೫-೫-೧೯೩೩:

ಟಾಲ್ ಸ್ಟಾಯ್ war and peace ಓದುತ್ತಿದ್ದೇನೆ. ಎಂತಹ ಅದ್ಭುತ ನಾವೆಲು ಅದು! ಕೆಲವು‘ವಚನ ಕವನ’ಗಳನ್ನು ಬರೆದೆ.

ನನ್ನ ಅಂತರಂಗದಲ್ಲಿ ಏನೇನೋ ಭವ್ಯ ಭಯಂಕರ ವ್ಯಾಪಾರಗಳಾಗುತ್ತಿವೆ. ಶ್ರೀಗುರುದೇವನ ಅನುಗ್ರಹವಿರಲಿ!-ಹದಿನಾಲ್ಕನೆಯ ತಾರೀಖು ಮನೆಯಲ್ಲಿ ಶ್ರೀಗುರುದೇವನ ಉತ್ಸವ ಏರ್ಪಡಿಸಲು ನಿರ್ಧರಿಸಿದೆವು.

೧೩-೫-೧೯೩೩:

ಬೆಳಿಗ್ಗೆ ಶ್ರೀನಿವಾಸ ವಿಜಯದೇವ ವೆಂಕಟಯ್ಯ ನಾನು ಸೇರಿ ನಮ್ಮ ಉಪ್ಪರಿಗೆಯನ್ನು ನಾಳಿನ ಉತ್ಸವಕ್ಕಾಗಿ ತಳಿರು ಜೊಂಪಗಳಿಂದ ಸಿಂಗರಿಸಿದೆವು. ರಾಜಮ್ಮ ಸಾವಿತ್ರಮ್ಮ ಮೊದಲಾದವರು ಉಪ್ಪರಿಗೆಯ ನೆಲಕ್ಕೆ ಮಲೆನಾಡಿನ ಪದ್ಧತಿಯಂತೆ ಸೆಗಣಿ ಬಳಿದು ರಂಗೋಲೆಯಿಕ್ಕಿ ಪವಿತ್ರತೆಯ ವಾತಾವರಣ ಕಲ್ಪಿಸಿದ್ದರು. ಇಷ್ಟೆಲ್ಲ ಮಾಡುತ್ತಿದ್ದಾಗಲೆ ನಮಗೆ ಒಂದು ಏನೋ ಪವಿತ್ರತೆಯ ಭಾವವು ಮನೆಯಲ್ಲೆಲ್ಲ ಸಂಚರಿಸಿದಂತೆ ಭಾಸವಾಗುತ್ತಿತ್ತು.

ಸಾಯಂಕಾಲ ದೇವಂಗಿ ಮಾನಪ್ಪನೂ ಇಂಗ್ಲಾದಿಯಿಂದ ಬಂದನು. ಎಲ್ಲರೂ ಸೇರಿ ಕವಿಶೈಲಕ್ಕೆ ಹೋದೆವು. ಅಲ್ಲಿ ನಾನೊಬ್ಬನೆ ಎಲ್ಲರಿಂದ ದೂರ ಹೋಗಿ ಕಾಡಿನ ನಡುವೆ ಒಂದು ಬಂಡೆಯ ಮೇಲೆ ಕುಳಿತು‘ಆಹ್ವಾನ’ಎಂಬ ಕವನವನ್ನು ರಚಿಸಿದೆ.(ಅದು ‘ಅಗ್ನಿಹಂಸ’ಎಂಬ ಕವನಸಂಗ್ರಹದಲ್ಲಿ ಮೊದಲು ಅಚ್ಚಾಗಿದೆ. ಅಲ್ಲದೆ ಶ್ರೀರಾಮಕೃಷ್ಣಾಶ್ರಮಗಳು ಪ್ರಕಟಿಸಿದ ಪ್ರಾರ್ಥನಾ ಪುಸ್ತಕಗಳೆಲ್ಲದರಲ್ಲಿಯೂ ಮುದ್ರಿತವಾಗಿದೆ. ಅದು ತುಂಬ ಜನಪ್ರಿಯವಾಗಿ ಅದರ ಸುಶ್ರಾವ್ಯತೆ ವಿದೇಶಗಳಲ್ಲಿಯೂ ಜಯಭೇರಿ ಹೊಡೆದಿದೆ! ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಮೇಲೆ ಅಲ್ಲಿ ಆಶ್ರಮಕ್ಕಾಗಿ ಕಟ್ಟಿದ ಒಂದು ಹೊಸ ಭವನದ ಪ್ರಾರಂಭೋತ್ಸವದಲ್ಲಿ ಹಾಡಲು ಒಂದು ಭಾರತೀಯ ಭಾಷೆಯ ಪ್ರಾರ್ಥನಾ ಗೀತೆಯನ್ನು ಆರಿಸಬೇಕೆಂದು ಅಲ್ಲಿಯ ಅಮೆರಿಕನ್ ಐರೋಪ್ಯ ಭಕ್ತರು ಆಶೆಪಟ್ಟರಂತೆ. ಪ್ರಬುದ್ಧಾನಂದರು ಭಾರತೀಯವಾದ ನಾನಾ ಭಾಷೆಗಳಲ್ಲಿ-ತೆಲುಗು, ತಮಿಳು, ಮಲೆಯಾಳಂ, ಬಂಗಾಳಿ. ಹಿಂದೀ ಇತ್ಯಾದಿ- ಪ್ರಾರ್ಥನಾಗೀತೆಗಳನ್ನು ರಿಕಾರ್ಡ್ ಮಾಡಿಸಿ ತೆಗೆದುಕೊಂಡು ಹೋಗಿದ್ದರು. ತಮ್ಮ ಖಾಸಗಿ ಉಪಯೋಗಕ್ಕೆಂದಿರಬಹುದು. ಅವರಯ “ನಾನಾ ಅನೇಕ ಭಾರತೀಯ ಭಾಷೆಗಳಲ್ಲಿ ಗೀತೆಗಳನ್ನು ರಿಕಾರ್ಡ್ ಮಾಡಿಸಿ ತಂದಿದ್ದೇನೆ. ಅವುಗಳನ್ನೆಲ್ಲ ಒಂದೊಂದಾಗಿ ಹಾಕುತ್ತೇನೆ. ನೀವೆಲ್ಲ ಕಿವಿಗೊಟ್ಟು ಆಲಿಸಿ ಅವುಗಳಲ್ಲಿ ಯಾವುದು ನಿಮ್ಮೆಲ್ಲರ ಮೆಚ್ಚುಗೆಯನ್ನು ಪಡೆಯುತ್ತದೆಯೊ ಅದನ್ನು ಆರಿಸೋಣ.” ಎಂದು ರಿಕಾರ್ಡ್‌ಗಳನ್ನು ಹಾಕಿದರಂತೆ. ಆಗ ಅವರೆಲ್ಲರೂ “ಬಾ, ಶ್ರೀಗುರುದೇವನೆ ಬಾ. ಶ್ಯಾಮಲ ಕಾನನ ಶೃಂಗ ತರಂಗಿತ, ಸಹ್ಯಾದ್ರಿಯ ಸುಂದರ ಮಂದಿರಕೆ. ಚಿನ್ಮಯ ಮಮ ಹೃನ್ಮರಕೆ!” ಎಂದು ಪ್ರಾರಂಭವಾಗುವ ‘ಆಹ್ವಾನ’ಕ್ಕೇ ಪ್ರಥಮಸ್ಥಾನ ಕೊಟ್ಟು ಆರಿಸಿ, ಅದನ್ನು ಕಷ್ಟಪಟ್ಟು ಅಭ್ಯಾಸ ಮಾಡಿ, ಪ್ರಾರಂಭೋತ್ಸವದಲ್ಲಿ ತುಂಬ ಮಧುರವಾಗಿ ಸಾಮೂಹಿಕವಾಗಿ ಹಾಡಿದರಂತೆ!)

ಆಗತಾನೆ ಪುಸ್ತಕರೂಪದಲ್ಲಿ ಪ್ರಕಟವಾಗಿದ್ದ‘ನವಿಲು’ ಕವನಸಂ‌ಗ್ರಹದ ಪ್ರಥಮ ಭಾಗವನ್ನು ಮಾನಪ್ಪ ತಂದಿದ್ದ. ಅದನ್ನು ಕವಿಶೈಲದಲ್ಲಿ ಕುಳಿತು ಓದಿದೆವು… ತರುವಾಯ ಬಾಲಕ ಡಿ.ಟಿ.ಚಂದ್ರಶೇಖರ ತನ್ನ ಸುಶ್ರಾವ್ಯವಾದ ಕಂಠದಿಂದ ಆಹ್ವಾನವನ್ನು ಹಾಡಿದ. ಮುಂಗಾರ ಮೊದಲ ಹೊಸ ಮಳೆಯಲ್ಲಿ ಚೆನ್ನಾಗಿ ಮಿಂದಿದ್ದ ಸಾಯಂ ಸೂರ್ಯಶೋಭೆಯ ಆ ದಟ್ಟಗಾಡಿನ ಮಲೆಗಳ ಮಧ್ಯೆ ಆ ಹಾಡು ಅಮೃತಗಾನವಾಗಿ ಪರಿಣಮಿಸಿ ಆಲಿಸಿದವರೆಲ್ಲರನ್ನೂ ಬೇರೊಂದು ಲೋಕಕ್ಕೆ ಒಯ್ದಿತ್ತು. ಅನೇಕ ವರ್ಷಗಳ ತರುವಾಯ ಆ ಪ್ರಾರ್ಥನಾಗೀತೆ ಸಹ್ಯಾದ್ರಿಯನ್ನೂ ಅರಬ್ಬೀ ಸಮುದ್ರವನ್ನು ಆಫ್ರಿಕಾಖಂಡವನ್ನೂ ಅಟ್ಲಾಂಟಿಕ ಮಹಾಸಾಗರವನ್ನು ದಾಟಿ ವಿಶಾಲ ಅಮೆರಿಕಾ ಖಂಡದ ಸಾವಿರಾರು ಮೈಲಿಗಳಾಚೆ ಅದರ ಪಶ್ಚಿಮ ತೀರದಲ್ಲಿರುವ ಕ್ಯಾಲಿಫೋರ್ನಿಯಾಕ್ಕೂ ತಲುಪುವುದಕ್ಕೆ  ಆ ದಿನವೆ ದೇವಂಗಿ ಚಂದ್ರಶೇಖರನ ಕಂಠದಿಂದ ಯಾತ್ರೆ ಹೊರಟಿತ್ತೋ ಏನೋ?

ಆ ರಾಗದ ಹೆಸರು‘ಸ್ಥಾವನ್’ಎಂದೋ  ಏನೋ?

ತರುವಾಯ ಕವಿಶೈಲದಲ್ಲಿದ್ದ ನಾವೆಲ್ಲರೂ ಕೂಡಿ‘ಆಹ್ವಾನ’ವನ್ನು ಸ್ಥಾವನ್ ರಾಗದಲ್ಲಿ ಧೀರಗಂಭೀರವಾಗಿ ಸಾಮೂಹಿಕವಾಗಿ ಹಾಡಿ ಶ್ರೀಗುರುದೇವನನ್ನು ಮಲೆನಾಡಿನ ಕುಪ್ಪಳಿಗೆ ಆಹ್ವಾನಿಸಿದೆವು! ಸಾಯಂಕಾಲವಾಗಿ ಬೈಗುಗಪ್ಪು ಕಾಡುಮಲೆಗೆ ಇಳಿದ ಮೇಲೆ ನಾವೆಲ್ಲ ಮನೆಗೆ ಇಳಿದು ಬಂದೆವು. ಹೂವಿನ ಮಾಲೆಗಳಿಂದ ಸಿಂಗರಗೊಂಡಿದ್ದ ಶ್ರೀಗುರುದೇವ ಶ್ರೀ ಮಹಾಮಾತೆ ಮತ್ತು ಸ್ವಾಮಿ ವಿವೇಕಾನಂದ ಇವರ ಬಣ್ಣದ ಚಿತ್ರಪಟಗಳ ಮುಂದೆ ದೊಡ್ಡ ದೊಡ್ಡ ನೀಲಾಂಜನ ಕಂಭಗಳ ಬೆಳಕಿನಲ್ಲಿ ಮಂಗಳಾರತಿ ಎತ್ತಿ ಪೂಜೆ ಮಾಡಿದೆವು. ಮತ್ತೆ ಆ ಪವಿತ್ರ ಜ್ಯೋತಿಗಳ ಎದುರು ಪದ್ಮಾಸನ ಹಾಕಿ ಕುಳಿತು ಎಲ್ಲರೂ ‘ಓಂ ಹ್ರೀಂ ಋತುಂ ತ್ವಮಚಲೋ ಗುಣಜಿತ್ ಗುಣೇಢ್ಯಃ’ಎಂದು ಮೊದಲಾಗುವ ಶ್ರೀರಾಮಕೃಷ್ಣಾ ಪ್ರಾರ್ಥನಾ ಸ್ತೋತ್ರವನ್ನು ಹಾಡಿದೆವು.(ಆ ಸ್ತೋತ್ರವನ್ನು ರಚಿಸಿದವರು ಸ್ವಾಮಿ ವಿವೇಕಾನಂದರೇ. ಈಗ ಅದನ್ನು ಪ್ರಪಂಚದ ಮೇಲೆಲ್ಲ ಶ್ರೀರಾಮಕೃಷ್ಣಾಶ್ರಮಗಳಲ್ಲಿ ಪೂಜಾ ಅನಂತರ ಪಠಿಸುತ್ತಾರೆ.)

