೨೧-೨-೧೯೩೪:

ನಿನ್ನೆ ಸಾಯಂಕಾಲ ಐದೂವರೆ ಗಂಟೆಗೆ ಮಹಾಪುರುಷಜಿ ಮಹಾರಾಜರವರು ತೀರಿಹೋದರೆಂದು ಇವೊತ್ತು ಬೆಳಿಗ್ಗೆ ಸುಮಾರು ಒಂಬತ್ತೂವರೆ ಗಂಟೆಗೆ ತಂತಿ ಬಂದಿತು. (ನನ್ನ ಪ್ರತಿಕ್ರಿಯೆ‘ಮುಕ್ತ ಮಹಾಪುರುಷನಿಗೆ’ ಎಂಬ ವಾರ್ಧಿಕ ಷಟ್ಪದಿಯ ರೂಪದ ಸುದೀರ್ಘ ಕವನವೊಂದರಲ್ಲಿ ಅಭಿವ್ಯಕ್ತಗೊಂಡಿದೆ. ಅದು‘ಅಗ್ನಿ ಹಂಸ’ಕವನಸಂಗ್ರಹದಲ್ಲಿ ಅಚ್ಚಾಗಿದೆ; ೨೭-೧೨-೧೯೭೪)

೨೭-೨-೧೯೩೪:ವಿದ್ಯಾರ್ಥಿ ನಿಲಯ ಅಡುಗೆಯವನು-ಅವನನ್ನು ಎಲ್ಲರೂ”ಅಜ್ಜ” ಎಂದು ಕರೆಯುತ್ತಾರೆ-ಕಾಯಿಲೆಯಾಗಿ ಆಸ್ಪತ್ರೆಗೆ ಸಾಗಿಸಲ್ಪಟ್ಟನು. ರಾತ್ರಿ ಸುಮಾರು ಎಂಟು ಗಂಟೆಯ ಹೊತ್ತಿಗೆ ಅವನ ಮಗ ರಾಮಕೃಷ್ಣ ಜಟಕಾದಲ್ಲಿ ಬಂದು‘ತಂದೆಯವರು ತೀರಿಹೋದರು’ಎಂದು ಅತ್ತನು. ಸ್ವಾಮಿ ದೇಶಿಕಾನಂದರು ತುಂಬ ಮೇಲುಮಟ್ಟದ ಹೃದಯದ ಮನುಷ್ಯರು: ತನ್ನ ರಕ್ತವನ್ನು ಕೊಟ್ಟು, ವೈದ್ಯರ ಅದಕ್ಷ್ಯದಿಂದಲೂ, ರಕ್ತ ತೆಗೆದುಕೊಂಡ ಐಯ್ಯಂಗಾರಿಯ ಕಾರ್ಪಣ್ಯದಿಂದಲೂ, ದಿಕ್ಕಿಲ್ಲದೆ ಇದ್ದ ಹುಡುಗನೊಬ್ಬನನ್ನು ಆಶ್ರಮಕ್ಕೆ ತಂದು ಶುಶ್ರೂಷೆ ಮಾಡಲಾರಂಭಿಸಿದ  ದಿನದಿಂದಲೇ ನನಗೆ  ಅವರಲ್ಲಿ ಗೌರವ ಇಮ್ಮಡಿಯಾಯಿತು.- ಪಾಪ,ಅಜ್ಜನು ಕಡೆಗೆ ಸಾಯುವಾಗ ತನ್ನ ಮಗನನ್ನು ಬಳಿಗೆ ಕರೆದು “ನಿನಗೆ ಮದುವೆ ಮಾಡಬೇಕು ಎಂಬಾಸೆಯಿತ್ತು. ನಿನಗೆ ಖುಷಿಯಿಲ್ಲ.” ಎಂದು ಹೇಳಿ ಸತ್ತನಂತೆ. ಅಯ್ಯೋ, ಮೂರು ಹೊತ್ತೂ ಸಂಪ್ರದಾಯಕ್ಕೆಂದು ವಿಷ್ಣುಸಹಸ್ರನಾಮ ಜಪಿಸುತ್ತಿದ್ದವನು ಕಡೆಯಲ್ಲಿ ಒಂದು ವಿಷ್ಣುನಾಮವನ್ನೂ ಹೇಳದೆ ಮಗನ ಮದುವೆಯ ಮಾತನ್ನೆ ಆಡಿದನಲ್ಲಾ!…

ರಾತ್ರಿ ಬಹಳ ಹೊತ್ತು ಜೀವ, ಜಗತ್ತು, ಜನನ,ಮೃತ್ಯ, ಇದರರ್ಥ ಉದ್ದೇಶಗಳ ವಿಚಾರ ಮಾಡುತ್ತಾ ನಿದ್ದೆ ಮಾಡಲಿಲ್ಲ.-

Bergson’s Creative Evolution, ಸ್ವಂತ ಪ್ರತಿಗೆ ಲೈಬ್ರರಿ ಪ್ರತಿಯಲ್ಲಿ ನಾನು ಮಾಡಿದ್ದ ಗುರುತು ಹಾಕಿಕೊಂಡೆ.

೨೮-೨-೧೯೩೪:

ಡಿ.ವಿ.ಗುಂಡಪ್ಪನವರನ್ನು ಲೈಬ್ರರಿಯಲ್ಲಿ ನೋಡಿದೆ. ಎಂತಹ ಸರಳ ಪ್ರಕೃತಿ? ಯಾವಾಗಲೂ ನಗುಮೊಗ! “ಮುಂದೆ ನನ್ನ ಪುಸ್ತಕಗಳು ಅಚ್ಚಾಗಿ ಅವುಗಳನ್ನು ಜನರು ಓದುವ ಪಕ್ಷದಲ್ಲಿ ನನಗೂ ನಿಮ್ಮಂಥಾ ವ್ಯಾಖ್ಯಾನಕಾರರೇ ದೊರಕಲಿ! ರಾಘವಾಂಕನಲ್ಲಿಲ್ಲದ ಗುಣಗಳನ್ನೆಲ್ಲ ಎತ್ತಿ ಹಾಕಿದ್ದೀರಿ ನೀವು!” ಎಂದರು ನನಗೆ.

(‘ಪ್ರಬುದ್ಧ ಕರ್ಣಾಟಕ’ದಲ್ಲಿ ನನ್ನ ಮಿಮರ್ಶಪ್ರಬಂಧ ಬಂದಿತ್ತು ರಾಘವಾಂಕನ ಹರಿಶ್ಚಂದ್ರ ಕಾವ್ಯವನ್ನು ಕುರಿತು. ಅದು ಈಗ ‘ಕಾವ್ಯ ವಿಹಾರ’ಗ್ರಂಥದಲ್ಲಿ ಅಚ್ಚಾಗಿದೆ. ಅದರಲ್ಲಿ ನಾನು ರಾಘವಾಂಕನ ‘ನಾಟಕೀಯತೆ’ಯನ್ನು ಮುಖ್ಯವಾಗಿಯೂ ಸನ್ನಿವೇಶ ರಚನೆ, ಸಂವಾದ ಚಾತುರ್ಯ, ಭಾವಕ್ಕೆ ತಕ್ಕ ಪದಲಾಲಿತ್ಯ ಇತ್ಯಾದಿಗಳನ್ನು ಪ್ರಶಂಸಿಸಿದ್ದೆ. ಕಾವ್ಯದ ಮೊದಲನೆಯ ಪದ್ಯ”ಶ್ರೀ ಪತಿಗೆ ಸೊಬಗನುಡುಪತಿಗೆ ಶಾಂತಿಯನು ವಾಣೀಪತಿಗೆ ಚಾತುರ್ಯಮಂ” ಎಂದು ಪ್ರಾರಂಭವಾಗುತ್ತದೆ. ಅಲ್ಲಿಬರುವ ಪ್ರತಿಮೆಗಳ ಹಿಂದಿರುವ ಭಾವಸತ್ಯದ ತತ್ತ್ವಗಳನ್ನು ಕುರಿತು ವ್ಯಾಖ್ಯಾನ ಮಾಡಿದ್ದೇನೆ. ಅದು ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಡಿ.ವಿ.ಜಿ.ಯವರೂ ಅದನ್ನು ತುಂಬಾ ಮೆಚ್ಚಿದ್ದರು. ಆದರೆ ಅವರ ದೃಷ್ಟಿಯಲ್ಲಿ ರಾಘವಾಂಕ ಕವಿಯ ದೃಷ್ಟಿ ನಾನು ವ್ಯಾಖ್ಯಾನಿಸಿದ ಮಟ್ಟಕ್ಕೆ ಏರಿತ್ತೇ ಎಂಬುದು ಸಂದೇಹಾಸ್ಪದ ಎಂದಾಗಿತ್ತು. ಅಂದರೆ ನಾನು ರಾಘವಾಂಕನಿಗೆ ಇರದೆ ಇದ್ದ ಔನ್ನತ್ಯವನ್ನು ಆರೋಪಿಸಿದ್ದೇನೆ ಎಂಬುದು ಅವರ ಇಂಗಿತವಾಗಿತ್ತು.)

೧-೪-೧೯೩೪:

ನಿನ್ನೆ ಬೆಳಿಗ್ಗೆ ದೇ.ರಾ.ವೆ.(ದೇವಂಗಿ ವೆಂಕಟಯ್ಯ) ದೇ.ರಾ.ಮಾ.(ದೇವಂಗಿ ಮಾನಪ್ಪ) ಕು.ರಾ.ವೆಂ.(ಕುಪ್ಪಳಿ ವೆಂಕಟಯ್ಯ) ನೀಲಗಿರಿಗೆ ಹೋಗುವುದಕ್ಕಾಗಿ ಮೈಸೂರಿಗೆ ಬಂದರು.(ಸ್ವಾಮಿ ಚಿನ್ಮಾತ್ರಾನಂದರ ಮುಂದಾಳುತನದಲ್ಲಿ ನಾನೂ ವಿದ್ಯಾರ್ಥಿನಿಲಯದ ಹುಡುಗರೂ ಊಟಿಗೆ ಪ್ರವಾಸ ಹೋಗುತ್ತೇವೆ. ನೀವೂ ಬನ್ನಿ ಎಂದು ಬರೆದಿದ್ದೆ ಎಂದು ತೋರುತ್ತದೆ. ಅದಕ್ಕಾಗಿ ಅವರು ನಾವು ಹೊರಡಲಿರುವ ಹಿಂದಿನ ದಿನಕ್ಕೆ ಸರಿಯಾಗಿ ಮೈಸೂರಿಗೆ ಬಂದಿದ್ದರು.)

