೧೯-೧-೧೯೩೨:

ಇವೊತ್ತು ಸಾಯಂಕಾಲ ಆರು ಗಂಟೆಗೆ ಹರಿಶ್ಚಂದ್ರ ಕಾವ್ಯಸಂಗ್ರಹವನ್ನು ಕಾಲೇಜಿನ ಕರ್ಣಾಟಕ ಸಂಘದಲ್ಲಿ ಓದುತ್ತೇನೆ.

೨೩-೧-೧೯೩೨:

ಸಾಯಂಕಾಲ ಎನ್.ಎಸ್.ನರಸಿಂಹಮೂರ್ತಿಗಳು ಮತ್ತು ಎ.ಸೀತಾರಾಂ ನನ್ನನ್ನು ಒಂದು ಬಾಡಿಗೆ ಕಾರಿನಲ್ಲಿ ಲಲಿತಾದ್ರಿಗೆ ಕರೆದೊಯ್ದರು. ಅಲ್ಲಿ ‘ಲಲಿತಾದ್ರಿ’ಕವನ ಓದಿದೆ. (ಈ ಪ್ರಸಂಗದಲ್ಲಿ ಗಾಂಭೀರ್ಯದ ಜೊತೆಗೆ ಸ್ವಲ್ಪ ವಿನೋದಾತ್ಮಕ ವಿಡಂಬನವೂ ಕೂಡಿಕೊಂಡಿದೆ. ಎನ್.ಎಸ್.ಸುಬ್ಬರಾಯರ ಅಣ್ಣ ಯೂನಿವರ್ಸಿಟಿ ಲೈಬ್ರರಿಯನ್ ನರಸಿಂಹಮೂರ್ತಿಗಳಿಗೆ ನನ್ನಲ್ಲಿ ತುಂಬ ಆದರ ಪೂರ್ವಕವಾದ ಮೆಚ್ಚುಗೆ. ನನ್ನ‘ಲಲಿತಾದ್ರಿ’ಕವನವನ್ನು ಲಲಿತಾದ್ರಿಗೆ ಹೋಗಿ ಅಲ್ಲಿಯೆ ಓದಿಸಿ ಕೇಳಬೇಕು ಎಂದು ಅವರ ಬಯಕೆ. ಅದರಲ್ಲಿಯೂ ಆ ಕವನವನ್ನು ಕವಿ ಅಲ್ಲಿಯೆ ರಚಿಸಿದ್ದು ಮಾತ್ರವಲ್ಲ. ಒಂದು ಹುಣ್ಣಿಮೆ ದಿನವೆ ಅತ್ರ ಚಂದ್ರೋದಯ ಇತ್ತ ಸೂರ್ಯಾಸ್ತ ಆಗುತ್ತಿದ್ದ ಸಮಯದಲ್ಲಿಯೆ ರಚಿಸಿದ್ದು. ಆದ್ದರಿಂದ ನಾವೂ ಒಂದು ಹುಣ್ಣಿಮೆಯ ದಿನವನ್ನೆ ಗೊತ್ತುಮಾಡಬೇಕೆಂದು ಅವರ ಆಶೆಯಾಗಿತ್ತು. ಆ ಸಮಯ ಮತ್ತು ದಿನವನ್ನು ಅವರೇ ಗೊತ್ತುಮಾಡಿ ನಮ್ಮನ್ನು ಅಲ್ಲಿಗೆ ಕರೆದೊಯ್ಯಲು ಬಾಡಿಗೆ ಕಾರನ್ನೂ ಅವರೇ ಗೊತ್ತುಮಾಡಿದ್ದರು. ಅವರ ಸಹೃದಯತೆ ಎಷ್ಟು ಹೃತ್ಪೂರ್ವಕವಾಗಿತ್ತೆಂದರೆ ಅದಕ್ಕಾಗಿ ದುಡ್ಡು ಖರ್ಚುಮಾಡಿದುದೆ ಮಹತ್ಸಾಕ್ಷಿಯಾಗಿತ್ತು! ಬರ್ನಾಡ್ ಷಾ ಹೇಳಿದ್ದಂತೆ‘Sincerity must be finacially tested!’”ಪ್ರಾಮಾಣಿಕತೆ ಆರ್ಥಿಕವಾಗಿಯೆ ಪರೀಕ್ಷಿತವಾಗಬೇಕು!” ಎಂಬ ಸೂಕ್ತಿ ವಿಡಂಬಾತ್ಮಕವಾಗಿದ್ದರೂ ಅದರಲ್ಲಿ ಸ್ವಲ್ಪ ಸತ್ಯಾಂಶವೂ ಇದೆ ಎಂದು ನಾವು ಒಪ್ಪಬೇಕಾಗುತ್ತದೆ! ಆರ್ಥಿಕತಾನಿಕಷದಲ್ಲಿ ನಮ್ಮ ಪ್ರಾಮಾಣಿಕತೆಯ ಹೊನ್ನು ಒರೆ ಹಿಡಿಸಿಕೊಂಡು ಗೆದ್ದರೆ ಅದರ ನೈಜತೆ ನಿಷ್ಕಳಂಕವಾದುದು ಎಂದು ಇತ್ಯರ್ಥವಾಗುತ್ತದಲ್ಲವೆ?

ಅಂತೂ ನಾವು ಮೂವರೂ ಹೊತ್ತಿಗೆ ಸರಿಯಾಗಿ ಲಲಿತಾದ್ರಿಗೆ ಸೇರಿದೆವು. ಆಗ ಲಲಿತಾದ್ರಿಗೆ ವಿವಿಧ ವರ್ಣಮಯ ಪುಷ್ಪಗಳಿಂದ ತುಂಬಿ ಮನೋಹರವಾದ ಉದ್ಯಾನವಾಗಿತ್ತು. ನಾನು ಕವನ ವಾಚಿಸಲು ತೊಡಗಿದೆ. ನಡುನಡುವೆ ನರಸಿಂಹಮೂರ್ತಿಗಳು‘ನಿಲ್ಲಿ, ನಿಲ್ಲಿ!’ ಎಂದು ಹೇಳಿ ನನ್ನ ವರ್ಣನೆಗೂ ನಿಸರ್ಗ ವ್ಯಾಪಾರಕ್ಕೂ ತಾಳೆ ನೋಡುತ್ತಿದ್ದರು. ಆಗ ಸೀತಾರಾಂ”ಇದೇನು ಆಡಿಟ್(ಲೆಕ್ಕಪತ್ರ ತಪಾಸಣೆ) ಮಾಡುತ್ತಿದ್ದೀರೋ? ಕಾವ್ಯದ ರಸಾನುಭವವನ್ನು ಸವಿಯುತ್ತಿದ್ದಿರೋ?”ಎಂದು ಚುಚ್ಚು ನುಡಿದು ನಗಲಾರಂಭಿಸಿದರು. ಆ ಚುಚ್ಚು ನರಸಿಂಹಮೂರ್ತಿಗಳಿಗೆ ನಾಟಿತೊ ಬಿಟ್ಟಿತೊ? ಅಂತೂ ಅವರೂ ನಗಲಾರಂಭಿಸಿದರು. ಆದರೆ ಆಡಿಟ್ ಕೆಲಸ ಮಾತ್ರ ನಿಲ್ಲಿಸಲಿಲ್ಲ!)

೨೫-೨-೧೯೩೨:

some Experiments of Mysticism by Rufus Jones ಓದಿದೆ.

೧೭-೩-೧೯೩೨:

Reading the Life of Tolstoy:

“He whose aim is his own happiness is bad: he whose aim is the good opinion of weak; he whose aim is the happiness of others is virtuous; he whose aim is God is great.”

