೨೦-೯-೧೯೩೨:

ಇದೊಂದು ಚಿರಸ್ಮರಣೀಯ ದಿನ. ಇಂದಿಗೆ ಸುಮಾರು ೧೯೩೧ ವರ್ಷಗಳ ಹಿಂದೆ ಮಾನವರ ಮೂರ್ಖತೆಯ ನಿಮಿತ್ತವಾಗಿ ಜಗತ್ತಿನ ಮಹಾಪುರುಷನೊಬ್ಬನು ಶಿಲುಬೆಯ ಮೇಲೆ ಚಿತ್ರಹಿಂಸೆಯಿಂದ ಹತನಾದನು. ಇಂದು, ನಾಗರಿಕರೆಂದೆನಿಸಿ ಕೊಂಡಿರುವ ನಾವಿರುವ ಕಾಲದಲ್ಲಿ ಮತ್ತೊಬ್ಬ ಮಹಾತ್ಮನು ಮನುಷ್ಯ ಜಾತಿಯ ಅವಿವೇಕದಿಂದ ನಿರಶನವ್ರತವೆಂಬ ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡುವುದರಲ್ಲಿದ್ದಾನೆ. ಆ ಮಹಾಪುರುಷನಿಂದ ಇಂದಿನ ಬಾಳು ಪೂಜ್ಯವಾಗಿದೆ. ಆಶಾಜನಕವಾಗಿದೆ. ಮಹಾತ್ಮಾಗಾಂಧಿಯವರ ಕಾಲದಲ್ಲಿಯೇ ಆ ಮಹಾ ಜಗದ್ವ್ಯಕ್ತಿಗೆ ಸಮಕಾಲೀನನಾಗಿ ಹುಟ್ಟಿರುವುದರಿಂದ ನಾನು ಹೆಮ್ಮೆಪಡುತ್ತೇನೆ. ಅದಕ್ಕಾಗಿ ಈಶ್ವರನಿಗೆ ಅಭಿನಂದನೆ!- ಇಂದು ಆತನು ನಿರಶನ ವ್ರತವನ್ನು, ಅಂತ್ಯಜರಿಗೆ ಪ್ರತ್ಯೇಕ ಚುನಾವಣೆಯು ಬೇಡವಾಗುವವರೆಗೆ ಅಥವಾ ತನಗೆ ಸಾವು ಬರುವವರೆಗೆ, ಕೈಕೊಳ್ಳುತ್ತಾನೆ. ಲೋಕವೇ ಕಾತರತೆಯಿಂದ ಕೂಡಿದೆ. ನಾನಿಂದು ಎಂದೂ ಮಾಡದ ಉಪವಾಸ ಕೈಕೊಂಡಿದ್ದೇನೆ. ಪ್ರಾತಃಕಾಲ ಎದ್ದು ಧ್ಯಾನ ಮಾಟಿದೆನು, ಪ್ರಾರ್ಥಿಸಿದೆನು. ಈಗ ಭಗವದ್ಗೀತೆಯನ್ನು ಓದತೊಡಗುತ್ತೇನೆ- ನನ್ನ ಹೃದಯವು ಯಾವುದೋ ಒಂದು ಅನಿರ್ದಿಷ್ಟ ಶೋಕಸಂಮಿಶ್ರ ಆನಂದದಿಂದ ಸ್ಪಂದಿಸುತ್ತಿದೆ. ಮಹಾತ್ಮನಿಗಾಗುವ ನೋವಿನಲ್ಲಿ ನೋಯುತ್ತಿದೆ. ಆದರೆ ಆತನ ಯಾತನೆಯಿಂದಲೆ ಮನುಜವರ್ಗದ  ಗೌರವವು ನೂರ್ಮಡಿಯಾಗಿದೆ ಎಂದು ಹಿಗ್ಗುತ್ತಿದೆ. ಆತನೊಡನೆ ಮನುಷ್ಯನಾಗಿರುವ ನಾನೂ ಆತನ ನೋವಿನ ತಪಸ್ಸಿನಿಂದ ಪುನೀತನಾದೆ. ಗೀತೆಯ ಹದಿನೆಂಟು ಅಧ್ಯಾಯಗಳನ್ನೂ ಓದಿ ಪೂರೈಸಿದೆ. ಊಟದ ಸಮಯವಾಗಲು ಸ್ವಲ್ಪ ಹಸಿವಾಯ್ತು. ತರುವಾಯ ಅರ್ಧ ನಿಂಬೆಯ ರಸವನ್ನು ನೀರಿಗೆ ಹಾಕಿ ತೆಗೆದುಕೊಂಡೆ. ಮಧ್ಯಾಹ್ನದ ಮೇಲೆ ಹಸಿವೇನೂ ಆಗಲಿಲ್ಲ. ಎಂದಿನಂತೆ ಸಂಜೆ ಆಟವನ್ನು ಆಡಿದೆ. (ಆಶ್ರಮದಲ್ಲಿ ವಾಲಿಬಾಲ್ ಕೋರ್ಟ್ ಇತ್ತು.)- ದಿನವೆಲ್ಲಾ ನಶ್ಯವನ್ನು ಕೂಡ ಹಾಕಿಕೊಳ್ಳಲಿಲ್ಲ.(ಊಟ ಬಿಟ್ಟಿದ್ದಕ್ಕಿಂತಲೂ ದೊಡ್ಡ ತ್ಯಾಗವೇ!) ಎರಡು ಹೊತ್ತೂ ಊಟ ಬಿಡುವುದೇ ನನಗಿಷ್ಟು ತಪಸ್ಸಾದರೆ ಆ ಮಹಾತ್ಮನು ಅನೇಕ ದಿನಗಳ ಉಪವಾಸ ಮಾಡುವುದು ಎಷ್ಟು ಕಠಿನವಾಗಿರಬೇಕು?

೧೨-೧೦-೧೯೩೨:

ಸಾಯಂಕಾಲ ಮಾಸ್ತಿಯವರು ಬಂದು ತಮ್ಮ ಕವನಗಳನ್ನೋದಿದರು. ಅವರಿಗೆ ನನ್ನ”ಕಲಾಸುಂದರಿ” ಎಂಬ ಕವನವನ್ನು ಓದಿದೆ. ಬಹಳ ಆನಂದಪಟ್ಟರು. ಪ್ರಥಮ ವರ್ಗದ ಕವಿತೆ ಇದು ಎಂದರು. ಅವರೂ ಅನೇಕ ಕವನಗಳನ್ನು ಅವರ ‘ತಾವರೆ’‘ಚೆಲುವು’‘ಅರುಣ’‘ಬಿನ್ನಹ’ಗಳಿಂದ ಓದಿದರು. ಅವರ ಗೀತೆಗಳೂ ಲಾವಣಿಗಳೂ ಇರುವಷ್ಟು ಚೆನ್ನಾಗಿ ಅವರ ಕವನಗಳಿಲ್ಲ.

೧೮-೧೦-೧೯೩೨:

ಬೆಳಿಗ್ಗೆ ಶ್ರೀಮಾನ್ ದೊಡ್ಡಬಳ್ಳಾಪುರದ ಲೋಕಸೇವಾನಿರತ ಬಿರುದಾಂಕಿತರಾದ ಕೊಂಗಾಡಿಯಪ್ಪನವರು ನನ್ನನ್ನು ನೋಡಲು ಬಂದಿದ್ದರು. ಅವರ ಹತ್ತಿರ ಬಹಳ ಹೊತ್ತು ಕರ್ಣಾಟಕ ದೇಶ ಭಾಷೆಗಳ ವಿಚಾರ ಮಾತಾಡಿದೆ. ತಮ್ಮೂರಿಗೆ ನನ್ನನ್ನು ಆಹ್ವಾನಿಸಿದರು.

ಮಧ್ಯಾಹ್ನ ವೆಂಕಣ್ಣಯ್ಯನವರ ಮನೆಗೆ ಹೋಗಿದ್ದೆ. ಎರಡು ಗಂಟೆ ಹೊತ್ತು ಮಾತಾಡುತ್ತಿದ್ದೆ. ದೊಡ್ಡಬಳ್ಳಾಪುರದಲ್ಲಿ ‘ಆಧುನಿಕ ಕವಿತೆ’ವಿಚಾರವಾಗಿಯೆ ಮಾತನಾಡು ಎಂದರು. ಮಾಸ್ತಿ ವೆಂಕಟೇಶ ಐಯಂಗಾರರ ವಿಚಾರ ಮಾತನಾಡಿದೆವು. ಅವರು ಎಂದೂ ಉದ್ವಗ್ನರಾದವರಲ್ಲ, ಗೊಣಗುಟ್ಟಿದವರಲ್ಲ ಎಂದರು….

ರಾತ್ರಿ ಎನ್.ಎಸ್.ನಾರಾಯಣಶಾಸ್ತ್ರಿಗಳ‘ಪಂಚರಾತ್ರ’ನಾಟಕವನ್ನು ಕಾಲೇಜಿನಲ್ಲಿ ಆಡಿದರು. ಶ್ರೀರಾಮಕೃಷ್ಣ ವಿದ್ಯಾರ್ಥಿನಿಲಯದ ಹುಡುಗರನ್ನು ನಾಟಕ ನೋಡಲು ಕರೆದುಕೊಂಡು ಹೋಗಲೆಂದಿದ್ದೆ. ಆದರೆ ಸ್ವಾಮಿಗಳು ಬೇಡ ಎಂದು ಬಿಟ್ಟರು. ಕಾರಣ: ಪಟ್ಟಣದಲ್ಲಿ ಇನ್ ಫ್ಲುಯನ್ಜಾ ಇದೆಯಂತೆ! ತಮ್ಮ ಧ್ಯೇಯವು ಎಷ್ಟೇ ಮಹೋನ್ನತವಾದುದಾಗಿರಲಿ ಅದನ್ನು ಇತರರ ಮೇಲೆ ಅದರಲ್ಲಿಯೂ ವಿಕಾಸವಾಗುತ್ತಿರುವ ಬಾಲಕರ ಮೇಲೆ ಬಲಾತ್ಕಾರದಿಂದ ಹೊರಿಸುವುದು ಅಷ್ಟೇನೂ ಶ್ಲಾಘ್ಯವಾದ ಕೆಲಸವಲ್ಲ….‘ಮುಕ್ತಿರಾಹು’ಎಂಬ ಕವನವನ್ನು ರಚಿಸುತ್ತಿದ್ದೇನೆ.

೧೯-೧೦-೧೯೩೨:

ಈ ದಿನ ವಿಶ್ವವಿದ್ಯಾನಿಲಯದ ಪದವಿಪ್ರಧಾನ ಮಹೋತ್ಸವ.

