೩೦-೧೨-೧೯೩೩:

ಕೆಲವರು ಬಂದು ಚಿತ್ರವಿಚಿತ್ರವಾದ ಪ್ರಶ್ನೆಗಳನ್ನು ಕೇಳಿದರು, ನವೀನ ಕವನಗಳ ವಿಚಾರವಾಗಿ. ಅವರಿಗೆ ರಸಕ್ಕಿಂತಲೂ ಗಣಿತವೆ ಪ್ರಾಮುಖ್ಯ ಎಂಬಂತೆ ತೋರುತ್ತದೆ. ಹೊಸದರ ಛಂದಸ್ಸು ನಾಗವರ್ಮನಲ್ಲಿದೆಯೇ ಎಂದು ಕೇಳುತ್ತಾರೆ. ಅದರ ಮೂಲವು ಅಲ್ಲಿದೆ ಎಂದರೆ ಅವರಿಗೆ ತಿಳಿಯುವುದಿಲ್ಲ. ಕೆಲವರು “ನಿಮ್ಮ ಕವನಗಳನ್ನು ಪದ್ಯಕ್ಕೋ ಅಥವಾ ಗದ್ಯಕ್ಕೋ ಸೇರಿಸಬೇಕು?” ಎಂದು ಕೇಳುತ್ತಾರೆ.

ಸಾಲಿ ರಾಮಚಂದ್ರರಾಯರೂ ಇನ್ನೊಬ್ಬ ವಿದ್ಯಾರ್ಥಿಯೂ ಸಾಯಂಕಾಲ ನನ್ನೊಡನೆ ಬಹಳ ಹೊತ್ತು ಮಾತಾಡಿದರು. ಆ ವಿದ್ಯಾರ್ಥಿ ನನ್ನ ಕವನಗಳನ್ನು ಚೆನ್ನಾಗಿ ಹಾಡಿ ತೋರಿಸಿದನು. ನಾನೂ ನನ್ನ ಕೆಲವು ಕವನಗಳನ್ನು ‘ಅಂದು’ತೋರಿಸಿದೆನು.

೩೧-೧೨-೧೯೩೩:

ಬೆಳಿಗ್ಗೆ ಕವಿಸಮ್ಮೇಳನಕ್ಕೆ ಮುನ್ನ ‘ಭಾವಚಿತ್ರ ಗ್ರಹಣ’ ವಾಯ್ತು. ವಿಶಾಲವಾದ ಚಪ್ಪರದಲ್ಲಿ ಎಳ್ಳುಕಾಳು ಹಾಕಲು ಜಾಗವಿರದಂತೆ ಜನ ಕಿಕ್ಕಿರಿದು ಹೋಗಿತ್ತು. ಉತ್ಸಾಹವೋ ಉತ್ಸಾಹ ತರುಣರಲ್ಲಿ. ಅನೇಕರು ದೂರದೂರದ ಊರುಗಳಿಂದ ಕವಿ ಸಮ್ಮೇಲನದ ಅಧ್ಯಕ್ಷರನ್ನು ನೋಡುವ ಸಲುವಾಗಿಯೆ ಬಂದಿದ್ದರಂತೆ! ಜನರು ನನ್ನ ಅಧ್ಯಕ್ಷ ಭಾಷಣವನ್ನು ನಿಶ್ಯಬ್ದರಾಗಿ ಕಿವಿಗೊಟ್ಟು ಕೇಳಿದರು. (ಭಾಷಣಕ್ಕೆ ಮುನ್ನ ನನ್ನನ್ನು ಸಭೆಗೆ ಪರಿಚಯ ಮಾಡಿಕೊಟ್ಟವರಲ್ಲಿ ಕೊಡಗಿನ ಮಡಿಕೇರಿಯ ಚಿ….ಪ್ಪನವರ ಮಗಳು ಪ…. ವತೀ ದೇವಿಯವರೂ ಒಬ್ಬರಾಗಿದ್ದರು.)

ಅಧ್ಯಕ್ಷ ಭಾಷಣದ ತರುವಾಯ ಹೊಸ ಕವನಗಳ ಕಾವ್ಯವಾಚನ ಏರ್ಪಟ್ಟಿತ್ತು. ನವೋದಯದ ಅನೇಕ ಕವಿಗಳು ತಮ್ಮ ಕವಿತೆಗಳನ್ನು ಓದಿದರು. ಹಾಡಿದರು, ‘ಅಂದರು!’ಕೆಲವರು ತುಂಬ ಕೆಳಮಟ್ಟದ ಕವನಗಳನ್ನು ನೀರಸವಾಗಿ ಓದುತ್ತದ್ದುದರಿಂದ ಜನ ಕೈಚಪ್ಪಾಳೆ ತಟ್ಟಿಯೆ ಅವರನ್ನು ಬಾಯಿಕಟ್ಟಿಸಿ ಓಡಿಸಿದರು. ಏನು ಹುಚ್ಚೋ ಏನೋ? ಎಂತೆಂತಹ ಪದ್ಯಗಳನ್ನೊ ತಂದು ಓದುತ್ತಾರೆ! ಅದರಲ್ಲಿಯೂ ನೆರದವರಿಗೆ ನನ್ನ ಕವನಗಳನ್ನು ಕೇಳಬೇಕೆಂಬಾಶೆ ಕೆರಳಿದ್ದುದರಿಂದ ಇತರನ್ನು ಆಲಿಸುವ ತಾಳ್ಮೆ ಇರಲಿಲ್ಲ. ನಾನು ಕವನವಾಚನಕ್ಕೆ ಎದ್ದೊಡನೆಯೆ ಕರತಾಡನಗಳ ಸಿಡಿಲೆ ಎದ್ದಿತು. ನಾನು ‘ಕುಮಾರವ್ಯಾಸ’ಮತ್ತು‘ಕಲ್ಕಿ’ಎರಡನ್ನೂ ನಾಟಕೀಯವಾಗಿ ವಾಚಿಸಿದೆ. ಮತ್ತು ಇತರ ಕವನಗಳ ತರುವಾಯ‘ಭಾರತ ತಪಸ್ವಿನಿ’ಎಂಬ ಸಾನೆಟ್ಟನ್ನು ಓಜೋಯುಕ್ತವಾಗಿ ವಾಚಿಸಿದೆ.(ಆ ಸಾನೆಟ್ಟೇ ಮಡಿಕೇರಿಯ ಸಾಹಿತ್ಯ ಪರಿಷತ್ತಿನ ಅಧಿವೇಶನದಲ್ಲಿ ಸತ್ಯಾಗ್ರಹಿಗಳನ್ನು ಹುಚ್ಚೆಬ್ಬಿಸಿತ್ತು!) ಸದಸ್ಯ ಸಹೃದಯ ಸಮುದ್ರ ಉಕ್ಕಿ ಹರಿದಂತೆ ಜನೋತ್ಸಾಹ ಭೋರ್ಗರೆಯಿತು!-ಡಿ.ವಿ.ಗುಂಡಪ್ಪನವರು, ಪಾವಟೆ ಸಿದ್ದರಾಮಪ್ಪನವರು ಮೊದಲಾದವರು ಸಭೆ ಮುಗಿದ ಮೇಲೆ ನನ್ನ ಬಳಿಗೆ ಬಂದು ಮನಃಪೂರ್ವಕವಾಗಿ ಶ್ಲಾಘೀಸಿದರು.(ಪಾವಟೆ ಸಿದ್ಧರಾಮಪ್ಪನವರು ‘ನನಗೆ ಈ ಆಧುನಿಕ ಕವನಗಳೆಂದರೆ ಸ್ವಲ್ಪವೂ ಸಹಿಸಲಾಗುತ್ತಿರಲಿಲ್ಲ. ಇಂದು ಪುಟ್ಟಪ್ಪನವರ ಭಾಷಣ ಮತ್ತು ಕವನ ವಾಚನಗಳನ್ನು ಕೇಳಿ ನನ್ನ ದೃಷ್ಟಿಯೆ ಸಂಪೂರ್ಣ ಬದಲಾಯಿಸಿದೆ!’ಎಂದರಂತೆ.)

(ನನ್ನ ಭಾಷಣವನ್ನು-‘ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ’-ಕೇಳಿದ ಜನ ಅದರ ಪ್ರತಿಗಳು ಬೇಕೆಂದು ಹಾತೊರೆದರಂತೆ. ಆದರೆ ಅದು  ಅಚ್ಚಾಗಿರಲಿಲ್ಲ. ನನ್ನ ಹತ್ತಿರವಿದ್ದದ್ದೂ ಏಕೈಕ ಹಸ್ತಪ್ರತಿ. ಪತ್ರಿಕೆಗಳವರು ಬಂದು ಭಾಷಣದ ಪ್ರತಿ ಕೇಳಿದರು. ಇಂಗ್ಲಿಷ್ ಭಾಷಣಗಳನ್ನು ಮಾತ್ರ ಶೀಘ್ರಲಿಪಿಯಲ್ಲಿ ಬರೆದುಕೊಳ್ಳುವ ಅಭ್ಯಾಸವಿದ್ದ ಆ ಕಾಲದಲ್ಲಿ  ನನ್ನ ಕನ್ನಡ ಭಾಷಣಕ್ಕೆ ಪತ್ರಿಕೆಯವರು ಗೌರವ ಕೊಡುತ್ತಿದ್ದುದೂ ಅಷ್ಟಕ್ಕಷ್ಟೆ! ನಾನು”ನನ್ನ ಭಾಷಣವನ್ನು ನಮ್ಮ ‘ಪ್ರಬುದ್ಧ ಕರ್ಣಾಟಕ’ಕ್ಕೆ ಕೊಡುತ್ತೇನೆಂದು ಮಾತು ಕೊಟ್ಟಿದ್ದೇನೆ. ಆದ್ದರಿಂದ ಕೊಡಲು ಸಾಧ್ಯವಿಲ್ಲ.” ಎಂದು ಬಿಟ್ಟೆ. ಹಾಗೆಂದರೇನು? ಸಾರ್ವಜನಿಕ ಭಾಷಣಕ್ಕೆ ಎಲ್ಲರ ಹಕ್ಕೂ ಇದೆ- ಎಂದು ಅವರು ವಾದಿಸಿದರು. ಆದರೆ ನಾನು ಹಿಡಿದ ಪಟ್ಟು ಬಿಡಲಿಲ್ಲ. ಕಡೆಗೆ ಅವರೆಲ್ಲ ಪ್ರೊ.ವೆಂಕಣ್ಣಯ್ಯನವರ ಬಳಿಗೆ ಹೋಗಿ ದೂರು ಹೇಳಿದರು. ಅವರು ನನ್ನ ಕೊಠಡಿಗೆ ಬಂದು “ಅವರಿಗೆ ಹಸ್ತಪ್ರತಿ ಕೊಡಬೇಡಿ. ಆದರೆ ಇಲ್ಲಿಯೆ ಕುಳಿತು ಭಾಷಣದ ಕೆಲವೇ ಭಾಗಗಳನ್ನು ಪತ್ರಿಕೆಗಳಿಗಾಗಿ ಬರೆದುಕೊಳ್ಳುತ್ತಾರೆ.” ಎಂದರು. ‘ಪ್ರಬುದ್ಧ ಕರ್ಣಟಕ’ದ ಸಂಪಾದಕರೂ ಅವರೇ ಆಗಿದ್ದುದರಿಂದ ಅವರ ಸಲಹೆಗೆ ಒಪ್ಪಿದೆ.)

