೧೨-೧೦-೧೯೨೯: ಶನಿವಾರ

ಗಂಗೆಯ ಮೇಲಣ ಸೂರ್ಯೋದಯ ಅತ್ಯಂತ ರಮಣೀಯ: ಉದ್ದಾಮ ಹೇಮಜ್ಯೋತಿ.

ಮಹಾಪುರುಷಜಿಯ ದರ್ಶನ ಮಾಡಿ ನಮಸ್ಕರಿಸಿದೆವು. ನಮ್ಮ ಯೋಗಕ್ಷೇಮವನ್ನು ವಿಚಾರಿಸಿದರು. ನಮಗೆ ಬಂಗಾಳಿ ಅಡುಗೆ ಹಿಡಿಸುತ್ತದೆಯೋ ಇಲ್ಲವೋ ಎಂದು ಕಾತರರಾಗಿ ಸ್ವಾಮಿ ಸಿದ್ಧೇಶ್ವರಾನಂದರಿಗೆ ಆ ವಿಚಾರವಾಗಿ ಸಲಹೆ ಇತ್ತರು. ದೇವಿ ಚಾಮುಂಡಿ ಮೈಸೂರಿಗೆ ಕೃಪಾಕರೆಯಾಗಿದ್ದಾಳೆ ಎಂದರು. ನಾವು ಅರ್ಪಿಸುವ ಚಾಮುಂಡಿಯ ವಿಗ್ರಹ ತಾಯಿಯೆ ಕಳುಹಿಸಿದ್ದು ಎಂದು ಹೇಳಿದರು. ಅವರಿಗೆ ಪರಮಾನಂದ!

ಅಲ್ಲಿಂದ ಸುಮಾರು ಏಳೂವರೆ ಗಂಟೆಗೆ ದೋಣಿಯವನೊಡನೆ ಚೌಕಾಸಿ ಮಾಡಿ ದೋಣಿ ಹತ್ತಿ ದಕ್ಷಿಣೇಶ್ವರಕ್ಕೆ ಹೊರಟೆವು. ಇಕ್ಕೆಲದ ಕಾರ್ಖಾನೆಗಳು, ವೃಕ್ಷರಾಜಿ, ಬಾಲಸೂರ್ಯನ ಕಾಂತಿ, ಈಶಾನ್ಯ ಮಾರುತನ ತಣ್ಪು. ಹುಟ್ಟುಹಾಕುವ ಸಲಿಲನಾದ. ದೂರದ ದಕ್ಷಿಣೇಶ್ವರದ ಉನ್ನತ ಶಿಖರ. ಅಲ್ಲಲ್ಲಿ ತೇಲುವ ದೋಣಿಗಳು, ಜಹಜುಗಳು. ತೇಲುವ ಗೋವಿನ ಶವ!*

(* ಕಲ್ಕತ್ತೆಯ ನಾಗರಿಕತೆಯ ಪಾಪಪೂರಿತ ಕಲ್ಮಷವನ್ನು ಹೊತ್ತೂ ಹೊತ್ತೂ ಪಾಪನಾಶಿನಿಯಾದ ಭಾಗೀರಥಿಯೂ ಕೊಳಕುಹೇಸಿಗೆಯ ಮುದ್ದೆಯಾಗಿದ್ದಾಳೆ. ಕಲ್ಕತ್ತಾದ ಹೇಸಿಗೆಯನ್ನೆಲ್ಲ ಗಂಗೆಗೆ ಬಿಡುತ್ತಾರೆ. ಗಂಗೆ ಅದನ್ನು ಹೊತ್ತು ಸಾಗರಕ್ಕೆ ಸಾಗಿಸುವ ಮುನ್ನವೆ ಸಾಗರದ ಉಬ್ಬರ ಆ ಹೇಸಿಗೆಯನ್ನೆಲ್ಲ ಮತ್ತೆ ಮೇಲಕ್ಕೆ ತಳ್ಳಿ ಮತ್ತೆ ಕಲ್ಕತ್ತೆಗೂ ಕಲ್ಕತ್ತೆಯಿಂದಾಚೆಯ ಮೇಲುಭಾಗಕ್ಕೂ ಸಾಗಿಸುತ್ತದೆ! ಹೀಗೆ ಹೇಸಿಗೆ ಹಿಂದೆ ಮುಂದೆ ಚಲಿಸೀ ಚಲಿಸೀ ಗಂಗೆಯ ನೀರೆಲ್ಲ ಹೇಸಿಗೆಯ ಕೆಸರಾಗುತ್ತದೆ. ಹೆಣಗಳೂ ತೇಲಿ ಕೊಳೆತು ನಾರುತ್ತಾ ಹೋಗುತ್ತಿರುತ್ತವೆ. ನಾವು ನೋಡಿದ್ದು ಒಂದು ದನದ ಹೆಣ. ಅದಾಗಲೆ ಕೊಳೆತು ನಾರುತ್ತಾ ತೇಲಿಹೋಗುತ್ತಿತ್ತು, ನಮ್ಮ ದೋಣಿಯ ಬದಿಯೆ. ನಾವು ಮೂಗು ಮುಚ್ಚಿಕೊಂಡೆವು. ಆ ಹೆಣದ ಮೇಲೆ ಒಂದೊ ಎರಡೊ ಹದ್ದುವೊ ಕಾಗೆಯೊ ಕುಳಿತು ಕೊಕ್ಕಿ ಕೊಕ್ಕಿ ತಿನ್ನುತ್ತಿದ್ದುವು. ನಾನಂತೂ ಗಂಗಾಸ್ನಾನ ಮಾಡಲು ಒಪ್ಪಲೆ ಇಲ್ಲ. ಮುಳುಗಿ ಎದ್ದರೆ ತಲೆಯ ಮೇಲೆ ಹೇಲಿನಕುಳ್ಳೆ ಕುಳಿತರೇನು ಗತಿ? ಕುಡಿಯುವ ಮಾತಂತಿರಲಿ, ಪವಿತ್ರ ಎಂದು ತಲೆಯ ಮೇಲೆ ಗಂಗಾಜಲವನ್ನು ಚಿಮುಕಿಸಿಕೊಳ್ಳಲೂ ಒಪ್ಪಲಿಲ್ಲ! ಆದರೆ ಎಷ್ಟೋ ಜನ ಶ್ರದ್ಧಾವಂತರು ಮುಳುಗಿ ಸ್ನಾನಮಾಡುವುದನ್ನು ನೋಡಿ ತುಂಬ ಅಸಹ್ಯಪಟ್ಟುಕೊಂಡಿದ್ದೆ! ಮೌಢ್ಯಕ್ಕೆ ನೈರ್ಮಲ್ಯಭಾವನೆಯೆ ಸತ್ತುಹೋಗುತ್ತದೆಯೊ ಏನೊ? ಆ ಗಂಗಾನದಿಯ ಹೇಸಿಗೆಯನ್ನು ನೆನೆದರೆ ಈಗಲೂ ನನಗೆ ಮೂಗು ಮುಚ್ಚಿಕೊಳ್ಳುವಂತಾಗುತ್ತದೆ!)

ದೋಣಿ ಎಂದರೆ ತುಂಗಾನದಿಯ ಮೇಲನ ದೋಣಿಯಂತಲ್ಲ. ಅದರಲ್ಲಿಯೆ ಒಂದು ಗುಡಿಸಲಿನಂತಹ ಮನೆಯೂ ಇರುತ್ತದೆ. ಅಂಬಿಗರ ಸಂಸಾರವೂ ಅಲ್ಲಿಯೆ ನಿವಾಸಿಸುತ್ತದೆ. ಒಂದು ರೀತಿಯಲ್ಲಿ ತೇಲುವ ಮನೆ. ಅಂಬಿಗರ ಬಳಿ ಕೆಲವು ಬಂಗಾಳಿ ಪುಸ್ತಕಗಳೂ ಇದ್ದುವು. ಅವರು ದಡಕ್ಕೆ ಬರುವುದು ಏನಾದರೂ ಆಹಾರ ಸಾಮಾಗ್ರಿಕೊಳ್ಳುವುದಕ್ಕಷ್ಟೆ ಎಂದು ತೋರುತ್ತದೆ. ಅವರ ಕೋಳಿನಾಯಿಗಳಿಗೂ ದೋಣಿಯೆ ನಿತ್ಯದ ಆವಾಸಸ್ಥಾನ! ಹುಕ್ಕ ಬೇರೆ ಸೇಯುತ್ತರುತ್ತಾರೆ! ವಿರಾಮವಾಗಿ! ಮೂರು ಜನ ಮುಂಭಾಗದಲ್ಲಿ ಹುಟ್ಟು ಹಾಕುತ್ತಾರೆ. ಒಬ್ಬನು ಹಿಂಭಾಗದಲ್ಲಿ ಪುಚ್ಛವನ್ನು ಬೇಕಾದ ಕಡೆಗೆ ತಿರುಗಿಸಿ ದೋಣಿಯ ದಿಕ್ಕನ್ನು ಬದಲಿಸುತ್ತಾನೆ. ದೋಣಿಯ ಅಗಲ ಏಳೆಂಟು ಅಡಿ; ಉದ್ದ ಸುಮಾರು ನಾಲ್ವತ್ತೈದು ಐವತ್ತು ಅಡಿ. ದೋಣಿಯ ಮನೆಯಲ್ಲಿ ನಾವು ಮೂವರೂ-ನಾನು, ಮಾನಪ್ಪ, ಗೋಪಾಲ್ ಮಹಾರಾಜ್-ಕುಳಿತಿದ್ದೆವು. ಬಿಸಿಲು ಮಳೆಗಳಿಂದ ಸ್ವಲ್ಪ ರಕ್ಷೆ ಒದಗಿಸುತ್ತದೆ.

