ಸ್ವಾಮಿ ಸಿದ್ದೇಶ್ವರಾನಂದರು ಮೈಸೂರು ಆಶ್ರಮದ ಅಧ್ಯಕ್ಷತೆಯಿಂದ ಮದ್ರಾಸು ಕೇಂದ್ರದ ಅಧ್ಯಕ್ಷತೆಗೆ ವರ್ಗವಾಗಿ ಮೈಸೂರನ್ನು ಬಿಟ್ಟು ಹೋದಂದು ನನ್ನ ಬದುಕಿನಲ್ಲಿ ಮತ್ತೊಂದು ಪರಿವರ್ತನೆಯ ಮಹದ್ ಘಟ್ಟ ಮೊದಲಾಯಿತು ಎಂದು ಹೇಳಬಹುದು. ಆ ಪರಿವರ್ತನೆಯ ಪರಿಣಾಮ ತನ್ನ ಪೂರ್ಣಪ್ರಮಾಣದಲ್ಲಿ ಫಲಿಸಿದುದೇನೊ ನಾಲ್ಕು ವರ್ಷಗಳ ಅನಂತರವೆ, ನನ್ನ ಮದುವೆಯಲ್ಲಿ! ಆ ಅವಧಿಯಲ್ಲಿ ನನ್ನ ಚೇತನ ತ್ಯಾಗ ಭೋಗಗಳ ದ್ವಿಮುಖ ಆಕರ್ಷಣೆಗೆ ಒಳಗಾಗಿ ಹೊಯ್ದಾಡುತ್ತಿದ್ದುದು ನನ್ನ ಆ ಕಾಲದ ಬರಹದಲ್ಲಿ ಚೆನ್ನಾಗಿ ಮುದ್ರಿತವಾಗಿದೆ. ಭಾವಶ್ರೀಮಂತವಾದ ಕವಿಯ ರಸಮಯ ಚೇತನ ಕಾವಿಯ ಉಗ್ರ ಕಠೋರ ತಪಸ್ಯೆಗೆ ಹಿಂಜರಿಯ ತೊಡಗಿದುದನ್ನು ಅಂದಿನ ನನ್ನ ಅನೇಕ ಭಾವಗೀತೆಗಳು ಸಾರಿ ಹೇಳುತ್ತವೆ. ಅಂತರ್ಮನದ ಆಳದಲ್ಲಿ ನಿಜವಾದ ತ್ಯಾಗದ ಆಧಾರವಿಲ್ಲದ ದುರ್ದಮ್ಯ ಲೈಂಗಿಕ ಪ್ರವೃತ್ತಿಯನ್ನು ಕೃತಕ ಪ್ರಯತ್ನದಿಂದ ಅಡ್ಡಗಟ್ಟಿದರೆ ಅದು ವಿಕೃತಮಾರ್ಗಗಳಲ್ಲಿ ಛದ್ಮವೇಷಿಯಾಗಿ ನಡೆಯಲು ತೊಡಗುತ್ತದೆ. ಮೊದಮೊದಲು ಗಾಂಭೀರ್ಯದ ಎಲ್ಲೆಯೊಳಗಿರುವ ಕಲಾಸತ್ತೆಯಲ್ಲಿ , ಬರಬರುತ್ತ ಅನ್ಯರಿಗೆ ಅಗೋಚರವಾದ ಸ್ವಪ್ನಸತ್ತೆಯಲ್ಲಿ, ಕೊನೆಕೊನೆಗೆ ಮುಚ್ಚುಮರೆಯ ಜಾಗ್ರತ್ ಸತ್ತೆಯಲ್ಲಿ ಪ್ರಕಟಗೊಳ್ಳತೊಡಗುತ್ತದೆ. ತನ್ನ ಅವಿವೇಕಕ್ಕೂ ನಾನಾ ತತ್ವರೂಪದ ಮನೋಹರ ಕನದವಸ್ತ್ರಗಳನ್ನೂ ಹೊದಿಸಲು ಹಿಂಜರಿಯದ ನಾಚಿಗೆಗೇಡಿಗೂ ಇಳಿಯುತ್ತದೆ. ವ್ಯಕ್ತಿ ಬೇಗ ಎಚ್ಚತ್ತುಕೊಂಡು ಲೋಕವು ಶತಕೋಟಿ ವರ್ಷಗಳಿಂದ ಅನುಸರಿಸುತ್ತಿರುವ ದಾರಿಯನ್ನು ಹಿಡಿದನೇ ಬದುಕಿಬಾಳುತ್ತಾನೆ; ಇಲ್ಲವೆ, ಅಧೋಗತಿಗಿಳಿದು ನಾಶವಾಗುತ್ತಾನೆ. ಅಂತೂ ಶ್ರೀಗುರುಕರುಣೆ ನನ್ನನ್ನು ಅಧೋಗತಿಗಿಳಿಯದಂತೆ, ಸ್ವರ್ಗರೂಪದ ನರಕದಲ್ಲಿ ನನ್ನನ್ನು ಕೆಲಕಾಲ ಶಿಕ್ಷಿಸಿ, ಆಶ್ರಮದಿಂದ ಹೊರಗೆ ಕಳುಹಿ ರಕ್ಷಿಸಿದನು.ಸ್ವಾಮಿ ಸಿದ್ದೇಶ್ವರಾನಂದರ ತರುವಾಯ ಸ್ವಾಮಿ ಈಶ್ವರಾನಂದರೂ ಅವರ ತರುವಾಯ ಸ್ವಾಮಿ ದೇಶಿಕಾನಂದರೂ ಅಧ್ಯಕ್ಷರಾದರು. ಅವರೂ ಇತರ ಸ್ವಾಮಿಗಳೂ ನನ್ನನ್ನು ತುಂಬ ವಿಶ್ವಾಸಪೂರ್ವಕವಾದ ಗೌರವದಿಂದಲೆ ಕಾಣುತ್ತಾ ನನ್ನ ಸ್ವಾತಂತ್ರ‍್ಯಕ್ಕೆ ಯಾವ ಭಂಗವನ್ನೂ ಒಡ್ಡದೆ ನಡೆಸಿಕೊಂಡರು. ಆದ್ದರಿಂದ ನಾನು ಆಶ್ರಮ ಬಿಟ್ಟು ಬಂದುದಕ್ಕೆ ನನ್ನ ಅಂತಸ್ಸಾಕ್ತಿಯ ಪ್ರೇರಣೆಯೆ ಕಾರಣವಲ್ಲದೆ ಇತರರ ಹೊಣೆ ಯಾವುದೂ ಇಲ್ಲ. ನಿಜವಾದ ಆಶ್ರಮ ಧರ್ಮಕ್ಕೆ ನಿಷ್ಠವಾದ ಮನಃಸ್ಥತಿ ನನ್ನಲ್ಲಿ ಇಲ್ಲದಿರುವುದನ್ನೂ ಮತ್ತು ಎಷ್ಟು ಪ್ರಯತ್ನಿಸಿದರೂ ಪ್ರಾರ್ಥಿಸಿದರೂ ಆ ಸ್ಥಿತಿ ನನ್ನಲ್ಲಿ ಉಂಟಾಗುವ ಸೂಚನೆ ತೋರದಿರುವುದನ್ನೂ ಗಮನಿಸಿ ನಾನು ಆತ್ಮವಂಚನೆಗೆ ಪಕ್ಕಾಗಬಾರದೆಂದು ನಿಶ್ಚಯಿಸಿ ಆಶ್ರಮದಿಂದ ಹೊರಗೆ ಬಂದೆ.

ಆಗ ನನ್ನಲ್ಲಿದ್ದ ಒಳತೋಟಿಯನ್ನೂ ಮತ್ತು ಹೋರಾಟವನ್ನೂ ಅಭಿವ್ಯಕ್ತಗೊಳಿಸುವ ಒಂದೆರಡು ಭಾವಗೀತೆಗಳನ್ನು ನಿದರ್ಶನವಾಗಿ ತೆಗೆದುಕೊಳ್ಳಬಹುದು. ನನ್ನ ಚೇತನ ಸೋತು ಒಪ್ಪಂದ ಮಾಡಿಕೊಳ್ಳುವ ಪೂರ್ವದಲ್ಲಿ ತಕ್ಕಮಟ್ಟಿಗೆ ಕಲಿಯಾಗಿಯೆ ಕದನ ಹೂಡಿತ್ತು ಎಂಬುದು ಅದರಿಂದ ಗೊತ್ತಾಗುತ್ತದೆ. ಇದೊಂದು ಪ್ರಾರ್ಥನೆ:

ಕ್ಲೆಬ್ಯವನು ಸಂಹರಿಸೊ, ದೌರ್ಬಲ್ಯವನು ದಹಿಸೊ
ಹೃದಯಕ್ಕೆ ಪೌರುಷವ ದಯಪಾಲಿಸೊ!
ಮನವು ಸರಿ ಎಂದುದನು ಎದೆಯನುಸರಿಸುವಂತೆ
ದೃಢತೆಯಾ ನಡತೆಯನು ನನ್ನದೆನಿಸೊ!
ರಾಗಸಾಗರದಲ್ಲಿ ಭೋಗಾಭಿಲಾಷೆಗಳ
ಭೈರವ ತರಂಗಗಳು ಅಪ್ಪಳಿಸಲು
ಲೋಕಮೋಹಕ ಇಂದ್ರಜಾಲ ಸಂಮ್ಮೋಹನಕೆ
ಇಂದ್ರಿಯ ವಿಹಂಗಗಳು ಮನವಳುಕಲು,
ಕ್ಲೆಬ್ಯವನು ಸಂಹರಿಸೋ….

