೧೦-೮-೧೯೩೧:

ಏನು ಬಿಡು ಎಂದರೂ ಬಿಡಬಲ್ಲೆನಯ್ಯಾ
ಕನ್ನಡದ ಮಮತೆಯನು ಬಿಡಲೊಲ್ಲನಯ್ಯಾ!

೧೨-೮-೧೯೩೧:

ಹತಾಶ

ಸೋಲು, ಸೋಲು, ಸೋಲು,ಸೋಲು!
ಗೆಲುವ ಕಾಣೆ! ಸಾವೆ ಮೇಲು!
ತೇಲು, ತೇಲು, ತೇಲು, ತೇಲು!
ಓ ಜೀವವೆ ತರಗಿನೋಲು!||ಪ||
ಸುರಿಯುತಿಹುದು ಬಿದಿಯ ಮಳೆ,
ಹರಿಯುತಿಹುದು ಬಾಳ ಹೊಳೆ,
ಬೀಸಿ ಬಂದು ಬಿರುಸುಗಾಳಿ
ಆತ್ಮಗಳನು ಕೊಚ್ಚಿ ತೇಲಿ
ಶೂನ್ಯದೆಡೆಗೆ ತರುಬುತಿದೆ,
ಕರುಣೆಯಿಲ್ಲದುರುಬುತಿದೆ!
೧೫-೮-೧೯೩೧:

ಗಾಂಧಿಯವರು ರೌಂಡ್ ಟೇಬಲ್ ಕಾನ್ಫರೆನ್ಸಿಗೆ ಹೋಗುವುದಿಲ್ಲವಂತೆ. ರಾಷ್ಟ್ರದ ಭಾವೀಸ್ಥತಿಯು ಭಯಂಕರವಾಗಿದೆ. ಸರಕಾರದ ರಾಜಕೀಯ ಕುತಂತ್ರಕ್ಕೆ ಬಲಿಯಾಗದಿರುವುದು ಮಹಾತ್ಮರಿಗೊಂದು ದಿಗ್ವಿಜಯವೇ. ಗಯಟೆಯವರ ಫೌಸ್ಟನ್ನು ಓದುತ್ತಾ

Faust(tells)
Oh aye, up to the stars we’ve climbed!
My friend, the times gone by are but in sum
A book with seven seals protected,
What Spirit of Times you call,
Good sirs, is but your spirit after all,
In which the times are seen reflected.
And verily, its oft a sorry sight!
At the first glimpse of it one runs away.
A dust-bin and a lumber room outright!
At bestm’ its history in a puppet-play,
with excellent pragmatic maxims garnished,
where with a puppets mouth is fitly furnished.

ಇದರಲ್ಲಿ”a dust-bin and a lumber-room outright!” ಎನ್ನುವುದು ನಾನು ‘ರಕ್ತಾಕ್ಷಿ’ಬರೆದಂತೆಯೇ ಇರುವುದು ನೋಡಿ ನನಗೆ ಆಶ್ಚರ್ಯವಾಯಿತು. ಅಲ್ಲಿ ಒಬ್ಬನು “ಅಂತೂ ಎಲ್ಲಿ ಯಾರನ್ನು ಒದ್ದು ಓಡಿಸಿದರೂ ಎಲ್ಲ ಈ ಭೂಮಿಗೆ ನುಗ್ಗಿಬಿಡುತ್ತಾರೆ. ಇದೇನು ಉಗ್ರಾಣವೋ ಕಸದ ಬುಟ್ಟಿಯೋ ಅದನ್ನು ನಾನರಿಯೆ ಎಂದು ಹೇಳುತ್ತಾನೆ.(ಗಯಟೆಯ ಫೌಸ್ಟನ್ನು ಓದುವುದಕ್ಕೆ ಎಷ್ಟೋ ಮುನ್ನವೆ ನಾನು‘ರಕ್ತಾಕ್ಷಿ’ಯನ್ನು ಬರೆದಿದ್ದ ವಿಚಾತ ಗೊತ್ತಿಲ್ಲದವನು ನಾನು ಗಯಟೆಯಿಂದಲೆ ಇದನ್ನು ಕದ್ದುಕೊಂಡೆನೆಂದು ವಾದಿಸಬಹುದು, ಅವಸರದ ಅವಿವೇಕ ವಿಮರ್ಶಕರು‘ರಕ್ತಾಕ್ಷಿ’ಹ್ಯಾಮ್ಲೆಟ್ ನ ಭಾಷಾಂತರ ಎಂದು ಹೇಳುತ್ತಾರಲ್ಲಾ ಹಾಗೆ. ಅಂಥವರು‘ಹ್ಯಾಮ್ಲೆಟ್’ಅನ್ನೂ ಓದಿರುವ ವಿಚಾರದಲ್ಲಿ ನನಗೆ ಸಂದೇಹ!)

೧೬-೮-೧೯೩೧:

‘ಉಪಮಾಲೋಲ ಲಕ್ಷ್ಮೀಶ’ಎಂಬ ಲೇಖನವನ್ನು ಬರೆದು ಮುಗಿಸಿದೆ. ಬೆಳಿಗ್ಗೆ ಸ್ವಾಮಿಜಿ(ಸಿದ್ದೇಶ್ವರಾನಂದರು) ಕನ್ನಂಬಾಡಿಗೆ ಹೋ‌ಗಿ, ಅಲ್ಲಿಂದ ‘ಪ್ರವಾಹದೃಶ್ಯವು ಬಹಳ ರಮಣೀಯವಾಗಿದೆ. ನೀನೂ ಬಾ.’ಎಂದು ಫೋನ್ ಮಾಡಿದರು. ಮಧ್ಯಾಹ್ನ ರೈಲಿಗೆ ನಾನೂ ಮತ್ತು ಕೆಲವರೂ ಅಲ್ಲಿಗೆ ಹೋದೆವು. ದೃಶ್ಯವು ಆವೇಶಜನಕವಾಗಿತ್ತು. ಕಟ್ಟೆಯ ಒಂದು ಕಡೆ(ಮೇಲ್ಗಡೆ)ತುಂಬಿದ ನೀರು ವಿಸ್ತಾರ ಗಂಭೀರವಾಗಿ ಪೂರ್ಣತೆಯ ಪ್ರತಿಬಿಂಬದಂತಿತ್ತು. ಇನ್ನೊಂದು ಕಡೆ ಸೇತುವೆಯಡಿ ನುಗ್ಗಿ ರಭಸದಿಂದ ಹರಿವ ನೀರು ಬಂಡೆಗಳಿಗೆ ಬಡಿದು ನೊರೆನೊರೆಯಾಗಿ ನೂರಾರು ಸಾವಿರಾರು ಮುತ್ತುಗಳ ಗೊಂಚಲಂತೆ ಸುಂದರ ಭಯಂಕರವಾಗಿತ್ತು. ಮತ್ತೊಂದೆಡೆ ಉದ್ಯಾನವೂ ಕೃತಕವಾದ ಬುಗ್ಗೆಗಳೂ ಕಿನ್ನರ ನಗರಿಯಂತೆ ಆಹ್ಲಾದಕರವಾಗಿದ್ದುವು. ನಾನು ತಮಾಷೆಗೆ ಕಟ್ಟೆಯ ಮೇಲುಗಡೆ ನಿಂತ ನೀರನ್ನು ಶ್ರೀರಾಮಕೃಷ್ಣರೆಂದೂ. ಸೇತುವೆಯಡಿಯಿಂದ ರಭಸವಾಗಿ ನುಗ್ಗಿ ಹರಿಯುವ ನೀರನ್ನು ಸ್ವಾಮಿ ವಿವೇಕಾನಂದರೆಂದೂ, ಉದ್ಯಾನವನ್ನು ರವೀಂದ್ರರೆಂದೂ ಹೇಳಿದೆನು. ಒಂದನೆಯದು ಸರ್ವಶಕ್ತಿ ಸಂಪೂರ್ಣವಾಗಿ ಅಚಲವಾದ ನಿರುದ್ವಿಗ್ನವಾದ ಬ್ರಹ್ಮವನ್ನೂ ಎರಡನೆಯದು ಅದರಿಂದ ಹೊಮ್ಮುವ ಮಹಾಶಕ್ತಿಯನ್ನೂ, ಮೂರನೆಯದು ಅದರಿಂದ ಪೋಷಿತವಾದ ಸೃಷ್ಟಿ ಸೌಂದರ್ಯವನ್ನೂ ಸೂಚಿಸಿದುವು. ಎಂಜಿನಿಯರ್ ಮನೆಯಲ್ಲಿ ನೆರೆದವರಿಗೆ ‘ಘೋರಾಂಧಕಾರದೊಳು’‘ಹೊಲದ ಹುಡುಗಿ’‘ಸತ್ಯ ಮತ್ತು ಸೌಂದರ್ಯ’‘ಇಂದಿನ ದೇವರು’ಎಂಬ ಕವಿತೆಗಳನ್ನು ಹಾಡಿದೆ. ಸುಮಾರು ೬ ಗಂಟೆಗೆ ಮೈಸೂರಿಗೆ ಬಂದೆವು.

