೨೧-೧೨-೧೯೩೪:

ಇವೊತ್ತು ಬೆಳಿಗ್ಗೆ ಕಾಲೇಜು… ಮಧ್ಯಾಹ್ನ ಶ್ರೀನಿವಾಸ ಬಂದು ಆಶ್ರಮದ ವಿದ್ಯಾರ್ಥಿನಿಲಯ ವಿದ್ಯಾರ್ಥಿಗಳೆಲ್ಲ ಪ್ರವಾಸ ಹೊರಡುವುದಾಗಿ ತಿಳಿಸಿದ. ಸಾಯಂಕಾಲ ಮದ್ರಾಸಿಗೆ ಹೋಗುವುದಾಗಿಯೂ, ಆಮೇಲೆ ಇತರ ಸ್ಥಳಗಳನ್ನು ನೋಡಿಕೊಂಡು ಅರುಣಾಚಲಕ್ಕೆ ಹೋಗಿ ರಮಣಮಹರ್ಷಿಗಳನ್ನು ನೋಡುವುದಾಗಿಯೂ ಕಾರ್ಯಕ್ರಮವಿರುವುದನ್ನು  ತಿಳಿಸಿದನು.Paul Brunton(ಪಾಲ್ ಬ್ರಂಟನ್) ಬರೆದ A search in secret India ದಿಂದ ರಮಣ ಮಹರ್ಷಿಗಳ ವಿಷಯವನ್ನು ಓದಿ “ನೀನು ಗುರುಮಹಾರಾಜರಂತಹ (ಶ್ರೀ ರಾಮಕೃಷ್ಣರು) ಒಬ್ಬ ವ್ಯಕ್ತಿಯನ್ನು ನೋಡುತ್ತೀಯೆ. ಆದರೆ ಶ್ರೀರಾಮಕೃಷ್ಣರು ರಸಪೂರ್ಣರಾಗಿದ್ದರು. ಇವರು(ರಮಣ ಮಹರ್ಷಿಗಳು) ಮೇಲೆ ನೋಡುವುದಕ್ಕೆ ‘ನೀರಸ’ರಂತೆ” ಎಂದೆ.

ಆಮೇಲೆ ಸಾಯಂಕಾಲ ರಾಮಮಂದಿರದಲ್ಲಿ ನಾರಾಯಣರಾವ್ ವ್ಯಾಸ್ ಎಂಬುವರ ಸಂಗೀತವಾಯ್ತು. ಎಲ್ಲರೂ ಹೊಗಳಿದ್ದರಿಂದ ನಾನೂ ಹೋದೆ. ಮಾನಪ್ಪನೂ ಇದ್ದ. ನನಗೆ ಇತರರು ಹೊಗಳಿದಷ್ಟೇನೂ ಚೆನ್ನಾಗಿರಲಿಲ್ಲ ಸಂಗೀತ. ಅಂತೂ ತಕ್ಕಮಟ್ಟಿಗಿತ್ತು.

ಅಲ್ಲಿಂದ ನಾನೂ ದೇಶಿಕಾನಂದರೂ ಟಾಂಗದಲ್ಲಿ ನೆಟ್ಟಗೆ ರೈಲ್ವೆಸ್ಟೇಷನ್ನಿಗೆ ಬಂದೆವು. ಒಂದು ಕಂಪಾರ್ಟ್‌ಮೆಂಟಿನಲ್ಲಿ ಶಂಕರ್ ಮಹಾರಾಜ್ ಇತರರು ಕುಳಿತಿದ್ದರು. ಅಷ್ಟು ಹುಡುಗರೆಲ್ಲಾ ನಡೆದುಕೊಂಡು ಸಾಮಾನುಗಳನ್ನು ತಲೆಯಮೇಲೆ ಹೊತ್ತುಕೊಂಡು ಬಂದರು. ನಾನು ಟಾಂಗಾ ಮಾಡಿಕೊಳ್ಳಬಾರದಿತ್ತೇ ಎಂದು ಸ್ವಲ್ಪ ಗಲಾಟೆ ಮಾಡಿದೆ. ಶ್ರೀನಿಗೆ ಸ್ವಲ್ಪ ಮನಸ್ಸು ಖಿನ್ನವಾಯಿತೆಂದು ಕಾಣುತ್ತದೆ.

ಅಲ್ಲಿಂದ ಆಶ್ರಮಕ್ಕೆ ಬಂದಮೇಲೆ ದೇಶಿಕಾನಂದರು ಶಂಕರ್ ಮಹಾರಾಜರ ಪುರಾಣ ಹೇಳಿದರು: ಆ ದಿನ ಮಹಂತರಿಗೆ (ಅಧ್ಯಕ್ಷರಿಗೆ) ಗೊತ್ತಿಲ್ಲದೆ ಸುಬ್ರಹ್ಮಣ್ಯ ಐಯರ್ ಅವರಿಂದ ಐವತ್ತು ರೂಪಾಯಿಗಳಿಗೆ ಒಂದು ಚೆಕ್ ಬರೆಯಿಸಿಕೊಂಡಿದ್ದರಂತೆ. ಆಮೇಲೆ ಅದು ಗೊತ್ತಾದಾಗ ಏಕೆ ಹಾಗೆ ಮಾಡಿದಿರಿ ಎಂದು ಕೇಳಲು”ನನ್ನ ಸ್ವಂತ ಜವಾಬ್ದಾರಿಯಿಂದ ಮಾಡಿದ್ದೇನೆ.” ಎಂದುಬಿಟ್ಟರಂತೆ. ಆಮೇಲೆ ಇನ್ನೂ ಬಹಳ ವಿಚಾರ ಮಾತಾಡಿಸಿದೆವು. ಅಂತೂ ಸಂನ್ಯಾಸಿಗಳಾದರೂ ಸಂಸಾರ ತಪ್ಪದು.-ಎಷ್ಟಾದರೂ ಸ್ವಭಾವ ಮನುಷ್ಯರದ್ದಲ್ಲವೇ? ಕೆಲವು ಸಾರಿ ಸಾಧಾರಣ ಜನರಿಗಿಂತ ಹೀನವಾಗಿ ವರ್ತಿಸುತ್ತಾರೆ. ಗುರುದೇವನ ಕಾಪಾಡಬೇಕು.

೨೨-೧೨-೧೯೩೪:

ಬೆಳಿಗ್ಗೆ ಕುಕ್ಕನಹಳ್ಳಿ ಕೆರೆಯ ಸುತ್ತ ಸಂಚಾರ ಹೋಗಿಬರುತ್ತಿದ್ದಾಗ ಮಾನಪ್ಪ ಶ್ರೀಕಂಠಯ್ಯನ ಮನೆಯಿಂದ ಬಂದನು.(ಮಾನಪ್ಪ ಮೈಸೂರಿಗೆ ಬಂದಾಗ ಆಶ್ರಮದಲ್ಲಿಯೂ ಉಳಿಯುತ್ತಿದ್ದನು. ಎ.ಸಿ.ಶ್ರೀಕಂಠಯ್ಯ, ಎ.ಸಿ.ನರಸಿಂಹಮೂರ್ತಿ ಮೊದಲಾದವರು ನಮ್ಮೂರಿಗೆ ಬಂದು ನಮ್ಮ ಮನೆಗಳಲ್ಲಿಯೆ ಉಳಿದು ಉಂಡು ತಿಂದು ನಮ್ಮೊಡನೆ ಏಕೀಭವಿಸಿದ ಮೇಲೆ ಮಾನಪ್ಪನನ್ನು ಅವರು ತಮ್ಮ ಅತಿಥಿಯಾಗಿರಬೇಕೆಂದು ಒತ್ತಾಯ ಪಡಿಸುತ್ತಿದ್ದರು.) ಅವನಿಗೆ ಎಡ್ಡಿಂಗ್ ಟನ್ ನThe Nature of the physical world ಎಂಬ ಪುಸ್ತಕದಿಂದ ಸ್ವಲ್ಪ ಭಾಗವನ್ನು ಓದಿದೆ. ಅಪರಾಹ್ನ ಮೂರುಮುಕ್ಕಾಲು ಗಂಟೆಗೆ ಅವನು ಬೆಂಗಳೂರಿಗೆ ರೈಲಿನಲ್ಲಿ ರಾತ್ರಿ ಹೊರಡುತ್ತೇನೆ ಎಂದು ಹೇಳಿ ಹೊರಟುಹೋದ. (ಬೆಳಿಗ್ಗೆ ಆಶ್ರಮಕ್ಕೆ ಬಂದಿದ್ದವನು ಅಲ್ಲಿಯೆ ನಮ್ಮೊಡನೆ ಊಟಗೀಟ ಮಾಡಿದ್ದನು. ಅವನು ಬೆಂಗಳೂರಿಗೆ ಹೋದದ್ದು ಬಹುಶಃ ಅವನ ತಂದೆಯವರು, ದೇವಂಗಿ ರಾಮಣ್ಣಗೌಡರು, ಆಗ ಬೆಂಗಳೂರಿನಲ್ಲಿ ಹವಾ ಬದಲಾವಣೆಗಾಗಿ ವಾಸವಾಗಿದ್ದುದಕ್ಕೆ ಎಂದು ತೋರುತ್ತದೆ. ೧೨-೨-೧೯೭೫)

೨೩-೧೨-೧೯೩೪:

ಬೆಳಿಗ್ಗೆ ಕಾದಂಬರಿ ಬರೆದೆ.philosophical congressನಲ್ಲಿ ರಾಧಾಕೃಷ್ಣನ್ ಮಾಡಿದ ಭಾಷಣ, ಮೆಕೆನ್ ಜಿ ಮಾಡಿದ ಅಧ್ಯಕ್ಷ ಭಾಷಣ ಓದಿದೆ…. ಸಾಯಂಕಾಲ ಹುಚ್ಚೂರಾಯರು ರಾಮಸ್ವಾಮಪ್ಪನಿಂದ ಮಾಡಿಸಿದ ಹೊಸಬಿರುವನ್ನು ರೂಮಿನಲ್ಲಿಟ್ಟೆ. ಎಂ.ಎಚ್.ಮರಿಯಪ್ಪನು ಕೊಟಡಿಯನ್ನೆಲ್ಲ ಗುಡಿಸಿ ನಿರ್ಮಲಪಡಿಸಿದನು. ಬೀರುವಿಗೆ ಐವತ್ತು ರೂಪಾಯಿ ಆಯಿತು…

