ಜಯಕಾರ ಮಾಡುತ್ತಾ ಘೇಘೋಷ ಕೂಗುತ್ತಾ ನಾವೆಲ್ಲರೂ ಅದ್ಭುತವನ್ನು ಸಾಧಿಸಿದ ವೀರರಂತೆ ಉನ್ಮತ್ತರಾಗಿರಲು ಕಾರು ತಲೆದೀಪ ಹೊತ್ತಿಸಿಕೊಂಡು ಏದುತ್ತಾ ಹೊರಟಿತು. ಇಂಗ್ಲಾದಿಗೆ! ನಕ್ಷತ್ರಖಚಿತ ಆಕಾಶ ಮೇಲೆ; ಇಕ್ಕೆಲಗಳಲ್ಲಿಯೂ ಕಾಡು ತುಂಬಿದ ಮಲೆಯ ಸಾಲುಗಳು; ಜನವಿಹೀನ ನೀರವ ರಸ್ತೆ!

(ಇಲ್ಲಿಗೆ ಆ ದಿನದ ಹುಲಿ ಬೇಟೆಯ ಸಾಹಸ ಕಥೆಯೇನೊ ಮುಗಿಯಿತು. ಆದರೆ ಆ ಹುಲಿಯ ಕತೆ ಸ್ವಾರಸ್ಯವಾಗಿಯೆ ಮುಂದುವರಿದಿರುವುದನ್ನೂ ಮತ್ತು ಈಗಲೂ ಮುಂದುವರಿಯುತ್ತಲೆ ಇರುವುದನ್ನೂ ಇಲ್ಲಿಯೆ ಹೇಳಿಬಿಡುತ್ತೇನೆ:

ಆ ಹುಲಿಚರ್ಮವನ್ನು ಮೈಸೂರಿಗೆ ಕಳುಹಿಸಿ ತಲೆಸಹಿತವಾಗಿ ಕಟ್ಟಿಸಿ ಹದಹಾಕಿಸಬೇಕೆಂದು ಮನಸ್ಸು ಮಾಡಿದೆವು. ಚರ್ಮ ಸುಲಿಯುವುದು ತಡವಾದರೆ ನಾವು ಅದನ್ನು ಮೈಸೂರಿಗೆ ಕಾರ್ಯದರ್ಶಿಯಾಗಿದ್ದ ಮರಾಟಿ ಯಲ್ಲು ಅದನ್ನು ರಾತ್ರಿಯೆ ಮಂಡೆಯೊಡನೆ ಉಗುರುಗಳೂ ಇರುವಂತೆ ಚರ್ಮ ಸುಲಿಸಿದನು. ಚರ್ಮಕ್ಕೆ ಚೆನ್ನಾಗಿ ಉಪ್ಪು ಹಚ್ಚಿ ಒಂದು ಸೀಮೆಯೆಣ್ಣೆ ಡಬ್ಬದಲ್ಲಿಟ್ಟು ಭದ್ರವಾಗಿ ಪ್ಯಾಕುಮಾಡಿ ಮೈಸೂರಿಗೆ ಕಳುಹಿಸಿದೆವು. ಆ ಕೆಲಸದ ಹೊರೆ ಹೊಣೆ ಖರ್ಚು ವೆಚ್ಚವನ್ನೆಲ್ಲ ದೇ.ರಾ. ವೆಂಕಟಯ್ಯನವರೆ ವಹಿಸಿಕೊಂಡದ್ದು.

ಆ ಚರ್ಮವನ್ನು ನಾವು ಕಳುಹಿಸಿದ್ದು ಸಾವಿರದ ಒಂಬೈನೂರ ಮೂವತ್ತೈದರ ಬೇಸಗೆ ರಜದಲ್ಲಿ. ಅದು ಸಿದ್ಧವಾಗಿ ಮತ್ತೆ ಇಂಗ್ಲಾದಿಗೆ ಬಂದದ್ದು ಮರುವರ್ಷದ ಬೇಸಗೆ ರಜಾಕ್ಕೆ ನಾವು ಹೋದಾಗಲೆ, ಎಂದರೆ ೧೯೩೬ನೆಯ ಮೇ ತಿಂಗಳು ೩೦ನೆಯ ತಾರೀಖಿನಂದು!ಒಂದು ವರ್ಷದ ತರುವಾಯ! ಅದಕ್ಕೆ ನೂರೊ ನೂರೈವತ್ತೂ ರೂಪಾಯಿ ತಗುಲಿತೆಂದು ತೋರುತ್ತದೆ, ಆಗಿನ ಮೌಲ್ಯದಲ್ಲಿ. ಈಗಾದರೆ ಐನೂರೊ ಸಾವಿರವೊ ತಗುಲುತ್ತಿತ್ತು!

ಅದು ತುಂಬ ಸೊಗಸಾಗಿ ಕಾಣುತಿತ್ತು. ಹುಲಿಯ ಮಂಡೆಯಂತೂ ನಿಜವಾಗಿಯೆ ಹುಲಿ ನಿಂತಂತೆ ತೋರುತಿತ್ತು. ತೆರೆದ ಬಾಯಿಯಲ್ಲಿ ಕೆನ್ನಾಲಗೆ ಮತ್ತು ಹಲ್ಲುಗಳು-ಎಲ್ಲ ಹಲ್ಲುಗಳೂ ಅತ್ಯಂತ ಸಹಜವಾಗಿಯೆ ಹೆದರಿಕೆ ಹುಟ್ಟಿಸುವಂತೆ ಇದ್ದುವು. ಹುಲಿಯ ಉಗುರುಗಳೂ ಸಹಜತೆಯನ್ನು ಒಂದಿಷ್ಟೂ ಕಳೆದುಕೊಂಡಿರಲಿಲ್ಲ. ಅದನ್ನು ಕುರಿತು ನಾನಾಡಿದ ಮೆಚ್ಚುಗೆಯ ಮಾತುಗಳಿಂದ ಅದು ನನಗೆ ಬಹಳ ಇಷ್ಟವಾಗಿದೆ ಎಂದು ಅರಿತ ವೆಂಕಟಯ್ಯನವರು ಅದನ್ನು ನನಗೇ ಕೊಟ್ಟುಬಿಟ್ಟರು!

ರಜದಿಂದ ಮೈಸೂರಿಗೆ ಹಿಂತಿರುಗುವಾಗ ಅದನ್ನು ನಾನು ತಂದು ಆಶ್ರಮದ ನನ್ನ ಕೊಠಡಿಯಲ್ಲಿ ನೆಲದ ಮೇಲೆ ಹರಡಿ ಅಲಂಕರಿಸಿದೆ!

ಸಾವಿರದ ಒಂಬೈನೂರ ಮೂವತ್ತಾರನೆಯ ಇಸವಿ ಆಗಸ್ಟ್‌ಒಂದನೆಯ ತಾರೀಖಿನಂದು ನಾನು ಆಶ್ರಮವನ್ನು ಬಿಟ್ಟು ವಾಣೀವಿಲಾಸಪುರದ ಬಡಾವಣೆಯ ಒಂದು ಬಾಡಿಗೆ ಮನೆಯಲ್ಲಿ, ನಮ್ಮ ಕಡೆಯ ವಿದ್ಯಾರ್ಥಿಗಳೊಡನೆ, ವಾಸಮಾಡಲು ತೊಡಗಿದಂದು ಆ ಹುಲಿಯ ಚರ್ಮ ಬಾಡಿಗೆಯ ಮನೆಯ ನಡುಮನೆಯನ್ನು ಅಲಂಕರಿಸಿತು, ನನ್ನ ಓದುಕೊಠಡಿ ಬಹಳ ಚಿಕ್ಕದಾಗಿದ್ದುದರಿಂದ. ಅಲ್ಲಿಂದ ಒಂದು ವರ್ಷದ ಮೇಲೆ ೧೯೩೭ರಲ್ಲಿ ನನ್ನ ಸ್ವಂತ ಮನೆ ‘ಉದಯರವಿ’ ಸಿದ್ಧವಾಗಲು ಅದು ಅಲ್ಲಿಗೆ ಸಾಗಿತು. ನಾನು ಮದುವೆಯಾಗಿ ಮೊದಲನೆಯ ಮಗು ಹುಟ್ಟಿದ ಮೇಲೆ,ನನಗೆ ಲೆಕ್ಚರರ್ ಸ್ಥಾನದಿಂದ ಅಸಿಸ್ಟೆಂಟ್‌ಪ್ರೊಫೆಸರ್ ಆಗಿ ೭-೧೧-೧೯೩೯ ರಂದು ಬೆಂಗಳೂರಿಗೆ ವರ್ಗವಾದ ಮೇಲೆ ಆ ಚರ್ಮ ಬೆಂಗಳೂರಿಗೆ ಹೋಯಿತು . ಬೆಂಗಳೂರಿನಲ್ಲಿ ಸುಮಾರು ಆರು ವರ್ಷ ಇರಬೇಕಾಯಿತು.

ಹುಲಿಚರ್ಮದ ವಿಚಾರವಾಗಿ ಘಟಿಸಿದ ಒಂದು ಸ್ವಾರಸ್ಯ ಘಟನೆ ಎಂದರೆ, ಮಲ್ಲೇಶ್ವರದ ಬಾಡಿಗೆ ಮನೆಯಲ್ಲಿ ನಾವು ಇದ್ದಾಗ ಕಣ್ಣಮ್ಮ ಎಂಬ ಹೆಂಗಸು ಮನೆಗೆಲಸಕ್ಕೆ ಬರುತ್ತಿದ್ದಳು. ಹುಲಿಚರ್ಮವನ್ನು ನಡುಮನೆಯಲ್ಲಿ ಹಾಸಿದ್ದೆವು, ಅದರ ತಲೆ ಎತ್ತಿ ನಿಂತಂತೆ ತೋರುವಂತೆ. ಅವಳು ಕೆಲಸಕ್ಕೆ ಬಂದ ಪ್ರಾರಂಭದಲ್ಲಿ ಮುಸುರೆ ತೊಳೆದ ಮೇಲೆ ಮನೆಯನ್ನೆಲ್ಲ ಗುಡಿಸಲು ಹೇಳಿದರು. ಅವಳು ಪೊರಕೆ ಹಿಡಿದು ಜಗಲಿಗೆ ಹೋದಳು. ಇದ್ದಕ್ಕಿದ್ದ ಹಾಗೆ ಕಿಟಾರನೆ ಕಿರುಚಿಕೊಂಡು ಹೆದರಿ ಬಿದ್ದು ಅಡುಗೆ ಮನೆಯತ್ತ ಧಾವಿಸಿದಳು. ತೇಜಸ್ವಿ, ಚೈತ್ರ ಅವರ ತಾಯಿ ಎಲ್ಲರೂ ಏನೊ ಅನಾಹುತವಾಯಿತೆಂದು ಕಣ್ಣಮ್ಮನ ಬಳಿಗೆ ಓಡಿದರು. ಅವರು ಊಹಿಸಿದ್ದು, ಆ ಮನೆಗೆ ಹಾಕಿದ ವಿದ್ಯುತ್ತಿನ ತಂತಿಗಳು ಆಗಾಗ ತೊಂದರೆ ಕೊಡುತ್ತಾ ಇದ್ದುದರಿಂದ, ಕಣ್ಣಮ್ಮಗೆ ಎಲ್ಲಿಯೊ ವಿದ್ಯುತ್‌ತಗುಲಿರಬೇಕೆಂದು. ಆಮೇಲೆ ವಿಷಯ ತಿಳಿದು ಎಲ್ಲರೂ ನಕ್ಕು ಅವಳಿಗೆ ಗೇಲಿ ಮಾಡಿದರು: ಅದು ನಿಜವಾದ ಹುಲಿ ಅಲ್ಲ, ತಲೆಕಟ್ಟಿಸಿ ಚರ್ಮ ಹದ ಹಾಕಿಸಿದ್ದು ಎಂದು!

