೬-೮-೧೯೩೦:

ಮಧ್ಯಾಹ್ನ ೩-೩೦ಕ್ಕೆ ಟಿ.ಎನ್. ಶ್ರೀಕಂಠಯ್ಯ ಮತ್ತು ವಿ.ಸೀತಾರಾಮಯ್ಯನವರಿಗೆ ‘ತಾನಾಜಿ’ಯನ್ನು ಕಾಲೇಜಿನಲ್ಲಿ ಓದಿ ಹೇಳಿದೆ. ಇಬ್ಬರೂ ಅದನ್ನು ಪ್ರಶಂಸೆ ಮಾಡಿದರು. ಸಾಯಂಕಾಲ ನಾನೂ ಸೀತಾರಾಂ ವಾಕಿಂಗ್ ಹೋದೆವು. ನಾನು ಅವರಿಗೆ‘ಶ್ರಾವಣ ಸಂಧ್ಯ ಸಮೀರ’ಎಂಬ ಕವನವನ್ನು ನೆನಪಿನಿಂದಲೆ ಹೇಳಿದೆ….. ಜಗತ್ತಿನ ಮೂಲ ಕಾರಣವು  ಸರ್ವನೀಯಮಗಳನ್ನೂ ದ್ವಂದ್ವಗಳನ್ನೂ ಜೀರ್ಣಿಸಿಕೊಂಡಿರುವ ಒಂದು ವ್ಯಕ್ತಿತ್ವ; ಆದರೆ ಅದು ಬರಿಯ ತತ್ತ್ವವಲ್ಲ ಎಂಬುದನ್ನು ವಿವರಿಸಿದೆ. ಹಿಂತಿರುಗಿ ಬರುವಾಗ ಸೀತಾರಾಂ-‘ಕತೆಗಳ ಕತೆ’ಎಂಬ ಲೇಖನವನ್ನು ಬರೆಯಬೇಕೆಂದಿದ್ದೇನೆ. ಅದಕ್ಕೆ ಈಗಿನ ಕತೆಗಾರರ ಸಹಾಯ ಬೇಕು. ಕತೆಗಳು ಹೇಗೆ ಮೂಡುವುವು, ಮನದಲ್ಲಿ ಹೇಗೆ ರೂಪಗೊಳ್ಳುವುವು ಎಂಬುದನ್ನು ಲೇಖಕರಿಂದ ತಿಳಿದು ಉದಾಹರಣೆಗಳನ್ನು ಕೊಡಬೇಕೆಂದು ಹೇಳಿದರು.

೯-೮-೧೯೩೦:

ಬಹಳ ದಿನಗಳಿಂದ ಡೈರಿ ಬರೆಯಲಿಲ್ಲ. ದೋಣಿಯಾಟಕ್ಕೆ ಸೇರಿದೆ. ದಿನವೂ ಪ್ರಾತಃಕಾಲ ಒಂದೂವರೆ ಗಂಟೆಯ ಹೊತ್ತು ಸಲಿಲಾಶಯದಲ್ಲಿ ತೇಲುವುದು. ‘ದೋಣಿ ಹಾಡು’ಎಂಬ ಕವನವನ್ನು ರಚಿಸಿ ಹಾಡಲು ಕೊಟ್ಟೆ.(ಪ್ರೊ.ಜೆ.ಸಿ.ರಾಲೊ ಪ್ರಿನ್ಸಿಪಾಲ್ ಆಗಿದ್ದಾಗ ಒಂದು ಸೀಮೆದೋಣಿ ತರಿಸಿ ಕುಕ್ಕನಹಳ್ಳಿಕೆರೆಯಲ್ಲಿ ವಿಶ್ವವಿದ್ಯಾನಿಲಯದ ಅಂದರೆ ಮಹಾರಾಜಾ ಕಾಲೇಜಿನ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ದೋಣಿಯಾಟಕ್ಕೆ ಅವಕಾಶ ಕಲ್ಪಿಸಿದರು. ಅದೊಂದು ಮೋಜಾಗಿತ್ತು ನಮಗೆಲ್ಲರಿಗೂ.‘ದೋಣಿ ಸಾಗಲಿ ಮುಂದೆ ಹೋಗಲಿ, ದೂರತೀರಕೆ ಸೇರಲಿ’ಎಂದು ಪ್ರಾರಂಭವಾಗುವ ಸಾಮೂಹಿಕ ಗೀತೆಯನ್ನು ಆಗಲೆ ರಚಿಸಿದ್ದು. ಹುಟ್ಟುಹಾಕುತ್ತಾ ಅದರ ಲಯಕ್ಕೆ ಹೊಂದಿಕೊಂಡು ಹಾಡುತ್ತಿದ್ದೆವು.)

೨೨-೮-೧೯೩೦:

ಯೂನಿಯನ್ನಲ್ಲಿ‘ತಾನಾಜಿ’ಓದಿದೆ. ಎನ್.ಎಸ್.ನರಸಿಂಹಮೂರ್ತಿಗಳು (ಎನ್.ಎಸ್.ಸುಬ್ಬರಾಯರ ಅಣ್ಣಂದಿರು.) ಬಹಳ ಸಂತೋಷಪಟ್ಟರು. ಪ್ರೊ.ವೆಂಕಣ್ಣಯ್ಯನವರು ತಮ್ಮ(ಸಂಪಾದಿಸಿದ್ದ)‘ಬಸವರಾಜದೇವರ ರಗಳೆ’ಯನ್ನು ಕೊಟ್ಟರು. ‘ತಾನಾಜಿ’ಯ ಪ್ರಸಿದ್ಧಿ ಮಹಾರಾಜಾ ಕಾಲೇಜಿನ ತುಂಬ ಹಬ್ಬಿಬಿಟ್ಟಿತು. ಆಗ ಕರ್ಣಾಟಕ ಸಂಘ, ಇತಿಹಾಸ ಸಂಘ, ತತ್ತ್ವಶಾಸ್ತ್ರಸಂಘ ಎಂದು ಬೇರೆಬೇರೆ ಸಂಘಗಳಿದ್ದಂತೆ ಇಡೀ ಕಾಲೇಜಿನ ‘ಯೂನಿಯನ್’ ಸಂಸ್ಥೆಯೊಂದಿತ್ತು. ಅದಕ್ಕೆ ಕಾಲೇಜಿನ ಪಕ್ಕದಲ್ಲಿಯೆ ಇದ್ದ ಈಗಲೂ ಇರುವ ಒಂದು ಪೂರ್ತಿ ಕಟ್ಟಡವನ್ನೆ ಮೀಸಲಾಗಿಟ್ಟಿದ್ದರು. ಪ್ರೊಫೆಸರ್ ಒಬ್ಬರು ಅಧ್ಯಕ್ಷರಾಗಿರುತ್ತಿದ್ದರು. ಹಾಗೆಯೆ ವಿದ್ಯಾರ್ಥಿ ಅಧ್ಯಕ್ಷರು ವಿದ್ಯಾರ್ಥಿ ಕಾರ್ಯದರ್ಶಿಗಳೂ ಚುನಾಯಿತರಾಗಿರುತ್ತಿದ್ದರು.‘ಯೂನಿಯನ್’ ಹಾಲಿನಲ್ಲಿ ಸಭೆ ಏರ್ಪಟ್ಟಿತ್ತು. ಅಧ್ಯಾಪಕವರ್ಗದವರೂ ವಿದ್ಯಾರ್ಥಿಗಳೂ ಕಿಕ್ಕಿರಿದು ನೆರೆದಿದ್ದರು. ತಾನಾಜಿಯ ಪಠನಕ್ಕಾಗಿಯೆ ಸಭೆ ಕರೆದಿದ್ದರು. ಆ ಪಠನ ಒಂದು ಅರ್ಧ ಗಂಟೆಯೊ ಮುಕ್ಕಾಲು ಗಂಟೆಯೊ ಹಿಡಿದಿದ್ದಿರಬಹುದು. ತುಂಬ ಪರಿಣಾಮಕಾರಿಯಾಗಿತ್ತು. ವೆಂಕಣ್ಣಯ್ಯನವರು ಹಿಗ್ಗಿಗೆ  ಪಾರವಿರಲಿಲ್ಲ. ಅದನ್ನು ನಾನು ಲಾವಣಿಯ ಧಾಟಿಯಲ್ಲಿಯೆ ತುಸು ರಾಗ ಸೇರಿಸಿಯೆ ಓದಿದ್ದೆ.

೨೩-೮-೧೯೩೦:

‘ಬಸವರಾಜದೇವರ ರಗಳೆ’ಯನ್ನು  ಓದಿದೆ. ಬಹಳ ಸೊಗಸಾದ ಗ್ರಂಥ. ಏನು ಗದ್ಯದ ಶೈಲಿ ಏನು ಪದ್ಯದ ಸರಳತೆ! ನಾನು ಅದನ್ನು ನಮ್ಮ ಕನ್ನಡದ ಅತ್ಯುತ್ತಮ ಗ್ರಂಥಗಳಲ್ಲಿ ಒಂದನ್ನಾಗಿ ಭಾವಿಸುತ್ತೇನೆ. ಅಯ್ಯೊ ಇನ್ನರ್ಧ ಸಿಕ್ಕಿಲ್ಲವಲ್ಲಾ ಎನ್ನಿಸುತ್ತದೆ. wordsworth by F.W.H.Myers ಎಂಬ ಗ್ರಂಥ ಓದಿದೆ.

