೨೧-೨-೧೯೩೧:

ಬೆಳಿಗ್ಗೆ ನಾನೂ ನಾರಾಯಣ ಸ್ವಾಮಿಯೂ ಒಂಟಿಕೊಪ್ಪಲಿನ ಹೊಸ ಆಶ್ರಮದಿಮದ ಕಾಲೇಜಿಗೆ ಹೊರಟೆವು. ದಾರಿಯಲ್ಲಿ ಕುಕ್ಕನಹಳ್ಳಿಯ ಕೆರೆಯಲ್ಲಿ ದೋಣಿ ಹೊರಡುತ್ತಿತ್ತು. ಆಚೆಯ ದಡದಲ್ಲಿ ಬಿ.ಎಂ.ಶ್ರೀ, ಮಂಗೇಶರಾಯರು ಮೊದಲಾದವರು ಇರಬೇಕೆಂದು ಊಹಿಸಿ, ಕರೆದು, ನಾವೂ ದಡಕ್ಕೆ ಬಂದ ದೋಣಿಗೆ ಏರಿದೆವು. ಮಂಗೇಶರಾಯರು ತಮ್ಮ ಒಂದು ಕವನವನ್ನು ಹಾಡಿದರು. ಅದು ಟೆನಿಸನ್ ಕವಿಯ Book ಎಂಬುದನ್ನು ಅನುಸರಿಸಿದೆಎಂದರು.”ಎಲ್ಲಿಂದ ಬರುತೀಯೆ?” ಎಂದು ಪ್ರಾರಂಭವಾಗುವುದು. ಆಮೇಲೆ ನಾನೂ ಡಿ.ಎಲ್.ನರಸಿಂಹಾಚಾರ್ಯರೂ ನನ್ನ ‘ದೋಣಿಹಾಡ’ನ್ನು ಹಾಡಿದೆವು. ತರುವಾಯ ನರಸಿಂಹಾಚಾರ್ಯರು ತೀ.ನಂ.ಶ್ರೀಯವರ ಸ್ವಾಗತಗೀತವನ್ನು ಮಧುರವಾಗಿ ಹಾಡಿದರು…. ದೋಣಿಯಾಟ ಮುಗಿಸಿ ಎಲ್ಲರೂ ಕಾಲೇಜಿಗೆ ಬಂದೆವು…. ಫೋಟೋ ಆಯಿತು. ತಿಂಡಿ ಕಾಫಿ ಆಯಿತು. ಆಮೇಲೆ ನಾನು‘ಪಾಂಚಜನ್ಯ’‘ಕುಮಾರವ್ಯಾಸ’‘ತಾನಾಜಿ’‘ಕಲ್ಕಿ’ಎಂಬ ಕವನಗಳನ್ನು ವಾಚನ ಮಾಡಿದೆನು. ‘ಕಲ್ಕಿ’ಯನ್ನು ಎನ್.ಎಸ್.ಸುಬ್ಬರಾಯರು ಬಹಳವಾಗಿ ಕೊಂಡಾಡಿ, ಅದರ ಇಂಗ್ಲಿಷ್ ಭಾಷಾಂತರವನ್ನು ಇಂಗ್ಲೆಂಡಿನ ಪತ್ರಿಕೆMercuryಗೆ ಕಳಿಸುತ್ತೇನೆ ಎಂದು ಹೇಳಿದರು. ಶ್ರೀಯವರೂ ಮಂಗೇಶರಾಯರೂ ಬಹು ಸ್ವಾರಸ್ಯವೂ ಬುದ್ದಿದಾಯಕವೂ ಆದ ಚಿಕ್ಕ ಉಪನ್ಯಾಸಗಳನ್ನು ಮಾಡಿದರು. ಎ.ಎನ್.ಮೂರ್ತಿರಾಯರು ‘ಗೌರಕ್ಕ’ಎಂಬ ತಮ್ಮ ಪ್ರಬಂಧವನ್ನು ಓದಿದರು. ತೀ.ನಂ. ಶ್ರೀಯವರು ನಕ್ಷತ್ರಗಳ ಮೇಲೆ ಬರೆದ ತಮ್ಮ ಭಾವಪ್ರಬಂಧವನ್ನು ಓದಿದರು. ಎರಡೂ ಬಹಳ ಚೆನ್ನಾಗಿದ್ದುವು. ಎಂ.ವಿ.ಸೀತಾರಾಮಯ್ಯನವರು‘ದಾಳಿಂಬೆ ಹೂ’ಎಂಬ ತಮ್ಮ ಪದ್ಯವನ್ನೂ‘ಸಾಹಿತ್ಯ ಮತ್ತು ಚಿತ್ರಕಲೆ’ಎಂಬ ತಮ್ಮ ಪ್ರಬಂಧದ ಭಾಗಗಳನ್ನೂ ಓದಿದರು. ಎಲ್. ಗುಂಡಪ್ಪನವರು ತಮ್ಮ ‘ಸೋಹ್ರಾಬ್-ರುಸ್ತುಮ್ಮು’ಭಾಷಾಂತರವನ್ನು ತಂದಿದ್ದರು. ಆದರೆ ಓದಲು ಅವಕಾಶವಾಗಲಿಲ್ಲ.

೨೮-೨-೧೯೩೧:

ಎಚ್.ಸಿ.ದಾಸಪ್ಪನವರಲ್ಲಿಗೆ ಹೋಗಿ, ಎಸ್.ಕೆ.ಸುಬ್ಬರಾಯರ ನೆರವಿನಿಂದ ಕೋರ್ಟಿಗೆ ಹೋಗಿ‘ಪವರ್ ಆಫ್ ಅಟಾರ್ನಿ’(power of Attorney)ಕಳಿಸಿದೆ.