(ಮೇಲೆ ಬರುವ ಹುಚ್ಚೂರಾಯರು, ರಾಮಸ್ವಾಮಪ್ಪ,ಮರಿಯಪ್ಪ ಇವರೆಲ್ಲ ನನ್ನ ಸಾಹಿತ್ಯ ಕೃತಿಗಳಿಂದಲೂ ನನ್ನ ಕವನ ವಾಚನಗಳಿಂದಲೂ ಆಕರ್ಷಿತರಾಗಿ ನನಗೆ ಸ್ವಯಂಸೇವೆ ಎಸಗುತ್ತಿದ್ದವರ ಗುಂಪಿಗೆ ಸೇರಿದವರು. ಈಗ ಹುಚ್ಚೂರಾವ್ ಮತ್ತು ರಾಮಸ್ವಾಮಿ ಎಲ್ಲಿದ್ದಾರೋ? ಎಂ.ಹಚ್.ಮರಿಯಪ್ಪ ಮಾತ್ರ ಮುಂದೆ ಡಾIIಎಂ.ಎಚ್.ಮರಿಗೌಡರಾಗಿ ವಿದೇಶಗಳಿಗೆ ಹೋಗಿ ಬಂದು ಕರ್ನಾಟಕದ ಹಾರ್ಟಿಕಲ್ಚರಲ್ (ತೋಟಗಾರಿಕೆ) ಇಲಾಖೆಯ ಮುಖ್ಯಸ್ಥರಾಗಿ ಬಹಳ ಕಾಲ ಅತ್ಯುತ್ತಮಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ, ಅವರು ತೋಟಗಾರಿಕೆಯ ಮುಖ್ಯಸ್ಥರಾದ ಮೇಲೆಯೆ, ಹಿಂದೆ ಸರ್ಕಾರ ಮತ್ತು ಅಧಿಕಾರಿಗಳಿಗೆ ಮಾತ್ರವೆ ಲಭಿಸುತ್ತಿದ್ದ ಸೌಕರ್ಯಗಳು ಸಾಮಾನ್ಯರಿಗೂ ರೈತಾಪಿ ಜನರಿಗೂ ಲಭಿಸುವಂತಾಯಿತು!… ಆಗ ಐವತ್ತು ರೂಪಾಯಿಗೆ ಮಾಡಿಸಿದ ಬೀಟೆ ಮರದ ಬೀರು ಈಗ ಐನೂರು ರೂಪಾಯಿಗೂ ದೊರೆಯಲಾರದು. ಅಲ್ಲದೆ ನಾನು ಮದುವೆಯಾದ ಸಂದರ್ಭದಲ್ಲಿ ಅದೇ ರಾಮಸ್ವಾಮಿ ಎಂಬ ರೈಲ್ವೆ ವರ್ಕ್‌ಷಾಪಿನ ಕೆಲಸಗಾರರು ನನಗೆ ಒಂದು ದೊಡ್ಡ ಮಂಚ ಮಾಡಿಕೊಟ್ಟರು, ಬೀಟೆ ಮರದಲ್ಲಿ. ಅದರ ಕಲೆಗಾರಿಕೆಯೂ ತುಂಬ ಮೇಲುಮಟ್ಟದ್ದಾಗಿದೆ. ಆಗ ಅದಕ್ಕೆ ಅವರು ನನ್ನಿಂದ ಮೂವತ್ತು ರೂಪಾಯಿ ತೆಗೆದುಕೊಂಡರೆಂದು ಜ್ಞಾಪಕ. ಈಗ ಒಂದು ಸಾವಿರ ರೂಪಾಯಿಗೂ ಅದು ದೊರೆಯಲಾರದು. ಅದು ಈಗಲೂ ನನಗೂ ನನ್ನವಳಿಗೂ ನಿಜವಾಗಿಯೂ ‘ಚಂದ್ರಮಂಚ’ವಾಗಿಯೆ ಇದೆ!೧೫-೨-೧೯೭೫.)

೩೧-೧೨-೧೯೩೪;

ಬಂದೀಗೌಡರು, ಭದ್ರಯ್ಯ ನಿನ್ನೆ ಸಾಯಂಕಾಲ ಬಂದಿದ್ದರು . ಶ್ರೀರಂಗಪಟ್ಟಣದಲ್ಲಿ ನಡೆಸುವ ಯುವಜನ ಸಮ್ಮೇಲನಕ್ಕೆ ನನ್ನನ್ನು ಅಧ್ಯಕ್ಷನಾಗಲು ಕೇಳಿದ್ದಾರೆ. ಸಮ್ಮೇಲನ ತೆರೆಯಲು ತಾರಾನಾಥರನ್ನು ಕೇಳಿದ್ದಾರೆ; ಮತ್ತು ಭಾಷಣ ಮಾಡಲು ಕೆ.ಟಿ.ಭಾಷ್ಯಂ ಅವರನ್ನು ಕೇಳಿದ್ದಾರಂತೆ. ಅವರಿಬ್ಬರೂ ಬರುವುದಾದರೆ ನಾನು ಬರುವುದಿಲ್ಲ ಎಂದು ಹೇಳಿಕಳಿಸಿದ್ದೇನೆ. ಕಾರಣಗಳನ್ನೂ ವಿಶದಪಡಿಸಿದ್ದೇನೆ. ನಿನ್ನೆ ಸಾಯಂಕಾಲ ಸ್ವಾಮಿ ದೇಶಿಕಾನಂದರಿಗೆ ನನ್ನ ಅಧ್ಯಕ್ಷ ಭಾಷಣವನ್ನು ಓದಿ ಹೇಳಿದೆ.

History of the Russian Revolution by Leon Trotsky ಓದುತ್ತಿದ್ದೇನೆ. ಸ್ಫೂರ್ತಿಕರವಾಗಿದೆ, ರಸವತ್ತಾಗಿದೆ. ನಮ್ಮ ದೇಶದ ಸ್ಥಿತಿಗತಿಗೆ ಹೋಲಿಸಿಕೊಳ್ಳುತ್ತಲೂ ಇದ್ದೇನೆ. ನಮ್ಮ ದೇಶದ ರಾಜಕೀಯ ಏಳಿಗೆಗೆ ಕೆಲಸ ಮಾಡುವರೆಲ್ಲ ಈ ಪುಸ್ತಕವನ್ನು ಚೆನ್ನಾಗಿ ಅಧ್ಯಯನ ಮಾಡಿದರೆ ಎಷ್ಟೋ ಸಹಾಯವಾಗುವುದರಲ್ಲಿ ಸಂದೇಹವಿಲ್ಲ.

ಇವೊತ್ತು ಬೆಳಿಗ್ಗೆ ಕಲ್ಕತ್ತಾದ ಅದ್ವೈತಾಶ್ರಮದಿಂದ ಯೂನಿವರ್ಸಿಟಿಯವರು ಅಚ್ಚುಹಾಕುತ್ತಿರುವ ನನ್ನ ‘ಶ್ರೀರಾಮಕೃಷ್ಣ’ ಗ್ರಂಥಕ್ಕಾಗಿ ಬ್ಲಾಕು ತಯಾರು ಮಾಡಲು ಚಿತ್ರಗಳನ್ನು ಕಳುಹಿಸಿದ್ದಾರೆ. ಜೈ ಗುರುದೇವ!

೧೩-೧-೧೯೩೫:

ಮಧ್ಯಾಹ್ನ ಒಂದೂವರೆ ಗಂಟೆಗೆ ನ.ಭದ್ರಯ್ಯ ಟ್ಯಾಕ್ಸಿ ತೆಗೆದುಕೊಂಡು ಬಂದರು. ನಾನೂ ಕೂಡಲೆ ಹೊರಟೆ. ಪ್ರೊ.ನಂಜುಂಡಯ್ಯನವರ ಮನೆಯಲ್ಲಿ ಬಿ.ಎಂ.ಶ್ರೀ. ಇಳಿದುಕೊಂಡಲ್ಲಿಗೆ ಹೋದೆ. ಅವರು ಗೇಟಿನ ಬಳಿಗೆ ಬಂದು ನನ್ನನ್ನು ಆದರದಿಂದ ಒಳಗೆ ಕರೆದುಕೊಂಡು ಹೋಗಿ ತಮ್ಮ ಭಾವಂದಿರೂ ನ್ಯಾಯಾಧಿಕಾರಿಗಳೂ ಆದ ಕೃಷ್ಣ ಸ್ವಾಮಿಯವರನ್ನು ಪರಿಚಯ ಮಾಡಿಸಿದರು. ಆಮೇಲೆ ಸ್ವಲ್ಪ ಕಾಫಿ ಬಾಳೆ ಹಣ್ಣುಗಳನ್ನು ಕೊಟ್ಟರು. ಸ್ವಲ್ಪ ಹೊತ್ತು ಮಾತಾಡುತ್ತಿದ್ದೆವು. ಅಷ್ಟರಲ್ಲಿ ಇಂದಿರಮ್ಮನವರೂ ಬಂದರು. ಮೂವರೂ ಭದ್ರಯ್ಯನವರೊಡನೆ ಹೊರಟು ಶ್ರೀರಂಗಪಟ್ಟಣಕ್ಕೆ ಹೋದೆವು, ಸುಮಾರು ಎರಡೂಮುಕ್ಕಾಲು ಗಂಟೆಗೆ. (ದಾರಿಯಲ್ಲಿ ಇಂದಿರಮ್ಮನವರು ತಮ್ಮ ಕೊರತೆ ಕರೆಕರೆಗಳನ್ನು ಹೇಳಿಕೊಳ್ಳುತ್ತಿದ್ದರು.)

