ದಿಬ್ಬಣಗಲ್ಲಿನಿಂದ ಮುಂದೆ ನಡೆದು, ನಿಂತು, ದೂರದ ದಿಗಂತದಲ್ಲಿ ದಿಗ್ದಂತಿಯೆಂಬಂತೆ ಎದ್ದುನಿಂತಿದ್ದ ‘ಕುಂದದ ಗುಡ್ಡ’ವನ್ನು ಮೆಚ್ಚಿ ನೋಡಿದರು. ಅಲ್ಲಿಂದ ಮುಂದೆ ನನ್ನ ‘ಶಿಲಾತಪಸ್ವಿ’ ಎಂಬ ಕವನಕ್ಕೆ ಆವೇಶವಿತ್ತು ಒಂದು ಆಳೆತ್ತರ ನಿಂತ ಮನುಷ್ಯಾಕಾರದ ಕಲ್ಲನ್ನೂ ತೋರಿಸಿದೆ. ಮತ್ತೆ ಮುಂದೆ ನಡೆದು ‘ಕವಿಶೈಲ’ದ ಬಂಡೆಯ ಮೇಲೆ ಪಶ್ಚಿಮ ದಿಗಂತಮುಖಿಗಳಾಗಿ ಎಲ್ಲರೂ ಕುಳಿತೆವು. ನಾನು ಅನೇಕ ಕವನಗಳಲ್ಲಿ, ಅದರಲ್ಲಿಯೂ ವಿಶೇಷವಾಗಿ ‘ಕವಿಶೈಲದಲ್ಲಿ ಸಂಧ್ಯೆ’ ಎಂಬ ಹೆಸರಿನ ಕವನದಲ್ಲಿ (‘ಪಕ್ಷಿಕಾಶಿ’ ಕವನ ಸಂಗ್ರಹದಲ್ಲಿದೆ.) ವರ್ಣಿಸಿರುವ

“ದೃಷ್ಟಿ ದಿಗಂತದ ಮೇರೆಯ ದಾಟಿ
ಗಗನದ ಮೇಘವಿತಾನವ ಮೀಟಿ
ದೂರಕೆ ದೂರಕೆ ಸುದೂರ ದೂರಕೆ
ಹಬ್ಬಿದೆ ಪರ್ವತ ದಿಗಂತ ಶೈಲಿ,
ಮೈಲಿ ಮೈಲಿ!”

ಎಂಬುದನ್ನು ಪ್ರತ್ಯಕ್ಷ ದರ್ಶಿಸಿದರು. ಮತ್ತೆ

ಸೊಂಡಿಲ ಮೇಗಡೆ ಸೊಂಡಿಲ ಚಾಚಿ
ವಿಶಾಲ ವ್ಯೋಮದ ಕರೆಯನೆ ಬಾಚಿ
ಸ್ಪರ್ಧಿಸುತಿರುವುವೊ ಎನೆ ದಿಗ್ದಂತಿ
ಹಬ್ಬಿದೆ ಸುತ್ತಲು ದಿಗಂತ ಪಂಕ್ತಿ,
ಗಂತಿ ಗಂತಿ!

ಎಂಬುದಂತೂ ಕವಿವರ್ಣನೆ ಯಾವುದರ ಅಗತ್ಯವೂ ವಾಚ್ಯವಾಗಿಯೆ ಇದಿರಿಗೆ ಮೆರೆದಿತ್ತು. ಇನ್ನು ಕುಪ್ಪಳಿ ಮನೆಯ ಇದಿರಿಗೇ ಗೋಡೆಯಂತೆ ನೇರವಾಗಿ ಎದ್ದಂತಿದ್ದ  ಗುಡ್ಡವನ್ನು ಮುತ್ತಿದ್ದ, ಮುದ್ದೆಮುದ್ದೆ ಹಸುರನ್ನೆ ಮೆತ್ತಿದಂತಿದ್ದ, ಸಾರ್ವಕಾಲಿಕ ಶ್ಯಾಮಲ ಅರಣ್ಯಶ್ರೇಣಿ ಮೆರೆದಿತ್ತು:

ತೆರೆತೆರೆ ತೆರೆಯೆದ್ದರಣ್ಯ ಶ್ರೇಣಿ
ಬಿದ್ದಿದೆ ನಿದ್ದೆಯೊಳೋ ಎನೆ ಪ್ರಾಣಿ
ಅಸಂಖ್ಯ ವರ್ಣದಿ ಅಪಾರ ಪರ್ಣದಿ
ತಬ್ಬಿದೆ ಭೂಮಿಯನೆರಂಕೆ ಚಾಚಿ,
ವೀಚಿ ವೀಚಿ!

ಮುಳುಗುತ್ತಿದ್ದ ಸೂರ‍್ಯನ ಸುಂದರ ಶೋಭೆಯನ್ನು ದೃಷ್ಟಿಸುತ್ತಾ, ‘ಕವಿಶೈಲ’ದ ಅರೆಬಂಡೆಯ ಮೇಲೆ ಬಿ.ಎಂ.ಶ್ರೀ. ಆದಿಯಾಗಿ ಎಲ್ಲರೂ ತಂತಮ್ಮ ಹೆಸರಿನ ಪ್ರಥಮಾಕ್ಷರಗಳನ್ನು ಕಲ್ಲುಗಳಿಂದಲ ಹೊಡೆದು ಕೆತ್ತಿದರು. ಅಲ್ಲಿಂದ ಮತ್ತೆ ಎಲ್ಲರೂ ಇನ್ನೂ ಎತ್ತರವಿರುವ ‘ಸಂಜೆಗಿರಿ’ ಹೆಸರ ಶಿಖರಕ್ಕೆ ಮೆಲ್ಲಮೆಲ್ಲಗೆ ಏರಿದೆವು. ಅಲ್ಲಿಂದ ಕಾಣಸಿಗುವ ದೃಶ್ಯದ ಮಹೋನ್ನತಿಯನ್ನು ‘ಸಂಜೆಗಿರಿಯಲಿ ಸಂಜೆ!’ ಎಂಬ ಶೀರ್ಷಿಕೆಯೆ ನನ್ನೊಂದು ಸಾನೆಟ್‌ನಲ್ಲಿ (‘ಕೃತ್ತಿಕೆ’ ಕವನಸಂಗ್ರಹದಲ್ಲಿದೆ.) ಓದುಗರು ಕಾಣಬಹುದು.

ಮಲೆನಾಡಿನ ಮೇಲೆ ಕತ್ತಲಿಳಿಯುತ್ತಿದ್ದಂತೆ ನಾವೂ ಇಳಿದೆವು ಕುಪ್ಪಳಿ ಮನೆಗೆ. ಉಪ್ಪರಿಗೆಗೆ ಹೋಗಿ, ಅಡಕೆ ಆರಿಸಲೆಂದು ಅಂಗಳಕ್ಕೆ ಹಾಕಿದ್ದ ಚಪ್ಪರದ ಮೇಲೆ ಅತಿಥಿಗಳಿಗಾಗಿ ಹಾಸಿದ್ದ ಜಮಖಾನದ ಮೇಲೆ ಕುಳಿತು ಅಡಕೆ ತೋಟದ ಮತ್ತು ಇದಿರೆದ್ದ ಕಾಡುಮೆತ್ತಿದ್ದ ಗುಡ್ಡದ ನಿತ್ಯಶ್ಯಾಮಲ ಪ್ರಶಾಂತ ಸನ್ನಿಧಿಯನ್ನು ಅನುಭವಿಸುತ್ತಾ ಲಘುಸಂವಾದದ ಸವಿಯಲ್ಲಿದ್ದೆವು. ಅಷ್ಟರಲ್ಲಿ ಒಳಗಿನಿಂದ ಸೌತೆಕಾಯಿಯ ಬೆಲ್ಲದ ಪಾನಕ ಬಂತು. ನಮಗೆಲ್ಲ ಅದು ಬಳಕೆಯ ವಸ್ತುವಾಗಿದ್ದರೂ ಬಯಲುಸೀಮೆಯವರಿಗೆ ಅಪೂರ್ವವಾದ ವಿಶೇಷ ವಸ್ತುವಾಗಿತ್ತು.

ಅಲ್ಲಿಂದ, ರಾತ್ರಿ ಇಂಗ್ಲಾದಿಯಲ್ಲಿಯೆ ತಂಗಲು ಏರ್ಪಾಟಾಗಿದ್ದುದರಿಂದ ಎಲ್ಲರೂ ಕಾರುಗಳಲ್ಲಿ ಕುಳಿತು ಕುಪ್ಪಳಿಯನ್ನು ಬೀಳುಕೊಂಡೆವು.

ಮರುದಿನ ಬೆಳಿಗ್ಗೆ (೨೬-೫-೧೯೩೬) ತೀರ್ಥಹಳ್ಳಿಯಲ್ಲಿ ಬಿ.ಎಂ.ಶ್ರೀ.ಯವರ ಭಾಷಣದ ಕಾರ್ಯಕ್ರಮವನ್ನು ಏರ್ಪಡಿಸಿದ್ದರು, ಕೂಡಲಿ ಚಿದಂಬರಂ ಮತ್ತು ಮಿತ್ರರು. ನಾವೆಲ್ಲರೂ ಹೋಗಿದ್ದೆವು. ಸಭೆ ಕಿಕ್ಕಿರಿದಿತ್ತು. ಸ್ವಾಮಿಜಿಯೂ ಮಾತಾಡಿದರು. ನರೆಲ್ಲ ಕೇಳಿಕೊಂಡುದರಿಂದ ಬಿ.ಎಂ.ಶ್ರೀ. ನನಗೂ ನನ್ನ ಕೆಲವು ಕವನಗಳನ್ನು ವಾಚಿಸುವಂತೆ ಹೇಳಿದರು. ಮಧ್ಯಾಹ್ನದ ಮೇಲೆ ಅವರನ್ನೆಲ್ಲ ಮುಂದಿನ ಆಗುಂಬೆಯ ಕಾರ್ಯಕ್ರಮಕ್ಕೆ ಕಳಿಸಿ ಬೀಳ್ಕೊಂಡು ನಾವು ಸ್ವಮಿಜಿಯೊಡನೆ ಮತ್ತೆ ಇಂಗ್ಲಾದಿಗೆ ಹಿಂತಿರುಗಿದೆವು.