ತೇಜಸ್ವಿ, ಚೈತ್ರ ಹುಟ್ಟಿ ಕೀಟಲೆ ಮಾಡುವ ವಯಸ್ಸಿಗೆ ಬಂದಂದಿನಿಂದ ಹುಲಿಯ ಚರ್ಮಕ್ಕೆ ಗ್ರಹಚಾರ ಷುರುವಾಯ್ತು! ಮೊದಲುಮೊದಲು ಅದರ ಮೇಲೆ ಸವಾರಿ ಗಿವಾರಿ ಮಾಡುವ ಆಟವಾಡಿದರು. ಆಮೇಲೆ ಅದರ ಮೇಲೆ ಸವಾರಿ ಗಿವಾರಿ ಮಾಡುವ ಆಟವಾಡಿದರು. ಆಮೇಲೆ ಅದರ ಮೀಸೆ ಹಲ್ಲು ಉಗುರು ಎಲ್ಲವನ್ನೂ ಪ್ರಶಂಸಿಸುವ ನೆವದಲ್ಲಿ ಅವುಗಳ ಮೇಲೆ ಕೈಮಾಡತೊಡಗಿದರು. ನಾವು ಮತ್ತೆ ಮೈಸೂರಿಗೆ ೧೨-೯-೧೯೪೫-೧೪-೯-೧೯೪೫ ಎರಡನೆ ಸಾರಿ ಆಕ್ಟಿಂಗ್‌ಪ್ರೊಫೆಸರ್ ಆಗಿ ಬಂದಮೇಲೆ, ತಮ್ಮ ಆರನೆಯ ಮತ್ತು ನಾಲ್ಕನೆಯ ವಯಸ್ಸುಗಳಲ್ಲಿದ್ದ ತೇಜಸ್ವಿ ಮತ್ತು ಚೈತ್ರರಿಂದ ಹುಲಿಗೆ ಜೈನದೀಕ್ಷೆ ಕೊಡಲ್ಪಟ್ಟು ಅದು ಕ್ರಮೇಣ ಸಾಧುವಾಯಿತು! ಮೊದಮೊದಲು ಅದರ ಮೀಸೆಗಳಲ್ಲಿ ಒಂದೊಂದೇ ಮಾಯವಾಗತೊಡಗಿದುವು. ಹೊಸ ಮೀಸೆಗಳನ್ನು ಹಾಕಿಸಲು ಕೇಳಿದಾಗ ಟ್ಯಾಕ್ಸಿಡರ್ಮಿಯವರು ಒಂದೊಂದು ಮೀಸೆಗೆಕ ಸುಮಾರು ಇಪ್ಪತ್ತು ರೂಪಾಯಿ ಆಗುತ್ತದೆ ಎಂದರು. ಅಲ್ಲವೇ ಮತ್ತೆ? ಹುಲಿ ಮೀಸೆ ಕ್ಷೌರದ ಅಂಗಡಿಯಲ್ಲಿ ದೊರೆಯುವ ವಸ್ತುವೇ? ಹುಲಿ ಮೀಸೆಯ ದುಬಾರಿ ವಿಚಾರವನ್ನು ತಿಳಿಸಿದರೂ ತೇಜಸ್ವಿ ಚೈತ್ರರು ಮನಸ್ಸಿಗೆ ಹಾಕಿಕೊಳ್ಳಲೆ ಇಲ್ಲ. ಅಂತೂ ನಾವು ನೋಡುತ್ತಿದ್ದ ಹಾಗೇ ಒಂದೊಂದೆ ಮೀಸೆ ಮಾಯವಾಗಿ ಹುಲಿಯ ಮಂಡೆ ಮೀಸೆ ಬೋಳಿಸಿದಂತಾಯ್ತು! ಹಾಗೆಯೆ ಆಗ ಅವರು ಸಾಕುತ್ತಿದದ ನಾಯಿಮರಿಗಳಿಗೆ ಧೈರ್ಯ ಕಲಿಸುತ್ತೇವೆ ಎಂದು ಹುಲಲಿಯ ಮೇಲೆ ಛೂ ಬಿಟ್ಟು ಅದರ ಕಿವಿ ಬಾಲ ಕಾಲುಗಳನ್ನು ಹಿಡಿದೆಳೆಯುವುದನ್ನು ಕಲಿಸಿದರು. ಆ ನಾಯಿಮರಿಗಳು ಅವರಿಗಿಂತ ಸ್ವಲ್ಪ ಮುಂದೆ ಹೋಗಿ ಕಿವಿ ಬಾಲ ಉಗುರು ಚರ್ಮದ ಭಾಗಗಳನ್ನೆ ಕಿತ್ತುವು. ಕಡೆಗೆ ಅಷ್ಟೊಂದು ಬೆಲೆ ಬಾಳುತ್ತಿದ್ದ ಉಗುರುಗಳೂ ಒಂದೊಂದಾಗಿ ಮಾಯವಾದುವು. ಹಲ್ಲುಗಳೂ ಹೋಗುತ್ತಿದ್ದುವೋ ಏನೋ? ಆದರೆ ಅವು ಸುಲಭವಾಗಿ ಕೀಳಲಾರದಷ್ಟು ಭದ್ರವಾಗಿದ್ದುವು. ಕೊನೆಗೆ ಹುಲಿಯ ‌ರೌದ್ರತೆಯ ಮಾಯವಾಗಿ ಕಾಂತಿಗೆಟ್ಟು ದದ್ದು ಹಿಡಿದ ಬೀದಿನಾಯಿಯ ಮಟ್ಟಕ್ಕೆ ಇಳಿಯಿತು. ಕೊಟ್ಟ ಕೊನೆಗೆ ನನ್ನ ಮಡದಿ, ಹುಲಿಗೆ ಒದಗಿದ ದುರ್ಗತಿಯನ್ನು ಸಹಿಸಲಾರದೆ, ಅದನ್ನು ಅವಮಾನದಿಂದ ಪಾರು ಮಾಡುವುದಕ್ಕಾಗಿ, ಟ್ಯಾಕ್ಸಿಡರ್ಮಿಯಿಸ್ಟ್‌ಪ್ರಧಾನಯ್ಯನವರ ಬಳಿಗೆ ಅದನ್ನು ಕಳಿಸಿ, ಅದನ್ನು ಉದ್ಧಾರ ಮಾಡಲು ಸಾಧ್ಯವೇ ಎಂಬುದನ್ನು ತಿಳಿಸಲು ಕೇಳಿದರು. ಅವರು ಅತ್ಯಂತ ಸಂಕೋಚದಿಂದ ಅದು ಉದ್ಧಾರವಾಗುವ ಸ್ಥಿತಿಯಲ್ಲಿಲ್ಲ ಎಂದರು. ಕೊನೆಗೆ ಅದರ ಶಿರಚ್ಛೇದನ ಮಾಡಿಸಿ, ಮಂಡೆಯನ್ನು ಮಾತ್ರವೆ ಪ್ರತ್ಯೇಕವಾಗಿ ಅಂಚು ಕಟ್ಟಿಸಿದರು. ಈಗ ಆ ಮಂಡೆ ಒಂದು ಬೀರುವಿನ ನೆತ್ತಿಯ ಮೇಲೆ ಮಂಡಿಸಿದೆ. ಉಳಿದೆಲ್ಲ ರೀತಿಯಿಂದಲೂ ತಕ್ಕಮಟ್ಟಿಗೆ ಹುಲಿಯಾಗಿಯೆ ಇದೆ. ಆದರೆ ಮೀಸೆಬೋಳ! ಜೈನ ಹುಲಿ!!’

ಅದನ್ನು ನೋಡಿ ಬೆಸಗೊಳ್ಳುವ ಸ್ನೇಹಿತರಿಗೆಲ್ಲಾ ಈ ದೀರ್ಘ ಕತೆಯನ್ನು ಸ್ವಾರಸ್ಯ ಕೆಡಬಾರದೆಂದು ಸಲಸಲಕ್ಕೂ ಸಾಕಷ್ಟು ಬದಲಾವಣೆಯ ಸ್ವಾರಸ್ಯಗಳೊಡನೆ ಹೇಳುತ್ತಿರು‌ತ್ತೇನೆ: ತೇಜಸ್ವಿ ಅವನ ಅಜ್ಜಿಗೆ ಹೇಳಿದಂತೆ: “ಸತ್ಯವನ್ನೇ ಹೇಳು, ಸ್ವಾರಸ್ಯವಾಗಿಯೂ ಇರಬೇಕು ಅಂದರೆ ಹೇಗಾಗುತ್ತದೆ, ಅಜ್ಜೀ?”

ಆ ಬೇಸಗೆ ರಜೆಯಲ್ಲಿ ನನಗೆ ಒದಗಿದ ಮತ್ತೊಂದು ಸಾಹಸದ ಪ್ರಸಂಗ ವೆಂದರೆ ನಾನೊಂದು ಹಂದಿ ಹೊಡೆದದ್ದು. ಅದು ಒಂದು ನಿಜವಾದ ಸಾಹಸದಂತೆ ಪ್ರಾರಂಭವಾಗಿ ವಿಜಯದಲ್ಲಿ ಕೊನೆಗೊಂಡಿದ್ದರೂ ಕಡೆಗೆ ನಗೆಪಾಟಲಾಗಿ ಹೋಯಿತು! ನಾನೆಷ್ಟು ಒಪ್ಪದೆ ಪ್ರತಿಭಟಿಸಿದರೂ!

ಆ ದಿನ ಕುಪ್ಪಳಿಯ ಉಪ್ಪರಿಗೆಯ ಮೇಲೆ ನಾವೆಲ್ಲ ಸೇರಿ ಏನೊ ಹರಟೆಯ ಸಲ್ಲಾಪದಲ್ಲಿ ತೊಡಗಿದ್ದೆವು; ನಮ್ಮ ವೆಂಕಟಯ್ಯ, ಶ್ರೀನಿ, ವಿಜಯ, ನಾನು ಇತ್ಯಾದಿ. ಗಂಟೆ ಸುಮಾರು ಬೆಳಗಿನ ಒಂಬತ್ತು ಇರಬಹುದು. ಉಪ್ಪರಿಗೆಯ ಎದುರು ದೃಶ್ಯ ಸುಮನೋಹರ; ಮಳೆ ತೊಳೆದ ಹಸುರಿನ ಅಡಕೆ ಬಾಳೆಯ ತೋಟ, ಗಗನಕ್ಕೇರಿದ ಓರೆಯ  ಮಲೆನಾಡು ಗುಡ್ಡಗಳು, ನಿರ್ಮೇಘ ನೀಲಾಕಾಶ!

