೩-೫-೧೯೩೦(ಇಂಗ್ಲಾದಿಯಲ್ಲಿ.)

ರಾತ್ರಿ ‘ಕೊಳಲು’ಕವನಸಂಗ್ರಹದಿಂದ ಎ.ಸಿ.ನರಸಿಂಹಮೂರ್ತಿ ಕವನಗಳನ್ನು ಹಾಡಿದರು. ಸಿಬ್ಬಲುಗುಡ್ಡೆಗೆ ಹೋದೆವು. ದೊಡ್ಡದೊಡ್ಡ ಮೀನುಗಳಿಗೆ ಪುರಿ ಹಾಕಿದೆವು. ಸುಂದರ ದೃಶ್ಯ. ನದಿಯ ಎರಡು ಕೂಲಗಳಲ್ಲಿಯೂ ದಟ್ಟವಾದ ತಳಿತ ಕೊಬ್ಬಿದ ಅರಣ್ಯಶ್ರೇಣಿಗಳ ವೃಕ್ಷಮಾಲೆ. ಮೈಲಿಯುದ್ಧ ಹರಡಿದ್ದ ಶ್ವೇತಸೈಕತರಂಗ. ಮಂಜುಳನಾದದಿಂದ ಮಂದಗಮನೆಯಾಗಿ ಪ್ರವಹಿಸುವ ಮಂಗಳ ತುಂಗೆ. ಅಲ್ಲಲ್ಲಿ ನೀರಿನಿಂದ ಮೇಲೆದ್ದ ಹೆಬ್ಬಂಡೆಗಳು. ಹಾರುತ್ತಿರುವ ಚುರುಕಿನ ಮುದ್ದೆಯನ್ನೆ ಮುದ್ರಿಸುದಂತಹ ಹೊಳೆಯ ಮೀಂಚುಳ್ಳಿ. ಕೊಕ್ಕು ಚೆನ್ನ. ಎದೆಯು ಕಪ್ಪು. ರೆಕ್ಕೆ ಬೆಳ್ಳಗೆ. ಮಿಂಚಿನ ಚಟುವಟಿಕೆ ಅದಕ್ಕೆ. ಸ್ವಲ್ಪ ಮೋಡ ಕವಿದಿತ್ತು. ಮುಂದೆ ಸೂರ್ಯಕಾಂತಿ. ನದಿಯ ಮೇಲುಗಡೆ ದೇವಾಲಯ. ವಸಂತೋನ್ಮತ್ತ ಕೋಗಿಲೆಗಳ ಹುಚ್ಚು ಹಿಡಿಸುವ ಹುಚ್ಚಿನ ಚೀರಿಂಚರ. ಎಲ್ಲ ಸ್ವರ್ಗೀಯವಾಗಿತ್ತು.

೪-೫-೧೯೩೦:

ಉಂಟೂರು ಗುಡ್ಡದ ನೆತ್ತಿ‘ಗಂಧರ್ವ ವೇದಿಕೆ’ಗೆ ಸಂಜೆ ಹೋಗಿದ್ದೆವು. ಮೋಡವೇರಿ ಮಿಂಚುಗುಡುಗು ಸಹಿತ ಮಳೆ ಸುರಿಯತೊಡಗಿ, ಓಡಿ ಓಡಿ ಗುಡಗುಡ್ಡವಿಳಿದು ಸಾಕಾಗಿ ಬಂದೆವು. ಹಳುವಿನಲ್ಲಿ ಮುಳ್ಳಿನಪೊದೆಗಳಲ್ಲಿ ನುಗ್ಗಿ ಬಟ್ಟೆ ಹರಿದು ಮೈ ಪರಚಿಸಿಕೊಂಡೆವು.

೫-೫-೧೯೩೦:

ವಾಟಿಗಾರಿಗೆ ಹೋಗಿ ಯಂತ್ರಜ್ಞ ಕಾರ್ಯ ಮಾಡಿದೆವು.(ಏನು ಎಂದು ನೆನಪಿಗೆ ಬರುವುದಿಲ್ಲ. ಬಹುಶಃ ಯಾವುದೋ ಪಂಪು ರಿಪೇರಿಯೋ?ಡಿ.ಆರ್.ವೆಂಕಟಯ್ಯನವರಿಗೆ ಅಂತಹ ಕಾರ್ಯಗಳೆಲ್ಲ ತಿಳಿದಿದ್ದು ವಾಟಿಗಾರು ಮಂಜಪ್ಪಗೌಡರ ಬೇಡಿಕೆಗೆ ಓಗೊಟ್ಟರೆಂದು ತೋರುತ್ತದೆ. ಇಂಗ್ಲಾದಿಯಲ್ಲಿ ಕೆಲವು ವರ್ಷಗಳಿಂದ ರೈಸ್ ಮಿಲ್ ತೆರೆದಿದ್ದು ಅದರ ಯಂತ್ರಕಾರ್ಯದಲ್ಲಿ ವೆಂಕಟಯ್ಯಗೆ ಆಸಕ್ತಿಯಿತ್ತು. ತಾವೇ ಆಳುಗಳ ಕೆಲಸವನ್ನೂ ಮಾಡುತ್ತಿದ್ದರು. ಕಾರು ಬೇರೆ ಇದ್ದುದರಿಂದ ಅದರ ಸೇವೆಯನ್ನೂ ಮಾಡುತ್ತಿದ್ದರು.) ರಾತ್ರಿ ಸಮುದ್ರಯಾನ.(ಎಂದು ದಿನಚರಿಯಲ್ಲಿ ಬರೆದಿದೆ. ಏನು ಎಂದು ಅರ್ಥವಾಗುತ್ತಿಲ್ಲ.)

೬-೫-೧೯೩೦:

ಒಂದು ಪದ್ಯ ಬರೆದೆ:‘ನೂರಾರು ಹೀನದಲಿ ನೀನೆನ್ನ ನೂಕುತಿಹೆ.’- ಹಿರಿಯಣ್ಣನನ್ನು ಕೇಳಿ ಉದ್ವೇಗ ನಿವಾರಣೆಯಾಯಿತು.(ಹೆಣ್ಣಿನ ವಿಚಾರದಲ್ಲಿ.)

೭-೫-೧೯೩೦:

ಬೆಳಿಗ್ಗೆ ಕುಪ್ಪಳಿಗೆ ಹೋದೆವು. ವೀ.ಸಿ.ಯವರ ಕಾಗದ. (ಈ ಕಾಗದ ‘ವಿಶ್ವಕರ್ಣಾಟಕ’ದವರು ಅವರಿಗೆ ಕಾಣಿಕೆಯಾಗಿ ಕೊಟ್ಟಿದ್ದ ‘ಕೊಳಲು’ ಕವನಸಂಗ್ರಹವನ್ನು ಓದಿ, ಮೆಚ್ಚಿ,ವಿ.ಸೀತಾರಾಮಯ್ಯನವರು ಬೆಂಗಳೂರಿನಿಂದ ನನಗೆ ಬರೆದದ್ದು. ಈ ಕಾಗದ ದೇ.ಜ.ಗೌ.ಅವರ‘ರಾಷ್ಟ್ರಕವಿ ಕುವೆಂಪು’ಗ್ರಂಥದಲ್ಲಿ ಪ್ರಕಟವಾಗಿದೆ. ಆ ಕಾಗದ ನನ್ನ ಮೇಲೆ ಎಂತಹ ಪರಿಣಾಮ ಮಾಡಿತ್ತು ಎಂದರೆ ಆ ಇಡೀ ಪತ್ರವನ್ನು ನನ್ನ ದಿನಚರಿಯಲ್ಲಿ ಅಂದೇ ಪ್ರತಿಮಾಡಿದ್ದೇನೆ. ಅವರ ಪ್ರಶಂಸೆಯ ನಿರಸೂಯತೆ ಮತ್ತು ಹೃತ್ಪೂರ್ವಕತೆಗಳಿಗೆ ನನ್ನ ಹೃದಯ ಎಷ್ಟು ಕೃತಜ್ಞವಾಗಿತ್ತು ಎಂಬುದನ್ನು ಸೂಚಿಸುತ್ತದೆ. ನಾನು ಅದನ್ನು ಅಮೂಲ್ಯವೆಂದು ಆ ದಿನವೆ ದಿನಚರಿಯಲ್ಲಿ ಪ್ರತಿಯೆತ್ತಿಕೊಂಡದ್ದು. ಆ ಇಂಗ್ಲಿಷ್ ಪತ್ರವನ್ನಿಲ್ಲಿ ಇಂದೂ(೨೯-೪-೧೯೭೪)ಹೆಮ್ಮೆ ಪಟ್ಟುಕೊಂಡೇ ಕೊಡುತ್ತದ್ದೇನೆ:ಅದು ಅಯಾಚಿತವಾಗಿ ಬಂದದ್ದು. ಅವರ ಹೃದಯದಿಂದ ತನಗೆ ತಾನೆ ಹೊಮ್ಮಿದ ಬುಗ್ಗೆಯಂತಿದೆ. ಆಗಿನ ಕಾಲಕ್ಕೇ ಅವರು ವಿಮರ್ಶಕವರೇಣ್ಯರೆಂದು ಪ್ರಸಿದ್ಧರಾಗಿದ್ದರು.‘ಪ್ರಬುದ್ಧ ಕರ್ಣಾಟಕ’ದಲ್ಲಿ ಬರುತ್ತಿದ್ದ ಅವರ ಪುಸ್ತಕಾವಲೋಕನಗಳನ್ನೂ ವಿಮರ್ಶೆಗಳನ್ನೂ ಪ್ರವರ್ಧಮಾನರಾಗುತ್ತಿದ್ದ ತರುಣರು ಗೌರವದಿಂದಲೆ ಓದಿ ಗಮನಿಸಿ ಚರ್ಚಿಸುತ್ತಿದ್ದರು.)

V.SITARAMAIAH
INTERMEDIATE COLLEGE
Bangalore,
1st May 1930

My dear Mr.Puttappa,

Many thanks for your kind gift ಕೊಳಲು which the V.K. people have sent on to me. The pieces are most of them, well known to me and were long before this collection. I have always been delighted with the original freshness of your pieces and the daring gallop of your numbers. They have the heartful touch with earth and like beautiful real flowers grow out of it.

I remember to have said to you-was it not at Belgaum?–that yours are the only poems which are cheerful and bright where wealth of poetic imagery and illumination runs hand in hand with a living zest for things. practically all others of any value, alas, for some reason or other have been sad. May the high gods preserve you from such a calamity and preserve you in full vigour of body. mind and spirit to give us more and ever more of your joyous ವಾಣಿ.

There is not a single piece among these poems howsoever the pedants may arraign it, for a littal freak, excess or loose end here and there which does not flash the poet K.V.P. And it is surely too late in the day to think of complimenting you as a poet. For, believe me, it is the opinion of many of us that yours is the purest steain of original poetry we have had of recent years, and that you are destined to be perhaps the most considerable poet of our time. There is nothing in Modern Kannada Literature to equal it in daring richness and exuberance- variety, God’s plenty.

I can’t help writing like this and Iam sure you will forgive me if I make you feel uncomfortable.

Trusting that this will find you in the enjoyment of perfect health.

I remain,

yours sincerely,
sd.(V.SITARAMIAH)

ದಿನ ಚರಿಯಲ್ಲಿ ವಿ.ಸೀತಾರಾಮಯ್ಯನವರ ಮೇಲೆ ಕಾಣಿಸಿದ ಪತ್ರದ ತರುವಾಯ “ಎ.ಆರ್.ಕೃಷ್ಣಶಾಸ್ತ್ರಿಗಳು‘ನನ್ನ ಗೋಪಾಲ’ವನ್ನು ಓದಿ ಇಂತೆಂದು ಬರೆದರು.” ಎಂದು ಅದನ್ನು ಬರೆಯಲಾಗಿದೆ. ತುದಿಯಲ್ಲಿ ಆವರಣ ಚಿಹ್ನೆಯೊಳಗೆ ‘produced by Memory(ನೆನಪಿನಿಂದ ಬರೆದದ್ದು)’ಎಂದಿದೆ. ಆದರೆ, ಆ ನೆನಪಿನಿಂದಲೆ ಬರೆದ ಅದು ಆಶ್ಚರ್ಯಕರವಾಗಿ ಮೂಲವನ್ನು ಪ್ರತಿಕೃತಿಸಿದೆಯಾದರೂ ಅಲ್ಲಲ್ಲಿ ಮೂಲದಿಂದ ಭಿನ್ನವಾಗಿದೆ. ಆದ್ದರಿಂದ ಇಲ್ಲೆ ಆ ಮೂಲವನ್ನೆ ಮೂಲದಿಂದಲೆ ಎತ್ತಿಕೊಡುತ್ತೇನೆ:

KARNATAKA SANGHA
CENTRAL COLLEGE
Bangalore

13th March 1930

My dear Puttappa,

I received-and read immediately-this morning your ನನ್ನ ಗೋಪಾಲ. As I have written to Mr.sastri, it is a littal gern containing in itself the essence of ಭಗವದ್ಗೀತಾ and ಭಾಗವತ.I have read the book with tears in my eyes and feel like a piece of clean linen for it. I am considered to be geberally cold and cutting, but belive me, I am overwhelmed by a feeling of exultation after reading it and feel incapable of doing any dull routine duty. Never was literature  made such a usful hand maid of Religion. May God and Goddess of Learning continue to go with you in your careerof service.

yours affectionataely,
sd.(A.R.KRISHNA SASTRY)

ಸಾಯಂಕಾಲ ಅಭ್ಯಂಜನ ಮಾಡಿದೆವು. ಸುಮಾರು ೬-೩೦ ಗಂಟೆಯ ಹೊತ್ತಿಗೆ ಗಿರಿಯಪ್ಪ ಹೆಗ್ಗಡೆಯವರು ಬಂದು ಗಾಂಧೀಜಿಯವರು ದಸ್ತಗಿರಿಯಾದ ವಿಚಾರ ಹೇಳಿದರು. ಹಿಂದೂ ಪತ್ರಿಕೆಯಲ್ಲಿಯೂ ದಪ್ಪ ಅಕ್ಷರಗಳಿಂದ “Mahatma Gandhi arrested and interned.” ಎಂದಿತ್ತು. ಎಲ್ಲರೂ ಕುತೂಹಲದಿಂದಲೂ ಕಳವಳದಿಂದಲೂ ವಿಚಾರಗಳನ್ನು ಓದಿದೆವು. ತರುವಾಯ ವಾಟಿಗಾರು ಮದುವೆಯಲ್ಲಿ ಮಾತನಾಡುವುದು ಬೇಡವೆಂದು ನಿರ್ಧರಿಸಿದ್ದ ನಾನು ಮಾತನಾಡಿಯೇ ಬಿಡಬೇಕೆಂದು ನಿರ್ಣಯಿಸಿದೆನು. ಬೆಳಿಗ್ಗೆ ರಾಷ್ಟ್ರಧ್ವಜಾರೋಹಣ ಮಾಡಬೇಕೆಂದು ನಿರ್ಧರಿಸಿದೆವು. ರಾತ್ರಿ ಬಹಳ ಚೆನ್ನಾಗಿ ನಿದ್ದೆ ಬಂತು.

