ಕುಮಾರಿ ಹೇಮಾವತಿಯನ್ನು ಮದುವೆಯಾಗಲು ಒಪ್ಪಿದ ನನ್ನ ಚೇತನಕ್ಕೆ ಬೆಟ್ಟಬೇಸಗೆಯ ಉರಿಬಿಸಿಲಿನ ತಾಪಕ್ಕೆ ಬೆಂದು ಬಾಯಾರಿದ ನೆಲಕ್ಕೆ ಬಿರುಮಳೆ ಹೊಯ್ದಂತಾಯ್ತು! ಜೀವ ತಾನು ಹೊರಲಾರದೆಯೆ ಹೊತ್ತಿದ್ದ ಒಂದು ಮಹಾ ಭಾರವನ್ನಿಳಿಸಿ, ಉಸ್ಸೆಂದು ಸುಯ್ದು, ಸಂತೋಷದ ತೊಟ್ಟಿಲಲ್ಲಿ ಆನಂದಮಯ ಶಿಶುನಿದ್ರೆಗೆ ಅದ್ದಿ ಹೋಯ್ತು!

೨೬-೭-೧೯೩೬ರಲ್ಲಿ ಹೇಮಾವತಿಯನ್ನು ವರಿಸಬೇಕೆನ್ನುವ ಮಂಜಪ್ಪಗೌಡರ ಸಲಹೆಗೆ ಒಪ್ಪಿಗೆಯಿತ್ತು ಕಾಗದ ಬರೆದ ಮರುದಿನವೆ, ಪರಧರ್ಮದ ಮುಳ್ಳಿನ ಹಾಸಿಗೆಯಿಂದ ಸ್ವಧರ್ಮದ ಹತ್ತಿಯ ಮೆತ್ತೆಗೆ ಚಿಮ್ಮಿ ನೆಗೆದಿದ್ದ ನನ್ನ ಚೇತನದ ಮಹೋಲ್ಲಾಸಕ್ಕೆ ರಸಸಾಕ್ಷಿಯಾಗಿದೆ, ನಾನು(೩೧-೭-೧೯೩೬) ರಚಿಸಿದ ಒಂದು ಸಾನೆಟ್ಟು. ಅದರ ಶೀರ್ಷಿಕೆ ’ಪ್ರೇಮಕ್ಕೆ’ ಎಂದಿದೆ, ಅದು ’ಕೃತ್ತಿಕೆ’ ಕವನಸಂಗ್ರಹದಲ್ಲಿ ಅಚ್ಚುಗೊಂಡಿದೆ. ಅದನ್ನು ಬರೆದಿರುವ ಹಸ್ತಪ್ರತಿಯ ಹಾಳೆಯ ನೆತ್ತಿ ಅಂಚಿನಲ್ಲಿ “ನಾಳೆ ಆಶ್ರಮ ಬಿಟ್ಟು ಬೇರೆ ಮನೆಗೆ ಹೋಗುವುದು!” ಎಂಬ ಸಣ್ಣಕ್ಕರದ ಟಿಪ್ಪಣಿಯೊಂದು ಮುಳ್ಳಿನ ಹಾಸಗೆಯಿಂದ ಹತ್ತಿಯ ಮೆತ್ತೆಗೆ ನೆಗೆಯುವ ಹಿಗ್ಗಿಗೆ ಸಾಕ್ಷೀಸ್ತಂಭದಂತಿದೆ! ಅದೇ ಪುಟದ ಅಡಿಯಂಚಿನಲ್ಲಿ ’ಜ್ಞಾನದೇವತೆಗೆ ಶ್ರದ್ಧೆ ಹೃದಯವಾದರೆ ಸಂದೇಹವು ಶ್ವಾಸಕೋಶವಾಗಿದೆ. ಬುದ್ಧಿಯ ಜೀವನಕ್ಕೆ ಶ್ರದ್ಧೆ ಸಂದೇಹಗಳೆರಡೂ ಸಜೀವವಾಗಿರಬೇಕು.’ ಎಂಬ ಒಂದು ಟಿಪ್ಪಣಿಕೆಯೂ ಇದೆ.

ಪ್ರೇಮಕ್ಕೆ
ಕಬ್ಬಿಗಗೆ ನಿನ್ನೆದೆಯೆ ಕಟ್ಟಕಡೆಯಾಶ್ರಮಂ
ಮೇಣುತ್ತಮಾಶ್ರಯಂ. ಗಂಧಶೀತಲ ವಾರಿ
ಬೆಂದು ಬಂದೆನಗೆ ನೀಂ. ಮಿಕ್ಕುದೆಲ್ಲಂ ದಾರಿ,
ಮನೆಯಲ್ತು. ಸಾಲ್ಗುಮಿನ್ನೆನಗಾ ವೃಥಾ ಶ್ರಮಂ
ಮನಸಿನಾ ವ್ಯರ್ಥ ವಿಚಿಕಿತ್ಸೆ! ವಿಜ್ಞಾನಕ್ಕೆ
ತತ್ತ್ವಕ್ಕೆ ಕಾವ್ಯಕ್ಕೆ ಪ್ರಕೃತಿಸೌಂದರ್ಯಕ್ಕೆ
ಭೋಗಕ್ಕೆ ತ್ಯಾಗಕ್ಕೆ ಮೇಣ್ ಬ್ರಹ್ಮಚರ್ಯಕ್ಕೆ
ಪ್ರೇರಕಂ ಪರಮಗತಿ ಸರ್ವಮುಂ ನೀನಕ್ಕೆ!
ಪ್ರೇಮಾವತಾರಿಣಿಯೆ, ಓ ನನ್ನ ಹೇಮಾಕ್ಷಿ,
ನಿನ್ನಪ್ಪುಗೆಯೆ ನನಗೆ ಸತ್ಯಸ್ಯಸತ್ಯಮಂ
ತೋರ್ಪುದಾನಂದಮಂ, ಮಿಕ್ಕೆಲ್ಲ ವಿಥ್ಯಮಂ
ವಿಸ್ಮತಿಯೊಳದ್ದಿಲ್ಲಗೈದು! ಪ್ರೇಮವೆ ಸಾಕ್ಷಿ
ಪರಮಾತ್ಮನಿರವಿಂಗೆ ಮೇಣವನನುಭವಕ್ಕೆ:
ನನ್ನ ಸಾಧನಮನಿತು ನಿನ್ನ ನೈವೇದ್ಯಕ್ಕೆ!

ಕುಮಾರಿ ಹೇಮಾವತಿ ಇನ್ನೂ ಶಾಸ್ತ್ರೀಯವಾಗಿ ನನ್ನ ಹೆಂಡತಿಯಾಗದಿದ್ದರೂ ಕವಿಯ ಕಾತರೋತ್ಸಾಹ ಅವಳನ್ನೂ ’ಹೇಮಾಕ್ಷಿ’ ಎಂದು ಹೆಸರಿಸಲೂ “ನಿನ್ನ ಆಲಿಂಗನವೆ ನನಗೆ ಸತ್ಯವನ್ನು ತೋರಿ, ಆನಂದವನ್ನಿತ್ತು, ಉಳಿದೆಲ್ಲ ಮಿಥ್ಯೆಗಳಿಂದಲೂ ನನ್ನನು ಪಾರುಮಾಡುತ್ತದೆ!” ಎಂದು ಹೇಳಲು ಒಂದಿನಿತೂ ಸಂಕೋಚದಿಂದ ಹಿಂಜರಿದಿಲ್ಲ! ನಲ್ಲೆಯೊಬ್ಬಳ ಆವಶ್ಯಕತೆಯ ಉತ್ಕಟತೆ ಎಂತಹ ವಿಷಮ ಮಟ್ಟಕ್ಕೇರಿತ್ತು ಎಂಬುದನ್ನು ಬಹಿರಂಗಗೊಳಿಸುತ್ತದೆ ಆ ಕವನ!

ತಟಕ್ಕನೆಯೊ ಎಂಬಂತೆ ಅದುವರೆಗೂ ಅಪರಿಚಿತ ದೂರವಸ್ತುವಾಗಿದ್ದ ಕುಮಾರಿ ಹೇಮಾವತಿಯ ಮೇಲೆ ಉಕ್ಕಿಹರಿದಂತಿರುವ ನನ್ನ ಒಲವಿನ ಹೊನಲನ್ನು ಚಿತ್ರಿಸಿರುವ ಕವನಗಳನ್ನೋದಿಯೋ ಏನೋ ಕನ್ನಡ ಜನತೆ ನನ್ನ ಅವಳ ವಿವಾಹಪೂರ್ವ ಸಂಬಂಧದ ಮೇಲೆ ಏನೇನೋ ಕಟ್ಟುಕತೆಗಳನ್ನು ಕಟ್ಟಿ ರಸರಂಜಿತಗೊಳಿಸಿರುವುದನ್ನು ನಾನು ಕೇಳಿದ್ದೇನೆ. ಅಲ್ಲದೆ, ಕೆಲವು ಪ್ರಶಂಸೆಯ ಲೇಖನಗಳಲ್ಲಿಯೂ ಓದಿ ಬೆರಗಾಗಿದ್ದೇನೆ! ನನ್ನ ಅವಳ ವಿವಾಹವು ಒಂದು ರೊಮಾನ್ಸ್ ಎಂಬಂತೆ ಕೆಲವರು ಚಿತ್ರಿಸಿಕೊಂಡಿದ್ದಾರೆ. ಅಂದರೆ, ವಿವಾಹಪೂರ್ವದಲ್ಲಿ ನಾವಿಬ್ಬರೂ ಒಲಿದು ನಲಿದು ಮಾತಾಡಿ ಒಬ್ಬರನ್ನೊಬ್ಬರು ಒಪ್ಪಿದ್ದೆವೆಂಬಂತೆ! ನಾವು ಮದುವೆಯಾಗಲು ಹಿರಿಯರು ಒಪ್ಪದಿದ್ದರೆ ಆತ್ಮಹತ್ಯೆ ಮಾಡಿಕೊಳ್ಲಲೂ ಸಿದ್ಧರಾಗಿದ್ದೆವು ಎಂಬಂತೆ! ಅಥವಾ ಒಟ್ಟಿಗೆ ಓಡಿಹೋಗಲೂ ಯತ್ನಿಸಿದ್ದೆವೋ ಎಂಬಂತೆ!

ಬರೀ ಸುಳ್ಳು: ಕಾಗಕ್ಕ ಗುಬ್ಬಕ್ಕನ ಕತೆ!

ನನ್ನ ಮತ್ತು ಹೇಮಾವತಿಯ ಮದುವೆಗಿಂತಲೂ ಅರಂಜಿತವೂ ನೀರಸವೂ ಸಂಪ್ರದಾಯ ಸಾಮಾನ್ಯವೂ ಆಗಿರುವ ಘಟನೆ ಮತ್ತೊಂದಿರಲಾರದು ಎಂದು ಹೇಳಿ, ಒಮ್ಮೆಗೇ ನಮ್ಮ ವಿಷಯಕವಾದ ರೊಮಾನ್ಸ್ ಭ್ರಾಂತಿಯನ್ನು ಸರ್ವರ ಮನಸ್ಸಿನಿಂದಲೂ ನಿರಸನಗೊಳಿಸಲು ಬಯಸುತ್ತೇನೆ.

ಈ ಕಟ್ಟುಕತೆಗೆ ಮೂಲ ಬಹುಶಃ, ನಾನು ಈ ’ ನೆನಪಿನ ದೋಣಿಯಲ್ಲಿ’ಯೆ ಹಿಂದೆ ಚಿತ್ರಿಸಿರುವಂತೆ, ಅವಳು ಹುಟ್ಟಿದ ಹನ್ನೊಂದನೆಯ ದಿನ ಅವಳನ್ನು ತೊಟ್ಟಿಲಿಗೆ ಹಾಕುವ ಸಮಾರಂಭಕ್ಕೆ, ಇಂಗ್ಲಾದಿಗೆ ಬಂದಿದ್ದ ನಾನು, ಅವಳ ತಂದೆಯವರೊಡನೆ ಅವಳ ತಾಯಿಯ ತವರುಮನೆಗೆ ನಂಬಳಕ್ಕೆ ಹೋಗಿದ್ದೆನೆಂಬುದಕ್ಕಾಗಿಯೂ, ಮತ್ತು ಅವಲ ತಂದೆಯವರು ಅವಳಿಗೊಂದು ಹೆಸರಿಡಲು ನನ್ನನ್ನು ಕೇಳಿದಾಗ ನಾನು ’ಹೇಮಾವತಿ’ ಎಂಬ ಹೆಸರನ್ನು ಸೂಚಿಸಿದ್ದೆನೆಂಬುದಕ್ಕಗಿಯೂ ಹುಟ್ಟಿಹಸರಿಸಿ ಹಬ್ಬಿರಬೇಕು! ಅಷ್ಟನ್ನೆ ಅತಿರಂಜನೆಗೊಳಿಸಿ ಒಬ್ಬ ಲೇಖಕಿ ನಾನು ಹೇಮಾವತಿಯನ್ನು ಅವಳು ಚಿಕ್ಕವಳಿರುವಾಗ ಎತ್ತಿ ಮುದ್ದಿಸಿ ಆಡಿಸಿದ್ದೆನೆಂದೂ ಬರೆದಿರುವುದನ್ನು ಓದಿ, ಹೇಮಾವತಿಗೂ ತೋರಿಸಿ, ತುಂಬಾ ನಕ್ಕಿದ್ದೇವೆ!