ಸಾಯಂಕಾಲ ಮಾನ್ಯ ಶ್ರೀ ಕಂಬಳಿಯವರು ತಮ್ಮ ಭವನದಲ್ಲಿ ಪರಿಷತ್ತಿನ ಸಮ್ಮೇಲನಕ್ಕೆ ಬಂದಿದ್ದ ಅತಿಥಿಗಳ ಗೌರವಾರ್ಥವಾಗಿ ಒಂದು ಉಪಾಹಾರ ಸಂತೋಷಕೂಟ ಏರ್ಪಡಿಸಿ ನಮ್ಮನ್ನೆಲ್ಲ ಆಹ್ವಾನಿಸಿದ್ದರು. ಅಲ್ಲಿ ಅವರು ಹಿಂದೆ ಬೆಳಿಗ್ಗೆ ತೋರಿದಷ್ಟು ಗರ್ವಿಗಳಾಗಿ ತೋರಲಿಲ್ಲ. ಬಹಳ ನೊಂದವರಾಗಿ ತೋರಿದರು. ರೌಂಡು ಟೇಬಲ್ ಕಾನ್ ಫರೆನ್ಸ್, ಕರ್ಣಾಟಕ ಏಕೀಕರಣ,- ನಮ್ಮ ಜನರು ಉತ್ತರ ಭಾರತದ ಜನರಲ್ಲಿ ಯಾರನ್ನು ಬೇಕಾದರೂ ಹೊಗಳಿ ಅನುಸರಿಸುತ್ತಾರೆ,- ಇತ್ಯಾದಿಯಾಗಿ ಮಾತಾಡಿದರು.

ಅಲ್ಲಿ ನನಗೆ ವೈಯಕ್ತಿಕ ಎನ್ನಬಹುದಾದ ಒಂದು ಸ್ವಾರಸ್ಯ ಸನ್ನಿವೇಶವೂ ಸಂಭವಿಸಿತು. ಮೇಜಿನ ಮೇಲೆ ಉಪಾಹಾರ ಸ್ವೀಕರಿಸುತ್ತಿದ್ದಾಗ ನನಗೆ ನೇರವಾಗಿ ಎದುರು ಆಸನದಲ್ಲಿ ಕುಮಾರಿ ಪ…. ವತಿಯವರು ಕುಳಿತಿದ್ದರು. ಅವರು ಹಾಗೆ ಕುಳಿತಿದ್ದುದು ಬರಿಯ ಕಾಕತಾಳೀಯವಾಗಿದ್ದಿರಬಹುದು. ಅದಕ್ಕೆ ಬೇರೆ ಯಾವ ಇಂಗಿತಾರ್ಥವನ್ನೂ ಆರೋಪಿಸುವುದು ತಪ್ಪಾಗುತ್ತದೆ. ಆದರೆ ನಮ್ಮ ಅಕ್ಕಪಕ್ಕಗಳಲ್ಲಿ ಕುಳಿತಿದ್ದವರು-ತಿ.ತಾ.ಶರ್ಮರು, ವಿ.ಸೀತಾರಾಮಯ್ಯನವರು ಇತ್ಯಾದಿ ಮಿತ್ರರು-ನಾವು ಹಾಗೆ ಎದುರುಬದುರಾಗಿ ಕುಳಿತು ನಗುತ್ತಾ ಮಾತಾಡುತ್ತಾ ಇದ್ದುದರಲ್ಲಿ ಏನೋ ಸ್ವಾರಸ್ಯ ಸಂಭವವನ್ನು ಕಂಡು ನಿರೀಕ್ಷಿಸುವಂತೆ ತೋರುತ್ತಿತ್ತು! ಕುಮಾರಿ ಪ…. ವತಿಯವರು ನಾನು ಮಡಿಕೇರಿ ಸಾಹಿತ್ಯ ಸಮ್ಮೇಲನಕ್ಕೆ ಹೋಗಿದ್ದಾಗ ತಮ್ಮ ತಾಯಿಗೆ ಪತ್ರ ಬರೆದು ನನ್ನನ್ನು ಅವರ ಮನಗೆ ಔತಣಕ್ಕೆ ಆಮಂತ್ರಿಸುವಂತೆ ಮಾಡಿದ್ದರು. ಅವರು ತಮ್ಮ ಮಾತೆಗೆ ಬರೆದಿದ್ ಕಾಗದವನ್ನು  ನನಗೆ ಓದಲು ಕೊಟ್ಟಿದ್ದರು. ನಾನು ಓದುತ್ತಾ ವಿಷಯ ಸಾಮಾನ್ಯದಿಂದ ವೈಯಕ್ತಿಕ ಘಟಕ್ಕೆ ಬಂದೊಡನೆಯೆ ಮುಂದೆ ಓದದೆ ಹಾಗೆಯೆ ಕೊಟ್ಟುಬಿಟ್ಟಿದ್ದೆ. ಏಕೆ ಹಾಗೆ ಮಾಡಿದೆನೆಂದು ಹೇಳುವುದು ಕಷ್ಟ. ಮುಂದೆ ಅವರು ಜಾತಿಭೇದ ಮೊದಲಾದುವನ್ನು ಗಣಿಸದೆ ನನ್ನನ್ನು ಮದುವೆಯಾಗುವ ಸೂಚನೆಯನ್ನೇನಾದರೂ ಸೂಚಿಸಿದ್ದರೊ ಏನೋ? ಅದನ್ನೇನಾದರೂ ನಾನು ಓದಿದ್ದರೆ ನನ್ನಲ್ಲಿ ತುಮುಲ ಉಂಟಾಗುತ್ತಿತ್ತು. ಅದಕ್ಕಾಗಿಯೆ ನನ್ನ ಜೀವನವನ್ನೆಲ್ಲ ನಿಯಂತ್ರಿಸುತ್ತಿರುವ ಗುರುವಿನ ಇಚ್ಛೆ-ತಾಯಿಯ ಇಚ್ಛೆ-ಈಶ್ವರೇಚ್ಚೇ ಅಥವಾ ವಿಧಿ ಅದನ್ನು ನಾನು ಓದದ ಹಾಗೆ ಮಾಡಿತ್ತು! ಆಮೇಲೆ ತಾತಾಚಾರ್ಯ ಶರ್ಮರೂ ಆ ವಿಚಾರವಾಗಿ ಪ್ರಸ್ತಾಪಿಸಿ ಕಾಗದ ಬರೆದಿದ್ದರು. ಅಲ್ಲದೆ ಒಮ್ಮೆ ಕುಮಾರಿ ಪ….ವತಿಯವರೊಡನೆ ಅವರ ತಾಯಿತಂದೆಯರೂ ಆಶ್ರಮಕ್ಕೆ ಬಂದು ನನ್ನನ್ನು ನೋಡಿದ್ದರು. ಅಂದು ಬೆಳಗ್ಗೆ ಹುಬ್ಬಳ್ಳಿಯ ಕವಿಸಮ್ಮೇಲನದಲ್ಲಿಯೂ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದಾಗ ಅದನ್ನು ಅನುಮೋದಿಸಿ ಮಾತನಾಡಿದವರಲ್ಲಿ ಕುಮಾರಿಯವರೂ ಒಬ್ಬರಾಗಿದ್ದರು. ಈ ಎಲ್ಲ ಆಕಸ್ಮಿಕಗಳು ನಮ್ಮ ಹಿತೈಷಿಗಳಾದ ಮಿತ್ರರಿಗೆ ಅರ್ಥಪೂರ್ಣವಾಗಿ ತೋರಿದುವೆಂದು ತೋರುತ್ತದೆ, ಶ್ರೀ ಕಂಬಳಿಯವರ ಔತಣ ಕೂಟಕ್ಕೂ ಬಂದು ನನ್ನೆದುರು ಆಸನದಲ್ಲಿಯೆ ಕುಳಿತು ಮುಖಾಮುಖಿಯಾಗಿ ಪರಿಚಯಾತ್ಮಕ ಸಂವಾದದಲ್ಲಿ ತೊಡಗಿದ್ದುದರಿಂದ.-ಈಶ್ವರನಿಗೇ ಗೊತ್ತು ಯಾರು ಯಾರ ಮನಸ್ಸಿನಲ್ಲಿ ಏನು ಏನು ಆಗುತ್ತಿತ್ತು ಎಂಬುದು! ಶ್ರೀಗುರುಕೃಪೆ ನನ್ನ ಜೀವನ ಸಂಗಾತಿಯನ್ನು ತಾನಾಗಿಯೆ ಗೊತ್ತುಮಾಡಿರುವಾಗ ಅನ್ಯಥಾ ಸಂಭವಿಸಲು ಹೇಗೆ ಸಾಧ್ಯ?…