ಯಾರೋ ಓಡಿ ಬಂದು ಸುದ್ದಿ ಕೊಟ್ಟರು: ‘ಕೆಳಕುಪ್ಪಳಿ ಕಾಡಿನ ಬಳಿ ಹಳ್ಳದ ಕೇದಗೆ ಹಿಂಡಿಲಲ್ಲಿ ಒಂದು ಹಂದಿ ಬಂದಿದೆಯಂತೆ. ಬೇಗ ನಾಯಿ ಕರೆದುಕೊಂಡು ಕೋವಿ ತರಬೇಕಂತೆ!’ ಎಂದು. ಸಿಕ್ಕಿದ್ದೇ ಸಾಕು ಬೇಟೆ ಎಂದು ನಾವೆಲ್ಲ ನಾಯಿಗಳೊಡನೆ ಧಾವಿಸಿದೆವು. ನಾನು ಇಪ್ಪತ್ತನೆಯ ನಂಬರಿನ ತೋಟಕೋವಿ ಹಿಡಿದಿದ್ದೆ, ಬಾರು ಮಾಡಿಕೊಂಡೇ.

ಸುಮಾರು ಅರ್ಧ ಮೈಲಿ ದೂರವಿದ್ದ ಆ ಜಾಗಕ್ಕೆ ಓಡುತ್ತಲೆ ಏದುತ್ತಾ ಹೋದೆವು. ನಾವು ಅಲ್ಲಿಗೆ ತಲುಪುವುದರಲ್ಲಿಯೆ ಸುತ್ತಮುತ್ತಣ ಒಕ್ಕಲು ಮನೆಗಳವರು ಕೂಗುತ್ತಾ ಕಾಕುಹಾಕುತ್ತಾ ಹಂದಿಯನ್ನು ಅಟ್ಟುತ್ತಿದ್ದುದು ಗೋಚರಿಸಿತು. ಕಾಡಿನಿಂದ ಹಿಂಡು ತಪ್ಪಿಸಿಕೊಂಡು ಕಂಗೆಟ್ಟಂತಿತ್ತು ಆ ಹಂದಿ. ನಾನು ನೋಡುತ್ತಿದ್ದಂತೆಯೆ ಮಳೆಯಿಂದ ಹೊರ ನುಗ್ಗಿ ಗದ್ದೆಬೈಲಿನಲ್ಲಿ ನಾಗಾಲೋಟದಿಂದ ಓಡುತ್ತಿತ್ತು ಗಡ್ಡವೇರಿದ ಕಾಡಿನತ್ತ. ಜನರೂ ಅಬ್ಬರಿಸುತ್ತಾ ಅದರ ಸರಿಸಮ ಓಡಲಾರದೆ ಹಿಂಬಾಲಿಸುತ್ತಿದ್ದರು.

ನಾವೂ-ನಮ್ಮ ಗುಂಪಿನವರು ಮತ್ತು ನಮ್ಮ ನಾಯಿಗಳು-ಅದು ಕಾಡಿನ ಕಡೆಗೆ ಓಡದಂತೆ ತಡೆಯಲು ಅಡ್ಡದಾರಿಯಲ್ಲಿ ಧಾವಿಸಿದೆವು. ನಮ್ಮ ನಾಯಿಗಳ ಕೂಗುವಿಕೆ, ಜನರ ಕೂಗಾಟ-ಗದ್ದಲವೊ ಗದ್ದಲ, ಹೇಳತೀರದು. ಅದರಲ್ಲಿ ಶಿಸ್ತು, ಸಂಯಮ ಏನೂ ಇರಲಿಲ್ಲ. ಬರಿಯ ಗೊಂದಲವಾಗಿತ್ತು!

ಎಡದ ನಳಿಗೆಯ-ಏಕೆಂದರೆ ಅದಕ್ಕೆ ಗುಂಡಿನ ತೋಟಾ ಹಾಕಿದ್ದೆ-ಕುದುರೆಯನ್ನು ಏರಿಸಿಕೊಂಡು, ಬಿಲ್ಲಿಗೆ ಕೈಹಾಕಿಕೊಂಡೇ, ಓಡುತ್ತಿದ್ದ ಹಂದಿಯ ಕಡೆಗೇ ಗಮನ ಹಾಯಿಸುತ್ತಾ ನಾನೂ ಇತರರೊಡನೆ ತಲೆಕೆಟ್ಟಂತೆ ಓಡುತ್ತಿದ್ದೆ. ಎಲ್ಲಿ ಕೈ ಅಮುಕಿತೋ ಏನಕೋ ಗುಂಡು ಹಾರಿಬಿಟ್ಟಿತು, ಢಂಕಾರದ ಸದ್ದು ಮೊಳಗುವಂತೆ!

ನನ್ನ ಕೋವಿಯಿಂದಲೆ ಗುಂಡು ಹಾರಿದ್ದರೂ ನನಗೇ ಗೊತ್ತಾಗಲಿಲ್ಲ! ಯಾರು ಹೊಡೆದವರು ಎಂದು ಎಲ್ಲರೊಡನೆ ವಿಸ್ಮಿತನಾಗಿರಲು ಕೋವಿಯ ನಳಿಗೆಯ ತುದಿಯ ಹೊಗೆ ನಿಜ ಹೇಳಿತು. ಆ ಗುಂಡು ಯಾರಿಗೂ ತಗುಲಬಹುದಿತ್ತು! ಯಾರಿಗಾದರೂ ತಗುಲಿದ್ದರೆ? ದೇವರ ದಯೆಯಿಂದ ಅದು ಯಾರಿಗೂ ಅಪಾಯ ಮಾಡದೆ ಎಲ್ಲಿಗೋ ಹೋಗಿತ್ತು. ಅಲ್ಲದೆ ಅದರಿಂದ ಉಂಟಾಗಬಹುದಾಗಿದ್ದ ಅನಾಹುತವನ್ನು ಕುರಿತು ತಲೆಕೆಡಿಸಿಕೊಳ್ಳಲೂ ಸಮಯವೂ ಇರಲಿಲ್ಲ. ಏಕೆಂದರೆ ಬೇಟೆಯ ಪ್ರಾಣಿ ಧಾವಿಸುತ್ತಿತ್ತು. ಅದನ್ನು ಹಿಂಬಾಲಿಸಿ ನಾಯಿಗಳು ಅಟ್ಟಿಅಟ್ಟಿ ಬೊಗಳುತ್ತಾ ಒಂದು ಮುಂಡುಗನ ಹಿಂಡಿಲು ದಟ್ಟಯಿಸಿದ್ದ ಹಳ್ಳದ ಬುಡಕ್ಕೆ ಅದನ್ನು ಅಟ್ಟಿ ತಡೆದಿದ್ದುವು. ನಾನೂ ಕೋವಿಗೆ ಬೇಗನೆ ಬೇರೆಯ ಗುಂಡಿನ ತೋಟಾ ಹಾಕಿಕೊಂಡು ಓಡಿದೆ. ನಾಯಿ ಹಂದಿಗಳ ಹೋರಾಟದ ಕಣಕ್ಕೇ ನುಗ್ಗಿ, ನಾಯಿಗಳನ್ನು ಹೆದರಿಸಿ ಓಡಲು ಪ್ರಯತ್ನಿಸುತ್ತಿದ್ದ ಹಂದಿಗೆ ತುಮಬ ಸಮೀಪದಿಂದಲೆ ಗುಂಡಿಕ್ಕಿದೆ. ಹಂದಿ ಮಗುಚಿ ಬಿದ್ದು ಸತ್ತಿತು. ನಾಯಿಗಳು ಮುತ್ತಿದ್ದುವು!

ನಾನು ಹಂದಿ ಹೊಡೆದ ವಾರ್ತೆ ಬಾಯಿಂದ ಬಾಯಿಗೆ ಕಿವಿಯಿಂದ ಕಿವಿಗೆ ಹಬ್ಬಿತು. ದೇವಂಗಿ ವೆಂಕಟಯ್ಯನವರು ಅವರ ಕಾರಿನಲ್ಲಿ ಅವರ ಕಾಮಗಾರಿ ಕಾರ್ಯದರ್ಶಿ ಶೇಷಪ್ಪಗೌಡರೊಡನೆ ತಟ್ಟಾಪುರದ ಅವರ ಅಡಕೆತೋಟ ಪರಿಶೀಲಿಸಲು ಬಂದಿದ್ದರಂತೆ. ಅವರ ಕಿವಿಗೂ ಮುಟ್ಟಿತು ಸುದ್ದಿ, ಕುಪ್ಪಳಿ ಪುಟ್ಟಪ್ಪಗೌಡರು ಒಂದು ದೊಡ್ಡ ಹಂದಿ ಷಿಕಾರಿ ಮಾಡಿದ್ದಾರಂತೆ ಎಂದು.

ತಟ್ಟಾಪುರದ ಅವರ ತೋಟ ಕುಪ್ಪಳಿಗೆ ಒಂದೆರಡು ಮೈಲಿ ದೂರವಿದ್ದು ಅವರು ಹಿಂದಕ್ಕೆ ಇಂಗ್ಲಾದಿಗೆ ಹೋಗುವ ಮಾರ್ಗವಾಗಿ ಕುಪ್ಪಳಿಗೆ ಬಂದೆಬಿಟ್ಟರು, ನಾನು ಷಿಕಾರಿ ಮಾಡಿದ ಹಂದಿ ನೋಡಲೆಂದು. ಹಂದಿ ನಮ್ಮ ಕೆರೆದಂಡೆಯಲ್ಲಿ ಹಸಿಗೆಯಾಗುವ ಪೂರ್ವಾವಸ್ಥೆಯಲ್ಲಿತ್ತು. ನಾನು ಅವರೆಲ್ಲರನ್ನೂ ಹೆಮ್ಮೆಯಿಮದ ಹಿಗ್ಗುತ್ತಾ ಕೆರೆದಂಡೆಗೆ ಕರೆದೊಯ್ದೆ. ಎಲ್ಲರೂ ಸುತ್ತ ನಿಂತು ಹಂದಿಯನ್ನು ನೋಡಿದರು . ತುಸುಹೊತ್ತಿನಲ್ಲಿಯೆ ಜೀವಾದಿಗಳ ವಿಚಾರದಲ್ಲಿ ಬಹುಕಾಲದ ಅನುಭವವಿದ್ದ ಶೇಷಪ್ಪಗೌಡರು ಇಂಗಿತವಾಗಿ ನಗುತ್ತಾ ವ್ಯಂಗ್ಯಧ್ವನಿಯಿಂದ “ಹೋಯ್‌! ಪುಟ್ಟಪ್ಪಗೌಡರ ಶಿಕಾರಿ ಇದು ಕಾಡುಹಂದಿ ಅಲ್ಲ!” ಎಂದು ಕೈ ಚಪ್ಪಾಳೆ ಹೊಡೆದರು. “ಮತ್ತೇನು ಊರು ಹಂದಿಯೆ? ಇಲ್ಲಿ ಯಾರೂ ಹತ್ತಿರದಲ್ಲಿ ಊರುಹಮದಿ ಸಾಕುವುದಿಲ್ಲ.” ಎಂದರು ಕೆಲವರು, ಶೇಷಪ್ಪಗೌಡರು ತಮಾಷೆಗಾಗಿ ಕುಚೋದ್ಯ ಮಾಡುತ್ತಿದ್ದಾರೆ ಎಂದು ತಿಳಿದು. ನಾನಂತೂ ನಾನು ಅಷ್ಟೊಂದು ಸಾಹಸಪಟ್ಟು ಶಿಕಾರಿ ಮಾಡಿದ ಹಂದಿಯನ್ನು ಊರುಹಂದಿ ಎಂದು ಮೂದಲಿಸಿ, ನನ್ನ ಸಾಹಸವನ್ನೆ ಅವಹೇಳನ ಮಾಡುತ್ತಿದ್ದಾರಲ್ಲಾ ಎಂದು ರೇಗಿದೆ. ಅವರು ಸ್ವಲ್ಪವೂ ಅಪ್ರತಿಭರಾಗದೆ “ಹಂದಿ ಕಾಡಿನದೇ; ಆದರೆ ಕಾಡುಸೇರಿದ ಊರುಹಂದಿ!” ಎಂದು ಏನೇನೊ ಚಹರೆ ಹೇಳಿದರು. ಆದರೆ ಯಾರೂ ಅದನ್ನು ಅಷ್ಟಾಗಿ ನಂಬಲಿಲ್ಲ. ನಾನಂತೂ ಅವರ ಪ್ರಾಣಿವಿಜ್ಞಾನವನ್ನು ಮೂದಲಿಸಿ ಧಿಕ್ಕರಿಸಿಬಿಟ್ಟೆ!