ಹಾಗೆಯೆ ಆ ಮನೆಯ ಒಳಗಣ ಸರಕು ಸಮಾನುಗಳನ್ನು ಲಕ್ಷಿಸದೆ: ಬಿದಿರಗಳುಗಳು, ಲಾಟೀನು, ಅಡುಗೆಯ ಪಾತ್ರೆಗಳು, ಹುಕ್ಕಾ. ದೋಣಿಗರಿಗೆ ಸೊಂಟದ ಪಂಚೆ ಮಾತ್ರ ಉಡುಪು. ಅನ್ನ ಬೇಯಿಸುವುದಕ್ಕೆ ಮೂಲೆಯಲ್ಲಿ ಸಣ್ಣ ಕಟ್ಟಿಗೆ ರಾಶಿಯಿತ್ತು. ಒಂದು ಎಣ್ಣೆಯ ಅಂಡೆ ನೇತಾಡುತ್ತಿತ್ತು. ದೋಣಿಯ ಮನೆಗೆ ನಾಲ್ಕು ನಾಲ್ಕು ಕಿಟಕಿಗಳು. ಅಲ್ಲಲ್ಲಿ ದಡದ ಸ್ನಾನಘಟ್ಟಗಳ ಮೇಲೆ ಕೆಲವರು ಕುಳಿತು ಜಪಸರ ಹಿಡಿದು ಜಪಮಾಡುತ್ತಿದ್ದರು. ಮತ್ತೆ ಕೆಲವರು ಬಟ್ಟೆ ಕೆಲವರು ಒಗೆಯುತ್ತಿದ್ದರು. ಕೆಲವರು ಕೊಳಕು ನೀರಿನಲ್ಲಿಯೆ ಮುಳುಗಿ ಮುಳುಗಿ ಮಜ್ಜನಗೈಯುತ್ತಿದ್ದರು! ದಡಗಳಲ್ಲಿ ತೆಂಗಿನ ಮರಗಳು, ಅಡಕೆ ಮರಗಳು ಚೆಲುವಾಗಿದ್ದುವು. ಗಂಗೆಯಲ್ಲಿ ಅಲ್ಲಲ್ಲಿ ತೇಲುವ ಕಸಕಡ್ಡಿಗಳ ಕೂಡೆ ಸಾಮಾನು ಹೊರುವ ದೊಡ್ಡದೊಡ್ಡ ದೋಣಿಗಳೂ ಸಾಗುತ್ತಿದ್ದುವು.

ಹೋಗುತ್ತಲೆ ನನಗೆ ನಾನೆ ಗುನುಗಿಕೊಂಡೆ:

ನೋಡು ನೋಡು ರುದ್ರಕಾಳಿ
ಬರುತಲಿಹಳು ಕೋಪತಾಳಿ,
ಡಮ ಡಮ ಡಮ ಡೋಳು ಬಡಿ
ಹರ ಹರ ಹರ ಎಂದು ನುಡಿ.
ಧಿಮಿ ಧಿಮಿ ಧಿಮಿ ಎಂದು ಕುಣಿ
ಜಯ ಜಯ ಜಯ ಎಂದು ಮಣಿ.
ಜಯ ಭಯಂಕರಿ ಜಯತು ಶಂಕರಿ
ಜಯತು ಭಯನಿವಾರಿಣಿ!
ಅಘಹಾರಿಣಿ ಭವತಾರಿಣಿ
ಜಯತು ವಿಲಯಕಾರಿಣಿ!

ಗುರುಮಹಾರಾಜರ ಪಂಚವಟಿ. ತಪಸ್ಸು ಮಾಡಿದ ಆದಿ ಪಂಚವಟಿ. ಗುಡಿಸಲಿದ್ದ ಜಾಗದಲ್ಲಿ ಮನೆಯಿದೆ. ಭಕ್ತರು ಇಟ್ಟಿಗೆಗಳನ್ನೆ ಕಳಚಿ ಹೊತ್ತರೆ ಮುಂದೆ ಗತಿಯೇನು? (ಪವಿತ್ರ ಸ್ಮಾರಕಗಳೆಂದು ಕೆಲವನ್ನು ಆಗಲೆ ಕಳಚಿಕೊಂಡಿದ್ದರು.) ವೇದಿಕೆಯ ಮೇಲೆ ಸಿಮೆಂಟು ಹಾಕಿ ಗುರುಮಹಾರಾಜರು ಕುಳಿತು ತಪಸ್ಸು ಮಾಡುತ್ತಿದ್ದ ಸ್ಥಳವನ್ನು ಗುರುತಿಸಿದ್ದಾರೆ.

ಪಂಚವಟಿಯ ಸುತ್ತಲೂ ಕಣಿಗಿಲೆ, ಈಚಲು, ತೆಂಗು, ಅಡಕೆ, ಪೂರ್ವದಿಕ್ಕಿನಲ್ಲಿ ಕೊಳವಿದೆ. ರಸಿಕನಿಗೆ (ಕಸಗುಡಿಸಿ ಕಕ್ಕಸ್ಸು ತೊಳೆಯುತ್ತಿದ್ದ ದಕ್ಷಿಣೇಶ್ವರದ ಜಲಗಾರ) ಅಭಯಪ್ರದಾನ ಮಾಡಿದ ಸ್ಥಳ! ಗೋವುಗಳು ಅಲ್ಲಲ್ಲಿ ಮೇಯುತ್ತಿವೆ. ಹಕ್ಕಿಗಳು ಮರಗಳಲ್ಲಿ ಕೂಗುತ್ತಿವೆ. ವೃದ್ಧವೃಕ್ಷ. ಕೆಸುವಿನ ಗಿಡಗಳು, ಗಾಳಿಯ ಮರಗಳು, ಎರಡು ದೊಡ್ಡ ಮರ. ಕೊಳದ ಚಿತ್ರವನ್ನು ಪೋಟೊ ತೆಗೆದೆವು. ನಾನು ಸ್ವಾಮಿಜಿ, ಎದುರು ದಡದಲ್ಲಿ ನಿಂತೆವು. ಎನಿತು  ಶಾಂತಿ ಈ ತಣ್ಗೊಳದಲ್ಲಿ! ನಿಬಿಡ ಕಿಸಲಯಗಳು. ಮೇಯುವ ಆಡುಗಳು.

ಮಥುರಬಾಬುವಿನ ಕುದುರೆಯ ಲಾಯ. ಮೇಲೆಲ್ಲ ಹುಲ್ಲು ಗಿಡ ಹಳು ಬೆಳೆದು ನಿಂತಿದೆ.

ತಾತ್ರಿಕ ಸಾಧನೆ ಮಾಡಿದ ಬಿಲ್ವವೃಕ್ಷಕ್ಕೆ ಸುತ್ತಲೂ ಬೇಲಿಹಾಕಿದ್ದಾರೆ. ಪಕ್ಕದಲ್ಲಿ ಕಾರ್ಖಾನೆಗಳನ್ನು ಕಟ್ಟಿ ಕೆಡಿಸಿದ್ದಾರೆ. ಬಿಲ್ವದ ಮರದಲ್ಲಿ ಎಷ್ಟು ದೊಡ್ಡ ಕಾಯಿಗಳು ನೇತಾಡುತ್ತಿವೆ! (ಇಲ್ಲಿಗೆ ಫೋಟೊ ತೆಗೆಯುವ ಹುಮ್ಮಸ್ಸೇ ಹೋಯಿತು. ತಪ್ಪು ಫಿಲ್ಮ್ ತಂದುಬಿಟ್ಟಿದ್ದಾರೆ. ಅಯ್ಯೋ ದೇವರೆ!) ನೆಲದ ತುಂಬ ಹುಲ್ಲು, ಗಿಡ ಬೆಳೆದುಕೊಂಡಿವೆ. ಯಾವುದನ್ನೂ ನಿರ್ಮಲವಾಗಿ ಇಟ್ಟಿಲ್ಲ.

ಗುರು ಮಹಾರಾಜರು ನೆಟ್ಟು ಬೆಳೆಸಿದ ಪಂಚವಟಿಯಲ್ಲಿ ಭಸ್ಮದಾರಿಯಾದ ಸಂನ್ಯಾಸಿಯೊಬ್ಬನು ಕುಳಿತಿದ್ದಾನೆ.

ಆ ಸ್ಥಳದಿಂದಲೆ ಗುರುದೇವನು ಗಂಗೆಯಲ್ಲಿ ತೇಲುತ್ತಿದ್ದ ಮಹಾಕಮಲವನ್ನೂ ಅದರ ಮೇಲೆ ನಿಂತಿದ್ದ ಶ್ರೀಕೃಷ್ಣನನ್ನೂ ಅವನ ಜೊತೆಯಲ್ಲಿದ್ದ ಬ್ರಹ್ಮಾನಂದ ಸ್ವಾಮಿಗಳನ್ನೂ (ಕೃಷ್ಣನ ಸಂಗಾತಿ ರಾಖಾಲ್) ನೋಡಿದ್ದಂತೆ!

ಶ್ರೀರಾಮಕೃಷ್ಣದೇವರ ಶಾಂತಿಕುಟೀರ. ಶಿವ, ಗುರುದೇವ, ಮಹಾಮಾತೆ.

ನಹಬತ್‌ಖಾನೆಯಲ್ಲಿ ಮಹಾಮಾತೆ ಸಂಸಾರ ಮಾಡಿದ್ದು. ಮಥುರಬಾಬುವಿನ ಅರಮನೆಯ ಕೋಣೆಯೊಂದರಲ್ಲಿ ಗುರುದೇವನು ಮೊದಲು ಇದ್ದದ್ದು. ಆ ಕೋಣೆಯ ಮುಂಭಾಗದ ಮೆಟ್ಟಲಿನ ಮೇಲೆ ನಾನು ಮಾನಪ್ಪ ನಿಂತೆವು. ಸ್ವಾಮಿಜಿ ಮುಖ ತೊಳೆಯಲು ಘಟ್ಟವಿಳಿದು ಹೋದರು. ಎದುರು ಗಂಗಾವಿಸ್ತಾರ ವೃಕ್ಷ. ಎರಡು ದೊಡ್ಡ ಮನೆಗಳು. ಏನು ಮೋಟಾರು ಶಬ್ದ! (ದಕ್ಷಣೇಶ್ವರ ಆಗಲೆ ವಾಹನಸಂಚಾರದ ಗಡಿಬಿಡಿಗೆ ಒಳಗಾಗಿತ್ತು.)

ಅಲ್ಲಿಂದ ಮುಂದೆ ನಡೆದು ಗುರುದೇವನ ಕೋಣೆಯ ಮುಂದೆ ನಿಂತೆವು. ಅದಕ್ಕೆ ಬೀಗ ಹಾಕಿತ್ತು. ಸ್ವಾಮಿಜಿ ಬೀಗದ ಕೈ ತರಲು ಹೋದರು. ಶ್ರೀಗುರು ಒಳಗಿನಿಂದ ಮೂರ್ತಿಮತ್ತಾಗಿ ಕರೆಯುವಂತಾಯಿತು. ಎಂತಹ ಪೂತ ಸನ್ನವೇಶ!