ಆ ದಿನವೆ ಹುಬ್ಬಳ್ಳಿಯ‘ಮಹಾರಾಷ್ಟ್ರ ಮಂಡಳಿ’ ಯವರು ತಮ್ಮಲ್ಲಿಗೆ ಬಂದು ಕವನವಾಚನ ಮಾಡುವಂತೆ ನನ್ನನ್ನು ಕೇಳಿಕೊಂಡರು. ಬೇರೆಬೇರೆ ಅಧಿವೇಶನದ ಕಾರ್ಯಕ್ರಮಗಳಿದ್ದುದರಿಂದ ಅವೆಲ್ಲ ಪೂರೈಸಿದ ಮೇಲೆ ಎಂದರೆ ರಾತ್ರಿ ಹನ್ನೊಂದು ಗಂಟೆಗೆ ಬರುವುದಾಗಿ ಒಪ್ಪಿಕೊಂಡೆ. ಡಿ.ವಿ.ಗುಂಡಪ್ಪನವರನ್ನು ಅಧ್ಯಕ್ಷತೆ ವಹಿಸಲು ಕರೆದಿದ್ದರು. ಎಲ್ಲಿಯೊ ಒಂದು ಬಯಲಿನಲ್ಲಿ ವೇದಿಕೆಯನ್ನು ನಿರ್ಮಿಸಿ ಉಜ್ವಲ ದೀಪಗಳನ್ನು ಹೊತ್ತಿಸಿದ್ದರು. ತುಂಬಾ ಜನ ನೆರೆದಿದ್ದರು. ಡಿಸೆಂಬರ್ ತಿಂಗಳ ಮಾಗಿಯ ಚಳಿ ಕೊರೆಯುತ್ತಿತ್ತು. ಅವರ ಅಪೇಕ್ಷೆಯ ಮೇರೆಗೆ ಮಹಾರಾಷ್ಟ್ರದ ವೀರನಾದ ತಾನಾಜಿಯನ್ನು ಕುರಿತು ನಾನು ಬರೆದಿದ್ದ ಲಾವಣಿಯನ್ನು ವಾಚಿಸಿದೆ. ಕರ್ನಾಟಕದವನಾದ ನಾನು ಮಹಾರಾಷ್ಟ್ರದ ವೀರನ ಮೇಲೆ ಕವನ ಬರೆದುದು ಅವರಿಗೆ ಬಹಳ ಮೆಚ್ಚಿಗೆಯಾಯಿತೆಂದು ತೋರುತ್ತದೆ. ಆದರೆ ಮೈಸೂರು ಸಂಸ್ಥಾನದ ನನಗೆ ಆಗ ಕರ್ನಾಟಕ-ಮಹಾರಾಷ್ಟ್ರದ ಕನ್ನಡ-ಮರಾಠಿ ಕದನದ ಗಂಧ ಗಾಳಿಯೂ ಸೋಂಕಿರಲಿಲ್ಲ. ಅಂತೂ ಆ ವರ್ಷದ (೧೯೩೩) ಕೊನೆಯ ಕಾರ್ಯಕ್ರಮ ಮರುವರ್ಷದ (೧೯೩೪) ಮೊದಲ ಘಂಟೆಯಲ್ಲಿ ಮುಗಿಯಿತು!

೧-೧-೧೯೩೪:

ಹೊಸವರ್ಷದ ಪ್ರಾರಂಭವೂ ಭಾಷಣ ಮತ್ತು ಕವನ ವಾಚನಗಳಿಂದಲೆ.ಬೆಳಿಗ್ಗೆ ಒಂದು ಹೈಸ್ಕೂಲಿನಲ್ಲಿ ಸಣ್ಣ ಭಾಷಣ ಮಾಡಿ ತರುವಾಯ ಕವನಗಳನ್ನು ವಾಚಿಸಿದೆ. ವಿದ್ಯಾರ್ಥಿವರ್ಗಕ್ಕೆ ಹಿಗ್ಗೊಹಿಗ್ಗು! ಸಿ.ಕೆ.ವೆಂಕಟರಾಮಯ್ಯನವರು ಅಧ್ಯಕ್ಷತೆ ವಹಿಸಿದ್ದರು…. ಅದಾದ ಮೇಲೆ ಡಿ.ವಿ.ಗುಂಡಪ್ಪ, ವೆಂಕಣ್ಣಯ್ಯ, ಶ್ರೀನಿವಾಸಮೂರ್ತಿ, ವಿ.ಸೀತಾರಾಮಯ್ಯ ಮೊದಲಾದವರು ಬಂದರು. ಧಾರವಾಡದಲ್ಲಿ ಆರ್.ಎಂ.ಮಹಿಷಿ ಯವರಲ್ಲಿ ಉಳಿದೆವು…. ಭೋಜನವೇನೊ ಬಹಳ ಸೊಗಸಾಗಿತ್ತು.-ಸಾಯಂಕಾಲ ಐದು ಗಂಟೆಗೆ ಧಾರವಾಡದ ಲಿಂಗಾಯತ ಮಂದಿರದಲ್ಲಿ ನನ್ನ ಕವನಗಳನ್ನು ಓದಿದೆ. ಆಮೇಲೆ ನನ್ನ ‘ರಕ್ತಾಕ್ಷಿ’ನಾಟಕದ ಎರಡು ದೃಶ್ಯಗಳನ್ನು ಅಭ್ಯಾಸಿಸಿ ತೋರಿಸಿದರು. ರಕ್ತಾಕ್ಷಿಯ ಹುಚ್ಚನ್ನು ಅಭಿನಯಿಸಿದವರು ಬಹಳ ಚೆನ್ನಾಗಿ ಮಾಡಿದರು.

ಅಲ್ಲಿಂದ ಕರ್ಣಾಟಕ ವಿದ್ಯಾವರ್ಧಕ ಸಂಘಕ್ಕೆ ಹೋಗಿ, ತರುವಾಯ ಆಲೂರು ವೆಂಕಟರಾಯರೊಡನೆ ಎಂ.ಎಲ್.ಸಿ.ಜೋಗರಾಯರ ಗೃಹಕ್ಕೆ ಹೋದೆವು. ಅಲ್ಲಿಗಾಗಲೆ ಡಿ.ವಿ.ಜಿ., ವೆಂಕಣ್ಣಯ್ಯ, ವೀ.ಸಿ.,ಬಂದಿದ್ದರು. ಶ್ರೀನಿವಾಸರಾವ್ ಕೌಜಲಿಗಿ,ಮುದವೀಡು ಕೃಷ್ಣರಾಯರೂ ಇದ್ದರು. ಎಂ.ಆರ್.ಶ್ರೀನಿವಾಸಮೂರ್ತಿಯವರು ಅಲ್ಲಮ ಪ್ರಭುವಿನ ಮೇಲೆ ಉಪನ್ಯಾಸ ಮಾಡಲು ಹಿಂದೆಯೆ ನಿಂತರು. ನನಗೆ ಸ್ವಲ್ಪ ತಲೆನೋಯುತ್ತಿತ್ತು. ಅಲ್ಲಿ ಉಪಾಹಾರ ಆದಮೇಲೆ ಜೋಗರಾಯರ ಕಾರಿನಲ್ಲಿ ಮಹಿಷಿಯವರ ಮನೆಗೆ ಬಂದೆವು.

ರಾತ್ರಿ ಅಲ್ಲಿಯೆ ಮಲಗಿದೆವು. ಸುಮಾರು ರಾತ್ರಿ ಎರಡೂವರೆ ಗಂಟೆಗೆ ಎದ್ದು, ಗುರುದೇವನ ಧ್ಯಾನ ಮುಗಿಸಿ,ಎಲ್ಲರೂ ರೈಲ್ವೆ ಸ್ಟೇಷನ್ನಿಗೆ ಹೋದೆವು. ನಾಲ್ಕು ಗಂಟೆಗೆ ಧಾರವಾಡ ಬಿಟ್ಟೆವು. ಅವರೆಲ್ಲರೂ ಜೊತೆ ಇಲ್ಲದಿದ್ದರೆ ಪ್ರಯಾಣ ಎಷ್ಟು ಬೇಸರವಾಗುತ್ತಿತ್ತೊ? ಡಿ.ವಿ.ಗುಂಡಪ್ಪನವರು ಎಂತಹ ಸರಸ ವಾಕ್ಪಟುಗಳಾಗಿದ್ದಾರೆ! ಬೆಂಗಳೂರಿಗೆ ಹೋಗುವವನ್ನೆಲ್ಲ ಬಿಟ್ಟು ನಾನು, ಎಂ.ಆರ್.ಶ್ರೀ., ಶ್ರೀನಿವಾಸ ಅರಸೀಕೆರೆಯಲ್ಲಿ ಮೈಸೂರು ಗಾಡಿಗೆ ಹತ್ತಿದೆವು. ರಾತ್ರಿ ಎಂಟು ಗಂಟೆಗೆ ಮೈಸೂರು ತಲುಪಿದೆವು.

೫-೧-೧೯೩೪:

ಇಂದು ಮಧ್ಯಾಹ್ನ ಗಾಂಧಿಯವರು ಹರಿಜನ ಕಾರ್ಯಕ್ಕಾಗಿ ಮೈಸೂರಿಗೆ ಬಿಜಯ ಮಾಡಿಸಿದ್ದಾರೆ. ಆ ಪುಣ್ಯಪುರುಷನ ಸಾನ್ನಿಧ್ಯದಿಂದ ಇಂದು ಮೈಸೂರು ದೇವಗೃಹವಾಗಿದೆ.ಮಹಾತ್ಮರು‘ರಾಜ ಅತಿಥಿ’ಎಂದು ಪತ್ರಿಕೆಗಳಲ್ಲಿ ಪ್ರಕಟವಾದುದು ಸುಳ್ಳಂತೆ. ಬಹುಶಃ ಬ್ರಿಟಿಷ್ ಸರಕಾರದ ಅಪ್ಪಣೆಯನ್ನು ಮೈಸೂರಿನ ದಾಸ ಸರಕಾರದವರು ಶಿರಸಾವಹಿಸಿರಬಹುದು. ಆದರೇನು? ಮಹಾತ್ಮರು ಭರತಖಂಡದ ಅನಭಿಷಿಕ್ತ ಚಕ್ರವರ್ತಿ! ಸಮಸ್ತ ಜಗತ್ತಿನ ಆಚಾರ್ಯದೇವ! ಇಂದು ಮಧ್ಯಾಹ್ನದ ಮೇಲೆ ನಾಲ್ಕು ಗಂಟೆಗೆ ಟೌನ್ ಹಾಲ್ ನ ಮುಂದೆ ಬಯಲಿನಲ್ಲಿ ಸಭೆ ಸೇರುತ್ತದೆ. ಗಾಂಧೀಜಿ ಮಾತಾಡುತ್ತಾರೆ. ಎಲ್ಲರೂ ಹೋಗಿ ನೋಡಲೇಬೇಕು.

