ಮುಂದಣ ನನ್ನ  ದಿನಚರಿ ಸಂಪೂರ್ಣ ಅನನುಕ್ರಮವಾಗಿದೆ. ಈ ಕ್ರಮ ಭಂಗ ೧೦-೯-೧೯೩೩ ರಂದು ಸ್ವಾಮಿ ಸಿದ್ಧೇಶ್ವರಾನಂದರು  ಮೈಸೂರು ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷತೆಯಿಂದ ನಿವೃತ್ತರಾಗಿ ಹೋದಂದಿನಿಂದಲೂ ಶುರುವಾಗಿದೆ! ಬರಬರುತ್ತಾ ಅದರ ತಾರೀಖುಗಳು ದೂರದೂರವಾಗಿ, ಕಡೆಕಡೆಗೆ ಬಹುದೂರವಾಗುತ್ತಾ ಹೋಗಿವೆ. ಸದ್ಯದ ದಿನಚರಿ ೧-೮-೧೯೩೫ ರಂದು ಜೀವಮ್ಮನ ವೃತ್ತಾಂತದಿಂದ ಕೊನೆಗೊಂಡು ಮತ್ತೆ ೭-೫-೧೯೩೬ ರಂದು ಒಂಬತ್ತು ತಿಂಗಳ ಅನಂತರ ಕಾಣಿಸಿಕೊಳ್ಳುತ್ತದೆ. ಅದೂ ಕೂಡ ಅತ್ಯಂತ ಚುಟಕವಾಗಿ: ೭-೫-೧೯೩೬-ಕುಂದದ ಗುಡ್ಡಕ್ಕೆ, ೮-೫-೧೯೩೬-ಗುಡ್ಡೆಕೇರಿ+ಆಗುಂಬೆ. ೯-೫-೧೯೩೬: ಕೌಲೆದುರ್ಗ, ಹನುಮಂತನಾಯ್ಕರ ಮನೆ,-ಇಂಗ್ಲಾದಿ! ನಾವು ಕುಂದದ ಗುಡ್ಡಕ್ಕೂ ಕೌಲೆದುರ್ಗಕ್ಕೂ ಪ್ರವಾಸ ಹೋಗಿ ಬಂದದ್ದು, ಸ್ವಾರಸ್ಯವಾಗಿ ಬರೆದರೆ ನೂರಾರು ಪುಟಗಳಾಗುವಂತಹುದನ್ನು ಮೂರುನಾಲ್ಕು ಹೆಸರುಗಳನ್ನು ಮಾತ್ರ ಹೇಳಿ ಮುಗಿಸಲಾಗಿದೆ. ಅದನ್ನು ತುಸುವೆ ಆದರೂ ಬಣ್ಣಿಸಿ ಹೇಳುವ ಆಶೆಯಿದೆ, ಮುಂದೆ.

ಈ ಮಧ್ಯೆ ದಿನಚರಿಯಲ್ಲಿ ಇಲ್ಲದ ನನ್ನ ಸಾಹಿತ್ಯಕ ಜೀವನದ ಒಂದೆರಡು ಮುಖ್ಯ ವಿಷಯಗಳನ್ನು ಕುರಿತು ಹೇಳುವುದು ಉಚಿತ ಎಂದು ತೋರುತ್ತದೆ:

ಆ ಸುಮಾರು ಒಂದು ವರ್ಷದ ಅಂತರದಲ್ಲಿ ನನ್ನ ಸಾಹಿತ್ಯ ಸೃಷ್ಟಿ-ಗದ್ಯ , ಪದ್ಯ, ನಾಟಕ, ಪ್ರಬಂಧ, ಜೀವನ ಚರಿತ್ರೆ-ಇತ್ಯಾದಿ ಬಹುಮುಖವಾಗಿ ರಸಾವೇಶದಿಂದ ಸಾಗುತಿತ್ತು. ‘ಪಕ್ಷಿಕಾಶಿ’ ಮತ್ತು ‘ಕೋಗಿಲೆ ಮತ್ತು ಸೋವಿಯಟ್‌ರಷ್ಯಾ’ ಸಂಕಲನಗಳಲ್ಲಿರುವ ಅನೇಕ ಕವನಗಳು ಮೂಡಿದ್ದುವು. ‘ಶ್ರೀರಾಮಕೃಷ್ಣ ಪರಮಹಂಸ’ ಮತ್ತು ‘ಸ್ವಾಮಿ ವಿವೇಕಾನಂದ’ ಜೀವನಚರಿತ್ರೆಗಳೂ ರಚಿತವಾದುವು. ‘ಚಿತ್ರಾಂಗದಾ’ ಕಾವ್ಯವೂ ಮುಗಿದಿತ್ತು. ೧೯೩೬ನೆಯ ಜನವರಿಯಲ್ಲಿ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯಕ್ಕೂ ನಾಂದಿ ಪ್ರಾರಂಭವಾಗಿತ್ತು. ನನ್ನ ಜೀವನದ ಉತ್ಕ್ರಾಂತಿಯ ಒಂದು ಸಂಧಿಕಾಲವೂ ಸನ್ನಿಹಿತವಾಗುತಿತ್ತು . ಶ್ರೀರಾಮಕೃಷ್ಣ ಪರಮಹಂಸರ ಶತಮಾನೋತ್ಸವವನ್ನು  ಮೈಸೂರು ಆಶ್ರಮ ವಿಜೃಂಭಣೆಯಿಂದ ಆಚರಿಸಿತು. ಆ ಸಂದರ್ಭದಕ್ಕಾಗಿಯೆ ರಚಿತವಾಗಿತ್ತು, ನನ್ನ ಕವನ ‘ಶತಮಾನ ಸಂಧ್ಯೆ!’ ಮತ್ತು ಹತ್ತು ವರ್ಷಗಳ ನನ್ನ ಆಶ್ರಮ ಜೀವನ ಕೊನೆಗೊಳ್ಳುವುದರಲ್ಲಿತ್ತು.’

ಆ ವರ್ಷದ (೧೯೩೬) ಬೇಸಗೆ ರಜದಲ್ಲಿ ಮೈಸೂರಿನಲ್ಲಿ ಓದುತ್ತಿದ್ದ ಹುಡುಗರೊಡನೆಡ ನಾನೂ ಊರಿಗೆ ಹೋಗಿದ್ದೆ, ಆ ರಜೆಯ ದಿನಗಳು ತುಂಬು ಹೊಳೆಗಳಾಗಿ ಹರಿಯುತ್ತಿದ್ದುವು, ನಮ್ಮ ಜೀವನದಲ್ಲಿ. ನಮ್ಮ ಉತ್ಸಾಹಕ್ಕೂ ಆನಂದಕ್ಕೂ ನೆರೆ ಉಕ್ಕಿಸಿದ್ದರು ಕೆಲವು ಬಯಲು ಸೀಮೆಯ ಮಿತ್ರರು , ಪ್ರಧಾನವಾಗಿ,  ಎ.ಸಿ.ನರಸಿಂಹಮೂರ್ತಿ ಮತ್ತು ಬಿ.ಕೃಷ್ಣಮೂರ್ತಿ. ನಾವೆಲ್ಲ ವಿಶೇಷವಾಗಿ ಇಂಗ್ಲಾದಿಯಲ್ಲಿಯೂ ಕುಪ್ಪಳಿಯಲ್ಲಿಯೂ ತಂಗುತ್ತಿದ್ದೆವು. ಇಂಗ್ಲಾದಿಯಲ್ಲಿ ಡಿ.ಆರ್. ವೆಂಕಟಯ್ಯನವರ ಉದಾರ ಆತಿಥ್ಯ ಅತ್ಯಂತ ಆಸ್ವಾದನೀಯ ವಾಗಿರುತಿತ್ತು. ವಾಲಿಬಾಲ್‌ಬ್ಯಾಡ್‌ಮೆಂಟನ್ ಇಸ್ಪೀಟು ಮೊದಲಾದ ನಾಗರಿಕ ಕ್ರೀಡೆಗಳ ಜೊತೆಗೆ ಕೋವಿ ನಾಯಿಗಳೊಡನೆ ಬೇಟೆಯಾಡುತ್ತಾ ಕಾಡುಬೆಟ್ಟಗಳಲ್ಲಿ ಅಲೆದು ನಲಿಯುತ್ತಿದ್ದೆವು. ನಮ್ಮ ಲೀಲಾ ಪ್ರವಾಸಗಳಿಗೆ ವೆಂಕಟಯ್ಯನವರ ಕಾರು ಸದಾ ಸಿದ್ಧವಾಗಿರುತ್ತಿತ್ತು.

ಒಂದು ದಿನ ಗುಡ್ಡೆಕೇರಿ ದುಗ್ಗಪ್ಪ ಹೆಗ್ಗಡೆಯವರು ನಂಟರ ಮನೆಗೆ ಬಂದಿದ್ದವರು ನಮ್ಮ ಮನೆಗೂ ಬಂದು ಉಳಿದರು. ಸಂಜೆ ನಾವೆಲ್ಲ ಕವಿಶೈಲಕ್ಕೆ ಹೋಗಿದ್ದಾಗ, ಅಲ್ಲಿಂದ ದಿಗಂತಕ್ಕೆದುರಾಗಿ ಎದ್ದು ಕಾಣುತ್ತಿದ್ದ ದೂರದ ಕುಂದದ ಗುಡ್ಡವನ್ನು ನೋಡುತ್ತಾ ಮೆಲ್ಲಮೆಲ್ಲಗೆ ಇಳಿದಿಳೆದು ಶಿಖರದ ಹಿಂದೆ ಮರೆಯಾಗುತ್ತಿದ್ದ ಸೂರ್ಯಾಸ್ತದ ಅದ್ಭುತ ವೈಭವವನ್ನು  ನೋಡುತ್ತಿದ್ದೆವು. ಆಗ ಹೆಗ್ಗಡೆಯೊವರು “ಆ ಗುಡ್ಡ ನಮ್ಮ ಮನೆಗೆ ಸಮೀಪದಲ್ಲಿದೆ. ಹಿಂದೆ ಅಲ್ಲಿ ಜೈನಗುರುಗಳು ಇದ್ದರಂತೆ. ಈಗ ಕಾಡುಬೆಳೆದು  ಹೋಗಿದೆ. ಅದರ ನೆತ್ತಿಯಲ್ಲಿರುವ ಒಂದು ಏಕಾಖಂಡವಾಗಿರುವ ದೊಡ್ಡ ಬಂಡೆಯಲ್ಲಿ ಸ್ವಾಭಾವಿಕವಾಗಿಯೆ ಆಗಿರುವ ಒಂದು ಕೊಳ ಇದೆ. ಬೆಟ್ಟ ಬೇಸಗೆಯಲ್ಲಿಯೂ ತಿಳಿನೀರು ತುಂಬಿರುತ್ತದೆ. ಷಿಕಾರಿಗೆ ಹೋದಾಗ ನಾವು ಅದರ ನೀರು ಕುಡಿದು ಬುತ್ತಿಯುಂಡು ತಣಿಯುತ್ತೇವೆ.” ಎಂದೆಲ್ಲ ಸ್ವಾರಸ್ಯವಾಗಿ ವರ್ಣಿಸಿದರು.

ಎಲ್ಲಿ ಗಿರಿನೆತ್ತಿಯ ಲ್ಲಿ ಬಂಡೆ ಹಾಸಿದ್ದರೆ (ಕವಿಶೈಲ ಮತ್ತು ನವಿಲುಕಲ್ಲುಗಳಲ್ಲಿರುವಂತೆ) ಅಲ್ಲಿಗೆ ಹೋಗಿ ಸೂರ್ಯೋದಯ ಅಥವಾ ಸೂರ್ಯಾಸ್ತಗಳನ್ನು ನೋಢುವ ಹವ್ಯಾಸ ಬೆಳೆಸಿಕೊಂಡಿದ್ದ ನಾನು “ಅಲ್ಲಿಗೆ ಹೋಗುವುದಕ್ಕೆ ಸಾಧ್ಯವೇ ? ದಾರೀಗೀರಿ ಇದೆಯೋ?” ಎಂದು ಆಸೆಪಟ್ಟಂತೆ ಪ್ರಶ್ನಿಸಿದೆ.