‘ರಾಗಸಾಗರದಲ್ಲಿ ಭೋಗಾಭಿಲಾಷೆಗಳ ಭೈರವ ತರಂಗಗಳು ಅಪ್ಪಳಿಸಲು’ಎನ್ನುವ ಉಕ್ತಿ ಸಂಪತ್ತಿನ ಶೈಲಿಯೆ ಕವಿಚೇತನವು ಎಂತಹ ಭಯಂಕರ ಭಾವಗಳ ಆವರ್ತಗರ್ತಕ್ಕೆ ಸಿಕ್ಕಿದೆ ಎಂಬುದನ್ನು ಸೂಚಿಸುತ್ತದೆ. ಮತ್ತೆ ಶ್ರೀಗುರುವನ್ನು ದೀನಾರ್ತವಾಗಿ ಹೀಗೆ ಬೇಡುತ್ತದೆ:

ಇದುವರೆಗೆ ನೀನೆನ್ನ ಕೈಹಿಡಿದು  ನಡೆಸಿರುವೆ,
ಇನ್ನಾದರೂ ನನ್ನ ಕೈಬಿಡದಿರು…
ವೈರಾಗ್ಯವೊಂದು ಕಡೆ ತನ್ನ ಮಹಿಮೆಯ ತೋರಿ
ಕೈಚಾಚಿ ಕರೆಯುತ್ತಿದೆ;
ಸೌಂದರ್ಯವೊಂದು ಕಡೆ ತನ್ನ ಮೋಹವ ಬೀರಿ
ಮೈಚಾಚಿ ಸೆಳೆಯುತ್ತಿದೆ…
ಒಂದು ಕಡೆ ಸ್ವಾತಂತ್ರ‍್ಯ, ಒಂದು ಕಡೆ ಮಾಧುರ್ಯ,
ನಡುವಿಹೆನು ಬಟ್ಟೆಗೆಟ್ಟು.
ಮುಕ್ತಿಯನ್ನೊಪ್ಪಲೋ? ಮಾಯೆಯನ್ನಪ್ಪಲೋ?
ತಿಳಿದ ನೀನೆನ್ನನಟ್ಟು!…

‘ತಿಳಿದ ನೀನೆನ್ನನಟ್ಟು!’ಎಂಬ ಉಕ್ತಿ ತುಂಬ ಅರ್ಥವತ್ತಾಗಿದೆ. ಅಂದರೆ, ಕವಿಯ ಮನಸ್ಸು ಅತ್ತ ಇತ್ತ ಉಯ್ಯಾಲೆಯಾಡುತ್ತಿದೆ. ತನ್ನ ನೈಜ ಸ್ವಭಾವ ಮತ್ತು ಸ್ವಧರ್ಮಗಳ ವಿಚಾರದಲ್ಲಿ ನಿಶ್ಚಿತೆಯಿಲ್ಲ. ಈ ತುಯ್ಯಾಲಾಟದಲ್ಲಿ ಕೊನೆಯ ನಿರ್ಣಯವನ್ನು ಶ್ರೀಗುರುವಿಗೆ ಬಿಟ್ಟುಕೊಡುತ್ತದೆ ಕವಿಚೇತನ. ತಾನೇ ಜವಾಬುದಾರಿ ಹೊರಲು ಹಿಂದೇಟು ಹಾಕುತ್ತಿದೆ! ನೀನೆ ನನ್ನನ್ನು ಸರಿಯಾದ ದಾರಿಗ ಅಟ್ಟು ಎಂದು ಮೊರೆಯಿಡುತ್ತಿದೆ. ಕಳುಹು, ಒಯ್ಯು, ನಡೆಸು ಎಂದಲ್ಲ‘ಅಟ್ಟು’ಎಂದು, ನನ್ನನ್ನು ಎಬ್ಬುವಂತೆ, ಎಲ್ಲವನ್ನೂ ತಿಳಿದಿರುವ ಗುರುದೇವನ ಕೈಗೆ ದೊಣ್ಣೆಯನ್ನು ಕೊಟ್ಟು‘ಜುಲುಂ’ಮಾಡಲು ಬೇಡುತ್ತದೆ.

‘ಇಂದ್ರಿಯ ಜಯ’ಎಂಬ ಒಂದು ಕವನದಲ್ಲಿ-

“ನೀ ಸತ್ತು ಸೂಡಿನಲಿ ಹೆಣ ಬೂದಿಯಾದಂದು
ನಿನಗೆ ಇಂದ್ರಿಯ ಜಯವು! ನೀನು ನಾನಾದಂದು!”

ಎಂದು, ಒಂದು ಹೆಣ್ಣು ಒಬ್ಬ ಸಾಧುವಿಗೆ ಕೈಗೆ ನೀಡಿದ ಮಂತ್ರಭಸ್ಮ ಹೇಳುತ್ತದೆ, ಸಂಪೂರ್ಣ ಇಂದ್ರಿಯ ಜಯ ಬದುಕಿರುವವನಿಗೆ ಸಾಧ್ಯವೆ ಇಲ್ಲ ಎಂಬರ್ಥದಲ್ಲಿ!

ಹಾಗೆಯೆ ‘ಮಾಯೆ-ಮುಕ್ತಿ’ಎಂಬ(ಸಾನೆಟ್) ಅಷ್ಟಷಟ್ಪದಿಯಲ್ಲಿ ಕವಿಯ ಮನಸ್ಸು ತನ್ನ ದಾರಿ ವೈರಾಗ್ಯದ್ದಲ್ಲ ಎಂಬ ನಿರ್ಣಯಕ್ಕೆ ಬಂದಿರುವುದು ಗೊತ್ತಾಗುತ್ತದೆ:

ಮರುಭೂಮಿ ಮಾರ್ಗದಲಿ, ವೈರಾಗ್ಯ ಸಾಧನದಿ
ಮುಕ್ತಿ?-ನಾನದನೊಲ್ಲೆ! ಅದು ನನ್ನ ಪಥವಲ್ಲ;
ರಸತಪಸ್ಸಿನ ಕವಿಯ ದರ್ಶನದ ಮತವಲ್ಲ!
ಸೌಂದರ್ಯ ಮಾಧುರ್ಯ ಸಂಮ್ಮೋಹ ನಂದನದಿ,
ಮಾಯಾ ಜಗತ್ತಿನ ಸಹಸ್ರಾರು ಬಂಧನದಿ
ಮಳೆಬಿಲ್ಲಿನಲಿ ಬಣ್ಣಗಳು ರಮಿಸುವಂದದಲಿ
ನಲಿಯುವೆನು ಹಾಸುಹೊಕ್ಕಾಗಿ. ಆನಂದದಲಿ
ಬಂಧನದ ನಾಡಿಯಲಿ ಹರಿಯುತಿದೆ ಮುಕ್ತಿನದಿ!
ತ್ಯಾಗ ತಾನೊಂದು ಕೈ, ಬೋಗ ತಾನೊಂದು ಕೈ,
ಯೋಗಿ ಕವಿ ಪರಿಯೆ ರಾಗಾಲಿಂಗನಕೆ ನೀಡಿ
ಥಕ್ಕಥೈ ಎಂದು ಕುಣಿದೈತಹಳು ಮುಕ್ತಿಯೈ,
ಮೈ ಮೈಯ, ಕೈ ಕೈಯನಪ್ಪಿ ಚುಂಬನಗೂಡಿ!
ನಿನಗೆ ಮಾಯಾ ಮೋಹದಂತೆಸೆವ ಪ್ರೇಯಸ್ಸು
ನನಗೆ ತಾನಹುದು ಮುಕ್ತಿಯ ಪರಮಶ್ರೇಯಸ್ಸು.