೧೮-೩-೧೯೩೨:

ಟಾಲ್ ಸ್ಟಾಯ್ ನ ಜೀವನ ಚರಿತ್ರೆಯನ್ನು ಓದುತ್ತಾ ಆ ಮಹಾತ್ಮನ ಅಪಜಯ ಸಂಕುಲಮಯವಾದ ಮಹಾಜಯವನ್ನು ನೆನೆದು ರೋಮಾಂಚವಾಗುತ್ತದೆ. ಆತನ ಜೀವನದಲ್ಲಿ ನಿತ್ಯ ನಿರಂತರ ಸಾಧನೆಯು ಅಸೀಮ ಅನಂತ ಆಕಾಶ ಸಮ ಆದರ್ಶದೆಡೆಗೆ ಎಡೆಬಿಡದೆ ಕೈನೀಡುತ್ತಿದೆ. ಆತನಲ್ಲಿದ್ದ ದುರ್ಬಲತೆಗಳು ನನಗೆ ಭಯಂಕರವಾಗಿ ಕಾಣುತ್ತವೆ. ಅವುಗಳನ್ನು ಗೆದ್ದುದರಿಂದ ಆತನು ಮತ್ತೂ ಭಯಂಕರನಾಗಿ ಕಾಣುತ್ತಾನೆ. ಅವನಲ್ಲಿದ್ದ ದುರ್ಬಲತೆಗಳಲ್ಲಿ ಕಣವಾದರೂ ನನ್ನಲ್ಲಿಲ್ಲ-ಎಂದರೆ ಅವುಗಳನ್ನು ಮಾಡುವ ಮನಸ್ಸಿಲ್ಲವೆಂದಲ್ಲ, ಮಾಡಲು ಅವಕಾಶವಿಲ್ಲ, ಸನ್ನಿವೇಶವಿಲ್ಲ. ಅವನ ಸ್ಥಿತಿಯಲ್ಲಿ ಮತ್ತು ಪರಿಸ್ಥಿತಿಯಲ್ಲಿ ನಾನಿದ್ದಿದ್ದರೆ ಅವನಿಗೇನು ಕಡಿಮೆಯಾಗುತ್ತಿರಲಿಲ್ಲ-ದುಷ್ಕೃತ್ಯಗಳಲ್ಲಿ! ಹೇ ಗುರುದೇವ ನಿನ್ನ ಆಶೀರ್ವಾದ ಪಂಜರದಲ್ಲಿ ನನ್ನನ್ನು ಮೊದಲು ಸೆರೆಯಿಟ್ಟು ರೆಕ್ಕೆ ಬಲಿತ ಮೇಲೆ ಹೊರಗೆ ಬಿಡು. ಸೆರೆಯ ಸಾರಾಂಶವನ್ನು ಹೀರಿ ಬಲುಷ್ಠನಾದ ಮೇಲೆ ಮುಕ್ತಿಯ ಹೊರೆಯನ್ನು ಹೊರಿಸು-ಇಷ್ಟಾದರೂ ನನ್ನ ಮನಸ್ಸು ದುರ್ಮಂತ್ರಪಾತ್ರೆಯಂತೆ ಕೆಲವು ಸಾರಿ ಘೋರಭೂತಗಳನ್ನೂ ವಿಕಾರ ಪಿಶಾಚಿಗಳನ್ನೂ ಸೃಜಿಸುತ್ತದೆ. ದೃಢನಿಶ್ಚಯತೆಯೂ ವ್ರತವೂ ಮಣ್ಣುಗೂಡುತ್ತವೆ. ಧ್ಯೇಯವು ಅಸಹ್ಯದ ಪಂಕದಲ್ಲಿ ಹೊರಳಾಡಿ ಕತ್ತೆಯಾಗುತ್ತೇನೆ. ನನ್ನ ಆದರ್ಶ ಮತ್ತು ಸಾಧನೆಗಳನ್ನು ನೆನೆದಾಗ ನಾನೆಷ್ಟು ಮಹಾತ್ಮನೆಂದು ನನಗೆ ನಾನೇ ಬೆದರುತ್ತೇನೆ. ಆದರೆ ನನ್ನ ಸೋಲುಗಳನ್ನು ನೆನೆದರೆ ನಾನೆಂತಹ ಕ್ಷುದ್ರನೆಂದು ತಿಳಿದು ನನ್ನಲ್ಲಿ ನನಗೇ ನಾಚಿಕೆಯಾಗುತ್ತದೆ. ನನ್ನೆದೆಯಲ್ಲಿ‘ಖಾಂಡವವನ ದಹನ’ವಾಗುತ್ತದೆ; ತ್ಯಾಗಭೋಗಗಳ ಹಣಾಹಣೆಯಾಗುತ್ತದೆ; ವೈರಾಗ್ಯ ವ್ಯಾಮೋಹಗಳ ಖಡ್ಗಾಖಡ್ಗಿಯಾಗುತ್ತದೆ; ನನ್ನ ಗೆಳೆಯರಿಗೆ ನಾನು ಶಾಂತಿಯ ಮೂರ್ತಿಯಂತೆ ಕಾಣುತ್ತೇನೆ. ಆಸರೆ ಅವರಿಯರು ಎಂತಹ ಭಯಂಕರ ಸಂಗ್ರಾಮಭೂಮಿ ನಾನೆಂದು. ಮೇಲೆ ಶಾಂತಿ, ಒಳಗೆ ಕ್ರಾಂತಿ! ಎಷ್ಟು ಸಲ, ಆದರ್ಶಚ್ಯುತನಾಗುತ್ತೇನೆ! ಮತ್ತೆಷ್ಟು ಸಲ ಪುನಃ ಪ್ರಬುದ್ಧ ಅಂತಶ್ಯಕ್ತಿಯಿಂದ ಇನ್ನೂ ಉಗ್ರತರ ಸಾಹಸ ಸಾಧನೆಗಳಿಗೆ ಮನಸ್ಸು ಮಾಡಿ ನಿಮಿರಿ ನಿಲ್ಲುತ್ತೇನೆ! ಇಲ್ಲ, ಎಂದಿಗೂ ಹಿಂಜರಿಯೆ, ಕಾದಾಡಿ ರಣದಲ್ಲಿ ಸಾಯುವೆನೇ ಹೊರತು ಹಿಂಜರಿಯೆ. ಹತ್ತಲ್ಲ ಸಾವಿರ ಸಾರಿ ಬಿದ್ದರೂ ಮತ್ತೆ ಎದ್ದು ಮುಂದೆ ನುಗ್ಗಿಯೇ ನುಗ್ಗುತ್ತೇನೆ. ನಿರಂತರ ಸಾಹಸವೇ ನೀತಿಯ ಚೈತನ್ಯ. ಹತಾಶನ ಹೃದಯವೇ ಮಹಾನರಕ! ಬಿದ್ದಾಗ ಮತ್ತೆ ಎದ್ದು ನಿಂತೆನೆಂದರೆ ನನ್ನಶಿರ ನಕ್ಷತ್ರಗಳಿಗೆ ತಗುಲಿದಂತಾಗುತ್ತದೆ. ಆ ಅಪ್ರತಿಹತ ಶ್ರದ್ದೆಯೇ ನನಗೆ ಶಕ್ತಿ. ಅದರಿಂದಲೇ ಗೆಲುವಿನಲ್ಲಿ ನನಗೆ ಸಂದೇಹವಿಲ್ಲ. ಇಂದಲ್ಲದಿದ್ದರೆ ನಾಳೆ, ನಾನು ವಿಜಯಿ. ಹೇ ಗುರುದೇವ, ಸರ್ವಶಕ್ತಿಮಾನ್ ಮಹಾಪ್ರಭೂ, ನನ್ನ ದೌರ್ಬಲ್ಯ ಲೋಹವು ನಿನ್ನ ಶಕ್ತಿಯ ಸ್ಪರ್ಶಮಣಿಯಿಂದ ಸ್ವರ್ಣವಾಗಿ ರಂಜಿಸಲಿ! ನನ್ನನ್ನು ಸಿಡಿಲಾಗಿ ಮಾಡು; ಕಲ್ಲಾಗಿ ಮಾಡು; ವಜ್ರವಾಗಿ ಮಾಡು; ಶ್ಮಶಾನವಾಗಿ ಮಾಡು; ಜಿತೇಂದ್ರಿಯ ಸ್ಥಿತಪ್ರಜ್ಞನನ್ನಾಗಿ ಮಾಡು, ಗರಿಯೆಲ್ಲ ಬೆಂದರೂ ಮೇಲೆ ಮೇಲಕ್ಕೆ ಹಾರುವ ಹುಚ್ಚು ಹಾಳಾಗದಿರಲಿ!

೨೨-೩-೧೯೩೨:

Tolsty’s Diary dated 28th heavy and wingless. Their sphere is down below. There are strong ones among them; Nepoleon. They terrible traces among men and cause an uproar, but it is all on the earth.There are those whose wings grow equably and who slowly rise and fly: Monks. There are light people, winged, who rise easily from among the crowd and again descend: good idscend among the crowd and break their wings, such am I. Then they struggle with broken wings, flutter strongly and fail. If my wings heal I will fly high. God grant it.

There are those who have heavenly wings and-purposely from love to men descend to earth(folding the wings) and teach men to fly. when they are no more needed they fly away:christ.”