ಬೆಳಿಗ್ಗೆ ಐದು ಗಂಟೆಗೆ ಎದ್ದು, ಸಾಮಾನು ಗಂಟುಮೂಟೆ ಕಟ್ಟಿಕೊಂಡು ೬ ಗಂಟೆಗೆ ಸಿದ್ದರಾದೆವು- ನಾನು, ಶ್ರೀನಿ, ವಿಜಯ, ಪ್ರಿಯನಥ್ ಮಹಾರಾಜ್ ಮತ್ತು ಉಳಿದವರೆಲ್ಲರೂ. ಏಳೂಮು‌ಕ್ಕಾಲು ಗಂಟೆಗೆ ಬಸ್ ಆಶ್ರಮಕ್ಕೆ ಬಂದಿತು. ನಾವೆಲ್ಲ ಹೊರಟೆವು. ದಾರಿಯಲ್ಲಿ ಹೆಚ್ಚೇನೂ ವಿಶೇಷ ನಡೆಯಲಿಲ್ಲ. ಬಯಲು ಸೀಮೆಯನ್ನು ಕಳೆದು ಗುಡ್ಡಗಾಡು ಪ್ರದೇಶಗಳಿಗೆ ಬರಲು ರಮಣೀಯ ದೃಶ್ಯಚಿತ್ರಗಳು ಪ್ರಾರಂಭವಾದುವು. ಆದರೆ ಮಲೆನಾಡಿನ ನನಗೆ ಅಷ್ಟೇನೂ ಹೊಸದಾಗಿ ಕಾಣಲಿಲ್ಲ. ಆದರೂ ಮನರಂಜಕವಾಗಿತ್ತು. ನೀಲಗಿರಿಗೆ ಸಮೀಪವಾದಂತೆಲ್ಲ ಪರ್ವತಕಾನನ ದೃಶ್ಯವು ಭವ್ಯವಾಗುತ್ತಾ ಹೋಯಿತು. ಕೊಡಗು, ಬ್ರಹ್ಮಗಿರಿ, ಬಾಬಾಬುಡನ್ ಬೆಟ್ಟ. ಕೆಮ್ಮಣ್ಣುಗುಂಡಿ, ಆಗುಂಬೆಘಾಟ್, ಜೋಗದ ಜಲಪಾತ- ಇವುಗಳಂತೆಯೆ ಅತ್ಮೋದ್ದಾರಕವೂ ಭಾವಪ್ರಚೋದಕವೂ ಆಗಿತ್ತು.

ದಾರಿಯಲ್ಲಿ ಮೈಸೂರು ಮದ್ರಾಸುಗಳ ಮೇರೆಯು ಸೇರುವೆಡೆ ಹರಿಯುವ ಹೊಳೆಯಲ್ಲಿ  ಕಟ್ಟಿ ತಂದಿದ್ದ ಬುತ್ತಿಯುಂಡೆವು. ಬಸ್ ಊಟಿಗೆ ಸುಮಾರು ಎರಡೂ ಮುಕ್ಕಾಲು ಗಂಟೆಗೆ ಬಂದಿತು. ಅಲ್ಲಿಂದ ಶ್ರೀರಾಮಕೃಷ್ಣ ಆಶ್ರಮಕ್ಕೆ ಹೋದೆವು. ನೀಲಗಿರಿಯಲ್ಲಿ ಆಶ್ರಮವೂ ಅದು ಇರುವ ಸ್ಥಳವೂ ಎತ್ತರದಲ್ಲಿದ್ದು ಮನೋಹರವಾಗಿವೆ. ಶ್ರೀಮಾನ್ ಕೆ.ವೆಂಕಟಪ್ಪನವರ ದಿವ್ಯ ವರ್ಣಚಿತ್ರಗಳಿಂದ ಮೊದಲೇ ಪರಿಚಿತವಾಗಿದ್ದ ಉದಕಮಂಡಲದ ದೃಶ್ಯಗಳು ನನಗೆ ಪ್ರಿಯವಾದುವು. ಆದರೆ ಪ್ರಕೃತಿಯೊಲುಮೆಯು ಬಹುಮಟ್ಟಿಗೆ ಸ್ವಯಂ ಪ್ರಕಾಶವಾದುದು. ಹಿಂಡಿ ತೆಗೆಯುವಂಥಾದ್ದಲ್ಲ. ಯಾವ ಸುಂದರ ದೃಶ್ಯವಾದರೂ ಒಲುಮೆ ಪಡೆಯದ ಹೊರತೂ ಹೃದಯಂಗಮವಾಗದು. ಆದ್ದರಿಂದ ಪರಿಚಯ ಸ್ನೇಹಗಳು ಅವಶ್ಯಕ. ಉದಕಮಂಡಲವೂ ಭೂಸ್ವರ್ಗಗಳೆಂದು ಕರೆಯಿಸಿಕೊಳ್ಳುವ ಸ್ಥಳಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.

ಆದರೆ ಇಲ್ಲಿ ನಾವು ಬಂದಿಳಿದಕೂಡಲೆ ಸಿ.ಐ.ಡಿ.ಗಳು ಬಂದು ನಮ್ಮ ವಿಳಾಸ ತೆಗೆದುಕೊಂಡರು. ಇಂದಿನ ಸರ್ಕಾರದ ತಳಹದಿಯು ಎಂತಹ ಭಯ ಸಂಶಯಗಳ ಮೇಲೆ ನಿಂತಿದೆ ಎಂಬುದು ಗೊತ್ತಾಗುತ್ತದೆ… ಸಾಯಂಕಾಲ ಸಂಚಾರ ಹೊರಟು ವೆಂಕಟಪ್ಪನವರು ಚಿತ್ರಿಸಿದ ಒಂದು ಸ್ಥಳವನ್ನು ನೋಡಿಕೊಂಡು ಒಂದು ಬೆಟ್ಟವನ್ನೇರಿ ಅಲ್ಲಿಂದ ಸೂರ್ಯಾಸ್ತವನ್ನು ನೋಡಿದೆವು. ನಮ್ಮ ಕವಿಶೈಲ, ಹುಲಿಕಲ್ಲು. ನವಿಲುಕಲ್ಲುಗಳೇನು ಕಡಮೆಯಲ್ಲವೆಂದೇ ಹೇಳುತ್ತೇನೆ. ಕತ್ತಲಾಗುವ ಹೊತ್ತಿಗೆ ಆಶ್ರಮಕ್ಕೆ ಬಂದೆವು. ನಿಜವಾಗಿಯೂ ಏನು ಚಳಿ! ಸ್ವೆಟರ್ ಹಾಕಿಕೊಂಡರೂ ಚಳೀನೇ!!

೨-೪-೧೯೩೪:

ಬೆಳಿಗ್ಗೆ ನಾನೂ ಪ್ರಿಯನಾಥ್ ಮಹಾರಾಜರೂ ಹೊರಟು ಎಲ್ಕ್ ಹಿಲ್ ನೆತ್ತಿಗೆ ಹೋಗಿ ಸೂರ್ಯೋದಯ ನೋಡಿದೆವು. ಕೊರೆಯುವ ಚಳಿಗೆ ಇತರರಾರೂ ಏಳಲೂ ಇಲ್ಲ! ಗಡದ್ದಾಗಿ ಮಲಗಿದ್ದರು! ಚಳಿಗಾಳಿ ಬೀಸುತ್ತಿತ್ತು. ವೆಂಕಟಪ್ಪನವರು ಬರೆದ ಚಿತ್ರದ ಮೂಲಸ್ಥಳಗಳನ್ನು ನೋಡಿಕೊಂಡು ಆಶ್ರಮಕ್ಕೆ ಹಿಂತಿರುಗಿದೆವು. ಕಾಫಿ ತಿಂಡಿ ಪೂರೈಸಿಕೊಂಡು ಗೌರ್ನ್‌ಮೆಂಟ್ ಗಾರ್ಡ್‌ನ್ಸ್ ಉದ್ಯಾನಕ್ಕೆ ಹೋದೆವು. (ಅಲ್ಲಿಯ ಶೈತ್ಯ ಎಷ್ಟಿತ್ತು ಎಂದರೆ ಕಾಫಿಯನ್ನಾಗಲಿ ತುಪ್ಪವನ್ನಾಗಲಿ ಏನನ್ನಾಗಲಿ ಒಂದು ಅಗ್ಗಿಷ್ಟಿಕೆ ಒಲೆಯ ಮೇಲೆ ಇಟ್ಟಕೊಂಡೇ ಬಡಿಸಿಕೊಳ್ಳಬೇಕು. ಇಲ್ಲದಿದ್ದರೆ ತುಟಿ ನಾಲಿಗೆಗೆ ಚಳಿ ಕಚ್ಚಿದಂತಾಗುತ್ತದೆ!) ಉದ್ಯಾನ ಬಹಳ ಸೊಗಸಾಗಿದೆ. ಬೇರೆ ಬೇರೆ ದೇಶದ ನಾನಾ ಆಕೃತಿಯ ವೃಕ್ಷಗಳಿವೆ. ಅದನ್ನೆಲ್ಲ ನೋಡುತ್ತಾ ತೋಡರ ಗುಡಿಸಲಿರುವ ಬಳಿಗೆ ಹೋದೆವು. ಆ ಗುಡಿಸಲು ಮತ್ತು ಅದರ  ನಿವಾಸಿಗಳನ್ನು ತೋಟ ನೋಡಲು ಬರುವ ನೋಟಕರಿಗಾಗಿಯೆ ಏರ್ಪಡಿಸಿದ್ದಾರೆ, ಮೃಗಾಲಯಕ್ಕೆ ಬರುವವರಿಗೆ ಪಂಜರದಲ್ಲಿ ಪ್ರಾಣಿಗಳನ್ನಿಡುವಂತೆ! ಆಹಾ! ಮನುಷ್ಯರನ್ನು, ನಮ್ಮಂತೆಯೆ ಇರುವ ಮನುಷ್ಯರನ್ನು, ಮೃಗಗಳೆಂಬಂತೆ ಹೋಗಿ ನೋಡುತ್ತೇವಲ್ಲಾ, ಶಿವಶಿವಾ! ಆ ತೋಡರನ್ನು ನೋಡಿ ನನಗೆ ಬಹಳ ವ್ಯಸನವಾಯ್ತು, ನಾಗರಿಕತೆಗೂ ನಾಗರಿಕತೆಯಿಂದ ಅಧೋಗತಿಗಿಳಿದ ಅನಾಗರಿಕತೆಗೂ ಇರುವ ಸಾಮ್ಯ ತಾರತಮ್ಯಗಳು ವಿಕಟಾಕಾರವಾಗಿ ನನ್ನೆದುರು ನಿಂತುವು….