೨೩-೧೦-೧೯೩೨:

ಶ್ರೀರಂಗಪಟ್ಟಣದ ಯಾತ್ರೆ.ಸ್ವಾಮಿ ಭೂತೇಶಾನಂದಜಿ, ರಾಜಗೋಪಾಲ, ನಾನು, ಸೀನು, ವಿಜಯ, ಚಂದ್ರು, ಎಂಕ್ಟು, ರಾಮಣ್ಣ, ಮರಿಯಪ್ಪ ಮೊದಲಾದವರೆಲ್ಲ ಬೆಳಿಗ್ಗೆ ವಿದ್ಯಾರ್ಥಿನಿಲಯದಲ್ಲಿ ಊಟಮುಗಿಸಿ ಹೊರಟೆವು. ದಿನವೆಲ್ಲ ಶ್ರೀರಂಗಪಟ್ಟಣದ ಗತವೈಭವವನ್ನು ನೋಡುವ ಸಂಭ್ರಮದಲ್ಲಿ ಕಾಲ ಕಳೆದೆವು. ಈಗಿನ ಪ್ರಪಂಚವನ್ನೆ ಮರೆತು ಕಳೆದುಹೋದ ಕಾಲದಲ್ಲಿ ಮತ್ತೆ ಜೀವಸಿದೆವು. ಕಲ್ಪನೆಯ ಮಂತ್ರಶಕ್ತಿಯಿಂದ ೧೭೯೯ ನೆಯ ಮೇ ೪ನೆಯ ತಾರೀಖನ್ನು ಪುನಃ ಸೃಜಿಸಿ, ಆ ಗಲಭೆ, ಗಡಿಬಿಡಿ, ಉತ್ಸಾಹ, ಕ್ರೋಧ, ಆಶಂಕೆ, ಉದ್ವೇಗ, ಸ್ವಾಮಿಭಕ್ತಿ, ರಾಜದ್ರೋಹ, ಯುದ್ಧ, ಎಲ್ಲವನ್ನೂ ಕಂಡೆನು. ಯಾತ್ರೆ ಮನೋಹರವಾಗಿತ್ತು.

೪-೧೧-೧೯೩೨:

ಮಧ್ಯಾಹ್ನ ಬೆಂಗಳೂರಿಗೆ ಹೊರಟೆ. ಶ್ರೀನಿವಾಸನೂ ರಾಮಣ್ಣನೂ ನನ್ನೊಡನೆ ಸ್ಟೇಷನ್ನಿಗೆ ಬಂದರು. ನಾರಾಯಣ ಶಾಸ್ತ್ರಿಗಳೂ ನನ್ನೊಡನೆಯೆ ಬೆಂಗಳೂರಿಗೆ ಪ್ರಯಾಣಮಾಡಿದರು. ದಾರಿಯಲ್ಲಿ ನಾಟಕಗಳ ವಿಚಾರ ಮಾತಾಡಿದೆವು. ಬೆಂಗಳೂರು ತಲುಪಿದಾಗ ಸಾಯಂಕಾಲವಾಗಿತ್ತು. ರೈಲ್ವೇ ಸ್ಟೇಷನ್ನಿಗೆ ಬಿ.ಎಸ್.ರಾಮರಾಯರೂ ಡಿ.ಆರ್. ಚನ್ನೇಗೌಡರೂ ಬಂದಿದ್ದರು. ಚನ್ನೇಗೌಡರು ಬಲವಂತ ಮಾಡಿ ನನ್ನನ್ನು ತಮ್ಮ ಮನೆಗೆ ಕರೆದೊಯ್ದರು. ರಾತ್ರಿ ಆಶ್ರಮಕ್ಕೆ ಹೋಗಿ ಬಂದೆವು. ತಿರುಮಲೆ ತಾತಾಚಾರ್ಯರ ಮನೆಯಲ್ಲಿ ದಿಲೀಪಚಂದ್ರ ವೇದಿಯವರ ಸಂಗೀತವನ್ನು ಸ್ವಲ್ಪ ಹೊತ್ತು ಕೇಳಿದೆವು. ಆತನು ಕೊರಲಿನಲ್ಲಿ ವೀಣೆ ಡಮರುಗ ಭೇರಿಗಳನ್ನೆಲ್ಲ ಇಟ್ಟುಕೊಂಡಿದ್ದಾನೆ.

೫-೧೧-೧೯೩೨:

ಬೆಳಿಗ್ಗೆ ನಾನೂ ಚನ್ನೆಗೌಡರೂ ಸಂಚಾರ ಹೋದೆವು. ದಾರಿಯಲ್ಲಿ ನಾನಾ ಗಹನ ವಿಚಾರಗಳನ್ನು ಮಾತಾಡಿದೆವು:ಬುದ್ದಿ, ಪ್ರತಿಭೆ, ಆತ್ಮಾ ಇತ್ಯಾದಿ. ೮-೩೦ ಗಂಟೆಗೆ ಪಠ್ಯಪುಸ್ತಕ ಸಮಿತಿಯ ಸಭೆಗೆ ಹೋದೆ. ೧೨-೩೦ಕ್ಕೆ ಮುಗಿಯಿತು. ಒಂದು ಗಂಟೆಗೆ ಮಾಸ್ತಿ ವೆಂಕಟೇಶ ಐಯ್ಯಂಗಾರರ ಮೋಟಾರು ಕಾರಿನಲ್ಲಿ ವಿಶ್ವೇಶ್ವರಪುರದ ಆಶ್ರಮಕ್ಕೆ ಹೋದೆ.(ಬೆಂಗಳೂರು ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ನಿರ್ಮಲಾನಂದರಿಗೂ ಬೇಲೂರು ಕೇಂದ್ರ ಶ್ರೀರಾಮಕೃಷ್ಣ ಮಿಶನ್ನಿಗೂ ಭಿನ್ನಾಭಿಪ್ರಾಯ ಉಂಟಾಗಿ ಕೇಸು ಕೋರ್ಟಿಗೆ ಹೋಗಿತ್ತು. ಕೇಸನ್ನು ನಡೆಸುವುದಕ್ಕಾಗಿ ಮಿಶನ್ನಿನ ಕಾರ್ಯದರ್ಶಿಗಳು ಬೆಂಗಳೂರಿಗೆ ಬಂದಿರಬೇಕಾಗಿತ್ತು. ಆದ್ದರಿಂದ ಅವರು ವಿಶ್ವೇಶ್ವರಪುರದ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಅದನ್ನೇ ತಾತ್ಕಾಲಿಕ ಆಶ್ರಮವನ್ನಾಗಿ ಮಾಡಿಕೊಂಡಿದ್ದರು. ಅಲ್ಲಿಯೆ ದೇವರಮನೆಯೂ ಸ್ಥಾಪಿತವಾಗಿ ಕ್ರಮಬದ್ದವಾಗಿ ಪೂಜೆ ಪ್ರಾರ್ಥನೆ ಭಜನೆ ನಡೆಯುತ್ತಿತ್ತು. ನಾನೂ ಸಿದ್ದೇಶ್ವರಾನಂದರೂ ಬೆಂಗಳೂರಿಗೆ ಬಂದಾಗ ಆ ಆಶ್ರಮದಲ್ಲಿಯೆ ಉಳಿಯುತ್ತಿದ್ದೆವು.) ಅಲ್ಲಿ ಗಡದ್ದಾಗಿ ಪ್ರಸಾದವಾಯಿತು. ಸಾಯಂಕಾಲ ಸೆಂಟ್ರಲ್ ಕಾಲೇಜಿಗೆ ಹೋಗಿ ಫಲಾಹಾರ ಕೂಟದಲ್ಲಿ ಭಾಗಿಯಾದೆ. ಬಿ.ಎಂ.ಶ್ರೀ, ಟಿ.ಎಸ್.ವೆಂ, ಎ.ಆರ್.ಶ್ರೀನಿವಾಸಮೂರ್ತಿಗಳು, ವೀ.ಸೀ.ಇತ್ಯಾದಿ ಅನೇಕ ಗಣ್ಯರು ನೆರೆದಿದ್ದರು. ಶ್ರೀಯುತ ಕೃಷ್ಣಶಾಸ್ತ್ರಿಗಳು. ಅವರ ಎಂದಿನ ಪದ್ಧತಿಯಂತೆ, ನಾನು ಬೆಂಗಳೂರಿಗೆ ಹೋದಾಗಲೆಲ್ಲ ಮಾಡುವಂತೆ ನನ್ನ ಕವಿತಾ ವಾಚನಕ್ಕೆ ಏರ್ಪಾಡು ಮಾಡಿದ್ದರು. ಗಣಿತಶಾಸ್ತ್ರ ಭವನದಲ್ಲಿ.ಫಲಾಹಾರ ಮುಗಿದ ಅನಂತರ ವಾಚನ: ಸಭಾಭವನ ಗಣ್ಯನಾಗರಿಕರಿಂದಲೂ ಉತ್ಸಾಹೀ ತರುಣರಿಂದಲೂ ಕಿಕ್ಕಿರಿದು ತುಂಬಿತ್ತು. ಸಾವಿರಾರು.ಎರಡು ಗಂಟೆಗಳ ಕಾಲ ಅವಿಚ್ಛಿನ್ನವಾಗಿ ವಾಚನ ಮಾಡಿದೆ. ಆದರೂ ಅವರಿಗೆ ತೃಪ್ತಿಯಾಗಲಿಲ್ಲ. ಚೀಟಿಯ ಮೇಲೆ ಚೀಟಿ ಬರುತ್ತಿತ್ತು. ಕವನದ ಹೆಸರನ್ನು ನಮೂದಿಸಿ, ಅದನ್ನು ಓದಿ ಇದನ್ನು ಓದಿ ಎಂದು. ಬಿ.ಎಂ.ಶ್ರೀಯವರೂ ವೀರಕೇಸರಿ ಸೀತಾರಾಮಶಾಸ್ತ್ರಿಗಳೂ ಒಂದೆರಡು ವಿಶ್ವಾಸಪೂರ್ವಕವಾದ ನುಡಿಗಳನ್ನಾಡಿದರು. ಸಭೆ ಮುಗಿದ ಮೇಲೆ ಕೆಲವರು ನನ್ನನ್ನು ಮುತ್ತಿ ಹಸ್ತಾಕ್ಷರ ತೆಗೆದುಕೊಂಡರು. ಏನು ಮೋಹ! ಏನು ಅಭಿಮಾನ! ನನ್ನ ಮೇಲಿನ ಕೃಪೆಯಿಂದ ನನ್ನನ್ನು ಒಲಿದಿರುವ ಕಲಾಸುಂದರಿಯ ಪ್ರಭಾವವು ಅಂದು ನನಗೆ ಮತ್ತಷ್ಟು ಮನದಟ್ಟಾಯಿತು. ಶ್ರೀಯವರ ಕಾರಿನಲ್ಲಿ ಕೆ.ಹೆಚ್.ರಾಮಯ್ಯನವರಲ್ಲಿಗೆ-ಚನ್ನೇಗೌಡರು ಅವರ ಮಾವನ ಮನೆಯಲ್ಲಿಯೆ ವಾಸಿಸುತ್ತಿದ್ದರು- ಬಂದೆ. ರಾತ್ರಿ ಹನ್ನೆರಡು ಗಂಟೆಯವರೆಗೆ ಚನ್ನೆಗೌಡರ ಜೊತೆ ನಾನು ತಿ.ತಾ.ಶರ್ಮರ ಮನೆಯಲ್ಲಿದ್ದೆ.