೨-೪-೧೯೩೨:

ಸಾಯಂಕಾಲ ಡಿ.ವಿ.ಗುಂಡಪ್ಪನವರು, ವೆಂಕಣ್ಣಯ್ಯ ಮೊದಲಾದವರು ಸೇರಿ ಕನ್ನಡ ಉದ್ಧಾರವಾಗುವ ವಿಚಾರ ಮಾತಾಡಿ ಸ್ವಲ್ಪ ಪ್ರಚಾರವನ್ನು ಹೆಚ್ಚು ಮಾಡಬೇಕೆಂದು  ನಿರ್ಧರಿಸಿದೆವು. ತರುವಾಯ ನಾನು ಗುಂಡಪ್ಪನವರೊಡನೆ ಅವರು ಇಳಿದುಕೊಂಡಿದ್ದ ಮಾಡರನ್ ಹೋಟೆಲಿಗೆ ಹೋದೆ. ದಾರಿಯಲ್ಲಿ ಮಳೆ ಬಂದು ಇಬ್ಬರೂ ತೊಯ್ದೆವು. ಅನೇಕ ವಿಚಾತಗಳನ್ನು ಕುರಿತು ಮಾತಾಡಿದೆವು. ಅಲ್ಲಿಯೆ ಭೋಜನವೂ ಆಯಿತು. ನಾನು ಹೇಳಿದೆ ಮಾತಿನ ನಡುವೆ”I shall gaze at the sky and clouds and sing my song and vanish from the world; you all shall prepare for next coming!” ಎನ್ನಲು ಅವರು”Splendid!” ಎಂದರು. ವಿನೋದದಲ್ಲಿ ವಿಷಯ ಪರಿಪೂರ್ಣತೆಯಿತ್ತು. ಅವರು ನನ್ನೊಡನೆ ರಿಸರ್ವಾಯರ್(ಒಂಟಿಕೊಪ್ಪಲಿನ ಜಲಾಶಯ) ವರೆಗೆ ಬಂದು ಕಳುಹಿಸಿ ಹೋದರು.

೩-೪-೧೯೩೨:

ಬೆಳಿಗ್ಗೆ ಐದೂಕಾಲು ಗಂಟೆಗೆ ಎದ್ದು ಆರೂವರೆ ಗಂಟೆ ಹೊತ್ತಿಗೆ ಗುಂಡಪ್ಪನವರಲ್ಲಿಗೆ ಹೋದೆ.‘ಕಲಾಸುಂದರಿ’‘ಜೋಗ’‘ವಿಮರ್ಶಕ’‘ಕುಕ್ಕನಹಳ್ಳಿಯ ಕೆರೆಯ ಮೇಲೆ’ ಮೊದಲಾದ ಅನೇಕ ಪದ್ಯಗಳನ್ನು ಓದಿದೆ. ಬಹಳ ಆನಂದಪಟ್ಟರು. ತರುವಾಯ ಸಂಸಾರಿಯಾಗುವಂತೆ ಸೂಚಿಸಿದರು. ಅದಿಲ್ಲದೆ ಜೀವನವು ಪರಿಪೂರ್ಣವಾಗದು ಎಂದರು. ನಾನೊಪ್ಪಲಿಲ್ಲ. ಒಂದೇ ಜನ್ಮದಲ್ಲಿ ಎಲ್ಲ ಅನುಭವಗಳನ್ನೂ ಪಡೆದು ಪರಿಪೂರ್ಣರಾದವರು ಅತಿ ವಿರಳ. ನಾನು ಅನೇಕ ಹಿಂದಿನ ಜನ್ಮಗಳಲ್ಲಿ ಅದನ್ನೆಲ್ಲ ಪಡೆದಿರಬಹುದು ಎಂದೆ. ಇನ್ನೂ ಅನೇಕ ಮಾತುಕತೆಗಳಾದ ಬಳಿಕ ಆದರದಿಂದ ಬೀಳ್ಕೊಂಡರು.(ಮಾಸ್ತಿಯವರ ‘ಚೆಲುವು’ಹೇಗಿದೆ ಎಂದರು. ಅದಕ್ಕೆ ನಾನು”ಹೆಸರಿನಲಿ ಹುಟ್ಟಿಯೂ ಕೆಸರಾದೆ ನೀ ಜಗಕೆ” ಎಂದೆ.)

೪-೪-೧೯೩೨:

ಆಯ್ಲಮರ್ ಮಾಡ್ ಅವರ ಟಾಲ್ ಸ್ಟಾಯ್ ಜೀವನಚರಿತ್ರೆ ಓದಿ ಮುಗಿಸಿದೆ.Otto’s Mysticism East and west ಓದುತ್ತಿದ್ದೇನೆ. ಅದ್ಭುತಗ್ರಂಥ. ಆದರೆ‘Theologian’ ಎಂದು ಶಂಕರನನ್ನು ಕರೆಯಬಾರದಾಗಿತ್ತು.

೧೫-೪-೧೯೩೨:

ಬೆಳಿಗ್ಗೆ ಎದ್ದು ಕೆ.ವೆಂಕಟಪ್ಪನವರ ಕಲಾಶಾಲೆಗೆ ಹೋದೆ. ಅಲ್ಲಿ ಹನ್ನೊಂದು ಗಂಟೆಯ ತನಕ ಅವರ‘ನೀಲಗಿರಿಯ ಚಿತ್ರ’ಗಳನ್ನು ಮನದಣಿಯೆ ನೋಡಿದೆನು. ಆ ಚಿತ್ರಗಳು ಎಂಥ ಅದ್ಭುತವಾಗಿವೆ! ನೋಡಿದಷ್ಟೂ ನೂತನವಾಗಿ ತೋರುತ್ತವೆ. ಒಂದೊಂದು ಚಿತ್ರವನ್ನೂ ಬಹಳ ಹೊತ್ತು ನೋಡುತ್ತಾ ಅವರೊಡನೆ ಪ್ರಕೃತಿವೈಭವ, ಸೌಂದರ್ಯ ಕಲಾ,ಕವನ, ಶಿಲ್ಪ ಇವುಗಳ ವಿಚಾರವಾಗಿ ಮಾತನಾಡಿದೆ. ಅವರ ಪ್ರತಿಯೊಂದು ಚಿತ್ರಕ್ಕೂ ನನ್ನ ಕವನಗಳಿಂದ ಒಂದೊಂದು ಉದಾಹರಣೆಯನ್ನು ತೆಗೆದು ಹೇಳಿದೆ-ಮಧ್ಯಾಹ್ನ ರೈಲು ಹತ್ತಿ  ಶಿವಮೊಗ್ಗೆಗೆ ಹೊರಟೆ. ದಾರಿಯಲ್ಲಿ Tolstoy’s Resurrection ಎಂಬ ಕಾದಂಬರಿಯನ್ನು ಓದತೊಡಗಿದೆ. ನಡುವೆ ರೈಲಿನ ಲೈನಿನಲ್ಲಿ ಕೆಲಸಮಾಡುವ ಶ್ರಮಜೀವಿಗಳನ್ನು ನೋಡಿ ಚಿಂತಾಮಗ್ನನಾದೆ. ಜಗತ್ತು ಜೀವ ಈಶ್ವರ ಜೀವನದ ಉದ್ದೇಶ ಗಮ್ಯಗಳನ್ನು ಕುರಿತು ಆಲೋಚಿಸಿದೆ. ಸಾಯಂಕಾಲ ರೈಲಿನಲ್ಲಿಯೆ ಧ್ಯಾನಮಾಡಿ(ಗಾಡಿಯಲ್ಲಿ ನಾನೊಬ್ಬನೆ ಇದ್ದೆ.) ಆಮೇಲೆ ಕತ್ತಲಾದಮೇಲೆ ಮಲಗಿದೆ.

೧೬-೪-೧೯೩೨:

ಬೆಳಿಗ್ಗೆ ಶಿವಮೊಗ್ಗಾಕ್ಕೆ ಬಂದೆ. ಮಲೆನಾಡಿನ ದೃಶ್ಯಗಳೂ ರಮಣೀಯ ಪ್ರಾತಃಕಾಲದ ಪೂರ್ವಕಾಶದ ಕಾಂಚನ ಮೇಘಗಳೂ ಜಗದೀಶ್ವರನ ಆವಿರ್ಭಾವದಂತೆ ಮೂಡಿಬಂದ ಭಗವಾನ್ ಕಿರಣಮಾಲಿಯೂ ನನ್ನಾತ್ಮವನ್ನು ಭಾವಪ್ರಪಂಚದ ಜ್ವಾಲಾ ಅಥವಾ ತೇಜೋಲೋಕಕ್ಕೆ ಕೊಂಡೊಯ್ದುವು.ಮಾನಪ್ಪ ರೈಲ್ವೆ ಸ್ಟೇಷನ್ನಿಗೆ ಬಂದಿದ್ದ. ಮೋಟಾರಿನಲ್ಲಿ ಮಂಡಿಗೆ ಬಂದೆವು.(ಅಂದು ಅದು ಸಾಧಾರಣ ವಿಷಯವಾಗಿ ತೋರುತ್ತಿದ್ದು ಗಮನಕ್ಕೇ ಬರುತ್ತಿರಲಿಲ್ಲ. ಇಂದು ಅದು ಎಷ್ಟು ಅಮೂಲ್ಯವಾಗಿ ಪವಿತ್ರವಾಗಿ ಪ್ರೇಮಪೂರ್ವಕವಾಗಿ ತೋರುತ್ತಿದೆ, ಮಾನಪ್ಪನ ಆ ಸ್ವಾಗತ ಕಾರ್ಯ? ಭಾವಿಸಿದಷ್ಟೂ ಅದರ ಬೆಲೆ ಹೆಚ್ಚುತ್ತಿದೆ!?… ಮಿತ್ರರೆಲ್ಲ ನೋಡಲು ಬಂದರು. ‘ಶ್ಮಶಾನ ಕುರುಕ್ಷೇತ್ರ’ವನ್ನು ನಾಳೆ ಓದಲು ಒಪ್ಪಿಕೊಂಡೆ… ಆಮೇಲೆ ಕವಿತೆ, ಸಂಗೀತ, ಶಿಲ್ಪ, ಚಿತ್ರಕಲೆ ಇವುಗಳ ವಿಚಾರವಾಗಿ ಮಾತಾಡಿದೆವು. ಸಾಯಂಕಾಲ ಚಂದ್ರಶೇಖರಯ್ಯ, ಚಿದಂಬರಂ, ಜೋಯಿಸ್, ಪುಟ್ಟನಂಜಪ್ಪ, ಮಾನಪ್ಪ, ಎ.ಸಿ.ನರಸಿಂಹಮೂರ್ತಿ, ಬಿ.ಕೃಷ್ಣಮೂರ್ತಿ ಎಲ್ಲರೂ ಬಹುದೂರ ಸಂಚಾರ ಹೋದೆವು. ತಿಂಗಳ ಬೆಳಕು ಹಾಲು ಹೊಯ್ದಂತಿತ್ತು. ದಾರಿಯಲ್ಲಿ ಕಲಾಸುಂದರಿ ತೇನೆಹಕ್ಕಿ ನವಿಲು ಮೊದಲಾದ ಕವನಗಳಿಂದ ಪದ್ಯಗಳನ್ನು ಹೇಳಿದೆ….

