೧೫-೫-೧೯೩೪:

ಎಲ್ಲರೂ ಬೆಳಿಗ್ಗೆ ಎದ್ದು ಕುಪ್ಪಳಿಗೆ ಹೋದೆವು. ಮಧ್ಯಾಹ್ನ ಉಪ್ಪರಿಗೆಯ ಮಳಿಗೆ ಕೋಣೆಯನ್ನೂ ಉಪ್ಪರಿಗೆಯನ್ನೂ ತೋರಣಗಳಿಂದ ಅಲಂಕರಿಸಿದೆವು.ಗುರುದೇವ, ಮಹಾಮಾತೆ, ಸ್ವಾಮಿಜಿಯವರ ಚಿತ್ರಪಟಗಳನ್ನೂ ವೇದಿಕೆ ರಚನೆ ಮಾಡಿ ಸ್ಥಾಪಿಸಿದೆವು. ಸಾಯಂಕಾಲ ಕವಿಶೈಲಕ್ಕೆ ಹೋದೆವು… ರಾತ್ರಿ ಮಂಗಳಾರತಿ ಮಾಡಿ, ಓಂ,ಹ್ರೀಂ ಋತಂ ಪಠಿಸಿ ಪ್ರಾರ್ಥನೆ ಮಾಡಿದೆವು. ಮರುದಿನ ಶ್ರೀರಾಮಕೃಷ್ಣ ಜನ್ಮೋತ್ಸವ. ಪೂಜೆಯ ಅನಂತರ ನೆರೆದಿರುವ ನೆಂಟರಿಷ್ಟರಿಗೆ ಓದುವ ಸಲುವಾಗಿ ಗಾಂಧೀಜಿಯವರು ದೇವರ ವಿಷಯವಾಗಿ ಮಾತಾಡಿರುವ ಗ್ರಾಮಾಫೋನ್ ರಿಕಾರ್ಡಿನ ಇಂಗ್ಲಿಷಿನಲ್ಲಿರುವ ಭಾಷಣವನ್ನು ಕನ್ನಡಕ್ಕೆ ಪರಿವರ್ತಿಸಿದೆ.

೧೬-೫-೧೯೩೪: ಕುಪ್ಪಳಿಯಲ್ಲಿ

ಇಂದು ಗುರುಮಹಾರಾಜರ ಜಯಂತ್ಯುತ್ಸವ. ಬೆಳಿಗ್ಗೆ ಐದು ಗಂಟೆಗೆ ಎದ್ದು ಎಲ್ಲರೂ ಸ್ನಾನಾದಿಗಳನ್ನು ಮುಗಿಸಿದೆವು. ಎಲ್ಲರೂ ಒಟ್ಟಿಗೆ ‘ಬಾ ಶ್ರೀಗುರುದೇವನೆ ಬಾ’ ಎಂದು ಮೊದಲಾಗುವ ‘ಆಹ್ವಾನ’ಗೀತೆಯನ್ನೂ ಹಾಡಿದೆವು. ಶ್ರೀನಿವಾಸ ಮಂಗಳಾರತಿ ಎತ್ತಿ ಪೂಜೆ ಮಾಡಿದನು. ಋಷಿವಾಣಿ‘ಪ್ರಾರ್ಥನೆ’ ಪುಸ್ತಕಗಳಿಂದ ಮಂತ್ರಗಳನ್ನೂ ಸ್ತೋತ್ರಗಳನ್ನೂ ಪಠಿಸಿ ಪ್ರಾರ್ಥಿಸಿದೆವು. ಆಮೇಲೆ ಕಾಫಿತಿಂಡಿಯ ಅನಂತರ ಕವಿಶೈಲಕ್ಕೂ ಸಂಜೆ ಗಿರಿಗೂ ಏರಿದೆವು.

ಅಲ್ಲಿಂದ ಇಳಿದು ಬಂದು ಪ್ರಾರಂಭಿಸಿದೆವು. ಪಠನ ವಾಚನ ಪೂಜಾದಿಗಳನ್ನು ನಾನು ಗೀತೆಯ ಎರಡನೆಯ ಅಧ್ಯಾಯವನ್ನು ಪಠಿಸಿದೆ. ಶ್ರೀನಿ ಸ್ವಾಮಿ ವಿವೇಕಾನಂದರ‘ವೇದಾಂತ’ಭಾಷಣದ ನನ್ನ ಅನುವಾದವನ್ನು ವಾಚಿಸಿದ. ವಿಜಯ ನನ್ನ ‘ಸ್ವಾಮಿ ವಿವೇಕಾನಂದ’ಜೀವನ ಚರಿತ್ರೆಯಿಂದ ಒಂದು ಭಾಗ ಓದಿದ. ಕೃಷ್ಣಮೂರ್ತಿ ಡಿ.ವಿ.ಗುಂಡಪ್ಪನವರು ಅದಕ್ಕೆ ಬರೆದಿರುವ ಮುನ್ನುಡಿಯನ್ನು ಓದಿದರು. ಶ್ರೀಕಂಠಯ್ಯ ವೆಂಕಣ್ಣನವರು ಭಾಷಾಂತರಿಸಿದ‘ಭಕ್ತಿಮಾರ್ಗ’ದಿಂದ‘ನಿರ್ಭಯತೆ’ ಎಂಬ ಅಧ್ಯಾಯವನ್ನೂ, ಮಾನಪ್ಪನು ‘ಶ್ರೀರಾಮಕೃಷ್ಣ ವಚನಾಮೃತ’ದಿಂದ ಕೆಲವು ಭಾಗವನ್ನೂ ಓದಿದರು. ಆಮೇಲೆ ನಾನು ನಿನ್ನೆತಾನೆ ಅನುವಾದ ಮಾಡಿದ ಗಾಂಧೀಜಿ ದೇವರ ವಿಚಾರವಾಗಿ ಮಾತನಾಡಿರುವ ರಿಕರ್ಡ್ ಭಾಷಣದ ಭಾಷಾಂತರವನ್ನು ಓದಿದೆನು…. ಪೂಜಾ ಕ್ರಮಗಳೆಲ್ಲ ಜರುಗಿದುವು.

ಸಾಯಂಕಾಲ‘ಕವಿಶೈಲ’‘ಸಂಜೆಗಿರಿ’ ಏರಿ ಸೂರ್ಯಸ್ತದ ವೈಭವವನ್ನು ವೀಕ್ಷಿಸಿದೆವು. ಕತ್ತಲೆಯಾದ ಮೇಲೆ ಇಳಿದು ಬಂದು ರಾತ್ರಿಯ ಆರತಿ ಮಾಡಿ, ಗೀತೆಯ ಹನ್ನೆರಡನೆಯ ಅಧ್ಯಾಯವನ್ನು ಪಠಿಸಿದೆವು.

ಉಪ್ಪರಿಗೆ ಎದುರು ಹಾಕಿದ್ದ ಅಡಕೆ ಚಪ್ಪರದ ಮೇಲೆ ನಿಂತು ನೋಡಿದಾಗ, ತೋಟದ ಮೂಲೆಯಿಂದೆದ್ದಿದ್ದ ಅಕ್ಕಿಪಾರಿಜಾತ ಹೂವು ಇಡಿದಿದ್ದ ಆ ಮರದ್ಲಲಿ ಅಕ್ಷರಶಃ ಕೋಟಿಕೋಟಿ ಮಿಣುಕು ಹುಳುಗಳು ಕಿಕ್ಕಿರಿದು ಮುತ್ತಿ ಬೆಳಕನ್ನು ಚಿಮ್ಮಿಚಿಮ್ಮಿ ಚಿಮುಕಿಸುತ್ತಿದ್ದುದು ಚೇತೋಹಾರಿ ದೃಶ್ಯವಾಗಿತ್ತು! ನೋಡಿ ನೋಡಿ ಮೈಮರೆತು ತಣಿದೆ!

೧೭-೫-೧೯೩೪: ಕುಪ್ಪಳಿಯಲ್ಲಿ

ನಾನು, ಶ್ರೀಕಂಠಯ್ಯ ಬಿಳಿಯಪ್ಪಗೌಡರು(ನನ್ನ ತಂಗಿ ರಾಜಮ್ಮನ ಯಜಮಾನರು) ಬೆಳಿಗ್ಗೆ ಅಶೋಕವನಕ್ಕೆ ಹೋದೆವು.(ಸಾನೆಟ್ಟುಗಳ ಸಂಕಲನ ‘ಕೃತ್ತಿಕೆ’ಯಲ್ಲಿರುವ ‘ಅಶೋಕದ ಹೂಗೊಂಚಲು’ ಎಂಬ ಸಾನೆಟ್ಟನ್ನು ನೋಡಿ: ದಿನಚರಿಯಲ್ಲಿ ತಂತೀ ಸಮಾಚಾರಕ್ಕೆ ಪ್ರಯೋಗವಾಗುವ ಸಂಕ್ಷಿಪ್ತಭಾಷೆ ಉಪಯುಕ್ತವಾಗಿದೆ. ಆದರೆ ಅದರ ಹಿಂದೆ ವಿಸ್ತಾರವೂ ವಿವಿಧವೂ ಆಗಿರುವ ಭಾವಾನುಭವಗಳ ಪ್ರಪಂಚವೇ ಅಡಗಿರುತ್ತದೆ.)