ಬಾಗಿಲು ಬೀಗ ತೆಗೆದು ನಾವೆಲ್ಲ ಒಳಗೆ ಹೋದೆವು. ಗುರುಮಹಾರಾಜರ ಕೊಠಡಿ ಸುಮಾರು ಹದಿನೈದು ಮೂವತ್ತು ಅಡಿ ಉದ್ದಗಲವಿದ್ದು, ಪೂರ್ವಕ್ಕೊಂದು ಪಶ್ಚಿಮಕ್ಕೊಂದು ಬಾಗಿಲುಗಳು. ಪಶ್ಚಿಮದ್ವಾರದ ಮುಂಭಾಗದ ಚಾವಡಿಯಿಂದ ಗಂಗಾದರ್ಶನ. ಮೂಲೆಯಲ್ಲಿ ಒಂದು ದೊಡ್ಡ ನೀರಿನ ಹರಿವೆ ಇದೆ. ಅದರಲ್ಲಿ ಶ್ರೀಗುರು ತಮ್ಮ ಉಪಯೋಗಕ್ಕೆ ನೀರು ತುಂಬಿ ಇಟ್ಟುಕೊಳ್ಳುತ್ತಿದರಂತೆ. ಅಂದಿನಿಂದಲೂ ಅದಕ್ಕೆ ನೀರು ತುಂಬುತ್ತಿದ್ದು ಅದು ಎಂದೂ ಖಾಲಿಯಾಗದಂತೆ ನೋಡಿಕೊಂಡಿದ್ದರಿಂದ ಇಂದಿಗೂ ಅದರಲ್ಲಿ ಗುರುಮಹಾರಾಜರು ಉಪಯೋಗಿಸುತ್ತಿದ್ದ ನೀರಿನ ಅಂಶವಿರುವುದರಿಂದ ಅದು ವವಿತ್ರ ವಸ್ತುವಾಗಿ ಭಕ್ತರಿಗೆ ತೀರ್ಥವೊದಗಿಸುತ್ತದೆ. ಎರಡು ಮಂಚಗಳಿವೆ. ಬುದ್ಧನ ವಿಗ್ರಹ ಗೂಡಿನಲ್ಲಿದೆ. ಚೈತನ್ಯದೇವನ ಸಮಾಧಿಸ್ಥ ಚಿತ್ರವಿದೆ. ಮಥುರಬಾಬುವಿನ ಒಂದು ದೊಡ್ಡದಾದ ತೈಲವರ್ಣಚಿತ್ರವೂ ಇದೆ. ಗುರುಮಹಾರಾಜರದ್ದೂ ಒಂದು ದೊಡ್ಡ ಚಿತ್ರವಿದೆ. ಆ ಚಿತ್ರದಲ್ಲಿ ಅವರು ಹಣೆಯಲ್ಲಿ ಗಂಧದ ಬಟ್ಟುಗಳನ್ನಿಟ್ಟಿದ್ದಾರೆ. ಕಬ್ಬಿಣದ ಸರಳುಗಳಿಂದ ಭದ್ರಪಡಿಸಲ್ಪಟ್ಟ ಬಾಗಿಲೊಂದು ಪೂರ್ವಕ್ಕಿದೆ.

“ಆದ್ಯ ಹೊಯ್ತೇ ಸ್ವಾಮಿವಾಕ್ಯೇ ಸೇವ್ಯಸೇವಕ ಭಾವ್ ಪ್ರಾಪ್ತಹೊಯ್ಲೇ.” ಶ್ರೀರಾಮಚಂದ್ರ ಬ್ರಹ್ಮಚಾರಿ ಗುರುಮಹಾರಾಜ್ ಅವರಿಗೆ ‘ಸೋಹಂ’ ಎನ್ನಬೇಡ ಎಂದು ಹೇಳಿದಾಗ ಬರೆದಿದ್ದಂತೆ, ಗೋಡೆಯ ಮೇಲೆ.

ಕೋಣೆಯಲ್ಲಿರುವ ಇತರ ವಿಗ್ರಹಗಳು ಮತ್ತು ಚಿತ್ರಗಳು: ಯೇಸುಕ್ರಿಸ್ತನ ಚಿತ್ರ, ರಾಧಾ-ಕೃಷ್ಣರ ಚಿತ್ರ, ರಾಮಚಂದ್ರ ದತ್ತನ ಚಿತ್ರ, ಪಾರ್ಶ್ವನಾಥ ವಿಗ್ರಹ, ಜಗನ್ನಾಥನ ವಿಗ್ರಹಗಳು, ಗಣೇಶನ ವಿಗ್ರಹ, ಧ್ರುವನ ಚಿತ್ರ, ನೃತ್ಯಭಂಗಿಯಲ್ಲಿ ಚೈತನ್ಯನ ಚಿತ್ರ.

ಗೋಡೆಯ ಮೇಲೆ ಶ್ರೀಗುರುದೇವನೆ ಸ್ವಹಸ್ತದಿಂದಲೆ ಇದ್ದಲಿನಲ್ಲಿ ಗೆರೆಗೆರೆಯ ಒಂದು ಚಿತ್ರ ಬರೆದಿದ್ದಾರೆ. ಮಕ್ಕಳು ಮುದುಮುದ್ದಾಗಿ ಬರೆದಂತೆ ಇದೆ. ಒಂದು ಹೂವಿನ ಗಿಡದ ಮೇಲೆ ಒಂದು ಹಕ್ಕಿ ಕೂತಂತೆಯೊ ಕೂರುತ್ತಿರುವಂತೆಯೊ ಕಾಣುತ್ತದೆ. ನಾನು ಅದನ್ನು ನನ್ನ ದಿನಚರಿ ಪುಸ್ತಕದಲ್ಲಿ ಪೆನ್ಸಿಲ್ಲಿನಿಂದ ಪ್ರತಿ ಎತ್ತಿಕೊಂಡಿದ್ದೇನೆ. ಅದನ್ನು ಮುಂದಿನ ಪುಟದಲ್ಲಿ ಪ್ರತಿಮಾಡಲು ಪ್ರಯತ್ನಿಸುತ್ತೇನೆ.

ಚಿತ್ರದ ಕೆಳಗೆ ಪೆನ್ಸಿಲ್ಲಿನಲ್ಲಿ “ದಕ್ಷಿಣೇಶ್ವರದಲ್ಲಿ ಶ್ರೀರಾಮಕೃಷ್ಣರು ಗೋಡೆಯ ಮೇಲೆ ಇದ್ದಲಿನಲ್ಲಿ ಬರೆದ ಚಿತ್ರ” ಎಂದಿದೆ.

ಅಲ್ಲಿಂದ ರಾಧಾಗೋವಿಂದ ದೇವಸ್ಥಾನಕ್ಕೆ ಹೋದೆವು. ರಾಧಾಗೋವಿಂದನ ವಿಗ್ರಹ ನಿರ್ಮಲ ಶುಭ್ರವಾದ ಅಮೃತಶಿಲೆಯ ವೇದಿಕೆಯ ಮೇಲಿದೆ. ನಮಸ್ಕಾರಾದಿಗಳನ್ನು ಮುಗಿಸಿ, ಕಾಳಿಗುಡಿಗೆ ಭವತಾರಿಣಿಯ ಸನ್ನಿಧಿಗೆ ಹೋದೆವು . ನಮಗೆ ಕಲ್ಲು ಮಾತ್ರವಾಗಿರುವ ಯಾವ ವಿಗ್ರಹದಲ್ಲಿ ಶ್ರೀಗುರು ಸಾಕ್ಷಾತ್ ಜಗನ್ಮಾತೆ ಭವತಾರಿಣಿಯನ್ನು ಪ್ರತ್ಯಕ್ಷ ದರ್ಶಿಸಿದರೋ ಆ ಭವತಾರಿಣಿಯ ಸನ್ನಿಧಿಗೆ ಹೋಗಿ, ನಿಂತು, ಹಳೆಯದನ್ನೆಲ್ಲ ನೆನೆದು ಪೂಜಿಸಿದೆವು. ಹೂವುಗಳನ್ನು ಕೊಂಡು ಅರ್ಪಿಸಿದೆವು. ಪ್ರಸಾದ ಪಡೆದೆವು. ನಮಸ್ಕರಿಸಿ ನಾಟ್ಯಮಂದಿರದ ಮಾರ್ಗವಾಗಿ ಬಲಿಪೀಠದ ಬಳಿಯಿಂದ ಹೋಗಿ ಶಿವದೇವಾಲಯಗಳನ್ನು ನೋಡಿದೆವು. ಶ್ಯಾಮಸುಂದರ ಶಿಲಾ ಲಿಂಗಗಳವು! ಅಲ್ಲಿ ತೀರ್ಥ ತೆಗೆದುಕೊಂಡೆವು. (ದಿನಚರಿಯಲ್ಲಿ ‘ನೀರು ಕುಡಿದೆವು’ ಎಂದು ಬರೆದಿದ್ದೇನೆ!!) ರಾಮಲಾಲದಾದ ಪುನಃ ನಮ್ಮ ಜೊತೆಯಲ್ಲಿ ಬೇಲೂರು ಮಠಕ್ಕೆ ಬರಬಹುದು ಎಂದು ಅವರನ್ನು ಹುಡುಕಿದೆವು, ಸಿಕ್ಕಲಿಲ್ಲ. ಹೋಟೆಲಿನಲ್ಲಿ ತಿಂಡಿ ತಿಂದು ಎಳನಿರು ಕುಡಿದೆವು. ದೋಣಿಗೆ ಬಂದು ಕುಳಿತೆವು. ದೋಣಿಯವನು ತಡಮಾಡಿದನು. ಇನ್ನೇನು ಹೊರಡುವುದರಲ್ಲಿದ್ದೆವು. ಅಷ್ಟರಲ್ಲಿ ಸ್ನಾನಘಟ್ಟದಲ್ಲಿ ಮಜ್ಜನಂಗೈಯುತ್ತಿದ್ದ ರಾಮಲಾಲದಾದರನ್ನು ಕಂಡೆವು. ವೃದ್ಧದೇಹದ ಲಘು ಅಂಗದ ಆತನು ಬಿಸಿಲಿನಲ್ಲಿ ಸ್ನಾನಮಾಡುತ್ತಿದ್ದುದು ಪವಿತ್ರವಾಗಿ ಕಂಡಿತು. ರಾಮಲಾಲ ಚಾಟರ್ಜಿಯ ತಮ್ಮನ ಮಗ ನಕುಲ ಚಾಟರ್ಜಿಯು ನಮ್ಮೊಡನೆ ಬೇಲೂರಿಗೆ ಬಂದನು.

(ಆಗ ನನ್ನ ದಿನಚರಿಯಲ್ಲಿ ಬರೆದಿದ್ದು, ಮತ್ತೆ ಇನ್ನೆಲ್ಲಿಯೂ ಪ್ರಕಟವಾಗದಿರುವ ಈ ಕೆಳಗಿನ ಪಂಕ್ತಿಗಳನ್ನು ಇಲ್ಲಿ ಕೊಡುತ್ತೇನೆ.)