ರಾತ್ರಿ ಉಪ್ಪರಿಗೆಯ ಮೇಲೆ ಲ್ಯಾಂಪುಗಳ ಉಜ್ವಲ ಬೆಳಕಿನಲ್ಲಿ‘ಗದಾಯುದ್ಧ’ನಾಟಕವನ್ನು ಪೂರ್ತಿಯಾಗಿ ಓದಿ ಹೇಳಿದೆ.

೧೪-೫-೧೯೩೩:

ಮುಂಜಾನೆ ನಾಲ್ಕುಗಂಟೆಗೆ ಸರಿಯಾಗಿ ಎಲ್ಲರೂ ಎದ್ದೆವು. ವಾಟಗಾರು ಮಂಜಪ್ಪಗೌಡರು ಅಷ್ಟು ಹೊತ್ತಿಗಾಗಲೆ ಬಂದಿದ್ದರು.(ಅವರ ಮನೆ ಸುಮಾರು ಎರಡೂವರೆ ಮೂರು ಮೈಲುಗಳ ದೂರದಲ್ಲಿದೆ. ಆ ಕಗ್ಗಾಡಿನ ದಾರಿಯಲ್ಲಿ ಕತ್ತಲೆಯಲ್ಲಿ ನಡೆದುಕೊಂಡೆ ಬಂದಿದ್ದರು. ಅಂದರೆ ರಾತ್ರಿ ಎರಡು ಗಂಟೆಗಾಗಲೆ ಎದ್ದು ಸ್ನಾನಮಾಡಿ ಮಡಿಯುಟ್ಟು ಹೊರಟಿರಬೇಕು ಮನೆಯಿಂದ!) ಎಲ್ಲರೂ ಸ್ನಾನ ಮಾಡಿ ಹೂವಿನ ಹಾರಗಳಿಂದಲೂ ಹೂವುಗಳಿಂದಲೂ ಶ್ರೀಗುರುದೇವ, ಮಹಾಮಾತೆ, ಸ್ವಾಮಿ ವಿವೇಕಾನಂದರ ತ್ರಿಮೂರ್ತಿಗಳನ್ನು ಮನೋಹರವಾಗಿ ಸಿಂಗರಿಸಿದೆವು. ಮೇಜಿನಮೇಲೆ ಗುರುಮಹಾರಾಜ್ ಮಹಾಮಾತೆಯರು ಒಟ್ಟಿಗೆ ಕುಳಿತಿದ್ದ ಒಂದು ಬಣ್ಣದ ಚಿತ್ರಪಟವನ್ನಿಟ್ಟೆವು. ಕೆಳಗೆ ಒಂದು ಮಣೆಯ ಮೇಲೆ ಸ್ವಾಮಿಜಿಯ ಚಿಕಾಗೊ ಭಂಗಿಯ ದೊಡ್ಡ ಚಿತ್ರಪಟವನ್ನಿಟ್ಟೆವು. ಮಲ್ಲಿಗೆ ಹೂವಿನ ದೊಡ್ಡ ಹಾರಗಳನ್ನು ರಾಜಮ್ಮ ಮೊದಲಾದವರು ಮಾಡಿ ಕೊಟ್ಟಿದ್ದರು. ನಡುನಡುವೆ ಗುಲಾಬಿ ಹೂವಿನ ರಂಗುರಂಗಿನ ಗೊಂಡೆಗಳಿದ್ದುವು. ಅತ್ತ ಇತ್ತ ಬಾಳೆಯ ಕಂದುಗಳನ್ನಿಟ್ಟೆವು. ಕಾಗೆಕಾಲು ಗುಬ್ಬಿಕಾಲು ಗೋಡೆಗೆ ಚಿತ್ರಾಕಾರಗಳಲ್ಲಿ ಹೊಡೆದಿದ್ದೆವು. ಊದುಬತ್ತಿಗಳನ್ನೂ ಎಣ್ಣೆಬತ್ತಿಗಳನ್ನೂ ಹೊತ್ತಿಸಿದೆವು. ನಾನಾ ಆಕಾರದ ಆರತಿಗಳನ್ನೆತ್ತಿ ಪೂಜೆ ಮಾಡಿದೆವು. ವಿಜಯದೇವ ಶ್ರೀನಿವಾಸರು ಪೂಜಾರಿಗಳಾಗಿದ್ದರು! ಓಂ ಹ್ರೀಂ ಋತುಂ ಹೇಳಿದೆವು. ಆಮೇಲೆ ‘ಪ್ರಾರ್ಥನೆ’ಪದ್ಯಗಳನ್ನು ಒಟ್ಟಿಗೆ ಉಚ್ಚರಿಸಿ ಸಾಮೂಹಿಕ ಹಾಡಿದೆವು. ತರುವಾಯ ಶ್ರೀನಿವಾಸನು ‘ಭಕ್ತಿಮಾರ್ಗ’ಎಂಬ ಗ್ರಂಥದಿಂದ‘ಪರಿಶುದ್ಧತೆ’ ಎಂಬ ಅಧ್ಯಾಯ ಓದಿದನು. ವಿಜಯದೇವನು ಭಗವಾದ್ ಗೀತೆಯ ಹನ್ನೆರಡನೆ ಅಧ್ಯಾಯದ ಕನ್ನಡ ಅನುವಾದವನ್ನೂ ನಾನು ಸಂಸ್ಕೃತ ಮೂಲವನ್ನೂ ಪಠಿಸಿದೆವು.

ಇದೆಲ್ಲಾ ನಡೆಯುತ್ತಿದ್ದಾಗಲೆ ದೇ.ರಾ.ವೆಂಕಟಯ್ಯ, ದೇ.ನಾ.ಹಿರಿಯಣ್ಣ, ದೇವಂಗಿ ತಿಮ್ಮಯ್ಯಗೌಡರು, ಕೊಳವಾರದ ತಿಮ್ಮಯ್ಯಗೌಡರು, ಗುರುವಳ್ಳಿ ಉಂಟೂರು ಇಂಗ್ಲಾದಿ ಶೇಷಪ್ಪಗೌಡರು, ಅಲ್ಲಿಗೆ ಪುಟ್ಟಯ್ಯನಾಯಕರು ಇತ್ಯಾದಿ ಸುಮಾರು ಇಪ್ಪತ್ತು ಗೃಹಸ್ಥರು ಬಂದರು.-ಕಾಫಿ ತಿಂಡಿ ವಿನಿಯೋಗವಾಯಿತು- ನನ್ನ ತಮ್ಮ ಕು.ರಾ.ವೆಂಕಟಯ್ಯ ನೆರೆದ ಮಹನೀಯರಿಗೂ ಮಹಿಳೆಯರಿಗೂ ನನ್ನ‘ಸ್ವಾಮಿ ವಿವೇಕಾನಂದ’ಗ್ರಂಥದಿಂದ ಕೆಲವು ಭಾಗಗಳನ್ನು ಓದಿದನು. ದೇ.ರಾ.ಮಾನಪ್ಪನು‘ಶ್ರೀರಾಮಕೃಷ್ಣ ವಚನಾಮೃತ’ದಿಂದ ಕೆಲವು ಭಾಗಗಳನ್ನು ಓದಿದನು. ವಿಜಯದೇವನು ಗೀತೆಯ ಎರಡನೆಯ ಅಧ್ಯಾಯ ಓದಿದನು. ಮಂಗಳಾರತಿ ಮಾಡಿ ಓಂ ಹ್ರೀಂ ಹೇಳಿ ಮುಗಿಸಿದೆವು.

ಆಮೇಲೆ ಮನೆಯ ಪಕ್ಕದ ಕಣದಲ್ಲಿ ವಾಲಿಬಾಲ್ ಆಡಿದೆವು. ತರುವಾಯ ಭೋಜನ ರೂಪದಲ್ಲಿ ಪ್ರಸಾದಗಳನ್ನು ಚೆನ್ನಾಗಿಯೆ ಸ್ವೀಕರಿಸಿದೆವು!-ಸಾಯಂಕಾಲ ಮತ್ತೆ ವಾಲಿಬಾಲ್ ಆಡಿದೆವು.- ಸಂಜೆ ಮತ್ತೆ ಆರತಿ ಮಾಡಿದೆವು. ‘ಪ್ರಾರ್ಥನೆ’ಇಂದಲೂ‘ಕೊಳಲು’ಇಂದಲೂ ಕವನಗಳನ್ನು ಹಾಡಿದೆವು. ರಾತ್ರಿಯೂಟವಾದ ಮೇಲೆ ಅನೇಕ ನಂಟರು ತಮ್ಮತಮ್ಮ ಮನೆಗಳಿಗೆ ಹೋದರು…..

ರಾತ್ರಿ‘ಹರಿಶ್ಚಂದ್ರ ಕಾವ್ಯ’ವನ್ನು ಓದಿದೆವು-ಶ್ರೀಗುರುದೇವನ ಸಾನ್ನಿಧ್ಯದ ಅನುಭವದ ಆನಂದದ ಉನ್ಮತ್ತತೆಯಿಂದ ನಿದ್ದೆಹೋದೆವು.

೧೫-೫-೧೯೩೩:

ಬೆಳಿಗ್ಗೆ ಪುನಃ ಮಂಗಳಾರತಿ ಮಾಡಿದೆವು. ಈಗ ಇಂಗ್ಲಾದಿಗೆ ಹೋಗುತ್ತೇನೆ. ಮೋಟಾರು ಬಂದು ನಿಂತಿದೆ. ಎಳೆಬಿಸಿಲು ಮೂಡಿ ಚಪ್ಪರದ ಮೇಲೆ, ಮನೆಯ ಹೆಂಚಿನ ಮೇಲೆ ತೋಟದ ಹಸುರಿನ ಮೇಲೆ ಚೈತನ್ಯೋದ್ದೀಪನವಾಗಿ ಬಿದ್ದಿದೆ. ಹಕ್ಕಿಗಳು ಹಾಡುತ್ತಿವೆ. ಹುಡುಗರೆಲ್ಲ ಸೇರಿ ಇಸ್ಪೀಟು ಆಡುತ್ತಾ ನಗುತ್ತಿದ್ದಾರೆ. ಜೈ ಶ್ರೀ ಗುರುಮಹಾರಜ್ ಕೀ ಜೈ! ಜೈ ಸ್ವಾಮೀಜಿ ಕೀ ಜೈ! ಜೈ ಮಹಾಮಾಯಿ ಕೀ ಜೈ!