೬-೧೧-೧೯೩೨:

ಬೆಳಿಗ್ಗೆ ಬಿ.ಎಂ.ಶ್ರೀಯವರ ಮನೆಗೆ ಹೋದೆ. ಅವರು ತಮ್ಮ ಹೃದಯದ ತಾಪವನ್ನೆಲ್ಲ ತೋಡಿಕೊಂಡರು. ಕನ್ನಡ ಎಂದರೆ ಅವರಿಗೆ ಪ್ರಾಣ. ಅದರ ಗೆಲವೇ ಅವರ ಜೀವನದ ಕೊನೆಯ ಗುರಿ. ಬಹಳ ಹೊತ್ತಾದ ಮೇಲೆ ಮಾಸ್ತಿಯವರ ಮತ್ತು ಕೃಷ್ಣಶಾಸ್ತ್ರಿಗಳ ಮನೆಗೆ ಹೋದೆ. ಒಬ್ಬರೂ ಇರಲಿಲ್ಲ. ಅಲ್ಲಿಂದ ಗವಿಪುರದ ದೇವಾಲಯಕ್ಕೆ ಹೋದೆವು. ಒಳನುಗ್ಗಿ ಪ್ರದಕ್ಷಿಣೆ ಮಾಡಿದೆವು. ಹಿಂತಿರುಗಿ ಬಂದು, ತೀರ್ಥಹಳ್ಳಿಯಲ್ಲಿ ನಾನು ಎ.ವಿ. ಸ್ಕೂಲಿನಲ್ಲಿ ಓದುತ್ತಿದ್ದಾಗ ಅಲ್ಲಿ ನಮಗೆ ಇಂಗ್ಲೀಷ್ ಮೇಷ್ಟರಾಗಿದ್ದ (ನಿಟ್ಟೂರು ಶ್ರೀನಿವಾಸರಾಯರ ತಂದೆ) ಶಾಮಣ್ಣನವರ ಮನೆಗು ಮತ್ತು ಆಶ್ರಮಕ್ಕೂ ಹೋದೆವು. ವಿದ್ಯಾರ್ಥಿಯೊಬ್ಬನಿಗೆ ಕೆಲವು ಪಂಕ್ತಿಗಳನ್ನು ಬರೆದು ಹಸ್ತಾಕ್ಷಾರ ಹಾಕಿಕೊಟ್ಟೆ. ಚೆನ್ನೇಗೌಡರಿಗೆ ವಾಲ್ಟ್ಯೆರ್ ಮೊದಲಾದವರ ಮೇಲೆ ಹೇಗೆ ಪ್ರಬಂಧ ಬರೆಯಬೇಕೆಂದು ಹೇಳಿದೆ. ಮಧ್ಯಾಹ್ನ ಮೂರು ಗಂಟೆಗೆ ಮೈಸೂರಿಗೆ ಟಿ.ಎಸ್.ವೆಂಕಣ್ಣಯ್ಯನವರೊಂದಿಗೆ ರೈಲಿನಲ್ಲಿ ಹೊರಟೆ. ದಾರಿಯಲ್ಲಿ ಮಾತಾಡಿ ಆಡಿ ಆಡಿಯೆ ಆಡಿದೆವು! ‘ರಕ್ತಾಕ್ಷಿ’ ಅಚ್ಚಾಗಿ ಹೊರಬಂದಿದೆ.(ಅದು ಮೊದಲು ಅಚ್ಚಾದದ್ದು ಶಿವಮೊಗ್ಗ ಕರ್ಣಾಟಕ ಸಂಘದಿಂದ.) ೮-೧೧-೧೯೩೨:

೭-೧೧-೧೯೩೨ ನೆಯ‘ತಾಯಿನಾಡು’ಪತ್ರಿಕೆಯಲ್ಲಿ ಬಂದ ನನ್ನ ಕವಿತಾ ವಾಚನದ ಪ್ರಶಂಸೆಯ ವರದಿ:

ಶ್ರೀ ಕೆ.ವಿ.ಪುಟ್ಟಪ್ಪನವರು

ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದವರು ಶನಿವಾರ ಸಂಧ್ಯಾ ಕಾಲ ಶ್ರೀ ಕೆ.ವಿ.ಪುಟ್ಟಪ್ಪನವರ ಕವಿತಾ ವಾಚನವನ್ನು ಏರ್ಪಡಿಸಿದ್ದರು. ಶ್ರೀ ಬಿ.ಎಂ.ಶ್ರೀಕಂಠಯ್ಯನವರು ಅಧ್ಯಕ್ಷತೆಯನ್ನು ಅಲಂಕರಿಸಿದ್ದರು. ಸಭಾಭವನವು ಸಹೃದಯ ಶ್ರೋತೃಬೃಂದದಿಂದ ನಿಬಿಡವಾಗಿತ್ತು. ಅಧ್ಯಕ್ಷರು ತಮ್ಮ ಶಿಷ್ಯೋತ್ತರ ಪರಿಚಯವನ್ನು ಸಭೆಗೆ ಮಾಡಿ ಅವರನ್ನು ಕವನಗಳನ್ನು ಓದುವಂತೆ ಪ್ರಾರ್ಥಿಸಿದರು. ಶ್ರೀಕೆ.ವಿ.ಪುಟ್ಟಪ್ಪನವರು ಎದ್ದಕೂಡಲೇ ಕರತಾಡನ ಪ್ರಶಂಸಾಧ್ವನಿಯು ಸಭಾಭವನವನ್ನು ಕಂಪಿಸಿತು. ಕವಿಗಳು ತಮ್ಮ ಕವಿತೆಗಳನ್ನು ಕಮನೀಯವಾಗಿ ರಸಕ್ಕೆ ಅನುಗುಣವಾಗಿ ಒಮ್ಮೊಮ್ಮೆ ಕೋಗಿಲೆಯಂತೆ ಕಲರವ ಧ್ವನಿಯಿಂದಲೂ, ಒಮ್ಮೊಮ್ಮೆ ಸಿಂಹ ಗಂಭೀರ ಗರ್ಜನೆಯಿಂದಲೂ, ಒಮ್ಮೊಮ್ಮೆ ದುಂಬಿಗಳ ಝೇಂಕಾರದಿಂದಲೂ ಪಠಿಸಿದರು. ಸುಮಾರು ಎರಡು ಗಂಟೆಗಳ ಕಾಲ ಸಭಿಕರು ಕವಿಪುಂಗವ ಪುಟ್ಟಪ್ಪನವರ ಕವಿತಾಂಬುಧಿಯ ಕ್ಷೀರಸಮುದ್ರದಲ್ಲಿ ಮಿಂದು ಮೋದಿಸಿದರು. ಅವರ ಕವಿತಾ ರಮಣೀಯ ಹಿಮವಂತನ ಪುತ್ರಿಯಾದ ಜಾಹ್ಮವಿಯಂತೆ ಪರ್ವತಶೃಂಗಗಳಿಂದ ಕುಣಿ ಕುಣಿದು ಧುಮುಧುಮುಕಿ ಗಂಭಿರ ಪ್ರವಾಹಿನಿಯಾಗಿ ಸಾಗರಮಂ ಸೇರ್ವಂತೆ ಆಕರ್ಣಿತರ ಅಂತರಂಗಮಂ ಆಹ್ಲಾದಿಸಿತು. ಪುಟ್ಟಪ್ಪನವರ ಕವಿತಾಪ್ರತಿಭೆಯು ಇಂದಿನ ಭಾರತದ ಪ್ರತಿಬಿಂಬವು. ಶ್ರೀಪುಟ್ಟಪ್ಪನವರು ಇತೋಪ್ಯತಿಶಯವಾದ ಸರಸ್ವತೀ ಪ್ರಸಾದವನ್ನು ಪಡೆದು ಕನ್ನಡ ಭೂಮಿಗೆ ಮಾತ್ರವೇ ಅಲ್ಲದೆ ಭಾರತಭೂಮಿಗೂ ಶರೋರತ್ನವಾಗಿ ಪರಿಣಮಿಸಲಿ ಎಂಬುದೇ ಕನ್ನಡಿಗರೆಲ್ಲರ ಹಾರೈಕೆ.

ಕರ್ಣಾಟಕ ಸಂಘದವರು ಇಂತಹ ಕವಿತಾಹಬ್ಬಗಳನ್ನು ಇನ್ನೂ ಅನೇಕವಾಗಿ ಏರ್ಪಡಿಸಿ ಕೃತಕೃತ್ಯರಾಗಬೇಕೆಂದು ಕೋರಲಾಗಿದೆ.