(ಆ ಕಾಡಿನ ಮೂಲೆಯ ಒಂದೆಮನೆ ಹಳ್ಳಿಯಲ್ಲಿ ಆ ರಾಜಕೀಯ ವಾರ್ತೆ ನಮ್ಮ ಮೇಲೆ ಏನು ಪರಿಣಾಮ ಮಾಡಿರಬೇಕು? ಅಲ್ಲಿ ನಾವೆಲ್ಲ ಇದ್ದವರು ಒಟ್ಟು ಸೇರಿದರೂ ಹತ್ತು ಹದಿನೈದು ಮಂದಿ ಆಗುತ್ತಿರಲಿಲ್ಲ. ಆದರೂ ದೊಡ್ಡ ಊರುಗಳಲ್ಲಿ ಆಚರಿಸುವಂತೆ ಆಚರಿಸಲು ಮನದಂದೆವು, ಮರುದಿನ ಬೆಳಿಗ್ಗೆ ರಾಷ್ಟ್ರಧ್ವಜಾರೋಹಣಕ್ಕೆ ಭರತಮಾತೆಯ ಸ್ವಾತಂತ್ರಕ್ಕೆ, ಬ್ರಿಟಿಷ್ ಸಾಮಾಜ್ಯದ ಅಂತ್ಯಕ್ಕೆ!)

೮-೫-೧೯೩೦:

ಬೆಳಿಗ್ಗೆ ಎದ್ದು ವಾಟಿಗಾರಿನಲ್ಲಿ ಮಾತಾಡಬೇಕಾದ ವಿಷಯಗಳನ್ನು ಗುರುತು ಹಚ್ಚಿಕೊಂಡೆನು. ತರುವಾಯ ರಾಷ್ಟ್ರಧ್ವಜಾರೋಹಣ ಮಾಡಿದೆವು. ಮೂರ್ತಿ ರಾಷ್ಟ್ರಗೀತೆಗಳನ್ನು(ಜನಗಣಮನ ಮತ್ತು ಜಯ ಹೇ ಕರ್ಣಾಟಕ ಮಾತೆ) ಹಾಡಿದರು. ಎಲ್ಲರೂ ನಮಸ್ಕಾರ ಮಾಡಿ, ಮಹಾತ್ಮಾ ಗಾಂಧೀಕಿ ಜೈ, ಶ್ರೀಸ್ವಾಮಿ ವಿವೇಕಾನಂದ ಕೀ ಜೈ, ಶ್ರೀರಾಮಕೃಷ್ಣ ಪರಮಹಂಸ ಕೀ ಜೈ, ಮಹಾಮಾಯೇ ಕೀ ಜೈ ಎಂದು ಜಯಘೋಷ ಮಾಡಿದೆವು. ನೀರವ ನಿರ್ಜನ ಸುಂದರವಾದ ಅರಣ್ಯಗಳ ಮಧ್ಯೆ ನಮ್ಮ ಜಯಘೋಷವು ಪ್ರತಿಧ್ವನಿತವಾಗಿ ರಾಷ್ಟ್ರದ ಎಲ್ಲ ಕಡೆಗಳಲ್ಲಿಯೂ ಆಗುತ್ತಿದ್ದ ಜಯಘೋಷದೊಡನೆ ಕಲೆತುಹೋಯಿತು.

೯-೫-೧೯೩೦

ಇಂಗ್ಲಾದಿಗೆ ಬೆಳಿಗ್ಗೆ ಹೋದೆವು. ನನಗೆ ಜ್ವರ ಬಂದಿತು. ವಾಟಿಗಾರಿಗೆ ಹೋಗಿ ಉಪನ್ಯಾಸ ಮಾಡಲಾಗಲಿಲ್ಲ.

೧೦-೫-೧೯೩೦:

ರೋಗಶಯ್ಯೆಯಲ್ಲಿ….ಮಳೆ….

೧೧-೫-೧೯೩೦:

‘ತಾರೆಗಳ ಹೆಸರಿಲ್ಲ, ನೋಡಿದರೆ ಬಾನಿಲ್ಲ’ಎಂಬ ಪದ್ಯ ಬರೆದೆ…..

“ಮಳೆ”…..

೧೨-೫-೧೯೩೦:

‘ನವಾಬ ನಂದಿನಿ’ಓದಿದೆ… ಸೀತಾರಾಂ ಬರುತ್ತಾರೆಂದು ನೋಡಿದೆವು. ಬರಲಿಲ್ಲ….. ೨-೩೦ಕ್ಕೆ ಶೃಂಗೇರಿಗೆ ಹೊರಟೆವು. ಕೊಪ್ಪದೆ ಕಾಫಿಕಾನಿನ ಕೊರಕಲು ರಸ್ತೆಯ ಕೆಸರಿನಲ್ಲಿ ಮೋಟಾರನ್ನು ನೂಕಿ ತಳ್ಳಬೇಕಾಯಿತು. ದಾರಿಯಲ್ಲಿ ತಿರುಗಣೆಗಳೂ ಕಣಿವೆಗಳೂ ವನಪರ್ವತಗಳೂ ಹಳ್ಳಿಗಳೂ ತೋಟಗಳೂ ರಮಣೀಯವಾಗಿದ್ದವು. ಸುಮಾರು೫-೩೦ಕ್ಕೆ ಶೃಂಗೇರಿ ತಲುಪಿದೆವು. ಶಾರದಾ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ತುಂಗೆಗೆ ಹೋದೆವು. ಮೀನುಗಳಿಗೆ ಹಣ್ಣು ಪುರಿ ಹಾಕಿದೆವು. ಶೃಂಗೇರಿಯು ರಸಿಕ ತತ್ತ್ವಜ್ಞ ಶಂಕರಾಚಾರ್ಯನ ಮನಸ್ಸನ್ನು ಪ್ರತಿಬಿಂಬಿಸುವ ಮನೋಹರವಾದ ಕ್ಷೇತ್ರ. ತೀರ್ಥಹಳ್ಳಿಯ ರಾಮತೀರ್ಥನ ಸ್ಥಾನವನ್ನು ಬಿಟ್ಟರೆ ಶೃಂಗೇರಿಯೇ ಸರಿ! ನೃಸಿಂಹ ಭಾರತಿಸ್ವಾಮಿಗಳ ಸ್ಮಾರಕ ಮಂದಿರವನ್ನು ನೋಡಿದೆವು. ರಾತ್ರಿ ೮-೩೦ ಕ್ಕೆ ಮರಳಿ ಬಂದೆವು ಇಂಗ್ಲಾದಿಗೆ.

೧೩-೫-೧೯೩೦:

ಬೆಳಿಗ್ಗೆ ಅಕಸ್ಮಾತ್ತಾಗಿ ಎ.ಸೀತಾರಾಂ(ಆನಂದ)ಮತ್ತು ವೆಂಕಟಸುಬ್ಬಯ್ಯ(ಸೆಂಟ್ರಲ್ ಕಾಲೇಜಿನ ಸಸ್ಯಶಾಸ್ತ್ರದ ಅಧ್ಯಾಪಕರಂತೆ. ಅವರು ಮಲೆನಾಡಿನ ಕಾಡಿನ ನಾರು ಬೇರುಗಳನ್ನು ತಮ್ಮ ಪ್ರಯೋಗಶಾಲೆಗಾಗಿ ಆಯ್ದುಕೊಳ್ಳಲು ಬಂದಿದ್ದರಂತೆ.) ಬಂದರು. ಬಹಳ ಹೊತ್ತು ಅನೇಕ ವಿಚಾರ ಮಾತಾಡಿದೆವು. ಸೀತಾರಾಂ ತಮ್ಮ ಕಥೆಗಳನ್ನು ಕೊಟ್ಟರು. ‘ಶಿಲ್ಪಿ’ಎಂಬ ಲಲಿತಕಲಾ ಪತ್ರಿಕೆಯನ್ನು ತೋರಿಸಿದರು. ವರ್ಣಶಿಲ್ಪದ ವಿಚಾರವಾಗಿಯೂ ಬಹಳ ಹೊತ್ತು ಮಾತಾಡಿದೆವು. ನಗ್ನಗಳ ಮಾತೂ ಬಂತು. ಮಂಜುಂದಾರರ ಲೇಖನವನ್ನು ಓದಿದೆವು. To the unknown ಎಂಬ ಚಿತ್ರವನ್ನು ನೋಡಿ ಬೆರಗಾದೆವು. ಪಿಳ್ಳೆ ಎಂಬುವರಿಂದ ರಚಿತವಾದ ಆಂಗ್ಲೇಯ ಕವನವನ್ನು ಓದಿ, ಬಂಗಾಳಿಗಳ ಸಂಕುಚಿತವಾದ ನಾಡೊಲ್ಮೆಯ ವಿಚಾರ ಮಾತಾಡಿದೆವು…. ಎಲ್ಲರೂ‘ಹಬ್ಬದೂಟ’ಉಂಡೆವು.(ಶ್ರೀ ಮತ್ತು ಶ್ರೀಮತಿ ಡಿ.ಆರ್.ವೆಂಕಟಯ್ಯನವರ ಧಾರಾಳವಾದ ಆತಿಥ್ಯದಲ್ಲಿ.) ತರುವಾಯ ನರಸಿಂಹಮೂರ್ತಿ ಕೊಳಲಿನ ಕವನಗಳನ್ನು ಹಾಡಿದರು. ಸೀತಾರಾಂ ನನ್ನ ಫೋಟೋಗಳನ್ನು ತೆಗೆದರು. ಇಂಗ್ಲಾದಿ ಹಳ್ಳದ ಕಲ್ಲಿನ ಮೇಲೆ ಮೊದಲು ನಾನೂ ವೆಂಕಟಸುಬ್ಬಯ್ಯನವರೂ ಕುಳಿತೆವು. ತರುವಾಯ ನಾನೂ ಸೀತಾರಾಂ ಕುಳಿತೆವು. ವೆಂಕಟಸುಬ್ಬಯ್ಯ ಫೋಟೋ ತೆಗೆದರು. ನನ್ನನ್ನು ಇಂಗ್ಲಾದಿಯ ಚಾವಡಿಯ ಕಲ್ಲಿನ ಮೇಲೆ ಕೂರಿಸಿ ತಸ್ವೀರು ತೆಗೆದರು. ತರುವಾಯ ಒಂದು ‘ಗುಂಪು ಫೋಟೋ’ತೆಗೆದರು. ಸಂಜೆ ಸುಮಾರು ೫-೩೦ ಗಂಟೆಗೆ ಮೋಟಾರಿನಲ್ಲಿ ಕುಳಿತು ತೀರ್ಥಹಳ್ಳಿಗೆ ಹೊರಟೆವು. ನೇಸರು ಪಡುವಲಲ್ಲಿ ಮುಳುಗುವ ಮುನ್ನ ರಾಮತೀರ್ಥಕ್ಕೆ ಹೋದೆವು. ದೂರದ ಎತ್ತರವಾದ ಕಲ್ಲುಗುಡ್ಡದ ಅಂಚಿನಲ್ಲಿ ಅಸ್ತಾಚಲ ಚೂಡಾವಲಂಬಿಯಾದ ದಿನಮಣಿಯು ಶಾಂತರಶ್ಮಿಗಳಿಂದ ಪ್ರೋಜ್ವಲನಾಗಿ ರಂಜಿಸುತ್ತಿದ್ದನು. ನಾನು ಹಳೆಯ ಕಾಲದ(ತೀರ್ಥಹಳ್ಳಿಯಲ್ಲಿ ಎ.ವಿ.ಸ್ಕೂಲಿನಲ್ಲಿ ಓದುತ್ತಿದ್ದ ಕಾಲದ)ನೆನಪುಗಳನ್ನು ಒಂದೊಂದಾಗಿ ಹೇಳಿ ಸೀತಾರಾಂಗೆ ಸ್ಥಲಗಳನ್ನು ತೋರಿದೆನು. ರಾಮತೀರ್ಥ, ಗೋಮುಖ, ಈಜುವ ಸ್ಥಳ ಇತ್ಯಾದಿ. ತರುವಾಯ ನನ್ನದೊಂದು ಬಹಿರಾಕಾರದ(ಷಿಲೊಟ್ಟೆ)ಚಿತ್ರ ತೆಗೆದರು. ಹೊಳೆಯ ಒಂದು ಸುಂದರ ದೃಶ್ಯವನ್ನೂ ಪೋಟೋ ತೆಗೆದರು. ಆಮೇಲೆ ಜೇಡರ ಹುಳುವೊಂದು ಬಲೆ ನೇಯುತ್ತಿದ್ದುದನ್ನು ಬಹಳ ಹೊತ್ತು ಈಕ್ಷಿಸಿದೆವು. ಅದರ ಸಹಜ ಸುಲಭ ಕೌಶಲವನ್ನು ನೋಡಿ ಬೆರಗಾಗಿ ಬಣ್ಣಿಸಿದೆವು. ಸೂರ್ಯನು ಮುಳುಗಿದನು. ಬೆಟ್ಟದ ಹಿಂಗಡೆ ಸಂಧ್ಯಾಜ್ಯೋತಿಯು ರಂಜಿಸುತ್ತಲೆ ಇತ್ತು. ಮರ್ಮರ ಮಂಜುಳನಾದದಿಂದ ತುಂಗೆಯು ಕಲ್ಲು ಬಂಡೆಗಳ ಸಂಧಿ ಸಂಧಿಗಳಲ್ಲಿ ಪ್ರವಹಿಸುತ್ತಿತ್ತು. ದೂರದ ಅರಳಿಮರದಲ್ಲಿ ಕೋಗಿಲೆಯೊಂದು ಕುಹೂಕುಹೂ ಎಂದು ಚೀರಿಂಚರಂಗೈಯುತ್ತಿತ್ತು. ನದಿಯ ಇಕ್ಕೆಲಗಳಲ್ಲಿಯೂ ದಟ್ಟವಾಗಿ ಬೆಳೆದ ಕಾನನ ಪರ್ವತಶ್ರೇಣಿಯು ಮನೋಜ್ಞವಾಗಿತ್ತು. ತಂಗಾಳಿಯು ತಣ್ಣಗೆ ತೀಡುತ್ತಿತ್ತು. ಹೊಳೆಯು ಪಶ್ಚಿಮ ಪರ್ವತಾಲಿಂಗನದಿಂದ ಮೂಡಿ ಹರಿದು ಬಂದು ಪೂರ್ವಪರ್ವತದ ಸಂಧಿಯಲ್ಲಿಯೆ ಮಾಯವಾದಂತೆ ಇತ್ತು. ನಾನು ಅಲ್ಲಿಗೆ ಹೋದ ಕೂಡಲೆ “Stop here and turn round. Behold the kingdom of Beauty smiles all around!” ಎಂದೆನು. ತೀರ್ಥಹಳ್ಳಿಯ ರಾಮತೀರ್ಥದಿಂದ ಸಿಲುಕುವ ನೋಟವು ಜಗತ್ತಿನ ಅತ್ಯಂತ ರಮಣೀಯವಾದ ದೃಶ್ಯಗಳಲ್ಲಿ ಒಂದು! ಕತ್ತಲಾಗುತ್ತ ಬಂದಿತು. ಮಬ್ಬು ಕವಿಯತೊಡಗಿತು. ಮನಸ್ಸಿನಿಂದ ಹೊರಟೆವು. ಸೀತಾರಾಂ ಮತ್ತು ವೆಂಕಟಸುಬ್ಬಯ್ಯನವರನ್ನು ಬೀಳ್ಕೊಂಡು ಮನೆಗೆ ಹಿಂತಿರುಗಿದೆವು. ಅವರು ತೀರ್ಥಹಳ್ಳಿಯಿಂದ ಆಗುಂಬೆಗೆ ಹೋದರು.