೨೪-೮-೧೯೩೦:

ಬೆಳಿಗ್ಗೆ ದೋಣಿಯಾಟಕ್ಕೆ ಕುಕ್ಕನಹಳ್ಳಿ ಕೆರೆಗೆ ಹೋದೆ. ಬಹಳ ಹೊತ್ತು ತೇಲಾಡಿದೆವು. ತುದಿಯಲ್ಲಿ ಹುಟ್ಟು ಕವೆಯಿಂದ ತಪ್ಪಿ, ಕಾಲು ಮೇಲಾಗಿ ದೋಣಿಗೆ ಬಿದ್ದೆ. ದೋಣಿಯ ತಳದ ಚಾಚುದಬ್ಬೆಯೊಂದು ಸೊಂಟದ ಕುಣಿಕೆಗೆ ಬಲಾವಾಗಿ ತಗುಲಿತು. ಎದ್ದು ಕೂರಲಿಕ್ಕೂ ನನ್ನಿಂದಾಗಲಿಲ್ಲ. ನನ್ನನ್ನು ದಡಕ್ಕೆ ಎತ್ತಿ ಸಾಗಿಸಿದರು. ನಡೆಯುವ ಮಾತಿರಲಿ ಎದ್ದು ನಿಲ್ಲಲ್ಲೂ ಆಗುತ್ತಿರಲಿಲ್ಲ. ಒಂದು ಟಾಂಗ ತಂದು ಜಟ್ಟಿ ಆಸ್ಪತ್ರೆಗೆ ಒಯ್ದರು. ಜಟ್ಟಿ ನನ್ನನ್ನು ನೆಲದಮೇಲೆ ಮಲಗಿಸಿ ಸೊಂಟದಮೇಲೆ ಕಾಲಿಟ್ಟು ತುಳಿದು ಎಳೆದು ನರಗಳನ್ನು ಸಡಿಲಿಸಿ, ಏನೊ ಒಂದು ಲೇಹ್ಯ ಹಚ್ಚಿ ಬಿಸಿ ನೀರು ಹಾಕಲು ಕೊಟ್ಟ. ತುಂಬಾ ಯಾತನೆ ಅನುಭವಿಸಿದೆ. ಜೀವನದ ಲೀಲೆಯಲ್ಲಿ ನಡುನಡುವೆ ಸಾಹಸಗಳಿಲ್ಲದಿದ್ದರೆ ಬೇಸರವಾಗುವುದಿಲ್ಲವೆ?…

(ನನ್ನ ಸೊಂಟದ ಮೇಲೆ ಹತ್ತಿ ತುಳಿದು ಜಟ್ಟಿ ಮಾರಾಯ ಮಾಡಿದ ತಾಂಡವ ನೃತ್ಯದಿಂದ ನನ್ನ ಯಾತನೆ ಹೆಚ್ಚಿತೆ ಹೊರತು ಮತ್ತೇನೂ ಪ್ರಯೋಜನವಾಗಲಿಲ್ಲ. ರಾತ್ರಿಯೆಲ್ಲ ನರಳುತ್ತಲೆ ಕಳೆಯಬೇಕಾಯಿತು. ಬೆಳಿಗ್ಗೆ ಪ್ರಿಯನಾಥ್ ಮಹಾರಾಜ್(ಸ್ವಾಮಿ ಚಿನ್ಮಾತ್ರಾನಂದರು) ನನ್ನನ್ನು ಟಾಂಗಾದಲ್ಲಿ ಕೃಷ್ಣರಾಜೇಂದ್ರ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಎಲೆಕ್ಟ್ರಿಕ್ ಮಾಸೇಜ್ ಅಂದರೆ ವಿದ್ಯುತ್ತಿನ ಮಾಲೀಸು ಮಾಡಿದೊಡನೆ ನನ್ನ ನೋವುಗೀವು ಎಲ್ಲ ಪವಾಡಸದೃಶ್ಯವಾಗಿ ಮಾಯವಾಯಿತು. ನನಗೆ ಆಶ್ಚರ್ಯವೋ ಆಶ್ಚರ್ಯ! ಆನಂದವೋ ಆನಂದ! ಹಠಾತ್ತನೆ ಸೊಂಟಕ್ಕೆ ಏಟು ಬೀಳುವ ಮುನ್ನಿನ ಪೂರ್ವಸ್ಥಿತಿಗೆ ಬಂದುಬಿಟ್ಟಿದ್ದೆ! ನಗುತ್ತಾ ನೆಟ್ಟಗೆ ನಡೆದುಕೊಂಡು ಬಂದು ಟಾಂಗಾದಲ್ಲಿ ಕುಳಿತು ಆಶ್ರಮಕ್ಕೆ ಬಂದೆ. ಆದರೆ ಮತ್ತೆ ಕ್ರಮೇಣ ನೋವು ಮರುಕಳಿಸಿತು. ಆದರೆ ಮುನ್ನಿನಷ್ಟು ಇರಲಿಲ್ಲ. ಆ ದಿನವೆಲ್ಲ ಮಲಗಿಯೆ ಕಳೆಯಬೇಕಾಯಿತು. ಕಾಲೇಜಿಗೆ ರಜಾ ಬರೆದು ಹಾಕಿದೆ. ಮತ್ತೆ ಮರುದಿನವೂ ಆಸ್ಪತ್ರೆಗೆ ಹೋಗಿ ವಿದ್ಯುತ್ತಿನ ಮಾಲೀಸು ತೆಗೆದುಕೊಂಡಾಗ ಹಿಂದಿನ ದಿನದಂತೆಯೆ ಒಂದರೆಕ್ಷಣದಲ್ಲಿ ನೋವೆಲ್ಲ ಮಾಯವಾಗಿ ಸಂಪೂರ್ಣ ಸ್ವಸ್ಥನಾದೆ. ಆದರೆ ಆವೋತ್ತೂ ಹಿಂದಿನಂತೆಯೆ ಆಶ್ರಮಕ್ಕೆ ಮರಳಿದ ಮೇಲೆ ತುಸು ನೋವು ಮರುಕಳಿಸಿತು. ಹೀಗೆ ಮೂರು ನಾಲ್ಕು ದಿನ ವಿದ್ಯುತ್ತ್ ಚಿಕಿತ್ಸೆ ತೆಗೆದುಕೊಂಎ ಮೇಲೆ ಸಂಪೂರ್ಣ ಗುಣವಾಯ್ತು!)

೫-೮-೧೯೩೦:

ಸೊಗಸಾದಂತೆಯೆ ನೋವೂ ಧೀರರಿಗಾಹಾರಮಲ್ತೆ?
ನೋವೆ ಬಾಳಿಗೆ ಸಾಣೆಯಲ್ತೆ? ಮಣಿಕರ್ಣಿಕೆಯಲ್ಲಿ
ಮಸಣಗಾಹಿಯು ನೀನಲ್ತೆ?ಬೃಂದಾವನದಲ್ಲಿ ತುರುಗಾಹಿಯೂ
ನೀನಲ್ತೆ?ಅದರಿಂದಲೆ ನಾನು ನಿನ್ನನ್ನು ಸುಖದಲ್ಲಿಯೂ
ದುಃಖದಲ್ಲಿಯೂ ಕಂಡು ಆರಾಧಿಸಬಲ್ಲೆ.

೬-೯-೧೯೩೦:

Sir Oliver Lodge’s Beyond physics ಎಂಬ ಪುಸ್ತಕ ಓದುತ್ತಿದ್ದೇನೆ.

೭-೯-೧೯೩೦:

ಕರ್ಣಾಟಕ ಸಾಹಿತ್ಯ ಸಮ್ಮೇಲನ.

೨೩೧೦-೧೯೩೦:

ಕೆಲವು ದಿನಗಳ ಹಿಂದೆ ನಾವೊಂದು ಗುಂಪು ಮಾಡಿಕೊಂಡು, ಇನ್ನುಮೇಲೆ ಕನ್ನಡ ಮಾತಾಡುವಾಗ ಅನಾವಶ್ಯಕವಾದ ಇಂಗ್ಲೀಷ್ ಪದಗಳನ್ನು ಉಪಯೋಗಿಸಿದರೆ, ಪದಕ್ಕೊಂದು ಕಾಸಿನಂತೆ ಜುಲ್ಮಾನೆ ಕೊಡತಕ್ಕದ್ದು ಎಂದು ನಿರ್ಧರಿಸಿದೆವು. ಇವೊತ್ತು ಜವಾಹಿರಿಲಾಲ್ ಅವರ ದಸ್ತಗಿರಿ ಪ್ರಯುಕ್ತ ಕಾಲೇಜು ಹರತಾಳ ಆಚರಿಸಿತು.

(ಆ ಸಂಘಕ್ಕೆ‘ಕಾಸಿನ ಸಂಘ’ಎಂದೇ ಹೆಸರಾಗಿತ್ತು. ತೀ.ನಂ.ಶ್ರೀಕಂಠಯ್ಯ ಅನೇಕ ವರ್ಷಗಳ ಮೇಲೆ ‘ಕಾಸಿನ ಸಂಘ’ಎಂದು ಒಂದು ಭಾವಪ್ರಬಂಧ ಬರೆದಿದ್ದಾರೆ. ಓದುಗರು ಅದನ್ನು ಓದಿ, ಆ ಸಂಘದ ದೆಸೆಯಿಂದ ನಾವೆಲ್ಲ ಏನೇನು ಪಾಡುಪಡಬೇಕಾಯಿತು ಎಂಬ ಸ್ವಾರಸ್ಯವನ್ನೂ ತಿಳಿಯಬಹುದು.)