೨೮-೫-೧೯೩೪: ಇಂಗ್ಲಾದಿಯಲ್ಲಿ

ಬೆಳಿಗ್ಗೆ ನಸುಕು ನಾಲ್ಕುಗಂಟೆಗೆ ಎ.ಸಿ.ನರಸಿಂಹಮೂರ್ತಿ, ದೇ.ರಾ.ವೆಂಕಟಯ್ಯ, ದೇ.ನಾ.ಹಿರಿಯಣ್ಣ ಮೊದಲಾದವರೆಲ್ಲ ಷಿಕಾರಿಗೆ ಹೋದರು. ದೂರದ ಕಾಡಿನಲ್ಲಿ ದೊಡ್ಡ ಬೇಟೆಗಾಗಿ ನಾನು, ಶ್ರೀನಿ, ವಿಜಯ ಕಾರಿಗಾಗಿ ದೇವಂಗಿಗೆ ಹೋದೆವು. ಡ್ರೈವರ್ ಇರಲಿಲ್ಲ. ನಾವು ಮೈಸೂರಿಗೆ ಹೊರಡಲಿದ್ದೇವೆ ಎಂಬುದನ್ನು ಕೇಳಿ ದೇವಂಗಿ ಚಿನ್ನಮ್ಮನವರು ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾರ್ಥಿನಿಲಯದಲ್ಲಿ ಹಲಗೆ ಹಾಕಿಸುವ ವೆಚ್ಚಕ್ಕಾಗಿ ಎಂಬತ್ತು ರೂಪಾಯಿಗಳನ್ನೂ ಕೊಟ್ಟರು. ಮತ್ತು ನಮ್ಮ ಮನೆಯ (ಕುಪ್ಪಳಿಯ)ಬಾಳ್ಕೆಯ ವಿಚಾರವಾಗಿ ನಮ್ಮ ವೆಂಕಟಯ್ಯಗೆ ಹೇಳುವಂತೆ ಕೆಲವು ಸಲಹೆ ಕೊಟ್ಟರು. ಸುಮಾರು ಹನ್ನೊಂದು ಗಂಟೆಗೆ ಕುಪ್ಪಳಿಗೆ ಉಂಟೂರು ಕಾರಿನಲ್ಲಿ ಬಂದೆವು. ಕಾರು‘ಹೊನಸಿನ ಕೊಡಿಗೆ’ಹತ್ತಿರ ಚಲಿಸದೆ ನಿಂತುಬಿಟ್ಟತು. ಅಲ್ಲಿಂದ ಮನೆಗೆ ನಡೆದುಹೋದೆವು. ಮಧ್ಯಾಹ್ನ ಒಂದೂವರೆ ಗಂಟೆಗೆ ಕಾರು ಸರಿಯಾಯಿತಂತೆ…

(*ತುಂಬ ಚಿಕ್ಕವಯಸ್ಸಿನಲ್ಲಿಯೆ ಅವರನ್ನು ವಾಟಗಾರು ವೆಂಕಟಪ್ಪಗೌಡರಿಗೆ ಕೊಟ್ಟು ಲಗ್ನವಾಗಿತ್ತು. ಅವರು ಮದುವೆಯಾದ ಸ್ವಲ್ಪ ಕಾಲದಲ್ಲಿಯೆ ಎಳೆ ವಯಸ್ಸಿನಲ್ಲಿ ತೀರಿಕೊಂಡರು. ತರುವಯ ಅವರು ತಮ್ಮ ‘ಹಡಗಿನಮಕ್ಕಿ’ಯ ಜಮೀನನ್ನು ನೋಡಿಕೊಳ್ಳುತ್ತಾ(ಅದರ ಅಣ್ಣ ದೇವಂಗಿ ತಿಮ್ಮಯ್ಯಗೌಡರ ನೆರವಿನಿಂದ) ತವರು ಮನೆಯಲ್ಲಿಯೆ ನೆಲಸಿದರು. ದೇವಂಗಿ ರಾಮಣ್ಣಗೌಡರು ಸುಧಾರಿಸಿದ ದೃಷ್ಟಿಯುಳ್ಳವರಾಗಿದ್ದರಿಂದ ಬಾಲ್ಯದಲ್ಲಿಯೆ ವಿಧವೆಯರಾಗಿದ್ದ ತಮ್ಮ ಮನೆತನದ ಇಬ್ಬರು ತರುಣಿಯರನ್ನು- ಒಬ್ಬರು ಈ ಚಿನ್ನಮ್ಮನವರು, ಮತ್ತೊಬ್ಬರು ಅರಮನೆ ಕೇರಿಗೆ ಕೊಟ್ಟಿದ್ದ ಸುಬ್ಬಮ್ಮನವರು- ಮೈಸೂರಿನ ಮಹಾರಾಣಿ ಹುಡುಗಿಯರ ಹಾಸ್ಟಲಿಗೆ ಓದಲು ಕಳಿಸಿದ್ದರು. ಅದಕ್ಕಾಗಿ ಅವರು ಟೀಕೆಗೂ ಪಕ್ಕಾಗಿದ್ದರು, ಸಂಪ್ರದಾಯಬದ್ಧರಾದ ಶುಂಠಬುದ್ಧಿಯ ಬಂಧುಜನರಿಂದ. ಆದ್ದರಿಂದ ಅವರು ಓದಿನಲ್ಲಿ ಹೆಚ್ಚು ಮುಂದುವರಿಯಲಾಗದೆ ಹಿಂದಕ್ಕೆ ಬಂದುಬಿಟ್ಟರು. ದೇವಂಗಿ ಚಿನ್ನಮ್ಮನವರು ಆಸ್ಪತ್ರೆ ಮುಂತಾದ ಸಂಸ್ಥೆಗಳಿಗೆ ಧನಸಹಾಯ ಮಾಡಿ ತುಂಬ ಲೋಕೋಪಕಾರಿ ಕಾರ್ಯ ಮಾಡಿದ್ದಾರೆ.)

೨೮-೭-೧೯೩೪:

ಆಶ್ಚರ್ಯ, ಸರಿಯಾಗಿ ಎರಡು ತಿಂಗಳಾದ ಮೇಲೆ ಮೈಸೂರಿನಲ್ಲಿ ಡೈರಿ ಬರೆಯಲು ತೊಡಗಿದ್ದೇನೆ. ಈ ಮಧ್ಯೆ ಎಷ್ಟೋ ಗಹನ ವಿಚಾರಗಳು-ಸಂಪೂರ್ಣ ಮಾನಸಿಕ-ನಡೆದಿವೆ. ಅವುಗಳನ್ನು ಬರೆಯಲು ತಾಳ್ಮೆಯೂ ಇಲ್ಲ. ಇಷ್ಟವೂ ಇಲ್ಲ. ಊರಿನಲ್ಲಿ ಸ್ವಲ್ಪ ಕಾಯಿಲೆ ಬಿದ್ದೆ. ಮಲೇರಿಯಾ ಹಿಡಿದುಬಿಟ್ಟಿತು. ಶಿವಮೊಗ್ಗಾಕ್ಕೆ ಬಂದಾಗಲೂ ಸ್ವಸ್ಥವಿರಲಿಲ್ಲ. ಅಲ್ಲಿ Galsworthy ಯ A Farsyte saga ಓದಿದೆ. ಮೈಸೂರಿಗೆ ಬಂದ ಮೇಲೆ ಮಲೇರಿಯಾ ಮತ್ತೆ ಷುರುವಾಯಿತು. ಮೂರು ಸಾರಿ ಕಾಯಿಲೆ ಬಿದ್ದು ಈಗ ದಿನವೂ ಕ್ವಿನೀನ್ ತೆಗೆದುಕೊಳ್ಳುತ್ತಿದ್ದೇನೆ- ಬಹುದಿನಗಳ ಮೇಲೆ ಈಗ ಸ್ವಲ್ಪ ಆರೋಗ್ಯವಾಗಿದ್ದೇನೆ.‘ನಾವೆಲು’ ನಿಧಾನವಾಗಿ ಸಾಗಿದೆ. ‘ಉಪನಿಷತ್ತಿನ ಋಷಿಯ ದರ್ಶನ’ ಎಂಬ ಪ್ರಬಂಧ ಬರೆಯುತ್ತಿದ್ದೇನೆ. ಶ್ರೀಮಾನ್ ಎನ್.ನರಸಿಂಹಮೂರ್ತಿಗಳು(ಎನ್.ಎಸ್. ಸುಬ್ಬರಾಯರ ಅಣ್ಣಂದಿರು) oxford Lectures on poetry by A.C.Bradley ಎಂಬ ಉತ್ಕೃಷ್ಟವಾದ ವಿಮರ್ಶೆಯ ಗ್ರಂಥವೊಂದನ್ನು ಹೊಸದಾಗಿ ಕೊಂಡು ನನಗೆ ಕಾಣಿಕೆಯಾಗಿ ಕಳಿಸಿದ್ದಾರೆ…‘ಪ್ರಭುಲಿಂಗ ಲೀಲೆಯ ಸಂಗ್ರಹ’ ಕೈಸೇರಿದೆ- ರಾಜಮನೆತನಕ್ಕೆ ಅದೊಂದು ಕೀರ್ತಿ ಎಂದೇ ಹೇಳಬೇಕು. ರಾಜಕುಮಾರನಿಗೆ ಪ್ರಜೆಗಳ ವಿಷಯ ಪರಿಚಯ ಹೆಚ್ಚಾಗುತ್ತದೆ…..

ಆಶ್ರಮದಲ್ಲಿ ನೆಮ್ಮದಿಯಿಲ್ಲ. ಪ್ರಿಯನಾಥ್ ಮಹಾರಾಜ್ ಮುನಿದುಕೊಂಡು ಪೊನ್ನಂಪೇಟೆ ಆಶ್ರಮಕ್ಕೆ ಹೋಗಿದ್ದಾರೆ. ಇತ್ಯರ್ಥಕ್ಕೆ ಪರೇಶ್ ಮಹಾರಾಜರು ಬಂದಿದ್ದಾರೆ. ಇದಕ್ಕೆಲ್ಲ ಮುಖ್ಯಕಾರಣ ಶಂಕರ್ ಮಹಾರಾಜ್ ಇರಬಹುದು. ನನ್ನೊಡನೆಯಂತೂ ಅವರು ಬಹಳ ತುಚ್ಛವಾಗಿ ನಡೆದಿದ್ದಾರೆ. ಅವರಿಗೆ ಅಹಂಕಾರ ಬಹಳ. ಅದೂ ಅಲ್ಲದೆ ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆಹಿಡಿದನು ಎಂಬಂತಾಗಿದೆ ಅವರಿಗೆ ವಿದ್ಯಾರ್ಥಿನಿಲಯದ ಅಧಿಕಾರ ಸಿಕ್ಕಿ. ಅವರಿಗೆ ಆಚಾರ್ಯನಾಗಬೇಕೆಂಬ ಆಶೆ-ದುರಾಶೆ ಬಹಳ ಇದೆ. ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು‘ಕಾವಿಯನುಟ್ಟು ಒಬ್ಬ ತರುಣನಿಗೆ’ ಎಂಬ ವಿಡಂಬನ ಕವನವನ್ನೂ ಬರೆದಿದ್ದೇನೆ….