‘ತಾಯಿನಾಡು’ಪತ್ರಿಕೆಯಲ್ಲಿ ಅಂದು ಪ್ರಕಟವಾದ ಕನ್ನಡಿಗರ ಹಾರೈಕೆ-ಶ್ರೀ ಪುಟ್ಟಪ್ಪನವರು ಇತೋಪ್ಯತಿಶಯವಾದ ಸರಸ್ವತೀ ಪ್ರಸಾದವನ್ನು ಪಡೆದು ಕನ್ನಡ ಭೂಮಿಗೆ ಮಾತ್ರವೇ ಅಲ್ಲದೆ ಭಾರತಭೂಮಿಗೂ ಶಿರೋರತ್ನವಾಗಿ ಪರಿಣಮಿಸಲಿ- ಹರಕೆಯಾಗಿ ಮುಂದೆ ತಕ್ಕಮಟ್ಟಿಗೆ ಕೈಗೂಡಿದುದನ್ನು ನೋಡಿದರೆ ಜನಮನದ ಹಾರೈಕೆ. ಹರಕೆ ಮತ್ತು ಅಭಪ್ಸೆಗಳು ವ್ಯರ್ಥವಾಗುವುದಿಲ್ಲ ಎಂಬ ಶ್ರದ್ಧೆಗೆ ಬೆಂಬಲ ದೊರೆಯುತ್ತದೆ. ಆಗಿನ್ನೂ ನನ್ನ ಮಹಾಕಾದಂಬರಿಗಳಾಗಲಿ ಮಹಾಕಾವ್ಯಗಳಾಗಲಿ ಹೊರಬಂದಿರಲಿಲ್ಲ. ಮಾತ್ರವಲ್ಲ ಅದರ ಸೂಚನೆಯೂ ಬಹಿಃಪ್ರಜ್ಞೆಗೆ ಗೋಚರವಾಗಿರಲಿಲ್ಲ. ಆದರೂ ನನ್ನನ್ನು ಕುರಿತು ಅಂದಿನ ಸಾಮಾನ್ಯಮತಿಗಳು ಮಾತ್ರವೆ ಅಲ್ಲ, ವಿಶೇಷ ವಿಮರ್ಶಕಮತಿಗಳಾಗಿದ್ದ ನಿಷ್ಠುರ ಸತ್ಯನಿಷ್ಠೆಯ ವಿಚಾರವಂತರೂ, ಈಗ ಓದಿದರೆ ಆಶ್ಚರ್ಯಪಡಬೇಕಾಗುವಂತಹ ಮಾತುಗಳನ್ನು ಸಾರ್ವಜನಿಕ ವೇದಿಕೆಗಳಿಂದ ವಿದ್ವಾಂಸರ ಸಭೆಗಳಲ್ಲಿ ಆಡಿದ್ದಾರೆ. ಉದಾಹರಣೆಗೆ ತಾಯಿನಾಡಿನ ಪ್ರಶಂಸೆಗೆ ಪೂರ್ವದಲ್ಲಿಯೆ, ಒಂದು ವರ್ಷಕ್ಕೆ ಹಿಂದೆಯೆ, ೧೯೩೧ ರಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜ್ ಕರ್ಣಾಟಕ ಸಂಘದಲ್ಲಿ ನವರತ್ನಂ ರಾಮರಾಯರಂತಹರು‘ಕನ್ನಡ ಸಾಹಿತ್ಯವನ್ನು ಕುರಿತು ಕೆಲವು ಸಲಹೆಗಳು’ಎಂಬ ವಿಷಯದ ಮೇಲೆ ಭಾಷಣ ಮಾಡುತ್ತ ಹೇಳಿದುದು‘ಪ್ರಬುದ್ಧ ಕರ್ಣಾಟಕ’ದಲ್ಲಿ ಹೀಗೆ ವರದಿಯಾಗಿದೆ:

“ಪಾಶ್ಚಾತ್ಯ ಸಾಹಿತ್ಯದಿಂದ ನಾವು ತೆಗೆದುಕೊಳ್ಳಬೇಕಾದ ಸಂಗತಿಗಳು ಅನೇಕವಾಗಿವೆ. ಅವುಗಳನ್ನು ತೆಗೆದುಕೊಳ್ಳಲು ನಮಗೆ ಹಕ್ಕು ಉಂಟು.  ಅವುಗಳಿಂದ ನಿಜವಾದ ಪ್ರಯೋಜನವೂ ಉಂಟು;ಈಗಾಗಲೇ ಆಗಿದೆ; ಮುಂದಕ್ಕೆ ಆಗುತ್ತದೆ. ಈ ಕೆಲಸದಲ್ಲಿ ಮII ಬಿ.ಎಂ.ಶ್ರೀಕಂಠಯ್ಯನವರು ದಾರಿ ತೋರಿಸಿದ್ದಾರೆ.(ಬಿ.ಎಂ.ಶ್ರೀಯವರಿಗಿಂತಲೂ ಪೂರ್ವದಲ್ಲಿಯೇ ಶ್ರೀಕಂಠೇಶಗೌಡರಂಥವರು ಆ ಕೆಲಸದಲ್ಲಿ ಹುಟ್ಟುಹಾಕಿ ದಾರಿತೋರಿಸಲು ಮಹಾಸಾಹಸ ಮಾಡಿದ್ದರು ಎಂಬ ವಿಚಾರ ಇತ್ತಿಚೆಗೆ ಬೆಳಕಿಗೆ ಬಂದ ಸಂಗತಿಯಾಗಿದೆ. ಆದರೆ ಬಹುಶಃ ನವರತ್ನ ರಾಮರಾಯರಿಗೆ ಅದು ತಿಳಿದಿರಲಾರದೆಂದು ತೋರುತ್ತದೆ.) ಹೊಸಹೊಸ ಯೋಚನೆಗಳು ಭಾವಗಳು ಛಂದಸ್ಸುಗಳು ಇವುಗಳನ್ನು ಬಳಕೆಗೆ ತಂದಿದ್ದಾರೆ. ಇವರಿಂದ ಮೊದಲಾದ ಕೆಲಸವನ್ನು ಅವರ ಶಿಷ್ಯರು ಮುಂದುವರಿಸುತ್ತಿದ್ದಾರೆ. ಮII ಪುಟ್ಟಪ್ಪನವರಂಥವರನ್ನು ಯಾವ ಇಂಗ್ಲಿಷ್ ಕವಿಗೆ ಹೋಲಿಸಿದರೂ ತಪ್ಪಾಗುವಂತಿಲ್ಲ.”

೧೬-೧೧-೧೯೩೨:

ಸಾಯಂಕಾಲ ‘ಹ್ಯಾಮ್ಲೆಟ್’ನಾಟಕ ನೋಡಲು ಹೋದೆ. ಸಾಧಾರಣವಾಗಿ ಅಭಿನಯಿಸಿದರು.

೧೯-೧೧-೧೯೩೨:

ಬೆಳಿಗ್ಗೆ ಮೈಸೂರಿನಿಂದ ನಾನೂ ಪ್ರಿಯನಾಥ್ ಮಹಾರಾಜರೂ ರೈಲಿನಲ್ಲಿ ಹೊರಟೆವು. ದಾರಿಯುದ್ದಕ್ಕೂ ಕಮನೀಯ ದೃಶ್ಯಗಳು.  ಬೆಳೆದು ನಿಂತ ಬತ್ತದ ಗದ್ದೆಗಳು-ನಡುವೆ ಹಾರುವ ಬಲಾಕಗಳು ಅಲ್ಲಲ್ಲಿ ನೀಳವಾಗಿ ನಿಂತ ಕುಶ ಕುಸುಮಗಳು, ಹಸುರು ಗದ್ದೆಯ ಮೇಲೆ ಓಡಾಡಿ ಮುಂದೆಮುಂದೆ ಹರಿಯುತ್ತಿದ್ದ ರೈಲುಯಂತ್ರದ ದಟ್ಟಹೊಗೆಯ ನೆಳಲು,ಅಂತೆಯೇ ಇರುತ್ತಿದ್ದ ಮರಗಳ ಛಾಯೆ, ದೂರದ ದಿಗಂತದ ಗಿರಿಶಿರೋರೇಖೆಗಳು ಅಲ್ಲಲ್ಲಿ ತೋರುತ್ತಿದ್ದ ಪುರಾತನ ಯುದ್ಧರಂಗದ ಸ್ಮಾರಕ ಸ್ತೂಪಗಳು, ರೈಲ್ವೇ ಸ್ಟೇಷನ್ನುಗಳು, ಮನುಷ್ಯರು ಎಲ್ಲವೂ ವಿಚಿತ್ರ ಮನೋಹರವಾಗಿತ್ತು. ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಬೆಂಗಳೂರಿಗೆ ಬಂದೆವು. ಆಶ್ರಮದಲ್ಲಿ(ವಿಶ್ವೇಶ್ವರಪುರಂ ೧೯೩ ನೆಯ ಮನೆಯಲ್ಲಿ)ಊಟ ಹೊಡೆದು ಮಲಗಿದೆವು. ಸಾಯಂಕಾಲ ಚನ್ನೆಗೌಡರೂ ಪ್ರಿಯನಾಥ್ ಮಹಾರಾಜರೂ ನಾನೂ ನರಹರಿ ಬೆಟ್ಟಕ್ಕೆ ಹೋದೆವು. ಅಲ್ಲಿಂದ ಬಂಉ ಒಕ್ಕಲಿಗರ ವಿದ್ಯಾರ್ಥಿನಿಲಯಕ್ಕೆ ಹೋಗಿ ವೈಜ್ಞಾನಿಕ ದೃಷ್ಟಿ ಇರಬೇಕು ಎಂಬ ವಿಷಯದ ಮೇಲೆ ಮಾತಾಡಿದೆ. ತರುವಾಯ ಊಟಮಾಡಿ ಮಲಗಿದೆ.

೨೦-೧೧-೧೯೩೨:

ಬೆಳಿಗ್ಗೆ ಪ್ರಿಯನಾಥರೂ ನಾನೂ ಲಾಲ್ ಬಾಗ್ ಕಡೆ ವಾಕಿಂಗ್ ಹೋದೆವು. ಮೋಡ ಕವಿದು ಎಲ್ಲ ವಿಷಣ್ಣವಾಗಿತ್ತು. ಏನೆಂದರೂ ಮೈಸೂರಿನ ವೈಶಾಲ್ಯ ಇಲ್ಲಿ ಸಿಕ್ಕುವುದಿಲ್ಲ. ಆಮೇಲೆ ಪ್ರಿಯ ಶ್ರೀನಿವಾಸಗೆ ಕಾಗದ ಬರೆದೆ. ಟಿ.ಎಸ್.ವಾಸ್ವಾನಿಯರ Religion and culture ಎಂಬ ಪುಸ್ತಕ ಓದಿದೆ. ಸಾಯಂಕಾಲ ತಿ.ತಾ.ಶರ್ಮ, ಪ್ರಿಯನಾಥರು, ಡಿ.ಆರ್.ಚೆನ್ನೇಗೌಡ, ಅಶ್ವತ್ಥನಾರಾಯಣರಾವ್ ಎಲ್ಲರೂ ಸಂಚಾರ ಹೋದೆವು. ದಾರಿಯಲ್ಲಿ ಕೆಲವರು ಸಿಕ್ಕರು. ಅವರ ಲಘುಪ್ರವರ್ತನವೂ ಮಾತುಗಳೂ ನನಗೆ ಬೇಸರವುಂಟು ಮಾಡಿದುವು. ತಿ.ತಾ.ಶರ್ಮರ ಮನೆಗೆ ಬಂದೆವು. ಅಲ್ಲಿ ರವೀಂದ್ರರ ಶೀಲ ಆಚರಣೆಗಳ ವಿಚಾರ ಟೀಕೆ ನಡೆಯಿತು. ಕೃಷ್ಣಪಕ್ಷವನ್ನೇ ಹಿಡಿದು ಮಾತಾಡಿದರೆ ಶುಕ್ಲಪಕ್ಷವು ನಮ್ಮ ಭಾಗಕ್ಕೆ ಶೂನ್ಯವಾಗುತ್ತದೆ-ಅಂತೂ ರವೀಂದ್ರರ ವೈಯಕ್ತಿಕ ನಡತೆಗೂ ಅವರ ಕಾವ್ಯಶ್ರೀಗೂ ಸಮಂಜಸ ಭಾವವಿಲ್ಲ ಎಂದು ಅನೇಕರ ಅಭಿಪ್ರಾಯ.