೧೪-೫-೧೯೩೦:

ಬೆಳಿಗ್ಗೆ ‘ನವಾಬ ನಂದಿನಿ’ ಓದಿ ಪೂರೈಸಲು ತೊಡಗಿದೆ. ಸ್ವಾಮಿ ವಿಶಾಲಾ ನಂದರ ಮರಣವಾರ್ತೆ ಕೇಳಿ ಶಂಕರ್ ಮಹಾರಾಜರಿಗೆ ಒಂದು ಪತ್ರ ಬರೆದೆ. ಮಧ್ಯಾಹ್ನ ಡಿ.ಆರ್.ವಿ.ಗೆ ಜ್ವರ ಬಂತು. ಸಾಯಂಕಾಲ ಹೊರಟು ಕುಪ್ಪಳಿಗೆ ಬಂದೆವು.

ರಾತ್ರಿ‘ಉಮ್ಮರನ ಒಸಗೆ’ಓದಿದೆವು. ‘ಅಶ್ವತ್ಥಾಮನ್’ ಸ್ವಲ್ಪ ಓದಿದೆವು. ತರುವಾಯ ಚಂದ್ರೋದಯವನ್ನೆ ನಿರೀಕ್ಷಿಸುತ್ತ ಉಪ್ಪರಿಗೆ ಮೇಲೆ ಕುಳಿತೆವು.

ವೈಶಾಖ ಬಹುಳ ಬಿದಿಗೆಯ ಚಂದ್ರನು ಬರುವುದು ರಾತ್ರಿ೯-೩೦ ಗಂಟೆಯಾಯಿತು. (ಕುಪ್ಪಳಿ ಮನೆಯ ಎದುರಿಗೇ ಆಕಾಶೋನ್ನತವಾಗಿ ಮಲೆ ಏರಿರುವುದರಿಂದ ಸೂರ್ಯೋದಯವಾಗಲಿ ಚಂದ್ರೋದಯವಾಗಲಿ ಕಾಣಿಸುವುದು ತಡವಾಗುತ್ತದೆ.) ನಾವು”ಮೂಡಣದ ಪಸುರುಡೆಯ ಪೆರ್ಬೆಟ್ಟದಂಚಿನಲಿ ಮಗುವಿನೆಳನಗೆಯಂತೆ ಬೆಳಕು ಹಬ್ಬಿ”ದುದನ್ನು ಕಂಡೊಡನೆ ಮೈಯೆಲ್ಲ ಕಣ್ಣಾಗಿ ನೋಡುತ್ತಾ ಕುಳಿತೆವು. ಮನೆಯ ಮುಂದುಗಡೆ ವನಪರಿವೃತ ಗಿರಿಗಳು ನಿಶ್ಚಲವಾಗಿ ನಿಂತುವು. ಮರಗಳೂ ಧ್ಯಾನಾರೂಢವಾಗಿದ್ದುವು. ಅಲ್ಲಲ್ಲಿ ಕಪ್ಪೆಗಳು ವನ್ಯಕ್ರಿಮಿಕೀಟಗಳು ಕೂಗುತ್ತಿದ್ದುವು. ಆದರೂ ಮೌನ,ಕತ್ತಲೆ,ಮಿಣುಕು ಹುಳುಗಳು(ಮನೆಗೆ ಅಂಟಿಕೊಂಡಂತಿದ್ದ) ಅಡಕೆತೋಟದಲ್ಲಿ ಪಳಕ್ ಪಳಕ್ ಎಂದು ಹೊಳೆದಳಿಯುತ್ತಿದ್ದವು. ಪೂರ್ವದಿಗಂತದಲ್ಲಿ (ಆಕಾಶಕ್ಕೆದ್ದ ಬೆಟ್ಟ ನೆತ್ತಿಯ ದಿಗಂತಕ್ಕೂ ನಮಗೂ ಎರಡೇ ಫರ್ಲಾಂಗು) ಬೆಳಕು ಬರಬರುತ್ತಾ ಬಲಿಯಿತು. ನಮ್ಮ ಹೃದಯದಲ್ಲಿಯೂ ನಿರೀಕ್ಷಣೆಯು ಕುಣಿದಾಡತೊಡಗಿತು. “ಕಾಯುವುದು ಕಾರ್ಯಸಾಧನೆಗಿಂತ ಕಷ್ಟತರ”ಎಂದರು ನರಸಿಂಹಮೂರ್ತಿ.‘ಯಮನ ಸೋಲು’ನಾಟಕದ ಒಂದು ಪಂಕ್ತಿಯನ್ನೆ ಉದ್ಧರಿಸಿ. ಆದರೆ

ಬಾಳಿನ ಹೊಸರಸವಣಕಿಪ ನೆಚ್ಚು:
ಬಾಲೆಯೆ, ಬೆಳೆವುದು ಬಳಿಲಿದ ನಚ್ಚು!

ಎಂಬ ತತ್ತ್ವವನ್ನು ವಿವರಿಸಿ ಹೇಳಿದೆನು. ಬರಬರುತ್ತ ಜ್ಯೋತಿ ಅಭಿವೃದ್ಧಿಯಾಯಿತು! ಜಪಾಪ್ರಸೂನಾಭಮಾಯ್ತು! ಎತ್ತರವಾದ ಮರಗಳ ಮಧ್ಯೆ ಚಂದ್ರಕಾಂತಿಯು ತಾಂಡವವಾಡತೊಡಗಿತು. ನೋಡು ಓ ಆ ಮರದ ನೆತ್ತಿಗೆ ತಿಂಗಳು ತೋರುವನು ಎಂದೆನು. ಕಡೆಗೆ ಎತ್ತರವಾದ ಎರಡು ಮರಗಳ ನಡುವೆ”ಜೊನ್ನಿನ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು” ಮೂಡಿದುದು. ತಿಳಿಬೆಳುದಿಂಗಳ ಮಳೆ ಸುರಿದುದು. ಶಾಂತಿಯು ಹಬ್ಬಿತು. ಕಾಂತಿಯು ನಾಡನು ಕಾಡನು ತಬ್ಬಿತು. ಎದೆಯುಬ್ಬಿತು; ಕುಣಿದಾಡಿತು; ಮುಳುಗಿತು, ಕರಗಿತು, ತೇಲಿತು, ಸತ್ತಿತು. ದೇಹಪಂಜರದಲ್ಲಿ ಜೀವ ಹೋರಾಡಿತು. ಹಾಗೆಯೇ ಸ್ವಲ್ಪಹೊತ್ತು ಧ್ಯಾನಮಗ್ನನಾಗಿ ಕುಳಿತೆನು. ತಿಂಗಳು ಮೇಲೆಮೇಲೆ ಏರಿದನು. ತಿಳಿಬಾನನು ಸೇರಿದನು. ದೀಪಗಳು ಚೆಲುವನ್ನು ಹಾಳು ಮಾಡುವುವು ಎಂದು ಅವನ್ನೆಲ್ಲ ಆರಸಿದೆವು. ಚಂದ್ರನ ಸೌಂದರ್ಯವು ಇಮ್ಮಡಿಯಾಯಿತು. ಕೃತಕತೆಯ ಮುಂದೆ ಪ್ರಕೃತಿಯು ಮೆರೆಯಲು ನಾಚುವಳು. ಹೇಸುವಳು…ಕಡೆಗೆ ಮಲಗಿದೆವು. ಎದುರಿಗೆ ಪೂರ್ತಿ ತೆರೆದಿದ್ದ ಉಪ್ಪರಿಗೆಯಿಂದ ನಾವು ಹಾಸಗೆಯಲ್ಲಿ ಮಲಗಿಕೊಂಡೆ ಅಡಕೆತೋಟ ಕಾಡು ಬೆಟ್ಟ ಮಲೆ ಆಕಾಶ ಎಲ್ಲವನ್ನೂ ಕಣ್ಬೋಲವಾಗಿ ಪಡೆದಿದ್ದೆವು. ನಮ್ಮ ಮುಂದೆ ತಿಳಿಯಾಳದಾಗಸದಲ್ಲಿ ತಿಂಗಳು ಬೆಳಗಿದನು. ಬೆಳ್ಮುಗಿಲು ಅಲ್ಲಲ್ಲಿ ಸಂಚರಿಸಿದುವು. ಮನೆಯ ಎದುರು ಕಾಡು ಬೆಟ್ಟ ತೆಂಗಿನಮರ ಅಡಕೆಮರ ಎಲ್ಲ ಬೆಳ್ದಿಂಗಳನು ಕುಡಿಕುಡಿದು ಮೂರ್ಛೆಗೊಂಡುವು. ನಾನೂ ಆನಂದ ಮಧುಪಾನಮತ್ತನಾಗಿ ಮೈಮರೆತು ಮಲಗಿದೆನು. ನೋಡುವವರಿಲ್ಲದಿದ್ದರೂ ತಿಂಗಳು ಬೆಳಗಿದನು. ಎಂತಹ ಕರ್ಮಯೋಗಿ ಚಂದ್ರನು! ಎಂತಹ ರಸ ಋಷಿ ಆತನು! ಚಂದ್ರರೂಪಿ ನಾರಾಯಣನಿಗೆ ನಮೋನಮೋ!