೭-೧೧-೧೯೩೦:

ಈ ದಿನ ಮಧ್ಯಾಹ್ನ ಶಿವಮೊಗ್ಗಕ್ಕೆ ಕರ್ಣಾಟಕ ಸಂಘದ ಆರಂಭೋತ್ಸವದಲ್ಲಿ ಉಪಕ್ರಮಣ ಭಾಷಣ ಮಾಡಲು ಹೊರಡುವವನಾಗಿದ್ದೇನೆ.

“ಸವರಿಸುವುದು ಕಲೆಯ ಕಾರ್ಯ!
ವಿವರಿಸುವುದು ಶಾಸ್ತ್ರದ ಕಾರ್ಯ!”

ನಾನೂ ಪ್ರಿಯನಾಥ್ ಮಹಾರಾಜರೂ(ಸ್ವಾಮಿ ಚಿನ್ನಾತ್ರಾನಂದರು) ರೈಲುಹತ್ತಿ ಶಿವಮೊಗ್ಗೆಗೆ ಹೊರಟೆವು. ನನ್ನ ಕೊಡೆ ರೈಲ್ವೆಸ್ಟೇಷನ್ನಿನಲ್ಲಿ ಟಿಕೆಟ್ ತೆಗೆದುಕೊಳ್ಳುವ ನೂಕುನುಗ್ಗಲಿನಲ್ಲಿ ಕಳುವಾಗಿ ಕಳೆದುಹೋಯಿತು. ಸ್ಕೌಟುಗಳು ಶ್ರವಣಬೆಳ್ಗೊಳಕ್ಕೆ ಹೋದರು. ದಾರಿಯಲ್ಲಿ ಕಲಾ ಸತ್ಯ ಸೌಂದರ್ಯ ಮೊದಲಾದವುಗಳನ್ನು ಕುರಿತು ಮಾತಾಡುತ್ತಾ ಹೋದೆವು.

೮-೧೧-೧೯೩೦

ಬೆಳಗಿನ ಜಾವದಲ್ಲಿ ಮಲೆನಾಡಿನ ಕಾಡುಗಳು ಪ್ರಾರಂಭವಾದುವು. ಚಳಿ ಹೆಚ್ಚಿತು. ನನಗೆ ಕಾಡನ್ನು ಕಂಡು ಆನಂದ ಉಕ್ಕಿತು. ರೈಲ್ವೆಸ್ಟೇಷನ್ನಿಗೆ ಮಾನಪ್ಪ, ಪುಟ್ಟನಂಜಪ್ಪ ಬಂದಿದ್ದರು. ದಾರಿಯಲ್ಲಿ ಸೀತಾರಾಂ, ಈಶ್ವರಯ್ಯ, ಜೋಯಿಸ್, ಚಿದಂಬರಂ ಸಿಕ್ಕಿದರು…. ಐದೂವರೆ ಗಂಟೆಗೆ ಆರಂಭೋತ್ಸವ ಪ್ರಾರಂಭವಾಯಿತು. ಸರ್ಕಾರಿ ಹೈಸ್ಕೂಲ್ ಹಾಲ್ ನಲ್ಲಿ.  ಜನರು ಸಭಾಮಂದಿರದಲ್ಲಿ ಕಿಕ್ಕಿರಿದಿದ್ದರು. ಉಪಕ್ರಮಣ ಭಾಷಣವನ್ನು ಎಲ್ಲರೂ ತಾಳ್ಮೆಯಿಂದ ಆಲಿಸಿದರು.(ಅಂದು ಮಾಡಿದ ಭಾಷಣ ‘ಸಾಹಿತ್ಯ ಪ್ರಚಾರ’ಎಂಬ ಹೆಸರಿನಿಂದ ಅದೇ ಶೀರ್ಷಿಕೆಯ ಗ್ರಂಥದಲ್ಲಿ ಅಚ್ಚಾಗಿದೆ.) ತುದಿಯಲ್ಲಿ ನನಗೆ ಅಭಿನಂದನೆಗಳನ್ನು ಅರ್ಪಿಸಿದರು.

೯-೧೧-೧೯೩೦:

ಪ್ರಾತಃಕಾಲ ರೈಲ್ವೆ ಸ್ಟೇಷನ್ನಿನ ಹೋಟೆಲಿನಲ್ಲಿ ಮಿತ್ರರು ಉಪಹಾರ ಏರ್ಪಡಿಸಿದ್ದರು. ಎಲ್ಲರೂ ಹುಡುಗಣ್ಣಗಳೆ! ಹರಟೆ ಕೊಚ್ಚಿ, ನಕ್ಕು, ನಾನಾ ತರಹದ ದೋಸೆಗಳನ್ನು ತಯಾರಿಸಿ ಕಬಳಿಸಿದೆವು. ಅದಾದಮೇಲೆ ಎಲ್ಲರೂ ಸರ್ಕಾರೀ ಕಾಡಿನ ಕಡೆಗೆ ಸಂಚಾರ ಹೋದೆವು. ದಾರಿಯಲ್ಲಿ ವಿನೋದವಾಗಿ ಹರಟಿದೆವು. ಸೀತಾರಾಂ ಪುಟ್ಟನಂಜಪ್ಪ ಇಬ್ಬರೂ ಚಂದ್ರಸೂರ್ಯರನ್ನು ಒಂದೇ ಪಟದ ಮೇಲೆ ಚಿತ್ರಿಸುವ ವಿಚಾರವಾಗಿ ಚರ್ಚೆ ಮಾಡುತ್ತಿದ್ದರು. ಬಹಳ ವಿನೋದಕರವಾಗಿತ್ತು….. ಅಲ್ಲಿ ಒಂದೆಡೆ ಹಸುರು ಹಾಸಿದಂತಿದ್ದ ಹುಲ್ಲಿನ ಮೇಲೆ ಕುಳಿತು‘ವಿಜ್ಞಾನಿ’‘ಕಲ್ಕಿ’‘ಪ್ರತಾಪಸಿಂಹ’ ಮೊದಲಾದ ಕವನಗಳ ಭಾಗಗಳನ್ನು ಹೇಳಿದೆ.‘ಕಲ್ಲು’ಎಂಬ ಪದ್ಯದ ಭಾಗವನ್ನೂ ಹೇಳಿದೆ. ಸಾಯಂಕಾಲ ಸಾಗರದಿಂದ ಬಂದವರಿಗಾಗಿ ವೆಂಕಟಸುಬ್ಬಶಾಸ್ತ್ರಿಗಳ ಮಹಡಿಯ ಮೇಲೆ ಅನೇಕ ಕವನಗಳನ್ನು ವಾಚನಮಾಡಿದೆ. ತರುವಾಯ ಪುರಭವನಕ್ಕೆ ಬಿಂದೂರಾಯರ ಭಾರತವಾಚನಕ್ಕೆ ಹೋದೆವು. ಜನ ತುಂಬಾ ಬಂದಿದ್ದರು.

೧೦-೧೧-೧೯೩೦:

ಬೆಳಿಗ್ಗೆ ಗೆಳೆಯರು ಬಂದರು:(ನಾನು ಯಾವಾಗಲೂ ಇಳಿದುಕೊಳ್ಳುತ್ತಿದ್ದಂತೆ ದೇವಂಗಿ ರಾಮಣ್ಣಗೌಡರ ಅಡಕೆಮಂಡಿಯಲ್ಲಿ ಮಾನಪ್ಪನ ಮತ್ತು ಮಂಜಪ್ಪಗೌಡರ ಅತಿಥಿಯಾಗಿದ್ದೆ. ಮಂಡಿಯ ಉಪ್ಪರಿಗೆಯಲ್ಲಿ ನಾವೆಲ್ಲ ಸೇರುತ್ತಿದ್ದುದು; ಸೀತಾರಾಂ, ಚಿದಂಬರಂ, ಪುಟ್ಟನಂಜಪ್ಪ, ಮಾನಪ್ಪ, ಚಂದ್ರಶೇಖರಯ್ಯ, ಶ್ರೀಹರಿ, ಜೋಯಿಸ್, ಇತ್ಯಾದಿ) ತಾನಾಜಿ, ಸಬಕ್ತ ಗೀನ್ ಪದ್ಯಗಳನ್ನು ಓದಿದೆ.(ಹಿಂದಿನ ದಿನದ ಕರ್ಣಾಟಕ ಸಂಘದ ಪ್ರಾರಂಭೋತ್ಸವದಲ್ಲಿ ನನ್ನ ಭಾಷಣ ಕೇಳಿ ಹಿಗ್ಗಿದ ಶಿವಮೊಗ್ಗದ ನಾಗರಿಕರು ನನ್ನ ಕವನವಾಚನ ಏರ್ಪಡಿಸಲು ಕೇಳಿಕೊಂಡಿದ್ದರು ಮೇರೆಗೆ ಮರುದಿನ ಸಂಜೆ ಮತ್ತೆ ಅದೇ ಹೈಸ್ಕೂಲಿನ ಹಾಲಿನಲ್ಲಿ ನನ್ನ ಕವನ ವಾಚನ ಏರ್ಪಟ್ಟಿತ್ತು. ಆ ಸಂಜೆ ಯಾವಯಾವ ಕವನಗಳನ್ನು ಓದಬೇಕೆಂದು ಮಿತ್ರರು ಚರ್ಚಿಸಿ ಪಟ್ಟಿಮಾಡಿಕೊಂಡರು.) ಆಮೇಲೆ ಈ ದಿನ ಓದುವ ಪದ್ಯಗಳ ಪಟ್ಟಿ ಹಾಕಿದೆವು.