ಸುಮಾರು ಮೂರುವರೆ ಗಂಟೆಗೆ ವಿದ್ಯಾರ್ಥಿನಿಲಯದ ಹುಡುಗರೆಲ್ಲರೊಡನೆ ಟೌನ ಹಾಲ್ ಮುಂಗಡೆಗೆ ಹೊರಟೆವು. ಹನ್ನೆರಡು ಸಾವಿರ ಮಂದಿ ಕಿಕ್ಕಿರಿದು ನೆರೆದಿದ್ದರು. ಬಿಸಿಲಿನಲ್ಲಿ ಜನಗಳ ನೂಕುತಾಕಿನ ನಡುವೆ ಕುಳಿತು ಸುಮಾರು ಒಂದು ಗಂಟೆ ಕಳೆದ ಮೇಲೆ ಮಹಾತ್ಮರು ಬಂದರು. ಜನಗಳಲ್ಲಿ ಉತ್ಸಾಹದ ಉಲ್ಲಾಸದ ಹೊಳೆ ಉಕ್ಕಿತು. ಆರು ವರ್ಷಗಳ ಹಿಂದೆ ಇದ್ದಂತೆಯೇ ತೋರಿದರು. ಎಂತಹ ವಾಮನಮೂರ್ತಿ! ಅವರನ್ನು ಗೌರವಿಸಲು ಬಂದ ಮಂದಿಯನ್ನು ನೋಡಿ ನನಗೆ ಮಾನವರ ದೇವತ್ವದ ಆಕಾಂಕ್ಷೆಯ ವಿಚಾರವಾಗಿ ನೆಚ್ಚು ಮೂಡಿತು. (ಒಂದು ಕವನ ರಚನೆಗೆ ಕೈ ಹಾಕಿದ್ದೇನೆ.)*

೭-೧-೧೯೩೪:

ವಿದ್ಯಾರ್ಥಿಗಳು ಚೆಂಡಾಟದಲ್ಲಿ ಮೈಮರೆತು ಮಗ್ನರಾಗಿದ್ದಾಗ ಸುಮಾರು ಐದೂವರೆ ಆರು ಗಂಟೆಯ ಹೊತ್ತಿಗೆ ಅವರನ್ನು ‘ಕ್ಲಾಸ್’ಗೆ ಕರೆದರು, ಚಿಕ್ಕವಯಸ್ಸಿನಲ್ಲಿಯೇ ಅಜೀರ್ಣವಾಗುವ ವೇದಂತವನ್ನು ಬೋಧಿಸುವುದು ಅಪಾಯಕರವೆಂದು ತೋರುತ್ತದೆ. ಅದೂ ಅಲ್ಲದೆ ಬೋಧಿಸುವವರಿಗೂ ‘ದರ್ಶನ’ದೊರೆತಿಲ್ಲ. ಸ್ವಾಭಾವಿಕವಾಗಿಯೆ ಹುಡುಗರಿಗೆ ಬೇಸರವಾಗುತ್ತದೆ. ಇದರಿಂದ ಏನು ಪರಿಣಾಮವಾಗಬಹುದೆಂದರೆ ಮುಂದೆ ಈ ಹುಡುಗರೆಲ್ಲರಿಗೂ ಅಂತಹ ವೇದಾಂತದಲ್ಲಿ ಸಂಪೂರ್ಣ ಜುಗುಪ್ಸೆ ಹುಟ್ಟಬಹುದು. ಏಕೆಂದರೆ ಅನೇಕ ನಾಸ್ತಿಕರೂ ಸಂದೇಹವಾದಿಗಳೂ ಪಾಷಂಡಿಗಳೂ ಚಿಕ್ಕಂದಿನಲ್ಲಿ ವೇದಾಂತಬೋಧನೆ ಅತಿಯಾದವರೆಂದು ತೋರುತ್ತದೆ. ಗುರುದೇವನು ಅಧ್ಯಾಪಕರಿಗೂ ಅಧ್ಯಾಯಿಗಳಿಗೂ ದಾರಿ ತೋರಲಿ.

೧೫-೧-೧೯೩೪:

ಶ್ರೀಮಾನ್ ತಾತಾಚಾರ್ಯ ಶರ್ಮರು ಒಂದು ಕಾಗದ ಬರೆದಿದ್ದಾರೆ. ಅದರಲ್ಲಿ ನನ್ನ ವಿವಾಹದ ಪ್ರಸ್ತಾವವನ್ನೆತ್ತಿ ಅಂತರಂಗವನ್ನು ಬಿಚ್ಚಿ ಬರೆಯುವಂತೆ ಬರೆದಿದ್ದಾರೆ. ಹಾಗೆಯೇ ಅವರಿಗೊಂದು ದೀರ್ಘ ಪತ್ರವನ್ನು ಬರೆದೆ.

ವಿಶ್ವ ಕರ್ನಾಟಕ

ಪ್ರಿಯ ಸಹೋದರ,                                                         ೧೧-೧-೧೯೩೪

ಬಹಳ ದಿನಂಗಳಿಂದ ಒಂದು ವಿಚಾರವು ನನ್ನನ್ನು ಬಾಧಿಸುತ್ತಿದೆ. ಗುರುದೇವನ

*‘ಸಭ್ಯತಾ ದೇವತೆ’ ಎಂಬ ಶೀರ್ಷಿಕೆಯ ಆ ಕವನ ‘ಅಗ್ನಿಹಂಸ’ ಕವನಸಂಗ್ರಹದಲ್ಲಿ ಅಚ್ಚಾಗಿದೆ.

ಆಶೀರ್ವದ; ನಮ್ಮಿಬ್ಬರ ಭೇಟಿಯಾದ ಮೊದಲನೆಯ ದಿನದಿಂದ ಈರ್ವರಲ್ಲೂ ಒಂದು ಬಗೆಯ ಪವಿತ್ರ ಸ್ಪರ್ಶವಾದ ಸೋದರ ವಾತ್ಸಲ್ಯವೇರ್ಪಟ್ಟಿತು. ಅಂದಿನಿಂದ ನಿಮ್ಮ ಹಿತವೇ ನನ್ನ ಹಿತವೆಂದು ಭಾವಿಸುತ್ತಿದ್ದೇನೆ. ಅಂತೆಯೇ ನನ್ನ ಕೈಹಿಡಿದ ‘ಭಾರತಿ’ಯು ಸಹ ಭಾವಿಸುತ್ತಾಳೆ.ಅಂದಮೇಲೆ ನಾನೊಂದು ವಿಚಾರವಾಗಿ ಇಲ್ಲಿ ಪ್ರಸ್ತಾಪ ಮಾಡಿದರೆ ಕೋಪವಿಲ್ಲವಷ್ಟೆ.

ಕೆಲವು ಕಾಲದ ಹಿಂದೆ ಹಲವರು ನಮ್ಮಿಬ್ಬರ ಬಾಂಧವ್ಯ ಕಂಡು ನಾನು ನಿಮ್ಮ ಅಂತರಂಗಕ್ಕೆ ಸೇರಿದವನೆಂದು ತಿಳಿದು ವಿವಾಹದ ಮಾತನ್ನೆತ್ತಿದರು. ನಾನು ತಳ್ಳಿಡುತ್ತ ಬಂದೆನು. ಹೀಗೆ ಕೆಲಕಾಲ ಕಳೆಯಿತು. ಮತ್ತೆ ಕೆಲವರು ನಿಮ್ಮ ಹಿತವರು ವಿವಾಹ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನೆಂಬುದನ್ನು ತಿಳಿಯಬೇಕೆಂದು ನನ್ನನ್ನಪೇಕ್ಷಿಸಿದರು. ನಾನಾದರೂ ಸಂಕೋಚದಿಂದ ಆ ವಿಚಾರವನ್ನೆತ್ತಲಿಲ್ಲ. ಇತ್ತೀಚೆಗೆ ಅನೇಕರು ವಿಧವಾಗಿ ಮಾತಾಡಿಕೊಳ್ಳುತ್ತಿದ್ದಾರೆ. ಅದು ನನ್ನ ಕಿವಿಗೆ ಬಿದ್ದಮೇಲೆ ದೀರ್ಘ ಆಲೋಚನೆ ಮಾಡಿದೆ. ನಿಮ್ಮ ಭವಿಷ್ಯವನ್ನು ಕೊಂಚ ಭಾವಿಸಿಕೊಂಡೆ. “ಈತನು ಗೃಹಸ್ಥನಾಗಬೇಕು. ಈತನಿಗೆ ತಕ್ಕ ಗೃಹಿಣಿಯಾಗಬೇಕು. ಕವಿಗೆ ತಕ್ಕ ಸತಿಯಾಗಬೇಕೆಂದು” ಬಯಸಿದೆ. ಆದರೆ, ನಿಮ್ಮ ಜೀವನದ ಸಂಕಲ್ಪವೇನೊ ನಿಮ್ಮ ಪುರುಷಾರ್ಥಸಾಧನೆಯ ದಾರಿಯೆಂತಹುದೋ? ಇದನ್ನರಿಯದ ನಾನು ಸಿಕ್ಕಸಿಕ್ಕ ಹಾಗೆಲ್ಲ ಆಲೋಚನೆ ಮಾಡುತ್ತ ಹೋಗುವುದು ಧರ್ಮವಲ್ಲವಷ್ಟೆ. ಆದಕಾರಣ ನನ್ನ ಅಂಕೆಯಿಲ್ಲದ ಭಾವನಾಶಕ್ತಿಯನ್ನು ಅದುಮಿದೆ. ವಿಚಾರಕ್ಕೆ ತೊಡಗಿದೆ. ಅದರ ಫಲವೇ ಈ ಪತ್ರ. ನನ್ನನ್ನು ಅನ್ಯಥಾ ಭಾವಿಸಬಾರದಾಗಿ ಬೇಡುತ್ತೇನೆ. ನಾನಿಷ್ಟು ಸ್ವಾತಂತ್ರ‍್ಯ ವಹಿಸಿದ್ದರೆ ಅದಕ್ಕೆ ನಿಮ್ಮಲ್ಲಿ ನನಗೂ ನನ್ನ ಸತಿಗೂ ಇರುವ ಸೋದರ ವಾತ್ಸಲ್ಯವೇ ಕಾರಣ.

ಸತ್ಸಂಗವು ಶೀಲಸಂಪಾದನೆಗಾಧಾರ. ಸತ್ಸತಿಯು ಜೀವನ ಸಾಕ್ಷಾತ್ಕಾರಕ್ಕೆ ಮೂಲಾಧಾರ. ಸ್ತ್ರೀ ಪುರುಷರೀರ್ವರಲ್ಲೂ ಅಪೂರ್ಣಪೂರ್ಣತಾಭಾವವಿದೆ. ಗಾರ್ಹಸ್ತ್ಯವೇ ಪೂರ್ಣತೆಯ ಸಂಕೇತ. ವಿವಾಹದ ಆವಶ್ಯಕತೆಯ ಮೇಲೆ ಉಪನ್ಯಾಸ ಕೊಡುತ್ತಿರುವೆನೆಂದು ಭಾವಿಸಲಾಗದು. ವ್ಯವಹಾರಲೋಕದ ನೀತಿಯ ಕಡೆ ದೃಷ್ಟಿಯನ್ನ ಎಳೆಯುತ್ತಿದ್ದೇನೆ. ಅಷ್ಟೆ.