ಆದರೆ ವಾಸ್ತವಾಂಶವೆ ಬೇರೆ: ಅವಳನ್ನು ತೊಟ್ಟಿಲಿಗೆ ಹಾಕುವ ಮನೆಗೆ ನಾನು ಹೋಗಿದ್ದಾಗಲೂ ಅವಳನ್ನು ನೋಡಿಯೆ ಇರಲಿಲ್ಲ. ತರುವಾಯವೂ ಅವಳನ್ನು ಕಣ್ಣಿಟ್ಟು ನೋಡಿದ್ದು ಅವಳನ್ನು ಮದುವೆಯಾದ ಅನಂತರವೆ! ಈ ನಡುವೆ, ಅಂದರೆ ಹದಿನಾರು ವರ್ಷಗಳ ಅಂತರ, ಅವಳಿಗೆ ನಾನು ಮತ್ತು ನನಗೆ ಅವಳು ಇದ್ದರೂ ಒಂದೇ ಇರದಿದ್ದರೂ ಒಂದೇ ಎಂಬಂತಿದ್ದೆವು. (ನಾವು ಮದುವೆಯಾಗುವಾಗ ಅವಳಿಗೆ ನನ್ನ ವಯಸ್ಸಿನ ಅರ್ಧ ವಯಸ್ಸು: ೧೯೦೪ ರಲ್ಲಿ ಹುಟ್ಟಿದ ನನಗೆ ೧೯೩೭ರಲ್ಲಿ ೩೨ ವಯಸ್ಸು; ೧೯೨೧ರಲ್ಲಿ ಹುಟ್ಟಿದ ಅವಳಿಗೆ ನನ್ನ ವಯಸ್ಸಿನಲ್ಲಿ ಅರ್ಧ ಹದಿನಾರು!)

ಕುಪ್ಪಳಿಯ ಮನೆತನಕ್ಕೂ ದೇವಂಗಿಯ ಮನೆತನಕ್ಕೂ ತುಂಬಾ ನಿಕಟ ಬಾಂಧವ್ಯವಿದ್ದುದರಿಂದಲೂ ಮತ್ತು ದೇವಂಗಿಯ ವೆಂಕಟಯ್ಯ, ಹಿರಿಯಣ್ಣ, ಮಾನಪ್ಪ ಮೊದಲಾದವರು ಎಳೆತನದ ಗೆಳೆಯರಾಗಿದ್ದುದರಿಂದಲೂ ಅವರ ಮನೆಯವರು ನಮ್ಮಲ್ಲಿಗೆ ಮತ್ತು ನಮ್ಮ ಮನೆಯವರು ಅವರಲ್ಲಿಗೆ ಹೋಗಿ ಬರುವುದು ಅತ್ಯಂತ ದೈನಂದಿನ ಸಂಗತಿ ಎಂಬಷ್ಟರ ಮಟ್ಟಿಗಿತ್ತು. ನಾನು ಮೈಸೂರಿಗೆ ಓದುವುದಕ್ಕೆ ಬಂದ ಮೇಲೆಯೂ ಪ್ರತಿ ರಜಾಕಾಲದಲ್ಲಿ ಮನೆಗೆ ಹೋಗುವಾಗಲೆಲ್ಲ ಶಿವಮೊಗ್ಗದಲ್ಲಿದ್ದ ದೇವಂಗಿಯವರ ಅಡಿಕೆ ಮಂಡಿ ಮತ್ತು ಮನೆಗಳಲ್ಲಿ ಕೆಲವು ದಿನವಾದರೂ ಉಳಿದು ಆತಿಥ್ಯವನ್ನೂ ಬಾಂಧವ್ಯವನ್ನೂ ಸವಿದೇ ಮುಂದಕ್ಕೆ  ಪಯಣಗೈದು ಇಂಗ್ಲಾದಿಯಲ್ಲಿ ಒಂದೆರಡು ದಿನಗಳಾದರೂ ಇದ್ದು ಮತ್ತೆ ಕುಪ್ಪಳಿಗೆ ಹೋಗುತ್ತಿದ್ದುದು ವಾಡಿಕೆಯಾಗಿತ್ತು. ಆದ್ದರಿಂದ ಅನಿವಾರ್ಯವಾಗಿ ಅವರ ಮನೆಯ ಹುಡುಗರನ್ನೆಂತೊ ಅಂತೆ ಹುಡುಗಿಯರನ್ನೂ ನೋಡುತ್ತಿರಲಿಲ್ಲ ಎಂದಲ್ಲ. ಹಾಗೆಯೆ ಹೇಮಾವತಿಯನ್ನೂ ನೋಡುತ್ತಿದ್ದಿರಬಹುದು. ಆದರೆ ನಾನು ಗಮನಿಸುವಂತಹ ಯಾವ ಆಕರ್ಷಣೆಯ ವಿಶೇಷತೆಯೂ ಅವಳಲ್ಲಿ ನನಗೆ ಕಂಡಿರಲಿಲ್ಲ. ಒಮ್ಮೆ, ಆಗಿನ್ನೂ ಅವಳು ತರುಣಿಯಾಗಿರಲಿಲ್ಲ, ತಾರುಣ್ಯದ ಹೊಸ್ತಿಲಿಗೆ ಕಾಲಿಡುತ್ತಿದ್ದಳಷ್ಟೆ, ಉಡುಗೆ ಇನ್ನೂ ಲಂಗವಾಗಿಯೆ ಇದ್ದು ಸೀರೆಯ ಸ್ಥಿತಿಗೆ ಏರಿರಲಿಲ್ಲ,-ಒಮ್ಮೆ ನಾನು ಬೇಸಗೆಯ ರಜೆಯಲ್ಲಿ ಕುಪ್ಪಳಿಯಿಂದ ಇಂಗ್ಲಾದಿಗೆ ಬಂದಿದ್ದೆ. ಅವಳೂ ಶಿವಮೊಗ್ಗದಿಂದ ತನ್ನ ಇತರ ಅಕ್ಕಂದಿರೊಡನೆ ಇಂಗ್ಲಾದಿಗೆ ಕೆಲ ದಿನಗಳ ಹಿಂದೆ ಬಂದಿದ್ದು, ಮತ್ತೆ ಒಂದು ಬೆಳಿಗ್ಗೆ ಅವರ ಕಾರಿನಲ್ಲಿ ಶಿವಮೊಗ್ಗೆಗೆ ಹೊರಟಿದ್ದಳು. ಆಗ ತೀರ್ಥಹಳ್ಳಿಯ ತುಂಗಾನದಿಗೆ ಇನ್ನೂ ಸೇತುವೆ ಆಗಿರಲಿಲ್ಲವಾದ್ದರಿಂದ ಕಾರು ಕೊಪ್ಪ ನರಸಿಂಹರಾಜಪುರಗಳ ಮಾರ್ಗವಾಗಿಯೆ ಶಿವಮೊಗ್ಗಕ್ಕೆ ಹೋಗಬೇಕಾಗಿತ್ತು. ನಾನೂ ಕುಪ್ಪಳಿಗೆ ಹೊರಟಿದ್ದೆ. ಸಾಮಾನ್ಯವಾಗಿ ಕಾಲುಹಾದಿಯಲ್ಲಿ ನಡೆದುಕೊಂಡೆ ಹೋಗುತ್ತಿದ್ದುದ್ದು ನನ್ನ ರೂಢಿ; ಆದರೆ ಮಿತ್ರ ದೇ.ರಾ.ವೆಂ. ಹೇಳಿದರು ಡ್ರೈವರಿಗೆ “ದಾರಿಯಲ್ಲಿ ಇವರನ್ನು ಕುಪ್ಪಳಿಗೆ ಬಿಟ್ಟುಹೋಗು” ಎಂದು. ಸರಿ, ನಾನು ಮುಂದಿನ ಸೀಟಿನಲ್ಲಿ ಡ್ರೈವರ್ ಪಕ್ಕದಲ್ಲಿ ಕುಳಿತೆ. ಕಾರು ಕುಪ್ಪಳಿಯ ಮನೆಯ ಹೊರ ಅಂಗಳದ ಕಣದಲ್ಲಿ ನಿಂತಿತು. ನಾನು ಇಳಿದೆ. ಹೇಮಾವತಿ ಮನೆಯೊಳಗೆ ಬಂದು, ಒಳಗಿನವರನ್ನು ಕಂಡು ಮಾತಾಡಿಕೊಂಡು, ಹೋಗಬಹುದೇನೊ ಎಂದು ಭಾವಿಸಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅವಳನ್ನು ನೋಡಿದೆ. ಆದರೆ ಅವಳು ಇಳಿಯಲಿಲ್ಲ. ಮತ್ತು ಡ್ರೈವರು ಅವಳ ಇಂಗಿತವರಿತು, ’ಅವರು ಇಳಿಯುವುದಿಲ್ಲ, ಶಿವಮೊಗ್ಗಕ್ಕೆ ಹೋಗುವುದು ಹೊತ್ತಾಗುತ್ತದೆ’ ಎಂಬರ್ಥದಲ್ಲಿ ಮಾತಾಡಿದ. ಸರಿ, ಕಾರು ಮೊಗದಿರುಹಿ ಹೊರಟಿತು. ನಾನು ಮನೆಯೊಳಕ್ಕೆ ನಡೆದೆ. ಅವಳು ಹಾಗೆ ಇಳಿಯದೆ, ಮನೆಯೊಳಗೆ ಬಂದು ಮನೆಯ ಮಹಿಳೆಯರನ್ನು ಮಾತಾಡಿಸಿ ಅವರ ಆತಿಥ್ಯವನ್ನು ಸ್ವೀಕರಿಸದೆ ನಿರ್ದಾಕ್ಷಿಣ್ಯವಾಗಿ ಎಂಬಂತೆ ಮೊಗದಿರುಹಿ ಹೋದದ್ದು ನನ್ನ ಮನಸ್ಸಿಗೆ ಹಿಡಿಸಲಿಲ್ಲ; ಸ್ವಲ್ಪಮಟ್ಟಿಗೆ ಜುಗುಪ್ಸೆಗೂ ಕಾರನವಾಯಿತೆಂದು ತೋರುತ್ತದೆ: ಬಹುಶಃ ಅವಳು ಹುಟ್ಟಿದ ಮೇಲೆ ಅವಳನ್ನು ’ನೋಡಿದ್ದು’ ಅದೇ ಮೊದಲನೆಯ ಸಲ ಎಂದು ತೋರುತ್ತದೆ. ಅವಳು ಒಂದು ಒರಟು ಬಟ್ಟೆಯ ಲಂಗ ಉಟ್ಟಿದ್ದು, ಹುಡುಗರು ಹಾಕಿಕೊಳ್ಳುವ ಒಂದುತುಂಬುತೋಳಿನ ಕೋಟು ಧರಿಸಿದ್ದಳು. ಅದೂ ಬಣಗೆಟ್ಟುಬಡ್ಡಾಗಿದ್ದಂತೆ ತೋರುತಿತ್ತು. ಹುಡುಗಿಯಾಗಿದ್ದ ಅವಳಲ್ಲಿ ನನಗೆ ಯಾವ ಮನಮೋಹಕತೆಯೂ ಗೋಚರಿಸಲಿಲ್ಲ. ಲಲನಾ ಕೋಮಲತೆಗೆ ಬದಲಾಗಿ ಅವಳಲ್ಲಿ ಎಲ್ಲವೂ ಬಲಿಷ್ಠತೆಯಾಗಿಯೆ ಕಾಣಿಸುತ್ತಿತ್ತು. ಅಗಲವಾದ ದುಂಡುಮುಖದಲ್ಲಿ ಬಾಲಿಕಾ ಮುಗ್ಧಭಾವ ವಿನಾ ಪ್ರಣಯಭಾವನೆಯ ಲವಲೇಶದ ಪ್ರವೇಶಕ್ಕೂ ಅಲ್ಲಿ ಅವಕಾಶವಿದ್ದಂತಿರಲಿಲ್ಲ, ಅವಳ ಉಡುಗೆ ತೊಡುಗೆಗಳಲ್ಲಿ. ಬಹುಶಃ ಆ ಕಾರಣಕ್ಕಾಗಿಯೆ ನನ್ನ ಪ್ರತಿಷ್ಠೆಗೆ ಧಕ್ಕೆಯೊದಗಿತ್ತೆಂದು ತೋರುತ್ತದೆ!