* * *

ಮರುದಿನ ೨೭-೫-೧೯೩೬ ಸ್ವಾಮಿಜಿಯನ್ನು ಕರೆದುಕೊಂಡು ನಾವೆಲ್ಲ-ಮಾನಪ್ಪ, ವಿಜಯದೇವ, ಚಂದ್ರಶೇಖರ, ಶ್ರೀನಿವಾಸ ಇತ್ಯಾದಿ-ಕುಪ್ಪಳಿಗೆ ಹೋದೆವು. ಅದರ ಮರುದಿನ, ಎಂದರೆ ೨೮-೫-೧೯೩೬, ಶ್ರೀರಾಮಕೃಷ್ಣ ಶತಮಾನೋತ್ಸವಾಚರಣೆಯಾದ್ದರಿಂದ, ಆವೊತ್ತೆ ಮಧ್ಯಾಹ್ನದ ಮೇಲೆ ಉಪ್ಪರಿಗೆಯಲ್ಲಿ ಶ್ರೀರಾಮಕೃಷ್ಣ-ಸ್ವಾಮಿ ವಿವೇಕಾನಂದ-ಶ್ರೀ ಮಹಾಮಾತೆ ಶಾರದಾ ದೇವಿಯವರ ದೊಡ್ಡ ದೊಡ್ಡ ಬಣ್ಣದ ಭಾವಚಿತ್ರಗಳನ್ನಿಟ್ಟು ವೇದಿಕೆಯನ್ನು ನಿರ‍್ಮಿಸಿ, ಬಗನಿ, ಬಾಳೆ, ಹಲಸು, ಮಾವು ಇತ್ಯಾದಿಯ ಹಸುರು ಎಲೆಗಳಿಂದ ಅಲಂಕರಿಸಿ, ಅದನ್ನೊಂದು ಪುಟ್ಟ ಅರಣ್ಯವನ್ನಾಗಿ ಮಾಡಿದೆವು. ಸ್ವಾಮಿಜಿಯ ಸಾನ್ನಿಧ್ಯದಿಂದಲೂ ಸಲಹೆಗಳಿಂದಲೂ ಉತ್ತೇಜಿತರಾದ ಹುಡುಗರು ನಾನಾವಿನ್ಯಾಸಗಳಲ್ಲಿ ಪವಿತ್ರಸೂಕ್ತಿಯ ಅಕ್ಷರಗಳನ್ನು ಗೋಡೆಯ ಮೇಲೆ ಎಲೆಗಳಿಗೆ ತಂತಿಮೊಳೆ ಹೊಡೆದು ವಿರಚಿಸಿದರು. ಉತ್ಸವಕ್ಕಾಗಿಯೆ ತವರುಮನೆಗೆ ಬಂದಿದ್ದ ತಂಗಿ ರಾಜಮ್ಮ ಮತ್ತು ಮನೆಯವರೆ ಆಗಿದ್ದ ಸಾವಿತ್ರಮ್ಮ ಮೊದಲಾದ ಮಹಿಳೆಯರು ತಮ್ಮ ಪಾಲಿನ ಬಣ್ಣಬಣ್ಣದ ರಂಗವಲ್ಲಿ ಇಕ್ಕುವ ಮೊದಲಾದ ಅಲಂದರಣಗಳನ್ನು ನೆರವೇರಿಸಿದರು. ಆಳುಗಳು ಮನೆಯ ಹೊರಅಂಗಳ ಒಳಅಂಗಳ ಹೆಬ್ಬಾಗಿಲುಗಳಲ್ಲಿ ಅಡಕೆ ಬಾಳೆಕಂಬಗಳನ್ನು ನೆಟ್ಟು ತೋರಣ ಕಟ್ಟಿ ಮಂಗಳ ಸಿಂಗಾರ ಮಾಡಿದರು. ಒಳಅಂಗಳದ ತುಳಸೀಕಟ್ಟೆಯ ದೇವರಿಗೆ ಕಾರ್ತಿಕೋತ್ಸವದಲ್ಲಿ ಮಾಡುವಂತೆ ಸುತ್ತಲೂ ಬಾಳೆಕಂಬಗಳನ್ನು ನೆಟ್ಟು ಅಡಕೆಯ ದಬ್ಬೆಗಳನ್ನು ಇಟ್ಟು ಹಣತೆ ದೀಪದ ಸಾಲು ಇಡಲು ಅನುಕೂಲವಾಗುವಂತೆ ಸಣ್ಣಸಣ್ಣ ಸೆಗಣಿ ಉಂಡೆಗಳನ್ನಿಟ್ಟು ಅಣಿಗೊಳಿಸಿದರು. ಅಜ್ಜಯ್ಯನ ಕಾಲದಿಂದಲೂ ದೇವರ ಬುಟ್ಟಿಯಲ್ಲಿದ್ದ ಪೂಜಾಸಾಮಗ್ರಿಗಳನ್ನು-ಆರತಿಗಳು, ಗಂಟೆಗಳು, ಶಂಖಗಳು, ಜಾಗಟೆಗಳು ಹಿರವಾಣಗಳು, ಗಿಂಡಿಗಳು, ಪಂಚಪಾತ್ರೆಗಳು, ಉದ್ದರಣೆಗಳು ಇತ್ಯಾದಿ-ಪಳಪಳ ಹೊಳೆಯುವಂತೆ ಬೆಳಗಿಸಿದರು. ಮನೆಯನ್ನೆಲ್ಲ ಸೆಗಣಿ ಬಳಿದು ಹಬ್ಬಕ್ಕೆ ಶುಚಿಗೊಳಿಸುವಂತೆ ಮಾಡಿದರು/

ಇಷ್ಟೆಲ್ಲ ಮಾಡಿ ಮುಗಿಸಿದ ಅನಂತರ ನಾವೆಲ್ಲ ಕವಿಶೈಲಕ್ಕೆ ಹೊಗುವ ಕಾರ್ಯಕ್ರಮವಿಟ್ಟುಕೊಂಡು ಸ್ವಾಮಿಜಿಯನ್ನೂ ಬರುವಂತೆ ಕೇಳಿಕೊಂಡೆವು. ಆದರೆ ಅವರು ‘ತಮಗೆ ಗುಡ್ಡ ಹತ್ತಲು ದಣಿವಾಗುತ್ತದೆ; ಎಂತೂ ಮೊನ್ನೆ ಒಮ್ಮೆ ಹೋಗಿ ನೋಡಿದ್ದಾಗಿದೆಯಲ್ಲಾ’ ಎಂಬರ್ಥದ ಮಾತಾಡಿ ಉಪ್ಪರಿಗೆಯಲ್ಲಿಯೆ ಉಳಿದರು, ರಾಜಮ್ಮ ಸಾವಿತ್ರಮ್ಮ ಮತ್ತು ಇತರ ಮಹಿಳಾವರ್ಗದವರೊಡನೆ ಮಾತಾಡಿದ್ದು.

ಸ್ವಾಮಿ ಸಿದ್ದೇಶ್ವರಾನಂದರ ದಿವ್ಯವ್ಯಕ್ತಿತ್ವದ ಪ್ರಭಾವವೆ ಅಂತಹದ್ದಾಗಿತ್ತು. ಮುದುಕರು ಹುಡುಗರು ಮಹಿಳೆಯರು ಮಕ್ಕಳು ಎಲ್ಲರೂ ಅವರೊಡನೆ ಅಹೈತುಕೀ ಆತ್ಮೀಯತೆಯನ್ನನುಭವಿಸುತ್ತಿದ್ದುದರಿಂದ ಒಡನೆಯೆ ಅಪರಿಚಿತತ್ವ ಮಾಯವಾಗಿ ಬಿಡುತ್ತಿತ್ತು. ಬಹುಕಾಲದ ಪರಿಚಿತರೊಡನೆ ಮತ್ತೆ ಸಂಧಿಸಿದರೊ ಎಂಬಂತೆ ತಮ್ಮ ಹೃದಯಗಳನ್ನೆಲ್ಲ ಮುಚ್ಚುಮರೆ ಇಲ್ಲದಂತೆ ಬಿಚ್ಚಿ ಹೇಳಿ ಅವರೊಡನೆ ವ್ಯವಹರಿಸುತ್ತಿದ್ದರು. ನಾವೆಲ್ಲ ಕವಿಶೈಲಕ್ಕೆ ತೊಲಗಿದ ಮೇಲೆ ಮನೆಯವರೂ ನಂಟರೂ ಎಲ್ಲ ಹೆಣ್ಣುಮಕ್ಕಳು ನಿಸ್ಸಂಕೋಚವಾಗಿ ಉಪ್ಪರಿಗೆಯಲ್ಲಿ ನೆರೆದು ಸ್ವಾಮಿಜಿಯ ಪ್ರಶ್ನೆಗಳಿಗೆಲ್ಲ ಉತ್ತರವಿತ್ತು. ಅವರಿಗೂ ಅನೇಕಾನೇಕ ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆದು ಸಂತೃಪ್ತರಾದರು. ಆ ಮಾತುಕತೆಗಳಲ್ಲಿ ಹೆಣ್ಣುಮಕ್ಕಳ ಕಡೆಯಿಂದ ಪಡೆಯಬಹುದಾದ ಕುಪ್ಪಳಿಯ ಮತ್ತು ದೇವಂಗಿಯ ಮನೆತನಗಳ ಸಮಬಂಧದ ಸಾಂಸಾರಿಕ ವಿವರಗಳನ್ನೆಲ್ಲ ತಿಳಿದುಕೊಂಡರು. ನೇರವಾಗಿ ಆ ಮಾತನ್ನೇನೂ ಎತ್ತದೆ, ನನ್ನ ಮತ್ತು ನನ್ನ ಭಾವೀ ಸಹಧರ‍್ಮಿಣಿಯ ವಿಚಾರವಾಗಿಯೂ ತಿಳಿಯಬಹುದಾದ ವಿವರಗಳನ್ನೂ ಸಂಗ್ರಹಿಸಿಕೊಂಡರು. ಆ ಸಂಬಂಧದಿಮದ ನನ್ನ ಲೌಕಿಕ ಮತ್ತು ಆಧ್ಯಾತ್ಮಿಕ ಶ್ರೇಯಸ್ಸಿಗೆ ಪ್ರತಿಕೂಲವಾಗುವುದಿಲ್ಲ ಎಂಬುದನ್ನೂ ಗ್ರಹಿಸಿದರೆಂದು ತೋರುತ್ತದೆ. ನನ್ನ ಸ್ವಭಾವ ಮತ್ತು ಸ್ವಧರ‍್ಮಗಳಿಗೆ ಸಂನ್ಯಾಸವು ಪರಧರ‍್ಮವಾಗಿ ಭಯಾವಹವಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಅರಿತಿದ್ದ ಅವರಿಗೆ ಮುಂದೆ ನನಗೆ ಆ ವಿಚಾರದಲ್ಲಿ ಏನು ಸಲಹೆಕೊಡಬೇಕು ಎಂಬುದನ್ನೂ ನಿಶ್ಚಯಿಸಿಕೊಂಡರೆಂದು ತೋರುತ್ತದೆ.

ಸ್ವಾರಸ್ಯವೆಂದರೆ, ನಮ್ಮ ಮಹಿಳೆಯರು ಯಾರಿಗೂ ಇಂಗ್ಲಿಷ್ ಗೊತ್ತಿರಲಿಲ್ಲ; ಮಲೆಯಾಳಿಯಾಗಿದ್ದ ಸ್ವಾಮಿಜಿಗೆ ಹೇಗೆ ಸಾಧ್ಯವಾಗಯಿತು ನಮ್ಮ ಮಹಿಳೆಯರೊಡನೆ ಅಷ್ಟು ಆತ್ಮೀಯವಾಗಿ ಸಂಭಾಷಿಸಲು? ಎಂದು ಯಾರಾದರೂ ಸಂದೇಹಿಸಿದರೆ ತಪ್ಪಾಗುತ್ತದೆ. ಅವರಿಗೆ ಕನ್ನಡ ಓದಿ ಬರೆಯಲು ಬರುತ್ತಿರಲಿಲ್ಲವಾದರೂ ಮೈಸೂರು ಆಶ್ರಮಕ್ಕೆ ಬಂದ  ಕೆಲವೇ ದಿನಗಳಲ್ಲಿ ಕನ್ನಡದಲ್ಲಿ ಸಾಮಾನ್ಯರೊಡನೆ ಚೆನ್ನಾಗಿಯೆ ಮಾತನಾಡುವಷ್ಟರ  ಮಟ್ಟಿನ ಕನ್ನಡ ಕಲಿತಿದ್ದರು. ಅಷ್ಟೇ ಅಲ್ಲ ತಕ್ಕಮಟ್ಟಿಗೆ ಕನ್ನಡದಲ್ಲಿಯೆ ಸಣ್ಣ ಸಣ್ಣ ಗುಂಪುಗಳಿಗೆ ವೇದಾಂತದ ವಿಚಾರವಾಗಿ ಪ್ರವಚನ ಕೊಡುವಷ್ಟು ಮುಂದುವರೆಇದಿದ್ದರು. ಅವರ ಆ ‘ಭಾಷೆಗಳನ್ನು ಕಲಿಯುವ ಶಕ್ತಿ’ಯ ಅದ್ಭುತ ಪ್ರದರ್ಶನವನ್ನು ಮುಂದೆ ಅವರು ಫ್ರಾನ್ಸ್ ದೇಶಕ್ಕೆ ಪ್ಯಾರಿಸ್ಸಿನ ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರಾಗಿ ಹೋದಮೇಲೆ ನಾವು ಇನ್ನೂ ವಿಸ್ಮಯಗೊಳ್ಳುವ ರೀತಿಯಲ್ಲಿ ಕಾಣುತ್ತೇವೆ. ಅಲ್ಲಿಗೆ ಅವರು ಹೋದ ಸ್ವಲ್ಪ ಕಾಲದಲ್ಲಿಯೆ ಫ್ರೆಂಚ್ ಭಾಷೆಯನ್ನು ಮಾತನಾಡಲು ಕಲಿತದ್ದಲ್ಲದೆ ಓದಿ ಬರೆಯುವುದನ್ನೂ ಎಷ್ಟು ಸಮರ್ಥವಾಗಿ ಅಭ್ಯಾಸ ಮಾಡಿದರು ಎಂದರೆ, ಜಗತ್‌ಪ್ರಸಿದ್ಧವಾಗಿರುವ ಫ್ರೆಂಚ್ ವಿಶ್ವವಿದ್ಯಾನಿಲಯಗಳಲ್ಲಿ ಮಹಾಮೇಧಾವಿಗಳಾದ ಪ್ರಾಧ್ಯಾಪಕರೂ ದಂಗುಬಡಿಯುವಂತೆ ವೇದಾಂತವನ್ನು ಕುರಿತು ಫ್ರೆಂಚ್ ಭಾಷೆಯಲ್ಲಿಯೆ ಗಂಟೆಗಟ್ಟಲೆ ನಿರರ್ಗಳವಾಗಿ ವಿದ್ವತ್ಪೂರ್ಣ ವಿಶೋಷೋಪನ್ಯಾಸಗಳನ್ನೂ ಕೊಟ್ಟು, ಅವು ಆ ವಿಶ್ವವಿದ್ಯಾನಿಲಯಗಳಿಂದ ಹೊತ್ತಗೆಗಳಾಗಿ ಹೊರಬಂದುದನ್ನೂ ನಾವು ನೋಡುತ್ತೇವೆ!