ಬ್ರಹ್ಮಚರ್ಯದ ಮೂಲಕವೇ ಪುರುಷಾರ್ಥವನ್ನು ಸಾಧಿಸಬೇಕೆಂಬ ಸಂಕಲ್ಪವಿದ್ದರೆ ನನಗೆ ಪರಮ ಸಂತೋಷ. ಅಂತಹ ಸಂಕಲ್ಪದಿಂದ ನಿಮ್ಮನ್ನು ವಿಮುಖರನ್ನಾಗಿ ಮಾಡುವ ಪಾತಕವನ್ನು ನಾನು ಕಟ್ಟಿಕೊಳ್ಳಲು ಸಿದ್ದನಾಗಿಲ್ಲ. ನನ್ನ ಕಿವಿಗೆ ಬಿದ್ದಿರುವ ಸುದ್ದಿಗಳಿಂದ ನೀವು‘ಗೃಹಸ್ಥಾಶ್ರಮ’ವಿರೋಧಿಗಳಲ್ಲವೆಂದು ತಿಳಿದುಬಂತು. ಸಂದೇಹ ನಿವೃತ್ತಿಗಾಗಿ ಈ ಪತ್ರವನ್ನು ಬರೆಯಲು ಮನಸ್ಸು ಮಾಡಿದೆನು.

ನಾನೂ ನನ್ನ ಕೈಹಿಡಿದವಳೂ ನಿಮ್ಮ ಅಂತರಂಗಕ್ಕೆ ಸೇರಿದವರೆಂದು ನಿಮಗೆ ಅನ್ನಿಸಿದೆ. ನಿಮ್ಮ ಭವಿಷ್ಯಜ್ಜೀವನ ಸೌಖ್ಯದಲ್ಲಿ ನಮಗಿರುವ ಶ್ರದ್ದಾಸಕ್ತಿಯ ಅರಿವು ತಮಗಿರುವುದಾದರೆ, ಕೃಪೆಮಾಡಿ ತಮ್ಮ ಅಂತರಂಗವನ್ನು ಬಿಚ್ಚಿ. ನಿಮ್ಮ ಮುಂದಿನ ಜೀವನವು ಸುಖವಾಗಿ, ಸುಂದರವಾಗಿ, ಶಾಂತವಾಗಿ,ಸಾರ್ಥಕವಾಗಿರಬೇಕೆಂಬುದೊಂದೇ ನಮ್ಮಿಬ್ಬರ ಆಶೆ. ಅದಕ್ಕಾಗಿ ನಾವು ಏನು ಮಾಡಬೇಕಾದರೂ ಸಿದ್ದರಾಗಿರುವೆವು.

ನಿಮ್ಮ ಪ್ರೇಮಕ್ಕೆ,ಸ್ನೇಹಕ್ಕೆ ನಾವು ಅರ್ಹರೆನಿಸಿದರೆ ನಾಳೆಯೆ ಉತ್ತರವನ್ನು ಕೊಡಬೇಕು. ಬರುವ ಉತ್ತರದ ಮೇಲೆ ಮುಂದಿನ ಮಾತು. ಈ ಪತ್ರ ವ್ಯವಹಾರವು ಪರಮಪವಿತ್ರವಾದುದೆಂದು ನಾನು ಭಾವಿಸಿ, ವರ್ತಿಸುತ್ತೇನೆ.

ಮನೆಯಲ್ಲಿ ಮಕ್ಕಳೆಲ್ಲ ಚೆನ್ನಾಗಿದ್ದಾರೆ. ಶ್ರೀಮತಿಯೂ ಆರೋಗ್ಯವಾಗಿದ್ದಾಳೆ. ಉತ್ತರ ಕರ್ಣಾಟಕದ ವಿಜಯ ಪ್ರಯಾಣದ ಆಲಸ್ಯವೆಲ್ಲ ತೀರಿತೊ?

ತಮ್ಮ ಸಹೋದರ
ಸಹಿ.
(ತಿ.ತಾ.ಶ)
ತಿ.ತಾ.ಶರ್ಮರಿಗೆ

ಶ್ರೀಮಾನ್ ಶರ್ಮರಿಗೆ                                                               ೧೫-೧-೧೯೩೨

ವಾತ್ಸಲ್ಯ, ಹಿತಚಿಂತನೆ ಮತ್ತು ಅನುರಾಗಪೂರ್ಣವಾದ ನಿಮ್ಮ ಪತ್ರವು ಕೈಸೇರಿ ಬಹಳ ಸಂತೋಷವಾಯಿತು. ನೀವೂ ಮತ್ತು ನನ್ನ ಮಾತೃಸಮಾನರಾದ ಶ್ರೀಮತಿ ರಾಜಮ್ಮನವರೂ ನನ್ನ ಮೇಲೆ ಇಟ್ಟಿರುವ ಪ್ರೀತಿಗೆ, ಇಂದಲ್ಲ ಹಿಂದಿನಿಂದಲೂ ಮುಗ್ಧನಾಗಿದ್ದೇನೆ; ಎಂಬುದನ್ನು ನೀವು ನನ್ನ ಹಿಂದಿನ ಪತ್ರಗಳಿಂದ ತಿಳಿಯಬಹುದು. ಆದ್ದರಿಂದ ನೀವು ಕೇಳಿರುವ ಪ್ರಶ್ನೆಗಳಿಗೆ ನನ್ನ‘ಅಂತರಂಗವನ್ನು ಬಿಚ್ಚಿ’ಉತ್ತರ ಬರೆಯುತ್ತೇನೆ.

ನೀವು ನನ್ನ ‘ಸಂಸಾರ ಸುಖ’ದ ವಿಚಾರದಲ್ಲಿ ಕುತೂಹಲರಾಗಿದ್ದೀರಿ ಎಬುದು ನನಗೆ ಈ ಹಿಂದೆಯೇ ತಿಳಿದಿದೆ. (ಇತರರಿಂದ ಪರೋಕ್ಷವಾಗಿಯೂ ತಮ್ಮ ಮತ್ತು ‘ಭಾರತಿ’ಯವರ ಮಾತುಕತೆಗಳಿಂದ ಪ್ರತ್ಯಕ್ಷವಾಗಿಯೂ) ನೀವು ನನ್ನ ಅಂತರಂಗಕ್ಕೆ ಸೇರಿದವರೆಂದು ಇತರರು ಊಹಿಸಿದುದೇನೂ ತಪ್ಪಲ್ಲ. ನಿಜವೆಂದೆ ಹೇಳುತ್ತೇನೆ.

“ಇತ್ತೀಚೆಗೆ ಅನೇಕರು ವಿಧವಾಗಿ ಮಾತಾಡಿಕೊಳ್ಳುತ್ತಿದ್ದಾರೆ” ಎಂದು ಬರೆದಿದ್ದೀರಿ. ಅದೇನು ಮಾತಾಡಿಕೊಳ್ಳುತ್ತಿದ್ದಾರೋ ನನಗೆ ಕುತೂಹಲವುಂಟಾಗಿದೆ. ಏಕೆಂದರೆ ಅಂತಹ ಗಾಳಿಸುದ್ದಿಗಳು ನನ್ನ ಕಿವಿಗೇ ಬಿದ್ದುಹೋಗಿವೆ. ಇತ್ತೀಚೆಗೆ ಮಾತ್ರವಲ್ಲ ಬಹುಕಾಲದಿಂದಲೂ! ಇರಲಿ ಅದು ಲೋಕರೂಢಿ! ಅದರ ಮೇಲೆ ನಮ್ಮ ಹತೋಟಿಯಿಲ್ಲ. ಆದರೆ ಅವುಗಳಿಂದ ಒಂದು ಉಪಯೋಗವುದೆ. ಏಕೆಂದರೆ ಅವುಗಳು ನಮ್ಮ ಜೀವನವನ್ನು ಮತ್ತಷ್ಟು ನಿಯಮಮಯವನ್ನಾಗಿ ಮಾಡಿ ಕಠಿನಮಾಡುತ್ತವೆ.

“ಈತನು ಗೃಹಸ್ಥನಾಗಬೇಕು. ಈತನಿಗೆ ತಕ್ಕ ಗೃಹಿಣಿಯಾಗಬೇಕು. ಕವಿಗೆ ತಕ್ಕ ಸತಿಯಾಗಬೇಕು” ಎಂಬುದು ನಿಮ್ಮ ದೀರ್ಘಾಲೋಚನೆಯ ಸಾರಸಿದ್ದಾಂತದ ಬಯಕೆಯಾಗಿದೆ ಎಂದು ಬರೆದಿದ್ದೀರಿ. ಅದರಲ್ಲೇನೂ ತಪ್ಪಿಲ್ಲ. ನಾನು ನಿಮ್ಮ ಬಯಕೆಯಂತೆ ಆಗಿದ್ದರೂ ನನಗೆ ಸಂತೋಷವಾಗಿಯೇ ಇರುತ್ತಿತ್ತು. ಆದರೆ ನಾನು ಈಗ ಆಗಿರುವುದೂ ಆಗುತ್ತಿರುವುದೂ ನನಗೆ ಸುಖ ಶಾಂತಿಪ್ರದವಾಗಿಯೇ ಇದೆ ಎಂದು ನಿಮಗೆ ಮತ್ತೆಮತ್ತೆ ಒತ್ತಿ ಹೇಳುತ್ತೇನೆ.