ಸಾಯಂಕಾಲ ಫರ‍್ನಹಿಲ್ ಅರಮನೆ, ಬರೋಡ ಅರಮನೆ ಇತ್ಯಾದಿಗಳನ್ನು ನೋಡಿದೆವು.

೩-೪-೧೯೩೨:

ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ದೊಡ್ಡಬೆಟ್ಟಕ್ಕೆ ಹೋದೆವು. ಸುಮಾರು ಮೂರು ನಾಲ್ಕು ಮೈಲಿ ಹತ್ತಿ ನಡೆಯಬೇಕಾಗಿತ್ತು ಅದರ ನೆತ್ತಿಗೆ, ಆದ್ದರಿಂದ ನಾನು ಅವರನ್ನೆಲ್ಲ ಮೂರು ಗಂಟೆಗೇ ಏಳುವಂತೆ ಮಾಡಿದೆ. ಉದ್ದೇಶ, ಸೂರ್ಯೋದಯಕ್ಕೆ ಮುನ್ನವೆ ಅಲ್ಲಿರಬೇಕು, ಸೂರ್ಯೋದಯ ದರ್ಶನಕ್ಕೆ ಎಂದು. ಅಂತೂ ಎಲ್ಲರೂ ಶಪಿಸುತ್ತ ಗೊಣಗುತ್ತ ಎದ್ದು ಬಂದಿದ್ದರು. ಸೂರ್ಯೋದಯವೂ ರಮಣೀಯವಾಗಿತ್ತು. ಅದರ ನೆತ್ತಿಗೆ ಸೇರುವಾಗ ಆರೂಕಾಲ ಗಂಟೆಯಾಗಿತ್ತು. ಚಳಿಯೂ ಗಾಳಿಯೂ ಸಹಿಸಲಸಾಧ್ಯವಾಗಿದ್ದುವು.(ಎಲ್ಲಿಗೆ ಹೋದರೂ ಅಲ್ಲಿಯ ಗಿರಿನೆತ್ತಿಯಿಂದ ಸೂರ್ಯೋದಯ ನೋಡುವುದು ನನ್ನದೊಂದು ‘ವ್ಯಸನ’ವಾಗಿತ್ತು!) ಒಂಬತ್ತು ಕಾಲು ಗಂಟೆಗೆ ದಣಿದು ಆಶ್ರಮಕ್ಕೆ ಬಂದೆವು.

ಸಾಯಂಕಾಲ ಬಸ್ ಸ್ಟಾಂಡಿಗೆ ಹೋಗಿ ಮರುದಿನಕ್ಕೆ ಟಿಕೆಟ್ ಗೊತ್ತುಮಾಡಿದೆವು. ಆ ಹಾಳು ಮಾರ್ಕೆಟ್! ಊಟಿಯಲ್ಲಾದರೇನು? ಮೈಸೂರಿನ ಸಂತೇಪೇಟೆ ಯಲ್ಲಾದರೇನು? ಎಲ್ಲಾ ಒಂದೇ! ಸರೋವರದ ಬಳಿ ಕುಳಿತು(ಬ್ಯಾನರ್ಜಿಯವರೊಡನೆ) ಸ್ವಲ್ಪ ಹೊತ್ತು ವಿಹರಿಸಿ ಆಶ್ರಮಕ್ಕೆ ಹಿಂತಿರುಗಿದೆವು.

ಬ್ಯಾನರ್ಜಿಯವರನ್ನು ಬೀಳ್ಕೋಳ್ಳುವಾಗ ನಾನು ಹೇಳಿದೆ!”we have met; and we are sure to forget each other. But I hope that we recognise each other when we meet.”

೪-೪-೧೯೩೪:

ಬೆಳಿಗ್ಗೆ ಊಟಿಯಿಂದ ಹೊರಟು ಮಧ್ಯಾಹ್ನ ಎರಡೂವರೆ ಗಂಟೆಗೆ ಮೈಸೂರು ಆಶ್ರಮಕ್ಕೆ ಬಂದೆವು. ದಾರಿಯಲ್ಲಿ ಬಸ್ ಓವರ್ ಲೋಡ್! ಸಾಕಾಗಿ ಹೋಯ್ತು!

೫-೪-೧೯೩೪:

ಎಲ್ಲರೂ ಸಾಯಂಕಾಲ ಮೂರು ಗಂಟೆಗೆ ರೈಲಿನಲ್ಲಿ ಶಿವಮೊಗ್ಗಾಕ್ಕೆ ಹೊರಟೆವು, ಬೇಸಿಗೆ ರಜಾಕ್ಕೆ ಸೂರ್ಯಸ್ತ ದಾರಿಯಲ್ಲಿ ಮನೋಹರವೂ ಭವ್ಯವೂ ಆಗಿತ್ತು.

೬-೪-೧೯೩೪:

ಬೆಳಿಗ್ಗೆ ಶಿವಮೊಗ್ಗಾಕ್ಕೆ ಬಂದೆವು. ಏನು ಸೆಕೆ! ದೇವರೆ ಗತಿ! ನನ್ನ ಕಾದಂಬರಿಯನ್ನು ಓದಲು ಪ್ರಾರಂಭಿಸಿದೆ:(‘ಕಾನೂರು ಸುಬ್ಬಮ್ಮ ಹೆಗ್ಗಡಿತಿ’ಎಂಬ ಹೆಸರಿನಿಂದ ಪ್ರಕಟವಾದ ನನ್ನ ಮೊದಲ ಕಾದಂಬರಿ. ಅದು ಮುಗಿದಿರಲಿಲ್ಲ…. ಅದರ ಮೊದಲ ಭಾಗ ೧೯೩೭ ರಲ್ಲಿ ಪ್ರಕಟವಾಯಿತು. ಆಮೇಲೆ ಅದರ ಹೆಸರು‘ಕಾನೂರು ಹೆಗ್ಗಡಿತಿ’ ಎಂದಾಯಿತು. ನನ್ನ ಶಿವಮೊಗ್ಗೆಯ ಮಿತ್ರರು-ದೇವಂಗಿ ಮಾನಪ್ಪ, ಭೂಪಾಳಂ ಚಂದ್ರಶೇಖರಯ್ಯ, ಕೂಡಲಿ ಚಿದಂಬರಂ, ‘ಆನಂದ’ ಕಾವ್ಯನಾಮದ ಎ.ಸೀತಾರಾಂ-ಮೊದಲಾದವರು- ಪೀಡಿಸಿ ಕೇಳಿಕೊಂಡಿದ್ದರಿಂದ ಅದನ್ನು ಆಗ ಬರೆದಿದ್ದಷ್ಟನ್ನೆ ಅವರಿಗೆ ಓದಿದ್ದೆ.೨೦-೧-೧೯೭೪)

೧೦-೪-೧೯೩೪:

ಶಿವಮೊಗ್ಗದ ಟೌನ್ ಹಾಲ್ ನಲ್ಲಿ ನನ್ನ ಕವನವಾಚನವನ್ನು ಏರ್ಪಡಿಸಿದರು, ಕರ್ಣಾಟಕ ಸಂಘದ ಮಿತ್ರರು. ಅಂದು ನಾನು ವಾಚನ ಮಾಡಿದ ಕವನಗಳು ಭಾವದಲ್ಲಿಯೂ ಆಲೋಚನೆಯಲ್ಲಿಯೂ ಮೇಲುಮಟ್ಟದವಾಗಿ ಗಹನವಾಗಿದ್ದುವು. ಜನರು ಗಹನಭಾವಗಳನ್ನಾಗಲಿ ಭಾಷೆಯನ್ನಾಗಲಿ ಗ್ರಹಿಸಲಾರದೆ ಹೋದರೆಂದು ತೋರುತ್ತದೆ. (ಜನರಿಗೆ ದೇಶಭಕ್ತಿಯ, ಭಾಷಾಭಿಮಾನದ, ಕನ್ನಡ ಮತ್ತು ಕರ್ಣಾಟಕ ಏಕೀಕರಣ  ಸಂಬಂಧವಾದ ಮತ್ತು ಇತರ ಸ್ಥೂಲಭಾವದ ಕವನಗಳು ಹಿಡಿಸಿದಂತೆ ಸೂಕ್ಷ್ಮಭಾವದ ಮತ್ತು ಉನ್ನತ ಆಲೋಚನೆಯ ಸೂಕ್ಷ್ಮಟ್ಮಭಾವಗಳು ತಟಕ್ಕನೆ ಗ್ರಾಹ್ಯವಾಗುವುದಿಲ್ಲ. ಆದ್ದರಿಂದ ಸಾಮಾನ್ಯ ಜನಜಂಗುಳಿಗೆ ಕಾವ್ಯವಾಚನ ಮಾಡುವಾಗಲೆಲ್ಲ ನಾನು ತಾತ್ತ್ವಿಕ, ಆಧ್ಯಾತ್ಮಿಕ ಮತ್ತು ಅನುಭಾವಿಕ ಕವನಗಳನ್ನು ಆರಿಸುತ್ತಲೇ ಇರಲಿಲ್ಲ. ಸಣ್ಣಗುಂಪಿನ ಮಿತ್ರರ ಗೋಷ್ಠಿಗಳಲ್ಲಿ ಮಾತ್ರ ಅವನ್ನು ಓದುತ್ತಿದ್ದೆ.)