ಅದಕ್ಕೆ ಅವರು “ನೀವು ಬರುವುದಾದರೆ ಹೇಳಿ. ನಾನು ಎಲ್ಲ ಏರ್ಪಾಡು ಮಾಡುತ್ತೇನೆ” ಎಂದರು.

ನನ್ನ ಮತ್ತು ಮಿತ್ರ ಆಶೆ ಕೆರಳಿತು. ಅದು ಫಲಿಸಬೇಕಾದರೆ ಯಾರ ಕೃಪೆ ಬೇಕೇ ಬೇಕಾಗಿತ್ತೋ ಅವರ ಕಡೆ ನಾವೆಲ್ಲ ಕಣ್ಣಾದೆವು.

ಇಂಗಿತವರಿತ ಡಿ.ಆರ್ಲ. ವೆಂಕಟಯ್ಯನವರು ಮುಗುಳು ನಗುತ್ತಾ “ಆಗಲಿ, ಅದಕ್ಕೇನಂತೆ. ಒಂದು ಟ್ರಿಪ್‌ಇಟ್ಟರಾಯಿತು.” ಎಂದು ಸಂತೋಷದ ಸಮ್ಮತಿ ಇತ್ತರು.

ಸರಿ, ಮೇ ತಿಂಗಳು ಏಳನೆಯ ತಾರೀಖು ಗುಡ್ಡೆಕೇರಿಗೆ ನಾವೆಲ್ಲ-ಏಳೆಂಟು ಮಂದಿ-ಹೋಗುವುದೆಂದು ಗೊತ್ತಾಯಿತು. ದುಗ್ಗಪ್ಪ ಹೆಗ್ಗಡೆಯವರು ನಮ್ಮನ್ನೆಲ್ಲ ಆಹ್ವಾಹನಿಸಿ, ಮರುದಿನ ಅವರ ಮನೆಗೆ ಹಿಂತಿರುಗಿದರು.

೧೯೩೬ ನೆಯ ಮೇ ಏಳನೆಯ ತಾರೀಖು ಬೆಳಿಗ್ಗೆ ಉಪಾಹಾರ ಮುಗಿಸಿ ಎರಡು ಕಾರುಗಳಲ್ಲಿ, (ಒಂದು ಇಂಗ್ಲಾದಿಯದು ಮತ್ತೊಂದು ಉಂಟೂರಿನದು) ನಾವೆಲ್ಲ-ತಮ್ಮ ಕಾರನ್ನು ಡ್ರೈವ್‌ಮಾಡುತ್ತಿದ್ದ ಡಿ.ಆರ್. ವೆಂಕಟಯ್ಯ , ತಮ್ಮ ಕಾರನ್ನು ಡ್ರೈವ್‌ಮಾಡುತ್ತಿದ್ದ ಡಿ.ಎನ್‌. ಹಿರಿಯಣ್ಣ, ನಾನು, ನರಸಿಂಹಮೂರ್ತಿ, ಕೃಷ್ಣಮೂರ್ತಿ, ಮಾನಪ್ಪ, ಶ್ರೀನಿವಾಸ, ವಿಜಯದೇವ ಇತ್ಯಾದಿ-ಕಿಕ್ಕಿರಿದು ಕುಳಿತು ಹೊರಟೆವು. ಆಗ ತೀರ್ಥಹಳ್ಳಿಯಲ್ಲಿ ತುಂಗಾನದಿಗೆ ಸೇತುವೆ ಆಗಿರಲಿಲ್ಲ. ಆದ್ದರಿಂದ ನಾವು ಕೊಪ್ಪ, ಹರಿಹರಪುರ, ಆಗುಂಬೆ ಮಾರ್ಗವಾಗಿ ಗುಡ್ಡೆಕೇರಿಗೆ ತಲುಪಬೇಕಾಗಿತ್ತು. ಆಗಿನ ರಸ್ತೆಗೆ ಟಾರುಗೀರು ಹಾಕಿರುವುದಿರಲಿ ತಗ್ಗು ದಿಣ್ಣೆ ಹೊಂಡಗಳಿರದಿದ್ದರೆ ಸಾಕಿತ್ತು. ಜೊತೆಗೆ ಬೆಟ್ಟಬೇಸಗೆಯ ಪುಡಿಧೂಳು ಮುಗಿಲುಮುಗಿಲಾಗಿ ಎದ್ದು ನಮ್ಮನ್ನೆಲ್ಲ ಕೆಂಧೂಳಿಗೂಳಿಸಿತ್ತು. ಆದರೂ ದಟ್ಟಗಾಡಿನ ನಡುವೆ ಪಯಣಿಸುತ್ತಿದದ ನನಗಂತೂ ಅತ್ಯಂತ ಮನೋಜ್ಞವಾಗಿತ್ತು ಸಹ್ಯಾದ್ರಿ ಶ್ರೇಣಿಗಳ ಅರಣ್ಯದರ್ಶನ.

ಗುಡ್ಡಕೇರಿ ದುಗ್ಗಪ್ಪ ಹೆಗ್ಗಡೆಯವರ ಮನೆ ಅವರ ಹೆಸರಿಗೆ ತಕ್ಕಂತೆ ದುರ್ಗವೆ ಆಗಿತ್ತು.  ಗೌಡ ಎಂಬುದು ಕಾರ್ಯಾಂಗಕ್ಕೂ ನಾಯಕ ಎಂಬುದು ಸೈನ್ಯಾಂಗಕ್ಕೂ ಹೆಗ್ಗಡೆ ಎಂಬುದು ನ್ಯಾಯಾಂಗಕ್ಕೂ ಸಲ್ಲುತ್ತಿದ್ದ ಬಿರುದುಗಳಾಗಿದ್ದುವಂತೆ. ದುಗ್ಗಪ್ಪ ಹೆಗ್ಗಡೆಯವರ ಮನೆ (ಅಥವಾ ‘ಮನೆಗಳು’ ಎಂದೇ ಹೇಳಬಹುದೇನೊ?) ವಿಸ್ತಾರವಾದ ಜೋಡಿ ಮನೆಗಳಾಗಿದ್ದುವು. ನಾವು ಇಳಿದುಕೊಂಡಿದ್ದ ಮನೆ ವಾಸದ ಮನೆಯಂತಿರದೆ ನ್ಯಾಯವಿತರಣೆಗಾಗಿಯೆ ಮಾಡಿಸಿದಂತಿತ್ತು. ನ್ಯಾಯಾಧೀಶರು ಕೂರುವ ಎತ್ತರದ ಜಾಗ, ಪಂಚಾಯತರು ಕೂರುವ ಜಾಗ, ಸಾಮಾನ್ಯ ಪ್ರೇಕ್ಷಕರು ಕೂರುವ ಜಾಗ, ನ್ಯಾಯಾಪೇಕ್ಷಿಗಳು ಅಥವಾ ಅಪರಾಧಿಗಳು ಕೂರುವ ಜಾಗ, ಹೀಗೆ ಜಗಲಿ ಜಗಲಿಯಾಗಿ ದೊಡ್ಡ ದೊಡ್ಡ ಕೆತ್ತನೆಯ ಮುಂಡಿಗೆಗಳಿಂದ ಅಲಂಕೃತವಾಗಿ ಗೌರವಾಸ್ಪದವಾಗಿತ್ತು.

ಆ ದಿನವೆಲ್ಲ ಉದಾರ ಆತಿಥ್ಯವನ್ನು ಸವಿಯುವ, ಅವರ ಗದ್ದೆ ತೋಟಗಳನ್ನು ಅಲೆದು ನೋಡುವ, ಹತ್ತಿರದ ಗುಡ್ಡನೆತ್ತಿಗೆ ಹೋಗಿ ಸೂರ್ಯಾಸ್ತವನ್ನು ದರ್ಶಿಸುವ ಮತ್ತು ಸುತ್ತಮುತ್ತಣ ಹಳ್ಳಿಗಳ ಮತ್ತು ಹಳ್ಳಿಗರ ಬದುಕಿನ ಕತೆಗಳನ್ನು ಕೇಳುವ, ನರಸಿಂಹಮೂರ್ತಿಯ  ಸುಶ್ರಾವ್ಯ ಕಂಠದಿಂದ ಭಾವಗೀತೆಗಳನ್ನು ಆಲಿಸುವ ಇತ್ಯಾದಿ ಸಂತೋಷ ಕ್ರಿಯೆಗಳಲ್ಲಿ ಕಳೆಯಿತು. ರಾತ್ರಿ ಚೆನ್ನಾಗಿ ನಿದ್ದೆಮಾಡಿದೆವು . ಸಮೃದ್ಧ ಭೋಜನಾನಂತರ!

ದುಗ್ಗಪ್ಪ ಹೆಗ್ಗಡೆಯವರು ನಮ್ಮ ಆಗಮನಕ್ಕಾಗಿ ಏಳೆಂಟು ದಿನಗಳಿಂದಲೂ ಪುರಸತ್ತಿಲ್ಲದೆ ಕಾರ್ಯಮಗ್ನರಾಗಿದ್ದರಂತೆ. (ಆಗಿನ ಕುಂದದ ಗುಡ್ಡ ಕಾಡು ದಟ್ಟಯಿಸಿ ಬೆಳೆದ ದುರ್ಗಮ ಪ್ರದೇಶವಾಗಿತ್ತು. ಈಗ (೧೯೭೫) ಗುಡ್ಡದ ನೆತ್ತಿಯಲ್ಲಿ ಆಧುನಿಕ ಸೌಕರ್ಯದ ಬಂಗಲೆಗಳಾಗಿವೆಯಂತೆ.  ಪ್ರವಾಸಿಗಳು ಬಂದು ತಂಗಲು ಎಲ್ಲ ನಾಗರಿಕ ಅನುಕೂಲಗಳನ್ನೂ ಒದಗಿಸಲಾಗಿದೆಯಂತೆ. ವಿದ್ಯುಚ್ಛಕ್ತಿ ಬಂದಿದೆಯಂತೆ! ಜೈನರಿಗೆ ಅದೊಂದು ಪವಿತ್ರಕ್ಷೇತ್ರವಾಗಿ ಯಾತ್ರಾರ್ಥಿಗಳು ಬಂದು ಹೋಗುತ್ತಿರುತ್ತಾರಂತೆ. ನೆತ್ತಿಗೆ ಕಾರುಲಾರಿಗಳು ಸುಗಮವಾಗಿ ಹೋಗಲು ಟಾರುರಸ್ತೆ ಇದೆಯಂತೆ!) ಹತ್ತಾರು ಆಳುಗಳ ಕೈಲಿ ಹಳು ಕಡಿಸಿ, ಮನುಷ್ಯ ಸಂಚಾರಕ್ಕೆ ಸಾಧ್ಯವಾಗುವಷ್ಟರಮಟ್ಟಿಗೆ ಮಾಡಲು ಅವರಿಗೆ ಸಾಕುಸಾಕಾಯಿತಂತೆ. ಆಮೇಲೆ ಗುಡ್ಡದ ನೆತ್ತಿಯಲ್ಲಿ ದಟ್ಟಕಾಡಿನ ಹೆಮ್ಮರಗಳ ಬುಡದ ಮುಳ್ಳುಪೊದೆ ಕುರುಚಲುಗಳನ್ನು ಕಡಿಸಿ, ಒಂದು ರಾತ್ರಿ ನಾವು ಅಲ್ಲಿ ತಂಗಲು ಅನುಕೂಲ ಮಾಡಿದ್ದರು. ರಾತ್ರಿ ಅಲ್ಲಿಯೆ ಊಟ ಮಾಡಲು ಅಡಿಗೆಯವರನ್ನು ಗೊತ್ತುಮಾಡಿ, ಪಾಕಕಾರ್ಯಕ್ಕೆ ಬೇಕಾದ ಮಹಾಮಹಾ ಪಾತ್ರೆಗಳನ್ನೆಲ್ಲ ಅಲ್ಲಿಗೆ ಹೊರಿಸಿದ್ದರು! ಅಕ್ಕಿ ಮೊದಲಾದ ಸಾಮಗ್ರಿಗಳನ್ನೆಲ್ಲ ತಕ್ಕಮಟ್ಟಿಗೆ ಬೃಇಹತ್‌ಪ್ರಮಾಣದಲ್ಲಿಯೆ ಸಾಗಿಸಿದ್ದರಂತೆ, ಕಾಫಿ ತಿಂಡಿ ಇಡ್ಲಿ ದೋಸೆ ಇತ್ಯಾದಿಗಳಿಗೂ; ಮತ್ತು ಚಾಪೆ, ರಗ್ಗು, ಜಮಖಾನೆ, ತಡಿ, ಸಿಗರೇಟು, ಇಸ್ಪೀಟು! ಇಷ್ಟನ್ನೂ ದಾರಿಯಿಲ್ಲದ ಕಾಡುದಾರಿಯಲ್ಲಿ ಆಳುಗಳು ಹೆಗಲಮೇಲೆ ಮತ್ತು ತಲೆ ಹೊರೆಯಲ್ಲಿ ಹೊತ್ತೇ ಸಾಗಿಸಿದ್ದರೆಂದ ಮೇಲೆ ಅವರು ಪಟ್ಟ ಶ್ರಮ ಎಷ್ಟು ಎಂದು ನಾವು ಊಹಿಸಬಹುದು.

