೧೮-೯-೧೯೩೩:

ಬೆಳಿಗ್ಗೆ ಕಾಲುನೋವು ಬಹಳ ಹೆಚ್ಚಾಗಿ ನಡೆಯಲೂ ಆಗುವಂತಿರಲಿಲ್ಲ…. ಮಧ್ಯಾಹ್ನ ಬಿಸಿನೀರು ಎಣ್ಣೆ ಹಚ್ಚಿ ತಿಕ್ಕಿದೆ. ನ.ಭದ್ರಯ್ಯ ಬಂದು ಚೆನ್ನಾಗಿ ಉಜ್ಜಿದರು. ಎಷ್ಟೊಮಟ್ಟಿಗೆ ವಾಸಿಯಾದಂತಾಯಿತು. ಆತನಿಗೆ ‘ಪಾಂಚಜನ್ಯ’ದ ಒಂದು ಪ್ರತಿ ಬಹುಮಾನವಾಗಿ ಕೊಟ್ಟೆ. ‘ರಾಮಮೋಹನ’ ಕಂಪನಿಯಿಂದ ನನ್ನ ಸಣ್ಣ ಕಥೆಗಳ ಕರಡು ಪ್ರತಿಯೊಂದು ಬಂದಿದೆ. ಅದರಲ್ಲಿ ಬಹಳ ತಪ್ಪುಗಳಿವೆ. ಏನು ಮಾಡುವುದೊ ತಿಳಿಯದು.[ಶ್ರೀಯುತ ಬಿ.ಎಸ್.ರಾಮರಾಯರು‘ರಾಮಮೋಹನ ಕಂಪನಿ’ಎಂಬ ಹೆಸರಿನಲ್ಲಿ ಪ್ರಾರಂಭಿಸಿದ್ದ ಪ್ರಕಾಶನ ಸಂಸ್ಥೆಯಲ್ಲಿ ನನ್ನ ಕೃತಿಗಳನ್ನೆಲ್ಲ  ಪ್ರಕಟಿಸುವುದಾಗಿ ನನ್ನೊಡನೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಅದಾವುದೂ ಸಾರ್ಥಕವಾಗದೆ ಶ್ರೀ.ವಿ.ಸೀತಾ ರಾಮಯ್ಯನವರ ಮಧ್ಯಸ್ಥಿತಿಕೆಯಿಂದ ಅದರಿಂದ ಪಾರಾಗಬೇಕಾಯಿತು. ವ್ಯವಹಾರ ವಿಚಾರದಲ್ಲಿ ನನಗಿದ್ದ ಅನಾಸಕ್ತಿರೂಪದ ಬೆಪ್ಪನ್ನು ಕೆಲವರು ಸ್ವಲಾಭಕ್ಕಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಸಿದುದು ಅವರ ತಪ್ಪೇನಲ್ಲ! ಏಕೆಂದರೆ ಅದು ಮನುಷ್ಯ ಸಹಜ ವರ್ತನೆಯ ಅಲ್ಲವೆ?]

ಸಾಯಂಕಾಲ ಎ.ಸೀತಾರಾಂ, ಎನ್.ಎಸ್.ನಾರಾಯಣಶಾಸ್ತ್ರಿ ಬಂದರು. ಅವರಿಗೆ ‘ಪಾಂಚಜನ್ಯ’ಗಳನ್ನು ಕಾಣಿಕೆ ಕೊಟ್ಟು ಅವರ ಕೈಯಲ್ಲಿಯೆ ಇತರ ಮಿತ್ರರಿಗೂ ಪ್ರತಿಗಳನ್ನು ಕೊಟ್ಟು ಕಳಿಸಿದೆ. ಅವರಿಗೆ ‘ಅವತಾರ’‘ಪ್ರೇಮದ ಪ್ರೇತ,’‘ಧ್ರಾಂ ಧ್ರೀಂ ಧ್ರೂಂ’ಓದಿದೆ. ಹಾಗೆಯೆ ಹಸ್ತಪ್ರತಿಯಲ್ಲಿದ್ದ ‘ಯಂತ್ರರ್ಷಿ’‘ಕೊಳಲು’‘ಗೋಪಿ’ಇತ್ಯಾದಿ ಹೊಸ ಕವನಗಳನ್ನೂ ಓದಿದೆ.

೧೯-೯-೧೯೩೩:

ಇವೊತ್ತು ಬೆಳಿಗ್ಗೆ ನಾವೆಲನ್ನು ಪ್ರಾರಂಭಿಸಿದೆ. ಗುರುದೇವನ ಕೃಪೆಯಿಂದ,ಸರಸ್ವತಿಯ ದಯೆಯಿಂದ, ಕಲಾಸುಂದರಿಯ ಪ್ರೇಮದಿಂದ ಆ ಕೃತಿಯು ಮಹಾಕೃತಿಯಾಗಲಿ ಎಂದು ಹಾರೈಕೆ. ಮಧ್ಯಾಹ್ನ ಶ್ರೀನಿ ಬಂದು ಹೋದನು. ಎ.ಸಿ.ಶ್ರೀಕಂಠಯ್ಯ ಸಾಯಂಕಾಲ ನನ್ನ ‘ನವಿಲು’ಪುಸ್ತಕಕ್ಕೆ ಬೈಂಡು ಹಾಕಿ ತಂದರು.

೨೩-೯-೧೯೩೩:

ಸ್ವಾಮಿ ಭೂತೇಶಾನಂದಜೀಯವರು(ವಿಜಯ ಮಹಾರಾಜ್) ಮದ್ರಾಸಿಗೆ ಹೋದರು. ಶ್ರೀನಿವಾಸ,ರಂಗಪ್ಪ, ಕೃಷ್ಣಮೂರ್ತಿ, ಬಿಳುವೆ ಹಿರಿಯಣ್ಣ ಇವರು ಕನ್ನಂಬಾಡಿ, ಶ್ರೀರಂಗಪಟ್ಟಣಗಳಿಗೆ ಬೈಸಿಕಲ್ ಮೇಲೆ ಸುಮಾರು ಮೂವತ್ತು ಮೈಲಿ ಸುತ್ತಿ ನನ್ನ ಹತ್ತಿರ ಚೆನ್ನಾಗಿ ಬೈಸಿಕೊಂಡರು. ಶ್ರೀನಿವಾಸ ಸ್ವಾಮಿಜಿಗೆ ಹೇಳಬೇಡಿ ಎಂದು ಲಲ್ಲೆಯಾಡಿ ಗೋಗರೆದನು. ಓಬಯ್ಯ ಮೈಸೂರಿಗೆ ಬರುತ್ತೇನೆ ಎಂದು ಕಾಗದ ಬರೆದಿದ್ದಾನೆ. ನನ್ನ ‘ಮಲೆನಾಡಿನ ಮೂಲೆಯಲ್ಲಿ’*ಎಂಬ ಕಾದಂಬರಿಯಲ್ಲಿ ಐದನೆಯ ಅಧ್ಯಾಯ ಬರೆದೆ. The Gods are Athiest ಎಂಬ Anotale France ನ ಕಥೆ ಓದುತ್ತಿದ್ದೇನೆ.

ಈ ಸಂದರ್ಬದಲ್ಲಿ ನಡೆದ ಒಂದು ಸ್ವಾರಸ್ಯಕರವಾದ ಘಟನೆಯನ್ನು ಇಲ್ಲಿಯೆ ಹೇಳಿಬಿಡುತ್ತೇನೆ.

ಕಾದಂಬರಿ ಪ್ರಾರಂಭವಾಗಿ ಒಂದೆರಡು ಅಧ್ಯಾಯಗಳು ಪೂರೈಸಿದ್ದಾಗ, ಆಗಾಗ್ಗೆ ರಜಾದಿನಗಳಲ್ಲಿ ಆಶ್ರಮಕ್ಕೆ ಬಂದು ನನ್ನೊಡನೆ ಸಂಜೆಯವರೆಗೂ ಇದ್ದು ಭಾವಗೀತೆಗಳನ್ನೂ ಇನ್ನಾವುದೊ ಇನ್ನೂ ಹಸ್ತಪ್ರತಿಯಲ್ಲಿದ್ದುದನ್ನೊ ಓದಿಸಿ ಆಲಿಸಿ ಹಿಗ್ಗುತ್ತಿದ್ದ ಎ.ಸಿ.ಶ್ರೀಕಂಠಯ್ಯ ನಾನು ಬರೆದಂತೆಲ್ಲ ಕಾದಂಬರಿಯನ್ನು ಓದಿಸಿ ಕೇಳಬೇಕೆಂದು ದುಂಬಾಲು ಬಿದ್ದರು. ಅದಕ್ಕಾಗಿ ಅವರು ಪ್ರತಿ ಭಾನುವಾರವೂ ತಪ್ಪದೆ, ಬಿಸಿನಲ್ಲಿ ಮಳೆಯಲ್ಲಿ, ಸ್ವಸ್ಥವಿದ್ದರೆ ಬೈಸಿಕಲ್ಲಿನಲ್ಲಿ, ಇಲ್ಲದಿದ್ದರೆ ಟಾಂಗಾದಲ್ಲಿ ಅವರಿಗೆ ಮೂರು ಮೈಲಿ ದೂರವಿದ್ದ ಆಶ್ರಮಕ್ಕೆ ಬಂದು ಮುಂದುವರಿದ ಕಾದಂಬರಿಯ ಅಧ್ಯಾಯಗಳನ್ನು ಓದಿಸಿ ಕೇಳುತ್ತಿದ್ದರು. ನನಗೂ ಒಬ್ಬ ಸಹೃದಯನ ರಸಸ್ವಾದನೆಯ ಪ್ರೋತ್ಸಾಹ ಒದಗುತ್ತಿತ್ತು. ಅಲ್ಲದೆ ಅವರು ಅನೇಕ ಇಂಗ್ಲಿಷ್ ಮತ್ತು ಕನ್ನಡ ಕಾದಂಬರಿಗಳನ್ನು ಓದಿದವರಾಗಿ ವಿಮರ್ಶೆ ಮಾಡುವ ಶಕ್ತಿಯನ್ನೂ ಚೆನ್ನಾಗಿ ಪಡೆದಿದ್ದರು. ಜೊತೆಗೆ ಸಿನಿಮಾ ನೋಡುವುದರಲ್ಲಿಯೂ ಅವರು ನಿಸ್ಸೀಮರಾಗಿದ್ದು ಅವುಗಳನ್ನೂ ನಿರ್ದಾಕ್ಷಿಣ್ಯವಾಗಿ ಪ್ರಶಂಸಿಸುತ್ತಿದ್ದರು ಅಥವಾ ಖಂಡಿಸುತ್ತಿದ್ದರು. ಕಥೆಯನ್ನು ಸಂವಿಧಾನವನ್ನೂ ಸಂವಾದವನ್ನೂ ಅಭಿನಯವನ್ನೂ ಕುರಿತು ಪ್ರೌಢವಾಗಿ ಪ್ರತಿಪಾದಿಸುತ್ತಿದ್ದರು.