ಇದು ನಡೆದ ಕೆಲವು ವರ್ಷಗಳ ಮೇಲೆ, ಮತ್ತೊಂದು ಬೇಸಗೆಯ ರಜೆಯಲ್ಲಿ, ನಾನು ಕೆಲವು ಬಯಲುಸೀಮೆಯ ಮಿತ್ರರೊಡಗೂಡಿ ಮಲೆನಾಡಿಗೆ ಹೋಗಿದ್ದು ಇಂಗ್ಲಾದಿಯಲ್ಲಿ ಉಳಿದಿದ್ದೆ. ಹೇಮಾವತಿಯೂ ಆಗ ಅವಳು ಸೀರೆಯುಟ್ಟು ಸೌಂದರ್ಯ ಪ್ರಜ್ಞೋದಯವಾಗಿದ್ದ ತರಳೆ, ತನ್ನ ಇತರ ಅಕ್ಕತಂಗಿ ತಮ್ಮಂದಿರೊಡನೆ ಇಂಗ್ಲಾದಿಯಲ್ಲಿ ರಜಾಕಾಲದ ಕೆಲವು ದಿನಗಳನ್ನು ಕಳೆಯಲು ಶಿವಮೊಗ್ಗೆಯಿಂದ ಬಂದಿದ್ದಳೆಂದು ನನ್ನ ಭಾವನೆ. ಒಂದು ಸಂಜೆ ನಾವು ಹುಡುಗರೆಲ್ಲ ಇಂಗ್ಲಾದಿ ಮನೆಯ ಹೊರ ಅಂಗಳದ ಕಣದಲ್ಲಿ ಎಂದಿನಂತೆ ವಾಲಿಬಾಲನ್ನೊ ಬ್ಯಾಡ್‌ಮೆಂಟನ್ನೊ ಕೋಲಾಹಲದ ಕೂಗಾಟದೊಡನೆ ಆಡಿ ಕತ್ತಲಾಗಲು ಮುಗಿಸಿ, ಜಗಲಿಗೆ ಹಿಂತಿರುಗುತ್ತಿದ್ದೆವು. ಬರುತ್ತಾ ದಾರಿಯಲ್ಲಿ ಇಂಗ್ಲಾದಿ ಮನೆಯ ವಿಶಾಲವಾದ ಒಳ ಅಂಗಳದ ಹೂವು ತುಂಬಿದ್ದ ಗಿಡಗಳ ಉದ್ಯಾನ ಪಾತಿಯಲ್ಲಿ ಒಂದು ಗುಲಾಬಿ ಗಿಡದ ಮುಳ್ಳಿಗೆ ಸಿಕ್ಕಿ ನೇತಾಡುತ್ತಿದ್ದ, ಕಸೂತಿ ಹಾಕಿದ್ದ, ಮನೋಹರವಾಗಿದ್ದ ಕರವಸ್ತ್ರವನ್ನು ಕಂಡೆ. ಯಾರದ್ದೊ ಕೈತಪ್ಪಿ ಮುಳ್ಳಿಗೆ ಸಿಕ್ಕಿಕೊಂಡಿರಬಹುದು ಎಂದು ಅದನ್ನು ಎತ್ತಿಕೊಂಡು ಮಡಚಿ ಜೇಬಿಗೆ ಹಾಕಿಕೊಂಡೆ. ಆ ವಿಷಯವನ್ನು ಕೆಲವು ಬಾಲಕ ಮಿತ್ರರಿಗೆ ತಿಳಿಸಿ “ಹ್ಯಾಂಡ್ ಕರ್‌ಚೀಫ್” ಯಾರದ್ದು ವಿಚಾರಿಸಲು ಹೇಳಿದೆ.

ಸ್ವಲ್ಪ ಹೊತ್ತಿನಲ್ಲಿಯೆ ಆ ಸಾಧಾರಣ ವಿಷಯ ಒಂದು ರೊಮ್ಯಾಂಟಿಕ್ ಘಟನೆಯಾಗಿ ಬಿಟ್ಟಿತ್ತು!

ಕರವಸ್ತ್ರ ನನಗೆ ಸಿಕ್ಕು, ನನ್ನ ಜೇಬಿನಲ್ಲಿರುವ ವಿಚಾರ ಆ ಮನೆಯಲ್ಲಿ ನೆರೆದಿದ್ದ ತರುಣಿಯರ ಗುಂಪುಗಿವಿಗೆ ಬಿದ್ದದ್ದೆ ತಡ, ಗುಸುಗುಸು ಹಬ್ಬಿತಂತೆ! ತನ್ನ ಕರವಸ್ತ್ರ ಕಳೆದುಹೋಗಿದೆ ಎಂದು ಹೇಮಾವತಿ ಹುಡುಕುತ್ತಿದ್ದ ಸಂಗತಿ ಅವರಲ್ಲಿ ಕೆಲವರಿಗೆ ಮೊದಲೇ ತಿಳಿದಿದ್ದು, ಅವರೆಲ್ಲರೂ ಹೇಮಾವತಿಯನ್ನು  ಚುಡಾಯಿಸಲು ಶುರುಮಾಡಿ “ಪುಟ್ಟಪ್ಪನವರಿಗೆ ಕರವಸ್ತ್ರ ಕೊಟ್ಟು, ಈಗ ಕರವಸ್ತ್ರ ಕಳೆದುಹೋಗಿದೆ ಎಂದು ನಟಿಸುತ್ತಿದ್ದಾಳೆ!” ಎಂದು ಲೇವಡಿ ಮಾಡಿ ಪರಿಹಾಸ್ಯದ ಓಕುಳಿಯೆರಚತೊಡಗಿದರಂತೆ! ಅಷ್ಟೇ ಸಾಲದೆ “ನೀನೇ ಹೋಗಿ ಅವರ ಹತ್ತಿರ ಕೇಳಿ ತೆಗೆದುಕೋ!” ಎಂದೂ ಸತಾಯಿಸುತ್ತಾ, “ಕರವಸ್ತ್ರವನ್ನು ಭಾವನ ಹತ್ತಿರದಿಂದ ತಂದುಕೊಡುತ್ತೇವೆ” ಎಂದ ಅವಳ ಸತಾಯಿಸುತ್ತಾ, “ಕರವಸ್ತ್ರವನ್ನು ಭಾವನ ಹತ್ತಿರದಿಂದ ತಂದುಕೊಡುತ್ತೇವೆ” ಎಂದ ಅವಳ ಪುಟ್ಟತಂಗಿಯರಿಗೂ ತಡೆ ಹಾಕಿ “ನೀವು ತಂದುಕೊಡಬೇಡಿ, ಬೇಕಾದರೆ ಅವಳೇ ಹೋಗಿ ಕೇಳಿ ತಂದುಕೊಳ್ಳಲಿ!’ ಎಂದೂ ವಿನೋದದ ನಿಷೇಧಾಜ್ಞೆ ಹೊರಡಿಸಿಬಿಟ್ಟರಂತೆ! ಸುದ್ದಿ ಮನೆಯ ಒಳಗಿನ ತರುಣಿಯರಿಂದ ಮಹಿಳೆಯರಿಗೂ ಹಬ್ಬಿ, ಅಲ್ಲಿಂದ ಜಗಲಿಯಲ್ಲಿದ್ದ ಹೊರಗಿನ ತರುಣವರ್ಗಕ್ಕೂ ಮಹನೀಯವರ್ಗಕ್ಕೂ ತಲುಪಿತು! ಪುಕ್ಕಟೆ ಲಭಿಸಿದ ಒಂದು ನಿರ್ದುಷ್ಟ ಸ್ವಾರಸ್ಯಕರ ಭಾವಪರಿವೇಷದ ಒಳಹೊಕ್ಕು ಅದನ್ನು ಸವಿಯುವ ಸಂತೋಷವನ್ನು ಯಾರೊಬ್ಬರೂ ತಿರಸ್ಕರಿಸಲೊಲ್ಲದೆ, ನನ್ನನ್ನೂ ಹೇಮಾವತಿಯನ್ನೂ ತಮ್ಮೊಂದು ಭಾವಮಯ ಇಂದ್ರಚಾಪದಿಂದ ತುಸುಹೊತ್ತು ಸುತ್ತಿ ಬಿಗಿದಂತಿದ್ದರು!

ಇನ್ನೊಮ್ಮೆ, ಅದೂ ನಡೆದದ್ದು ಒಂದು ಬೇಸಗೆಯ ರಜಾಕಾಲದಲ್ಲಿಯೇ ಬಹುಶಃ ನಾವು ಮದುವೆಯಾಗುವುದಕ್ಕೆ ಹಿಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿರಬಹುದು. ಅಂದರೆ ಹೇಮಾವತಿ ಹದಿನೈದು ವರ್ಷದ ತರುಣಿಯಾಗಿದ್ದಾಗ. ಅವಳು ಎಂದಿನಂತೆ ಇತರರೊಡನೆ ಶಿವಮೊಗ್ಗದಿಂದ ಇಂಗ್ಲಾದಿಗೆ ಬಂದಿದ್ದಳು. ನಾನೂ ಇಂಗ್ಲಾದಿಗೆ ಹೋಗಿ ಸ್ನೇಹಿತರೊಡನೆ ಒಂದೆರಡು ದಿನಗಳು ತಂಗಿದ್ದೆ.

ಒಂದು ಸಂಜೆ ನಾವೆಲ್ಲರೂ ಹೊರಂಗಳದಲ್ಲಿ ಆಟ ಮುಗಿಸಿ ದಣಿದು ಒಳಗೆ ಬಂದಿದ್ದೆವು. ಇತರ ಮಿತ್ರರೆಲ್ಲ ತುಸು ಗಾಳಿ ಸವಾರಿ ಮಾಡುತ್ತೇವೆ ಎಂದು ಹೊರಗೆ ಗುಂಪುಗೂಡಿ ಸಂಚಾರಕ್ಕೆ ಹೋದರು. ನಾನು ತುಸು ಧ್ಯಾಮಗ್ನನಾಗಿ ಯಾವುದೊ ಕವನ ರಚನೆಗಾಗಿ ಏಕಾಂಗಿಯಾಗಿರಲು ಬಯಸಿ, ಅಂಗಳದಲ್ಲಿ ಹಾಕಿದ್ದ ಅಡಿಕೆ ಚಪ್ಪರಕ್ಕೆ ಏಣಿಏರಿ ಹೋಗಿ, ಆಕಾಶದ ಕೆಳಗೆ, ಸೂರ‍್ಯಾಸ್ತ ಸಂಧ್ಯಾವರ್ಣ ವೈಭವವನ್ನು ನೋಡುತ್ತಾ ಕುಳಿತೆ. ಬೇಯಿಸಿದ ಅಡಕೆಯನ್ನು ಬಿಸಿಲಿಗೆ ಹರಡಲು ಅಡಕೆ ದಬ್ಬೆಗಳನ್ನು ಒತ್ತಾಗಿ ಹಾಕಿದ್ದ ಚಪ್ಪರದ ಮೇಲೆ ವಾಟೆಸಲಕಿನಿಂದ ಮಾಡಿದ್ದ ತಟ್ಟೆಗಳನ್ನು ಹರಡಿದ್ದರು. ಆದರೆ ತಟ್ಟಿಗಳ ನಡುವೆ ವಿರಳವಾಗಿದ್ದ ಜಾಗದಲ್ಲಿ ಅಡಕೆ ದಬ್ಬೆಗಳ ನಡುವೆ ಅಲ್ಲಲ್ಲಿ ಕಂಡಿಗಳಿದ್ದುವು. ಗಮನಿಸಿದ ಹೊರತೂ, ಆ ಕಂಡಿಗಳಿಂದ ಮೇಲಿದ್ದವರು ಕೆಳಗಿದ್ದವರನ್ನಾಗಲಿ ಕೆಳಗಿದ್ದವರು ಮೇಲಿದ್ದವರನ್ನಾಗಲಿ ನೋಡುವುದು ಸಾಧ್ಯವಿರಲಿಲ್ಲ.