ಸರಿ,ಹಂದಿ ಕಾಡಿನದೊ ಊರಿನದೊ ಕಾಡುಸೇರಿದ ಊರಿನದೊ ಏನಾದರಾಗಲಿ! ಹಸಿಗೆಯಾಯಿತು. ಇತರರಿಗೂ ಕಳುಹಿಸಿದಂತೆ ಇಂಗ್ಲಾದಿಗು ಪಾಲು ಕಳುಹಿಸಲಾಯಿತು. ಆದರೆ….

ನನ್ನ ಮನಸ್ಸು ನನ್ನ ಸಾಹಸವನ್ನು ನೂರಕ್ಕೆ ನೂರರಷ್ಟು ಸವಿಯಲಾರದೆ ಹೋಯಿತು. ಒಳಗೊಳಗೆ ಕಾಡುಸೇರಿದ ಊರುಹಂದಿಯೆ ಇದ್ದರೂ ಇರಬಹುದೇನೊ ಎಂಬ ಅಳುಕು ನನ್ನ ಸಾಹಸದ ಹಿಗ್ಗಿಗೆ ತಣ್ಣೀರೆರಚುತ್ತಿತ್ತು!

ಆ ಬೇಸಗೆಯ ರಜೆಯಲ್ಲಿಯೆ ಸುಮಾರು ಮೇ ತಿಂಗಳ ಮಧ್ಯಭಾಗದಲ್ಲಿ ಮೈಸೂರು ವಿಶ್ವವಿದ್ಯಾನಿಲಯದವರು ಚಿಕ್ಕಮಗಳೂರಿನಲ್ಲಿ ಒಂದು ಉಪನ್ಯಾಸ ಸಪ್ತಾಹ ಏರ್ಪಡಿಸಿದ್ದರು. ಪ್ರೊ. ವೆಂಕಣ್ಣಯ್ಯನವರು, ನಾ. ಕಸ್ತೂರಿ, ತೀ.ನಂ.ಶ್ರೀಕಂಠಯ್ಯ, ಜಿ.ಹನುಮಂತರಾಯರು (ಅವರು ಕಾರ್ಯದರ್ಶಿಯಾಗಿದ್ದು, ಅವರಿಲ್ಲದ ಯಾವ ಸಪ್ತಾಹವೂ ಸ್ವಾರಸ್ಯವಾಗಿರುತ್ತಿರಲಿಲ್ಲ ವಾದ್ದರಿಂದ ಅಧ್ಯಾಪಕರನ್ನು ಉಪನ್ಯಾಸ ಸಪ್ತಾಹಗಳಿಗೆ ಆಕರ್ಷಿಸುವ ಸಲುವಾಗಿ ಅವರು ಇದ್ದಿರಲೇ ಬೇಕಾಗಿತ್ತು!) ಮುಂತಾದವರು ಭಾಗವಹಿಸಿದ್ದರು. ನನ್ನನ್ನೂ ಭಾಗವಹಿಸವಂತೆ ಕೇಳಿಕೊಂಡಿದ್ದರು. ಇಂಗ್ಲಾದಿಯ ಕಾರಿನಲ್ಲಿ ವೆಂಕಟಯ್ಯಗೌಡರು, ಮಾನಪ್ಪ, ನಾನು ಚಿಕ್ಕಮಗಳೂರಿಗೆ ಹೋಗಿ , ನಂಟರು ಶ್ರೀ ಉದ್ದೇಗೌಡರ ಅತಿಥಿಗಳಾಗಿ ಉಳಿದುಕೊಂಡೆವು.

ನಾನು ಹರಿಶ್ಚಂದ್ರ ಕಾವ್ಯವನ್ನು ಭಾಷಣದ ವಿಷಯವನ್ನಾಗಿ ತೆಗೆದುಕೊಂಡಿದ್ದೆ. ಅಂದಿನ ಸಭೆಗೆ ಸರ್. ಕೆ.ಪಿ. ಪುಟ್ಟಣ್ಣಶೆಟ್ಟರು, ಆಗ ಚಿಕ್ಕಮಗಳೂರು ಜಿಲ್ಲೆಯ ಡೆಪ್ಯುಟಿ ಕಮೀಷನರ್ ಆಗಿದ್ದ ಮಾಸ್ತಿ ವೆಂಕಟೇಶ ಐಯಂಗಾರ್ಯರು ಮತ್ತು ಊರಿನ ಗಣ್ಯರು ಬಂದಿದ್ದರು. ಮಾಸ್ತಿಯವರು ನನ್ನನ್ನು ಪುಟ್ಟಣ್ಣಶೆಟ್ಟರಿಗೆ ಪರಿಚಯಿಸಿದರು. ಭಾಷಣದ ತರುವಾಯ ಮಾಸ್ತಿಯವರ ಭವ್ಯ ಕ್ವಾಟರ್ಸ್‌ನಲ್ಲಿ ಉಪನ್ಯಾಸ ಸಪ್ತಾಹಕ್ಕೆ ಬಂದಿದ್ದ ಅಧ್ಯಾಪಕರುಗಳಿಗೆಲ್ಲ ಒಂದು ಫಲಾಹಾರ ಉತ್ಸವದ ಏರ್ಪಾಡಾಗಿತ್ತು. ಮಾಸ್ತಿಯವರ ಸಲುಗೆಯ, ಸಭ್ಯತೆಯ, ಸರಳತೆಯ ಮತ್ತು ವಿನಯ ಮಾಧುರ್ಯದ ಸವಿಯನ್ನು ನಾವೆಲ್ಲ ಮನದಣಿಯೆ ಆಸ್ವಾದಿಸಿ ಆಹ್ಲಾದಿತರಾದೆವು.

ಸಪ್ತಾಹ ಮುಗಿದಮೇಲೆ ಮೈಸೂರಿನ ಮಿತ್ರರನ್ನು ನಮ್ಮ ಊರಿಗೆ ಬಂದು ಹೋಗುವಂತೆ ಕೇಳಿಕೊಂಡೆವು. ಹೇಗಿದ್ದರೂ ವೆಂಕಟಯ್ಯನವರ ಕಾರು ಇತ್ತು. ಚಿಕ್ಕಮಗಳುರಿನಿಂದ ಕಡೂರಿಗೆ ಹೋಗಿ ರೈಲು ಹತ್ತುವ ಬದಲು ನಮ್ಮೂರಿಗೆ ಬಂದು ಶಿವಮೊಗ್ಗೆಯಲ್ಲಿ ರೈಲು ಹತ್ತಿಸುವುದಾಗಿ ಪುಸಲಾಯಿಸಿದೆವು.

ಆದರೆ ಆ ಸಣ್ಣ ಫೋರ್ಡ್ ಕಾರಿನಲ್ಲಿ ನಾವಿಷ್ಟು ಜನರು-ಟಿ.ಎಸ್‌.ವೆಂ, ತೀ.ನಂ.ಶ್ರೀ, ನಾ.ಕ.,ಜಿ.ಹ,ದೇ.ರಾ.ಮಾ, ಕುವೆಂಪು, ದೇ.ರಾ.ವೆಂ.,-ಹೋಗುವುದು ಹೇಗೆ? ಹಿಂದುಗಡೆಯ ಸೀಟಿನಲ್ಲಿ ನಾಲ್ಕು ಜನ, ಮುಂದುಗಡೆ ಮೂವರು ಎಂದಾಯಿತು; ಮುಂದೆ ಡ್ರೈವ್‌ಮಾಡುತ್ತಿದ್ದ, ವೆಂಕಟಯ್ಯನವರ ಜೊತೆ ನಾನು, ಮಾನಪ್ಪ ಕುಳಿತೆವು. ಹಿಂದೆ ವೆಂಕಣ್ಣಯ್ಯನವರು ಮತ್ತು ಇತರ ಮೂವರು ಕೂತರು. ಕೂತರು ಎಂಬ ಕ್ರಿಯಾಪದ ಸಾಲದು . ಏಕೆಂದರೆ, ವೆಂಕಣ್ಣಯ್ಯನವರು ಮತ್ತು ಹನುಂತರಾಯರು ಅಷ್ಟೇನೂ ದಢೂತಿ ವ್ಯಕ್ತಿಗಳಾಗಿರಲಿಲ್ಲದಿದ್ದರೂ ಕಸ್ತೂರಿ ಮತ್ತು ಶ್ರೀಕಂಠಯ್ಯ ಇಬ್ಬರೂ ಭಾರೀ ಸ್ಥೂಲಕಾಯರಾಗಿದ್ದು ಸೀಟಿಗೆ ಇಬ್ಬರೆ ಹಿಡಿಸುವಂತಿದ್ದರು! ಅಂತೂ ಕಾರಿನ ಕ್ಯಾನ್‌ವಾಸ್‌ಟಾಪನ್ನು ಹಿಂದಕ್ಕೆ ಮಡಿಚಿಟ್ಟು ನಾಲ್ವರನ್ನೂ ತೂರಿಸಿದೆವು!

ದಾರಿಯುದ್ದಕ್ಕೂ ರಸ್ತೆ ಮಲೆನಾಡಿನ ದಟ್ಟ ಮಲೆಗಾಡುಗಳ ಮಧ್ಯೆ ಹಾಯುತಿದ್ದು, ಸಂಜೆಯ ಗಾಳಿ ತೀಡುತ್ತಿದ್ದುದರಿಂದ ಸಹಿಸಲಸಾಧ್ಯವಾಗಬಹುದಾಗಿದ್ದ ಪಯಣ ಅತಿಥಿಗಳಿಗೆ ತಕ್ಕಮಟ್ಟಿಗೆ ವಿನೋದಕರವಾಗಿಯೆ ಇತ್ತು. ಜೊತೆಗೆ ಸುಸಂಸ್ಕೃತ ಹಾಸ್ಯ ಪರಿಹಾಸ್ಯದ ನಗೆವಾತುಗಳೂ ಮನಸ್ಸನ್ನು ಇಕ್ಕಟ್ಟಿನ ಕಡೆಗೆ ಹೋಗದಂತೆ ತಡೆದಿದ್ದುವು. ಅಂತೂ ರಾತ್ರಿ ಒಂಬತ್ತೂವರೆ ಗಂಟೆಯ ಹೊತ್ತಿಗೆ ಇಂಗ್ಲಾದಿಗೆ ತಲುಪಿದೆವು. (ಬ್ರಾಹ್ಮಣ ಅತಿಥಿಗಳಿಗಾಗಿ ಬ್ರಾಹ್ಮಣರಿಂದಲೆ ಅಡುಗೆ ತಯಾರಾಗಿಸಿದ್ದರು.)

