೧೩-೧೨-೧೯೩೨:

ಬೆಳಿಗ್ಗೆ ಕ್ಲಾಸಿತ್ತು. ಹನ್ನೆರಡೂವರೆ ಗಂಟೆಗೆ ಕಾಲೇಜಿನಿಂದ ಬಂದಾಗ ರೊನಾಲ್ಸ್ ಎ.ಪೆನ್ ರೋಸ್(Ronald A.penrose) ದಂಪತಿಗಳು ನನಗಾಗಿ ಕಾದಿದ್ದರು. ಅವರು ಪ್ಯಾರಿಸ್ಸಿನಲ್ಲಿರುವ ರಾಜಾರಾಯರಿಂದ ನನ್ನ ವಿಚಾರವನ್ನು ಕೇಳಿ, ಇಲ್ಲಿಗೆ ಬಂದಾಗ ನನ್ನನ್ನು ನೋಡಲು ಬಂದಿದ್ದರು. ಅವರೀಗ ಕಲ್ಕತ್ತಾಕ್ಕೆ ಹೋದರು. ಅವರೊಡನೆ ಸ್ವಲ್ಪಹೊತ್ತು ಮಾತುಕತೆ ಆಡಿದೆವು. ನನ್ನ ಕವನಗಳ ವಿಚಾರ ಕೇಳಿದರು. ಇಂಗ್ಲಿಷಿಗೆ ತರ್ಜುಮೆ ಮಾಡಲು ಬಹಳ ಕಷ್ಟ ಎಂದು ಹೇಳಿದೆ. ಇಬ್ಬರೂ ಬಹಳ ವಿನಯವಿಶ್ವಾಸಗಳಿಂದ ನಡೆದುಕೊಂಡು ಬೀಳ್ಕೊಂಡರು.(ಪ್ಯಾರಿಸ್ಸಿನ ಸೌಂದರ್ಯವೇನೂ ಅವರಲ್ಲಿದ್ದಂತೆ ತೋರಲಿಲ್ಲ.!)

೧೯-೧೨-೧೯೩೨:

ಇಂದು ಅಖಿಲ ಭಾರತ ತತ್ತ್ವ ಮಹಾಸಮ್ಮೇಲನ ಮೈಸೂರಿನಲ್ಲಿ ಸೇರುತ್ತದೆ. ಆದರೆ ಮಹಾರಾಜರು ಅದನ್ನು ಪ್ರಾರಂಭಿಸುತ್ತಾರೆ. ಎಲ್ಲರೂ ದರ್ಬಾರು ಉಡುಪು ಹಾಕಿಕೊಳ್ಳಬೇಕಂತೆ! ಇದೇನು ಅವಿವೇಕ? ತತ್ತ್ವಸಮ್ಮೇಲನದಲ್ಲಿಯೂ ದಾಸ್ಯದ ಚಿಹ್ನೆಯೇ? ನಾನಂತೂ ಹೋಗುವುದೇ ಇಲ್ಲ.”ಕಡೆಯ ಪೂಜಾರಿಯ ಕರುಳಿನಿಂದ ಕಡೆಯ ದೊರೆಯ ಕುತ್ತಿಗೆಗೆ ನೇಣುಹಾಕಿದ ಹೊರತೂ ಮನುಷ್ಯಜಾತಿಗೆ ಮುಕ್ತಿಯಿಲ್ಲ.”-ತಡಿಯಂಡ ಮೋಳು ಶಿಖರ.

೨೭-೧೨-೧೯೩೨:

ಬೆಳಿಗ್ಗೆ ನಾನು, ಶ್ರೀನಿವಾಸ, ವಿಜಯದೇವ ಮಡಿಕೇರಿಗೆ ಹದಿನೆಂಡನೆಯ ಕರ್ಣಾಟಕ ಸಾಹಿತ್ಯ ಪೆರಿಷತ್ತಿನ ಅಧಿವೇಶನಕ್ಕಾಗಿ ಹೊರಟೆವು.( ಒಂದು ಬಸ್ಸನ್ನು ಗೊತ್ತು ಮಾಡಿದ್ದರು.ಪ್ರೋ.ವೆಂಕಣ್ಣಯ್ಯ,ಶ್ರೀಕಂಠಯ್ಯ, ರಾಜರತ್ನಂ ಮೊದಲಾದ ಮೈಸೂರಿನಿಂದ ಹೊರಡುವವರೆಲ್ಲ ಅದರಲ್ಲಿದ್ದರು.) ದಾರಿಯಲ್ಲಿ ಫ್ರೇಸರ್ ಪೇಟೆಯಲ್ಲಿ ಕೆಲವು ಸಣ್ಣ ಸಾಹಸಕೃತ್ಯಗಳಾದುವು: ಅಲ್ಲಿಯ ಹೋಟಲಿನಲ್ಲಿ ರಾಜರತ್ನಂ ಅದರ ಸೌಂದರ್ಯವನ್ನು ನೋಡಿದೆವು.

೨೮-೧೨-೧೯೩೨:

ಪರಿಷತ್ತಿನ ಅಧಿವೇಶನ ಪ್ರಾರಂಭವಾಯ್ತು. ಡಿ.ವಿ.ಗುಂಡಪ್ಪನವರ ಅಧ್ಯಕ್ಷ ಭಾಷಣ, ಏನು ಉತ್ಸಾಹ ಇಲ್ಲಿಯ ಜನರಿಗೆ! ಕಿಕ್ಕಿರಿದಿದ್ದರು.-ಸಾಯಂಕಾಲ ಒಂದು ಚರ್ಚೆ ಪ್ರಾರಂಭವಾಯಿತು. ಮಡಿಕೇರಿಯ ಶಂಭುಶಾಸ್ತ್ರಿ ಎಂಬುವನು ಹೊಸ ರೀತಿಯ ನವೋದಯದ ಕವನಗಳನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಗಾಂಭೀರ್ಯ ತಪ್ಪಿ ಖಂಡಿಸಿದನು. ಆ ಪಂಡಿತ ಮೂರ್ಖನಿಗೆ ಸಂಪ್ರದಾಯವಲ್ಲದ್ದೆಲ್ಲ ಕ್ಷುಲ್ಲಕವಾಗಿತ್ತು. ಅವನು ತನ್ನ ಖಂಡನೆಗೆ ನಿರ್ದೇಶಕವಾಗಿ ತೆಗೆದುಕೊಂಡದ್ದು ನನ್ನ ಕವನ ಸಂಗ್ರಹ ‘ಕೊಳಲು’ ಅಲ್ಲಿದ್ದ ಮೊದಲನೆ ಪದ್ಯದ ಮೊದಲನೆಯ ಎರಡು ಪಂಕ್ತಿಗಳು! ಅವನಿಗೆ ತಕ್ಕಶಾಸ್ತಿಯೆ ಆಯಿತು. ಮಾಸ್ತಿ, ಸಿ.ಕೆ.ವೆಂಕಟರಾಮಯ್ಯ, ಟಿ.ಎಸ್.ವೆಂಣ್ಣಯ್ಯನವರು, ತೀ.ನಂ. ಶ್ರೀಕಂಠಯ್ಯ ಒಬ್ಬರಾದಮೇಲೆ ಒಬ್ಬರು ಎದ್ದು ವೇದಿಕೆಗೆ ಏರಿ‘ಅಖಾಂಡಕ್ಕೆ’ಇಳಿದಂತೆ ಅದ್ಭುತವಾಗಿ ಪ್ರತಿಭಟಿಸಿದರು.

೨೯-೧೨-೧೯೩೨:

ಮಧ್ಯಾಹ್ನ ಓಂಕಾರೇಶ್ವರ ದೇವಾಲಯಕ್ಕೆ ಹೋದೆವು. ಅಲ್ಲಿಯ ಸರೋವರ ಬಹಳ ಮನೋಹರವಾಗಿದೆ. ಅಲ್ಲಿಯ ವಿಗ್ರಹ:ತುರುಕಣ್ಣಗೆ ಜುಟ್ಟುಬಿಡಿಸಿ ಲಿಂಗ ಕಟ್ಟಿ ಬಿಟ್ಟಿದ್ದಾರೆ! ಅದು ಮೊದಲು ಮಸೀದಿಯಾಗಿದ್ದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ.-ರಾತ್ರಿ ‘ಬೊಳಕಾಟ,’‘ಕೋಲಾಟ’ಗಳಾದುವು. ಕೋಲಾಟವು ಚೆನ್ನಾಗಿತ್ತು. ಬೆಳಿಗ್ಗೆ ಗದ್ದುಗೆಗೆ ಹೋದೆವು. ಆಮೇಲೆ ಕಾಡು ಬೆಟ್ಟ ಹತ್ತಿದೆವು.(ಆವಾಗಲೆ ಎಂದು ತೋರುತ್ತದೆ ನಾನು ರಾಜರತ್ನಂ ಇಬ್ಬರೂ‘ಪೂವಮ್ಮ’ಎಂಬ ಬಾಲೆಯನ್ನು ಸಂಧಿಸಿದ್ದು. ಅವಳ ಹೆಸರಿನಲ್ಲಿ ನಾವಿಬ್ಬರೂ ಒಂದೊಂದು ಕವನವನ್ನು ‘ಪೂವಮ್ಮ’ಎಂಬ ಶೀರ್ಷಿಕೆಯಲ್ಲಿಯೆ ಬರೆದಿದ್ದೇವೆ. ಪ್ರತ್ಯೇಕವಾಗಿ, ಸ್ವತಂತ್ರವಾಗಿ: ಅವರು ಬರೆಯುತ್ತಾರೆ ಎಂಬುದು ನನಗಾಗಲಿ, ನಾನು ಬರೆಯುತ್ತೇನೆ ಎಂಬುದು ಅವರಿಗಾಗಲಿ ತಿಳಿದಿರಲಿಲ್ಲ. ನಮ್ಮ ಕವನಗಳು ಅಚ್ಚಾದ ಮೇಲೆ ಅದು ಗೊತ್ತಾದದ್ದು. ಅವರದ್ದು ಎಂಡ್ಕುಡ್ಕ ರತ್ನನ ಶೈಲಿಯಲ್ಲಿದೆ. ನನ್ನದು ಸಾಹಿತ್ಯ ಭಾಷೆಯಲ್ಲಿದೆ. ಆದರೂ ಸಾಮ್ಯ ಎಷ್ಟು ಅದ್ಭುತವಾಗಿದೆ? ಕೆಲವು ಉಪಮೆಗಳಂತೂ ಒಂದು ಮತ್ತೊಂದರ ಭಾಷಾಂತರ ಎಂಬಂತಿವೆ!)