ಮನೆಯಲ್ಲ ಚಪ್ಪರದ ಕೆಳಗೆ ನಿಃಶಬ್ದವಾಗಿತ್ತು. ಹೆಂಗಸರೂ ಹೆಣ್ಣುಮಕ್ಕಳೂ ಹೊರಂಗಳದಾಚೆ ದೂರದಲ್ಲಿ ಮತಾಡುತ್ತಾ ಗುಲ್ಲೆಬ್ಬಿಸಿದ್ದುದು ಮಂದವಾಗಿ ಕಿವಿಗೆ ಬೀಳುತ್ತಿತ್ತು. ಬೈಗುಗಪ್ಪಿನ ನಸುಗು ಮುಸುಗುತ್ತಿತ್ತು. ಕೆಳಗಡೆಯ ವರಾಂಡದ ಗೋಡೆಗೆ ಆಗತಾನೆ ಲ್ಯಾಂಪಿನ ದೀಪ ಹೊತ್ತಿಸಿದ್ದರು. ನಾನು ಕೂತಿದ್ದ ಜಾಗದಿಂದ ಒಮದು ಕಂಡಿಯಲ್ಲಿ ಆ ದೀಪ ಮತ್ತು ಆ ದೀಪದ ಪ್ರಕಾಶ ಬೆಳಗುತ್ತಿದ್ದ ಒಂದೆರಡು ಮಾರಿನ ಜಾಗ ಕಾಣಿಸುತ್ತಿತ್ತು. ಒಮ್ಮೆ ಅತ್ತ ನಾನು ಕಣ್ಣು ಹಾಯಿಸಿದಾಗ ಯಾರೊ ಅಲ್ಲಿ ಚಲಿಸಿದಂತಾಯ್ತು. ಚಲಿಸುತ್ತಿದ್ದವರು ಹೆಂಗಸರೆಂಬುದೂ ಲ್ಯಾಂಪಿನ ಪ್ರಕಾಶದಲ್ಲಿ ಹೊಳೆಯುತ್ತಿದ್ದ ನೀಲಿಬಣ್ಣದ ಸೀರೆಯಿಂದ ಗೊತ್ತಾಯಿತು. ಚಲಿಸುತ್ತಿದ್ದ ವ್ಯಕ್ತಿ ಚಲಿಸದೆ ಲ್ಯಾಂಪಿನ ಬೆಳಕಿನಲ್ಲಿ ನಟ್ಟು ನಿಂತಿತು! ಕುತೂಹಲ ಕೆರಳಿ ಗಮನಿಸಿ ನೋಡಿದೆ. ನಿಂತಿದ್ದವಳು ಹೇಮಾವತಿ! ಅವಳು ನನ್ನ ಕಡೆಗೇ ನೋಡುತ್ತಿರುವಂತೆ ಕಂಡಿತು ಆ ಕಂಡಿಯಲ್ಲಿ! ಬಹುಶಃ ಆ ಕಂಡಿಯಲ್ಲಿ ಆಕಾಶಕ್ಕೆದುರಾಗಿ ಕುಳಿತಿದ್ದ ನಾನು ಅವಳಿಗೆ ಕಾಣಿಸುತ್ತಿದ್ದಿರಬಹುದು. ಆದರೆ ನಾನೂ ಅವಳನ್ನು ನೋಡುತ್ತಿದ್ದೇನೆ ಎಂಬುದು ಅವಳಿಗೆ ತಿಳಿದಿರಲಿಕ್ಕಿಲ್ಲ. ಅಥವಾ ತಿಳಿದಿತ್ತೋ ಇಲ್ಲವೊ ಎಂಬುದನ್ನು ನಾನು ತಿಳಿಯಲಾರದವನಾಗಿದ್ದೆ. ನಾನೇನೊ ಅವಳ ಸುಂದರ ರೂಪವನ್ನು ದೀಪದ ಬೆಳಕಿನಲ್ಲಿ ಹೊಳೆಯುತ್ತಾ ನನ್ನ ದಿಕ್ಕೆಗೇ ನಟ್ಟಿದ್ದ ಅವಳ ಕಣ್ಣುಗಳಿಂದ! ಒಂದೆರಡು ನಿಮಿಷ ಹಾಗೆ ನಿಂತಿದ್ದವಳು ಸರಕ್ಕನೆ ಬಾಗಿಲು ದಾಟಿಹೋಗಿ ಕಣ್ಮರೆಯಾದಳು. ಅವಳೇನು ಉದ್ದೇಶಪೂರ್ವಕವಾಗಿ ನಿಂತಿರಲಿಲ್ಲ. ಹೊರಟುಹೋದಳು ಎಂದುಕೊಂಡು ನಾನು ಮತ್ತೆ ಸುತ್ತಣ ಕಾಡಿನ ಕಡೆಗೂ ಸಂಧ್ಯಾ ವರ್ಣಸಮೂಹದ ಕಡೆಗೂ ಕಣ್ಣಾದೆ.

ಆದರೆ ಒಂದೆರಡು ನಿಮಿಷಗಳಲ್ಲಿಯೆ ಮತ್ತೆ ಅವಳು ಹೊರಗೆ ಬಂದು ಮೊದಲು ನಿಂತಲ್ಲಿಯೆ, ಮೊದಲು ನಿಂತಿದ್ದಂತೆಯೆ ಮತ್ತೆಯೂ ನಿಂತು ನನ್ನತ್ತ ನೋಡತೊಡಗಿದಳು. ನಾನು ಭಾವಿಸಿದೆ ಅವಳ ಮೊಗದಲ್ಲಿ ಏನೊ ಹರ್ಷದ ಛಾಯೆ ಸುಳಿದಂತೆ! ಅವಳನ್ನು ಚೆನ್ನಾಗಿ ನೋಡಿದೆ! ನಾನು ಮದುವೆಯಾಗುವ ವಿಚಾರವೇ ನನ್ನ ಮನಸ್ಸಿನಲ್ಲಿ ಇಲ್ಲದಿದ್ದರೂ ಹೆಣ್ಣಿನ ಚೆಲುವನ್ನು ಯಾವ ದುರ್ಭಾವನೆಯೂ ಇಲ್ಲದೆ ಗಂಡಸು ನೋಡುವಂತೆ ನೋಡಿದೆ! ಅಷ್ಟರಲ್ಲಿ ಯಾರೊ ಬಂದರೊ ಏನೊ ಎಂಬಂತೆ ಅವಳು ಸರಕ್ಕನೆ ಮತ್ತೆ ಬಾಗಿಲು ದಾಟಿ ಕಣ್ಮರೆಯಾದಳು. ಆದರೆ ಯಾರೂ ಬರಲಿಲ್ಲ ಎಂಬುದು ಗೊತ್ತಾದಂತೆ ಮತ್ತೆ ಹಿಂದಕ್ಕೆ ಬಂದು ಅದೇ ಸ್ಥಳದಲ್ಲಿ ನಿಂತಳು! ನಾನು ತನ್ನನ್ನು ನೋಡಲಿ ಎಂದೇ ಹಾಗೆ ಮಾಡುತ್ತಿದ್ದಾಳೆಯೊ ಎಂಬ ಅನುಮಾನವಾಗಿ ನನಗೆ ಹೃದಯ ಗುಸು ಹಿಗ್ಗಿದಂತಾಯ್ತು! ಅಷ್ಟರಲ್ಲಿ ಅವಳ ಅಕ್ಕತಂಗಿಯರ ಗುಂಪು ಅಂಗಳಕ್ಕೆ ನುಗ್ಗಿ ಬಂದುದರಿಂದ ಅವಳು ನನ್ನತ್ತ ಒಮ್ಮೆ ನೆಟ್ಟದೃಷ್ಟಿ ಹರಿಸಿ ಕಣ್ಮರೆಯಾದಳು. ನಾನು ಶ್ರೀಗುರುಸ್ಮರಣೆ ಮಾಡುತ್ತಾ ಸಂಧ್ಯಾಧ್ಯಾನಮಗ್ನನಾದೆ!

ಜಗನ್ಮಾತೆ ಮಕ್ಕಳ ಈ ಆಟ ನೋಡಿ ಮುಗುಳುನಕ್ಕಳೇನೋ?

ಆದರೆ ಮೇಲೆ ನಮೂದಿಸಿದ ಘಟನಾವಳಿ ಬರಿಯ ಕಾಕತಾಳೀಯ ಮಾತ್ರವಾಗಿದ್ದು ಕವಿಯ ಪ್ರಚ್ಛನ್ನ ಪ್ರಣಯಕಲ್ಪನೆ ಜೋಡಿಸಿ ಕಟ್ಟಿದ ಕಥೆಯಾಗಿರಲಿಕ್ಕೂ ಸಾಕು! ಏನಾದರೂ ಆಗಿರಲಿ. ಅಂತೂ ನನಗೂ ಹೇಮಾವತಿಗೂ ಮೇಲೆ ಹೇಳಿದಂತಹ ದೂರದೂರದ ದರ್ಶನದಂತಹ ದೃಷ್ಟಿ ಮಾತ್ರ ಸಂಬಂಧವಿದ್ದಿತೇ ಹೊರತು ಮತ್ತಾವ ರೀತಿಯ ಸಂಬಂಧವೂ ಇರಲಿಲ್ಲ. ವಿವಾಹ ಪೂರ್ವದಲ್ಲಿ ಎಂದೂ ನಾವು ಒಬ್ಬರನ್ನೊಬ್ಬರು ಮುಖಾಮುಖಿಯಾಗಿ ಮಾತಾಡಿಸಿಯೂ ಇರಲಿಲ್ಲ.

* * *

ಸಾವಿರದ ಒಂಭೈನೂರ ಮೂವತ್ತಾರನೆಯ ಇಸವಿಯ ಅಗಸ್ಟ್ ಒಂದನೆಯ ತಾರೀಖು(೧-೮-೧೯೩೬) ನಾನು ಆಶ್ರಮವನ್ನು ಬಿಟ್ಟು, ಆಶ್ರಮಕ್ಕೆ ತುಸು ದೂರ ಪಶ್ಚಿಮಕ್ಕೆ, ಆಗ  ಒಂಟಿಕೊಪ್ಪಲು ಎಂದು ಈಗ ವಾಣೀವಿಲಾಸಪುರಂ ಎಂದೂ ಹೆಸರಾಂತಿರುವ ಬಡಾವಣೆಯಲ್ಲಿ ಗೊತ್ತುಮಾಡಿದ ಒಂದು ಬಾಡಿಗೆಯ ಮನೆಗೆ ಬಂದೆ. ಆ ಮನೆಯೆ ವಿದ್ಯಾರ್ಥಿನಿಲಯವೂ ಆಗಿತ್ತು. ಏಕೆಂದರೆ ಆಶ್ರಮದ ವಿದ್ಯಾರ್ಥಿ ನಿಲಯದಲ್ಲಿದ್ದ ನಮ್ಮ ಕಡೆಯ ಹುಡುಗರೆಲ್ಲರೂ-ಶ್ರೀನಿವಾಸ, ವಿಜಯದೇವ, ಕೃಷ್ಣಪ್ಪ, ರಾಮಣ್ಣ, ಚಂದ್ರಶೇಖರ ಮತ್ತು ವೆಂಕಟಪ್ಪ-ಆಶ್ರಮದ ವಿದ್ಯಾರ್ಥಿನಿಲಯವನ್ನು ಸ್ವಾಮಿಜಿಯ ಅಪ್ಪಣೆಯಂತೆ ತ್ಯಜಿಸಿ ನನ್ನೊಡನೆ ಇರಲು ಬಂದಿದ್ದರು.

ಅಷ್ಟರಲ್ಲಿಯೆ ನಾನು ಹೇಮಾವತಿಯನ್ನು ಮದುವೆಯಾಗಲು ಒಪ್ಪಿಗೆಯಿತ್ತು ಹೊಸಮನೆ ಮಂಜಪ್ಪಗೌಡರಿಗೆ ಕಾಗದ ಬರೆದಿದ್ದೆ. ಮಾನಪ್ಪನೂ ಅದನ್ನು ಸಮರ್ಥಿಸಿಯೂ ಆಗಿತ್ತು. ಅಲ್ಲದೆ ನಾನು ಸ್ವಂತ ಮನೆ ಕಟ್ಟಲು ನಾವಿದ್ದ ಬಾಡಿಗೆಯ ಮನೆಯ ಬೀದಿಯಲ್ಲಿಯೆ ತುತ್ತತುದಿಯ ಪಶ್ಚಿಮಕ್ಕೆ ಒಂದು ಜಾಗವನ್ನೂ ಕೊಂಡಾಗಿತ್ತು. ಮತ್ತು ಮನೆಯ ಪ್ಲಾನನ್ನೂ ಧಾಮ್ ಎಂಬ ಹೆಸರಿನ ಬಂಗಾಳಿ ಕಂಟ್ರಾಕ್ಟರ್ (ಅವರು ಆಶ್ರಮದ ದೇವಸ್ಥಾನದ ಕಟ್ಟಡ ಕಟ್ಟುತ್ತಿದ್ದರು.) ಹತ್ತಿರ ತಯಾರಿಸುತ್ತಿದ್ದೆ.

ಆಶ್ರಮ ಬಿಟ್ಟುಬಂದ ಹದಿನೈದು ದಿನಗಳಲ್ಲಿ, ಎಂದರೆ ೧೬-೮-೧೯೩೬ರಲ್ಲಿ, ಹೊಸಮನೆ ಮಂಜಪ್ಪಗೌಡರಿಗೆ ಬರೆದ ಕಾಗದದಲ್ಲಿ ಹೀಗೆ ಬರೆದಿದ್ದೇನೆ: (ಕುವೆಂಪು ಪತ್ರಗಳು) “….ಇನ್ನು ವಿವಾಹದ ವಿಚಾರ. ತಮ್ಮ ಮತ್ತು ಇತರರ ಪ್ರಯತ್ನಗಳಿಗೆ ನಾನು ಚಿರಕೃತಜ್ಞ. ಜಾತಕದ ಗೋಜು ದಯವಿಟ್ಟು ಬೇಡ. ನನಗೆ ಈ ಕಗ್ಗದಲ್ಲಿ ಸಹನೆಯಿಲ್ಲ. ಆದರೆ ಪ್ರಾರ್ಥನೆಯಲ್ಲಿ ನಂಬಿಕೆ! ನಾನು ಗುರುದೇವನನ್ನು ಪ್ರಾರ್ಥಿಸುವಂತೆಯೆ ನೀವೆಲ್ಲರೂ ಪ್ರಾರ್ಥಿಸಿದರೆ ಅದಕ್ಕಿಂತಲೂ ಮಂಗಳವಾದದ್ದು ಬೇರೆ ಏನೂ ಇಲ್ಲ! ವರನಂತೆ ವಧುವೂ ಪ್ರಾರ್ಥಿಸಲಿ!-ಇದನ್ನು ತೀರ್ಥರೂಪುಗಳಿಗೆ ತಿಳಿಸಿ: ಈ ಒಂದು ವಿವಾಹದಲ್ಲಿಯಾದರೂ ಅತೀ ಹಳೇ ಸಂಪ್ರದಾಯವನ್ನು ಮನ್ನಾ ಮಾಡಬೇಕೆಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿ. ಅವರು ತೀಕ್ಷ್ಣಮತಿಗಳು. ಪ್ರಗತಿಗಾಮಿಗಳು. ಅಲ್ಲ ಎನ್ನುವುದಿಲ್ಲ!- ಜಾತಕ ಗೀತಕ ಬೇಡ!