ಮರುದಿನ ‘ಮಲೆನಾಡು ಒಕ್ಕಲಿಗ ಯುವಕರ ಸಂಘ’ದ ವಾರ್ಷಿಕೋತ್ಸವವು ತೀರ್ಥಹಳ್ಳಿ ಶಿವಮೊಗ್ಗ  ರಸ್ತೆಯಲ್ಲಿ ತೀರ್ಥಹಳ್ಳಿಯಿಂದ ಸುಮ ಆರು ಎಂಟೊಂಬಂತ್ತು ಮೈಲಿ ದೂರದಲ್ಲಿರುವ ‘ಹುಗಲವಳ್ಳಿ’ಯಲ್ಲಿ ಜರುಗಲು ಏರ್ಪಾಟಾಗಿತ್ತುಇ. ಬೆಳಿಗ್ಗೆ ಸ್ನಾನ ಕಾಫಿ ತಿಂಡಿ ಪೂರೈಸಿ, ನಾಲ್ವರು ಅತಿಥಿಗಳನ್ನೂ ಹುಗಲವಳ್ಳಿಯ ಸಮಾರಂಭಕ್ಕೆ ಕರೆದೊಯ್ದೆವು. ಅಂದಿನ ಸಭೆಯಲ್ಲಿ ಆ ನಾಲ್ವರ ಬೋಧಕವೂ ಸ್ವಾರಸ್ಯವೂ ಆದ ಭಾಷಣಗಳನ್ನು ಆಲಿಸುವ ಸುದೈವ ಮಲೆನಾಡಿಗರಿಗೆ ಒದಗಿತು. ಸಭೆಯ ಕಾರ್ಯಕಲಾಪ ರಾತ್ರಿಯಾಗುವವರೆಗೂ ಮುಂದುವರಿದಿತ್ತು. ಮರುದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನ ಬಯಲುಸೀಮೆಯ ಅತಿಥಿಗಳನ್ನು ‘ನವಿಲುಕಲ್ಲಿಗೆ’ ಕರೆದೊಯ್ಯುವ ಕಾರ್ಯಕ್ರಮವಿದ್ದುದರಿಂದ ಆ ರಾತ್ರಿಯೆ ಮತ್ತೆ ಇಂಗ್ಲಾದಿಗೆ ಅವರೊಡನೆ ನಾವೆಲ್ಲ ಹಿಂದಿರುಗಿದೆವು.

ಬೆಳಿಗ್ಗೆ ಐದು ಗಂಟೆಗೆ ಮೊದಲೆ ಎಲ್ಲರನ್ನೂ ಎಬ್ಬಿಸಿ, ಕಾರಿನಲ್ಲಿ ಕಾಡು ರಸ್ತೆಯಲ್ಲಿಯೆ ಅವರನ್ನೆಲ್ಲ ‘ನವಿಲುಕಲ್ಲು’ ಗುಡ್ಡದ ಬುಡದವರೆಗೆ ಕರೆದೊಯ್ದೆವು. ಅಲ್ಲಿಂದ ಕತ್ತಲುಕತ್ತಲೆಯಲ್ಲಿಯೆ ನಾಡಿನ ನಡುವೆ ಮುಂಜಾನೆಯ ಹಕ್ಕಿಗಳ ಉಲಿಹವನ್ನು ಆಲಿಸುತ್ತಾ ಎಲ್ಲರೂ ನೆತ್ತಿಗೆ ಏರಿದೆವು. ಅಂದು ಉಷಃಕಾಲದಿಂದ ಹಿಡಿದು ಸೂರ್ಯೋದಯವರೆಗೂ ನಾವು ಕಂಡ ದೃಶ್ಯಪರಂಪರೆಯ ಅದ್ಭುತ ಸೌಂದರ್ಯಾನುಭೂತಿಯನ್ನು ಇಲ್ಲಿ ನಾಣು ವರ್ಣಿಸುವುದಿಲ್ಲ. ನನ್ನ ಗದ್ಯ ಪದ್ಯಗಳ ಸೃಜನ ಸಾಹಿತ್ಯದಲ್ಲಿ ಆ ಅನುಭವ ನಾನಾ ಸ್ತರಗಳಲ್ಲಲಿ ವರ್ಣಿತವಾಗಿದೆ. ಅದರ ಮಹತ್ತನ್ನೆಲ್ಲ ಒಂದು ನಡೆದ ಘಟನೆಯಿಂದಲೆ ಸೂಚಿಸ ಬಯಸುತ್ತೇನೆ: ನಾವೆಲ್ಲರೂ ಪಂಕ್ತಿಯ  ಹಿಂದೆ ಪಂಕ್ತಿಯಂತೆ ಮೇಲಮೇಲಕ್ಕೆದ್ದು ಪೂರ್ವದಿಗಂತದಲ್ಲಿ ವಿಶ್ರಾಂತವಾಗಿದ್ದ ಪರ್ವತಶ್ರೇಣಿಗಳತ್ತ ಬಿಡುಗಣ್ಣಾಗಿ ಮಾತಿಲ್ಲದೆ ಸುಮಾರು ಒಂದು ಒಂದೂವರೆ ಗಂಟೆಯವರೆಗೂ ನಿಷ್ಪಂದರೆಂಬಂತೆ ನೋಡುತ್ತಿದ್ದೆವು. ರಸಾನುಭವದ ತುತ್ತತುದಿಯಲ್ಲಿ ಸಮಾಧಿ ಸ್ಥಿತಿಯಿಂದ ಇಳಿದುಬಂದವರಂತೆ ಎಚ್ಚತ್ತು ನಿಟ್ಟುಸಿರುಬಿಡುತ್ತಿದ್ದಂತೆ, ಧ್ಯಾನಲೀನ ಸ್ನಗ್ಧಮಂದಸ್ಮಿತರಾಗಿದ್ದ ಪ್ರೊ. ವೆಂಕಣ್ಣಯ್ಯನವರು ತಮ್ಮ ಸಾವಧಾನವಾದ ಆರ್ದ್ರ ಗಂಭೀರ ಧ್ವನಿಯಲ್ಲಿ ನನ್ನ ಕಡೆ ತಿರುಗಿ, ಏನನ್ನೋ ಯಾಚಿಸುತ್ತಿರುವರೋ ಅಥವಾ ಆಜ್ಞಾಪಿಸುತ್ತಿರುವರೋ ಎಂಬಂತೆ “ಪುಟ್ಟಪ್ಪ, ಇದನ್ನು ಹಿಡಿದಿಟ್ಟುಕೋ” ಎಂದು ಮತ್ತೆ ಆ ದಿವ್ಯದೃಶ್ಯದತ್ತ ಕಣ್ಣಾಗಿ ಮುಂದೆ ಮಾತನಾಡಲಾರದವರಂತೆ ಮೌನಿಯಾದರು.

ನವಿಲುಕಲ್ಲಿನಿಂದ ಮತ್ತೆ ಇಂಗ್ಲಾದಿಗೆ ಬಂದು ಸ್ನಾನ ಕಾಫಿ ತಿಂಡಿ ಪೂರೈಸಿ, ಕಾರಿನಲ್ಲಿ ಅತಿಥಿಗಳನ್ನು ನಮ್ಮ ಮನೆ ಕುಪ್ಪಳಿಗೆ ಕರೆದೊಯ್ದೆವು. ‘ಮಲೆನಾಡಿನ ಚಿತ್ರಗಳಲ್ಲಿ’ ಮತ್ತು ಭಾವಗೀತೆಗಳಲ್ಲಿ ಕುಪ್ಪಳಿಯ ಮನೆಯ ಮತ್ತು ಸುತ್ತಣ ಕಾಡು ಬೆಟ್ಟಕಣಿವೆಗಳ ವೈಚಿತ್ಯ್ರ ಸೌಂದರ್ಯಗಳನ್ನೆಲ್ಲ ಓದಿ ತಿಳಿದಿದ್ದ ಪ್ರೊ. ವೆಂಕಣ್ಣಯ್ಯನವರಿಗೆ ವಿಶ್ವಾಸಪೂರ್ವಕ ಕುತೂಹಲ: ‘ಕಾಡು ಮುತ್ತು ಕೊಡುತಲಿರುವ ಸೊಬಗು ವೀಡು ನನ್ನ ಮನೆ’ಯನ್ನು ಕಣ್ಣಾರೆ ನೋಡಲು.

ಮನೆ ಕೆರೆ ಗದ್ದೆ ತೋಟಗಳನ್ನೆಲ್ಲ ವೀಕ್ಷಿಸಿದ ಮೇಲೆ ಅವರನ್ನೆಲ್ಲ ‘ಕವಿಶೈಲ’ಕ್ಕೆ ಕರೆದೊಯ್ದೆವು, ಕಾರಿನಲ್ಲಿ ಅಲ್ಲ, ಕಾಲಿನಲ್ಲಿ! ಗುಡ್ಡ ಹತ್ತಿ ಕವಿಶೈಲದ ನೆತ್ತಿಯ ಬಂಡೆಗೆ ಹೋಗಿ ಕುಳಿತೆವು. ಮನೆಯ ಎದುರಿನ ನಿತ್ಯಾಶ್ಯಾಮಲವಾದ ಗುಡ್ಡದೋರೆಯ ನ್ನು ಆವರಿಸಿದ್ದ ಮುದ್ದೆಮುದ್ದೆ ಹಸುರಿನ ವೈವಿಧ್ಯವನ್ನು ನೋಡಿ ಎಲ್ಲರಿಗೂ ಬೆರಗು ಬಡಿದಂತಾಯಿತು. ‘ತೆರೆಮೇಲೆ ತೆರೆಯೆದ್ದು ಹರಿಯುತಿದೆ ಗಿರಿಪಂಕ್ತಿ ಕಣ್ಣಟ್ಟಿ ಹೋಹನ್ನೆಗಂ!’ ‘ದೃಷ್ಟಿದಿಗಂತದ ಮೇರೆಯ ದಾಟಿ, ಗಗನದ ಮೇಘವಿತಾನವ ಮೀಟಿ, ದೂರಕೆ ದೂರಕೆ ಸುದೂರ ದೂರಕೆ ಹಬ್ಬಿಡೆ ಪರ್ವತ ದಿಗಂತ ಶೈಲಿ, ಮೈಲಿ ಮೈಲಿ!’ ಇತ್ಯಾದಿ, ಕವನಗಳಲ್ಲಿ ವರ್ಣಿತವಾದದ್ದನ್ನೆಲ್ಲ ಕಣ್ಣಾರೆ ಕಂಡು ಮನಸಾರ ಅನುಭವಿಸಿ ತಣಿದರು. ವೆಂಕಣ್ಣಯ್ಯನವರಾದಿಯಾಗಿ ಎಲ್ಲರೂ ತಮ್ಮತಮ್ಮ ಹೆಸರುಗಳ ಪ್ರಥಮಾಕ್ಷರಗಳನ್ನು ಬಂಡೆಯ ಗೋಡೆಯ ಮೇಲೆ ಕಲ್ಲಿನ ತುಂಡುಗಳಿಂದ ಬಡಿದು ಕೆತ್ತಿದರು!