ಮರುದಿನ, ೨೮-೫-೧೯೩೬, ನಮ್ಮ ಮನೆ ಕುಪ್ಪಳಿಯ ಜೀವಮಾನದಲ್ಲಿ ಒಂದು ಚಿರಸ್ಮರಣೀಯವಾದ ಪವಿತ್ರದಿನವಾಯ್ತು. ಭಗವಾನ್ ಶ್ರೀರಾಮಕೃಷ್ಣ ಗುರದೇವನ ಶತಮಾನೋತ್ಸವವನ್ನು ಆಚರಿಸಿ; ಮತ್ತು ಆ ಆಚರಣೆ ಶ್ರೀಮತ್ ಸ್ವಾಮಿ ಸಿದ್ಧೇಶ್ವರಾನಂದರ ಪಾವನ ನೇತೃತ್ವದಲ್ಲಿ ಮಾತ್ರವಲ್ಲದೆ ಆ ದಿನದ ಪೂಜಾದಿಗಳೆಲ್ಲ ಅವರ ದಿವ್ಯಹಸ್ತದಿಂದಲೆ ನಡೆದು! (ಅದೇ ಅಂತಹ ಕೊನೆಯ ಉತ್ಸವವೂ ಆಗಿಬಿಟ್ಟಿತಲ್ಲಾ ಎಂಬುದೊಂದೇ ಕೊರಗು, ಇಂದು (೧೭-೧೧-೧೯೭೫) ಅದನ್ನು ನೆನೆದು ಬರೆಯುತ್ತಿರುವ ನನಗೆ, ಏಕೆಂದರೆ ತರುವಾಯ ೧-೫-೧೯೩೭ರಂದು ಮದುವೆಯಾದ ಮೇಲೆ ನಾನು ಕುಪ್ಪಳಿಗೆ ಹೋಗುವುದೇ ವಿರಳವಾಗಿಬಿಟ್ಟಿತು. ಹಿಂದೆ ಪ್ರತಿವರ್ಷವೂ ಬೇಸಗೆ ರಜವನ್ನು ಅಲ್ಲಿಯೆ ಕಳೆಯುತ್ತಿದ್ದಂತೆ ಕಳೆಯಲು ಸಾಧ್ಯವಾಗಲಿಲ್ಲ, ಸಂಸಾರಿಯಾದ ಮೇಲೆ.)

‘ಅಜ್ಜಯ್ಯನ ಅಭ್ಯಂಜನ’ದ ಬಚ್ಚಲು ಒಲೆಗೆ ಹಿಂದಿನ ಸಂಜೆಯೆ ಬೆಂಕಿ ಹಾಕಿಸಿ ದೈತ್ಯ ಹಂಡೆಗಳಲ್ಲಿ ನೀರು ಕುದಿಯುತ್ತಿತ್ತು. ನಾವೆಲ್ಲ ಗಂಡಸರು ಏಳುವ ಮುನ್ನವೆ ಹೆಣ್ಣುಮಕ್ಕಳೆಲ್ಲ ರಾತ್ರಿ ೩ ಗಂಟೆಗೊ ಎದ್ದು ಸ್ನಾನಮಾಡಿ ರಂಗೋಲಿ ಹಾಕುವ ತೋರಣವಿಕ್ಕುವ ಇತ್ಯಾದಿ ಕಾರ‍್ಯಗಳಲ್ಲಿಯೂ ಅತಿಥಿಗಳಿಗೆ ಬೆಳಗಿನ ಉಪಾಹಾರಾದಿಗಳನ್ನು ತಯಾರಿಸುವ ಕಾರ‍್ಯದಲ್ಲಿಯೂ ನಿರತರಾಗಿದ್ದರು. ನಾವೂ ಸುಮಾರು ಮೂರುಗಂಟೆಯ ಹೊತ್ತಿಗೇ ಎದ್ದೆವು. ತಕ್ಕಮಟ್ಟಿನ ಗಜಿಬಿಜಿ ಮತ್ತು ಊದಿನ ಕಡ್ಡಿಯ ಮತ್ತು ಗಂಧದ ಚಕ್ಕೆಯ ಸುವಾಸನೆ ಮನೆಯನ್ನೆಲ್ಲ ವ್ಯಾಪಿಸಿ ಪವಿತ್ರತೆಯ ವಾತಾವರಣ ಕಲ್ಪಿತವಾಗಿತ್ತು. ಮನೆಯ ಮುಂದಣ ಮಲೆಯ ನೆತ್ತಿಗೆ ಅರಣನೇರುವ ಮುನ್ನವೆ, ಕಾಜಾಣಗಳ ಉಲಿಹ ರಾಗಾಲಾಪನೆಗೆ ತೊಡಗಿದ್ದಾಗಲೆ ನಾವೆಲ್ಲ ಸ್ನಾನಾದಿಗಳನ್ನು ಪೂರೈಸಿದ್ದೆವು. ಸ್ವಾಮಿಜಿ ಉಪ್ಪರಿಗೆಯಲ್ಲಿ ಮಲಗಿದ್ದಲ್ಲಿಯೆ ಅದರ ತೆರೆದುಕೊಂಡಿರುವ ಮೂಡಣ ದಿಕ್ಕಿನ ಕಡೆಯ ಕಾಡಿನ ಮೇಲೆ ಉಷೋದಯ ವಾಗುತ್ತಿರುವ ಅದ್ಭುತ ದೃಶ್ಯವನ್ನು ಮಲಗಿದ್ದಂತೆಯೆ ಕಣ್ಣು ತೆರೆದು ನೋಡಿ ಆನಂದಮಯ ಧ್ಯಾನಸ್ಥರಾಗಿದ್ದರಂತೆ!

ಆ ದಿನದ ಪೂಜಾವಿಧಿಗಳನ್ನೆಲ್ಲ ಸ್ವಾಮಿಜಿಯೆ, ಆಶ್ರಮದಲ್ಲಿ ನಡೆಸುವಂತೆ, ಶಾಸ್ತ್ರೋಕ್ತ ಸಂಪ್ರದಾಯದ ಪ್ರಕಾರ ನಡೆಸಿದರು. ಅತಿರೇಕಕ್ಕೆ ಹೋಗದೆ, ಸಣ್ಣ ಚೊಕ್ಕಟ ಪ್ರಮಾಣದಲ್ಲಿ, ಒಂದು ಅಗಲವಾದ ತಟ್ಟೆಯಮೇಲೆ ಹಾಕಿದ್ದ ಮರಳ ಮೇಲೆ ಕಾಷ್ಠಗಳನ್ನಿಟ್ಟು ಅಗ್ನಿಪ್ರತಿಷ್ಠೆ ಮಾಡಿದರು. ಸ್ವಾಹಾದಿ ಮಂತ್ರಗಳನ್ನೂ ಹೇಳಿ ಹವಿಯನ್ನರ್ಪಿಸಿದರು, ‘ಶ್ರೀರಾಮಕೃಷ್ಣ ಪರಮಹಂಸ’, ‘ಸ್ವಾಮಿ ವಿವೇಕಾನಂದ’, ‘ಮಹಾಮಾತೆ’ ‘ಬಾ ಶ್ರೀಗುರುದೇವನೆ ಬಾ’ ‘ಸಂನ್ಯಾಸಿ ಗೀತೆ’ ಮೊದಲಾದ ಕವನಗಳನ್ನೂ ಉಪನಿಷನ್ಮಂತ್ರಗಳನ್ನೂ, ಸ್ವಾಮಿ ವಿವೇಕಾನಂದರ ಮತ್ತು ಶ್ರೀರಾಮಕೃಷ್ಣಪರಮಹಂಸರ ಜೀವನಚರಿತ್ರೆಗಳಿಂದ ಭಾಗಗಳನ್ನೂ ಪಠಿಸಿದೆವು. ಭಗವದ್ಗೀತೆಯಿಂದಲೂ ಉಪನಿಷತ್ತುಗಳಿಂದಲೂ ವಾಚನವಾಯಿತು.

ದೇವಂಗಿ, ಉಂಟೂರು, ಇಂಗ್ಲಾದಿ, ಅಲಿಗೆ ಮೊದಲಾದ ಕಡೆಗಳಿಂದ ನಂಟರು ಇಷ್ಟರು ಮಿತ್ರರು ನೆರೆದು ಆರಾಧನೆಯಲ್ಲಿ ಭಾಗವಹಿಸಿ ಧನ್ಯರಾದರು.

ಸಂಜೆ ಕವಿಶೈಲದತ್ತ ಹೋಗಿ ಸುತ್ತಣ ಕಾಡುಗಳಲ್ಲಿ ತಿರುಗಾಡಿ ಕತ್ತಲಾದ ಮೇಲೆ ಮನೆಗೆ ಬಂದೆವು. ಅಷ್ಟರಲ್ಲಿ ಕಾರ‍್ತಿಕ ದೀಪೋತ್ಸವಕ್ಕೆ ಅಣಿಯಾಗಿತ್ತು. ಅಂಗಳದ ಕಲ್ಲು ತುಳಸೀಕಟ್ಟೆಯ ಸುತ್ತಲೂ ಕಂಬಗಳನ್ನಿಟ್ಟು ಎರಡುಮೂರು ಪಂಕ್ತಿಗಳಲ್ಲಿ ದಬ್ಬೆಗಳನ್ನು ಹಾಕಿ, ಸೆಗಣಿ ಉಮಡೆಗಳ ಮೇಲೆ ಅವು ಜರಿಬೀಳದಂತೆ ಹಣತೆಗಳನ್ನಿಟ್ಟು, ಎಣ್ಣೆಹಾಕಿ, ಬತ್ತಿಗಳನ್ನಿಟ್ಟಿದ್ದರು. ತುಳಸಿಯ ಮುಂಭಾಗದಲ್ಲಿ ಇಕ್ಕೆಲಗಳಲ್ಲಿಯೂ ಬಾಳೆಯ ದಿಂಡು ನಟ್ಟು, ಅವುಗಳ ತುದಿಗೆ ಎಣ್ಣೆಗದ್ದಿದ ಬಟ್ಟೆಯ ಬತ್ತಿಗಳನ್ನು ಕೊಟ್ಟೆಕಡ್ಡಿಯ ತುದಿಗೆ ಸುತ್ತಿ ಚುಚ್ಚಿದ್ದರು. ಹಣತೆಗಳಿಗೆಲ್ಲ ದೀಪಹೊತ್ತಿಸಿದರು, ಬಾಳೆಗಂಬಗಳ ನೆತ್ತಿಯ ಕೊಟ್ಟೆಕಡ್ಡಿಗಳ ಬತ್ತಿಗೂ ದೀಪ ಹೊತ್ತಿಸಿದರು! ಆ ದೀಪ ಮಾಲೆ ಮತ್ತು ದೀಪಸ್ತೋಮ ಆ ಸುತ್ತಣ ಕತ್ತಲೆಯಲ್ಲಿ ಅತ್ಯಂತ ಮನೋಹರವಾಗಿತ್ತು. ತುಳಸೀ ದೇವರಿಗೆ ಆರತಿಯೆತ್ತಿ ಜಾಗಟೆ ಗಂಟೆ ಬಾರಿಸಿದರು. ಗುಗ್ಗಳದ ಪುಡಿಯನ್ನು ಬಾಳೆಕಂಬದ ತುದಿಯ ದೀಪಸ್ತೋಮಕ್ಕೆ ಎರಚಿದರು. ಬುಗ್ಗೆಂದು ಅಗನಿದೀಪ್ತಿ ಮೇಲಕ್ಕೇರಿ ಕಣ್ಣಿಗೆ ರಮಣೀಯವಾಗುತಿತ್ತು. ಮತ್ತು ಗುಗ್ಗಳದ ಕಂಪು ಮನೆಯನ್ನೆಲ್ಲ ವ್ಯಾಪಿಸಿ ಘ್ರಾಣಕ್ಕೂ ಅಪ್ಯಾಯಮಾನವಾಗಿತ್ತು.