(ವೆಂಕಟಯ್ಯ ಕಾಗದ ಬರೆದಿದ್ದ. ಮನೆ ಜಮೀನು ವಿಷಯದಲ್ಲಿ ಕಾನೂನು ಪ್ರಕಾರ ವ್ಯವಹರಿಸುವುದಕ್ಕೆ ಸಲಸಲಕ್ಕೂ ನನ್ನ ಹಾಜರಿ ಮತ್ತು ರುಜು ಪಡೆಯಬೇಕಾಗುವುದು ಸಾಧ್ಯವಾಗುವುದಿಲ್ಲವಾದ್ದರಿಂದ ಅವನಿಗೆ‘ಪವರ್’ ಆಫ್ ಅಟಾರ್ನಿ’ ಕಳಿಸಿ ಕೊಡುವಂತೆ. ಅದನ್ನು ಆಗ ಸುಪ್ರಸಿದ್ದ ಲಾಯರ್ ಆಗಿ, ಶ್ರೀರಾಮಕೃಷ್ಣಾಶ್ರಮದ ಕಾರ್ಯದರ್ಶಿಯಾಗಿದ್ದು, ನನಗೆ ತುಂಬ ಸಲುಗೆಯ ಪರಿಚಯವಿದ್ದುದರಿಂದ ಎಚ್.ಸಿ.ದಾಸಪ್ಪನವರಲ್ಲಿಗೆ ಕೊಂಡೊಯ್ದೆ. ಅವರು ತಮ್ಮ ಸಹಾಯಕರಾಗಿದ್ದ ಲಾಯರು ಎಸ್.ಕೆ.ಸುಬ್ಬರಾಯರಿಗೆ ಚೀಟಿ ಕೊಟ್ಟರು.)

೮-೩-೧೯೩೧:

ಬೆಳಿಗ್ಗೆ ತಾಂಡವೇಶ್ವರ ಮೊದಲಾದವರು ಬಂದರು. ತಿರುಗಾಟಕ್ಕೆ ಹೋದೆವು.

೧-೪-೧೯೩೧:

‘ಆಧುನಿಕ ಕನ್ನಡ ಸಾಹಿತ್ಯ’ವನ್ನು ತಿ.ತಾ.ಶರ್ಮರಿಗೆ ಕಳುಹಿಸಿದೆ.(ಅವರು ‘ವಿಶ್ವಕರ್ಣಾಟಕ’ ಸಂಪಾದಕರಾಗಿದ್ದು ಒಂದು ಲೇಖನ ಕಳಿಸಬೇಕೆಂದೂ ಬರೆದಿದ್ದರು. ಅದಕ್ಕಾಗಿ ಬರೆದದ್ದು ಈ‘ಆಧುನಿಕ ಕನ್ನಡ ಸಾಹಿತ್ಯ.’ ಆ ಲೇಖನವಿರುವ ಸಂಚಿಕೆ ಈಗಲೂ ನನ್ನ ಬಳಿ ಇದೆ. ಆದರೆ ಆ ಲೇಖನವನ್ನು ಇನ್ನೂ ನನ್ನ ಯಾವ ಸಂಗ್ರಹದಲ್ಲಿಯೂ ಸೇರಿಸಲಿಲ್ಲ. ಇಂದಿನ ನನ್ನ ದೃಷ್ಟಿಗೆ ಅದರಲ್ಲಿರುವ ಪ್ರಶಂಸೆಗಳು ಅತಿ ಬಾಲಿಶವಾಗಿ ತೋರಿರುವದರಿಂದ. ಅದು ಪ್ರಕಟವಾದ ಮೇಲೆಯೂ ಮತ್ತು ನಾನು ದೊಡ್ಡಬಳ್ಳಾಪುರದಲ್ಲಿ ಮುಂದೆ ಮಾಡಿದ ಭಾಷಣಗಳು ಪತ್ರಿಕೆಗಳಲ್ಲಿ ವರದಿಯಾದ ಮೇಲೆಯೂ ಉತ್ತರ ಕರ್ಣಾಟಕದವರೂ ಅಲ್ಲಿಯ ಪತ್ರಿಕೆಗಳೂ ಬಹಳ ಕ್ರುದ್ಧವಾಗಿ ನನ್ನನ್ನು ಖಂಡಿಸಿದುವು. ನಾನು ಅವರ ಕಡೆಯ ಸಾಹಿತ್ಯದ ಮುಂದಾಳುಗಳನ್ನು ನಿರಾಕರಿಸಿದೆ ಎಂದು. ನಾನು ಬೇಕೆಂದು ನಿರಾಕರಿಸಿರಲಿಲ್ಲ. ನನಗೆ ಅತ್ತಕಡೆಯ ವ್ಯಾಪ್ತಿ ಇರಲಿಲ್ಲವಾಗಿ‘ಅಜ್ಞಾನ’ದಿಂದಲೆ ಹಾಗೆ ಆಗಿತ್ತು. ಅವರ ಕ್ರೋಧಕ್ಕೆ ಸ್ವಲ್ಪ ಕಾರಣವೂ ಇತ್ತು. ನಾನು ಮಾಸ್ತಿ, ಡಿ.ವಿ.ಜಿ., ಪಂಜೆ, ಬಿ.ಎಂ.ಶ್ರೀ, ವೀ.ಸೀ. ಇವರನ್ನೆಲ್ಲ ಹೆಸರಿಸಿ ಅತ್ತಕಡೆಯ ಒಬ್ಬರನ್ನೂ ಹೆಸರಿಸದಿದ್ದುದು ಅವರ ಮುನಿಸಿಗೆ ಸಕಾರಣ ಒದಗಿಸಿತ್ತು.)

೩-೪-೧೯೩೧:

A letter written by Mr.D.V.Gundappa after he saw or read‘ಯಮನ ಸೋಲು’. ಡಿ.ವಿ.ಗುಂಡಪ್ಪನವರು. ಸ್ವಾಮಿ ಶ್ರೀವಾಸಾನಂದರು ಮತ್ತು ವಿ.ಸುಬ್ರಮಣ್ಯ ಅಯ್ಯರ್ ಅವರು ಬರೆದ ಮೂರು ಪತ್ರಗಳನ್ನು ೩-೪-೧೯೩೧ ನೆಯ ತಾರೀಖು ಹಾಕಿ ನನ್ನ ದಿನಚರಿಯಲ್ಲಿ ಒಟ್ಟಿಗೆ ಪ್ರತಿ ಎತ್ತಿದ್ದೇನೆ. ಅವೆಲ್ಲ ಕಳೆದು ಹೋದರೂ ಒಂದು ಕಡೆ ಇರಲಿ ಎಂದಿರಬಹುದು.

D.V.GUNDAPPA
THE KARNATAKA AND INDIAN REVIEW
OF REVIEWS PUBLISHED MONTHLY
BASAVANAGUDI P.O.BANGALORE CITY,
MYSORE STATE : INDIA

February 26,1928.

Dear Brother,

I hope you won’t grouse at finding me write in English. Because I am fated to use this language more largely, the pen moves faster in it.