ಆಶ್ರಮವನ್ನು ಬಿಟ್ಟು ಬೇರೆ ಇರಬೇಕಾಗಿ ಬರಬಹುದೆಂದು ಒಂಟಿಕೊಪ್ಪಲಿನ ಹೊಸ ಬಡಾವಣೆಯಲ್ಲಿ ಜಾಗಕ್ಕಾಗಿ ಹೇಳಿದ್ದೇನೆ. ಸರಿಯಾದ ಜಾಜ ಸಿಕ್ಕರೆ ಒಂದು ಸಣ್ಣ ಮನೆಯನ್ನು ಕಟ್ಟಿಸಬೇಕೆಂದಿದ್ದೇನೆ. ಅದರಲ್ಲಿ ನಮ್ಮೂರಿನ ಹುಡುಗರೂ ಇರಬಹುದು:ಆ ಮನೆಗೆ ‘ಸಹ್ಯಾದ್ರಿ’ಎಂದು ಹೆಸರು ಕೊಡಬೇಕೆಂದಿದ್ದೇನೆ…

six Famous Living poets ಎಂಬ ಪುಸ್ತಕ ಓದಿದೆ: Mansfield, Kipling, Maurice Baring, Henry Newbolt, Alfred Noyes, John Drinkwatere-ಆರು ಜನರಿದ್ದಾರೆ…

ಮೊನ್ನೆ ಪ್ರೊ.ವೆಂಕಣ್ಣಯ್ಯ, ತೀ.ನಂ. ಶ್ರೀಕಂಠಯ್ಯ ಆಶ್ರಮಕ್ಕೆ ಬಂದು ಪ್ರಬುದ್ಧ ಕರ್ಣಾಟಕಕ್ಕೆ ಕವನಗಳನ್ನು ಆಯ್ದಕೊಳ್ಳಲೆಂದು ನನ್ನ ಕವನಗಳ ಹಸ್ತಪ್ರತಿ ಕೊಂಡು ಹೋಗಿದ್ದಾರೆ.

೩-೮-೧೯೩೪:

ಬೆಳಿಗ್ಗೆ ದಿನಚರಿಯ ಕರ್ಮಗಳಾದ ಮೇಲೆ ಪದ್ಧತಿಯಂತೆ ‘ಋಷಿವಾಣಿ’ಯನ್ನು ಓದಿದೆ. ಗುರುದೇವನ, ಉಪದೇಶಾವಳಿಯನ್ನು (The Teachings of sri Ramakrishna) ಓದಿದೆ. ತರುವಾಯ ‘ಪ್ರಭುಲಿಂಗ ಲೀಲೆಯ’ ಕೆಲವು ಭಾಗವನ್ನು ಪಾಠಕ್ಕೆ ಸಿದ್ಧಗೊಳಿಸಿದೆ- ಸ್ನಾನ ಊಟ ಮಾಡಿ ಕಾಲೇಜಿಗೆ ಹೋದೆ…

ನಾನು ಕಸ್ತೂರಿ ಇಬ್ಬರೂ ಸೇರಿ ಮುನಿಸಿಪಲ್ ಆಫೀಸಿಗೆ ಹೋಗಿ ಅಲ್ಲಿ ಮುನಿಸಿಪಲ್ ಎಂಜಿನಿಯರ್ ಆಗಿರು ಕೃಷ್ಣಯಂಗಾರರನ್ನು ಕಂಡು ಒಂಟಿಕೊಪ್ಪಲಿನ ಹೊಸ ಬಡಾವಣೆ ಜಾಗಕ್ಕೆ ಅರ್ಜಿ ಹಾಕಿಕೊಂಡಿದ್ದುದು ಏನಾಯಿತೆಂದು ವಿಚಾರಿಸಿದೆವು. ಹದಿನಾಲ್ಕು ಹದಿನೈದನೆಯ ತಾರೀಖಿನ ಒಳಗಾಗಿ ವಿಷಯ ತಿಳಿಸುತ್ತೇನೆ ಎಂದರು. ಅವರು, ಆ ಮುನಿಸಿಪಲ್ ಎಂಜಿನಿಯರು‘Hither to I had seen you in your poems, but now I see you personally’ ಎಂದುದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಈ ಮಹಾರಾಯ ಏನು ಪದ್ಯ ಓದುತ್ತಾನೊ ದೇವರೆ ಬಲ್ಲ. ಬಹುಶಃ ಆತನ ಮಕ್ಕಳು ಓದುತ್ತಿದ್ದ” ಬೊಮ್ಮನ ಹಳ್ಳಿಯ ಕಿಂದರಿಜೋಗಿ” ಓದಿರಬಹುದು… ಮುನಿಸಿಪಲ್ ಆಫೀಸಿನ ವಾತಾವರಣ, ಅಲ್ಲಿದ್ದ ಸಾಲುಮರಗಳು ಎಲ್ಲವೂ ಸೆರೆಮನೆಯ ಪದಾರ್ಥಗಳಂತೆ ನನಗೆ ಮ್ಲಾನವಾಗಿ ಕಾಣಿಸಿದುವು. ಬಹುಶಃ ನಾನು ಪಟ್ಟಣದ ಕಡೆಗೆ ಬಹಳ ಅಪೂರ್ವವಾಗಿ ಹೋಗುವುದರಿಂದ ಹಾಗೆ ಕಂಡಿರಬಹುದೇ?”….

ಖಾದಿ ಅಂಗಡಿಯಲ್ಲಿ ಒಂದು ಕೋಟು ಎರಡು ಷರ್ಟು ಹೊಲಿಯಲು ಹಾಕಿದೆ…

ಅಲ್ಲಿಂದ ಡೆಂಟಿಸ್ಟ್ ಕಮಾಲ್ ಷರೀಫರನ್ನು ಕಂಡೆ. ಅವರೇನು ನನ್ನನ್ನು ಕಂಡಾಗಲೆಲ್ಲ “ನಿಮಗೆ ಮದುವೆಯಾಯ್ತೇನು? ದೇವಂಗಿ ರಾಮಣ್ಣಗೌಡರ ಮನೆಯಿಂದ ಹೆಣ್ಣಾಗುತ್ತದೆ ಎಂದು ಕೇಳಿದ್ದೆ. ನೀವು ಆಗಬೇಕಿತ್ತು. ಒಳ್ಳೇ ಸಂಬಂಧ.” ಎಂದು ಮೊದಲಾಗಿ ಪುರಾಣ ತೆಗೆಯುತ್ತಾರೆ!…

ಆಶ್ರಮಕ್ಕೆ ಬಂದಮೇಲೆ ‘ಗಮಕಿ’ಎಂಬ ಕವನವನ್ನು (ಬೆಳಿಗ್ಗೆಯಿಂದ ಅದನ್ನು ಬಾಯಲ್ಲಿಯೆ ರಚಿಸುತ್ತಿದ್ದೆ.) ಸ್ವಲ್ಪ ಬರೆದು ಆಮೇಲೆ ನಾನು ಕೈಕೊಂಡಿರುವ ಸರಳರಗಳೆಯ ಮಹಾಕಾವ್ಯವನ್ನೂ(ಆಮೇಲೆ ಅದು ‘ಚಿತ್ರಾಂಗದಾ’ಎಂದು ಪ್ರಸಿದ್ದವಾಗಿದೆ.) ಸ್ವಲ್ಪ ಮುಂದುವರಿಸಿದ ‘ಗಮಕಿ’ ಎಂಬ ಕವನ ನಮ್ಮೂರಿನಲ್ಲಿ ಈ ಸಲ ಬೇಸಗೆಯಲ್ಲಿ ಶ್ರೀಕೃಷ್ಣರಾಯರು ರಾತ್ರಿ ಭಾರತ ಓದಿದಾಗ ಪ್ರೇರಿತವಾದುದು. ಆ ಕವನ ಅಂದಿನಿಂದಲೂ ಹೃದಯದಲ್ಲಿ‘ಗರ್ಭ’ವಾಗುತ್ತಿತ್ತು….

What is Beauty–by carrit ಮತ್ತು Lakoon by Lessing ಎರಡು ಪುಸ್ತಕ ಓದುತ್ತಿದ್ದೇನೆ. ರಾತ್ರಿ ಈ ಸಲ ‘ವೇದಾಂತ ಕೇಸರಿ’ಯಲ್ಲಿ paul Brunton ಎಂಬುವನು A search in Secret India ಎಂಬ ಹೆಸರಿಟ್ಟು ಬರೆದ ಪುಸ್ತಕದಿಂದ ಮಾಸ್ಟರ್ ಮಹಾಶಯನ ವಿಷಯ ಕಿತ್ತುಹಾಕಿದ್ದಾರೆ. ಓದಿ ಹರ್ಷವಾಯ್ತು. ಆಮೇಲೆ C.E.M.Joad ಬರೆದ The philosphy of Radhakrishnan(Counteract from the East) ಪುಸ್ತಕದಲ್ಲಿ ಕೆಲವು ಭಾಗ ಓದಿದೆ. ಶ್ರೀ ಮಾನ್ ರಾಧಾಕೃಷ್ಣರು ನಿಜವಾಗಿಯೂ ನವೀನ ಹಿಂದೂಧರ್ಮದ ಒಬ್ಬ ಋಷಿ!