ಆಮೇಲೆ ‘ಕವಿಶೈಲ’ದಿಂದ ಅದಕ್ಕಿಂತಲೂ ತುಂಗತರವಾಗಿದ್ದ ‘ಸಂಜೆಗಿರಿ’ ಶಿಖರಕ್ಕೆ ಹಾದಿಯಿಲ್ಲದ ಪೊದೆಯ ಹಳುವಿನ ನಡುವೆ, ಹಾದಿಮಾಡಿಕೊಂಡು ಹತ್ತಿದೆವು. ಅಲ್ಲಿಂದ ಕಾಣಿಸಿದ ಇನ್ನೂ ವಿಶಾಲತರವಾಗಿದ್ದ ದೃಶ್ಯಚಕ್ರಕ್ಕೆ ಅವರೆಲ್ಲ ಮನಸೋತರು. ಅಲ್ಲಿ ನಾನು ಬೇಸಗೆಯ ರಜೆಗೆ ಹೋದಾಗಲೆಲ್ಲ ಒಂದು ಎತ್ತರವಾದ ಮರಕ್ಕೆ ಅನುಕೂಲವಾದ ಅಟ್ಟಣೆ ಕಟ್ಟಿಸಿ ಸಂಜೆಯ ಸೂರ್ಯಾಸ್ತವನ್ನು ನೋಡಲು ಕೂತುಕೊಳ್ಳುತ್ತಿದ್ದೆ. ಮರ ಹತ್ತಿ ಅಲ್ಲಿಗೆ ಏರುವ ಸಾಹಸಕ್ಕೆ ವೆಂಕಣ್ಣಯ್ಯನವರು ಕೈಹಾಕಲಿಲ್ಲ; ಕಡಮೆ ವಯಸ್ಸಿನವರು ಮಾತ್ರ ಹತ್ತಿ ಕೂತರು.

ನಾವೆಲ್ಲ ಅಲ್ಲಿ ಕೂತಿದ್ದ ಸಮಯದಲ್ಲಿ ಯಾರೊ ಕೆಲವರು ಬೇಟೆಗಾರರು ಹಳು ನುಗ್ಗಿದ್ದರು. ಕಣಿವೆಯ ದಟ್ಟಗಾಡಿನಿಂದ ಅವರ ಕಾಕೂ ನಾಯಿಗಳ ಬೊಬ್ಬೆಯೂ ಬಹುದೂರದಿಂದ ಮಂದವಗಿ ಕೇಳಿಬರುತ್ತಿತ್ತು. ನಾವೆಲ್ಲ ನೋಡುತ್ತಿದ್ದಂತೆಯೆ ಸೋವಿನವರ ಕೂಗಿನಬ್ಬರಕ್ಕೆ ಬೆಚ್ಚರಗೊಂಡು ಅವರಿಂದ ಪಾರಾಗಲು ಆ ಕಾಡನ್ನೆ ತ್ಯಜಿಸಲು ನಿಶ್ಚಯಿಸಿ ನುಗ್ಗಿ ಓಡಿಬರುತ್ತಿದ್ದ ಒಂದು ದೊಡ್ಡ ಕಾಡುಹಂದಿಯನ್ನು ನಾವು ಕೂತಿದ್ದ ಸ್ಥಳಕ್ಕೆ ಸುಮಾರು ಎರಡು ಎರಡೂವರೆ ಫರ್ಲಾಂಗು ದೂರದಲ್ಲಿ ಕೆಳಗೆ ಬೆಟ್ಟದ ಬುಡದ ಹಳುವಿನಲ್ಲಿ ಧಾವಿಸುತ್ತಿದ್ದುದನ್ನು ಕಂಡು, ನಾವು, ಅಚ್ಚ ಮಲೆನಾಡಿಗರು, ಬಯಲುಸೀಮೆಯ ಅತಿಥಿಗಳ ಗಮನವನ ನು ಸೆಳೆಯಲೆಂದು ಸುಟ್ಟಿದೋರಿ ಕೂಗಿಕೊಂಡೆವು. ನಮ್ಮಿಂದ ದೂರದಲ್ಲಿ ಕೆಳಗಡೆ ಹಳುವಿನಲ್ಲಿ ಹೂಂಕರಿಸಿ ಧಾವಿಸುತ್ತಿದ್ದ ಆ ಹೆಬ್ಬಂದಿಯನ್ನು ಸಕೃದ್ಧರ್ಶಿಸಿದ ಜಿ. ಹನುಮಂತರಾಯರು ಅದರ ವಿಚಾರದಲ್ಲಿ ಭಯಾಶ್ಚರ್ಯ ಚಕಿತರಾಗಿದ್ದ ನಮ್ಮನ್ನು ನಮ್ಮ ಬಾಲಿಶ ಗ್ರಾಮ್ಯತೆಗಾಗಿ ಮೂದಲಿಸುವಂತೆ ‘ಅಯ್ಯೋ, ಅದೇನು ಮಹಾ? ಒಂದು ದೊಣ್ಣೆ ತೆಗೆದುಕೊಂಡು ಬಡಿದು ಹಾಕಬಹುದು!’ ಎಂದು ನಕ್ಕು ನಗಿಸಿದರು. ಅವರಿಗೆ ಅದು ಅಷ್ಟು ಲಘು ವಸ್ತುವಾಗಿ ತೋರಿದ್ದು ಸಹಜವೆ. ಏಕೆಂದರೆ ಅವರಿಗೆ ಬೇಟೆಯ ಅನುಭವವಾಗಲಿ ಕಾಡಿನಲ್ಲಿ ಅದರ ಅಪಾಯವಾಗಲಿ ಒಂದಿನಿತೂ ಗೊತ್ತಿರಲಿಲ್ಲ. ಆದರೆ ಕಾಡಿನಲ್ಲಿ ಬೇಟೆಯಾಡಿ ಹಂದಿ ಸೀಳಿದ್ದ ನಾಯಿಗಳನ್ನು ಹಂದಿಯ ಕೋರೆದಾಡಿ ಗಳಿಗೆ ಸಿಕ್ಕು ನುಗ್ಗುನುರಿಯಾಗಿ ಸತ್ತಿದ್ದ ಜನರನ್ನೂ ಕಂಡೂ ಕೇಳಿಯೂ ಅರಿತಿದ್ದ ನಮಗೆ ಆ ಪ್ರಾಣಿಯನ್ನು ಕುರಿತು ಒದಗಬಹುದಾದ ಭಾವಕೋಶ ಅವರಿಗೆ ಹೇಗೆ ತಾನೆ ಒದಗೀತು?

‘ಸಂಜೆಗಿರಿ’ ಮತ್ತು ‘ಕವಿಶೈಲ’ಗಳಿಂದ ಪ್ರಾತಃಸಮಯ ಸಾಧ್ಯವಾದ ರಮಣೀಯತೆಯನ್ನು ಸವಿದು ಮನೆಯ ಕಡೆಗೆ ಇಳಿದೆವು. ಎಲ್ಲರನ್ನೂ ಉಪ್ಪರಿಗೆಗೆ ಕರೆದುಕೊಂಡು ಹೋಗಿ ಬಿಸಿಲಲ್ಲಿ ಒಣಗಿಸಿದ್ದ ಕರಿಬಾಳೆ ಹಣ್ಣುಗಳನ್ನೂ ಬಣ್ಣದ ಸೌತೆಕಾಯಿಗಳನ್ನು ಕಡೆದು ಬೆಲ್ಲ ಹಾಕಿ ಮಾಡಿದ್ದ ಪಾನಕವನ್ನೂ ಕೊಟ್ಟೆವು. ತಮಗೆ ಅಪರಿಚಿತವಾಗಿದ್ದ ಅವುಗಳ ರುಚಿಯನ್ನು ಬಯಲು ಸೀಮೆಯವರು ಬಹಳವಾಗಿ ಶ್ಲಾಘಿಸಿದರು!

ಪ್ರೊ|| ವೆಂಕಣ್ಣಯ್ಯನವರಿಗೆ ತಾವೇ ನನ್ನಿಂದ ಬರೆಯಿಸಿದ ‘ಮನೆಯ ಶಾಲೆಯ ಐಗಳ ಮಾಲೆ’ಯ ಭಾವಪ್ರಬಂಧದ ಕ್ಷೇತ್ರವಾಗಿದ್ದ ಕುಪ್ಪಳಿ ಮನೆಯ ಉಪ್ಪರಿಗೆಯನ್ನು ಕಂಡು ತುಮಬ ಪ್ರಮೋದವಾಯಿತು.

ಆ ದಿನವೆ ಮಧ್ಯಾಹ್ನದ ಮೇಲೆ ಅವರೆಲ್ಲ ಮೈಸೂರಿಗೆ ಹೊರಟರು.

ಪ್ರತಿವರ್ಷದಂತೆ ಈ ಸಾರಿಯೂ ಬೇಸಗೆ ರಜೆಯಲ್ಲಿ ನಮ್ಮ ಮನೆಯಲ್ಲಿ ಶ್ರೀರಾಮಕೃಷ್ಣ ಜಯಂತ್ಯುತ್ಸವವನ್ನು ಆಚರಿಸಿದೆವು.

…..ಮೈಸೂರಿಗೆ ಹಿಂದಿರುಗಿದ ಮೇಲೆ, ಈ ಸಾರಿ ನಾನು, ಶ್ರೀನಿ, ವಿಜಯ ಮೂವರೂ ಊರಿನಲ್ಲಿ ಎಲ್ಲಿಗೇ ಹೋದರೂ ತಪ್ಪದೆ ಸೊಳ್ಳೆಪರದೆ ಉಪಯೋಗಿ ಸಿದ್ದರಿಂದ, ಯಾರಿಗೂ ಸ್ವಲ್ಪವೂ ಮಲೇರಿಯಾ ಬರಲಿಲ್ಲ.

೨೦-೭-೧೯೩೫: ನಾಲ್ಕೂಕಾಲು ಗಂಟೆ, ಶ್ರೀರಾಮಕೃಷ್ಣಾಶ್ರಮ, ಮೈಸೂರು.