೩೦-೧೨-೧೯೩೨:

ಮರುದಿನ ತಲಕಾವೇರಿಗೆ ಮಾನಪ್ಪ ತಂದಿದ್ದ ಕಾರಿನಲ್ಲಿ ಹೋದೆವು. (ಮಡಿಕೇರಿ ಪರಿಷತ್ತಿನ ಅಧಿವೇಶನಕ್ಕೆ ತಪ್ಪದೆ ಬರಬೇಕೆಂದು ಡಿ.ಆರ್. ಮಾನಪ್ಪಗೆ ನಾನು ಕಾಗದ ಬರೆದಿದ್ದೆ ಶಿವಮೊಗ್ಗ ಮಿತ್ರರನ್ನೂ ಕರಕೊಂಡು ಅವನು ತಮ್ಮ ಕಾರಿನಲ್ಲಿ ಮಡಿಕೇರಿಗೆ ಆಗಮಿಸಿದ್ದ.) ಬ್ರಹ್ಮಗಿರಿಯ ನೆತ್ತಿಗೂ ಹತ್ತಿ ಅದ್ಭುತ ದೃಶ್ಯವನ್ನು ನೋಡಿದೆವು. (ಮುಂದೆ ನನ್ನ ಶ್ರೀರಾಮಾಯಣ ದರ್ಶನದಲ್ಲಿ ಬಳಸಿದ ಒಂದು ಮಹೋಪಮೇಯಲ್ಲಿ ಅದರ ವರ್ಣನೆ ಬರುವಂತಾಯಿತು: ೪-೮-೧೯೭೪) ಕುಂಡದಲ್ಲಿ ಸ್ನಾನ ಮಾಡಿದೆವು. ಮುಗಿಸಿ ಕೆಳಗಿಳಿದು ಭಾಗಮಂಡಲದಲ್ಲಿ ಶ್ರೀ ಸತ್ಯಗಿರಿನಾಥನ್ ಅವರ ನೇತೃತ್ವದಲ್ಲಿ ತಯಾರಾಗಿದ್ದ ಔತಣಸದೃಶವಾದ ಊಟವನ್ನು ಗಡದ್ದಾಗಿ ಹೊಡೆದೆವು…. ನಮ್ಮ ಕಾರಿನ ಸ್ವಿಚ್ ಕೀ ಪೀಕಲಾಟ. ಅಂತೂ ಬಸ್ಸಿನಲ್ಲಿಯೆ ಹಿಂತಿರುಗಿ ಬಂದೆವು…. ಶ್ರೀನಿವಾಸ ದಾರಿಯಲ್ಲಿ ವಾಂತಿ ಮಾಡಿಕೊಂಡ.- ರಾತ್ರಿ ನಾಟಕ. ಪಚೀತಿ. ವೆಂಕಣ್ಣಯ್ಯನವರ ಬಲಾತ್ಕಾರಕ್ಕೆ ಕವನ ಓದಲು ಹೋಗಿ ಆಭಾಸವಾಯ್ತು.

೩೧-೧೨-೧೯೩೨:

ಶಂಬುಭಟ್ಟನ ನವೋದಯ ಕಾವ್ಯದ ಖಂಡನೆಯನ್ನು ಪ್ರಾತ್ಯಕ್ಷಿಕವಾಗಿ ತುಂಡು ತುಂಡು ಮಾಡಿ ಖಂಡಿಸಲೊ ಎಂಬಂತೆ ಪ್ರೋ.ವೆಂಕಣ್ಣಯ್ಯ ಮೊದಲಾದವರ ಸಲಹೆಯಂತೆ ಬೆಳಗ್ಗೆ ನವೋದಯ ಕವನಗಳ ವಾಚನ ಏರ್ಪಟ್ಟಿತು. ಅಧೀವೇಶನದ ವಿಶಾಲ ಚಪ್ಪರದಲ್ಲಿ ಸಹೃದಯರು ಕಿಕ್ಕಿರಿದು ನೆರೆದಿದ್ದರು. ನಾನು ರಾಜರತ್ನಂ ಪ್ರಮುಖರಾಗಿದ್ದಂತೆ ನೆನಪು. ನಾನೇ ಸುಮಾರು ಒಂದೂವರೆ ಗಂಟೆಯ ಕಾಲ ವಾಚನ ಮಾಡಿದೆ. ಕರತಾಡನಗಳ ಸುರಿಮಳೆಯಾಗುತ್ತಿತ್ತು. ಜನರ ಉತ್ಸಾಹವೂ ತುದಿಗಾಲ ಮೇಲೆ ನಿಂತು ನಿರೀಕ್ಷಿಸುವಂತಿತ್ತು. ಆಗ ಸತ್ಯಾಗ್ರಹದ ಕಾಲ. ಎಲ್ಲೆಲ್ಲಿಯು ದೇಶಭಕ್ತಿಯ ಬೆಂಕಿ ಧಗಿಸುತ್ತಿದ್ದ ಕಾಲ. ಕೊಡಗು  ಬ್ರಿಟಿಷರ ಆಳ್ವಿಕೆಯಲ್ಲಿತ್ತು. ನಾವು ದೇಶೀಯ ಸಂಸ್ಥಾನದಿಂದ ಹೋಗಿದ್ದವರು: ಅಲ್ಲಿದ್ದ ರಾಜಕೀಯದ ಕಾವು ನಮಗೆ ಅಷ್ಟಾಗಿ ತಟ್ಟಿರಲಿಲ್ಲ. ಆದರೆ ಸೆರೆಮನೆಗೆ ಹೋಗಿ, ಲಾಠಿ ಏಟು ತಿಂದು ನಾನಾ ಕಷ್ಟಗಳನ್ನು ಸಹಿಸುತ್ತಿದ್ದ ಆ ಜನರಿಗೆ ನನ್ನ ದೇಶಭಕ್ತಿಯ ಕವನಗಳು ಬರಿಯ ಕಾವ್ಯವಾಗಿರಲಿಲ್ಲ. ಅಗ್ನಿಸ್ಪೋಟಕ ವಸ್ತುಗಳಾಗಿದ್ದವು. ನಾನು‘ಸತ್ಯಾಗ್ರಹಿ’,‘ಇಂದಿನ  ದೇವರು,’‘ಮಹಾತ್ಮಾ ಗಾಂಧಿ,’‘ಮೊತಿಲಾಲ ನೆಹರು,’‘ಭರತಮಾತೆಗೆ,’‘ಕಲ್ಕಿ,’‘ಪಾಂಚಜನ್ಯ’ಇವುಗಳನ್ನು ಒಂದಾದ ಮೇಲೆ ಒಂದರಂತೆ ವಾಚಿಸುತ್ತಾ ಹೋಗಲು ವಾತಾವರಣ ಅತ್ಯಂತ ಆಸ್ಪೋಟಕವಾಗತೊಡಗಿ‘ಭಾರತ ತಪಸ್ವಿನಿಗೆ’ಎಂಬ ಸಾನೆಟ್ಟನ್ನು ಧೀರ ಧ್ವನಿಯಿಂದ ವಾಚಿಸಿ ಮುಗಿಸಿದುದೆ ತಡ ಸಭೆಯಲ್ಲಿ ಅಣುಸ್ಪೋಟವಾದಂತಾಯಿತು:ಅಲ್ಲಲ್ಲಿ ಎದ್ದು ನಿಂತ ಸತ್ಯಾಗ್ರಹಿಗಳಾದ ಯುವಕರು ಕಿವಿ ಬಿರಿಯುವಂತೆ ‘ಮಹಾತ್ಮ ಗಾಂಧೀ ಕೀ ಜೈ’‘ಭಾರತ ಮಾತಾ ಕೀ ಜೈ!’‘ಕಾಂಗ್ರೆಸ್ ಜಿಂದಾಬಾದ್,’‘ಬ್ರಿಟಿಷರಿಗೆ ಧಿಕ್ಕಾರ!’ಇತ್ಯಾದಿ ಘೋಷಣೆಗಳನ್ನು ಅಬ್ಬರಿಸಿ ಕೂಗತೊಡಗಿದರು. ಕೈಬೀಸಿ, ಕೊರಳೆತ್ತಿ! ಅವರು ಎಷ್ಟು ಆವೇಶಪೂರ್ಣ ಉದ್ರಿಕ್ತರಾಗಿದ್ದರೆಂದರೆ ಯಾರು ಸಮಾಧಾನಪಡಿಸಿದರೂ ಪ್ರಯೋಜನವಾಗಲಿಲ್ಲ. ಸಭೆ ದಿಗ್ ಭ್ರಾಂತವಾಗಿ ಸ್ತಂಭಿತವಾಯಿತು. ಕಡೆಗೆ ಪೋಲಿಸಿನವರು ನುಗ್ಗಿ ಅವರನ್ನೆಲ್ಲ ದಸ್ತಗಿರಿ ಮಾಡಿ ಹೊರಗೆ ಕೊಂಡೊಯ್ದರು. ಅವರನ್ನೆಲ್ಲ ಪೋಲೀಸ್ ವ್ಯಾನಿನಲ್ಲಿ ಊರಿಂದ ಹೊರಗೆ ಸಾಗಿಸಿದರಂತೆ! ಅಂದರೆ ಸಭೆಯಲ್ಲಿ ಅನೇಕ ಜನ ಸಿ.ಐ.ಡಿ.ಗಳು ಮಫ್ತಿಯಲ್ಲಿದ್ದರು. ಅದರಲ್ಲಿ ಒಬ್ಬರು ನನ್ನನ್ನು ಯಾವಾಗಲೂ ಮಿತ್ರರಂತೆ ಹಿಂಬಾಲಿಸುತ್ತಾ ಇದ್ದರು. ನನ್ನ ಕವನಗಳನ್ನು ಹೊಗಳುವಂತೆ ನಟಿಸುತ್ತಿದ್ದರು. ತರುವಾಯ ಅವರು ನನಗೆ ಹಿತವಾದ ಹೇಳಿದರು: “ಪುಟ್ಟಪ್ಪನವರೆ, ಈ ಕೊಡಗಿನ ಜನ ಮೈಸೂರಿನಂಥವರಲ್ಲ. ನಿಮ್ಮ ಕವನಗಳನ್ನು ತಪ್ಪಾಗಿ ತಿಳಿದು ರಾಜಕೀಯಕ್ಕೆ ಪರಿವರ್ತಿಸಿ ಬಿಡುತ್ತಾರೆ. ಆದ್ದರಿಂದ ಇಲ್ಲಿ ಅಂತಹ ಕವನಗಳನ್ನು ಓದದಿರುವುದೆ ಲೇಸು.” ಎಂದು ಮುಸುಗಿನ ಎಚ್ಚರಿಕೆ!!

