ಈ ಸಲ ಆಷಾಢಮಾಸದ ಜಡಿಮಳೆಯೇನೂ ನಾವು ಹೆಚ್ಚಾಗಿ ನೋಡಲಿಲ್ಲಾ. ತುಂಗಾ ಪ್ರವಾಹವೂ ತುಂಬಲಿಲ್ಲಾ. ಈ ಶ್ರಾವಣದಲ್ಲಿ ಮಾತ್ರ ಯಿದುವರೆಗೆ ಚೆನ್ನಾಗಿಯೇ ಮಳೆ ಬಂದಿತು. ನದಿಯೂ ತಕ್ಕಮಟ್ಟಿಗೆ ಏರಿದ್ದಿತು. ಈಗ ಯಿಳಿದಿದೆ. ರೈತರಿಗೆ ಕಾಲಕ್ಕೆ ತಕ್ಕ ಮಳೆಯಾಗಿದ್ದರೂ ತಡೆದಮಳೆ ಹಿಂಗಾರಿನಲ್ಲಿ ಸುರಿದರೆ ಸ್ವಲ್ಪ ಕಷ್ಟಕೊಡಬಹುದು. ಅಂತೂ ಶ್ರೀಭಗವಂತನ ದಯೆ ಈ ವರ್ಷ ರೈತರ ಮೇಲೆ ಯಿಲ್ಲವೇ ಯಿಲ್ಲ. ಮಳೆ ಸರಿಯಾಗಿ ಬರಲಿಲ್ಲವೆಂದಲ್ಲಾ ರೈತರ ಬೆಳಸಿಗೆ ತಕ್ಕ ಬೆಲೆಯೇ ಯಿಲ್ಲ. ನೀವು ಯಾವಾಗಲಾದರೂ ಕೇಳಿ ತಿಳಿದುಕೊಂಡಿದ್ದರೆ ನಿಮಗೆ ಜ್ಞಾಪಕವಿರಬಹುದು-ಭತ್ತ ೮-೯ ರೂಪಾಯಿ ಯಿದ್ದದ್ದೂ ಅಡಿಕೆ ೧೫-೧೬ ರೂಪಾಯಿ ಯಿದ್ದದ್ದೂ. ಈಗ ನೋಡಿ ಭತ್ತ ೫-೬ಕ್ಕೆ ಬಂದಿದೆ. ಅಡಿಕೆ ಮಣವಂದರ ೮ ರೂಪಾಯಿ ಆಗಿದೆ. ಈ ವರ್ಷ ಬಡರೈತರಿಗೆ ಬಹಳ ಕಷ್ಟ.

ಈ ವ್ಯವಹಾರಕ್ಕೆ ಸಂಬಂಧಪಟ್ಟ ವಿಚಾರಗಳು ನಿಮಗೆ ಬೇಕಾಗಿಲ್ಲದಿರಬಹುದು. ನಮ್ಮನ್ನೂ ಕರೆಯುತ್ತಾ ನೀವು”ದೂರ ಬಹುದೂರ” ಹೋಗುವವರು. ಆದರೆ ನಮ್ಮ “ವ್ಯವಹಾರ”ದ ಗೋಜು ನಿಮಗೆ ಬೇಡವಾದರೆ ನೀವೊಬ್ಬರೇ ದೋಣಿಯಲ್ಲಿ ಮುಂದೆ ಹಾಯಬೇಕಾಗುವುದು. ನಮಗೆ ದಡದಲ್ಲಿಯೆ ಯಿನ್ನೂ ಬಹಳ ಕೆಲಸವಿದೆ. ಅದು ಮುಗಿಯುವವರೆಗೂ ಆಗಾಗ”ಕೊಳಲಿನ” ಗಾನವೊಂದು ಕೇಳಿದರೆ ಸಾಕು, ನೀವೆಷ್ಟು ದೂರವಿದ್ದರೂ ಮೊದಲಿನಂತೆ ನಿಮ್ಮೊಡನೆಯೇ ಬಾಲ್ಯದ ಗೆಳೆಯನೊಡನೆ ಯಿದ್ದಂತೆಯೇ.

ವಿರಾಮವೇ ಸಿಗದ ನಮ್ಮ ಕೆಲಸದಲ್ಲಿ ಆಗಾಗ, ದೂರದಲ್ಲಿ, ಆಚೆ ದಡದಲ್ಲಿರುವ ಶ್ರೀಗುರುದೇವನ ಮಂದಿರವೂ ಆ ಕಡೆಯೇ ಕೊಳಲಿನ ಗಾನಮಾಡುತ್ತ ದಿವ್ಯ ಗೀತೆಗಳನ್ನು ಹಾಡುತ್ತ ಈ ಸಾಗರವನ್ನು ನಿರ್ಭೀತಿಯಿಂದ ದಾಟಲೆಳೆಸುವ ಗೆಳೆಯನೂ ನೆನಪಿಗೆ ಬರುತ್ತಿದ್ದರೆ ಸಾಕು. ಅವನಾ ನೌಕೆಯು”ಸುಪಥವಾಗಿ”ನಡೆಯಲಿ.

ಸೀತಾರಾಂ ಬಂದಿದಾನೆ!ಒಳ್ಳೇ ಸುದ್ದಿಯನ್ನೇ ತಂದಿದ್ದಾನೆ!”ತಾನಾಜಿ!” ಈಸಲ ನೀವು ಶಿವಮೊಗ್ಗೆಗೆ ಬಂದಾಗ, ಯಿರಲಿ. ಅದು ಆಗಿನ ಮಾತು. ಈಗ್ಯೆ ನಿಮ್ಮ ಹಸ್ತಪತ್ರಿಕೆಯು ಯಿಲ್ಲಗೆ ಬರುತ್ತಲೇ ನಾವೇ ಓದಿಕೊಳ್ಳುತ್ತೇವೆ. ಆಮೇಲೆ ನಿಮಗೂ ತೊಂದರೆಕೊಡದೆಬಿಡುವುದಿಲ್ಲಾ.‘ತಾನಾಜಿ’ಒಂದನ್ನೇ ಅಲ್ಲಾ. ಅದುವರೆಗೆ ನೀವು ಬರೆದ ಯಿತರ ಕವನಗಳನ್ನೂ ಓದಿಸದೆ ಬಿಡುವುದಿಲ್ಲಾ. ಆದರೆ ದಯೆಯಿಟ್ಟು ಮುಚ್ಚುಮರೆ ಮಾಡಬೇಡಿ. ಆಗಾಗ ನೀವು ಬರೆದಿರುವ ಕವನಗಳ ಸುದ್ದಿಯನ್ನು ಕಳುಹಿಸುತ್ತಿರಿ.

“ಜಯಕರ್ಣಾಟಕ”ದಲ್ಲಿನ ವಿಮರ್ಶೆಯನ್ನು ಓದಿದೇವೆ (ನಾನು ಚಿದಂಬರ ಸೀತಾರಾಂ ಶ್ರೀಹರಿ ಜೋಯಿಸ ಈಶ್ವರ.) ವಿಮರ್ಶಕನ ವಿಷಯದಲ್ಲಿ ನಮಗೆ ಸಿಟ್ಟು ಬರಲಿಲ್ಲಾ; ಜುಗುಪ್ಸೆಯೂ ಹುಟ್ಟಲಿಲ್ಲಾ; ಆದರೆ ನಗುಬಂತು. ಬಹಳ ಗಟ್ಟಿಯಾಗಿಯೆ ನಕ್ಕುಬಿಟ್ಟೆವು. ದಿನವೂ ನಗುತ್ತಲಿದ್ದೇವೆ. ನೆನಪಿಸಿಕೊಂಡಾಗಲೆಲ್ಲ ನಗುತ್ತೇವೆ. ಯಿದಕ್ಕೆ ಯಿನ್ನೂ ಒಂದು ವಾರದ ಅವಧಿ ಯಿಟ್ಟುಕೊಂಡಿದೇವೆ. ಈ ರೀತಿ ನಮ್ಮ ಹರ್ಷಕ್ಕವಕಾಶ(ಅರ್ಥಾತ್ ನಮ್ಮ ಆಯುಷ್ಯವೃದ್ಧಿಗೂ ಸಹ, ಯಾಕೆಂದರೆ ನಗುವಿನಿಂದ ಆಯುಷ್ಯ ಹೆಚ್ಚುತ್ತಂತೆ) ಕಲ್ಪಿಸಿಕೊಟ್ಟ ಆ‘Ellis-priyeman’ ವಿಖ್ಯಾತ ವಿಮರ್ಶಕವಿಗೆ ನಮ್ಮ ಅಂತಃಕರಣ ಪೂರ್ವಕವಾದ ಅಭಿನಂದನಗಳನ್ನು ಸಮರ್ಪಿಸದಿರಲಾರೆವು. ಎಲ್ಲಕ್ಕೂ ಮೇಲಾಗಿ(೧)”ಸೋದರಿಯರೆ ನೀವೆಲ್ಲರು ಬನ್ನಿ” ಎಂಬ ಕವನದ ಮೇಲಿನ ವಿಮರ್ಶೆಯಲ್ಲಿ “ಈ ಸೋದರಿಯರು ಯಾರು? ಹಕ್ಕಿಗಳಾಗುತ್ತಾರೆ, ಬಾಲಕರಾಗುತ್ತಾರೆ ವಗೈರೆ” ಮಾತುಗಳೂ(೨) ‘ರತಿ,’ “….ಗೆ”, “ಗುರಿ” ಈ ಕವನಗಳ ಮೇಲಣ ವಿಮಶೆಯಲ್ಲಿ “ಮತ್ತು ಪುಟ್ಟಪ್ಪನವರಂತಹ ಯುವಕರು ಮುದುಕರಂತೆ… ಸರಿಯಲ್ಲಾ” ಈ ಮಾತುಗಳೂ ನಮ್ಮನ್ನು ನಗುವಿನ ಸಮುದ್ರದಲ್ಲಿಯೇ ಮುಳಿಗಿಸಿಬಿಟ್ಟಿವೆ.