೧೮-೫-೧೯೩೩:

ನಾನು ವೆಂಕಟಯ್ಯನೂ ನಮ್ಮ ಕಣದಲ್ಲಿ ವಾಲಿಬಾಲ್ ಆಡಿದೆವು…. ಸುಮಾರು ಆರುಗಂಟೆ ಹೊತ್ತಿಗೆ ನಾನು, ರಾಜಮ್ಮ, ಕಮಲಾಕ್ಷಮ್ಮ ವೆಂಕಟಯ್ಯ, ಗೋಪಾಲ ಎಲ್ಲರೂ ಕವಿಶೈಲಕ್ಕೆ ಹೋದೆವು. ಅಲ್ಲಿ‘ಆಹ್ವಾನ’ವನ್ನು ಜೊತೆಗೂಡಿ ಹಾಡಿದೆವು. ಮಳೆ ಬರುವಂತಾಗಲು ಗುಡ್ಡವಿಳಿದು ಮನೆಗೆ ಬಂದೆವು. ನಮ್ಮ ಅಂಗಳದ ಚಪ್ಪರದ ಮೇಲೆ ಜಮಖಾನ ಹಾಸಿ ಕೂತೆವು. ರಾಜಮ್ಮ, ಕಮಲಾಕ್ಷಮ್ಮ ಎಲ್ಲರೂ ಬಂದು ಸೇರಿದರು. ಅವರಿಗೆ ನಾನು ಕೆಲವು ಕವಿತೆಗಳನ್ನು ಹೇಳಿ-ದೇವರು, ಸಂಸ್ಕೃತಿಗಳ ವಿಚಾರವಾಗಿಯೂ ಸ್ತ್ರೀಯರು ಸ್ತ್ರೀಯರ ಪುರೋಭಿವೃದ್ಧಿಗಾಗಿ ಪ್ರಯತ್ನಿಸಬೇಕೆಂದು ಹೇಳಿದೆನು. ಕಮಲಾಕ್ಷಮ್ಮ ಒಳ್ಳೆಯ ಹುಡುಗಿ. ಆಕೆಯಲ್ಲಿ ಸರಳತೆ, ಸಂಸ್ಕೃತಿ, ಸುಶೀಲತೆ ಎಲ್ಲವೂ ಕೂಡಿವೆ.

೧೯-೫-೧೯೩೩:

ಐಯ್ಯಪ್ಪಗೌಡರ ಮನೆಯಲ್ಲಿ ಔತಣ: ಬೆಳಿಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ವೆಂಕಟಯ್ಯನಿಗೆ ಹರಿಶ್ಚಂದ್ರ ಕಾವ್ಯ ಸಂಗ್ರಹದ ಪಾಠ ಹೇಳಿದೆ. ಹನ್ನೊಂದು ಹನ್ನೆರಡು ಗಂಟೆಯ ಹೊತ್ತಿಗೆ ವಾಟಗಾರು ಮಂಜಪ್ಪಗೌಡರೂ ದೇವಂಗಿ ವೆಂಕಟಯ್ಯ ಹಿರಿಯಣ್ಣರೂ ಬಂದರು. ಊಟವಾದ ಮೇಲೆ ಅವರೆಲ್ಲ ಹೋದರು.

ಮಧ್ಯಾಹ್ನ ನಾನೊಬ್ಬನೆ ಉಪ್ಪರಿಗೆಯ ಮಳಿಗೆ ಕೋಣೆಯಲ್ಲಿ war and peace (ಯುದ್ಧ ಮತ್ತು ಶಾಂತಿ) ಓದುತ್ತಾ ಕುಳಿತಿದ್ದೆ. ರಾಜಮ್ಮ ಬಂದಳು. ತನ್ನ ಆಕಾಶಬಣ್ಣದ ಖಾದಿ ಸೀರೆಯನ್ನೂ ಕುಪ್ಪಸವನ್ನೂ ತಂದು ತೋರಿಸಿದಳು. ನಾನು ಅವುಗಳನ್ನು ಶ್ಲಾಘಿಸಿ ಸರಳವಾದ ಉಟುಪೇ ಅತ್ಯಂತ ಯೋಗ್ಯವಾದುದು ಎಂದು ಹೇಳಿ, ಶ್ರೀರಾಮಕೃಷ್ಣ ಮತ್ತು ಶಾರದಾದೇವಿಯರ ವಿಷಯ ತಿಳಿಸಿದೆ.

ಸಾಯಂಕಾಲ ವಾಲಿಬಾಲ್ ಆಡಿದೆವು. ನಾನೂ ಕಮಲಾಕ್ಷಮ್ಮನೂ ಒಂದು ಕಡೆ, ರಾಜಮ್ಮ ಗೋಪಾಲರು ಒಂದು ಕಡೆ, ಎರಡು ಸಾರಿ ನಮ್ಮ ಎದುರುಪಾರ್ಟಿ ಸೋತಿತು. ಕಡೆಗೆ ರಾಜಮ್ಮ, ಕಮಲಾಕ್ಷಮ್ಮ, ಗೋಪಾಲರನ್ನು ಒಂದು ಕಡೆ ಬಿಟ್ಟು ನಾನೊಬ್ಬನೆ ಆಡಿದೆ. ಆಗಲೂ ಸೋತರು, ಆಮೇಲೆ ಓಬಯ್ಯನೂ ಬಂದು ಆಟಕ್ಕೆ ಸೇರಿದ. ನಾನು, ಕಮಲೆ, ರಾಜಿ ಒಂದುಕಡೆ; ಗೋಪಾಲ, ಓಬಯ್ಯ ಒಂದುಕಡೆ ಆಗಿ ಆಡಿದೆವು. ಆಗಲೂ ಅವರೇ ಸೋತರು….

ತರುವಾಯ ಬೆಟ್ಟ ಹತ್ತಿ ಕವಿಶೈಲಕ್ಕೆ ಹೋದೆವು. ಗೋಪಾಲ, ಓಬಯ್ಯ, ರಾಜಿ,ಕಮಲೆ, ನಾನು. ಅಲ್ಲಿ ಏನೋ ಮಾತಿಗೆ ಸೂರ್ಯ, ನಕ್ಷತ್ರ, ಬಾಲಚುಕ್ಕಿ, ಧೂಮಕೇತುಗಳ ವಿಚಾರ ಬಂದಿತು. ನಾನು ರಾಜಿ ಕಮಲೆಯರಿಗೆ ಕೆಲವು ಪ್ರಶ್ನೆಗಳನ್ನು ಹಾಕಿ ಅವರಿಗೆ ಭೂಮಿ,ಸೂರ್ಯ, ನಕ್ಷತ್ರ, ಧೂಮಕೇತು. ಉಲ್ಕೆ ಮೊದಲಾದುವುಗಳ ವಿಚಾರವಾಗಿಯೂ ಅವುಗಳಿಗಿರುವ ಪರಸ್ಪರ ದೂರ ಮತ್ತು ಸಂಬಂಧದ ವಿಚಾರವಾಗಿಯೂ ಮಾತಾಡಿದೆ….ಬಹಳ ಕತ್ತಲೆಯಾದ ಮೇಲೆ ಮನೆಗೆ ಇಳಿದು ಬಂದೆವು.

ಕುಂಬಳಕಾಯಿ ಹಲ್ವ ಮಾಡಿದ್ದರು. ಹಾಗೆ ಮಾಡುವುದರಿಂದ ಜಿಡ್ಡು ತುಪ್ಪ ಒಳ್ಳೆಯ ತುಪ್ಪವಾಗುವುದನ್ನು ಕಂಡುಹಿಡಿದರು…. ನನ್ನೆದೆಯಲ್ಲಿ ಸಂಯಮ ಸಮ್ಮೋಹಗಳಿಗೆ ಹೋರಾಟವಾಗುತ್ತದೆ ಒಂದೊಂದು ವೇಳೆ! ಶ್ರೀ ಗುರುದೇವನೆ ಮಾರ್ಗದರ್ಶಿ!

೨೦-೫-೧೯೩೩:

ಬೆಳಿಗ್ಗೆ ಗೀತಾ ಓದಿದೆ. ಆಮೇಲೆ ಟಾಲ್ ಸ್ಟಾಯ್ ನ what is Art? ಓದಿದೆ. ಆಮೇಲೆ war and peace ೩ನೆಯ ಭಾಗವನ್ನು ಓದಿದೆ. ಅದರಲ್ಲಿ pirre ಉರಿಯುತ್ತಿದ್ದ ಮಾಸ್ಕೋದಲ್ಲಿ ಕಂಡ ಕೊಲೆಯ ದೃಶ್ಯಗಳಿಂದ ನನ್ನ ಮನ ಕರಗಿ ಕದಡಿತು.war and peace ಅದೊಂದು ಮಹಾಜೀವನ- ಜಾಲಗಳ ಪುರಾಣಕಾವ್ಯ! ಟಾಲ್ ಸ್ಟಾಯ್ ಧನ್ಯನು ಅದನ್ನು ಬರೆದು! ನಾವೆಂದು ಬರೆಯುವುದು ಅಂತಹ ಕಾದಂಬರಿಗಳನ್ನು?- ಮಹಾತ್ಮರ ಘೋರ ಉಪವಾಸವೊಂದು ಕಡೆ ಮನಸ್ಸನ್ನು ಹೆದರಿಸುತ್ತಿದೆ. ಏನು ಜೀವನ? ಏನು ಜೀವನ ಸಮಸ್ಯೆ! ತಲೆ ತತ್ತರಿಸುತ್ತದೆ! ಆದರೆ ಇದರ ಹಿಂದೆ ಯಾವುದೋ ಒಂದು ‘ಮಹಾಮತಿ’ ಇದೆ ಎಂಬ ನೆಚ್ಚು ಹೃದಯ ಮನಗಳ ಕ್ರಾಂತಿಯನ್ನು ಪರಿಹರಿಸಿ ಶಾಂತಿದಾನ ಮಾಡುತ್ತದೆ… ಹಿಂದಿನ ರಾತ್ರಿ ಪ್ರಾರ್ಥಿಸಿದೆ, ಮಹಾತ್ಮರಿಗೆ ಒಳ್ಳೆಯದಾಗಲಿ ಎಂದು…

೨೫-೫-೧೯೩೩:

ಬಹಳ ದಿನಗಳಾದ ಮೇಲೆ ಪುನಃ ದಿನಚರಿ ಬರೆಯುತ್ತಿದ್ದೇನೆ. ಈ ದಿನಗಳಲ್ಲಿ ನನ್ನ ಅಂತಹರಂಗದಲ್ಲಿ ಜರುಗುತ್ತಿರುವ ಭಾವರಾಗಗಳ ಕಥೆಯನ್ನು ವಿವರವಾಗಿ ಬರೆದರೆ ಅದೊಂದು ಗ್ರಂಥವೆ ಆಗುತ್ತದೆ. ಆದರೆ ನನಗೆ ಇಷ್ಟವಿಲ್ಲ.

ನನ್ನ ಹೃದಯವ್ಯೋಮದಲ್ಲಿ ಇತ್ತಿಚೆಗೆ ಮಹಾಮೇಘಗಳ ಭಯಂಕರ ತಾಂಡವವಾಗುತ್ತಿದೆ. ಮುಗಿಲು ಬಿಸಿಲುಗಳ ಕಣ್ಣು ಮುಚ್ಚಾಲೆಯಾಗುತ್ತಿದೆ. ಮಾಯೆ ಮುಕ್ತಿಗಳಿಗೆ ದ್ವಂದ್ವಯುದ್ಧವಾಗುತ್ತಿದೆ. ಮಾಯೆಯೇ ಮುಕ್ತಿಯಾಗುವುದೆಂದು ನನ್ನ ಹಾರೈಕೆ.ಪ್ರಾರ್ಥನೆ…