ನಾನು ಕಾದಂಬರಿಯ ಆರನೆಯ ಅಧ್ಯಾಯ‘ಸೇರೆಗಾರರ ಕೇಪಿನ ಕೋವಿ’ಯನ್ನು ಬರೆದು ಮುಗಿಸಿದ್ದಾಗ ಎಂದಿನಂತೆ ಮಟಮಟ ಮಧ್ಯಾಹ್ನದ ಬಿಸಿಲಿನಲ್ಲಿ ಟಾಂಗಾದಲ್ಲಿ

(* ಕಾದಂಬರಿಗೆ‘ಕಾನೂರು ಹೆಗ್ಗಡಿತಿ’ಎಂಬ ಹೆಸರು ನಿಲ್ಲುವ ಮೊದಲು ಅನೇಕ ಹೆಸರುಗಳನ್ನು ಯೋಚಿಸಿದ್ದೆ. ಅದರಲ್ಲಿ ಇದೂ ಒಂದು.)

ಬಂದಿಳಿದರು. ಅವರಿಗೆ ಹೆದರಿಕೆ. ಕಾದಂಬರಿಯನ್ನು ಮುಂದುವರಿಸಿದ್ದಾರೆಯೊ ಇಲ್ಲವೊ ಎಂದು. ಆರನೆಯ ಅಧ್ಯಾಯ ಮುಗಿದಿದೆ ಎಂಬ ಸುವಾರ್ತೆಗೆ ಅವರ ಮನಸ್ಸು ನೆಮ್ಮದಿಗೊಂಡಿತು. ಸಿಡುಬಿನ ಚುಕ್ಕಿಯ ಅವರ ಮೊಗದಲ್ಲಿ ನಗೆಮುಗುಳು ಅರಳಿತು. ಹಾಗೆಯೆ ಸ್ವಲ್ಪ ಹೊತ್ತು ಅದೂ ಇದೂ ಮಾತನಾಡಿದ ಮೇಲೆ ಅವರು ತಂದಿದ್ದ ತಿಂಡಿಯೂ ಮುಗಿದಾಗ ಕಾದಂಬರಿಯ ಆರನೆಯ ಅಧ್ಯಾಯವನ್ನು ಹೊರತೆಗೆದೆ. ಅವರಿಗೆ ಮಕ್ಕಳ ಕುತೂಹಲವೋ ಕುತೂಹಲ! ಹಿಂದಿನ ನಾಲ್ಕು ಅಧ್ಯಾಯಗಳನ್ನೂ ತಲ್ಲೀನರಾಗಿ ಆಲಿಸಿ ಚಿತ್ರಿಸಿಕೊಂಡು ಅನುಭವಿಸಿದ್ದರು. ಕಾದಂಬಿರಿಯನ್ನು ನಿಜವಾಗಿ ಆಸ್ವಾದಿಸುವುದು ಹೇಗೆ ಎಂಬುದನ್ನು ಅವರು ಅನುಭವಿಸಿ ಅರಿತಿದ್ದರು, ಕಣ್ಣಿಗೆ ಕಟ್ಟಿದಂತೆ ನೋಡಿ ಮತ್ತು ಸಾಕ್ಷಾತ್ತಾಗಿ ಸಂವಾದಗಳನ್ನೆಲ್ಲ ಕಿವಿಯಿಂದಾಲಿಸಿ! ನಾನು ಓದುವ ಧಾಟಿಯೂ ನೆರವಾಗುತ್ತಿತ್ತು.

ಆರನೆಯ ಆರನೆಯ ಅಧ್ಯಾಯದ ಹೆಸರನ್ನು ಹೇಳಿದೆ:‘ಸೇರೆಗಾರರ ಕೇಪಿನ ಕೋವಿ’ಅವರು ಮೆಲನಾಡಿಗೆ ಬಂದು ನಮ್ಮೊಡನೆ ಇದ್ದು ಬೇಟೆಗಳಲ್ಲಿ ಭಾಗವಿಹಿಸಿದ್ದರು, ಪ್ರೇಕ್ಷಕರಾಗಿ! ಕೇಪಿನ ಕೋವಿ, ತೋಟಾಕೋವಿ, ಜೋಡು ನಳಿಗೆ, ಒಂಟಿ ನಳಿಗೆ, ರೈಫಲ್, ಹನ್ನೆರಡನೆ ನಂಬರು, ಇಪ್ಪತ್ತನೆ ನಂಬರು,(ಬಿಲ್ಲು, ಹಳು, ಕತ್ತ, ಗಜ,ಕೇಪು,ಚರೆ, ಕಡುಕು, ಗುಂಡು) ಇತ್ಯಾದಿಗಳೆಲ್ಲ ಅವರಿಗೆ ಪರಿಚಿತವಾಗಿತ್ತು. ಆದ್ದರಿಂದಲೆ ನನ್ನ ಕಾದಂಬರಿಯಲ್ಲಿ ಬರುವ ಕಾಡಿನ,ಬೇಟೆಯ, ಗದ್ದೆ, ತೋಟಗಳ, ಗುಡ್ಡ ಬೆಟ್ಟಗಳ, ಹೊಳೆ ತೊರೆಗಳ ವರ್ಣನೆಗಳನ್ನು ಕಂಡುಂಡಂತೆ ಆಸ್ವಾದಿಸುತ್ತಿದ್ದರು. ಆ ವಿಷಯಗಳಲ್ಲಿ ನಾನು ಒಮ್ಮೊಮ್ಮೆ ಅವರಿಗೆ ಸವಾಲು ಹಾಕಿ ಅವರ ಸಾಮರ್ಥ್ಯವನ್ನೂ ಸಹೃದತೆಯನ್ನೂ ಒರೆಗಲ್ಲಿಗೆ ಹಚ್ಚುತ್ತಿದ್ದೆ!

ಅಂದೂ ಒರೆಗಲ್ಲಿಗೆ ಹಚ್ಚಿದೆ:

“ಶ್ರೀಕಂಠಯ್ಯ,ಇವೊತ್ತು ನಿಮ್ಮ ಪರೀಕ್ಷೆ ಮಾಡುತ್ತೇನೆ. ಸಿದ್ಧರಾಗಿ.”

“ಏನದು ಪರೀಕ್ಷೆ?” ಅವರು ಕೇಳಿದರು ತುಸು ಬೆರಾಗಿ.

“ಹಿಂದಿನ ಅಧ್ಯಾಯಗಳಲ್ಲಿ ಕಾನೂರು ಸೇರೆಗಾರ ರಂಗಪ್ಪ ಸೆಟ್ಟರ ವಿಷಯ ನೀವು ಸ್ವಲ್ಪ ಮಟ್ಟಿಗೆ ತಿಳಿದಿದ್ದೀರಿ, ಪರೋಕ್ಷವಾಗಿ. ಈ ಅಧ್ಯಾಯದಲ್ಲಿ ಅವರನ್ನು ಪ್ರತ್ಯಕ್ಷವಾಗಿ ಪ್ರವೇಶಿಸುತ್ತೇನೆ. ನೀವು ಅನೇಕ ಸಿನಿಮಾಗಳನ್ನು ನೋಡಿದವರು; ಅನೇಕ ಕಾದಂಬರಿಗಳನ್ನು ಓದಿದವುರ. ನಾನು ಸೇರೆಗಾರರನ್ನು ಪ್ರವೇಶಿಸಬಹುದಾದ ಹತ್ತಾರು ರೀತಿಗಳನ್ನು ನೀವು ಕಲ್ಪಿಸಿಕೊಳ್ಳಿ.”ಓಹೋ ಇಷ್ಟೇನೆ?ನಾನು ಮೊದಲೇ ಊಹಿಸಿದ್ದೆ” ಎನ್ನುವಂತಾಗಬೇಕು ನಿಮ್ಮ ಕಲ್ಪನಾ ವೈವಿದ್ಯ ನಿಮ್ಮ ಊಹೆಗಳೆಲ್ಲ ಸೋತು,”ನೀವು ವಿಸ್ಮಯಾಶ್ಚರ್ಯಗಳಿಂದ ಕುರ್ಚಿಯಿಂದ ನೆಗೆದೇಳುವಂತಾಗದಿದ್ದರೆ ನನ್ನ ಕಾದಂಬರಿ ವ್ಯರ್ಥ ಎಂದು ಸವಾಲು ಹಾಕುತ್ತೇನೆ.ಹತ್ತುನಿಮಿಷ ಕೊಡುತ್ತೇನೆ,ಸಾಧ್ಯವಾದಷ್ಟು ರೀತಿಗಳನ್ನು ಊಹಿಸಿಕೊಳ್ಳಿ ಮತ್ತೆ!”ಎಂದು ನಾನು ಬೇರೆ ಏನೋ ಕೆಲಸದಲ್ಲಿ ನಿರತನಾದೆ.