ಆ ದಿನದ ಬೇಟೆಯಲ್ಲಿ ಬೇರೆ ಯಾವ ಮೃಗ ಪಕ್ಷಿಯೂ ಸಿಗದಿದ್ದಲ್ಲಿ ತನ್ನನ್ನು ಹೀಯಾಳಿಸುತ್ತಿದ್ದ ವೃತ್ತಪತ್ರಿಕೆಗಳೆಲ್ಲವನ್ನೂ ಒಂದು ಮರಕ್ಕೆ ಕಟ್ಟಿ ಅದಕ್ಕೆ ಗುರಿಯಿಟ್ಟು ಹೊಡೆದು ಹೊಡೆದು ಅದೇ ಆ ದಿನದ ಬೇಟೆಯೆಂದು ಲೆನಿನ್ನನು (Lenin) ಮನೆಗೆ ಬರುತ್ತಿದ್ದನಂತೆ! ನಾವೂ ಸಹ ಆ ವಿಮರ್ಶೆ ಬಂದ ‘ಜಯಕರ್ನಾಟಕ’ದ ಪ್ರತಿಯೊಂದನ್ನು ಹತ್ತಿರದಲ್ಲೇ ಯಿಟ್ಟುಕೊಂಡು (ಗುಂಡು ಹೊಡೆಯುವುದಕ್ಕಲ್ಲ.) ಸಾಯಂಕಾಲ ವಾಯುವಿಹಾರಾರ್ಥವಾಗಿ ಹೋದಾಗ ಬೇಜಾರಾಗಿ ನಗುವು ಜೀವನಕ್ಕೆ ಬೇಕೇಬೇಕಾದಾಗ, ದಿವ್ಯವಾದಾ ವಿಮರ್ಶೆಯನ್ನು ಓದಿ ಪುನಃ ಪುನಃ ವಿಮರ್ಶಕನನ್ನು ಅಭಿನಂದನೀಯನನ್ನಾಗಿ ಮಾಡಿಕೊಳ್ಳುವೆವು. ಏನೇ ಆದರೂ ನಮ್ಮದು”Non violence” ತತ್ವ.

ನೀವು ಬರೆದಂತೆ ಆ ವಿಮರ್ಶೆಯಲ್ಲಿ ಕೆಲವು ಪದ್ಯಗಳು ವಿನಹ ಉಳಿದ ಪದ್ಯಗಳ ಯಿಂಗ್ಲಷ್ ಮೂಲಗಳೆಂದು ಕೊಟ್ಟಿರುವ ಪದ್ಯಗಳು ಸ್ವಲ್ಪವೂ ಸಮಂಜಸವಾಗಿಲ್ಲಾ; ಹೊಂದುವಂತಿಲ್ಲಾ; ಅದಿರಲಿ.”ಕೊಳಲಿಗೆ” ನಿಮ್ಮದೊಂದು ಪ್ರಸ್ತಾವನೆ ಯಿದ್ದಿದ್ದರೆ ಚೆನ್ನಾಗಿತ್ತು. ಅದರಲ್ಲಿ ಕೆಲವು ವಿಚಾರಗಳು ವಿವರಿಸಿ ಬರೆದಿದ್ದರೆ ವಿಮರ್ಶಕನಿಗೆ ಬರೆಯಲವಕಾಶವಿರುತ್ತಿರಲಿಲ್ಲಾ.

ಯಿಲ್ಲಿ ನಿಮ್ಮ ಕವನಗಳನ್ನೋದುತ್ತಾ ಅವುಗಳ ವಿಚಾರ ಮಾತನಾಡುತ್ತ ಸಂತೋಷದಿಂದ್ದೇವೆ.”ತಾನಾಜಿ” ಎಂದಿಗೆ ಓದೇವೋ ಎಂದು ಕಾದಿದೇವೆ. ಬೇಗನೆ ಕಳಿಸಿದಲ್ಲಿ ಬಹಳ ವಂದನೆಗಳು. ಶ್ರೀಸ್ವಾಮಿಜಿಯವರಿಗೆ ನನ್ನ ವಿನಯಪೂರ್ವಕವಾದ ವಂದನೆಗಳನ್ನು ಸಮರ್ಪಿಸಿರಿ. ನಾನು ೪-೫ ದಿನಗಳಲ್ಲಿಯೆ ಮದ್ರಾಸು ಕಡೆ ಹೊರಡಬೇಕಾಗಿ ಇರುವುದರಿಂದ ದಯೆಯಿಟ್ಟು ಈ ಪತ್ರ ಕೈಸೇರಿದ ದಿನವೇ ಉತ್ತರ ಬರೆಯಿರಿ. ನಾನು ತಡಮಾಡಿದೆನೆಂದು ನೀವೂ ಆ ರೀತಿ ಮಾಡಬೇಡಿ.

ಯಿತಿ
ಚಂದ್ರಶೇಖರ

ಜಯ್ ಶ್ರೀಗುರುಮಹಾರಾಜ!

೩-೧೦-೧೯೩೦ರಿಂದ ಪ್ರಾರಂಭವಾಗಿ ೧೦-೯-೧೯೩೩ನೆಯ ಭಾನುವಾರದ ವರೆಗೆ ವ್ಯಾಪಿಸುತ್ತದೆ ಈ ದಿನಚರಿಯ ಪುಸ್ತಕ. ಕ್ರಮವಾಗಿ ಪ್ರತಿದಿನವೂ ಬರೆದಿಲ್ಲ. ಈ ಪುಸ್ತಕ ತಾರೀಖು ಹಾಕಿ ಅಚ್ಚುಮಾಡಿಸಿರುವ ವರ್ಷದ ಡೈರಿಯಲ್ಲ. ಒಂದು ಸಣ್ಣ ಆಕಾರದ ನೋಟುಬುಕ್ಕು. ಮನಸ್ಸು ಬಂದಾಗ ತಾರೀಖು ಹಾಕಿ ಬರೆದಿದ್ದೇನೆ. ವಿಷಯದ ದೃಷ್ಟಿಯಿಂದ ನೋಡುದರೆ ಮುಖ್ಯವಾದುದರ ಜೊತೆಗೆ ಏನೇನೂ ಮುಖ್ಯವಲ್ಲ ಎಂದು ತೋರುವ ಕ್ಷುದ್ರಗಳೂ ಲಿಖಿತವಾಗಿವೆ. ಕೆಲವು ತಾರೀಖಿನ ಕೆಳಗೆ ಏಳೆಂಟು ಪುಟ ಬರೆದಿದ್ದರೆ ಮತ್ತೆ ಕೆಲವದರ ಮುಂದೆ ಅರ್ಧಪಂಕ್ತಿ ಮಾತ್ರ ಇರುತ್ತದೆ. ಮಹತ್ತಾದುದು ಅಲ್ಪವಾದುದು ಎಂದು ಭೇದವೆಣಿಸಿಲ್ಲ. ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ ಈ ದಿನಚರಿಯ ಪುಸ್ತಕ ಪ್ರಾರಂಭವಾಗುವುದು ೩-೧೦-೧೯೩೦ರಂದು, ಸ್ವಾಮಿ ಸಿದ್ದೇಶ್ವರಾನಂದರೊಡನೆ ನಾನು ಮಾನಪ್ಪ ದೀಕ್ಷಾಯಾತ್ರೆ ಕೈಕೊಂಡಂದು. ಇದು ಕೊನೆಯಾಗುವುದು-ಮೈಸೂರಿನಲ್ಲಿ ಶ್ರೀರಾಮಕೃಷ್ಣಾಶ್ರಮವನ್ನು ಒಂದು ಬಾಡಿಗೆ ಮನೆಯಲ್ಲಿ ಪ್ರಾರಂಭಿಸಿ, ಬೆಳೆಸಿ, ಒಂಟಿಕೊಪ್ಪಲಿನಲ್ಲಿ ಅದಕ್ಕೊಂದು ಜಾಗ ಸಂಪಾದನೆಮಾಡಿ, ಅಲ್ಲೊಂದು ಸ್ವಂತದ ಕಟ್ಟಡ ಪೂಜ್ಯ ಸ್ವಾಮಿ ಸಿದ್ಧೇಶ್ವರಾನಂದರು, ಮುಂದೆ ಫ್ರಾನ್ಸಿಗೆ ಹೋಗಿ ಪ್ಯಾರಿಸ್ಸಿನಲ್ಲಿ ಶ್ರೀರಾಮಕೃಷ್ಣ ಸಂಸ್ಥೆಯೊಂದನ್ನು ಸಂಸ್ಥಾಪಿಸುವ ಮಾರ್ಗ ಮಧ್ಯೆ, ಸ್ವಲ್ಪಕಾಲ, ಅದಂರೆ ಆರೇಳು ವರ್ಷ, ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರಾಗಿರಲು ಮೈಸೂರನ್ನು ಬೀಳ್ಕೊಂಡ ದಿನದಂದು! ೧೯೨೬ರಿಂದ ೧೯೩೦ರ ತುದಿವರೆಗೆ ನಾನು ಅವರ ನಿರಂತರ ದಿವ್ಯ ಸಾನಿಧ್ಯದಲ್ಲಿದ್ದೆ. ಅವರನ್ನು ಬೀಳ್ಕೊಂಡ ದಿನದ ಡೈರಿಯ ಕೊನೆಯ ಸುಮಾರು ಹದಿನಾಲ್ಕು ಪುಟಗಳನ್ನು ನಾನು ಓದುವಾಗೆಲ್ಲ ಕಣ್ಣು ತೇವವಾಗುತ್ತದೆ, ದುಃಖಕ್ಕಲ್ಲ, ಸುಖಕ್ಕೆ, ಕೃತಜ್ಞತೆಗೆ! ಆ ಮೂರು ವರ್ಷಗಳಲ್ಲಿ ನನ್ನ ಅಧ್ಯಾತ್ಮ ಜೀವನದ ಮಾತಂತಿರಲಿ, ನನ್ನ ಸಾಹಿತ್ಯಕ ಜೀವನ ಅನೇಕ ಕೃತಿಗಳನ್ನು ರಚಿಸಿ ಸುಪ್ರಸಿದ್ಧವಾಗಿ ಶ್ರೀಮಂತವಾದುದನ್ನು ನೋಡುತ್ತೇವೆ. ಚಿಕ್ಕದು ದೊಡ್ಡದು ಅಲ್ಪ ಅನಲ್ಪ ಎನ್ನದೆ ಡೈರಿಯಲ್ಲಿರುವುದನ್ನೆಲ್ಲ ಕೊಡಬೇಕೆಂದಿದ್ದೇನೆ. ಕವಿಯ ಬದುಕಿನ ವೈವಿಧ್ಯಮಯ ಲೋಕಾನುಭವಗಳ ಪರಿಚಯಕ್ಕೆ ಸಾವಿರಾರು ಗವಾಕ್ಷಗಳು ತೆರೆದುಕೊಳ್ಳುತ್ತವೆ ಅಲ್ಲಿ. ಅನೇಕ ಅಲ್ಪಗಳೂ ಸೇರಿಯೆ ಜೀವನದ ಮಹತ್ತು ಸಿದ್ದಿಸುತ್ತದೆ; ಯಾವ ಬದುಕೂ ಬರಿಯ ಮಹತ್ತುಗಳಿಂದಲೆ ಕೂಡಿರುವುದಿಲ್ಲ; ಬರಿಯ ಮಹತ್ತುಗಳಿಂದಲೆ  ತುಂಬಿರುವ ಜೀವನವಿದ್ದರೆ ಅದು ಮಾನವಜೀವನವಾಗುವುದಿಲ್ಲ!

