ದೀಕ್ಷಾಯಾತ್ರೆಯಿಂದ ಹಿಂತಿರುಗಿದ ಮೇಲೆ ಸುಮಾರು ನಾಲ್ಕುಐದು ತಿಂಗಳು, ೧೯೩೦ನೆಯ ಮಾರ್ಚಿ ೧ನೆಯ ತಾರೀಖಿನವರೆಗೆ, ನಾನು ದಿನಚರಿ ಬರೆಯುವ ಗೋಜಿಗೆ ಹೋಗಿಲ್ಲ, ಆದರೆ ಆ ಅವಧಿಯಲ್ಲಿ ನನ್ನ ಸಾಹಿತ್ಯಕ್ಕೆ ಸೃಜನ ಕಾರ್ಯ ನಿಶ್ಯಬ್ಧವಾಗಿ ಕಾಲೇಜಿನ ಅಧ್ಯಾಪನಾದಿ ಕರ್ತವ್ಯಗಳ ಜೊತೆಜೊತೆಗೆ ಸಾಗುತ್ತಲೆ ಇತ್ತು ಎಂಬುದನ್ನು ನನ್ನ ಕವನಗಳ ಹಸ್ತಪ್ರತಿ ಹೇಳುತ್ತದೆ. ಅಲ್ಲದೆ ಅಗೋಚರ ಅಧ್ಯಾತ್ಮಿಕ ಭೂಮಿಕೆಯಲ್ಲಿ ಕವಿಯ ನವದೀಕ್ಷಿತ ಚೇತನ ತನ್ನ ನಿರಂತರ ಸಾಧನೆಯಲ್ಲಿ ತೊಡಗಿತ್ತೆಂದು ಬೇರೆ ಹೇಳಬೇಕಾಗಿಲ್ಲ. ಆಶ್ರಮದ ಸಾಧುಸಂಗವೆ-(ಆಗ ಮೈಸೂರಿನ ಆಶ್ರಮ ನಿವಾಸಿಯಾಗಿದ್ದ ಸ್ವಾಮಿ ನಿಖಿಲಾನಂದರು ಬಂಗಾಳಿ ಭಾಷೆಯಲ್ಲಿರುವ‘ಮ’ವಿರಚಿತ ‘ಶ್ರೀರಾಮಕೃಷ್ಣ ಕಥಾಮೃತ’ವನ್ನು ಇಂಗ್ಲಿಷಿಗೆ ಭಾಷಾಂತರ ಮಾಡುವ ತಪಸ್ಯೆಯಲ್ಲಿ ತೊಡಗಿದ್ದರು.)-ಕವಿಚೇತನಕ್ಕೆ ಋಷಿತ್ವದ ದಿವ್ಯಾಗ್ನಿಸಂಸ್ಕಾರ ನೀಡುವ ತಪಶ್ಚರ್ಯ್ಯೆಯಾಗಿತ್ತು. ಆ ಕಾಲದಲ್ಲಿ ಹೊಮ್ಮಿದ ಸುಮಾರು ಹದಿನೈದು ಇಪ್ಪತ್ತು ಸಣ್ಣದೊಡ್ಡ ಕವನಗಳಲ್ಲಿ ಆ ಬೆಂಕಿಯ ಕಾವು ಬೆಳಕುಗಳು ತುಸುಮಟ್ಟಿಗೆ ಪ್ರಕಟವಾಗಿವೆ:-ಕಡಲ ತಡಿ, ನಾನು ಯಾರು?, ಕುಣಿಯುವಂತೆ ಮತ್ತ ಶಿಖಿ, ಬನದಲಿ ದಿನದಿನ ಬಣ್ಣದ ಹೂಗಳು, ಧ್ರುವತಾರೆ, ಕುಕ್ಕನಹಳ್ಳಿಯ ಕೆರೆಯಾಚೆ, ನನ್ನದು ನಿನ್ನಯ ಕೊಳಲನು ಮಾಡು, ಪ್ರಾತಃಕಾಲ, ರಕ್ತಧುನಿ, ನಡುಹಗಲು, ಮಾಗಿ ಬರುತಿದೆ, ಸೌಂದರ್ಯ, ವಚನ ಬ್ರಹ್ಮ, ನೀನೆಂತು ಪೊರೆಯೋ ಅದನು ನಾನರಿಯೆ, ಗುಟ್ಟನರಿತು ಸುಮ್ಮನಿರು, ಕುಮಾರವ್ಯಾಸ, ಬೆಚ್ಚುತಿದೆ ಮೈ, ಬೈಗುಗೆಂಪು, ಕಬ್ಬಿಗರು, ಗೂಬೆ, ವಿಪ್ಲವಮೂರ್ತಿಯ ಬೆಳ್ಮುಗಿಲು, ಏಕೆ?, ಸಾವಿನ ಸಮತೆ.

‘ಧ್ರುವತಾರೆ’ ಮತ್ತು ‘ಕುಕ್ಕನಹಳ್ಳಿಯ ಕೆರೆಯಾಚೆ’ ಎಂಬ ಕವನಗಳಲ್ಲಿ ಆಗ ತಾನೆ ತೆಗೆದುಕೊಂಡ ಮಂತ್ರದೀಕ್ಷೆಯ ಪ್ರಭಾವ ನೇರವಾಗಿರುವುದನ್ನು ಕಾಣುತ್ತೇವೆ. ಶ್ರೀರಾಮಕೃಷ್ಣರನ್ನೇ ಉದ್ದೇಶಿಸುತ್ತದೆ ಧ್ರುವತಾರೆ:

ಅಗಣಿತ ತಾರಾಗಣಗಳ ನಡುವೆ
ನಿನ್ನನೆ ನೆಚ್ಚಿಹೆ ನಾನು;
ನನ್ನೀ ಜೀವನ ಸಮುದ್ರಯಾನಕೆ
ಚಿರ ಧ್ರುವತಾರೆಯು ನೀನು!

ಎಂದು ‘ಕುಕ್ಕನಹಳ್ಳಿಯ ಕೆರೆಯಾಚೆ’ಬರೆದ ಅನೇಕ ವರ್ಷಗಳ ತರುವಾಯ ಯಾವುದೊ ಒಂದು ಗೋಷ್ಠಿಯಲ್ಲಿ ನಾನು ಅದನ್ನು ವಾಚಿಸಿದಾಗ ನನ್ನ ಮಿತ್ರರೊಬ್ಬರು ಸಂಜೆಯನ್ನು ತಪಸ್ವಿನಿಗೆ ಹೋಲಿಸಿದುದರ ಔಚಿತ್ಯವನ್ನೂ ಆ ಕವನದಲ್ಲಿ ಬರುವ ಮೌನ, ಧ್ಯಾನ, ಗುರು, ಶಿಷ್ಯ, ಜಪ, ಸಮಾಧಿ, ಯೋಗಿ, ಮಂತ್ರ, ಸಂಧ್ಯಾಯೋಗಿನಿ, ದೀಕ್ಷೆ, ಶಾಂತಿ ಇತ್ಯಾದಿ ಅಧ್ಯಾತ್ಮ ಸಾಧನೆಯ ಪರವಾದ ಪದಗಳನ್ನೂ ಕುರಿತು ಟೀಕೆ ಮಾಡಿದರು, ನೀವು ಏನು ಬರೆಯಲಿ ಎಲ್ಲವನ್ನೂ ಅಧ್ಯಾತ್ಮದತ್ತ ಒಯ್ಯುತ್ತೀರಿ ಎಂದು. ನಾನು ಅವರಿಗೆ ಅದನ್ನು ಬರೆದ ಕಾಲ ದೇಶ ಸಂದರ್ಭಗಳನ್ನೆಲ್ಲ ತಿಳಿಸಿದ ಮೇಲೆ ಅವರಿಗೆ ಅರ್ಥವಾಗಿ ಸಮಾಧಾನವಾಯಿತು. ಭಾವಗೀತೆಗಳಲ್ಲಿ ಅಭಿವ್ಯಕ್ತಗೊಳ್ಳುವುದು ತತ್ಸಾಮಯಿಕ ಪ್ರಭಾವ ತಾನೆ?

‘ರಕ್ತಧುನಿ’ಮತ್ತು‘ಬೈಗುಗೆಂಪು’ಎರಡೂ ಕವನಗಳು ಆಗ ನಡೆಯುತ್ತಿದ್ದ ಸ್ವಾತಂತ್ರ ಸಂಗ್ರಾಮದ ರಣರೋಷದ ಔರ್ವಾನಳವನ್ನು ಪ್ರತಿಬಿಂಬಿಸುತ್ತವೆ. ರಕ್ತಧುನಿ ನೇರವಾಗಿ ರಕ್ತಕ್ರಾಂತಿಯ ಆಗಮನವನ್ನು ಸಾರಿ ಆಹ್ವಾನಿಸುತ್ತದೆ:

ಬರುತಲಿದೆ! ಬರುತಲಿದೆ!
ವಿಪ್ಲವದ ರಕ್ತಧುನಿ
ನೋಡು ಹರಿದು ಬರುತಿದೆ!
ಬೇನೆವಸಿರಿನಿಂದ ಚಿಮ್ಮಿ
ದಾಸ್ಯಶಿಲೆಯನೊಡೆದು ಹೊಮ್ಮಿ,
ಶ್ರೀಮಂತರ ಕೊಳಕ ಬಿಚ್ಚಿ,
ಹಳೆತನೆಲ್ಲ ಕೊಚ್ಚಿ ಕೊಚ್ಚಿ
ನೋಡು ನುಗ್ಗಿ ಬರುತಿದೆ!