೨೧-೧೧-೧೯೩೨:

ಬೆಳಿಗ್ಗೆ ದೊಡ್ಡಬಳ್ಳಾಪುರಕ್ಕೆ ಹೊರಟು ಬಸ್ ಸ್ಟಾಂಡಿಗೆ ಬಂದೆವು. ಅಲ್ಲಿ ನವೀನ ನಾಗರಿಕತೆಯ ಕೃಷ್ಣಪಕ್ಷದ ಕೇಂದ್ರಸ್ಥಾನವನ್ನು ಕಂಡೆವು. ಆ ಗಲಿಬಿಲಿ, ಆ ಭಿಕ್ಷುಕರು, ಆ ಕೂಗುವ್ಯಾಪಾರಿಗಳು, ಆ ದ್ರುತಪದ ಸಂಚಾರ-೯ ಗಂಟೆಗೆ ಹೊರಟಿತು. ಮಂದಿ ಕಿಕ್ಕಿರಿದಿತ್ತು. ೧೧ ಗಂಟೆಗೆ ದೊಡ್ಡಬಳ್ಳಾಪುರಕ್ಕೆ ಬಂದೆವು. ಕೊಂಗಾಡಿಯಪ್ಪನವರು ಆಸ್ಪತ್ರೆಯಲ್ಲಿದ್ದರು. ಅಲ್ಲಿಂದ ಅವರ ಮನೆಗೆ(ದನದ ಕೊಟ್ಟಿಗೆಯಂತೆ ತೋರಿತು.) ಕರೆದೊಯ್ದರು. ಕೆಸರು ಕೊಳಕು ದುರ್ವಾಸನೆಯ ಗಲ್ಲಿ ಗಲ್ಲಿಯಲ್ಲಿ ನುಗ್ಗಬೇಕಾಯಿತು. ಆಮೇಲೆ ಅವರ ಆಫೀಸು ಕೋಣೇ!! ರಾಮಾ! ಸುಸಂಸ್ಕೃತವಾದ ಹೆಗ್ಗಣಗಳು ಕೂಡ ಅಲ್ಲಿ ವಾಸಮಾಡಲಾರವು! ಆಗತಾನೆ ನೆಲಕ್ಕೆ ಬಳಿದಿದ್ದ ಸೆಗಣಿ ಅಲ್ಲಲ್ಲಿ ಉಂಡೆಉಂಡೆಯಾಗಿ ಇನ್ನೂ ಹಸಿಯಾಗಿಯೆ ಇತ್ತು. ದನದ ಕೊಟ್ಟಿಗೆಗೆ ಕಾಲಿಟ್ಟಂತೆ ಸೆಗಣಿ ಗಂಜಲದ ವಾಸನೆ ಬಗ್ಗೆಂದು ಮೂಗಿಗೆ ಬಡಿದು ಮುಖ ಸಿಂಡರಿಸುವಂತೆ ಮಾಡಿತ್ತು. ಕಡೆಗೆ ನಮ್ಮನ್ನು ಸ್ನಾನದ ಮನೆಗೆ ಕರೆದರು. ಅದೋ ಶ್ರೀರಾಮನಿಗೇ ಪ್ರೀತಿ! ನನಗೆ ಬಹಳ ಜುಗುಪ್ಸೆ ಹುಟ್ಟಿತು! ಉಬ್ಬಳಿಕೆ ಬುರುವಂತಾಯಿತು. ಎಲ್ಲವೂ ನಗೆ ಸಹಿಸಕೊಳ್ಳುವಂತೆ ಸಮಾಧಾನಪಡಿಸುತ್ತಿದ್ದರು.- ಆದರೆ ಮನುಷ್ಯ ಬಹಳ ಒಳ್ಳೆಯವನು. ಆತನಿಗೆ ದಾಸ್ಯಭಾವದ ವೇಷತೊಟ್ಟ ಯಶೋಲೋಭವು ಬಹಳವಾಗಿದೆ: ತನಗೆ ಬಂದಿದ್ದ ಲೋಕಸೇವಾನಿರತ ಬಿರುದಿನ ಸಂಬಂಧವಾದದ್ದನ್ನೆಲ್ಲ ತೋರಿಸಿದರು. ದೊಡ್ಡದೊಡ್ಡ ಲೆಖ್ಖ ಬರೆಯುವ ಕಡತದ ನೋಟುಬುಕ್ಕುಗಳಲ್ಲಿ ಅವರ ವಿಚಾರವಾಗಿ ಪತ್ರಿಕೆಗಳಲ್ಲಿ ಬಂದಿದ್ದ ಪ್ರಶಂಸೆಗಳೆಲ್ಲವನ್ನೂ ಕತ್ತರಿಸಿ ಅಂಟಿಸಿಕೊಂಡಿದ್ದರು. ದಿವಾನರಾದಿಯಾಗಿ ಅಮಲ್ದಾರರವರೆಗಿನ ಯೋಗ್ಯತಾಪತ್ರಗಳನ್ನು ಅಂಟಿಸಿಕೊಂಡಿದ್ದರು. ಅಂತಹ ನಾಲ್ಕಾರು  ಬೃಹತ್ ಪುಸ್ತಕಗಳನ್ನು ನಮ್ಮ ಮುಂದಿಟ್ಟು ಓದಲು ಹೇಳಿದರು! ಏನಾದರೇನು? ಸಂಸ್ಕೃತಿಯಿಲ್ಲದಿದ್ದ ಮೇಲೆ? ಶುಚಿಯಿಲ್ಲದಿದ್ದ ಮೇಲೆ? ಶೋಭಿಸದು. ಅಲ್ಲಿಂದ ಎಷ್ಟು ಬೇಗ ಹೊರಟರೆ ಅಷ್ಟು ಬೇಗ ಸಾಕು ಎನ್ನಿಸಿತು. ಕಡೆಗೆ ಸತ್ರದ ಕೊಟಡಿಗೆ ಹೋದೆವು. ಅಲ್ಲಿ ಕೆಲವು ಸುಸಂಸ್ಕೃತ ಸ್ನೇಹಿತರು ದೊರೆತರು.ನಮಗೆ (ನನಗೆ, ಪ್ರಿಯನಾಥ್ ಮಹಾರಾಜರಿಗೆ) ಸ್ವಲ್ಪ ಧೈರ್ಯ ಬಂದಿತು! ಅಲ್ಲಿ ಸ್ವಲ್ಪ ವಿಶ್ರಮಿಸಿಕೊಂಡು ಭೀಮಸೇನರಾಯರು, ರಂಗಸ್ವಾಮಿಐಯ್ಯಂಗಾರ್ಯರು, ಅಶ್ವತ್ಥನಾರಾಯಣರಾವ್ ಇವರೊಡನೆ ಕೆರೆಯ ಕಡೆಗೆ ಹೋಗಿ ಶೌಚಕಾರ್ಯಗಳನ್ನು ಮುಗಿಸಿದೆವು. ಇಡೀ ದೊಡ್ಡಬಳ್ಳಾಪುರವೆ ನನಗೆ ಗಲೀಜಾಗಿತ್ತು.!

ಸಾಯಂಕಾಲ ಉಪನ್ಯಾಸಕ್ಕೆ ಸುಮಾರು ಇನ್ನೂರು ಜನ ನೆರೆದಿದ್ದರು. ಊರಿನ ವಿದ್ಯಾವಂತರು ಅಧಿಕಾರಿಗಳು ಎಲ್ಲ ಬಂದಿದ್ದರು. ಹೆಡ್ ಮಾಸ್ಟರಾಗಿದ್ದ ವೆಂಕಟರಾಮಯ್ಯನವರು ಅಧ್ಯಕ್ಷರಾಗಿ ನನ್ನ ಪರಿಚಯ ಹೇಳಿದರು. ಒಂದೂವರೆ ಗಂಟೆ ಉಪನ್ಯಾಸವಾಯಿತು. ವಿಷಯ ಸೂಕ್ಷ್ಮವಾಗಿತ್ತು. ಆದರೂ ಕಷ್ಟಪಟ್ಟು ಸುಲಭ ಶೈಲಿಯಲ್ಲಿ ಹೇಳಿದೆ. ತರುವಾಯ ದೇವಸ್ಥಾನಕ್ಕೆ ಹೋದೆವು.(ನನಗೆ ಅದರಕ್ಕು ಒಂದುನಿತೂ ಆಸಕ್ತಿಯಾಗಲಿ ಶ್ರದ್ಧೆಯಾಗಲಿ ಇರದಿದ್ದರೂ ಹೋದಲೆಲ್ಲಾ ಸಭ್ಯತೆಗಾಗಿ ಚಿತ್ರಹಿಂಸೆಯನ್ನು ಸಹಿಸಬೇಕಾಗಿತ್ತು!)

ಅಲ್ಲಿಂದ ಬಂದು ಸತ್ರದಲ್ಲಿ ಊಟ ತರಿಸಿಕೊಂಡು ಭೋಜನ ಮಾಡಿದೆವು. ಮತ್ತು ಕೊಂಗಾಡಿಯಪ್ಪನವರ ಸೆರೆಮನೆಯ ಆತಿಥ್ಯದಿಂದ ಬಿಡುಗಡೆ ಹೊಂದಿ ಸತ್ರದ ಕೊಠಡಿಯಲ್ಲಿಯೆ ಮಲಗಿದೆವು!