ಮರುದಿನ ಬೆಳಿಗ್ಗೆ ಕಾಫಿ ತಿಮಡಿ ಸ್ನಾನಾದಿಗಳನ್ನು ಪೂರೈಸಿ ನಾವೆಲ್ಲ, ಸಾಧ್ಯವಾಗುವಲ್ಲಿಯವರೆಗೆ, ಕಾರುಗಳಲ್ಲಿ ಕುಂದದಗುಡ್ಡದ ಕಡೆಗೆ ಹೊರಟೆವು, ಹಳ್ಳಿಯ ಗಾಡಿಗಳು ತಿರುಗಿತಿರುಗಿ ಆಗಿದ್ದ ಕೊರಕಲು ರಸ್ತೆಯಲ್ಲಿ! ಕಾರು ಮುನ್ನಡೆಯಲು ಅಸಾಧ್ಯವಾದಲ್ಲಿ ಎಲ್ಲರೂ ಕೆಳಗಿಳಿದು ಗುಡ್ಡ ಹತ್ತಲು ತೊಡಗಿದೆವು. ಮುಳ್ಳುಮಟ್ಟುಗಳನ್ನು ಸವರಿ ದಾರಿ ಮಾಡಿದ್ದರೂ ನಾವು ಎಲ್ಲ ಕಡೆಯೂ ನೆಟ್ಟಗೆ ನಿಂತು ಹೋಗಲಾಗಲಿಲ್ಲ. ತಲೆಗೂ ಬಟ್ಟೆಗಳಿಗೂ ಮುಳ್ಳು ಹಿಡಿಯದಂತೆ ತಲೆಬಗ್ಗಿಸಿ, ಸೊಂಟಬಗ್ಗಿಸಿ, ಕೆಲವೆಡೆ ಕುಳಿತು ಒರಕಿಯೂ ಗುಡ್ಡವೇರಬೇಕಾಯಿತು. ಒಳ್ಳೆ ವ್ಯಾಯಾಮ ಸರ್ಕಸ್ಸು ಕಲಿಸಿದಿರಿ ನಮಗೆ ಎಂದು  ದುಗ್ಗಪ್ಪ ಹೆಗ್ಗಡೆಯವರಿಗೆ ವಿನೋದವಾಡಿದೆವು.

ಅಂತೂ ನನ್ನ ಆಸೆಯಂತೆ ಬೆಳಿಗ್ಗೆ ಮುಂಚೆ ಗುಡ್ಡದ ನೆತ್ತಿಯಲ್ಲಿ ನಿಂತು ಸೂರ್ಯೋದಯವನ್ನೂ ಕಣಿವೆಯ  ಕಾಡುಗಳನ್ನೆಲ್ಲ ಮುತ್ತಿಮುಸುಗುವ ಮಂಜಿನ ಮನೋಹರತೆಯನ್ನೂ ನೋಡಲಾಗಲಿಲ್ಲ. ಏಕೆಂದರೆ ನಾವು ನೆತ್ತಿಗೆ ಏರಿ ನಿಂತಿದದೆ ಸುಮರು ಹತ್ತುಗಂಟೆಯ ಸಮಯಕ್ಕೆ.

ಆದರೂ ನೆತ್ತಿಯ ಹಾಸುಬಂಡೆಗೆ ಹೋಗಿ ನಿಂತು ಸುತ್ತ ನಾಲ್ಕು ದಿಕ್ಕಿಗೂ ತಿರುಗಿ ನೋಡಿದಾಗ ಧನ್ಯರಾಗಿದ್ದೆವು! ನಾವು ನಿಂತಿದ್ದ ಕುಂದದ ಗುಡ್ಡದನೆತ್ತಿ ಆ ಶ್ರೇಣಿಯಲ್ಲಿಯೆ ಅತ್ಯಂತ ಉನ್ನತ ಶಿಖರವಾದ್ದರಿಂದ ಸುತ್ತಣ ಕಾಡು ತುಂಬಿದ ಪರ್ವತಶ್ರೇಣಿಯ ದೃಶ್ಯಚಕ್ರಕ್ಕೆ ನಾವೆ ಕೇಂದ್ರವಾಗಿದ್ದೆವು. ಆ ಅನುಭವದ ಪರಿಣಾಮವನ್ನು ನನ್ನ ಗದ್ಯಪದ್ಯದ ಕೃತಿಗಳಲ್ಲಿ ಮಲೆನಾಡಿನ ಚಿತ್ರಗಳು, ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು, ಶ್ರೀರಾಮಾಯಣದರ್ಶನಂ ಇತ್ಯಾದಿ-ಕಾಣಬಹುದು ಎಂದಷ್ಟೆ ಇಲ್ಲಿ ಹೇಳಬಯಸುತ್ತೇನೆ.

ಆದರೆ ಅದೆಲ್ಲದರ ಮಹತ್ತನ್ನೂ ಮೀರಿ ನಮಗೆ ಆಶ್ಚರ್ಯಕರವಾಗಿದ್ದುದಿಉ ಎಂದರೆ ಆ ಬೆಟ್ಟ ಬೇಸಗೆಯಲ್ಲಿ, ತೊರೆಗಳೆಲ್ಲ ಬತ್ತಿ ಕೊರಕಲು ಬಿದ್ದಿರುವ ಆ ಕಾಲದಲ್ಲಿ, ಆ ಎತ್ತರದ ಗುಡ್ಡನೆತ್ತಿಯ ಮಂಡೆಯಂತಿದ್ದ ಹಾಸುಬಂಡೆಯ ನಡುವೆ ಇದ್ದ ಪುಟ್ಟ ಸರೋವರದಲ್ಲಿ, ನಡುಹಗಲ ಬಿಸಿಲಿಗೆ, ಅದರ ಬಹುಶಃ ಎರಡಾಳೆತ್ತರದ ಕಲ್ಲುತಳವೂ ಕಾಣಿಸುವಷ್ಟರ ಮಟ್ಟಿಗೆ ಸ್ಫಟಿಕ ನಿರ್ಮಲವೆಂಬಂತೆ ತಿಳಿಯಾಗಿ ತುಂಬಿ ನಿಂತಿದ್ದ ನೀರು! ಮಣಿನಿಕಾಶೋಧಕ! ಸುಮರು ಹತ್ತುಹದಿನೈದು ಅಡಿ ಅಗಲದ ಮತ್ತು ಇಪ್ಪತ್ತು ಇಪ್ಪತ್ತೈದು ಅಡಿ ಉದ್ದದ ಆ ಕೊಳದ ಕಲ್ಲುತಡಿಯ ಸುತ್ತಲೂ ನಾವೆಲ್ಲ ನಿಂತು ಆಶ್ಚರ್ಯಚಿಹ್ನೆಗಳಾಗಿದ್ದೆವು! ಜೊತೆಗೆ ಪ್ರಶ್ನೆಚಿಹ್ನೆಗಳೂ ಆಗಿದ್ದೆವು. ಅದು ಹೇಗೆ ಸಾಧ್ಯವಾಯಿತು ಆ ಬರಡು ನೆತ್ತಿಯಲ್ಲಿ ಆ ನೀರು ಶೇಖರವಾಗಿರುವುದಕ್ಕೆ ಎಂದು.

ದುಗ್ಗಪ್ಪ ಹೆಗ್ಗಡೆಯವರಿಗೇನೂ ಅದೊಂದು ವೈಜ್ಞಾನಿಕ ಸಮಸ್ಯೆಯಾಗಿ ತೋರಲಿಲ್ಲ: ಹಿಂದೆ ಅಲ್ಲಿ ತಪಸ್ಸು ಮಾಡುತ್ತಿದ್ದ ಕುಂದ ಕುಂದಾಚಾರ್ಯರ ಮಹಿಮೆಯಿಂದಲೆ ಆ ಪವಾಡ ಸಿದ್ಧವಾಗಿತ್ತು.

ಸುತ್ತಣ ದೃಶ್ಯಾವಲೋಕನ ಮಾಡಿದ ಅನಂತರ ಆ ನೆತ್ತಿಬಂಡೆಯನ್ನು ಆವರಿಸಿದಂತೆ ದಟ್ಟಯಿಸಿ ಬೆಳೆದಿದ್ದ ಕಾಡಿನಲ್ಲಿ ಸಾಧ್ಯವಾದಷ್ಟು ಸುತ್ತಾಡಿದೆವು. ಅದು ಹಿಂದೆ ಕುಂದ ಕುಂದಾಚಾರ್ಯರ ತಪೋರಂಗವಾಗಿದ್ದುದಕ್ಕೆ ಸಾಕ್ಷಿಯಾಗಿ ನಮಗೆ ನಿಬಿಡಾರಣ್ಯದ ಹೊರತೂ ಬೇರೇನೂ ಕಾಣಲಿಲ್ಲ. ಕಾಡುಮುಚ್ಚಿದ್ದ ಒಂದು ಕಟ್ಟಡದ ಅವಶೇಷವೆಂಬಂತೆ ಒಂದೇನೂ ಇತ್ತು, ಅಷ್ಟೆ. ಬಿಸಿಲೇರಿದಂತೆ ನಾವು ಅಲೆಯುವುದನ್ನು ಬಿಟ್ಟುಬಂದು ಅಲ್ಲಲ್ಲಿ ಮರದ ನೆರಳಿನಲ್ಲಿ ವಿಶ್ರಮಿಸಿದೆವು. ಕೆಲವರು ಜಮಖಾನ ಹಾಸಿ ಇಸ್ಪೀಟಿಗೂ ಶುರುಮಾಡಿದರು! “ಊಟ ರೆಡಿ ಆಗುವವರೆಗೂ ಸುಮ್ಮನೆ ಏಕೆ ಕೂರಬೇಕು?” ಎಂದು.