ಅದು ಮುಗಿದ ಮೇಲೆ ಗುರುಮಹಾರಾಜರಿಗೆ ಉಪ್ಪರಿಗೆಯ ಮೇಲೆ ಪೂಜಾಕಾರ‍್ಯ ಜರುಗಿಸಿದರು ಶ್ರೀ ಸ್ವಾಮಿಜಿ.

ಆದರ ದಿವ್ಯತೆ ಮತ್ತು ಭವ್ಯತೆಗಳು ಇಂದಿನ ನೆನಪಿಗೆ ತಗಲುತ್ತಿರುವಂತೆ ಅಂದಿನ ನೈಜಕ್ಕೆ ವೇದ್ಯವಾಗಿರಲಿಲ್ಲ ಎಂದು ತೋರುತ್ತದೆ? ಮಹಿಮೆ ಮನಸ್ಸಿಗೆ ಬರಬೇಕಾದರೆ ನಾವು ಘಟನೆಯಿಂದ ಸ್ವಲ್ಪ  ದೂರಕ್ಕೆ ಸರಿಯಬೇಕಾಗುತ್ತದೆ, ಕಾಲದಲ್ಲಿಯೂ ಮತ್ತು ದೇಶದಲ್ಲಿಯೂ!

ಮರುದಿನವೂ (೨೯-೫-೧೯೩೬) ಸ್ವಾಮಿಜಿಯನ್ನು ಕುಪ್ಪಳಿಯಲ್ಲಿಯೆ ಉಳಿಸಿಕೊಂಡು ಅವರ ಸಾನ್ನಿಧ್ಯ ಮತ್ತು ಸಂವಾದಗಳನ್ನು ನಾವೆಲ್ಲರೂ ಸವಿದೆವು. ವಿಶೇಷವಾಗಿ, ಅಂತಹ ಸನ್ನಿವೇಶಗಳನ್ನೆ ಕಾಣದಿದ್ದ ನಮ್ಮ ಮಹಿಳಾವರ್ಗ ಅದರ ಪೂರ್ಣ ದಿವ್ಯಲಾಭ ಪಡೆದು ಧನ್ಯವಾಗಿತ್ತು.

ಅದರ ಮರುದಿನ (೩೦-೫-೧೯೩೬) ನಾವೆಲ್ಲರೂ ಇಂಗ್ಲಾದಿಗೆ ಹೋದೆವು. ಆ ದಿನವೆ ಒಮದು ವರುಷದ ಹಿಂದೆ ಹುಲಿ ಹೊಡೆದು ನಾವು ಮೈಸೂರಿಗೆ ಕಳಿಸಿದ್ದ ಮಂಡೆ ಸಹಿತದ ಅದರ ಚರ‍್ಮ ತಲೆಕಟ್ಟಿ ಹದ ಹಾಕಿಸಿಕೊಂಡು ಅಂಚೆಯಮುಖಾಂತರ ಬಂದಿತು. ಅದನ್ನು ಬಿಚ್ಚಿ ಹಾಸಿ ನೋಡುವುದೆ ಒಂದು ಹಬ್ಬವಾಯಿತು ನಮಗೆಲ್ಲ.

ಅದರ ಮರುದಿನ (೩೧-೫-೧೯೩೬) ಸ್ವಾಮಿಜಿ ವಾಪಸು ಹೊರಟುಹೋದರು. ೧-೬-೧೯೩೬:

ನಾನು ವೆಂಕಟಯ್ಯ ಬೆಳಿಗ್ಗೆ ಇಂಗ್ಲಾದಿಯಿಂದ ಹೊರಟು ಮಾತಾಡುತ್ತಾ (ಗೃಹ ಕೃತ್ಯದ ಮತ್ತು ಸಂಸಾರದ ತಾಪತ್ರಯದ ವಿಚಾರವಾಗಿ) ಕುಪ್ಪಳಿಗೆ ಬಂದೆವು. (ಆಹಾ! ಬರೆಯುವುದಾದರೆ ಒಬ್ಬೊಬ್ಬ ವ್ಯಕ್ತಿಯ ಜೀವನವೂ ಒಂದೊಂದು ಮಹಾಕಾದಂಬರಿಯಾಗದೇ?)

* * *

ಕಾಲೇಜು ಪ್ರಾರಂಭವಾಗುವ ಹೊತ್ತಿಗೆ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮಕ್ಕೆ ಹಿಂತಿರುಗಿದೆ. ನಮ್ಮ ಕಡೆಯ ಹುಡುಗರೆಲ್ಲರೂ ಶ್ರೀರಾಮಕೃಷ್ಣ ವಿದ್ಯಾರ್ಥಿನಿಲಯಕ್ಕೆ ಸೇರಿದರು.

ನನ್ನ ಜೀವನದಲ್ಲಿ ಬಹಕಾಲದಿಂದಲೂ ದೇಹಕ್ಕೂ ಧ್ಯೇಯಕ್ಕೂ ನಡೆಯುತ್ತಿದ್ದ ಹೋರಾಟದ ಹೊಗೆಯಲ್ಲಿ ಅಗ್ನಿಜ್ವಾಲೆಗಳು ಕಾಣಿಸಿಕೊಳ್ಳತೊಡಗಿದುವು. ಈ ಹೋರಾಟದ ಸೂಚನೆ ನನ್ನ ಅನೇಕ ಕವನಗಳಲ್ಲಿ ಪ್ರತಿಫಲನಗೊಂಡಿರುವುದನ್ನು ಯಾರಾದರೂ ಗುರುತಿಸಬಹುದು. ಆದ್ದರಿಂದಲೆ ಆ ಕವನಗಳನ್ನೋದಿದ ನನ್ನ ಹಿತಚಿಂತಕರು ಮಿತ್ರರು ನನಗೂ ಕಾಗದ ಬರೆಯುತ್ತಿದ್ದರು. ಮತ್ತು ಸ್ವಾಮಿಜಿಗೂ ಹೇಳುತ್ತಿದ್ದರು, ನನ್ನ ಕವಿಜೀವನ ಗೃಹಸ್ಥಧರ‍್ಮಕ್ಕೆ ಯೋಗ್ಯವಾದುದೆ ಹೊರತು ಸಂನ್ಯಾಸಕ್ಕೆ ಅರ್ಹವಾದುದಲ್ಲ ಎಂದು. ನನ್ನ ಅನೇಕ ಪ್ರೇಮಕವನಗಳಲ್ಲಿ, ಯಾವ ನಿರ್ದಿಷ್ಟ ಸುಂದರಿಯನ್ನೂ ಕುರಿತಲ್ಲದಿದ್ದರೂ, ಹೆಣ್ಣಿನ ಚೆಲುವಿನ ಆಶೆ ಪ್ರಕಟವಾಗಿರುವುದನ್ನು ನೋಡಬಹುದು, ೧೮-೧-೧೯೩೦ರಲ್ಲಿ ಬರೆದ ಒಂದು ಕವನದಲ್ಲಿ (‘ಬೆಚ್ಚುತಿದೆ ಮೈ!’ ಎಂಬುದು ‘ಕಲಾಸುಂದರಿ’ಯಲ್ಲಿ ಅಚ್ಚಾಗಿದೆ) ಅದು ಹೀಗೆ ಪ್ರಕಾಶಿತವಾಗಿದೆ:

ಕೆಚ್ಚಿರುವುದಾತ್ಮದಲಿ
ಬೆಚ್ಚುತಿದೆ ಮೈ ನೆಚ್ಚಿರುವುದೆದೆಯಲ್ಲಿ,
ಕೆಚ್ಚಿಲಿಯು ಕೈ!….
ಧ್ಯೇಯವೋ ಭೂಮಿಯಲಿ;
ಬಲವಿಲ್ಲ ಭಕ್ತಿಯಲಿ,
ಮನದ ಶಕ್ತಿಯಲಿ

ಹೊಸಮನೆ ಮಂಜಪ್ಪಗೌಡರಿಗೆ ೧೨-೧೦-೧೯೩೨ರಲ್ಲಿ ಬರೆದ ಕಾಗದದಲ್ಲಿ (ಹರಿಹರಪ್ರಿಯ ಸಂಪಾದಿತ ಕುವೆಂಪು ಪತ್ರಗಳು-ಪುಟ ೨೦) ದೇವಂಗಿಯವರ ಮಂಡಿಯಲ್ಲಿ ಆಗಿದ್ದ ಕುಪ್ಪಳಿಯ ಸಾಲವನ್ನು ತೀರಿಸುವ ವಿಚಾರವಾಗಿ ಬರೆಯುತ್ತ, ನಾನು ಅವಿವಾಹಿತನಾಗಿಯ ಇದ್ದು ಸಾಲವನ್ನು ತೀರಿಸುವ ಭರವಸೆ ನೀಡಿದ್ದೇನೆ. “ಅದನ್ನೆಲ್ಲ ವಿಚಾರಮಾಡಿಯೆ ನಾನು ವಿವಾಹ ಮೊದಲಾದ ಬಂಧನಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದೇನೆ. ನಿಮ್ಮೊಡನೆ ಸತ್ಯವಾಗಿ ಹೇಳುವುದಾದರೆ, ನನಗೆ ಮದುವೆಯಲ್ಲಾಗಲಿ ಸಂಸಾರದಲ್ಲಾಗಲಿ ಜುಗುಪ್ಸೆಯೂ ಇಲ್ಲ. ಅದು ಪಾಪವೆಂದೂ ತಿಳಿದಿಲ್ಲ. ಆದರೆ ವಿವಾಹವೂ ಅದರ ತರುವಾಯ ಬರುವ ಬಂಧನಗಳೂ ನನ್ನ ಧ್ಯೇಯಸಾಧನೆಗೆ ಅಡಚಣೆಗಳೆಂದು ತ್ಯಾಗ ಮಾಡಿರುತ್ತೇನೆ. ನನ್ನ ಜೀವನ ಮತ್ತು ಈಶ್ವರದತ್ತ ಸಾಮರ್ಥ್ಯಗಳನ್ನು ಬೃಹತ್ತರವಾದ ಜಗಜ್ಜೀವನದೊಡನೆ ಲಗ್ನಮಾಡಲು ಬಯಸಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ನಮ್ಮ ಮನೆಗೆ ದ್ರೋಹ ಮಾಡುವುದೂ ಇಲ್ಲ. ಅದಕ್ಕಾಗಿಯೇ ನಾನೆಂದೂ ಸಂನ್ಯಾಸಿಯಾಗಿ ಕಾವಿಯನ್ನು ತೊಡುವುದೂ ಇಲ್ಲ ಎಂದು ನಿರ್ಧರಿಸಿದ್ದೇನೆ.”