೨೨-೧೧-೧೯೩೨:

ಬೆಳಿಗ್ಗೆ ಐದು ಗಂಟೆಗೆ ಎದ್ದು ಅರ್ಕಾವತಿ ನದಿಯ ಕಡೆಗೆ ಸಂಚಾರ ಹೊರಟೆವು. ನಾನು,ಪ್ರಿಯನಾಥ್ ಮಹಾರಾಜ್, ಅಶ್ವತ್ಥನಾರಾಯಣರಾನ್, ಭೀಮಸೇನರಾವ್, ಶ್ಯಾಮಭಟ್, ಪ್ರಾತಃಕಾಲದ ಪ್ರಥಮಾವಸ್ಥೆಯಾದ ಉಷಃಕಾಲ ರಮಣೀಯವಾಗಿತ್ತು. ಅರ್ಕಾವತಿ ನದಿಯೋ ನಮ್ಮೂರಿನ ಗದ್ದೆಯ ನಡುವೆ ಹರಿಯುವ ಹಳ್ಳಕ್ಕಿಂತಲೂ ಅತ್ತತ್ತ! ಗದ್ದೆಯ ಕಾಲುವೆ! ಅಲ್ಲಿ ಒಂದು ಬಂಡೆಯ ಮೇಲೆ ಕುಳಿತು”ನಾಡಿನ ಪುಣ್ಯದ ಪೂರ್ವ ದಿಗಂತದ” ಎಂಬ ಕವನವನ್ನು ಹಾಡಿದೆನು. ತರುವಾಯ ಹಿಂತಿರುಗಿ ಬರುವಾಗ ಭೀಮಸೇನರಾಯರು ಮಾರ್ಗದರ್ಶಿಯಾಗಿ ನಮ್ಮನ್ನೆಲ್ಲ ಕೆರೆಯೊಳಗೆ ಒಯ್ದು ಹಾಕುವುದರಲ್ಲಿದ್ದರು! ಜೊಂಡು ಬೆಳೆದು ಕಣ್ಣಿಗೆ  ಮೋಸಮಾಡುತ್ತಿದ್ದ ನೀರಿನಲ್ಲಿ ಅಶ್ವತ್ಥನಾರಾಯಣರಾಯರು ಮುಂದೆ ದೊಣ್ಣೆಯೂರಿಕೊಂಡು ಹೋಗಿ ಗುಳುಂಗಯವಾಗುವುದರಲ್ಲಿದ್ದರು. ಪುನಃ ಹಿಂದಕ್ಕೆ ಬಂದು ಬಳಸುದಾರಿಯಲ್ಲಿ ನಡೆದು ಊರು ಸೇರಿದೆವು! ತರುವಾಯ ಹೋಟೆಲುಗೆ ಹೋಗಿ ಸ್ನಾನ ಮಾಡಿದೆವು. ಆಮೇಲೆ ಮುನ್ಸೀಫರಾಗಿದ್ದ ಮಲ್ಲಪ್ಪನವರ ಮನೆಗೆ ಹೋದೆವು. ಅವರು ತಮ್ಮದೊಂದು ಕವನ ಓದಲು ಪ್ರಾರಂಭಿಸಿದರು. ಅದಂತೂ ‘ಬೋರಿಂಗ ಆಗಿತ್ತು. ಆಮೇಲೆ ಒಂದೇ ಒಂದು ಕಪ್ಪು ಹಾಲು ಕೊಟ್ಟರು. ಅಲ್ಲಿಂದ ಹಿಂತಿರುಗಿ ಬಂದೆವು. ಶ್ರೀನಿವಾಸ, ವಿಜಯದೇವರಿಗೆ ಕಾಗದ ಬರೆದೆ.(ಬೆಂಗಳೂರಿಗೆ ಹೋದ ಕೂಡಲೆ ತಿಗಣೆ ಕೊಲ್ಲುವ ಕೆಲಸ ಮಾಡಬೇಕು.)….. ಮಧ್ಯಾಹ್ನ ಪ್ರಿಯನಾಥ್ ಮಹಾರಾಜ್ ಅವರು ತಾವು ಬಂಗಾಳದ ಕ್ರಾಂತಿಕಾರರಾಗಿದ್ದಾಗ ಮಾಡಿದ್ದ ಡಕಾಯಿತಿಯ ವಿಚಾರ ಹೇಳಿದರು….. ನಾಲ್ಕೂವರೆ ಗಂಟೆಗೆ ಹೈಸ್ಕೂಲಿಗೆ ಹೋಗಿ ಅಲ್ಲಿಯ ಉಪಧ್ಯಾಯರೊಡನೆ ತಿಂಡಿ ತಿಂದೆವು….ಅಲ್ಲಿಂದ ಉಪನ್ಯಾಸಕ್ಕೆ ಹೋದೆವು.(ಮೈಸೂರು ವಿಶ್ವವಿದ್ಯಾನಿಲಯ ಏರ್ಪಡಿಸಿದ್ದ ವಿಶೇಷೋಪನ್ಯಾಸಗಳು.) ಒಂದೂವರೆ ಗಂಟೆ ಹೊತ್ತು  ಪದ್ಯವಾಚನ ಮತ್ತು ವಿಮರ್ಶೆ ಮಾಡಿದೆ… ಕೊಂಗಾಡಿಯಪ್ಪನವರಿಗೆ ನನ್ನ ಜೀವನಚರಿತ್ರೆ ಬೇಕಾಗಿದೆಯಂತೆ!

೨೩-೧೧-೧೯೩೨:

ದೊಡ್ಡಬಳ್ಳಾಪುರ. ಬೆಳಿಗ್ಗೆ ಎದ್ದು The Heart of India ಕಟ್ಟಡಗಳ ಕಡೆ ತಿರುಗಾಡಲು ಹೋದೆವು-ಸಾಯಂಕಾಲ ಸ್ವಾಮಿ ಚಿನ್ಮಾತ್ರಾನಂದರ(ಪ್ರಿಯನಾಥ್ ಮಹಾರಾಜ್)ಉಪನ್ಯಾಸ ಮತ್ತು ತರುವಾಯ ನನ್ನ ಕವಿತಾವಾಚನವಾಯಿತು… ಆಮೇಲೆ ಪಾಪಣ್ಣ(ರುಮಾಲೆ)ನವರ ನೂತನ ಗೃಹಪ್ರವೇಶಕ್ಕೆ ಹೋದೆವು! ಪಿ.ವೆಂಕಟಸುಬ್ಬಯ್ಯ ಎಂಬೊಬ್ಬರು ಚಿನ್ಮಾತ್ರಾನಂದರ ಉಪನ್ಯಾಸದಲ್ಲಿ ಸ್ವಲ್ಪ ಪ್ರತಿಭಟನೆ ತೋರಿದರು- ನಾಳೆ ಬೆಳಿಗ್ಗೆ ನಂದಿಬೆಟ್ಟಕ್ಕೆ ಹೋಗುವವರಿದ್ದೇವೆ.

೨೪-೧೧-೧೯೩೨:

ಬೆಳಿಗ್ಗೆ ಐದೂವರೆ ಗಂಟೆಗೆ ಸಂಚಾರ ಹೋದೆವು. ಬಂದು ಹಾಸಿಗೆ ಗಂಟುಮೂಟೆ ಕಟ್ಟಿದೆವು. ಶ್ರೀಯುತ ಕೊಂಗಾಡಿಯಪ್ಪನವರು ಸಿದ್ದಪಡಿಸಿದ ಬಸ್ಸಿನಲ್ಲಿ ಸುಮಾರು ಒಂಬತ್ತೂವರೆ ಗಂಟೆಗೆ ನಂದಿಗೆ ಹೊರಟೆವು. ಆದರೆ ಮೋಟಾರು ಬಸ್ಸು ನಗರದ ಬೀದಿಗಳಲ್ಲಿ ಮೆರವಣಿಗೆ ಹೊರಟಿತು! ಮನೆಮನೆಗಳ ಮುಂದೆ ನಮಗೆ ತೆಂಗಿನಕಾಯಿ ಹೂವಿನ ಹಾರಗಳ ವಿನಿಯೋಗವಾಯಿತು! ಅಮಲ್ದಾರರ ಮನೆಗೆ ಹೋಗಲು ನಮಗೆ ನಾವಿಳಿದುಕೊಂಡಿದ್ದ ಸ್ಥಳಕ್ಕೆ ಬಂದು ಮುನ್ಸೀಫರು, ಸಬ್ ರಿಜಿಸ್ಟಾರರು, ಎಲ್ಲರೂ ನಮ್ಮನ್ನು ನಾವಿಳಿದುಕೊಂಡಿದ್ದ ಸ್ಥಳಕ್ಕೆ ಬಂದು ಭೇಟಿಮಾಟಿದ್ದರು. ಅಮಲ್ದಾರರು ಬಂದಿರಲಿಲ್ಲ. ಆದರೂ ನಾನೊಬ್ಬನೇ ಕೊಂಗಾಡಿಯಪ್ಪನವರ ದಾಕ್ಷೀಣ್ಯಕ್ಕಾಗಿ ಹೋದೆ! ಭಾರತವಾಚನದ ಬಿಂದೂರಾಯರೂ ಅಲ್ಲಿಗೆ ಆಗತಾನೆ ಬಂದಿದ್ದರು. ಪ್ರಿಯನಾಥರು ಅಲ್ಲಿಗೆ ಬರಲಿಲ್ಲ. ಅಲ್ಲಿಂದ ದೇವಸ್ಥಾನಕ್ಕೆ ಹೋಗಿ ನಂದಿಗೆ ಹೊರಟೆವು.

ದಾರಿಯಲ್ಲಿ ರಮಣೀಯವಾದ ದೃಶ್ಯಗಳಿದ್ದುವು. ನಂದಿಬೆಟ್ಟ ಸಮೀಪವಾದಂತೆಲ್ಲ ಅದರ ಗಿರಿಶ್ರೇಣಿಯು ದಿಗಂತಕ್ಕೆದುರಾಗಿ ಶೃಂಗಶೃಂಗವಾಗಿ ಮೇಲೆದ್ದಿತು. ಅರ್ಧ ವರ್ತುಲಾಕಾರದ ಕಣಿವೆಯೊಂದು ರಮಣೀಯವಾದುದು.