ಹತ್ತು ನಿಮಿಷ ಅವರು ಸೇರೆಗಾರರ ಪ್ರವೇಶವಾಗಬಹುದಾದ ನಾನಾ ರೀತಿಗಳನ್ನು ಕುರಿತು ಆಲೋಚಿಸಿ, ಧೇನಿಸಿ ಆಲಿಸಲು ಸಿದ್ದರಾದರು. ನಾನು ಓದತೊಡಗಿದೆ:

“ತರಂಗಿತ ಸಹ್ಯಾದ್ರಿ ಶ್ರೇಣಿಗಳಿಂದ ರಚಿತವಾದ ಬಹುದೂರದ ಪ್ರಾಚೀನದಿಗಂತ ರೇಖೆಯ ದೀರ್ಘ ಸರ್ಪವಿನ್ಯಾಸವು ಸದ್ಯಃಫ್ರುಫುಲ್ಲಿತವಾದ ಉಷಃಕಾಂತಿಯಿಂದ ತಕ್ಕಮಟ್ಟಿಗೆ ಸ್ಪಷ್ಟವಾಗಿದ್ದರೂ ಬೇಗಬೇಗನೆ ಪ್ರಸ್ಫುಟವಾಗುತ್ತಿದ್ದರೂ ಕಾನೂರು ಬೆಟ್ಟದ ಕಾನನಾಂತರದಲ್ಲಿ ಮಾತ್ರ ಕತ್ತಲೆ ಇನ್ನೂ ದಟ್ಟವಾಗಿ ಮೆತ್ತಿಕೊಂಡಂತಿತ್ತು.” ಎಂದು ಪ್ರಾರಂಭಿಸಿದೆ. ಅವರು ತಮ್ಮ ಚೇತನವೆಲ್ಲ ಸಮಾಧಿಗೊಂಡಂತೆ ಆಲಿಸುತ್ತಿದ್ದರು. ಕಾಡು,ಕಾಡುಕೋಳಿ,ಹೇಟೆ, ಮರಿಗಳು ಹೀಗೆ ಮುಂದುವರಿದಂತೆಲ್ಲ ಅವರಿಗೆ ಅಚ್ಚರಿ, ಸೇರೆಗಾರರ ವಿಷಯವೆ ಇಲ್ಲವಲ್ಲ ಎಂದು ಹುಂಜದ ಪ್ರಣಯ;ಪೊದೆಯಲ್ಲಿ ದೂರದ ತೆಕೋ ತೆಕ್ ತೆಕ್ ತೆಕ್! ಹುಂಜದ ಮೋಹ.-ಹೀಗೆ ಮುಂದುವರಿದು, ಅವರ ಕುತೂಹಲ ಮುಳ್ಳುಮೊನೆಯೇರಿದಂತಾಗಿ ಒದ್ದಾಡತೊಡಗಿತ್ತು. “ಇನ್ನೂ ಬಿಸಿಯಾಗಿದ್ದ ನಳಿಗೆಯ ತುದಿಯಿಂದ ಹೊಗೆಯಾಡುತ್ತಿದ್ದ ಕೇಪಿನಕೋವಿಯನ್ನು ಕೈಯಲ್ಲಿ ಹಿಡಿದು, ಕಾನೂರು ಸೇರೆಗಾರ ರಂಗಪ್ಪ ಸೆಟ್ಟರು ತಾವು ಅಡಗಿನಿಂತಿದ್ದ ಹೊದರಿನಿಂದ ಹೊರಗೆ ನೆಗೆದು, ಹುಂಜವಿದ್ದ ಜಾಗಕ್ಕೆ ಕಾತರದಿಂದ ನುಗ್ಗಿದರು.”ಓದಿ ಮುಗಿಸಿದ್ದೆ ತಡ, ಶ್ರೀಕಂಠಯ್ಯ ಕುರ್ಚಿಯಿಂದ ನೆಗೆದೆದ್ದು ಹರ್ಷಾತಿಶಯಕ್ಕೆ ಕುಣಿದಾಡಿಬಿಟ್ಟರು,ಚಪ್ಪಾಳೆ ಹೊಡೆಯುತ್ತಾ!”ಅದ್ಭುತ!ಅದ್ಭುತ! ನಾನೆಲ್ಲಿಯೂ ಇಂಥಾದ್ದನ್ನು ಸಂಧಿಸಿಲ್ಲ!”ಎಂದ ಅವರ ಉದ್ಘೋಷಣೆಗೆ ಪಕ್ಕದ ಕೊಠಡಿಯಲ್ಲಿದ್ದ ಸ್ವಾಮಿಜಿ ಓಡಿಬಂದು ‘ಏನಾಯಿತು?’ಎಂದು ಕೇಳಿಯೆಬಿಟ್ಟರು. ವಿಷಯವನ್ನರಿತು ನಕ್ಕು ಹೊರಟುಹೋದರು.

೨೪-೯-೧೯೩೩:

ಬೆಳಿಗ್ಗೆ ವಿದ್ಯಾರ್ಥಿನಿಲಯಕ್ಕೆ ಹೋಗಿ ಸ್ವಾಮಿ ವಿವೇಕಾನಂದರ‘ವೇದಾಂತ’ಉಪನ್ಯಾಸವನ್ನು ಸ್ವಲ್ಪ ತರ್ಜುಮೆ ಮಾಡಿದೆ.-ಓಬಯ್ಯ ಬಂದಿದ್ದಾನೆ.

೨೮-೯-೧೯೩೩:

ನಿನ್ನೆ ಸಾಯಂಕಾಲ ಬಂದಿದ್ದ ಸಂಪದ್ಗಿರಿರಾಯರು ಇವೊತ್ತು ಮಧ್ಯಾಹ್ನ ಬೆಂಗಳೂರಿಗೆ ಹೋದರು. ಅವರು ಪುತ್ತೂರಿನ ಶಿಶು ಸಪ್ತಾಹದ ವಿಚಾರವಾಗಿ ಅನೇಕ ವಿಷಯ ಹೇಳಿದರು. ಕಾರಂತರು ಬಹುಮುಖ ಪ್ರತಿಭೆಯನ್ನು ಹೊಗಳಿದರು. ಆ ಹೊಗಳಿಕೆಯಲ್ಲಿ ತಾತ್ಕಾಲಿಕ ಪ್ರಭೆಯಿಂದ ಉಂಟಾಗುವ ಉತ್ ಪ್ರೇಕ್ಷೆಯಿತ್ತು. ನಾನು ಪುತ್ತೂರಿಗೆ ಬರದಿದ್ದುದಕ್ಕಾಗಿ ಅಲ್ಲಿಯ ಜನರಿಗೆ ಅಸಮಾಧಾನವಾಗಿದೆಯಂತೆ. ನಾನು ಹೇಳಿದೆ: ನಾನೀಗಲೆ ಮಾಡುವ ಕೆಲಸ ಬಿಟ್ಟು ಅಲೆದಾಟಕ್ಕೆ ಷುರುಮಾಡಿಬಿಟ್ಟರೆ ನನ್ನ ನಿಜವಾದ ಕಾರ್ಯಕ್ಕೆ ತೊಂದರೆಯಾಗುತ್ತದೆ ಎಂದು.

ಮಧ್ಯಾಹ್ನ ಶ್ರೀನಿ ಬಂದ. ಅವನಿಗೆ ಸಂಪದ್ಗಿರಿರಾಯರು ತಂದಿದ್ದ ಒಂದು ಹಸ್ತ ಲಿಖಿತ ಮಾಸಪತ್ರಿಕೆಯನ್ನು ತೋರಿಸಿದೆ. ಹೈದರ್ ಎಂಬ ಮುಸಲ್ಮಾನರ ಹುಡುಗನು ಶ್ರೀಕೃಷ್ಣತನಯ ಎಂಬ ಹೆಸರಿನಿಂದ ಲೇಖನ, ಕವನ,ಚಿತ್ರಗಳನ್ನು ಅದರಲ್ಲಿ ಬರೆದಿದ್ದುದು ಆಶ್ಚರ್ಯಗೊಳಿಸುವಂತಿತ್ತು. ಅವನಿಗೆ ಟಾಲ್ ಸ್ಟಾಯ್ ಬರೆದ The God son ಎಂಬ ಕಥೆಯನ್ನು ಓದಿದೆ. ಹಳೆಯ ಮಿತ್ರ ಎಸ್.ರಾಮ್ ರಾವ್ ಬಂದಿದ್ದ. ಅವನಿಗೆ ‘ಪಾಂಚಜನ್ಯ’ ದ ಒಂದು ಪ್ರತಿಕೊಟ್ಟು,ಅದರಿಂದ ಕೆಲವು ಕವನಗಳನ್ನು ಓದಿದೆ. (ನಾವು ತೀರ್ಥಹಳ್ಳಿಯಲ್ಲಿ ಓದುತ್ತಿದ್ದಾಗ ಅವನೂ ನಾನು ಗೋಲಿಯಾಟದಲ್ಲೆ ಮುಳುಗುತ್ತಿದ್ದೆವು. ಅವನ ತಂದೆ ಅಮಲ್ದಾರರಾಗಿದ್ದುರು.)

೨೯-೯-೧೯೩೨:

ಬೆಳಿಗ್ಗೆ ಕಾದಂಬರಿ ಬರೆಯುತ್ತಿದ್ದೆ. ಆ ಹಾಸನದ ಭೂವಳ್ಳಿ ಹೆಡ್ ಮಾಸ್ಟರ್ ಗುಂಡಪ್ಪನವರು ಬಂದರು. ಅವರ ಮಗ ನಾಗರಾಜನೂ ಜೊತೆಗೆ ಬಂದಿದ್ದ. ಅವನಿಂದ ನನಗೆ ಸಾಷ್ಟಾಂಗ ನಮಸ್ಕಾರ ಮಾಡಿಸಿದರು. ಅಯ್ಯೋ! ಈ ದಾಸ್ಯ ಭಾವ ಎಂದಿಗೆ ಹೋಗುವುದು?