“ನನ್ನ ಕಿವಿಗೆ ಬಿದ್ದಿರುವ ಸುದ್ದಿಗಳಿಂದ ನೀವು ಗೃಹಸ್ಥಾಶ್ರಮ ವಿರೋದಿಗಳಲ್ಲವೆಂದು ತಿಳಿದುಬಂತು.”ಎಂದು ಬರೆದಿದ್ದೀರಿ. ಅದೇನು ಸುದ್ದಿ? ದಯವಿಟ್ಟು ತಿಳಿಸುತ್ತೀರಾ? ಅದನ್ನು ತಿಳಿಯಲು ನೀವು ಸುದ್ದಿಗಳಿಗೇಕೆ ಹೋಗಬೇಕು? ನನ್ನ ಬರವಣಿಗೆ ಭಾಷಣಗಳಿಂದಲೂ ಅದು ವ್ಯಕ್ತವಾಗುತ್ತದೆ. ಶ್ಲಾಘನೆಗೆ ಪಾತ್ರವಾಗಿದೆ ಎಂಬುದೂ ವ್ಯಕ್ತವಾಗುತ್ತದೆ. ಹೀಗೆ ಸಂಸಾರ ಸಂನ್ಯಾಸಗಳೆರಡನ್ನೂ ಪ್ರಶಂಸಿಸುತ್ತಿದ್ದೆನೆಂದು ನಗಬೇಡಿ, ನನ್ನ ‘ದರ್ಶನಕ್ಕೆ’ಅವೆರಡು ಪಥಗಳಲ್ಲಿಯೂ ಸರಿಯಾಗಿ ನಡೆದವರು ಜೀವಿತಾದರ್ಶವನ್ನು ಸೇರಿಯೇ ಸೇರುತ್ತಾರೆ ಎಂದು ವೇದ್ಯವಾಗಿದೆ. ಆದ್ದರಿಂದ ನನಗೆ ಈಗಿನ ಕಾಲಸ್ಥಿತಿಗೆ ಸುಗಮವೆಂದು ತೋರಿದ ಪಥವನ್ನು ಆರಿಸಿಕೊಳ್ಳಬೇಕಾಗಿದೆ. ನನ್ನದು ಕವಿಯ ಮಾರ್ಗ ಏನೆನ್ನುತ್ತೀರೋ? ನಾನು ಕಾವಿಯುಟ್ಟು ಸಂನ್ಯಾಸಿಯಾಗುವುದಿಲ್ಲ. ಏಕೆಂದರೆ ನಾನು ಪ್ರಕೃತಿ ಸೌಂದರ್ಯ ಉಪಾಸಕನು. ಸಂನ್ಯಾಸಿಯು ಮಾಯಾಪ್ರಪಂಚದಿಂದ ವಿಮುಖನಾಗಿ ‘ವೈರಾಗಿ’ಯಾಗಿರಬೇಕು. ಹಾಗೆಯೆ ನನಗೆ ವಿವಾಹ  ಮಾಡಿಕೊಳ್ಳುವುದೂ ‘ಭಯಂಕರ’ವಾಗಿದೆ. ಪ್ರಪಂಚವು ನಾನು ಬಯಸುವ ಆದರ್ಶ ಜಗತ್ತಿನಂತೆ ಇದ್ದಿದ್ದರೆ ನಾನೂ ವಿವಾಹಿತನಾಗಿರುತ್ತಿದ್ದೆನೆಂದು ತೋರುತ್ತದೆ. ಆದರೆ ಆ ಆದರ್ಶ ಜಗತ್ತು ಎಂದೆಂದಿಗೂ ಆದರ್ಶ ಜಗತ್ತೆ! ನನಗೂ ಒಂದು ಮನೆಯಿದೆ, ಮಲೆನಾಡಿನಲ್ಲಿ! ದೊಡ್ಡ ಮನೆ! ಜಮೀನಿದೆ. ಬಂಧುಗಳಿದ್ದಾರೆ. ಆ ಮನೆಗೆ ನಾನು ಯಜಮಾನನೂ ಆಗಿದ್ದೇನೆ. ಆ ಕಷ್ಟಸುಖಗಳನ್ನೂ ಹೊರೆಹೊಣೆಗಳನ್ನೂ ಬುದ್ದಿ ಕಲಿಯುವಂತೆ ಅನುಭವಿಸಿದ್ದೇನೆ. ತಿಳಿಯದವರು,ನಾನು ಯಾವುದನ್ನೂ ಅರಿಯದ‘ಹಾರುವ ಹಕ್ಕಿ’‘ಮೊರೆಯುವ ಜೇನು’ಎಂದು ಏನೇನೊ ಕಾವ್ಯ ವಚನಗಳನ್ನು ಹೇಳುತ್ತಿದ್ದಾರೆ. ಅವರನ್ನೆಲ್ಲ ಸರಿಪಡಿಸಲು ನನಗೆ ಸಮಯ ಇಷ್ಟಗಳೆರಡೂ ಇಲ್ಲ. ಆದ್ದರಿಂದ(ಮಾತಿನ ಅಶ್ಲೀಲತೆಗಾಗಿ ಕ್ಷಮಾಪಣೆ ಬೇಡುತ್ತೇನೆ. ದಯವಿಟ್ಟು ಕ್ಷಮಿಸಿ.) ಸ್ತ್ರೀ ಪುರುಷರ ದೈಹಿಕಸಮಾಗಮದ ಸಂಭೋಗ‘ಸುಖ’ವೊಂದನ್ನುಳಿದು ಇನ್ನೆಲ್ಲದರಲ್ಲಿಯೂ ನಾನೂ, ನಾನೂ ಸಂಸಾರಿ! ಅಷ್ಟೇ ಅಲ್ಲ. ನಾನು ಬೇಸಿಗೆಯ ರಜಕ್ಕೆ ಊರಿಗೆ ಹೋದಾಗ ಅಲ್ಲಿಯ ಕಾರ್ಯಗಳೆಲ್ಲವನ್ನು ಕುತೂಹಲದಿಂದ ನೋಡಿ ಅವುಗಳಲ್ಲಿ ಭಾಗವಹಿಸುತ್ತೇನೆ. ಸಂಸಾರಗಳೊಡನೆ ಬೆರೆತು ಇರುತ್ತೇನೆ. ಆದ್ದರಿಂದ ನನಗೂ ಗೊತ್ತಿದೆ ಸ್ವಲ್ಪಮಟ್ಟಿಗೆ ಸಂಸಾರದ ‘ಸುಖ’! ಆದ್ದರಿಂದಲೇ ನಾನು ಹೇಳಿದ್ದು ಅದು ‘ಭಯಂಕರವಾಗಿದೆ’ಎಂದು. ಆ ಬಂಧನಕ್ಕೆ ಸಿಲುಕಿದರೆ ನನಗೆ ಈಗಿರುವ ಸ್ವಾತಂತ್ರ‍್ಯಕ್ಕೆ ಎಲ್ಲಿ ಲೋಪ ಬರುತ್ತದೆಯೋ ಎಂದು ಭಯ. ನೀವು ‘ಕವಿಗೆ ತಕ್ಕ ಒಳ್ಳೆಯ ಸತಿ, ಗೃಹಿಣಿ’ಎಂದು ಬರೆದಿದ್ದೀರಿ. ಅದೂ ಹಾಗೆಯೇ ನಾನು ಎಷ್ಟೋ ಸಂಸಾರಗಳನ್ನು ನೋಡಿದ್ದೇನೆ. ನೂರಾರು ಉತ್ಕೃಷ್ಟ ಕಾವ್ಯಗಳನ್ನೂ ಓದಿ ತಿಳಿದಿದ್ದೇನೆ- ಆ ಆದರ್ಶವು ಸರ್ವದಾ ಆದರ್ಶವೇ ಹೊರತು‘ದರ್ಶ’ವಾಗಿಲ್ಲ ಎಂದು. ನನ್ನ ಬಾಳಿನ ಹಾಲು ಹೊಳೆಯಲ್ಲಿ ಹುಳಿ ಹಿಂಡಿಕೊಳ್ಳಲು ಹೆದರಿಕೆ! ಹೆಪ್ಪುಗಟ್ಟಲಿ, ಬೆಣ್ಣೆಬರುವುದೆ ಎಂದು ನೀವು ಹೇಳಬಹುದು. ಆದರೆ ಹುಳಿ ಹಿಂಡದೆ ಹಾಲನ್ನೇ ಕರೆದು ಬೆಣ್ಣೆ ತೆಗೆಯುವುದು ಶುಚಿ ಮತ್ತು ಲೇಸು. ಅದೂ ಅಲ್ಲದೆ ಮದುವೆಯಾದ ಮೇಲೆ ಈಗಿನಂತೆ ‘ಉಢಾಫಿ’ಯಾಗಿರುವುದೂ ಕಷ್ಟ! ಆಗ ರಾಜರು, ಅಧಿಕಾರಿಗಳು, ಚಾಕರಿ, ಸಂಬಳ,ಮೃತ್ಯು, ಎಲ್ಲದಕ್ಕೂ ಹಲ್ಲುಗಿರಿಯಬೇಕಾಗುತ್ತದೆ. ಎಷ್ಟಾದರೂ ಈಗಿನಂತೆ ‘ದಿವ್ಯ ನಿರ್ಲಕ್ಷತೆ’ಯಿಂದ ಇರಲು ಆಗುವುದಿಲ್ಲ. ಎಲ್ಲಕ್ಕೂ ಹೆಚ್ಚಾಗಿ ನಾನು ಈಗಾಗಲೇ ಬ್ರಹ್ಮಚರ್ಯದ ಶಕ್ತಿ ತೇಜಸ್ಸು ಶಾಂತಿಗಳನ್ನು ತುಸುಮಟ್ಟಿಗೆ ಕಂಡುಕೊಂಡಿದ್ದೇನೆ. ಜೀವನ ಯಜ್ಞವು ಅದರಿಂದ ಹೆಚ್ಚು ಸಾರ್ಥಕವಾಗುತ್ತದೆ.

‘ಸ್ತ್ರೀ ಪುರುಷರೀರ್ವರಲ್ಲೂ ಅಪೂರ್ಣ ಪೂರ್ಣತಾಭಾವವಿದೆ. ಗಾರ್ಹಸ್ತ್ಯವೇ ಪೂರ್ಣತೆಯ ಸಂಕೇತ’ಎಂದು ಬರೆದಿದ್ದೀರಿ. ನಾನೂ ಜೀವಶಾಸ್ತ್ರ ಮತ್ತು ಲೈಂಗಿಕ ಶಾಸ್ತ್ರಗಳನ್ನೂ ಇತರ ಶಾಸ್ತ್ರ ವಿಷಯಗಳನ್ನೂ ಅಧ್ಯಯನ ಮಾಡಿದ್ದೇನೆ. ನಿಮ್ಮ ಸೂತ್ರದಲ್ಲಿ ಸತ್ಯಾಂಶವೆಷ್ಟಿದ್ದರೂ ಅದಿನ್ನೂ ನನಗೆ ಸಿದ್ಧಾಂತವಾಗಿಲ್ಲ. ವಿವಾದಾಸ್ಪದವಾಗಿದೆ. ಬ್ರಹ್ಮಚಾರಿಗಳಾಗಿ ಜೀವನ ದರ್ಶನವನ್ನು ಕಂಡುಕೊಂಡ ಮಹನೀಯರನ್ನು ನಾನು ಅಪೂರ್ಣ ಜೀವಿಗಳೆಂದು ಹೇಳುವ ದಿಟ್ಟತನಕ್ಕೆ ಹೋಗಲಾರೆ. ಪ್ರೇಮವೆಂದರೆ ಕಾಮ ಎಂದು ಅರ್ಥ ಮಾಡೋಣವೇ? ಪ್ರೇಮದ ಮಹಿಮೆ ಸೌಂದರ್ಯಗಳನ್ನು ಕುರಿತು ನಾನು ಬರೆದಿದ್ದೇನೆ. ಅವುಗಳನ್ನು ಅನುಭವಿಸಿದ್ದೇನೆ. ಆದರೆ ‘ಪ್ರೇಮ’ಎಂದರೆ ‘ಗಂಡ ಹೆಂಡಿರ ಬೇಟ’ ಎಂಬ ಸಂಕುಚಿತಾರ್ಥವನ್ನು ಮಾತ್ರ ನಾನೊಪ್ಪುವುದಿಲ್ಲ.