೧೧-೮-೧೯೩೪:

ಈಶ್ವರಾನಂದ ಸ್ವಾಮಿಗಳು ಮದ್ರಾಸಿಗೆ ಹೋದರು. (ಮೈಸೂರಿನಲ್ಲಿ ಅಧ್ಯಕ್ಷರಾಗಿದ್ದರು, ಸ್ವಾಮಿ ಸಿದ್ದೇಶ್ವರಾನಂದರು ಮದ್ರಾಸಿನ ಅಧ್ಯಕ್ಷರಾಗಿ ಹೋದಮೇಲೆ. ಬಹುಶಃ ಸ್ವಾಮಿ ಸಿದ್ದೇಶ್ವರಾನಂದರು ಬೆಂಗಳೂರಿನ ಆಶ್ರಮಕ್ಕೆ ಅಧ್ಯಕ್ಷರಾಗಿ ಬಂದುದರಿಂದ ಸ್ವಾಮಿ ಈಶ್ವರಾನಂದರು ಅಲ್ಲಿಗೆ ಅಧ್ಯಕ್ಷರಾಗಿ ಹೋದರೆಂದು ತೋರುತ್ತದೆ. ಬೆಂಗಳೂರಿನ ಆಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ನಿರ್ಮಲಾನಂದರಿಗೂ ಶ್ರೀರಾಮಕೃಷ್ಣ ಮಿಶನ್ನಿನ ಕೇಂದ್ರ ಬೇಲೂರು ಮಠಕ್ಕೂ ನಡೆಯುತ್ತಿದ್ದ ವ್ಯವಹಾರ ಕೋರ್ಟಿನಲ್ಲಿ ಇತ್ಯರ್ಥವಾದುದರಿಂದ ಸ್ವಾಮಿ ನಿರ್ಮಲಾನಂದರು ಕೇರಳದ ಆಶ್ರಮಗಳ ಯಜಮಾನರಾಗಿ ಹೋದುದರಿಂದ ಸ್ವಾಮಿ ಸಿದ್ದೇಶ್ವರಾನಂದರು ಬೆಂಗಳೂರಿಗೆ ಅಧ್ಯಕ್ಷರಾಗಿ ಬರಬೇಕಾಯಿತೆಂದು ತೋರುತ್ತದೆ. ಅದಕ್ಕು ನನ್ನ ವೈಯಕ್ತಿಕ ಬದುಕಿಗೂ ಏನೂ ಸಂಬಂಧವಿಲ್ಲದಂತೆ ತೋರುವ ಈ ಘಟನೆ ನನ್ನ ಬದುಕಿನ ದಿಕ್ಕನ್ನೆ ಬದಲಾಯಿಸುವ ಘಟನೆಗಾಗಿಯೆ ಸಂಘಟಿಸಿತೆಂಬಂತೆ ಭಾಸವಾಗುತ್ತದೆ, ನನ್ನ ವೈಯಕ್ತಿಕ ಭಾವನೆಗೆ! ಹೇಗೆಂದರೆ, ಸಿದ್ದೇಶ್ವರಾನಂದರು ಬೆಂಗಳೂರಾಶ್ರಮದ ಅಧ್ಯಕ್ಷರಾಗಿದ್ದಾಗಲೆ, ವಿಧಿ ನಿಯಂತ್ರಣವೆಂಬಂತೆ, ದೇವಂಗಿ ರಾಮಣ್ಣಗೌಡರು ತಮ್ಮ ಅಸ್ವಸ್ಥತೆಯ ನಿವಾರಣೆಗಾಗಿ ಹವಾ ಬದಲಾಯಿಸಲು ಬೆಂಗಳೂರಿಗೆ ಸಂಸಾರಸಮೇತರಾಗಿ ಬಂದು ಒಂದು ಬಾಡಿಗೆ ಮನೆಯಲ್ಲಿ ನೆಲೆಸಿದರು. ಆ ಬಾಡಿಗೆಮನೆ ಆಶ್ರಮಕ್ಕೆ ಸಮೀಪದಲ್ಲಿದ್ದು ಶ್ರೀಗೌಡರೂ ದಿನವೂ ಅಲ್ಲಿಗೆ ಹೋಗುತ್ತಿದ್ದು, ಸ್ವಾಮಿಗಳೊಡನೆ ಬಹಳ ಹೊತ್ತು ಕಳೆಯುತ್ತಿದ್ದರಂತೆ. ಆಗ ಅವರೂ ಶ್ರೀಗೌಡರೂ ನನ್ನ ವಿಚಾರವಾಗಿಯೂ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರಂತೆ. ಸ್ವಾಮಿಜಿಯೆ ನನ್ನೊಡನೆ ಆ ವಿಷಯ ಹೇಳಿದರು. ತರುವಾಯ. ಶ್ರೀಗೌಡರು ನನ್ನ ತಂದೆ ಮತ್ತು ಕುಪ್ಪಳಿ ಮನೆತನದ ವಿಚಾರವಾಗಿಯೂ ಬಹಳ ಹೇಳುತ್ತಿದ್ದರಂತೆ. ಮೈಲಿ ಬಂದು ಮನೆಯ ಗಂಡಸರೆಲ್ಲ ತೀರಿಕೊಂಡಾಗ ಸ್ವಾಮಿಭಕ್ತ ಬೇಲರವನೊಬ್ಬನು ಹೇಗೆ ಮನೆತನಕ್ಕೆ ಬೆಂಬಲವಾಗಿ ನಿಂತು ಸೇವೆ ಸಲ್ಲಿಸಿದ್ದನು ಎಂಬುದನ್ನು ಕಥೆ ಹೇಳುತ್ತಾ ಗೌಡರು ಭಾವಪೂರ್ಣ ಗದ್ಗದರಾಗಿ ಕಣ್ಣೀರು ಸುರಿಸಿದ್ದರಂತೆ! ಬಾಹ್ಯದಲ್ಲಿ ನಿಷ್ಠುರ ವ್ಯಕ್ತಿಗಳಾಗಿ ಕಠೋರ ಮನಸ್ಕರಾಗಿ ಲೆಖ್ಖಾಚಾರದ ವ್ಯಕ್ತಿಯಾಗಿ ತೋರುತ್ತಿದ್ದ ಅವರು ಹಾಗೆ ಕಣ್ಣೀರು ಸುರಿಸುತ್ತಿದ್ದುದನ್ನು ಕಂಡು ಸ್ವಾಮಿಜಿ ಆಶ್ಚರ್ಯಪಟ್ಟಿದ್ದರಂತೆ: ಅವರ ಹೃದಯ ಗುಪ್ತಕೋಮಲತೆಯನ್ನು ಗುರುತಿಸಿ! ಮುಂದೆ ಅವರ  ಮಗಳನ್ನೆ ನಾನು ವರಿಸುವಂತಾಗಲು ಸ್ವಾಮಿಜಿಯೆ ಪ್ರಚ್ಛನ್ನ ಪ್ರೇರಣವೂ ಕಾರಣವೂ ಆದುದನ್ನೂ ಕಾಣುತ್ತೇವೆ!೪-೨-೧೯೭೫)….‘ಬಭ್ರುವಾಹನ’ಮಹಾಕಾವ್ಯವನ್ನು ಮುಂದೆ ಸಾಗಿಸುತ್ತಿದ್ದೇನೆ.(ಈಗ ‘ಚಿತ್ರಾಂಗದಾ’ಎಂದು ಹೆಸರಾಂತಿರುವ ಕೃತಿಗೆ ಆಗ ಇನ್ನೂ ನಾಮಕರಣವಾಗಿರಲಿಲ್ಲ. ಆದಕಾರಣ ಡೈರಿಯಲ್ಲಿ ಬೇರೆಬೇರೆ ಹೆಸರುಗಳು ಗೋಚರಿಸುತ್ತವೆ.)

ನನ್ನ ಕಾದಂಬರಿಯಲ್ಲಿ ಮೂವತ್ತೈದನೆಯ ಅಧ್ಯಾಯ ಬರೆದು ಮುಗಿಸಿದೆ. (ಮಹಾಕಾವ್ಯ, ಕಾದಂಬರಿ,ಭಾವಗೀತೆಗಳು, ಸಾಹಿತ್ಯ ವಿಮರ್ಶೆ ಇತ್ಯಾದಿ ಕೆಲಸಗಳು ಒಟ್ಟೊಟ್ಟಿಗೆ ನಡೆಯುತ್ತಿದ್ದುವು.)

ಶ್ರೀನಿ ಮಧ್ಯಾಹ್ನ ಬಂದಿದ್ದನು. ಅವನೂ ನಾನೂ ಸಿ.ಕೆ.ವೆಂಕಟರಾಮಯ್ಯನವರ ‘ಸುಂದರಿ’ನಾಟಕವನ್ನು ಓದಿದೆವು.

Discovering poetry by Elizabeth Drew ಓದುತ್ತಿದ್ದೇನೆ.