ಇವತ್ತೊಂದು ಘಟನೆ ನಡೆಯಿತು. ಅದು ಹಳೆಯ ಸಂಸ್ಕಾರಗಳ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ಸ್ವಾಮಿ ದೇಶಿಕಾನಂದರೆಂಬುವರು ಇಲ್ಲಿದ್ದಾರೆ. ಈಗ ಅವರು ಉದ್ದಕೂದಲು ಮತ್ತು ಗಡ್ಡ ಬಿಟ್ಟಿದ್ದಾರೆ. ಬಹುಶಃ Personalit ಗೆ ಅಥವಾ ಜನರಿಗೆ ಡಂಗು ಬಡಿಯಲಿರಬಹುದು. ಅವರು ಬಹಳ ಭಕ್ತಿ ತೋರಿಸುತ್ತಾರೆ. ಇವೊತ್ತು ನಾನು ಕೊಟಡಿಯಿಂದ ಹೊರಗೆ ಹೋದಾಗ ಒಬ್ಬಾತನನ್ನು ನಿರ್ದೇಶಿಸಿ‘ಇವರೇ ನಮ್ಮ ಬೆಂಗಳೂರಿನ ಚಮ್ಮಾರಭಕ್ತ’ಎಂದರು. ನಾನು ಸುಮ್ಮನಾದೆ. ವ್ಯಕ್ತಿಯು ಅವರು ಹೇಳದಿದ್ದರೆ ಚಮ್ಮಾರನೆಂದು ಗೊತ್ತಾಗುವಂತಿರಲಿಲ್ಲ. ಶುಚಿಯಾಗಿ ನೋಡಲು ಗೌರವಯುಕ್ತವಾಗಿಯೂ ಇದ್ದನು. ಊಟದ ಸಮಯದಲ್ಲಿ ಒಳಗೆ ನಮ್ಮೊಡನೆ ಊಟದ ಮನೆಯಲ್ಲಿ ಹಾಕಿದ್ದ ಎಲೆಯನ್ನು ದೇಶಿಕಾನಂದರು ಎತ್ತಿಕೊಂಡು ಬಂದು ಹೊರಗಿಡುತ್ತಿದ್ದರು, ಜನರು ತಿರುಗಾಡವ ಮನೆಯೊಳಗಣ ಓಣಿದಾರಿಯಲ್ಲಿ.‘ಏಕೆ?’ಎಂದು ಕೇಳಿದೆ. ‘ಚಮ್ಮಾರನಿಗೆ’ಎಂದರು. ನಾನು ಕೇಳಿದೆ “ಒಳಗೇಕೆ ಹಾಕಬಾರದು?” ಎಂದು. “ಇರಲಿ,ಇರಲಿ.” ಎಂದರು.”ಒಳ್ಳೆ ವೇದಾಂತ ನಿಮ್ಮದು. ಮುಸಲ್ಮಾನರನ್ನೂ ಒಳಗೆ ಕೂರಿಸಿಕೊಂಡು ಊಟ ಹಾಕಿದ್ದೇವೆ. ಚಮ್ಮಾರನಿಗೆ ಹಾಕಬಾರದೆ?” ಎಂದು ಹಾಸ್ಯ ಮಾಡಿದೆ. ಅಷ್ಟುಹೊತ್ತಿಗೆ ಆಶ್ರಮದ ಅಧ್ಯಕ್ಷರಾಗಿರುವ ಈಶ್ವರಾನಂದರೂ ನನ್ನಂತೆಯೆ ವಾದಿಸಿದರು. ಏನೆಂದರೂ ದೇಶಿಕಾನಂದರು”ಅವನು ಹೊರಗೇ ಊಟ ಮಾಡಲಿ” ಎಂದರು. ನನಗೆ ರೇಗಿತು:”ಒಳ್ಳೆ ಕೆಲಸ ನಿಮ್ಮದು.ನಾನು ಎಲ್ಲರೊಡನೆಯೂ ಹೇಳುತ್ತೇನೆ, ಆಶ್ರಮದಲ್ಲಿ ಹೀಗೆ ಭೇದ ಮಾಡುತ್ತಾರೆಂದು! ಅಯ್ಯೋ ನಿಮ್ಮ ಕಾರ್ಯವನ್ನು ನೋಡಿ ಗುರುಮಹಾರಾಜರು (ಶ್ರೀರಾಮಕೃಷ್ಣರು) ಕಣ್ಣೀರು ಕರೆಯುತ್ತಿದ್ದಾರೆ! ನೋಡಿ”ಎಂದೆ. ಆದರೂ ದೇಶಿಕಾನಂದರು ಕೇಳಲಿಲ್ಲ. ಆದರೆ ಈಶ್ವರಾನಂದರು ಎದ್ದುಹೋಗಿ ಹೊರಗಿದ್ದ ಎಲೆಯನ್ನು ಎತ್ತಿ ತಂದು ಒಳಗೆ ನಮ್ಮ ಜೊತೆಯಲ್ಲಿಯೆ ಹಾಕಿದರು. ಆಮೇಲೆ ಚಮ್ಮಾರನೂ ನಮ್ಮೊಡನೆಯೆ ಕುಳಿತು ಉಂಡನು.- ಎಲ್ಲ ಬಿಟ್ಟ ಸಂನ್ಯಾಸಿಗೇ ಈ ಬುದ್ದಿ ಇರುವುದಾದರೆ ಸಂಪ್ರದಾಯ ದಾಸರು ಹರಿಜನ ವಿರೋಧಿಗಳಾಗುವುದು ಆಶ್ಚರ್ಯವೇ?*…

(*ನಾಲ್ವತ್ತು ವರುಷಗಳ ಮೇಲೆ, ೨೦-೧೦-೧೯೭೪ ರಲ್ಲಿ, ಮೇಲೆ ಬರೆದ ದಿನಚರಿಯನ್ನು ಕುರಿತು ಟಿಪ್ಪಣಿ ಬರೆಯಬೇಕು ಎನ್ನಿಸುತ್ತಿದೆ. ಆ ಯೌವನದ ಹುರುಪಿನಲ್ಲಿ ಅನುಭವಗಳು ಬಿಸಿಬಿಸಿಯಾಗಿರುತ್ತಿದ್ದ ತತ್ಕಾಲದಲ್ಲಿ ಕೋಪವು ಸತ್ಕೋಪವಾಗಿ ಅದು ನ್ಯಾಯಸಮ್ಮತವಾಗಿದ್ದಾಗಲೂ ಅದು ವ್ಯಕ್ತಗೊಳಿಸುವ ಭಾಷೆ ಅತಿರೇಕದ್ದಾಗುವುದು ಸಹಜವೆ. ಸ್ವಾಮಿ ದೇಶಕಾನಂದರು ಏತಕ್ಕಾಗಿಯೊ ಅಂದು ಆ ರೀತಿ ವರ್ತಿಸಿದ್ದರು. ಆದರೆ ಅವರು ಜಾತಿಭೇದ ಭಾವನೆಯಿಂದ ಹಾಗೆ ವರ್ತಿಸಿದ್ದರೆಂದು ಅವರನ್ನು ಆಮೇಲೆ ಬಹಳ ಹತ್ತಿರದಿಂದ ಬಹುಕಾಲದವರೆಗೆ ತಿಳಿದ ನನಗೆ ತೋರುವುದಿಲ್ಲ. ಜೊತೆಗೆ ಅವರು ಪೂರ್ವಾಶ್ರಮದಲ್ಲಿ ಬ್ರಾಹ್ಮಣರಾಗಿದ್ದರೆ ಸಂಸ್ಕಾರ ಬಲದಿಂದ ಹಾಗೆ ಮಾಡಿದರೆಂದು ಹೇಳಬಹುದಾಗಿತ್ತೇನೊ? ಅವರು ಪೂರ್ವಾಶ್ರಮದಲ್ಲಿ ಕೊಡವರು. ಕೊಡಗಿನವರಲ್ಲಿಯೆ ಆ ತರಹದ ಭೇದಭಾವನೆ ಅತ್ಯಪೂರ್ವ. ಅತಿಥಿ ಸತ್ಕಾರದಲ್ಲಿ ಎಂತೊ ಅಂತೆ ಅತಿಥಿಗೌರವದಲ್ಲಿಯೂ ಬೇರೆ ಏನೊ ಕಾರಣ ಇದ್ದಿರಬಹುದೇನೊ? ಹೇಳಲಾಗದಿದ್ದುದು? ಹೇಳಬಾರದಿದ್ದುದು?

ಒಂದುವೇಳೆ, ವರ್ಣಾಶ್ರಮ ಮತ್ತು ಜಾತಿಪದ್ದತಿಗಳ ಅನಿಷ್ಟ ಸೂತ್ರಗಳಿಂದ ಬದ್ದವಾಗಿರುವ ಹಿಂದೂಮತದ ದುಃಸಂಸ್ಕಾರದ ಅವಶೇಷವೇನಾದರೂ ಆ ಸಂನ್ಯಾಸಿಯಲ್ಲಿ ಅಂದೂ ಅಲ್ಪಸ್ವಲ್ಪ ಉಳಿದಿದ್ದು ಅವರನ್ನು ಹಾಗೆ ಪ್ರೇರಿಸಿದ್ದರೂ ತರುವಾಯ ಜೀವನದಲ್ಲಿ ಅವರು ಅಂಥದ್ದನ್ನೆಲ್ಲ ಸಂಪೂರ್ಣವಾಗಿ ತ್ಯಜಿಸಿ ಅತೀತರಾಗಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರು ಸ್ವಾಮಿ ಈಶ್ವರಾನಂದರ ಕಾಲದಲ್ಲಿಯೂ ನಮ್ಮೊಡನೆ ಆಶ್ರಮವಾಸಿಗಳಾಗಿದ್ದರು. ತರುವಾಯ ಸ್ವಾಮಿ ಈಶ್ವರಾನಂದರು ಕೊಚ್ಚಿಯ ಆಶ್ರಮಕ್ಕೆ ಅಧ್ಯಕ್ಷರಾಗಿ ಹೋದಮೇಲೆ ಸ್ವಾಮಿ ದೇಶಿಕಾನಂದರೇ ಅಧ್ಯಕ್ಷರಾಗಿ ಆಶ್ರಮದ ಪುರೋಗತಿಗೆ ತುಂಬಾ ಸೇವೆ ಸಲ್ಲಸಿದರು.)

೩-೧೦-೧೯೩೩:

ಜಿ.ವಾಸುದೇವರಾವ್ *ಬಂದಿದ್ದರು. ‘ಪಾಂಚಜನ್ಯ’ದ ಕವನಗಳನ್ನು ಅವರಿಗೆ ಓದಿದೆ. ಕಾದಂಬರಿಯನ್ನು ಮುಂದುವರಿಸಿದೆ. The Gods are Athiest ಓದಿ ಮುಗಿಸಿದೆ.