Will Durant, The Mansions of Philosophy ಯಲ್ಲಿ The Meaning of History ಎಂಬ ಅಧ್ಯಾಯವನ್ನು ಓದುತ್ತಿದ್ದೆ. ಅದರಲ್ಲಿ ಚರಿತ್ರೆ ಮಹಾವ್ಯಕ್ತಿಗಳ ಸೃಷ್ಟಿಯೊ? ಎಂಬ ವಾದವಿದೆ.-ನಾನು ಓದುತ್ತಿದ್ದ ಪುಟದ ಮೇಲೆ ಒಂದು ಇರುವೆ ಹರಿದುಬಂದಿತು. ಊದಿದೆ. ಹಾರಿ ಹೋಗಲಿಲ್ಲ. ಪುಸ್ತಕವನ್ನು ಮುಚ್ಚಿ ತೆರೆದೆ! ಇರುವೆ ಮುದ್ದೆಯಾಗಿತ್ತು. ಸತ್ತುಹೋಯಿತೆಂದು ಮತ್ತೆ ಮುಂದುವರಿದು ಓದುತ್ತಾ ಕುಳಿತೆ. ತುಸುಹೊತ್ತಿನಲ್ಲಿ ನಿಶ್ಚಲವಾಗಿ ಬಿದ್ದಿದ್ದ ಚುಕ್ಕೆ (ಇರುವೆಯ ಕಳೇಬರ!) ಒದ್ದಾಡಿಕೊಳ್ಳಲಾರಂಭಿಸಿತು. ಹಾಗೆಯೆ ನೋಡುತ್ತಾ ಕುಳಿತೆ. ಒಂದು ಸಾರಿ ಅದು ಒದ್ದಾಡಿಕೊಂಡು ನೋಯುವುದನ್ನು ಮತ್ತೊಂದು ಸಾರಿ ಪುಸ್ತಕ ಮುಚ್ಚಿ-ನಿಲ್ಲಿಸಿಬಿಡಲೇ ಎಂದು ಆಲೋಚಿಸಿದೆ. ಮತ್ತೆ ನೋಡೋಣ ಎಂದು ಸುಮ್ಮನಾದೆ. ಅದು ಒದ್ದಾಡಿಕೊಳ್ಳುವುದನ್ನು ಹೆಚ್ಚು ಮಾಡಿತು. ಇದ್ದಕ್ಕಿದ್ದ ಹಾಗೆ ನನ್ನ ಮನಸ್ಸು ನಾನು ಓದುತ್ತಿದ್ದ ದೊಡ್ಡ ಪುಸ್ತಕದ ಮೇಲೆ ಒಂದು ಪೂರ್ಣ ವಿರಾಮದ ಚುಕ್ಕಿಗಿಂತಲೂ ಸಣ್ಣದಾಗಿ ಒದ್ದಾಡಿಕೊಂಡು ಸಂಕಪಡುತ್ತಿರುವ ಇರುವೆಯನ್ನು ಭೂಮಿ ಗ್ರಹ ರವಿ ತಾರಾ ನೀಹಾರಿಕಾ ಕಾಲ ದೇಶ ಬ್ರಹ್ಮಾಂಡದ ಮಹಾ ಬೃಹದ್ಭಿತ್ತಿಗೆದುರಾಗಿ ಭಾವಿಸಿ ಪುಲಕಿತವಾಯಿತು. ಈ ಇರುವೆಯ ಸಂಕಟ! ನಾನು, ಓದುವ ಪುಸ್ತಕ, ಭಾರತವರ್ಷ, ಭೂಮಿ-ಅದರ ಇತಿಹಾಸ-ಸೂರ್ಯ-ತಾರೆ-ಗಿರ‍್ರನೆ ಸುತ್ತುವ ಭೀಮಭೀಮ ಭೀಮಾಕಾರದ ನೀಹಾರಿಕೆ.-ಇದರ ಗೋಳನ್ನು ಕೇಳುವ ದೇವರೆಲ್ಲಿ? ಕ್ಷಣಮಾತ್ರದಲ್ಲಿ ಮನಸ್ಸು ಇವುಗಳನ್ನೆಲ್ಲ ಚಿಂತಿಸಿಬಿಟ್ಟಿತು. -ಕಣ್ಣಿನಲ್ಲಿ ನೀರೂ ಹರಿಯಿತು! ಅಳಬೇಕು ಎನ್ನಿಸಿತು! ಅಳುವುದು ಸವಿಯಾಗಿ ಕಂಡಿತು! -ಇಷ್ಟರಲ್ಲಿ ಮುದ್ದೆಯಾಗಿದ್ದ ಇರುವೆ ನೆಟ್ಟಗಾಗಿ ಹರಿದಾಡತೊಡಗಿತ್ತು! ಏನೋ ಮಹದಾನಂದವಾಯಿತು!-ನಾನರಿಯೆ! ಅಹಿಂಸಾಬುದ್ಧಿಯಿಂದಲ್ಲ. ಏಕೆಂದರೆ ಹಿಂದೆ ಎಷ್ಟೋ ಪ್ರಾಣಿ ಪಕ್ಷಿಗಳನ್ನು ಬಂದೂಕಿನಿಂದ ಹೊಡೆದು ಕೊಂದಿದ್ದೇನೆ. ಮುಂದೆಯೂ ಕೊಲ್ಲುವುದಿಲ್ಲ ಎನ್ನುವ ನಂಬಿಕೆಯಿಲ್ಲ-ಆದರೂ ಆ ಇರುವೆಯ ಜೀವ ಉಳಿದುದು ಮಹಾ ಆನಂದಕರವಾಯ್ತು. ಮತ್ತೆ ಉಃಫೆಂದು ಊದಿ ಅದನ್ನು ಹಾರಿಸಿ-ಈ ಡೈರಿ ಬರೆಯತೊಡಗಿದೆ-ಈ ಅನುಭವ ನನಗೆ ಮಹಾಶ್ರೇಷ್ಠವಾಗಿ ಕಂಡಿದೆ.

೧-೮-೧೯೩೫:

ನಿನ್ನೆ ಒಂದು ವಿಶೇಷ ನಡೆಯಿತು:

ಕಮಲಮ್ಮಗೆ ಕ್ಷಯದ ಚಿಹ್ನೆಯ ಕಾಯಿಲೆಯಾಗಿ ಇಲ್ಲಿಗೆ ಕರೆದುಕೊಂಡು ಬಂದರು. ಒಂಟಿಕೊಪ್ಪಲಿನಲ್ಲಿ ಜಯರಾಂ ಡಾಕ್ಟರ (ಕ್ಷಯಾಸ್ಪತ್ರೆಯ ಮುಖ್ಯವೈದ್ಯರು) ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲಿ ಶ್ರೀನಿವಾಸನ ತಾಯಿ, ಸಾವಿತ್ರಿ, (ಗತಿಸಿದ ನನ್ನ ತಮ್ಮ ತಿಮ್ಮಯ್ಯನ ಹೆಂಡತಿ ಮತ್ತು ಶ್ರೀನಿವಾಸನ ಅಕ್ಕ) ಲಲಿತಮ್ಮ ಮತ್ತು ಹಿರಿಯಣ್ಣ (ಇವರೆಲ್ಲರಿಗೂ ಅಣ್ಣ), ಇವರೆಲ್ಲರೂ ತಂಗಿದ್ದಾರೆ. ನಿನ್ನೆ ಕಮಲಮ್ಮನನ್ನು ಕ್ಷಯಾಸ್ಪತ್ರೆಗೆ ಸೇರಿಸಿದ್ದಾರೆ-ಇವರ ಹತ್ತಿರದ ಬಂಧುವಾದ ಹಿರೇತೋಟದ ದಾಸಪ್ಪಗೌಡರು ಅವರ ಮಗಳು ಜೀವಮ್ಮನನ್ನೂ ಮತ್ತು ಅವರ ಹೆಂಡತಿಯನ್ನೂ ಕರೆದುಕೊಂಡು ಬಂದಿದ್ದಾರೆ. ಅವರ ಹೆಂಡತಿಗೆ ಕಿರುನಾಲಗೆ ಚಿಕಿತ್ಸೆ ಮಾಡಿಸಬೇಕಂತೆ  ಅದಕ್ಕಾಗಿ.

ನಿನ್ನೆ ಸಾಯಂಕಾಲ ಜೀವಮ್ಮ, ಸಾವಿತ್ರಮ್ಮ, ಲಲಿತಮ್ಮ ಆಶ್ರಮಕ್ಕೆ ಆರತಿಯಾಗುವ ಸಮಯಕ್ಕೆ ಬಂದರು. ಆರತಿಗೆ ಬಂದ ಇತರ ಭಕ್ತಗಣದೊಡನೆ ದೇವರ ಮನೆಯ ಎದುರಿನ ಹಾಲಿನಲ್ಲಿ ಕುಳಿತು ಪೂಜೆ ಪ್ರಾರ್ಥನೆಗಳಲ್ಲಿ ಭಾಗಿಗಳಾದರು.

ಆರತಿ ಮುಗಿದೊಡನೆ ನಾನು ಶಂಕರನಾರಾಯಣರಾಯರೂ (ಕೊಡಗಿನ ಕಡೆಯಿಂದ ಬಂದಿದ್ದ ಒಬ್ಬ ಭಕ್ತರು) ಯಾವುದೊ ವಿಚಾರವಾಗಿ ನನ್ನ ಕೊಠಡಿಯಲ್ಲಿ ಕುಳಿತು ಒಂದು ಚರ್ಚೆಯಲ್ಲಿ ಮಗ್ನರಾಗಿದ್ದೆವು.

ಆಗ ಇದ್ದಕ್ಕಿದಹಾಗೆ ಆಶ್ರಮದ ಹಾಲಿನಲ್ಲಿ ಯಾರೊ ಆವೇಶಪೂರ್ಣವಾಗಿ ಪ್ರಾರ್ಥನಾಭಂಗಿಯಿಂದ ಶ್ರೀಗುರುದೇವನಿಗೆ ಮೊರೆಯಿಡುವ ಕಾವ್ಯಮಯ ಆರ್ತ ಭಾಷೆ ಕೇಳಿಬಂದಿತು. ಆ ಸಂಬೋಧನೆ ಎಷ್ಟು ಹೃತ್ಪೂರ್ವಕವಾಗಿ ಎಂತಹ ಸಾಹಿತ್ಯಕ ಶೈಲಿಯಲ್ಲಿತ್ತು  ಎಂದರೆ ನಾನು ಯಾರೋ ಯಾವುದೋ ವಚನ ಸಾಹಿತ್ಯ ಕೃತಿಯಿಂದ ಭಾವಪೂರ್ಣವಾಗಿ ವಾಚನ ಮಾಡುತ್ತಿದ್ದಾರೆ ಎಂದು ಭಾವಿಸಿದೆ. ಅಷ್ಟರಲ್ಲಿ ಶ್ರೀನಿವಾಸ ನನ್ನ ರೂಮಿಗೆ ಬಂದು, ‘ಜೀವಮ್ಮಗೆ ಏನೋ ಮೈಮೇಲೆ ಬಂದ ಹಾಗಿದೆ; ಗುರುಮಹಾರಾಜರಿಗೆ ಕೈಮುಗಿದುಕೊಂಡು ಏನೇನನ್ನೋ ನಿವೇದಿಸುತ್ತಿದ್ದಾಳೆ!’ ಎಂದು ಹೇಳಿದ. ಒಡನೆಯೆ ನಾನು ಪ್ರಾರ್ಥನಾಮಂದಿರಕ್ಕೆ ಹೋಗಿ ದೂರನಿಂತು ನೋಡಿದೆ.