ಸ್ವಾಮಿಜಿ ಮದರಾಸಿಗೆ ನಿರ್ಗಮಿಸಿದ ಮರುದಿನವಲ್ಲ ಮರುದಿನದ ನನ್ನ ದಿನಚರಿ (೧೨-೯-೧೯೩೩) ಯಲ್ಲಿ ಹೀಗೆ ಜಿಜ್ಞಾಸೆ ನಡೆದಿದೆ:

“ಇಂದು psychology of Religion ವಿಚಾರ ಮಾಡಿದಂತೆಲ್ಲ ನನಗೆ ಬುದ್ದಿ ದೃಷ್ಟಿಯಿಂದ ಸಂಪೂರ್ಣ ಅಜ್ಞಾನ ಮತ್ತು ಆಶ್ಚರ್ಯಗಳೇ ಕಟ್ಟಡಕಡೆಯ ಸಿದ್ದಾಂತಗಳೆಂದು ತೋರುತ್ತಿದೆ. ಆಶ್ಚರ್ಯ ಚಿಹ್ನೆಗಳಿಂದ ಪರಿವೃತವಾದ ಪ್ರಶ್ನೆಚಿಹ್ನೆಗಳು ಮತ್ತು ಅವುಗಳನ್ನೆಲ್ಲ ಸುತ್ತುವರಿದ ಒಂದು ದೊಡ್ಡ ಸೊನ್ನೆ!???! ಇದೇ ನಮ್ಮ ಜ್ಞಾನಕ್ಕೆ ದೃಷ್ಟಾಂತ ಚಿತ್ರ. ನನ್ನಿಯು ಅನಿರ್ವಚನೀಯ, ಅಚಿಂತ್ಯ, ಆದರೆ ಅನುಭವಸಾಧ್ಯ ಎಂದು ನನಗೆ ದಿನದಿನವೂ ಹೆಚ್ಚುಹೆಚ್ಚಾಗಿ ಹೊಳೆಯುತ್ತಿದೆ. ಈ ಇಂದ್ರಿಯ ಜಗತ್ತಿನ ಹಿಂದಿರುವ ಅತೀಂದ್ರಿಯ ವಿಶ್ವವು ಇಷ್ಟು ಮಧುರವಾಗಿ ನನ್ನೆದೆಗೆ ಆಗಾಗ್ಗೆ ಗೋಚರಿಸುತ್ತಿದೆ! ಹೇ ಗುರುದೇವ, ಅದರ ವಿಚಾರವಾಗಿ ನಾವು ಆಲೋಚಿಸಿದುದೆಲ್ಲ ಅಲ್ಲಿ ಸುಳ್ಳಾಗಲಿ ಎಂಬುದೇ ನನ್ನ ಹಾರೈಕೆ. ಏಕೆಂದರೆ ಆಲೋಚನೆಯು ಬುದ್ದಿಯ ಸಾಂತತೆಯಿಂದ ಕಲುಷಿತವಾದುದು.

ಹೇ ಗುರುದೇವ, ನಾವು ಅನುಭವಿಸುವುದೆಲ್ಲ ಅಲ್ಲಿ ದಿಟವಾಗಲಿ! ಏಕೆನೆ, ಅನುಭವವು ರಸರೂಪಿ.”

ಅದರ ಮರುದಿನ (೧೩-೯-೧೯೩೩) ದಿನಚರಿಯಲ್ಲಿ ನನ್ನ ಸಾಹಿತ್ಯಕ್ಕೆ ಜೀವನದ ಒಂದು ಪ್ರಮುಖ ಪ್ರಕಟಣೆಯ ಪ್ರಸ್ತಾಪ ಬರುತ್ತದೆ: ‘ಪಾಂಚಜನ್ಯ’ಕವನಸಂಗ್ರಹದ ವಿಷಯ. ನನ್ನ ನಾಟಕ‘ರಕ್ತಾಕ್ಷಿ’ಯನ್ನು ಪ್ರಕಟಿಸಿದ ಶಿವಮೊಗ್ಗ ಕರ್ಣಾಟಕ ಸಂಘವೆ‘ಪಾಂಚಜನ್ಯ’ವನ್ನೂ ಪ್ರಕಟಿಸಿತು. ಆಗ ಸಂಘದ ಪ್ರಮುಖ ಪ್ರಚೋದಕ ಶಕ್ತಿಯಾಗಿ ಅದರ ಮುಖ್ಯ ಕಾರ್ಯದರ್ಶಿಯಾಗಿದ್ದ ಕೂಡಲಿ ಚಿದಂಬರಂ ಅವರು ಕೃತಿಯ ಸಂಪಾದನೆಯ ಭಾರವನ್ನು ಹೊತ್ತಿದ್ದರು. ಆ ಸಂಗ್ರಹದಲ್ಲಿದ್ದ ಕವನಗಳನ್ನು ಕುರಿತು ಅವರು ಬರೆದ ನಾಲ್ಕು ಮಾತುಗಳು ಅಧ್ಯಯನ ಯೋಗ್ಯವಾಗಿವೆ. ಅಲ್ಲದೆ ಅದೇ ದಿನಚರಿಯಲ್ಲಿ ಎಲ್.ಗುಂಡಪ್ಪನವರ‘ಸರಳರಗಳೆ’ಯ ವಿಚಾರವಾಗಿ ಆಗ ನನಗಿದ್ದ ಅಭಿಪ್ರಾಯ ಸಹಿತವಾಗಿ: ಆದ್ದರಿಂದ ಅದನ್ನಿಲ್ಲಿ ಪೂರ್ತಿಯಾಗಿಯೆ ಕೊಡುತ್ತಿದ್ದೇನೆ.

೧೩-೯-೧೯೩೩:

ಬೆಳಿಗ್ಗೆ ವಿದ್ಯಾರ್ಥಿನಿಲಯಕ್ಕೆ ಹೋಗಿ ಶ್ರೀನಿಗೆ ಕನ್ನಡ ಪಾಠ ಹೇಲಿಕೊಟ್ಟೆ. ಅಲ್ಲಿಂದ ಬಂದವನು”ಸೊಬಗನೇಕೆ ಹಳಿಯುತಿರುವೆ?” ಎಂದು ಪ್ರಾರಂಭವಾಗುವ ಕವನದಲ್ಲಿ ಕೆಲವು ಪದ್ಯಗಳನ್ನು ರಚಿಸಿದೆ.”

(* ಆ ಕವನ ‘ಗೋಪಿ’ಎಂಬ ಶೀರ್ಷಿಕೆಯಿಂದ‘ಷೋಡಶಿ’ಯಲ್ಲಿ ಪ್ರಕಟಗೊಂಡಿದೆJ

ಸೊಬಗನೇಕೆ ಹಳಿಯುತಿರುವೆ,
ಬಣಗು ಬೈರಾಗಿ?
ಸೊಬಗು  ದೇವನಂಶವಲ್ತೆ?
ಹೇಳು ಓ ತ್ಯಾಗಿ!
ನಿರಾಕಾರವಾದುದೆಮ್ಮ
ಮನಕೆ ಬರಿಯ ಸೊನ್ನೆ ಬೊಮ್ಮ!
ತುದಿಯೊಳೆಮಗೆ ಬರಲು ಸಾವು
ನಿರಾಕಾರವಾಗೆ ನಾವು,
ಸೊಬಗೆ ನಿರಾಕಾರವಾಗಿ
ದೇವನಹುದು ಕಣಾ, ಚಾಗಿ!

ನನ್ನ ಚೇತನ ಪ್ರೇಮ ಸೌಂದರ್ಯಗಳ ಕಡೆಗೆ ಓಲುತ್ತಿರುವುದಕ್ಕೆ ಸಾಕ್ಷಿ ಹೇಳುವಂತಿದೆ ಈ ಕವನ)

ನನ್ನ ತಮ್ಮನ(ಕೆ.ಆರ್.ವೆಂಕಟಯ್ಯ)ಕಾಗದ ಬಂದಿತು. ಅದರಲ್ಲಿ ಅವನು ಶ್ರೀರಾಮಕೃಷ್ಣರ ಹೆಸರನ್ನೇ ಮಹಾಮಂತ್ರವಾಗಿ ಸ್ವೀಕರಿಸಿದ್ದಾನೆ ಎಂದು ತಿಳಿದು ಬಂದಿತು. ಆತನು ದೇಹದ ವಿಚಾರದಲ್ಲಿ ಬಹಳ ತಳಮಳಗೊಂಡಿದ್ದಾನೆ ಎಂದು ತೋರುತ್ತದೆ. ಮುಂದಿನ ಕಾಗದದಲ್ಲಿ ಅದನ್ನು ಕುರಿತು ಬರೆಯಬೇಕು. ದೇಹಚಿಂತನೆಯು ಅತಿಯಾದರೆ ದೇಹಕ್ಕೂ ಆತ್ಮಕ್ಕೂ ಎರಡಕ್ಕೂ ಕೆಟ್ಟದ್ದು.(ಈ ಮಧ್ಯೆ ಕುಪ್ಪಳಿ ಮನೆಯ ಆರ್ಥಿಕ ಪರಿಸ್ಥಿತಿ ದಿನದಿನಕ್ಕೂ ಇಳಿಮುಖವಾಗಿ ಹೋಗುತ್ತಿತ್ತು. ವೆಂಕಟಯ್ಯ ಹೇಗೋ ತೆವಳಿಕೊಂಡು ಅದನ್ನು ನಡೆಸುತ್ತಿದ್ದ. ಅವನಿಗೆ ಧೈರ್ಯ ಹೇಳಿ ನಾನು ಕಾಗದ ಬರೆಯುತ್ತಿದ್ದೆ. ಮನಸ್ಸನ್ನು ಆಧ್ಯಾತ್ಮಿಕದತ್ತ ತಿರುಗಿಸಿದರೆ ಸ್ವಲ್ಪವಾದರೂ ಶಾಂತಿಲಾಭವಾಗುವ ವಿಷಯ ಕುರಿತು ಶ್ರೀರಾಮಕೃಷ್ಣ-ವಿವೇಕಾನಂದ-ಗೀತೆ ಮೊದಲಾದುವನ್ನು ಓದುತ್ತಿರುವಂತೆ ಬರೆದಿದ್ದೆ. ಅವನು ಇಂದಿಗೂ(೧೯೭೪ ನೆಯ ಸೆಪ್ಟೆಂಬರ್ ೨೮),ಅಷ್ಟೇನೂ ದೃಢಕಾಯನಾಗಿರದಿದ್ದರೂ, ತನ್ನ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾನೆ.)