ತಿರುಮಲೆ ತಾತಾಚಾರ‍್ಯ ಶರ‍್ಮರು ೧೧-೧-೧೯೩೪ರಲ್ಲಿ ನನಗೆ ನನ್ನ ವಿವಾಹ ವಿಚಾರವಾಗಿ  ಬರೆದ ಕಾಗದಕ್ಕೆ (ಆ ಕಾಗದ ಹಿಂದೆಯೆ ‘ನೆನಪಿನ ದೋಣಿ’ಯಲ್ಲಿ ಉಕ್ತವಾಗಿದೆ) ನಾನು ೧೫-೧-೧೯೩೪ರಂದು ಬರೆದ ದೀರ್ಘ ಉತ್ತರದಲ್ಲಿ (ಅದೂ ‘ಕುವೆಂಪು ಪತ್ರಗಳು’ ಅಲ್ಲಿ ಪ್ರಕಟವಾಗಿದೆ.) ಹೀಗೆ ತಿಳಿಸಿದ್ದೇನೆ:

….ನನ್ನದು ಕವಿಯ ಮಾರ್ಗ. ಏನೆನ್ನುತ್ತೀರೋ? ನಾನು ಕಾವಿಯುಟ್ಟು ಸಂನ್ಯಾಸಿಯಾಗುವುದಿಲ್ಲ. ಏಕೆಂದರೆ ನಾನು ಪ್ರಕೃತಿ ಸೌಂದರ‍್ಯ ಉಪಾಸಕನು. ಸಂನ್ಯಾಸಿಯು ಮಾಯಾಪ್ರಪಂಚದಿಂದ ವಿಮುಖನಾಗಿ ‘ವೈರಾಗಿ’ಯಾಗಿರಬೇಕು. ಹಾಗೆಯೆ ನನಗೆ ವಿವಾಹ ಮಾಡಿಕೊಳ್ಳುವುದೂ ‘ಭಯಂಕರ’ವಾಗಿದೆ. ಪ್ರಪಂಚವು ನಾನು ಬಯಸುವ ಜಗತ್ತಿನಂತೆ ಇದ್ದಿದ್ದರೆ ನಾನು ವಿವಾಹಿತನಾಗಿರುತ್ತಿದ್ದೆನೆಂದು ತೋರುತ್ತದೆ. ಆದರೆ ಆ ಆದರ್ಶದ ಜಗತ್ತು ಎಂದೆಂದಿಗೂ ಆದರ್ಶದ ಜಗತ್ತೆ…. ಆ ಬಂಧನಕ್ಕೆ ಸಿಲುಕಿದರೆ ನನಗೆ ಈಗಿರುವ ಸ್ವಾತಂತ್ರ‍್ಯಕ್ಕೆ ಎಲ್ಲಿ ಲೋಪ ಬರುತ್ತದೆಯೋ ಎಂಬ ಭಯ….ಅದೂ ಅಲ್ಲದೆ ಮದುವೆಯಾದ ಮೇಲೆ ಈಗಿನಂತೆ ‘ಉಢಾಪಿ’ಯಾಗಿರುವುದೂ ಕಷ್ಟ! ಆಗ ರಾಜರು ಅಧಿಕಾರಿಗಳು, ಚಾಕರಿ, ಸಂಬಳ, ಮೃತ್ಯು ಎಲ್ಲದಕ್ಕೂ ಹಲ್ಲುಗಿರಿಯ ಬೇಕಾಗುತ್ತದೆ. ಎಷ್ಟಾದರೂ ಈಗಿನಂತೆ ‘ದಿವ್ಯನಿರ್ಲಕ್ಷತೆ’ಯಿಂದ ಇರಲು ಆಗುವುದಿಲ್ಲ….”

ಇಷ್ಟೆಲ್ಲ ಬರೆದ ಮೇಲೂ ಆ ದೀರ್ಘಪತ್ರದ ಕೊನೆಯಲ್ಲಿ, ತಿ.ತಾ,ಶರ‍್ಮರು ೧೧-೧-೧೯೩೪ರಲ್ಲಿ ಬರೆದ ಕಾಗದಕ್ಕೆ ಉತ್ತರ ಎಂಬಂತೆ ಅದರ ಮರುದಿನವೆ ೧೨-೧-೧೯೩೪ರಲ್ಲಿ ರಚಿಸಿದ ಒಂದು ಸಾನೆಟ್ಟನ್ನೂ ಪ್ರತಿಮಾಡಿ ಬರೆದು ಕಳಿಸಿದ್ದೇನೆ: ಅದು ‘ಕೃತ್ತಿಕೆ’ ಹೆಸರಿನ ಸಾನೆಟ್ಟುಗಳ ಸಂಕಲನದಲ್ಲಿ ‘ಮಾಯೆ-ಮುಕ್ತಿ’ ಎಂದಿದೆ:

ಮರುಭೂಮಿ ಮಾರ್ಗದಲಿ, ವೈರಾಗ್ಯ ಸಾಧನದಿ
ಮುಕ್ತಿ? ನಾನದನೊಲ್ಲೆ! ಅದು ನನ್ನ ಪಥವಲ್ಲ,
ರಸತಪಸ್ಸಿನ ಕವಿಯ ದರ್ಶನದ ಮತವಲ್ಲ.
ಸೌಂದರ‍್ಯ ಮಾಧುರ‍್ಯ ಸಂಮ್ಮೋಹ ನಂದನದಿ,
ಮಾಯಾ ಜಗತ್ತಿನ ಸಹಸ್ರಾರು ಬಂಧನದಿ,
ಮಳೆಬಿಲ್ಲಿನಲಿ ಬಣ್ಣಗಳು ರಮಿಸುವಂದದಲಿ
ನಲಿಯುವೆನು ಹಾಸುಹೊಕ್ಕಾಗಿ. ಆನಂದದಲಿ
ಬಂಧನದ ನಾಡಿಯಲಿ ಹರಿಯುತಿದೆ ಮುಕ್ತಿನದಿ!

ತ್ಯಾಗ ತಾನೊಂದು ಕೈ, ಭೋಗ ತಾನೊಂದು ಕೈ,
ಯೋಗಿಕವಿ ಪರಿಯೆ ರಾಗಾಲಿಂಗನಕೆ ನೀಡಿ
ಥಕಥೈ ಎಂದು ಕುಣಿದೈತಹಳು ಮುಕ್ತಿಯೈ,
ಮೈ ಮೈಯ ಕೈ ಕೈಯನಪ್ಪಿ ಚುಂಬನಗೂಡಿ
ನಿನಗೆ ಮಾಯಾ ಮೋಹದಂತೆಸೆವ ಪ್ರೇಯಸ್ಸು
ನನಗೆ ತಾಜಹುದು ಮುಕ್ತಿಯ ಪರಮ ಶ್ರೇಯಸ್ಸು!

ಹೀಗೆ ಸಂನ್ಯಾಸದ ಆದರ್ಶ ನನ್ನದಲ್ಲ ಎಂದು ತೀರ‍್ಮಾನಿಸಿದ್ದರೂ ‘ಸಂಸಾರಿ’ ಯಾಗುವ ಧೈರ‍್ಯವೂ ನನ್ನ ಕವಿಚೇತನಕ್ಕೆ ಇನ್ನೂ ಸಮನಿಸಿರಲಿಲ್ಲ. ತ್ಯಾಗ ಭೋಗಗಳ ಎರಡರ ಟಕ್ಕಾಟಿಕ್ಕಿಯ ಜೋಕಾಲಿಯಲ್ಲಿ ಆಟವಾಡುತ್ತಿತ್ತು. ಆದ್ದರಿಂದಲೆ ಶ್ರೀಗುರುವಿನ ತ್ರಿಕಾಲದರ್ಶಿಯಾದ ಮಹಾಕರುಣೆ ತಾಯಿಯ ಕ್ರೌರ್ಯದಿಂದೆಂಬಂತೆ ನನ್ನನ್ನು ನರಕಕ್ಕೆ ದಬ್ಬು ಹೆದರಿಕೆ ಹುಟ್ಟಿಸಿ, ಕುತ್ತಿಗೆ ಹಿಡಿದು ತಳ್ಳಿಬಿಟ್ಟಿತು ನಾಕದತ್ತ! ಆಶ್ರಮವಾಸಕ್ಕೆ ತಕ್ಕುದಲ್ಲದ  ಮನೋಧರ‍್ಮವನ್ನಿಟ್ಟುಕೊಂಡು ಆಶ್ರಮದಲ್ಲಿರಲು ಅದು ನನ್ನನ್ನು ಬಿಡಲಿಲ್ಲ. ನನ್ನನ್ನು ಆಶ್ರಮದಿಂದ ಹೊರಗೆ ಕಳಿಸಲು ಅದು ತನ್ನದೇ ನೆವವನ್ನೊಡ್ಡಿ ಮಾನವಾಗಿ ನನ್ನನ್ನು ದೂರಮಾಡಿತು. ಆಶ್ರಮದ ಅಧ್ಯಕ್ಷರು ನನ್ನನ್ನು ಹೊರಗೆ ಹೋಗಲು ಹೇಳುವಂತೆ ಮಾಡುವ ಬದಲಾಗಿ ನಾನೇ ಆಶ್ರಮವನ್ನು ಬಿಟ್ಟುಹೋಗುವಂತೆ ಸನ್ನಾಹವನ್ನೊಡ್ಡಿತು.

