನೈವೇದ್ಯ ಸಾಗುತ್ತಿತ್ತು. ಕುರಿ ಕಡಿಯುವುದೇನು ನನಗೆ ಹೊಸ ಅನುಭವವಾಗಿರಲಿಲ್ಲ. ಆದರೂ ನನಗೆ ಸಾಕಪ್ಪಾ ಸಾಕು ಎನ್ನಿಸಿಬಿಟ್ಟಿತು.

ಅಯ್ಯೋ ಮಾತೆಯೆ, ನೀನು ದಕ್ಷಿಣೇಶ್ವರದಲ್ಲಿ ಭವತಾರಿಣಿಯಾಗಿ ಎಂತು ರಂಜಿಸುವೆ? ಇಲ್ಲಿ ರುದ್ರ ಕಾಳಿಯಾಗಿ ಮಾರುದ್ದ ನಾಲಗೆ ಚಾಚಿಕೊಂಡು ಭಯಂಕರಳಾಗಿರುವೆ! ಸುತ್ತಮುತ್ತಲೂ ಏನು ಗಲೀಜು. ಹಿಂದೂಮತದಲ್ಲಿ ಬೆಳಕು ಎಷ್ಟಿದೆಯೊ ಅದಕ್ಕೆ ಇಮ್ಮಡಿಯಾಗಿ ಆಚಾರದಲ್ಲಿ ಕೊಳಕು ಇದೆ. ಅಯ್ಯೋ ನಾವೆಲ್ಲರೂ ಹೇಗೆ ಪದ್ಧತಿಗೆ ಗುಲಾಮರಾಗಿಬಿಟ್ಟಿದ್ದೇವೆ!

ಕಾಲಿಗಟ್ಟದಿಂದ ನೆಟ್ಟಗೆ ಅದ್ವೈತ ಆಶ್ರಮಕ್ಕೆ ಬಂದೆವು. ಊಟಮಾಡಿದೆವು. ಹೊಳೆಯ ಬಾಳೆಯ ಕಾಯಿ ಬಂಗಾಳದ ಶ್ರೇಷ್ಠವಾದ ಪಲ್ಯ!

ತರುವಾಯ ಸ್ವಾಮಿ ವಿಜಯಾನಂದರು ರವೀಂದ್ರರ ಕೆಲವು ಕವನಗಳ ಛಂದಸ್ಸನ್ನು ತಿಳಿಸಿದರು. ಅದರಲ್ಲಿ ನನಗೆ ಯಾವುದೊ ಹೊಸದಾಗಿ ಕಾಣಲಿಲ್ಲ. ಕನ್ನಡದ ಛಂದೋ ಸೌಭಾಗ್ಯವು ಇತರ ಭಾಷೆಗಳೆಲ್ಲಕ್ಕಿಂತಲೂ ಅನಂತವಾಗಿದೆ ಎಂದು ತೋರುತ್ತದೆ.

ಮಧ್ಯಾಹ್ನ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ಗೆ ಹೋದೆವು. ಅಲ್ಲಿ ಆಂಗ್ಲೇಯರ ಅತ್ಯಾಚಾರ ದಬ್ಬಾಳಿಕೆ ಇವುಗಳ ಕೀರ್ತಿಯನ್ನು ಉದ್ಭೋಷಿಸುವ ಚಿತ್ರಗಳು ವಿಗ್ರಹಗಳು ಎಲ್ಲಾ ಇವೆ. ಅಲ್ಲಿ ಕೇಶವಚಂದ್ರ ಸೇನ, ರಾಮಮೋಹನರಾಯ್ ಇವರ ದೊಡ್ಡ ತೈಲವರ್ಣ ಚಿತ್ರಗಳೂ ಇವೆ. ನಮಗೆ ಬೇಜಾರಾಯಿತು. ಸ್ವಾಮಿಗಳು “ನಾನು ಈ ವಾತಾವರಣವನ್ನು ಸಹಿಸಲಾರೆ. ಹೋಗೋಣ.” ಎಂದರು. ನನಗೂ ಹಾಗೇ ಅನ್ನಿಸಿತು. ಈ ದರಿದ್ರ ಮಂದಿರಕ್ಕೆ ಎಷ್ಟು ಕೋಟಿ ಭಾರತೀಯರ ದುಡ್ಡನ್ನು ಆ ದುಂದುಗಾರ ಕರ್ಜನ್ನನು ಖರ್ಚು ಮಾಡಿರುವನು! ವಿಕ್ಟೋರಿಯಾ ಮೆಮೋರಿಯಲ್ ಹಾಲಿನ ಸುತ್ತಲೂ ಮೈಸೂರಿನ ಸುಂದರ ದೃಶ್ಯಗಳ ಛಾಯೆ ಸ್ವಲ್ಪ ಇದೆ!