ಆ ರಾತ್ರಿ ಅಲ್ಲಿಯೆ ತಂಗಿದೆವು. ತಿಂಗಳ ಬೆಳಕು ಜೇಡಿ ಬಳಿದಂತಿತ್ತು . ಹಾಸು ಬಂಡೆಯ ಮೇಲೆ ಕುಳಿತೆ ಬೆಳದಿಂಗಳೂಟ ಮಾಡಿದೆವು. ಬೆಟ್ಟಬೇಸಗೆಯಾಗಿದ್ದರೂ ಸಂಜೆಯಾಗುತ್ತಲೆ ಕಾಡಿನ ಚಳಿಗಾಳಿ ಬೀಸಿ ತಂಪು ಶುರುವಾಗಿ, ರಾತ್ರಿ ಮಲಗುವಷ್ಟರಲ್ಲಿ ರಗ್ಗುಗಳನ್ನು ಹೊದೆದುಕೊಂಡು ಮಲಗುವಂತಾಯಿತು. ಕಾಡಿನ ಕತ್ತಲೆಯನ್ನು ಬೆಳಗಲು ಹೆಗ್ಗಡೆಯವರು ಗ್ಯಾಸು ಲೈಟುಗಳನ್ನೂ ತಂದು ಹೊತ್ತಿಸಿದ್ದರು!

ಮಧ್ಯರಾತ್ರಿ ಹೆಮ್ಮರದ ಒಣಗಿ ಲಡ್ಡಾದ ಹೆಗ್ಗೊಂಬು ಒಂದು ಬಿದ್ದು ಸ್ವಲ್ಪ ಹೊತ್ತು ನಮ್ಮನ್ನೆಲ್ಲ ಎಬ್ಬಿಸಿ ಗಾಬರಿಗೊಳಿಸಿತು. ಸದ್ಯಕ್ಕೆ ದೇವರದಯೆಯಿಂದ ಅದು ಮಲಗಿದ್ದ ಯಾರ ಮೇಲೆಯೂ ಬಿದ್ದಿರಲಿಲ್ಲವಾದ್ದರಿಂದ ನಾವೆಲ್ಲ ಒಬ್ಬರನ್ನೊಬ್ಬರು ಪುಕ್ಕಲುಗಳೆಂದು ಚುಡಾಯಿಸಿ ನಗೆ ಎಬ್ಬಿಸುವಂತಾಯಿತಷ್ಟೆ!

ಬರುಬರುತ್ತಾ ಚಳಿ ಹೆಚ್ಚಾಗಿ ಬಲವಾಗಿ ರಗ್ಗು ಸುತ್ತಿಕೊಂಡು ಮಲಗಿದ್ದೆವು. ಬೆಳಗಿನ ಜಾವದ ಹೊತ್ತಿಗೆ ತಲೆಗೂ ಬಟ್ಟೆ ಸುತ್ತಿಕೊಂಡು ಮಲಗುವಷ್ಟಾಯಿತು! ತಿಂಗಳ ಬೆಳಕು ಮರಗಳ ಎಲೆಎಲೆಯ  ನಡುವೆ ತೂರಿ ಬರುತ್ತಿದ್ದು ಕಣ್ಣುಬಿಟ್ಟು ನೇಡಿದರೆ ವಸ್ತುಗಳನ್ನು ಗುರುತಿಸಬಹುದಾದಷ್ಟು ಬೆಳಕು ಬರುತ್ತಿತ್ತು. ಆದರೆ ಬೆಳಗಿನ ಜಾವದ ಹೊತ್ತಿಗೆ ಕಣ್ಣುಬಿಟ್ಟ ಉ ನೋಡಿದಾಗ ಕಾವಣ ದಟ್ಟಯಿಸಿಬಿಟ್ಟಿತ್ತು. ಇಡೀ ಬೆಟ್ಟನೆತ್ತಿಯನ್ನೆ ಬಿಳಿಮಂಜು ನಿಬಿಡವೆಂಬಂತೆ ಆಕ್ರಮಿಸಿತ್ತು. ಅಂದರೆ ನಾವು ಮೋಡದ ನಡುವೆಯೆ ಅದರ ಹೊಟ್ಟೆಯೊಳಗೇ ಮಲಗಿದ್ದಂತೆ ಇತ್ತು. ಹೊದೆದಿದ್ದ ರಗ್ಗುಗಳ ಮೇಲುಮೈ ಒದ್ದೆಯಾಗತೊಡಗಿದ್ದುವು, ಸಣ್ಣಗೆ ಇಬ್ಬನಿ ಕೂತಂತೆ! ಅಂತೂ ಆ ಬೆಟ್ಟ ನೆತ್ತಿಯ ಕಾಡಿನಲ್ಲಿ ಕಳೆದ ಆ ಇರುಳು ಒಂದು ಅಪೂರ್ವ ಅನುಭವವಾಗಿತ್ತು.

ಬೆಳಿಗ್ಗೆ  ನನ್ನ ಇಷ್ಟ ತಕ್ಕಮಟ್ಟಿಗೆ ನೆರವೇರಿತು: ಬೆಟ್ಟನೆತ್ತಿಯಿಂದ ಸೂರ್ಯೋದಯ ದರ್ಶನ! ಮತ್ತು ಕಣಿವೆಕಾಡುಗಳನ್ನೆಲ್ಲ ನೊರೆಯೆದ್ದ ಕಡಲಂತೆ ಮಂಜು ತುಂಬಿರುವ ದಿವ್ಯದೃಶ್ಯ!

ಅಲ್ಲಿಯೆ ಕಾಫಿತಿಂಡಿ ಪೂರೈಸಿಕೊಂಡು ಎಲ್ಲರೂ ಇಳಿದೆವು.

ಮುಂದಿನ ನಮ್ಮ ಪ್ರವಾಸದ ಕಾರ್ಯಕ್ರಮ ಕೌಲೆದುರ್ಗಕ್ಕೆ ಹೋಗುವುದಾಗಿತ್ತು.

ಕುಂದದಗುಡ್ಡದ ಬುಡದಲ್ಲಿ ದುಗ್ಗಪ್ಪ ಹೆಗ್ಗಡೆಯವರ ಮನೆ ಗುಡ್ಡೆಕೇರಿ ಇದ್ದಂತೆ ಕೌಲೆದುರ್ಗದ ಬುಡದಲ್ಲಿ ಹನುಮಂತನಾಯಕರ ಮನೆ ಹಾರೊಗದ್ದೆ ಇತ್ತು. ನಾವೆಲ್ಲ ಪ್ರವಾಸ ಬರುವ ವಿಚಾರವನ್ನು ಮೊದಲೆ ಅವರಿಗೆ ದುಗ್ಗಪ್ಪ ಹೆಗ್ಗಡೆಯವರು ತಿಳಿಸಿದ್ದರು. ಅವರೂ ಸಿದ್ಧರಾಗಿ ಕಾಯುತ್ತಿದ್ದರು, ನಮಗೆಲ್ಲ ಕೌಲೆದುರ್ಗಕ್ಕೆ ಮಾರ್ಗದರ್ಶಿಗಳಾಗಲೆಂದು.

‘ಕೌಲೆದುರ್ಗ’ದ ಸರಿಯಾದ ಹೆಸರು ‘ಕಾವಲೆದುರ್ಗ’ ಎಂದಿತ್ತಂತೆ, ನಗರ ಸಂಸ್ಥಾನಕ್ಕೆ ಅಧೀನವಾಗಿ ರಾಜ್ಯಕ್ಕೆ ಕಾವಲಾಗಿ ಒಬ್ಬ ದುರ್ಗಾಧಿಪತಿಯ ಆಡಳತಿದಲ್ಲಿ. ಒಂದು ಶತಮಾನದ ಹಿಂದೆ ಭದ್ರವಾದ ಕೋಟೆಯಾಗಿದ್ದು, ಆನೆ ಕುದುರೆ ಕಾಲಾಳುಗಳಿಂದ ಕೂಡಿದ ಸೈನ್ಯವಿದ್ದು, ಅರಮನೆ ಅಶ್ವಶಾಲೆ ಗಜಶಾಲೆ ಎಣ್ಣೆಬಾವಿ ತುಪ್ಪದಬಾವಿ ಆಯುಧಾಗಾರ ಇತ್ಯಾದಿಗಳಿದ್ದು ಜನ ತುಂಬಿ ಗಿಜಿಗಿಜಿಸುತ್ತಿದ್ದ ಅದು ಇಂದು ನಿಬಿಡಾರಣ್ಯವಪ್ಪಿದ ಕಡಿದಾದ ಬೆಟ್ಟಮಾತ್ರವಾಗಿದೆ. ತೀರ್ಥಹಳ್ಳಿಗೆ ತಾಲೂಕು ಕಛೇರಿ ವರ್ಗವಾಗುವುದಕ್ಕೆ ಮೊದಲು ಕೌಲೆದುರ್ಗವೆ ತಾಲೂಕಿಗೆ ಮುಖ್ಯ ಪಟ್ಟಣವಾಗಿತ್ತಂತೆ, ಬ್ರಿಟಿಷರ ಆಡಳಿತ ಬಂದಮೇಲೆ.

ದುರ್ಗದ ವಂಶಕ್ಕೆ ಸೇರಿದ್ದವರಂತೆ, ಹನುಮಂತನಾಯಕರು. ನಾವು ತೀರ್ಥಹಳ್ಳಿಯ ಎ.ವಿ.ಸ್ಕೂಲಿನಲ್ಲಿ ಓದುತ್ತಿದ್ದಾಗ ಅವರು ಕನ್ನಡ ಅಪ್ಪರ್ ಸೆಕೆಂಡರಿಯಲ್ಲಿ ನಮಗಿಂತಲೂ ಮುಂದಿದ್ದು ಓದುತ್ತಿದ್ದರು . ಆಗಲೂ ಅವರನ್ನು ಮಾತಾಡಿಸುವ ಧೈರ್ಯ ಇರಲಿಲ್ಲ! ಎತ್ತರವಾಗಿ ಆಜಾನುಬಾಹುವಾಗಿ ಜಟ್ಟಿಯ ಮೈಕಟ್ಟಿನಿಂದ ಬಲಿಷ್ಠರಾಗಿ ಗಂಭೀರವ್ಯಕ್ತಿಯಾಗಿದ್ದರು. ಮಾತು ನಡೆ ಚಲನವಲನ ಎಲ್ಲದರಲ್ಲಿಯೂ ಸಾವಕಾಶದ ದೃಢತೆ ತೋರುತ್ತಿತ್ತು. ಅವರ ಮುಂದಾಳುತನದಲ್ಲಿ ನಾವೆಲ್ಲ ಕೌಲೆದುರ್ಗದತ್ತ ಪಾದಚಾರಿಗಳಾಗಿ ಹೊರಟೆವು. ದಟ್ಟಕಾಡು ಪ್ರಾರಂಭವಾಗಿ ಸ್ವಲ್ಪದೂರ ನಡೆಯುವುದರಲ್ಲಿ ಗುಡ್ಡ ಏರುವ ತಾಣದಲ್ಲಿ ಪಾಳಾದ ಕೋಟೆಯ ಹೆಬ್ಬಾಗಿಲು ಕಾಣಿಸಿತು. ಅಲ್ಲಿಂದ ಕಲ್ಲುಮೆಟ್ಟಿಲು ಶುರುವಾಗಿ ಬಹುದೂರದ ನೆತ್ತಿಯ ಸಮತಟ್ಟಿನವರೆಗೂ ಹೋಗಿತ್ತು. ಎಲ್ಲೆಲ್ಲಿಯೂ ಹಳುಬೆಳೆದು ಕಾಡು ದಟ್ಟೈಸಿ, ಯಾರಿಗಾದರೂ ಅಲ್ಲಿ ಹಿಂದೆ ಜನವಸತಿ ಇತ್ತು ಎಂಬುದೇ ಸಂದೇಹಾಸ್ಪವಾಗುವಂತಿತ್ತು. ಆದರೆ ಕಲ್ಲುಮೆಟ್ಟಿಲ ದಾರಿಯೊಂದೇ ಅದಕ್ಕೆ ಸಾಕ್ಷಿಯಾಗಿತ್ತು.  ಸಮತಟ್ಟಿನ ಪ್ರದೇಶ ತಲುಪಿದ ಮೇಲೆ ತುಪ್ಪದಬಾವಿ ಎಣ್ಣೆಯಬಾವಿ ಎಂದೆಲ್ಲ ಏನೇನೂ ಅವಶೇಷ ಸ್ವರೂಪದ ಸ್ಥಳಗಳನ್ನೆಲ್ಲ ನಿರ್ದೇಶಿಸಿದರು. ಕೊನೆಗೆ ಅರಮನೆಗೆ ಹೋಗೋಣ ಎಂದು ಸಾಂದ್ರ ಅರಣ್ಯವನ್ನೆ ಹೊಕ್ಕುಬಿಟ್ಟರು! ದೊಡ್ಡಮರಗಳು, ನಡುವೆ ಹಳು, ಕೊನೆಗೆ ಪ್ರವೇಶ ದುಸ್ಸಾಧ್ಯವಾದ ಇಲಾತ್‌ಸೀಗೆ (ಲಂಟಾನಾ) ಪಿಟಿಲುಪಿಣಿಲಾಗಿ ನೆಯ್ದು ಬೆಳೆದಿದ್ದ ಒಂದು ಕಂದರಸ್ಥಾನಕ್ಕೆ ನಮ್ಮನ್ನು ಒಯ್ದರು. ಉಟ್ಟ ಬಟ್ಟೆ ಹರಿದು, ಮೈಗೀರಿ ಸಾಕೋಸಾಕಾಗಿತ್ತು ನಮಗೆ!