ಸಾಯಂಕಾಲ ೬ ಗಂಟೆಗೆ ಪದ್ಯಪಠನ ಪ್ರಾರಂಭವಾಯಿತು. ಜನರು ಯದ್ವಾತದ್ವಾ ಕಿಕ್ಕಿರಿದಿದ್ದರು. ೨ ಗಂಟೆಗಳ ಕಾಲ ಓದಿದೆ.(ಅಂದರೆ ರಾಗವಾಗಿ ಕೆಲವನ್ನು ನಾಟಕೀಯವಾಗಿ ಕೆಲವನ್ನು ವಾಚಿಸಿದೆ.)ನೆರೆದ ಜನರ ಸಂತೋಷ ಘೋಷ ಮತ್ತು ಕರತಾಡನ ಉಕ್ಕಿ ಹರಿದಿತ್ತು. ನನಗೆ ದಣಿವಾಗಿ ನಿಲ್ಲಿಸಲು, ಅನೇಕರು ಎದ್ದುನಿಂತು ಇನ್ನೂ ಕೆಲವನ್ನು ಓದಲು ಒತ್ತಾಯಿಸಿದರು. ಬಿಸಿ ಕಾಫಿ ತಂದು ಮೇಜಿನ ಮೇಲಿಟ್ಟರು. ಕುಡಿದು ವಾಚನವನ್ನು ಮುಂದುವರಿಸಿದೆ. ನೆರೆದವರಿಗೆಲ್ಲ ಒಂದು ತರಹದ ಕಾವ್ಯದ ಮತ್ತು ಏರಿದಂತಿತ್ತು!

ಆ ಸಂಜೆಯ ಕಾವ್ಯವಾಚನದ ಪ್ರಭಾವವನ್ನು ಕುರಿತು ಕರ್ಣಾಟಕ ಸಂಘದ ಕಾರ್ಯದರ್ಶಿಯಾಗಿದ್ದ ಕೂಡಲಿ ಚಿದಂಬರಂ ಅವರು‘ಪ್ರಬುದ್ಧ ಕರ್ಣಾಟಕ ’ದಲ್ಲಿ ಹೀಗೆಂದು  ಬರೆದರು:

“ಮ//ರಾ//ಪುಟ್ಟಪ್ಪನವರ ಭಾಷಣ ಪ್ರಭಾವವು(ಸಾಹಿತ್ಯ ಪ್ರಚಾರ) ಊರಲ್ಲೆಲ್ಲ ಹಬ್ಬಿದುದರಿಂದ ೧೦-೧೧-೧೯೩೦ ನೆಯ ಸೋಮವಾರ ಸಾಯಂಕಾಲ ಅವರ ಕವನಗಳನ್ನು ಕೇಳಲು ಹೈಸ್ಕೂಲು ಮಂದಿರದಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು. ಸ್ವಲ್ಪಕಾಲ ಮಾತ್ರವಿದ್ದು ಹೋಗೋಣವೆಂದು ಬಂದಿದ್ದ ಜನರೂ ಕೂಡ ಅಖಂಡ ೨ ಗಂಟೆಗಳ ಕಾಲ ಏಕಚಿತ್ತರಾಗಿ ಪುಟ್ಟಪ್ಪನವರ ಕವನಗಳನ್ನು ಕೇಳಿದರು. ಮೊದಲು ಚಿದಂಬರಂ ಅವರು ಪುಟ್ಟಪ್ಪವನರ ಕೃತಿಗಳ-‘ಕಬ್ಬದ ಬಳ್ಳಿ’ಯಿಂದ ಹಿಡಿದು ಇಲ್ಲಿಯವರೆಗೆ ಪ್ರಕಟವಾಗಿರುವ ಎಲ್ಲ ಕೃತಿಗಳ ಸೊಬಗನ್ನು ನಾಲ್ಕುನಾಲ್ಕು ಮಾತುಗಳಿಂದ ತಿಳಿಸಿದರು.‘ಕಿರಿಯ ಕಾಣಿಕೆ’‘ತಳಿರು’‘ಕೊಳಲು’ ಇವುಗಳಲ್ಲಿರುವ ತಮ್ಮ ಕವನಗಳನ್ನಲ್ಲದೆ ಇನ್ನೂ ಅಚ್ಚಾಗದಿರುವ ‘ಮಲೆನಾಡಿಗೆ ಬಾ’ ‘ಸಬಕ್ತಗೀನ್’ ‘ತಾನಾಜಿ’ ‘ವಿಮರ್ಶಕ’ ‘ಕಲ್ಕಿ’ ಇವೇ ಮೊದಲಾದ ಅನೇಕ ಕವನಗಳನ್ನು ಕವಿಗಳಿಂದಲೇ ಕೇಳಿ ಜನರು ಆನಂದಪಟ್ಟರು.‘ಸರಳ ರಗಳೆ’ಯ ಪ್ರಭಾವವನ್ನು ತಿಳಿಸಲೋಸುಗ ‘ಯಮನ ಸೋಲಿ’ನಿಂದ ಕೆಲವು ದೃಶ್ಯಗಳನ್ನು ಓದಿದ ಮೇಲೆ, ಚಿಕ್ಕಹುಡುಗರು ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ಯನ್ನು ಕವಿಗಳ ಬಾಯಿಂದ ಕೇಳಬೇಕೆಂದು ಆಸೆಪಟ್ಟು ಅವರನ್ನು ಪ್ರಾರ್ಥಿಸಿದ್ದರಿಂದ ಅದನ್ನೂ ಹಾಡಿದರು. ಅಂತೂ ಶ್ರೀಮಾನ್ ಪುಟ್ಟಪ್ಪನವರು ಅಂದು ಶಿವಮೊಗ್ಗೆಯಲ್ಲಿ ಹೊಸಯುಗದ ಪ್ರವಾಹವನ್ನು ಹೊರಳಿಸಿದರು….. ಶಿವಮೊಗ್ಗೆಯಲ್ಲಿಯೆ ಇದ್ದೂ ಸಂಘದ ಪ್ರಾರಂಭೋತ್ಸವವನ್ನು ನೋಡದಿದ್ದವರು ಇದ್ದರೆ ಅವರು ದುರದೃಷ್ಟಶಾಲಿಗಳೇ ಸರಿ!”

೧೧-೧೧-೧೯೩೦:

ಬೆಳಿಗ್ಗೆ ಜೋಗಕ್ಕೆ ಹೊರಟೆವು ಮೋಟಾರಿನಲ್ಲಿ. ದಾರಿಯಲ್ಲಿ ಕಣ್ಣಿಗೆ ಹಬ್ಬದ ಸೂರೆಯಾಯಿತು. ಕಾಡು, ಬೆಟ್ಟ, ಹಳ್ಳಿ, ಬಯಲು, ಹಕ್ಕಿ,ದನಕರು, ಜನರು- ಹಬ್ಬದ ಮೇಲೆಹಬ್ಬ. ಸಾಗರದಲ್ಲಿ ರಾಮಕೃಷ್ಣಯ್ಯನವರು ಉಪಾಹಾರ ಏರ್ಪಡಿಸಿದ್ದರು. ಮೊಸರನ್ನ ಹುಳಿಯನ್ನ ಬುತ್ತಿಕಟ್ಟಿ ಕೊಟ್ಟರು. ಎಳನೀರು ಕೊಟ್ಟರು. ಜೋಗಕ್ಕೆ ೧೨ ಗಂಟೆಗೆ ಹೋದೆವು. ಹೊಳೆಯನ್ನು ದಾಟುವಾಗ ಅಲ್ಲಿ ನಿಂತು ಸೊಬಗನ್ನು ಸವಿದೆವು. ಅರಣ್ಯವು ಬೆಟ್ಟದ ನೆತ್ತಿಯಿಂದ ನದಿಗೆ ಧುಮುಕಲೆಂದು ಓಡಿಬಂದು ದಡದಲ್ಲಿ ಮುಗ್ಗರಿಸಿಕೊಂಡು ನಿಂತಂತಿತ್ತು. ತೆಪ್ಪದ ದೋಣಿಯ ಮೇಲೆ ಮೋಟಾರುಕಾರನ್ನೂ ಹೇರಿಕೊಂಡು ಕುಳಿತು ಹೊಳೆಯನ್ನು ದಾಟಿದೆವು. ಜೋಗವ್ನನು ಎದೆ ತುಂಬಾ ಕಣ್ಣು ತುಂಬಾ ನೋಡಿದೆವು. ಜಲಪಾತ ಪ್ರಾರಂಭವಾಗುವ ಸ್ಥಳದಲ್ಲಿ ಹಾಸುಬಂಡೆಗಳ ಮೇಲೆ ಕುಳಿತು ಬುತ್ತಿಯೂಟ ಮಾಡಿದೆವು. ಅಲ್ಲಿಂದ ೪ ಗಂಟೆಗೆ ಸಾಗರಕ್ಕೆ ಬಂದೆವು. ಅಲ್ಲಿ ರಾಮಕೃಷ್ಣಯ್ಯನವರ (ಅಲ್ಲಿ ಮುನ್ಸೀಫರಾಗಿಯೊ ಏನೊ ಯಾವುದೊ ಆ ಸಣ್ಣಸ್ಥಳಕ್ಕೆ ದೊಡ್ಡದಾಗಿದ್ದ ಒಂದು ಹುದ್ದೆಯಲ್ಲಿದ್ದರು.) ಮನೆಯಲ್ಲಿಯೆ ಒಂದರ್ಧ ಗಂಟೆ ನನ್ನ ಪದ್ಯಪಠನವಾಯ್ತು. ಕತ್ತಲಾದಮೇಲೆ ಶಿವಮೊಗ್ಗೆಗೆ ಹೊರಟೆವು. ದಾರಿಯಲ್ಲಿ ನನ್ನ ಬಾಲ್ಯಜೀವನದ ಕಥೆಯನ್ನು ಹೇಳುತ್ತಿದ್ದೆ. ಮೊಲಗಳು ಒಂದಾದ ಮೇಲೊಂದು ದಾರಿಯಲ್ಲಿ ರಸ್ತೆ ದಾಟಿ ಓಡುತ್ತಿದ್ದುವು. ಪ್ರಯಾಣವು ರಮಣೀಯವಾಗಿತ್ತು. (ಆದಿನ ಬೆಳಿಗ್ಗೆ ಹೋಗುವಾಗ ಕಾಜಾಣವನ್ನು  ತೋರಿಸಿದೆ. ಆದರೆ ದೊಡ್ಡ ಕಾಜಾಣ ನೋಡಲು ಸಿಕ್ಕಲಿಲ್ಲ.) ರಾತ್ರಿ ೯ ಗಂಟೆಗೆ ಮನೆ ಸೇರಿದೆವು.