೧೧-೪-೧೯೩೪:

ಬೆಳಿಗ್ಗೆ ಬಸ್ಸಿನಲ್ಲಿ ಕುಳಿತು ಇಂಗ್ಲಾದಿಗೆ ಬಂದೆವು-ಆಃ ಈ ಕಾಡುಬೆಟ್ಟಗಳು ಎಷ್ಟು ಆತ್ಮೀಯವಾಗಿವೆ?… ಸಾಯಂಕಾಲ ಮಳೆ ಚೆನ್ನಾಗಿ ಸುರಿಯಿತು. ವಾಲಿಬಾಲ್ ಆಡಲಾಗದಿದ್ದರೂ ಸಂತೋಷವಾಗಿತ್ತು.ಡಾIIಚಂದ್ರಮೌಳೇಶ್ವರ, ವೆಂಕಟಯ್ಯ, ಹಿರಿಯಣ್ಣ ನಾನು ವಾಕಿಂಗ್ ಹೋದೆವು.

೧೨-೪-೧೯೩೪:

ಬೆಳಿಗ್ಗೆ ನಾನು ವೆಂಕಟಯ್ಯ, ಶ್ರೀನಿವಾಸ, ವಿಜಯದೇವ ಎಲ್ಲ ಬೆಮ್ಮಾರಲ ಹಣ್ಣು ಕೊಯ್ಯಲು ಆಲ್ಮನೆ ಉಬ್ಬಿಗೆ ಹೋದೆವು. ದೃಶ್ಯಗಳು ರಮಣೀಯವಾಗಿದ್ದುವು. ಶ್ರೀನಿವಾಸ ಒಂದು ಹೊರಸಲು ಹಕ್ಕಿಗೆ ಈಡು ಹೊಡೆದನು. ಆದರೆ ಅದು ಸುರಕ್ಷಿತವಾಗಿ ಮನೆಗೆ ಹೋಯಿತು. ಅಲ್ಲಿಂದ ದೇವಂಗಿಗೆ ಊಟಕ್ಕೆ ಹೋದೆವು, ಹುಡುಗರ ಮಾತು ಕೇಳಿ. ಆದರೆ ಅಲ್ಲಿ ಹಿರಿಯರಿಗೆ ನಾವು ಊಟಕ್ಕೆ ಬರುವುದು ಗೊತ್ತೇ ಇರಲಿಲ್ಲ! ಪಾಪ, ಅವಸರವಸರವಾಗಿ ನೆಂಟರ ಉಪಚಾರಕ್ಕೆ ಅಡುಗೆ ಮಾಡಿದರು. ಅಂತೂ ಚೆನ್ನಾಗಿ ಭೋಜನವಾಯಿತು. … ಸಾಯಂಕಾಲ ಇಂಗ್ಲಾದಿಯಲ್ಲಿ ಚೆನ್ನಾಗಿ ವಾಲಿಬಾಲ್ ಆಡಿದೆವು….ಧ್ಯಾನ ಮಾಡಿದೆ… ಏನು ಭಾವಗಳು ಬರುತ್ತಿವೆ!

೧೩-೪-೧೯೩೪:

ಬೆಳಿಗ್ಗೆ ಉಂಟೂರಿಗೆ ಹೋದೆವು. ನಿನ್ನೆ ಮಧ್ಯಾಹ್ನವೆ ಶಿವಮೊಗ್ಗಾದಿಂದ ಬಂದಿದ್ದ ಮಾನಪ್ಪನೂ ಕೂಡಿ.- ಸಾಯಂಕಾಲ ಮನೆಗೆ ಬಂದೆ, ಕುಪ್ಪಳಿಗೆ.ಶ್ರೀನಿವಾಸ, ವಿಜಯದೇವ, ಮಾನಪ್ಪ ಚಿಕ್ಕಮಗಳೂರಿಗೆ ಹೋದರು… ರಾಜಮ್ಮ, ಸಾವಿತ್ರಮ್ಮ, ಚಂದ್ರಶೇಖರ ಬಂದರು. ಸಾಯಂಕಾಲ ನಾನು ಕು.ರಾ.ವೆಂ.(ಕುಪ್ಪಳಿ ವೆಂಕಟಯ್ಯ) ಮತ್ತು ಇತರರು ಕವಿಶೈಲಕ್ಕೆ ಹೋಗಿದ್ದೆವು. ಆಹಾ! ಕವಿಶೈಲವು ನನ್ನ ಶಾಂತಿಯ ಸೌಂದಯದ ಸ್ವರ್ಗ. ಚಂದ್ರುವೊಡನೆ ಎಲ್ಲರೂ ಒಟ್ಟಿಗೆ ಆಹ್ವಾನವನ್ನೂ- ಬಾ ಶ್ರೀಗುರುದೇವನೆ ಬಾ-ಹಾಡಿನ, ಓಂ ಹ್ರೀಂ ಋತುಂ- ಪಠಿಸಿದೆವು…

ರಾತ್ರಿ ಉಪ್ಪರಿಗೆಯ ಮೇಲೆ ಲ್ಯಾಂಪಿನ ಬೆಳಕಿನಲ್ಲಿ ಕುಳಿತು ಹರಟೆ ಹೊಡೆಯುತ್ತಾ ರಾಜಮ್ಮ ಮೂಡಿಗೆರೆ ಸೀಮೆಯ ಕಿರಾತ ಶ್ರೀಮಂತರ ಮತ್ತು ಅನಾಗರಿಕ ಐಶ್ವರ್ಯವಂತರ ಮಡ್ಡಬುದ್ದಿಯ ಕೊಳಕು ನಡತೆಯ ಭಯಂಕರ ಕಥೆಗಳನ್ನು ಹೇಳಿದಳು. ಹೆಣ್ಣುಮಕ್ಕಳು ದಿನವೂ ಸ್ನಾನ ಮಾಡಿದರೆ, ಜಡೆ ಹಾಕಿಕೊಂಡರೆ, ಕುಂಕುಮವಿಟ್ಟು ಹೂಮುಡಿದರೆ ‘ಸೂಳೆಯರಂತೆ!’ ಹೆಂಡತಿ ರೋಗದಿಂದ ನರಳುತ್ತಿದ್ದರೂ ಗಂಡ ಬಳಿ ಸಾರಿ ಮಾತಾಡಬಾರದಂತೆ!

೧೪-೪-೧೯೩೪:

ಬೆಳಿಗ್ಗೆ ಏಳುತ್ತಲೆ ಉಪ್ಪರಿಗೆಯ ಎದುರಿನ ಸ್ವಗೀಯ ದೃಶ್ಯ ಕಣ್ಣಿಗೆ ಬಿತ್ತು.(ಕುಪ್ಪಳಿಯ ಉಪ್ಪರಿಗೆ ಪೂರ್ವದಿಕ್ಕಿಗೆ ಗೋಡೆಯಿಲ್ಲದೆ ತೆರೆದೆ ಇರುವುದರಿಂದ ರಾತ್ರಿ ಉಪ್ಪರಿಗೆಯಲ್ಲಿ ಮಲಗಿದವರು ಬೆಳಿಗ್ಗೆ, ಎದ್ದು ಕೂರುವುದೂ ಬೇಡ, ಮಲಗಿದ್ದ ಹಾಗೆಯೆ ಕಣ್ಣು ತೆರೆದರೆ ಸಾಕು, ಅರ್ಧ ಆಕಾಶದವರೆಗೆ ಎದ್ದಂತಿರುವ ಕಾಡಿಡಿದ ಮಲೆಯ ಮತ್ತು ಅದರ ಬುಡದಲ್ಲಿ ಮನೆಗೆ ಅಂಟಿಕೊಂಡಿರುವ ಅಡಕೆತೋಟದ ನೋಟ ಕಣ್ಬೊಲಕ್ಕೆ ಒಳಗಾಗುತ್ತದೆ.)ನಮ್ಮ ಮನೆಯ ಆಸ್ತಿಗಳೆಲ್ಲೆಲ್ಲ ದೊಡ್ಡ ಆಸ್ತಿ ಎಂದರೆ ನಮ್ಮ ಉಪ್ಪರಿಗೆಯ ಎದುರಿನ ದೃಶ್ಯ-ಅದರಲ್ಲಿಯೂ ಪ್ರಾತಃಕಾಲದಲ್ಲಿ!-

ಸ್ನಾನಾದಿಗಳನ್ನು ಪೂರೈಸಿ‘ಋಷಿವಾಣಿ’ಯನ್ನು ಓದುತ್ತಿದ್ದೆ. ಸೂರ್ಯನು ಗಿರಿಶಿಖರಗಳ ಹಸುರಿನ ಮೇಲೆ ಮೂಡಿದನು. ಆಃ!ಮಾತು ಸೋತು ಸಾಯುವಂತಹ ಸೊಬಗು ಸುಳಿದಾಡಿತು!