‘ನಿಮ್ಮ ಮುಂದಿನ ಜೀವನವು ಸುಖವಾಗಿ, ಸುಂದರವಾಗಿ, ಶಾಂತವಾಗಿ, ಸಾರ್ಥವಾಗಿರಬೇಕೆಂಬುದೊಂದೇ ನಮ್ಮಿಬ್ಬರ ಆಶೆ.’ಎಂದು ಲೋಕಾನಂದಕರವಾದ ಮತ್ತು ಅತ್ಯಂತ ಶ್ಲಾಘನೀಯವಾದ ನಿಮ್ಮ ಅಭಿಲಾಷೆಯನ್ನು ತಿಳಿಸಿದ್ದೀರಿ. ಅದಕ್ಕಾಗಿ ನನಗೆ ಬಹಳ ಸುಖವಾಗಿದೆ. ಅದು ನಿಮ್ಮ ಆಶೀರ್ವಾದವಾಗಲಿ ಎಂದು ಹಾರೈಸುತ್ತೇನೆ. ಹಾಗಾದರೆ ಈಗ ನನ್ನ ಜೀವನವು ಸುಖ ಸುಂದರ ಶಾಂತ ಸಾರ್ಥಕವಾಗಿಲ್ಲವೆಂದೇನು ನಿಮ್ಮ ಅಭಿಪ್ರಾಯ? ಹಾಗಿದ್ದ ಪಕ್ಷದಲ್ಲಿ ನೀವು ಅದನ್ನು ತಿದ್ದಿಕೊಳ್ಳಬೇಕೆಂದು ಪ್ರಾರ್ಥನೆ. ದೈವಯೋದಿಂದ ನಾನೂ ನೀವೂ  ಒಟ್ಟಿಗೆ ಕೆಲವು ದಿನಗಳ ಮಟ್ಟಿಗಾದರೂ ಇರುವ ಅವಕಾಶ ದೊರೆತರೆ ಅದನ್ನು ನೀವೇ ಕಾಣಬಹುದು. ಈ ಸಾರಿ ಬೇಸಗೆ ರಜಾಕ್ಕೆ ನಮ್ಮೂರಿಗೆ ನೀವೇಕೆ ಬರಬಾರದು? ಖಂಡಿತ ಬರಬೇಕು. ಹಿಂದಿನಿಂದಲೂ ಬರುತ್ತೇನೆ. ಬರುತ್ತೇನೆ ಎಂದು ಚಕ್ಕರ್ ಕೊಡುತ್ತಿದ್ದೀರಿ. ನಿಮ್ಮ ಮಾರುತ್ತರದ ಕಾಗದದಲ್ಲಿ ‘ಬಂದೇ ಬರುತ್ತೇನೆ’ಎಂದಿರಲೇಬೇಕೆಂದು ನನ್ನ ಆಗ್ರಹಪೂರ್ವಕವಾದ ವಿನಂತಿ. ನನ್ನ ಆಹ್ವಾನವು ನಿಮಗೊಬ್ಬರಿಗಲ್ಲ, ಶ್ರೀಮತಿ ರಾಜಮ್ಮನವರಿಗೂ ನಿಮ್ಮ ಮಕ್ಕಳಿಗೂ ವ್ಯಾಪಿಸುತ್ತದೆ. ಶ್ರೀಮತಿ ರಾಜಮ್ಮನವರು ನಮ್ಮಲ್ಲಿಗೆ ಬಂದರೆ ಅಲ್ಲಿಯ ಸ್ತ್ರೀಯರೂ ಬಹಳ ಆದರದಿಂದ ಕಾಣುತ್ತಾರೆ. ಅವರಿಗೆಲ್ಲ ಬೆಳಕು ಬಂದಂತಾಗುತ್ತದೆ. ನಮ್ಮ ಕಡೆಯ ಒಕ್ಕಲಿಗ ಲಲನೆಯರೂ, ಸಂಸ್ಕೃತರೂ, ನಯಜೀವಿಗಳೂ, ಸುಂದರಿಯರೂ, ಅತಿಥಿ ಸತ್ಕಾರ ಲೋಲುಪೆಯರೂ ಆಗಿದ್ದಾರೆಂದು ನಿಮಗೆ ತಿಳಿಸಲು ಹೆಮ್ಮೆಯಾಗುತ್ತದೆ.

ಈಗಾಗಲೇ ನನ್ನ ಪತ್ರವು ಉಪನ್ಯಾಸವಾಗಿಬಿಟ್ಟಿದೆ. ಹೆಚ್ಚು ಬರೆದು ನಿಮಗೆ ಬೇಸರ ಮಾಡಬಾರದು. ನನ್ನ ಬರವಣಿಗೆಯ ಕಹಳೆ ಇದ್ದೇ ಇದೆಯಷ್ಟೆ! ಪುಸ್ತಕಗಳಲ್ಲಿ.

ನೀವು ಬರೆದಿರುವಂತೆ ಕವಿಗೆ ತಕ್ಕ ಗೃಹಿಣಿಯೂ ಸತಿಯೂ ಆಗುವ ದೇವಿಯು ನನ್ನ ಪ್ರೀತಿಯ ಸೋದರಿಯಾಗಿ ಇರುವ, ಬರುವ, ಪಕ್ಷದಲ್ಲಿ ನಾನೂ ವರ್ಡ್ಸ್ ವರ್ತ್ ಮಹರ್ಷಿಯಂತೆ ನಮ್ಮ ಕಾಡುನಾಡಿನ ಮಲೆಗಳಲ್ಲಿ ಎಷ್ಟು ಸಂತೋಷದಿಂದ  ಅಲೆಯಬಹುದಾಗಿತ್ತು. ಆದರೆ ಹಿತಜೀವಿಗಳಿಗೂ ಪ್ರಿಯಜೀವಿಗಳಿಗೂ ಈ ಜಗತ್ತಿನಲ್ಲಿ, ಸುಕೃತ ವಶದಿಂದ, ಕಡಿಮೆಯಿಲ್ಲ, ಅದ್ಕೆ ನೀವೇ ಉದಾಹರಣೆ. ನಿಮ್ಮೊಡನೆ ನಮ್ಮ ಆ ಭವ್ಯ ಕಾನನ ಪ್ರದೇಶಗಳಲ್ಲಿ ಅಲೆಯುವುದು ನನಗೆಷ್ಟು ಸಂತೋಷಪ್ರದವಾದುದು ಎಂಬುದನ್ನು ನೀವು ಅಲ್ಲಿಗೆ ಬಂದ ಮೇಲೆ ತಿಳಿಯುತ್ತೀರಿ.

ನನ್ನ ಈ ದೀರ್ಘಪತ್ರವು ನಿಮ್ಮ‘ವ್ಯವಹಾರ ಲೋಕದ ನೀತಿಯ ದೃಷ್ಟಿ’ಗೆ ಹೇಗೆ ಕಾಣುತ್ತದೆಯೋ ನಾನರಿಯೆ. ನನ್ನ ಜೀವನದರ್ಶನದ ಪಥವು ಈ ಪತ್ರದಿಂದ ನಿಮಗೆ ತಿಳಿಯುತ್ತದೆಯೋ ಇಲ್ಲವೋ ನಾನು ಹೇಳಲಾರೆ.

ಮರುಭೂಮಿ ಮಾರ್ಗದಲಿ, ವೈರಾಗ್ಯ ಸಾಧನದಿ
ಮುಕ್ತಿ? ನಾನದನೊಲ್ಲೆ! ಅದು ನನ್ನ ಪಥವಲ್ಲ,
ರಸ ತಪಸ್ಸಿನ ಕವಿಯ ದರ್ಶನದ ಮತವಲ್ಲ.
ಸೌಂದರ್ಯ ಮಾಧುರ್ಯ ಸಂಮ್ಮೋಹ ನಂದನದಿ,
ಮಾಯಾ ಜಗತ್ತಿನ ಸಹಸ್ರಾರು ಬಂಧನದಿ,
ಮಳೆಬಿಲ್ಲಿನಲಿ ಬಣ್ಣಗಳು ರಮಿಸುವಂದದಲಿ
ನಲಿಯುವೆನು ಹಾಸುಹೊಕ್ಕಾಗಿ.ಆನಂದದಲಿ
ಬಂಧನದ ನಾಡಿಯಲಿ ಹರಿಯುತಿದೆ ಮುಕ್ತಿ ನದಿ.

ತ್ಯಾಗ ತಾನೊಂದು ಕೈ, ಭೋಗ ತಾನೊಂದು ಕೈ,
ಯೋಗಿ ಕವಿ ಪರಿಯೆ ರಾಗಲಿಂಗನಕೆ ನೀಡಿ
ಥಕ್ಕಥೈ ಎಂದು ಕುಣಿದೈತಹಳು ಮುಕ್ತಿಯೈ,
ಮೈ ಮೈಯ ಕೈ ಕೈಯನಪ್ಪಿ ಚುಂಬನಗೂಡಿ.
ನಿನಗೆ ಮಾಯಾ ಮೋಹದಂತೆಸೆವ ಪ್ರೇಯಸ್ಸು
ನನಗೆ ತಾನಹುದು ಮುಕ್ತಿಯ ಪರಮ ಶ್ರೇಯಸ್ಸು!
(-೧೨-೧-೧೯೩೪)

ಇಂತು ತಮ್ಮ

೧೬-೧-೧೯೩೪:

ಈಶ್ವರ ಸಣಕಲ್ಲ ರಬಕವಿ-ಎಂಬ ತರುಣರು ನನ್ನನ್ನು, ನಾನು ಹುಬ್ಬಳ್ಳಿಯಿಂದ ಹೊರಡಲು ಅನುವಾಗುತಿದ್ದಾಗ, ಕಾಣಲು ಬಂದರು. ಆ ಕೊಠಡಿಯಲ್ಲಿಯೆ ಹೊರಡಲು ಅನುವಾಗುತ್ತಿದ್ದ ಹಿರಿಯರಾದ ಡಿ.ವಿ.ಜಿ., ಮಾಸ್ತಿ,ವೆಂಕಣ್ಣಯ್ಯ, ಎಂ.ಆರ್.ಶ್ರೀ, ವೀ.ಸೀ. ಮೊದಲಾದವರೂ ಇದ್ದರು. ಈಶ್ವರ ಸಣಕಲ್ಲು ನೇರವಾಗಿ ನನ್ನಡೆಗೆ ಬಂದು ಬೀಳುಕೊಡುವ ಮಾತನಾಡಿ, ಬಾಗಿ, ನನ್ನ ಕಲುಮುಟ್ಟಿ ನಮಸ್ಕಾರ ಮಾಡಿ ಬಿಟ್ಟರು! ನಾನು ಚಕಿತನಾಗಿ ‘ಏನಿದು?’ಎಂದು ಅವರನ್ನು ಎತ್ತಿ ಮಾತನಾಡಿಸಿದ್ದೆ. ಅವರು ಬಹಳ ಸರಳ ಹೃದಯರು ಎಂದು ತೋರಿತು. ಅವರಿಂದ ಇಂದು ಒಂದು ಸೊಗಸಾದ ಪತ್ರ ಬಂದಿದೆ. ಆ ಪತ್ರದೊಳಗೆ ಒಂದು ಹೂವು ಮತ್ತು ಸಂಕ್ರಾಂತಿಯ ಎಳ್ಳುಬೆಲ್ಲ ಇಟ್ಟಿದ್ದಾರೆ. ಆ ಹೂವು ಶ್ರೀಗುರುದೇವನಿಗೆ ಅರ್ಪಿತವಾಗಲಿ! ಎಳ್ಳುಬೆಲ್ಲವನ್ನು ನಾನು ಅವರಲ್ಲಿ ಉಂಟುಮಾಡಿರುವ ಸಂಕ್ರಾಂತಿಯ ಚಿಹ್ನೆಯಾಗಿ ಕಳುಹಿಸಿದ್ದಾರೆ!