೧೨-೧೧-೧೯೩೦:

ಭದ್ರಾವತಿಗೆ ಹೋದೆವು. ಕಾರ್ಖಾನೆಯನ್ನೆಲ್ಲ ನೋಡಿದೆವು. ನಮ್ಮ ದೇಶೀಯರ ಯಂತ್ರ ಕುಶಲತೆಯಲ್ಲಿ ನನಗೆ ನೆಚ್ಚುಹೆಚ್ಚಿ ಎದೆ ಕುಣಿದಾಡಿತು. ಮತ್ತೆ ತಿರುಗಿ ೧ ಗಂಟೆಯ ಹೊತ್ತಿಗೆ ಶಿವಮೊಗ್ಗಕ್ಕೆ ಬಂದೆವು. ಚೊಕ್ಕಂ ಅಯ್ಯಂಗಾರ್(ಡಾಕ್ಟರ್) ನಮ್ಮ ಜೊತೆ ಬಂದರು. ಸಾಯಂಕಾಲ ಮಿತ್ರರು ನನ್ನನ್ನು ಸ್ಟುಡಿಯೋಕೆ ಕರೆದುಕೊಂಡು ಹೋಗಿ Flash light(ಫ್ಲಾಷ್ ಲೈಟ್) ಫೋಟೋ ತೆಗೆಸಿದರು. (ಅದೇ ನನ್ನ ಮೊದಲನೆಯ ಪಬ್ಲಿಕ್ ಫೋಟೋ. ಅದು ಆಗಲೆ ‘ಪ್ರಬುದ್ಧ ಕರ್ಣಾಟಕ’ದಲ್ಲಿ ಅಚ್ಚಾಯಿತು. ನನ್ನ ‘ಸಾಹಿತ್ಯ ಪ್ರಚಾರ’ಭಾಷಣದೊಂದಿಗೆ. ಆಮೇಲೆ ಅದನ್ನು ಶಿವಮೊಗ್ಗ‘ಕರ್ಣಾಟಕ ಸಂಘ’ಪ್ರಕಟಿಸಿದ ‘ರಕ್ತಾಕ್ಷಿ’ ನಾಟಕದ ಮೊತ್ತಮೊದಲ ಮುದ್ರಣದಲ್ಲಿ ಪ್ರಕಟಿಸಿದರು. ಈಗ‘ರಾಷ್ಟ್ರಕವಿ ಕುವೆಂಪು’ಸಾಕ್ಷ್ಯ ಚಿತ್ರದಲ್ಲಿ ನನ್ನ ಫೋಟೋ ಪಂಕ್ತಿಯ ಮೊದಲನೆಯದಾಗಿ ಬಂದಿದೆ.) ಆಮೇಲೆ ತುಂಗಾನದಿಯ ಮರಳು ದಿಣ್ಣೆಗೆ ಹೋಗಿ ಕುಳಿತೆವು. ಅಲ್ಲಿ ಮಿಲ್ಟನ್, ಕುಮಾರವ್ಯಾಸ, ಲಕ್ಷ್ಮೀಶ ಮೊದಲಾದ ಕವಿಗಳ ವಿಚಾರವಾಗಿಯೂ ಶಂಕರಾಚಾರ್ಯ ಮೊದಲಾದ ತತ್ತ್ವಜ್ಞರ ವಿಚಾರವಾಗಿಯೂ ಮಾತನಾಡಿದೆವು.

೧೩-೧೧-೧೯೩೦:

ಬೆಳಿಗ್ಗೆ ಮೈಸೂರಿಗೆ ರೈಲು ಹತ್ತಿದೆವು. ದಾರಿಯಲ್ಲಿ ರೈಲಿನ ಮೃದುಗಮನಕ್ಕೆ ಮನಸೋತು ಮೈಸೂರಿಗೆ ರಾತ್ರಿ ೮ ಗಂಟೆಗೆ ಬಂದೆವು. ೧೨,೧೩ ನೆಯ ತಾರೀಖುಗಳಲ್ಲಿ ಆದ ವಿದ್ಯಾರ್ಥಿ ಪೋಲೀಸು ಘರ್ಷಣೆ ಜಗಳದ ವಿಚಾತ ಗೊತ್ತಾಯಿತು.

೨೨-೧೧-೧೯೩೦: ಬರ್ನಾಡ್ ಷಾ ಓದಿದೆ.(Bernard shaw)

೨೭-೧೧-೧೯೩೦: ಕಾಲೇಜಿನ ಕರ್ಣಾಟಕ ಸಂಘದಲ್ಲಿ ‘ಕೊಳಲು’ಓದಿದೆ. Stopford A.Brook’s Browning ಓದುತ್ತಿದ್ದೇನೆ.

೪-೧೨-೧೯೩೦:Reason and Religion-by H.D Bhattacharya (Philosphical Quarterly, Vol. VI, No.I, April 1930) Russel’s sceptical Essays.

೧೩-೧೨-೧೯೩೦: ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಪದ್ಯಪಠನ.

೧೪-೧೨-೧೯೩೦:ಅರಸು ವಿದ್ಯಾರ್ಥಿ ನಿಲಯದಲ್ಲಿ ಪದ್ಯಪಠನ.

೧೫-೧೨-೧೯೩೦:ಮಹಾರಾಜರ ಹೈಸ್ಕೂಲಿನಲ್ಲಿ ಕರ್ಣಾಟಕ ಸಂಘದ ಸ್ಥಾಪನೆಯಲ್ಲಿ ಉಪಕ್ರಮ ಭಾಷಣ-‘ಕನ್ನಡ ನುಡಿಯ ಸಂಪತ್ತು’೧೭-೧೨-೧೯೩೦:A Miscellany by A.C.Bradley,L.L.D.Litt.D.ಓದಿದೆ.

೬-೧-೧೯೩೦: ಶಿವಮೊಗ್ಗಾಕ್ಕೆ ಹೋದೆ.Introduction to Science by G.A. Thomson ಓದಿದೆ.

೭-೧-೧೯೩೧:

ಶಿವಮೊಗ್ಗದಲ್ಲಿ ದೇ.ರಾ.ಗೌ.ರವರ ಅಡಕೆ ಮಂಡಿಯ ಉಪ್ಪರಿಗೆಯಲ್ಲಿ ನೆರೆದ ಮಿತ್ರರಿಗೆ ರಾತ್ರಿ೯ ಗಂಟೆಯಿಂದ ೧ ಗಂಟೆಯವರೆಗೆ ಸುಮಾರು ನಾಲ್ಕು ಗಂಟೆಯ ಹೊತ್ತು ‘ಶ್ಮಶಾನ ಕುರುಕ್ಷೇತ್ರಂ’‘ಹಾಳೂರು’ಮೊದಲಾದ ಕವಿತೆಗಳನ್ನು ನಾಟಕಗಳನ್ನೂ ಓದಿದೆ.