ಮಧ್ಯಾಹ್ನ ಎ.ಸಿ.ಶ್ರೀಕಂಠಯ್ಯ ಹೊಸದಾಗಿ ಬಣ್ಣ ಹಾಕಿದ ನನ್ನ ಕೋಟು ತಂದುಕೊಟ್ಟರು. ತರುವಾಯ ಅವರೊಡನೆ ಎಲ್.ಗುಂಡಪ್ಪನವರ ‘ಭಾಸನ ಏಕಾಂಕ ನಾಟಕಗಳು’ಎಂಬುದರ ವಿಚಾರವಾಗಿ ‘ಜಯ ಕರ್ಣಾಟಕ’ದಲ್ಲಿ ಬಂದಿದ್ದ ಅನ್ಯಾಯ ವಿಮರ್ಶೆಯ ವಿಚಾರವಾಗಿ ಮಾತಾಡಿದೆವು. ಗುಂಡಪ್ಪನವರು ಕನ್ನಡಿಗರಿಗೆ ಒಂದು ಒಳ್ಳೆಯ ಗ್ರಂಥವನ್ನೇ ಒದಗಿಸಿದ್ದಾರೆ. ಸರಳ ರಗಳೆಯು ರಚನೆಗೆ ಸುಲಭವಾಗಿರುವಂತೆ ತೋರುತ್ತದೆ. ಆದರೆ ‘ಏಕನಾದ’ದ ಬೇಸರವು ಬಾರದಂತೆ ಯತಿ ಸ್ಥಾನಗಳನ್ನೂ ಛಂದಸ್ಸನ್ನೂ ಬದಲಾಯಿಸಿ, ಅದನ್ನು ಬಿಗಿಮಾಡಿ, ಅದರಲ್ಲಿ ಶ್ರೇಷ್ಠತೆಯನ್ನು ಪಡೆಯುವುದು ಬಹಳ ಹೆಚ್ಚು. ಅಂಥಾದ್ದು ‘ನಾಗರಿಕ’ದಲ್ಲಿ (ಎಂ.ಆರ್.ಶ್ರೀ ಅವರ ಕೃತಿ) ಬೇಕಾದಷ್ಟಿದೆ.‘ಯಶೋಧರಾ’ದಲ್ಲಿ (ಮಾಸ್ತಿಯವರ ನಾಟಕ) ಶೈಲಿಗೂ ವಿಷಯಕ್ಕೂ ‘ಜೂರತ್ತೇ’ಇಲ್ಲದಂತೆ ತೋರುತ್ತದೆ.-

ಶಿವಮೊಗ್ಗದಿಂದ ಚಿದಂಬರಂ ಅವರ ಕಾಗದ ಬಂದಿದೆ. ಅದರಲ್ಲಿ ‘ಪಾಂಚಜನ್ಯ’ಕ್ಕೆ ‘ಪ್ರಕಟನ ಪತ್ರ’ವನ್ನು ಕಳುಹಿಸಿದ್ದಾರೆ. ನಾನು‘ಗಲಭೆ ಬೇಡ’ಅಂತಾ ಬರೆದರೆ, ಅವರು ಭೇರಿ ಹೊಡೆಯುತ್ತಾ ಗಲಭೆ ಮಾಡುವುದಿಲ್ಲ ಎಂದು ಉದ್ಘೋಷಿಸುವಂತಿದೆ! ಇದು ಪ್ರಕಟಣೆಯ ಪತ್ರ:

“ಕೆ.ವಿ.ಪುಟ್ಟಪ್ಪನವರ ‘ಪಾಂಚಜನ್ಯ’(ಕವನ ಸಂಗ್ರಹ)-

ಈ ಕವನ ಸಂಗ್ರಹವು ಈಗಾಗಲೇ ಪ್ರಸಿದ್ದವಾಗಿರುವ ರಕ್ತಧುನಿ-ಪಾಂಚಜನ್ಯ-ಕಲ್ಕಿ- ಕುಮಾರವ್ಯಾಸ-ಇಂದಿನ ದೇವರು-ಶ್ರಾವಣ ಸಂಧ್ಯಾ ಸಮೀರ-ಈ ಕವನಗಳನ್ನಲ್ಲದೆ- ಕಾಳರಾತ್ರಿ, ಕಾಳಿ ಬರುವಳು, ಭೈರವ ನಾರಿ, ವಿಪ್ಲವಮೂರ್ತಿ, ಸತ್ಯಾಗ್ರಹಿ, ಅವತಾರ, ಮಹಾತ್ಮಾಗಾಂಧಿ. ಮೊತಿಲಾಲ ನೆಹರು, ಭರತಮಾತೆ, ಭಾರತ ತಪಸ್ವಿನಿ, ಮುಕ್ತಿರಾಹು, ಪ್ರೇಮದ ಪ್ರೇತ- ಇವೇ ಮೊದಲಾದ ಕವನಗಳನ್ನೊಳಗೊಂಡಿದೆ. (ಮಲ್ಲಗೀತೆ-ಎಂಬ ಶೀರ್ಷಿಕೆಯ ಬಲಿಷ್ಟ ಗೀತೆಯನ್ನು ಏಕೆ ಕೈಬಿಟ್ಟರೋ) ಈ ಕವನಗಳಲ್ಲಿ ಲಾಲಿತ್ಯಕ್ಕೆ ಬಹ್ವಂಶ ಎಡೆಯಿಲ್ಲವೆಂದು ಹೇಳಬಹುದು. ‘ತರುಗಳ ತಳಿರಿನ ತಣ್ಣೆಳಲಲ್ಲಿ’ ಕುಳಿತು ಹಾಯಾಗಿ ಹಾಡುವ ಗೊಲ್ಲನ ‘ಕೊಳಲಿ’ನ ಇನಿದನಿ ಇಲ್ಲಿ ಕೇಳಿ ಬರುವುದಿಲ್ಲ. ‘ಇಂಚರದ ಕೊಳಲು ಬಿರಿದು ಇಲ್ಲಿ ಕಠೋರ ಭೇರಿಯಾಗಿದೆ.’ ಅದರ ನಾದವು ಬೊಮ್ಮವ ಬಿರಿವಂತೆ ಮಸೆಯುತ್ತಿದೆ. ಕವಿಯ ಲೇಖನಿಯಿಲ್ಲ ಕಠಾರಿಯಾಗಿದೆ.

‘ ನದಿಗಿರಿ ನಿರ್ಝರ ಜಲಕಲತಾನ’ದಂತೆ ಮಂಜುಳ ನಿನಾದದಿಂದ ಜಾರುವ ಶ್ರೀಮಾನ್ ಪುಟ್ಟಪ್ಪನವರ ಶಬ್ದಸ್ರೋತವಿಲ್ಲಿ ಕಡಲವಾಣಿಯಂತೆ ಕೂಗಿ ರೇಗಿ ಉನ್ಮತ್ತವಾಗಿ ತೆರೆಯೇಳುತಿದೆ. ಅವರ ಶಬ್ದಶೈಲಿಯಲ್ಲಿ‘ ಸಿಡಿಲನು ಸಿಡಿಯುವಂತೆ ಮೊಳಗುತೆ ನುಗ್ಗುವ ಕಾರ್ಗಾಲದ ಕರ್ಮುಗಿಲಿಂ ಹೊಮ್ಮುವ ಕೆಂಗಿಡಿ ಬಣ್ಣದ ಹೊಂಗೆರೆ ಮಿಂಚಿಗೆ’ ಸಮನಾಗಿ ರುದ್ರವಾಗಿ ಬೆಳಗುತ್ತಿದೆ. ಈ ಕವನವನ್ನು ಓದುತ್ತಿದ್ದಂತೆ ‘ಮೆಯ್ಯಲಿ ಮಿಂಚಿನ ಹೊಳೆ ತುಳುಕಾಡುವುದು’

ಕಲಾವಿದರು ಈ ರುದ್ರಾರಾಧನೆಯ ಕಾರಣವನ್ನು ದೂರ ಅರಸಬೇಕಾಗಿಲ್ಲ. ಶ್ರೀಮಾನ್ ಪುಟ್ಟಪ್ಪನವರು ಅದನ್ನು ಮುನ್ನುಡಿಯಲ್ಲಿ ಹೀಗೆ ವಿವರಿಸಿರುವರು:”ಸೃಷ್ಟಿಯಲ್ಲಿ ರುದ್ರವೂ ರಮಣೀಯವೂ ಮಿಳಿತವಾಗಿವೆ. ಅದರಿಂದ ನಿಜವಾದ ಕಲಾವಿದನಿಗೆ ಸೌಂದರ್ಯದಂತೆ ರೌದ್ರವೂ ಆರಾಧನೆಯ ದೇವತೆಯೇ. ಯಾವುದನ್ನು ಬಿಟ್ಟು ಯಾವುದನ್ನು ಹಿಡಿದರೂ ಪೂರ್ಣಸತ್ಯವಾಗುವುದಿಲ್ಲ.”