ನಾನು ಚಂದ್ರು (ದೇವಂಗಿ ಚಂದ್ರಶೇಖರ) ಕವಿಶೈಲಕ್ಕೆ ಏರಿದೆವು. ಹಿಂದಿನ ದಿನದ ಮಳೆಯಿಂದ ಕಾಡು ಮಲೆ ನೆಲಗಳು ಮಿಂದು ಮಡಿಯಾಗಿದ್ದುವು. ಇಂದು ಬೆಳಿಗ್ಗೆ ನಮಗೆ ದೊರಕಿದ ದೃಶ್ಯವು ನಮ್ಮ ಪುಣ್ಯಕ್ಕೆ ಎಣೆಯಿಲ್ಲದಂಥದು. ಕಣಿವೆಗಳನ್ನು ತುಂಬಿದ್ದ ಮಂಜಿನ ಪರದೆಯು ಮೇಲೇಳತೊಡಗಿ, ಸಲಸಲಕ್ಕೂ ಎದೆ ಹಾರಿಸುವಂತಹ ದೃಶ್ಯಗಳು ಗೋಚರಿಸಿದುವು. ಅದನ್ನು ಎಂದಾದರೂ ಕಲಾಸುಂದರಿಯ ಕೃಪೆಯಿಂದ ಸಾಹಿತ್ಯರೀತ್ಯಾ ಹೊರಹೊಮ್ಮಿಸುತ್ತೇನೆ1 ಇಂದು ನನ್ನ ಜೀವನದಲ್ಲಿ ಮತ್ತೊಂದು ಮಹಾದಿನವಾಯ್ತು ಪ್ರಕೃತಿ ಕೃಪೆಯಿಂದ.ಕಣ್ಣು ನೀರುತುಂಬಿ ಕಂಠವು ಗದ್ಗದವಾಗಿ ಚೆನ್ನಾಗಿ ಅಳುತ್ತಾ ಕುಣಿದಾಡಬೇಕೆನಿಸಿತು!

(*ಋಷಿವಾಣಿ: ಈಶಾವಾಸ್ಯ, ಕೇನ, ಕಠ ಮೊದಲಾದ ಉಪನಿಷತ್ತುಗಳಿಂದ ನಾನು ಮಹತ್ತಾದುವು ಎಂದು ಮೆಚ್ಚಿಕೊಂಡಿದ್ದ ಕೆಲವು ಮಂತ್ರಶ್ಲೋಕಗಳನ್ನು ಆರಿಸಿ ಅದಕ್ಕೆ ‘ಋಷಿವಾಣಿ’ಎಂಬ ಹೆಸರಿಟ್ಟು, ಅದನ್ನು ಶ್ರೀರಾಮಕೃಷ್ಣಾಶ್ರಮದಿಂದ ಪ್ರಕಟಿಸುವುದಾಗಿ ಗೊತ್ತು ಮಾಡಿದ್ದೆವು. ಪ್ರಿಯನಾಥ್ ಮಹಾರಾಜ್ ರವರು(ಸ್ವಾಮಿ ಚಿನ್ಮಾತ್ರಾನಂದರು) ಅದನ್ನು ಅಚ್ಚಿಗೆ ಕೊಟ್ಟರು. ನಾನು ಅದಕ್ಕೊಂದು ಸಣ್ಣ ಮುನ್ನುಡಿ ಬರೆದೆ. ಆ ಮುನ್ನುಡಿ ಸಂಪ್ರದಾಯಸ್ಥರ ಶ್ರದ್ಧೆಗೆ ಹಿಡಿಸುವಂತಿರಲಿಲ್ಲ. ಮೈಸೂರು ವಿಶ್ವವಿದ್ಯಾನಿಲಯ ರಿಜಿಸ್ಟ್ರಾರ್ ಆಗಿದ್ದು ನಿವೃತ್ತರಾಗಿ ಮಹಾರಾಜರ ಖಾಸಗಿ ವೇದಾಂತಾಧ್ಯಾಪಕರಾಗಿದ್ದ ವಿ.ಸುಬ್ರಹ್ಮಣ್ಯ ಐಯರ್ ಅವರು ಅದನ್ನೊದಿ,ಶ್ರೀರಾಮಕೃಷ್ಣಾಶ್ರಮದ ಹೆಸರಿನಲ್ಲಿ ಅದು ಪ್ರಕಟವಾದರೆ ಆಶ್ರಮವು ಸಂಪ್ರದಾಯದವರ ಖಂಡನೆಗೆ ಪಾತ್ರವಾಗುತ್ತದೆ. ಆದ್ದರಿಂದ ಅದನ್ನು ಆಶ್ರಮ ಪ್ರಕಟಿಸುವುದು ಒಳ್ಳೆಯದಲ್ಲ ಎಂದು ಸಲಹೆ ಕೊಟ್ಟರಂತೆ. ಪುಸ್ತಕ ಅಚ್ಚಾಗಿ ಬಿಟ್ಟಿತ್ತು.ಇನ್ನೇನು ಮಾಡುವುದಕ್ಕಾಗುತ್ತದೆ? ನಾಶಪಡಿಸಲು ನಾನು ಒಪ್ಪಲಿಲ್ಲ. ಅದಕ್ಕೊಂದು ಉಪಾಯ ಹೂಡಿದೆವು. ಪುಸ್ತಕದ ಪ್ರಕಾಶರ ಹೆಸರನ್ನು ದೇ.ರಾ.ಮಾನಪ್ಪ ಎಂದು ಅಚ್ಚು ಹಾಕಿಸಿದೆವು. ಮಾನಪ್ಪ ಒಪ್ಪಿಗೆಯನ್ನೂ ಪಡೆದಿರಲಿಲ್ಲ. ನಾನೆ ಅವನ ಒಪ್ಪಿಗೆಯ ಹೊಣೆಗಾರಿಕೆ ಹೊತ್ತಿದ್ದೆ. ಪುಸ್ತಕವನ್ನೇನೂ ಆಶ್ರಮವೇ ಮಾರಾಟ ಮಾಡಿತು. ಅದರ ಮುನ್ನುಡಿಯನ್ನು ಓದಿದ ಕೆಲವರು.

1. ಕೃತ್ತಿಕೆ:ಕವಿಶೈಲ, ಸಾನೆಟ್ ೩,೧೬-೪-೧೯೩೪ ನೋಡಿ.ಟೀಕಿಸಿದರಂತೆ. ಆದರೆ ದೂರ ಟೀಕಿಸಿದರಂತೆ. ಆದರೆ ದೂರು ಆಶ್ರಮದ ಮೇಲೆ ಬರುವಂತಿರಲಿಲ್ಲ. ಶಾಸ್ತ್ರಿಗಳೊಬ್ಬರು ನನ್ನೊಡನೆಯೂ ವಾದಿಸಿದರು. ಆದರೆ ನಾನು ಅವರ ಶ್ರುತಿ ಪ್ರಾಮಾಣ್ಯದ ನಂಬುಗೆಯನ್ನು ಒಪ್ಪಲಿಲ್ಲವಾದ್ದರಿಂದ ತೆಪ್ಪಗಾದರು.

ಆ ಮುನ್ನುಡಿ ಬೇರೆಲ್ಲಿಯೂ ಪ್ರಕಟವಾಗಿಲ್ಲ. ನನ್ನ ಆಗಿನ ಮನೋಧರ್ಮವನ್ನು ಅದು ಪ್ರಕಟಿಸುತ್ತದೆ, ಆದ್ದರಿಂದ ಅದನ್ನು ಇಲ್ಲಿ ಕೊಡಬಯಸುತ್ತೇನೆ. ‘ಋಷಿವಾಣಿ’ಯಲ್ಲಿರುವ ಮಂತ್ರಗಳನ್ನಾಶ್ರಯಿಸಿಯೆ ನಾನು ಅ.ನ.ಕೃಷ್ಣರಾಯರು ಹೊರಡಿಸುತ್ತಿದ್ದ ‘ವಿಶ್ವವಾಣಿ’ಗೆ ‘ಉಪನಿಷತ್ತಿನ ಋಷಿಯ ದರ್ಶನ’ಎಂಬ ಲೇಖನವನ್ನು ಬರೆದು ಕೊಟ್ಟಿದ್ದೆ. ಅದು ಇತ್ತೀಚೆಗೆ ‘ಇತ್ಯಾದಿ’ಎಂಬ ಗ್ರಂಥದಲ್ಲಿ ‘ಉದಯರವಿ ಪ್ರಕಾಶನ’ದಿಂದ ಮುದ್ರಿತವಾಗಿದೆ.)