ವಿದ್ಯಾರ್ಥಿನಿಲಯದಲ್ಲಿದ್ದ ಮಲೆನಾಡಿನ ಕಡೆಯ ಹುಡುಗರು ಅತಿಶಿಸ್ತಿಗೆ ಬೇಸತ್ತು ಸ್ವಲ್ಪ ಪ್ರತಿಭಟನೆ ತೋರುವಂತೆ ವರ‍್ತಿಸಿದರು ಎಂದು ತೋರುತ್ತದೆ. ಉದಾಹರಣೆಗೆ, ಒಂದು ಸುಪ್ರಸಿದ್ಧ ಫುಟ್‌ಬಾಲ್ ಮ್ಯಚ್ ನಡೆಯುತ್ತಿದ್ದರೆ, ಮಿಡ್ಲ್‌ಸ್ಕೂಲ್ ಹೈಸ್ಕೂಲ್ ಹುಡುಗರಿರಲಿ, ಕಾಲೇಜು ಹುಡುಗರು ಕೂಡ ಆಟ ನೋಡಲು ಹೋಗಿ ಪ್ರಾರ್ಥನೆಗೆ ತಡವಾಗಿ ಬರಬಾರದು ಎಂದು ರೂಲ್ಸು ಚಲಾಯಿಸುತ್ತಿದ್ದರು ವಾರ್ಡನ್ ಸ್ವಾಮಿಜಿ. ಹೀಗೆಯೆ ಅನೇಕ ಸಣ್ಣಪುಟ್ಟ ವಿಚಾರಗಳಲ್ಲಿ ವಾರ್ಡನ್ ಸ್ವಾಮಿಗಳಿಗೂ ಹುಡುಗರಿಗೂ ತಿಕ್ಕಾಟವಾಗುತ್ತಿತ್ತು. ಮಲೆನಾಡಿನ ಹುಡುಗರೆಲ್ಲ ಗುಂಪು ಕಟ್ಟಿಕೊಂಡು ಅಶಿಸ್ತಿನಿಂದ ವರ‍್ತಿಸುತ್ತಾರೆ ಎಂದು ಅವರು ಆಶ್ರಮದ ಅಧ್ಯಕ್ಷರಿಗೆ ದೂರುಕೊಟ್ಟರು. ಹುಡುಗರು ನಮ್ಮ ಕಡೆಯವರಾದುದರಿಂದ ಅಧ್ಯಕ್ಷರು ಅವರನ್ನ ತಹಬಂದಿಗೆ ತರುವಂತೆ ನನಗೆ ಹೇಳಿದರು. ನಾನು ವಿಚಾರಿಸಲಾಗಿ, ಹುಡುಗರದ್ದು ಅಂತಹ ಪ್ರಮಾದಕರವಾದ ಅಶಿಸ್ತಾಗಿ ಕಾಣಲಿಲ್ಲ. ನಿಲಯದ ನಿಯಮಗಳನ್ನೂ ಸಮಯ ಸಂದರ್ಭಗಳನ್ನು ನೋಡಿ ಚಲಾಯಿಸಬೆಕು ಎಂಬುದು ನನ್ನ ಅಭಿಪ್ರಾಯವಾಗಿತ್ತು. ಸ್ವಾತಂತ್ರ‍್ಯವನ್ನೆಲ್ಲ ಪೂರ‍್ತಿ ಮೊಟಕುಗೊಳಿಸಿ ವಿದ್ಯಾರ್ಥಿನಿಲಯವನ್ನು ಒಂದು ರೀತಿಯ ಜೈಲನ್ನಾಗಿ ಪರಿವರ‍್ತಿಸಬಾರದು ಎಂಬುದು ನನ್ನ ಮತವಾಗಿತ್ತು. ಅದೂ ಅಲ್ಲದೆ ಕೂತರೆ ನಿಂತರೆ ಎದ್ದರೆ ಮಲಗಿದರೆ, ಪ್ರಾರ್ಥನೆ ಮಾಡಿ, ಭಜನೆ ಮಾಡಿ ಎಂದೆಲ್ಲ ಅತೀ ಧರ‍್ಮಬೋಧೆಯಿಂದ ಮಕ್ಕಳಿಗೆಲ್ಲ ‘ಅಧ್ಯಾತ್ಮ’ ವಿಚಾರದಲ್ಲಿಯೆ ತಿರಸ್ಕಾರವೂ ಜುಗುಪ್ಸೆಯೂ ಹುಟ್ಟಿಬಿಟ್ಟಿತ್ತು! ನನಗೂ ಸ್ವಲ್ಪ ಬೇಜಾರಾಗಿ ಅಂದಿನ ನನ್ನ ದಿನಚರಿಯಲ್ಲಿ, ತುಸು ಅತಿಯಾಯಿತೋ ಎಂಬಂತೆ, ಹೀಗೆ ಬರೆದಿದ್ದೇನೆ: “ಒಂದು ದೃಷ್ಟಿಯಿಂದ ನೋಡಿದರೆ,  ಪ್ರಪಂಚದ ವಿಷಯದಲ್ಲಿ ಅತೃಪ್ತಿ ಹೊಂದಿ ಅದನ್ನು ಬಿಟ್ಟ ವೈರಾಗಿಗಳು ವಿದ್ಯಾರ್ಥಿಗಳನ್ನು ತರಬಿಯತ್ತು ಮಾಡಲು ಅನರ್ಹರೆಂದೇ ತೋರುತ್ತದೆ. ಅತಿ ಧರ‍್ಮಭೋಧೆಯಿಂದ ಅದಕ್ಕೆ ವಿರುದ್ಧವಾದ ಭಾವ ಉದ್ದೀಪನವಾಗುತ್ತದೆ.”

ಈ ಒಂದು ಸಂದರ್ಭದಲ್ಲಿ, ಮೇಲುನೋಟಕ್ಕೆ ಕಾಕತಾಳೀಯವಾಗಿ ತೋರುವ ಕೆಲವು ಸಂಗತಿಗಳು ಹಸುಹೊಕ್ಕಗಿ ವ್ಯೂಹರಚನೆ ಮಾಡುತ್ತಿದ್ದಂತೆ ತೋರುತ್ತದೆ; ಹೋರಾಡುತ್ತಿದ್ದ ನನ್ನ ಮನಸ್ಸು ಮದುವೆಗೆ ಒಪ್ಪಿಗೆ ನೀಡಲು ನಿಶ್ಚಯಿಸಿರುವುದಕ್ಕೆ ಗುರುತಾಗಿದೆ, ೧೧-೭-೧೯೩೬ನೆಯ ತಾರೀಖು ಹಾಕಿರುವ ನನ್ನ ಒಂದು ಕವನ ಸಾನೆಟ್, “ಹೆಣ್ಣು!”

“ಪರಮ ಸಂಪೂರ್ಣತೆಯೆ ಕೋಮಲತೆಯೊಡಗೂಡಿ
ಸೌಂದರ‍್ಯರೂಪದಿಂದಿಳೆಗೆ  ಬರಲದೆ ಹೆಣ್ಣು
ತಾನಾಗಿ ಮೋಹಿಸುತ್ತಿದೆ. ಕಬ್ಬಗನ ಕಣ್ಣು
ರೂಪಾಗ್ನಿರಾಶಿಗೆ ಪತಂಗದಂದದೊಳೋಡಿ
ಮುಗ್ಗುತಿದೆ, ಮೃತ್ಯುಮಾಧುರ‍್ಯಕ್ಕೆ ಮನಸೋತು:
ತುಟಿ,ಬಾಯಿ, ಕಣ್ಣು, ಮೈ, ಕೆನ್ನೆ, ಹಣೆ, ಹುಬ್ಬು, ಮುಡಿ,
ಹೆದೆಯೇರ್ದ ಬಿಲ್ಲನೆದೆ, ಬಳ್ಳಿನಡು, ಮುತ್ತಿನಡಿ-
ಬ್ರಹ್ಮಶಿಲ್ಪಿಯ ಕೃತಿಗೆ ಕವಿಯ ಬಿರುದಿನ ಮಾತು!
ನಿನ್ನನುಳಿದರೆ ತಿರೆಯ ಬದುಕು ಮರುಧರೆ, ಸೊನ್ನೆ;
ಬಾಳ್ಗಿಡಕೆ ಜೀವನಂ ಹೂ ಹಣ್ಣು ಕಂಪಿಂಪು
ನೀನಲ್ತೆ, ಓ ಎನ್ನ ನೀಲಿ ಸೀರೆಯ ಕನ್ನೆ/
ಸಂಸ್ಕೃತಿಯ ರಸಿಕತೆಯ ಕಲೆಯ ಕಾವ್ಯದ ಪೆಂಪು
ನೀನಿರಲ್ಕೆಲ್ಲ ಸಾಧನೆಗೆ ನೀಂ ಫಲಸಿದ್ಧಿ!
ನೀನಿಲ್ಲದಿಹ ತಪಕಿಹುದೆ ಶುದ್ಧಿ ಮೇಣ್ ಬುದ್ಧಿ?”

ಈ ಕವನವನ್ನು ರಚಿಸಿದ ಮರುದಿನವಲ್ಲ ಅದರ ಮರುದಿನವೆ (೧೩-೭-೧೯೩೬) ನಾನು ಹೊಸಮನೆ ಮಂಜಪ್ಪಗೌಡರಿಗೆ ಒಂದು ಕಾಗದ ಬರೆದೆ, ಇಂಗ್ಲಿಷಿನಲ್ಲಿ. (ಅದು ‘ಕುವೆಂಪು ಪತ್ರಗಳು’ ಅಲ್ಲಿ ಅಚ್ಚಾಗಿದೆ) ಆ ಕಾಗದದಲ್ಲಿ, ಕೆಲವು ದಿನಗಳ ಹಿಂದೆ, ಅಂದರೆ ಬೇಸಗೆರಜೆಯಿಂದ ನಾನು ಮೈಸೂರಿಗೆ ಬರುವಾಗ ದಾರಿಯಲ್ಲಿ ಶಿವಮೊಗ್ಗದಲ್ಲಿ ಅವರೊಡನೆ ಉಳಿದಿದ್ದ ಕಾಲದಲ್ಲಿ, ಅವರು ನನ್ನ ಮದುವೆಯ ಪ್ರಸ್ತಾಪವೆತ್ತಿದಾಗೆ ನಡೆಸಿದ ಸಂವಾದದತ್ತ ಅವರ ಗಮನ ಸೆಳೆದಿದ್ದೇನೆ. ಆ ಸಂವಾದ ಸಮಯದಲ್ಲಿ ಅವರು ನಾನು ದೇವಂಗಿ ರಾಮಣ್ಣಗೌಡರ ಮಗಳು ಹೇಮಾವತಿಯನ್ನು ಏಕೆ ಮದುವೆಯಾಗಬಾರದೆಂದೂ ರಾಮಣ್ಣಗೌಡರಿಗೂ ಆ ವಿಚಾರದಲ್ಲಿ ತುಂಬ ಇಷ್ಟವಿದೆಯೆಂದೂ ಅವರ ಸೂಚನೆಯ ಮೇರೆಗೇ ತಾವು ಪ್ರಸ್ತಾಪಿಸುತ್ತಿರುವುದಾಗಿ ಹೇಳಿದ್ದರು. ನಾನು ಎಂದಿನಂತೆಯೆ ನನ್ನ ಆದರ್ಶಜೀವನೋದ್ದೇಶವನ್ನು ಕುರಿತು ಉಪನ್ಯಾಸ ಕೊಟ್ಟಿದ್ದೆನೆಂದು ತೋರುತ್ತದೆ. ಏಕೆಂದರೆ ಆ ಕಾಗದದಲ್ಲಿಯ ಮೊದಲನೆಯ ವಾಕ್ಯವೆ ಹೀಗಿದೆ:

“You remember, we had a private talk a few days ago, when you proposed my marriage. I hope, I discribed very completely the condition of my mind. You can very well appreciate that standpoint.”

ಆ ಕಾಗದದ ಪೂರ‍್ತಿಪಾಠ ಹೀಗಾಗುತ್ತದೆ ಕನ್ನಡದಲ್ಲಿ:

‘ನಿಮಗೆ ನೆನಪಿರಬಹುದು, ನೀವು ನನ್ನೊಡನೆ ಗೋಪ್ಯವಾಗಿ ಮಾತನಾಡಿದ್ದು, ನನ್ನ ಮದುವೆಯ ಪ್ರಸ್ತಾಪವೆತ್ತಿ. ನನ್ನ ಮನಸ್ಸನ್ನೆಲ್ಲ ಬಿಚ್ಚಿ ನಿಮ್ಮ ಮುಂದೆ ಇಟ್ಟಿದ್ದೇನೆಂದು ನಂಬುತ್ತೇನೆ. ನನ್ನ ದೃಷ್ಟಿಯನ್ನು ನೀವು ಮೆಚ್ಚಿದ್ದೀರಿ ಎಂದು ಭಾವಿಸುತ್ತೇನೆ.’

ಈಗ ಒಂದು ವಿಷಯ: ನಾನು ಒಂಟಿಕೊಪ್ಪಲಿನಲ್ಲಿ ಒಂದು ಜಾಗವನ್ನು ಕೊಂಡುಕೊಳ್ಳುವದರಲ್ಲಿದ್ದೇನೆ. ಅಲ್ಲಿ ಒಂದು ಚೊಕ್ಕದಾದ ಮನೆ ಕಟ್ಟಬೇಕೆಂದಿದ್ದೇನೆ. ಪ್ರಿಯ ಮಾನಪ್ಪನಿಗೂ ಆ ವಿಷಯ ತಿಳಿಸಿ ಬರೆದಿದ್ದೇನೆ. ಮನೆ ಕಟ್ಟಿದ ಮೇಲೆ, ಬಹುಶಃ ಆರು ತಿಂಗಳಲ್ಲಿ ಮುಗಿಯಬಹುದು, ಆಶ್ರಮವನ್ನು ಬಿಟ್ಟು ಅಲ್ಲಿಯೆ ಇರಬೇಕೆಂದು ಬಯಸಿದ್ದೇನೆ. ಬಹುಶಃ ನಮ್ಮ ಕಡೆಯ ವಿದ್ಯಾರ್ಥಿಗಳನ್ನು ನನ್ನೊಡನೆ ಇರುವಂತೆ ಕೇಳಿಕೊಳ್ಳಬೇಕೆಂದಿದ್ದೇನೆ, ಹಂಚಿಕೆಯಾಗಿ ಖರ್ಚು ಪ್ರತಿಯೊಬ್ಬರಿಗೂ ಕಡಮೆ ಬೀಳುವ ಆರ್ಥಿಕ ಅನುಕೂಲಕ್ಕಾಗಿ.