ಎಂದು ಪ್ರಾರಂಭವಾಗಿ

ಸಿಡಿವ ಮದ್ದಿನುಂಡೆಯಂತೆ
ಹಾರಲಿಹ ಫಿರಂಗಿಯಂತೆ
ಒಡೆಯಲಿರುವ ಬಾಂಬಿನಂತೆ
ವಿಪ್ಲವದ ಕೇಸರಿಯು
ರಕ್ತಪಾನಕೆಳಿಸಿ ಎಳಸಿ
ಹೊರಗೆ ನೆಗೆಯ ನರಳಿ ಕೆರಳಿ
ಸಿದ್ಧವಾಗುತಿರುವುದು!
ಪ್ರಬುದ್ಧವಾಗುತಿರುವುದು!

ಎಂದು ಮುಂದುರಿಯುತ್ತದೆ.

ಕಬ್ಬಿಗನ ಲೇಖನಿಯು ಕಠಾರಿಯಾಗುತಿರುವುದು!
ಇಂಚರದ ಕೊಳಲು ಬಿರಿದು
ಕಠೋರ ಭೇರಿಯಾಗುತಿದೆ!

ಎಂದು ಎಚ್ಚರಿಸಿ ಮುಂದೆ ನುಗ್ಗಿ

ದೇಶಭಕ್ತರೆದೆಗಳಿಂದ
ಸೋರ್ವ ನೆತ್ತರೆಲ್ಲ ಸೇರಿ,
ವೀರ ಸತಿಯರಕ್ಷಿಗಳ
ಶೋಣಿತಾಶ್ರುನದಿಯ ಸೇರಿ,
ಕ್ರೋಧದಿಂದ, ವೇಗದಿಂದ,
ಅರಮನೆಗಳನುರುಳಿಸಿ
ಬಡಜನರನು ಕೆರಳಿಸಿ
ಬರುತಲಿದೆ! ಬರುತಲಿದೆ!
ವಿಪ್ಲವದ ರಕ್ತಧುನಿ
ನೋಡು, ನೋಡು, ಅದೋ ನೋಡು
ಹರಿದು ಬರುತಿದೆ!

ಎಂದು ಕೊನೆಗಾಣುತ್ತದೆ ಭಯಂಕರೋಗ್ರವಾಗಿ.

ಈ ಉಗ್ರಕವನ‘ವಿಶ್ವಕರ್ನಾಟಕ’ದಲ್ಲಿ ತಿ.ತಾ. ಶರ್ಮರಿಂದ ಪ್ರಕಟವಾಯಿತು. ಒಡನೆಯೆ ಅದು ದೇಶಭಕ್ತ ಸತ್ಯಾಗ್ರಹಿಗಳೆಲ್ಲರ ಬಾಯಲ್ಲಿ ಖಡ್ಗಜಿಹ್ವೆಯಾಗಿ ಝಳಪಿಸತೊಡಗಿತು. ಸಭೆ ಸಭೆಗಳಲ್ಲಿ ಪ್ರಥಮದಲ್ಲಿಯೆ ಪ್ರಾರ್ಥನೆಯ ರೂಪದಲ್ಲಿ ಆವೇಶವಾಣಿಯಿಂದ ಘೋಷಿತವಾಯಿತು. ಸ್ವಾತಂತ್ರಸಂಗ್ರಾಮಕ್ಕೆ ರಕ್ತಕ್ರಾಂತಿಯ ಕರೆಕೊಡುವ ರುದ್ರಗೀತೆಯಾಗಿಬಿಟ್ಟಿತು: ಬೆಂಗಳೂರಿನ ಒಂದು ಬೃಹತ್ ಸಭೆಯಲ್ಲಿ ವೀರ ಸತ್ಯಾಗ್ರಹಿಯೊಬ್ಬನು ಇದನ್ನು ಆವೇಶದಿಂದ ವಾಚಿಸಿದಾಗ ಇಡೀ ಸಭಾಸ್ತೋಮವೆ ಪುಲಕಿತವಾಗಿ ಕರತಾಡನ ಮತ್ತು‘ಜಯ್ ಭಾರತಮಾತಾ ಕಿ ಜಯ್’ಜಯಘೋಷಗೈದಿತಂತೆ! ದಾಕ್ಷಿಣ್ಯಕ್ಕಾಗಿ ಬಂದು ಮುಗ್ಧವಾಗಿ ಅಧ್ಯಕ್ಷತೆ ವಹಿಸಿದ್ದ ಡಿ.ವಿ. ಗುಂಡಪ್ಪನವರು ಗಾಬರಿಗೊಂಡು ಚಕಿತರಾದರಂತೆ! ಕಾನೂನಿನ ಗದಾಪ್ರಹಾರಕ್ಕೆ ತಾವು ಬಲಿಯಾಗುವ ಪ್ರಸಂಗ ಬಂದರೆ? ಅದಕ್ಕೆ ಅವರು ತಯಾರಿರಲಿಲ್ಲ.ಮಾರ್ಲೆಯ ರಾಜೀ ಮನೋಭಾವನೆಯ ಮತ್ತು ಗೋಖಲೆಯ ಸಾವಧಾನ ಮಂದಗಮನ ತತ್ವದ ಉಪಾಸಕರಾಗಿದ್ದ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ವಿಷಯವನ್ನು ಆದಷ್ಟು ಸೌಮ್ಯಗೊಳಿಸಿ ನಿರ್ವೀರ್ಯವಾಗಿಸುವ ಉದ್ದೇಶದಿಂದಲೂ ಸರಕಾರವನ್ನು ಸಮಾಧಾನ ಪಡಿಸುವ ಸಲುವಾಗಿಯೂ‘ರಕ್ತಧುನಿ’ಯಲ್ಲಿ ಸುರಿವ ರಕ್ತ ಕವಿಯ ರಕ್ತವಾಗಿರುವುದರಿಂದ ಅದು ಕೆಂಪಲ್ಲವೆಂದೂ, ಅದರ ಬಣ್ಣ ಧವಳವೆಂದೂ ವ್ಯಾಖ್ಯಾನ ಮಾಡಿ, ಅದು ಅಹಿಂಸಾ ತತ್ವವನ್ನೆ ಪ್ರತಿಪಾದಿಸುವ ಸಾತ್ವಿಕ ಕವನವೆಂದು ಸಾರಿದರಂತೆ!

ಇನ್ನು ಬೈಗುಗೆಂಪು:ಬೈಗುಗೆಂಪಿಗೂ ಸ್ವಾತಂತ್ರ ಸಂಗ್ರಾಮಕ್ಕೂ ಏನು ಸಂಬಂಧ? ಇಮಾಂ ಸಾಬಿಗೂ ಕೃಷ್ಟಜನ್ಮಾಷ್ಟಮಿಗೂ ಏನು ಸಂಬಂಧ ಎಂಬಂತೆ!ಆದರೆ ಆ ಕಾಲ ಹಾಗಿತ್ತು. ಎಲ್ಲಿಯೂ ಎಲ್ಲದರಲ್ಲಿಯೂ ನಾವು ಸ್ವಾತಂತ್ರದ ಹೋರಾಟವನ್ನೇ ಕಾಣುತ್ತಿದ್ದ ಕಾಲ! ಸಮಯ ಸಂದರ್ಭ ಸಿಕ್ಕದರೆ ಸಾಕು, ಬ್ರಿಟಿಷರನ್ನು ಖಂಡಿಸುತ್ತಿದ್ದ ಕಾಲ! ಮತ್ತು ನಾನು ಬರೆದ” ಶ್ರಾವಣ ಸಂಧ್ಯಾ ಸಮೀರ” ಎಂಬ ಕವನದಲ್ಲಿಯೂ ಶ್ರಾಮಣ ಸಮೀರನನ ಸತ್ಯಾಗ್ರಹಕ್ಕೆ ಸೇರುವಂತೆ ಆಹ್ವಾನಿಸುವುದನ್ನು ಕಾಣುತ್ತೇವೆ.‘ಬೈಗುಗೆಂಪು’ಕವನ ರಚಿತವಾದ ಸ್ಥಳವೂ ನನಗೆ ಚೆನ್ನಾಗಿ ಜ್ಞಾಪಕವಿದೆ. ಕುಕ್ಕನಹಳ್ಳಿ ಕೆರೆಯ ಏರಿಯ ಮೇಲೆ ಸಂಜೆ ಸಂಚಾರ ಹೋಗುತ್ತಿದ್ದಾಗ, ೧೯೩೦ನೆಯ ಫೆಬ್ರುವರಿ ೨ನೆಯ ತೇದಿ, ಪಶ್ಚಿಮ ದಿಕ್ಕು ಸೂರ್ಯಾಸ್ತದಲ್ಲಿ ಓಕುಳಿಯಾಗಿತ್ತು. ಅಲ್ಲಿದ್ದ ಕೆಲವು ಮೋಡಗಳೂ ಬೆಂಕಿಹೊತ್ತಿ ಉರಿಯುತ್ತಿದ್ದವು. ಪತ್ರಿಕೆಗಳಲ್ಲಿ ಸತ್ಯಾಗ್ರಹದ ಮತ್ತು ಸ್ವಾತಂತ್ರ ಚಳುವಳಿಯ ಸುದ್ದಿಗಳನ್ನು ಓದಿದ್ದ ಕವಿಯ ಮನಸ್ಸು ಹೃದಯ ಪ್ರಾಣ ಎಲ್ಲದರಲ್ಲಿಯೂ ಬೆಂಕಿ ವ್ಯಾಪಿಸಿತ್ತು. ಬೇರೆ ಸಮಯವಾಗಿದ್ದರೆ ಸೂರ್ಯಾಸ್ತದ ಆಕಾಶ ಕವಿಯ ಸೌಂದರ್ಯಪ್ರಜ್ಞೆಯನ್ನು ಮಾತ್ರ ಎಚ್ಚರಿಸಿ ರಸಸ್ವಾದದ ಕಡೆಗೆ ಆತನನ್ನು ಒಯ್ಯತ್ತಿತ್ತು. ಆದರೆ ಅಂದು ಹಾಗಾಗಲಿಲ್ಲ. ರಕ್ತೋಕುಳಿಯ ಆ ಬಾನಿನಲ್ಲಿ ಸೌಂದರ್ಯದ ಜೊತೆಗೆ ಕವಿ ರೌದ್ರವನ್ನೂ ದರ್ಶಿಸಿದ. “ಸುಂದರ ಮಂಗಳವೀ ಭೈಗು, ರುದ್ರ ಮನೋಹರವೀ ಬೈಗು!” ಎಂದು ಪ್ರಾರಂಭವಾಯ್ತು ಕವನ. ಒಂದು ಪಂಕ್ತಿ ಸೌಂದರ್ಯ ಕೋಮಲತೆಗಳನ್ನು ಪ್ರತಿಬಿಂಬಿಸಿದರೆ ಮರು ಪಂಕ್ತಿ ರೌದ್ರತೆ ಕಠೋರತೆಗಳನ್ನು ಪ್ರತಿಬಿಂಬಿಸುತ್ತದೆ:

ನೆಚ್ಚಳಿದಳಿದಿಹ ಚೆಲುವೆಯರೆಲ್ಲರ
ಕೆನ್ನೆಗಳೆಳೆಗೆಂಪೀ ಬೈಗು;
ರಕ್ಕಸನುರದಾ ರುಧಿರವನೀಂಟಿದ
ನರಹರಿ ಕೋಪವು ಈ ಬೈಗು!
ಭಾರತ ಪುತ್ರರು ಚೆಲ್ಲಿದ, ಚೆಲ್ಲುವ
ಶೋಣಿತ ರಣಧುನಿ ಈ ಬೈಗು!

ಎಂದು ಬ್ರಿಟಿಷರಿಂದ ಕೊಲೆಯಾದ ದೇಶಭಕ್ತರ ನೆತ್ತರಿನ ರೌದ್ರರಸವನ್ನು ನಿರ್ದೇಶಿಸುತ್ತದೆ ಈ ಪಂಕ್ತಿ. ಪಕ್ಕದ ಪಂಕ್ತಿಯಲ್ಲಿ, ಪರದೇಶಿಯರ ದೆಸೆಯಿಂದ ದೇಶದಲ್ಲಿ ರೋಗ ರುಜೆ ಕ್ಷಾಮಕ್ಕೆ ಒಳಗಾಗಿ ಸತ್ತ ಮಕ್ಕಳ ಚೆಲುವನ್ನು ನೆನಪಿಗೆ ತಂದು ಕರುಣರಸದ ಹೊನಲು ಹರಿಯುತ್ತದೆ:

ಹುಟ್ಟಿದ ಕೂಡಲೆ ಹಸಿದೇ ಮಡಿದಿಹ
ಹಸುಮಕ್ಕಳ ಚೆಲುವೀ ಬೈಗು!-ಎಂದು.
ಹಾಗೆಯೆ
ಗೋಪಿಯರೊಡಗೂಡಾಡುವ ಹಾಡುವ
ಕೃಷ್ಣನ ಪ್ರಾಮವು ಈ ಬೈಗು!

ಎಂದು ಕೊನೆಗೊಳ್ಳುತ್ತದೆ‘ಬೈಗುಗೆಂಪು’ಸ್ವಾತಂತ್ರದ ಆರಾಧನೆಗೆ ಕುಂಕುಮದ ಆರತಿ ಎತ್ತಿ!

‘ವಿಪ್ಲವಮೂರ್ತಿ’ಎಂಬ ಕವನದ ಮೇಲೆ ಬಂಗಾಳಿ ಕವಿ‘ನಸ್ರೂಲ್ ಇಸ್ಲಾಂ’ ಅವರ ‘ವಿದ್ರೋಹಿ’ಎಂಬ ವಿಖ್ಯಾತ ಕವನದ ಛಾಯೆ ಬಿದ್ದಿದೆ.ಅವರ ಆ ಕವನ ವಿಶೇಷವಾಗಿ ದೇಶಭಕ್ತಿಯ ರಾಜಕೀಯದಿಂದ ಕೂಡಿದೆ.‘ವಿಪ್ಲವಮೂರ್ತಿ’ಯನ್ನು ರಾಜಕೀಯವಾಗಿ ಬೇಕಾದರೂ ವ್ಯಾಖ್ಯಾನಿಸಬಹುದು. ಅಥವಾ ಆಧ್ಯಾತ್ಮಿಕಕ್ಕೂ ಏರಿಸಬಹುದು.‘ನಸ್ರೂಲ್ ಇಸ್ಲಾಂ’ಅವರ ಆ ಕವನವನ್ನು ನನಗೆ ಬೇಲೂರು ಮಠದಲ್ಲಿ ಸಾಧುವೊಬ್ಬರು ಓದಿ ಹೇಳಿದಾಗ ನಾನು ತುಂಬಾ ಮೆಚ್ಚಿಕೊಂಡಿದ್ದೆ. ಆ ಕವನ ಬರೆದ ಕವಿಯನ್ನು ರಾಜದ್ರೋಹದ ಆಪಾದನೆಯ ಮೇಲೆ ಶಿಕ್ಷೆಗೆ ಒಳಪಡಿಸಿತ್ತಂತೆ ಬ್ರಿಟಿಷ್ ಸರ್ಕಾರ. ‘ವಿಪ್ಲವಮೂರ್ತಿ’ ‌ಪ್ರಕಟವಾದಾಗ ನಾನಾ ತರಹದ ಪ್ರತಿಕ್ರಿಯೆಗೆ ಒಳಗಾಯಿತು. ಅದರ ದರ್ಶನ ಧ್ವನಿಯನ್ನು ಗ್ರಹಿಸಲಾರದ ಸಹೃದಯರು ಅರ್ಥವಿಲ್ಲದ ಹುಚ್ಚು ಬರೆಹ ಎಂದು ಟೀಕಿಸಿದರು. ಹೌದು, ಅದು ಶಿವನ ಹುಚ್ಚನ್ನೇ ಪ್ರಕಟಿಸುತ್ತದೆ ಎಂದು ತಿಳಿಸುವ ಸಲುವಾಗಿ ದ್ವಿತೀಯ ಮುದ್ರಣದಲ್ಲಿ ಒಂದು ವಿವರಣೆಯನ್ನು ಅಚ್ಚು ಹಾಕಿಸಲಾಯಿತು. ಅದು ಹೀಗಿದೆ: (ಹುಲಿದೊವಲನುಟ್ಟು ಮುಡಿಗೆದರಿದ ಉನ್ಮಾದಮೂರ್ತಿ, ಅರೆಮಬ್ಬಿನಲ್ಲಿ ಮೂಡಿ ಅಭಿನಯಿಸುತ್ತಾನೆ. ಭಾವಕ್ಕೆ ತಕ್ಕಂತೆ ಪದ ಸ್ವರ ಅಂಗವಿನ್ಯಾಸಗಳಿಂದಲೂ ಸತ್ತ್ವ ರಜಸ್ಸು ತಮಸ್ಸುಗಳನ್ನು ಸೂಚಿಸುವ ಗಾಂಭೀರ್ಯ ವೇಗ ಮಾಂದ್ಯಗಳಿಂದಲೂ ವರ್ತಿಸುತ್ತಾನೆ. ನಡುನಡುವೆ ಮಾತಿಲ್ಲದೆ ನರ್ತಿಸುತ್ತಾನೆ.) ಅಗಣಿತ ವೈವಿದ್ಯದ ಸೃಷ್ಟಿತಾಂಡವ ಲೀಲೆಯ ಅದ್ವೈತ ಭಾವನೆಯನ್ನು ಕಲ್ಪನಾಮಾತ್ರವಾಗಿಯಾದರೂ ಗ್ರಹಿಸುವ ಸಾಮರ್ಥ್ಯವಿಲ್ಲದಿದ್ದರೆ ಈ ಕವನ ಹುಚ್ಚಾಗಿಯೇ ಉಳಿಯುತ್ತದೆ! ಇದು ನಾಟಕೀಯ ಕವನಗಳ ಜಾತಿಗೆ ಸೇರುತ್ತದೆ. ‘ಕಲ್ಕಿ’‘ಕುಮಾರ ವ್ಯಾಸ’‘ಪಾಂಚಜನ್ಯ’‘ರಕ್ತಧುನಿ’ಇತ್ಯಾದು ಕವನಗಳಂತೆ. ಇವುಗಳನ್ನೆಲ್ಲ ವಾಚಿಸುವಾಗ ಅಭಿನಯಪೂರ್ವಕವಾಗಿ ಅಂಗಭಂಗಿಯಿಂದಲೂ ಧ್ವನಿಯ ಏರಿಳಿತಗಳಿಂದಲೂ ಪ್ರೇಕ್ಷಕರಿಗೆ ದೃಶ್ಯಕಾವ್ಯ ಭಾವನೆ ಬರುವಂತೆ ಮಾಡಬೇಕಾಗುತ್ತದೆ, ಸಾಧ್ಯವಿದ್ದಲ್ಲಿ ವೇಷಭೂಷಣ ಸಹಿತವಾಗಿ.