೧೫-೫-೧೯೩೦:

ಬೆಳಗ್ಗೆ ಬೇಟೆಗೆ ಹೋದೆವು, ನಾನೂ ಮೂರ್ತಿ ಇಬ್ಬರೆ.(ಇದು‘ಸಾರಿಗೆ ಬೇಟೆ’ನಾಯಿಗಳನ್ನು ಜೊತೆಗೆ ಬರಗೊಡದೆ,ಕೈಯಲ್ಲಿ ಕೋವಿ ಹಿಡಿದು ಕಾಡುಗಳಲ್ಲಿ ನಿಧಾನವಾಗಿ ಹೊಂಚಿ ಸುತ್ತುವುದು.)ಕಾಡಿನ ಭಯಂಕರತೆಯಲ್ಲಿ ನುಗ್ಗಿದೆವು.ಜಿಗಣಿಗಳ ಕೈಯಲ್ಲಿ ಚೆನ್ನಾಗಿ ಕಡಿಸಿಕೊಂಡೆವು. ಆ ದಟ್ಟ ಬನವನ್ನು ಭೇದಿಸಿಕೊಂಡು ಹೋಗುವಾಗ ರಕ್ತಪ್ರವಾಹವೂ ಆಯಿತು. ಕಡೆಗೆ ನನಗೆ ಕಾಡಿನಲ್ಲಿ ದಿಕ್ಕು ತಪ್ಪಿತು. ಹಳುವಿನ ದಾರಿಯಲ್ಲಿ ಒಂದು ಬರ್ಕ ಎದ್ದು ಓಡಿತು. ಅಕಸ್ಮಾತ್ತಾಗಿ ಎದ್ದು ಓಡಿದ್ದರಿಂದ ಸರಿಯಾಗಿ ಗುರಿಕಟ್ಟಿ ಹೊಡೆಯಲಾಗಲಿಲ್ಲ. ಅಂತೂ ಒಂದು ಈಡು ಹಾರಿ ಢಂಕಾರವು ಕಾನನವನ್ನು ಕಂಪಿಸಿತು. ಏಟು ತಪ್ಪಿತೆಂದೇ ತೋರುತ್ತದೆ. ಮತ್ತೊಂದು ಬರ್ಕ ಅಲ್ಲಿಯೆ ಎದ್ದು ಓಡಿತು. ಮುಂದೆ ಎರಡು ಕಾಡುಕುರಿಗಳು ಓಡಿದವು. ಅಂತೂ ನಮಗೆ ಸಾಹಸವಾಯಿತು.ಸುಮಾರು ಹತ್ತೂವರೆಗೆ ಬೆವರಿ ಬಳಲಿ ಮನೆಗೆ ಬಂದೆವು.

‘ವೈಶಾಖ ಸೂರ್ಯೋದಯ’ಎಂಬ ಕವನವನ್ನು ಪ್ರಾರಂಭಿಸಿದೆ.‘ಕಾರಿರುಳು’ ನಕಲು ಎತ್ತಿದೆ. ಸಾಯಂಕಾಲ ಇಂಗ್ಲಾದಿಗೆ ಹೋಗಿ ಬಂದೆವು.(ಪೋಸ್ಟು ತರುವುದಕ್ಕೂ) ಡಿ.ಆರ್.ವಿ.ಗೆ ಕಾಯಿಲೆ ಬಿಟ್ಟಿತ್ತು. ಉಪ್ಪಿನಕೋಟೆಯ ಮುತ್ತಿಗೆ ವಿಚಾರ ಓದಿ ಬಹಳ ಹಿಗ್ಗಿದೆವು.(ಸ್ವಾತಂತ್ರ ಸಂಗ್ರಾಮದ ಸತ್ಯಾಗ್ರಹ ನಡೆಯುತ್ತಿದ್ದ ಕಾಲ.)

೧೬-೫-೧೯೩೦:

ಗಿರಿಜಾ ಕಲ್ಯಾಣ ಓದಿದೆ. ಕಾವ್ಯದಲ್ಲಿ ಮಿಂಚುಗಳು ಇಲ್ಲದಿದ್ದರೂ ಮಿಣುಕು ಹುಳುಗಳಾದರೂ ಇರಬೇಕು! ಅದೂ ಇಲ್ಲದಿದ್ದರೆ ಆ ಕಾವ್ಯ ಅಧಮಾಧಮವಾದುದೆಂದೇ ಭಾವಿಸಬೇಕು.

ಸಾಯಂಕಾಲ ಕಿರುಬೇಟೆಗೆ ಹೋದೆವು. ನಾನೊಂದು ಹುಲುಬೆಕ್ಕನ್ನು ಹೊಡೆದೆ.

(ರಾತ್ರಿ ಕನಸಿನಲ್ಲಿ ಮಹಾಕಾಯನಾದ ಅತಿಮಾನುಷ ಪುರುಷನೊಬ್ಬನು ಬಂದು ‘ನೀನು ಇನ್ನು ಹದಿನೈದು ದಿನಗಳಲ್ಲಿ ಶ್ರೀಗುರು ಚರಣಸ್ಥನಾಗುವೆ’ಎಂದನು. ಓಂ ಹ್ರೀಂ ನಮೋ ಭಗವತೇ ರಾಮಕೃಷ್ಣಾಯ.)

೧೭-೫-೧೯೩೦:

ಬೆಳಿಗ್ಗೆ ಗಿರಿಜಾಕಲ್ಯಾಣ ಎರಡನೆ ಆಶ್ವಾಸ ಓದಿದೆ. Hunt’s what is poetry ಎಂಬ ಪ್ರಬಂಧ ಓದುತ್ತಿದ್ದೇನೆ. ರಾತ್ರಿ ಮೂರ್ತಿ ಕೊಳಲಿನ ಕವನಗಳನ್ನು ಹಾಡಿದರು.

೧೮-೫-೧೯೩೦: ಇಂಗ್ಲಾದಿಗೆ ಹೋಗಿ, ಅಲ್ಲಿಂದ ವಾಟಗಾರಿಗೆ ಹೋದೆವು.

೧೯-೫-೧೯೩೦:

ಬೆಳಿಗ್ಗೆ ಷಿಕಾರಿಗೆ ಹೋದೆವು. ನವಿಲುಕಲ್ಲು ಗುಡ್ಡದಲ್ಲಿ ನಿಂತು ಚಕ್ರಾಕಾರವಾಗಿ ಮೈಲಿಮೈಲಿಗಳವರೆಗೆ ಹಬ್ಬಿದ ಸಹ್ಯಾದ್ರಿಗಳ ಹುಚ್ಚು ಹಿಡಿಸುವ ಸ್ವರ್ಗೀಯ ಸೌಂದರ್ಯವನ್ನು ನೋಡಿದೆವು. ಸಿಬ್ಬಲುಗುಡ್ಡೆಯಲ್ಲಿ ಹಗಲು ಹನ್ನೆರಡು ಗಂಟೆಗೆ ತೊರೆಯ ನಡುಬಂಡೆಯ ಮೇಲೆ ಕುಳಿತು ಬುತ್ತಿಯುಂಡೆವು. ಸಾಯಂಕಾಲ ಆರು ಗಂಟೆಗೆ ಮನೆಗೆ ಬಂದೆವು.