ನಮ್ಮನ್ನು ಕರೆದುಕೊಂಡು ಹೋಗಿ, ಉಪಾಹಾರ ಮಾಡಿಸುತ್ತಾ ಕುಳಿತು ಮೂರು ಗಂಟೆಗೆ ಪ್ರಾರಂಭವಾಗಬೇಕಾಗಿದ್ದ ಸಭೆಯನ್ನು ನಾಲ್ಕು ಗಂಟೆಗೆ ಪ್ರಾರಂಭಿಸಿದರು. ಏನು ಮಂದಿಯೋ ಏನೋ ಯಾರಿಗೆ ಬೇಕಿತ್ತು ಆ ತಿಂಡಿ?  ಆ ಕಹಳೆಗೊರಲಿನ ಸಿದ್ಧಲಿಂಗ ದೇವರು ಬೇರೆ! ಆ ಮೂರು ಗಂಟೆಯ ಸುಡುಬಿಸಿಲಿನಲ್ಲಿ ಆ ಪಟ್ಟಣದ ಧೂಳೀಮಯ ಬೀದಿಯಲ್ಲಿ ವಾದ್ಯಸಮೇತ ನಮ್ಮನ್ನು ನಡೆಸಿಕೊಂಡು ಮೆರವಣಿಗೆ ಹೊರಟರು! ನಾನು ಕೊಡೆಯನ್ನೂ ತೆಗೆದುಕೊಂಡು ಹೋಗಿದ್ದಿಲ್ಲ. ಬರೀ ತಲೆ! ನಾನು ಕೇಳಿಯೆ ಬಿಟ್ಟೆ: ‘ಇದೇನು ನಮ್ಮನ್ನು ಪ್ರದರ್ಶಿಸುತ್ತಿದ್ದೀರೊ? ಅಥವಾ ಪಳಗಿಸುತ್ತಿದ್ದೀರೊ?’ ಎಂದು. ಬಿ.ಎಂ.ಶ್ರೀ ಹೇಳಿದರು. ‘ಹಣ್ಣು ಮಾಡುತ್ತಿದ್ದಾರೆ!’ ಎಂದು. ಏನು ಮಂಕುಮಂದಿಯೋ ನಾನು ಬೇರೆ ಕಾಣೆ. ಮೈಸೂರಿನಿಂದ ಹೋದವರನ್ನು ಟೀ ಕೊಟ್ಟು ಹುಷಾರು ಮಾಡಿ,ಮತ್ತೆ ಬಿಸಿಲಿನಲ್ಲಿ ಸುಮರು ಒಂದೂವರೆ ಎರಡು ಮೈಲಿ ನಡೆಸಿ, ನಾಲ್ಕು ಗಂಟೆಗೆ ಉಪನ್ಯಾಸ ಮಂಟಪಕ್ಕೆ ಕರೆದುಕೊಂಡು ಹೋಗುವುದೇ? ಅಲ್ಲಿ ಜನಗಳು ಕಾದೂ ಕಾದೂ ಕಾದೂ ಶಪಿಸುತ್ತಿದ್ದರಂತೆ!

ಅಂತೂ ಕಾರ್ಯವೇನೊ ಸಾಂಗವಾಗಿ ನೆರವೇರಿತು. ಮಾರಾಯ ಆ ಸಿದ್ಧಲಿಂಗದೇವರು ಅರ್ಧಗಂಟೆ ಹೊತ್ತು ಹೇಳಿದ್ದನ್ನೆ ಹೇಳಿ ಹೇಳಿ ನಮ್ಮನ್ನು ಪರಿಚಯಮಾಡಿಕೊಡುವ ಸಂಭ್ರಮದಲ್ಲಿ ತನ್ನ ಬುಡುಬುಡುಕೆಯ ಒಳಗಿನ ಟೊಳ್ಳನ್ನು ಚೆನ್ನಾಗಿ ಪ್ರದರ್ಶಿಸಿದನು.

ಆಮೇಲೆ ‘ಶ್ರೀ’ಯವರು ಸುಮಾರು ಅರ್ಧಗಂಟೆ ಮತ, ಭಾಷೆ, ಜಾತಿ ಇವುಗಳ ತೊಡಕುಗಳ ವಿಚಾರವಾಗಿ ಸ್ವಾರಸ್ಯವಾಗಿ ಮಾತಾಡಿದರು.

ನನ್ನ ಭಾಷಣದ ವಾಚನವೂ ಅರ್ಧ ಗಂಟೆಗೆ ಮುಗಿಯಿತು: ‘ಯುವಕರು ನಿರಂಕುಶಮತಿಗಳಾಗಬೇಕು.’

ಇಂದಿರಮ್ಮನವರ ಸಪ್ಪೆಗೋಳಿನ ಭಾಷಣವೂ ಅರ್ಧ ಗಂಟೆ ಹಿಡಿಯಿತು. ಮಧ್ಯೆ ಕೆಲವು ಹುಡುಗರು ಎದ್ದುಹೋದರು. ಅಮ್ಮನವರಿಗೆ ಬಹಳ ಅಸಮಾಧಾನವಾಯಿತಂತೆ! ತಮ್ಮ ವಿಚಾರದಲ್ಲಿ ಅವರಿಗೆ ಇರಬೇಕಾದುದಕ್ಕಿಂತಲೂ ದೊಡ್ಡ ಅಭಿಪ್ರಾಯವಿದೆ ಎಂದು ತೋರುತ್ತದೆ.

ಆಮೇಲೆ ಕೆ.ಟಿ.ಭಾಷ್ಯಂ ಹತ್ತು ನಿಮಿಷ ಮಾತಾಡಿದರು. ಅವರಿಗೆ ದೇವರ ದಯೆಯಿಂದ ಬೆಂಗಳೂರಿಗೆ ಹೊರಡಲು ರೈಲು ಬರುವ ಹೊತ್ತಾದುದರಿಂದ ಸದ್ಯಃ ಬೇಗ ಮುಗಿಸಿದರು. ಇಲ್ಲದಿದ್ದರೆ ನಮ್ಮನ್ನೆ ಮುಗಿಸಿ ಬಿಡುತ್ತಿದ್ದರು!

ಅವರು ಹೇಳಿದುದರಲ್ಲಿ ಒಂದೇ ಮಾತು ಸತ್ಯವಾಗಿದ್ದುದು. ಅದೇನೆಂದರೆ: ‘ಜಗತ್ತಿನಲ್ಲಿ ಎರಡೇ ಜಾತಿಗಳಿವೆ! ಒಂದು ಮೇಲು, ಒಂದು ಕೀಳಲು. ಉದಾರಿಗಳೆಲ್ಲ ಮೇಲು ಜಾತಿ; ಸ್ವಾರ್ಥಪರರೂ ಸಂಕುಚಿತ ದೃಷ್ಟಿಯವರೆಲ್ಲ ಕೀಳು ಜಾತಿ.’-ಉಳಿದುದೆಲ್ಲ ಬರೀ ಸುಳ್ಳು ಆದರೂ ರಭಸದಿಂದ ಹೇಳುತ್ತಿದ್ದ ಕಾರಣ ಮಂದಮತಿಗಳಾದ ಕೆಲವು ಸದಸ್ಯರು ಕೈಚಪ್ಪಾಳೆ ಹಾಕಿಯೆ ಹಾಕುತ್ತಿದ್ದರು. ಅವರ ಉಪನ್ಯಾಸದ ಸ್ಯಾಂಪಲ್‌:

“ನಮ್ಮ ಭರತಖಂಡ ವಶಿಷ್ಠ ವಿಶ್ವಾಮಿತ್ರರು ಹುಟ್ಟಿದ ಭರತಖಂಡ. ವಶಿಷ್ಠ ವಿಶ್ವಾಮಿತ್ರರು ಇನ್ನೆಲ್ಲಿಯೂ ಹುಟ್ಟಲಿಲ್ಲ. ಹುಟ್ಟಿದ್ದಾರೆಯೇ? ಇಲ್ಲ! ಇಲ್ಲ! (ಕೈಚಪ್ಪಾಳೆ)…..ನಮ್ಮ ದೇಶದಲ್ಲಿ ಈ ಜಾತಿ ಈ ಭೇದ ಕಚ್ಚಾಟ ಇರಲೇ ಇಲ್ಲ. ಎಲ್ಲ ಹೊರದೇಶದವರು ತಂದುಹಾಕಿದ್ದು! ಯುವಕರೇ ನೀವೆಲ್ಲ ಸೇರಿ ದಾಸ್ಯವನ್ನು ಮುರಿಯಬೇಕು”…. ಇತ್ಯಾದಿ.

ಕೊಳಕು ನೀರು ರಭಸವಾಗಿ ಧುಮುಕಿ ನುಗ್ಗಿದರಾಯ್ತು, ಜನರು ಪವಿತ್ರವಾರಿ ಎಂದು ಸ್ನಾನಮಾಡಿ ಪಾನವನ್ನೂ ಮಾಡುತ್ತಾರೆ.

ನನ್ನ ಭಾಷಣ ಮುಗಿದೊಡನೆ ಭಾಷ್ಯಂ “It’s like a poem ಇದು ಹ್ಯಾಗ್ರೀ ಬರೀತೀರಿ? ನಮಗಂತೂ ಆಗೋದಿಲ್ಲ.” ಎಂದರು.

ಹೊರಗೆ ಬಂದಮೇಲೆ ಸಂಪ್ರದಾಯಸ್ಥರಾಗಿ ತೋರುತ್ತಿದ್ದು ಪೇಟಕೋಟು ಉತ್ತರೀಯ ತೊಟ್ಟಿದ್ದ ಮುದುಕರಾದ ದೊಡ್ಡ ಮನುಷ್ಯರೊಬ್ಬರು ನನಗೆ ಹೇಳಿದರು: “ನಾನು ಮುದುಕ. ಆದರೂ ನೀವು ಭಾಷಣ ಮಾಡುತ್ತಿದ್ದಾಗ ರೋಮಾಂಚವಾಯಿತು. I repent for what all I have done in the past! ಅದಕ್ಕೇ ನೋಢಿ, ನಿಮ್ಮ ಭಾಷಣದ ಪುಸ್ತಕ ತೆಗೆದುಕೊಂಡಿದ್ದೇನೆ. ಚೆನ್ನಾಗಿ ಹತ್ತಾರು ಸಲ ಓದಬೇಕು. ನಾನೇನೊ ಮುದುಕನಾಗಿಬಿಟ್ಟೆ. ಯಾರಿಗೂ ಸಹಾಯ ಮಾಡಲಾರೆ. ಆದರೆ ನನ್ನನ್ನೇ ತಿದ್ದಿಸಿಕೊಂಡರೆ ಸಾಕು” ಎಂದರು. ನನಗೆ ಆನಂದವೂ ಆಶ್ಚರ್ಯವೂ ಆಯಿತು.