೧೭-೪-೧೯೩೨:

ಬೆಳಿಗ್ಗೆ ಆರು ಗಂಟೆಗೆ ನಾನೂ ಭೂಪಾಳಂ ಚಂದ್ರಶೇಖರಯ್ಯನವರೂ ಗುಡ್ಡೇಮೊರಡಿಗೆ ಹೋದೆವು. ಅಲ್ಲಿಯ ಶಿವಾಲಯದಲ್ಲಿ ಶಾಂತ ಸನ್ನಿವೇಶವಿದ್ದುದನ್ನು ಕಂಡು, ಸ್ವಲ್ಪ ಹೊತ್ತು ಧ್ಯಾನ ಮಾಡಿದೆ. ಆಮೇಲೆ ಬ್ರಹ್ಮ, ಮಾಯೆ. ಅನುಭೂತಿ. ಶ್ರುತಿ. ಮತಿ ಇವುಗಳನ್ನು ಕುರಿತು ಮಾತಾಡುತ್ತ ಹಿಂದಕ್ಕೆ ಬಂದೆವು….

ಸಾಯಂಕಾಲ ಕರ್ಣಾಟಕ ಸಂಘದಲ್ಲಿ ‘ಶ್ಮಶಾನ ಕುರುಕ್ಷೇತ್ರ’ ಓದಿದೆ. ಆಮೇಲೆ ಸಂಚಾರ ಹೋದೆವು….

(ಪುರಸಭಾ ಭವನದಲ್ಲಿ ಆ ವಾಚನ ಏರ್ಪಡಿಸಿದ್ದರು. ಜನ ಕಿಕ್ಕಿರಿದು ತುಂಬಿತುಳುಕಿ ಉಕ್ಕಿ ಹರಿದಿತ್ತು. ಕೊನೆಯ ರುದ್ರ-ಕೃಷ್ಣರು ಸಂಧಿಸುವ ದೃಶ್ಯವನ್ನು ವಾಚನ ಮಾಡಿ ಮುಗಿಸಿದೆ. ಅಂತಹ ಜನಸಂದಣಿ ಇದ್ದರೂ ಎಲ್ಲರೂ ಸ್ತಂಭಿತರಾದಂತೆ ನಿಃಶಬ್ದತೆ ಘನಿಸಿತ್ತು. ಮುಂದೆ ಕಂಸದಲ್ಲಿರುವ ರಂಗನಿರ್ದೇಶನವನ್ನು ಓದತೊಡಿಗಿದೆ. ‘ಇದ್ದಕ್ಕಿದ್ದ ಹಾಗೆ ದೃಶ್ಯ ಮಾಯವಾಗಿ ಕವಿದಿದ್ದ ಕತ್ತಲೆ ಇನ್ನೂ ದಟ್ಟವಾಗಿ ಫಕ್ಕನೆ ಅತ್ಯಂತ ಕಾಂತಿಯುಕ್ತವಾಗುತ್ತದೆ’ಎಂಬ ಸಾಲುಗಳನ್ನು ಓದುತ್ತಿದ್ದಂತೆ ವಿದ್ಯುದ್ದೀಪಗಳೆಲ್ಲ ಆರಿಹೋದುವು. ನೆರೆದವರೆಲ್ಲ ‘ದೀಪಹೋಯ್ತು’‘ದೀಪ ಹೋಯ್ತು’ ಎಂದು ದಿಗ್ ಭ್ರಾಂತರಾಗಿ ಎದ್ದು ನಿಲ್ಲುವಷ್ಟರಲ್ಲಿ ಮತ್ತೆ ತಟಕ್ಕನೆ ದೀಪ ಬಂತು! ಸರಿ ನಾನು ಮುಂದಿನ ಆರೇಳು ಅತ್ಯಂತ ಧ್ವನಿಪೂರ್ಣವೂ ಗಂಭೀರ ಭವ್ಯವೂ ಆಗಿರುವ ಸಾಲುಗಳನ್ನು ಓದಿ ಪೂರೈಸಿದೆ. ಅದೇ ರೀತಿ, ಒಮ್ಮೆ ಮೈಸೂರಿನಲ್ಲಿ ಮರಿಮಲ್ಲಪ್ಪ ಹೈಸ್ಕೂಲಿನ ದೊಡ್ಡ ಹಾಲಿನಲ್ಲಿ ಮನಶ್ಯಾಸ್ತ್ರದ ಅಧ್ಯಾಪಕರಾಗಿದ್ದ ಎನ್.ಎಸ್. ನಾರಾಯಣಶಾಸ್ತ್ರಿಗಳು ಏರ್ಪಡಿಸಿದ್ದ‘ಶ್ಮಶಾನ ಕುರುಕ್ಷೇತ್ರ’ ವಾಚನ ಸಮಾರಂಭದಲ್ಲಿಯೂ ವಾಚನ ಮುಗಿಸಿ ಅದೇ ರಂಗನಿರ್ದೆಶನದ ಪಂಕ್ತಿಗಳನ್ನು ಓದುತ್ತಿದ್ದಾಗಲೂ ವಿದ್ಯುದ್ದೀಪಗಳೆಲ್ಲ ಆರಿಹೋಗಿ ಮತ್ತೆ ಬೆಳಗಿದ್ದುವು! ಹೀಗಾದದ್ದು ಶಕುನಪೂರ್ಣವಾಗಿತ್ತು. ಯಾರಾದರೂ ಬೇಕೆಂದೇ ಹಾಗೆ ದೀಪಗಳನ್ನು ಆರಿಸಿ ಮತ್ತೆ ಹೊತ್ತಿಸಿದಂತಿತ್ತು. ಆದರೆ ಯಾರನ್ನು ವಿಚಾರಿಸಿದರೂ ಅದು ಕಾಕತಾಳೀಯವಾಗಿ ನಡೆದ ಆಕಸ್ಮಿಕ ಘಟನೆಯೆಂದೇ ಎಲ್ಲರೂ ಭಾವಿಸಿದ್ದರು. ಇಂದಿಗೂ ನನಗೆ ಸಂದೇಹ: ಯಾರಾದರೂ ಪೂರ್ವಭಾವಿಯಾದ ತಂತ್ರದಿಂದ ಸಂಭವಿಸಿದ್ದೋ ಅಥವಾ ನಿಜವಾಗಿ ಕಾಕತಾಳೀಯವಾಗಿ ಸಂಭವಿಸಿದ ಆಕಸ್ಮಿಕವೋ ಎಂದು? ಹೇಗೇ ಸಂಭವಿಸಿರಲಿ, ಸನ್ನಿವೇಶಕ್ಕೇನೋ ಒಂದು ಭವ್ಯತೆಯನ್ನೊದಗಿಸಿತ್ತು!)