೬-೧೦-೧೯೩೩:

ಈಗ ಬೆಳಿಗ್ಗೆ ಎಂಟೂಮುಕ್ಕಾಲು ಗಂಟೆ. ವಿದ್ಯಾರ್ಥಿನಿಲಯಕ್ಕೆ ಹೋಗಿ ಹುಡುಗರಿಗೆ As you like it ಅನ್ನು ಸ್ವಲ್ಪ ಭಾಗ ಓದಿ ಬಂದು, ಕಾಫಿ ಕುಡಿದು, ನನ್ನ ಕಾದಂಬರಿಯನ್ನು ಬರೆಯುತ್ತಿದ್ದೆ. ಕುಟ್ಟಪ್ಪ ಬಂದು ಕೆ.ಎಚ್.ರಾಮಯ್ಯನವರು ತೀರಿಕೊಂಡರೆಂದು ತಿಳಿಸಿದರು. ವಿಧಿಯ ಲೀಲೆ ಅಂಚಿತ್ಯವಾಗಿದೆ. ಮೊನ್ನೆ ತಾನೆ ಪ್ಯಾರಿಸ್ಸಿಗೆ ಹೋಗಿ ಆರೋಗ್ಯವಾಗಿ ಬಂದು ವಿನೋದಕರವಾದ ಭಾಷಣಗಳನ್ನು ಸಾಭಿನಯವಾಗಿ ಮಾಡಿ ಜನರನ್ನೆಲ್ಲ ನಗಿಸಿ ನಗುತ್ತಿದ್ದ

(ಆ ಹೆಸರಿನ ತರುಣ ಆತನೂ ಕವಿಯಾಗಿದ್ದನು. ತಾನು ರಚಿಸಿದ ಒಂದು ಕವನವನ್ನು ಓದಿದನು. ವಿಷಯ ಹಿಮಾಲಯವೋ ಏನೋ ಸರಿಯಾಗಿ ನೆನೆಪಿಲ್ಲ. ಅದರ ವಸ್ತು ಉದಾತ್ತವಾಗಿತ್ತು ಛಂದಸ್ಸು ಮತ್ತು ಶೈಲಿಯಲ್ಲಿ ನನ್ನ ಕಲ್ಕಿಯ ಅನುಕರಣೆ ಇದ್ದಂತೆ ತೋರಿತ್ತು. ಮುಂದೆ ಆತನ ವಿಚಾರವೆ ನನಗೆ ಗೊತ್ತಾಗಲಿಲ್ಲ. ಈಗಲೂ ಇದ್ದಾನೋ ಇಲ್ಲವೋ ತಿಳಿಯೆ ೨೦-೧೦-೧೯೭೪)

ಆ ಮನುಷ್ಯ ಇಷ್ಟು ಬೇಗ ಸಾಯುವನೆಂದು ಯಾರು ಭಾವಿಸಿದ್ದರು? ಮೊನ್ನೆ ಟೌನ್ ಹಾಲಿನಲ್ಲಿ ಭಾಷಣ ಮಾಡುವಾಗ ಬಳಲಿ ಕೂತರಂತೆ. ಹೃದಯ ಚಲನೆಗೆ ಭಂಗ ಬಂದಿತಂತೆ. (ಡಾಕ್ಟರೊಬ್ಬರು ಆಮ್ಲಜನಕದಿಂಕಲೊ ಅಥವಾ ತಮ್ಮ ಬಾಯುಸಿರಿನಿಂದಲೊ ಊದಿ ಅವರಿಗೆ ಪ್ರಜ್ಞೆ ಮರಳುವಂತೆ ಮಾಡಿದಾಗ ಅವರ ಹೆಸರನ್ನು ಶಾಲಾ ಹುಡುಗರು ಸಂಭೋದಿಸುವಂತೆ ಉಚ್ಚರಿಸಿ ಕರೆದು ಏಕವಚನದಲ್ಲಿಯೆ‘ಗಟ್ಟಿಗ ಕಣೋ ನೀನು!’ ಎಂದು ಸಿಫಾರಸು ನುಡಿದು ಮತ್ತೆ ಪ್ರಜ್ಞೆ ತಪ್ಪಿದರಂತೆ. ಅವರು ಸಾಧಾರಣವಾಗಿ ದೊಡ್ಡ ದೊಡ್ಡ ಅಧಿಕಾರಿಗಳನ್ನೂ ಸ್ನೇಹಿತನಂತೆ‘ನೀನಿ-ತಾನು’ಎಂದೇ ಕರೆಯುತ್ತಿದ್ದುದು ರೂಢಿ.) ನಿನ್ನೆ ತಾನೆ ಕೇಳಿದ್ದೆ. ಇವತ್ತು ತೀರಿಕೊಂಡರು. ನಮ್ಮ ದೇಶದ ಒಬ್ಬ ನಗುಮೊಗದ ಧೀರ ಹೃದಯದ ಸರಳ ಜೀವನದ ಸತ್ಪುರುಷನು ಕಣ್ಮರೆಯಾದನು. ಆತ ಹಿಂದುಳಿದ ಪಂಗಡಗಳಿಗೆ ಧೈರ್ಯದಾತನಾಗಿದ್ದನು. ಸಾಮಾನ್ಯರನ್ನು ಮುಂದಕ್ಕೆ ತರಬೇಕು ಎನ್ನುವ ಪ್ರಯತ್ನ ಆತನದಾಗಿತ್ತು. ವಿಧಿಲೀಲೆ ಅಂಚಿತ್ಯ; ಆದರೆ ನಿರುದ್ದೇಶಕವಾದುದಲ್ಲ ಎಂದು ನನ್ನ ನಂಬಿಕೆ. ಜೈ ಗುರುದೇವ! ಜೈ ಗುರುದೇವ! ಆತನ ಆತ್ಮಕ್ಕೆ ಶಾಂತಿಯಾಗಲಿ!!

೮-೧೦-೧೯೩೩ರಿಂದ ೧೩-೧೦-೧೯೩೩ ರವರೆಗೆ:

ಭಾನುವಾರ ಮಧ್ಯಾಹ್ನ ಕಾದಂಬರಿ ಬರೆಯುತ್ತಿದ್ದೆ. ಶ್ರೀಕಂಠಯ್ಯ ಜ್ವರವಿದ್ದರೂ ಅದನ್ನು ಕೇಳಲೆಂದು ಟಾಂಗ ಮಾಡಿಕೊಂಡು ಬಂದರು. ನಾನೂ ಓದಿದೆ. ಆಮೇಲೆ ಜ್ವರ ಜೋರಾಗಿ ಮಲಗಿದರು. ಮರುದಿನ  ಮತ್ತೆ ಟಾಂಗ ಮಾಡಿಕೊಂಡು ಮನೆಗೆ ಹೋದರು. (ಪರಿಣಾಮ:ಅವರ ಇನ್ ಪ್ಲೂಯನ್ ಜಾ ನನಗೆ ತಗುಲಿತು.) ಅಂದಿನಿಂದ ನನಗೂ ಇನ್ ಪ್ಲೂಯನ್ ಜಾ ಆಗಿ ನರಳಿಬಿಟ್ಟೆ. ಮೈನೋವು ನಿದ್ದೆಯಿಲ್ಲ.

ಅಂತೂ ಈಗ ೨೧-೧೦-೧೯೭೪.ವಾಸಿ.ಜ್ವರ ಬಂದು ಹೋಗಿಬಿಟ್ಟಾಗಲೆಲ್ಲ ಜಗತ್ತು ನನಗೆ ಮತ್ತಷ್ಟು ಮನೋಹರವಾಗಿ ಹೊಸದಾಗಿ ಸುಖಮಯವಾಗಿ ಕಾಣಿಸುತ್ತದೆ:

“ನೀನು ಬರಬೇಕಯ್ಯ, ನೀನು ಬರಬೇಕು.
ಆರೋಗ್ಯದ ದಿನಗಳಲ್ಲಿ ನೂರಾರು ಗೆಳೆಯರು ನಾನು
ಹಾಡಿಯಾಡುವುದನು ಕೇಳೆ ನೋಡಿ ನಲಿಯಲೆಂದು ಬಂದು
ನನ್ನನ್ನು ಸೂರೆಗೊಳ್ಳುತ್ತಾರೆ.
ಆದರೆ ಈ ರೋಗದ ದಿನದಲಿ. ಬೇಸರದ ನೋವಿನ
ನೆನಪಿನ ಶಯ್ಯೆಯಲಿ ನಿದ್ದೆಯಲ್ಲದೆ ನಾನು ನರಳಿ ಹೊರಳುತ್ತಿರೆ,
ನನ್ನ ಬಳಿಗೆ ಸುಳಿಯುವವರನೆ ಕಾಣೆನಯ್ಯ!
ನೀನು ಬರಬೇಕಯ್ಯಾ, ನೀನೆ ಬರಬೇಕು.
ಇಲ್ಲದಿರೆ ಈ ದೀರ್ಘ ದಿನಗಳನು ನಾ ಸಹಿಸಲಾರೆ,

ಹೇ ನನ್ನ ಪ್ರೇಮಮೂರ್ತಿ.”

೧೬-೧೦-೧೯೩೩:

ಇವತ್ತು ಕಾಲೇಜಿಗೆ ಹೋದೆ.

೧೭-೧೦-೧೯೩೩:

ಆಶ್ರಮಕ್ಕೆ ನಾಲ್ವತ್ತು ರೂಪಾಯಿ ಕೊಟ್ಟೆ. ಸೇವಿಂಗ್ಸ್ ಬ್ಯಾಂಕಿನಲ್ಲಿ ಎಂಬತ್ತು ರೂಪಾಯಿ ಇಟ್ಟೆ.(ಎರಡು ವರ್ಷಕ್ಕೊಮ್ಮೆ ಹತ್ತು ರೂಪಾಯಿ ಬಡ್ತಿ. ನಾಲ್ಕು ವರ್ಷಕ್ಕೆ ಇಪ್ಪತ್ತು ಬಡ್ತಿ ಆಗಿತ್ತು.)

೩೦-೧೦-೧೯೩೩:

ಬೆಳಿಗ್ಗೆ ಈಶಾವಾಸ್ಯ, ಕೇನ, ಮುಂಡಕ ಉಪನಿಷತ್ತುಗಳಿಂದ ಕೆಲವು ಮಂತ್ರಗಳನ್ನು ಭಾಷಾಂತರಿಸಿದೆ. ಮತ್ತೆ  ಕಾಫಿ ಕುಡಿದು ಬಯಲಿಗೆ ಬಂದೆ;