I have just a word to say, And that is a word of the heartiest and warmest congratulation-on the poetic quality ofಯಮನ ಸೋಲು The delicacy of conception and phrasing are, if I may say so,-superb, exceedingly so in several places. It is a work of careful and skilful art-dominated by a noble sentiment. May the gift grow in you; and may it be ours for long-fr very very long-to enjoy the beauties of its output.

when you chance to go thro Bangalore, won’t you remember to give me the pleasure of your company for some time?

with every good wish I remain.

Sincerely yours,
(Sd/-)
D.V.GUNDAPPA

(ಈ ಕೆಳಗಿನ ಕಾಗದ ಸ್ವಾಮಿ ಶ್ರೀವಾಸಾನಂದರು ಬರೆದದ್ದು. ಅವರು ಮೈಸೂರು ಸರಕಾರದ ದೊಡ್ಡ ಹುದ್ದೆಯಲ್ಲಿದ್ದು ನಿವೃತ್ತರಾದ ಮೇಲೆ ಸಂನ್ಯಾಸಿಯಾಗಿದ್ದರು. ಮೈಸೂರು ಶ್ರೀರಾಮಕೃಷ್ಣಾಶ್ರಮವನ್ನು ಪ್ರಾರಂಭಿಸುವುದಕ್ಕೆ ಅವರೂ ತುಂಬ ಉತ್ಸಾಹದಿಂದ ಕೆಲಸ ಮಾಡಿದ್ದರು; ಧನಸಹಾಯದಿಂದಲೂ ಎಂದು ಕೇಳಿದ್ದೇನೆ.) ಶ್ರೀ ಕೃಷ್ಣರಾಜ ಒಡೆಯರು ಸಿಂಹಾಸನವನ್ನೇರಿ ಇಪ್ಪತ್ತೈದು ವರ್ಷವಾದಾಗ ಮೈಸೂರು ಸಂಸ್ಥಾನ ವಿಜೃಂಭಣೆಯಿಂದ ಅದರ ರಜತೋತ್ಸವವನ್ನು ನಡೆಸಿತು. ಬಿ.ಎಂ.ಶ್ರೀಯವರು ರಜತೋತ್ಸವ ಪ್ರಗಾಥವನ್ನು ಬರೆದಿದ್ದರು. ನಾನು ಸ್ವಭಾವತಃ ರಾಜತ್ವ ದ್ವೇಷಿಯಾಗಿದ್ದರೂ ಶ್ರೀ ಕೃಷ್ಣರಾಜ ಒಡೆಯರಲ್ಲಿ ಇತರ ದೇಶೀಯ ರಾಜರಲ್ಲಿ ಎಲ್ಲಿಯೂ ಕಾಣಬರದ ಕೆಲವು ಸದ್ಗುಣಗಳನ್ನು ಕಂಡು ಅವರ ವಿಷಯದಲ್ಲಿ ಗೌರವವಿಟ್ಟುಕೊಂಡಿದ್ದೆ.ಅಲ್ಲದೆ ಅವರು ಶ್ರೀರಾಮಕೃಷ್ಣರು-ವಿವೇಕಾನಂದರು ಮತ್ತು ಶ್ರೀ ರಾಮಕೃಷ್ಣಾಶ್ರಮಗಳು ಈ ವಿಚಾರದಲ್ಲಿ ಭಕ್ತಿ ಗೌರವ ಉಳ್ಳವರೆಂಬುದನ್ನು ವಿ.ಸುಬ್ರಹ್ಮಣ್ಯ ಅಯ್ಯರ್ ಮತ್ತು ಸ್ವಾಮಿ ಶ್ರೀವಾಸಾನಂದ(ಅವರು ಪೂರ್ವಾಶ್ರಮದಲ್ಲಿ ಮಹಾರಾಜರು ಹತ್ತಿರದ ವ್ಯಕ್ತಿಗಳಾಗಿದ್ದರಂತೆ.)ಮತ್ತು ಸ್ವಾಮಿ ಸಿದ್ದೇಶ್ವರಾನಂದರಿಂದಲೂ ಕೇಳಿದ್ದೆ. ಜೊತೆಗೆ ಹೊಸವಸ್ತುವನ್ನು ಕುರಿತು ಹೊಸ ರೀತಿಯಲ್ಲಿ ಕಾವ್ಯ ಬರೆಯಬೇಕೆಂಬ ಸ್ಫೂರಿಯೂ ಪ್ರೇರಣೆಯಾಗಿ”ಬೆಳ್ಳಿಹಬ್ಬದ ಕಬ್ಬದ ಬಳ್ಳಿ.”ಎಂಬ ಹೆಸರಿನಲ್ಲಿ ಒಂದು ಪ್ರಗಾಥಸದೃಶ ಕವಿತೆ ಬರೆದೆ, ಅಪ್ರಾಸ ಅಸಮ ಪಂಕ್ತಿಯ ಛಂದಸ್ಸಿನಲ್ಲಿ. ಅದನ್ನು ನನ್ನ ಖರ್ಚಿನಿಂದಲೆ ಅಚ್ಚು ಹಾಕಿಸಿದೆ. ಅದು ಇತ್ತೀಚೆಗೆ‘ಇಕ್ಷುಗಂಗೋತ್ರಿ’ಯಲ್ಲಿ ಪ್ರಕಟವಾಗಿದೆ.ಅದರ ಒಂದು ಪ್ರತಿಯನ್ನು ಸ್ವಾಮಿ ಸಿದ್ದೇಶ್ವರಾನಂದರ ಮತ್ತು ನಾ. ಕಸ್ತೂರಿಯವರ ಸಲಹೆಯಂತೆ ಸ್ವಾಮಿ ಶ್ರೀವಾಸಾನಂದರಿಗೂ ಕಳಿಸಿದ್ದೆ. ಅದಕ್ಕೆ ಬರೆದ ಕಾಗದ ಇಲ್ಲಿದೆ.)

ADWAITA  ASRAMA
P.O.MAYAVATI,
DIST. ALMORA, U.P.

23rd Aug 1927

My dear puttappa,

Many thanks for your kind gift of‘Belli-habbada-kabbada Balli’The poetry is charming and yet simple, with the thoughts uttered in most homely Kannada.your love of charming scenes and ideal life are admirable and I am sure the public will eagerly look forward to tasting the riper fruits of your mature muse which has begun to sing with such promise.

with all good wishes and blessings.

yours ever lovingly,
(Sd/-)
SRIVASANANDA.

P.S.I wish I had your command of Kannada and then I should have  sent you these few lines  in that language.