ರಾತ್ರಿ ಮಂಜಪ್ಪಗೌಡರೊಡನೆ ವೈರಾಗ್ಯ, ಸಾಧನೆ, ಸಿದ್ದಿ, ಶ್ರೀರಾಮಕೃಷ್ಣ, ವಿವೇಕಾನಂದ, ಟಾಲ್ ಸ್ಟಾಯ್ ಮೊದಲಾದ ವಿಚಾರಗಳನ್ನು ಕುರಿತು ಮಾತನಾಡಿ, ಸುಮಾರು ಹನ್ನೆರಡು ಗಂಟೆಗೆ ಮಲಗಿದೆ.೧೮-೪-೧೯೩೨:

ಬೆಳಿಗ್ಗೆ ಚಂದ್ರಶೇಖರಯ್ಯ ಅವರೊಡನೆ  ಸತ್ಯಗ್ರಹ, ಅಹಿಂಸೆ, ಭರತಖಂಡದ ಪುನರುದ್ಧಾರ ಮತ್ತು ಪುನರುಜ್ಜೀವನಗಳ ವಿಷಯ ಮಾತಾಡಿದೆ. ಸಾಹಸಗಳಲ್ಲಿ ಅಹಿಂಸಾಮಯ ಸತ್ಯಾಗ್ರಹವು ಸರ್ವೋತ್ಕೃಷ್ಟವಾದುದು. ಹಿಂಸೆಯು ಸಾಧಾರಣ ಮಾನವನನ್ನು ಧ್ಯೇಯದಿಂದ ಪತನವಾಗುವಂತೆ ಮಾಡಿ ಅಧೋಗತಿಗೊಯ್ಯುತ್ತದೆ. ಬೆಳಕು ನಂದಿಹೋಗುತ್ತದೆ. ಶ್ರೀಕೃಷ್ಣ ಮುಂತಾದ ಮಹದ್ ವ್ಯಕ್ತಿಗಳೇ ಹಿಂಸೆ ಅಹಿಂಸೆಗಳನ್ನು ಮೀರಿ ಕೆಲಸಮಾಡಬಲ್ಲರು.

೨೬-೪-೧೯೩೨:

ಉಷಃಕಾಲ ಐದು ಗಂಟೆಗೆ ಇಂ‌ಗ್ಲಾದಿಯಿಂದ ಹೊರಟು ಎ.ಎನ್.ಮೂರ್ತಿರಾಯರು, ಬಿ.ಕೃಷ್ಣಮೂರ್ತಿ, ಡಿ.ಆರ್.ವೆಂ, ಡಿ.ಎನ್.ಹಿ, ದೇ.ನಾ.ಶ್ರೀ, ನಾನು, ಮಾನಪ್ಪ ಎಲ್ಲರೂ ‘ನವಿಲು ಕಲ್ಲಿಗೆ’ಹೋದೆವು. ದೃಶ್ಯವು ದಿವ್ಯವು ಭವ್ಯವೂ ಸುಂದರವೂ ಆಗಿತ್ತು. ಪರ್ವತಾರಣ್ಯಗಳ ತರಂಗ ಮಾಲೆಗಳೂ ಮೇಘ ವಿರಚಿತ ಯಕ್ಷಸರಸ್ಸುಗಳೂ ಸೂರ್ಯೋದಯ ಸಮಯದಲ್ಲಿ ಅತೀವ ರಮಣೀಯವಾಗಿದ್ದವು. ಪರ್ವತಾರಣ್ಯ ವಿರಚಿತ ದಿಗಂತದಿಮದ ಭಗವಾನ್ ಮರೀಚಿ ಮಾಲಿಯು ಒಯ್ಯೋಯ್ಯನೆ ಮೈದೋರುವ ಪ್ರಥಮದರ್ಶನವಂತೂ ರೋಮಾಂಚನಗೊಳಿಸಿತ್ತು. ಆ ದಿವ್ಯಾವತರಣದ ದೃಶ್ಯದ ಆಸ್ವಾದನೆಯಲ್ಲಿ ಬಹಳ ಹೊತ್ತು ಮಗ್ನವಾಗಿದ್ದು ತರುವಾಯ ಅಲ್ಲಿಂದ ಹೊರಟು‘ಸಿಬ್ಬಲುಗುಡ್ಡೆ’ಗೆ ಹೋದೆವು. ನಿಬಿಡಾರಣ್ಯಗಳ ದಾರಿಯಲ್ಲದ ದಾರಿಯಲ್ಲಿ ದಾರಿ ಮಾಡಿಕೊಂಡು. ದಾರಿಯಲ್ಲಿ ಮೂರ್ತಿರಾಯರಿಗೆ ಎಲ್ಲ ದೃಶ್ಯಗಳನ್ನು ಕುರಿತು ಪರಿಚಯ ಹೇಳುತ್ತಾ ಹೋದೆವು. ‘ಸಿಬ್ಬಲುಗುಡ್ಡೆ’ಯಲ್ಲಿ ಮೀನುಗಳಿಗೆ ಮಂಡಕ್ಕಿ ಅಕ್ಕಿ ಹಾಕಿದೆವು. ಅವುಗಳೊಡನೆ ನಮ್ಮ ಉತ್ಸಾಹವು ಮೀರಿತ್ತು. ಅಲ್ಲಿಂದ ಹೊಳೆಯ ನಡುವಣ ಬಂಡೆಗಳೆಡೆಗೆ ಹೋಗಿ ಒಂದು ಗಂಟೆಯ ಹೊತ್ತು ಜಲಕ್ರೀಡೋನ್ಮತ್ತರಾಗಿ ಮಿಂದೆವು. ತುಂಗೆಯು ವನಮಾಲಿನಿ: ಸೈಕತರಂಗ ವಿಲಾಸಿನಿ. ಸುಮಾರು ಹತ್ತು ಗಂಟೆಗೆ ಹಿಂದೆ ಬಂದು ಸುಖಭೋಜನ ಮಾಡಿ ಹಗಲು ನಿದ್ದೆ ಮಲಗಿದೆವು. ಅಪರಾಹ್ನ ಕಾಫಿಯಾದ ಅನಂತರ ಬೇಟೆಗೆ ಹೋದೆವು. ಮುಂಗಾರು ಮಳೆಯಲ್ಲಿ ಚೆನ್ನಾಗಿ ನೆನೆದೆವು. ಸಾಯಂಕಾಲ ಎಲ್ಲರೂ ಸೇರಿ‘ಕುಪ್ಪಳಿ’ಬಂದೆವು.

(ದಿನಚರಿಯ ಈ ಒಕ್ಕಣೆ ಎಷ್ಟು ಹ್ರಸ್ವ! ಎಷ್ಟು ನೀರಸ! ನಡೆದ ಆ ವಾಸ್ತವದ ಸ್ವಾರಸ್ಯದ ಮುಂದೆ?೧೫-೭-೧೯೭೪)

೨೭-೪-೧೯೩೨:

ಬೆಳಿಗ್ಗೆ ‘ಕವಿಶೈಲ’ದ ಮಾರ್ಗವಾಗಿ ಅರಣ್ಯಗಳಲ್ಲಿ ಸಂಚರಿಸಿ, ದಾರಿಯಲ್ಲಿ ಒಂದು ತರುಕುಂಜದಲ್ಲಿ ಕುಳಿತೆವು. ನರಸಿಂಹಮೂರ್ತಿಯೂ ಮೂರ್ತಿರಾಯರೂ ಭಾವಗೀತೆಗಳನ್ನು ಹಾಡಿದರು. ಸಾಯಂಕಾಲ ಇಂಗ್ಲಾದಿಗೆ ಹೋಗುತ್ತೇವೆ.

೯-೫-೧೯೩೨:

Ruskin’s Unto This Last ಮತ್ತು Tolstoy’s Essays and letters ಓದುತ್ತಿದ್ದೇನೆ.

೨೯-೫-೧೯೩೨:

‘ಭಕ್ತಿಮಾರ್ಗ’ದ ಭಾಷಾಂತರವನ್ನು ತಿದ್ದಿದೆ.

೧-೬-೧೯೩೨:

‘ಮಲೆನಾಡು ಒಕ್ಕಲಿಗ ಯುವಕ ಸಂಘ’ದ ಪ್ರಾರಂಭೋತ್ಸವಕ್ಕಾಗಿ ಕಾಲುನಡಿಗೆಯಲ್ಲಿಯೆ ಬೆಟ್ಟಗುಡ್ಡ ಕಾಡಿನ ಒಳದಾರಿಯಲ್ಲಿ .ಬಯಲುಗಳನ್ನೂ ದಾಟಿ, ಹಾದಿಯಲ್ಲಿ ಹತ್ತಾರು ಅನುಭವದ ಕತೆಗಳನ್ನು ಆಲಾಪಿಸುತ್ತಾ ಬೆಳಿಗ್ಗೆ ಒಂಬತ್ತುವರೆ ಗಂಟೆಗೆ ಹಿರೇತೋಟಕ್ಕೆ ತಲುಪಿದೆವು. ದಾಸೇಗೌಡರು. ಗುರಪ್ಪಗೌಡರು ನಮ್ಮನ್ನೆಲ್ಲ ಸ್ವಾಗತಿಸಿದರು.ಅಂದು ಸಾಯಂಕಾಲ ಅವರ ಮನೆಯ ಮೇಲುಗಡೆ ಬೆಟ್ಟದಲ್ಲಿ ಒಂದು ಪೀಠಸ್ಥಾನವನ್ನು(ಕುಪ್ಪಳಿಯ ಕವಿಶೈಲದಂತೆ) ಕಂಡುಹಿಡಿದು ಅಲ್ಲಿ ಕುಳಿತು ಬಹಳ ಹೊತ್ತು ಹಾಡಿದೆವು.