೮-೧-೧೯೩೧:

ಬೆಳಿಗ್ಗೆ ತೀರ್ಥಹಳ್ಳಿಗೆ ಹೋಗಿ ಕೆಲಸ ಪೂರೈಸಿಕೊಂಡು, ಸಾಯಂಕಾಲ ಹಿಂತಿರುಗಿ ಬಂದು, ರೈಲು ಹತ್ತಿದೆ.(ಏತಕ್ಕೆ? ಸರಿಯಾಗಿ ನೆನಪಿಲ್ಲ. ಆದರೆ ಊಹಿಸುತ್ತೇನೆ: ಕುಪ್ಪಳ್ಳಿ ರಾಮಣ್ಣಗೌಡರು ಅಡಕೆ ವ್ಯಾಪಾರದ ಸಾಹುಕಾರಿಕೆಯಲ್ಲಿ ದೇವಂಗಿ ರಾಮಣ್ಣಗೌಡರ ಅಡಕೆಮಂಡಿಯಿಂದ ಬಂಡವಾಳರೂಪವಾಗಿ ಪಡೆದಿದ್ದ  ಬಹುದೊಡ್ಡ ಮೊತ್ತದ ಸಾಲಕ್ಕೆ ಕುಪ್ಪಳಿ ಮನೆಯ ಅನೇಕ ಜಮೀನುಗಳನ್ನು ಕ್ರಯಕ್ಕೆ ಬರೆದು ಕೊಡಬೇಕಾಯ್ತು ಅವರಿಗೆ ನಾವು. ಆ ಪತ್ರಗಳಿಗೆ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ನಾನೂ ರುಜು ಹಾಕಬೇಕಾಗಿದ್ದುದರಿಂದ ಅಲ್ಲಿಗೆ ಹೋಗಬೇಕಾಗಿ ಬಂತು. ನನಗಿನ್ನೂ ನೆನಪಿದೆ. ಆ ರಿಜಿಸ್ಟ್ರಾರ್ ನನ್ನೊಡನೆ ದೊಡ್ಡ ಸಾಹಿತ್ಯಪ್ರೇಮಿ ಸುಸಂಸ್ಕೃತನಂತೆ ಮಾತಾಡಿ, ನಾವು ಆಫೀಸಿನಿಂದ ಹೊರಟೊಡನೆ ನಮ್ಮ ಹಿಂದೆ ಒಬ್ಬ ಜವಾನನನ್ನು ಕಳಿಸಿ ಹತ್ತು ರೂಪಾಯಿನ ಲಂಚ ತೆಗೆದುಕೊಂಡದ್ದು. ಎಷ್ಟು ನಾಜೋಕು ನಾಗರಿಕವಾಗಿ ಮಾಡಬಾರದ ಅನಾಗರಿಕ ಅಕ್ರಮ ನ್ಯಾಯಬಾಹಿರ ಕಾರ್ಯವನ್ನು ಸಾಧಿಸಿದ್ದ ಅವನು? ಆಗ ನನಗೆ ಅದು ಕೋಟಿಕೋಟಿ ಆಫೀಸುಗಳಲ್ಲಿ ಕೋಟಿಕೋಟಿ ಅಧಿಕಾರಿಗಳು ಪುರಾತನ ಕಾಲದಿಂದ ಹಿಡಿದು ಇಂದಿಗೂ ಆಚರಿಸುತ್ತಿರುವ ‘ಮನುಧರ್ಮಶಾಸ್ತ್ರ’ಗೊತ್ತಿರಲಿಲ್ಲ!) ಸ್ಟೇಷನ್ನಿಗೆ ಸ್ವಲ್ಪ ದೂರದಲ್ಲಿದ್ದ ಗುಡ್ಡದಮೇಲೆ ಬೆಂಕಿಯ ಬೇಲಿಯಂತೆ ದಾವಾಗ್ನಿಯ ಮಾಲೆಯು ಜಾಜ್ವಲ್ಯಮಾನವಾಗಿ ರಂಜಿಸಿತ್ತು.

೯-೧-೧೯೩೧:

ದಾರಿಯಲ್ಲಿ ರೈಲಿನ ಮೇಲೆ‘ವಿಪ್ಲವಾಚಾರ್ಯ’ಎಂಬ ಕವನ ಬರೆದೆ.

೧೦-೧-೧೯೩೧: ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ವಿಜೃಂಭಣೆಯಿಂದ ಜರುಗಿತು.

(ಇದು ಮಠದಲ್ಲಿ ಖಾಸಗಿರೂಪದಲ್ಲಿ ನಡೆಯುವ ಪೂಜೆ ಇತ್ಯಾದಿಗಳಿಗೆ ಸಂಬಂಧಪಟ್ಟುದು.)

೧೭-೧-೧೯೩೧:

ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಬನುಮಯ್ಯ ಹೈಸ್ಕೂಲಿನಲ್ಲಿ ಆಚರಿಸಿದೆವು.(ಇದು ಸಾರ್ವಜನಿಕವಾದ ಕಾರ್ಯಕ್ರಮಕ್ಕೆ ಸಂಬಂಧಪಟ್ಟುದು. ) ನಾನು ‘ಸಂನ್ಯಾಸಿ ಗೀತೆ’ಯನ್ನು ವೀರ್ಯವತ್ತಾಗಿ ವಾಚಿಸಿದೆ.(ಇದು ಸ್ವಾಮಿ ವಿವೇಕಾನಂದರ The Song the Sanysin ಕವನದ ಕನ್ನಡ ಅನುವಾದ.) ಸಂಪದ್ಗಿರಿರಾಯರು ಚೆನ್ನಾಗಿ ಮಾತನಾಡಿದರು. ಶ್ರೀಮತಿ ಕನಕಲಕ್ಷಮ್ಮನವರ ಭಾಷಣವೂ ಚೆನ್ನಾಗಿತ್ತು. ಜೆ.ಎಂ.ಕುಮಾರಪ್ಪನವರು (ಮಹಾರಾಜ ಕಾಲೇಜಿನಲ್ಲಿ ಪ್ರೋಫೆಸರ್ ಆಗಿ ಬಂದಿದ್ದರು.) ಭಾವಪೂರ್ಣವಾಗಿ ಉಪನ್ಯಾಸ ಮಾಡಿದರು. ಸ್ವಾಮಿ ನಿಖಿಲಾನಂದರು (ಆಗ ಅವರು ಮೈಸೂರಿನ ಆಶ್ರಮದಲ್ಲಿದ್ದು‘ಮ’ವಿರಚಿತ ಬಂಗಾಳಿ ಭಾಷೆಯಲ್ಲಿರುವ”ಶ್ರೀರಾಮಕೃಷ್ಣ ಕಥಾಮೃತ” ವನ್ನು ಇಂಗ್ಲಿಷಿಗೆ ಭಾಷಾಂತರಿಸುತ್ತಿದ್ದರು. ಅವರು ಅಮೆರಿಕಾಕ್ಕೆ ನ್ಯೂಯಾರ್ಕಿನ ಶ್ರೀರಾಮಕೃಷ್ಣಾಶ್ರಮಕ್ಕೆ ಅಧ್ಯಕ್ಷರಾಗಿ ಹೋದಮೇಲೆ ಇಲ್ಲಿ ಕೈಕೊಂಡಿದ್ದ ಭಾಷಾಂತರಕಾರ್ಯವನ್ನು ಪೂರ್ಣಗೊಳಿಸಿ ಅದನ್ನು ‘The Gospel of sri Ramakrishna’ಎಂಬ ಬೃಹತ್ ಗ್ರಂಥವನ್ನಾಗಿ ಪ್ರಕಟಿಸಿದರು. ಅವರು ಸುಮಾರು ಒಂದು ವರುಷದ ಹಿಂದೆ ದಿವಂಗತರಾದರು. ೨೬-೫-೧೯೭೪). prophetic ಆಗಿ ಮಾತಾಡಿದರು.

೧೮-೧-೧೯೩೧:

ಮಧ್ಯಾಹ್ನ ತಮ್ಮನ(ಕೆ.ಆರ್.ವೆಂಕಟಯ್ಯ) ಕಾಗದ ಬಂತು, ಮನೆಯ ಜಫ್ತಿಗೆ ಬಂದಿದ್ದಾರೆಂದು! ‘ಇದರ ಕಥೆ ಹೀಗಿದೆ. ನನ್ನ ತಾಯಿಯ ಅಣ್ಣ ಹಿರಿಕೊಡಿಗೆ ಸುಬ್ಬಯ್ಯನಾಯಕರು ಕಡಿದಾಳು ಸುಬ್ಬಯ್ಯಗೌಡರು ಎಂಬುವರ ಕೈಯಲ್ಲಿ ಸಾಲ ಮಾಡಿದ್ದರಂತೆ(ಈ ಕಡಿದಾಳು ಸುಬ್ಬಯ್ಯಗೌಡರು ಕಡಿದಾಳ್ ಮಂಜಪ್ಪನವರು ಅಥವಾ ನನ್ನ ಮೊದಲ ಮಗಳ ಗಂಡನ ತಂದೆ ದಿವಂಗತ ಕಡಿದಾಳ್ ತಮ್ಮಯ್ಯಗೌಡರಿಗೂ ಯಾವ ಸಂಬಂಧವೂ ಇಲ್ಲ.) ಆ ಸಾಲಕ್ಕೆ ಅವರ ಮೇಲೆ ದಾವಾಹಾಕಿ ಜಫ್ತಿಗೆ ಬಂದಾಗ ಅವರು ಕುಪ್ಪಳಿ ರಾಮಣ್ಣಗೌಡರ ಮರೆ ಹೊಕ್ಕಂರಂತೆ. ಕುಪ್ಪಳಿ ರಾಮಣ್ಣಗೌಡರು ಜಾಮೀನು ನಿಂತು ಹಿರಿಕೊಡಿಗೆಯ ಜಮೀನು ಮನೆ ಜಫ್ತಿಯಾಗದಂತೆ ತಡೆದರಂತೆ. ಕುಪ್ಪಳಿ ರಾಮಣ್ಣಗೌಡರು ತೀರಿಹೋದಮೇಲೆ ಹಿರಿಕೊಡಿಗೆಯ ಸುಬ್ಬಯ್ಯ ನಾಯಕರೂ ತೀರಿಹೋದರಂತೆ. ತನ್ನ ಸಾಲ ಮಧ್ಯೆ ಕುಪ್ಪಳಿಯ ಮನೆಯ ಕೆಲವು ಜಮೀನುಗಳನ್ನೆಲ್ಲ ದೇವಂಗಿ ಮಂಡಿಗೆ ಸಾಲಕ್ಕಾಗಿ ಬರೆದುಕೊಟ್ಟ ಮೇಲೆ ಬಹುಶಃ ಕಡಿದಾಳು ಸುಬ್ಬಯ್ಯಗೌಡರಿಗೆ ತನ್ನ ಸಾಲ ಹಿರಿಕೊಡಿಗೆಯವರಿಂದ ಬರುವುದಿಲ್ಲ. ಎಂದು ಗೊತ್ತಾಗಿ, ಕುಪ್ಪಳಿಯವರೂ ತಮ್ಮ ಜಮೀನುಗಳನ್ನೆಲ್ಲ ಬರೆದುಕೊಟ್ಟಮೇಲೆ ಜಾಮೀನಾಗಿದ್ದ ಅವರಿಂದಲೂ ತನಗೆ ಸಾಲದಹಣ ಬರುವುದಿಲ್ಲವೆಂದು ಹೆದರಿ ಜಾಮೀನು ನಿಂತವರ ಮೇಲೆ ದಾವಾ ಹಾಕಿ ಜಫ್ತಿ ಆರ್ಡರ್ ತಂದಿರಬೇಕು. ಅಂತೂ ಹಿರಿಯರ ವಹಿವಾಟಿನ ಚಪ್ಪಡಿ ಹೊರೆ ಕಿರಿಯರ ಮೇಲೆ ಬಿತ್ತು! ಆ ವ್ಯವಹಾರದಲ್ಲಿ ಹಿರಿಕೊಡಿಗೆಯವರ ಗದ್ದೆ ಅಡಿಕೆತೋಟ ಮನೆ ಎಲ್ಲ ಒಬ್ಬ ಬ್ರಾಹ್ಮಣನ ಕೈಸೇರಿತು. ಅಲ್ಲಿಗೆ ಪುಟ್ಟಯ್ಯನಾಯ್ಕರು ಸಂಕಟದಿಂದ ಹೇಳುತ್ತಿದ್ದರು. ಆಗಿದ್ದ ಆ ಸಾಲದ ಮೊತ್ತ ಮೂರೇ ಸಾವಿರ ರೂಪಾಯಂತೆ! ಆ ಮೂರು ಸಾವಿರಕ್ಕೆ ಈಗ ಒಂದು ಲಕ್ಷ ಬಲೆಬಾಳುವ ಹಿರಿಕೊಡಿಗೆ ಕೈಬಿಟ್ಟು ಹಾರುವರಿಗೆ ಸೇರಿತಂತೆ!’