ಅಲ್ಲಿಂದ ಮೃಗಶಾಲೆ (ಜೂ)ಯನ್ನು ಹುಡುಕಿಕೊಂಡು ಹೊರಟೆವು. ಹೆಬ್ಬಾಗಿಲಿನ ನೆತ್ತಿಯಲ್ಲಿ ಏಳನೆಯ ಎಡ್‌ವರ್ಡ ಚಕ್ರವರ್ತಿಯ ದೊಡ್ಡ ಸವಾರ ಪ್ರತಿಮೆ ಇದೆ. ಅಲ್ಲಿಂದ ದಾರಿ ಹುಡುಕಿಕೊಂಡು ಜೂಗೆ ಹೋದೆವು. ನಮ್ಮ ಮೈಸೂರಿನ ಮೃಗಾಲಯದ ಸಣ್ಣದಾದರೂ ಸಾವಿರ ಪಾಲಿಗೆ ವಾಸಿ ಎನ್ನಿಸಿತು ನನಗೆ. ಅಲ್ಲಿಂದ ಹೊರಟು ಕೊಳಕಾದ ಬೀದಿಗಳಲ್ಲಿ ಸಂಚರಿಸಿ ಟ್ರಾಂ ಗಾಡಿ ಏರಿದೆವು. ಅದು ಕಿಡ್ಡರ್‌ಪೂರ್‌ನಿಂದ ಬರುತ್ತಿದ್ದ ಗಾಡಿ. ನಾವು ಹೌರಾಕ್ಕೆ ಟಿಕೆಟ್ ತೆಗೆದುಕೊಂಡೆವು. ಏಳುವರೆ ಆಣೆ ಕೊಟ್ಟೆವು. ನಾವು ಬರಬೇಕಾಗಿದ್ದು ಹೌರಾ ಸೇತುವೆಗೆ. ಎಸ್‌ಪ್ಲನೇಡ್‌ನಲ್ಲಿ ಟ್ರಾಂ ಇಳಿದೆವು. ಭಾಷೆ ಗೊತ್ತಿಲ್ಲದೆ ಮೋಸಹೋದೆವು. ಟ್ರಾಂ ಸರ್ವಿಸ್ಸಿನ ಮೋಟಾರುಗಾಡಿ ಹತ್ತಿದೆವು. ಆದರೆ ಟ್ರಾಂ ಟಿಕೆಟ್ಟನ್ನು ತೋರಿಸದೆ ಮತ್ತೆ ಆರಾಣೆ ಕೊಟ್ಟು ಟಿಕೆಟ್ ತೆಗೆದುಕೊಂಡೆವು. ನನ್ನ ಕೈಲಿ ಟಿಕೆಟ್ ಇತ್ತು. ಆ ಗಾಡಿಯ ಟಿಕೆಟ್ ಕಲೆಕ್ಟರ್ ಅದನ್ನು ನೋಡಿ ಹಿಂದಿಯಲ್ಲಿ “ನೀವು ಮತ್ತೆ ಏಕೆ ಟಿಕೆಟ್ ತೆಗೆದುಕೊಂಡಿರಿ? ಇದೇ ಸಾಕಿತ್ತು. ಇದು ಮೋಟಾರ್ ಟ್ರಾಂ ಸರ್ವಿಸ್!” ಎಂದನು. ನಾನು ಇವನು “ಈ ಟಿಕೆಟ್‌ಗಳನ್ನು ಇಲ್ಲೇಕೆ ಇಟ್ಟುಕೊಂಡಿರುವಿರಿ?” ಎನ್ನುತ್ತಾನೆ ಎಂದು ತಿಳಿದು ಅವನ್ನು ಬಿಸಾಡಿಬಿಟ್ಟೆ! ಇದ್ದದ್ದೂ ತಮಾಷೆಯಾಗಿ ಹೋಯಿತು!

ಅಲ್ಲಿಂದ ಹೌರಾದ ತೇಲುವ ಸೇತುವೆಗೆ ಬಂದೆವು. ಸ್ಟೀಮರ್ ಘಟ್ಟದಲ್ಲಿ ಬೇಲೂರಿಗೆ ಜಹಜು ಹತ್ತಿದೆವು. ಪಡುವಣಾಗಸದ ಕೆಂಪಾದ ದಿನೇಶನು ನಗರದ ಒಂದು ಮಹೋನ್ನತ ಸೌಧಶಿಖರದ ನೆತ್ತಿಯಲ್ಲಿ ರಾಜಿಸುತ್ತಿದ್ದನು. ಅರ್ಧಚಂದ್ರನು ಗಗನದಲ್ಲಿ, ಮಂಜು ನದಿಯ ಮೇಲೆ ಕವಿದಿತ್ತು. ಗಾಳಿ ತಣ್ಣಗೆ ಬೀಸಿತ್ತು. ಪ್ರಮಾಣ ಮನೋಹರವಾಗಿತ್ತು.