“ಮಾನಪ್ಪನೊಡನೆ ಒಂದು ವಿಚಾರ ಹೇಳಿದ್ದೆ. ಅದೇನೆಂದರೆ ಹೆಣ್ಣಿನ ಒಪ್ಪಿಗೆ. (On principle I want that the bride also must consent.) ಗಂಡನ್ನು ಮಾತ್ರ ಕೇಳಿದರೆ ಸಾಲದು. ಹೆಣ್ಣೂ ಒಪ್ಪಬೇಕು? ನಾನು ಹೇಮಾವತಿಯನ್ನು ಒಪ್ಪಿದಂತೆ ಆಕೆಯೂ ನನ್ನನ್ನು ಒಪ್ಪುತ್ತಾಳೆಂದು ನಂಬಿದ್ದೇನೆ. ಹೆಣ್ಣಿನ ಒಪ್ಪಿಗೆ ಸಂಪ್ರದಾಯದಲ್ಲಿಲ್ಲದಿದ್ದರೂ ಹೆಣ್ಣಿಗೂ ವ್ಯಕ್ತಿತ್ವವಿದೆ, ಆಶಯಗಳಿವೆ ಎಂಬುದನ್ನು ಗಮನಿಸಬೇಕು. A delicate problem! But women have delicate methods to solve problems!

ನನ್ನ ಶ್ರೇಯಃಕಾಂಕ್ಷಿಗಳಾಗಿರುವ ನೀವೆಲ್ಲ ಹೇಳಿದಂತೆ ಆಗಬಹುದು. ಮಾನಪ್ಪ ಇಲ್ಲಿಗೆ ಯಾವಾಗ ಬರುತ್ತಾನಂತೆ?

-ಇತಿ ಶ್ರೀ ಗುರುಚರಣದಲ್ಲಿ

ಮೇಲಿನ ಕಾಗದದಲ್ಲಿ ಸೂತ್ರಪ್ರಾಯವಾಗಿ ಸೂಚ್ಯವಾಗಿರುವ ಕೆಲವು ವಿಷಯಗಳನ್ನು ವಿವರಿಸುವುದು ಆವಶ್ಯಕ:

ಮೊದಲು ಶ್ರೀ ದೇವಂಗಿ ರಾಮಣ್ಣಗೌಡರ ವಿಚಾರ: ಸುತ್ತಮುತ್ತಲೂ ಅಜ್ಞಾನ, ಮೂಢಾಚಾರ, ಮತಮೌಢ್ಯ, ದೆವ್ವಪಿಶಾಚಿಗಳ ಪೂಜೆ, ಬಲಿ ಇತ್ಯಾದಿ ಗ್ರಾಮೀಣ ಅಂಧಕಾರದ ವಾತಾವರಣವಿದ್ದ ಆ ಕಾಲದಲ್ಲಿ ದೇ.ರಾ.ಗೌ. ಒಬ್ಬರೇ ವೈಜ್ಞಾನಿಕದೃಷ್ಟಿಯ ವಿಚಾರವಾದಿಗಳಾಗಿ ಸಾಮಾಜಿಕ ಲೋಪದೋಷಗಳನ್ನು ಪ್ರತಿಭಟಿಸಿ ನಿಂತಿದ್ದುದು ನಿಜವಾಗಿಯೂ ವಿಸ್ಮಯಕರ ಸಂಗತಿ. ಅವರ ಪ್ರಯತ್ನದಿಂದಾಗಿ ಕೃಷಿ ಮೊದಲಾದ ಲೌಕಿಕ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಮದುವೆ ಮದ್ಯಪಾನಾದಿ ವ್ಯವಹಾರದ ಭೂಮಿಕೆಗಳಲ್ಲಿಯೂ ಸುಧಾರಣೆಗಳು ಕಾಲಿಟ್ಟು ಕೆಲವು ಮನೆತನಗಳಲ್ಲಿ ಮತ್ತು ಕೆಲವು ವ್ಯಕ್ತಿಗಳಲ್ಲಿಯಾದರೂ ಬದುಕು ಪರಿವರ್ತನೆ ಹೊಂದಿತ್ತು. ಅವರು ಪುರೋಹಿತಶಾಹಿಯ ಕುರುಡು ನಂಬಿಕೆಗಳನ್ನೆಲ್ಲ ತಿರಸ್ಕರಿಸಿದ್ದರು: ಪಂಚಾಂಗ, ನಿಮಿತ್ತ ನೋಡಿಸುವುದು. ರಾಹುಕಾಲ ಗುಳಿಕಕಾಲ, ಧರ್ಮಸ್ಥಳಾದಿ ಕಡೆಗಳಲ್ಲಿ ನಡೆಯುತ್ತಿದ್ದ ಉಯ್ಯಿಲು ಕೊಡುವುದು ಮೊದಲಾದ ದುರ್ಮಂತ್ರ ವ್ಯಾಪಾರಗಳು ಇವುಗಳನ್ನೆಲ್ಲ ತಮ್ಮ ಹತ್ತಿರ ಸುಳಿಯಗೊಡುತ್ತಿರಲಿಲ್ಲ. ಅವರ ಈ ವಿಚಾರಶೀಲತೆಯನ್ನು ಹಿಂದೂಧರ್ಮದ ವಿಚಾರದಲ್ಲಿ ಅವರಿಗಿರುವ ದ್ವೇಷವೆಂದೂ ವಿರೋಧವೆಂದೂ ಭ್ರಮಿಸಿ ಕ್ರೈಸ್ತಪಾದ್ರಿಗಳು ಅವರ ಮುಖಸ್ತುತಿ ಮಾಡಿ ಅವರನ್ನು ಕ್ರೈಸ್ತರನ್ನಾಗಿ ಮತಾಂತರಗೊಳಿಸಲು ಮಾಡಿದ ಕುತಂತ್ರವೂ ವಿಫಲವಾಯಿತು. ಏಕೆಂದರೆ ದೇ.ರಾ.ಗೌ. ಅವರು ಹಿಂದೂಧರ್ಮದ ಪೌರಾಣಿಕ ಕಟ್ಟುಕತೆಗಳನ್ನೆಂತೊ ಅಂತೆ ಕ್ರೈಸ್ತಧರ್ಮಿಗಳ ಕಟ್ಟುಕತೆಗಳನ್ನೂ ಅವೈಜ್ಞಾನಿಕವಾದ ಅವಿಚಾರಗಳೆಂದು ತಿರಸ್ಕರಿಸಿ ತಮ್ಮ ಮತಿಸ್ವಾತಂತ್ರ‍್ಯವನ್ನು ರಕ್ಷಿಸಿಕೊಂಡಿದ್ದರು. ಹಿಂದೂ ಮೌಢ್ಯವನ್ನು ಕ್ರೈಸ್ತ ಮೌಢ್ಯಗಳಿಗೆ ವಿನಿಮಯ ಮಾಡಿಕೊಳ್ಳುವ ಮತ್ತೊಂದು ಅವಿವೇಕಕ್ಕೆ ಅವರೆಂದೂ ವಶವಾಗಲಿಲ್ಲ. ಅವರ ಈ ವೈಚಾರಿಕತೆಯೆ ಒಂದು ಪ್ರಬಲ ಕಾರಣವಾಯಿತೊ ಏನೊ ಅವರಿಗೆ ನನ್ನ ಮೇಲೆ ಗೌರವ ವಿಶ್ವಾಸಗಳು ತಲೆದೋರುವುದಕ್ಕೆ. ಅಲ್ಲದಿದ್ದರೆ, ಯಾವ ಆ ಕಾಲದ ಶ್ರೀಮಂತ ವರ್ಗದ ತಂದೆಯಾಗಲಿ ತನ್ನ ಮಗಳನ್ನು, ವಿಪರೀತ ಸಾಲದಲ್ಲಿ ಮುಳುಗಿದ್ದ ಒಂದು ಮನೆತನದ ಒಬ್ಬ ಕನಸುಣಿ‘ಭಾವೋನ್ಮಾದಿ ಯುವಕನಿಗೆ’, ಅದರಲ್ಲಿಯೂ ಹಣಸಂಪಾದನೆಗೆ ಪೀಠಪ್ರಾಯವಾಗಿದ್ದ ಅಮಲ್ದಾರಿಕೆಯಂತಹ ಹುದ್ದೆಯಲ್ಲದೆ ಬರಿಯ ವಿಶ್ವವಿದ್ಯಾನಿಲಯದ ನೂರು ರೂಪಾಯಿ ಸಂಬಳದ ಒಬ್ಬ ಲೆಕ್ಚರನಿಗೆ ಕೊಡಲು ದುಂಬಾಲು ಬಿದ್ದು ಮುಂದುವರಿಯುತ್ತಿರಲಿಲ್ಲ!

ಆದ್ದರಿಂದಲೆ ಅವರು ಎಲ್ಲ ಸಂಪ್ರದಾಯಗಳನ್ನೂ ಮೂಲೆಗೊತ್ತಿ ಕುಲಜನರ ಮತ್ತು ಬಂಧು ಬಾಂಧವರ  ಅವಹೇಳನದ ಟೀಕೆಗಳನ್ನೆಲ್ಲ ಗುಡಿಸಿಟ್ಟು, ಶ್ರೀಮಂತಿಕೆಯ ಮರ‍್ಯಾದೆ ಮತ್ತು ಕುಲಗೌರವದ ರೂಢಿ ಎಂದು ಎಲ್ಲರೂ ತಲೆಬಾಗಿ ಹೆದರಿ ಅನಿವಾರ‍್ಯವೆಂದು ಆಚರಿಸುತ್ತಿದ್ದ ಸಾಮಾಜಿಕ ರೀತಿಗಳನ್ನೆಲ್ಲ ಒಂದಿನಿತೂ ಲೆಕ್ಕಿಸದೆ ಹೇಮಾವತಿಯನ್ನು ನನಗೆ ಮದುವೆ ಮಾಡಿಕೊಡಲು ಸಮರ್ಥರಾದದ್ದು!

ಸಾಮಾನ್ಯವಾಗಿ ಆ ಕಾಲದಲ್ಲಿ ಒಂದು ಮದುವೆ ನಿಶ್ವಯವಾಗುವುದೆಂದರೆ ಒಂದು ರಾಜಕೀಯದ ಸಂಧಿವಿಗ್ರಹ ಸ್ವರೂಪದ ಘಟನೆಯಂತಿರುತ್ತಿತ್ತು: ಗಂಡುಹೆಣ್ಣಿನ ಜಾತಕಗಳನ್ನು ಜೋಯಿಸರಿಗೆ ತೋರಿಸಿ ತಾರಾನುಕೂಲ ನೋಡುವುದು; ದೇವಸ್ಥಾನಕ್ಕೆ ಹೋಗಿ ದೇವರಿಗೆ ಹೂಮುಡಿಸಿ ಪೂಜೆಮಾಡಿಸಿ ಹೂವು ಬಲಕ್ಕೆ ಬೀಳುತ್ತದೆಯೊ ಎಡಕ್ಕೆ ಬೀಳುತ್ತದೆಯೊ ಎಂದು ಪ್ರಸಾದ ಬರಿಸುವುದು ಅಥವಾ ಪ್ರಸಾದ ಬರಿಸದಿರುವುದು; (ಆ ಎರಡೂ ಭಟ್ಟರ ಕೈಯಲ್ಲಿಯೆ ಇರುತ್ತಿದ್ದುದು ಸಂಭವ!) ಮನೆಯಲ್ಲಿ ಮಾತುಕತೆಯ ಸಮಯದಲ್ಲಿ ತುಳಸಿಕಟ್ಟೆಯ ಎದುರಿಗೆ ಹೊತ್ತಿಸಿಟ್ಟ ನೀಲಾಂಜನ ದೀಪಗಳು ಗಾಳಿಗೆ ಆರಿಹೋಗಿಯೋ ಆರಿಹೋಗದೆಯೋ ಶಕುನ ಬಂದಿತೋ ಇಲ್ಲವೊ ಎಂದು ನೋಡುವುದು; ನಿಶ್ಚಿತಾರ್ಥ ಎಂದು ನಂಟರನ್ನೆಲ್ಲ ಕರೆದು ಔತಣವಿಕ್ಕಿ ವಿಘ್ನಪರಂಪರೆಗಳನ್ನು-ತೆರ ಗಿರ, ಒಡವೆ ವಸ್ತು ಇತ್ಯಾದಿ-ನಿವಾರಿಸಿಕೊಳ್ಳುವುದು ಇತ್ಯಾದಿ ಇತ್ಯಾದಿ ತಲೆಚಿಟ್ಟು ಹಿಡಿಸುವಂತಹ ನೂರಾರು ಆಚಾರ ಸಮೂಹಗಳಿಂದ ಅನುಲ್ಲಂಘ್ಯವಾಗಿರುತ್ತಿತ್ತು.