೧-೩-೧೯೩೦:

ಬೆಳಿಗ್ಗೆ ಸಂಚಾರ ಹೊರಟು ಹಿಂದಕ್ಕೆ ಬರುವಾಗ ಹಾಗೆಯೆ ವೆಂಕಣ್ಣಯ್ಯನವರ ಮನೆಗೆ ಹೋದೆ. ಅವರು ಈ ದಿನ ಅರಸೀಕೆರೆ ರೈಲಿನಲ್ಲಿ ಶ್ರೀಯುತ ಗಳಗನಾಥರು ಬರುತ್ತಾರೆಂದು ಹೇಳಿದರು. ಮಧ್ಯಾಹ್ನ ಸುಮಾರು ಐದು ಗಂಟೆಯ ಹೊತ್ತಿಗೆ ವೆಂಕಣ್ಣಯ್ಯನವರಲ್ಲಿಗೆ ಹೋದೆ. ಶ್ರೀಯುತ ಗಳಗನಾಥರನ್ನು ಕಂಡೆ. ಅವರನ್ನು ಹಿಂದೆಯೆ ಬೆಳಗಾಂನಲ್ಲಿ ನೋಡಿದೆ.(ಸಾಹಿತ್ಯ ಪರಿಷತ್ತಿನ ಸಮ್ಮೇಲನದಲ್ಲಿ.) ಅವರ ಅತಿ ಸಾಧಾರಣ ವೇಷವನ್ನು ಕಂಡು ಆಶ್ಚರ್ಯಪಟ್ಟಿದ್ದೆ. ಈ ದಿನವೂ ಮುದುಕರಾದ ಅವರ ಸಾಮಾನ್ಯ ಉಡುಪನ್ನು ನೋಡಿ ನನಗೆ ಅವರಲ್ಲಿ ಒಂದು ವಿಧವಾದ ಪೂಜ್ಯ ಬುದ್ಧಿಯುಂಟಾಯಿತು. ಏಕೆಂದರೆ ಆಕೃತಿ ಆತ್ಮವನ್ನು ತೋರುವಂತೆಯೆ ವೇಷ ಅಂತರಂಗ ಆವೇಶವನ್ನು ಬಿಚ್ಚಿ ತೋರುವುದು.

ಅವರು ತಮ್ಮ ಕಾಲದಲ್ಲಿ ನನ್ನಂತಹ ತರುಣತಿಗೆ ಇಷ್ಟೊಂದು ಉತ್ಸಾಹವಿರಲಿಲ್ಲ ಎಂಬ ಮಾತು ಹೇಳಿದರು. ಆಸುರೀ ಜಾಗ್ರತಿ ಮತ್ತು ದೈವೀ ಜಾಗ್ರತಿ ಎಂಬ ಎರಡು ವಿಧವಾದ ಜಾಗ್ರತಿಗಳುಂಟೆಂದು ಹೇಳಿದರು. ಕುಂಭಕರ್ಣನು ನಿದ್ರೆಯಿಂದ ಎಚ್ಚತ್ತುದೂ ಜಾಗ್ರತಿಯೇ. ಆದರೆ ಅಂತಹ ಜಾಗ್ರತಿಯಿಂದ ಲೋಕಕ್ಕೆ ಸಂಕಟವುಂಟಾಗುವುದು. ಶ್ರೀಮನ್ನಾರಾಯಣನೂ ಹಾಲ್ಗಡಲಿನಿಂದ ಎಚ್ಚತ್ತನು. ಅದರಿಂದ ಲೋಕಕ್ಕೆ ಕಲ್ಯಾಣವಾಯಿತು. ಅಂತೂ ಈಗ ಇಂಡಿಯಾ ದೇಶದಲ್ಲಿ ಜಾಗ್ರತಿಯೇನೋ ಉಂಟಾಗಿದೆ. ಮಲಗಿಲ್ಲ. ಆಸುರೀ ಜಾಗ್ರತಿಯೋ ದೈವೀ ಜಾಗ್ರತಿಯೋ ಮುಂದೆ ಪರಿಣಾಮದಿಂದ ಗೊತ್ತು ಮಾಡಬೇಕು ಎಂದರು. ಅದಕ್ಕೆ ಟಿ.ಎಸ್.ವಿ.ಯವರು”ಇಷ್ಟು ದಿನ ಹಿಂದಿನವರು ಮಾಡಿದ ತಪಃಪ್ರಭಾವವೆಲ್ಲ ಆಸುರೀ ಜಾಗ್ರತಿಯಲ್ಲಿಯೇ ಪರಿ ಸಮಾಪ್ತಿ ಹೊಂದುವುದೆ? ತುದಿಯಲ್ಲಿ ಒಳ್ಳೆಯದಾಗಲೇಬೇಕು.” ಎಂದರು. ನಾನು”ಈಗ ಸ್ವಲ್ಪ ಬಿಸಿಲ ಬೇಗೆ ಇದೆ. ತುಸು ತಡಮಾಡಿ ಹೋಗೋಣ.”ಎಂದೆ.

ಸಂಚಾರ ಹೊರಟಾಗ ದಾರಿಯಲ್ಲಿ ನಾನಾ ಕಥೋಪಕಥನಗಳಾದುವು. ಈಶ್ವರ ನಿರ್ಭರತೆಯ ವಿಚಾರವಾಗಿ ಗಳಗನಾಥರು ತಮ್ಮ ಜೀವಮಾನದಲ್ಲಿಯೆ ನಡೆದ ಒಂದು ಸಂಗತಿ ಹೇಳಿದರು. “ನನಗೆ ಒಂದು ಸಾರಿ ಮೂತ್ರರೋಗ ಬಂದಾಗ ಹುಬ್ಬಳ್ಳಿ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹೋದೆ. ನನ್ನೊಡನೆ ನನ್ನ ಪತ್ನಿ ಬಂದಿದ್ದರು. ಅಲ್ಲಿ ಯಾವ ಪ್ರಯೋಜನವೂ ಆಗಲಿಲ್ಲ. ಆಗ ನನ್ನ ಗುರು ಶ್ರೀ ಶೇಷಾಚಲ ಸ್ವಾಮಿಗಳನ್ನು ನೆನೆದು ನಾನೂ ಆಕೆಯೂ ಇಬ್ಬರೂ ಕಣ್ಣೀರುಗರೆದೆವು. ನನಗೆ ಬಹಳ ಯಾತನೆಯಾಗುತ್ತಿತ್ತು. ನಾನು ಕಡೆಗೆ ಬೆಂಗಳೂರಿಗೆ ಹೋಗಲು ನಿರ್ಧರಿಸಿದೆ. ನನ್ನ ಪತ್ನಿಗೂ ಹೇಳಿದೆ. ಆಕೆ”ನಾನೂ ಬರುತ್ತೇನೆ. ಜೊತೆಗೆ ಯಾರು?”ಎಂದರು.”ಜೊತೆಗೆ ಪರಮಾತ್ಮನಿದ್ದಾನೆ, ‌ಗುರು ಇದ್ದಾರೆ.” ಎಂದೆ. ಆದರೆ ಆಕೆ ಬರುತ್ತೇನೆ ಎಂದು ಹಟಹಿಡಿದರು. ಕಡೆಗೆ ಹೇಳಿದೆ”ನೋಡು, ನೀನು ನನ್ನೊಡನೆ ಹುಬ್ಬಳ್ಳಿಗೆ ಬಂದೆ. ಆದ್ದರಿಂದ ಏನೂ ಪ್ರಯೋಜನವಾಗಲಿಲ್ಲ. ಬೆಂಗಳೂರಿಗೆ ನೀನು ನನ್ನೊಡನೆ ಬಂದು ಕಾಯಿಲೆ ಗುಣಪಡಿಸುತ್ತೇನೆ ಎಂಬ ಧೈರ್ಯವಿದ್ದರೆ ಹೇಳು. ನಾನೂ ಗುರುಗಳನ್ನೂ ಪರಮಾತ್ಮನನ್ನೂ ಸಂಗಡ ಕರೆದುಕೊಂಡು ಹೋಗೆನು ಎಂದೆ. ನೀನು ಬರದೆ ಇದ್ದರೆ ನಾನು ನಿರ್ಭರತೆಯಿಂದ ಹೋಗುವೆನು. ಜೊತೆಯಲ್ಲಿ ಶ್ರೀಗುರುಗಳು ಇರುವರು ಎಂದೆ.”ಆಕೆ ಒಪ್ಪಿದರು. ರೈಲು ಹತ್ತಿ ಹಿಂದಕ್ಕೆ ಬಂದೆವು. ಹಾವೇರಿಯಲ್ಲಿ ಆಕೆಯನ್ನು ಇಳಿಸಿದೆ. ನಾನು ಮುಂದೆ ಬೆಂಗಳೂರಿಗೆ ಬಂದೆ. ಅಲ್ಲಿ ಎಲ್ಲವೂ ಸುಖವಾಗಿ ಇಪ್ಪತ್ತು ಇಪ್ಪತ್ತೈದು ದಿನದೊಳಗೆ ಮುಗಿಯಿತು. ಪುನಃ ಹಿಂತಿರುಗಿದೆ.” ಎಂದು ಮೊದಲಾಗಿ ಬಹಳ ಸ್ವಾರಸ್ಯವಾಗಿ ನನ್ನ ಕಣ್ಣಿನಲ್ಲಿ ನೀರು ತುಂಬುವಂತೆ ಹೇಳಿದರು.