೨೧-೮-೧೯೩೧:

ಸಾಯಂಕಾಲ ವೆಂಕಣ್ಣಯ್ಯನವರ ಮನೆಯಲ್ಲಿ ‘ಉಪಮಾಲೋಲ ಲಕ್ಷ್ಮೀಶ’ವನ್ನು ಓದಿದೆ. ಅದನ್ನು ಕಾಲೇಜಿನ ಕರ್ಣಾಟಕ ಸಂಘದಲ್ಲಿ ಓದಬೇಕು ಎಂದರು.

೨೨-೮-೧೯೩೧:

ರಾಜರುಗಳು ತೊಲಗಬೇಕು ಎಂಬ ವಿಚಾತ ಮಾತಾಡಿದೆವು.

“ರಕ್ತ ಬೇಕು! ರಕ್ತ!ರಕ್ತ!
ಬಿಳಿಯೆದೆಗಳ ಬಿಸಿಯ ರಕ್ತ!”
ಎಂದು ಕೂಗುತಿಹಳು ಕಾಳಿ:
ಕೇಳಿ ಅದೋ ಕೇಳಿ!ಕೇಳಿ!
ಹೂವು ಹಣ್ಣು ಗಂಧ ಸಾಕು
ಕೀರ್ತನೆಗಳನಾಚೆ ನೂಕು!
“ರಕ್ತ ಬೇಕು ರಕ್ತ,ರಕ್ತ!
ಬಿಳಿಯೆದೆಗಳ ಬಿಸಿಯ ರಕ್ತ!”
೨೩-೮-೧೯೩೧:

‘ವಾಲ್ಮೀಕಿಯ ಭಾಗ್ಯ’ವನ್ನು ಮರಳಿ ಬರೆದು ಮುಗಿಸಿದೆ.‘ಗಯಟೆ’ಯ‘ಫೌಸ್ಟ್’ಓದಿದೆ. ‘ಉಪಮಾಲೋಲ ಲಕ್ಷ್ಮೀಶ’ವನ್ನು ತಿದ್ದಿದೆ.(ಆ ಪ್ರಬಂಧವನ್ನು ‘ಕವಿ ಲಕ್ಷ್ಮೀಶ’ಎಂಬ ಸ್ಮರಣಸಂಚಿಕೆಗಾಗಿ ಬರೆದಿದ್ದೆ. ಲಕ್ಷ್ಮೀಶನ ಜನ್ಮಸ್ಥಳವಾದ ದೇವನೂರಿನಲ್ಲಿ ಜರುಗಿದ ಮಹಾಕವಿ ಪೂಜಾ ಸಂದರ್ಭದಲ್ಲಿ.) ಸಾಯಂಕಾಲ ಕುಕ್ಕನಹಳ್ಳಿಯ ಕೆರೆಯ ಏರಿಯ ಮೇಲೆ ವಾಯುವಿಹಾರಕ್ಕಾಗಿ ಹೋದೆ. ಅಲ್ಲಿ‘ಪಲ್ಲವಿ’ಎಂಬ ಕವನವನ್ನು ರಚಿಸಿದೆ.(‘ಕೇಳುವುದೆಲ್ಲೆಡೆ ಪಲ್ಲವಿಯೊಂದು ನೀ ನಾ ನಾ ನೀ ಜೋ ಜೋ ಎಂದು’ಎಂದು ಪ್ರಾರಂಭವಾಗುತ್ತದೆ. ಅದು‘ಕಲಾಸುಂದರಿ’ಎಂಬ ಕವನಸಂಗ್ರಹದಲ್ಲಿ ಪ್ರಕಟಗೊಂಡಿದೆ. ದಿನಚರಿಯಲ್ಲಿ ಇಡೀ ಕವನ ಬರೆದಿದ್ದೇನೆ. ಇಲ್ಲಿ ಮತ್ತೆ ಕೊಡುವುದು ಅನಾವಶ್ಯಕ.

೨೬-೮-೧೯೩೧:

ರಾತ್ರಿ ೧೦-೩೦ರ ವರೆಗೆ ಚಂದ್ರಶೇಖರ ಶಾಸ್ತ್ರಿಗಳಿಗೆ ನನ್ನ ಕೆಲವು ಕವನಗಳ ಅಭಿಪ್ರಾಯಗಳನ್ನು ಸೂಚಿಸುತ್ತಿದ್ದೆ.

೫-೯-೧೯೩೧:

ಶ್ರೀಕೃಷ್ಣಜಯಂತಿ ಆಚರಿಸಲ್ಪಟ್ಟಿತು. ಎಂಜಿನಿಯರ್ ಬಹಳ ಸ್ವಾರಸ್ಯವಾಗಿ ಮಾತಾಡಿದರು. ಭಾಗವತ ವಾಚನವಾಯಿತು ಕೃಷ್ಣಗಿರಿ ಕೃಷ್ಣರಾಯರಿಂದ.

೬-೯-೧೯೩೧:

ಸಣ್ಣಕಥೆಗೆ ಸಾಮಾಗ್ರಿ:

(೧) ಲೋಕೋಪಕಾರಿ:- ಬಡವನೊಬ್ಬನು ಐಶ್ವರ್ಯಕಾಮಿಯಾಗಿ ಕಷ್ಟಪಟ್ಟು ದುಡಿದು ಐಶ್ವರ್ಯ ಸಂಪಾದನೆ ಮಾಡುತ್ತಾನೆ. ಇತರ ಶ್ರೀಮಂತರಂತೆ ತಾನೂ ಉಡುಪು ಹಾಕಿಕೊಳ್ಳುತ್ತಾನೆ. ಕೋಚ್ ಗಾಡಿ ಇಡುತ್ತಾನೆ. ಎಲ್ಲ ಮಾಡುತ್ತಾನೆ. ಆದರೆ ಆತನಿಗೆ ವಿದ್ಯೆ ಸಂಸ್ಕೃತಿಗಳು ಇಲ್ಲದಿದ್ದುದರಿಂದಲೂ ಆತನು ಶೂದ್ರನಾದುದರಿಂದಲೂ ಇತರ ಶ್ರೀಮಂತರು ಅವನನ್ನು ಗಣನೆಗೆ ತರುವುದಿಲ್ಲ. ಹಣದ ಸುಖ ಸಿಕ್ಕಿದಮೇಲೆ ಗೌರವ ಕೀರ್ತಿಗಳ ಕಡೆಗೆ ಮನಸ್ಸು ಹೋಗಿ, ಅದಕ್ಕಾಗಿ ದಾನಮಾಡುವುದು ಸಾರ್ವಜನಿಕ ಸಂಸ್ಥೆಗಳಿಗೆ ಸಹಾಯ ಮಾಡುವುದು ದೇಶಭಕ್ತಿಯ ಚಳವಳಿಗೆ ಉತ್ತೇಜನ ಕೊಡುವುದು ಹೀಗೆ ಮಾಡಿ ಗೌರವ ಕೀರ್ತಿ ಸಂಪಾದನೆ ಮಾಡುತ್ತಾನೆ.ಆದರೆ ಆತನ ಬುದ್ದಿಯು ಸ್ವಾರ್ಥತೆಯಿಂದ ಸ್ವಲ್ಪವೂ ಪಾರಾಗಿರುವುದಿಲ್ಲ. ಕಡೆಗೆ ಮಹಾಜನಗಳಿಂದ ‘ಲೋಕೋಪಕಾರಿ’ ಎಂಬ ಬಿರುದೂ ಬರುತ್ತದೆ. ಆತನ ಭಾವಚಿತ್ರ ಪತ್ರಿಕೆಗಳಲ್ಲಿ ಬರುತ್ತದೆ. ಹೀಗೆ ಜಯಲಾಭದಿಂದ ಹಿಗ್ಗುತ್ತಾನೆ. ಆದರೆ ಕಡೆಗೆ ಎಲ್ಲರೂ ಎಲ್ಲ ಸಂಸ್ಥೆಗಳೂ ಆತನಿಂದ ಧನಸಹಾಯ ಪಡೆಯಲು ಬರುತ್ತಾರೆ. ಕೆಲವರು ಆತನಿಂದ ದುಡ್ಡು ಕಸಿಯುವುದಕ್ಕೆಂದೇ ಹೊಸ ಸಂಸ್ಥೆಗಳನ್ನೂ ನಿರ್ಮಿಸುತ್ತಾರೆ. ಮಾನ ಉಳಿಸಿಕೊಳ್ಳುವುದಕ್ಕೂ ಗೌರವಕ್ಕೂ ಅವನು ದುಡ್ಡು ಕೊಟ್ಟೂ ಕೊಟ್ಟೂ ಬಡವನಾಗುತ್ತಾ ಬರುತ್ತಾನೆ. ಆಮೇಲೆ ದಾನ ಕಡಮೆಯಾದಂತೆಲ್ಲಾ ಜನಗಳು ಅವನನ್ನು ನಿಂದಿಸುತ್ತಾರೆ. ಕೀರ್ತಿ ಗೌರವಗಳು ಮಸುಳುತ್ತವೆ. ಮನೆಯಲ್ಲಿ ಮಕ್ಕಳೊಡನೆ ವ್ಯಾಜ್ಯವಾಗುತ್ತದೆ. ಕಡೆಗೆ ನಿರ್ಗತಿಕನಾಗಿ ಸತ್ತಾಗ ಶವಸಂಸ್ಕಾರಕ್ಕೂ ಹಣ ಸಾಲದಾಗುತ್ತದೆ.

(೨) ಕಾಲೇಜಿನಲ್ಲಿ ಹುಡುಗನಾಗಿದ್ದಾಗ ಕವಿತೆ ಬರೆದು ಕೀರ್ತಿ ಪಡೆಯುತ್ತಾನೆ. ತಾನು ಉದ್ದಾಮ ಕವಿಯೆಂದು ವರ್ತಿಸಿ ದೊಡ್ಡ ಆದರ್ಶ ಸಾಧನೆ ಮಾಡಲು ಯತ್ನಸಿ ಆಗದೆ ಕಡೆಗೆ ಹಳ್ಳಿಯಲ್ಲೊಂದು ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರಗಾರನಾಗುತ್ತಾನೆ.

೧೨-೯-೧೯೩೧: ಲಕ್ಷ್ಮೀನಾರಾಯಣಯ್ಯರಿಗೆ ಎಂಟಾಣೆ.

೧೯-೯-೧೯೩೧:

ಸಾಯಂಕಾಲ ನರಸಿಂಹಾಚಾರ್, ತಾಂಡವೇಶ್ವರ್ ಮೊದಲಾದವರು ಪದ್ಯಗಳನ್ನು ಕೇಳಲು ಬಂದರು. ಒಂದೂಕಾಲು ಗಂಟೆ ಓದಿ ತರುವಾಯ ಬಿ.ಎಂ.ಶ್ರೀಯವರ ಆಧಿಪುರಾಣದ ಮೇಲಿನ ಉಪನ್ಯಾಸಕ್ಕೆ ಹೋದೆವು.

೨೦-೯-೧೯೩೧:

ಒಂದು ಮಹಾ ಅದ್ಭುತವಾದ ಕನಸು ಕಂಡೆ. ಅದರಲ್ಲಿ ಜಗನ್ಮಾತೆಯು ಶಿಲೆಯಂತಿದ್ದವಳು ಇದ್ದಕ್ಕಿದ್ದಂತೆ ಸಜೀವವಾಗಿ ಬಂದು ನನ್ನ ತಲೆಯ ಮೇಲೆ ತನ್ನ ಖಡ್ಗದಿಂದ ಗೆರೆ ಎಳೆದು(ರಕ್ತ ಬರುವಂತೆ)‘ನೀನು ನಾಳೆಯಿಂದ ಬೇರೆಯ ವ್ಯಕ್ತಿಯಾಗುವೆ’ಎಂದಳು. ನಾಣು ರಾತ್ರಿ ಹಾಗೇ ಬೆವರಿ, ಎದ್ದು, ತಣ್ಣೀರು ಕುಡಿದು ಗಂಟೆ ನೋಡಿದೆ. ಸುಮಾರು ಒಂದೂಕಾಲು ಗಂಟೆಯಾಗಿತ್ತು.

ಪ್ರಾತಃಕಾಲ ಅತ್ಯಂತ ರಮಣೀಯವಾಗಿತ್ತು. ನನ್ನೆದೆ ಕೋಗಿಲೆಯಾಗಿದೆ ಎಂದು ಕೊಂಡೆ. ಜಡವೆಂಬುದೆಲ್ಲ ಅಳಿದು ಚಿಲುಮೆ ಚಿಮ್ಮುತ್ತಿತ್ತು. ನೂರಾರು ಹನಿಗಳು ಹುಲ್ಲಿನ ಮೇಲೆ ಮಿಳಿರಿ ನಳನಳಸಿ ಹೋಳೆದಿದ್ದುವು.

ಕರ್ಣಾಟಕ ಸಂಘದ ಕಾರ್ಯನಿರ್ವಾಹಕ ಪತ್ರಿಕೆಯನ್ನಾಗಿ ಮಾಡುವ ಸೂಚನೆ ತೆಗೆದರು.

ತರ್ಕಶಾಸ್ತ್ರವೆಂಬುದು ಜೀವನವೆಂಬ ವೃಕ್ಷದ ಮೇಲೆ ಹತ್ತಿರುವ ಬಂದಿಳಿಕೆಯಲ್ಲ, ಮರಕ್ಕೆ ನಿಲುವನ್ನು ದಯಪಾಲಿಸುವ ಅದರ ಅಸ್ಥಿಪಂಜರ….. ಅನೇಕ ತತ್ತ್ವಶಾಸ್ತ್ರಗಳು ಮತ್‌ಉ ದರ್ಶನಕಾರರು ಮೊದಲಾದವರು ನನ್ನಿಯನ್ನು ಕಟ್ಟಲು ಪ್ರಯತ್ನಿಸುವರೇ ಹೊರತು ಅದನ್ನು ಮುಟ್ಟಲು ಯತ್ನಿಸುವುದೇ ಇಲ್ಲ.

ಸಾಯಂಕಾಲ ಸಂಚಾರದಿಂದ ಹಿಂದೆ ಬಂದು ವಿ.ಸುಬ್ರಹ್ಮಣ್ಯ ಅಯ್ಯರ್ ಅವರಿಗೆ ‘ಪಲ್ಲವಿ’‘ಕಲ್ಕಿ’‘ಇಂದಿನ ದೇವರು’‘ಪಾಂಚಜನ್ಯ’‘ಆತ್ಮಶ್ರದ್ಧೆ’‘ಕಾಳಿ ಬರುವಳು’ಎಂಬ ಪದ್ಯಗಳನ್ನು ಓದಿದೆ. ಅವರು ಬಹಳ ಸಂತೋಷಪಟ್ಟರು.

೨೦-೯-೧೯೩೧:(?)