೨-೬-೧೯೩೨:

‘ಮಲೆನಾಡು ಒಕ್ಕಲಿಗ ಯುವಕರ ಸಂಘ’ದ ಕಾರ್ಯಕಲಾಪಗಳು ಸುಮಾರು ಮಧ್ಯಾಹ್ನ ಒಂದು ಗಂಟೆಗೆ ಮಾಳೂರು ಪ್ರವಾಸಿ ಮಂದಿರದಲ್ಲಿ ಪ್ರಾರಂಭವಾದುವು.ನಾವು ಹಾರೈಸಿದ್ದುದಕ್ಕಿಂತಲೂ ಹೆಚ್ಚಾಗಿ ಜನರು ಸಂದಣಿಸಿದ್ದರು. ಮII ಹೊಸಮನೆ ಮಂಜಪ್ಪಗೌಡರನ್ನು ಅಧ್ಯಕ್ಷರನ್ನಾಗಿ ಆರಿಸಿ, ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ಮೊದಲು ನಾನು ಸಂಘದ ಉದ್ದೇಶ ರೀತಿನೀತಿಗಳು, ವಿದ್ಯಾಪ್ರಚಾರದ ವಿಚಾರ ಮಾತನಾಡಿ ಕಡೆಗೆ ‘ಗುರು’ವಿನ ವಿಚಾರ, ಸ್ವದೇಶಿಯ ವಿಚಾರ ಮಾತನಾಡಿದೆ. ಸಮಾಜ ಸುಧಾರಣೆಯ ವಿಚಾರ ಇತರರೂ ಮಾತನಾಡಿದರು. ಸುಮಾರು ಸಂಜೆ ಐದೂವರೆ ಗಂಟೆಗೆ ಕಾರ್ಯಕಲಾಪ ಮುಗಿಯಿತು. ರಾತ್ರಿ ಅವರ ಮನೆಯಲ್ಲಿ ಕೆಲವು ಪದ್ಯಗಳನ್ನು ನೆನಪಿನ ಮೇಲೆ ಹಾಡಿದೆನು.

೩-೬-೧೯೩೨: ಬೆಳಿಗ್ಗೆ ಹೊರಟು ಹತ್ತೂವರೆಗೆ ಇಂಗ್ಲಾದಿಗೆ ಹಿಂತಿರುಗಿದೆವು.

‘ಮೇಲಿನ ಜೂನ್ ಒಂದು, ಎರಡು, ಮೂರನೆಯ ತಾರೀಖುಗಳಲ್ಲಿ ನಡೆದ  ಸಂಗತಿಯನ್ನು ನನ್ನ ದಿನಚರಿ ಅತಿಸಾಮಾನ್ಯವಾದ ದೈನಂದಿನ ವ್ಯಾಪಾರಗಳಲ್ಲಿ ಯಃಕಶ್ಚಿತವಾದ ಒಂದು ಘಟನೆ ಎಂಬ ಭಾವ ಬರುವಂತೆ ಚಿತ್ರಿಸಿದೆ. ಆಗ ಹಾಗೆಯೆ ತೋರಿತ್ತು ಎನ್ನಬಹುದು. ಆದರೆ ಅದು ನನ್ನ ಜೀವಮಾನದ ಸಾರ್ವಜನಿಕ ಸೇವಾ ಭೂಮಿಕೆಯಲ್ಲಿ ಒಂದು ಪ್ರಧಾನ ಸ್ಥಾನ ಪಡೆಯುವ ಅರ್ಹತೆಯುಳ್ಳದ್ದಾಗಿದೆ. ಸಾಧಾರಣವಾಗಿ, ನನ್ನ ಕವಿಬದುಕಿನ ಸಾಹಿತ್ಯಭೂಮಿಕೆಯನ್ನೆ ನನ್ನ ಜೀವನಮೌಲ್ಯದ ಸರ್ವಸ್ವವೆಂಬಂತೆ ನನ್ನ ಜೀವನಚರಿತ್ರೆ ಬರೆದವರು ಮತ್ತು ನನ್ನ ಸಾಹಿತ್ಯದ ವಿಮರ್ಶೆ ಮಾಡುವವರು ತಿಳಿದು ಬರೆದಿದ್ದಾರೆ ಮತ್ತು ಬರೆಯುತ್ತಿದ್ದಾರೆ. ನನ್ನ ಸಮಾಜ ಸುಧಾರಣಾ ಪಕ್ಷವನ್ನಾಗಲಿ, ನನ್ನ ವಿಚಾರವಾದೀ ಮನೋಧರ್ಮವನ್ನಾಗಲಿ ಅವರು ಅಷ್ಟೇನೂ ಗಂಭೀರವಾಗಿ ಗಣನೆಗೆ ತಂದುಕೊಳ್ಳುತ್ತಿಲ್ಲ. ನನ್ನ ಕವಿಪ್ರತಿಭೆ ತನ್ನ ರಸಧರ್ಮಕ್ಕೆ ಒಂದಿನಿತೂ ಭಂಗ ಬರದ ರೀತಿಯಲ್ಲಿ ವೈಚಾರಿಕ ಬುದ್ಧಿಯನ್ನೂ ವೈಜ್ಞಾನಿಕ ದೃಷ್ಟಿಯನ್ನೂ ಸಮಪ್ರಮಾಣದಲ್ಲಿ ಅಳವಡಿಸಿಕೊಂಡಿರುವುದನ್ನು ಸಹೃದಯರು ಗುರುತಿಸಲಾಗದಿದ್ದರೆ ನನ್ನನ್ನು ಆಂಶಿಕವಾಗಿ ಮಾತ್ರ ಪರಿಶೀಲಿಸಿದಂತಾಗುತ್ತದೆ; ನನ್ನ ಪೂರ್ಣತ್ವಕ್ಕೆ ಚ್ಯುತಿ ಬರುತ್ತದೆ.

ಅಂದು ಪ್ರಾರಂಭವಾದ ‘ಮಲೆನಾಡು ಒಕ್ಕಲಿಗರ ಯುವಕರ ಸಂಘ’ಒಳಹೊಕ್ಕು ನೋಡಿದರೆ ಅದೊಂದು ಕ್ರಾಂತಿಸಂಸ್ಥೆಯೆ ಆಗಿತ್ತು.‘ಒಕ್ಕಲಿಗರ’ಎಂಬ ವಿಶೇಷನ ಅಂದಿನ ಮಲೆನಾಡಿನ ದುಃಸ್ಥಿತಿಯ ಪರಿಸ್ಥಿತಿಗೆ ಅನಿವಾರ್ಯವಾಗಿತ್ತು. ಅಲ್ಲಿಯ ಒಕ್ಕಲಿಗರು ಇತರ ಶೂದ್ರವರ್ಗದವರಂತೆ ಬ್ರಾಹ್ಮಣರೊಡ್ಡಿ ಮತಾಚಾರದ ಮೌಢ್ಯ ಸಂಕುಲಗಳ ಬೋನಿನೊಳಗೆ ಸಿಕ್ಕಿಬಿದ್ದ ಇಲಿಗಳಾಗಿದ್ದರು. ಆ ಇಲಿಗಳನ್ನು ಬೋನಿನಿಂದ ಬಿಡಿಸಲು ಕ್ರೈಸ್ತಪಾದ್ರಿಗಳು ತಮ್ಮ ರೀತಿಯ ಪ್ರಯತ್ನಗಳನ್ನು ಮಾಡಿ, ಆ ಬೋನಿನಿಂದ ಹೊರಬಂದವುಗಳನ್ನು ಹಿಡಿದು ಹಾಕಿಕೊಳ್ಳಲು ತಮ್ಮದೇ ಆಗಿರುವ ಬೇರೆ ರೀತಿಯ ಬೋನುಗಳನ್ನು ಒಡ್ಡಿಕೊಂಡಿದ್ದರು. ಶೂದ್ರರು ಬ್ರಾಹ್ಮಣ್ಯ ಮೌಢ್ಯದ ಬೋನಿನಿಂದ ನೆಗೆದರೆ ಕ್ರೈಸ್ತ ಮೌಢ್ಯದ ಬೋನಿಗೆ ಬೀಳಬೇಕಾಗಿತ್ತು. ಎರಡೂ ಪುರೋಹಿತಶಾಹಿಗಳೆ! ಎರಡೂ ಇಲಿಗಳನ್ನಾಕರ್ಷಿಸಲು ಇಡುತ್ತಿದ್ದ ತಿಂಡಿಗಳು ರೂಪದಲ್ಲಿ ಬೇರೆ ಬೇರೆಯಾಗಿದ್ದರೂ ಸ್ವರೂಪದಲ್ಲಿ ಒಂದೇ ತರಹದ್ದಾಗಿದ್ದುವು: ದೇವರು, ಧರ್ಮ,ಪಾಪ, ಪುಣ್ಯ, ಸ್ವರ್ಗ, ನರಕ ಇತ್ಯಾದಿ ಆಧ್ಯಾತ್ಮಿಕ ವೇಷದ ಮತನಾಯಕ ಗರುಡ ಪುರಾಣದಂತಹ ಸರಕುಗಳು!