ಮೈಸೂರಿನ ವೈಭವವನ್ನು ನೋಡಿ ತಮ್ಮ ಗುರುಗಳು” ಮಹಾರಾಜ್, ಮಾಯಾ ವೈಭವವನ್ನು ನೋಡಬೇಕಾದರೆ ಹೊರಗೆ ಹೋಗಿ ನೋಡಬೇಕು”ಎಂದು ಹೇಳುತ್ತಿದ್ದುದನ್ನು ಹೇಳಿದರು.

ನನ್ನನ್ನು ಕುರಿತು”ಏನ್ರೀ ಪುಟ್ಟಣ್ಣನವರೇ, ನಾನು ‘ಸದ್ಗುರು’ ಮಾಸಪತ್ರಿಕೆಯನ್ನು ಪುನಃ ಹೊರಡಿಸಿದಾಗ ನಿಮ್ಮ ಲೇಖನಗಳು ಅದರಲ್ಲಿ ಬರಬೇಕು.” ಎಂದರು. ಅದಕ್ಕೆ ನಾನು “ಆಗಲಿ. ಅದಕ್ಕೇನು? ನೀವು ಕೇಳುವುದು ಹೆಚ್ಚೋ ನಾನು ಕೊಡುವುದು ಹೆಚ್ಚೋ?” ಎಂದೆ. “ನಾನು ಕೇಳುವುದು ನೀವು ಕೊಟ್ಟರೆ ಹೆಚ್ಚಾಗುತ್ತದೆ!”ಎಂದರು.

ಬಹಳ ಹೊತ್ತು ಕುಕ್ಕನಹಳ್ಳಿ ಕೆರೆಯ ತುದಿಯ ಹಾಸುಗಲ್ಲು ಮಣೆಯ ಮೇಲೆ ಕುಳಿತೆವು. ಬೈಗುಗೆಂಪು ಮುಳುಗಿತು ಒಯ್ಯೊಯ್ಯನೆ, ಕತ್ತಲಿಳಿಯಿತು. ಪ್ರಸಿದ್ಧ ಕಾದಂಬರಿಕಾರರೊಡನೆ ನಾವು ಗಳಪುತ್ತಾ ಕುಳಿತೆವು:

“ಮಮಕಾರ, ಅಹಂಕಾರ ಹೋದರಷ್ಟೆ ಈಶ್ವರನು ಬಂದು ಹೃದಯದಲ್ಲಿ ನೆಲಸುವುದು. ಎದೆಯಲ್ಲಿ ಎರಡು ವಸ್ತುಗಳಿರಲಾರವು. ಜೀವನಿರೆ ಪರಮನಿಲ್ಲ; ದೇವನಿರೆ ಜೀವನಿಲ್ಲ. ನಮ್ಮಲ್ಲಿ ಆಗಾಗ ನಾವು ಮೈಮರೆತಾಗ ನಿರಹಂಕಾರಿಗಳಾದಾಗ ಈಶ್ವರನು ಬರುತ್ತಾನೆ. ಆದರೆ ಮರಳಿ ತೊಲಗುತ್ತಾನೆ. ಅಹಂಕಾರದ ದೆಸೆಯಿಂದ.”

ಹಾಗೆಯೆ ವೆಂಕಣ್ಣಯ್ಯನವರು ಶ್ರೀರಾಮಕೃಷ್ಣ ಪರಮಹಂಸರ ಕಥೆಯನ್ನೆತ್ತಿದರು…… ಡಿ.ಎಲ್.ನರಸಿಂಹಾಚಾರ್ ಮತ್ತು ಶ್ರೀನಿವಾಸರಾವ್ ಅವರ(ಶ್ರೀರಾಮಕೃಷ್ಣರ)ಪಟಗಳು ಬೇಕು ಎಂದು ಕೇಳಿದರು. ಹಿಂತಿರುಗಿ ಬರುವಾಗ ಕೆರೆಯ ಏರಿಯ ಮೇಲೆ ನಾವು ಮೂವರು (ಡಿ.ಎಲ್.ನ, ನಾನು ಮತ್ತು ಶ್ರೀನಿವಾಸರಾವ್)ಹುಡುಗಣ್ಣಗಳು ಒಂದಾಗಿ ಹಳೆಯ ದಿನಗಳನ್ನು ನೆನೆದು ಗೋಲಿ ಚಿಣ್ಣಿಕೋಲು ಇವುಗಳನ್ನು ಕುರಿತು ಹರಟುತ್ತಾ ಮುಂದೆ ನಡೆದೆವು. ಹಿಂದೆ ವೆಂಕಣ್ಣಯ್ಯ ಗಳಗನಾಥರು ಬರುತ್ತಿದ್ದರು….. ನಾವು ಮೂವರೂ ಸೇರಿ ಒಂದು ದಿನ ಗೋಲಿಯಾಡಲೇಬೇಕೆಂದು ನಿಶ್ಚಯಿಸಿದ್ದೇವೆ!(ಆ ನಿಶ್ಚಯ ಇಹಲೋಕದಲ್ಲಿ ಕೈಗೂಡಲೆ ಇಲ್ಲ. ಆ ಮೂವರಲ್ಲಿ ಇಬ್ಬರು ಈಗಾಗಲೆ ಪರಲೋಕವಾಸಿಗಳಾಗಿರುವುದರಿಂದ ಬಹುಶಃ ಅದು ಮುಂದೆ ಪರಲೋಕದಲ್ಲಿ ಕೈಗೂಡಬಹುದೇನೊ! ಆದರೆ ನಾನು ಹೋಗುವವರೆಗೂ ಅವರಿಬ್ಬರೂ ಕಾಯಬೇಕಾಗುತ್ತದೆ. ಅಲ್ಲಿ ವೆಂಕಣ್ಣಯ್ಯವನರನ್ನೂ ಗಳಗನಾಥರನ್ನೂ ರೆಫ್ರಿಗಳನ್ನಾಗಿ ಮಾಡಿಕೊಳ್ಳಬೇಕಾದೀತೊ ಏನೊ?)

ವೆಂಕಣ್ಣಯ್ಯನವರ ಮನೆಗೆ ಬಂದಾಗ ಅವರು ನನಗೆ‘ಶ್ರೀರಾಮಕೃಷ್ಣ ಕಥಾಮೃತ’ವನ್ನು(ಅವರೇ ಬೆಂಗಳೂರು ಶ್ರೀರಾಮಕೃಷ್ಣಾಶ್ರಮಕ್ಕಾಗಿ ಕನ್ನಡಿಸಿದ್ದು ಇರಬೇಕು ಅಥವಾ ಹಿಂದೆ ಮೈಸೂರು ಸರಕಾರದಲ್ಲಿ ನಾರಾಯಣ ಐಯ್ಯಂಗಾರ್ ಹೆಸರಿನಿಂದ ಡೆಪ್ಯುಟಿ ಕಮೀಷನರ್ ಮೊದಲಾದ ದೊಡ್ಡ ಹುದ್ದೆಗಳಲ್ಲಿದ್ದು ತರುವಾಯ ಸಂನ್ಯಾಸಿಯಾಗಿ ಶ್ರೀರಾಮಕೃಷ್ಣ ಮಿಶನ್ನಿಗೆ ಸೇರಿದ ಶ್ರೀವಾಸಾನಂದರು ಪಂಡಿತರ ಕೈಯಿಂದ ಭಾಷಾಂತರ ಮಾಡಿಸಿದ್ದಿರಬೇಕು.) ಕೊಟ್ಟರು. ಅದು‘ಎಂ’ ವಿರಚಿತ. ಗಳಗನಾಥರು ಶ್ರೀರಾಮಕೃಷ್ಣ ಪ್ರಚಾರ(ಮಿಶನ್) ವಿಚಾತ ನನ್ನನ್ನು ಕೇಳಿದರು. ನಾನು ಎರಡು ಮೂರು ಮಾತುಗಳಲ್ಲಿ ಅದರ ತತ್ವವನ್ನು ತಿಳಿಸಲು ಯತ್ನಿಸಿದೆ. ವೆಂಕಣ್ಣಯ್ಯನವರೂ ಗುರುದೇವನ ಉಪದೇಶ ಮಾರ್ಗವನ್ನು ಕುರಿತು ಹೇಳಿದರು….