ಸಾಯಂಕಾಲ ಆರುವರೆ ಗಂಟೆಗೆ ಭಗಿನೀ ಸೇವಾ ಸಮಾಜದಲ್ಲಿ ಕಾವ್ಯ ಪಠನ ಮಾಡಿದೆ. ಸುಮಾರು ಒಂದೂಕಾಲು ಗಂಟೆಯ ಹೊತ್ತು ಓದಿದೆ. ಇದೇ ಮೊದಲು ನಾನು ಬರಿಯ ಸ್ತ್ರೀಯರ ಗುಂಪಿನಲ್ಲಿ ನಿಂತುದು. ಆದರೆ ಅವರೆಲ್ಲ ನನಗೆ ತಾಯಂದಿರಂತೆಯೂ ತಂಗಿಯರಂತೆಯೂ ಕಂಡುಬಂದರು. ಜಯ ಗುರುದೇವ! ಜಯ ಮಹಾ ಮಾತೆ!

೩೦-೯-೧೯೩೧:

My meditation to-day are:

Science,Intellect or Reason, and Truth names given to the devotion of mind towards external objects.

Art, Emotion and Beauty are names given to the love of heart towards external objects.

when Intellect and Emotion ignite the will, the bomb of perfection bursts into an aweful silence.

೩-೧೦-೧೯೩೧:

ಧ್ಯಾನದೀಪ್ತ ಸ್ಮೃತಿಯೆ ಕವಿತೆಗೆ ಮೂಲ. ಕವಿತೆಯು ಬೋಧಿಸುವುದಿಲ್ಲ. ಮೋದ ಪಡಿಸುವುದು. ಕಲುಸುವುದಿಲ್ಲ, ನಲಿಸುವುದು.

೪-೧೦-೧೯೩೧:

ಬೆಳಿಗ್ಗೆ ಸಂಚಾರ ಹೋದೆನು. ಕೋಗಿಲೆಗಳು ಕೂಗುತ್ತಿದ್ದುದನ್ನು ಕೇಳಿ”ಬಹುಮಾನ” ಎಂಬ ಕವನ ರಚಿಸಿದೆನು. ನನ್ನ ಮಿತ್ರರೊಬ್ಬರು ಕೆಲದಿನಗಳ ಹಿಂದೆ ನನ್ನ ಕವನಗಳನ್ನು ಇಂಗ್ಲೀಷಿಗೆ ತರ್ಜುಮೆ ಮಾಡಲು ಹೇಳಿದರು. ಅದೂ ಇದಕ್ಕೆ ಆಧಾರ.

೯-೧೦-೧೯೩೧:

ಆಶ್ರಮದ ಚಾವಡಿಯಲ್ಲಿ Ernest Rhys ಅವರು ಬರೆದRabindranatha Tagore- A Biographical study ಎಂಬ ಪುಸ್ತಕವನ್ನು ಓದುತ್ತ ಕುಳಿತಿದ್ದೆ. ಓದುತ್ತ ಓದುತ್ತ ತಲ್ಲೀನನಾಗಿದ್ದೆ. ಆಗ ಎಂಟೂವರೆ ಗಂಟೆಯಾಗಿತ್ತು. ಪ್ರಾಭಾತದ ಪವಿತ್ರ ಶಾಂತತೆಯಲ್ಲಿ ಮೃದುಮಧುರ ಕಾಕಲು ಶಬ್ದವು ನನ್ನೆದುರಿನಲ್ಲಿಯೇ ಕೇಳಿಸಿತು. ತಲೆಯೆತ್ತಿ ನೋಡಿದೆ. ಆಶ್ರಮದ ಎದುರುಗಡೆಯ ಹಸುರಿನಿಂದ ಹಚ್ಚಗಿದ್ದ ಬಯಲಿನಲ್ಲಿ. ನನಗೆದುರು ಅತಿಸಮೀಪದಲ್ಲಿ ಎರಡು ಉರುಳಿ ಹಕ್ಕಿಗಳು  ನಿಂತಿದ್ದವು. ಆ ಹಕ್ಕಿಗಳೇ ನನ್ನನ್ನು ಎಚ್ಚರಿಸಿದ ವಾಣಿಗಳೆಂದು ತಿಳಿದೆ. ಹಸುರು ಬಯಲ ಮೇಲೆ ಬಿಸಿಲು ಮುದ್ದಾಗಿ ಮಲಗಿತ್ತು. ಪ್ರಾತಃಸೂರ್ಯ ಕಿರಣಗಳಿಂದ ದೀಪ್ತವಾಗಿದ್ದ ನೀಲಾಕಾಶದಲ್ಲಿ ಬಿಳಿಯ ತೆಳ್ಳನೆ ಮೋಡಗಳು ಅತಿವಿರಳವಾಗಿ ಮಾಯಾಸ್ವಪ್ನಗಳಂತೆ ಮನಮೋಹಿಸಿದ್ದುವು. ಎದುರು ಹೂವಿನ ಗಿಡವೊಂದರಲ್ಲಿ ರಕ್ತವರ್ಣದ ಕುಸುಮಗಳೆರಡು ಮೆಲ್ಲನೆ ಬೀಸುತ್ತಿದ್ದ ತಂಗಾಳಿಗೆ ತಲೆದೂಗುತ್ತಿದ್ದುವು. ನನ್ನನ್ನು ಕರೆದ ಹಕ್ಕಿಗಳು ಹುಲ್ಲು ಹುಳುಗಳನ್ನು ಬೇಟೆಯಾಡುವುದರಲ್ಲಿ ತೊಡಗಿದ್ದುವು. ನಾನು ಸೃಷ್ಟಿಸೌಂದರ್ಯವನ್ನು ನೋಡುತ್ತಾ ಆಲೋಚನಾಮಗ್ನನಾದೆನು. ನನ್ನನ್ನು ಕರೆದು ಅದನ್ನು ನೋಡುವಂತೆ ಮಾಡಿದ ಆ ಹಕ್ಕಿಗಳಿಗೆ ಮನಸ್ಸಿನಲ್ಲಿಯೇ ಮುತ್ತಿಟ್ಟೆನು. ಅವುಗಳ ವಾಣಿಯಲ್ಲಿ “ಕವಿಯೇ, ಇಂತಹ ಮನೋಹರವಾದ ಪ್ರಾತಃಕಾಲವನ್ನು ನೋಡದೆ ಬಿಡುವರೇ? ಅದೇನನ್ನು ಓದುತ್ತಿರುವೆ? ಕಡೆಗೆ ಓದಬಹುದಂತೆ! ಆ ಪುಸ್ತಕ ಇದ್ದೇ ಇರುವುದು! ಆದರೆ ಈ ದಿನದ ಮಧುರ ಪ್ರಭಾತವು ಮರಳಿ ಬರುವುದೇ? ಕಾಲದ ಶ್ಮಶಾನದಲ್ಲಿ ಚಿರಂತನವಾಗಿ ಮುಳುಗಿ ಹೋಗುವುದು. ಅದನ್ನು ನೆನಹಿನಲ್ಲಾದರೂ ಸೆರೆ ಹಿಡಿದು ಇಟ್ಟಕೋ!” ಎಂಬಂತಿತ್ತು. ಹಸುರು ಬಯಲನ್ನೂ ಬಿಸಿಲನ್ನೂ ಆಕಾಶವನ್ನೂ ತೆಳು ಮುಗಿಲುಗಳನ್ನೂ ನೋಡುತ್ತ ನೋಡುತ್ತ ಭಾವಾವಿಷ್ಟನಾದೆ. ಸೌಂದರ್ಯದ ಸಂದೇಶವನ್ನು ಹೊತ್ತು ತಂದ ವಿಹಂಗಮ ದೂತರಿಗೆ ಕೈಮುಗಿದೆ. ಆ ಹಕ್ಕಿಗಳು ನನ್ನಾವ ಕಳೆದ ಜನ್ಮದ ಬಂಧುಗಳೋ ಎಂದು ಹಿಗ್ಗಿದೆ. ಹೇ ಬ್ರಹ್ಮಾಂಡದ ಅಸೀಮ ಸೌಂದರ್ಯದ ರಸಮೂರ್ತಿಯೇ, ನಾನು ಕಲೆಯ ಪೂಜೆಯನ್ನು ಮರೆತಾಗ ಇಂದಿನಂತೆಯೇ ಮುಂದೆ ಯಾವಾಗಲೂ ಕರುಣೆಯಿಂದ ಬಂದು ನನ್ನನ್ನು ಎಚ್ಚರಿಸು!

೧೯-೧೦-೧೯೩೧:

when we can’t get anything from God, we for Grace!