ಆದರೆ ನಾವು ಪಟ್ಟ ಶ್ರಮಕ್ಕೆ ಮೀರಿತ್ತು ನಮಗೊದಗಿದ ಸಫಲತೆ. ಅಲ್ಲೆಲ್ಲಿಯೂ ನಮಗೆ ಯಾವ ಕಟ್ಟಡದ ಅವಶೇಷವೂ ಕಾಣಿಸದೆ ಮೊದಮೊದಲು ನಿರಾಶೆಯಾಗಿತ್ತು. ಕಡೆಗೆ ಅವರು ನಮ್ಮನ್ನು ಹಳುಬಳ್ಳಿ ಹಬ್ಬಿದ್ದ ಒಂದೆಡೆಗೆ ಕರೆದೊಯ್ದು  ನಿಲ್ಲಿಸಿ ‘ಇಲ್ಲಿಯೆ ಅರಮನೆ ಇದ್ದದ್ದು ನಾವು ನಿಂತಿರುವ ಸ್ಥಳ ಒಂದು ಅಂಗಳ.’ ಎಂದು ಒಂದೆರಡು ಕಡೆ ಹಳು ಸವರಿದರು . ನೋಡುತ್ತೇವೆ: ನಾವು ನಿಂತದ್ದು, ಉಜ್ಜಿ ನುಣ್ಣಗೆ ಮಾಡಿದ್ದ ಕಲ್ಲುಕೆತ್ತನೆಯ ವಿಸ್ತಾರವಾದ ಹಾಸುಚಪ್ಪಡಿಯ ಜಗಲಿ! ಉರುಳಿ ಬಿದ್ದಿದ್ದ ಕಂಭಗಳು ತಮ್ಮ ಹಿಂದಿನ ನುಣುಪನ್ನಾಗಲಿ ಕಲೆಯನ್ನಾಗಲಿ ಇನ್ನೂ ಕಳೆದುಕೊಂಡಿರಲಿಲ್ಲ. ಆ ಬೃಹತ್‌ಪ್ರಮಾಣದ ಶಿಲಾಖಂಡಗಳನ್ನು ನೋಡಿಯೆ ನಮಗೆ ಎದೆ ಝಲ್ಲೆಂದಿತು! ಪಾಪ, ಅದನ್ನು ನಿರ್ಮಿಸಿದವರು ಅದು ಅನಂತಕಾಲವೂ ಶಾಶ್ವತವಾಗಿ ತನ್ನ ಶಿಲ್ಪಕಲಾ ವೈಭವವನ್ನು ಮೆರೆಯುತ್ತ ಅಚ್ಚಳಿಯದ ವೈಭವದಿಂದ ನಿಂತಿರುತ್ತದೆ ಎಂಬ ಅಚಲಶ್ರದ್ಧೆಯಿಂದ ದುಡಿದಿದ್ದರಿಂದ ತೋರುತ್ತದೆ!

ಅಲ್ಲಿ ನಿಂತುನಿಂತು, ನೋಡಲು ಸಾಧ್ಯವಾದದ್ದೆಲ್ಲವನ್ನೂ ನೋಡಿದೆವು. ಆ ದುರ್ಗಕ್ಕೆ ಒದಗಿದ್ದ ದುಃಸ್ಥಿತಿಗೆ ಮನ ಮರುಗುತ್ತಿತ್ತು. ಏನಾಗಿ ಇದ್ದದ್ದು ಏನಾಗಿ ಹೋಗಿತ್ತು? ಆದರೆ ಆ ಗತಿ ಇಡೀ ಭರತಖಂಡಕ್ಕೆ ಒದಗಿದ್ದ ಗತಿಗೆ ಪ್ರತಿನಿಧಿ ಮಾತ್ರ ಆಗಿತ್ತು! ಆ ದುರ್ಗದ ಸ್ಥಿತಿ ಈಗಲೂ (೧೯೭೫) ಹಾಗೆಯೆ ಇದೆಯೊ ಅಥವಾ ಸ್ವಾತಂತ್ಯ್ರೋದಯವಾದ ಮೇಲೆ ಕುಂದದ ಗುಡ್ಡಕ್ಕೆ ಒದಗಿರುವ ಸೌಭಾಗ್ಯದಂತೆ, ಪ್ರಾಕ್ತನ ವಸ್ತು ಸಂರಕ್ಷಣೆಯ ಇಲಾಖೆಯವರಿಂದ ಪ್ರವಾಸಿಗಳು ಹೋಗುವಮಟ್ಟಿಗಾದರೂ ಏನಾದರೂ ಸೌಕರ್ಯ ಒದಗಿದೆಯೋ ಗೊತ್ತಿಲ್ಲ.

ಅಲ್ಲಿಂದ ನಮ್ಮನ್ನು ಶಿಖರೇಶ್ವರ ಎಂಬ ಹೆಸರಿನ ಕೌಲೆದುರ್ಗದ ಅತ್ಯುನ್ನುತ ಶೃಂಗಸ್ಥಾನಕ್ಕೆ ಕರೆದೊಯ್ದರು. ಅಲ್ಲೊಂದು ಪಾಳುಬಿದ್ದ ಗುಡಿಯಿತ್ತು. ಆ ಶಿಖರದ ಸುತ್ತ ತುದಿಯಲ್ಲಿ ನೆತ್ತಿಯ ತಲೆಬುರುಡೆಯಾಗಿ ಒಂದು ಮಹಾ ಹೆಬ್ಬಂಡೆಯಿತ್ತು. ಆ ಹಾಸು ಹೆಬ್ಬಂಡೆಯ ಮೇಲೆ ದೇವಸ್ಥಾನಕ್ಕೆ ಸನಿಹವಾಗಿ ನಾವೆಲ್ಲ ಕುಳಿತೆವು. ಆ ಬಂಡೆಯೆ ಆ ಪರ್ವತ ಶ್ರೇಣಿಯ ಕೊನೆಯಾಗಿದ್ದು ಅದರ ಪೂರ್ವದಿಕ್ಕಿನ ಅರಣ್ಯಮಯ ದೃಶ್ಯ ಸಾವಿರಾರು ಅಡಿಯ ಕೆಳಗಿದ್ದು ನೋಡುವುದಕ್ಕೆ ಹೆದರಿಕೆಯಾಗುವಂತಿತ್ತುಇ. ಕ್ಯಾಮರಾ ತಂದಿದ್ದ ಮಾನಪ್ಪ, ನಮ್ಮ ಸಹಿತವಾಗಿ, ಆ ಬಂಡೆಯ ಫೋಟೊ ತೆಗೆದನು.

ಮಧ್ಯಾಹ್ನದ ಬಿಸಿಲು ಏರಿತ್ತು. ದಣಿದಿದ್ದೆವು. ಕಾಲು ಸೋತು ಇಳಿದೆವು, ಹನುಮಂತನಾಯ್ಕರ ಮನೆಯ ಆತಿಥ್ಯಕ್ಕೆ; ಔತಣಕೂಟದ ತರುವಾಯ ಸ್ವಲ್ಪ ವಿಶ್ರಮಿಸಿ, ಕಾರುಗಳನ್ನೇರಿ ಆಗುಂಬೆಗೆ ಹೋಗಿ, ಸೂರ್ಯಾಸ್ತ ನೋಡಿದೆವು. ಆದರೆ ಮೋಡಗಳು ದಿಗಂತವನ್ನು ಮರೆಮಾಡಿದ್ದರಿಂದ ಆ ಸೌಂದರ್ಯದ ಸಫಲದರ್ಶನವಾಗಲಿಲ್ಲ. ಅಲ್ಲಿಂದ ಪಯಣಿಸಿ ರಾತ್ರಿ ಸುಮಾರು ಹತ್ತು ಗಂಟೆಯ ಹೊತ್ತಿಗೆ ಇಂಗ್ಲಾದಿಗೆ ಬಂದೆವು.

ಆ ಬೇಸಗೆಯ ರಜೆಯಲ್ಲಿ ನಡೆದ ಎರಡು ಘಟನೆಗಳು ಉಲ್ಲೇಖಯೋಗ್ಯವಾದುವು. ಒಂದಂತೂ ನನ್ನ ಬದುಕಿನ ದಿಕ್ಕನ್ನು ಬದಲಾಯಿಸಲು ವಿಧಿವ್ಯೂಹವು ರಚಿಸುತ್ತಿದ್ದ ಪೂರ್ವಭಾವಿ ವಿನ್ಯಾಸದಂತೆ ತೋರುತ್ತದೆ, ಈಗ ಪರಿಭಾವಿಸುವ ನನಗೆ.

ಆ ವರ್ಷದ ‘ಮಲೆನಾಡು ಒಕ್ಕಲಿಗ ಯುವಕರ ಸಂಘ’ದ ವಾರ್ಷಿಕೋತ್ಸವವನ್ನು ಮೇ ತಿಂಗಳ ಕೊನೆಯ ಭಾಗದಲ್ಲಿ ಇಂಗ್ಲಾದಿಯಲ್ಲಿ ನಡೆಸಲು ನಿಶ್ಚಯಿಸಿದ್ದರು. ಆ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಉಪನ್ಯಾಸ ನೀಡಲು ಪೂಜ್ಯ ಬಿ.ಎಂ.ಶ್ರೀಕಂಠಯ್ಯನವರನ್ನ ಉ ಕೇಳಿಕೊಳ್ಳಲಾಗಿತ್ತು. ನವೋದಯದ ಆ ಕಾಲ ಬಿ.ಎಂಶ್ರೀ.ಯವರ ಜೀವನದಲ್ಲಿ ಎಂತಹದ್ದಾಗಿತ್ತೆಂದರೆ , ತಮ್ಮ ಹಿರಿಯತನ, ಆಯಾಸ, ವಯಸ್ಸು , ಅನಾನುಕೂಲ, ಪ್ರಯಾಣಶ್ರಮ, ಮೇಲು, ಕೀಳು, ವ್ಯಯ ಮತ್ತು ನಷ್ಟ ಯಾವುದನ್ನೂ ಲೆಕ್ಕಿಸದೆ, ಕನ್ನಡದ ಏಳಿಗೆಗಾಗಿ ಅವರು ಕರೆದಲ್ಲಿಗೆ ದುಂಬಾಲು ಬಿದ್ದು ಹೋಗುತ್ತಿದ್ದರು! ಇನ್ನು ನಾವೆಲ್ಲ ಕೆಲವು ಶಿಷ್ಯರು (ದೇವಂಗಿ ಮಾನಪ್ಪ, ಕೂಡಲಿ ಚಿದಂಬರಂ, ಎಸ್‌.ವಿ. ಕೃಷ್ಣಮೂರ್ತಿ, ಎ. ಸೀತಾರಾಂ, ನಾನು ಇತ್ಯಾದಿ-) ಜೊತೆ ಇದ್ದುಇ ಭಾಗವಹಿಸುತ್ತೇವೆ ಎಂದು ಗೊತ್ತಾದ ಮೇಲೆ ಶಿಷ್ಯವಾತ್ಸಲ್ಯವಶರಾಗಿ ಒಪ್ಪದೆ ಇರುತ್ತಾರೆಯೆ?