ಶ್ರೀರಾಮಕೃಷ್ಣ ಗುರುದೇವನಂ ನೆರೆ ನೆನೆದು
ದೋಣಿಯಿಂದಿಳಿ ಕೆಳಗೆ, ಯಾತ್ರಿಕನೆ. ಭವಯೋಗಿ,
ದಿವಿಜ ಗಂಗೆಯ ನಿರ್ಮಲ ಸುತೀರ್ಥದೊಳು ಮಿಂದು
ಪರಿಶುದ್ಧನಾಗಿ, ಪಾವನನಾಗಿ ಮೇಲೇರು.
ಕೈಮುಗಿದು ತಲೆಬಾಗಿ, ಬಗೆಯ ಕೊಳೆಯನು ನೀಗಿ
ಸ್ನಾನಘಟ್ಟವನಡರು, ರಸಯೋಗಿ. ಕಬ್ಬಿಹನೆ,
ಸುಂದರ ವಸುಂಧರೆಯ ವೈಕುಂಠಮಂದಿರಂ
ಮುಂದಿಹುದು ಚಂದದಲಿ, ನೋಡು ಆನಂದದಲಿ.
ಕಲಿಯುಗದ ಪರಮಾವತಾರನೀ ಎಡೆಯಲ್ಲಿ
ದಿವ್ಯ ಲೀಲೆಯ ಮೆರೆದನಿಲ್ಲಿಯೇ ಭಕ್ತರಂ
ಪೊರೆದನೀ ತಾಣದೊಳ್ ಧರೆಗೆ ನವಕಾಂತಿಯಂ,
ಬಗೆಗೆ ಪೊಸದಿಟ್ಟಿಯಂ, ಬೆಂದೆದೆಗೆ ಶಾಂತಿಯಂ
ಕನಿಕರದಿ ನೀಡಿದನು.

ಕೈಮುಗಿದು ಮುಂದೆ ನಡೆ.
ಮೆಲ್ಲನಡಿಯಿಡು, ಸದ್ದು ಮಾಡದಿರು. ಕೆಡಿಸದಿರು
ಮೌನವನು. ಮರ್ತ್ಸದೆಲೆಯು ಮುಗಿದುದೀಯೆಡೆಗೆ,
ಭೂಸ್ವರ್ಗಮಿನ್ನಿರ್ಪುದೀ ದಕ್ಷಿಣೇಶ್ವರಂ!
ಜಡಮೆಂಬುದಿಲ್ಲಿಲ್ಲ; ಚೈತನ್ಯಮಿಹುದೆಲ್ಲ!
ಕಲ್ಮಣ್ಣು ಗಿಡಮರಗಳೆಲ್ಲಮುಂ ಬದುಕಿಹವು;
ಉಸಿರೆಳೆದು ಜೀವಿಸುವೆ; ಸಾರುತಿವೆ ಗುರುದೇವ
ಜೀವನ ಚರಿತ್ರೆಯಂ. ಭಕ್ತವರ ಯಾತ್ರಿಕನೆ,
ಈ ಕಲ್ಲ ಮೇಲ್ಮೆಲ್ಲನಡಿಯನಿಡು, ತುಳಿಯದಿರು:
ಗುರುದೇವನ ಪವಿತ್ರಪಾದಮಂ ಮುಂ ಪೊತ್ತು
ಪಾವನತೆಯೊಂದಿರುವ ಭಕ್ತಶಿಲೆಯಿದು. ಇಲ್ಲಿ,
ಬಹರೆಲ್ಲ ಶಿಷ್ಯರೈ; ಇಹರೆಲ್ಲ ಗುರುಗಳೈ!
ಬಹರೆಲ್ಲ ಹರಿಭಕ್ತರಿಹರೆಲ್ಲ ಹರಿಮಯಂ!
ಸುತ್ತಲುಂ ಕಲ್ಗಳು ಕಥಾಮೃತವ ಕಾರುತಿವೆ:
“ಗುರುದೇವನಿಹನಿಲ್ಲಿ, ಮಾಕಾಳಿಯಿಹಳಿಲ್ಲಿ”
ಎಂದಿಲ್ಲಿಗೈತರ್ಪ ಜನಕರೆಲ್ಲ ಸಾರುತಿವೆ!
ದಿವ್ಯ ಗುರು ದೊರಕಿದರೆ ಕಲ್ಲಿನೆದೆಯುಂ ಕೂಡ
ಮೆಲ್ಲಿತಾಗುವುದೆಂಬ, ಮೂಕ ನರನಾದೊಡಂ
ಸರಸ ಕವಿಯಾಗುವನು ಎಂದೆಂಬ ನನ್ನಿಯನು
ತೋರುತಿವೆ ತಿರೆಗೆ, ಮೆಣೆತ್ತಲುಂ ಗುರುವರನ
ಆತ್ಮ ಕಾಂತಿಯ ಶಾಂತಿ ಹೃದಯವರಿವಂದದಲಿ
ಸುಳಿಯುತಿದೆ.

ಕಾಣಿರೇಂ? ಕಾಣಿರೇಂ, ಕಣ್ಗಳಿರ,
ಪರಮಹಂಸನ ಪರಮಮೂರ್ತಿಯಂ? ಕೇಳಿರೇಂ?
ಕೇಳಿರೇಂ, ಕಿವಿಗಳಿರ, ವಿಶ್ವ ಗುರುವರ್ಯನಾ
ಮಂಗಳ ಸುವಾಣಿಯಂ? ಹೃದಯ, ನೀನರಿಯೆಯಾ
ಪರಮಹಂಸನ ಪೂತಸನ್ನಿಧಿಯ ಸೌಖ್ಯಮಂ?
ಕುರುಡರೇಂ? ಕಿವುಡರೇಂ? ಜಡನೇನು? ನಿಲ್ಲಿಲ್ಲಿ,
ಕಬ್ಬಿಗನೆ, ನಿಲ್ಲಿಲ್ಲಿ: ಮನವ ಕೇಂದ್ರೀಕರಿಸಿ
ಕಲ್ಪನೆಯೆರಂಕೆಗಳನುರೆ ಕೆದರಿ, ಮಾಸಗಳ
ಬರಿಸಗಳ ಜವನಿಕೆಯ ಹರಿದಾತ್ಮಶಕ್ತಿಯಲಿ
ಕಳೆದ ಕಾಲದ ಗಬ್ಬವನು ನುಗ್ಗಿ ನಿಂತಲ್ಲಿ
ನೋಡೇನು ಕಾಣುತಿದೆ?………

೧೩-೧೦-೧೯೨೯: ಭಾನುವಾರ

ದಿನಚರಿ ಪ್ರಾರಂಭವಾಗುತ್ತದೆ, “ಕಾಳಿ ಬರುವಳು!” ಎಂಬ ಕವನದಿಂದ.  ದುರ್ಗಾಪೂಜೆಯ ಪ್ರಭಾವಸ್ಪೂರ್ತಿಯಿಂದ ಹೊಮ್ಮಿದೆ ಆ ವೀರಕವನ! ‘ನೋಡು ಬರುತಲಿರುವಳದೋ ರುದ್ರಭದ್ರ ಕಾಳಿಯು, ದೇವಿ ಚಂಡಿ ಚಾಮುಂಡಿ ರಕ್ತರುಂಡ ಮಾಲಿಯು!’ ಎಂದು ಮೊದಲಾಗುತ್ತದೆ. ಆ ಕವನ ಮೊದಲು ‘ಪಾಂಚಜನ್ಯ’ ಎಂಬ ನನ್ನ ಕವನಸಂಗ್ರಹದಲ್ಲಿ ಅಚ್ಚಾಗಿದೆ. ಆಗ ನಡೆಯುತ್ತಿದ್ದ ಸ್ವಾತಂತ್ಯ್ರ ಸಂಗ್ರಾಮಕ್ಕೆ ಸ್ಪೂರ್ತಿ ನೀಡಲು ರಣಕಾಳಿಯನ್ನು ಆಹ್ವಾನಿಸುವಂತಿದೆ; ಜಗನ್ಮಾತೆಯ ಸೃಷ್ಟಿಲೀಲಾತಾಂಡವವನ್ನೂ ಪ್ರತಿಧ್ವನಿಸುತ್ತದೆ!

ಬೆಳಿಗ್ಗೆ ಮಹಾಪುರುಷಜಿಗೆ ನಮಸ್ಕರಿಸಿ ನಿಂತೆವು. ಅವರೆದುರಿಗೆ ಹೋದಾಗಲೆಲ್ಲಾ ಏನೊ ಒಂದು ಭಕ್ತಿವಾತ್ಸಲ್ಯಗಳ ಪರಸ್ಪರ ಸಮ್ಮೇಲನದ ಅನುಭವವಾಗುತ್ತದೆ, ಅವರ ಮುಗುಳುನಗೆಯ ಮಾಧುರ್ಯವೇನು! ಗಾಂಭೀರ್ಯವೇನು! ಗಂಭೀರ ಅರ್ಥವೇನು!…

ತರುವಾಯ ಭೇದಿ ಔಷಧ ತೆಗದುಕೊಂಡೆ….

ರವೀಂದ್ರನಾಥ ಠಾಕೂರರ ಬಂಗಾಳಿ ಭಾಷೆಯ ‘ಗೀತಾಂಜಲಿ’ ಕೈಗೆ ಸಿಕ್ಕಿತು. ಅದರ ಪದ್ಯಗಳ ರೂಪವನ್ನು ಪರಿಶೀಲಿಸಿ ನೋಡಿದೆನು. ನನಗಾವುದೂ ವಿಶಿಷ್ಟವಾಗಿ ಕಾಣಲಿಲ್ಲ. ನಾನು ಕನ್ನಡದಲ್ಲಿ ಆ ವೈವಿಧ್ಯಕ್ಕಿಂತಲೂ ಹೆಚ್ಚಾದ ವೈವಿಧ್ಯವನ್ನು ಸಾಧಿಸಬಲ್ಲೆನೆಂಬ ಧೈರ್ಯವಿದೆ; ಆಗಲೆ ಸಾಧಿಸಿಯೂ ಇದ್ದೇನೆ. ಛಂದಸ್ಸಿನ ವಿಷಯದಲ್ಲಿ ಕನ್ನಡಿಗರು ಯಾರಿಗೂ ತಲೆ ತಗ್ಗಿಸಿಬೇಕಾಗಿಲ್ಲ, ನಮ್ಮ ಕನ್ನಡ ಛಂದಸ್ಸು ಅತಿ ಶ್ರೇಷ್ಠವೂ ಬಹುಮುಖ್ಯವೂ ಆದುದಾಗಿದೆ.