ಸುಲ್ತಾನಪೇಟೆಯ ಬಸ್ ನಿಲ್ದಾಣದಲ್ಲಿ ನಮ್ಮ ಸಾಮಾನುಗಳನ್ನೆಲ್ಲ ಇಟ್ಟು ಮೇಲಕ್ಕೆ ಏರಿದೆವು. ನನಗೆ ಮಲೆನಾಡಿನ ಗಿರಿವನಗಳ ನೆನಪಾಯಿತು. ಬೆಟ್ಟವನ್ನಡರಿದ ಅರಣ್ಯಗಳು ನಿಬಿಡ ಶ್ಯಾಮಲವಾಗಿದ್ದುವು. ಹತ್ತುವ ಸೋಪಾನಶ್ರೇಣಿಯು ತರುಗಳ ಮಧ್ಯೆ ವಕ್ರವಕ್ರವಾಗಿ ಸರ್ಪಾಕಾರವಾಗಿತ್ತು. ಎಪ್ಪತ್ತುನಾಲ್ಕು ವರ್ಷದ ಮುದುಕರಾದ ಶ್ರೀಕೊಂಗಾಡಿಯಪ್ಪನವರು ಹತ್ತಿದ್ದಂತೂ ಆಶ್ಚರ್ಯವೇ. ಅಹೋಬಲಾಚಾರ್ಯನೆಂಬ ವ್ಯಾಸರಾಯ ಮಠದ ಹಾರುವನಂತೂ ಹೊಟ್ಟೆಬಾಕನೂ ಅತ್ಯಾಶಿಯೂ ಶೂದ್ರಜುಗುಪ್ಸಾಕರ ವ್ಯಕ್ತಿಯೂ ಆಗಿದ್ದಾನೆ. ವಾಸುದೇವಯ್ಯನವರು ನನ್ನ ಉಪನ್ಯಾಸಗಳಿಂದ ಅವರ ಜೀವನದಲ್ಲಿ ಹೊಸತೊಂದು ಅಧ್ಯಾಯ ಪ್ರಾರಂಭವಾಯಿತೆಂದು ಹೇಳಿದರು.

ಎಲ್ಲರೂ ಮೆಟ್ಟಲುಗಳನ್ನು ಹತ್ತೀಹತ್ತೀ ನೆತ್ತಿಗೆ ಬಂದೆವು. ನಂದಿಯು ರಮಣೀಯವೂ ಶಾಂತವೂ ಆದ ಸ್ಥಳ ಅಮೃತ ಸರೋವರವು ಆದರ್ಶವಾಗಿದೆ. ಕಿನ್ನರ ಪ್ರಪಂಚದಲ್ಲಿ ಇದ್ದಂತೆ! ಸುತ್ತಲೂ ಅನೇಕ ನೂರು ಮೈಲಿಗಳ ವಿಸ್ತಾರವಾದ ಬಯಲುಸೀಮೆಯ ದೃಶ್ಯ. ಇನ್ನೊಂದು ಮಾತ್ರ ಮಲೆನಾಡಿನ ಒಂದು ‘ದ್ವೀಪದಂತೆ!’ ಅಲ್ಲಲ್ಲಿ ಗುಡ್ಡಗಳು ಬೆಳ್ಳಗೆ ಕೆಂಪಗೆ ಹೊಳೆಯುವ ಕೆರೆಗಳು. ಹೋಟೆಲಿನಲ್ಲಿ ಊಟಮಾಡಿದೆವು. ಚೆನ್ನಾಗಿತ್ತು. ಅವರೆಲ್ಲರೂ ಹೊರಟು ಹೋದರು. ನಾನು, ಪ್ರಿಯನಾಥರು ಮತ್ತು ಅಶ್ವತ್ಥನಾರಾಯಣರಾಯರು ಮೂವರೆ ಉಳಿದೆವು. ಗ್ರಹಚಾರವಶಾತ್ ಮೋಡಕವಿದುಕೊಂಡಿತು. ದೃಶ್ಯವಿರಲಿ, ಮಂಜು ಕವಿದು ಸುತ್ತಲೂ ಲೋಕವೂ ನಾಕವೂ ಭೂಮಿಯೂ ಆಕಾಶವೂ ಒಂದು ಹಾಲ್ಗಡಲಂತೆ ತೋರಿತು.

ಅವರೆಲ್ಲ ಹೋದಮೇಲೆ ಸುಬ್ಬರಾಯರೆಂಬ ನಂದಿಯ ಮುಖ್ಯಾಧಿಕಾರಿಗಳು ನಮಗೆ ಇಳಿದುಕೊಳ್ಳಲು ಒಂದು ಲಕ್ಷಣವಾದ ಕೊಟಡಿಯನ್ನು ಕೊಟ್ಟರು. ಏಳೆಂಟು ಸ್ಪ್ರಿಂಗ್ ಮಂಚಗಳಿದ್ದವು. ಸ್ಥಳವು ದೊಡ್ಡ ದೊಡ್ಡ ಕಲ್ಲುಗಳ ತೊಲೆಗಳಿಂದ ಕಟ್ಟಿದ್ದ ಕಟ್ಟಡ. ಅಲ್ಲಿ ಕುಳಿತು ಹರಟೆ ಹೊಡೆದೆವು. ನಮ್ಮ ಹಾಸಗೆ ಪೆಟ್ಟಿಗೆ ಎಲ್ಲ ಸಂಜೆ ಐದೂವರೆ ಹೊತ್ತಿಗೆ ಬಂದುವು. ಆರು ಗಂಟೆಗೇ ನಮಗೆ ಕತ್ತಲೆಯಾಗಿ ಬಹಳ ಹೊತ್ತಾದಂತೆ ತೋರಿತು. ಆರೂವರೆಗೇ ಹೋಟೆಲಿನಲ್ಲಿ ಊಟಮಾಡಿದೆವು. ಮಳೆ,ಗಾಳಿ, ಮಂಜು, ಕತ್ತಲು! ಆಮೇಲೆ ನಾವಿಳಿದುಕೊಂಡಿದ್ದ ಕೊಟಡಿಗೆ ಬಂದು ಅನೇಕ ವಿಚಾರ ಕುರಿತು ಮಾತಾಡಿದೆವು. ನಾನು ವಿಜ್ಞಾನಕ್ಕೂ ಮತಕ್ಕೂ ಇರುವ ವ್ಯತ್ಯಾಸಗಳನ್ನು ಹೇಳಿ, ವಿಜ್ಞಾನದ ಶ್ರೇಷ್ಠತೆಯನ್ನು ವಿಸ್ತರಿಸಿ, ನಿಜವಾದ‘ದರ್ಶನ’ದಲ್ಲಿ ಬುದ್ದಿ ಭಾವಗಳೂ ವಿಜ್ಞಾನ ಮತ್ತು ಮತವೂ ಸೇರಿವೆ ಎಂದು ಹೇಳಿದೆ. ಒಂಬತ್ತುವರೆ ಗಂಟೆಗೇ ಮುಳುಗಿದೆವು ನಿದ್ರೆಯಲಿ! ರಾತ್ರಿ ಶ್ರೀನಿವಾಸ, ವಿಜಯದೇವ ಮೊದಲಾದವರೊಡನೆ ಇದ್ದಂತೆ ಕನಸು ಕಂಡೆ! ರಾತ್ರಯೆಲ್ಲ ಮಳೆಯೋ ಮಳೆ! ಭೋರೆಂಬ ಗಾಳಿಯ ಸದ್ದು!

೨೫-೧೧-೧೯೩೨:

ಬೆಳಿಗ್ಗೆ ಏಳುಗಂಟೆಗೆ ಎದ್ದೆವು. ರಾತ್ರಿ ಎಂಥಾ ನಿದ್ದೆ! ಬಹಳ ಸುಖವಾಗಿತ್ತು. ಎದ್ದು ನೋಡುತ್ತೇವೆ. ಅದೇ ಮಂಜು, ಮೋಡ, ಮಳೆ,ಗಾಳಿ, ಚಳಿ! ಬಾಗಿಲು ತೆರೆದರೆ ಸಾಕು ಮೋಡ ಕೊಟಡಿಯೊಳಗೆ ಬೆಳ್ಳಗೆ ಹೊಗೆಯಂತೆ ನುಗ್ಗುತ್ತಿತ್ತು! ಮುಖ ಪ್ರಕ್ಷಾಳನಾನಂತರ ಕಾಫಿ ಉಪ್ಪಿಟ್ಟು ಭದ್ರವಾಗಿ ಹೊಡೆದು ಹೊರಗೆ ಹೋದೆವು ಆ ರಂಪದಲ್ಲಿಯೆ! ಕಬ್ಬನ್, ಕನ್ನಿಂಗ್ಹಾಮ್ ಬಂಗಲೆ ಕಡೆಗೆ. ದೇವರೇ ಗತಿ! ಏನು ಹಿಮ? ಅಲ್ಲಿಂದಲೆ ಓಡುತ್ತಲೆ ಹಿಂತಿರುಗಿದೆವು. ತರುವಾಯ ನಾನೂ ಅಶ್ವತ್ಥರೂ ಪದ್ಯ ಓದಲು ತೊಡಗಿದೆವು. ಸೂಪರಿಂಟೆಂಡೆಂಟರಾದ ಸುಬ್ಬರಾಯರೂ ಅವರ ಸಹಾಧಿಕಾರಿಯೂ ಹೋಟಲಿನವರಾದ ರಾಮಚಂದ್ರಯ್ಯ ಎಲ್ಲರೂ ಬಂದರು. ಸುಮಾರು ಮಧ್ಯಾಹ್ನ ಹನ್ನೆರಡೂವರೆ ಗಂಟೆ ತನಕ ಕವನ ವಾಚನವಾಯಿತು. ಆ ಗಿರಿಶಿಖರದಲ್ಲಿ ಆ ನಿರ್ಜನತೆಯಲ್ಲಿ ಅದು ತುಂಬಾ ಮೋಹಕವಾಗಿತ್ತು. ತರುವಾಯ ಊಟ-ಹಗಲು ನಿದ್ದೆ. ಎರಡೂವರೆ ಗಂಟೆ ಹೊತ್ತಿಗೆ ಏಳಲೊಲ್ಲದೆ ಹಾಸಿಗೆ ಬಿಟ್ಟೆದ್ದೆವು. ಗಂಟುಮೂಟೆ ಕಟ್ಟಿ ಕೂಲಿಗಳಿಗೆ ಕೊಟ್ಟು, ಕಾಫಿ ತೆಗೆದುಕೊಂಡು ಹೊರಟೆವು. ಆ ಮಂಜಿನಲ್ಲಿ, ಮೋಡದ ಮಂಜಿನಲ್ಲಿ, ಆ ಚಳಿ ಉಡುರಿನಲ್ಲಿ! ಆ ಗಾಳಿಯಲ್ಲಿ! ಟಿಪ್ಪು ಬೀಳಿಗೆ(Tippu’s fall) ಹೋಗಲು ಹೊರಟೆವು. ಆದರೆ ಆ ಹವಾದಲ್ಲಿ ಮನಸ್ಸು ಬರಲಿಲ್ಲ. ಅಲ್ಲಿಂದ ಸುಬ್ಬರಾಯರ ಆಫೀಸಿಗೆ ಹೋಗಿ ಹೇಳಿ ಇಳಿಯತೊಡಗಿದೆವು. ನಮ್ಮ ಮೇಲೆ, ಸುತ್ತ, ಕೆಳಗೆ, ಬರಿಯ ಬಿಳಿಯ ಹಾಲ್ಗಡಲು ಆಕಾಶ! ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಕೆಳಗೆ ಬಂದೆವು. ಮಳೆ ಚಿಟಿಚಿಟಿ ಮಾಡುತ್ತಲೇ ಇತ್ತು. ರೇಜಿಗೆ ಹಿಡಿಸಿತ್ತು. ಷೆಡ್ಡಿನಲ್ಲಿ ಕುಳಿತೆವು. ಅವರಿಬ್ಬರೂ ನಂದಿಯ ದೇವಾಲಯ ನೋಡಲು ಹೋದರು. ನಾನು ಟಾಲ್ ಸ್ಟಾಯ್ ನ‘ಅನ್ನಾ ಕೆರಿನಿನಾ’ ಓದುತ್ತಾ ಕುಳಿತೆ. ಎರಡು ಅಧ್ಯಾಯ ಮುಗಿಸಿ ಅಲ್ಲಿದ್ದ ಒಬ್ಬರೈತನೊಡನೆ ಆ ಊರಿನ ವಿಚಾರ ಎಲ್ಲ ಕೇಳಿದೆ. ಅಲ್ಲಿಯ ಬೆಳೆಯೂ ಮಾತಿನ ವಿಷಯವಾಗಿತ್ತು. ಸ್ವಲ್ಪ ಹೊತ್ತಿನ ಮೇಲೆ ಪ್ರಿ…..ಅ….. ಇಬ್ಬರೂ ಬಂದರು. ಸಂಜೆ ಐದು ಗಂಟೆಯಾದರೂ ಬಸ್ಸು ಬರಲಿಲ್ಲ. ನಮಗೆ ಸಂದೇಹವಾಗಿ ರೈಲ್ವೇ ಸ್ಟೇಷನ್ನಿಗೆ ಫೋನ್ ಮಾಡಿದೆವು. ರೈಲು ಹೊರಡಲು ಐವತ್ತು ನಿಮಿಷ ಇದೆ ಎಂದರು. ಕೂಡಲೆ ಗಂಟುಮೂಟೆ ಹೊರಸಿಕೊಂಡು ಅಲ್ಲಿಗೆ ಹೊರಟೆವು. ದಾರಿಯಲ್ಲಿ ಬಸ್ಸು ಸಿಕ್ಕಿತು. ಅದನ್ನೇರಿ ರಾತ್ರಿ ಏಳೂವರೆ ಗಂಟೆಗೆ ಬೆಂಗಳೂರಿಗೆ ಬಂದೆವು.