ಆಮೇಲೆ ಕೆ.ಪಿ.ಮುತ್ತಣ್ಣನವರೊಡನೆ ಶ್ರೀಮತಿ ಕೊಟೇಶ ಚಿನ್ನಪ್ಪನವರಲ್ಲಿಗೆ ಊಟಕ್ಕೆ ಹೋದೆವು. ಅವರು ಸತ್ಯಾಗ್ರಹದಲ್ಲಿ ಭಾಗಿಯಾಗಿ ಉತ್ತರಕ್ಕೆ ಹೋಗಿ ಬಂದವರಂತೆ. ಆ ಮನೆಯಲ್ಲಿ ಎಲ್ಲರೂ ತುಂಬಾ ಸುಸಂಸ್ಕೃತರಾಗಿದ್ದಂತೆ ಕಂಡಿತು. ಅವರ ಮಗಳೊಬ್ಬರು ಡೆಹರಾಡೂನಿನಲ್ಲಿದ್ದಾರಂತೆ. ಅವರು ನನ್ನ‘ಕೊಳಲ’ನ್ನು ಓದಿ ತಮ್ಮ ತಾಯಿಗೆ ನನ್ನನ್ನು ಔತಣಕ್ಕೆ ಕರೆಯೆ ಕಾಗದ ಬರೆದಿದ್ದರಂತೆ.(ಆ ಕಾಗದವನ್ನು ನನಗೆ ಓದಲು ಕೊಟ್ಟರು.) ನಾನು ಓದತೊಡಗಿದೆ. ನನ್ನ ವಿಚಾರವಾಗಿ ಅವರಿಗಿದ್ದ ಮೆಚ್ಚುಗೆ ಗೌರವಗಳನ್ನು ಮನಬಿಚ್ಚಿ ಪ್ರಶಂಸಿಸಿದ್ದರು. ಆ ಕಾಗದ ಎಲ್ಲಿ ವೈಯಕ್ತಿಕ ವಿಷಯಕ್ಕೆ ತಿರುಗುತ್ತೊ ಅಲ್ಲಿ ನಾನು ಮುಂದಕ್ಕೆ ಓದದೆ ನಿಲ್ಲಿಸಿಬಿಟ್ಟು, ಕಾಗದವನ್ನು ಹಿಂತಿರುಗಿಸಿದ್ದೆ. ಮುಂದಣ ಕಾಗದದಲ್ಲಿ ಜಾತಿಗೀತಿ ಭೇದವನ್ನು ನಿರ್ಲಕ್ಷಿಸುವ ಮತ್ತು ವಿವಾಹವಾಗುವ ವಿಚಾರವಿತ್ತೆಂದು ಊಹಿಸುತ್ತೇನೆ. ಅದಕ್ಕೆ ಪುಷ್ಟಿ ಕೊಡುವಂತೆ ಒಮ್ಮೆ ಆ ತರುಣಿ ತಮ್ಮ ತಂದೆ ತಾಯಿಯರೊಡನೆ ಮೈಸೂರಿನ ಶ್ರೀ ರಾಮಕೃಷ್ಣಾಶ್ರಮಕ್ಕೆ ಬಂದು ನನ್ನನ್ನು ಸಂಧಿಸಿದ್ದರು. ಅಲ್ಲದೆ ಹುಬ್ಬಳ್ಳಿಯ ಸಾಹಿತ್ಯ ಸಮ್ಮೇಳನಕ್ಕೆ ನಾನು ಕವಿ ಸಮ್ಮೇಳನದ ಅಧ್ಯಕ್ಷನಾಗಿ ಹೋಗಿದ್ದಾಗ ಅಲ್ಲಿಗೂ ಬಂದಿದ್ದರು. ಅಲ್ಲಿ ಡಾ.ಹರ್ಡೀಕರ್ ಅವರ ಮನೆಯಲ್ಲಿ ಮತ್ತು ಮುಂಬಯಿ ಶಾಸಕರಾಗಿದ್ದ ಮಾನ್ಯ ಶ್ರೀ ಕಂಬಳಿಯವರ ಸೌಧದಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ನಮಗೆ ಸಂತೋಷ ಕೂಟದ ಔತಣಗಳನ್ನು ಏರ್ಪಡಿಸಿದ್ದಾಗ ನನಗೆ ನೇರವಾಗಿ ಎದುರಾಗಿ ಆ ಸ್ಫುರದ್ರೂಪಿಣಿ ತರುಣಿಯೂ ಕುಳಿತಿದ್ದರು. ಪರಸ್ಪರ ಸಂಭಾಷಣೆಯೂ ನಡೆದಿತ್ತು. ಎಷ್ಟರಮಟ್ಟಿಗೆ ಎಂದರೆ ನನ್ನ ಕೆಲವು ಸಾಹಿತಿ ಸ್ನೇಹಿತರು ಅದರಲ್ಲಿ ಏನೊ ಒಂದು ಮಧುರಾರ್ಥ ಕಲ್ಪನೆಯನ್ನೂ ಮಾಡಿದ್ದರು! ಆದರೆ ವಿನಯ, ಸೌಂದರ್ಯ ಮತ್ತು ಗಾಂಭೀರ್ಯಗಳ ಮೂರ್ತಿಯೆ ಆಗಿದ್ದ ಆ ಸುಸಂಸ್ಕೃತ ತರುಣಿ ನನ್ನ ಗೌರವ ಪ್ರಶಂಸೆಗಳಿಗೆ ಭಾಜನರಾಗಿದ್ದರೇ ಹೊರತೂ ಅನ್ಯಥಾ ಭಾವಕ್ಕೆ ಅವಕಾಶ ಕೊಟ್ಟಿರಲಿಲ್ಲ. ಅಲ್ಲದೆ ಶ್ರೀ ಗುರುವಿನ ಎಚ್ಛೆ ನನ್ನಲ್ಲಿ ಯಾವ ಮಧುರ ಭಾವವೂ ಪ್ರಚೋದಿತವಾಗದಂತೆ ನೋಡಿಕೊಂಡಿತ್ತೆಂಬುದು ನನ್ನ ಸುದೃಢ ಶ್ರದ್ಧೆ: ನನಗಾಗಿ ಆತನು ಆರಿಸಲಿದ್ದ ಜೀವನಸಂಗಾತಿ ಬೇರೆಯೆ ಆಗಿದ್ದಾಗ ಇತರ ಪಾತ್ರದಲ್ಲಿ ಮನಸ್ಸು ರುಚಿಸುವುದೆಂತು?

ಸಾಯಂಕಾಲ ಗೋಪಾಲ ಸಂಗರ ಕಾರಿನಲ್ಲಿ ಮೂರುನಾಡಿನ ರಾಮನಾಯ್ಕರ ಮನೆಗೆ ಹೋಗಿ ಬಂದೆವು….

೨೧-೧-೧೯೩೩:

ಮಧ್ಯಾಹ್ನ ಶ್ರೀರಾಮಕೃಷ್ಣ ವಿದ್ಯಾರ್ಥಿನಿಲಯದಲ್ಲಿ ಕೋಲರಿಜ್ ಕವಿಯ”ದಿ ರೈಮ್ ಆಫ್ ದಿ ಏನ್ಷಂಟ್ ಮ್ಯಾರಿನರ್” ಎಂಬ ಕಥನ ಕವನವನ್ನು ಬಾಲಕರಿಗೆ ಓದಿದೆ. ಆಮೇಲೆ ಶ್ರೀನಿವಾಸನಿಂದ‘ಸಂನ್ಯಾಸಿ ಗೀತೆ’ಯನ್ನೂ ಚಂದ್ರಶೇಖರನಿಂದ‘ಗೊಲ್ಲನ ಗಾಯತ್ರಿ’ಯನ್ನೂ ಹಾಡಿಸಿದೆ.-ಸಾಯಂಕಾಲ ಶ್ರೀನಿವಾಸನನ್ನೂ ಚಂದ್ರಶೇಖರನನ್ನೂ ಕಿಟ್ಟಯ್ಯನ ಹೊಲಕ್ಕೆ ಕರೆದುಕೊಂಡು ಹೋಗಿ ನಾಳೆಯ ದಿನ ಜನ್ಮೋತ್ಸವದ ಸಭೆಯಲ್ಲಿ ಹೇಗೆ ವಾಚಿಸಬೇಕೆಂದು ತರಬಿಯತ್ತು ಮಾಡಿದೆ. ಶ್ರೀನಿವಾಸನನ್ನು ದೂರ ಬಂಡೆಯ ಮೇಲೆ ನಿಲ್ಲಿಸಿ ನಾನೂ ಚಂದ್ರುವೂ ದೂರ ಹೋಗಿ ನಿಂತು ಹೇಳಿಸಿ ಕೇಳಿದೆವು. ಆಕಾಶಕ್ಕೆದುರಾಗಿದ್ದು ಬೈಗಿನ ಬಣ್ಣಗಳೆದುರು ಮಷೀ ಚಿತ್ರವಾಗಿದ್ದ ಶ್ರೀನಿವಾಸ ಆಕಾರ ಕೆತ್ತಿಮೆತ್ತಿದ್ದ ಶಿಲ್ಪಕೃತಿಯಂತಿತ್ತು….

೨೨-೧-೧೯೩೩:

‘ವಿವೇಕವಾಣಿ’ ಪದ್ಯಗಳನ್ನೂ ಲೇಖನಗಳನ್ನೂ ಪ್ರತಿ ಎತ್ತಿಸಿದೆ. ವಿಜಯದೇವ, ಮರಿಯಪ್ಪ. ಬರೆದರು. ಸಾಯಂಕಾಲ ಸ್ವಾಮಿ ವಿವೇಕಾನಂದರ ಜನ್ಮೋತ್ಸವ ನಿಮಿತ್ತ ಸಾರ್ವಜನಿಕ ಸಭೆಯು ಬನುಮಯ್ಯನವರ ಶಾಲೆಯಲ್ಲಿ ನಡೆಯಿತು. ಮದರಾಸಿನ ತತ್ತ್ವಶಾಸ್ತ್ರ ಪ್ರೊII ಪಿ.ಎನ್.ಶ್ರೀನಿವಾಸಾಚಾರ್ಯರೂ ಕ್ಯಾಂಬೆಯ ಸುಂದರಶಾಸ್ತ್ರಿಗಳೂ ಪ್ರೊIIಟಿ.ಎಸ್.ವೆಂಕಣ್ಣಯ್ಯನವರೂ ಮಾತಾಡಿದರು. ಸರ್ವೆಂಟ್ಸ ಆಫ್ ಇಂಡಿಯಾ ಸೊಸೈಟಿಯ ಪಿ.ಕೋದಂಡರಾಯರ ಪರಿಚಯವಾಯಿತು. ಸ್ವಲ್ಪ ಮಾತಿನಿಂದಲೆ ಅವರ ನಮ್ರ ಭಾವವು ದೈನ್ಯ ಪ್ರದರ್ಶನವೂ ಅಂತರಂಗದ ಅಹಂಕಾರದ ಮಾರುವೇಷದಂತೆ ಕಂಡು ಬಂದುವು! ಇಂಥವರೆಲ್ಲ ಭರತಖಂದ ಸೇವಕರು ಎಂದು ಹೆಸರಿಟ್ಟುಕೊಂಡಿದ್ದಾರಲ್ಲಾ? ಏನು ಜಬರದಸ್ತು?!-ಶ್ರೀಮಾನ್ ವೆಂಕಟಕೃಷ್ಣಯ್ಯನವರು (ತಾತಯ್ಯ)ನನ್ನನ್ನು ಕರೆದು”you are a most spirited youth. No knew that Kannada had such powre before you wrote. I am immensly glad.” ಎಂದು ಮೊದಲಾಗಿ ಬಹಳ ದಯೆಯಿಂದ ಮಾತಾಡಿಸಿದರು. ನಾನು “ಎಲ್ಲಾ ತಮ್ಮ ಆಶೀರ್ವಾದ ” ಎಂದನು.- ಶ್ರೀನಿವಾಸ‘ಸಂನ್ಯಾಸಿ ಗೀತೆ’ಯನ್ನು ಸಾಧಾರಣ ಮಟ್ಟಿಗೆ ವೀರವಾಣಿಯಿಂದಲೆ ವಾಚಿಸಿದನು. ಡಿ.ಟಿ.ಚಂದ್ರಶೇಖರ ‘ಗೊಲ್ಲನ ಗಾಯತ್ರಿ’ಯನ್ನು ಚೆನ್ನಾಗಿಯೆ ಹಾಡಿದನು.