೧೨-೮-೧೯೩೪:

ಇಂದು ಒಂದು ಶುಭ ವರ್ತಮಾನ ಬಂದಿದೆ. ಕೆಲವು ದಿನಗಳ ಹಿಂದೆ ತೀರ್ಥಹಳ್ಳಿಯಿಂದ ಯಾರೊ ಒಬ್ಬರು ಒಂದು ಸಣ್ಣಪತ್ರಿಕಾ ಲೇಖನವನ್ನು ಕತ್ತರಿಸಿ, ಅದರ ಹಿಂದೆ ಬಿಳಿಕಾಗದ ಅಂಟಿಸಿ, ಅದರಲ್ಲಿ”Sir, sorry for condition of the president of the Malnad Vokkaligara Yuvajana sangha viz H.S. Manjappa Gowda” ಎಂದು ಬರೆದು ಕಳಿಸಿದ್ದರು. ಆ ಲೇಖನ ‘ವಿಚಿತ್ರ ಲಗ್ನ’ಎಂದಿತ್ತು. ಅದರಲ್ಲಿ “ಮೇಗರವಳ್ಳಿ ಬಳಿ ಒಬ್ಬ ಹುಡುಗಿಯನ್ನು ಹನುಮಯ್ಯಗೌಡರು ಮದುವೆಯಾಗಿ ಆಕೆಯ ತವರೂರಿಗೆ ಇಪ್ಪತ್ತು ದಿನಗಳ ಮೇಲೆ ಹೆಂಡತಿಯೊಡನೆ ಹೋಗಿ ವರನಿಗೆ ಶಿವಮೊಗ್ಗದಲ್ಲಿ ಕೆಲಸವಿದ್ದುದರಿಂದ ಅಲ್ಲಿಗೆ ಹೋದನೆನೆಂದೂ, ತರುವಾಯ HSM ಮತ್ತು ಇತರರು ಸೇರಿ ಆ ಮದುವೆಯಾಗಿದ್ದ ಗಂಗಮ್ಮನನ್ನು ಬಿಳುಮನೆ ಚ…..ಗೆ ಕೂಡಿಕೆ ಮಾಡಿಸಿದರೆಂದೂ, ಆಮೇಲೆ ಹನುಮಯ್ಯಗೌಡರು ಫಿರ‍್ಯಾದು ಮಾಡಿದ್ದರೆಂದೂಮ,HSMರವರು ಮದುವೆ ಕರ್ಚು ಕೊಡುತ್ತೇನೆ, ಫಿರ್ಯಾದು ವಾಪಸು ತೆಗೆದುಕೊಳ್ಳು ಎಂದು ಹೇಳುತ್ತಿದ್ದಾರೆಂದೂ” ಇತ್ತು.

ನಾನು, ಆ ಲೇಖನದೊಡನೆ,ವಿಷಯ ಏನೆಂದು ಕೇಳಿ ಮಂಜಪ್ಪಗೌಡರಿಗೆ ಕಾಗದ ಬರೆದಿದ್ದೆ. ಇವತ್ತು ಉತ್ತರ ಬಂದಿದೆ. ಅವರು ಮಾಡಿರುವ ಕೆಲಸ ಅತ್ಯಂತ ಶ್ಲಾಘನೀಯವಾದುದು.

ಮೇಗರವಳ್ಳಿಯಲ್ಲಿ ಓದುತ್ತಿದ್ದಾಗ ಚ….ಗಂಗೆಯರು ಪರಸ್ಪರ ಅನುರಾಗದಲ್ಲಿದ್ದರು. ಹನುಮೈಗೌಡನು ಗಂಗೆಯ ತಂದೆತಾಯಿಗಳಿಗೆ ದುಡ್ಡಿನಾಸೆ ತೋರಿಸಿ, ತಾನು ರೋಗಿಷ್ಠ ವೃದ್ಧ ಅಸಹ್ಯ ವ್ಯಕ್ತಿಯಾದರೂ ಬಲಾತ್ಕಾರದಿಂದ ಗಂಗೆಗೆ ತಾಳಿ ಕಟ್ಟಿದನು. ಹುಡುಗಿ ಪಟೇಲರಿಗೂ ಪೋಲೀಸರಿಗೂ ಅರ್ಜಿ ಕೊಟ್ಟರೂ ಯಾರೂ ಕೇಳಲಿಲ್ಲ. ಕಡೆಗೆ ಹುಡುಗಿ ಗಂಡನ ಮನೆಯಿಂದ ಓಡಿಹೋಗಿ ಕಾಡು ಸೇರಿದಳು. ಮತಸ್ಥ ಮುಖಂಡ ಮುಟ್ಕಾಳರೆಲ್ಲರೂ ಸನಾತನ ಪದ್ಧತಿಗೆ ಶರಣಾಗಿ ಹುಡುಗಿಯ ಪಕ್ಷ ನಿಲ್ಲಲಿಲ್ಲ. ಕಡೆಗೆ ಚ… ಹುಡುಗಿ ಇಬ್ಬರೂ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ವಾರ್ತೆ ಹಬ್ಬಿತು. ತಂದೆತಾಯಿಗಳಿಗೆ ದಿಗಿಲಾಗಿ ಮಲೆನಾಡು ಒಕ್ಕಲಿಗ ಯುವಕರ ಸಂಘಕ್ಕೆ ಮೊರೆಯಿಟ್ಟರು. ಚ…ನೂ ಬಹಳ ಯತ್ನಮಾಡಿದನು. ಹನುಮೈಗೌಡರು ಸಾಬರು ಪೋಲೀಸರ ಪಟಾಲಂ ಸೇರಿಸಿ ಗಂಗಮ್ಮನನ್ನ ಹುಡುಕಲು ಹೊರಟರು. ಪರಿಸ್ಥಿತಿ ಹೀಗಿರಲು ಮಂಜಪ್ಪಗೌಡರು ಅಲ್ಲಿಗೆ ಹೋಗಿ, ಹಿಂದೂ ಲಾ, ಪೋಲೀಸು, ಹಿರಿಯರನ್ನೆಲ್ಲ ತಳ್ಳಿಬಿಟ್ಟು ಗಂಗಮ್ಮನನ್ನು ಆಕೆಯ ಪ್ರಿಯನಾದ ಚ…. ನಿಗೆ ಎರಡನೆ ಮದುವೆ ಮಾಡಿಸಿಬಿಟ್ಟರಂತೆ.

ಇಂತಹ ಪ್ರಸಂಗ ಮಲೆನಾಡಿನಲ್ಲಿ ನಡೆದದ್ದು ಇದೇ ಮೊದಲನೆಯದು. ಪ್ರೇಮದ ವಿಜಯವಾದಂತಿದೆ. ಇದು ಕಾದಂಬರಿಗಾಗಲಿ ನಾಟಕಕ್ಕಆಗಲಿ ಚೆನ್ನಾದ ವಸ್ತುವಾಗಿದೆ. ಗುರುಕೃಪೆಯಿಂದ ಎಂದಾದರೂ ಕೈಕೊಳ್ಳುತ್ತೇನೆ.*

(*ಈ ಸಮಸ್ಯೆಯ ಪರಿಹಾರಕ್ಕಾಗಿಯೆ ಆ ವರುಷದ ಸಂಘದ ವಾರ್ಷಿಕ ಸಭೆಯನ್ನು ಮೇಗರವಳ್ಳಿಯಲ್ಲಿ ಇಟ್ಟುಕೊಂಡರು. ಆ ಸಭೆಗೆ ಅಧ್ಯಕ್ಷನಾಗಲು ನನ್ನನ್ನು ಆಹ್ವಾನಿಸಿದರು. ಆದರೆ ನನಗೆ ಕೆಲಸದ ನಿಮಿತ್ತ ಹೋಗಲಾಗಲಿಲ್ಲ. ನಾನು ಕೃಷ್ಣಗಿರಿ ಕೃಷ್ಣರಾಯರಿಗೆ ಈ ಕಥೆಯನ್ನೆಲ್ಲ ಹೇಳಿ, ಅವರನ್ನು ಭಾರತವಾಚನ ಮಾಡಲು ಅಲ್ಲಿಗೆ ಕಳಿಸಿದೆ. ಅವರು ರುಕ್ಮಿಣೀ ಕಲ್ಯಾಣದ ಭಾಗವನ್ನು ವಾಚನ ಮಾಡಿ, ಶ್ರೀಕೃಷ್ಣನು ಮಾಡಿದ ಸಾಹಸವನ್ನು ಸ್ವಾರಸ್ಯವಾಗಿ ವಿವರಿಸಬೇಕೆಂದೂ, ನಿಜವಾದ ಪ್ರೇಮವೇ ಮದುವೆಗೆ ಕಾರಣವಾಗಬೇಕೆಂದೂ ಹಣವಾಗಲಿ ಬಲಾತ್ಕಾರವಾಗಲಿ ಆಗಬಾರದು ಎಂಬುದನ್ನು ಎಲ್ಲರಿಗೂ ಮನಸ್ಸಿಗೆ ಹಿಡಿಯುವಂತೆ ಮಾಡಬೇಕೆಂದು ಸೂಚನೆ ಕೊಟ್ಟು ಕಳಿಸಿದೆ. ಆದರೆ ನಮ್ಮ ಉದ್ದೇಶವನ್ನು ನಾವೆ ಗುಟ್ಟಾಗಿಟ್ಟುಕೊಂಡಿದ್ದೆವು, ಏಕೆಂದರೆ ಈ ಉದ್ದೇಶಕ್ಕಾಗಿಯೆ ಕೃಷ್ಣರಾಯರನ್ನು ಕಳಿಸಿದ್ದಾರೆ ಎಂಬುದೇನಾದರೂ ಗೊತ್ತಾಗಿದ್ದರೆ ವಿರೋಧಿಗಳ ಮನಸ್ಸು ಪ್ರತಿಭಟನೆಗೆ ಸಿದ್ಧವಾಗಿರುತ್ತಿದ್ದು ನಮ್ಮ ಕೆಲಸ ಕೈಗೂಡುತ್ತಿರಲಿಲ್ಲ. ಕೃಷ್ಣರಾಯರ ಭಾರತವಾಚನಕ್ಕೂ ಈ ಮದುವೆಗೂ ಏನೂ ಸಂಬಂಧವಿಲ್ಲ ಎಂಬಂತೆ ತೋರಿಸುವುದು ಅವಶ್ಯಕವಾಗಿತ್ತು. ಅವರು ಹಿಂದೆಯೂ ನಮ್ಮ ಸಂಘದ ವಾರ್ಷಿಕೋತ್ಸವಗಳಿಗೆ ಬಂದು ಭಾರತವಾಚನದಿಂದ ಮಲೆನಾಡಿನವರನ್ನು ತಣಿಸಿದ್ದರು, ಮೋಹಗೊಳಿಸಿದ್ದರು. ಅವರಲ್ಲಿ ಎಲ್ಲರಿಗೂ ಗೌರವ ವಿಶ್ವಾಸಗಳಿದ್ದುವು. ಅಂತೂ ಮಂಜಪ್ಪಗೌಡರಿಗೆ ಬೆಂಬಲವಾಗಿ ಕೃಷ್ಣರಾಯರ ಭಾರತವಾಚನ ಜಯಡಿಂಡಿಮ ಭಾರಿಸಿತು. ಎಲ್ಲವೂ ಸುಸೂತ್ರವಾಗಿ ಸುಗಮವಾಗಿ ಸಮಾಧಾನಕರವಾಗಿ ಕೊನೆಗೊಂಡಿತು!