೩-೧೧-೧೯೩೧: ಶನಿವಾರ

ಶ್ರೀರಾಮಕೃಷ್ಣರ ಜೀವನಚರಿತ್ರೆ ಬರೆಯುತ್ತಿದ್ದೇನೆ. ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಣೆಗಾಗಿ.”ಜನನಿಗೆ” ಎಂಬ ಸರಳ ರಗಳೆಯ ಕವನ ಬರೆದೆ.(ನನ್ನ ತಾಯಿ ತೀರಿದ ಏಳು ವರ್ಷಗಳ ಮೇಲೆ, ಕುಕ್ಕನಹಳ್ಳಿ ಕೆರೆಯ ಪೂರ್ವದ ಬಯಲು ದಡದಲ್ಲಿ ಸಂಜೆಯ ಹೊತ್ತು ಕುಳಿತು. ಬರೆದದ್ದು. ‘ನೆನಪಿನ ದೋಣಿಯಲ್ಲಿ’ ಹಿಂದೆ ಅದನ್ನು ಎತ್ತಿ ಬರೆದಿದ್ದೇನೆ.)- ಸಾಯಂಕಾಲ ಎನ್.ಎಸ್.ಸುಬ್ಬರಾಯರೂ ಎನ್.ಎಸ್.ನರಸಿಂಹಮೂರ್ತಿಗಳೂ ಆಶ್ರಮಕ್ಕೆ ಬಂದರು. ಅವರಿಗೆ”ಇಂದಿನ ದೇವರು” “ಆತ್ಮಶ್ರದ್ಧೆ” ಎಂಬ ಪದ್ಯಗಳನ್ನೂ “ವರ್ಣಶಿಲ್ಪಿ” ಎಂಬ ಮುಕ್ತಕವನ್ನೂ ಓದಿದೆ.(ಮುಕ್ತಕ ಸಾನೆಟ್ಟಿಗೆ ಪರ್ಯಾಯ ಪದವಾಗಿ ಉಪಯೋಗವಾಗಿದೆ. ಕೆ.ವೆಂಕಟಪ್ಪನವರ ಸ್ಟುಡಿಯೋದಲ್ಲಿ ಅವರ ವರ್ಣಚಿತ್ರಗಳನ್ನು ನೋಡಿ ಬಂದು ಬರೆದದ್ದು. ‘ಕೃತ್ತಿಕೆ’ಕವನ ಸಂಗ್ರಹದಲ್ಲಿದೆ.)

೧೨-೧೧-೧೯೩೧: ನಿನ್ನೆ” ಕಾಳರಾತ್ರಿ” ಎಂಬ ಪದ್ಯ ಬರೆದೆ.

೨೯-೧೧-೧೯೩೧:

ನಿನ್ನೆ Bradley ಓದಿದೆ.(ಎನ್.ಎಸ್.ನರಸಿಂಹಮೂರ್ತಿಗಳು ಆಗ ಮೈಸೂರು ಯೂನಿವರ್ಸಿಟಿಯ ಲೈಬ್ರೇರಿಯನ್ ಆಗಿದ್ದರು. ಅವರು ನನಗೆ ಎ.ಸಿ.ಬ್ರಾಡ್ಲೆಯ Oxford Lectures on poetry ಎಂಬ ಅಮೂಲ್ಯ ವಿಮರ್ಶಕಗ್ರಂಥವನ್ನು ಹೊಚ್ಚ ಹೊಸದಾಗಿಕೊಂಡು ಮೈತ್ರಿಯ ಕೊಡುಗೆಯಾಗಿ ಕೊಟ್ಟಿದ್ದರು. ಅದರ ಅಧ್ಯಯನ ನನ್ನ ಕಾವ್ಯಮೀಮಾಂಸೆಯ ಮತ್ತು ಕಾವ್ಯ ವಿಮರ್ಶೆಯ ಶಕ್ತಿಯ ಮೇಲೆ ತುಂಬ ಪರಿಣಾಮಕರವಾದ ಪ್ರಭಾವ ಬೀರಿದೆ.)

೫-೧೨-೧೯೩೧:

ಸಾಯಂಕಾಲ ಐದೂವರೆ ಗಂಟೆಗೆ ನಾನೂ ಎ.ಸೀತಾರಾಂ ಇಬ್ಬರೂ ಸಂಚಾತ ಹೊರಟು ಒಂಟಿಕೊಪ್ಪಲಿನ ಆಚೆ ದಿಬ್ಬದ ಕಡೆಗೆ ಹೋದೆವು. ದಾರಿಯಲ್ಲಿ ವಿವಿಧ ವಿಷಯಗಳನ್ನು ಕುರಿತು ಮಾತಾಡಿದೆವು. ದೂರದ ದಿಗಂತದ ಪರ್ವತರೇಖೆಗಳನ್ನು ಬಣ್ಣಿಸಿದೆವು. ಚಾಮುಂಡಿಯ ಬೆಟ್ಟದ ದೃಶ್ಯವನ್ನು ಸ್ತುತಿಸಿದೆವು. ಬಯಲಿನಲ್ಲಿ ಗುಂಪು ಸೇರಿ ಕುಳಿತ ತೇನೆಹಕ್ಕಿಗಳನ್ನು ಎಬ್ಬಿಸಿದೆವು. ತೇನೆಹಕ್ಕಿಗಳು ಗುಂಪಾಗಿದ್ದುದನ್ನು ನಾನು ನೋಡಿದ್ದು ಇದೇ ಮೊದಲು. ಅಲ್ಲಿ ರೈತನೊಬ್ಬನು ಹೂಬಿಟ್ಟ ಹುಚ್ಚೆಳ್ಳು ಗಿಡಗಳ ಹೊಲದಲ್ಲಿ ನಡುನಡುವೆ ಬೆಳೆದಿದ್ದ ರಾಗಿಯ ಹುಲ್ಲು ಕೊಯ್ಯುತ್ತಿದ್ದುದು ಕಣ್ಣಿಗೆ ಬಿತ್ತು.  ಅಲ್ಲಿ ನಿಂತು ನಾವು ಸುತ್ತಣ ನೋಟವನ್ನು ಬಣ್ಣಿಸುತ್ತಿರಲು ಅವನು‘ಬುದ್ದೀ, ಕೂತುಕೊಳ್ಳಿ ಹವಾ ಚೆನ್ನಾಗಿದೆ’ಎಂದು ತನ್ನ ಹೊಲದಲ್ಲಿ ಆಹ್ವಾನಿವಿತ್ತನು. ನಾವೂ ಅಲ್ಲಿದ್ದ ಎತ್ತರದ ಬಂಡೆಗಳ ಮೇಲೆ ಕುಳಿತೆವು. ಆತನ ಆಹ್ವಾನದ ರೀತಿಯು ಅಷ್ಟು ಆಕರ್ಷಣೀಯವಾಗಿತ್ತು. ಆತನೊಡನೆ ಮಳೆಬೆಳೆಗಳ ವಿಚಾತ ಎತ್ತಿದೆವು. ಮಳೆ ಈ ಸಾರಿ ಚೆನ್ನಾಗಿ ನಡೆಸಲಿಲ್ಲ ಎಂದನವನು. ಆಮೇಲೆ ನಾನು ಅವನ ಬಳಿಗೆ ಹೋಗಿ ಅವನ ಕೆಲಸದ ವಿಚಾರ ವಿಚಾರಿಸಿದೆನು. ಹುಚ್ಚೆಳ್ಳನ್ನು ನಾನು ಅಚ್ಚೆಳ್ಳೆಂದು ಕೇಳಿದೆನು. ಅದಕ್ಕೆ ಆತನು”ಇದು ಹುಚ್ಚೆಳ್ಳು, ಸ್ವಾಮಿ. ಎಳ್ಳಿನ ಹೂವು ಹೀಗೆ ಹಳದಿಯಾಗಿರೋದಿಲ್ಲ. ಅದರ ಹೂವು ನಿಮ್ಮ ಪಂಚೆಯಂತೆ ಬೆಳ್ಳಗಿರುತ್ತದೆ. ಕಾಯಿ ನಿಮ್ಮ ಕವಚದಂತೆ (ನೀಲಶ್ಯಾಮಲ) ಇರುತ್ತದೆ” ಎಂದನು. ಆತನ ನಡೆನುಡಿಗಳಲ್ಲಿ ಪ್ರಕೃತಿಗೆ ಸಹಜವಾದ ಸರಳತೆ ಮೈತ್ರಿಗಳು ಹೊರಹೊಮ್ಮುತ್ತಿದ್ದವು. ನಾನು “ನೇಗಿಲುಯೋಗಿ” “ಹೊಲದ ಹುಡುಗಿ” “ಸಂಜೆವೆಣ್ಣು” ಗಳನ್ನು ಹಾಡಿದೆನು. ಕಲ್ಲಿನಮೇಲೆ ಕುಳಿತು. ಪಶ್ಚಿಮದಲ್ಲಿ ಸಂಧ್ಯಾ ಅರುಣರಾಗವು ಜಡೆಜಡೆಯಾದ ಮೇಘಗಳಲ್ಲಿ ಅದ್ಭುತವಾಗಿ ರಂಜಿಸುತ್ತಿತ್ತು. ದಿಬ್ಬದ ಆ ಕಡೆಯಿದ್ದ ಮತ್ತೊಂದು ದಿಬ್ಬದ ದಿಗಂತರೇಖೆಯಲ್ಲಿ ಚಲಿಸುವ ಗೋವುಗಳೂ ಮನಷ್ಯರೂ ಗಗನಪಟದಲ್ಲಿ ಚಿತ್ರಿತವಾದ ಸಚಲ ಸಜೀವ ಪುತ್ಥಳಿಗಳಂತೆ ಭವ್ಯವಾಗಿ ಚಲಿಸುತ್ತಿದ್ದುದನ್ನು ಕಂಡು ಬೆರಗಾದೆವು. ಹಕ್ಕಿಗಳೂ ಗವುಜಲು ಹಕ್ಕಿಗಳೂ ಕಣಿವೆಯಲ್ಲಿ ಕೂಗುತ್ತಿದ್ದುವು. ವಾಯುಮಂಡಲವು ಪ್ರಶಾಂತ ಪ್ರಸನ್ನವಾಗಿತ್ತು. ಸ್ವಲ್ಪ ಹೊತ್ತಿನ ಮೇಲೆ ಕತ್ತಲೆಯ ಮಸುಗು ಕವಿಯಿತು. ಮೈಸೂರಿನಲ್ಲಿ ವಿದ್ಯುದ್ದೀಪಗಳು ಮಿನುಗಿದುವು. ಚಾಮುಂಡಿ ಬೆಟ್ಟದಲ್ಲಿ ಸಾಲುದೀಪಗಳು ರಂಜಿಸಿದುವು. ರೈತನು ತನ್ನ ಕೆಲಸ ಪೂರೈಸಿ ಬಂದು ನಮಗೆ ಸ್ವಲ್ಪ ದೂರದಲ್ಲಿ ಕುಳಿತುಕೊಂಡನು.