ಮೊನ್ನೆ ಚಿನ್ಮಾತ್ರಾನಂದರು ಬೆಂಗಳೂರಿಗೆ ಹೋಗಿಬಂದು ಒಂದು ವಿಷಯ ಹೇಳಿದರು. ಅದನ್ನು ನಾನು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ತಿ.ತಾ.ಶರ್ಮರವರೂ ಅವರ ಪತ್ನಿಯವರೂ ನಾನು ಮದುವೆ ಮಾಡಿಕೊಂಡರೆ ಲೇಸೆಂದು ವಾದಿಸಿದರಂತೆ. ನನ್ನ ‘ಆದರ್ಶ ಸಾಧನೆ’ಎಂಬ ಸಣ್ಣಕಥೆಯೆ ನನ್ನ ಹೃದಯವ್ನನು ಬಿಚ್ಚಿ ಹೇಳುತ್ತಿದೆಯಂತೆ, ನನ್ನಲ್ಲಿ ಭೋಗದ ತೀವ್ರ ಆಕಾಂಕ್ಷೆ ಇದೆಯಂತೆ-(ಆಕಾಂಕ್ಷೆ-ಹೋರಾಟವಲ್ಲ.) ಆ ಕಥೆಯಿಂದ ಅವರಿಗೆ ಆ ಭಾವ ಹೇಗೆ ಬಂದಿತೋ ನಾನರಿಯೆ. ಆ ಕಥೆಯಲ್ಲಿ ಮನುಷ್ಯ ಹೇಗೆ ಉಚ್ಚ ಆದರ್ಶದಿಂದ ಆತ್ಮವಂಚನೆ ಮಾಡಿಕೊಂಡು ಮೆಲ್ಲಮೆಲ್ಲನೆ ಅಧಃಪತನನಾಗುತ್ತಾನೆ ಎಂಬುದು ಚಿತ್ರಿತವಾಗಿದೆ. ನನ್ನಲ್ಲಿ ಭೋಗಾಭಿಲಾಷೆಯು ಎಷ್ಟರಮ         ಟ್ಟಿಗಿದೆಯೋ ಹಾಗೆಯೇ ಯೋಗಾಭಿಲಾಷೆಯೂ ಇದೆ. ನನಗೆ ವಿವಾಹವಾಗಲಿ ಸಂನ್ಯಾಸವಾಗಲಿ ಎರಡೂ ಒಂದೆ. ಈ ಸಂನ್ಯಾಸಿಗಳು ತಮ್ಮ ಧ್ಯೇಯವೇ ಉತ್ಕೃಷ್ಟ ಎನ್ನುವಂತೆ ಸಂಸಾರಿಗಳೂ ತಮ್ಮದೇ ಉತ್ತಮ ಎನ್ನುತ್ತಾರೆ. ನಾನು ಆಜನ್ಮ ಬ್ರಹ್ಮಚಾರಿಯಾಗಿ ಬಾಳಿದರೂ ಅಥವಾ ವಿವಾಹಿತನಾಗಿ ಬದುಕಿದರೂ ಎರಡಕ್ಕೂ ಅವಕಾಶ ಅನುಕೂಲ ಸಂದರ್ಭಗಲೇ ಕಾರಣವೆಂದು ನಾನು ತಿಳಿಯುತ್ತೇನೆ. ಅನಿರ್ವಚನೀಯವೂ ಮಹಾ ರಹಸ್ಯಮೂರ್ತಿಯೂ ಆದ ಜಗದಾದಿ ಚೈತನ್ಯ ಶಕ್ತಿಯ ಸಾಕ್ಷಾತ್ಕಾರವು ನನ್ನ ಕ್ಷುದ್ರ ಸಂನ್ಯಾಸ ಸಂಸಾರಗಳಿಂದ ಬದ್ದವಾಗಿಲ್ಲವೆಂದು ನನ್ನ ನಂಬುಗೆ- ಇನ್ನೊಂದು ವಿಚಾರ-ನಾನು ಕೊಡಗಿನ ಸಾಹಿತ್ಯ ಪರಿಷತ್ತಿಗೆ ಹೋಗಿದ್ದಾಗ ಅವರ ಮನೆಗೆ ಔತಣಕ್ಕೆ ಕರೆಯಬೇಕೆಂದು ಬರೆದಿದ್ದರು.ಅವರದು ಬಹಳ ಒಳ್ಳೆಯ ಸಂಸ್ಕೃತಿಯ ಸಂಸಾರ. ಆದರೆ ನಾನು ಅಲ್ಲಿಗೆ ಹೋಗುವಾಗಲಾಗಲಿ ಹೋದ ಮೇಲಾಗಲಿ ಬೇರೆ ಯಾವುದನ್ನೂ ಭಾವಿಸಿರಲಿಲ್ಲ. ಆದ್ದರಿಂದ ಚಿನ್ಮಾತ್ರಾನಂದರು ಹೇಳಿದ ವಿಚಾರ ಕೇಳಿ ಬಹಳ ಆಶ್ಚರ್ಯವಾಯಿತು.ಆನಂದವೂ ಆಗಲಿಲ್ಲ. ಎಂದು ನಾನು ಹೇಳುವುದಿಲ್ಲ. ಕುಮಾರಿ ಪ… ಅವರು ನನ್ನಲ್ಲಿ ಅನುರಕ್ತೆಯರಾಗಿದ್ದರಂತೆ. ಇದು ನಿಜವೋ ಸುಳ್ಳೋ ತಿಳಿಯದು. ನಿಜವಾಗಿದ್ದರೂ ಸಂತೋಷ. ಸುಳ್ಳಾಗಿದ್ದರೂ ಸಂತೋಷ, ಅಂತಹ ಸುಸಂಸ್ಕೃತ ಸಜ್ಜನ ಕನ್ಯೆಯನ್ನು ಸಹಧರ್ಮಿಣಿಯಾಗಿ ಸ್ವೀಕರಿಸುವುದು ಭಾಗ್ಯವಲ್ಲದೆ ಮತ್ತೇನು? ಆದರೆ ನನ್ನ ಸ್ವಾತಂತ್ರಕ್ಕೆಲ್ಲಿ ಭಂಗ ಬರುತ್ತಿದೆಯೋ ಎಂಬ ಭೀತಿ. ಅಲ್ಲದೆ ನಾನು ಸಂಸಾರ ನಿರ್ವಹಿಸುವಷ್ಟು ಜವಾಬ್ದಾರಿ ಮನುಷ್ಯನಲ್ಲವೆಂದು ತೋರುತ್ತದೆ. ನಾನು ಆಕಾಶವಿಹಾರಿ,ಸ್ವಪ್ನ ಸಂಚಾರಿ, ವಾಸ್ತವ ಜಗತ್ತು ಭಾರವಾಗಿ ಬಿಟ್ಟರೆ ಏನು ಗತಿ? ಹೆಂಡತಿ, ಮಕ್ಕಳು-ಮುಂದೆ ಅದರಿಂದಾಗುವ ಬಂಧನ ಪರಂಪರೆ! ಇವನ್ನೆಲ್ಲ ಯೋಚಿಸಿಯೆ ನಾನು ಮದುವೆಗೆ ಹಿಂಜರಿಯುತ್ತಿರುವುದು; ಈಶ್ವರ ಸಾಕ್ಷಾತ್ಕಾರವು ತಪ್ಪುತ್ತದೆ ಎಂದಲ್ಲ. ಈಶ್ವರನ ಭವ್ಯತೆಯ ಮುಂದೆ ಸಂನ್ಯಾಸ ಸಂಸಾರಗಳೆರಡೂ ಕ್ಷುದ್ರಗಳೇ ಅಥವಾ ಮಹತ್ತುಗಳೇ. ಅಂತೂ ನಾನು ತುಂಬಾ ರೋಮಾಂಚಿತ. ಬಹುಶಃ ಕುಮಾರಿ ಪ….. ರವರೇ ನನ್ನಲ್ಲಿಗೆ ಬಂದು ತಮ್ಮ ಅನುರಾಗವನ್ನು ವ್ಯಕ್ತಪಡಿಸಿದರೆ ನಾನು ಒಪ್ಪುತ್ತೇನೆಯೊ ಏನೊ! ಅದು ಗುರುದೇವನಿಚ್ಛೆ. ಏಕೆಂದರೆ ಆಕೆ ಆರ್ಯಸಮಾಜದ ಹೋಮ ಹವನಗಳಲ್ಲಿ ಬೆಳೆದವರು. ನಾನು ಸ್ವತಂತ್ರ ಯುಕ್ತಿವಾದಿ. ನಮ್ಮಿಬ್ಬರಿಗೂ ಸರಿಹೋಗುವುದನ್ನು ನಾನು ಕಾಣೆ. ಇದೆಲ್ಲಾ ಹುಚ್ಚುಗನಸು! ಆದರೆ ಚಿನ್ಮಾತ್ರಾನಂದರೂ ಇತರ ಸಂನ್ಯಾಸಿಗಳೂ ಇದನ್ನು ಕುರಿತು ನನ್ನೊಡನೆ ಮಾತಾಡಬೇಕಾದರೆ,ಸಂಸಾರ ವಿವಾಹ ಮೊದಲಾದವು ಅಪವಿತ್ರ ಪಾಪ ಎನ್ನುವಂತೆ ಹಾಸ್ಯಾಸ್ಪದವಾಗಿ ಮಾತಾಡಿದರು. ಅದನ್ನು ಕೇಳಿ ನನಗೆ ವ್ಯಸನವಾಯಿತು. ಕುಮಾರಿ ಪ…. ಅವರಂತಹ ತರುಣಿಯ ಪ್ರಣಯಭಿಕ್ಷೆ(ಅದು ಹೌದೊ ಅಲ್ಲವೊ ತಿಳಿಯದು!)  ಅವಹೇಳನಕ್ಕಾಗಲಿ ಹಾಸ್ಯಕ್ಕಾಗಲಿ ಲಘುತ್ವಕ್ಕಾಗಲಿ ಈಡಾಗಲು ತಕ್ಕುದಲ್ಲವೆಂದು ನನ್ನ ಭಾವನೆ.- ಇವರೆಲ್ಲ ತಮ್ಮ ಹೃದಯಗಳನ್ನು ಸಾಕಾದಷ್ಟು ಪರಿಶೀಲಿಸಿದ್ದಾರೆಯೋ ನನಗೆ ಸಂದೇಹ-ಆದರೆ ನಾನು ಅವಿವಾಹತನಾಗಿಯೇ ಮುಂದುವರಿಯಬೇಕೆಂದು ನನ್ನ ಅತ್ಯತ್ಕಟ ಆಶೆ. ಏನೊ ಒಂದೊಂದು ಸಲ ಹೃದಯ ಅಧೀರವಾಗುವುದುಂಟು. ಆದರೆ ಅದು ತಾತ್ಕಾಲಿಕವೆಂದು ನನ್ನ ಭಾವನೆ…. ಶ್ರೀಗುರುದೇವನು ಈ ಎಲ್ಲ ಸಮಸ್ಯೆಗಳನ್ನೂ ಕಗ್ಗಂಟುಗಳನ್ನು ಹೇಗೆ ಪರಿಹರಿಸುವನೋ ಹೇಗೆ ಬಿಡಿಸುವನೋ ನಾನರಿಯೆ. ಎಷ್ಟು ಸಮಸ್ಯಾ ಜಟಿಲವಾಗಿದೆ ಈ ಜಗಜ್ಜೀವನ! ಇದರ ಪರಿಹಾರವೇ ಮುಕ್ತಿ. ಹೇ ಗುರುದೇವ ಕೃಪೆಗೈ.

ಮಾಯೆಯಾ ಮೋಹನ ಜ್ವಾಲೆಯಲಿ ಮುಳುಗೆ
ತನು ಕಾತರಿಸಿತು;
ಮಾಯೆ ತಪ್ಪಲು, ದೇವ, ನಿನ್ನ ಕರುಣೆಯಲಿ
ಮನ ಚೇತರಿಸಿತು.
ಕತ್ತಲೆಯ ಪಾತಾಳದಂಚಿನಲಿ ಕಿಡಿಯೊಂದು
ತತ್ತರಿಸಿತು;
ಅದ ನೋಡಿ ದೂರದಿಂ ರವಿಯ ಕೃಪೆ ಐತಂದು
ಅದನುತ್ತರಿಸಿತು!
ಜೈ ಗುರುಮಹಾರಾಜ್ ಕೀ ಜೈ!
-ಈಗೊಂದು ನಾಟಕ ಬರೆಯಲು ಪ್ರಾರಂಭಿಸಿದ್ದೇನೆ.