ಸಾಯಂಕಾಲ ತಾಯಿಯನ್ನು ಮನೆಗೆ ಕಳಿಸುವ ಉತ್ಸವ. ಬಹಳ ವೈಭವ ಕೋಲಾಹಲಗಳಿಂದ ಕೂಡಿತ್ತು. ವಿಗ್ರಹವನ್ನು ಪೀಠದಿಂದ ಸ್ವಲ್ಪ ದೂರ ಹೊತ್ತುಕೊಂಡು ಬಂದು. ಅದಕ್ಕೆ ತವರುಮನೆಗೆ ಹೋಗುವ ಹೆಣ್ಣಿಗೆ ಮಾಡುವ ಉಪಚಾರದ ಕರ್ಮಕ್ರಿಯೆಗಳನ್ನೆಲ್ಲ ಮಾಡುವರು. ಕೆನ್ನೆಮುಟ್ಟಿ ಮುದ್ದುಮಾಡುವರು. “ಹೋಗಿ ಬರ್ತೀಯಾ?” ಎಂದು ಕೇಳುವರು. ಹೂವು ಮುಡಿಸುವರು. ಅಕ್ಷತೆ ಎರಚುವರು. ಮಂಗಳಾರತಿ ಎತ್ತುವರು. ಮತಾಪು ಮೊದಲಾದವುಗಳನ್ನು ಅವಳ ಮುಂದೆ ಸುಡುವರು. ಎಲ್ಲರೂ ಕಡೆಗೆ ಒಬ್ಬೊಬ್ಬರಾಗಿ ಹೋಗಿ ಆಕೆಯ ಪಾದಗಳನ್ನು ಮುಟ್ಟಿ ಶರಣು ಮಾಡುವರು. ತರುವಾಯ ಅದನ್ನು  ಗಂಗೆಗೆ ಹೊತ್ತುಕೊಂಡು ಒಯ್ದರು. ಮಾತೆಯ ಮುಖ ಮಠಕ್ಕೆ ಅಭಿಮುಖವಾಗಿಯೆ ಇತ್ತು: ಏಕೆಂದರೆ, ಮುಂದಿನ ವರುಷ ಮರಳಿ ಬಾ ಎಂಬ ಸೂಚನೆಯಂತೆ! ಮಹಾಪುರುಷಜಿ ಉಪ್ಪರಿಗೆಯ ವರಾಂಡದಲ್ಲಿ ಬಂದು ಕುಳಿತರು. (ಹಿಂದೆಲ್ಲ ಮಾಡುತ್ತಿದ್ದಂತೆ ಕೆಳಗಿಳಿದು ಬಂದು ತಾಯಿಯನ್ನು ಕಳುಹಿಸಿ ಕೊಡುವಂತಹ ದೇಹಶಕ್ತಿ ಅವರಿಗೆ ಇರಲಿಲ್ಲ. ಅವರ ಆರೋಗ್ಯ ಬಹಳ ಸೂಕ್ಷ್ಮ ಸ್ಥಿತಿಯಲ್ಲಿತ್ತು.) ತಾಯಿಯ ಮುಂದೆ ನೃತ್ಯವಾಯಿತು. ಆಮೇಲೆ ನಟನೆಯ ಯುದ್ಧವಾಯಿತು! ‘ಜಯ್ ಶಿವ! ಜಯ್ ಜಗನ್ಮಾತಾ!’ ಎಂದು ಒಂದು ಪಕ್ಷದವರೂ ‘ಜಯ ಶಿವ! ಜಯ ಪರಮಪಿತ!’ ಎಂದು ಇನ್ನೊಂದು ಪಕ್ಷದವರೂ ಎದುರುಬದುರು ನಿಂತು ಕೂಗಾಡಿಬಿಟ್ಟರು! ತರುವಾಯ ಗಂಗಾಜಲದಲ್ಲಿ ಮೂರ್ತಿ ವಿಸರ್ಜನವಾಯಿತು.

ಶಾಂತಿಜಲವನ್ನು ತಂದು ಪೀಠದ ಮೇಲಿಟ್ಟು, ಬ್ರಹ್ಮಚಾರಿಯೊಬ್ಬನಿಂದ ಮಂತ್ರಗಳನ್ನು ಹೇಳಿಸಿ, ನೀರನ್ನು ನೆರೆದಿದ್ದವರ ಮೇಲೆ “ಓಂ ಶಾಂತಿಃ ಶಾಂತಿಃ ಶಾಂತಿಃ!” ಎಂದು ಹೇಳುತ್ತಾ ಎರಚಿದರು. ತರುವಾಯ ‘ಸಮರೇ ನಾಚೇ ಕಾರೇ ರಮಣಿ?’ ಮೊದಲಾದ ರಾಮಪ್ರಸಾದ, ಕಮಲಾಕಾಂತರ ವೀರರಸ ಪ್ರಧಾನವಾದ ಗೀತಗಳನ್ನು ಹಾಡಿದರು.

ಬೇಲೂರು ಮಠದಂತೆಯೆ ಇತರ ಸಾವಿರಾರು ಕಡೆಗಳಲ್ಲಿ, ಗಂಗೆಯ ಎರಡು ದಡಗಳಲ್ಲಿಯೂ, ಆ ರಾತ್ರಿಯೆ, ತಾಯಿಯನ್ನು ತವರಿಗೆ ಕಳಿಸುವ ವಿಸರ್ಜನೋತ್ಸವ ಸಮಾರಂಭ. ಆದ್ದರಿಂದಲೆ ಗಂಗಾನದಿಯ ಇಕ್ಕೆಲುಗಳೂ ವಾದ್ಯ, ಜಾಗಟೆ, ಶಂಖ, ಘಂಟೆ, ಸಾವಿರಾರು ದೀಪಕಾಂತಿ, ಜನಗಳ ಕೂಗು, ಕದನಿ ಮೊದಲಾದ ಮದ್ದುಗುಂಡುಗಳ ಆರ್ಭಟೆ ಇತ್ಯಾದಿ ನಾದ ಕಾಂತಿಗಳಿಂದ ತುಂಬಿ ಹೋಗಿದುವು. ತೇಲುವ ದೋಣಿಗಳು ಗಂಗೆಯ ವಕ್ಷದಲ್ಲಿ ಜ್ಯೋತಿರ್ಗವಾಕ್ಷಗಳು ದಟ್ಟಯಿಸಿದಂತಿದ್ದುವು. ಇಂಪಾದ ವಾದ್ಯಧ್ವನಿ ವಾಯುಮಂಡಲವನ್ನೆಲ್ಲ ತುಂಬಿ, ಗಂಗೆಯ ತರಂಗಗಳ ಮೇಲೆ ತೇಲಿಬಂದು ಸ್ವರ್ಗ ಮರ್ತ್ಸ ವೈಕುಂಠಗಳನ್ನು ಪ್ರವೇಶಿಸುವಂತಿತ್ತು.

ಒಬ್ಬೊಬ್ಬರೂ ಬಿಲ್ವಪತ್ರಗಳ ಮೇಲೆ ‘ಶ್ರೀದುರ್ಗಾಚರಣಂ’ ಎಂದು ಬರೆದು ಶಾಂತಿಜಲದ ಕುಂಭದಲ್ಲಿ ಹಾಕಬೇಕು. ಒಬ್ಬೊಬ್ಬರೂ ಆಕೆಯ ಹೆಸರನ್ನು ನೂರೆಂಟು ಸಾರಿ ಹೇಳಬೇಕು.

ಕಿರಿಯರು ಹಿರಿಯರಿಗೆ ಕಾಲುಮುಟ್ಟಿ ನಮಸ್ಕಾರ ಮಾಡುತ್ತಾರೆ. ಒಬ್ಬರನ್ನೊಬ್ಬರು ಆಲಿಂಗಿಸುತ್ತಾರೆ.

ಇದೆಲ್ಲ ಮುಗಿದ ಮೇಲೆ ಊಟಕ್ಕೆ ಕುಳಿತಾಗ ‘ಉಪುದಾ’ ಅವರ ಉಪನ್ಯಾಸ ವಿನೋದವೂ ಆಯಿತು. ಅಂತೂ ಮನೋಹರವೂ ಆತ್ಮೋದ್ಧಾರಕವೂ ಆದ ರಾತ್ರಿಯಿದು!

೧೪-೧೦-೧೯೨೯: ಸೋಮವಾರ

ದಿನಚರಿಯಲ್ಲಿ ಅಂದೇ ಪೆನ್ಸಿಲ್ಲಿನಲ್ಲಿ ಬರೆದ ಎರಡು ಚಿಕ್ಕ ಕವನಗಳಿವೆ. ಒಂದು “ತರಳೆ ನಾನು ದೊರೆಯೆ ನೀನು ಬಾರ ತರಳನಂದದಿ.” ಎಂದು ಪ್ರಾರಂಭವಾಗುತ್ತದೆ. ಅದು ‘ಷೋಡಶಿ’ ಎಂಬ ಕವನಸಂಗ್ರಹದಲ್ಲಿ ಅಚ್ಚಾಗಿದೆ. ಮತ್ತೊಂದು “ಶಿವನ ಕೃಪೆಯದಿರಲಿ ಬಿಡು, ಬಂದೆ ಬರುವುದು, ಮನುಜನೊಲ್ಮೆಯೊಂದ ಕೊಡು, ಶಿವನ ತರುವುದು.” ಎಂದು ಪ್ರಾರಂಭವಾಗುತ್ತದೆ. ಇದು ಸ್ವಾಮಿ ಸಿದ್ಧೇಶ್ವರಾನಂದರನ್ನೆ ನಿರ್ದೇಶಿಸಿ ರಚಿತವಾದದ್ದು. ನನ್ನ ಭಕ್ತಿ ಕೃತಜ್ಞತೆಗಳನ್ನು ಸೂಚಿಸುತ್ತದೆ. “ಮೆಲ್ಲನೆನ್ನನೊಯ್ದಿತಣ್ಣ ಶಿವನ ಭಕ್ತಿಗೆ!” ಎಂದು ಕೊನೆಗೊಳ್ಳುತ್ತದೆ.

ಮಧ್ಯಾಹ್ನ ದೇವರಮನೆಗೆ ಹೋಗಿ ಶ್ರೀಗುರುಮಹಾರಾಜರ ಅಂಗಿ ಪಾದುಕೆ ಕೈಬರಹ ಮೊದಲಾದ ಸ್ಮೃತಿವಸ್ತುಗಳನ್ನು ನೋಡಿದೆವು….