ಮಾಧವರ ಮನೆಗೆ (ಗಣಿತಶಾಸ್ತ್ರ ಪ್ರೊಫೆಸರ್. ಆಗಿದ್ದ ಪ್ರೊ.ಮಾಧ್ವರು ಕಾರ್ ಇಟ್ಟಿದ್ದರು. ಅದನ್ನು ಕರ್ನಾಟಕ ಸಂಘದ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಶ್ರೀಯುತ ಗಳಗನಾಥರ ಉಪಯೋಗಕ್ಕಾಗಿ ಕೇಳಲು ವೆಂಕಣ್ಣಯ್ಯನವರು ನನಗೆ ಸೂಚಿಸಿದರೆಂದು ಭಾವಿಸುತ್ತೇನೆ.)ಮೋಟಾರ್ ಗಾಡಿಗಾಗಿ ಹೋದೆ. ಅವರು ಊರಿನಲ್ಲಿರಲಿಲ್ಲ.

ಮಾರ್ಚಿ ೨,೧೯೩೦:

ಗುರುಮಹಾರಾಜರ ಹುಟ್ಟಿದ ಹಬ್ಬ.

೧೧-೩-೧೯೩೦:

ಇವೊತ್ತು ಲಲಿತಾದ್ರಿಯಲ್ಲಿ ಬೆಳ್ದಿಂಗಳೂಟ. ಮನೋಹರವಾಗಿತ್ತು.(ಎಂದಷ್ಟೆ ಇದೆ ನನ್ನ ದಿನಚರಿಯಲ್ಲಿ. ಆದರೆ ಆ ಸಂಕ್ಷೇಪತೆ ಆ ದಿನದ ಅನುಭವದ ಸ್ವಾರಸ್ಯಕ್ಕೆ ತುಂಬಾ ಅನ್ಯಾಯ ಮಾಡುತ್ತದೆ. ಆ ಸಂತೋಷಕೂಟದಲ್ಲಿ ಪ್ರಾಧ್ಯಾಪಕರು, ಉಪಪ್ರಾಧ್ಯಾಪಕರು, ಲೆಕ್ಚರರುಗಳು, ಕನ್ನಡ ಎಂ.ಎ. ಮೊದಲನೆಯ ಗುಂಪಿನ ಎಲ್ಲ ವಿಧ್ಯಾರ್ಥಿಗಳು ಭಾಗಿಗಳಾಗಿದ್ದರು. ಪ್ರೊ// ವೆಂಕಣ್ಣಯ್ಯ, ತೆಲುಗು ಪಂಡಿತರು ಅನಂತಕೃಷ್ಣ ಶರ್ಮ, ಸಂಸ್ಕೃತ ಪ್ರೊ//ನರಸಿಂಹಶಾಸ್ತ್ರಿ,ಕನ್ನಡ ಅಧ್ಯಾಪಕರಲ್ಲದಿದ್ದರೂ ಕನ್ನಡದ ನವೋದಯದಲ್ಲಿ ಉತ್ಸಾಹೀ ಭಾಗಿಗಳಾಗಿದ್ದ ಜಿ.ಹನುಮಂತರಾವ್, ಎಸ್.ವಿ.ರಂಗಣ್ಣ, ಎ.ಎನ್.ಮೂರ್ತಿರಾವ್ ಮುಂತಾದವರು, ಶ್ರೀಕಂಠಯ್ಯ, ನರಸಿಂಹಾಚಾರ್, ಅನಂತರಂಗಾಚಾರ್, ವೆಂಕಟರಾಮಪ್ಪ ಮೊದಲಾದ ಆಗತಾನೆ ಕೆಲಸಕ್ಕೆ ಸೇರಿದ ಅನಂತರಂಗಾಚಾರ್. ವೆಂಕಟರಾಮಪ್ಪ ಮೊದಲಾದ ಆಗತಾನೆ ಕೆಲಸಕ್ಕೆ ಸೇರಿದ ಅಧ್ಯಾಪಕರಾಗಿದ್ದ ವಿದ್ಯಾರ್ಥಿಗಳು;ಎರಡೂ ಮೂರೊ ಕಾರುಗಳಲ್ಲಿ ಲಲಿತಾದ್ರಿಗೆ ಹೋಗಿದ್ದೆವು. ಭೋಜನ ವ್ಯವಸ್ಥೆಯೆಲ್ಲ ಎಂದಿನಂತೆ ಅನಂತರಂಗಾಚಾರ್ ನೇತೃತ್ವದಲ್ಲಿ ನಡೆದಿತ್ತು. ಆಗ‘ಲಲಿತಾದ್ರಿ’ತುಂಬ ಮನೋಹರವಾಗಿ ಉದ್ಯಾನಾವೃತ್ತವಾಗಿದ್ದು ಲಲಿತ ಪ್ರವಾಸಗಳಿಗೆ ಆದರ್ಶಪ್ರಾಯವಾಗಿತ್ತು. ಆದ್ದರಿಂದಲೆ ನನ್ನ ಕವನ‘ಲಲಿತಾದ್ರಿ’ಮೂಡಿತ್ತು. ನನಗೆ ಆನಂದದ ವಿವರವೇನೂ ನೆನಪಿದೆ. ಕತ್ತಲಾಗಿ ಬೆಳ್ದಿಂಗಳು ಚೆಲ್ಲಿದ ಮೇಲೆ,ಬಿಸಿಬೇಳೆ ಹುಳಿಯನ್ನ ಇತ್ಯಾದಿಗಳೆಲ್ಲ ಪೂರೈಸಿದ ಮೇಲೆ ವೆಂಕಣ್ಣಯ್ಯನವರು ಕೆಲವು ನನ್ನ ಹೊಸ ಕವನಗಳನ್ನೋದುವಂತೆ ಪ್ರಚೋದಿಸಿದರು. ನಾನೂ ಉತ್ಸಾಹದಿಂದಲೆ ಅವರ ಕರೆಗೆ ಓಗೊಟ್ಟಿದ್ದೆ.)

೧೩-೪-೧೯೩೦ನೆಯ ತಾರೀಖಿನಲ್ಲಿ ಎನ್.ಅನಂತರಂಗಾಚಾರ್ಯರ ಮೈಸೂರು ವಿಳಾಸ ಮಾತ್ರವಿದೆ. ಬಹುಶಃ ನಾನು ಬೇಸಿಗೆ ರಜಕ್ಕೆ ಊರಿಗೆ ಹೊರಡುವ ಮುನ್ನ ಯಾವ ಕಾರಣಕ್ಕೂ ಏನೊ ಅವರ ವಿಳಾಸ ಬರೆದುಕೊಂಡಿರಬೇಕು. ಮುಂದಿನ ನನ್ನ ದಿನಚರಿಯಲ್ಲಿ ೧೯-೪-೧೯೩೦ನೆಯ ತಾರೀಖು ಹಾಕಿ‘ಆಗುಂಬೆ ಘಾಟಿಗೆ ಲಲಿತಯಾತ್ರೆ’ಎಂದಿದೆ. ಅಂದರೆ ಈ ಮಧ್ಯೆ ನಾನು ಮೈಸೂರಿನಿಂದ ಮಲೆನಾಡಿಗೆ ಹೋಗಿದ್ದು, ಬಹುಶಃ ಇಂಗ್ಲಾದಿಯ ಕಾರಿನಲ್ಲಿ ಡಿ.ಆರ್.ವೆಂಕಟಯ್ಯನವರೊಡನೆ ನಾವೆಲ್ಲ ಆಗುಂಬೆಗೆ ಹೋಗಿ ಸೂರ್ಯಾಸ್ತ ನೋಡಿ ಬಂದಿರಬೇಕು. ಮುಂದಿನ ನನ್ನ ದಿನಚರಿಯಲ್ಲಿ‘ನ’ಎಂಬ ಹೆಸರೂ ಬರುತ್ತಿರುತ್ತದೆ.‘ನ’ಎಂದರೆ ನರಸಿಂಹಮೂರ್ತಿ, ಮೊನ್ನೆ ತಾನೆ(೨೧-೪-೧೯೨೪)ಬೆಂಗಳೂರಿನಲ್ಲಿ ತೀರಿಕೊಂಡ ಶ್ರೀಎ.ಸಿ.ನರಸಿಂಹಮೂರ್ತಿ. ಇತ್ತೀಚಿನ ಕೆಲವು ವರ್ಷಗಳಲ್ಲಿ ನಾನು ಬೇಸಿಗೆ ರಜಾಕ್ಕೆ ಊರಿಗೆ ಹೋಗುವಾಗಲೆಲ್ಲ ಯಾರಾದರೂ ಒಬ್ಬರೊ ಇಬ್ಬರೊ ಬಯಲುಸೀಮೆಯ ಬ್ರಾಹ್ಮಣ ಸ್ನೇಹಿತರು ನನ್ನೊಂದಿಗೆ ಬಂದು ಕುಪ್ಪಳಿಯಲ್ಲಿದ್ದು ನನ್ನೊಡನೆ ಕಾಡು ಕಣಿವೆ ಬೆಟ್ಟಗಳನ್ನಲೆದು ಮೈಸೂರಿಗೆ ಹಿಂತಿರುಗುತ್ತಿದ್ದರು. ಹಾಗೆ ಕುಪ್ಪಳಿಗೆ ಬರುತ್ತಿದ್ದವರಲ್ಲಿ ಎ.ಸಿ.ನರಸಿಂಹಮೂರ್ತಿಯ ಅಣ್ಣ ಎ.ಸಿ.ಶ್ಯಾಮರಾವ್ ಮೊದಲಿಗರಾಗಿದ್ದರು. ಅವರು ಕುಪ್ಪಳಿಮನೆಯ ಉಪ್ಪರಿಗೆಯ ಕೋಣೆಯಲ್ಲಿ ಸ್ಟೌ ಹೊತ್ತಿಸಿ ತಮ್ಮ ಅಡುಗೆ ತಾವೆ ಮಾಡಿಕೊಳ್ಳುತ್ತಿದ್ದರು. ಆಮೇಲಾಮೆಲೆ ಎ.ಸಿ.ನರಸಿಂಹಮೂರ್ತಿ, ಬಿ.ಕೃಷ್ಣಮೂರ್ತಿ, ಎ.ಸೀತಾರಾಂ ಮೊದಲಾದ ಹಲವಾರು ಮಿತ್ರರು ಬಂದಿದ್ದು ಹೋಗುತ್ತಿದ್ದರು. ದೇವಂಗಿ ರಾಮಣ್ಣಗೌಡರ ಹಿರಿಯ ಮಗ ವೆಂಕಯ್ಯನವರು ಇಂಗ್ಲಾದಿಯಲ್ಲಿಯೂ ನಮ್ಮನ್ನೆಲ್ಲ ಅಥಿತಿಗಳನ್ನಾಗಿ ಸ್ವೀಕರಿಸಿ ಬೇಟೆ ಮೊದಲುಗೊಂಡು ಬ್ಯಾಡ್ ಮಿಂಟನ್, ವಾಲಿಬಾಲ್, ಇಸ್ಪೀಟು, ಕೇರಂ ಮೊದಲಾದ ಮೃಗಯಾ ಮತ್ತಿತರ ಕ್ರೀಡೆಗಳಿಂದ ನಮ್ಮನ್ನೆಲ್ಲ ನಲಿಸುತ್ತಿದ್ದರು. ಆ ವಿಚಾರವಾಗಿ ಕೆಲವು ಸ್ವಾರಸ್ಯ ಘಟನೆಗಳನ್ನು ಮುಂದೆ ತಿಳಿಸುವ ಅವಕಾಶ ಒದಗಬಹುದು. ಓದುಗರಲ್ಲಿ ಒಂದು ವಿನಂತಿ: ನನ್ನ ಈ ದಿನಚರಿಯ ಬರವಣಿಗೆ ಅಂದಿನ ಆ ಅನುಭವಗಳ ಜೀವಂತಿಕೆ, ಮಾಧುರ್ಯ ಮತ್ತು ಉಲ್ಲಾಸಮಯ ಸದೃಶ್ಯವಾಗಿ, ನಿರ್ಜೀವ ನೀರಸವಾಗಿ ಬಿಡುತ್ತದೆ. ಓದುಗರ ಕಲ್ಪನೆ ಆ ರಕ್ತ ಮಾಂಸ ಜೀವಗಳನ್ನು ಈ ಎಲುಬಿನ ಗೂಡಿಗೆ ತುಂಬಿಕೊಳ್ಳಬೇಕಾಗುತ್ತದೆ!