ದಾರಿಯಲ್ಲಿ ಬರುವಾಗಲೂ ಕಾರಿನಲ್ಲಿಯೆ ಇಂದಿರಮ್ಮನವರು ಕರೆಕರೆ ಗೊಣಗುವುದನ್ನು ಬಿಡಲಿಲ್ಲ. ಹಿಂದಿನ ಸೀಟಿನಲ್ಲಿ ಅವರೊಡನೆ ಕುಳಿತಿದ್ದ ಬಿ.ಎಂ.ಶ್ರೀಗೆ ಸಾಕು ಸಾಕಾಗಿರಬೇಕು!-ತಮ್ಮ ಉಪನ್ಯಾಸವನ್ನು ಯಾರೂ ಸರಿಯಾಗಿ ಕೇಳಲಿಲ್ಲ ಎಂದೂ ಹೆಂಗಸರಿಗೆ ಮರ್ಯಾದೆ ಕೊಡುವುದಿಲ್ಲ ಎಂದೂ ಅವರ ದೂರು! ದೇವರೆ ಗತಿ! ‘ಶ್ರೀ’ಯವರು “ಇಲ್ಲ, ನಿಮ್ಮ ಉಪನ್ಯಾಸ ಚೆನ್ನಾಗಿತ್ತು” ಎಂದು ಆಶ್ವಾಸನೆ ಕೊಟ್ಟರೂ ಅವರು ಸಮಾಧಾನ ಹೊಂದಲಿಲ್ಲ. ಅವರ ಮುಖದಲ್ಲಿ ಅತೃಪ್ತಿಯೂ ವಾಣಿಯಲ್ಲಿ ಹತಾಶೆಯೂ ಚೆನ್ನಾಗಿ ವ್ಯಕ್ತವಾಗಿದ್ದುವು-ಅವರಿಲ್ಲದಿದ್ದರೆ ಬಿ.ಎಂ.ಶ್ರೀಯವರೊಡನೆ ಉಪಯೋಗದ ಮಾತುಗಳಿಂದ ಕಾಲ ಕಳೆಯಬಹುದಾಗಿತ್ತು.

ಇಂದಿರಮ್ಮನವರ ಪರವಾಗಿ: ಅವರ ತಾಯಿಯವರ ರೋಗದ ಮತ್ತು ಶುಶ್ರೂಷೆಯ ಕಷ್ಟದ ವಿಚಾರವಾಗಿ ಅವರು ಹೇಳಿದ್ದುದು ಮರುಕ ಹುಟ್ಟಿಸುವ ಹಾಗಿತ್ತು!”

(“ಶ್ರೀರಂಗಪಟ್ಟಣದ ಯುವಜನ ಸಮ್ಮೇಳನದ ನನ್ನ ಭಾಷಣ “ಯುವಕರು ನಿರಂಕುಶಮತಿಗಳಾಗಬೇಕು” ಎಂಬುದು ಪತ್ರಿಕೆಗಳಲ್ಲಿ ವರದಿಯಾದುದೆ ತಡ ಕೆಲವು ಸಂಪ್ರದಾಯದ ಮೂಢಮತಿಗಳಾದ ಹಾರುವರಿಗೆ ತಲೆಕಟ್ಟಂತಾಯಿತು. ಪತ್ರಿಕೆಗಳಲ್ಲಿ ನಾನಾ ವಿಧವಾದ ಟೀಕೆ ಟಿಪ್ಪಣಿ ಖಂಡನೆಗಳೆಲ್ಲ ಬಂದವಂತೆ. ಆದರೆ ಆಶ್ರಮದ ನಿರುಪದ್ರವ ಪ್ರಶಾಂತ ಜಾತ್ಯತೀತ ವಾತಾವರಣದಲ್ಲಿ ಇರುತ್ತಿದ್ದ ನನಗೆ ಅದರ ಅರಿವಾಗಲೇ ಇಲ್ಲ. ಆದ್ದರಿಂದ ಬಿಸಿ ಮುಟ್ಟಲೂ ಅವಕಾಶವಾಗಲಿಲ್ಲ. ಆಗ ಆಶ್ರಮಕ್ಕೆ ಕನ್ನಡ ಪತ್ರಿಕೆ ಬರುತ್ತಿರಲಿಲ್ಲ. ಹಿಂದೂಪತ್ರಿಕೆ ಅಂತಹ ಸ್ಥಳೀಯ ವಿಷಯಗಳನ್ನು ಲೆಕ್ಕಿಸುತ್ತಿರಲಿಲ್ಲ.

ಸ್ವಲ್ಪ ದಿನಗಳಾದ ಮೇಲೆ ನನಗೆ ಮಿತ್ರರಿಂದ ಅನೇಕ ವಿಷಯ ತಿಳಿಯಿತು. ಒಂದು ಪತ್ರಿಕೆಯಲ್ಲಿ ಬ್ರಾಹ್ಮಣರ ಅಗ್ರಗಣ್ಯ ವ್ಯಕ್ತಿಯಾಗಿದ್ದ ದೇವಡು ನರಸಿಂಹಶಾಸ್ತ್ರಿ ಅನೇಕ ಕಾಲಂಗಳ ದೀರ್ಘಲೇಖನ ಬರೆದು ನನ್ನನ್ನು ಖಂಡಿಸಿ, ಸರಕಾರವೂ ವಿಶ್ವವಿದ್ಯಾನಿಲಯವೂ ಗಮನಕ್ಕೆ ತಂದುಕೊಂಡು ನನ್ನನ್ನು ಶಿಕ್ಷಿಸಬೇಕೆಂದು ಕೇಳಿದ್ದರಂತೆ. ಆದರೆ ನಾನು ಅದನ್ನೆಲ್ಲ ಮನಸ್ಸಿಗೆ ಹಾಕಿಕೊಂಡಿರಲಿಲ್ಲ.

ಸರಕಾರ ಪತ್ರಿಕೆಯಲ್ಲಿ ಪ್ರಕಟವಾದ ಉಗ್ರ ಟೀಕೆಗಳನ್ನು ಗಮನಿಸಿ ವಿಶ್ವವಿದ್ಯಾನಿಲಯಕ್ಕೆ ತನಿಖೆ ಮಾಡಿ ವರದಿ ಒಪ್ಪಿಸಲು ಕೇಳಿತಂತೆ. ವಿಚಾರಣೆಯ ಕರ್ತವ್ಯ ಪ್ರೊ|| ವೆಂಕಣ್ಣಯ್ಯನವರ ಮೇಲೆ ಬಿತ್ತು. ಏಕೆಂದರೆ ನಾನು ಕನ್ನಡ ಲೆಕ್ಚರರ್ ಆಗಿ ಅವರ ಅಧೀನಕ್ಕೆ ಒಳಪಟ್ಟಿದ್ದರಿಂದ. ಒಂದು ದಿನ ವೆಂಕಣ್ಣಯ್ಯನವರು ನನ್ನನ್ನು ಕೇಳಿದರು, ತಮಗೆ ಬಂದಿದ್ದ ಆಜ್ಞೆಯ ವಿಚಾರ ಏನನ್ನೂ ತಿಳಿಸಿದೆ, ಲೋಕಾಭಿರಾಮವಾಗಿ ಎಂಬಂತೆ: ‘ಅದೇನಯ್ಯಾ ನೀನು ಭಾಷಣ ಮಾಡಿದಿಯಂತೆ ಶ್ರೀರಂಗಪಟ್ಟಣದಲ್ಲಿ? ತಂದು ಕೊಡುತ್ತೀಯೇನು ನನಗೆ. ‘ಅಚ್ಚಾಗಿದ್ದ ಕೆಲವು ಪ್ರತಿಗಳು ನನ್ನಲ್ಲಿ ಇದ್ದುವು. ಅವರಿಗೆ ಒಂದನ್ನು ಕೊಟ್ಟೆ.

ಅವರು ನನಗೆ ಮುಂದೆ ಎಂದೂ ಯಾವ ವಿಚಾರವನ್ನೂ ಹೇಳಲಿಲ್ಲ. ಆಮೇಲೆ ತಿಳಿದುದನ್ನು ಬರೆಯುತ್ತಿದ್ದೇನೆ. ನನ್ನ ಭಾಷಣವನ್ನು ಓದಿದ ಅವರು ವಿಶ್ವವಿದ್ಯಾನಿಲಯಕ್ಕೆ ಬರೆದ ಕಾಗದದಲ್ಲಿ ‘ನಾನು ನನ್ನ ಮಗನಿಗೆ ಬುದ್ಧಿ ಹೇಳಬೇಕಾಗಿ ಬಂದರೆ ಇದಕ್ಕಿಂತಲೂ ವಿಚಾರಪೂರ್ವಕವಾಗಿ ಸೊಗಸಾಗಿ ಸಮರ್ಥವಾಗಿ ಹೇಳಲಾರೆ.’ ಎಂದು ಬರೆದಿದ್ದರಂತೆ!)

೧-೪-೧೯೩೫-೧೫-೬-೧೯೩೫:

ಈ ಸಾರಿಯ ರಜಾದಿನಗಳು ಬಹಳ ಸುಖಸಂತೋಷ ಸಾಹಸ ಆರೋಗ್ಯಗಳಿಂದ ಕೂಡಿದ್ದುವು. ಶಿವಮೊಗ್ಗೆಯಲ್ಲಿ ಒಂದೆರಡು ದಿನಗಳಿದ್ದು ಕಾರ್ ನಲ್ಲಿ ಇಂಗ್ಲಾದಿಗೆ ಹೋದೆವು:

ಇಂಗ್ಲಾದಿಯಲ್ಲಿ ಒಂದು ದೊಡ್ಡಬೇಟೆ ಏರ್ಪಾಡಾಗಿತ್ತು. ಮೈಸೂರಿನಲ್ಲಿ ಓದುತ್ತಿದ್ದು ರಜಾಕ್ಕೆ ಊರಿಗೆ ಬಂದಿದ್ದ ಎಲ್ಲ ಹುಡುಗರೂ ಮತ್ತು ನಮ್ಮ ಅತಿಥಿಗಳಾಗಿ ಆಗಮಿಸಿದ್ದ ಬಯಲುಸೀಮೆಯ ಮಿತ್ರರೂ ಅದರಲ್ಲೆ ಪ್ರೇಕ್ಷಕರೂಪದಲ್ಲಿ ಭಾಗಿಗಳಾಗಿದ್ದರು. ಬೆಳಿಗ್ಗೆ ಕಾಫಿತಿಂಡಿ ಪೂರೈಸಿ ಹೊರಟೆವು, ಕಾಡಿಗೆ ಲಗ್ಗೆ ನುಗ್ಗಲು. ಮಧ್ಯಾಹ್ನಾದ ಊಟಕ್ಕೆ ಬುತ್ತಿ ಕಟ್ಟಿ ತರಲು ಆಳುಗಳನ್ನು ನೇಮಿಸಲಾಗಿತ್ತು. ಹಳು ನುಗ್ಗಲು ಜನರೂ ನಾಯಿಗಳೂ ಅನೇಕರು ಜಮಾಯಿಸಿದ್ದರು. ನಾಯಿಗಳಿಗೂ ಬುತ್ತಿ ತರುವಂತೆ ಹೇಳಲು ಮರೆತಿರಲಿಲ್ಲ.