ರಾತ್ರಿಯ ದೇವಿಯ ಪೂಜೆಯಾಗುತ್ತಿತ್ತು. ಬಹಳ ವಿಜೃಂಭಣೆಯಿಂದ ನಡೆಯಿತು. ಬಂಗಾಳಿಯ ಕೀರ್ತನೆಗಳನ್ನು ದ್ರುಪದ್ ಶೈಲಿಯಲ್ಲಿ ಹಾಡಿದರು. ಜೆ.ಸಿ.ಬೋಸ್ (ಜ್ಯೋತೀಶ್ ಚಂದ್ರ ಬೋಸ್) ಎಂಬುವರ ಪರಿಚಯವಾಯಿತು. ಅವರೊಡನೆ ರಾಧಾಕೃಷ್ಣನ್‌ರವರ ವಿಚಾರವಾಗಿ ಮಾತಾಡಿದೆವು. ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಎರಡು ಪಂಗಡಗಳಾಗಿವೆ ಎಂದೂ, ಒಂದು ಆಶುತೋಷ ಮುಖರ್ಜಿಯವರ ಪಂಗಡ, ಮತ್ತೊಂದು ಯದುನಾಥ ಸರ್ಕಾರ್ ಅವರ ಪಂಗಡ. ಆದ್ದರಿಂದ ದಾಸಗುಪ್ತ-ರಾಧಾಕೃಷ್ಣನ್ ಇವರ ಅಸೂಯೆ, ಸಿನ್ಹ ಮತ್ತು ರಾಧಾಕೃಷ್ಣನ್ ಅವರ ಜಗಳ!

ಪ್ರಾತಃಕಾಲ ಗಂಗೆಯ ಮೇಲಿನ ಸೂರ್ಯೋದಯ:
೧೧-೧೦-೧೯೨೯: ಶುಕ್ರವಾರ

“ಎನಿತು ಚೆಲುವು ಈ ದಿನಮಣಿಯುದಯ?

ಮಿರುಗುತಲಿದೆ ಈ ಗಂಗೆಯ ಹೃದಯ!”

ಪುನಃ ದೇವಿಯ ಪೂಜೆಯಾಯಿತು. ಅನೇಕ ಭಕ್ತರು ನೆರೆದಿದ್ದರು. ಕುಮಾರಿ ಪೂಜೆಯಾಯಿತು. ಹುಡುಗಿಯೊಂದನ್ನು ಪೂಜಿಸಿದರು. ವಿಚಿತ್ರವಾದ ಉಡುಪು ಬಂಗಾಳಿ ಹೆಂಗಸರದು.

ಮಹಾಪುರುಷಜಿಗೆ ಅಡ್ಡಬಿದ್ದೆವು. ನಮ್ಮ ಟೀ ವಿಚಾರವಾಗಿ ಅವರಿಗೆ ಎಷ್ಟು ಮುತುವರ್ಜಿ! ಇವರಲ್ಲವೆ ಮಹಾಪುರುಷ?

ಒಬ್ಬರು ವಿನೋದಶೀಲದ ಸಂನ್ಯಾಸಿ. ಅವರನ್ನು ಎಲ್ಲರೂ ‘ಉಪುದಾ’ ಎಂದೇ ಕರೆಯುತ್ತಿದ್ದರು. ಸ್ವಾಮಿ ಸಿದ್ಧೇಶ್ವರಾನಂದರು ನನ್ನನ್ನು ಕವಿ ಎಂದು ಪರಿಚಯಿಸಿದಾಗ ಅವರು ನನ್ನನ್ನು ತಂಬಾ ಹೊತ್ತು ದಿಟ್ಟಿಸಿ ನೋಡಿ ಬಂಗಾಳಿಯಲ್ಲಿ ‘ಮುಖ ಚಹರೆ ನೋಡಿದರೇ ಗೊತ್ತಾಗುತ್ತದೆ ಕವಿ ಎಂದು’ ಹೇಳಿದ ರೀತಿಯಿಂದಲೆ ಎಲ್ಲರನ್ನೂ ನಗಿಸಿದರು.

ಸಾಯಂಕಾಲ ತಾಯಿಯ ಪೂಜೆ. ಮದ್ದಳೆಗಳ ಸದ್ದು ಭೈರವ ಮೋಹಕವಾಗಿತ್ತು. ಸಾವಿರಾರು ಭಕ್ತರು ನೆರೆದಿದ್ದರು.