ಆತನೊಡನೆ ಮಾತು ತೆಗೆ‌ದೆವು. ಆತನು ಹೇಳಿದನು: “ಬುದ್ದೀ, ಸರ್ಕಾರಕ್ಕೆ ದುಡ್ಡು ಸುರಿದು ಜಮೀನು ತೆಗೆದುಕೊಂಡಿದ್ದೇವೆ. ವರುಷ ವರುಷವೂ ಆರೂವರೆ ರೂಪಾಯಿ ಕಂದಾಯ ಕಟ್ಟಬೇಕು. ಮಳೆ ನಡೆಸಿದಲ್ಲಿ ರೈತ ಬದುಕುತ್ತಾನೆ. ಇಲ್ಲದಿದ್ದರೆ ಜಮೀನನ್ನೇ ಹರಾಜು ಮಾಡುತ್ತಾರೆ. ನನ್ನ ತಾತ ಇದನ್ನು ಕೊಂಡುಕೊಂಡ. ಇದರಲ್ಲಿ ಮೂರು ಎಕರೆ ಇದೆ ನೋಡಿ. ಇಷ್ಟು ನಮ್ಮ ಜಮೀನು” ಎಂದು ಮೇರೆಯನ್ನು ಕೈಬೀಸಿ ತೋರಿಸಿ”ನಾವು ಇಬ್ಬರು ಅಣ್ಣತಮ್ಮಂದಿರು. ಅವನಿಗೊಬ್ಬ ಮಗನಿದ್ದಾನೆ. ನನಗೆ ಒಬ್ಬ. ಅಣ್ಣನ ಮಗನಿಗೆ ಲಗ್ನವಾಗಿದೆ.ಮಕ್ಕಳಿದ್ದಾರೆ” ಎಂದು ಮೊದಲಾಗಿ ಬಹಳ ಸಲುಗೆಯಿಂದ ತನ್ನ ಕಷ್ಟಗಳನ್ನೆಲ್ಲ ಹೇಳಿಕೊಂಡ. ಆ ಮಾತುಗಳಲ್ಲಿ ಸಿಟ್ಟಾಗಲಿ, ಜುಗುಪ್ಸೆಯಾಗಲಿ, ಕರುಬು ಕೂಡ ಇರಲಿಲ್ಲ. ಸಹಿಷ್ಣುತೆ ಒಂದು ಮಾತ್ರ ತೋರುತ್ತಿತ್ತು. ಕತ್ತಲಾಗುತ್ತಿದ್ದುದನ್ನು ಕಂಡು ರೈತನು “ಬುದ್ದೀ, ಹೋಗೋಣ” ಎಂದನು. ನಾವೂ ಹೊರಟೆವು. ಆಗ ಅವನು “ನಾಳೆ ಬನ್ನಿ, ಸ್ವಾಮೀ. ಹವಾ ಚೆನ್ನಾಗಿರುತ್ತದೆ. ನಾನೂ ಬರುತ್ತೇನೆ. ಇಲ್ಲಗೆ” ಎಂದನು.

ಆ ಆಹ್ವಾನದಲ್ಲಿ ಆದರವು ಉಕ್ಕಿ ಹರಿಯುತ್ತಿತ್ತು. ಹೊಲವು ತನ್ನದು ಅಲ್ಲಿಗೆ ಬಂದವರು ತನ್ನ ಅತಿಥಿಗಳು ಎಂಬುದು ಆ ಬಡವನ ಎದೆಯಲ್ಲಿ ಮಹಾವೇದವಾಗಿತ್ತು.

ಆಮೇಲೆ ಹೊರಟು ಬರುತ್ತಾ ಹೊಲಗಳ ನಡುವಣ ದಾರಿಯಲ್ಲಿ ಅವನ ದನಗಳು. ಸಂಪಾದನೆ, ಖರ್ಚು, ಸಾಲ ಎಲ್ಲವನ್ನು ಕುರಿತು ಮಾತಾಡಿದೆವು. ಅಲ್ಲದೆ ಮಲೆನಾಡಿನ ವಿಚಾರ ಹೇಳಿದೆವು. ಅವನು ಹಿರಿಹಿರಿ ಹಿಗ್ಗಿದನು. ಅವನ ಮಕ್ಕಳಿಗೆ ವಿದ್ಯಾಭ್ಯಾಸವಾಗುತ್ತಿದೆಯೇ ಎಂದು ಕೇಳಿದೆವು.”ಇಲ್ಲ, ಬುದ್ದೀ, ದನ ಕಾಯುವುದಕ್ಕೆ ಯಾರೂ ಇಲ್ಲ. ನಾವು ದೊಡ್ಡವರು ಹೊಲದಲ್ಲಿರುವಾಗ ಆ ಹುಡುಗರು ದನ ಕಾಯುತ್ತಾರೆ” ಎಂದು ದೈನ್ಯದಿಂದ ಹೇಳಿದನು. ಆಮೇಲೆ ಅವನ ಹುಟ್ಟುವಳಿ, ವ್ಯಾಪಾರ, ತೆರಿಗೆ ಎಲ್ಲಾ ಕೇಳಿದೆವು. ನಮ್ಮ ಸಂಭಾಷಣೆಯಲ್ಲಿ ಯುಗಗಳ ಮೈತ್ರಿ ಇತ್ತು. ಕಡೆಗೆ ಅವನಿಗೆ ಹೇಳಿದೆ.”ಅಯ್ಯಾ, ನಾನೂ ನಿನ್ನಂತೆಯೆ ಒಕ್ಕಲಿಗ” ಎಂದು.