‘ಕುಮಾರವ್ಯಾಸ’-೧೯೩೦ನೆಯ ಜನವರಿ ೧೦ ರಂದು ಆ ಕವನ ಮೂಡಿದ ದಿನವೆಂದೆ ತೋರುತ್ತದೆ. ನನ್ನನ್ನು ಕಾಣಲು ಆಶ್ರಮಕ್ಕೆ ಬಂದಿದ್ದರು ಬಿ.ಎಸ್. ರಾಮರಾವ್. ಅವರು ಕೈಲಾಸಂ ಅವರ ಆರಾಧಕರು. ಅವರ ನಾಟಕಗಳನ್ನು ಕನ್ನಡದಲ್ಲಿ ಮತ್ತು ಇಂಗ್ಲಿಷಿನಲ್ಲಿ ಅವರ ಬಾಯಿಂದಲೆ ಕೇಳಿ ಅದರಂತೆಯೆ ತಾವೂ ನಾಟಕೀಯವಾಗಿ ಧ್ವನಿಯಿಂದಲೆ ಅಭಿನಯಿಸಿ ವಾಚನ ಮಾಡುವ ಸಾಮರ್ಥ್ಯ ಅವರದಾಗಿತ್ತು. ಕೈಲಾಸಂ ಅವರು ತಮ್ಮ ನಾಟಕಗಳನ್ನು ವಾಚನ ಮಾಡುವುದನ್ನು ಕೇಳಿದವರಿಗೇ ಗೊತ್ತು ಅದೆಷ್ಟು ಅನುಕರಣೀಯ ಎಂಬುದು. ಗುರುವನ್ನೆ ಸಮರ್ಥವಾಗಿ ಅನುಕರಿಸುತ್ತಿದ್ದರು ಬಿ.ಎಸ್.ರಾಮರಾವ್. ಅವರು ಮತ್ತು ಇನ್ನೊಬ್ಬ ಮಿತ್ರರೊಡನೆ ನಾನು ಆ ಸಂಜೆ ಕುಕ್ಕನಹಳ್ಳಿ ಕೆರೆಯ ಏರಿಯ ಮೇಲೆ ತಿರುಗಾಡಲು ಹೋದೆ. ಮಾತಿನ ಮಧ್ಯೆ ನಾನು ಆ ದಿನವೆ ರಚಿಸಿದ್ದ‘ಕುಮಾರವ್ಯಾಸ’ ಕವನದ ವಿಚಾರ ಹೇಳಿದೆ.ಮಿತ್ರರು ಅದನ್ನು ಕೇಳಲು ಆತುರರಾದರು. ಆಗತಾನೆ ಹೊಮ್ಮಿದ ಆ ಕವನ ಇನ್ನೂ ಬಿಸಿಬಿಸಿಯಾಗಿಯೇ ಇತ್ತು ನನ್ನ ತಲೆಯಲ್ಲಿ. ಬೈಗಿನ ಮಬ್ಬು ಕವಿಯುತ್ತಿದ್ದ ಏರಿಯ ಮೇಲೆ ನಿಂತಂತೆಯೆ ಪಠಿಸತೊಡಗಿದೆ. ಮಿತ್ರರು ನನ್ನತ್ತ ರೆಪ್ಪೆಮುಚ್ಚದೆ ನೋಡುತ್ತ ಕಿವಿಯಾಗಿ ನಿಂತಿದ್ದರು. ನಾನು ನಾಟಕೀಯವಾಗಿ ಧ್ವನಿಯನ್ನು ಏರಿಸಿ ಇಳಿಯಿಸಿ ಬಾಗಿಸಿ ತುಸು ಅಂಗಭಂಗಿ ಸಹಿತವಾಗಿ ವಾಚಿಸುತ್ತಿದ್ದಂತೆಯೆ ನನ್ನ ಸ್ನೇಹಿತರ ಕಾಲು ನೆಲದಮೇಲೆ ನಿಲ್ಲಲೊಪ್ಪಲಿಲ್ಲ! ಅನ್ಯಲೋಕ ವಿಹಾರಿಯಾದರು! ಮಹಾಭಾರತ ಲೋಕಕ್ಕೆ ಪ್ರವೇಶಿಸಿದ್ದರು; ಕುರುಕ್ಷೇತ್ರ ಕಂಗೊಳಿಸುತ್ತಿತ್ತು. ಕಲಿಯುಗ ದ್ವಾಪರವಾಗಿತ್ತು:

ಕುಮಾರವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು!
ಭಾರತ ಕಣ್ಣಲಿ ಕುಣಿವುದು: ಮೆಯ್ಯಲಿ
ಮಿಂಚಿನ ಹೊಳೆ ತುಳೂಕಾಡುವುದು! ಇತ್ಯಾದಿ.

ರಣರಂಗ, ಸಂಗ್ರಾಮ. ಪಟುಭಟರಾರ್ಭಟ, ಕೈದುಗಳಾಟ, ತಾಗುವ ಗದೆಗಳ ಸಂಘಟ್ಟಣೆ, ರಥಚಕ್ರಧ್ವನಿ ಚಿತ್ಕಾತ,-ಕೇಳುತ್ತ, ನೋಡುತ್ತ, ನಿಷ್ಪಂದರಾಗಿ ನಿಂತಿದ್ದರು ಮಿತ್ರರು. ಉಸಿರೇ ಕಟ್ಟಿದ್ದಂತೆ! ವಾಚನ ಪೂರೈಸಿದಾಗ ಕುಕ್ಕನಹಳ್ಳಿಯ ಕೆರೆಯ ಏರಿ ಪರಿವರ್ತಿತವಾಗಿತ್ತು!(ರಾಮರಾಯರು) ಕೈಲಾಸಂ ವಾಚನವನ್ನು ಕೇಳಿ ಇನ್ನಿಲ್ಲ ಎನ್ನುತ್ತಿದ್ದ ರಾಮರಾಯರು, ತಮ್ಮ ಕಿವಿಯನ್ನೆ ತಾವು ನಂಬದಾದರು. ಇದು ಸಾಧ್ಯವೆ? ಎಂದು ಮಾರುಹೋದರು. ಹಿಂದಕ್ಕೆ ಬರುತ್ತಾ ಆಶ್ರಮದವರೆಗೂ ಮನಸ್ಸು ಬಿಚ್ಚಿ ಹೃದಯತುಂಬಿ ತಮ್ಮ ಹಿಗ್ಗಿಗೆ ನಾಲಗೆಯೀಯುತ್ತಿದ್ದರು……‘ಕುಮಾರವ್ಯಾಸ’ ಪ್ರಬುದ್ಧ ಕರ್ಣಾಕದಲ್ಲಿ ಅಚ್ಚಾದಾಗ ಸಾಹಿತ್ಯಕ ಕರ್ಣಾಟದ ಬೆರಗುಹೊಡೆದು ಕಿವಿಗೊಟ್ಟಿತು. ನಾನೂ ವಾಚನ ಮಾಡಿದ ಸಭೆಗಳಲ್ಲೆಲ್ಲ ಕುಮಾರವ್ಯಾಸಕ್ಕೆ ಕೇಳಿಕೆ ಬರುತ್ತಿತ್ತು. ತರುವಾಯ ಅನೇಕ ವಿದ್ಯಾರ್ಥಿಮಿತ್ರರೂ ಅದನ್ನು ಸರ್ವತ್ರ ವಾಚನ ಮಾಡತೊಡಗಿದರು. ಪಠ್ಯಪುಸ್ತಕಗಳಲ್ಲಿ ಅಚ್ಚಾಗಿ ಮಕ್ಕಳ ನಾಲಗೆಯ ಮೇಲೆ ತಾಂಡವವಾಡಿಬಿಟ್ಟಿತು!

* * *

ದೀಕ್ಷಾ ಯಾತ್ರೆಯಿಂದ ಹಿಂತಿರುಗಿ ಬಂದಮೇಲೆ ಬರೆದ ಈ ಕವನಗಳೆಲ್ಲ ‘ಪ್ರಬುದ್ಧ ಕರ್ಣಾಟಕ’ ‘ವಿಶ್ವಕರ್ಣಾಟಕ’ ಮೊದಲಾದ ಪತ್ರಿಕೆಗಳಲ್ಲಿ ಬೆಳಕು ಕಂಡು ಸುಪ್ರಸಿದ್ಧವಾದುವು. ಇದಕ್ಕೆ ಮೊದಲೆ ಬರೆದ ಕವನಗಗಳು‘ಕೊಳಲು’ಎಂಬ ಹೆಸರಿನ ನನ್ನ ಮೊದಲನೆಯ ಕವನ ಸಂಗ್ರಹದಲ್ಲಿ ಪ್ರಕಟನೆಗಾಗಿ ಅಚ್ಚಾಗುತ್ತಾ ಇದ್ದವು.‘ಕೊಳಲು’ ಕವನ ಸಂಗ್ರಹ ಪ್ರಕಟವಾದದ್ದೆ ಒಂದು ಐತಿಹಾಸಿಕ ಘಟನೆ, ನನ್ನ ಸಾಹಿತ್ಯಕ ಜೀವನದಲ್ಲಿ. ನಾನು ಬರೆಯುತ್ತಿದ್ದ ಕವನಗಳನ್ನು ಮಿತ್ರರಿಗೆ ಓದುತ್ತಿದ್ದೆನೆ ಹೊರತು ಅವುಗಳನ್ನು ಪ್ರಕಟಿಸುವುದಕ್ಕೆ ಕಾತರನಾಗಿರಲಿಲ್ಲ. ಆದ್ದರಿಂದಲೆ ನನ್ನ ಕವನಗಳು ಹುಟ್ಟಿದ ಮೇಲೆ ಏಳೆಂಟು ವರ್ಷಗಳಾದರೂ ಹಸ್ತಪ್ರತಿಯ ತೊಟ್ಟಿಲಲ್ಲಿಯೆ ಇರುತ್ತಿದ್ದವು!‘ಪ್ರಬುದ್ಧ ಕರ್ಣಾಟಕ’‘ವಿಶ್ವಕರ್ಣಾಟಕ’ಗಳಿಗೂ ನಾನು ಕಳುಹಿಸುತ್ತಿದ್ದುದು ಆ ಪತ್ರಿಕೆಗಳ ಸಂಪಾದಕರ ವಿಶ್ವಾಸಪೂರ್ವಕವಾದ ತಗಾದೆಗಾಗಿಯೆ! ನನ್ನ ಸಾಹಿತ್ಯದ ಪ್ರಕಟಣೆಯಲ್ಲಿಯೂ ಅಡ್ಡ ನಿಂತಿರುತ್ತಿತ್ತು ಔದಾಸೀನ್ಯದ ನನ್ನ ಸ್ಥಾವರ ಪ್ರಕೃತಿ.