೨೩-೧-೧೯೩೩: ‘ಶಿಶು’ವಿನಲ್ಲಿ ಮೂರು ಕವನಗಳನ್ನು ಬರೆದೆ-ಕಲಾಸುಂದರಿಯು ಮಹಾತಪಸ್ವಿನಿ. ಆಕೆಯ ಬಾಹ್ಯತೇಜಸ್ಸು ಅಂತಃತಪಸ್ಸಿನ ಪ್ರತಿಫಲನ.

೨-೨-೧೯೩೩:

ವಿ.ವೆಂಕಟಾಚಾರ್,ಶ್ರೀನಿವಾಸನ್,ನರಹರಿ ಇವರು ಮಧ್ಯಾಹ್ನ ಮೂರು ಗಂಟೆಗೆ ಬಂದರು. ಸಂಜೆ ಏಳು ಗಂಟೆಯವರೆಗೂ ಆಶ್ರಮದ ನನ್ನ ಕೊಠಡಿಯಲ್ಲಿ ಅವರಿಗೆ ನನ್ನ ಅನೇಕ ಕವನಗಳ ವಾಚನ ಮಾಡಿದೆ. ಆಮೇಲೆ ಶ್ರೀನಿವಾಸನ್ ಅವರ ಕಾರಿನಲ್ಲಿ ಕುಕ್ಕನಹಳ್ಳಿಯ ಕೆರೆಯ ಮೇಲೆ ವಿಹಾರ ಹೋಗಿ ಬಂದೆವು. ನರಹರಿಯೊಡನೆ ಶ್ರೀರಂಗಪಟ್ಟಣಕ್ಕೆ ಹೋಗಿ ಕವನ ವಾಚನ ಒಪ್ಪಿಕೊಂಡೆ.

೩-೨-೧೯೩೩:

ಪಿ.ಗೋಪಾಲಕೃಷ್ಣ ಶೆಟ್ಟರೊಡನೆ ವ್ಯವಹರಿಸಿ ಚಿ.ರಾಜಮ್ಮಗೆ ಒಂದು ಸ್ವರ್ಣ ಪದಕದ ಚೈನನ್ನು ಕಳಿಸಿದೆ.

(ನನ್ನ ಚಿಕ್ಕಪ್ಪ ರಾಮಯ್ಯಗೌಡರ ಮಗಳು ಅವಳ ಮದುವೆ ನಂದಿಪುರದ ಬಿಳಿಯಪ್ಪಗೌಡರೊಡನೆ ನಡೆಯಲು ಗೊತ್ತಾಗಿತ್ತು.)

೪-೨-೧೯೩೩:

ಬೆಳಿಗ್ಗೆ‘ವಿವೇಕವಾಣಿ,’‘ನವಿಲು’ಗಳಿಗೆ ಮುನ್ನುಡಿ ಮತ್ತು ಟಿಪ್ಪಣಿಗಳನ್ನು ಬರೆದೆ. ಮಧ್ಯಾಹ್ನ ೩ ಗಂಟೆಗೆ ಶ್ರೀರಂಗಪಟ್ಟಣಕ್ಕೆ ಕವನವಾಚನ ಮಾಡಲು ಹೋಗುವಾಗ ನನ್ನೊಡನೆ ಬರಲು ಶ್ರೀನಿವಾಸ ವಿಜಯದೇವ ಒಪ್ಪಿದರು. ಈಶ್ವರಾನಂದರಿಗೆ ಅವರಿಗೆ ಅಪ್ಪಣೆಕೊಡುವಂತೆ ಹೇಳಿದ್ದೆ. ಪ್ರಿಯನಾಥ್ ಮಹಾರಾಜರು ವಿಜಯದೇವನ ಕೈಯಲ್ಲಿ ಅವರನ್ನು ಕಳಿಸುವಂತೆ ಕಾಗದವನ್ನು ಬರೆದುಕೊಟ್ಟರು. ಅಲ್ಲಿ ಏನು ನಡೆಯಿತೋ ಅವರು ಬರಲಿಲ್ಲ. ನಾನು ನರಹರಿಯೊಡನೆ ಅವರು ತಂದ ಕಾರಿನಲ್ಲಿ ಶ್ರೀರಂಗಪಟ್ಟಣಕ್ಕೆ ಹೋದೆ. ಅಲ್ಲಿ ಎರಡೂವರೆ ಗಂಟೆಯ ಹೊತ್ತು ಕವನವಾಚನ ಮಾಡಿದೆ.

೬-೨-೧೯೩೩:

ಜಿ.ಪಿ.ರಾಜರತ್ನಂರವರು ಕಿಟ್ಟಯ್ಯನ ಹೊಲದಲ್ಲಿ ಬಂಡೆಗಳ ಮೇಲೆ ಕುಳಿತು ಹೆಂಡ್ಕುಡ್ಕ ರತ್ನನ ಪದಗಳನ್ನು ಓದಿದರು. ಶ್ರೀನಿವಾಸ ವಿಜಯದೇವ ಮೊದಲಾದ ಎಲ್ಲಿ ವಿದ್ಯಾರ್ಥಿನಿಲಯದ ಹುಡುಗರೂ ಇದ್ದರು.

೭-೨-೧೯೩೩:

ಮಹಾರಾಣಿ ಕಾಲೇಜಿನವರು‘ಮಹಾರಾತ್ರಿ’ ನಾಟಕವಾಡುವುದಾಗಿಯೂ ಅದನ್ನು ಅಭಿನಯಪೂರ್ವಕವಾಗಿ ಓದುವುದನ್ನು ಹೇಗೆ ಎಂದು ತೋರಿಸಿಕೊಡಬೇಕೆಂದೂ ಕೇಳಿಕೊಂಡದ್ದರಿಂದ ಅಲ್ಲಿಗೆ ಹೋಗಿ ವಾಚನ ಮಾಡಿ ತೋರಿಸಿದೆ.

೮-೨-೧೯೩೩:

ವಿದ್ಯಾರ್ಥನಿಯರು‘ಮಹಾರಾತ್ರಿ’ ನಾಟಕಾಭ್ಯಾಸ ಮಾಡುವಾಗ ಅದನ್ನು ನೋಡಿ ಸಲಹೆ ಕೊಡಲು ಹೋಗಿದ್ದೆ.

೯-೨-೧೯೩೩:

‘ಮಹಾರಾತ್ರಿ’ ನಾಟಕಾಭ್ಯಾಸದ ಪ್ರಯುಕ್ತ ಮಹಾರಾಣಿ ಕಾಲೇಜಿಗೆ ಹೋಗಿದ್ದೆ ಹಿಂದಕ್ಕೆ ಬರುವುದು ರಾತ್ರಿ ಒಂಬತ್ತು ಗಂಟೆ ಆಗಿತ್ತು. ವಿದ್ಯಾರ್ಥಿನಿಲಯದಲ್ಲಿ ಔತಣಕ್ಕೆ ಕರೆದಿದ್ದರು. ಆದರೆ ನಾನು ಹೋಗಲಿಲ್ಲ. ಎರಡು ತುಂಡು ಬ್ರೆಡ್ ತಿಂದು ಹಾಲು ಕುಡಿದು ಮಲಗಿದೆ.

೧೧-೨-೧೯೩೩:

ಬೆಳಿಗ್ಗೆ ಎದ್ದು ಸ್ನಾನಮಾಡಿ ಗಂಟು ಮೂಟೆ ಕಟ್ಟಿದೆ, ಮನೆಗೆ ಹೊರಡಲು.(ಚಿಃರಾಜಮ್ಮನ ಮದುವೆಗಾಗಿ ಕುಪ್ಪಳಿಗೆ) ವಿಜಯದೇವನೂ ಬರುತ್ತಾನೆ ನನ್ನೊಡನೆ-ಬಿಸಿಲು, ಪೆನಾಲ್ಟಿ-(ಬಹುಶಃ ವಿಜಯದೇವನಿಗೆ ಅರ್ಧ ಟಿಕೆಟ್ಟು ತೆಗೆದುಕೊಂಡ್ದದ್ದು ತಪ್ಪು ಎಂದು ಟಿಕೆಟ್ ಚೆಕ್ ಮಾಡುವವನು‘ಪೆನಾಲ್ಟಿ’ ವಸೂಲು ಮಾಡಿದ್ದಿರಬೇಕು!) ಸಾಯಂಕಾಲ ಶಿವಮೊಗ್ಗಕ್ಕೆ ಬಂದೆವು. ಸ್ಟೇಷನ್ನಿನಲ್ಲಿ ಮಾನಪ್ಪ ಕಾದಿದ್ದ. ಹೊರಗೆ ಚಂದ್ರಶೇಖರ ಶೆಟ್ಟಿ, ಚಿದಂಬರಂ, ಪುಟ್ಟನಂಜಪ್ಪ ಎಲ್ಲ ಬಂದಿದ್ದರು. ಅಲ್ಲಿಂದ ಅಡಕೆ ಮಂಡಿಗೆ ಹೋದೆವು. ಸ್ನಾನಮಾಡಿ ಆಮೇಲೆ ಮಾತಾಡುತ್ತಾ ಕುಳಿತೆವು. ರಾತ್ರಿ ಒಂದು ಗಂಟೆಯ ಮೇಲೆ ಆಯಿತು. ನಾವು ಮಲಗಲು.‘ಮುಕ್ತಿರಾಹು’ ಮೊದಲಾದ ಕವನಗಳನ್ನು ಓದಿದೆ. ‘ಹರಿಶ್ಚಂದ್ರ ಕಾವ್ಯ’ ಮೊದಲಾದವುಗಳ ವಿಚಾರ ಮಾತಾಡಿದೆವು.

ರಾತ್ರಿ ೩ ಗಂಟೆಗೆ ಮಾನಪ್ಪ ಎಬ್ಬಿಸಿದ. ಕಾರಿನಲ್ಲಿ ಬೆಳಿಗ್ಗೆ ೬ ಗಂಟೆ ಹೊತ್ತಿಗಾಗಲೆ ಇಂಗ್ಲಾದಿಗೆ ಬಂದೆವು.

ಅಲ್ಲಿಂದ ಕುಪ್ಪಳಿಗೆ ಹೋದೆವು.

೧೨-೨-೧೯೩೩:

ಮನೆ ತುಂಬೆಲ್ಲ ಮದುವೆಗೆ ಮುನ್ನಿನ ಸಂಭ್ರಮ, ಕೋಲಾಹಲ! ನಂಟರಿಷ್ಟರ ಆಗಮನ, ಸ್ವಾಗತ ಇತ್ಯಾದಿ.

ಸಾಯಂಕಾಲ ನಾನು ಮಾನಪ್ಪ  ವಿಜಯದೇವ ಕವಿಶೈಲಕ್ಕೆ ಹೋದೆವು. ಎಂತಹ ವಾತಾವರಣ! ಅಲ್ಲಿ ಸ್ವಲ್ಪ ಹೊತ್ತು ಕುಳಿತು ಧ್ಯಾನ ಮಾಡಿದೆವು. ಧ್ಯಾನದ ಆನಂದವೊ! ಆಮೇಲೆ ಹಿಂತಿರುಗಿದೆವು.