ನಮ್ಮವರನ್ನು ಈ ಹಳೆಯ ಮತಮೌಢ್ಯ ಸಂಕುಲಗಳಿಂದ ಪಾರುಮಾಡಿ, ಅವರಿಗೆ ವೈಚಾರಿಕತೆಯನ್ನೂ ವೈಜ್ಞಾನಿಕತೆಯನ್ನೂ ನೀಡಿ, ನಿಜವಾದ, ಉಪನಿಷತ್ ಪ್ರಣೀತವಾದ ವೇದಾಂತದ ಅಧ್ಯಾತ್ಮಶ್ರೀಯೆಡೆಗೆ ಅವರನ್ನು ಕರೆದೊಯ್ಯಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಅವರಿಗೆ ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಪರಿಚಯ ಮಾಡಿಕೊಟ್ಟು ಅವರ ಚೇತನವನ್ನು ಮೇಲೆತ್ತಿದರೆ ಆ ಕೆಲಸ ತನ್ನಷ್ಟಕ್ಕೆ ತಾನೆ ಕೈಗೂಡುತ್ತದೆ ವಾರ್ಷಿಕ ಅಧಿವೇಶನ ಒಂದರಲ್ಲಿ‘ಮಲೆನಾಡು ಯುವಕರಿಗೆ’ ಎಂಬ ಭಾಷಣದಲ್ಲಿ(ಅದು ‘ನಿರಂಕುಶಮತಿಗಳಾಗಿ’ ಎಂಬ ಪುಸ್ತಕದಲ್ಲಿ ಅಚ್ಚಾಗಿದೆ.) ಲೌಕಿಕವಾದ ಅನೇಕ ವಿಷಯಗಳಲ್ಲಿ ಹಿತವಾದ ನೀಡಿ, ಕೊನೆಗೆ ಶ್ರೀರಾಮಕೃಷ್ಣ ಪರಮಹಂಸರ ಉಪದೇಶಗಳಲ್ಲಿ ಸರ್ವರಿಗೂ ಸರ್ವಸಮ್ಮತವಾದ ಸಂಪೂರ್ಣ ತೃಪ್ತಿಯ ಆತ್ಮಶ್ರೀ ಲಭಿಸುತ್ತದೆ ಎಂದು ಹೇಳಿ, ಉಪನಿಷತ್ತಿನ ಮಹಾ ಮಂತ್ರಗಳಿಂದ ಭಾಷಣವನ್ನು ಕೊನೆಗಾಣಿಸಿದ್ದೆ.

ಜಕ್ಕಿಣಿ, ಪಂಜ್ರೊಳ್ಳಿ, ಭೂತ, ದೆವ್ವ ಮೊದಲಾದುವುಗಳಿಗೆ ಬಲಿಕೊಟ್ಟು ಪೂಜೆ ಮಾಡುವುದರ ಬದಲು ಹೆಚ್ಚು ತಾತ್ವಿಕವೂ ನಾಗರಿಕವೂ ಆಗಿರುವ ದೇವಭಾವನೆಗಳನ್ನು ಆಶ್ರಯಿಸಲು ಕರೆ ಕೊಟ್ಟಿದೆ. ವರ್ಷವರ್ಷವೂ ಬಂದು ಕಾಣಿಕೆ ವಸೂಲು ಮಾಡುವ ಗುರುಗಳನ್ನು ತಿರಸ್ಕರಿಸಿ, ಆ ಕಾಣಿಕೆಯನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಟ್ಟುತ್ತಿರುವ ವಿದ್ಯಾರ್ಥಿನಿಲಯದ ನಿಧಿಗೆ ಕೊಡುವಂತೆ ಸಲಹೆಯಿತ್ತಿದ್ದೆ. ಪ್ರತಿ ಹಬ್ಬದಲ್ಲಿಯೂ ಕಾಣಿಕೆ ಡಬ್ಬಿಗೆ ಹಾಕುತ್ತಿದ್ದ ದುಡ್ಡನ್ನು ತಿರುಪತಿ ಧರ್ಮಸ್ಥಳಗಳಿಗೆ ಕಳಿಸುವುದನ್ನು ನಿಲ್ಲಿಸಿ ವಿದ್ಯಾಸಂಸ್ಥೆಗೆ  ಆ ಧನವನ್ನೆಲ್ಲ ನೀಡಿದರೆ ಭಗವತಿ ಸರಸ್ವತಿ ಸಲ್ಲಿಸಿದಂತಾಗುತ್ತದೆ ಎಂದು ಬೋಧಿಸಿದ್ದೆ. ಹಾಗೆ ಮಾಡುವುದರಿಂದ ನಿಮಗೆ ಏನೂ ಅಮಂಗಳ ಅಪಾಯ ಆಗುವುದಿಲ್ಲ ಎಂಬುದನ್ನು ತೋರಿಸಲು ನಮ್ಮ ಮನೆಯ ಕಾಣಿಕೆ ದುಡ್ಡನ್ನೆಲ್ಲ ವಿದ್ಯಾನಿಧಿಗೆ ಅರ್ಪಿಸಿ ನಿದರ್ಶನವಾಗಿದ್ದೆ……’

೧೦-೬-೧೯೩೨:

ಕುಪ್ಪಳಿಯಿಂದ ಇಂಗ್ಲಾದಿಗೆ ಬಂದಿದ್ದೇನೆ, ಮೈಸೂರಿಗೆ ಹೊರಟವನು. ಶ್ರೀಗೌಡರಿಗೆ ಬಹಲ ಕಾಯಿಲೆಯಂತೆ ಡಿ.ಆರ್.ವಿ.ಅವರನ್ನು ನೋಡಲು ಶಿವಮೊಗ್ಗಾಕ್ಕೆ ಹೋಗಿದ್ದಾನೆ….

೬-೭-೧೯೩೨:

ಕೆಲವು ದಿನಗಳಿಂದ ಕಡಲು ಕ್ಷುಬ್ದವಾಗಿದೆ. ರಾಗದಲೆಗಳು ಅಪ್ಪಳಿಸುತ್ತಿವೆ. ಮನಸ್ಸು ಅವಿವೇಕವಾದರೆ ತಿನಿಸೇನು ಮಾಡೀತು?-ಸಿ.ಎಸ್.ಗುಂಡೂರಾವ್ ಗೆ ರೂ.೫೦ ಕೊಟ್ಟೆ. ಸಾಯಂಕಾಲ ಟಿ.ಎಸ್.ವೆಂಕಣ್ಣಯ್ಯನವರನ್ನು ಹೋಗಿ ಕಂಡೆ. ಗೋಕಾಕರ ವಿಮರ್ಶೆಯ ವಿಚಾತ ಮಾತಾಡಿದೆವು.

೧೮-೭-೧೯೩೨:

ಹೇ ಗುರುದೇವ, ನೀನು ಸರ್ವಶಕ್ತಿ ಪೂರ್ಣನಾಗಿರುವೆ. ನನ್ನ ಹೃದಯದ ದುರ್ಬಲತೆಯನು ದೂರಮಾಡಿ ಅದರ ಶೂನ್ಯವನು ಪೂರ್ಣಗೈ. ಸಲಸಲವೂ ನವಪ್ರತಿಜ್ಞೆಯಿಂದ ನವ ಉತ್ಸಾಹದಿಂದ ನವ ಆಶೆಯಿಂದ ನನ್ನಾತ್ಮವು ರೆಕ್ಕೆಬಿಚ್ಚಿ ಹಾರುತ್ತಿರುವುದು. ಸ್ವಲ್ಪದೂರ ಹೋಗುವುದರಲ್ಲಿಯೆ ಭೂಸ್ಪರ್ಶ ಮಾಡುವುದು. ಬಿಂಕದಲಿ ಹೆಡೆಯೆತ್ತಿದ ನನಗೆ ನಮ್ರತೆಯ ನೀಡಲೆಂದೇ ನೀನು ಅಪಜಯದ ಮೇಲೆ ಅಪಜಯವ ಹೇರುತ್ತಿರುವುದು? ಎನಿತು ದಿನಗಳಿಂದ ಹೋರಾಡುತ್ತಿದ್ದೇನೆ. ಇಂದು ಮುಗಿಸುವೆ, ನಾಳೆ ಮುಗಿಸುವೆ, ಇಂದು ಜಯಿಸುವೆ, ನಾಳೆ ಜಯಿಸುವೆ ಎಂದು ಕಾಲ ಹರಿದುಹೋಗುತ್ತಿದೆ. ಆದರೂ ಹತಾಶನಾಗೆನು. ಅನಂತ ಪ್ರಯತ್ನವು ನನ್ನದಾಗಿದೆ. ಯತ್ನಶೀಲವೇ ಮಹಾಸಾಧನೆ. ನಿನ್ನ ಚರಣಧೂಳಿಯನ್ನು ಶಿರಸಾ ವಹಿಸಿ ಮುಂದುವರಿಯುತ್ತೇನೆ, ಮುಂದುವರಿಯುತ್ತೇನೆ. ನನ್ನ ದುಃಖದ ಹೊರೆಯು ತಲೆಯ ಮೇಲಿರಲಿ; ನನ್ನ ನಾಚಿಗೆಯು ಬೆನ್ನಿನ ಮೇಲಿರಲಿ;ನಿನ್ನ ಕೃಪೆಯಲಿ ನಂಬುಗೆಯು ನನ್ನೆದೆಯೊಳಿರಲಿ!