ಸ್ವಾಮಿ ಸಿದ್ದೇಶ್ವರಾನಂದರ ಮತ್ತು ನಾ. ಕಸ್ತೂರಿಯವರ ಉತ್ಸಾಹವೆ ನನ್ನ ಪ್ರಸಿದ್ಧಿ ತನ್ನ ಪ್ರಥಮ ಸೋಪಾನವೇರಲು ಕಾರಣವಾಗಿತ್ತು. ನಾನು ಆಶ್ರಮ ಸೇರದೆ ಸಂತೇಪೇಟೆಯ ಕೊಠಡಿಯಲ್ಲಿಯೆ ಮುಂದುವರಿದಿದ್ದರೆ ನನಗೆ ಪ್ರತಿಷ್ಠಿತರ ಸಂಪರ್ಕವಾಗಲಿ ನನ್ನ ಕವನಗಳನ್ನು ಕೇಳಿ ಮೆಚ್ಚಿ ಹೊಗಳುವ ಸಹೃದಯದ ಸಂಗವಾಗಲಿ ಈ ಪ್ರಮಾಣದಲ್ಲಿ ಎಂದಿಗೂ ದೊರೆಯುತ್ತಿರಲಿಲ್ಲ. ಅಲ್ಲದೆ ನನ್ನ ಜಾತಿಯ ಕಾರಣಕ್ಕಾಗಿಯೇ ಸಾಹಿತ್ಯ ಸಂಸ್ಕೃತಿಗಳಲ್ಲಿ ಮೇಲುಗೈಯಾಗಿರುವ ಬ್ರಾಹ್ಮಣರ ಪ್ರಶಂಸೆ ದೊರೆಯುವುದು ಕಷ್ಟವಾಗುತ್ತಿತ್ತು. ಜಾತಿಭಾವನೆಗೆ ದೂರವಾಗಿದ್ದ ಆಶ್ರಮದಲ್ಲಿ ನನ್ನ ಜಾತಿ ಯಾವುದೆಂದು ಯಾರೂ ಗಮನಿಸುವಂತಿರಲಿಲ್ಲ. ಕೆಲವರು ನನ್ನನ್ನು ಅಯ್ಯಂಗಾರಿ ಎಂದೂ, ಮತ್ತೆ ಕೆಲವರು ಸಾಹಿತ್ಯ ರಚನೆ ಬ್ರಾಹ್ಮಣನಲ್ಲದವನಿಗೆ ಸಾಧ್ಯವಲ್ಲವಾದ್ದರಿಂದ ನಾನು ಬ್ರಾಹ್ಮಣನೇ ಆಗಿರಬೇಕೆಂದೂ ಭಾವಿಸಿದ್ದರು.

ಆ ಕಾಲದಲ್ಲಿ ವಿಧ್ಯಾಭ್ಯಾಸದ ಇಲಾಖೆಯಲ್ಲಾಗಲಿ ವಿಶ್ವವಿದ್ಯಾನಿಲಯದಲ್ಲಾಗಲಿ ಬ್ರಾಹ್ಮಣರಲ್ಲದ ಕನ್ನಡಿಗರ ಸ್ಥಾನವೆ ಇರಲಿಲ್ಲ; ಕೈಬೆರಳೆಣಿಕೆಯ ಸ್ಥಾನಗಳಿದ್ದಲ್ಲಿಯೂ ಮಾನ ಪ್ರತಿಷ್ಠೆಗಳಿರುತ್ತಿರಲಿಲ್ಲ. ಬ್ರಾಹ್ಮಣರೆ ಮೌಲ್ಯನಿರ್ಮಾಪಕರು: ಕೃತಿಕಾರರೂ ಅವರೇ, ಕೃತಿಗೆ ಬೆಲೆ ಕಟ್ಟುವವರೂ ಅವರೇ; ಅವರು ಮೆಚ್ಚಿದರೆ ಆ ಕೃತಿಗೆ ಬೆಲೆ, ಇಲ್ಲದಿದ್ದರೆ ಅದು ಕಸದಬುಟ್ಟಿಗೇ!

ನಾನು ಹೇಳುತ್ತಿರುವುದಕ್ಕೆ ನಿದರ್ಶವಾಗಿ ನನ್ನ ಇಂಗ್ಲಿಷ್ ಕವನಗಳನ್ನೆ ತೆಗೆದುಕೊಳ್ಳಬಹುದು; ಉದಾಹರಣೆಯಾಗಿ ಮೊನ್ನೆ ತಾನೆ ಪ್ರಕಟವಾಗಿರುವ Alien Harp  ಕವನ ಸಂಗ್ರಹದಲ್ಲಿರುವ ಕವನಗಳನ್ನೆ ನೋಡಬಹುದು. ನಾನು ಕನ್ನಡದಲ್ಲಿ ಬರೆಯುವುದಕ್ಕೆ ಮುನ್ನವೆ ಎಂದರೆ ೧೯೨೨-೨೩-೨೪-೨೫-೨೬ರಲ್ಲಿ ಬರೆದ ಕವನಗಳು ಅವು. ಮೂಲೆಗುಂಪಾಗಿ ಹೋಗಿದ್ದ ಅವುಗಳನ್ನು ನಾನು‘ನೆನಪಿನ ದೋಣಿಯಲ್ಲಿ’ಬರೆಯುತ್ತಿದ್ದಾಗ ಹಳೆಯ ಹಸ್ತಪ್ರತಿಗಳ ಮಧ್ಯೆ ಪತ್ತೆ ಹಚ್ಚಿದೆ. ಈಗಿನ ನನ್ನ ವಿದ್ವತ್ತು ಮತ್ತು ಪ್ರಜ್ಞೆಯ ಮಟ್ಟದಿಂದ ಅವುಗಳನ್ನು ಓದಿದಾಗ ನಾನು ರೋಮಾಂಚಿತನಾದೆ: ಆ ಭಾಷೆ, ಆ ಭಾವಗಳು, ಆ ಪ್ರಾಸಗಳು, ಆ ಕಾವ್ಯವಸ್ತು ವಿನ್ಯಾಸ, ಆ ಆಧ್ಯಾತ್ಮಿಕ ತತ್ವದ ಔನ್ಯತ್ಯ, ನನ್ನದಲ್ಲದ ಒಂದು ಪರಕೀಯ ಭಾಷೆಯಲ್ಲಿ! ನಾನಿನ್ನೂ ವಿದ್ಯಾರ್ಥಿಯಾಗಿದ್ದಾಲೆ! ಓದಿದಂತೆಲ್ಲ ನಾನು ದಿಗ್‌ ಭ್ರಾಂತನಾದೆ. ನಿಜವಾಗಿಯೂ ಇವು ನನ್ನ ಕವನಗಳೇ? ನಾನೆ ಬರೆದವುಗಳೇ? ಎಂದು ಕೊಂಡೆ.The Ground Nut Seller, The Lunatics Ode, Elegy Written at Gumbaz ಇತ್ಯಾದಿಗಳನ್ನು ಓದಿದಾಗ ನಾನೆಂದು ಕೊಂಡೆ, ಇವುಗಳ ಪ್ರಕಟಣೆ ಪ್ರಶಂಸೆ ನನಗೆಲ್ಲಿಯಾದರೂ ದೊರಕಿದ್ದರೆ ಏನು ಅನಾಹುತವಾಗುತ್ತಿತ್ತು? ಕನ್ನಡಕ್ಕೆ? ಎಂದು! ಆದರೆ ಅದೂ ಸುದೈವವೆ, ಯಾರೂ ಪ್ರಶಂಸಿಸದಿದ್ದದ್ದು.(ಇಲ್ಲಿ ಒಂದು ಸಂಗತಿ ತಿಳಿಸಬೇಕಾಗಿದೆ. ತಿಳಿಸದಿದ್ದರೆ ಕಸಿನ್ಸ್ ಅವರಿಗೆ ಅನ್ಯಾವೆಸಗಿದಂತಾಗುತ್ತದೆ. ನಾನು ಅವರಿಗೆ ನನ್ನ ಇಂಗ್ಲಿಷ್ ಕವನಗಳ ಹಸ್ತಪ್ರತಿ ತೋರಿಸಿದಾಗ ಇವುಗಳಾವುವನ್ನೂ ಇನ್ನೂ ಬರೆದಿರಲಿಲ್ಲ.)