ಶ್ರೀ

ತಾ:೧೪-೧-೧೯೩೪
ರಬಕವಿ

ಶ್ರೀಮಾನ್ ಕೆ.ವಿ.ಪುಟ್ಟಪ್ಪನವರ ಚರಣಸನ್ನಿಧಿಗೆ ಸವಿನಯ ವಂದನೆಗಳು.

ಅಣ್ಣಯ್ಯ, ತಮ್ಮ ಕವನಗಳನ್ನು ಬೇರೆಬೇರೆ ಮಾಸಿಕಗಳಲ್ಲಿಯೂ, ವೃತ್ತ ಪತ್ರಿಕೆಗಳಲ್ಲಿಯೂ, ತಮ್ಮ ಭಾವಪಟವನ್ನು‘ಪ್ರಬುದ್ಧ ಕರ್ಣಾಟಕ’ದಲ್ಲಿಯೂ ಕಂಡಂದಿನಿಂದ ತಮ್ಮನ್ನೊಮ್ಮೆ ಕಾಣಬೇಕೆಂದೂ ಕಂಡು ತಮಗೆ ನನ್ನ ಎಲ್ಲ ಎದೆಯೊಲವಿನಿಂದ ತಲೆವಾಗಬೇಕೆಂದೂ ಎಣಿಕೆ ಹಾಕುತ, ದಿನಗಳನ್ನೆಣಿಸುತ್ತಿದ್ದೆ. ಅಂಥ ಸಂಧಿಯನ್ನು ಹುಬ್ಬಳ್ಳಿಯ ಸಾಹಿತ್ಯ ಪರಿಷತ್ತು ಒದಗಿಸಿಕೊಟ್ಟಿತು.

ಅಲ್ಲಿ ತಮ್ಮನ್ನು ಕಂಡು, ತಮ್ಮಂಥ ಸಹೃದಯರ ಮುಂದೆ ನನ್ನ ಹೃದಯವನ್ನು ಬಿಚ್ಚಬೇಕೆಂದು ಬಗೆದೆ! ಆದರೆ ಅದು ಹೇಗೆ ಸಾಧ್ಯವು?ನಾನೊಬ್ಬ ಬಡ ಬೀದಿ ಭಿಕಾರಿಯು!ತಾವೋ ಉನ್ನತ ಪದಾರೂಢರು! ಹೀಗಾಗಿ ನಯಭಯಗಳಿಂದ ದೂರದಿಂದಲೇ ನಿಂತು, ತಮ್ಮನ್ನು ದಿಟ್ಟಿಸಿ, ನಿಟ್ಟಿಸಿ, ತಮಗೆ ನನ್ನ ಅನೇಕಾನೇಕ ವಂದನೆಗಳನ್ನು ಮನದಲ್ಲಿಯೇ ಸಲಿಸುತ್ತಿದ್ದೇನೆ ಹೊರ್ತು, ತಮ್ಮ ಬಳಿಗೆ ಬಂದು ಮಾತನಾಡುವ ಎದೆಯಾಗಲಿಲ್ಲ! ಇದೇ ರೀತಿಯಿಂದ ಪರಿಷತ್ತು ಕೊನೆಗೊಂಡಿತು. ನನ್ನ ಹಾರೈಕೆಯು ಮಾತ್ರ ಪೂರೈಸದೆ ಹಾಗೇ ಉಳಿಯಿತು.

ಕೊನೆಗೆ ತಾವು ಹೋಗುವ ದಿನ ಬಂದಿತು. ಅಂದು ಸೋಮವಾರ ಮುಂಜಾನೆ. ಹೊಸ ವರ್ಷದ ಹೊಸ ದಿನವು!ತಾವು ಶ್ರೀಮಾನ್ ಡಿ.ವಿ.ಗುಂಡಪ್ಪನವರ ಬಳಿಗೆ ಬಂದಾಗ, ನಾನು ಬಂದು ನನ್ನ ಆಕಾಂಕ್ಷೆಯನ್ನು ಪೂರೈಸಿಕೊಂಡೆ! ತಾವು ನಿಂತಿರುವಾಗ, ನಾನು ಬಂದು ತಮಗೆ ನಮಸ್ಕರಿಸಲು, ತಾವು ಅಂದ ‘ಏನಿದು?’ಎಂಬ ಶಬ್ದವು ನನ್ನ ಹೃದಯದಲ್ಲಿ ಇನ್ನೂ ಪಡಿನುಡಿಗುಡತಲಿರುವುದು! ಅಣ್ಣಾ, ತಮ್ಮನ್ನು ಕಂಡ ಆ ಒಂದು ಕ್ಷಣದಲ್ಲಿ ಸುಖಾನಂದದಲ್ಲಿ ತೇಲಿಕೊಂಡು, ನಾನು ಯಾವದೋ ಒಂದು ಸ್ವಪ್ನರಾಜ್ಯವನ್ನು ಸೇರುತ್ತಿದ್ದೆ!

ಆ ಕ್ಷಣವು ಹೋಯಿತು! ಅಂದಿನಿಂದಲೂ, ನನ್ನ ಹೃದಯವು, ತಮ್ಮ ಮುಖ ಮಾಧುರ್ಯದಲ್ಲಿ ತೇಲಿ ಬಂದ ಆ ‘ಏನಿದು?’ಎಂಬ ಶಬ್ದವನ್ನು ಮತ್ತೆಮತ್ತೆ ಕೇಳಲು ತವಕಪಡುತಲಿರುವುದು! ಆ ಕ್ಷಣವು ಇನ್ನೆಂದು ಬರುವುದೋ ಏನೋ!

ತಮ್ಮನ್ನು ಹುಬ್ಬಳ್ಳಿಯಲ್ಲಿ ಕಂಡ ಮೊದಲುಗೊಂಡು, ನನ್ನ ಜೀವನ ಸಂಕ್ರಾಂತಿಯು ಬೆರೆತು ಎದ್ದು ಕಾಣಿಸುತಿರುವುದು! ತಮ್ಮಂಥ ಕರುಣಿಗಳ ನೆರವಿನಿಂದ ನನ್ನ ಬಡತನದ ಕಗ್ಗತ್ತಲೆಯ ಬಾಳು ಬೆಳಗಬಹುದೆಂಬ ಆಸೆಯ ನೆರಳೊಂದು ಹೃದಯದಲ್ಲಿ ಮೂಡಿಮೂಡಿ ಹೊಯ್ದಾಡುತಿದೆ! ತಮ್ಮ ಕವಿತಾರಸದಿಂದ ನನ್ನ ಬತ್ತುತಿಹ ಜೀವನವು ರಸಮಯವಾಗುವದೆಂಬ ನಂಬುಗೆಯ ಆಧಾರವೊಂದು ಸಿಕ್ಕಂತಾಗಿದೆ! ತಮ್ಮ ಜ್ಞಾನಕಿರಣಗಳಿಂದ ನನ್ನ ಭಾವೀಪಥವು ಪ್ರಕಾಶಮಯವಾಗಿ, ನನಗೆ ಮುಂದುವರಿಯಲು ಸುಲಭವಾಗುವದೆಂದು ಅನಿಸುತಿದೆ! ಅಣ್ಣಾ, ನನ್ನ ಜೀವನದಲ್ಲಿಯ ಈ ಬಗೆಯ ಸಂಕ್ರಾಂತಿಗೆ ತಾವೇ ಕಾರಣರು! ಅದಕಾಗಿ ನಾನು, ಯಾವ ವಿಧದ ಸೇವೆಯಿಂದಲೂ, ತಮ್ಮಿಂದ ಉಪಕಾರಮುಕ್ತನಾಗಲಾರೆ!

ಹೀಗಿರಲು, ಬಡವನಾದ ನಾನು ತಮಗೆ ಏನನಿತ್ತು ತಮ್ಮ ಉಪಕಾರ ತೀರಿಸಬಲ್ಲೆ? ಇರುವ ಒಂದು ಅಲ್ಪ ಹೃದಯವನ್ನೇ ನಾನಿಂದು ಎಳ್ಳುಬೆಲ್ಲದ ರೂಪದಿಂದ ತಮ್ಮ ಸನ್ನಿಧಿಗೆ ಕಳುಹಿರುವೆ! ಅದಕ್ಕೆ ತಮ್ಮ ರಸವಾಣಿಯಿಂದ ಆಶೀರ್ವದಿಸುವ ಕೃಪೆಯಾಗಬೇಕು.

ಸುಜ್ಞರಿಗೆ ಹೆಚ್ಚಿಗೆ ಬರೆಯಲಾರೆ! ಒಬ್ಬ ಬಡತಮ್ಮನ ಮೇಲೆ ಚಿರಪ್ರೇಮವಿರಲಿ! ಇಂತಿ ಸವಿನಯ ವಂದನೆಗಳು

ತಮ್ಮ ಬಡತಮ್ಮ
ಸಹಿ.
(ಈಶ್ವರ ಸಣಕಲ್ಲು, ರಬಕವಿ)
ನನ್ನ ವಿಳಾಸ:ಈಶ್ವರ ಸಣಕಲ್ಲು, ರಬಕವಿ.
ಪೋಸ್ಟ್:ರಬಕವಿ.