ನಾನು ಪುರಂದರದಾಸರ ಮಹೋತ್ಸವಕ್ಕೆ ಹೋಗಲು ಹೊರಟಿದ್ದೆ. ಅದರಲ್ಲಿ ಭಾಗಿಯಾಗಿ ಎಲ್ಲವನ್ನೂ ಪೂರೈಸಿಕೊಂಡು ಬಂದು ವೆಂಕಟಯ್ಯನಿಗೆ ಕಾಗದ ಬರೆದೆ. ಸ್ವಾಮಿ ಸಿದ್ಧೇಶ್ವರಾನಂದರಿಗೂ ವಿಷಯ ತಿಳಿಸಿದೆ. ಅವರೂ ವೆಂಕಟಯ್ಯನಿಗೆ ಒಂದು ಕಾಗದ ಬರೆದರು:

ಗುರುದೇವ, ಕಷ್ಟಪರಂಪರೆಗಳನ್ನು ತಂದೊಡ್ಡುವೆ! ಏಕೆ? ಪರೀಕ್ಷೆಗಾಗಿಯೇ? ಇನ್ನೂ ನನ್ನ ಪರೀಕ್ಷೆ ಮುಗಿಯಲಿಲ್ಲವೇ? ಆಗಲಿ, ನಿನ್ನ ಇಷ್ಟ! ಆಳಿನೊಂದಪಮಾನ ವಾಳ್ದಂಗೆ! ನನ್ನ ಅಪಮಾನ ನಿನಗೆ, ನನ್ನ ಸನ್ಮಾನ ನಿನಗೆ! ನಿನ್ನನ್ನು ಹೃತ್ಪೂರ್ವಕವಾಗಿ ನಂಬಿದ್ದೇನೆ. ಗೀತೆಯಲ್ಲಿ “ಅನನ್ಯಾಶ್ಚಿಂತಯಂತೋ” ಎಂದು ಮೊದಲಾಗಿ ಭರವಸೆ ಕೊಟ್ಟಿರುವೆ. ನೀನು ಕೈಬಿಡೆ! ನಾನು ಬಲ್ಲೆ! ನನ್ನ ಒಳಗಿನಿ ವಾಣಿ ಹೇಳುತ್ತಿದೆ. ನನ್ನ ಎದೆಯಲ್ಲಿ ತುಂಬಿ ತುಳುಕುವ ಸಿಡಿಲಿನ ಕಡಲೇ ಅದಕ್ಕೆ ಸಾಕ್ಷಿ! ನಾನು ತಮ್ಮನಿಗೆ ಬರೆದ ಕಾಗದದಲ್ಲಿ ಏನಾದರೂ ಅಹಂಕಾರವಿದ್ದರೆ, ಮನ್ನಿಸು! ಆ ಅಹಂಕಾರವು ಭಕ್ತನ ಅಭಿಮಾನೋತ್ಪನ್ನವಾದ ಅಹಂಕಾರ ಎಂದು ಬಿನ್ನವಿಸುತ್ತೇನೆ. ನನ್ನ ತಮ್ಮನ ಯೋಗಕ್ಷೇಮವನ್ನು ನೋಡಿಕೋ! ಅವನಿಗೆ ಶಾಂತಿಯನ್ನು ನೀಡು! ನಿನ್ನ ಚಿತ್ತಕ್ಕೆ ನನ್ನ ಅಹಂಕಾರವು ಅಡ್ಡಿ ಬರದಿರಲಿ; ಆದರೆ ಪ್ರಾರ್ಥನೆಗೆ ಅಹಂಕಾರವಿಲ್ಲ. ಅದು ಅಡ್ಡ ಬಂದರೂ ನೀನು ಸಹಿಸುವೆ; ಪ್ರಸನ್ನನಾಗುವೆ. ಅನಾಥನಂತೆ ನನ್ನ ತಂದೆಯು ಮನೆಬಿಟ್ಟು ತೀರ್ಥಹಳ್ಳಿಯಲ್ಲಿ ಸತ್ತರು. ತಾಯಿಯು ಕಷ್ಟದಿಂದ ಮಡಿದಳು. ತಂಗಿಯರಿಬ್ಬರೂ ವಿವಾಹಿತರಾದ ಎರಡೇ ವರ್ಷಗಳಲ್ಲಿ ಹೋದರು. ನನಗಾಗಿ ಚಿಕ್ಕಪ್ಪನವರು ತಮ್ಮ ಜೀವವನ್ನೇ ತೆತ್ತುರ. ತಮ್ಮ ತಿಮ್ಮುವೂ ಕಾಲವಾದನು. ಈಗ ವೆಂಕಟಯ್ಯನಿದ್ದಾನೆ. ಅವನನ್ನು ನೋಡಿಕೋ! ನನಗೆ ಪರ್ವಾ ಇಲ್ಲ. ನನ್ನನ್ನು ಏನು ಬೇಕಾದರೂ ಮಾಡು. ನಿನ್ನ ಇಷ್ಟ! ನಿನ್ನನ್ನು ಭದ್ರವಾಗಿ ಹಿಡಿದುಬಿಟ್ಟಿದ್ದೇನೆ. ನೀನು ಇಷ್ಟಬಂದಂತೆ ಮಾಡು. ನನಗೆ ಕೆಚ್ಚಿದೆ. ಶಾಂತಿಯಿದೆ. ಇತರರಿಗಾಗಿ ಮರುಗುವೆ. ಅಥವಾ ಕವಿವರ್ಯನೆಂಬುವ ಕೀರ್ತಿಯು ಪುಕ್ಕಟೆಯಾಗಿ ದೊರಕುವುದಿಲ್ಲ ಎಂಬುದನ್ನು ತೋರಲು ಈ ರೀತಿ ಮಾಡುತ್ತಿರುವೆಯಾ? ಆ ಕೀರ್ತಿ ಯಾರಿಗೆ? ನನಗಲ್ಲ! ನಿನಗೆ ಕಾದಷ್ಟೂ ಆತ್ಮಜ್ಯೋತಿಯು ಪ್ರಕಾಶವಾಗುವುದೆಂದು ಹೀಗೆ ಬೆಂಕಿ ಹಾಕುತ್ತಿದ್ದೀಯೇನು? ನಿನ್ನಿಷ್ಟ! ಗುರುದೇವ, ನಿನ್ನಿಷ್ಟಟ!

೧೫-೨-೧೯೩೧:

ಶಿವರಾತ್ರಿ. ಮೊತೀಲಾಲರ ಶ್ರಾದ್ಧದಿನ.