ಸಾಯಂಕಾಲ Thomas Hardy ಓದಿದೆ. ಎಂತಹ ಸಂಸಾರ ಚಿತ್ರ! ಎಂತಹ ಶೋಕ ಕರುಣಗಳ ವರ್ಣನೆ! ಕೊಚ್ಚಿ ಮಹಾರಾಜರ ವರ್ತನೆಯನ್ನು ಕೇಳಿ ನಕ್ಕೂ ನಕ್ಕೂ ಸಾಕಾಯಿತು. (ಇದು ಬಹುಶಃ ಈಶ್ವರಾನಂದರೋ ಮತ್ತಾರೋ ಸ್ವಾಮಿಜಿ ಕೊಚ್ಚಿ  ಅರಮನೆಯಲ್ಲಿ ನಡೆಯುತ್ತಿದ್ದ ಹಾಸ್ಯಾಸ್ಪದ ರೀತಿನೀತಿಗಳನ್ನು ಕುರಿತು ಹರಟೆ ಹೊಡೆದಿದ್ದುದರ ಪರಿಣಾಮವಿರಬೇಕು.(೩೦-೯-೧೯೭೪)

೧೪-೯-೧೯೩೩:

ಪ್ರಾತಃಕಾಲ ಸುಮಾರು ಐದೂವರೆ ಗಂಟೆಗೆ ಎದ್ದು, ಗುರುದೇವನನ್ನು ನೆನೆದು, ಪರದೆಯಿಂದ ಹೊರಗೆ ಬಂದು ಕಿಟಕಿಯಿಂದ ಪೂರ್ವ ದಿಗಂತವನ್ನು ನೋಡಿದೆ. ಗಗನದ ಸಲಿಲ ಸದೃಶ ನೀಲಪಟದಲ್ಲಿ ಚಿತ್ರವಿಚಿತ್ರವಾಗಿ ರೇಖಾವಿನ್ಯಾಸಗಳಿಂದ ಪಸರಿಸಿದ್ದ ಮುಗಿಲು ಸದ್ಯ ಪ್ರಸ್ಫುಟ ಅರುಣ ರಾಗರಂಜಿತವಾಗಿ ಆಶಾಪೂರ್ಣವಾಗಿತ್ತು. ಅದನ್ನು ನೋಡಿ ಸೌಂದರ್ಯರೂಪಿಯಾದ ಪರಮಾತ್ಮನಿಗೆ ಕೈಮುಗಿದೆ. ಹಸುರು ಹುಲ್ಲಿನ ಮೇಲೆ ನಿಬಿಡವಾಗಿ ಮುದ್ದಾಗಿ ಕುಳಿತಿದ್ದ ಹನಿಗಳನ್ನು ನೋಡಿ ಸೂರ್ಯೋದಯದ ರಮಣೀಯತೆಯನ್ನು ಕಲ್ಪಿಸಿಕೊಂಡು ಪುಳಕಿತನಾದೆ. ಹೇ ಪ್ರಾತಃಕಾಲ ಸ್ವರೂಪಿ ಭಗವಂತನೇ ನಮೋ ನಮಃ!…

ಬೆಳಿಗ್ಗೆ ಕೆಂಗೇರಿಯ ಗುರುಕುಲ ಸೇವಾಸಂಘದ ಬ್ರಹ್ಮಚಾರಿ ನಾರಾಯಣರಿಂದ ಒಂದು ಪತ್ರವು ಬಂದಿತು. ನೋಡಿ ನಿಜವಾಗಿ ಸಂತೋಷಪಟ್ಟೆ. ಗುರುದೇವನು ನನ್ನ ಮೂಲಕ ಮಾಡಿಸಿದ ಕೆಲಸವು ಸಾರ್ಥಕವಾಗುತ್ತಿದೆ ಎಂದು ಕೊಂಡೆ. ಪಂಡಿತರಿಂದಲ್ಲ, ವಿಮರ್ಶಕರಿಂದಲ್ಲ. ಸಾಧಾರಣ ಜನರಿಂದ ನನ್ನ ಕೃತಿಗಳ ಪ್ರಶಂಸೆಯು ಬಂದಾಗ ನಾನು ಧನ್ಯನೆಂದು ಭಾವಿಸುತ್ತೇನೆ. ಪಾಂಡಿತ್ಯ ವಕ್ರದೃಷ್ಟಿಯುಳ್ಳ ಮನೀಷಿಗಳ ಅಭಿಪ್ರಾಯ ಕೆಲವು ವೇಳೆ ಕೃತಿಯ ಯೋಗ್ಯತೆಯನ್ನು ಸರಿಯಾಗಿ ತಿಳಿಯಲಾರದು- ಅಸೂಯೆ, ಅಸಹನೆ, ಔದಾಸೀನ್ಯ, ಆದ್ಯತನದಲ್ಲಿ ತಿರಸ್ಕಾರ ಮೊದಲಾದ ಉಪಾಧಿಗಳಿಗೆ ವಶವಾಗಿ. ಇದು ಬ್ರಹ್ಮಚಾರಿ ನಾರಾಯಣರು ಬರೆದ ಪತ್ರ:

ಓಂ

ಕೆಂಗೇರಿ, ಬೆಂಗಳೂರು
೧೩-೯-೧೯೩೩

ಶ್ರೀಮಾನ್ ಕೆ.ವಿ.ಪುಟ್ಟಪ್ಪನವರ
ಅಡಿದಾವರೆಗಳಲ್ಲಿ.

ಕನ್ನಡಿತಿಯ ಮಾನ್ಯಪುತ್ರರೇ, ಸಪ್ರೇಮ ನಮಸ್ಕಾರ: ತಮ್ಮ ವಿಚಾರ ತರಂಗ ಪರಿವೃತ ಮೆದುಳಿನಲ್ಲಿ ಬ್ರಹ್ಮಚಾರಿ ರಾಮಚಂದ್ರಜಿಯವರ ಜೊತೆಯಲ್ಲಿ ಬಂದಿದ್ದ ನಾರಾಯಣನೆಂಬ ವ್ಯಕ್ತಿಯ ಜ್ಞಾಪಕವಿದ್ದಲ್ಲಿ, ಅದು ಆತನ ಸುಯೋಗವೇ ಸರಿ. ಇದು ಈಗ್ಗೆ ಸುಮಾರು ನಾಲ್ಕು ವರ್ಷಗಳ ಹಿಂದಿನ ಮಾತು.

ಅದಿರಲಿ,-ನನಗೆ ಇಂದು ತಾನೇ ತಮ್ಮ‘ಸ್ವಾಮಿ ವಿವೇಕಾನಂದ’ಎಂಬ ಪುಸ್ತಕವನ್ನು ಓದುವ ಸುಕೃತ ಲಭಿಸಿತು. ನಾನು ಕನ್ನಡ, ಹಿಂದಿ, ಇಂಗ್ಲಿಷು, ಸಂಸ್ಕೃತ ಭಾಷೆಗಳಲ್ಲಿ ಕೆಲವು ಗ್ರಂಥಗಳನ್ನು ಓದಿದ್ದೇನೆ. ಆದರೆ ಯಾವ ಪುಸ್ತಕವನ್ನು ಓದಿದಾಗ್ಗೂ, ತಮ್ಮ ಪುಸ್ತಕವನ್ನು ಓದಿದಾಗ ಆದ ಆನಂದವನ್ನು ಅನುಭವಿಸಲಿಲ್ಲ. ಉಪನಿಷತ್ ಗ್ರಂಥಗಳನ್ನು ಪ್ರತ್ಯೇಕಿಸಿ, ನನ್ನ ಅಸಂಪೂರ್ಣ ಔಪಾಸನೆಯ ಕಾಲದಲ್ಲಿ. ಎಲ್ಲೋ ಒಂದೊಂದು ವೇಳೆ, ಕೆಲವು ಕ್ಷಣಗಳವರೆಗೆ ಒಂದು ವಿಧವಾದ ಆನಂದವನ್ನು ಅನುಭವಿಸುತ್ತೇನೆ. ಆ ಆನಂದವು ಇಂದು ‘ಸ್ವಾಮಿ ವಿವೇಕಾನಂದ’ವನ್ನು ಪಠಿಸಿದಾಗ ದೊರಕಿತು. ತಮ್ಮ ಹೃದಯವು ಕನ್ನಡಿತಿಯ ಬಿಂಬ.- ನನ್ನ ಆನಂದ ಸೂಚನೆಯನ್ನು ಮುಡುಪಾಗಿ ಈ ಚಿಕ್ಕಪತ್ರ. ಅಸಂಬದ್ದತೆಯನ್ನು ಕ್ಷಮಿಸಿಬೇಕು.