ಸಾಯಂಕಾಲ ಎಲ್ಲ ಸ್ವಾಮಿಗಳಿಗೂ ನಮಸ್ಕಾರ ಮಾಡಿ ಮಹಾಪುರುಷಜಿಯ ಬಳಿಗೆ ಹೋದೆವು. ಅವರಿಗೆ ಗೂರ್ಲು ಬಂದಿತ್ತು. ತೊಂದರೆಪಡುತ್ತಿದ್ದರು. ಆದರೂ ಅತ್ಯಂತ ಪ್ರಸನ್ನರಾಗಿ ತುಂಬ ಕರುಣೆಯಿಂದ ನಮ್ಮ ಊಟ ಉಪಚಾರಗಳ ವಿಚಾರ ಕೇಳಿದರು. ಮತ್ತು ಗುರುಮಹಾರಾಜರು ನಿಮ್ಮ ಬಳಿಯರ ಸದಾ ಇರುವರು ಎಂದು ಹಲ್ಲಿಲಿವಾಯ ಮುಗುಳ್ನಗೆಯಿಂದ ಆಶೀರ್ವದಿಸಿದರು.

ಗಂಟುಮೂಟೆ ಕಟ್ಟಿಕೊಂಡು ಎಲ್ಲರನ್ನೂ ಬೀಳುಕೊಂಡು ಹೌರಾ ಸ್ಟೇಷನ್ನಿಗೆ ಬಂದು ನೂಕುನುಗ್ಗಲಿನಲ್ಲಿ ತುಂಬ ಶ್ರಮದಿಂದಲೆ ರೈಲು ಹತ್ತಿದೆವು. ರಾತ್ರಿ ನಿದ್ದೆಯೆ ಇಲ್ಲ….

೧೫-೧೦-೧೯೨೯: ಮಂಗಳವಾರ

ಪೂರಿಗೆ ಬಂದೆವು. ಪವಿತ್ರ ಯಾತ್ರಾಸ್ಥಳವೆಂದು ಪ್ರಸಿದ್ಧವಾಗಿದ್ದರೂ ತುಂಬ  ಸಪ್ಪೆ ಊರು.ಅದರ ಬೀದಿಗಳು ಮನೆಗಳು ಸುತ್ತುಮುತ್ತ ಎಲ್ಲವೂ ಹಳೆಯ ಕೊಳಕು ಬಟ್ಟೆಯ ನೆನಪು ತರುತ್ತವೆ. ಬಹುಶಃ ಭಕ್ತರು ಭಕ್ತಿಯ ಆವೇಶದಲ್ಲಿ ಕೊಳಕು ಅಸಹ್ಯ ಅನಾಗರಿಕ ಯಾವುದನ್ನೂ ಗಮನಿಸುವುದಿಲ್ಲ ಎಂದು ತೋರುತ್ತದೆ. ಹಾಗಿರುವುದು ಹಿಂದೂ ಆಚಾರದ ಸಾಮಾನ್ಯ ಲಕ್ಷಣವೆ ಆಗಿಹೋದಂತಿದೆ.

ಶ್ರೀರಾಮಕೃಷ್ಣ ಆಶ್ರಮಗಳಿಂದ ಬರುವವರೆಲ್ಲ‘ಬೃಂದಾವನ ಶೃಂಗಾರಿಎಂಬ ಹೆಸರಿನ ಪೂಜಾರಿ ಪುರೋಹಿತರ ಮನೆಯಲ್ಲಿ ಇಳಿದುಕೊಂಡು ಅವರ ಆತಿಥ್ಯದಲ್ಲಿರುತ್ತಾರಂತೆ, ನನಗೂ ದೊರೆಯಿತು. ಅದರ ಅನುಭವ! ಸಹಿಸಿಕೊಂಡೆವು! ನಾವು ಇಳಿದುಕೊಂಡಿದ್ದ ಮನೆ ಇರುವುದು‘ವೈಕುಂಠಕೇರಿ’ ಯಲ್ಲಂತೆ! ಕೇರಿಯೆ ವೈಕಂಠವಲ್ಲದಿದ್ದರೂ ಭಕ್ತರನ್ನು ವೈಕುಂಠಕ್ಕೆ ಕಳಿಸುತ್ತದೆ ಎಂಬರ್ಥದಲ್ಲಿ! ಸಮುದ್ರ ತೀರದ ರೋಗಗಳಾದ ಆನೆಕಾಲು, ತೊನ್ನು, ಕುಷ್ಠ ಎಲ್ಲವೂ ಹೆಚ್ಚಂತೆ ಇಲ್ಲಿ. ಪಟ್ಟಣವೂ ಶುದ್ಧ ಗಲೀಜು!

ಸ್ನಾನ ಮಾಡಲೆಂದು ಸಮುದ್ರಕ್ಕೆ ಹೋದೆವು: ನಿಜವಾಗಿಯೂ ಧನ್ಯರಾದೆವು! ಪೂರಿಯಲ್ಲಿ ಸಮುದ್ರ ಅತ್ಯಂತ ಪ್ರಶಾಂತ. ಮದರಾಸಿನಲ್ಲಿರುವಂತೆ ನಿರಂತರ ಅಲ್ಲೋಲ ಕಲ್ಲೋಲಮಯವಾಗಿ ವೇಲೆಗೆ ಭಯಂಕರವಾಗಿ ಅಪ್ಪಳಿಸುತ್ತಾ ಕ್ಷೋಭಾಕರವಾಗಿಲ್ಲ. ನೀಲಸ್ಫಟಿಕ ಛವಿಯ ಸುಂದರ ಸೌಮ್ಯ ಲೀಲಾಮಯ ಕೈಶೋರವೀಚಿಗಳಿಂದ ಶ್ರೀಕೃಷ್ಣನ ಬಾಲವಿಗ್ರಹವನ್ನು ನೆನಪಿಗೆ ತರುವಂತಿತ್ತು. ನನ್ನ ಕವಿಚೇತನವು ಆ ಸುನೀಲ ಸಲಿಲಾರ್ಣವರ ವರ್ಣನೆ ತಾನಾಗಿ ಸಮಾಧಿ ಸುಖಿಯಾಯಿತು! ಸ್ನಾನ ಮಾಡುವವರು ಸಮುದ್ರದೊಳಗೆ ಎರಡು ಮೂರು ಫರ್ಲಾಂಗು ಹೋದರು. ಸೊಂಟದೆತ್ತರ ಅಥವಾ ಎದೆಯೆತ್ತರಕ್ಕಿಂತ ಹೆಚ್ಚಾಗುವುದಿಲ್ಲ ಅದರ ಆಳ! ಆದರೆ ಸಮುದ್ರದ ಅನುಭವವಾಗಲಿ ಪರಿಚಯವಾಗಲಿ ಇರದಿದ್ದ ನಮಗೆ ಹೆದರಿಕೆ, ದೂರ ಹೋಗಲು. ಅದಕ್ಕಾಗಿ ಒಂದಿಬ್ಬರು ಬೆಸ್ತರಿಗೆ ದುಡ್ಡು ಕೊಟ್ಟು ನಮ್ಮ ಅಂಗರಕ್ಷಕರನ್ನಾಗಿ ಮಾಡಿಕೊಂದು ಮುಂದೆಮುಂದೆ ಹೋದೆವು. ಆದರೂ, ಆ ಬೆಸ್ತರು ಎಷ್ಟೇ ಧೈರ್ಯ ಹೇಳಿದರೂ, ನಮಗೆ ಒಂದು ಒಂದೂವರೆ ಫಲಾಂಗಿನಾಚೆ ಹೋಗಲು ಧೈರ್ಯವಾಗಲಿಲ್ಲ! ನನಗಂತೂ ಪೂರಿಯಲ್ಲಿ ಅತ್ಯಂತ ಪೂಜ್ಯವೂ ದರ್ಶನೀಯವೂ ಪವಿತ್ರವೂ ಮನೋಜ್ಞವೂ ಆಗಿದ್ದುದೆಂದರೆ ಆ ಸಮುದ್ರ ವೇಲಾಭೂಮಿಯೊಂದೆ!

ಸಮುದ್ರಸ್ನಾನ ಮುಗಿಸಿಕೊಂಡು ಒಬ್ಬರ ಮಾರ್ಗದರ್ಶನದಲ್ಲಿ ಜಗನ್ನಾಥನ ದರ್ಶನಕ್ಕೆ ಹೋದೆವು. ಎಲ್ಲ ಪವಿತ್ರ ಕ್ಷೇತ್ರಗಳಂತೆಯೆ ಇಲ್ಲಿಯೂ, ಪಂಡರು, ಪೂಜಾರಿಗಳು! ಭಕ್ತರಿಂದ ಆದಷ್ಟು ಗಿಟ್ಟಿಸಿಕೊಳ್ಳುವುದೆ ಅವರ ಕರ್ತವ್ಯ. ಆದರೆ ನಾವು ಸ್ವಾಮಿಜಿಯ ಪರಿಚಯದವರೊಬ್ಬರನ್ನು, ಅವರೂ ಅವರನ್ನೆಲ್ಲ ತಿಳಿದ ಆ ಗುಂಪಿನವರೆ, ಮುಂದಿಟ್ಟುಕೊಂಡಿದ್ದುದರಿಂದ ಅವರು ಗುರಾಣಿಯಾಗಿ ನಮ್ಮನ್ನು ಪಂಡರ ಬಾಣಗಳಿಂದ ರಕ್ಷಿಸಿದರು. ವಿಶಾಲಾಕ್ಷಿ, ಲಕ್ಷ್ಮಿ, ಸರಸ್ವತಿ, ಜಗನ್ನಾಥ ಎಂದೆಲ್ಲ ದೇವರುಗಳ ಪರಿಚಯವಾಯಿತು. ಇಲ್ಲಿ ಜಗನ್ನಾಥ ಎಂದರೆ ಬಲರಾಮ ಸುಭದ್ರೆ ಕೃಷ್ಣರನ್ನು ಸಾಲಾಗಿ ನಿಲ್ಲಿಸಿರುವುದೆ! ಆ ವಿಗ್ರಹಗಳೂ ಮರದಿಂದ ಕೆತ್ತಿಮಾಡಿದುವು, ಮಕ್ಕಳು ಚಿತ್ರ ಬರೆದಂತೆ ತುಂಬ ಸ್ಥೂಲವೂ ವಿಕಾರವೂ ಆಗಿವೆ. ಮಲೆನಾಡಿನಲ್ಲಿ ಮಾರಿಗೊಂಬೆಗಳನ್ನು ಮಾಡಿ ಒಂದೂರಿನಿಂದ ಮತ್ತೊಂದೂರಿಗೆ ಎಳೆದುಕೊಂಡು ಹೋಗಿ ಬಿಡುತ್ತಾರಲ್ಲಾ ಹಾಗೆಯೆ ಒಡ್ಡೊಡ್ಡಾಗಿವೆ. ಮರವಾದ್ದರಿಂದ ವರ್ಷ ವರ್ಷವೂ ಬದಲಾಯಿಸುತ್ತಾರಂತೆ. ಆ ದೇವಸ್ಥಾನ ಹಿಂದೆ ಬೌದ್ಧರದಾಗಿತ್ತೆಂದೂ ಆ ಮತ ಈ ದೇಶದಲ್ಲಿ  ಕುಸಿದ ಮೇಲೆ ಬುದ್ಧ ಸಂಘ ಧರ್ಮ ಎಂಬ ಮುನ್ನಿನ ಪ್ರತೀಕಗಳನ್ನು ತೆಗೆದೊಗೆದು ಬಲರಾಮ ಕೃಷ್ಣ ಸುಭದ್ರೆಯರನ್ನು ಸ್ಥಾಪಿಸಿದರೆಂದೂ ಹೇಳುತ್ತಾರೆ! ದೇವಾಲಯವೇನೊ ಅದ್ಭುತವಾಗಿದೆ. ಬೃಹತ್ ಪ್ರಮಾಣದ್ದು. ನನಗಂತೂ ದಕ್ಷಿಣೇಶ್ವರದಲ್ಲಿ ಆದಂತಹ ಅನುಭವಗಳಾಗಲಿ ಅಥವಾ ಪೂರಿಯಲ್ಲಿಯೆ ಸಮುದ್ರ ವೇಲಾಭೂಮಿಯಲ್ಲಿ ಮತ್ತು ಸಮುದ್ರಸ್ನಾನ ಮಾಡಿದಾಗ ಆದಂತಹ ರಸೋನ್ಮೇಷವಾಗಲಿ ಆಗಲಿಲ್ಲ. ಸದ್ಯಃ ಹೇಗಾದರೂ ಆದಷ್ಟು ಬೇಗ ಇಲ್ಲಿಂದ ಹೊರಗೆ ಹೋದರೆ ಸಾಕು ಎನ್ನಿಸುವಂತಾಯಿತು.