೨೨-೨-೧೯೩೧:

ಗುರುಮಹಾರಾಜರ ಜನ್ಮೋತ್ಸವವು ಒಂಟಿಕೊಪ್ಪಲಿನ ಹೊಸಕಟ್ಟಡದಲ್ಲಿ ನಡೆಯಿತು. ಆ ದಿನ ಸಾಯಂಕಾಲ ಅಲ್ಲಿಯೆ ಹಾಕಿದ್ದ ಚಪ್ಪರದಲ್ಲಿ ಸಾರ್ವಜನಿಕ ಮಹಾಸಭೆ ನಡೆಯಿತು. ಫ್ರೋಫೆಸರ್ ಪಿ.ಶೇಷಾದ್ರಿ ಅಧ್ಯಕ್ಷತೆ ವಹಿಸಿದ್ದರು. ನಾನು‘ಹಿಂದೂ ಧರ್ಮ ಮತ್ತು ಶ್ರೀರಾಮಕೃಷ್ಣ’ಎಂಬ ಲೇಖನವನ್ನು ಓದಿದೆ.(ಸ್ವಾಮಿ ವಿವೇಕಾನಂದರು ಬಂಗಾಳಿ ಭಾಷೆಯಲ್ಲಿ ಬರೆದಿದ್ದ ಲೇಖನದ ಕನ್ನಡ ಅನುವಾದ ಮಾಡಿದ್ದೆ. ಅತ್ಯಂತ  ಉಜ್ವಲವಾಗಿದ್ದ ಬಂಗಾಳಿ ಭಾಷೆಯ ಛಾಯೆಯನ್ನು ಸ್ವಲ್ಪವೂ ಕೆಡದಂತೆ ಅನುವಾದ ಮಾಡಿದ್ದೆ. ಅದರ ವಸ್ತುವಿನ ಭವ್ಯತೆಗೆ ಹೆಗಲೆಣೆಯಾಗಿದೆ ಅದರ ಭಾಷೆಯ ಓಜಸ್ಸು. ಆ ಲೇಖನವನ್ನು ಸ್ವಾಮಿ ವಿವೇಕಾನಂದರ ಕೃತಿಶ್ರೇಣಿಯಲ್ಲಿ ಹಾಗೆಯೆ ಸೇರಿಸಿದ್ದಾರೆ. ಮೈಸೂರಿನ ಶ್ರೀರಾಮಕೃಷ್ಣಾಶ್ರಮದ ಅಚ್ಚುಗೊಂಡು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಪ್ರಕಟವಾಗಿರುವ ನನ್ನ ‘ಶ್ರೀ ರಾಮಕೃಷ್ಣ ಪರಮಹಂಸ’ಜೀವನಚರಿತ್ರೆಯ ಆರನೆಯ ಮುದ್ರಣದಲ್ಲಿ ಒಂದು ದಂಗುಬಡಿದು ಆಲಿಸಿತು.!N.S.Subba Rao spoke in English about the distribution to Man. Prof.ಧ್ರುವspoke on the production of spiritual wealth. ತಿ.ತಾ.ಶರ್ಮರು ಅರ್ಧಗಂಟೆಯ ಹೊತ್ತು ವೀರ್ಯವತ್ತಾಗಿ ಮಾತಾಡಿದರು. ಆಮೇಲೆ ಪ್ರೋಫೆಸರ್ ಟಿ.ಎಸ್.ವೆಂಕಣ್ಣಯ್ಯನವರು ಬಹಳ ಸ್ವಾರಸ್ಯವಾಗಿ‘ಭಗವದ್ಗೀತೆ ಮತ್ತು ಶ್ರೀರಾಮಕೃಷ್ಣ’ಎಂಬ ವಿಚಾರವಾಗಿ ಮಾತನಾಡಿದರು. ಒಟ್ಟಿನಲ್ಲಿ ಎಲ್ಲವೂ ತುಂಬ ವೈಭವದಿಂದ ಜರುಗಿತು. ನನಗಾದರೋ ಯಾವ ವಿಧವಾದ ಗಲಭೆಯೂ ಸರಿಹೋಗುವುದಿಲ್ಲ. ಆ ದಿನ ಎಲ್ಲ ಪೂರೈಸಿದ ಮೇಲೆ ನಾರಾಯಣಸ್ವಾಮಿಯೊಡನೆ ಬಯಲಿನಲ್ಲಿ ನಿಂತು ಕುಳಿತು ಏನೇನೋ ಮಾತಾಡಿದೆ. ಜಗತ್ತಿನ ಹಿಂದಿರುವ ಹುಚ್ಚಿನ ವಿಚಾರವಾಗಿಯೂ!

(ಹೊಸ ಆಶ್ರಮದಲ್ಲಿಯೂ ಸ್ವಾಮಿ ಸಿದ್ಧೇಶ್ವರಾನಂದರು ನನಗೆ ಒಂದು ಪ್ರಶಸ್ತವಾದ ಕೊಠಡಿಯನ್ನೆ ಬಿಟ್ಟುಕೊಟ್ಟರು. ನನ್ನ ಓದುಬರಹಕ್ಕೂ ಕಾವ್ಯರಚನೆಗೂ ಯಾವ ವಿಧವಾದ ಅಡಚಣೆಯೂ ಉಂಟಾಗಬಾರದೆಂದು ಅವರು ತುಂಬ ವಿಶ್ವಾಸಪೂರ್ವಕವಾಗಿ ಮುತುವರ್ಜಿವಹಿಸುತ್ತಿದ್ದರು. ಒಮ್ಮೊಮ್ಮೆ ಇತರ ಸ್ವಾಮಿಗಳಿಂದ-ತಮಗೆ ಮೀಸಲಾಗಿರಬೇಕಾಗಿದ್ದ ಜಾಗ ಸಿಗದಿದ್ದುದಕ್ಕೆ- ಟೀಕೆಗೂ ಒಳಗಾಗುತ್ತಿದ್ದರೆಂದು ತೋರುತ್ತದೆ.)

೨೦-೨-೧೯೩೧:(ದಿನಚರಿ ಬರೆಯುವಾಗ ತಾರೀಖುಗಳು ಹಿಂದು ಮುಂದಾಗಿವೆ ಎಂದು ತೋರುತ್ತದೆ.)

ಕರ್ಣಾಟಕ ಸಂಘದ ವಾರ್ಷಿಕೋತ್ಸವ ಮಹಾರಾಜಾ ಕಾಲೇಜಿನಲ್ಲಿ. ಪಂಜೆ ಮಂಗೇಶರಾಯರು ಅಧ್ಯಕ್ಷರು. ನಾನು ಮೊದಲು ಅವರನ್ನು ಎದುರುಗೊಂಡಾಗ ಅವರು ಭಾವವಶರಾಗಿ ಉದ್ವೇಗದಿಂದ ನನ್ನನ್ನು ದುರುದುರನೆ ಬಿಟ್ಟಕಣ್ಣು ಮುಚ್ಚದೆ ಸಂಭ್ರಮಾತಿಶಯದಿಂದ ನೋಡುತ್ತಾ “ಆನಂದವಾಯಿತು! ಮಹದಾನಂದವಾಯಿತು!” ಎಂದರು. ನನಗೂ ಅವರಂತೆಯೇ ಆಯಿತು. ಆ ವೃದ್ಧರು ಭಾವಮಯ ವ್ಯಕ್ತಿ, ಬರಿಯ ಕಣ್ಣೀರಿನ ಮುದ್ದೆ? ಮತ್ತೆ ನನ್ನ ಕೈಹಿಡಿದು ಗುಂಪಿನಿಂದ ಪ್ರತ್ಯೇಕಿಸಿ ಸ್ವಲ್ಪ ದೂರ ಕರೆದುಕೊಂಡು ಹೋಗಿ ನಿಂತರು. ತಮ್ಮ ಜೇಬಿನಲ್ಲಿದ್ದ ಕನ್ನಡಕವನ್ನು ಹೊರತೆಗೆದು ಹಾಕಿಕೊಂಡು ನನ್ನ ಎರಡೂ ಭುಜಗಳನ್ನು ತಮ್ಮ ಎರಡೂ ಕೈಗಳಿಂದ ಹಿಡಿದುಕೊಂಡು ಒಂದು ತೈಲವರ್ಣದ ಕಲಾಕೃತಿಯನ್ನು ಅವಲೋಕಿಸುವಂತೆ ದಿಟ್ಟಿಸಿ ದಿಟ್ಟಿಸಿ ಎವೆಯಿಕ್ಕದೆ ನೋಡಿದರು! ಅವರ ಆನಂದವೊ ಹೇಳತೀರದಂತೆ ಹರಿದಿತ್ತು. ಅವರ ಆನಂದದಲ್ಲಿ ನಾನೂ ಕೊಚ್ಚಿಹೋದೆ.

ಪ್ರೋಫೆಸರ್ ವೆಂಕಣ್ಣಯ್ಯ ಮತ್ತು ಇತರರು ಅಲ್ಲಿಗೆ ಬಂದು ಎಚ್ಚರಿಸಿದ ಮೇಲೆಯೆ ಅವರಿಗೆ ತಾವು ಕರ್ಣಾಟಕ ಸಂಘದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಲು ಬಂದುದು ಜ್ಞಾಪಕವಾಗಿ ಎಲ್ಲರೊಡನೆ ಸೀನಿಯರ್ ಬಿ.ಎ.ಹಾಲ್ ವೇದಿಕೆಗೆ ನಡೆದರು.

ಆದಿನ ಎ.ಎನ್.ಮೂರ್ತಿರಾಯರು ಅನುವಾದಿಸಿ ರಚಿಸಿದ ‘ಆಷಾಢಭೂತಿ’ ನಾಟಕವೂ ನಿರುಪಮವಾಗಿ ಅಭಿನಯಿಸಲ್ಪಟ್ಟಿತು.