೮-೭-೧೯೩೩:

ನಿನ್ನೆ ಸಾಯಂಕಾಲ ಮಾನಪ್ಪ, ಸೀತಮ್ಮ,ಗಿರಿಯಮ್ಮ, ಲಕ್ಷ್ಮಿದೇವಿ, ಸಾವಿತ್ರಮ್ಮ ಎಲ್ಲ ಬಂದಿದ್ದರು. ಇವೊತ್ತು ಬೆಳಿಗ್ಗೆ ಬೆಂಗಳೂರಿನ ಮಾರ್ಗವಾಗಿ ಊರಿಗೆ ಹೋದರು- ಅರಮನೆಕೇರಿ ರಾಮಣ್ಣನಿಗೆ (ವಿದ್ಯಾರ್ಥಿನಿಲಯದ ಹುಡುಗ) ಟಾನ್ಸಿಲ್ ಶಸ್ತ್ರ ಚಿಕಿತ್ಸೆಯಾಯಿತು. ನಾನೂ ಆಸ್ಪತ್ರೆಗೆ ಹೋಗಿದ್ದೆ. ಈಗತಾನೆ ಅಲ್ಲಿಂದ ಬಂದೆ. ಆಸ್ಪತ್ರೆ ನನ್ನ ಕಣ್ಣಿಗೆ ವ್ಯಕ್ತಿತ್ವವಿಲ್ಲದ ಒಂದು ಮಹಾ ಉಪಕಾರದ ಯಂತ್ರದಂತೆ ಭೀಷಣವಾಗಿ ತೋರಿತು. ಒಬ್ಬ ಹಳ್ಳಿಯವನನ್ನು ಡೋಲಿಯ ಮೇಲೆ ತಂದರು. ನಾನು ನೋಡುತ್ತ ನಿಂತಿದ್ದೆ. ಅವನು ಎಲುಬು ಚರ್ಮವಾಗಿದ್ದನು. ಅವನನ್ನು ಡೋಲಿಯಲ್ಲಿ ಹೊತ್ತುಕೊಂಡು ಹೋದ ರೀತಿ, ಹೊಳೆಯು ಎಷ್ಟು ಭಾವಹೀನವಾಗಿ ಯಾಂತ್ರಿಕವಾಗಿ ಒಂದು ಮರದ ತುಂಡನ್ನು ತೇಲಿಸುವುದೋ ಹಾಗೆ ಅವನನ್ನು ಹೊತ್ತುಕೊಂಡು ಹೋದರು. ಆಸ್ಪತ್ರೆಯಲ್ಲಿ ಎಲ್ಲ ಇದೆ. ಆದರೆ ರೋಗಿಗೆ ಬೇಕಾಗುವ ಎಲ್ಲ ಔಷಧಿ ಪಥ್ಯಗಳಿಗಿಂತ ಶ್ರೇಷ್ಠವಾಗಿರುವ ಪ್ರೀತಿ(personal Love) ಇಲ್ಲ. ಆದ್ದರಿಂದ ಅದೊಂದು ಮಹಾ ನಿರ್ದಾಕ್ಷಿಣ್ಯ ಯಂತ್ರದಂತಿದೆ. ಇಹಸಂಸಾರದ ರೋಗ ರುಜನೆಗಳನ್ನು ನೋಡಬೇಕಾದರೆ, ಆಸ್ಪತ್ರೆಗೆ ಹೋಗಬೇಕು…..

‘ಪಾಂಚಜನ್ಯ’ಕವನಸಂಗ್ರಹವನ್ನು ಶಿವಮೊಗ್ಗ ಕರ್ಣಾಟಕ ಸಂಘದವರು ಮೈಸೂರಿನ ವೆಸ್ಲಪ್ರೆಸ್ಸಿನಲ್ಲಿ ಅಚ್ಚು ಹಾಕಿಸುತ್ತಾರೆ.

೧೮-೮-೧೯೩೩:

ಪ್ಯಾರಿಸ್ಸಿನಲ್ಲಿರುವ ಹಾಸನದ ರಾಜಾರಾಯರು ಬೆಳಿಗ್ಗೆ ಬಂದಿದ್ದರು. ತುಂಬ ಉತ್ಸಾಹಶಾಲಿಗಳಾಗಿ ಕಂಡರು. ಆದರೆ ಅಭಿಪ್ರಾಯಗಳನ್ನು ಆಳವಾದ ವಿವೇಚನೆಯಿಂದ ಹೇಳುತ್ತಿದ್ದಂತೆ ತೋರಲಿಲ್ಲ.

೨೩-೮-೧೯೩೩:

ಮತ್ತೊಬ್ಬ ಕ್ರಿಸ್ತನು ಶಿಲುಬೆಗೇರಿದ್ದಾನೆ ಇಂದು. ಅಯ್ಯೋ ಲೋಕವೆ ನಿನ್ನ ರಕ್ಷಕರಿಗೆ, ನಿನ್ನ ಹಿತಚಿಂತಕರಿಗೆ, ನಿನಗಾಗಿ ಎದೆಯೊಲುಮೆಯನ್ನು ಧಾರೆಯೆರೆಯುವವರಿಗೆ ನೀನೀವುದೇನು? ವಿಷಪ್ರಾಸನ! ಶರಶಯ್ಯೆಯಿ! ಕ್ರಿಸ್ತನನ್ನು ಶಿಲುಬೆ!ಸಾಕ್ರೆತೀಸನನ್ನು ವಿಷ ಕೊಟ್ಟು ಕೊಂದೆ! ಭೀಷ್ಮನಿಗೆ ಶರಶಯ್ಯೆತ್ತೆ!ಕ್ರಿಸ್ತನನ್ನು ಶಿಲುಬೆಗೆತ್ತಿ ಮೊಳೆ ಹೊಡೆದೆ! ನಾನು ಬರೆದಿರುವ “ಅವತಾರ” ಎಂಬ ಪದ್ಯವು ನೆನಪಿಗೆ ಬರುತ್ತದೆ. ಅಯ್ಯೋ, ಮಹಾತ್ಮಾಗಾಂಧಿಯವರಂತಹ ಆದರ್ಶ ಜೀವಿಗಳನ್ನು ಮಹಾಪುರುಷರನ್ನು ಯಾವ ರೀತಿ ನಾವು ಕಾಣುತ್ತಿದ್ದೇವೆ? ಲಾರ್ಡ್‌ವಿಲ್ಲಿಂಗ್ ಡನ್ ನೀನು ಭಯಂಕರ ಸೈತಾನಯಂತ್ರಕ್ಕೆ ಸಹಾಯ ಮಾಡುವ ನಿಸ್ಸಹಾಯಕವಾದ ಒಂದು ಮೊಳೆಯಾಗಿ ಅಧೋಗತಿಗಿಳಿದಿರುವೆ. ಲೋಕೈಕ ಪೂಜ್ಯನಾದ ಮಹಾತ್ಮನ ನಿರಶನವ್ರತದ ಯಾತನೆಯು ಹಿಮಾಲಯ ಪರ್ವತದ ಹೃದಯವನ್ನು ಹಿಂಡದಿರದು. ಇಂತಿರಲು ಕೆಲಸಕ್ಕೆ ಬಾರದ ಅನ್ಯಾಯವಾದ ಕಾನೂನುಗಳನ್ನು ರಚಿಸಿ, ತರುವಾಯ ನ್ಯಾಯಮಾರ್ಗಗಳಲ್ಲಿ ಹೋಗುವವರು ಕಾನೂನಿಗೆ ವಿರೋಧಿಗಳೆಂದು ಹೇಳಿ ಅವರನ್ನು ಪೀಡಿಸುವುದು ಎಂತಹ ಅಧಮ ನೀಚ ಪೈಶಾಚಿಕ ನಾರಕ ಕಾರ್ಯ!

ಇಂದು ಭರತಖಂಡವನ್ನೆಲ್ಲ ಮುಗಿಲು ಮುಚ್ಚಿದಂತಿದೆ. ಎಲ್ಲರೂ ಕಂಗೆಟ್ಟಂತೆ ತೋರುತ್ತಿದೆ. ಹೇ ಗುರುದೇವ, ದಾರಿತೋರು!

ಈ ಮಹಾವಿಶ್ವವನ್ನೂ ಅನಾದಿ ಅನಂತ ಕಾಲವನ್ನೂ ದೇಶವನ್ನೂ ಧ್ಯಾನಿಸಿದೆನೆಂದರೆ ಭರತಖಂಡವೂ ಗಾಂಧಿಯವರೂ ಈ ನಮ್ಮ‘ಐಲುಪೈಲು’ಪ್ರಪಂಚವೂ ಎಲ್ಲವೂ ಯಃಕಶ್ಚಿತವಾಗಿ ಹೋಗುತ್ತದೆ! ಆದರೆ ಒಂದು ಇರುವೆಯ ಪ್ರೇಮಭಂಗವೂ ದೂರದ ಬಹುದೂರದ ನೀಹಾರಿಕೆಯ ಅಂತರಂಗದಲ್ಲಿ ನಡೆಯುವ ಒಂದು ಮಹತ್ತಾದ ಅಗ್ನಿಕಾರ್ಯದಂತೆಯೇ ಮುಖ್ಯವೂ ಮನನೀಯವೂ ಆಗಿದೆ!

ಅಯ್ಯೋ, ಗಾಂಧಿಯವರಿಗಾಗಿ ನನ್ನೆದೆಯಲ್ಲಿರುವ ಸಂತಾಪವನ್ನು ನಾನೇನು ಬರೆದು ಮುಗಿಸಲಿ? ಅವರಿಗಾಗಿ ನಿತ್ಯವು ತಪ್ಪದೆ ಪ್ರಾರ್ಥನೆ ಮಾಡುವೆ. ನಾನು ಮತ್ತೇನು ಮಾಡಬಲ್ಲೆ? ಜಯಗುರುದೇವ! ಜಯ ಗುರುದೇವ!

೧೪-೮-೧೯೩೩:

ಇಂದು ನಾನು ಮೊತ್ತಮೊದಲಾಗಿ ನನ್ನ ಗಡಿಯಾರ ಕೊಂಡೆ.‘ಆ ಗಡಿಯಾರ ಇಂದಿಗೂ(೨೮-೮-೧೯೭೪) ನನ್ನ  ಕೈಯಲ್ಲಿದ್ದು ನಡೆಯುತ್ತಿದೆ! ನಾಲ್ವತ್ತೊಂದು ವರ್ಷಗಳ ಅನಂತರವೂ!’

೨೨-೮-೧೯೩೩:

ಶ್ರೀಕಂಠಯ್ಯ ಎ.ಸಿ.ಅವರಿಗೆ ಗಡಿಯಾರದ ಬಾಬ್ತು ೨೨ ರೂ.ಚೆಕ್ ಕೊಟ್ಟೆ

೩೦-೮-೧೯೩೩:

ಕಾದಂಬರಿ ಸಂಗ್ರಹ ಓದಿ ಮುಗಿಸಿದೆ. ಥಾಮಸ್ ಹಾರ್ಡಿ ಅವರ The Return of the Native ಓದುತ್ತಿದ್ದೇನೆ. Far from Madding crowd ಗಿಂತಲೂ ಚೆನ್ನಾಗಿದೆಯಂತೆ, ನೋಡಬೇಕು. ಇಂದು ಮಧ್ಯಾಹ್ನ ನನ್ನ ತಮ್ಮನಿಂದ (ಕೆ.ಆರ್. ವೆಂಕಟಯ್ಯ) ಕಾಗದ ಬಂದಿತು. ಅದರಲ್ಲಿ ಅವನು ಗುರುವನ್ನು ಅಪೇಕ್ಷಿಸಿ, ನನ್ನ ಉಪದೇಶ ಕೇಳಿದ್ದನು. ಒಂದು ಕಾಗದ ಬರೆದೆ. ಅದರಲ್ಲಿ ಗುರು,ಮಂತ್ರ, ಧ್ಯಾನ,ಮನಃಶ್ಯಕ್ತಿ ಮುಂತಾದುವುಗಳನ್ನು ಕುರಿತು ಬರೆದಿದ್ದೇನೆ. ಆತನಿಗೆ ಹೀಗೆಯೇ ಪದೇ ಪದೇ ಕಾಗದಗಳನ್ನು ಬರೆಯಬೇಕೆಂದು ಬಯಸಿದ್ದೇನೆ. ಆಹಾ! ಒಂದು ಆತ್ಮವು ಊರ್ಧ್ವಗಾಮಿಯಾಗಲು ತೊಡಗಿತೆಂದರೆ ನನಗೆಷ್ಟು ಆನಂದವಾಗುತ್ತದೆ. ಒಬ್ಬ ಅಜ್ಞಾತ ವ್ಯಕ್ತಿಯ ಆತ್ಮಸಾಧನೆ, ಉದ್ಧಾರ ಸಿದ್ದಿಗಳ ಮುಂದೆ ದೊಡ್ಡ ದೊಡ್ಡ ರಾಜವಿಪ್ಲವಗಳೂ ನಿರ್ಮಾಣಗಳೂ ಕ್ಷುದ್ರವಾಗಿ ತೋರುತ್ತವೆ!