ದೇವಾಲಯದ ಹೆಬ್ಬಾಗಿಲೀಚೆಗೆ ಬಂದರೆ ‘ಆನಂದ ಬಜಾರ್’ ಸಿಗುತ್ತದೆ. ವಿಶಾಲವಾದ ವೇದಿಕೆಯಂತಹ ಜಾಗದಲ್ಲಿ ಬುಟ್ಟಿಗಳಲ್ಲಿ ಬುಟ್ಟಿಬುಟ್ಟಿಗಟ್ಟಲೆ ಅನ್ನ ಪಲ್ಯ ಇತ್ಯಾದಿ ಏನೇನೊ ಭೋಜ್ಯಗಳನ್ನಿಟ್ಟುಕೊಂಡು ಮಾರಾಟಕ್ಕೆ ಕುಳಿತಿರುತ್ತಾರೆ. ಅದೆಲ್ಲ ಜಗನ್ನಾಥಗೆ ಅರ್ಪಿಸಿದ ಪ್ರಸಾದವಂತೆ. ಶುಚಿ ಎಂಬುದನ್ನು ಕೇಳಬೇಡಿ. ಕೆಲವು ಕಡೆ ನೊಣ ಕೂರದಂತೆ ಕೊಳಕು ಬಟ್ಟೆ ಮುಚ್ಚಿರುತ್ತಾರೆ. ಜಾತಿಗೀತಿ ಭೇದವಿಲ್ಲದೆ ಯಾರು ಬೇಕಾದರೂ ಭಕ್ತರು ಕೈಹಾಕಿ ಬುಟ್ಟಿಯಿಂದ ಅನ್ನ ತೆಗೆದುಕೊಳ್ಳಬಹುದು! ನಮ್ಮ ದೇಶದಲ್ಲಿ ಒಂದು ಒಳ್ಳೆಯ ತತ್ವವನ್ನು ಆಚರಣೆಗೆ ತರುವಾಗಲೂ ಅದನ್ನು ಹೇಗೆ ಕುಲಗೆಡಿಸುತ್ತಾರೆ ಎನ್ನುವುದಕ್ಕೆ ಈ ‘ಆನಂದ ಬಜಾರು’ ಒಂದು ಒಳ್ಳೆಯ ನಿದರ್ಶನ! ಭೇದಭಾವ ಇರಬಾರದು ಜಗನ್ನಾಥನ ಸಾನ್ನಿಧ್ಯದಲ್ಲಿ ಜಗನ್ನಾಥನ ಭಕ್ತರೊಳಗೆ ಎಂಬ ತತ್ವ ಎಂತಹ ಪೂಜ್ಯ ತತ್ತ್ವ! ಹಾಗೆಂದು ಹೇಳಿ ಕೊಳಕರೂ ರೋಗಿಗಳೂ ಸಿಕ್ಕಿಸಿಕ್ಕಿದವರು ಕೈತೊಳೆಯದೆ ಮಾಡದೆ ಬುಟ್ಟಿಗೆ ಕೈಹಾಕಿ ಅನ್ನ ತೆಗೆದುಕೊಂಡರೆ ಅದನ್ನು ಸಹಿಸುವುದು ಹೇಗೆ? ಜಾತಿಭೇದ ನಿರ್ಮೂಲನದ ಹೆಸರಿನಲ್ಲಿ ಜಾತಿಭೇದಕ್ಕೇನೂ ಸಂಬಂಧವಿಲ್ಲದ ಮತ್ತು ಜಾತಿ ಯಾವುದೆ ಆಗಲಿ ಮನುಷ್ಯ ಮಾತ್ರನಿಗೆ ಅವಶ್ಯಕವಾಗಿರುವ ಶುಚಿತ್ವ ನೈರ್ಮಲ್ಯ ಇವುಗಳನ್ನು ಧಿಕ್ಕರಿಸುವುದೇ? ಆದರೇನು ಮಾಡುವುದು? ನಾವೂ ಅಂದಿನ ಊಟಕ್ಕೆ ಆ ಆನಂದ ಬಜಾರಿನ ಮಹಾಪ್ರಸಾದವನ್ನೆ ತೆಗೆದುಕೊಳ್ಳಬೇಕಾಯಿತು. ಇಲ್ಲದಿದ್ದರೆ ಊಟವೇ ಸೊನ್ನೆಯಾಗುತ್ತಿತ್ತು!

ಇನ್ನೊಂದು ಸ್ವಾರಸ್ಯದ ವಿಚಾರ ಹೇಳುವುದನ್ನು ಮರೆತಿದ್ದೆ!

ದೇವಸ್ಥಾನದ ಒಳಗೆ ದೇವರಿಗೆ ಅಭಿಮುಖವಾಗಿ ಸ್ವಲ್ಪ ದೂರದಲ್ಲಿ ಒಂದು ಜಾಗ ತೋರಿಸುತ್ತಾರೆ, ಇಲ್ಲಿ ಚೈತನ್ಯದೇವನು ಹನ್ನೆರಡು ವರ್ಷಗಳ ಕಾಲ ನಿಂತು ತಪಸ್ಸು ಮಾಡಿದನು ಎಂದು! ಈಗಲೂ ದೇವಸ್ಥಾನದ ನೆಲಕ್ಕೆ ಹಾಕಿದ ಹಾಸುಗಲ್ಲಿನ ಚಪ್ಪಡಿಯ ಒಂದು ಭಾಗ ಸಮೆದೂ ಸಮೆದೂ ನುಣ್ಣಗಾಗಿರುವುದನ್ನು ತೋರಿಸಿ, ಚೈತನ್ಯದೇವನು ನಿಂತೂ ನಿಂತೂ ಸಮೆದದ್ದು ಎಂದು ಭಕ್ತರಿಗೆ ಬಣ್ಣಿಸುತ್ತಾರೆ; ಹಾಗೆಯೆ ಕೈಯಿಟ್ಟು ಇಟ್ಟೂ ಸಮೆದದ್ದು ಎಂದು ಇನ್ನೊಂದು ಎಡೆಯನ್ನು ನಿರ್ದೇಶಿಸುತ್ತಾರೆ! ಸಮೆದು ನುಣ್ಣಗಾಗಿರುವುದೇನೋ ನಿಜ. ಆದರೆ ಅದು ಚೈತನ್ಯದೇವನ ಪಾದ ಮತ್ತು ಹಸ್ತಗಳ ನಿರಂತರ ಸ್ಪರ್ಶಘರ್ಷಣದಿಂದ ಆದದ್ದೋ, ಅಥವಾ ಶತಶತಮಾನಗಳಿಂದಲೂ ಅಲ್ಲಿಗೆ ಬರುವ ಲಕ್ಷಾಂತರ ಕೋಟ್ಯಂತರ ಯಾತ್ರಾರ್ಥಿಗಳು ಚೈತನ್ಯದೇವನ ಪಾದ ಮತ್ತು ಹಸ್ತಗಳಿಂದ ಪವಿತ್ರವಾಗಿರುವ ಸ್ಥಲಗಳೆಂದು ಆ ಕಂಭದ ಮತ್ತು ಹಾಸುಗಲ್ಲಿನ ಭಾಗಗಳನ್ನು ಮುಟ್ಟೀ ಮುಟ್ಟೀ ನಮಿಸೀ ಸಮೆದು ಆದದ್ದೋ ಎಂಬ ಸಂದೇಹ ನನ್ನದಾಗಿತ್ತು!

ಇಲ್ಲಿಯ ಸಮುದ್ರದಲ್ಲಿಯೆ, ಅಂದರೆ ನಾವು ಸ್ನಾನಮಾಡಿದ ಜಾಗದಲ್ಲಿಯೆ, ಚೈತನ್ಯದೇವನು ಕಡಲ ನೀಲಿಯನ್ನು ಶ್ರೀಕೃಷ್ಣನ ನೀಲಮೇಘಶ್ಯಾಮ ಶರೀರವೆಂದೇ ಭಾವಿಸಿ ಅನುಭಾವಿಸಿ ಭಾವಸಮಾಧಿಸ್ಥನಾಗಿ ಸಮುದ್ರಪ್ರವೇಶ ಮಾಡಿಬಿಟ್ಟದ್ದಂತೆ! ಆಮೇಲೆ ಬೆಸ್ತರು ಆತನ ಮೃತ ಕಳೇಬರವನ್ನು ಹುಡುಕಿ ತಂದರಂತೆ! ನಂಬಿದರೇನು ತಪ್ಪಲ್ಲ! ಇಲ್ಲಿಯ ಸಮುದ್ರದ ಪ್ರಶಾಂತ ನೀಲಿಮೆ ನನ್ನಂತಹ ಸಾಮಾನ್ಯನನ್ನೂ ಆ ಮಟ್ಟಿಗೆ ಭಾವವಶನನ್ನಾಗಿ ಮಾಡಿತು ಎಂದಮೇಲೆ ಚೈತನ್ಯದೇವನಿಗೆ ಆ ನೀಲಿಮಾ ಸೌಂದರ್ಯದಲ್ಲಿ ಶ್ರೀಕೃಷ್ಣದರ್ಶನವಾದುದರಲ್ಲಿ ಅಚ್ಚರಿಯೇನಿಲ್ಲ!