ಅಂದಿನ ಶಿಕಾರಿಯ ಶಿಖರವೆಂದರೆ ಒಂದು ಎಂಟು ಹತ್ತು ಆಳು ಹೊರೆಯ ದೊಡ್ಡ ಹಂದಿಯನ್ನು ಹೊಡೆದದ್ದು. ಆ ಹಂದಿಯನ್ನು ಎದುರಿಗೆ ಹಾಕಿಕೊಂಡು ನಾವೆಲ್ಲರೂ ಫೋಟೋ ತೆಗೆಸಿಕೊಂಡೆವು: ಶೇಷಪ್ಪಗೌಡರು, ವೆಂಕಟಯ್ಯ, ಹಿರಿಯಣ್ಣ, ನಾನು, ಮಾನಪ್ಪ, ನರಸಿಂಹಮೂರ್ತಿ, ಯಲ್ಲು-(ಹಳುನುಗ್ಗುವವರ ಮುಖ್ಯಸ್ಥ) – ಮುಂತಾದವರು. ಆ ಹಂದಿ ತುಂಬ ವಯಸ್ಸಾಗಿ ಬಲಿತಿದ್ದು ದೊಡ್ಡ ದೊಡ್ಡ ಗಾತ್ರದ ಕೋರೆಗಳಿದ್ದುದರಿಂದ ಆ ಕೋರೆಗಳಲ್ಲಿ ಮುತ್ತುಗಳಿರುತ್ತವೆ ಎಂಬ ಪ್ರತೀತಿಯಿತ್ತು . ಅಲ್ಲದೆ ನಾವು ಓದುತ್ತಿದ್ದ ಕಾವ್ಯಗಳಲ್ಲಿಯೂ  ಕವಿಯ ಉತ್‌ಪ್ರೇಕ್ಷೆ ಪುಳಿಂದಿಯರನ್ನು ಚಿತ್ರಿಸುತ್ತಾ ಅವರು ಬಿದಿರು ಮತ್ತು ಹಂದಿಯ ಕೋರೆಗಳಿಂದ ಉದುರಿದ ಮುತ್ತುಗಳನ್ನು ಆಯುತ್ತಿದ್ದರು ಎಂಬ ವರ್ಣನೆಗಳನ್ನು ನೋಡಿದ್ದೆವು. ಅದಕ್ಕೋಸ್ಕರ ಹಂದಿಯನ್ನು ಹಸಿಗೆ ಮಾಡುವವರಿಗೆ ಕೋರೆಯಲ್ಲಿರಬಹುದಾದ ಮುತ್ತುಗಳನ್ನು ಹುಡುಕುವಂತೆ ಹೇಳಿದ್ದೆವು. ತರುವಾಯ ಆ ಮುತ್ತುಗಳನ್ನು ತಂದು ತೋರಿಸಿದರು. ಗುಂಡುಗುಂಡಗೆ ಬೆಳ್ಳಗಿದ್ದುವು. ಬಹುಶಃ ಕೋರೆಯ ಎಲುಬಿನ ಅಂಶಗಳಾಗಿ ಕ್ಯಾಲ್‌ಸಿಯಂ ರಚನೆಗಳಾಗಿದ್ದುವೊ ಏನೊ!

ಈ ವರ್ಷದ ಬೇಸಿಗೆಯ ರಜಾಕಾಲದಲ್ಲಿ ನಾವು ಮಾಡಿದ ಅಥವಾ ನಮಗೆ ಒದಗಿದ ಮತ್ತೊಂದು ಅನಿರೀಕ್ಷಿತ ಸಾಹಸವೆಂಧರೆ-ಹುಲಿ ಷಿಕಾರಿ, ದೊಡ್ಡ ಪಟ್ಟೆಹುಲಿ, ಹೆಬ್ಬುಲಿ!

ಸಾಮಾನ್ಯವಾಗಿ ಇಂಗ್ಲಾದಿಯಲ್ಲಿ ನಾವೆಲ್ಲ ಉಳಿದಾಗ ಸಂಜೆಹೊತ್ತು ಬ್ಯಾಡ್‌ಮೆಂಟನ್ನನ್ನೋ ವಾಲಿಬಾಲನ್ನನ್ನೋ ಆಡುತ್ತಿದ್ದೆವು. ಮತ್ತೆ ಒಮ್ಮೆಮ್ಮೆ ಬೈಗಿನ ಮರಸು ಬೇಟೆಗೂ ಹೋಗುತ್ತಿದ್ದೆವು. ಅಂದರೆ ಪ್ರಾಣಿಗಳು ಓಡಾಡಬಹುದಾದ ಕಾಡ ನಡುವಣ ‘ಕಂಡಿಗಳಲ್ಲಿ’ ಮರದ ಮೇಲೆಯೊ ಅಟ್ಟಣೆಯಲ್ಲಿಯೊ ನೆಲದ ಮೇಲಣ ಜಿಗ್ಗು ಸೊಪ್ಪು ಅಡಕಿ ಮುಚ್ಚಿದ ಮರೆಯಲ್ಲಿಯೊ ಕೋವಿ ಹಿಡಿದು ಕಾಯುತ್ತಾ ಕೂರುವುದು.

ಆವೊತ್ತು ಸಾಯಂಕಾಲ ಸುಮಾರು ನಾಲ್ಕು ನಾಲ್ಕೂವರೆಗೆ ನಾವೆಲ್ಲ ಮರಸು ಕೂರಲು ಹೋಗುವ ಮನಸ್ಸು ಮಾಡಿದೆವು. ವಾಸ್ತವವಾಗಿ ನಮಗೆ ಬೇಟೆಯಾಡುವುದೆ ಮುಖ್ಯ ಗುರಿಯಾಗಿರಲಿಲ್ಲ. ಆ ನೆವದಲ್ಲಿ ಬ್ಯಾಡ್‌ಮೆಂಟನ್‌ವಾಲಿಬಾಲ್‌ಗಳಿಗಿಂತ ಬೇರೆಯಾದ ಏನೊ ಒಂದು ವೈವಿಧ್ಯವೆ ನಮಗೆ ಬೆಕಾಗಿತ್ತು. ಕಾಡಿನಲ್ಲಿ ಸುತ್ತಿ ಮೃಗಗಳಿಗಾಗಿ ನಿರೀಕ್ಷಿಸುವ ಅನಿರೀಕ್ಷತೆಯನ್ನನುಭವಿಸುವ ಮನಃಸಾಹಸದ ಸಂತೋಷಕ್ಕಾಗಿಯೆ ನಮ್ಮಲ್ಲಿ ಕೆಲವರು ಹೊರಟಿದ್ದೆವು. ಆದ್ದರಿಂದ ಬಯಲುಸೀಮೆಯ ಮಿತ್ರರಿರಲಿ ನಾನು ಕೂಡ ಕೋವಿ ಹಿಡಿದಿರಲಿಲ್ಲ. ವೆಂಕಟಯ್ಯ ಹಿರಿಯಣ್ಣ ಇಬ್ಬರೆ ತೋಟಾ ಕೋವಿ ಹಿಡಿದಿದ್ದರು. ಮತ್ತೆ ನಾವೆಲ್ಲ-ನಾನು, ಮಾನಪ್ಪ, ನರಸಿಂಹಮೂರ್ತಿ, ಕೃಷ್ಣಮೂರ್ತಿ, ವಿಜಯದೇವ, ಶ್ರೀನಿವಾಸ-ವಾಕಿಂಗ್‌ಹೋಗುವವರಂತೆ ಹೊರಟಿದ್ದೆವು. ಷಿಕಾರಿಗೆ ಹೋಗುವಾಗ ಬಿಳಿ ಬಟ್ಟೆ ಹಾಕಿಕೊಳ್ಳಬಾರದು ಎಂಬ ಮಾಮೂಲನ್ನೂ ತಿರಸ್ಕರಿಸಿದ್ದೆವು!

ಇಂಗ್ಲಾದಿಯ ಹಳೆಯ ಪೋರ್ಡ್ ಕಾರಿನಲ್ಲಿ ನಾವಷ್ಟು ಜನರೂ ಕಿಕ್ಕಿರಿದು ಹತ್ತಿದ್ದೆವು. ವೆಂಕಟಯ್ಯನೆ ಡ್ರೈವರ್. ಕೊಪ್ಪ-ತೀರ್ಥಹಳ್ಳಿ ರಸ್ತೆಯಲ್ಲಿ ಇಂಗ್ಲಾದಿಯಿಂದ ತೀರ್ಥಹಳ್ಳಿಯ ಕಡೆಗೆ ಸುಮಾರು ಎರಡೂವರೆ ಮೂರು ಮೈಲಿ ಹೋಗಿ, ರಸ್ತೆಯ ಪಕ್ಕಕ್ಕೆ ಕಾಡು ಇಡಿದು ಏರಿದ್ದ ತಿರುಳೆಬೈಲು ಗುಡ್ಡದ ಬುಡದಲ್ಲಿ ಕಾರು ನಿಲ್ಲಿಸಿದೆವು. ಆಗಿನ ಕಾಲದಲ್ಲಿ ಅತ್ಯಂತ ನಿಸ್ಸಂಚಾರವಾಗಿದ್ದ ಆ ರಸ್ತೆಯಲ್ಲಿ ಮನುಷ್ಯ ಸಂಚಾರವೂ ವಿರಳವಾಗಿದ್ದು ಗಾಡಿ ಕಾರುಗಳಂತೂ ಅಪೂರ್ವ ವಸ್ತುಗಳಾಗಿದ್ದುವು. ಕಾರು ಎಂದರೆ ಹಳ್ಳಿಗರಿಗೆ ಭಯಮಿಶ್ರಿತ ಗೌರವ ವಸ್ತುವಾಗಿದ್ದು ಯಾರೋ ಅದರ ಬಳಿ ಸಾರುವ ಆತಂಕ ಇರಲೂ ಸಾಧ್ಯವಿರಲಿಲ್ಲ!)