೧೩-೨-೧೯೩೩:

ಬೆಳಿಗ್ಗೆ ಕವಿಶೈಲಕ್ಕೆ ಹೋಗಿ ಬಂದೆವು…. ಚಿIIರಾಜಮ್ಮನ ವಿವಾಹವಾಯಿತು.ಅಲ್ಲಿ ನೆರೆದ ಅನೇಕರಿಗೆ ಆ ಸನ್ನಿವೇಶದ ಗಂಭೀರತೆಯೆ ಮನಸ್ಸಿಗೆ ಬರುವುದಿಲ್ಲ ಎಂದು ತೋರುತ್ತಿತ್ತು. ಜೀವಗಳೆರಡು ಇಂದ್ರಧನು ಸದೃಶವಾದ ಪ್ರೇಮಪಾಶದಲ್ಲಿ ಬದ್ದವಾಗುವ ಸಮಯವದು. ಆದರೆ ಆ ವಾದ್ಯ, ಕೊಂಬು, ಕಹಳೆ, ಅನಿಷ್ಟ ಹಾರ್ಮೋನಿಯಂ ಇವುಗಳ ದಾಂಧಲೆಯಲ್ಲಿ ಆತ್ಮವು ಆಳಕ್ಕೆ ಮುಳುಗುತ್ತದೆಯೇ? ಗಗನಕ್ಕೆ ಎತ್ತರಕ್ಕೆ ಏರಬಲ್ಲುದೇ? ಅಂಗಳದಲ್ಲಿ ನಿರ್ಮಿಸಿದ್ದ ಮಂಟಪದಲ್ಲಿ ಧಾರೆಯಾಗುವಾಗ ನಾನು ಉಪ್ಪರಿಗೆ ಮೇಲೆ ಕುಳಿತು ‘ಶ್ರೀರಾಮಕೃಷ್ಣವಚನಾಮೃತ’ವನ್ನು ಓದುತ್ತಿದ್ದೆ… ಗಂಡಿನ ಕಡೆಯವರು ಹೋಗುವಾಗ ಕೆಳಕುಪ್ಪಳಿ ಜಡ್ಡಿನ ಹತ್ತಿರಕ್ಕೆ ಹೋಗಿ, ಎಲ್ಲರೂ ಅಳುತ್ತಿದ್ದುದಕ್ಕಾಗಿ ತಾನೂ ಅಳುತ್ತಿದ್ದ ರಾಜಮ್ಮನನ್ನು ಸಂತೈಸಿದೆನು.-ತರುವಾಯ ಹಿಂದಕ್ಕೆ ಬಂದು ನಾನು, ಮಾನಪ್ಪ, ವೆಂಕಟಯ್ಯ, ವಾಟಿಗಾರು ಮಂಜಪ್ಪಗೌಡರು ಐಯ್ಯಪ್ಪಗೌಡರು ಇನ್ನೂ ಕೆಲವರು ನಂಟರು ಕವಿಶೈಲಕ್ಕೆ ಹೋಗಿ ಸೂರ್ಯಾಸ್ತದ ರಮಣೀಯತೆಯನ್ನು ಆಸ್ವಾದಿಸಿದೆವು. ಅಲ್ಲದೆ, ಸಿರಸಿ ಸಿದ್ಧಾಪುರದ ಕರ ನಿರಾಕರಣೆಯ ಚಳವಳಿ ವಿಚಾರವಾಗಿ ಮಾನಪ್ಪ ಬಹಳ ದುರಂತ ಕತೆ ಹೇಳಿದ. (ಆಗ ಆ ಚಳವಳಿ ಉಗ್ರವಾಗಿ ನಡೆಯುತ್ತಿತ್ತು. ಬ್ರಿಟಿಷ್ ಸರಕಾರ ನಿಷ್ಕರುಣೆಯಿಂದ ತನ್ನ ಅಧಿಕಾರ ಚಲಾಯಿಸಿ, ಸಾವಿರಾರು ಜನರನ್ನು ಹಿಂಸಿಸಿ, ಸೆರೆಮನೆಗೆ ತಳ್ಳುತ್ತಿತ್ತು. ಹಳ್ಳಿಯ ಹೆಂಗಸರು ಮಕ್ಕಳು ನಿರ್ಗತಿಕರಾಗಿ ಕಡುಸಂಕಟಕ್ಕೆ ಒಳಗಾಗಿದ್ದರು. ಅವರಿಗಾಗಿ ಶಿವಮೊಗ್ಗ ಮುಂತಾದ ಸ್ಥಳಗಳಲ್ಲಿ ಶಿಬಿರಗಳನ್ನು ತೆಗೆದು ಅನ್ನ ಬಟ್ಟೆ ಕೊಟ್ಟು ಪೊರೆಯುತ್ತಿದ್ದರು, ಕಾಂಗ್ರೆಸ್ಸಿಗರು, ದೇವಂಗಿ ಮಾನಪ್ಪನೂ ಡಾ.ಹರ್ಡೀಕರ ಕಾನಕಾನಹಳ್ಳಿ ಸರ್ದಾರ್ ವೆಂಕಟರಾಮಯ್ಯ ಇವರಿಗೆ ಬೆಂಬಲವಾಗಿ ಮುಂದಾಳಾಗಿದ್ದನು.)

‘ಕವಿಶೈಲ’ಸರ್ದಾರ್ ವೆಂಕಟರಾಮಯ್ಯನವರು ಏನೋ ಒಂದು ಹಿಂದೀ ಪದ್ಯದ ಭಾಗವನ್ನು ಕೆತ್ತಿದ್ದಾರೆ: ಆ ಕವಿಶೈಲವೊಂದು ಪಾವನ ಮಂದಿರ!-

(ಸರ್ದಾರ ಎಂದು ದೇಶಭಕ್ತರಿಂದ ಬಿರುದು ಪಡೆದಿದ್ದ ಕಾನಕಾನಹಳ್ಳಿ ವೆಂಕಟರಾಮಯ್ಯನವರು ಪೋಲೀಸರ ಕೈಗೆ ಸಿಕ್ಕದೆ ತಪ್ಪಿಸಿಕೊಂಡು ತಲೆಮರೆಸಿಕೊಂಡೆ ಚಳವಳಿಯನ್ನು ನಿರ್ದೇಶಿಸುತ್ತಿದ್ದರು. ಅವರು ತಲೆ ಮರೆಸಿಕೊಂಡ ಆ ಅಜ್ಞಾತವಾಸವನ್ನು ಕುಪ್ಪಳಿಯ ಮನೆಯ ಉಪ್ಪರಿಗೆಯಲ್ಲಿ ಅವಿತು ಕಳೆದಿದ್ದರು, ಒಂದೆರಡು ತಿಂಗಳು! ಆಗ ಅವರು ಸಾಯಂಕಾಲ ನಮ್ಮ ವೆಂಕಟಯ್ಯನ ಜೊತೆಯಲ್ಲಿ ಆಗಾಗ ‘ಕವಿಶೈಲ’ಕ್ಕೆ ಹೋಗಿ ಬರುತ್ತಿದ್ದರಂತೆ. ಆಗ ಬಂಡೆಯ ಮೇಲೆ ದೇವನಾಗರಿ ಲಿಪಿಯಲ್ಲಿ ಆ ಪಂಕ್ತಿಗಳನ್ನು ಕೆತ್ತಿದ್ದರು.)

ಏಳು ಗಂಟೆಗೆ ಕತ್ತಲೆಯಾದ ಮೇಲೆ ಕವಿಶೈಲದಿಂದಿಳಿದು ಮನೆಗೆ ಬಂದೆವು. ಮೋಟಾರು ಕಾರು ಏರಿ, ಮೊದಲು ಉಂಟೂರಿಗೆ ಹೋಗಿ ನಾಗಪ್ಪಗೌಡರನ್ನು (ದೇವಂಗಿ ರಾಮಣ್ಣಗೌಡರ ತಮ್ಮಂದಿರು) ಮಾತಾಡಿಸಿ ಆಮೇಲೆ ಇಂಗ್ಲಾದಿಗೆ ಹೋದೆವು. ಅಲ್ಲಿ ರಾತ್ರಿ ಹತ್ತು ಗಂಟೆಯ ತನಕ ಜೀವ, ಜಗತ್ತು, ಈಶ್ವರ, ರಷ್ಯಾ, ನಾಸ್ತಿಕತೆ, ಖಗೋಲಶಾಸ್ತ್ರ, ಪ್ರಾಣಿಶಾಸ್ತ್ರ, ಜನನಶಾಸ್ತ್ರ ಇವುಗಳ ವಿಚಾರವಾಗಿ ನಾನಾ ಸಂಭಾಷಣೆಯಲ್ಲಿ ತೊಡಗಿದ್ದೆವು. ಶ್ರೀಗೌಡರೂ ನಾವೂ.(ದೇವಂಗಿ ರಾಮಣ್ಣಗೌಡರನ್ನು ಸಾಧಾರಣವಾಗಿ ಆ ಪ್ರಾಂತದವರೆಲ್ಲ‘ಗೌಡರು’ಎಂದೆ ಕರೆಯುತ್ತಿದ್ದರು.)

೧೪-೨-೧೯೩೩:

ಬೆಳಗ್ಗೆ ಎದ್ದು ಮೋಟಾರಿನಲ್ಲಿ ಹೊರಟೆವು. ದಾರಿಯಲ್ಲಿ ರಮಣೀಯ ದೃಶ್ಯಗಳನ್ನೂ ಜಿಂಕೆ ಕಾಡುಕೋಳಿ ಚೋರೆ ಇತ್ಯಾದಿ ಮೃಗ ಪಕ್ಷಿಗಳನ್ನೂ ನೋಡುತ್ತ ಸುಮಾರು ಒಂಬತ್ತು ಗಂಟೆಗೆ ಶಿವಮೊಗ್ಗಗೆ ಬಂದೆವು… ಮಂಜಪ್ಪಗೌಡರೊಡನೆ ಸತ್ಯ ಸೌಂದರ್ಯಗಳ ವಿಚಾರ ಮಾತನಾಡಿದೆ. ಮಾನಪ್ಪನಿಂದ ಬರ್ನಾಡ್ ಷಾನ An Intelligent woman’s Guide to socialism and Capitalism ಈಸಿಕೊಂಡು ಕೆಲವು ಭಾಗ ಓದಿದೆ.

ಸಾಯಂಕಾಲ ರೈಲು ಹತ್ತಿ ಮೈಸೂರಿಗೆ ಹೊರಟೆ ಮಿತ್ರರೆಲ್ಲ ಸ್ಟೇಷನ್ನಿಗೆ ಬಂದು ಬೀಳುಕೊಟ್ಟುರು.

೨೮-೨-೧೯೩೩:

ಕವಿಶೈಲದಲ್ಲಿ ಕಾನಕಾನಹಳ್ಳಿ ವೆಂಕಟರಾಮಯ್ಯನವರು ಕೆತ್ತಿದ್ದ ಹಿಂದೀ ಪಂಕ್ತಿಗಳಿವು;ದೇವನಾಗರಿ ಲಿಪಿಯಲ್ಲಿ:

“ನಾಮೀ ಪತ್ಥರ್ ಪರ್
ನಾಮ್ ಕವಿಯೋಂಕೆ ಅಮರ್”
“ಹೆಸರು ಪಡೆದ ಅರೆಯ ಮೇಲೆ
ಕವಿಯ ಹೆಸರು ಅಮರವಾಯ್ತು!”