ಆಮೇಲೆ-ಈಗ ಬರುತ್ತದೆ ನಿಮಗೆ ಸೋಜಿಗದ ಸುದ್ದಿ-ವಧು ಒಬ್ಬಳನ್ನು  ಆರಿಸಿ ಮದುವೆಯಾಗಿ ಸಂಸಾರಿಯಾಗಬೇಕೆಂದಿದ್ದೇನೆ! ನಿಜ, ಯಾವುದರ ವಿಚಾರದಲ್ಲಿಯೂ ಇನ್ನೂ ಏನೂ ನಿಶ್ಚಯಕ್ಕೆ ಬಂದಿಲ್ಲ. ನಿಮಗೆ ತಿಳಿಸಿದ್ದೆನಲ್ಲಾ, ನನಗೆ ಬೇಕಾದವಳು ಆತ್ಮದ ಸಂಗಾತಿ, ಬರಿಯ ಒಡಲಿನ ಒಡನಾಡಿಯಲ್ಲ! ನೀವು ಮೊದಲಿನಿಂದಲೂ ನನ್ನ ಹಿತಚಿಂತಕರಾಗಿರುವುದರಿಂದ ನನ್ನ ನಿರ್ಧಾರದ ವಿಚಾರದಲ್ಲಿ ನಿಮ್ಮ ಸಲಹೆ ಅಭಿಪ್ರಾಯ ಏನೆಂದು ಕೇಳುತ್ತೇನೆ. ಈ ಸುದ್ದಿಯನ್ನು ಯಾರಿಗೂ ತಿಳಿಸಬೇಡಿ, ನಿಮ್ಮಲ್ಲಿಯೆ ಇರಲಿ. ಸುದ್ದಿ ಹೊರಗೆಡಹಿದರೆ ಕೆಲಸವೆ ಕೆಡಬಹುದು!

ಕಾಗದ ಓದಿದ ಮೇಲೆ ಎಚ್ಚರಿಕೆಯಿಂದ ನಾಶಮಾಡಿಬಿಡಿ!

ಶ್ರೀಕಂಠ ಹೇಗಿದ್ದಾನೆ?

ಮಾನಪ್ಪಗೆ ‘ನಮಸ್ಕಾರ’ ಹೇಳಿ. ನನ್ನ ಮನಸ್ಸನ್ನು ಅವನಿಗೂ ತಿಳಿಸಿದ್ದೇನೆ. ಅವನದನ್ನು ನನಗೆ ತಿಳಿಸಿರುವಂತೆ!’

ಹೊಸಮನೆ ಮಂಜಪ್ಪಗೌಡರಿಗೆ ಕಾಗದ ಬರೆದ ಮರುದಿನವೆ, ಅಂದರೆ ೧೪-೭-೧೯೩೬ನೆಯ ದಿನಾಂಕದಲ್ಲಿ, ನನ್ನ ಕವನಗಳ ಹಸ್ತಪ್ರತಿಯಲ್ಲಿ ಪದ್ಯ ಬರೆಯದೆ ಬಿಟ್ಟಿರುವ ಅದರ ಅಂಚಿನ ಖಾಲಿ ಜಾಗದಲ್ಲಿ ಈ ಟಿಪ್ಪಣಿಯಿದೆ: ‘ಇವತ್ತು ಶ್ರೀನಿ, ವಿಜಯ ಇವರಿಗೆಲ್ಲ ನಾಳೆ ವಿದ್ಯಾರ್ಥಿನಿಲಯ ಬಿಟ್ಟುಹೋಗವಂತೆ ದೇಶಿಕಾನಂದರು ಹುಕುಂ ಮಾಡಿದ್ದಾರೆ. ನಾನು ಮಾನಪ್ಪಗೆ ಕಾಗದ ಬರೆದಿದ್ದೇನೆ. ಇವೊತ್ತೆ ನಾನು ಮದುವೆಯ ವಿಚಾರವಾಗಿ ಮಂಜಪ್ಪಗೌಡರಿಗೂ ಬರೆದಿದ್ದುದು ಆಶ್ಚರ‍್ಯ!’

ಆಶ್ರಮದ ವಿದ್ಯಾರ್ಥಿ ನಿಲಯಕ್ಕೆ ಸೇರಿದ್ದ ಆ ಹುಡುಗರನ್ನೆಲ್ಲ ಮಲೆನಾಡಿನಿಂದ ಮೈಸೂರಿಗೆ ಓದಲು ಕರೆದುಕೊಂಡು ಬಂದದ್ದು ನಾನೆ. ಆದ್ದರಿಂದ ನಾನೆ ಅವರ ಕ್ಷೇಮಕ್ಕೆ ಹೊಣೆಗಾರನಾಗಿದ್ದೆ. ಆ ಹುಡುಗರು ನನ್ನನ್ನು ಆಶ್ರಯಿಸಿ ಸಲಹೆ ಕೇಳಿದರು. ಒಂದು ಮನೆಯನ್ನು ಬಾಡಿಗೆಗೆ ಗೊತ್ತುಮಾಡುವಂತೆ ಹೇಳಿದೆ. ಅದರೆ ಅವರನ್ನೆಲ್ಲ ಬಾಡಿಗೆ ಮನೆಗೆ ಕಳಿಸಿ ನಾನು ಮಾತ್ರ ಆಶ್ರಮದಲ್ಲಿರುವುದು ಸರಿಯಾಗಿ ತೋರಲಿಲ್ಲ. ಅವರೊಂದಿಗೆ ನಾನೂ ಬರುವುದಾಗಿ ಅವರಿಗೆ ಧೈರ‍್ಯ ಹೇಳಿದೆ. ಈ ಎಲ್ಲ ವಿಚಾರಗಳನ್ನು ಕುರಿತು ಮಾನಪ್ಪಗೆ ಕಾಗದ ಬರೆದೆ.

ಹವಾ ಬದಲಾವಣೆಗಾಗಿ ಬೆಂಗಳೂರಿನಲ್ಲಿದ್ದ ಅವನ ತಂದೆಯವರನ್ನು ನೋಡಲು ಬಂದಿದ್ದ ಮಾನಪ್ಪ ಮೈಸೂರಿಗೆ ಬಂದು ನನ್ನ ಜೊತೆ ಆಶ್ರಮದಲ್ಲಿಯೆ ಎರಡು ದಿನ ಇದ್ದನು. ಅವನು ಬೆಂಗಳೂರು ಆಶ್ರಮದ ಆಗಿನ ಅಧ್ಯಕ್ಷರಾಗಿದ್ದ ಸ್ವಾಮಿ ಸಿದ್ದೇಶ್ವರಾನಂದನಿಂದ ನನಗೆ ಒಂದು ಸಂದೇಶವನ್ನು ಹೊತ್ತು ತಂದಿದ್ದನು. ಅದು ಒಂದು ಸಣ್ಣ ಕಾಗದದ ರೂಪದಲ್ಲಿತ್ತು ಎಂದು ನನ್ನ ನೆನಪು. ಕುಪ್ಪಳಿ ಮನೆಯಲ್ಲಿ ಶ್ರೀರಾಮಕೃಷ್ಣ ಶತಮಾನೋತ್ಸವವನ್ನು ನೆರವೇರಿಸಿ ಕೊಟ್ಟು ಹಿಂತಿರುಗಿದ ಸ್ವಾಮೀಜಿ ಮಂಜಪ್ಪಗೌಡರೊಡನೆಯೂ ಮತ್ತು ರಾಮಣ್ಣಗೌಡರೊಡನೆಯೂ ಏನೇನು ಮಾತನಾಡಿದ್ದರೋ ನಾನರಿಯೆ. ಅಂತೂ ಅವರು ನನ್ನ ಬದುಕಿನ ಶ್ರೇಯಸ್ಸು ಸಂಸಾರಿಯಾಗುವುದರಲ್ಲಿದೆ ಎಂದು ನಿಶ್ಚಯಿಸಿಕೊಂಡರೆಂದು ತೋರುತ್ತದೆ. ದೇವಂಗಿಯ ಮನೆತನ ತುಂಬ ದೊಡ್ಡ ಮನೆತನ, ನೀನು ಮಾನಪ್ಪನ ತಂಗಿಯನ್ನೇಕೆ ಮದುವೆಯಾಗಬಾರದು ಎಂಬರ್ಥದಲ್ಲಿ ಕಾಗದ ಬರೆದಿದ್ದರು! ನನ್ನನ್ನು ಶ್ರೀರಾಮಕೃಷ್ಣ ಪರಮಹಂಸರ ಅಂತರಂಗ ಶಿಷ್ಯರಾಗಿದ್ದ ಸ್ವಾಮಿ ಶಿವಾನಂದರಲ್ಲಿಗೆ ಕರೆದೊಯ್ದು ಅವರಿಂದ ದೀಕ್ಷೆ ಕೊಡಿಸಿದ್ದ ಸ್ವಾಮೀಜಿಯಿಂದ ಈ ಸಲಹೆ ನಾನು ಸಂಸಾರಿಯಾಗುವಂತೆ! ಹೆಣ್ಣನ್ನೂ ಅವರೇ ಗೊತ್ತು ಮಾಡಿ! ಅದೂ, ನಾನು ಮಂಜಪ್ಪಗೌಡರಿಗೆ ಮದುವೆಯಾಗುವ ಅಭಿಲಾಷೆಯನ್ನು ವ್ಯಕ್ತಪಡಿಸಿ ಬರೆದ ಕಾಗದದ ಅರಿವು ಏನೂ ಇಲ್ಲದೆಯೆ! ಬಹುಶಃ ನನ್ನ ಕಾಗದ ಇನ್ನೂ ಮಂಜಪ್ಪಗೌಡರಿಗೆ ತಲುಪಿರಲಿಕ್ಕಿಲ್ಲವೊಏನೊ? ನಮ್ಮನ್ನೆಲ್ಲ ಮೀರಿದ ಶಕ್ತಿ ಒಡ್ಡಿದೆ ವ್ಯೂಹವೋ?-’ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಕೊಟ್ಟದ್ದೂ ಹಾಲು ಅನ್ನ!’ ನಾನು ಮಾನಪ್ಪಗೆ ನನ್ನ ಸಮ್ಮತಿಯನ್ನು ಸೂಚಿಸಿ ಕಳುಹಿಸಿದೆನೊ ಅಲ್ಲವೊ ಮಂಜಪ್ಪಗೌಡರ ಕಾಗದವೂ ಬಂತು: ನಾನು ಹೇಮಾವತಿಯನ್ನೇ ವರಿಸಬೇಕೆಂಬ ಆದೇಶ ಹೊತ್ತು: ’ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು!’

’ಮನೆ ಕಟ್ಟಿ ನೋಡು! ಮದುವೆ ಮಾಡಿ ನೋಡು!’ ಎಂಬ ಗಾದೆಯಿದೆ. ಆ ಎರಡರಲ್ಲಿ ಒಂದೊಂದನ್ನೆ ಮಾಡಿ ನಿಭಾಯಿಸುವುದು ಕಷ್ಟವಾಗಿರುವಾಗ ಎರಡನ್ನೂ ಒಟ್ಟಿಗೆ ಮಾಡುವುದು ತುಂಬ ಕಷ್ಟ ಎಂಬರ್ಥದಲ್ಲಿ. ಆದರೆ ನಾನು, ಆ ಒಂದೊಂದಕ್ಕೂ ಹೆದರಿ ಹಿಂಜರಿಯುತ್ತಿದ್ದ ನಾನು, ಎರಡನ್ನೂ ಒಟ್ಟಿಗೆ ಕೈಗೊಳ್ಳುವಂತೆ ವಿಧಿ ನಿಯಂತ್ರಿಸುವಂತೆ ತೋರುತಿತ್ತು.