ಒಂದು ದಿನ ಮಾಸ್ತಿ ವೆಂಕಟೇಶ ಐಯ್ಯಂಗಾರ್ ಅವರು ಆಶ್ರಮಕ್ಕೆ ಬಂದಿದ್ದಾಗ ಸ್ವಾಮಿಜಿಯವರು ನನ್ನನ್ನೂ ನನ್ನ ಕವನಗಳನ್ನೂ  ಅವರ ಮುಂದೆ ಬಹಳವಾಗಿ ಹೊಗಳಿದರು. ಅಲ್ಲದೆ ಕೆಲವನ್ನು ಓದಲೂ ಹೇಳಿದರು. ನಾನೂ ಓದಿದೆ, ಹಾಡಿದೆ, ಅಭಿನಯಿಸಿದೆ! ಕನ್ನಡ ಸರಸ್ವತಿ ಮಾಸ್ತಿಯವರಲ್ಲಿ ನಿರಸೂಯವಾದ ಮೆಚ್ಚುಗೆಯನ್ನು ಪ್ರಚೋದಿಸಿದಳು.”ಇವುಗಳನ್ನೇಕೆ ಪ್ರಕಟಿಸಬಾರದು, ಪುಸ್ತಕ ರೂಪದಲ್ಲಿ? ಕವನಗಳನ್ನು ಬರೆದು ಹಸ್ತಪ್ರತಿ ಮಾಡಿಕೊಡಿ. ನಾನು ಪ್ರಕಟಣೆಗೆ ಏರ್ಪಾಡು ಮಾಡುತ್ತೇನೆ.” ಎಂದರು. ಆದರೆ ಆ ವಿಚಾರದಲ್ಲಿ ನಾನು ಸೋಮಾರಿಯಾಗಿದ್ದೆ. ಅವನ್ನೆಲ್ಲ ಮತ್ತೆ ಬರೆದು ಹಸ್ತಪ್ರತಿ ತಯಾರಿಸುವಷ್ಟು ಉತ್ಸಾಹಿಯಾಗಲಿಲ್ಲ.

ಮತ್ತೆ ಕೆಲವು ದಿನಗಳ ಅನಂತರ ಆಶ್ರಮಕ್ಕೆ ಬಂದ ಅವರು ಹಸ್ತಪ್ರತಿ ಸಿದ್ಧವಾಯಿತೆ? ಎಂದು ಕೇಳಿದರು. ನಾನು ಮುಗುಳುನಕ್ಕೆ. ಅವರಿಗೂ ತಿಳಿಯುತೆಂದು ತೋರುತ್ತದೆ, ನನ್ನ ಸೋಮಾರಿತನ? ಅವರ ಜೊತೆ ಬಂದಿದ್ದ ತಿರುಮಲೆ ಶ್ರೀನಿವಾಸಾಚಾರ್ ಎಂಬುವರಿಗೆ ಆ ಕೆಲಸ ವಹಿಸಿದರು. ಅವರು ನನ್ನ ಹಸ್ತಪ್ರತಿಯನ್ನು ತೆಗೆದುಕೊಂದು ಹೋಗಿ, ತಾವೇ ಆಯ್ದ ಕವನಗಳನ್ನು ಬರೆದು ಪ್ರತಿಯೆತ್ತಿ ಅಚ್ಚಿನ ಹಸ್ತಪ್ರತಿ ಸಿದ್ಧಮಾಡಿದರು. ನಾನು ಮಾಸ್ತಿಯವರನ್ನೇ ಕೇಳಿದೆ ಅದಕ್ಕೆ ಮುನ್ನುಡಿ ಬರೆಯಲು. ಅವರೆಂದರು” ನಿಮ್ಮ ಗುರುಗಳು ಬಿ.ಎಂ.ಶ್ರೀಕಂಠಯ್ಯನವರನ್ನೇ ಕೇಳಿ. ಅದೇ ಉಚಿತವಾದದ್ದು.” ಎಂದರು. ನಾನೋ? ಹಾಗೆ ಒಬ್ಬರಲ್ಲಿಗೆ ಹೋಗಿ ಕೇಳುವ ಅಭ್ಯಾಸವೇ ಇಲ್ಲದವನು. ಸ್ವಲ್ಪ ಹಿಂದುಮುಂದು ನೋಡಿ,ಒಂದು ದಿನ ಬೆಳಿಗ್ಗೆ ಸುಮಾರು ೯ ಗಂಟೆಗೆ ಕೃಷ್ಣಮೂರ್ತಿಪುರಂದಲ್ಲಿಯೆ ಇದ್ದ ಅವರ ಮನೆಗೆ ಅಚ್ಚಿಗೆ ಸಿದ್ಧವಾಗಿದ್ದ ಹಸ್ತಪ್ರತಿಯೊಡನೆ ತುಂಬ ಸಂಕೋಚದಿಂದಲೆ ಹೋದೆ. ಆದರೆ ಅವರು ನನ್ನನ್ನು ಒಳಕ್ಕೆ ಕರೆದು, ಅವರು ಓದುವ ಕೊಠೆಡಿಯಲ್ಲಿಯೆ ಕುರ್ಚಿ ಕೊಟ್ಟು ಕುಳ್ಳಿರಿಸಿ, ನನ್ನ ಹತ್ತಿರಕ್ಕೆ ತಮ್ಮ ಕುರ್ಚಿಎಳೆದುಕೊಂಡು ಕುಳಿತು, ಅತ್ಯಂತ ಆತ್ಮೀಯವಾಗಿ ಮಾತಾಡಿಸಿ ಚಳಿ ಬಿಡಿಸಿದರು! ಮಾಸ್ತಿಯವರು ಹೇಳಿದ್ದನ್ನು ಹೇಳಿ, ಅವರ ಮುಂದೆ ಹಸ್ತಪ್ರತಿ ಇಟ್ಟೆ. ಕನ್ನಡದ ಅಭ್ಯುದಯಕ್ಕಾಗಿ ಸೊಂಟ ಕಟ್ಟಿ ದುಡಿದು ತಪಸ್ಸುಮಾಡುತ್ತಿದ್ದ ಅವರಿಗೆ ತುಂಬ ಸಂತೋಷವಾಗಿ ಒಡನೆಯೆ ಮುನ್ನುಡಿ ಬರೆಯಲು ಒಪ್ಪಿದರು.೭-೧-೧೯೩೦ರಂದು ಅತ್ಯಂತ ಆತ್ಮೀಯವಾದ, ಅತ್ಯಂತ ಪ್ರೋತ್ಸಾಹಕರವಾದ, ಅತ್ಯಂತ ಹೃತ್ಪೂರ್ವಕವಾದ ಪ್ರಶಂಸೆಯ ಆ ಮುನ್ನುಡಿ, ಅವರ ಆಶೀರ್ವಾದದೊಡನೆ ನನ್ನ ಕೈಸೇರಿತು. ಹೀಗಿತ್ತು ಆ ಮುನ್ನುಡಿಯ ಮೊದಲನೆಯ ವಾಕ್ಯ. ಅದೇ ಒಂದು ಪ್ರತ್ಯೇಕ ಪ್ಯಾರಾ ಆಗಿ:” ಶ್ರೀಮಾನ್ ಪುಟ್ಟಪ್ಪನವರ ‘ಕೊಳಲಿ’ ಮುನ್ನುಡಿ ನುಡಿಯುವುದು ನನಗೊಂದು ಹೆಮ್ಮೆಯ ವಿಷಯ.”

ಮಾಸ್ತಿಯವರೂ ಸೇರಿ ಅವರ ಮೂವರು ಮಿತ್ರರು ಉದಯಮಾನ ಲೇಖಕರ ಕೃತಿಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಲು ತಿಂಗಳು ತಿಂಗಳೂ ಚಂದಾ ಹಾಕಿ ಶೇಖರಿಸಿದ್ದ ನಿಧಿಯಿಂದ‘ಕೊಳಲು’ಸತ್ಯಶೋಧನ ಪ್ರಕಟನಾಲಯದವರಿಂದ ಆ ಮಾಲೆಯಲ್ಲಿ ಪ್ರಪ್ರಥಮ ಗ್ರಂಥವಾಗಿ ಪ್ರಕಾಶಿತವಾಯಿತು. ಬಿ.ಎಂ. ಶ್ರೀ. ಯವರು ಮುನ್ನುಡಿಯಲ್ಲಿ ಬರೆದಂತೆ ಪುಟ್ಟಪ್ಪನವರ ಕೀರ್ತಿಲತೆ ಕನ್ನಡ ನಾಡಿನಲ್ಲೆಲ್ಲ ಹಬ್ಬಿತು!

ಆದರೆ ಆ ಕೀರ್ತಿಲತೆಗೆ, ಬಿ.ಎಂ.ಶ್ರೀ. ಅಂತಹರ ಆಶೀರ್ವಾದದ ಔಷಧಿರಕ್ಷೆಯಿದ್ದರೂ, ಅಸೂಯಾಪರ ರಂಧ್ರಾನ್ವೇಷಣದ ಕ್ಷ ವಿಮರ್ಶಕನಾಮಕ ಕೀಟಕಂಟಕ ಮಾತ್ರ ತಪ್ಪಲಿಲ್ಲ!