೨೬-೧೧-೧೯೩೨:

ಬೆಂಗಳೂರಿನಲ್ಲಿ ಪ್ರಾತಃಕಾಲವೆಲ್ಲ ಮೋಡ ಮಳೆ ಮಬ್ಬು.‘ರಕ್ತರಜನಿ’ಪ್ರೂಫ್ ತಿದ್ದಿದೆ. The Faith of An Agnostic, Anna Karenina, sri Ramakrishna, ಇವುಗಳಲ್ಲಿ ಸ್ವಲ್ಪಸ್ವಲ್ಪ ಓದಿದೆ. ಮಧ್ಯಾಹ್ನ ಮೈಸೂರಿಗೆ ಹೊರಟೆವು. ಸಾಯಂಕಾಲ ಏಳುಗಂಟೆಗೆ ಮೈಸೂರು ತಲುಪಿದೆವು-ದಾರಿಯಲ್ಲಿ ಒಂದು ಹೆಣ ಹೂಳುತ್ತಿದ್ದುದನ್ನು ಕಂಡೆವು- ಬಿ.ಎಸ್.ರಾಮರಾಯರು ಇನ್ನೂ ಎರಡು ತಿಂಗಳಲ್ಲಿಯೆ ಕಥನಕವನಗಳನ್ನೂ ಸಣ್ಣ ಕಥೆಗಳನ್ನೂ ಅಚ್ಚುಹಾಕಿಸುವುದಾಗಿ ಮಾತುಕೊಟ್ಟಿದ್ದಾರೆ.‘ನವಿಲು’ ಅನ್ನೂ ಬೆಂಗಳೂರು ಪ್ರೆಸ್ಸಿಗೆ ಮುದ್ರಣಕ್ಕಾಗಿ ಕಳುಹಿಸಲು ಹೇಳಿದ್ದಾರೆ.

೮-೧೨-೧೯೩೨:

ಕತ್ತಿವರಸೆ ತಿರುಗಿಸುವವನು-ಪಾಪ! ಮುದುಕ, ಬಡವ,ಕರುಣೆಯನ್ನು ಉದ್ರೇಕಿಸುವ ವ್ಯಕ್ತಿ. ಆಶ್ರಮಕ್ಕೆ ಬಂದು ತಾನು ಕತ್ತಿವರಸೆಯಲ್ಲಿ ನಿಷ್ಣಾತನೆಂದೂ ಆಶ್ರಮದಲ್ಲಿ ಪ್ರದರ್ಶನ ಕೊಡುವೆನೆಂದೂ ಹೇಳಿ ಸ್ವಾಮಿ ಸಿದ್ದೇಶ್ವರಾನಂದರನ್ನು ಒಪ್ಪಿಸಿದ್ದನು. ಮೊನ್ನೆ ಆತನು ಹಾಡು ಹೇಳಿಕೊಂಡು ಕತ್ತಿ ತಿರುಗಿಸುವುದನ್ನು ನೋಡಿ ನಾನು ತಡೆಯಲಾರದೆ ಹೊರಗೆ ದೂರ ಹೋಗಿ ಚೆನ್ನಾಗಿ ನಕ್ಕುಬಿಟ್ಟೆ. ಎಲ್ಲ ಹಾಸ್ಯಾಸ್ಪದವಾಗಿತ್ತು. ಆಮೇಲೆ ಆತನು ವೀರಭಂಗಿಯಿಂದ ಕತ್ತಿವರಸೆ ಪ್ರದರ್ಶಿಸುತ್ತಾ ಆಲುಗಡ್ಡೆ, ಬದನೆಕಾಯಿ, ನೀರುಳ್ಳಿ, ಹೀರೆಕಾಯಿಗಳನ್ನು ಖಡ್ಗಪ್ರಯೋಗದಿಂದ ತುಂಡರಿಸಿದನು! ಆಲೂಗಡ್ಡೆಯನ್ನು ಯುಕ್ತಿಯಿಂದ ಖಡ್ಗ ಬೀಸಿ ಗಾಲಿಗಾಲಿಗಳಾಗಿ ಕತ್ತರಿಸುವುದೇನೊ ಪರ್ವಾಇಲ್ಲ. ಅಂತೂ ಆ ವೃದ್ಧಮೂರ್ತಿಯು ದಾರಿದ್ರ‍್ಯದ ದೆಸೆಯಿಂದ ನಗುವ ಜನಗಳ ಮುಂದೆ, ಅವರೆಲ್ಲ ತನ್ನ ಸಾಧನೆಯನ್ನು ಪ್ರಶಂಸಿಸುತ್ತಿದ್ದಾರೆ ಎಂದು ತಪ್ಪಾಗಿ ತಿಳಿದುಕೊಂಡು ಕತ್ತಿ, ಲಾಟಿಗಳಿಂದ ಕಷ್ಟಪಡುವುದನ್ನು ನೋಡಿದಾಗ ನನಗೆ ನಗುವೂ ಅಳುವೂ ಒಂದೇ ಸಾರಿ ಬರುವಂತಾಯಿತು. ಹಾ ಸೃಷ್ಟಿಯೆ! ಹಾ ಜೀವನವೆ! ಈಗ ಆತನು ಕತ್ತಿವರಸೆ ತೋರಿಸಲು ಎಂಟುಮುಕ್ಕಾಲು ಗಂಟೆಗೆ ಬಂದನು. ಆದರೆ ನಿನ್ನೆ ಏಳೂವರೆಗೆ ಬರುತ್ತೇನೆ ಎಂದಿದ್ದ. ಸುಬ್ರಹ್ಮಣ್ಯ ಅಯ್ಯರ್ ಮೊದಲಾದ ದೊಡ್ಡ ಮನುಷ್ಯರು‘ನಾಳೆ’ ಎಂದರಂತೆ.ಅದಕ್ಕೆ ಈಗ ಬಂದ. ಅವರೆಲ್ಲ ಏಳೂವರೆ ಗಂಟೆಗೇ ಬಂದು ನೋಡಿ ಹೊರಟುಹೋಗಿಬಿಟ್ಟಿದ್ದರು. ನಾನು ಆ ವಿಷಯವನ್ನು ಆತನಿಗೆ ತಿಳಿಸಲು ದೀರ್ಘವಾಗಿ ನಿಟ್ಟುಸಿರೆಳೆದು ಸುಬ್ರಹ್ಮಣ್ಯ ಅಯ್ಯರ್ ಅವರ ಮನೆಯ ದಿಕ್ಕಿಗೆ ಹೋದನು. ಆತನ ಕೈಯಲ್ಲಿ ಏನೋ ಒಂದು ಶೀಸೆ, ಒಂದು ತರಕಾರಿಯ ಗಂಟು ಇದ್ದುವು. ಬಹುಶಃ ಅವುಗಳೆಲ್ಲ ಅವನು ತನ್ನ ಖಡ್ಗ ಪ್ರಹಾರದ ಚಾತುರ್ಯ ಪ್ರದರ್ಶನಕ್ಕಾಗಿ ತಂದಿದ್ದಿರಬಹುದು! ನನ್ನ ಹೃದಯವು ಬಡವನಾದ ಆ ಮುದುಕಮೂರುತಿಯನ್ನು ನೋಡಿ ಕನಿಕರದಿಂದ ಕರಗಿಹೋಯಿತು. ಆತನು ಮೊಳಕಾಲವರೆಗೆ ಕೊಳಕು ಪಂಚೆ ಉಟ್ಟಿದ್ದಾನೆ. ನರೆತ ಗಿಡ್ಡನೆಗಡ್ಡ ಕ್ಷೌರಕ್ಕೂ ಕಾಸಿಲ್ಲದ ಅಭಾವಸೂಚಕವಾಗಿದೆ! ಕೊಳಕು ರುಮಾಲು! ಪಾಪ ಅಯ್ಯೋ ಅನ್ನಿಸುತ್ತದೆ. ಇದೇನು ಕನಿಕರದ ಕಣ್ಣೀರು ಬರುವಂತಾಯಿತು. ಶ್ರೀ ಗುರುದೇವ ನಮ್ಮನ್ನೆಲ್ಲ ಕ್ಷಮಿಸು! ಆತನನ್ನು ಕ್ಷಮಿಸಿ ಶಾಂತಿಯನ್ನು ದಯಪಾಲಿಸು!