ಅಹಾ! ಎಂತಹ ಮನೋಗರ ಸ್ವರ್ಗೀಯ ಸುಂದರ ಸುಮಧುರ ಪ್ರಾತಃ ಕಾಲವಿದು! ಆನಂದವು ಲೋಕದ ಮೂಲೆಮೂಲೆಗೂ ನುಗ್ಗಿ ಹುಚ್ಚು ಹಿಡಿಸುವಂತಿದೆ. ಎಳನೇಸರ ಕದಿರುಗಳ ಕಾಂತಿಯಲ್ಲಿ ಇದೇನು ಹಿಮಮಣಿಗಳ ಅದ್ಭುತ ಲೀಲೆ! ಹಸುರು ಬಯಲಿನ ಮೇಲೆ ಬಿಳಿಯ ನುಣ್ಣನೆ ಮುತ್ತುಗಳನ್ನು ಚೆಲ್ಲಿ, ನಡುನಡುವೆ ರನ್ನದ ಹಣತೆಗಳಲ್ಲಿ ಚಿನ್ನದ ಬೆಳ್ಳಿಯ ಪಚ್ಚೆಯ ನೀಲಿಯ ಬತ್ತಿಗಳಿಗೆ ಬಣ್ಣಬಣ್ಣದ ಸೊಡರುಗಳನ್ನು ಹೋತ್ತಿಸಿಟ್ಟಂತೆ ತನುಮನ ಆತ್ಮಗಳನ್ನೆಲ್ಲ ಅಪಹರಿಸಿ ನನ್ನನ್ನು ಇಲ್ಲಗೈವಂತಿದೆ ಈ ಹಿಮಮಣಿಗಳ ದಿವ್ಯಮಾಯೆ! ಓ ಮನೋಹರ ಮಾಯೆಯೇ, ನಿನಗಿದೋ ನನ್ನ ಕೆಂದುಟಿಗಳ ಮುತ್ತು! ಉಣ್ಣೆಮುಗಿಲ ಮುಡಿವೊತ್ತ ಚಾಮುಂಡಿಗಿರಿ! ತುಂಡು ಮುಗಿಲ ರಂಗೋಲಿ ಹಾಕಿದ ಶರದಾಕಾಶ! ಮೆಲ್ಲನೆ ಬೀಸುವ ತಂಗಾಳಿ! ನೋಡಲ್ಲಿ: ಆ ಹುಲ್ಲಿನ ಎಸಳ ತುದಿಯಲ್ಲಿ, ಪ್ರಕೃತಿದೇವಿಯ ಮೂಗುತಿಯ ಕೆಂಪುಮಣಿಯಂತೆ, ಜ್ವಾಲೆಯ ಒಂದು ಹನಿಯಂತೆ ಕಂಪಿಸುತ್ತಿದೆ ಆ ಹಿಮಮಣಿ ಮಲ್ಲೆಲರ ಸೋಂಕಿಂಗೆ! ಬಯಲಿನ ಮೇಲೆ ಒಂದೊಂದು ಹೆಜ್ಜೆಗೂ ಹಿಂದಿನ ದೃಶ್ಯವಡಗಿ ಮತ್ತೊಂದು ದೃಶ್ಯವು ಕಂಗೊಳಿಸುತ್ತಿದೆ. ಕೆಲವು ಹನಿಗಳಂತೂ ಸ್ವರ್ಣಜ್ವಾಲೆಗಳಂತೆ ಉರಿಯುತ್ತಿವೆ! ಆ ಉರುಳಿ ಹಕ್ಕಿ ಬಯಲಿನಲ್ಲಿ ಹೊಳೆವ ಇಬ್ಬನಿಗಳ ನಡುವೆ ಹೇಗೆ ಹಾಡುತ್ತಿದೆ! ಆ ಗುಬ್ಬಚ್ಚಿಗಳ ಗುಂಪು ಕೂಗುತ್ತಿದೆ! ಬೀದಿಯ ಜಲಗಾರ ಪೊರೆಕೆ ಹಿಡಿದು ತನ್ನ ಕೆಲಸದಲ್ಲಿ ಮಗ್ನನಾಗಿದ್ದಾನೆ! ಅವನಿಗೂ ಈ ಸೊಬಗನ್ನು ಸವಿಯುವ ಶಕ್ತಿ ಇದ್ದಿದ್ದರೆ! ಆ ಬೈಸಿಕಲ್ಲಿನವನು. ಈ ಚೆಲುವನ್ನು ಲೆಕ್ಕಿಸದೆ ಎಷ್ಟು ಧೂರ್ತತೆಯಿಂದ ಧಾವಿಸುತ್ತಿದ್ದಾನೆ? ಏನು ಕೆಲಸವೊ ಪಾಪ ಅವನಿಗೆ?ಬಹುಶಃ ಬೊಂಬಾಯಿ ‘ಆನಂದಮಂದಿರ’ದಲ್ಲಿ ಕೆಲಸವಿರಬಹುದು! ನಾನು ಬೇಡ ಎನ್ನುವುದಿಲ್ಲ; ಹೋಗಿ ತಿನ್ನು! ಆದರೆ ದಾರಿಯಲ್ಲಿ ಈ ಸೌಂದರ್ಯವನ್ನೂ ಏಕೆ ನೋಡುತ್ತಾ ಹೋಗಬಾರದೊ, ನತದೃಷ್ಟಾ? ಹಾಗೆ ಮಾಡಿದರೆ ನಿನ್ನ ಕಾಫಿ, ನಿನ್ನ ದೋಸೆ ಇನ್ನಷ್ಟು ರುಚಿಯಾಗುತ್ತವೆ!… ಆಃ! ಆ ಹಿಮಮಣಿ! ಎಂತಹ ನೀಲಜ್ವಾಲೆ! ಕಣ್ಣು ಕುಕ್ಕುತ್ತಿದೆ. ಶ್ಯಾಮಲ ತೃಣಗಳ ಮಧ್ಯೆ ಜ್ಯೋತಿಸ್ ತೃಣದಂತೆ! ಇದೇನು, ನಾನೂ ಒಂದು ಹಿಮ ಮಣಿಯಾಗಿಬಿಟ್ಟಿದ್ದೇನೆ! ಮಿಣುಕುತ್ತಿದ್ದೇನೆ! ಮೆಲ್ಲೆಲರಿನಲಿ ಕಂಪಿಸುತ್ತಿದ್ದೇನೆ. ರವಿ ಕಿರಣದಲಿ ತಳತಳಿಸುತ್ತಿದ್ದೇನೆ! ಕಲ್ಲಿನಂತೆ ಶತಮಾನಗಳು ಬಾಳುವುದಕ್ಕಿಂತಲೂ ಹಿಮಮಣಿಯಂತೆ ಬಣ್ಣಬಣ್ಣದ ಸೊಡರಾಗಿ ಹೊಳೆದು ನಲಿದು ಮೂರು ನಿಮಿಷ ಬಾಳಿ ಆವಿಯಾಗಿ ಬೇಗನೆ ಗಗನಕ್ಕೇರಿ ಮುಗಿಲ ಮನೆಯನ್ನು ಸೇರುವುದೇ ಲೇಸು!

೮-೧೧-೧೯೩೩: ವೃದ್ಧ ಪಿತಾಮಹ ವೆಂಕಟಕೃಷ್ಣಯ್ಯನವರ ನಿಧನ.

* * *

ಸಾವಿರದ ಒಂಬೈನೂರ ಮೂವತ್ತು ಮೂರನೆಯ ಇಸವಿ ಡಿಸೆಂಬರ್ ಕೊನೆಯ ವಾರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಲನದ ವಾರ್ಷಿಕ ಅಧಿವೇಶನ ಹುಬ್ಬಳ್ಳಿಯಲ್ಲಿ ನಡೆಯುವುದೆಂದು ಗೊತ್ತಾಗಿತ್ತು. ಅದರ ಅಂಗವಾಗಿ ನಡೆಯುವ ಕವಿ ಸಮ್ಮೇಲನಕ್ಕೆ ನನ್ನನ್ನು ಅಧ್ಯಕ್ಷನಾಗುವಂತೆ ಆಹ್ವಾನಿಸಿದ್ದರು. ನಾನು ಹಿಂದೆಮುಂದೆ ನೋಡುತ್ತಿದ್ದಾಗ ಮತ್ತೆ ಪ್ರೋ.ವೆಂಕಣ್ಣಯ್ಯನವರೆ ಹುರಿದುಂಬಿಸಿದರು. ಜೊತೆಗೆ ತಾವೂ ಸಮ್ಮೇಲನಕ್ಕೆ ಹೋಗುವುದಾಗಿಯೂ ನಾವೆಲ್ಲ ಒಟ್ಟಿಗೆ ಹೋಗಬಹುದೆಂದೂ ಹೇಳಿ ನನ್ನನ್ನು ಒಪ್ಪಿಸಿದರು.

ಸರಿ, ನಾನು ಕವಿಸಮ್ಮೇಲನದ ಅಧ್ಯಕ್ಷ ಭಾಷಣ ಸಿದ್ದಗೊಳಿಸಿದೆ. ಅದಕ್ಕೆ ‘ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ’ಎಂದು ಹೆಸರು ಕೊಟ್ಟಿದ್ದೆ. ವೆಂಕಣ್ಣಯ್ಯನವರಿಗೂ ಅದನ್ನು ತೋರಿಸಿ ಬೆನ್ನು ತಟ್ಟಿಸಿಕೊಂಡೆ.

ಸಮ್ಮೇಲನ ನಡೆಯುವ ತಾರೀಖಿಗೆ ಒಂದು ವಾರದ ಮೊದಲೆ ನಾನು ಶಿವಮೊಗ್ಗಕ್ಕೆ ಹೋದೆ. ಏಕೆಂದರೆ ಅಲ್ಲಿ ವಿಶ್ವವಿದ್ಯಾನಿಲಯದ ಸಾಪ್ತಾಹಿಕ ಪ್ರಚಾರೋಪನ್ಯಾಸಗಳ ಕಾರ್ಯಕ್ರಮ ಜರುಗುತ್ತಿತ್ತು. ಮತ್ತು ಪ್ರೋ.ವೆಂಕಣ್ಣಯ್ಯನವರು ಅದರ ಉದ್ಘಾಟನೆ ಮಾಡಲು ಅಲ್ಲಿಗೆ ಹೋಗಿದ್ದರು. ಅಲ್ಲಿಂದಲೆ ನಾವು ಹುಬ್ಬಳ್ಳಿ ಸಮ್ಮೇಲನಕ್ಕೆ ಹೋಗಬಹುದೆಂದು ಅವರು ತಿಳಿಸಿದ್ದರು.