೩೧-೮-೧೯೩೩:

‘ತಾಯಿನಾಡಿ’ನ ಸಂಪಾದಕರಾದ ಪಿ.ಆರ್.ರಾಮಯ್ಯನವರು ತಮ್ಮ ಪತ್ರಿಕೆಯು ಆಚರಿಸಲಿರುವ ಸರ್.ಎಂ.ವಿಶ್ವೇಶ್ವರಯ್ಯನವರ ವರ್ಧಂತ್ಯತ್ಸವಕ್ಕೆ ಅವರ ವಿಚಾರವಾಗಿ ಒಂದು ಕವನ ಬೇಕೆಂದು ಕೇಳಿದ್ದರು. ಪ್ರೇರಣೆಯಾದಲ್ಲಿ ಬರೆದು ಕಳಿಸುತ್ತೇನೆ ಎಂದು ಬರೆದಿದ್ದೇನೆ.

೩-೯-೧೯೩೩:

ಸರ್.ಎಂ.ವಿ. ಯವರನ್ನು ವಿಷಯವಾಗಿ ‘ಯಂತ್ರರ್ಷಿ’ಎಂಬ ಕವನವನ್ನು ಬರೆಯಲು ಉಪಕ್ರಮಿಸಿದ್ದೇನೆ.

೪-೯-೧೯೩೩:

‘ಯಂತ್ರರ್ಷಿ’ಯನ್ನು ಸ್ವಲ್ಪ ಮುಂದುವರಿಸಿದೆ. The Return of the Native ಓದುತ್ತಿದ್ದೇನೆ. The greater victorian poets by walker ಓದುತ್ತಿದ್ದೇನೆ. ಸ್ವಾಮಿ ವಿವೇಕಾನಂದರ ‘ವೇದಾಂತ’ಉಪನ್ಯಾಸ ಭಾಷಾಂತರವಾಗುತ್ತಿದೆ.೨೧೦

೫-೯-೧೯೩೩:

‘ಭಗಿನೀ ಸೇವಾ ಸಮಾಜ’ದಲ್ಲಿ ಒಂದು ಕವನವಾಚನ ಮಾಡಲು ಒಪ್ಪಿ ಕೊಂಡಿದ್ದೇನೆ. ಮಿಡ್ನಾಪೂರ್ ಡಿಸ್ಟ್ರಿಕ್ಟ ಮ್ಯಾಜಿಸ್ಟ್ರೇಟ್ ಕೊಲೆಯಾದರೆಂದು ಕೇಳಿದೆ. ಅದರಿಂದ ಒಮ್ಮೆ ಹರ್ಷವೂ ಒಮ್ಮೆ ದುಃಖವೂ ಉಂಟಾಯಿತು. ನಮ್ಮ ದೇಶೀಯರಲ್ಲಿ ಕೆಚ್ಚು ಸಾಹಸಗಳಿವೆಯಲ್ಲಾ ಎಂದು ಹರ್ಷ; ನಮ್ಮ ದೇಶೀಯರನ್ನು ಇಂಥಾ ಹಿಂಸೆಗೆ ನೂಕುತ್ತಿದ್ದಾರಲ್ಲಾ ಎಂದು ಶೋಕ.

೬-೯-೧೯೩೩:

ಈ ವಿಷಯವು London,The sunday Express, March 5, 1933, ‘Believe it or not’ ಎಂಬುದರಲ್ಲಿ ಅಚ್ಚಾಗಿದೆ. ಇದು ಒಳ್ಳೆಯ ಕಥೆಗೆ(ಕವನ) ಸಾಮಗ್ರಿ ದೊರಕಿಸುತ್ತದೆ:

THE FORGOTIEN WOMAN

The barque‘Colubine’trading regularly among the shetland Islands in the north of scotland, was deserted by her crew on November 3rd 1886, off Lerwick.In their haste a passenger Mrs. Inge Bjorn was left aboand forgotten!

Later the ship floated off the bank on which it was aground and easterly gale drove it until Iceland was in sight. Then the wind shifted to westward and the‘Colubine’began to drift towards Norway. She cleared the dangerous reefs of Vigero Fiord in a miraculous manner, threanding channels which tax the skill of a most experienced pilot.

At the mercy of the wind, the barque drifted to and fro for 108 days until some fisher folk sighted her and at great risk, reacued the famished half-frozen ‘Forgotten woman!’

೧೦-೯-೧೯೩೩ ನೆಯ ಭಾನುವಾರ, ರಾತ್ರಿ ೯ ಗಂಟೆ ೭ ನಿಮಿಷ:

ಈಗತಾನೆ ಗೋಪಾಲ್ ಮಹಾರಾಜ್(ಸ್ವಾಮಿ ಸಿದ್ದೇಶ್ವರಾನಂದರು) ಮದ್ರಾಸಿಗೆ ಅಲ್ಲಿಯ ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರಾಗಲು,ಒಂದು ವರ್ಷದ ಮಟ್ಟಿಗೆ, ಹೋದರು ಅವರು ನನ್ನ ಜೀವನದಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದಿದ್ದಾರೆ. ನನ್ನ ಜೀವನವಾಹಿನಿಯ ಗತಿಯನ್ನೇ ಬೇರೆಯ ಮುಖಕ್ಕೆ ತಿರುಗಿಸಿದ್ದಾರೆ. ಅವರ ಚರಣಾರವಿಂದಗಳಿಗೆ ನಮೋ!

ನನಗೆ ನೆನಪಾಗುತ್ತಿದೆ: ನಾನು ಸಂತೆಪೇಟೆ ‘ಆನಂದಮಂದಿರ’ ಹೋಟೆಲಿನ ನರಕವಾಸದಲ್ಲಿದ್ದು, ಆ ಹೋಟೆಲಿನಲ್ಲಿ ಆರು ವರುಷಗಳಿಂದ ಇದ್ದು ನನ್ನ ಆರೋಗ್ಯವನ್ನೆ ಕೆಡಿಸಿಕೊಂಡಿದ್ದೆ. ಸ್ವಾಮಿ ಸಿದ್ದೇಶ್ವರಾನಂದರಿಂದ ಆ ನರಕದಿಂದ ಪಾರಾಗಿ ಆಶ್ರಮದ ಸ್ವರ್ಗೀಯ ಜೀವನದಲ್ಲಿ ಭಾಗಿಯಾದೆ. ಮೊದಲು ನನಗೆ ಅವರ ಪರಿಚಯವಾದದ್ದು ‘ಲೋಟಸ್ ಲೀಫ್ ಯೂನಿಯನ್’ನಲ್ಲಿ. Lotus Leaf Union ಅನ್ನು ಸಂತೇಪೇಟೆ ಹೋಟೆಲ್ ‘ಆನಂದ ಮಂದಿರ’ದ ನಮ್ಮ ಕೊಠಡಿಯಲ್ಲಿಯೆ ನಾನು ಸ್ಥಾಪಿಸಿದೆ. ಅಲ್ಲಿ ಸ್ನೇಹಿತರೊಡನೆ ಸ್ವಾಮಿ ವಿವೇಕಾನಂದ ಮೊದಲಾದವರ ಬರಹ ಮತ್ತು ಜೀವನ ತತ್ವಗಳನ್ನು ರಭಸದಿಂದ ಅವಲೋಕಿಸುತ್ತಿದ್ದೆವು. ನಾನು ಬಿ.ಎ.ತರಗತಿಗೆ ಬರಲು ಸದಸ್ಯರು ಹೆಚ್ಚಿದುದರಿಂದ ಅದನ್ನು ಎಸ್.ವಿ.ಕನಕಶೆಟ್ಟರು ಇತ್ಯಾದಿಯವರು ಇರುತ್ತಿದ್ದ ‘ಮನ್ನಾರ್ ಕೃಷ್ಣಶೆಟ್ಟಿ ಹಾಸ್ಟಲಿ’ಗೆ ವರ್ಗಾಯಿಸಿದೆವು. ಆಗ ಒಂದು ಚರ್ಚೆ ಅಲ್ಲಿ ಏರ್ಪಟ್ಟಿತ್ತು. ಆ ಸಂಘದ ಆಶ್ರಯದಲ್ಲಿ.‘That cast system is a Hinderance to India’s progress’ ಎಂಬ ವಿಚಾರವಾಗಿ. ನಾನು Prime Mover ಆಗಿದ್ದೆ. ಅದಕ್ಕೆ ಸ್ವಾಮಿ ಶ್ರೀವಾಸಾನಂದರನ್ನು ಅಧ್ಯಕ್ಷರಾಗುವಂತೆ ಕನಕಶೆಟ್ಟರು ಕೇಳಿಕೊಂಡಿದ್ದರು. ಆಗ ಮೈಸೂರಿಗೆ ಶ್ರೀರಾಮಕೃಷ್ಣಾಶ್ರಮವು ಬಂದು ಒಂದು ವರ್ಷವಾಗಿದ್ದರೂ ನಾನು ಅದರ ಪರಿಚಯ ಮಾಡಿಕೊಂಡಿರಲಿಲ್ಲ. ಆಗ ನಾನು ಸ್ವಲ್ಪ ಹೆಚ್ಚಾಗReserve ಆಗಿದ್ದೆ. ಶ್ರೀವಾಸಾನಂದರು ಬರಲಾರದ್ದರಿಂದ ಸ್ವಾಮಿ ಸಿದ್ದೇಶ್ವರಾನಂದರನ್ನು ಕಳಿಸಿದರು. ಅವರು ಆ ದಿನದ ಸಭೆಗೆ ಅಧ್ಯಕ್ಷರಾಗಿದ್ದರು. ಅಂದು ನಾನು ನನ್ನ ಭಾಷಣವನ್ನು ಸ್ವಾಮಿ ವಿವೇಕಾನಂದರ “Be proud that you are an Indian.” ಎಂಬ ಉಪನ್ಯಾಸ ಭಾಗದಿಂದ ಪ್ರಾರಂಭ ಮಾಡಿ, ಉದ್ದಕ್ಕೂ ವಿವೇಕಾನಂದರ ಅಭಿಪ್ರಾಯಗಳನ್ನೇ ಹೇಳಿ, ಜಾತಿಪದ್ಧತಿಯು ಕೆಡುಕೆಂದು ಸಾಧಿಸಿದೆ. ಸ್ವಾಮಿಗಳಿಗೆ ದೇವರ ದಯದಿಂದ ನನ್ನಲ್ಲಿ ವಿಶ್ವಾಸ ಹುಟ್ಟುತು. ಅಲ್ಲದೆ ಆ ದಿನದ ಸಭೆಯ ಪ್ರಾರಂಭದಲ್ಲಿ ನಾನೇ ರಚಿಸಿದ”ಜಯ ಹೇ ಕರ್ಣಾಟಕ ಮಾತೆ!” ಎಂಬ ಕವನವನ್ನೂ ಸಾಮೂಹಿಕವಾಗಿ ಹಾಡಿದ್ದರು. ನನ್ನ ವಿಚಾರವನ್ನೂ ಇತರರಿಂದ ತಿಳಿದುಕೊಂಡು ನನ್ನನ್ನು ಆಶ್ರಮಕ್ಕೆ ಬರುವಂತೆ ಹೇಳಿಕಳುಹಿಸಿದರು. ನಾನು ಹೋಗಲಿಲ್ಲ. ನಾಲ್ಕು ಐದು ಸಾರಿ ಹೇಳಿಕಳಿಸಿದ ಮೇಲೆ ಒಂದು ದಿನ ಬೆಳಿಗ್ಗೆ ಕನಕಶೆಟ್ಟರ ಒಡಗೂಡಿ ದಿವಾನ್ಸ್ ರೋಡಿನಲ್ಲಿ ಮರಿಮಲ್ಲಪ್ಪ ಹೈಸ್ಕೂಲ್ ಹತ್ತಿರವಿದ್ದ ಆಶ್ರಮಕ್ಕೆ ಹೋದೆ. ನನಗಿನ್ನೂ ಚೆನ್ನಾಗಿ ನೆನಪಿದೆ. ಎಳಬಿಸಿಲು ಮರದ ಹಸುರಿನ ಮೇಲೆ ಮುದ್ದಾಗಿ ನಳನಳಿಸಿ ನಗುತ್ತಿತ್ತು. ಆಗ ಆ ಮನೆಯ ಎದುರಿಗಿದ್ದ(ಈಗ ಕಡಿದು ಹಾಕಿಬಿಟ್ಟಿದ್ದಾರೆ!) ಮರಗಳಲ್ಲಿ ಹಕ್ಕಿಗಳು ಪ್ರಭಾತಗಾನ ಗೈಯುತ್ತಿದ್ದುವು. ಆಶ್ರಮ ನಿಃಶಬ್ದವಾಗಿ ಶಾಂತವಾಗಿತ್ತು. Hall ನಲ್ಲಿ ಇದ್ದ್ರ ound Table ಮುಂದೆ ಯಾರೋ ಒಂದಿಬ್ಬರು ಕುಳಿತಿದ್ದರು. ಬಹುಶಃ ಕಸ್ತೂರಿಯೂ ಇದ್ದರೆಂದು ತೋರುತ್ತೆ.(ಕಸ್ತೂರಿಯವರೂ ಸ್ವಾಮಿಜಿಯ ಜೊತೆ ನಮ್ಮ L.L.U. ಮೀಟಿಂಗಿಗೆ ಬಂದಿದ್ದರು.) ನಾನು ದ್ವಾರಪ್ರವೇಶ ಮಾಡಿದ ಕೂಡಲೆ ಜೊತೆಯಲ್ಲಿದ್ದ ಕನಕಶೆಟ್ಟಿ  ಒಳಗೆ ಕೋಣೆಯಲ್ಲಿ ಹಾಸಗೆ ಮೇಲೆ ಮಲಗಿದ್ದ ಸ್ವಾಮಿಜಿಯವರಿಗೆ ನಾನು ಬಂದಿರುವುದನ್ನು ಹೇಳಿದರು. ಆಗ ಅವರು ದಡಕ್ಕನೆ ಎದ್ದು ಬಂದರು. ಬಹುದೂರದಿಂದ ಬಂದ ಬಹುಕಾಲದ ಸ್ನೇಹಿತನನ್ನು ಎದುರುಗೊಂಡವರಂತೆ ನನ್ನನ್ನು ಅತ್ಯಂತ ಸ್ನೇಹಮಯ ವಾಣಿಯಿಂದ ಮಾತಾಡಿಸತೊಡಗಿದರು. (ತೆಳ್ಳಗೆ ಉದ್ದವಾಗಿ ಬಡಕಲು ಜೀವಿಗಳಾಗಿದ್ದರು.)