ಅಲ್ಲದೆ ನಾನು ಅಂದು ಡೈರಿಯಲ್ಲಿ ಬರೆದಂತೆ ಆ ನಡೆದ ಸಂಗತಿ ವ್ಯರ್ಥವಾಗಲಿಲ್ಲ. ಮುಂದೆ ಅನೇಕ ವರ್ಷಗಳ ಮೇಲೆ ನಾನು ಬರೆದ ‘ಮಲೆಗಳಲ್ಲಿ ಮದುಮಗಳು’ ಎಂಬ ಕಾದಂಬರಿಯಲ್ಲಿ ಓದುಗರು ಅದರ ಛಾಯೆಯನ್ನು ಚಿನ್ನಮ್ಮ-ಮುಕುಂದಯ್ಯರ ಪಾತ್ರಗಳಲ್ಲಿ ಪ್ರಭಾವರೂಪವಾಗಿ ಗುರುತಿಸಬಹುದು.೫-೨-೧೯೭೫.)

೧೬-೧೦-೧೯೩೪:

ಮಧ್ಯಾಹ್ನ ಮೂರು ಗಂಟೆಗೆ ರೈಲುಹತ್ತಿ ಹೊರಟು ಮಂಡ್ಯಕ್ಕೆ ಹೋಗಿ ಅಲ್ಲಿ ಸಾಯಂಕಾಲ ಸುಮಾರು ಒಂದೂವರೆ ಗಂಟೆ ಹೊತ್ತು ನನ್ನ ಕವನಗಳ ಕಾವ್ಯವಾಚನ ಮಾಡಿದೆ.

೨೨-೧೦-೧೯೩೪:

ಬೆಳಿಗ್ಗೆ ಐದು ಗಂಟೆಗೆ ಎದ್ದು ಕುಕ್ಕನಹಳ್ಳಿಯ ಕೆರೆಯ ಸುತ್ತು ಸಂಚಾರ ಹೋಗಿ ಆಶ್ರಮಕ್ಕೆ ಬಂದೆ. ರಾತ್ರಿಯ ಅವಸಾನದ ಅಂಚಿನಲಿ ಅಸ್ತಂಗತವಾಗುತ್ತಿದ್ದ ಚಂದ್ರನ ಕಾಂತಿಯ ಮಾಯೆ ಮನೋಹರವಾಗಿತ್ತು. ತರುವಾಯದ ಉಷಃಕಾಲವೂ ಅರುಣೋದಯವೂ ರಮ್ಯವಾಗಿದ್ದುವು…. ಸಂಚಾರದಿಂದ ಹಿಂತಿರುಗಿ ಬಂದು ಆಶ್ರಮದ ನನ್ನ ಕೊಠಿಡಿಯ ಕಿಟಕಿಯ ಬಳಿ ಮುಖಕ್ಷೌರ ಮಾಡಿಕೊಳ್ಳುತ್ತ ಕುಳಿತಿದ್ದೆ. (ಇವೊತ್ತು ದಸರಾ ರಜಾ ಮುಗಿದು ಕಾಲೇಜು ತೆರೆಯುತ್ತದೆ ಆದ್ದರಿಂದ.) ಯಾರೊ ಇಬ್ಬರು ಹಳ್ಳಿಯ ಹೆಂಗಸರು ಕನ್ನಂಬಾಡಿಗೆ ಹೋಗುವ ದೂರದ ರಸ್ತೆಯಿಂದ ನನ್ನ ಕಿಟಕಿಯ ಬಳಿಗೆ ಬಂದರು. ನೋಡಿದರೆ ಕನಿಕರ ಹುಟ್ಟುವಂತಿತ್ತು. ಅವರಲ್ಲಿ ಒಬ್ಬಳ ಮುಖದ ಮೇಲಂತೂ ಜಗತ್ತಿನ ಶೋಕವೆಲ್ಲಾ ಸೇರಿ ಮುದ್ರಿತವಾದಂತೆ ಹೃದಯ ವಿದ್ರಾವಕವಾಗಿತ್ತು.

ಏನಾದರೂ ಕೆಲಸ ಇದೆಯೇ ಎಂದು ಕೇಳಿದರು. ಏನೂ ಇಲ್ಲ ಎಂದು ಹೇಳಿ ಅವರ ಕಥೆ ಏನೆಂದು ವಿಚಾರಿಸಿದೆ. ಅವರು ಯಾವುದೋ ದೂರದ ಹಳ್ಳಿಯ ಬಡ ಒಕ್ಕಲಿಗರಂತೆ!” ನಮಗೆ, ಗಂಡಿಲ್ಲದ ಮುಂಡೇರು…” ಎನ್ನುತ್ತ ಬಿಕ್ಕಿಬಿಕ್ಕಿ ಅಳತೊಡಗಿದಳು ಒಬ್ಬಳು. ಅವರ ಊರಿನಲ್ಲಿ ಮಳೆಬೆಳೆ ಏನೂ ಇಲ್ಲದೆ ಈಗ ನಾಲ್ಕೈದು ದಿನಗಳ ಹಿಂದೆ ಮೈಸೂರಿಗೆ ಕೆಲಸ ಹುಡುಕಿಕೊಂಡು ಬಂದರಂತೆ. ಇನ್ನೂ ಕೆಲಸ ಸಿಕ್ಕಿಲ್ಲವಂತೆ.-ಊರಿಂದ ಬರುತ್ತಾ ಹಿಟ್ಟು ರೊಟ್ಟಿ ಕಟ್ಟಿಕೊಂಡು ಬಂದಿದ್ದರಂತೆ. ಅದೆಲ್ಲ ತೀರಿಹೋಗಿ ಈಗ ಹೊಟ್ಟೆಗಿಲ್ಲದೆ, ನಡೆಯಲಾಗದೆ ಇದ್ದಾರೆ. ಒಬ್ಬ ಹೆಂಗಸಿಗೆ ಇಬ್ಬರು ಮಕ್ಕಳಿದ್ದಾರಂತೆ. ಚಿಕ್ಕವರು. ಅವರನ್ನು ಕೊಪ್ಪಲಿನಲ್ಲಿ ಹಿಟ್ಟಿಗೆ(‘ಇಟ್ಟಿಗೆ’ಅಲ್ಲ) ಕೆಲಸಕ್ಕೆ ಇಟ್ಟುಕೊಂಡಿದ್ದಾರಂತೆ. ಆ ಗೋಳನ್ನೆಲ್ಲ ಹೇಳಿಕೊಂಡು ಬಸಬಸ ಅತ್ತಳು. ನನಗೂ ಕಣ್ಣಿನಲ್ಲಿ ಹನಿಯಾಡಿತು. ಅವರಿಗೆ ಮೈಸೂರಿನ ಬಂಗಲೆಯಮನೆಗಳಿಗೆ ಹೋಗಿ ಕೆಲಸ ಕೇಳಲು ಹೆದರಿಕೆ, ಏನು ಮಾಡುತ್ತಾರೋಏನು ಹೇಳುತ್ತಾರೋ ಎಂದು. ಅಯ್ಯೋ ದೇವರೇ? ಮೈಸೂರು ರಾಮರಾಜ್ಯವೇ-? ಸ್ವಲ್ಪ ಹೊತ್ತು ಅವರೊಡನೆ ಮಾತಾಡಿ, ಕೆಲಸ ಹುಡುಕುವ ರೀತಿಯನ್ನೂ ಸ್ಥಳಗಳನ್ನೂ ತಿಳಿಸಿ, ನಾಲ್ಕೈದು ಚಪಾತಿಗಳನ್ನೂ ಕೊಡಿಸಿ, ಊಟಕ್ಕೆ ಉಪಯೋಗಿಸಿ ಎಂದು ಒಂದು ರೂಪಾಯಿ ಕೊಟ್ಟೆ. ಅವರ ದುಃಸ್ಥಿತಿಯನ್ನು ನೆನೆದು ಶೋಕವೂ ಅವರಿಗೆ ಸೇವೆ ಮಾಡುವ ಹೃದಯವನ್ನೂ ಸಾಮರ್ಥ್ಯವನ್ನೂ ಗುರುದೇವನು ಅನುಗ್ರಹಿಸಿದ್ದಾನಲ್ಲಾ ಎಂದು ಆನಂದವೂ ಎರಡೂ ಉಂಟಾಗಿವೆ….

The Garden of vision ಓದಿ ಮುಗಿಸಿದೆ. The Nature of the physical world by Eddington- ಓದುತ್ತಿದ್ದೇನೆ… ಮಹಾಕಾವ್ಯವಾದ ಚಿತ್ರಾಂಗದೆಯಲ್ಲಿ ಸ್ವಲ್ಪ ಬರೆದೆ.. ರಾತ್ರಿ ಶ್ರೀನಿ,ವಿಜಯ ಮುಂತಾದವರಿಗೆ King Lear  ಓದುತ್ತಿದ್ದೇನೆ.

೩೨-೧೦-೧೯೩೪:

ಟೌನ್ ಹಾಲಿನಲ್ಲಿ ಕಾಲೇಜ್ ಯೂನಿಯನ್ನಿನವರು‘ರಕ್ತಾಕ್ಷಿ’ಯನ್ನಾಡಿದರು. ಎರಡು ಸಾವಿರದ ಮೇಲೆ ಜನರು ನೆರೆದಿದ್ದರಂತೆ. ನಾಣು ಹೋಗಿರಲಿಲ್ಲ. ಪ್ರದರ್ಶನ ಅಷ್ಟೇನೂ ಹೆಚ್ಚು ಜಯಪ್ರದವಾಗಲಿಲ್ಲಂತೆ.