ಆಗತಾನೆ ಒಂಟಿಕೊಪ್ಪಲಿನ ಪಶ್ಚಿಮ ದಿಕ್ಕಿಗಿದ್ದ ಹೊಲಗಳನ್ನೆಲ್ಲ ಪುರಸಭೆ ಕೊಂಡುಕೊಂಡು ಮನೆ ಕಟ್ಟುವ ಜಾಗಗಳನ್ನಾಗಿ ಪರಿವರ್ತಿಸಿ ತುಂಬ ಸುಲಭ ಬೆಲೆಗೆ ಮಾರುತ್ತಿತ್ತು. ಒಂದು ಚದರಕ್ಕೆ ಎರಡಾಣೆಗೊ ಮೂರಾಣೆಗೊ! ಆಶ್ರಮದ ಸ್ವಾಮಿಗಳೆ ನನಗೂ ಹೇಳಿದ್ದರು ಒಂದು ಜಾಗ ಕೊಂಡುಕೊಳ್ಳುವುದಕ್ಕೆ. ’ನನಗೇತಕ್ಕೆ ಜಾಗ’ ಎಂದಾಗ ಕೊಂಡುಕೊಂಡಿರು, ಮುಂದೆ ಏತಕ್ಕಾದರೂ ಉಪಯೋಗಿಸಬಹುದು’. ಎಂದಿದ್ದರು. ನಾನೂ ಅರ್ಜಿ ಹಾಕಿದ್ದೆ. ಆದರೆ ಈಗ ಆಶ್ರಮ ಬಿಡುವ ಮತ್ತು ಮದುವೆಯಾಗುವ ನಿಶ್ಚಯ ಮಾಡಿದ ಮೇಲೆ ಅದು ಹಿಂದಿನಂತೆ ಉದಾಸೀನದ ಪ್ರಶ್ನೆಯಾಗಲಿಲ್ಲ. ನನಗೆ ಯಾವ ವಿಚಾರದಲ್ಲಿಯೂ ಸಂಬಂಧಪಟ್ಟ ಅಧಿಕಾರಿಗಳನ್ನು ನೋಡುವುದಾಗಲಿ ಕಛೇರಿಗಳಿಗೂ ಗುಮಾಸ್ತರ ಬಳಿಗೂ ಅಲೆಯುವುದಾಗಲಿ ಒಂದಿನಿತೂ ಗೊತ್ತಿರಲಿಲ್ಲ. ಅರ್ಜಿ ಹಾಕ್ಕುವಾಗಲೂ ನನಗೆ ನೆರವಾಗಿದ್ದದ್ದು ನಾ.ಕಸ್ತೂರಿ. ಅವರ ಸಂಗಡವೆ ನಾನು ಮುನಿಸಿಪಲ್ ಆಫೀಸಿಗೆ ಹೋಗಿ ಅರ್ಜಿ ಗುಜರಾಯಿಸಿದ್ದೆ ಕೆಲವು ತಿಂಗಳ ಹಿಂದೆ. ಈಗ ಆಶ್ರಮದ ಅಧ್ಯಕ್ಷರನ್ನೆ ಆಶ್ರಯಿಸಿ, ಅವರ ಪ್ರಭಾವದಿಂದ ಜಾಗ ಪಡೆಯಲು ಮುಂದಾದೆ. ಸ್ವಾಮಿ ದೇಶಿಕಾನಂದರನ್ನು ಮುಂದೆ ಮಾಡಿಕೊಂಡು, ಮದುವೆಯಾಗಲು ನಿಶ್ಚಯಿಸಿ ಮಂಜಪ್ಪಹೌಡರಿಗೆ ಕಾಗದ ಬರೆದ ಹತ್ತೆ ದಿನಗಳೊಳಗೆ, ೨೩-೭-೧೯೩೬ ತಾರೀಖು, ಮುನಿಸಿಪಲ್ ಆಫೀಸಿಗೆ ಪ್ರೆಸಿಡೆಂಟರನ್ನೆ ಕಂಡು ಮಾತನಾಡಲು ಹೋದೆವು. ಆಹ ಪ್ರೆಸಿಡೆಂಟ್ ಆಗಿದ್ದವರು ಎಂ.ಎ.ಶೀನಿವಾಸನ್. ಅವರದು ತೋರಿಕೆಯ ವಿನಯ, ತೋರಿಕೆಯ ದಾಕ್ಷಿಣ್ಯ. ನನಗೆ ಮನೆಕಟ್ಟಲು ಜಾಗ ಕೊಡುವ ವಿಚಾರದಲ್ಲಿ ತುಂಬ ಸಹಾನುಭೂತಿ ತೋರಿದರು. ಆದರೆ ಇನ್ನೇನೊ ಒಂದು ಆಶ್ರಮಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಸ್ವಾಮಿಜಿಗೂ ಅವರಿಗೂ ಮಾತು ಬೆಳೆದು, ತುಸು ಬಿಸಿಬಿಸಿಯಾಗಿ ಮಾತಾಡಿಬಿಟ್ಟರು. ಆಗಲೆ ನನಗೆ ಗೊತ್ತಾದದ್ದು, ಅವರ ತೋರಿಕೆಯ ವಿನಯ ದಾಕ್ಷಿಣ್ಯಗಳ ಹಿಂದೆ ಎಂತಹ ರಾಜಸ ಅಹಂಕಾರ ಅಡಗಿದೆ ಎಂದು. ಏನಾದರಾಗಲಿ, ನನಗಂತೂ ಮನೆ ಕಟ್ಟಲು ಜಾಗ ದೊರೆಯುವಂತಾಯಿತು.

ಅದನ್ನೆಲ್ಲ ನೆನೆದೇ ಸ್ವಾಮಿ ದೇಶಿಕಾನಂದಜಿ ತರುವಾಯ ಹೇಳುತ್ತಿದ್ದರಂತೆ: ’ಎಲ್ಲರೂ ದೂರುತ್ತಿದ್ದರು ನಮ್ಮನ್ನು, ಶ್ರೀರಾಮಕೃಷ್ಣಾಶ್ರಮದ ಸಂನ್ಯಾಸಿಗಳು ಪುಟ್ಟಪ್ಪನಿಗೆ ಕಾವಿ ಉಡಿಸಿ ಸಂನ್ಯಾಸಿಯನ್ನಾಗಿ ಮಾಡಿಬಿಡುತ್ತಾರೆ ಎಂದು. ಹಾಗೇನೂ ಮಾಡಲಿಲ್ಲ ನಾವು: ಮನೆ ಕಟ್ಟಿಸಿ, ಮದುವೆ ಮಾಡಿಸಿ ಕಳಿಸಿಕೊಟ್ಟೆವು’ ಎಂದು!

ಅಷ್ಟರಲ್ಲಿ ಹುಡುಗರೆಲ್ಲ ಸೇರಿ ಒಂಟಿಕೊಪ್ಪಲಿನ ಹೊಸ ಬದಾವಣೆಯಲ್ಲಿಯೆ ಒಂದು ಮನೆ ಬಾಡಿಗೆಗೆ ಗೊತ್ತು ಮಾಡಿದರು. ತಿಂಗಳ ತುದಿಗೆ ಅಲ್ಲಿಗೆ ಹೋಗುವುದೆಂದೂ ನಿರ್ಣಯಿಸಿದರು, ಏಕೆಂದರೆ ಒಂದು ತಿಂಗಳ ಖರ್ಚನ್ನು ಸರಿಯಾಗಿ ಲೆಕ್ಕಹಾಕಿ ಆಶ್ರಮಕ್ಕೆ ಕೊಡಲು ಅನುಕೂಲವಾಗುತ್ತದೆ ಎಂದು!

ನನ್ನ ಹದಿಮೂರನೆಯ ತಾರೀಖಿನ – ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದ-ಕಾಗದಕ್ಕೆ ಮಂಜಪ್ಪಗೌಡರು ತಡಮಾಡದೆ ಉತ್ತರ ಬರೆದರು. ಅದರಲ್ಲಿ ಕುಮಾರಿ ಹೇಮಾವತಿಯನ್ನೇ ನಾನು ಮದುವೆಯಾಗಬೇಕು ಎಂಬುದನ್ನು ಆಲೋಚನೆಗಾಗಲಿ ಜಿಜ್ಞಾಸೆಗಾಗಲಿ ಅವಕಾಶವಿಲ್ಲದ ದೃಢನಿಶ್ಚಯ ಧ್ವನಿಯಲ್ಲಿ ಬರೆದಿದ್ದರು. ನನ್ನ ಮಾನಸಿಕ ಸ್ಥಿತಿಯೂ ತುಂಬ ತುರ್ತು ಪರಿಸ್ಥಿತಿಯಲ್ಲಿದ್ದು ಯಾವ ಮೀನ ಮೇಷಕ್ಕೂ ಅಲ್ಲಿ ಅವಕಾಶವಿರಲಿಲ್ಲ. ಒಡನೆಯೆ ನನ್ನ ಒಪ್ಪಿಗೆ ಸೂಚಿಸಿ ಕಾಗದ ಬರೆದೆ: ೨೬-೭-೧೯೩೬ರಲ್ಲಿ, ಇಂಗ್ಲಿಷಿನಲ್ಲಿ.

ನಿಮ್ಮ ಕಾಗದ ತಲುಪಿದೆ. ಮಾನಪ್ಪ ಇಲ್ಲಿಗೆ ಬಂದಿದ್ದ. ಇಲ್ಲಿಯೆ ನನ್ನೊಡನೆ ಎರಡು ದಿನ ಇದ್ದ. ಈಗ ಮತ್ತೆ ಬೆಂಗಳೂರಿಗೆ ಹೋಗಿದ್ದಾನೆ. (ಸ್ವಾಮಿಜಿಗೆ ವಿಚಾರ ತಿಳಿಸಲೆಂದೂ ಮತ್ತು ಅಲ್ಲಿಯ ಹವಾ ಬದಲಾವಣೆಗೆಂದು ಸಂಸಾರದೊಡನೆ ಇದ್ದ ತನ್ನ ತಂದೆಯವರಿಗೂ ನನ್ನ ಸಮ್ಮತಿಯನ್ನು ತಿಳಿಸಲೆಂದೂ!) ಇಷ್ಟರಲ್ಲಿಯೆ ಅವನು ಶಿವಮೊಗ್ಗೆಗೆ ಬಂದಿರಲೂ ಬಹುದು….(ಮಾನಪ್ಪನ ಮದುವೆಯ ವಿಚಾರವಾಗಿಯೂ ಉದ್ದ ಒಕ್ಕಣೆ ಇದೆ.)….

ಹೇಮಾವತಿಯನ್ನು ಮದುವೆಯಾಗುವ ನಿಮ್ಮ ಸಲಹೆಯನ್ನು ನಾನು ಹೃತ್ಪೂರ್ವಕ ಹಿಗ್ಗಿ ಒಪ್ಪಿದ್ದೇನೆ.

’ಇವೊತ್ತು ನಾನು ಮನೆ ಕಟ್ಟುವ ಜಾಗವನ್ನು ಕೊಂಡುಕೊಳ್ಳುತ್ತಿದ್ದೇನೆ. ಅದಕ್ಕೆ ಸುಮಾರು ೫೦೦ ರೂಪಾಯಿ ಬೀಳುತ್ತದೆ. ಎರಡು ವರ್ಷದ ಸಂಬಳ ಮೊತ್ತ ನನಗೆ ಸರಕಾರದಿಂದ ಸಾಲವಾಗಿ ದೊರೆಯುತ್ತದೆ. ಮನೆ ಕಟ್ಟಿದ ತರುವಾಯ ಮದುವೆಯಾಗಿ ಅಲ್ಲಿ ಸಂಸಾರ ಹೂಡಬೇಕೆಂದಿದ್ದೇನೆ.

(ವಾಸ್ತವವಾಗಿ, ಮನೆ ಕಟ್ಟಿ ಮುಗಿಯುವ ಮುನ್ನವೆ ಮದುವೆಯಾದದ್ದು!)