ತಮ್ಮ ವಿಶ್ವಾಸಾಕಾಂಕ್ಷಿ,
ಬ್ರ|| ನಾರಾಯಣ

ವಿ.ಸೂ.ನನ್ನ ನಮಸ್ಕಾರಗಳನ್ನು ಶ್ರೀಸ್ವಾಮಿ ಸಿದ್ದೇಶ್ವರಾನಂದಜಿಯವರಿಗೂ ಶ್ರೀಸ್ವಾಮಿ ಚಿನ್ಮಾತ್ರಾನಂದಜಿಯವರಿಗೂ ಭವ್ಯ ಆಶ್ರಮವಾಸಿಗಳಿಗೂ ವಸ್ತು ಸ್ಥಿತಿ ಹೇಗೆಯೇ ಇರಲಿ, ಈ ಪತ್ರವು ಓದಿದವರ ಭಾವವನ್ನು ಪ್ರದರ್ಶಿಸುತ್ತದೆ. ಅದು ಪುಸ್ತಕ ಬರೆದ ನನ್ನ ಯೋಗ್ಯತೆಯದಲ್ಲ; ಪುಸ್ತಕದ ನಾಯಕರಾದ ಸ್ವಾಮಿ ವಿವೇಕಾನಂದರ ಪ್ರಭಾವವನ್ನು ಸೂಚಿಸುತ್ತದೆ. ಜೈ!ಗುರುಮಹಾರಾಜ್ ಕೀ ಜೈ!….

ಸಾಯಂಕಾಲ ಕಾಲೇಜಿನಿಂದ ಬಂದವನು‘ಕೊಳಲು’ಎಂಬ ಒಂದು ಸಾನೆಟ್ಟನ್ನು ಬರೆದು ಮುಗಿಸಿದೆ. ಅದರ ಕಡೆಯ ಪಂಕ್ತಿಯು”ಗಾನದದ್ವೈತದಲಿ  ನಾನಾರು ನೀನಾರು?” ಎಂಬುದಾಗಿ ಕೊನಾಗೊಂಡಿತು. ಆಲೋಚನೆಯ ದೃಷ್ಟಿಯಿಂದ ಅದು ಉನ್ನತವಾಗಿದ್ದರೂ ಭಾವದೃಷ್ಟಿಯಿಂದ ನನಗೆ ಏಕೋ ಸಮಾಧಾನವಾಗಲಿಲ್ಲ. ಮೇಲಿನ‘ನೂರಾರು’ಎಂಬುದಕ್ಕೆ ಪ್ರಾಸವೂ ಬೇಕಿತ್ತು. ಅದಕ್ಕಾಗಿ ಮೊದಲು ಬೇರೆ ರೀತಿಯಿಂದ ‘ತವರೂರು’‘ಊರು’ ಎಂಬುವುಗಳಲ್ಲಿ ಕೊನೆಗೊಂಡ ಎಷ್ಟೇಷ್ಟೊ ಪಂಕ್ತಿಗಳನ್ನು ಆಲೋಚಿಸಿ ಕೊನೆಗೆ “ಗಾನದದ್ವೈತದಲಿ ನೀನಾರು ನಾನಾರು?” ಎಂದು ಬರೆದು ಮುಗಿಸಿದ್ದೆ. ಉತ್ತಮಪ್ರತಿ ಎತ್ತುವಾಗ ‘ನಾಕ ಸುಂದರಿಯರು’‘ಕುಸುಮ ಸುಂದರಿಯರನು’ಎಂದು ಮಾಡಿದೆ. ಕಡೆಗೆ, ಇದ್ದಕ್ಕಿದ್ದಂತೆ, ಕೊಳಲನ್ನು ಕೇಳಿದರೆ ಆಗುವ ಅನುಭವವು ಸ್ವಪ್ನಸ್ಥಿತಿಗೆ ನಿಕಟವಾಗುವುದರಿಂದ ‘ಸ್ವಪ್ನಸುಂದರಿಯರನು’ಎಂದು ಬರೆದೆ. ತುದಿಯ ಹದಿನಾಲ್ಕನೆಯ ಪಂಕ್ತಿಯ ವಿಚಾರದಲ್ಲಿ ಅಸಮಾಧಾನ ಇದ್ದೇ ಇತ್ತು. ಬರೆದು ಪೂರೈಸಿ ಹೊರಗೆ ಹೋಗಿ ಮತ್ತೆ ಬಂದೆ. ಮತ್ತೆ ಓದುತ್ತಿರಲು ಇದ್ದಕ್ಕಿದ್ದಂತೆ ” ಸಂಗೀತ  ಸ್ರೋತ್ರದಲಿ ನಾನು ಬಣ್ಣದ ನೀರು” ಎಂಬ ಪಂಕ್ತಿಯು ಮನಕೆ ಮಿಂಚಿತು. ನಾನು ಹೇಳಬೇಕೆಂದಿದ್ದ ಅನುಭವವೆಲ್ಲವನ್ನೂ ಅದು ಸೂಚಿಸುತ್ತಿತ್ತು. ನಾನು ಮು‌ಗ್ದನಾದೆ.‘ಕಲಾ ಸುಂದರಿ’ಯನ್ನು ಅಭಿವಂದಿಸಿದೆ. ಗಾನ ಬಣ್ಣಗಳೆರಡೂ ಸೇರಿ, ಕಿವಿ ಕಣ್ಣುಗಳೆರಡೂ ಸೇರಿ, ವ್ಯಕ್ತಿತ್ವವು ಕರಿಗಿ ಹೋಗುವದನ್ನು ” ಸಂಗೀತ ಸ್ರೋತ್ರದಲಿ ನಾನು ಬಣ್ಣದ ನೀರು” ಎಂಬುದು ಬಹಳ ಚೆನ್ನಾಗಿ ಹೇಳುತ್ತದೆ. ಅದಕ್ಕಿಂತ ಉತ್ತಮವಾಗಿ ಹೇಳುವುದು ಅಸಾಧ್ಯವೆಂದು ನನ್ನ ವಿಮರ್ಶೆ…

ಆಮೇಲೆ ಶ್ರೀನಿ, ವಿಜಯ, ರಂಗಪ್ಪ. ಕೃಷ್ಣಮೂರ್ತಿ ಎಲ್ಲರೂ ಬಂದರು. ನಮ್ಮ ವಾಲಿಬಾಲ್ ರಿಪೇರಿಗೆ ಹೋಗಿದ್ದು ಟೆನ್ನಿಸ್ ಚೆಂಡಿನಲ್ಲಿಯೆ ವಾಲಿಬಾಲ್ ಆಡಿದೆವು!

ಆಡುತ್ತಿದ್ದಾಗಲೆ ಎ.ಸೀತಾರಾಂ* ಬಂದರು. ಅವರು ತಾವು ಬರೆದಿದ್ದ ‘ಪಾಂಚಜನ್ಯ’ ಮುಖಚಿತ್ರವನ್ನು ತಂದಿದ್ದರು: ಕೊಳಲನ್ನು ಹಿಂದಿಟ್ಟುಕೊಂಡು ಪಾಂಚಜನ್ಯ ಊದುತ್ತಾನೆ ಶ್ರೀ ಕೃಷ್ಣ ಎಂಬ ಭಾವವು ಕುಶಲವಾಗಿದೆ. ಚಿತ್ರವು ಬಹುಮಟ್ಟಿಗೆ ವೀರ್ಯವತ್ತಾಗಿ ಒಳಗಿರುವ ಕವನಗಳ ಆತ್ಮಕ್ಕೆ ಸಾಕ್ಷಿಯಾಗಿದೆ.-ಸ್ವಲ್ಪ ಹೊತ್ತು ಮಾತಾಡುತ್ತಿದ್ದು ಅವರ ಜೊತೆ ತುಸುದೂರ ಹೋಗಿ ಕಳುಹಿಸಿ ಬಂದೆ…. ರಾತ್ರಿ ಹತ್ತೂವರೆ ಗಂಟೆ ತನಕ ಥಾಮಸ್ ಹಾರ್ಡಿಯ The Return of the Native ಓದುತ್ತಿದ್ದೆ. ಕ್ಲಿಮ್ ನ ತಾಯಿ ಮಿಸೆಸ್ ಯೋಬ್ರೈಟ್ ಸಾವಿನ ಸನ್ನಿವೇಶ ಕರುಳು ಕರಗುವಂತಿದೆ.