ಎಲ್ಲರೂ ಗುಡ್ಡವೇರಿದೆವು. ಬರಬರುತ್ತಾ ಕಾಡು ದಟ್ಟವಾಗುತ್ತಿತ್ತು. ಹೆಮ್ಮರಗಳ ಬುಡಗಳಲ್ಲಿ ಗಿಜಿರು ಹಳು ಸಾಂದ್ರವಾಗತೊಡಗಿತು. ಸಾಯಂಕಾಲ ಗೊತ್ತು ಕೂರಲು ಹೋಗುವ ಹಕ್ಕಿಗಳ ಕೊರಳೂ ಕ್ರಮಕ್ರಮೇಣ ವಿರಳವಾಯ್ತು. ಕಾಡಿನ ಒಳಗೆ ಹೋದಂತೆಲ್ಲ ಬೇಸಗೆಯ ಬೇಗೆ ಇಳಿಮುಖವಾಗಿ ತಂಪುಗೊಳ್ಳತೊಡಗಿತು. ಮರಸಿಗೆ ಕೂರಲು ಹೋಗುತ್ತಿರವಾಗ ಯಾರೊಬ್ಬರೂ ಮಾತಾಡಬಾರದು, ಸೀನಬಾರದು, ಕೆಮ್ಮಬಾರದು, ಏನೊಂದು ಸದ್ದನ್ನೂ ಮಾಡಬಾರದು ಎಂದು ಕಟ್ಟಾಣೆಯಾಗಿತ್ತು.

ವೆಂಕಟಯ್ಯ, ಹಿರಿಯಣ್ಣ ಮತ್ತು ಶೇಷಪ್ಪಗೌಡರು ಇವರು ಮೂವರೂ ಕೋವಿ ಹಿಡಿದಿದ್ದವರು. ಶೇಷಪ್ಪಗೌಡರು ಹಳಬರಾಗಿ ಅನುಭವಶಾಲಿಗಳಾಗಿದ್ದರಿಂದ ಆ ಕಾಡಿನ ಮೃಗಸಂಚಾರದ ‘ಕಂಡಿ’ಗಳನ್ನೆಲ್ಲ ಅರಿತವರಾಗಿದ್ದರು. ಅವರೇ ಮುಂದಾಳಾಗಿ ಮಾರ್ಗದರ್ಶನ ಮಾಡುತ್ತಿದ್ದರು. ಒಂದೆರಡು ಫರ್ಲಾಂಗು ಗುಡ್ಡವೇರಿದ ಮೇಲೆ ಶೇಷಪ್ಪಗೌಡರು ನಿಂತರು. ಕೈಬಾಯಿ ಕಣ್ಣುಸನ್ನೆಯಿಂದಲೆ ಮೃಗಯಾ ಭಾಷೆಯನ್ನಾಡಿ, ವೆಂಕಟಯ್ಯನನ್ನುಒ ಆ ‘ಕಂಡಿ’ಯಲ್ಲಿ ಕೂರುವಂತೆ ಹೇಳಿದರು. ಮುಂದೆ ಕಾಡು ಕಠಿಣವಾಗುತ್ತಿರುವುದನ್ನು ಗಮನಿಸಿದ ಬಯಲು ಸೀಮೆಯ ನಾಗರಿಕರು ಕೈಸನ್ನೆ ಕಣ್ಣುಸನ್ನೆಯಿಂದಲೆ ತಾವೂ ವೆಂಕಟಯ್ಯನವರೊಡನೆಯೆ ಇರುವುದಾಗಿ ಹೇಳಿದರು. ನಾನೂ ಬರಿಗೈಯಲ್ಲಿ ಇದ್ದುದರಿಂದ ಅಲ್ಲಿಯೆ ಕೂರುವುದಾಗಿ ಹೇಳಿದೆ. ಶ್ರೀನಿವಾಸ, ವಿಜಯದೇವ, ಮಾನಪ್ಪರೂ ನಮ್ಮ ಜೊತೆಯೆ ನಿಂತರು. ಶೇಷಪ್ಪಗೌಡರು ತಲೆದೂಗಿ ನಗುಮೊಗವಾದರು, ಇಷ್ಟು ಜನ ಒಂದುಕಡೆ ಮರಸಿಗೆ ಕೂತರೆ ಷಿಕಾರಿ ಆದಂತೆ ಎಂದು!

ನಮ್ಮೆಲ್ಲರನ್ನೂ ಅಲ್ಲಿ ಬಿಟ್ಟು ಹಿರಿಯಣ್ಣ ಶೇಷಪ್ಪಗೌಡರು ಮುಂದೆ ಇನ್ನೂ ದಟ್ಟಯಿಸಿದ ಕಾಡಿನೊಳಗೆ ನಡೆದು ಕಣ್ಮರೆಯಾದರು.

ಅಲ್ಲಿಗೆ ಸುಳಿಯುವ ಪ್ರಾಣಿಗಳಿಗೆ ಮನುಷ್ಯರಿರುವುದು ಗೊತ್ತಾಗದಂತೆ ನಮ್ಮನ್ನೆಲ್ಲ ಎಲ್ಲಿ ಅಡಗಿಸುವುದೆಂದು ವೆಂಕಟಯ್ಯಗೆ ತಲೆನೋವು! ಕೆಲವರು ಒಂದು ಮರದ ಬುಡದ ಪೊದೆಯಲ್ಲಿ ಮರೆಯಾಗಿ ಕೂರಲು ಒಪ್ಪಿದರು. ಆದರೆ ಮತ್ತೆ ಕೆಲವರು ನೆಲದ ಮೇಲೆ ಕೂತರೆ ಏನಾದರೂ ಅಪಾಯವಾಗುತ್ತದೆ ಎಂದು ಹೆದರಿ ಮರದ ಮೇಲೆಯೆ ಹತ್ತಿ ಕೂರುತ್ತೇವೆ, ಸ್ವಲ್ಪವೂ ಸದ್ದುಮಾಡುವುದಿಲ್ಲ ಎಂದರು. ವೆಂಕಟಯ್ಯ ಒಂದು ಮರ ಹತ್ತಿ ಕವಲುಗೊಂಬೆಯ ಸಂಧಿಯಲ್ಲಿ ಕೋವಿ ಹಿಡಿದು ಕೂತನು. ಅದರ ಬಳಿಯ ಮರದಲ್ಲಿ ನೆಲದಿಂದ ಹೆಚ್ಚೇನೂ ಎತ್ತರವಿರದ ಹೆಗ್ಗೊಂಬೆಗಳಲ್ಲಿ ನಾವೂ-ನರಸಿಂಹಮೂರ್ತಿ, ಕೃಷ್ಣಮೂರ್ತಿ, ನಾನು-ಕುಳಿತೆವು.

ನಾನು ನಾನಾ ವಿಧವಾದ ತತ್ವಚಿಂತನೆಯಲ್ಲಿ ಮುಳುಗಿದೆ; ಕವಿಸಹಜ ಮನೋಧರ್ಮದಿಂದ ವನ್ಯರಮ್ಯತೆಯನ್ನು ಆಸ್ವಾದಿಸಿದೆ. ಅರಣ್ಯದ ನಿಶ್ಯಬ್ದತೆಯ ಸದ್ದುಗಳನ್ನು  ಆಳಿಸಿದೆ: ಮೆಲುಗಾಳಿಗೆ ಹಣ್ಣೆಲೆ ಉದುರುವ ಸದ್ದು, ಆಗೊಂದು ಈಗೊಂದು ಒಣಗಿದ ಕಡ್ಡಿ ಮರದಿಂದ ಬೀಳುವ ಸದ್ದು; ನೆಲದ ಮೇಲೆ ದಟ್ಟಯಿಸಿ ಬಿದ್ದಿದ್ದ ತರಗೆಲೆಗಳಲ್ಲಿ ಏನೊ ಸಣ್ಣಪುಟ್ಟ ಜಂತುಗಳು ತಿರುಗಾಡಿದ ಸದ್ದು; ಅನತಿದೂರದಲ್ಲಿ ಮಂಗಟ್ಟೆಹಕ್ಕಿ ಕೂಗಿದ ಸದ್ದು; ಯಾವುದೊ ಬಿದಿರುಮಳೆಯಲ್ಲಿ ಗಾಳಿಗೆ ಬಿದಿರು ಬಿದಿರಿಗೆ ಉಜ್ಜುವ ಕೀರಲು ಸದ್ದು; ಯಾವುದೊ ಮರದ ಒಣಗೊಂಬೆಯಲ್ಲಿ ಮರಕುಟಿಗನ ಕೊಕ್ಕು ಕೊಟಗುವ ಸದ್ದು; ಎಲ್ಲಿಂದಲೋ ಬಂದು ಎಲ್ಲಿಗೋ ಹೋಗುವ ಗಿಳಿಹಿಂಡಿನ ಗುಂಪುಲಿ ಸದ್ದು; ಏಕಾಂಗಿಯಾದ ಕಾಮಹಳ್ಳಿಯ ಇಂಪುಲಿ ಸದ್ದು; ಒಮ್ಮೆಮ್ಮೆ ದೂರದ ಕಣಿವೆಗಳಲ್ಲಿರುವ ಹಳ್ಳಿಮನೆಗಳ ನಾಯಿ ಬೊಗಳುವ ಸದ್ದು; ಹಾಗೆಯೆ ದನ ಕೊಟ್ಟಿಗೆಗೆ ಹೋಗುವ ಹಂಬಾ ಸದ್ದು; ಸದ್ದಿಲ್ಲದ ಆ ಅಡವಿಯ ನಿಃಶಬ್ದತೆ ಎಷ್ಟೊಂದು ಮರಿಸದ್ದುಗಳಿಂದ ಸಂಭವಿಸುತ್ತದೆ!