ಅಂತಹ ವಿಮರ್ಶೆಗೆ ಪ್ರಾತಿನಿಧಿಕವಾಗಿ ಒಂದನ್ನು ಇಲ್ಲಿ ಹೆಸರಿಸುತ್ತೇನೆ. ಅದನ್ನು ಬರೆದ ಆ ವಿಮರ್ಶಕ ಅಂದು ನಮಗೆ ಅನಾಮಧೇಯನಾಗಿದ್ದುದರಿಂದ ಆತನ ನಾಮವೂ ಸಧ್ಯಕ್ಕೆ ಅನವಶ್ಯಕ. ಆ ವಿಮರ್ಶೆಯನ್ನು ಕುರಿತು ನಾನಾ ರೀತಿಯ ಪರ ವಿರುದ್ಧ ವಿಮರ್ಶೆಗಳೂ ಬೇರೆ ಬೇರೆ ಪತ್ರಿಕೆ ಮಾಸ ಪತ್ರಿಕೆಗಳಲ್ಲಿ ಬಂದುವಂತೆ. ನಾನು ಅವನ್ನೆಲ್ಲ ನೋಡುವ ಗೋಜಿಗೇ ಹೋಗಲಿಲ್ಲ. ಇದನ್ನೂ ನೋಡುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ‘ಜಯ ಕರ್ಣಾಟಕ’ದ ಚಂದಾದಾರನಾಗಿದ್ದುದರಿಂದ ಅದು ನನಗೆ ತಪ್ಪದೆ ತಲುಪುತ್ತಿದ್ದು, ನಾನು ಓದಲೇಬೇಕಾಯಿತು. ಓದಿದ ಮೇಲೆಯೂ ನನ್ನ ಪ್ರತಿಕ್ರಿಯೆ ಉದಾಸೀನರೂಪದ್ದಾಗಿತ್ತೇ ಹೊರತು ನನಗೆ ಕೋಪವಾಗಲಿ ದ್ವೇಷವಾಗಲಿ ಸಾಧ್ಯವಾಗಲಿಲ್ಲ. ಗಲಿವರನಿಗೆ ಲಿಲಿಪುಟ್ಟರು ಎಸೆದ ಬಾಣಗಳಂತಿದ್ದವು ಆ ವಿಮರ್ಶನ ಟೀಕೆಗಳು. ಕೆಲವು ಔಚಿತ್ಯದ ಎಲ್ಲೆಯೊಳಗೇ ಪ್ರವೇಶಿಸುತ್ತಿರಲಿಲ್ಲ. ಮತ್ತೆ ಕೆಲವು ಸಹೃದಯಕಲ್ಪನಾ ದಾರಿದ್ರ‍್ಯಕ್ಕೆ ಸಾಕ್ಷಿಯಾಗಿದ್ದುವು! ನಾನು ಇದುವರೆಗೆ ಮೊದಲಿನಿಂದಲೂ ನನ್ನ ಕೃತಿಯ ವಿಮರ್ಶೆಗೆ ಪ್ರತಿವಿಮರ್ಶೆ ಬರೆಯುವ ತಂಟೆಗೆ ಹೋದವನಲ್ಲ, ಒಂದು‘ಹೊರತು’ವಿನಾ: ನನ್ನ ನಾಟಕ‘ಶೂದ್ರತಪಸ್ವಿ’ಯನ್ನು ಕುರಿತು ಮಾಸ್ತಿಯವರು ಬರೆದ ವಿಮರ್ಶೆಗೆ, ಮೂರು ವರ್ಷಗಳ ಅನಂತರ, ಅದು ಪುಸ್ತಕರೂಪದಲ್ಲಿ ಅಚ್ಚಾಗುವಾಗಲಫ ಅಥವಾ ಪುನರ್ಮುದ್ರಿತವಾಗುವಾಗಲೊ‘ಮಾರ್ನುಡಿ’ಬರೆದಿದ್ದೇನೆ.

‘ಕೊಳಲಿ’ನ ವಿಮರ್ಶೆಯಲ್ಲಿ ಸಹೃದಯ ಕಲ್ಪನಾದಾರಿದ್ರ‍್ಯಕ್ಕೆ ನಿದರ್ಶನವಾಗಿ ಒಂದು ಉದಾಹರಣೆ ಕೊಡುತ್ತೇನೆ.‘ಮುಂಗಾರು’ಕವನದಲ್ಲಿ ‘ಧಾರೆಯ ದಾರದಿ ನೊಯ್ದಿಹ ತೆಳ್ಳನೆ ಜವನಿಕೆಯುಡುವಳು ತಿರೆಹಣ್ಣು’ಎಂಬ ಅತ್ಯಂತ ಸುಂದರವೂ ಉಚಿತವೂ ಆಗಿರುವ ಉಪಮೆಯನ್ನು ಕುರಿತು‘ಈ ಹೆಣ್ಣಿನ ಸೊಂಟ ಎಷ್ಟು ದೊಡ್ಡದ್ದಾಗಿರಬೇಕು?’ಎಂದು ಮೊದಲಾಗಿ ಲೇವಡಿ ಮಾಡಿತ್ತು ಆ ವಿಮರ್ಶೆ. ಆ ವಿಮರ್ಶಕನ ಅನರ್ಹತೆಗೆ ಕಾರಣ ಆತನಿಗೆ ಕವಿಗಾಗಿದ್ದ ಲೋಕಾನುಭವದ ಸೆರಗೂ ಸೋಂಕಿರಲಿಲ್ಲ; ಇನ್ನು ಸೊಂಟದ ಪರಿಚಯದ ಮಾತಂತಿರಲಿ! ಆ ಲೋಕಾನುಭವವನ್ನು ಕುರಿತು‘ನೆನಪಿನ ದೋಣಿ’ಯಲ್ಲಿ ಹಿಂದೆಯೆ ಆ ಕವನ‘ಮುಂಗಾರು’ಮೂಡಿದ ಸನ್ನಿವೇಶವನ್ನು ವರ್ಣಿಸುವಾಗ ಹೇಳಿದ್ದೇನೆ.

ಇನ್ನುಳಿದ ಬಾಲಿಶ ವಿಮರ್ಶೆಗಳಲ್ಲಿ ಕೆಲವರನ್ನು ಕುರಿತು ನನ್ನ ಮಿತ್ರರಾದ ದಿವಂಗತ ಎ.ಸೀತಾರಾಂ(ಆನಂದ)ಮತ್ತು ಭೂಪಾಳಂ ಚಂದ್ರಶೇಖರಯ್ಯ ಅವರು೧೬-೮-೩೦ಮತ್ತು ೮-೮-೧೯೩೦ರಲ್ಲಿ ನನಗೆ ಬರೆದ ಕಾಗದಗಳನ್ನು ಕೊಟ್ಟರೆ ಸಾಕೆಂದು ತೋರುತ್ತದೆ. ಆ ಕಾಗದಗಳನ್ನು ಅವರೇನು ಗಂಭೀರ ವಿಮರ್ಶೆ ಎಂದು ಬರೆದಿಲ್ಲ. ತುಸು ವಿನೋದವಾಗಿಯೆ ಲಘುವಾಗಿಯೆ ಬರೆದಿದ್ದಾರೆ. ಅಂತಹ ವಿಮರ್ಶೆಗೆ ಸಾಮಾನ್ಯರ ಪ್ರತಿಕ್ರಿಯೆ ಎಂತಹದ್ದಾಗಿತ್ತು ಎಂಬುದನ್ನು ತುಸುಮಟ್ಟಿಗೆ ಸೂಚಿಸುತ್ತದೆ, ಅಷ್ಟೇ.

c/oA.ANANTHIAH
pleader
SHIMOGA

೧೬-೮-೧೯೩೦

ಶ್ರೀಯುತ ಪುಟ್ಟಪ್ಪನವರಿಗೆ ನಮಸ್ಕಾರಗಳು.

ನಾನು ಇಲ್ಲಿಗೆ ಬಂದಾಗಿನಿಂದ ಇದುವರೆಗೂ ತಮ್ಮ ಪತ್ರದ ಮತ್ತು “ತಾನಾಜಿ” ಕವಿತೆಯ ನಿರೀಕ್ಷೆಯಲ್ಲಿದ್ದೆನಾದುದರಿಂದ, ನಾನು ಮೊದಲು ತಮಗೆ ಕಾಗದ ಬರೆಯಲಿಲ್ಲ. ತಾವೇ ಮೊದಲು ನನಗೆ ಬರೆಯುವಿರೆಂಬ ಭಾವನೆಯಿತ್ತು. ಇದುವರೆಗೂ ತಮ್ಮಿಂದ ಯಾವ ಸಮಾಚಾರವೂ ಇಲ್ಲದ್ದರಿಂದ ಈಗ ನಾನೇ ಬರೆಯಲು ಕುಳಿತೆ.