ಡಿಸೆಂಬರ್ ೨೪,೨೫,೨೬, ಮತ್ತು ೨೭ ಶಿವಮೊಗ್ಗದ ಮಿತ್ರರ ಅಕ್ಕರೆಯ ಸೆರೆಯಾಳಾಗಿದ್ದೆ. ಸೆಟ್ಟಿಹಳ್ಳಿ ಕಾಡುಮನೆಗೆ (ಫಾರೆಸ್ಟ್ ಲಾಡ್ಜ್) ಹೋದೆವು. ಅಲ್ಲಿ ಜಿ.ಹನುಮಂತರಾಯರ ನೇತೃತ್ವದಲ್ಲಿ ಉಪನ್ಯಾಸಕ್ಕೆ ಬಂದಿದ್ದ ಅಧ್ಯಾಪಕರುಗಳಿಗೆಲ್ಲ ಪುಷ್ಕಳ ಸುಖ ಸಮಾರಾಧನೆ ನಡೆಯುತ್ತಿತ್ತು. ಮೈಸೂರು ವಿಶ್ವವಿದ್ಯಾನಿಲಯದ‘ಪ್ರಸಾರಾಂಗಕ್ಕೆ’ಭದ್ರಬುನಾದಿ ಹಾಕಿದರೆ ಹನುಮಂತರಾಯರು. ಅನೇಕ ಅಧ್ಯಾಪಕರು ಹನುಮಂತರಾಯರ ಆತಿಥ್ಯದ ಊಟೋಪಚಾರದಿಂದಲೆ ಮೋಹಿತರಾಗಿ ಉಪನ್ಯಾಸ ಸಪ್ತಾಹಕ್ಕೆ ಒಪ್ಪಿಕೊಂಡು ಬರುತ್ತಿದ್ದರು ಎಂದರೆ ಅತಿಶಯೋಕ್ತಿಯಾಗುವುದಿಲ್ಲ.

ಸಪ್ತಾಹದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ನನ್ನ ಭಾಷಣದ ಏರ್ಪಾಡು ಇರಲಿಲ್ಲ. ಆದರೂ ವೆಂಕಣ್ಣಯ್ಯನವರ ಬಲತ್ಕಾರಕ್ಕೆ ಮಣಿದು ಒಂದು ಸಂಜೆಯ ಉಪನ್ಯಾಸಕ್ಕೆ ಒಪ್ಪಿದೆ. ಉಪನ್ಯಾಸ ಶಿವಮೊಗ್ಗ ನಗರದ ಪುರಭವನದಲ್ಲಿ ಏರ್ಪಟ್ಟಿತು. ವೆಂಕಣ್ಣಯ್ಯನವರೆ ಅಧ್ಯಕ್ಷತೆ ವಹಿಸಿದ್ದರು. ಜನ ತುಂಬಿ ಕಿಕ್ಕಿರಿದು ತುಳುಕಿಯೂ ಇತ್ತು. ಮೇಲೆ ಕೆಳಗೆ ಹೊರಗಡೆ!

ನನ್ನ ಭಾಷಣದ ಮುಖ್ಯ ವಿಷಯ ‘ಆಧುನಿಕ ಮಾನವ’ ಎಂಬುದಾಗಿತ್ತು. ಸಿ.ಜಿ.ಯಂಗ್ ಮನಶಾಸ್ತ್ರ‍್ಜ್ಞನ Modern man is search of a soul ಎಂಬ ಗ್ರಂಥದಲ್ಲಿನ ಆ ವಿಚಾರಕವಾದ ಪ್ರಬಂಧವನ್ನೆ ಆಶ್ರಯಿಸಿ ನಮ್ಮ ಉಪನಿಷತ್ತಿನ ಆಧಾರದ ವೇದಾಂತದ ದೃಷ್ಟಿಕೋನದಿಂದ ಮಾತನಾಡಿದೆ. ಪ್ರಾಚೀನದ ಶಾಶ್ವತ ಮೌಲ್ಯದ ಸಾರಸರ್ವಸ್ವವನ್ನು ಹೀರಿಕೊಂಡು  ಅರ್ವಾಚೀನದ ಜಗದ್ ವಿಶಾಲ ವೈಜ್ಞಾನಿಕ ದೃಷ್ಟಿಯಿಂದ ಪೋಷಿತವಾಗಿ ಅಗಾಮಿಕದತ್ತ ಸಾಗಿ ನೂತನ ಮೌಲ್ಯಗಳನ್ನು ಸಾಧಿಸುವಾತನೆ ನವೀನ ಅಥವಾ ನಿಜವಾದ ಆಧುನಿಕ ಮಾನವನಾಗುತ್ತಾನೆ. ಆಧುನಿಕ ಕಾಲದಲ್ಲಿ ಹುಟ್ಟಿರುವ ಮಾತ್ರಕ್ಕೆ ಆಧುನಿಕನಾಗುವುದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದೆ. ಉಪನ್ಯಾಸದ ಪ್ರಭಾವ ಅದ್ಭುತವಾಗಿತ್ತು ಎಂಬುದನ್ನು ಸೂಚಿಸುತ್ತಾ, ತರುವಾಯ ಮಿತ್ರರೊಡನೆ ಮಾತಾಡುವಾಗ ವೆಂಕಣ್ಣಯ್ಯನವರು ‘ಹೇಗಿತ್ತು ಇಂದಿನ ಭಾಷಣ? It was a great speech ಎಂದು ಒಬ್ಬರೊಡನೆ ಹೇಳುತ್ತಿದ್ದುದು ನನ್ನ ಕಿವಿಗೂ ಬಿದ್ದಿತು.’

ಇಪ್ಪತ್ತೇಳನೆಯ ತಾರೀಖು ಜೋಗದ ಜಲಪಾತ ಸಂದರ್ಶಿಸುವ ಏರ್ಪಾಡು ಮಾಡಿದೆ. ಮಾನಪ್ಪ, ಕಸ್ತೂರಿ, ನಾನು ಇನ್ನಿಬ್ಬರು, ಯಾರೊ ಸರಿಯಾಗಿ ನೆನಪಿಲ್ಲ, ಒಂದು ಕಾರಿನಲ್ಲಿ ಹೊರಟೆವು. ಆದರೆ ಕಾರು ಸಾಗರದಲ್ಲಿ ಕೆಟ್ಟು ನಿಂತಿತು. ಅದರ ರಿಪೇರಿ ಸಂಜೆಯವರೆಗೂ ಆಯಿತು. ಜೋಗದಲ್ಲಿ ಉಳಿಯಲು ಏರ್ಪಾಡು ಮಾಡಿಕೊಂಡಿದ್ದ ನಾ.ಕಸ್ತೂರಿ ಮತ್ತು ಸಂಗಡಿಗರನ್ನು ಜೋಗಕ್ಕೆ ಒಯ್ದುಬಿಟ್ಟು ಮತ್ತೆ ನಾವು ರಾತ್ರಿಯೆ ಶಿವಮೊಗ್ಗಕ್ಕೆ ಹಿಂದಿರುಗಿದೆವು. ಮರುದಿನವೆ(೨೯-೧೨-೧೯೩೩) ಹುಬ್ಬಳ್ಳಿಗೆ ಹೊರಡಬೇಕಾಗಿದ್ದರಿಂದ.

ಇಲ್ಲಿ ಒಂದು ಸ್ವಾರಸ್ಯ ವಿಷಯವನ್ನು ಕುರಿತು ಹೇಳಬೇಕು ಅನ್ನಿಸುತ್ತದೆ. ಹುಬ್ಬಳ್ಳಿಯ ಸಾಹಿತ್ಯ ಸಮ್ಮೇಲನದ ಉತ್ಸಾಹಿ ಕಾರ್ಯಕ್ರಮರು ಸಮ್ಮೇಲನ ಪ್ರಾರಂಭಭದ ಹಿಂದಿನ ದಿನ ಸಮ್ಮೇಲನದ ಅಧ್ಯಕ್ಷರನ್ನೂ ಕವಿಸಮ್ಮೇಲನದ ಅಧ್ಯಕ್ಷರನ್ನೂ ಆನೆಯ ಮೇಲೆ ಊರಿನ ಪ್ರಮುಖ ಬೀದಿಗಳನ್ನು ಮೆರವಣಿಗೆ ಮಾಡಲು ನಿಶ್ಚಯಿಸಿದ್ದರು. ನನಗೂ ಕಾಗದ ಬರೆದು ತಪ್ಪದೆ ಮೆರವಣಿಗೆ ಮಾಡಿಸಿಕೊಳ್ಳಲು ಬರಬೇಕೆಂದು ಕಾಗದ ಬರೆದಿದ್ದರು. ಅವರು ಕಾಗದ ಬರೆಯದೆ ಇದ್ದಿದ್ದರೆ ನಾನು ಮುನ್ನವೆ ಹುಬ್ಬಳ್ಳಿಗೆ ಹೋಗಿ ಮೆರವಣಿಗೆಗೆ ಸಿಕ್ಕಿಹಾಕಿಕೊಳ್ಳುತ್ತಿದ್ದನೊ ಏನೊ? ಕಾಗದ ಬರೆದು ತುಂಬ ಉಪಕಾರ ಮಾಡಿದ್ದರು.

ಆ ತೆರನ ಬೀದಿ ಮೆರವಣಿಗೆಗೆ ನನ್ನ ಮಟ್ಟಿಗೆ, ನಾನು ಬದ್ದದ್ವೇಷಿ, ಅದನ್ನು ನೆನೆದರೂ ನನಗೆ ಜುಗುಪ್ಸೆಯಾಗುತ್ತದೆ. ಆ ವಿಚಾರವಾಗಿ ವೆಂಕಣ್ಣಯ್ಯನವರಿಗೆ ಹೇಳಿ ಪ್ರತಿಭಟಿಸಿದೆ. ಅವರು ಮೊದಮೊದಲು”ಮಾಡಿದರೆ ಮಾಡಲಿ ಬಿಡು” ಎಂದು ಲಘುವಾಗಿ ಹೇಳಿ ನಕ್ಕರು. ಆದರೆ ನನ್ನ ಪ್ರತಿಭಟನೆ ಔಪಚಾರಿಕವಲ್ಲ ಎಂದು ಅವರಿಗೆ ಮನದಟ್ಟಾದ ಮೇಲೆ ಮೆರವಣಿಗೆಯಿಂದ ತಪ್ಪಿಸಿಕೊಳ್ಳಲು ಅವರೇ ಉಪಾಯ ಸೂಚಿಸಿದರು. ಮೆರವಣಿಗೆಯನ್ನು ೨೮ ನೆಯ ತಾರೀಖು  ಅಪರಾಹ್ನ ಇಟ್ಟುಕೊಂಡಿದ್ದರು. ನಾವು ತಡಮಾಡಿ ಹೋಗಿ ಮೆರವಣಿಗೆ ಮುಗಿದ ಮೇಲೆ ರೈಲಿನಿಂದಿಳಿದರಾಯಿತು! ನಮ್ಮ ಹುನಾರಿಗೆ ವಿಧಿಯ ಬೆಂಬಲವೂ ಒದಗಿ ಬಂದದ್ದು ನಾವು ಬೇಂಕೆಂದೇ ತಡಮಾಡಿ ಬರಲಿಲ್ಲ ಎಂಬುದಕ್ಕೆ ಇನ್ನಷ್ಟು ಸಾಕ್ಷಿ ದೊರೆಯಿತು!