೩೧-೧೦-೧೯೩೪:

ಮಧ್ಯಾಹ್ನ ಮೂರು ಗಂಟೆಗೆ ರೈಲಿಗೆ ಹೊರಟೆ. ದಾರಿಯಲ್ಲಿ ಇಕ್ಕೆಲದಲ್ಲಿಯೂ ಹಳದಿಯ ಬತ್ತದ ಪೈರು ರಮಣೀಯವಾಗಿತ್ತು.-ಏಳೂವರೆ ಗಂಟೆಗೆ ಹಾಸಿಗೆ ಬಿಚ್ಚಿ ಮಲಗಿದೆ.ಧ್ಯಾನ ಮಾಡಿದೆ.

೧೫-೧೨-೧೯೩೪:

ಬೆಳಿಗ್ಗೆ ಶಿವಮೊಗ್ಗ ರೈಲ್ವೆ ಸ್ಟೇಷನ್ನಿಗೆ ಚಂದ್ರಶೇಖರಶೆಟ್ಟರೂ ಅವರ ತಮ್ಮ ಬಿ.ಆರ್.ಕೃಷ್ಣಮೂರ್ತಿ, ಮಾನು ಬಂದಿದ್ದರು. ಒಂದು ಗಂಟೆ ರೈಲು ಹೊತ್ತಾಗಿ ಬಂದಿತ್ತಂತೆ… ಎನ್.ಎಸ್.ಸುಬ್ಬರಾಯರ ಅಧ್ಯಕ್ಷತೆಯಲ್ಲಿ ಒಂದೂಕಾಲು ಗಂಟೆ ಕಾಲ ಕವನವಾಚನ ಮಾಡಿದೆ. (ಅಂದು ಯಾವುದೊ ಒಂದು ಎಜ್ಯಕೇಶನಲ್ ಕಾನ್ ಫರೆನ್ಸ್ ನಡೆಯುತ್ತಿತ್ತು. ಅದಕ್ಕೆ ನನ್ನ ಕವನ ವಾಚನಕ್ಕಾಗಿ ಶ್ರೀ ಸುಬ್ಬರಾಯರ ಕೇಳಿಕೊಂಡು ಕಾರ್ಯಕ್ರಮ ಗೊತ್ತಾಗಿತ್ತಾಗಿ ನೆನಪು.)…. ಸಾಯಂಕಾಳ ನಾನು, ಮಾನು ಶಿವಮೊಗ್ಗದಿಂದ ಮೈಸೂರಿಗೆ ಹೊರಟೆವು. ರೈಲಿನಲ್ಲಿ ಮಾನಪ್ಪಗೆ ನೀಹಾರಿಕೆ, ನಕ್ಷತ್ರ, ಸೌರವ್ಯೂಹ, ಗ್ರಹಗಳ ಸಂಭವ, ಕಾಲ, ದೇಶ ಇತ್ಯಾದಿ ನವೀನ ವಿಜ್ಞಾನದ ಆವಿಷ್ಕಾರಗಳನ್ನು ಕುರಿತು ಹೇಳಿದೆ.

೧೬-೧೨-೧೯೩೪:

ಭಾನುವಾರ-ಬೆಳಿಗ್ಗೆ ರೈಲಿನಿಂದ ನೋಡಲು ಮನೋಹರವಾದ ದೃಶ್ಯ ಪ್ರಾರಂಭವಾಯಿತು. ಹಾಸನದಿಂದ ಮುಂದೆ.”ರೈಲುಗಾಡಿಯ ಕಿಟಕಿ” ಎಂಬ ಕವನವನ್ನು ಪ್ರಾರಂಭಿಸಿದೆ. ಹನ್ನೊಂದುವರೆ ಗಂಟೆಗೆ ರೈಲು ಮೈಸೂರು ತಲುಪಿತು. ಸಾಯಂಕಾಲ ಗೀತಾ ಜಯಂತಿ….ಸಾಯಂಕಾಲಕ್ಕೆ “ರೈಲುಗಾಡಿಯ ಕಿಟಕಿ”ಯನ್ನು ಬರೆದು ಮುಗಿಸಿದೆ. (ಅದು “ಕೋಗಿಲೆ ಮತ್ತು ಸೋವಿಯಟ್ ರಷ್ಯಾ” ಕವನ ಸಂಗ್ರಹದಲ್ಲಿ ಅಚ್ಚಾಗಿದೆ. ೯-೨-೧೯೭೫.)

೨೦-೧೨-೧೯೩೪:

Interview with the prince

(ಜಯಚಾಮರಾಜ ಒಡೆಯರನ್ನು ಇಂಟರ್ ಮೀಡಿಯಟ್ ಕಾಲೇಜಿಗೆ ಸೇರಿಸಿದರು. ಅವರಿಗಾಗಿ ಒಂದು ಪ್ರತ್ಯೇಕ ಕೋಣೆಯನ್ನೂ ಸಜ್ಜುಗೊಳಿಸಿದರು. ರಾಜಯೋಗ್ಯವಾಗುವಂತೆ. ಅಲ್ಲಿ ಅವರ ಜೊತೆಗಾರ ವಿದ್ಯಾರ್ಥಿ ಶೆಷಾದ್ರಿ ಎಂಬುವರ ಸಂಗಡ ಅವರು ವಿರಾಮದ ಕಾಲದಲ್ಲಿ ವಿಶ್ರಮಿಸುತ್ತಲೊ ಓದುತ್ತಲೊ ಅಥವಾ ಯಾರಾದರೂ ನಿಯಮಿತರಾದ ಅಧ್ಯಾಪಕರೊಡನೆ ಪಾಠಪ್ರಚನ ಮಾಡುತ್ತಲೊ ಇರುತ್ತಿದ್ದರು. ಕನ್ನಡದ ವಿಷಯಕ್ಕೆ ವಾರಕ್ಕೊಮ್ಮೆ ಇಮ್ಮೆಯೊ ನಾನೂ  ಅವರನ್ನು ಸಂಧಿಸಲು ನಿಯಮಿತನಾಗಿದ್ದೆ. ಕರ್ತವ್ಯ ನಿರ್ವಹಣೆಗಾಗಿ ಯಾಂತ್ರಿಕವಾಗಿ ಹೋಗಿ ಏನಾದರೂ ಕೇಳಿ, ಹೇಳುವುದನ್ನು ಹೇಳಿ ಬರುತ್ತಿದ್ದೆ. ಕನ್ನಡದಲ್ಲಿ ಅವರಿಗೆ ಅಷ್ಟೇನೂ ಆಸಕ್ತಿಯಿದ್ದಂತೆ ನನಗೆ ತೋರಲಿಲ್ಲ. ಅವರು ಕನ್ನಡವನ್ನು ಉಚ್ಚರಿಸಿ ಮಾತಾಡುತ್ತಿದ್ದುದೂ ನನಗೆ ಕೃತಕವೂ ವಿಲಕ್ಷಣವೂ ಆಗಿ ತೋರುತ್ತಿತ್ತು. ಒಂದು ಸಲ ಕೇಳಿಯೂ ಬಿಟ್ಟೆ-ಏಕೆ ನೀವು ಮನೆಯಲ್ಲಿ ಕನ್ನಡದಲ್ಲಿ ವ್ಯವಹರಿಸುವುದಿಲ್ಲವೆ ಎಂದು. ಅವರು ಅವ್ವೆಯರು ಆಳುಗಳೊಡನೆ ಮಾತನಾಡುವುದಾಗಿ ಹೇಳಿದಂತೆ ಜ್ಞಾಪಕ! ಅದಕ್ಕೆ ಅವರ ಕನ್ನಡ ಅಷ್ಟು ದುರವಸ್ಥೆಯಲ್ಲಿತ್ತೆಂದು ತೋರುತ್ತದೆ.