ದೇ.ರಾ.ಗೌ. ನನ್ನ ಸಲಹೆಯಂತೆ ಅವನ್ನೆಲ್ಲ ಗಾಳಿಗೆ ತೂರಿಬಿಟ್ಟರು! ಜಾತಕ ಗೀತಕ ಒಂದನ್ನೂ ನೋಡಲಿಲ್ಲ. ಅಲ್ಲದೆ ಗಂಡಿನಮನೆಯಿಂದ ದಿಬ್ಬಣ ಬರುವುದು, ಮದುವೆಯಾದ ಮೇಲೆ ಹೆಣ್ಣಿನ ಮನೆಯಿಂದ ದಿಬ್ಬಣ ಹೋಗುವುದು, ಬಾಸಿಂಗ ಗೀಸಿಂಗ ಕಟ್ಟವುದು,  ಕದಿನಿಗಿದನಿ ಗರ್ನಾಲು ಗಿರ್ನಾಲು ಹಾರಿಸುವುದು, ದಂಡಿಗೆ ಹತ್ತುವುದು ಇತ್ಯಾದಿಯಾದ ಸಂಪ್ರದಾಯದ ನಾಟಕವೂ ನಡೆಯಲಿಲ್ಲ. ಜಾತಕ ಗೀತಕ ನೋಡುವ ಸಂಪ್ರದಾಯಕ್ಕೆಲ್ಲಿಯಾದರೂ ಅವಕಾಶ ಕೊಟ್ಟಿದ್ದರೆ ಅದಕ್ಕೆ ಇನ್ನೆಷ್ಟು ನಾನಾ ರೀತಿಯ ವಿಘ್ನಗಳನ್ನು ತಂದೊಡ್ಡಿ ಮದುವೆ ನಡೆಯದಂತೆಯೆ ಮಾಡಲು ಪ್ರಯತ್ನಗಳು ನಡೆಯುತ್ತಿದ್ದುವೊ? ಏಕೆಂದರೆ, ನನ್ನ ಮತ್ತು ಹೇಮಾವತಿಯ ಮದುವೆಯಾಗುವುದು ಎಲ್ಲರಿಗೂ ಸಮ್ಮತವಾಗಿರಲಿಲ್ಲ ಎನ್ನುವುದಕ್ಕೆ ಮದುವೆ ಗೊತ್ತಾದ ದಿನಕ್ಕೆ ಒಂದುದಿನ ಮುನ್ನ ನನಗೂ ಮಾನಪ್ಪಗೂ (ಬಹುಶಃ ಇತರರಿಗೂ) ಬಂದ ಮೂಗರ್ಜಿಯಂತಹ ಬೇನಾಮೀ ಪತ್ರಗಳ ಸಾಕ್ಷಿ!

* * *

ಆಶ್ರಮ ಬಿಟ್ಟು ಬಂದಮೇಲೆ ಮತ್ತೆ ದೈನಂದಿನ ಕೆಲಕಾರ್ಯಗಳಲ್ಲಿ ಕಾಲ ಕಳೆಯುತ್ತಿತ್ತು. ವಿದ್ಯಾರ್ಥಿಗಳು ಹೊಸ ಹುಮ್ಮಸ್ಸಿನಿಂದ ಸ್ವಲ್ಪ ದಿನಗಳು, ೪-೮-೧೯೩೬ರಂದು ಅಡಿಗೆಗೆ ಲಿಂಗಣ್ಣನು ಬರುವವರೆಗೆ, ಅಂದರೆ ಮೂರು ದಿನಗಳು, ತಾವೇ ಸೌದೆ ಅಕ್ಕಿ ತರಕಾರಿ ಇತರ ಸಾಮಾನುಗಳನ್ನೆಲ್ಲ ಕೊಂಡು ತಂದು ಆಡುವುದು, ಬಡಿಸುವುದು, ಮುಸುರೆ ತೊಳೆಯುವುದು, ಮನೆ ಗುಡಿಸುವುದು ಇತ್ಯಾದಿ ಎಲ್ಲ ಕಾರ‍್ಯಗಳನ್ನು ಉತ್ಸಾಹದಿಂದ ಮಾಡಿಕೊಂಡು ಸ್ಕೂಲು ಕಾಲೇಜುಗಳಿಗೆ ಹೋಗಿ ಬರುತ್ತಿದ್ದರು. ಅವರಿಗೆಲ್ಲ ಒಂದು ರೀತಿಯ ಸ್ವಾತಂತ್ರ‍್ಯ ಲಭಿಸಿದುದಕ್ಕೆ ಹಿಗ್ಗು! ಆ ಹಿಗ್ಗಿನ ಹೊಸದರಲ್ಲಿ ಹೊರೆಹೊಣೆಯ ಭಾರ ಗಮನಕ್ಕೆ ಬರುತ್ತಿರಲಿಲ್ಲ.

ನಾನು ಕಾಲೇಜಿಗೆ ಹೋಗಿಬರುವುದು, ಕವನ ರಚನೆ ಮತ್ತು ‘ಶ್ರೀರಾಮಾಯಣ ದರ್ಶನಂ’ ಮುಂದುವರಿಸುವುದು ಮತ್ತು ಅಧ್ಯಯನ ಧ್ಯಾನಾದಿಗಳಲ್ಲಿ ತೊಡಗಿರುತ್ತಿದ್ದೆ. ನನ್ನ ಹಸ್ತಪ್ರತಿಗಳಿಂದ ಕೆಲವು ರಚನೆಗಳ ತಾರೀಖುಗಳು ತಿಳಿದುಬರುತ್ತವೆ.

‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಪ್ರಾರಂಭಿಸಿದ್ದು ೨೭ ಜನವರಿ ೧೯೩೬. ‘ಕವಿಕ್ರತುದರ್ಶನಂ’ ೨-೨-೧೯೩೬ರಲ್ಲಿ ಪ್ರಾರಂಭವಾಗಿ ೮-೩-೧೯೩೬ರಲ್ಲಿ ಮುಗಿದಿದೆ. ಎರಡನೆಯ ಸಂಚಿಕೆ ‘ಶಿಲಾತಪಸ್ವಿನಿ’ ೨೬-೬೧೯೩೬ರಲ್ಲಿ ಮುಗಿದಿದೆ. ಮೂರನೆಯ ಸಂಚಿಕೆ ‘ಮಮತೆಯ ಸುಳಿ ಮಂಥರೆ’ ೨೯-೭-೧೯೩೬ರಲ್ಲಿ ಮುಗಿದಿದೆ. ನಾಲ್ಕನೆಯ ಸಂಚಿಕೆ ‘ಊರ‍್ಮಿಳಾ’ ೧೩-೯-೧೯೩೬ರಲ್ಲಿ ಮುಗಿದಿದೆ. ಅಂದರೆ ನಾನು ಆಶ್ರಮವನ್ನು ಬಿಡುವ ಮುನ್ನವೆ ಮೂರು ಸಂಚಿಕೆಗಳು ಪೂರೈಸಿದ್ದುವು. ಇನ್ನು ಭಾವಗೀತೆಗಳ ರಚನೆಯ ತಾರೀಖುಗಳು ಹೀಗಿವೆ. ಆಶ್ರಮ ಬಿಡುವ ಹಿಂದಿನ ದಿನ ೩೧-೭-೧೯೩೬ರಲ್ಲಿ ‘ಪ್ರೇಮಕ್ಕೆ’ ಎಂಬ ಸಾನೆಟ್ ಬರೆದ ವಿಚಾರವನ್ನು ಹಿಂದೆಯೆ ತಿಳಿಸಿದೆ. ಆಶ್ರಮ ಬಿಟ್ಟು ಬಂದಮೇಲೆ ೨೦-೮-೧೯೩೬ರಂದು ‘ಕ್ಷೇಮಕಾರಿ’ ಎಂಬ ಸಾನೆಟ್ ರಚಿತವಾಗಿದೆ. ಅದಾದ ಎರಡೆ ದಿನಗಳಲ್ಲಿ ಅಂದರೆ ೨೨-೮-೧೯೩೬ರಲ್ಲಿ ಪ್ರಾರಂಭವಾಗಿ ೨೬-೮-೧೯೩೬ರಂದು ಪೂರೈಸಿದೆ ಒಂದು ಮಹತ್ವದ ಕವನ ‘ಕೂಸಿನ ಕನಸು’.

ಈ ಮಧ್ಯೆ, ನನ್ನ ಕವನಗಳ ಹಸ್ತಪ್ರತಿಯಲ್ಲಿ ಇಂಗ್ಲೀಷಿನಲ್ಲಿ ಬರೆದಿರುವ ಒಂದು ಸಣ್ಣ ಅಡಿಟಿಪ್ಪಣಿಕೆಯಲ್ಲಿ ಹೀಗಿದೆ. ೨೦-೮-೧೯೩೬ರಲ್ಲಿ: `Yesterday I read an article in Trivini named `Mr. puttappa and Modern kannada Poetry.” ಟಿ.ಎನ್.ಶ್ಯಾಮರಾವ್ ಎಂಬುವರು, ಆಗ ನನಗೆ ಅಪರಿಚಿತರು ಅಥವಾ ಅತ್ಯಲ್ಪ ಪರಿಚಿತರ, ‘ಶ್ಯಾಮ’ ಎಂಬ ಕಾವ್ಯನಾಮದಿಂದ ಆ ಲೇಖನ ಬರೆದಿದ್ದರು. ಅದನ್ನೋದಿ ನಾನು ಉತ್ತೇಜಿತನಾಗಿದ್ದೆ. ‘ಕಲ್ಕಿ’ ‘ಶ್ಮಶಾನಕುರುಕ್ಷೇತ್ರಂ’ ಮತ್ತು ‘ಸತ್ಯ ಮತ್ತು ಸೌಂದರ‍್ಯ’ ಮೊದಲಾದವುಗಳನ್ನು ಅಲ್ಲಲ್ಲಿ ಇಂಗ್ಲಿಷಿಗೆ ಭಾಷಾಂತರಿಸಿ ತುಂಬ ಪ್ರೋತ್ಸಾಹಕರವಾದ ಶ್ಲಾಘನೆಯ ಮಾತುಗಳನ್ನು ಬರೆದಿದ್ದರು. ಮುಂದೆ ಅವರು ನನಗೆ ತುಂಬ ಪರಿಚಿತರಾದರು. ನನ್ನ ಅನೇಕ ಕವನಗಳನ್ನೂ ಮತ್ತು ‘ಶ್ಮಶಾನ ಕುರುಕ್ಷೇತ್ರಂ’ ನಾಟಕವನ್ನೂ ಇಂಗ್ಲಿಷಿಗೆ ಭಾಷಾಂತರಿಸಿ ‘Sixty Poems and a Drama’ ಎಂಬ
ಶೀರ್ಷಿಕೆಯಲ್ಲಿ ಪ್ರಕಟಿಸುವ ಸಂಕಲ್ಪ ಇಟ್ಟುಕೊಂಡಿದ್ದರು. ಇಂಗ್ಲಿಷಿಗೆ ತರ್ಜುಮೆ ಮಾಡಿದ ಅನೇಕ ಕವನಗಳನ್ನು ನನ್ನ ಪರಿಶೀಲನೆಗಾಗಿ ಕಳಿಸಿ ಒಪ್ಪಿಗೆ ಪಡೆದಿದ್ದರು. ಆದರೆ ಇತ್ತೀಚೆಗೆ ಅವರು ಏನಾದರೋ ಎಂಬ ಸುಳಿವೇ ಸಿಕ್ಕಿಲ್ಲ. ಅವರು ಅಷ್ಟೇನೂ ಆರೋಗ್ಯವಂತರಾಗಿರಲಿಲ್ಲ. ಅವರು ಭಾಷಾಂತರಿಸಿದ ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ ಎಂಬ ‘ಲೆನಿನ್’ ಎಂಬ ಸಾನೆಟ್ಟು Kannada Studies ನಲ್ಲಿ ಅಚ್ಚಗಿವೆ.