VONTIKOPPAL MOHALLA
30th Aug. 1927

My dear puttappa,

It was really very kind of you to have sent me a copy of your jubilee Ode, for which I thank you most heartily. The poem is an exquisite piece of composition in Kannada. I have read it with the greatest delight. The sentiments it contains are most appropriate to the greatest occasion in honour of which you have written it. Tastes, however, differ. For my part I should have left out on this occasion the eighth stanza. Be this as it may, the ode posseses rare merits. It is an unqualified success in a new field.

I believe you submitted a copy to his Highness, who I have no doubt, will have appreciated your talents.

with sri Ramakrishna’s blessings. you will. I am sure, make a mark in the world of Kannada letters, as a most oroginal poet. with my best wishes to you.

I am

yours very sincerly,
(sd/-) V.SUBRAMANYA IYAR

ಮೇಲಿನ ಕಾಗದದ ಕರ್ತೃ ನಿವೃತ್ತರಾಗಿದ್ದ ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆಗಿದ್ದರು. ಅಲ್ಲದೆ ಮಹಾರಾಜರಿಗೆ ವೇದಾಂತ ಬೋಧಕರೂ ಆಗಿದ್ದರು. ಶ್ರೀರಾಮಕೃಷ್ಣ ಆಶ್ರಮದ ಭಕ್ತ ಹಿತೈಷಿಗಳಾಗಿದ್ದು ಮೈಸೂರು ಆಶ್ರಮಕ್ಕೆ ರಾಜ ಸಹಾಯ ದೊರೆಯಲು ಮುಖ್ಯ ಕಾರಣವಾಗಿದ್ದರು.)

೧೫-೪-೧೯೩೧:

ಮೈಸೂರಿಂದ ಹೊರಟು ಶಿವಮೊಗ್ಗಗೆ ರೈಲು ಹತ್ತಿದೆ. ಒಂದು ಗಾಡಿಗೆ ಒಬ್ಬನೇ ಕುಳಿತಿದ್ದೆ.(ಸೆಕೆಂಡ್ ಕ್ಲಾಸ್ ಇರಬೇಕು.) ಎಡತೊರೆಯಿಂದ ಹಿಡಿದು ಬೀರೂರಿನವರೆಗೂ ಜಡಿಮಳೆ ಹೊಡೆಯಿತು. ರೈಲಿನಲ್ಲಿ ರವೀಂದ್ರನಾಥ ಠಾಕೂರರ ಗಲ್ಪಗುಚ್ಪದಲ್ಲಿ(ಬಂಗಾಳಿ ಭಾಷೆ) ಕತೆಗಳನ್ನು ಓದಿದೆ.

೧೬-೪-೧೯೩೧:

ಶಿವಮೊಗ್ಗೆಗೆ ಬಂದೆ. ಮಾನಪ್ಪ ಸ್ಟೇಷನ್ನಿಗೆ ಬಂದಿದ್ದ. ಮಧ್ಯಾಹ್ನ‘ವಾಲ್ಮೀಕಿಯ ಭಾಗ್ಯ’ವನ್ನು ಓದಿದೆ. ಚಂದ್ರಶೇಖರಯ್ಯ, ಚಿದಂಬರಂ, ಕೃಷ್ಣಮೂರ್ತಿಗಳು,(ಎಸ್.ವಿ.ಕೃಷ್ಣಮೂರ್ತಿರಾವ್) ಎಲ್ಲ ಇದ್ದರು…. ಸಾಯಂಕಾಲ ಹೊಸ ರೈಲ್ವೇ ಸ್ಟೇಷನ್ ಬಳಿ ತಿರುಗಾಡಲು ಹೋದೆವು. ಗುಡುಗು ಮಿಂಚುಗಳ ರುದ್ರಲೀಲೆಯನ್ನು ಮನದಣಿಯೆ ನೋಡಿದೆವು. ರಾತ್ರಿ ಸುಮಾರು ಹನ್ನೆರಡು ಗಂಟೆಯವರೆಗೆ ಪದ್ಯಪಠನ ಮಾಡಿದೆ.

೧೭-೪-೧೯೩೧:

ಬೆಳಿಗ್ಗೆ ಶ್ರೀ ಚಿದಂಬರಂರವರ ಮನೆಗೆ ಹೋದೆವು. ಇಡ್ಲಿ ಕಾಫಿಯಾದ ಮೇಲೆ ಕೆಲವು ಪದ್ಯಗಳನ್ನು ಓದಿದೆವು. ಚಂದ್ರಶೇಖರಯ್ಯ‘ಗೊಲ್ಲನ ಬಿನ್ನಹ’ಓದಿದರು. ಕೃಷ್ಣಮೂರ್ತಿ(ಎಸ್.ವಿ.ಕೃಷ್ಣಮೂರ್ತಿರವ್) ‘ಗೊಲ್ಲನ ಗಾಯತ್ರಿ’ಯನ್ನು ಸ್ವಾರಸ್ಯವಾಗಿ ಹಾಡಿದರು. ಹಗಲು ‘ಯಶೋಧರ ಚರಿತ್ರೆ’‘ಲಕ್ಷ್ಮೀಶ’‘ಷೆಕ್ಸ್ಪಿಯರ್’ ಮೊದಲಾದುವುಗಳನ್ನು  ಕುರಿತು ಮಾತಾಡಿದೆವು. ರಾತ್ರಿ ಹನ್ನೆರಡು ಗಂಟೆಯ ಮೇಲೆ ಒಂದು ಗಂಟೆಯವರೆಗೆ ‘ರಕ್ತಾಕ್ಷಿ’ಯನ್ನು ಓದಿದೆ. ಚಂದ್ರಶೇಖರಯ್ಯ ಇತ್ಯಾದಿಗಳಿದ್ದರು.ಪಾಪ! ಚಿದಂಬರಂ ಕಥೆಯ ಸ್ವಾರಸ್ಯ ನೆತ್ತಿಗೇರಿ ಮಲಗಿದರು!

೧೮-೪-೧೯೩೧:

ಬೆಳಿಗ್ಗೆ ಶಿವಮೊಗ್ಗದಿಂದ ಹೊರಟು ದೇವಂಗಿಯವರ ಮೋಟಾರುಗಾಡಿಯಲ್ಲಿ ಡಿ.ಆರ್.ವೆಂ. ರೊಡನೆ ಇಂಗ್ಲಾದಿಗೆ ೧೦ ಗಂಟೆಗೆ ಬಂದೆವು. ಸಾಯಂಕಾಲ ದೇವಂಗಿ (ಮನೆಯಲ್ಲಿದ್ದ) ಆಸ್ಪತ್ರೆಗೆ ಹೋದೆವು. ಡಾಕ್ಟರು ನನ್ನನ್ನು ತೂಗಿದರು. ೧೨೬ ಪೌಂಡು ತೂಕವಾಯ್ತು. ಎತ್ತರ ೬ ಅಡಿ ಹತ್ತಿರ. ಆಮೇಲೆ ಹೂಚೆಂಡಾಟಕ್ಕೆ ಹೋದೆವು.