೨೫-೪-೧೯೩೦:ಕುಪ್ಪಳಿ

ಮಾ(ಡಿ.ಆರ್.ಮಾನಪ್ಪ)ಬಂದಿದ್ದ.‘ದುರಂತ ಕರ್ಣ’ನನ್ನು ಬರೆದು ಮುಗಿಸಿದೆ. (ಮಹಾರಾಜಾ ಕಾಲೇಜಿನ ವಿದ್ಯಾರ್ಥಿ ಸಂಘದವರು ಪ್ರಕಟಿಸಲಿದ್ದ ಕುಮಾರವ್ಯಾಸ ಪ್ರಶಸ್ತಿಗಾಗಿ.)ಸಾಯಂಕಾಲ ನರಸಿಂಹಮೂರ್ತಿ ನಾನು ಅಡ್ಡಾಡಲು ಹೋದೆವು.(ಕವಿಶೈಲದತ್ತ ಕಾಡುಮಲೆಗಳಲ್ಲಿ.)…ಡಿಕ್ವಿನಿಯ‘My First Acquaintance with the poets’ಎಂಬ ಪ್ರಬಂಧ ಓದಿದೆವು. ರಾತ್ರಿ ಕೊಳಲಿನ ಪದ್ಯಗಳನ್ನು ಹಾಡಿದೆವು. ಇಸ್ಪೀಟು ಆಡಿದೆವು. (ಎ.ಸಿ.ನರಸಿಂಹಮೂರ್ತಿ ಭಾವಗೀತೆಗಳನ್ನು ತುಂಬ ಸೊಗಸಾಗಿ ಹಾಡುತ್ತಿದ್ದರು.)

೨೬-೪-೧೯೩೦:

ಬೆಳಿಗ್ಗೆ ಇಂಗ್ಲಾದಿಗೆ ಹೋದೆವು. ಸಾಯಂಕಾಲ ಉಂಟೂರು ಗುಡ್ಡಕ್ಕೆ ಹೋಗಿ ಹಾಡಿದೆವು. ಡಾಕ್ಟರೂ ನಾವೂ.(ಆಗ ದೇವಂಗಿ ಮನೆಯಲ್ಲಿಯೆ ಸರ್ಕಾರಿ ಆಸ್ಪತ್ರೆ ಮತ್ತು ಪೋಸ್ಟಾಫೀಸು ತೆರೆದಿದ್ದರು. ಇತ್ತೀಚೆಗೆ ತೀಥಹಳ್ಳಿ ಕೊಪ್ಪಾ ರಸ್ತೆಯಲ್ಲಿ ಹೊಸಕಟ್ಟಡ ಕಟ್ಟಿದಮೇಲೆ ಅಲ್ಲಿಗೆ ವರ್ಗಾವಣೆಗೊಂಡುವು. ಆಗ ಡಾಕ್ಟರು ದೇವಂಗಿ ಮನೆಯ ಒಂದು ಸಣ್ಣ ಕಟ್ಟಡದಲ್ಲಿಯೆ ಸಂಸಾರ ಸಮೇತ ವಾಸಿಸುತ್ತಿದ್ದರು.) ಕುಮಾರವ್ಯಾಸ, ಪಾಂಚಜನ್ಯ, ಕಬ್ಬಿಗರು ಮೊದಲಾದುವುಗಳ ಪಠನವಾಯಿತು. ನರಸಿಂಹಮೂರ್ತಿ ಕೊಳಲುನ ಅನೇಕ ಭಾವಗೀತೆಗಳನ್ನು ಬಂಡೆಯ ನೆತ್ತಿಯಲ್ಲಿ ಕುಳಿತು ಹಾಡಿದರು.

೨೭-೪-೧೯೩೦

ಬೆಳಿಗ್ಗೆ ಬೇಟೆಗೆ ಹೋದೆವು. ಜೋಗಿಗುಡ್ಡದಲ್ಲಿ ನಾನು ಒಂದು ಮೊಲಕ್ಕೆ ಹೊಡೆದ ಈಡು ತಪ್ಪಿತು. ಆಮೇಲೆ ಹೋಗುತ್ತಾ ಒಂದು ಬರ್ಕಕ್ಕೆ ಹೊಡೆದೆ. ಅದೂ ತಪ್ಪಿತು. ಹಾರ್ವರ ಹಾಡ್ಯದಲ್ಲಿ ಬಿಲ್ಲಿಗೆ ಕೂತಿದ್ದಾಗ ಹಿಂದುಗಡೆಯಿಂದ ಮಿಂಚಿನ ವೇಗದಲ್ಲಿ ಓಡಿಹೋಗುತ್ತಿದ್ದ ಒಂದು ಕಾಡುಕುರಿಗೆ ಗುಂಡಿಗೆ ನಳಿಗೆಯ ಬಿಲ್ಲನ್ನೆ ಏರಿಸಿದ್ದು ಗುರಿಯಿಡಲು ಸಾಧ್ಯವಾಗದೆ ಅಂದಾಜಿನ ಮೇಲೆಯೆ ಈಡು ಹಾರಿಸಿದೆ. ಗುಂಡು ಅದರ ಸೊಂಟಕ್ಕೆ ತಗಲಿ ಕಾಡುಕುರಿ ಬಿದ್ದು, ಕರುಣಾಕರವಾಗಿ ಕೂಗಿಕೊಳ್ಳಲುತೊಡಗಿತು. ಆಕ್ರಂದನ ಕಾಡನ್ನೆಲ್ಲ ಕನಿಕರಿಸುವಂತಿತ್ತು. ನನಗೆ ತಡೆಯಲಾಗಲಿಲ್ಲ. ಬೇಗಬೇಗ ಬಿಲ್ಲಿನಿಂದ ಎದ್ದು ಓಡಿಹೋಗಿ ಕುರಿಯ ತಲೆಗೆ ಗುರಿಯಿಟ್ಟು ಮತ್ತೊಂದು ಈಡು ಹೊಡೆದೆ. ಅದು ಸತ್ತು, ಕೂಗಿ ನಿಂತಿತು….. ಕಟ್ಟಿನಿಂದ ಕಟ್ಟಿಗೆ ಅಲೆದು, ಬಿಲ್ಲಿಗೆ ಕೂತು ಸಾಕಾಗಿ, ಬಿಸಿಲಿನಲ್ಲಿ ಬಾಯಾರಿ ಅಪರಾಹ್ನ ಒಂದು ಗಂಟೆ ಹೊತ್ತಿಗೆ ಇಂಗ್ಲಾದಿಗೆ ಬಂದೆವು. ಸಾಯಂಕಾಲ ಡಾಕ್ಟರೂ ಸೇರಿದಂತೆ ನಾವೆಲ್ಲರೂ-ವೆಂಕಟಯ್ಯ ಹಿರಿಯಣ್ಣ, ಮಾನಪ್ಪ,ನರಸಿಂಹಮೂರ್ತಿ, ಇತ್ಯಾದಿ-ತಿರುಗಾಡಲು ಹೋದೆವು. ಹಿಂದೂ ಪತ್ರಿಕೆ ಓದಿದೆವು.(ಸ್ವಾತಂತ್ರ‍್ಯ  ಸಂಗ್ರಾಮದ ಸತ್ಯಾಗ್ರಹದ ಬಿಸಿ ಸುದ್ದಿಗಳು.)