ಮುನ್ನುಡಿ

ವೇದಗಳು ಭಾವ ಮತ್ತು ಕಲ್ಪನಾ ಪ್ರಧಾನವಾಗಿರುವಂತೆ ವೇದಾಂತವಾದ ಉಪನಿಷತ್ತುಗಳು ಆಲೋಚನಾಪ್ರಧಾನವಾಗಿವೆ. ನಾಗರಿಕತೆಯ ಪ್ರಾರಂಭಕಾಲದಲ್ಲಿ ಪ್ರಕೃತಿ ವ್ಯಾಪಾರಗಳ ರಮ್ಯತೆ ಭೀಷಣತೆಗಳಿಗೆ ಮೆಚ್ಚಿ ಬೆಚ್ಚಿದ ಮನುಷ್ಯನು ಬಿಸಿಲು ಮಳೆ ಗಾಳಿ ಬೆಂಕಿ ಮೊದಲಾದವುಗಳಿಗೆ ಸೂರ್ಯ ಇಂದ್ರ ವಾಯು ಅಗ್ನಿ ಇತ್ಯಾದಿ ದೇವತೆಗಳನ್ನು ಕಲ್ಪಿಸಿ, ಆ ದೇವತೆಗಳ ಕರುಣೆ ಕನಿಕರ ಸಹಾಯಗಳನ್ನು ಪಡೆಯಲೆಂದೂ, ಅವರ ಕೋಪ ದ್ವೇಷ ಮಾತ್ಸರ್ಯಗಳನ್ನು ತವಿಸಲೆಂದೂ, ಸಂತೃಪ್ತನಾದಾಗ ಅವರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಲೆಂದೂ ಹಾಡಿದ ಪ್ರಾರ್ಥನೆ ಸ್ತೋತ್ರಗಳಿಗೆ ವೇದಗಳು ನಿಧಿಯಾಗಿವೆ. ಮಾನವನ ಮೊತ್ತ ಮೊದಲನೆಯ ಪ್ರಕೃತಿ ಮತ್ತು ಸೃಷ್ಟಿ ವಿಷಯಕವಾದ ಮಹದಾಲೋಚನೆಗಳಿಗೆ ಉಪನಿಷತ್ತುಗಳು ಗಣಿಯಾಗಿವೆ. ವೇದಗಳಲ್ಲಿ ಹೃದಯದ ಆಶೆ ಆಕಾಂಕ್ಷೆ ಭಯ ಭರವಸೆ ಮೊದಲಾದ ಭಾವಗಳು ತುಂಬಿವೆ. ಉಪನಿಷತ್ತುಗಳಲ್ಲಿ ಜಗತ್ತು, ಈಶ್ವರ, ಆತ್ಮ,ಬ್ರಹ್ಮ, ಇತ್ಯಾದಿಗಳನ್ನು ಕುರಿತು ತೀಕ್ಷ್ಣವೂ ಬುದ್ದಿಪ್ರಧಾನವೂ ಆದ ತತ್ತ್ವಾಲೋಚನೆಗಳಿವೆ. ವೇದಗಳಲ್ಲಿ ತತ್ತ್ವ ಅಥವಾ ಆಲೋಚನೆ ಇಲ್ಲವೆಂದಲ್ಲ. ಮಹಾವಾಕ್ಯಗಳೂ ಕೆಲವು ಸೂಕ್ತಗಳೂ ಉತ್ತಮ ಆಲೋಚನೆಗೆ ಸಾಕ್ಷಿಯಾಗಿವೆ. ಆದರೆ ಉಪನಿಷತ್ತುಗಳಲ್ಲಿ ತತ್ತ್ವಾನ್ವೇಷಣೆಯು ಪರಮಾವಧಿ ಮುಟ್ಟಿದೆ. ಎಂದಮಾತ್ರಕ್ಕೆ ಉಪನಿಷತ್ತುಗಳಲ್ಲಿ ಇರುವುದೆಲ್ಲ ಪರಮಸತ್ಯ ಮತ್ತು ಆ ಸತ್ಯದ ಪರಮಾವಧಿ ಎಂದು ಭಾವಿಸಬಾರದು. ಆ ಮಂದಿರಗಳಲ್ಲಿಯೂ ಬೇರೆಯ ಮನೆಗಳಲ್ಲಿರುವಂತೆ ಬೇಕಾದಷ್ಟು ಧೂಳಿಯಿದೆ. ಅಸತ್ಯ ಅಥವ ಅಪಸತ್ಯವಿದೆ. ಖಗೋಲ ರಾಸಾಯನ ಮತ್ತು ಭೌತ ಇತ್ಯಾದಿ ಶಾಸ್ತ್ರಗಳಿಗೆ ಸಂಬಂಧಪಟ್ಟ ಆಗಿನ ಕಾಲದ ಆಲೋಚನೆಗಳೂ ಸಿದ್ದಾಂತಗಳೂ ವಿಜ್ಞಾನಶಾಸ್ತ್ರದ ಮಹೋನ್ನತ ಶಿಖರಗಳನ್ನಡರಿರುವ ಈಗಿನ ನಮಗೆ ಬರಿಯ ಶಿಶುಪ್ರಲಾಪದಂತೆ ತೋರುತ್ತವೆ. ಐತಿಹಾಸಿಕ ದೃಷ್ಟಿಯಿಂದ ಎಷ್ಟೇ ಉಪಯುಕ್ತವಾಗಿ ಕಂಡುಬಂದರೂ ಅಂಧಗೌರವಕ್ಕೆ ಶರಣಾಗದೆ ಪುರಾತನವಾದುದನ್ನು ಹೇಗೆ ಬಿಡುವುದು ಎಂಬ ಗಾವಿಲತನಕ್ಕೆ ಮಾರುಹೋಗದೆ ಅವುಗಳನ್ನೆಲ್ಲ ಗುಡಿಸಿಬಿಡುವುದು ನಮ್ಮ ಆತ್ಮದ ಆರೋಗ್ಯಕ್ಕೆ ಅತ್ಯಾವಶ್ಯಕವಾಗಿದೆ. ನೂರೆಂಟು ಉಪನಿಷತ್ತುಗಳಲ್ಲಿ ಶ್ರೀಶಂಕರಾಚಾರ್ಯರು ಹತ್ತು ಉಪನಿಷತ್ತುಗಳನ್ನು ಮಾತ್ರವೇ ಭಾಷ್ಯಕ್ಕೆ ಯೋಗ್ಯವೆಂದು ಆರಿಸಿಕೊಂಡರು. ಅವುಗಳಲ್ಲಿಯೂ ಕೂಡ ನಮ್ಮ ದೃಷ್ಟಿಗೆ ಹಾಸ್ಯಾಸ್ಪದವಾಗಿಯೂ ತೊದಲಾಗಿಯೂ ಕಾಣುವ ಎಷ್ಟೋ ವಿಷಯಗಳು ನಿರೂಪಿತವಾಗಿವೆ. ಆದ್ದರಿಂದ ಆ ಉಪನಿಷತ್ತುಗಳಲ್ಲಿ ಉತ್ತಮೊತ್ತವೆಂದು ತೋರಿದ ಮಂತ್ರಶ್ಲೋಕಗಳಿಂದ ಮಾತ್ರ ಕೆಲವನ್ನು ಇಲ್ಲಿ ಸಂಗ್ರಹಿಸಿ ಅನುವಾದ ಮಾಡಿದೆ. ಈ ಅನುವಾದವು ಪಂಡಿತರಿಗೊಪ್ಪುವ ಭಾಷಾಂತರವಲ್ಲ. ಆದ್ದರಿಂದ ಇದು ಪಂಡಿತರಿಗಾಗಿ ಬರೆದುದಲ್ಲ. ಪಂಡಿತರಿಗೆ ಮೂಲಗಳೂ ಭಾಷಾಂತರಗಳೂ ಟೀಕೆ ವ್ಯಾಖ್ಯಾನ ಭಾಷ್ಯಗಳೂ ಲೆಕ್ಕವಿಲ್ಲದಷ್ಟಿವೆ. ಸಾಮಾನ್ಯರಿಗೆ ವೇದ ಉಪನಿಷತ್ತುಗಳೆಂದರೆ ಉತ್ತರ ಧ್ರುವ ಅಥವ ದೂರದ ನಕ್ಷತ್ರಗಳಿಗಿಂತ ದೂರವಾಗಿವೆ. ವೇದಗಳು ಹೇಳುತ್ತವೆ, ಉಪನಿಷತ್ತುಗಳು ಹೇಳುತ್ತವೆ, ಎಂದರಾಯಿತು ನಮ್ಮವರು ಹೆದರಿ ಬಾಯಿಮುಚ್ಚಿಕೊಳ್ಳುತ್ತಾರೆ. ಅದು ಅನಾವಶ್ಯಕ. ಅವುಗಳನ್ನು ಬರೆದವರು ನಮ್ಮಂತೆಯೇ ಮನುಷ್ಯರು. ಮನುಷ್ಯರ ಇತರ ಕೃತಿಗಳಲ್ಲಿ ಇರುವಂತೆ ವೇದೋಪನಿಷತ್ತುಗಳಲ್ಲಿಯೂ ಮೂಢಭಾವನೆಗಳೂ ತಪ್ಪುಭಾವನೆಗಳೂ ಇಲ್ಲದೆ ಇಲ್ಲ. ಕೆಲವರು ಸಾಮಾನ್ಯರಿಗೆ ಈ ವಿಷಯವನ್ನು ತಿಳಿಸದೆ ಅಂಧಗೌರವವನ್ನು ಮಾತ್ರ ಪೋಷಿಸುತ್ತಿದ್ದಾರೆ. ಆ ಅಂಧಗೌರವವನ್ನು ಮುರಿದು ವಿಚಾರಬುದ್ದಿಯನ್ನು ಪ್ರಚೋದಿಸುವ ಸಲುವಾಗಿಯೂ ಉಪನಿಷತ್ತುಗಳ ಮಹಾಖನಿಯಲ್ಲಿರುವ ಅತ್ಯಮೂಲ್ಯವದ ಶ್ರೇಷ್ಠರತ್ನಗಳ-ಕಲ್ಲುಮಣ್ಣು ಕನಕಡ್ಡಿಗಳನ್ನೆಲ್ಲ-ಪರಿಚಯವನ್ನು ಮಾಡಿಕೊಡುವ ಉದ್ದೇಶದಿಂದಲೂ ಈ ಸಣ್ಣ ಸಂಗ್ರಹವನ್ನು ಮಾಡಲಾಗಿದೆ. ಪುರಾತನ ಋಷಿವಾಣಿಯು ನೂತನದ ಕಿವಿಗೆ ಬಿದ್ದು ಬಾಳು ಸಾರ್ಥಕವಾಗಲಿ. ನಮ್ಮ ಪುಣ್ಯಭೂಮಿಯಲ್ಲಿ ಹೊಸ ಋಷಿಗಳು ಅವತರಿಸಲಿ.