೪-೩-೧೯೩೩:

Each must become God-like and beautiful who care to see God and Beaty- PLOTINUS.

೧-೪-೧೯೩೩:

ಈ ದಿನ ಸ್ವಾಮಿ ಪರಮಾನಂದರು ಮೈಸೂರಿಗೆ ಬಂದರು. ಅವರು ಅಮೆರಿಕೆಯಲ್ಲಿ ಇಪ್ಪತ್ತೇಳು ವರ್ಷಗಳಿಂದ ಶ್ರೀರಾಮಕೃಷ್ಣಾಶ್ರಮಗಳ ಅಧ್ಯಕ್ಷರಾಗಿದ್ದಾರೆ. ಅನೇಕ ಧಾರ್ಮಿಕಗ್ರಂಥಗಳನ್ನೂ ಧಾರ್ಮಿಕ(ಆಧ್ಯಾತ್ಮಿಕ ಧ್ವನಿಯ) ಕವನಗಳನ್ನೂ ಬರೆದಿದ್ದಾರೆ. ಅವುರ ಹನ್ನೊಂದೂವರೆ ಗಂಟೆಗೆ ಬಂದರು. ವಿದೇಶಗಳಲ್ಲಿದ್ದ ಅತಿಥಿಗೆ ಅಭ್ಯಾಸವಾಗಿದ್ದ ರೀತಿಯಲ್ಲಿ ಅವರಿಗೆ ಬೇಕಾದ ಸೌಕರ್ಯಗಳನ್ನೆಲ್ಲ ಕಲ್ಪಿಸಿದ್ದರು. ಅವರು ಉಳಿದುಕೊಳ್ಳುವ ರೂಮನ್ನು ಶೃಂಗರಿಸಿದುದು ಮಾತ್ರ ಅತಿ ನಾಜೋಕಾಗಿತ್ತು. ಆತಿಥ್ಯ ದೃಷ್ಟಿಯಿಂದ ಅದೇನೋ ಸರಿಯಾಗಿತ್ತು. ಆದರೆ ಅತಿಥಿಯ ದೃಷ್ಟಿಯಿಂದ ಅದು ಸ್ವಲ್ಪ ಅತಿಯಾಗಿತ್ತು. ಅವರ ವ್ಯಕ್ತಿತ್ವವು ಅಷ್ಟೇನೂ ಮಹೋಜ್ವಲವಾಗಿದಿದ್ದರೂ ಅಸಾಮಾನ್ಯವಾಗಿತ್ತು. ಅವರ ಮೃದು ಸ್ವಭಾವವು ಬಾಹ್ಯದಿಂದಲೆ ತಿಳಿಯುತ್ತಿತ್ತು. ಅವರಲ್ಲಿ ‘ಕವಿ’ಯೂ ಅಂತರ್ಗತವಾಗಿದ್ದನು. ಹೌದು, ಅವರ ತೇಜಸ್ಸಿಗೆ ಅವರ ಆತ್ಮದಲ್ಲಿದ್ದ ಕಾವ್ಯರಸ ಮತ್ತು ಕಾವ್ಯದೃಷ್ಟಿಗಳೂ ಬಹುಮುಖ್ಯ ಕಾರಣಗಳಾಗಿದ್ದುವು. ವಿಶ್ವದ ವ್ಯಕ್ತ ಸೌಂದರ್ಯದ ಉಪಾಸನೆಯು ಅವ್ಯಕ್ತ ಸೌಂದರ್ಯದ ಸತ್ಯದ ಅನುಭವವನ್ನು ಕಿಂಚಿತ್ತಾದರೂ ತಂದುಕೊಡುತ್ತದೆ. ಅವರಲ್ಲಿ ಅಮೆರಿಕಾದವರಿಗೆ ಸಹಜವಾದ ಸ್ವಲ್ಪ ಅಹಂಕಾರದ ಛಾಯೆಯೂ ಇತ್ತು. ಆದರೆ ಅದು ಸ್ವಾಭಾವಿಕವಾಗಿತ್ತು. ದೋಷಾರೋಪಣೆ ಮಾಡುವಂತಿರಲಿಲ್ಲ.

ಸಾಯಂಕಾಲ ಪೌರಮಂದಿರದಲ್ಲಿ (ರಂಗಾಚಾರ್ಲು ಪುರಭವನ) ಸಭೆ ಸೇರಿ ಅವರಿಗೆ ಬಿನ್ನವತ್ತಳೆ ಅರ್ಪಿಸಿದರು. ಅವರೂ ಮನೋಹರವಾಗಿ ಉತ್ತರವಿತ್ತರು. ಅವರ ಉಪನ್ಯಾಸವು ಭಾವಪೂರ್ಣವಾಗಿತ್ತು. ಆದರೆ ರವೀಂದ್ರನಾಥ ಠಾಕೂರ ಮುಂತಾದವರ ವಕ್ತೃತೆಯಲ್ಲಿ ಕಂಡುಬರುವ ಆಳವೂ ರಸದರ್ಶನವೂ ನನಗೆ ಕಂಡುಬರಲಿಲ್ಲ. ಅಂತೂ‘ಸಾಮಾನ್ಯ’ರಿಗೆ ಸ್ವಲ್ಪ ಆವೇಶಜನಕವಾಗಿತ್ತು. ಅವರ ಉಪನ್ಯಾಸಕ್ಕಿಂತಲೂ ಅವರು ವ್ಯಕ್ತಿಶಃ ಹೆಚ್ಚು ಉಜ್ವಲರಾಗಿದ್ದಾರೆ.-ಟೌನ್ ಹಾಲಿನಿಂದ ಹಿಂದಕ್ಕೆ ಆಶ್ರಮಕ್ಕೆ ನಡೆದು ಬರುತ್ತಾ ವಿದ್ಯಾರ್ಥಿನಿಲಯದ ಒಬ್ಬ ಹುಡುಗ,ಶ್ರೀಕಂಠ, ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ಸಂನ್ಯಾಸಿಯನ್ನು ನೋಡಿ ‘ಕಪಟ ಸಂನ್ಯಾಸಿ’ಎಂದು ಲೇವಡಿ ಮಾಡಿದನು. ನಾನು ‘ಹಾಗೆನ್ನಬಾರದು’ಎಂದು ಹೇಳಿ‘ಅಮೆರಿಕಾಕ್ಕೆ ಹೋಗಿ ಬಂದು,ಒಳ್ಳೆ ಉಡುಪು ಹಾಕಿಕೊಂಡ ಮಾತ್ರಕ್ಕೆ ದೊಡ್ಡವರಾಗುತ್ತಾರೆ. ಹಾಗಲ್ಲದೆ ಮೌನವಾಗಿ ಈಶ್ವರ ದರ್ಶನಾಕಾಂಕ್ಷಿಗಳಾಗಿರುವವರು ತಿರಸ್ಕೃತರು ಎನ್ನುವುದು ತಪ್ಪು.’ ಎಂದು ತಿಳಿಯ ಹೇಳಿದೆ.

ಆಮೇಲೆ ಶ್ರೀನಿವಾಸ ಮೊದಲಾದವರಿಗೆ-ವಿಶ್ವದಲ್ಲಿರುವ ಮಹತ್ತಿನ ವಿಚಾರವಾಗಿ ತಿಳಿಸಿದೆ:ಒಂಟಿಕೊಪ್ಪಲಿನ ದಿಬ್ಬದ ಹೊಲದಲ್ಲಿ ಮೊನ್ನೆ ಸಂಧಿಸಿದ ದುಡಿವರೈತ ಕಿಟ್ಟಯ್ಯನೂ, ಜಗತ್ತಿನ ಕೀರ್ತಿ ಐಶ್ವರ್ಯ ಪ್ರಶಂಸೆ ಪ್ರೇಮದೃಷ್ಟಿ ಇವುಗಳೊಂದರ ಬೆಂಬಲವೂ ಇಲ್ಲದೆ ಮೌನವಾಗಿ ಜಗತ್ತಿಗಾಗಿ ದುಡಿಯುತ್ತಿರುವ ಆ ಕಿಟ್ಟಯ್ಯನೂ, ಲೋಕದ ಕೀರ್ತಿ ಪ್ರಶಂದೆ ಧನ ಮಾನ ಸ್ಥಾನ ಪ್ರೀತಿ ಇವುಗಳೆಲ್ಲದರ ಬೆಂಬಲ ಮತ್ತು ಸ್ಫೂರ್ತಿಗಳಿಂದ ಪ್ರೇರಿತರಾಗಿ ಕೆಲಸಮಾಡುವ ಮಹಾಪುರುಷರೆಂದೆನಿಸಿಕೊಳ್ಳುವವರಿಗಿಂತಲೂ ಹೆಚ್ಚು ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ತಿಳಿಸಿದೆ. ಆದ್ದರಿಂದ ತಾತ್ಕಾಲಿಕ ಭಾವಕ್ಕೆವಶರಾಗಿ ಶರಣಾಗಿ ಅಭಿಪ್ರಾಯಗಳನ್ನು ಉಗುಳಬಾರದು. ಯಾವುದನ್ನೂ ವಿಚಾರಮಾಡಿ ತಡೆದು ತಡೆದು ಹೊಗಳಬೇಕು ಅಥವಾ ತೆಗಳಬೇಕು- ಕಾಲುನೆಕ್ಕುವ ನಮ್ರತೆಯೂ ಹೂಂಕರಿಸುವ ಟೊಳ್ಳು ಅಹಂಕಾರವೂ ಎರಡೂ ತಪ್ಪು. ಮಧ್ಯಮಾರ್ಗವೆ ಶ್ರೇಯಸ್ಸು, ಆತ್ಮಗೌರವವಿರಬೇಕು.ರಾತ್ರಿ ಬಹಳ ಹೊತ್ತು ಪರಮಾನಂದರು ಶಶಿ ಮಹಾರಾಜ್, ಸ್ವಾಮಿಜಿ(ಸ್ವಾಮಿ ರಾಮಕೃಷ್ಣಾನಂದ-ಸ್ವಾಮಿ ವಿವೇಕಾನಂದ) ಮೊದಲಾದವರ ವಿಚಾರ ಹೇಳಿದರು. ಸ್ವಾಮಿ ವಿವೇಕಾನಂದರು ಬಡ ಹುಡುಗನೊಬ್ಬನಿಗಾಗಿ ಕಣ್ಣೀರು ಸುರಿಸಿದ್ದನ್ನು ಹೇಳಿದರು.