ನಾನು ಆಶ್ರಮ ಬಿಟ್ಟುಬಂದು ಒಂದು ತಿಂಗಳಾದ ಮೇಲೆ ೪-೯-೧೯೩೬ರಂದು ಬೆಂಗಳೂರು ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರಾಗಿದ್ದ ಗೋಪಾಲ್ ಮಹಾರಾಜ್ (ಸ್ವಾಮಿ ಸಿದ್ಧೇಶ್ವರನಂದರು) ಮೈಸೂರಿಗೆ ಬಂದರು. ಹುಡುಗರು ಮತ್ತು ನಾನು ಆಶ್ರಮ ಬಿಟ್ಟು ಬಾಡಿಗೆ ಮನೆಗೆ ಬಂದದ್ದನ್ನ ಅರಿತಿದ್ದರು. ಅವರನ್ನು ನಾನು ಕಂಡಾಗ, ನಾನು ಹಿಂದೆ ಅವರಲ್ಲಿ ಯಾವ ಅಕ್ಕರೆ ಮೈತ್ರಿಗಳನ್ನು ಅನುಭವಿಸುತ್ತದ್ದೇನೋ ಅದರಲ್ಲಿ ಒಂದಿನಿತು ಮುಕ್ಕಾಗಿರಲಿಲ್ಲ. ನಾನು ಆಶ್ರಮ ಬಿಟ್ಟುಹೋದ ವಿಚಾರದಲ್ಲಿ ಅವರಿಗೆ ಏನೂ ಅಸಮಾಧಾವವಿರಲಿಲ್ಲ. ಆ ವಿಚಾರವಾಗಿ ಅವರು ಯಾವ ಪ್ರಶ್ನೆಯನ್ನೂ ಕೇಳಿಲಿಲ್ಲ. ಅಲ್ಲದೆ ನಾವಿರುವ ಬಾಡಿಗೆ ಮನೆಗೆ ಬರುವುದಾಗಿಯೂ ಹುಡುಗರನ್ನೆಲ್ಲ ನೋಡಿ ಮಾತಾಡಿಸುವುದಾಗಿಯೂ ಅತ್ಯಂತ ಕೃಪೆಯ ಹೃದಯದಿಂದ ಹೇಳಿದರು.

ಮರುದಿನ ಬೆಳಿಗ್ಗೆ ನಮ್ಮ ಕಾಫಿತಿಂಡಿಯ ಸಮಯಕ್ಕೆ ಆಶ್ರಮದಿಂದ ಬಂದೇಬಿಟ್ಟರು! ಹುಡುಗರನ್ನೆಲ್ಲ ಅವರವರ ಹೆಸರು ಹಿಡಿದು ಕರೆದು ತುಂಬ ಆತ್ಮೀಯತೆಯಿಂದ ಮಾತಾಡಿಸಿದರು. ಮನೆಯನ್ನೆಲ್ಲ ನೋಡಿ, ಅನುಕೂಲ ಅನಾನುಕೂಲಗಳನ್ನು ವಿಚಾರಿಸಿ, ಸಲಹೆಯಿತ್ತರು. ಒಟ್ಟಿಗೆ ಕುಳಿತು ನಾವೆಲ್ಲರೂ ಅವರ ಸಂಭಾಷಣೆಯನ್ನೂ ಹಾಸ್ಯವಿನೋದಗಳನ್ನೂ ಸವಿಯುತ್ತಾ ಕಾಫಿ ತಿಂಡಿ ತೆಗೆದುಕೊಂಡೆವು. ನಾನು ಮಾನಪ್ಪನ ತಂಗಿ ಹೇಮಾವತಿಯನ್ನು ಮದುವೆಯಾಗಲು ಒಪ್ಪಿಗೆಯಿತ್ತುದಕ್ಕೆ ತುಂಬಾ ಸಂತೋಷದಿಂದ ಆಶೀರ್ವದಿಸಿದರು. ತಾವು ಕೆಲವು ತಿಂಗಳಲ್ಲಿ ಫ್ರಾನ್ಸಿಗೆ ಹೋಗಬೇಕಾಗಬಹುದೆಂಬುದನ್ನೂ ಸೂಚಿಸಿದರು. ನಾನು ಬದುಕಿನಲ್ಲಿ ಕೈಕೊಂಡ ಹೊಸಮಾರ್ಗದ ವಿಚಾರದಲ್ಲಿ ನನ್ನ ಹೃದಯಕ್ಕೆ ಧೈರ್ಯ ತುಂಬಿದರು. ಶ್ರೀಮಹಾಪುರಷಜಿಯವರ ಕೃಪೆಗೆ ಪಾತ್ರನಾಗಿದ್ದ ನನಗೆ ಯಾವ ಹೆದರಿಕೆಯೂ ಬೇಡ ಎಂಬ ಆಶ್ವಾಸನವಿತ್ತರು!

ಅವರು ಬಂದುಹೋದ ಮರುದಿನವೆ ೫-೯-೧೯೩೬ರಲ್ಲಿ ನಾನು ರಚಿಸಿದ ಒಂದು ಸಾನೆಟ್ ‘ಪೂರ್ಣಯೋಗಿಯೆ ಪರಮಭೋಗಿ’ ಎಂಬುದೇ ಅದಕ್ಕೆ ಉಜ್ವಲಸಾಕ್ಷಿಯಾಗಿದೆ!  ಆ ದಿನವೆ ‘ನನ್ನ ಶೈಲಿ’ ಎಂಬ ಹೆಸರಿನ ಮತ್ತೊಂದು ಸಾನೆಟ್ಟನ್ನೂ ಬರೆದಿದ್ದೇನೆ. ಅದೂ ಗೋಪಾಲ್ ಮಹಾರಾಜ್ ನನ್ನಲ್ಲಿ ಮೂಡಿಸಿದ್ದ ಆತ್ಮಪ್ರತ್ಯಕ್ಕೆ ಮತ್ತೊಂದು ಹೆಗ್ಗುರುತಾಗಿದೆ. ಅಲ್ಲಿಂದ ಮುಂದೆ ಏಳು ತಿಂಗಳಲ್ಲಿ ನನ್ನ ಮದುವೆ ನಡೆಯಿತು. ಆ ಅವಧಿಯಲ್ಲಿ ನನ್ನ ಹೆಚ್ಚಿನ ಕಾವ್ಯಶಕ್ತಿ ಶ್ರೀರಾಮಾಯಣ ದರ್ಶನಂ ರಚನೆಗೇ ಮೀಸಲಾಗಿದ್ದಿತಾದರೂ ನಾನು ರಚಿಸಿದ ಹದಿನೈದು ಹದಿನಾರು ಭಾವಗೀತಗಳಲ್ಲಿ ಜೀವನದ ಉಲ್ಲಾಸ ಉತ್ಸಾಹ ಕೆಚ್ಚು ಆಶಾವಾದಗಳೆ ತುಂಬಿರುವುದನ್ನು ಓದುಗರು ಕಾಣಬಹುದು. ಆ ಕವನಗಳನ್ನೂ ತಾರೀಖಿನೊಡನೆ ಇಲ್ಲಿ ಕೊಡುತ್ತೇನೆ:

‘ಊರ‍್ಮಿಳಾ ದೇವಿ ಸಾನೆಟ್-೧೩೯-೧೯೩೬;’‘ಚೋರೆ-ಬೋರೆ ೧೭-೯-೧೯೩೬’; ‘ಕೇಳಿದೊಡನೆಯ ಬೀದಿವಾದ್ಯ ೨೮-೯-೧೯೩೬’; ‘ಸಾಮಾನ್ಯ ಬೀದಿ-೧೦-೧೦-೧೯೩೬’; ‘ಇಂದ್ರದಿಗಂತದಿ-೧೪-೧೦-೧೯೩೬’; ‘ಶ್ರೀಕೃಷ್ಣಜನ್ಮಾಷ್ಟಮಿ ೨೩-೧೦-೧೯೩೬’; ‘ರೈತನ ದೃಷ್ಟಿಯಲ್ಲಿ ವಿಜಯನಗರ ಸಾಮ್ರಜ್ಯ-೧೪-೧೧-೧೯೩೬’; ‘ರಸವೊಂದೆ ಕವಿಗೆ ನೀತಿ-೧೩-೧-೧೯೩೭’; ‘ಒಂದು ಸಣ್ಣ ಹಕ್ಕಿಗೆ-೬-೧-೧೯೩೭’; ‘ದೇವರು ರುಜು ಮಾಡಿದನು-೨-೨-೧೯೩೭’; ‘ತಿಂಗಳ್ ಮಾವ-೨೫-೨-೧೯೩೭’; ‘ಬಾ ಫಾಲ್ಗುಣ ರವಿದರ್ಶನಕೆ-೪-೩-೧೯೩೭’; ‘ಪರ್ವತಾರಣ್ಯಗಳಲ್ಲಿ-ಸಾನೆಟ್೧ ೧೧-೩-೧೯೩೭’; ‘ಸದಾ-೩೦-೩-೧೯೩೭’; ‘ಕೃಪೆ-೪-೪-೧೯೩೭’. ‘ಸಂಸಾರಿಯಾಗಲಿರುವ ಬ್ರಹ್ಮಚಾರಿಯ ಪ್ರಾರ್ಥನೆ-೫-೪-೧೯೩೭’. ಮುಂದೆ ಮದುವೆಯಾದ ಮೇಲೆ ದಾಂಪತ್ಯ ಪ್ರೇಮಗೀತೆಗಳ ಸಾಲುಸಾಲೆ ಶುರುವಾಗುತ್ತದೆ.

* * *

ಆಶ್ರಮ ಬಿಟ್ಟುಬಂದ ಮೇಲೆ ದಿನಚರಿ ಬರೆಯುವುದು ತುಂಬಾ ವಿರಳವಾಗುತ್ತಾ ಹೋಗುತ್ತದೆ. ಆಶ್ರಮ ಬಿಟ್ಟ ದಿನ ೧-೮-೧೯೩೬ರಲ್ಲಿ ಬರೆದ ಡೈರಿ ಮತ್ತೆ ಪ್ರಾರಂಭವಾಗಿರುವುದು ಮೂರೂವರೆ ತಿಂಗಳ ಮೇಲೆಯೆ, ೧೫-೧೧-೧೯೩೬ರಂದು: “ಇವತ್ತು ನಾಲ್ಕು ಗಂಟೆಗೆ ಬೆಂಗಳೂರಿಗೆ ಹೊರಡುತ್ತೇನೆ. ತುಮಕೂರು, ಮಧುಗಿರಿ ದಾವಣಗೆರೆಗಳಲ್ಲಿ ವಿಶ್ವವಿದ್ಯಾನಿಲಯದ ವಿಶೇಷ ಉಪನ್ಯಾಸಕ್ಕೆ-ಈ ಉಪನ್ಯಾಸಗಳ ದೆಸೆಯಿಂದ ಈಗ ಸುಮಾರು ಒಂದು ಒಂದೂವರೆ ತಿಂಗಳಿಂದ ಒಂದು ಪಂಕ್ತಿ ಕವನ (ರಾಮಾಯಣದದಲ್ಲಿಯೂ) ಬರೆಯಲಾಗಲಿಲ್ಲ. ನಿನ್ನೆ ‘ರೈತನ ದೃಷ್ಟಿಯಲ್ಲಿ ವಿಜಯನಗರ ಸಾಮ್ರಾಜ್ಯ’ ಎಂಬ  ಕವನ ಬರೆದೆ;, ದಿನಚರಿಯಲ್ಲಿ ಈ ತಾರೀಖಿನ ತರುವಾಯ ಮತ್ತೆ ದಿನಚರಿ ಪ್ರಾರಂಭವಾಗಿರುವುದು ಮತ್ತೆ ಎರಡು ವರ್ಷಗಳ ಅನಂತರವೆ, ೨೭-೮-೧೯೩೮ರಂದು, ಅಂದರೆ ಮದುವೆಯಾಗಿ ಒಂದು ವರ್ಷ ಮೂರು ತಿಂಗಳು ಆದಮೇಲೆ, ಹೇಮಾವತಿ ಚೊಚ್ಚಲು ಹೆರಿಗೆಗಾಗಿ ಶಿವಮೊಗ್ಗಾಕ್ಕೆ ಹೋಗಿದ್ದ ಕಾಲದಲ್ಲಿ!

ಮೇಲೆ ಉಕ್ತವಾಗಿರುವ ತುಮಕೂರು, ಮಧುಗಿರಿ ಮತ್ತು ದಾವಣಗೆರೆಯ ವಿಶೇಷೋಪನ್ಯಾಸಗಳ ವಿಚಾರ ತುಸು ಸ್ವಾರಸ್ಯಕರ ಸಂಗತಿಗಳನ್ನು ಬರೆದು ‘ನೆನಪಿನ ದೋಣಿಯಲ್ಲಿ’ ಯ ಈ ಅರುವತ್ತೈದನೆಯ ವಿಭಾಗವನ್ನು ಮುಗಿಸುತ್ತೇನೆ.