ಕೆ.ವಿ.ಪುಟ್ಟಪ್ಪ
ಮೈಸೂರು ದಿನಾಂಕ:೬-೧೧-೧೯೩೩

೧೫-೪-೧೯೩೪:

ಬೆಳಿಗ್ಗೆ ಎದ್ದು‘ಋಷಿವಾಣಿ’ಯನ್ನು ಓದಿದೆ. ಗಿರಿ ವನ ಗೃಹಗಳ ಮೇಲೆ ದಟ್ಟವಾದ ಮಂಜಿನ ಪರದೆ ಬಿದ್ದು, ಮಬ್ಬಿನ ನೋಟ ನೋಡಲು ಸುಂದರವಾಗಿತ್ತು. ಕಾಫಿಯಾದ ಮೇಲೆ ಕವಿಶೈಲಕ್ಕೆ ಹೋದೆ. ಇಂದು ಮತ್ತೊಂದು ರೀತಿಯ ದೃಶ್ಯಗಳು. ಇವೊತ್ತು ಮಂಜು ಕವಿಶೈಲವನ್ನೆ ಕವಿದಿತ್ತು. ಸೂರ್ಯನ ರಶ್ಮಿಗಳು ಮರಗಳ ಸಂಧಿಯಲ್ಲಿ ತೂರಿ ಬಂದು ಕೋಲುಕೋಲಾಗಿದ್ದ ದೃಶ್ಯ ಸುಮನೋಹರವಾಗಿತ್ತು. ಮಂಜು ಹತ್ತಿಯಂತೆ ನಮ್ಮ ಮನೆ ತೋಟಗಳನ್ನು ಮುಚ್ಚಿ, ಎದುರಿನ ಗುಡ್ಡಗಾಡುಗಳನ್ನು ಸಮುದ್ರತೀರವನ್ನಾಗಿ ಮಾಡಿತ್ತು. ಸ್ವಲ್ಪ ಹೊತ್ತಾದ ಮೇಲೆ ನಿನ್ನೆಯಂತೆಯೆ ದಕ್ಷಿಣ ಮತ್ತು ನೈರುತ್ಯ ದಿಕ್ಕಿನಲ್ಲಿ ಕಾಡಿಡಿದ ಬೆಟ್ಟಗಳು ಮಂಜಿನ ಕಡಲಿನಿಂದ ತಲೆಯೆತ್ತಿ ಮೇಲೆದ್ದು ಇಣಿಕಿ ಇಣಿಕಿ ತಲ್ಲಣಗೊಳಿಸಿದುವು!

ನಮ್ಮ ಮನೆಯ ಭಾಗ್ಯವೇ ಭಾಗ್ಯ, ಇಷ್ಟು ಸಮೀಪದಲ್ಲಿಯೆ ಇಂತಹ ದೃಶ್ಯಸ್ವರ್ಗವಿರುವುದು! ಆದರೆ ನೋಡಲು ತಕ್ಕ ಕಣ್ಣು ಬೇಕು. ನನಗೆ ಒಂದೊಂದು ಸಾರಿ”ನನಗಾಗಿಯೇ ಪ್ರಕೃತಿಮಾತೆ ಈ ದೃಶ್ಯ ಸೌಂದರ್ಯಗಳನ್ನು ಮಂಜಿನ ಪರದೆಗಳ ಸಹಾಯದಿಂದ ವಿರಚಿಸಿ ತೋರಿಸುತ್ತಿದ್ದಾಳೆಯೋ ಏನೋ?” ಎಂದು ಎನ್ನಿಸುತ್ತದೆ!! ಇರಬಹುದು! ಈ ಯಾಂತ್ರಿಕ ಪ್ರದರ್ಶನದ ಹಿಂಗಡೆ ಚೇತನದ ಗುಟ್ಟು ಇರಬಾರದೇಕೆ?-ಮನೆಗೆ ಸುಮಾರು ಎಂಟೂವರೆ ಗಂಟೆಯ ಹೊತ್ತಿಗೆ ಇಳಿದು ಬಂದು ಕಾದಂಬರಿಯಲ್ಲಿ ೨೬ನೆಯ ಅಧ್ಯಾಯವನ್ನು ಬರೆದು ಮುಗಿಸಿದೆ.(‘ಕಾನೂರಿನಲ್ಲಿ ದೆಯ್ಯದ ಹರಕೆ’ ಎಂಬ ಶೀರ್ಷಿಕೆಯದು.) ಆಮೇಲೆ ಸೊಫೋಕ್ಲೀಸನ Aias ನಾಟಕ ಓದಿದೆ.(ಮಿಡ್ಸ್ ಟನ್ ಮರ‍್ರೆ ಭಾಷಾಂತರ.)…

ಮಧ್ಯಾಹ್ನ ವಾಟಗಾರು ಮಂಜಪ್ಪಗೌಡರು ಬಂದಿದ್ದರು. ಸಾಯಂಕಾಲ ಚೆನ್ನಾಗಿ ಮಳೆ ಹೊಯ್ದಿತು. ಶ್ರೀನಿ, ವಿಜಯ ಯಾರೂ ಬರಲಿಲ್ಲ.

ಸಾಯಂಕಾಲ ಆರು ಗಂಟೆಗೆ ಕವಿಶೈಲಕ್ಕೆ ಹೋಗಿ ಏರಿಳಿಯುವ ವ್ಯಾಯಾಮ ತೆಗೆದುಕೊಂಡೆ. ಮುಳುಗುವ ದಿವಾಕರನನ್ನು ಕಣ್ದಣಿಯೆ ಅವಲೋಕಿಸಿದೆ. ಮತ್ತೆ ಧ್ಯಾನ ಮಾಡಿದೆ. ಜೈ ಭಗವಾನ್! ರಾಜಮ್ಮನೂ ವೆಂಕಟಯ್ಯನೂ ಬಂದಿದ್ದರು. ನನ್ನ ಜೊತೆಗೆ…

ರಾತ್ರಿ ಉಪ್ಪರಿಗೆಯಲ್ಲಿ ಕುಳಿತು ಕಾದಂಬರಿ ಬರೆಯುವುದನ್ನು ಮುಂದುವರಿಸಿದೆ….

೬-೫-೧೯೩೪:

‘ಮಲೆನಾಡು ಯುವಕರ ಸಂಘ’ದ ವಾರ್ಷಿಕೋತ್ಸವವು ಇಂಗ್ಲಾದಿಯಲ್ಲಿ(ದೇವಂಗಿ)ಬಹಳ ವಿಜೃಂಭಣೆಯಿಂದ ನಡೆಯಿತು, ನನ್ನ ಅಧ್ಯಕ್ಷತೆಯಲ್ಲಿ. ತೀರ್ಥಹಳ್ಳಿ ಕೊಪ್ಪ ಮಂಡಗದ್ದೆ ಮೇಗರವಳ್ಳಿ ಮೊದಲಾದ ಕಡೆಗಳಿಂದ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು. ಮೈಸೂರಿನಿಂದ ಶ್ರೀಮಾನ್ ಕೃಷ್ಣಗಿರಿ ಕೃಷ್ಣರಾಯರನ್ನು ಆಮಂತ್ರಿಸಿದ್ದೆವು. ಅವರು ಅದ್ಭುತವಾಗಿ ಭಾರತವಾಚನ ಮಾಡಿದರು.(ಆಗಲೆ ನಾನು‘ಹಾಡಿದನು ಗಮಕಿ! ನಾಡು ನಲಿದುದು ರಸದ ಕಡಲಿನಲಿ ಧುಮುಕಿ!’ಎಂದು ಪ್ರಾರಂಭವಾಗುವ ಅಸಮ ಪಂಕ್ತಿ ಛಂದಸ್ಸಿನ ಕವನರಚನೆ ಮಾಡಿದ್ದು. (ಸಂಘದ ವಾರ್ಷಿಕೋತ್ಸವಗಳನ್ನು ಬೇರೆಬೇರೆಯ ಊರುಗಳಲ್ಲಿ ಸಾಮಾನ್ಯವಾಗಿ ಬೇಸಗೆ ರಜಕ್ಕೆ ನಾನೂ ಇತರ ಹುಡುಗರೂ ಹೋಗಿದ್ದಾಗಲೆ ಏರ್ಪಡಿಸುತ್ತಿದ್ದರು. ನಾವೆಲ್ಲ ಸಕ್ರಿಯವಾಗಿ ಪಾಲುಗೊಳ್ಳಲು ಅನುಕೂಲವಾಗುವಂತೆ.)

೭-೫-೧೯೩೪:

ನಾನು ಕೃಷ್ಣರಾಯರನ್ನು ನಮ್ಮ ಮನೆಗೆ(ಕುಪ್ಪಳಿಗೆ) ಕರೆತಂದೆ. ಮಂಜಪ್ಪಗೌಡರು ಮಾನಪ್ಪ ಇತರ ಮಿತ್ರರೂ ಬಂದರು. ನಾವೆಲ್ಲ ಕವಿಶೈಲಕ್ಕೂ ಹೋದೆವು ಕೃಷ್ಣರಾಯರಿಗೆ ನಮ್ಮ ಮನೆಯ ಸನ್ನಿವೇಶವನ್ನು ನೋಡಿ ಬಹಳ ಆನಂದವೂ ಆಶ್ಚರ್ಯವೂ ಆಯಿತು-ಕೆಲವು ಕವನಗಳನ್ನೂ ಓದಿದೆ.

೮-೫-೧೯೩೪:

ಕೃಷ್ಣರಾಯರು ಮೈಸೂರಿಗೆ ಹೊರಟುಹೋದರು. ನಾವು-ಶ್ರೀನಿ, ವಿಜಯ, ನಾನು ಮನೆಗೆ(ಕುಪ್ಪಳಿಗೆ)ಬಂದೆವು. ಕಾಡಿಗೆ ಹೋಗಿ ಗೋಪಾಲನು ನೋಡಿ ಇಟ್ಟಿದ್ದ ಒಂದು ತುಡುವೇಜೇನು ಕಿತ್ತೆವು. ಗೋಪಾಲನು ಹಲ್ಲೆಗಳನ್ನು ಕಿತ್ತುಕಿತ್ತು. ಬೋಗುಣಿಗೆ ತುಂಬಿದನು. ತುಪ್ಪ ಒಂದು ದಡಿಯದ ಮಟ್ಟಿಗಿತ್‌ಉತ.