ಮುಳುಗುವ ಸೂರ್ಯ, ಸಂಜೆಗೆಂಪು, ಮಹಾದಿಗಂತ ರೇಖೆ, ಮಹತ್ತರ ಆಕಾಶ, ದೊಡ್ಡ ನಗರ ಮೈಸೂರು, ಪವಿತ್ರ ಚಾಮುಂಡಿಬೆಟ್ಟ ಎಲ್ಲವೂ ಮನದಿಂದ ಜಾರಿ ಆ ರೈತನ ಮುದ್ದಾದ ಬಡ ಮೂರುತಿಯದೊಂದೆ ಮನಸ್ಸನ್ನು ತುಂಬಿತು. ಕತ್ತಲಲ್ಲಿ ನಮಗೆ ದಾರಿ ತೋರಿಸುತ್ತ ಬಹುದೂರ ಬಂದನು. ಬೇಡ, ಹೋಗು ಎಂದರೆ ಒಲ್ಲನು. ಅಯ್ಯೋ ಎರಡೇ ಗಂಟೆಯ ಪರಿಚಯದಿಂದ ನಾವು ಆತನೆದೆಯನ್ನೆ ಸೂರಗೊಂಡೆವು. ಆತನೂ ನಮ್ಮೆದೆಯನ್ನು ಸೂರೆಗೊಂಡನು. ಕಡೆಗೆ ನಮ್ಮನ್ನು ಕಳುಹಿಸಿ ಬೀಳ್ಕೊಂಡು ಆ ಮಹಾತ್ಮನು ತನ್ನ ಹುಲ್ಲು ಗುಡಿಸಲಿಗೆ ಹೊರಟು ಕತ್ತಲಲ್ಲಿ ಮಾಯವಾದನು. ನಾವು ನಮ್ಮ ವೈಭವದ ಆಶ್ರಮದ ಕಡೆಗೆ ಬಂದೆವು. ದಾರಿಯಲ್ಲಿ ಆತನೊಬ್ಬನೇ ನಮ್ಮ ಮಾತಿನ ಮನಸ್ಸಿನ ಹೃದಯದ ಹಿರಿಯ ಮೂರ್ತಿಯಾದನು. ನನ್ನ ಜೀವಮಾನದಲ್ಲಿ ಅವನೊಡನೆ ಮಾತಾಡಿದಂತೆ, ಅವನನ್ನು ಒಲಿದಂತೆ, ನಾಳೆ ಹೋಗಲು ಸಮಯವಿಲ್ಲ. ನಾಡಿದ್ದಾದರೂ ಅಲ್ಲಿಗೆ ಹೋಗಿ ಪುನಃ ಆತನೊಡನೆ ಮಾತಾಡುವೆನು.

ಆಶ್ರಮಕ್ಕೆ ಬಂದ ಮೇಲೆ ನಶ್ಯದ ಭಾಂಗಿಯ ಪೆಟ್ಟಿಗೆಯನ್ನು ಶ್ರಮದಿಂದ ಒಡೆದು ನೋಡಿದೆವು.

ಹೇ ಸರಸ್ವತಿಯೇ, ಆ ರೈತನ ಮೈತ್ರಿಯನ್ನು ನನ್ನೆದೆಯಲ್ಲಿ ಹರಿಸಿ ಕವನವಾಹಿನಿಯಾಗುವಂತೆ ಮಾಡು! ಅಯ್ಯೋ ಅವನ ಹೆಸರು ಕೇಳುವುದನ್ನೆ ಮರೆತನಲ್ಲಾ!

೭-೧೨-೧೯೩೧:

‘ಹೊಲದ ಕವಿ’ ಪೂರೈಸಿದೆ.(ಆಗ ಆ ಕವನಕ್ಕೆ ಹಾಗೆ ಹೆಸರಿಟ್ಟಿದ್ದೆ. ಆಮೇಲೆ ಅದನ್ನು ‘ಕಿಟ್ಟಯ್ಯ’ಎಂದು ಬದಲಾಯಿಸಿದೆ. ಬಹುಶಃ ಅವನ ಹೆಸರು ಕೇಳಿ ತಿಳಿದ ಮೇಲೆ. ಆ ಕವನ ‘ನವಿಲು’ಕವನ ಸಂಗ್ರಹದಲ್ಲಿ ಅಚ್ಚಾಗಿದೆ.)

೮-೧೨-೧೯೩೧:

ಪುನಃ ಇವೊತ್ತು ಸಾಯಂಕಾಲ ‘ಹೊಲದ ಕವಿ’ ಹೊಲಕ್ಕೆ ಹೋದೆ. ಮೊದಲು ಅವನು ಕಾಣಲಿಲ್ಲ. ಹಾಗೆಯೇ ನೋಡುತ್ತಿರಲು ಬೇಲಿಯ ದೂರದಲ್ಲಿ ಯಾರೋ ಕುಳಿತಂತೆ ಕಂಡಿತು. ಕಡೆಗೆ ಯಾರೂ ಇಲ್ಲವೆಂದು ನಿರ್ಧರಿಸಿ ಕುಳಿತೆ. ಸ್ವಲ್ಪ ಹೊತ್ತಿನಲ್ಲಿ ಆ ಕಾಣಿಕೆಯ ರೈತನಾಗಿ ಎದ್ದು ಬಂದನು. ಬಹಳ ಮಾತಾಡಿದೆವು. ಶ್ರೀ ರಾಮಕೃಷ್ಣ ಪರಮಹಂಸರ ವಿಷಯ ಹೇಳಿದೆ. ತರುವಾಯ ಈಶ್ವರನು ಎಲ್ಲಕ್ಕೂ ಕಾರಣ ಎಂಬುದನ್ನು ಕುರಿತು ಮಾತಾಡಿದೆವು. ಆಮೇಲೆ ರೈತರ ಸಾಲದ ವಿಚಾರ ಮಾತಾಡಿದೆವು. ಬಹುದೂರ ಕತ್ತಲಾದ ಮೇಲೆ ನನ್ನೊಂದಿಗೆ ಬಂದು ಅವನ ಮನೆಗೆ ಹೋದನು.

ಅವನ ಹೆಸರು ಇವೊತ್ತು ಕೇಳಿದೆ-‘ಕಿಟ್ಟಯ್ಯ’ಎಂದಂತೆ!….

೪-೧-೧೯೩೨:

ಇಂದು ಭರತ ಖಂಡದ ಇತಿಹಾಸದಲ್ಲಿ ಒಂದು ಮಹಾತಿವಿಷಮತಮವಾದ ದಿನ. ನಾಲ್ಕು ಗಂಟೆಯ ಹೊತ್ತಿನಲ್ಲಿ ‘ಹಿಂದೂ’ಪತ್ರಿಕೆಯಲ್ಲಿ ಸುಬಾಶ್ ಚಂದ್ರ ಬೋಸರ ದಸ್ತಗಿರಿಯ ವಿಚಾರ ಓದಿ ಸರ್ಕಾರದವರು ಮಾಡುತ್ತಿರುವ ಅವಿವೇಕವನ್ನು ಕುರಿತು ಮಾತಾಡಿದೆವು. ಹಾಗೆಯೇ ನಾಳೆ ಗಾಂಧಿಯವರು ದಸ್ತಗಿರಿಯಾದರೆಂದು ಸುದ್ದಿ ಬರಹುದೆಂದು ಮಾತಾಡುತ್ತಿರುವಾಗಲೇ ವೆಂಕಟದೇಶಿಕಾಚಾರ್ ಬಂದು ಒಂದು ನೋಟಿಸನ್ನು ತಂದು ಕೊಟ್ಟರು. ಅದರಲ್ಲಿ ಗಾಂಧಿ, ವಲ್ಲಭಬಾಯಿ ಪಟೇಲ್ ಅವರ ದಸ್ತಗಿರಿಯೂ ಸುಬಾಶ್ ಚಂದ್ರ ಬೋಸರ ಗಡೀಪಾರೂ ನಮೂದಿಸತವಾಗಿತ್ತು. ಆಶ್ರಮವೇ ದಿಗಿಲುಬಿದ್ದಂತಾಯಿತು. ಇದಕ್ಕಾಗಿಯೇ ರೌಂಡ್ ಟೇಬಲ್ ಕಾನ್ ಫರೆನ್ಸ್ ಆಯಿತೇ? ಸರ್ಕಾರದವರು ಎಡವಿದರು! ಮುಂದೆ ನಡೆಯಬಹುದಾದ ಪ್ರಚಂಡ ಸತ್ಯಾಗ್ರಹವನ್ನೂ ಸಕಾರವು ಕರೆಯಲಿರುವ ಲಾಠಿ ಗುಂಡಿನ ಮಳೆಯನ್ನೂ ಕುರಿತು ಮಾತಾಡಿದೆವು…. ಒಂದು ಬಟ್ಟಲು ಉಪ್ಪುನೀರನ್ನು ಮಡಕೆಯಲ್ಲಿ ಮುಚ್ಚಿಟ್ಟು ಸಮುದ್ರವನ್ನೇ ಸೆರೆಯಲ್ಲಿಟ್ಟೆನೆಂದರೆ ಹೇಗೋ ಹಾಗೆ ಗಾಂಧಿಯನ್ನು ಸೆರೆಯಲ್ಲಿಟ್ಟು ಸ್ವಾಂತತ್ರ‍್ಯವನ್ನು ಬಾಯಿಮುಚ್ಚಿದಂತಾಯಿತೇ? ಇದನ್ನೇ ಕುರಿತು ಮಾತಾಡಿದೆವು. ಡೈರಿ ಓದಿದೆನು….

೫-೧-೧೯೩೨:

ದಿನಚರಿಯಲ್ಲಿ ತೀರ್ಥಹಳ್ಳಿಯಲ್ಲಿ ಪ್ರೈಮರಿ ಬಾಯ್ಸ ಸ್ಕೂಲಿನಲ್ಲಿ ಅಸಿಸ್ಟೆಂಟ್ ಮಾಸ್ಟರ್ ಆಗಿದ್ದ ಬಿ.ಎಸ್.ಟಿ. ಮೋಸೆಸ್ ಅವರ ಅಡ್ರೆಸ್ ಮಾತ್ರ ಇದೆ.(ಅವರ ವಿಚಾರ ‘ನೆನಪಿನ ದೋಣಿಯಲ್ಲಿ’ ಹಿಂದೆಯೇ ಬಂದಿದೆ. ಅವರು ನಮ್ಮ ಮನೆಯ, ಕುಪ್ಪಳಿಯ, ಉಪ್ಪರಿಗೆಯಲ್ಲಿ ನಮಗೆ ಮನೆಮೇಷ್ಟರಾಗಿ ಅಕ್ಷರಾಭ್ಯಾಸ ಮಾಡಿಸಿ, ಯೇಸುಕ್ರಿಸ್ತ-ಬೈಬಲು ಇತ್ಯಾದಿ ವಿಚಾರಗಳನ್ನು ತಿಳಿಸಿ, ಕನ್ನಡದಲ್ಲಿ ‘ಪರ್ವತ ಪ್ರಾರ್ಥನೆ’ ಹೇಳಿಕೊಟ್ಟಿದ್ದರು, ಸುಮಾರು ೧೯೧೧-೧೯೧೨ ರಲ್ಲಿ….. ನಾನು ಸುಪ್ರಸಿದ್ದನಾದ ಮೇಲೆ, ನನ್ನ ಮಾತು ನಡೆಯುತ್ತದೆ ಎಂದು ಭಾವಿಸಿ, ತಮ್ಮನ್ನು ತೀರ್ಥಹಳ್ಳಿಯಿಂದ ಬೇರೆ ಕಡೆಗೆ, ಬಹುಶಃ ಅವರ ಹೆಂಡತಿ ಸೂಲಗಿತ್ತಿಯಾಗಿ ಕೆಲಸ ಮಾಡುತ್ತಿದ್ದ ಇನ್ನಾವುದೋ ಬೇರೆ ಊರಿಗೆ, ವರ್ಗಾಯಿಸಿ ಕೊಡುವಂತೆ ಡಿ.ಪಿ.ಐ. ಅವರಿಗೆ ಸಿಪಾರಸು ಮಾಡಲು ಕೇಳಿಕೊಂಡು ಕಾಗದ ಬರೆದಿದ್ದರು.)

೮-೧-೧೯೩೨:

ಶ್ರೀರಾಮಕೃಷ್ಣ ಪರಮಹಂಸರ ಅಂತರಂಗ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ವಿಜ್ಞಾನಾನಂದರು ಮೈಸೂರು ಆಶ್ರಮಕ್ಕೆ ಬೆಳಿಗ್ಗೆ ಬಂದು ರಾತ್ರಿ ಹತ್ತು ಗಂಟೆಗೆ ರೈಲಿನಲ್ಲಿ ಬೆಂಗಳೂರಿಗೆ ಹೋದರು.

೧೬-೧-೧೯೩೨:

ಸಾಯಂಕಾಲ ಏಳು ಗಂಟೆಗೆ ಯೂನಿವರ್ಸಿಟಿ ಲೈಬ್ರರಿಯಲ್ಲಿ ‘ಶ್ಮಶಾನ ಕುರುಕ್ಷೇತ್ರಂ’ಓದಿದೆ. ಎನ್.ಎಸ್.ಸುಬ್ಬರಾಯರು, ಎನ್.ಎಸ್.ನರಸಿಂಹಮೂರ್ತಿಗಳು, ವರ್ಣಶಿಲ್ಪಿ ಕೆ.ವೆಂಕಟಪ್ಪನವರು, ಕತೆಗಾರ ಎ.ಸೀತಾರಾಂರವರು ಇದ್ದರು.

(ಆ ದಿನವೇ ಎಂದು ತೋರುತ್ತದೆ. ವಾಚನ ಮುಗಿದ ಮೇಲೆ, ಎನ್.ಎಸ್. ನರಸಿಂಹಮೂರ್ತಿಗಳು-ಲೈಬ್ರೇರಿಯನ್ ಆಗಿದ್ದರು-ಶ್ಮಶಾನ ಕುರುಕ್ಷೇತ್ರವನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿದರೆ ಖಂಡಿತ ನೊಬೆಲ್ ಬಹುಮಾನ ದೊರೆಯುತ್ತದೆ ಎಂದು ಹೇಳಿದ್ದು. ನನಗೆ ಅದು ಅಷ್ಟು ಹಿತವಾಗಲಿಲ್ಲ. ಅವರು ಹಾಗೆ ಅಂದದ್ದು ಏಕೆಂದರೆ ಶ್ಮಶಾನ ಕುರುಕ್ಷೇತ್ರದ ಯೋಗ್ಯತೆಗೆ ನೊಬೆಲ್ ಬಹುಮಾನದ ಬೆಲೆ ಕಟ್ಟುವುದು ಆ ನನ್ನ ಕೃತಿಗೆ ಅವಮಾನ ಮಾಡಿದಂತೆ ಎಂಬುದು ನನ್ನ ಭಾವನೆಯಾಗಿತ್ತು. ಅಂತಹ ಸನ್ನಿವೇಶವೆ ಕಾರಣವಾಗಿ‘ಬಹುಮಾನ’ಎಂಬ ನನ್ನ ವಿಡಂಬನಾತ್ಮಕ ಕವನ ಮೂಡಿದ್ದು. ಅದು ಪ್ರಕಟವಾದ ಮೇಲೆ ಅಸೂಯಾಪರರಾದ ಕೆಲವರು ಈ ಕವಿ ಈಗಾಗಲೆ ನೊಬೆಲ್ ಬಹುಮಾನ ತನಗೆ ದೊರಕಲು ತಾನು ಅರ್ಹನೆಂಬುದಾಗಿ ಅಹಂಕಾರಿಯಾಗಿದ್ದಾನೆ ಎಂಬ ಆರೋಹಣೆ ಮಾಡಿ ಸಂತೋಷಪಟ್ಟುಕೊಂಡರಂತೆ!)