(ಇಂಗ್ಲಾದಿಯಲ್ಲಿ ಒಂದು ಬ್ಯಾಡ್ಮೆಮೆಂಟನ್ ಕೋರ್ಟು ಮಾಡಿದ್ದರು. ಆಗ ಎಲ್ಲವನ್ನೂ ಕನ್ನಡೀಕರಿಸಬೇಕೆಂಬ ಒಂದು ಚಟ ವ್ಯಾಪಿಸಿತ್ತು. ಅದಕ್ಕಾಗಿ ಬ್ಯಾಡ್ಮೆಮೆಂಟನ್ ಅನ್ನು ‘ಹೂಚೆಂಡು’ಎಂದು ಅನುವಾದಿಸಿದ್ದೆವು!)

೧೯-೪-೧೯೩೧:

ಬೆಳಿಗ್ಗೆ ಷಿಕಾರಿಗೆ ಹೋದೆವು.(ದೊಡ್ಡಬೇಟೆಯ ರೀತಿಯದು.) ಒಂದು ಕಾಡು ಕುರಿ ಒಂದು ಕಣೆಹಂದಿ ಹೊಡೆದೆವು. ಕಾಡಿನಲ್ಲಿ ಬಿಲ್ಲಿಗೆ ಕುಳಿತುಕೊಂಡು ಧ್ಯಾನ ಮಾಡಿದೆನು. ಕಾಡಿನ ಹಸುರು ಮನೋಹರವಾಗಿತ್ತು. ಚೇತೋಹಾರಿಯಾಗಿತ್ತು. ಸಂಜೆ ಹೂಚೆಂಡಾಟವಾದಿದೆವು….ರಾತ್ರಿ ಗಾಂಧಿ, ರಷ್ಯಾ, ಮತ, ಗೀತಾ, ಕೃಷ್ಣ, ಜ್ಞಾನ, ಖಗೋಳ ಇತ್ಯಾದಿಗಳನ್ನು ಕುರಿತು ಗೌಡರು (ದೇವಂಗಿ ರಾಮಣ್ಣಗೌಡರು.) ಮತ್ತು ವೆಂಕಟಯ್ಯ(ಅವರ ಹಿರಿಯ ಮಗ)ನೊಡನೆ ಮಾತಾಡಿದೆ.

೨೦-೪-೧೯೩೧: ಇಂಗ್ಲಾದಿಯಿಂದ ಹೊರಟು ಮನಗೆ ಬಂದೆ. ರಾತ್ರಿ ಭಾರತ ವಾಚನ,

೨೧-೪-೧೯೩೧:

ಸಾಯಂಕಾಲ ವಾಟಗಾರು ಮಂಜಪ್ಪಗೌಡರು ಬಂದರು. ರಾತ್ರಿ ಕಾವ್ಯವಾಚನ, ‘ತಾನಾಜಿ’ ಓದಿದೆ.

೨೨-೪-೧೯೩೧:

ಬೆಳಿಗ್ಗೆ ಷಿಕಾರಿಗೆ ಹೋದೆವು. ಒಂದು ಕಾಡುಕುರಿ ಹೊಡೆದೆವು. ಸಾಯಂಕಾಲ “ಕವಿಶೈಲ”ಕ್ಕೆ ಹೋದೆವು. ಪದ್ಯಗಳನ್ನು ಹಾಡಿದೆನು.

೨೪-೪-೧೯೩೧:

ಮಂಜಪ್ಪಗೌಡರು ಹೋದರು. ರಾತ್ರಿ‘ಯಶೋಧರ ಚರಿತ್ರೆ’ಯನ್ನು ಓದಿದೆನು.

೨೫-೪-೧೯೩೧:

ಬೆಳಿಗ್ಗೆ ವೆಂಕಟಯ್ಯ ವಾಟಗಾರಿಗೆ ಹೋಗಿ ಇಂಗ್ಲಾದಿಗೆ ಹೋದನು. ಹೊಸ ತೋಟದ ಹರಾಜು. ನಾನು ಎಣ್ಣೆಸ್ನಾನಕ್ಕೆ ಹೋದೆ, ಭಗವದ್ಗೀತೆಯನ್ನು ಓದಿಯಾದ ಮೇಲೆ ಕೆರೆಯೇರಿಯಲ್ಲಿ ಭಯಂಕರವಾದ ವಾರ್ತೆಯು ಕಿವಿಗೆ ಬಿತ್ತು.(……) ಸಿಡಿಲು ಬಿದ್ದಂತಾಯ್ತು ಎದೆಗೆ. ಅಯ್ಯೋ ಇಂತಾಗುವುದೆಂದು ಯಾರು ನೆನಪಿಸಿದ್ದರು. ಬಹಳ ಆಲೋಚಿಸಿದೆ. ಕಡೆಗೆ ಬೈರನ್ ಕವಿಯ ಮಾತು ನೆನಪಿಗೆ ಬಂದು ಸುಮ್ಮನಾದೆ. ಬಿ.ಎಂ.ಶ್ರೀಯವರ “ದುಃಖ ಸೇತು”ವನ್ನು ನೆನೆದೆ…. ಇವೊತ್ತು ಮಧ್ಯಾಹ್ನ ಇಂಗ್ಲಾದಿಗೆ ಹೋಗುತ್ತೇನೆ.

೨೬-೪-೧೯೩೧:

ಇಂಗ್ಲಾದಿಯಲ್ಲಿ ವಿವಾಹ ಮಹೋತ್ಸವ ಸನ್ನಾಹ ಸಂಭ್ರಮ.