೨೦-೫-೧೯೩೦:

ಬೆಳಿಗ್ಗೆ‘ತಳಿರು’ಗ್ರಂಥದ ಮೇಲೆ ಜಯಕರ್ನಾಟಕದಲ್ಲಿ ಬಂದ ವಿಮರ್ಶೆಯನ್ನು ಓದಿ ‘ವಿಮರ್ಶಕ’ಎಂಬ ಪದ್ಯ ಬರೆದೆ.

ಸಾಯಂಕಾಲ ದೇವಂಗಿಯ ಡಾಕ್ಟರು, ಡಿ,ಆರ್,ವೆಂಕಟಯ್ಯ, ಡಿ.ಎನ್. ಹಿರಿಯಣ್ಣ ಮೂರ್ತಿ, ಸುಬ್ಬಯ್ಯ, ನಾನು ಎಲ್ಲರೂ ಸೇರಿ ನವಿಲುಕಲ್ಲಿಗೆ ಹೋದೆವು. ನಾವು ಅಲ್ಲಿಗೆ ಹೋದಾಗ ೫ ಗಂಟೆ. ದಿಗಂತ ಪರ್ವತಶ್ರೇಣಿಯಲ್ಲಿ ಮೋಡಗಳು ಮಳೆಗರೆದು ಓಡುತ್ತಿದ್ದುವು. ದೃಶ್ಯವು ಅತಿ ಮನೋಹರವಾಗಿತ್ತು. ವಕ್ರಗತಿಯಿಂದ ಹರಿಯುವ ತುಂಗಾನದಿಯೂ ಕಾಣಿಸುತ್ತಿತ್ತು. ತೀರ್ಥಹಳ್ಳಿಯೂ ಕಾಣಿಸಿತು. ಅಲ್ಲಲ್ಲಿ ದೂರ ಕೆಳಗಡೆ ಗದ್ದೆಗಳು ತೋಟಗಳು ಊರುಗಳು! ಮೂರ್ತಿ ‘ಕಿನ್ನರನ ಹಾಡು’ಹಾಡಿದರು.(ದುಂಬಿಯು ಬಂಡನು ಹೀರುವ ಎಡೆಯಲಿ ನಾ ಮಧುಪಾನವ ಮಾಡುವೆನು- ಎಂದು‘ಬಿರುಗಾಳಿ’ನಾಟಕದಲ್ಲಿ ಬರುವುದು.) ನಾನು ‘ಸಂಜೆವೆಣ್ಣು’‘ನಿನ್ನವನು ನಾನಲ್ಲವೆ’‘ಆತ್ಮನಿವೇದನ’‘ಕೈಬಿಟ್ಟರೆ ನೀ ಗತಿಯಾರೈ’ಎಂದು ಕವನಗಳನ್ನು ಹಾಡಿದೆನು. ಬಂಡೆಯ ಮೇಲೆ ನಮ್ಮ ಹೆಸರುಗಳನ್ನು ಕೆತ್ತಿದೆವು. ನವಿಲುಕಲ್ಲಿನ ಗುಡ್ಡದ ನೆತ್ತಿಯು ಜಗತ್ತಿನ ರಮಣೀಯ ದೃಶ್ಯಗಳಲ್ಲಿ ಒಂದು. ಕಂಡರೆ ಸಾಲದು, ಕಂಡುಹಿಡಿಯಬೇಕು!

೨೧-೫-೧೯೩೦:

ಕುಪ್ಪಳಿಗೆ ಬೆಳಿಗ್ಗರ ಹೋದೆವು. ‘ನನ್ನ ಕವಿತೆಗೆ’‘ಕವಿತೆಯಲ್ಲಿ’ಎಂಬ ಕವನಗಳನ್ನು ರಚಿಸಿದೆ.‘ವಂಗ ವಿಜೇತ’ ಓದಿ ಮುಗಿಸಿದೆ.

೨೨-೫-೧೯೩೦:

ಬೆಳಿಗ್ಗೆ ‘ಸಬಕ್ತಗೀನ್’ಕವನವನ್ನು ರಚಿಸಿದೆ.

೨೮-೫-೧೯೩೦:

ಬೇಟೆಗೆ ಹೋದೆವಯ, ೧೬ ಈಡುಗಳು ಹಾರಿದವು. ಜಿಂಕೆಗಳು, ಹಂದಿ, ಬರ್ಕ, ಕಾಡುಕುರಿ, ಇವುಗಳಿಗೆಲ್ಲ ಹೊಡೆದರು, ತಪ್ಪಿದರು. ದಿನವೆಲ್ಲ ಸಾಹಸದ ದಿನವಾಯ್ತು. ನಾನು ಎರಡು ಬರ್ಕ ಹೊಡೆದೆ.

೭-೬-೧೯೩೦: ಶಿವಮೊಗ್ಗಾಕ್ಕೆ.

೯-೬-೧೯೩೦:

ಕೆ.ಸಿ.ಲಿಂಗೇಗೌಡರ ಮನೆಯಲ್ಲಿ ಕವನಗಳನ್ನು ಓದಿದೆ.(ಅವರು ಶಿವಮೊಗ್ಗೆಯಲ್ಲಿ ಆಗ ನ್ಯಾಯಾಧೀಶರಾಗಿದ್ದರು.)

೧೪-೬-೧೯೩೦: ಶಿವಮೊಗ್ಗಾದಿಂದ ಹೊರಟೆ.

೧೫-೬-೧೯೩೦: ಮೈಸೂರು.(ಶ್ರೀರಾಮಕೃಷ್ಣಾಶ್ರದಲ್ಲಿ.)

೧೭-೬-೧೯೩೦: T.S.V. and I went on a long evening walk talking about ಹರಿಹರನ ರಗಳೆ!(ನಾನೂ ವೆಂಕಣ್ಣಯ್ಯನವರೂ ಹರಿಹರನ ರಗಳೆಯನ್ನು ಕುರಿತು ಮಾತನಾಡುತ್ತಾ ತುಂಬಾ ದೂರ ತಿರುಗಾಡಲು ಹೋಗಿದ್ದೆವು.)

೧೮-೬-೧೯೩೦:

ನೀನೊರ್ವನೆಯೆ ಏಗಳುಂ ಕಯ್ವಿಡದೆ ಕಾಯ್ವನ್; ಬಲ್ಲೆನ್. ಇನ್ನೆಲ್ಲರುಂ ಬಟ್ಟೆಯೆಡೆಯೊಳೆ ಬಿಟ್ಟು ಪೋಪರಯ್; ಬಲ್ಲೆನ್.

೨೪-೬-೧೯೩೦:ಬೆಂಗಳೂರಿಗೆ ಹೊರಟೆನು.

೨೫-೬-೧೯೩೦:ಬೆಂಗಳೂರಿನಲ್ಲಿ Text Book Committee.

೨೭-೬-೧೯೩೦:ದೇಶೀಯ ವಿದ್ಯಾಶಾಲೆಯಲ್ಲಿ ಪದ್ಯಗಳನ್ನು ಓದಿದೆ.

೧೨-೭-೧೯೩೦: ಮನೆಯಿಂದ ಲೆಕ್ಕದ ಪಟ್ಟಿ ಬಂದಿತು.

ಖಂಡ ಮೇಘಾಚ್ಛನ್ನ ಹಿಮಕರ ಜ್ಯೋತ್ನೆಯು ತರಳ ಸುಂದರ ತಪಸ್ವಿನಿಯ ಧ್ಯಾನಸ್ಥ ದರ ನಿಮೀಲಿತ ನಯನಗಳ ಧರ್ಮಜ್ಯೋತಿಯಂತೆ ಮಂಗಳ ಮನೋಹರವಾಗಿತ್ತು.