ಜೊತೆಗೆ, ಪ್ರತಿವರ್ಷವೂ ಬೇಸಗೆ ರಜೆಗೆ ಹೋದವರು ನಾವೆಲ್ಲ ಸೇರಿ ಕುಪ್ಪಳಿಯಲ್ಲಿ ಶ್ರೀರಾಮಕೃಷ್ಣ ಜನ್ಮೋತ್ಸವವನ್ನು ಆಚರಿಸುತ್ತಿದ್ದವರು, ಆ ವರ್ಷ (೧೯೩೬) ಶ್ರೀರಾಮಕೃಷ್ಣರ ಶತಮಾನೋತ್ಸವದ ವರ್ಷವಾದ್ದರಿಂದ, ಜನ್ಮೋತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕೆಂದು ನಿಶ್ಚಯಿಸಿ, ಸ್ವಾಮಿ ಸಿದ್ಧೇಶ್ವರಾನಂದಜಿ ಅವರಿಗೆ ಬಮದು ಆಶೀರ್ವದಿಸಬೇಕೆಂದು ಕಾಗದ ಬರೆದಿದ್ದೆವು.

ಮತ್ತೆ ಇಲ್ಲಿ ವಿಧಿವ್ಯೂಹದ ವಿನ್ಯಾಸ:

ಸ್ವಾಮಿ ಸಿದ್ದೇಶ್ವರಾನಂದರು ಮೈಸೂರಿನಿಂದ ಮದರಾಸು ಆಶ್ರಮದ ಅಧ್ಯಕ್ಷತೆಗೆ ಹೋಗಿದ್ದವರು ಮತ್ತೆ ಅಲ್ಲಿಂದ ಬೆಂಗಳೂರು ಆಶ್ರಮಕ್ಕೆ ಅಧ್ಯಕ್ಷರಾಗಿ ವರ್ಗಗೊಂಡಿದ್ದರು. ಮೈಸೂರು ಆಶ್ರಮದಲ್ಲಿ ನಾವು ಶತಮಾನೋತ್ಸವವನ್ನು ಆಚರಿಸಿದ್ದಾಗ ಅವರೂ ಬೆಂಗಳೂರಿನಿಂದ ಅಲ್ಲಿಗೆ ಬಂದು ಭಾಗವಹಿಸಿದ್ದರು.

ಅದೇ ಸಮಯದಲ್ಲಿ ಅಸ್ವಸ್ಥರಾಗಿದ್ದ ದೇವಂಗಿ ರಾಮಣ್ಣಗೌಡರು ದೀರ್ಘಕಾಲದ ಹವಾ ಬದಲಾವಣೆಗಾಗಿ ಬೆಂಗಳೂರಿಗೆ ಹೋಗಿ ಇರಲು ನಿಶ್ಚಯಿಸಿದ್ದರುಇ. ಅವರ ಮಗ ಮಾನಪ್ಪ ಅವರಿಗಾಗಿ ಒಂದು ಹೆಚ್ಚು ಗಲಾಟೆಯಿಲ್ಲದ ಸ್ಥಳದಲ್ಲಿ ಮನೆ ಹುಡುಕಲು ಬೆಂಗಳೂರಿಗೆ ಹೋಗಿ ಬೆಂಗಳೂರು  ಆಶ್ರಮದಲ್ಲಿ ಸ್ವಾಮಿ ಸಿದ್ದೇಶ್ವರಾನಂದರ ಕೋರಿಕೆಯಂತೆ ಇಳಿದುಕೊಂಡನು. ಸ್ವಾಮಿಜಿಯ ಸಲಹೆಯಂತೆ ಆಶ್ರಮದ ಎದುರಿಗೇ ಸಮೀಪದಲ್ಲಿರುವ ಒಂದು ವಿಸ್ತಾರವಾದ ಕಾಂಪೌಂಡಿನ ದೊಡ್ಡಮನೆಯನ್ನು ಬಾಡಿಗೆಗೆ ಗೊತ್ತುಮಾಡಿದನು. ಆಶ್ರಮಕ್ಕೆ ಸಮೀಪವಾಗಿದ್ದು ಹೋಗಿಬರುವುದಕ್ಕೆ ಅನುಕೂಲವಾಗಿದ್ದುದರಿಂದ ಸ್ವಾಮಿಜಿಯ ಮತ್ತು ಆಶ್ರಮದ ಸಾನ್ನಿಧ್ಯದ ಮನಃಶಾಂತಿಯೂ ತಂದೆಯವರಿಗೆ ಒದಗುವಂತಾಗುತ್ತದೆ ಎಂದೂ!

ಶ್ರೀಗೌಡರು ದಿನವೂ ಸಂಜೆ ಆಶ್ರಮಕ್ಕೆ ಹೋಗುವ ಅಭ್ಯಾಸಮಾಡಿ, ಅಲ್ಲಿಯ ಪೂಜೆ ಭಜನೆ ಪ್ರವಚನಗಳಿಂದಲೂ ಸ್ವಾಮಿ ಸಿದ್ದೇಶ್ವರಾನಂದರ ವ್ಯಕ್ತಿತ್ವದ ಸ್ನೇಹಮಯ ಪವಿತ್ರ ಪ್ರಭಾವದಿಂದಲೂ, ತಮ್ಮ ವ್ಯಾವಹಾರಿಕಪೂರ್ವ ಸ್ವಭಾವಕ್ಕೆ ಸ್ವಲ್ಪ  ವ್ಯತಿರಿಕ್ತವಾಗಿಯೊ ಎಂಬಂತೆ, ಆಶ್ಚರ್ಯಕರವಾಗಿ ಆಕರ್ಷಿತರಾದರು. ಪೂಜ್ಯ ಸ್ವಾಮಿಜಿಯ ವ್ಯಕ್ತಿತ್ವವೇ ಅಂತಹದಾಗಿತ್ತು. ಎಂತಹ ನಿಷ್ಠುರ ಹೃದಯವನ್ನಾದರೂ ಅವರ ಅಕ್ಕರೆ ಮಿದುಗೊಳಿಸುತ್ತಿತ್ತು. ಗೌಡರು ಸಾಧಾರಣವಾಗಿ ಬಿಗುಮಾನದವರು. ಹೆಚ್ಚು ಮಾತಿನವರಲ್ಲ. ತಮ್ಮ ವೈಯಕ್ತಿಕ ಜೀವನದ ಗೋಪ್ಯತೆಯನ್ನು ಉಕ್ಕಿನ ಪರದೆಯ ಹಿಂದೆ ಎಂಬಂತೆ ರಕ್ಷಿಸಿಕೊಳ್ಳುವ ಶ್ರೀಮಂತ ಸ್ವಭಾವದವರು. ಆದರೆ ಸ್ವಾಮಿಜಿಯ ಮುಂದೆ ಅವರು ತಮ್ಮ ಬದುಕಿನ ಕಷ್ಟ ನಿಷ್ಠುರಗಳನ್ನೆಲ್ಲ ಬಿಚ್ಚಿ ಹೇಳಿ ಅವರ ಸಾಂತ್ವನ ವಚನಗಳಿಂದ ತೃಪ್ತರೂ ಪ್ರಶಾಂತರೂ ಆಗುತ್ತಿದ್ದರಂತೆ.

ಮಾತುಮಾತಿನ ಮಧ್ಯೆ ನನ್ನ ವಿಚಾರ ಬಂದಾಗ ಗೌಡರು ಕುಪ್ಪಳಿ ಮನೆತನದ ಅನೇಕ ದುಃಖ ದುರಂತದ ಕಥೆಗಳನ್ನು ಹೇಳಿ ನನ್ನ ತಂದೆಯ ಸಾವಿನ ವಿಚಾರ ಇತ್ಯಾದಿಗಳನ್ನು ತಿಳಿಸಿ, ವಂಶಕ್ಕೆ ಉಳಿದಿರುವವನು ನಾನೊಬ್ಬನೆ ಎಂಬುದನ್ನು ಅವರ ಗಮನಕ್ಕೆ ತಂದು, ನನ್ನ ಮದುವೆಯ ಪ್ರಸ್ತಾಪವನ್ನು ಮಾಡುತ್ತಿದ್ದರಂತೆ. ಸ್ವಾಮಿ ಸಿದ್ದೇಶ್ವರಾನಂದರಿಗೆ ನನ್ನಲ್ಲಿ ಎಷ್ಟು ಪ್ರೀತಿಯೋ ಶ್ರೀಗೌಡರಿಗೂ ನನ್ನ ವಿಚಾರವಾಗಿ ಗೌರವಪೂರ್ವಕವಾದ ವಿಶ್ವಾಸವಿತ್ತು. ಹಿಂದೆ ನಮ್ಮ ಮನೆ ಪಾಲಾಗುವ ಸಮಯದಲ್ಲಿ ನಾನು ಅವರಿಗೆ ಬರೆದಿದ್ದ ಕಾಗದದಿಂದ ಅವರಿಗೆ ನನ್ನಲ್ಲಿ ಪೂಜ್ಯಭಾವನಾ ಸದೃಶವೆಂಬಂತಹ ಗೌರವವುಂಟಾಗಿ, ತುವಾಯದ ನನ್ನ ಸಾಹಿತ್ಯಕ ಕೃತಿಗಳಿಂದಲೂ ಭಾಷಣಗಳಿಂದಲೂ ಕವಿಜೀವನದಿಂದಲೂ ಅದು ಮತ್ತಷ್ಟು ಪುಷ್ಟಿಗೊಂಡಿತ್ತು. ಅವರ ಹೆಣ್ಣು ಮಕ್ಕಳು ಮದುವೆಯಾಗುವ ಮುನ್ನ ಬೇರೆಯವರ ಮುಖಾಂತರ ನನ್ನನ್ನೂ ವಿಚಾರಿಸಿದ್ದರು. ಆಗೆಲ್ಲ ನಾನು ವೈರಾಗ್ಯಪರವಾದ ಮಾತುಗಳನ್ನಾಡಿ ಅವರ ಸೂಚನೆಗಳನ್ನು ತಿರಸ್ಕರಿಸಿದ್ದೆ.

ಈ ಘಟನೆ ನಡೆಯುವ ಅಚಿರ ಪೂರ್ವದಲ್ಲಿಯೂ ಒಮ್ಮೆ ನಾನು ಬೇಸಗೆ ರಜೆಯಿಂದ ಮೈಸೂರಿಗೆ ಹಿಂತಿರುಗುತ್ತಿದ್ದ ಮಾರ್ಗದಲ್ಲಿ ಶಿವಮೊಗ್ಗೆಯಲ್ಲಿ ಹೊಸಮನೆ ಮಂಜಪ್ಪಗೌಡರೊಡನೆ ಮಾನಪ್ಪನ ಜೊತೆಯಲ್ಲಿ ದೇವಂಗಿ ಅಡಕೆಮಂಡಿಯಲ್ಲಿ ಉಳಿದಿದ್ದಾಗ ಮಂಜಪ್ಪಗೌಡರು ನನ್ನ ವೈವಾಹಿಕ ಜೀವನದ ಮತನ್ನೆತ್ತಿ ರಾಮಣ್ಣಗೌಡರ ಮಗಳು ಹೇಮಾವತಿಯನ್ನೇಕೆ ಮದುವೆಯಾಗಬಾರದು ಎಂದೂ, ಆ ವಿಚಾರವಾಗಿ ನನ್ನೊಡನೆ ಪ್ರಸ್ತಾಪಿಸಲು ಶ್ರೀರಾಮಣ್ಣಗೌಡರೇ ಹೇಳಿದ್ದಾರೆಂದೂ ತಿಳಿಸಿದ್ದರು. ಆಗಲೂ ನಾನು ನಕ್ಕು, ಅದೆಂದಿಗೂ ಅಸಾಧ್ಯ ಎಂಬುದಾಗಿ ಹೇಳಿಬಿಟ್ಟಿದ್ದೆ.