೨೭-೪-೧೯೩೧:

ಮದುವೆ….ಮಧ್ಯಾಹ್ನ ದ್ಯಾವೇಗೌಡರ ಅಧ್ಯಕ್ಷತೆಯಲ್ಲಿ ಉಪನ್ಯಾಸಗಳಾದುವು…ಬ್ರಂಟ್ ದಂಪತಿಗಳು ಬಂದಿದ್ದರು.(ನಾನು ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ಮೈಸೂರಿನಲ್ಲಿ, ಓದುತ್ತಿದ್ದಾಗ ಪ್ರಿನ್ಸಿಪಾಲ್ ಆಗಿದ್ದವರು.) ಹರಿಕಥೆಯ ಶವಮೂರ್ತಿ ಶಾಸ್ತ್ರಿಗಳು “ಕರ್ಣಾಟಕ ವಿಜಯ” ಎಂಬ ಹರಿಕಥೆ ಮಾಡಿದರು….ಪಾರ್ಥನಾರಾಯಣ ಪಂಡಿತರು, ಅಂಡೆಕುಳಿ ಮಂಜಯ್ಯ ಮೊದಲಾದವರು ಬಂದಿದ್ದರು.‘ಜಯಕರ್ಣಾಟಕ’ದ ಪ್ರಚಾರಕರಾದ ಶೇಷಗಿರಿರಾವ್ ಕುಲಕರ್ಣಿ ಬಂದಿದ್ದರು. ಅವರೂ ನಾನೂ ಬಹಳ ಮಾತುಕತೆಯಾಡಿದೆವು.

ಅವರಿಗೆ‘ಕಲ್ಕಿ’‘ತಾನಾಜಿ’ಮೊದಲಾದ ಕವನಗಳ ಪರಿಚಯ ಮಾಡಿಕೊಟ್ಟೆನು.

೨೮-೪-೧೯೩೧:

ಮರುದಿನ ನನ್ನ ತಂದೆಗೆ ಮಿತ್ರರಾಗಿದ್ದ ಸುಬ್ಬಣ್ಣಸೆಟ್ಟರಿಗೆ,(ಕನ್ನಡ ಜಿಲ್ಲೆಯಿಂದ ಆಳುಗಳನ್ನು ತಂದು ಸೇರೆಗಾರಿಕೆ ಮಾಡುತ್ತಿದ್ದವರು.) ಗೌಡರಿಗೆ(ದೇವಂಗಿ ರಾಮಣ್ಣ ಗೌಡರು.)ಕೆಲವು ಕವನಗಳನ್ನು ಓದಿ ತೋರಿಸಿದೆ, ಇಂಗ್ಲಾದಿಯ ಉಪ್ಪರಿಗೆಯ ಮೇಲೆ.

೪-೫-೧೯೩೧:

‘ಅಜ್ಜಯ್ಯನ ಅಭ್ಯಂಜನ’ಎಂಬ ಪ್ರಬಂಧ ಬರೆದು ‘ಪ್ರಬುದ್ಧ ಕಣಾಟಕ’ಕ್ಕೆ ಕಳುಹಿಸಿದೆನು.

೬-೫-೧೯೩೧:

ದೇವಂಗಿಯಲ್ಲಿ ‘ನನ್ನ ಗೋಪಾಲ’ನಾಟಕವನ್ನು ಹುಡುಗರು ಆಡಿದರು. ನಾನು ನನ್ನ ಕೆಲವು ಕವನಗಳನ್ನು ಪಠನಮಾಡಿದೆ…. ಡಾಕ್ಟರೊಡನೆ ದೇವರು. ಜೀವ,ಧರ್ಮ, ಮತ ಇತ್ಯಾದಿ ವಿಚಾತ ಒಂದೂವರೆ ಗಂಟೆ ಮಾತಾಡಿದೆ.

೮-೫-೧೯೩೧:

ಬೆಳಿಗ್ಗೆ ಶ್ರೀನಿವಾಸ, ವಿಜಯದೇವರನ್ನು ಕರೆದುಕೊಂಡು ಮನೆಗೆ ಬಂದೆ.(ಮನೆಗೆ ಅಂದರೆ ಕುಪ್ಪಳಿಗೆ.)

೧೫-೫-೧೯೩೧:

ಮರಳಿ ಹಿರಿಯಣ್ಣನನ್ನು ಕರೆದುಕೊಂಡು ಮನೆಗೆ ಬಂದೆ.

೧೬-೫-೧೯೩೧:

ಒಂದು ಸಣ್ಣಕಥೆ ಬರೆದೆ…. ಎರಡು ದಿನ ಷಿಕಾರಿಗೆ ಹೋದೆವು…

೨೦-೫-೧೯೩೧:

ಬೆಳಿಗ್ಗೆ ಮರಸಿಗೆ ಹೋದೆವು…. ಇಂದು ಮಧ್ಯಾಹ್ನ ಇಂಗ್ಲಾದಿಗೆ ಹೋಗುತ್ತೇನೆ, ನಾಳೆ ಚಿಕ್ಕಮಗಳೂರಿಗೆ ಹೋಗುವುದಕ್ಕಾಗಿ.

೪-೬-೧೯೩೧:

ಸಾಯಂಕಾಲ ಸೀತಾರಾಂ, ರಾಮರಾವ್, ಶ್ರೀಹರಿ ಬಂದರು ಮನೆಗೆ.‘ಕುಪ್ಪಳಿಗೆ. ಅಂದು ಭಾರಿ ಮಳೆ ಹಿಡಿದು ಹೊಡೆಯುತ್ತಿತ್ತು. ಬೈಗು ತುಂಬಾ ಕತ್ತಲಾದಮೇಲೆ,ಸುಮಾರು ೮ ಗಂಟೆ ರಾತ್ರಿ ಇರಬಹುದು. ಎ.ಸೀತಾರಾಂ(ಆನಂದ)ಬಿ.ಎಸ್.ರಾಮರಾವ್(ಕೈಲಾಸಂ ಕೃತಿ ಪ್ರಸಾರದಲ್ಲಿ ಆಸಕ್ತರು.) ಮತ್ತು ಶ್ರೀಹರಿ(ಯಾವದೋ ಬ್ಯಾಂಕ್ ಮ್ಯಾನೇಜರ್ ಆಗಿದ್ದರೆಂದು ತೋರುತ್ತದೆ.ಶಿವಮೊಗ್ಗದಲ್ಲಿ.)ತೀರ್ಥಹಳ್ಳಿಗೆ ಬಂದು, ಅಲ್ಲಿಂದ ದೇವಂಗಿಗೆ ಬಂದು, ನಾನು ಕುಪ್ಪಳಿಯಲ್ಲಿದ್ದೇನೆ ಎಂದು ತಿಳಿದು ಕಾಡಿನಲ್ಲಿ ದಾರಿ ತೋರಿಸಲು ಲಾಟೀನು ಹಿಡಿದು ಒಬ್ಬ ಆಳನ್ನು ಕರೆದುಕೊಂಡು, ನಡೆದೂ ನಡೆದೂ ಸಾಕಾಗಿ ಬಂದಿದ್ದರು! ಅವರು ಬಂದಾಗಲೂ ಮಳೆ ಭೋರೆಂದು ಹುಯ್ಯುತ್ತಿತ್ತು. ಕಲ್ಲು ಮುಳ್ಳು ಕೆಸರುಗಳಲ್ಲಿ ನಡೆದು ತೊಯ್ದು ಒದ್ದೆಮುದ್ದೆಯಾಗಿದ್ದರು. ‘ಕುಪ್ಪಳಿ!ಕಾಲೆಲ್ಲ ಹೆಪ್ಪಳ್ಳಿ!’ಎಂದು ಸೀತಾರಾಂ ಪದ್ಯ ರಚನೆ ಮಾಡಿದರು. ಕಾಲೆಲ್ಲ ಗುಳ್ಳೆ ಬಂತು ಎಂಬ ಅರ್ಥದಲ್ಲಿ! ಆವೋತ್ತೆ ಎಂದು ತೋರುತ್ತದೆ, ಬಿ.ಎಸ್.ರಾಮರವ್ ನನ್ನ ವರ್ಡ್ಸವರ್ತ್ ಕವಿಯ‘The Solitary Reaper’ಎಂಬ ಕವನದ ಭಾಷಾಂತರ‘ಹೊಲದ ಹುಡುಗಿ’ಯನ್ನು ಎಷ್ಟು ಅದ್ಭುತವಾಗಿ ಜಾನಪದ ಮಟ್ಟದಲ್ಲಿ ಹಾಡಿದರು ಎಂದರೆ, ನಾವೆಲ್ಲ ಆ ರಸಾನುಭವದ ಸವಿಯಲ್ಲಿ ಮಿಂದು ಮುಳುಗಿ ಮೈಮರೆಯುವಂತೆ)

೫-೬-೧೯೩೧:

ನಾವೆಲ್ಲರೂ ಒಟ್ಟು ಶಿವಮೊಗ್ಗೆಗೆ ಹೋದೆವು.‘ಯಮನಸೋಲು’‘ಹೋಂ ರೂಲು’ಆಡಿದೆವು. ನಾನೂ ಪಾತ್ರ ವಹಿಸಿದೆನು.(ಯಮನ ಸೋಲಿನಲ್ಲಿ ಸತ್ಯವಾನ್ ಪಾತ್ರ,ಅದಕ್ಕಾಗಿಯೆ ನನ್ನನ್ನು ಕರೆದೊಯ್ಯುವುದಕ್ಕಾಗಿಯೆ ಅವರೆಲ್ಲ ಕುಪ್ಪಳಿಗೆ ಧಾವಿಸಿದ್ದು.)

೬-೬-೧೯೩೧:ಶಿವಮೊಗ್ಗದಲ್ಲಿ.

೭-೬-೧೯೩೧: ಮನೆಗೆ ಬಂದೆವು. ಬಿ.ಕೃಷ್ಣಮೂರ್ತಿ, ಎ.ಸಿ.ನರಸಿಂಹಮೂರ್ತಿ ಮಾನಪ್ಪ ಎಲ್ಲರೂ ಇಂಗ್ಲಾದಿಗೆ ಬಂದೆವು.

೮-೬-೧೯೩೧:ಬೇಟೆಗೆ ಹೋದೆವು.

೯-೬-೧೯೩೧:ನಮ್ಮ ಮನೆಗೆ ಹೋದೆವು. ಸಾಯಂಕಾಲ‘ಕವಿಶೈಲ’ಕ್ಕೆ ಹೋಗಿ ವಿನೋದದಿಂದ ಕಾಲ ಕಳೆದೆವು. ಅ.ಚ.ನ.ಹಾಡಿದರು.(ನನ್ನ ಕವನಗಳನ್ನು) (ಎ.ಸಿ.ನರಸಿಂಹಮೂರ್ತಿಗೆ ಅ.ಚ.ನ.)

೧೦-೬-೧೯೩೧ ಮಧ್ಯಾಹ್ನ ಇಂಗ್ಲಾದಿಗೆ ಹೋಗುತ್ತೇವೆ.

೧೪-೬-೧೯೩೧:(‘ಯಮನ ಸೋಲು’ಮತ್ತು‘ಬಿರುಗಾಳಿ’ಎರಡು ನಾಟಕಗಳನ್ನೂ ಒಟ್ಟಿಗೆ ಸೇರಿಸಿದ ಪುಸ್ತಕವನ್ನು ಅವರಿಗೆ ಪ್ರಕಾಶಕರು ಕಳಿಸಿದ್ದರು.ಓದಿ ವಿ.ಸೀತಾರಾಮಯ್ಯ ಬರೆದ ಕಾಗದ ನಾನು ಊರಲ್ಲಿದ್ದಾಗ ತಲುಪಿತ್ತು.)

V.SITARAMAIH
INTERMEDIATE COLLEGE
Bangalore
11 Jully, 1931

My dear puttappa

Thank you very much your kind gift(ಎರಡು ನಾಟಕಗಳು.)

It is too late in the day for anybody to convey compliments to you. you are now above and beyoud them. Kannada knowing people ought to be really grateful to you for the sustained pleasure you are supplying them through your poems, plays and sketches. I am particularly grateful to the beautiful lyrics contained in ಬಿರುಗಾಳಿ. The same cheer, the same grace and music, the same deftness and lightness of touch feature the original and the adaptation. I see Arial in them. And I make bold to confess that only K.V.P. is capable of such a rendering. I heartily conghatulate you on it…

Thanking you I remain,

yours most sinceraly,
(sd/-)
(V.SITARAMAIAH)

೨೯-೭-೧೯೩೧:

ಹರಿಶ್ಚಂದ್ರ ಕಾವ್ಯಸಂಗ್ರಹವನ್ನು ಓದಿದೆ. ಓದಿ ಹಿಗ್ಗಿ ರಸಲಹರಿಯಲ್ಲಿ ತೇಲಿ ಹೋದೆ. ಅದು ಜಗತ್ತಿನ ಅತ್ಯುತ್ತಮ ಗ್ರಂಥಗಳಲ್ಲಿ ಪ್ರಥಮತಮ ಶ್ರೇಣಿಗೆ ಸೇರತಕ್ಕ ಗ್ರಂಥ. ಭಾಷೆಯು ಸರಳವಾಗಿದೆ. ಮನೋಹರವಾಗಿದೆ. ಓದುತ್ತಿದ್ದರೆ ಗಂಗಾನದಿಯಲ್ಲಿ ದೋಣಿಯಲ್ಲಿ ಕುಳಿತು ತೇಲಿದಂತಾಗುವುದು. ಉಪಮಾನಗಳು ಗಾದೆಗಳು ಬೇಕಾದಷ್ಟು ಉಪಯೋಗಿಸಲ್ಪಟ್ಟಿವೆ.ಶುಷ್ಕ ಪಾಂಡಿತ್ಯದ ಒಗರು ಶೈಲಿಯಲ್ಲ. ಬೇಂಟೆಯ ವರ್ಣನೆಯಂತೂ ಅದನ್ನು ಅನುಭವಿಸಿದವೇ ಬಲ್ಲ ಎನ್ನುವಂತಿದೆ. ಅದ್ವಿತೀಯವಾಗಿದೆ. ವರಾಹ ನುಗ್ಗಲು ‘ಎಲೆಲೆಲೆಲೆಲೇ’ಎಂದು ಪ್ರಾರಂಭವಾಗುವ ಪದ್ಯ, ತರುವಾಯ ಪುಳಿಂದನು ಹೆದರಿ ಓಡುವ ವರ್ಣನೆ ಇರುವ ಪದ್ಯ, ಆಮೇಲೆ ಹಂದಿ ಹರಿಶ್ಚಂದ್ರನನ್ನು ಸಂಧಿಸುವ ಪದ್ಯ ಬಹಳ ಚೆನ್ನಾಗಿವ. ವರಿಷ್ಠರು ಕುಳಿತ ವರ್ಣನೆ, ವಿಶ್ವಾಮಿತ್ರನ ಕೋಪ, ಮಾಯದಬಲೆಯರ ಸಂಭಾಷಣೆ, ಹರಿಶ್ಚಂದ್ರ ವೀರಬಾಹುಕರ ಸಂಭಾಷಣೆ, ಮಸಣಗಾವಲು. ಚಂದ್ರಮತಿಯ ಕಷ್ಟ ಎಲ್ಲವೂ ಪ್ರಪಂಚದ ಉತ್ತಮೋತ್ತಮ ಮಹಾಕವಿಗಳ ಬರವಣಿಗೆಯ ಜಾತಿಗೆ ಸೇರಿದ ಕೃತಿಗಳಾಗಿವೆ. ರಾಘವಾಂಕನ ಸ್ವಸ್ಥಳ ಪ್ರೀತಿಯು ಕೋಡಿಯೊಡೆದು ಉಕ್ಕುತಿದೆ ಕಾವ್ಯದಲ್ಲಿ. ನಮ್ಮ ಪೂರ್ವಕವಿಗಳಲ್ಲಿ ದೇಶಭಕ್ತಿಯು ಇಲ್ಲ ಎನ್ನುವವರು ಅದನ್ನು ಓದಿ ನೋಡಿದರೆ ಅದು ಎಷ್ಟು ಮಮತಾಪೂರ್ಣವಾದ ದೇಶಭಕ್ತಿ ಎನ್ನುವುದು ಗೊತ್ತಾಗುತ್ತದೆ. ರಾಘವಾಂಕನನ್ನು ಇದುವರೆಗೂ ಮೂಲೆಗಿಟ್ಟ ದುರ್ಭಾಗಿಗಳೆಂದೇ ಹೇಳಬೇಕು.

೧-೮-೧೯೩೧:

ರಾಘವಾಂಕನನ್ನು ಕಸ್ತೂರಿಗೂ ಎ.ಸೀತಾರಾಂಗೆ‘ಬೋರ್’ಮೂಡಿದೆ. ಬರ್ ಟ್ರೆಂಡ್ ರಸೆಲ್ ರವರ what I believe ಓದಿದೆ. ಆದರೆ ಅವರ sceptical Essays ಎಂಬುವದರಲ್ಲಿರುವ ವಿಷಯಗಳನ್ನೇ ಇಲ್ಲಿಯೂ ಸಂಕ್ಷೇಪವಾಗಿ ತಿಳಿಸಿದ್ದಾರೆ. ಆತ್ಮಾ, ಅಮೃತತ್ವ ಮೊದಲಾದ ಅವೈಜ್ಞಾನಿಕ ವಿಷಯಗಳನ್ನು ಕುರಿತು ಮಾತಾಡುವಾಗ ಸ್ವಾಭಾವಿಕವಾಗಿಯೇ ಅನಿಷ್ಕೃಷ್ಟ ಅನಿರ್ದಿಷ್ಟ ಭಾಷೆ ಮತ್ತು ಅಭಿಪ್ರಾಯಗಳನ್ನೆ ಸೂಚಿಸಿದ್ದಾರೆ. ದೇವರು, ಆತ್ಮಾ, ಅಮೃತತ್ವ ಮೊದಲಾದವುವಾದದಿಂದ ಎಂದಿಗೂ ಪ್ರತಿಪಾದಿತವಾಗಲಾರವು. ಅವುಗಳು ಸದ್ದಿಯಿಂದ ಸ್ವಿಕೃತವಾಗುವವರೆಗೂ ಶ್ರದ್ದೆಯಿಂದ ಸ್ವೀಕೃತವಾಗಿರುವುವು. ಅಥವಾ ಅಶ್ರದ್ಧೆಯಿಂದ ತಿರಸ್ಕೃತವಾಗುವುವು. ಅವುಗಳ ಪರವಾಗಿ ಎಷ್ಟು ಹೇಳಬಹುದೋ ಅಷ್ಟನ್ನೇ ಅವುಗಳಿಗೆ ವಿರುದ್ಧವಾಗಿಯೂ ಹೇಳಬಹುದು. ಆದರೆ ರಸ್ಸಲ್ ರವರು ತುಂಬಾ ಧೀಶಕ್ತಿಯುಳ್ಳವರು. ಕತ್ತರಿಯಂಥಾ ಮನುಷ್ಯರು. ವಿಭಜನೆ ಮಾಡುವುದೆಂದರೆ ಅವರ ಪ್ರಾಣ. ಆದರೆ ಅವರ ಕೆಲಸವೆಲ್ಲ ಲಯಕಾರಿಯೇ ಹೊರತು ಸೃಷ್ಟಿಕಾರಿಯಲ್ಲವೆಂದು ತೋರುತ್ತದೆ.