೧೫-೯-೧೯೩೩:

ಬೆಳಿಗ್ಗೆ ವ್ಯಾಯಾಮ ಮುಗಿಸಿಕೊಂಡು ವಿದ್ಯಾರ್ಥಿನಿಲಯಕ್ಕೆ ಹೋಗಿ ಬಂದೆ,

ಪಾಠ ಹೇಳಿ.”ಜನಪ ಕೇಳುಪಲಾಲಿತಾಂಜನವೆನೆ…”ಎಂಬ ಪದ್ಯಕ್ಕೆ ಕಷ್ಟದಿಂದ ಅರ್ಥ ಮಾಡಿದೆ. ಅಂತಹ ಪದ್ಯಗಳಿಂದ ನಮಗೆ ಲಭಿಸುವುದು ಸಾಹಸದಿಂದ ಒದಗುವ ಆನಂದವಲ್ಲ….

‘ಯಂತ್ರರ್ಷಿ’ಯನ್ನು ಬರೆದು ಮುಗಿಸಿದೆ. ಕೆಲವು ಸಾರಿ ಕಾವ್ಯವು ಹೊರ ಹೊಮ್ಮುವ ವಿಧಾನವು ತುಂಬಾ ವಿಸ್ಮಯಕಾರಿಯಾಗಿರುತ್ತದೆ…

ಇವೊತ್ತು ‘ಪಾಂಚಜನ್ಯ’ದ ಐವತ್ತು ಪ್ರತಿಗಳು ವೆಸ್ಲಿ ಪ್ರೆಸ್ಸಿನಿಂದ ಬಂದುವು. ಈಶ್ವರಾನಂದರಿಗೆ ‘ಮುಕ್ತಿರಾಹು’ಓದಿದೆ. ಇಂಗ್ಲಿಷಿಗೆ ಭಾಷಾಂತರ ಮಾಡಿ ವಿವರಿಸಿದೆ.

ಶ್ರೀನಿಗೊಂದು ವಿಜಯಗೊಂದು ‘ಪಾಂಚಜನ್ಯ’ದ ಪ್ರತಿ ಕೊಟ್ಟೆ.

*(ನನ್ನ ಅನೇಕ ಗ್ರಂಥಗಳಿಗೆ ಮುಖಚಿತ್ರಗಳನ್ನು ಬರೆದಿರುವವರು ಎ.ಸೀತಾರಾಂ‘ಆನಂದ’ಕಾವ್ಯನಾಮದಿಂದ ಪ್ರಸಿದ್ದರಾದವರು.

ಅವರು ‘ಕಾನೂರು ಹೆಗ್ಗಡತಿ’ಗೆ ಬರೆದುಕೊಟ್ಟ ಕಾಜಾಣಗಳ ಚಿತ್ರವೆ ಈಗ ‘ಉದಯರವಿ ಪ್ರಕಾಶನ’ದ ಚಿಹ್ನೆಯಾಗಿದೆ.)

ರಾತ್ರಿ ಹತ್ತು ಗಂಟೆಯ ತನಕ ನಾನು,ಭೂತೇಶಾನಂದ, ವಿಮುಕ್ತಾನಂದ,ದೇಶಿಕಾನಂದ,ಈಶ್ವರಾನಂದ ಎಲ್ಲರೂ ಸೇರಿ ನಾನಾ ವಿಚಾರವಾಗಿ”ಹರಟೆ” ಹೊಡೆದೆವು. ಒಬ್ಬೊಬ್ಬರು ಒಂದೊಂದಾಗಿ ಸುಮಾರು ಹತ್ತುಹದಿನೈದು ಕಥೆಗಳಾದವು…

ಧ್ಯಾನಮಾಡಿ ಆಮೇಲೆ ಮಲಗಿದೆ. ಓಂ!

೧೬-೯-೧೯೩೩:

ರಂಗೂನಿನಿಂದ ಶ್ರೀಧರರಾವ್ ಅವರು ಹಿಂದೆ ಮಾತು ಕೊಟ್ಟ ಮೇರೆಗೆ ಒಂದು ಬುದ್ದನ ವರ್ಣಚಿತ್ರ ಪಟವನ್ನು ಮಠದಲ್ಲಿರಿಸುವುದಕ್ಕಾಗಿ ಕಳುಹಿಸಿದ್ದಾರೆ.(ಆ ಪಟದಲ್ಲಿ ಬುದ್ಧನ ಮುಖ ಥೇಟ್ ಬರ್ಮೀಯನದು!)

೧೭-೯-೧೯೩೩:

ಬೆಳಿಗ್ಗೆ ಕುಕ್ಕನಹಳ್ಳಿ ಕೆರೆಯ ಕಡೆ ಸಂಚಾರ ಹೋದೆ. ತುಂತುರು ಮಳೆಯಲ್ಲಿ ಸಿಕ್ಕಿ ಒದ್ದೆಯಾಗಿ ಓಡಿ ಬಂದೆ. ವಿದ್ಯಾರ್ಥಿನಿಲಯಕ್ಕೆ ಹೋಗಿ ಅಭ್ಯಂಜನ ಮಾಡಿದೆ. ವಿದ್ಯಾರ್ಥಿಗಳಿಗೆ ಠಾಕೂರರ The Renunciation ಓದಿದೆ. ಮಧ್ಯಾಹ್ನ The Return of the Native ಓದಿ ಮುಗಿಸಿದೆ. walt whitman ಓದಿದೆ. ನಾನೊಂದು ಕಾದಂಬರಿಗೆ ವಸ್ತು ಸಂವಿಧಾನ ಪ್ರಾರಂಭಿಸಿದ್ದೇನೆ, ಹಗಲೆಲ್ಲ ಅದನ್ನೇ ಕುರಿತು ಆಲೋಚಿಸಿದೆ. ಗುರುದೇವನ ಕೃಪೆಯಿಂದ ಸರಸ್ವತೀ ಮಾತೆಯ ಅನುಗ್ರಹದಿಂದ ಅದನ್ನು ದಸರಾ ರಜದಲ್ಲಿ ಮುಗಿಸುತ್ತೇನೆ.*

(*ಮುಂದೆ ‘ಕಾನೂರು ಹೆಗ್ಗಡಿತಿ’ಎಂದು ಸುಪ್ರಸಿದ್ದವಾದ ನನ್ನ ಮಹಾ ಕಾದಂಬರಿಯ ಉಗಮಸ್ಥಾನವಾಗಿದೆ ಈ ಅಂದಿನ ಸಂಕಲ್ಪ ನಾನು ಟಾಲ್ ಸ್ಟಾಯ್, ರೋಮಾ ರೋಲಾ, ಥಾಮಸ್ ಹಾರ್ಡಿ, ಗಾಲ್ಸ್ ವರ್ದಿ ಮೊದಲಾದವರ‘ಮಹಾಕಾದಂಬರಿ’ಗಳನ್ನು ಓದಿದೆ ಮೇಲೆ ನಮ್ಮ ಕನ್ನಡದಲ್ಲಿ ಎಂದು ಅಂತಹ ಕಾದಂಬರಿಗಳು ಹುಟ್ಟುತ್ತವೆಯೋ ಎಂದು ಹಂಬಲಿಸತೊಡಗಿದೆ. ಅಲ್ಲದೆ ಸಾಹಿತಿಗಳಾದ ನನ್ನ ಮಿತ್ರರಿಗೆಲ್ಲ ಅಂತಹ ಕಾದಂಬರಿಗಳನ್ನು ನೀವೇಕೆ ಬರೆಯಲು ಪ್ರಯತ್ನಿಸಬಾರದು ಎಂದು ಪೀಡಿಸತೊಗಿದೆ. ಒಂದು ದಿನ ಸಂಜೆ ಪ್ರೊ.ವೆಂಕಣ್ಣಯ್ಯನವರೊಡನೆ ಈ ವಿಚಾರವಾಗಿ ಮಾತಾಡುತ್ತಾ ಕುಕ್ಕನಹಳ್ಳಿ ಕೆರೆದಂಡೆಯ ಹಾದಿಯಲ್ಲಿ ಹೋಗುತ್ತಿದ್ದಾಗ ಅವರೆಂದರು:” ನೀವೆ ಏಕೆ ಬರೆಯಬಾರದು?”ನಾನು ಹೆದರಿ ಹಿಂಜರಿದು “ಅದೇನು ಭಾವಗೀತೆ, ಸಣ್ಣಕತೆ, ನಾಟಕ ಬರೆದಂತೆಯೇ? ಅಥವಾ ಸಾಧಾರಣ ಕಾದಂಬರಿ ಬರೆದಂತೆಯೇ? ‘ಮಹಾಕಾದಂಬರಿ’ಗೆ ಇಂಗ್ಲಿಷಿನಲ್ಲಿ ಗ್ರೇಟರ್ ನಾವೆಲ್ ಅನ್ನುತ್ತಾರೆ. ಅದರ ಪಾತ್ರಸಂಖ್ಯೆಯ ವಿಪುಲತೆ, ಅದರ ದಿಗಿಲು ಹುಟ್ಟಿಸುವ ವಿಸ್ತಾರ, ಅದರ ಭಯಂಕರ ವೈವಿದ್ಯ-ಆಲೋಚಿಸಿದರೆ ಮೈ ಜುಮ್ಮೆನ್ನುತ್ತದೆ! ಅವನ್ನೆಲ್ಲ ಅನ್ವಯ ಕೆಡದಂತೆಮ ಎಲ್ಲಿಯೂ ಹೊಂದಾಣಿಕೆಗೆ ಭಂಗ ಬರದಂತೆ ಕಲ್ಪನೆಯಲ್ಲಿ ಹಿಡಿದಿಟ್ಟುಕೊಂಡು ಸಾವಿರಾರು ಪುಟಗಳಲ್ಲಿ ನಡೆಸುವುದು ಸಾಧ್ಯವೇ? ನಾನು ಬರೆಯ ಹೊರಟರೆ ಉತ್ರರಕುಮಾರನ ರಣಸಾಹಸವಾಗುತ್ತದಷ್ಟೆ!” ಎಂದು ನಕ್ಕುಬಿಟ್ಟೆ. ಆದರೆ ಅವರು ಗಂಭೀರವಾಗಿಯೇ ಮುಂದುವರಿದರು:”ನೋಡಿ,ಕಾದಂಬರಿಗೆ ಅವಶ್ಯಕವಾದ ಕೆಲವು ಶಕ್ತಿಗಳು ನಿಮ್ಮಲ್ಲಿ ಆಗಲೆ ಪ್ರಕಟಗೊಂಡು ಸಾರ್ಥಕವಾಗಿವೆ. ಕಥನ,ಸಂವಾದ ಮತ್ತು ವರ್ಣನ ಈ ಮೂರು ಶಕ್ತಿಗಳು ನಿಮ್ಮಲ್ಲಿ ಇವೆ. ಸಣ್ಣಕಥೆ ಬರೆದಿದ್ದೀರಿ, ನಾಟಕ ಬರೆದಿದ್ದೀರಿ, ಮಲೆನಾಡಿನ ಚಿತ್ರಗಳಲ್ಲಿ ವರ್ಣನೆ ಪ್ರತಿಭೆ ಸೊಗಸಾಗಿ ವ್ಯಕ್ತಗೊಂಡಿದೆ. ಆದ್ದರಿಂದ ನೀವು ಹೆದರಬೇಕಾಗಿಲ್ಲ. ಇನ್ನೊಬ್ಬರಿಗೆ ಹೇಳುತ್ತಾ ಹೋಗುವುದರ ಬದಲು ನೀವೇ ಒಂದು ಕೈ ನೋಡಿಬಿಡಿ!”