೨೮-೪-೧೯೩೦

ಬೆಳಿಗ್ಗೆ ಎದ್ದು ಕಂಪನಕೊಡಿಗೆ ತೋಟಕ್ಕೆ ಹೋದೆವು. ಬೆಮ್ಮಾರಲಹಣ್ಣು ತಿಂದೆವು. ಕಡೆಗೆ ದೇವಂಗಿಗೆ ಹೋದೆವು. ಅಲ್ಲಿ…..

ನಾನು ಸಾಧಕನು, ಸಿದ್ಧನಲ್ಲ;
ನಾನು ಸಾಹಸಿಯು, ವಿಜಯಿಯಲ್ಲ!
ಇನಿತು ದಿನ ಕೈಹಿಡಿದು ನಡೆಸಿದೈ ನೀನು
ಇನ್ನು ಕೈಬಿಟ್ಟೆಯಾದರೆ ನಿನಗೆ ನಿನ್ನಾಣೆ!
ಕೇಡು ಮಾಡುವ ಸಿಹಿಯ
ದೂರಮಾಡು,
ಒಳ್ಳಿತಾಗುವ ಕಹಿಯ
ನನಗೆ ನೀಡು!

‘ಕಬ್ಬಿಗರ ಕಾವ’ವನ್ನು ಮಧ್ಯಾಹ್ನ ಓದಿದೆ….. ಬಗೆ ಕದಡಿ ಗುರುದೇವನನ್ನು ಮನದಣಿಯೆ ಬೇಡಿದೆನು. ಮರಳಿ ದೇವಂಗಿಗೆ ಹೋಗಿ ಹಿಂದೂ ಪತ್ರಿಕೆ ಓದಿದೆ. ಮತ್ತೆ ಎಲ್ಲರೂ ಉಂಟೂರು ಗುಡ್ಡಕ್ಕೆ(ಅದಕ್ಕೆ ‘ಗಂಧರ್ವವೇದಿಕೆ’ ಎಂದು ನಾಮಕರಣ ಮಾಡಿದ್ದೆವು.)ಹೋದೆವು. ಸಂಜೆವೆಣ್ಣು, ಆತ್ಮನಿವೇದನ, ನಿನ್ನವನು ನಾನಲ್ಲವೇ, ಗೊಲ್ಲನ ಗಾಯತ್ರಿ, ಕುಮಾರವ್ಯಾಸ ಇತ್ಯಾದಿ‘ಕೊಳಲಿ’ನ ಮತ್ತು ಇತರ ಕವನಗಳನ್ನು ಹಾಡಿದೆವು…. ಗುಡ್ಡದ ನೆತ್ತಿಯಲ್ಲಿಯೆ ಕತ್ತಲಾಯಿತು. ದಟ್ಟ ಕಾಡಿನಲ್ಲಿ ಇಳಿದು ಬರುವಾಗ ಮಿಣುಕುಹುಳುಗಳು ಬನದ ಮುದ್ದೆಮುದ್ದೆಯ ಕಗ್ಗತ್ತಲಲ್ಲಿ ಚಿಮುಕಿಸಿ ಚೆಲ್ಲಿ ಸೂಸುತ್ತಿದ್ದ ಮಿಂಚಿನ ಹನಿಗಳನ್ನು ನೋಡಿ ನೋಡಿ ಮೈಮರೆತೆವು…. ಸ್ವಲ್ಪಹೊತ್ತು ಧ್ಯಾನ ಮಾಡಿದೆ. ರಾತ್ರಿ ಆ ಚೆಲ್ವಿನ ಮುದ್ದು ಮೂರ್ತಿಯೇ ಕಂಗಳೆದುರು ನಲಿದಾಡಿ ಎದೆಯನ್ನು ಕೆರಳಿಸಿ ಬಗೆಯನ್ನು ಸೆಳೆಯತೊಡಗಿತು. ನಾನು, ಕಂಗೆಟ್ಟು ಹಾದಿಯರಿಯದೆ ಗುರುದೇವನಿಗೆ ಮೊರೆಯಿಟ್ಟು “ಕರುಣಾಳು ಬಾ, ಬೆಳಕೆ ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು.”ಎಂದು ಪ್ರಾರ್ಥಿಸಿದೆ-ಎರಡು ಹಾದಿಗಳ ನಡುವೆ ಸಿಕ್ಕಿರುವೆ. ಎರಡು ದೃಷ್ಟಿಗಳು ನನ್ನನ್ನು ಸೆಳೆಯುತ್ತಿವೆ. ಒಂದು ಶುಷ್ಕ ಸತ್ಯ,ಮತ್ತೊಂದು ಸರಸ ಸೌಂದರ್ಯ! ಒಂದು ಮಹತ್ತಾದುದು; ಮತ್ತೊಂದು ಆನಂದವಾದುದು. ಶ್ರೀಗುರುವೇ ನನ್ನನ್ನು ಉದ್ಧರಿಸಬೇಕು. ನನಗೆ ಎರಡೂ ಸರಿಯೆ! ಸೊಬಗಿಗೆ ಒಂದು ಸಾರಿ ಸೆರೆಯಾಳಾನು! ನನ್ನಿಗೊಂದು ಸಾರಿ ಅಡಿಯಾಳಾನು!

ಸೊಬಗೆ ನನ್ನಿ ಎಂದು ಸಾರಿ
ನನ್ನಿಯೆ ಸೊಬಗೆಂದು ತೋರಿ
ಸೊಗದ ಸೊದೆಯ ತಿರೆಗೆ ಬೀರಿ
ಒಲ್ಮೆ ಸೊಬಗು ಸೊಗದಲಿ
ಪರಮಪುರುಷನಮಲ ಹರುಷ-
ವಿಹುದ ಸಾರಿ ಜಗದಲಿ!

ನಾನು ಒಂದನ್ನು ಬಿಟ್ಟು ಒಂದನ್ನು ಹಿಡಿಯಲಾರೆ. ಆ ಎರಡರ ಸಮನ್ವಯವೇ ನಿಜವಾದ ಯೋಗ! ತ್ಯಾಗ ಭೋಗಗಳ ಸಮನ್ವಯವೇಯೋಗ! ಜಯ ಗುರುದೇವ! ಜಯ ಸ್ವಾಮಿಜಿ! ಜಯ ಮಹಾಮಾತೆ! ಜಯ ಭವತಾರಿಣಿ!Lead me kindly light! ಸೌಂದರ್ಯ- ಮಧುರಾಗ್ನಿಯಲಿ ಬಿದ್ದು ಬೇಯುತಿಹೆ!

೨೯-೪-೧೯೩೦:

ಬೆಳಿಗ್ಗೆ ಇಂಗ್ಲಾದಿಯಿಂದ ಕುಪ್ಪಳಿಗೆ ಹೊರಟೆವು, ನಾನು, ನರಸಿಂಹಮೂರ್ತಿ ಸಹ್ಯಾದ್ರಿಯ ಶ್ಯಾಮಲಸುಂದರ ನಿಬಿಡೋನ್ನತ ವನಶ್ರೇಣಿಗಳ ಮೇಲೆ ಪ್ರಾತಃಸೂರ್ಯನ ಹೇಮಜ್ಯೋತಿಯು ಸ್ವರ್ಗೀಯ ರಮ್ಯವಾಗಿತ್ತು. ದಾರಿಯಲಿ ಕೋಟಿ ಪಕ್ಷಿಗಳ ಮಧುತ ನಿಸ್ವನಮೇಳ! ಕಕ್ಕೆ, ನೇರಿಲು ಮೊದಲಾದ ಮರಗಳ ಹೂವಿನ ಮುದ್ದೆ! ಪುಷ್ಪೋನ್ಮತ್ತ ವೃಕ್ಷಗಳನ್ನು ನೋಡಿ ಹುಚ್ಚನಾದೆ. ಮರಗಳಿಗೆ ಹೂವಿನ ಹುಚ್ಚು, ಹಕ್ಕಿಗಳಿಗೆ ಹಾಡಿನ ಹುಚ್ಚು, ಕಾಡುಗಳಿಗೆ ಹಸುರಿನ ಹುಚ್ಚು, ಕಬ್ಬಿಗನಿಗೆ ಬರಿಯ ಹುಚ್ಚು-ಸಾವಿನ ಹುಚ್ಚು, ಬದುಕಿನ ಹುಚ್ಚು, ಒಲ್ಮೆಯ ಹುಚ್ಚು, ಬೇಟದ ಹುಚ್ಚು, ಚಾಗದ ಹುಚ್ಚು, ಬರಿಯ ಹುಚ್ಚು! ಏನು ಕಿಚ್ಚು!

ಮಧ್ಯಾಹ್ನ ಗಾಂಧೀಜಿಯವರ who is a sathyagrahi?(ಸತ್ಯಾಗ್ರಹಿ ಯಾರು)ಎಂಬ ಲೇಖನವನ್ನು ಓದಿ‘ಸತ್ಯಾಗ್ರಹಿ’ಎಂಬ ಕವನ ಬರೆದೆ. ಅದನ್ನು‘ವಿಶ್ವಕರ್ಣಾಟಕ’ಕ್ಕೆ ಕಳುಹಿಸಲು ಎ.ಸಿ.ನರಸಿಂಹಮೂರ್ತಿ ನಕಲು ಮಾಡಿದರು. ಮನಸ್ಸೆಲ್ಲಾ ಅಂತರ್ಮುಖಿಯಾಗಿದೆ.