೨೩-೭-೧೯೩೦:

ನೀನು ಶಕ್ತಿಗೆ ಆಗರನಂತೆ.ಅದರಲ್ಲಿ ಹನಿಯೊಂದನ್ನು ದಯಪಾಲಿಸೆಯೇನು? ನೀನು ದಯಾರ್ಣವನಂತೆ. ನನ್ನಲ್ಲಿ ನಿನಗಿನಿತು ದಯ ಬಾರದೇನು? ನೀನೇನು ಜಿಪುಣನೇನು?

೨-೮-೧೯೩೦:

ನಾ.ಕಸ್ತೂರಿ ನಾನು ಸಂಸ್ಕೃತವನ್ನು ಓದಿ ಆಮೇಲೆ ವಾಕಿಂಗ್ ಹೋದೆವು. ಕುಕ್ಕನಹಳ್ಳಿಯ ಕೆರೆಯಲ್ಲಿ ದೋಣಿಯಿರುವುದನ್ನು ನೋಡಿ, ರಾಬಿವಸನ್ ಕ್ರೂಸೊ ನೆನಪಾಗುತ್ತೆ ಎಂದು ಮಾತು ತೆಗೆದೆ. ಅಲ್ಲಿಂದ ನನ್ನ ಜೀವನ ಚರಿತ್ರೆಯನ್ನೆಲ್ಲ ಹೇಳುತ್ತ ಹೋದೆ. ಆಶ್ರಮದ ಕಟ್ಟಡಕ್ಕೆ ಹೋಗಿ ಅಲ್ಲಿಂದ ಹಿಂತಿರುಗಿದೆವು. (ಆಗ ಆಶ್ರಮ ಕೃಷ್ಣಮೂರ್ತಿಪುರದಲ್ಲಿ ಬಾಡಿಗೆಯ ಮನೆಯಲ್ಲಿತ್ತು. ಶಾಶ್ವತ ಕಟ್ಟಡಕ್ಕಾಗಿ ಸ್ವಾಮಿ ಸಿದ್ದೇಶ್ವರಾನಂದರು ಒಂಟಿಕೊಪ್ಪಲಿನ ಹೊಸ ಬಡಾವಣೆಯಲ್ಲಿ ಆಗತಾನೆ ಜಾಗ ತೆಗೆದುಕೊಂಡು ಕಟ್ಟಡ ಕಟ್ಟಿಸಲು ಶುರುಮಾಡಿದ್ದರು.)

೪-೮-೧೯೩೦:

‘ತಾನಾಜಿ’ ಎಂಬ ಲಾವಣಿಯನ್ನು ಬರೆದು ಪೂರೈಸಿದೆ.(ಹಸ್ತಪ್ರತಿಯಲ್ಲಿ-೩-೮-೧೯೩೦ ನೆಯ ಬೆಳಿಗ್ಗೆ ೯ ಗಂಟೆಗೆ ಪ್ರಾರಂಭವಾಗಿ ೪-೮-೧೯೩೦ನೆಯ ಸೋಮವಾರ ಮಧ್ಯಾಹ್ನ ೩ ಗಂಟೆ ೪೦ ನಿಮಿಷಕ್ಕೆ ಮುಗಿದುದು-ಎಂದಿದೆ.) ಒಬ್ಬ ವೀರನನ್ನು ಹೆತ್ತ ವೀರನಂತೆ ನನ್ನೆದೆಯು ಹಿಗ್ಗಿದುದು, ಬರೆದು ಪೂರೈಸಿದ ಮೇಲೆ ಬಹಳ ಆಯಾಸವಾದಂತಿತ್ತು. ನಾನೇ ರಾಯಗಡದಿಂದ ತಾನಾಜಿಯ ಜೊತೆಯಲ್ಲಿ ಹೊರಟು ಸಿಂಹಗಡವನ್ನು ಹತ್ತಿ ಯುದ್ಧಮಾಡಿ, ಮರಳಿ ಬೆಳಿಗ್ಗೆ ತಾನಾಜಿಯು ಸತ್ತ ವರ್ತಮಾನವನ್ನು ಶಿವಾಜಿಗೆ ಹೇಳಿದವನಷ್ಟು ಬಳಲಿಕೆಯಾಗಿತ್ತು!

೫-೮-೧೯೩೦:

ಸೀತಾರಾಂಗೆ ಲಾವಣಿಯನ್ನು ಓದುತ್ತೇನೆ ಎಂದು ಹೇಳಿದ್ದೆ. ಆದರೆ ೫ ಗಂಟೆಗೆ ಬಿ.ಎಂ.ಶ್ರೀಯವರು ಬೆಂಗಳೂರಿಗೆ ಪ್ರೋಫೆಸರ್ ಆಗಿ ಹೋಗುವವರಾದ್ದರಿಂದ ಅವರಿಗೆ ಸುಖಪ್ರಯಾಣ ಬಯಸಲು ಕರ್ಣಾಟಕ ಸಂಘವು ನೆರೆಯಿತು. ಆದ್ದರಿಂದ ‘ಲಲಿತಾದ್ರಿ’ಗೆ ಹೋಗುವ ನಮ್ಮ ಕಾರ್ಯಕ್ರಮವನ್ನು ನಿಲ್ಲಿಸಿ ಕಾಲೇಜಿಗೆ ಹೋದೆವು. ಬಿ.ಎಂ.ಶ್ರೀ.ಯವರು ಎರಡು ಗಂಟೆಗಳ ಕಾಲ ಭಾಷಣ ಮಾಡಿದರು. ಕರ್ಣ,ನಚಿಕೇತನ, ಸಾಕ್ರೇತೀಸ ಇವರುಗಳ ಕತೆ ತೆಗೆದುಕೊಂಡು ಬಹಳ ಸ್ವಾರಸ್ಯವಾಗಿ ಮಾತನಾಡಿದರು. ತರುವಾಯ ರಾತ್ರಿ ೮ ಗಂಟೆಯ ಮೇಲೆ ಎನ್.ಎಸ್.ನಾರಾಯಣಶಾಸ್ತ್ರಿ(ಮನಶ್ಯಾಸ್ತ್ರದ ಅಧ್ಯಾಪಕರಾಗಿದ್ದರು.)ಮತ್ತು ಸೀತಾರಾಂ ಇಬ್ಬರೂ ನನ್ನ ರೂಮಿಗೆ ಬಂದರು. (ಕೃಷ್ಣಮೂರ್ತಿಪುರದಲ್ಲಿದ್ದ ಆಶ್ರಮಕ್ಕೆ ಲಾವಣಿ ಓದಿದೆನು. ಇಬ್ಬರೂ ಬಹಳ ಹಿಗ್ಗಿದರು. ಅದನ್ನು ಚಿತ್ರಮಯವಾಗಿ (ಅಂದರೆ ಚಿತ್ರಗಳನ್ನು ಬರೆಯಿಸಿ ಸಚಿತ್ರವಾಗಿ) ಸೂಚಿಸಿದರು. ಸೀತಾರಾಂ ಚಿತ್ರಗಳನ್ನು ತಾವೇ ಬರೆಯುವಂತೆ ಹೇಳಿದರು.(ಈ ‘ತಾನಾಜಿ’ಯ ವಿಚಾರವಾಗಿಯೆ ಸೀತಾರಾಂ ಶಿವಮೊಗ್ಗದ ಮಿತ್ರರ ಕುತೂಹಲ ಕೆರಳಿಸಿ ಕಾಗದ ಬರೆದದ್ದು. ಆ ಕಾಗದವನ್ನು ‘ನೆನಪಿನ ದೋಣಿಯಲ್ಲಿ’ ಇದಕ್ಕೆ ಹಿಂದೆಯೆ ಪ್ರಕಟಿಸಲಾಗಿದೆ.)