ಪ್ರಾರ್ಥನೆಗೆ ನೆರೆದಿದ್ದವರೆಲ್ಲ ಇನ್ನೂ ಹೋಗಿರಲಿಲ್ಲ. ಅವರ ಮಧ್ಯೆ ಶ್ರೀಗುರುದೇವನ ಪಟವಿದ್ದ ದಿಕ್ಕಿಗೆ ಮುಖವಾಗಿ ಕೈಮುಗಿದುಕೊಂಡು ‘ಸ್ವಾಮಿ, ನಾನು ಇಷ್ಟು ದಿನ ಕಷ್ಟಸಂಕಟಗಳಲ್ಲಿ ಸಿಕ್ಕಿ ಬೆಂದು ನೊಂದು ಪ್ರಾರ್ಥಿಸಿದುದು ಇಂದು ಸಾರ್ಥಕವಾಯಿತು. ನೀನು ನನಗೆ ದರ್ಶನವಿತ್ತು ಕೃಪೆದೋರಿ ನನ್ನ ಜನ್ಮ ಸಾರ್ಥಕ್ಯವಾಯ್ತು.’ ಎಂದೆಂದು ನಾನಾ ವಿಧವಾಗಿ ಭಗವಂತನಿಗೆ ಶರಣಾಗತಳಾಗಿ ತನ್ನ ಧನ್ಯತೆಯನ್ನು ತೋಡಿಕೊಂಡಳು. ತನಗೆ ಗುರುದೇವನು ಕಾಣಿಸಿಕೊಂಡನೆಂದೂ ದಿವ್ಯಾನುಭವವಾಯಿತೆಂದೂ ಭಾವಾವೇಶದ ವಾಣಿಯಿಂದ ಹೇಳುತ್ತಾ ಆನಂದಬಾಷ್ಪದ ಕಣ್ಣೀರುಗರೆದಳು. ಆಕೆಗೆ ಆ ಸ್ಥಳದಿಂದ ಕದಲಲೂ ಇಷ್ಟವಾಗಲಿಲ್ಲ. ಜೊತೆ ಬಂದವರು ‘ಮನೆಗೆ ಹೋಗೋಣ ಏಳು’ ಎಂದರೆ, ‘ನಿಮಗೇನು ಕಣ್ಣಿಲ್ಲವೆ? ಅಲ್ಲಿ ನೋಡಿ. ಗುರುದೇವನು ಪ್ರತ್ಯಕ್ಷನಾಗಿದ್ದಾನೆ. ನಾನು ಅವನನ್ನು ಬಿಟ್ಟುಹೋಗುವುದಿಲ್ಲ. ’ ಎಂದು ಕುಳಿತೆಬಿಟ್ಟಳು. ಅವರಲ್ಲಿ ಕೆಲವರು ಗದರಿಸಿ ಬಲಾತ್ಕಾರವಾಗಿ ಕರೆದೊಯ್ಯಲು ಮನಸ್ಸು ಮಾಡಿದ್ದರು. ನಾನು ಹಾಗೆ ಮಾಡಬೇಡಿ ಎಂದು, ‘ನಾಳೆ ಮತ್ತೆ ಪ್ರಾರ್ಥನೆಗೆ ಬರೋಣ’ ಎಂದು ಉಪಚಾರ ಹೇಳಿ ಸಮಾಧಾನ ಮಾಡಿ, ಒಂದು ಟಾಂಗಾ ತಂದು ಕೊಂಡೊಯ್ಯುವಂತೆ ಮಾಡಿದೆ.

ಆದರೂ ಮನೆಗೆ ಹೋದಮೇಲೆ ಮಹಾ ಆನಂದವನ್ನು ಪ್ರದರ್ಶಿಸುತ್ತಾ ನನ್ನನ್ನು ಕಂಡು ಮಾತಾನಾಡಬೇಕೆಂದು ಹಟ ಹಿಡಿದಳಂತೆ. ನಾನು ರಾತ್ರಿ ಒಂಬತ್ತು ಗಂಟೆಯ ಮೇಲೆ ಊಟ ಮುಗಿಸಿ, ವಿದ್ಯಾರ್ಥಿನಿಲಯದಲ್ಲಿದ್ದ ಶ್ರೀನಿವಾಸ, ವಿಜಯದೇವ, ರಾಮಣ್ಣ ಇವರೊಡನೆ ಅಲ್ಲಿಗೆ ಹೋದೆ. ಜೀವಮ್ಮನನ್ನು ಹಾಸಗೆಯಲ್ಲಿ ಮಲಗಿಸಿದ್ದರು. ಪಕ್ಕದಲ್ಲಿ ಹಿರಿಯಣ್ಣ ಕುಳಿತಿದ್ದ. ನಾನು ಬಂದುದನ್ನು ಕೇಳಿ ಬೇಡವೆಂದರೂ ಕೇಳದೆ ಎದ್ದು ಕುಳಿತು, ತನ್ನ ಆತ್ಮಕಥೆಯನ್ನೂ ತಾನು ಕೃತಾರ್ಥಳಾದೆ ಎಂಬುದನ್ನೂ ಸವಿಸ್ತಾರವಾಗಿ ಹೇಳತೊಡಗಿದಳು. ನಾನು ಮೌನವಾಗಿ ಕುಳಿತು ಕೇಳಿದೆ:

ತನ್ನ ಪತಿಯ ಸ್ಥಿತಿ, ತನಗೆ ಅವರನ್ನು ಆಗಲಿ ಇರಬೇಕಾಗಿ ಬಂದ ಪರಿಸ್ಥಿತಿ, ತಾನು ದೇವರನ್ನು  (ಶ್ರೀರಾಮಕೃಷ್ಣ ಪರಮಹಂಸರು) ಪ್ರಾರ್ಥನೆ ಮಾಡಲು ತೊಡಗಿದುದು (ಸಾವಿತ್ರಮ್ಮನ ಹೇಳಿಕೆಯ ಮೇರೆಗೆ), ತನಗಾದ ಅವಮಾನಗಳು, ಕಷ್ಟ ಸಂಕಟಗಳು-ಎಲ್ಲವನ್ನೂ ಸವಿಸ್ತಾರವಾಗಿ ಉತ್ತಮವಾದ ಸಾಹಿತ್ಯಸ್ಪಷ್ಟವಾದ ಕನ್ನಡದಲ್ಲಿ ಹೇಳಿದಳು. ಕಡೆಗೆ ತನ್ನನ್ನು ಈ ಕಮಲಮ್ಮನ ಕಾಯಿಲೆಯ ನೆವದಿಂದ ಇಲ್ಲಿಗೆ ಕರೆತಂದು, ನಿಮ್ಮ ಆಶ್ರಮದಲ್ಲಿ (ಶ್ರೀರಾಮಕೃಷ್ಣಾಶ್ರಮದಲ್ಲಿ) ನನಗೆ ದರ್ಶನವಿತ್ತ ಗುಇರುದೇವನೊಬ್ಬನೇ ಈ ಯುಗದ ಅವತಾರಪುರುಷನು. ಅವರೇ ದೇವರು-ಎಂದು ಸರಳ ಹೃದಯದಿಂದಲೂ ಭಾವದಿಂದಲೂ ಅಲ್ಲಿ ಕುಳಿತಿದ್ದವರೆಲ್ಲ ಬೆರಗಾಗುವಂತೆ ಮಾತನಾಡಿದಳು.

ನಾನು ಕೆಲವು ಸಮಾಧಾನದ ಮತ್ತು ಉತ್ತೇಜನದ ಮಾತುಗಳನ್ನಾಡಿ ಆಶ್ರಮಕ್ಕೆ ಬಂದೆ….ಜೈ ಗುರುಮಹಾರಾಜರಿಗೆ ಜೈ!’*

(* ೧-೮-೧೯೩೯ ನೆಯ ತಾರೀಖಿನಲ್ಲಿ ಬರೆದ ಡೈರಿಯಲ್ಲಿದ್ದುದು ಮೇಲೆ ಕೊಟ್ಟಿರುವ ಒಕ್ಕಣೆ. ಅದು ನಡೆದ ತರುವಾಯದ ಜೀವಮ್ಮನ ಜೀವನದ ಕಥೆಯನ್ನು, ನಾನು ಸಂಗ್ರಹಿಸಿದಂತೆ, ಆಕೆಯ ದುರಂತದ ಆದರೂ ಆಕೆಯ ದೃಷ್ಟಿಯಿಂದ ಮಂಗಳಾಂತ್ಯದವರೆಗೂ ಸಂಗ್ರಹವಾಗಿ ಕೊಡುತ್ತೇನೆ, ಒಂದು ಪರಿಶಿಷ್ಟದಲ್ಲಿ.

ಅದು ಬರೆದರೆ ಒಂದು ಸ್ವತಂತ್ರ ಕಾದಂಬರಿಯೆ ಆದೀತು. “ನನ್ನ ಜೀವನ ಚರಿತ್ರೆ ಬರೆಯಿರಿ!” ಎಂದು ಬಾಯಿಬಿಟ್ಟು ಆಕೆಯ ನನ್ನನ್ನು ಕೇಳಿಕೊಂಡಿದ್ದಳು, ನಾನು ಆಕೆಯನ್ನು, ಆಶ್ರಮದಲ್ಲಿ ಆಕೆಗಾದ ಅನುಭವದ ಅನಂತರ, ಅವರು ಉಳಿದುಕೊಂಡಿದ್ದ ಒಂಟಿಕೊಪ್ಪಲಿನ ಜಯರಾಂ ಡಾಕ್ಟರ್ ರವರ ಬಾಡಿಗೆಯ ಮನೆಯಲ್ಲಿ (ಈಗ ‘ಉದಯರವಿ’ಯ ಬಲಪಕ್ಕವಾಗಿದೆ ಆ ಮನೆ೧) ಕಂಡು ಮಾತನಾಡುತ್ತಿದ್ದಾಗ. ಆದರೆ ಅಂದು ನಾನು ನಕ್ಕು ಸುಮ್ಮನಾಗಿದ್ದೆ.

ಮುಂದೆ ನಾನು ‘ಕಾನೂರು ಹೆಗ್ಗಡಿತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಎಂಬ ಎರಡು ಕಾದಂಬರಿಗಳನ್ನು ಬರೆದ ಮೇಲೆ ‘ಕಾಲೋಸ್ಮಿ’ ಎಂಬ ಹೆಸರಿನ ಒಂದು ಮಹಾಕಾದಂಬರಿಯನ್ನು ಬರೆಯಲು ಸಂಕಲ್ಪಿಸಿದೆ. ಆ ಕಾದಂಬರಿಯಲ್ಲಿ ಇಡೀ ನಮ್ಮ ರಾಷ್ಟ್ರಜೀಔನದ ಒಂದು ಶತಮಾನವನ್ನು-ಸ್ವಾತಂತ್ಯ್ರ ಸಂಗ್ರಾಮಾದಿಯಾಗಿ ಅದರ ಶತಶತ ಮುಖಗಳನ್ನು, ಹಳ್ಳಿ-ಪಟ್ಟಣ, ಸಂಸಾರ-ಸಂನ್ಯಾಸ, ಮತ-ಅಧ್ಯಾತ್ಮ- ಮೌಢ್ಯ-ವಿಜ್ಞಾನ ಪ್ರಗತಿ-ರಾಜಕೀಯ-ಸಾಮಾಜಿಕ ಇತ್ಯಾದಿಗಳನ್ನು ಚಿತ್ರಿಸಬೇಕೆಂದು ಸಂಕಲ್ಪಿಸಿದೆ. ಅದಕ್ಕಾಗಿ ಸಾಮಗ್ರಿಗಳನ್ನೂ ಸಂಗ್ರಹಿಸತೊಡಗಿದೆ. ಅಚ್ಚಾಗಿ ಪ್ರಕಟಗೊಂಡಿದ್ದ ಗ್ರಂಥಗಳ ಜೊತೆಗೆ ಆ ಜೀವನದಲ್ಲಿ ಭಾಗಿಯಾದ ಮಿತ್ರ ಮತ್ತು ಪರಿಚಿತ ವ್ಯಕ್ತಿಗಳಿಂದಲೂ ಅವರ ಜೀವನ ಚರಿತ್ರೆಗಳನ್ನು  ಹಸ್ತಪ್ರತಿಗಳಲ್ಲಿ ಕೂಡಿಹಾಕಲೂ ಪ್ರಯತ್ನಿಸಿದೆ. ಕೆಲವನ್ನು ಕೂಡಿಹಾಕಿಯೂ ಹಾಕಿದೆ. ಹಾಗೆ ಕೂಡಿಹಾಕಿರುವ ವ್ಯಕ್ತಿ ಜೀವನಚರಿತ್ರೆಗಳಲ್ಲಿ ಅನಾಮಧೇಯರೂ ಅಖ್ಯಾತರೂ ಆದವರ ಬದುಕುಗಳೂ ಸೇರಿವೆ. ಅಂತಹ ಬದುಕುಗಳಲ್ಲಿ ಜೀವಮ್ಮನ ಆತ್ಮ ಕಥೆಯೂ ಒಂದಾಗಿದೆ.)