ಪ್ರೊ.ವೆಂಕಣ್ಣಯ್ಯನವರೂ ನಾನೂ ಶಿವಮೊಗ್ಗದಿಂದ ಹರಿಹರಕ್ಕೆ ಬಸ್ಸಿನಲ್ಲಿ ಹೋದೆವು. ಬಸ್ಸು ಆಗಿನ ಹಾಳು ಧೂಳಿನ ಕೊರಕಲು ರಸ್ತೆಯಲ್ಲಿ ಹಾಗೂ ಹೀಗೂ ಚರಿಸಿ ತಡವಾಗಿ ಹರಿಹರಕ್ಕೆ ತಲುಪುವಷ್ಟರಲ್ಲಿ ಬೆಂಗಳೂರಿಂದ ಹುಬ್ಬಳ್ಳಿ ಕಡೆಗೆ ಹೋಗುವ ರೈಲು ಹೊರಟೆ ಹೋಗಿತ್ತು. ಅಲ್ಲಿ ಎಲ್ಲಿಯೂ ತಂಗಲು ಗೊತ್ತಾದ ಜಾಗವೂ ಇರಲಿಲ್ಲ. ಕುಳಿತುಕೊಳ್ಳುವುದಕ್ಕಾಗಲಿ ಮಲಗುವುದಕ್ಕಾಗಲಿ ಕೊಠಡಿಗಳ ಸೌಕರ್ಯದ ಮಾತಿರಲಿ, ಮಲಮೂತ್ರ ವಿಸರ್ಜನೆಗೂ! ರಾಮ ರಾಮ ತಂಬಿಗೆ ಹಿಡಿದು ಹೋಗುತ್ತಿರುವ ಒಂದು ಹೆಂಗಸಿನ ಚಿತ್ರ ಒಂದು ಕಡೆ, ಅದೇರೀತಿಯ ಗಂಡಸಿನ ಚಿತ್ರ ಇನ್ನೊಂದು ಕಡೆ! ಹೋಗಿ ನೋಡಿದರೆ ಸಾಲಾಗಿ ಒಲೆಗಳಿವೆ! ಕೆಲವರು ಬಹಿರ್ದೆಶಕ್ಕೆ ಕುಳಿತಿಯೆ ಇದ್ದಾರೆ! ಒಬ್ಬರಿಂದೊಬ್ಬರಿಗೆ ಯಾವ ಮರೆಯೂ ಇಲ್ಲ. ಅಲ್ಲದೆ ಒಲೆಯ ತುಂಬ ತುಂಬಿ ತುಳುಕುತ್ತಿದ್ದ ಹೇಲಿನ ಉಚ್ಚೆಯ ಸಹಿಸಲಾರದ ದುರ್ಗಂಧ! ಒಲೆ ಅಲ್ಲದ ನೆಲದ ಜಾಗದಲ್ಲಿಯೂ ಕಾಲಿಡಲು ತಾವಿಲ್ಲದಂತೆ ಹೇಲಿನ ಗುಪ್ಪೆಗಳು! ನನಗೆ ಜೀವವೆ ಹೋದ ಹಾಗಾಯಿತು. ಯಾವಾಗಲೂ ಯಾರೂ ನೋಡದಂತೆ ಮರೆಯಲ್ಲಿ ಕುಳಿತು ಅಭ್ಯಾಸವಿದ್ದ ನನಗೆ‘ಇದೇನು ಬಯಲುಸೀಮೆಯ ಜನರಿಗೆ ಮಾನ ಮರ್ಯದೆ ಏನೂ ಇಲ್ಲವೆ?’ಎನ್ನಿಸಿ ಅತ್ಯಂತ ಜುಗುಪ್ಸೆಯಾಯಿತು.

ಸಾಯಂಕಾಲವಾಗುತ್ತಿತ್ತು. ದರಿದ್ರ ಸ್ಟೇಷನ್ನಿನಲ್ಲಿ ಏನು ಮಾಡುವುದು ಎಂದು ಪಕ್ಕದಲ್ಲಿಯೆ ತುಸು ದೂರದಲ್ಲಿ ಹರಿಯುತ್ತಿದ್ದ ತುಂಗಭದ್ರೆಯ ಮಳಲ ತಡಿಗೆ ಹೋದೆವು. ಅಲ್ಲಿಯೂ ಕಕ್ಕಸ್ಸಿನ ವಾತಾವರಣವೆ! ಅಂತೂ ದೂರ ದೂರ ನಡೆದು ಹುಡುಕಿ ಇದ್ದುದರಲ್ಲಿ  ಸ್ವಲ್ಪ ಚೊಕ್ಕಟವೆಂದು ತೋರಿದ ಎಡೆಯಲ್ಲಿ ಕುಳಿತು ಹೊಳೆಯ ಮೇಲೆ ನೇಸರು ಬೈಗುಗೆಂಪು ಎರಚುತ್ತಾ ಮುಳುಗುವುದನ್ನು ಪ್ರಯತ್ನಪೂರ್ವಕ ಆಸ್ವಾದಿಸಿದೆವು. ಕತ್ತಲಾಗುತ್ತಿರಲು ಮತ್ತೆ ರೈಲ್ವೆ ಸ್ಟೇಷನ್ನಿಗೆ ಬಂದು, ಒಂದು ಗೂಡ್ಸ್ ಗಾಡಿಯಲ್ಲಿ ಮಲಗಿದೆವು.

ಮರುದಿನ ೨೯-೧೨-೧೯೩೩ನೆಯ ಬೆಳಿಗ್ಗೆ ಏಳು ಗಂಟೆಗೆ ಹುಬ್ಬಳ್ಳಿಯಲ್ಲಿ ನಾವು ರೈಲಿನಿಂದ ಇಳಿದಾಗ ಕವಿಸಮ್ಮೇಲನವದ ಅಧ್ಯಕ್ಷರನ್ನು ಸಂಭ್ರಮದಿಂದ ಸ್ವಾಗತಿಸಲು ಯಾರೂ ಇರಲಿಲ್ಲ.(ಅಂದು ಆ ದಿನ ನನ್ನ ಜನ್ಮದಿನವಾಗಿತ್ತು ಎಂಬುದನ್ನು ನಾನು ಇಂದು ಗಮನಿಸುತ್ತಿದ್ದೇನೆ. ಆಗ ನಾನು ಜನ್ಮದಿನ ಗಿನ್ಮದಿನ ಒಂದನ್ನೂ ಗಮನಿಸುತ್ತಿರಲಿಲ್ಲ.) ಹಿಂದಿನ ದಿನವೇ ನಾನು ಆನೆ ಮೇಲಣ ಮೆರವಣಿಗೆಗೆ ಆಗಮಿಸುತ್ತೇನೆ ಎಂದು ನನ್ನನ್ನು ಸ್ವಾಗತಿಸಲು ಬಂದಿದ್ದರಂತೆ. ನಾನು ಬರದಿರಲು ತುಂಬಾ ನಿರಾಶರಾಗಿ ಕೋಪಗೊಂಡು ಹಿಂತಿರುಗಿದ್ದರಂತೆ. ಬಹುಶಃ ಅವರಲ್ಲಿ ಉಚ್ಚ ವರ್ಗಕ್ಕೆ ಸೇರಿದ್ದ ಕೆಲವರಲ್ಲಿಯಾದರೂ”ಈ ಶೂದ್ರ ಒಕ್ಕಲಿಗನಿಗೆ ಆನೆ ಏರುವ ಅರ್ಹತೆ ಎಲ್ಲಿಂದ ಬರಬೇಕು? ಅದರ ವಿಜೃಂಭಣೆ ಮತ್ತು ಗೌರವ ಅದಕ್ಕೆ ಹೇಗೆ ಅರ್ಥವಾದೀತು?” ಎಂದುಕೊಂಡು ತಿರಸ್ಕಾರದ ನಗೆ ನಕ್ಕಿರಬೇಕು!

ಸಮ್ಮೇಲನಕ್ಕೆ ಮೈಸೂರಿನ ಕಡೆಯಿಂದ ಸಾಹಿತ್ಯಲೋಕದ ಪ್ರತಿಷ್ಠಿತ ವ್ಯಕ್ತಿಗಳೆಲ್ಲರೂ ಬಂದಿದ್ದರು; ಬಿ.ಎಂ.ಶ್ರೀ., ಡಿ.ವಿ.ಜಿ., ಎ.ಆರ್.ಕೃ., ಮಾಸ್ತಿ, ಶ್ರೀನಿವಾಸಮೂರ್ತಿ, ಸುಬ್ಬರಾಯಪ್ಪನವರು ಇತ್ಯಾದಿ ಇತ್ಯಾದಿ. ಶ್ರೀಕಂಬಳಿ ಎಂಬ ಆ ಕಡೆಯ ಪ್ರತಿಷ್ಠಿತ ವ್ಯಕ್ತಿಯೊಬ್ಬರು ಉದ್ಘಾಟನಾ ಭಾಷಣ ಮಾಡಿದರು. “ಅವರಲ್ಲಿ ಸಾಹಿತ್ಯಕ ವಿಷಯ ಪರಿಜ್ಞಾನಕ್ಕಿಂತಲೂ ಜಂಭ ದರ್ಪಗಳೆ ಹೆಚ್ಚಾಗಿರುವಂತೆ ತೋರಿತು.” ಎಂದು ನನ್ನ ಅಂದಿನ ದಿನಚರಿಯಲ್ಲಿ ಬರೆದಿದ್ದೇನೆ. ಅದು ಎಷ್ಟರ ಮಟ್ಟಿಗೆ ಸರಿಯೋ ನಾನರಿಯೆ.

“ಅಧ್ಯಕ್ಷ ನಾಗೇಶಶಾಸ್ತ್ರಿಗಳ ಭಾಷಣವು ವಿಷಯ ಪರಿಪೂರ್ಣವಾಗಿದ್ದರೂ ಸ್ವಲ್ಪಮಟ್ಟಿಗೆ ದೀರ್ಘವೂ ನೀರಸವೂ ಆಗಿದ್ದಂತೆ ತೋರಿತು.-ಮೈಸೂರಿನ ನಮಗೆ ಇಲ್ಲಿಯವರ ನಡೆ ನುಡಿಗಳಲ್ಲಿ ಸ್ವಲ್ಪ ಒರಟುತನ ತೋರುತ್ತದೆ.”