ಅವರ ಸರಳ ಹೃದಯ, ಸ್ನೇಹಮಯ ಅದರ, ಪಿತೃಭಾವ, ಪವಿತ್ರತೆ ಇವುಗಳಿಂದ ನಾನು ಶರಣಾದೆನು. ಆಗ ನನಗೆ ಗೊತ್ತಾಗಲಿಲ್ಲ.- ನನ್ನ ಜೀವನದಲ್ಲಿ ಎಂತಹ ಮಹಾಕ್ರಾಂತಿಕಾರಕ ಘಟನೆಯಾಗುತ್ತಿದೆ ಎಂದು. ಅವರು ನನ್ನನ್ನು ಕುರಿತು”ವಿವೇಕಾನಂದ ಗ್ರಂಥಗಳನ್ನು ಓದಿದ್ದೀಯಾ?” ಎಂದರು(ಸಂವಾದ ಇಂಗ್ಲಿಷಿನಲ್ಲಿಯೆ ನಡೆಯಿತು. ಅವರು ಮಲೆಯಾಳಿಯಾಗಿದ್ದು ಕನ್ನಡವನ್ನು ತೊದಲು ತೊದಲಾಗಿ ಕಲಿಯಲು ತೊಡಗಿದ್ದರಷ್ಟೆ.೩೧-೮-೧೯೭೪) ನಾನು ಹೇಳಿದೆ-ಎಲ್ಲವನ್ನೂ ಓದಿದ್ದೇನೆ. ನನಗೆ ವಿವೇಕಾನಂದರು ಮಹೋನ್ಮತ ಗುರುಗಳಾಗಿದ್ದಾರೆ ಎಂದು. ಅವರು ಕೆಲವು ಗ್ರಂಥಗಳನ್ನೂ ‘ವೇದಾಂತ ಕೇಸರಿ’‘ಪ್ರಬುದ್ದ ಭಾರತ’ಮೊದಲಾದ ಮಾಸಪತ್ರಿಕೆಗಳನ್ನೂ ಓದುವಂತೆ ಹೇಳಿ ಕೊಟ್ಟರು. ನಾನು ಕವಿ ಎಂಬುದನ್ನು ಕೇಳಿ ಹಿಗ್ಗಿದರು. ಬಹುಶಃ ಕಸ್ತೂರಿಯವರ ಪರಿಚಯವು ಅಲ್ಲಿಯೆ ಆಯಿತೆಂದು ತೋರುತ್ತದೆ. ಅಂದಿನಿಂದ ಆಶ್ರಮಕ್ಕೂ ನನಗೂ ಸಂಬಂಧವು ಹೆಚ್ಚಾಗಿ ಬೆಳೆಯಿತು. ಆದರೂ ನಾನು ದೂರ ದೂರವಾಗಿಯೇ ಇರುತ್ತಿದ್ದೆ. ಆದರೆ ಸ್ವಾಮಿಜಿ ನನ್ನನ್ನು ದೂರವಾಗಲು ಬಿಡಲಿಲ್ಲ.

ಕೆಲವು ತಿಂ‌ಗಳ ಮೇಲೆ ಸ್ವಾಮಿ ವಿವೇಕಾನಂದರ ಜನ್ಮೋತ್ಸವವನ್ನು ಬನುಮಯ್ಯನವರ ಹೈಸ್ಕೂಲಿನಲ್ಲಿ ಆಚರಿಸಿದರು. ಅಲ್ಲಿ ‘ಜಯ ಹೇ ಕರ್ಣಾಟಕ ಮಾತೆ’ಎಂಬ ಕವನವನ್ನು ಹಾಡುವಂತೆ ನನಗೆ ಕಾಗದ ಬರೆದು ಕಳಿಸಿದರು. ಅಂದು ಸಭೆಯಲ್ಲಿ ಅದನ್ನು ಹಾಡಿದೆ. ಕಸ್ತೂರಿ ಸ್ವಾಮೀಜಿ ಎಲ್ಲರೂ ಬಹಳವಾಗಿ ಪ್ರಶಂಸಿಸಿದರು. ಸರಿ- ಆಶ್ರಮಕ್ಕೆ ದಿನವೂ ಕಾಲೇಜಿಗೆ ಹೋಗುವಾಗ ಬರುವಾಗ ಹೋಗುತ್ತಲೇ ಇದ್ದೆ. ಈ ಮಧ್ಯೆ ಸ್ವಾಮಿ ಶರ್ವಾನಂದರು ಬಂದರು. ಅವರ ವಿಚಾರ ನನ್ನ ಜೀವನದಲ್ಲಿ ನೆಯ್ದುಹೋಯಿತು. ಸ್ವಾಮಿಗಳಂತೂ ನನ್ನ ಆತ್ಮವಾಗಿ ಹೋದರು. ನಾನು ಸಂತೆಪೇಟೆಯ‘ನರಕ’ದಲ್ಲಿಯೇ ಇದ್ದೆ. ಅದೇ ಸ್ವರ್ಗವಾಗಿ ಹೋಗಿತ್ತು.

ಒಂದು ದಿನ ಸ್ವಾಮಿಜಿ ಮತ್ತು ತಾತಾಗಾರು(ವೆಂಕಟಸುಬ್ಬಯ್ಯ) ನನ್ನ ಕೊಟಡಿಗೆ ಬಂದರು. ಆಗ ಆ ಕೊಟಡಿಯಲ್ಲಿದ್ದ ದೇಶಭಕ್ತರ ಮತ್ತು ಧರ್ಮಪ್ರವರ್ತಕರ ಚಿತ್ರ ಪಟಗಳನ್ನೂ ನನ್ನ ಪುಸ್ತಕ ಭಂಡಾರವನ್ನೂ ನೋಡುತ್ತಿದ್ದರು.”ಈ ಗಲೀಜಿನಲ್ಲಿ ಏಕೆ ಇದ್ದೀಯೆ? ಆಶ್ರಮಕ್ಕೆ ಬಾ, ಒಂದು ಕೊಟಡಿ ಕೊಡುತ್ತೇನೆ”ಎಂದರು. ನಾನು ಒಪ್ಪಲಿಲ್ಲ. ಹೀಗೆಯೆ ಒಂದು ವರ್ಷ ಕಳೆಯಿತು. ನಾನು ಬಹುಶಃ ಮೂರನೆಯ ವರ್ಷದ ಬಿ.ಎ.ಯಲ್ಲಿ ಓದುತ್ತಿದ್ದಾಗ ತಿಮ್ಮು, ಮಾನಪ್ಪ ಎಲ್ಲರೂ ವಿದ್ಯಾಭ್ಯಾಸ ಬಿಟ್ಟರು. ನಾನೊಬ್ಬನೇ ಒಂದು ಕೊಟಡಿಯಲ್ಲಿದ್ದೆ. ದಸೆರಾದಲ್ಲಿ ಕಾಯಿಲೆ ಬಿದ್ದೆ. ಮಲೇರಿಯಾ ಜೋರಾಯಿತು. ೧೦೬ ಡಿಗ್ರಿಯವರೆಗೂ ಏರಿತು. ನೋಡಿಕೊಳ್ಳುವವರೂ ಯಾರೂ ಇರಲಿಲ್ಲ. ಹೋಟೆಲಿನವರು ಗಂಜಿ ಕೊಟ್ಟು ಹೋಗುತ್ತಿದ್ದರು. ನಾನು ಆಶ್ರಮಕ್ಕೆ ನಾಲ್ಕಾರು ದಿನಗಳಾದರೂ ಬರದಿರಲು ಸ್ವಾಮೀಜಿ ಮತ್ತು ಕಸ್ತೂರಿಯವರು ಗಾಬರಿಯಾದರು. ನಾನು ಒಂದು ಕಾಗದ ಬರೆದು ನನಗೆ ಬಹಳ ಕಾಯಿಲೆಯಾಗಿದೆ ಎಂದು ಹೇಳಿಕಳಿಸಿದೆ. ಸರಿ,ಅಂದೇ ಸಾಯಂಕಾಲ Vivekananda Rovers ಗೆ‘Investure Ceremony’ಅದನ್ನು ಮುಗಿಸಿ ಕಸ್ತೂರಿ ಮತ್ತು ಸ್ವಾಮಿಜಿ ನಾಲ್ಕೈದು ಸ್ಕೌಟುಗಳೊಡನೆ ಒಂದು ಟಾಂಗ ಗೊತ್ತುಮಾಡಿ ಕೊಂಡು ನನ್ನ ಕೊಟಡಿಗೆ ಬಂದರು. ಒಂದು ಗಂಟೆಯ ಹೊತ್ತು ನನ್ನನ್ನು ಕಾಡಿಸಿ ಆಸ್ಪತ್ರೆಗೆ ಒಯ್ದರು. ಅಲ್ಲಿ ಹದಿನೈದು ದಿವಸಗಳಿದ್ದೆ. ಸ್ವಾಮಿಗಳು ನನ್ನ ತಂದೆಯಂತೆ ದಿನವೂ ಬಂದು, ಹಣ್ಣು ತಂದುಕೊಟ್ಟು, ಮಾತಾಡಿಸಿ, ಧೈರ್ಯ ಹೇಳಿ-(ಆಗಲೇ ನನಗವರು ಈಗಲೂ ನನ್ನ ಬಳಿಯಿರುವ ಗುರುಮಹಾರಾಜ್. ಸ್ವಾಮಿಜಿ, ಮಹಾಮಾತೆಯರಿರುವ ಭಯಂಕರವಾಗಿತ್ತು. ಅದನ್ನು ನನ್ನ ಆತ್ಮಕಥೆಯಲ್ಲಿ ವರ್ಣಿಸಬೇಕೆಂದಿದ್ದೇನೆ. ನಾನು ಹೇಳಿದೆ”ಸ್ವಾಮಿಜೀ, ನನ್ನನ್ನು ಆಶ್ರಮಕ್ಕೆ ಕರೆದುಕೊಂಡು ಹೋಗಿ. ಗುಣವಾದ ಮೇಲೆ ನನ್ನ ಕೊಟಡಿಗೆ ಹೋಗುತ್ತೇನೆ” ಎಂದು. ಹಾಗೆಯೆ ಮಾಡಿದರು. ಗುಣವಾದ ಮೇಲೆ ನಾನು ಮತ್ತೆ ಸಂತೆಪೇಟೆಗೆ ಕಾಲಿಡಲಿಲ್ಲ. ನನ್ನ ತಮ್ಮ ತಿಮ್ಮು ಬಂದ. ಅವನ ಕೈಯಲ್ಲಿ ನನ್ನ ಕೊಟಡಿಯಲ್ಲಿದ್ದ ಸಾಮಾನುಗಳನ್ನೆಲ್ಲ ತರಿಸಿದೆ. ಆಮೇಲೆ ನನಗೆ ಆಶ್ರಮವೇ ಮನೆಯೂ ಮಂದಿರವೂ ತಪೋವನವೂ ಸಾಧನ ರಂಗವೂ ಆಯಿತು. ಅಯ್ಯೋ ನಾನು ಸ್ವಾಮಿ ಸಿದ್ದೇಶ್ವರಾನಂದರಿಗೆ ಎಷ್ಟು ಋಣಿಯಾದರೆ ತಾನೇ ತೀರೀತು? ಅವರು ನನ್ನ ಭಾಗದ ದೇವರು.