ಕ್ರಮೇಣ ಬೈಗಾಗುತ್ತಾ ಬಂದಂತೆಲ್ಲ ಮರಿಸದ್ದುಗಳೂ ಕಡಮೆಯಾಗುತ್ತಾ ಬಂದು ನಿಜವಾದ ಕಾಂತಾರ ನೀರವತೆ ನೆಲಸತೊಡಗಿತು. ಕತ್ತಲೆಯಾಗಿಲ್ಲದಿದ್ದರೂ ಕಾಡಿನ ಮಬ್ಬುಗಪ್ಪು ಹುಬ್ಬುಗಂಟಿಕ್ಕಿಂದಾಗಿ ನಮ್ಮ ತಾಳ್ಮೆಗೆ ಉಸಿರುಕಟ್ಟುವಂತಾಯಿತು. ಮೊದಲುಮೊದಲು ಯಾವುದಾದರೂ ಜಂತು ಸುಳಿಯಬಹುದೆಂಬ ನಿರೀಕ್ಷಣೆಯ ಕುತೂಹಲದಿಂದ ಬೇಜಾರಾಗಿರದಿದ್ದವರಿಗೆ ಬರುಬರುತ್ತಾ ಬೇಸರವಾಗತೊಡಗಿತ್ತು. ಮೇಲಿದ್ದವರಲ್ಲಿಯೊ ಕೆಳಗಿದ್ದವರಲ್ಲಿಯೊ ಒಬ್ಬಿಬ್ಬರು ತಮ್ಮ ಸರ್ವಪ್ರಯತ್ನವನ್ನೂ ಮೀರಿ ಆಕಳಿಸಿದ್ದರು! ಒಬ್ಬರಂತೂ ಆಕಳಿಸುವಾಗ ಅಭ್‌ಆಸಬಲದಿಂದ ಬಾಯಿಗೆದುರಾಗಿ ಆಮಂಗಳ ಪರಿಹಾರಾರ್ಥವಾಗಿ ಚಿಟಿಕೆ ಹೊಡೆದು ಇತರರ ದೃಷ್ಟಿಕೋಪಕ್ಕೆ ಪಕ್ಕಾಗಿದ್ದರು! ‘ಕಾಯುವುದು ಕಾರ್ಯಸಾಧನೆಗಿಂತ ಕಷ್ಟತರ!’ ಎಂಬ ‘ಯಮನ ಸೋಲು’ ನಾಟಕದ ಒಂದು ಸೂಕ್ತಿ, ಆ ನಾಟಕ ಪ್ರದರ್ಶನದಲ್ಲಿ ಅನೇಕ ಸಲ ಭಾಗವಹಿಸಿದ್ದ ನಮಗೆ-ನರಸಿಂಹಮೂರ್ತಿ, ಕೃಷ್ಣಮೂರ್ತಿ, ನಾನು-ಸಾಕ್ಷಾತ್ಕಾರವಾಗತೊಡಗಿತ್ತು! ಕತ್ತಲಾಗುವವರೆಗೆ ಮರಸು ಕೂರಲೆಬೇಕಾದುದು ಅನಿವಾರ್ಯವಾದುದರಿಂದ ಹೇಗೊ ತೆಪ್ಪಗೆ ಕೂತಿದ್ದೆವು!….

ಇದ್ದಕ್ಕಿದ್ದ ಹಾಗೆ ನಮ್ಮ ಬೇಸರದ ಕೋವಿಮಸಿಗೆ ಕಿಡಿತಗುಲಿ ಸಿಡಿದೆದ್ದು ಭಯಂಕರ ಉದ್ವೇಗವಾಗಿ ಆಸ್ಫೋಟಿಸಿತ್ತು!

ಢಾಂ! ಎಂದು ಒಂದು ತೋಟಾಕೋವಿಯ ಈಡು ಕಾಡನ್ನೆಲ್ಲ ಕಲಕಿಬಿಟ್ಟಿತು! ಅದನ್ನು ಹಿಂಬಾಲಿಸಿ, ಅದರೊಡನೊಡನೆಯೆ, ಒಂದು ಹುಲಿಯ ಹೇರಾರ್ಭಟೆ ಕಿವಿಗಪ್ಪಳಿಸಿತ್ತು! ಏನು? ಬಂತು? ಎಂದು ನಾವು ಚೇತರಿಸಿಕೊಳ್ಳುವುದರಲ್ಲಿಯೆ ಹುಲಿಯ ಅಬ್ಬರವನ್ನು ಬೆಂಬತ್ತಿದಂತೆ ಮತ್ತೊಂದು ಈಡೂ ಮೊಳಗಿತ್ತು-ಢಾಂ!

ಮತ್ತೆ ಸಂಪೂರ್ಣ ನಿಶ್ಯಬ್ದ! ಕಾಡೆ ಮರವಟ್ಟಿತೆಂಬಂತೆ!

ಮೊದಲನೆಯ ಈಡು ಕೇಳಿಸಿದೊಡನೆಯೆ ನಾವೆಲ್ಲ ಚಕಿತಚಿತ್ತರಾದೆವು, ಸಾಹಸೋಜ್ವಲರಾಗಿ ಸಂತೋಷಗಂಡಂತೆ. ಏನೊ ಷಿಕಾರಿಯಾಯ್ತು ಎಂದು,ಹಂದಿಯೊ, ಮಿಗವೊ, ಕಾಡುಕುರಿಯೊ, ಬರ್ಕಗಿರ್ಕವೊ?  ಆದರೆ ಅತ್ಯಂತ ಅನಿರೀಕ್ಷಿತವಾದ ಹುಲಿಯ ಅಬ್ಬರ ಕಾಡನ್ನೆಲ್ಲ ಆಲೋಡಿಸಿ ಬಂದೊಡನೆ-ಪ್ರಾಣಿಸಹಜವಾದ ಭಯಚಕಿತ ಹೃದಯರಾಗಿ, ಪ್ರಾಣರಕ್ಷಣೆಗೆಂಬಂತೆ, ತಟಕ್ಕನೆ, ನೆಲದ ಮೇಲೆ ಪೊದೆಯ ಮರೆಯಲ್ಲಿ ಕುಳಿತಿದ್ದವರು ನೆಗೆದೆದ್ದು ಮಂಗಗಳಂತೆ, ಕೈಗೆ ಸಿಕ್ಕಿದ ಗಿಡವೊ ಮರವೊ ಏರಿಬಿಟ್ಟರು! ಮರದ ಮೇಲೆಯೆ ಕೂತಿದ್ದ ನಾವೂ ಇನ್ನೂ ಎತ್ತರದ ತಾಣಕ್ಕೆ ಹತ್ತಿದೆವು: ಗಾಯಗೊಂಡ ಹುಲಿ ನಮ್ಮತ್ತ ಧಾವಿಸಿದರೆ ಅದರ ಕೈಗೆ ಎಟುಕಬಾರದೆಂಬ ಅಭಿಲಾಷೆಯಿಂದ! ಕೆಲವರಂತೂ ಮುಳ್ಳುಗಿಡವನ್ನೆ ಹತ್ತಿಬಿಟ್ಟಿದ್ದರು! ಅದಾದರೂ ಎತ್ತರವಾಗಿತ್ತೆ? ಹಾಸ್ಯಾಸ್ಪದವಾಗಿತ್ತು ಆ ಪ್ರಾಣಭಯದ ಸಾಹಸ? ಸೊಂಟ ಮುರಿದಿದ್ದ ಹುಲಿಗಾದರೂ ಕೈಗೆಟುಕಬಹುದಾಗಿತ್ತು!

ಈ ಸಾಹಸಗಳೆಲ್ಲ ಮಿಂಚಿನ ವೇಗದಿಂದ ಸಾಗುತ್ತಿದ್ದಂತೆ ಮತ್ತೊಂದು ಈಡೂ ಕೇಳಿಸಿತ್ತು! ಆಗ ನಮಗೆಲ್ಲ ತುಸು ಧೈರ್ಯ ಮೂಡಿತು, ಎರಡನೆಯ ಗುಂಡೂ ಹಾರಬೇಕಾದರೆ ಮೊದಲನೆಯ ಗುಂಡು ಹುಲಿಗೆ ತಗುಲಿರಲೆಬೇಕು ಎಂದು. ಅಷ್ಟರಲ್ಲಿ ಕಾಡಿನ ಶಕುನಪೂರ್ಣ ನಿಶ್ಯಬ್ದತೆಯನ್ನು  ಭೇದಿಸಿಕೊಂಡು “ಹೋಯ್‌!” ಎಂಬ ಸುದೀರ್ಘ ಶಿಕಾರಿ ಕಾಕು ಕೇಳಿಸಿತು, ಹಿರಿಯಣ್ಣನ ಕೊರಳ ದನಿಯಲ್ಲಿ. ಆ ಧ್ವನಿಯಲ್ಲಿ ವಿಜಯದ ಠೀವಿಯಿದ್ದುದು ಚೆನ್ನಾಗಿ ಗೋಚರವಾಗುವಂತಿತ್ತು!

ಸರಿ  ಮರದಿಂದಲೂ ಗಿಡಗಳಿಂದಲೂ ನಾವೆಲ್ಲ ದಡಬಡನೆ ಕೆಳಗೆ ಹಾರಿದೆವು. ಮುಳ್ಳು ಮರ ಏರಿದ್ದವರೂ ಬಟ್ಟೆ ಹರಿದುದನ್ನಾಗಲಿ ಮುಳ್ಳು ಗೀರಿದುದನ್ನಗಲಿ ಲೆಕ್ಕಲಿಸಿರಲಿಲ್ಲ. ಜಯಮತ್ತರಾಗಿಬಿಟ್ಟಿದ್ದರು ಎಲ್ಲರೂ!

ಹಿರಿಯಣ್ಣನ ಕರೆ ಕೇಳಿಬಂದ ದಿಕ್ಕಿಗೆ ಹಳುವಿನಲ್ಲಿ ಹತ್ತಿ ಇಳಿದು ಒಂದು ಸರಲನ್ನು ದಾಟಿ ವೆಂಕಟಯ್ಯನ ನೇತೃತ್ವದಲ್ಲಿ ಧಾವಿಸಿದೆವು. ಇನ್ನೂ ಕಪ್ಪಾಗಿರಲಿಲ್ಲ. ಬೆಳಕು ತಕ್ಕಮಟ್ಟಿಗೆ ಚೆನ್ನಾಗಿಯೆ ಇತ್ತು.

ಹೋಗಿ ನೋಡುತ್ತೇವೆ: ಕೋವಿ ಹಿಡಿದು, ಗೆಲುವಿನ ನಗೆಮೊಗವಾಗಿ ಕಾಡಿಡಿದ ಗುಡ್ಡ ದೋರೆಯಲ್ಲಿ ನಿಂತಿದ್ದ ಹಿರಿಯಣ್ಣನ ಕಾಲಬಳಿ ಬಿದ್ದಿದೆ, ಮಹಾಗಾತ್ರದ ಭೀಷಣ ಸೌಂದರ್ಯದ ಹುಲಿರಾಯ! ನಾವೆಲ್ಲರೂ ಅದನ್ನು ಮುತ್ತಿಕೊಂಡು ಅದರ ಅಂಗಾಂಗಳನ್ನೂ ಬೆರಗಿನಿಂದ ನೋಡಿದೆವು: ಮೀಸೆ, ಕಣ್ಣು, ಉಗುರು, ಪಟ್ಟೆಪಟ್ಟೆಯ  ಹಳದಿ ಕಪ್ಪುಗಳು, ಬಾಲ!