೧೯-೭-೧೯೩೨:

ಬರೆಯಲಿರುವ ಪದ್ಯಗಳು:ಕೋಗಿಲೆಯ ಕನಸು,ಷೋಡಶಿ, ಶಿಶು, ವಡ್ಸ್‌ವರ್ತ್, ವೈಶಾಖ, ಸೂರ್ಯ, ಗುರುದೇವ,

೨೦-೭-೧೯೩೨: ಎಸ್.ನಂಜಯ್ಯ ರೂ.೧-೦೦.

೨೫-೭-೧೯೩೨:

ಸಾಯಂಕಾಲ ಆರು ಗಂಟೆಯಿಂದ ಎಂಟು ಗಂಟೆಯವರೆಗೆ ಯೂನಿವರ್ಸಿಟಿ ಲೈಬ್ರರಿಯಲ್ಲಿ ಕೆಲವು ಹೊಸ ಕವನಗಳನ್ನು ಓದಿದೆ. ಟಿ.ಎಸ್.ವೆಂಕಣ್ಣಯ್ಯನವರು, ಟಿ.ಎನ್.ಶ್ರೀಕಂಠಯ್ಯ, ಎನ್.ನರಸಿಂಹಮೂರ್ತಿಗಳು, ಡಿ.ಎಲ್.ನರಸಿಂಹಾಚಾರ್, ಎನ್.ಎಸ್. ನಾರಾಯಣಶಾಸ್ತ್ರಿ, ಎ.ಸೀತಾರಾಂ ಎಲ್ಲ ಇದ್ದರು.

೧೬-೮-೧೯೩೨:

ಬೆಳಿಗ್ಗೆ ಎದ್ದು ಕುಕ್ಕನಹಳ್ಳಿಯ ಕೆರೆಯ ಸುತ್ತ ಸಂಚಾತ ಹೋಗಿಬಂದೆ. ತರುವಾಯ ರಾಧಾಕೃಷ್ಣರ An Idealistic View of Life ಓದಿದೆ. ಹರಿಶ್ಚಂದ್ರ ಕಾವ್ಯ ವಿಮರ್ಶೆಯನ್ನೂ ಸ್ವಲ್ಪ ಬರೆದೆ. ಸಾಯಂಕಾಳ ಶ್ರೀನಿವಾಸ, ವಿಜಯದೇವ, ವೆಂಕಟಪ್ಪ, ರಾಮಪ್ಪ, ಶ್ರೀಕಂಠ ಇವರನ್ನು ಕರೆದುಕೊಂಡು ಕಿಟ್ಟಯ್ಯನ ಹೊಲಕ್ಕೆ ಹೋದೆ, ಅದೃಷ್ಟವಶಾತ್ ಅವನೂ ಸಿಕ್ಕಿದ. ಹುಡುಗರಿಗೆ ನಾನು ಅವನ ವಿಚಾರವಾಗಿ ಬರೆದ ಕವನದ ವಿಚಾರ ಹೇಳಿದೆ. ಅವನೂ ಬಹಳ ಕಾಲ ತನ್ನ ಸುಖ ದುಃಖಗಳನ್ನು ಕುರಿತು ಮಾತನಾಡಿ ಮನೆಗೆ ಹೋದನು. ದಾರಿಯಲ್ಲಿ ಕವಿತೆಗಳನ್ನು ಹಾಡುತ್ತಾ ಆಶ್ರಮಕ್ಕೆ ಹಿಂತಿರುಗಿದೆವು.(ಕಾಯುಂಡೆ ಪ್ರಸಾದ ಸೊನ್ನೆ!)

(ಮೇಲಿನ ದಿನಚರಿಯಲ್ಲಿ ಬರುವ ಹುಡುಗರ ಹೆಸರುಗಳು ಆಗತಾನೆ ಶ್ರೀರಾಮಕೃಷ್ಣ ಆಶ್ರಮ ಪ್ರಾರಂಭಿಸಿದ್ದ ವಿದ್ಯಾರ್ಥಿನಿಲಯಕ್ಕೆ ಮಲೆನಾಡಿನಿಂದ ಬಂದಿದ್ದ ನಮ್ಮ ನೆಂಟರಿಷ್ಟರ ಮಕ್ಕಳವು.)

೨೮-೮-೧೯೩೨:

ಯೂನಿವರ್ಸಿಟಿ ಯೂನಿಯನ್ ಪರವಾಗಿ ಕಾಲೇಜಿನ ಉಪನ್ಯಾಸ ಮಂದಿರದಲ್ಲಿ ‘ರಕ್ತಾಕ್ಷಿ’ನಾಟಕವನ್ನು ಎರಡೂವರೆ ಗಂಟೆಯ ಕಾಲ ಓದಿದೆ. ಮಂದಿರವು ಕಿಕ್ಕಿರಿದು ತುಂಬಿ ತುಳುಕಿತ್ತು. ಶ್ರೀಯುತ ಶಂಕರನಾರಾಯಣರಾಯರು(ಆಗ ಮೈಸೂರಿನ ನ್ಯಾಯಾಧೀಶರಾಗಿದ್ದರು.) ತಮ್ಮ ಮೋಟಾರಿನಲ್ಲಿ ನನ್ನನ್ನು ಆಶ್ರಮಕ್ಕೆ ತಂದು ಬಿಟ್ಟರು.

೧೦-೮-೧೯೩೨:

ನನ್ನ ಮನಸ್ಸು ಗುರುದೇವನ ಕೃಪೆಯಿಂದ ಸ್ತಿಮಿತವಾಗುವಂತೆ ತೋರುತ್ತಿದೆ.  ಜ್ಯೋತಿಯ ದರ್ಶನವೂ ಸಮೀಪವಾಗುತ್ತಿದೆ ಎಂಬ ಹಾರೈಕೆಯಿದೆ. ಎಲ್ಲವೂ ಭುವನ ಸಮಸ್ತವೂ ಅರ್ಥಪೂರ್ಣವಾಗುತ್ತಿದೆ. ಆವೇದ್ಯವು ಅನುಭವವೇದ್ಯವಾಗುತ್ತಿದೆ. ಹೇ ಗುರುದೇವ, ನಿನ್ನ ಕೃಪೆಯಿರಲಿ. ಓಂ ಶಾಂತಿಃ ಶಾಂತಿಃ ಶಾಂತಿಃ!

ಬೆಳಿಗ್ಗೆ ಕುಕ್ಕನಹಳ್ಳಿಯ ಕೆರೆಯ ಮೇಲೆ ಸಂಚಾರ ಹೋದೆ. ಆಶ್ರಮಕ್ಕೆ ಬಂದು ನೋಡಿದಾಗ ಟಿ.ಎಸ್.ವಿ, ಟಿ. ಎನ್,ಎಸ್, ಡಿ.ಎಲ್.ಎನ್. ಬಂದಿದ್ದರು. ಸ್ವಲ್ಪ ಹೊತ್ತು, ಹರ್ಷಾಲಾಪದಲ್ಲಿ ಕಾಲ ಸಮೆಯಿಸಿ ನನ್ನ ಕೆಲವು ಕವನಗಳನ್ನೂ ಲೇಖನಗಳನ್ನು ಪ್ರಬುದ್ಧ ಕರ್ಣಾಟಕಕ್ಕಾಗಿ ಕೊಂಡೊಯ್ದರು.

೧೯-೯-೧೯೩೨:

ನಾಳೆ ಗಾಂಧಿಯವರ ಆಮರಣಾಂತ ಉಪವಾಸ ಪ್ರಾರಂಭವಾಗುವ ದಿನ. ಇಂದು ಸ್ವಾಮಿಗಳೂ ವಿದ್ಯಾರ್ಥಿನಿಲಯದ ಬಾಲಕರೂ ಉಪವಾಸ ಮಾಡಿದರು. ನಾಳೆ ನಾನು ಮಾಡುತ್ತೇನೆ- ಸಾಯಂಕಾಲ ವಿದ್ಯಾರ್ಥಿಗಳಿಗೆ ಕೆಲವು ಕವನಗಳನ್ನು ಓದಿದೆ. The story of philosphy by will Durant ಓದುತ್ತಿದ್ದೇನೆ. ಜೈ ಗುರುಮಹಾರಾಜ್ ಕೀ ಜೈ!