ಮೊದಲು ನನ್ನ ಕವನಗಳ ಯೋಗತ್ಯೆಯನ್ನು ಕಂಡುಹಿಡಿದು ನನಗೆ ಉತ್ತೇಜನ ಕೊಟ್ಟವರೇ ಅವರು ಮತ್ತು ಕಸ್ತೂರಿ.(ಇಬ್ಬರೂ ಕನ್ನಡಿಗರಲ್ಲ! ಮಲೆಯಾಳದವರು. ಈಗ ನನ್ನನ್ನು ಆರಾಧಿಸುವವರು ಆಗ ತಿರಸ್ಕರಿಸುತ್ತಿದ್ದರು. ಅವರ ಹೆಸರನ್ನು ನಾನು ಬರೆಯಲಾರೆ. ನನಗೆ ಆಶ್ಚರ್ಯವೂ ಸಂಕೋಚವೂ ಆಗುತ್ತದೆ. ಅವರೆಲ್ಲ ಈಗ ಕನ್ನಡದ ಮುಂದಾಳುಗಳು) ಆಶ್ರಮದಿಂದಲೆ ಕನ್ನಡ ಭಾಷೆಗೆ ನನ್ನಿಂದ ಸೇವೆಯಾದುದು. ಇರಲಿ ಅದೊಂದು ಬಹುದೊಡ್ಡ ಕಥೆ!

ಸ್ವಾಮಿ ಸಿದ್ದೇಶ್ವರಾನಂದರು ನನ್ನ ಚಿಕ್ಕಪ್ಪ; ತಮ್ಮ ಇಬ್ಬರು ಸಹೋದರಿಯರು ತೀರಿಕೊಂಡಾಗ ಎಂತಹ ಅವಲಂಬನವಾಗಿ ಧೈರ್ಯ ಹೇಳಿದರು! ನನ್ನನ್ನು ಪ್ರೇಮವೆಂಬ ಒಂದು ಮಂತ್ರದಿಂದ ಉದ್ಧಾರ ಮಾಡಿರುವರು. ಕನ್ನಡನಾಡಿನ ಜನರು ಅವರಿಗೆ ಚಿರ ಋಣಿಗಳಾಗಿರಬೇಕು. ನನ್ನ ಗ್ರಂಥಗಳನ್ನು ಓದುವವರು ಮೊದಲು ಅವರಿಗೆ ನಮಸ್ಕರಿಸಿ ಓದಲಿ. ನನ್ನನ್ನೂ ಮಾನಪ್ಪನನ್ನೂ ಕಲ್ಕತ್ತಕ್ಕೆ ಕೊಂಡೊಯ್ದು ಶ್ರೀರಾಮಕೃಷ್ಣರ ಅಂತರಂಗದ ಶಿಷ್ಯರಾಗಿರುವ ಶ್ರೀಮತ್ ಸ್ವಾಮಿ ಶಿವಾನಂದರಿಂದ ಮಂತ್ರೋಪದೇಶ ಕೊಡಿಸಿದರು. ಅವರಂತಹ ಎಳಮಕ್ಕಳ ಮನಸ್ಸಿನವರನ್ನೂ ತಾಯಿಯಂತೆ ಎಲ್ಲರ ಮೇಲೆಯೂ ರಾಜರಿಂದ ಹಿಡಿದು ಬಡವರವರೆಗೆ ವಿಶ್ವಾಸ ತೋರಿಸುವವರನ್ನು ನಾನು ಬೇರೆ ನೋಡಿಲ್ಲ. ಅವರು ತಮ್ಮ ಹೆಸರಿಗೆ ತಕ್ಕಂತೆ ದಿಟವಾಗಿಯೂ ಸಿದ್ದೇಶ್ವರಾನಂದರಾಗಿರುವರು. ಗುರು, ತಾಯಿ,ತಂದೆ, ಸಹೋದರ, ಸ್ನೇಹಿತ ಎಲ್ಲರೂ ಒಂದಾಗಿದ್ದಾರೆ. ಅವರನ್ನು ಅಧ್ಯಕ್ಷರನ್ನಾಗಿ ಪಡೆದ ಮದರಾಸು ಧನ್ಯ! ಅವರು ಬಿಟ್ಟುಹೋದ ಮೈಸೂರು ಅಧನ್ಯ! ಅಂತೂ ಒಂದು ವರುಷದ ಮೇಲೆ ಹಿಂದಕ್ಕೆ ಬರುತ್ತಾರೆಂಬ ಸಂತೋಷ!

ಅವರು ಇತರ ಸಂನ್ಯಾಸಿಗಳಂತಲ್ಲ. ಎಂತಹ ಕಲಾವಂತರು! ಸಂಗೀತ, ಚಿತ್ರಕಲೆ, ಕವಿತೆ, ತತ್ತ್ವಶಾಸ್ತ್ರ, ವಿಜ್ಞಾನ-ಯಾವುದಲ್ಲ ಯಾವುದು ಹೌದು? ಎಲ್ಲದರಲ್ಲಿಯೂ ಅವರಿಗೆ ಆದರ, ಅತ್ಯಾದರ. ಅವರು ಯಾರೊಬ್ಬರ ವಿಚಾರವಾಗಿಯೂ ನಿಂದಿಸುವರಲ್ಲ. “If Gopal Maharaj praises we must minus ninety percent; if he condemns we must add ninety percent more to get at correct truth!” ಎಂದು ನಾವು(ಪ್ರಿಯನಾಥ್ ಮಹಾರಾಜ್) ವಿನೋದಕ್ಕಾಗಿ ಹೇಳುವುದು ನಿಜವಾಗಿಯೂ ವಿನೋದವಲ್ಲ; ಸತ್ಯ ಶ್ರೀ ಗುರುದೇವನು ಅವರಿಗೆ ಆಯುರಾರೋಗ್ಯ ಜ್ಞಾನಾನಂದಗಳನ್ನು ದಯಪಾಲಿಸಲಿ. ಅವರ ಚರಣಧೂಳಿಯ ಯೋಗ್ಯತೆ ನನಗಿಲ್ಲ. ಅಂತಹ ಪವಿತ್ರಾತ್ಮರು ಅವರು.(ಶಿವನ ಕೃಪೆಯದಿರಲಿ ಬಿಡುII ಬಂದೆ ಬರುವುದುII ಮನುಜನೊಲ್ಮೆಯೊಂದ ಕೊಡುIIಶಿವನ ತರುವುದು) ಎಂದು ಪ್ರಾರಂಭವಾಗುವ‘ನವಿಲು’ ಅಲ್ಲಿರುವ ನನ್ನ ಕವನವು ಅವರನ್ನುದ್ದೇಶಿಸಿಯೇ ಬರೆದುದಾಗಿದೆ. ಜೈ ಶ್ರೀಗುರುಮಹಾಜ್ ಕೀ ಜೈ! ಜೈ ಸ್ವಾಮಿಜಿ ಮಹಾರಾಜ್ ಕೀ ಜೈ! ಜೈ ಮಹಾಮಾತಾ ಕೀ ಜೈ!(ಡೈರಿ ಮುಗಿದುದರಿಂದ ಅವರ ವಿಚಾರ ಇಲ್ಲಿಗೆ ನಿಲ್ಲಿಸಬೇಕಾಯಿತು. ಅವರು ನನ್ನ ಜೀವನದಲ್ಲಿ ಹಾಸುಹೊಕ್ಕಾಗಿದ್ದಾರೆ.)

ಈಗ ರಾತ್ರಿ ೧೦ ಗಂಟೆ ೨ ನಿಮಿಷ. ಅವರನ್ನು ಕಳುಹಲು ರೈಲ್ವೆ ಸ್ಟೇಷನ್ನಿಗೆ ಹೋಗಿರುವ ಪ್ರಿಯನಾಥ್ ಮಹಾರಾಜ್, ವಿಜಯ ಮಹಾರಾಜ್, ಉಪೇನ್ ಮಹಾರಾಜ್, ಶಂಕರ್ ಮಹಾರಾಜ್, ಈಶ್ವರಾನಾಂದಜಿ ಇವರು ಇನ್ನೂ ಸ್ಟೇಷನ್ನಿನಿಂದ ಹಿಂತಿರುಗಿಲ್ಲ.

ಈ ಡೈರಿ ಪ್ರಾರಂಭವಾದುದು ೩-೧೦-೧೯೨೬ ನೆಯ ಗುರುವಾರ, ನಾನು ಮಾನಪ್ಪ ಇಬ್ಬರೂ ಸ್ವಾಮಿ ಸಿದ್ದೇಶ್ವರಾನಂದರೊಡಗೂಡಿ ಮಂತ್ರೋಪದೇಶವನ್ನು ಪಡೆಯಲು ಕಲ್ಕತ್ತಾಕ್ಕೆ ಹೊರಟ ದಿನಂದಂದು. ಅಂದಿನಿಂದ ನನ್ನ ಜೀವನದಲ್ಲಿ ಏನೇನಾಗಿ ಹೋಗಿದೆ! ಈಗ ಜೀವವು ಅಂದಿಗಿಂತಲೂ ಹೆಚ್ಚಾಗಿ ದೋಷರಹಿತವಾಗಿಲ್ಲ; ಆದರೂ ಉನ್ನತವಾಗಿದೆ- ಜ್ಞಾನವಲಯವು ವಿಸ್ತಾರವಾಗಿದೆ. ಆದರೆ ಜ್ಯೋತಿಯು ಬಂದಿದೆಯೋ ಇಲ್ಲವೋ ನನಗೇ ಹೇಳಲು ತಿಳಿಯದಾಗಿದೆ. ಹೇ ಗುರುದೇವ ನಿನ್ನನ್ನು ಸಂಪೂರ್ಣವಾಗಿ ನಂಬಿದ್ದೇನೆ. ನನ್ನನ್ನು ಉದ್ದರಿಸು ನನ್ನ ಬಾಳಿನ ಶುಷ್ಕ ತೃಣಸಮೂಹವೆಲ್ಲ ನಿನ್ನ ಪ್ರೇಮದ ಜ್ವಾಲೆಯಲ್ಲಿ ಉರಿದುಹೋಗಲಿ. ನನ್ನ ಎದೆಯ ಹೊನ್ನು ಆ ಜ್ವಾಲೆಯಲ್ಲಿ ತನ್ನ ಕಾಳಿಕೆಯನು ಕಳೆದುಕೊಂಡು ಅಪರಂಜಿಯಾಗಲಿ.

೧೦-೯-೧೯೩೩
ಭಾನುವಾರ ರಾತ್ರಿ
೧೦ ಗಂಟೆ ೧೫ ನಿಮಿಷ