೧೩-೫-೧೯೩೪:

ನಾವು ಮಧ್ಯಾಹ್ನ ಇಂಗ್ಲಾದಿಯಿಂದ ಮೋಟಾರಿನಲ್ಲಿ ಕುಳಿತು ತಿರುಳೆಬೈಲು ಕೆರೆಗೆ ಮೀನು ಹೊಡೆಯಲು ಕೋವಿ ತೆಗೆದುಕೊಂಡು ಹೋಗುತ್ತಿದ್ದೆವು. ಕಾರು ಬಿಡಲು ಕಲಿಯಲೆಂದು ನಾನೇ ಸ್ಟೀರಿಂಗ್ ಮಾಡುತ್ತಿದ್ದೆ. ದಾರಿಯಲ್ಲಿ ಶಿವಮೊಗ್ಗೆಯಿಂದ ಬರುತ್ತಿದ್ದ ಎ.ಸಿ.ಶ್ರೀಕಂಠಯ್ಯ, ಎ.ಸಿ.ನರಸಿಂಹಮೂರ್ತಿ, ದೇ.ರಾ.ಮಾನಪ್ಪ ಸಿಕ್ಕಿದರು. ಮತ್ತೆ ಎಲ್ಲರೂ ಒಟ್ಟಾಗಿ ಹಿಂತಿರುಗಿ ಇಂಗ್ಲಾದಿಗೇ ಬಂದೆವು.

೧೪-೫-೧೯೩೪:

ಬೆಳಿಗ್ಗೆ ಐದೂವರೆ ಗಂಟೆಗೆ ಎದ್ದು, ಇಂಗ್ಲಾದಿಗೆ ಸುಮಾರು ಎರಡೂವರೆ ಮೂರು ಮೈಲಿ ದೂರವಿರುವ ನವಿಲುಕಲ್ಲು ಗುಡ್ಡನೆತ್ತಿಗೆ ಹೋದೆವು- ದೇ.ರಾ.ವೆಂ., ಎ.ಸಿ.ಶ್ರೀ., ಎ.ಸಿ.ನ. ದೇ.ರಾ.ಮಾ., ನಾನು- ಕಾಡುದಾರಿಯಲ್ಲಿ ನಡೆದು ಏರಿ ನವಿಲುಕಲ್ಲು ನೆತ್ತಿಗೆ ಹೋಗುವಷ್ಟರಲ್ಲಿಯೆ ಸೂರ್ಯೋದಯವಾಗಿ ಬಿಟ್ಟಿತ್ತು! ನಾವು ಮುಖ್ಯವಾಗಿ ಗಿರಿಪಂಕ್ತಿಗಳ ಮೇಲೆ ದಿಗಂತದಲ್ಲಿ ಸೂರ್ಯ ಉದಯವಾಗುವುದನ್ನು ನೋಡಲೆಂದೇ ಹೋಗಿದ್ದೆವು. ಎರಡನೆಯದಾಗಿ, ಕಣಿವೆಗಳನ್ನೆಲ್ಲ ಮಂಜು ತುಂಬಿಕೊಂಡು ಸಮುದ್ರವಾಗಿ, ಮೇಲೆದ್ದ ಶಿಖರಗಳು ಮಾತ್ರ ದ್ವೀಪಸ್ತೋಮಗಳಾಗಿ ತೋರುವ ದೃಶ್ಯವನ್ನೂ ನಿರೀಕ್ಷಿಸಿದ್ದೆವು. ಆದರೆ ಕಣಿವೆಗಳಲ್ಲಿ ಹತ್ತಿಮಂಜು ತುಂಬಿಕೊಂಡಿರಲಿಲ್ಲ. ಅದಕ್ಕೆ ಬದಲಾಗಿ ಸೊಳ್ಳೆ ಪರದೆಯೆಂಬಂತೆ ತೆಳುವಾದ ಮುಸುಗು ಮುಸುಗಿತ್ತು. ದೃಶ್ಯವೇನೊ ಚೆನ್ನಾಗಿತ್ತು. ಆದರೆ ನಾವು ಹಾರೈಸಿದಂತಿರಲಿಲ್ಲ.

ಅಲ್ಲಿಂದ ಇಂಗ್ಲಾದಿಗೆ ಹಿಂತಿರುಗಿ ಬಂದು, ಕಾಫಿತಿಂಡಿ ಪೂರೈಸಿ, ಕಾರಿನಲ್ಲಿ ತೀರ್ಥಹಳ್ಳಿಯ ಬಳಿ ಹೋಳೆಯಾಚೆಯ ಕುರುವಳ್ಳಿಯ ಹಿಂದಣ ಕಲ್ಲುಗುಡ್ಡಕ್ಕೆ ಹೊರಟೆವು. ಚಿಕ್ಕ ಹುಡುಗರೂ(ದೇವಂಗಿ ವೆಂಕಟಯ್ಯಗೌಡರ ಮಕ್ಕಳು) ಮೋಟಾರು ಹತ್ತಿದರು. (ಶ್ರೀನಿ, ವಿಜಯ ಹಿಂದಿನ ರಾತ್ರಿ ನೆಂಪೆಗೆ ಹೋಗಲೆಂದು ಉಂಟೂರಿಗೆ ಹೋಗಿದ್ದರು. ನಮ್ಮ ಜೊತೆಗೆ ಬಂದು ರಾಮತೀರ್ಥದಲ್ಲಿ ಮೀಯುವ ಸುಯೋಗವನ್ನು ತಪ್ಪಿಸಿಕೊಂಡರು.) ಆ ಕಲ್ಲುಗುಡ್ಡವೊ ಏಕ ಶಿಲೆಯೆಂಬಂತಿದೆ. ಸುಮಾರು ಒಂದೂವರೆ ಮೈಲಿ ಉದ್ದವಾಗಿ ಅರ್ಧ ಮೈಲಿಯಾದರೂ ಅಗಲವಾಗಿದೆ. ಅದರ ನೆತ್ತಿ ಸಮತಟ್ಟಾಗಿ ವಿಸ್ತಾರವಾದ ವೇದಿಕೆಯಂತಿದೆ. ಆ ಔನ್ನತ್ಯದಿಂದ ನೋಡಿದರೆ ಸುತ್ತಲೂ ದಿಗಂತ ವಿಶ್ರಾಂತವಾದ ಮಲೆಗಳ ಸಾಲು ಕಾಣಿಸುತ್ತದೆ. ಕೆಳಗಡೆ ಹರಿಯುವ ತುಂಗಾನದಿಯೂ ಅದರ ದಡದ ಮೇಲಣ ತೀರ್ಥಹಳ್ಳಿಯೂ ಮನೋಹರವಾಗಿ ಗೋಚರಿಸುತ್ತವೆ. ಅದರ ನೆತ್ತಿಯಲ್ಲಿ ಸ್ವಲ್ಪಕಾಲ ದೃಶ್ಯವೀಕ್ಷಣೆಯಲ್ಲಿ ತಲ್ಲೀನರಾಗಿ, ತರುವಾಯ ಕಾಲುನಡಿಗೆಯಲ್ಲಿಯೆ ಆ ಗುಡ್ಡದ ಉತ್ತರಭಾಗದಲ್ಲಿ ಕ್ರಮೇಣ ಇಳಿಜಾರಾದ ಕಡೆಯಿಂದ ಪೊದೆಗಳ ನಡುನಡುವೆ ಹಾದು ಕುರುವಳ್ಳಿ ಪೇಟೆಗೆ ಇಳಿದೆವು. ಅಲ್ಲಿಂದ ತುಂಗೆಯ ವಕ್ಷಮಧ್ಯೆ ಇರುವ ರಾಮತೀರ್ಥಕ್ಕೆ ಹೋದೆವು. ನಾನು ಅಲ್ಲಿ ಮೀಯದೆ ಹತ್ತು ಹದಿನಾಲ್ಕು ವರ್ಷಗಳಾಗಿದ್ದವು. ಬಹಳ ದಿನಗಳಿಂದ ಅಗಲಿದ ತಾಯನ್ನು ಮತ್ತೆ ಸೇರಿದಂತಾಯಿತು. ಸ್ನಾನವು ಅತ್ಯಂತ ಆಪ್ಯಾಯಮಾನವಾಗಿತ್ತು. ತೆರೆಗಳನ್ನೂ ಬಂಡೆಗಳ ನಡುನಡುವೆ ಬೀಳುವ ಸಣ್ಣಸಣ್ಣ ಜಲಪಾತದ ನೊರೆಗಳನ್ನೂ ಪ್ರೀತಿಯಿಂದ ಅಪ್ಪಿ ಆನಂದಿತನಾದೆನು.

ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಗೆ ಮನೆಗೆ(ಇಂಗ್ಲಾದಿಗೆ) ಹಿಂತಿರುಗದೆವು. ಸಾಯಂಕಾಲ ಮೈಸೂರಿನವರಿಗೂ(ವೆಂಕಟಯ್ಯ, ಹಿರಿಯಣ್ಣ, ಡಾಕ್ಟರು, ಕಾಪೌಂಡರು, ಮೇಷ್ಟರು, ಮಾನಪ್ಪ) ವಾಲಿಬಾಲ್ ಪಂದ್ಯವಾಯಿತು. ಮೈಸೂರು ಪಾರ್ಟಿಯವರನ್ನು ‘ದ್ವಾಸಿ’(ದೋಸೆ)

ಹುಯ್ದುಬಿಟ್ಟರು!