ನಾವು ಕುಪ್ಪಳಿಯಲ್ಲಿ ಆಚರಿಸಲಿರುವ ಶ್ರೀ ರಾಮಕೃಷ್ಣ ಶತಮಾನೋತ್ಸವಕ್ಕೆ ತಾವು ಬರುವ ಕೃಪೆಮಾಡಬೇಕೆಂದು ಅವರನ್ನು ಕೇಳಿಕೊಂಡಾಗ ಅವರು ಸಂತೋಷದಿಂದಲೆ ಒಪ್ಪಿಕೊಂಡಿದ್ದರು. ಅವರು ಒಪ್ಪಿಕೊಳ್ಳುವುದಕ್ಕೆ ಅಂತರಂಗಿಕವಾಗಿ ಮತ್ತೊಂದು ಪ್ರೇರಣೆಯೂ ಇದ್ದಿರಬಹುದೆಂದು ತರುವಾಯ ನಡೆದ ಘಟನಾಪರಂಪರೆಗಳಿಂದ ಊಹಿಸಬಹದೇನೊ? ನನಗೆ ಹೆಣ್ಣು ಕೊಡಲು ಹವಣಿಸುತ್ತಿರುವ ಮನೆತನವನ್ನೂ ಮತ್ತು ನಮ್ಮ ಮನೆತನವನ್ನೂ ಹೊಕ್ಕು ಬಳಕೆಯಿಂದ ಹತ್ತಿರವಾಗಿ ಅರಿಯುವ ಮನಸ್ಸೂ ಅವರಿಗಿತ್ತೆಂದು ತೋರುತ್ತದೆ.

ಅಂತೂ ಅವರು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು, ಅಲ್ಲಿಂದ ದೇವಂಗಿ ಮಾನಪ್ಪನೊಡನೆ ಅವರ ಕಾರಿನಲ್ಲಿ ೧೯೩೬ನೆಯ ಮೇ ತಿಂಗಳು ೨೩ನೆಯ ತಾರೀಖು ಒಕ್ಕಲಿಗರ ಯುವಕರ ಸಂಘದ ವಾರ್ಷಿಕೋತ್ಸವಕ್ಕೆ ಒಂದು ದಿನ ಮುಂಚಿತವಾಗಿ ಇಂಗ್ಲಾದಿಗೆ ದಯಮಾಡಿಸಿದರು, ನಮಗೆಲ್ಲ ಮಹಾಸಂಭ್ರಮವಾಗುವಂತೆ!

ಮರುದಿನ ಸಂಘದ ವಾರ್ಷಿಕೋತ್ಸವ. ಇಂಗ್ಲಾದಿಯ ವಿಶಾಲವಾದ ಒಳಾಂಗಣದಲ್ಲಿ ಸಭೆ ನೆರೆಯಲು ಎಲ್ಲ ಏರ್ಪಾಡುಗಳೂ ಶ್ರೀಯುತ ವೆಂಕಟಯ್ಯಗೌಡರ ಯಾಜಮಾನ್ಯದ ನೇತೃತ್ವದಲ್ಲಿ ಆಗಿತ್ತು. ಆದರೆ ಸಕಾಲಕ್ಕೆ ಬಿ.ಎಂ.ಶ್ರೀ. ಯವರ ಆಗಮವಾಗಲಿಲ್ಲ. ಅವರನ್ನು ಶಿವಮೊಗ್ಗದಿಂದ ಇಂಗ್ಲಾದಿಗೆ ಕರೆತರಲು ನಿಯೋಜಿತರಾಗಿದ್ದ ದೇವಂಗಿ ಮಾನಪ್ಪ, ಕೂಡಲಿ ಚಿದಂಬರಂ, ಎಸ್.ವಿ. ಕೃಷ್ಣಮೂರ್ತಿ ಅವರು  ಬೆಳಿಗ್ಗೆಯ ಸಮಯಕ್ಕೆ ಸರಿಯಾಗಿ ಇಂಗ್ಲಾದಿ ತಲುಪಲು (ಸುಮಾರು ನಾಲ್ವತ್ತು ಮೈಲಿ) ಕಾರು ಗೊತ್ತು ಮಾಡಿ ಹೊರಟರಂತೆ. ಆದರೆ ಕಾರು ಮಂಡಗದ್ದೆಯ ಹತ್ತಿರಕ್ಕೆ ಬರುವಷ್ಟರಲ್ಲಿ ಸಾಯಂಕಾಲವೆ ಆಯಿತಂತೆ.

ಆದರೆ ಆ ತೊಂದರೆಯ ಸಂದರ್ಭವನ್ನೂ ವ್ಯರ್ಥಗೊಳಿಸಲು ಬಿಡಲಿಲ್ಲ. ನಮ್ಮ ಜನ, ಬಿ.ಎಂ.ಶ್ರೀ.ಯವರು ಬಂದಿರುವ ವಿಚಾರವೂ, ಅವರಿದ್ದ ಕಾರು ತೊಂದರೆಗೀಡಾಗಿದ್ದ ವಿಚಾರವೂ, ಅವರೂ ಅವರನ್ನು ಕರೆತರುತ್ತಿದ್ದ ಶಿಷ್ಯರೂ ಕಾರನ್ನು ರಿಪೇರಿಗೆ ಬಿಟ್ಟು ತಾವೆಲ್ಲ ತುಂಗಾನದಿಯ ಮಳಲದಂಡೆಯ ಬಂಡೆಗಳಿಗೆ ವಿಲಾಸಪ್ರವಾಸಿಗಳಾಗಿ ಹೋಗಿ ನೀರಾಟವಾಡುತ್ತಿದ್ದ ವಿಚಾರವೂ ಬಾಯಿಂದ ಬಾಯಿಗೆ ಹಬ್ಬಿ  ಜನ ಓಡೋಡಿ ಬಂದು ನೆರೆಯಿತು. ಅದೂ ಬರಿಯ ಬಾಯುಪಚಾರವಾಗಿರಲಿಲ್ಲ. ಕಾಫಿ ಉಪ್ಪಿಟ್ಟು ದೋಸೆ ಇತ್ಯಾದಿಗಳ ಸಮಾರಾಧನೆಯೂ ಆಯಿತು. ಬೆಳಿಗ್ಗೆ, ಮಧ್ಯಾಹ್ನ, ಮರಗಳ ನೆರಳಲ್ಲಿ ಕುಳಿತು, ಒದಗಿದ್ದ ಸಮೃದ್ಧ ವನಭೋಜನವೂ ಆಯಿತಂತೆ! ಶ್ರೀಯವರ ಅನೌಪಚಾರಿಕ ಭಾಷಣದ ಅಮೃತಾಹಾರವೂ ನೆರೆದಿದ್ದ ಜನರನ್ನು ತಣಿಸತಂತೆ! ಬಹುಶಃ ಅವರ ಜೊತೆಯಲ್ಲಿಯ ನಮ್ಮ ಕರೆಗೆ ಓಗೊಡು ಬಂದಿದ್ದ ಕೃಷ್ಣಗಿರಿ ಕೃಷ್ಣರಾಯರ ಭಾರತವಾಚನವೂ ಸೇರದೆ ಇರಲಿಕ್ಕಿಲ್ಲ!

ಅತ್ತ ಇಂಗ್ಲಾದಿಯಲ್ಲಿ ಶ್ರೀಯವರಿಗಾಗಿ ಕಾದು ಕಾರ್ಯಕ್ರಮವನ್ನು ಒಂದು ಗಂಟೆಯ ಹೊತ್ತು ಮುಂದೂಡಿದೆವು. ಕಡೆಗೆ, ಏನೋ ತೊಂದರೆಯಾಗಿರಬಹುದು, ತಡವಾಗಿ ಬಂದರೂ ಆಮೇಲೆ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಬಹುದು ಎಂದು ನಿರ್ಣಯಿಸಿ, ಪೂಜ್ಯ ಸ್ವಾಮಿ ಸಿದ್ದೇಶ್ವರಾನಂದರನ್ನೆ ಅಧ್ಯಕ್ಷತೆ ವಹಿಸುವಂತೆ ಕೇಳಿಕೊಂಡು ಕಾರ್ಯ ನೆರವೇರಿಸಿದೆವು.

ಅಂತೂ ಎಲ್ಲ ಮುಗಿದ ಮೇಲೆ ಬೈಗಾಗುತ್ತಿದ್ದಾಗ ಬಿ.ಎಂ.ಶ್ರೀಯವರು ಬಂದರು. ಶಿಷ್ಯರಿಂದ ನಡೆದ ಕತೆಯನ್ನೆಲ್ಲ ಕೇಳಿ ನಕ್ಕು ನಲಿದೆವು!

ಶ್ರೀಯವರು ಮಾರ್ಗಾಯಾಸ ಪರಿಹಾರಕ್ಕಾಗಿ ಸ್ವಲ್ಪಮಟ್ಟಿಗೆ ‘ಅಜ್ಜಯ್ಯನ ಅಭ್ಯಂಜನ’ ಸದೃಶವಾದ ಎಣ್ಣೆಸ್ನಾನವನ್ನೆ ಮಾಡಿ ವಿಶ್ರಮಿಸಿದರು. ಶ್ರೀ ವೆಂಟಯ್ಯಗೌಡರು ಸಭೆಗೆ ಬರು ಬ್ರಾಹ್ಮಣ ಅತಿಥಿಗಳಿಗಾಗಿ ಬ್ರಾಹ್ಮಣ ಅಡುಗೆಯವರನ್ನೆ ಕರೆಸಿ ಪ್ರತ್ಯೇಕ ಅಡುಗೆ ಮಾಡಿಸಿದ್ದರು. ಆದರೆ ಊಟಕ್ಕೆ ಮಾತ್ರ ನಾವು ಬ್ರಾಹ್ಮಣ ಅಬ್ರಾಹ್ಮಣ ಭೇದವಿಲ್ಲದೆ ಒಟ್ಟಿಗೆ ಕುಳಿತು ಸಹಪಂಕ್ತಿ ಭೋಜನ ಮಾಡುತ್ತಿದ್ದೆವು. ಮತ್ತೆ ಏಕೆ ಪ್ರತ್ಯೇಕ ಅಡುಗೆ  ಎಂದು ಕೇಳಿದ್ದಕ್ಕೆ ಗೌಡರು ‘ನಮ್ಮ ಅಡುಗೆಯ ರುಚಿ ಅವರಿಗೆ ಹಿಡಿಸದಿರಬಹುದು’ ಎಂದರು.

ಆದರೆ ಆ ರಾತ್ರಿಯನ್ನೂ ನಿರುಪಯೋಗಗೊಳಿಸುಲಿಲ್ಲ. ಗ್ಯಾಸ್‌ಲೈಟುಗಳ ಉಜ್ಜಲಕಾಂತಿಯಲ್ಲಿ ಬೆಳಗಿನ ಸಭೆಯನ್ನೆ ಬಿ.ಎಂ.ಶ್ರೀ.ಯವರ ಅಧ್ಯಕ್ಷತೆಯಲ್ಲಿ ಹ್ರಸ್ವವಾಗಿ ಮುಂದುವರಿಸಿ ಕೈಕೊಂಡೆವು. ಜೊತೆಗೆ ಭಾವಗೀತೆಗಳ ಹಾಡುವಿಕೆ, ಕೃಷ್ಣಗಿರಿ ಕೃಷ್ಣರಾಯರ ಭಾರತವಾಚನ ಇತ್ಯಾದಿ ಮನರಂಜನೆಯ ಕಾರ್ಯಗಳೂ ಜರುಗಿದುವು.