ಸೌಂದರ್ಯದೇವತೆಯ ಪೂಜೆಯನು ಮಾಡಿದರೆ
ಸ್ವಾತಂತ್ರ‍್ಯ ದೇವತೆಗೆ ಮುನಿಸು ಬಹುದು;
ಸ್ವಾತಂತ್ರ ದೇವತೆಯ ಪೂಜೆಯನು ಮಾಡಿದರೆ
ಸೌಂದರ್ಯದೇವತೆಯು ಎದೆಯಿರಿವಳು.
ಅವಳ ಚೆಲುವಿಗೆ ಸೋಲೆ
ಇವಳಿಗೆನ್ನಯ ಮೇಲೆ
ಕೋಪವಹುದು!
ಒಂದು ನನ್ನಿಯ ಮುಕ್ತಿ,
ಒಂದು ಸೊಬಗಿನ ಭಕ್ತಿ,
ಎರಡು ಬೇಕು!
ಬಗೆಗೆ ಸತ್ಯವು ಬೇಕು,
ಎದೆಗೆ ಸೌಂದರ್ಯ ಬೇಕು
ನನಗೆರಡು ಬೇಕು!-

ಗುರುದೇವನೇ ಪೊರೆಯಬೇಕೆನ್ನ. ಕಂಗೆಟ್ಟು ಹೋಗಿಹೆನು. ರಾತ್ರಿ ಗ್ರಾಮಫೋನ್ ಕೇಳಿದ್ದೇ ಕೇಳಿದ್ದು!

೩೦-೪-೧೯೩೦-ವೈಶಾಖ ಶುದ್ಧ ೨-(ಕುಪ್ಪಳಿಯಲ್ಲಿ.)

ಬೆಳಿಗ್ಗೆ ತಿ.ತಾ.ಶರ್ಮರಿಗೆ ಕಾಗದ ಬರೆದು‘ಸತ್ಯಾಗ್ರಹಿ’ಯನ್ನು ಕಳುಹಿಸಿದೆ. ಬಿ.ಎಸ್.ರಾಮರಾಯರಿಗೆ ಕಾಗದ ಬರೆದೆ. ಗುರಪ್ಪಗೌಡರಿಗೆ ಬರೆದೆ.‘ಕಬ್ಬಿಗರ ಕಾವ’ದಲ್ಲಿ ಸಂಗ್ರಹಿಸಬೇಕಾದ ಭಾಗಗಳನ್ನು ಗುರುತಿಸಿಕೊಂಡೆ-

ಈಗ ೧೦ ಗಂಟೆಗೆ ಐದು ನಿಮಿಷ ಇದೆ. ನಾನು ಕುರ್ಚಿಯಮೇಲೆ ಕುಳಿತು ಡೈರಿ ಬರೆಯುತ್ತಿದ್ದೇನೆ.(ಕುಪ್ಪಳಿಯ ಉಪ್ಪರಿಗೆಯಲ್ಲಿ.)ಮೂರ್ತಿ ಸ್ಟೌ ಮುಂದೆ ಕುಳಿತು‘ಕೊಳಲು’ಹಾಡುತ್ತಿದ್ದಾರೆ.(ಎ.ಸಿ.ನರಸಿಂಹಮೂರ್ತಿಯೂ ಅವರ ಅಣ್ಣನಂತೆಯೆ ಮೊದಲು ಮೊದಲು ತಾವೇ ತಮ್ಮ ಊಟವನ್ನು ಸಿದ್ಧಮಾಡಿಕೊಳ್ಳುತ್ತಿದ್ದರು. ಕಾಫಿಯನ್ನು ಮಾತ್ರ ನಮ್ಮೊಡನೆಯೆ ನಾವು ತಯಾರಿಸಿದ್ದನ್ನೆ ತೆಗೆದುಕೊಳ್ಳುತ್ತಿದ್ದರು. ಕೆಲವು ಸಾರಿ ತಾವೆ ತಯಾರಿಸಿಕೊಳ್ಳಲು ಬೇಸರಾಗಿ ನಮ್ಮ ಮನೆಯವರು ಮಾಡಿದ ಸಾರು ಉಪ್ಪಿನಕಾಯಿ ಮಜ್ಜಿಗೆ ತೆಗೆದುಕೊಳ್ಳುತ್ತಿದ್ದರು. ಕೊನೆಕೊನೆಗೆ ಬಿ.ಕೃಷ್ಣಮೂರ್ತಿ, ಎ.ಸಿ.ಶ್ರೀಕಂಠಯ್ಯ(ನರಸಿಂಹಮೂರ್ತಿಯ ಎರಡನೆ ಅಣ್ಣ)ಮೊದಲಾದವರೂ ಬರತೊಡಗಿದಾಗ ಈ ಪ್ರತ್ಯೇಕ ಅಡುಗೆಯ ಮಡಿಯನ್ನು ತೆಗೆದೆಸೆದುಬಿಟ್ಟರು.) ಸ್ಟೌ ಶೃತಿ ಕೊಡುತ್ತದೆ.

ಮಧ್ಯಾಹ್ನ ಜಟ್ಟಿನಮಕ್ಕಿಗೆ ಹೋಗಿ, ಅಲ್ಲಿಂದ ದೇವಂಗಿಗೆ ಹೋದೆವು. ಅಲ್ಲಿ ‘ಕವಿತೆ’ಇರಲಿಲ್ಲ. ಹಿಂದೂ ಪತ್ರಿಕೆಯನ್ನು ತೆಗೆದುಕೊಂಡು ಅಂಚೆಮನೆ ಅರೆಕಲ್ಲಿಗೆ ಬಂದೆವು, ನಾನು, ಮೂರ್ತಿ, ಡಾಕ್ಟರು, ವೆಂಕಟಯ್ಯ. ಅಲ್ಲಿ ಮೂರ್ತಿ ಕೊಳಲಿನ ಪದ್ಯಗಳನ್ನು ಇಂಒಆಗಿ ಹಾಡಿದರು:‘ಘೋರಾಂಧಕಾರದೊಳು,’‘ಬಿನ್ನಹ’‘ಹೊಲದ ಹುಡುಗಿ,’‘ಸತ್ಯ ಮತ್ತು ಸೌಂದರ್ಯ’…ರಾತ್ರಿ ಹಿಂದೂ ಪತ್ರಿಕೆಯನ್ನು ಓದಿ ದೇಶದ ಹಾಹಾಕಾರ ಆಳರಸರ ದಬ್ಬಾಳಿಕೆಗಳನ್ನು ಕುರಿತು ಚಿಂತಿಸಿದೆವು..‘ಕವಿತೆ’ಯನ್ನು ನೆನೆದು ಮಲಗಿದೆ. ‘ಓಂ ನಮೋ ಭಗವತೇ ರಾಮಕೃಷ್ಣಾಯ!’

೧-೫-೧೯೩೦-ವೈಶಾಖ ಶುದ್ಧ ೩-(ಕುಪ್ಪಳಿಯಲ್ಲಿ.)

ಬೆಳಿಗ್ಗೆ ‘ರಸ ಋಷಿ’ಯನ್ನು ಬರೆಯತೊಡಗಿದೆನು.Golden Treasury ಯಿಂದ ಪದ್ಯ ಓದಿದೆನು. ನನ್ನ ಕವಿತೆಗಳಲ್ಲಿ ಕೆಲವನ್ನು ಓದಿದೆವು. ಮಧ್ಯಾಹ್ನ ಹಗಲು ನಿದ್ದೆ ಮಾಡಿದೆವು. ಸಾಯಂಕಾಲ ೫ಗಂಟೆಗೆ ಅಂಚೆಮನೆ ಬಂಡೆಗೆ ಹೋದೆವು. ದಾರಿಯಲ್ಲಿ ವಿವಾಹದ ವಿಚಾರ ಮಾತಾಡಿದೆವು. ವಿವಾಹ ಮಾಡಿಕೊಳ್ಳುವುದು ಹೇಯವಾದುದೆಂದು ನಾನು ಎಣಿಸುವುದಿಲ್ಲ. ಆದರೆ ವಿವಾಹವಾದರೆ ನಮ್ಮ ಸ್ವಾತಂತ್ರ, ದಿವ್ಯ ನಿರ್ಲಕ್ಷತೆ, ಕಲ್ಕಿತನ ಹೋಗುವುದೋ ಏನೋ ಎಂದು ಭಯ! ಎಂದು ಹೇಳಿದೆ. ದಾರಿಯಲ್ಲಿ ಪ್ರಕೃತಿ ನಿರ್ಲಕ್ಷ ಜೀವನದ ವಿಚಾರ ಚರ್ಚೆಮಾಡಿದೆವು. ರಾತ್ರಿ ಬಹಳ ಹೊತ್ತು ಮಂತ್ರಜಪ ಮಾಡಿದೆ.

೨-೫-೧೯೩೦-ವೈಶಾಖ ಶುದ್ಧ ೪-(ಕುಪ್ಪಳಿಯಲ್ಲಿ.)

ಬೆಳಿಗ್ಗೆ ಮೇಲೆ ಬೆಟ್ಟಕ್ಕೆ ಹೋದೆವು.(ಈಗಿನ ‘ಕವಿಶೈಲ’‘ಸಂಜೆಗಿರಿ’ ಕಡೆಗೆ.) ರಮಣೀಯವಾದ ಘಟ್ಟಗಳ ಮಾಲೆಗಳನ್ನು ಬಣ್ಣಿಸುತ್ತಾ ನಲಿದೆವು….‘ರಸ ಋಷಿ’ಯನ್ನು ಹನ್ನೆರಡು ಗಂಟೆಗೆ ಮುಗಿಸಿದೆನು. ಸಾಯಂಕಾಲ ಇಂಗ್ಲಾದಿಗೆ ಹೋದೆವು. ಸಿದ್ಧಸೆಟ್ಟಿ ಕಾಲವಾದನು.