ಹಿರಿಯಣ್ಣನಿಂದ-ಅವನು ಕುಳಿಗಿದ್ದ ಮರದ ಕೊಂಬೆ, ಹುಲಿ ಬಂದ ದಿಕ್ಕು, ಅದು ಕಣಿವೆಯತ್ತ ನೋಡುತ್ತಾ ನಿಂತಿದ್ದ ಬಂಗಿ, ಇವನು ಗುರಿಯಿಟ್ಟ ರೀತಿ, ಮೊದಲನೆ ಈಡು ಹೊಡೆದೊಡನೆ ಅದು ಹಾರಿಬಿದ್ದ ರೀತಿ, ಮತ್ತೆ ಏಳಲು ಪ್ರಯತ್ನಿಸುತ್ತಿದ್ದಂತೆಯೆ ಇನ್ನೊಂದು ಗುಂಡೂ ಬಿದ್ದು ನೆಲಕ್ಕೆ ಒರಗಿದ್ದು, ಎಲ್ಲವನ್ನೂ ಕೇಳಿದೆವು. ಸಂತೋಷಭರದಲ್ಲಿ ನಾವೆಲ್ಲರೂ ಹುಲಿಯ ಮೇಳೆ ಹತ್ತಿ ಕುಳಿತೂ ಬಿಟ್ಟೆವುಇ! ವೆಂಕೆಟಯ್ಯ-ಹಿರಿಯಣ್ಣ ಇಬ್ಬರೂ ಸಿಗರೇಟು ಸೇದುವ ಅಭ್ಯಾಸವಿದ್ದವರಾದ್ದರಿಂದ ಒಂದೊಂದು ಸಿಗರೇಟು ಹೊತ್ತಿಸಿದರು! ನಾನೂ ಆ ಸಂತೋಷ ಸಮಾರಂಬದ ಸವಿನೆನಪಿಗಾಗಿ ಒಂದು ಸಿಗರೇಟು ಈಸಿಕೊಂಡು ಹೊತ್ತಿಸಿ ಸೇದುತ್ತಾ ಕುಳಿತಿದ್ದೆ ಹುಲಿಯ ಮೇಲೆ! ಉಳಿದವರು ಬಿಡುತ್ತಾರೆಯೆ? ಸರಿ, ಹುಡುಗರೂ ಸೇರಿ, ಎಲ್ಲರೂ ಹುಲಿಯ ಮೇಲೆ ಸಿಗರೇಟು ಸೇದುವ ಸವಾರಿ ಮಾಡಿಯೆ ಬಿಟ್ಟರು!

ಈ ಸಂಭ್ರಮದಲ್ಲಿ ಕತ್ತಲಾಗುತ್ತಿದ್ದುದನ್ನೂ ಹುಲಿಯನ್ನು ಸಾಗಿಸಿಕೊಂಡು ಹೋಗುವ ಸಮಸ್ಯೆಯನ್ನೂ ಮರೆತೇ ಬಿಟ್ಟಿದ್ದೆವು, ಶೇಷಪ್ಪಗೌಡರು ಎಚ್ಚರಿಸದಿದ್ದರೆ!

“ಹುಲಈನ ಹೊಡೆದುಬಿಟ್ಟರೆ ಆಗಲಿಲ್ಲ. ಈಗ ಅದನ್ನು ಹೊತ್ತು ರಸ್ತೆಗೆ ಹಾಕಬೇಕಲ್ಲಾ, ಅಣ್ಣಗಳಿರಾ? ನಾನು ಮುದುಕ; ನನ್ನ ಕೈಲಾಗದು, ಪರಾಯದ ಹುಡುಗರು ಹೊರಿ, ಹೊರಿ!”

ಯಾರು ಹೊರುವವರಿಉ? ಅದಾದರೂ ಸಾಧಾರಣ ಭಾರದ್ದೇ? ಅಲ್ಲಿ ಇದ್ದವರೆಲ್ಲ ಶ್ರೀಮಂತರ ಮಕ್ಕಳೇ! ಹೊರೆ ಹೊತ್ತಾಗಲಿ, ದುಡಿದು ಕೆಲಸ ಮಾಡಿಯಾಗಲಿ ಗೊತ್ತಿದ್ದವರೇ ಅಲ್ಲ. ಶೇಷಪ್ಪಗೌಡರೊಬ್ಬರೆ ಮೈಬಗ್ಗಿಸಿ ಅಂಥಾ ಕೆಲಸ ಮಾಡಿದ್ದ ಒಕ್ಕಲಮಗ. ಆದರೆ ವಯಸ್ಸಾದವರು! ಕಡೆಗೂ ಅವರೇ ಮುಂದಾಗಬೇಕಾಯ್ತು!

ಅವರ ಮುಂದಾಳುತನದಲ್ಲಿ ಎಲ್ಲರೂ ಸೇರಿ ಕಾಡುಹಂಬುಗಳನ್ನು ಉಗಿದು ಹುಲಿಯ ಮುಂಗಾಲುಗಳನ್ನೂ ಹಿಂಗಾಲುಗಳನ್ನೂ ಬಿಗಿದು ಕಟ್ಟಿದೆವು. ಹುಲಿಯ ಭಾರಕ್ಕೆ ಮುರಿಯದಂತಹ ಒಂದು ನೇರವಾಗಿ ಬೆಳೆದಿದ್ದ ದೊಡ್ಡ ಗಿಡದ ದಿಂಡನ್ನು ಕಡಿದು ಹೊರೆಗೋಲು ಮಾಡಿದೆವು. ಅದನ್ನು ಮುಂಗಾಲು ಹಿಂಗಾಲುಗಳ ಮಧ್ಯೆ ತೂರಿಸಿದೆವು. ಮುಂದಕ್ಕೂ ಹಿಂದಕ್ಕೂ ಇಬ್ಬರು ಮೂವರು ಹೆಗಲು ಕೊಡುವಷ್ಟು ಉದ್ದಬಿಟ್ಟಿದ್ದೆವು. ಶೇಷಪ್ಪಗೌಡರು , ವೆಂಕಟಯ್ಯ, ಕೃಷ್ಣಮೂರ್ತಿ, ನರಸಿಂಹಮೂರ್ತಿ, ವಿಜಯದೇವ, ಮಾನಪ್ಪ ಎಲ್ಲ ಹೆಗಲು ಕೊಟ್ಟರು. ಗುಡ್ಡದ ಇಳಿಜಾರಿನಲ್ಲಿ ಇಳಿಯತೊಡಗಿದಾಗಲೆ ಕತ್ತಲಾಗಿತ್ತು. ದಾರಿಯಲ್ಲದ ದಾರಿಮಾಡಿಕೊಂಡು ಇಳಿದೆವಿಉ. ವಾಸ್ತವವಾಗಿ ಹುಲಿಯನ್ನು ಹೊತ್ತಿರಲಿಲ್ಲ; ಅದನ್ನು ಎಳೆದರು ಎಂದೇ ಹೇಳಬೇಕು. ಅದರ ಭಾರಕ್ಕೆ ಹೊರೆಗೋಲು ಬಾಗುವುದರ ಜೊತೆಗೆ ಇವರಷ್ಟೂ ಜನರು ಅದನ್ನು ಎತ್ತಿ ನಿತ್ತರಿಸಲಾರದೆ ಹೋದರು. ಆದ್ದರಿಂದ ಹುಲಿಯ ಬೆನ್ನು ಹಳುವಿನ ನೆಲಕ್ಕೆ ಕೀಸುವಂಥೆ ಇದ್ದಿತೆ ಹೊರತು ಎತ್ತಿ ಹೊತ್ತಂತೆ ಇರಲಿಲ್ಲ! ನಾವು ಉಳಿದವರು ಎಲ್ಲರ ಕೋವಿಗಳನ್ನೂ ಇತರ ಕಂಬಳಿಗಿಂಬಳಿ ಸಾಮಾನುಗಳನ್ನೂ ಹೊತ್ತುಕೊಂಡಿದ್ದೆವು. ಅಂತೂ ರಾತ್ರಿ ಏಳೂವರೆ ಎಂಟುಗಂಟೆಯೆ ಆಯಿತು ಆ ಹುಲಿಯನ್ನು ಹೊತ್ತು ತಂದು ರಸ್ತೆಗೆ ಕಾರಿನ ಬಳಿ ಹಾಕಬೇಕಾದರೆ!

ಮುಂದೆ? ಅದನ್ನು ಕಾರಿಗೆ ಹಾಕುವುದು ಹೇಗೆ? ನಾವಷ್ಟು ಜನ ಕಾರಿನಲ್ಲಿ ಕೂರುವುದು ಹೇಗೆ? ಅದೊಂದು ಸಾಧಾರಣ ಲಡಗಾರಿ ಫೋರ್ಡ್ ಕಾರು! ಎರಡು ಸೀಟುಗಳು. ಹಿಂದಕ್ಕೆ ಹೊರೆಹಾಕಲು ಈಗಿನ ಕಾರುಗಳಿಗಿರುವಂತೆ ಡಿಕ್ಕಿಪೆಟ್ಟಿಗೆಯೂ ಇರಲಿಲ್ಲ. ಸರಿ, ಅದರ ಟಾಪನ್ನು ಕಳಚಿ ಹಿಂದಕ್ಕೆ ಸರಿಸಿ ಇಟ್ಟು, ಹುಲಿಯನ್ನು  ಎಲ್ಲರೂ ಸೇರಿ ಎತ್ತಿ ನೂಕಿ ತಳ್ಳಿ ದಬ್ಬಿ ಹಿಂದಿನ ಸೀಟಿನಲ್ಲಿ ಬಾಗಿಲು ಹಾಕದೆಯೆ ಇಟ್ಟೆವು. ಅದರ ಮುಂಭಾಗ ಹಿಂಭಾಗಗಳು ಕಾರಿನ ‘ಬಾಡಿ’ಯಿಂದ ಹೊರಗೆ ಚಾಚಿದ್ದುವು. ಎರಡು ಬಾಗಿಲುಗಳು ತೆಗೆದೇ ಇದ್ದುವು. ಮತ್ತೆ ಹುಲಿಯ ಮೇಲೆಯೆ ಹತ್ತಿ ಕುಳಿತರು ನಾಲ್ಕು ಜನಕ! ಉಳಿದವರು ಮುಂದಿನ ಸೀಟಿನಲ್ಲಿ ಕಿಕ್ಕಿರಿದೆವು. ಡ್ರೈವರ್ ವೆಂಕಟಯ್ಯನಿಗೆ ಒಂದು ಚೂರು ಸ್ಥಳ ಬಿಡುವುದು ಅನಿವಾರ್ಯವಾಯಿತಷ್ಟೆ!