ರಾತ್ರಿ ಮಲಗುವುದು ಸ್ವಲ್ಪ ಹೊತ್ತಾಗಿತ್ತಾದರೂ ಬೆಳಿಗ್ಗೆ ಮುಂಚೆ ನವಿಲುಕಲ್ಲಿಗೆ ಹೋಗಿ ಸೂರ‍್ಯೋದತ ನೋಡುವ ನನ್ನ ಉತ್ಸಾಹದ ಕಾರ್ಯಕ್ರಮಕ್ಕೆ ವಯಸ್ಕರಾಗಿದ್ದ ಬಿ.ಎಂ.ಶ್ರೀಯವರೂ ಹೃತ್ಪೂರ್ವಕ ಬೆಂಬಲವಿತ್ತರು.

ಇಂಗ್ಲಾದಿಯಿಂದ ನವಿಲುಕಲ್ಲಿಗೆ ಒಂದೆರಡು ಮೈಲಿ ಕಾಡಿನಲ್ಲಿ ನಡೆದು ಗುಡ್ಡವೇರಿ ನೆತ್ತಿಯ ಕಲ್ಲಿಗೆ ಹತ್ತಬೇಕಾಗುತ್ತದೆ. ಆದ್ದರಿಂದ ನಾನು ಬೆಳಗಿನ ಜಾವ ನಾಲ್ಕು ಗಂಟೆಯ ಹೊತ್ತಿಗೇ ತರುಣರನ್ನೆಲ್ಲ ಎಬ್ಬಿಸಿಬಿಟ್ಟೆ. ನಿದ್ದೆ ಕೆಡಿಸಿದ್ದಕ್ಕೆ ಗೊಣಗುತ್ತಲೆ ಎದ್ದು ಅವರೆಲ್ಲ ನಡೆದುಕೊಂಡೇ ಗ್ಯಾಸ್‌ಲೈಟು ಹಿಡಿದಿದ್ದ ಆಳುಗಳೊಡನೆ ಕಾಡು ದಾರಿಯಲ್ಲಿ ಹೊರಟರು. ಬಿ.ಎಂ.ಶ್ರೀ, ಸ್ವಾಮೀಜಿ ಮತ್ತು ಕೃಷ್ಣರಾಯರನ್ನು ಸ್ವಲ್ಪ ಹೊತ್ತಿನ ಮೇಲೆ ಕಾರಿನಲ್ಲಿ ಕೂರಿಸಿ ನವಿಲುಕಲ್ಲಿನ ಗುಡ್ಡದ ಬುಡದವರೆಗಿನ ಒರಟು ವಕ್ರದ ಗಾಡಿರಸ್ತೆಯಲ್ಲಿಯೆ ಕರೆದೊಯ್ದು, ಇಳಿಸಿ, ಕಡಿದಾಗಿ ಏರು ಹತ್ತಿರದ ನೇರ ಕಾಲುದಾರಿಯನ್ನು ಬಿಟ್ಟು, ತುಸು ದೂರವಾದರೂ ಇಳಿಜಾರಾಗಿದ್ದು ಸೌದೆ ಹೊಡೆಯುವವರು ಮಾಡಿದ್ದ ಗಾಡಿರಸ್ತೆಯಲ್ಲಿ ನಿಧಾನವಾಗಿ ಪೊದೆಗಳ ನಡುವೆ ನಡೆಸಿಕೊಂಡು ಹೋದೆವು. ತುಸು ಸ್ಥೂಲಕಾಯರಾಗಿದ್ದು ಆಯಾಸಗೊಂಡಿದ್ದರೂ ಬಿ.ಎಂ.ಶ್ರಿ.ಯವರು ನಗೆವಾತಡುತ್ತಾ ತರುಣರೆಂಬಂತೆ ಉತ್ತಾಹದಿಂದಲೆ ಗಿರಿನೆತ್ತಿಗೆ ಏರಿದ್ದರು!

ಉಷೋದಯ ಅರುಣೋದಯ ಸೂರ‍್ಯೋದಯಗಳ ದಿವ್ಯ ಮಹೂರ್ತಗಳಲ್ಲಿ ಮಲೆನಾಡಿನ ಕಾಡು ಕಣಿವೆ ಮಂಜಿನ ಲೀಲೆಗಳು ದೃಗ್ಗೋಚರವಾಗುವ ಸ್ವರ್ಗೀಯ ಸೌಂದರ‍್ಯಾಸ್ವಾದನೆಯ ಅನಂತರ ದೇ.ರಾ.ವೆಂ.ಗೌಡರು ಆಳುಗಳ ಕೈಲಿ ಹೊರಿಸಿ ತರಿಸಿದ್ದ ಕಾಫಿ ತಿಂಡಿಗಳನ್ನೂ ಅಸ್ವಾದಿಸಿ, ಹಕ್ಕಿಗಳಿಂಚರವನ್ನಾಲಿಸುತ್ತಾ ಮನೆಯ ಕಡೆಗೆ ಇಳಿದು ಬಂದೆವು. ಧನ್ಯವಾಗಿತ್ತು ಆ ೨೫-೫೧೯೩೬ರ ಪ್ರಾತಃಕಾಲ!

ಆ ದಿನ ಪೂರ್ವಾಹ್ನದಲ್ಲಿ ವಾರ್ಷಿಕೋತ್ಸವದ ಸಭೆ ಎರಡನೆಯ ದಿನವೂ ಮುಂದುವರೆಯಿತು. ಬಿ.ಎಂ.ಶ್ರೀ.ಯವರೆ ಅಧ್ಯಕ್ಷತೆ ವಹಿಸಿದ್ದರು. ಸ್ವಾಮೀಜಿಯವರೂ ಭಾಷಣ ಮಾಡಿದರು.

ಅವೊತ್ತೇ ಸಾಯಂಕಾಲ ಕುಪ್ಪಳಿಗೆ ಹೋಗುವ ಕಾರ‍್ಯಕ್ರಮವಿತ್ತು. ನನ್ನ ಭಾವಗೀತೆಗಳಿಂದಲೂ ಮತ್ತು ಭಾವಪ್ರಬಂಧಗಳಿಂದಲೂ ಕುಪ್ಪಳಿ ಮನೆಯ ಹೆಸರು ಅಖಿಲ ಕರ್ಣಾಟಕದ ಕಿವಿಗೆ ಬಿದ್ದಿತ್ತು. ‘ಮನೆಯ ಶಾಲೆಯ ಐಗಳ ಮಾಲೆ’ಯ ಉಪ್ಪರಿಗೆ, ಅನೇಕ ಕವನಗಳಿಗೆ ಪ್ರೇರಕವೂ ವಸ್ತುವೂ ಆಗಿದ್ದ ‘ಕವಿಶೈಲ’ ಮತ್ತು ‘ಸಂಜೆಗಿರಿ’ಗಳು, ‘ಕಾಡು ಮುತ್ತು ಕೊಡುತಲಿರುವ ಸೊಬಗುವೀಡು ನನ್ನ ಮನೆ’-ಇವೆಲ್ಲವನ್ನೂ ನೋಡಬೇಕೆಂಬ ವಾತ್ಸಲ್ಯಪೂರ್ಣ ಕುತೂಹಲವಿತ್ತು ಬಿ.ಎಂ.ಶ್ರೀ. ಆದಿಯಾಗಿ ಅತಿಥಿಗಳಾಗಿ ಬಂದಿದ್ದ ಬಯಲುಸೀಮೆಯ ಮಿತ್ರರಿಗೆ. ಸ್ವಾಮಿಜಿಯವರಂತೂ ಕುಪ್ಪಳಿಯಲ್ಲಿಯೆ ಉಳಿದು ಶ್ರೀರಾಮಕೃಷ್ಣ ಶತಮಾನೋತ್ಸವವನ್ನು ನೆರವೇರಿಸುವ ಕೃಪೆ ಮಾಡಲೆಂದೇ ಆಗಮಿಸಿದ್ದವರಷ್ಟೇ!

ಕುಪ್ಪಳ್ಳಿ ಮನೆಗೆ ಹೋದವರು ಮೊದಲು ಉಪ್ಪರಿಗೆಯ ಮೇಲೆ ಸ್ವಲ್ಪ ವಿಶ್ರಮಿಸಿಕೊಂಡರು. ಅನಂತರ ಬಿ.ಎಂ.ಶ್ರೀ., ಸ್ವಾಮಿಜಿ ಮತ್ತು ಕೃಷ್ಣರಾಯರಾದಿಯಾಗಿ ಕುಪ್ಪಳಿ ಇಂಗ್ಲಾದಿ ಉಂಟೂರು ದೇವಂಗಿ ಮನೆಗಳ ಮಿತ್ರರೆಲ್ಲ ಕೂಡಿ, ಇಡೀ ಗುಂಪು ‘ಕವಿಶೈಲ’ಕ್ಕೆ ನಡೆದುಕೊಂಡೆ ಏರಿದೆವು. ಅದೊಂದು ದಿಬ್ಬಣವೆ ಆಗಿತ್ತು. ದಿಬ್ಬಣಗಲ್ಲು ಹೆಸರಿನ ಓರೆಯನ್ನು ಏರುವಾಗ!

‘ದಿಬ್ಬಣಗಲ್ಲು?’ ಎಂಬ ಹೆಸರನ್ನು ಕೇಳಿ ಅವರಿಗೆ ಕುತೂಹಲ. ಆಗ ನಾವು ಏರುತ್ತಿದ್ದ ಗುಡ್ಡದ ಓರೆಯ ಕಡೆ ಕೈದೋರಿ ಅವರ ಗಮನ ಸೆಳೆದೆ. ‘ಕವಿಶೈಲ’ ಹೆಸರಿನ ನೆತ್ತಿ ದೊಡ್ಡದೊಡ್ಡ ಬಂಡೆಗಳಿಂದಲೂ ಹಾಸುಬಂಡೆಗಳಿಂದಲೂ ಕೂಡಿದ್ದಿತಾದರೂ ನಾವು ಏರುತ್ತಿದ್ದ ಗುಡ್ಡದ ಓರೆಯಲ್ಲಿ ಅಲ್ಲಲ್ಲಿ ತುಸುತುಸುವೆ ಸನಿಹಕ್ಕೆ ನೆಲಕ್ಕೆ ಹಾಸಿದ್ದಂತೆ ಸಣ್ಣ ಚಪ್ಪಡಿಗಳಿದ್ದು ಕಲ್ಲುಗಳೆ ದಿಬ್ಬಣವಾಗಿ ಸಾಗುತ್ತಿದ್ದಂತೆ ತೋರುತ್ತಿತ್ತು. ಅದಕ್ಕಾಗಿ ಆ ಸ್ಥಳಕ್ಕೆ ‘ದಿಬ್ಬಣಗಲ್ಲು’ ಎಂಬ ಹೆಸರಾಗಿತ್ತು. ‘ಕವಿಶೈಲ’ದಂತೆ ನಾವು ಓದಿದವರು ಇತ್ತೀಚೆಗೆ ಕೊಟ್ಟ ಹೆಸರಲ್ಲ ಅದು. ನಾನು ಹುಟ್ಟುವ ಮೊದಲೆ ಹಳ್ಳಿಯ ಪ್ರತಿಭೆ ಇಟ್ಟಿದ್ದ ಹೆಸರಾಗಿತ್ತು. ಅದು.