ರಾತ್ರಿ ನಾನೊಂದು ಕನಸು ಕಂಡೆ: ಕನಸಿನಲ್ಲಿ ಸ್ವಾಮಿ ಬ್ರಹ್ಮಾನಂದರು ಸ್ವಾಮಿ ರಾಮಕೃಷ್ಣನಂದರು ಸ್ವಾಮಿ ಶಿವಾನಂದರೊಡನೆ ನಾನಿದ್ದೆ. ಸ್ವಾಮಿಜಿಯೊಬ್ಬರು ನನ್ನನ್ನು ಕರೆದು ಮುಳುಗುವ ಸೂರ್ಯನನ್ನು ತೋರಿಸಿದರು. ದೃಶ್ಯವು ಉಜ್ವಲ ಮನೋಹರವಾಗಿತ್ತು. ರವಿ ಬಿಂಬವು ಮೊದಲು ಮಬ್ಬಾಗಿದ್ದುದರಿಂದ ಕಾಣದಿದ್ದರೂ ಕಡೆಗೆ ಅತ್ಯಂತ ಉಜ್ವಲವಾಗಿ ಕಂಡಿತು. ಆ ದೃಶ್ಯವು ನನ್ನನ್ನು ಆಕರ್ಷಿಸಿ ಎಳೆಯತೊಡಗಿತು. ಬಿದ್ದರೆ ಬಹಳ ಆಳ!ನಾನು ಭಯಂಗೊಂಡು “ಸ್ವಾಮಿಜೀ!” ಎಂದು ಕೂಗಿಕೊಂಡೆ! ಅವರು ಕೈಹಿಡಿದು ಎಳೆದುಕೊಂಡರು. ಆಮೇಲೆ “ಯೋಗ ಮೂರ್ಛೆಗೆ ಸಂದೆನು!” ಇದೆಂತಹ ಸ್ವಪ್ನ?!

೨-೪-೧೯೩೩:

ಬೆಳಿಗ್ಗೆ ವಿದ್ಯಾರ್ಥಿ ನಿಲಯಕ್ಕೆ ಹೋಗಿ ಕನ್ನಡ ಹೇಳಿದೆ. ಅಲ್ಲಿಂದ ಆಶ್ರಮಕ್ಕೆ ಬಂದ ಮೇಲೆ ಸ್ವಾಮಿ ಪರಮಾನಂದರು ನನ್ನ ಕವನಗಳನ್ನು ಓದಲು ಹೇಳಿದರು. ಓದಿದೆ.‘ಗೊಲ್ಲನ ಗಾಯತ್ರಿ’‘ನಿನ್ನವನು ನಾನಲ್ಲವೆ?’‘ದಾರಿ ತೋರೆನಗೆ’ ಇಷ್ಟನ್ನು ಓದಿದೆ. ಅವರಿಗೆ ಸುತರಾಂ ತಿಳಿಯದಿದ್ದುದರಿಂದ ಎಷ್ಟರ ಮಟ್ಟಿಗೆ ಸಂತೋಷಪಟ್ಟರೊ ನಾನು ಬೇರೆ ಕಾಣೆ. ಆಮೇಲೆ ಅವರು ಅವರ ಇಂಗ್ಲಿಷ್ ವಚನ ಕವನಗಳನ್ನು ಓದಿದರು, ಹಾಡಿದರು!

೩-೪-೧೯೩೩:

ಸ್ವಾಮಿ ಪರಮಾನಂದರು ಬೆಂಗಳೂರಿಗೆ ಹೊರಟರು. ಅಲ್ಲಿಂದ ಮದರಾಸಿಗೆ ಹೋಗಿ ಕೊಲೊಂಬೊದಿಂದ ಅಮೆರಿಕಾಕ್ಕೆ ಹೋಗುತ್ತಾರೆ. ನಿನ್ನೆ ಸಾಯಂಕಾಲ ಅವರಿಗೆ ಸ್ವಲ್ಪ ಮೈ ಚೆನ್ನಾಗಿರಲಿಲ್ಲ. ಆದ್ದರಿಂದ ಅವರ ಮಾತುಕತೆಗಳ ಆನಂದ ನಮಗೆ ಲಭಿಸಲಿಲ್ಲ. ಅವರದು ಬಹಳ ಮೃದುಮಧುರ ಪ್ರಕೃತಿ! ಅವರಾತ್ಮವು ವಿಶ್ವದ ಸತ್ಯ ಸೌಂದರ್ಯಗಳಲ್ಲಿ ಚೆನ್ನಾಗಿ ಮಿಂದಿದೆ. ಅವರ ಮುಖದಲ್ಲಿ ಸಹಜವಾದ ತೇಜಸ್ಸಿದೆ; ಋಷಿಸದೃಶ್ಯವಾದ ಓಜಸ್ಸಿದೆ!

-ಬೆಳಿಗ್ಗೆ ಹೊರಡುವಾಗ ನನಗೆ ಅವರ The soul’s secret Door ಎಂಬ ವಚನ ಕವನಗಳ ಪುಸ್ತಕವನ್ನು ಕಯಪಾಲಿಸಿದರು. ಅದರಲ್ಲಿ ಹೀಗೆ ಬರೆದಿದ್ದಾರೆ:

Sriyut K.V.Puttappa
with my loving blessings
-paramananda

April 3rd 1933

ಹೊರಡುವಾಗ ನಾನು ಮಾಡಿದ ಭಕ್ತಿಯುತವಾದ ನಮಸ್ಕಾರಕ್ಕೆ ಆಶೀರ್ವಾದ ಪೂರ್ವಕವಾದ ಪ್ರತಿನಮಸ್ಕಾರ ಮಾಡಿ, ಮುಗುಳು ನಗುತ್ತಾ”I have left something for you, you will all be blessed.” ಎಂದು ಹೇಳಿದರು-ಅವರು ‘ಕವಿ-ಸಂನ್ಯಾಸಿ’ಮಹಾಭಕ್ತರು, Sweet to hear, sweeter to be near!

೮-೪-೧೯೩೩:

ಸಾಯಂಕಾಲ ಮೈಸೂರಿನಿಂದ ಶಿವಮೊಗ್ಗಗೆ ರೈಲಿನಲ್ಲಿ ಹೊರಟೆವು.

೯-೪-೧೯೩೩: ಬೆಳಿಗ್ಗೆ ಶಿವಮೊಗ್ಗ.

೧೧-೪-೧೯೩೩:

ಶಿವಮೊಗ್ಗದ ಮಿತ್ರರೊಡನೆ ಬೆಳಿಗ್ಗೆಯೆಲ್ಲ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿವೇಶನದಲ್ಲಿ ನಡೆದ ಗಲಿಬಿಲಿಯ ವಿಚಾರವಾಗಿಯೂ ‘ಜಯ ಕರ್ನಾಟಕ’ದಲ್ಲಿ ನನ್ನ ದೊಡ್ಡಬಳ್ಳಾಪುರದ ಉಪನ್ಯಾಸಗಳ ಮೇಲೆ ಬಂದ ಟೀಕೆಯ ವಿಚಾರವಾಗಿಯೂ ಮಾತಾಡಿ ಆ ಲೇಖನವನ್ನು ಓದಿದೆವು. (ನಾನು ಆ ಭಾಷಣಗಳಲ್ಲಿ ಡಿ.ವಿ.ಜಿ, ಮಾಸ್ತಿ, ಬಿ.ಎಂ.ಶ್ರೀ. ಮತ್ತು ಪಂಜೆ ಇವರ ಹೆಸರನ್ನು ಮಾತ್ರ ಆಚಾರ್ಯ ಸ್ಥಾನದಲ್ಲಿಟ್ಟುದಕ್ಕೆ ಉತ್ತರ ಕರ್ನಾಟಕದವರು ಕಟುವಾಗಿ ಆಕ್ಷೇಪಿಸಿದ್ದರು.) ಶಿವಮೊಗ್ಗದಲ್ಲಿ ಕಾ.ವೆಂ.ರವರನ್ನು ಕಂಡೆ.(ಬಹುಶಃ ಕಾನಕಾನಹಳ್ಳಿ ವೆಂಕಟರಾಮಯ್ಯನವರನ್ನೆ ಕುರಿತದ್ದಾಗಿರಬೇಕು.)

೧೩-೪-೧೯೩೩:

ಬೆಳಿಗ್ಗೆ ಹೊರಟು ಮೋಟಾರಿನಲ್ಲಿ ಕೆಮ್ಮಣ್ಣುಗುಂಡಿಗೆ ಹೋದೆವು. ಕೆಮ್ಮಣ್ಣು ಗುಂಡಿಯ ಕೆಲ ವರುಷಗಳಲ್ಲಿಯೆ ಮೈಸೂರಿನ ನೀಲಗಿರಿಯಾಗುವ ಸಂಭವವಿದೆ. ದೃಶ್ಯಗಳು ಭೀಕರವಾಗಿಯೂ ರಮಣೀಯವಾಗಿಯೂ ಭವ್ಯವಾಗಿಯೂ ಇದ್ದುವು….ನಾನು ದಾರಿಯಲ್ಲಿ ಆಗಲಿ ಇಂಗ್ಲಾದಿಗೆ ಬಂದೆ.

ಉಂಟೂರಿನ ಮೇಲಿರುವ ಒಂದು ಗುಡ್ಡದ ನೆತ್ತಿಯ ಅರೆಬಂಡೆಗೆ ಸಾಯಂಕಾಲ ಹೋಗಿ ಸ್ವಲ್ಪ ಧ್ಯಾನಮಾಡಿದೆ. ಅದಕ್ಕೆ‘ಹುಲಿಕಲ್ಲು’ಎಂದು ಹೆಸರಿಟ್ಟೆವು. ಅಲ್ಲೊಂದು ಹುಲಿಯ ಗುದ್ದೂ ಇದೆ. ಸ್ಥಳವೂ ‘ನವಿಲು ಕಲ್ಲಿ’ನಂತೆ ರಮಣೀಯವಾಗಿದೆ. ಟಾಲ್ ಸ್ಟಾಯ್ ರವರ ‘ವಾರ್ ಅಂಡ್ ಪೀಸ್’ಓದಿದೆ.

೧೪-೪-೧೯೩೩:

ಬೆಳಿಗ್ಗೆ ನಾನೂ ದೇ.ರಾ.ವೆಂ.ರವರೂ ಬೆಟ್ಟಗಾಡುಗಳಲ್ಲಿ ಸಂಚಾರ ಹೊರಟೆವು. ಹತ್ತುಗಂಟೆ ಹೊತ್ತಿಗೆ ಶಿವಮೊಗ್ಗದಿಂದ ಹುಡುಗರೆಲ್ಲ ಬಂದರು….