ಹೀಗೆ ನನ್ನ ಹಂಬಲದ ತೀವ್ರತೆಗೆ ಗುರುವರ್ಯರ ಪ್ರೋತ್ಸಾಹದ ರೂಪದ ಆಶೀರ್ವಾದದ ಬೆಂಬಲ ದೊರೆತುದರಿಂದಲೊ ಏನೊ ‘ಮಹಾ ಕಾದಂಬರಿ’ರಚಿಸುವ ಗೀಳಿಗೆ ವಶವಾಗಿಬಿಟ್ಟೆ. ೧೯-೯-೧೯೩೩ ರ ದಿನಚರಿ”ಬೆಳಿಗ್ಗೆ ನಾವೆಲನ್ನು ಪ್ರಾರಂಭಿಸಿದೆ.”ಎಂದು ಪ್ರಾರಂಭವಾಗುತ್ತದೆ. ಅದು ಮೊದಲು ಪ್ರಕಟವಾದದ್ದು ನಾಲ್ಕು ಹೊತ್ತಗೆಗಳಲ್ಲಿ. ಮೊದಲನೆ ಭಾಗ ೧೯೨೭ ರಲ್ಲಿ ಹೊರಬಿತ್ತು. ಆಗ ಶಿವಮೊಗ್ಗದಲ್ಲಿಯೆ ವಕೀಲಿ ಮಾಡುತ್ತಿದ್ದ ಕೂಡಲಿ ಚಿದಂಬರಂ ನೇತೃತ್ವದಲ್ಲಿ ದೇವಂಗಿ ಮಾನಪ್ಪನವರು ಮತ್ತು ನಾನು ಸೇರಿದಂತೆ ಪ್ರಾರಂಭವಾಗಿದ್ದ ‘ಕಾವ್ಯಾಲಯ’ಪ್ರಕಾಶನ ಸಂಸ್ಥೆಯಿಂದ. ಅದು ಮುಗಿಯಲು ಸುಮಾರು ನಾಲ್ಕು ವರ್ಷವಾಯಿತು. ಅಂದರೆ ನಾಲ್ಕು ವರ್ಷವೆಲ್ಲ ಇನ್ನೇನೂ ಮಾಡದೆ ಕಾದಂಬರಿ ಬರೆಯುತ್ತಿದ್ದೆ ಎಂದು ಅರ್ಥವಲ್ಲ, ಕಾಲೇಜಿನ ಅಧ್ಯಾಪನಾದಿ ಕರ್ತವ್ಯಕರ್ಮಗಳ ನಿರ್ವಹಣೆಯ ಜೊತೆಯಲ್ಲಿಯೇ ಆ ಅವಧಿಯಲ್ಲಿ ‘ಚಿತ್ರಾಂಗದಾ’ದಂತಹ ಕಾವ್ಯವೂ ಅನೇಕಾನೇಕ ಭಾವಗೀತೆಗಳೂ ವಿಮರ್ಶ ಪ್ರಬಂಧಗಳೂ ನಾಟಕಗಳೂ ರಚನಗೊಂಡಿದ್ದುವು. ‘ಕಾನೂರು ಸುಬ್ಬಮ್ಮ ಹೆಗ್ಗಡಿತಿ’ಎಂಬ ಶೀರ್ಷಿಕೆಯಲ್ಲಿ ಅದು ಹೊರಬಂದಮೇಲೆಯೆ ಇತರ ದೊಡ್ಡ ಕಾದಂಬರಿಗಳು ಕ್ರಮೇಣ ಬರತೊಡಗಿದ್ದವು. ಹಾಗೆ ಬಂದವುಗಳಲ್ಲಿ ಕಾರಂತರ‘ಮರಳಿ ಮಣ್ಣಿಗೆ’ಮೊದಲನೆಯದೆಂದು ತೋರುತ್ತದೆ.)

ಸಾಯಂಕಾಲ ವಾಲಿಬಾಲ್ ಆಟದಲ್ಲಿ ನನ್ನ ಕಾಲು ಉಳುಕಿ ಹೋಯಿತು. ಬಿ.ಆರ್. ಕೃಷ್ಣಮೂರ್ತಿ ಕಾಲಿಗೆ ಎಣ್ಣೆ ಉಜ್ಜಿದನು. ಅವನು ನಿಜವಾಗಿಯೂ ಭೂಪಾಳಂ ಚಂದ್ರಶೇಖರ ಶೆಟ್ಟರ ಸಹೋದರನೇ ದಿ.(ಬಿ.ಆರ್.ಪುಟ್ಟನಂಜಪ್ಪನವರ ತಮ್ಮ.) ಇನ್ನೊಬ್ಬರಿಗೆ ಸಹಾಯ ಸೇವೆ ಮಾಡುವುದೆಂದರೆ ಆತನಿಗೆ ಆನಂದ.

ರಾತ್ರಿ ಎಂಟೂವರೆ ಗಂಟೆಗೆ ಶ್ರೀನಿ ಬಂದು ಕಾಲಿಗೆ ಎಣ್ಣೆ ಉಜ್ಜಿ ಬಿಸಿನೀರಿನ ಶಾಖ ಕೊಟ್ಟು ಹೋದನು. ರಾತ್ರಿ ಮೂರು ಗಂಟೆಯ ಹೋತ್ತಿಗೆ ಕುಟ್ಟಪ್ಪನವರನ್ನು (ಕೊಡಗಿನವರು, ಆಶ್ರಮಕ್ಕೆ ಸೇರಲು ಬಂದಿದ್ದರು ಅವರು ಮುಂದೆ ಬ್ರಹ್ಮಚಾರಿಯಾಗಿ ಸಂನ್ಯಾಸಿಯಾಗಿ ಶ್ರೀರಾಮಕೃಷ್ಣಾಶ್ರಮಕ್ಕೆ ಸೇವೆ ಸಲ್ಲಿಸಿದರು.) ಅವರ ಕೊಟಡಿಯ ಬಾಗಿಲ ಬಳಿ ಹೋಗಿ ಕರೆದೆ. ಕಾಲು ನಡೆಯಲಾಗಲಿಲ್ಲ. ಅವರು ಎದ್ದು ಬಂದು ಒಂದು ಔಷಧಿಯ ತೈಲ ಉಜ್ಜಿದರು. ಸೃಷ್ಟಿಯ ಅಂತರಾಳದಲ್ಲಿರುವ ರಚನಾಶಕ್ತಿಗೆ ನನ್ನ ಕಾಲನ್ನು ಗುಣ ಮಾಡುವಂತೆ ಸೂಚಿಸಿ, ಧ್ಯಾನಿಸಿ ಮಲಗಿ ನಿದ್ದೆ ಮಾಡಿದೆ.