ನಾನು ಮೈಸೂರಿನಿಂದ ರೈಲಿನಲ್ಲಿ ಹೊರಟು, ಬೆಂಗಳೂರಿನಲ್ಲಿ ನನ್ನನ್ನು ಕೂಡಿಕೊಂಡ ದೇ.ರಾ.ಮಾನಪ್ಪನೊಡನೆ ತುಮಕೂರಿಗೆ ಹೋದೆ. ಅಲ್ಲಿ ಬಿ.ಕೃಷ್ಣಮೂರ್ತಿ ಸ್ಟೇಷನ್ನಿಗೆ ಬಂದು ನಮ್ಮನ್ನು ಸ್ವಾಗತಿಸಿ ತಮ್ಮ ಮನೆಗೆ ಕರೆದುಕೊಂಡು ಹೋದರು. ನಾನು ಹೋದದ್ದು ವಿಶ್ವವಿದ್ಯಾನಿಲಯದ ವಿಶೇಷ ಉಪನ್ಯಾಸಕ್ಕಾಗಿಯಾದರೂ ಹೋದೆಡೆಯಲ್ಲೆಲ್ಲ ಜನರೂ ವಿದ್ಯಾರ್ಥಿಗಳೂ ಮುಖ್ಯವಾಗಿ ನನ್ನ ಸ್ವಂತ ಕವನಗಳ ವಾಚನ ಕೇಳಲೆಂದೇ ಮುಖ್ಯವಾಗಿ ಆಸಕ್ತರಾಗಿರುತ್ತಿದ್ದರು. ಅದರಂತೆಯೆ ತುಮಕೂರಿನಲ್ಲಿಯೂ ಸಂಜೆ ಕವನವಾಚನ ಏರ್ಪಟ್ಟಿತ್ತು. ಜನ ಕಿಕ್ಕಿರಿದು ನೆರೆದು ಸುಮಾರು ಎರಡು ಗಂಟೆಗಳ ಕವನವಾಚನ ಕೇಳಿದರು. ಮರುದಿನ ವಿಶೇಷೋಪನ್ಯಾಸ: ‘ಕುಮಾರವ್ಯಾಸನ ದುರಂತ ಕರ್ಣ’ ಎಂಬುದು ವಿಷಯವಾಗಿತ್ತು. ಆ ದಿನ ಅಧ್ಯಕ್ಷತೆ ವಹಿಸಿದ್ದವರು ಒಬ್ಬ  ಸಂಪ್ರದಾಯದ ಅಯ್ಯಂಗಾರರು. ಹೆಸರು ರಾಮಾನುಜ ಅಯ್ಯಂಗಾರ್ ಎಂಬಂತೆ ಜ್ಞಾಪಕ. ಅವರು ಆ ಜಿಲ್ಲೆಯ ವಿದ್ಯಾಧಿಕಾರಿಯಂತೆ. ಕಚ್ಚೆಪಂಚೆ ಹಾಕಿ, ಕರಿ ನಿಲುವಂಗಿ ತೊಟ್ಟು, ಜರಿಪೇಟದಿಂದ ಮೆರೆಯುತ್ತಿದ್ದ ಅವರ ಹಣೆಯ ಮೇಲೆ ಬಹುದೂರದಿಂದಲೂ ಕಾಣಬಹುದಾಗಿದ್ದ ದಪ್ಪದಪ್ಪದ ಮೂರು ನಾಮಗಳು! ಅವರು ತುಂಬ ಸ್ವಪ್ರತಿಷ್ಠೆಯ ವ್ಯಕ್ತಿಯಾಗಿ, ನನ್ನ ಭಾಷಣವನ್ನು ಸವಿಯುವ ಉದ್ದೇಶಕ್ಕಿಂತಲೂ ಹೆಚ್ಚಾಗಿ ಅದನ್ನು ಖಂಡಿಸಿ, ತಮ್ಮ ಪಾಂಡಿತ್ಯ ಪ್ರತಿಭೆಗಳನ್ನು ಮೆರೆಯಬೇಕು ಎನ್ನುವ ಉದ್ದೇಶದಿಂದಲೆ ಬಂದ ಹಾಗಿತ್ತು. ಅವರು ನನ್ನ ಸಾಹಿತ್ಯವನ್ನಾಗಲಿ ನನ್ನ  ಕವನಗಳನ್ನಾಗಲಿ ಓದಿಯೂ ಇರಲಿಲ್ಲ. ಆದರೆ ನನ್ನ  ಖ್ಯಾತಿ ಕನ್ನಡ ನಾಡನ್ನು ತುಂಬಿತ್ತು ಎಂಬುದನ್ನು ಮಾತ್ರ ತಿಳಿದಿದ್ದರೆಂದು ತೋರುತ್ತದೆ. ಜೊತೆಗೆ ನನ್ನ ಬರಹ ಭಾಷಣಗಳಲ್ಲಿ ಸಂಪ್ರದಾಯದ ಬ್ರಾಹ್ಮಣ ವರ್ಗವನ್ನು ವಿಡಂಬಿಸಿ ಖಂಡಿಸುವ ಕೆಲಸ ನಡೆದಿರುವುದನ್ನೂ ಅವರು ತಿಳಿದಿದ್ದರು. ಬಹಶಃ ನನ್ನ ಶ್ರೀರಂಗಪಟ್ಟಣದ ಭಾಷಣ ‘ಯುವಕರು ನಿರಂಕುಶಮತಿಗಾಳಾಗಬೇಕು’ ಎಂಬಂತಹ ಬರಹಗಳನ್ನೂ ಪತ್ರಿಕೆಗಳಲ್ಲಿ ಓದಿದ್ದರಬಹುದು. ಆದ್ದರಿಂದಲೆ ಅವರಲ್ಲಿ ನನ್ನನ್ನು ಹೇಗಾದರೂ ಮಾಡಿ ಮುಖ ಭಂಗಿಸುವಂತೆ ಮಾತಾಡಿ ಸಂತೋಷಪಟ್ಟುಕೊಳ್ಳಬೇಕೆಂಬ ಅಸೂಯಾತೃಷೆಯೂ ಇದ್ದಿರಬಹುದು.

ಸಭೆ ಕಿಕ್ಕಿರಿದು ನೆರೆದಿತ್ತು. ಅಧ್ಯಕ್ಷರಾಗಿದ್ದ  ಐಯ್ಯಂಗಾರರು ನನ್ನ ಪರಿಚಯ ಮಾಡಿಕೊಡಲು ಮಾತಾಡಿದರು. ಧ್ವನಿಯಲ್ಲಿ ಒಂದು ತೆರನಾದ ಅನುಗ್ರಹಿಸುವ ಧೋರಣೆಯಿತ್ತು. ಆದರೆ ಭಾಷಣದ ಅಂದಿನ ವಿಷಯ ಪ್ರಸ್ತಾವನೆಗೆ ಬದಲಾಗಿ ಯಾವುದೊ ವೈಯಕ್ತಿಕ ವಿಚಾರ ಪ್ರಾರಂಭಿಸಿಬಿಟ್ಟರು. ಹಿಂದಿನ ರಾತ್ರಿ ನಾನು ಆ ಊರಿನಲ್ಲಿ ನ್ಯಾಯಾಧೀಶರಾಗಿದ್ದ ಒಬ್ಬರ ಮನೆಗೆ ಮಿತ್ರರೊಡನೆ ಊಟಕ್ಕೆ ಹೋಗಿದ್ದೆ. ಅವರು ಒಕ್ಕಲಿಗರಂತೆ! ನನಗೆ ಅದೊಂದೂ ಗಮನಕ್ಕೆ ಬಂದಿರಲಿಲ್ಲ. ನಾಡಿನ ಪ್ರಸಿದ್ಧ ಕವಿಯನ್ನು ಮಿತ್ರರೊಡನೆ ಆದರಿಸಬೇಕೆಂದು ಕರೆದಿದ್ದರೆಂದು ನನ್ನ ಊಹೆ. ಅವರಿಗೆ ಮದುವೆಗೆ ಬಂದಿದ್ದ ಒಬ್ಬ ಕನ್ಯೆ ಇರುವ ವಿಚಾರವೂ ನನಗೇನೂ ಗೊತ್ತಿರಲಿಲ್ಲ. ಈ ಅಯ್ಯಂಗಾರರು ಅದನ್ನೇ ಪ್ರಸ್ತಾಪಿಸುತ್ತಾ ನಾನು ತುಮಕೂರಿಗೆ ಕನ್ಯಾರ್ಥಿಯಾಗಿ ಬಂದಂತೆಯೂ ಅದು ಸಫಲವಾಗುವಂತೆ ತಾವು ಹರಸುವುದಾಗಿಯೂ ಏನೇನೊ ಅಸಂಬದ್ಧ ಪ್ರಲಾಪ ಭಾಷಣ ಮಾಡಿದರು. ನನಗೆ ಮನಸ್ಸಿನಲ್ಲಿ ‘ಇಸ್ಸಿ ಇವನೆಂತಹ ಮನುಷ್ಯ?’ ಎನಿಸಿತು.

ನನ್ನ ಭಾಷಣ ಪ್ರಾರಂಭವಾಯಿತು. ಸದಸ್ಯರು ಸ್ವಾರಸ್ಯವನ್ನು ಸವಿಯುತ್ತಾ ನಿಃಶಬ್ದರಾಗಿದ್ದರು. ಭಾಷಣದ ನಡುವೆ ಕರ್ಣನ ವಿಚಾರ ಮಾತಾಡುವಾಗ ನಿದರ್ಶನವಾಗಿ ಅಧ್ಯಕ್ಷರ ಭಾಷಣವನ್ನು ತೆಗೆದುಕೊಂಡು ಅದರ ಅನೌಚಿತ್ಯ ಮತ್ತು ಅಪ್ರಕೃತತ್ವಗಳ ಕಡೆಗೆ ಸದಸ್ಯರ ಗಮನ ಹರಿಯುವಂತೆ ವ್ಯಂಗ್ಯವಾಗಿ ಮಾತಾಡಿದೆ. ಸಭೆ ಗೊಳ್ಳೆಂದು ನಕ್ಕು ಅಭಿಮಾನಿಗಳಾಗಿದ್ದ ಯಾರೋ ಒಬ್ಬರು ‘ಷೇಮ್! ಷೇಮ್!’ ಎಂದು ಕೂಗಿಕೊಂಡರು. ನಾನು ಭಾಷಣ ನಿಲ್ಲಿಸಿದೆ. ಸಭೆ ಗುಜುಗುಜು ಎಂದು ಬಹುಶಃ ಕೂಗಿದಾತನನ್ನು ಸುಮ್ಮನಿರಿಸಿತು. ನಾನೂ ಒಂದೆರಡು ಮಾತನ್ನು ಸಮಾಧಾನ ಸೂಚಕವಾಗಿ ಆಡಿ ನನ್ನ ಭಾಷಣ ಮುಂದುವರಿಸಿದೆ. ಆದರೆ  ಭಾಷಣದ ವಸ್ತುವನ್ನಾಗಲಿ ಭಾಷಣಕಾರನ ದೃಷ್ಟಕೋನವನ್ನಾಗಲಿ ಅರಿಯದ ಮತ್ತು ಅರ್ಥ ಮಾಡಿಕೊಳ್ಳದ ಅಧ್ಯಕ್ಷರ ದೆಸೆಯಿಂದ ಭಾಷಣ ಎಷ್ಟು ಪರಿಣಾಮಕಾರಿಯಾಗಬೇಕಿತ್ತೋ ಅಷ್ಟು ಪರಿಣಾಮಕಾರಿಯಾಗಲಿಲ್ಲ ಎಂಬುದು ನನ್ನ ಮಿತ್ರರ ಅಭಿಪ್ರಾಯವಾಗಿತ್ತು. ಅಲ್ಲದೆ ಬೇಕೆಂತಲೆ ಆ ಮನುಷ್ಯನನ್ನು ಅಧ್ಯಕ್ಷತೆ ವಹಿಸುವಂತೆ ಮಾಡಲಾಗಿತ್ತು ಎಂದೂ ಅವರ ಸಂಶಯವಾಗಿತ್ತು. ಏಕೆಂದರೆ ಆ ಮನುಷ್ಯ ಎಲ್ಲಿ ಹೋದರೂ ಯಾವಗಲೂ ಹೀಗೆಯೆ ಅನುಚಿತವಾಗಿ ಮಾತನಾಡಿ ಕಾರ‍್ಯಕ್ರಮವನ್ನೆ ಕೆಡಿಸುವುದು ಆತನ ಸ್ವಭಾವವಾಗಿತ್ತಂತೆ!

ಬಿ.ಕೃಷ್ಣಮೂರ್ತಿ ಮತ್ತು ದೇ.ರಾ.ಮಾನಪ್ಪನೊಡಗೂಡಿ ದೇವರಾಯನ ದುರ್ಗ ಮೊದಲಾದ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಬಂದು, ಮಧುಗಿರಿ ಮತ್ತು ದಾವಣಗೆರೆ ಕಾರ್ಯಕ್ರಮಗಳನ್ನೂ ಪೂರೈಸಿದೆ. ದಾವಣಗೆರೆಯಲ್ಲಿ ನನ್ನ ಕವನವಾಚನಕ್ಕಾಗಿ ಏರ್ಪಾಡಾಗಿದ್ದ ಸಭೆ ಸ್ಮರಣೀಯವಾಗಿತ್ತು; ಯಾವುದೊ ಒಂದು ನಾಟಕದ ಥಿಯೇಟರು, ಉಸಿರು ಕಟ್ಟುವಂತೆ ಜನ ಕಿಕ್ಕಿರಿದಿತ್ತು!