ಇಲ್ಲಿ ನನ್ನ ಗೆಳೆಯರೆಲ್ಲಾ”ತಾನಾಜಿ” ಗಾಗಿ ಕಾದಿದ್ದಾರೆ. ನಾನು ನನ್ನ ಕೈಲಾದ ಮಟ್ಟಿಗೆ ಅದನ್ನು ನನ್ನ ಸ್ನೇಹಿತರಿಗೆ ವಿವರಿಸಿದೆ. ಅವರೆಲ್ಲಾ “ತಾನಾಜಿ”ಯನ್ನು ಎದುರುಗೊಳ್ಳಲು ಒಮ್ಮನಸ್ಸಿನಿಂದ ಕಾದಿದ್ದಾರೆ. ಜೊತೆಗೆ” ಸಮೀರ”ನ ವಿಷಯವನ್ನೂ ಹೇಳಿದೆ. ಅವರ ದಾಹ ಹೆಚ್ಚಿದೆ. ನೀವು ನನಗೆ “ಸಮೀರ”ನ ಪರಿಚಯ ಮಾಡಿಕೊಟ್ಟ ಸನ್ನಿವೇಶವೂ ಸಮಯವೂ ನನ್ನ ಚಿತ್ತದಲಲ್ಲಿ ಊರಿ ನಿಂತಿದೆ. ಕವಿಯು ಯಾವ ಸನ್ನಿವೇಶ-ಸ್ಥಳಗಳಲ್ಲಿ ಸ್ಫೂರ್ತಿಗೊಂಡು-ಹುರಿಗೊಂಡು ಕವನವನ್ನು ಹಾಡಿದನೋ ಅದೇ ಸ್ಥಳದಲ್ಲಿ, ಪ್ರಾಯಶಃ ಅದೇ ಸಮಯದಲ್ಲಿ-ಅದೇ ಸನ್ನಿವೇಶದಲ್ಲಿ, ಆ ಕವಿಯ ಪಕ್ಕದಲ್ಲಿ ನಡೆಯುತ್ತಾ, ಅವನ ಮುಖದಿಂದ ಹೊರಡುವ ಕಾವ್ಯಲಹರಿಯಲ್ಲಿ ಮುಳುಗೇಳುವ ಭಾಗ್ಯವು ಈ ಲೋಕದಲ್ಲಿ ಬಹು ಜನರಿಗಿರಲಾರದು. ನಿಮ್ಮ ಮುಖದಿಂದ ಕೇಳಿದ”ಶ್ರಾವಣ ಸಂಧ್ಯಾ ಸಮೀರ”ನ ವೃತ್ತಾಂತವು ನನ್ನ ಮನದಲ್ಲಿ ಅಚ್ಚಳಿಯದಂತಿದೆ. ತಾನಾಜಿಯನ್ನು ಶ್ರಾವಣ ಸಂಧ್ಯಾ ಸಮೀರನ ಜೊತೆಯಲ್ಲಿ ಕಳಿಸಬೇಕೆಂದು ಪ್ರಾರ್ಥನೆ. (“ತಾನಾಜಿ”ಯನ್ನು ನಕಲುಮಾಡಿ ನನಗೆ ನಿಮ್ಮ ಮೊದಲನೆಯ ಹಸ್ತಪ್ರತಿಯನ್ನು ಕಳಿಸಿಕೊಡಬೇಕು. “ಸಮೀರ”ನನ್ನು ನೀವೆ ನಕಲುಮಾಡಿ ಆ ನಕಲಿಗೆ ನಿಮ್ಮ ಹಸ್ತಾಕ್ಷರವನ್ನು ಹಾಕಿ ಕಳಿಸಿಕೊಡಬೇಕು. ನನ್ನ ಈ ಎರಡು ಪ್ರಾರ್ಥನೆಗಳನ್ನು ನಡೆಸಿಕೊಡಿ.

‘ಜಯಕರ್ಣಾಟಕ’ದಲ್ಲಿ “ಕೊಳಲು” ಮತ್ತು “ತಳಿರು” ಇವುಗಳ ಮೇಲೆ ಬಂದ ವಿಮರ್ಶೆಯನ್ನು ಓದಿದೆವು! ನನ್ನ ಸಲಹೆಯೇನೆಂದರೆ, ನೀವು ಬರೆದಿರುವ”ವಿಮರ್ಶಕ” ಕವಿತೆಯನ್ನು ಆತನಿಗೆ ಕಳಿಸುವುದು! ವಿಮರ್ಶಕನಿಗೆ ಸ್ವಲ್ಪ”ರುಚಿಪಲ್ಲಟ”ವಾಗಿದೆ! ನನಗೆ ತೋರುವುದೇನೆಂದರೆ ಅವನು ಪುಸ್ತಕದ ವಿಮರ್ಶೆಗಿಂತ, ತನ್ನ ಪಾಂಡಿತ್ಯ ಪ್ರದರ್ಶನವನ್ನು ಹೆಚ್ಚಾಗಿ ಮಾಡಿಕೊಂಡಂತೆ ತೋರುತ್ತದೆ. ಅವನ ವಿಮರ್ಶೆಯನ್ನು ಓದುತ್ತ ಓದುತ್ತ ಅವನ ತಲೆಯಲ್ಲಿರುವುದು ಮೆದುಳೋ-ಮಣ್ಣೋ ಎಂದು ಸಂದೇಹವಾಗುತ್ತದೆ. ನನ್ನ ಸಿದ್ಧಾಂತವು ಅದು ಮಣ್ಣೇ ಎಂದು! ಆ ಮಣ್ಣು ಮೆದುಳಿನ ಆಕೃತಿಯಲ್ಲಾದರೂ ಇದ್ದಿದ್ದರೆ ಅವನ ವಿಮರ್ಶೆಯ ಸರಣಿ ಬೇರೆಯಾಗಿರುತ್ತಿತ್ತು. ಅಂತೂ ಆ ವಿಮರ್ಶಕನ ವಿವೇಕಶೂನ್ಯವಾದ ವಿಮರ್ಶೆಯನ್ನು ಓದಿ ನಾವೆಲ್ಲಾ ಪಟ್ಟಾಗಿ ನಕ್ಕೆವು!ಅವನಿಂದ ದೂರದಲ್ಲಿದ್ದೇವೆ!-ಇನ್ನೇನು ಮಾಡಲು ಸಾಧ್ಯ? ಅವನೊಬ್ಬ ಪ್ರಾಂತಿಕಭಾವನೆ(privincialism)ಗೆ ಬಲಿಬಿದ್ದ ಅಂಧಪಶು ನಿಮ್ಮ ಕವನಗಳಲ್ಲಿ ದೋಷವನ್ನು ಹುಡುಕಿದನೆಂದು ನನಗೆ ಅವನಲ್ಲಿ ಆಗ್ರಹವಿಲ್ಲ. ಏಕೆಂದರೆ ಅಲ್ಲಿಲ್ಲಿ ದೋಷವಿರಬಹುದು- ಇದೆ-ಎಂಬ ಭಾವನೆಯನ್ನು”ಕವಿತೆಗೆ”ಎಂಬ ಕವನದಲ್ಲಿ ನೀವೇ ನುಡಿದಿದ್ದೀರಿ. ವಿಮರ್ಶಕನ ಕಣ್ಣಿಗೆ ಆ ಸುಂದರವಾದ ಕವನವು ಬಿದ್ದಂತೆ ತೋರುವುದಿಲ್ಲ. ಅವನಿಗೆ ಪಂಚೇಂದ್ರಿಯಗಳ ಶಕ್ತಿಯೂ ಪಲ್ಲಟವಾದಂತಿದೆ. ಅಂತು ಅವನ ವಿಮರ್ಶೆಯಿಂದ ಒಂದು ಉಪಯೋಗವು ಕಾಣಬರುತ್ತದೆ. ಮುಂದೆ ಒಂದು ಕಾಲದಲ್ಲಿ, ಕಾವ್ಯವಿಮರ್ಶೆಗಳ ಚರ್ಚೆ ಬಂದಾಗ ಹೀನವಿಮರ್ಶೆ ಎಂದರೇನು ಅನ್ನುವುದಕ್ಕೆ ನಮ್ಮ ಧಾರವಾಡದ ವಿಮರ್ಶಕನ ವಿಮರ್ಶೆಯನ್ನು ಉತ್ತಮವಾದ ಉದಾಹರಣೆಯಾಗಿ ಹೇಳಬಹುದು. ಅದು ಬಿಟ್ಟು, ಅವನ ವಿಮರ್ಶೆಗಳಿಂದ ಇನ್ನು ಯಾವ ಉಪಯೋಗವೂ ಕಾಣಬರುವುದಿಲ್ಲ. ಒಂದು ಮಾತಿನಲ್ಲಿ ಹೇಳುವುದಾದರೆ ಅವನು ಕಾವ್ಯರಸಾನುಭವ ಮಾಡಲಾರದ”ಷಂಡ”ನೆನ್ನಬಹುದು! ಸಾಕು-ಅವನ ಮಾತು.

ನಾವೆಲ್ಲಾ ಇಲ್ಲಿ ಆರೋಗ್ಯವಾಗಿದ್ದೇವೆ. ಇದಕ್ಕೆ ಉತ್ತರವಾಗಿ ತಾನಾಜಿ-ಸಮೀರ-ನಿಮ್ಮ ಉತ್ತರ-ಇಷ್ಟನ್ನೂ ನಿರೀಕ್ಷಿಸುತ್ತಿದ್ದೇನೆ-ಹೆಚ್ಚು ವಿಳಂಬ ಮಾಡದೆ ಕಳಿಸಿಕೊಡಬೇಕು.

ಇತಿ ನಿರಂತರ ನಿಮ್ಮ ಶ್ರೇಯಃಕಾಂಕ್ಷಿ
ಸೀತಾರಾಮ್
SHIMOGA
Dated: ೧-೮-೩೦

ಶ್ರೀಯುತ ಪುಟ್ಟಪ್ಪನವರಿಗೆ,

ಪ್ರೀತಿಪೂರ್ವಕವಾದ ವಿಜ್ಞಾಪನೆಗಳು.

ನಿಮ್ಮ ಕಾಗದ ಕೈಸೇರಿ ಹದಿನೈದು ದಿನಗಳಾಗುತ್ತ ಬಂತು. ನಿಮ್ಮಿಂದ ಯಿಂತಹ ಕಾಗದಗಳು ಬಂದು ಎಷ್ಟೋ ವರ್ಷಗಳಾಯಿತು. ನಿಜ! ನೀವು ಬರಬರುತ್ತ”ದೂರ” “ಬಹುದೂರ”ವೇ ಹೋಗುತ್ತಲಿದೀರಿ!ಇನ್ನು ನಿಮ್ಮಿಂದ ಮೊದಲಿನಂತಹ ಪತ್ರಗಳು ಬರುವ ಕಾಲವೇ ಆಗಿಹೋಯಿತೆಂದು ತಿಳಿದಿದ್ದೆ. ಇಷ್ಟು ದಿನವೂ ತಿಳಿದಿದ್ದೆ. ಆದರೆ ನನ್ನಾಭಾವನೆಯು ತಪ್ಪಾಯಿತು. ನಿಮ್ಮ ಕಾಗದ ಕೈಸೇರಿದಂದಿನಿಂದ ಮೊದಲಿನಂತೆ ನಿಮಗೆ ಉತ್ತರ ಬರೆಯಲೂ ಧೈರ್ಯವಾಯಿತು!