(ಮಧ್ಯಾಹ್ನ ನಾನೂ ಸ್ವಾಮಿಜಿಯವರೂ‘ಕವಿಗಳ ಸೌಂದರ್ಯ್ಯೋಪಾಸನೆ ಸಾಧುಗಳ ಧ್ಯಾನಕ್ಕೆ ಯಾವ ರೀತಿಯಿಂದಲೂ ಕಡಮೆಯಾದುದಲ್ಲ.’ಎಂಬ ವಿಚಾರವಾಗಿ ವಾಗ್ವಾದ ಮಾಡಿದೆವು.)

ಆ ಸಮುದ್ರದ ಸುನೀಲಾಕರ್ಷಣೆ ಎಷ್ಟರಮಟ್ಟಿಗೆ ಇತ್ತೆಂದರೆ ರಾತ್ರಿಯ ರೈಲಿಗೆ ಪೂರಿಯನ್ನು ಬಿಡುವ ಮುನ್ನ ಇನ್ನೊಮ್ಮೆ ವೇಲಾಭೂಮಿಗೆ ಹೋಗಿಬರೋಣ ಎಂದು ಸ್ವಾಮಿಜಿಯನ್ನು ಒಪ್ಪಿಸಿದೆ. ಹೋಗಿ ಮೂಕರಾಗಿ ನಿಂತು ದರ್ಶನ ತೆಗೆದುಕೊಂಡೆವು. ಮುಂದೆ ೧೯೩೬ರಲ್ಲಿ, ಏಳು ವರ್ಷಗಳ ಅನಂತರ ಬರೆದು ‘ರಸಸಿದ್ಧಿ’ ಎಂಬ ಸಾನೆಟ್ ಒಂದರಲ್ಲಿ ಕಾಣುತ್ತದೆ ಆ ರಸಾನುಭವದ ಧ್ವನಿ, ಪ್ರತಿಧ್ವನಿ:

ಗಗನವನು ನೋಡು ಮೈ ನೀಲಿಗಟ್ಟುವವರೆಗೆ.
ಕಡಲನೀಕ್ಷಿಸು ವಾರಿರಾಶಿ ಧಮನಿಗಳಲ್ಲಿ
ಧುಮ್ಮಿಕ್ಕಿ ಮೊರೆವನ್ನೆಗಂ. ಕಟ್ಟಿರುಳಿನಲ್ಲಿ
ನೀನೆ ಕತ್ತಲೆಯಾಗಿ, ನಿನ್ನೊಳಗೆ ಮಿರುಮಿರುಗೆ
ಕೋಟ್ಯಸಂಖ್ಯೆಯ ತಾರೆಯನ್ನೆಗಂ ಧ್ಯಾನಗೈ.
ಕೇಳು, ಸುಗ್ಗಿಯ ಹಕ್ಕಿ ಕರೆಯ ಸಗ್ಗವ ಕೂಗಿ,
ಮೆಯ್ಯ ನೆತ್ತರುಮೆಲ್ಲಮಿಂಚರದ ಹೊನಲಾಗಿ.
ಸರ್ವಸೃಷ್ಟಿಯನೊಂದೆ ಮುಕ್ಕುಳಲಿ ಪಾನಗೈ!
ವಿಶ್ವವಿದು ನಿನ್ನಾತ್ಮದಾ ಕಾಲದೇಶದಲಿ
ನಿನ್ನ ಮೈಯಾಗಲಿ:-ವಸುಂಧರೆ ಹೃದಯವಾಗಿ,
ವಿಸ್ತೃತ ಸಮುದ್ರಗಳೆ ಶ್ವಾಸಕೋಶಗಳಾಗಿ,
ತೇಲಲಿ ಜಗತ್ತು ರಸಸಿದ್ಧಿಯಾಕಾಶದಲಿ
ಒಂದು ಎರಡೆಂದೆಂಬ ಹುಸಿಯನೆಲ್ಲವ ಬಿಟ್ಟು:
ಉಳಿಯಲೆಂದೆಂದಿಗೂ ಮೂಕವಾಗಿಹ ಗುಟ್ಟು!

ಸಾಯಂಕಾಲ ಸಮುದ್ರದರ್ಶನದಿಂದ ಹಿಂತಿರುಗುವಾಗ ಬಳಿಯ ಗೂಡಾರದ ಹೋಟಲೊಂದರಲ್ಲಿ ಟೀ ಕುಡಿದೆವು. ಪಂಡಾಗೆ ಐದು ರೂಪಾಯಿ ದಕ್ಷಿಣೆ ಕೊಟ್ಟು, ಒಂದು ಒಡ್ಡರ ಸಾರೋಟು ಗಾಡಿಯಲ್ಲಿ ಕುಳಿತು ರೈಲ್ವೇಸ್ಟೇಷನ್ನಿಗೆ ಬಂದು ರೈಲು ಹತ್ತಿದೆವು. ನೂಕುತಾಕು ಬಹಳ ಇತ್ತು. ರಾತ್ರಿ ಕುರ್ದಾ ಸ್ಟೇಷನ್ನಿನಲ್ಲಿ ಇಳಿದು ಎರಡು ಗಂಟೆಗಳ ತನಕ ಕಾಯಬೇಕಾಯ್ತು, ಕಲ್ಕತ್ತಾ – ಮದ್ರಾಸು ರೈಲಿಗಾಗಿ. ಹಾಗೆ ಕಾಯುತ್ತಿದ್ದಾಗಲೆ‘ಕುಣಿಯುವಳಾರೀ ಭೈರವನಾರಿ, ರಣರಂಗದಲಿ ರೌದ್ರವ ತೋರಿ?’ಎಂದು ಮೊದಲಾಗುವ ಕಾಳಿಯ ಸೃಷ್ಟಿಸ್ಥಿತಿಲಯ ತಾಂಡವವನ್ನು ವರ್ಣಿಸುವ ಕವನವನ್ನು ಬಾಯಲ್ಲಿಯೆ ರಚಿಸಿ ಆಮೆಲೆ ದಿನಚರಿಯಲ್ಲಿ ಬರೆದಿಟ್ಟೆ.(ಅದು‘ಪಾಂಚಜನ್ಯ’ಕವನ ಸಂಗ್ರಹದಲ್ಲಿ ‘ಬೈರವನಾರಿ’ಎಂಬ ಶೀರ್ಷಿಕೆ ಹೊತ್ತು ೧೯೩೩ರಲ್ಲಿ ಪ್ರಕಟವಾಗಿದೆ.)

೧೬-೧೦-೧೯೨೯ ರಿಂದ ೧೯-೧೦-೧೯೨೬ರ ವರೆಗೆ ರೈಲಿನಲ್ಲಿ ಪ್ರಯಾಣಮಾಡಿ ಮದರಾಸಿಗೆ ಬಂದೆವು. ಸಾಯಂಕಾಲ ಸಮುದ್ರತೀರಕ್ಕೆ ಹೋದೆವು. ಅಲ್ಲಿ ಕತ್ತಲಾಗಿ ಚಂದ್ರೋದಯವಾಗಿ ಮೇಲೇರುವವರೆಗೂ ಮಳಲಲ್ಲಿ ಕುಳಿತು ದೃಶ್ಯ ಸೌಂದರ್ಯವನ್ನು ಸವಿಯುತ್ತಾ ನಾನಾ ಮಾತುಕತೆಗಳಲ್ಲಿ ಕಾಲ ಕಳೆದೆವು. ನನ್ನ ದಿನಚರಿಯಲ್ಲಿ ಆ ದಿನವೆ ಬರೆದ ಹತ್ತೆ ಪಂಕ್ತಿಯ ಒಂದು ಕವನವಿದೆ. ಅದನ್ನು ಓದಿದರೆ ಇನ್ನೂ ಮುಂದೆ ಬರೆಯುವ ಉದ್ದೇಶವಿತ್ತೋ ಏನೋ ಅನ್ನಿಸುತ್ತದೆ. ಅದು ಎಲ್ಲಿಯೂ ಪ್ರಕಟವಾದಂತಿಲ್ಲ.

ಸಮುದ್ರ

ಶ್ರೀ ವೇದಮೂರ್ತಿಯ ಸನಾತನ ಮಹಾವಾಣಿ,
ನೀರ್ಮೆಯ್ಯ ಸಚ್ಚಿದಾನಂದಮೂರ್ತಿ,
ಧಾತ್ರಿಯೊಳು ಜಗದೀಶನಮಿತತೆಯ ಸೂಚಿಸುವ
ಹೇ ಮಹಾ ಪ್ರತಿನಿಧಿಯೆ, ತತ್ವನಿಧಿಯೆ,
ಶ್ರೀಗುರುವಿನೆಡೆಗೈತರುವ ಶಿಷ್ಯನಂದದಲಿ
ದೇವನಿಲಯಕೆ ಬರುವ ಭಕ್ತವರನಂದದಲಿ
ಕನ್ನಡಕದ ಕಬ್ಬಿಗನು ಬಂದೆ ನಾ ನಿನ್ನಮಲ
ಗಂಭೀರ ಸನ್ನಿಧಿಗೆ ತುತ್ತತುದಿಗೆ!
ಸತ್ತ್ವ ರಾಜಸ ತಮೋ ಗುಣದಾಗರವೆ, ನಮೋ!
ವಾರಿಧಿ, ನಮೋ! ರತ್ನ ನವನಿಧಿ, ನಮೋ!

ಸಮುದ್ರಮಹಾದೇವನಿಗೆ ಮಾಡಿದ ಈ ಮಹಾನಮನದೊಂದಿಗೆ ಮುಗಿದಿದೆ ನಮ್ಮ ದೀಕ್ಷಾಯಾತ್ರೆಯ ದಿನಚರಿ. ಮತ್ತೆ ಅದು ಪ್ರಾರಂಭವಾಗಿದೆ, ಸುಮಾರು ಐದು ತಿಂಗಳ ಮೇಲೆ, ೧೯೩೦ ನೆಯ ಮಾರ್ಚಿ ಒಂದನೆಯ ತಾರೀಖಿನಂದು.