ಸಾಯಂಕಾಲ ಕೆಲವು ಪಾದ್ರಿಗಳೂ ಇಬ್ಬರು ಐರೋಪ್ಯರೂ ದೇವಂಗಿಯ ಆಸ್ಪತ್ರೆಯ ಬಳಿ ಬಂದು‘ಹರಿಕಥೆ’ ಮಾಡುತ್ತಾರೆಂದು ತಿಳಿಯಿತು. ಹಿಂದೂಮತವನ್ನೇನಾದರೂ ಖಂಡಿಸುತ್ತಾರೋ ನೋಬೇಕೆಂದು ಅಲ್ಲಿಗೆ ಏಳೂವರೆ ಗಂಟೆಗೆ ವೆಂಕಟಯ್ಯ  ಹಿರಿಯಣ್ಣ ಶ್ರೀನಿವಾಸ ವಿಜಯದೇವ ಮೊದಲಾದವರೊಡನೆ ಹೋದೆ. ಆದರೆ ನಾನು ಬಂದಿದ್ದು ನೋಡಿ ಉಪದೇಶಿ ಬಹಳ ಎಚ್ಚರಿಕೆಯಿಂದ ಮಾತಾಡಿಬಿಟ್ಟನು. ಅವನ‘ಹರಿಕಥೆ’ತಮಾಷೆಯಾಗಿತ್ತು. ಈ ಸಂಬಳದ ‘ಕಂಬಳಿಕುರಿ’ಗಳಿಂದ ಧರ್ಮಪ್ರಚಾರವಾಗುತ್ತದೆಯೇ? ಅಯ್ಯೋ ಯೇಸು! ಕಡೆಯಲ್ಲಿ ನಾನೂ ಎರಡು ಮಾತಾಡಿದೆ- ಜಗತ್ತಿನಲ್ಲಿ ಯೇಸುಕ್ರಿಸ್ತನಂತೆಯೆ ನೂರಾರು ಮಹಾತ್ಮರು ಹುಟ್ಟಿ ಸತ್ತಿದ್ದಾರೆ. ಅವರಲ್ಲಿ ಯೇಸುಕ್ರಿಸ್ತನು ಒಬ್ಬನು ಮಾತ್ರ. ಅವರವರು ಅವರವರ ಮತವನ್ನು ಸತ್ಯ ಧರ್ಮ ಪ್ರೇಮ ಇವುಗಳನ್ನು ಹಿಡಿದು ಅನುಸರಿಸಿದರೆ ಮೋಕ್ಷ ಲಭಿಸಿಯೆ ಲಭಿಸುತ್ತದೆ. ಬೇಕಾದುದು ನೀರು, ಅದನ್ನು ಯಾವ ಹೆಸರಿನಿಂದ ಕರೆದರೇನು? ಎಂಬ ಶ್ರೀಗುರುದೇವನ ತತ್ವವನ್ನು ಸ್ವಲ್ಪ ಹೊತ್ತು ವಿವರಿಸಿದೆ.

೧೫-೪-೧೯೩೩:

ಎ.ಸೀತಾರಾಂ,ಮಾನಪ್ಪ, ನರಸಿಂಹಮೂರ್ತಿ, ಇವರೆಲ್ಲರೂ ಬಂದಿದ್ದರು… ನಾವು ‘ನವಿಲು ಕಲ್ಲಿ’ಗೆ ಹೋಗಿ ಅತ್ಯಂತ ಭವ್ಯ ಸುಂದರವಾದ ದೃಶ್ಯವನ್ನು ನೋಡಿದೆವು. ಅಂತಹುದೇ ಮತ್ತೊಂದು ಮಹಿಮಾಮಯ ದೃಶ್ಯವನ್ನು ನಾನು ಬೇರೆ ಎಲ್ಲಿಯೂ ಕಂಡಿಲ್ಲ… ಮತ್ತೊಂದು ದಿನ ಸಾಯಂಕಾಲ ಕವಿಶೈಲದಲ್ಲಿ ಶ್ರೀ…. ವಿ…. ಯವರಿಗೆ ಗಾಯತ್ರಿ ಮಂತ್ರದ ವಿಚಾರವಾಗಿಯೂ ಧ್ಯಾನದ ವಿಚಾರವಾಗಿಯೂ ಬಹಳ ಹೊತ್ತು ಮಾತಾಡಿದೆ. ಆಮೇಲೆ ಎಲ್ಲರೂ ಧ್ಯಾನ ಮಾಡಿದೆವು. ತರುವಾಯ ‘ಓಂ ಹ್ರೀಂ ಋತಂ’ಪ್ರಾರ್ಥನೆ ಹೇಳಿದೆವು.

೩-೫-೧೯೩೩:

ಬೆಳಿಗ್ಗೆ ಎದ್ದು ಹೊಸಮನೆ ಮಂಜಪ್ಪಗೌಡರು, ಬಾಗಮನೆ ದೇವೇಗೌಡರು, ಶ್ರೀನಿವಾಸ, ವಿಜಯದೇವ, ದೇ.ರಾ.ವೆಂಕಟಯ್ಯ, ಕು.ರಾ.ವೆಂಕಟಯ್ಯ ಇತ್ಯಾದಿಯವರೊಡನೆ ಕುಡುಮಲ್ಲಗೆಗೆ ಹೋದೆವು….. ಅಲ್ಲಿ ನಾನು‘ಮಲೆನಾಡಿನ ಒಕ್ಕಲಿಗ ಯುವಕರ ಸಂಘ’ಕ್ಕೆ ಅದರ ವಾರ್ಷಿಕ ಸಭೆಗೆ ಅಧ್ಯಕ್ಷತೆ ವಹಿಸಿದೆ. ನನ್ನ ಭಾಷಣ ಅಚ್ಚಾಗಿದೆ. (‘ನಿರಂಕುಶಮತಿಗಳಾಗಿ’ಎಂಬ ಪುಸ್ತಕದಲ್ಲಿರುವುದು.) ಆ ದಿನವೆಲ್ಲ ನಡೆಯಬೇಕಾಗಿದ್ದ ಕಾರ್ಯಕ್ರಮಗಳನ್ನೆಲ್ಲ ಮಾಡಿ ಮುಗಿಸಿ ಸಾಯಂಕಾಲ ಏಳು ಗಂಟೆಯ ಹೊತ್ತಿಗೆ ಭಾಷಣ ಮಾಡಿ ಮುಗಿಸಿದೆ. ತರುವಾಯ ಹೊಸಮನೆ ಮಂಜಪ್ಪಗೌಡರೊಡನೆ ಸಂಚಾರ ಹೊರಟು, ಕಾಡಿನ ನಡುವೆ ತೀರ್ಥಹಳ್ಳಿಗೆ ಹೋಗುವ ರಸ್ತೆಯಲ್ಲಿ ನಡೆದು, ಅವರಿಗೆ ಫ್ರಾಯ್ಡ ಮೊದಲಾದ ಮನಃಶಾಸ್ತ್ರದ ಸಿದ್ಧಾಂತಗಳನ್ನು ತಿಳಿಸಿದೆ. ಶ್ರೀರಾಮಕೃಷ್ಣ, ವಿವೇಕಾನಂದ, ಟಾಲ್ ಸ್ಟಾಯ್, ಮಹಾತ್ಮಾಗಾಂಧಿ ಮೊದಲಾದ ಸಿದ್ಧಪುರುಷರನ್ನೂ ಸಾಧಕವ್ಯಕ್ತಿಗಳನ್ನೂ ಕುರಿತು ಮಾತಾಡಿದೆವು. …ರಾತ್ರಿ ೯-೩೦ ಕ್ಕೆ ನೆರೆದಿದ್ದ ಜನರಿಗೆ ನನ್ನ ಕೆಲವು ಕವನಗಳನ್ನು ಸುಮಾರು ಒಂದು ಗಂಟೆಯ ಹೊತ್ತು ವಾಚಿಸಿದೆ.

೪-೫-೧೯೩೩:

ಬೆಳಿಗ್ಗೆ ಅನೇಕ ವರ್ಷಗಳ ಹಿಂದೆ ಒಕ್ಕಲಿಗರಾಗಿದ್ದು ಕ್ರೈಸ್ತಪಾದ್ರಿಗಳ ಬೋಧನೆಗೆ ಸಿಕ್ಕಿ ಕ್ರೈಸ್ತರಾಗಿದ್ದ ವಯೋವೃದ್ಧ ಚನ್ನಪ್ಪಗೌಡರೊಡನೆ ಧರ್ಮ ದೇವರು ಮತ ಮತ್ತು ಸಮಾಜಗಳ ವಿಚಾರವಾಗಿ ಮಾತಾಡಿದೆ. ಅವರಿಗೆ ಶ್ರೀರಾಮಕೃಷ್ಣರ ಜೀವನ ಚರಿತ್ರೆಯನ್ನು ಓದಲು ಹೇಳಿದೆ. ಅವರು ಸ್ವಲ್ಪ ವ್ಯಸನಪೂರ್ವಕ ಧ್ವನಿಯಿಂದಲೆ ಹೇಳಿದರು. “ನಾವು ತರುಣರಾಗಿದ್ದಾಗ ಹೀಗೆ ಹೇಳುವವರು ಯಾರೂ ಇರಲಿಲ್ಲ. ನಮ್ಮಲ್ಲಿ ಆಗ ಪ್ರಚಲಿತವಾಗಿದ್ದುದು ಮೂಢಾಚಾರಗಳು ಮಾತ್ರ!” ಅಂದರೆ, ಈ ಸರ್ವಧರ್ಮ ಸಮನ್ವಯ ಭಾವ, ಈ ವೇದಾಂತ ದರ್ಶನದ ವಿಶ್ವವಿಶಾಲ ವೈಶಲ್ಯ ಇಂಥವುಗಳು ತಮಗೆ ತಿಳಿದಿದ್ದರೆ ಮತಾಂತರಗೊಳ್ಳದೆಯೆ ಸಮಾಜವನ್ನು ಉನ್ನತ ಮಟ್ಟಕ್ಕೆ ಎತ್ತುವ ಪ್ರಯತ್ನವನ್ನು ತಾವೂ ಮಾಡಬಹುದಾಗಿತ್ತು ಎಂಬರ್ಥದಲ್ಲಿ-

ಬೆಳಿಗ್ಗೆ ಒಂಬತ್ತು ಗಂಟೆಗೆ ಇಂಗ್ಲಾದಿಗೆ ಬಂದೆವು. ಸಾಯಂಕಾಲ ನಮ್ಮ ಮನೆಗೆ ಬಂದೆವು. ಅಲ್ಲಿಗೆ ಪುಟ್ಟಯ್ಯನಾಯಕರು ಮ್ತ್ತು ಮಂಜಪ್ಪನಾಯಕರು ಉಳಿದರು. ಹೊಸಮನೆ ಮಂಜಪ್ಪಗೌಡರು ಮೋಟಾರಿನಲ್ಲಿ ಶಿವಮೊಗ್ಗೆಗೆ ಹೋದರು. ಅದೇ ಮೋಟಾರಿನಲ್ಲಿ ನನ್ನ ಚರ್ಮದ ಕೈಪೆಟ್ಟಿಗೆ ಉಳಿದುಹೋಗಿದೆ. ತೆಗೆದುಕೊಳ್ಳುವುದನ್ನು ಮರೆತುಬಿಟ್ಟೆ. ಅದರಲ್ಲಿ ನನ್ನ ಹಸ್ತಪ್ರತಿಗಳೆಲ್ಲ ಬಹಳ ಇವೆ. ಅದು ಏನಾಗುವುದೋ ಎಂದು ಉದ್ವೇಗದಿಂದಿದ್ದೇನೆ. ಗುರುದೇವನ ಇಚ್ಛೆ ಇದ್ದಂತಾಗಲಿ. ಅಂತೂ ಸುರಕ್ಷಿತವಾಗಿ ಹಿಂದಕ್ಕೆ ಬರಲಿ ಎಂದು ಪ್ರಾರ್ಥಿಸುತ್ತೇನೆ-

ರಾತ್ರಿ ಮಹಾತ್ಮಾಗಾಂಧಿಯವರು ಮತ್ತೆ ಇದೇ ತಿಂಗಳು ಎಂಟನೆಯ ತಾರೀಖಿನಿಂದ ಕೈಕೊಳ್ಳಲಿರುವ ಉಪವಾಸ ಸತ್ಯಾಗ್ರಹವನ್ನು ಕುರಿತು ಮಾತಾಡಿದೆವು. ಈ ಸಾರಿ ಏನಾಗುತ್ತದೆಯೋ ದೇವರೇ ಬಲ್ಲ. ಅಂತೂ ಬಹಳ ಕಳವಳವಾಗಿದೆ.