ಅವರಿಗೆ ಅರಮನೆಯಲ್ಲಿ ಪ್ರೈವೆಟ್ ಟ್ಯೂಷನ್ ಹೇಳಲು ನನಗೆ ಆಹ್ವಾನ ಬಂದಿತ್ತು. ನನ್ನನ್ನು ಕಾರಿನಲ್ಲಿ ಕೊಂಡೊಯ್ದು ಮತ್ತೆ ಕಾರಿನಲ್ಲಿ ತಂದು ಮನೆಗೆ ಬಿಡುವುದಾಗಿಯೂ ಒಳ್ಳೆಯ ಸಂಭಾವನೆ ಕೊಡುವುದಗಿಯೂ ಕಾಲೇಜಿನ ಮುಖ್ಯಾಧಿಕಾರಿ ಹೇಳಿದರು. ಆದರೆ ಆಗ ನಾನು ಆಶ್ರಮವಾಸಿ ಅವಿವಾಹಿತ ತರುಣನಾಗಿದ್ದು, ಕಾಲೇಜಿನಲ್ಲಿ ಪಾಠ ಹೇಳುವ ಕೆಲವನ್ನೂ ನನ್ನ ಸಾಹಿತ್ಯ ಸೃಷ್ಟಿಗೆ ಅಡಚಣೆ ಎಂದು ಭಾವಿಸಿದ್ದ ಕಾಲ. ಜೊತೆಗೆ ಹುಟ್ಟಿನಿಂದಲೂ ನನಗೆ ಪುರೋಹಿತರು ಮತ್ತು ರಾಜರು ಎಂದರೆ ಆಗದು. ಏನು ಜನ್ಮಾಂತರ ಸಂಸ್ಕಾರವೊ ತಿಳಿಯದು. ಶ್ರೀಮಂತರ ಅಧಿಕಾರ ಡೌಲು ಇವುಗಳನ್ನು ಕಂಡರೆ ಹೇಸುತ್ತಿದ್ದೆ. ಅವರ ಅಹಂಕಾರಕ್ಕೆ ಪ್ರತಿಯಾಗಿ ನನ್ನ ಅಹಂಕಾರವನ್ನು ಒಂದು ಅತಿಯಾದ ಮಟ್ಟಕ್ಕೆ ಏರಿಸುತ್ತಿದ್ದೆ.”I have got better business than teaching princes!(ಈ ರಾಜಕುಮಾರರುಗಳಿಗೆ ಪಾಠ ಹೇಳುವುದಕ್ಕಿಂತಲೂ ನನಗೆ ಬೇರೆ ಉತ್ತಮತರ ಕೆಲಸವಿದೆ.!) ಎಂದು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿಬಿಟ್ಟೆ. ಎಲ್ಲರಿಗೂ ಆಶ್ಚರ್ಯ. ಅರಮನೆಯಿಂದ ಅಂತಹ ಕರೆ ಬರುವುದೇ ಎಂದು ಇತರರು ಹಾತೊರೆಯುತ್ತಿದ್ದರೆ. ಇವನು ತಿರಸ್ಕರಿಸುತ್ತಾನಲ್ಲಾ ಎಂದು! ಯಾವುದನ್ನು ಎಲ್ಲರೂ ತಮ್ಮ ಜನ್ಮಕ್ಕೇ ಒದಗುವ ಪರಮ ಗೌರವ ಎಂದು ಭಾವಿಸುತ್ತಿದ್ದರೋ ಅದನ್ನು ನನ್ನ ಕವಿಚೇತನ ಅವಮಾನಕರ ಎಂದು ಭಾವಿಸಿತ್ತು. ಆ ನನ್ನ ಮನೋಧರ್ಮ ೯-೧-೧೯೩೧ ರಲ್ಲಿಯೆ ರಚಿತವಾಗಿದ್ದ”ಕವಿ” ಎಂಬ ಕವನದಲ್ಲಿ ಪ್ರಕಟವಾಗಿತ್ತು. ಆ ಕವನ‘ಪಾಂಚಜನ್ಯ’ ಹೆಸರಿನ ಸಂಗ್ರಹದಲ್ಲಿ ೧೯೩೩ರಲ್ಲಿಯೇ ಅಚ್ಚಾಗಿತ್ತು. “ವಸಂತ ವನದಲಿ ಕೂಗುವ ಕೋಗಿಲೆ ರಾಜನ ಬಿರುದನು ಬಯಸುವುದಿಲ್ಲ!” ಎಂದು ಪ್ರಾರಂಭವಾಗಿ”ಕವಿಗರಸುಗಿರಸುಗಳ ಋಣವಿಲ್ಲ! ಅವನಗ್ನಮುಖಿ ಪ್ರಲಯಶಿಖಿ!” ಎಂದು ಮುಗಿಯುತ್ತದೆ.

ಈ ರಾಜಕುಮಾರರಿಗೆ ಸಂಬಂಧಪಟ್ಟಂತೆಯೆ ಮುಂದೆ ಸಂಭವಿಸಿದ ಇನ್ನೊಂದು ಘಟನೆಯನ್ನೂ ಇಲ್ಲಿಯೆ ಹೇಳಿಬಿಡುತ್ತೇನೆ. ಪರೀಕ್ಷೆಯಲ್ಲಿ ಅವರ ಉತ್ತರಗಳಿಗೆ ನಾನು ಬೆಲೆಕಟ್ಟಿದಾಗ ತೇರ್ಗಡೆ ಹೊಂದಲೂ ಸಾಲದಷ್ಟು ನಂಬರು ಬರುತ್ತಿತ್ತು. ಕೊನೆಯ ಪರೀಕ್ಷೆಯಲ್ಲಿ ನಾನು ಬೆಲೆ ಕಟ್ಟಿದ ಅವರ ಉತ್ತರಪತ್ರಿಕೆಗಳಿಗೆ ಮೂರನೆಯ ದರ್ಜೆಯಲ್ಲಿ ತೇರ್ಗಡೆಹೊಂದಲು ಸಾಕಾದಷ್ಟು ನಂಬರು ಬಂದಿತು. ಇತರ ವಿಷಯಗಳಲ್ಲಿ ಇತರ ಅಧ್ಯಾಪಕರು ಪ್ರಥಮವರ್ಗದಲ್ಲಿ ತೇರ್ಗಡೆ ಹೊಂದಲು ಬೇಕಾದುದಕ್ಕಿಂತಲೂ ಹೆಚ್ಚು ನಂಬರು ಕೊಟ್ಟು ಅವರಿಗೆ ರ‍್ಯಾಂಕ್ ಬರುವಂತೆ ಮಾಡಿದ್ದರಂತೆ. ನನಗೂ ಹಾಗೆಯೆ ಮಾಡಲು ಮೇಲಿಂದ ಸಲಹೆ ಬಂದಾಗ ನಾನು ಕಟುವಾಗಿ ತಿರಸ್ಕರಿಸಿದೆ. ಅವರು ರಾಜಕುಮಾರರಾಗಿ ಉಳಿದ ವಿದ್ಯಾರ್ಥಿಗಳಿಗಿಂತ ಬಹಲ ಮೇಲುಮಟ್ಟದವರಾಗಿರಬಹುದು;ಆದರೆ ವಿದ್ಯಾರ್ಥಿಗಳಾಗಿ ಇತರರೊಡನೆ ಸಮಾನಸ್ಪರ್ದಿಗಳಾಗಬೇಕಾಗುತ್ತದೆ. ಆ ತರಹದ ಪಕ್ಷಪಾತ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದುಬಿಟ್ಟೆ. ಆದರೂ ಆ ವರ್ಷ ಅವರಿಗೆ ಪ್ರಥಮವರ್ಗದಲ್ಲಿ ತೇರ್ಗಡೆಯಾದುದಲ್ಲದೆ, ರ‍್ಯಾಂಕೂ ಲಭಿಸಿ, ಪದಕಗಳೂ ದೊರೆತವೆಂದು ಕೇಳಿದ್ದೇನೆ! ಸರ್ಕಾರದ ಒಂದು ಇಲಾಖೆಯಂತಿದ್ದ ವಿಶ್ವವಿದ್ಯಾನಿಲಯ ಮತ್ತು ಸರ್ಕಾರದ ಸೇವಕರಾಗಿ ಸಂಬಳ ಪಡೆದು ಬದುಕುತ್ತಿದ್ದ ಅಧ್ಯಾಪಕವರ್ಗ ದೊರೆಗಳ ಕೃಪಾಕಟಾಕ್ಷಕ್ಕೆ ಎದುರುಬಿದ್ದು ದೊರೆ ಮಕ್ಕಳಿಗೆ ಅವಮಾನ ಮಾಡಿ ಅವರ ಕೋಪಕ್ಕೆ ಪಾತ್ರರಾಗಲು ಹೇಗೆತಾನೆ ಸಾಧ್ಯ?

ಇಲ್ಲಿಯೆ ಇನ್ನೊಂದು ವಿಚಾರವನ್ನು ಹೇಳಿಬಿಡುತ್ತೇನೆ. ಅದು ರಾಜತ್ವಕ್ಕೇ ಸಂಬಂಧಿಸಿದ್ದಾದ್ದರಿಂದ. ಆಗ ಸರ್ಕಾರಿ ನೌಕರರಾದವರೆಲ್ಲ ಮೈಸೂರಿನ ಅರಮನೆಯ ದಸರಾ ದರ್ಬಾರಿಗೆ ಖಡ್ಡಾಯವಾಗಿ ಹೋಗಲೇಬೇಕಾಗಿತ್ತು. ಹೋಗದಿದ್ದರೆ ಏಕೆ ಬರಲಿಲ್ಲ ಎಂದು ಸಮಜಾಯಿಸಿ ಕೇಳುತ್ತಿದ್ದರು. ಸರಿಯಾದ ವಿವರಣೆ ಕೊಡದಿದ್ದರೆ ಅದನ್ನು ರಾಜದ್ರೋಹ ಎಂದು ಆಪಾದಿಸಲಾಗುತ್ತಿತ್ತು. ಆದರೆ ನಾನು ಎಂದೂ ದರ್ಬಾರಿಗೆ ಹೋಗಲಿಲ್ಲ. ಹೋಗದಿರುವುದಕ್ಕೆ ಕಾರಣಗಳಲ್ಲಿ ಅವರೇ ಅಚ್ಚುಮಾಡಿದ್ದ ಪದಗಳಲ್ಲಿ Indisposition ಎಂಬ ಒಂದು ಪದ ಇರುತ್ತಿತ್ತು. ಆ ಇಂಗ್ಲಿಷ್ ಪದಕ್ಕೆ “ಅಸ್ವಸ್ಥತೆ” ಮತ್ತು “ಮನಸ್ಸಿಲ್ಲದಿರುವಿಕೆ” ಎಂಬ ಎರಡೂ ಅರ್ಥಗಳಿರುತ್ತವೆ. ಆ ಶ್ಲೇಷಾರ್ಥದ ಸಹಾಯ ಪಡೆದು ನಾನು ಹಾಗೆ ವಿವರಣೆ ಕೇಳಿದಾಗಲೆಲ್ಲ ‘indisposition’ಎಂದು ಪದದ ಬಾಣಪ್ರಯೋಗ ಮಾಡಿಬಿಡುತ್ತಿದ್ದೆ!

ನನಗೂ ಈ ರಾಜತ್ವಕ್ಕೂ, ನನಗೆ ಏನೇನೂ ಇಷ್ಟವಿಲ್ಲದಿದ್ದರೂ, ಋಣಾನುಬಂಧ ನಾನು ವೈಸ್‌ ಛಾನ್ಸಲರ್ ಆಗಿ ನಿವೃತ್ತನಾಗುವವರೆಗೂ ತಪ್ಪಲೆ ಇಲ್ಲ. ಅದನ್ನು ಬಹುಶಃ ಮುಂದೆ ಆ ಸಂದರ್ಭದಲ್ಲಿ ಹೇಳುತೇನೆ.)